ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, March 7, 2013

ಧೂಳುಮರಿ


ಕೆಲವು ಗೆಳೆತನಗಳೇ ಹಾಗೆ.

ಅದೆಷ್ಟೋ ವರ್ಷ ಗುರುತಿಲ್ಲದಂತೆ ಮರೆಯಾಗಿದ್ದು, ಇನ್ನೆಂದೂ ಅದು ಮರುಚಿಗುರುವುದೇ ಇಲ್ಲ ಅನಿಸಿ, ನಮ್ಮ ಪಾಲಿಗೆ ಉಳಿದಿರುವುದು ಆಗೊಮ್ಮೆ ಈಗೊಮ್ಮೆ ಕಾಲಗರ್ಭದಿಂದ ಇದ್ದಕ್ಕಿದ್ದಂತೇ ಮೇಲೆದ್ದು ಬರುವ ಹಳೆಯ ನೆನಪುಗಳಷ್ಟೆ ಅಂದುಕೊಂಡು ಅವನ್ನೇ ಚಪ್ಪರಿಸಿ ಸವಿಯುತ್ತಾ ಕಳೆದುಹೋದ ಕಾಲಕ್ಕಾಗಿ ಹಂಬಲಿಸಿ ಮರುಗುತ್ತಿದ್ದಂತೇ ಮೋಡಗಳ ಮರೆಯಿಂದ ಛಕ್ಕನೆ ಹೊರಬಂದು ಜಗವನ್ನೆಲ್ಲಾ ಸ್ವಪ್ನಸದೃಶವಾಗಿಸಿಬಿಡುವ ಚಂದ್ರನಂತೆ ಒಂದು ದಿನ ಅನಿರೀಕ್ಷಿತವಾಗಿ ಧುತ್ತನೆ ಎದುರಾಗಿ ಮೂಕವಾಗಿಸಿಬಿಡುತ್ತವೆ.

ನನ್ನ ಮತ್ತು ಅನಂತಕೃಷ್ಣನ ಗೆಳೆತನದಲ್ಲೂ ಹಾಗೇ ಆಯಿತು.

ಹೈಸ್ಕೂಲು ಮತ್ತು ಪಿಯುಸಿ ಸೇರಿ ಇಡೀ ಐದು ವರ್ಷ ಒಂದೇ ಬೆಂಚಿನಲ್ಲಿ ಕೂತ ನಮ್ಮ ಗೆಳೆತನ ಇದ್ದಕ್ಕಿದ್ದಂತೆ ಭೂತಕ್ಕಿಳಿದುಬಿಟ್ಟದ್ದು ಇಪ್ಪತ್ತೊಂದು ವರ್ಷಗಳ ಹಿಂದೆ ಅವನಿಗೆ ಮೆಡಿಕಲ್ ಸೀಟ್ ಸಿಕ್ಕಿ ನನಗೆ ಸಿಗದೇ ಹೋದಾಗ.  ಅವನು ಉತ್ಸಾಹದಿಂದ ಪುಣೆಯ ಏಎಫ್‌ಎಂಸಿಗೆ ಹೊರಟುಹೋದರೆ ನಾನು ಜೋಲುಮೋರೆ ಹಾಕಿಕೊಂಡು ಮೈಸೂರಿನಲ್ಲೇ ಬಿಎಸ್ಸೀಗೆ ಸೇರಿದೆ.  ಅವನಿಂದ ಪತ್ರಗಳು ಬರತೊಡಗಿದರೂ ನನ್ನ ಕೀಳರಿಮೆ ಹಾಗೂ ನಿರುತ್ಸಾಹಗಳಿಂದಾಗಿ ನಿಧಾನವಾಗಿ ನಿಂತುಹೋದವು.  ಸಂಪರ್ಕ ಪೂರ್ತಿಯಾಗಿ ಕತ್ತರಿಸಿಹೋಗಿ ಹತ್ತೊಂಬತ್ತು ಇಪ್ಪತ್ತು ವರ್ಷಗಳೇ ಆಗಿರಬೇಕು.

ಎರಡು ತಿಂಗಳ ಹಿಂದೆ ಒಂದು ಭಾನುವಾರ ಬೆಳಿಗ್ಗೆ ಬೆಳಿಗ್ಗೆಯೇ ಫೋನಿನಲ್ಲಿ ಅವನ ದನಿ ಕೇಳಿ ನನಗೆ ಮಾತೇ ಹೊರಡಲಿಲ್ಲ.  ‘ಎಲ್ಲಿಂದ ಮಾತಾಡ್ತಿದಿಯೋ?  ನೀನಿನ್ನೂ ಈ ದೇಶದಲ್ಲೇ ಇದೀಯೇನೋ?" ಎಂಬ ನನ್ನ ಅಚ್ಚರಿ ಸಂತೋಷದ ಪ್ರಶ್ನೆಗೆ ಅವನದು ನಗೆಯ ಉತ್ತರ.  ‘ಮನೇಲೆ ಇರು, ಅರ್ಧಗಂಟೇಲಿ ಅಲ್ಲಿಗೇ ಬಂದು ಎಲ್ಲಾನೂ ಹೇಳ್ತೀನಿ’ ಎನ್ನುತ್ತಾ ಲೈನ್ ಕತ್ತರಿಸಿದ.  ನನ್ನ ಫೋನ್ ನಂಬರ್, ಅಡ್ರೆಸ್ ಎಲ್ಲವನ್ನೂ ಅದ್ಹೇಗೆ ಪತ್ತೆ ಮಾಡಿದ, ಅದಕ್ಕಾಗಿ ಅದೆಷ್ಟು ಹುಡುಕಾಡಿರಬೇಕು ಅಂದುಕೊಳ್ಳುತ್ತಿದ್ದಂತೇ ಬಾಗಿಲಲ್ಲಿ ಕಾಣಿಸಿಕೊಂಡ.  ‘ಅಷ್ಟೋಂದು ಕೂದಲಿತ್ತಲ್ಲ, ಅದೆಲ್ಲಾ ಎಲ್ಲಿ ಹೋಯ್ತೋ!  ಬೋಳುಗುಂಡ ಆಗಿದ್ದೀಯಲ್ಲಾ’ ಎನ್ನುತ್ತಾ ನನ್ನನ್ನು ತಬ್ಬಿಕೊಂಡ.  ವರ್ಷವರ್ಷಗಳ ಪರಿಚಯದಂತೆ ಲಲಿತೆಯ ಜೊತೆ ಹರಟಿದ, ಪುಟ್ಟಿಯನ್ನು ಅನಾಮತ್ತಾಗಿ ಮೇಲೆತ್ತಿ ತೋಳುಗಳ ಮೇಲಿಟ್ಟುಕೊಂಡು ಜೋಕಾಲಿಯಾಡಿಸಿದ.  ಇಡೀ ದಿನ ನಮ್ಮ ಜತೆಯೇ ಕಳೆದ.  ತನ್ನ ಕಥೆಯನ್ನೆಲ್ಲಾ ಹೇಳಿದ.

