ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, September 20, 2013

ಕಥೆ: "ಭೂಮಿ - ಹೆಣ್ಣು"





ನನ್ನನ್ನು ನೋಡಲು ಭಾನುವಾರ ಬೆಳಿಗ್ಗೆ ಬರುತ್ತಿದ್ದ ಅಮ್ಮ ಶನಿವಾರ ಹನ್ನೆರಡೂವರೆಗೆ ಕ್ಲಾಸುಗಳು ಮುಗಿಯುತ್ತಿದ್ದಂತೇ ಬಂದಾಗ ನನಗೆ ಸಂತೋಷಕ್ಕಿಂತಲೂ ಅಚ್ಚರಿಯಾಯಿತು.
ಗೆಳತಿಯರ ಜತೆ ಡಾರ್ಮಿಟರಿಯತ್ತ ಹೆಜ್ಜೆ ಹಾಕಿದವಳಿಗೆ ದೂರದಲ್ಲಿ ಮೆಯಿನ್ ಗೇಟಿನ ಬಳಿ ಗೇಟ್‌ಕೀಪರ್ ಪುಷ್ಪರಾಜ್ ಜತೆ ಮಾತಾಡುತ್ತಾ ನಿಂತಿರುವ ಹಳದೀ ಸೀರೆ ಕಪ್ಪು ರವಿಕೆಯ, ಪರಿಚಿತ ಹೊರೆಗೂದಲಿನ, ತೆಳ್ಳನೆಯ ದೇಹದ ಹೆಂಗಸು ಅಮ್ಮನಿರಬಹುದೇನೋ ಅನ್ನುವ ಅನುಮಾನ ಮೂಡುತ್ತಿದ್ದಂತೇ, "ನಿಮ್ಮಮ್ಮ ಬಂದಿರೋ ಹಾಗಿದೆ" ಎಂಬ ಜೆಸ್ಸಿಕಾಳ ಮಾತು ಎಲ್ಲ ಅನುಮಾನವನ್ನೂ ಪರಿಹರಿಸಿ "ಓಕೆ, ನೀನು ಹೋಗು" ಎಂದು ಒದರಿ ಮತ್ತೆ ಅವಳತ್ತ ತಿರುಗಿಯೂ ನೋಡದೇ, ಬೆನ್ನ ಮೇಲಿನ ಬ್ಯಾಗಿನ ಭಾರವನ್ನೂ ಲೆಕ್ಕಿಸದೇ, ಗುಂಪುಗುಂಪಾಗಿ ಮೆಯಿನ್ ಗೇಟಿನತ್ತ ಧಾವಿಸುತ್ತಿದ್ದ ವಿದ್ಯಾರ್ಥಿಗಳ ನಡುವೆ ದಾರಿ ಮಾದಿಕೊಂಡು ಓಡಿದೆ.  ಗೇಟ್ ತಲುಪಲು ತೆಗೆದುಕೊಂಡ ಒಂದು ನಿಮಿಷದಷ್ಟು ಅವಧಿಯಲ್ಲಿ ಮನಸ್ಸಿಗೆ ಬಂದದ್ದು ಅಮ್ಮ ಇದ್ದಕ್ಕಿದ್ದಂತೇ ಬಂದದ್ದೇಕೆ ಎಂಬ ಮರಕ್ಕೆ ಸುತ್ತಿಕೊಂಡ ನೂರೊಂದು ಬಳ್ಳಿ ಬಂದಳಿಕೆಗಳು.  ಅವುಗಳ ಹಿಂದೆಯೇ ಬಂದದ್ದು ನಾನು, ಜೆಸ್ಸಿಕಾ ಮತ್ತು ಆರೋಗ್ಯಮೇರಿ ಮಾಡಿದ ಗ್ರೀನ್ ಎನರ್ಜಿ ಬಗೆಗಿನ ಪ್ರಾಜೆಕ್ಟ್ ನಿನ್ನೆ ರೀಜನಲ್ಸ್‌ನಲ್ಲಿ ಸೆಲೆಕ್ಟ್ ಆದದ್ದರ ಬಗ್ಗೆ ಅಮ್ಮನಿಗೆ ಹೇಳಬೇಕೆಂಬ ತುಡಿತ.  ಕೇಳಿದರೆ ಅವಳಿಗೆ ಖುಷಿಯಾಗುತ್ತದೆ.  ಸ್ಟೇಟ್ ಲೆವೆಲ್ ಸೆಲೆಕ್ಷನ್ ಬಗ್ಗೆಯೂ ಅವಳಿಗೆ ಹೇಳಬೇಕು.  ಅದಿರುವುದು ಬೆಂಗಳೂರಿನಲ್ಲಿ, ಮುಂದಿನ ಬುಧವಾರ ಅಲ್ಲಿಗೆ ಹೋಗಬೇಕು ಅಂತಲೂ ಹೇಳಬೇಕು.  ಅದು ಕೇಳಿದರೆ ಅಮ್ಮನಿಗೆ ಭಯವಾಗಬಹುದು.  ‘ಬೆಂಗಳೂರಿಗೆ!  ಅಲ್ಲಿಗೆ ಹೋಗಲೇಬೇಕಾ?  ನೀನೇ ಹೋಗಬೇಕಾ?  ಬೇರೆ ಇಯಾರನ್ನಾದರೂ ಕಳಿಸೋಕೆ ಆಗಲ್ಲವಾ?  ನಾನೂ ಬರಲಾ?... ಆವತ್ತೊಂದಿನಕ್ಕೆ ರಜಾ ಸಿಗುತ್ತದೇನೋ ನೋಡುತ್ತೇನೆ’ ಎಂದು ಅಮ್ಮ ಮುಖ ಬಾಡಿಸಿಕೊಂಡು ತನಗಷ್ಟಕ್ಕೇ ಅನ್ನುವಂತೆ ಹೇಳುವುದು ಖಂಡಿತ.  ಪಾಪ, ಅಮ್ಮ.  ಅವಳಿಗೆ ಧೈರ್ಯ ಹೇಳಬೇಕು.  ಹೆದರುವುದಕ್ಕೇನೂ ಇಲ್ಲ, ನಮ್ಮ ಫಿಸಿಕ್ಸ್ ಮಿಸ್ ಜತೆಗೆ ಬರುತ್ತಾರೆ ಎಂದು ಹೇಳಬೇಕು.  ನೀನು ರಜಾ ಹಾಕುವುದೇನೂ ಬೇಡ,  ನಮ್ಮ ಪ್ರಾಜೆಕ್ಟ್ ನ್ಯಾಷನಲ್ಸ್‌ಗೆ ಸೆಲೆಕ್ಟ್ ಆಗಲಿ ಅಂತ ಬ್ಲೆಸ್ ಮಾಡು, ನಮಗೋಸ್ಕರ ಜೀಸಸ್‌ನಲ್ಲಿ ಪ್ರೇ ಮಾಡು, ಅಷ್ಟು ಸಾಕು ಅಂತ ಹೇಳಬೇಕು.
ನಾನು ಗೇಟ್ ತಲುಪುವ ಹೊತ್ತಿಗೆ ಅಮ್ಮ ಬಾಗಿ ವಿಸಿಟಸ್ ರಿಜಿಸ್ಟರಿನಲ್ಲಿ ಬರೆಯುತ್ತಿದ್ದಳು.  ಹಾಗೆ ಬಾಗಿ ಏನಾದರೂ ಬರೆಯುವಾಗ ಅಮ್ಮನ ಕೆಳತುಟಿ ಚೂರೇ ಮುಂದಕ್ಕೆ ಚಾಚಿಕೊಳ್ಳುತ್ತದೆ.  ಅಮ್ಮ ಒಂಥರಾ ಚಂದ ಕಾಣುತ್ತಾಳೆ.
ಅವಳನ್ನು ಸಮೀಪಿಸಿ ಏದುತ್ತಾ ನಿಂತೆ.  ತಲೆಯೆತ್ತಿ ನೋಡಿದ ಅಮ್ಮ ಸಣ್ಣಗೆ ಮುಗುಳ್ನಕ್ಕು ಮತ್ತೆ ಬಾಗಿ ರಿಜಿಸ್ಟನಲ್ಲಿ ಬರೆದಿದ್ದನ್ನೇನೋ ಹೊಡೆದುಹಾಕಿ ಮತ್ತೆ ಬರೆದು ಸೈನ್ ಮಾಡಿ ಅದನ್ನು ಪಕ್ಕದಲ್ಲಿದ್ದ ಮತ್ಯಾರೋ ಹೆಂಗಸಿನತ್ತ ತಳ್ಳಿ ನನ್ನ ಕಡೆ ತಿರುಗಿದಳು.  "ಕ್ಲಾಸೆಲ್ಲಾ ಆಯ್ತಾ" ಎನ್ನುತ್ತ ನನ್ನ ಭುಜದ ಮೇಲೆ ಕೈಯಿಟ್ಟು ನನ್ನನ್ನು ತನ್ನೆಡೆಗೆ ಎಳೆದುಕೊಂಡಳು.  "ಹ್ಞೂಂ" ಎನ್ನುತ್ತಾ ಅವಳ ಕಂಕುಳಿಗೆ ತಲೆ ಉಜ್ಜಿದೆ.  "ಬ್ಯಾಗನ್ನೂ ಎತ್ಕೊಂಡೇ ಬಂದ್ಬಿಟ್ಟಿದ್ದೀಯ" ಎನ್ನುತ್ತಾ ಅಮ್ಮ ನನ್ನ ಬೆನ್ನಿನ ಮೇಲಿದ್ದ ಪುಸ್ತಕದ ಚೀಲಕ್ಕೆ ಕೈಹಾಕಿದಳು.  "ನಾನೇ ಹಿಡ್ಕೋತೀನಿ ಬಿಡು.  ಬೇಕಾದ್ರೆ ನಿನ್ನ ಬ್ಯಾಗನ್ನೂ ಕೊಡು, ಹಿಡ್ಕೋತೀನಿ" ಅಂದೆ.  ಅಮ್ಮ ನಕ್ಕಳು.  "ಇದೇನು, ಈವತ್ತೇ ಬಂದ್ಬಿಟ್ಟಿದ್ದೀಯ?" ಅಂದೆ.  ಅಮ್ಮ ಮಾತಾಡಲಿಲ್ಲ.  ತಲೆಯೆತ್ತಿ ಅವಳನ್ನೇ ನೋಡಿದೆ.
ಆ ಮೈಸೂರು - ಕೊಳ್ಳೇಗಾಲದ ಕೆಟ್ಟರಸ್ತೆಯಲ್ಲಿ ಎರಡುಗಂಟೆ ಬಸ್ಸಿನಲ್ಲಿ ಕೂತು ಬಂದಿದ್ದ ಅಮ್ಮನ ತಲೆಗೂದಲು ಕೆದರಿಹೋಗಿತ್ತು.  ಮುಖದ ತುಂಬಾ ಬೆವರು.  "ಮುಖ ತೊಳ್ಕೋತೀಯ ಅಮ್ಮ?" ಅಂದೆ.  "ಪರವಾಗಿಲ್ಲ ಬಿಡು" ಅಂದಳು.  ನಾನು ಮತ್ತೆ ಬಾಯಿ ತೆರೆಯುವ ಮೊದಲೇ "ನಿಂದಿನ್ನೂ ಲಂಚ್ ಆಗಿಲ್ಲ ಅಲ್ಲವಾ?  ಪರ್ಮಿಷನ್ ತಗೋತೀನಿ, ಹೊರಗೆ ಹೋಗೋಣ.  ಹೋಟೆಲ್‌ನಲ್ಲಿ ಊಟ ಮಾಡೋಣ" ಅಂದಳು.  "ಗುಡ್ ಐಡಿಯಾ!" ಎನ್ನುತ್ತಾ ಅಮ್ಮನ ಬೆನ್ನಿನ ಮೇಲೆ ಮೆಲ್ಲಗೆ ಬಡಿದೆ.  ಅಮ್ಮ ನನ್ನ ತಲೆಗೂದಲು ಸವರಿದಳು.  "ಕೂದಲೆಲ್ಲಾ ಕೆದರಿಹೋಗಿದೆಯಲ್ಲ" ಎನ್ನುತ್ತಾ ಬೆರಳುಗಳಿಂದಲೇ ನನ್ನ ಕೂದಲನ್ನು ಒಪ್ಪ ಮಾಡಲು ನೋಡಿದಳು.  "ನನ್ನ ಕೂದಲು ಸರಿಯಾಗೇ ಇದೆ.  ನಿಂದೇ ಕೆದರಿಹೋಗಿರೋದು" ಅಂದೆ.  ಅಮ್ಮ ಮತ್ತೊಮ್ಮೆ ನಕ್ಕಳು.  ಇಬ್ಬರೂ ವಾರ್ಡನ್ ಛೇಂಬನತ್ತ ನಡೆದೆವು.
ವಾರ್ಡನ್ ಸಿಸ್ಟರ್ ಕ್ಯಾಥರೀನ್ ಚೇಂಬನಲ್ಲಿರಲಿಲ್ಲ.  ಈಗ ತಾನೆ ಎಲ್ಲೋ ಹೋದರು ಅಂತ ಗೊತ್ತಾಯಿತು.  ಕಾಯೋಣ ಅಂದುಕೊಂಡು ಡಾರ್ಮಿಟರಿಯತ್ತ ನಡೆದೆವು.
ವಿಸಿಟಸ್ ರೂಮಿನಲ್ಲಿ ತುಂಬಾ ಜನ ಇದ್ದರು.  ಮಾರ್ಗರೆಟ್, ಡೊರೋಥಿ, ಕರುಣಾ ತಂತಮ್ಮ ಅಪ್ಪ ಅಮ್ಮಂದಿರೊಡನೆ ಮಾತಾಡಿಕೊಂಡು ಕುಲುಕುಲು ನಗುತ್ತಿದ್ದರು.  ಮಾತುಗಳ, ನಗೆಗಳ, ಯಾವುಯಾವುದೋ ತಿಂಡಿಗಳ ಪರಿಮಳಗಳು ಅಲ್ಲೆಲ್ಲಾ ತುಂಬಿಕೊಂಡಿದ್ದವು.  ಒಳಗಿಟ್ಟಿದ್ದ ಕಾಲುಗಳನ್ನು ತಪ್ಪು ಮಾಡಿದಂತೆ ಹೊರತೆಗೆದೆವು.  ಹೊರಗೆ ಮರಗಳ ಕೆಳಗಿನ ಸಿಮೆಂಟ್ ಬೆಂಚುಗಳಲ್ಲಿ ಒಂದೆರಡು ಖಾಲಿ ಇದ್ದವು.  ಆದ್ಯಾಕೋ ಅಮ್ಮ ಅಲ್ಲಿ ಕೂರಲು ಇಷ್ಟಪಡಲಿಲ್ಲ.  "ಅಲ್ಲಿ ಹೋಗೋಣ" ಎನ್ನುತ್ತಾ ಅನತೀ ದೂರದ ದಾಳಿಂಬೆ ಮರದತ್ತ ಕೈಮಾಡಿ ಅತ್ತ ನಡೆದಳು.
