ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, May 28, 2012

ಕಥೆಗೊಬ್ಬಳು ನಾಯಕಿ- ಭಾಗ ೧ -

ಆವತ್ತು ಶನಿವಾರ.  ಮಾಮೂಲಿನಂತೆ ಯೂನಿವರ್ಸಿಟಿಗೆ ರಜಾ.  ಬೆಳಿಗ್ಗೆ ನಿಧಾನವಾಗಿ ಎದ್ದು ಸ್ನಾನ ಮಾಡದೇ ಉಪ್ಪಿಟ್ಟು ಮಾಡಿ ತಿಂದು ಪೇಪರ್ ಓದಿ ಮುಗಿಸುವಷ್ಟರಲ್ಲಿ ಸಹೋದ್ಯೋಗಿ ಮುರಳಿಯ ಫೋನ್ ಬಂತು.
"ಆ ಹಾಳು ಹೈದರಾಬಾದಿನ ಸೆಮಿನಾರಿಗೆ ಪೇಪರ್ ರೆಡೀ ಮಾಡ್ತಾ ಇದೀನಿ.  ಹಾಳಾದ್ದು ತಲೆ ತಿನ್ತಾ ಇದೆ ಮಾರಾಯ್ರೇ.  ಬೆಳಗಿನಿಂದ್ಲೂ ಕಂಪ್ಯೂಟರ್ ಮುಂದೆ ಕೂತಿದ್ದೀನಿ.  ಸಖತ್ ಕನ್‌ಫ್ಯೂಸು.  ನೀವು ಸ್ವಲ್ಪ ನೋಡೋದಿಕ್ಕೆ ಆಗುತ್ತಾ?"  ಒಂದೇ ಉಸಿರಿನಲ್ಲಿ ಮಾತು ಹರಿಸಿದ.  "ನೋಡೋಣವಂತೆ.  ಅದಕ್ಕೇನು" ಅಂದೆ.  ಆತುರಾತುರವಾಗಿ "ಈಗ ಬರಲಾ?" ಅಂದ.
ಒಗೆಯಲು ಇಡೀ ಒಂದುವಾರದ ಕೊಳೆಬಟ್ಟೆಗಳಿದ್ದವು.  ಇಂದು ಒಗೆದು ಒಣಗಿಸಿ ನಾಳೆ ಇಸ್ತ್ರಿ ಮಾಡಿಬಿಟ್ಟರೆ ಒಂದು ದೊಡ್ಡ ಕೆಲಸ ಮುಗಿದಂತೆ.  ಅಲ್ಲದೇ ತಲೆಯಲ್ಲಿ ಕೊರೆಯುತ್ತಿದ್ದ ಕಥೆಯೊಂದನ್ನು ಬರೆದು ಮುಗಿಸುವ ಆತುರವೂ ನನ್ನಲ್ಲಿತ್ತು.  ಹೀಗಾಗಿ ಮುರಳಿ ತನ್ನ ತಾಪತ್ರಯವನ್ನು ಹೊತ್ತುಕೊಂಡು ಈಗಲೇ ವಕ್ಕರಿಸುವುದು ಬೇಡ ಎನಿಸಿತು.
"ಹೇಗೂ ಕಂಪ್ಯೂಟರ್ ಮುಂದೆ ಕೂತಿದ್ದೀರಿ.  ಹಾಗೇ ಕೈಲಾದಷ್ಟು ಕುಟ್ತಾ ಹೋಗಿ.  ನಾನು ಸಾಯಂಕಾಲ ನಿಮ್ಮನೆಗೇ ಬರ್ತೀನಿ.  ಇಬ್ರೂ ಸೇರಿ ಮುಗಿಸಿಬಿಡೋಣ" ಅಂದೆ.
ಕೆಲಕ್ಷಣಗಳ ಮೌನದ ನಂತರ ಅತ್ತಲಿಂದ ಅವನು ರಾಗ ಎಳೆದ.  "ಸಾಯಂಕಾಲ ಬರ್ತೀರಾ?...  ಈಗ ಆಗಲ್ವಾ?"
"ಇಲ್ಲಾ ಸಾರ್.  ಸ್ವಲ್ಪ ಹೊರಕ್ಕೆ ಹೋಗೋದಿದೆ."  ಸುಳ್ಳು ಹೊಸೆದೆ.  "ಸಂಜೆ ಖಂಡಿತಾ ಬರ್ತೀನಿ" ಅಂದೆ.
ಅತ್ತಲಿಂದ "ಹ್ಞೂ... ಸರಿ" ಎಂಬ ಸಣ್ಣನೆಯ ಗೊಣಗು ಕೇಳಿಬಂತು.
ದೂರದ ಪಾಂಡಿಚೆರಿಯಲ್ಲಿ ಕನ್ನಡ ಮಾತಾಡುವ ಒಬ್ಬನೇ ಒಬ್ಬ ಸಹೋದ್ಯೋಗಿ ಮುರಳಿ ಮಾತ್ರ.  ಹೀಗಾಗಿ ಇಬ್ಬರ ನಡುವೆ ಸ್ವಲ್ಪ ಹೆಚ್ಚಿನ ಸಲಿಗೆ.  ಆದರೆ ಆ ಸಲಿಗೆ ತನಗೆ ಮಾತ್ರ ಉಪಯೋಗವಾಗುವಂತೆ ಅವನು ನೋಡಿಕೊಳ್ಳುತ್ತಿದ್ದುದು ನನ್ನ ಗಮನಕ್ಕೆ ಎಂದೋ ಬಂದಿತ್ತು.  ಅದರ ಬಗ್ಗೆ ನನಗೇನೂ ಬೇಸರ ಇಲ್ಲ.
ಬಟ್ಟೆ ಒಗೆದು, ಸ್ನಾನ ಮಾಡಿ ಮಧ್ಯಾಹ್ನದ ಊಟಕ್ಕೆ ಒಂದಷ್ಟು ಬೇಯಿಸುವಷ್ಟರಲ್ಲಿ ಎರಡುಗಂಟೆಯಾಯಿತು.  ಊಟ ಮಾಡಿ ಕಂಪ್ಯೂಟರ್ ಮುಂದೆ ಕುಳಿತು ಒಂದೆರಡು ಪ್ಯಾರಾ ಟೈಪ್ ಮಾಡುವಷ್ಟರಲ್ಲಿ ನಿದ್ದೆ ತೂಗಿಕೊಂಡು ಬಂತು.  ಕಂಪ್ಯೂಟರನ್ನು ಹಾಗೇ ಬಿಟ್ಟು ಹಾಸಿಗೆ ಸೇರಿದೆ.
ಸಂಜೆ ಐದೂವರೆಯ ಹೊತ್ತಿಗೆ ಸ್ಟ್ಯಾಫ್ ಕ್ವಾರ್ಟರ್ಸ್‌ನ ಮತ್ತೊಂದು ಮೂಲೆಯಲ್ಲಿದ್ದ ಮುರಳಿಯ ಮನೆ ತಲುಪಿದಾಗ ಬಾಗಿಲು ತೆರೆದವಳು ಅವನ ಹೆಂಡತಿ ಭಾಗೀರಥಿ.  ಮುಖದಲ್ಲಿ ಉತ್ಸಾಹದ ನಗು ತಂದುಕೊಂಡು "ಬನ್ನೀ ಬನ್ನೀ" ಎಂದು ಸ್ವಾಗತಿಸಿದಳು.  "ಎಲ್ಲಿ ಮುರಳಿ?" ಎನ್ನುತ್ತಾ ಒಳಗೆ ಕಾಲಿಟ್ಟೆ.
"ಅವ್ರು ಹೊರಕ್ಕೆ ಹೋಗಿದ್ದಾರೆ.  ಇನ್ನೇನು ಬರಬೋದು.  ಬನ್ನಿ ಕೂರಿ" ಅಂದಳು.
ನನ್ನ ಹೆಜ್ಜೆ ಅಲ್ಲೇ ಸ್ಥಗಿತಗೊಂಡಿತು.  "ಹೌದಾ?  ಆಮೇಲೇ ಬರ‍್ತೀನಿ."  ಸಣ್ಣಗೆ ದನಿ ಹೊರಡಿಸಿದೆ.
"ಅಯ್ಯೋ ಬನ್ನಿ.  ಕೂರಿ.  ಅವ್ರು ಇನ್ನೇನು ಬಂದ್ಬಿಡ್ತಾರೆ."  ಅದೇ ಮಾತುಗಳನ್ನು ಪುನರುಚ್ಚರಿಸಿದಳು.  ಸೋಫಾದತ್ತ ಕೈತೋರಿದಳು.  ಎರಡೇ ಹೆಜ್ಜೆಯಲ್ಲಿ ಗೋಡೆಯತ್ತ ಸರಿದು ಫ್ಯಾನ್‌ನ ಸ್ವಿಚ್ ಒತ್ತಿದಳು.  "ತುಂಬಾ ಸೆಖೆ" ಎಂದು ತನ್ನಷ್ಟಕ್ಕೇ ಹೇಳಿಕೊಂಡು ಫ್ಯಾನಿನ ವೇಗ ಅಧಿಕಗೊಳಿಸಿದಳು.  ನಿಂತೇ ಇದ್ದ ನನ್ನತ್ತ ತಿರುಗಿ "ಅರೆ ಇನ್ನೂ ನಿಂತೇ ಇದ್ದೀರಲ್ಲ!  ಕೂತುಕೊಳ್ರೀ"  ಎಂದು ಒತ್ತಾಯದ ದನಿ ತೆಗೆದಳು.  ನಾನು ಮುಜುಗರಪಡುತ್ತಲೇ ಸೋಫಾದಲ್ಲಿ ಮುದುರಿ ಕೂರುವುದನ್ನೇ ಕಾದಿದ್ದು "ಏನು ತಗೋತೀರಿ?  ಕಾಫಿ ಆಗಬಹುದಾ?" ಎಂದು ಪ್ರಶ್ನೆ ಹಾಕಿ ನನ್ನ ಉತ್ತರಕ್ಕೂ ಕಾಯದೇ "ಈಗ ತರ್ತೀನಿ" ಎನ್ನುತ್ತಾ ಲಗುಬಗೆಯಿಂದ ಅಡಿಗೆ ಮನೆಗೆ ಓಡಿದಳು.
ಕಳೆದ ವರ್ಷ ಯೂನಿವರ್ಸಿಇಗೆ ಬಂದಾಗಿನಿಂದ ನಾನು ಮುರಳಿಯ ಮನೆಗೆ ಸುಮಾರು ಐದಾರು ಸಲ ಬಂದಿರಬಹುದು ಅಷ್ಟೇ.  ಪ್ರತೀಸಲವೂ ಡಿಪಾರ್ಟ್‌ಮೆಂಟಿನಿಂದ ಅವನ ಜತೆಯೇ ಇಲ್ಲಿಗೆ ಬಂದು ಸ್ವಲ್ಪ ಹೊತ್ತು ಕುಳಿತು ಡಿಪಾರ್ಟ್‌ಮೆಂಟಿನಲ್ಲಿ ಎಲ್ಲರೆದುರು ಆಡಲಾಗದ ಮಾತುಗಳೇನಾದರೂ ಇದ್ದರೆ ಅದನ್ನು ಆಡಿ ಮುಗಿಸಿ, ಅವನ ಹೆಂಡತಿ ನೀಡಿದ ಕಾಫಿಯನ್ನೋ ಟೀಯನ್ನೋ ಹೀರಿ ನನ್ನ ಮನೆಯತ್ತ ಹೊರಡುತ್ತಿದ್ದೆ.   ಆವಾಗೆಲ್ಲಾ ಅವನ ಹೆಂಡತಿಯ ಜತೆ ನನ್ನದು ಒಂದೆರಡು ಮಾತುಗಳಷ್ಟೇ.  ನಾನೂ ಮುರಳಿಯೂ ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದರೆ ಸಾಮಾನ್ಯವಾಗಿ ಅವಳು ಅತ್ತ ಸುಳಿಯುತ್ತಲೇ ಇರಲಿಲ್ಲ.  ಅಡಿಗೆಮನೆಯಿಂದಲೇ ಮೆಲುದನಿಯಲ್ಲಿ ಗಂಡನನ್ನು ಕರೆದು ಚಹದ ಕಪ್ಪುಗಳ ಟ್ರೇಯನ್ನು ಅವನ ಕೈಲಿಡುತ್ತಿದ್ದಳು.  ಖಾಲೀ ಕಪ್ಪುಗಳು ನಾನು ಅಲ್ಲಿಂದ ಹೊರಡುವವರೆಗೂ ಅಲ್ಲೇ ಟೀಪಾಯ್ ಮೇಲೇ ಇರುತ್ತಿದ್ದವು.
ಮುರಳಿ ಮನೆಯಲ್ಲಿಲ್ಲದ ಸಮಯದಲ್ಲಿ ನಾನಿಲ್ಲಿಗೆ ಬಂದದ್ದು ಇದೇ ಮೊದಲು.  ಈಗ ಅವನ ಹೆಂಡತಿಯ ವರ್ತನೆಯಲ್ಲಿ ಇದೆಂತಹ ಬದಲಾವಣೆ!  ನಗಲೋ ಬೇಡವೋ ಎಂಬಂತೆ ಸಣ್ಣಗೆ ತುಟಿಯರಳಿಸಿ "ಚೆನ್ನಾಗಿದ್ದೀರಾ?" ಎಂದು ಪಿಸುಗಿ ಉತ್ತರಕ್ಕೂ ಕಾಯದೇ ಮೈತುಂಬಾ ಸೆರಗು ಹೊದ್ದು ಮರೆಯಾಗಿಬಿಡುತ್ತಿದ್ದವಳ ವರ್ತನೆಯಲ್ಲಿ ಇಂದು ಇಷ್ಟೋಂದು ಸಲಿಗೆ!  ನಡೆನುಡಿಯಲ್ಲಿ ಇಷ್ಟೋಂದು ಸಂಭ್ರಮ!  ಸೋಜಿಗ ಪಟ್ಟುಕೊಂಡೆ.
ಎರಡು ನಿಮಿಷಗಳಲ್ಲಿ ಕಾಫಿಯ ಲೋಟ ಹಿಡಿದು ಹೊರಬಂದಳು.  "ತಗೋಳ್ಳೀ" ಎನ್ನುತ್ತಾ ಕೈಗೇ ಲೋಟವನ್ನಿತ್ತಳು.  ಹಿಂದೆ ಸರಿದು ಗೋಡೆಯನ್ನೊರಗಿ ನಿಂತಳು.
ನಿಧಾನವಾಗಿ ಪಾನೀಯವನ್ನು ಗುಟುಕರಿಸಿದೆ.  ತಲೆ ತುಂಬಾ ಗೊಂದಲ.  ಒಮ್ಮೆ ಬಾಗಿಲತ್ತ ತಿರುಗಿದೆ...  ನಡೆಯಲ್ಲಿ, ನುಡಿಯಲ್ಲಿ ಎಂದೂ ಇಲ್ಲದ ಸಲಿಗೆ ಚಿಮ್ಮಿಸಿ ನನ್ನನ್ನು ಗೊಂದಲದಲ್ಲಿ ಕೆಡವಿ ಗೋಡೆಯೊರಗಿ ನಿಂತಿದ್ದವಳತ್ತ ಓರೆನೋಟ ಹೂಡಿದೆ.
ನನ್ನದೇ ವಯಸ್ಸಿರಬೇಕು.  ಮಧ್ಯಮ ನಿಲುವು, ಗೋಧಿ ಬಣ್ಣದ ತುಂಬಿದ ದೇಹ.  ದುಂಡು ಮುಖ, ಅಗಲ ಕಣ್ಣುಗಳು, ಚಂದದ ಮೂಗು, ಪುಟ್ಟ ಬಾಯಿ, ತಲೆಯಲ್ಲಿ ಹೊರೆಗೂದಲು...  ಮೊಟ್ಟಮೊದಲ ಬಾರಿಗೆ ಅವಳನ್ನು ಅಪಾದಮಸ್ತಕ ಅವಲೋಕಿಸಿದೆ.  ತಿಳಿನೀಲೀ ಸೀರೆ, ಬಿಳುಪು ರವಿಕೆಯಲ್ಲಿ ಆಕರ್ಷಕವಾಗಿ ಕಂಡಳು.
ಕುಡಿದು ಮುಗಿಸಿ ಲೋಟವನ್ನು ಕೆಳಗಿಡುತ್ತಿದ್ದಂತೇ ಮುಂದೆ ಸರಿದು ಅದನ್ನು ಎತ್ತಿಕೊಂಡಳು.  ಬೆನ್ನುಹಾಕಿ ಸರಸರನೆ ನಡೆದುಹೋಗಿ ಅಡಿಗೆಮನೆ ಸೇರಿದಳು.  ಮರುಕ್ಷಣ ಲೋಟವನ್ನು ತೊಳೆಯುವ ಶಬ್ಧ ಅಡಿಗೆಮನೆಯಿಂದ ಕೇಳಿಬಂತು.
ಮುರಳಿ ಬರಲೇ ಇಲ್ಲವಲ್ಲ? ಎಂದುಕೊಳ್ಳುತ್ತಾ ಒಮ್ಮೆ ಬಾಗಿಲತ್ತ ನೋಡಿದೆ.  ಅಲ್ಲಿಂದ ನೋಟ ಹೊರಳಿಸುವಷ್ಟರಲ್ಲಿ ಅವಳು ಅಡಿಗೆಮನೆಯಿಂದ ಹೊರಬಂದಳು.  ಮತ್ತೆ ಅದೇ ಗೋಡೆಗೊರಗಿ ನಿಂತಳು.  ಕೊರಳನ್ನು ಅತ್ತಿತ್ತ ಹೊರಳಿಸಿದಳು.  ಗೋಡೆಯ ಪಕ್ಕದಲ್ಲಿದ್ದ ಬೆತ್ತದ ಕುರ್ಚಿಯೊಂದನ್ನು ಸರಕ್ಕನೆ ನನ್ನ ಹತ್ತಿರಕ್ಕೆ ಎಳೆದುಕೊಂಡು ಕುಳಿತಳು.  ನಾನು ಬೆರಗುಹತ್ತಿ ನೋಡುತ್ತಿದ್ದಂತೇ "ನಿಮ್ಮ ಕಥೆ ಓದಿದೆ" ಎಂದು ಮಾತು ಆರಂಭಿಸಿದಳು.  ನಾನು ಹೌದಾ? ಎನ್ನಬೇಕೆಂದುಕೊಳ್ಳುವಷ್ಟರಲ್ಲಿ ತಾನೇ "ನಿಮ್ಮ ಕಥೆಗಳನ್ನೆಲ್ಲಾ ಓದಿದ್ದೀನಿ.  ನಿಮ್ಜತೆ ಮಾತಾಡ್ಬೇಕು ಅಂತ ಅಂದ್ಕೋತಾನೇ ಇದ್ದೆ.  ಸಮಯಾನೇ ಸಿಗ್ತಾ ಇರ‍್ಲಿಲ್ಲ" ಎನ್ನುತ್ತಾ ನಕ್ಕಳು.
