ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, May 17, 2012

ಲೇಖನ- "ಭಯೋತ್ಪಾದನೆಯ ನಿಗ್ರಹದಲ್ಲಿ ನಾವೇಕೆ ಸೋಲುತ್ತಿದ್ದೇವೆ?"



ತನ್ನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಕೆಲವು ಋಣಾತ್ಮಕ ಅಂಶಗಳಿಂದಾಗಿ ಭಾರತ ತನ್ನ ಹಿತಾಸಕ್ತಿಗಳನ್ನು ತನ್ನ ಗಡಿಯೊಳಗೆ ಅಥವಾ ತನ್ನ ಸುತ್ತಮುತ್ತ ರಕ್ಷಿಸಿಕೊಳ್ಳುವುದು ಅಸಾಧ್ಯವಾಗಿದೆ ಮತ್ತು ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಅಸಮರ್ಥವಾಗಿದೆ ಎಂಬರ್ಥದ ಮಾತುಗಳನ್ನು ಕಳೆದವಾರದ ಲೇಖನದಲ್ಲಿ ಹೇಳಿದ್ದೆ.  ಈ ಅಂಶವನ್ನು ಒಂದು ಅಂಕಣಬರಹದ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ವಿಶದಪಡಿಸಲು ಇಲ್ಲಿ ಪ್ರಯತ್ನಿಸುತ್ತೇನೆ.
ಪಂಜಾಬಿನಲ್ಲಿ ಅಕಾಲಿಗಳ ಖಲಿಸ್ತಾನ್ ಚಳುವಳಿ ಪಾಕಿಸ್ತಾನದ ಸಕ್ರಿಯ ಸಹಕಾರದೊಂದಿಗೆ ಉಗ್ರ ಭಯೋತ್ಪಾದನಾ ಕರ್ಮಕಾಂಡವಾಗಿ ಬದಲಾದದ್ದು ೧೯೮೧ರಲ್ಲಿ.  ಇಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಸ್ಥಾಪನೆಯ ಬಗ್ಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಪರಸ್ಪರ ಅಪನಂಬಿಕೆಯ ಹಗ್ಗಜಗ್ಗಾಟ ನಡೆಯುತ್ತಿದೆ.  ಇವೆರಡರ ನಡುವಿನ ಈ ಮೂವತ್ತೊಂದು ವರ್ಷಗಳಲ್ಲಿ ಭಾರತದಲ್ಲಿ ನಡೆದಿರುವ ಭಯೋತ್ಪಾದನಾ ಕೃತ್ಯಗಳು ನಾಲ್ಕು ಸಾವಿರಕ್ಕೂ ಅಧಿಕ ಹಾಗೂ ದಿನಕ್ಕೆ ಸರಾಸರಿ ನಾಲ್ವರು ಭಾರತೀಯರು ಭಯೋತ್ಪಾದನೆಗೆ ಬಲಿಯಾಗುತ್ತಿದ್ದಾರೆ ಎಂದು ಒಂದು ವರದಿ ಹೇಳುತ್ತದೆ.  ಭಯೋತ್ಪಾದಕ ಘಟನೆಗಳಲ್ಲಿ ಭಾರತಕ್ಕೆ ವಿಶ್ವದಲ್ಲಿ ಇರಾಕ್ ಮತ್ತು ಪಾಕಿಸ್ತಾನಗಳ ನಂತರ ಮೂರನೆಯ ಸ್ಥಾನ.  ಕಳೆದ ದಶಕದ ಮಧ್ಯಭಾಗದವರೆಗೂ ಭಾರತ ಮೊದಲ ಸ್ಥಾನದಲ್ಲಿತ್ತು.  ಈ ದೇಶದ ಒಬ್ಬರು ಪ್ರಧಾನಮಂತ್ರಿ, ಮತ್ತೊಬ್ಬರು ಮಾಜಿ ಪ್ರಧಾನಮಂತ್ರಿ, ಒಬ್ಬರು ಮಾಜಿ ಸೇನಾದಂಡನಾಯಕ ಭಯೋತ್ಪಾದನೆಗೆ ಬಲಿಯಾಗಿದ್ದಾರೆ.  ರಾಷ್ಟ್ರದ ಸಂಸತ್ ಒಮ್ಮೆ ಭಯೋತ್ಪಾದನಾ ಧಾಳಿಗೊಳಗಾಗಿದೆ.