ಆ ಕುಳ್ಳ ದಾಳಿಂಬೆ ಮರದ ಕೆಳಗೆ ಮಡುಗಟ್ಟಿದ್ದ ನೆರಳಿನಲ್ಲಿ ಇಬ್ಬರೂ ಕುಳಿತೆವು.  "ನಿನಗೇ ಅಂತ ತಂದೆ" ಎನ್ನುತ್ತಾ ಅಮ್ಮ ತನ್ನ ಹೆಗಲಲ್ಲಿದ್ದ ಬ್ಯಾಗನ್ನು ಕೆಳಗಿಟ್ಟು ಜಿಪ್ ಎಳೆದಳು.  ಕಿತ್ತಳೆ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲ ಹೊರತೆಗೆದು ಒಂದನ್ನು ಎತ್ತಿಕೊಂಡು ಸಿಪ್ಪೆ ಬಿಡಿಸತೊಡಗಿದಳು.  "ಏನಮ್ಮ, ಈವತ್ತೇ ಬಂದ್ಬಿಟ್ಟಿದೀಯ?" ಎಂದು ಮತ್ತೆ ಕೇಳುತ್ತಲೇ ಅವಳು ಬಿಡಿಸಿ ಕೊಟ್ಟ ತೊಳೆಗಳಿಗೆ ಕೈಚಾಚಿದೆ.
ಅಮ್ಮ ತಲೆ ತಗ್ಗಿಸಿದಳು.  "ಬೆಳಿಗ್ಗೇನೇ ಬಂದೆ.  ಸ್ವಲ್ಪ ಕೆಲಸ ಇತ್ತು."  ಮೆಲ್ಲಗೆ ಹೇಳಿ ಮತ್ತೊಂದು ಹಣ್ಣನ್ನು ಕೈಗೆತ್ತಿಕೊಂಡಳು.  "ಸಾಕು ಸಾಕು.  ಆಮೇಲೆ ತಿಂತೀನಿ" ಅಂದೆ.  "ಹಣ್ಣು ತಿನ್ನೋಕೇನು, ಬರೀ ನೀರು ಅದರಲ್ಲಿರೋದು" ಎನ್ನುತ್ತಾ ಸಿಪ್ಪೆ ಬಿಡಿಸತೊಡಗಿದಳು.
"ಸಾಯಂಕಾಲದವರೆಗೂ ಇಲ್ಲೇ ಇರ್ತೀಯ?  ನನ್ನನ್ನ ಈವತ್ತು ಸಿನಿಮಾಗೆ ಕರಕೊಂಡು ಹೋಗ್ತೀಯ?  ಥ್ರೀ ಈಡಿಯಟ್ಸ್ ತುಂಬಾ ಚೆನ್ನಾಗಿದೆ ಅಂತ ನನ್ನ ಕ್ಲಾಸ್‌ಮೇಟ್ಸೆಲ್ಲಾ ಹೇಳ್ತಾರೆ" ಅಂದೆ.  ಅಮ್ಮ ಉತ್ತರಿಸಲಿಲ್ಲ.  ತಲೆ ತಗ್ಗಿಸಿದಳು.  "ಯಾಕೆ, ಬೇಗ ಮನೆಗೆ ಹೋಗ್ಬೇಕಾ?" ಅಂದೆ.  ಅಮ್ಮ ಅದಕ್ಕೂ ಉತ್ತರಿಸಲಿಲ್ಲ.  "ದುಡ್ಡು ಕಮ್ಮಿ ಇದೆಯಾ?" ಅಂದೆ.  "ಇಲ್ಲ, ಹಂಗೇನಿಲ್ಲ" ಅಂದಳು ಥಟ್ಟನೆ.  "ಮತ್ತೆ?" ಅಂದೆ.  ಅಮ್ಮ ಮಾತಾಡಲಿಲ್ಲ.  "ಯಾಕೆ ಮಾತಾಡ್ತಾನೇ ಇಲ್ಲ?."  ಹಣ್ಣು ಬಿಡಿಸುತ್ತಿದ್ದ ಅವಳ ಕೈ ಹಿಡಿದೆಳೆದೆ.  ಜಾರಿ ಕೆಳಗೆ ಬೀಳತೊಡಗಿದ ಹಣ್ಣನ್ನು ಅಮ್ಮ ಗಕ್ಕನೆ ಹಿಡಿದುಕೊಂಡಳು.  "ಮಣ್ಣಿಗೆ ಬಿದ್ದುಹೋಗ್ತಿತ್ತು ನೋಡು" ಅಂದಳು.  "ಸಾರೀ" ಎಂದು ಪೆಚ್ಚುದನಿ ಹೊರಡಿಸಿದೆ.  ಅಮ್ಮ ಮತ್ತೆ ಮೌನವಾದಳು.  ಅವಳನ್ನೇ ನೋಡುತ್ತಾ ಕುಳಿತೆ.
"ನಿಂಗೊಂದು ವಿಷಯ ಹೇಳಬೇಕು" ಅಂದಳು ಅಮ್ಮ ತಲೆಯೆತ್ತದೇ.  "ಹೇಳು" ಅಂದೆ.  ಅಮ್ಮ ಮತ್ತೆ ಮೌನವಾದಳು.  "ಹೇಳೂ."  ಕೂಗಿದೆ.  ಈಗ ಅವಳ ಕೈ ಅಲುಗಿಸಲು ಹೋಗಲಿಲ್ಲ.
"ಆವತ್ತು ನಿಂಗೆ ಒಬ್ರು ಅಂಕಲ್ ಬಗ್ಗೆ ಹೇಳಿದ್ದನಲ್ಲ, ನಮ್ಮ ಆಫೀಸ್‌ನಲ್ಲೇ ಇರೋರು.  ಶಿವಮೂರ್ತಿ ಅಂತ."  ತಲೆ ತಗ್ಗಿಸಿದಂತೇ ಬಿಡಿಸಿದ ತೊಳೆಗಳನ್ನು ನನ್ನತ್ತ ಚಾಚಿದಳು ಅಮ್ಮ.
ಆ ಅಂಕಲ್ ಬಗ್ಗೆ ಅಮ್ಮ ಎರಡು ಮೂರು ಸಲ ಹೇಳಿದ್ದಳು.  ಅವರೂ ಅಮ್ಮನ ಹಾಗೇ ಕ್ಲರ್ಕು.  ಅವರು ತುಂಬಾ ಒಳ್ಳೆಯವರಂತೆ.
"ಹ್ಞೂಂ, ಗೊತ್ತು."  ತೊಳೆಗಳನ್ನು ಎರಡೂ ಬೊಗಸೆಗಳಿಗೆ ತುಂಬಿಕೊಂಡೆ.
"ಅವರಿಗೆ ಇಬ್ಬರು ಮಕ್ಕಳು ಅಂತ ಹೇಳಿದ್ದೆನಾ?"
ನೆನಪಾಗಲಿಲ್ಲ.  ಮೂರು ಬೀಜಗಳನ್ನು ಒಟ್ಟಿಗೇ ದೂರಕ್ಕೆ ಹಾರಿಸುತ್ತಾ "ಇಲ್ಲ" ಅಂದೆ.
"ಗಂಡು ಮಕ್ಕಳು.  ಇಬ್ರೂ ನಿಂಗಿಂತ ಚಿಕ್ಕೋರು.  ಒಬ್ಬ ಐದನೇ ಕ್ಲಾಸು, ಇನ್ನೊಬ್ಬ ಮೂರು."  ಅದೆತ್ತಲೋ ನೋಡುತ್ತಾ ಹೇಳಿದಳು ಅಮ್ಮ.
"ಸರಿ, ಅದಕ್ಕೇನು?"
"ಆ ಅಂಕಲ್‌ಗೆ ಹೆಂಡತಿ ಇಲ್ಲ, ಗೊತ್ತಾ?"  ಈಗ ಅಮ್ಮ ನನ್ನನ್ನೇ ನೇರವಾಗಿ ನೋಡಿದಳು.
"ಛೆ, ಪಾಪ."  ಮತ್ತೊಂದು ಬೀಜವನ್ನು ಮೇಲಕ್ಕೆ ಹಾರಿಸಿದೆ.
"ಹೆರಿಗೇನಲ್ಲಿ ಹೋಗಿಬಿಟ್ಟದ್ದು ಅವರು.  ಮಗೂನೂ ಹೋಗಿಬಿಡ್ತಂತೆ.  ಐದುವರ್ಷ ಆಯ್ತಂತೆ.  ನಮ್ಮ ಆಫೀಸಿಗೆ ಬರೋದಕ್ಕೂ ಮೊದ್ಲೇ."  ಕುಪ್ಪಳಿಸಿಕೊಂಡು ನನ್ನ ಹತ್ತಿರಕ್ಕೇ ಬರುತ್ತಿದ್ದ ಕಾಗೆಯನ್ನು "ಹುಷ್" ಎಂದು ಓಡಿಸಿದಳು ಅಮ್ಮ.  "ಆ ಅಂಕಲ್ ನನ್ನನ್ನ ಒಂದು ಮಾತು ಕೇಳಿದ್ರು ನಿನ್ನೆ" ಅಂದಳು.  ಅವಳ ದನಿ ನಡುಗಿದಂತೆ ಕೇಳಿಸಿ ಸರಕ್ಕನೆ ತಲೆಯೆತ್ತಿದೆ.
ಅಮ್ಮ ತಲೆಯನ್ನು ಮತ್ತೂ ಬಾಗಿಸಿದಳು.  "ನನ್ನನ್ನ ಮದ್ವೆ ಮಾಡ್ಕೋತೀಯಾ? ಅಂದ್ರು."  ಬರಲೋ ಬೇಡವೋ ಎನ್ನುವಂತೆ ಮಾತು ಹೊರಬಂದಿತ್ತು.
ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ.  ಸುಮ್ಮನೆ "ಹೌದಾ?" ಎಂದು ದನಿ ಹೊರಡಿಸಿದೆ.  "ಹ್ಞೂಂ" ಅಂದಳು ಅಮ್ಮ.  ಅವಳು ನನ್ನನ್ನೇ ನೇರವಾಗಿ ನೋಡುತ್ತಿದ್ದಳು.  ಅವಳೊಂದಿಗೆ ಏನಾದರೂ ಮಾತಾಡಬೇಕೆನಿಸಿತು.  "ನೀನು ಏನಂದೆ ಅಮ್ಮ?" ಅಂದೆ.
"ಅದೇ ಗೊತ್ತಾಗ್ಲಿಲ್ಲ.  ನಿನ್ನನ್ನ ಕೇಳೋಣ ಅಂತ ಬಂದೆ.  ನೀನು ಏನು ಹೇಳ್ತೀಯ?"  ಅಮ್ಮ ಆತುರಾತುರವಾಗಿ ಕೇಳಿದಳು.  ಛಕ್ಕನೆ ದನಿ ತಗ್ಗಿಸಿದಳು.  "ಅವರನ್ನ ಮದುವೆ ಮಾಡಿಕೊಳ್ಲಾ?"  ಪಿಸುಗಿದಳು.
ತಿಳಿಯಾಗುತ್ತಿದ್ದ ನನ್ನ ತಲೆ ಮತ್ತೆ ಗೋಜಲುಗಟ್ಟಿತು.  ಏನೂ ತೋಚದೆ ಅವಳ ಮುಖವನ್ನೇ ದಿಟ್ಟಿಸಿದೆ.  ಬಾಯಲ್ಲಿ ಸಂಗ್ರಹಗೊಂಡಿದ್ದ ಐದಾರು ಕಿತ್ತಳೆ ಬೀಜಗಳನ್ನು ಉಗಿಯಲು ಮನಸ್ಸಾಗದೇ ನಾಲಿಗೆಯಲ್ಲಿ ಹೊರಳಾಡಿಸತೊಡಗಿದೆ.
"ನಿಮ್ಮಪ್ಪ ಹೋಗಿ ಹನ್ನೆರಡು ವರ್ಷ ಆಯ್ತು ಅಲ್ವಾ?"  ತನಗಷ್ಟಕ್ಕೇ ಹೇಳಿಕೊಂಡಳು ಅಮ್ಮ.
ಅಪ್ಪನನ್ನು ನಾನು ಫೋಟೋದಲ್ಲಿ ನೋಡಿದ್ದೇನೆ.  ಆತ ಸತ್ತಾಗ ನನಗೆ ಎರಡೂ ತುಂಬಿರಲಿಲ್ಲವಂತೆ.  ‘ನೀನು ನಿಮ್ಮಪ್ಪನ ಹಾಗೇ.  ಅಗಲ ಹಣೆ... ಚೂರು ಕಪ್ಪು" ಎಂದು ಅಮ್ಮ ನೂರೊಂದು ಸಲ ಹೇಳಿದ್ದಾಳೆ.  ಬೇಸಿಗೆ ರಜೆಯಲ್ಲಿ ಮನೆಗೆ ಹೋದಾಗಲೆಲ್ಲಾ ಕಣ್ಣಿಗೆ ಬೀಳುವ ಅಪ್ಪನ ಫೋಟೋಗಳನ್ನು ನೋಡಿದರೆ ಅವಳ ಮಾತು ಸರಿಯೆನಿಸುತ್ತದೆ.
