ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, May 28, 2012

ಅರ್ಥ



ಗೋಳದ ಆಚೆ ಬದಿಯ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ನೋಡುತ್ತಾ ರಾತ್ರಿ ಮೂರುಗಂಟೆಯವರೆಗೆ ಟೀವಿ ಮುಂದೆ ಕೂತುಕೊಂಡಿದ್ದರ ಫಲವಾಗಿ ಇಂದು ಬೆಳಿಗ್ಗೆ ಎದ್ದಾಗ ಎಂಟುಗಂಟೆಯಾಗಿಹೋಗಿತ್ತು.  ಆತುರಾತುರವಾಗಿ ಪ್ರಾತರ್ವಿಧಿ ಸ್ನಾನಾದಿಗಳನ್ನು ಮುಗಿಸಿ ಉಡುಪು ಧರಿಸುವ ಹೊತ್ತಿಗೆ ಅಡಿಗೆಮನೆಯಿಂದ ದೋಸೆಯ ಪರಿಮಳ ತೇಲಿಬಂದು ಮೂಗರಳಿಸಿ ಬಾಯಲ್ಲಿ ನೀರೂರಿಸಿತು.  ಆದರೆ ದುರಾದೃಷ್ಟ, ಆ ಅಡಿಗೆಮನೆ ಪಕ್ಕದಮನೆಯಲ್ಲಿತ್ತು ಹಾಗೂ ಅಲ್ಲಿ ದೋಸೆ ಹುಯ್ಯುತ್ತಿದ್ದವಳು ಕಲ್ಯಾಣರಾಮನ್‌ನ ಹೆಂಡತಿ ಮನಮತಿಯಾಗಿದ್ದಳು.  ನಾಲ್ಕು ತಿಂಗಳ ಹಿಂದೆ ಅರುಂಧತಿಗೆ ದೆಹಲಿಗೆ ಟ್ರಾನ್ಸ್‌ಫರ್ ಆಗಿ, ಹೋಗುವವಳು ಒಬ್ಬಳೇ ಹೋಗದೇ, ಬಿಟ್ಟಿರಲಾಗದೆಂದು ಮಗರಾಯ ಆದಿತ್ಯನನ್ನೂ, ಮನೆಯಲ್ಲಿ ಹಿರಿಯರೊಬ್ಬರಿದ್ದರೆ ಲಕ್ಷಣ ಹಾಗೂ ಕ್ಷೇಮ ಎಂದು ಲಕ್ಷ್ಮಕ್ಕನನ್ನೂ ಕರೆದುಕೊಂಡು ಹೊರಟುಹೋದಾಗಿನಿಂದ ನನ್ನ ಅಡಿಗೆಮನೆಯ ಕಿಟಕಿಗೆ ನೇರವಾಗಿ ತನ್ನ ಅಡಿಗೆಮನೆ ಕಟ್ಟಿಸಿಕೊಂಡಿದ್ದ ಕಲ್ಯಾಣರಾಮನ್‌ನ ಬಗ್ಗೆ ದಿನಬೆಳಗಾದರೆ ನನಗೆ ಅಸೂಯೆಯಾಗುವುದು ಮಾಮೂಲಾಗಿಬಿಟ್ಟಿದೆ.  ನಾನೀಗ ಎಲ್ಲರೂ ಇದ್ದೂ ಅನಾಥ, ಮದುವೆಯಾಗಿಯೂ ಬ್ರಹ್ಮಚಾರಿ.
ಎಲ್ಲ ಕೋಪ ಅಸಹನೆಯನ್ನೂ ಸ್ಕೂಟರಿನ ಮೇಲೆ ಕಕ್ಕಿ ಅದನ್ನು ಮನಸ್ಸೋ ಇಚ್ಚೆ ಒದ್ದು ಅಯ್ಯರ್ ಹೋಟೆಲಿನ ದಾರಿ ಹಿಡಿದೆ.  ನನ್ನ ಮನಸ್ಸು ಶಾಂತವಾದದ್ದು ಆರು ಇಡ್ಲಿಗಳನ್ನು ಗದುಕಿ ನೊರೆಕಾಫಿಯನ್ನು ಸೊರಸೊರನೆ ಹೀರಿ ಬಾಯೊರೆಸಿಕೊಂಡಾಗಲೇ.
ಯೂನಿವರ್ಸಿಟಿಯ ದಾರಿ ಹಿಡಿದೆ.  ಸ್ಕೂಟರ್ ತನ್ನ ಪಾಡಿಗೆ ತಾನು ಓಡುತ್ತಿತ್ತು.  ನನ್ನ ತಲೆಯೂ ಸಹಾ.
ನಾನಿಲ್ಲಿ ಒಂಟಿಕಪಿಯಂತೆ ಏಕಾಂಗಿಯಾಗಿ ದಿನದೂಡಬೇಕಾಗಬಹುದೆಂದು ತಿಳಿದಾಗ ತುಂಬಾ ಬೇಸರವಾಗಿತ್ತು.  ಒಂಟಿತನ ಅನಿವಾರ್ಯ ಎಂದರಿವಾದಾಗ ಅದಕ್ಕೆ ಹೊಂದಿಕೊಳ್ಳುವ ಮನಸ್ಸು ಮಾಡಿದ್ದೆ.  ಅಲ್ಲದೇ ಅದನ್ನು ತಮಾಷೆಯಾಗಿ ತೆಗೆದುಕೊಳ್ಳಲೂ ಪ್ರಯತ್ನಿಸಿದ್ದೆ.  "ನಾನೊಬ್ಬನೇ ನೆಮ್ಮದಿಯಾಗಿರುತ್ತೇನೆ.  ಅರಸನ ಅಂಕೆ ಇಲ್ಲ, ದೆವ್ವದ ಕಾಟ ಇಲ್ಲ" ಎಂದು ಎದೆಯುಬ್ಬಿಸಿ ಹೇಳಿದ್ದಲ್ಲದೇ "ನಿನ್ನ ಗೈರುಹಾಜರಿಯಲ್ಲಿ ನಾನಿಲ್ಲಿ ಬೇರೊಬ್ಬಳನ್ನು ತೆಗೆದುಕೊಂಡು ಲೀವ್ ವೇಕೆನ್ಸಿ ಭರ್ತಿ ಮಾಡಿಕೊಳ್ಳುತ್ತೇನೆ" ಎಂದು ಅರುಂಧತಿಯನ್ನು ರೇಗಿಸಿದ್ದೆ.  ಟೀವಿ ಕೊಂಡರೆ ಟೇಪ್‌ರೆಕಾರ್ಡರ್ ಉಚಿತ, ಫ್ರಿಜ್ ಕೊಂಡರೆ ಮಿಕ್ಸಿ ಉಚಿತ, ಸೋಪು ಕೊಂಡರೆ ಶ್ಯಾಂಪೂ ಸ್ಯಾಶೆ ಉಚಿತ- ಇಂಥವುಗಳ ಹಾಗೆ "ದೊಡ್ಡವಳನ್ನು ಮದುವೆಯಾದರೆ ಚಿಕ್ಕವಳು ಉಚಿತ" ಎಂಬ ಮಾರಾಟತಂತ್ರವನ್ನು ನನ್ನ ಅತ್ತೆಮಾವ ಅನುಸರಿಸಿ ಅರುಂಧತಿಯ ಜತೆಗೆ ಅವಳ ತಂಗಿಯನ್ನೂ ನನಗೆ ಕೊಟ್ಟಿದ್ದರೆ ಈಗ ಅದೆಷ್ಟು ಚೆನ್ನಾಗಿರುತ್ತಿತ್ತು ಎಂದು ಒಂದೆರಡು ಸಲ ಅಂದುಕೊಂಡದ್ದೂ ಉಂಟು!
ಒಬ್ಬನೇ ಇರುವುದರಿಂದ ಸಖತ್ ಬಿಡುವು ಸಿಗುತ್ತದೆ, ಸಾಕಷ್ಟು ಕಥೆ ಕಾದಂಬರಿಗಳನ್ನು ಇಳಿಸಿಬಿಡಬಹುದು ಎಂದೆಲ್ಲಾ ಲೆಕ್ಕ ಹಾಕಿದ್ದೆ.  ಬರೀ ಲೆಕ್ಕ ಹಾಕಿದ್ದೇ ಬಂತು.  ಕೂತರೆ ನಿಂತರೆ ಆದಿತ್ಯನ ನೆನಪಾಗಿ ಏನು ಮಾಡಲೂ ಮೂಡ್ ಬರದೇ ಅನ್ಯಮನಸ್ಕತೆಯಲ್ಲಿ ದಿನಗಳೆಯತೊಡಗಿದೆ.  ಈ ನಾಲ್ಕು ತಿಂಗಳಲ್ಲಿ ನಾನು ಶುರು ಮಾಡಿದ ನಾಕೈದು ಕಥೆಗಳಲ್ಲಿ ಒಂದನ್ನೂ ಪೂರ್ಣಗೊಳಿಸಿಲ್ಲ.  ಬರವಣಿಗೆ ಸುಲಲಿತವಾಗಿ ಸಾಗಬೇಕಾದರೆ ಗಳಿಗೆಗೊಮ್ಮೆ ಬಳಿ ಬಂದು ಕಾಟ ಕೊಡುವ ಪ್ರೀತಿಪಾತ್ರರು ಮನೆಯಲ್ಲಿರಬೇಕು ಎಂಬ ಸತ್ಯ ನಾಕು ದಿನದಲ್ಲಿ ನನಗೆ ಮನದಟ್ಟಾಗಿತ್ತು.  ನಾನು ಕಥೆ ಬರೆಯುವುದಿರಲಿ, ನನ್ನ ಬದುಕೇ ಒಂದು ಕಥೆಯಾಗುತ್ತಿರುವಂತೆ ಕಾಣತೊಡಗಿತ್ತು.
ಯೂನಿವರ್ಸಿಟಿ ಹತ್ತಿರವಾಗುತ್ತಿದ್ದಂತೇ ನಿನ್ನೆ ಹೆಚ್‌ಓಡಿ ಪ್ರೊ ಸೆಂಗೋಟ್ಟೈ ಹೇಳಿದ್ದ ಮಾತು ನೆನಪಿಗೆ ಬಂತು.