ಪುಣೆಯಲ್ಲಿ ಎಂಬಿಬಿಎಸ್ ಮುಗಿದದ್ದೇ ಎಂಡಿಗೆಂದು ದೆಹಲಿಯ ಎಐಐಎಂಎಸ್‌ಗೆ ಹೋದವನು ಆರುತಿಂಗಳಲ್ಲಿ ಅದನ್ನು ತೊರೆದು ಆದಿವಾಸಿಗಳ ಆರೋಗ್ಯವನ್ನು ಧ್ಯೇಯವಾಗಿಟ್ಟುಕೊಂಡ ಎನ್‌ಜಿಓ ಒಂದಕ್ಕೆ ಸೇರಿಕೊಂಡು ಸುಮಾರು ಹತ್ತುವರ್ಷ ಛತ್ತೀಸ್‌ಘರ್, ಆಂಧ್ರ ಪ್ರದೇಶ, ಒರಿಸ್ಸಾಗಳ ಕಾಡುಮೇಡುಗಳಲ್ಲಿ ಅಲೆದನಂತೆ.  ಹಾಗೆ ಅಲೆಯುತ್ತಿದ್ದಾಗಲೇ ಪರಿಚಯವಾದ ಕಾರವಾರದ ಕನ್ನಡತಿಯೇ ಆದ ವೈದ್ಯೆಯೊಬ್ಬಳಲ್ಲಿ ಪ್ರೇಮಾಂಕುರವಾಗಿ ಮದುವೆಯೂ ಆಗಿಬಿಟ್ಟನಂತೆ.  ಅವನಿಗೀಗ ಮೂರು ಮಕ್ಕಳು.  ಮೊದಲಿನೆರಡು ಹೆಣ್ಣು, ಕೊನೆಯದು ಗಂಡು.  ಮೊದಲ ಮಗಳಿಗೆ ಹದಿಮೂರು ವರ್ಷವಾದರೆ ಗಂಡುಮಗುವಿಗಿನ್ನೂ ಎರಡೂ ತುಂಬಿಲ್ಲ.  ತನ್ನ ಎನ್‌ಜಿಓ ಕಾರ್ಯಾಚರಣೆಯನ್ನು ಕರ್ನಾಟಕಕ್ಕೆ ವಿಸ್ತರಿಸಿದಾಗ ಅದರ ಮುಂದಾಳತ್ವ ವಹಿಸಿದ ಇವನು ಐದು ವರ್ಷಗಳಿಂದ ಕಾಮಗೆರೆಯಲ್ಲಿದ್ದಾನಂತೆ.  ಹೆಂಡತಿ ಈಗ ಮಂಗಳೂರಿನ ಮೆಡಿಕಲ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿ.  ಮಕ್ಕಳೂ ಅವಳ ಜತೆಯೇ ಇವೆಯಂತೆ.

ರಾತ್ರಿಯ ಊಟ ಮುಗಿಸಿ ಅವನು ನಮ್ಮ ಮನೆಯಿಂದ ಹೊರಡುವ ಹೊತ್ತಿಗೆ ನಮ್ಮಿಬ್ಬರ ನಡುವಿನ ಎರಡು ದಶಕಗಳ ಧೀರ್ಘ ಮೌನ ಕುರುಹೂ ಇಲ್ಲದಂತೆ ಕರಗಿಹೋಗಿತ್ತು.  ತಿಂಗಳಲ್ಲಿ ಹೆಂಡತಿಯನ್ನೂ ಕೊನೆಯ ಮಗುವನ್ನೂ ಕರೆತಂದು ಉತ್ಸಾಹದಿಂದ ನಮಗೆ ಪರಿಚಯ ಮಾಡಿಸಿದ.  ಅವನ ಹೆಂಡತಿ ಅವನನ್ನು ಏಕವಚನದಲ್ಲೇ ಮಾತಾಡಿಸುತ್ತಿದ್ದಳು.  ವಾರದ ಹಿಂದೆ ಫೋನ್ ಮಾಡಿ ತನಗೆ ಮತ್ತೆ ಎಂಡಿ ಮಾಡುವ ಹುಚ್ಚು ಹತ್ತಿದೆಯೆಂದೂ, ಜಾನ್ ಹಾಪ್‌ಕಿನ್ಸ್ ಯೂನಿವರ್ಸಿಟಿಯಲ್ಲಿ ಫೆಲೋಶಿಪ್ ಸಿಕ್ಕಿರುವುದಾಗಿಯೂ, ಮುಂದಿನ ತಿಂಗಳು ತಾನು ಅಲ್ಲಿಗೆ ಹೊರಡುತ್ತಿರುವುದಾಗಿಯೂ ಬಡಬಡ ಹೇಳಿದ.  ಅದೇ ಸಂಜೆ ಮತ್ತೆ ಫೋನ್ ಮಾಡಿ ಕಾಮಗೆರೆಯ ಬಗ್ಗೆ, ಹತ್ತಿರದ ಹೊಳೆಯ ಬಗ್ಗೆ, ಅದರ ಜಲಪಾತದ ಬಗ್ಗೆ, ಸುತ್ತಲಿನ ಕಾಡುಮೇಡು ಬೆಟ್ಟಗುಡ್ಡಗಳ ಬಗ್ಗೆ ಇಡೀ ಅರ್ಧಗಂಟೆ ವರ್ಣಿಸಿ, ನಾನು ಈ ಊರು ಬಿಡುವುದರ ಒಳಗೆ ನೀವೆಲ್ಲರೂ ಒಮ್ಮೆ ಇಲ್ಲಿಗೆ ಬನ್ನಿ ಎಂದು ಆಹ್ವಾನವಿತ್ತ.  ಮುಂದಿನವಾರವೇ ತನ್ನ ಹೆಂಡತಿ ಮಕ್ಕಳೂ ಬರುತ್ತಿರುವುದಾಗಿಯೂ ಅದೇ ಸಮಯಕ್ಕೆ ನಾವೂ ಅಲ್ಲಿರಬೇಕೆಂದು ತಾಕೀತು ಮಾಡಿಬಿಟ್ಟ.