ಅಪ್ಪ ಅಮ್ಮನದು ಪ್ರೇಮವಿವಾಹವಂತೆ.  ಅಪ್ಪ ಹೈಸ್ಕೂಲಿನಲ್ಲಿ ಮೇಷ್ಟ್ರು.  ಕೊಳ್ಳೇಗಾಲದ ಕಡೆಯವನಂತೆ.  ಮೈಸೂರಿನಲ್ಲಿ ಅಮ್ಮನ ಪಕ್ಕದ ಮನೆಯಲ್ಲೇ ಬಾಡಿಗೆಯಲ್ಲಿದ್ದನಂತೆ.  ಅಪ್ಪನಿಗೆ ಕೊಳ್ಳೇಗಾಲಕ್ಕೇ ಟ್ರ್ಯಾನ್ಸ್‌ಫರ್ ಆದಾಗ ಅಮ್ಮನನ್ನೂ ಕರೆದುಕೊಂಡು ಹೋಗಿಬಿಟ್ಟನಂತೆ.  ‘ತಮ್ಮ ಲಗೇಜ್ ಜತೆ ನನ್ನನ್ನೂ ಒಂದು ಮೂಟೆ ಮಾಡಿ ಯಾರ ಕಣ್ಣಿಗೂ ಕಾಣದ ಹಾಗೆ ರಾತ್ರೋರಾತ್ರಿ ಕೊಳ್ಳೇಗಾಲಕ್ಕೆ ಸಾಗಿಸಿಬಿಟ್ರು’ ಎಂದು ಅಮ್ಮ ಲೆಕ್ಕವಿಲ್ಲದಷ್ಟು ಸಲ ಹೇಳಿದ್ದಾಳೆ.  ಹಾಗೆ ಹೇಳುವಾಗೆಲ್ಲಾ ಅವಳ ಕಣ್ಣುಗಳು ಅರೆಮುಚ್ಚಿಕೊಳ್ಳುತ್ತವೆ.  ತುಟಿಗಳ ಮೇಲೆ ತೆಳುನಗೆ.  ಅಮ್ಮ ಪುಟ್ಟ ಹುಡುಗಿಯ ಹಾಗೆ ಕಾಣುತ್ತಾಳೆ.  ಅದನ್ನೆಲ್ಲಾ ನೆನಸಿಕೊಳ್ಳುತ್ತಿದ್ದಂತೆ ನನಗೂ ನಗು ಬಂತು.  ಅದು ಆರುತ್ತಿದ್ದಂತೇ ಅಮ್ಮ ಬಿಕ್ಕುವ ಶಬ್ಧ ಕೇಳಿ ಬೆಚ್ಚಿದೆ.
ಅಮ್ಮ ಮುಖ ಮುಚ್ಚಿಕೊಂಡು ಸದ್ದಿಲ್ಲದೇ ಅಳುತ್ತಿದ್ದಳು.
ಬಾಯಲ್ಲಿದ್ದ ಬೀಜಗಳನ್ನು ಪಕ್ಕಕ್ಕೆ ಉಗಿದೆ.  ಮುಂದಕ್ಕೆ ಬಾಗಿ ಅಮ್ಮನ ತೊಡೆಯ ಮೇಲೆ ಎರಡೂ ಕೈಗಳನ್ನು ಊರಿದೆ.  "ಯಾಕಮ್ಮಾ ಅಳ್ತಿದೀಯ?  ಅಳ್ಬೇಡ, ಸುಮ್ನಿರಮ್ಮ" ಎಂದು ಗೋಗರೆದೆ.  ಯಾರಾದರೂ ಇತ್ತ ನೋಡುತ್ತಿದ್ದಾರೇನೋ ಎಂದು ಸುತ್ತಲೂ ಕಣ್ಣಾಡಿಸಿದೆ.  ಇಲ್ಲ, ನಮ್ಮನ್ನು ಯಾರೂ ನೋಡುತ್ತಿರಲಿಲ್ಲ.  ಸಮಾಧಾನವಾಯಿತು.  "ಅಳ್ಬೇಡಮ್ಮ" ಅಂದೆ ಮತ್ತೊಮ್ಮೆ.
ಅಮ್ಮ ಮುಖ ಮುಚ್ಚಿದ್ದ ಕೈ ತೆಗೆದಳು.  ಆದರೆ ಬಿಕ್ಕುವಿಕೆ ನಿಂತಿರಲಿಲ್ಲ.  "ನಂಗೆ ಇಪ್ಪತ್ತೆರಡು ವರ್ಷ ಆವಾಗ.  ಆ ದಿನದಿಂದ ನಾನು ಎಷ್ಟು ಕಷ್ಟ ಅನುಭವಿಸಿದ್ದೀನಿ ಗೊತ್ತಾ?  ಈ ಪಾಪಿ ಬಾಳಿನಲ್ಲಿ ಅದೆಷ್ಟು ನರಳಿದ್ದೀನಿ ಅಂತ ನಂಗೊಬ್ಬಳಿಗೆ ಮಾತ್ರ ಗೊತ್ತು."  ಹೇಳುತ್ತಾ ಒಮ್ಮೆ ಜೋರಾಗಿ ಬಿಕ್ಕಿದಳು.  ಮರುಕ್ಷಣ "ಊಂ ಊಂ" ಎನ್ನುತ್ತ ಬಿಕ್ಕಿಬಿಕ್ಕಿ ಅಳತೊಡಗಿದಳು.
ನನಗೆ ಗಾಬರಿ.  "ಅಳ್ಬೇಡಮ್ಮ" ಎನ್ನುತ್ತಿದ್ದಂತೇ ಅಮ್ಮ ನನ್ನನ್ನು ತಬ್ಬಿಕೊಂಡಳು.  "ಒಂಟಿ ಹೆಂಗ್ಸು ಈ ಭೂಮಿ ಮೇಲಿರಬಾರದು.  ಮಂದೀ ಕೆಟ್ಟೋವ್ರು.  ನೀ ಇದ್ದದ್ದಕ್ಕೆ ನಾನೂ ಇರಬೇಕಾಯ್ತು.  ಇಲ್ಲಾಂದ್ರೆ ಎಂದೋ ಕಾವೇರಿ ಪಾಲಾಗ್ತಿದ್ದೆ."  ಅಮ್ಮ ಜೋರಾಗಿ ಅತ್ತಳು.  ನನಗೂ ಅಳು ಬಂತು.  ತಡೆದುಕೊಂಡು ಮತ್ತೊಮ್ಮೆ ಸುತ್ತಲೂ ನೋಡಿದೆ.  ಸಿಸ್ಟರ್ ಕ್ಯಾಥರೀನ್ ತಮ್ಮ ಛೇಂಬನತ್ತ ನಡೆದುಹೋಗುವುದು ಕಂಡಿತು.  ಅಮ್ಮನ ಭುಜವನ್ನು ರಭಸವಾಗಿ ಅಲುಗಿಸಿದೆ.  "ಅಮ್ಮ ಅಮ್ಮ, ವಾರ್ಡನ್ ಹೋಗ್ತಿದಾರೆ ನೋಡಮ್ಮ" ಅಂದೆ.
ಅಮ್ಮ ತಕ್ಷಣ ಅಳು ನಿಲ್ಲಿಸಿದಳು.  ಸೆರಗಿನಿಂದ ಆತುರಾತುರವಾಗಿ ಮುಖ ಒರೆಸಿಕೊಂಡು "ನಡಿ ನಡೀ" ಎನ್ನುತ್ತಾ ಧಡಕ್ಕನೆ ಮೇಲೆದ್ದಳು.  ನನಗೆ ನಿರಾಳವೆನಿಸಿತು.  ಪುಸ್ತಕದ ಚೀಲವನ್ನು ಸುಂಯ್ಯನೆ ಮೇಲೆತ್ತಿ ಬೆನ್ನಿಗೆ ಸೇರಿಸಿದೆ.  ನಾನೇ ಮುಂದಾಗಿ ಓಡಿಹೋಗಿ ಸಿಸ್ಟರ್ ಕ್ಯಾಥರೀನ್‌ರ ಮುಂದೆ ನಿಂತು ಏದುತ್ತಾ "ಸ್ತೋತ್ರ ಸಿಸ್ಟರ್" ಅಂದೆ.  "ಸ್ತೋತ್ರ" ಅಂದರು ಮೆಲ್ಲಗೆ.  ‘ಏನು?’ ಅನ್ನುವಂತೆ ನನ್ನನ್ನೇ ನೇರವಾಗಿ ನೋಡಿದರು.  ನಾನು ಅಮ್ಮನ ಮುಖ ನೋಡಿದೆ.
ಅಮ್ಮನ ಮಾತು ಕೇಳಿದ ಸಿಸ್ಟರ್ ಕ್ಯಾಥರೀನ್ ತಲೆ ಅಲುಗಿಸಿಬಿಟ್ಟರು.  ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಾ "ಚಿಕಾಗೋದಿಂದ ಬಂದಿರೋ ರೆವರೆಂಡ್ ಎಡ್ಮಂಡ್ ಗಿಲಾರ್ಡ್ ಈವತ್ತು ಲಂಚ್ ಆದಮೇಲೆ ಸೀನಿಯರ್ ಸ್ಟೂಡೆಂಟ್ಸ್ ಜತೆ ಇಂಟಯಾಕ್ಟ್ ಮಾಡ್ತಾರೆ ಅಂತ ಬೆಳಿಗ್ಗೆ ಮಾಸ್‌ನಲ್ಲಿ ಅನೌನ್ಸ್ ಮಾಡಿದ್ದು ಇಷ್ಟು ಬೇಗ ಮರೆತುಹೋಯ್ತಾ?" ಅಂದರು.
ನನಗದು ಮರೆತೇಹೋಗಿತ್ತು.  ತಲೆತಗ್ಗಿಸಿದೆ.  ಹೂಗೊಂಚಲುಗಳನ್ನು ಎದೆಗವಚಿಕೊಂಡು ಪ್ರಿನ್ಸಿಪಾಲರ ಆಫೀಸಿನತ್ತ ಹೋಗುತ್ತಿದ್ದ ಬೆರಿಲ್‌ಳನ್ನು ಕೂಗಿ ಕರೆದು ಅದೆಲ್ಲವನ್ನೂ ತಮ್ಮ ಛೇಂಬನಲ್ಲಿಡುವಂತೆ ಆಜ್ಞಾಪಿಸಿ ಅಮ್ಮನತ್ತ ತಿರುಗಿದ ಅವರು "ಓಕೆ, ಕರಕೊಂಡು ಹೋಗಿ.  ಇಲ್ಲೇ ಎಲ್ಲಾದ್ರೂ ಹತ್ತಿರದಲ್ಲಿ ಏನಾದ್ರೂ ತಿನ್ನಿಸಿಬಿಟ್ಟು ತಕ್ಷಣ ವಾಪಸ್ ಕರಕೊಂಡು ಬಂದ್ಬಿಡಿ" ಅಂದರು.  ನನ್ನತ್ತ ತಿರುಗಿ "ವನ್ ಫಾರ್ಟಿಫೈವ್‌ಗೆ ಸರಿಯಾಗಿ ಚಾಪೆಲ್‌ನಲ್ಲಿರಬೇಕು, ಗೊತ್ತಾಯ್ತಾ?" ಅಂದರು.  ಸೋತು ತಲೆಯಾಡಿಸಿದೆ.
ಗಡಿಯಾರ ನೋಡಿದ ಅಮ್ಮನ ಮುಖದಲ್ಲಿ ಗಾಬರಿ ಕಂಡಿತು.  "ಒಂದುಗಂಟೆ ಆಗೇಬಿಡ್ತು ನೋಡು.  ಓಡು, ಡಾರ್ಮಿಟರೀಲಿ ಬ್ಯಾಗ್ ಇಟ್ಟು ಬಾ.  ಇಲ್ಲೇ ಹತ್ತಿರದಲ್ಲಿ ಯಾವ್ದಾದ್ರೂ ಹೋಟೆಲ್ ಇದೆಯಾ ನೋಡೋಣ" ಅಂದಳು.  ಡಾರ್ಮಿಟರಿಯತ್ತ ಓಡಿದೆ.  ಹಿಂದಕ್ಕೆ ಬಂದಾಗ ಅಮ್ಮ ಗೇಟಿನ ಬಳಿ ಸೆಕ್ಯೂರಿಟಿ ಕ್ಯಾಬಿನ್ ಬಳಿ ನಿಂತು ಸೆಲ್‌ಫೋನಿನಲ್ಲಿ ಯಾರೊಂದಿಗೋ ಮಾತಾಡುತ್ತಿದ್ದಳು.  "...ಇಲ್ಲ, ಆಗಲ್ಲ... ಪರ್ಮಿಷನ್ ಸಿಗ್ಲಿಲ್ಲ...  ನೀವು ಊಟ ಮಾಡಿ.  ನಮ್ಮನ್ನ ಕಾಯ್ಬೇಡಿ" ಎಂದು ಹೇಳುತ್ತಿದ್ದಳು.  ನಾನು ಹತ್ತಿರಾದೊಡನೆ "ಆಮೇಲೆ ಮಾತಾಡ್ತೀನಿ" ಎಂದು ಹೇಳಿ ಫೋನನ್ನು ಬ್ಯಾಗಿಗೆ ಸೇರಿಸಿದಳು.  ಗೇಟ್‌ಕೀಪರ್ ಪುಷ್ಪರಾಜನ ಟೇಬಲ್ ಮೇಲಿದ್ದ ವಿಸಿಟರ್ಸ್ ರಿಜಿಸ್ಟರನ್ನು ಎಳೆದುಕೊಂಡು "ಇದೊಂದು ಗೋಳು" ಎಂದು ಗೊಣಗಿ ತುಟಿ ಕಚ್ಚಿಕೊಂಡು ಅದರಲ್ಲಿ ಪೆನ್ ಆಡಿಸಿ "ಬಾ, ಬೇಗ ಹೋಗೋಣ" ಅನ್ನುತ್ತಾ ನನ್ನನ್ನು ಎಳೆದುಕೊಂಡೇ ಗೇಟ್ ದಾಟಿದಳು.
ಎರಡು ತಿರುವುಗಳಾಚೆ ಇದ್ದ ಒಂದು ಹೋಟೇಲಿಗೆ ಓಡುತ್ತಲೇ ಹೋದೆವು.  ಟೇಬಲ್ ಹಿಡಿದು ಕೂತಾಗ ಸಮಯ ಒಂದೂ ಕಾಲು.  "ಏನು ತಗೋತೀಯ?" ಅಂದಳು ಅಮ್ಮ.  ನಾನು ಉತ್ತರಿಸುವ ಮೊದಲೇ ವೈಟರ್ "ತಿಂಡಿ ಏನೂ ಇಲ್ಲ.  ಬರೀ ಮೀಲ್ಸ್ ಮಾತ್ರ.  ಹೋಗಿ ಕೂಪನ್ ತಗಂಬನ್ನಿ" ಎಂದು ಒದರಿ ಬಾಳೆಲೆ ಹರಡಿದಾಗ ನನ್ನ ಮಸಾಲೆ ದೋಸೆಯ ಬಯಕೆ ಸಟಕ್ಕನೆ ಮುದುರಿಕೊಂಡಿತು.  ಅಮ್ಮ ಮಾತಿಲ್ಲದೇ ಎದ್ದು ಹೋಗಿ ನನಗೆ ಫುಲ್ ಮೀಲ್ಸ್, ತನಗೆ ಮಿನಿ ಮೀಲ್ಸ್ ಕೂಪನ್ ತಂದಳು.  ಎಲೆಗಿಂತಲೂ ಹೆಚ್ಚಾಗಿ ಗಡಿಯಾರದತ್ತ ನೋಡಿಕೊಂಡು ಮಾತಿಲ್ಲದೇ ತುತ್ತು ನುಂಗಿದೆವು.
