ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, May 28, 2012

ಕಾಗದದ ದೋಣಿಗಳುಕೊಳ್ಳೇಗಾಲ ತಲುಪಿದಾಗ ಬೆಳಗಿನ ಒಂಬತ್ತೂಕಾಲುಮೋಡ ಮುಸುಕಿಕೊಂಡು ಇನ್ನೂ ಆರೋ ಆರೂವರೆಯೋ ಅನ್ನುವ ಹಾಗಿತ್ತು.
ಹತ್ತು ಹನ್ನೆರಡು ವರ್ಶಗಳೇ ಆಗಿಹೋಗಿತ್ತು ಇಲ್ಲಿಗೆ ಬಂದುಅಮ್ಮನಿಗೆ ಇಲ್ಲಿಯ ಶಾಲೆಯಿಂದ ವರ್ಗವಾದ ಮೇಲೆ ನಾನು ಇತ್ತ ಕಡೆ ಬಂದದ್ದೇ ಇಲ್ಲನಾನು ಇಲ್ಲಿನ ಮಿಡ್ಲ್ ಸ್ಕೂಲಿನಲ್ಲಿ ಏಳನೆಯ ಮತ್ತು ಪಕ್ಕದ ಎಂ. ಸಿ. ಕೆ. ಸಿ. ಹೈಸ್ಕೂಲಿನಲ್ಲಿ ಎಂಟು ಮತ್ತು ಒಂಬತ್ತನೆಯ ತರಗತಿಗಳನ್ನು ಕಳೆದಿದ್ದೆಸರಸಕ್ಕ ಮಹದೇಶ್ವರ ಕಾಲೇಜಿನಲ್ಲಿ ಬಿ ಇಡೀ ಮೂರೂ ವರ್ಷಗಳನ್ನು ಓದಿದ್ದಳುಅವಳು ಬಿ ಮುಗಿಸುವ ಹೊತ್ತಿಗೆ ಸರಿಯಾಗಿ ಅಮ್ಮನಿಗೆ ಮೈಸೂರಿಗೇ ವರ್ಗವಾಗಿ ಸಧ್ಯ ಅಕ್ಕ ಗಂಗೋತ್ರಿ ಹಾಸ್ಟೆಲ್‍ಗೆ ಸೇರುವುದು ತಪ್ಪಿತುಅಬ್ಬ, ಮನೆಯಿಂದಾನೇ ಯೂನಿವರ್ಸಿಟಿಗೆ ಹೋಗಬೋದು, ಸಧ್ಯ! ಅಂತ ಆಕೆ ಮೌನವಾಗಿಯೇ ಸಂಭ್ರಮಿಸಿದ್ದು ನನಗಿನ್ನೂ ನೆನಪಿದೆ.
"ಬ್ರೇಕ್‍ಫಾಸ್ಟ್ ಮಾಡಿಬಿಡೋಣವಾ?" ಅಂದಳು ಅಕ್ಕ.
ಬಸ್ ಸ್ಟ್ಯಾಂಡಿನ ಪೂರ್ವದಂಚಿನ ಅಂಗಡಿಗಳು ಹಿಂದೆ ಸರಿದು ಅದು ಮೊದಲಿಗಿಂತಲೂ ಅಗಲವಾಗಿ ಬೆಳೆದಿತ್ತುತಲೆಗೇ ತಾಗುತ್ತಿದ್ದ ತಡಿಕೆಯ, ಜಿಂಕ್ ಶೀಟಿನ ಮಾಡುಗಳ ಕೆಳಗಿನ ಕತ್ತಲ ಗೂಡುಗಳಂತಹ ಅಂಗಡಿಗಳು ಕಾಂಕ್ರೀಟು ಆರ‍್‍ಸಿಸಿಯ ಹೊಸ ಅವತಾರವೆತ್ತಿದ್ದವುಹಿಂದೆ ಇದ್ದ ಅವುಗಳ ಮುಂದಿನ ಒದ್ದೆ ಮಣ್ಣುನೆಲದಲ್ಲೀಗ ಸಿಮೆಂಟ್ ಮೆಟ್ಟಲುಗಳು ಮೊಳಕೆಯೊಡೆದು ಮೇಲೆದ್ದಿದ್ದವುಬಸ್ ಸ್ಟ್ಯಾಂಡಿನ ದಕ್ಷಿಣಕ್ಕೆ ನಾನೆಂದೂ ಒಳಗೆ ಕಾಲಿರಿಸದ ಮಾಸಲು ಗುಲಾಬಿ ರಂಗಿನ ಅದೇ ಶೋಭಾ ಥಿಯೇಟರ್ಪಶ್ಚಿಮಕ್ಕೆ ಕೆನೆಬಣ್ಣದ ಎತ್ತರದ ಕಟ್ಟಡವೊಂದು ಎದ್ದುನಿಂತಿತ್ತುಮೊದಲು ಇರಲಿಲ್ಲ ಇದು...  ಅಕ್ಕನ ಪ್ರಶ್ನೆಗೆ ಬೆಚ್ಚಿ "ಹ್ಞಾ! ಏನು?" ಅಂದೆ.  "ಬ್ರೇಕ್‍ಫಾಸ್ಟ್" ಅಂದಳು ಅಕ್ಕ ನನಗೊಬ್ಬನಿಗೇ ಕೇಳುವಂತೆಪೆಚ್ಚುನಗೆ ನಗುತ್ತಾ ಹ್ಞೂಂಗುಟ್ಟಿದೆ.  "ಗೀತಾ ಭವನ್‍ಗೆ ಹೋಗೋದಾ?" ಅಂದೆನನಗೆ ನೆನಪಾದದ್ದು ಅದೊಂದೇ ಹೋಟೆಲ್ಅಕ್ಕನ ಮುಖದಲ್ಲಿ ತೆಳುವಾಗಿ ನಗೆ ಹರಡಿಕೊಂಡಿತು.  "ಬೆಳಿಗ್ಗೆ ಬೆಳಿಗ್ಗೇನೇ ನಿನ್ನ ಫೇವರಿಟ್ ಮಸಾಲೆ ದೋಸೆ ಬೇಕು ಅಂದ್ರೆ ಅಲ್ಲಿಗೇ ಹೋಗ್ಬೇಕುಅದು ಬಿಟ್ಟು..." ನಕ್ಕಳು.
"ಅದು ಬಿಟ್ಟುಮತ್ತೆ?"
"ಇಲ್ಲೇ ಹತ್ತಿರದಲ್ಲೇ ಒಂದು ಒಳ್ಳೇ ಹೋಟೇಲಿದೆಶೆಟ್ಟಿ ಹೋಟೆಲ್ ಅಂತಬೆಳಗಿನ ಹೊತ್ತಲ್ಲಿ ಒಳ್ಳೇ ಇಡ್ಲಿ ಸಾಂಬಾರ್ ಸಿಗುತ್ತೆ."
ನನಗೆ ಅಚ್ಚರಿಅಂಥಾ ಹೋಟೆಲಿನ ಹೆಸರನ್ನೇ ಕೇಳಿರಲಿಲ್ಲ.
"ನಿಂಗೆ ಹ್ಯಾಗೆ ಗೊತ್ತು?"  ಕೇಳಿದೆ.
"ಆರೇಳು ತಿಂಗಳ ಹಿಂದೆ ಗೆಸ್ಟ್ ಲೆಕ್ಚರ್ ಕೋಡೋಕೆ ಅಂತ ಮಾನಸ ಕಾಲೇಜಿಗೆ ಬಂದಿದ್ನಲ್ಲಾ ಆವಾಗ ತಿಂಡಿಗೆ ಹೋಟೆಲ್‍ಗೇ ಕರಕೊಂಡು ಹೋಗಿದ್ರು."
ಅಕ್ಕನ ಮುಖದ ನಗೆ ಮಾಯವಾಗಿ ಕಣ್ಣುಗಳು ಅರೆ ಮುಚ್ಚಿಕೊಂಡವುವರ್ತಮಾನದಿಂದ ಛಕ್ಕನೆ ಭೂತಕ್ಕಿಳಿದುಬಿಡುವುದು ಹಕ್ಕಿ ಆಕಾಶದಲ್ಲಿ ರೆಕ್ಕೆ ಬಿಚ್ಚುವಷ್ಟೇ ಸರಾಗ ಸರಸಕ್ಕನಿಗೆ.
"ಅಲ್ಲಿಗೇ ಹೋಗೋಣ" ಅಂದೆತಲೆತಗ್ಗಿಸಿ ಹೆಜ್ಜೆ ಹಾಕಿದ ಅಕ್ಕನನ್ನು ಮೌನವಾಗಿ ಹಿಂಬಾಲಿಸಿದೆ.
ಅಕ್ಕ ಹೇಳಿದ್ದು ನಿಜಶೆಟ್ಟಿ ಹೋಟೆಲ್‍ನಲ್ಲಿ ಇಡ್ಲಿ ಸಾಂಬಾರ್ ಸೊಗಸಾಗಿತ್ತುಈಗ ಮೈಸೂರಿನ ಯಾವ ಹೋಟೆಲಿನಲ್ಲೂ ಕಾಣಸಿಗದ ಗಟ್ಟಿ ಚಟ್ನಿಯಲ್ಲಿ ಎರಡು ಇಡ್ಲಿ ಎಕ್ಸ್‍ಟ್ರಾ ಬಾರಿಸಿದೆಅಕ್ಕ ಮಾಮೂಲಿನಂತೆ ಎರಡೇ ಇಡ್ಲಿ ತಿಂದಳುಸಾಂಬಾರಿನಲ್ಲಿ ಒಂದು, ಚಟ್ನಿ ಜತೆ ಒಂದು.
ಹೋಟೆಲಿನಿಂದ ಹೊರಬಂದು ಆಟೋ ಹತ್ತಿ ಶ್ರೀನಿವಾಸಯ್ಯನವರ ಮನೆಗೆ ಹೋದೆವುಅಮ್ಮನ ಕೊಳ್ಳೇಗಾಲದ ಸಹೋದ್ಯೋಗಿ ಅವರುಈಗ ರಿಟೈರ್ ಆಗಿದ್ದಾರೆ.
ಅಮ್ಮ ಬದುಕಿದ್ದರೆ ಇನ್ನೂ ಸರ್ವೀಸ್‍ನಲ್ಲಿರುತ್ತಿದ್ದಳು.
ಹತ್ತು ಹನ್ನೆರಡು ವರ್ಷಗಳ ಹಿಂದೆ ಬಿಟ್ಟುಬಂದ ಕೊಳ್ಳೇಗಾಲಕ್ಕೆ ಮತ್ತೆ ಬರಬೇಕಾದ ಸಂದರ್ಭ ಒದಗಿದ್ದು ಮೂರು ವರ್ಷಗಳಿಂದ ಯಾವ ಸಂಪರ್ಕವೂ ಇಲ್ಲದಿದ್ದ ಶ್ರೀನಿವಾಸಯ್ಯನವರು ಇದ್ದಕ್ಕಿದ್ದಂತೆ ಕಳೆದ ಭಾನುವಾರ ಬೆಳಿಗ್ಗೆ ಬೆಳಿಗ್ಗೆಯೇ ನಮ್ಮ ಮೈಸೂರಿನ ಮನೆಯ ಬಾಗಿಲು ತಟ್ಟಿದ್ದರಿಂದಾಗಿ.
ಕೊಳ್ಳೇಗಾಲದಲ್ಲಿದ್ದಾಗ ಅಮ್ಮ ಅಲ್ಲೊಂದು ಪುಟ್ಟ ಮನೆ ಖರೀದಿಸಿದ್ದಳುನಾನು ಓದುತ್ತಿದ್ದ ಎಂ ಸಿ ಕೆ ಸಿ ಹೈಸ್ಕೂಲಿನ ಬಲಗಡೆಯ ಕಾಂಪೌಂಡಿಗೆ ಮಾರು ದೂರದಲ್ಲೇ ಇತ್ತು ಮನೆಶ್ರೀನಿವಾಸಯ್ಯನವರ ಸಂಬಂಧಿಕರದ್ದೇ ಅದುಅವರಿಗೇನೋ ಸಮಯವಾಗಿ ಮನೆ ಮಾರಲೇಬೇಕಾದಾಗ ಶ್ರೀನಿವಾಸಯ್ಯ ಇರಲಿ ಇರಲಿ, ಮುಂದೆ ಬೇಕಾಗ್ತದೆಇನ್ವೆಸ್ಟ್‍ಮೆಂಟ್ ಅಂತಾದರೂ ಕೊಂಡುಕೊಂಡುಬಿಡಿಮಕ್ಕಳ ಮದುವೆ ಹೊತ್ತಿಗೆ ಮಾರಿಬಿಡೋರಂತೆ ಎಂದು ಅಮ್ಮನನ್ನು ಒತ್ತಾಯಿಸಿ ಪಿಎಫ್‍ನಲ್ಲಿ ಅಲ್ಲಿ ಇಲ್ಲಿ ಅಮ್ಮ ಉಳಿಸಿದ್ದ ಹಣವನ್ನೆಲ್ಲಾ ಒಟ್ಟುಗೂಡಿಸುವಂತೆ ಮಾಡಿ ಕೇವಲ ನಲವತ್ತೈದು ಸಾವಿರಕ್ಕೆ ಮನೆಯನ್ನು ಅಮ್ಮನ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಟ್ಟಿದ್ದರುತಾವೇ ಮನೆಗೆ ಬಾಡಿಗೆಯವರನ್ನು ಗೊತ್ತು ಮಾಡಿ ನಾವು ಅಲ್ಲಿರುವಷ್ಟು ದಿನವೂ ತಿಂಗಳು ತಿಂಗಳೂ ಬಾಡಿಗೆ ಹಣ ಅಮ್ಮನ ಕೈಗೆ ತಪ್ಪದೇ ಸಿಗುವಂತೆ ನೋಡಿಕೊಂಡಿದ್ದರುನಾವು ಊರನ್ನು ಬಿಡುವಾಗ ಬಾಡಿಗೆಯವರನ್ನು ಖಾಲಿ ಮಾಡಿಸಿ ಮತ್ತೊಬ್ಬರಿಗೆ ಮೂರು ವರ್ಷಕ್ಕೆ ಭೋಗ್ಯಕ್ಕೆ ಕೊಡಿಸಿದ್ದರುಎಂಟು ವರ್ಷಗಳ ಹಿಂದೆ ಅಮ್ಮ ತೀರಿಕೊಂಡಾಗಿನಿಂದ ಮನೆಗೆ ಸಂಬಂಧಿಸಿದ ಎಲ್ಲ ವ್ಯವಹಾರವನ್ನೂ ಶ್ರೀನಿವಾಸಯ್ಯನವರು ಅಕ್ಕನ ಜತೆ ನಡೆಸುತ್ತಿದ್ದಾರೆ ಮನೆ ಈಗ ಅವರಿಗೇ ಬೇಕಾಗಿದೆಯಂತೆಅವರು ಮೈಸೂರಿಗೆ ಬಂದದ್ದೇ ಅದರ ಬಗ್ಗೆ ಮಾತಾಡುವುದಕ್ಕಾಗಿ.