ನಿಮ್ಮ ಕಥೆ ಓದಿದೆ ಎಂಬ ಮಾತನ್ನು ಅವರಿವರಿಂದ ಕೇಳುವುದು ನನಗೆ ಅಭ್ಯಾಸವಾಗಿಹೋಗಿತ್ತು.  ಅಂತಹ ಮಾತುಗಳು ಕಿವಿಗೆ ಬಿದ್ದಾಗೆಲ್ಲಾ ನನ್ನ ಪ್ರತಿಕ್ರಿಯೆ ಒಂದು ಸಣ್ಣನೆಯ ನಗೆ.  ಹಿಂದೆಯೇ "ಹೌದಾ?  ಹೇಗನಿಸ್ತು?" ಎಂಬ ಪ್ರಶ್ನೆ ನನ್ನ ಬಾಯಿಂದ ಸರಾಗವಾಗಿ ಹೊರಡುತ್ತಿತ್ತು.  ಆದರೆ ಈಗ ಅದೇ ಮಾತನ್ನು ಭಾಗೀರಥಿಯ ಬಾಯಿಂದ ಕೇಳಿದಾಗ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ನಾನು ಗೊಂದಲದಲ್ಲಿ ಬಿದ್ದದ್ದಂತೂ ನಿಜ.  ಸುಮ್ಮನೆ ಅವಳ ಮುಖವನ್ನೇ ನೋಡಿದೆ.  ಅವಳೇ ಮಾತಾಡಿದಳು: "ನೋಡೀ, ಸಾಮಾನ್ಯವಾಗಿ ನಿಮ್ಮ ಕಥೆಗಳಲ್ಲಿ..." ಎಂದು ಆರಂಭಿಸಿ ಹತ್ತು ಹಲವು ಪ್ರಶ್ನೆ ಕೇಳಿದಳು.  ನನ್ನ ಉತ್ತರಗಳ ಮೇಲೆ ಮತ್ತಷ್ಟು ಪ್ರಶ್ನೆಗಳ ಧಾಳಿ ನಡೆಸಿದಳು.  ಕೆಲವು ಉತ್ತರಗಳಿಗೆ ನಕ್ಕಳು.  ಇನ್ನು ಕೆಲವಕ್ಕೆ ಗಂಭೀರ ಮುಖಮುದ್ರೆಯ ಪ್ರತಿಕ್ರಿಯೆ ತೋರಿದಳು...
ಒಂದು ಹಂತದಲ್ಲಿ ನಾನು ಏಕಾಏಕಿ ವಾಚ್ ನೋಡಿದೆ.  ಐವತ್ತು ನಿಮಿಷಗಳು ಕಳೆದುಹೋಗಿದ್ದವು!  ಮುರಳಿಯ ಪತ್ತೆ ಇರಲಿಲ್ಲ.  ನಾನು ಅವನ ಮನೆಯಲ್ಲಿ ಅವನ ಪತ್ನಿಯ ಜತೆ ಮೊಟ್ಟಮೊದಲ ಬಾರಿಗೆ ಒಂಟಿಯಾಗಿ ಐವತ್ತು ನಿಮಿಷಗಳನ್ನು ಕಳೆದಿದ್ದೆ.  ಈ ಐವತ್ತು ನಿಮಿಷಗಳಲ್ಲಿ ನನ್ನ ಬಹುಪಾಲು ಎಲ್ಲಾ ಕಥೆಗಳನ್ನೂ ಅವಳು ಓದಿದ್ದಾಳೆಂದೂ, ಅವುಗಳ ಬಗ್ಗೆ ವಿಮರ್ಶಾತ್ಮಕವಾಗಿ ಮಾತಾಡುವ ಸಾಮರ್ಥ್ಯ ಅವಳಿಗಿದೆಯೆಂದೂ ಅರಿತೆ.  ಇಂಥಾ ಒಬ್ಬಳು ಹೆಣ್ಣು ನನಗೆ ಇಷ್ಟೋಂದು ಹತ್ತಿರದಲ್ಲೇ ಇದ್ದಾಳೆ ಎಂದು ನನಗೆ ಇದುವರೆಗೂ ತಿಳಿದೇ ಇರಲಿಲ್ಲವಲ್ಲ!
ಅವಳ ಬಗ್ಗೆ ನನಗೆ ತಿಳಿದ ವಿಚಾರಗಳು ನನ್ನನ್ನು ಅಚ್ಚರಿಗೊಳಿಸಿದವು.  ಅವಳು ಇಂಗ್ಲಿಷ್‌ನಲ್ಲಿ ಎಮ್ ಎ, ಅದರ ಜತೆಗೆ ಎಮ್ ಫಿಲ್ ಸಹಾ ಮಾಡಿದ್ದಳು.  ಅಷ್ಟೇ ಅಲ್ಲ.  ಮದುವೆಗೆ ಮೊದಲು ಶಿವಮೊಗ್ಗಾದ ಕಾಲೇಜೊಂದರಲ್ಲಿ ಎರಡುವರ್ಷ ಅಧ್ಯಾಪಕಿಯಾಗಿ ಕೆಲಸ ಮಾಡಿದ್ದಳು.  ಆ ಬಗ್ಗೆ ಹೇಳುವಾಗ ಅವಳ ಕಣ್ಣುಗಳಲ್ಲಿದ್ದ ಹೊಳಪು, ಹಿಂದೆಯೇ ಅವುಗಳಲ್ಲಿ ಕವಿದುಕೊಂಡ ಸೂತಕದಂಥಾ ಮಸುಕು ನನ್ನನ್ನು ಪ್ರಶ್ನೆಗಳ ಹುತ್ತವೊಂದರ ಕತ್ತಲಿನೊಳಗೆ ತಳ್ಳಿದವು.  ಮದುವೆಗೆ ಒಪ್ಪಿಕೊಂಡಾಗ ಮುರಳಿ ಹಾಕಿದ ಮೊದಲ ಕಟ್ಟಳೆ ಕೆಲಸ ಬಿಡಬೇಕು ಎಂಬುದಾಗಿತ್ತು ಎಂದು ಹೇಳಿ ಸಣ್ಣಗೆ ನಕ್ಕಳು.  "ಇಲ್ಲೇ ನಮ್ಮ ಯೂನಿವರ್ಸಿಟಿಯ ಇಂಗ್ಲೀಷ್ ಡಿಪಾರ್ಟ್‌ಮೆಂಟಿನಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಹುದ್ದೆಗಳು ಖಾಲಿ ಇವೆಯಲ್ಲ?  ಯಾಕೆ ಸೇರಿಕೊಳ್ಳಬಾರದು?" ಎಂಬ ನನ್ನ ಪ್ರಶ್ನೆಗೆ ಉತ್ತರವಾಗಿ ಸೂರು ನೋಡಿದಳು.
ಸಂಭಾಷಣೆಯ ಒಂದು ಹಂತದಲ್ಲಿ ಒಂದೆರಡು ಕ್ಷಣಗಳ ಮೌನದ ನಂತರ ಅವಳು ನನ್ನನ್ನೇ ನೇರವಾಗಿ ನೋಡುತ್ತಾ ತುಟಿಯಲುಗಿಸಿದಳು.
"ಒಂದು ಪ್ರಶ್ನೆ ಕೇಳಲಾ?"
ನಾನು "ಹ್ಞೂಂ" ಎನ್ನುವಷ್ಟರಲ್ಲಿ ಹೊರಗೆ ಮುರಳಿಯ ಬೈಕ್ ಬಂದ ಸದ್ದಾಯಿತು.  ಅವಳು ಚಕ್ಕನೆ ಮೇಲೆದ್ದಳು.  ಚಣದಲ್ಲಿ ಮೈತುಂಬಾ ಸೆರಗು ಹೊದ್ದಳು.  ಕುರ್ಚಿಯನ್ನು ಸರ್ರನೆ ಗೋಡೆಯತ್ತ ಸರಿಸಿದಳು.  ಅವಳು ಬಾಗಿಲತ್ತ ಎರಡು ಹೆಜ್ಜೆ ಇಡುವಷ್ಟರಲ್ಲಿ ಮುರಳಿ ಕಾಣಿಸಿಕೊಂಡ.  ನನ್ನತ್ತ ಒಮ್ಮೆ, ಅವಳತ್ತ ಒಮ್ಮೆ ಚಕಚಕನೆ ನೋಟ ಹೊರಳಿಸಿದ.  ಅವಳ ಮೇಲೆ ಅವನ ನೋಟ ಕೆಲಕ್ಷಣ ಸ್ಥಿರವಾಗಿ ನಿಂತಿತು.  ಕಣ್ಣುಗಳು ಅಗಲವಾಗಿ ತೆರೆದುಕೊಂಡವು.  ಮರುಕ್ಷಣ ನನ್ನತ್ತ ತಿರುಗಿದ.  ಕಣ್ಣರಪ್ಪೆಗಳು ಸೋತಂತೆ ಕೆಳಗಿಳಿದವು.  ಅವುಗಳ ಬದಲಾಗಿ ಅಗಲವಾಗಿ ತೆರೆದುಕೊಂಡದ್ದು ಬಾಯಿ.  "ಬಂದು ತುಂಬಾ ಹೊತ್ತಾಯ್ತೇನೂ?" ಎಂದು ದೊಡ್ಡ ದನಿಯಲ್ಲಿ ಪ್ರಶ್ನಿಸಿದ.
ಹ್ಞೂ ಒಂದು ಗಂಟೆ ಆಯ್ತು ಎಂದು ಹೇಳಲು ಬಾಯಿ ತೆರೆಯುವಷ್ಟರಲ್ಲಿ ಅವನ ಹೆಂಡತಿ ಒಂದು ಹೆಜ್ಜೆ ಮುಂದಿಟ್ಟಳು.  "ಅವ್ರು ಈಗ ತಾನೇ ಬಂದ್ರು.  ಇನ್ನೂ ಎರಡು ನಿಮಿಷವೂ ಆಗಿಲ್ಲ" ಅಂದಳು.  ಅಷ್ಟು ಹೇಳಿ ಅಲ್ಲಿ ಇನ್ನು ತನಗೇನೂ ಕೆಲಸವಿಲ್ಲವೆಂಬಂತೆ ಒಳಕೋಣೆಗೆ ಹೋಗಿಬಿಟ್ಟಳು.
ನಾನು ದಂಗಾಗಿಹೋದೆ.  ಉತ್ತರಿಸಲು ತೆರೆದಿದ್ದ ನನ್ನ ಬಾಯಿ ಗಕ್ಕನೆ ಮುಚ್ಚಿಕೊಂಡಿತು.  ಪ್ರತಿಕ್ರಿಯೆಯಾಗಿ ಅವನ ಕಣ್ಣುಗಳು ಚಕ್ಕನೆ ಅಗಲವಾದವು.  "ತುಂಬಾ ಹೊತ್ತು ಕಾಯಿಸಿಬಿಟ್ಟೆನೇನೋ ಅಂತ ಬೇಜಾರಾಯ್ತು... ಹೆಹೆಹೇ" ಎನ್ನುತ್ತಾ ಒಳಗೆ ಬಂದು ಎದುರಿನ ಸೋಫಾದಲ್ಲಿ ಕುಳಿತು ದೇಹವನ್ನು ಹಿಂದಕ್ಕೆ ಮುಂದಕ್ಕೆ ತೂಗಾಡಿಸಿದ.  ಒಳಕೋಣೆಯತ್ತ ತಿರುಗಿ "ನೋಡೂ ಸ್ವಲ್ಪ ಟೀ ಮಾಡು" ಎಂದು ಕೂಗು ಹಾಕಿದ.  ದಢಕ್ಕನೆ ಮೇಲೆದ್ದು ಬಾತ್‌ರೂಮಿನತ್ತ ನಡೆದ.
ಅವನ ಹೆಂಡತಿ ಒಳಕೋಣೆಯಿಂದ ಬಂದವಳು ನನ್ನತ್ತ ತಿರುಗಿಯೂ ನೋಡದೇ ಸರಸರನೆ ಕಿಚನ್‌ನತ್ತ ನಡೆದುಹೋದಳು.
ಇಡೀ ಮನೆಯಲ್ಲಿ ಮೌನ.  ಗಂಟೆಯಿಂದ ಎದುರಿಗೆ ಕೂತ ಹೆಣ್ಣು ಏಕಾಏಕಿ ಮಾಯವಾಗಿದ್ದಳು.  ಕಿವಿ ತುಂಬಾ ಕೇಳಿದ್ದ ಕೋಮಲ ದನಿ, ಚುರುಕುಮಾತುಗಳು, ಕಿಲಕಿಲ ನಗೆ- ಎಲ್ಲವೂ ಅದೆಲ್ಲೋ ಗುರುತು ಸಿಗದಂತೆ ಹಾರಿಹೋಗಿದ್ದವು...  ಕಳೆದ ಒಂದು ಗಂಟೆಯಿಂದ ನಡೆದದ್ದು ಒಂದು ಕನಸೇನೋ ಎಂದು ನನಗನಿಸತೊಡಗಿತು.
"ಟೀ ಆಗಿದೆ.  ಸ್ವಲ್ಪ ಬರ‍್ತೀರಾ?"  ಹಿಂದೆಂದೋ ಕೇಳಿದ್ದ, ಈಗ ಗುರುತಿಗೆ ಸಿಕ್ಕದಿದ್ದ ಅಪರಿಚಿತ ಹೆಣ್ಣು ದನಿಯೊಂದು ಕಿಚನ್‌ನಿಂದ ಕೇಳಿಬಂತು.  ಬಾತ್‌ರೂಮಿನಿಂದ ಹೊರಬಂದಿದ್ದ ಮುರಳಿ "ಹ್ಞೂ ಹ್ಞೂ" ಎಂದು ಗುಟುರು ಹಾಕುತ್ತಾ ಅತ್ತ ನಡೆದ.  ತಲೆಯೆತ್ತಿ ಅತ್ತ ನೋಡಿದ ನನಗೆ ಕಂಡದ್ದು ಅವನ ಅಗಲ ಬೆನ್ನು.  ಅದರಾಚೇ ಇರಬಹುದಾದ ಹೆಣ್ಣು ನನಗೊಂದು ಊಹೆ ಮಾತ್ರವಾದಳು.
ಆ ಗಳಿಗೆಯಲ್ಲಿ ನನಗೆ ಥಟ್ಟನೆ ನೆನಪಿಗೆ ಬಂದದ್ದು ವರ್ಷದ ಹಿಂದೆ ನಾನಿಲ್ಲಿಗೆ ಬಂದಾಗ ಮುರಳಿಯ ಬಗ್ಗೆ ಮತ್ತೊಬ್ಬ ಸಹೋದ್ಯೋಗಿ ಡಿಸೋಜಾ ಹೇಳಿ ನಕ್ಕಿದ್ದ ಒಂದು ಮಾತು.
ಅವನಾ?  ಅವನೊಂದು ಸ್ಪೆಸಿಮೆನ್...  ಮದುವೆ ಮಾಡ್ಕೊಂಡು ಹೆಂಡ್ತೀನ ಕರಕೊಂಡು ಇಲ್ಲಿಗೆ ಬಂದಾಗ ನಾವ್ಯಾರಾದ್ರೂ ಮನೆಗೆ ಹೋದ್ರೆ ವೆರಾಂಡಾದಲ್ಲೆ ನಿಂತು ಮಾತಾಡಿ ಕಳಿಸಿಬಿಡ್ತಿದ್ದ.  ಅಷ್ಟೇ ಅಲ್ಲ, ಡಿಪಾರ್ಟ್‌ಮೆಂಟಿಗೆ ಬರೋವಾಗ ಹೆಂಡತೀನ ಮನೇ ಒಳಗೇ ಕೂಡಿ ಹಾಕಿ ಹೊರಗ್ನಿಂದ ಬೀಗ ಹಾಕ್ಕೊಂಡು ಬರ್ತಿದ್ದ...  ಅಂಥಾ ಗೂಸಲು ನನ್ಮಗ.
ಟೀ ಲೋಟವನ್ನು ನನ್ನ ಕೈಲಿತ್ತ ಮುರಳಿ ಗೋಡೆಯ ಮೇಲಿದ್ದ ಗಡಿಯಾರದತ್ತ ನೋಡಿ "ಕೆಲಸ ಶುರೂ ಮಾಡೋಣವಾ?" ಅಂದ.  ನನಗೆ ಮೂಡಿರಲಿಲ್ಲ.  ಮನಸ್ಸು ಗೋಜಲುಗೋಜಲಾಗಿಬಿಟ್ಟಿತ್ತು.
"ನೀವು ಟೈಪ್ ಮಾಡಿರೋದನ್ನ ಫ್ಲಾಪಿಗೆ ಹಾಕ್ಕೊಡಿ.  ರಾತ್ರಿ ಮನೇಲಿ ನೋಡ್ತೀನಿ" ಅಂದೆ.  "ಹ್ಞಾ ಹ್ಞಾ  ಹಾಗೇ ಮಾಡಿ.  ಅದೇ ಒಳ್ಳೇದು" ಎಂದ ಅವನ ದನಿ ನಿರಾಳವಾಗಿದ್ದಂತೆ ಕಂಡಿತು.