ನಮ್ಮ ಅಟೆಂಡರ್ ನಾಗಲಿಂಗಂ ಯಾವುದೋ ಹೊರಸಂಬಂಧ ಶುರುಹಚ್ಚಿಕೊಂಡು ಹೆಂಡತಿಯನ್ನು ಕಡೆಗಣಿಸುತ್ತಿದ್ದಾನಂತೆ.  ಇದು ಇತ್ತೀಚೆಗೆ ವಿಪರೀತಕ್ಕೆ ಹೋಗಿ ಅವಳನ್ನವನು ಹೊಡೆಯುವುದು ಬಡಿಯುವುದೆಲ್ಲಾ ಮಾಡಿ ಅವಳ ಬದುಕನ್ನು ನರಕ ಮಾಡಿಬಿಟ್ಟಿದ್ದಾನಂತೆ.  ಅಕ್ಕಪಕ್ಕದವರ ಬುದ್ಧಿಮಾತನ್ನೆಲ್ಲಾ ಕಾಲಕಸದಂತೆ ತಳ್ಳಿಬಿಡುತ್ತಿದ್ದಾನಂತೆ.  ಕೊನೆಗೆ ಆ ಬಡಪಾಯಿ ಹೆಣ್ಣಿನ ವಯಸ್ಸಾದ ತಾಯಿ ಹೆಚ್‌ಓಡಿಯವರ ಮನೆಗೆ ಹೋಗಿ ಕಣ್ಣೀರು ಹಾಕುತ್ತಾ ಎಲ್ಲವನ್ನೂ ಒಪ್ಪಿಸಿ ಹಾದಿ ತಪ್ಪಿರುವ ಅಳಿಯನಿಗೆ ನೀವಾದರೂ ಒಂದಷ್ಟು ಬುದ್ಧಿಮಾತು ಹೇಳಿ ನನ್ನ ಮಗಳ ಬಾಳು ಉಳಿಸಿ ಎಂದು ಗೋಗರೆದಿದ್ದಳಂತೆ.  ನಿನ್ನೆ ಸಾಯಂಕಾಲ ನಾವು ಅಧ್ಯಾಪಕರನ್ನೆಲ್ಲಾ ತಮ್ಮ ಕೋಣೆಗೆ ಕರೆದು ಬಾಗಿಲು ಹಾಕಿಕೊಂಡು ಪ್ರೊ ಸೆಂಗೋಟ್ಟೈ ಅವರು ವಿಷಯವನ್ನು ಅರುಹಿದ್ದರು.  "ವಿಷಯ ಸೂಕ್ಷ್ಮದ್ದು.  ಅವನ ಜತೆ ಹೇಗೆ ಮಾತಾಡೋದು ಅಂತ ಹೊಳೀತಾ ಇಲ್ಲ" ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.  ಪ್ರತಿಕ್ರಿಯೆಯಾಗಿ ಒಬ್ಬರು "ಛೆ ಛೆ" ಎಂದು ಲೊಚಗುಟ್ಟಿದರೆ ಇನ್ನೊಬ್ಬರು "ಇಟೀಸ್ ವೆರಿ ಬ್ಯಾಡ್" ಎಂದು ರಾಗ ಎಳೆದರು.  ಮತ್ತೊಬ್ಬರು "ಅವನ ಹೆಂಡತಿಯನ್ನ ನಾನು ನೋಡಿದ್ದೀನಿ.  ಲಕ್ಷಣವಾಗಿದ್ದಾಳೆ, ಒಳ್ಳೇ ಫಿಗರ್ರು.  ಅಂಥೋಳನ್ನ ಬಿಟ್ಟು ಇನ್ನೊಬ್ಬಳ ಸೆರಗು ಯಾಕೆ ಹಿಡಿದ ಈ ಕಮನಾಟಿ! ಎಂದು ಗೊಣಗಿ ಕಣ್ಣುಗಳನ್ನು ಅರೆಮುಚ್ಚಿ ಅರೆಬೋಳುತಲೆಯನ್ನು ಕೆರೆದುಕೊಳ್ಳುತ್ತಿದ್ದಂತೇ ಪ್ರೊ ಜೋಸೆಫ್ ಮರಿಯಾದಾಸ್ "ನಮಗ್ಯಾಕೆ ಇದರ ಉಸಾಬರಿಮತ್ತೊಬ್ಬರ ಪರ್ಸನಲ್, ಅದೂ ಯಕಶ್ಚಿತ್ ಅಟೆಂಡರ್ ಒಬ್ಬನ ಅಫೇರ್ ಬಗ್ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ ನಮಗಿಲ್ಲ" ಎಂದು ಒದರಿ ವಿಷಯಕ್ಕೆ ಒಂದೇ ಏಟಿಗೆ ಮಂಗಳ ಹಾಡಲು ಪ್ರಯತ್ನಿಸಿದರು.  "ಹಾಗಲ್ಲ..." ಎನ್ನುತ್ತಾ ನಾಗಲಿಂಗಂನ ಅತ್ತೆ ತನ್ನ ಮುಂದೆ ಗೋಳಾಡಿದ್ದನ್ನು ಮತ್ತೊಮ್ಮೆ ವಿವರಿಸಿ "ನಾವೇನಾದರೂ ಮಾಡಬೇಕು.  ವಿಮೆನ್ಸ್ ರೈಟ್ಸ್, ಹ್ಯೂಮನ್ ರೈಟ್ಸ್, ಡೊಮೆಸ್ಟಿಕ್ ವಯೊಲೆನ್ಸ್ ಬಗ್ಗೆಲ್ಲಾ ಕ್ಲಾಸ್‌ನಲ್ಲಿ ಪಾಠ ಮಾಡೋ ನಾವು ಈ ಪ್ರಸಂಗಾನ ನಿರ್ಲಕ್ಷಿಸೋದು ಸರಿ ಅನ್ಸೋಲ್ಲ" ಎಂದು ದನಿ ಎಳೆದರು ಪ್ರೊ ಸೆಂಗೋಟ್ಟೈ.   ಅವರ ಹಾವಭಾವ, ಪದಗಳನ್ನು ಜೋಡಿಸಿದ ಜಾಣ್ಮೆ, ಕಣ್ಣಗುಡ್ಡೆಗಳ ಅಡ್ಡಾದಿಡ್ಡಿ ಉರುಳಾಟಗಳನ್ನು ಗಮನಿಸಿದ ನನಗೆ ಈ ಮನುಷ್ಯನಿಗೆ ವಿಷಯದಲ್ಲಿ ಆಸಕ್ತಿಯಿದೆ, ಆದರೆ ತಾನಾಗಿ ನಾಗಲಿಂಗಂಗೆ ಬುದ್ಧಿಮಾತು ಹೇಳಲು ತಯಾರಿಲ್ಲ, ಅದನ್ನು ಬೇರೊಬ್ಬರು ಮೈಮೇಲೆ ಹಾಕಿಕೊಳ್ಳಲಿ ಎಂಬುದೇ ಈತನ ಇಂಗಿತ ಎಂದು ಮನದಟ್ಟಾಯಿತು.  ಕಂಡವರ ಮಕ್ಕಳನ್ನು ಬಾವಿಗೆ ನೂಕಿ ಆಳ ನೋಡುವ ಈ ಮನುಷ್ಯನ ನೀಚಬುದ್ಧಿ ನನಗೆ ಪರಿಚಯವಿಲ್ಲದೇ ಇಲ್ಲ.  ಮುಂದೇನು ನಡೆಯಬಹುದೆಂದು ಸುಮ್ಮನೆ ನೋಡುತ್ತಾ ಕುಳಿತೆ.  ಆದರೆ ಐದು ಹತ್ತು ನಿಮಿಷಗಳವರೆಗೆ ಅಲ್ಲಿ ಇಲ್ಲಿ ಎಡತಾಕಿದ ಚರ್ಚೆ ಕೊನೆಗೆ ನನ್ನ ಕಾಲಿಗೇ ಸುತ್ತಿಕೊಳ್ಳತೊಡಗಿತು.  "ಅವನಿಗೆ ನಿಮ್ಮ ಜತೆ ಸಲಿಗೆ ಜಾಸ್ತಿ, ನೀವು ಹೇಳಿದರೆ ಕೇಳುತ್ತಾನೆ" ಎಂದು ಡಾ ಮಾಧವನ್ ಹೇಳಿದ ಮಾತನ್ನು ಎಲ್ಲರೂ ಅನುಮೋದಿಸಿಬಿಟ್ಟರು.  ಅದಕ್ಕೇ ಕಾದಿದ್ದವರಂತೆ ಪ್ರೊ ಸೆಂಗೋಟ್ಟೈ ಪಟ್ಟಾಗಿ ಹಿಡಿದುಬಿಟ್ಟರು.  ಇದು ನಿಮ್ಮಿಂದ ಮಾತ್ರ ಸಾಧ್ಯ ಎನ್ನುವ ಅರ್ಥದಲ್ಲಿ ಏನೇನೋ ಹೇಳತೊಡಗಿದರು.
ನಾಗಲಿಂಗಂಗೆ ನನ್ನ ಜತೆ ಸಲಿಗೆ ನಿಜ.  ವಯಸ್ಸಿನಲ್ಲಿ ಉಳಿದ ಅಧ್ಯಾಪಕರಿಗಿಂತ ಚಿಕ್ಕವನಾದ ನನ್ನ ಜತೆ ಸರಿಸುಮಾರು ನನ್ನದೇ ವಯಸ್ಸಿನ ಅವನು ನಗುತ್ತಾ ಮಾತಾಡುತ್ತಾನೆ.  ನನ್ನ ಮುಜುಗರವನ್ನು ಅಲಕ್ಷಿಸಿ ಪೋಲಿ ಜೋಕ್ಸ್ ಸಹಾ ಹೇಳುತ್ತಾನೆ.  ಆಗೀಗ ನನ್ನಿಂದ ಐವತ್ತೋ ನೂರೂ ಸಾಲ ಪಡೆಯುವುದೂ ಉಂಟು.  ಹೀಗಿದ್ದರೂ ಅವನ ಸಂಸಾರದ ವಿಷಯದಲ್ಲಿ ಅವನಿಗೆ ಬುದ್ಧಿಮಾತು ಹೇಳುವಂಥ ಜವಾಬ್ಧಾರಿಯನ್ನು ಮೈಮೇಲೆ ಹಾಕಿಕೊಳ್ಳಲು ನಾನು ತಯಾರಿರಲಿಲ್ಲ.  "ನೀವಾದರೇ ಸರಿ, ನಿಮ್ಮ ಸ್ಥಾನಕ್ಕೆ ಬೆಲೆ ಕೊಟ್ಟು ನಿಮ್ಮ ಮಾತು ಕೇಳುತ್ತಾನೆ" ಎಂದು ಹೆಚ್‌ಓಡಿಯವರತ್ತಲೇ ಮಾತು ತಿರುಗಿಸಿದೆ.  "ನೀವಾದರೂ ನಡೆಯುತ್ತೆ.  ನೀವು ನಮ್ಮೆಲ್ಲರಿಗಿಂತಲೂ ಹಿರಿಯರು, ನಿಮ್ಮ ಮಾತನ್ನಂತೂ ಅವನು ತಳ್ಳಿಹಾಕೋದಿಲ್ಲ" ಎಂದು ಪಕ್ಕದಲ್ಲಿದ್ದ ಪ್ರೊ ಜೋಗಾ ಶಾಸ್ತ್ರಿಯವರಿಗೆ ಪೂಸಿ ಹೊಡೆಯಲು ನೋಡಿದೆ.  ಅದ್ಯಾವುದೂ ನಡೆಯಲಿಲ್ಲ.  ಎಲ್ಲರೂ ಸೇರಿ ಜವಾಬ್ಧಾರಿಯನ್ನು ನನ್ನ ತಲೆಗೇ ಕಟ್ಟಿಬಿಟ್ಟರು.  ಪ್ರೊ ಸೆಂಗೋಟ್ಟೈ ನನ್ನ ಬೆನ್ನು ತಟ್ಟುತ್ತಾ "ನೀವು ಒಮ್ಮೆ ಪ್ರಯತ್ನ ಪಡಿ ಇವರೇ.  ಅವನು ಕೇಳ್ಲಿಲ್ಲಾ ಅಂದ್ರೆ ನಾವು ಕೈಹಾಕೋದು ಇದ್ದೇ ಇದೆ" ಎಂದು ಮಾತು ಮುಗಿಸಿ ನೆಮ್ಮದಿಯಲ್ಲಿ ಉಸಿರಾಡಿ ಅಲ್ಲಿಗೆ ಮೀಟಿಂಗನ್ನು ಬರಖಾಸ್ತುಗೊಳಿಸಿಬಿಟ್ಟಿದ್ದರು.
ಬೆಳಿಗ್ಗೆ ಎರಡು ಗಂಟೆಗಳ ಪಾಠದ ನಂತರ ನನಗೆ ದಿನಪೂರ್ತಿ ಬಿಡುವಿತ್ತು.  ನಾಗಲಿಂಗಂ ಏನೋ ಒಂದೆರಡು ನೋಟೀಸುಗಳನ್ನು ತಂದವನು ಮಾಮೂಲಿನಂತೆ ಸಲಿಗೆಯಿಂದ ಮಾತಾಡಿ ನನ್ನ ಸಹಿ ಹಾಕಿಸಿಕೊಂಡು ಹೋದ.  ಅವನು ಅತ್ತ ಹೋದದ್ದೇ ಪ್ರೊ ಜೋಗಾ ಶಾಸ್ತ್ರಿ ಬಾಗಿಲಲ್ಲಿ ಹಣಕಿ "ಮಾತಾಡಿದ್ರಾ?" ಅಂದರು.  ಸುಮ್ಮನೆ ಹಲ್ಲುಬಿಟ್ಟೆ.  ಕೋಣೆಯಲ್ಲಿ ಕೂರಲು ಮನಸ್ಸಾಗದೇ ಎದ್ದು ಕ್ಯಾಂಟೀನಿನತ್ತ ನಡೆದೆ.  ಹನ್ನೆರಡೂವರೆಗೇ ಊಟ ಮಾಡಿ ಲೈಬ್ರರಿಯತ್ತ ನಡೆದೆ.  ಯಾವ ಪುಸ್ತಕ ಎತ್ತಿಕೊಂಡರೂ ನಾಗಲಿಂಗಂ ಮತ್ತು ಪ್ರೊ ಸೆಂಗೋಟ್ಟೈ ಅವರ ಮುಖಗಳೇ ಕಾಣತೊಡಗಿದವು.  ಬೇಜಾರಾಯಿತು.  ಎದ್ದು ವೇಗವಾಗಿ ಕಾಲು ಹಾಕಿ ಕಂಪ್ಯೂಟರ್ ಸೆಂಟರಿಗೆ ನುಗ್ಗಿದೆ.  ಮೂರು ನಾಲ್ಕು ದಿನಗಳಿಂದ ಇ ಮೇಲ್ ನೋಡಿಯೇ ಇರಲಿಲ್ಲ.  ಬಂದಿದ್ದ ಹತ್ತಾರು ಮೇಲ್‌ಗಳನ್ನು ಓದಿ ಉತ್ತರಿಸಿದಾಗ ಏನೋ ಸಾಧಿಸಿದಂತೆ ನೆಮ್ಮದಿಯಾಯಿತು.
ಮೂರೂವರೆಗೆ ನನ್ನ ಕೋಣೆಗೆ ಹಿಂತಿರುಗುತ್ತಿದ್ದಂತೇ ಇಂಟರ್‌ಕಾಂ ಹೊಡೆದುಕೊಳ್ಳತೊಡಗಿತು.  ಎತ್ತಿದರೆ ಪ್ರೊ ಸೆಂಗೋಟ್ಟೈ.  "ನಾಗಲಿಂಗಂ ಸಿಕ್ಕಿದ್ನಾ?" ಅಂದರು.  "ಇಲ್ಲ.  ಇತ್ತ ಕಡೆ ಬರ‍್ಲೇ ಇಲ್ಲ" ಅಂದೆ.  ಮಾತಿಲ್ಲದೇ ಫೋನಿಟ್ಟರು.  ಎರಡು ನಿಮಿಷದಲ್ಲಿ ಬಾಗಿಲು ನೂಕಿಕೊಂಡು ನಾಗಲಿಂಗಂ ಒಳಬಂದ.  "ನಿಮಗೆ ಅರ್ಜೆಂಟಾಗಿ ಕೊಡೋದಿಕ್ಕೆ ಹೆಚ್‌ಓಡಿ ಹೇಳಿದ್ರು" ಎನ್ನುತ್ತಾ ಹಳೆಯ ಜರ್ನಲ್ ಒಂದನ್ನು ನನ್ನ ಮುಂದಿಟ್ಟ.  ಈ ಪ್ರೊ ಸೆಂಗೋಟ್ಟೈ ಎಂಥ ಪಾಕಡಾ ಎನ್ನುವುದು ನನಗೆ ಹಲಬಾರಿ ಅನುಭವಕ್ಕೆ ಬಂದಿದೆ.
ವರ್ಷದ ಹಿಂದೆಯೇ ನಾನು ಓದಿ ಬಿಸಾಡಿದ್ದ ಆ ಜರ್ನಲ್ ಅನ್ನು ಅತ್ತ ಒಗೆದು ಕೂತುಕೋ ಅಂದೆ.  ಆರಾಮವಾಗಿ ಛೇರ್ ಎಳೆದುಕೊಂಡು ಕೂತ.  "ಯಾಕ್ ಸಾರ್ ಒಂಥರಾ ಇದೀರಿ?" ಅಂದ.  "ಡೆಲ್ಲಿಯಿಂದ ಫೋನ್ ಬಂತಾಎಲ್ಲಾ ಆರಾಮ ತಾನೆ?" ಎಂದು ವಿಚಾರಿಸಿಕೊಂಡ.
"ಹ್ಞೂ, ಆರಾಮ.  ನಿಮ್ಮ ಮನೇಲಿ ಹೇಗೆ?" ಅಂದೆ.