ನನಗೂ ಅಕ್ಕನಿಗೂ ಮನೆಯ ಬಗ್ಗೆ ಯಾವ ಪ್ರೀತಿಯೂ ಇರಲಿಲ್ಲನಾವಿಬ್ಬರೂ ಮನೆಯೊಳಗೆ ಹೋಗಿದ್ದು ಒಂದೇ ಒಂದು ಸಲ, ಅದನ್ನು ಕೊಂಡ ದಿನಹಿಂದಿನ ಮಾಲೀಕರು ಹೇಗಿತ್ತೋ ಹಾಗೆ ಬಿಟ್ಟುಹೋಗಿದ್ದ, ಕಿತ್ತುಹೋದ ನೆಲದ, ಮಾಸಲು ಗೊಡೆಗಳ ಕತ್ತಲಗೂಡು ನನಗೂ ಸರಸಕ್ಕನಿಗೂ ಮನೆ ಅಂತ ಅನಿಸಿರಲೇ ಇಲ್ಲಹಾಗಂತ ನಮ್ಮನಮ್ಮಲ್ಲೇ ಮೆತ್ತಗೆ ಮಾತಾಡಿಕೊಂಡಿದ್ದೆವುಅಮ್ಮನಿಗೇನೂ ಹೇಳಲಿಲ್ಲಅವಳೂ ಮನೆಯ ಬಗ್ಗೆ ನಮ್ಮ ಜತೆ ಹೆಚ್ಚೇನೂ ಮಾತಾಡಲೇ ಇಲ್ಲನಾವೇನು ಇಲ್ಲಿ ಇರ್ತೀವಾಶ್ರೀನಿವಾಸಯ್ಯನವರು ಹೇಳೋ ಹಾಗೆ ಬರೀ ಇನ್ವೆಸ್ಟ್‍ಮೆಂಟ್‍ಗೆ ಅಂತ ಅಷ್ಟೇ ಎಂದು ಒಮ್ಮೆ ಮಾತ್ರ ಸರಸಕ್ಕನಿಗೆ ಹೇಳಿದ್ದಳಂತೆಈಗ ಮನೆಯನ್ನು ಶ್ರೀನಿವಾಸಯ್ಯನವರು ಕೊಂಡುಕೊಳ್ಳುವ ವಿಷಯ ನಮಗೆ ಸಂತೋಷವನ್ನೇ ಉಂಟುಮಾಡಿತುಆದರೆ ಆನಂತರ ಅವರು ತಾವು ಮನೆಯನ್ನು ಕೊಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ವಿವರಿಸಿದಾಗ ಮಾತ್ರ ನಮಗಿಬ್ಬರಿಗೂ ತುಂಬಾ ಬೇಜಾರಾಯಿತು.
ಅವರ ಹೆಂಡತಿ ಆರು ತಿಂಗಳ ಹಿಂದೆ ಕ್ಯಾನ್ಸರ‍್‍ನಿಂದ ತೀರಿಕೊಂಡರಂತೆಚಿಕಿತ್ಸೆಗೆ ಅಂತ ಸಾಲ ಮಾಡಿ ಒಂದು-ಒಂದೂವರೆ ಲಕ್ಷ ಖರ್ಚು ಮಾಡಿದರೂ ಏನೂ ಪ್ರಯೋಜನವಾಗಲಿಲ್ಲವಂತೆಕಳೆದ ತಿಂಗಳು ಇವರು ರಿಟೈರ್ ಆದಾಗಿನಿಂದ ಈಗಿರುವ ದೊಡ್ಡದಾದ ಮನೆಗೆ ಬಾಡಿಗೆ ಕಟ್ಟುವುದು ಕಷ್ಟ ಅನಿಸುತ್ತಿದೆಯಂತೆಬಂದ ಪಿಎಫ್, ಗ್ರ್ಯಾಚುಯಿಟಿ ಎಲ್ಲವನ್ನೂ ಸೇರಿಸಿ ಹೆಂಡತಿಯ ಚಿಕಿತ್ಸೆಯ ಖರ್ಚಿಗೆ ಮಾಡಿದ ಸಾಲವನ್ನು ತೀರಿಸಿ ಒಂದು ಪುಟ್ಟ ಮನೆಯನ್ನು ಕೊಂಡುಕೊಂಡುಬಿಡುವುದು ಉತ್ತಮ, ಆಮೇಲೆ ಪೆನ್ಷನ್‍ನಿಂದ ಮಿತವಾಗಿ ಬದುಕು ಸಾಗಿಸಿಬಿಡಬೇಕು ಅಂತ ಯೋಚಿಸುತ್ತಿದ್ದಾರಂತೆಗಂಡುಮಕ್ಕಳಿಂದ ಏನೂ ಪ್ರಯೋಜನವಿಲ್ಲವಂತೆಹಿರೀಮಗ ರಮೇಶ ನೌಕರಿ ಇಲ್ಲದೇ ಪೋಲಿ ಬಿದ್ದಿದ್ದಾನಂತೆಅವನ ಹೆಂಡತಿ ತವರುಮನೆ ಸೇರಿಕೊಂಡಿದ್ದಾಳಂತೆಎರಡನೇ ಮಗ ಸುರೇಶ ಅಮೆರಿಕಾಗೆ ಹೊರಟುಹೋದವನು ಎರಡು ವರ್ಷಗಳಿಂದ ಸಂಪರ್ಕವನ್ನೇ ಕಡಿದುಕೊಂಡಿದ್ದಾನಂತೆಇದೆಲ್ಲದರ ನಡುವೆ ಒಳ್ಳೆಯದು ಅನ್ನಬಹುದಾದ ಒಂದೇ ಒಂದು ಬೆಳವಣಿಗೆಯೆಂದರೆ ಮಗಳು ಶಾಲಿನಿಗೆ ನಾಲ್ಕು ತಿಂಗಳ ಹಿಂದೆ ಸಿಕ್ಕಿದ ಸ್ಕೂಲ್ ಟೀಚರ್ ಕೆಲಸಕೊಳ್ಳೇಗಾಲದಿಂದ ಪೂರ್ವಕ್ಕೆ ಮೂವತ್ತು ಕಿಲೋಮೀಟರಿಗೂ ಆಚೆ ಬೆಟ್ಟಗಳ ಸೀಮೆಯ ಒಂದು ಹಳ್ಳಿಯಲ್ಲಿರುವ ಶಾಲೆ ಅದುಬೆಳಿಗ್ಗೆ ಆರುಗಂಟೆಗೆ ಮನೆ ಬಿಡುವ ಅವಳು ಎರಡು ಬಸ್ಸು ಹತ್ತಿ ಅಲ್ಲಿಗೆ ತಲುಪುವ ಹೊತ್ತಿಗೆ ಎಂಟೂವರೆಯಾಗಿರುತ್ತದಂತೆಅವಳಿಗಿನ್ನೂ ಮದುವೆಯಾಗಿಲ್ಲಶ್ರೀನಿವಾಸಯ್ಯನವರು ಮಗಳ ಸಂಬಳವನ್ನು ಇಡಿಯಾಗಿ ಬ್ಯಾಂಕಿನಲ್ಲೇ ಇಡುತ್ತಿದ್ದಾರಂತೆ, ದಿಢೀರನೆ ಅವಳ ಮದುವೆ ಫಿಕ್ಸ್ ಆದರೆ ಬೇಕಾಗುತ್ತದೆಂದು.
ಶ್ರೀನಿವಾಸಯ್ಯನವರು ಇರುವ ಸಾಲವನ್ನೆಲ್ಲಾ ತೀರಿಸಿ ಉಳಿದ ಹಣದಲ್ಲಿ ಖರೀದಿಸಲು ಸಾಧ್ಯವಿರುವುದು ನಮ್ಮ ಮನೆ ಮಾತ್ರವಂತೆಅದೂ ಒಂದೇ ಪೂರ್ತಿ ಹಣವನ್ನು ಒಂದೇ ಗಂಟಿನಲ್ಲಿ ನಮಗೆ ಕೊಡಲು ಆಗುವುದಿಲ್ಲವಂತೆಮನೆಯ ಬೆಲೆ ಈಗ ಎರಡು ಲಕ್ಷಅದು ಬರೀ ಸೈಟಿನ ಬೆಲೆ ಅಂತೆಹಳೆಯ ಮನೆಯಾದ್ದರಿಂದ ಅದಕ್ಕೇನೂ ಬೆಲೆ ಇಲ್ಲವಂತೆಈಗ ನಮಗೆ ಒಂದು ಲಕ್ಷ ಕ್ಯಾಶ್ ಕೊಟ್ಟು ಉಳಿದದ್ದಕ್ಕೆ ಬಡ್ಡಿ ಸೇರಿಸಿ ತಿಂಗಳು ತಿಂಗಳೂ ಸ್ವಲ್ಪ ಸ್ವಲ್ಪ ಕೊಟ್ಟು ಒಂದು ವರ್ಷದಲ್ಲಿ ಲೆಕ್ಕ ಚುಕ್ತಾ ಮಾಡಿಬಿಡುತ್ತಾರಂತೆ.
" ರೀತಿಯ ವ್ಯವಹಾರ ನಡೆಸಲು ಒಪ್ಪುವುದು ನೀವು ಮಾತ್ರ ಅನ್ನೋ ನಂಬಿಕೆಯಿಂದ ಇಲ್ಲಿಗೆ ಬಂದೆ."  ಅವರು ಸಣ್ಣಗೆ ಹೇಳಿ ತಲೆತಗ್ಗಿಸಿ ಮೌನವಾಗಿ ಕೂತುಬಿಟ್ಟರುಅವರು ಹೇಳಿದ್ದೆಲ್ಲವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನನಗೆ ಸ್ವಲ್ಪ ಸಮಯವೇ ಬೇಕಾಯಿತು, ಒದ್ದೆ ನೆಲದ ಮೇಲೆ ಬಿದ್ದ ನೀರು ಒಳಗಿಳಿಯಲು ನಿಧಾನಿಸುವಂತೆಅವರ ಕಷ್ಟದ ಕಥೆಗಳು ನನ್ನ ಅರಿವಿಗೆ ನಿಲುಕುತ್ತಿದ್ದಂತೇ ಪಾಪ ಅನಿಸಿಬಿಟ್ಟಿತುಅಕ್ಕನ ಕಣ್ಣಂಚಿನಲ್ಲಿ ನೀರು.  "ಒಂದು ನಿಮಿಷ ಇರಿ" ಎಂದು ಅವರಿಗೆ ಹೇಳಿ ನನ್ನನ್ನು ಒಳಕೊಣೆಗೆ ಕರೆದುಕೊಂಡು ಹೋದವಳು ನನ್ನ ಕೈಹಿಡಿದು "ಕೊಟ್ಬಿಡೋಣ ಕಣೋ" ಅಂದಳುಅವಳಿಗೆ ಹೇಳಲು ಸಾಧ್ಯವಾದದ್ದು ಅಷ್ಟೇ ಇರಬೇಕು.
ಅಮ್ಮ ಹೋದಾಗಿನಿಂದ ನನಗೆ ಅಕ್ಕ ಅಮ್ಮ ಇಬ್ಬರೂ ಆಗಿರುವ ನನ್ನ "ಸರಸಮ್ಮ" ಅಭಿಪ್ರಾಯಕ್ಕೆ ಚಕಾರವೆತ್ತುವ ಅಭ್ಯಾಸವೇ ನನಗಿಲ್ಲ.
"ಹ್ಞೂಂ ಕಣೇ ಸರಸಕ್ಕ, ಕೊಟ್ಬಿಡೋಣ."  ತಣ್ಣಗೆ ಹೇಳಿದೆ.
ನಮ್ಮ ಮಾತು ಕೇಳಿದ ಶ್ರೀನಿವಾಸಯ್ಯನವರ ಕಣ್ಣುಗಳಲ್ಲಿ ಸಂತೋಷಕ್ಕಿಂತಲೂ ಹೆಚ್ಚಿನ ಅಚ್ಚರಿ.
ಮಾತು ಮುಗಿದ ನಂತರ ಅವರು ಹೆಚ್ಚು ಹೊತ್ತು ನಿಲ್ಲಲಿಲ್ಲನಮ್ಮ ಮನೆಯಲ್ಲಿ ಈಗಿರುವವರ ಭೋಗ್ಯದ ಆವಧಿ ಮುಂದಿನ ತಿಂಗಳು ಮುಗಿಯಲಿದೆಯೆಂದೂ, ಸಮಯಕ್ಕೆ ಸರಿಯಾಗಿ ಮನೆ ಬಿಡಲು ಅವರು ತಯಾರಿರುವುದಾಗಿಯೂ, ಅವರಿಗೆ ನಾವು ಹಿಂತಿರುಗಿಸಬೇಕಾದ ಅರವತ್ತು ಸಾವಿರ ಭೋಗ್ಯದ ಹಣವನ್ನು ತಾವೇ ಕೊಡುವುದಾಗಿಯೂ, ಅದನ್ನು ನಮ್ಮ ವ್ಯವಹಾರದಲ್ಲಿ ಅಡ್ಜಸ್ಟ್ ಮಾಡಿಕೊಳ್ಳಬಹುದೆಂದು ಹೇಳಿ ಊಟಕ್ಕೆ ನಿಲ್ಲಿ ಎಂದು ಅಕ್ಕ ಎಷ್ಟು ಹೇಳಿದರೂ ನಿಲ್ಲದೇ ಹೊರಟುಹೋದರುಅವರು ನಿಜವಾಗಿಯೂ ನಮ್ಮಲ್ಲಿಗೆ ಬಂದಿದ್ದರೇ ಎಂಬ ಸಂಶಯ ಅವರು ಹೊರಟುಹೋದ ಸುಮಾರು ಹೊತ್ತಿನವರೆಗೆ ನಮ್ಮನ್ನು ಕಾಡುತ್ತಿತ್ತು.