*     *     *

ಮನೆ ಸೇರಿ ಮುಖದ ಮೇಲೆ ತಣ್ಣೀರು ಚಿಮುಕಿಸಿಕೊಂಡಾಗ ನಾನು ಮಧ್ಯಾಹ್ನದ ನಿದ್ದೆಯಿಂದ ಈಗ ತಾನೆ ಎದ್ದಂತೆನಿಸಿತು.  ಕತ್ತಲುಗಟ್ಟಿದ್ದ ಬಾಲ್ಕನಿಯಲ್ಲಿ ಈಸೀಛೇರ್ ಹಾಕಿಕೊಂಡು ಕುಳಿತೆ.  ತಲೆತುಂಬಾ ಪ್ರಶ್ನೆಗಳು ಪ್ರಶ್ನೆಗಳು...  ಗಂಟೆಯವರೆಗೆ ಎದುರು ಕುಳಿತು ಆತ್ಮೀಯವಾಗಿ ಮಾತಾಡಿದ ಒಬ್ಬಳಿಗೂ, ಸೆರಗು ಹೊದ್ದು ಕಿಚನ್‌ಗೆ ಓಡಿಹೋಗಿ ಸಣ್ಣನೆಯ ದನಿಯಲ್ಲಿ "ಟೀ ಆಗಿದೆ" ಎಂದು ಉಸುರಿದ ಇನ್ನೊಬ್ಬಳಿಗೂ ಏನಾದರೂ ಸಂಬಂಧವಿದೆಯೇ?  ಅವರಿಬ್ಬರೂ ಒಬ್ಬರೇ?  ಅಥವಾ ಬೇರೆಬೇರೆಯೇ?  ಒಬ್ಬಳ ನೆರಳು ಇನ್ನೊಬ್ಬಳೇ?  ಇಲ್ಲಾ ಒಬ್ಬಳ ಭೂತ ಇನ್ನೊಬ್ಬಳೇ?...  ತಲೆಯನ್ನು ಬಿಗಿಯಾಗಿ ಒತ್ತಿಹಿಡಿದೆ.  ಅಮ್ಮ ಏಕಾಏಕಿ ನೆನಪಾದಳು.  ಹಿಂದೆಯೇ ಸರಸಕ್ಕ ಸಹ.
ಅಮ್ಮನ ನೆನಪಾದಾಗಲೆಲ್ಲಾ ಸರಸಕ್ಕ ನೆನಪಿಗೆ ಬರುವುದು, ಅಥವಾ ಸರಸಕ್ಕನನ್ನು ನೆನಸಿಕೊಂಡಾಗಲೆಲ್ಲಾ ಅಮ್ಮನನ್ನೂ ನೆನೆಯುವುದು ನನಗೆ ಮಾಮೂಲು.  ಅಮ್ಮನ ಪಡಿಯಚ್ಚು ಸರಸಕ್ಕ.  ಇಬ್ಬರೂ ಮೌನದ ಮೂಟೆಗಳು...  ನನಗೆ ಇಂದಿಗೂ ಪೂರ್ಣವಾಗಿ ಅರ್ಥವಾಗದ ಒಗಟುಗಳು.
ನನ್ನಮ್ಮ ಪ್ರೈಮರಿ ಸ್ಕೂಲ್ ಟೀಚರ್.  ಅವಳೆಂದೂ ಜಡೆ ಹೆಣೆದುಕೊಂಡದ್ದನ್ನೇ ನಾನು ನೋಡಿಲ್ಲ. ಕೂದಲನ್ನು ಯಾವಾಗಲೂ ಗಂಟು ಹಾಕಿಕೊಂಡಿರುತ್ತಿದ್ದಳು.  ಉಡುತ್ತಿದ್ದುದು ಅಚ್ಚ ಬಿಳಿಯ ಸೀರೆ ಅಥವಾ ಗುಲಾಬಿ ಬಣ್ಣದ ಸೀರೆ.  ಬೇರೆ ಬಣ್ಣದ ಸೀರೆಗಳನ್ನು ಅಮ್ಮ ಉಟ್ಟದ್ದೇ ಇಲ್ಲ.  ಅಷ್ಟೇ ಅಲ್ಲ ಅಮ್ಮ ಹೆಚ್ಚು ಮಾತಾಡಿದ್ದೇ ಇಲ್ಲ.  ಯಾವಾಗಲೂ ಏನಾದರೊಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದಳು.  ಏನೂ  ಕೆಲಸವಿಲ್ಲ ಅಂದರೆ ಮನೆ ಮುಂದಿನ ಸಂಪಿಗೆ ಮರದ ಕೆಳಗೆ ಕುರ್ಚಿ ಹಾಕಿಕೊಂಡು ಮೌನವಾಗಿ ಕುಳಿತುಬಿಡುತ್ತಿದ್ದಳು.  ಬೇರೆ ಊರಿನಲ್ಲಿ ಕೆಲಸದಲ್ಲಿದ್ದ ಅಪ್ಪ ಶನಿವಾರ ಭಾನುವಾರಗಳಂದು ಮಾತ್ರ ಮನೆಗೆ ಬರುತ್ತಿದ್ದುದು.  ಆಗಲೂ ಅವರಿಬ್ಬರ ನಡುವೆ ಹೆಚ್ಚು ಮಾತಿಲ್ಲ.  ಹ್ಞಾ ನೆನಪಾಗುತ್ತಿದೆ.  ಅಮ್ಮ ಒಂದುಸಲ ಅಪ್ಪನೊಡನೆ ಜಗಳಾಡಿದ್ದಳು.  ರಾತ್ರಿಯಿಡೀ ನಡೆದ ಜಗಳ ಅದು.  ನಾನು ಆಗಷ್ಟೇ ಹೈಸ್ಕೂಲಿಗೆ ಸೇರಿದ್ದೆ.  ಭಾನುವಾರ ರಾತ್ರಿ ಊಟವಾದ ಮೇಲೆ ಯಾವುದೋ ಮಾತಿಗೆ ಅಮ್ಮ ಅಳತೊಡಗಿದಳು.  ಅಳುತ್ತ ಅಳುತ್ತಲೇ ದನಿ ಎತ್ತರಿಸಿ ಕೂಗಾಡತೊಡಗಿದಳು.  ಅಪ್ಪ ಮಾತ್ರ ಸುಮ್ಮನೆ ಕುಳಿತುಬಿಟ್ಟಿದ್ದ.  ಸರಸಕ್ಕ ತನಗೆಂದೇ ಇದ್ದ ಪುಟ್ಟ ಕೋಣೆ ಸೇರಿಕೊಂಡುಬಿಟ್ಟಿದ್ದಳು.  ನನಗೆ ನಿದ್ದೆ ಬಂದಾಗಲೂ ಅಮ್ಮನ ಕೂಗಾಟ ನಿಂತಿರಲಿಲ್ಲ.  ಆಗ ಅಮ್ಮನ ಕೂಗಾಟದ ಜತೆ ಅಪ್ಪನ ಮೆಲ್ಲ ಮೆಲ್ಲನೆಯ ಮಾತುಗಳೂ ಸೇರಿಕೊಂಡಿದ್ದವು...  ಆ ರಾತ್ರಿ ನನಗೆ ಮತ್ತೆ ಮತ್ತೆ ಎಚ್ಚರವಾಗುತ್ತಿತ್ತು...  ಅಮ್ಮನ ಬಾಯಿಂದ ಕೂಗಾಟ ಕೇಳಿದ್ದು ಅದೇ ಮೊದಲು, ಅದೇ ಕೊನೆ.
ಬೆಳಿಗ್ಗೆ ಎದ್ದಾಗ ಮನೆಯಿಡೀ ಮೌನ.  ಅಪ್ಪ ಮಾಮೂಲಿನಂತೆ ಬೆಳಿಗ್ಗೆ ಬೆಳಿಗ್ಗೆಯೇ ಹೊರಟುಹೋಗಿದ್ದ.  ಹಾಗೆ ಹೋದ ಅಪ್ಪ ಮುಂದಿನ ಶನಿವಾರ ಬರಲಿಲ್ಲ.  ಅದರ ಮುಂದಿನ ಶನಿವಾರವೂ ಅವನ ಸುಳಿವಿಲ್ಲ.  "ಅಪ್ಪ ಬರಲಿಲ್ಲವಲ್ಲಾ" ಎಂದು ಅಮ್ಮನ ಬಳಿ ರಾಗ ಎಳೆದಾಗ "ಬರ್ತಾರೆ ಬಿಡು" ಅಂದಿದ್ದಳು.  ಅದೇ ರಾಗವನ್ನು ಸರಸಕ್ಕನ ಮುಂದೆ ಹಾಡಿದಾಗ ಅವಳು ಹೇಳಲೋ ಬೇಡವೋ ಎಂಬಂತೆ ಪಿಸುದನಿಯಲ್ಲಿ "ಅಪ್ಪ ಇನ್ನು ಬರೋದಿಲ್ಲ" ಅಂದಿದ್ದಳು.  "ಹಂಗಂದ್ರೇನೇ ಸರಸಕ್ಕ?  ಯಾಕೆ ಬರೋದಿಲ್ಲ?" ಎಂದು ಕೇಳಿದಾಗ ಅತ್ತಿತ್ತ ನೋಡಿ ಮತ್ತಷ್ಟು ತಗ್ಗಿದ ದನಿಯಲ್ಲಿ ಉತ್ತರಿಸಿದ್ದಳು.  "ಅಪ್ಪ ಇನ್ನು ಇಲ್ಲಿಗೆ ಬರೋದಿಲ್ಲ.  ಅವನು ಹಾಸನದಲ್ಲಿ ಬೇರೇ ಯಾವಳನ್ನೋ ಮದುವೆ ಮಾಡಿಕೊಂಡಿದ್ದಾನೆ.  ಇನ್ನುಮುಂದೆ ಅವಳ ಜತೆಯೇ ಇರುತ್ತಾನಂತೆ."
ಬದುಕಿನ ಮತ್ತೊಂದು ಮಗ್ಗಲು ನನ್ನ ಮುಂದೆ ಮೈತೆರೆದುಕೊಂಡಿತ್ತು...
ಅದಾಗಿ ಎರಡು-ಮೂರು ತಿಂಗಳ ನಂತರ ಅಮ್ಮ ಒಂದುದಿನ ಮುಸ್ಸಂಜೆಯಾದರೂ ಮನೆಯಲ್ಲಿ ದೀಪ ಹಚ್ಚದೇ ಕತ್ತಲೆಯಲ್ಲೇ ಮಂಡಿಗಳ ನಡುವೆ ತಲೆಯಿಟ್ಟು ಗೋಡೆಗೊರಗಿ ಕುಳಿತಿದ್ದಳು.  ಗೆಳೆಯರ ಜತೆ ಕುಣಿದು ಕುಪ್ಪಳಿಸಿ ಬೆವರೊರೆಸಿಕೊಳ್ಳುತ್ತಾ ಮನೆಗೆ ಬಂದ ನನ್ನನ್ನು ಸರಸಕ್ಕ ಮೂಲೆಗೆ ಕರೆದೊಯ್ದು ವಿಷಯ ಹೇಳಿದಳು.
ಅಪ್ಪನೂ ಅವನ ಹೊಸ ಹೆಂಡತಿಯೂ ಯಾವುದೋ ದೇವಸ್ಥಾನಕ್ಕೆ ಅಂತ ಹೋಗಿದ್ದು ಬರುತ್ತಿರುವಾಗ ಬಸ್ ಅಕ್ಸಿಡೆಂಟ್ ಆಗಿ ಇಬ್ಬರೂ ಸತ್ತುಹೋಗಿದ್ದರಂತೆ.  ಅದಾಗಿ ಒಂದುವಾರದ ಮೇಲೇ ಆಯಿತಂತೆ.  ಅಮ್ಮನಿಗೆ ಗೊತ್ತಾದದ್ದು ಇಂದು.
ಆಮೇಲೆ ಅಮ್ಮ ಮತ್ತೂ ಮೌನವಾಗಿಬಿಟ್ಟಳು.  ಅವಳು ಹೆಚ್ಚು ಹೆಚ್ಚು ಮೌನವಾದಷ್ಟೂ ಸರಸಕ್ಕ ನನಗೆ ಹೆಚ್ಚು ಹೆಚ್ಚು ಹತ್ತಿರವಾಗತೊಡಗಿದಳು.
ಸರಸಕ್ಕ... ಅವಳ ಹೆಸರು ಸರಸ್ವತಿ ಅಂತ.  ಹೆಸರಿಗೆ ತಕ್ಕಂತೆ ಯಾವಾಗಲೂ ಕೈಯಲ್ಲಿ ಒಂದಲ್ಲಾ ಒಂದು ಪುಸ್ತಕ ಹಿಡಿದಿರುತ್ತಿದ್ದಳು.  ನನಗಿಂತಾ ಏಳೆಂಟು ವರ್ಷಕ್ಕೆ ದೊಡ್ಡವಳು ಅವಳು.  ಅವಳೂ ಅಮ್ಮನ ಹಾಗೆ.  ಹೆಚ್ಚು ಮಾತಾಡುತ್ತಲೇ ಇರಲಿಲ್ಲ.  ಆದರೆ ನಾನು ಹೇಳುವುದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದಳು.  ನನ್ನ ಮಾತುಗಳಿಗೆ ಪ್ರತಿಕ್ರಿಯೆಯನ್ನೇ ತೋರದಿದ್ದ ಅಮ್ಮನಿಗಿಂತ ಹ್ಞೂ ಹೌದಾ? ಆಮೇಲೆ..." ಅನ್ನುತ್ತಿದ್ದ, ಒಮ್ಮೊಮ್ಮೆ ಸಣ್ಣಗೆ ತುಟಿ ತೆರೆದು ನಗುತ್ತಿದ್ದ ಸರಸಕ್ಕ ನನಗೆ ಹೆಚ್ಚು ಪ್ರಿಯಳಾಗಿಹೋದಳು.
ಆ ದಿನಗಳಲ್ಲಿ ಅಮ್ಮನ ಎದೆಯಲ್ಲಿನ ವೇದನೆ, ಅಳಲು, ತಳಮಳಗಳನ್ನು ಅರ್ಥ ಮಾಡಿಕೊಳ್ಳಲು ನನಗೆ ಹಲವು ವರ್ಷಗಳೇ ಬೇಕಾದವು.  ಒಂದೊಂದಾಗಿ ಎಲ್ಲವೂ ನನ್ನ ಅರಿವಿನ ಪರಿಧಿಗೆ ಬರುತ್ತಿದ್ದಂತೇ ಅವಳ ಮೌನ ಅರ್ಥ ಪಡೆದುಕೊಳ್ಳತೊಡಗಿತು.  ನಾನೂ ಹೆಚ್ಚು ಹೆಚ್ಚು ಮೌನಿಯಾಗತೊಡಗಿದೆ...  ಪುಟ್ಟ ಮನೆಯಲ್ಲಿ ಮೂರು ಮೌನವೃತ್ತಗಳು.
ನನ್ನನ್ನೂ, ಸರಸಕ್ಕನನ್ನೂ ಓದಿಸಲು ಅಮ್ಮ ಪಡಬಾರದ ಪಾಡು ಪಡುತ್ತಿದ್ದಾಳೆ ಎಂದು ಅರಿವಾಗುವ ಹೊತ್ತಿಗೆ ನಾನು ಕಾಲೇಜು ಮೆಟ್ಟಲು ಹತ್ತಿದ್ದೆ.  ಅಕ್ಕ ಎಕನಾಮಿಕ್ಸ್‌ನಲ್ಲಿ ಎಮ್. ಎ. ಮುಗಿಸಿ ಮಹಾರಾಣೀಸ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದಳು.  ಜತೆಗೇ ಪಿ. ಹೆಚ್. ಡಿ. ಸಹಾ ಮಾಡತೊಡಗಿದ್ದಳು.
ಸರಸಕ್ಕ ಸಂಪಾದಿಸಲು ಶುರು ಮಾಡಿದ ಮೇಲೇ ಮನೆಗೆ ಅದೆಷ್ಟೋ ವರ್ಷಗಳ ನಂತರ ಹೊಸದಾಗಿ ಬಣ್ಣ ಹೊಡೆಸಿದ್ದು.  ಆದರೆ ಅಮ್ಮನ ಮೈಮೇಲೆ ಬಿಳಿ ಅಥವಾ ಗುಲಾಬಿ ಬಣ್ಣದ ಹೊರತಾಗಿ ಬೇರೊಂದು ಬಣ್ಣ ಕಾಣಲಿಲ್ಲ.  ಅಮ್ಮ ಅದೇ ಅಮ್ಮನಾಗೇ ಉಳಿದುಬಿಟ್ಟಿದ್ದಳು.
ಕೆಲಸಕ್ಕೆ ಸೇರಿದ ಮೇಲೆ ಸರಸಕ್ಕನಲ್ಲಿ ಅಂತಹ ಹೇಳಿಕೊಳ್ಳುವ ಬದಲಾವಣೆಯೇನೂ ಆಗಲಿಲ್ಲ.  ನಡೆನುಡಿಯಲ್ಲೂ ಅಷ್ಟೇ, ಉಡುಪಿನಲ್ಲೂ ಅಷ್ಟೇ.  ಸರಸಕ್ಕನ ಉಡುಗೆ ಅಂದರೆ ಅಮ್ಮನ ಹಾಗೆ ಸೀರೆ ರವಿಕೆಯಷ್ಟೇ.  ಆದರೆ ಒಂದೇ ವ್ಯತ್ಯಾಸ.  ಅಮ್ಮ ಬರೀ ಬಿಳಿ ಅಥವಾ ಗುಲಾಬಿ ರಂಗಿನ ಸೀರೆಗಳನ್ನುಟ್ಟರೆ ಅಕ್ಕ ಬಣ್ಣಬಣ್ಣದ ಸೀರೆ ಉಡುತ್ತಿದ್ದಳು.  ಆದರೆ ರವಿಕೆ ಮಾತ್ರ ಯಾವಾಗಲೂ ಬಿಳಿ.  ಬಣ್ಣದ ಹೂವಿನ ಸೀರೆಯುಟ್ಟು ಜತೆಗೆ ಬಿಳಿ ರವಿಕೆ ತೊಟ್ಟು ಹೆಗಲಿಗೆ ಕಪ್ಪು ಚೀಲ ತೂಗು ಹಾಕಿಕೊಂಡು ಆಕೆ ನಡೆದುಹೋಗುತ್ತಿದ್ದರೆ ಥೇಟ್ "ಛೋಟೀ ಸೀ ಬಾತ್" ಚಿತ್ರದ ವಿದ್ಯಾ ಸಿನ್ಹಾಳಂತೇ ಕಾಣುತ್ತಿದ್ದಳು.
ಆ ದಿನಗಳಲ್ಲೇ ಒಂದುದಿನ ಅಮ್ಮ ಊಟದ ಸಮಯದಲ್ಲಿ ಸರಸಕ್ಕನಿಗೆ "ಇನ್ನು ನಿನಗೊಂದು ಮದುವೆ ಅಂತ ಆಗಿಬಿಟ್ಟರೆ ನನಗೆ ನೆಮ್ಮದಿ" ಅಂದಳು.  ಆಮೇಲೆ ಅದೇ ವಾಕ್ಯ ಮತ್ತೆ ಮತ್ತೆ ನನ್ನ ಕಿವಿಗೆ ಬೀಳತೊಡಗಿತು.  ಸರಸಕ್ಕ ಹೆಚ್ಚು ಮಾತಾಡುವವಳೇ ಅಲ್ಲ.  ಮಾತಾಡಿದರೂ ಮೆಲ್ಲಗೆ ದನಿ ಹೊರಡಿಸುತ್ತಿದ್ದಳು.  ಅಮ್ಮನ ಮಾತಿಗೆ ಅದೂ ಇಲ್ಲ.  ಇವಳು ಕಾಲೇಜಿನಲ್ಲಿ ಏನು ಮಾತಾಡುತ್ತಾಳೆ?  ಮಾತಾಡಿದರೂ ವಿದ್ಯಾರ್ಥಿನಿಯರಿಗೆ ಕೇಳಿಸುತ್ತದೆಯೇ ಎಂಬ ಅನುಮಾನ ನನಗೆ ಬರುತ್ತಿತ್ತು.   ಮಹಾರಾಣೀ ಕಾಲೇಜಿನ ಆ ಪ್ರಳಯಾಂತಕ ಹುಡುಗಿಯರು ಇವಳನ್ನೆಷ್ಟು ಗೋಳು ಹುಯ್ದುಕೊಳ್ಳುತ್ತಿರಬಹುದು ಎಂದು ಯೋಚಿಸಿ ಅವಳ ಬಗ್ಗೆ ಮರುಕವೇ ಆಗುತ್ತಿತ್ತು.  ನನ್ನೆಲ್ಲಾ ಅನುಮಾನಗಳು ದೂರವಾದದ್ದು ನಾನು ಬಿ ಎ ಮುಗಿಸಿ ಎಮ್ ಎ ಮಾಡಲು ಗಂಗೋತ್ರಿಗೆ ಸೇರಿದಾಗಲೇ.  ಅಕ್ಕನ ಕಾಲೇಜಿನಲ್ಲಿ ಬಿ ಎ ಮಾಡಿ ಬಂದಿದ್ದ ನನ್ನ ತರಗತಿಯ ಕೆಲವು ಹುಡುಗಿಯರು ತಾವಾಗಿಯೇ ನನ್ನ ಬಳಿಗೆ ಬಂದು "ನೀವು ಸರಸ್ವತಿ ಮೇಡಮ್ ಅವರ ತಮ್ಮನಾ!  ನಿಮ್ಮಕ್ಕ... ಓಹ್... ಶಿ ಈಸ್ ಎ ಜೀನಿಯಸ್... ಎ ಗ್ರೇಟ್ ಟೀಚರ್" ಎಂದು ಮೆಚ್ಚುಗೆಯ ಮಾತಾಡಿದ್ದರು...  ನನಗೆ ಹೆಮ್ಮೆಯೆನಿಸಿತ್ತು.
ಅಕ್ಕನ ಮದುವೆಯ ಬಗ್ಗೆ ಅಮ್ಮನ ರಾಗ ಸ್ವಲ್ಪ ಬದಲಾಗಿತ್ತು.  "ಅವರಿಗೆ ಹೇಳಿದ್ದೇನೆ, ಇವರಿಗೆ ಹೇಳಿದ್ದೇನೆ, ನಾಳೆ ಅವರು ಬರುತ್ತಿದ್ದಾರೆ, ನಾಡಿದ್ದು ಇವರು ಬರುತ್ತಿದ್ದಾರೆ" ಅನ್ನತೊಡಗಿದಳು.  ಅವಳ ಮಾತಿನಂತೆ ಅವರಿವರು ಬಂದುಹೋದದ್ದೂ ಆಯಿತು.  ಸರಸಕ್ಕ ಮಾತ್ರ ತನ್ನ ಪಾಡಿಗೆ ತಾನು ಮೌನವಾಗೇ ಇದ್ದುಬಿಟ್ಟಿದ್ದಳು.
ಒಂದು ಮಧ್ಯಾಹ್ನ ಎಲ್ ಐ ಸಿ ಆಫೀಸಿಗೆ ಹೋಗಿ ಅಮ್ಮನ ಪಾಲಿಸಿಯ ಕಂತು ತುಂಬಿ ಅಲ್ಲೇ ಕೆಳಗಿದ್ದ ಗೋವರ್ಧನ ಹೋಟೆಲಿಗೆ ಮಸಾಲೆ ದೋಸೆ ತಿನ್ನಲೆಂದು ನುಗ್ಗಿದ ನನಗೆ ಕಂಡದ್ದು ಅಚ್ಚರಿಯ ನೋಟ.  ಫ್ಯಾಮಿಲಿ ರೂಮಿನ ಮೂಲೆಯಲ್ಲಿ ಯಾರೋ ಒಬ್ಬ ಗಂಡಸಿನೊಡನೆ ಸರಸಕ್ಕ!  ನನ್ನನ್ನು ನೋಡಿ ಕೈಬೀಸಿ ಕರೆದಳು.  ಹೋಗಿ ಕುಳಿತೆ.  "ನನ್ನ ಕಲೀಗ್, ನಾವಿಬ್ರೂ ಒಟ್ಟಾಗಿಯೇ ಎಮ್ ಎ ಮಾಡಿದ್ದು" ಎಂದು ಜತೆಯಲ್ಲಿದ್ದವನ ಪರಿಚಯ ಮಾಡಿಸಿದಳು.  ನಸುಗಪ್ಪಾಗಿ ಎತ್ತರವಾಗಿದ್ದು ಆಕರ್ಷಕವಾಗಿ ಕಾಣುತ್ತಿದ್ದ ಅವನು ನನ್ನನ್ನು ಆತ್ಮೀಯತೆಯಿಂದ ಮಾತಾಡಿಸಿದ.  ನನ್ನ ಜತೆ ಅವನಾಡಿದ ಮಾತುಗಳಿಂದ ನನ್ನ ಬಗ್ಗೆ ಅವನಿಗೆ ಈಗಾಗಲೇ ಸಾಕಷ್ಟು ಗೊತ್ತಾಗಿದೆ ಅನಿಸಿತು.  ಸರಸಕ್ಕನೇ ಹೇಳಿರಬೇಕು.  ಅಲ್ಲದೇ ದಿನಾ ಮನೆಯಲ್ಲಿ ಕಾಣುತ್ತಿದ್ದ ಸರಸಕ್ಕನಿಗೂ, ಈಗ ಹೋಟೇಲಿನ ಮೂಲೆಯಲ್ಲಿ ಚಹ ಹೀರುತ್ತಿದ್ದ ಸರಸಕ್ಕನಿಗೂ ಅಜಗಜಾಂತರ ವ್ಯತ್ಯಾಸ.  ಮುಖದ ತುಂಬಾ ಮುಗುಳ್ನಗೆ.  ಅವನು ಹೇಳಿದ ಯಾವುದೋ ಜೋಕಿಗೆ ಕಿಲಕಿಲನೆ ನಕ್ಕುಬಿಟ್ಟಳು.  ಒಂದು ಹಂತದಲ್ಲಿ ಅವನ ಗಮನ ಸೆಳೆಯಲು ಅವನ ಮುಂಗೈ ಮೇಲೆ ರಪ್ಪನೆ ಬಡಿದಳು...
ಮನೆಯ ಕಡೆ ನಡೆದಾಗ ಸರಸಕ್ಕನೂ ಅವನೂ ಪ್ರೇಮಿಗಳಿರಬಹುದೇ ಎಂಬ ಅನುಮಾನ ಬೇಡಬೇಡವೆಂದರೂ ಮನಸ್ಸಿಗೆ ಬಂತು.
