ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, May 28, 2012

ದಾರಿ


ಆ ದಾರಿ ತನ್ನನ್ನು ಊರೊಂದರೊಳಕ್ಕೆ ಕರೆದೊಯ್ಯುತ್ತದೆ ಎಂದವಳು ಊಹಿಸಿರಲೇ ಇಲ್ಲ.  ಇದೂ ಒಂದು ದಾರಿ, ಒಂದಲ್ಲಾ ಒಂದು ದಾರಿ ಹಿಡಿದು ನಡೆಯಲೇಬೇಕಲ್ಲಾ ಅಂದುಕೊಂಡು ಈ ದಾರಿ ಹಿಡಿದು ಬಂದಿದ್ದಳು.
ಕೆಂಪುಮಣ್ಣಿನ ಹಾದಿ.  ಇಕ್ಕೆಲಗಳಲ್ಲಿ ಹಚ್ಚಹಸಿರ ತಂಪಿನ ನಡುವೆ ಹಳ್ಳದಲ್ಲಿಳಿದು ದಿಣ್ಣೆಯೇರಿ ಬಳುಕಿ ಬಳುಕಿ ಸಾಗಿತ್ತು.   ಕಾಲಿಟ್ಟಾಗ ಆಕರ್ಷಕ ಅನಿಸಿದ್ದೇನೋ ನಿಜ.  ಆದರೆ ಎಷ್ಟು ಹೊತ್ತು ನಡೆದರೂ ಅದು ಮುಗಿಯುವುದೇ ಇಲ್ಲವೇನೋ ಅನ್ನುವಂತೆ ಕಂಡಾಗ ಆತಂಕಗೊಂಡಳು.  ಅದರೊಟ್ಟಿಗೆ, ಒಂದು ನರಪಿಳ್ಳೆಯೂ ಎದುರಾಗದಾಗ ಎದೆಯಲ್ಲಿ ಭಯ ಬುಗ್ಗೆಯಾಗಿ ಉಕ್ಕತೊಡಗಿತು.  ಇದು ನನಗೊಬ್ಬಳಿಗೇ ಮೀಸಲಾದ ದಾರಿಯೇನೋ ಎಂದವಳಿಗೆ ಅನುಮಾನ ಬರುವಷ್ಟರಲ್ಲಿ ದಾರಿ ಫಕ್ಕನೆ ಎಡಕ್ಕೆ ಹೊರಳಿತ್ತು.  ಆಗ ಕಂಡಿತು ಆ ಊರು.  ಅದನ್ನು ಕಾಣುತ್ತಿದ್ದಂತೇ ಅವಳು ಗಕ್ಕನೆ ನಿಂತುಬಿಟ್ಟಳು.
ಊರಿಗೆ ಹರದಾರಿ ದೂರವಿರುವಾಗಲೇ ಹೊಸಬರೆದುರು ಅಟ್ಟಹಾಸದಿಂದ ಎಗರಾಡುವ ನಾಯಿಗಳೊಂದೂ ಈ ಊರಲ್ಲಿಲ್ಲವಲ್ಲ!  ಗ್ರಾಮಸಿಂಹಗಳಿಲ್ಲದ ಊರೂ ಉಂಟೇಅವಳಿಗೆ ಅಚ್ಚರಿ.  ಮೂಗಿನ ಮೇಲೆ ಬೆರಳಿಟ್ಟುಕೊಂಡು ನಾಲ್ಕು ಹೆಜ್ಜೆ ಸರಿಸಿದವಳು ಮತ್ತಷ್ಟು ಅಚ್ಚರಿಗೊಳಗಾದಳು.  ಬೀದಿಯಲ್ಲಿ ಜನರೇ ಇಲ್ಲ!  ಹೊತ್ತು ಮಾರುದ್ದ ಏರಿ ಬಿಸಿಲು ಚುರುಗುಟ್ಟುತ್ತಿದ್ದರೂ ಈ ಊರ ಜನರ ನಿದ್ದೆ ಇನ್ನೂ ಕಳೆದಿಲ್ಲವೇಎಂಥಾ ಜನರಪ್ಪ!  ಎಂಥಾ ಊರಪ್ಪ!
ಕುತೂಹಲದಿಂದ ಎದುರಾದ ಮೊದಲ ಮನೆಯತ್ತ ನೋಡಿದರೆ ಅದರ ಬಾಗಿಲು ತೆರೆದಿದೆ!  ಹಾಗೇ ಮುಂದೆ ನೋಟ ಹೊರಳಿಸಿದರೆ ಎಲ್ಲ ಮನೆಗಳ ಬಾಗಿಲುಗಳೂ ತೆರೆದಿವೆ!  ಇದೇನು ಸೋಜಿಗ ಎಂದುಕೊಳ್ಳುತ್ತಾ ಮೊದಲ ಮನೆಯ ಬಾಗಿಲು ಸಮೀಪಿಸಿದಳು.  ಮೂರು ಮೆಟ್ಟಲುಗಳನ್ನು ಅನುಮಾನದಿಂದಲೇ ಏರಿದಳು.  ಹೊಸ್ತಿಲಲ್ಲಿ ನಿಂತು ಒಳಗಿಣುಕಿದಳು.
ಒಳಗೆ ಜೀವದ ಸುಳಿವಿರಲಿಲ್ಲ.  ಗಕ್ಕನೆ ತಲೆ ಹಿಂತೆಗೆದುಕೊಂಡಳು.  ಏರಿದ್ದ ಮೂರು ಮೆಟ್ಟಲುಗಳನ್ನು ಹಾರಿ ಇಳಿದಳು.  ಎದುರು ಮನೆಯತ್ತ ಬಾಣದಂತೆ ಓಡಿದಳು... ಅಲ್ಲಿಂದ ಪಕ್ಕದ ಬಾಗಿಲಿಗೆ ಜಿಗಿದಳು...  ಹತ್ತು ಮನೆಗಳನ್ನು ದಾಟಿ ಹನ್ನೊಂದನೆಯದರ ತೆರೆದ ಬಾಗಿಲಲ್ಲಿ ನಿಂತು "ಯಾರಾದರೂ ಇದ್ದೀರಾ?" ಎಂದು ಕೂಗಿದಳು.
ಉತ್ತರ ಬರಲಿಲ್ಲ.
ದಾರಿಯ ನಟ್ಟನಡುವೆ ನಿಬ್ಬೆರಗಾಗಿ ನಿಂತಳು.
ದಾರಿಯ ಇಕ್ಕೆಲಗಳಲ್ಲಿ ನಿಂತ ಮಾವಿನ ಮರಗಳಲ್ಲಿ ಹೊಂಬಣ್ಣದ ಹಣ್ಣುಗಳು ಗೊಂಚಲುಗೊಂಚಲಾಗಿ ತೂಗುತ್ತಿದ್ದವು.  ಅವುಗಳನ್ನು ಕುಕ್ಕಿ ತಿನ್ನುವ ಒಂದಾದರೂ ಗಿಳಿ ಇರಲಿಲ್ಲ.  ಆಗಸದೆತ್ತರಕ್ಕೆ ತಲೆಯೆತ್ತಿ ನಿಂತಿದ್ದ ತೆಂಗಿನಮರಗಳಲ್ಲಿ ಎಳನೀರುಗಳ ಜೊಂಪೆಗಳೋ ಜೊಂಪೆಗಳು.  ಆದರೆ ಒಂದಾದರೂ ಗೀಜಗನ ಗೂಡು ತೂಗಾಡುತ್ತಿರಲಿಲ್ಲ.  ಒಂದೊಂದು ಮನೆಯ ಮುಂದೂ ಇದ್ದ ಬಾಳೆಮರಗಳಲ್ಲಿ ಕಣ್ಣುಕುಕ್ಕುವ ಮಾಗಿದ ಗೊನೆಗಳು.  ಒಂದಾದರೂ ಮಂಗ ಒಂದಾದರೂ ಹಣ್ಣನ್ನು ಕಿತ್ತ ಕುರುಹೇ ಇಲ್ಲ.  ಇದು ನಿಜಕ್ಕೂ "ಮಂಗಗಳ ಉಪವಾಸ".