"ನಮ್ಮನೇಲಾಫಸ್ಟ್ ಕ್ಲಾಸ್!  ಎಲ್ಲಾ ನಿಮ್ಮ ದಯ" ಅಂದ.  ಕಸಿವಿಸಿಯಾಯಿತು.  ಕರ್ಚೀಫ್‌ನಿಂದ ಮುಖಕ್ಕೆ ಗಾಳಿ ಹಾಕಿಕೊಂಡೆ.
"ಭಾಳಾ ಸೆಖೆ ಸಾರ್.  ಹಾಳು ಮಳೆ, ಕಳ್ಳ ನನ್ಮಗಂದು ಸೆಪ್ಟೆಂಬರ್ ದಾಟಿದ್ರೂ ಪತ್ತೇನೇ ಇಲ್ಲ" ಎನ್ನುತ್ತಾ ಟೇಬಲ್ ಮೇಲಿದ್ದ ಪುಸ್ತಕವೊಂದನ್ನೆತ್ತಿ ತಾನೂ ಗಾಳಿ ಹಾಕಿಕೊಂಡ.  "ಅಲ್ಲಾ ಸಾರ್, ಮಳೆ ಬೇರೆ ಇಲ್ಲ.  ಇಂಥಾದ್ರಲ್ಲಿ ನಮ್ಮ ತಮಿಳುನಾಡಿಗೆ ಕಾವೇರಿ ನೀರು ಬಿಡೋದೇ ಇಲ್ಲ ಅಂತ ನಿಮ್ಮ ಛೀಫ್ ಮಿನಿಸ್ಟರ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರಂತಲ್ಲ!  ಈಗ ತಾನೆ ಪೇಪರ್‌ನಲ್ಲಿ ನೋಡ್ದೆ" ಎನ್ನುತ್ತಾ ಒಂದು ಲೋಕಲ್ ಹಳದೀ ಪತ್ರಿಕೆಯ ಹೆಸರು ಹೇಳಿದ.  ಮುಖ ಮುಂದೆ ತಂದು "ಅನ್ಯಾಯ ಸಾರ್ ಇದು" ಅಂದ.
ಕಾವೇರಿ ನೀರಿನ ವಿಷಯದಲ್ಲಿ ನಾನು ಇಕ್ಕಟ್ಟಿಗೆ ಸಿಕ್ಕಿಬೀಳುವಂಥ ಪ್ರಸಂಗಗಳು ಆಗಾಗ ಸೃಷ್ಟಿಯಾಗುವುದು ನಾನು ಪಾಂಡಿಚೆರಿಗೆ ಬಂದಾಗಿನಿಂದಲೂ ನಡೆದೇ ಇದೆ.  ಈ ರಾಜಕಾರಣಿಗಳು ಹಾಗೂ ಹಳದೀ ಪತ್ರಿಕೆಗಳಿಂದಾಗಿ ನಾನು ಆಗಾಗ ಪೇಚಿಗೆ ಸಿಕ್ಕಿಬೀಳುತ್ತೇನೆ.  ಒಂದೆರಡು ಕಹಿ ಅನುಭವಗಳು ಬೇಡಬೇಡವೆಂದರೂ ಮತ್ತೆ ಮತ್ತೆ ನೆನಪಿಗೆ ಬರುತ್ತವೆ.  ೧೯೯೧ರ ಕಾವೇರಿ ಗಲಾಟೆಯ ಸಂದರ್ಭದಲ್ಲಿ ಬಂಗಾರಪ್ಪ ಸರಕಾರ ಹಿಂದೆಮುಂದೆ ನೋಡದೇ ಸಂವಿಧಾನವನ್ನು ಧಿಕ್ಕರಿಸುವ ಮಾತಾಡಿ, ಅದೂ ಸಾಲದೆಂಬಂತೆ ವಿವೇಕಿಗಳಾರೂ ಮಾಡದಂತಹ "ಕಾವೇರಿ ಕಣಿವೆ ಪ್ರಾಧಿಕಾರ" ಅಂತಲೋ ಎನನ್ನೋ ಹುಟ್ಟುಹಾಕಿ, ಸುಪ್ರೀಂ ಕೋರ್ಟ್ ಅದನ್ನು ಸಂವಿಧಾನಬಾಹಿರವೆಂದು ರದ್ದುಪಡಿಸಿ ಛೀಮಾರಿ ಹಾಕಿದ ಪ್ರಹಸನ ನಡೆದಾಗ ನಾನು ಅತೀವ ಅವಮಾನಕ್ಕೆ ಗುರಿಯಾಗಿದ್ದೆ.   ನನ್ನ ತಮಿಳು ಗೆಳೆಯರಿಗಂತೂ ಹಬ್ಬ.  ಅವಕಾಶ ಸಿಕ್ಕಿದಾಗಲೆಲ್ಲಾ ಚುಚ್ಚತೊಡಗಿದರು.  "ಇದೇನಿದುನಿಮ್ಮ ರಾಜ್ಯದವರಿಗೆ ರಾಷ್ಟ್ರದ ಏಕತೆ, ಭಾವೈಕ್ಯತೆಯ ಬಗ್ಗೆ ಗೌರವವೇ ಇಲ್ಲವಲ್ಲ!" ಎಂದೆಲ್ಲಾ ಹಂಗಿಸಿದರು.  ಕೊನೆಗೆ ನಾನು ಬೇಸತ್ತು "ಸಾಕು ಸುಮ್ಮನಿರ್ರೀ, ನಿಮ್ಮ ಬಂಡವಾಳ ನನಗೂ ಗೊತ್ತು.  ಸ್ವಾತಂತ್ರಪೂರ್ವದಲ್ಲೇ ಪ್ರತ್ಯೇಕ ದ್ರಾವಿಡಸ್ಥಾನದ ಬೇಡಿಕೆ ಎತ್ತಿದ ನಿಮ್ಮಿಂದ ನಾವು ರಾಷ್ಟ್ರೀಯ ಏಕತೆಯ ಪಾಠ ಕಲಿಯಬೇಕಾಗಿಲ್ಲ" ಎಂದೆಲ್ಲಾ ಕೂಗಾಡಿದೆ.  ಆಮೇಲೆ ತೀರಾ ಇತ್ತೀಚೆಗೆ ಎಸ್ ಎಂ ಕೃಷ್ಣ ಅವರು ನೀರು ಬಿಡುವುದಿಲ್ಲ ಬಿಡುವುದಿಲ್ಲ ಬಿಡುವುದಿಲ್ಲಾ ಅನ್ನುತ್ತಲೇ ನೀರು ಬಿಟ್ಟು ನನ್ನನ್ನು ಮತ್ತೊಮ್ಮೆ ನಗೆಪಾಟಲಿಗೀಡುಮಾಡಿದರು.  ಆಗ ಕೀಟಲೆಗಳಿಂದ ತಪ್ಪಿಸಿಕೊಳ್ಳಲು ನಾನು ಯೂನಿವರ್ಸಿಟಿ ಬಸ್ಸಿನಲ್ಲಿ ಪ್ರಯಾಣ ಮಾಡುವುದನ್ನೇ ಕೆಲಕಾಲ ಬಿಟ್ಟುಬಿಟ್ಟಿದ್ದೆ!  ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನಾನು ತಮಿಳುನೆಲದಲ್ಲಿ ವೀರಕನ್ನಡಿಗನಾಗಿ ತಲೆಯೆತ್ತಿ ನಡೆದದ್ದು ಒಂದೇ ಒಂದು ಸಲ.  ೧೯೯೫ರಲ್ಲಿ ಒಮ್ಮೆ ತನ್ನ ಭತ್ತದ ಗದ್ದೆಗಳಿಗೆ ನೀರಿಲ್ಲಾ ಎಂದು ತಮಿಳುನಾಡು ಕಾವೇರಿ ಟ್ರಿಬ್ಯೂನಲ್ ಮುಂದೆ ಸುಳ್ಳುಸುಳ್ಳೇ ಅತ್ತಾಗ ನಿಜವನ್ನು ಅರಿಯಲು ವೈ ಕೆ ಅಲಘ್ ಸಮಿತಿ ತಂಜಾವೂರಿಗೆ ಹೋಯಿತು.  ಅಲ್ಲಲ್ಲಿ ಬಾಡಿದ್ದ ಬತ್ತದ ಗದ್ದೆಗಳನ್ನು ತೋರಿಸಿ ತಮಿಳುನಾಡು ಸಮಿತಿಯನ್ನು ಅಡ್ಡದಾರಿಗೆಳೆಯುವ ಕುತಂತ್ರ ತೋರಿತು.  ಆಗ ಮುಖ್ಯಮಂತ್ರಿ ದೇವೇಗೌಡರು ನೀರಾವರಿ ಇಲಾಖೆಯ ಇಂಜಿನೀಯರುಗಳನ್ನು ಗುಟ್ಟಾಗಿ ತಂಜಾವೂರಿಗೆ ಕಳಿಸಿದರು.  ಅವರೆಲ್ಲಾ ಅಯ್ಯಪ್ಪನ ಭಕ್ತರಂತೆ ವೇಷ ಧರಿಸಿ ತಮಿಳುನಾಡು ಎಲ್ಲೆಲ್ಲಿ ನೀರಿಲ್ಲ ಎಂದು ಗೋಳಿಡುತ್ತಿತ್ತೋ ಅಲ್ಲೆಲ್ಲಾ ಹೋಗಿ ಅಲ್ಲಿ ಸಾಕಷ್ಟು ನೀರಿರುವುದನ್ನು ಪತ್ತೆ ಹಚ್ಚಿದರು.  ಅಷ್ಟೇ ಅಲ್ಲ, ಬತ್ತದ ಸಸಿಗಳು ಸೊಂಪಾಗಿ ನಳನಳಿಸುತ್ತಿರುವ ದೃಶ್ಯವನ್ನು ಫೋಟೋ ತೆಗೆದುಕೊಂಡು ಬಂದು ಗೌಡರ ಕೈಗಿತ್ತರು.  ಕರ್ನಾಟಕ ಸರಕಾರ ಅವನ್ನು ಟ್ರಿಬ್ಯೂನಲ್ ಮುಂದಿಟ್ಟಾಗ ಮುಖ್ಯಮಂತ್ರಿ ಜಯಲಲಿತಮ್ಮನಿಂದ ಹಿಡಿದು ನನ್ನ ತಮಿಳು ಗೆಳೆಯರವರೆಗೆ ಎಲ್ಲರೂ ಗಪ್‌ಚಿಪ್!  ಏನು ಮಾಡಿದರೂ ಕಾವೇರಿ ಸುದ್ದಿ ಎತ್ತಲೇ ಒಲ್ಲರು!  ನನಗಾಗ ಅದೆಷ್ಟು ನೆಮ್ಮದಿಯೆನಿಸಿತ್ತು!
ಈಗ ಈ ಖದೀಮ ಇದ್ದಕ್ಕಿದ್ದಂತೆ ಆ ವಿಷಯವನ್ನೆತ್ತಿ ನನ್ನನ್ನು ತಬ್ಬಿಬ್ಬುಗೊಳಿಸಿದ್ದ.  ತನ್ನ ಅನೈತಿಕ ವ್ಯವಹಾರದ ಬಗ್ಗೆ ನಾನು ಪ್ರಶ್ನಿಸಹೊರಟಿರುವುದರ ಸುಳಿವೇನಾದರೂ ಇವನಿಗೆ ಸಿಕ್ಕಿಹೋಗಿದೆಯೇನನ್ನನ್ನು ನಿರ್ವೀರ್ಯಗೊಳಿಸಲು ಅವನು ಹೂಡಿದ ತಂತ್ರವೇ ಈ ಕಾವೇರಿ ಸುದ್ಧಿ?
"ಹಂಗೇನೂ ಇಲ್ಲ.  ಛೀಫ್ ಮಿನಿಸ್ಟರ್ ಯಾವ ಸ್ಟೇಟ್‌ಮೆಂಟೂ ಕೊಟ್ಟಿಲ್ಲ.  ಮಳೆಯಾಗಿ ಕನ್ನಂಬಾಡೀನಲ್ಲಿ ನೀರು ಸೇರಿದ್ರೆ ಅವ್ರು ತಾವಾಗೇ ನೀರು ಬಿಡ್ತಾರೆ.  ತುಂಬಿಟ್ಕೊಂಡು ಏನು ಮಾಡ್ತಾರೆಈ ಲೋಕಲ್ ಯೆಲ್ಲೋ ಜರ್ನಲ್‌ಗಳನ್ನ ನಂಬಬೇಡಿ ನಾಗಲಿಂಗಂ."  ವಿಷಯವನ್ನು ತೇಲಿಸಲು ಪ್ರಯತ್ನಿಸಿದೆ.  ನಿನ್ನೆಯಾಗಲೀ, ಇಂದಾಗಲೀ ಯಾವುದೇ ರಾಷ್ಟ್ರೀಯ ಪತ್ರಿಕೆ ಅಥವಾ ನಂಬಲರ್ಹ ನ್ಯೂಸ್ ಚಾನಲ್‌ಗಳ್ಯಾವುದರಲ್ಲೂ ಈ ಸುದ್ಧಿ ಕೇಳಿರದಿದ್ದ ನನ್ನ ದನಿಯಲ್ಲಿ ನನಗೇ ಅರಿವಿಲ್ಲದಂತೆ ನಿಖರತೆ ಇಣುಕಿತ್ತು.
