ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, May 10, 2012

ಲೇಖನ- "ಅಫ್ಘನ್ ಯುದ್ಧ: ಮುಂದಿನ ದಿನಗಳ ಆತಂಕಗಳು"



ಕಳೆದ ವಾರ ಒಸಾಮಾ ಬಿನ್ ಲಾಡೆನ್‌ನ ವರ್ಷಾಂತಿಕದ ಸಂದರ್ಭದಲ್ಲಿ ಅಧ್ಯಕ್ಷ ಒಬಾಮಾ ಕಾಬೂಲ್‌ಗೆ ದಿಢೀರ್ ಭೇಟಿ ನೀಡಿ ೨೦೧೪ರಲ್ಲಿ ಅಫ್ಘನ್ ಯುದ್ಧವನ್ನು ನಿಲುಗಡೆಗೆ ತರುವ ಬಗೆಗಿನ ಒಪ್ಪಂದವೊಂದಕ್ಕೆ ಸಹಿಹಾಕಿದ್ದಾರೆ.  ಯುದ್ಧನಿಲುಗಡೆಯ ಬಗೆಗಿನ ಹೇಳಿಕೆಗಳು ಹಲವು ತಿಂಗಳುಗಳಿಂದಲೂ ಹೊರಬರುತ್ತಿದ್ದರೂ ಅಧ್ಯಕ್ಷ ಒಬಾಮಾರ ಕಾಬೂಲ್ ಭೇಟಿಯ ಸಂದರ್ಭ ಮತ್ತು ಒಪ್ಪಂದದ ಸ್ವರೂಪ ಅಮೆರಿಕನ್ ಇತಿಹಾಸದಲ್ಲೇ ಅತಿ ಧೀರ್ಘವಾದ ಈ ಯುದ್ದದ ಬಗೆಗಿನ ಗಂಭೀರ ಚರ್ಚೆಗೆ ವೇದಿಕೆ ಸಿದ್ಧಪಡಿಸಿವೆ.  ಹನ್ನೊಂದೂವರೆ ವರ್ಷಗಳ ಹಿಂದೆ ಅಫ್ಘನ್ ನೆಲಕ್ಕೆ ಕಾಲಿರಿಸಿದ ಅಮೆರಿಕನ್ ಸೇನೆ ಅಲ್ಲಿ ತನ್ನ ಉದ್ದೇಶಗಳನ್ನು ಸಾಧಿಸಿಯಾಗಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಈ ಚರ್ಚೆಯನ್ನು ಪ್ರಾರಂಭಿಸಬೇಕು.
ಎರಡೂಕಾಲು ಶತಮಾನಗಳಿಗೂ ಅಧಿಕವಾದ ತನ್ನ ಇತಿಹಾಸದಲ್ಲಿ ಅಮೆರಿಕಾದ ರಾಜಧಾನಿ ಶತ್ರುಧಾಳಿಗೊಳಗಾದದ್ದು ಎರಡು ಬಾರಿ.  ೧೮೧೨-೧೬ರ ಯುದ್ಧದಲ್ಲಿ ಉತ್ತರದ ಕೆನಡಾದಿಂದ ಮುಂದೊತ್ತಿ ಬಂದ ಬ್ರಿಟಿಷ್ ಸೇನೆ ಅಮೆರಿಕನ್ ಸೇನೆಯನ್ನು ಬಗ್ಗುಬಡಿದು ವಾಷಿಂಗ್‌ಟನ್ ನಗರವನ್ನು ಪ್ರವೇಶಿಸಿ ಅಧ್ಯಕ್ಷರ ನಿವಾಸಕ್ಕೆ ಬೆಂಕಿಯಿಟ್ಟಾಗ ಅಧ್ಯಕ್ಷ್ಶ ಜೇಮ್ಸ್ ಮ್ಯಾಡಿಸನ್ ರಾಜಧಾನಿಯನ್ನು ತೊರೆದು ಓಡಿಹೋಗಿದ್ದರು.  ಸರಿಸುಮಾರು ಎರಡು ಶತಮಾನಗಳಷ್ಟು ಧೀರ್ಘ ವಿರಾಮದ ನಂತರ, ದಶಕದ ಹಿಂದೆ ಸೆಪ್ಟೆಂಬರ್ ೧೧, ೨೦೦೧ರ ಮಂಗಳವಾರದ ಆ ನಿರ್ಣಾಯಕ ಬೆಳಗಿನಲ್ಲಿ ಕುಖ್ಯಾತ ಧಾರ್ಮಿಕ ಭಯೋತ್ಪಾದಕ ಸಂಘಟನೆ ಅಲ್ ಖಯೀದಾ ಕೇವಲ ಪ್ರಯಾಣಿಕರ ವಿಮಾನಗಳನ್ನೇ ಅಸ್ತ್ರಗಳನ್ನಾಗಿ ಬಳಸಿ ಇಪ್ಪತ್ತನೇ ಶತಮಾನದ ಯಾವುದೇ ಶತ್ರುಗಳಾದ ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್‌ಗಳು ಎಸಗಲಾಗದಿದ್ದಷ್ಟು ಹಾನಿಯನ್ನು ಅಮೆರಿಕಾಗೆ ಎಸಗಿದಾಗ ಅಧ್ಯಕ್ಷ ಜಾರ್ಚ್ ಬುಶ್ ಸಹಾ ಹಲವಾರು ಗಂಟೆಗಳ ಕಾಲ ತಲೆಮರೆಸಿಕೊಂಡಿದ್ದರು.  ಅಲ್ ಖಯೀದಾ ಅಮೆರಿಕನ್ನರಲ್ಲಿ ಬಿತ್ತಿದ್ದು ಅತೀವ ಭೀತಿ.  ಆ ದಿನ ಹೆದರದ ಅಮೆರಿಕನ್ನನೇ ಇರಲಿಲ್ಲ.  ಆ ಭೀತಿ ಆಕ್ರೋಶವಾಗಿ ಬದಲಾಗಿ ಸೇಡಿಗಾಗಿ ಹಾತೊರೆದ ಅಮೆರಿಕಾ ಅಲ್ ಖಯೀದಾಗೆ ನೆಲೆ ನೀಡಿದ್ದ ಅಫಘಾನಿಸ್ತಾನದ ತಾಲಿಬಾನ್ ಸರಕಾರವ ಮೂಲೋತ್ಪಾಟನೆ ಮಾಡುವ ಹಠ ತೊಟ್ಟದ್ದು, ಪರಿಣಾಮವಾಗಿ ಅಮೆರಿಕಾ ನೇತೃತ್ವದ ನ್ಯಾಟೋ ಸೇನೆ ಅಕ್ಟೋಬರ್ ೨೦೦೧ರ ಮೊದಲ ವಾರ ಅಫಘಾನಿಸ್ತಾನವನ್ನು ಪ್ರವೇಶಿಸಿದ್ದು ಈಗ ಇತಿಹಾಸ.
ಈ ಹನ್ನೊಂದೂವರೆ ವರ್ಷಗಳಲ್ಲಿ ಏನಾಗಿದೆ?
