ಪ್ರೇಮಶೇಖರ
(“ಹೊಸ ದಿಗಂತ” ದೈನಿಕದ ಭಾನುವಾರದ
ವಿಶೇಷ ಪುರವಣಿ “ಆದ್ಯಂತ”ದಲ್ಲಿ ಇದೇ ಜನವರಿ ೧೪, ೨೦೧೮ರಂದು ಪ್ರಕಟವಾದ ಲೇಖನ)
ಸುಮಾರು ನಾಲ್ಕು-ನಾಲ್ಕೂವರೆ ಸಾವಿರ ವರ್ಷಗಳ ಹಿಂದೆ ಈಜಿಪ್ಟ್ನಲ್ಲಿ ನಿರ್ಮಾಣವಾದ ಪಿರಮಿಡ್ಗಳು ಇಂದಿನ ಇಪ್ಪತ್ತೊಂದನೆಯ ಶತಮಾನದಲ್ಲಿ ನಮಗೆ ಅತ್ಯದ್ಭುತಗಳಾಗಿ ಕಾಣುತ್ತವೆ.
ಅವುಗಳ ಬಗೆಗಿನ ನಮ್ಮ ಕೌತುಕ, ಕುತೂಹಲಗಳು ಬಹುಶಃ ಎಂದಿಗೂ ಶಮನವಾಗುವುದೇ ಇಲ್ಲವೇನೋ.
ಆದರೆ ಅದಕ್ಕೂ ಅಚ್ಚರಿಯ ವಿಷಯವೆಂದರೆ, ನಮಗೆ ಅತಿ ಪ್ರಾಚೀನವೆನಿಸುವ ಪಿರಮಿಡ್ಗಳನ್ನು ನಿರ್ಮಿಸಿದವರೇ “ಅಬ್ಬ, ಇದೆಷ್ಟು ಪ್ರಾಚೀನ!” ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಅತಿ ಅತಿ ಪ್ರಾಚೀನ ನಗರದ ಅವಶೇಷಗಳು ಭಾರತದಲ್ಲಿ ಪತ್ತೆಯಾಗಿವೆ!
ಅದಾದದ್ದು ಹದಿನೇಳು ವರ್ಷಗಳ ಹಿಂದೆ, ಅಕಸ್ಮಿಕವಾಗಿ.
) ಅದು ೧೯೯೯ನೇ ಇಸವಿ.
ಡಾ. ಎಸ್. ಕದಿರೋಳಿ ಹಾಗೂ ಡಾ. ಎಸ್. ಬದರೀನಾರಾಯಣ್ ನೇತೃತ್ವದ, ಭಾರತ ಸರ್ಕಾರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್ಐಓಟಿ - ಚಿಕ್ಕದಾಗಿ ನಿಯೋಟ್) ಭೂವಿಜ್ಞಾನಿಗಳ ತಂಡ ದೇಶದ ಮುಖ್ಯ ಭೂಭಾಗ ಮತ್ತು ಗುಜರಾತ್ ರಾಜ್ಯದ ಸೌರಾಷ್ಟ್ರ ಪರ್ಯಾಯದ್ವೀಪದ ನಡುವಿರುವ ಖಂಭಾತ್ ಕೊಲ್ಲಿಯಲ್ಲಿ (ಕ್ಯಾಂಬೆ ಕೊಲ್ಲಿತೀರದಿಂದ ಇಪ್ಪತ್ತು ಕಿಲೋಮಿಟರ್ ದೂರದ ಸಾಗರಪ್ರದೇಶದಲ್ಲಿ ಜಲಮಾಲಿನ್ಯದ ಪ್ರಮಾಣವನ್ನು ಪರೀಕ್ಷಿಸುತ್ತಿತ್ತು.
ಸೈಡ್ಸ್ಕ್ಯಾನ್ ಸೋನಾರ್ ಉಪಕರಣದ ಮೂಲಕ ಸಾಗರತಳಕ್ಕೆ ಶಬ್ಧತರಂಗಗಳ ಕೋಲನ್ನು ಕಳುಹಿಸಿ ಎದುರಾಗುವ ಗಟ್ಟಿ ಹಾಗೂ ಮೃದುವಸ್ತುಗಳು ಕಂಪ್ಯೂಟರ್ನಲ್ಲಿ ಮೂಡಿಸುವ ಇಮೇಜ್ಗಳ ಆಧಾರದಲ್ಲಿ ಸಾಗರದಾಳದ ನೀರಿನಲ್ಲಿ ಏನೇನಿದೆಯೆಂದು ಪರಿಶೀಲಿಸುತ್ತಿದ್ದ ವಿಜ್ಞಾನಿಗಳು ೧೨೦ ಅಡಿ ನೀರಿನಾಳದಲ್ಲಿ ಚೌಕಾಕಾರದ, ಆಯತಾಕಾರದ ಜ್ಯಾಮಿತೀಯ ರಚನೆಗಳನ್ನು ಕಂಡು ದಂಗಾದರು.
ಅಕಸ್ಮಿಕವಾಗಿ ಪ್ರಕೃತಿಯೇ ಅಲ್ಲೊಂದು ಇಲ್ಲೊಂದು ಜ್ಯಾಮಿತೀಯ ರಚನೆಗಳನ್ನು ನಿರ್ಮಿಸಬಹುದು, ಆದರೆ ಅಂತಹ ಅನೇಕ ರಚನೆಗಳು ಒಂದು ಸ್ಥಳದಲ್ಲಿ ಕ್ರಮಬದ್ಧವಾಗಿ ಹರಡಿಕೊಂಡಿದ್ದಲ್ಲಿ ಅಲ್ಲಿ ಮನುಷ್ಯನ ಕೈವಾಡ ನಡೆದಿದೆ ಎಂದೇ ಅರ್ಥ.
ಹೀಗಾಗಿ, ಕುತೂಹಲಗೊಂಡ ನಿಯೋಟ್ ವಿಜ್ಞಾನಿಗಳು ಹೆಚ್ಚು ಆಸ್ಥೆಯಿಂದ ಅಲ್ಲಿ ಶೋಧನೆ ಕೈಗೊಂಡರು.
ಇದು ಆರಂಭ.
ಮಗುಚಿ ಹಾಕಿದ ಆಲಿಕೆಯ ಆಕಾರದಲ್ಲಿರುವ ಖಂಭಾತ್ ಕೊಲ್ಲಿ ಸುಮಾರು ೩,೦೦೦ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ.
ಅಮೆರಿಕಾದ ಪೂರ್ವ ತೀರದ ಪಸಮಾಕೋಡಿ ಕೊಲ್ಲಿ, ಫ್ರಾನ್ಸ್ನ ರಾನ್ ನದಿಯ ಮುಖಜಭೂಮಿ ಹಾಗೂ ನಮ್ಮದೇ ಬಂಗಾಲದ ಸುಂದರಬನ್ ಮುಖಜಭೂಮಿಯ ಜತೆಗೆ ಖಂಭಾತ್ ಕೊಲ್ಲಿ ಪ್ರಪಂಚದಲ್ಲೆ ಅತೀ ಎತ್ತರದ ಭರತವಿರುವ ಸಾಗರತೀರ.
ಜತೆಗೆ ಇಲ್ಲಿ ಮೇಲ್ಮೈ ಗಾಳಿಯೂ ವೇಗವಾಗಿರುವ ಕಾರಣ ಇಲ್ಲಿ ಬಲವಾದ ಸಾಗರ ಪ್ರವಾಹಗಳಿರುತ್ತವೆ.
ಈ ಎಲ್ಲಾ ಕಾರಣಗಳ ಜತೆ, ಮಧ್ಯ ಭಾರತದ ದೊಡ್ಡ ನದಿಯಾದ ನರ್ಮದಾ ಸೇರಿದಂತೆ ತಪತಿ (ತಾಪಿ), ಮಾಹೀ ಹಾಗೂ ಛತ್ರಂಜಿ ನದಿಗಳ ಜತೆಗೆ ಇನ್ನೂ ಹಲವಾರು ಸಣ್ಣಪುಟ್ಟ ಹೊಳೆಹಳ್ಳಗಳು ಈ ಕಿರಿದಾದ ಖಂಭಾತ್ ಕೊಲ್ಲಿಗೆ ಹರಿದುಬರುವುದರಿಂದಾಗಿ ಇಲ್ಲಿನ ನೀರು ಸದಾ ಕಲಕಿದಂತೆ ಗಾಢ ಬಣ್ಣದಿಂದ ಕೂಡಿರುತ್ತದೆ.
ಇದರಿಂದಾಗಿ ಇಲ್ಲಿ ಮುಳುಗುಹಾಕಿ ಅಥವಾ ಬೆಳಕು ಹಾಯಿಸಿ ಸಾಗರ ತಳ ಶೋಧಿಸುವುದು ಸಾಧ್ಯವಾಗದು.
ನೀರಿನಾಳದಲ್ಲಿ ವಿಡಿಯೋ ಚಿತ್ರೀಕರಣವಂತೂ ಸಾಧ್ಯವೇ ಇಲ್ಲ.
ಪರಿಣಾಮವಾಗಿ, ನಿಯೋಟ್ ಭೂವಿಜ್ಞಾನಿಗಳಿಗೆ ಸೈಡ್ಸ್ಕ್ಯಾನ್ ಸೋನಾರ್ (SONAR - Sound Navigation and
Ranging), ಸಾಗರದ ತಳದಲ್ಲಿ ಹತ್ತು ಅಡಿಗಳಷ್ಟು ಆಳದ ನೆಲವನ್ನೂ ಪರಿಶೀಲಿಸಬಲ್ಲ ಸಬ್ ಬಾಟಂ ಪ್ರೊಫೈಲರ್ ಉಪಕರಣಗಳ ಮೂಲಕ ಸಾಗರತಳದ ಇಮೇಜ್ಗಳನ್ನು ಪಡೆದು ಕಂಪ್ಯೂಟರ್ನಲ್ಲಿ ವಿಶ್ಲೇಷಿಸದೇ ಬೇರೆ ದಾರಿ ಇರಲಿಲ್ಲ.
ಆದರೆ ಅವರಿಗಿದ್ದ ಅದಮ್ಯ ಕುತೂಹಲ ಎಲ್ಲ ಅಡೆತಡೆಗಳನ್ನೂ ಒತ್ತರಿಸಿಬಿಟ್ಟಿತು.
ಸಾಗರದಾಳದ ಗಟ್ಟಿ ವಸ್ತುಗಳು ಗಾಢ ಬಣ್ಣದಲ್ಲೂ, ಮೃದುವಸ್ತುಗಳು ತೆಳು ಬಣ್ಣದಲ್ಲೂ ಇರುವಂತೆ ಇಮೇಜ್ ಮೂಡಿಸುವ ಸೈಡ್ಸ್ಕ್ಯಾನ್ ಸೋನಾರ್ನಿಂದ ನಿರಂತರವಾಗಿ ಇಮೇಜ್ಗಳನ್ನು ಪಡೆದು ಕ್ರಮಬದ್ಧವಾಗಿ ವಿಶ್ಲೇಷಿಸತೊಡಗಿದ ಅವರ ಮುಂದೆ ಮುಂದಿನ ಎರಡು ವರ್ಷಗಳಲ್ಲಿ ಅದ್ಭುತಗಳು ತೆರೆದುಕೊಳ್ಳತೊಡಗಿದವು.
ಸಮುದ್ರದಲ್ಲಿನಿಯೋಟ್ ಭೂವಿಜ್ಞಾನಿಗಳ ತಂಡಕ್ಕೆ ಮೊದಲು ಗುರುತಿಗೆ ಸಿಕ್ಕಿದ್ದು ಸಾಗರತಳದಲ್ಲಿದ್ದ ಎರಡು ಪ್ರಾಚೀನ ನದಿಪಾತ್ರಗಳು.
ಇಂದಿನ ನರ್ಮದಾ ಹಾಗೂ ತಪತೀ ನದಿಗಳ ಮುಂದುವರೆದ ಭಾಗಗಳಾಗಿರಬಹುದಾದ, ಒಂದುಕಾಲದಲ್ಲಿ ನೆಲದ ಮೇಲೆ ಹರಿದಿದ್ದ ಆ ನದಿಗಳು ಏಳರಿಂದ ಎಂಟುಸಾವಿರ ವರ್ಷಗಳ ಹಿಂದೆ ಸಾಗರದ ಮಟ್ಟ ಏರುತ್ತಾಹೋದಂತೇ ಅಂತರ್ಧಾನವಾಗಿಬಿಟ್ಟಿದ್ದವು.
ಸಮುದ್ರ ಅವುಗಳನ್ನು ನುಂಗಿ ನೂರಾ ಇಪ್ಪತ್ತು ಅಡಿಗಳೆತ್ತರಕ್ಕೆ ಏರಿನಿಂತಿತ್ತು.
ಈಗಿನ ಹಾಜ಼ಿರಾ ಬಂದರಿನಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿನ ಆ ಪ್ರಾಚೀನ ನದಿಪಾತ್ರಗಳಲ್ಲೊಂದರ ಇಕ್ಕೆಲಗಳಲ್ಲಿ ಎರಡು ನಗರದ ಅವಶೇಷಗಳು ನಿಯೋಟ್ ವಿಜ್ಞಾನಿಗಳಿಗೆ ಗೋಚರವಾದವು.
ಒಂದು ನಗರದಲ್ಲಂತೂ ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಸಾಗಿದ ನೇರ ರಸ್ತೆಗಳು, ಕ್ರಮಬದ್ಧ ಚರಂಡಿ ವ್ಯವಸ್ಥೆ, ಚೌಕಾಕಾರದ, ಆಯತಾಕಾರದ ಕಟ್ಟಡಗಳ ಅವಶೇಷಗಳ ಸಾಲುಸಾಲು ಒಂಬತ್ತು ಕಿಲೋಮೀಟರ್ ಉದ್ದ ಹಾಗೂ ಎರಡು ಕಿಲೋಮೀಟರ್ ಅಗಲದವರೆಗೆ ಹರಡಿಹೋಗಿದ್ದವು.