ಎರಡು ದಿನ ಕಳೆಯಿತು.  ಆವತ್ತು ಭಾನುವಾರ.  ಮನೆಯಲ್ಲಿ ಮಾಮೂಲಿನಂತೆ ಮೌನದ ಸಾಮ್ರಾಜ್ಯ.  ಅಮ್ಮ ಅಡಿಗೆ ಮನೆಯಲ್ಲಿದ್ದಳು.  ಪುಸ್ತಕವೊಂದನ್ನು ಹಿಡಿದು ಕುಳಿತಿದ್ದ ನಾನು ಅಕ್ಕ ತನ್ನ ಕೋಣೆಯಿಂದ ಹೊರಬಂದು ಅಡಿಗೆಮನೆಯತ್ತ ಹೋಗುವುದನ್ನು ಕಂಡೆ.  ಮೆಲುಮಾತುಗಳು ಕೇಳಿಬಂದವು.  ಮನೆಯಲ್ಲಿ ಹೆಪ್ಪುಗಟ್ಟಿದ್ದ ಮೌನವನ್ನು ಕರಗಿಸುವ ಸಾಮರ್ಥ್ಯ ಆ ಪಿಸುಗುದನಿಗಳಿಗಿರಲಿಲ್ಲ...  ಮೌನ ತಾನೇ ತಾನಾಗಿ ವಿಜೃಂಭಿಸುತ್ತಿತ್ತು.  ನಿಮಿಷಗಳುರುರುಳಿದವು...
"ಏನಂದೇ?  ಏನಂದೇ?  ಇನ್ನೊಂದ್ಸಲ ಹೇಳು?"  ಇದ್ದಕ್ಕಿದ್ದಂತೇ ಅಮ್ಮನ ದನಿ ಮೌನವನ್ನು ಸೀಳಿ ನನ್ನ ಕಿವಿಗಳನ್ನಿರಿಯಿತು.  ಹಿಂದೆಯೇ ನನ್ನ ಬೆನ್ನ ಹಿಂದಿನ ಕಿಟಕಿಯೊಂದು ದಢಾರನೆ ಮುಚ್ಚಿಕೊಂಡಿತು.  ನನಗಾದಷ್ಟೇ ಆಶ್ಚರ್ಯ ಮನೆಯ ಗೋಡೆ ಕಿಟಕಿ ಬಾಗಿಲುಗಳಿಗೂ ಆಗಿ ಅವೂ ಬೆಚ್ಚಿರಬೇಕು.  ಅಮ್ಮನ ಏರುದನಿಯನ್ನು ಕೇಳಿದ ಅಭ್ಯಾಸ ನನ್ನಂತೇ ಅವುಗಳಿಗೂ ಇದ್ದಂತಿರಲಿಲ್ಲ.  ಶತಶತಮಾನಗಳಿಂದ ಸುಪ್ತವಾಗಿದ್ದು ಏಕಾಏಕಿ ಸಿಡಿದ ಜ್ವಾಲಾಮುಖಿಯಂತೆ ಅಮ್ಮ ಸ್ಫೋಟಗೊಂಡಿದ್ದಳು.
ದಢಕ್ಕನೆದ್ದು ಅಡಿಗೆಮನೆಗೆ ಓಡಿದೆ. ಅಲ್ಲಿ...
ಸರಸಕ್ಕ ಗೋಡೆಗೊರಗಿ ನಿಂತಿದ್ದಳು.  ಪ್ರಶಾಂತ ಮುಖ...  ಅಮ್ಮ ನೆಲದ ಮೇಲೆ ಕುಳಿತಿದ್ದಳು.  ಮುಂದೆ ತರಕಾರಿಗಳ ರಾಶಿ.  ಕೈಯಲ್ಲಿ ಹರಿತ ಚಾಕು.  ನೋಟ ಸರಸಕ್ಕನ ಮೇಲೆ ಕೀಲಿಸಿತ್ತು.
ಇಬ್ಬರನ್ನೂ ನೋಡಿದೆ.  ನನ್ನತ್ತ ಒಮ್ಮೆ ನೋಡಿ ಸರಸಕ್ಕ ಅಮ್ಮನೆಡೆಗೆ ತಿರುಗಿದಳು.
"ನಾನು ನಿರ್ಧಾರ ಮಾಡಿದ್ದೀನಿ ಅಮ್ಮ.  ನಾನು ಮದುವೆಯಾಗೋದು..."
ಅವಳ ಮಾತನ್ನು ಅಮ್ಮ ಅಷ್ಟಕ್ಕೇ ಕತ್ತರಿಸಿದಳು.  ಮತ್ತೊಮ್ಮೆ ಜ್ವಾಲಾಮುಖಿಯ ಆಸ್ಫೋಟನೆ.
"ಸಾಕು ನಿಲ್ಸು.  ಅದ್ಯಾವನೋ, ಅದೆಲ್ಲಿಯವನೋ.  ಅವನನ್ನ ನೀನು ಮದುವೆಯಾಗೋದು!  ಹ್ಞುಹ್!  ಹರಗೀಸ ಆಗೋದಿಲ್ಲ."
ಸರಸಕ್ಕ ಸೆಟೆದು ನಿಂತಳು.
"ನಾನು ಅವರನ್ನ ಮದುವೆಯಾದ್ರೆ... ನೀನು ಏನು ಮಾಡ್ತೀಯ?"  ಸ್ಫುಟವಾಗಿ ಬಂತು ಸವಾಲು.
ನಾನು ಸ್ಥಾವರವಾಗಿ ನಿಂತೆ.
"ಏನು ಮಾಡ್ತೀನಿ ಅಂತ ಕೇಳಿದ್ಯಾ?"  ಅಮ್ಮನ ದನಿ ಏಕಾಏಕಿ ಸೌಮ್ಯವಾಯಿತು.  "ಹೇಳ್ತೀನಿ ಕೇಳು."  ಇನ್ನಷ್ಟು ಸೌಮ್ಯತೆ.
ಕೈಯಲ್ಲಿ ಹಿಡಿದಿದ್ದ ಚಾಕುವನ್ನು ಅಮ್ಮ ಎತ್ತಿ ಹಿಡಿದಳು.  ಎಡಗೈ ಹೊಟ್ಟೆಯನ್ನು ಒತ್ತಿತು.
"ನಿನ್ನನ್ನ ಹೊತ್ತು ಹೆತ್ತ ಈ ಹೊಟ್ಟೆಗೆ..." ಬಲಗೈಯಲ್ಲಿದ್ದ ಚಾಕುವಿನ ಮೊನೆಯನ್ನು ಹೊಟ್ಟೆಗೆ ಒತ್ತಿದಳು.  ಹಾಗೇ ಮೇಲೆ ಎದೆಗೆ ಕೊಂಡೊಯ್ದಳು.  "...ನೋವು ನುಂಗಿ ನಿನ್ನ ಮೇಲೆ ಪ್ರೀತಿ ಸುರಿಸಿದ ಈ ಎದೆಗೆ ಈ ಚಾಕೂನ ಚುಚ್ಚಿಕೊಳ್ತೀನಿ."
ಸರಸಕ್ಕನ ಮೇಲೆ ಅಮ್ಮನ ಈ ವರ್ತನೆಯ ಪರಿಣಾಮ ಅಸಾಧಾರಣವಾಗಿತ್ತು.  ಆಕೆ ಬೆಚ್ಚಿದಳು.  ಅವಳ ಕಣ್ಣುಗಳು ಅಗಲವಾಗಿ ತೆರೆದುಕೊಂಡವು.  ಬಿಟ್ಟಬಾಯಿ ಬಿಟ್ಟಂತೆ ನಿಂತಳು.  ಅವಳ ಬಲಗೈ ಮೋಡಿಗೆ ಸಿಕ್ಕಿದಂತೆ ಎದೆಯನ್ನು ಒತ್ತಿತು.  ಎಡಗೈ ಏನನ್ನೋ ಬೇಡುವಂತೆ ಮುಂದಕ್ಕೆ ಚಾಚಿಕೊಂಡಿತು...  ಸರಸಕ್ಕ ಶಿಲೆಯಾಗಿ ನಿಂತುಬಿಟ್ಟಿದ್ದಳು.
ಅಮ್ಮನತ್ತ ನೋಡಿದೆ.
ಪ್ರಶಾಂತ ಮುಖಮುದ್ರೆ.  ಕಣ್ಣುಗಳು ಮಾತ್ರ ಸರಸಕ್ಕನ ಮೇಲೆ ಕೀಲಿಸಿದ್ದವು.  ಎಡಗೈ ಕೆಳಹೊಟ್ಟೆಯ ಮೇಲಿದ್ದರೆ ಬಲಗೈ ಚಾಕುವನ್ನು ಎದೆಗೆ ಒತ್ತಿ ಹಿಡಿದಿತ್ತು.  ಚಾಕುವಿನ ಹಿಡಿಕೆಯನ್ನು ಅವಳೆಷ್ಟು ಬಲವಾಗಿ ಹಿಡಿದಿದ್ದಳೆಂದರೆ ಅವಳ ಕೈ ಬೆರಳುಗಳ ಗೆಣ್ಣುಗಳು ಬೆಳ್ಳಗೆ ಬಿಳಿಚಿಕೊಂಡುಬಿಟ್ಟಿದ್ದವು...  ಅಮ್ಮನ ಪ್ರಶಾಂತ ಮುಖದ ಹಿಂದೆ ಕಟು ನಿರ್ಧಾರವಿತ್ತು...
ಯಾವನೋ ಅಜ್ಞಾತ ಶಿಲ್ಪಿ ಕೆತ್ತಿಟ್ಟ ಶಿಲ್ಪಗಳಂತೆ ಇಬ್ಬರ ಶರೀರಗಳಲ್ಲೂ ಚಲನೆಯೇ ಇಲ್ಲ!  ಭರತ-ಬಾಹುಬಲಿಯರ ದೃಷ್ಟಿಯುದ್ಧದಂತೆ ಇಬ್ಬರೂ ಒಬ್ಬರ ಮೇಲೊಬ್ಬರು ದೃಷ್ಟಿ ಕೀಲಿಸಿದ್ದರು.
ನಾನು ನೋಡುತ್ತಿದ್ದಂತೇ ಸರಸಕ್ಕನ ಮೈಯಲ್ಲಿ ಚಲನೆ ಕಂಡಿತು.  ಅಮ್ಮನ ದೇಹದಲ್ಲಿ ಅದೇ ನಿಶ್ಚಲತೆ...  ಸರಸಕ್ಕ ಸೋತುಹೋಗಿದ್ದಳು.
ಅವಳೆದೆ ಮೆಲ್ಲಗೆ ಏರಿಳಿಯಿತು.  ಕೊರಳನರಗಳು ಉಬ್ಬಿದವು.  ಕಣ್ಣರೆಪ್ಪೆಗಳು ಅಂಕೆ ತಪ್ಪಿದಂತೆ ಪಟಪಟನೆ ಬಡಿದುಕೊಂಡವು.  ತಲೆ ಮೇಲೆ ಕೆಳಗೆ ಏರಿಳಿಯಿತು.  "ಹ್ಞೂಕ್ ಹ್ಞೂಕ್" ಎಂಬ ವಿಚಿತ್ರ ಶಬ್ಧ ಅವಳ ಗಂಟಲಿನಿಂದ ಹೊರಟಿತು.  ಮರುಕ್ಷಣ ನೆಟ್ಟಗೆ ನಿಂತಳು.  ಒಮ್ಮೆ ಅಗಲವಾಗಿ ಕಣ್ಣು ತೆರೆದು ಅಮ್ಮನನ್ನು ನೋಡಿದಳು.  ಸರಕ್ಕನೆ ತಲೆತಗ್ಗಿಸಿ ಪಕ್ಕಕ್ಕೆ ಹೊರಳಿದಳು.  ಬಾಗಿಲಲ್ಲಿ ನಿಂತಿದ್ದ ನನ್ನನ್ನು ಸರಿಸಿಕೊಂಡು ಸರಸರನೆ ನಡೆದುಹೋಗಿ ತನ್ನ ಪುಟ್ಟ ಕೋಣೆ ಸೇರಿಕೊಂಡಳು.
ನಾನು ಅಮ್ಮನತ್ತ ತಿರುಗಿದೆ.  ಅವಳ ನೋಟ ಕ್ಷಣದ ಹಿಂದೆ ಸರಸಕ್ಕ ತೆರವು ಮಾಡಿ ಹೋಗಿದ್ದ ಶೂನ್ಯದತ್ತೆಲೇ ನೆಟ್ಟಿತ್ತು.  ನಾನು ನೋಡುತ್ತಿದ್ದಂತೇ ಅವಳ ಕೈಬೆರಳುಗಳು ಸಡಿಲಾದವು.  ಚಾಕು ಸಶಬ್ಧವಾಗಿ ಕೆಳಗೆ ಬಿತ್ತು.  ಅದರ ಹಿಂದೆಯೇ ಅಮ್ಮ ಹೊರಹಾಕಿದ ಧೀರ್ಘ ನಿಟ್ಟುಸಿರು...
ಒಂದುಗಂಟೆಯ ನಂತರ ಅಮ್ಮ ಸರಸಕ್ಕನ ಕೋಣೆಯ ಬಾಗಿಲಿಗೆ ಹೋಗಿ ಅದೇ ದಿನನಿತ್ಯದ ಮೆಲ್ಲನೆಯ ದನಿಯಲ್ಲಿ "ಊಟಕ್ಕೆ ಬಾ ಮಗೂ" ಅಂದಳು.  ಅನುದಿನದ ಪರಿಪಾಠದ ಪುನರಾವರ್ತನೆಯಂತೆ ಅರೆನಿಮಿಷದಲ್ಲಿ ಸರಸಕ್ಕ ಹೊರಬಂದಳು...  ಎಂದಿನಂತೆ ಅಮ್ಮ ಬಡಿಸಿದ್ದನ್ನೆಲ್ಲಾ ಮೌನವಾಗಿ ತಿಂದಳು.  ಅಮ್ಮನೂ ಮೌನವಾಗಿ ಊಟ ಮಾಡಿದಳು.  ಅಂದು ಊಟ ಸೇರದೇ ಹೋದದ್ದು ನನಗೆ ಮಾತ್ರ...
ಇದಾಗಿ ಹತ್ತುವರ್ಷಗಳೇ ಕಳೆದುಹೋಗಿವೆ.  ತನ್ನ ಮದುವೆಯ ವಿಷಯವನ್ನು ಸರಸಕ್ಕ ಮತ್ತೆ ಎತ್ತಲಿಲ್ಲ.  ತನ್ನ ಪ್ರೇಮಿಗೆ ಅದೇನು ಹೇಳಿದಳೋ, ಅವನನ್ನು ಅದ್ಹೇಗೆ ಸಮಾಧಾನಿಸಿದಳೋ, ಅವನಿಂದ ಹೇಗೆ ದೂರವಾದಳೋ, ತನ್ನೊಳಗಿನ ಹಾಲಾಹಲವನ್ನು ಅದೆಲ್ಲಿ ಬಚ್ಚಿಟ್ಟುಬಿಟ್ಟಳೋ, ಸತ್ತ ಕನಸುಗಳನ್ನು ಅದೆಲ್ಲಿ ಸಮಾಧಿ ಮಾಡಿದಳೋ... ನನಗೆ ಗೊತ್ತಿಲ್ಲ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳಿರುವುದು ಅವಳಲ್ಲಿ ಮಾತ್ರ.  ಅವಳನ್ನು ಕೇಳುವ ಧೈರ್ಯ ಇದುವರೆಗೆ ನನಗೆ ಬಂದಿಲ್ಲ.
ಆ ಭಾನುವಾರ ಕಳೆದು ಏಳು ತಿಂಗಳಿಗೆ ಅಮ್ಮ ತೀರಿಕೊಂಡಳು.  ಹೃದಯಾಘಾತ.  ಸಾಯುವುದಕ್ಕೆ ಒಂದು ನೆಪ...  ಆ ಗಳಿಗೆಯಿಂದ ಸರಸಕ್ಕ ನನಗೆ ಅಕ್ಕನಾಗಿ ಉಳಿಯಲಿಲ್ಲ.
ಅಮ್ಮನಾದಳು.
ನನ್ನನ್ನು ಗಂಗೋತ್ರಿಗೆ ಸೇರಿಸಿ ಓದಿಸಿದಳು.  ಎಮ್ ಏ ಮುಗಿದಾಗ ಪಿ ಹೆಚ್ ಡಿ ಮಾಡು ಎಂದು ಪ್ರೋತ್ಸಾಹಿಸಿದಳು.  ಯುಜಿಸಿಯ ಜೆ ಆರ್ ಎಫ್ ಪರೀಕ್ಷೆಗೆ ತಾನೇ ಕೋಚಿಂಗ್ ಕೊಟ್ಟಳು.  ಪಾಸಾಗಿ ಫೆಲೋಶಿಪ್ ದೊರೆತಾಗ ಮೌನವಾಗಿ ಸಂಭ್ರಮಿಸಿದಳು.  ನಾನು ಪಿ ಹೆಚ್ ಡಿ ಗೆ ಸೇರಿದ ವರ್ಷವೇ ಅಕ್ಕ ಗಂಗೋತ್ರಿಯಲ್ಲೇ ರೀಡರ್ ಆದಳು.  ನಾನು ಪಿ ಹೆಚ್ ಡಿ ಮುಗಿಸಿ ಪಾಂಡಿಚೆರಿ ಯೂನಿವರ್ಸಿಟಿಯಲ್ಲಿ ಲೆಕ್ಚರರ್ ಆದಾಗ ನಳಪಾಕ್‌ಗೆ ಕರೆದುಕೊಂಡು ಹೋಗಿ ನನಗಿಷ್ಟವಾದ ಮಸಾಲೆ ದೋಸೆ, ಜಹಾಂಗೀರ್ ಕೊಡಿಸಿದಳು....  ಚಹ ಹೀರುತ್ತಾ ಅದೇ ಮೆಲ್ಲನೆಯ ದನಿಯಲ್ಲಿ ಹೇಳಿದಳು: "ಇನ್ನು ನಿನಗೊಂದು ಮದುವೆ ಅಂತ ಆಗಿಬಿಟ್ಟರೆ ಸರಿ.  ನನಗೆ ನೆಮ್ಮದಿ."
ನಾನು ಬೆಚ್ಚಿದೆ.  ದಶಕದ ಹಿಂದೆ ಅವಳಿಗೆ ಕೆಲಸ ಸಿಕ್ಕಿ ಅವಳೊಂದು ನೆಲೆ ಕಂಡಾಗ ಅವಳಿಗೆ ಅಮ್ಮ ಇದೇ ಮಾತು ಹೇಳಿದ್ದಳು.
ಒಂದೆರಡು ತಿಂಗಳ ನಂತರ ಮೈಸೂರಿಗೆ ಹೋದಾಗ ಅಕ್ಕ ಗೋವರ್ಧನಕ್ಕೆ ಕರೆದುಕೊಂಡು ಹೋದಳು.  ನನಗಿಷ್ಟವಾದ ಮಸಾಲೆ ದೋಸೆ, ಜಹಾಂಗೀರ್‌ಗೆ ಆರ್ಡರ್ ಮಾಡಿದಳು...
ಹತ್ತುವರ್ಷಗಳ ಹಿಂದೆ ಅವಳ ಪ್ರೇಮಿಯೊಡನೆ ಕುಳಿತಿದ್ದ ಅದೇ ಮೂಲೆಯ ಟೇಬಲ್‌ನಲ್ಲೇ ಕುಳಿತಿದ್ದೆವು.  ನೆನಪುಗಳ ಪ್ರವಾಹ ನುಗ್ಗಿಬಂತು.  ಅಕ್ಕನಿಗೂ ಹಾಗೇ ಆಗಿರಬೇಕು, ಕಣ್ಣುಗಳನ್ನು ಅರೆಮುಚ್ಚಿ ಕುಳಿತುಬಿಟ್ಟಳು...  ಗಂಭೀರ ಮುಖ.  ಅಂದು ಅವಳ ಪ್ರೇಮಿ ಹೇಳಿದ ಜೋಕಿಗೆ ಕಿಲಕಿಲ ನಕ್ಕ ಅಕ್ಕನ ಚೆಲುವು ಮುಖ ಕಣ್ಣೆದುರು ತೇಲಿಬಂತು.  ಅದ್ಯಾಕೋ ಅಂಥದೇ ನಗುವನ್ನು ಅವಳ ಮುಖದಲ್ಲಿ ಕಾಣುವ ಬಯಕೆಯಾಯಿತು.  ಅಕ್ಕ ಮತ್ತೊಮ್ಮೆ ಆ ರೀತಿ ನಗಬಲ್ಲಳೇ ಎಂದು ಅನುಮಾನವಾಯಿತು.  ಜೋಕಿಗಾಗಿ ತಡಕಾಡಿದೆ.  ಒಂದೂ ನೆನಪಿಗೆ ಬರಲಿಲ್ಲ...  ಅಕ್ಕನ ಮುಖದಲ್ಲಿ ನಗೆ ಕಾಣಲಿಲ್ಲ.
ತಿಂಡಿ ತಿಂದು ಕಾಫಿಗೆ ಆರ್ಡರ್ ಮಾಡುವ ಮೊದಲು ಅಕ್ಕ ಹೇಳಿದಳು: "ಇನ್ನೊಂದು ಜಹಾಂಗೀರ್ ತಗೋ."
ತುಂಟ ಜೋಕೊಂದು ಥಟ್ಟನೆ ಹೊಳೆದುಬಿಟ್ಟಿತು.  "ಜಹಾಂಗೀರ್ ಬ್ಯಾಡ.  ನೂರ್ ಜಹಾನ್ ಕೊಡಿಸೇ ಸರಸಕ್ಕ" ಅಂದುಬಿಟ್ಟೆ.  ಅವಳ ನಗುವಿಗಾಗಿ ಕಾತರದಿಂದ ಕಾದೆ.
ಅಕ್ಕ ನಕ್ಕಳು... ಸಣ್ಣಗೆ.  ಅಂದು ನಕ್ಕ ಮುಕ್ತ ಕುಲುಕುಲು ನಗೆಯಲ್ಲ.  ಬರೀ ಅದರ ಪಳೆಯುಳಿಕೆ.
ಅಂದಿಗೂ ಇಂದಿಗೂ ಕಾವೇರಿಯಲ್ಲಿ ಅದೆಷ್ಟು ನೀರು ಹರಿದಿದೆ!
ಮೌನವಾಗಿ ಕಾಫಿ ಹೀರಿದೆ.  ಲೋಟ ಕೆಳಗಿಡುತ್ತಿದ್ದಾಗ ಅಕ್ಕ ಒಂದು ಪ್ರಶ್ನೆ ಕೇಳಿದಳು.
"ಯಾವಾಗ ಮದುವೆಯಾಗುತ್ತೀ?"
ನನ್ನಲ್ಲಿ ಉತ್ತರವಿರಲಿಲ್ಲ.  ಪ್ರಶ್ನೆಗೊಂದು ಉತ್ತರ ಇಲ್ಲದಿದ್ದಾಗ ಪ್ರತಿಪ್ರಶ್ನೆ ಕೇಳಬಹುದಾಗಿತ್ತು.
ಸರಸಕ್ಕ, ನೀನು ಯಾವಾಗ ಮದುವೆಯಾಗುತ್ತೀಯೇ? ಎಂದು ಕೇಳಬಹುದಾಗಿತ್ತು...  ಕೇಳಬೇಕಾಗಿತ್ತು.  ಕೇಳಲಾಗಲಿಲ್ಲ.  ಇಂದಿಗೂ ಆಗಿಲ್ಲ.
ಪೋಸ್ಟ್ ಡಾಕ್ಟೊರಲ್ ಫೆಲೋಶಿಪ್ ಪಡೆದುಕೊಂಡು ಅಕ್ಕ ಏಳು ತಿಂಗಳ ಹಿಂದೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಹೊರಟುಹೋದಳು.  ಇಲ್ಲಿ, ಹೊಸ ಊರಿನಲ್ಲಿ ನಾನು ಒಂಟಿ.  ಊರೇ ಏಕೆ ದೇಶದಲ್ಲೇ ನನ್ನವರೆನ್ನುವವರು ಯಾರೂ ಇಲ್ಲ.  ಅಮ್ಮನ, ಸರಸಕ್ಕನ, ನನ್ನ ಸರಸಮ್ಮನ ನೆನಪಾದಾಗ ಹೀಗೇ ಕತ್ತಲುಗಟ್ಟಿದ ಬಾಲ್ಕನಿಯಲ್ಲೋ, ಬೆಡ್‌ರೂಮಿನಲ್ಲೋ ಮುದುರಿ ಕೂತು ಅತ್ತುಬಿಡುತ್ತೇನೆ.  ಯಾರಿಗಾದರೂ ಏನಾದರೂ ಹೇಳಲೇಬೇಕು ಅನಿಸಿದಾಗ ಸರಸಕ್ಕನಿಗೆ ಒಂದು ಧೀರ್ಘ ಇ ಮೇಲ್ ಕಳಿಸುತ್ತೇನೆ.  ಇಪ್ಪತ್ತನಾಲ್ಕು ಗಂಟೆಗಳಲ್ಲಿ ಉತ್ತರ ಬರುತ್ತದೆ.  ಅವಳ ಇ ಮೇಲ್‌ಗಳು ಅವಳು ಪತ್ರಿಕೆಗಳಿಗೆ ಬರೆಯುವ ಲೇಖನಗಳಷ್ಟೇ ಸುಧೀರ್ಘವಾಗಿರುತ್ತವೆ.  ಇದುವರೆಗಿನ ಬದುಕಿನಲ್ಲಿ ಅಕ್ಕ ಬಾಯಿ ತೆರೆದು ಹೇಳಿದ್ದಕ್ಕಿಂತಲೂ ನೂರು ಪಟ್ಟು ಮಾತುಗಳನ್ನು ಅವಳು ಈ ಏಳು ತಿಂಗಳಲ್ಲಿ ಇ ಮೇಲ್ ಮೂಲಕ ಹೇಳಿಬಿಟ್ಟಿದ್ದಾಳೆ...  ಸರಸಕ್ಕ ನನಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಹತ್ತಿರವಾಗಿದ್ದಾಳೆ...