ಮಲ್ಲಿಗೆ, ಸೂಜಿಮಲ್ಲಿಗೆ, ಏಳು ಸುತ್ತಿನ ಮಲ್ಲಿಗೆ, ದುಂಡುಮಲ್ಲಿಗೆ, ಚೆಂಡುಮಲ್ಲಿಗೆ, ಸಂಪಿಗೆ, ಕೇದಗೆ, ಪಾರಿಜಾತ, ಗುಲಾಬಿ...  ಅಬ್ಬ ಎಷ್ಟೊಂದು ಹೂಗಳು!  ಬಿರಿದಿರುವುದು ಸಾವಿರ, ಸುರಿದಿರುವುದು ಲಕ್ಷ.
ಹೂ ಮುಡಿವ ಹೆಣ್ಣುಗಳೆಲ್ಲಾ ಎಲ್ಲಿ ಹೊರಟುಹೋಗಿದ್ದಾರೆಹೋಗಲಿ, ದೇವರಿಗಾದರೂ ಹೂ ಏರಿಸಬಾರದೇಅಥವಾ... ಅಥವಾ... ಈ ಊರಲ್ಲಿ ದೇವರೂ ಇಲ್ಲವೇ?
ಅವಳಿಗೆ ಏನೊಂದೂ ತಿಳಿಯಲಿಲ್ಲ.
ಏನಾದರೂ ಶಬ್ಧ ಕೇಳುತ್ತದೆಯೇ ಎಂದು ಕಿವಿ ನಿಮಿರಿಸಿ ಕಾದಳು.
ಮಗುವೊಂದರ ನಗೆ, ಕರುವೊಂದರ ಅಂಬಾ, ಗಿಳಿಯೊಂದರ ಕೀಕೀ, ಅಳಿಲೊಂದರ ಚೀಂವ್ ಚೀಂಚ್ಚಿಕ್ಕಂದಿನಲ್ಲಿ ಅಜ್ಜಿಯ ಮನೆಯ ಹಿಂದಿದ್ದ ಏಕರೆಗಟ್ಟಲೆ ತೋಟದ ಯಾವುದೋ ಮರದಲ್ಲಿ ಅಡಗಿ ಕೂತು "ನಂಗೊಂದ್ ಧೋತ್ರ ಕೊಡು, ನಂಗೊಂದ್ ಧೋತ್ರ ಕೊಡು" ಎಂದು ಒಂದೇ ಸಮಗೆ ರಚ್ಚೆ ಹಿಡಿಯುತ್ತಿದ್ದ ಆ ಗುರುತಿಲ್ಲದ ಹಕ್ಕಿ, ಇಲ್ಲಿ ಬೆಂಗಳೂರಿನಲ್ಲಿ ರಾತ್ರಿ ಅರ್ಧ ಕಳೆದು ಟೀವಿಗಳೆಲ್ಲಾ ಧಾರಾವಾಹಿ ನೋಡಿಕೊಂಡು ಸುಸ್ತಾಗಿ ಕಣ್ಣುಬಾಯಿ ಮುಚ್ಚುತ್ತಿದ್ದಂತೇ ಮುಸುಕಿದ ಮೌನದಲ್ಲಿ "Did you do it?...  Do it… do it… it…" ಎಂದು ಕೂಗಿ ಕೇಳುತ್ತಾ ಮನೆಯ ಮಾಡಿನ ಮೇಲೇ ಹಾರಿಹೋಗುವ ಆ ಹೆಸರಿಲ್ಲದ ಹಕ್ಕಿ...
ಉಹ್ಞುಂ ಏನೂ ಇಲ್ಲ.  ಎಲ್ಲೆಡೆ ಸ್ಮಶಾನ ಮೌನ.  ನೀರವ, ನಿರ್ಮಾನುಷ.  ಜೀವದ ಕುರುಹೇ ಇಲ್ಲದ ಊರು.
ಏನೂ ತಿಳಿಯದೇ ಅವಳು ನಿಧಾನವಾಗಿ ಮುಂದೆ ಕಾಲೆಳೆದಳು.  ತಲೆ ತಗ್ಗಿತ್ತು.  ಹಾಗೇ ಅದೆಷ್ಟು ದೂರ ನಡೆದಳೋ, ದಾರಿ ಒಮ್ಮೆಲೆ ನಿಂತಂತಾಗಿ ತಲೆಯೆತ್ತಿದಳು.  ಎದುರಿಗೆ ಎರಡು ಬೃಹದಾಕಾರದ ಕಲ್ಲಿನ ಆನೆಗಳ ನಡುವಿನ ಮಹಾದ್ವಾರ.
ಯಾರೋ ಕೈ ಹಿಡಿದು ಮುನ್ನಡೆಸಿದಂತೆ ಒಳಗಡಿಯಿಟ್ಟಳು.  ವಿಶಾಲ ಪ್ರಾಂಗಣದಲ್ಲಿ ಹಾದು ದಿಕ್ಕುದಿಕ್ಕುಗಳಿಗೆ ರೆಂಬೆಕೊಂಬೆಗಳನ್ನು ಹರಡಿಕೊಂಡು ನಿಂತಿದ್ದ ಪುರಾತನ ಅಶ್ವತ್ಥವೃಕ್ಶವನ್ನು ಬಳಸಿ ಮುಂದಡಿಯಿಟ್ಟಳು.  ಎದುರಿಗೆ ಇಡೀ ನೋಟವನ್ನು ಸೆಳೆದು ನಿಲ್ಲಿಸಿದ ಎತ್ತರದ ಚಿತ್ತಾರದ ಗೋಪುರ.  ತೆರೆದ ದ್ವಾರ.  ಕಲ್ಲಿನ ಏಳು ಮೆಟ್ಟಲುಗಳನ್ನು ಒಂದೊಂದಾಗಿ ಲೆಕ್ಕ ಹಾಕಿಕೊಂಡು ಏರಿ ನಿಂತಳು.  ಒಳಗಿನ ಕತ್ತಲಿಗೆ ಕಣ್ಣುಗಳು ಹೊಂದಿಕೊಂಡಂತೇ ನಿಶ್ಚಲವಾಗಿ ನಿಶ್ಶಬ್ಧವಾಗಿ ನಿಂತ ದೇವದೇವಿಯರು, ಯಕ್ಷಯಕ್ಷಿಯರು ಖಗಮಿಗಗಳು- ಎಲ್ಲವೂ ನಿಚ್ಚಳವಾಗಿ ಕಂಡವು.  ಎತ್ತರದ ಛಾವಣಿಗೆ ಎಲ್ಲೆಂದರಲ್ಲಿ ತೂಗುಬಿದ್ದ ನೂರಾರು ಸಾವಿರಾರು ಗಂಟೆಗಳು.  ಕಣ್ಣನೇರಕ್ಕೆ ಗರ್ಭಗೃಹ.  ಕಣ್ಣುಗಳನ್ನು ತುಂಟನಗೆ ಮಿನುಗಿಸುತ್ತಾ ತುಟಿಗಳಿಗೆ ಕೊಳಲು ಹಚ್ಚಿ ನಿಂತ ಮುದ್ದು ಕೃಷ್ಣ.  ಅವನಿಗೊಂದು ಮುತ್ತು ಕೊಡುವ ಬಯಕೆಯಾಯಿತು.  ಲಗುಬಗೆಯಿಂದ ಹೊಸ್ತಿಲು ದಾಟಿದಳು.