ಹೀಗಿದ್ದೂ ಭಯೋತ್ಪಾದನೆಯನ್ನು ಹತ್ತಿಕ್ಕುವ, ಭಯೋತ್ಪಾದಕ ಕೃತ್ಯಗಳನ್ನು ಎಸಗಿದವರನ್ನು ತ್ವರಿತವಾಗಿ ಶಿಕ್ಷಿಸಿ ಆ ಮೂಲಕ ಭವಿಷ್ಯದ ಭಯೋತ್ಪಾದಕರಿಗೆ ಎಚ್ಚರಿಕೆ ನೀಡುವಂತಹ ಒಂದು ವ್ಯವಸ್ಥೆ ನಮ್ಮಲ್ಲಿಲ್ಲ.  ಧರ್ಮ, ಪ್ರಾದೇಶಿಕತೆ, ಭಾಷೆ ಮುಂತಾದ ವಿಷಯಗಳು ಭಯೋತ್ಪಾದನೆಯ ನಿಗ್ರಹದಲ್ಲಿ ಅನಗತ್ಯವಾಗಿ ನುಸುಳಲು ರಾಜಕೀಯ ಪಕ್ಷಗಳು ಮತ್ತು ಬುದ್ಧಿಜೀವಿಗಳು ಅವಕಾಶ ಮಾಡಿಕೊಡುತ್ತಿದ್ದಾರೆ.  ಇವರು ಅಫ್ಜಲ್ ಗುರು ನಿರಪರಾಧಿ ಎಂದು ಸಾರುತ್ತಾರೆ, ಅಜ್ಮಲ್ ಕಸಬ್‌ನ ಎಲ್ಲ ನೌಟಂಕಿಗಳಿಗೂ ತಲೆಯಾಡಿಸುವಂತೆ ನಮ್ಮ ವ್ಯವಸ್ಥೆಯನ್ನು ಬಗ್ಗಿಸುತ್ತಾರೆ.  ಅಷ್ಟೇ ಅಲ್ಲ, ರಾಜೀವ್ ಗಾಂಧಿಯ ಹತ್ಯೆಯ ಸಂಚನ್ನು ರೂಪಿಸಿದ ಪ್ರಭಾಕರನ್ ತನ್ನ ಮಿತ್ರ ಎಂದು ಮುಖ್ಯಮಂತ್ರಿ ಕರುಣಾನಿಧಿ ಹೇಳಿಕೆ ಕೊಡುತ್ತಾರೆ ಮತ್ತು ರಾಜೀವ್‌ರ ಪತ್ನಿ ಸೋನಿಯಾ ಗಾಂಧಿ ತಮ್ಮ ಯುಪಿಎ ಸರಕಾರದ ಉಳಿವಿಗಾಗಿ ಈ ಕರುಣಾನಿಧಿಯವರನ್ನು ಸತತವಾಗಿ ಅವಲಂಬಿಸುತ್ತಾರೆ!
ಒಟ್ಟಾರೆ ಈ ದೇಶ ಪರಿಣಾಮಕಾರಿಯಾದ ಭಯೋತ್ಪಾದನೆ ನಿಗ್ರಹ ವ್ಯವಸ್ಥೆಯನ್ನು ರೂಪಿಸಿ ಅನುಷ್ಟಾನಗೊಳಿಸುವಲ್ಲಿ ವಿಫಲವಾಗಿದೆ ಎನ್ನುವುದಂತೂ ಸ್ಪಷ್ಟ.  ಈ ವೈಫಲ್ಯದಲ್ಲಿ ರಾಜಕೀಯ ಪಕ್ಷಗಳು, ಮಾಧ್ಯಮಗಳು ಮತ್ತು ನಾಗರೀಕರ ಪಾತ್ರವನ್ನು ವಿಶ್ಲೇಷಿಸುವ ಅಗತ್ಯವಿದೆ.  ಭಯೋತ್ಪಾದನೆಯ ಬಗ್ಗೆ ಅಮೆರಿಕಾ ಒಂದು ರಾಷ್ಟ್ರವಾಗಿ ಪ್ರತಿಕ್ರಿಯಿಸುತ್ತಿರುವ ಬಗೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ವಿಶ್ಲೇಷಣೆಯನ್ನು ಪ್ರಾರಂಭಿಸೋಣ.