ತಾಲಿಬಾನ್ ಸರಕಾರವನ್ನು ಕಿತ್ತೊಗೆದ ಅಮೆರಿಕಾ ಕಾಬೂಲ್‌ನಲ್ಲಿ ಹಮೀದ್ ಕರ್ಜಾಯ್ ಸರಕಾರವನ್ನು ಅಸ್ತಿತ್ವಕ್ಕೆ ತಂದಿತೇನೋ ನಿಜ.  ಆದರೆ ಕರ್ಜಾಯ್ ಸರಕಾರ ತನ್ನ ಸ್ವಸಾಮರ್ಥ್ಯದಿಂದ ಒಂದುದಿನವೂ ಅಧಿಕಾರದಲ್ಲಿ ಉಳಿಯಲಾರದು ಎನ್ನುವುದು ಅದು ಅಸ್ತಿತ್ವಕ್ಕೆ ಬಂದ ಈ ಎಂಟುವರ್ಷಗಳಲ್ಲಿ ಶತಸಿದ್ಧವಾಗಿದೆ.  ತಾಲಿಬಾನ್ ರಾಜಕೀಯ ಅಧಿಕಾರವನ್ನು ಕಳೆದುಕೊಂಡಿದ್ದರೂ ಮುಲ್ಲಾ ಒಮರ್ ಸೇರಿದಂತೆ ಅದರ ನಾಯಕರು ನೆರೆಯ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿ ನೆಲೆಯೂರಿದ್ದಾರೆ ಮತ್ತು ಅಲ್ಲಿಂದಲೇ ತಮ್ಮ ನ್ಯಾಟೋ ವಿರುದ್ಧದ ಕಾರ್ಯಾಚರಣೆಗಳನ್ನು ನಿರ್ದೇಶಿಸುತ್ತಿದ್ದಾರೆ.  ಪರಿಣಾಮವಾಗಿ ಅಫಘಾನಿಸ್ತಾನದ ಮೂರನೇ ಎರಡರಷ್ಟು ಪ್ರದೇಶದಲ್ಲಿ ತಾಲಿಬಾನ್ ಪ್ರಭಾವಶಾಲಿಯಾಗಿದೆ ಮತ್ತು ರಾಜಧಾನಿ ಕಾಬೂಲ್‌ನಲ್ಲಿಯೂ ಅದು ಸಕ್ರಿಯವಾಗಿದೆ.  ಇದರರ್ಥ ತಾಲಿಬಾನ್‌ನ ಮೂಲೋತ್ಪಾಟನೆ ಮಾಡುವುದರಲ್ಲಿ ಅಮೆರಿಕಾ ಮತ್ತು ನ್ಯಾಟೋ ನಿರ್ಣಾಯಕವಾಗಿ ಸೋತಿವೆ.
ಈ ಸೋಲಿನ ಸುಳಿವು ಅಮೆರಿಕಾಗೆ ಮೂರು ವರ್ಷಗಳಿಗೂ ಹಿಂದೆಯೇ ಸಿಕ್ಕಿತ್ತು.  ಪರಿಣಾಮವಾಗಿಯೇ ಅದು ತಾಲಿಬಾನಿಗಳನ್ನು ಒಳ್ಳೆಯ ತಾಲಿಬಾನಿ ಹಾಗೂ ಕೆಟ್ಟ ತಾಲಿಬಾನಿ ಎಂದು ವಿಂಗಡಿಸುವ ಮತ್ತು ಒಳ್ಳೆಯ ತಾಲಿಬಾನಿಗಳ ಜತೆ ಸ್ನೇಹ ಸಂಪರ್ಕ ಏರ್ಪಡಿಸುವುದನ್ನು ಸಮರ್ಥಿಸುವ ಅಚಿಟಿoಟಿ ಆoಛಿಣಡಿiಟಿe ಅಥವಾ ಂussie oಛಿಣಡಿiಟಿe ಬಗ್ಗೆ ಒಲವು ತೋರಿತ್ತು.  ಈ ತತ್ವದ ಪ್ರಕಾರ ಸಾಂದರ್ಭಿಕ ಒತ್ತಡದಿಂದಾಗಿ ತಾಲಿಬಾನ್ ಸಂಘಟನೆಯನ್ನು ಸೇರಿರುವವರು ಒಳ್ಳೆಯ ತಾಲಿಬಾನಿಗಳು.  ಇವರಲ್ಲಿ ಇಸ್ಲಾಮಿಕ್ ಮೂಲಭೂತವಾದದ ಬಗ್ಗೆ ತೀವ್ರ ಒಲವೇನೂ ಇರುವುದಿಲ್ಲ, ಹೀಗಾಗಿ ಇವರನ್ನು ಆ ಹಾದಿಯಿಂದ ಸುಲಭವಾಗಿ ವಿಮುಖಗೊಳಿಸಬಹುದು.  ಅಷ್ಟೇ ಅಲ್ಲ, ಇವರು ಕರ್ಜಾಯ್ ಸರಕಾರದ ಜತೆ ಕೈಜೋಡಿಸುವಂತೆ ಮಾಡುವ ಮೂಲಕ ಅಫಫಾನಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಸ್ಥಾಪಿಸಬಹುದು ಮತ್ತು ಅಫ್ಭನ್ ಸಮಾಜದಲ್ಲಿ ಕೆಟ್ಟ ತಾಲಿಬಾನಿಗಳ ಪ್ರಭಾವವನ್ನು ನಿಗ್ರಹಿಸಬಹುದು.