ಅವಳ ಬಲಗಾಲು ದೇವಾಲಯದ ಒಳಗಿನ ನೆಲಕ್ಕೆ ತಾಕಿತೋ ಇಲ್ಲವೋ ಮೇಲ್ಛಾವಣಿಯಿಂದ ಜೋತಾಡುತ್ತಿದ್ದ ಗಂಟೆಗಳೆಲ್ಲವೂ ಒಂದೇ ಸಮನೆ ಢಣಢಣಗುಟ್ಟತೊಡಗಿದವು.
ಒಂದು ಗಂಟೆ ಬಾರಿಸಿದರೆ ಕಿವಿಗಿಂಪು.  ಅದರೊಂದಿಗೆ ಸಾವಿರ ಜತೆಗೂಡಿದರೆ... ಒಹ್!  ಮೌನಕಣಿವೆಯಿಂದ ಶಬ್ಧಕ್ಷೋಭೆಯ ಪ್ರವಾಹಕ್ಕೆ ಏಕಾಏಕಿ ಒಗೆಯಲ್ಪಟ್ಟ ಅವಳು ಬೆಚ್ಚಿ ಕಿವಿ ಮುಚ್ಚಿಕೊಂಡಳು.  ಒಳಗಿಟ್ಟಿದ್ದ ಕಾಲು ಚಣದಲ್ಲಿ ಹಿಂದೆ ಸರಿಯಿತು.
ಥಟ್ಟನೆ ಗಂಟೆಗಳು ಮೌನವಾಗಿಬಿಟ್ಟವು.
ಮತ್ತೆ ಒಳಗಡಿಯಿಡುವ ಧೈರ್ಯ ಅವಳಿಗಿರಲಿಲ್ಲ.  ದಿಕ್ಕುತೋಚದೇ ಮುದ್ದು ಕೃಷ್ಣನನ್ನೇ ನೋಡುತ್ತಾ ನಿಂತಳು.  ಅವನಂತೂ ತನ್ನ ಪಾಡಿಗೆ ತಾನಿದ್ದ.  ನಿಟ್ಟುಸಿರಿಟ್ಟು ಹಿಂದೆ ತಿರುಗಿದಳು.  ಬೆಚ್ಚಿದಳು.  ನೀಳದೇಹದ ವೃದ್ಧನೊಬ್ಬ ಅವಳತ್ತಲೇ ಗಂಭೀರವಾಗಿ ನೋಡುತ್ತಾ ಅರಳೀಮರದ ಕೆಳಗೆ ನಿಂತಿದ್ದ.  ಶ್ವೇತವಸನಧಾರಿ.  ನೀಳ ಗಡ್ಡಮೀಸೆಗಳೂ ಅಚ್ಚಬಿಳುಪು.
ಮೋಡಿಗೆ ಸಿಕ್ಕಿದಂತೆ ಅವನತ್ತ ಸಾಗಿದಳು.  ಹತ್ತಿರಾದಂತೆ ಅವನ ಕಣ್ಣುಗಳಲ್ಲಿ ಮಡುಗಟ್ಟಿದ್ದ ದಿಗಿಲು ಅವಳೆದೆಯಲ್ಲಿ ಭಯದ ಅಲೆಗಳನ್ನೆಬ್ಬಿಸಿತು.
ಅವಳು ಮಾರು ದೂರ ಇರುವಾಗಲೇ ಅವನು ತುಟಿ ತೆರೆದ.  ನಡುಗುವ ದನಿಯಲ್ಲಿ ಪ್ರಶ್ನಿಸಿದ: "ಒಬ್ಬಳೇ ಇಷ್ಟುದೂರ ಬಂದೆಯಲ್ಲ!  ಮಗುವನ್ನೇಕೆ ಬಿಟ್ಟುಬಂದೆ?"
ಅವಳು ಬೆಚ್ಚಿದಳು.  ಮಗನ ನೆನಪು ಏಕಾಏಕಿ ಒತ್ತರಿಸಿಕೊಂಡು ಬಂತು.  ವೃದ್ಧನ ಪ್ರಶ್ನೆಗೆ ಉತ್ತರಿಸುವುದನ್ನೂ ಮರೆತು ಓಡಿದಳು.  ದೇವಾಲಯದ ಹೊರದ್ವಾರನ್ನು ಚಣದಲ್ಲಿ ದಾಟಿದಳು.  ನಿರ್ಜನ ರಸ್ತೆಯಲ್ಲಿ ಹುಚ್ಚುಹಿಡಿದಂತೆ ನಾಗಾಲೋಟ ಹಾಕಿದಳು.
ಅದೆಲ್ಲಿತ್ತೋ ಒಂದು ಕಲ್ಲು, ಬರುವಾಗ ಮರೆಯಾಗಿದ್ದದ್ದು ಈಗ ತಲೆಯೆತ್ತಿ ನಿಂತಿತ್ತು.  ಅವಳು ಎಡವಿದಳು.  "ಅಯ್ಯಮ್ಮಾ" ಎಂದು ಚೀರುತ್ತಾ ಕೆಳಗೆ ಬಿದ್ದಳು.
ಅವಳಿಗೆ ಗಕ್ಕನೆ ಎಚ್ಚರವಾಯಿತು.
ಧಡಕ್ಕನೆ ಎದ್ದು ಕುಳಿತಳು.  ಸುತ್ತಲೂ ಕತ್ತಲೆ.  ಮೈಯಿಡೀ ಬೆವತುಹೋಗಿತ್ತು.  ಎದೆ ನಗಾರಿಯಂತೆ ಹೊಡೆದುಕೊಳ್ಳುತ್ತಿತ್ತು.  ಮಗ್ಗುಲಲ್ಲಿದ್ದ ಮಗುವೂ ಗಕ್ಕನೆ ಎದ್ದು ಕೂತು ಅವಳತ್ತ ಪಿಳಿಪಿಳಿ ನೋಡಿತು.  "ಅಮ್ಮಾ" ಅಂದಿತು.
"ಎಚ್ಚರವಾಗಿಬಿಟ್ಟಿತಾ ಮಗೂಕನಸುಗಿನಸು ಕಂಡೆಯಾ ಚಿನ್ನಾ?"  ಮಗುವನ್ನು ಹತ್ತಿರಕ್ಕೆಳೆದುಕೊಳ್ಳುತ್ತಾ ಪ್ರಶ್ನಿಸಿದಳು.
"ಇಲ್ಲಮ್ಮ, ಕನಸು ಕಾಣ್ಲಿಲ್ಲ."  ಮಗು ಪಿಸುಗುಟ್ಟಿತು.  ಅವಳ ಮಡಿಲಲ್ಲಿ ತಲೆಯಿಟ್ಟಿತು.  ಅವಳು ಒಂದು ಕೈಯಲ್ಲಿ ಮಗುವನ್ನು ಎದೆಗವಚಿಕೊಂಡು ಇನ್ನೊಂದು ಕೈಯಲ್ಲಿ ಮೃದುವಾಗಿ ಅವನ ಬೆನ್ನು ತಟ್ಟುತ್ತಾ ಹಿಂದಕ್ಕೆ ಒರಗಿದಳು.
"ನೀನು ಕನಸು ಕಂಡೆಯಾ ಅಮ್ಮ?"  ಅವಳೆದೆಗೆ ಒರಗಿದಂತೇ ಮಗು ಅರೆನಿದ್ದೆಯಲ್ಲಿ ಪಿಸುಗು ಪ್ರಶ್ನೆ ಹಾಕಿತು.
"ಇಲ್ಲ ಮಗು."  ಅವಳು ಥಟ್ಟನೆ ಉತ್ತರಿಸಿದಳು.  ಮಗುವನ್ನು ಗಟ್ಟಿಯಾಗಿ ಎದೆಗೊತ್ತಿಕೊಂಡಳು.
ಬೆಳಗಾಯಿತು.