ಹೋಗಲು ನನಗೂ ಉತ್ಸಾಹ.  ಲಲಿತೆಯೂ ಖುಷಿಯಿಂದ ಒಪ್ಪಿಕೊಂಡಳು.  ನದಿ, ಜಲಪಾತ, ಕಾಡು, ಕಾಡಾನೆ ಬಗ್ಗೆ ಕೇಳಿ ಪುಟ್ಟಿಯಂತೂ ಈವತ್ತೇ ಹೋಗೋಣ ಎಂದು ಹಠ ಹಿಡಿದಳು.  ಹೇಗೂ ಈ ಶುಕ್ರವಾರ ಕ್ರಿಸ್‌ಮಸ್, ಸೋಮವಾರ ಮೊಹರ್ರಂ.  ಶನಿವಾರ ಒಂದು ದಿನ ಯೂನಿವರ್ಸಿಟಿಗೆ ರಜಾ ಹಾಕಿದರೆ ಪಟ್ಟಾಗಿ ನಾಲ್ಕು ದಿನಗಳ ರಜಾದ ಮಜಾ.  ಗುರುವಾರ ಸಾಯಂಕಾಲವೇ ಕಾಮಗೆರೆಯಲ್ಲಿರುವುದಾಗಿ ಅನಂತನಿಗೆ ತಿಳಿಸಿ ಹೊರಡುವ ತಯಾರಿ ಆರಂಭಿಸಿಬಿಟ್ಟೆವು.  ಅವನಂತೂ ಗುರುವಾರ ಬೆಳಿಗ್ಗೆ ಕಣ್ಣುಬಿಡುತ್ತಿದ್ದಂತೇ ಫೋನ್ ಮಾಡಿ "ಸಾಯಂಕಾಲ ಬರ್ತಾ ಇದೀರಿ ತಾನೆ?" ಎಂದು ಕೇಳಿ ಖಾತ್ರಿ ಪಡಿಸಿಕೊಂಡ.

*     *     *

ಅನಂತನೊಡನೆ ಫೋನ್ ಸಂಭಾಷಣೆ ಮುಗಿಸಿ ಟಾಯ್ಲೆಟ್ಟಿಗೆ ಹೋಗಿಬಂದು ಹಲ್ಲುಜ್ಜಿ, ಅಡಿಗೆಮನೆಯ ನೆಲದ ಮೇಲೆ ಕಾಲು ಚಾಚಿ ಗೋಡೆಗೊರಗಿ ಕುಳಿತು ಲಲಿತೆ ಮುಂದೆ ಮಾಡಿದ ಟೀ ಲೋಟಕ್ಕೆ ಕೈ ಚಾಚುತ್ತಿದ್ದಂತೇ ಕಾಲಿಂಗ್ ಬೆಲ್ ಮೊಳಗಿತು.

ಎರಡು ನಿಮಿಷಗಳ ನಂತರ ಪುಟ್ಟಿ ಸದ್ದಾಗದಂತೆ ಕಾಲಬೆರಳುಗಳಲ್ಲೇ ಓಡಿಬಂದು "ಆ ಅಂಕಲ್ ಬಂದಿದ್ದಾರೆ" ಎಂದು ಕಿವಿಯಲ್ಲಿ ಪಿಸುಗುಟ್ಟಿ, ಆ ಪಿಸುಗುಟ್ಟಿವಿಕೆಯೇ ಬಂದದ್ದು ಯಾವ ಅಂಕಲ್ಲೆಂದು ಸ್ಪಷ್ಟವಾಗಿ ಸೂಚಿಸಿ, ಇವನ್ಯಾಕೆ ಇಷ್ಟೊತ್ತಿಗೇ ಬಂದ ಎಂದುಕೊಳ್ಳುತ್ತಾ ಉಳಿದಿದ್ದ ಟೀಯನ್ನು ನಾಲಿಗೆಯ ಮೇಲೆ ಎರಚಿಕೊಂಡು, ಡೈನಿಂಗ್ ಛೇನ ಮೇಲಿದ್ದ ಶರಟನ್ನು ಎಳೆದು ಎರಡು ಸಲ ಪಟಪಟ ಒದರಿದೆ.

ಸೋಫಾ ಬಿಟ್ಟು ಪಕ್ಕದ ಪ್ಲಾಸ್ಟಿಕ್ ಸ್ಟೂಲಿನ ಮೇಲೆ ಮುದುರಿ ಕುಳಿತಿದ್ದ ಶ್ರೀನಿವಾಸನ್.  ಲಲಿತೆ "ಭೇದಿ ಕಲರ್" ಎಂದು ಮೂಗು ಮುರಿಯುತ್ತಿದ್ದ ಕೆಟ್ಟ ಹಳದೀ ಬಣ್ಣದ ಶರಟು ಹಾಕಿಕೊಂಡಿದ್ದ.  ತಲೆ ಬಾಚಿರಲಿಲ್ಲ.  "ಡಿಸ್ಟರ್ಬ್ ಮಾಡಿದೆನಾ?  ಸಾರಿ" ಅಂದ.  ಲಲಿತೆ ಮುಂದೆ ಹಿಡಿದ ಟೀ ಲೋಟವನ್ನು ತೆಗೆದುಕೊಂಡು "ರಾತ್ರಿಯಿಡೀ ಭಯಂಕರ ಜಗಳ ಸಾರ್" ಎಂದು ಸಣ್ಣಗೆ ದನಿ ಹೊರಡಿಸಿ ತಲೆ ತಗ್ಗಿಸಿದ.  ಕಿಚನ್‌ನತ್ತ ಆತುರದಲ್ಲಿ ಹೆಜ್ಜೆ ಹಾಕುತ್ತಿದ್ದ ಲಲಿತೆ ಗಕ್ಕನೆ ನಿಂತುಬಿಟ್ಟಳು.

"ನಂಗೆ ಸಾಕಾಗಿಹೋಯ್ತು ಸಾರ್."  ಲೋಟವನ್ನು ಟೀಪಾಯ್ ಮೇಲಿಟ್ಟ.  "ಟೀ ಕುಡೀರಿ, ತಣ್ಣಗಾಗಿಬಿಡುತ್ತೆ."  ಲಲಿತೆ ದನಿ ಎಳೆದು ನನ್ನತ್ತ ನೋಡಿದಳು.