ಊಟ ಮುಗಿದಾಗ ಒಂದೂ ಮೂವತ್ತಾರು.  ಅರೆಬರೆ ಕೈತೊಳೆದು ಸ್ಕೂಲಿನತ್ತ ಓಡಿದೆವು.  ನನ್ನನ್ನು ವಾಪಸ್ ಕರೆತಂದು ಸ್ಕೂಲಿನೊಳಗೆ ಬಿಟ್ಟಿರುವುದಾಗಿ ಪುಷ್ಪರಾಜನ ರಿಜಿಸ್ಟರಿನಲ್ಲಿ ಬರೆದು, ಸಮಯ ಒಂದೂ ನಲವತ್ತೆರಡು ಎಂದು ನಮೂದಿಸಿ ಸಹಿಮಾಡಿ ನೆಟ್ಟಗೆ ನಿಂತ ಅಮ್ಮನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಳ್ಳುತ್ತಿತ್ತು.  ಅವಳು ಮತ್ತೆ ಅಳಲು ಶುರುಮಾಡಬಹುದು ಎನಿಸಿ ಭಯವಾಯಿತು.  "ಟೈಮಾಗೋಯ್ತಮ್ಮ, ಹೋಗ್ತೀನಿ" ಎಂದು ಒದರಿ ಅವಳಿಗೆ ಬೆನ್ನು ಹಾಕಿ ಓಡಿದೆ.  ಚಾಪೆಲ್‌ನ ಮೆಟ್ಟಲೇರುವ ಮೊದಲು ಹಿಂದೆ ತಿರುಗಿ ನೋಡಿದಾಗ ಅಮ್ಮ ಇನ್ನೂ ಗೇಟ್ ಹಿಡಿದು ನಿಂತಿದ್ದಳು.
ರೆವರೆಂಡ್ ಎಡ್ಮಂಡ್ ಗಿಲಾರ್ಡ್ ಕೆಂಪಗೆ ಗುಂಡುಗುಂಡಗೆ, ಇಟ್ಟರೆ ಒಡೆದುಹೋಗುವಂತಿದ್ದರು.  ಪಕ್ಕದಲ್ಲಿದ್ದ ಮೇಬಲ್ ಹೇಮಾವತಿ "ಕುಂಬಳದ ಹಣ್ಣು" ಎಂದು ಅವರಿಗೆ ನಾಮಕರಣ ಮಾಡಿಬಿಟ್ಟಳು.  ನಾವು ನಾಕೈದು ಜನ ಮುಖ ಕೆಳಗೆ ಮಾಡಿಕೊಂಡು ಸದ್ದಿಲ್ಲದೇ ನಕ್ಕೆವು.  ಅವರ ಬಗ್ಗೆ ಫಾದರ್ ಅಗಸ್ಟಿನ್ ಹತ್ತು ನಿಮಿಷ ಏನೇನೋ ಹೇಳಿದರು.  ನಂತರ ಶುರು ಹಚ್ಚಿಕೊಂಡ ಕುಂಬಳದ ಹಣ್ಣು ದೇವರಿಗಿಂತಲೂ ಸೈತಾನನ ಬಗ್ಗೆಯೇ ಹೆಚ್ಚು ಹೇಳಿತು.  "ಹಿಂದೆ ಸೋವಿಯೆತ್ ರಷ್ಯಾದಲ್ಲಿ ಕಮ್ಯೂನಿಸ್ಟರು ಶಿಲುಬೆಯನ್ನು ಬೂಟುಗಾಲಿನಲ್ಲಿ ತುಳಿಯುತ್ತಿದ್ದರು.  ಈಗ ಅದೇ ಪಾಪವನ್ನು ಅಲ್ ಖಯೀದಾ ಮತ್ತು ತಾಲಿಬಾನಿಗಳು ಮಾಡುತ್ತಿದ್ದಾರೆ.  ಅವರನ್ನು ಸುಳ್ಳಿನ ಮಾರ್ಗದಿಂದ ಸತ್ಯದ ಮಾರ್ಗಕ್ಕೆ ತರಬೇಕು.  ದೇವರ ರಾಜ್ಯದಲ್ಲಿ ನೆಲಸಲು ಅವರನ್ನು ಯೋಗ್ಯರನ್ನಾಗಿಸಬೇಕು..." ಎಂದು ತುಂಬಾ ಹೊತ್ತು ಮಾತಾಡಿತು.  ಬೇಜಾರಾಗಿ ಸುತ್ತಮುತ್ತ ನೋಡತೊಡಗಿದೆ.  ಹೇಮಾವತಿಯೂ ಅತ್ತಿತ್ತ ನೋಡುತ್ತಿದ್ದವಳು ನನ್ನ ಕಡೆ ಬಾಗಿ "ನಿಮ್ಮಮ್ಮ ಈವತ್ತೇ ಬಂದಿದ್ರು ಅಲ್ವಾ?" ಎಂದು ಪಿಸುಗಿದಳು.  ಶಿವಮೂರ್ತಿ ಅಂಕಲ್ಲನ್ನು ಮದುವೆಯಾಗಲಾ ಎಂದು ಅಮ್ಮ ಕೇಳಿದ್ದಕ್ಕೆ ನಾನು ಏನೂ ಹೇಳಲೇ ಇಲ್ಲವಲ್ಲ ಎಂದು ನೆನಪಾಗಿ ಬೇಜಾರಾಯಿತು.  ನಾಳೆ ಬಂದು ಮತ್ತೆ ಕೇಳಿದರೆ ಏನು ಹೇಳುವುದು ಎಂದು ಯೋಚಿಸತೊಡಗಿದೆ.  ಏನೂ ಹೊಳೆಯಲೇ ಇಲ್ಲ.  ಥೆರೆಸಕ್ಕನನ್ನು ಕೇಳಬೇಕು ಅಂದುಕೊಂಡೆ.
ಕುಂಬಳದ ಹಣ್ಣಿನ ಮಾತು ಮುಗಿದಾದಮೇಲೆ ನಮಗೆಲ್ಲರಿಗೂ ಎರಡೆರಡು ಪುಸ್ತಕಗಳನ್ನು ಕೊಟ್ಟರು.  ಒಂದು ಕನ್ನಡ, ಇನ್ನೊಂದು ಇಂಗ್ಲೀಷ್.  ಡಾಕ್ಟರ್ ಜಾನಿ ಲೀ ಎನ್ನುವವರು ಬರೆದಿದ್ದ "ಕಮ್ಯೂನಿಸ್ಟರ ಕಟುಕತನದಿಂದ ಪಾರಾದೆ" ಎಂಬ ಕನ್ನಡ ಪುಸ್ತಕ ಹಳೆಯದಾಗಿಹೋಗಿತ್ತು.  ಆದರೆ "Muslim Life in America" ಎಂಬ ಅಗಲದ ಸೈಜಿನ ಇಂಗ್ಲಿಷ್ ಪುಸ್ತಕ ಮಾತ್ರ ಹೊಚ್ಚ ಹೊಸದಾಗಿತ್ತು.  ಅದರಲ್ಲಿ ತುಂಬಾ ಕಲರ್ ಫೋಟೋಗಳಿದ್ದವು.
ಥೆರೆಸಕ್ಕ ರಾತ್ರಿಯವರೆಗೂ ನನಗೆ ಸಿಗಲೇ ಇಲ್ಲ.  ಡೈನಿಂಗ್ ಹಾಲ್‌ನಲ್ಲಿ ಸಿಕ್ಕಿದರೂ ಮಾತಾಡಲಾಗಲಿಲ್ಲ.  ಆಮೇಲೆ ಎಂಟರಿಂದ ಹತ್ತರವರೆಗೆ ಸ್ಟಡಿ ಹಾಲ್‌ನಲ್ಲಿ ಹೋಂವರ್ಕ್ ಮಾಡುತ್ತಾ ಕೂತಾಗ ಅವಳು ಪಕ್ಕದಲ್ಲಿದ್ದರೂ ಬಾಯಿ ತೆರೆಯುವಂತೇ ಇರಲಿಲ್ಲ.  ಮೂಲೆಯ ಈಸಿ ಚೇರಿನಲ್ಲಿ ಕೂತು "ಉoಟಿe ತಿih he Wiಟಿಜ" ಓದುತ್ತಿದ್ದ ಡಾರ್ಮಿಟರಿ ಇನ್‌ಚಾರ್ಜ್ ಸಿಸ್ಟರ್ ಮನೋಹರಿಯವರಿಗೆ ಕೇಳಿಸಿಬಿಟ್ಟರೆ ಬೈಯುತ್ತಾರೆ.
ಚರ್ಚಿನ ಗಂಟೆ ಹತ್ತು ಬಾರಿಸಿ, ನಮ್ಮ ಸ್ಟಡಿ ಮುಗಿದು, ಸಿಸ್ಟರ್ ಮನೋಹರಿಯವರ ಮುಂದೆ ವೃತ್ತಾಕಾರದಲ್ಲಿ ಮಂಡಿಯೂರಿ "ಪರಲೋಕದಲ್ಲಿರುವ ನಮ್ಮ ತಂದೆಯೇ..." ಹೇಳಿ, ಅವರಿಗೆ ಗುಡ್‌ನೈಟೂ ಹೇಳಿ ಎಲ್ಲರೂ ಡಾರ್ಮಿಟರಿಗೆ ನುಗ್ಗಿದೆವು.  ಬಾತ್‌ರೂಮಿನ ಪಕ್ಕದ ಪರದೆಯ ಹಿಂದೆ ಒಂದೇಸಲಕ್ಕೆ ಇಬ್ಬರು ಮೂವರು ಒಟ್ಟಿಗೆ ಹೋಗಿ ಬಟ್ಟೆ ಬದಲಾಯಿಸಿ ಬಂದು ಹಾಸಿಗೆ ಸೇರಿದಾಗ ಹತ್ತೂವರೆ.  ದೀಪವಾರಿಸುತ್ತಿದ್ದಂತೇ ಪಕ್ಕದ ಕಾಟಿನಲ್ಲಿನ್ನೂ ಕೂತೇ ಇದ್ದ ಥೆರೆಸಕ್ಕನನ್ನು ಪಿಸುದನಿಯಲ್ಲಿ ಕರೆದೆ.  ತಕ್ಷಣ ಓಗೊಟ್ಟಳು.
ಐದು ತಿಂಗಳ ಹಿಂದೆ ನಾನು ಏಳನೆಯ ತರಗತಿ ಪಾಸಾಗಿ ಎಂಟನೆಯ ತರಗತಿ ಸೇರಿ, ಜ್ಯೂನಿಯರ್ ಗರ್ಲ್ಸ್ ಡಾರ್ಮಿಟರಿಯಿಂದ ಸೀನಿಯರ್ ಗರ್ಲ್ಸ್ ಡಾರ್ಮಿಟರಿಗೆ ಬಂದಾಗಿನಿಂದಲೂ ಪಕ್ಕದ ಕಾಟಿನಲ್ಲೇ ಮಲಗುವ ಥೆರೆಸಕ್ಕನಿಗೆ ನನ್ನ ಮೇಲೆ ತುಂಬಾ ಪ್ರೀತಿ.  ಅವಳು "ಟ್ವೆಲ್ತ್ ಏ"ನಲ್ಲಿದ್ದಾಳೆ.  ನನ್ನೆಲ್ಲಾ ಪ್ರಶ್ನೆಗಳಿಗೆ ಅವಳಲ್ಲಿ ಉತ್ತರವಿರುತ್ತದೆ.
"ಇರು" ಎನ್ನುತ್ತಾ ಥೆರೆಸಕ್ಕ ನನ್ನ ಕಾಟಿಗೇ ಬಂದಳು.  ಉದ್ದಕ್ಕೆ ನನಗೆ ಒತ್ತಿಕೊಂಡೇ ಮಲಗಿ "ಈಗ ಹೇಳು" ಎಂದು ಪಿಸುಗುಟ್ಟಿದಳು.  ಅಮ್ಮ ಮಧ್ಯಾಹ್ನ ಕೇಳಿದ್ದ ಪ್ರಶ್ನೆಯನ್ನು ಅವಳಿಗೆ ಹೇಳಿದೆ.  "ಏನು ಹೇಳಬೇಕು ಅಂತ ಗೊತ್ತಾಗ್ಲಿಲ್ಲ" ಅಂದೆ.  ಥೆರೆಸಕ್ಕ ಸ್ವಲ್ಪ ಹೊತ್ತು ಮಾತಾಡಲೇ ಇಲ್ಲ.  ಅವಳೇನಾದರೂ ನಿದ್ದೆಗಿದ್ದೆ ಮಾಡಿಬಿಟ್ಟಳೇನೋ ಅಂದುಕೊಳ್ಳುತ್ತಿದ್ದಂತೇ "ಆ ಶಿವಮೂರ್ತಿ ಅಂಕಲ್ ಯಾವ ಕ್ಯಾಸ್ಟೇ?" ಅಂದಳು.  ನನಗದು ಗೊತ್ತಿರಲಿಲ್ಲ.  "ಕ್ರಿಶ್ಚಿಯನ್ನೇ ಇರಬೇಕು ಅಕ್ಕ, ನಮ್ಮ ಹಾಗೇ" ಅಂದೆ ಅನುಮಾನಿಸುತ್ತಾ.  "ಇರಲಾರದು" ಅಂದಳು ಥೆರೆಸಕ್ಕ ಥಟಕ್ಕನೆ.  "ನಿಮ್ಮಮ್ಮನ್ನ ಕೇಳಿ ತಿಳ್ಕೋ.  ಅದು ತುಂಬಾ ಇಂಪಾರ್ಟೆಂಟು."
"ಹಂಗಂದ್ರೇನು ಥೆರೆಸಕ್ಕ?."
"ನೋಡು, ಅವ್ರು ಕ್ರಿಶ್ಚಿಯನ್ ಆಗಿದ್ರೆ ಏನೂ ಪ್ರಾಬ್ಲಂ ಇರಲ್ಲ.  ಒಂದುವೇಳೆ ಹಿಂದೂ ಆಗಿದ್ರೆ..."
"ಹಿಂದೂ ಆಗಿದ್ರೆ..."
"ನಿನ್ನನ್ನ ಈ ಡಾರ್ಮಿಟರಿಯಿಂದ ಓಡಿಸಿಬಿಡ್ತಾರೆ."
ನನಗೆ ಎತ್ತಿ ಕುಕ್ಕರಿಸಿದಂತಾಯಿತು.  "ಹಂಗಂದ್ರೇನು ಥೆರೆಸಕ್ಕ!  ಯಾಕೆ ಓಡಿಸ್ತಾರೆ?"  ಧಡಕ್ಕನೆ ಎದ್ದು ಕೂತೆ.