ಆಮೇಲೆ ದಿನವಿಡೀ ನಾವು ಅವರ ಬಗ್ಗೇ ಮಾತಾಡುತ್ತಿದ್ದೆವು.
ಶ್ರೀನಿವಾಸಯ್ಯನವರು ಕೊಳ್ಳೇಗಾಲದ ಕಡೆಯೇ ಇದ್ದ ಒಂದು ಹಳ್ಳಿಯವರುಅದು ಸರಗೂರು ಅಂತಲೋ ಎನೋ ಇರಬೇಕುಸರಿಯಾಗಿ ನೆನಪಾಗುತ್ತಿಲ್ಲಅಲ್ಲಿದ್ದ ಒಂದಷ್ಟು ಜಮೀನು, ಮನೆಯನ್ನು ಓದಿಲ್ಲದ ಅಣ್ಣಂದಿರಿಗೆ ಬಿಟ್ಟು ತಾವು ಕೊಳ್ಳೇಗಾಲದಲ್ಲಿ ಬಾಡಿಗೆ ಮನೆಯಲ್ಲಿದ್ದರುಅಚ್ಛಬಿಳೀ ಕಚ್ಚೆಪಂಚೆ, ಶರಟು, ಕಪ್ಪು ಕೋಟು, ತಲೆ ಮೇಲೆ ಮೈಸೂರು ಪೇಟಾದಪ್ಪ ಮೀಸೆಯ ಐದೂಮುಕ್ಕಾಲಡಿ ಎತ್ತರದ ಶ್ರೀನಿವಾಸಯ್ಯನವರನ್ನು ನೋಡಿದರೆ ಗೌರವ ಮೂಡುತ್ತದೆ ಎಂದು ಅಕ್ಕ ಅಮ್ಮ ಹೇಳಿದರೆ ನನಗಂತೂ ಭಯವಾಗುತ್ತಿತ್ತುಅವರು ಕಲಿಸುತ್ತಿದ್ದುದು ಕನ್ನಡ ವೇಶದಲ್ಲಿ ಅವರು "ಶ್ರೀಮದ್‍ ರಮಾರಮಣ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮಕುಟ ತಟಘಟಿತ..." ಎಂದು ಕಂಚಿನ ಕಂಠದಲ್ಲಿ ಹೇಳತೊಡಗಿದರೆ ಸಾಕ್ಷಾತ್ ಮುದ್ದಣನೇ ಕಣ್ಣ ಮುಂದೆ ನಿಂತಂತೆನಿಸುತ್ತದೆ ಎಂದು ಅಮ್ಮ ಒಮ್ಮೆ ಹೇಳಿದ್ದನ್ನು ನೆನಸಿಕೊಂಡರೆ ಅವಳು ಹೇಳಿದ್ದು ಸರಿ ಅಂತ ಈಗ ಅನಿಸುತ್ತದೆ.
ಇಂದು ನಾವು ಕಂಡ ಶ್ರೀನಿವಾಸಯ್ಯನವರು ಶ್ರೀನಿವಾಸಯ್ಯನವರ ಪಳೆಯುಳಿಕೆ.
ಎಲ್ಲರಿಗೂ ಕೈಲಾದಷ್ಟು ಸಹಾಯ ಮಾಡಿಕೊಂಡು, ಸಾಕಷ್ಟು ಅನುಕೂಲವಾಗಿಯೇ ಇದ್ದ ಅವರಿಗೆ ಈಗ ಇಂತಹ ದುಃಸ್ಥಿತಿ ಬಂದಿರುವುದು ನಮಗಂತೂ ತುಂಬಾ ನೋವುಂಟುಮಾಡಿತ್ತುಅವರ ಹೆಂಡತಿಯಂತೂ ತುಂಬಾ ಒಳ್ಳೆಯ ಹೆಂಗಸುನಮ್ಮ ಕಷ್ಟಕಾಲದಲ್ಲಿ ಅಮ್ಮನಿಗೆ ಅವರು ಅದೆಷ್ಟೋ ಬಾರಿ ಧೈರ್ಯ ಹೇಳಿದ್ದರುಹಾಸನದಲ್ಲಿ ನೌಕರಿಯಲ್ಲಿದ್ದು ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ ಅಪ್ಪ ಅಲ್ಲೇ ಬೇರೊಬ್ಬಳನ್ನು ಕಟ್ಟಿಕೊಂಡು ನಮ್ಮನ್ನು ತೊರೆದಾಗ ತನ್ನಲ್ಲಿ ಬದುಕುವ ಛಲವನ್ನು ತುಂಬಿದ್ದು ಶ್ರೀನಿವಾಸಯ್ಯನವರ ಹೆಂಡತಿಯೇ ಎಂದು ಅಮ್ಮನೇ ಒಮ್ಮೆ ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ.  ಅವರ ಕೊನೆಗಾಲದಲ್ಲಿ ನಾವವರನ್ನು ಮರೆತೇಬಿಟ್ಟೆವಲ್ಲಾ ಎಂದು ತುಂಬಾ ಬೇಜಾರಾಯಿತುಕೊಳ್ಳೇಗಾಲ ಬಿಟ್ಟ ಮೇಲೆ ಶ್ರೀನಿವಾಸಯ್ಯನನರನ್ನು ಬಿಟ್ಟು ಅವರ ಮನೆಯ ಮತ್ಯಾರನ್ನೂ ನಾವು ಭೇಟಿಯಾಗಿರಲಿಲ್ಲಅಮ್ಮ ಹೋದ ಮೇಲೆ ಅವರೇ ಎರಡು ಸಲ ಇಲ್ಲಿಗೆ ಬಂದು ನಮ್ಮ ಮನೆಯ ಭೋಗ್ಯದ ಪತ್ರಗಳಿಗೆ ಸಹಿ ಮಾಡಿಸಿಕೊಂಡು ಹೋಗಿದ್ದರುಕಳೆದ ಬಾರಿ ಬಂದದ್ದು ಮೂರು ವರ್ಷಗಳ ಹಿಂದೆಆವಾಗ ಎಲ್ಲರೂ ಚೆನ್ನಾಗಿದ್ದಾರೆ, ನೆಮ್ಮದಿಯಾಗಿದ್ದೇವೆ ಎಂದು ಹೇಳಿದ್ದರುಆನಂತರ ಅವರಿಂದ ಯಾವ ಸುದ್ಧಿಯೂ ಇರಲಿಲ್ಲತನ್ನ ನೌಕರಿಯಲ್ಲಿ ಮುಳುಗಿದ್ದ ಅಕ್ಕ, ನನ್ನ ರೀಸರ್ಚ್‍ನಲ್ಲಿ ಮುಳುಗಿದ್ದ ನಾನು ಶ್ರೀನಿವಾಸಯ್ಯನವರಿರಲಿ, ನಮ್ಮ ಕೊಳ್ಳೇಗಾಲದ ಮನೆಯ ಬಗೆಗೂ ತಲೆ ಕೆಡಿಸಿಕೊಂಡಿರಲಿಲ್ಲಈಗ ನೋಡಿದರೆ ಎಲ್ಲವೂ ಬದಲಾಗಿಹೋಗಿದೆನಮ್ಮ ಸುತ್ತ ನಾವೇ ಕಟ್ಟಿಕೊಂಡ ಪರದೆ ಬೇರೆಲ್ಲಾ ಕಡೆ ಪಾರದರ್ಶಕವಾಗಿ ಹಿಂಜಿಕೊಂಡು ಜಗತ್ತಿನದೆಲ್ಲವನ್ನೂ ನಮಗೆ ತೋರಿಸಿದರೂ ಅದ್ಯಾವುದೋ ಅವ್ಯಕ್ತ ಹಠದಲ್ಲಿ ಒಂದು ಕಡೆ ಮಾತ್ರ ಕಪ್ಪಾಗಿ ಉಳಿದು ಶ್ರೀನಿವಾಸಯ್ಯನವರ ಮನೆಯನ್ನು ಮರೆಯಲ್ಲಿಟ್ಟುಬಿಟ್ಟಿತ್ತು.
ಎರಡು ವಾರಗಳ ನಂತರ ಶ್ರೀನಿವಾಸಯ್ಯನವರೇ ಪೋನ್ ಮಾಡಿ ನೀವಿಬ್ಬರೂ ಒಮ್ಮೆ ಇತ್ತ ಬಂದು ಎಲ್ಲವನ್ನೂ ನೋಡಿದರೆ ಚೆನ್ನಿತ್ತು, ಭೋಗ್ಯಕ್ಕಿದ್ದವರು ನಾಳೆಯೇ ಮನೆ ಖಾಲಿ ಮಾಡುತ್ತಿದ್ದಾರೆ, ಸಾಧ್ಯವಾದರೆ ನಮ್ಮ ವ್ಯವಹಾರವನ್ನೂ ಆದಷ್ಟು ಬೇಗ ಮುಗಿಸಿಬಿಡೋಣ ಎಂದು ಬಡಬಡ ಹೇಳಿದರುಭಾನುವಾರ ಬರುತ್ತೇವೆ ಎಂದು ಅಕ್ಕ ಹೇಳಿದರೆ ಇಲ್ಲ ಗುರುವಾರವೇ ಬನ್ನಿ, ರಿಜಿಸ್ಟ್ರೇಷನ್ ಮುಗಿಸಿಬಿಡೋನಅದು ಒಳ್ಳೆಯ ದಿನ ಎಂದು ಒತ್ತಾಯಿಸಿದರು.

*     *     *

ನಮ್ಮನ್ನೇ ಕಾಯುತ್ತಿದ್ದ ಶ್ರೀನಿವಾಸಯ್ಯನವರು "ಬನ್ನಿ, ಬನ್ನೀ" ಎಂದು ಸಂಭ್ರಮದಿಂದ ಸ್ವಾಗತಿಸಿ ನಾವು ಕಾಲು ತೊಳೆದುಕೊಂಡು ಕೂರುತ್ತಿದ್ದಂತೇ "ಹೊತ್ತಾಯ್ತು ಹೊತ್ತಾಯ್ತು, ತಿಂಡಿ ತಿಂದುಬಿಡಿಮಾತೇನಿದ್ರೂ ಆಮೇಲೆ" ಎಂದು ಅವಸರಿಸಿದರು.  "ತಿಂಡಿ ಆಯ್ತು, ಈಗತಾನೆ" ಅಂದಳು ಅಕ್ಕ.  "ಇಲ್ಲೇ ಶೆಟ್ಟಿ ಹೋಟೆಲ್‍ನಲ್ಲಿ" ಸಣ್ಣಗೆ ಸೇರಿಸಿದಳುನಿಮಿಷದವರೆಗೆ ನಮ್ಮಿಬ್ಬರ ಮುಖಗಳನ್ನೂ ಮೌನವಾಗಿ ದಿಟ್ಟಿಸಿದರು ಶ್ರೀನಿವಾಸಯ್ಯನವರು.  "ಹ್ಞುಂಮಕ್ಕಳಿಬ್ಬರೂ ತಾಯಿ ಹಂಗೇನೇಒತ್ತಾಯಿಸಿ ಪ್ರಯೋಜನವಿಲ್ಲ."  ಸಣ್ಣಗೆ ಲೊಚಗುಟ್ಟಿದರು.  "ಕಾಫಿಯಾದರೂ ಆಗಬಹುದಲ್ಲ?"  ಅನುಮಾನಿಸುತ್ತಾ ಕೇಳಿದರುಅಕ್ಕ ತಲೆಯಾಡಿಸಿದಳು.  "ನಿಮ್ಮ ತಿಂಡಿ ಆಯಿತೇ?"  ಪ್ರಶ್ನಿಸಿದಳು.  "ಇನ್ನೂ ಇಲ್ಲಶಾಲೂ ಡಬ್ಬಕ್ಕೆ ತಿಂಡಿ ಹಾಕ್ಕೊಂಡು ಐದೂಮುಕ್ಕಾಲಿಗೇ ಮನೆ ಬಿಟ್ಲುರಮೇಶ ನಿನ್ನೆ ರಾತ್ರಿಯಿಂದ ಮನೆ ಕಡೆ ಬಂದಿಲ್ಲನೀವು ಬಂದ ಮೇಲೆ ಒಟ್ಟಿಗೆ ತಿನ್ನೋಣ ಅಂತ ಕಾಯ್ತಾ ಇದ್ದೆ" ಅಂದರುಮಣಕುಗಟ್ಟಿದ ಕ್ಯಾಲೆಂಡರಿನ ಹಿಂದಿನಿಂದ ಹಲ್ಲಿಯೊಂದು ಲೊಚಗುಟ್ಟಿತುನನಗೆ ಒಳಗೆಲ್ಲೋ ಸಣ್ಣಗೆ ಚುಚ್ಚಿತುತಲೆತಗ್ಗಿಸಿದೆ  ಅರೆಕ್ಷಣದ ನಂತರ ಮೌನದ ಆಳದಿಂದ ಅಕ್ಕನ ದನಿ ಮೆಲ್ಲಗೆ ಮೇಲೆದ್ದು ಬಂತು: "ನೀವು ತಿಂಡಿ ತಿನ್ನಿನಾನು ಕಾಫಿ ಮಾಡ್ತೀನಿಮೂವರೂ ಒಟ್ಟಿಗೆ ಕುಡಿಯೋಣ."