ಅವನು ಲೋಟವನ್ನೆತ್ತಿ ತುಟಿಗೆ ಹಿಡಿದ.  ಒಂದೇ ಗುಟುಕಿಗೆ ಎಲ್ಲವನ್ನೂ ಬಾಯಿಗೆ ಸುರಿದುಕೊಂಡು ಖಾಲಿ ಲೋಟವನ್ನು ಲಲಿತೆಯತ್ತ ಚಾಚಿದ.  ಅವಳು ಕೈ ಮುಂದೆ ಮಾಡುತ್ತಿದ್ದಂತೇ "ಇರಲಿ ಬಿಡಿ" ಎನ್ನುತ್ತಾ ಟೀಪಾಯ್ ಮೇಲಿಟ್ಟ.  ಅದನ್ನು ಅಲ್ಲೇ ಬಿಟ್ಟು ಲಲಿತೆ ಅಡಿಗೆಮನೆಯತ್ತ ಧಾಪುಗಾಲು ಹಾಕಿದಳು.  ಒಗ್ಗರಣೆ ಸೀದ ವಾಸನೆ ಗಪ್ಪನೆ ಮೂಗಿಗೆ ಬಡಿಯಿತು.  ಪಕ್ಕದ ಕೋಣೆಯಲ್ಲಿ ಮಗಳು ಒಂದೇಸಮನೆ ಕೆಮ್ಮತೊಡಗಿದಳು.

"ಫ್ಯಾನ್ ಹಾಕಿ.  ಎಲ್ಲಾ ಕಿಟಕೀನೂ ತೆಗೀರಿ."  ಲಲಿತೆ ಅಡಿಗೆಮನೆಯಿಂದಲೇ ಕೂಗಿ ಕೆಮ್ಮಿದಳು.  ಅವನೇ ಮೇಲೆದ್ದು ತನ್ನ ತಲೆಯ ಹಿಂದೆಯೇ ಇದ್ದ ಫ್ಯಾನ್‌ನ ಗುಂಡಿಯೊತ್ತಿ ರೆಗ್ಯುಲೇಟರನ್ನು ಪಟಪಟ ತಿರುಗಿಸಿದ.  ನಾನು ಎರಡೂ ಕಿಟಕಿಗಳನ್ನೂ ವಿಶಾಲವಾಗಿ ತೆರೆದೆ.

ಅವನೇನೋ ಅಂದ.  ಭರಭರ ಸುತ್ತತೊಡಗಿದ ಫ್ಯಾನ್‌ನ ಸದ್ದಿನಲ್ಲಿ ಅದೇನೆಂದು ಗೊತ್ತಾಗಲಿಲ್ಲ.  ‘ಏನು?’ ಎಂಬಂತೆ ಅವನತ್ತ ಪ್ರಶ್ನಾರ್ಥಕ ನೋಟ ಹೂಡುತ್ತಿದ್ದಂತೇ ಬೊಗಸೆಯಲ್ಲಿ ಮುಖ ಮುಚ್ಚಿ ಬಿಕ್ಕಿಬಿಕ್ಕಿ ಅಳತೊಡಗಿದ.  "ಇಟೀಸ್ ಓಕೆ, ಇಟೀಸ್ ಓಕೆ" ಎನ್ನುತ್ತಾ ನಾನು ಹತ್ತಿರ ಸರಿಯುತ್ತಿದ್ದಂತೇ ಅವನು ಧಡಕ್ಕನೆದ್ದು ಬೀಸುನಡಿಗೆಯಲ್ಲಿ ಹೊಸ್ತಿಲು ದಾಟಿ ಹೊರಟುಹೋದ.  ಗರಬಡಿದು ಅವನು ಹೋದತ್ತಲೇ ನೋಟ ಕೀಲಿಸಿ ನಿಂತ ನಾನು ವಾಸ್ತವಕ್ಕೆ ಬಂದದ್ದು "ಇದೇನು ಹೊರಟುಹೋದ್ರಾ?" ಎಂಬ ಲಲಿತೆಯ ಬೆರಗಿನ ಉದ್ಗಾರ ಕಿವಿಗಪ್ಪಳಿಸಿದಾಗಲೇ.

"ಇದೇನು ಕಥೆ ಇದು!" ಎಂಬ ನನ್ನ ಪ್ರಶ್ನೆಗೆ ಉತ್ತರವಾಗಿ ಲಲಿತೆ ""ಇದೇನು ಇಷ್ಟು ಸದ್ದು!" ಎನ್ನುತ್ತಾ ಫ್ಯಾನಿನ ವೇಗ ತಗ್ಗಿಸಿದಳು.

ಮೂರುನಾಲ್ಕು ವಾರಗಳಿಂದ ಸರಿಸುಮಾರು ದಿನವೂ ಇದೇ ಸುದ್ಧಿ.  ಗಂಡಹೆಂಡಿರ ಜಗಳ.  ಆದದ್ದು ನೋಡಿದರೆ ಪ್ರೇಮವಿವಾಹ.  ನಾಕೇ ದಿನದಲ್ಲಿ ಹಳಸಿಹೋಗಿದೆ.  ದಿನಾ ಬೆಳಗು ಸಂಜೆ ನನ್ನ ಮುಂದೆ ಗೋಳಾಡುತ್ತಾನೆ.

ನಾಲ್ಕು ವರ್ಷಗಳಿಂದ ನನ್ನ ಸಹೋದ್ಯೋಗಿ ಈ ಶ್ರೀನಿವಾಸನ್.  ವಯಸ್ಸು ಇನ್ನೂ ಮೂವತ್ತೋ ಮೂವತ್ತೊಂದೋ.  ಮೃದುಸ್ವಭಾವದ ಅಸಾಮಿ.  ಅವಿವಾಹಿತನಾಗಿದ್ದ ಅವನು ಆರೇಳು ತಿಂಗಳ ಹಿಂದೆ ಒಂದು ಸಂಜೆ ಆಗಷ್ಟೇ ಎಂ ಎಸ್ಸೀ ಫೈನಲ್ ಪರೀಕ್ಷೆ ಬರೆದು ಮುಗಿಸಿದ್ದ ಕರುಣಾಮೇರಿಯನ್ನು ಜತೆಯಲ್ಲಿ ಕರೆತಂದು ತಾವಿಬ್ಬರೂ ಮದುವೆಯಾಗಲು ನಿರ್ಧರಿಸಿರುವುದಾಗಿ ಘೋಷಿಸಿದಾಗ ನಮಗೆಲ್ಲರಿಗೂ ಅಚ್ಚರಿ.  ಇವರಿಬ್ಬರಿಗೂ ಅದ್ಯಾವಾಗ ಒಲವು ಮೂಡಿತು, ಅದು ಹೇಗೆ ಹೀಗೆ ಹೆಮ್ಮರವಾಗಿ ಬೆಳೆಯಿತು ಎಂದು ನಾವು ಅಧ್ಯಾಪಕರುಗಳಿರಲಿ ವಿದ್ಯಾರ್ಥಿಗಳಿಗೂ ಗೊತ್ತೇ ಆಗಿರಲಿಲ್ಲ.  ಅದಾಗಿ ಒಂದು ತಿಂಗಳಲ್ಲಿ ತಂದೆತಾಯಿ ಯಾರೂ ಇಲ್ಲದ, ಚಾಮರಾಜನಗರದ ಚರ್ಚ್ ಒಂದರಲ್ಲಿ ಕ್ರೈಸ್ತ ಸನ್ಯಾಸಿನಿಯರ ಆಶ್ರಯದಲ್ಲಿ ಬೆಳೆದ ಮೇರಿಯನ್ನು ಮೇಲುಕೋಟೆಯ ಅಪ್ಪಟ ಪುಳಿಚಾರು ಶ್ರೀನಿವಾಸನ್ ರಿಜಿಸ್ಟರ್ ಮದುವೆ ಮಾಡಿಕೊಂಡು ಯೂನಿವರ್ಸಿಟಿಯ ಎಸ್ಟೇಟ್ ಡಿಪಾರ್ಟ್‌ಮೆಂಟಿನವರನ್ನು ಹೇಗೋ ಸರಿಮಾಡಿಕೊಂಡು ಸ್ಟ್ಯಾಫ್ ಕ್ವಾರ್ಟರ್ಸ್ ಗಿಟ್ಟಿಸಿಕೊಂಡು ನಮ್ಮ ನಡುವೆ ಸಂಸಾರ ಹೂಡಿಯೇಬಿಟ್ಟ.