ನದಿಪಾತ್ರದ ನದಿಪಾತ್ರದ ಪೂರ್ವದಲ್ಲಿನ ವಾಸದ ಗೃಹಗಳ ಅಡಿಪಾಯಗಳಂತಿರುವ ರಚನೆಗಳು ೫x೪ ಮೀಟರ್ ಅಳತೆಯವಾಗಿದ್ದರೆ ಪಶ್ಚಿಮದಲ್ಲಿನ ಅಡಿಪಾಯಗಳು ೧೬x೧೫ ಮೀಟರ್ ಅಳತೆಯವಾಗಿವೆ.
ಅಲ್ಲದೇ ಪಶ್ಚಿಮದಲ್ಲಿ ಕೆಲವು ದೊಡ್ಡ ರಚನೆಗಳೂ ಕಾಣಬರುತ್ತವೆ.
ಪಶ್ಚಿಮದಂಚಿನಲ್ಲಿ ಕಂಡುಬಂದಿರುವ, ಎಲ್ಲ ಕಡೆಗಳಿಂದಲೂ ಎತ್ತರದ ಗೋಡೆಗಳಿಂದ ಆವೃತವಾಗಿರುವ ಆಯತಾಕಾರದ ತಗ್ಗಿನ ರಚನೆಯೊಂದು ೪೧ ಮೀಟರ್ ಉದ್ದ ಮತ್ತು ೨೫ ಮೀಟರ್ ಅಗಲವಾಗಿದೆ.
ಇದರ ಒಂದು ಒಳಬದಿಯಲ್ಲಿ ಏಳು ಮೀಟರ್ ಕೆಳಗೆ ಇಳಿದುಹೋಗಲು ಮೆಟ್ಟಲುಗಳಿವೆ.
ರಚನೆಯ ಒಂದು ಕಡೆ ನೀರು ಒಳಹರಿದು ಬರಲು, ಇನ್ನೊಂದು ಕಡೆ ಹೊರಹರಿದುಹೋಗಲು ಅನುವಾಗುವಂತಹ ರಚನೆಗಳಿವೆ.
ಜತೆಗೆ ಎಲ್ಲ ಕಡೆಯಿಂದಲೂ ಆವೃತವಾಗಬಲ್ಲ, ಕೋಣೆಯಂತಹ ರಚನೆಯೊಂದೂ ಇದೆ.
ಇದು ಮೊಹೆಂಜೋದಾರೋನಲ್ಲಿನ ಸ್ನಾನಗೃಹದ (The Great Bath) ಪಡಿಯಚ್ಚಿನಂತಿದೆ.
ಮನುಷ್ಯನಪಶ್ಚಿಮದಲ್ಲೇ ಎತ್ತರದ ದಿನ್ನೆಯೊಂದರ ಮೇಲೆ ೨೦೦ ಮೀಟರ್ ಉದ್ದ, ೪೫ ಮೀಟರ್ ಅಗಲದ ರಚನೆಯೊಂದಿದೆ ಹಾಗೂ ಅದಕ್ಕೆ ಹತ್ತಿಹೋಗಲು ಬಲಗಡೆ ಮೆಟ್ಟಲುಗಳಿವೆ.
ರಚನೆಯ ಒಳಗೆ ೧೮ ಮೀಟರ್ ಮತ್ತು ಅದಕ್ಕೂ ದೊಡ್ಡದಾದ ಚೌಕಾಕಾರದ ಕೋಣೆಗಳಂತಹ ಹಲವಾರು ರಚನೆಗಳಿವೆ.
ಇದರ ಪೂರ್ವ ಭಾಗದಲ್ಲಿ ಕೆಲವು ಮನುಷ್ಯನ ಹಾಗೂ ಪ್ರಾಣಿಗಳ ಮೂಳೆಗಳು ಮತ್ತು ಹಲ್ಲು ಹಾಗೂ ದವಡೆಮೂಳೆ ಪಳೆಯುಳಿಕೆಯ ಸ್ಥಿತಿಯಲ್ಲಿ ದೊರೆತಿವೆ.
ಒಟ್ಟಾರೆ ಈ ರಚನೆ ಮೊಹೆಂಜೋದಾರೋ, ಹರಪ್ಪಾ, ಧೊಲವೀರ ಹಾಗೂ ಇತರ ಸಿಂಧೂ ನಾಗರಿಕತೆಯ ನಗರಗಳಲ್ಲಿ ಕಂಡುಬಂದಿರುವ ದುರ್ಗ (Citadel) ಅನ್ನು ಹೋಲುತ್ತದೆ.
ಆ ನಗರಗಳಲ್ಲಿರುವಂತಹ ಧಾನ್ಯ ಸಂಗ್ರಹಾಗಾರ ಸಹಾ ಇಲ್ಲಿ ಕಂಡುಬಂದಿದೆ.
ಅದು ೧೯೦ ಮೀಟರ್ ಉದ್ದ ಹಾಗೂ ೮೫ ಮೀಟರ್ ಅಗಲವಿದೆ.
ಅದರ ದಕ್ಷಿಣ ಭಾಗದಲ್ಲಿ ಬಹುಶಃ ಕೆಲಸಗಾರರಿಗೆಂದು ಪುಟ್ಟಪುಟ್ಟ ವಸತಿಕೋಣೆಗಳಿವೆ.
ಇದೆಲ್ಲವೂ ಸೂಚಿಸುವುದು ಈಗ ನೀರಿನಾಳದಲ್ಲಿ ಮುಳುಗಿರುವ ಆ ನಗರ ನಮಗೆ ಪರಿಚಿತವಿರುವ ಮೊಹೆಂಜೋದಾರೋ, ಚಾನ್ಹುದಾರೋ, ಸಕ್ತಜೆಂಡರ್, ಹರಪ್ಪಾ, ರೋಪಡ್, ಕಾಲಿಬಂಗಾನ್, ಧೊಲವೀರ ಹಾಗೂ ಇನ್ನಿತರ ಸಿಂಧೂ ಸಂಸ್ಕೃತಿಯ ನಗರಗಳ ಪಡಿಯಚ್ಚು!
ಮೇ ೧೯, ೨೦೦೧ರಂದು ಅಂದಿನ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಮಂತ್ರಿ ಪ್ರೊ. ಮುರಲಿ ಮಹೋಹರ್ ಜೋಷಿ ಈ ಪತ್ತೆಗಳ ಕುರಿತಾಗಿ ಪ್ರಕಟಣೆ ನೀಡಿದರು.
ಆದರೆ ಆ ವಿವರಗಳು ದೇಶವಿದೇಶಗಳ ಇತಿಹಾಸಜ್ಞರಲ್ಲಿ, ಆಸಕ್ತರಲ್ಲಿ ನಾಲ್ಕು ಸಾವಿರ ವರ್ಷಗಳಷ್ಟು ಪುರಾತನವಾದ ಸಿಂಧೂ ಕಣಿವೆಯ ನಾಗರೀಕತೆ ಒಂದುಕಾಲದಲ್ಲಿ ಒಣನೆಲವಾಗಿದ್ದ, ಈಗ ನೂರಿಪ್ಪತ್ತು ಅಡಿಗಳ ನೀರಿನಲ್ಲಿ ಮುಳುಗಿಹೋಗಿರುವ ಖಂಭಾತ್ ಕೊಲ್ಲಿಗೂ ಹರಡಿತ್ತು ಎಂದಷ್ಟೇ ಸೂಚಿಸುವ ಹೊರತಾಗಿ ಮತ್ತೇನೂ ಹೆಚ್ಚಿನ ಆಸಕ್ತಿ ಕೆರಳಿಸಲಿಲ್ಲ.
ಆದರೆ, ಮುಂದಿನ ದಿನಗಳಲ್ಲಿ ಖಂಭಾತ್ ನಗರಗಳು ಎಷ್ಟು ಪ್ರಾಚೀನ ಎಂದು ಪರೀಕ್ಷಿಸಹೊರಟ ನಿಯೋಟ್ ಭೂವಿಜ್ಞಾನಿಗಳಿಗೆ ಮತ್ತಷ್ಟು ಅಚ್ಚರಿಗಳು ಎದುರಾದವು.
ಖಂಭಾತ್ ಕೊಲ್ಲಿಯಲ್ಲಿ ಮುಳುಗು ಹಾಕಿ ಸಾಗರತಳ ವೀಕ್ಷಣೆಯಾಗಲೀ, ಜಲಾಂತರ್ಗತ ವಿಡಿಯೋ ಚಿತ್ರೀಕರಣವಾಗಲೀ ಸಾಧ್ಯವಿಲ್ಲದ ಕಾರಣ ಅಲ್ಲಿ ಹೂಳೆತ್ತುವ ಮೂಲಕ ಸಾಗರತಳದ ವಸ್ತುಗಳನ್ನು ಮೇಲೆತ್ತಿ ತಂದು ಪರಿಶೀಲಿಸಲು ನಿಯೋಟ್ ಭೂವಿಜ್ಞಾನಿಗಳು ಮಾಡಿಕೊಂಡ ಮನವಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಮಂತ್ರಾಲಯ ಅನುಮತಿ ನೀಡಿತು.
ಅದಕ್ಕನುಗುಣವಾಗಿ ನವೆಂಬರ್ ೨೦೦೧ರಲ್ಲಿ ಆರಂಭವಾದ ಆ ಬಗೆಯ ಶೋಧನೆ ಮೇಲೆ ತಂದ ಟನ್ಗಟ್ಟಲೆ ಮಣ್ಣುಕೆಸರಿನಲ್ಲಿ ಅಚ್ಚರಿ ಹುಟ್ಟಿಸುವಂತಹ ನೂರಾರು ಪ್ರಾಚ್ಯ ವಸ್ತುಗಳು ಬೆಳಕು ಕಂಡಿವೆ.
ಮಡಕೆ ಚೂರುಗಳು, ಮಣಿಗಳು, ಅಲಂಕೃತ ಶಿಲಾಪ್ರತಿಮೆಗಳು, ಕಲ್ಲಿನ ಉಪಕರಣಗಳು, ಸೂಕ್ಷ್ಮ ಕುಸುರಿ ಕಲೆಯ ಕಲ್ಲಿನ ಆಟಿಕೆಯೋ ಅಥವಾ ಬೇರಾವುದೋ ಉಪಯುಕ್ತ ವಸ್ತುಗಳು ನೂರುಗಟ್ಟಲೆಯಲ್ಲಿ ದೊರೆತಿವೆ.
ಒಂದರಲ್ಲಂತೂ ತುದಿಯಿಂದ ತುದಿಗೆ ನಡುಮಧ್ಯದಲ್ಲಿ ನೀಳವಾಗಿ, ನೇರವಾಗಿ ಸೂಕ್ಷ್ಮ ರಂಧ್ರವನ್ನು ಕೊರೆಯಲಾಗಿದೆ!
ಆ ನಗರಗಳ ನಿವಾಸಿಗಳ ಸೂಕ್ಷ್ಮ ಕುಶಲತೆ ಹಾಗೂ ತಾಂತ್ರಿಕ ಸಾಮರ್ಥ್ಯಕ್ಕೆ ಇದು ಸಾಕ್ಷಿಯಾಗಿದೆ.
ಇವೆಲ್ಲಕ್ಕಿಂತಲೂ ಅಮೂಲ್ಯವಾದ ವಸ್ತುವೆಂದರೆ ಪಳಯುಳಿಕೆಗಟ್ಟಿದ ಒಂದು ಪಾಲಿಷ್ ಮಾಡಲ್ಪಟ್ಟ ತೇಗದ ಮರದ ತುಂಡು.
ಕಲ್ಲಿನ ವಸ್ತುಗಳನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆ ಒಡ್ಡಲಾಗುವುದಿಲ್ಲವಾದ ಕಾರಣ ಈ ಮರದ ತುಂಡು ಸಿಕ್ಕಿದಾಗ ವಿಜ್ಞಾನಿಗಳಿಗೆ ಸಂಭ್ರಮನೋ ಸಂಭ್ರಮ.
ಅದನ್ನು ಕಾರ್ಬನ್-೧೪ ಪರೀಕ್ಷೆಗೊಳಪಡಿಸಿದ ಅವರಿಗೆ ತಿಳಿದದ್ದು ಅದು ೯,೫೦೦ ವರ್ಷಗಳಷ್ಟು ಹಳೆಯದು ಎಂದು!
ಅದರ ಆಧಾರದ ಮೇಲೆ ಆ ನಗರಗಳು ಒಂಬತ್ತು ಸಾವಿರ ವರ್ಷಗಳಷ್ಟು ಪುರಾತನ, ಪ್ರಪಂಚದಾದ್ಯಂತ ಇದುವರೆಗೆ ದೊರೆತಿರುವ ನಗರಗಳ ಅವಶೇಷಗಳಲ್ಲೇ ಇವು ಅತ್ಯಂತ ಹಳೆಯವು ಎಂಬ ತೀರ್ಮಾನಕ್ಕೆ ನಿಯೋಟ್ ವಿಜ್ಞಾನಿಗಳ ತಂಡ ಬಂತು.
ಇದರರ್ಥ ಭೂಮಿಯ ಮೇಲೆ ಮೊತ್ತಮೊದಲ ನಗರಗಳು ನಿರ್ಮಾಣವಾದದ್ದು ಐದು ಸಾವಿರ ವರ್ಷಗಳ ಹಿಂದೆ, ಸುಮೇರಿಯಾ ಅಂದರೆ ಇಂದಿನ ಇರಾಕ್ನಲ್ಲಿ ಎಂದು ಬರೆಯಲಾಗಿರುವ ಇತಿಹಾಸವನ್ನು ನಾವೀಗ ಬದಲಾಯಿಸಬೇಕು!