ತಲೆಯೆತ್ತುತ್ತಿದ್ದ ನನ್ನ ಕಣ್ಣುಗಳ ಮುಂದೆ ಫಳಕ್ ಎಂದು ಮಿಂಚಿದ್ದು ಶ್ರೀನಿವಾಸಯ್ಯನವರ ಕಣ್ಣುಗಳಿಂದ ಹೊರಟಿರಬಹುದಾದ ಬೆಳಕೇ ಎಂದು ನಾನು ಅಚ್ಚರಿ ಪಡುತ್ತಿರುವಂತೇ ಅವರು ಮೇಲೆದ್ದರು.  "ಬಾ, ಅಡಿಗೆಮನೆ ತೋರಿಸ್ತೀನಿ" ಎನ್ನುತ್ತಾ ಕತ್ತಲ ಮೂಲೆಯತ್ತ ಸಾಗಿದರುಮಾಳಿಗೆಯ ಮೇಲೆ ಒಂದೆರಡು ಹನಿಗಳು ತಟಪಟ ಬಿದ್ದ ಸದ್ದುಕಿಟಕಿಯತ್ತ ತಿರುಗುವಷ್ಟರಲ್ಲಿ ತಟಪಟ ನಿಂತುಹೋಯಿತು.
ಅಕ್ಕನಿಗೆ ಅಡಿಗೆಮನೆಯನ್ನು ತೋರಿಸಿ ತಾವು ತಟ್ಟೆಗೆ ತಿಂಡಿ ಹಾಕಿಕೊಂಡು ಬಂದು ನನ್ನೆದುರು ಕುಳಿತರುತಟ್ಟೆಯಲ್ಲಿದ್ದ ಎರಡು ಇಡ್ಲಿಗಳ ಸೈಜು, ಗಟ್ಟಿ ಚಟ್ನಿ, ಕಪ್ಪಿನಲ್ಲಿದ್ದ ಸಾಂಬಾರಿನ ಬಣ್ಣವನ್ನು ನೋಡುತ್ತಿದ್ದಂತೆ ಅವೆಲ್ಲವೂ ಶೆಟ್ಟಿ ಹೋಟೆಲಿನದ್ದಿರಬಹುದೇ ಎಂಬ ಅನುಮಾನ ನನಗಾಯಿತು.  "ನೀವೂ ಒಂದಿಷ್ಟು ತಿಂದಿದ್ರೆ ಆಗಿತ್ತು" ಎಂದು ಮತ್ತೆ ಮತ್ತೆ ಸಣ್ಣಗೆ ಹೇಳಿಕೊಳ್ಳುತ್ತಲೇ ನಿಧಾನವಾಗಿ ತಿಂಡಿ ತಿಂದರು ಶ್ರೀನಿವಾಸಯ್ಯನವರುಅಕ್ಕ ಪುಟ್ಟ ಸ್ಟೀಲ್ ತಟ್ಟೆಯೊಂದರಲ್ಲಿ ಮೂರು ಲೋಟಗಳನ್ನಿಟ್ಟುಕೊಂಡು ಬಂದಳುನಂತರ ಹಲವು ನಿಮಿಷಗಳವರಗೆ ಮೂವರು ದಾಯಾದಿಗಳಂತಿದ್ದ ಕಾಫಿ ಗುಟುಕರಿಸುವ ಮೂರು ಶಬ್ಧಗಳು ನಮ್ಮಿರವನ್ನು ನಿರ್ಲಕ್ಷಿಸಿ ತಮ್ಮತಮ್ಮೊಳಗೆ ಏನೋ ಅಪನಂಬಿಕೆಯಲ್ಲಿ ಗೊಣಗಾಡಿಕೊಳ್ಳುತ್ತಿದ್ದವು.
ಅಕ್ಕ ಖಾಲಿ ಲೋಟಗಳನ್ನು ತೆಗೆದುಕೊಂಡು ಅಡಿಗೆ ಮನೆಗೆ ಹೋದಳುಬಾಗಿಲ ಬಳಿ ಸದ್ದಾಯಿತುಶ್ರೀನಿವಾಸಯ್ಯನವರು ಎದ್ದು ಅತ್ತ ಹೋಗುತ್ತಿದ್ದಂತೇ ಬಾಗಿಲನ್ನು ದೂಡಿಕೊಂಡು ಯುವಕನೊಬ್ಬ ಒಳಬಂದನೀಲೀ ಜೀನ್ಸ್ ಪ್ಯಾಂಟ್, ಗುಂಡು ಕುತ್ತಿಗೆಯ ಮಾಸಲು ಬಿಳಿ ಟೀಶರ್ಟ್, ತಗ್ಗಿದ ತಲೆಯಲ್ಲಿ ಪೊದೆಗೂದಲು.
"ಬಾ ಬಾ, ನಿನ್ನೆಯೆಲ್ಲಾ ಎಲ್ಲಿಗೆ ಹೋಗಿದ್ದೆಶಾಸ್ತ್ರಿಗಳ ಮನೆಗೂ ಹೋಗಲಿಲ್ಲವಂತಲ್ಲ?"  ಶ್ರೀನಿವಾಸಯ್ಯನವರು ಪ್ರಶ್ನಿಸಿದರು.
"ಶಾಸ್ತ್ರಿಗಳ ಹತ್ರ ಹೋಗಲ್ಲ ಅಂತ ಎಷ್ಟು ಸಲ ಹೇಳಬೇಕು ನಿಮಗೆನನ್ ಮುಖ ಕಂಡ್ರೆ ಸಾಕು ತಾಯಿತ ಕಟ್ಕ, ತಗಡು ಕಟ್ಕ, ಸುಬ್ರ ಕಟ್ಕ, ಶ್ಯಾಟ ಕಟ್ಕ ಅಂತ ಜಮಿಡ್ತ ಹಿಡಿದುಬಿಡ್ತಾರೆ."  ತಲೆತಗ್ಗಿಸಿ ಗೂಳಿಯಂತೆ ಒಳನುಗ್ಗುತ್ತಿದ್ದ ಅವನು ಅಸಹನೆಯಲ್ಲಿ ಒದರಿದಶ್ರೀನಿವಾಸಯ್ಯನವರು "ಹುಷ್ ಹುಷ್" ಎಂದೇನೋ ಹೇಳಹೊರಟಂತೇ ಅಡಿಗೆ ಮನೆಯಿಂದ ಅಕ್ಕ ಕೈಯೊರೆಸಿಕೊಳ್ಳುತ್ತಾ, ಕೈಬಳೆಗಳನ್ನು ಕಿಣಿಕಿಣಿಗುಟ್ಟಿಸುತ್ತಾ ಹೊರಬಂದಳುತಲೆ ತಗ್ಗಿಸಿದಂತೇ ಬಚ್ಚಲ ಮನೆಯತ್ತ ಧಾಪುಗಾಲಿಡುತ್ತಿದ್ದ ಅವನು ಹಿಂದೆ ತಿರುಗದೇ "ರಜವೇನೇ ನಿಂಗೆ ಈವತ್ತು?" ಅಂದದನಿಯಲ್ಲಿದ್ದ ಅಸಡ್ಡೆಯ ಧೂಳು ಮನೆಯಿಡೀ ಎರಚಾಡಿತುಅಕ್ಕ ದಂಗಾಗಿ ನಿಂತುಬಿಟ್ಟಳುಬಾಯಿ ತೆರೆಯಲು ಶ್ರೀನಿವಾಸಯ್ಯನವರಿಗೂ ಆಗಲಿಲ್ಲ.  "ಮಾತಾಡಕ್ಕೂ ಆಗಲ್ವೇನೆ ನಿಂಗೆಸಿಕ್ಕಿರೋದು ಪುಟಗೋಸಿ ಪ್ರೈಮರಿ ಸ್ಕೂಲ್ ಟೀಚರ್ ಕೆಲ್ಸಯೂನಿವರ್ಸಿಟಿ ಪ್ರೊಫೆಸರ್ ಆಗಿಬಿಟ್ಟಷ್ಟು ಕೊಬ್ಬು ಬಿಕನಾಸಿಗೆ" ಎನ್ನುತ್ತಾ ಬಚ್ಚಲ ಮನೆಯ ಬಾಗಿಲು ಸಮೀಪಿಸಿದವನು ರಭಸವಾಗಿ ಇತ್ತ ತಿರುಗಿದಎಡಗೈ ಪ್ಯಾಂಟಿನ ಜಿಪ್ ಮೇಲಿತ್ತು.
ಅಕ್ಕನನ್ನೇ ನೋಡಿದವನು ಅರೆಕ್ಷಣ ಬೆಪ್ಪಾಗಿ ನಿಂತುಬಿಟ್ಟಜಿಪ್‍ಗೆ ಹೂಡಿದ್ದ ಕೈ ಬೆಚ್ಚಿದಂತೆ ಅಲ್ಲೇ ಸ್ಥಗಿತಗೊಂಡುಬಿಟ್ಟಿತ್ತು.
ನಾನವನನ್ನು ನೇರವಾಗಿ ನೋಡಿದೆಹನ್ನೆರಡು ವರ್ಷಗಳ ಹಿಂದಿನ ಆಕರ್ಷಕ ಗೋಧಿಬಣ್ಣ ಕಳೆದುಕೊಂಡು ಕಪ್ಪುಗಟ್ಟುತ್ತಿದ್ದ ಮುಖಹಣೆಯ ಮೇಲೆ ಕೆದರಾಡಿದ್ದ ಮುಂಗುರುಳು, ದಪ್ಪ ಮೀಸೆ, ವಾರದ ಗಡ್ಡರಮೇಶ ವಯಸ್ಸಿನಲ್ಲಿ ಬೆಳೆದಿದ್ದವಯಸ್ಸಿನ ಜತೆಯೇ ಬರಬೇಕಾಗಿದ್ದ ಅದರ ಹಲವಾರು ಸಂಗಾತಿಗಳು ಹಿಂದೆ ಉಳಿದುಬಿಟ್ಟಿದ್ದವು.
ಅಕ್ಕ ಮುಂದೆ ಬಂದಳು.  "ನನ್ ಗುರುತಾಗ್ಲಿಲ್ವಾ ರಮೇಶಸರಸ್ವತಿಸುಶೀಲಾ ಟೀಚರ್ ಮಗ್ಳು."
ಅವನ ಕಣ್ಣರೆಪ್ಪೆಗಳು ಎರಡುಸಲ ಬಡಿದುಕೊಂಡವುಪರಿಚಯದಲ್ಲಿ ಅವು ಅರಳುತ್ತವೆ ಅನಿಸುವಷ್ಟರಲ್ಲಿ ಅವನು ಒಮ್ಮೆ ಶುಷ್ಕ ನಗೆ ನಕ್ಕು ಬಚ್ಚಲಮನೆಯೊಳಗೆ ನುಗ್ಗಿ ಧಡಕ್ಕನೆ ಬಾಗಿಲು ಮುಚ್ಚಿಕೊಂಡುಬಿಟ್ಟ.
"ಯಾಕೆ ಹೀಗಾದ ಅಂತ ಗೊತ್ತಾಗ್ತಿಲ್ಲಮ್ಮ..."  ಹೆಪ್ಪುಗಟ್ಟಿದ ನಿಮಿಷಗಳ ಮೌನವನ್ನು ಕತ್ತರಿಸಲು ಶ್ರೀನಿವಾಸಯ್ಯನವರ ದನಿ ಹೆಣಗುತ್ತಿದ್ದಂತೆಯೇ ಬಚ್ಚಲಮನೆಯ ಬಾಗಿಲು ತೆರೆದುಕೊಂಡು ರಮೇಶ ಹೊರಬಂದಮೋರೆ ತೊಳೆದಿದ್ದಕುರ್ಚಿಯಲ್ಲಿ ಕೂತು ನನ್ನತ್ತ, ಸರಸಕ್ಕನತ್ತ ಒಮ್ಮೆ ನೋಟ ಹರಿದಾಡಿಸಿ ಸಹಜದನಿಯಲ್ಲಿ ಪ್ರಶ್ನಿಸಿದ: "ಏನು, ಭಾಳಾ ದಿನ ಆದ್ಮೇಲೆ ಅಕ್ಕ, ತಮ್ಮ ಬಂದ್ಬಿಟ್ಟಿದ್ದೀರಿಏನು ವಿಶೇಷ?"  ತನ್ನ ಪ್ರಶ್ನೆಗೆ ಉತ್ತರ ಅಗತ್ಯವಿಲ್ಲವೆಂಬಂತೆ ಅಕ್ಕನ ಮೇಲೆ ನೋಟ ಕೀಲಿಸಿ ಮತ್ತೊಂದು ಪ್ರಶ್ನೆ ಹೊರತೂರಿದ: "ಏನು ಮಾಡ್ತಿದೀಯೇ ಈಗಮದುವೆ ಗಿದುವೆ ಮಾಡ್ಕೊಂಡ್ಯಾ?"
"ಗಂಗೋತ್ರಿಲಿದೀನಿರೀಡರ್ ಆಗಿದ್ದೀನಿ, ಇಕನಾಮಿಕ್ಸ್‍ನಲ್ಲಿ."  ಅಕ್ಕನ ದನಿಯಲ್ಲಿ ಯಾವ ಉತ್ಸಾಹವೂ ಇರಲಿಲ್ಲ.
"ಪರವಾಗಿಲ್ಲವೇ!"  ಅವನು ಕಣ್ಣರಳಿಸಿದನನ್ನತ್ತ ತಿರುಗಿದ.  "ನೀನೇನು ಮಾಡ್ತಿದೀಯೋ?"
ಏನೂ ಇಲ್ಲ, ಪೋಲಿ ತಿರುಗಿಕೊಂಡಿದ್ದೀನಿ ಅನ್ನಬೇಕೆನಿಸಿತುಆಗಲಿಲ್ಲಸುಮ್ಮನೆ ಅವನನ್ನೇ ನೋಡಿದೆಅಕ್ಕನೇ ಹೇಳಿದಳು: "ಈಗ ತಾನೆ ಪಾಂಡಿಚೆರಿ ಯೂನಿವರ್ಸಿಟೀಲಿ ಅಪಾಯಿಂಟ್‍ಮೆಂಟ್ ಆಗಿದೆ, ಲೆಕ್ಚರರ್ಮುಂದಿನ ವಾರ ಹೋಗ್ತಿದಾನೆ ಜಾಯಿನ್ ಆಗೋದಿಕ್ಕೆ."
"ಪರವಾಗಿಲ್ಲವೇಅಕ್ಕ ತಮ್ಮ ಇಬ್ರೂ ಅಮ್ಮನ ದಾರೀನೇ ಹಿಡಿದುಬಿಟ್ರಿ."