ಅವಳು ಮಾತಾಡಲಿಲ್ಲ.  ನನಗೆ ಅಳು ಬರುವಂತಾಯಿತು.  "ಹೇಳು ಥೆರೆಸಕ್ಕಾ, ಯಾಕೆ ಓಡಿಸ್ತಾರೆ?" ಎಂದು ಗೋಗರೆದೆ.  ಈಗ ಅವಳು ಮಾತಾಡಿದಳು: "ಇದು ಫ್ರೀ ಬೋರ್ಡಿಂಗ್ ಸ್ಕೂಲ್ ಅಲ್ವಾ.  ನಿಂಗಿಲ್ಲಿ ಸೀಟ್ ಕೊಟ್ಟಿರೋದು ನೀನು ಕ್ರಿಶ್ಚಿಯನ್ ವಿಡೋದು ಮಗಳು ಅಂತ.  ಆ ಶಿವಮೂರ್ತಿ ಅಂಕಲ್ ಹಿಂದೂ ಆಗಿದ್ರೆ, ನಿಮ್ಮಮ್ಮ ಅವರನ್ನ ಮದುವೆ ಮಾಡ್ಕೊಂಡುಬಿಟ್ರೆ ಏನಾಗುತ್ತೆ ಹೇಳು?  ಅವ್ಳು ಕ್ರಿಶ್ಚಿಯನ್ ವಿಡೋ ಆಗೇ ಉಳಿಯೋದಿಲ್ಲ ಅಲ್ವಾ?  ಹಿಂದೂ ಆಗಿಬಿಡ್ತಾಳೆ.  ಮ್ಯಾರೀಡ್ ಹಿಂದೂ ವುಮನ್.  ಅವಳ ಜತೆ ನೀನೂ ಹಿಂದೂ ಆಗಿಬಿಡ್ತೀಯ.  ಅದಕ್ಕೇ ಹೇಳಿದ್ದು ನಿನ್ನನ್ನ ಇಲ್ಲಿಂದ ಓಡಿಸ್ತಾರೆ ಅಂತ."
"ಏನು ಹೇಳ್ತಾ ಇದೀಯ ಥೆರೆಸಕ್ಕ?  ಶಿವಮೂರ್ತಿ ಅಂಕಲ್ಲನ್ನ ನಮ್ಮಮ್ಮ ಮದುವೆಯಾದ್ರೆ ನಾನು ಹ್ಯಾಗೆ ಹಿಂದೂ ಆಗ್ತೀನಿ ಥೆರೆಸಕ್ಕ?"  ಡಾರ್ಮಿಟರಿಯಿಂದ ಹೊರಹೋಗುವ ಯೋಚನೆಯಿಂದಲೇ ನಾನು ಹೆದರಿಹೋಗಿದ್ದೆ.  ಅವಳು ನಕ್ಕುಬಿಟ್ಟಳು.
"ಏ ಪೆದ್ದಿ, ಶಿವಮೂರ್ತಿ ಅಂಕಲ್ ನಿಮ್ಮಮ್ಮಂಗೆ ಹಸ್ಬೆಂಡ್ ಆದ್ರೆ ನಿಂಗೇನಾಗ್ತಾರೆ ಹೇಳು?  ಫಾದರ್ ಅಲ್ವಾ?  ನೀನು ಹಿಂದೂ ಫಾದದು ಮಗಳಾಗ್ತೀಯ.  ಅಂದ್ರೆ ಹಿಂದೂ ಆಗಿಬಿಡ್ತೀಯ."  ಹಾಗೆಂದವಳೇ "ನಂಗೆ ನಿದ್ದೆ ಬರ್ತಿದೆ.  ಮಲಕ್ಕೋತೀನಿ.  ನೀನೂ ಮಲಕ್ಕೊಂಡು ನಿದ್ದೆ ಮಾಡು.  ನಿಮ್ಮಮ್ಮ ಇನ್ನೊಂದ್ಸಲ ಬಂದಾಗ ಶಿವಮೂರ್ತಿ ಅಂಕಲ್ ಯಾವ ಕ್ಯಾಸ್ಟು ಅಂತ ಕೇಳೋದನ್ನ ಮರೀಬೇಡ ಅಷ್ಟೆ" ಎಂದು ಹೇಳುತ್ತಾ ಎದ್ದು ತನ್ನ ಕಾಟಿಗೆ ಹೊರಟುಹೋದಳು.  ನಾನು ದಿಕ್ಕೆಟ್ಟುಹೋಗಿದ್ದೆ.
ನಿದ್ದೆ ಬರಲಿಲ್ಲ.  ಅಳು ಬಂತು.
ಈ ಬೋರ್ಡಿಂಗ್ ಸ್ಕೂಲ್ ಬಿಟ್ಟರೆ ನನಗೇನೂ ಗೊತ್ತೇ ಇಲ್ಲ.  ಎಲ್‌ಕೇಜಿಗೆ ಇಲ್ಲಿಗೆ ಬಂದವಳು ನಾನು.  ಸಮ್ಮರ್ ವೆಕೇಷನ್‌ನಲ್ಲಿ ಅಮ್ಮನ ಜತೆ ಕೊಳ್ಳೇಗಾಲಕ್ಕೆ ಹೋದಾಗ ಅಲ್ಲಿಯ ಕ್ರಿಶ್ಚಿಯನ್ ಸ್ಟ್ರೀಟ್‌ನ ನೀರಿಲ್ಲದ ಕೊಳದ ಅಂಚಿನ ಬಾಡಿಗೆ ಮನೆ, ಕಿಟಕಿಯಿಂದ ಕಾಣುವ ಮರಡೀ ಗುಡ್ಡ, ಅಮ್ಮ ಕರೆದುಕೊಂಡು ಹೋಗಿ ಸಿನಿಮಾ ತೋರಿಸುವ ಕೃಷ್ಣಾ ಥಿಯೇಟರ್, ಶಾಂತಿ ಥಿಯೇಟರ್, ಮತ್ತೆ ಅದರ ಪಕ್ಕ ಇರೋ ಇನ್ನೊಂದು, ಏನಂತ ಅದರ ಹೆಸರು?  ಷೋಭಾ ಥಿಯೇಟರ್!  ಹ್ಞೂ ಅದೇ.  ಇಷ್ಟರ ಹೊರತಾಗಿ ಬೇರಾವ ಜಾಗವೂ ನಂಗೆ ಗೊತ್ತೇ ಇಲ್ಲ.  ಬೇರೆ ಸ್ಕೂಲುಗಳೂ ಗೊತ್ತಿಲ್ಲ.  ಈಗ ನನ್ನನ್ನ ಇಲ್ಲಿಂದ ಓಡಿಸಿಬಿಟ್ರೆ ಎಲ್ಲಿಗೆ ಹೋಗಲಿ?  ನನ್ನನ್ನ ಬೇರೆ ಸ್ಕೂಲಿಗೆ ಸೇರಿಸಿ ಹಣ ಖರ್ಚು ಮಾಡಿ ಓದಿಸೋದಕ್ಕೆ ತನ್ನ ಕೈಲಿ ಸಾಧ್ಯಾನೇ ಇಲ್ಲ ಅಂತ ಅಮ್ಮ ತುಂಬಾ ಸಲ ಹೇಳಿದ್ದಾಳೆ.
ಬಿಕ್ಕಿ ಬಿಕ್ಕಿ ಅಳತೊಡಗಿದೆ.
ಯಾರೋ ಲೈಟ್ ಹಾಕಿ ಬೆಳಕಾಯಿತು.  ಬೋರಲಾಗಿ ಬಿದ್ದಿದ್ದವಳು ಹೊರಳಿ ಎದ್ದು ಕೂತೆ.  ಡಾರ್ಮಿಟರಿಯ ಉಳಿದ ಹತ್ತೊಂಬತ್ತು ಹುಡುಗಿಯರೂ ಎದ್ದುಬಂದು ನನ್ನ ಸುತ್ತ ನಿಂತಿದ್ದರು.  "ಏನಾಯ್ತೇ? ಏನಾಯ್ತೇ?" ಎಂದು ಕೇಳುತ್ತಿದ್ದರು.  ನಾನು ಇನ್ನೂ ಜೋರಾಗಿ ಅಳತೊಡಗಿದೆ.
ಪಕ್ಕ ಕೂತು ನನ್ನ ಭುಜ ಸವರುತ್ತಿದ್ದ ಥೆರೆಸಕ್ಕ ಎಲ್ಲರಿಗೂ ವಿಷಯ ಹೇಳಿದಳು.
"ಶಿವಮೂರ್ತಿ ಅಂದ್ರೆ ಹಿಂದೂ ಅಂತೇನೂ ಇಲ್ಲ.  ಅಂಥಾ ಹೆಸರನ್ನ ಕ್ರಿಶ್ಚಿಯನ್ಸೂ ಇಟ್ಕೋತಾರೆ ಅಂದಳು ನೈಂತ್ ಏನ ಭಾಗ್ಯ.  "ಹೌದು, ನನ್ ಕ್ಲಾಸ್‌ಮೇಟ್ ನರ್ಮದಾಳ ತಂದೆ ಹೆಸರು ಗುರುಮೂರ್ತಿ ಅಂತ.  ಅವ್ರು ಕ್ರಿಶ್ಚಿಯನ್" ಅಂದಳು ಟೆಂತ್ ಸೀನ ಜ್ಯೋತಿ.  ನನಗೆ ಸ್ವಲ್ಪ ಸಮಾಧಾನವಾಯಿತು.  ಅಳು ನಿಲ್ಲಿಸಿದೆ.  ಆದರೆ ನೈಂತ್ ಬೀನ ಸೋನಿಯಾ ಬಾಯಿ ಹಾಕಿ "ಹಂಗೇನೂ ಇಲ್ಲ.  ಗುರುಮೂರ್ತಿ ಅನ್ನೋದು ಕ್ರಿಶ್ಚಿಯನ್ ಇರಬೋದು.  ಆದ್ರೆ ಈ ಶಿವಮೂರ್ತಿ, ರಾಮಮೂರ್ತಿ, ಕೃಷ್ಣಮೂರ್ತಿ ಅಂತಿರೋ ಹೆಸರುಗಳು ಮಾತ್ರ ಪಕ್ಕಾ ಹಿಂದೂ.  ನಾನು ಗ್ಯಾರಂಟಿ ಕೊಡ್ತೀನಿ" ಅಂದುಬಿಟ್ಟಳು.  ಹಿಂದೆಯೇ ಟ್ವೆಲ್ತ್ ಬೀನ ಚಿತ್ರಾ ಬಾಯಿ ಹಾಕಿ "ಹೌದು ಹೌದು.  ಗುರುಮೂರ್ತಿ ಅನ್ನೋದು ಕ್ರಿಶ್ಚಿಯನ್ ಹೆಸರು.  ಜೀಸಸ್ ಅನ್ನ ಗುರುನಾಥರು, ಬಾಲಗುರುನಾಥರು, ಬಾಲಗುರುಮೂರ್ತಿ ಅಂತೆಲ್ಲಾ ಕರೀತೀವಿ ಅಲ್ವಾ?.  ಹೆಸರಲ್ಲಿ ಗುರು ಅಂತ ಇದ್ರೆ ಕ್ರಿಶ್ಚಿಯನ್.  ಶಿವ ಅಂತ ಇದ್ರೆ ಖಂಡಿತಾ ಹಿಂದೂ" ಎಂದುಹೇಳಿ ನನ್ನನ್ನು ಮತ್ತೆ ಹೆದರಿಸಿಬಿಟ್ಟಳು.  ಅಳು ಉಮ್ಮಳಿಸಿಕೊಂಡು ಬಂತು.
"ಛೇ, ಪಾಪ" ಎಂದು ನನ್ನದೇ ಕ್ಲಾಸಿನ ನಿರ್ಮಲಾ ಅಂದರೆ ಇಲವೆಂತ್ ಡೀನ ನ್ಯಾನ್ಸಿ "ಅದ್ಯಾಕೆ ಪಾಪ ಅಂತೀಯ?  ಶಿವಮೂರ್ತೀನೋ, ಗುರುಮೂರ್ತೀನೋ ಎಂಥದೋ ಒಂದು ಮೂರ್ತೀನ ಇವರಮ್ಮ ಮದುವೆಯಾಗಲಿ ಬಿಡ್ರೇ.  ಅದು ಇವಳಿಗೂ ಒಳ್ಳೇದೇ.  ಇವರಮ್ಮನಿಗೆ ಗಂಡ, ಇವಳಿಗೆ ಅಪ್ಪ ಸಿಗ್ತಾನೆ.  ಈ ಬೋರ್ಡಿಂಗ್ ಬಿಟ್ಟು ಜುಮ್ಮಂತ ಮನೇಲೇ ಅಪ್ಪ ಅಮ್ಮನ ಜತೆ ಇರಬೋದು.  ನಾವಿಲ್ಲಿ ದಿನಕ್ಕೆ ಹತ್ತು ಸಲ ‘ಪರಲೋಕದಲ್ಲಿರುವ ನಮ್ಮ ತಂದೆಯೇ...’ ಅಂತ ಜಪ ಮಾಡ್ತಾ ಇದ್ರೆ ಇವ್ಳು ಭೂಲೋಕದಲ್ಲೇ ಇರೋ ಹೊಸಾ ತಂದೆ ಜತೆ ದಿನಾ ಸಾಯಂಕಾಲ ಸಿನಿಮಾ ಹೋಟೆಲು ಅಂತ ಮಜಾ ಮಾಡ್ತಾಳೆ" ಅಂದಳು.  "ಹೌದಲ್ಲವ" ಅಂದರು ಒಂಬಿಬ್ಬರು.  ಸ್ವಲ್ಪ ಹೊತ್ತು ಮೌನ.  ನಾನು ಕಣ್ಣೊರೆಸಿಕೊಳ್ಳುತ್ತಿದ್ದಂತೆ ಯಾರೊ ಒಬ್ಬರು ಕಿಸಕ್ಕನೆ ನಕ್ಕರು.  ಹಿಂದೆಯೇ ಮತ್ತಿಬ್ಬರು.  ಮುಂದಿನ ನಿಮಿಷದಲ್ಲಿ ಎಲ್ಲರೂ ನಗತೊಡಗಿದರು.  ನನಗೆ ಮತ್ತೆ ಅಳುಬಂತು.
