ಈ ಬಂಧ, ಸಂಬಂಧ
ಕತ್ತಲಕಾಡಿನಲ್ಲಿ
ಮಲೆತು ನಿಂತ ಹಚ್ಚ
ಹಸಿರ ಹಲಸಿನ ಮರ
ರೆಂಬೆಕೊಂಬೆಯಲ್ಲೆಲ್ಲಾ ಗಿಡಿದ ಹಣ್ಣು
ರೆಂಬೆಕೊಂಬೆಯಲ್ಲೆಲ್ಲಾ ಗಿಡಿದ ಹಣ್ಣು
ಸೋಬನಕ್ಕಾಗಿ ಕಾದ ಹೆಣ್ಣು
ಸೋಬನಕ್ಕಾಗಿ ಕಾದ ಹೆಣ್ಣು
ಕೈಬೀಸಿ ಕರೆದಳೆಂದು
ಮರ ಹತ್ತಿ ಕಾಯಿ ಗುದ್ದಿ
ಹಣ್ಣು ಬಗೆದು ತಿರುಳಿಗೆ ಬಾಯಿ
ಹಾಕುವಷ್ಟರಲ್ಲಿ
ರೆಕ್ಕೆಪುಕ್ಕವೆಲ್ಲಾ ಕಿತ್ತುಹೋಗಿತ್ತು
ರೆಕ್ಕೆಪುಕ್ಕವೆಲ್ಲಾ ಕಿತ್ತುಹೋಗಿತ್ತು
ಹಕ್ಕಿ ಹಾರಲಾರದೇ ಬಿದ್ದಿತ್ತು
ರೆಕ್ಕೆಪುಕ್ಕ ಕಳೆದುಕೊಂಡ ಮುರುಕುಹಕ್ಕಿ
ಕಾಳು ತಿಂದು ನೀರು ಕುಡಿದು ಬೆಳೆದು
ಸಹ್ಯಾದ್ರಿಯ ಸಾಲಾಗಿ
ಸಾಲಲ್ಲೊಂದು ಶಿಖರವಾಗಿ
ಶಿಖರದಲ್ಲೊಂದು ಕೋಡುಗಲ್ಲಾಗಿ
ಹೊಕ್ಕುಳ ಮೇಲೆಕೆಳಗೆಲ್ಲಾ ತಿವಿದಿತ್ತು
ಚಂದಿರನ ಕರೆತಂದಿತ್ತು
ಚಂದಿರನ ಕರೆತಂದಿತ್ತು
ತಾರೆಗಳಿಂದ ಸೋಬಾನೆ ಹಾಡಿಸಿತ್ತು
ಇದೆಲ್ಲಿಯವರೆಗೆ ಈ ಪರಿಪಾಟಲು?
ಇದಕ್ಕೊಂದು ಮಂಗಳ ಹಾಡಬೇಕು
ಎಷ್ಟೇ ಕಷ್ಟವಾದರೂ ಸರಿ
ಕೊಂಡುತರಬೇಕು ಒಂದು ಪಂಜರವನ್ನು
ಮೂರುಮೂಲೆಯ ಕೆಂಪುಪಂಜರವನ್ನು
ಪಂಜರದ ಸರಳುಗಳ ನಡುವೆ ಅವಿತು
ರಮಿಸಿ ಮುದ್ದಿಸಿ ಮತ್ತೇರಿಸಿ
ರೆಕ್ಕೆಪುಕ್ಕಗಳನ್ನೆಲ್ಲಾ ಅಂಟಿಸಿಬಿಡಬೇಕು
ರೆಕ್ಕೆಪುಕ್ಕಗಳನ್ನೆಲ್ಲಾ ಅಂಟಿಸಿಬಿಡಬೇಕು
ತುದಿಗಳನ್ನು ಕತ್ತರಿಸಿಬಿಡಬೇಕು
ಅಳಬೇಡ ಸುಮ್ಮನಿರು
ಕಥೆಯೊಂದ ಹೇಳುವೆ ರಾತ್ರಿಯಿಡೀ
ಪಂಜರದ ಗಿಣಿಯದನ್ನೇನಲ್ಲ
ಶಹಜಾದೆಯ ಸಾವಿರದೊಂದು ಕಥೆಗಳಲ್ಲೊಂದು
ಸಾವಿರದೊಂದು ಕಥೆಗಳಲ್ಲೊಂದು
ಅರಬ್ಬೀ ಕುದುರೆಯದು, ಬಾಗ್ದಾದಿನ ಚದುರೆಯದು
** ** **
ಏಪ್ರಿಲ್ ೧೯೮೫
No comments:
Post a Comment