ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, May 28, 2012

ಗಾಯ


ಎಲ್ಲಾ ಶುರುವಾದದ್ದು ಮೊನ್ನೆ ಭಾನುವಾರ ಸಂಜೆ.  ಆವತ್ತು ಮಿಲಾದ್ ಉನ್ ನಬಿ.  ಪವಿತ್ರ ಪ್ರವಾದಿಯವರ ಹುಟ್ಟುಹಬ್ಬ.  ಗೆಳೆಯ ಆಷ್ಪಾಕ್ ಅಹ್ಮದ್‌ನ ಮನೆಯಿಂದ ಮಟನ್ ಬಿರಿಯಾನಿಯ ದೊಡ್ಡ ಕ್ಯಾರಿಯರ್ ಬಂದಿತ್ತು.  ತೃಪ್ತಿಯಾಗುವಂತೆ ಉಂಡು ಬೀಡಾ ಜಗಿಯುತ್ತಲೇ ಹಾಸಿಗೆಯಲ್ಲುರುಳಿದೆ.  ಎಚ್ಚರವಾದಾಗ ಕತ್ತಲುಗಟ್ಟುತ್ತಿತ್ತು.  ಕಣ್ಣುಜ್ಜಿಕೊಳ್ಳುತ್ತಾ ಎದ್ದು ಕುಳಿತಂತೇ ಹೊರಗೇನೋ ಗಲಾಟೆ ಕೇಳಿಸಿತು.  "ಅದೇನೇ?" ಅಂದೆ.  "ಅದೇನೋ ನೀವೇ ನೋಡಿ.  ನಾನು ಸ್ಟೋವ್ ಮೇಲೆ ಹಾಲಿಟ್ಟಿದ್ದೀನಿ" ಎಂಬ ಉತ್ತರ ಬಂತು.  ಎದ್ದುಹೋಗಿ ಮುಂಬಾಗಿಲು ತೆರೆದೆ.
ಮನೆಯ ಮುಂದೆ ಏಳೆಂಟು ಜನ ಭಿಕ್ಷುಕರು ನಿಂತಿದ್ದರು.  ಅರೆಬೆತ್ತಲೆಯ ಗಂಡಸರು, ತೇಪೆಸೀರೆಯ ಹೆಂಗಸರು, ಅದ್ಯಾವುದೂ ಇಲ್ಲದ ಒಂದೆರಡು ಚಿಳ್ಳೆಪಿಳ್ಳೆಗಳು.  ಜತೆಯಲ್ಲಿ ಒಂದು ಕರೀನಾಯಿ.  ಗುಂಡುಗುಂಡಗಿದ್ದ ಅದು ಇಡೀ ಗುಂಪಿನ ಏಕೈಕ ಆರೋಗ್ಯವಂತ ಸದಸ್ಯನಂತೆ ಕಂಡಿತು.  ಒಬ್ಬ ತಂತಿಗಳು ಕಿತ್ತುಹೋಗಿ ಅತ್ತಿತ್ತ ನಿಗುರಿಕೊಂಡಿದ್ದ ತಂಬೂರಿಯೊಂದನ್ನು ಟಂಯ್ಯ ಟಂಯ್ಯ ಎಂದು ಬಾರಿಸುತ್ತಿದ್ದ.  ಅವನ ಪಕ್ಕದಲ್ಲಿದ್ದವಳು ತಲೆಯನ್ನು ಒಂದುಕಡೆ ವಾಲಿಸಿಕೊಂಡು ಕಣ್ಣುಗಳನ್ನು ಅರೆಮುಚ್ಚಿಕೊಂಡು ಕೀರಲು ಕಂಠದಲ್ಲಿ "ಪೂಜಿಸಲೆಂದೇ ಹೂಗಳ ತಂದೇ, ದರುಶನ ಕೋರಿ ನಾ ನಿಂದೆ, ತೆರೆಯೋ ಬಾಗಿಲನೂ... ರಾಮಾ..." ಎಂದು ಹಾಡುತ್ತಿದ್ದಳು.  ಆಲಾಪನೆಯೋ ಆಕ್ರಂದನವೋ ತಿಳಿಯದಂತಿದ್ದ ಆ ಸದ್ದಿಗೆ ಉಳಿದವರೂ ದನಿ ಸೇರಿಸಿ ಆ ಜರ್ಮನಿಯ ಕತ್ತೆ ನಾಯಿ ಬೆಕ್ಕು ಕೋಳಿಹುಂಜದ ಕ್ಯಾಕೋಫೋನಿಗಿಂತಲೂ ಅತ್ತತ್ತಲೇ ಆದ ಗೊಂದಲವನ್ನು ಸೃಷ್ಟಿಸಿಬಿಟ್ಟಿದ್ದರು.
ಒಂದೆರಡು ಪುಡಿನಾಣ್ಯಗಳನ್ನು ತಂದು ಕೈಗೆ ಹಾಕಬೇನಿಸಿದರೂ ಇನ್ನಷ್ಟು ಹೊತ್ತು ಆ ಚಿಟ್ಟು ಹಿಡಿಸುವ ಸಂಗೀತವನ್ನು ಕೇಳಲು ಹೆದರಿ ಮುಂದೆ ಹೋಗ್ರೀ ಎಂದು ಅರಚಲು ಬಾಯಿ ತೆರೆಯುವಷ್ಟರಲ್ಲಿ ತಟಕ್ಕನೆ ಟಂಯ್ಯ ಟಂಯ್ಯ ನಿಂತಿತು.  ಕಣ್ಣುಗಳನ್ನು ಅರೆಮುಚ್ಚಿಕೊಂಡೇ ಅರಚುತ್ತಿದ್ದ ಗಾಯಕಿಯ ಪಕ್ಕೆಗೆ ತಂಬೂರಿಯವ ತಂಬೂರಿಯಿಂದಲೇ ತಿವಿದ.  ಅವಳು ಗಕ್ಕನೆ ಹಾಡು ನಿಲ್ಲಿಸಿ ಕಣ್ಣುಗಳನ್ನು ಅಗಲವಾಗಿ ತೆರೆದು ನನ್ನನ್ನೇ ನೋಡಿದಳು.  ಒಬ್ಬಾತ, ಪುರುಚಲು ಗಡ್ಡದವ, ಮುಂದೆ ನುಗ್ಗಿ ಎರಡು ಕೈಗಳನ್ನೂ ಮೇಲೆತ್ತಿ "ಶಾಮೀ" ಎನ್ನುತ್ತಾ ಅಡ್ಡಬಿದ್ದೇಬಿಟ್ಟ.  ನನಗೆ ನಿಜವಾಗಿಯೂ ಗಾಬರಿಯಾಗಿಬಿಟ್ಟಿತು.  ಒಮ್ಮೆ ಸುತ್ತಲೂ ನೋಡಿದರೆ ಎಲ್ಲ ಕಿಟಕಿಗಳು ತೆರೆದಿವೆ!  ಒಂದಿಬ್ಬರು ತಂತಮ್ಮ ಹೊರಬಾಗಿಲುಗಳಲ್ಲಿ ನಿಂತು ತಮಾಷೆ ನೋಡುತ್ತಿದ್ದಾರೆ.
ಅಡ್ಡಬಿದ್ದವ ಎದ್ದ.  "ಶಾಮೀ ನೀವೇ ಕಾಪಾಡಬೇಕು.  ನೀವೇ ಆ ಪರಮಾತುಮ.  ಬದುಕಿಸೋದು ಸಾಯಿಸೋದು ಎಲ್ಲಾ ನಿಮ್ಮ ಕೈಲೇ ಇದೆ" ಅಂದ.  ಸಮ್ಮತಿಯಲ್ಲಿ ಗಾಯಕಿ ತಲೆಯಾಡಿಸಿದಳು.  ಪಕ್ಕದಲ್ಲಿದ್ದ ತಂಬೂರಿಯೂ ಒಮ್ಮೆ ಟಂಯ್ ಅಂದಿತು.  ನನಗೆ ದಿಕ್ಕೆಡುವಂತಾಯಿತು.
ಅವನು ಒಂದು ಹೆಜ್ಜೆ ಮುಂದಿಟ್ಟ.  ಮತ್ತೊಮ್ಮೆ "ಶಾಮೀ" ಎಂದು ಬಾಯಿ ತೆರೆಯುತ್ತಿದ್ದಂತೇ ಹಿಂದಿನಿಂದ  "ಇದೇನ್ರೀ ಇದೂ?" ಎಂಬ ನನ್ನ ಹೆಂಡತಿಯ ಗಾಬರಿದನಿ ಕೇಳಿಸಿತು.  ಅವನ ಗಮನ ತಕ್ಷಣ ಅವಳತ್ತ ತಿರುಗಿತು.  ಅವನು ಅವಳಿಗೂ ಒಂದು ನಮಸ್ಕಾರ ಹೊಡೆದ.  "ತಾಯೀ, ಪಾರ್ವತಿದೇವೀ, ನಿಮ್ ಪಾದಕ್ಕೆ ಬಿದ್ದೇ" ಅಂದ.  ಬಿದ್ದೇಬಿಡುತ್ತಾನೆಂದು ಹೆದರಿ ಅವಳು ಎರಡು ಹೆಜ್ಜೆ ಹಿಂದೆ ಹಾರಿದಳು.  ಅವನೇನೂ ಬೀಳಲಿಲ್ಲ.  ಹೆಂಗಸರಿಗೆ ಬರೀ ಆಶ್ವಾಸನೆಯಷ್ಟೇ ಸಾಕು ಅಂದುಕೊಂಡನೇನೋ.
ನನಗಿಂತಲೂ ನನ್ನ ಹೆಂಡತಿಯ ಗೊಂದಲ ಮೊದಲು ತಿಳಿಯಾಯಿತೆಂದು ಕಾಣುತ್ತದೆ.  "ಭಿಕ್ಷಾ ಕೇಳ್ಕೊಂಡು ಒಬ್ಬಿಬ್ಬರು ಬರೋದನ್ನ ನಾ ಕಂಡಿದ್ದೆ.  ಹೀಗೆ ಲೂಟಿ ಮಾಡೋರ ಥರಾ ಗುಂಪುಗಟ್ಟಿಕೊಂಡು ಬರೋರನ್ನ ನಾನಂತೂ ಎಲ್ಲೂ ನೋಡಿರ್ಲಿಲ್ಲ.  ಇದೇನು ನಿಮ್ಮ ಗೋಳು?"  ದನಿಯೆತ್ತರಿಸಿ ಪ್ರಶ್ನಿಸಿದಳು.
ಅವನು ಹಲ್ಲು ಗಿಂಜಿದ.  "ನಮಗೊಂದು ದೊಡ್ಡ ಭಿಕ್ಷಾ ಬೇಕು ತಾಯೀ" ಅಂದ.  "ನಿಮ್ಮನ್ನಲ್ಲದೇ ಇನ್ಯಾರನ್ನ ಕೇಳಲೀ?" ಎಂದೂ ಸೇರಿಸಿದ.
ಎಲಾ ಇವನ!  ಅದ್ಯಾವ ಭಾರೀ ಭಿಕ್ಷೆ ಇವನಿಗೆ ಬೇಕಾಗಿರೋದುಅಂಥಾ ಭಿಕ್ಷೆ ನಮ್ಮ ಮನೆಯಲ್ಲಿದೆಯೇಕೇಳಿಯೇಬಿಟ್ಟೆ.  ಅವನು ಹಾಗೆ ಬಾ ದಾರಿಗೆ ಎನ್ನುವಂತೆ ಒಮ್ಮೆ ನಕ್ಕು ಪಕ್ಕದ ಖಾಲೀ ಜಾಗದತ್ತ ಕೈಮಾಡಿದ.  "ಒಂದು ನಾಕು ದಿನ ನಿಮ್ ಜಾಗದಲ್ಲಿ ಗುಡಿಸ್ಲು ಹಾಕ್ಕೊಂಡಿರ್ತೀವಿ.  ನಾಕು ದಿನ ಅಷ್ಟೇ.  ಮಳೆಗಿಳೆ ನಿಂತಮೇಲೆ ಗಾಡಿ ಬುಟ್‌ಬುಡ್ತೀವಿ" ಅಂದ.  "ನಾಕೇ ದಿನ ತಾಯೀ."  ಗಾಯಕಿ ಕೀರಲು ದನಿ ಹೊರಡಿಸಿದಳು.  ತಂಬೂರಿ ಮಾತ್ರ ಸುಮ್ಮನಿತ್ತು.  ನಾಯಿಯೂ ಮೌನವಾಗಿತ್ತು.
"ನೋಡಪ್ಪ, ಅದು ನಮ್ ಜಾಗ ಅಲ್ಲ.  ನಮ್ಮನ್ನೇನೂ ಕೇಳಬೇಡಿ" ಅಂದಳು ನನ್ನ ಹೆಂಡತಿ.  "ನಡೀರೀ ಒಳಗೆ" ಎನ್ನುತ್ತಾ ನನ್ನನ್ನು ದಬ್ಬಿಕೊಂಡೇ ಒಳಬಂದು ಬಾಗಿಲು ಹಾಕಿದಳು.  ಅವಳೇನೋ ಗೊಣಗಿಕೊಳ್ಳುತ್ತಿದ್ದಳು.  ಭಿಕ್ಷುಕರನ್ನು ಬೈಯುತ್ತಿರಬಹುದು ಅಂದುಕೊಂಡೆ.  ಒಳಮನೆಗೆ ನಡೆಯುತ್ತಿದ್ದಂತೆ "ಬಾಗಿಲು ತೆಗೆಯೋ ಮೊದಲು ಯಾರು ಬಂದಿದ್ದಾರೆ ಅಂತ ನೋಡೋಕಾಗಲ್ವಾಮೊನ್ನೆ ತಾನೆ ಬಾಗಿಲಿಗೆ ಅದೇನೋ ಮ್ಯಾಜಿಕ್ ಹೋಲು ಗೀಲು ಅಂತ ಹಾಕಿಸಿದ್ದು ದಂಡಕ್ಕೆ" ಎಂದು ಗಟ್ಟಿಯಾಗಿಯೇ ಗೊಣಗುತ್ತಾ ಅವಳು ಅಡಿಗೆಮನೆಯತ್ತ ನಡೆದಳು.  ಗೊಣಗುಬೈಗಳು ನನಗೇ ಎಂದರಿವಾಯಿತು.  ಅಡಿಗೆಮನೆಯಿಂದ ಇನ್ನೂ ಜೋರಾಗಿಯೇ ಸದ್ದು ಬಂತು: "ಅದ್ಯಾವಳೋ ತಿರುಪೆಯವಳು ತೆರೆಯೋ ಬಾಗಿಲನೂ ರಾಮಾ ಅಂದ ಕೂಡಲೇ ತಾನೇ ಶ್ರೀರಾಮಚಂದ್ರ ಅಂದ್ಕೊಂಡು ಬಾಗಿಲು ತೆರೆದುಬಿಟ್ರು."
ಮಾತಿಗಿಂತಲೂ ದಟ್ಟವಾಗಿ ಬಂತು ಸುಟ್ಟ ಹಾಲಿನ ವಾಸನೆ.
ಅವಸರವಾಗಿದ್ದುದರಿಂದ ಆ ಗಳಿಗೆಯಲ್ಲಿ ಮೂತ್ರಕ್ಕೆ ಹೋಗುವುದು ನನಗೆ ಮುಖ್ಯವೆನಿಸಿತು.
ಮೈ ಹಗುರಾಗಿಸಿಕೊಂಡು ನಿರಾಳವಾಗಿ ಬಾಯಿ ಮುಕ್ಕಳಿಸಿ ಮುಖದ ಮೇಲೂ ನೀರು ಚಿಮುಕಿಸಿದ ಶಾಸ್ತ್ರ ಮಾಡಿ ತುಂಡು ಟವಲ್‌ನಿಂದ ಒರೆಸಿಕೊಳ್ಳುತ್ತಾ ಹಾಲ್‌ಗೆ ಬರುತ್ತಿದ್ದಂತೇ ಇವಳು ಟೀ ಲೋಟ ಹಿಡಿದು ಬಂದಳು.  "ತಗೋಳಿ, ಕುಡೀರಿ."  ಗಂಭೀರವಾಗಿ ಅಂದವಳು ಮರುಕ್ಷಣ ಕಿರುನಗೆ ನಕ್ಕಳು.  "ಕುಡಿಯಿಸಲೆಂದೇ ಟೀಯನು ತಂದೆ, ತೆರೆಯೋ ಬಾಯಿಯನು... ಪ್ರೇಮಾ..."  ಮುಸಿಮುಸಿ ನಕ್ಕಳು.
ಹಾಲು ಸುಟ್ಟ ವಾಸನೆ ಮಾಯವಾಗಿ ಜಾಸ್ಮಿನ್ ಫ್ಲೇವರ್ ರೂಮ್ ಫ್ರೆಷ್ನರ್‌ನ ಗಾಢ ಪರಿಮಳ ಮನೆಯಿಡೀ ತುಂಬಿಕೊಂಡಿತ್ತು.
ಕಣ್ಣುಜ್ಜಿಕೊಳ್ಳುತ್ತಾ ಎದ್ದುಬಂದ ಮಗಳು ಬಾಯಿ ತೆರೆದು ನಕ್ಕಳು.
ರಾತ್ರಿ ಕಳೆದು ಬೆಳಗಾಗಿ ಒಂದು ದಿನವಾಯಿತು.