"ಏನಾಗ್ತಿದೆ ಇಲ್ಲಿ?"  ಬಾಗಿಲಲ್ಲಿ ಕೂಗು ಕೇಳಿಸಿತು.  ಗಕ್ಕನೆ ತಲೆಯೆತ್ತಿದೆ.  ಕೈಯಲ್ಲಿ ಗಾನ್ ವಿತ್ ದ ವಿಂಡ್ ಹಿಡಿದಂತೇ ಸಿಸ್ಟರ್ ಮನೋಹರಿ ಬಾಗಿಲು ದೂಡಿಕೊಂಡು ಒಳನುಗ್ಗಿದರು.  ಎಲ್ಲರೂ ಗಪ್‌ಚಿಪ್ಪಾಗಿ ತಲೆತಗ್ಗಿಸಿಕೊಂಡು ನಿಂತುಬಿಟ್ಟರು.  ನನಗೆ ಭಯವಾಯಿತು.  ಕಣ್ಣೊರೆಸಿಕೊಳ್ಳುತ್ತಲೇ ಎದ್ದುನಿಂತೆ.  ಹತ್ತಿರ ಬಂದ ಅವರು "ಯಾಕಮ್ಮಾ ಅಳ್ತಿದೀಯ?" ಅಂದರು.  ಅವರ ದನಿ ಮೃದುವಾಗಿತ್ತು.  "ಏನೂ ಇಲ್ಲ ಸಿಸ್ಟರ್" ಎನ್ನುತ್ತಿದ್ದಂತೇ ಬಿಕ್ಕುವಂತಾಯಿತು.  ತಡೆದುಕೊಳ್ಳಲಾಗದೇ ಮತ್ತೆ ಮತ್ತೆ ಬಿಕ್ಕಿದೆ.  ಸಿಸ್ಟರ್ ಮನೋಹರಿ ನನ್ನ ಪಕ್ಕ ಕೂತು ನನ್ನನ್ನು ತಮ್ಮ ಎದೆಗೆ ಒತ್ತಿಕೊಂಡರು.  "ಅಳಬೇಡ, ಏನಾಗ್ತಿದೆ ಹೇಳು?  ಹೊಟ್ಟೆ ನೋಯ್ತಿದೆಯಾ?" ಎನ್ನುತ್ತಾ ನನ್ನ ಬೆನ್ನು ಸವರಿದರು.  "ವೈ ಈಸ್ ಶಿ ಕ್ರೈಯಿಂಗ್?" ಎಂದು ಪಕ್ಕದಲ್ಲಿದ್ದವರನ್ನು ಕೇಳಿದರು.
ನಿರ್ಮಲಾ ಹೇಳಲು ಹೋಗಿ ಒಂದೆರಡು ಪದಗಳ ನಂತರ ನಿಲ್ಲಿಸಿಬಿಟ್ಟಳು.  ಆಮೇಲೆ ಥೆರೇಸಕ್ಕನೇ ಎಲ್ಲವನ್ನೂ ಹೇಳಿದಳು.  "ವಿ ಆರ್ ವರೀಡ್ ಎಬೌಟ್ ಹರ್ ಪ್ಯೂಚರ್, ಸಿಸ್ಟರ್" ಅಂದಳು.  ಸಿಸ್ಟರ್ ಮನೋಹರಿ ನನ್ನನ್ನು ತಮ್ಮ ಎದೆಗೆ ಬಿಗಿಯಾಗಿ ಒತ್ತಿಕೊಂಡರು.  ನಾನು ಬಿಕ್ಕುತ್ತಲೇ ಇದ್ದೆ.  ಒಂದೆರಡು ನಿಮಿಷಗಳ ನಂತರ ಅವರು ನನ್ನನ್ನು ಎಬ್ಬಿಸಿಕೊಂಡು ಎದ್ದುನಿಂತರು.  "ಇನ್ನು ನೀವೆಲ್ಲಾ ಮಲಗಿ.  ಬೆಳಗಾಗೋವರೆಗೆ ಮತ್ತೆ ಲೈಟ್ ಆನ್ ಮಾಡಕೂಡದು, ಗುಡ್ ನೈಟ್" ಎಂದರು ಜೋರಾಗಿ.  "ಬಾ, ನನ್ನ ಜತೆ" ಎಂದು ನನ್ನ ಕಿವಿಯಲ್ಲಿ ಹೇಳಿ ನನ್ನನ್ನು ಬಾಗಿಲತ್ತ ನಡೆಸಿದರು.
ಅವರ ಕೋಣೆಯ ಮೂಲೆಯಲ್ಲಿ ಟೇಬಲ್ ಲ್ಯಾಂಪ್ ಉರಿಯುತ್ತಿತ್ತು.  ಎರಡೂ ಕಡೆ ಎತ್ತರಕ್ಕೆ ಜೋಡಿಸಿದ್ದ ಪುಸ್ತಕಗಳ ನಡುವೆ ಇದ್ದ ಬೆಳ್ಳನೆಯ ಪವಿತ್ರ ಮಾತೆಯ ಪ್ರತಿಮೆಯ ಕಾಲುಗಳ ಮೇಲೆ ಲ್ಯಾಂಪ್‌ನ ಬೆಳಕು ಬಿದ್ದು ಅವು ಪ್ರಖರವಾಗಿ ಹೊಳೆಯುತ್ತಿದ್ದವು.  ಸಿಸ್ಟರ್ ಮನೋಹರಿ ತಮ್ಮ ಹಾಸಿಗೆಯ ಮೇಲೇ ನನ್ನನ್ನು ಕೂರಿಸಿ ತಾವು ಪಕ್ಕ ಕೂತರು.  "ನಿಮ್ಮಮ್ಮನ್ನ ನಾನು ನೋಡಿದ್ದೀನಿ.  ಶಿ ಲುಕ್ಸ್ ಯಂಗ್.  ಎಷ್ಟು ವಯಸ್ಸು ಅವರಿಗೆ?" ಅಂದರು.  "ಮೂವತ್ತನಾಲ್ಕು" ಅಂದೆ ಮೆಲ್ಲಗೆ.  "ಶಿ ಈಸ್ ಯಂಗ್, ವೆರಿ ಯಂಗ್" ಅಂದರು.  ಅವರ ದನಿಯೂ ಮೆತ್ತಗಾಗಿಬಿಟ್ಟಿತ್ತು.
ಸುಮಾರು ಹೊತ್ತು ಅವರು ಏನೂ ಮಾತಾಡಲೇ ಇಲ್ಲ.  ಕಣ್ಣುಮುಚ್ಚಿ ಕೂತುಬಿಟ್ಟಿದ್ದರು.  ಸುತ್ತಲಿನ ನೀರವತೆಯಲ್ಲಿ ನನಗೆ ಜೋರಾಗಿ ಉಸಿರಾಡಲೂ ಹಿಂಜರಿಕೆಯಾಗುತ್ತಿತ್ತು.  ಅವರನ್ನೇ ಮೌನವಾಗಿ ನೋಡುತ್ತಾ ಕೂತುಬಿಟ್ಟೆ.  ನಮ್ಮ ಸೈನ್ಸ್ ಪ್ರಾಜೆಕ್ಟ್ ಬಗ್ಗೆ ಅಮ್ಮನಿಗೆ ಹೇಳಲೇ ಇಲ್ಲವಲ್ಲ ಎಂದು ನೆನಪಾಗಿ ಮುಂದಿನ ಕ್ಷಣದಲ್ಲೇ ಅದು ಮುಖ್ಯವಲ್ಲ ಅನಿಸಿತು.  ಅಮ್ಮ ನಾಳೆ ಬರುತ್ತಾಳೋ ಇಲ್ಲವೋ ಎಂದು ಯೋಚನೆ ಬಂತು.  ಚರ್ಚ್‌ನ ಗಂಟೆ ಹನ್ನೊಂದು ಬಾರಿಸಿದಾಗ ಸಿಸ್ಟರ್ ಮನೋಹರಿ ಗಕ್ಕನೆ ಕಣ್ಣು ತೆರೆದರು.  "ನಿಮ್ಮಮ್ಮ ಮತ್ತೆ ಮದುವೆಯಾಗಲಿ.  ನಾಳೆ ಅವರು ಬಂದಾಗ ಹಾಗಂತ ಹೇಳಿಬಿಡು" ಅಂದರು.  ಅವರನ್ನೇ ಬಿಟ್ಟಕಣ್ಣು ಬಿಟ್ಟಂತೆ ನೋಡಿದೆ.  "ಶಿವಮೂರ್ತಿ... ಶಿವಮೂರ್ತಿ ಅಂಕಲ್... ಹಿಂದೂ..." ಎಂದು ತೊದಲಿದೆ.  ಅವರು ನನ್ನ ಭುಜ ತಟ್ಟಿದರು.  "ಅದರ ಬಗ್ಗೆ ಆಮೇಲೆ ಯೋಚಿಸೋಣ.  ಮೊದಲು ನಿಮ್ಮಮ್ಮ ಮದುವೆಯಾಗಲಿ.  ಅದು ಮುಖ್ಯ" ಅಂದರು.  ಅವರು ಕಣ್ಣುಗಳನ್ನು ಅರೆಮುಚ್ಚಿಕೊಂಡಿದ್ದರು.  ನಾನು ತಲೆತಗ್ಗಿಸಿದೆ.  ಅವರು ನನ್ನ ಭುಜ ತಟ್ಟಿದರು.  "ಮೊದಲು ನಿಮ್ಮಮ್ಮನ ಲೈಫ್ ಸೆಕ್ಯೂರ್ ಆಗಲಿ" ಅಂದರು.  ಸ್ವಲ್ಪ ತಡೆದು "ನಿನ್ನನ್ನ ಮನೇಲೇ ಇರಿಸಿಕೊಳ್ಳೋದಿಕ್ಕೆ ನಿನ್ನ ಹೊಸಾ ತಂದೆಯ ಅಬ್ಜೆಕ್ಷನ್ ಏನೂ ಇಲ್ಲ ಅಂತ ತಿಳಕೋಬೇಕು ನಾವು.  ಹಾಗಂತ ನಿಮ್ಮಮ್ಮನ್ನ ಕೇಳು" ಅಂದರು.  "ಹ್ಞೂಂ, ಕೇಳ್ತೀನಿ" ಅಂದೆ.  "ಸರಿ, ಈಗ ಹೋಗಿ ಮಲಕ್ಕೋ.  ಅಳೋದು ಗಿಳೋದು ಮಾಡಬೇಡ" ಎನ್ನುತ್ತಾ ಎದ್ದುನಿಂತರು.  ಅವರಿಗೆ ಗುಡ್‌ನೈಟ್ ಹೇಳಿ ಬಾಗಿಲತ್ತ ನಡೆದೆ.  ಬಾಗಿಲು ದಾಟಿ ನಾಲ್ಕು ಹೆಜ್ಜೆಯಿಟ್ಟಾಗ ರಾತ್ರಿಯ ನೀರವತೆಯನ್ನು ಕೊರೆದುಕೊಂಡು ಅವರ ದನಿ ಕೇಳಿಸಿತು: "ಗಾನ್ ವಿತ್ ದ ವಿಂಡನ್ನ ನಿನ್ನ ಹಾಸಿಗೆ ಮೇಲೇ ಬಿಟ್ಟಿದ್ದೀನಿ.  ಈಗೇನೂ ಬೇಡ ಅದು ನಂಗೆ.  ಬೆಳಿಗ್ಗೆ ತಂದುಕೊಡು."
ಭಾನುವಾರದ ಬೆಳಗಿನ ಮಾಸ್ ಮುಗಿದಾದ ಮೇಲೆ ನೇರ ವಿಸಿಟಸ್ ರೂಮಿಗೆ ಹೋದೆ.  ಅಮ್ಮ ಬಂದಿರಲಿಲ್ಲ.  ದಿನವಿಡೀ ಕಾದೆ.  ಅವಳು ಬರಲೇ ಇಲ್ಲ.  "ಈವತ್ತು ಭಾನುವಾರ ಅಲ್ಲವಾ?  ನಿಮ್ಮಮ್ಮ ಬರಲಿಲ್ಲವಾ?  ನಿನ್ನೆ ಬಂದಿದ್ರಲ್ಲ, ಅದಕ್ಕೆ ಈವತ್ತು ಬರಲ್ವೇನೋ" ಎಂದು ಎಲ್ಲರೂ ಕೇಳಿ ಚಿಟ್ಟು ಹಿಡಿಸಿದರು.  ಮತ್ತೆ ಮತ್ತೆ ದೂರದ ಮೆಯಿನ್ ಗೇಟಿನತ್ತಲೇ ನೋಡುತ್ತಾ ಡಾರ್ಮಿಟರಿಯ ಮುಂದಿನ ಕಲ್ಲುಬೆಂಚಿನ ಮೇಲೇ ಕುಳಿತಿದ್ದೆ.  ನಿರ್ಮಲಾ ಬಂದು ಬಾ ತಿರುಗಾಡುವಾ ಅಂತ ಕರೆದೊಯ್ದಳು.  ಇಬ್ಬರೂ ಚರ್ಚನ್ನು ಒಂದು ಸುತ್ತು ಬಂದೆವು.  ಬಾಯ್ಸ್ ಡಾರ್ಮಿಟರಿಯ ಮುಂದೆ ನಮ್ಮ ಕ್ಲಾಸಿನ ಗುರುರಾಜ್ ಮತ್ತು ನೈಂತ್ ಬೀನ ವಿಕ್ಟರ್ ವಿಜಯಕುಮಾರ್ ಯಾವುದೋ ಸ್ಟ್ಯಾಂಪಿನ ವಿಷಯಕ್ಕೆ ಕೆಟ್ಟದಾಗಿ ಬೈದಾಡಿಕೊಳ್ಳುತ್ತಿದ್ದವರು ನಮ್ಮನ್ನು ನೋಡಿ ಜಗಳ ನಿಲ್ಲಿಸಿ "ನಮ್ಮ ಸ್ಟ್ಯಾಂಪ್ ಕಲೆಕ್ಷನ್ ನೋಡ್ತೀರಾ?" ಎನ್ನುತ್ತಾ ಸ್ಟ್ಯಾಂಪುಗಳನ್ನು ಅಂಟಿಸಿದ್ದ ನೋಟ್ ಬುಕ್‌ಗಳನ್ನು ಮೇಲೆತ್ತಿ ತೋರಿಸುತ್ತಾ ನಮ್ಮ ಕಡೆ ಓಡಿಬಂದರು.  ನಮಗೆ ಭಯವಾಯಿತು.  "ಈಗ ಬೇಡಾ, ನಾಳೆ ಕ್ಲಾಸಿಗೇ ತಗೋಂಡು ಬನ್ನಿ, ಅಲ್ಲೇ ನೋಡ್ತೀವಿ" ಎಂದು ಹೇಳಿ ನಮ್ಮ ಡಾರ್ಮಿಟರಿಯತ್ತ ಓಡಿಬಂದೆವು.  ನಿರ್ಮಲಾ ಫಿಸಿಕ್ಸ್ ಹೋಂವರ್ಕ್ ನೆನಪಿಸಿದಳು.  ಮನಸ್ಸಿಲ್ಲದ ಮನಸ್ಸಿನಿಂದ ಸ್ಟಡಿ ಹಾಲ್‌ನತ್ತ ಕಾಲೆಳೆದೆ.