ಭಯೋತ್ಪಾದಕ ಧಾಳಿಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಗೂ ಅಮೆರಿಕನ್ನರು ಪ್ರತಿಕ್ರಿಯಿಸುವ ರೀತಿಗೂ ವ್ಯತ್ಯಾಸವಿದೆ.  ೯/೧೧ ದುರಂತಕ್ಕೆ ರಾಜಕೀಯ ಪಕ್ಷಗಳು, ಮಾಧ್ಯಮಗಳು, ಸಾಮಾನ್ಯ ಅಮೆರಿಕನ್ನರು ಪ್ರತಿಕ್ರಿಯಿಸಿದ ಬಗೆ ಅಸಾಧಾರಣವಾಗಿತ್ತು.  ವಿರೋಧ ಪಕ್ಷವಾದ ಡೆಮೋಕ್ರಾಟಿಕ್ ಪಕ್ಷ ಅಧ್ಯಕ್ಷ ಬುಷ್‌ರನ್ನು ನಾಲಾಯಕ್ ಎಂದು ಹೀಗಳೆದು ಅವರ ರಾಜೀನಾಮೆ ಕೇಳಲಿಲ್ಲ.  ಬದಲಾಗಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿತು.  ಛಿದ್ರವಿಚ್ಛಿದ್ರ ಶವಗಳ ಚಿತ್ರಗಳನ್ನು ಪ್ರಕಟಿಸಬೇಡಿ ಎಂಬ ಸರಕಾರದ ವಿನಂತಿಗೆ ಸುದ್ದಿಮಾಧ್ಯಮಗಳು ಮರುಮಾತಾಡದೆ ಸಮ್ಮತಿಸಿದವು.  ಅಷ್ಟೇ ಅಲ್ಲ, ಭಯೋತ್ಪಾದನೆಯ ನಿಗ್ರಹದಲ್ಲಿ ಭದ್ರತಾ ಪಡೆಗಳು ಎಸಗಬಹುದಾದ ಅತಿರೇಕಗಳನ್ನು ಪ್ರಚಾರ ಮಾಡಬೇಡಿ ಎಂಬ ಬೇಡಿಕೆಗೂ ಅವು ಸಮ್ಮತಿಸಿದವು.  ಭಯೋತ್ಪಾದನೆಯ ನಿಗ್ರಹಕ್ಕೆ ಬುಷ್ ಸರಕಾರ ಜಾರಿಗೆ ತಂದ, ನಮ್ಮಲ್ಲಿನ ‘ಪೋಟಾ’ಗಿಂತಲೂ ಭಯಾನಕವಾದ ಪೇಟ್ರಿಯಾಟ್ ಕಾಯಿದೆಗಳಿಗೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.  ಸರಕಾರ, ಗುಪ್ತಚರ ಇಲಾಖೆಗಳು, ಭದ್ರತಾ ಪಡೆಗಳೂ ಸೇರಿದಂತೆ ವ್ಯವಸ್ಥೆಯ ವಿವಿಧ ಅಂಗಗಳು ಹಾಗೂ ಜನತೆಯೂ ಒಳಗೊಂಡಂತೆ ಇಡೀ ರಾಷ್ಟ್ರ ಅಮೆರಿಕಾಗೆ ಯಾವುದೇ ಹಾನಿ ತಟ್ಟದಂತೆ ನೋಡಿಕೊಳ್ಳುವುದು ತನ್ನ ಕರ್ತವ್ಯ ಎಂದು ತಿಳಿಯಿತು.  ಪರಿಣಾಮವಾಗಿ ೯/೧೧ನ ನಂತರ ವಿಶ್ವದ ವಿವಿಧೆಡೆ -ಯೆಮೆನ್, ಇರಾಕ್, ಅಫಘಾನಿಸ್ತಾನ್, ಪಾಕಿಸ್ತಾನ್- ಅಮೆರಿಕಾದ ಹಿತಾಸಕ್ತಿಗಳಿಗೆ ಸಂಬಂಧಿಸಿದ ಕಟ್ಟಡಗಳು ಅಥವಾ ವ್ಯಕ್ತಿಗಳ ಮೇಲೆ ಧಾಳಿಗಳಾಗಿವೆ.  ಆದರೆ ಅಮೆರಿಕಾದ ನೆಲದಲ್ಲಿ ಯಾವುದೇ ಭಯೋತ್ಪಾದಕ ಧಾಳಿ ನಡೆದಿಲ್ಲ.  ನಡೆಯಲು ಆ ದೇಶ ಅವಕಾಶ ಕೊಟ್ಟಿಲ್ಲ.  ಆದರೆ ನಮ್ಮಲ್ಲಿ ಪರಿಸ್ಥಿತಿ ವಿರುದ್ಧವಾಗಿದೆ.