ಅವನು ಆ ವಿಷಯ ಬಿಟ್ಟ.  ದೆಹಲಿ, ಅಹಮದಾಬಾದ್‌ಗಳಲ್ಲಿನ ಬಾಂಬ್ ಸ್ಪೋಟಗಳ ಬಗ್ಗೆ ಮಾತು ತೆಗೆದ.  ನನಗೇ ಅಚ್ಚರಿಯಾಗುವಂತೆ ದೆಹಲಿಯಲ್ಲಿರುವ ನನ್ನ ಹೆಂಡತಿ ಮತ್ತು ಮಗನ ಬಗ್ಗೆ ಕಾಳಜಿ ತೋರಿದ.  ಮಾರ್ಕೆಟ್ಟು ಗೀರ್ಕೆಟ್ಟು ಅಂತ ಜನ ಸೇರೋ ಕಡೆ, ಅದೂ ಸಾಯಂಕಾಲದ ಹೊತ್ನಲ್ಲಿ ಹೋಗ್ಬೇಡಿ ಅಂತ ಮೇಡಂಗೂ ನಿಮ್ಮಗಂಗೂ ಹೇಳಿ ಸಾರ್ ಅಂದ.  ಶನಿವಾರಗಳಲ್ಲಂತೂ ಅಂಥಾ ಕಡೆ ಕಾಲಿಡಲೇಬೇಡಿ ಅಂತ ಹೇಳಿ ಅಂತಲೂ ಸೇರಿಸಿದ.  ತಲೆಯಾಡಿಸಿದೆ.  "ಈ ಟೆರರಿಸ್ಟ್ ನನ್ ಮಕ್ಳು ಶನಿವಾರಾನೇ ಅಟ್ಯಾಕ್ ಮಾಡೋದಿಕ್ಕೆ ಶುರು ಮಾಡಿಕೊಂಡ್ಬಿಟ್ಟಿದ್ದಾರೆ ನೋಡಿ ಎಂದು ಲೊಚಗುಟ್ಟಿದ.  ಅದಕ್ಕೂ ತಲೆಯಾಡಿಸಿದೆ.  "ಯಾಕ್ ಸಾರ್, ಮಾತೇ ಆಡ್ತಿಲ್ಲಬೆಳಗಿನಿಂದ್ಲೂ ಗಮನಿಸ್ತಾನೇ ಇದೀನಿ, ನೀವು ಏನೋ ಭಾರೀ ಯೋಚನೇಲಿರೋಹಾಗಿದೆ" ಅಂದ.  ಇನ್ನು ಮುಂದೂಡುವುದರಲ್ಲಿ ಏನೂ ಅರ್ಥವಿಲ್ಲ ಎನಿಸಿತು.
"ನಿಮ್ಮ ಬಗ್ಗೆ ಒಂದು ಮಾತು ಕೇಳಿದೆ" ಅಂತ ಶುರು ಮಾಡಿದೆ.  ನನ್ನನ್ನೇ ನೇರವಾಗಿ ನೋಡಿದ.  ಕಣ್ಣುಗಳು ಸಂಕುಚಿತಗೊಂಡವು.  "ನಿಮ್ಮದೇನೋ ಅಫೇರ್ ಬಗ್ಗೆ ಯಾರೋ ಮಾತಾಡ್ತಿದ್ರು.  ಮನೇಲಿ ಹೆಂಡ್ತೀನ ಟಾರ್ಚರ್ ಮಾಡ್ತಿದೀರಿ ಅಂತ ಪುಕಾರು ಎದ್ದಿದೆ" ಅಂದೆ.  ಅವನು ಪ್ರತಿಕ್ರಿಯಿಸಲಿಲ್ಲ.  ಹಿಂದಕ್ಕೆ ಒರಗಿ ಕುಳಿತು ನನ್ನನ್ನೇ ನೇರವಾಗಿ ನೋಡುತ್ತಿದ್ದ.  ಅವನು ನಿರಾಕರಿಸುತ್ತಿದ್ದಾನೆ ಅಂದುಕೊಂಡಿದ್ದೆಲ್ಲಾ ಸುಳ್ಳಾಯಿತು.  ಉತ್ಸಾಹದಿಂದ ಮುಂದುವರೆಸಿದೆ: "ಇದೆಲ್ಲಾ ಒಳ್ಳೇದಲ್ಲಾ ನೋಡಿ.  ನೀವೂ ಎಜುಕೇಟೆಡ್.  ಕೆಲ್ಸ ಸಣ್ಣದಾದ್ರೂ ಪರವಾಗಿಲ್ಲ, ಇರೋದು ಸೆಂಟ್ರಲ್ ಯೂನಿವರ್ಸಿಟೀಲಿ.  ಯು ಆರ್ ಎ ಸೆಂಟ್ರಲ್ ಗವರ್ನ್‌ಮೆಂಟ್ ಎಂಪ್ಲಾಯೀ.  ನೀವು ಹೀಗೆಲ್ಲಾ ಮಾಡಬಾರ್ದು.  ಹೊರಸಂಬಂಧವನ್ನ ದೂರ ಇಟ್ಟು ಮನೇಲಿ ಹೆಂಡ್ತಿ ಜೊತೆ ನೆಮ್ಮದಿಯಾಗಿರೋದು ವಿವೇಕಿಗಳ ಲಕ್ಷಣ.  ಒಂದ್ವೇಳೆ ನಿಮ್ ಹೆಂಡ್ತಿ ಪೋಲೀಸ್ ಸ್ಟೇಷನ್‌ನಲ್ಲೇನಾದ್ರೂ ಕಂಪ್ಲೇಂಟ್ ಕೊಟ್ಟುಬಿಟ್ರೆ ಏನಾಗಬೋದು ಯೋಚಿಸಿ.  ಡೊಮೆಸ್ಟಿಕ್ ವಯೊಲೆನ್ಸ್ ಬಗ್ಗೆ ಕಾನೂನೇ ಇದೆ, ನಿಮಗೆ ಗೊತ್ತಿರಬೇಕಲ್ಲ..." ಎಂದೇನೋ ಹೇಳುತ್ತಿದ್ದಂತೇ ಅವನು ನೆಟ್ಟಗೆ ಕೂತ.  ಒಮ್ಮೆ ಕೆಳತುಟಿ ಕಚ್ಚಿಕೊಂಡ.  ನನ್ನ ಮಾತು ನಾಟಿದೆ ಅಂದುಕೊಂಡೆ.  "ನಿಮ್ ಒಳ್ಳೇದಕ್ಕೇ ಹೇಳ್ತಿದೀನಿ..." ಎಂದು ನಾನು ಮತ್ತೆ ಬಾಯಿ ತೆರೆಯುತ್ತಿದ್ದಂತೇ ಅವನು ನಿಧಾನವಾಗಿ ಎದ್ದು ನಿಂತ.  "ಸ್ವಲ್ಪ ಬನ್ನಿ ಸಾರ್" ಎನ್ನುತ್ತಾ ನನ್ನ ಕೈ ಹಿಡಿದ.  ನಾನು ಗೊಂದಲಕ್ಕೆ ಬಿದ್ದೆ.  "ಎಲ್ಲಿಗೆ?" ಅಂದೆ.  "ಇಲ್ಲೇ ನಾಕು ಹೆಜ್ಜೆ" ಎನ್ನುತ್ತಾ ತಾನೇ ಬಾಗಿಲು ತೆರೆದ.  ನನ್ನನ್ನು ಛೂ ಬಿಟ್ಟಿರುವುದು ಹೆಚ್‌ಓಡಿ ಎಂದು ಇವನಿಗೆ ಗೊತ್ತಾಗಿಹೋಗಿರಬೇಕು, ನನ್ನನ್ನು ಮುಂದಿಟ್ಟುಕೊಂಡು ಅವರ ಮುಖದ ನೀರಿಳಿಸಲು ಹೊರಟಿದ್ದಾನೆ ಅನಿಸಿತು.  ಹಿಂದಿನ ಒಂದೆರಡು ಪ್ರಸಂಗಗಳು ಥಟ್ಟನೆ ನೆನಪಿಗೆ ಬಂದವು.  ಇವನು ಲೋಕಲ್, ಇಲ್ಲೇ ಪಕ್ಕದ ಹಳ್ಳಿಯವನು.  ಇವನಂತೇ ಸಾಕಷ್ಟು ಜನ ಈ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುವ ಗ್ರೂಪ್ ಸಿ, ಗ್ರೂಪ್ ಡಿ ಸ್ಟ್ಯಾಫ್ ಸುತ್ತುಮುತ್ತಲ ಹಳ್ಳಿಯವರು.  ಎಲ್ಲರಲ್ಲೂ ಒಗ್ಗಟ್ಟು.  ಯೂನಿವರ್ಸಿಟಿ ಇರೋದು ನಮ್ಮೂರಲ್ಲಿ.  ಇದು ನಮ್ಮದು ಅಂತ ಘಂಟಾಘೋಷವಾಗಿಯೇ ಹೇಳುತ್ತಾರೆ.  ನಾವು ಹೊರಗಿನವರೇನಾದರೂ ಇವರಲ್ಲೊಬ್ಬನನ್ನು ಏನಾದರೂ ಅಂದರೆ ಮುಗಿಯಿತು.  ಎಲ್ಲರೂ ಒಟ್ಟಾಗಿ ದಾಳಿಯಿಟ್ಟುಬಿಡುತ್ತಾರೆ.  ಯಾವುದೋ ಕ್ಷುಲ್ಲಕ ವಿಷಯದ ಬಗ್ಗೆ ಕಾಮರ್ಸ್ ಡಿಪಾರ್ಟ್‌ಮೆಂಟಿನ ಹೆಚ್‌ಓಡಿ ಛೇಂಬರ್‌ಗೆ ಐವತ್ತು ಅರವತ್ತು ಜನ ನುಗ್ಗಿ ಸುತ್ತುಗಟ್ಟಿದ್ದು ನಡೆದು ಎರಡು ತಿಂಗಳು ಕಳೆದಿಲ್ಲ.
ಇದ್ಯಾಕೋ ವಿಪರೀತಕ್ಕೆ ಹೋಗುತ್ತಿದೆ ಎನಿಸಿತು.  "ನಿಮ್ಮ ಪರ್ಸನಲ್ ವಿಷಯದ ಬಗ್ಗೆ ನಾನು ತಲೆ ಹಾಕ್ತಿದೀನಿ ಅಂತ ತಿಳೀಬೇಡಿ.  ನಿಮ್ಮ ಒಳ್ಳೇದಕ್ಕೇ ನಾನು ಹೇಳಿದ್ದು" ಅಂದೆ ಸಣ್ಣಗೆ.  ಅವನು ಸದ್ದಿಲ್ಲದೇ ನಕ್ಕ.  "ನೀವು ಕಲಿತವರು, ಹೇಳಬೇಕಾದದ್ದೇ."  ನನ್ನ ಕೈ ಹಿಡಿದು ನಡೆಯುತ್ತಲೇ ಹೇಳಿದ.  ನನಗೆ ಮತ್ತೂ ಗೊಂದಲ.   ಅವನು ಹೆಚ್‌ಓಡಿಯವರ ಛೇಂಬರ್ ದಾರಿ ಬಿಟ್ಟು ಮತ್ತೊಂದು ಕಡೆ ತಿರುಗಿದಾಗ ಅಚ್ಚರಿಯಾಯಿತು.  ಕುತೂಹಲದಿಂದ ಹಿಂಬಾಲಿಸಿದೆ.  ಅವನು ನನ್ನ ಕೈ ಹಿಡಿದಂತೇ ತೆರೆದೇ ಇದ್ದ ಕ್ಲಾಸ್‌ರೂಮಿನೊಳಗೆ ನುಗ್ಗಿದ.  ಕಚಪಚ ಮಾತಾಡಿಕೊಂಡು ಕಿಲಿಕಿಲಿ ನಗುತ್ತಾ ತಮ್ಮ ಪಾಡಿಗೆ ತಾವಿದ್ದ ಮೂರುನಾಲ್ಕು ಹುಡುಗಿಯರು ಧಡಕ್ಕನೆ ಎದ್ದು ನಿಂತರು.  ಅವರತ್ತ ಯಾವ ಗಮನವನ್ನೂ ಕೊಡದೇ ಇವನು ನನ್ನ ಕೈ ಅಲುಗಿಸಿ ಹೇಳಿದ: "ನೀವು ಲೆಕ್ಚರ್ ಕೊಡಬೇಕಾದ್ದು ಇಲ್ಲಿ."  ಮಾತು ಮುಗಿಸಿ ಹಿಂತಿರುಗಿ ನೋಡದೆ ಹೊರನಡೆದ.
ನಾನು ದಂಗಾಗಿಹೋದೆ.

*     *     *

ನಡೆದದ್ದನ್ನು ಯಾರಿಗೂ ಹೇಳಲಿಲ್ಲ.  ಹೇಳಿಕೊಳ್ಳಲಾಗಲಿಲ್ಲ ಎನ್ನುವುದೇ ಸರಿ.  ತನ್ನ ಖಾಸಗೀ ವಿಷಯಕ್ಕೆ ಯಾರು ತಲೆ ಹಾಕಿದರೂ ತಾನದನ್ನು ಸಹಿಸುವುದಿಲ್ಲ ಎಂಬುದನ್ನು ನಾಗಲಿಂಗಂ ತೋರಿಸಿಕೊಂಡ ಬಗೆಯನ್ನು ಹೇಗೆ ಹೇಳಬೇಕು, ಹೇಳಿಕೊಳ್ಳಬೇಕು ಎನ್ನುವುದೇ ತೋಚಲಿಲ್ಲ.  ನಾನು ಅಧ್ಯಾಪಕ, ಅವನು ಜವಾನ; ನನ್ನಲ್ಲಿ ಅವನಿಗೆ ವಿಶ್ವಾಸವಿದೆ, ನನ್ನ ಮಾತನ್ನವನು ಕೇಳುತ್ತಾನೆ ಎಂದೆಲ್ಲಾ ಮನದಲ್ಲಿ ತುಂಬಿದ್ದ ಒಂಥರಾ ಹಮ್ಮು ಹೇಳಹೆಸರಿಲ್ಲದೇ ಕರಗಿಹೋದದ್ದನ್ನು ಯಾವ ಪದಗಳಲ್ಲಿ ಹಿಡಿದಿಡಬೇಕೆಂದು ತಿಳಿಯದೇ ಕಂಗೆಟ್ಟುಹೋದೆ.  ಯೂನಿವರ್ಸಿಟಿಯಲ್ಲಿ ಒಂದು ಕ್ಷಣವೂ ಇರಲಾಗದೇ ಮನೆಗೆ ಬಂದುಬಿಟ್ಟೆ.  ಬಟ್ಟೆಯನ್ನೂ ಬದಲಿಸದೇ ಹಾಸಿಗೆಯಲ್ಲಿ ಬಿದ್ದುಕೊಂಡೆ.
