ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, April 26, 2012

ಲೇಖನ- "ಇಸ್ಲಾಮಾಬಾದ್‍ನ ಹಿಂದಿನ ಕಾಣದ ಕೈ



ಇತಿಹಾಸ ಮತ್ತು ವರ್ತಮಾನದ ಆಧಾರದ ಮೇಲೆ ಮುಂದಿನ ಹದಿನೈದು ವರ್ಷಗಳಲ್ಲಿ ಏಷಿಯಾದ ರಾಜಕೀಯ-ಸಾಮರಿಕ ಸ್ಥಿತಿಗತಿಗಳು ಹೇಗೆ ಬದಲಾಗಬಹುದೆಂಬ ಚಿತ್ರಣವನ್ನು ನೀಡುವಂತೆ ದಶಕದ ಹಿಂದೆ ತಜ್ಞರ ತಂಡವೊಂದನ್ನು ಅಮೆರಿಕಾದ ರಕ್ಷಣಾ ಇಲಾಖೆ ಕೇಳಿಕೊಂಡಿತು. ಆ ತಂಡ ಚಿತ್ರಿಸಿದ ಮೂರು ‘ಭವಿಷ್ಯಗಳಲ್ಲಿ ಒಂದು ಹೀಗಿತ್ತು: ಕಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ೨೦೧೨-೧೪ರಲ್ಲಿ ಭಾರತದೊಡನೆ ತನ್ನ ನಾಲ್ಕನೆಯ ಹಾಗೂ ಅಂತಿಮ ಯುದ್ಧವನ್ನು ನಡೆಸುತ್ತದೆ, ಸೋಲು ಅನುಭವಿಸುತ್ತದೆ ಮತ್ತು ಭಾರತದೊಡನೆ ವಿಲೀನಗೊಳ್ಳುತ್ತದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕಶ್ಮೀರಕ್ಕೆ ಸಂಬಂಧಿಸಿದಂತೆ ಕಳೆದ ಆರೂವರೆ ದಶಕಗಳಲ್ಲಿ ಕಾರ್ಗಿಲ್ ಕದನವೂ ಸೇರಿದಂತೆ ಮೂರು ಯುದ್ಧಗಳು ಮತ್ತು ಅಸಂಖ್ಯಾತ ಗಡಿ ಘರ್ಷಣೆಗಳು ನಡೆದಿವೆ.  ಅಶಾಂತ ಕಶ್ಮೀರ ಇವೆರಡು ದೇಶಗಳನ್ನು ಮತ್ತೊಮ್ಮೆ ಯುದ್ಧಕ್ಕೆ ನೂಕುವ ಸಾಧ್ಯತೆಯನ್ನು ಯಾವಾಗಲೂ ಜೀವಂತವಾಗಿರಿಸಿದೆ.  ಈ ನಿಟ್ಟಿನಲ್ಲಿ ಮತ್ತೊಂದು ಯುದ್ಧ ಯಾರನ್ನೂ ಅಚ್ಚರಿಗೊಳಿಸುವುದಿಲ್ಲ.
೨೦೧೨ನೇ ಇಸವಿಯ ಮೂರನೇ ಒಂದು ಭಾಗ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಮೆರಿಕನ್ ತಜ್ಞರ ತಂಡ ನುಡಿದ ಭವಿಷ್ಯಕ್ಕೆ ರಂಗಸಜ್ಜಿಕೆ ಆರಂಭವಾಗಿದೆಯೇ ಎಂದು ನೋಡಿದರೆ ಅಂತಹದೇನೂ ಕಾಣುತ್ತಿಲ್ಲ.  ಎರಡೂ ದೇಶಗಳ ನಡುವೆ ಮುಂಬೈ ಧಾಳಿಗಳ ನಂತರದ ತಿಂಗಳುಗಳಲ್ಲಿ ಇದ್ದ ಉದ್ರಿಕ್ತ ಪರಿಸ್ಥಿತಿಗೆ ವಿರುದ್ಧವಾಗಿ ಇತ್ತೀಚಿನ ದಿನಗಳಲ್ಲಿ ಭಾರತದ ಬಗ್ಗೆ ಪಾಕಿಸ್ತಾನದ ನೀತಿಗಳಲ್ಲಿ ಅಭೂತಪೂರ್ವ ಸಕಾರಾತ್ಮಕ ಬದಲಾವಣೆಗಳು ಕಾಣುತ್ತಿವೆ.  ಭಾರತದೊಡನೆ ಆರ್ಥಿಕ ಸಹಕಾರವನ್ನು ವೃದ್ಧಿಸಿಕೊಳ್ಳುವತ್ತ ಇಸ್ಲಾಮಾಬಾದ್ ತೀವ್ರ ಆಸಕ್ತಿ ತೋರುತ್ತಿದೆ.  ಅದಕ್ಕೆ ಪೂರಕವಾಗಿ ಪಾಕ್ ಸೇನಾ ದಂಡನಾಯಕ ಜನರಲ್ ಅಷ್ಪಾಕ್ ಪರ್ವೆಜ್ ಕಯಾನಿ ತನ್ನ ದೇಶ ಸಿಯಾಚಿನ್ ಪ್ರದೇಶದಲ್ಲಿ ನಿಶ್ಶಸ್ತ್ರೀಕರಣದ ಬಗ್ಗೆ ಆಸಕ್ತಿ ಹೊಂದಿದೆಯೆಂದು ಹೇಳಿಕೆ ಕೊಟ್ಟಿದ್ದಾರೆ.  ಇದೇ ಜನರಲ್ ಕಯಾನಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸ್ನೇಹವೃದ್ಧಿಯ ವಿರುದ್ಧವಾಗಿದ್ದರು ಮತ್ತು ಪಾಕಿಸ್ತಾನದ ಸಾಮರಿಕ ಯೋಜನೆಗಳು ಭಾರತ-ಕೇಂದ್ರಿತ ಎಂಬ ಹೇಳಿಕೆಗಳನ್ನು ಇತ್ತೀಚಿನವರೆಗೂ ನೀಡುತ್ತಿದ್ದರು.
ಈ ಬೆಳವಣಿಗೆಗಳನ್ನು ಭಾರತದ ಜತೆಗಿನ ಸಂಬಂಧಗಳನ್ನು ಉತ್ತಮಪಡಿಸಿಕೊಂಡು ಶಾಂತಿಯುತ ಸಹಬಾಳ್ವೆಗೆ ಪಾಕಿಸ್ತಾನ ಕೊನೆಗೂ ಮನಸ್ಸು ಮಾಡುತ್ತಿರುವ ಸ್ಪಷ್ಟ ಸಂಕೇತಗಳು ಎಂದು ಪರಿಗಣಿಸಬಹುದಾಗಿದೆ.  ಈ ಬಗ್ಗೆ ನೆಮ್ಮದಿಯೆನಿಸಿದರೂ, ಪಾಕಿಸ್ತಾನ ಸ್ವಇಚ್ಚೆಯಿಂದ ಈ ನೀತಿ ಹಿಡಿದಿದೆಯೋ ಅಥವಾ ಕಾಣದ ಕೈನ ತಾಳಕ್ಕೆ ಅನುಗುಣವಾಗಿ ಹೆಜ್ಜೆ ಹಾಕುತ್ತಿದೆಯೋ ಎಂಬ ಪ್ರಶ್ನೆ ಎದುರಾಗುತ್ತದೆ.  ಈ ನಿಟ್ಟಿನಲ್ಲಿ ಸ್ವಲ್ಪ ಪತ್ತೇದಾರಿ ನಡೆಸಿದರೆ ದಕ್ಷಿಣ ಏಷಿಯಾದ ಈ ಎರಡು ಅಗ್ರ ಶಕ್ತಿಗಳ ನಡುವೆ ಯುದ್ಧವಾಗದಂತೆ ನೋಡಿಕೊಳ್ಳಲು ತೃತೀಯ ಶಕ್ತಿಯೊಂದು ಕಾರ್ಯನಿರತವಾಗಿರುವ ಸ್ಪಷ್ಟ ಸೂಚನೆಗಳು ಸಿಗುತ್ತವೆ ಮತ್ತು ಈ ತೃತೀಯ ಶಕ್ತಿ ನೆರೆಯ ಚೈನಾ ಆಗಿರಬಹುದು ಎಂಬ ಸಂಗತಿ ನಮ್ಮನ್ನು ನಿಬ್ಬೆರಗಾಗಿಸುತ್ತದೆ.
ಕಳೆದ ಎರಡು-ಮೂರು ತಿಂಗಳುಗಳಲ್ಲಿ ಭಾರತ - ಪಾಕಿಸ್ತಾನಗಳ ನಡುವೆ ಉತ್ತಮ ಸಂಬಂಧಗಳನ್ನು ವೃದ್ಧಿಗೊಳಿಸುವ ಅಗತ್ಯವನ್ನು ಒತ್ತಿ ಹೇಳುವಂತಹ ಹಲವಾರು ಹೇಳಿಕೆಗಳನ್ನು ಚೀನೀ ಸರಕಾರ ನೀಡಿದೆ.  ಅಧ್ಯಕ್ಷ ಜರ್ದಾರಿಯವರ ಏಪ್ರಿಲ್ ೮ರ ಭಾರತ ಭೇಟಿಯನ್ನು ಚೈನಾದ ಸರಕಾರ ಮತ್ತು ಸರಕಾರಿ ನಿಯಂತ್ರಿತ ಮಾಧ್ಯಮಗಳು ಶ್ಲಾಘಿಸಿವೆ.  ಇದೆಲ್ಲಕ್ಕೂ ಕಲಶಪ್ರಾಯವಾದ ಬೆಳವಣಿಗೆಯೆಂದರೆ, ಭಾರತದ ಜತೆ ಆರ್ಥಿಕ ಸಂಬಂಧಗಳನ್ನು ವೃದ್ಧಿಗೊಳಿಸಿಕೊಳ್ಳುವಂತೆ ನಮ್ಮ ಚೀನೀ ಮಿತ್ರರು ನಮಗೆ ಸಲಹೆ ನೀಡಿದ್ದಾರೆ ಎಂದು ತಿಂಗಳ ಹಿಂದೆ ಬಹಿರಂಗವಾಗಿ ಹೇಳುವ ಮೂಲಕ ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಬೆಕ್ಕನ್ನು ಚೀಲದಿಂದ ಹೊರಗೆ ಬಿಟ್ಟಿದ್ದಾರೆ!
ಚೈನಾದ ಈ ನಡವಳಿಕೆ ಅದರ ಇಲ್ಲಿಯವರೆಗಿನ ಸ್ವಭಾವಕ್ಕೆ ಸಂಪೂರ್ಣ ವಿರುದ್ಧ.  ಭಾರತವನ್ನು ದಕ್ಷಿಣ ಏಶಿಯಾದ ಎಲ್ಲೆಯೊಳಗೇ ಕಟ್ಟಿಹಾಕುವ ತಂತ್ರದ ಅಂಗವಾಗಿ ಪಾಕಿಸ್ತಾನವನ್ನು ಒಂದು ಬಲಿಷ್ಟ ಶಕ್ತಿಯಾಗಿ ಬೆಳೆಸುವುದು ಬೀಜಿಂಗ್‌ನ ದಕ್ಷಿಣ ಏಶಿಯಾ ನೀತಿಯ ಪ್ರಮುಖ ಅಂಶವಾಗಿತ್ತು.  ಇದರ ಅಂಗವಾಗಿಯೇ ಪಾಕಿಸ್ತಾನ ಅಣ್ವಸ್ತ್ರಶಕ್ತಿಯಾಗಲು ಎಲ್ಲ ಸಹಕಾರಗಳನ್ನೂ ಚೈನಾ ನೀಡಿತ್ತು.  ಇದೇ ಚೈನಾ ಈಗ ಭಾರತ - ಪಾಕಿಸ್ತಾನಗಳ ನಡುವೆ ಸ್ನೇಹವೃದ್ಧಿಯನ್ನು ಬಯಸುತ್ತಿದೆ.  ಇದಕ್ಕೆ ಕಾರಣಗಳನ್ನು ಶೋಧಿಸಹೊರಟರೆ ಮತ್ತಷ್ಟು ಬೆರಗು ಹುಟ್ಟಿಸುವ ಸಂಗತಿಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತವೆ.
ಪಾಕಿಸ್ತಾನದ ನೆಲದ ಮೂಲಕ ಚೈನಾವನ್ನು ಅರಬ್ಬೀ ಸಮುದ್ರಕ್ಕೆ ಸಂಪರ್ಕಿಸುವ ರೈಲುಹಾದಿಯ ನಿರ್ಮಾಣದತ್ತ ಚೀನೀಯರು ತೀವ್ರ ಗಮನ ಹರಿಸಿದ್ದಾರಷ್ಟೇ.  ಈ ರೈಲುಹಾದಿಯ ಆರ್ಥಿಕ ಹಾಗೂ ಸಾಮರಿಕ ಮಹತ್ವದ ಅಗಾಧತೆಯನ್ನು ಚೀನೀಯರು ಮನಗಂಡಿದ್ದಾರೆ.  ಹೀಗಾಗಿಯೇ ರೈಲುಹಾದಿಯ ನಿರ್ಮಾಣದ ಮೊದಲ ಹಂತದ  ಕೆಲಸಗಳು ಆರಂಭವಾಗಿರುವ  ಪಾಕ್ ಆಕ್ರಮಿತ ಕಶ್ಮೀರದ ಗಿಲ್ಗಿಟ್ - ಬಾಲ್ಟಿಸ್ತಾನ್ ಪ್ರದೇಶದಲ್ಲಿ ಸುಮಾರು ಏಳರಿಂದ ಹನ್ನೊಂದು ಸಾವಿರ ಚೀನೀ ಸೈನಿಕರು ಈಗಾಗಲೇ ಖಾಯಂ ಆಗಿ ಬೀಡುಬಿಟ್ಟಿದ್ದಾರೆ.  ಪಾಕ್ ಆಕ್ರಮಿತ ಕಶ್ಮೀರದಲ್ಲಿ ಸುದ್ಧಿಸಂಸ್ಥೆಗಳಿಗೆ ಪ್ರವೇಶವಿಲ್ಲದ ಕಾರಣ ಅಲ್ಲಿನ ಘಟನಾವಳಿಗಳ ಬಗ್ಗೆ ನಿಖರ ವಿವರಗಳು ಸಿಗದಿದ್ದರೂ ಲಭ್ಯ ಮಾಹಿತಿಗಳ ಪ್ರಕಾರ ಅಲ್ಲಿನ ಪಾಕ್ ವಿರೋಧೀ ದಂಗೆಗಳನ್ನು ಅಡಗಿಸಿ ಶಾಂತಿ ಸ್ಥಾಪಿಸುವುದರಲ್ಲಿ ಚೀನೀ ಸೇನೆ ಗಮನಾರ್ಹ ಪಾತ್ರ ವಹಿಸುತ್ತಿದೆ.  ಅಂದರೆ, ಅಲ್ಲಿ ಶಾಂತಿ ಸ್ಥಾಪನೆಯ ಗುತ್ತಿಗೆಯನ್ನು ಚೈನಾ ತೆಗೆದುಕೊಂಡಿದೆ!  ಇದರರ್ಥ ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಿ ಶೀಘ್ರವಾಗಿ ರೈಲುಹಾದಿಯನ್ನು ನಿರ್ಮಿಸುವುದು ಪಾಕಿಸ್ತಾನಕ್ಕಿಂತಲೂ ಚೈನಾಗೆ ಹೆಚ್ಚು ಅಗತ್ಯವಾಗಿದೆ.
ಚೀನೀಯರ ಈ ಎಲ್ಲ ಯೋಜನೆಗಳು ಯಶಸ್ವಿಯಾಗಿ ಚೈನಾ ಮತ್ತು ಅರಬ್ಬೀ ಸಮುದ್ರಗಳ ನಡುವೆ ನೇರ ರೈಲು ಸಂಪರ್ಕ ನಿರ್ಮಾಣವಾಗಲು ಕೊನೇಪಕ್ಷ ಹನ್ನೆರಡು - ಹದಿನೈದು ವರ್ಷಗಳು ಹಿಡಿಯುತ್ತವೆ.  ಅಲ್ಲಿಯವರೆಗೆ ಮತ್ತು ಆನಂತರ ಪಾಕಿಸ್ತಾನದ ಭೌಗೋಳಿಕ ನಕ್ಷೆ ಮತ್ತು ಆಂತರಿಕ ರಾಜಕಾರಣ ಹೀಗಿರುವಂತೆಯೇ ಇದ್ದರೆ ಮಾತ್ರ ಚೈನಾ ಯುಶಸ್ವಿಯಾಗಿ ರೈಲು ಹಾದಿಯನ್ನು ನಿರ್ಮಿಸಿ ಅದರ ಫಲವನ್ನು ಅನುಭವಿಸಲು ಸಾಧ್ಯವಾಗುತ್ತದೆ.  ಆದರೆ ಪಾಕಿಸ್ತಾನದ ಪ್ರಸಕ್ತ ಆಂತರಿಕ ಪರಿಸ್ಥಿತಿ ಚೈನಾಗೆ ಆತಂಕ ಹುಟ್ಟಿಸುವಂತಿದೆ.  ಪಾಕಿಸ್ತಾನೀ ಸೇನೆ ೨೦೦೭ರ ಉತ್ತರಾರ್ಧದಿಂದಲೂ ಖೈಬರ್ - ಫಕ್ತೂನ್‌ಖ್ವಾ ಪ್ರಾಂತ್ಯದ ದುರ್ಗಮ ಪರ್ವತಗಳು ಮತ್ತು ಕಣಿವೆಗಳಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ವಿರುದ್ಧ ಸೆಣಸುತ್ತಿದೆ.  ಜತೆಗೇ ನೈಸರ್ಗಿಕ ಸಂಪನ್ಮೂಲಗಳ ಅಗಾಧ ಭಂಡಾರ ಬಲೂಚಿಸ್ತಾನದದಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಸಂಗ್ರಾಮ ಸೇನೆಯನ್ನೂ, ರಾಷ್ಟ್ರನಾಯಕರನ್ನೂ ಕಂಗೆಡಿಸುತ್ತಿದೆ.  ಇದು ಸಾಲದು ಎಂಬಂತೆ ಪಾಕಿಸ್ತಾನೀ ಸೇನೆಯಲ್ಲಿ ಇತ್ತೀಚೆಗೆ ಬಿರುಕುಗಳು ಕಾಣಿಸಿಕೊಂಡಿವೆ.  ರಾಷ್ಟ್ರದ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸೇನೆಯ ಅಗ್ರನಾಯಕತ್ವ ಗಮನ ಕೊಟ್ಟರೆ ಮಧ್ಯಮ ಮತ್ತು ಕೆಳಹಂತದ ಅಧಿಕಾರಿಗಳು ಮತ್ತು ಸೈನಿಕರು ಇಸ್ಲಾಮಿಕ್ ಮೂಲಭೂತವಾದಿಗಳತ್ತ ಒಲವು ತೋರುತ್ತಿದ್ದಾರೆ.  ಸೇನೆಯಲ್ಲಿ ಶೇಕಡಾ ಮೂವತ್ತರಷ್ಟಿರುವ ಪಕ್ತೂನಿಗಳಲ್ಲಿ ಬಹುಪಾಲು ಸೈನಿಕರು ಗಡಿನಾಡಿನಲ್ಲಿ ಸೇನೆ ನಡೆಸುತ್ತಿರುವ ಸೈನಿಕ ಕಾರ್ಯಾಚರಣೆಗಳ ಬಗ್ಗೆ ಅಸಮ್ಮತಿ ಹೊಂದಿದ್ದಾರೆ.  ಈ ಆಂತರಿಕ ಛಿದ್ರತೆಗಳು ಪಾಕಿಸ್ತಾನಿ ಸೇನೆಯ  ಸಾಮರಿಕ ಸಾಮರ್ಥ್ಯವನ್ನು ಬಹಳಷ್ಟು ಕುಂದಿಸಿದೆ.
ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಭಾರತದೊಂದಿಗೆ ಮತ್ತೊಂದು ಯುದ್ಧವಾದರೆ ಅದರಲ್ಲಿ ಬಳಕೆಯಾಗುವ ಅಸ್ತ್ರಗಳ ಆಧಾರದ ಮೇಲೆ ಎರಡು ವಿಭಿನ್ನ ಪರಿಣಾಮಗಳನ್ನು ಮುಂಗಾಣಬಹುದು.  ಒಂದು- ಯುದ್ಧದಲ್ಲಿ ಅಣ್ವಸ್ತ್ರಗಳು ಬಳಕೆಯಾದರೆ ಅದು ಪಾಕಿಸ್ತಾನಕ್ಕೆ ಹೆಚ್ಚು ಮಾರಕವಾಗಿ ಅದರ ಭೌಗೋಳಿಕ ಮೇಲ್ಮೈಲಕ್ಷಣ ಬದಲಾಗುವುದು ನಿಶ್ಚಯ.  ಎರಡು- ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಯುದ್ಧವೇ ನಡೆದರೆ ಅದರಲ್ಲಿ ಪಾಕಿಸ್ತಾನೀ ಸೇನೆ ಸೋತು ಅದು ಆ ದೇಶದ ರಾಜಕೀಯದ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳುವುದು ನಿಶ್ಚಿತ.  ಇದೆಲ್ಲದರ ಪರಿಣಾಮವಾಗಿ, ಮೇಲೆ ಉಲ್ಲೇಖಿಸಿದ ಅಮೆರಿಕದ ರಕ್ಷಣಾ ವಿಶೇಷಜ್ಞರ ಭವಿಷ್ಯದಂತೆ ಪಾಕಿಸ್ತಾನ ಭಾರತದೊಡನೆ ವಿಲೀನಗೊಳ್ಳದಿದ್ದರೂ ಆ ದೇಶ ಈಗಿರುವಂತೆ ಉಳಿಯುವುದಿಲ್ಲ ಎಂಬುದು ಮಾತ್ರ ನಿರ್ವಿವಾದದ ಸಂಗತಿ.  ರಣಾಂಗಣದಲ್ಲಿ ಸೋತ ಸೇನೆ ರಾಷ್ಟ್ರ ರಾಜಕಾರಣದ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಂತೇ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಕೈ ಮೇಲಾಗುತ್ತದೆ ಮತ್ತು ಸಿಂಧ್ ಹಾಗೂ ಬಲೂಚಿಸ್ತಾನಗಳಲ್ಲಿ ಪ್ರತ್ಯೇಕತೆಗೆ ಭಾರೀ ಕುಮ್ಮಕ್ಕು ಸಿಕ್ಕಿ ಅವು ಸ್ವತಂತ್ರಗೊಳ್ಳುವುದಕ್ಕೆ ದಾರಿ ಸುಗಮವಾಗುತ್ತದೆ.  ಸ್ವತಂತ್ರ ಸಿಂಧ್ ಮತ್ತು ಬಲೂಚಿಸ್ತಾನಗಳು ತಮ್ಮ ಆರ್ಥಿಕ, ಸಾಮರಿಕ, ಒಟ್ಟಾರೆ ಅಸ್ತಿತ್ವದ ಅಗತ್ಯಗಳಿಗಾಗಿ ಭಾರತವನ್ನು ಅವಲಂಬಿಸುತ್ತವೆ, ಅಂದರೆ ನವದೆಹಲಿಯ ಪ್ರಭಾವಕ್ಕೊಳಗಾಗುತ್ತವೆ.  ಚೈನಾಗೆ ಛಳಿ ಹುಟ್ಟಿಸಿರುವುದು ಈ ದುಃಸ್ವಪ್ನ.
ಪಾಕಿಸ್ತಾನದಲ್ಲಿ ಚೈನಾ ಎದುರುನೋಡುವ ಅಪಾಯಗಳು ಮೂರು ಬಗೆಯವು.  ಮೊದಲನೆಯದು- (ಭಾರತದೊಡನೆ ವಿಲೀನಗೊಂಡು) ಪಾಕಿಸ್ತಾನ ಭೂಪಟದಿಂದ ಸಂಪೂರ್ಣವಾಗಿ ಮಾಯವಾಗುವುದು, ಎರಡನೆಯದು- ಪಾಕಿಸ್ತಾನ ಉಳಿದರೂ ಸಿಂಧ್ ಮತ್ತು ಮತ್ತು ಬಲೂಚಿಸ್ತಾನಗಳನ್ನು ಕಳೆದುಕೊಂಡು ಕೇವಲ ಪಂಜಾಬ್ ಮತ್ತು ಖೈಬರ್ - ಫಕ್ತೂನ್‌ಖ್ವಾಗಳನ್ನೊಳಗೊಂಡ ಪುಟ್ಟ ಹಾಗೂ ಸಮುದ್ರತೀರವಿಲ್ಲದ ದೇಶವಾಗಿಬಿಡುವುದು, ಮತ್ತು ಮೂರನೆಯದು- ಪಾಕಿಸ್ತಾನದ ಭೌಗೋಳಿಕ ಸ್ಥಿತಿಯಲ್ಲಿ ಯಾವ ಬದಲಾವಣೆಯಾಗದಿದ್ದರೂ ಆ ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳ ಹಿಡಿತ ಉಂಟಾಗುವುದು.  ಈ ಮೂರರಲ್ಲಿ ಒಂದು ಘಟಿಸಿದರೂ ಪಾಕ್ ನೆಲದ ಮೂಲಕ ಅರಬ್ಬೀ ಸಮುದ್ರವನ್ನು ತಲುಪುವ ಚೈನಾದ ಯೋಚನೆ ಮಣ್ಣುಪಾಲಾಗಿ ಅದರ ಕನಸು ಹಳವಂಡವಾಗುತ್ತದೆ.
ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಕೈಮೇಲಾದರಂತೂ ಅದು ಚೈನಾಗೇ ಮುಳುವಾಗುತ್ತದೆ.  ಈಗಾಗಲೇ ಪಾಕಿಸ್ತಾನದೊಂದಿಗೆ ನೇರ ಗಡಿ ಹೊಂದಿರುವ ಉಯ್ಘರ್ ಝಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಚೀನೀ ಸರಕಾರದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮುಸ್ಲಿಂ ಉಗ್ರಗಾಮಿಗಳು ಪಾಕಿಸ್ತಾನದಲ್ಲಿ ರಹಸ್ಯವಾಗಿ ತರಬೇತಿ ಪಡೆಯುತ್ತಿದ್ದಾರೆ.  ಪಾಕ್ ಸರಕಾರವನ್ನು ಇಸ್ಲಾಮಿಕ್ ಮೂಲಭೂತವಾದಿಗಳು ತಮ್ಮ ಕೈಗೆ ತೆಗೆದುಕೊಂಡರೆ ಆಗ ಈ ಉಯ್ಘರ್ ಉಗ್ರಗಾಮಿಗಳಿಗೆ ಪಾಕಿಸ್ತಾನದಲ್ಲಿ ಬಹಿರಂಗವಾಗಿಯೇ ಬೆಂಬಲ ದೊರೆಯುತ್ತದೆ.  ಪರಿಣಾಮವಾಗಿ ಉಯ್ಘರ್ ಝಿನ್‌ಝಿಯಾಂಗ್ ಹೊತ್ತಿ ಉರಿಯತೊಡಗುತ್ತದೆ.
ಇಂತಹ ಯಾವುದೇ ಅನಾಹುತಗಳು ಘಟಿಸದಂತೆ ನೋಡಿಕೊಳ್ಳಲು ಚೈನಾ ಶತಾಯಗತಾಯ ಹೆಣಗುವುದು ಸಹಜ.  ಈ ನಿಟ್ಟಿನಲ್ಲಿ ಬೀಜಿಂಗ್‌ನ ದೂರಗಾಮಿ ಯೋಜನೆಯ ಮೊದಲ ಹಂತವಾಗಿ ಪ್ರಸ್ತುತದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧವಾಗದಂತೆ ನೋಡಿಕೊಳ್ಳಲೇಬೇಕು ಎಂದು ಚಾಲಾಕೀ ಚೈನಾ ಅರಿತಿದೆ.
***     ***     ***
ಬುಧವಾರ, ಏಪ್ರಿಲ್ ೨೫, ೨೦೧೨ರಂದು "ವಿಜಯವಾಣಿ" ಪತ್ರಿಕೆಯ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ


Thursday, April 19, 2012

ಲೇಖನ- "ಭಾರತ - ಪಾಕಿಸ್ತಾನ ಸಂಬಂಧಗಳು: ’ತೀರ್ಥಯಾತ್ರೆ’ಯ ಆಚೆ ಈಚೆ"



ಪಾಕಿಸ್ತಾನಿ ಅಧ್ಯಕ್ಷ ಅಸಿಫ್ ಆಲಿ ಜರ್ದಾರಿಯವರ ಏಪ್ರಿಲ್ ೮ರ ಭಾರತ ಭೇಟಿ ಎರಡೂ ದೇಶಗಳ ಮಾಧ್ಯಮಗಳಲ್ಲಿ ಕೆಲವು ದಿನಗಳವರೆಗೆ ಸಾಕಷ್ಟು ಸದ್ದುಗದ್ದಲಕ್ಕೆ ಕಾರಣವಾಯಿತುಜರ್ದಾರಿಯವರ ಅಜ್ಮೀರ್ ತೀರ್ಥಯಾತ್ರೆಯನ್ನು ಭಾರತಕ್ಕೆ ಅಧಿಕೃತ ಭೇಟಿಯಂತೆ ಬಗೆದು ಅದರಿಂದ ಎರಡೂ ದೇಶಗಳ ಮೈತ್ರಿವೃದ್ಧಿಗೆ ಸಹಕಾರಿಯಾಗುತ್ತದೆಂದು ಪತ್ರಿಕೆಗಳು ಮತ್ತು ವಿಶ್ಲೇಷಕರು ವರ್ಣಿಸಿದರುವಾಸ್ತವವಾಗಿ ಅದು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ಟೀಯವರ ದರ್ಗಾಗೆ ಜರ್ದಾರಿಯವರ ಖಾಸಗೀ ಭೇಟಿಯಾಗಿತ್ತುಆ ಖಾಸಗೀ ಭೇಟಿಯನ್ನು ದ್ವಿಪಕ್ಷೀಯ ಮಾತುಕಥೆಗಳಿಗೆ ಒಂದು ಪುಟ್ಟ ವೇದಿಕೆಯನ್ನಾಗಿ ಬದಲಾಯಿಸಿದ್ದು ಪ್ರಧಾನಿ ಮನಮೋಹನ್ ಸಿಂಗ್ದೊರಕಿದ ಅವಕಾಶದಲ್ಲಿ ಅವರದನ್ನು ಚೊಕ್ಕವಾಗಿ ಮಾಡಿದ್ದಾರೆ.   ಇದಕ್ಕೂ ಮೀರಿದ ಪ್ರತಿಕ್ರಿಯೆಯನ್ನು ನವದೆಹಲಿಯಿಂದ ಬಯಸುವುದು ಅವ್ಯವಾಹಾರಿಕಈ ನಿಟ್ಟಿನಲ್ಲಿ ನೋಡಿದಾಗ ಜರ್ದಾರಿಯವರ ಭೇಟಿಗೆ ಉತ್ತರವಾಗಿ ಪ್ರಧಾನಿ ಸಿಂಗ್ ಆದಷ್ಟು ಬೇಗನೆ ಪಾಕಿಸ್ತಾನಕ್ಕೆ ಭೇಟಿ ನೀಡಬೇಕೆಂದು ರ‍್ಯಾಡ್‌ಕ್ಲಿಫ್ ಗಡಿಯ ಎರಡೂ ಕಡೆಯ ಮಾಧ್ಯಮಗಳು, ಎಕ್ಸ್‌ಪರ್ಟ್ಗಳು ದನಿಯೆತ್ತರಿಸಿ ಕೂಗಿದ್ದು ನಗೆ ತರಿಸುತ್ತದೆಪ್ರಧಾನಿ ಸಿಂಗ್ ಇಸ್ಲಾಮಾಬಾದ್‌ನಲ್ಲಿ ಜರ್ದಾರಿ ಅಥವಾ ಗಿಲಾನಿಯವರ ಜತೆ ಕೆಲವು ತಾಸು ಕಳೆದು, ಆತಿಥ್ಯ ಸವಿದು, ನಂತರ ಪಾಕಿಸ್ತಾನದಲ್ಲಿ ಎಲ್ಲಿಗೆ ಭೇಟಿ ನೀಡಬೇಕುನಾನ್‌ಕಾನಾ ಸಾಹಿಬ್‌ಗಾ?
ಜವಾಹರ್‌ಲಾಲ್ ನೆಹರೂ - ಲಿಯಾಖತ್ ಆಲಿ ಖಾನ್ ಅವರಿಂದ ಹಿಡಿದು ಮನನೋಹನ್ ಸಿಂಗ್ - ಯೂಸುಫ್ ರಾಜಾ ಗಿಲಾನಿಯವರೆಗೆ ಎರಡೂ ದೇಶಗಳ ನಾಯಕರು ಕಳೆದ ಆರು ದಶಕಗಳಿಗೂ ಮಿಕ್ಕಿದ ಕಾಲದಲ್ಲಿ ಪರಸ್ಪರ ಭೇಟಿಯಾಗುತ್ತಲೇ ಇದ್ದಾರೆಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕುತ್ತಲೇ ಇದ್ದಾರೆಆದರೂ ದಕ್ಷಿಣ ಏಶಿಯಾದ ಈ ಎರಡು ದೇಶಗಳ ನಡುವಿನ ವೈಷಮ್ಯ ಅಳಿದಿಲ್ಲ, ಸ್ನೇಹಯುತ ಸಹಬಾಳ್ವೆ ಸಾಧ್ಯವಾಗಿಲ್ಲಹೀಗಿರುವಾಗ ಕೆಲವೇ ಗಂಟೆಗಳ ಭೇಟಿಯಿಂದ ಅದ್ಭುತವೊಂದನ್ನು ನಿರೀಕ್ಷಿಸುವುದು ಹಾಸ್ಯಾಸ್ಪದಎರಡು ಬದಲಾಯಿಸಲಸಾಧ್ಯವಾದ ನಕಾರಾತ್ಮಕ ವಾಸ್ತವಗಳ ಕಾರಣದಿಂದಾಗಿ ದಕ್ಷಿಣ ಏಶಿಯಾದ ಈ ಎರಡು ದೇಶಗಳ ನಡುವೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆಈ ಎರಡು ವಾಸ್ತವಗಳನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ.
ಧರ್ಮದ ಆಧಾರದ ಮೇಲಿನ ದೇಶವಿಭಜನೆಯ ಭೀಕರ ನರಹತ್ಯೆ, ದಾರುಣ ನೆನಪುಗಳನ್ನು ಹೊತ್ತ ಮಿಲಿಯಾಂತರ ಮಂದಿಯ ವಲಸೆ, ಹಾಗೂ ಕೆಲವೇ ವಾರಗಳಲ್ಲಿ ಆರಂಭವಾದ ಕಶ್ಮೀರ ಯುದ್ಧಗಳಿಂದಾಗಿ ವೈರತ್ವವನ್ನು ಮೈಗೂಡಿಸಿಕೊಂಡು ಭಾರತ ಮತ್ತು ಪಾಕಿಸ್ತಾನಗಳು ಅಸ್ತಿತ್ವಕ್ಕೆ ಬಂದು ಇನ್ನೇನು ಆರೂವರೆ ದಶಕಗಳಾಗುತ್ತಿವೆಈ ಧೀರ್ಘ ಆವಧಿಯಲ್ಲಿ ಎರಡೂ ದೇಶಗಳ ನಡುವೆ ಸತತವಾಗಿ ಮುಂದುವರೆಯುತ್ತಿರುವ ವೈಷಮ್ಯಕ್ಕೆ ಧರ್ಮದ್ವೇಷವೇ ಕಾರಣ ಎಂಬ ವಾದ ಜನಜನಿತವಾಗಿದೆಈ ವಾದದಲ್ಲಿ ಹುರುಳಿಲ್ಲಈ ದ್ವೇಷದ ಹಿಂದಿರುವುದು ಎರಡೂ ದೇಶಗಳ ನಡುವಿನ ಗಡಿಯ ಸ್ವರೂಪ.
ನಲವತ್ತೇಳರಲ್ಲಿ ಬ್ರಿಟಿಷರು ಉಪಖಂಡವನ್ನು ವಿಭಜಿಸಿ ನವರಾಷ್ಟ್ರಗಳ ನಡುವೆ ಎಳೆದ ಗಡಿರೇಖೆ, ಮುಖ್ಯವಾಗಿ ಎರಡೂ ಪಂಜಾಬ್‌ಗಳನ್ನು ವಿಭಾಗಿಸುವ ರ‍್ಯಾಡ್‌ಕ್ಲಿಫ್ ರೇಖೆ ಸಾಗುವುದು ಸಿಂಧೂ ನದೀಬಯಲಿನ ನಡುಮಧ್ಯದಲ್ಲಿಅಂದರೆ ಸಮತಟ್ಟಾದ ನೆಲದಲ್ಲಿಇದೇ ತಾಪತ್ರಯದ ಮೂಲಯಾವುದೇ ನೈಸರ್ಗಿಕ ತಡೆಗಳಿಲ್ಲದ, ಸಮತಟ್ಟಾದ ಬಯಲಿನಲ್ಲಿ ಸಾಗುವ ಗಡಿರೇಖೆ ಎರಡು ಅಲುಗಿನ ಕತ್ತಿಯಂತೆಇದು ಎರಡು ದೇಶಗಳಿಗೂ ಸೇನಾ ದೃಷ್ಟಿಯಿಂದ ಸಮಾನ ಅನುಕೂಲ, ಅವಕಾಶಗಳನ್ನೊದಗಿಸುತ್ತದೆಹೀಗಾಗಿ ಇಂತಹ ರೇಖೆಯ ಎರಡೂ ಕಡೆ ಇರುವ ದೇಶಗಳ ನಡುವೆ ಸಹಜವಾಗಿಯೇ ಅಪನಂಬಿಕೆ, ಪರಸ್ಪರರ ಹಂಚಿಕೆ ಹಾಗೂ ಹುನ್ನಾರಗಳ ಬಗ್ಗೆ ನಿರಂತರ ಸಂದೇಹಗಳು ಮೂಡುತ್ತದೆಇದರ ಮುಂದಿನ ಪರಿಣಾಮವಾಗಿ ಎರಡೂ ದೇಶಗಳೂ ಕಟ್ಟೆಚ್ಚರದಲ್ಲಿ ಗಡಿಯನ್ನು ಕಾಯುತ್ತವೆ ಮತ್ತು ಯಾವಾಗಲೂ ಯುದ್ಧಕ್ಕೆ ತಯಾರಾಗಿರುತ್ತವೆಈ ನಿರಂತರ ಯುದ್ಧಸನ್ನದ್ಧ ಸ್ಥಿತಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಯಾವಾಗಲೂ ಸೂಕ್ಷ್ಮವಾಗಿರಿಸಿಬಿಡುತ್ತದೆಭಾರತ ಮತ್ತು ಪಾಕಿಸ್ತಾನಗಳ ನಡುವೆ ಆಗುತ್ತಿರುವುದು ಇದೇಎರಡೂ ದೇಶಗಳ ನಡುವಿನ ಈ ಎರಡು ಅಲುಗಿನ ಕತ್ತಿಯಂತಹ ಗಡಿಯಿಂದಾಗಿ ಉಂಟಾಗಿರುವ ಈ ವೈಮನಸ್ಯ ಧರ್ಮವನ್ನು ಮೀರಿದ್ದುನಿಜ ಹೇಳಬೇಕೆಂದರೆ ಎರಡೂ ದೇಶಗಳ ಜನತೆಗಳ ಧರ್ಮ ಒಂದೇ ಆಗಿದ್ದರೂ ಗಡಿಯ ಸ್ವರೂಪದಿಂದಾಗಿ ಪರಸ್ಪರ ಅಪನಂಬಿಕೆ, ವೈಮನಸ್ಯ, ದ್ವೇಷ ಉಂಟಾಗುತ್ತಿತ್ತುಇರಾನ್ ಮತ್ತು ಇರಾಕ್‌ಗಳ ಜನತೆ ಮುಸ್ಲಿಮರಾಗಿದ್ದರೂ ಷಟ್ ಅಲ್ ಅರಬ್ ನೆಲ ಹಾಗೂ ಜಲ ಗಡಿಯ ಸ್ವರೂಪದಿಂದಾಗಿ ಅವೆರಡು ದೇಶಗಳ ನಡುವೆ ಅತ್ಯುಗ್ರ ವೈಷಮ್ಯ ಸೃಷ್ಟಿಯಾಗಿರುವುದನ್ನು ಇಲ್ಲಿ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬೇಕು.
ಎರಡೂ ದೇಶಗಳ ನಡುವಿನ ಮತ್ತೊಂದು ಸಧ್ಯಕ್ಕೆ ಪರಿಹರಿಸಲಾಗದ ಸಮಸ್ಯೆಯೆಂದರೆ ಕಶ್ಮೀರ ವಿವಾದಕಶ್ಮೀರ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾದರೂ ಮುಸ್ಲಿಮರ ಜನಸಾಂದ್ರತೆ ಹೆಚ್ಚಾಗಿರುವುದು ಶ್ರೀನಗರವನ್ನೊಳಗೊಂಡ ಕಶ್ಮೀರಿ ಕಣಿವೆ ಹಾಗೂ ರಾಜ್ಯದ ಪಶ್ಚಿಮ ಮತ್ತು ವಾಯುವ್ಯ ಭಾಗಗಳಲ್ಲಿದಕ್ಷಿಣದ ಜಮ್ಮು ಪ್ರದೇಶದಲ್ಲಿ ಹಿಂದೂಗಳು ಅಧಿಕ ಸಂಖ್ಯೆಯಲ್ಲಿದ್ದರೆ ಪೂರ್ವದ ವಿಶಾಲ ಲಡಾಖ್ ಪ್ರದೇಶ ಬೌದ್ಧರ ನೆಲೆಒಂದುವೇಳೆ ಪಂಜಾಬ್ ಮತ್ತು ಬಂಗಾಲಗಳಂತೆ ಕಶ್ಮೀರವೂ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟಿದ್ದಿದ್ದರೆ ಅವರು ಆ ರಾಜ್ಯವನ್ನೂ ಎರಡು ತುಂಡು ಮಾಡಿ ಮುಸ್ಲಿಂ ಪ್ರದೇಶವನ್ನು ಪಾಕಿಸ್ತಾನಕ್ಕೂ, ಹಿಂದೂ ಮತ್ತು ಬೌದ್ಧ ಪ್ರದೇಶಗಳನ್ನು ಭಾರತಕ್ಕೂ ನೀಡುತ್ತಿದ್ದರು೧೯೪೭-೪೮ರ ಪ್ರಥಮ ಕಶ್ಮೀರ ಯುದ್ಧದಲ್ಲಿ ಕಣಿವೆಯೊಂದನ್ನುಳಿದು ಮತ್ತೆಲ್ಲಾ ಮುಸ್ಲಿಂ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡ ಪಾಕಿಸ್ತಾನ ಅಷ್ಟಕ್ಕೇ ತೃಪ್ತವಾಗದೇ ಹಿಂದೂ ಬಹುಸಂಖ್ಯಾತ ಜಮ್ಮು ಮತ್ತು ಬೌದ್ಧ ಬಹುಸಂಖ್ಯಾತ ಲಡಾಖನ್ನೂ ಸೇರಿಸಿದಂತೆ ಇಡೀ ಜಮ್ಮು ಮತ್ತು ಕಶ್ಮೀರ ರಾಜ್ಯವೇ ತನಗೆ ಬೇಕು ಅನ್ನುತ್ತಿದೆ ಮತ್ತು ಅದಕ್ಕಾಗಿ ೧೯೬೫ರಲ್ಲಿ ಮತ್ತೆ ಭಾರತದ ವಿರುದ್ಧ ವಿಫಲ ಸೈನಿಕ ಕಾರ್ಯಾಚರಣೆ ನಡೆಸಿದೆ೧೯೮೪ರ ಸಿಯಾಚಿನ್ ಘರ್ಷಣೆ ಮತ್ತು ೧೯೯೯ರ ಕಾರ್ಗಿಲ್ ಕದನಗಳು ಸಹಾ ಪಾಕಿಸ್ತಾನದ ಈ ಕಶ್ಮೀರೀ ದಾಹದ ಪರಿಣಾಮಗಳುಉಪಖಂಡದ ಮುಸ್ಲಿಮರಿಗಾಗಿ ಮಾತ್ರ ಎಂಬ ಹೇಳಿಕೆಯೊಡನೆ ಅಸ್ತಿತ್ವಕ್ಕೆ ಬಂದ ಪಾಕಿಸ್ತಾನ ಹಿಂದೂ ಜಮ್ಮು ಮತ್ತು ಬೌದ್ಧ ಲಡಾಖ್ ಪ್ರದೇಶಗಳೂ ತನಗೇ ಬೇಕು ಎಂದು ಹೇಳುತ್ತಿರುವ ನೀತಿಗೆ ಅರ್ಥವೇನುಈ ಪ್ರಶ್ನೆಗೆ ಉತ್ತರಕ್ಕಾಗಿ ನಾವು ಧರ್ಮದ ಆಚೆ ಹುಡುಕಬೇಕು.