ಪ್ರತಿಕ್ರಿಯಿಸಲು ತೊಚದೇ ಸುಮ್ಮನೆ ಕುಳಿತೆಅಕ್ಕನೂ ಮೌನವಾಗಿ ರಮೇಶನನ್ನೇ ನೋಡುತ್ತಿದ್ದಳು.  " ದಾರೀನ ನೀನು ಹಿಡೀಬೋದಾಗಿತ್ತಲ್ಲ ರಮೇಶಹಿಡೀತೀಯಾ ಅಂತ ನಾನೆಷ್ಟು ಆಸೆ ಪಟ್ಟಿದ್ದೆ."  ಶ್ರೀನಿವಾಸಯ್ಯನವರ ದನಿ ನರಳಿತು.
"ಬಾಯಿ ಮುಚ್ಚಿಎಲ್ಲಾ ಹಾಳು ಮಾಡಿದ್ದೇ ನೀವು."  ರಮೇಶ ಏಕಾಏಕಿ ಸಿಡಿದಬೆಚ್ಚಿ ಅವನನ್ನೇ ನೋಡುತ್ತಿದ್ದಂತೇ ಅಕ್ಕನತ್ತ ತಿರುಗಿ ತಾರಕ ದನಿಯಲ್ಲಿ ಕೂಗಿದ: "ಹೀಗಾಗಬೇಕು ಅಂತ ನಾನು ಅಂದ್ಕೊಂಡಿದ್ನಾ ಸರಸೀನೆನಪಿದೆಯಾ ನಿಂಗೆನಂಗೆ ಮ್ಯಾಥ್ಸ್ ಒಂಚೂರೂ ಬರ್ತಿರ್ಲಿಲ್ಲಪೊಲಿಟಿಕಲ್ ಸೈನ್ಸ್ ಅಂದ್ರೆ ನಂಗೆ ಪ್ರಾಣಪಿಯುಸಿನಲ್ಲಿ ಆರ್ಟ್ಸ್‍ಗೆ ಸೇರ್ಕೊಂಡೋನನ್ನ ನನ್ನ ಹೆಸರು ಕೆಡಿಸಿಬಿಟ್ಟೆ, ನನ್ನ ಮರ್ಯಾದೆ ತೆಗೆದುಬಿಟ್ಟೆ ಅಂತೆಲ್ಲಾ ಹಂಗಿಸಿ ಬಲವಂತವಾಗಿ ಸೈನ್ಸ್‍ಗೆ ಸೇರಿಸಿದ್ದು ಇವರೇ ಅಲ್ವಾಆಮೇಲೆ ಆದದ್ದೇನುಪಿಯುಸಿ ಫಸ್ಟ್ ಇಯರ‍್‍ನಲ್ಲೇ ವಾಷ್ ಔಟ್ಸಪ್ಲಿಮೆಂಟರೀಲಿ ಹೆಣಗಾಡಿ ಫಿಸಿಕ್ಸ್, ಬಯಾಲಜಿ ಪಾಸು ಮಾಡ್ಕೊಂಡೆನಾ ಅದೆಷ್ಟು ಕಷ್ಟಪಟ್ರೂ ಹಾಳು ಮ್ಯಾಥ್ಸೂ, ಕೆಮಿಸ್ಟ್ರೀ ಪಾಸಾಗ್ಲೇ ಇಲ್ಲಅಲ್ಲಿಗೆ ನನ್ನ ಓದು ನಿಂತೋಯ್ತುಕೊಂದ್ಬಿಟ್ರು ನನ್ನನ್ನ" ಅಂದವನೇ ಧಡಕ್ಕನೆ ಮೇಲೆದ್ದು " ಮನೇಲಿ ಒಂದುಗಳಿಗೇನೂ ನೆಮ್ಮದಿ ಇಲ್ಲ ನಂಗೆ" ಎನ್ನುತ್ತಾ ಕೈಗಳನ್ನು ರಭಸವಾಗಿ ಬೀಸುತ್ತಾ ಬಾಗಿಲಾಚೆ ನಡೆದುಬಿಟ್ಟ.
ಎಲ್ಲವೂ ಕೆಲವೇ ನಿಮಿಷಗಳಲ್ಲಿ ನಾಟಕದಂತೆ ನಡೆದುಹೋಗಿತ್ತುಶ್ರೀನಿವಾಸಯ್ಯನವರು ಕುರ್ಚಿಯಲ್ಲಿ ಮುದುರಿ ಕುಳಿತಿದ್ದರುಮೌನವನ್ನು ಮುರಿಯಲು ನನಗೆ ಭಯವಾಗುತ್ತಿತ್ತುಕಿಟಕಿಯಾಚೆ "ಹಳೇ ಪೇಪರ್, ಖಾಲಿ ಸೀಸಾ" ಎಂಬ ಕರ್ಕಶ ಕೂಗು.
ಕೊನೆಗೆ ಶ್ರೀನಿವಾಸಯ್ಯನವರೇ ಮಾತಾಡಿದರು: "ಅವನ ಜಾತಕವೇ ಸರಿಯಿಲ್ಲಪಿಯುಸಿ ಫೇಲಾದ ಮೇಲೆ ಇಲ್ಲೇ ನನ್ನ ಪರಿಚಯದೋರನ್ನ ಹಿಡಿದು ಕಕೂನ್ ಮಾರ್ಕೆಟ್‍ನಲ್ಲಿ ಕೆಲಸಕ್ಕೆ ಸೇರಿಸಿದೆಐದಾರು ವರ್ಷ ನೆಮ್ಮದಿಯಾಗೇ ಇತ್ತುಅದನ್ನ ಬಿಟ್ಟು ಯಾರದೋ ಮಾತು ಕೇಳಿ ಸ್ಟೇಷನರಿ ಅಂಗಡಿ ಇಡ್ತೀನಿ ಅಂದರೈಟೋ ಅಂದೆಐವತ್ತು ಸಾವಿರ ಹೊಂದಿಸಿ ಕೊಟ್ಟೆಅದೂ ನಾಕು ದಿನ ಚೆನ್ನಾಗಿ ನಡೀತುಅಷ್ಟೊತ್ತಿಗೆ ಮದುವೆ ಮಾಡ್ದೆಅವಳು ಬಂದ ಮೇಲೇ ಎಲ್ಲಾ ಹಾಳಾದದ್ದುಅವಳಿಗೆ ಹೋಟೆಲ್ ಷೋಕಿಸಾಯಂಕಾಲ ಆದ್ರೆ ಸಾಕು ಹೋಟೆಲಿಗೆ ಕರಕೊಂಡು ಹೋಗು ಅಂತ ಹಿಡಕೋತಾ ಇದ್ಲುಇವನು ಒಂದುಗಂಟೆ ಒಂದೂವರೆ ಗಂಟೆ ಅಂಗಡಿ ಬಿಟ್ಟು ಅದೂ ಚೆನ್ನಾಗಿ ವ್ಯಾಪಾರ ಆಗೋ ಸಂಜೆ ಹೊತ್ನಲ್ಲಿ ಅವಳನ್ನ ಕರಕಂಡು ಹೋಗಿ ತಿನ್ನಿಸ್ಕೊಂಡು, ಸುತ್ತಾಡಿಸ್ಕೊಂಡು ಬರ್ತಿದ್ದದಿನಾ ಇದೇ ಕಥೆಅಂಗಡಿ ಮುಚ್ಚಬೇಡವೋ, ನಾನಾದ್ರೂ ನೋಡ್ಕೋತೀನಿ ಅಂದ್ರೆ ಅದೇನು ಕಾರಣವೋ ಕೈಯಾಡಿಸಿಬಿಟ್ಟು ನಡೆದುಬಿಡ್ತಿದ್ರುಆರು ತಿಂಗಳಲ್ಲಿ ಅಂಗಡಿ ಮುಚ್ಚಿಬಿಟ್ಟಬರಿಕೈಯಾಗಿ ನಿಂತಹೆತ್ತ ಕರುಳು, ಸಂಕಟ ತಡೀಲಾರದೇ ಅಂಗಡಿ ಮುಂದುವರಿಸಪ್ಪಾ ಅಂತ ಮೂವತ್ತು ಸಾವಿರ ಹೊಂದಿಸಿಕೊಟ್ಟೆ."  ಗಕ್ಕನೆ ನಿಲ್ಲಿಸಿದರುಒಮ್ಮೆ ಜೋರಾಗಿ "ಹ್ಞುಂ" ಎಂದು ಹೋಂಕರಿಸಿ " ದುಡ್ಡಿಗೆ ಅವನ ಹೆಂಡತಿ ಚಿನ್ನ ಮಾಡಿಸಿಕೊಂಡ್ಳುಅದನ್ನೂ ಎತ್ಕೊಂಡು ತವರುಮನೆಗೆ ನಡೆದುಬಿಟ್ಲುಅದಾಗಿ ಮೊನ್ನೆ ಉಗಾದಿಗೆ ಎರಡುವರ್ಷಅದೇ ಗಳಿಗೆಗೆ ನನ್ ಹೆಂಡ್ತಿಗೆ ಹಾಳು ಕ್ಯಾನ್ಸರ್ ಅಂತ ಗೊತ್ತಾಯ್ತು.   ಆಸ್ಪತ್ರೆ, ಆಸ್ಪತ್ರೆ ಅಂತ ಓಡಾಡೋದ್ರಲ್ಲಿ ಇವನನ್ನ ಮರೆತೇಬಿಟ್ಟೆಹೆಂಡ್ತಿ ಕಣ್ಣುಮುಚ್ಚಿದ ಮೇಲಷ್ಟೇ ಇವನ ಕಡೆ ಗಮನ ತಿರುಗಿದ್ದುಅಷ್ಟೊತ್ತಿಗೆ ಇವನು ಬೀದೀಲಿ ನಿಂತಿದ್ದವಾರಗಟ್ಟಲೆ ಮನೇಗೇ ಬರ್ತಿರ್ಲಿಲ್ಲ."  ಏರಿಳಿತವಿಲ್ಲದ ದನಿಯಲ್ಲಿ ನಿರ್ವಿಕಾರವಾಗಿ ಹೇಳಿದರು, ಹಾಗೆ ಹೇಳುವುದು ಬದುಕಿನ ಒಂದು ಸಹಜ ಭಾಗವೆಂಬಂತೆಅರೆಕ್ಷಣದಲ್ಲಿ ಬೇರಾರದೋ ದನಿಯಲ್ಲಿ ಹೇಳುವಂತೆ ಸಣ್ಣಗೆ ಆರಂಭಿಸಿದರು: "ಇವನ ಗ್ರಹಬಲವೇ ಚೆನ್ನಾಗಿಲ್ಲಶಾಂತಿ ಮಾಡ್ತೀನಿ, ನಂತಾವ ಕಳಿಸಿ, ಯಂತ್ರ ಮಾಡಿ ಕೊಡ್ತೀನಿ" ಅಂತ ನಾಗರಾಜ ಶಾಸ್ತ್ರಿಗಳು ಸಿಕ್ಕಿದಾಗಲ್ಲೆಲ್ಲಾ ಹೇಳ್ತಾರೆಎಷ್ಟು ಹೇಳಿದ್ರೂ ಇವನು ಅತ್ತ ಹೋಗೋದಿಲ್ಲ."  ದನಿ ನಿಧಾನವಾಗಿ ಒಣಗಿ ಉದುರಿಹೋಯಿತುನಾವಿಬ್ಬರೂ ಮೌನವಾಗಿದ್ದೆವುಏನು ಹೇಳಬೇಕೆಂದು ಹೊಳೆಯದ ನಿಸ್ಸಹಾಯಕತೆಸಂದರ್ಭಕ್ಕೆ ಇನಿತೂ ಹೊಂದದ ಸಹಜ ದನಿಯಲ್ಲಿ ಅವರ ಮಾತು ಮತ್ತೆ ಆರಂಭವಾಯಿತು.