ಮಾರನೆಯ ದಿನ ಡಿಪಾರ್ಟ್‌ಮೆಂಟಿಗೆ ಕಾಲಿಡುತ್ತಿದ್ದಂತೇ ಎದುರಾದ ಪ್ರೊ ಮಾಧವನ್ ಸಣ್ಣಗೆ "ಸಾರೀ" ಅಂದರು.  ಪೆಚ್ಚುನಗೆ ಹೊರಹಾಕಿ ನಾಲಿಗೆ ಕಚ್ಚಿಕೊಂಡೆ.  "ಅವನು ಅಯೋಗ್ಯ.  ಎಲ್ಲಾ ಬಿಟ್ಟವನು.  ಅವನ ವಿಷಯಕ್ಕೆ ಹೋಗೋ ನಮಗೆ ಬುದ್ಧಿ ಇಲ್ಲ" ಅಂದರು.  ತಲೆತಗ್ಗಿಸಿದೆ.  ಕೆಲಸವಾಯಿತು ಎಂಬಂತೆ ಹೊರಟುಹೋದರು.  ಪ್ರೊ ಸೆಂಗೋಟ್ಟೈ ಎದುರಿಗೆ ಸಿಕ್ಕಿದರೂ ಏನೂ ಮಾತಾಡಲಿಲ್ಲ.  ನಾಗಲಿಂಗಂ ಎಲ್ಲೂ ಕಾಣಲಿಲ್ಲ.
ಕ್ಲಾಸ್ ಮುಗಿಸಿ ಹೊರಬರುತ್ತಿದ್ದಂತೇ ಆಫೀಸ್ ಮ್ಯಾನೇಜರ್ ಗಿರಿಧರ್ ಎದುರಿಗೆ ಬಂದ.  "ವಿಷಯ ಗೊತ್ತಾಯ್ತೇನು ಸಾರ್?" ಅಂದ.  ಏನು ಎಂಬಂತೆ ನೋಡಿದೆ.  "ನಾಗಲಿಂಗಂ ಹೆಂಡ್ತಿ ನಿನ್ನೆ ಸಾಯಂಕಾಲ ಸೂಯಿಸೈಡ್ ಮಾಡ್ಕೊಂಡ್ಲಂತೆ.  ಅದಕ್ಕೆ ಇವನೇ ಕಾರಣ ಅಂತ ಅವರಮ್ಮ ಕಂಪ್ಲೇಂಟ್ ಕೊಟ್ಳಂತೆ.  ಇವನನ್ನ ಬೆಳಿಗ್ಗೆ ಅರೆಸ್ಟ್ ಮಾಡಿದ್ದಾರಂತೆ."
ಆಮೇಲೆ ಸಾಕಷ್ಟು ಹೊತ್ತು ಎಲ್ಲರ ಬಾಯಲ್ಲೂ ಅದೇ ಮಾತು.  ಎಲ್ಲ ಮಾತುಗಳನ್ನೂ ಮೌನವಾಗಿ ಕೇಳಿಸಿಕೊಂಡೆ.  ಮಾತಾಡಲಾಗಲಿಲ್ಲ.  ನನ್ನ ಮಾತುಗಳು ಯಾರಿಗೂ ಬೇಕಾಗಿಯೂ ಇರಲಿಲ್ಲ.
ಮಧ್ಯಾಹ್ನ ಸರಿಯಾಗಿ ಪಾಠಗಳನ್ನೇ ಮಾಡಲಾಗಲಿಲ್ಲ.  ಏನೋ ಒಂದಷ್ಟು ಒದರಿ ಹೊರಬರುತ್ತಿದ್ದಂತೇ ನಾಗಲಿಂಗಂ ಎದುರಿಗೆ ಬಂದ.  ಎಂದಿನಂತೆ "ವಣಕ್ಕಂ ಸಾರ್" ಎಂದು ಒಂದೇ ಕೈನ ನಮಸ್ಕಾರ ಒಗೆದು ನಿರಮ್ಮಳವಾಗಿ ನಕ್ಕು ಆಫೀಸ್ ರೂಮಿನತ್ತ ನಡೆದುಹೋದ.  ನಾನು ಕಂಬದಂತೆ ನಿಂತೆ.
ಮಾಮೂಲಿನಂತೆ ಮೂರೂವರೆಗೆ ಸಹೋದ್ಯೋಗಿ ಕೃಷ್ಣಮೂರ್ತಿಯ ಜತೆ ಟೀ ಕುಡಿಯಲು ಕ್ಯಾಂಟೀನಿಗೆ ಹೋದಾಗ ಅವರಿಂದ ವಿವರಗಳು ತಿಳಿದವು.
ನಾಗಲಿಂಗಂ ಅರೆಸ್ಟ್ ಆದ ಒಂದೇ ಗಂಟೆಯೊಳಗೆ ಅವನ ಅಣ್ಣಂದಿರು ಜಾಮೀನು ಕೊಟ್ಟು ಬಿಡಿಸಿಕೊಂಡರಂತೆ.  ಕಂಪ್ಲೇಂಟನ್ನು ವಾಪಸ್ ತೆಗೆದುಕೊಳ್ಳುವಂತೆ ನಾಗಲಿಂಗಂನ ಅತ್ತೆಯ ಮೇಲೆ ಒತ್ತಡ ಹಾಕಿದರಂತೆ.  ಊರ ಮುಖಂಡರೂ ಅವರ ಹಿಂದೆ ನಿಂತರಂತೆ.  ಆ ವಿಧವೆ ಮುದುಕಿಯ ಮತ್ತೊಬ್ಬಳು ಮಗಳು ಗಂಡನ ಜತೆ ಬೆಂಗಳೂರಿನಲ್ಲಿ ಏನೋ ಸಣ್ಣ ಚಾಕರಿ ಮಾಡಿಕೊಂಡು ಯಾವುದೋ ಸ್ಲಮ್‌ನಲ್ಲಿದ್ದಾಳಂತೆ.  ಅದು ಬಿಟ್ಟರೆ ಈ ಮುದುಕಿಗೆ ಯಾರೂ ಇಲ್ಲವಂತೆ.  ಇರುವ ಒಬ್ಬ ತಮ್ಮ ಜಗಳಾಡಿಕೊಂಡು ದೂರ ಇದ್ದಾನಂತೆ.  ಒತ್ತಡ ತಡೆಯಲಾರದೆ ಆಯಮ್ಮ ಕಂಪ್ಲೇಂಟ್ ವಾಪಸ್ ತೆಗೆದುಕೊಂಡಳಂತೆ.  ಬಹಳ ದಿನಗಳಿಂದ ಕಾಡುತ್ತಿದ್ದ ಹೊಟ್ಟೆನೋವಿಗೆ ರೋಸಿಹೋಗಿ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಳು, ತನ್ನ ಅಳಿಯನಿಗೂ ಇದಕ್ಕೂ ಏನೇನೂ ಸಂಬಂಧ ಇಲ್ಲ, ಯಾರೋ ಆಗದವರ ಮಾತು ಕೇಳಿ ದೇವರಂಥ ಅಳಿಯನ ಮೇಲೆ ಕಂಪ್ಲೇಂಟ್ ಕೊಟ್ಟು ತಪ್ಪು ಮಾಡಿದೆ ಎಂದು ಬರೆದುಕೊಟ್ಟಿದ್ದಾಳಂತೆ.  ಇದಿಷ್ಟೇ ಅಲ್ಲ, ಆಗದವರು ಯಾರು ಎಂದು ಇನ್ಸ್‌ಪೆಕ್ಟರ್ ಕೇಳಿದ್ದಕ್ಕೆ ಮೂರು ನಾಲ್ಕು ಹೆಸರು ಹೇಳಿದಳಂತೆ.  ಅವುಗಳಲ್ಲಿ ನಮ್ಮ ಹೆಚ್‌ಓಡಿ ಪ್ರೊ ಸೆಂಗೋಟ್ಟೈ ಅವರ ಹೆಸರೂ ಇದೆಯಂತೆ!  ಪ್ರೊ ಸೆಂಗೋಟ್ಟೈ ತಮ್ಮ ಪರಿಚಯದ ಲಾಯರ್ ಬಳಿ ಹನ್ನೊಂದು ಗಂಟೆಗೆ ಹೋದವರು ಇನ್ನೂ ಬಂದಿಲ್ಲವಂತೆ.  "ಸದ್ಯ ನಿಮ್ಮ ಹೆಸರು ಹೇಳಲಿಲ್ಲ ಆಯಮ್ಮ.  ಅಷ್ಟು ಉಪಕಾರ ಮಾಡಿದ್ಲು" ಎನ್ನುತ್ತಾ ಮಾತು ಮುಗಿಸಿದರು ಕೃಷ್ಣಮೂರ್ತಿ.  ಕುಡಿಯುತ್ತಿದ್ದ ಟೀಗೆ ಹುಳಿ ಒಗರು ಕಹಿ ಸಿಹಿ ಎಲ್ಲವೂ ತುಂಬಿಕೊಂಡಿತು.
ಸಂಜೆ ದೀಪ ಹಚ್ಚುವ ಹೊತ್ತಿನಲ್ಲಿ ಎದುರುಮನೆಯ ಸೆಲ್ವರಾಜನ್ ಬಂದರು.  ಸುತ್ತಮುತ್ತಲಲ್ಲಿ ಎಲ್ಲರೂ ಗೌರವದಿಂದ "ವಾದ್ಯಾರ್" ಎಂದು ಕರೆಯುವ ಅವರು ಸರಕಾರೀ ಶಾಲೆಗಳಲ್ಲಿ ಇಪ್ಪತ್ತೈದು ವರ್ಷಗಳಿಂದ ತಮಿಳು ಕಲಿಸುತ್ತಿದ್ದಾರೆ.  ವರ್ಷದ ಹಿಂದೆ ಹೈಯರ್ ಸೆಕೆಂಡರಿ ಸ್ಕೂಲಿಗೆ ಹೆಡ್‌ಮಾಸ್ತರಾಗಿ ಬಡ್ತಿ ಸಿಕ್ಕಿದೆ.  ಸೌಮ್ಯ ಸ್ವಭಾವದ ಅವರು ಬಿಡುವಾದಾಗ ಬಂದು ಸ್ವಲ್ಪ ಹೊತ್ತು ಮಾತಾಡಿಹೋಗುತ್ತಾರೆ.  ಕಷ್ಟಸುಖ ಹೇಳಿಕೊಳ್ಳುತ್ತಾರೆ.  ಐವತ್ತು ದಾಟಿದ ಅವರ ಮನೆಯಲ್ಲಿ ಜತೆಗಿರುವುದು ಚಿಕ್ಕವಯಸ್ಸಿನ ಹೆಂಡತಿ ಮಾತ್ರ.  ಎರಡನೆಯ ಸಂಬಂಧವಂತೆ.  ಆಕೆಗೆ ಮಕ್ಕಳಿಲ್ಲ.  ತುಂಬಾ ಚಟುವಟಿಕೆಯ ಹೆಂಗಸು.  ಕರೆಸ್ಪಾಂಡೆನ್ಸ್‌ನಲ್ಲಿ ಬಿ ಎ ಮುಗಿಸಿ ವರ್ಷದ ಹಿಂದೆ ಬಿ ಎಡ್ ಸಹಾ ಮಾಡಿಕೊಂಡರು.  ಆರೇಳು ತಿಂಗಳ ಹಿಂದೆ ಮನೆಗೆ ಹತ್ತಿರದಲ್ಲೇ ಇರುವ ಒಂದು ಕ್ರಿಶ್ಚಿಯನ್ ಸ್ಕೂಲಿನಲ್ಲಿ ಟೀಚರ್ ಕೆಲಸವೂ ಸಿಕ್ಕಿದೆ.  ಉತ್ಸಾಹದಿಂದ ಹೋಗಿಬರುತ್ತಾರೆ.  ಅವರಿಗೂ ಅರುಂಧತಿಗೂ ಸರಿಸುಮಾರು ಒಂದೇ ವಯಸ್ಸು.  ಇಬ್ಬರಿಗೂ ತುಂಬಾ ಸ್ನೇಹ.  ಆವಳಿಲ್ಲಿದ್ದಾಗ ದಿನಕ್ಕೆ ಒಮ್ಮೆಯಾದರೂ ಇತ್ತ ಬರುತ್ತಿದ್ದರು.  ಈಗ ನನಗೆ ಅವರ ಭೇಟಿಯಾಗುವುದು ಮನೆ ಮುಂದಿನ ರಸ್ತೆಯಲ್ಲಿ ಮಾತ್ರ.  ಆಗೆಲ್ಲಾ ಸುಮ್ಮನೆ ನಗೆಯರಳಿಸಿ ಮುಂದೆ ಹೋಗುತ್ತಾರೆ.  ಸೆಲ್ವರಾಜನ್‌ರ ಮೊದಲ ಹೆಂಡತಿಯ ಮಗ ಚೆನ್ನೈನ ಯಾವುದೋ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾನೆ.  ಅವನ ಅಡ್ಮಿಷನ್ ಸಮಯದಲ್ಲಿ ನನ್ನಿಂದ ಐವತ್ತು ಸಾವಿರ ತೆಗೆದುಕೊಂಡಿದ್ದರು.  ಹತ್ತೇ ದಿನಗಳಲ್ಲಿ ಹಣವನ್ನು ಹಿಂತಿರುಗಿಸಿ ನನ್ನ ಕೈಯನ್ನು ಹಣೆಗೊತ್ತಿಕೊಂಡು ಕೈಮುಗಿದು ಹೋಗಿದ್ದರು.
ಯಾಕೋ ಸಪ್ಪಗಿದ್ದರು.  "ಕೂತುಕೊಳ್ಳಿ" ಅಂದೆ.  "ಉಸ್" ಎನ್ನುತ್ತಾ ಕುಳಿತರು.  "ಬೇಜಾರಾಗ್ತಿದೆ ಸಾರ್" ಅಂದರು.  ಬೆಚ್ಚಿದೆ.  ಆತ ನಿಜಕ್ಕೂ ತುಂಬಾ ಬೇಸರದಲ್ಲಿದ್ದಂತೆ ಕಾಣುತ್ತಿದ್ದರು.  "ಬೇಜಾರೇಕೆಏನು ವಿಷಯ?" ಎಂದೆ.  ನನ್ನ ದನಿ ಕಂಪಿಸುತ್ತಿತ್ತು.  ಈ ಹಸುವಿನಂಥ ಮನುಷ್ಯನಿಗೆಂತಹ ತೊಂದರೆ ಕಾಡುತ್ತಿದೆ ಎಂದು ದಿಗಿಲುಗೊಂಡೆ.