ಪಾಕಿಸ್ತಾನಕ್ಕೆ ನೀರುಣಿಸುವ ಎಲ್ಲ ಪ್ರಮುಖ ನದಿಗಳೂ ಹುಟ್ಟುವುದು ಅಥವಾ ಹರಿದುಬರುವುದು ಭಾರತದ ವಶದಲ್ಲಿರುವ ಹಿಂದೂ ಮತ್ತು ಬೌದ್ಧ ಪ್ರದೇಶಗಳ ಮೂಲಕಈ ಪ್ರದೇಶಗಳು ಖಾಯಂ ಆಗಿ ಭಾರತದ ವಶದಲ್ಲೇ ಉಳಿದರೆ ಆಗ ಪಾಕಿಸ್ತಾನ ತನ್ನ ನೀರಿನ ಅಗತ್ಯಕ್ಕಾಗಿ ಯಾವಾಗಲೂ ಭಾರತದ ದಾಕ್ಷಿಣ್ಯದಲ್ಲಿ ಉಳಿಯಬೇಕಾಗುತ್ತದೆಆ ನದಿಗಳನ್ನು ಭಾರತ ತಡೆಗಟ್ಟಿಬಿಟ್ಟರೆ ಪಾಕಿಸ್ತಾನದ ಮೇಲೆ ಅದರ ಪರಿಣಾಮ ಭೀಕರ೧೯೪೮ರ ಏಪ್ರಿಲ್‌ನಲ್ಲಿ ಪಂಜಾಬ್‌ನ ಫಿರೋಜ್‌ಪುರ್ ಹೆಡ್‌ವರ್ಕ್ಸ್‌ನಿಂದ ಪಾಕಿಸ್ತಾನಕ್ಕೆ ನೀರು ಹರಿದುಹೋಗುವುದನ್ನು ಭಾರತ ತಾತ್ಕಾಲಿಕವಾಗಿ ತಡೆಹಿಡಿದದ್ದು ಪಾಕಿಸ್ತಾನೀಯರನ್ನು ಇನ್ನೂ ದುಃಸ್ವಪ್ನದಂತೆ ಕಾಡುತ್ತಿದೆಅಂಥದೇ ಕ್ರಮವನ್ನು ಭಾರತ ಕಶ್ಮೀರದಲ್ಲೂ ಕೈಗೊಂಡರೇನು ಎನ್ನುವ ಆತಂಕ ಅವರಲ್ಲಿದೆ೧೯೬೦ರ ಸಿಂಧೂ ನದಿನೀರು ಹಂಚಿಕೆಯ ಒಪ್ಪಂದದ ಪ್ರಕಾರ ಸಿಂಧೂ, ಝೀಲಂ ಮತ್ತು ಚಿನಾಬ್ ನದಿಗಳ ಮೇಲೆ ಪಾಕಿಸ್ತಾನ ಸಂಪೂರ್ಣ ಹಕ್ಕುಗಳನ್ನು ಪಡೆದುಕೊಂಡರೂ ಆ ದೇಶಕ್ಕೆ ಭಾರತದ ಮೇಲೆ ಪೂರ್ಣ ವಿಶ್ವಾಸ ಉಂಟಾಗಿಲ್ಲಆ ಒಪ್ಪಂದವನ್ನು ಭಾರತ ಏಕಪಕ್ಷೀಯವಾಗಿ ಮುರಿದು ನದಿಗಳನ್ನು ತಡೆಗಟ್ಟಿಬಿಡಬಹುದಾದ ಆತಂಕದಲ್ಲಿ ಪಾಕಿಸ್ತಾನೀಯರು ತೊಳಲುತ್ತಿದ್ದಾರೆತಮ್ಮ ಈ ಆತಂಕ ನಿರಾಧಾರ, ಒಪ್ಪಂದದ ಎಲ್ಲ ಅಂಶಗಳನ್ನೂ ಭಾರತ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂಬ ಸತ್ಯಗಳನ್ನು ಒಪ್ಪಿಕೊಳ್ಳಲಾಗದಷ್ಟು ಅವಿವೇಕ, ಅಪನಂಬಿಕೆ ಅವರಲ್ಲಿ ಮನೆಮಾಡಿದೆಹೀಗಾಗಿಯೇ ಅವರು ಮುಸ್ಲಿಂ ಅಲ್ಲದ ಪ್ರದೇಶಗಳನ್ನು ಕೇಳುತ್ತಿರುವುದುಹಿಂದೂ ಮತ್ತು ಬೌದ್ಧ ಪ್ರದೇಶಗಳ ಮೇಲೂ ತಮ್ಮ ಹತೋಟಿಯನ್ನು ಸ್ಥಾಪಿಸಲು, ತನ್ಮೂಲಕ ತಮ್ಮ ನದಿಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸ್ಥಾಪಿಸಲು ಅವರು ಹೆಣಗುತ್ತಿದ್ದಾರೆಇದರರ್ಥ ಕಶ್ಮೀರ ಸಮಸ್ಯೆಗೆ ಕಾರಣ ಧರ್ಮ ಅಲ್ಲಪಾಕಿಸ್ತಾನದ ಆರ್ಥಿಕವ್ಯವಸ್ಥೆಕಶ್ಮೀರ ಒಂದು ಧಾರ್ಮಿಕ ಪ್ರಶ್ನೆ ಅಲ್ಲಅದೊಂದು ಭೌಗೋಳಿಕ ಮತ್ತು ಆರ್ಥಿಕ ಪ್ರಶ್ನೆಆದರೆ ಪಾಕಿಸ್ತಾನ ಇದನ್ನು ಮುಚ್ಚಿಟ್ಟು ಧಾರ್ಮಿಕ ಕಾರಣವನ್ನು ಮುಂದೆ ಮಾಡುತ್ತಿದೆತನ್ನ ಜನತೆಯನ್ನು ಶತ್ರುಗಳ ವಿರುದ್ಧ ಹುಚ್ಚೆಬ್ಬಿಸಲು ಧರ್ಮಕ್ಕಿಂತಲೂ ಪ್ರಬಲವಾದ ಭಾವನಾತ್ಮಕ ಆಯುಧ ಬೇರೇನಿದೆ?
ಎರಡು ಅಲುಗಿನ ಕತ್ತಿಯಂತಿರುವ ಪಂಜಾಬ್ ಗಡಿರೇಖೆ ಮತ್ತು ಕಶ್ಮೀರ ವಿವಾದ ಎರಡೂ ದೇಶಗಳ ನಡುವೆ ನಿರಂತರ ಅಪನಂಬಿಕೆ, ಸಂದೇಹಗಳನ್ನು ಸೃಷ್ಟಿಸಿವೆಹೀಗಾಗಿ ಎರಡೂ ದೇಶಗಳು ನಿರಂತರವಾಗಿ ಯುದ್ಧಸನ್ನದ್ಧ ಸ್ಥಿತಿಯಲ್ಲಿವೆಒಂದುವೇಳೆ ಎರಡೂ ದೇಶಗಳ ನಡುವೆ ನೈಸರ್ಗಿಕ ತಡೆ ಇದ್ದಿದ್ದರೆ ಇವು ಸ್ವಾತಂತ್ರ್ಯದ ಮೊದಲ ಕೆಲವು ವರ್ಷಗಳು ಪರಸ್ಪರ ಕಾದಾಡಿಕೊಂಡು ನಂತರ ನಿಧಾನವಾಗಿ ತಮ್ಮ ಪಾಡಿಗೆ ತಾವು ಬೇರೆ ಬೇರೆ ದಿಕ್ಕು ಹಿಡಿದು ಸಾಗುತ್ತಿದ್ದವುಪರಿಣಾಮವಾಗಿ ಗಡಿ ಶಾಂತವಾಗಿರುತ್ತಿತ್ತುಶಾಂತ ಗಡಿ ಕಾಲಾನುಕ್ರಮದಲ್ಲಿ ಸ್ನೇಹವೃದ್ಧಿಗೆ ನಾಂದಿಯಾಗುತ್ತಿತ್ತುಆದರೆ ರ‍್ಯಾಡ್‌ಕ್ಲಿಫ್ ಗಡಿರೇಖೆಯನ್ನು ಬದಲಾಯಿಸುವುದು ಸಾಧ್ಯವೇ ಇಲ್ಲಜತೆಗೆ ಇಡೀ ಕಶ್ಮೀರವನ್ನು ಭಾರತ ಪಾಕಿಸ್ತಾನಕ್ಕೆ ಒಪ್ಪಿಸುವ ಸಾಧ್ಯತೆಯೂ ಇಲ್ಲಇವೆರಡೂ ಆಗದೇ ಕೇವಲ ರಾಷ್ಟ್ರನಾಯಕರ ಭೇಟಿಗಳಿಂದ ಮೈತ್ರಿಯುತ ಸಹಬಾಳ್ವೆ ಸಾಧ್ಯವಿಲ್ಲ.
ಇಷ್ಟಾಗಿಯೂ ಯೂರೋಪಿನ ಉದಾಹರಣೆ ನನಗೊಂದು ಆಶಾಕಿರಣದಂತೆ ಕಾಣುತ್ತಿದೆಯೂರೋಪಿನ ಸರಿಸುಮಾರು ಎಲ್ಲ ಗಡಿಗಳೂ ಎರಡು ಅಲುಗಿನ ಕತ್ತಿಯಂತಹ ಗಡಿಗಳುಈ ಗಡಿಗಳು ಆ ಖಂಡದಲ್ಲಿ ಶತಮಾನಗಳವರೆಗೆ ನೂರಾರು ಯುದ್ಧಗಳಿಗೆ ಕಾರಣವಾದವುಫ್ರೆಂಚರು ಮತ್ತು ಜರ್ಮನರು ಶಾರ್ಲೆಮಾನ್‌ನ ಕಾಲದಿಂದ ಇಪ್ಪತ್ತನೇ ಶತಮಾನದ ಮಧ್ಯದವರೆಗೆ ಅಂದರೆ ಸುಮಾರು ಸಾವಿರದ ಮುನ್ನೂರು ವರ್ಷಗಳವರೆಗೆ ಪರಸ್ಪರ ಕಾದಾಡುತ್ತಲೇ ಬಂದರುಆದರೆ ಎರಡನೆಯ ಮಹಾಯುದ್ದದ ನಂತರ ಈ ಕಾದಾಟಗಳ ನಿರುಪಯುಕ್ತತೆಯನ್ನು ಯೂರೋಪಿಯನ್ನರು ಅರ್ಥಮಾಡಿಕೊಂಡರುಬದಲಾಯಿಸಾಧ್ಯವಾದ ಗಡಿಗಳನ್ನು ಹೇಗಿವೆಯೋ ಹಾಗೇ ಒಪ್ಪಿಕೊಂಡು ಆರ್ಥಿಕ ಸಹಕಾರದ ತಳಹದಿಯ ಮೇಲೆ ಶಾಂತಿಯುತ ಸಹಬಾಳ್ವೆ ಸಾಗಿಸುವುದು ವಿವೇಕ ಎಂದು ಯೂರೋಪಿಯನ್ ರಾಷ್ಟ್ರಗಳು ಅರಿತ ನಂತರ ಆ ಖಂಡದಲ್ಲಿ ಘಟಿಸಿರುವುದು, ಘಟಿಸುತ್ತಿರುವುದು ಪವಾಡಅಲ್ಲೀಗ ಗಡಿವಿವಾದಗಳಿಲ್ಲ, ಯುದ್ಧವಿಲ್ಲ, ರಕ್ತಪಾತವಿಲ್ಲ.
ಅಂತಹ ಪವಾಡದ ಮೊದಲ ಗುರುತುಗಳು ದಕ್ಷಿಣ ಏಶಿಯಾದಲ್ಲಿ ಈಗ ಕಾಣಬರುತ್ತಿವೆಪರಸ್ಪರ ಆರ್ಥಿಕ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಅಭೂತಪೂರ್ವವೆನಿಸುವ ಕ್ರಮಗಳನ್ನು ಎರಡೂ ದೇಶಗಳು ಇತ್ತೀಚಿನ ದಿನಗಳಲ್ಲಿ ತೆಗೆದುಕೊಂಡಿವೆನವದೆಹಲಿ ದಶಕದ ಹಿಂದೆಯೇ ತನಗೆ ನೀಡಿರುವಂತಹ Most Favoured Nation (MFN) ಸ್ಥಾನವನ್ನು ಭಾರತಕ್ಕೆ ನೀಡಲು ಪಾಕಿಸ್ತಾನ ಇತ್ತೀಚೆಗೆ ಮನಸ್ಸು ಮಾಡಿದೆಪ್ರಪ್ರಥಮ ಬಾರಿಗೆ ಎರಡೂ ದೇಶಗಳ ವಾಣಿಜ್ಯ ಮಂತ್ರಿಗಳು ಗಡಿಯ ಅತ್ತ ಇತ್ತ ಪಯಣಿಸಿದ್ದಾರೆಯೂರೋಪಿಗೆ ಸಿದ್ಧ ಉಡುಪುಗಳ ನಿರ್ಯಾತದ ಸವಲತ್ತುಗಳನ್ನು ಪಡೆದುಕೊಳ್ಳಲು ಪಾಕಿಸ್ತಾನಕ್ಕೆ ಭಾರತ ದಾರಿ ಮಾಡಿಕೊಟ್ಟಿದೆಪರಸ್ಪರ ವ್ಯಾಪಾರದಲ್ಲಿ ಅಡ್ಡಿಯಾಗಿರುವ ಹಲವು ತಡೆಗಳನ್ನು ನಿರ್ಮೂಲಗೊಳಿಸಲು ಮೂರು ಒಪ್ಪಂದಗಳನ್ನು ಎರಡೂ ದೇಶಗಳು ಮಾಡಿಕೊಂಡಿವೆಲಾಹೋರ್ ಮತ್ತು ನವದೆಹಲಿಗಳಲ್ಲಿ ಪರಸ್ಪರ ವಾಣಿಜ್ಯ ಮೇಳಗಳು ಆಯೋಜಿತಗೊಂಡಿವೆವಾಘಾ-ಅಟಾರಿ ಗಡಿಯಲ್ಲಿ ಹೆಚ್ಚಿನ ಸರಕು ಸಾಗಾಣಿಕೆಗೆ ಅನುಕೂಲವಾಗುವಂತೆ ಎರಡನೆಯ ಪ್ರವೇಶದ್ವಾರವನ್ನು ತೆರೆಯಲಾಗಿದೆ.   ಸಹಕಾರ ಹೀಗೇ ಮುಂದುವರೆದರೆ ಸಧ್ಯದಲ್ಲೆ ಭಾರತೀಯ ಬ್ಯಾಂಕ್‌ಗಳು ಪಾಕಿಸ್ತಾನದಲ್ಲಿ ಮತ್ತು ಪಾಕಿಸ್ತಾನೀ ಬ್ಯಾಂಕುಗಳು ಭಾರತದಲ್ಲಿ ಶಾಖೆಗಳನ್ನು ತೆರೆಯುವ ಸಾಧ್ಯತೆ ಇದೆಇದೆಲ್ಲಕ್ಕೂ ಕಲಶಪ್ರಾಯವಾಗಿ ಪಾಕಿಸ್ತಾನೀಯರು ಭಾರತದಲ್ಲಿ ನೇರ ಬಂಡವಾಳ ಹೂಡಿಕೆಯಲ್ಲಿ ತೊಡಗುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ (ಅವರಲ್ಲಿ ಕೆಲವರು ಭಯೋತ್ಪಾದನಾ ಕ್ಷೇತ್ರದಲ್ಲಿ ಈಗಾಗಲೇ ಹೂಡಿರುವ ಬಂಡವಾಳದ ಮಾತು ಇಲ್ಲಿ ಬೇಡ).  ಇದೆಲ್ಲವೂ ಫಲ ನೀಡಿ ಎರಡೂ ದೇಶಗಳ ಜನತೆ ಪರಸ್ಪರ ಆರ್ಥಿಕವಾಗಿ ಒಬ್ಬರ ಮೇಲೊಬ್ಬರು ಅವಲಂಬಿತರಾದರೆ ಮಾತ್ರ ಯೂರೋಪಿನಲ್ಲಾದ ಪವಾಡ ದಕ್ಷಿಣ ಏಶಿಯಾದಲ್ಲೂ ಘಟಿಸಬಹುದು.
**     **     *
ಏಪ್ರಿಲ್ ೧೮, ೨೦೧೨ರ "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ


Thursday, April 12, 2012

ಲೇಖನ- "ಇರಾನ್: ಸರಕಾರೀ ಪ್ರಾಯೋಜಿತ ಭಯೋತ್ಪಾದನೆಯ ಹೊಸ ಮುಖ"


ಅರವತ್ತರ ದಶಕದಲ್ಲಿ ಅಂತರರಾಷ್ಟ್ರೀಯ ರಂಗದಲ್ಲಿ ತಲೆಯೆತ್ತಿದ ಸರಕಾರೀ ಪ್ರಾಯೋಜಿತ ಭಯೋತ್ಪಾದನೆ ಅಮೆರಿಕಾ ಮತ್ತು ಸೋವಿಯೆತ್ ಯೂನಿಯನ್‌ಗಳ ನಡುವಿನ ಶೀತಲ ಸಮರದ ಒಂದು ಕರಾಳ ಉಪವಸ್ತು.  ವೈರಿಯನ್ನು ನೇರವಾಗಿ ಎದುರಿಸದೇ ತನ್ನ ಅನಾಮಿಕ ಬಂಟರ ಮೂಲಕ ಅವನಿಗೆ ನೋವಾಗುವಲ್ಲಿ ಆಗಾಗ ಕುಟುಕಿ ಕಂಗೆಡಿಸಲು ಆ ಎರಡು ದೈತ್ಯ ರಾಷ್ಟ್ರಗಳು, ಮುಖ್ಯವಾಗಿ ಸೋವಿಯೆತ್ ಯೂನಿಯನ್, ಹುಡುಕಿಕೊಂಡ ಅನೀತಿಯುತ ಸಮರತಂತ್ರದ ಪರಿಣಾಮವಾಗಿ ಉದ್ಭವವಾದ ಈ ಪಿಡುಗು ವಿಶ್ವವನ್ನು ಕಾಡತೊಡಗಿ ಅರ್ಧ ಶತಮಾನವೇ ಆಗುತ್ತಿದೆ.   ಈ ಆವಧಿಯನ್ನು ಭಯೋತ್ಪಾದಕರ ಹಿನ್ನೆಲೆ ಮತ್ತವರ ಬೆಂಬಲಿಗ ಸರಕಾರಗಳ ನೀತಿ ಮತ್ತು ಉದ್ದೇಶಗಳ ಆಧಾರದ ಮೇಲೆ ನಾನು ನಾಲ್ಕು ಹಂತಗಳಾಗಿ ವಿಭಾಗಿಸುತ್ತೇನೆ.
ಮೊದಲ ಹಂತ: ೧೯೪೮ - ೧೯೭೯
ಇಸ್ರೇಲ್‌ನ ಸ್ಥಾಪನೆಯಿಂದಾಗಿ ಸಂತ್ರಪ್ತರಾದ ಲಕ್ಷಾಂತರ ಪ್ಯಾಲೆಸ್ತೈನ್ ಅರಬ್ಬರ ರೊಚ್ಚು ಹಾಗೂ ಆ ಯೆಹೂದೀ ರಾಷ್ಟ್ರವನ್ನುನೇರವಾಗಿ ರಣಾಂಗಣದಲ್ಲಿ ಎದುರಿಸಲಾಗದ ಅವರ ಅಸಹಾಯಕತೆ ಮೊದಮೊದಲು ಇಸ್ರೇಲ್ ವಿರುದ್ಧದ ಅರಬ್ ಭಯೊತ್ಪಾದಕ ಗುಂಪುಗಳ ಉಗಮಕ್ಕೆ ದಾರಿ ಮಾಡಿಕೊಟ್ಟಿತು.  ಈ ಗುಂಪುಗಳಿಗೆ ಬೆಂಬಲವಾಗಿ ಮಧ್ಯಪ್ರಾಚ್ಯದ ಸರಿಸುಮಾರು ಎಲ್ಲ ತೈಲಸಂಪನ್ನ ಅರಬ್ ದೇಶಗಳೂ ಇದ್ದವು.  ತಾವೇ ಕಾಲು ಕೆರೆದು ಆರಂಭಿಸಿದ ೧೯೬೭ರ ಆರು ದಿನಗಳ ಯುದ್ಧ ಮತ್ತು ೧೯೭೪ರ ಯೋಮ್ ಕಿಪ್ಪುರ್ ಯುದ್ಧಗಳಲ್ಲಿ ಇಸ್ರೇಲ್‌ನಿಂದ ಸೋತು ಸುಣ್ಣವಾದ ಈಜಿಪ್ಟ್, ಸಿರಿಯಾ, ಜೋರ್ಡಾನ್ ದೇಶಗಳು ಮತ್ತವರ ಬೆಂಬಲಿಗ ಅರಬ್ ರಾಷ್ಟ್ರಗಳು ತಮ್ಮ ಯೆಹೂದಿ ಶತ್ರುವನ್ನು ನೆಮ್ಮದಿಗೆಡಿಸಲು ಈ ಗುಂಪುಗಳ ಮೊರೆಹೊಕ್ಕವು.
ಅರಬ್ ಭಯೋತ್ಪಾದಕ ಸಂಘಟನೆಗಳ ಕೆಂಗಣ್ಣು ಅನತೀಕಾಲದಲ್ಲಿಯೇ ಇಸ್ರೇಲ್‌ಗೆ ಬೆಂಬಲ ನೀಡುತ್ತಿದ್ದ ಪಶ್ಚಿಮದ ರಾಷ್ಟ್ರಗಳು, ಮುಖ್ಯವಾಗಿ ಅಮೆರಿಕಾದತ್ತಲೂ ತಿರುಗಿದ್ದು ಸಹಜವೇ ಆಗಿತ್ತು.  ಹೀಗೇ ಇಸ್ರೇಲ್ ವಿರೋಧೀ ಭಯೋತ್ಪಾದಕ ಸಂಘಟನೆಗಳು ಅಮೆರಿಕಾವನ್ನೂ ತಮ್ಮ ವಿರೋಧಿಯೆಂದು ಬಗೆದದ್ದು ಸೋವಿಯೆತ್ ಯೂನಿಯನ್‌ಗೆ ಹಲವು ಬಗೆಯಲ್ಲಿ ವರದಾನವಾಗಿ, ಈ ಸಂಘಟನೆಗಳನ್ನು ಪ್ರೋತ್ಸಾಹಿಸುವುದು ಆ ಕಮ್ಯೂನಿಸ್ಟ್ ದೈತ್ಯನ ವಿದೇಶನೀತಿಯ ಒಂದು ಪ್ರಮುಖ ಅಂಗವಾಯಿತು.  ಇಸ್ರೇಲ್-ವಿದೋಧಿ ಅರಬ್ ಭಯೋತ್ಪಾದನೆಯ ಜತೆ ಸೋವಿಯೆತ್ ಯೂನಿಯನ್‌ನ ಪಶ್ಚಿಮ-ವಿದೋಧಿ ವಿದೇಶನೀತಿಯ ಅಪವಿತ್ರ ವಿವಾಹದಿಂದಾಗಿ ಮಾರ್ಕ್ಸಿಸ್ಟ್ ಭಯೋತ್ಪಾದಕರೂ ಸೃಷ್ಟಿಯಾದರು.  ಈ ಭಯೋತ್ಪಾದಕ ಗುಂಪುಗಳಿಗೆ ಧನಸಹಾಯ ಮತ್ತು ಮಾರಕಾಸ್ತ್ರಗಳ ಪೂರೈಕೆಯ ಜತೆಗೆ ಭಯೋತ್ಪಾದನಾ ಚಟುವಟಿಕೆಗಳ ತರಬೇತಿ ನೀಡುವುದನ್ನು ಸೋವಿಯೆತ್ ಗೂಢಚಾರ ಸಂಸ್ಥೆ ಕೆಜಿಬಿ (ಕೊಮಿತೆತ್ ಗೋಸುದರ್ಸ್ತ್ ವೆನ್ನೋನಿ ಬಿಝೋ ಪಾಸ್ನೋಸ್ತಿ) ಮತ್ತು ಆಗಿನ ಪೂರ್ವ ಜರ್ಮನಿಯ ಗೂಢಚಾರ ಸಂಸ್ಥೆ ಸ್ತಾಸಿ ವ್ಯಾಪಕವಾಗಿ ರೂಢಿಸಿಕೊಂಡವು.  ಈ ತರಬೇತಿ ಕೇಂದ್ರಗಳು ಹಿಂದಿನ ದಕ್ಷಿಣ ಯೆಮೆನ್ ಮತ್ತು ಗಢಾಫಿಯ ಲಿಬಿಯಾಗಳಲ್ಲಿದ್ದವು.  ಹೀಗೆ ವಿಶ್ವದ ಅಗ್ರಶಕ್ತಿಯೊಂದರ ಸಕ್ರಿಯ ಸಹಕಾರದಿಂದಾಗಿ ಈ ಅರಬ್ ಮತ್ತು ಮಾರ್ಕ್ಸಿಸ್ಟ್ ಭಯೋತ್ಪಾದಕರು ಪಶ್ಚಿಮ ಯೂರೋಪ್, ಲ್ಯಾಟಿನ್ ಅಮೆರಿಕಾ, ಈಶಾನ್ಯ ಆಫ್ರಿಕಾ ಮತ್ತು ಪಶ್ಚಿಮ ಏಶಿಯಾಗಳಲ್ಲಿ ನಡೆಸಿದ ಭಯೋತ್ಪಾದನಾ ಚಟುವಟಿಕೆಗಳು ಶೀತಲ ಸಮರದ ಇತಿಹಾಸದ ಒಂದು ರಕ್ತರಂಜಿತ ಅಧ್ಯಾಯ.
ಎರಡನೆಯ ಹಂತ: ೧೯೭೯ - ೧೯೮೮
ಇತಿಹಾಸದ ಒಂದು ವಿಪರ್ಯಾಸದಂತೆ ಎಪ್ಪತ್ತರ ದಶಕದ ಅಂತ್ಯದಲ್ಲಿ ಮುಸ್ಲಿಂ ಸಂಘಟನೆಗಳು, ಒಟ್ಟಾರೆ ಜಾಗತಿಕ ಮುಸ್ಲಿಂ ಮನಸ್ಸು, ಸೋವಿಯೆತ್ ಯೂನಿಯನ್ ವಿರುದ್ಧ ತಿರುಗಿಬಿದ್ದು ಅಮೆರಿಕಾದ ಮಾಸ್ಕೋ-ವಿರೋಧಿ ನೀತಿಗಳಿಗೆ ಸಹಕಾರ ನೀಡತೊಡಗಿದವು.  ಕಾಬೂಲ್‌ನಲ್ಲಿನ ತನ್ನ ಕೈಗೊಂಬೆ ಬಬ್ರಾಕ್ ಕರ್ಮಾಲ್ ಸರಕಾರವನ್ನು ಉಳಿಸಲು ೧೯೭೯ರ ಡಿಸೆಂಬರ್ ಅಂತ್ಯದಲ್ಲಿ ಅಫಘಾನಿಸ್ತಾನವನ್ನು ಪ್ರವೇಶಿಸಿದ ಸೋವಿಯೆತ್ ಸೇನೆಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಲು ಅಮೆರಿಕಾ ಬಳಸಿಕೊಂಡದ್ದು ಇಸ್ಲಾಮನ್ನು.  ಧರ್ಮವೇ ಇಲ್ಲದ ಕಮ್ಯೂನಿಸ್ಟರನ್ನು ಅಫಘಾನಿಸ್ತಾನದಲ್ಲಿ ಇರಗೊಟ್ಟರೆ ಅವರು ಆ ದೇಶದಲ್ಲಿ ಇಸ್ಲಾಮನ್ನೇ ನಾಶ ಮಾಡಿಬಿಡುತ್ತಾರೆ, ಇಸ್ಲಾಂ ಉಳಿಯಬೇಕಾದರೆ ರಶಿಯನ್ನರು ಅಫಘಾನಿಸ್ತಾನದಿಂದ ಕಾಲ್ತೆಗೆಯುವಂತೆ ಮಾಡಲೇಬೇಕು ಎಂದು ಅಮೆರಿಕಾ ವಾದಿಸಿದಾಗ ಅದನ್ನು ಒಪ್ಪಿ ಇಸ್ಲಾಮನ್ನು ಉಳಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿ ಮೊರಾಕ್ಕೋದಿಂದ ಹಿಡಿದು ಫಿಲಿಪೀನ್ಸ್‌ವರೆಗೆ ದೂರದೂರದ ದೇಶಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಅಫಘಾನಿಸ್ತಾನಕ್ಕೆ ಬಂದರು.  ಈ ಇಸ್ಲಾಂನ ಸೈನಿಕರಿಗೆ ಪಾಕಿಸ್ತಾನದ ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ ಅಮೆರಿಕಾದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ(ಸಿಐಏ)ಯ ಆಫೀಸ್ ಆಫ್ ದ ಟೆಕ್ನಿಕಲ್ ಸರ್ವೀಸಸ್ ಮತ್ತು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ ಏಜೆನ್ಸಿ(ಐಎಸ್‌ಐ)ಯ ನಿರ್ದೇಶನಾಲಯಗಳು ತರಬೇತಿ ನೀಡಿದವು.
ಈ ಒಂಬತ್ತು ವರ್ಷಗಳಲ್ಲಿ ಮುಸ್ಲಿಂ ಕ್ರೋಧ ಸೋವಿಯೆತ್ ಯೂನಿಯನ್‌ನತ್ತ ತಿರುಗಿ ಅಮೆರಿಕಾಗೆ ನೆಮ್ಮದಿಯೆನಿಸಿದರೂ ಆ ಕ್ರೋಧ ವ್ಯಕ್ತವಾದದ್ದು ಅಫಘಾನಿಸ್ತಾನದಲ್ಲಿ ಮಾತ್ರ.  ತನ್ನ ಎಲ್ಲೆಯೊಳಗೆ ಅದು ಪ್ರವೇಶಿಸದಂತೆ ಹಾಗೂ ವಿಶ್ವದ ಇತರೆಡೆ ತನ್ನ ಹಿತಾಸಕ್ತಿಗಳ ಮೇಲೆ ಯಾವುದೇ ಭಯೋತ್ಪಾದಕ ಧಾಳಿಗಳಾಗದಂತೆ ನೋಡಿಕೊಂಡದ್ದು ಸೋವಿಯೆತ್ ಸಾಧನೆ.  ಇದಕ್ಕೆ ವಿರುದ್ಧವಾಗಿ ಲಿಬಿಯಾದ ಅಧ್ಯಕ್ಷ ಮುವಾಮರ್ ಗಢಾಫಿಯ ಪಶ್ಚಿಮ ವಿರೋಧಿ ನೀತಿಗಳಿಂದಾಗಿ ಅಮೆರಿಕಾ ಮತ್ತು ಬ್ರಿಟನ್‌ಗಳು ಆಗಾಗ ಭಯೋತ್ಪಾದನಾ ಧಾಳಿಗಳನ್ನೆದುರಿಸಿದ್ದುಂಟು.  ಅದೇ ದಿನಗಳಲ್ಲಿ ಭಾರತದ ಪಂಜಾಬ್‌ನಲ್ಲಿ ಉಗ್ರಭಯೋತ್ಪಾದನೆಯನ್ನು ಪಾಕಿಸ್ತಾನ ಪ್ರಾಯೋಜಿಸಿತು.
ಮೂರನೆಯ ಹಂತ: ೧೯೮೮ - ೨೦೧೧
ಸರಕಾರೀ ಪ್ರಾಯೋಜಿತ ಭಯೋತ್ಪಾದನೆ ಮತ್ತೊಮ್ಮೆ ಉಗ್ರ ಪಶ್ಚಿಮ-ವಿರೋಧಿಯಾಗಿ ಬೆಳೆದದ್ದು ಮತ್ತು ಅದನ್ನು ಅಡಗಿಸಲು ಪಶ್ಚಿಮದ ರಾಷ್ಟ್ರಗಳು ಪಣತೊಟ್ಟು ಸರಿಸುಮಾರು ಯಶಸ್ವಿಯಾದದ್ದು ಈ ಆವಧಿಯಲ್ಲಿ.
ಒಂಬತ್ತು ವರ್ಷಗಳ ಯುದ್ಧದ ನಂತರ ೧೯೮೮ರಲ್ಲಿ ಸೋವಿಯೆತ್ ಸೇನೆ ಕೊನೆಗೂ ಅಫಘಾನಿಸ್ತಾನದಿಂದ ಕಾಲ್ತೆಗೆದಾಗ ಯುದ್ಧದಿಂದ ಜರ್ಝರಿತವಾಗಿದ್ದ ಆ ನತದೃಷ್ಟ ದೇಶವನ್ನು ಹೇಗಿತ್ತೋ ಹಾಗೇ ಬಿಟ್ಟು ಅಮೆರಿಕನ್ನರು ಓಡಿಹೋದರು.  ಅಮೆರಿಕನ್ನರಿಗೆ ಇಸ್ಲಾಮಿನ ಮೇಲೆ ಯಾವ ಪ್ರೀತಿಯೂ ಇಲ್ಲ, ಅವರು ಅಫಘಾನಿಸ್ತಾನದಲ್ಲಿ ಕಾರ್ಯನಿರತರಾಗಿದ್ದದ್ದು ಇಸ್ಲಾಮನ್ನು ಉಳಿಸಲೆಂದಲ್ಲ, ಬದಲಾಗಿ ರಶಿಯನ್ನರು ಹಿಂದೂ ಮಹಾಸಾಗರದತ್ತ ಮುನ್ನುಗ್ಗದಂತೆ ತಡೆದು ತನ್ಮೂಲಕ ಈ ವಲಯದಲ್ಲಿ ತಮ್ಮ ಸೈನಿಕ ಪ್ರಭಾವಕ್ಕೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳುವ ಸ್ವಾರ್ಥಪರ ಹುನ್ನಾರದಿಂದ ಎಂಬುದು ಅಫಘಾನಿಸ್ತಾನದಲ್ಲಿ ಕಾರ್ಯನಿರತರಾಗಿದ್ದ ಇಸ್ಲಾಂನ ಸೈನಿಕರಿಗೆ ಅರಿವಾದದ್ದೇ ಅವರು ಅಮೆರಿಕಾದ ವಿರುದ್ಧ ತಿರುಗಿಬಿದ್ದರು.  ಇವರಲ್ಲಿ ಪ್ರಮುಖನಾದವನು ಒಸಾಮಾ ಬಿನ್ ಲಾದೆನ್ ಮತ್ತು ೧೯೮೭ರಲ್ಲಿ ಆತ ಸ್ಥಾಪಿಸಿದ ಅಲ್ ಖಯೀದಾ ಸಂಘಟನೆ ವಿಶ್ವದ ಅತ್ಯಂತ ಘಾತಕ ಭಯೋತ್ಪಾದನಾ ಸಂಘಟನೆಯಾಗಿ ಬೆಳೆದು ನಿಂತದ್ದು ಈಗ ಇತಿಹಾಸ.