ಸಂಸತ್ ಧಾಳಿಯ ನಂತರ ಎನ್‌ಡಿಏ ಸರಕಾರ ಜಾರಿಗೆ ತಂದ "ಪೋಟಾ" ಇಸ್ಲಾಂ ವಿರೋಧಿ ಎಂದು ಕೆಲವು ರಾಜಕೀಯ ಪಕ್ಷಗಳೂ, ಬುದ್ಧಿಜೀವಿಗಳೂ ಹುಯಿಲೆಬ್ಬಿಸಿದರು.  ತಮ್ಮ ಆಪಾದನೆಯ ಸಮರ್ಥನೆಗಾಗಿ ಅವರು ಪೋಟಾ ಕಾಯಿದೆಯಡಿಯಲ್ಲಿ ಬಂಧಿತರಾದವರಲ್ಲಿ ಬೇರೆಲ್ಲಾ ಧರ್ಮದವರಿಗಿಂತಲೂ ಮುಸ್ಲಿಮರು ಅಧಿಕವಾಗಿದ್ದಾರೆ ಎಂಬ ಅಂಕಿಅಂಶವನ್ನು ಎತ್ತಿ ಹಿಡಿದರು.  ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವವರಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ.  ಹೀಗಿರುವಾಗ ಬಂಧಿತರಾದವರಲ್ಲೂ ಅವರೇ ಅಧಿಕವಾಗಿರುವುದು ಸಹಜವೇ ಆಗಿದೆ.  ಈ ವಾಸ್ತವವನ್ನು ಕಡೆಗಣಿಸಿದ ಯುಪಿಏ ಸರಕಾರ ಫೋಟಾ ಇಲ್ಲದೆಯೂ ನಾವು ಭಯೋತ್ಪಾದನೆಯನ್ನು ನಿಗ್ರಹಿಸಬಹುದು ಎಂದು ಘೋಷಿಸಿತು.  ಈ ನಿರ್ಧಾರ ಅದೆಷ್ಟು ಟೊಳ್ಳಿನದು ಎನ್ನುವುದು ಕಳೆದ ಎಂಟು ವರ್ಷಗಳಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ.
ಸಂಸತ್ ಭವನದ ಮೇಲಿನ ಧಾಳಿಯನ್ನು ಬಿಜೆಪಿ ಸರಕಾರವೇ ರೂಪಿಸಿತು ಎಂದು ಕೆಲವು ಪುಡಿ ರಾಜಕೀಯ ಪಕ್ಷಗಳು ಮತ್ತು ಕೆಲವರು ಬುದ್ಧಿಜೀವಿಗಳು ಹೇಳಿದರು.  ಪುಸ್ತಕಗಳನ್ನೂ ಬರೆದರು.  ಅವರ ಮಾತುಗಳಿಗೆ ಅದಕ್ಕೆಂದೇ ಇರುವ ಕೆಲವು ಪತ್ರಿಕೆಗಳು ಪ್ರಚಾರ ಕೊಟ್ಟವು.  ಭಾರತ ನಗೆಪಾಟಲಿಗೀಡಾಯಿತು.