ಅಥವಾ ಜಗತ್ತಿನ ಇತಿಹಾಸವನ್ನು ಸಧ್ಯಕ್ಕೆ ಬದಿಗಿಟ್ಟರೂ ಮೆಹ್ರ್ಘರ್ ಉತ್ಖನನಗಳನ್ನು ಮುಂದೊಡ್ಡಿ ತಾನೇ ಏಶಿಯಾದಲ್ಲಿ ನಾಗರಿಕತೆಯ ತೊಟ್ಟಿಲು ಎಂದು ಬೀಗುತ್ತಿರುವ ಪಾಕಿಸ್ತಾನದ ಹಮ್ಮಿಗೆ ಸೂಜಿ ಚುಚ್ಚಿ, ನಾಗರೀಕತೆ ಆರಂಭವಾದದ್ದು ಗುಜರಾತ್ನಲ್ಲಿ ಅಂದರೆ ಭಾರತದಲ್ಲಿ ಎಂದು ಹೇಳಬೇಕು!
ಆದರೆ, ಇತಿಹಾಸಕಾರರನ್ನು ಬೆಚ್ಚಿಬೀಳಿಸುವ ಈ ತೀರ್ಮಾನಕ್ಕೆ ಸಹಜವಾಗಿಯೇ ಅಪಸ್ವರಗಳೆದ್ದವು.
ಹೆಲ್ಸಿಂಕಿ ವಿಶ್ವವಿದ್ಯಾಲಯದ ಇಂಡಾಲಜಿಯ ಪ್ರಾಧ್ಯಾಪಕ ಡಾ. ಅಸ್ಕೋ ಪರ್ಪೋವಾ, ಬ್ರಿಟಿಶ್ ಮ್ಯೂಸಿಯಂನ ಪುರಾತತ್ವಶಾಸ್ತ್ರಜ್ಞ ಜಸ್ಟಿನ್ ಮಾರಿಸ್, ಭಾರತದಲ್ಲಿ ಕಾರ್ಬನ್ ಡೇಟಿಂಗ್ ತಂತ್ರಜ್ಞಾನದ ಪಿತಾಮಹ ಡಾ. ಡಿ. ಪಿ. ಅಗ್ರವಾಲ್ ಸೇರಿದಂತೆ ಹಲವಾರು ದೇಶವಿದೇಶಗಳ ವಿದ್ವಾಂಸರು ನಿಯೋಟ್ ವಿಜ್ಞಾನಿಗಳ ತೀರ್ಮಾನವನ್ನು ಸಂದೇಹಿಸಿದರು.
ಅದೇ ಖಂಭಾತ್ ತೀರದಲ್ಲಿ ಸಿಂಧೂ ನಾಗರಿಕತೆಯ ಬಂದರುನಗರ ಲೋಥಾಲ್ ಅನ್ನು ಶೋಧಿಸಿದ ಗೌರವಾನ್ವಿತ ಸಾಗರ ಪುರಾತತ್ವಶಾಸ್ತ್ರಜ್ಞ ಡಾ. ಎಸ್. ಆರ್. ರಾವ್ ಅವರೂ ಸಹಾ ನಿಯೋಟ್ ವಿಜ್ಞಾನಿಗಳ
ಶೋಧನೆಗಳನ್ನು ಪುರಸ್ಕರಿಸಲು ನಿರಾಕರಿಸಿದರು.
ಆ ಮರದ ತುಂಡು ದೇಶದ ಪಶ್ಚಿಮ ಭಾಗದಲ್ಲಿ ನೈಸರ್ಗಿಕವಾಗಿ ಬೆಳೆಯುವ ತೇಗದ ಮರದ್ದಾದರೂ ಯಾವುದಾದರೂ ನದಿ ಅದನ್ನು ಸಮುದ್ರಕ್ಕೆ ಹೊತ್ತೊಯ್ದು ಒಗೆದಿರಬಹುದಾದ ಸಾಧ್ಯತೆ ಇದೆಯೆಂದು ಇತಿಹಾಸಕಾರ ಪ್ರೊ. ಇರಾವತಂ ಮಹಾದೇವನ್ ಅಭಿಪ್ರಾಯಪಟ್ಟರು.
ಅಲ್ಲಿ ಪತ್ತೆಯಾದ ನೂರಾರು ಪ್ರಾಚ್ಯವಸ್ತುಗಳ ಬಗೆಗೂ ಅದನ್ನೇ ಹೇಳಬಹುದು.
ಈ ಅನುಮಾನಗಳನ್ನು ದೂರೀಕರಿಸುವ ಉದ್ದೇಶದಿಂದ ನಿಯೋಟ್ ಮುಂದಿನ ದಿನಗಳಲ್ಲಿ ಆ ಪ್ರದೇಶದ ಮಣ್ಣಿನ ಹತ್ತು ಸ್ಯಾಂಪಲ್ಗಳನ್ನು ಪರಿಶೀಲಿಸಿ ಫಲಿತಾಂಶವನ್ನು ಪ್ರಾಚ್ಯವಸ್ತುಗಳಿಗೆ ಹೋಲಿಸಿ ನೋಡಿತು.
ಬಂದ ಫಲಿತಾಂಶ ಆ ವಸ್ತುಗಳೆಲ್ಲವೂ ಅಲ್ಲಿಯವೇ, ಬೇರೆಡೆಯಿಂದ ನೀರಿನ ಮೂಲಕವೋ, ಇನ್ನಾತರ ಮೂಲಕವೋ ಸಾಗಿಬಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿತು.
ನಿಯೋಟ್ ತನ್ನ ಸಂಶೋಧನೆಯಲ್ಲಿ ಲಕ್ನೋದ ಬೀರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಆಫ್ ಪೇಲಿಯೋಬಾಟನಿ, ಹೈದರಾಬಾದ್ನ ನ್ಯಾಷನಲ್ ಜಿಯೋಫಿಸಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ಅಹ್ಮದಾಬಾದ್ನ ಫಿಸಿಕಲ್ ರೀಸರ್ಚ್ ಲ್ಯಾಬೋರೇಟರಿಗಳ ಸಹಾಯವನ್ನು ತೆಗೆದುಕೊಂಡಿದ್ದನ್ನು ನಾವಿಲ್ಲಿ ಗಣನೆಗೆ ತೆಗೆದುಕೊಳ್ಳಬೇಕು.
ಖಂಭಾತ್ ಕೊಲ್ಲಿಯಲ್ಲಿ ಮೇಲೆತ್ತಿ ತಂದಿರುವ ಪ್ರಾಚ್ಯ ವಸ್ತುಗಳು ಬೇರೆಡೆಯಿಂದ ಅಲ್ಲಿಗೆ ಸಾಗಿಸಲ್ಪಟ್ಟವು ಎಂದು ಹೇಳಿದರೂ ಅಲ್ಲಿ ನೀರಿನಾಳದಲ್ಲಿ ಪತ್ತೆಯಾಗಿರುವ ರಚನೆಗಳ ಬಗ್ಗೆ ಏನು ಹೇಳುವುದು?
ಅವು ರಚನೆಗಳೇ ಅಲ್ಲ, ಕಂಪ್ಯೂಟರ್ ಮೂಡಿಸಿದ ಚಮತ್ಕಾರಗಳು ಎಂಬ ಕಟುವಿಮರ್ಶೆಗಳು ಮೊದಲಿಗೆ ಬಂದರೂ ನಿಯೋಟ್ ವಿಜ್ಞಾನಿಗಳು ಅನುಸರಿಸಿದ ಸಂಶೋಧನಾ ಮಾರ್ಗ ಪೂರ್ತಿ ವಿಶ್ವಾಸಾರ್ಹ ವೈಜ್ಞಾನಿಕ ವಿಧಾನಗಳು ಎಂದರಿತೊಡನೇ ಟೀಕಾಕಾರರು ತಮ್ಮ ವಾದವನ್ನು ಬದಲಿಸಿದರು.
ಖಂಭಾತ್ ಸೇರಿದಂತೆ ಇಡೀ ಗುಜರಾತ್ ಪ್ರದೇಶ ಭೂಕಂಪ ವಲಯದಲ್ಲಿರುವುದರಿಂದ ಭಾರಿ ಭೂಕಂಪವೊಂದು ನೆಲದ ಮೇಲಿದ್ದ, 'ಪ್ರಾಚೀನವಲ್ಲದ' ನಗರವೊಂದನ್ನು ಅನಾಮತ್ತಾಗಿ ಎತ್ತಿ ಸಮುದ್ರದಾಳಕ್ಕೆ ಒಗೆದಿರಬೇಕೆಂದು ಅವರ ಹೊಸ ವಾದವಾಗಿತ್ತು.
ಆದರೆ ಹಾಗೇನಾದರೂ ಆಗಿದ್ದರೆ ಸಾಗರದಾಳದಲ್ಲಿನ ನಗರದ ರಸ್ತೆಗಳು, ಕಾಲುವೆಗಳು, ಒಳಚರಂಡಿ ವ್ಯವಸ್ಥೆಗಳು ಹಿಗ್ಗಾಮುಗ್ಗಾ ಜಗ್ಗಿಹೋದಂತಾಗಿ ಹಾಳಾಗಿರುತ್ತಿದ್ದವು.
ಆದರೆ ಅವೆಲ್ಲವೂ ಒಂದಿನಿತೂ ಮುಕ್ಕಾಗದೇ ಇಂದಿಗೂ ನೇರವಾಗಿವೆ!
ಅಲ್ಲದೇ, ಸಾಗರದಾಳದ ರಚನೆಗಳು ಸದೃಢ ಅಡಿಪಾಯಗಳ ಮೇಲೆ ನಿಂತಿವೆ, ಚೂರೂ ಅಲುಗಿಲ್ಲ ಎಂದು ಸಬ್ ಬಾಟಂ ಪ್ರೊಫೈಲರ್ ಪರೀಕ್ಷೆ ಹೇಳುತ್ತದೆ.
ಮಣ್ಣಿನ ಸ್ಯಾಂಪಲ್ ಪರೀಕ್ಷೆಯಂತೂ ಅವೆಲ್ಲವೂ ಅಲ್ಲಿಯವೇ ಎಂದು ವಿಶ್ವಾಸಾರ್ಹವಾಗಿ ಹೇಳುತ್ತದೆ.
ಇದರರ್ಥ ಆ ನಗರಗಳು ಅಲ್ಲಿಯವೇ ಎಂಬುದು ನಿಶ್ಚಿತವಾಗುತ್ತದೆ.
ಆಗ 'ಮತ್ತೆ' ಎದುರಾಗುವ ಪ್ರಶ್ನೆ- ಅವು ಎಷ್ಟು ಹಳೆಯವು?
ನಿಯೋಟ್ ವಿಜ್ಞಾನಿಗಳು ಹೇಳುವಂತೆ ಅದು ೯,೫೦೦ ವರ್ಷಗಳು ಹಳೆಯವೇ?
ಮರದ ಪಳೆಯುಳಿಕೆಯ ಕಾರ್ಬನ್ ಡೇಟಿಂಗ್ ಫಲಿತಾಂಶವನ್ನು ಬದಿಗಿಟ್ಟರೂ ಖಂಭಾತ್ ನಗರಗಳು ಕನಿಷ್ಟ ಎಂಟು ಸಾವಿರ ವರ್ಷಗಳ ಹಿಂದಿನವು ಎಂದು ನಿಖರವಾಗಿ ಹೇಳಬಹುದು ಎಂದು ನನಗನಿಸುತ್ತದೆ.
ಸಾಗರದ ಮಟ್ಟ ಏರುತ್ತಾ ಹೋಗಿ ಗುಜರಾತ್ ತೀರವನ್ನು ನುಂಬಿ ಖಂಭಾತ್ ಕೊಲ್ಲಿಯನ್ನು ಸೃಷ್ಟಿಸಿದ್ದು ಎಂಟರಿಂದ ಏಳು ಸಾವಿರ ವರ್ಷಗಳ ಹಿಂದೆ ಎಂದು ಭೂವಿಜ್ಞಾನಿಗಳು ಮತ್ತು ಸಾಗರವಿಜ್ಞಾನಿಗಳು ನಿಖರವಾಗಿ ಗುರುತಿಸಿದ್ದಾರೆ.
ಇದರರ್ಥ ಒಂದು ಕಾಲದಲ್ಲಿ ಒಣನೆಲವಾಗಿದ್ದ ಖಂಭಾತ್ ಕೊಲ್ಲಿ ಏಳು ಸಾವಿರ ವರ್ಷಗಳ ಹಿಂದೆ ತನ್ನ ಮೇಲಿದ್ದ ಜನ ಜಾನುವಾರು, ಮನೆ ಮಠ ಎಲ್ಲವನ್ನೂ ಹೊತ್ತುಕೊಂಡು ನೀರಿನಲ್ಲಿ ಮುಳುಗಿಹೋಯಿತು!
ಹೀಗಾಗುವುದು ಸಾಧ್ಯವೇ?
ಈ ಪ್ರಶ್ನೆಗೆ ಉತ್ತರಿಸಲು ಹೋದರೆ ಖಂಭಾತ್ ರಹಸ್ಯವಷ್ಟೇ ಅಲ್ಲ, ಹಲವು ಅದ್ಭುತರಮ್ಯ ಸಂಗತಿಗಳು ನಮ್ಮೆದುರು ಅನಾವರಣಗೊಳ್ಳತೊಡಗುತ್ತವೆ.