ಈ ತತ್ವದ ಸೃಷ್ಟಿಕರ್ತ ಆಸ್ಟ್ರೇಲಿಯನ್ ಸೇನೆಯ ಮಾಜೀ ಲೆಫ್ಟಿನೆಂಟ್ ಕರ್ನಲ್ ಡೇವಿಡ್ ಕಿಲ್‌ಕಲೆನ್.  ಈತ ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಸೇನೆಯಿಂದ ನಿವೃತ್ತನಾದಂದಿನಿಂದಲೂ ಅಮೆರಿಕಾದ ಅಧ್ಯಕ್ಷರಿಗೆ ಇರಾಕ್, ಅಫಘಾನಿಸ್ತಾನ್, ಪಾಕಿಸ್ತಾನಗಳ ಬಗ್ಗೆ, ಅಂತರರಾಷ್ಟ್ರೀಯ ಭಯೋತ್ಪಾದನೆಯ ನಿಗ್ರಹದ ಮಾರ್ಗೋಪಾಯಗಳ ಬಗ್ಗೆ ಸಲಹೆ ನೀಡುತ್ತಿದ್ದಾನೆ.  ಈ ವಿಷಯಗಳ ಬಗ್ಗೆ ಈತನ ಜ್ಞಾನ ಅಪಾರ ಹಾಗೂ ಈತನ ಸಲಹೆಗಳಿಗೆ ಶ್ವೇತಭವನ ಮತ್ತು ಪೆಂಟಗನ್‌ಗಳಲ್ಲಿ ತುಂಬ ಮಹತ್ವವಿದೆ.
ಈ ಕಿಲ್‌ಕಲೆನ್‌ನ ಉಪದೇಶವನ್ನು ಆಚರಣೆಗೆ ತರಲು ಒಬಾಮಾ ಸರಕಾರ ತನ್ನ ಅಧಿಕಾರಾವಧಿಯ ಆರಂಭದಿಂದಲೂ ಪ್ರಯತ್ವಪಟ್ಟಿದೆ.  ಆದಾಗ್ಯೂ, ತಾಲಿಬಾನಿಗಳಲ್ಲಿ ಒಳ್ಳೆಯ ತಾಲಿಬಾನಿಗಳನ್ನು ಗುರುತಿಸುವಲ್ಲಿ ಮತ್ತು ಅವರನ್ನು ಭಯೋತ್ಪಾದನೆ ಹಾಗೂ ಧಾರ್ಮಿಕ ಮೂಲಭೂತವಾದದಿಂದ ವಿಮುಖಗೊಳಿಸುವಲ್ಲಿ ಇದುವರೆಗೂ ಅಮೆರಿಕಾಗೆ ಯಾವ ಯಶಸ್ಸೂ ದೊರೆತಿಲ್ಲ.  ಈ ಬಗ್ಗೆ ತೀರಾ ಇತ್ತೀಚಿನ ಪ್ರಯತ್ನವೂ ವಿಫಲವಾಗಿದೆ.  ಒಳ್ಳೆಯ ತಾಲಿಬಾನಿಗಳನ್ನು ತಮ್ಮತ್ತ ಸೆಳೆಯುವ ನವೀನ ಪ್ರಯತ್ನಗಳ ರೂಪರೇಷೆಗಳ ಕುರಿತಾಗಿ ಅಮೆರಿಕನ್, ಅಫ್ಘನ್ ಮತ್ತು ಪಾಕಿಸ್ತಾನೀ ಅಧಿಕಾರಿಗಳು ಏಪ್ರಿಲ್ ೨೬ರಂದು ಚರ್ಚುಸಿ ಸಹಿ ಹಾಕಿದ ಒಪ್ಪಂದಕ್ಕೆತಾಲಿಬಾನ್ ಉಗ್ರ ವಿರೋಧ ವ್ಯಕ್ತಪಡಿಸಿದೆ.  