*     *     *

ಮಾಮೂಲಿನಂತೆ ಚುಮುಚುಮು ಬೆಳಕಿನಲ್ಲಿ ಎದ್ದು ವಾಕಿಂಗ್ ಹೊರಟೆ.  ಗೇಟು ತೆರೆದು ಹೊರಗೆ ಕಾಲಿಡುತ್ತಿದ್ದಂತೇ ಕಲಸಿಹೋಗಿದ್ದ ನಿನ್ನೆಯ ರಂಗೋಲಿಯ ನಟ್ಟನಡುವೆ ಹಸಿರು ಗುಪ್ಪೆಯೊಂದು ಕಂಡು ಅಚ್ಚರಿಯಾಯಿತು.  ಕುತೂಹಲದಿಂದ ಬಾಗಿ ನೋಡಿದರೆ ಅದೊಂದು ನಾಯಿ.  ನನ್ನ ಹೆಂಡತಿ ಧಾರಾಳವಾಗಿ ಸುರಿದಿದ್ದ ಹಸಿರು ರಂಗೋಲಿ ಪುಡಿಯೆಲ್ಲಾ ಅದರ ಮೈಗಂಟಿಕೊಂಡು ಅದೊಂದು ಹಸಿರು ಮುದ್ದೆಯಂತೆ ಕಾಣುತ್ತಿತ್ತು.  ಯಾತರ ಪರಿವೆಯೂ ಇಲ್ಲದೇ ಆರಾಮವಾಗಿ ಪವಡಿಸಿತ್ತು.  ಥತ್, ಬೆಳಿಗ್ಗೆ ಬೆಳಿಗ್ಗೆಯೇ ಇದರ ದರ್ಶನ ಎಂದುಕೊಂಡು ಗಕ್ಕನೆ ಮುಖ ಹೊರಳಿಸಿ ಮುಂದೆ ಹೆಜ್ಜೆಯಿಟ್ಟವನು, ಹೆಂಗಸರಂತೆ ಮಾತಾಡುತ್ತಿದ್ದ, ಎಲ್ಲರೂ ಬೆನ್ನ ಹಿಂದೆ "ಸಂಗಡಿಕಿ" ಎಂದು ಕರೆದು ಮುಸಿಮುಸಿ ನಗುತ್ತಿದ್ದ, ನಾರಾಯಣನಿಗೆ ಡಿಕ್ಕಿ ಹೊಡೆದು ಮುಗ್ಗರಿಸಿದೆ.  ಗಾಬರಿಯಲ್ಲಿ ಬೀಳುವುದನ್ನು ತಪ್ಪಿಸಲು ಕೈಯಾಡಿಸಿದರೆ ಸಿಕ್ಕಿದ್ದು ಅವನ ನಡು.  ಬಲವಾಗಿ ಹಿಡಿದುಬಿಟ್ಟೆ.  ಅವನು "ಯವ್ವೀ!  ಬೆಳಿಗ್ಗೆಬೆಳಿಗ್ಗೇನೇ ಇದೇನಾಗೈತೆ ನಿಂಗೆ?" ಎಂದು ಅರಚಿ ನನ್ನ ಕೆನ್ನೆಗೆ ತಿವಿದ.  ಥತ್ ಎಂದುಕೊಂಡು ಎಡಕ್ಕೆ ಎಗರಿ "ಸಾರೀ" ಅಂದೆ.  ಅವನು ನನ್ನನ್ನು ನಿರ್ಲಕ್ಷಿಸಿ ಪಕ್ಕಕ್ಕೆ ತಿರುಗಿದ.  ಅವನ ನೋಟವನ್ನನುಸರಿಸಿ ನನ್ನ ಕಣ್ಣುಗಳೂ ಅತ್ತ ಹೊರಳಿದವು.  ಕಂಡ ನೋಟದಿಂದ ಅವಾಕ್ಕಾದೆ.
ಪಕ್ಕದ ಖಾಲಿ ಸೈಟಿನಲ್ಲಿ ಪಿರಮಿಡ್ ಒಂದು ಎದ್ದು ನಿಂತಿತ್ತು!
ಅದೊಂದು ಪಕ್ಕಾ ತ್ರಿಕೋನ.  ತಳದಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ಅಡಿಗಳಷ್ಟು ಅಗಲವಾಗಿತ್ತು.  ಮೂರೂ ಕಡೆ ಪ್ಲಾಸ್ಟಿಕ್ ಹಾಳೆಗಳ ಗೋಡೆ.  ಸಮನಾದ ಅಳತೆಯ ಬೂದುಗಪ್ಪು ಬಣ್ಣದ ನೂರಾರು ಪುಟ್ಟಪುಟ್ಟ ಪ್ಲಾಸ್ಟಿಕ್ ಹಾಳೆಗಳನ್ನು ಒಂದಕ್ಕೊಂದು ಸೇರಿಸಿ ಹೊಲಿದ ಹೊದಿಕೆ.  ಒಂದೂ ಸುಕ್ಕಿಲ್ಲದ ಅದನ್ನು ನೋಡಿದರೆ ಕಲ್ಲಿನಿಂದಲೇ ಕಟ್ಟಿರಬೇಕೆಂಬ ಅನುಮಾನ.  ಗಿಝಾ ಪಿರಮಿಡ್‌ನ ಮರಿ ಇರಬಹುದೇನೋ ಎಂಬ ಭ್ರಮೆ.  ಬಾಗಿಲೆಲ್ಲಿ ಎಂದು ಹುಡುಕಿದರೆ ಅದೆಲ್ಲೂ ಕಾಣಲಿಲ್ಲ.  ಹಾಗೆ ಕುತೂಹಲದಲ್ಲಿ ನೋಡುತ್ತಿದ್ದಂತೇ ನಾಯಿ ರಂಗೋಲಿಯ ನಡುವಿನಿಂದೆದ್ದು ಒಮ್ಮೆ ಮೈ ಒದರಲು ದಟ್ಟ ಹಸಿರು ಧೂಳು ಮೇಲೆದ್ದಿತು.  ಕಣ್ಣುಗಳ ಮುಂದೆ ಹಸಿರು ಪರದೆ.  ಏನೂ ಕಾಣಲಿಲ್ಲ.  "ಇದೇನು ಮಾರಾಯ್ರೇ ಇದೂ?" ಎನ್ನುತ್ತಾ ಪಕ್ಕಕ್ಕೆ ಹೊರಳಿದರೆ ಸಂಗಡಿಕಿ ಮಾಯವಾಗಿದ್ದ.  ಹಸಿರು ಧೂಳು ಕರಗುವುದನ್ನೇ ಕಾದು ರಸ್ತೆಯ ಉದ್ದಗಲಕ್ಕೂ ಕಣ್ಣು ಹಾಯಿಸಿದೆ.  ಅವನ ಸುಳಿವಿರಲಿಲ್ಲ.  ಬಂದಂತೇ ಕರಗಿಹೋಗಿದ್ದ.
ನಾಯಿ ಹಸಿರನ್ನೆಲ್ಲಾ ಒದರಿಕೊಂಡು ತನ್ನ ನಿಜರೂಪ ತಾಳಿ ಕರ್ರಗೆ ನಿಲ್ಲಲು ನನಗೆ ಅದರ ಗುರುತು ಹತ್ತಿತು.  ನಿನ್ನೆ ಸಂಜೆ ವಕ್ಕರಿಸಿದ್ದ ಭಿಕ್ಷುಕರ ಗುಂಪಿನಲ್ಲಿದ್ದ ಕರಿನಾಯಿ ಇದು.  ಅದೊಮ್ಮೆ ತಲೆಯನ್ನು ಪಟಪಟ ಒದರಿತು.  ನಿದ್ದೆಯಿಂದೆದ್ದ ನಮ್ಮ ಬೀದಿಯ ನಾಯಿಗಳೆಲ್ಲಾ "ಬೊಂವ್ವೋ" ಎಂದು ರಣಕಹಳೆ ಮೊಳಗಿಸುತ್ತಾ ಇದರತ್ತ ನುಗ್ಗಿಬಂದವು.  ಅವುಗಳ ನಾಯಕತ್ವ ವಹಿಸಿದ್ದುದು ಗಡವ ಭೀಮ.  ಅದರ ಧೈರ್ಯ, ಪರಾಕ್ರಮಗಳನ್ನು ನೋಡಿಯೇ ಬೀದಿಯ ಮಕ್ಕಳು ಅದಕ್ಕೆ ಭೀಮ ಎಂದು ಹೆಸರಿಟ್ಟಿದ್ದರು.  ಅದರ ಅನೇಕ ಶೌರ್ಯ ಸಾಹಸಗಳಿಗೆ ನಮ್ಮ ಬೀದಿ ಸಾಕ್ಷಿಯಾಗಿತ್ತು.  ನಮ್ಮ ಇಡೀ ಬೀದಿಯ ಹೆಣ್ಣುನಾಯಿಗಳಿಗೆಲ್ಲಾ ಯಜಮಾನನಾಗಿದ್ದ ಇದು ಹೊರಗಿನ ಯಾವುದೇ ಗಂಡುನಾಯಿಯೂ ಇತ್ತ ಸುಳಿಯದಂತೆ ನೋಡಿಕೊಳ್ಳುತ್ತಿತ್ತು.  ಕನ್ಯಾಮಾಸದಲ್ಲಂತೂ ಇದರ ದರಬಾರು ಹೇಳತೀರದು.  ಬೀದಿಯನ್ನು ಪದಾಕ್ರಾಂತಗೊಳಿಸಿಕೊಂಡ ಮೇಲೆ ಅಕ್ಕಪಕ್ಕದ ಬೀದಿಗಳಿಗೆ ಚೈತ್ರಯಾತ್ರೆ ಹೊರಡುತ್ತಿತ್ತು.  ಅದನ್ನು ಕಂಡರೆ ನಮ್ಮ ಬೀದಿಯ ಮಕ್ಕಳಿಗೆ ಹೆಮ್ಮೆ, ಹೆಂಗಸರಿಗೆ ಅಭಿಮಾನ, ಗಂಡಸರಿಗೆ ಹೊಟ್ಟೆಯುರಿ.  ಈಗ ಇದ್ದಕ್ಕಿದ್ದಂತೆ ತನ್ನ ಎಲ್ಲೆಯೊಳಗೆ ಅತಿಕ್ರಮಿಸಿದ್ದ ಕರಿನಾಯಿಯತ್ತ ಅದು ರೋಷಾವೇಶದಿಂದ ಮುನ್ನುಗ್ಗಿತು.
ಕರಿನಾಯಿ ನೆಟ್ಟಗೆ ನಿಂತು ವೈರಿಗಳ ಗುಂಪನ್ನೇ ತೀಕ್ಷ್ಣವಾಗಿ ನೋಡಿತು.  ಮುಂದೆ ನಡೆದದ್ದು ಅಸಾಧಾರಣ ಘಟನೆ.  ಕರಿನಾಯಿಯ ನೋಟದಲ್ಲಿ ಅದೇನು ಶಕ್ತಿಯಿತ್ತೋ, ಬೀದಿ ನಾಯಿಗಳು ಒಮ್ಮೆಲೆ ಸ್ತಬ್ಧವಾದವು.  ಭೀಮ ಬೆಚ್ಚಿದಂತೆ ಗಕ್ಕನೆ ನಿಂತುಬಿಟ್ಟಿತು.  ಕರಿನಾಯಿ ಒಂದು ಹೆಜ್ಜೆ ಮುಂದಿಟ್ಟಿತು.  ಬೀದಿನಾಯಿಗಳು ಭೀಮನನ್ನು ಬಿಟ್ಟು ಕುಂಯ್ ಕುಂಯ್ ಎನ್ನುತ್ತಾ ಹಿಂತಿರುಗಿ ನೋಡದೇ ಓಡಿಹೋದವು.  ಭೀಮ ಮಾತ್ರ ಗರಬಡಿದಂತೆ ನಿಂತುಬಿಟ್ಟಿತ್ತು.  ಕರಿನಾಯಿ ಮುಂದೆ ಹೆಜ್ಜೆ ಹಾಕಿತು.  ಅದು ಹತ್ತಿರಾಗುತ್ತಿದ್ದಂತೇ ಭೀಮ ಕುಂಯ್‌ಗರೆಯತೊಡಗಿತು.  ಸಪೋರ್ಟ್‌ಗಾಗಿ ಸುತ್ತಲೂ ನೋಡಿದರೆ ಒಂದು ಪಿಳ್ಳೆಯೂ ಇಲ್ಲ.  ಅದರ ಕಣ್ಣುಗಳಲ್ಲಿ ಹಿಂದೆಂದೂ ಕಂಡಿರದಿದ್ದ ಅಸಹಾಯಕತೆ ಮಡುಗಟ್ಟತೊಡಗಿತು.  ಪೊಗದಸ್ತಾಗಿ ಬೆಳೆದ ಪಠಾಣನಂತೆ ತನ್ನತ್ತ ಗಂಭೀರನಡಿಗೆಯಲ್ಲಿ ಬರುತ್ತಿದ್ದ ಕರಿನಾಯಿಯನ್ನೇ ನೋಡುತ್ತಾ ಮುದುರಿಕೊಳ್ಳತೊಡಗಿತು.  ಕರಿನಾಯಿ ಇನ್ನೂ ಹತ್ತಿರಾದಂತೆ ಭೀಮ ಧೊಪ್ಪನೆ ಕೆಳಗುರುಳಿ ಬೆನ್ನು ಕೆಳಗೆ ಮಾಡಿ ಕಾಲುಗಳನ್ನು ಅಗಲಿಸಿಕೊಂಡು ಶರಣಾಗತಿ ಹೇಳಿಬಿಟ್ಟಿತು.  ಅದೊಂದು ಕರುಣಾಜನಕ ನೋಟ.  ಕರಿನಾಯಿ ಭೀಮನ ಸುತ್ತಲೂ ಒಮ್ಮೆ ಸುತ್ತುಹಾಕಿ ಅದರ ಎದೆ ಮೇಲೆ ಒಂದು ಕಾಲನ್ನಿಟ್ಟು ನಿಂತಿತು.  ಬಟಾಬಯಲಿನಲ್ಲಿ ತೆರೆದುಕೊಂಡು ಬಿದ್ದಿದ್ದ ಭೀಮನ ಶಿಶ್ನದ ಮೇಲೇ ನೇರವಾಗಿ ಉಚ್ಚೆ ಹೊಯ್ದಿತು.
ಅದೆಷ್ಟೋ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದ್ದ ಭೀಮನ ಆಳ್ವಿಕೆ ಹೀನಾಯವಾಗಿ ಕೊನೆಯಾಗಿತ್ತು.
ಗರಬಡಿದವನಂತೆ ನಿಂತುಬಿಟ್ಟೆ.  ನಿಮಿಷದ ನಂತರ ಸಾವರಿಸಿಕೊಂಡು ಸುತ್ತಲೂ ನೋಡಲಾಗಿ ಎಲ್ಲ ಬಾಗಿಲುಗಳೂ ತೆರೆದುಕೊಂಡಿವೆ.  ಎಲ್ಲರೂ ಬೀದಿಯಲ್ಲಿ ನಡೆಯುತ್ತಿರುವ ನಾಟಕವನ್ನು ಎವೆಯಿಕ್ಕದೇ ನೋಡುತ್ತಿದ್ದಾರೆ.  ಅದ್ಯಾವಾಗ ಬಂದಳೋ, ನನ್ನ ಹೆಂಡತಿಯೂ ಬಂದು ನನ್ನ ಬೆನ್ನ ಹಿಂದೆಯೇ ನಿಂತಿದ್ದಾಳೆ.
ಭೀಮನ ಎದೆಯ ಮೇಲಿಂದ ಕರಿನಾಯಿ ಕಾಲು ತೆಗೆದೊಡನೇ ಎಲ್ಲರ ದೃಷ್ಟಿಯೂ ನನ್ನತ್ತ ತಿರುಗಿತು.  "ಭರ್ಜರಿ ಗಂಡು ನಾಯಿ!"  ಮೆಚ್ಚುಗೆಯಲ್ಲಿ ಅಂದಳು ಎದುರುಮನೆಯ ಪಟ್ಟಾಭಿರಾಮನ ಹೆಂಡತಿ.  ಸಮ್ಮತಿಯಲ್ಲಿ ಒಂದೆರಡು ಹೆಣ್ಣು ಉಸಿರುಗಳು ಹ್ಞೂಂಗರೆದವು.  ಪಟ್ಟಾಭಿರಾಮ ಹೆಂಡತಿಯತ್ತ ದುರುಗುಟ್ಟಿ ನೋಡಿದ.  ಅವಳು ತಲೆತಗ್ಗಿಸಿದಳು.  ಜನ ನಾಯಿಬೆಕ್ಕುಗಳನ್ನು ಇಷ್ಟಪಡುವುದು, ಅದರಲ್ಲೂ ಹೆಂಗಸರು ಗಂಡುನಾಯಿಗಳನ್ನು ಮೆಚ್ಚುವುದು ಪಟ್ಟಾಭಿರಾಮನಿಗೆ ಇಷ್ಟವಾಗುವುದಿಲ್ಲ.  ಇವೆಲ್ಲಾ ಬೂರ್ಜ್ವಾ ಪಳೆಯುಳಿಕೆಗಳು ಎಂದು ಮೂಗು ಮುರಿಯುತ್ತಾನೆ.
ಹೆಂಡತಿ ತಲೆ ತಗ್ಗಿಸಿದೊಡನೇ ಪಟ್ಟಾಭಿರಾಮ ನನ್ನತ್ತ ತಿರುಗಿ "ಹೆಹೆಹೆ" ಎಂದು ಹಲ್ಲು ಬಿಟ್ಟ.  ಎರಡು ಹೆಜ್ಜೆ ಮುಂದೆ ಬಂದು "ನಿಮ್ಮದಾಹೊಸದಾಗಿ ತಂದಿರೇನು?" ಎಂದು ಪ್ರಶ್ನಿಸಿದ.  ನನಗೆ ಮುಜುಗರವಾಯಿತು.  "ಇಲ್ಲಾ ಇವರೇ.  ಯಾರದೋ ಗೊತ್ತಿಲ್ಲ" ಅಂದೆ.  ಅದ್ಯಾಕೋ ಸಂಕೋಚವಾಗಿ ಭಿಕ್ಷುಕರ ಸುದ್ಧಿಯೆತ್ತಲಿಲ್ಲ.  "ಅದೆಲ್ಲಿಂದಲೋ ಬಂದುಬಿಟ್ಟಿದೆ" ಅಂದಳು ನನ್ನ ಹೆಂಡತಿ ಬೇಸರದಲ್ಲಿ ಮುಖ ಕಿವಿಚುತ್ತಾ.  ಈ ಕರಿನಾಯಿ ನಮ್ಮದೆಂದು ಇವರೆಲ್ಲರೂ ತಿಳಿದದ್ದು ಅವಳಿಗೆ ಸ್ವಲ್ಪವೂ ಹಿಡಿಸಿರಲಿಲ್ಲ.
ಇದ್ಯಾತರ ಪರಿವೆಯೂ ಇಲ್ಲದೇ ಕರಿನಾಯಿ ನಿಧಾನವಾಗಿ ನಡೆದು ಪಿರಮಿಡ್ ಸಮೀಪಿಸಿತು.  ಆಗಲೇ ಎಲ್ಲರ ಕಣ್ಣುಗಳೂ ಅತ್ತ ಹೊರಳಿದ್ದು.  ಪಿರಮಿಡ್ ಕಣ್ಣಿಗೆ ಬಿದ್ದದ್ದೇ ಎಲ್ಲರ ಬಾಯಲ್ಲೂ ಸಖೇದಚ್ಚರಿಯ ಉದ್ಗಾರಗಳು.  ನನ್ನ ಹೆಂಡತಿಯಂತೂ ಉಸಿರಾಡುವುದನ್ನೂ ಮರೆತು ಬೆಪ್ಪಾಗಿ ನಿಂತುಬಿಟ್ಟಳು.  ಕರಿನಾಯಿ ನಮ್ಮ ಕಾಂಪೌಂಡ್ ಕಡೆಗಿದ್ದ ಪಿರಮಿಡ್‌ನ ಗೋಡೆಯತ್ತ ಎಡಬಲ ನೋಡದೇ ಹೆಜ್ಜೆ ಹಾಕಿತು.  ಅದು ಸಮೀಪಿಸುತ್ತಿದ್ದಂತೇ ಗೋಡೆಯ ನಟ್ಟನಡುವೆ ಅದು ಒಳಗೆ ತೂರುವಷ್ಟು ಸೀಳು ಕಾಣಿಸಿಕೊಂಡಿತು.  ನಾಯಿ ಹಿಂತಿರುಗಿ ನೋಡದೇ ಸೀಳಿನೊಳಗೆ ಪ್ರವೇಶಿಸಿತು.  ಅದರ ಬಾಲದಂಚು ಮರೆಯಾದೊಡನೇ ಸೀಳು ಮುಚ್ಚಿಕೊಂಡಿತು.  ಬಿರುಕು ಬಿಟ್ಟಿದ್ದ ಗುರುತೂ ಇಲ್ಲದಂತೆ ಗೋಡೆ ಮೊದಲಿನಂತೇ ಆಗಿಬಿಟ್ಟಿತು.  ಇದೇನು ಕನಸೇಈ ಸಲ ಎಲ್ಲರ ಉದ್ಗಾರಗಳೊಡನೆ ನನ್ನ ಉದ್ಗಾರವೂ ಸೇರಿಕೊಂಡಿತು.
ಪಿರಮಿಡ್ ಬಗ್ಗೆ ಎಲ್ಲರದೂ ಪ್ರಶ್ನೆಗಳು.  ಎಲ್ಲರ ಪ್ರಶ್ನೆಗಳಿಗೆ ಎಲ್ಲರೂ ಉತ್ತರಿಸಲು ಹೋಗಿ ಗೊಂದಲವೋ ಗೊಂದಲ.  ಅದು ಭಿಕ್ಷುಕರದಿರಬಹುದೇನೋ ಎಂಬ ಅನುಮಾನ ಕರಿನಾಯಿಯಿಂದಾಗಿ ನನಗೆ ಬಂದರೂ ಏನೋ ಹಿಂಜರಿಕೆಯಾಗಿ ಸುಮ್ಮನೆ ನಿಂತೆ.  ಕೊನೆಗೆ ತಿಕಸ್ವಾಮಿಗೂ (ಅವನಿಗೆ ಅಂಥಾ ಹೆಸರು ಯಾಕೆ ಬಂತು ಅಂತ ಆಮೇಲೆ ಹೇಳುತ್ತೇನೆ) ಅದು ಹೊಳೆದುಬಿಟ್ಟಿತೇನೋ, ಇದ್ದಕ್ಕಿದ್ದಂತೆ ನನ್ನತ್ತ ತಿರುಗಿ "ನಿನ್ನೆ ಸಾಯಂಕಾಲ ನಿಮ್ಮನೇ ಮುಂದೆ ನಿಂತಿದ್ರಲ್ಲಾ ಆ ತಿರುಪೆಯವರ ಜೊತೆ ಇತ್ತಲ್ವಾ ಈ ನಾಯಿ?" ಎಂದು ಕೂಗಿದ.  ಮರುಗಳಿಗೆಯಲ್ಲಿ ಒಮ್ಮೆಲೆ ನೆನಪಾದಂತೆ ಎಲ್ಲರೂ "ಹೌದಲ್ವಾನಮಗೆ ಮರೆತೇಹೋಗಿತ್ತು!" ಎಂದು ಉದ್ಗರಿಸಿದರು.  ಗೇಟು ನೂಕಿಕೊಂಡು ಕಣ್ಣುಜ್ಜುತ್ತಾ ಬಂದ ಮಗಳು "ಓಹ್ ಎಷ್ಟು ದೊಡ್ಡ ಪಿರಮಿಡ್!  ನಮ್ ಮನೇಗಿಂತ್ಲೂ ಎತ್ರ!" ಅಂದಳು.  ಸುತ್ತಲೂ ಒಮ್ಮೆ ಕಣ್ಣಾಡಿಸಿ "ನಮ್ಮನೆ ಅಷ್ಟೇ ಅಲ್ಲ, ಸಂದೀಪ್ ಮನೆ, ಸೋನಿಯಾ ಮನೆ, ರೋಹಿತ್ ಮನೆ, ನರ್ಮದಾ ಮನೆ, ಗಾಯತ್ರಿ ಮನೆ, ಸುಬ್ಬು ಮನೆ, ಪರ್ವೀನ್ ಮನೆ, ಎಲ್ಲಾ ಮನೆಗಳಿಗಿಂತ್ಲೂ ಎತ್ರ.  ಅಬ್ಬ!" ಎಂದು ಕೂಗಿದಳು.  ತನ್ನಮ್ಮನ ಹತ್ತಿರ ಸರಿದು ಸಣ್ಣನೆಯ ದನಿಯಲ್ಲಿ "ಸಂಗಡಿಕಿ ಅಂಕಲ್ ಮನೆಗಿಂತ್ಲೂ ಎತ್ರ ಅಲ್ವಮ್ಮ?" ಎಂದು ಪಿಸುಗಿದಳು.