ತನ್ನ ಐದು ಬಿಲಿಯನ್ ವರ್ಷಗಳ ಬದುಕಿನಲ್ಲಿ ನಮ್ಮೀ ಭೂಮಿ ಹಲವು ಹಿಮಯುಗಗಳನ್ನು ಕಂಡಿದೆ.
ಕೊನೆಯ ಹಿಮಯುಗ ಆರಂಭವಾದದ್ದು ೧,೧೦,೦೦೦ ವರ್ಷಗಳ ಹಿಂದೆ.
ಆಗ ಭೂಮಿಯ ಉತ್ತರ ಮತ್ತು ದಕ್ಷಿಣದ ಬಹುಭಾಗವನ್ನು ಹಿಮ ಆವರಿಸಿಕೊಂಡಿತ್ತು.
ಸುಮಾರು ೧೬,೦೦೦ ವರ್ಷಗಳ ಹಿಂದೆ ಹಿಮಯುಗದ ಅಂತ್ಯ ಆರಂಭವಾದಂತೇ ಹಿಮ ಕರಗತೊಡಗಿ ಭೂಮಂಡಲದ ಆದ್ಯಂತ ಸಾಗರದ ಮಟ್ಟ ನಿಧಾನವಾಗಿ ಏರತೊಡಗಿತು, ಸಾಗರತೀರದ ಪ್ರದೇಶಗಳು ನಿಧಾನವಾಗಿ ನೀರಿನಲ್ಲಿ ಮುಳುಗತೊಡಗಿದವು.
೧೨,೮೦೦ ವರ್ಷಗಳ ಹಿಂದೆ ಸಾಗರದ ನೀರು ಛಕ್ಕನೆ ಏರಿಬಂದು ನೆಲವನ್ನು ನುಂಗಿಬಿಡುವಂತಹ ಭಯಾನಕ ಘಟನೆಯೊಂದು ಘಟಿಸಿತು.
ನಮ್ಮ ಪುರಾಣಗಳು, ಬೈಬಲ್, ಅದಕ್ಕೂ ಹಳೆಯದಾದ, ಐದುಸಾವಿರ ವರ್ಷಗಳಷ್ಟು ಪುರಾತನವಾದ ಸುಮೇರಿಯಾದ ಗಿಲ್ಗಮೇಶ್ ಆಖ್ಯಾಯಿಕೆಯಲ್ಲಿ ಜಲಪ್ರಳಯದ ಉಲ್ಲೇಖಗಳಿವೆ.
ಹಾಗೆ ನೋಡಿದರೆ, ಪೂರ್ವದಲ್ಲಿ ಚೀನಾದ ಯಾಂಗ್ಟ್ಝೆ ನದಿಕಣಿವೆಯಿಂದ ಹಿಡಿದು ಪಶ್ಮಿಮದಲ್ಲಿ ಪೆರು - ಬೊಲಿವಿಯಾಗಳ ಎತ್ತರದ ಪರ್ವತಪ್ರದೇಶದವರೆಗೆ, ಉತ್ತರದಲ್ಲಿ ಹಿಮಮಯ ಅಲಾಸ್ಕಾದಿಂದ ಹಿಡಿದು ದಕ್ಷಿಣದಲ್ಲಿ ಬರಡು ಆಸ್ಟ್ರೇಲಿಯಾದವರೆಗೆ ಜಗತ್ತಿನಾದ್ಯಂತ ಐನೂರಕ್ಕೂ ಹೆಚ್ಚಿನ ಜಲಪ್ರಳಯದ ದಂತಕತೆಗಳು ದೊರೆಯುತ್ತವೆ.
ಒಂದಕ್ಕೊಂದು ಸಂಪರ್ಕವಿಲ್ಲದ ಇತಿಹಾಸಪೂರ್ವಕಾಲದ ನೂರಾರು ಮಾನವಜನಾಂಗಗಳೆಲ್ಲವೂ ಪ್ರಳಯವನ್ನು ತಮ್ಮ ಸಾಮೂಹಿಕ ನೆನಪಿನ ಕೋಶದಲ್ಲಿ ಇನ್ನೂ ಇಟ್ಟುಕೊಂಡಿರುವುದು ಏನನ್ನು ಸೂಚಿಸುತ್ತದೆ ಅಂದರೆ ಅವೆಲ್ಲವೂ ಪ್ರಳಯವನ್ನು ಎಂದೋ ಒಂದು ಕಾಲದಲ್ಲಿ ಕಂಡಿವೆ, ಅನುಭವಿಸಿವೆ!
ಹೀಗಾಗಿ ಜಲಪ್ರಳಯ ಮಾನವ ಜನಾಂಗದ ಸಮಷ್ಟೀ ಪ್ರಜ್ಞೆಯಲ್ಲಿ ಶಾಶ್ವಗವಾಗಿ ದಾಖಲಾಗಿಹೊಗಿದೆ!
ಹಾಗಿದ್ದರೆ ಈ ಪ್ರಳಯ ಅನ್ನುವುದಾದರೂ ಏನು?
ಅದೆಷ್ಟೋ ವರ್ಷಗಳಿಂದ ವಿದ್ವಾಂಸರನ್ನೂ, ಸಾಮಾನ್ಯ ಆಸಕ್ತರನ್ನೂ ಕಾಡಿದ ಈ ಪ್ರಶ್ನೆಗೆ ಕಳೆದೊಂದು ದಶಕದಲ್ಲಿ ಉತ್ತರಗಳು ದೊರೆಯಲಾರಂಭಿಸಿವೆ.
ವಿವಿಧ ಕಾರಣಗಳಿಗಾಗಿ ನಮ್ಮೀ ಭೂಗ್ರಹದ ಅಕ್ಷಗಳು ಆಗಾಗ ಬದಲಾಗುತ್ತವೆ.
ಧ್ರುವಪಲ್ಲಟ ಎಂದು ಕರೆಯಲಾಗುವ ಅಂಥದೊಂದು ಬದಲಾವಣೆ ಕೊನೆಯ ಬಾರಿಗೆ ಘಟಿಸಿದ್ದು ೧೨,೮೦೦ ವರ್ಷಗಳ ಹಿಂದೆ.
ಆಗ ಉತ್ತರ ಧ್ರುವ ಈಗಿನ ಉತ್ತರ ಕೆನಡಾದಲ್ಲಿತ್ತು ಮತ್ತು ದಕ್ಷಿಣ ಧ್ರುವ ದಕ್ಷಿಣ ಹಿಂದೂಮಹಾಸಾಗರದಲ್ಲಿತ್ತು.
ಈಗ ಛಳಿ ನಾಡಾಗಿರುವ ಉತ್ತರ ಸೈಬೀರಿಯಾ ಉತ್ತರ ಸಮಶೀತೋಷ್ಣ ವಲಯದಲ್ಲಿದ್ದರೆ ಅಂಟಾರ್ಕ್ಟಿಕಾ ದಕ್ಷಿಣ ಸಮಶೀತೋಷ್ಣ ವಲಯದಲ್ಲಿತ್ತು.
ನಮ್ಮ ಸೌರವ್ಯೂಹದ ಹೊರವಲಯದಲ್ಲಿ ಓರ್ಟ್ ಕ್ಲೌಡ್ ಎಂದು ಕರೆಯಲ್ಪಡುವ ಅಗಣಿತ ವಿಸ್ತಾರದ ಧೂಳು ಮತ್ತು ಹಿಮದ ಪದರವಿದೆ.
ಇದು ಧೂಮಕೇತುಗಳ ಉಗಮಸ್ಥಾನ.
ಅಲ್ಲಿರುವ ಟ್ರಿಲಿಯನ್ಗಟ್ಟಲೆ ಧೂಮಕೇತುಗಳಲ್ಲಿ ಕೆಲವು ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಸೌರವ್ಯೂಹವನ್ನು ಪ್ರವೇಶಿಸುವುದು ಅನಾದಿಕಾಲದಿಂದಲೂ ನಡೆಯುತ್ತಿದೆ.
ಹಾಗೆ ಇಪ್ಪತ್ತುಸಾವಿರ ವರ್ಷಗಳ ಹಿಂದೆ ಸೌರವ್ಯೂಹಕ್ಕೆ ಬಂದ ಅಲೆಮಾರಿ ಧೂಮಕೇತುವೊಂದು ಮುಂದಿನ ಎಂಟುನೂರು ವರ್ಷಗಳಲ್ಲಿ ಸೂರ್ಯನ ಸುತ್ತಲಿನ ತನ್ನ ಪ್ರತೀ ಪ್ರದಕ್ಷಿಣೆಯಲ್ಲೂ ಭೂಮಿಯ ಕಕ್ಷೆಗೆ ಹತ್ತಿರಾಗುತ್ತಾ ಬಂತು.
೧೨,೮೦೦ ವರ್ಷಗಳ ಸುಮಾರಿಗೆ ಭೂಮಿಯ ಕಕ್ಷೆಗೆ ಅಡ್ಡವಾಗಿ ಬಂದ ಆ ಧೂಮಕೇತು ಐದು ಚೂರುಗಳಾಗಿ ಸಿಡಿಯಿತು.
ಎಲ್ಲಕ್ಕಿಂತ ದೊಡ್ಡದಾದ ತುಂಡು ಅಂದಿನ ಉತ್ತರ ಧ್ರುವ ಅಂದರೆ ಇಂದಿನ ಉತ್ತರ ಕೆನಡಾಗೆ ಅಪ್ಪಳಿಸಿತು.
ಮತ್ತೆರಡು ಮಧ್ಯಮ ಗಾತ್ರದ ತುಂಡುಗಳು ಉತ್ತರ ಯೂರೋಪ್ ಮತ್ತು ಸಿರಿಯಾ ಮೇಲೂ ಎರಗಿದವು.
ಶೂಮೇಕರ್-ಲೆವಿ ಧೂಮಕೇತು ಇಪ್ಪತ್ತೊಂದು ಚೂರುಗಳಾಗಿ ಸಿಡಿದು ಗುರುಗ್ರ್ಹಕ್ಕೆ ಅಪ್ಪಳಿಸಿದ ಅಂತಃರಿಕ್ಷ ದೀಪಾವಳಿಯ ರುದ್ರರಮಣೀಯ ದೃಶ್ಯವನ್ನು ೧೯೯೪ರಲ್ಲಿ ನಾವು ನೋಡಿಯೇ ಇದ್ದೇವೆ.
ಗುರುಗ್ರಹಕ್ಕೆ ಐದಾರು ಕಿಲೋಮೀಟರ್ ಅಗಲದ ತಲೆಯ ಧೂಮಕೇತುವಿನ ಚೂರುಗಳು ಅಪ್ಪಳಿಸಿದರೆ ಅವು ಆ ಅಗಾಧ ಗ್ರಹದ ಕೂದಲನ್ನೂ ಕೊಂಕಿಸಲಾರವು.
ಆದರೆ ನಮ್ಮ ಪುಟ್ಟ ಭೂಮಿಗದು ಮಾರಣಾಂಗಿಕ ಹೊಡೆತ.
ಅಂದಿನ ಆ ಹೊಡೆತಗಳ ಪರಿಣಾಮವಾಗಿ ಇಡೀ ಭೂಮಂಡಲ ಅದುರಿ ಸಾಗರಗಳ ನೀರು ಏಕಾಏಕಿ ಎಲ್ಲ ಭೂಖಂಡಗಳ ಮೇಲೆ ಚೆಲ್ಲಾಡಿಹೋಯಿತು.
ಈ ದುರಂತ ಸಾಗರತೀರಗಳಲ್ಲಿ ಭಯಾನಕವಾಗಿತ್ತು.
ಉಕ್ಕಿ ಮೇಲೇರಿಬಂದ ಸಾಗರ ಹಿಂದಕ್ಕೆ ಹರಿದೋಡುವಾಗ ತನ್ನ ದಾರಿಯಲ್ಲಿದ್ದ ಎಲ್ಲವನ್ನೂ ಸೆಳೆದುಕೊಂಡುಹೋಯಿತು.
ಅದೇ ಸಮಯಕ್ಕೆ, ಧೂಮಕೇತುವಿನ ಅಪ್ಪಳಿಸುವಿಕೆಯಿಂದಾಗಿ ಉತ್ಪತ್ತಿಯಾದ ಅಗಾಧ ಶಾಖ, ಹೊಡೆತಕ್ಕೆ ನೇರವಾಗಿ ಸಿಲುಕಿದ ಅಂದಿನ ಉತ್ತರ ಧ್ರುವದ ಹಿಮವನ್ನು ಅತಿ ಕ್ಷಿಪ್ರಕಾಲದಲ್ಲಿ ಕರಗಿಸಿಬಿಟ್ಟಿತು.
ಇದು ಸಾಗರದ ಮಟ್ಟ ಏಕಾಏಕಿ ಗಣನೀಯವಾಗಿ ಏರುವುದಕ್ಕಷ್ಟೇ ಅಲ್ಲ ಧ್ರುವಗಳನ್ನೂ ಪಲ್ಲಟಗೊಳಿಸಿಬಿಟ್ಟಿತು.
ಧ್ರುವದಲ್ಲಿನ ಮೈಲುಗಟ್ಟಲೆ ಎತ್ತರದ ಹಿಮ ಕರಗಿದ್ದರಿಂದಾಗಿ ಅಲ್ಲಿ ಭೂಮಿಯ ಮೇಲಿದ್ದ ಅಗಾಧ ಒತ್ತಡ ಏಕಾಏಕಿ ಮಾಯವಾದ ಕಾರಣ ಭೂಮಿಯ ಹೊರಪದರ ಸರ್ರನೆ ಜರುಗಿ ಉತ್ತರ ಧ್ರುವ ಮೇಲಕ್ಕೆ ಸರಿದು ಈಗಿನ ಸ್ಥಳಕ್ಕೆ ಬಂತು, ಅದಕ್ಕೆ ನೇರವಾಗಿದ್ದ ಅಂಟಾರ್ಟಿಕಾ ದಕ್ಷಿಣ ಧ್ರುವವಾಗಿಹೋಯಿತು.