ಮಗುವನ್ನು ಕಿಂಡರ್ಗಾರ್ಟನ್ನಲ್ಲಿ ಬಿಟ್ಟು ಅವಳು ಆಫೀಸಿಗೆ ಹೋದಳು.  ರಾತ್ರಿಯ ಕನಸನ್ನು ಜೀವದ ಗೆಳತಿಗೆ ವಿವರಿಸಿದಳು.  ಗಮನವಿಟ್ಟು ಆಲಿಸಿದ ಗೆಳತಿ ಗಂಭೀರದನಿಯಲ್ಲಿ ಹೇಳಿದಳು: "ಮಗು ಜೋಪಾನ.  ಅವನನ್ನು ಒಂಟಿಯಾಗಿ ಬಿಡಬೇಡ."
ಸಂಜೆ ಮಗು ಹೊರಬರುವುದಕ್ಕೆ ಅರ್ಧಗಂಟೆ ಮೊದಲೇ ಅವಳು ಶಾಲೆಯ ಗೇಟ್ ಮುಂದೆ ನಿಂತಿದ್ದಳು.
ರಾತ್ರಿ ಮಗು ಅವಳೆದೆಯ ಮೇಲೆ ತಲೆಯಿಟ್ಟು ನೆಮ್ಮದಿಯಾಗಿ ನಿದ್ದೆಹೋದ ಮೇಲೆ ಅವಳು ಹಿಂದಿನ ರಾತ್ರಿಯ ದಾರಿ ಹಿಡಿದಳು.
ಪರಿಚಯವಾಗಿದ್ದ ದಾರಿಯಲ್ಲವೇ, ಸರಸರನೆ ಮುಂದೆ ಸಾಗಿದಳು.  ದೇವಾಲಯದ ಹೆಬ್ಬಾಗಿಲು ದಾಟಿ ಅಶ್ವತ್ಥವೃಕ್ಷದ ನೆರಳಲ್ಲಿ ಹಾದು ಚಿತ್ತಾರದ ಎತ್ತರದ ಗೋಪುರವನ್ನು ಕಣ್ಣೊಳಗೆ ತುಂಬಿಕೊಂಡು ಏಳು ಮೆಟ್ಟಲು ಏರಿ ಕಂಡ ಮುದ್ದು ಕೃಷ್ಣನ ಕಣ್ಣುಗಳ ಮೇಲೇ ನೋಟ ಕೀಲಿಸಿ ಇಂದು ಅವನಿಗೊಂದು ಮುತ್ತು ಕೊಟ್ಟುಬಿಡಲೇಬೇಕು ಅಂದುಕೊಳ್ಳುತ್ತಾ ಒಳಗಡಿಯಿಟ್ಟಳು.
ಅವಳ ಬಲಗಾಲು ನೆಲವನ್ನು ಸೋಕಿತೋ ಇಲ್ಲವೋ, ಗಂಟೆಗಳೆಲ್ಲಾ ಒಮ್ಮೆಲೆ ಮೊಳಗತೊಡಗಿದವು.  ರಿಂಗಣಗಳು ಒಂದಕ್ಕೊಂದು ಢಿಕ್ಕಿ ಹೊಡೆದು ಒಂದು ಇನ್ನೊಂದರ ಪ್ರತಿಧ್ವನಿಯಾಗಿ ಇನ್ನೊಂದು ಮಗದೊಂದರ ಕೂಗಾಗಿ ಆಲಯದ ಉದ್ದಗಲಕ್ಕೂ ಗುಡುಗಾಡಿ ಅವಳೆದೆಯನ್ನು ಧಿಮಿಧಿಮಿಗುಟ್ಟಿಸಿದವು.  ಅವಳು ಕಾಲು ಹಿಂತೆಗೆದು ಏಳೂ ಮೆಟ್ಟಲುಗಳನ್ನು ಹಾರುತ್ತಾ ಕೆಳಗಿಳಿದಳು.  ಶ್ವೇತವಸನಧಾರಿ ವೃದ್ಧನ ಮುಂದೆ ನಿಂತಳು, ಏದುಸಿರು ಹಾಕುತ್ತಾ.
ಅವನ ಕಣ್ಣುಗಳಲ್ಲಿದ್ದ ದಿಗಿಲು ನಿನ್ನೆಗಿಂತಲೂ ನೂರ್ಮಡಿಯಾಗಿತ್ತು.  ನಡುಗುವ ದನಿಯಲ್ಲಿ ಪ್ರಶ್ನಿಸಿದ: "ಮಗುವನ್ನು ಯಾಕೆ ಬಿಟ್ಟುಬಂದೆ?"
ಅವಳು ನಿರುತ್ತರಳಾಗಿ ನಿಂತಳು.  ಅವನೇ ಮಾತಾಡಿದ: "ಇಲ್ಲಿಗೆ ಬರಲೇಬೇಕು ಅನಿಸಿದರೆ ಮಗುವನ್ನೂ ಯಾಕೆ ಜತೆಯಲ್ಲಿ ಕರೆದುಕೊಂಡು ಬರಬಾರದು ನೀನು?"
"ಹ್ಞೂಂ" ಎನ್ನುವುದನ್ನೂ ಮರೆತು ಅವಳು ಮುಖ್ಯದ್ವಾರದತ್ತ ಓಡಿದಳು.  ಓಡುತ್ತಾ ಓಡುತ್ತಾ ಮನೆ ತಲುಪಿದಳು.  ಮನೆಯಲ್ಲಿ ಮಗು ನೆಮ್ಮದಿಯಾಗಿ ನಿದ್ರಿಸುತ್ತಿತ್ತು.  ಅದರ ಎರಡೂ ಕೆನ್ನೆಗಳಿಗೆ ಮುತ್ತಿಟ್ಟು ಪಕ್ಕದಲ್ಲಿ ಉರುಳಿಕೊಂಡಳು.  ಮಗುವನ್ನು ಎಳೆದು ಎದೆಯ ಮೇಲೆ ಮಲಗಿಸಿಕೊಂಡು ಅವನ ಬೆನ್ನನ್ನು ಮೃದುವಾಗಿ ತಟ್ಟತೊಡಗಿದಳು.
ಇಬ್ಬರೂ ಒಂದು ನಿದ್ದೆ ತೆಗೆದ ಮೇಲೆ ಬೆಳಗಾಯಿತು.  ಅಂದು ಭಾನುವಾರ.
ಅವಳೊಂದಿಗೇ ಎದ್ದ ಮಗು ಅವಳ ಹೆಜ್ಜೆಗೆ ಹೆಜ್ಜೆ ಕೂಡಿಸುತ್ತಾ ಅವಳು ಹೋದೆಡೆಯೆಲ್ಲಾ ಓಡಾಡಿತು.  ಅವಳು ಮೆಟ್ಟಲು ತೊಳೆದು ಅಂಗಳ ಸಾರಿಸಿ ಪುಟ್ಟದೊಂದು ರಂಗೋಲಿಯಿಟ್ಟು ಮಗುವನ್ನು ಸೋಫಾದಲ್ಲಿ ಕೂರಿಸಿ ಅವನ ಕೆನ್ನೆ ತಟ್ಟಿ "ನಿನಗೊಂದು ಲೋಟ ಹಾಲು, ನನಗೊಂದು ಲೋಟ ಕಾಫಿ ತರುತ್ತೇನೆ ಈಗಲೇ" ಎಂದು ಹೇಳಿ ಅಡಿಗೆ ಮನೆಯತ್ತ ನಡೆದಳು.  ಅವಳು ಅಡಿಗೆಮನೆಯ ಒಳಗೆ ಕಾಲಿಟ್ಟಿದ್ದಳೋ ಇಲ್ಲವೋ ಮಗು "ಅಮ್ಮಾ, ಯಾರೋ ಅಂಕಲ್ ಬಂದಿದ್ದಾರೆ ನೋಡು ಬಾರಮ್ಮಾ" ಎಂದು ಕೂಗಿತು.  ಬೆಳಿಗ್ಗೆ ಬೆಳಿಗ್ಗೆಯೇ ಇದ್ಯಾರು? ಎಂದುಕೊಳ್ಳುತ್ತಾ ಹೊರಬಂದ ಅವಳು ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಯನ್ನು ನೋಡಿ ಬೆಚ್ಚಿಬಿದ್ದಳು.  ನಾಲಿಗೆಯ ಪಸೆಯೇ ಆರಿಹೋಗಿ ಹಣೆಯಲ್ಲಿ ಬೆವರಹನಿಗಳು ಸಾಲುಗಟ್ಟಿದವು.  ಎದೆಯೊಳಗೆ ನಗಾರಿ.