*     *     *

ತಿಕಸ್ವಾಮಿಯ ಹೆಸರಿನ ವೃತ್ತಾಂತವನ್ನು ನಿಮಗೆ ಈಗಲೇ ಹೇಳಿಬಿಡಬೇಕು.  ಮುಂದಿನ ಅವಾಂತರಗಳನ್ನು ವರ್ಣಿಸಹೊರಟಾಗ ಅದು ಮರೆತುಹೋಗಿಬಿಡಬಹುದು.
ಅವನ ಹೆಸರು ಟಿ. ಕೆ. ಸ್ವಾಮಿ ಅಂತ.  ಎರಡು ಮೂರು ವರ್ಷಗಳ ಹಿಂದೆ ನವೆಂಬರ್ ಒಂದರಂದು ನಾವೆಲ್ಲಾ ಗುಂಪು ಕಟ್ಟಿಕೊಂಡು ಹರಟೆ ಹೊಡೆಯುತ್ತಿದ್ದಾಗ ಯಾರೋ ಬರೀ ಕನ್ನಡದಲ್ಲೇ ಮಾತಾಡಬೇಕೆಂದು ಸೂಚಿಸಿ, ಸೂಚನೆಯನ್ನು ಎಲ್ಲರೂ ಅನುಮೋದಿಸಿ, ಅದರಂತೆ ನಡೆಯಲು ಹೆಣಗಾಡುತ್ತಿದ್ದಾಗ, ಹೆಣಗಾಡಿ ನಗುತ್ತಿದ್ದಾಗ, ಮತ್ಯಾರೋ ನಮ್ಮೆಲ್ಲರ ಇನಿಷಿಯಲ್ಸ್ ಅನ್ನೂ ಕನ್ನಡದಲ್ಲೇ ಹೇಳಬೇಕೆಂದು ತಾಕೀತು ಮಡಿ ಅದಕ್ಕೂ ಸಮ್ಮತಿಸಿ, ಹಾಗೆ ಹೇಳಿಕೊಳ್ಳುತ್ತಿದ್ದಂತೇ ಟಿ. ಕೆ. ಸ್ವಾಮಿ ಸದ್ದಿಲ್ಲದೇ ಜಾಗ ಖಾಲಿ ಮಾಡಿದ್ದು ಯಾರ ಗಮನಕ್ಕೂ ಬರಲೇ ಇಲ್ಲ.  ಕೊನೆಗೆ ಸಂಗಡಿಕಿ ಅವರೆಲ್ಲಿ ಅಂದಾಗಲೇ ಆತ ನಮ್ಮ ನಡುವೆ ಇದ್ದ ಎಂಬುದು ನಮಗೆ ನೆನಪಾದದ್ದು.  ಅದ್ಯಾಕೆ ಸದ್ದಿಲ್ಲದೇ ಓಡಿಹೋದ ಎಂದು ತಲೆಕೆರೆದುಕೊಳ್ಳುತ್ತಿದ್ದಂತೇ ಸಂಗಡಿಕಿಯೇ ನಗುತ್ತಾ ಅದ್ಯಾಕೆ ಓಡಿಹೋದದ್ದು ಅಂತ ನಂಗೊತ್ತು.  ಅವರ ಇನಿಷಿಯಲ್ಸ್ ಅನ್ನೂ ಕನ್ನಡದಲ್ಲೇ ಹೇಳಿದ್ರೆ ಆಗೋ ಅಭಾಸ ಅವರಿಗೆ ಹೊಳೆದುಹೋಗಿರಬೇಕು.  ಟಿ ಅಂದ್ರೆ ಅವರೂರು ತಿಮಕಾಪುರ, ಕೆ ಅಂದ್ರೆ ಅವರಪ್ಪನ ಹೆಸರು ಕರುಗಯ್ಯ.  ಇನ್ನು ಅವೆರಡನ್ನೂ ಒಟ್ಟಾಗಿ ಸೇರಿಸಿ ಕನ್ನಡದಲ್ಲಿ ಹೇಳಿದ್ರೆ ಏನಾಗುತ್ತೆ ಹೇಳಿ? ಎಂದು ಕೀಟಲೆಯ ನಗು ನಕ್ಕು ಭಯಂಕರವಾಗಿ ನಾಚಿಕೊಂಡು ಪಕ್ಕಕ್ಕೆ ಮುಖ ಹೊರಳಿಸಿದಾಗ ಎಲ್ಲರೂ ನಕ್ಕುಬಿಟ್ಟಿದ್ದೆವು.  ಆ ದಿನದಿಂದ ಟಿ. ಕೆ. ಸ್ವಾಮಿಯನ್ನು ಎದುರಿಗೆ ಸ್ವಾಮಿಯವರೇ ಅಂತ ಸಂಬೋಧಿಸಿದರೂ ಹಿಂದಿನಿಂದ ಎಲ್ಲರೂ ತಿಕಸ್ವಾಮಿ ಎಂದೇ ಕರೆಯುತ್ತಿದ್ದರು.  ಅವನ ಬಗ್ಗೆ ಮಾತು ಬಂದಾಗಲೆಲ್ಲಾ ನನ್ನ ಹೆಂಡತಿಯೂ "ಆ ಸ್ವಾಮಿ ಇಲ್ವಾ..." ಎಂದು ಮಾತು ಆರಂಭಿಸುತ್ತಾಳೆ.  ಹಾಗೆ ಹೇಳುವಾಗೆಲ್ಲಾ "ಆ" ಎಂಬುದಕ್ಕೆ ಒತ್ತು ನೀಡಿ, ತುಟಿಯಂಚಿನಲ್ಲಿ ತುಂಟನಗೆ ತುಳುಕಿಸುತ್ತಾಳೆ.  ನಾನೇನಾದರೂ ಬೇರಾವುದೋ ಧ್ಯಾನದಲ್ಲಿದ್ದು ಯಾವ ಸ್ವಾಮಿಯೇ? ಅಂದರೆ "ಅಯ್ ಹೋಗಪ್ಪ, ನೀವೊಬ್ರು.  ಗೊತ್ತಾಗ್ಲೇ ಇಲ್ವಾಅದೇ ಅದು ಅದೂರೀ... ಅದರ ಸ್ವಾಮಿ" ಎಂದು ವಿವರಿಸಿ ಜೋರಾಗಿಯೇ ನಕ್ಕುಬಿಡುತ್ತಾಳೆ.  ಪಕ್ಕದ ಮನೆಯ ಗಂಗಣ್ಣಿಗೆ ಅಂಥಾ ಮಡಿವಂತಿಕೆಯೇನೂ ಇಲ್ಲ.  ಆ ತಿಕಸ್ವಾಮಿ ಕಣ್ರೀ ಎಂದು ಗಂಡ ತ್ರಿಯಂಬಕನಿಗೆ ಕೂಗಿ ಹೇಳುವುದು ಸುತ್ತಲ ಹತ್ತು ಮನೆಗಳಿಗೆ ಕೇಳಿಸುತ್ತದೆ.
ನಮ್ಮ ಬೀದಿಯ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಈ ತಿಕಸ್ವಾಮಿ.  ಉಪಾಧ್ಯಕ್ಷ ಪಟ್ಟಾಭಿರಾಮ.  ಇಬ್ಬರಿಗೂ ಒಬ್ಬರನ್ನೊಬ್ಬರು ಕಂಡರೆ ಆಗುವುದಿಲ್ಲ.  ಅದೆಷ್ಟೋ ಸಲ ಮೀಟಿಂಗ್‌ಗಳಲ್ಲಿ ಇವರಿಬ್ಬರ ಮನಸ್ತಾಪಗಳನ್ನು ಪರಿಹರಿಸುವುದರಲ್ಲೇ ನಮ್ಮ ಸಮಯ ವ್ಯರ್ಥವಾಗುತ್ತದೆ.  ನಾರಾಯಣ, ಪಟ್ಟಾಭಿರಾಮನ ಕಟ್ಟಾ ಅಭಿಮಾನಿ.  ಅವನಿಗೆ ಸಂಗಡಿಕಿ ಎಂದು ಹೆಸರಿಟ್ಟದ್ದು ತಿಕಸ್ವಾಮಿ.  ಇಬ್ಬರ ಮನೆಗಳೂ ಅಂಟಿಕೊಂಡಂತೇ ಇವೆ.  ಆದರೂ ಒಬ್ಬರಿಗೊಬ್ಬರಿಗೆ ಮಾತಿಲ್ಲ.  ತಿಕಸ್ವಾಮಿಗೆ ವಯಸ್ಸು ಐವತ್ತು ದಾಟಿದೆ.  ಅವನಿಗೆ ಇಬ್ಬರು ಹೆಂಡತಿಯರು.  ಮಕ್ಕಳಿಲ್ಲ.  ಸಂಗಡಿಕಿಗೆ ಮದುವೆಯಾಗಿಲ್ಲ.  ಆಗುವುದೂ ಇಲ್ಲ ಎನ್ನುವುದು ಎಲ್ಲರ ಅಭಿಮತ.
ಪ್ಲಾಸ್ಟಿಕ್ ಪಿರಮಿಡ್ ಭಿಕ್ಷುಕರದ್ದು ಎಂಬ ಅನುಮಾನ ನಂಬಿಕೆಯಾಗಿ ಬೆಳೆದು ಎಲ್ಲರ ಮನದಲ್ಲೂ ನೆಲೆನಿಲ್ಲುವ ಹೊತ್ತಿಗೆ ಅದನ್ನು ಧೃಡೀಕರಿಸುವಂತೆ ರಸ್ತೆಯ ಕಡೆಗಿದ್ದ ಪಿರಮಿಡ್ ಗೋಡೆಯಲ್ಲಿ ಸೀಳು ಕಾಣಿಸಿಕೊಂಡಿತು.  ತಿರುಪೆಯವರು ಒಬ್ಬೊಬ್ಬರಾಗಿ ಹೊರಬಂದರು.  ನಿನ್ನೆ ಸಂಜೆ ಕಂಡಿದ್ದ ಅದೇ ಗಂಡಸರು, ಹೆಂಗಸರು, ಚಿಳ್ಳೆಪಿಳ್ಳೆಗಳು.  ಎಲ್ಲರಿಗೂ ಮುಂದಿದ್ದವನು ಪುರುಚಲು ಗಡ್ಡದವನು.  ನೇರವಾಗಿ ನನ್ನತ್ತ ಬಂದ.  "ಶಾಮೀ" ಎನ್ನುತ್ತಾ ಕೈಯೆತ್ತಿ ಮುಗಿದ.  "ತಮ್ಮ ದಯ.  ಏನೋ ಒಂದು ನೆಲೆಯಾಯ್ತು" ಎನ್ನುತ್ತಾ ಪಿರಮಿಡ್‌ನತ್ತ ಕೈತೋರಿದ.  ನನ್ನ ಹೆಂಡತಿ ಮುಂದೆ ನುಗ್ಗಿದಳು.  "ಅಲ್ಲಪ್ಪಾ, ಏನೋ ಗುಡಿಸಲು ಹಾಕ್ಕೋತಾರೆ ಅಂದ್ರೆ... ಈ ಥರಾ ತೆಂಗಿನ ಮರದೆತ್ತರ ಎಬ್ಬಿಸಿ ನಿಲ್ಲಿಸಿಬಿಡೋದಾನಿನ್ನನ್ನೇನು ಫೆರೋ ಮಹಾರಾಜ ಅಂತ ತಿಳಕೊಂಡಿದ್ದೀಯೋ ಹೇಗೆ?" ಅಂದಳು ದನಿಯೆತ್ತರಿಸಿ.  ಅವನೂ "ತಾಯೀ, ಪಾರ್ವತೀದೇವೀ" ಎನ್ನುತ್ತಾ ನಡು ಬಾಗಿಸಿದ.  "ನಾವು ಜನ ಜಾಸ್ತಿ ಕಣವ್ವಾ.  ಅದ್ರಲ್ಲಿ ಅಂತಸ್ತು ಬೇರೆ.  ಇರೋದು ನಾಕು ದಿನವಾದ್ರೂ ಎಲ್ಲರಿಗೂ ಅನುಕೂಲವಾಗಿರಬೇಕಲ್ವಾ ನಮ್ಮವ್ವಾ?" ಅಂದ.  ಒಮ್ಮೆ ಲೊಚಗುಟ್ಟಿ "ನನ್ನನ್ನ ಅದೆಂಥದೋ ಮಾರಾಜ ಅಂದ್ರಾಅದೆಲ್ಲಾ ಆ ಕಾಲಕ್ಕೇ ಆಗೋಯ್ತು ಕಣ ನಮ್ಮವ್ವಾ.  ಆ ಐಭೋಗ ಈಗ ಎಲ್ಬಂತು ಬುಡಿ?" ಎನ್ನುತ್ತಾ ಕಣ್ಣೊರೆಸಿಕೊಂಡ.  ನನ್ನ ಹೆಂಡತಿ ಮತ್ತೆ ಬಾಯಿ ತೆರೆಯುವಷ್ಟರಲ್ಲಿ ಪಟ್ಟಾಭಿರಾಮನ ಹೆಂಡತಿ ಮುಂದೆ ಬಂದಳು.  "ಇರಲಿ ಬಿಡ್ರೀ ಲಲಿತಮ್ಮ.  ಇಂಥಾ ಒಂದು ಪಿರಮಿಡ್ ನಮ್ ಬೀದಿಲಿರೋದು ನಮಗೆಲ್ಲಾ ಒಂದು ಹೆಮ್ಮೆ, ಗೌರವ.  ಊರಿಗೇ ಲಕ್ಷಣ" ಅಂದಳು.  ಪಟ್ಟಾಭಿರಾಮ ಹೆಂಡತಿಯತ್ತ ಮೆಚ್ಚುಗೆಯಿಂದ ನೋಡಿದ.  ನನ್ನತ್ತ ತಿರುಗಿ "ಸೋವಿಯೆತ್ ರಷ್ಯಾದಲ್ಲಿ ಸಖತ್ ಪಿರಮಿಡ್‌ಗಳಿವೆ ಇವರೇ.  ನನ್ ಹೆಂಡ್ತೀಗೆ ಎಲ್ಲಾನೂ ಪುಸ್ತಕಗಳಲ್ಲಿ ತೋರ‍್ಸಿದ್ದೀನಿ.  ಕಲರ್ ಕಲರ್ ಪುಸ್ತಕಗಳು.  ಮಾಸ್ಕೋದಿಂದ ತರಿಸಿದ್ದು, ನಾನು ಸಣ್ಣವನಾಗಿದ್ದಾಗ.  ನಮ್ ದೇಶದಲ್ಲೂ ಪಿರಮಿಡ್ ಇದ್ರೆ ಎಷ್ಟು ಚಂದ ಅಂತಿದ್ಲು.  ಇವಳ ಆಸೆ ಈವತ್ತು ಪೂರೈಸ್ತು ನೋಡಿ" ಅಂದ.
ಆ ಬೆಳಿಗ್ಗೆ ನಾನು ವಾಕಿಂಗ್ ಹೋಗಲಿಲ್ಲ.  ಅದೆಷ್ಟೋ ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದಿದ್ದ ದಿನಚರಿ ಏರುಪೇರಾಗಿತ್ತು.  ನಿನ್ನೆ ಗೆಳೆಯ ಆಷ್ಪಾಕ್ ಅಹ್ಮದ್ ಬಿರಿಯಾನಿ ತುಂಬಿಸಿ ಕೊಟ್ಟಿದ್ದ ಕ್ಯಾರಿಯರ್‌ಗೆ ನನ್ನ ಹೆಂಡತಿ ಕಾಯನ್ನ, ಅವರೆಕಾಯಿ ಗೊಜ್ಜು, ಒಗ್ಗರಣೆ ಮೊಸರನ್ನ ತುಂಬಿಸಿಟ್ಟಿದ್ದಳು.  ಆಫೀಸಿಗೆ ಹೋಗುವ ದಾರಿಯಲ್ಲಿ ನಾನದನ್ನು ಅವನ ಮನೆಗೆ ತಲುಪಿಸಬೇಕಾಗಿತ್ತು.  ಈ ಪಿರಮಿಡ್ ಗೊಂದಲದಲ್ಲಿ ಅದು ಮರೆತೇಹೋಗಿ ಕ್ಯಾರಿಯರ್ ದಿನವಿಡೀ ನನ್ನ ಕಾರಿನಲ್ಲೇ ಉಳಿದುಬಿಟ್ಟಿತು.  ಸಂಜೆ ಮನೆಗೆ ಹಿಂತಿರುಗುವಾಗ ಕಣ್ಣಿಗೆ ಬಿದ್ದು ತೆರೆದರೆ ಎಲ್ಲವೂ ಹಾಳಾಗಿಹೋಗಿದ್ದವು.  ಬೇಸರದಿಂದಲೇ ಮನೆಗೆ ಹಿಂತಿರುಗಿದೆ.  ಬೀದಿಯಲ್ಲಿ ಮಕ್ಕಳೆಲ್ಲಾ "ನೋಡ್ ನೋಡ್ ಪಿರಮಿಡ್ ನೋಡ್..." ಎಂದು ಕವಿತೆ ಕಟ್ಟಿಕೊಂಡು ಒಟ್ಟಾಗಿ ಹಾಡುತ್ತಿದ್ದರು.  ಗುಂಪಿನಲ್ಲಿ ನನ್ನ ಮಗಳನ್ನು ಹುಡುಕಿದೆ.  ಕಾಣಲಿಲ್ಲ.  ಮನೆಗೆ ಬಂದರೆ ಅವಳು ಮೂಲೆಯಲ್ಲಿ ಕುಳಿತು ಓದಿಕೊಳ್ಳುತ್ತಿದ್ದಳು.  "ಆಡೋಕೆ ಹೋಗ್ಲಿಲ್ವಾ ಪುಟ್ಟೀನಿನ್ ಫ್ರೆಂಡ್ಸೆಲ್ಲಾ ಪಿರಮಿಡ್ ಮುಂದೇನೇ ಇದ್ದಾರೆ" ಅಂದೆ ಅವಳ ಪಕ್ಕ ಕೂರುತ್ತಾ.  ಅವಳು ತಲೆ ಅಲುಗಿಸಿದಳು.  "ಇಲ್ಲ ಅಪ್ಪಾಜೀ, ನಾನು ಹೋಗ್ಲಿಲ್ಲ.  ನಂಗೆ ನಾಳೆ ಟೆಸ್ಟ್ ಇದೆ, ಸೋಷಿಯಲ್ ಸ್ಟಡೀಸ್‌ನಲ್ಲಿ.  ಜಿಯೋಗ್ರಫಿ ಆಫ್ ಕರ್ನಾಟಕ.  ಚೆನ್ನಾಗಿ ಓದ್ಕೋಬೇಕಪ್ಪ, ಇಲ್ಲಾಂದ್ರೆ ನಮ್ ಮಿಸ್ಸು ಬೈತಾರೆ.  ಅವ್ರು ಭಾಳಾ ಸ್ಟ್ರಿಕ್ಟು."
"ಸರಿ ಓದ್ಕೋ.  ಗುಡ್ ಗರ್ಲ್."  ಅವಳ ಭುಜ ತಟ್ಟಿ ಲಲಿತೆ ತಂದ ಚಹಾದ ಲೋಟಕ್ಕೆ ಕೈಯೊಡ್ಡಿದೆ.