ಭೂಮಿಯ ಹೊರಪದರದ ಈ ಜರುಗಾಟ, ಅದರಿಂದಾದ ಧ್ರುವಪಲ್ಲಟ ಅಂದಿನ ಸಕಲ ಜೀವರಾಶಿಗಳ ಮೇಲೆ ಉಂಟುಮಾಡಿದ ಪರಿಣಾಮ ಅತ್ಯಂತ ಭೀಕರವಾಗಿತ್ತು.
ಸಮಶೀತೋಷ್ಣ ವಲಯವಾಗಿದ್ದ ಉತ್ತರ ಸೈಬೀರಿಯಾ ಏಕಾಏಕಿ ಶೀತವಲಯವಾದ ಪರಿಣಾಮವಾಗಿ ಅಲ್ಲಿದ್ದ ಜೀವರಾಶಿಗಳೆಲ್ಲಾ ಹತ್ತಿಪ್ಪತ್ತು ನಿಮಿಷಗಳೊಳಗೆ ಸತ್ತು ಹಿಮಗಟ್ಟಿಹೋದವು.
ಆರಾಮವಾಗಿ ಮೇಯುತ್ತಿದ್ದ ಪ್ರಾಣಿಗಳು ಏಕಾಏಕಿ ಜೀವಂತವಾಗಿ ರಿಫ್ರಿಜಿರೇಟರ್ನ ಡೀಪ್ ಫ್ರೀಝರ್ನೊಳಕ್ಕೆ ದೂಡಲ್ಪಟ್ಟಂತಾದವು!
ಹಿಮಗಟ್ಟಿಹೋದ ಅಂತಹ ಮ್ಯಾಮತ್ ಒಂದರ ದೇಹ ಕೆಲದಶಕಗಳ ಹಿಂದೆ ಪತ್ತೆಯಾಯಿತು.
ಅದೆಷ್ಟು ಸುಸ್ಥಿತಿಯಲ್ಲಿದೆಯೆಂದರೆ ಅದರ ಮಾಂಸ ಈಗ ಬೇಯಿಸಿ ತಿನ್ನಬಹುದಾದಷ್ಟು ತಾಜಾ ಆಗಿದೆ!
ಹಿಮಗಟ್ಟಿಹೋಗುವಾಗ ಅದು ಮೇಯುತ್ತಿದ್ದ ಬಟರ್ಕಪ್ ಹೂಗಳು ಅದರ ಜಠರದಲ್ಲಿ ಇನ್ನೂ ಹಾಗೆಯೇ ಇವೆ!
ಉತ್ತರ ಸೈಬೀರಿಯಾದ ಪರ್ಮಾಫ್ರಾಸ್ಟ್ ಅಂದರೆ ಶಾಶ್ವತವಾಗಿ ಹಿಮಗಟ್ಟಿಹೋಗಿರುವ ನೆಲದ ಕೆಳಗೆ ಇಂತಹ ಅದೆಷ್ಟು ಪ್ರಾಣಿಗಳ ದೇಹಗಳು ಅಡಗಿವೆಯೋ.
ಇದು ಸೈಬೀರಿಯಾದ ಕಥೆಯಾದರೆ ಅಂಟಾರ್ಟಿಕಾದ್ದು ಇನ್ನೂ ದೊಡ್ಡ ದುರಂತ.
ಒಂದು ದೊಡ್ಡ ಹಿಮಖಂಡ ಎಂದು ನಾವು ತಿಳಿದಿರುವ ಅಂಟಾರ್ಟಿಕಾ ವಾಸ್ತವವಾಗಿ ಅಕ್ಕಪಕ್ಕದಲ್ಲಿರುವ ಎರಡು ಬೃಹತ್ ದ್ವೀಪಗಳು.
ಹದಿಮೂರು ಸಹಸ್ರಮಾನಗಳ ಹಿಂದೆ ಸಮಶೀತೋಷ್ಣ ವಲಯದಲ್ಲಿದ್ದ ಅವುಗಳಲ್ಲಿ ತಿಳಿಜಲದ ನದಿ ಸರೋವರಗಳಿದ್ದವು, ಹರಿದ್ವರ್ಣದ ಕಾಡುಗಳಿದ್ದವು, ಅವೆಲ್ಲವೂ ಲೆಕ್ಕವಿಲ್ಲದಷ್ಟು ವೈವಿಧ್ಯಮಯ ಜೀವಸಂಕುಲಗಳನ್ನು ಪೋಷಿಸಿದ್ದವು.
ಇಂದು ಅವಾವುವೂ ಇಲ್ಲ..
ಅಂಟಾರ್ಟಿಕಾದ ಮೇಲೆ ಒಂದೂವರೆ ಕೋಟಿ ಚದರ ಕಿಲೋಮೀಟರ್ ಅಗಲದ, ಎರಡುಮೂರು ಕಿಲೋಮೀಟರ್ ಎತ್ತರದ ಹಿಮದ ಚಪ್ಪಡಿ ಶಾಶ್ವತವಾಗಿ ಕೂತುಬಿಟ್ಟಿದೆ.
ಇನ್ನು ಈ ಧ್ರುವ ಪಲ್ಲಟದ ಪರಿಣಾಮ ಆಗಿನ ಮನುಷ್ಯರ ಮೇಲೆ ಏನಾಗಿದ್ದಿರಬಹುದು?
ಉಕ್ಕೇರಿದ ಸಾಗರದ ನೀರು ಎತ್ತರದ ಪ್ರದೇಶಗಳಿಗೆ ಬರಲಿಲ್ಲ, ನಿಜ.
ಆದರೆ, ನಿಂತ ನೆಲ ಗಿರ್ರನೆ ತಿರುಗಿದ್ದು, ಆಕಾಶದಲ್ಲಿದ್ದ ಸೂರ್ಯ ಸರ್ರನೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಿದು ಮನುಷ್ಯನನ್ನು ದಿಕ್ಕೆಡಿಸಿದ್ದು ಅರ್ಜೆಂಟೀನಾದ ಪೆಟಗೋನಿಯಾ ಪ್ರಸ್ಥಭೂಮಿಯ ಮೂಲನಿವಾಸಿಗಳ ದಂತಕಥೆಯೊಂದರಲ್ಲಿ ಕಂಡುಬರುತ್ತವೆ!
ಇದು ಅನಾಗರಿಕ ಮಾನವನದಾಯಿತು.
ಬೃಹತ್ ನಗರಗಳನ್ನು ನಿರ್ಮಿಸಿಕೊಂಡು, ಸುಖಮಯ ಬದುಕಿಗೆ ಬೇಕಾದ್ದೆಲ್ಲವನ್ನೂ ಅಲ್ಲಿ ವ್ಯವಸ್ಥೆ ಮಾಡಿಕೊಂಡು ನೆಮ್ಮದಿಯಾಗಿ ಬದುಕುತ್ತಿದ್ದ ನಾಗರಿಕ ಮನುಷ್ಯನೇನಾದರೂ ಅಂದು ಈ ಭೂಮಿಯ ಮೇಲೆ ಇದ್ದನೇ?
ಇದ್ದ ಎಂದು ಹೇಳುತ್ತಾನೆ ಗ್ರೀಕ್ ತತ್ವಜ್ಞಾನಿ ಪ್ಲೇಟೋ.
ಹನ್ನೆರಡು ಸಾವಿರ ವರ್ಷಗಳ ಹಿಂದೆ ಮಧ್ಯ ಅಟ್ಲಾಂಟಿಕ್ ಸಾಗರದಲ್ಲಿ ಅಟ್ಲಾಂಟಿಸ್ ಎಂಬ ದ್ವೀಪವಿತ್ತೆಂದೂ, ಅಲ್ಲಿನ ಜನ ವೈಜ್ಞಾನಿಕವಾಗಿ ಅಗಾಧ ಪ್ರಮಾಣದ ಪ್ರಗತಿ ಸಾಧಿಸಿದ್ದರೆಂದೂ, ಆ ಕಾರಣದಿಂದ ಅಟ್ಲಾಂಟಿಸ್ ನಾಗರಿಕತೆ ಭೂಮಿಯ ಇತರೆಲ್ಲಾ ನಾಗರಿಕತೆಗಳ ಹಿರಿಯಣ್ಣನಾಗಿ ಮೆರೆದಿತ್ತೆಂದೂ ಪ್ಲೇಟೋ ಬರೆಯುತ್ತಾನೆ.
ಮುಂದುವರಿದು ಆತ, ಹನ್ನೆರಡು ಸಾವಿರ ವರ್ಷಗಳ ಹಿಂದೆ ಅಟ್ಲಾಂಟಿಸ್ ನಾಗರಿಕತೆ, ಪ್ರಾಕೃತಿಕ ದುರಂತಗಳು ಹಾಗೂ ಸ್ವಯಂಕೃತಾಪರಾಧಗಳಿಂದ ಅಂತ್ಯವಾಯಿತೆಂದೂ, ಅಟ್ಲಾಂಟಿಸ್ ದ್ವೀಪ ಸಾಗರದಲ್ಲಿ ಮುಳುಗಿಹೋಯಿತೆಂದೂ ಹೇಳುತ್ತಾನೆ.
ಪ್ಲೇಟೋ ಉಲ್ಲೇಖಿಸುವ ಪ್ರಾಕೃತಿಕ ದುರಂತ ಧೂಮಕೇತುವಿನ ಅಪ್ಪಳಿಸುವಿಕೆಯಿಂದಾದ ಪರಿಣಾಮವಿರಬಹುದು.
ಇದರ ಬಗ್ಗೆ ಈಗಲೇ ನಿಖರವಾಗಿ ಹೇಳಲಾಗದಿದ್ದರೂ, ಒಂದು ಮಾತ್ರ ನಿಜ.
೧೨,೮೦೦ರಿಂದ ೧೧,೭೦೦ ಅಥವಾ ೧೧,೮೦೦ರವೆಗೆಗಿನ ಒಂದು ಸಾವಿರ ವರ್ಷಗಳಷ್ಟು ಆವಧಿಯಲ್ಲಿ ಭೂಮಿಯಲ್ಲಿನ ಬಹುಪಾಲು ಜೀವಸಂಕುಲ ನಾಶವಾಯಿತು.
ಇದಾದದ್ದು ಎರಡು ರೀತಿಯಲ್ಲಿ. ಧೂಮಕೇತುವಿನ ಹೊಡೆತದಿಂದ ಭೂಮಿ ಅದುರಿದಾಗ ಮೊದಲಿಗೆ ಉಕ್ಕೇರಿದ ಸಾಗರಗಳು ತೀರಗಳಿಂದ ಅದೆಷ್ಟೋ ದೂರದ ಪ್ರದೇಶಗಳಲ್ಲಿನ ಸಮಸ್ಥವನ್ನೂ ಚಣದಲ್ಲಿ ತೊಳೆದುಹಾಕಿಬಿಟ್ಟರೆ, ಧೂಮಕೇತುವಿನ ಐದು ಚೂರುಗಳ ಅಪ್ಪಳಿಸುವಿಕೆಯಿಂದಾಗಿ ಮೇಲೇಳತೊಡಗಿದ ಅಗಾಧ ಧೂಳಿನ ರಾಶಿ ಭೂಮಿಯ ಸುತ್ತಲಿನ ವಾಯುಮಂಡಲದಲ್ಲಿ ಕವಿದುಕೊಂಡು ಸೂರ್ಯರಶ್ಮಿ ನೆಲ ತಲುಪದಂತೆ ಮಾಡಿತು.
ಇದರಿಂದಾಗಿ ಉಷ್ಣಯುಗದ ಆರಂಭಕ್ಕೆ ತಾತ್ಕಾಲಿಕ ತಡೆಬಿದ್ದು ಸುಮಾರು ಒಂದುಸಾವಿರ ವರ್ಷಗಳ ಕತ್ತಲಿನ ತಾತ್ಕಾಲಿಕ ಆದರೆ ಭೀಕರ ಹಿಮಯುಗವೊಂದು ಆರಂಭವಾಯಿತು.
ಪ್ಲೇಟೋ ಮತ್ತೊಂದು ಮಾತು ಹೇಳುತ್ತಾನೆ.
ಅಟ್ಲಾಂಟಿಸ್ ದುರಂತದಿಂಸ್ದ ಅಳಿದುಳಿದ ಕೆಲವರು ಅಕ್ಕಪಕ್ಕದ ಖಂಡಗಳಿಗೆ ಹೋಗಿ ಅಲ್ಲಿ ಮತ್ತೆ ನಾಗರಿಕತೆಗಳನ್ನು ಹುಟ್ಟುಹಾಕಿದರು.
ಇದನ್ನು ಜಗತ್ತಿನಾದ್ಯಂತದ ವಿವಿಧ ಪುರಾಣ ದಂತಕತೆಗಳಲ್ಲಿ, ಜಲಪ್ರಳಯದ ನಂತರ ಮತ್ತೊಮ್ಮೆ ಪ್ರವರ್ಧಮಾನಕ್ಕೆ ಬರತೊಡಗಿದ ಮಾನವಜನಾಂಗದ ವರ್ಣನೆಗಳಿಗೆ ತಾಳೆ ಹಾಕೋಣ.
ಎಲ್ಲ ದಂತಕಥೆಗಳೂ ಹೇಳುವುದು ಮಹಾಪುರುಷನೊಬ್ಬ ಪ್ರಳಯದ ಸಮಯದಲ್ಲಿ ನಾಶವಾದ ಜೀವರಾಶಿಗಳ ಮರುಹುಟ್ಟಿಗೆ ಕಾರಣನಾದ ಎಂದು.