ಅವನು ಒಳಬರಲಿಲ್ಲ.  ಹೊಸ್ತಿಲಾಚೆಯೇ ನಿಂತು ಮಾತಾಡಿದ: "ಮಗುವನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ."  ದನಿ ಗಂಭೀರವಾಗಿತ್ತು.
ಪ್ರತಿಕ್ರಿಯಿಸಲು ಅವಳಿಗೆ ನಿಮಿಷಗಳು ಬೇಕಾದವು.  ಅವನು ತಾಳ್ಮೆಯಿಂದ ಕಾದ.
"ಮಗೂನ... ಎಲ್ಲಿಗೆ ಕರ... ಕರಕೊಂಡು ಹೋಗ್ತೀರಿ?"  ಮಾತು ತಡೆತಡೆದು ಬಂತು.
"ನನ್ನ ಮನೆಗೆ."  ಗಂಭೀರವಾಗಿ ಬಂತು ಉತ್ತರ.
"ಯಾಕೆ?"  ಅವಳು ಥಟ್ಟನೆ ಪ್ರಶ್ನಿಸಿದಳು.  ಅವನು ಬೆಚ್ಚಿದ.  ಕಣ್ಣರೆಪ್ಪೆಗಳು ಅಪನಂಬಿಕೆಯಲ್ಲಿ ಪಟಪಟ ಬಡಿದುಕೊಂಡವು.  ಚಣದಲ್ಲಿ ಸಾವರಿಸಿಕೊಂಡ.
"ಮಗೂಗೆ ನಾಲ್ಕುವರ್ಷ ಆದ ನಂತರ ತಿಂಗಳಿಗೊಂದು ಸಲ ನನ್ನ ಮನೆಗೆ ಕರಕೊಂಡು ಹೋಗೋ ಹಕ್ಕನ್ನ ಕೋರ್ಟ್ ನಂಗೆ ಕೊಟ್ಟಿರೋದನ್ನ ನೀವು ಮರೆತಿದ್ದೀರಿ.  ಮಗೂಗೆ ಮೊನ್ನೆ ತಾನೆ ನಾಲ್ಕು ತುಂಬಿತು."
ಮರೆತುಹೋಗಿದ್ದ ಹಳೆಯ ದುಃಸ್ವಪ್ನವೊಂದು ಏಕಾಏಕಿ ನೆನಪಿಗೆ ಬಂದಂತೆ ಅವಳಿಗೆ ಎಲ್ಲವೂ ನೆನಪಾಗಿಬಿಟ್ಟಿತು.  ಇನ್ನಷ್ಟು ನೆನಪು ಮಾಡಿಕೊಡುವ ಉದ್ದೇಶದಿಂದಲೋ ಏನೋ ಅವನು ಮಾತು ಮುಂದುವರೆಸಿದ: "ನಾನು ಕಳೆದ ಭಾನುವಾರ ಇಂಡಿಯಾಗೆ ಬಂದೆ.  ಇನ್ನು ಅಮೆರಿಕಾಗೆ ಹೋಗೋದಿಲ್ಲ."
ಯಾಕೆ? ಎಂದು ಅವಳು ಕೇಳಲಿಲ್ಲ.  ಅದರತ್ತ ಅವಳ ಗಮನವೇ ಇರಲಿಲ್ಲ.
ಆರು ವರ್ಷಗಳ ಹಿಂದೆ ಅವನನ್ನು ಮೊಟ್ಟಮೊದಲ ಬಾರಿಗೆ ನೋಡಿದ ನೆನಪು ಅವಳಿಗೆ ಬಂದುಬಿಟ್ಟಿತ್ತು.  ಸರಿಸುಮಾರು ಒಂದುವರ್ಷ ನೀವು, ನಂತರ ಎರಡುವರ್ಷಗಳವರೆಗೆ ನೀನು, ತದನಂತರದ ಮೂರುವರ್ಷಗಳು ಮೌನ, ಈಗ ಮತ್ತೆ ನೀವುತಾನವನ ನಾಲಿಗೆಯಲ್ಲಿ ನೀವು ನೀನಾಗಿ ಮತ್ತೆ ನೀವೇ ಆಗಿ ಬದಲಾಗಿಹೋದ ಪರಿ ಅವಳನ್ನು ಚಣಕಾಲ ಅಲ್ಲಾಡಿಸಿಬಿಟ್ಟಿತು.  ಸಾವರಿಸಿಕೊಂಡಳು.  ಅದರ ಅಭ್ಯಾಸ ಅವಳಿಗೆ ತುಂಬಾ ಇದೆ.
"ಒಳಗೆ ಬನ್ನಿ.  ಮಾತಾಡುವುದಿದೆ."  ಗಂಭೀರವಾಗಿ ಹೇಳಿದಳು.
ಅವನು ನಿಧಾನವಾಗಿ ಒಳಗಡಿಯಿಟ್ಟ.  ಮಗು ಕುಳಿತಿದ್ದ ಸೋಫಾದ ಮತ್ತೊಂದು ಅಂಚಿನಲ್ಲಿ ಕೂತ.  ಅದರತ್ತ ತುಟಿಯರಳಿಸಿ ಕೈಚಾಚಿದ.
ಮಗು ಬೆದರಿದಂತೆ ಸೋಫಾದಿಂದ ಛಕ್ಕನೆ ಕೆಳಗಿಳಿದು ತನ್ನಮ್ಮನತ್ತ ಓಡಿ ಅವಳ ಕಾಲುಗಳೆರಡರ ನಡುವೆ ನಿಂತು ನೈಟಿಯ ಅಂಚನ್ನೆಳೆದು ಮುಖ ಮುಚ್ಚಿಕೊಂಡುಬಿಟ್ಟಿತು.
ಅವನು ಪೆಚ್ಚುಪೆಚ್ಚಾಗಿ ನಕ್ಕ.  ಅವಳು ನಿರಾಳವಾಗಿ ನಕ್ಕಳು.
"ಮಗೂಗೆ ನಿಮ್ಮ ನೆನಪಿಲ್ಲ..."
ಅವನು ಅವಳ ಮಾತನ್ನು ಅಲ್ಲಿಗೇ ಕತ್ತರಿಸಿದ: "ನಾನವನ ಅಪ್ಪ ಅನ್ನೋದನ್ನ ನೀವು ಅವನಿಗೆ ನೆನಪು ಮಾಡಿಕೊಡಬೇಕು."
"ಹಾಗಂತ ಕೋರ್ಟ್ ನಂಗೇನೂ ಹೇಳಿಲ್ಲ."  ಅವಳು ಸಿಡಿದಳು.  ಅವನು ಪೆಚ್ಚಾದ.  ಅವಳು ತಣ್ಣನೆಯ ದನಿಯಲ್ಲಿ ಮುಂದುವರೆಸಿದಳು: "ಇದ್ದಕ್ಕಿದ್ದ ಹಾಗೆ ಬಂದು ಬಾ ಅಂತ ಕರೆದ್ರೆ ಹೇಗೆಹೀಗೇ ಒಂದೆರಡು ಸಲ ಬಂದುಹೋಗಿ.  ಅವನಿಗೆ ಮೊದಲು ನಿಮ್ಮ ಪರಿಚಯ ಆಗಲಿ.  ನಿಮ್ಮ ಜತೆ ಬರೋವಷ್ಟು ಧೈರ್ಯ ಬರ್ಲಿ ಅವನಿಗೆ."