*     *     *

- ಭಾಗ ೨ -

ಕೆನ್ನೆಗಳ ಮೇಲೆ ಕಣ್ಣೀರು ಹರಿದ ಕಲೆಗಳನ್ನು ಕೈಗಳಿಂದ ಸವರಿಕೊಂಡೆ.  ಈ ಕಣ್ಣೀರು ಅಮ್ಮನಿಗೋ, ಸರಸಕ್ಕನಿಗೋ?  ಅಥವಾ... ಸಂಜೆ ಎದೆ ತುಂಬ ನೂರು ನೂರು ಪ್ರಶ್ನೆಗಳನ್ನು ಹುಟ್ಟು ಹಾಕಿದ ಭಾಗೀರಥಿಗೋ...?
ಹಿಂದೆಂದೋ ಡಿಸೋಜ ಹೇಳಿದ ಮಾತುಗಳು, ಸಂಜೆ ಕಂಡ ಕುಲುಕುಲು ನಗೆಯ ಸ್ನೇಹಪರ ಹೆಣ್ಣು, ಮರುಕ್ಷಣ ಕಣ್ಣಮುಂದೆ ಸೆರಗುಹೊದ್ದು ಸರಸರನೆ ಸರಿದುಹೋದ ಅವಳ ಪ್ರೇತ, ಅವಳೊಳಗಿನ ಬಿರಿಯಲು ಕಾದ ಮೊಗ್ಗುಗಳು, ಅವಳ ಸುತ್ತಲೂ ರಾಶಿರಾಶಿಯಾಗಿ ಹರಡಿಬಿದ್ದಿರುವ ಬಾಡಿದ ಪಕಳೆಗಳು...  ಬಹುಷಃ ಕತ್ತಲ ಮೂಲೆಯಲ್ಲಿ ಅವಳು ಹನಿಸುತ್ತಿರಬಹುದಾದ ಕಣ್ಣೀರು...
ಇದೆಲ್ಲವನ್ನೂ ಯಾರಿಗಾದರೂ ಹೇಳಬೇಕು.
ಹೇಳಿಕೊಳ್ಳಲು ನನಗೆ ಸರಸಕ್ಕನಿಗಿಂತ ಹತ್ತಿರದವರು ಯಾರಿದ್ದಾರೆ?  ಕಂಪ್ಯೂಟರ್‌ನತ್ತ ನಡೆದೆ.