ಇದು ನಮ್ಮ ಪುರಾಣಗಳಲ್ಲಿ ಮನು, ಬೈಬಲ್ನಲ್ಲಿ ನೋವಾ, ಅದಕ್ಕೂ ಹಳೆಯ ಸುಮೇರಿಯಾದ ಗಿಲ್ಗಮೇಶ್ನಲ್ಲಿ ಉತ್ನಪಿಸ್ತಿಂ, ಪೆರುವಿನಲ್ಲಿ ವೀರಕೋಚ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಈ ಎಲ್ಲಾ ಮಹಾಪುರುಷರಲ್ಲಿ ಇರುವ ಸಾಮ್ಯತೆಯೆಂದರೆ ಇವರೆಲ್ಲಾ ಆಯಾ ಪ್ರದೇಶದ ನಿವಾಸಿಗಳಿಂದ ದೈಹಿಕವಾಗಿ ಬೇರೆ ತೆರನಾಗಿದ್ದರು; ಎತ್ತರದ, ಶ್ವೇತವರ್ಣದ, ಹೊಂಗೂದಲಿನ, ನೀಳ ಗಡ್ಡಗಳನ್ನು ಹೊಂದಿದವರಾಗಿದ್ದರು!
ಇವರು ಸಮುದ್ರತೀರವನ್ನು ತೊರೆದು ದೂರದ ಪರ್ವತಪ್ರದೇಶಗಳಿಗೆ ಹೋಗಿ ಅಲ್ಲಿ ನಾಗರಿಕತೆಯನ್ನು ಮರುಸ್ಥಾಪಿಸಿದರು- ಮನು ಹಿಮಾಲಯದಲ್ಲಿ, ನೋವಾ ಅರಾರತ್ ಪರ್ವತದಲ್ಲಿ, ವೀರಕೋಚ ಪೆರುವಿಯನ್ ಆಂಡೀಸ್ ಪರ್ವತಗಳಲ್ಲಿ... ಹೀಗೆ.
ಈ ಪುರಾಣ ದಂತಕತೆಗಳನ್ನು ಲಭ್ಯವಿರುವ ಐತಿಹಾಸಿಕ ವಾಸ್ತವಗಳ ಜತೆ ತಾಳೆ ಹಾಕೋಣ.
ಈಶಾನ್ಯ ಇರಾಕ್ನಲ್ಲಿರುವ ಶನಿದರ್ ಗುಹೆ ಪಶ್ಚಿಮ ಏಶಿಯಾದಲ್ಲಿ ಕಳೆದೊಂದು ಲಕ್ಷ ವರ್ಷಗಳಲ್ಲಿ ಘಟಿಸಿದ ಮಾನವ ಇತಿಹಾಸದ ನೈಸರ್ಗಿಕ ವಸ್ತುಸಂಗ್ರಹಾಲಯವೆಂದೇ ಗುರುತಿಸಲ್ಪಟ್ಟಿದೆ.
ಇಲ್ಲಿ ದೊರೆಯುವ ವಿವರಗಳು ಹೇಳುವುದೇನೆಂದರೆ ಹನ್ನೊಂದು ಸಾವಿರ ವರ್ಷಗಳ ಹಿಂದೆ ಮಾನವ ಏಕಾಏಕಿ ಅತ್ಯಂತ ನಾಗರಿಕನಾದ; ತನ್ನ ಅಲೆಮಾರಿತನವನ್ನು ತೊರೆದು ಒಂದೆಡೆ ನೆಲೆ ನಿಂತಿದ್ದ, ನಾಯಿ ಸಾಕಿದ್ದ, ವ್ಯವಸಾಂii ಆರಂಭಿಸಿದ್ದ!
ಇದಕ್ಕಿಂತಲೂ ಸ್ಪಷ್ಟ ಕುರುಹುಗಳು ಶನಿದರ್ಗೆ ಅನತೀ ದೂರದ ಗೊಬೆಕ್ಲಿ ತೆಪೆಯಲ್ಲಿ ಸಿಗುತ್ತವೆ.
ಇಲ್ಲಿದ್ದದ್ದುಆಗ್ನೇಯ ಟರ್ಕಿಯಲ್ಲಿರುವ ಗೊಬೆಕ್ಲಿ ತೆಪೆ ಕಳೆದೆರಡು ದಶಕಗಳಲ್ಲಿ ಜಗತ್ತಿನ ಎಲ್ಲೆಡೆಗಳಿಂದ ಆಸಕ್ತ ಪುರಾತತ್ವಶಾಸ್ತ್ರಜ್ಞರನ್ನು ತನ್ನತ್ತ ಸೆಳೆಯುತ್ತಿದೆ.
ಇತ್ತೀಚಿನ ದಶಕಗಳಲ್ಲಿ ಪತ್ತೆಯಾದ ಅತಿ ಮುಖ್ಯ ಪುರಾತತ್ವ ನೆಲೆ ಈ ಗೊಬೆಕ್ಲಿ ತೆಪೆ.
ಹನ್ನೆರಡು ಸಹಸ್ರಮಾನಗಳ ಹಿಂದೆ ಬೇಟೆಯಾಡುತ್ತಿದ್ದ, ಆಹಾರ ಸಂಗ್ರಹಿಸುತ್ತಿದ್ದ (huಟಿಣeಡಿ-gಚಿಣheಡಿeಡಿ) ಅನಾಗರಿಕ ಮಾನವ.
ಆದರೆ ೧೧,೬೦೦ ವರ್ಷಗಳ ಸುಮಾರಿಗೆ ಇಲ್ಲಿ ಉತ್ಕೃಷ್ಟ ನಾಗರಿಕತೆ ಏಕಾಏಕಿ ಕಾಣಿಸಿಕೊಳ್ಳುತ್ತದೆ.
ವ್ಯವಸಾಯದ ಕುರುಹೂ ಇಲ್ಲದಿದ್ದ ಸ್ಥಳದಲ್ಲಿ ವ್ಯವಸ್ಥಿತ ವ್ಯವಸಾಯ ಕ್ರಮ ಆರಂಭವಾಗುತ್ತದೆ, ಅದ್ಭುತ ಶಿಲಾ ಕಟ್ಟಡಗಳು ನಿರ್ಮಾಣವಾಗುತ್ತವೆ!
ಗೊಬೆಕ್ಲಿ ತೆಪೆಯಲ್ಲಿ ಪುರಾತತ್ವಶಾಸ್ತ್ರಜ್ಞರು ಅನಾವರಣಗೊಳಿಸಿರುವ ನಿರ್ಮಿತಿಗಳು ದಿಕ್ಕುಗಳನ್ನು ನಿಖರವಾಗಿ ಅನುಸರಿಸಿ ಭೂಮಿಯ ಮೇಲೆ ನಿರ್ಮಾಣವಾದ ಕಟ್ಟಡಗಳಲ್ಲೇ ಇಂದು ನಮಗೆ ಲಭ್ಯವಿರುವ ಅತ್ಯಂತ ಹಳೆಯ ಕಟ್ಟಡಗಳು.
ಉತ್ಖನನಗೊಂಡಿರುವ ಸ್ವಲ್ಪ ಸ್ಥಳದಲ್ಲೇ ಅಗಾಧ ವಿಸ್ತಾರದ ಶಿಲಾವೃತ್ತಗಳು, ಅಗಾಧ ಎತ್ತರದ ಶಿಲಾಸ್ಥಂಭಗಳು, ಅಗಾಧ ಗಾತ್ರದ ಶಿಲಾ ಕಟ್ಟಡಗಳು ನಮಗೆ ಕಾಣಸಿಗುತ್ತವೆ.
ಇನ್ನು ನೆಲದೊಳಗೇ ಅಡಗಿರುವ ಎಲ್ಲವೂ ಅನಾವರಣಗೊಂಡರೆ ಏನೇನು ಅದ್ಭುತಗಳು ಗೋಚರವಾಗುತ್ತವೆಯೋ, ನಮ್ಮ ಇತಿಹಾಸದ ಬಗ್ಗೆ ಅದೆಷ್ಟು ಅಮೂಲ್ಯ ವಿವರಗಳು ನಮಗೆ ದೊರೆಯುತ್ತವೆಯೋ!
ಗೊಬೆಕ್ಲಿ ತೆಪೆ ನಮ್ಮ ಮುಂದಿಡುವ ಅತಿ ಮುಖ್ಯ ಪ್ರಶ್ನೆಯೆಂದರೆ ಬೇಟೆಯಾಡುತ್ತಾ, ಆಹಾರ ಸಂಗ್ರಹಿಸುತ್ತಾ ಅಲೆದಾಡುತ್ತಿದ್ದ ಮಾನವ ಒಂದು ಬೆಳಿಗ್ಗೆ ಎದ್ದ ಕೂಡಲೇ ಇದ್ದಕ್ಕಿದ್ದಂತೇ ನಾಗರಿಕನಾಗಿಬಿಟ್ಟನೇ?
ಅಲೆಮಾರಿ ಬದುಕನ್ನು ತೊರೆದು ಒಂದೆಡೆ ಶಾಶ್ವತ ನಿಲ್ಲುವ ಬಯಕೆ ಅವನಿಗೆ ಬಂದುಬಿಟ್ಟಿತೇ?
ಬೇಟೆಯಾಡುವುದನ್ನು, ಆಯಾ ಹೊತ್ತಿನ ಕೂಳಿಗಾಗಿ ಹುಡುಕಾಡುವುದನ್ನು ಬಿಟ್ಟು ಬೇಕಾದ್ದೆಲ್ಲವನ್ನೂ ಒಂದೆಡೆ ಬೆಳೆದುಕೊಳ್ಳಲು ವ್ಯವಸಾಯ ಆರಂಭಿಸಿದನೇ?
ಐದು, ಹತ್ತು, ಐವತ್ತು ಟನ್ ತೂಗುವ ಅಗಾಧ ಗಾತ್ರದ ಕಲ್ಲುಗಳನ್ನು ಬಳಸಿ ದಿಕ್ಕುಗಳನ್ನು ನಿಖರವಾಗಿ ಅನುಸರಿಸಿ ಜ್ಯಾಮಿತೀಯ ಕಟ್ಟಡಗಳನ್ನು ನಿರ್ಮಿಸುವಂತಹ ಬುದ್ಧಿವಂತನಾಗಿಬಿಟ್ಟನೇ?
ಅವನಿಗೇನಾದರೂ ಅಲ್ಲಾದೀನನ ಅದ್ಭುತ ದೀಪ ಸಿಕ್ಕಿಬಿಟ್ಟಿತೇ?
ಹಾಗೇನೂ ಇರಲಾರದು ಬಿಡಿ.
ವಿಶ್ವಾಸಾರ್ಹ ಉತ್ತರಕ್ಕಾಗಿ ನಾವು ಪ್ಲೇಟೋನತ್ತಲೇ ಹೊರಳಬೇಕು.
ನಾಶವಾದ ಅಟ್ಲಾಂಟಿಸ್ ನಾಗರಿಕತೆಯಿಂದ ಅಳಿದುಳಿದ ಕೆಲವರು ದೂರದ ಟರ್ಕಿಯ ಗೊಬೆಕ್ಲಿ ತೆಪೆಗೆ ಓಡಿಬಂದು ತಮ್ಮ ಜ್ಞಾನವನ್ನು ಬಳಸಿ ನಾಗರಿಕತೆಯನ್ನು ಹುಟ್ಟುಹಾಕಿದರು ಎಂದು ನಂಬದೇ ನಮಗೀನ ಬೇರೆ ದಾರಿ ಇಲ್ಲ.
ಇಲ್ಲಿ ಈಜಿಪ್ಟ್ನ ಪುರಾತನ ಕಥೆಗಳು ನಮ್ಮ ನೆರವಿಗೆ ಬರುತ್ತವೆ.
ಅತಿಪ್ರಾಚೀನವೆಂದು ನಾವೀಗ ನಂಬಿರುವ ಈಜಿಪ್ಟ್ನ ಅತ್ಯಂತ ಹಳೆಯ ಆಖ್ಯಾಯಿಕೆಗಳಲ್ಲಿ ದಾಖಲಾಗಿರುವುದು '...ನಮ್ಮ ಫೂರ್ವಜರು ಸಾಗರದ ನಡುವಿನ ದ್ವೀಪವೊಂದರಲ್ಲಿ ನೆಲೆಸಿದ್ದರು' ಎಂದು!
ಪ್ಲೇಟೋನ ಅಟ್ಲಾಂಟಿಸ್ ವಿವರಗಳನ್ನು ಕಲ್ಪನೆಯೆಂದೇ ಸುಮಾರು ಎರಡುಸಾವಿರ ವರ್ಷಗಳವರೆಗೆ ವಿದ್ವಾಂಸ ಜಗತ್ತು ನಂಬಿತ್ತು.
ಆದರೆ ಅದು ಕಳೆದ ಎರಡು ಶತಮಾನಗಳಲ್ಲಿ ತನ್ನ ನಂಬಿಕೆಯನ್ನು ಬದಲಾಯಿಸಿಕೊಳ್ಳುತ್ತಾ ಇದೆ.