ಅವನು ನಿಮಿಷಗಳ ಕಾಲ ಮೌನವಾದ.  ನಂತರ ಅವಳತ್ತ ನೋಡದೇ ಹೇಳಿದ: "ಆಲ್ರೈಟ್.  ನೀವು ಹೇಳೋದು ಸರಿ.  ನಾನು ಮತ್ತೆ ಬುಧವಾರ, ನೋ... ಮಂಗಳವಾರಾನೇ ಬರ್ತೀನಿ.  ಆಮೇಲೆ ಗುರುವಾರ ಒಂದ್ಸಲ ಆಗಬೋದಲ್ಲಶನಿವಾರಾನೂ ಒಮ್ಮೆ ಬಂದು ಇಲ್ಲೇ ಹತ್ತಿರದ ಪಾರ್ಕ್ನಲ್ಲಿ ಸ್ವಲ್ಪ ಹೊತ್ತು ಕಳೆದರೆ ಅವನು ನಂಗೆ ಒಗ್ಗಿಕೋತಾನೆ.  ಭಾನುವಾರ ಬೆಳಿಗ್ಗೆ ನನ್ ಜೊತೆ ಹೊರಡೋದಿಕ್ಕೆ ಹಿಂಜರಿಯೋದಿಲ್ಲ."  ಎದ್ದು ನಿಂತ.  ಅವಳು ಮೌನವಾಗಿದ್ದಳು.  ಅವನು ಅವಳತ್ತ ನಿಧಾನವಾಗಿ ಹೆಜ್ಜೆ ಹಾಕಿದ.  ನೈಟಿಯ ಮರೆಯಲ್ಲಿ ಭಯತುಂಬಿದ ಕಣ್ಣುಗಳನ್ನು ಅರಳಿಸಿಕೊಂಡು ಇಣುಕುತ್ತಿದ್ದ ಮಗುವಿನತ್ತ ಕೈಚಾಚಿದ.  "ಬಾ ಮಗೂ.  ಅಯ್ ಆಮ್ ಯುವರ್..."  ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ಮಗು ಮುಖವನ್ನು ಪೂರ್ತಿಯಾಗಿ ನೈಟಿಯಿಂದ ಮುಚ್ಚಿಕೊಂಡುಬಿಟ್ಟಿತು.
"ಇಟ್ ಈಸ್ ಒಕೇ."  ಅವನು ಅವಳತ್ತ ತಿರುಗಿದ: "ಮಂಗಳವಾರ ಸಾಯಂಕಾಲ ಬರ್ತೀನಿ.  ಅವನಿಗೆ ಅಂತ ತಂದಿರೋ ಆಟದ ಸಾಮಾನುಗಳನ್ನ ತರ್ತೀನಿ.  ಅವನಿಗವು ಇಷ್ಟ ಆಗುತ್ವೆ."  ಅವಳು ಈಗಲೂ ಮೌನವಾಗಿದ್ದಳು.
ಅವನು ಬಾಗಿಲತ್ತ ನಡೆದ.  ಹೊಸ್ತಿಲ ಹೊರಗೆ ಒಂದು ಕಾಲಿಟ್ಟು ಹಿಂದೆ ತಿರುಗಿದ: "ಮಂಗಳವಾರ ನನ್ನ ಹೆಂಡತಿಯನ್ನೂ ಕರಕೊಂಡು ಬರ್ತೀನಿ.  ನಿಮಗೆ ಅಭ್ಯಂತರ ಇಲ್ಲ ತಾನೆ?"
"ಧಾರಾಳವಾಗಿ ಕರಕೊಂಡು ಬನ್ನಿ."  ಅವಳ ತಕ್ಷಣದ ಅಂಗೀಕಾರದಿಂದ ಅವನು ಅಚ್ಚರಿಗೊಂಡ.  ಸಣ್ಣಗೆ, ಹೇಳಲೋ ಬೇಡವೋ ಅನ್ನುವಂತೆ, ದನಿ ಹೊರಡಿಸಿದ: "ಅವಳಿಗೆ ಮಕ್ಕಳಿಲ್ಲ.  ಮಕ್ಕಳು ಅಂದ್ರೆ ಅವಳಿಗೆ ತುಂಬಾ ಇಷ್ಟ."
ಎಲ್ಲ ಹೆಂಗಸರಿಗೂ.  ನಾಲಿಗೆಯ ತುದಿಯವರೆಗೆ ಬಂದ ಮಾತು ಅಲ್ಲೇ ನಿಂತುಹೋಯಿತು.  ಅದನ್ನು ಕೆಳಗೊತ್ತಿ ಮಾತನ್ನು ಬೇರೊಂದು ದಿಕ್ಕಿಗೆ ತಿರುಗಿಸಿದಳು: "ಇದೆಷ್ಟು ದಿನ ಹೀಗೆ?"
ಅವನು ಅವಳನ್ನೇ ನೇರವಾಗಿ ನೋಡಿದ.  ಅದೆಷ್ಟೋ ಕಾಲದ ಮೇಲೆ ಅವರಿಬ್ಬರ ಕಣ್ಣುಗಳು ಮುಖಾಮುಖಿಯಾದವು.
"ಇಡೀ ಹದಿನಾಲ್ಕು ವರ್ಷ ಹೀಗೇ.  ಆಗ ಇವನಿಗೆ ಹದಿನೆಂಟು ತುಂಬುತ್ತೆ.  ಪರ್ಮನೆಂಟ್ ಆಗಿ ಇಲ್ಲಿರಬೇಕೋ ಅಥವಾ ಅಲ್ಲಿರಬೇಕೋ ಅನ್ನೋ ನಿರ್ಧಾರವನ್ನ ಅವನೇ ತಗೋತಾನೆ."  ಅಷ್ಟು ಹೇಳಿ ಹಿಂದಕ್ಕೆ ತಿರುಗಿದ.  ಸರಸರನೆ ಮೆಟ್ಟಲಿಳಿದು ಹಿಂತಿರುಗಿ ನೋಡದೇ ರಸ್ತೆಬದಿಯಲ್ಲಿ ನಿಂತಿದ್ದ ಕೆಂಪುಬಣ್ಣದ ಉದ್ದನೆಯ ಕಾರಿನತ್ತ ನಡೆದ.  ನೈಟಿಯ ಮರೆಯಿಂದ ಹೊರಬಂದ ಮಗು "ಕೆಂಪು ಕಾರು!  ಕೆಂಪು ಕಾರು!" ಎನ್ನುತ್ತಾ ಉತ್ಸಾಹದಿಂದ ಬಾಗಿಲತ್ತ ಓಡಿತು.  ಅವಳು ಬೆದರಿದಳು.  ಹಾರುತ್ತಿದ್ದ ಎದೆಯನ್ನು ಒತ್ತಿಹಿಡಿದು ಮಗುವಿನ ಹಿಂದೆಯೇ ಓಡಿದಳು.  ಎಂಜಿನ್ ಗೊರಗುಟ್ಟಿಸಿದ ಅವನು ಇತ್ತ ತಿರುಗಿದ.  ಮಗುವನ್ನೇ ನೋಡುತ್ತಾ ಸಣ್ಣಗೆ ನಕ್ಕ.  ಕಿಟಕಿಯಾಚೆ ಕೈ ಆಡಿಸಿದ.  ಅವಳು ಸರ್ರನೆ ಮಗುವಿನ ಮುಖದತ್ತ ತಿರುಗಿದಳು.  ಅಲ್ಲಿ ಕಿರುನಗೆ ತುಳುಕುತ್ತಿತ್ತು.  ಬಟ್ಟಲುಗಣ್ಣುಗಳನ್ನು ಅರಳಿಸಿಕೊಂಡು ಮಗು ತಾನೂ ಮೆಲ್ಲಮೆಲ್ಲನೆ ಕೈ ಮೇಲೆತ್ತಿ ಆಡಿಸಿತು.   ಅವಳು ಮತ್ತೆ ಕಾರಿನ ಕಡೆ ತಿರುಗುವಷ್ಟರಲ್ಲಿ ಅದು ತಿರುವಿನಲ್ಲಿ ಹೊರಳಿಕೊಳ್ಳುತ್ತಿತ್ತು.  "ಕೆಂಪು ಕಾರು ಹೊರಟೋಯ್ತು."  ಮಗು ನಿರಾಶೆಯಲ್ಲಿ ದನಿ ಎಳೆಯಿತು.