*     *     *

ಬೆಳಿಗ್ಗೆ ಇನ್ನೂ ಕತ್ತಲಿರುವಾಗಲೇ ಫೋನ್ ಹೊಡೆದುಕೊಂಡಿತು.  ಎತ್ತಿಕೊಂಡರೆ ಆ ಕಡೆಯಿಂದ ಇವಳ ತಂಗಿ ಮಾತಾಡುತ್ತಿದ್ದಳು.
"ಇಲ್ಲಿ, ಡೆಲ್ಲೀನಲ್ಲಿ ಬಾಂಬ್ ಬ್ಲ್ಯಾಸ್ಟ್ ಆಗಿದೆ ಭಾವಾ, ಏಳೆಂಟು ಕಡೆ."
"ಹೌದಾಮೈ ಗಾಡ್!"
"ಹ್ಞೂಂ.  ವಿಷಯ ತಿಳಿದು ನೀವು ಅಕ್ಕ ಗಾಬರಿಯಾಗ್ತೀರೇನೋ ಅಂತ ನಾನೇ ಫೋನ್ ಮಾಡ್ದೆ.  ನಾನು ಮಕ್ಳು ಕ್ಷೇಮವಾಗಿದ್ದೀವಿ.  ಇವ್ರು ಲಂಡನ್‌ನಿಂದ ಈ ಬೆಳಿಗ್ಗೆ ಬರಬೇಕಾಗಿತ್ತು.  ಆದ್ರೆ ಇಲ್ಲಿ ಏರ್‌ಪೋರ್ಟ್ ಬಂದ್ ಆಗಿದೆ.  ಇವರ ಫ್ಲೈಟನ್ನ ಲಾಹೋರ್‌ಗೆ ತಗೋಂಡು ಹೋಗಿದ್ದಾರಂತೆ.  ಇಲ್ಲಿ ಏರ್‌ಪೋರ್ಟ್ ಓಪನ್ ಆಗೋ ತನ್ಕಾ ಅವ್ರು ಅಲ್ಲೇ ಹೆಲ್ಡ್‌ಅಪ್..."  ಎದ್ದುಬಂದ ಲಲಿತೆ ಫೋನ್ ಕಿತ್ತುಕೊಂಡಳು.  ನಾನು ಟೀವಿಯತ್ತ ಓಡಿದೆ.
ಭೀಕರ ನೋಟಗಳು ಕಣ್ಣಿಗೆ ಬಿದ್ದವು.  ಎರಡು ಪಂಚತಾರಾ ಹೋಟೆಲ್‌ಗಳು ಕುಸಿದುಬಿದ್ದಿದ್ದವು.  ರಸ್ತೆಗಳ ಉದ್ದಗಲಕ್ಕೂ ಹರಡಿದ್ದ ಮಣ್ಣು, ಗಾರೆ, ಇಟ್ಟಿಗೆ, ಗಾಜಿನ ಚೂರುಗಳು, ಗುರುತೇ ಸಿಗದಂತೆ ವಿರೂಪಗೊಂಡ ವಾಹನಗಳು, ಛಿಧ್ರವಿಚ್ಛಿಧ್ರ ಶವಗಳು...  ರಕ್ತ ಹೆಪ್ಪುಗಟ್ಟಿಹೋಯಿತು.
ಅನ್ಯಮನಸ್ಕತೆಯಿಂದಲೇ ಆಫೀಸಿಗೆ ಹೋದೆ.  ಎಲ್ಲರ ಬಾಯಲ್ಲೂ ಡೆಲ್ಲಿ ದುರಂತದ ಮಾತೇ.  ಈ ಪಾಕಿಸ್ತಾನವನ್ನ ಹುಟ್ಟಿಲ್ಲಾ ಅನ್ನಿಸಿಬಿಡಬೇಕು ಕಣ್ರೀ ಎಂದು ಎಲ್ಲರೂ ಅವಡುಗಚ್ಚುತ್ತಿದ್ದರು.  ಸಾಯಂಕಾಲ ಮನೆಗೆ ಹಿಂತಿರುಗುತ್ತಿದ್ದಂತೇ ಅರಳೀಮರದ ಕೆಳಗೆ ಸೇರಿದ್ದ ಬೀದಿಯ ಜನರ ಮಾತುಗಳಲ್ಲೂ ಅದೇ ಅಭಿಪ್ರಾಯ.  "ಅದು ಪಾಕಿಸ್ತಾನ ಅಲ್ಲಾರೀ, ಅದೊಂದು ಪಾಪಸ್ತಾನ" ಎಂದು ಸಿದ್ಧಲಿಂಗೇಶ್ವರ ಆವೇಶದಲ್ಲಿ ಕೂಗಿದ.  "ಹೌದು, ಹೌದು" ಅಂದ ಪಕ್ಕದ ಮನೆಯ ತ್ರಿಯಂಬಕ.  ಪಟ್ಟಾಭಿರಾಮನಿಗೆ ಅದೇನು ತಿಕ್ಕಲು ಹತ್ತಿತೋ "ಸಾಕು ಸುಮ್ಮನಿರ್ರೀ" ಎಂದು ಅರಚಿಬಿಟ್ಟ.  "ಈ ಬಾಂಬ್ ಬ್ಲಾಸ್ಟ್‌ಗೆ ಪಾಕಿಸ್ತಾನೀಯರು ಕಾರಣ ಅನ್ನೋದನ್ನ ನಾನು ನಂಬೋದಿಲ್ಲ.  ಈ ಕೇಸರೀ ಮೀಡಿಯಾದವರು ಹಬ್ಬಿಸೋ ಸುಳ್ಳುಕಂತೆಯನ್ನೆಲ್ಲಾ ನಂಬ್ಕೊಂಡು ನೀವೆಲ್ಲಾ ಕುಣೀಬೇಡಿ" ಎಂದು ಅಬ್ಬರಿಸಿದ.  ನಮಗೆಲ್ಲಾ ಅಚ್ಚರಿ.  ಇವನಿಗೇನು ತಲೆ ಕೆಟ್ಟಿದೆಯೇ ಎಂದು ನಾನು ಅಂದುಕೊಳ್ಳುತ್ತಿದ್ದಂತೇ "ಬೋಳೀಮಗನೇ, ಪಾಕಿಸ್ತಾನದಲ್ಲಿ ನಿಮ್ಮಪ್ಪ ಇದ್ದಾನೇನೋ?" ಎನ್ನುತ್ತಾ ತ್ರಿಯಂಬಕ ಪಟ್ಟಾಭಿರಾಮನ ಕಾಲರ್ ಹಿಡಿದ.  ಇಬ್ಬರನ್ನೂ ಬಿಡಿಸಿ ದೂರ ಒಯ್ಯಬೇಕಾದರೆ ಸಾಕುಬೇಕಾಗಿಹೋಯಿತು.  ಕೊನೆಗೆ ಸಂಗಡಿಕಿ "ಯವ್ವೀ, ನಿಮಗೇನೂ ಬೇರೆ ಕೇಮೆ ಇಲ್ವಾಘನಂಧಾರೀ ಗಂಡಸ್ರು!  ಹೋಗಿ ತೆಪ್ಪಗೆ ಹೊದ್ಕೊಂಡು ಬಿದ್ಕೊಳ್ಳಿ" ಎಂದು ಬೈದು ಎಲ್ಲರನ್ನೂ ಅವರವರ ಮನೆಯೊಳಗೆ ಅಟ್ಟಿದಾಗಲೇ ಬೀದಿ ಶಾಂತವಾದದ್ದು.
ಮನೆಯೊಳಗೆ ನಡೆದೆ.  "ರೀ ವಿಷಯ ಗೊತ್ತಾಯ್ತಾ? ಎನ್ನುತ್ತಾ ನನ್ನ ಹೆಂಡತಿ ಹತ್ತಿರ ಬರುತ್ತಿದ್ದಂತೇ ಮಗಳು ಓಡಿಬಂದು ನನ್ನ ಕೈ ಜಗ್ಗಿದಳು.  "ನಮ್ ಟೆಸ್ಟು ಕ್ಯಾನ್ಸಲ್ ಆಯ್ತು ಅಪ್ಪಾಜೀ.  ಈವತ್ತು ಸೋಷಿಯಲ್ ಮಿಸ್ಸು ಬರ‍್ಲೇ ಇಲ್ಲಾ."  ಖುಷಿಯಿಂದ ಹೇಳಿ ಟೀವಿಯತ್ತ ಓಡಿದಳು.  ನನ್ನ ಹೆಂಡತಿ ಮತ್ತೆ ಬಾಯಿ ತೆರೆದಳು: "ಟೆರರಿಸ್ಟ್ರು ಅದ್ಯಾರೋ ಡೆಕ್ಕನ್ ಮುಜಾಹಿದೀನ್ ಅಂತ್ಲಂತೇರೀ.  ಈಗತಾನೆ ಟೀವಿನಲ್ಲಿ ಹೇಳಿದ್ರು.  ಇನ್ನೂ..."  ನನ್ನ ಹೆಂಡತಿ ಹೇಳುತ್ತಿದ್ದಂತೇ ಅವಳ ಮಾತನ್ನು ಮೀರಿ ದೂರದಿಂದಲೇ ಮಗಳ ದನಿ ತೂರಿಬಂತು: "ಡೆಕ್ಕನ್ ಅಂದ್ರೆ ನಾವಿರೋ ಸ್ಥಳ ಅಲ್ವಾ ಅಪ್ಪಾಜಿನಂಗೊತ್ತು.  ನಮ್ಮ ಕರ್ನಾಟಕ ಇರೋರು ಡೆಕ್ಕನ್ ಪ್ಲಾಟೋನಲ್ಲಿ ಅಂತ ನಮ್ಮ ಸೋಷಿಯಲ್ ಸ್ಟಡೀಸ್ ಟೆಕ್ಸ್ಟ್ ಬುಕ್‌ನಲ್ಲಿದೆ."
ಎರಡು ಮೂರು ದಿನ ಟೀವಿಯಲ್ಲಿ ಬರೀ ಡೆಲ್ಲಿ ಸುದ್ಧಿಯೇ.  ಮೈಕ್ ಹಿಡಿದ ವರದಿಗಾರ್ತಿಯರ ಅರಚಾಟಗಳು, ಎಕ್ಸ್‌ಪರ್ಟ್ಗಳ ಉವಾಚಗಳು, ಸರಕಾರಕ್ಕೆ ಉಪದೇಶಗಳು, ಟೆರರಿಸ್ಟ್ಸ್ ಯಾರು, ಎಲ್ಲಿಯವರು ಎನ್ನುವ ಬಗ್ಗೆ ನೂರೊಂದು ಉಹಾಪೋಹಗಳು...  ಕೊನೆಗೆ ನಾಲ್ಕನೆಯ ದಿನ ಸ್ಫೋಟಗಳ ಹಿಂದಿನ "ಮಾಸ್ಟರ್ ಮೈಂಡ್" ಯಾರೆಂದು ಬಿಬಿಸಿ ಖಚಿತವಾಗಿ ಸಾರಿತು.  ಅವನೊಬ್ಬ ಪಾಕಿಸ್ತಾನೀ ಮೂಲದ ಭಯೋತ್ಪಾದಕ ಗುಂಪಿನ ನಾಯಕ.  ಅಡಗಿರುವುದು ಪಾಕ್ ಆಕ್ರಮಿತ ಕಾಶ್ಮೀರದ ಮುಝಾಫರಾಬಾದ್‌ನಲ್ಲಿ.  ಅಮೆರಿಕಾದ ಗುಪ್ತಚರ ಇಲಾಖೆ ಸಿಐಎ ಮತ್ತು ಬ್ರಿಟಿಷ್ ಗುಪ್ತಚರ ಇಲಾಖೆ ಎಂಐ೬ಗಳ ಜಂಟೀ ಕಾರ್ಯಾಚರಣೆಯ ಫಲವಾಗಿ ಈ ವಿವರಗಳು ಹೊರಬಂದಿದ್ದವು.  ಅವನನ್ನು ಬಂಧಿಸುವಂತೆ ಪಾಕಿಸ್ತಾನ ಸರಕಾರದ ಮೇಲೆ ಅಮೆರಿಕಾ ಮತ್ತು ಭಾರತ ಸರಕಾರಗಳು ಒತ್ತಡ ಹೇರುತ್ತಿರುವುದನ್ನೂ, ಆದರೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪಾಕಿಸ್ತಾನ ಕಸರತ್ತು ನಡೆಸುತ್ತಿರುವುದನ್ನೂ ಬಿಬಿಸಿ ವರದಿ ಸವಿವರವಾಗಿ ತಿಳಿಸಿತು.  ಆಮೇಲೆ ವಾರದವರೆಗೆ ಪ್ರತೀದಿನ ಇದೇ ಸುದ್ಧಿ.  ಭಾರತಕ್ಕಿರಬಹುದಾದ ಬೇರೆ ದಾರಿಗಳ ಚರ್ಚೆ...
ವಾರ ಕಳೆಯುತ್ತಿದ್ದಂತೇ ನಮ್ಮ ಬೀದಿಯಲ್ಲಿ ಬದುಕು ಮಾಮೂಲಿನಂತಾಗತೊಡಗಿತ್ತು.  ಮೊದಮೊದಲು ಎಲ್ಲರ ಆಸಕ್ತಿ ಕೆರಳಿಸಿದ ಪಿರಮಿಡ್ ಈಗ ಶತಶತಮಾನಗಳಿಂದ ಅಲ್ಲಿಯೇ ಇದ್ದಷ್ಟು ಸಾಮಾನ್ಯವೆನಿಸತೊಡಗಿತ್ತು.  ಭಿಕ್ಷುಕರು ಗುಂಪುಗಟ್ಟಿಕೊಂಡು ಬೆಳಿಗ್ಗೆ ಹೊರಗೆ ಹೋದರೆ ಸಂಜೆಯ ಹೊತ್ತಿಗೆಲ್ಲಾ ಭರ್ತಿ ಜೋಳಿಗೆಗಳನ್ನು ಹೊರಲಾರದೇ ಹೊತ್ತುಕೊಂಡು ಹಿಂತಿರುಗುತ್ತಿದ್ದರು.  ಒಂದೆರಡು ದಿನಗಳಿಂದ ದೊಡ್ಡವರಷ್ಟೇ ಹೊರಗೆ ಹೋಗುತ್ತಾರೆ.  ಮಕ್ಕಳೆಲ್ಲಾ ಪಿರಮಿಡ್‌ನಲ್ಲೇ ಉಳಿಯುತ್ತಿವೆ.  ಸಂಜೆಯ ಹೊತ್ತಿನಲ್ಲಿ ನಮ್ಮ ಮಕ್ಕಳು ಹೊರಗೆ ಆಡುವಾಗ ಅವೂ ಬಂದು ಸೇರುತ್ತವೆ.  ಈಗ ಅವುಗಳ ಮೈಮೇಲೆ ನಮ್ಮ ಮಕ್ಕಳಿಗಿಂತಲೂ ಒಳ್ಳೆಯ ಬಟ್ಟೆಗಳಿವೆ.  ಜತೆಗೇ ಮೈಗೆಲ್ಲಾ ಸೆಂಟು ಪೂಸಿಕೊಂಡು ಘಂ ಅಂತಿರುತ್ತವೆ.  ಕರಿನಾಯಿ ಹಗಲೆಲ್ಲಾ ಅದೆಲ್ಲಿ ಅಡಗಿರುತ್ತಿತ್ತೋ, ಕತ್ತಲಾದೊಡನೆ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು.  