ಈ ಮದುವೆಗಾಗಿ ಅವರಿಬ್ಬರೂ ಎದುರಿಸಿದ ಸವಾಲುಗಳು, ಪಟ್ಟ ಕಷ್ಟಗಳು ನನ್ನ ಕಣ್ಣಮುಂದೆಯೇ ಇವೆ.  ಈ ಮದುವೆಯಾದರೆ ನಮ್ಮ ನಿನ್ನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಹಾಗೇ ಎಂದು ಖಡಾಖಂಡಿತವಾಗಿ ಹೇಳಿದ ತಾಯಿ ಮತ್ತು ಅಜ್ಜನಿಂದ ಶ್ರೀನಿವಾಸನ್ ದೂರವಾದರೆ ಕರುಣಾಮೇರಿಯದು ಇನ್ನೂ ದೊಡ್ಡ ಕಥೆ.  ಅವಳನ್ನು ಎಳೆಕೂಸಾಗಿದ್ದಾಗಿನಿಂದಲೂ ಸಾಕಿ, ಅವಳೂ ತಮ್ಮಂತೇ ಸಂನ್ಯಾಸಿನಿಯಾಗಿ ತಮ್ಮ ಜತೆಯೇ ಚರ್ಚ್‌ನ ಶಾಲೆಯಲ್ಲೇ ಅಧ್ಯಾಪಕಿಯಾಗಿ ಬದುಕು ಕಳೆಯಬೇಕೆಂದು ತಕ್ಕ ಅಡಿಪಾಯವನ್ನು ಅದೆಷ್ಟೋ ವರ್ಷಗಳಿಂದಲೂ ಹಾಕುತ್ತಾ ಬಂದಿದ್ದ ಸಂನ್ಯಾಸಿನಿಯರಿಗೆ ಇವಳು ಹೀಗೆ ರಾಂಗ್ ಹೊಡೆದದ್ದು ಸಿಡಿಲೇ ಸರಿ.  ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಮುಖ ಮಾಡಿಕೊಂಡ, ತಮಿಳು ಮಾತಾಡುತ್ತಿದ್ದ ಅರ್ಧ ಡಜ಼ನ್ ಬಿಳಿಯುಡುಗೆಯ ಸಂನ್ಯಾಸಿನಿಯರು ಯೂನಿವರ್ಸಿಟಿಯ ಹಾಸ್ಟೆಲ್‌ಗೆ ಧಾಳಿಯಿಟ್ಟು ಮೇರಿಯ ಕೋರ್ಟ್ ಮಾರ್ಷಲ್ ಮಾಡಿದ್ದಲ್ಲದೇ ಅವಳನ್ನು ಬಲವಂತವಾಗಿ ವ್ಯಾನಿನೊಳಗೆ ಎತ್ತಿಹಾಕಿಕೊಂಡು ಹೋಗುವ ಪ್ರಯತ್ನವನ್ನೂ ಮಾಡಿದರು.  ಇವಳು ತಪ್ಪಿಸಿಕೊಂಡು ಅದೆತ್ತಲೋ ಓಡಿದವಳು ಮತ್ತೆ ಕಾಣಿಸಿಕೊಂಡದ್ದು ಎರಡು ದಿನಗಳ ನಂತರ, ಒಂದಷ್ಟು ಎಬಿವಿಪಿ ಹುಡುಗರೊಂದಿಗೆ.  ಮಾರನೇ ದಿನವೇ ಗಾಂಧಿಭವನದಲ್ಲಿ ಇಬ್ಬರೂ ಸತಿಪತಿಯರಾಗಿಯೇಬಿಟ್ಟರು.  ಆ ನಂತರ ಶ್ರೀನಿವಾಸನ್ ಇವಳನ್ನು ಕಿಡ್ನ್ಯಾಪ್ ಮಾಡಿದ್ದಾನೆಂದು ಚರ್ಚ್‌ನವರು ಪೋಲೀಸ್ ಕಂಪ್ಲೇಂಟ್ ಕೊಟ್ಟರೂ ಮೇರಿಯ ಹೇಳಿಕೆಯಿಂದಾಗಿ ಅದು ಬಿದ್ದುಹೋಯಿತು.  ಆಮೇಲಾಮೇಲೆ ಏನೇನೋ ಸುದ್ಧಿಗಳು.  ಇಪ್ಪತ್ತು ಮೂವತ್ತು ಎಬಿವಿಪಿ ಪಡ್ಡೆಗಳು ಚರ್ಚ್‌ನೊಳಗೇ ನುಗ್ಗಿ ಫಾದಗೇ ಧಮಕಿ ಹಾಕಿದ ಮೇಲೇ ಅಂತೆ ನವಜೋಡಿ ಧೈರ್ಯವಾಗಿ ಬೆಳಿಗ್ಗೆ ಸಂಜೆ ಕುಕ್ಕರಹಳ್ಳಿ ಕೆರೆ ಏರಿಯ ಮೇಲೆ ವಾಕಿಂಗ್ ಹೋಗತೊಡಗಿದ್ದು.  ಎಬಿವಿಪಿ ಪಡ್ಡೆಗಳ ಜೊತೆ ಲಾಠಿ ಹಿಡಿದ ಒಂದಷ್ಟು ಅದೆಂಥದ್ದೋ ಸೇನೆಯವರೂ, ಒಂದಿಬ್ಬರು ಎಮ್ಮೆಲ್ಲೇಗಳೂ ಇದ್ದರು ಎಂಬ ಸುದ್ಧಿ.  ಶ್ರೀನಿವಾಸನ್‌ನನ್ನು ಕೇಳಿದರೆ ‘ಅದೇನೋ ನಂಗೊತ್ತಿಲ್ಲಾ ಸಾರ್.  ಒಟ್ಟಿನಲ್ಲಿ ಅದ್ಯಾರೋ ಪುಣ್ಯಾತ್ಮರಿಂದಾಗಿ ನನ್ನ ಬದುಕು ಹಸನಾಯ್ತು, ಕಂಟಕ ಎಲ್ಲಾ ಕಳೆದುಹೋಯ್ತು’ ಅನ್ನುತ್ತಾನೆ.  ಈ ಬಗ್ಗೆ ಮೇರಿಯನ್ನಂತೂ ಕೇಳಲಾಗಿಲ್ಲ.