"ನಿಮಗೆ ಹೇಳಿಕೊಳ್ಳಲೇಬೇಕು ಅಂತಾನೇ ಬಂದೆ..." ಎಂದು ಆರಂಭಿಸಿ ಮುಂದಿನ ಅರ್ಧಗಂಟೆಯವರೆಗೆ ಅವರು ಬಿಡಿಬಿಡಿಯಾಗಿ ಹೇಳಿದ ಮಾತುಗಳ ಸಾರಾಂಶ ಇಷ್ಟು-
ಮೊದಲ ಹೆಂಡತಿ ತೀರಿಕೊಂಡಾಗ ಅವರಿಗೆ ಮೂವತ್ತಾರು ವರ್ಷ.  ಮಗ ಮಹೇಶನಿಗೆ ಐದು.  ಎರಡನೆಯ ಮದುವೆಗೆ ಎಲ್ಲರೂ ಒತ್ತಾಯಿಸಿದರೂ ಬರುವವಳು ಮಗನನ್ನು ಹೇಗೆ ನೋಡಿಕೊಳ್ಳುತ್ತಾಳೋ ಎಂದು ಹೆದರಿ ಮರುಮದುವೆಯಾಗಲು ಮನಸ್ಸು ಮಾಡಲಿಲ್ಲ.  ಹಳ್ಳಿಯಲ್ಲಿದ್ದ ನೆಂಟರ ಕಡೆಯ ವಾಸುಗಿ ಎಂಬ ಬಡಹುಡುಗಿಯನ್ನು ಕರೆತಂದು ಮನೆಯಲ್ಲಿಟ್ಟುಕೊಂಡರು.  ಮಗುವಿನ ಜತೆ ಆಡಿಕೊಂಡು ಅವನು ನಗುನಗುತ್ತಾ ಇರುವಂತೆ ನೋಡಿಕೊಳ್ಳುವುದು ಮಾತ್ರ ಅವಳ ಕೆಲಸ.  ಉಳಿದೆಲ್ಲವನ್ನೂ ತಾವೇ ಮಾಡಿದರು.  ಹಳ್ಳಿಯ ಶಾಲೆಯಲ್ಲಿ ಆಗಷ್ಟೇ ಹತ್ತನೆಯ ತರಗತಿ ಮುಗಿಸಿದ್ದ ಅವಳನ್ನು ತಾವಿದ್ದ ಶಾಲೆಯಲ್ಲೇ ಪ್ಲಸ್ ಟೂ ಗೆ ಸೇರಿಸಿದರು.  ಅದನ್ನವಳು ಪಾಸು ಮಾಡಿದಾಗ ಕಾಲೇಜಿಗೆ ಸೇರು ಅಂದರು.  ಅವಳು ಇಷ್ಟವಿಲ್ಲದೇ ಮನೆಯಲ್ಲೇ ಉಳಿದಳು.  ಶಾಲೆಗೆ ಹೋಗುತ್ತಿದ್ದ ಮಹೇಶನ ಅಗತ್ಯಗಳನ್ನು ಪೂರೈಸುತ್ತಾ, ಬಿಡುವಿನ ವೇಳೆಯಲ್ಲಿ ಕಸೂತಿ ಗಿಸೂತಿ ಹಾಕಿಕೊಂಡು, ಟೀವಿಯಲ್ಲಿ ತಮಿಳು ಸಿನಿಮಾಗಳನ್ನು ನೋಡಿಕೊಂಡು ಕಾಲ ಕಳೆಯುವುದೇ ಅವಳಿಗೆ ಇಷ್ಟವಿದ್ದಂತಿತ್ತು.  ಇವರೂ ಒತ್ತಾಯಿಸಲಿಲ್ಲ.
ಮಗು ಮಹೇಶ ಹೋಮ್‌ವರ್ಕ್ ಗೀಮ್‌ವರ್ಕ್ ಅಂಥಾದ್ದೆಲ್ಲಾ ಮುಗಿಸಿ ಊಟ ಮಾಡಿ ಎಂಟೊಂಬತ್ತು ಗಂಟೆಗೆಲ್ಲಾ ಮಲಗಿಬಿಡುತ್ತಿತ್ತು.  ಇವರಿಬ್ಬರೇ ಸುಮಾರು ಹೊತ್ತು ಟೀವಿ ನೋಡುತ್ತಾ ಕುಳಿತುಕೊಳ್ಳುತ್ತಿದ್ದರು.  ಒಂದೇ ಸೂರಿನಡಿಯಲ್ಲಿ ಹಲವಾರು ವರ್ಷ ಒಟ್ಟಿಗೆ ಬದುಕಿದ ಇಬ್ಬರ ನಡುವೆ ಹೀಗೇ ಏನೋ ಆಕರ್ಷಣೆ ಮೂಡಿ ಒಂದು ದಿನ ತಪ್ಪು ನಡೆದುಹೋಯಿತು.  ಇಬ್ಬರ ಕೈಮೀರಿ ನಡೆದದ್ದು ಅದು.  ಅದರ ಬಗ್ಗೆ ಸೆಲ್ವರಾಜನ್ ಅವರಿಗೆ ಇಂದಿಗೂ ಪಶ್ಚಾತ್ತಾಪವಿದೆ.  ಆದದ್ದಾಯಿತು, ಅವಳಿಗೆ ತನ್ನಿಂದ ಅನ್ಯಾಯವಾಗಬಾರದು ಎಂದು ತಾಳಿ ಕಟ್ಟಿದರು.  ಅವಳೂ ಸಂತೋಷದಿಂದಲೇ ಒಪ್ಪಿಕೊಂಡಳು.
ಮದುವೆಯಾದಾಗ ಅವರಿಗೆ ನಲವತ್ತು, ಅವಳಿಗೆ ಹತ್ತೊಂಬತ್ತು.  ಅದಾಗಿ ಹನ್ನೆರಡು ವರ್ಷಗಳು ಕಳೆದುಹೋಗಿವೆ.
ಮಹೇಶ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ವಯಸ್ಸಿಗೆ ಬಂದಾಗ ವಾಸುಗಿಗೆ ಹೆಚ್ಚಿನ ವಿರಾಮ.  ತನ್ನದೇ ಅಂತ ಒಂದು ಮಗುವೂ ಆಗದ ಅವಳಿಗೆ ಸಮಯ ಹೋಗುವುದೇ ಕಷ್ಟವಾಯಿತು.  ಎಲ್ಲದರಲ್ಲೂ ಒಂದು ರೀತಿಯ ನಿರಾಸಕ್ತಿ.  ಅವಳು ಏನಾದರೊಂದನ್ನು ಹಚ್ಚಿಕೊಳ್ಳಲಿ ಎನ್ನುವ ಉದ್ದೇಶದಿಂದ ಸೆಲ್ವರಾಜನ್ ಹೆಂಡತಿಯನ್ನು ಅಣ್ಣಾಮಲೈ ಯೂನಿವರ್ಸಿಟಿಯ ಕರೆಸ್ಪಾಂಡೆನ್ಸ್ ಕೋರ್ಸ್‌ನಲ್ಲಿ ಬಿ ಎಗೆ ಸೇರಿಸಿದರು.  ಜಾಣೆಯಾದ ಅವಳು ಉತ್ಸಾಹದಿಂದ ಸಮಯಕ್ಕೆ ಸರಿಯಾಗಿ ಡಿಗ್ರಿ ಮುಗಿಸಿದಳು.  ಅವಳಲ್ಲಿ ಲವಲವಿಕೆ ಮರುಕಳಿಸಿತ್ತು.  ಬಿ ಎ ಮುಗಿದದ್ದೇ ಇಲ್ಲೇ ಪಾಂಡಿಚೆರಿಯಲ್ಲೇ ಬಿ ಎಡ್ ಮಾಡಿದಳು.  ಮನೆಗೆ ಹತ್ತಿರದ ಪ್ರೈವೇಟ್ ಸ್ಕೂಲೊಂದರ ಪ್ರಿನ್ಸಿಪಾಲ್, ಸೆಲ್ವರಾಜನ್‌ರ ಹಳೆಯ ವಿದ್ಯಾರ್ಥಿನಿ.  ವಾಸುಗಿಗೆ ಅಲ್ಲಿ ಟೀಚರ್ ಕೆಲಸ ಸಿಕ್ಕಿತು.
ಎರಡು-ಮೂರು ತಿಂಗಳಿಂದ ವಾಸುಗಿಯ ವರ್ತನೆ ಬದಲಾಗಿದೆ.  ಅದರರ್ಥ ಗಂಡನನ್ನು ಅಸಡ್ಡೆ ಮಾಡುತ್ತಾಳೆ ಅಂತೇನೂ ಅಲ್ಲ.  ಗಂಡನ ಬಗ್ಗೆ ಮೊದಲಿನ ಅದೇ ಗೌರವ ಇದೆ.  ವಾರಕ್ಕೊಮ್ಮೆ ಬರುವ ಮಹೇಶನನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾಳೆ.  ಅದರಲ್ಲೇನೂ ತೊಂದರೆಯಿಲ್ಲ.  ಅವಳು ಹೇಳುತ್ತಿರುವುದು "ಇನ್ನು ನನಗೀ ಬದುಕು ಸಾಕು" ಅಂತ.
ಅವಳ ಬಾಯಿಂದ ಮೊಟ್ಟಮೊದಲು ಈ ಮಾತು ಕೇಳಿದಾಗ ಸೆಲ್ವರಾಜನ್ ಏನೊಂದೂ ಅರ್ಥವಾಗದೇ ಗೊಂದಲಕ್ಕೆ ಬಿದ್ದರಂತೆ.  ಏನೇನೋ ಕೆಟ್ಟ ಯೋಚನೆಗಳೆಲ್ಲಾ ಒಂದೇ ಸಲಕ್ಕೆ ಬಂದು ಕಂಗಾಲಾಗಿಹೋದರಂತೆ.  ಅವಳೇ ಕೈಹಿಡಿದು ಸಮಾಧಾನಿಸಿ ವಿವರಿಸಿದಳಂತೆ.  ಅವಳ ಮಾತಿನ ಅರ್ಥ- ಸೆಲ್ವರಾಜನ್‌ರ ಹೆಂಡತಿಯಾಗಿ, ಮಹೇಶನ ಮಲತಾಯಿಯಾಗಿ ಬದುಕು ಸವೆಸಿದ್ದು ಇಲ್ಲಿಗೆ ಸಾಕು.
"ಬದುಕೆಂದರೆ ಏನು ಅಂತ ತಿಳಿಯದ ವಯಸ್ಸಿನಲ್ಲಿ ನಿಮ್ಮ ಹೆಂಡತಿಯಾಗಿ, ನಿಮ್ಮ ಇಷ್ಟಾನಿಷ್ಟಗಳಿಗೆ ತಕ್ಕಂತೆ ನಡೆದುಕೊಂಡು, ಮಹೇಶನಿಗೆ ತಾಯಿಯಿಲ್ಲದ ಕೊರತೆ ಕಾಡದಂತೆ ನೋಡಿಕೊಳ್ಳುವ ಹೆಣಗಾಟದಲ್ಲಿ ನನ್ನೆಲ್ಲಾ ವೈಯುಕ್ತಿಕ ಬಯಕೆಗಳನ್ನು ಅದುಮಿಟ್ಟು ಸವೆಸಿದ ಬದುಕು ಇಲ್ಲಿಗೆ ಸಾಕು.  ನನಗೀಗ ನನ್ನದೇ ಬದುಕು ಬೇಕು.  ನನಗೆ ಸ್ವಾತಂತ್ರ್ಯ ಕೊಡಿ."  ವಾಸುಗಿ ಗಂಡನಿಗೆ ನೇರವಾಗಿ ಆದರೆ ಸ್ಪಷ್ಟವಾಗಿ ಹೇಳಿದ್ದು ಇದು.  ಅವಳಿಗೀಗ ಮೂವತ್ತೊಂದು.
ಮೆಲುದನಿಯಲ್ಲಿ, ತಡೆತಡೆದು ಹೇಳಿದ ಸೆಲ್ವರಾಜನ್ "ಅವಳಿಗೆ ನಾನ್ಯಾವಾಗ ಸ್ವಾತಂತ್ರ್ಯ ಕೊಟ್ಟಿರಲಿಲ್ಲಅವಳನ್ನೆಂಥಾ ಬಂಧನದಲ್ಲಿಟ್ಟಿದ್ದೆಅವಳಿಗೆ ಅವಳದೇ ಆದ ಬದುಕು ಬೇಕಂತೆ.  ಹಾಗಂದರೇನುಇದುವರೆಗೆ ಅವಳು ಬದುಕಿದ್ದು ಅವಳದೇ ಬದುಕಲ್ಲವೇನು?" ಎನ್ನುತ್ತಾ ಎಡತೋಳಿಗೆ ತಲೆ ಒತ್ತಿಕೊಂಡು ಬಿಕ್ಕಿದರು.
ಅವರ ಅರಿವಿಗೆ ನಿಲುಕುವಂತಹ ಉತ್ತರ ನನ್ನಲ್ಲಿರಲಿಲ್ಲ.  ನಮ್ಮಿಬ್ಬರ ನಡುವೆ ಅಗಾಧ ಕಂದರವಿತ್ತು.
ಸೆಲ್ವರಾಜನ್ ನಿಜಕ್ಕೂ ಏಕಾಂಗಿ ಎನಿಸಿ ವ್ಯಥೆಯಾಯಿತು.
ನಿತ್ಯದಂತೆ ರಾತ್ರಿ ಅರುಂಧತಿಗೆ ಫೋನ್ ಮಾಡಿದಾಗ ವಾಸುಗಿಯ ವಿಷಯ ಹೇಳಿದೆ.  ಬೇಜಾರು ಮಾಡಿಕೊಂಡಳು.  "ಐ ಕ್ಯಾನ್ ಅಂಡರ್‌ಸ್ಟ್ಯಾಂಡ್ ಹರ್.  ಬಟ್..."  ಮುಂದೇನೂ ಹೇಳದೇ ಬೇರೆ ವಿಷಯ ಎತ್ತಿದಳು.