ಮೊದಮೊದಲು ಒಂದು ನಿರ್ದಿಷ್ಟ ನೆಲೆಯಿಲ್ಲದ ಸರಕಾರೇತರ ಭಯೋತ್ಪಾದನಾ ಸಂಘಟನೆಯಾಗಿದ್ದ ಅಲ್ ಖಯೀದಾ ಅಧ್ಯಕ್ಷ ಜಾಫರ್ ನಿಮೇರಿಯ ಪತನಾನಂತರ ಶೀಘ್ರಗತಿಯಲ್ಲಿ ಇಸ್ಲಾಮಿಕ್ ಮೂಲಭೂತವಾದದ ತೊಟ್ಟಿಲಾಗಿ ಬದಲಾದ ಸುಡಾನ್‌ನಲ್ಲಿ ಕಾಲೂರಿದರೂ ಅದಕ್ಕೆ ಗಟ್ಟಿಯಾದ ನೆಲೆ ಸಿಕ್ಕಿದ್ದು ತೊಂಬತ್ತರ ದಶಕದ ಮಧ್ಯದಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರದ ಸೂತ್ರಗಳನ್ನು ಹಿಡಿದಾಗ.  ಹೀಗೆ ಅಲ್ ಖಯೀದಾ ಸುಡಾನ್ ಮತ್ತು ಅಫಘಾನಿಸ್ತಾನಗಳಲ್ಲಿ ಶಾಶ್ವತ ನೆಲೆ ಮತ್ತು ಪಾಕಿಸ್ತಾನ ಮತ್ತು ಕಶ್ಮೀರಗಳಲ್ಲಿ ಬೆಂಬಲದ ಗೂಡುಗಳನ್ನು ಗಳಿಸಿಕೊಂಡು ತನ್ನ ಮುಂದಿನ ಕರಾಳ ಹಂಚಿಕೆಗಳ ಸೂಚನೆಗಳನ್ನು ಆಗಾಗ ನೀಡತೊಡಗಿದರೂ ಇದ್ಯಾವುದನ್ನೂ ಅಮೆರಿಕಾ ಆಗಲೀ ವಿಶ್ವವಾಗಲೀ ಗಣನೆಗೆ ತೆಗೆದುಕೊಳ್ಳದೇ ಹೋದದ್ದು ದುರಂತ.  ಅಲ್ ಖಯೀದಾ ಬೆಳೆದ ಬಗೆ ಒಂದು ತಲೆಮಾರಿನ ಬೇಜವಾಬ್ದಾರಿ ವರ್ತನೆಗೆ ಮುಂದಿನ ತಲೆಮಾರು ತೆರಬೇಕಾದ ಭೀಕರ ಬೆಲೆಗೆ ಒಂದು ಉದಾಹರಣೆ.
ದಶಕದ ಹಿಂದೆ ಸೆಪ್ಟೆಂಬರ್ ೧೧ರ ಮಂಗಳವಾರದ ಆ ನಿರ್ಣಾಯಕ ಬೆಳಗಿನಲ್ಲಿ ಕೇವಲ ಪ್ರಯಾಣಿಕರ ವಿಮಾನಗಳನ್ನೇ ಅಸ್ತ್ರಗಳನ್ನಾಗಿ ಬಳಸಿ ಹಿಂದಿನ ಯಾವುದೇ ಶತ್ರುಗಳಾದ ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್‌ಗಳು ಎಸಗಲಾಗದಿದ್ದಷ್ಟು ಹಾನಿಯನ್ನು ಅಮೆರಿಕಾಗೆ ಅಲ್ ಖಯೀದಾ ಎಸಗಿದ್ದು ಎಲ್ಲರಿಗೂ ತಿಳಿದದ್ದೇ.  ಆ ಧಾಳಿಯ ನಂತರ ಎಚ್ಚತ್ತುಕೊಂಡ ಅಮೆರಿಕಾ ತನ್ನ ಗಡಿಯೊಳಗೆ ತೆಗೆದುಕೊಂಡ ಸುರಕ್ಷಾಕ್ರಮಗಳಿಂದ ಹಾಗೂ ಅಫಘಾನಿಸ್ತಾನ ಮತ್ತ್ತು ಇರಾಕಿನಲ್ಲಿ ಕೈಗೊಂಡ ಮಿಲಿಟರಿ ಕಾರ್ಯಾಚರ್ಣೆಗಳು ಮತ್ತು ಆ ಮೂಲಕ ಅಲ್ ಖಯೀದಾ ಮತ್ತದರ ಬೆಂಬಲಿಗರ ಮೇಲೆ ಹೇರಿದ ಒತ್ತಡಗಳಿಂದಾಗಿ ತನ್ನ ನೆಲದ ಮೇಲೆ ಹಾಗೂ ಇತರೆಡೆ ತನ್ನ ಹಿತಾಸಕ್ತಿಗಳ ಮೇಲೆ ಮತ್ತೊಂದು ಘಾತಕ ಧಾಳಿಯಾಗದಂತೆ ನೋಡಿಕೊಂಡಿದೆ
ನಾಲ್ಕನೆಯ ಹಂತ: ೨೦೧೧ರಿಂದೀಚೆಗೆ
ಕಳೆದ ಮೇ ೧ರಂದು ಅಮೆರಿಕಾ ಲಾಡೆನ್‌ನನ್ನು ಅವನ ಅಡಗುದಾಣದಲ್ಲೇ ನಿರ್ಮೂಲಗೊಳಿಸಿ ಅಲ್ ಖಯೀದಾವನ್ನು ನಿರ್ವೀರ್ಯಗೊಳಿಸಿದ ನಂತರ ಹಾಗೂ ಲಿಬಿಯಾದಲ್ಲಿ ಅಧ್ಯಕ್ಷ ಗಢಾಫಿಯ ಪತನಾನಂತರ ಸರಕಾರೀ ಪ್ರಾಯೋಜಿತ ಭಯೋತ್ಪಾದನೆ ವಿಶ್ವರಂಗದಲ್ಲಿ ಅಂತ್ಯವಾಯಿತೆಂಬ ನಂಬಿಕೆ ಕೆಲವೇ ದಿನಗಳಲ್ಲಿ ಹುಸಿಯಾಗಿದೆ.  ಇದಕ್ಕೆ ಕಾರಣವಾಗಿ ಎಂಬತ್ತರ ದಶಕದ ಲಿಬಿಯಾದ ವರ್ತನೆಗಳನ್ನು ಮರುಕಳಿಸುವಂತೆ ಮಾಡುತ್ತಿರುವುದು ಇರಾನ್.  ಈ ಬೆಳವಣಿಗೆ ಸಮಕಾಲೀನ ಇರಾನ್ ಎದುರಿಸುತ್ತಿರುವ ಎರಡು ಧಾರ್ಮಿಕ-ರಾಜಕೀಯ ಗೊಂದಲಗಳು ಮತ್ತು ಅವುಗಳಿಂದ ಹೊರಬರಲು ತೆಹರಾನ್ ಹುಡುಕಿಕೊಂಡ ಎರಡು ನಕಾರಾತ್ಮಕ ನೀತಿಗಳು ಕಾರಣವಾಗಿವೆ.
ಆಧುನಿಕ ಇರಾನ್‌ನ ರಾಜಕೀಯ ಹಾಗೂ ಸಾಮಾಜಿಕ ದಿಕ್ಕುದೆಸೆಯನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟ ಆಯತೊಲ್ಲಾ ಖೊಮೇನಿ ೧೯೭೯ರ ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬಂದ ನಂತರ ತನ್ನ ದೇಶಕ್ಕೆ ಇಸ್ಲಾಮಿಕ್ ಜಗತ್ತಿನ ನಾಯಕತ್ವ ದೊರಕಿಸಿಕೊಡಲು ಸೌದಿ ಅರೇಬಿಯಾ ಜತೆ ಸೈದ್ಧಾಂತಿಕ ಸಮರಕ್ಕಿಳಿದ.  ಆದರೆ ಸುನ್ನಿ ಪ್ರಾಬಲ್ಯದ ಇಸ್ಲಾಮಿಕ್ ಜಗತ್ತಿನಲ್ಲಿ ಶಿಯಾ ಇರಾನ್‌ಗೆ ಮನ್ನಣೆ ಸಿಗದಿದ್ದಾಗ ಇರಾನಿ ನಾಯಕರಿಗೆ ಹೊಳೆದ ಮಾರ್ಗ ಉಗ್ರ ಇಸ್ರೇಲ್-ವಿರೋಧಿ ನೀತಿ.  ಈ ನೀತಿಯ ಅಂಗವಾಗಿಯೇ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ, ಪ್ಯಾಲೆಸ್ತೈನ್‌ನಲ್ಲಿ ಹಮಸ್ ಸೇರಿದಂತೆ ಕೆಲವು ಪ್ರಮುಖ ಇಸ್ರೇಲ್-ವಿರೋಧೀ ಭಯೋತ್ಪಾದಕ ಸಂಘಟನೆಗಳಿಗೆ ಇರಾನ್ ಬೆಂಬಲ ನೀಡತೊಡಗಿತು.  ಇದರ ಜತೆಗೆ ಇತ್ತೀಚೆಗೆ ಇರಾನ್‌ನ ಅಣ್ವಸ್ತ್ರದ ಬಯಕೆಗೆ ಪಶ್ಚಿಮದ ರಾಷ್ಟ್ರಗಳು, ಮುಖ್ಯವಾಗಿ ಅಮೆರಿಕಾ ಒಡ್ಡುತ್ತಿರುವ ತಡೆಗೆ ಪ್ರತಿಯಾಗಿ ಮುಸ್ಲಿಂ ಜಗತ್ತಿನ ಬೆಂಬಲ ಗಳಿಸಲು ಮತ್ತು ತನ್ನ ಪ್ರತಿಕ್ರಿಯಾಸಾಮರ್ಥ್ಯವನ್ನು ಪ್ರದರ್ಶಿಸಲು ತೆಹರಾನ್ ಭಯೋತ್ಪಾದನಾ ಮಾರ್ಗವನ್ನು ಹಿಡಿದಿದೆ.  ಕಳೆದ ಎರಡು ತಿಂಗಳುಗಳಲ್ಲಿ ಏಶಿಯಾದ ಅರ್ಧ ಡಜನ್ ದೇಶಗಳಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಅಥವಾ ಅದರ ವಿಫಲಯತ್ನಕ್ಕೆ ಅದು ಕಾರಣವಾಗಿದೆ.  ಫೆಬ್ರವರಿ ೧೩ರಂದು ದೆಹಲಿಯಲ್ಲಿ ಇಸ್ರೇಲಿ ರಾಜತಂತ್ರಜ್ಞೆಯೊಬ್ಬರ ಮೇಲೆ ನಡೆದ ಧಾಳಿ, ಅದೇ ದಿನ ಜಾರ್ಚಿಯಾದ ರಾಜಧಾನಿ ತಿಬಿಲೀಸಿಯಲ್ಲಿ ಇಸ್ರೇಲೀ ದೂತಾವಾಸದ ವಾಹನವೊಂದರ ಕೆಳಗೆ ಅಡಗಿಸಿಟ್ಟಿದ್ದ ಗ್ರೆನೇಡ್, ಅದರ ಮರುದಿನ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ತನ್ನದೇ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಸಿಕ್ಕಿಬಿದ್ದ ಇರಾನೀ ಭಯೋತ್ಪಾದಕ ಮತ್ತು ಈ ಹಂಚಿಕೆಗೆ ಸಂಬಂಧಿಸಿದಂತೆ ಥಾಯ್ಲೆಂಡ್ ಮತ್ತು ಮಲೇಶಿಯಾದಲ್ಲಿ ಸೆರೆಸಿಕ್ಕ ಮತ್ತಿಬ್ಬರು ಇರಾನೀಯರು, ಮಾರ್ಚ್ ೧೫ರಂದು ಅಜರ್‌ಬೈಜಾನ್‌ನಲ್ಲಿ ಅಮೆರಿಕಾ ಮತ್ತು ಇಸ್ರೇಲ್ ಹಿತಾಸಕ್ತಿಗಳ ಮೇಲೆ ಧಾಳಿಯೆಸಗಲು ಯೋಜನೆ ರೂಪಿಸುತ್ತಿದ್ದ ಆರೋಪದ ಮೇಲೆ ಬಂಧಿತರಾದ ಮೂವತ್ತೆರಡು ಇರಾನೀಯರು ಇರಾನ್‌ನ ಈ ಹೊಸ ರೂಪಕ್ಕೆ ಸಾಕ್ಷಿ.  ಈ ಪ್ರಕರಣಗಳು ಭಯೋತ್ಪಾದನೆಯನ್ನು ವಿದೇಶನೀತಿಯ ಅಂಗವಾಗಿ ಇರಾನ್ ಅನುಸರಿಸಲಾರಂಭಿಸಿರುವುದರ ಸ್ಪಷ್ಟ ಸೂಚನೆ.
ಆದರೆ ಭಯೋತ್ಪಾದನೆಯನ್ನು ವಿದೇಶನೀತಿಯಾಗಿ ಅನುಸರಿಸಿದ ಯಾವ ರಾಷ್ಟ್ರವೂ ಇದುವರೆಗೆ ಯಶಸ್ವಿಯಾಗಿಲ್ಲ ಮತ್ತು ಆ ನೀತಿ ಅನುಸರಿಸಿದ ನಾಯಕರು ಹೀನಾಯವಾಗಿ ಚರಿತ್ರೆಯ ಕಸದಬುಟ್ಟಿಗೆ ಸೇರಿದ್ದಾರೆ ಎಂಬ ಐತಿಹಾಸಿಕ ಸತ್ಯದ ಹಿನ್ನೆಲೆಯಲ್ಲಿ ಇರಾನ್‌ನ ಈ ಹೊಸರೂಪದ ವಿಫಲತೆಯನ್ನು ಮುಂಗಾಣಬಹುದು.  ಅದರಲ್ಲೂ, ಇರಾನಿ ತೈಲದ ಮೇಲೆ ಅವಲಂಬಿತವಾದ ಚೈನಾದಂತಹ ಬೆರಳೆಣಿಕೆಯ ಕೆಲವು ದೇಶಗಳ ಹೊರತಾಗಿ ನೈಜ ನೇಹಿಗರೇ ಇಲ್ಲದ ಹಾಗೂ ಧಾರ್ಮಿಕ, ರಾಜಕೀಯ ಕಾರಣಗಳಿಂದಾಗಿ ಮುಸ್ಲಿಂ ಜಗತ್ತಿನಲ್ಲೂ ಒಂಟಿಯಾಗಿರುವ ತೆಹರಾನ್ ತನ್ನ ಈಗಿನ ಹಾದಿಯಲ್ಲಿ ಯಶಸ್ವಿಯಾಗುವ ಸಾಧ್ಯತೆ ಲವಲೇಶವೂ ಇಲ್ಲ.  ಜತೆಗೇ, ಹಿಂದೆ ಭಯೋತ್ಪಾದನಾ ಸಂಘಟನೆಗಳು ಫ್ರಾಂಕೆನ್‌ಸ್ಟೈನ್ ರಕ್ಕಸನಾಗಿ ಬೆಳೆದು ತನ್ನ ಸೃಷ್ಟಿಕರ್ತ ಹಾಗೂ ಪೋಷಕರಿಗೇ ತಲೆನೋವಾದದ್ದುಂಟು.  ಇಸ್ರೇಲ್-ವಿರೋಧಿ ಅರಬ್ ಭಯೋತ್ಪಾದಕ ಸಂಘಟನೆಗಳು ತಮ್ಮೆಲ್ಲಾ ಚಟುವಟಿಕೆಗಳಿಗೆ ಅನಿಯಂತ್ರಿತ ಬೆಂಬಲ ಸಿಗದೇ ಹೋದಾಗ ಅರಬ್ ರಾಷ್ಟ್ರಗಳ ವಿರುದ್ಧವೇ ತಿರುಗಿಬಿದ್ದದ್ದು ತೆಹೆರಾನ್‌ಗೆ ಒಂದು ಪಾಠವಾಗಬೇಕು.  ಭಾರತ-ವಿರೋಧಿ ಭಯೋತ್ಪಾದನೆಯನ್ನು ದಶಕಗಳವರೆಗೆ ಪ್ರಾಯೋಜಿಸಿದ ಪಾಕಿಸ್ತಾನ ಈಗ ಅದೇ ಭಯೋತ್ಪಾದಕರಿಂದ ಇನ್ನಿಲ್ಲದ ಕೋಟಲೆಗೀಡಾಗಿರುವುದನ್ನು ಇರಾನೀ ನಾಯಕರು ಅಗತ್ಯವಾಗಿ ಗಮನಿಸಬೇಕು.
ಇಡೀ ಬೆಳವಣಿಗೆಯನ್ನು ಮತ್ತೊಂದು ಮಗ್ಗುಲಿಂದ ನೋಡುವುದಾದರೆ, ಇರಾನೀ ನಾಯಕತ್ವದ ನಕಾರಾತ್ಮಕ ನಡವಳಿಕೆಯಿಂದಾಗಿ ವಿಶ್ವದಲ್ಲಿ ನಿರ್ಲಕ್ಷಕ್ಕೊಳಗಾಗಿರುವ ಇರಾನೀ ಜನತೆ ಮೈಕೊಡವಿ ಮೇಲೆದ್ದು ಬದಲಾವಣೆಯ ರಣಕಹಳೆಯೂದುವುದು ಮತ್ತು ಅವರ ಬೆಂಬಲಕ್ಕೆ ವಿಶ್ವಸಮುದಾಯ ನಿಂತು ವರ್ಷದ ಹಿಂದೆ ಲಿಬಿಯಾದಲ್ಲಾದದ್ದು ಇರಾನ್‌ನಲ್ಲಿ ಮರುಕಳಿಸಲೂಬಹುದು ಎಂದು ಆಶಿಸಬಹುದು.
***     ***     ***
ಬುಧವಾರ, ಏಪ್ರಿಲ್ ೧೧, ೨೦೧೨ರ "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ

Sunday, April 8, 2012

ಲೇಖನ- "ಸುತ್ತಮುತ್ತ ಚೀನೀ ಭೂತ"


ಬುಧವಾರ, ಏಪ್ರಿಲ್ ೪, ೨೦೧೨ರ "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ

ಇತ್ತೀಚಿನ ದಿನಗಳಲ್ಲಿ ಭಾರತದ ಸುತ್ತಮುತ್ತ ಚೀನೀ ಪ್ರಭಾವ ತೀವ್ರಗತಿಯಲ್ಲಿ ಏರುತ್ತಿದೆ.  ಪಶ್ಚಿಮದಲ್ಲಿ ಪಾಕಿಸ್ತಾನದ ಗ್ವಾಡಾರ್‌ನಲ್ಲಿ ಚೀನೀಯರು ನೌಕಾನೆಲೆಯೊಂದನ್ನು ನಿರ್ಮಿಸಿದ್ದಾರೆ, ಪೂರ್ವದಲ್ಲಿ ಬಾಂಗ್ಲಾದೇಶದ ಚಿಟ್ಟಗಾಂಗ್‌ನಲ್ಲಿ ಆರ್ಥಿಕ ಹಾಗೂ ಸಾಮರಿಕ ಮಹತ್ವದ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ, ಮಿಯಾನ್ಮಾರ್‌ನ ಸಿಟ್ವೇಯಲ್ಲಿ ಬಂದರೊಂದನ್ನು ನಿರ್ಮಿಸಿದ್ದಾರೆ, ಮಿಯಾನ್ಮಾರ್‌ಗೇ ಸೇರಿದ ಕೋಕೋ ದ್ವೀಪಗಳಲ್ಲಿ ಚೀನೀ ನೌಕಾನೆಲೆ ಈಗಾಗಲೇ ಅಸ್ತಿತ್ವದಲ್ಲಿದೆ, ದಕ್ಷಿಣದಲ್ಲಿ ಶ್ರೀಲಂಕಾದ ಹಂಬನ್‌ತೋಟದಲ್ಲಿ ಬಂದರೊಂದನ್ನು ನಿರ್ಮಿಸುವ ಕಾರ್ಯದಲ್ಲಿ ಚೀನೀಯರು ತೊಡಗಿದ್ದಾರೆ.
ಇವುಗಳ ಜತೆಗೇ ದಕ್ಷಿಣ ಚೈನಾ ಸಮುದ್ರದಲ್ಲಿನ ಹೈನಾನ್ ದ್ವೀಪ ಮತ್ತು ಪರಾಸೆಲ್ ದ್ವೀಪಸಮುಚ್ಚಯದ ವೂಡಿ ದ್ವೀಪದಲ್ಲಿರುವ ಚೀನೀ ನೌಕಾನೆಲೆಗಳನ್ನು ಒಟ್ಟಿಗೆ ಸೇರಿಸಿ String of Pearls (ಮುತ್ತಿನ ಹಾರ) ಎಂಬ ಚಂದದ ಹೆಸರಿನಿಂದ ಕರೆಯುವ ವಾಡಿಕೆಯನ್ನು ಪಶ್ಚಿಮದ ವಿದ್ವಾಂಸರು ಮತ್ತು ಅವರನ್ನು ಅನುಕರಿಸುವ ಭಾರತೀಯ ವಿದ್ವಾಂಸರು ಕಳೆದ ಆರೇಳು ವರ್ಷಗಳಿಂದ ಬೆಳೆಸಿಕೊಂಡಿದ್ದಾರೆ.  ಆದರೆ ಈ ಚೀನೀ ನೆಲೆಗಳ ಸ್ವರೂಪ ಮತ್ತು ಉದ್ದೇಶಗಳ ಆಧಾರದ ಮೇಲೆ ಇವುಗಳನ್ನು "ಮುತ್ತುಗಳು" ಎಂದು ಹೆಸರಿಸುವುದು ಹಾಸ್ಯಾಸ್ಪದ.  ಮುಂದೊಮ್ಮೆ ಭಾರತ ಮತ್ತು ಚೈನಾಗಳ ನಡುವೆ ಯುದ್ಧವೇನಾದರೂ ಸಂಭವಿಸಿದರೆ ಅದು ೧೯೬೨ರಲ್ಲಾದಂತೆ ಹಿಮಾಲಯದ ಗಡಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ.  ಬದಲಾಗಿ, ಭಾರತದ ಸುತ್ತಲೂ ಹರಡಿಕೊಂಡಿರುವ ತನ್ನೀ ನೆಲೆಗಳಿಂದ ಭಾರತದ ಮೂರೂ ಕಡೆಯ ಸಾಗರತೀರಗಳಿಗೆ ತೀವ್ರತಮ ಅಪಾಯವೊಡ್ಡಲು ಅಂದರೆ ಭಾರತವನ್ನು ಮಾರಣಾಂತಿಕವಾಗಿ 'ಕುಟುಕಲು' ಚೈನಾಗೆ ಅನುಕೂಲವಾಗುತ್ತದೆ!  ಈ ಅಪಾಯದ ಆಧಾರದ ಮೇಲೆ ಚೀನೀ ನೆಲೆಗಳಿಗೆ ಅನ್ವರ್ಥವಾದ ಹೆಸರೆಂದರೆ "ಕುಟುಕುಕೊಂಡಿಗಳು" ಮತ್ತು ಇವುಗಳನ್ನು ಒಟ್ಟಿಗೆ ಸೇರಿಸಿ String of Stings (ಕುಟುಕುಕೊಂಡಿಗಳ ಹಾರ) ಎಂದು ಕರೆಯುವುದು ಎಲ್ಲ ರೀತಿಯಿಂದಲೂ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ.
ಈ ಕುಟುಕುಕೊಂಡಿಗಳಲ್ಲಿ ಮುಖ್ಯವಾದುವುಗಳನ್ನು ಚೈನಾ ಗಳಿಸಿಕೊಂಡ ಬಗೆ ಮತ್ತು ಅದರಲ್ಲಿ ನಮ್ಮ ಬೇಜವಾಬ್ದಾರೀ ನಡವಳಿಕೆಯನ್ನು ಸ್ವಲ್ಪ ಪರಿಶೀಲಿಸೋಣ.
ಮೂಲತಃ ಚೈನಾ ಮತ್ತು ಪಾಕಿಸ್ತಾನಗಳ ನಡುವೆ ನೇರ ಭೂಸಂಪರ್ಕ ಇರಲಿಲ್ಲ.  ಆದರೆ ೧೯೪೭-೪೮ರ ಪ್ರಥಮ ಕಶ್ಮೀರ ಯುದ್ಧದಲ್ಲಿ ಕಶ್ಮೀರದ ಪಶ್ಚಿಮೋತ್ತರ ಭಾಗದ ಮೇಲೆ ಪಾಕಿಸ್ತಾನ ಹತೋಟಿ ಸ್ಥಾಪಿಸಿದಾಗ ಮತ್ತು ಅದನ್ನು ತೆರವುಗೊಳಿಸಲು ಜನವರಿ ೧, ೧೯೪೯ರ ಕದನವಿರಾಮದ ನಂತರ ಭಾರತ ಅಕ್ಷರಷಃ ಯಾವುದೇ ಪ್ರಯತ್ನ ಮಾಡದಿದ್ದಾಗ ಆ ಪ್ರದೇಶದ ಮೂಲಕ ಪಾಕಿಸ್ತಾನ ಚೈನಾದ ಜತೆ ಭೂಸಂಪರ್ಕ ಸಾಧಿಸಿತು.  ಐವತ್ತರ ದಶಕದಲ್ಲಿ ಕಶ್ಮೀರದ ಪೂರ್ವೋತ್ತರ ಭಾಗವಾದ ಲದಾಖ್‌ನ ಮೇಲೆ ಚೀನೀಯರು ಹತೋಟಿ ಸ್ಥಾಪಿಸಿ ಎರಡೂ ದೇಶಗಳ ನಡುವೆ ಸಂಬಂಧಗಳು ತೀವ್ರಗತಿಯಲ್ಲಿ ಕಲುಷಿತಗೊಳ್ಳತೊಡಗಿದಾಗಲಾದರೂ ಪಾಕಿಸ್ತಾನ ಮತ್ತು ಚೈನಾಗಳ ನಡುವೆ ಭೂಸಂಪರ್ಕ ಮುಂದೊಮ್ಮೆ ಭಾರತಕ್ಕೆ ಒಡ್ಡಬಹುದಾದ ಅಪಾಯವನ್ನು ನೆಹರೂ ಸರಕಾರ ಮನಗಾಣದೇ ಹೋದದ್ದು ದುರಂತ.  ೧೯೬೨ರ ಭಾರತ - ಚೈನಾ ಯುದ್ಧವಾದ ಎರಡೇ ತಿಂಗಳಲ್ಲಿ ಚೈನಾ ಮತ್ತು ಪಾಕಿಸ್ತಾನ ತಮ್ಮ ನಡುವಿನ ಗಡಿಯನ್ನು ಅಧಿಕೃತವಾಗಿ ಗುರುತಿಸಿ ಮಾನ್ಯ ಮಾಡುವ ಒಪ್ಪಂದವೊಂದಕ್ಕೆ ಸಹಿ ಹಾಕಿ ದೂರಗಾಮೀ ಮಿತ್ರತ್ವಕ್ಕೆ ನಾಂದಿ ಹಾಡಿದವು.  ನಂತರ ಜಿಯಾ-ಉಲ್-ಹಖ್ ಕಾಲದಲ್ಲಿ ಬಲೂಚಿಸ್ತಾನದ ಗ್ವಾಡಾರ್ ಬಂದರನ್ನು ಸೌದಿ ಅರೇಬಿಯಾದ ಸಹಕಾರದಿಂದ ಅಭಿವೃದ್ಧಿಪಡಿಸಲು ಪಾಕಿಸ್ತಾನ ಆರಂಭಿಸಿದರೂ ಅನತೀಕಾಲದಲ್ಲೇ ಅರಬ್ಬರು ಅಲ್ಲಿಂದ ಮಾಯವಾಗಿ ಅವರ ಸ್ಥಾನದಲ್ಲಿ ಚೀನೀಯರು ತುಂಬಿಕೊಂಡರು.  ಈಗಲ್ಲಿ ಚೀನೀಯರ ಚಟುವಟಿಕೆ ಅದೆಷ್ಟು ಮುಂದುವರಿದಿದೆಯೆಂದರೆ ಅವರೀಗ ಚೈನಾವನ್ನು ಅರಬ್ಬೀ ಸಮುದ್ರಕ್ಕೆ ಜೋಡಿಸುವ ರೈಲುಹಾದಿಯನ್ನು ನಿರ್ಮಿಸುವ ಸಾಹಸಕ್ಕೆ ಕೈಹಾಕಿದ್ದಾರೆ!
ಪಾಕ್ ಆಕ್ರಮಿತ ಕಶ್ಮೀರದ ಗಿಲ್ಗಿಟ್ - ಬಾಲ್ಟಿಸ್ತಾನದ ದುರ್ಗಮ ಪರ್ವತ ಪ್ರದೇಶದಲ್ಲಿ ಚೈನಾ ಮತ್ತು ಪಾಕಿಸ್ತಾನಗಳನ್ನು ಸಂಪರ್ಕಿಸುವ "ಕಾರಾಕೊರಂ ಹೆದ್ದಾರಿ"ಯನ್ನು ಚೀನೀಯರು ನಾಲ್ಕು ದಶಕಗಳ ಹಿಂದೆಯೇ ನಿರ್ಮಿಸಿದರಷ್ಟೇ.  ಎಂಬತ್ತರ ದಶಕದಲ್ಲಿ ಪರಮಾಣು ಅಸ್ತ್ರಕ್ಕೆ ಅಗತ್ಯವಾದ ಪರಿಕರಗಳು ಚೈನಾದಿಂದ ಪಾಕಿಸ್ತಾನಕ್ಕೆ ಹರಿದುಬಂದದ್ದು ಮತ್ತು ೧೯೮೭ರಲ್ಲಿ ಪಾಕಿಸ್ತಾನದ ಮೊತ್ತಮೊದಲ ಪರಮಾಣು ಅಸ್ತ್ರ ಪರೀಕ್ಷೆಗೆಂದು ಚೈನಾದ ಲಾಪ್‌ನಾರ್‌ಗೆ ರಹಸ್ಯವಾಗಿ ಸಾಗಿಸಲ್ಪಟ್ಟದ್ದು ಈ ಮಾರ್ಗದ ಮೂಲಕ.  ಈಗ ಚೀನೀಯರು ನಿರ್ಮಿಸಹೊರಟಿರುವ ರೈಲುಹಾದಿ ಈ ಕಾರಾಕೊರಂ ಹೆದ್ದಾರಿಗೆ ಹೊಂದಿಕೊಂಡಂತೇ ಸಾಗುತ್ತದೆ.
ಪಶ್ಚಿಮ ಚೈನಾದ ಕಾಶ್‌ಗರ್‌ನಿಂದ ಅರಬ್ಬೀ ಸಮುದ್ರತೀರದಲ್ಲಿನ ಗ್ವಾಡಾರ್ ಬಂದರಿಗೆ ಸಂಪರ್ಕ ಕಲ್ಪಿಸುವ ಈ ರೈಲುಹಾದಿ ಕೇವಲ ಆರ್ಥಿಕ ಮಹತ್ವದ್ದು ಎಂದು ಚೈನಾ ಹೇಳುತ್ತಿದೆ.  ಪಶ್ಚಿಮ ಏಶಿಯಾದ ತೈಲರಾಷ್ಟ್ರಗಳಿಂದ ಚೈನಾದ ಪೂರ್ವತೀರದ ಬಂದರುಗಳಿಗೆ ಜಲಮಾರ್ಗದಲ್ಲಿ ತೈಲ ಸಾಗಿಸಲು ಈಗ ಇಪ್ಪತ್ತೊಂದು ದಿನಗಳು ಬೇಕಾಗುತ್ತವೆ.  ಆದರೆ ಈ ರೈಲುಹಾದಿ ಪೂರ್ಣಗೊಂಡ ನಂತರ ಈ ತೈಲ ಸಾಗಾಟಕ್ಕೆ ತಗಲುವ ಕಾಲ ಕೇವಲ ನಲವತ್ತೆಂಟು ಗಂಟೆಗಳು!  ಈ ದೃಷ್ಟಿಯಿಂದ ಈ ರೈಲುಹಾದಿ ಚೀನೀಯರಿಗೆ ಆರ್ಥಿಕವಾಗಿ ಅತ್ಯಂತ ಅನುಕೂಲಕರ ಎಂಬುದು ನಿಜವಾದರೂ ಅದರ ಸಾಮರಿಕ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ.  ಭಾರತ ಮತ್ತು ಚೈನಾಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿದ ಪಕ್ಷದಲ್ಲಿ ಚೈನಾ ತನ್ನ ಸೈನಿಕರನ್ನು ತ್ವರಿತಗತಿಯಲ್ಲಿ ಅರಬ್ಬೀ ಸಮುದ್ರತೀರಕ್ಕೆ ಕಳುಹಿಸಿ ಭಾರತದ ಪಶ್ಚಿಮ ತೀರಕ್ಕೆ ಅಪಾಯವೊಡ್ಡಲು ಈ ರೈಲುಹಾದಿ ಸಹಕಾರಿಯಾಗಬಲ್ಲುದು.