ಮರುದಿನ ಮುರಳಿಯ ಪೇಪರ್‌ಗೆ ನನ್ನದೊಂದಿಷ್ಟು ಸೇರಿಸಿ ಅದನ್ನು ಒಂದು ಹದಕ್ಕೆ ತಂದೆ.  ಇನ್ನವನು ಯಾವ ಅಳುಕೂ ಇಲ್ಲದೇ ಅದನ್ನು ಹೈದರಾಬಾದಿನ ಸೆಮಿನಾರಿನಲ್ಲಿ ಮಂಡಿಸಬಹುದು.  ಫ್ಲಾಪಿಯನ್ನ ಜೇಬಿಗೆ ಹಾಕಿಕೊಂಡು ಸಂಜೆ ಅವನ ಮನೆಯತ್ತ ನಡೆದೆ.  ಮನೆಗೆ ಹತ್ತಿರಾಗುತ್ತಿದ್ದಂತೇ ಯೋಚನೆ ಬೇರೊಂದು ದಾರಿ ಹಿಡಿಯಿತು.
ಈಗ ಮನೆಗೆ ಹೋದರೆ ನನಗೆ ಕಾಣುವ ನೋಟ ಎಂತಹದು?  ಡ್ರಾಯಿಂಗ್ ರೂಮಿನಲ್ಲಿ ಕೂತು ಗಟ್ಟಿದನಿಯಲ್ಲಿ ಹರಟುವ ಮುರಳಿ, ಸೆರಗು ಹೊದ್ದು ಸದ್ದಿಲ್ಲದೇ ಅಡಿಗೆ ಮನೆ ಸೇರಿಕೊಳ್ಳುವ ಅವನ ಹೆಂಡತಿ...
ಆ ದೃಶ್ಯವನ್ನು ಮತ್ತೊಮ್ಮೆ ನೋಡುವುದು ಬೇಡ.  ಫ್ಲಾಪಿಯನ್ನು ಮುರಳಿಗೆ ನಾಳೆ ಡಿಪಾರ್ಟ್‌ಮೆಂಟಿನಲ್ಲೇ ಕೊಟ್ಟರಾಯಿತು.
ಹೆಜ್ಜೆಯನ್ನು ಬೇರೆಡೆ ಹೊರಳಿಸಿದೆ.  ಲೈಬ್ರರಿಯವರೆಗೆ ಒಂದು ವಾಕ್ ಹೊರಟೆ.  ಹಿಂತಿರುಗಿ ಬರುತ್ತಿದ್ದಾಗ ಮುರಳಿಯ ಮನೆಯ ರಸ್ತೆಯ ತಿರುವಿನಲ್ಲಿ ಅವನ ಬೈಕ್ ಕಂಡಿತು.  ಅವನು ನನಗೆ ಬೆನ್ನು ಹಾಕಿ ಕ್ಯಾಂಪಸ್‌ನಿಂದ ಹೊರಗೆ ಹೋಗುತ್ತಿದ್ದ. 
ಈಗ ಮನೆಯಲ್ಲಿ ಭಾಗೀರಥಿ ಒಬ್ಬಳೆ ಇದ್ದಾಳೆ!  ಈಗ ಹೋದರೆ ಅವಳನ್ನೇ ನೇರವಾಗಿ ನೋಡಬಹುದು.  ಅವಳ ಪ್ರೇತವನ್ನಲ್ಲ!
ನನಗರಿವಿಲ್ಲದಂತೇ ಹೆಜ್ಜೆಗಳು ಅವಳ ಮನೆಯತ್ತ ತಿರುಗಿದ್ದವು.
ಬಾಗಿಲು ಸಮೀಪಿಸುತ್ತಿದ್ದಂತೇ ಅದು ತೆರೆದುಕೊಂಡಿತು.  ತೆರೆದ ಬಾಗಿಲಲ್ಲಿ ನಗುಮೊಗದ ಭಾಗೀರಥಿ!
"ನೀವು ಬರೋದನ್ನ ಕಿಟಕೀಲಿ ನೋಡ್ದೆ" ಅಂದಳು.  "ಒಳಗೆ ಬನ್ನಿ" ಎನ್ನುತ್ತಾ ಪಕ್ಕಕ್ಕೆ ಸರಿದುನಿಂತಳು.  ನಾನು ಸೋಫಾದಲ್ಲಿ ಕೂರುತ್ತಿದ್ದಂತೇ ಪ್ರಶ್ನೆ ಹಾಕಿದಳು.
"ಅರ್ಧಗಂಟೇ ಹಿಂದೆ ರಸ್ತೆ ತಿರುವಿಗೆ ಬಂದು ಹಿಂದಕ್ಕೆ ಹೋಗಿಬಿಟ್ರಲ್ಲ?"  ನಕ್ಕಳು.
ಇವಳಿಗದು ಗೊತ್ತಾಗಿಹೋಗಿದೆ!
ಸುಮ್ಮನೆ ನಕ್ಕೆ.  ಅವಳಿಂದ ಮತ್ತೊಂದು ಪ್ರಶ್ನೆ ಬಂತು.
"ಈಗ ಇವರು ಹೊರಗೆ ಹೋಗೋದನ್ನ ನೋಡಿದ ಮೇಲೂ ಇತ್ತ ಕಡೆ ಬಂದ್ರಿ?"  ತುಟಿಯಂಚಿನಲ್ಲಿ ತುಂಟನಗುವಿತ್ತು.
ದೇವರೇ!  ಇವಳು ಅದನ್ನೂ ನೋಡಿಬಿಟ್ಟಿದ್ದಾಳೆ!
ಏನು ಹೇಳಬೇಕೆಂದು ತಿಳಿಯಲಿಲ್ಲ.  ಅವಳನ್ನೇ ಮಿಕಿಮಿಕಿ ನೋಡಿದೆ.  ಅವಳು ಕಿಲ ಕಿಲ ನಕ್ಕುಬಿಟ್ಟಳು.  ಒಂದು ಹೆಜ್ಜೆ ಮುಂದಿಟ್ಟು ಅರಳಿದ ಕಣ್ಣುಗಳಿಂದ ನನ್ನನ್ನೇ ನೇರವಾಗಿ ನೋಡುತ್ತಾ ಒಂದೊಂದೇ ಪದ ಹೊರಡಿಸಿದಳು.
"ಅವರು ಮನೇಲಿ ಇರೋವಾಗ ಬರದೇ ಹೊರಗೆ ಹೋದಾಗ ಬಂದಿದ್ದೀರಲ್ಲಾ, ಇದಕ್ಕೆ ಕಾರಣ...  ನನ್ನನ್ನ... ನನ್ನನ್ನ ಮಾತ್ರ ನೋಡಬೇಕು ಅಂತಾನಾ?"
ನಾನು ಪೂರ್ಣವಾಗಿ ಬೆತ್ತಲಾಗಿಹೋಗಿದ್ದೆ.  ಇನ್ನು ಮುಚ್ಚಿಡುವಂತಹದೇನೂ ಇರಲಿಲ್ಲ.  ಅವಳೊಂದು ಗೆರೆ ನಿರ್ಮಿಸಿದ್ದಳು.  ಅದನ್ನು ಅನುಸರಿಸಿ ನಡೆಯದೇ ನನಗೆ ಬೇರೆ ದಾರಿ ಇರಲಿಲ್ಲ.
"ಹೌದು ನಿಮ್ಮನ್ನ ನೋಡೋದಿಕ್ಕೆ ಅಂತಾನೇ ಬಂದದ್ದು.  ಮುರಳಿ ಇರೋವಾಗ ಬಂದ್ರೆ ನಿಮ್ಮನ್ನ... ನಿಜವಾದ ನಿಮ್ಮನ್ನ ನೋಡೋದಿಕ್ಕೆ ಆಗೋದಿಲ್ಲ ಅಂತ ಗೊತ್ತಿತ್ತು.  ಅದಕ್ಕೇ ಆತ ಇಲ್ಲದಾಗ ಬಂದೆ."  ಉಸಿರೆಳೆದುಕೊಂಡು ಮುಂದುವರೆಸಿದೆ.  "ನಿಮ್ಮನ್ನ ನೋಡಬೇಕು ಅಂತ ಯಾಕೆ ಅನಿಸ್ತು ಅಂತ ಗೊತ್ತಿಲ್ಲ..."  ಮುಂದಕ್ಕೆ ಪದಗಳು ಹೊಳೆಯಲಿಲ್ಲ.  ಅವಳ ಮುಖದಲ್ಲಿ ಮತ್ತೆ ನಗೆಯ ಲಾಸ್ಯ.
"ನೀವು ಬರ‍್ತೀರಿ ಅಂತ ನಂಗೂ ಅನಿಸ್ತಿತ್ತು.  ಯಾಕೆ ಹಾಗನಿಸ್ತಿತ್ತು ಅಂತ ನಂಗೆ ಗೊತ್ತಿಲ್ಲ...  ನಮ್ಮ ನಿನ್ನೆಯ ಸಂಭಾಷಣೆ ಇದ್ದಕ್ಕಿದ್ದ ಹಾಗೇ ಮುಗಿದುಹೋಯ್ತು.  ಬಹುಷಃ ಅದು ಪೂರ್ಣವಾಗಲೀ ಅನ್ನೋ ಬಯಕೆ ನನ್ನ ಮನದಾಳದಲ್ಲಿತ್ತೋ ಏನೋ.  ರಾತ್ರಿಯಿಡೀ ತೊಳಲಾಟ ನಂಗೆ."  ಕಣ್ಣುಗಳನ್ನು ಅರೆಮುಚ್ಚಿದಳು.
"ಹ್ಞೂ ನಂಗೂ ಹಾಗೇನೇ ಆಯ್ತು.  ನನ್ನೆದುರು ಕೂತು ನಗ್ತನಗ್ತಾ ಮಾತಾಡ್ತಾ ಇದ್ದ ನೀವು ಮುರಳಿ ಬಂದ ಒಡನೇ ಬೇರೆಯೇ ವ್ಯಕ್ತಿ ಆಗ್ಬಿಟ್ರಿ.  ನಂಗೆ ಆಘಾತ ಆಯ್ತು.  ಆ ಆಘಾತದಿಂದ ನಾನಿನ್ನೂ ಹೊರಗೆ ಬಂದಿಲ್ಲ."
ಅವಳು ನೆಟ್ಟಗೆ ನಿಂತಳು.  ನನ್ನನ್ನು ನೇರವಾಗಿ ನೋಡುತ್ತಾ ಮಾತು ಹೊರಹಾಕಿದಳು. "ನಾನು ಬೇರೆಯೇ ವ್ಯಕ್ತಿ ಆದದ್ದು!  ನಾನಾಗಿ ಹಾಗೆ ಮಾಡ್ಲಿಲ್ಲ."  ಸೆರಗಿನೊಳಗಿದ್ದ ತಾಳಿ ಹೊರತೆಗೆದಳು.  ಅದನ್ನು ಎರಡು ಬೆರಳುಗಳಲ್ಲಿ ಮೇಲೆತ್ತಿ ಹಿಡಿದಳು.  "ಹಾಗೆ ಮಾಡಿಸಿದ್ದು... ಇದು."  ಮಾತು ಮುಗಿಸಿದಳು.
ಒಂದು ಆಘಾತದಿಂದ ಹೊರಬರಲು ಬಯಸಿದ ನಾನು ಇನ್ನೊಂದು ಆಘಾತಕ್ಕೆ ಸಿಕ್ಕಿದ್ದೆ.
ನನ್ನ ಕಣ್ಣುಗಳಲ್ಲಿನ ಗೊಂದಲ ಅವಳಿಗೆ ಅರ್ಥವಾಗಿರಬೇಕು.  "ಓಹ್ ಬಿಡಿ.  ಅದು ಇದ್ದದ್ದೇ...  ಇರಿ ನಿಮಗೆ ಕಾಫಿ ತರ್ತೀನಿ."  ಅಡಿಗೆ ಮನೆಯತ್ತ ನಡೆದಳು.
"ಒಂದು ಮಾತು ಕೇಳಲಾ?"  ಕಾಫಿಯ ಲೋಟವನ್ನು ನನ್ನ ಕೈಲಿಡುತ್ತಾ ಕೇಳಿದಳು.  ನಾನು ಕಣ್ಣುಗಳನ್ನು ಅರಳಿಸಿದೆ.
"ನಿನ್ನೆ ಕೇಳಲಾಗದೇಹೋದ ಪ್ರಶ್ನೆ ಇದು.  ನಿಮ್ಮ ಕಥೆಗಳಲ್ಲಿ ನಾಯಕಿಯರು ಯಾಕೆ ಅಷ್ಟೋಂದು ಮೌನವಾಗಿರ‍್ತಾರೆ?  ಅವರ ಮೌನ ಹೇಗಿರುತ್ತೆ ಅಂದ್ರೆ ಅವರಿಗೆ ತಮ್ಮದೇ ಆದ ಅಸ್ತಿತ್ವವೇ ಇಲ್ಲವೇನೋ ಅನ್ನಿಸಿಬಿಡುತ್ತೆ."
ಸರಸಕ್ಕ ಥಟ್ಟನೆ ನೆನಪಾದಳು.
ನಿನ್ನ ಕಥೆಗಳಲ್ಲಿ ನಾಯಕಿಯರೇ ಇರುವುದಿಲ್ಲವಲ್ಲೋ.  ಇದ್ದರೂ ನೆರಳುಗಳ ಹಾಗೆ ಕೈಗೆ ಸಿಗದೇ ಅಲ್ಲಲ್ಲಿ ಕರಗಿಹೋಗಿಬಿಡ್ತಾರಲ್ಲ?  ಒಮ್ಮೆ ಅಕ್ಕ ಹೀಗೆ ಕೇಳಿದ್ದಳು.  ಅವಳ ಪ್ರಶ್ನೆಗೆ ಉತ್ತರ ಕೊಡಲಾಗಿರಲಿಲ್ಲ.  ಈಗ ಅಕ್ಕನ ಪ್ರಶ್ನೆಯನ್ನೇ ಭಾಗೀರಥಿ ಮತ್ತೊಂದು ರೀತಿಯಲ್ಲಿ ಕೇಳಿದ್ದಳು.
ನಾನು ಹತ್ತಿರದಿಂದ ಕಂಡ ಹೆಣ್ಣುಗಳು ಅಮ್ಮ ಮತ್ತು ಸರಸಕ್ಕ ಮಾತ್ರ.  ಇಬ್ಬರೂ ಮೌನದ ಚಿಪ್ಪುಗಳು.  ಆದರೆ ಛಲಗಾರ್ತಿಯರು.  ಗಟ್ಟಿ ವ್ಯಕ್ತಿತ್ವವುಳ್ಳವರು.  ಅವರ ನಡುವೆ ಬೆಳೆದ ನನ್ನ ಕಥೆಗಳಲ್ಲಿ ನಾಯಕಿಯರು ಮೌನಿಗಳಾಗುವುದು ಸಹಜ.  ಆದರೆ ಅಸ್ತಿತ್ವವೇ ಇಲ್ಲದಂತಾಗುವುದು?  ನನ್ನ ಕಥಾನಾಯಕಿಯರು ಹಾಗಿರುತ್ತಾರೆಯೇ?  ಇರಬಹುದೇನೋ.  ಅಂದು ಸರಸಕ್ಕ, ಇಂದು ಭಾಗೀರಥಿ ಹೀಗೆ ಕೇಳಬೇಕಾದರೆ ಅದು ನಿಜವಿದ್ದರೂ ಇರಬಹುದು.  ಬಹುಷಃ ನನ್ನ ಪಾತ್ರಚಿತ್ರಣವೇ ಅಪೂರ್ಣವಾಗಿರಬಹುದೇನೋ.  ಅಮ್ಮ ಮತ್ತು ಸರಸಕ್ಕನ ಒಂದು ಮುಖ ಮಾತ್ರ ನನ್ನ ಕಥೆಗಳಲ್ಲಿ ಪ್ರತಿಬಿಂಬಿತವಾಗುತ್ತಿದೆಯೇ?  ಕೈಲಿದ್ದ ಕಾಫಿಯ ಲೋಟವನ್ನೂ ಮರೆತು ಯೋಚಿನೆಗೆ ಬಿದ್ದಿದ್ದೆ.  ನಿಜ ಹೇಳಬೇಕೆಂದರೆ ಸರಸಕ್ಕ ಆ ಮಾತು ಹೇಳಿದಾಗ ಹೆಚ್ಚು ತಲೆ ಕೆಡಿಸಿಕೊಳ್ಳದ ನಾನು ಈಗ ಭಾಗೀರಥಿಯ ಮಾತುಗಳನ್ನು ತೀವ್ರವಾಗಿ ತೆಗೆದುಕೊಂಡದ್ದು ಯಾಕೆ ಎಂದು ನನಗೇ ಅರ್ಥವಾಗಲಿಲ್ಲ.
ಅವಳ ಮಾತುಗಳು ಮುಂದುವರಿದವು.
"ನಾಯಕಿಯೊಬ್ಬಳು ಇಡಿಯಾಗಿ ಆವರಿಸಿಕೊಂಡಿರೋ ಕಥೆಯೊಂದನ್ನ ನೀವು ಬರೆದರೆ ಹೇಗಿರುತ್ತೆ?  ನನಗಂತೂ ಕುತೂಹಲ."
ನನಗೂ ಕುತೂಹಲವಾಯಿತು.
"ನಿಮಗೆ ಹೆಂಗಸರ ಬಗ್ಗೆ, ಅವರ ಮನಸ್ಸಿನ ಆಟಗಳ ಬಗ್ಗೆ ಹೆಚ್ಚು ತಿಳಿದಿಲ್ಲ ಅಲ್ಲವೇ?"  ಕೇಳಿದಳು.
ನಾನು ಸುಮ್ಮನೆ ಅವಳ ಮುಖವನ್ನೇ ದೃಷ್ಟಿಸಿದೆ.  ಪ್ರಶ್ನೆಗಳು ಮುಂದುವರೆದವು.
"ಅಥವಾ ತಿಳಿದುಕೊಳ್ಳೋ ಪ್ರಯತ್ನಾನ ನೀವು ಮಾಡಿಯೇ ಇಲ್ಲ ಅನ್ನಬೋದಾ?"
ಅವಳ ಪ್ರಶ್ನೆ ಮುಗಿಯುತ್ತಿದ್ದಂತೇ ಹೊರಗೆ ಮುರಳಿಯ ಬೈಕ್ ಬಂದ ಸದ್ದಾಯಿತು.  ಅವಳು ಥಟ್ಟನೆ ಮೇಲೆದ್ದಳು.  ನನ್ನ ಕಡೆ ಒಮ್ಮೆ ನೋಡಿ ಮುಖದಲ್ಲಿ ನಗೆಯರಳಿಸಿದಳು.  ಈ ದಿನಕ್ಕೆ ಇದು ಕೊನೆಯ ನಗೆ, ಚೆನ್ನಾಗಿ ನೋಡಿಕೋ ಎನ್ನುವಂತಹ ಚೆಲುವು ನಗೆ.
ಆ ರಾತ್ರಿ ಸರಸಕ್ಕನಿಗೆ ಮತ್ತೊಂದು ಇ ಮೇಲ್ ಕಳಿಸಿದೆ.  ಬೆಳಿಗ್ಗೆ ನನ್ನ ಎರಡೂ ಇ ಮೇಲ್‌ಗಳಿಗೆ ಅವಳಿಂದ ಉತ್ತರ ಬಂದಿತ್ತು.  ಆದರೆ ಅದರಲ್ಲಿ ಭಾಗೀರಥಿಯ ಬಗ್ಗೆ ಒಂದು ಮಾತೂ ಇಲ್ಲ!  ಬರೀ ತನ್ನ ಬಗ್ಗೆ, ತನ್ನ ಕೆಲಸದ ಬಗ್ಗೆ ಬರೆದಿದ್ದಳು.   ನನ್ನನ್ನು ಅಷ್ಟೋಂದು ಗಾಢವಾಗಿ ತಟ್ಟಿದ ಭಾಗೀರಥಿ ಅಕ್ಕನಿಗೆ ಏನೂ ಅನಿಸಲಿಲ್ಲವೇ?  ನನಗೆ ಅಚ್ಚರಿಯಾಯಿತು.