"ಇವನಿಗೆ ನಾನು ಮಾಡಬೇಕಾದ್ದೆಲ್ಲಾ ಮಾಡಿದ್ದೇನೆಇನ್ನು ನನ್ನ ಕೈಯಿಂದ ಆಗಲ್ಲಸುರೇಶ ನನ್ನನ್ನ ಮರೆತಿದ್ದಾನೆಹಾಗೆ ಮಾಡೋದರ ಮೂಲಕ ನೀವೂ ನನ್ನನ್ನ ಮರೆತುಬಿಡಿ ಅಂತ ಅವನು ನಂಗೆ ಹೇಳ್ತಾ ಇದಾನೆಸಧ್ಯಕ್ಕೆ ನನ್ನನ್ನ ನಂಬಿರೋದು, ನಾನು ನಂಬಿರೋದು ಶಾಲಿನಿಅವಳಿಗೆ ಅಂತ ಏನನ್ನೂ ಮಾಡಿಲ್ಲ ನಾನುಈಗ ನನ್ನ ಕೈಯಲ್ಲಿ ಏನು ಉಳಿದಿದೆಯೋ ಅದನ್ನ ಅವಳ ಕೈಗೆ ಹಾಕಿಬಿಡ್ತೀನಿನಿಮ್ಮ ಮನೇನ ಕೊಂಡುಕೋಳ್ತಾ ಇರೋದೂ ಅವಳಿಗೇನೆಮನೆ ರಿಜಿಸ್ಟರ್ ಆಗೋದೂ ಅವಳ ಹೆಸರಿಗೇಆವತ್ತು ಒಂದುಲಕ್ಷ ಈಗ ಕೊಡ್ತೀನಿ, ಇನ್ನೊಂದನ್ನ ಕಂತಿನಲ್ಲಿ ಕೊಡ್ತೀನಿ ಅಂತ ಹೇಳ್ದೆ ನೆನಪಿದೆಯಾ ಒಂದುಲಕ್ಷಕ್ಕೆ ಹೇಗೋ ಇನ್ನೂ ಐವತ್ತು ಹೊಂದಿಸಿದ್ದೀನಿಭೋಗ್ಯಕ್ಕಿದ್ದವರಿಗೆ ಅವರ ಅರವತ್ತು ಸಾವಿರವನ್ನ ಕೊಟ್ಟಿದ್ದೀನಿತೊಂಬತ್ತು ಸಾವಿರ ಈಗ ತಗೋಳ್ಳಿಇನ್ನುಳಿದ ಐವತ್ತನ್ನ ತಿಂಗಳಿಗೆ ಇಷ್ಟು ಅಂತ ಒಂದು ವರ್ಷದಲ್ಲಿ ಕೊಟ್ಟು ತೀರಿಸಿಬಿಡ್ತೀನಿಒಂದುವೇಳೆ ಅದು ತೀರೋ ಮೊದ್ಲೇ ನಾನೇ ತೀರಿಹೋದ್ರೆ ಶಾಲಿನಿ ಕೊಡ್ತಾಳೆ."  ಥಟಕ್ಕನೆ ಮಾತು ನಿಲ್ಲಿಸಿದರುಫಕ್ಕನೆ ಒಮ್ಮೆ ಉಸಿರೆಳೆದುಕೊಂಡು ನಮ್ಮ ಮುಖಗಳಲ್ಲಿ ಮೂಡಿರಬಹುದಾದ ಭಾವನೆಗಳನ್ನು ನಿರ್ಲಕ್ಷಿಸಿ ಮತ್ತೆ ಆರಂಭಿಸಿದರು: "ಈವತ್ತು ಅವಳು ಮನೇಲೇ ಇರಬೇಕಾಗಿತ್ತುಒಳ್ಳೆದಿನ, ರಿಜಿಸ್ಟ್ರೇಶನ್ ಮಾಡಿಸಿಬಿಡೋಣ ಅಂತ ರಜಾ ಹಾಕಿದ್ಲುಆದ್ರೆ ಅವರ ಹೆಡ್ ಮಿಸ್ಟ್ರೆಸ್ಸು ಏನೋ ಒಂದು ಕೆಲಸ ಹಚ್ಚಿ ರಜಾ ಕ್ಯಾನ್ಸಲ್ ಮಾಡಿಬಿಟ್ರುವಿಧಿಯಿಲ್ಲದೇ ಹೋದ್ಲುಕೆಲಸ ಏನಿದ್ರೂ ಮುಗಿಸಿ ಅರ್ಧದಿನದ ರಜೇನಾದ್ರೂ ತಗೊಂಡು ಮಧ್ಯಾಹ್ನಕ್ಕೆಲ್ಲಾ ಬಂದುಬಿಡ್ತೀನಿ ಅಂತ ಹೇಳಿಹೋಗಿದ್ದಾಳೆಬಂದ ಕೂಡ್ಲೆ ಹೊರಟುಬಿಡೋಣಸಬ್ ರಿಜಿಸ್ಟಾರ್ ಆಫೀಸು ಐದುಗಂಟೆವರೆಗೂ ತೆರೆದಿರುತ್ತೆಐದು ಹತ್ತು ನಿಮಿಷ ಹೆಚ್ಚುಕಮ್ಮಿ ಆದ್ರೂ ಏನೂ ತೊಂದರೆ ಇಲ್ಲಅಲ್ಲಿರೋರೆಲ್ಲಾ ನನ್ನ ಪರಿಚಯದೋರೇಕಾಗದ ಪತ್ರ ಎಲ್ಲಾ ರೆಡಿ ಮಾಡಿಸಿಟ್ಟಿದ್ದೀನಿಸರಕಾರೀ ರೇಟು ಎಂಬತ್ತು ಸಾವಿರಅದಕ್ಕೆ ತಕ್ಕ ಹಾಗೇ ಛಾಪಾ ಕಾಗದ ತೆಗೆದಿದ್ದೀನಿನಾಳೆ ಎಲ್ಲ ಆಗಿಬಿಟ್ರೆ ನೆಮ್ಮದಿನಾಳೇನೇ ಒಳ್ಳೇ ಹೊತ್ನಲ್ಲಿ ಹಾಲು ಕಾಯಿಸಿಬಿಟ್ರೆ ಸಾಕುಗೃಹಪ್ರವೇಶ ಅಂತ ದೊಡ್ಡದಾಗಿ ಖರ್ಚು ಮಾಡೋದಿಕ್ಕೆ ನನ್ನ ಕೈಲಾಗೋದಿಲ್ಲಶನಿವಾರ ಶಿಫ್ಟ್ ಮಾಡಿಬಿಡಬೇಕು ಅನ್ನೋ ಯೋಚನೆ ನಂದುಭಾನುವಾರ ಸಾಯಂಕಾಲದೊಳಗೆ ಮನೇ ಖಾಲಿ ಮಾಡಿ ಬೀಗದ ಕೈ ಕೊಟ್ಟುಬಿಡ್ತೀನಿ ಅಂತ ಓನರ‍್‍ಗೆ ಮಾತು ಕೊಟ್ಟಿದ್ದೀನಿ."  ಮಾತು ಮುಗಿಸಿ ತಲೆಯೆತ್ತಿ ಗೋಡೆಯ ಮೇಲಿದ್ದ ಗಡಿಯಾರದತ್ತ ಕಣ್ಣಾಡಿಸಿದರು.  "ಹ್ಞೂಹನ್ನೆರಡಾಯ್ತುಶಾಲೂ ಬರೋ ಹೊತ್ತಿಗೆ ಮೂರು ಗಂಟೆಯಾದ್ರೂ ಆಗುತ್ತೆಬರೀ ನನ್ನ ಮಾತನ್ನೇ ಕೇಳ್ತಾ ಕೂರೋದು ನಿಮಗೆ ಬೇಸರವಾಗಬೋದುಒಂದು ಸುತ್ತು ನಿಮ್ಮನೆ ಕಡೆ ಹೋಗಿದ್ದು ಬರೋಣವಾ?"
"ಹ್ಞೂ, ಹೋಗಿದ್ದು ಬರೋಣ."  ಮೆಲ್ಲನೆ ಹೇಳಿ ಎದ್ದು ನಿಂತಳು ಅಕ್ಕನಾನು ನಿರಾಳವಾಗಿ ಉಸಿರಾಡಿದೆ.  "ಒಂದು ನಿಮಿಷ ಇರಮ್ಮ" ಎಂದು ಅಕ್ಕನಿಗೆ ಹೇಳಿ ಒಳಕೋಣೆಯತ್ತ ಹೋದವರು ಶರ್ಟ್ ಬದಲಾಯಿಸಿಕೊಂಡು ಬಂದರುಕೊಳಕು ಗೋಣಿದಾರದಲ್ಲಿ ಕಟ್ಟಿದ್ದ ಎರಡು ಹಳೆಯ ಬೀಗದ ಕೈಗಳನ್ನು ಅಕ್ಕನ ಮುಂದೆ ಹಿಡಿದರು.  "ಇದು ನಿನ್ನದು. ತಗೋಮ್ಮ."
ಅಕ್ಕ ಹಿಂಜರಿದಳು.  "ನಿಮ್ಮಲ್ಲೇ ಇರಲಿನಿಮಗೇ ಸೇರಬೇಕಾದ್ದು ಅದು."
"ಇಲ್ಲಮ್ಮ ಸರಸೂನನಗೆ ಸೇರಬೇಕಾದ್ದಲ್ಲಇದು ನಿನ್ನದುನಿನ್ನಲ್ಲೇ ಇರಲಿರಿಜಿಸ್ಟ್ರೇಶನ್ ಆದಮೇಲೆ, ಶಾಲೂ ತನ್ನ ಕೈಯಾರೆ ನಿನಗೆ ಹಣ ಕೊಟ್ಟ ಮೇಲೆ ಅವಳ ಕೈ ಮೇಲೆ ಇದನ್ನ ಹಾಕಿಬಿಡು."  ದನಿಯಲ್ಲಿ ಅವಾಕ್ಕಾಗಿಸುವಂತಹ ಸ್ಪಷ್ಟತೆ.
ಅಕ್ಕ ಮರುಮಾತಾಡದೆ ಅದನ್ನು ತೆಗೆದುಕೊಂಡಳುಹೊರಗೆ ಸಣ್ಣನೆಯ ಗುಡುಗುಮೂವರೂ ಕಿಟಕಿಯತ್ತ ನೋಡಿದೆವುಆಕಾಶ ಕಪ್ಪುಗಟ್ಟಿ ಇನ್ನೇನು ಮಳೆ ಆರಂಭವಾಗುವಂತಿತ್ತು.  "ಶುಭಸೂಚನೆ!"  ಶ್ರೀನಿವಾಸಯ್ಯನವರು ಉದ್ಗರಿಸಿ ಗೂಟದಲ್ಲಿ ನೇತಾಡುತ್ತಿದ್ದ ಹಳೆಯ ಉದ್ದನೆಯ ಕೊಡೆಯೊಂದನ್ನು ಕೈಗೆ ತೆಗೆದುಕೊಂಡರು.  "ನಿಮ್ಮ ಮನೆಯ ದಾರಿ ನಿಮಗೆ ಗೊತ್ತೋ ಅಥವಾ ನಾನು ತೋರಿಸಬೇಕೋ?"  ಕೀಟಲೆಯ ನಗೆಯೊಂದಿಗೆ ಪ್ರಶ್ನೆ ತೂರಿದರುನಾನು ಪೆಚ್ಚಾಗಿ ನಕ್ಕರೆ ಅಕ್ಕ ಬೆರಳಿನಿಂದ ಗಲ್ಲಕ್ಕೆ ಬಡಿದುಕೊಂಡಳು.  "ಬನ್ನಿ, ನಾನು ತೋರಿಸ್ತೇನೆ, ನಿಮ್ಮನೇ ದಾರೀನ" ಎನ್ನುತ್ತಾ ಶ್ರೀನಿವಾಸಯ್ಯನವರು ಹೊರಗೆ ಕಾಲಿಟ್ಟರು.
ನಾಲ್ಕು ಹೆಜ್ಜೆ ಇಡುತ್ತಿದ್ದಂತೇ ಮಳೆ ಜೋರಾಯಿತುಶ್ರೀನಿವಾಸಯ್ಯನವರು ಕೊಡೆಯನ್ನು ಬಿಡಿಸಿ ನಮ್ಮಿಬ್ಬರ ತಲೆ ಮೇಲೆ ಹಿಡಿದರುಅವರ ತಲೆ ಮೇಲೆ ಮಳೆ ನಿರ್ದಯವಾಗಿ ಬಾರಿಸತೊಡಗಿತು.
"ಬೇಡ, ನೀವೇ ಹಿಡ್ಕೊಳ್ಳಿ."  ಕೊಡೆಯನ್ನು ಅವರತ್ತ ತಳ್ಳಿದೆ.  "ವಾಪಸ್ ಹೋಗೋಣ."  ಹೇಳಿ ಹಿಂದಕ್ಕೆ ತಿರುಗಿ ಓಡಿದೆಮಾತಿಲ್ಲದೇ ಅಕ್ಕ ನನ್ನನ್ನು ಹಿಂಬಾಲಿಸಿದಳುಶ್ರೀನಿವಾಸಯ್ಯನವರು ಒಂದೊಂದೇ ಹೆಜ್ಜೆ ಇಡುತ್ತಾ ಬಂದರುಕೊಡೆ ಅತ್ತಿತ್ತ ಓಲಾಡುತ್ತಿತ್ತು.
"ಭೋಗ್ಯಕ್ಕಿದ್ದವರು ಖಾಲಿ ಮಾಡಿದ ದಿನವೇ ಮನೇನ ಕ್ಲೀನ್ ಮಾಡ್ಸಿ ಸುಣ್ಣ ಬಣ್ಣ ಹೊಡೆಸಿಬಿಟ್ಟೆನೀವು ಒಂದ್ಸಲ ನೋಡಿದ್ರೆ ಚೆನ್ನಾಗಿತ್ತು."  ತಮ್ಮಷ್ಟಕ್ಕೇ ಹೇಳಿಕೊಳ್ಳುತ್ತಾ ಶ್ರೀನಿವಾಸಯ್ಯನವರು ಬೀಗದ ಕೈಯನ್ನು ನನ್ನ ಕೈಯಲ್ಲಿಟ್ಟು ಗಾಳಿಗೆ ಓಲಾಡಿದ ಕೊಡೆಯನ್ನು ಪ್ರಯಾಸದಿಂದ ಮಡಿಸತೊಡಗಿದರುಗುಡುಗಿನ ಜತೆ ಮಳೆ ಅಧಿಕವಾಯಿತುಆತುರಾತುರವಾಗಿ ಬೀಗ ತೆರೆದೆ.
ಮೂವರೂ ಮಾತಿಲ್ಲದೇ ಕುಳಿತೆವುಅರ್ಧಗಂಟೆಯಾದರೂ ಮಳೆ ನಿಲ್ಲಲಿಲ್ಲಎರಡು ಸಲ ನಿಲ್ಲುವಂತೆ ಕಂಡು ಮತ್ತೆ ಜೋರಾಯಿತುಎದ್ದು ಕಿಟಕಿಯ ಬಳಿ ಹೋಗಿ ಮಳೆಯನ್ನು ನೋಡುತ್ತಾ ನಿಂತೆಮನೆಯ ಮುಂದಿನ ರಸ್ತೆಯಲ್ಲಿ ಕೆನ್ನೀರಿನ ಕಾಲುವೆಯೊಂದು ಕಸಕಡ್ಡಿಗಳನ್ನು ಹೊತ್ತುಕೊಂಡು ಹರಿಯುತ್ತಿತ್ತು.

*     *     *

ಮಳೆ ಪೂರ್ಣವಾಗಿ ನಿಲ್ಲುವ ಹೊತ್ತಿಗೆ ಮೂರು ಗಂಟೆಯಾಗಿತ್ತುಶಾಲಿನಿ ತೋಯ್ದು ತೊಪ್ಪೆಯಾಗಿ ಮನೆಗೆ ಬಂದಾಗ ಐದೂವರೆರಿಜಿಸ್ಟ್ರೇಶನ್ ಕೆಲಸವನ್ನು ನಾಳೆಗೆ ಮುಂದೂಡಿದೆವುನಾಳೆ ಇಡೀ ದಿನಕ್ಕೆ ತನಗೆ ರಜಾ ಸ್ಯಾಂಕ್ಷನ್ ಆಗಿದೆ ಎಂದು ಶಾಲಿನಿ ಉತ್ಸಾಹದಿಂದ ಘೋಷಿಸಿದಳುಇರಲಿ ಎಂದು ಅಕ್ಕ ಶುಕ್ರವಾರಕ್ಕೂ ರಜೆ ಹಾಕಿಯೇ ಬಂದಿದ್ದರಿಂದ ನಮಗೂ ತೊಂದರೆಯೇನೂ ಆಗುತ್ತಿರಲಿಲ್ಲ.