ಕೆರಿಬಿಯನ್ ಸಮುದ್ರದ ಬಿಮಿನಿ ದ್ವೀಪದ ತೀರದ ಸನಿಹದ ಸಮುದ್ರದಾಳದ ನೆಲದಲ್ಲಿ ಮ್ಯಾಂಗನೀಸ್ ಆಕ್ಸೈಡ್ ಲೇಪಿತ ಉದ್ದುದ್ದ ರಸ್ತೆಗಳು ಪತ್ತೆಯಾಗಿವೆ, ಹೈಟಿಯ ತೀರದ ಸಮುದ್ರದಾಳದಲ್ಲಿ ಬಹುಮಹಡಿಯ ಕಟ್ಟಡಗಳು ತಲೆಕೆಳಕಾಗಿ ಉರುಳಿ ಬಿದ್ದಿರುವುದು ಕಂಡುಬಂದಿವೆ, ಈಗಿನದೆಂದು ನಮಗನಿಸುವ, ಆದರೆ ಹನ್ನೆರಡು-ಹದಿನಾಲ್ಕು ಸಾವಿರ ವರ್ಷಗಳಷ್ಟು ಪುರಾತನವಾದ ತಾಂತ್ರಿಕವಾಗಿ ಉತ್ಕೃಷ್ಟವಾದ ಅದೆಷ್ಟೋ ವಸ್ತುಗಳು ಅಟ್ಲಾಂಟಿಕ್ ಸಾಗರದಲ್ಲಿ, ಪೆರು, ಈಕ್ವೆಡಾರ್, ಕೊಲಂಬಿಯಾಗಳ ದಟ್ಟಾರಣ್ಯಗಳ ಗುಹೆಗಳಲ್ಲಿ ವರ್ಷವರ್ಷವೂ ಪತ್ತೆಯಾಗುತ್ತಿವೆ.
ಅಷ್ಟೇ ಅಲ್ಲ, ಅಟ್ಲಾಂಟಿಕ್ ಸಾಗರದಲ್ಲಿರುವ ಕ್ಯಾನರೀಸ್, ಅಝೋರ್ಸ್ ದ್ವೀಪಗಳು ಮುಳುಗಿಹೋರಿರುವ ಭೂಖಂಡವೊಂಡರ ಎತ್ತರದ ದಿನ್ನೆಗಳು ಎಂದು ಭೂಗರ್ಭಶಾಸ್ತ್ರಜ್ಞರು ಹೇಳತೊಡಾಗಿದ್ದಾರೆ.
ಅಂದರೆ ಧೂಮಕೇತುವಿನ ಹೊಡೆತ, ಧ್ರುವಪಲ್ಲಟ, ಜಲಪ್ರಳಯ, ತಾತ್ಕಾಲಿಕ ಹಿಮಯುಗ ಇವೆಲ್ಲವುಗಳನ್ನು ದಾಟಿ ಬಂದ ಮನುಷ್ಯ ಗೊಬೆಕ್ಲಿ ತೆಪೆ ಸೇರಿದಂತೆ ಜಗತ್ತಿನ ವಿವಿಧೆಡೆ ಕಟ್ಟಿದ ನಗರಗಳಲ್ಲೆರಡಾಗಿರಬಹುದು ನಮ್ಮ ಖಂಭಾತ್ ಕೊಲ್ಲಿಯಲ್ಲಿ ಪತ್ತೆಯಾಗಿರುವ ಅವಶೇಷಗಳು.
ನಂತರ ಆ ನಗರಗಳೂ ಮುಳುಗಿಹೋದದ್ದೇಕೆ?
ಮತ್ತೊಂದು ಜಲಪ್ರಳಯವೇ?
ಕಳೆದ ಹಿಮಯುಗ ಆರಂಭವಾದದ್ದು ೧,೧೦,೦೦೦ ವರ್ಷಗಳ ಹಿಂದೆ ಮತ್ತು ಅದರ ಅಂತ್ಯವಾದದ್ದು ೧೧,೭೦೦ ವರ್ಷಗಳ ಹಿಂದೆ.
ಹಿಮಯುಗದಲ್ಲಿ ಸಾಗರಗಳ ಮಟ್ಟ ಸಾಕಷ್ಟು ಕೆಳಗಿದ್ದು ಭೂಖಂಡಗಳು ಇಂದಿಗಿಂತಲೂ ಹೆಚ್ಚು ವಿಸ್ತಾರವಾಗಿದ್ದವು.
ಭಾರತದ ಬಗ್ಗೇ ಹೇಳುವುದಾದರೆ ಅದರ ತೀರಗಳು ಇಂದಿನಂತಿರಲೇ ಇಲ್ಲ.
ನಮ್ಮ ಗಮನವನ್ನು ಪಶ್ಚಿಮತೀರದ ಮೇಲಷ್ಟೇ ಕೇಂದ್ರೀಕರಿಸುವುದಾದರೆ ಇಪ್ಪತ್ತೊಂದು ಸಾವಿರ ವರ್ಷಗಳ ಹಿಂದೆ ಅದು ದಕ್ಷಿಣದಲ್ಲಿ ಲಕ್ಷದ್ವೀಪಗಳವರೆಗೆ ಹರಡಿತ್ತು ಹಾಗೂ ಗೋವಾದ ಉತ್ತರದಲ್ಲಿ ಇಂದಿನಂತೆ ನೇರವಾಗಿ ಉತ್ತರಕ್ಕೆ ಸಾಗದೇ, ವಾಯುವ್ಯಕ್ಕೆ ತಿರುಗಿ ಸರಿಸುಮಾರು ನೇರವಾಗಿ ಪರ್ಶಿಯನ್ ಕೊಲ್ಲಿಯತ್ತ ಸಾಗುತ್ತಿತ್ತು.
ಹಿಮಯುಗದ ಅಂತ್ಯ ಮೊದಲಾಗತೊಗಿದಂತೇ ಜಾಗತಿಕ ತಾಪಮಾನ ನಿಧಾನವಾಗಿ ಏರುತ್ತಾ ಹೋಗಿ ಧ್ರುವ ಪ್ರದೇಶಗಳಲ್ಲಿ ವಿಶಾಲವಾಗಿ, ಉನ್ನತವಾಗಿ ಹರಡಿಕೊಂಡಿದ್ದ ಹಿಮರಾಶಿಯನ್ನು ಕರಗಿಸತೊಡಗಿತು.
ಪರಿಣಾಮವಾಗಿ ಜಗತ್ತಿನಾದ್ಯಂತ ಏರುತ್ತಾ ಹೋದ ಸಾಗರದ ಮಟ್ಟ ಭಾರತದ ಪಶ್ಚಿಮ ತೀರವನ್ನೂ ಹಂತಹಂತವಾಗಿ ನುಂಗತೊಡಗಿತು.
ಹದಿಮೂರು ಸಾವಿರ ವರ್ಷಗಳ ಹಿಂದೆ ಮುಂಬೈನಿಂದ ಪಶ್ಚಿಮದ ವಿಶಾಲ ಪ್ರದೇಶ ಸಾಗರದಲ್ಲಿ ಮುಳುಗಿಹೋಗಿ ಅಲ್ಲೊಂದು ಉದ್ದದ ದ್ವೀಪ ನಿರ್ಮಾಣವಾಯಿತು.
೧೨,೮೦೦ ವರ್ಷಗಳ ಹಿಂದೆ ಘಟಿಸಿದ ಧೂಮಕೇತುವಿನ ಹೊಡೆತ, ಧ್ರುವಪಲ್ಲಟ, ಪ್ರಳಯ ಹಿಮಯುಗದ ಅಂತ್ಯವನ್ನು ತಾತ್ಕಾಲಿಕವಾಗಿ ತಡೆಗಟ್ಟಿ ಅದನ್ನು ಸಾವಿರ ವರ್ಷಗಳವರೆಗೆ ಮತ್ತಷ್ಟು ಉಲ್ಬಣಗೊಳಿಸಿತು.
ನಂತರ, ೧೧,೮೦೦-೧೧,೭೦೦ ವರ್ಷಗಳ ಹಿಂದೆ ಮತ್ತೆ ಉಷ್ಣಯುಗ ಆರಂಭವಾದಂತೇ ನಿಧಾನವಾಗಿ ಏರತೊಡಗಿದ ಸಾಗರದಿಂದಾಗಿ ಏಳುಸಾವಿರ ವರ್ಷಗಳ ಹಿಂದೆ ಆ ದ್ವೀಪವೂ ಮುಳುಗಿಹೋಗಿ ಸಮುದ್ರ ಮತ್ತಷ್ಟು ಮುನ್ನುಗ್ಗಿ ಬಂದು ಖಂಭಾತ್ ಕೊಲ್ಲಿ ನಿರ್ಮಾಣವಾಯಿತು ಮತ್ತು ಗುಜರಾತ್ ಸೇರಿದಂತೆ ಭಾರತದ ಪಶ್ಚಿಮ ತೀರ ಈಗಿನ ಆಕಾರವನ್ನು ಪಡೆದುಕೊಂಡಿತು.
ಖಂಭಾತ್ ಕೊಲ್ಲಿ ನಿರ್ಮಾಣವಾಗಲು ಸುಮಾರು ಎಂಟುನೂರು ವರ್ಷಗಳು ತಗುಲಿರಬೇಕೆಂದು ಭೂಗರ್ಭಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ಖಂಭಾತ್ ಕೊಲ್ಲಿಯಲ್ಲಿ ನೀರು ನುಗ್ಗಲು ಎಂಟುನೂರು ವರ್ಷಗಳು ಹಿಡಿದಿದ್ದರಿಂಂದ ಅಲ್ಲಿದ್ದ ನಗರಗಳ ಜನರಿಗೆ ಅಪಾಯ ಏಕಾಏಕಿ ಎರಗಿಬಂದಿಲ್ಲ.
ಅದರ ಸೂಚನೆ ನಿಧಾನವಾಗಿ ಸಿಗುತ್ತಾಹೋಗಿದೆ, ಅವರು ಒಳನಾಡಿಗೆ ವಲಸೆ ಹೋಗಿದ್ದಾರೆ.
ಹಿಂದೆ ಪ್ರಳಯದ ತರುವಾಯ ಆದಂತೆ ಈ ಜನರೂ ಪರ್ವತ ಪ್ರದೇಶಗಳತ್ತ ಮುಖ ಮಾಡಿದ ಹಾಗೆ ಕಾಣುತ್ತದೆ.
ಆದರೆ ಹೊಸ ಸ್ಥಳಗಳಲ್ಲಿ ಏಕಾಏಕಿ ನಗರ ನಿರ್ಮಾಣ ಸಾಧ್ಯವಾಗಿಲ್ಲ.
ಶಾಶ್ವತ ವಸತಿನೆಲೆಗಲನ್ನು ಕಟ್ಟಿಕೊಳ್ಳಲೂ ಅವರಿಗೆ ತಲೆಮಾರುಗಳೇ ಹಿಡಿದಿರಬೇಕು.
ಅಂತಹ ವ್ಯವಸ್ಥಿತ ಗ್ರಾಮಗಳು ಐದು-ಐದೂವರೆ ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗತೊಡಗಿದ್ದು ಈಗಿನ ಬಲೂಚಿಸ್ತಾನ್-ಅಫ್ಘಾನಿಸ್ತಾನ್ ಗಡಿಯ ಪರ್ವತ ಸೀಮೆಯಲ್ಲಿರುವ ಮೆಹ್ರ್ಘರ್ ಹಾಗೂ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ನೇಪಾಲಗಳ ಹಿಮಾಲಯದ ತಪ್ಪಲಿನಲ್ಲಿ.
ಅದೇ ಸಮಯದಲ್ಲಿ ಈಜಿಪ್ಟ್ ಹಾಗೂ ಸುಮೇರಿಯಾಗಳಲ್ಲೂ ಇದೇ ಬಗೆಯ ಶಾಶ್ವತ ವಸತಿ ನೆಲೆಗಳು, ಪುಟ್ಟ ನಗರಗಳು ನಿರ್ಮಾಣವಾಗತೊಡಗಿದ್ದು ಗಮನಾರ್ಹ.
ಇದೇನು ಹೇಳುತ್ತದೆಯೆಂದರೆ ವಿಶ್ವಾದ್ಯಂತ ಅದೆಷ್ಟೋ ನಾಗರಿಕ ವಸತಿಗಳು ಏರಿಬಂದ ಸಾಗರದಲ್ಲಿ ಮುಳುಗಿಹೋಗಿರಬೇಕು!
ಭೂವಿಜ್ಞಾನಿಗಳ ಅಂದಾಜಿನ ಪ್ರಕಾರ ಏರಿದ ಸಾಗರಗಳಿಂದಾಗಿ ಭೂಮಿಯ ಆದ್ಯಂತ ಮುಳುಗಿಹೋದ ನೆಲದ ವಿಸ್ತೀರ್ಣ ಸುಮಾರು ಒಂದೂವರೆ ಕೋಟಿ ಚದರ ಕಿಲೋಮೀಟರ್ಗಳು!
ಹಾಗೆ ಮುಳುಗಿಹೋದ ತೀರಗಳ ಜನ ಒಳನಾಡುಗಳಿಗೆ ಓಡಿಹೋಗಿ ಹೊಸ ನೆಲೆಗಳನ್ನು ಸ್ಥಾಪಿಸಿಕೊಂಡಿರಬೇಕು!
ಖಂಭಾತ್ ಕೊಲ್ಲಿ, ಹಾಗೂ ಬಹುಶಃ ನಮಗೆ ಗೊತ್ತಿಲ್ಲದ ಇತರ, ಸಮುದ್ರತೀರಗಳೀಂದ ಓಡಿದ ಜನ ಬಲೂಚಿಸ್ತಾನದ ಉತ್ತರದ ಪರ್ವತಸೀಮೆಯ ಮೆಹ್ರ್ಘರ್ ಹಾಗೂ ಹಿಮಾಲಯದ ತಪ್ಪಲುಗಳಲ್ಲಿ ನೆಲೆನಿಂತು ಮುಂದಿನ ಒಂದು ಸಹಸ್ರಮಾನದಲ್ಲಿ ಖಂಭಾತ್ ಕೊಲ್ಲಿಯಲ್ಲಿನ ನಗರಗಳ ಪಡಿಯಚ್ಚುಗಳನ್ನೇ ಸರಸ್ವತಿ ಹಾಗೂ ಸಿಂಧೂ ನದಿಗಳ ಉದ್ದಕ್ಕೂ ನಿರ್ಮಿಸತೊಡಗಿದರು.