ಹಲವು ಧಾಳಿಗಳಿಗೆ ಕಾರಣವಾಗಿದೆ ಎಂದು ಸಾಕ್ಷಾಧಾರಗಳ ಮೂಲಕ ಸಾಬೀತಾಗಿರುವ "ಸಿಮಿ" ಹಾಗೂ ಅದರ ನಂತರದ ಅವತಾರ "ಇಂಡಿಯನ್ ಮುಜಾಹಿದೀನ್" ಬಗ್ಗೆ ಕೆಲವು ರಾಜಕೀಯ ಪಕ್ಷಗಳು, ಮುಖ್ಯವಾಗಿ ಮುಲಾಯಂ ಸಿಂಗ್ ಯಾದವ್‌ರ ಸಮಾಜವಾದಿ ಪಕ್ಷ ತೋರುತ್ತಿರುವ ಆದರ ಅಕ್ಷಮ್ಯ.  ಈ ಮುಲಾಯಂ ಸಿಂಗ್ ಒಂದು ಕಾಲದಲ್ಲಿ ನಮ್ಮ ರಕ್ಷಣಾ ಮಂತ್ರಿಯಾಗಿದ್ದರು ಎಂದು ನೆನಸಿಕೊಂಡರೆ, ಮತ್ತೀಗ ಅವರ ಹೆಸರು ಮುಂದಿನ ರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದೆ ಎನ್ನುವುದನ್ನು ನೋಡಿದರೆ ದೇಶ ನಾಯಕತ್ವದ ವಿಚಾರದಲ್ಲಿ ಅದೆಷ್ಟು ದುರದೃಷ್ಟಶಾಲಿ ಎನಿಸುತ್ತದೆ.  ಇದರ ಜತೆಗೆ ಕೇಂದ್ರ ಸರಕಾರದಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಕುಳಿತಿರುವ ಡಿಎಂಕೆ ಪಕ್ಷ ಎಲ್‌ಟಿಟಿಇ ಪರ ಮತ್ತು ಪಿಡಿಪಿ ಕಾಶ್ಮೀರಿ ಉಗ್ರರ ಪರ ವಹಿಸುವುದನ್ನು ಕಂಡಾಗ ಗಾಬರಿಯಾಗುತ್ತದೆ.  ಅಮೆರಿಕಾದ ರಾಜಕೀಯ ಪಕ್ಷವೊಂದು ಅಲ್ ಖಯೀದಾ ಅಥವಾ ತಾಲಿಬಾನ್ ಪರವಾಗಿರುವುದನ್ನು ಊಹಿಸಿಕೊಳ್ಳಲು ಸಾಧ್ಯವೇ?
ನಮ್ಮ ಸುದ್ಧಿ ಮಾಧ್ಯಮಗಳ ಬಗ್ಗೆ ಹೇಳುವುದಾದರೆ ಹಿಂದೆಲ್ಲಾ ದುರಂತಗಳು ಘಟಿಸಿದ ನಂತರದ ಚಿತ್ರಗಳನ್ನಷ್ಟೇ ಪ್ರಸಾರ ಮಾಡುತ್ತಿದ್ದ ಅವು ಮುಂಬೈ ಧಾಳಿಯ ಸಂದರ್ಭದಲ್ಲಿ ಕ್ರಿಕೆಟ್ ಆಟದ ನೇರಪ್ರಸಾರದಂತೆ ಇಡೀ ಘಟನಾವಳಿಗಳನ್ನು "ಲೈವ್" ಆಗಿ ಪ್ರಸಾರ ಮಾಡುವ ತಂತ್ರವನ್ನು ರೂಪಿಸಿಕೊಂಡವು.  ಅತೀ ಉತ್ಸಾಹದಿಂದಾಗಿ ಅವು ಪ್ರಸಾರ ಮಾಡುತ್ತಿದ್ದ ವಿವರಗಳೇ ತಾಜ್ ಹೋಟೆಲ್ ಮೇಲೆ ಪಾಕ್ ಉಗ್ರರ ಹಿಡಿತ ಧೀರ್ಘವಾಗಲು ಕಾರಣವಾಯಿತು ಎಂಬ ಸಂಗತಿ ನಮ್ಮ ಮಾಧ್ಯಮಗಳ ಬೇಜವಾಬ್ದಾರಿ ವರ್ತನೆಗೊಂದು ಕನ್ನಡಿ.