ಶಾಲಿನಿ ಬಂದವಳೇ ಒದ್ದೆ ಬಟ್ಟೆಯಲ್ಲೇ ಅಕ್ಕನನ್ನು ತಬ್ಬಿಕೊಂಡಳುನನ್ನತ್ತ ನೋಡಿ "ಹೇಗಿದ್ದೀಯೋ ಗುಂಡಣ್ಣ?" ಅಂದಳು ಉತ್ಸಾಹದಿಂದ.
ನನಗಿಂತ ಮೂರು ವರ್ಷಗಳಿಗೆ ಚಿಕ್ಕವಳುಕೆನ್ನೆಗಳು ತುಸು ಒಳಗಿಳಿದಿದ್ದವುಕಣ್ಣುಗಳ ಸುತ್ತ ಮಸುಕುಮಸುಕು ಕಪ್ಪು ಗೆರೆಗಳುತುಟಿಗಳು ಬಿಳಿಚಿಕೊಂಡಿದ್ದವುಗೋಧಿಬಣ್ಣದ ತೆಳ್ಳನೆಯ ಎತ್ತರದ ದೇಹಕ್ಕೆ ಚಂದದ ಸೀರೆ, ಚಪ್ಪಟೆ ಎದೆಯನ್ನು ಮುಚ್ಚಿದ್ದ ಆಕರ್ಷಕ ಡಿಸೈನ್‍ನ ಎಂಬ್ರಾಯ್ಡರಿ ರವಿಕೆ, ಕಿವಿಯಲ್ಲಿ ಹೊಸದರಂತೆ ಹೊಳೆಯುತ್ತಿದ್ದ ರಿಂಗುಗಳುಇವೆಲ್ಲಕ್ಕೂ ಮಿಗಿಲಾಗಿ ಮುಖದ ತುಂಬಾ ಆಕರ್ಷಕ ಮುಗುಳ್ನಗುಚಂಡಮಾರುತಕ್ಕೆ ಸಿಕ್ಕಿ ನಲುಗಿದ ಮರ ನಿಧಾನವಾಗಿ ಹಚ್ಚಗೆ ಚಿಗುರೊಡೆಯುತ್ತಿತ್ತು.
ಶಾಲಿನಿ ಅಕ್ಕನೊಂದಿಗೆ ಗಲಗಲ ಮಾತಾಡುತ್ತಿದ್ದಳುಮನೆಯೊಳಗೆ ಬೆಳಗಿನಿಂದ ನರಳಾಡುತ್ತಾ ತೆವಳುತ್ತಿದ್ದ ಕಾಲ ರೆಕ್ಕೆ ಬಿಚ್ಚಿ ಹಾರತೊಡಗಿತು.
ಮಳೆಗೆ ಒಳ್ಳೇ ಜೋಡಿ ಎಂದು ಹೇಳಿ ಶಾಲಿನಿ ಗರಿಗರಿ ಮೆಣಸಿನಕಾಯಿ ಬಜ್ಜಿ ಕರಿದಳುಅಕ್ಕ ಕಾಫಿ ಮಾಡಿದಳುರಾತ್ರಿಯ ಅಡಿಗೆಗೂ ಇಬ್ಬರ ಕೈ ಸೇರಿತು.
ಊಟಕ್ಕೆ ಕೂರುವ ಹೊತ್ತಿಗೆ ರಮೇಶ ಬಂದಶೇವ್, ಸ್ನಾನ ಮಾಡಿ ಬಟ್ಟೆ ಬದಲಿಸಿದ್ದಇದೆಲ್ಲವನ್ನೂ ಅದೆಲ್ಲಿ ಮಾಡಿಕೊಂಡ ಎಂದು ನಾನು ಅಚ್ಚರಿ ಪಡುತ್ತಿದ್ದಂತೆ ನನ್ನ ಬಳಿ ಬಂದು ಕೂತ.  "ನಿಮ್ಮನೇನ ಅಪ್ಪ ಕೊಂಡ್ಕೋತಾ ಇದಾರಂತೆ?"  ಪಿಸುದನಿಯಲ್ಲಿ ಪ್ರಶ್ನಿಸಿದಅಕ್ಕ, ಶಾಲಿನಿ ಅಡಿಗೆ ಮನೆಯಲ್ಲಿದ್ದರುಶ್ರೀನಿವಾಸಯ್ಯನವರು ಬಚ್ಚಲಿಗೆ ಹೋಗಿದ್ದರು.
ನಾನು ಉತ್ತರಿಸಲಿಲ್ಲಅವನೇ ಮಾತಾಡಿದ: "ಇವರಿಬ್ರೂ ನಂಗೆ ಹೇಳ್ಲೇ ಇಲ್ಲಸಾಯಂಕಾಲ ಮೂರನೇಯೋರಿಂದ ಗೊತ್ತಾಯ್ತುನಾನು ಮನೆ ಹಿರೀಮಗನೋಡೋ, ನನಗೆ ಸಿಗ್ತಾ ಇರೋ ಮರ್ಯಾದೇನ!"  ಲೊಚಗುಟ್ಟಿದಬಚ್ಚಲಮನೆಯ ಕಡೆಯಿಂದ ಬಂದ ಶ್ರೀನಿವಾಸಯ್ಯನವರ ಕಡೆ ನೋಡಿ ಮುಗುಳ್ನಕ್ಕಅಡಿಗೆಮನೆಯಿಂದ ಹೊರಬಂದ ಅಕ್ಕನತ್ತ ತಿರುಗಿ "ನಿನ್ನ ಕೈಚಳಕವೇನೇ ಸರಸೀಬೀದಿವರೆಗೂ ಗಮಗಮಾ ಅಂತಿದೆ" ಅಂದತಾನಾಗಿಯೇ ಕೈ ತೊಳೆದುಕೊಂಡು ಊಟಕ್ಕೆ ಕೂತ.
ಶಾಲಿನಿಯ, ಶ್ರೀನಿವಾಸಯ್ಯನವರ ಅಕ್ಕರೆಯ ಒತ್ತಾಯಗಳ ನಡುವೆ ಊಟ ಸಾಗಿತುಶಾಲಿನಿಯ ಕೈನ ಸಾರು, ತಿಳಿಸಾರುಗಳೆರಡೂ ಸೊಗಸಾಗಿದ್ದವು, ಅವರಮ್ಮ ಮಾಡುತ್ತಿದ್ದ ಹಾಗೇನಾನು ಮಾತಿಲ್ಲದೇ ಮತ್ತೊಮ್ಮೆ ಬಡಿಸಿಕೊಂಡರೆ ಅಕ್ಕ ಬಾಯಿ ತೆರೆದೇ ಹೊಗಳಿದಳು.  "ಹ್ಞುಂ!" ಎಂಬ ಉದ್ಗಾರ ಕೇಳಿ ತಲೆಯೆತ್ತಿದೆಶ್ರೀನಿವಾಸಯ್ಯನವರು ಅಕ್ಕನ ಕಡೆ ದೈನ್ಯವಾಗಿ ನೋಡುತ್ತಿದ್ದರು.  "ಏನೋ ಒಂದು ಹಳೇ ಮಾತು ನೆನಪಾಗಿಬಿಟ್ಟಿತುಹೊಟ್ಟೆಲೇ ಇಟ್ಕೊಳ್ಳೋಕೆ ಆಗ್ತಾ ಇಲ್ಲಹೇಳಿಯೇಬಿಡ್ತೀನಿ" ಎನ್ನುತ್ತಾ ಎಡಕ್ಕೆ ಹೊರಳಿ ಗೋಡೆಯ ಮೇಲಿದ್ದ ಲಕ್ಷ್ಮಿ, ಸರಸ್ವತಿ, ಗಣೇಶರ ದೊಡ್ಡ ಪಟದತ್ತ ನೋಡುತ್ತಾ ದನಿಯನ್ನು ಎಳೆಯತೊಡಗಿದರು: "ನೀವೆಲ್ಲಾ ಕೊಳ್ಳೇಗಾಲ ಬಿಟ್ಟು ಹೋಗೋವಾಗ ನನ್ನ ಹೆಂಡತಿ ನಿಮ್ಮಮ್ಮನಿಗೆ ಒಂದು ಮಾತು ಹೇಳಿದ್ಲು- ದೂರ ಹೋದ್ರಿ ಅಂತ ನಮ್ಮನ್ನ ಮರೆತುಬಿಡಬೇಡಿನಿಮ್ಮ ಮಗನಿಗೆ ಹೆಣ್ಣು ಹುಡುಕೋ ಕಾಲ ಬಂದಾಗ ಮೊದಲು ನಮ್ಮನೇಗೆ ಬನ್ನಿ ಅಂತದೇವರಿಚ್ಛೆ ಇದ್ರೆ ಹಾಗೆ ನಡೆಯುತ್ತೆ ಬಿಡಿ ಅಂದ್ರು ನಿಮ್ಮಮ್ಮ."
"ಅಬ್ಬಅದೆಷ್ಟೋ ದಿನಗಳಾದ ಮೇಲೆ ನೆಮ್ಮದಿಯಾಗಿ ಊಟ ಮಾಡಿದೆ ಮನೇಲಿ." ರಮೇಶ ಗಟ್ಟಿಯಾಗಿ ತೇಗಿದತಲೆಯೆತ್ತಿದರೆ ಶಾಲಿನಿ, ಅಕ್ಕ ಇಬ್ಬರೂ ಇರಲಿಲ್ಲಕೈಲಿದ್ದ ಕೊನೇ ತುತ್ತನ್ನು ತಟ್ಟೆಗೇ ಹಾಕಿದೆ.
ಊಟವಾದದ್ದೇ ರಮೇಶ ತನ್ನ ಕೋಣೆ ಸೇರಿಕೊಂಡಮತ್ತೊಂದು ಕೋಣೆಯಲ್ಲಿ ಅಕ್ಕ, ಶಾಲಿನಿಶ್ರೀನಿವಾಸಯ್ಯನವರೇ ತಮಗೂ ನನಗೂ ಹಜಾರದಲ್ಲಿ ಮಂದಲಿಗೆಗಳನ್ನು ಹಾಸಿದರುಮನೆ ಮೌನವಾಯಿತು.
ನನಗೆ ನಿದ್ದೆ ಬರಲಿಲ್ಲಎದೆಯಲ್ಲೇನೋ ಹಿಂಡಿದಂತಾಗುತ್ತಿತ್ತುಅದೆಷ್ಟೋ ಹೊತ್ತಿನ ನಂತರ ಹೊರಗೆ ಸಣ್ಣಗೆ ಮಳೆ ಆರಂಭವಾದಾಗ ಜೋಗುಳ ಹಾಡಿದಂತಾಗಿ ನಿದ್ದೆ ಹತ್ತಿತು.
ರಾತ್ರಿ ಒಂದು ಹೊತ್ತಿನಲ್ಲಿ ಗಕ್ಕನೆ ಎಚ್ಚರವಾಯಿತುಮಳೆ ಜೋಗುಳ ನಿಲ್ಲಿಸಿ ಸಣ್ಣಗೆ ಅಳತೊಡಗಿತ್ತುನಿಮಿಷದ ನಂತರ ಯಾರೋ ಹತ್ತಿರದಲ್ಲೇ ಅಳುತ್ತಿದ್ದಾರೆ ಅನಿಸಿ ಮಂಪರು ಹಾರಿಹೋಯಿತುಪಕ್ಕದ ಕೋಣೆಯಲ್ಲಿ ಶಾಲಿನಿಯ ಅಳು, ಅಳುಕು ಬಿಕ್ಕುಗಳು, ಅಕ್ಕನ ಪಿಸುದನಿಯ ಸಮಾಧಾನದ ಮಾತುಗಳು ಸ್ಪಷ್ಟವಾಗಿ ಕಿವಿಗೆ ಬಿದ್ದವುನನಗೆ ಮತ್ತೆ ನಿದ್ದೆ ಹತ್ತಲಿಲ್ಲಮತ್ತೆ ಮಳೆ ಆರಂಭವಾಯಿತು.
ಇದ್ದಕ್ಕಿದ್ದಂತೆ ಮೂಗಿಗೆ ಪರಿಮಳ ಸೂಸಿದಂತಾಗಿ ಕಣ್ಣುಬಿಟ್ಟೆಹತ್ತಿರದಲ್ಲೇ ಕತ್ತಲಲ್ಲಿ ಯಾರೋ ನಡೆದಾಡುತ್ತಿದ್ದರು.  "ಎಚ್ಚರವಾಗಿಬಿಟ್ಟಿತಾ?"  ಪಿಸುದನಿಯ ಪ್ರಶ್ನೆ ಬಂತು.  "ನಿದ್ದೆ ಬರಲಿಲ್ವಾ ರಮೇಶಣ್ಣ?"  ಪ್ರಶ್ನಿಸಿದೆ.  "ಬೆಳಗಾಗ್ತಿದೆಯಲ್ಲೋಇನ್ಯಾವ ನಿದ್ದೆನಂದು ಸ್ನಾನ ಗೀನ ಎಲ್ಲಾ ಆಯ್ತುಮಳವಳ್ಳಿಗೆ ಹೊರಟಿದ್ದೀನಿಕೆಲಸ ಇದೆಎದ್ದು ಬಾಗಿಲು ಹಾಕ್ಕೋ."  ಬಾಗಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದ.