ರಾತ್ರಿ ಯಾತಕ್ಕಾದರೂ ಎದ್ದು ಕಿಟಕಿಯಲ್ಲಿ ಹಣಕಿದರೆ ಅದು ಬೀದಿಯಲ್ಲಿ ನಿಶ್ಶಬ್ಧವಾಗಿ ಸರಿದಾಡುವುದು ಕಣ್ಣಿಗೆ ಬೀಳುತ್ತಿತ್ತು.  ಮೊದಲ ಒಂದೆರಡು ಬೆಳಿಗ್ಗೆ ನಮ್ಮ ಮನೆಯ ಮುಂದೆ ಬಿದ್ದಿರುತ್ತಿದ್ದ ಅದು, ಇದೇನಿದು ಬೆಳಿಗ್ಗೆ ಬೆಳಿಗ್ಗೇ ಇದರ ದರ್ಶನ ಎಂದು ಅದಕ್ಕೆ ಕೇಳುವಂತೇ ಬೈದುಕೊಂಡ ಮೇಲೆ ತಿಕಸ್ವಾಮಿಯ ಮನೆಯ ಮುಂದೆ ಬಿದ್ದುಕೊಳ್ಳತೊಡಗಿದೆ.  ದಿನಾ ಬೆಳಿಗ್ಗೆ ನಾನು ವಾಕಿಂಗ್ ಹೊರಡುತ್ತಿದ್ದಂತೇ ಅವನ ಕಿರಿಯ ಹೆಂಡತಿ ಮನೆ ಮುಂದಿನ ದೀಪ ಹಾಕದೇ ಸದ್ದಾಗದಂತೆ ಬಾಗಿಲು ತೆರೆಯುವುದು ಕಣ್ಣಿಗೆ ಬೀಳುತ್ತದೆ.  ರಸ್ತೆಯಲ್ಲಿ ನಡೆದುಹೋಗುತ್ತಿದ್ದಂತೇ ನನ್ನ ಕಿವಿಗಳ ತುಂಬಾ ತುಂಬಿಕೊಳ್ಳುತ್ತಿದ್ದ ಗೊರಕೆ ತಿಕಸ್ವಾಮಿಯದೋ ಅಥವಾ ಕರಿನಾಯಿಯದೋ ಎಂದು ನನಗೆ ಸರಿಯಾಗಿ ಗೊತ್ತಾಗುವುದಿಲ್ಲ.  ಇಂದು ವಾಕಿಂಗ್ ಹೊರಟಾಗಲೂ ಅಷ್ಟೇ.  ಅದರ ಬಗ್ಗೇ ಯೋಚಿಸುತ್ತಾ ನಡೆದಂತೆ ಎರಡು ಸಂಗತಿಗಳು ನನ್ನನ್ನು ಮತ್ತೆ ಮತ್ತೆ ಕಾಡಿದವು.  ಭಿಕ್ಷುಕರು ಒಂದು ದಿನವೂ ನಮ್ಮ ಬೀದಿಯಲ್ಲಿ ಭಿಕ್ಷೆ ಬೇಡಿರಲಿಲ್ಲ.  ಕರಿನಾಯಿ ಒಮ್ಮೆಯೂ ಬಾಯಿ ತೆರೆದು ಬೊಗಳಿರಲಿಲ್ಲ.
ವಾಕಿಂಗ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಂತೇ ತನ್ನ ಬಾಗಿಲಲ್ಲೇ ನಿಂತಿದ್ದ ತಿಕಸ್ವಾಮಿ ಸನ್ನೆ ಮಾಡಿದ.  ಹತ್ತಿರ ಹೋದೆ.  ಅವನ ಮುಖ ಬಾಡಿತ್ತು.  "ಒಳಗೆ ಬನ್ನೀ, ವಿಷಯ ಸೂಕ್ಷ್ಮದ್ದು" ಎಂದು ಪಿಸುಗುಟ್ಟಿದ.  ಕುತೂಹಲಗೊಂಡು ಅವನನ್ನುಸರಿಸಿ ಒಳಗೆ ಹೋದೆ.  ಅವನು ಬಾಗಿಲು ಮುಚ್ಚಿದ.  "ಕೇಳಿದ್ರೆ ನಿಮಗೆ ಆಘಾತ ಆಗಬೋದು" ಎಂದು ಪೀಠಿಕೆ ಹಾಕಿದ.  ಈಗ ಸ್ವಲ್ಪ ಹೆದರಿಕೆಯೇ ಆಯಿತು.  ಅವನನ್ನೇ ನೋಡಿದೆ.  ಅವನು ಒಮ್ಮೆ ತೆರೆದಿದ್ದ ಕಿಟಕಿಯತ್ತ ನೋಡಿ ತುಟಿ ಬಿಚ್ಚಿದ:
"ಬೆಳಿಗ್ಗೆ... ನೀವು ವಾಕಿಂಗ್ ಹೋದಮೇಲೆ... ನಿಮ್ಮ ಮನೇ ಮುಂದೆ ಅದ್ಯಾರೋ ಒಬ್ಬ ಗಂಡಸು ಠಳಾಯಿಸ್ತಿದ್ದ."
".........."
"ಇಲ್ಲಿಯೋನಲ್ಲ ಅವ್ನು.  ನಿಮ್ ಕಾಂಪೌಂಡ್ ಒಳಗೆಲ್ಲಾ ಇಣುಕಿ ನೋಡ್ತಾ ಇದ್ದ.  ನಿಮ್ಮನೇ, ಪಿರಮಿಡ್ಡು ಎರಡನ್ನೂ ಸೇರಿಸಿ ಒಂದು ಸುತ್ತು ಬಂದ.  ಆಮೇಲೆ..."
".........."
"ಮೆಲ್ಲಗೆ ನಿಮ್ಮನೇ ಬಾಗಿಲು ಬಡಿದ.  ನಿಮ್ ಮಿಸೆಸ್ಸು ಬಾಗಿಲು ತೆರೆದ್ರು.  ಅವ್ನು ಸರಕ್ಕನೆ ಒಳಗೆ ನುಗ್ಕೊಂಡ.  ನಾನು ನೋಡ್ತಾನೇ ಇದ್ದೆ.  ಇಡೀ ಹತ್ತು ನಿಮಿಷ ಕಳೆದ ಮೇಲೆ ಹೊರಕ್ಕೆ ಬಂದ.  ನಿಮ್ ಮಿಸೆಸ್ ಜೊತೆ ಅದೇನೋ ಪಿಸುಗುಟ್ಟಿ ಓಡಿಹೋದ.  ಅರೆಕ್ಷಣದಲ್ಲಿ ಮಾಯವಾಗಿಬಿಟ್ಟ."
".........."
"ನಂಗೆ ಭಾರೀ ಶಾಕ್ ಆಯ್ತು."
".........."
"ನಂಗೊಂದು ಅನುಮಾನ."
".........."
"ಅವ್ನು ಮಫ್ತಿನಲ್ಲಿದ್ದ ಸಿ ಐ ಡಿ ಅನ್ಸುತ್ತೆ."
".........."
"ನೀವು ಯಾತಕ್ಕೂ ಹುಷಾರಾಗಿರಿ.  ಹಿತರಕ್ಷಣಾ ಸಮಿತಿಯ ಅಧ್ಯಕ್ಷನಾಗಿ ನಾನು ಈ ಮಾತನ್ನ ನಿಮಗೆ ಹೇಳಲೇಬೇಕಾದ್ದು ನನ್ನ ಕರ್ತವ್ಯ.  ಈ ಸಿ ಐ ಡಿ, ಪೋಲೀಸು, ಗೌರ್ಮೆಂಟು-  ಭಾಳಾ ಕೆಟ್ಟಜನ...  ಇವರ ಸಹವಾಸ ಒಳ್ಳೇದಲ್ಲ.  ನಿಮ್ ಮಿಸೆಸ್‌ಗೆ ಹೇಳಿ."
ಮನೆಯೊಳಗೆ ಹೋದರೆ ನನ್ನ ಹೆಂಡತಿ ಯಾಕೋ ಸಪ್ಪಗಿದ್ದಳು.  ಏನಾಯ್ತು? ಎಂಬಂತೆ ನೋಡಿದರೆ ಅವಳು ಮೆಲ್ಲಗೆ "ಹುಷ್!" ಎಂದು ಬಾಯಿ ಮೇಲೆ ಬೆರಳಿಟ್ಟು ನನ್ನನ್ನು ಒಳಕೋಣೆಗೆ ಕರೆದುಕೊಂಡು ಹೋದಳು.  "ನೀವು ಅತ್ತ ವಾಕಿಂಗ್ ಹೋದದ್ದೇ ನನ್ನ ಚಿಕ್ಕಮ್ಮನ ಮಗ ಗಣೇಶ, ಅದೇ ಪೋಲೀಸ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಕ್ಯಾಂಟೀನ್ ನಡೆಸ್ತಾನಲ್ಲ ಅವ್ನು, ಬಂದಿದ್ದ."  ಪಿಸುಗಿದಳು.  "ನಂಗ್ಯಾಕೋ ಭಯವಾಗುತ್ತೆ."  ನನ್ನ ಕೈಹಿಡಿದಳು.
"ವಿಷಯ ಏನು?"  ಅವಳ ಭುಜ ತಟ್ಟಿದೆ.
ಸ್ವಲ್ಪ ತಡೆದು ದನಿಯನ್ನು ಮತ್ತೂ ತಗ್ಗಿಸಿದಳು: "ನಿನ್ನೆ ರಾತ್ರಿ ಸ್ಟೇಷನ್‌ನಲ್ಲಿ ಇನ್ಸ್‌ಪೆಕ್ಟರ್ರು, ಸರ್ಕಲ್ ಇನ್ಸ್‌ಪೆಕ್ಟರ್ರು, ಜತೆಗೇ ಬೇರೆ ಕಡೆಯಿಂದ ಬಂದಿದ್ದ ಇನ್ನೂ ಒಂದಷ್ಟು ಜನ ಗುಟ್ಟಾಗಿ ಏನೋ ಮಾತಾಡ್ಕೋತಾ ಇದ್ರಂತೆ.  ಡೆಲ್ಲಿ ಬ್ಲ್ಯಾಸ್ಟ್, ಇಂಟಲಿಜೆನ್ಸ್ ರಿಪೋರ್ಟು, ಡೆಕ್ಕನ್ ಮುಜಾಹಿದೀನ್, ನಮ್ಮನೆ ಪಕ್ಕದ ಪ್ಲಾಸ್ಟಿಕ್ ಪಿರಮಿಡ್, ತಿರುಪೆ ಜನ, ಕರಿನಾಯಿ ಅಂತೆಲ್ಲಾ ಏನೇನೋ ತುಂಬಾ ಮಾತಾಡ್ಕೋತಾ ಇದ್ರಂತೆ.  ಅವನು ಹೇಳೋ ಪ್ರಕಾರ ಡೆಲ್ಲಿ ಬ್ಲ್ಯಾಸ್ಟ್‌ಗೂ ಈ ಪಿರಮಿಡ್‌ಗೂ ಏನೋ ಸಂಬಂಧ ಇರೋಹಾಗಿದೆಯಂತೆ."
"ಹುಚ್ಚು."  ತಲೆ ಒದರಿದೆ.
"ಇಲ್ಲಾರೀ, ಅವ್ನು ಆಣೆ ಮಾಡಿ ಹೇಳ್ದ.  ಪೋಲೀಸ್ರು ನಮ್ಮನೇ ಬಗ್ಗೂ ಮಾತಾಡೋದೂ, ನಿಮ್ಮೆಸ್ರು, ನನ್ನೆಸ್ರು ಎಲ್ಲಾನೂ ಚೂರುಚೂರು ಅವನ ಕಿವಿಗೆ ಬಿತ್ತಂತೆ.  ಅದಕ್ಕೆ ನಂಗೆ ಸೂಚನೆ ಕೊಡೋದಿಕ್ಕೆ ಬಂದಿದ್ದ.  ಅವ್ನು ತುಂಬಾ ಗಾಬರಿಯಾಗಿದ್ದಾರೀ.  ಪೋಲೀಸರಿಗೆ ಗೊತ್ತಾಗಕೂಡದು ಅಂತ ಕತ್ಲೇನಲ್ಲೇ ಗುಟ್ಟಾಗಿ ಬಂದಿದ್ದ.  ನೀವು ವಾಕಿಂಗ್ ಹೋಗಿದ್ದೀರಿ ಅಂದಾಗ ಬೇಜಾರು ಮಾಡ್ಕೊಂಡ.  ತಾನು ಹೇಳಿದ್ದನ್ನೆಲ್ಲಾ ಒಂದೂ ಬಿಡದೇ ನಿಮ್ಮ ಕಿವಿಗೆ ಹಾಕೋದಿಕ್ಕೆ ಎರಡೆರಡು ಸಲ ಹೇಳಿಹೋದ."
".........."
"ಪೋಲೀಸ್ರ ಮಾತ್ನಲ್ಲಿ ಕರಿನಾಯಿ ವಿಷಯ ಮತ್ತೆ ಮತ್ತೆ ಬರ್ತಿತ್ತಂತೆ.  ಅದೆಲ್ಲಿ ಅಂತ ಕೇಳ್ದ ಗಣೇಶ.  ಮನೆ ಮುಂದೆನೇ ಬಿದ್ದಿರುತ್ತೆ ನೋಡು ಅಂದೆ.  ಇಲ್ಲಕ್ಕಾ, ನಾನು ಸುತ್ತಾ ಹುಡುಕ್ದೆ, ಅದೆಲ್ಲೂ ಕಾಣಿಸ್ತಾ ಇಲ್ಲ ಅಂದ.  ಅಂದಹಾಗೆ, ಈವತ್ತು ನೀವು ನೋಡ್ಲಿಲ್ವಾ ಅದನ್ನ?"
"ನೋಡ್ದೆ.  ಎದುರುಮನೆ ಮುಂದೆ ಗೊರಕೆ ಹೊಡೀತಾ ಬಿದ್ಕೊಂಡಿತ್ತು."
"ನೀವು ಹೊರಟ ಎರಡು ನಿಮಿಷಕ್ಕೆಲ್ಲಾ ಗಣೇಶ ಬಂದ.  ಅಷ್ಟು ಬೇಗ ಅದೆಲ್ಲಿ ಮಾಯವಾಗಿಬಿಡ್ತೋ ಅದು!"
"ನಾನು ಹೊರಟಾಗ ತಿಕಸ್ವಾಮೀದು ಕಿರೀ ಹೆಂಡ್ತಿ ಬಾಗಿಲು ತೆರೆದ್ಲು.  ಆಗ ಎದ್ದು ಓಡಿಹೋಯ್ತೇನೋ."
"ಓಡಿಹೋಯ್ತೋ ಅಥವಾ ಮನೇ ಒಳಗೇ ಹೋಯ್ತೋ."  ಗೊಣಗಿದಳು.