ಈ ಸಂದರ್ಭದಲ್ಲಿ ನಮ್ಮ ಅಂದರೆ ನಾಗರೀಕರ ವರ್ತನೆಯನ್ನೂ ನಾವು ವಿಮರ್ಶಿಸಿಕೊಳ್ಳಬೇಕು.  ನಮ್ಮ ‘ನಾಗರೀಕ’ರ ಸ್ವಾರ್ಥವೂ ಸಹಾ ಈ ದೇಶವನ್ನು ಎಂತಹ ಗಂಡಾಂತರಕ್ಕೆ ದೂಡುತ್ತದೆ ಎನ್ನುವುದನ್ನು ಉದಾಹರಣೆಯ ಮೂಲಕ ಹೇಳಲೇಬೇಕು.  ಡಿಸೆಂಬರ್ ೧೯೯೯ರಲ್ಲಿ ಪಾಕ್ ಭಯೋತ್ಪಾದಕರು ಇಂಡಿಯನ್ ಏರ್‌ಲೈನ್ಸ್‌ನ ಐಸಿ-೮೧೪ ವಿಮಾನವನ್ನು ಅಪಹರಿಸಿ ಕಂದಹಾರಕ್ಕೆ ಕೊಂಡೊಯ್ದು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡ ಘಟನೆ ನೆನಪಿದೆಯೇ?  ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಅವರು ಕೇಳಿದ್ದು ಮೂವತ್ತೈದು ಉಗ್ರರ ಬಿಡುಗಡೆ ಹಾಗೂ ಇಪ್ಪತ್ತು ಕೋಟಿ ಡಾಲರ್‌ಗಳು.  ಇದಕ್ಕೆ ಒಪ್ಪಲು ಯಾವುದೇ ಸರಕಾರಕ್ಕೆ ಸಾಧ್ಯವಿರಲಿಲ್ಲ.  ಅಪಹರಣಕಾರರು ಹಾಗೂ ನಮ್ಮ ಸರಕಾರದ ನಡುವಿನ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿದ ಅಫಘಾನಿಸ್ತಾನದ ತಾಲಿಬಾನ್ ಸರಕಾರದ ಇಬ್ಬಂದಿ ಚಾಲಾಕಿನಿಂದಾಗಿ ಕಮ್ಯಾಂಡೋ ಆಪರೇಷನ್ ಮೂಲಕ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದೂ ಸಾಧ್ಯವಿರಲಿಲ್ಲ.   ಸರಕಾರ ಹಾಗೂ ಸುರಕ್ಷಾ ದಳಗಳ ಉನ್ನತ ಅಧಿಕಾರಿಗಳ ವಿಶೇಷ ಕಾರ್ಯತಂಡ ಈ ಬಗ್ಗೆ ಚರ್ಚಿಸುತ್ತಿದ್ದಾಗ ಒತ್ತೆಯಾಳುಗಳ ಬಂಧುಬಾಂಧವರು ಮಾಡಿದ್ದೇನು?  ಇವರೆಲ್ಲಾ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದ ಕಟ್ಟಡದ ಮುಂದೆಯೇ ಗುಂಪುಗಟ್ಟಿಕೊಂಡು ಒಂದು ಸಂಘ ಮಾಡಿಕೊಂಡು ತಮ್ಮಲ್ಲೇ ಒಬ್ಬ ಕಾರ್ಯದರ್ಶಿಯನ್ನೂ ಆಯ್ಕೆ ಮಾಡಿಕೊಂಡು ಕಟ್ಟಡದ ಒಳಗೆ ನುಗ್ಗಿ ಧಾಂದಲೆ ಎಬ್ಬಿಸಿದರು.  "ಅಪಹರಣಕಾರರ ಬೇಡಿಕೆಗಳನ್ನು ಒಪ್ಪಿಕೊಳ್ಳಿ, ನಮ್ಮವರನ್ನು ಬಿಡಿಸಿ" ಎಂದು ಸರಕಾರದ ಮೇಲೆ ಒತ್ತಡ ಹಾಕಿದರು.  ಅವರಿಗೆ ಅವರ ಮಗ, ಮಗಳು, ತಂದೆ, ತಾಯಿ, ಗಂಡ, ಹೆಂಡತಿ ಸುರಕ್ಷಿತವಾಗಿ ಮನೆಗೆ ಹಿಂತಿರುಗುವುದು ಬೇಕಾಗಿತ್ತು.  ಇನ್ಯಾತರ ಪರಿವೆಯೂ ಅವರಿಗಿರಲಿಲ್ಲ.  ಕೆಲವು ಟೀವಿ ಚಾನಲ್‌ಗಳೂ ಅವರ ಬೆಂಬಲಕ್ಕೆ ನಿಂತವು.  ಪರಿಣಾಮವಾಗಿ ಜೈಲಿನಲ್ಲಿದ್ದ ಮೂವರು ಕುಖ್ಯಾತ ಉಗ್ರರನ್ನು ಬಿಡುಗಡೆ ಮಾಡಿ ಅವರನ್ನು ವಿಮಾನದಲ್ಲಿ ಕುಳ್ಳಿರಿಸಿಕೊಂಡು, ಜತೆಗೆ ಒಂದು ಲಕ್ಷ ಡಾಲರ್‌ಗಳಿದ್ದ ಚೀಲವನ್ನೂ ಹಿಡಿದುಕೊಂಡು ವಿದೇಶಮಂತ್ರಿ ಜಸ್ವಂತ್ ಸಿಂಗ್ ಕಂದಹಾರಕ್ಕೆ ಹೋದರು!  ಉಗ್ರರನ್ನೂ ಹಣವನ್ನೂ ಅಪಹರಣಕಾರರಿಗೆ ಒಪ್ಪಿಸಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸಿಕೊಂಡು ಬಂದರು.  ಒತ್ತೆಯಾಳುಗಳ ಬಂಧುಬಾಂಧವರಿಗೆ ಈಗ ನೆಮ್ಮದಿಯಾಯಿತು.  ಆನಂತರ ನಡೆದದ್ದೇನು?  ಸರಕಾರ ಬಿಡುಗಡೆಗೊಳಿಸಿದ ಮೂವರು ಉಗ್ರರಲ್ಲೊಬ್ಬನಾದ ಮಾಸೂದ್ ಅಝರ್ ಪಾಕಿಸ್ತಾನದಲ್ಲಿ "ಜೈಶ್ ಎ ಮೊಹಮ್ಮದ್" ಎಂಬ ಭಯೋತ್ಪಾದಕ ಸಂಘಟನೆಯನ್ನು ಹುಟ್ಟುಹಾಕಿದ.  ಆನಂತರದ್ದು ದುರಂತ ಕಥೆ.  ಜೈಶ್ ಎ ಮೊಹಮ್ಮದ್ ಕಾಶ್ಮೀರವೂ ಸೇರಿದಂತೆ ರಾಷ್ಟ್ರದ ವಿವಿಧೆಡೆ ಅಸಂಖ್ಯ ಭಯೋತ್ಪಾದಕ ಧಾಳಿಗಳನ್ನು ಎಸಗಿದೆ.  ಅದು ಕೊಂದವರ ಸಂಖ್ಯೆ ಐದು ಸಾವಿರವನ್ನು ದಾಟಿದೆ!  ಅಷ್ಟೇ ಅಲ್ಲ, ೯/೧೧ ಧಾಳಿ ಎಸಗಿದ ಅಲ್ ಖಯೀದಾ ಉಗ್ರರು ಜರ್ಮನಿಯಲ್ಲಿ ವಿಮಾನಚಾಲನೆಯ ತರಬೇತಿ ಪಡೆಯಲು ಬಳಸಿದ ಹಣ ನಮ್ಮ ಸರಕಾರ ಕಂದಹಾರ್‌ನಲ್ಲಿ ಅಪಹರಣಕಾರರಿಗೆ ಕೊಟ್ಟ ಒಂದು ಲಕ್ಷ ಡಾಲರ್ ಎಂದು ಒಂದು ಅನಧಿಕೃತ ವರದಿ ಹೇಳುತ್ತದೆ.