ತಮ್ಮ ಒಗ್ಗಟ್ಟನ್ನು ಮುರಿಯವ ವೈರಿಯ ಹುನ್ನಾರ ಯಶಸ್ವಿಯಾಗದು, ಅದಕ್ಕೆ ನಾವು ಖಂಡಿತವಾಗಿಯೂ ಅವಕಾಶ ಕೊಡುವುದಿಲ್ಲ ಎಂದು ತಾಲಿಬಾನಿ ನಾಯಕರು ಘೋಷಿಸಿದ್ದಾರೆ.  ಅಷ್ಟೇ ಅಲ್ಲ, ಅಧ್ಯಕ್ಷ ಒಬಾಮಾ ಕಾಬೂಲ್‌ನಿಂದ ನಿರ್ಗಮಿಸುತ್ತಿದ್ದಂತೇ ಆ ನಗರದಲ್ಲಿ ಹಲವಾರು ಸ್ಫೋಟಗಳನ್ನು ನಡೆಸಿ ತಮ್ಮ ವಿನಾಶಕಾರಿ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಇದು ಸಾಲದು ಎಂಬಂತೆ ಅಫ್ಘನ್ ಜನತೆಯನ್ನು ತಮ್ಮತ್ತ ಸೆಳೆಯುವ ಬಗೆಗಿನ ಪ್ರಯತ್ನಗಳಲ್ಲೂ ಅಮೆರಿಕಾ ಮತ್ತು ನ್ಯಾಟೋ ಹೇಳಿಕೊಳ್ಳುವ ಯಶಸ್ಸು ಗಳಿಸಿಲ್ಲ.  ತಾಲಿಬಾನ್ ಜತೆಗಿನ ಯುದ್ಧದ ಜತೆಜತೆಯೇ ಅಫ್ಘನ್ ಜನತೆಯ ಜೀವನಮಟ್ಟವನ್ನು ಉತ್ತಮಪಡಿಸುವುದಕ್ಕಾಗಿ ಅಮೆರಿಕಾ ಅಗಾಧ ಪ್ರಮಾಣದಲ್ಲಿ ಹಣವನ್ನು ಆ ದೇಶದಲ್ಲಿ ಸುರಿಯುತ್ತಿರುವುದೇನೋ ನಿಜ.  ಆದರೆ ಇದರಲ್ಲಿ ಹೆಚ್ಚಿನ ಪಾಲು ಅಫ್ಘನ್ ಸರಕಾರದ ಭ್ರಷ್ಟಾಚಾರೀ ಅಧಿಕಾರಿಗಳ ಜೇಬು ಸೇರಿ ಜನರಿಗೆ ನೌಕರಿ ನೀಡುವಂತಹ ಅದೆಷ್ಟೋ ಅಭಿವೃದ್ಧಿ ಯೋಜನೆಗಳ ಅನುಷ್ಟಾನ ಕೇವಲ ಕಾಗದದ ಮೇಲಷ್ಟೇ ಉಳಿದಿದೆ.  ಹೀಗಾಗಿ ಸರಕಾರದ ಬಗ್ಗೆ ಭ್ರಮನಿರಸನಗೊಂಡ ಜನತೆ ತಾಲಿಬಾನ್‌ನತ್ತ ತಿರುಗುವ ಪ್ರಕ್ರಿಯೆ ೨೦೦೮ರಿಂದಲೂ ನಡೆಯುತ್ತಿದೆ.  ಜತೆಗೇ, ಗ್ರಾಮೀಣ ಅಫಘಾನಿಸ್ತಾನದ ಬಹುತೇಕ ಜನರು ತಮ್ಮ ಅದಾಯಕ್ಕಾಗಿ ಅಫೀಮು ಬೆಳೆಗೆ ಮೊರೆಹೋಗಿದ್ದಾರೆ.  ಈ ಅಫೀಮು ಅಂತಿಮವಾಗಿ ಅಮೆರಿಕಾವನ್ನೇ ತಲುಪಿ ಅಲ್ಲಿನ ಯುವಸಮುದಾಯದ ಆರೋಗ್ಯವನ್ನು ಹದಗೆಡಿಸುತ್ತಿದೆ.  ಈ ನಿಟ್ಟಿನಲ್ಲೂ ಅಮೆರಿಕಾ ಸೋತಿದೆ.