ಮುಂದಿನ ಮೂರು ದಿನಗಳಲ್ಲಿ ಭಾಗೀರಥಿಯನ್ನು ನೋಡಲಾಗಲಿಲ್ಲ.  ಮೂರು ರಾತ್ರಿಯೂ ಹಾಸಿಗೆ ಸೇರುವಾಗ ಏನೋ ಕಳೆದುಕೊಂಡ ಕೊರಗು ಕಾಡಿತು.  ಸರಸಕ್ಕನಿಂದ ಮತ್ತೊಂದು ಇ ಮೇಲ್ ಬಂತು.  ಎಲ್ಲವೂ ಬರೀ ಮಾಮೂಲೀ ವಿಷಯಗಳೇ.  ಭಾಗೀರಥಿಯ ಬಗ್ಗೆ ಒಂಧು ಅಕ್ಷರವೂ ಇರಲಿಲ್ಲ.
ನಾಲ್ಕನೆಯ ದಿನ ಬೆಳಿಗ್ಗೆ ಬಾತ್‌ರೂಮಿನಿಂದ ಹೊರಬರುತ್ತಿದ್ದಂತೇ ಫೋನ್ ಕಿಣಿಕಿಣಿಗುಟ್ಟಿತು.  ಎತ್ತಿಕೊಂಡು "ಹಲೋ" ಎಂದೆ.  ಪ್ರತಿಯಾಗಿ ಕಿವಿಗೆ ಬಿದ್ದದ್ದು ಭಾಗೀರಥಿಯ ದನಿ!
"ಅರೆ ನೀವು!"  ನನ್ನ ದನಿಯಲ್ಲಿನ ಸಂಭ್ರಮಾಶ್ಚರ್ಯ ಒಂದು ದನಕ್ಕೂ ಸುಲಭವಾಗಿ ತಿಳಿಯುವಂತಿತ್ತು.
"ಹ್ಞೂಂ ನಾನೇ?  ಆಶ್ಚರ್ಯ ಆಯ್ತಾ?"  ಕಿಲಕಿಲ ನಗುತ್ತಾ ಪ್ರಶ್ನಿಸಿದಳು.
"ನನ್ ಫೋನ್ ನಂಬರ್ ಹೇಗೆ ಸಿಕ್ತು?"  ಕೇಳಿದೆ.
ಅತ್ತ ಕಡೆಯಿಂದ ಮತ್ತೊಮ್ಮೆ ನಗೆ.  "ಟೆಲಿಫೋನ್ ಡೈರೆಕ್ಟರಿ ಅಂತ ಒಂದು ದಪ್ಪ ಪುಸ್ತಕ ಇದೆ ಗೊತ್ತಾ?"  ನಗೆ ದೊಡ್ಡದಾಯಿತು.
ನಾನು ಪೆಚ್ಚಾದೆ.  ಅವಳೇ ಮಾತಾಡಿದಳು.
"ಈ ಕಡೆ ಬರ‍್ಲೇ ಇಲ್ಲ?   ನಾನಂತೂ ದಿನಾ ಸಾಯಂಕಾಲ ನಿಮ್ಮ ದಾರಿ ಕಾಯ್ತಿದ್ದೆ."  ದನಿ ಗಂಭೀರವಾಗಿತ್ತು.
ಏನೆಂದು ಉತ್ತರಿಸಲಿ?  ನಿನ್ನನ್ನ ನೋಡೋದಿಕ್ಕೆ ನಾನೆಷ್ಟು ತವಕ ಪಡ್ತಾ ಇದೀನಿ ಗೊತ್ತಾ ಭಾಗೀರಥಿ? ಎಂದು ಹೇಳಿ ಎದೆಯಾಳದ ಭಾವನೆಗಳನ್ನೆಲ್ಲಾ ಒಂದೇ ಬಾರಿಗೆ ಹೊರಹಾಕಿಬಿಡಲೇ?  ನಾಲಿಗೆ ಹೊರಳಲಿಲ್ಲ.  ಒಬ್ಬಳು ವಿವಾಹಿತ ಸ್ತ್ರೀ ಮತ್ತು ಒಬ್ಬ ಅವಿವಾಹಿತ ಪುರುಷನ ನಡುವೆ ಮೂರನೆಯವರ ಅನುಪಸ್ಥಿತಿಯಲ್ಲಿ ಮಾತು ನಡೆಯುವಾಗ ಸಾಮಾನ್ಯವಾಗಿ ಆಕೆ ತೋರುವಷ್ಟು ಸಲಿಗೆಯನ್ನು ಗಂಡಸು ತೋರಲಾರ.  ಇದು ವಿಚಿತ್ರವಾದರೂ ಸತ್ಯ.
ಮೌನ ಧರಿಸಿದೆ.  ಆಕೆ ಮೌನಿಯಾಗಿರಲಿಲ್ಲ.
"ಇವ್ರು ಮಧ್ಯಾಹ್ನ ಹೈದರಾಬಾದಿಗೆ ಹೊರಟಿದ್ದಾರೆ."
ಅರೆ ನನಗದು ಮರೆತೇಹೋಗಿತ್ತಲ್ಲ!
"...ಇನ್ನು ನಾಲ್ಕು ದಿನ ಈ ಮನೇಲಿ ನಾನು ಒಂಟಿ.  ನಿಮ್ಜತೆ ಮನಸ್ಸಿಗೆ ತೃಪ್ತಿಯಾಗೋವಷ್ಟು ಮಾತಾಡೋ ಆಸೆ...  ಸಾಯಂಕಾಲ ಬನ್ನಿ.  ಕಾಯ್ತಾ ಇರ್ತೀನಿ..."
ಆ ಗಳಿಗೆಯಿಂದ ನಾನು ನಾನಾಗಿರಲಿಲ್ಲ.  ಎದೆಯಲ್ಲಿ ಏನೋ ಸಂತೋಷ.  ಎಷ್ಟೊತ್ತಿಗೆ ಸಂಜೆಯಾಗುತ್ತದೋ ಎಂಬ ತವಕ...
ಅವಳು ನಗೆಸೂಸುತ್ತಾ ಒಳಗೆ ಆಹ್ವಾನಿಸಿದಾಗ ಯಾವ ಅಳುಕೂ ಇಲ್ಲದೇ ಒಳನಡೆದು ಸೋಫಾದಲ್ಲಿ ಆರಾಮವಾಗಿ ಕುಳಿತೆ...
ತೆರೆದಿದ್ದ ಕಿಟಕಿಯಲ್ಲಿ ಮೋಡಗಳು ದಟ್ಟವಾಗಿ ಕಪ್ಪುಗಟ್ಟುತ್ತಿದ್ದವು.
"ಮಳೆ ಬರೋಹಾಗಿದೆ."  ಹೇಳಿದೆ.  ಮಾತು ಆರಂಭಿಸಲು ಒಂದು ನೆಪ.
"ಬರಲಿ ಬರಲಿ.  ಒಂದು ಭರ್ಜರಿ ಮಳೆಯ ಅಗತ್ಯ ಇದೆ, ಈ ಊರಿಗೆ..."  ಥಟ್ಟನೆ ದನಿ ತಗ್ಗಿಸಿದಳು.  "...ಈ ಬದುಕಿಗೆ" ಎಂದು ಮೆಲ್ಲಗೆ ಹೇಳಿ ಮಾತು ಮುಗಿಸಿದಳು. 
"ಅಷ್ಟೋಂದು ಬೇಸರ ತರಿಸಿಬಿಟ್ಟಿದೆಯೇ ಈ ಬದುಕು?"  ಉತ್ತರ ತಿಳಿದಿದ್ದರೂ ಪ್ರಶ್ನಿಸಿದೆ, ಮತ್ತಷ್ಟು ಉತ್ತರಗಳು ತಿಳಿಯಬಹುದೇನೋ ಎಂಬ ಕುತೂಹಲದಿಂದ, ಆಸೆಯಿಂದ.  ಅವಳು ಬಾಯಿ ತೆರೆಯುವ ಮೊದಲೇ ಅರೆತೆರೆದಿದ್ದ ಬಾಗಿಲು ಫಕ್ಕನೆ ವಿಶಾಲವಾಗಿ ತೆರೆದುಕೊಂಡಿತು.
ತೆರೆದ ಬಾಗಿಲಿಂದ ಬಂದದ್ದು ಗಾಳಿ, ಬಿರುಗಾಳಿ.
ಟೀಪಾಯ್ ಮೇಲಿದ್ದ ವರ್ತಮಾನ ಪತ್ರಿಕೆ ಪಟಪಟ ಸದ್ದುಮಾಡುತ್ತಾ ಕೆಳಗೆ ಜಾರಿತು.  ಹಾಳೆಗಳು ಬೇರೆಬೇರೆಯಾದವು.  ಬಿಡಿಬಿಡಿ ಹಾಳೆಗಳು ಮಡಿಸಿಕೊಳ್ಳುತ್ತಾ, ಬಿಡಿಸಿಕೊಳ್ಳುತ್ತಾ, ಸರಸರಗುಟ್ಟುತ್ತಾ ಗೋಡೆಯ ಕಡೆ ಸರಿಯತೊಡಗಿದವು.  ಅವುಗಳನ್ನು ಹಿಡಿದುಕೊಳ್ಳಲೆಂದು ದಢಕ್ಕನೆ ಮೇಲೆದ್ದೆ.  ಭಾಗೀರಥಿ ಕೈ ಅಡ್ಡತಂದಳು.
"ಹೋದರೆ ಹೋಗಲಿ ಬಿಡಿ.  ನಿನ್ನೆಯ ಪೇಪರ್ ಅದು.  ಹಳತು.  ಇನ್ನು ಅದು ಹೋಗುವುದು ರದ್ಧಿಗೇ.  ಮುದುರಿ ಮೂಲೆಯಲ್ಲಿ ಬಿದ್ದಿರಲಿ.  ಈವತ್ತಿನ ಪೇಪರ್ ಇನ್ನೂ ಟೀಪಾಯ್ ಮೇಲೇ ಇದೆ.  ಅದನ್ನ ಇನ್ನೂ ಓದಿಲ್ಲ ನಾನು.  ಅದು ಹಾರಿ ಹೋಗುವುದು ಬೇಡ, ಹಾಳಾಗುವುದು ಬೇಡ.  ಇರಿ, ಬಾಗಿಲು ಮುಚ್ಚಿಬಿಡುತ್ತೆನೆ."
ಎದ್ದುನಿಂತಿದ್ದವನು ಮತ್ತೆ ಕೂತೆ.  ಅವಳು ಧಾಪುಗಾಲು ಹಾಕಿ ನಡೆದು ಬಾಗಿಲು ಮುಚ್ಚಿ ಬೋಲ್ಟ್ ಹಾಕಿದಳು.  ಮನೆಯಲ್ಲಿ ಗಕ್ಕನೆ ಕತ್ತಲು ಕವಿದುಕೊಂಡಿತು.  ದೀಪದ ಸ್ವಿಚ್ ಒತ್ತಿ ಬೆಳಕು ಮಾಡಿದಳು.  ಜಮುಖಾನೆಯ ಮೇಲೆ ಗೋಡೆಗೊರಗಿ ಕುಳಿತು ಮುಂದಕ್ಕೆ ಕಾಲು ಚಾಚಿದಳು.  "ಹೀಗೆ ಕೂತ್ಕೊಳ್ಳೋದು ಅಂದ್ರೆ ನಂಗೆ ತುಂಬ ಇಷ್ಟ."  ನಗುತ್ತಾ ವಿವರಣೆ ನೀಡಿದಳು.  "ನಿಮಗೆ ಆಕ್ಷೇಪಣೆ ಇಲ್ಲ ತಾನೆ?"  ತಲೆ ಓರೆಯಾಗಿಸಿ ಪ್ರಶ್ನಿಸಿದಳು.  ನನಗೆ ನಗು ಬಂತು.  ತನ್ನ ಮನೆಯಲ್ಲಿ ತನಗಿಷ್ಟ ಬಂದ ಹಾಗೆ ಕುಳಿತುಕೊಳ್ಳಲು ಅವಳಿಗೆ ಅಧಿಕಾರ ಇದೆ.  ಆಕ್ಷೇಪ ತೋರಲು ನಾನು ಯಾರು?
"ನಾನು ಬಿ ಎ ಮಾಡಿದ್ದು ಮೈಸೂರಲ್ಲಿ, ಮಹಾರಾಣೀಸ್‌ನಲ್ಲಿ ಗೊತ್ತಾ?" ಅಂದಳು.  "ಓಹ್ ಎಷ್ಟು ಚಂದ ಇತ್ತು!"  ಗುನುಗಿಕೊಂಡು ಛಾವಣಿಗೆ ಮೊಗವೆತ್ತಿದಳು.  ಕಪ್ಪುಕಣ್ಣುಗಳಲ್ಲಿ ಮಿಂಚು.
ಮಾಳಿಗೆಯ ಮೇಲೆ ತಟಪಟ ಹನಿಗಳುದುರಿದವು.  ಕಿಟಕಿಯಲ್ಲಿ ಪ್ರಖರ ಮಿಂಚು ಬೆಳಕು.  ಹಿಂದೆಯೇ ಕಿವಿಗಡಚಿಕ್ಕುವ ಸಿಡಿಲು.  ಮರುಕ್ಷಣ ಫಕ್ಕನೆ ದೀಪ ಆರಿಹೋಯಿತು.  ಕರೆಂಟ್ ಹೋಯಿತೇನೋ.  ಮನೆಯಿಡೀ ಗಾಢಾಂಧಕಾರ.  ಕಾಲುಚಾಚಿ ಕುಳಿತು ಛಾವಣಿಗೆ ಮೊಗವೆತ್ತಿದ್ದ ಚೆಲುವೆ ಇದ್ದಕ್ಕಿದ್ದಂತೇ ಕತ್ತಲಲ್ಲಿ ಕರಗಿಹೋದಳು.
"ಭಾಗೀರಥಿ, ಮಿಸೆಸ್ ಮುರಳಿ."  ಆತುರಾತುರವಾಗಿ ದನಿ ಹೊರಡಿಸಿದೆ.
ಪ್ರತಿಕ್ರಿಯೆಯಾಗಿ ಬಂದದ್ದು ಅವಳ ಕುಲುಕುಲು ನಗೆ.  "ಯಾಕೆ ಹೆದರಿಬಿಟ್ರಾ?"  ಕೇಳಿದಳು.
"ನೀವು ಹೆದರಿದಿರೇನೋ ಅನಿಸಿತು" ಅಂದೆ.  ಅವಳಿಂದ ಮತ್ತೊಮ್ಮೆ ನಗೆಯ ಪ್ರತಿಕ್ರಿಯೆ.
ಅವಳು ಎದ್ದು ಮೇಣದ ಬತ್ತಿ ಹಚ್ಚುತ್ತಾಳೆ ಎಂದು ನಿರೀಕ್ಷಿಸಿದೆ.  ಇಲ್ಲ.  ಅವಳ ಹೆಜ್ಜೆಯ ಶಬ್ಧ ಕೇಳಿಬರಲಿಲ್ಲ.  ಅದೇ ಗೋಡೆಯ ಕಡೆಯಿಂದ ಪ್ರಶ್ನೆ ಬಂತು.  "ಹೊಸದಾಗಿ ಏನು ಬರೆದ್ರಿ?"
ಅವಳ ದನಿ ಸಹಜವಾಗಿತ್ತು.  ಬೆಳಕಿನಿಂದ ಏಕಾಏಕಿ ಕತ್ತಲೆಗೆ ಒಗೆಯಲ್ಪಟ್ಟ ಅರಿವೇ ಇಲ್ಲದಷ್ಟು ಅಥವಾ ಅದು ಲೆಕ್ಕಕ್ಕೇ ಇಲ್ಲದಷ್ಟು ಸಹಜ!
ನನಗೆ ಅಚ್ಚರಿ.  ಹಿಂದೆಯೇ ಕತ್ತಲಲ್ಲಿ ಕೂತು ಸಂಭಾಷಿಸುವ ಬಗ್ಗೆ ಮುಜುಗರ.
"ಇಲ್ಲ ಏನೂ ಇಲ್ಲ."  ದನಿ ಎಳೆದೆ.  "ಕತ್ಲೇನಲ್ಲಿ ಕೂರೋದು ಬೇಡ.  ಮೇಣದ ಬತ್ತಿ ಹಚ್ಚಿ."  ಕತ್ತಲಲ್ಲಿ ಅವಳ ಆಕೃತಿಯನ್ನು ಗುರುತಿಸುವ ವ್ಯರ್ಥ ಪ್ರಯತ್ನ ಮಾಡಿದೆ.
ಅವಳು ನಕ್ಕುಬಿಟ್ಟಳು.  ಮರುಕ್ಷಣ ನಗೆ ನಿಂತು "ಹ್ಞೂಹ್" ಎಂಬ ಉದ್ಗಾರ ಕಿವಿಗಳನ್ನು ಇರಿಯಿತು.
"ಒಂದಷ್ಟು ಮೇಣದ ಬತ್ತಿಗಳನ್ನು ತಂದಿಡಿ ಅಂತ ಇವರಿಗೆ ನೂರು ಸಲ ಹೇಳಿದ್ದೀನಿ.  ಇವ್ರು ತರಲೇ ಇಲ್ಲ...  ಮತ್ತೆ ಕರೆಂಟ್ ಬರೋವರೆಗೆ ಅಥವಾ ನಾಳೆ ಸೂರ್ಯ ಹುಟ್ಟೋವರೆಗೆ ಹೀಗೇ ಕತ್ಲೇನಲ್ಲೇ ಕೂತಿರ‍್ಬೇಕು."
ಅವಳ ದನಿಯಲ್ಲಿದ್ದುದು ವ್ಯಂಗವೋ ವಿಷಾದವೋ ತಿಳಿಯಲಿಲ್ಲ.
"ನಾನು ಹೋಗಿ ತರಲೇ?"  ಕೇಳಿದೆ.
"ಅದರ ಅಗತ್ಯ ಇದೆಯೇ?"  ಥಟ್ಟನೆ ಬಂತು ಪ್ರಶ್ನೆ.
ನಾನು ಒಂದುಕ್ಷಣ ಅವಾಕ್ಕಾದೆ.  ಗೋಡೆಯತ್ತ ದೃಷ್ಟಿ ಕೀಲಿಸಿದೆ.  ಕಿಟಕಿಯಲ್ಲಿ ಛಕ್ಕನೆ ಮಿಂಚು ಹೊಳೆಯಿತು.  ಅರೆಕ್ಷಣ ಮನೆಯೊಳಗೆ ಬೆಳಕೋ ಬೆಳಕು.  ಆ ಬೆಳಕಿನಲ್ಲಿ ಅವಳು ಪೂರ್ತಿಯಾಗಿ ನನ್ನ ದೃಷ್ಟಿಗೆ ನಿಲುಕಿದಳು.
ಕಾಲುಗಳನ್ನು ಮಡಿಚಿ ಎದೆಗೆ ಒತ್ತಿಕೊಂಡಿದ್ದಳು.  ಮಂಡಿಗಳ ಮೇಲೆ ಮುಖವಿತ್ತು.  ಕೈಗಳೆರಡೂ ಜತೆಯಾಗಿ ಹೆಣೆದುಕೊಂಡು ಮೊಣಕಾಲುಗಳನ್ನು ಬಳಸಿದ್ದವು...
ಮತ್ತೊಂದು ಮಿಂಚು.  ಮತ್ತೊಮ್ಮೆ ಕಂಡ ಹೆಣ್ಣು.  ಹಿಂದೆಯೇ ಏಕಾಏಕಿ ಅಧಿಕಗೊಂಡ ಮಳೆ.
"ಮೇಣದ ಬತ್ತಿ ಬೇಡ.  ಅದರ ಬದಲು ಒಂದು ಮಗು ಇದ್ದಿದ್ರೆ!  ಕೂಸಿರೋ ಮನೆಗೆ ದೀಪ ಯಾಕೆ ಅಂತಾರೆ ಅಲ್ವಾ?"  ಮಳೆಯ ಜತೆ ರಾಗವಾಗಿ ಬಂತು ಅವಳ ಮಾತು.
ನಾನು ನಿಜಕ್ಕೂ ಬೆರಗಾದೆ.  ಭಾಗೀರಥಿಗೆ ಮಗುವಿನ ಬಯಕೆ!  ನನ್ನ ಹೆಂಡತಿಗೆ ಮಕ್ಳು ಮರಿ ಅಂದ್ರೆ ಒಂಥರಾ ಅಲರ್ಜಿ.  ಮಕ್ಳು ಬೇಡವೇ ಬೇಡ ಅಂತ ಕಂಡೀಷನ್ ಹಾಕೀನೇ ಅವ್ಳು ಹಸೆಮಣೆ ಏರಿದ್ದು...  ಅವಳಿಗೆ ಬೇಡ ಅಂದ್ಮೇಲೆ ನಂಗೂ ಬೇಡ...  ನಾವಿಬ್ರೇ ನೆಮ್ಮದಿಯಾಗಿ ಇದ್ದುಬಿಟ್ಟಿದ್ದೀವಿ.  ಮದುವೆಯಾಗಿ ಮೂರು ನಾಲ್ಕು ವರ್ಷವಾದರೂ ಇನ್ನೂ ಮಕ್ಕಳಾಗಿಲ್ಲದೇ ಇರುವುದಕ್ಕೆ ಮುರಳಿ ನಗುನಗುತ್ತಾ ಕೊಟ್ಟಿದ್ದ ವಿವರಣೆ ಅದು.
ನನ್ನನ್ನು ಕತ್ತಲಲ್ಲಿ ಕೂರಿಸಿ ಇವಳು ನನ್ನ ಮುಂದೆ ನಾಟಕವಾಡುತ್ತಿದ್ದಾಳೆಯೆ?  ನನ್ನನ್ನು ಮತ್ತಷ್ಟು ಕತ್ತಲೆಗೆ ದೂಡುವ ಸಂಚೇ ಇದು?  ಬೇಸರವಾಯಿತು.
"ಹೌದು.  ಕೂಸಿರೋ ಮನೆಗೆ ದೀಪದ ಅಗತ್ಯ ಇಲ್ಲ ನಿಜ.  ಆದ್ರೆ ಈ ಮನೆಗೆ ಕೂಸು ಬೇಡ ಅಂತ ನೀವು, ಮೇಣದಬತ್ತಿ ಬೇಡ ಅಂತ ಮುರಳಿ ನಿರ್ಧರಿಸಿಬಿಟ್ಟಿರುವಾಗ ಈ ಮನೆಗೆ ಬೆಳಕೆಲ್ಲಿ ಬರುತ್ತೆ?"  ನನ್ನ ದನಿ ಖಾರವಾಗಿತ್ತು.
"ಏನಂದ್ರಿ?"  ಕತ್ತಲಲ್ಲಿ ಛಟ್ಟನೆ ಚೀರಿದಂತೆ ಪ್ರಶ್ನೆ ಬಂತು.  "ಈ ಮನೆಗೆ ಮಗು ಬೇಡ ಅಂತ ನಾನು ನಿರ್ಧರಿಸಿಬಿಟ್ಟಿದ್ದೀನಾ?  ಹಾಗಂತ ನಿಮಗೆ ಯಾವಾಗ ಹೇಳ್ದೆ ನಾನು?"  ಗಾಯಗೊಂಡ ಪ್ರಾಣಿಯೊಂದರ ಚೀತ್ಕಾರದಂತಿತ್ತು ಅವಳ ದನಿ.
ನಾನು ಅವಾಕ್ಕಾದೆ.  "ಮುರಳಿ ಹಾಗಂತ..." ತೊದಲಿದೆ.
ನಿಮಿಷಗಳವರೆಗೆ ಅವಳ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.  ಮಳೆಯ ರಭಸ ಹೆಚ್ಚಾಯಿತು.  ಜತೆಗೇ ಉದ್ರೇಕಗೊಂಡ ಗಾಳಿ.
ನಿಮಿಷಗಳುರುಳಿದವು.  ಮಳೆಯ ರಾಗವನ್ನು ಆಲಿಸುತ್ತಾ ಕುಳಿತೆ.  ಗೋಡೆಯ ಕಡೆಯಿಂದ ಯಾವ ಶಬ್ಧವೂ ಇರಲಿಲ್ಲ.  ಅವಳು ಅಲ್ಲಿಂದೆದ್ದು ಬೇರೆಡೆ ಹೋಗಿರಬಹುದೇ?  ಅನುಮಾನವಾಯಿತು.
ನಿಧಾನವಾಗಿ ಮಳೆಯ ರಭಸ ಇಳಿಯಿತು.  ಅದರ ಸದ್ದು ಕಡಿಮೆಯಾಗುತ್ತಿದ್ದಂತೇ ನನ್ನ ಕಿವಿಗೆ ಬಿದ್ದದ್ದು ಬಿಕ್ಕುವಿಕೆಯ ಶಬ್ಧ.
ಭಾಗೀರಥಿ ಅಳುತ್ತಿದ್ದಾಳೆ!
"ಭಾಗೀರಥೀ."  ನನ್ನ ದನಿಯಲ್ಲಿ ಗಾಬರಿಯಿತ್ತು.  ಥಟ್ಟನೆ ಎದ್ದುನಿಂತೆ.  "ಭಾಗೀರಥಿ...  ನೀವು ಅಳ್ತಾ ಇದೀರಾ?"
ಉತ್ತರವಾಗಿ ಅವಳು ದನಿಯೆತ್ತಿ ಅಳತೊಡಗಿದಳು.
ಕತ್ತಲ ರಾತ್ರಿ.  ಕತ್ತಲುಗಟ್ಟಿದ ಮನೆ.  ಕತ್ತಲಲ್ಲಿ ಕರಗಿಹೋಗಿ ಬರೀ ಅಳು ಮಾತ್ರವಾಗಿ ಅರಿವಿಗೆ ನಿಲುಕುತ್ತಿರುವ ಹೆಣ್ಣು...
ಏನು ಮಾಡಲೂ ತೋಚದೆ ಮತ್ತೆ ಧೊಪ್ಪನೆ ಸೋಫಾದಲ್ಲಿ ಕುಸಿದೆ.  ಕೆಂಡದ ಮೇಲೆ ಕುಳಿತಂತೆ ಚಡಪಡಿಸಿದೆ.  ಮತ್ತೆ ಮೇಲೆದ್ದೆ.  "ಭಾಗೀರಥೀ..." ಕರೆದೆ.
ಅವಳ ಅಳು ದೊಡ್ಡದಾಯಿತು.
ನಿಧಾನವಾಗಿ ಅವಳಿದ್ದ ದಿಕ್ಕಿಗೆ ಹೆಜ್ಜೆಯಿಟ್ಟೆ.
ನಾಲ್ಕು ಹೆಜ್ಜೆಯಿಟ್ಟು ನಿಂತೆ.  ಮಸುಕು ಬಿಳುಪು ಗೋಡೆಯ ಹಿನ್ನೆಲೆಯಲ್ಲಿ ಮುದುರಿ ಕುಳಿತ ಹೆಣ್ಣಿನ ಮಾಸಲು ಆಕೃತಿ...  ಹೊರಡುತ್ತಿದ್ದ ಬಿಕ್ಕುಗಳು.
ನಿಮಿಷದವರೆಗೆ ಕಲ್ಲುಕಂಬದಂತೆ ನಿಂತೆ.  ನನ್ನಿಂದ ಒಂದೆರಡು ಅಡಿಗಳಷ್ಟು ಸನಿಹದಲ್ಲಿ ಭಾಗೀರಥಿ!  ನನ್ನೆದೆಯಲ್ಲಿ ಕೋಲಾಹಲ...  ಹೃದಯ ಹಾರಿಹೋಗುವಂತೆ ಹೊಡೆದುಕೊಳ್ಳತೊಡಗಿತು...  "ಅಳಬೇಡೀ..."  ನನ್ನ ದನಿ ನನಗೇ ಅಪರಿಚಿತವಾಗಿತ್ತು.   ಮಾಸಲು ಆಕೃತಿ ಅತ್ತಿತ್ತ ತೂಗಾಡಿತು.  ಬಿಕ್ಕುಗಳ ನಡುನಡುವೆ ಮಾತುಗಳು ಹೊರಬಂದವು.
"ಅಳದೇ ಇನ್ನೇನು ಮಾಡ್ಲಿ ನಾನು?  ನನ್ನ ಆಸೆಗಳು ಸತ್ತದ್ದನ್ನ, ನನ್ನ ಕನಸುಗಳು ಚೂರಾದ್ದನ್ನ, ನನ್ನ ವ್ಯಕ್ತಿತ್ವಕ್ಕೆ ಶವವಸ್ತ್ರ ಹೊದಿಸಿದ್ದನ್ನ ಸಹಿಸಿಕೊಂಡೆ.  ಈಗ... ಈಗ... ನನ್ನ ಹೆಣ್ತನಕ್ಕೇ ಕೊಳ್ಳಿಯಿಕ್ಕುವ ಈ ಮಾತುಗಳನ್ನ ಹೇಗೆ ತಾನೆ ಸಹಿಸಿಕೊಳ್ಳಲಿ?"
ನನ್ನ ಕಾಲುಗಳು ಸೋತುಹೋದವು.  ಅಲ್ಲಿ ನಿಂತಲ್ಲೇ ಕೆಳಗೆ ಜಮುಖಾನೆಯ ಮೇಲೆ ಕುಸಿದೆ.  ಅವಳ ಮಾತುಗಳು ಮುಂದುವರಿದವು.
"ಹೆಣ್ಣಾಗಿ ಹುಟ್ಟಿದ ನನಗೆ... ನನಗೆ ತಾಯಿ ಆಗೋ ಬಯಕೆ ಇಲ್ಲವಾ?  ಮಗು ಬೇಡ ಅಂತೀನಾ ನಾನು?"  ಅವಳ ಅಳು ತಾರಕ್ಕೇರಿತು.  ಮರುಕ್ಷಣ ಥಟ್ಟನೆ ನಿಂತಿತು.  ಮಾತುಗಳು ತಡೆತಡೆದು ಬಂದವು.
"ಒಂದು ಮಗೂನ...  ನನ್ನದು ಅಂತ ಒಂದೇ ಒಂದು ಮಗೂನ ನಾನೆಷ್ಟು ಬಯಸಿದ್ದೆ ಗೊತ್ತಾ?...  ನಂಗೊಂದು ಮಗೂನ ಕೊಡೋದಿಕ್ಕೆ ಇವರಿಗೆ ಆಗ್ಲಿಲ್ಲ."  ಅವಳ ದನಿ ಏಕಾಏಕಿ ಏರಿತು.  "ಕಟ್ಕೊಂಡ ಹೆಂಡ್ತೀಗೆ ತಾಯಿಯಾಗೋ ಅವಕಾಶ ಕೊಡಲಾಗದ ಷಂಡ ಈ ನನ್ನ ಗಂಡ.  ಈಗ ನೋಡಿದ್ರೆ ನಾನು ಮಗು ಬೇಡ ಅಂತಿದೀನಿ ಅಂತ ಹೊರಗೆ ಹೇಳ್ಕೊಂಡು ತಿರುಗ್ತಾ ಇದಾರಾ?  ಕೇಳಿದೋರು ನಾನೊಂದು ಹೆಣ್ಣೇ ಅಲ್ಲ ಅಂತ..." ಅವಳಿಗೆ ಮುಂದೆ ಹೇಳಲಾಗಲಿಲ್ಲ.  ಒಮ್ಮೆ ಬಿಕ್ಕಿದಳು.  ಮತ್ತೆ "ಧೋ" ಎಂದು ಮಳೆ ಆರಂಭವಾದಂತೆ ಬಿಕ್ಕಿಬಿಕ್ಕಿ ಅಳತೊಡಗಿದಳು.
ನಾನು ಶಿಲೆಯಾಗಿ ಕುಳಿತುಬಿಟ್ಟೆ.  ಹಾಗೆ ಕುಳಿತದ್ದು ಒಂದು ಗಳಿಗೆಯೋ, ಒಂದು ಯುಗವೋ ನನಗೆ ಗೊತ್ತಿಲ್ಲ.  ಒಂದು ಹಂತದಲ್ಲಿ ಮನೆಯೊಳಗೆ ಮಿಂಚೊಂದು ಹೊಳೆಯಿತು.  ಹಿಂದೆಯೇ ಮತ್ತೊಂದು...  ಮತ್ತೊಮ್ಮೆ ಮಿನುಗಿ ಟ್ಯೂಬ್‌ಲೈಟ್ ಹೊತ್ತಿಕೊಂಡಿತು.  ಮನೆ ತುಂಬಾ ಕಣ್ಣು ಕುಕ್ಕುವಷ್ಟು ಬೆಳಕು.  ಕರೆಂಟ್ ಬಂದಿತ್ತು.
ಭಾಗೀರಥಿ ಗೋಡೆಗೊರಗಿ ಕುಳಿತಿದ್ದಳು.  ಅಳು ನಿಂತಿತ್ತು.  ಕೆಂಪಾದ ಕಣ್ಣುಗಳು, ಕೆನ್ನೆಯ ಮೇಲೆ ಹರಿದ ಕಣ್ಣೀರ ಗೆರೆ...  ಕೆನ್ನೆಗಳೂ ಕೆಂಪಾಗಿ ಹೊಳೆಯುತ್ತಿದ್ದವು.  ನಾನು ಅವಳಿಂದ ಎರಡು ಅಡಿಗಳ ದೂರದಲ್ಲಿ ಕುಳಿತಿದ್ದೆ.
ಮನೆಯಲ್ಲಿ ಬೆಳಕು ಮೂಡಿದೊಡನೇ ಅವಳು ಚಕ್ಕನೆ ನನ್ನತ್ತ ತಿರುಗಿದಳು.  ಕಣ್ಣುಗಳಲ್ಲಿ ಶೂನ್ಯತೆ...  ರೆಪ್ಪೆಗಳು ಪಟಪಟನೆ ಬಡಿದುಕೊಂಡವು.  ಧೀರ್ಘವಾಗಿ ಉಸಿರ್ಗರೆದಳು.
ನಾನು ಎದ್ದುನಿಂತೆ.  "ನಾನಿನ್ನು ಬರಲಾ?"  ಪ್ರಶ್ನಿಸಿದೆ.
ಅವಳು ತಕ್ಷಣ ಉತ್ತರಿಸಲಿಲ್ಲ.  ಸೆರಗಿನ ತುದಿಯಿಂದ ಒದ್ದೆಯಾಗಿದ್ದ ಕೆನ್ನೆಗಳನ್ನು ಒತ್ತಿದಳು.  ಹ್ಞೂ ಎನ್ನುವಂತೆ ತಲೆ ಅಲುಗಿಸಿದಳು.
ಆ ರಾತ್ರಿ ಸರಸಕ್ಕನಿಗೆ ಹೇಳಲು ನನ್ನೆದೆಯ ತುಂಬಾ ಒಂದು ಸಾಗರದಷ್ಟು ಮಾತುಗಳಿದ್ದವು...
ಅಕ್ಕನಿಗೆ, ನನ್ನ ಸರಸಕ್ಕನಿಗೆ ಸುಧೀರ್ಘ ಇ ಮೇಲ್ ಕಳಿಸಿ ನಾನು ಹಾಸಿಗೆ ಸೇರಿದಾಗ ಮೂಡಣಕ್ಕೆ ತೆರೆದುಕೊಂಡ ಕಿಟಕಿಯಲ್ಲಿ ಕೆಂಪು ಮೂಡುತ್ತಿತ್ತು.