ಆ ದಿನವಿಡೀ ಅವಳು ಅವಳಾಗಿರಲಿಲ್ಲ.
ಮಂಗಳವಾರ ಅವನು ಜತೆಯಲ್ಲಿ ಕರೆತರುವ ಮಕ್ಕಳ ಬಯಕೆಯನ್ನು ಎದೆಯಲ್ಲಿ ತುಂಬಿಕೊಂಡ ಅವಳು...ಮುಂದಿನ ಮೂರುದಿನಗಳಲ್ಲಿ ಮಗು ಸಿಲುಕುವ ಆಮಿಷಗಳು...ಮುಂದಿನ ಭಾನುವಾರ ತನ್ನ ಮೆಚ್ಚಿನ ಕೆಂಪು ಬಣ್ಣದ ಕಾರಿನಲ್ಲಿ ಕೂತು ನನಗೆ ಟಾಟಾ ಹೇಳಿಹೋಗುವ ಮಗು..., ಸಂಜೆಯವರೆಗೆ ಏಕಾಕಿಯಾಗಿ ಭಯ ಆತಂಕದಲ್ಲಿ ಚಡಪಡಿಸುವ ನಾನು...
...ಇಡೀ ಹದಿನಾಲ್ಕು ವರ್ಷ ಹೀಗೆ!
ಅಷ್ಟುವರ್ಷಗಳಲ್ಲಿ "ಆ" ಮನೆಯ ಪ್ರಲೋಭನೆಗಳ ಪರ್ವತಕ್ಕೆ ಸರಿಸಾಟಿಯಾಗಿ ನಿಲ್ಲುವಂಥದ್ದು ನನ್ನಲ್ಲೇನಿದೆಆ ಪರ್ವತ ಮಗುವನ್ನು ಇಡಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡು ನನ್ನತ್ತ ವಿಜಯದ ನಗೆ ತೂರಿ ಭಾರಿಭಾರಿ ಬಂಡೆಗಳನ್ನು ನನ್ನ ತಲೆಯ ಮೇಲೇ ಉರುಳಿಸಿಬಿಟ್ಟರೆ ನನ್ನ ಗತಿಯೇನು?
ಅವಳು ವಿಹ್ವಲಳಾದಳು.
ಸಂಜೆ ದೀಪ ಹಚ್ಚುವ ಹೊತ್ತಿಗೆ ಅವಳಿಗೆ ದಾರಿಯೊಂದು ಕಂಡಿತು.
ರಾತ್ರಿ ಮರೆಯದೇ ಮಗುವನ್ನೂ ಜತೆಯಲ್ಲಿ ಕರೆದೊಯ್ದಳು.  ನೀರವ, ನಿರ್ಜನ ದಾರಿಯ ಇಕ್ಕೆಲಗಳಲ್ಲಿನ ತೆರೆದ ಬಾಗಿಲುಗಳ ಮನೆಗಳನ್ನೇ ಬೆರಗುಗಣ್ಣುಗಳಿಂದ ನೋಡುತ್ತಾ ನಡೆಯುತ್ತಿದ್ದ ಮಗುವಿನ ಕೈ ಹಿಡಿದು ಆತುರಾತುರವಾಗಿ ಮುಂದೆ ಸಾಗಿದಳು.  ದೇವಾಲಯದ ಆಕರ್ಷಣೆ ಇಂದು ಮೇರೆ ಮೀರಿತ್ತು.  ಓಡುನಡಿಗೆಯಲ್ಲೇ, ಮಗುವನ್ನೂ ಓಡಿಸಿಕೊಂಡೇ ಮಹಾದ್ವಾರವನ್ನು ದಾಟಿದಳು.  ಅಶ್ವತ್ಥವೃಕ್ಷದ ನೆರಳಲ್ಲಿ ಹೆಜ್ಜೆ ಮಂದಗೊಳಿಸಿದ ಮಗುವಿಗೆ ಪೂಸಿ ಹೊಡೆದು ಮುಂದೆ ಓಡಿಸಿದಳು.  ಇಬ್ಬರೂ ಮೆಟ್ಟಲುಗಳನ್ನು ಏರಿನಿಂತರು.  ಹೊಸ್ತಿಲ ಬಳಿ ಅವಳು ಅಧೀರಳಾಗಿ ನಿಂತುಬಿಟ್ಟಳು.
ಮಗು ಉತ್ಸಾಹದ ಚಿಲುಮೆಯಾಗಿತ್ತು.  "ಒಳಗೆ ಎಷ್ಟು ಚಂದ ಇದೆ!  ಬಾಮ್ಮಾ ಒಳಗ್ಹೋಗೋಣ" ಎನ್ನುತ್ತಾ ಒಂದೇ ಜಿಗಿತಕ್ಕೆ ಹೊಸ್ತಿಲನ್ನು ದಾಟಿಯೇಬಿಟ್ಟಿತು.  ಏನಾಗುತ್ತಿದೆಯೆಂದು ಅವಳಿಗೆ ಅರಿವಾಗುವ ಹೊತ್ತಿಗೆ ಅವಳೂ ಆಲಯದ ಒಳಗಿದ್ದಳು.
ಮೆಲ್ಲಮೆಲ್ಲನೆಯ ಗೆಜ್ಜೆಯ ಉಲಿತ ಒಂದುಕಡೆಯಿಂದ ಕೇಳಿಬಂತು.  ಅದು ಮತ್ತೊಂದು ಕಡೆ ಪ್ರತಿಧ್ವನಿಸಿತು.  ಅರೆಕ್ಷಣದಲ್ಲಿ ಛಾವಣಿಯ ಗಂಟೆಗಳೆಲ್ಲವೂ ಪುಟಾಣಿ ಗೆಜ್ಜೆಗಳಂತೆ ಇಂಪಾಗಿ ಉಲಿಯತೊಡಗಿದ್ದವು.  ಅವಳೆದೆ ಹಗುರಾಯಿತು.  ಒಮ್ಮೆ ನಿರಾಳವಾಗಿ ಉಸಿರು ಹಾಕಿ ಕೃಷ್ಣನತ್ತ ತಿರುಗಿದರೆ ಅವನು ಪೀಠದಿಂದಿಳಿದು ಇತ್ತಲೇ ನಡೆದುಬರುತ್ತಿದ್ದ.  ಅವಳಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ.
ಮುಗುಳುನಗುತ್ತಾ ಅವರನ್ನು ಸಮೀಪಿಸಿದ ಕೃಷ್ಣ ಅವಳಿಗೆ ವಂದಿಸಿ ಹೇಳಿದ: "ಇಷ್ಟು ದಿನ ಒಂಟಿಯಾಗಿದ್ದು ಬೇಜಾರಾಗಿಹೋಗಿತ್ತು.  ಅಬ್ಬ, ಇಂದು ನಂಗೊಬ್ಬ ಫ್ರೆಂಡ್ ಸಿಕ್ಕಿದ!  ಈಗ ನಂಗೆಷ್ಟು ಖುಷಿಯಾಗಿದೆ ಗೊತ್ತಾನಿಮಗೆ ಸಾವಿರ, ಇಲ್ಲ ಇಲ್ಲ... ಏಳು ಪ್ಲಸ್ ಹನ್ನೊಂದು ಅಕ್ಷೋಹಿಣಿ ಥ್ಯಾಂಕ್ಸ್, ಆಂಟಿ."