*     *     *

ನಾನು ಆಫೀಸಿಗೆ, ಮಗಳು ಶಾಲೆಗೆ ಎಂದಿನಂತೆ ಹೋಗಿಬಂದೆವು.  ಲಲಿತೆಯ ಟೀವಿ ಸೀರಿಯಲ್‌ಗಳು ದಿನನಿತ್ಯದಂತೆ ಸರಾಗವಾಗಿ ಓಡಿದವು.  ಗಣೇಶ ಅನಾವಶ್ಯಕವಾಗಿ ಗಾಬರಿಗೊಂಡಿದ್ದ ಎಂದು ಕಾಣುತ್ತದೆ.
ನಾನು ಹೊರಬರಬಹುದೆಂದು ತಿಕಸ್ವಾಮಿ ಸಂಜೆಯಿಡೀ ತನ್ನ ಬಾಗಿಲಲ್ಲಿ, ಕಿಟಕಿಯಲ್ಲಿ ಇತ್ತಲೇ ಹಣಕುತ್ತಿದ್ದ.  ನನಗೆ ಹೊರಗೆ ಹೋಗಿ ಅವನ ಕೈಗೆ ಸಿಕ್ಕಿಕೊಳ್ಳುವ ಮನಸ್ಸಿರಲಿಲ್ಲ.  ಹೆಂಡತಿ ಮಗಳೊಡನೆ ನೆಮ್ಮದಿಯಾಗಿ ಊಟ ಮುಗಿಸಿ ಎಲೆ ಅಡಿಕೆ ಮೆಲ್ಲುತ್ತಾ ಸೋಫಾದಲ್ಲಿ ಒರಗಿದೆ.  ಅಡಿಗೆಮನೆಯ ಕೆಲಸವನ್ನೆಲ್ಲಾ ಮುಗಿಸಿ ಕೈಯೊರೆಸಿಕೊಳ್ಳುತ್ತಾ ಬಂದು ನನ್ನ ಪಕ್ಕ ಕೂತ ಲಲಿತೆ ಟೀವಿ ಹಾಕಿದಳು.  ಯಾವುದೋ ಹಳೆಯ ಸಿನಿಮಾ.  "ಅಯ್ಯೋ ಮೊದ್ಲೇ ಹಾಕ್ಬೇಕಿತ್ತೂರೀ, ಛೆ ಛೆ" ಎನ್ನುತ್ತಾ ಅದರಲ್ಲಿ ಕಣ್ಣು ಕೀಲಿಸಿದಳು.  ನಿದ್ದೆ ಬರುತ್ತಿದೆಯೆಂದು ಮಗಳು ಬೆಡ್‌ರೂಂ ಸೇರಿದಳು.  ನನಗೂ ನಿದ್ದೆ ತೂಗಿಕೊಂಡು ಬರುತ್ತಿತ್ತು.  ಲಲಿತೆಯ ತೊಡೆಯ ಮೇಲೇ ತಲೆಯಿಟ್ಟು ಅಲ್ಲೇ ಸೋಫಾದಲ್ಲೇ ಒರಗಿದೆ.
ಯಾರೋ ರಭಸದಿಂದ ಮೈ ಅಲುಗಿಸಿದಂತಾಗಿ ಗಕ್ಕನೆ ಕಣ್ಣು ಬಿಟ್ಟೆ.  "ಅಲ್ಲಿ ನೋಡ್ರೀ!"  ಲಲಿತೆ ನನ್ನ ಮುಖವನ್ನು ಟೀವಿಯತ್ತ ತಿರುಗಿಸಿದಳು.  ನಿದ್ದೆಗಣ್ಣುಗಳನ್ನು ಬಲವಂತವಾಗಿ ತೆರೆದೆ.  ಅರೆಕ್ಷಣದಲ್ಲಿ ನನ್ನ ನಿದ್ದೆ ಹಾರಿಹೋಯಿತು.
ಟೀವಿ ಪರದೆಯಲ್ಲಿ ಪ್ಲಾಸ್ಟಿಕ್ ಪಿರಮಿಡ್!  ಸುತ್ತಲೂ ರೈಫಲ್ ಹಿಡಿದ ಸೈನಿಕರು.  ಹಾರಿಬಂದ ಹೆಲಿಕಾಪ್ಟರ್‌ನಿಂದ ಕಮ್ಯಾಂಡೋಗಳು ನಮ್ಮ ಟೆರೇಸಿನ ಮೇಲೇ ಧುಮುಕುತ್ತಿದ್ದರು.  "ಬ್ರೇಕಿಂಗ್ ನ್ಯೂಸ್" ಎಂಬ ಕೆಂಬಣ್ಣದ ದಪ್ಪಕ್ಷರಗಳು...
ಗಡಬಡಿಸಿ ಎದ್ದು ಓಡಿಹೋಗಿ ಮುಂಬಾಗಿಲು ತೆರೆಯಲು ನೋಡಿದರೆ ಅದು ಹೊರಗಿನಿಂದ ಬೋಲ್ಟ್ ಆಗಿತ್ತು.  ಸೈನಿಕನೊಬ್ಬ ಕಿಟಕಿಯಲ್ಲಿ ಕಾಣಿಸಿಕೊಂಡು "ಒಳಗೇ ಇರಿ.  ಹೊರಗೆ ಬರೋದು ಕ್ಷೇಮ ಅಲ್ಲ" ಅಂದ.  "ಏನು ನಡೀತಾ ಇದೆ?" ಅಂದೆ.  ಅವನು ಉತ್ತರಿಸದೇ ಅತ್ತ ಸರಿದುಹೋದ.  "ಇಲ್ಲಿ ಕೇಳಿಸ್ಕೊಳ್ರೀ" ಎಂದು ಲಲಿತೆ ಕೂಗಿದಳು.  ಅತ್ತ ಓಡಿದೆ.  ವರದಿಗಾರ್ತಿಯೊಬ್ಬಳು ಮೈಕ್ ಹಿಡಿದು ತಾರಕ ದನಿಯಲ್ಲಿ ಒದರುತ್ತಿದ್ದಳು:
"ಕಳೆದ ಒಂದು ವಾರದಿಂದ ಅಮೆರಿಕಾದ ಗುಪ್ತಚರ ಇಲಾಖೆ ಸಿಐಎ ಮತ್ತು ನಮ್ಮ ಗುಪ್ತಚರ ಇಲಾಖೆಗಳು ಜಂಟಿಯಾಗಿ ಕೈಗೊಂಡ ರಹಸ್ಯ ಕಾರ್ಯಕ್ರಮಗಳಿಗೆ ಗೆಲುವು ಸಿಕ್ಕಿದೆ.  ದೆಹಲಿ ಸ್ಫೋಟಗಳ ರೂವಾರಿ ಹಾಗೂ ಕುಖ್ಯಾತ ಭಯೋತ್ಪಾದಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ರಹಸ್ಯ ನೆಲೆಯೊಂದರಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿಗಳು ವಾರದ ಹಿಂದೆಯೇ ದೊರೆತಿದ್ದರೂ ಪಾಕಿಸ್ತಾನದ ನಕಾರಾತ್ಮಕ ಧೋರಣೆಯಿಂದಾಗಿ ಅವನ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಾಗಿರಲಿಲ್ಲ.  ಆದರೆ ಈಗ ಅವನ ಬಗ್ಗೆ ಅತ್ಯಮೂಲ್ಯ ವಿವರಗಳು ಪತ್ತೆಯಾಗಿವೆ.  ಅವುಗಳ ಸಹಾಯದಿಂದ ಅವನನ್ನು ಪಾಕಿಸ್ತಾನದ ಸಹಕಾರವಿಲ್ಲದೇ ನಿರ್ನಾಮಗೊಳಿಸಬಹುದಾಗಿದೆ.  ಈ ಭಯೋತ್ಪಾದಕನ ಬಗೆಗಿನ ರೋಚಕ ವಿವರಗಳು ಹಾಗೂ ಅವು ದೊರೆತ ಬಗೆ ಹೀಗಿದೆ-  ಭಯೋತ್ಪಾದಕನ ಅಡಗುದಾಣದ ಸುಳಿವನ್ನು ಹುಡುಕುತ್ತಾ ವಾರದಿಂದಲೂ ಪಾಕ್ ಆಕ್ರಮಿತ ಕಾಶ್ಮೀರದ ಜಫರ್‌ವಾಲ್, ಮುಜಾಫರಾಬಾದ್, ಗಡೀ, ಚಿನಾನಿ, ದೂಧ್‌ನಿಯಾಲ್ ಪ್ರದೇಶಗಳಲ್ಲಿ ಮಾರುವೇಶದಲ್ಲಿ ಸಂಚರಿಸುತ್ತಿದ್ದ ನಮ್ಮ ಗುಪ್ತಚರನೊಬ್ಬ ಮೊನ್ನೆ ಮಧ್ಯಾಹ್ನ ಮಂಗಲ್ ಹಳ್ಳಿಯ ಹೊರವಲಯದಲ್ಲಿನ ಮರವೊಂದರ ಕೆಳಗೆ ವಿಶ್ರಮಿಸುತ್ತಿದ್ದಾಗ ಮರದ ಮೇಲೆ ಕುಳಿತಿದ್ದ ವಾನರದಂಪತಿಯೊಂದರ ಸಂಭಾಷಣೆ ಕಿವಿಗೆ ಬಿತ್ತು.  "ಇವನ್ಯಾರುಸೂಕ್ಷ್ಮವಾಗಿ ನೋಡಿದರೆ ಇಲ್ಲಿಯವನಂತೆ ಕಾಣುವುದಿಲ್ಲವಲ್ಲ?" ಎಂಬ ಹೆಣ್ಣುಕೋತಿಯ ಪ್ರಶ್ನೆಗೆ ಗಂಡುಕೋತಿ "ಅವನೊಬ್ಬ ಮಾರುವೇಷದಲ್ಲಿರುವ ಭಾರತೀಯ ಗೂಢಚಾರ.  ದೆಹಲಿ ಸ್ಫೋಟಗಳಿಗೆ ಕಾರಣವಾದ ಭಯೋತ್ಪಾದಕನನ್ನು ಹುಡುಕಿ ಇಲ್ಲೆಲ್ಲಾ ಅಲೆಯುತ್ತಿದ್ದಾನೆ" ಎಂದು ಉತ್ತರಿಸಿತು.  ಅದಕ್ಕೆ ಹೆಣ್ಣುಕೋತಿಯು ನಗಾಡುತ್ತಾ "ಆ ಭಯೋತ್ಪಾದಕ ಇಲ್ಲೇ ಮುಝಾಫರಾಬಾದ್ ಪಟ್ಟಣದಲ್ಲೇ ಇರುವ ಸಂಗತಿ ಈ ಗೂಢಚಾರನಿಗೆ ಗೊತ್ತಿಲ್ಲವೇ?" ಎಂದು ಪ್ರಶ್ನಿಸಿತು.  ಆಗ ಗಂಡುಕೋತಿಯು "ಹೌದು, ಇವನಿಗೆ ಗೊತ್ತಿಲ್ಲ.  ಗೊತ್ತಾದರೂ ಇವನ ದೇಶದವರು ಏನು ಮಾಡಲು ಸಾಧ್ಯಭಯೋತ್ಪಾದಕ ಪಾಕಿಸ್ತಾನದ ಸೇನೆಯ ರಕ್ಷಣೆಯಲ್ಲಿದ್ದಾನೆ.  ಅವನ ನೆಲೆಯ ಮೇಲೆ ಭಾರತದ ಸೇನೆ ಮಿಸೈಲ್ ಧಾಳಿ ನಡೆಸಿದರೆ ಭಾರತ - ಪಾಕಿಸ್ತಾನಗಳ ನಡುವೆ ಯುದ್ಧ ಆರಂಭವಾದಂತೆಯೇ.  ಪಾಕಿಸ್ತಾನದ ಬಳಿ ಅಣ್ವಸ್ತ್ರಗಳಿರುವುದರಿಂದ ಹಾಗೂ ಅವುಗಳನ್ನು ಭಾರತದ ವಿರುದ್ಧ ಬಳಸಲು ಪಾಕಿಸ್ತಾನೀಯರು ಹಿಂಜರಿಯುವುದಿಲ್ಲವಾದ್ದರಿಂದ ಪಾಕಿಸ್ತಾನವನ್ನು ಯುದ್ಧಕ್ಕೆ ಪ್ರಚೋದಿಸುವ ತಪ್ಪನ್ನು ಭಾರತ ಸರಕಾರ ಎಸಗುವುದಿಲ್ಲ" ಎಂದು ವಿವರಿಸಿತು.  ಆಗ ಹೆಣ್ಣುಕೋತಿಯು "ಅಂದರೆ ಈ ಭಯೋತ್ಪಾದಕನನ್ನು ಶಿಕ್ಷಿಸುವುದು ಭಾರತಕ್ಕೆ ಸಾಧ್ಯವಾಗುವುದೇ ಇಲ್ಲವೇ?" ಎಂದು ತನ್ನ ಗಂಡನನ್ನು ಪ್ರಶ್ನಿಸಿತು.  ಅದಕ್ಕೆ ಉತ್ತರವಾಗಿ ಗಂಡುಕೋತಿಯು "ಒಂದು ಸುಲಭವಾದ ದಾರಿ ಇದೆ.  ಆದರೆ ಅದು ಭಾರತೀಯರಿಗೆ ಗೊತ್ತೇ ಇಲ್ಲ" ಎಂದುತ್ತರಿಸಿತು.  "ಅದೇನು ಹೇಳು" ಎಂದು ಹೆಣ್ಣುಕೋತಿಯು ಉತ್ಸಾಹ ತೋರಲು ಗಂಡುಕೋತಿಯು "ಪ್ರಿಯೆ, ನಿನಗೆ ಹೇಳದಿರುತ್ತೇನೆಯೇ?  ಕೇಳು, ಇಲ್ಲಿಂದ ದಕ್ಷಿಣಕ್ಕೆ ಸುಮಾರು ಮೂರು ಸಾವಿರ ಕಿಲೋಮೀಟರ್ ದೂರದಲ್ಲಿ ಕರ್ನಾಟಕವೆಂಬ ರಾಜ್ಯವಿದೆ.  ನಮ್ಮ ಪೂರ್ವಜರ ನಾಡು ಕಿಷ್ಕಿಂದೆ ಇರುವುದು ಅಲ್ಲಿಯೇ.  ಆ ಅರ್ಥದಲ್ಲಿ ಆ ಪುರಾತನ ರಾಜ್ಯ ಕರ್ನಾಟಕ ನಮ್ಮೆಲ್ಲರ ತವರು.  ಆ ರಾಜ್ಯದ ದಕ್ಷಿಣ ತುದಿಯಲ್ಲಿ ಮೈಸೂರು ಎಂಬ ಸುಂದರ ನಗರವಿದೆ.  ಆ ನಗರದಲ್ಲಿರುವ ವಿದ್ಯಾರಣ್ಯಪುರಂ ಎಂಬ ಬಡಾವಣೆಯ ಅಂಚಿನಲ್ಲಿ "ತಿಂಡಿ ಪಾರ್ಕ್" ಎಂಬ ಬಯಲುಪ್ರದೇಶವಿದೆ.  ಪಾನೀಪೂರಿ, ಗೋಬಿ ಮಂಚೂರಿ, ಮಸಾಲೆಪುರಿ ಮುಂತಾದ ಹಲವು ಹತ್ತು ರುಚಿರುಚಿ ತಿಂಡಿಗಳನ್ನು ಮಾರುವ ಅನೇಕ ಗಾಡಿಗಳೂ, ಅವೆಲ್ಲವನ್ನೂ ಮೆದ್ದು ಆನಂದಿಸುವ ನೂರಾರು ನಾಗರೀಕರೂ ದಿನಾ ಸಂಜೆ ಅಲ್ಲಿ ನೆರೆಯುವುದರಿಂದ ಆ ಬಯಲಿಗೆ ತಿಂಡಿ ಪಾರ್ಕ್ ಎಂಬ ಹೆಸರು ಬಂದಿದೆ.  ಆ ತಿಂಡಿ ಪಾರ್ಕಿನ ವಾಯುವ್ಯದಲ್ಲಿ ಒಂದು ಪಿರಮಿಡ್ ಇದೆ.  ಅದರಲ್ಲಿ ಒಂದು ಕರಿನಾಯಿ ಇದೆ.  ಆ ನಾಯಿಯಲ್ಲಿ ಈ ಭಯೋತ್ಪಾದಕನ ಜೀವ ಅಡಗಿದೆ.  ಆ ನಾಯಿಯನ್ನು ಹಿಡಿದು ಗೋಣು ಮುರಿದರೆ ಈ ಭಯೋತ್ಪಾದಕನ ಗೋಣೂ ಮುರಿದುಹೋಗುತ್ತದೆ" ಎಂದುತ್ತರಿಸಿತು.  ಹೆಣ್ಣುಕೋತಿಯು "ಓ ಹೀಗಾ!" ಎಂದು ಅಚ್ಚರಿಯಿಂದ ಉದ್ಗರಿಸಲು ಗಂಡುಕೋತಿಯು "ಹೌದು ಹಾಗೇ.  ಆದರೆ ಈ ಭಾರತೀಯರಿಗೆ ಅದು ಗೊತ್ತಿಲ್ಲ.  ಇಂಥ ವಿಚಾರಗಳಲ್ಲಿ ಅವರು ಸ್ವಲ್ಪ ಮೊದ್ದು.  ನಾನಾದರೂ ಹೇಳಬಹುದಾಗಿತ್ತು.  ಆದರೆ ಹೇಳುವ ಹಾಗಿಲ್ಲ.  ಈ ಭಾರತೀಯ ನೇತಾರರು ಶಾಪಕ್ಕೊಳಗಾದವರು" ಅಂದಿತು.  "ಅದೇನು ಶಾಪನನಗೆ ಹೇಳು" ಎಂದು ಹೆಣ್ಣುಕೋತಿಯು ಕೇಳಲು ಗಂಡುಕೋತಿಯು "ಈ ಭಾರತೀಯ ನೇತಾರರಿಗೆಲ್ಲಾ ಹಿರೀಕನಾಗಿದ್ದವನೊಬ್ಬ ನಮ್ಮ ಮೂವರು ಹಿರಿಯರನ್ನು ಹಿಡಿದು ಅವರ ಕಣ್ಣು ಕಿವಿ ಹಾಗೂ ಬಾಯಿಯನ್ನು ಬಂದ್ ಮಾಡಿ "ತೆಪ್ಪಗೆ ಕೂತಿರಿ" ಎಂದು ತಾಕೀತು ಮಾಡಿ ಟೇಬಲ್ ಮೇಲೆ ಅಲಂಕಾರಕ್ಕಾಗಿ ಕೂರಿಸಿಕೊಂಡಿದ್ದ.  ಅದರಿಂದಾಗಿ ತುಂಬಾ ನೊಂದುಕೊಂಡ ನಮ್ಮ ಪಿತಾಮಹ ಈ ಭಾರತೀಯರ ನೇತಾರರಿಗೆ ನಾಡಿನ ಒಳಿತಿಗೆ ಅಗತ್ಯವಿರುವುದು ಕಾಣಿಸದಿರಲಿ, ಕೇಳಿಸದಿರಲಿ, ದೇಶದ ಉದ್ಧಾರಕ್ಕೆ ಅಗತ್ಯವಿರುವಂತಹದು ಇವರ ಬಾಯಿಂದ ಬಾರದಿರಲಿ ಎಂದು ಶಾಪ ಕೊಟ್ಟ.   ಕಳೆದ ಅರವತ್ತು ವರುಷಗಳಿಂದ ಅದು ಹಾಗೇ ನಡೆದುಕೊಂಡು ಬರುತ್ತಿದೆ" ಎಂದು ವಿವರಿಸಿ "ಹ್ಞುಂ, ಇರಲಿ ಬಿಡು.  ನಮಗ್ಯಾಕೆ ಅದೆಲ್ಲಾಹೊಟ್ಟೆ ಚುರುಗುಟ್ಟುತ್ತಿದೆ, ಬಾ ಏನಾದರೂ ಬಾಯಾಡಿಸುವಾ" ಅಂದಿತು.  ಆಗ ಹೆಣ್ಣುಕೋತಿಯು ಬಾಯಲ್ಲಿ ನೀರೂರಿಸಿಕೊಂಡು "ನೀನು ಬಾಯಾಡಿಸುವಾ ಅಂದಾಗ ನೆನಪಾಯಿತು.  