ಆದರೆ ಅವನು ಅಂದುಕೊಂಡಷ್ಟು ಅವನ ಬದುಕು ಹಸನಾಗಿಲ್ಲ ಎನ್ನುವುದು ಕಳೆದ ಒಂದು ತಿಂಗಳಿಂದಲೂ ಕಣ್ಣಿಗೆ ರಾಚುತ್ತಿರುವ ವಾಸ್ತವ.  ದಿನಾ ವಾಗ್ವಾದ, ಕೂಗಾಟ.  ರಾತ್ರಿ ಹನ್ನೆರಡು ಒಂದಾದರೂ ಇವರ ಗಲಾಟೆ ನಿಲ್ಲುವುದಿಲ್ಲ ಎಂದು ನಮ್ಮೆರಡೂ ಮನೆಗಳ ನಡುವಿನ ಜರ್ನಲಿಸಂ ಡಿಪಾರ್ಟ್‌ಮೆಂಟಿನ ಪ್ರೊಫೆಸರ್ ವಿಶ್ವನಾಥ್ ಬೇಸರದಲ್ಲಿ ಹೇಳಿದರೆ ಅವರ ಹೆಂಡತಿ ಲಲಿತೆಯ ಮುಂದೆ ಗೊಣಗಾಡುತ್ತಾರೆ.  ಶ್ರೀನಿವಾಸನ್ ಸಹಾ ಮನೆಗೇ ಬಂದು ನನ್ನ ಮುಂದೆ ಗೋಳಾಡುತ್ತಾನೆ.  ‘ಇವಳಿಗಾಗಿ ನಾನು ಎಲ್ಲರನ್ನೂ ದೂರ ಮಾಡಿಕೊಂಡೆ ಸಾರ್’ ಎಂದು ಅಲವತ್ತುಕೊಂಡಿದ್ದಾನೆ.  ಲಲಿತೆಯ ಇರವನ್ನೂ ಲೆಕ್ಕಿಸದೇ ಒಂದೆರಡು ಬಾರಿ ಕಣ್ಣಿಗೆ ಕರವಸ್ತ್ರ ಒತ್ತಿಕೊಂಡಿದ್ದಾನೆ.

ಎರಡು ವಿಭಿನ್ನ ಪರಿಸರಗಳಲ್ಲಿ ಬೆಳೆದು, ವಿಭಿನ್ನ ಮನಸ್ಥಿತಿ ಇಷ್ಟಾನಿಷ್ಟಗಳನ್ನು ರೂಢಿಸಿಕೊಂಡ ಎರಡು ಜೀವಗಳು ಒಂದೇ ಸೂರಿನಡಿಯಲ್ಲಿ ಸೇರಿ ಒಂದೇ ಪಾತ್ರೆಯ ಅನ್ನವನ್ನು, ಒಂದೇ ಹಾಸಿಗೆಯನ್ನು ಹಂಚಿಕೊಳ್ಳತೊಡಗಿದಾಗ ಅಭಿಪ್ರಾಯಭೇದಗಳು, ಇರಿಸುಮುರಿಸು ಸಹಜ ಎಂಬ ಅರಿವು ನನಗೂ ಇದೆ.  ಅಷ್ಟೇಕೆ, ನನ್ನ ಬದುಕಿನಲ್ಲೇ ಅದು ನಡೆದಿದೆ.  ಆಗಷ್ಟೇ ವೃತ್ತಿಗಿಳಿದು ಸಂಪಾದನೆಗೆ ತೊಡಗಿದ್ದ ನನ್ನ ಮನೆಯಲ್ಲಿ ತನ್ನ ತವರುಮನೆಯಲ್ಲಿದ್ದಷ್ಟು ಸೌಕರ್ಯಗಳು ಇಲ್ಲದಿದ್ದ ಬಗ್ಗೆ ಲಲಿತೆಗೆ ಆರಂಭದಲ್ಲಿ ಅಸಮಾಧಾನವಿತ್ತು.  ಸಣ್ಣಪುಟ್ಟ ‘ಇಲ್ಲ’ಗಳಿಗೂ ಸಿಡಸಿಡ ಅನ್ನುತ್ತಿದ್ದಳು.  ಹಾಗೇ, ಅಮ್ಮ ಹಾಗೂ ಅಮ್ಮನದೇ ಪಡಿಯಚ್ಚು ಅಕ್ಕನ ಕೈಯಡಿಗೆಯನ್ನೇ ಉಂಡು ಬೆಳೆದಿದ್ದ ನನಗೆ ಲಲಿತೆ ಮೈಗೂಡಿಸಿಕೊಂಡಿದ್ದ ತವರುಮನೆಯ ಅಡಿಗೆಯ ವಿಧಾನಗಳು ಸ್ವಲ್ಪವೂ ರುಚಿಸುತ್ತಿರಲಿಲ್ಲ.  ಅವಳು ಬಾಯಿ ಚಪ್ಪರಿಸಿಕೊಂಡು ಉಣ್ಣುತ್ತಿದ್ದರೆ ನಾನು ಹೊಸ ಹೆಂಡತಿಗೆ ಬೇಜಾರು ಮಾಡಬಾರದೆಂದು ಕಮಕ್ ಕಿಮಕ್ ಅನ್ನದೇ ಕಷ್ಟಪಟ್ಟು ತುತ್ತು ಗಂಟಲಿಗಿಳಿಸುತ್ತಿದ್ದೆ.  ಇಷ್ಟೆಲ್ಲಾ ಕಷ್ಟಪಡುವುದು ಈ ಹೊಟ್ಟೆಗಾಗಿ, ಅದಕ್ಕೇ ಹೀಗೆ ಸೊನ್ನೆಯಾಯಿತಲ್ಲ ಅಂತ ದಿನವೂ ಒಳಗೊಳಗೇ ನೊಂದುಕೊಳ್ಳುತ್ತಿದ್ದೆ.  ಲಲಿತೆಯ ಮೇಲೆ ಸಿಟ್ಟು ಉಕ್ಕುತ್ತಿತ್ತು.  ಆದರೀಗ ಪರಿಸ್ಥಿತಿ ಬದಲಾಗಿದೆ.  ಈ ಹತ್ತು ವರ್ಷಗಳಲ್ಲಿ ನಿಧಾನವಾಗಿ ಒಬ್ಬರಿಗೊಬ್ಬರು ಹೊಂದಿಕೊಂಡಿದ್ದೇವೆ.  ಯಶಸ್ವಿ ಬದುಕೆಂದರೆ ಹೊಂದಾಣಿಕೆಯೇ ಅಲ್ಲವೇ?  ಲಲಿತೆಗೆ ಈಗ ನಮ್ಮೀ ಮನೆಯೇ ಸ್ವರ್ಗ.  ಅವಳ ಕೈನ ಅಡಿಗೆ ನನಗೀಗ ಅಮೃತ.