ಮಾರನೆಯ ದಿನ ಡಿಪಾರ್ಟ್‌ಮೆಂಟಿನಲ್ಲಿ ಪ್ರೊ ಸೆಂಗೋಟ್ಟೈ, ನಾಗಲಿಂಗಂ ಇಬ್ಬರೂ ಕಾಣಲಿಲ್ಲ.  ನಾಗಲಿಂಗಂ ಎರಡು ದಿನಕ್ಕೆ ರಜೆ ಹಾಕಿರುವುದಾಗಿ ಗಿರಿಧರ್ ಹೇಳಿದ.  "ನಾಗಲಿಂಗಂನ ಅತ್ತೆ ನಮ್ಮ ಈ ಘನಂದಾರೀ ಪ್ರೊಫೆಸರ್ ಬಗ್ಗೆ ಪೋಲೀಸರಿಗೆ ಸುಮ್ನೆ ಬಾಯಲ್ಲಿ ಹೇಳಿದ್ದಂತೆ.  ಬರೆದೇನೂ ಕೊಟ್ಟಿಲ್ವಂತೆ.  ಅವಳ ಮಾತನ್ನ ಪೋಲೀಸರು ಲೆಕ್ಕಕ್ಕೇನೂ ತಗೋಂಡಿಲ್ವಂತೆ.  ಈವಯ್ಯನಿಗೆ ಅಷ್ಟಕ್ಕೇ ಭೇದಿ ಕಿತ್ತುಕೊಂಡು ಅದ್ಯಾರೋ ಲಾಯರ್ ಕಾಲು ಹಿಡ್ಕೊಂಡು ಕೂತಿದ್ದಾನಂತೆ" ಎಂದು ಪ್ರೊ ಮಾಧವನ್ ಚಹಾದ ಜತೆ ನೆಂಜಿಕೊಂಡು ಗಹಗಹಿಸಿದರು.
ಹನ್ನೊಂದರ ಹೊತ್ತಿಗೆ ಅರುಂಧತಿಯಿಂದ ಫೋನ್ ಬಂತು.  "ಈ ಶನಿವಾರ ನೀವು ಡೆಲ್ಲಿಗೆ ಹೊರಡೋದೇನೂ ಬೇಡ.  ಅಲ್ಲೇ ಇರಿ.  ಹೋದ ತಿಂಗಳಷ್ಟೇ ನೀವು ಇಲ್ಲಿಗೆ ಬಂದಿದ್ರಲ್ಲ.  ಮತ್ತೆ ಪ್ರಯಾಣ ಮಾಡೋದು ಬೇಡ.  ಮುಂದಿನ ಶನಿವಾರದಿಂದ ಆದಿತ್ಯನಿಗೆ ಹತ್ತು ದಿನಗಳ ಪೂಜಾ ಹಾಲಿಡೇಸ್ ಇದೆಯಲ್ಲ ಆವಾಗ ನಾನೂ ರಜಾ ತಗೋತೀನಿ.  ನಾವೇ ಅಲ್ಲಿಗೆ ಬರ್ತೀವಿ.  ನೀವೂ ರಜಾ ಕ್ಯಾನ್ಸಲ್ ಮಾಡಿಬಿಡಿ.  ನಾವು ಬಂದಾಗ ತಗೋಳ್ಳೋರಂತೆ.  ಟ್ಯಾಕ್ಸಿ ಮಾಡ್ಕೊಂಡು ಒಂದೆರಡು ದಿನ ಮೈಸೂರಿಗೂ ಹೋಗಿಬರೋಣ.  ಚಾಮುಂಡಿ ಬೆಟ್ಟಕ್ಕೆ ಹೋಗಿ ಮೂರುನಾಕು ವರ್ಷಾನೇ ಆಗೋಯ್ತು" ಅಂದಳು.  ಖುಷಿಯಾಯಿತು.
ಎರಡು ವಾರಗಳ ಹಿಂದೆ ಟಿಕೆಟ್ ಬುಕ್ ಮಾಡಿದ್ದು ಇಂಟರ್‌ನೆಟ್‌ನಲ್ಲಿ.  ಅಲ್ಲೇ ಕ್ಯಾನ್ಸಲ್ ಮಾಡಿದೆ.  ಮುಂದಿನ ಇಡೀ ವಾರಕ್ಕೆಂದು ಮೊನ್ನೆ ತಾನೆ ಕೊಟ್ಟಿದ್ದ ರಜಾ ಅರ್ಜಿ, ನಿನ್ನೆಯಿಂದಲೂ ಹೆಚ್‌ಓಡಿ ಸಾಹೇಬರ ಗೈರುಹಾಜರಿಯಿಂದಾಗಿ ಡಿಪಾರ್ಟ್‌ಮೆಂಟ್ ಆಫೀಸ್ ದಾಟಿ ಮುಂದೆ ಹೋಗಿರಲಿಲ್ಲ.  ಮ್ಯಾನೇಜರ್ ಗಿರಿಧರನಿಂದ ಅದನ್ನು ಹಿಂದಕ್ಕೆ ಪಡೆದು ಅವನ ಮುಂದೆಯೇ ಹರಿದು ಅವನ ಕಸದ ಬುಟ್ಟಿಗೇ ಹಾಕಿದೆ.
ಸಂಜೆ ಮನೆಗೆ ಹಿಂತಿರುಗುತ್ತಿದಾಗ ಯೋಚನೆ ಬಂತು.  ಎರಡು-ಮೂರು ತಿಂಗಳಿಂದ ನೀನು ಬೆಂಗಳೂರಿಗೆ ಬರಲೇ ಇಲ್ಲವಲ್ಲ ಅಂತ ಪುಟ್ಟಕ್ಕ ಮೊನ್ನೆ ಫೋನ್ ಮಾಡಿ ಕೇಳಿದ್ದಳು.  ಹೇಗೂ ನನ್ನ ದೆಹಲಿ ಪ್ರಯಾಣ ಕ್ಯಾನ್ಸಲ್, ವೀಕೆಂಡ್‌ನಲ್ಲಿ ಬೆಂಗಳೂರಿಗೆ ಹೋಗಿದ್ದು ಬರೋಣ ಅನಿಸಿತು.  ಮನೆಯ ದಾರಿ ಬಿಟ್ಟು ಬಸ್ ಸ್ಟ್ಯಾಂಡ್‌ನತ್ತ ಗಾಡಿ ತಿರುಗಿಸಿದೆ.  ರಿಸರ್ವೇಶನ್ ಕೌಂಟರ್‌ನಲ್ಲಿ ಹೆಚ್ಚು ಜನ ಇರಲಿಲ್ಲ.
ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಹಿಂತಿರುಗಿದಾಗ ಎದುರುಮನೆಯ ಮುಂದೆ ದಿನವೂ ಬೆಳಗರೆಯುವ ಮುಂಚೇ ತಪ್ಪದೇ ಕಾಣಿಸಿಕೊಳ್ಳುತ್ತಿದ್ದ ರಂಗೋಲಿ ಕಾಣಲಿಲ್ಲ.  ಒಣನೆಲದಲ್ಲಿ ಹಳೆಯ ರಂಗೋಲಿ ಗೆರೆಗಳು ಕಲಸಿಹೋಗಿದ್ದವು.  ತಲೆಯೆತ್ತಿ ನೋಡಿದರೆ ಮನೆಬಾಗಿಲಿಗೆ ಬೀಗ.  ಒಂದುನಿಮಿಷ ಅತ್ತಲೇ ನೋಡುತ್ತಾ ನಿಂತುಬಿಟ್ಟೆ.  ಮನೆಯತ್ತ ತಿರುಗಿದಾಗ ಸ್ಕೂಟರ್ ಒರೆಸುತ್ತಿದ್ದ ಪಕ್ಕದ ಮನೆಯ ತಂಗವೇಲು ಕಾಂಪೌಂಡ್ ಹತ್ತಿರ ಬಂದ.
"ವಾದ್ಯಾರ್ ಹೆಂಡತಿ ಅವರನ್ನ ಬಿಟ್ಟುಹೋದ್ಲು.  ನಿನ್ನೆ ಬೆಳಿಗ್ಗೆ.  ಇಲ್ಲೇ ಟೆಂತ್ ಕ್ರಾಸ್‌ನಲ್ಲಿ ಬಾಡಿಗೆ ಮನೆ ಹಿಡಿದಿದ್ದಾಳಂತೆ.  ವಾದ್ಯಾರ್ ಸಂಜೆ ಹೊತ್ತಿಗೆಲ್ಲಾ ಸೇಲಂಗೆ ಹೋದ್ರು.  ಅದೇನೋ ವಿ ಆರ್ ಎಸ್ ತಗೋತಾರಂತೆ.  ಮನೆನೂ ಮಾರಿ ಸೇಲಂಗೆ ಹೊರಟುಹೋಗ್ತೀನಿ ಅಂತ ಹೇಳ್ತಿದ್ರು.  ಹೀಗಾಗಬಾರ್ದಾಗಿತ್ತು ಸಾರ್.  ಆಯಮ್ಮನ್ನ ಓದ್ಸಿ ವಾದ್ಯಾರ್ ತಮ್ಮ ತಲೆ ಮೇಲೆ ತಾವೇ ಮಣ್ಣು ಹಾಕ್ಕೊಂಡ್ರು."
"ಮಹೇಶ?"
"ಮೊನ್ನೆ ರಾತ್ರೀನೇ ಬಂದಿದ್ದ.  ಬೆಳಿಗ್ಗೆಬೆಳಿಗ್ಗೇನೇ ಚೆನ್ನೈಗೆ ಹೊರಟುಹೋದ, ಆಯಮ್ಮ ಮನೆ ಬಿಟ್ಟು ಹೋಗೋದಕ್ಕೂ ಮೊದ್ಲೇ."
ಬೀಗಕ್ಕೆ ಕೀಲಿಕೈ ಹೂಡಿದ ನನ್ನ ಕೈ ನಡುಗುತ್ತಿತ್ತು.
ಯೂನಿವರ್ಸಿಟಿಗೆ ಹೋದರೆ ಡೆಪ್ಯುಟಿ ರಿಜಿಸ್ಟ್ರಾರ್ ಮಾಣಿಕ್ಯಂ ನಿನ್ನೆ ರಾತ್ರಿ ತೀರಿಕೊಂಡಿದ್ದಾರೆಂದು ತಿಳಿಯಿತು.  ನನಗಿಲ್ಲಿ ಕೆಲಸ ಸಿಕ್ಕಿದಾಗ ನಾನು ಮೊಟ್ಟಮೊದಲು ಭೇಟಿಯಾದ ವ್ಯಕ್ತಿ ಅವರು.  ಜಾಯ್ನಿಂಗ್ ರಿಪೋರ್ಟನ್ನು ಹೇಳಿ ಬರೆಸಿದವರೇ ಅವರು.  ನನಗೊಂದು ಬಿಡಾರದ ವ್ಯವಸ್ತೆ ಮಾಡಿಕೊಟ್ಟವರೂ ಅವರೇ.  ಪಾಠ ಮಾಡುವುದೊಂದನ್ನುಳಿದು ಇತರ ಅನೇಕ ವಿಷಯಗಳಲ್ಲಿ ನಾನು ಪೆದ್ದ ಎಂದು ತಿಳಿದ ಮೇಲಂತೂ ನನ್ನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು.
ಸಂಕಟವಾಯಿತು.
ಹನ್ನೊಂದು ಗಂಟೆಗೆ ಕಂಡೋಲೆನ್ಸ್ ಮೀಟಿಂಗ್, ಆನಂತರ ರಜಾ ಎಂದು ತಿಳಿಯಿತು.  ನನ್ನ ಸಹೋದ್ಯೋಗಿಗಳಿಗೆ ಮೊದಲೇ ತಿಳಿದಿರಬೇಕು.  ಎಲ್ಲರ ಕೋಣೆಗಳ ಬಾಗಿಲಲ್ಲಿ ಬೀಗ.  ಅನ್ಯಮನಸ್ಕತೆಯಲ್ಲಿ ನನ್ನ ಕೋಣೆಯಲ್ಲಿ ಕುಳಿತೆ.
ಹಾಗೇ ಅದೆಷ್ಟು ಹೊತ್ತು ಕುಳಿತಿದ್ದೆನೋ, ಬಾಗಿಲ ಬಳಿ ಸದ್ದಾಗಿ ಅತ್ತ ತಿರುಗಿದೆ.  ನಾಗಲಿಂಗಂ ಒಳಬಂದ.  ನನ್ನ ಅನುಮತಿಗೂ ಕಾಯದೇ ಛೇರ್ ಎಳೆದುಕೊಂಡು ಕೂತ.  "ಹೇಗಿದ್ದೀರಿ ಸಾರ್ನೋಡಿ ನಾಲ್ಕೈದು ದಿನಗಳೇ ಆಗಿಬಿಟ್ಟಿವೆ ಅಲ್ವಾ?" ಅಂದ.  ನಾನು ಮೌನವಾಗಿ ಅವನನ್ನೇ ನೋಡಿದೆ.  ಆ ಗಳಿಗೆಯಲ್ಲಿ ನನಗೆ ಬೇಡವಾಗಿದ್ದ ಮನುಷ್ಯ ಅವನು.
"ಯಾಕ್ ಸಾರ್, ಮಾತೇ ಆಡ್ತಿಲ್ಲನನ್ ಮೇಲೆ ಬೇಜಾರಾ, ಆವತ್ತು ಕ್ಲಾಸ್‌ರೂಮಿಗೆ ಕರಕೊಂಡು ಹೋಗಿ ಬಿಟ್ಟದ್ದನ್ನ ಇನ್ನೂ ಮರೆತಿಲ್ವಾ ನೀವುನಾನಂತೂ ಅದನ್ನ ಆವತ್ತೇ ಮರೆತೆ" ಎನ್ನುತ್ತಾ ನಕ್ಕ.  ಒಮ್ಮೆ ಕೆಮ್ಮಿ "ನೀವಷ್ಟೇ ಅಲ್ಲ, ಮತ್ಯಾರೂ ನನ್ನ ಪರ್ಸನಲ್ ವಿಷಯಕ್ಕೆ ತಲೆಹಾಕಬಾರದು ಅಂತ ಆವತ್ತೇ ನಿರ್ಧಾರ ಮಾಡ್ದೆ.  ನನ್ ಹೆಂಡ್ತಿ ಕಥೆ ಮುಗಿದೋಯ್ತು."