ನನ್ನನ್ನೊಮ್ಮೆ ಆ ತಿಂಡಿ ಪಾರ್ಕಿಗೆ ಕರೆದುಕೊಂಡು ಹೋಗು ಪ್ರಿಯಾ" ಎಂದು ಬೇಡಿಕೊಂಡಿತು.  ಅದಕ್ಕುತ್ತರವಾಗಿ ಗಂಡುಕೋತಿಯು "ಖಂಡಿತಾ ಕರೆದುಕೊಂಡುಹೋಗುತ್ತೇನೆ.  ನಿನ್ನನ್ನು ಕರೆದುಕೊಂಡು ಹೋಗದೇ ಇನ್ಯಾರನ್ನು ಕರೆದುಕೊಂಡು ಹೋಗಲಿಆದರೆ ಈಗಲ್ಲ.  ಡೆಲ್ಲಿ ಸ್ಫೋಟಗಳ ನಂತರ ಭಾರತ - ಪಾಕಿಸ್ತಾನಗಳ ನಡುವೆ ಭುಗಿಲೆದ್ದಿರುವ ವೈಮನಸ್ಯದಿಂದಾಗಿ ಗಡಿ ದಾಟುವುದು ಕಷ್ಟ.  ವೀಸಾ ಸಿಗುವುದಿಲ್ಲ.  ನಿಜ ಹೇಳಬೇಕೆಂದರೆ ನಲವತ್ತೇಳರ ದೇಶವಿಭಜನೆಯಿಂದಾಗಿ ನಮ್ಮ ಪೂರ್ವಿಕರ ನಾಡನ್ನು ಕಣ್ಣಿಂದ ನೋಡುವ ಭಾಗ್ಯ ನಮಗಿಲ್ಲದಂತಾಗಿದೆ.  ಒಂದಲ್ಲಾ ಒಂದು ದಿನ ಪರಿಸ್ಥಿತಿ ಸುಧಾರಿಸಬಹುದು.  ಕಾಯೋಣ" ಎಂದು ಪ್ರಿಯತಮೆಯನ್ನು ಸಮಾಧಾನಿಸಿ ಪಕ್ಕದ ಸೇಬಿನ ಮರಕ್ಕೆ ಜಿಗಿಯಿತು.  ಹೆಣ್ಣುಕೋತಿಯು ಸಮ್ಮತಿಯಲ್ಲಿ ತಲೆಯಾಡಿಸಿ "ಹೌದು ಪ್ರಿಯಾ, ನೀನು ಹೇಳುವುದು ಸರಿ.  ಒಂದಲ್ಲಾ ಒಂದುದಿನ ನಾವು ಪಾಸ್‌ಪೋರ್ಟ್, ವೀಸಾ ಅಂತ ಯಾವ ರಗಳೆಯೂ ಇಲ್ಲದೇ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ನಿರಾತಂಕವಾಗಿ ಓಡಿಯಾಡುವ ಕಾಲ ಬಂದೇ ಬರುತ್ತದೆ.  ಅಲ್ಲಿಯವರೆಗೆ ಕಾಯೋಣ" ಎಂದುತ್ತರಿಸಿ ತಾನೂ ಸೇಬಿನ ಮರಕ್ಕೆ ಜಿಗಿಯಿತು.  ಇದೆಲ್ಲವನ್ನೂ ಗಮನವಿಟ್ಟು ಕೇಳಿಸಿಕೊಂಡ ನಮ್ಮ ಬೇಹುಗಾರ ಒಡನೆಯೆ ನವದೆಹಲಿಗೆ ಹಿಂತಿರುಗಿ ತನ್ನ ಮೇಲಧಿಕಾರಿಗಳಿಗೆ ವರದಿ ಮಾಡಿದ.  ತಕ್ಷಣ ಕಾರ್ಯೋನ್ಮುಖರಾದ ಬೇಹುಗಾರ ಸಂಸ್ಥೆ ಮೈಸೂರು ನಗರದಲ್ಲಿ ಪಿರಮಿಡ್ ಇರುವುದನ್ನೂ, ಅಲ್ಲೊಂದು ಕರಿನಾಯಿ ಇರುವುದನ್ನೂ ಖಚಿತಪಡಿಸಿಕೊಂಡಿತು.  ಒಡನೆಯೇ ನಮ್ಮ ಭದ್ರತಾ ಪಡೆಗಳು ಕಾರ್ಯನಿರತವಾದವು..."
"ತಿರುಪೆಯವರೇ, ನಿಮ್ಮ ಕರಿನಾಯಿಯನ್ನು ನಮಗೊಪ್ಪಿಸಿ.  ಇಲ್ಲದಿದ್ದರೆ ನೀವು ಭೀಕರ ಪರಿಣಾಮಗಳನ್ನು ಎದುರಿಸುತ್ತೀರಿ."  ಹೊರಗೆ ಮೈಕ್‌ನಲ್ಲಿ ಅನೌನ್ಸ್ ಮಾಡಿದರು.  ಎರಡು ಕ್ಷಣದಲ್ಲಿ ಅದು ನಮ್ಮ ಟೀವಿಯಲ್ಲೂ ಕೇಳಿಸಿತು.  ಅದು ಮುಗಿಯುತ್ತಿದ್ದಂತೇ ಫೋನ್ ಹೊಡೆದುಕೊಂಡಿತು.  ಹೋಗಿ ಎತ್ತಿಕೊಂಡೆ.  ಆ ಕಡೆಯಿಂದ ಪಟ್ಟಾಭಿರಾಮ ಪ್ರಶ್ನಿಸಿದ: "ಏನ್ರೀ, ಈ ಆರ್ಮಿಯೋರು ನಿಮ್ಮನೆ ಬಾಗಿಲಿಗೂ ಬೋಲ್ಟ್ ಹಾಕಿಬಿಟ್ಟಿದ್ದಾರಾ?"  "ಹೌದು ಇವರೇ" ಅಂದೆ.  "ಇದು ಭಾಳಾ ಅನ್ಯಾಯ.  ನಮ್ಮ ಬೀದಿಗೆ ಬಂದು ನಮ್ಮನ್ನೇ ಒಳಗೆ ಕೂಡಿಹಾಕೋದು ಅಂದ್ರೇನುಅಲ್ದೇ, ಆ ಬಡಪಾಯಿ ನಾಯಿ ವಿರುದ್ಧ ಈಪಾಟಿ ಕಮ್ಯಾಂಡೋಗಳು ತುಪಾಕಿ ಎತ್ಕಂಡು ಬಂದಿದಾರಲ್ಲ!  ಮೂರುನಾಕು ಟ್ಯಾಂಕ್‌ಗಳನ್ನೂ ತಂದು ಅಲ್ಲೇ ಅರಳಿಮರದ ಕೆಳಗೆ ನಿಲ್ಸಿದ್ದಾರಂತೆ.  ಇದೇನ್ರೀ ಇದೂ?"
".........."
"ನೋಡಿ, ನಾವೆಲ್ಲಾ ಒಗ್ಗಟ್ಟಾಗಿ ಪ್ರೊಟೆಸ್ಟ್ ಮಾಡ್ಬೇಕು.  ಹಿಂಬಾಗಿಲ ಮೂಲಕ ಹೊರಗೆ ಬನ್ನಿ.  ಹಾಗಂತ ಎಲ್ಲರಿಗೂ ಹೇಳ್ತೀನಿ.  ಪ್ರೆಸಿಡೆಂಟ್ ತಿಕಸ್ವಾಮಿ ಇಲ್ಲಿ ನನ್ ಜತೆ ಇದ್ದಾರೆ.  ನಾವಿಬ್ರೂ ನಮ್ ನಮ್ಮ ವೈಮನಸ್ಯಗಳನ್ನ ಬದಿಗಿರಿಸಿದ್ದೀವಿ."  ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ಲೈನ್ ಕತ್ತರಿಸಿದ.
ಹಿಂಬಾಗಿಲತ್ತ ನಡೆದೆ.  ಅದನ್ನು ತೆರೆಯುತ್ತಿದ್ದಂತೇ ಹಿತ್ತಿಲಲ್ಲಿ ಹೆಲಿಕಾಪ್ಟರ್‌ನಿಂದ ಧುಮುಕುತ್ತಿದ್ದ ಕಮ್ಯಾಂಡೋ ಒಬ್ಬ ತನ್ನ ರೈಫಲ್ ಅನ್ನು ನನ್ನತ್ತಲೇ ಗುರಿ ಹಿಡಿದ.  ಧಡಾರನೆ ಬಾಗಿಲು ಮುಚ್ಚಿಬಿಟ್ಟೆ.  ಮರುಕ್ಷಣ ಅದು ಹೊರಗಿನಿಂದ ಬೋಲ್ಟ್ ಆಯಿತು.  ಕೈಹಿಸುಕಿಕೊಳ್ಳುತ್ತಾ ಬಂದು ಟೀವಿ ಮುಂದೆ ಕುಳಿತೆ.  ಬೀದಿಯ ಜನರೆಲ್ಲಾ ಒಬ್ಬೊಬ್ಬರಾಗಿ ಬಂದು ನಮ್ಮ ಮನೆಯ ಮುಂದೆ ಸೇರಿದರು.  ನನ್ನೊಬ್ಬನನ್ನುಳಿದು ಎಲ್ಲರೂ ಅಲ್ಲಿದ್ದರು.  ಎಲ್ಲರಿಗಿಂತ ಮುಂದೆ ತಿಕಸ್ವಾಮಿಯೂ ಪಟ್ಟಾಬಿರಾಮನೂ ಕೈಕೈ ಹಿಡಿದು ನಿಂತಿದ್ದರು.  ಕ್ಯಾಮೆರಾ ತಮ್ಮ ಮೇಲೆ ಸುಳಿದಂತೆ ಇಬ್ಬರೂ ಕೈ ಮೇಲೆತ್ತಿ ಮುಷ್ಟಿ ಬಿಗಿ ಮಾಡಿ ಒಂದೇ ದನಿಯಲ್ಲಿ ಘೋಷಣೆ ಕೂಗಿದರು:
"ಪಿರಮಿಡ್ ನಮ್ಮದು."
"ನಮ್ಮದು, ನಮ್ಮದು."
"ಕರಿನಾಯಿ ನಮ್ಮದು."
"ನಮ್ಮದು, ನಮ್ಮದು."
"ಸೇನೆ ನಮ್ಮದಲ್ಲ."
"ನಮ್ಮದಲ್ಲ, ನಮ್ಮದಲ್ಲ."
ಸೇನಾ ಕಾರ್ಯಾಚರಣೆ ಹಠಾತ್ತನೆ ನಿಲುಗಡೆಗೆ ಬಂತು.  ಸೇನೆಗೂ, ಬೀದಿಯ ಜನರಿಗೂ ಮಾತುಕತೆ ಶುರುವಾಯಿತು.  ಏರು ದನಿಯಲ್ಲಿ ಆರಂಭವಾದ ಅದು ನಿಧಾನವಾಗಿ ಪಿಸುಮಾತಿಗಿಳಿಯಿತು.  ಏನೂ ಕೇಳಿಸುತ್ತಲೇ ಇರಲಿಲ್ಲ.  ಮಾತುಕತೆಯ ವಿವರಗಳು ದೊರೆಯುತ್ತಿಲ್ಲ ಎಂದು ವರದಿಗಾರ್ತಿ ಬೇಸರದಲ್ಲಿ ಹೇಳಿದಳು.  ಕೆಲಸ ಕಳೆದುಕೊಂಡ ಟೀವಿ ಕ್ಯಾಮರಾ ಅತ್ತಿತ್ತ ಅಲೆಯತೊಡಗಿತು.  ಸ್ಟರ್ಲಿಂಗ್ ಥಿಯೇಟರನ್ನು ಸುತ್ತು ಹಾಕಿ ಇತ್ತ ಓಡಿಬಂದು ಡಾಕ್ಟರ್ ನೀಲಕಂಠಮೂರ್ತಿಯವರ ಕ್ಲಿನಿಕ್ಕಿನ ಮುಚ್ಚಿದ ಬಾಗಿಲಿನ ಮೇಲೆ ಒಮ್ಮೆ ಕಣ್ಣಾಡಿಸಿ ಸೆಂಟ್ ಥಾಮಸ್ ಸ್ಕೂಲ್, ಅದರಾಚೆಯ ಸ್ಮಶಾನದೊಳಗೂ ಒಮ್ಮೆ ನುಗ್ಗಾಡಿ ಇತ್ತ ಬಂತು.  ಹಾಗೇ ಅಲೆದಾಡುತ್ತಾ ನಮ್ಮ ಮನೆಯೊಳಗೂ ಬಂತು.  ಲಲಿತೆಯತ್ತ ನೋಡಿ ಕಣ್ಣು ಮಿಟುಕಿಸಿದೆ.  ಟೀವಿ ಪರದೆಯ ತುಂಬಾ ಅವಳ ಲಜ್ಜೆಭರಿತ ನಗೆ ತುಂಬಿಕೊಂಡಿತು.  ನಗುತ್ತಾ ಎದ್ದು ಬಾತ್‌ರೂಮಿನತ್ತ ನಡೆದೆ.
ಲಾಡಿ ಸಡಿಲಿಸಿ ಪಾಯಿಜಾಮಾವನ್ನು ಕೆಳಗೆ ಸರಿಸಿ ನಿರಾಳವಾಗಿ ಕಣ್ಣುಮುಚ್ಚಿ ಹಾಡೊಂದನ್ನು ಗುನುಗತೊಡಗಿದಂತೇ ಹಾಲ್‌ನಲ್ಲಿ ಲಲಿತೆ ಕಿಟಾರನೆ ಕಿರುಚಿಕೊಂಡಳು.  ಸರಕ್ಕನೆ ಪಾಯಿಜಾಮ ಏರಿಸಿ ಲಾಡಿಯ ಅಂಚುಗಳನ್ನು ಕೈಯಲ್ಲಿ ಹಿಡಿದಂತೇ ಹೊರಬಂದೆ.  ಮುಖಮುಚ್ಚಿಕೊಂಡು ಕುಳಿತಿದ್ದ ಲಲಿತೆ ತಲೆಯೆತ್ತದೇ ಟೀವಿಯತ್ತ ಕೈತೋರಿದಳು.
ಟೀವಿ ಪರದೆಯಲ್ಲಿ ಕಣ್ಣುಗಳನ್ನು ಮುಚ್ಚಿಕೊಂಡು ಪಾಯಿಜಾಮ ಬಿಚ್ಚಿಕೊಂಡು ನಿಂತಿದ್ದ ಮನುಷ್ಯ ನಾನೇ ಎಂದು ಗುರುತು ಹತ್ತಲು ಒಂದೆರಡು ನಿಮಿಷಗಳೇ ಬೇಕಾದವು.  ಪರದೆಯ ಮೂಲೆಯಲ್ಲಿ ಮಿನುಗುತ್ತಿದ್ದ "ರೀಪ್ಲೇ" ಎಂಬ ಅಕ್ಷರಗಳನ್ನೇ ಬೆಪ್ಪಾಗಿ ನೋಡಿದೆ.  ಇಡೀ ಪರದೆಯ ತುಂಬಾ ನನ್ನ ಹೊಕ್ಕಳು ತುಂಬಿಕೊಂಡದ್ದನ್ನು ಕಂಡು ಮುಜುಗರ ಪಟ್ಟುಕೊಳ್ಳುತ್ತಿದ್ದಂತೇ ಕ್ಯಾಮರಾ ಹೊಕ್ಕಳಿಂದ ಮೆಲ್ಲಮೆಲ್ಲನೆ ಕೆಳಗಿಳಿಯತೊಡಗಿತು.  ವಿಪರೀತ ನಾಚಿಕೆಯಾಗಿಹೋಗಿ ಸರಕ್ಕನೆ ರಿಮೋಟ್ ಎತ್ತಿಕೊಂಡು ಸಿಕ್ಕಿದ ಗುಂಡಿ ಒತ್ತಿದೆ.  ಬೇರೊಂದು ಚಾನಲ್ ತೆರೆದುಕೊಂಡಿತು.  ಅದರಲ್ಲಿ ಅದ್ಯಾವುದೋ ಸೀರಿಯಲ್ ಬರುತ್ತಿತ್ತು, ಸಧ್ಯ.  ನೆಮ್ಮದಿಯೆನಿಸಿತು.  ಹಿಂದಿನದನ್ನು ಮರೆಯಲು ಇದರತ್ತ ಗಮನ ಕೇಂದ್ರೀಕರಿಸಿದೆ.
ನಸುನೀಲೀ ಬೆಳಕಿನಲ್ಲಿ ಮೀಯುತ್ತಿದ್ದ ಕೋಣೆ ಬೆಡ್‌ರೂಮಿನಂತೆ ಕಂಡಿತು.  ಹೌದು ಅದೇ.  ವಿಶಾಲವಾದ ಜೋಡಿಮಂಚ ಹಾಸಿಗೆಗಳು ಮಸುಕುಮಸುಕಾಗಿ ಕಾಣುತ್ತಿವೆ.  ಹಾಸಿಗೆಯಲ್ಲಿ ಯಾರೋ ಹೆಂಗಸು ಮಲಗಿದ್ದಾಳೆ.  ತುಂಡುಲಂಗ ತೊಡೆಗಳಿಂದ ಮೇಲೇರಿರುವಂತೆ ಕಾಣುತ್ತಿದೆ.  ಅವಳ ಅಂಗಾಲನ್ನು ಸವರಿ ಮೇಲೇರಿದ ಕ್ಯಾಮರಾ ಬತ್ತಲೆ ತೊಡೆಗಳನ್ನು ನೆಕ್ಕತೊಡಗಿತು.  ಬೇಸರದಲ್ಲಿ "ಛೆ ಛೆ" ಅಂದುಕೊಂದು ಮತ್ತೊಂದು ಚಾನಲ್‌ಗೆ ಹೋದರೆ ಅಲ್ಲೂ ಅದೇ ಸೀರಿಯಲ್.  ಇಲ್ಲಂತೂ ಕ್ಯಾಮೆರಾ ಆ ಹೆಣ್ಣಿನ ಮುಖದ ಮೇಲೆ ಕೀಲಿಸಿದೆ.  ಅದನ್ನು ನೋಡಿದವನೇ ಬೆಚ್ಚಿದೆ.
ಅದು ನನ್ನ ಮಗಳು.  ಟೀವಿ ಕ್ಯಾಮರಾ ನುಗ್ಗಿರುವುದು ನಮ್ಮ ಬೆಡ್‌ರೂಮಿಗೆ.
"ಓ ಬೇಡಾ, ಪ್ಲೀಸ್ ನಿಲ್ಸೀ" ಎಂದು ಅರಚುತ್ತಾ ಮುಂಬಾಗಿಲತ್ತ ಓಡಿ ಅದನ್ನು ಜಗ್ಗಿದೆ.  ಸೋತು ನಿಂತೆ.  ಹತಾಷೆಯಲ್ಲಿ ದಬದಬ ಬಡಿದೆ.  ಮ್ಯಾಜಿಕ್ ಹೋಲ್‌ಗೆ ಕಣ್ಣು ಹೂಡಿದೆ.  ಕ್ಯಾಮೆರಾ ಬೆಳಕು ಕಣ್ಣಿಗೇ ಚುಚ್ಚಿತು.  ಮುಖಮುಚ್ಚಿಕೊಂಡು ಕುಳಿತಿದ್ದ ಲಲಿತೆಯ ಮೈ ಅಲುಗಿಸಿದೆ.  ಅವಳು ಕಣ್ಣು ತೆರೆದು ಟೀವಿಯತ್ತ ನೋಡಿದ್ದೇ ನಾಗಾಲೋಟದಲ್ಲಿ ಬೆಡ್‌ರೂಮಿಗೆ ನುಗ್ಗಿ ನೈಟ್ ಲ್ಯಾಂಪ್ ಆರಿಸಿದಳು.  ಟೀವಿಯಲ್ಲಿ ಕತ್ತಲೆಯಾಯಿತು.  ಆದರೆ ಕ್ಯಾಮರಾ ಬೆಡ್‌ರೂಂ ಬಿಟ್ಟು ಹೋಗಲಿಲ್ಲ.  ಹಾಳಾದ್ದು ಕತ್ತಲಲ್ಲೂ ಏನೋ ಹುಡುಕುತ್ತಿತ್ತು.  ನನ್ನ ಮಗಳು, ಎಂಟೊಂಬತ್ತು ವರ್ಷದ ಮುಗ್ಧ ಬಾಲಕಿ, ಪ್ರಜಾಪ್ರಭುತ್ವದ ಬಿಡುಗಣ್ಣುಗಳ ಮುಂದೆ ಕತ್ತಲಲ್ಲೂ ಬತ್ತಲಾಗುತ್ತಿದ್ದಳು.
ಮುಖ ಮುಚ್ಚಿಕೊಳ್ಳುವುದು ಈಗ ನನ್ನ ಸರದಿ.