ಅವಳಿಗೆ ಮಾತೇ ಹೊರಡಲಿಲ್ಲ.
ಮುದ್ದು ಕೃಷ್ಣ ಅವಳ ಮಗನ ಕೈಹಿಡಿದ.  "ಬಾರೋ, ಆಟ ಆಡೋಣ" ಎನ್ನುತ್ತಾ ಅವನನ್ನು ಕರೆದುಕೊಂಡು ಆಲಯದ ಹೊರಗೋಡಿದ.  ಸರಿಸುಮಾರು ಒಂದೇ ದಪ್ಪ, ಎತ್ತರದ ಅವರಿಬ್ಬರನ್ನೇ ನೋಡುತ್ತಾ ಅವಳೂ ಹೊರಬಂದಳು.  ತನ್ನ ಹೊಸ ಗೆಳೆಯನ ಕೈ ಹಿಡಿದು ಓಡುತ್ತಿದ್ದ ಕೃಷ್ಣ ಹಿಂದೆ ತಿರುಗಿ ಅವಳಿಗೆ ಕೂಗಿ ಹೇಳಿದ: "ಆಂಟೀ, ನಾವು ಆಟ ಆಡಿ ಬರೋದರ ಒಳಗೆ ನೀವು ಬಿಸಿಬಿಸಿ ಅಡಿಗೆ ಮಾಡಿ.  ಮೊಸರು ಕಡೆದು ನಮಗಿಬ್ಬರಿಗೂ ಒಂದೊಂದು ಗಡಿಗೆ ತುಂಬಾ ಬೆಣ್ಣೆ ತುಂಬಿಸಿ ರೆಡಿಯಾಗಿಡೋದನ್ನ ಮಾತ್ರ ಮರೀಬೇಡಿ."
ಅವಳಿಗೆ ಗೊಂದಲ.  ಎಲ್ಲಿ ಅಡಿಗೆ ಮಾಡುವುದುಕಡೆಯಲು ಮೊಸರೆಲ್ಲಿ?
ಯಾರೋ ನಸುವಾಗಿ ಕೆಮ್ಮಿದಂತಾಗಿ ಪಕ್ಕಕ್ಕೆ ಹೊರಳಿದಳು.  ಶ್ವೇತವಸನಧಾರಿ ವೃದ್ಧ ಮುಗುಳ್ನಗುತ್ತಾ ನಿಂತಿದ್ದ.  ಅವನಿಗೆ ತನ್ನ ಗೊಂದಲ ಹೇಳಿಕೊಂಡಳು.  ಅವನು ನಕ್ಕುಬಿಟ್ಟ.
"ಇಷ್ಟೊಂದು ಮನೆಗಳಿವೆಯಲ್ಲ, ಯಾವುದಾದರೊಂದನ್ನ ಆರಿಸಿಕೋ ಮಗಳೇ.  ನೀ ಹೊಕ್ಕ ಮನೆ ನಿನ್ನದು.  ಅಲ್ಲಿ ನಿನಗೆಲ್ಲವೂ ದೊರೆಯುತ್ತದೆ."
ಅವಳ ಕಣ್ಣುಗಳಲ್ಲಿ ಬಣ್ಣಿಸಲಾಗದಷ್ಟು ಅಚ್ಚರಿ.  "ಎ... ಎ... ಎಷ್ಟು ದಿನ ಹೀಗೆ?"  ಮಾತುಗಳು ತಡೆತಡೆದು ಬಂದವು.
"ಇನ್ನು ಇಡೀ ಹದಿನಾಲ್ಕು ವರ್ಷಗಳು ಹೀಗೇ."  ಅವನು ಅವಳ ಭುಜ ಸವರುತ್ತಾ ಗಂಭೀರ ದನಿಯಲ್ಲಿ ಹೇಳಿದ.
ಅವಳೆದೆಯ ಮೇಲಿದ್ದ ಭಾರೀ ಬಂಡೆ ಸರ್ರನೆ ಸರಿದುಹೋಯಿತು.  ಅತೀವ ನಿರಾಳತೆಯಲ್ಲಿ ತಲೆ ಮೇಲೆತ್ತಿ ಕಣ್ಣುಮುಚ್ಚಿದಳು.  ಮತ್ತೆ ಕಣ್ಣು ತೆರೆದರೆ ಎದುರಿಗೆ ಯಾರೂ ಇಲ್ಲ.  ಶ್ವೇತವಸನಧಾರಿ ಬಂದಂತೇ ಮಾಯವಾಗಿದ್ದ.  ಅತ್ತಿತ್ತ ಕೌತುಕದಲ್ಲಿ ಕಣ್ಣಾಡಿಸಿದವಳ ನೋಟ ಒಂದು ಕಡೆ ಸ್ಥಿರಗೊಂಡಿತು.  ಆಲಯದ ಗೋಡೆಯಲ್ಲಿ ಕಲ್ಲಲ್ಲಿ ಕಲ್ಲಾಗಿ ಕುಳಿತಿದ್ದ ಗಿಣಿಯೊಂದು ಫಕ್ಕನೆ ರೆಕ್ಕೆ ಬಿಚ್ಚಿ ಹೊರಹಾರಿಬಂದು ಮಾಮರವೊಂದರ ಹಸಿರಲ್ಲಿ ಬೆರೆತುಹೋಯಿತು.  ಅದಕ್ಕೆ ಕೋಗಿಲೆಯೊಂದರ "ಕುಹೂ ಕುಹೂ" ಸ್ವಾಗತ.  ಹತ್ತಿರದ ಮನೆಯೊಂದರ ಹಿತ್ತಲಿನಿಂದ ಕರುವೊಂದು "ಅಂಬಾ" ಎಂದು ತನ್ನಮ್ಮನನ್ನು ಕೂಗಿ ಕರೆಯಿತು.  ಹಿಂದೆಯೇ ಹಸುವಿನ ಮಾರ್ದನಿ.  ಬೆರಗಿನಿಂದ ಸುತ್ತಲೂ ನೋಡುತ್ತಾ ನಿಂತವಳಿಗೆ ಯಾವುದೋ ಮರದ ಹಿಂದಿನಿಂದ ಮಗನ ನಗೆ ಕೇಳಿಬಂತು.  ಹಿಂದೆಯೇ ಕೃಷ್ಣನ ದನಿ: "ಬಾರೋ, ನಿಂಗೆ ಎಂಥ ಆಟ ಇಷ್ಟ ಹೇಳು, ನಾನು ಕಲಿಸಿಕೊಡ್ತೀನಿ.  ಜೂಟಾಟಲಗೋರಿಚಿನ್ನಿದಾಂಡುಮರಕೋತಿದಬಕ್ ದಬಕ್ ಗುಲ್ಟೋರಿಯಾಯಾವ ಆಟ ಬೇಕು ನಿಂಗೆ?"
ಯಾವ ಆಟಾನಾದ್ರೂ ಕಲಿಸಿಕೊಡು ಮಾರಾಯ.  ಆದ್ರೆ ಹೆಣ್ಣುಮಕ್ಕಳ ಸೀರೆ ಕದಿಯೋ ಆಟಾನ ಮಾತ್ರ ಅವನಿಗೆ ಕಲಿಸಬೇಡ, ನಿನ್ ದಮ್ಮಯ್ಯಾ ಅಂತೀನಿ.  ಅವಳು ನಸುನಗೆ ತುಳುಕಿಸುತ್ತಾ ಹತ್ತಿರದಲ್ಲಿ ಕಂಡ ಮನೆಯ ತೆರೆದ ಬಾಗಿಲತ್ತ ನಿರಾಳವಾಗಿ ಹೆಜ್ಜೆ ಹಾಕಿದಳು.
 --***೦೦೦***--
 ಅಕ್ಟೋಬರ್ ೨೦೦೯

No comments:

Post a Comment