ಹೀಗೆ ನಮಗೀಗ ಚೆನ್ನಾಗಿ ಪರಿಚಿತವಾಗಿರುವ ಸಿಂಧೂ-ಸರಸ್ವತಿ ನಾಗರಿಕತೆ ರೂಪು ತಳೆಯತೊಡಗಿತು.
ಇತಿಹಾಸದ ಚಕ್ರ ಮತ್ತೊಂದು ಸುತ್ತು ತಿರುಗಿತ್ತು.
ಗೊಬೆಕ್ಲಿ ತೆಪೆ ಪತ್ತೆಯಾದ ನಾಲ್ಕೈದು ವರ್ಷಗಳಲ್ಲೇ ಖಂಭಾತ್ ಕೊಲ್ಲಿಯ ನಗರ ಅವಶೇಷಗಳು ಪತ್ತೆಯಾದವಷ್ಟೇ.
ಆದರೆ ಮೊದಲಿನದರ ಬಗ್ಗೆ ನಡೆದಷ್ಟು ಅಧ್ಯಯನ ಎರಡನೆಯದರ ಬಗ್ಗೆ ನಡೆದಿಲ್ಲ.
ಇದಕ್ಕೆ, ಈ ಎರಡು ನಗರಗು ಸಾಗರದಾಳದಲ್ಲಿರುವುದೂ, ಲೇಖನದ ಆರಂಭಧಲ್ಲಿ ಹೇಳಲಾಗಿರುವ ನೈಸರ್ಗಿಕ ಕಾರಣಗಳಿಂದಾಗಿ ಅಲ್ಲಿ ಅಧ್ಯಯನ ಕಷ್ಟಸಾಧ್ಯವಾಗಿರುವುದೂ ಕಾರಣವಾದರೂ ಇದರ ಜತೆ ಮತ್ತೊಂದು ಕಾರಣವೂ ಇದೆ.
ಖಂಭಾತ್ ಕೊಲ್ಲಿಯ ಅವಶೇಷಗಳು ಪತ್ತೆಯಾದದ್ದು ೧೯೯೯-೨೦೦೧ರಲ್ಲಿ.
ಆಗ ಕೇಂದ್ರದಲ್ಲೂ, ಗುಜರಾತ್ ರಾಜ್ಯದಲ್ಲೂ ಇದ್ದದ್ದು ಬಿಜೆಪಿ ಸರ್ಕಾರ.
ಅವಶೇಷಗಳ ಬಗ್ಗೆ ೨೦೦೧ರ ಉತ್ತರಾರ್ಧದಲ್ಲಿ ಚೂರು ಚೂರೇ ಮಾಹಿತಿ ಹೊರಬರತೊಡಗಿದಂತೇ ಅದನ್ನು ಒಂದು ಬೌದ್ಧಿಕ ವರ್ಗ ವೈದಿಕ ಸಂಸ್ಕೃತಿಯ ಅಗಾಧ ಪ್ರಾಚೀನತೆಯ ಸಾಕ್ಷಿ ಎಂದೂ, ಭಾರತ ನಾಗರಿಕತೆಯ ತೊಟ್ಟಿಲು ಎಂದೂ ಉತ್ಸಾಹದಿಂದ ಬಣ್ಣಿಸತೊಡಗಿತು.
ಸೈದ್ಧಾಂತಿಕವಾಗಿ ಅದಕ್ಕೆ ವಿರುದ್ಧವಾದ ಬೌದ್ಧಿಕ ವರ್ಗ ಸಹಜವಾಗಿಯೇ ಅದೆಲ್ಲವನ್ನೂ ಅಲ್ಲಗಳೆಯಲು ಟೊಂಕ ಕಟ್ಟಿ ನಿಂತಿತು.
ಭಾರತದಲ್ಲಿ ಇತಿಹಾಸ ರಚನೆ, ಅಧ್ಯಯನ ಹಾಗೂ ಬೋಧನೆ ಎಡಪಂಥೀಯ ಸಿದ್ಧಾಂತದಲ್ಲಿ ವಿಶ್ವಾಸವಿಟ್ಟ ಇತಿಹಾಶಕಾರರ ಹಿಡಿತದಲ್ಲಿದ್ದ/ಇನ್ನೂ ಇರುವ ಕಾರಣ ಎರಡನೆಯ ಗುಂಪಿನ ವಾದಕ್ಕೆ ಹೆಚ್ಚು ಪ್ರಚಾರ ಸಿಗತೊಡಗಿತು.
ಇದರ ಜತೆಗೇ, ಭೂಗರ್ಭಶಾಸ್ತ್ರಜ್ಞರು ತಮ್ಮ ಎಲ್ಲೆಯೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಕೆಲ ಭಾರತೀಯ ಪುರಾತತ್ವ ಶಾಸ್ತ್ರಜ್ಞರು ಅಸಹನೆ ತೋರಿದ್ದೂ ಸಹಾ ಖಂಭಾತ್ ಅವಶೇಷಗಳಿಗೆ ವಿದ್ವಾಂಸ ವಲಯದಲ್ಲಿ ಹೆಚ್ಚು ಆಸಕ್ತಿ ಉಂಟಾಗದಂತೆ ಮಾಡಿತು.
ಈ ಹಿನ್ನೆಲೆಯೊಂದಿಗೆ, ಖಂಭಾತ್ ಅವಶೇಷಗಳ ಸುದ್ಧಿ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಮಂತ್ರಿ ಮುರಲಿ ಮನೋಹರ್ ಜೋಷಿಯವರ ಹೇಳಿಕೆಯೊಂದಿಗೆ ಬಿಬಿಸಿ ಮೂಲಕ ಜಗತ್ತಿಗೆ ದೊಡ್ಡದಾಗಿ ಬಿತ್ತರವಾದದ್ದು ಜನವರಿ ೧೯, ೨೦೦೨ರಂದು.
ಅದಾಗಿ ಸರಿಯಾಗಿ ಎಂಟೇ ದಿನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಘಾಂಚಿ ಮುಸ್ಲಿಮರು ಸಬರ್ಮತಿ ಎಕ್ಸ್ಪ್ರೆಸ್ ರೈಲಿನ ಎಸ್-೬ ಬೋಗಿಗೆ ಬೆಂಕಿ ಹಚ್ಚಿ ಐವತ್ತಕ್ಕಿಂತಲೂ ಹೆಚ್ಚು ಕರಸೇವಕರನ್ನು ಕೊಂದು ಪಾಕಿಸ್ತಾನಕ್ಕೆ ಓಡಿಹೋಗಿ ಆಶ್ರಯ ಪಡೆದರು.
ಪ್ರತಿಕ್ರಿಯೆಯಾಗಿ ಗುಜರಾತ್ ಹಿಂಸಾಚಾರದಲ್ಲಿ ಮುಳುಗಿಹೋಯಿತು.
ಇತ್ತೀಚಿನ ದಿನಗಳ ಮಹಾನ್ ಪುರಾತತ್ವ ಸಂಶೋಧನೆಗಾಗಿ, ಭಾರತೀಯ ಉಪಖಂಡದಲ್ಲಿ ನಾಗರಿಕತೆಯ ತವರು ಎಂದು ವಿಶ್ವಾದ್ಯಂತ ಎಲ್ಲ ಆಸಕ್ತರ ಗಮನ ಸೆಳೆಯಬೇಕಾಗಿದ್ದ ಗುಜರಾತ್ ಮತೀಯ ಅಸಹಿಷ್ಣುಗಳ, ಹಿಂದೂ ಮೂಲಭೂತವಾದಿಗಳ ತವರು ಎಂದು ಜಗತ್ತಿನೆಲ್ಲೆಡೆ ಮಾಧ್ಯಮಗಳಿಂದ ಚಿತ್ರಿತಗೊಂಡಿತು.
ಕೆಲವರಿಗೆ ಬೇಕಾಗಿದ್ದದ್ದು ಇದೇ.
ಇಂದಿನ ಭಾರತದ ದುರಂತ ಇದು.
ಅದೇ ಸಮಯದಲ್ಲಿ, ಅಂತರರಾಷ್ಟ್ರೀಯ ಖ್ಯಾತಿಯ ಲೇಖಕ, ಪುರಾತತ್ವ ಸಂಶೋಧಕ ಗ್ರಹಾಮ್ ಹ್ಯಾನ್ಕಾಕ್ ಖಂಭಾತ್ ಕೊಲ್ಲಿಯಲ್ಲಿ ಜಲಾಂತರ್ಗತ ಸಂಶೋಧನೆಗೆ ಮುಂದಾದರೇನೋ ನಿಜ.
ಆದರೆ ಡಿಸೆಂಬರ್ ೨೦೦೧ರ ಸಂಸತ್ ದಾಳಿಯ ಪರಿಣಾಮವಾಗಿ ಭಾರತ ಮತ್ತು ಪಾಕಿಸ್ತಾನಗಳು ಗಡಿಯಲ್ಲಿ ಸೇನೆ ಜಮಾಯಿಸಿ ಯುದ್ಧದ ಸ್ಥಿತಿಯನ್ನು ನಿರ್ಮಿಸಿದ್ದರಿಂದ ಖಂಭಾತ್ ಕೊಲ್ಲಿಯಲ್ಲಿ ಯಾವುದೇ ಸಂಶೋಧನೆಗೆ ಅನುಮತಿ ನೀಡಲು ಭಾರತೀಯ ನೌಕಾಪಡೆ ಸ್ಪಷ್ಟವಾಗಿ ನಿರಾಕರಿಸಿತು.
ಆದರೆ ತಮ್ಮ ಪಾಡಿಗೆ ತಾವು ಸಂಶೋಧನೆ ಮುಂದುವರೆಸಿದ ಡಾ. ಎಸ್. ಕದಿರೋಳಿ, ಡಾ. ಎಸ್. ಬದರೀನಾರಾಯಣನ್, ಡಾ. ಸುಂದರೇಶನ್, ಮೈಕೇಲ್ ಕ್ರೀಮೋ, ಗ್ರಹಾಂ ಹ್ಯಾನ್ಕಾಕ್, ಮತ್ತಿತರ ವಿದ್ವಾಂಸರು ಖಂಭಾತ್ ಕೊಲ್ಲಿಯ ಅವಶೇಷಗಳ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ ಪ್ರಕಟಿಸಿದ್ದಾರೆ.
ನಿಯೋಟ್ ವಿಜ್ಞಾನಿಗಳು ಅನುಸರಿಸಿದ, ಮೊದಲಿಗೆ ಇತರ ಭಾರತೀಯ ಪುರಾತತ್ವಶಾಸ್ತ್ರಜ್ಞರಿಂದ ತಿರಸ್ಕರಿಸಲ್ಪಟ್ಟ, ಅಸಾಂಪ್ರದಾಯಿಕ ಸಂಶೋಧನಾ ವಿಧಾನಗಳು ಈಗ ಜಗತ್ತಿನಾದ್ಯಂತ ಮನ್ನಣೆ ಗಳಿಸಿವೆ.
ಅವುಗಳನ್ನು ಇತರ ಸಂಶೋಧಕರು ಕೆರಿಬಿಯನ್ ಸಮುದ್ರದಲ್ಲಿ, ಏಜಿಯನ್ ಸಮುದ್ರದಲ್ಲಿ, ಜಪಾನ್ ಸಮುದ್ರದಲ್ಲಿ ಹಾಗೂ ಇತರೆಡೆ ತಮ್ಮ ಸಂಶೋಧನೆಗಳಲ್ಲಿ ಆಳವಡಿಸಿಕೊಳ್ಳತೊಡಗಿದ್ದಾರೆ.
ಅಂತಿಮವಾಗಿ ಇಂದು ಈ ಬಗ್ಗೆ ಏನು ಹೇಳಬಹುದು?
ಜಗತ್ತಿನ ಮಾತು ಅತ್ತ ಇರಲಿ, ಕೊನೇಪಕ್ಷ ಭಾರತೀಯ ಉಪಖಂಡದಲ್ಲಿ ಸಧ್ಯಕ್ಕೆ ದೊರೆತಿರುವ ಅತ್ಯಂತ ಪ್ರಾಚೀನ ನಗರದ ಸಾಕ್ಷಿಗಳು ಈ ಖಂಭಾತ್ ಅವಶೇಷಗಳು.
ಈ ಪ್ರಾಚೀನ ಇತಿಹಾಸದ ಅಧ್ಯಯನವನ್ನು ಆಧುನಿಕ ಕಾಲದ ಧರ್ಮ, ಸಿದ್ಧಾಂತ, ರಾಜಕೀಯಗಳ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ವಸ್ತುನಿಷ್ಟ ಸಂಶೋಧನೆ ಹಾಗೂ ಪೂರ್ವಾಗ್ರಹರಹಿತ ಅಧ್ಯಯನಕ್ಕೊಳಗೊಳಪಡಿಸುವ ಅಗತ್ಯವಿದೆ.
ಅಂತಿಮವಾಗಿ ಹೊರಬರುವ ಸತ್ಯ ಹೇಗೇ ಇರಲಿ, ಏನೇ ಇರಲಿ, ಮಾನಜಜನಾಂಗದ ಅರಿವಿನ ಪರಿಧಿ ವಿಸ್ತಾರವಾಗುವುದು ಈ ಮಾರ್ಗದಿಂದ ಮಾತ್ರ ಎಂಬ ಸಾರ್ವಕಾಲಿಕ ಸತ್ಯವನ್ನು ನಾವು ಗುರುತಿಸಬೇಕಾಗಿದೆ.
--***೦೦೦***--
ಜನವರಿ ೫, ೨೦೧೮
No comments:
Post a Comment