ಮೇಲೆ ವಿವರಿಸಿದ ಪ್ರತಿಕೂಲ ಪರಿಸ್ಥಿತಿಗಳು ಇನ್ನೆರಡು ವರ್ಷಗಳಲ್ಲಿ ಸರಿಹೋಗುವ ಯಾವ ಸೂಚನೆಯೂ ಇಲ್ಲ.  ಹೀಗಿರುವಾಗ ಅಮೆರಿಕಾ ೨೦೧೪ರಲ್ಲಿ ತನ್ನ ಸೈನಿಕ ಕಾರ್ಯಾಚರಣೆಯನ್ನು ನಿಲುಗಡೆಗೆ ತಂದರೆ ಎನಾಗಬಹುದು?
ಈಗಾಗಲೇ ಅಫಗಾನಿಸ್ತಾನದ ಮೂರನೆಯ ಎರಡರಷ್ಟು ಪ್ರದೇಶದಲ್ಲಿ ಪ್ರಭಾವ ವಿಸ್ರರಿಸಿಕೊಂಡಿರುವ ತಾಲಿಬಾನ್ ಮತ್ತಷ್ಟು ಸಕ್ರಿಯವಾಗುವುದು ನಿಶ್ಚಯ.  ಅದನ್ನು ನಿಗ್ರಹಿಸುವ ಸಾಮರ್ಥ್ಯ ಈಗಷ್ಟೇ ಕಣ್ಣುಬಿಡುತ್ತಿರುವ ಅಫ್ಘನ್ ಸರಕಾರೀ ಸೇನೆಗಿಲ್ಲ.  ಪರಿಣಾಮವಾಗಿ ತಾಲಿಬಾನ್ ಕಾಬೂಲ್‌ನಲ್ಲಿ ಮತ್ತೊಮ್ಮೆ ಅಧಿಕಾರ ಗಳಿಸಲು ದಾರಿ ಸುಗಮವಾಗುತ್ತದೆ.  ಈ ಬೆಳವಣಿಗೆ ಅಮೆರಿಕಾ ಮತ್ತದರ ಮಿತ್ರರಾಷ್ಟ್ರಗಳ ಮೇಲೆ ಹಿಂದೆಂದಿಗಿಂತಲೂ ಅಧಿಕವಾದ ಋಣಾತ್ಮಕ ಪರಿಣಾಮ ಬೀರುತ್ತದೆ.  ತನ್ನ ಹಿಂದಿನ ಅಧಿಕಾರಾವಧಿಯಲ್ಲಿ ಅಲ್ ಖಯೀದಾದಂತಹ ಘಾತಕ ಸಂಘಟನೆಗೆ ಆಶ್ರಯವಿತ್ತ ತಾಲಿಬಾನ್ ಅದೇ ಕೃತ್ಯವನ್ನು ಮತ್ತೊಮ್ಮೆ ಎಸಗುವುದರಲ್ಲಿ ಸಂದೇಹವಿಲ್ಲ.  ಪರಿಣಾಮವಾಗಿ ಈ ದಿನಗಳಲ್ಲಿ ಬಲಹೀನಗೊಂಡಿರುವ ಅಲ್ ಖಯೀದಾ ಮತ್ತೊಮ್ಮೆ ಬಲಿಷ್ಟವಾಗುತ್ತದೆ ಮತ್ತು ಲಾಡೆನ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ತನ್ನ ಯೋಜನೆಗಳನ್ನು ಮತ್ತಷ್ಟು ರೊಚ್ಚಿನಿಂದ ಅನುಷ್ಟಾನಕ್ಕೆ ತರುತ್ತದೆ.  ಇದು ಅಮೆರಿಕಾ ಮತ್ತು ಪಶ್ಚಿಮ ಯೂರೋಪ್‌ಗೆ ಒಳ್ಳೆಯ ಸುದ್ದಿಯೇನಲ್ಲ.