ನಮ್ಮ ಜನರ ವರ್ತನೆಯನ್ನು ಅಂಥದೇ ಸಂದರ್ಭದಲ್ಲಿ ಅಮೆರಿಕನ್ ಜನತೆ ವರ್ತಿಸಿದ ಬಗೆಗೆ ಹೋಲಿಸಬೇಕು.  ೧೯೭೯ರಲ್ಲಿ ಇರಾನ್‌ನ ಇಸ್ಲಾಮಿಕ್ ಮೂಲಭೂತವಾದಿಗಳು ತೆಹರಾನ್‌ನಲ್ಲಿದ್ದ ಅಮೆರಿಕನ್ ದೂತಾವಾಸಕ್ಕೆ ನುಗ್ಗಿ ೫೨ ಅಮೆರಿಕನ್ನರನ್ನು ೪೪೪ ದಿನಗಳಷ್ಟು ಸುಧೀರ್ಘಕಾಲ ಒತ್ತೆಯಾಳುಗಳಾಗಿಟ್ಟುಕೊಂಡಾಗ ಈ ಒತ್ತೆಯಾಳುಗಳ ಬಂಧುಬಾಂಧವರು ಮಾಡಿದ್ದೇನು ಎಂಬುದು ನಮಗೊಂದು ಅಮೂಲ್ಯ ಪಾಠವಾಗುತ್ತದೆ.  ಅವರ‍್ಯಾರೂ ಸರಕಾರದ ಮೇಲೆ ಯಾವ ಒತ್ತಡವನ್ನೂ ಹಾಕಲಿಲ್ಲ.  ತಮ್ಮತಮ್ಮಲ್ಲೇ ಸಪೋರ್ಟ್ ಗ್ರೂಪ್‌ಗಳನ್ನು ಮಾಡಿಕೊಂಡು ಒಬ್ಬರಿಗೊಬ್ಬರು ಸಾಂತ್ವನ ಹೇಳುತ್ತಿದ್ದರು, ಫೋನಿನಲ್ಲಿ ಧೈರ್ಯ ಹೇಳುತ್ತಿದ್ದರು, ಆಗಾಗ ಒಟ್ಟಿಗೆ ಸೇರಿ ಮೊಂಬತ್ತಿಗಳನ್ನು ಹಚ್ಚಿ ತಮ್ಮ ಪ್ರೀತಿಪಾತ್ರರ ಕ್ಷೇಮಕ್ಕಾಗಿ ಮೌನವಾಗಿ ಪ್ರಾರ್ಥಿಸುತ್ತಿದ್ದರು.  ’ನಮಗೆ ನಮ್ಮ ಅಮೆರಿಕಾ ಅಮೂಲ್ಯ.  ನಮ್ಮ ದೇಶವನ್ನು ನಾವು ಪ್ರೀತಿಸುತ್ತೇವೆ" ಎಂದು ಮೌನವಾಗಿಯೇ ಜಗತ್ತಿಗೆ ಸಾರಿದರು.  ಇವರಿಂದ ನಾವು ಕಲಿಯುವುದು ಏನೂ ಇಲ್ಲವೇ?
ಭಯೋತ್ಪಾದನೆಯ ನಿಗ್ರಹ ಸೇನೆಯಿಂದ ಮಾತ್ರ ಸಾಧ್ಯವಾಗಲಾರದು.  ರಾಜಕೀಯ ಪಕ್ಷಗಳು ಮತ್ತು ಅವು ರೂಪಿಸುವ ಸರಕಾರಗಳು, ಜನತೆ, ಮುಖ್ಯವಾಗಿ ಜನಾಭಿಪ್ರಾಯ ಮೂಡಿಸಬಲ್ಲ ವರ್ಚಸ್ವೀ ಬುದ್ಧಿಜೀವಿಗಳು, ಹಾಗೂ ಪತ್ರಕರ್ತರು ಈ ದೇಶದ ಬಗ್ಗೆ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದರ ಅಗತ್ಯವಿದೆ.  ಈ ದೇಶ ನಮ್ಮೆಲ್ಲರದು.  ಇದನ್ನು ಕಾಪಾಡುವ ಜವಾಬ್ದಾರಿಯೂ ನಮ್ಮೆಲ್ಲರದೇ
***     ***     ***
ಬುಧವಾರ, ಮೇ ೧೬, ೨೦೧೨ರಂದು "ವಿಜಯವಾಣಿ" ಪತ್ರಿಕೆಯ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ

No comments:

Post a Comment