"ದೀಪ ಹಾಕು ರಮೇಶಣ್ಣಬಾಗಿಲೆಲ್ಲಿ ಅಂತ ಕಾಣ್ತಾನೇ ಇಲ್ಲ" ಅಂದೆ.  "ಏಯ್, ಸುಮ್ಮನಿರೋದೀಪ ಹಾಕಿ ಎಲ್ಲರನ್ನೂ ಎಬ್ಬಿಸಬೇಡಪಾಪ, ನಿದ್ದೆ ಮಾಡಲಿ" ಎನ್ನುತ್ತಾ ತಾನೇ ಬಾಗಿಲು ತೆರೆದಎದ್ದು ಅತ್ತ ಹೋದೆಸೊಗಸುಗಾರ ಪುಟ್ಟಸ್ವಾಮಿಯಂತೆ ಡ್ರೆಸ್ ಮಾಡಿಕೊಂಡು ಮೈಗೆಲ್ಲಾ ಸೆಂಟ್ ಪೂಸಿಕೊಂಡಿದ್ದ ಅವನು ಆತುರಾತುರವಾಗಿ ಷೂ ಲೇಸ್ ಕಟ್ಟಿ ಛತ್ರಿ ಬಿಡಿಸಿ ಮೆಟ್ಟಲಿಳಿದ.
ಬಾಗಿಲು ಮುಚ್ಚಿ ಬಂದು ಮಂದಲಿಗೆಯ ಮೇಲೆ ಅಂಗಾತ ಮಲಗಿ ಕತ್ತಲು ಯಾವಾಗ ಕರಗುತ್ತದೆಂದು ಕಿಟಕಿಯತ್ತಲೇ ನೋಡತೊಡಗಿದೆಬೆಳಗಾಗತೊಡಗಿದಂತೆ ಮಳೆಯ ರಭಸವೂ ಅಧಿಕವಾಯಿತುಎದ್ದು ಕಿಟಕಿಯ ಬಳಿ ಹೋಗಿ ನಿಂತೆಮನೆಯ ಮುಂದಿನ ರಸ್ತೆಯಲ್ಲಿ ನೀರು ಕಾಲುವೆಯಂತೆ ಹರಿಯುತ್ತಿತ್ತುಕಸಕಡ್ಡಿ, ಹೊಲಸೆಲ್ಲಾ ನಿನ್ನೆಯೇ ಕೊಚ್ಚಿಹೋಗಿರಬೇಕುಸ್ವಚ್ಚ ತಿಳಿಗೆಂಪಿನ ಅರೆಪಾರದರ್ಶಕ ನೀರು ನೀಳಜಡೆಯಂತೆ ಮಡಿಕೆಮಡಿಕೆಯಾಗಿ ಹರಿದುಹೋಗುವುದನ್ನೇ ನೋಡುತ್ತಾ ನಿಂತೆ.
"ಒಂದು ಕಾಗದದ ದೋಣಿ ಮಾಡಿಕೊಡಲಾ?"
ಬೆಚ್ಚಿ ಹಿಂದೆ ತಿರುಗಿದೆಶಾಲಿನಿ ನಗುತ್ತಾ ನಿಂತಿದ್ದಳುಶುಭ್ರವಾಗಿ ತೊಳೆದ ಮುಖಕೆಲವೇ ತಾಸುಗಳ ಹಿಂದೆ ಧೀರ್ಘವಾಗಿ ಅತ್ತ ಯಾವ ಕುರುಹೂ ಅಲ್ಲಿರಲಿಲ್ಲ.
ಸಣ್ಣಗೆ ನಕ್ಕೆಬಾತ್‍ರೂಮಿನ ಬಾಗಿಲು ತೆರೆದುಕೊಂಡು ಸರಸಕ್ಕ ಹೊರಬಂದಳುಕಿಲಕಿಲ ನಕ್ಕು "ಟೀ ಮಾಡ್ತೀನಿ" ಎನ್ನುತ್ತಾ ಅಡಿಗೆಮನೆಯತ್ತ ನಡೆದಳು ಶಾಲಿನಿ.
ತಟ್ಟೆಯೊಂದರಲ್ಲಿ ಟೀ ಲೋಟಗಳನ್ನಿಟ್ಟುಕೊಂಡು ಬಂದ ಶಾಲಿನಿ ನನಗೊಂದು ಸರಸಕ್ಕನಿಗೊಂದು ಕೊಟ್ಟು "ಎದ್ದಿದ್ದಾನೋ ಇಲ್ಲವೋ" ಎಂದು ಗೊಣಗಿಕೊಳ್ಳುತ್ತಾ ರಮೇಶನ ಕೋಣೆಯತ್ತ ನಡೆದಳು.  "ಅವನು ಹೊರಗೆ ಹೋದ" ಅಂದೆ.  "ಅರೆ ಹೌದಾನಮಗ್ಯಾರಿಗೂ ಹೇಳಲೇ ಇಲ್ಲಅದೆಲ್ಲಿಗೆ ಹೋದ ಮಳೇಲಿ?" ಅಂದಳು ಅಚ್ಚರಿಯಲ್ಲಿ.  "ಅದೇನೋ ಮಳವಳ್ಳಿಗೆ ಹೋಗಬೇಕು ಅಂದ" ಅಂದೆ.  "ಮಳವಳ್ಳಿಗೆ!"  ಸಣ್ಣಗೆ ಹೂಂಕರಿಸಿದಳುಒಮ್ಮೆ ತುಟಿ ಕಚ್ಚಿಕೊಂಡು ತೆಳುವಾಗಿ ನಕ್ಕಳು.  "ಹೆಂಡತಿ ನೆನಪಾಗಿಬಿಟ್ಟಳೇನೋಅದಕ್ಕೇ ಇರಬೇಕು ಇಷ್ಟು ಮಳೆ" ಎನ್ನುತ್ತಾ ಮೂಲೆಯತ್ತ ತಿರುಗಿದವಳು "ಅಯ್ಯೋ, ನನ್ ಛತ್ರಿ ಎತ್ಕೊಂಡು ಹೋಗಿಬಿಟ್ಟಿದ್ದಾನೆ" ಎಂದು ಕೂಗಿದಳು ಗಾಬರಿಯಲ್ಲಿ.  "ಯಾರು?" ಎನ್ನುತ್ತಾ ಶ್ರೀನಿವಾಸಯ್ಯನವರು ಎದ್ದರುಶಾಲಿನಿ ಉತ್ತರಿಸಲಿಲ್ಲಉತ್ತರ ಬೇಕಿಲ್ಲದಂತೆ ಅವರೂ "ನಾರಾಯಣಾ" ಎನ್ನುತ್ತಾ ಬಲಮಗ್ಗುಲಾಗಿ ಎದ್ದು ಬಾತ್‍ರೂಮಿನತ್ತ ನಡೆದರು.
ನಾನು ಸ್ನಾನ ಮುಗಿಸಿ ಬರುವ ಹೊತ್ತಿಗೆ ಮಳೆ ಸಂಪೂರ್ಣವಾಗಿ ನಿಂತಿತ್ತುಅಕ್ಕ, ಶಾಲಿನಿಯ ಸ್ನಾನ ಮೊದಲೇ ಆಗಿತ್ತುಎಲ್ಲರೂ ಬೇಗ ಹೊರಟು ಶೆಟ್ಟಿ ಹೋಟೆಲಿನಲ್ಲಿ ತಿಂಡಿ ತಿಂದು ಅಲ್ಲಿಂದಲೇ ಸಬ್ ರಿಜಿಸ್ತ್ರಾರ್ ಆಫೀಸಿಗೆ ಹೋಗಬೇಕೆಂದು ಮೊದಲೇ ಮಾತಾಗಿದ್ದುದರಿಂದ ನಾನು ಬೇಗಬೇಗನೆ ತಯಾರಾದೆಕೆಲಸ ಮುಗಿದ ಕೂಡಲೇ ನಾವು ಮೈಸೂರಿಗೆ ಹೊರಟುಬಿಡುವಾ ಎಂದು ಅಕ್ಕ ಹೇಳಿದ್ದಳುತಲೆ ಬಾಚಿಕೊಳ್ಳುತ್ತಾ ಕೋಣೆಯಿಂದ ಹೊರಬರುತ್ತಿದ್ದಂತೇ ಹಜಾರದ ನಡುಮಧ್ಯದಲ್ಲಿ ಶಾಲಿನಿ ಬಿಕ್ಕಿಬಿಕ್ಕಿ ಅಳುತ್ತಿದ್ದಳುಅವಳನ್ನು ತಬ್ಬಿ ಹಿಡಿದು ನಿಂತ ಶ್ರೀನಿವಾಸಯ್ಯನವರ ಮುಖದಲ್ಲಿ ಪ್ರೇತಕಳೆ.
"ಅಲ್ಲೇ ಇಟ್ಟಿದ್ದೆ... ದೇವರ ಗೂಡಿನಲ್ಲೇ, ಗಣೇಶನ ಫೋಟೋದ ಹಿಂದೆನೇ...  ಎಲ್ಲಾನೂ ಸೇರಿಸಿ ರಬ್ಬರ್ ಬ್ಯಾಂಡ್ ಹಾಕಿಟ್ಟಿದ್ದೆ..."  ಶಾಲಿನಿ ಬಿಕ್ಕುಗಳ ನಡುವೆ ಮತ್ತೆ ಮತ್ತೆ ಹೇಳುತ್ತಿದ್ದಳುಸರಸಕ್ಕನ ಕಡೆ ನೋಡಿದೆಅವಳು ಶಿಲೆಯಾಗಿ ನಿಂತುಬಿಟ್ಟಿದ್ದಳು.
"ಇನ್ನೊಂದ್ಸಲ ನೋಡ್ತೀನಿ ಇರೀ" ಎನ್ನುತ್ತಾ ಶಾಲಿನಿ ತಂದೆಯನ್ನು ಬಿಟ್ಟು ದೇವರ ಮನೆಯತ್ತ ಬಾಣದಂತೆ ಓಡಿದಳುಶ್ರೀನಿವಾಸಯ್ಯನವರು ಅವಳು ಹೋದತ್ತಲೇ ನೋಡುತ್ತಾ ಕಂಬದಂತೆ ನಿಂತರುಶಾಲಿನಿಯ ಹಿಂದೆಯೇ ಓಡಿದ ಸರಸಕ್ಕ ಎರಡುಕ್ಷಣಗಳಲ್ಲಿ ಅವಳನ್ನು ತನ್ನ ಭುಜಕ್ಕೆ ಒರಗಿಸಿಕೊಂಡು ಹೊರಗೆ ಕರೆತಂದಳುಶಾಲಿನಿ ಭೋರಿಟ್ಟು ಅಳುತ್ತಿದ್ದಳುಏನಾಗಿದೆಯೆಂದು ತಿಳಿಯದೇ ಅಕ್ಕನ ಮುಖವನ್ನೇ ನೋಡಿದೆಅಲ್ಲಿದ್ದದ್ದು ನೂರೊಂದು ಪ್ರಶ್ನೆಗಳು.
ಅವರಿಬ್ಬರೂ ತಮ್ಮನ್ನು ಸಮೀಪಿಸುತ್ತಿದ್ದಂತೇ ಶ್ರೀನಿವಾಸಯ್ಯನವರು ಅವರಿಗೆ ಬೆನ್ನು ಹಾಕಿ ಎರಡು ಹೆಜ್ಜೆ ನಡೆದು ಕುರ್ಚಿಯಲ್ಲಿ ಕುಳಿತು ತಲೆ ತಗ್ಗಿಸಿದರುಸರಸಕ್ಕನತ್ತ ಹೊರಳಿ ಎರಡೂ ಕೈಗಳನ್ನು ಮೇಲೆತ್ತಿ ತಗ್ಗಿದ ತಲೆಯ ಮೇಲೆ ಜೋಡಿಸಿ ಕ್ಷೀಣ ದನಿ ಹೊರಡಿಸಿದರು: "ನಮ್ಮಿಂದ ತಪ್ಪಾಯ್ತಮ್ಮ ಸರಸ್ವತೀಮಾತು ಉಳಿಸಿಕೊಳ್ಳೋದಿಕ್ಕೆ ಆಗ್ತಾ ಇಲ್ಲಾನಿಮ್ಮನೇನ ಕೊಂಡುಕೊಳ್ಳೋ ಸ್ಥಿತೀಲಿ ಈಗ ನಾವಿಲ್ಲಮ್ಮ ಸಾಮರ್ಥ್ಯ ನಮ್ಮಲ್ಲಿಲ್ಲಮ್ಮಾನಮ್ಮನ್ನ ಕ್ಷಮಿಸಿಬಿಡು ತಾಯೀ."
ಸರಸಕ್ಕ ನನ್ನತ್ತ ನೋಡಿದಳುನನಗೆ ಗೊಂದಲಶಾಲಿನಿಯತ್ತ ತಿರುಗಿದೆಅವಳು ಗೋಡೆಗೆ ಹಣೆಯೊತ್ತಿ ಬಿಕ್ಕುತ್ತಿದ್ದಳುಶ್ರೀನಿವಾಸಯ್ಯನವರತ್ತ ತಿರುಗಿದೆಅವರ ಮುಖ ಕಿಟಕಿಯ ಕಡೆಗಿತ್ತುಅವರ ನೋಟವನ್ನನುಸರಿಸಿ ಅತ್ತ ತಿರುಗಿದೆಕಣ್ಣಳತೆಗಿನ ಆಕಾಶಪೂರ್ತಿ ದಟ್ಟವಾಗಿ ಕವಿದು ತೂಗುತ್ತಿದ್ದ ಕಡುಗಪ್ಪು ಮೋಡಗಳು ಇನ್ನೇನು ಕತ್ತರಿಸಿ ಕೆಳಗೆ ಬೀಳುವಂತಿದ್ದವು.
ಶಾಲಿನಿ ಒಮ್ಮೆ ಗಟ್ಟಿಯಾಗಿ ಬಿಕ್ಕಿದಳುಅತ್ತ ನೋಡುವ ಧೈರ್ಯವಾಗದೇ ನಿಸ್ಸಹಾಯಕತೆಯಲ್ಲಿ ಸರಸಕ್ಕನತ್ತ ತಿರುಗುತ್ತಿದ್ದಂತೇ "ಹೋ" ಎಂದು ಕೂಗುತ್ತಾ ಮತ್ತೆ ಮಳೆ ಆರಂಭವಾಯಿತು.

--***೦೦೦***--

2 comments:

  1. Awesome story! Narration is flawless; subject is so heart-touching; situations are entirely relatable!

    ReplyDelete
    Replies
    1. Heartened by your appreciative words. Thank you very much.

      Delete