ಶ್ರೀನಿವಾಸನ್ - ಕರುಣಾಮೇರಿಯ ದಾಂಪತ್ಯದಲ್ಲೂ ಹೀಗೇ ಆಗುತ್ತಿರಬೇಕು.  ಅದರಲ್ಲೂ ವಿಭಿನ್ನ ಧಾರ್ಮಿಕ ಹಿನ್ನೆಲೆಯಿಂದಾಗಿ ಅವರಿಬ್ಬರ ನಡುವಿನ ಕಂದರ ನನ್ನ ಹಾಗೂ ಲಲಿತೆಯ ನಡುವಿದ್ದ ವ್ಯತ್ಯಾಸಗಳಿಗಿಂತಲೂ ಆಳವಾಗಿರುವುದು ಸಹಜ.  ಹೀಗಾಗಿ ಇಬ್ಬರೂ ಹೊಂದಾಣಿಕೆಯ ಮನೋಭಾವವನ್ನು ಸಾಕಷ್ಟು ರೂಢಿಸಿಕೊಳ್ಳುವವರೆಗೆ ಹೀಗೆ ಕಲಹ ಮನಸ್ತಾಪಗಳು ಇದ್ದದ್ದೇ ಎಂದು ನಾವು ಅಂದುಕೊಂಡಿದ್ದೆವು.  ಆದರೆ ದಿನಗಳೆದಂತೆ ಅವರ ನಡುವೆ ಹೊಂದಾಣಿಕೆಯ ಯಾವ ಲಕ್ಷಣಗಳೂ ಕಾಣುತ್ತಿಲ್ಲ.  ವಾರದ ಹಿಂದೆ ಕ್ಯಾಂಪಸ್ ಒಳಗೇ ಸಿಟಿಬಸ್ಸಿನಲ್ಲಿ ನಮ್ಮ ವಿದ್ಯಾರ್ಥಿಗಳೆದುರಿಗೇ ವಾಗ್ವಾದಕ್ಕಿಳಿದುಬಿಟ್ಟಿದ್ದರು.

ನನಗೆ ತಿಳಿದಂತೆ ಮೊದಮೊದಲು ಅವಳ ವಿದ್ಯಾಭ್ಯಾಸವನ್ನು ಮುಂದುವರೆಸುವ ವಿಷಯದಲ್ಲಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯವೆದ್ದಿತ್ತು.  ಮನೆಯಲ್ಲೇ ಕೂತಿರಬೇಡ, ಪಿಹೆಚ್‌ಡಿ ಮಾಡು ಎಂದು ಶ್ರೀನಿವಾಸನ್ ಹೆಂಡತಿಗೆ ಹೇಳಿದ್ದಲ್ಲದೇ ‘ದಯವಿಟ್ಟು ನೀವೇ ಅವಳ ಗೈಡ್ ಆಗಿ ಸಾರ್, ನಾನು ಅವಳ ಗಂಡ ಆಗಿರೋದ್ರಿಂದ ಗೈಡೂ ಆಗೋದಿಕ್ಕೆ ಯೂನಿವರ್ಸಿಟಿ ಬಿಡೋದಿಲ್ಲ ಅನ್ನೋದು ನಿಮಗೆ ಗೊತ್ತೇ ಇದೆ’ ಎಂದು ನನ್ನನ್ನು ನಾಕೈದು ಬಾರಿ ವಿನಂತಿಸಿಕೊಂಡಿದ್ದ.  ನಾನೂ ಆಗಲಿ ಅದಕ್ಕೇನಂತೆ ಅಂದಿದ್ದೆ.  ಆದರೆ ಒಂದು ದಿನ ಧುಮಗುಟ್ಟುತ್ತಾ ಮನೆಗೇ ಬಂದು ನಂಗೆ ಪಿಹೆಚ್‌ಡಿ ಗೀಹೆಚ್‌ಡಿ ಮಣ್ಣು ಮಸಿ ಎಂಥದೂ ಬ್ಯಾಡ, ಇಷ್ಟು ಓದಿದ್ದೇ ಸಾಕು ಅಂತ ಅವಳದು ಒಂದೇ ಹಠ ಸಾರ್ ಎಂದು ಅತೀವ ಬೇಸರದಲ್ಲಿ ಒದರಿದ.  ಆಮೇಲೆ ಅವನದರ ಬಗ್ಗೆ ಮತ್ತೆ ಮಾತಾಡಲೇ ಇಲ್ಲ.