ಈವ್‌ನಿಂಗ್ ಮಾಸ್ ಮುಗಿಸಿಕೊಂಡು ಬಂದು ರಾತ್ರಿಯ ಊಟದ ಬೆಲ್‌ಗಾಗಿ ಕಾಯುತ್ತಾ ಜೆಸ್ಸಿಕ ಮತ್ತು ನಿರ್ಮಲಾ ಜತೆ ಗಾರ್ಡನ್‌ನ ಮಾವಿನಮರದ ಕೆಳಗೆ ನಿಂತಿದ್ದಾಗ ನನಗೆ ಫೋನ್ ಬಂದಿದೆಯೆಂದು ಜ್ಯೋತಿ ಕೂಗಿದಳು.  ಅಮ್ಮನಿರಬಹುದೆಂದು ಆಫೀಸ್‌ರೂಮಿನತ್ತ ಓಡಿದೆ.  ಹೌದು, ಅದು ಅಮ್ಮನೇ.  ಈವತ್ತು ಬರಲಾಗಲಿಲ್ಲ, ಬೇಜಾರು ಮಾಡಿಕೋಬೇಡ ಎಂದೇನೋ ಹೇಳುತ್ತಿದ್ದಳು.  ಸರಿಯಾಗಿ ಕೇಳಿಸುತ್ತಲೇ ಇರಲಿಲ್ಲ.  ಅವಳ ಮಾತಿಗಿಂತಲೂ ಬೇರೆಬೇರೆ ಜನರ ಮಾತುಗಳು, ಬಸ್ಸಿನ ಹಾರ್ನ್ ಜೋರಾಗಿ ಕೇಳಿಸುತ್ತಿದ್ದವು.  "ಬಸ್‌ನಲ್ಲಿದ್ದೀಯಾ?" ಅಂದೆ.  "ಹ್ಞೂಂ" ಅಂದಳು.  ಹಿಂದೆಯೇ "ಮುಂದಿನ ಭಾನುವಾರ ಖಂಡಿತಾ ಬರ್ತೀನಿ" ಅಂದಂತೆ ಕೇಳಿಸಿತು.  "ಅಮ್ಮಾ, ನೀನು ಶಿವಮೂರ್ತಿ ಅಂಕಲ್ಲನ್ನ ಮದ್ವೆ ಮಾಡ್ಕೊ ಅಮ್ಮ" ಅಂದೆ.  ಅಮ್ಮ ಉತ್ತರಿಸಲಿಲ್ಲ.  "ಕೇಳಿಸ್ತಮ್ಮಾ?" ಅಂದೆ.  "ಹ್ಞೂಂ ಕೇಳಿಸ್ತು" ಅಂದಳು.  "ಲೈನ್ ಸರಿಯಾಗಿಲ್ಲ.  ಆಮೇಲೆ ಮಾಡ್ಲಾ?" ಅಂದಳು.  "ಒಂದ್ನಿಮಿಷ ಇರಮ್ಮ, ನಿನ್ನ ಮದುವೆ ಆದ್ಮೇಲೆ ನನ್ನನ್ನ ಮನೇಲೇ ಇರಿಸ್ಕೋತೀಯಮ್ಮ?" ಅಂದೆ ಆತುರಾತುರವಾಗಿ.  "ನಿನ್ನ ಸ್ಕೂಲು?" ಅಂದಳು ಅಮ್ಮ.  ದನಿಯಲ್ಲಿ ಗಾಬರಿಯಿತ್ತು.  "ಕೊಳ್ಳೇಗಾಲದಲ್ಲೇ ಬೇರೆ ಸ್ಕೂಲಿಗೆ ಸೇರ್ಕೋತೀನಿ ಅಮ್ಮ.  ಮನೆಯಿಂದಾನೇ ಸ್ಕೂಲಿಗೆ ಹೋಗ್ತೀನಿ ಅಮ್ಮ, ಚೆನ್ನಾಗಿರುತ್ತೆ" ಅಂದೆ.  ಬಸ್ಸಿನ ಹಾರ್ನ್ ಕಿವಿ ಕಿತ್ತುಹಾಕಿತು.  "ಅಮ್ಮಾ ಅಮ್ಮಾ" ಅಂದೆ.  ಅಮ್ಮ ಉತ್ತರಿಸಲಿಲ್ಲ.  "ಏನಂತೆ? ಏನಂತೆ?" ಎಂಬ ಯವುದೋ ಗಂಡಸಿನ ದನಿ ಬೇರೆಲ್ಲಾ ಸದ್ದುಗಳನ್ನೂ ಮೀರಿ ಕಿವಿಗಪ್ಪಳಿಸಿತು.  ದೂರದಿಂದ ಬಂದ "ಇದ್ದಕ್ಕಿದ್ದ ಹಾಗೆ ಕೇಳಿಬಿಟ್ಲು" ಎಂಬ ಹೆಂಗಸಿನ ದನಿ ಅಮ್ಮನದಿರಲಾರದು ಅಂದುಕೊಳ್ಳುತ್ತಿದ್ದಂತೇ ಅವಳ ದನಿ ಸ್ಪಷ್ಟವಾಗಿ ಕೇಳಿಸಿತು.  "ಹ್ಞೂಂ ಏನು ಹೇಳ್ದೇ?  ಬೇರೆ ಸ್ಕೂಲಾ?" ಅಂದಳು ಅಮ್ಮ.  "ಹೌದಮ್ಮಾ.  ಕೊಳ್ಳೇಗಾಲದಲ್ಲೇ..." ಅಂತ ನಾನು ಶುರುಮಾಡುತ್ತಿದ್ದಂತೇ ಅಮ್ಮ ತಡೆದಳು.  "ಇಲ್ಲ ಮಗೂ.  ನಿಂಗೆ ಆ ಜಾಗಾನೇ ಒಳ್ಳೇದು.  ಇಲ್ಲಿ ಅಷ್ಟು ಅನುಕೂಲ ಇರಲ್ಲ.  ಅವರ ಮನೇಲಿ ಎರಡು ಗಂಡುಮಕ್ಕಳಿವೆ ಅಂತ ಹೇಳಿದ್ದೀನಿ ಅಲ್ವಾ?  ಇಬ್ರೂ ತುಂಬಾ ತುಂಟರು.  ನಿಂಗೆ ಓದೋಕೆ ಬಿಡಲ್ಲ ಅವ್ರು.  ಅಲ್ಲೇ ಇದ್ಕೊಂಡು ಓದಿ ದೊಡ್ಡೋಳಾಗು ಮಗೂ.  ನೀನು ಜಾಣೆ ಅಲ್ವಾ..."  ಅಮ್ಮ ಮುಂದೆ ಹೇಳಿದ್ದೇನೆಂದು ಕೇಳಿಸಲಿಲ್ಲ.  ಅತ್ತ ಕಡೆಯಿಂದ ಮಾತುಗಳು ಯಾವಾಗ ನಿಂತವೆಂದೂ ಗೊತ್ತಾಗಲೇ ಇಲ್ಲ.  ಫೋನ್ ಮೌನವಾದ ಮೇಲೂ ಅದನ್ನು ಕಿವಿಗೆ ಒತ್ತಿಕೊಂಡೆ ನಿಂತಿದ್ದೆ, ಕಸಗುಡಿಸುವ ವನಜಮ್ಮ ಬಂದು "ಯಾಕಳ್ತಿದೀಯ? ಎಂದು ಭುಜ ಅಲುಗಿಸುವವರೆಗೂ.
*     *     *
ಭಾನುವಾರಗಳಂದು ರಾತ್ರಿಯ ಊಟವಾದ ಮೇಲೆ ಸ್ಟಡಿ ಹಾಲ್‌ಗೆ ಹೋಗುವುದು ಕಡ್ಡಾಯವಲ್ಲ.  ಆದರೂ ಅಲ್ಲಿಗೆ ಹೋದೆ.  ಡಾರ್ಮಿಟರಿಯಲ್ಲಿನ ಗಲಾಟೆಯಿಂದ ದೂರ ಇರಬೇಕು ಅನಿಸುತ್ತಿತ್ತು.  ಒಂದಿಬ್ಬರು ಜ್ಯೂನಿಯರ್ ಗರ್ಲ್ಸ್ ಅಲ್ಲಿದ್ದರು.  ಎಲ್ಲಾ ಹೋಂವರ್ಕ್‌ಗಳನ್ನೂ ಇಟ್ಟುಕೊಂಡು ಏನಾದರೂ ಬಾಕಿ ಉಳಿದಿದೆಯಾ ಎಂದು ಒಂದೊಂದಾಗಿ ತೆಗೆದು ನೋಡತೊಡಗಿದೆ.  ಬಾಗಿಲಲ್ಲಿ ಸದ್ದಾಯಿತು.  ತಲೆಯೆತ್ತಿದೆ.  ಸಿಸ್ಟರ್ ಮನೋಹರಿ ಬೆರಳಾಡಿಸಿ ಕರೆದರು.  ಎದ್ದುಹೋದೆ.  ತಮ್ಮ ಕೋಣೆಗೆ ಕರೆದುಕೊಂಡು ಹೋದರು.  ಅಲ್ಲಿ ನಿನ್ನೆ ರಾತ್ರಿಯಂತೇ ಪವಿತ್ರ ಮಾತೆಯ ಕಾಲುಗಳು ಬೆಳ್ಳಗೆ ಪ್ರಖರವಾಗಿ ಹೊಳೆಯುತ್ತಿದ್ದವು.  ಅವರು ಟೇಬಲ್ ಲ್ಯಾಂಪ್ ಆರಿಸಿ ಟ್ಯೂಬ್‌ಲೈಟ್ ಹಾಕಿದರು.  ಈಗ ಇಡೀ ಕೋಣೆ ಬೆಳ್ಳಗೆ ಹೊಳೆಯತೊಡಗಿತು.  ಪವಿತ್ರ ಮಾತೆ ಸಹಾ.
"ಶಿವಮೂರ್ತಿ ಅಂಕಲ್ ಮನೇಲಿ ಇರೋಕೆ ನಂಗೆ ಅನುಕೂಲ ಇರಲ್ವಂತೆ ಸಿಸ್ಟರ್."  ಅವರು ಕೇಳುವ ಮೊದಲೇ ನಾನೇ ಹೇಳಿದೆ.  "ನನಗದು ಗೊತ್ತು" ಅಂದರು.  ನಾನು ಕಣ್ಣರಳಿಸುತ್ತಿದ್ದಂತೇ ಅವರು ಕೈ ಅಡ್ಡ ಆಡಿಸಿದರು.  "ಅದನ್ನ ಮರೆತುಬಿಡು.  ನಾವೀಗ ಕಾಫಿ ಕುಡಿಯೋಣ" ಎನ್ನುತ್ತಾ ಟೀಪಾಯ್ ಮೇಲಿದ್ದ ಕಾಫಿ ಮೇಕನತ್ತ ನಡೆದರು.  "ಮಿಸ್ಟರ್ ಶಿವಮೂರ್ತಿ ಅವರ ಗಂಡುಮಕ್ಕಳಿಗೆ ಹೊಸಾ ಅಮ್ಮ ಸಿಗ್ತಾಳೆ.  ಮಿಸ್ ಶೀಲಾಮಣಿಯ ಮಗಳಿಗೆ ಹೊಸಾ ಅಪ್ಪ ಸಿಗೋದಿಲ್ಲ.  ಈ ಪ್ರಪಂಚದಲ್ಲಿ ಎಲ್ಲಾ ಸಿಗೋದು ಗಂಡಸರಿಗೆ ಮಾತ್ರ, ಅವರು ಪುಟ್ಟ ಹುಡುಗರಾಗಿದ್ರೂನೂ.  ಹೆಣ್ಣುಮಕ್ಕಳ ಪಾಲಿಗಿರೋದು ಬರೀ ಕಳಕೊಳ್ಳೋದು ಅಷ್ಟೇ.  ಅದನ್ನ ದೊಡ್ಡದಾಗಿ ತ್ಯಾಗ ಅಂತ ಕರೆದು ಗ್ಲೋರಿಫೈ ಮಾಡ್ತಾರೆ" ಎಂದು ಹೇಳುತ್ತಾ ಕಪ್ಪುಗಳಿಗೆ ಕಾಫಿ ಸುರಿದರು.
ಕಾಫಿ ತುಂಬಾ ಚೆನ್ನಾಗಿತ್ತು.  ನೀರು ಬೆರೆಸದೇ ಬರೀ ಹಾಲಿನಲ್ಲೇ ಮಾಡಿದ್ದು.  ಚಪ್ಪರಿಸಿದೆ.  ಅವರೂ ಮೌನವಾಗಿ ಕಾಫಿ ಹೀರಿದರು.  ನಾನೇ ಕಪ್ಪುಗಳನ್ನು ತೊಳೆದಿಟ್ಟೆ.  ಅವರ ಕೋಣೆಯಲ್ಲಿ ತುಂಬಾ ಕಸ ಇತ್ತು.  ಟೇಬಲ್ ಕೆಳಗಂತೂ ರಾಶಿ ಕಾಗದದ ಚೂರುಗಳು.  "ತುಂಬಾ ಕಸ ಇದೆ ಸಿಸ್ಟರ್, ಗುಡಿಸಲಾ?" ಅಂದೆ.  "ಈಗ ಬೇಡ.  ಇಲ್ಲಿ ತುಂಬಾ ಕ್ಲೀನ್ ಮಾಡೋದಿದೆ.  ನಾಳೆ ಸ್ಕೂಲ್ ಆದ ಮೇಲೆ ಇನ್ನೂ ಒಂದಿಬ್ಬರನ್ನ ಕರಕೋಂಡು ಬಂದುಬಿಡು" ಅಂದರು.  ನಾನು ಹ್ಞೂಂಗುಟ್ಟುವ ಮೊದಲೇ "ನಿಮ್ಮಮ್ಮನ ಮದುವೆಯ ಸುದ್ದಿ ನ್ಯಾಷನಲ್ ಇವೆಂಟ್ ಅಂತ ಕಾಣುತ್ತೆ.  ಎಲ್ಲಾ ಕಡೆ ವೈಲ್ಡ್ ಫೈರ್ ಥರಾ ಹರಡಿಬಿಟ್ಟಿದೆ.  ನಮ್ಮ ಡೈನಿಂಗ್ ಹಾಲ್‌ನಲ್ಲೂ ಅದರದೇ ಮಾತು.  ಎಲ್ಲರಿಗೂ ಯಾಕೆ ಹೇಳೋಕೆ ಹೋದೆ?" ಅಂದರು.