*     *     *

ಹಾಗೆ ಅದೆಷ್ಟು ಹೊತ್ತು ಕುಳಿತಿದ್ದೆವೋ, ದೂರದಲ್ಲಿ ಕೋಳಿಯೊಂದು ಕೂಗಿತು.  ಕಣ್ಣು ತೆರೆದರೆ ಲಲಿತೆ ಯಾತನೆಯಲ್ಲಿ ಮುಖ ಕಿವಿಚುತ್ತಾ ಕಿಬ್ಬೊಟ್ಟೆಯನ್ನು ಒತ್ತಿಕೊಂಡು ಮಿಸುಕಾಡುತ್ತಿದ್ದಳು.  ಕಣ್ಣಂಚುಗಳಲ್ಲಿ ನೀರು ಜಿನುಗುತ್ತಿತ್ತು.  "ಏನಾಯ್ತು?" ಅಂದೆ ಗಾಬರಿಯಲ್ಲಿ.  "ತಡೆಯೋದಿಕ್ಕೆ ಆಗ್ತಾ ಇಲ್ಲ.  ನಿಮಗೆ ಕೈ ಮುಗೀತೀನಿ, ಒಂದೇ ಒಂದು ನಿಮಿಷ ಕ್ಯಾಮರಾ ಇತ್ತ ಬರದ ಹಾಗೆ ನೋಡ್ಕೊಳ್ಳಿ, ಪ್ಲೀಸ್."  ಧಡಕ್ಕನೆದ್ದು ಟಾಯ್ಲೆಟ್‌ನತ್ತ ಓಡಿದಳು.  ಹಾರಿ ಅವಳ ಕೈಹಿಡಿದೆಳೆದು ಕೂರಿಸಿದೆ.
"ಸ್ವಲ್ಪ ತಡಕೋ."  ಗೋಗರೆದೆ.  ಕೈ ಕೊಸರಿಕೊಂಡಳು.  "ಆಗ್ತಾ ಇಲ್ಲಾರೀ."  ಸಿಡುಕಿದಳು.  "ನಿಮ್ಮ ದಮ್ಮಯ್ಯಾ ಅಂತೀನಿ."  ನರಳಿದಳು.  "ನಾನು ನಿಸ್ಸಹಾಯಕ."  ಒರಲಿದೆ.  ಬಿಕ್ಕುತ್ತಾ ಕೂತಳು.  ನಾನು ತಲೆ ಕೆಳಗೆ ಹಾಕಿದೆ.
ಬೀದಿಯಲ್ಲಿ "ಪ್ರಜಾಪ್ರಭುತ್ವಕ್ಕೆ ಜಯವಾಗಲಿ" ಎಂಬ ಘೋಷಣೆ ಮೊಳಗಿದಾಗ ತಲೆಯೆತ್ತಿದೆ.  ಟೀವಿಯಲ್ಲಿ ಮೈಕ್ ಹಿಡಿದ ವರದಿಗಾರ್ತಿ ಕಾಣಿಸಿಕೊಂಡಳು.  "ನಿಮಗೊಂದು ಶುಭಸುದ್ಧಿ" ಎಂದು ಮಾತು ಆರಂಭಿಸಿದಳು.
"ಮಾತುಕತೆ ಫಲಪ್ರದವಾಗಿ ಮುಕ್ತಾಯಗೊಂಡಿದೆ.  ಸೇನೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಹೊರನಡೆಯಲಿದೆ.  ಶಾಂತಿಯುತವಾಗಿ ಕರಿನಾಯಿಯನ್ನು ಹೊರಗೆ ಬಿಡುವಂತೆ ಪಿರಮಿಡ್‌ನ ನಿವಾಸಿಗಳ ಮನವೊಲಿಸಲು ಸಂಧಾನಕಾರ್ಯ ಆರಂಭವಾಗಲಿದೆ.  ನಾರಾಯಣ ಉರುಫ್ ಸಂಗಡಿಕಿ ಅವರು ಸಂಧಾನಕಾರರಾಗಿರುತ್ತಾರೆ.  ಕರಿನಾಯಿ ಹೊರಬಂದ ಮೇಲೆ, ಅದರ ವಿರುದ್ಧ ಸರಕಾರ ಹಾರ್ಡ್ ಎವಿಡೆನ್ಸ್ ಮುಂದಿಡುವವರೆಗೂ ಅದು ತಿಕಸ್ವಾಮಿಯವರ ಕಿರಿಯ ಪತ್ನಿಯ ರಕ್ಷಣೆಯಲ್ಲಿ ಅವರ ಬೆಡ್‌ರೂಮಿನಲ್ಲೇ ಇರುತ್ತದೆ."
ಪರದೆಯ ತುಂಬಾ ಸಂಗಡಿಕಿಯ ಮುಖ ಕಾಣಿಸಿಕೊಂಡಿತು.  "ಸಂಧಾನಕ್ಕೆ ತೆರಳುವಾಗ ನೀವು ಯಾವ ಉಡುಪು ಧರಿಸುತ್ತೀರಿಐ ಮೀನ್, ಈ ಕಾರ್ಯಕ್ಕೆ ಯಾವ ಉಡುಪು ಸೂಕ್ತ ಎಂದು ನಿಮ್ಮ ಅಭಿಪ್ರಾಯ?"  ವರದಿಗಾರ್ತಿ ಪ್ರಶ್ನೆ ಹಾಕಿ ಅವನ ಬಾಯಿಗೆ ಮೈಕ್ ಹಿಡಿದಳು.  ಸಂಗಡಿಕಿ ಒಮ್ಮೆ ವಿಶಾಲವಾಗಿ ನಕ್ಕು ಹೇಳಿದ:
"ನನ್ನಲ್ಲಿ ಹೊಚ್ಚ ಹೊಸ ರೇಷ್ಮೆ ಪಂಚೆ ಶರ್ಟುಗಳಿವೆ.  ಅವುಗಳಿಂದ ಕೆಲಸ ಆಗದೇ ಹೋದರೆ ಪ್ರೆಸಿಡೆಂಟ್ ತಿಕಸ್ವಾಮಿಯವರ ಕಿರಿಯ ಹೆಂಡತಿ ತಮ್ಮ ಸೀರೆ ರವಿಕೆಗಳನ್ನು ನನಗೆ ಕೊಡಲು ಮುಂದೆ ಬಂದಿದ್ದಾರೆ.  ತಮ್ಮ ಮದುವೆಯ ಹಾಗೂ ಪ್ರಸ್ಥದ ಸೀರೆರವಿಕೆಗಳೆರಡನ್ನೂ ನನ್ನ ಮುಂದಿಟ್ಟಿದ್ದಾರೆ.  ಆಯ್ಕೆ ನನ್ನದು.  ನನಗೆ ಎರಡೂ ಸೊಗಸಾಗಿ ಒಪ್ಪುತ್ತವೆ..."
ಲಲಿತೆಯನ್ನು ಕೈಹಿಡಿದು ಎಬ್ಬಿಸಿ ಕರೆದುಕೊಂಡು ಹೋಗಿ ಟಾಯ್ಲೆಟ್ಟಿನೊಳಗೆ ಬಿಟ್ಟೆ.

--***೦೦೦***--

ಮೈಸೂರು, ಪಾಂಡಿಚೆರಿ
ಡಿಸೆಂಬರ್ ೨೦೦೮

No comments:

Post a Comment