ನಾನು ಬೆಚ್ಚಿದೆ.  "ಏನು ಮಾಡ್ದೆ ಅವಳಿಗೆ?"  ನನಗರಿವಿಲ್ಲದಂತೇ ಚೀರಿದೆ.
ಅವನು ನಕ್ಕ.  "ನಾನೇನೂ ಮಾಡ್ಲಿಲ್ಲ ಸಾರ್.  ನೋಡು, ನಿನ್ ಮೇಲೆ ನಂಗೆ ರವಷ್ಟೂ ಇಷ್ಟ ಇಲ್ಲ.  ನಂಗೀಗ ಬೇಕಾಗಿರೋವ್ಳು ಸುಮತಿ.  ಅವಳನ್ನ ಕಟ್ಕೋತೀನಿ.  ನೀನು ಈ ಗಳಿಗೇಲಿ ಜಾಗ ಖಾಲಿ ಮಾಡ್ಬೇಕು.  ಈ ಮನೆಯಿಂದಷ್ಟೆ ಅಲ್ಲ, ಈ ಪ್ರಪಂಚದಿಂದ್ಲೇ ತೊಲಗಿಹೋಗ್ಬೇಕು.  ನಾನೀಗ ಬೀಚ್ ಕಡೆ ಒಂದು ವಾಕಿಂಗ್ ಹೋಗ್ತೀನಿ.  ಸರಿಯಾಗಿ ಅರ್ಧಗಂಟೆ ಕಳೆದು ಬರ್ತೀನಿ.  ಅಷ್ಟರ ಒಳಗೆ ನೀನು ಜೀವಸಹಿತ ಇರಬಾರದು.  ನೆನಪಿಟ್ಕೋ" ಅಂತ ಹೇಳಿದೋನು ಮತ್ತೆ ಅವಳ ಕಡೆ ತಿರುಗಿದ್ರೆ ಕೇಳಿ.  ಹೇಳಿದ ಹಾಗೇ ಅರ್ಧಗಂಟೆಗೆ ಮನೆಗೆ ಬಂದೆ.  ಅವ್ಳು ಫ್ಯಾನ್‌ನಲ್ಲಿ ನೇತಾಡ್ತಿದ್ಲು.  ಅಷ್ಟೇ."  ನಿರ್ವಿಕಾರವಾಗಿ ಹೇಳಿ ಹಿಂದಕ್ಕೆ ಒರಗಿದ.  ಪ್ರತಿಕ್ರಿಯಿಸಲಾಗದಷ್ಟು ಜರ್ಝರಿತಗೊಂಡಿದ್ದ ನನ್ನನ್ನೇ ನೋಡುತ್ತಾ ಮುಂದುವರೆಸಿದ: "ನಾನು ನಿಮ್ಮಷ್ಟು ಓದಿಲ್ಲ.  ಕಷ್ಟಪಟ್ಟು ಟೆಂತ್ ಮುಗಿಸ್ದೆ.  ನಿಮ್ಮ ಹಾಗೆ ಇಂಗ್ಲೆಂಡು, ಅಮೆರಿಕಾ ಅಂದ್ಕೊಂಡು ಪ್ರಪಂಚ ಸುತ್ತಿದೋನಲ್ಲ ನಾನು.  ಹುಟ್ಟಿದ ಈ ಕಾಲಾಪೇಟೆ ಹಳ್ಳೀನಲ್ಲೇ ಮೂವತ್ತಾರು ವರ್ಷ ಕಳೆದ್ದೀನಿ.  ನಾ ನೋಡಿರೋ ಪಟ್ಟಣಗಳು ಅಂದ್ರೆ ಪಾಂಡಿಚೆರಿ, ಪಕ್ಕದ ಕಡಲೂರು, ವಿಲ್ಲುಪುರಂ ಮಾತ್ರ.  ಚೆನ್ನೈ ನೋಡಿರೋದು ಸಿನಿಮಾದಲ್ಲಿ ಅಷ್ಟೇ.  ಆದ್ರೆ ಈ ಹೆಂಗಸರ ಜತೆ ಹೇಗೆ ನಡಕೋಬೇಕು ಅನ್ನೋದನ್ನ ಮಾತ್ರ ಚೆನ್ನಾಗಿ ತಿಳಕೊಂಡಿದ್ದೀನಿ.  ಹೆಂಗಸರ ವಿಷಯದಲ್ಲಿ ಖಡಕ್ ಆಗಿರಬೇಕು ಸಾರ್.  ನಿಮಗೆ ಏನೇನೂ ಗೊತ್ತಿಲ್ಲ.  ಇಷ್ಟವಾದ ಹೆಣ್ಣನ್ನ ಹೆಗಲ ಮೇಲೆ ಕೂರಿಸ್ಕೊಂಡು ಊರೆಲ್ಲಾ ಸುತ್ತಿಸ್ಬೇಕು.  ಇಷ್ಟವಿಲ್ಲದೋಳ್ನ ಆ ಗಳಿಗೇಲೇ ಟಾಯ್ಲೆಟ್ಟಿಗೆ ಎಸೆದು ಮೂರು ಬಕೀಟು ನೀರು ಹಾಕಿಬಿಡಬೇಕು..."
ಈ ನರರಾಕ್ಷಸನನ್ನು ಇಲ್ಲೇ ಹೂತುಬಿಡಬೇಕೆನಿಸಿತು.  ಕೈ ಎತ್ತಿದೆ.  ಅದು ಕುರ್ಚಿಯ ತೋಳಿನಲ್ಲಿ ಸತ್ತು ಬಿದ್ದುಕೊಂಡಿತ್ತು.
ಸೆಲ್ ಫೋನ್ ಹೊಡೆದುಕೊಂಡಿತು.  "ಅದೇನೋ ಮಾತಾಡಿ ಸಾರ್.  ಆಮೇಲೆ ಬರ್ತೀನಿ" ಎನ್ನುತ್ತಾ ಅವನು ಎದ್ದುಹೋದ.  ಅವನು ಹಾಕಿದ್ದ ಮೋಡಿ ಕಳಚಿದಂತೆ ಕೈ ಮೇಲೆದ್ದಿತು.
ಫೋನನ್ನು ಕಿವಿಗೆ ಹಿಡಿದೆ.  ಅತ್ತಲಿಂದ ಅರುಂಧತಿ ಮಾತಾಡುತ್ತಿದ್ದಳು.
"ರೀ, ಮುಂದಿನವಾರ ನಂಗೆ ರಜಾ ಸಿಗೋದಿಲ್ಲಾರೀ.  ಪಾಂಡಿಚೆರಿಗೆ ಬರೋಕೆ ಆಗಲ್ಲ.  ಬೇಜಾರು ಮಾಡ್ಕೋಬೇಡಿ, ಪ್ಲೀಸ್.  ನೀವೇ ಇಲ್ಲಿಗೆ ಬಂದ್ಬಿಡ್ರೀ.  ನೀವಾಗಿ ಬರ್ತಿದ್ದೋರನ್ನ ಬೇಡ, ಅಲ್ಲೇ ಇರಿ ಅಂತ ಹೇಳಿ ತಪ್ಪು ಮಾಡಿದೆನಲ್ಲಾ ನಾನು ಅಂತ ಬೇಜಾರಾಗ್ತಿದೆ.  ನೀವು ಬೇಜಾರು ಮಾಡ್ಕೋಬೇಡೀಪ್ಪಾ, ಪ್ಲೀಸ್.  ನಾವೆಲ್ಲಾ ನಿಮ್ಮನ್ನ ತುಂಬಾ ಮಿಸ್ ಮಾಡ್ಕೋತಾ ಇದೀವಿ..."  ಅವಳು ಹೇಳುತ್ತಲೇ ಇದ್ದಳು.
"ಪರವಾಗಿಲ್ಲ ಬಿಡು, ನಾನೇ ಬರ್ತೀನಿ" ಅಂದೆ.  "ನೀನೊಂದು ನಕ್ಷತ್ರವಾಗಲೇಬೇಕು ಅಂತೇನೂ ಇಲ್ಲ.  ನಿನ್ನ ಮನೆಯಲ್ಲಿ ಸದಾ ಉರಿವ ಒಂದು ಹಣತೆಯಾದರೂ ಸಾಕು" ಎಂದು ನಾನು ಎಸ್ಸೆಸ್ಸೆಲ್ಸಿ ಮುಗಿಸಿ ಕೊಳ್ಳೇಗಾಲದ ಎಂ ಸಿ ಕೆ ಸಿ ಹೈಸ್ಕೂಲ್ ಬಿಡುತ್ತಿದ್ದಾಗ ಸೌಭಾಗ್ಯ ಮೇಡಂ ನನ್ನ ಆಟೋಗ್ರಾಫ್ ಪುಸ್ತಕದಲ್ಲಿ ಬರೆದದ್ದು ಏಕಾಏಕಿ ನೆನಪಾಯಿತು.
"ಸೌಭಾಗ್ಯ ಮೇಡಂ, ನೀವೇಕೆ ಈ ನಾಗಲಿಂಗನಿಗೆ ಟೀಚರ್ ಆಗಲಿಲ್ಲ?"  ದನಿಯೆತ್ತರಿಸಿ ಕೂಗಿದೆ.

--***೦೦೦***--

ಅಕ್ಟೋಬರ್ ೫, ೨೦೦೮

4 comments:

  1. ಬಹಳ ಗ೦ಭೀರ ವಿಷಯದ ಬಗ್ಗೆ ಲಘು ಧಾಟಿಯಲ್ಲಿ ಬರೆದ ಒಳ್ಳೆಯ ಕಥೆ, ಒಮ್ಮೆ ಹೊಟ್ಟೆ ತು೦ಬ ನಕ್ಕು ಬಿಟ್ಟೆ ! ಇ೦ಥದೇ ಒಬ್ಬ ವ್ಯಕ್ತಿ ನಮ್ಮೂರಲ್ಲೂ ಇದ್ರು, ತಮ್ಮಷ್ಟೇ ಸ್ಥೂಲ ಕಾಯದ ಮೊದಲ ಹೆ೦ಡತಿಯನ್ನು "ಡಬ್ಬಲ್ ಸೀಟು" ಅ೦ತಲೇ ಕರೆಯುತ್ತಿದ್ದರು, ಅವಳಿ೦ದ ಮಗನಾಗಲಿಲ್ಲ ಅ೦ತ ೫೦ ರ ಬಳಿಕ ೨ ನೇ ಮದುವೆಯಾಗಿ, ಮತ್ತೂ ಮೂರೋ ನಾಲ್ಕೋ ಸ೦ತತಿ ಬೆಳೆಸಿದವರು, ತಮ್ಮ ತಮ್ಮನೊ೦ದಿಗೆ ಏನೋ ಮನಸ್ತಾಪವೋ, ಹುಚ್ಚು ಸ್ಪರ್ಧೆಯೋ, ಇಬ್ಬರೂ ಸಮಾನ ಜರ್ಝರಿತರಾಗಿ ಕೊನೆ ಎಣಿಸುತ್ತಿದ್ದಾಗ, ತಮ್ಮನಲ್ಲಿ ಬ೦ದು,"ಆನು ನಿನ್ನ ವಡೆ ಸುಟ್ಟವು ತಿನ್ನುತ್ತೇ" ಅ೦ತ ಪ೦ಥ ಹಾಕಿ, (ನಮ್ಮಲ್ಲಿ ತಿಥಿಗೆ ಈ ವಡೆ ಸುಟ್ಟವು ಅತಿ ಅವಶ್ಯ ತಿನಿಸು !) ತಮ್ಮ ಸತ್ತು ಒ೦ದೆರಡು ತಿ೦ಗಳಲ್ಲೇ ತಾನೂ ಪರಲೋಕ ಸೇರಿದ್ದರು. ಎಪ್ಪತ್ತೆ೦ಭತ್ತು ಎಕ್ರೆ ಭೂಮಿ ಮಾಡೀಕೊ೦ಡಿದ್ದವರು ಈ ಅಡಿಕೆ ಭಟ್ರು ! ಏನೇ ಹೇಗೇ ಮಾಡಿದ್ರೂ ಅರಗಿಸಿಕೊಳ್ಳುವವರು.

    ReplyDelete
    Replies
    1. ಕಥೆ ಇಷ್ಟಪಟ್ಟದ್ದಕ್ಕೆ ಕೃತಜ್ಞತೆಗಳು. ನಿಮ್ಮೂರಿನ ಅಡಿಕೆ ಭಟ್ಟರು ಸ್ವಾರಸ್ಯಕರ ವ್ಯಕ್ತಿ. ಸ್ವಂತ ತಮ್ಮನನ್ನು ಹಾಗೆ ದ್ವೇಷಿಸಲು ಅದೆಂಥಾ ಕಾರಣವಿತ್ತೋ. ಅದು ಕುತೂಹಲದ ಜತೆ ಬೇಸರವನ್ನೂ ಉಂಟುಮಾಡುತ್ತದೆ.

      Delete
  2. ಅ೦ತವರ ವ್ಯಕ್ತಿತ್ವದ ವೈಚಿತ್ರ ಅಲ್ಲವೇ ಅದು, ನೀವೆ೦ದ೦ತೆ "ನೀನೊಂದು ನಕ್ಷತ್ರವಾಗಲೇಬೇಕು ಅಂತೇನೂ ಇಲ್ಲ. ನಿನ್ನ ಮನೆಯಲ್ಲಿ ಸದಾ ಉರಿವ ಒಂದು ಹಣತೆಯಾದರೂ ಸಾಕು" ಎ೦ಬ ಹಣತೆ ಅವರೊಳಗೆ ಯಾವತ್ತೂ ಬೆಳಗುವುದೇ ಇಲ್ಲ.

    ReplyDelete
    Replies
    1. ಹೌದಲ್ಲವೇ! ಎಂಥ ದುರಂತ ಅದು!

      Delete