ಇನ್ನು ಪೂರ್ವದತ್ತ ತಿರುಗೋಣ.
ಅಂಡಮಾನಿನ ಉತ್ತರದಲ್ಲಿದ್ದ ಎರಡು ಪುಟ್ಟ ಕೋಕೋ ದ್ವೀಪಗಳು ತನಗೆ ಸೇರಬೇಕೆಂದು ಮಿಯಾನ್ಮಾರ್ (ಹಿಂದಿನ ಬರ್ಮಾ) ಐವತ್ತರ ದಶಕದ ಆರಂಭದಲ್ಲಿ ವಾದಿಸಿತು.  ಆಧಾರ ತೋರಿಸಿ ಎಂದು ನೆಹರೂ ಕೇಳಿದಾಗ ಮಿಯಾನ್ಮಾರಿಗಳು ಮುಂದೆ ಮಾಡಿದ್ದು ಒಂದೂವರೆ ಶತಮಾನಗಳ ಹಿಂದೆ ಆ ದ್ವೀಪಗಳಲ್ಲಿ ದಕ್ಷಿಣ ಮಿಯಾನ್ಮಾರ್‌ನ ಹಂಪಾವದೀ ಜಿಲ್ಲೆಯ ರೆವಿನ್ಯೂ ಅಧಿಕಾರಿಗಳು ತೆರಿಗೆ ಸಂಗ್ರಹಿಸಿದ್ದರು ಎನ್ನಲಾದ ದಾಖಲೆ.  ಅದನ್ನು ಮನ್ನಿಸಿದ ಶಾಂತಿದೂತ ನೆಹರೂ ಆ ದ್ವೀಪಗಳನ್ನು ಮಿಯಾನ್ಮಾರ್‌ಗೆ ಒಪ್ಪಿಸಿದರು.  ಆನಂತರ ಮಿಯಾನ್ಮಾರ್ ಆ ದ್ವೀಪಗಳನ್ನು ಚೈನಾಗೆ ಗುತ್ತಿಗೆಗೆ ಕೊಟ್ಟು ಅವರಲ್ಲಿ ನೌಕಾ ನೆಲೆಗಳನ್ನು ನಿರ್ಮಿಸಿದ್ದಾರೆ.  ಜತೆಗೇ ಹಿಂದುಳಿದ ಮಿಯಾನ್ಮಾರ್‌ನತ್ತ ಭಾರತ ನಿರ್ಲಕ್ಷ ತೋರಿದಾಗ ಚೀನೀಯರು ಆ ದೇಶಕ್ಕೆ ಅಗಾಧ ಆರ್ಥಿಕ ನೆರವು ನೀಡಿ ಮಿಯಾನ್ಮಾರಿಗಳ ವಿಶ್ವಾಸ ಗಳಿಸಿ ಆ ದೇಶದ ಬಂಗಾಳ ಕೊಲ್ಲಿ ತೀರದ ಸಿಟ್ವೇಯಲ್ಲಿ ಬಂದರೊಂದನ್ನು ನಿರ್ಮಿಸುವ ಅವಕಾಶವನ್ನು ಗಳಿಸಿಕೊಂಡರು.  ಈಗ ಮಿಯಾನ್ಮಾರ್‌ನ ನೆಲದ ಮೂಲಕ ಚೈನಾವನ್ನು ಬಂಗಾಳ ಕೊಲ್ಲಿಯ ತೀರಕ್ಕೆ ಸಂಪರ್ಕಿಸುವ ರೈಲುಹಾದಿ ನಿರ್ಮಿಸುವಲ್ಲಿ ಚೀನೀಯರು ಕಾರ್ಯನಿರತರಾಗಿದ್ದಾರೆ.  ಈ ರೈಲುಹಾದಿ ಪೂರ್ಣವಾದಾಗ ಚೈನಾ ತನ್ನ ಯುನಾನ್ ಪ್ರಾಂತ್ಯದಿಂದ ಸಿಟ್ವೇ ಬಂದರಿಗೆ ಮತ್ತು ಅಲ್ಲಿಂದ ಬಂಗಾಳಕೊಲ್ಲಿಯ ಕೋಕೋ ದ್ವೀಪಗಳಲ್ಲಿರುವ ತನ್ನ ನೆಲೆಗೆ ಸೈನಿಕರನ್ನೂ, ಯುದ್ಧಸಾಮಗ್ರಿಗಳನ್ನೂ ಒಂದೇ ದಿನದಲ್ಲಿ ಸಾಗಿಸಬಹುದು!
ಇದೆಲ್ಲದರ ಅರ್ಥ- ಮುಂದೊಮ್ಮೆ ಭಾರತ ಮತ್ತು ಚೈನಾಗಳ ನಡುವೆ ಯುದ್ಧವೇನಾದರೂ ಸಂಭವಿಸಿದರೆ ಅದು ಹಿಮಾಲಯ ಗಡಿಗಳಿಂದಾಚೆಗೆ ಹಬ್ಬಿ ಪಾಕಿಸ್ತಾನದ ಗ್ವಾಡಾರ್ ಮತ್ತು ಮಿಯಾನ್ಮಾರ್‌ನ ಕೋಕೋ ದ್ವೀಪಗಳಿಂದ ಹೊರಟ ಚೀನೀ ಯುದ್ಧನೌಕೆಗಳು ಪೂರ್ವ ಪಶ್ಚಿಮಗಳೆರಡರಲ್ಲೂ ನಮ್ಮ ಕಡಲತೀರಗಳಿಗೆ ಬೆದರಿಕೆ ಒಡ್ಡುತ್ತವೆ.  ಗಿಲ್ಗಿಟ್ - ಬಾಲ್ಟಿಸ್ತಾನ್‌ಗಳ ಮೇಲೆ ಪಾಕಿಸ್ತಾನದ ಆಕ್ರಮಣವನ್ನು ತೆರವುಗೊಳಿಸದ ಹಾಗೂ ಕೋಕೋ ದ್ವೀಪಗಳನ್ನು ಮಿಯಾನ್ಮಾರ್‌ಗೆ ಒಪ್ಪಿಸುವ ಎರಡು ಬೇಜವಾಬ್ದಾರೀ ನಿರ್ಣಯಗಳು ಮುಂದೊಮ್ಮೆ ನಮ್ಮ ದೇಶಕ್ಕೆ ಈ ಬಗೆಯ ಅಪಾಯವನ್ನೊಡ್ಡಬಹುದೆಂಬ ಅರಿವು ಅಂದಿನ ನಮ್ಮ ಸರಕಾರಕ್ಕಿರಲಿಲ್ಲ ಎನ್ನುವುದು ನಮ್ಮ ದುರಾದೃಷ್ಟ.  ನನಗೆ ತಿಳಿದಂತೆ ವಿಶ್ವದ ಇನ್ಯಾವ ದೇಶದ ನಾಯಕರೂ ರಾಷ್ಟ್ರದ ಸುರಕ್ಷತೆಯ ವಿಷಯದಲ್ಲಿ ಈ ಬಗೆಯ ಬೇಜವಾಬ್ದಾರಿತನವನ್ನು ಪ್ರದರ್ಶಿಸಿಲ್ಲ.
ಈ ವಲಯದಲ್ಲಿ ಪ್ರಭಾವವನ್ನು ವೃದ್ಧಿಸಿಕೊಂಡು, ಭಾರತದ ಸುತ್ತಲೂ ಕುಟುಕುಕೊಂಡಿಗಳ ಹಾರವನ್ನು ನಿರ್ಮಿಸಿ, ಈ ದೇಶವನ್ನು ಸೈನಿಕವಾಗಿ ಸುತ್ತುವರೆಯುವ ಯೋಜನೆಯಲ್ಲಿ ಯಶಸ್ಸು ಗಳಿಸುತ್ತಿದ್ದಂತೇ ಭಾರತದ ಬಗ್ಗೆ ಚೈನಾದ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಗಳು ಕಾಣಬರುತ್ತಿವೆ.  ಹದಿಮೂರು ವರ್ಷಗಳ ಹಿಂದೆ ಕಾರ್ಗಿಲ್ ಸಮರದ ಸಂದರ್ಭದಲ್ಲಿ ಪಾಕಿಸ್ತಾನವನ್ನು ಚೈನಾ ಬೆಂಬಲಿಸಲಿಲ್ಲ.  ಬದಲಿಗೆ, ತನ್ನ ಸೈನಿಕರನ್ನು ಕಾರ್ಗಿಲ್‌ನಿಂದ ಹಿಂದಕ್ಕೆ ಕರೆಸಿಕೊಂಡು ಕಶ್ಮೀರದಲ್ಲಿ ಶಾಂತಿಸ್ಥಾಪನೆಗೆ ದಾರಿ ಮಾಡಿಕೊಡಬೇಕೆಂದು ಇಸ್ಲಾಮಾಬಾದ್‌ಗೆ ಬುದ್ಧಿಮಾತು ಹೇಳಿತ್ತು.  ಆದರೀಗ ಕಶ್ಮೀರಕ್ಕೆ ಸಂಬಂಧಿಸಿದಂತೆ ಚೈನಾ ಸಾರಾಸಗಟಾಗಿ ಪಾಕಿಸ್ತಾನದ ಪರ ನಿಂತಿದೆ.  ಜತೆಗೇ ೨೦೦೯ರ ಬೇಸಗೆಯಿಂದೀಚೆಗೆ ಅದರ ಸೈನಿಕರು ಲದಾಖ್ ಗಡಿಯಲ್ಲಿ ಭಾರತದ ಪ್ರದೇಶದೊಳಗೆ ಅತಿಕ್ರಮಿಸುವುದು ಅಸ್ವಾಭಾವಿಕ ಎನ್ನುವ ಮಟ್ಟಿಗೆ ನಡೆಯುತ್ತಿದೆ.  ಪೂರ್ವದ ಅರುಣಾಚಲ ಪ್ರದೇಶದಲ್ಲಿ ತನ್ನ ಸಾಮರಿಕ ಸ್ಥಿತಿಯನ್ನು ಭಾರತ ಎಂಬತ್ತರ ದಶಕದಿಂದೀಚೆಗೆ ಗಣನೀಯವಾಗಿ ಉತ್ತಮಗೊಳಿಸಿಕೊಂಡಿರುವುದರಿಂದ ಅಲ್ಲಿ ತನ್ನ ಬೇಳೆ ಬೇಯದು ಎಂದರಿತ ಚೈನಾ ಪಶ್ಚಿಮದ ಲದಾಖ್‌ನಲ್ಲಿ ಅಂದರೆ ಭಾರತ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲದ ಪ್ರದೇಶದಲ್ಲಿ ಒತ್ತಡವನ್ನು ಅಧಿಕಗೊಳಿಸಿ ನವದೆಹಲಿಯ ನೆಮ್ಮದಿಯನ್ನು ಕೆಡಿಸುವ ಪ್ರಯತ್ನ ಮಾಡುತ್ತಿದೆ.  ಈ ಬೆಳವಣಿಗೆಗಳು ಭವಿಷ್ಯದಲ್ಲಿ ಭಾರತ ಎದುರಿಸಬೇಕಾದ ದೊಡ್ಡದೊಂದು ಅಪಾಯದ ಮುನ್ಸೂಚನೆಯಂತೆ ಕಾಣುತ್ತಿವೆ.  ಕಶ್ಮೀರದಲ್ಲಿ ಮೂರೂ ಕಡೆ ಪಾಕಿಸ್ತಾನೀ ಮತ್ತು ಚೀನೀ ಸೇನೆಗಳೆರಡರ ನಡುವೆ ಇಕ್ಕಳದಲ್ಲಿ ಸಿಲುಕುವಂತೆ ಸಿಲುಕಿಕೊಂಡಿರುವ ನಮ್ಮ ಸೇನೆಗೆ ಏಕಕಾಲದಲ್ಲಿ ಎರಡು ರಣಾಂಗಣಗಳಲ್ಲಿ ಸೆಣಸುವ ವಿಷಮ ಪರಿಸ್ಥಿತಿ ಒದಗಬಹುದೆಂಬ ಕಳವಳವನ್ನು ಮಾಜೀ ಸೇನಾ ದಂಡನಾಯಕ ಜನರಲ್ ದೀಪಕ್ ಕಪೂರ್ ಮತ್ತು ಮಾಜೀ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಬ್ರಜೇಶ್ ಮಿಶ್ರಾ ವ್ಯಕ್ತ ಪಡಿಸಿದ್ದಾರೆ.
ಅಂತರರಾಷ್ಟ್ರೀಯ ಪರಿಸ್ಥಿತಿಯೂ ಚೈನಾಗೆ ಅನುಕೂಲಕರವಾಗಿರುವಂತೆ ಕಂಡುಬರುತ್ತಿದೆ.  ಕಳೆದೊಂದು ದಶಕದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಗ್ರಹಿಸುವುದನ್ನಷ್ಟೇ ತನ್ನ ವಿದೇಶನೀತಿಯ ಪ್ರಮುಖ ಗುರಿಯಾಗಿಸಿಕೊಂಡು ತನ್ನ ಚಟುವಟಿಕೆಗಳನ್ನು ಮೆಡಿಟರೇನಿಯನ್ ಸಮುದ್ರದಿಂದ ಪಾಮೀರ್‌ವರೆಗಷ್ಟೇ ಸೀಮಿತಗೊಳಿಸಿಕೊಂಡು ಉಳಿದೆಡೆ ನಿರಾಸಕ್ತವಾಗಿರುವ ಅಮೆರಿಕಾ ದಕ್ಷಿಣ ಏಶಿಯಾ ಮತ್ತು ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಏರುತ್ತಿರುವ ಚೀನೀ ವರ್ಚಸ್ಸನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸ್ಥಿತಿಯಲ್ಲಿಲ್ಲ.  ಇದು ಚೈನಾಗೆ ಒಂದು ವರದಾನ.
***     ***     ***