ಈ ಬೆಳವಣಿಗೆಗಳ ಪರಿಣಾಮ ಭಾರತದ ಮೇಲೆ ಏನಾಗಬಹುದು ಎನ್ನುವುದರತ್ತಲೂ ನಾವು ಅಗತ್ಯವಾಗಿ ಗಮನ ಹರಿಸಬೇಕು.  ಸೋವಿಯೆತ್ ನಿರ್ಗಮನದ ನಂತರ ಅವ್ಯವಸ್ಥೆಗೀಡಾದ ಅಫಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಸೃಷ್ಟಿಸಿ ಅದಕ್ಕೆ ರಾಜಕೀಯ ಅಧಿಕಾರ ಸಿಗುವಂತೆ ಮಾಡಿದ್ದು ಪಾಕಿಸ್ತಾನ.  ಇಸ್ಲಾಮಾವಾದ್‌ನ ಈ ಕೃತ್ಯದ ಹಿಂದಿದ್ದದ್ದು ಕೇವಲ ಅಫಘಾನಿಸ್ತಾನವನ್ನು ತನ್ನ ಕೈಗೊಂಬೆಯಾಗಿರಿಸಿಕೊಳ್ಳುವುದಷ್ಟೇ ಆಗಿರಲಿಲ್ಲ.  ಭಾರತದ ವಿರುದ್ಧದ ತನ್ನ ಹಣಾಹಣಿಯಲ್ಲಿ ತನಗೆ ಅತ್ಯಗತ್ಯವಾಗಿದ್ದ strategic depth ಅನ್ನು ಅಫಘಾನಿಸ್ತಾನದಲ್ಲಿ ಗಳಿಸಿಕೊಳ್ಳುವುದೂ ಸಹಾ ಬೇನಜ಼ಿರ್ ಸರಕಾರದ ಹುನ್ನಾರವಾಗಿತ್ತು.  ತನ್ನ ಎರಡೂ ಪ್ರಯತ್ನಗಳನ್ನೂ ಯಶಸ್ಸಿನತ್ತ ಕೊಂಡೊಯ್ಯುವ ರಾಜಕೀಯ ಹಾಗೂ ಸೇನಾಸಾಮರ್ಥ್ಯ ಆ ದಿನಗಳಲ್ಲಿ ಪಾಕಿಸ್ತಾನಕ್ಕಿತ್ತು.  ಆದರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.  ಗಡಿನಾಡು ಪ್ರಾಂತ್ಯ ಸಂಪೂರ್ಣವಾಗಿ ತಾಲಿಬಾನೀಕರಣಗೊಂಡಿದೆ ಮತ್ತು ಅಲ್ಲಿ ತಾಲಿಬಾನಿಗಳ ಸೇನಾಸಾಮರ್ಥ್ಯವೂ ಆತಂಕ ಹುಟ್ಟಿಸುವ ಮಟ್ಟದಲ್ಲಿದೆ.  ಜತೆಗೇ, ಪಾಕಿಸ್ತಾನದ ಚುಕ್ಕಾಣಿಯಂತಿರುವ ಬಲಿಷ್ಟ ಪಂಜಾಬ್ ಪ್ರಾಂತ್ಯದ ಸಮಾಜದಲ್ಲೂ ಇಸ್ಲಾಮಿಕ್ ಮೂಲಭೂತವಾದ ಕಳೆದೊಂದು ದಶಕದಲ್ಲಿ ಗಮನಾರ್ಹವಾಗಿ ಬೆಳೆದಿದೆ.  ಈ ಬೆಳವಣಿಗೆಗಳನ್ನು ತಡೆಗಟ್ಟುವ ಸಾಮರ್ಥ್ಯ ಇಸ್ಲಾಮಾಬಾದ್‌ನಲ್ಲಿ ಜೀವ ಹಿಡಿದುಕೊಂಡಿರುವ ಗಿಲಾನಿ ಸರಕಾರಕ್ಕಿಲ್ಲ.  ಪರಿಣಾಮವಾಗಿ ಒಂದುವೇಳೆ ಕಾಬೂಲ್‌ನಲ್ಲಿ ತಾಲಿಬಾನ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅದು ತನ್ನ ಪ್ರಭಾವನ್ನು ಪಾಕಿಸ್ತಾನಕ್ಕೆ ವಿಸ್ತರಿಸುವುದು ನಿಶ್ಚಯ.  ಅಂದರೆ ಇತಿಹಾಸದ ಒಂದು ವ್ಯಂಗ್ಯದಂತೆ ತಾಲಿಬಾನ್ ನೇತೃತ್ವದ ಅಫಘಾನಿಸ್ತಾನ ಅನತೀಕಾಲದಲ್ಲೇ ಪಾಕಿಸ್ತಾನದಲ್ಲಿ strategic depth ಗಳಿಸಿಕೊಳ್ಳುತ್ತದೆ!  ಇದರರ್ಥ, ಇಸ್ಲಾಮಿಕ್ ಮೂಲಭೂತವಾದ ವಾಘಾ ಬಾರ್ಡರ್‌ಗೆ ಬಂದು ನಿಲ್ಲುತ್ತದೆ!