*     *     *

ಡಿಪಾರ್ಟ್‌ಮೆಂಟಿಗೆ ಹೋಗಬೇಕೆನಿಸಲಿಲ್ಲ.  ರಜಾ ಚೀಟಿ ಬರೆದು ಪಕ್ಕದ ಮನೆಯ ಕಾಮರ್ಸ್ ಪ್ರೊಫೆಸರರ ಕೈಯಲ್ಲಿ ಕೊಟ್ಟು ಕಳುಹಿಸಿಬಿಟ್ಟೆ.  ತಿಂಡಿಯನ್ನೂ ತಿನ್ನದೇ ಮತ್ತೆ ಹಾಸಿಗೆಯಲ್ಲುರುಳಿದೆ.  ಮನದ ತುಂಬಾ ಭಾಗೀರಥಿ ತುಂಬಿಕೊಂಡಿದ್ದಳು.  ಅವಳು ನನ್ನ ಹೆಂಡತಿಯಾಗಿದ್ದಿದ್ದರೆ...!  ಯೋಚನೆ ಬಂತು...  ಅದ್ಯಾವಾಗ ನಿದ್ದೆ ಬಂತೋ ಎದ್ದಾಗ ಸಮಯ ಹನ್ನೆರಡು ದಾಟಿತ್ತು.  ಹಸಿವೆಯಾಗಿತ್ತು.  ಉಪ್ಪಿಟ್ಟು ಕೆದಕಿ ತಿಂದು ಕಂಪ್ಯೂಟರ್ ಆನ್ ಮಾಡಿದೆ...  ಸರಸಕ್ಕನಿಂದ ಇ ಮೇಲೇನಾದರೂ ಬಂದಿರಬಹುದೇನೋ ಎಂಬ ಆಸೆಯಿಂದ ಗಂಟೆಗೊಂದು ಸಲ ಪರಿಶೀಲಿಸಿದೆ.  ಉಹ್ಞುಂ  ಅವಳಿಂದ ಯಾವ ಇ ಮೇಲೂ ಇಲ್ಲ.
ಸರಸಕ್ಕನಿಂದ ಯಾವ ಇ ಮೇಲೂ ಬರದೇ ಮೂರು ದಿನಗಳು ಕಳೆದುಹೋಗಿದ್ದವು!  ನನಗೆ ಅಚ್ಚರಿ.  ಹಿಂದೆಯೇ ಗಾಬರಿ.  ಅವಳಿಗೇನಾದರೂ ಆರೋಗ್ಯ ಕೆಟ್ಟಿದೆಯೇ?...  ಮತ್ತೊಂದು ಇ ಮೇಲ್ ಕಳಿಸಿದೆ.  ಒಂದು ಕಡೆ ಭಾಗೀರಥಿ, ಇನ್ನೊಂದು ಕಡೆ ಸರಸಕ್ಕ.  ನನ್ನ ಆಲೋಚನೆಗಳು ಪೆಂಡ್ಯುಲಂನಂತೆ ಅತ್ತಿತ್ತ ಓಲಾಡಿದವು.
ಸಂಜೆಯಾಗುತ್ತಿದ್ದಂತೇ ಭಾಗೀರಥಿಯನ್ನು ನೋಡಬೇಕೆನಿಸಿತು.  ಉಡುಪು ಬದಲಿಸಿ ಹೊರಡುವಷ್ಟರಲ್ಲಿ ಸರಸಕ್ಕನಿಂದ ಇ ಮೇಲೇನಾದರೂ ಬಂದಿರಬಹುದೇನೋ ಎಂದು ಮತ್ತೊಮ್ಮೆ ನೋಡಿದರೆ ಹೇಗೆ ಅನಿಸಿತು.  ಕಂಪ್ಯೂಟರ್‌ನತ್ತ ನಡೆದೆ.  ಆ ಗಳಿಗೆಗೆ ಸರಿಯಾಗಿ ಫೋನ್ ಹೊಡೆದುಕೊಂಡಿತು.  ಭಾಗೀರಥಿಯೇ?  ಆತುರಾತುರವಾಗಿ ಎತ್ತಿಕೊಂಡೆ.
ಅತ್ತಲಿಂದ ಕೇಳಿಬಂದದ್ದು ಸರಸಕ್ಕನ ದನಿ!
"ಸರಸಕ್ಕ ಎಲ್ಲಿಂದ ಮಾತಾಡ್ತಿದೀಯೇ?"  ಅಚ್ಚರಿ, ಸಂತೋಷದಲ್ಲಿ ಕೂಗಿಬಿಟ್ಟೆ.
"ಹೀಥ್ರೋ ಏರ್‌ಪೋರ್ಟ್‌ನಿಂದ.  ನಾನೀಗ ಇಂಡಿಯಾಗೆ ಹೊರಟಿದ್ದೀನಿ."  ಹಲವು ಕ್ಷಣಗಳ ಮೌನದ ನಂತರ ಅವಳ ದನಿ ನಿಧಾನವಾಗಿ ತೇಲಿಬಂತು.
"ಓಹ್ ರಿಯಲೀ?"
"ಹ್ಞೂಂ.  ಯಾಕೋ ನಿನ್ನನ್ನ ನೋಡ್ಬೇಕು ಅನ್ನಿಸ್ತು.  ಹೊರಟುಬಿಟ್ಟೆ."
"ಹೌದಾ ಸರಸಕ್ಕ!"
"ಹೌದು.  ಬ್ರಿಟಿಷ್ ಏರ್‌ವೇಸ್... ಲಂಡನ್ ಚೆನ್ನೈ ಡೈರೆಕ್ಟ್ ಫ್ಲೈಟ್.  ಬೆಳಿಗ್ಗೆ ಮೂರೂವರೆಗೆ ಮೀನಂಬಾಕ್ಕಂನಲ್ಲಿ ಕಾಯ್ತಾ ಇರೋ.  ಎಷ್ಟೊತ್ತಿಗೆ ನಿನ್ನನ್ನ ನೋಡ್ತೀನೋ ಅನ್ನಿಸ್ತಾ ಇದೆ..."
ಸರಸಕ್ಕ ಬರುತ್ತಿದ್ದಾಳೆ, ಇದ್ದಕ್ಕಿದ್ದಂತೇ!  ಅದೂ ನೇರವಾಗಿ ಪಾಂಡಿಚೆರಿಗೇ!  ನನ್ನನ್ನು ನೋಡಲೇ ಅಂತೆ!  ನನಗೆ ಅಚ್ಚರಿ.  ಅದಕ್ಕಿಂತಲೂ ಮಿಗಿಲಾಗಿ ಹೇಳಲಾಗದಷ್ಟು ಸಂತೋಷ....  ನಿಮಿಷಗಳವರೆಗೆ ಭಾಗೀರಥಿ ಮರೆತೇಹೋದಳು.  ಮತ್ತೆ ನೆನಪಾದಾಗ ಗೊಂದಲ.  ಅವಳ ಬಗ್ಗೆ ಸರಸಕ್ಕನಿಗೆ ಹೇಳಲೋ ಬೇಡವೋ?  ಐದಾರು ದಿನಗಳಿಂದ ಸರಸಕ್ಕನಿಗೆ ನಾ ಕಳಿಸಿದ ಎಲ್ಲ ಇ ಮೇಲ್‌ಗಳಲ್ಲೂ ಬರೀ ಅವಳೇ ತುಂಬಿಕೊಂಡಿದ್ದಳು.  ಅದರೆ ಸರಸಕ್ಕನಿಂದ ಆ ಬಗ್ಗೆ ಒಂದು ಮಾತೂ ಇಲ್ಲ.  ಬಹುಷಃ ನಾನು ಭಾಗೀರಥಿಯ ಬಗ್ಗೆ ಅಷ್ಟೋಂದು ಬರೆದದ್ದು ಅವಳಿಗೆ ಇಷ್ಟವಾಗಿರಲಾರದೇನೋ.  ತನ್ನ ಬೇಸರವನ್ನು ಮೌನದ ಮೂಲಕ ತೋರಿಸಿಕೊಂಡಿರಬೇಕು...  ಅವಳ ಸ್ವಭಾವ ಹಾಗೇ ಅಲ್ಲವೇ?
ರಾತ್ರಿ ಹನ್ನೊಂದು ಗಂಟೆಗೆ ಟ್ಯಾಕ್ಸಿ ಬುಕ್ ಮಾಡಿದೆ...   ಅಂಗಡಿಗೆ ಓಡಿಹೋಗಿ ಮನೆಗೆ ಬೇಕಾದ ಸಾಮಾನುಗಳನ್ನೆಲ್ಲಾ ತಂದಿಟ್ಟೆ...  ಸರಸಕ್ಕನ ಸ್ವಾಗತಕ್ಕೆ ಮನೆ ತಯಾರಾಯಿತು.  ಈ ಧಾವಂತದಲ್ಲಿ ಭಾಗೀರಥಿಯನ್ನು ನೋಡುವುದನ್ನು ಒಲ್ಲದ ಮನಸ್ಸಿನಿಂದ ನಾಳೆಗೆ ಮುಂದೂಡಿದೆ...
ರಾತ್ರಿ ಊಟ ಮಾಡಿ ಕೈತೊಳೆಯುತ್ತಿದ್ದಾಗ ಕಾಲಿಂಗ್ ಬೆಲ್ ಹೊಡೆದುಕೊಂಡಿತು.   ಬಾಗಿಲು ತೆರೆದರೆ ಕಂಡದ್ದು ಪ್ರೊಫೆಸರ್ ಗುಣಶೇಖರನ್.  ಮುಖ ಬಾಡಿತ್ತು.  ನನ್ನ ಕೈ ಹಿಡಿದು ಮೆಲ್ಲಗೆ ಹೇಳಿದರು.  "ಸಮ್‌ಥಿಂಗ್ ಬ್ಯಾಡ್ ಹ್ಯಾಸ್ ಹ್ಯಾಪನ್ಡ್ ಇನ್ ದ ಕ್ಯಾಂಪಸ್...  ಮಿಸೆಸ್ ಮುರಳಿ ಹ್ಯಾಸ್ ಕಮಿಟೆಡ್ ಸೂಯಿಸೈಡ್."
"ಮಿಸೆಸ್ ಮುರಳಿ!  ಭಾಗೀರಥಿ!  ಪ್ರೊಫೆಸರ್, ವಾಟ್ ಆರ್ ಯೂ ಟಾಕಿಂಗ್?"  ನಾನು ಚೀರಿದೆ...
ಮುಂದಿನ ಐದು ನಿಮಿಷಗಳಲ್ಲಿ ವಿವರಗಳು ದೊರೆತವು.   ಕತ್ತಲಾದರೂ ಭಾಗೀರಥಿಯ ಮನೆಯಲ್ಲಿ ದೀಪ ಕಾಣದೇ ಹೋದಾಗ ಸೋಜಿಗಗೊಂಡ ಮಿಸೆಸ್ ಗುಣಶೇಖರನ್ ಅತ್ತ ಹೋದರಂತೆ.  ಬಾಗಿಲು ಒಳಗಿನಿಂದ ಬೋಲ್ಟ್ ಆಗಿದ್ದುದು ನೋಡಿ ಕಾಲಿಂಗ್ ಬೆಲ್ ಮಾಡಿದರಂತೆ.   ಎಷ್ಟು ಸಲ ಬೆಲ್ ಮಾಡಿದರೂ ಒಳಗಿನಿಂದ ಯಾವ ಪ್ರತಿಕ್ರಿಯೆಯೂ ಬಾರದಿದ್ದಾಗ ಅಕ್ಕಪಕ್ಕದವರನ್ನು ಕರೆದರಂತೆ...  ಸೆಕ್ಯೂರಿಟಿ ಗಾರ್ಡ್ ಬಂದು ಬಾಗಿಲು ಒಡೆದು ಒಳಹೋದಾಗ ಡ್ರಾಯಿಂಗ್ ರೂಮಿನ ಫ್ಯಾನಿನಲ್ಲಿ ಭಾಗೀರಥಿಯ ಶವ ತೂಗಾಡುತ್ತಿತ್ತಂತೆ...
ಭಾಗೀರಥಿ ತನ್ನ ಬದುಕನ್ನು ಅಂತ್ಯಗೊಳಿಸಿಕೊಂಡಿದ್ದಳು...  ನಾನು ನಾನಾಗಿ ಉಳಿದಿರಲಿಲ್ಲ.
ತನಗೆ, ತನ್ನ ಭಾವನೆಗಳಿಗೆ, ತನ್ನ ಹೆಣ್ತನಕ್ಕೆ ಯಾವ ಬೆಲೆಯೂ ಇಲ್ಲದ ಈ ಬದುಕು ಇನ್ನು ಸಾಕು ಅನಿಸಿಬಿಟ್ಟಿತೇ ಅವಳಿಗೆ?  ಮುರಳಿಯ ಜತೆಗಿನ ಈ ಹಾಳು ಬದುಕಿನ ಹೊರತಾಗಿ ತನಗೆ ಬೇರೊಂದು ಬದುಕೇ ಇಲ್ಲ ಎಂದವಳು ತಿಳಿದಳೇ?  ರಾತ್ರಿ ಅವಳು ಅಷ್ಟೋಂದು ಅತ್ತದ್ದು!  ತನಗೆ ಮಕ್ಕಳೆಂದರೆ ಇಷ್ಟವಿಲ್ಲ ಎಂದವಳ ಗಂಡ ಹೊರಗಿನ ಜನಕ್ಕೆ ಹೇಳಿಕೊಂಡು ತಿರುಗುತ್ತಿರುವುದರಿಂದ ಅವಳಿಗಾದ ಆಘಾತ, ಮಾನಸಿಕ ವೇದನೆಗೆ ನಾನು ಸಾಕ್ಷಿಯಾಗಿದ್ದೆ.  ಅವಳನ್ನು ಆತ್ಮಹತ್ಯೆಗೆ ದೂಡಿದ್ದು ಮುರಳಿಯ ಆ ಮಾತುಗಳೇ?  ಅಥವಾ ಅದನ್ನು ಅವಳಿಗೆ ಹೇಳಿಬಿಟ್ಟ ನನ್ನ ಮೂರ್ಖತನವೇ?  ಭಾಗೀರಥಿಯ ಆತ್ಮಹತ್ಯೆಗೆ ನಾನು ಕಾರಣವೇ?
ಅವಳ ಮನೆಯತ್ತ ಓಡಿದೆ.  ಅಲ್ಲಿ ಯಾರ‍್ಯಾರೋ ಇದ್ದರು.  ಒಂದಿಬ್ಬರು ಪೋಲೀಸರೂ ಸಹ...  ಶವವನ್ನು ಈಗ ತಾನೆ ಪೋಸ್ಟ್ ಮಾರ್ಟಂಗೆ ತೆಗೆದುಕೊಂಡು ಹೋಗಿಬಿಟ್ಟರಲ್ಲ ಅಂದರು.  ಹಿಂದಕ್ಕೆ ಬಂದೆ.  ಕತ್ತಲಲ್ಲಿ ಕೂತೆ.  ಅಳು ಒತ್ತರಿಸಿಕೊಂಡು ಬಂತು...
ಹನ್ನೊಂದು ಗಂಟೆಗೆ ಟ್ಯಾಕ್ಸಿಯವನು ಬಂದು ಹಾರ್ನ್ ಮಾಡಿದಾಗಲೇ ನಾನು ವಾಸ್ತವಕ್ಕೆ ಬಂದದ್ದು.  ಒಲ್ಲದ ಮನಸ್ಸಿನಿಂದ ಎದ್ದು ಹೊರಟೆ.  ಸರಸಕ್ಕನನ್ನು ಸ್ವಾಗತಿಸಲು ನನ್ನಲ್ಲಿ ಯಾವ ಉತ್ಸಾಹವೂ ಉಳಿದಿರಲಿಲ್ಲ.
ಸರಸಕ್ಕನನ್ನು ಕರೆತಂದ ಆ ವಿಮಾನ ಮೂರೂವರೆಗೆ ಸರಿಯಾಗಿ ನೆಲಕ್ಕಿಳಿಯಿತು.  ಅವಳು ಹೊರಬರುವಹೊತ್ತಿಗೆ ನಾಲ್ಕೂವರೆಯಾಯಿತು.
ಸರಸಕ್ಕನ ಅರಳಿದ ಮುಖವನ್ನು ದೂರದಿಂದಲೇ ಗುರುತಿಸಿದೆ...  ಅಕ್ಕ ಸ್ವಲ್ಪ ಬೆಳ್ಳಗಾಗಿದ್ದಳು.  ಆದರೆ ತುಸು ಬಡವಾಗಿದ್ದಳು.  ಕಣ್ಣುಗಳು ಸ್ವಲ್ಪ ಒಳಗಿಳಿದಿದ್ದವು.  ಅದರ ಹೊರತಾಗಿ ಸರಸಕ್ಕ ಮೊದಲಿದ್ದ ಹಾಗೇ.  ಉಡುಪಿನಲ್ಲಿ ಯಾವ ಬದಲಾವಣೆಯೂ ಇಲ್ಲ.  ಮೆರೂನ್ ರಂಗಿನ ಸೀರೆ, ಬಿಳೀ ರವಿಕೆ.
ಅಕ್ಕನ ಹೆಗಲಲ್ಲಿ ಅದೇ ಮಾಮೂಲೀ ಕಪ್ಪು ಚೀಲ.  ಜತೆಗೆ ಕೈಯಲ್ಲೊಂದು ಪುಟ್ಟ ಸೂಟ್‌ಕೇಸ್ ಮಾತ್ರ.
"ಹೇಗಿದ್ದೀಯೋ?" ಅಂದಳು ಅಕ್ಕ.  "ಚೆನ್ನಾಗಿದ್ದೀನಿ" ಅಂದೆ.  ನಗಲು ಹೆಣಗಿದೆ.
ಟ್ಯಾಕ್ಸಿ ಹೊರಟಿತು.  ಅಕ್ಕ ಸೀಟಿಗೊರಗಿ ನಿದ್ದೆಹೋದಳು.  ಮೌನ ಮೌನ ಮೌನ, ಹೊರಗೆ ಒಳಗೆ- ಎಲ್ಲೆಲ್ಲೂ.
ಮನೆ ತಲುಪಿದಾಗ ಅಕ್ಕನೇ ಚಹ ಮಾಡಿದಳು.  ಇಬ್ಬರೂ ಕುಡಿದೆವು.  ಅಕ್ಕ ಸ್ನಾನ ಮಾಡಲು ಹೋದಾಗ ನಾನು ಭಾಗೀರಥಿಯ ಮನೆಯತ್ತ ಓಡಿದೆ.  ಮುರಳಿ ಹೈದರಾಬಾದಿನಿಂದ ಹಿಂತಿರುಗಿದ್ದ.  ಜತೆಯಲ್ಲಿ ಇನ್ನೂ ಒಂದೆರಡು ಜನ ಇದ್ದರು.  ಅವನ ಜತೆ ಏನು ಮಾತಾಡಬೇಕೆಂದು ತೋಚಲಿಲ್ಲ.  ಸುಮ್ಮನೆ ಒಂದೆರಡು ನಿಮಿಷ ನಿಂತಿದ್ದು ತಲೆ ಕೆಳಗೆ ಹಾಕಿ ಹಿಂದಕ್ಕೆ ತಿರುಗಿದೆ.  ಅಕ್ಕ ಇನ್ನೂ ಸ್ನಾನದ ಮನೆಯಿಂದ ಹೊರಬಂದಿರಲಿಲ್ಲ.  ಅಂಗಳದಲ್ಲಿ ಶಥಪಥ ಹಾಕತೊಡಗಿದೆ, ಸರಸಕ್ಕನ ಕರೆ ಕೇಳುವವರೆಗೂ.
"ಬಾ ಕೂತುಕೋ.  ನಾನು ಯಾಕೆ ಬಂದದ್ದು ಅಂತ ಹೇಳಿಬಿಡ್ತೀನಿ."
ಇದೇ ಮಾತನ್ನು ಅಕ್ಕ ನಿನ್ನೆ ರಾತ್ರಿಗೆ ಮೊದಲು ಹೇಳಿದ್ದರೆ ಚಿಗರೆಯಂತೆ ಅವಳ ಬಳಿ ಓಡಿಹೋಗುತ್ತಿದ್ದೆ...  ಈಗ ನಿಧಾನವಾಗಿ ಕಾಲೆಳೆದೆ.
ಅಕ್ಕ ನನ್ನ ಪಕ್ಕದಲ್ಲೇ ಸೋಫಾದಲ್ಲಿ ಕುಳಿತಳು.  "ಇಲ್ಲಿ ಕೇಳು" ಎಂದು ನನ್ನ ಗಮನ ಸೆಳೆದಳು.  "ಸರಿಯಾದ ವಯಸ್ಸಿಗೆ ಮದುವೆಯಾಗಿಬಿಟ್ಟರೆ ಚಂದ ಅಲ್ಲವಾ?"  ಕೇಳಿದಳು.
ಬೆರಗು ಹತ್ತಿದವನಂತೆ ಅವಳ ಮುಖವನ್ನೇ ನೋಡಿದೆ.  ಅಕ್ಕ ಹೇಳುತ್ತಿರುವುದೇನು?  ಯಾರ ಮದುವೆಯ ಬಗ್ಗೆ ಅವಳು ಮಾತು ತೆಗೆದಿರುವುದು?  ಅವಳೇನಾದರೂ ಮದುವೆಯಾಗಹೊರಟಿದ್ದಾಳೆಯೇ?  ಅವಳಿಗೆ ಇಷ್ಟವಾದ ವರನೊಬ್ಬ ದೊರಕಿರಬಹುದೇ?  ಅದರ ಬಗ್ಗೆ ನನ್ನೊಡನೆ ಮಾತಾಡಲು ಇಲ್ಲಿಗೆ ಓಡಿಬಂದಿದ್ದಾಳೆಯೇ?
ಇರಲಿ, ಅದು ಒಳ್ಳೆಯದೇ.  ಮೂವತ್ತೇಳರ ಅಕ್ಕ ಮದುವೆಯಾಗುವುದೇ ಇಲ್ಲವೇನೋ ಅಂದುಕೊಂಡಿದ್ದೆ.  ಸಧ್ಯ ಈಗಲಾದರೂ ಅವಳಿಗೆ ಮದುವೆಯ ಯೋಚನೆ ಬಂತಲ್ಲ.  ಅವಳು ಹೇಳುವುದನ್ನು ಪೂರ್ತಿಯಾಗಿ ಕೇಳಿ "ಆದಷ್ಟು ಬೇಗ ಮದುವೆಯಾಗಿಬಿಡೇ ಸರಸಕ್ಕ" ಅಂದುಬಿಡಬೇಕು.  ನನ್ನೆದೆಯ ನೋವನ್ನು ಮರೆತು ಅವಳ ನಿರ್ಧಾರಕ್ಕೆ ಸಂತೋಷ ತೋರಬೇಕು.  ಸರಸಕ್ಕನ ಸಂತೋಷ ನನಗೆ ಮುಖ್ಯ.
"ಸಧ್ಯ ಈಗಲಾದರೂ ನಿನಗೆ ಮದುವೆಯಾಗೋ ಯೋಚನೆ ಬಂತಲ್ಲ."  ನೆಮ್ಮದಿಯ ಉಸಿರ್ಗರೆದೆ.  ಅಕ್ಕ ಪಕಪಕನೆ ನಕ್ಕುಬಿಟ್ಟಳು.
"ಅಯ್ಯೋ ಪೆದ್ದಾ.  ನಾನು ಮಾತಾಡ್ತಾ ಇರೋದು ನನ್ನ ಮದುವೆಯ ಬಗ್ಗೆ ಅಲ್ಲವೋ.  ನಿನ್ನ ಮದುವೆಯ ಬಗ್ಗೆ."  ನಗುತ್ತಾ ತನ್ನ ಅದೇ ಮಾಮೂಲಿ ತಗ್ಗಿದ ದನಿಯಲ್ಲಿ ಮಾತು ಮುಂದುವರೆಸಿದಳು.  "ಇದುವರೆಗೆ ನೀನು ಯಾವ ಹೆಣ್ಣಿನ ಬಗೆಗಾದರೂ ಮಾತಾಡಿದ್ದಾಗಲೀ ಬರೆದದ್ದಾಗಲೀ ಇಲ್ಲ.  ಆದ್ರೆ ಈಗ...  ನಿನ್ನ ಇ ಮೇಲ್‌ಗಳ ತುಂಬಾ ಬರೀ ಭಾಗೀರಥಿಯ ವಿಷಯವೇ!"
ನನ್ನೆದೆ ಧಸಕ್ಕೆಂದಿತು.  ಮಾತು ಹೊರಡಲಿಲ್ಲ.  ಸರಸಕ್ಕ ಮುಂದುವರೆಸಿದಳು.  "ನಿನ್ನ ಕಥೆಗಳ ಹಾಗೇ ನಿನ್ನ ಬದುಕೂ ಸಹ ನಾಯಕಿಯೊಬ್ಬಳಿಲ್ಲದೇ ಕಳೆದುಹೋಗಿಬಿಡುತ್ತದೇನೋ ಅಂತ ನಾನೆಷ್ಟು ಕೊರಗಿದ್ದೆ ಗೊತ್ತಾ?  ಈಗ ನಿನ್ನ ಭಾಗೀರಥಿ ಜಪ ನೋಡಿದ್ಮೇಲೆ ನನ್ನ ಕೊರಗು ದೂರಾಯ್ತು.  ನಿನ್ನ ಕಥೆಗೊಬ್ಬಳು ನಾಯಕಿ ಸಿಕ್ಕಿದ್ದಾಳೆ ಅಂತ ಅರ್ಥ ಆಗೋಯ್ತು.  ಸಂತೋಷ ತಡೀಲಿಕ್ಕಾಗ್ಲಿಲ್ಲ.  ಅದಕ್ಕೇ ಓಡ್ಬಂದೆ.  ಹೇಳು, ಅವ್ಳು ನಿಂಗೆ ನಿಜವಾಗ್ಲೂ ಇಷ್ಟ ಆಗಿದ್ದಾಳಾ?"
ನಾನು ಬೆವತುಹೋದೆ.  "ಸರಸಕ್ಕಾ... ಭಾಗೀರಥಿ..." ಮುಂದೆ ಹೇಳಲಾಗಲಿಲ್ಲ.
ಅಕ್ಕ ನನ್ನ ಭುಜ ತಟ್ಟಿದಳು.  "ನಂಗೊತ್ತು ನೀನು ಏನು ಹೇಳೋದಿಕ್ಕೆ ಹೊರಟಿದ್ದೀಯ ಅಂತ.  ಅವಳ್ಗೆ ಮದುವೆ ಆಗಿದೆ ಅಂತ ತಾನೆ?  ಯೆಸ್ ಅವಳೊಬ್ಳು ವಿವಾಹಿತೆ.  ಆದ್ರೆ ಆ ವಿವಾಹಕ್ಕೆ ಏನಾದ್ರೂ ಅರ್ಥ ಇದೆಯಾ?   ನೀನೇ ನಿನ್ನ ಇ ಮೇಲ್‌ಗಳ ತುಂಬ ಬರೆದ ಹಾಗೆ ಅವಳ ಭಾವನೆಗಳಿಗೆ, ಅವಳ ವ್ಯಕ್ತಿತ್ವಕ್ಕೆ, ಅವಳ ಹೆಣ್ತನಕ್ಕೆ ಅಲ್ಲಿ ಏನಾದ್ರೂ ಬೆಲೆ ಇದೆಯಾ?"  ಸರಸಕ್ಕನ ದನಿ ಏರಿತು.  ಅವಳು ಏಕಾಏಕಿ ಸ್ಫೋಟಗೊಂಡಳು.  ಯುಗಯುಗಗಳ ಮೌನವನ್ನು ಕಿತ್ತೊಗೆದು ಏಕಾಏಕಿ ಸಿಡಿದ ಜ್ವಾಲಾಮುಖಿಯ ಸ್ಫೋಟ ಅದು.  "ಇಲ್ಲಿ ಕೇಳು, ಒಬ್ಬಳು ಹೆಣ್ಣಾಗಿ ನಾನು ಈ ಮಾತು ಹೇಳ್ತಾ ಇದೀನಿ.  ತಾನು ಹೆಣ್ಣಾಗಿ ಹುಟ್ಟಿದ್ದು ಸಾರ್ಥಕವಾಯ್ತು ಅನ್ನೋ ಭಾವನೆ ಒಂದು ಹೆಣ್ಣಿನ ಹೃದಯದಲ್ಲಿ ಬರೋ ಹಾಗೆ ಯಾವನು ಮಾಡ್ತಾನೋ ಅವನೇ ನಿಜವಾದ ಗಂಡ್ಸು.  ಅಂಥವನ ಜತೆ ಬಾಳಿದರೇ ಅವಳ ಬದುಕಿಗೆ ಒಂದು ಅರ್ಥ.  ಭಾಗೀರಥಿಯ ಗಂಡ ಅಂಥಾ ಗಂಡ್ಸಲ್ಲ.  ಬೆಂಕಿ ಹಾಕು ಅವನ ಮುಖಕ್ಕೆ.  ಅವನ ಜತೆಗಿನ ಸಂಸಾರಕ್ಕೆ.  ನಿನಗವಳು ಇಷ್ಟ ಆಗಿದ್ದಾಳೆ.  ಅವಳಿಗೂ ನೀನು ಇಷ್ಟ ಆಗಿದ್ದೀಯ.  ಅವಳು ನಿನ್ನ ಜತೆ ಆಡಿದ ಮಾತುಗಳು, ನಡಕೊಂಡ ರೀತಿಯಿಂದ ಅದು ಅರ್ಥ ಆಗತ್ತೆ.  ಅವಳಿಗೆ ಒತ್ತಾಸೆಯಾಗಿ ನಿಲ್ಲು.  ಅವಳು ಡೈವೋರ್ಸ್ ತಗೋಂಡು ಆ ಹಾಳು ಬದುಕಿನಿಂದ ಹೊರಕ್ಕೆ ಬರ‍್ಲಿ.  ಅವಳನ್ನ ಮದ್ವೆ ಮಾಡ್ಕೋ.  ಅವಳ ಬದುಕಿಗೆ ಒಂದು ಅರ್ಥ ಕೊಡು.  ನಿಮ್ಮಿಬ್ಬರಿಗೆ ಒತ್ತಾಸೆಯಾಗಿ ನಾನು ನಿಲ್ತೀನಿ."  ಅವಳು ಏದುಸಿರು ಹಾಕಿದಳು.
"ಸರಸಕ್ಕಾ"  ಚೀರಿದೆ.
ಅವಳ ದನಿ ಮತ್ತಷ್ಟು ಏರಿತು.  ಜ್ವಾಲಾಮುಖಿಯ ಮತ್ತೊಂದು ಆಸ್ಫೋಟ ಅದು.  "ನೀನು ಈಗ ಹಿಂದೆಗೆಯೋದು ಬೇಡ.  ನೀನ್ಯಾಕೆ ಹೆದರ್ತೀಯ?  ನಿನ್ ಜತೆ ನಾನಿದ್ದೀನಿ ಕಣೋ.  ನಾನು ನಿನ್ನ ಅಕ್ಕ ಅಲ್ಲ.  ನಿನ್ನಮ್ಮ ಕಣೋ.  ನಾನು ನಿನ್ನಮ್ಮ.  ನಿನಗಿಷ್ಟವಾದ ಹೆಣ್ಣಿನ ಜತೆ ನಿನ್ನ ಮದುವೆ ಮಾಡೋದು ನನ್ನ ಕರ್ತವ್ಯ."  ಅವಳ ಕಣ್ಣುಗಳಲ್ಲಿ ಫಳಕ್ಕನೆ ಕಣ್ಣೀರು ಚಿಮ್ಮಿತು.  ಅದನ್ನು ನಿರ್ಲಕ್ಷಿಸಿ ನನ್ನ ಭುಜವನ್ನು ರಭಸವಾಗಿ ಅಲುಗಿಸಿದಳು.  ದನಿಯಲ್ಲಿ ಏರಿದ ಆವೇಶ.  ಸರಸಕ್ಕ ಹಿಂದಿನ ಸರಸಕ್ಕನಾಗಿರಲಿಲ್ಲ.  ದಢಕ್ಕನೆ ಎದ್ದು ನಿಂತಳು.  ದನಿ ಎತ್ತರಿಸಿ ಕೂಗಿದಳು. "ನನ್ ಮಾತನ್ನ ನಂಬು.  ನನ್ನ ಬದುಕು ಬರಡಾದ ಹಾಗೆ ನಿನ್ನ ಬದುಕು ಬರಡಾಗೋದಿಕ್ಕೆ ಬಿಡೋದಿಲ್ಲ ನಾನು..."  ಅಕ್ಕ  ಒಮ್ಮೆ ಬಿಕ್ಕಿದಳು.  ಧೊಪ್ಪನೆ ಕೆಳಗೆ ಕುಸಿದಳು.  ಬಿಕ್ಕುತ್ತಲೇ ಮಾತು ಹೊರಡಿಸಿದಳು. "ಹೌದು ಕಣೋ.  ನನ್ನ ಬದುಕು ಬ... ಬ... ಬರಡಾದ ಹಾಗೆ ನಿನ್ನ ಬದುಕು ಬರಡಾಗೋದಿಕ್ಕೆ ನಾನು... ನಾನು ಬಿಡೋದಿಲ್ಲ.  ಖಂಡಿತಾ ಬಿಡೋದಿಲ್ಲಾ..."  ಮರುಕ್ಷಣ ಸರಸಕ್ಕ ಕೈಗಳಲ್ಲಿ ಮುಖ ಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದಳು.
ನಾನು ದಂಗಾಗಿ ಅವಳನ್ನೇ ನೋಡಿದೆ...  "ಸರಸಕ್ಕ ಸರಸಕ್ಕ..."  ಮಾತುಗಳು ಗಂಟಲಲ್ಲೇ ಹೂತುಹೋದವು...  ಒಮ್ಮೆ ಬಿಕ್ಕಿದೆ.  ಅಳು ಉಮ್ಮಳಿಸಿಕೊಂಡು ಬಂತು...

--***೦೦೦***--
 ಫೆಬ್ರವರಿ ೨೦೦೫

3 comments:

 1. Amma, Sarasakka gaadhavagi manavannu thattuva, manadalluliyuva pathra chithrana .

  - Shyamala.

  ReplyDelete
  Replies
  1. Thank you, ma'am, for your heartening and encouraging remarks.

   Delete