ನಾನು ಬೆಚ್ಚಿದೆ.  "ಇಲ್ಲ ಸಿಸ್ಟರ್, ನಾನು ಯಾರಿಗೂ ಹೇಳ್ಲಿಲ್ಲ" ಅಂದೆ ಗಾಬರಿಯಲ್ಲಿ.  "ರಾತ್ರಿ ಅಷ್ಟು ರಂಪ ಮಾಡಿದೆಯಲ್ಲ.  ವಿಷಯ ಡಾರ್ಮಿಟರಿ ದಾಟಿ ಹೋಗೋದಿಕ್ಕೆ ಎಷ್ಟು ಹೊತ್ತು!  ದೀಸ್ ಗರ್ಲ್ಸ್!  ಓಹ್!  ದೆ ಹ್ಯಾವ್ ಫಾರ್ಟೆಡ್ ಎವೆರಿವೇರ್. ದ ಹೋಲ್ ಕ್ಯಾಂಪಸ್ ಸ್ಮೆಲ್ಸ್ ನ್ಯಾಸ್ಟಿ."  ಟೇಬಲ್ ಲ್ಯಾಂಪ್ ಹಚ್ಚಿ ಟ್ಯೂಬ್‌ಲೈಟ್ ಆರಿಸಿದರು.  ಪವಿತ್ರ ಮಾತೆಯ ಮುಖ ಮಂಕಾಗಿಹೋಗಿ ಕಾಲುಗಳು ಮಾತ್ರ ಬೆಳ್ಳಗೆ ಹೊಳೆಯತೊಡಗಿದವು.
"ವಿಷಯ ಯಾರಿಗೂ ಗೊತ್ತಾಗದೇ ಇದ್ರೆ ಡೆಮಾಕ್ಲಿಸ್ ಸ್ವೋರ್ಡ್ ಇಷ್ಟು ಬೇಗ ನಿನ್ನ ಕುತ್ತಿಗೆ ಮೇಲೆ ಬೀಳ್ತಾ ಇರ್ಲಿಲ್ಲ.  ವಿ ವುಡ್ ಹ್ಯಾವ್ ಕ್ರಾಸ್ಡ್ ದ ಬ್ರಿಜ್ ವೆನ್ ವಿ ರೀಚ್ಡ್ ಇಟ್.  ಬಟ್, ಈಗೇನಾಗಿಹೋಗಿದೆ ನೋಡು!  ಇಲ್ಲಿ ಇನ್ನು ನಿಂಗೆ ಸ್ಥಳ ಇಲ್ಲ ಅನ್ನೋದು ಎಲ್ಲರ ಅಭಿಪ್ರಾಯ."  ಗಂಭೀರವಾಗಿ ಹೇಳಿದರು.  ನನಗೆ ಹೃದಯ ಬಾಯಿಗೆ ಬಂತು.  ಹೊಳೆಯುತ್ತಿದ್ದ ಪವಿತ್ರ ಮಾತೆಯ ಕಾಲುಗಳೂ ಕತ್ತಲಲ್ಲಿ ಕಪ್ಪಾಗಿಹೊದವು.  "ಈಗೇನ್ಮಾಡ್ಲಿ ಸಿಸ್ಟರ್?"  ಮುಖ ಮುಚ್ಚಿಕೊಂಡು ಅಳತೊಡಗಿದೆ.
"ಛೆ ಛೆ.  ಅಳೋದ್ಯಾಕೆ?"  ನನ್ನನ್ನು ಎಳೆದು ತಮ್ಮ ಎದೆಗೊತ್ತಿಕೊಂಡರು.  "ಇವರು ಹೇಳೋದನ್ನ ತಪ್ಪು ಅನ್ನೋಕಾಗಲ್ಲ.  ಸಂಸ್ಥೆಯ ರೂಲ್ಸ್ ಪ್ರಕಾರ ಅವರು ಹೇಳೋದು ಸರಿ."  ನನ್ನ ಬೆನ್ನು ನೇವರಿಸುತ್ತಾ ಹೇಳಿದರು.  ನನಗೆ ಕತ್ತಲಲ್ಲೂ ಒಂದು ಕಿರಣ ಕಂಡಿತು.
"ಸಿಸ್ಟರ್ ಸಿಸ್ಟರ್, ಆ ಶಿವಮೂರ್ತಿ ಅಂಕಲ್ ಹಿಂದೂನೋ ಕ್ರಿಶ್ಚಿಯನ್ನೋ ಅಂತ ಅಮ್ಮನ್ನ ಕೇಳೋದನ್ನ ಮರೆತುಬಿಟ್ಟೆ ಸಿಸ್ಟರ್.  ಅವರೇನಾದ್ರೂ ಕ್ರಿಶ್ಚಿಯನ್ನೇ ಆಗಿದ್ರೆ ಅಮ್ಮನೂ..."  ನನ್ನ ಮಾತನ್ನು ಅಲ್ಲಿಗೇ ಕತ್ತರಿಸಿದರು ಸಿಸ್ಟರ್ ಮನೋಹರಿ: "ಓಹ್ ಫಗೆಟ್ ಇಟ್.  ಆ ಶಿವಮೂರ್ತೀದು ಯಾವ ರಿಲಿಜನ್ನೇ ಆಗಿರಲಿ.  ನಿಮ್ಮಮ್ಮನಿಗೆ ಅದರಿಂದೇನೂ ಆಗಲ್ಲ.  ನಿನಗೂ."  ನನಗೆ ಅರ್ಥವಾಗಲಿಲ್ಲ.  ತಲೆಯೆತ್ತಿ ಕೆಲವೇ ಇಂಚುಗಳ ದೂರದಲ್ಲಿದ್ದ ಅವರ ಕಣ್ಣುಗಳನ್ನೇ ಬೆರಗಿನಿಂದ ನಿರುಕಿಸಿದೆ.  ಅವರು ನಗುತ್ತಾ ನನ್ನ ತಲೆಯನ್ನು ಮತ್ತೆ ತಮ್ಮೆದೆಗೆ ಒತ್ತಿಕೊಂಡರು.  "ಹೆಣ್ಣು ಅಂದ್ರೆ ಭೂಮಿ ಹಾಗೆ.  ಎರಡೂ ಒಂದೇ.  ಭೂಮಿಗೆ ಯಾವ ಧರ್ಮವೂ ಇಲ್ಲ.  ಹೆಣ್ಣಿಗೂ."  ಸದ್ದಿಲ್ಲದೇ ನಕ್ಕರು.  "ನಾನೂ ಒಬ್ಬಳು ಹೆಣ್ಣು." ಜೋರಾಗಿಯೇ ನಕ್ಕು ನನ್ನ ನೆತ್ತಿಯ ಮೇಲೆ ಮುತ್ತಿಟ್ಟರು.
ಹಾಗೇ ಅದೆಷ್ಟು ಹೊತ್ತು ಕಳೆಯಿತೋ, ಸಿಸ್ಟರ್ ಮನೋಹರಿ ಏಕಾಏಕಿ ನನ್ನನ್ನು ಅಲುಗಿಸಿದರು.  ಟೇಬಲ್ ಲ್ಯಾಂಪ್ ಆಗಿಹೋಗಿತ್ತು.  ಒಳಗೆ, ಹೊರಗೆ, ಎಲ್ಲೆಲ್ಲೂ ಕತ್ತಲು.  ನನ್ನನ್ನು ಬಿಟ್ಟು ಕೋಣೆಯ ಮತ್ತೊಂದು ಮೂಲೆಗೆ ಸರಾಗವಾಗಿ ಹೋಗಿ ಮೊಂಬತ್ತಿ ಹಚ್ಚಿದರು.  ಮಂದವಾಗಿ ಹರಡಿಕೊಂಡ ಬೆಳಕಿನಲ್ಲಿ ಪವಿತ್ರ ಮಾತೆಯ ಮುಖ ಸೌಮ್ಯವಾಗಿ ಹೊಳೆಯತೊಡಗಿತು.
ಹಿಂದಕ್ಕೆ ಬಂದು ಈಸಿಛೇರಿನಲ್ಲಿ ಆರಾಮವಾಗಿ ಕುಳಿತ ಸಿಸ್ಟರ್ ಮನೋಹರಿ ಸಹಜದನಿಯಲ್ಲಿ ಮಾತು ತೆಗೆದರು: "ಇಲ್ಲಿ ಕೇಳು.  ಧರ್ಮಗಳ, ಧಾರ್ಮಿಕ ಸಂಸ್ಥೆಗಳ ನೀತಿ ನಿಯಮಗಳಿಂದ ಬದುಕು ಕಂಡುಕೊಂಡವರಿಗಿಂತ ಬದುಕು ಕಳಕೊಂಡವರೇ ಹೆಚ್ಚು ಅಂತ ಪ್ರಪಂಚದ ಇತಿಹಾಸ ಹೇಳುತ್ತೆ."  ಸ್ವಲ್ಪ ತಡೆದು ಮುಂದುವರೆಸಿದರು: "ಆದರೆ, ಅರ್ತವಾಗಿ ಬೇಡಿದ ಯಾವ ಆತ್ಮವನ್ನೂ ಯಾವ ಧರ್ಮವೂ ತಿರಸ್ಕರಿಸಿಲ್ಲ ಅನ್ನೋದು ಅಷ್ಟೇ ನಿಜ.  ಅದನ್ನ ನಮ್ಮ ಮದರ್ ಸುಪೀರಿಯರ್ ಸಹಾ ಒಪ್ಕೋತಾರೆ.  ನಿನ್ನ ಬಗ್ಗೆ ಅವರ ಜತೆ ಮಾತಾಡಿದ್ದೀನಿ.  ನಿನ್ನನ್ನ ನೋಡೋದಿಕ್ಕೆ ಇಷ್ಟ ಪಡ್ತಾರೆ ಅವರು."
ಒಂದು ಧೀರ್ಘ ನಿಟ್ಟುಸಿರು ನನ್ನೆದೆಯಿಂದ ತಾನಾಗಿಯೇ ಬಂತು.  "ಯಾವಾಗ ನೋಡಬೇಕು ಸಿಸ್ಟರ್ ನಾನು ಅವರನ್ನ?"
"ಒಂಬತ್ತು ಗಂಟೆಗೆ.  ಸಾಧ್ಯ ಇದ್ರೆ ನೀನು ಮತ್ತೊಂದು ರಾತ್ರೀನ ಅಳ್ತಾ ಕಳೆಯೋದನ್ನ ತಪ್ಪಿಸಬೇಕು ಅನ್ನೋದು ನನ್ನ ಆಶಯ"
ಸರಕ್ಕನೆ ವಾಚ್ ನೋಡಿದೆ.  ಒಂಬತ್ತು ಗಂಟೆಗೆ ನಾಲ್ಕು ನಿಮಿಷಗಳಿದ್ದವು.  ಗಾಬರಿಯಲ್ಲಿ ಧಡಕ್ಕನೆದ್ದು ನಿಂತೆ.  "ನೀವೂ ಬನ್ನಿ ಸಿಸ್ಟರ್ ನಂಜೊತೆ.  ನಂಗೆ ಭಯವಾಗುತ್ತೆ.  ನಾನು ಯಾವತ್ತೂ ಅವರ ಕೋಣೆಗೆ ಹೋಗಿಲ್ಲ."
ಸಿಸ್ಟರ್ ಮನೋಹರಿ ನಕ್ಕುಬಿಟ್ಟರು.  "ನೋ, ಸಾರಿ.  ಇದು ನಿನ್ನ ಬದುಕಿನ ದೋಣಿ.  ಸ್ವಲ್ಪ ದೂರ ನಾನು ತಳ್ಳಿದ್ದೀನಿ ಅಷ್ಟೇ.  ಇನ್ನುಮುಂದೆ ನೀನೇ ಹುಟ್ಟು ಹಾಕ್ಕೊಂಡು ಮುಂದೆ ಹೋಗಬೇಕು."  ಗಂಭೀರವಾಗಿ ಹೇಳಿ ಕೋಣೆಯ ಬಾಗಿಲು ತೆರೆದರು.  ತಾವೇ ಮುಂದಾಗಿ ಹೊರಗೆ ಹೆಜ್ಜೆಯಿಟ್ಟು ನಿಂತರು.  "ಹೋಗು.  ನೀನು ಬರೋವರೆಗೂ ನಾನಿಲ್ಲೇ ಕಾಯ್ತಾ ಇರ್ತೀನಿ."  ಅವರ ದನಿ ಎಲೆಯೊಂದರ ಮರ್ಮರದಂತಿತ್ತು.  ನನ್ನ ಕಾಲುಗಳು ಒಮ್ಮೆ ನಡುಗಿದವು.  ಕಣ್ಣುಗಳನ್ನು ಇಡಿಯಾಗಿ ತೆರೆದು ಹೊಳೆಯುತ್ತಿದ್ದ ಪವಿತ್ರ ಮಾತೆಯ ಮುಖವನ್ನೊಮ್ಮೆ ನೋಡಿದೆ.  ಕಣ್ಣುಗಳನ್ನು ಒಮ್ಮೆ ಮುಚ್ಚಿ ತೆರೆದೆ.  ನಿಧಾನವಾಗಿ ಬಾಗಿಲು ದಾಟಿದೆ. 
ಮೊಂಬತ್ತಿಯ ಬೆಳಕು ಬಾಗಿಲಾಚೆ ತುಸು ದೂರಕ್ಕಷ್ಟೇ ಸಾಗಿ ಸೋತುಬಿದ್ದಿತ್ತು.  ಅದರಾಚೆ ಕತ್ತಲುಗಟ್ಟಿದ ಕಾರಿಡಾರ್.
ನೆಟ್ಟಗೆ ನಿಂತು ಕತ್ತಲನ್ನೇ ಕಣ್ಣುಗಳಲ್ಲಿ ತುಂಬಿಕೊಂಡೆ.  ಇಪ್ಪತ್ತು ಅಡಿಗಳ ದೂರದಲ್ಲಿ ಮಹಡಿಯ ಮೆಟ್ಟಲುಗಳಿವೆ ಎಂದು ಚೆನ್ನಾಗಿ ಗೊತ್ತು.  ಹನ್ನೆರಡು ಮೆಟ್ಟಲು ಹತ್ತಿ ಬಲಕ್ಕೆ ತಿರುಗಿ ಮತ್ತೆ ಹತ್ತು ಮೆಟ್ಟಲು ಹತ್ತಿ, ನೀಳ ಕಾರಿಡಾನಲ್ಲಿ ಕೊನೆಯವರೆಗೂ ನಡೆದು...
ಎರಡೂ ಕೈಗಳನ್ನು ಮೇಲೆತ್ತಿ ಎದೆಯ ಮೇಲೆ ಮೆಲ್ಲನೆ ಒತ್ತಿಕೊಂಡೆ.  ಕತ್ತಲಲ್ಲಿ ಕಾಲುಗಳು ಎಡಕ್ಕಾಗಲೀ ಬಲಕ್ಕಾಗಲೀ ಹೊರಳದಂತೆ ಎಚ್ಚರಿಕೆಯಿಂದ ಒಂದೊಂದೇ ಹೆಜ್ಜೆ ಮುಂದಿಟ್ಟೆ.
--***೦೦೦***--
ಅಕ್ಟೋಬರ್ ೨, ೨೦೧೦