ಹೀಗಾಗದಂತೆ ತಡೆಯುವ ಸಾಮರ್ಥ್ಯ ಭಾರತಕ್ಕಿದೆಯೇ ಎಂದು ನೋಡಿದರೆ ಉತ್ತರ ನಿರಾಶದಾಯಕ.  ಅಮೆರಿಕಾದ ನೀತಿಗಳು ಅಫಘಾನಿಸ್ತಾನದಲ್ಲಿ ಸೋತಿರಬಹುದು, ಆದರೆ ಅಮೆರಿಕಾದ ಗಡಿಯೊಳಗೆ ಅವು ಸಂಪೂರ್ಣವಾಗಿ ಯಶಸ್ವಿಯಾಗಿವೆ.  ೯/೧೧ ಧಾಳಿಗಳ ನಂತರ ಅಂತಹ ಮತ್ತೊಂದು ದುರಂತ ಘಟಿಸದಂತೆ ಆ ದೇಶ ನೋಡಿಕೊಂಡಿದೆ.  ಆದರೆ ಭಯೋತ್ಪಾದನೆಯ ನಿಗ್ರಹದಲ್ಲಿ ಅಮೆರಿಕಾ ಮತ್ತು ಇಸ್ರೇಲ್ ತೋರಿರುವಷ್ಟು ಬದ್ಧತೆ ಮತ್ತು ಸಾಮರ್ಥ್ಯವನ್ನು ಭಾರತ ಇದುವರೆಗೆ ತೋರಿಲ್ಲ.  ಈ ಬಗ್ಗೆ ಒಂದು ಸ್ಪಷ್ಟ ಹಾಗೂ ಪರಿಣಾಮಕಾರಿ ನಿರ್ಧಾರವನ್ನು ತೆಗೆದುಕೊಳ್ಳುವುದೂ ಭಾರತಕ್ಕೆ ಸಾಧ್ಯವಾಗಿಲ್ಲ.  ಇಂತಹ ಪರಿಸ್ಥಿತಿಯಲ್ಲಿ ಅಫಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೊಮ್ಮೆ ಅಧಿಕಾರಕ್ಕೆ ಬಾರದಂತೆ, ಅದು ಪಾಕಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳದಂತೆ ನೋಡಿಕೊಳ್ಳುವುದು ನವದೆಹಲಿಯ ಸಾಮರ್ಥ್ಯಕ್ಕೆ ಮೀರಿದ ವಿಷಯ.  ಈ ಬಗ್ಗೆ ಭಾರತ ಪ್ರಯತ್ನಿಸಿದರೂ ಅದಕ್ಕೆ ದೇಶದೊಳಗೇ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.  ಇದಕ್ಕೆ ಕಾರಣ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಕೆಲವು ಋಣಾತ್ಮಕ ಅಂಶಗಳು.  ಅವುಗಳನ್ನು ನಿವಾರಿಸಿಕೊಳ್ಳದೇ ಭಾರತ ತನ್ನ ಹಿತಾಸಕ್ತಿಗಳನ್ನು ತನ್ನ ಗಡಿಯೊಳಗೆ ಅಥವಾ ತನ್ನ ಸುತ್ತಮುತ್ತ ರಕ್ಷಿಸಿಕೊಳ್ಳುವುದು ಅಸಾಧ್ಯ.  ಈ ವಾಸ್ತವ ಭಾರತದ ಭವಿಷ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.

***     ***     ***
ಬುಧವಾರ, ಮೇ ೯, ೨೦೧೨ರಂದು "ವಿಜಯವಾಣಿ" ಪತ್ರಿಕೆಯ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ

No comments:

Post a Comment