Wednesday, April 4, 2012

ಕವನ- "ಹೆಜ್ಜೆ ಹಿಮ್ಮುಖವಾದಾಗ..."



ನೆನಪಾಗದೇ ಹೋದ ವಿಷಯ
ಗಳೆಲ್ಲಾ ನಿನ್ನ ಬಗ್ಗೇ
ಅಂದರೆ ನೊಂದುಕೊಳ್ಳಬೇಡ
ಸತ್ಯದ ಒಂದು ಮಗ್ಗಲು ಹೀಗೂ ಇರುತ್ತದೆ
ನನಗೆ ವಿಷಾದವಾಗುತ್ತದೆ

ಜೋಡಿಹೆಜ್ಜೆಗಳಲ್ಲಿ ಕಂಡ ಕನಸು
ಗಳೆಲ್ಲಾ ಏಕಾಕಿತನದ ಬಗ್ಗೇ
ಅಂದರೆ ಮುಖ ತಿರುಗಿಸಬೇಡ
ಬದುಕಿನ ಒಂದು ಮುಖ ಹೀಗೂ ಇರುತ್ತದೆ
ನನಗೆ ಬಿಕ್ಕುವಂತಾಗುತ್ತದೆ

ನನಗೂ ಅನಿಸುತ್ತದೆ ಒಂದಲ್ಲಾ ಒಂದು ದಿನ
ನೆನಪುಗಳು ನವೆದು ಕನಸುಗಳು ಕರಗಿ
ಈ ಬದುಕು ಬರಡು ಬೆಂಗಾಡಾಗಿ ಬತ್ತಲ
ವಾಸ್ತವ ಇದಿರು ನಿಂತು ಹೆದರಿಸಿ
ಹೆಜ್ಜೆ ಹಿಮ್ಮುಖವಾದಾಗ
ಎಲ್ಲೆಲ್ಲೂ ನೀನೇ... ನನ್ನಲ್ಲೂ...
ಇರಬೇಕಿತ್ತೆಂದು... ಬೇಕೆಂದು...
ಸಾವಿರದೊಂದು ಕಥೆಗಳಲ್ಲೊಂದ
ದಿನಕ್ಕೊಂದರಂತೆ
ಹೇಳುತ್ತಿರಬೇಕೆಂದು
ಕೇಳುತ್ತಿರಬೇಕೆಂದು

** ** **