ಇಷ್ಟರ ಹೊರತಾಗಿ ಅವರ ನಡುವಿನ ಮನಸ್ತಾಪಕ್ಕೆ ಮತ್ತಾವ ಕಾರಣದ ಸುಳಿವೂ ನಮಗೆ ಸಿಕ್ಕಿಲ್ಲ.  ಜಗಳಗಳು ಮಾತ್ರ ದಿನಾ ಹೊತ್ತುಗೊತ್ತಿಲ್ಲದೇ ನಡೆಯುತ್ತಿವೆ.  ‘ಎಷ್ಟು ದಿನ ಅಂತ ಹೀಗೆ?  ಹೊಂದಿಕೊಂಡು ಹೋಗಿ’ ಎಂದು ಒಂದು ದಿನ ಮಾತಿನ ನಡುವೆ ಹೇಳಿದಾಗ ಅವನು ತಲೆ ಒದರಿಬಿಟ್ಟಿದ್ದ.  ‘ನಾನು ಸಾಕಷ್ಟು ಹೊಂದಿಕೊಂಡಿದ್ದೀನಿ ಸಾರ್.  ಅವಳೇ ಮೊಂಡಾಟ ಮಾಡ್ತಾಳೆ.  ನನ್ನಷ್ಟು ಸಾಫ್ಟ್ ಯಾರು ಸಿಗ್ತಾರೆ ಹೇಳಿ?  ನೀವು ನಮ್ಮಪ್ಪನ್ನ ನೋಡಬೇಕಾಗಿತ್ತು.  ಉರಿಸಿಂಗ!  ಉಗ್ರನರಸಿಂಹ ಅಂದ್ರೆ ಉಗ್ರನರಸಿಂಹ.  ಅವರಿಗೆ ಅಮ್ಮ ಅದೆಷ್ಟು ಹೆದರ್ತಿದ್ಲು ಅಂದ್ರೆ ಅವಳ ಗಂಟಲಿಂದ ಸ್ವರ ಹೊರಡ್ತಾ ಇರೋದು ಅಪ್ಪ ಹೋದಾಗಿಂದ ಮಾತ್ರ.  ಅಂಥಾ ಗಂಡ ಇವಳಿಗೆ ಸಿಕ್ಕಿದ್ರೆ ಹೇಗಾಡ್ತಿದ್ಲೋ’ ಎಂದು ಏನೇನೋ ಕಥೆ ಶುರುಹಚ್ಚಿಕೊಂಡುಬಿಟ್ಟಿದ್ದ.

ಶ್ರೀನಿವಾಸನ್‌ಗೆ ನನ್ನ ಜತೆ ಸಲಿಗೆ ಇರುವಂತೆ ಕರುಣಾಮೇರಿಗೆ ಸುತ್ತಮುತ್ತಲ ಬೇರೆಲ್ಲಾ ಹೆಂಗಸರಿಗಿಂತ ಲಲಿತೆಯೊಂದಿಗೆ ಸಲಿಗೆ ಜಾಸ್ತಿ.  ಹಿಂದೆಲ್ಲಾ ಆಗೊಮ್ಮೆ ಹೀಗೊಮ್ಮೆ ನನ್ನನ್ನು ಯಾವುದಾದರೂ ಪುಸ್ತಕ ಕೇಳಿಕೊಂಡು ಮನೆಗೆ ಬಂದಾಗ ಲಲಿತೆಯನ್ನು ಗೌರವದಿಂದ "ಮೇಡಂ" ಎಂದು ಸಂಬೋಧಿಸುತ್ತಿದ್ದವಳು ಮದುವೆಯಾಗಿ ನಮ್ಮ ನೆರೆಯವಳೇ ಆಗಿಬಿಟ್ಟ ಮೇಲೆ ಬಾಯಿತುಂಬಾ "ಲಲಿತಕ್ಕಾ" ಎಂದು ಕರೆಯುತ್ತಾಳೆ.  ಈ ಸಲಿಗೆಯನ್ನೇ ಉಪಯೋಗಿಸಿಕೊಂಡು ಅವಳ ಸಂಸಾರದ ಬಿಕ್ಕಟ್ಟಿನ ಮರ್ಮವನ್ನರಿತು ಏನಾದರೂ ಸಲಹೆ ಕೊಡಲು ಮೊನ್ನೆ ಲಲಿತೆ ಪ್ರಯತ್ನಿಸಿದಳಂತೆ.  ಸಂಜೆ ತರಕಾರಿ ತರಲು ಇವಳು ಹೊರಟಾಗ ಅವಳೂ ಜತೆಗೂಡಿದಳಂತೆ.  ಹಿಂತಿರುಗುತ್ತಾ ಮೇರಿ ತನ್ನ ಬೇಸರವನ್ನು ಇಷ್ಟಿಷ್ಟೇ ಹೊರಹಾಕತೊಡಗಿದಾಗ ಲಲಿತೆ ಸಣ್ಣಗೆ ‘ಹೊಸದಾಗಿ ಮದುವೆಯಾಗಿದ್ದೀರಿ, ತಕ್ಷಣಕ್ಕೆ ಹೊಂದಿಕೊಳ್ಳೋದು ಕಷ್ಟಾನೇ...  ರಾತ್ರಿ... ನೀನೇನಾದ್ರೂ ಸರಿಯಾಗಿ... ನಡಕೊಳ್ತಾ ಇಲ್ಲವಾ?’ ಎಂದು ರಾಗ ಎಳೆಯುತ್ತಿದ್ದಂತೇ ಅವಳು "ಓಹ್ ಅದಾ!" ಎಂದು ಉದ್ಗರಿಸಿ ರಸ್ತೆಯಲ್ಲಿದ್ದವರೆಲ್ಲಾ ತಿರುಗಿ ನೋಡುವಂತೆ ಪಕಪಕನೆ ನಕ್ಕುಬಿಟ್ಟಳಂತೆ.  ಇವಳ ಮುಜುಗರವನ್ನೂ ಲೆಕ್ಕಿಸದೇ ಯಾವುದೋ ಭಾರಿ ಜೋಕೊಂದನ್ನು ನೆನಸಿಕೊಳ್ಳುವಂತೆ ಮತ್ತೆ ಮತ್ತೆ ನೆನಸಿಕೊಂಡು ದಾರಿಯುದ್ದಕ್ಕೂ ನಗುತ್ತಿದ್ದಳಂತೆ.  ಲಲಿತೆಗೆ ಯಾಕಾಗಿ ಕೇಳಿದೆನೋ ಅನಿಸಿಬಿಟ್ಟಿತಂತೆ.

ಅದಾಗಿ ಎರಡು ದಿನಗಳಾಗಿವೆ.  ಅಂದಿನಿಂದ ಇವರ ಕಲಹಗಳ ಬಗ್ಗೆ ಪ್ರೊ. ವಿಶ್ವನಾಥ್ ಅವರಿಂದ ನನಗಾಗಲೀ, ಅವರ ಶ್ರೀಮತಿಯವರಿಂದ ಲಲಿತೆಗಾಗಲೀ ಯಾವ ಕಂಪ್ಲೇಂಟೂ ಬಂದಿಲ್ಲ.

ಆದರೆ ಈ ಗಂಡಹೆಂಡಿರ ಜಗಳ ಉಗ್ರವಾಗಿ ಮರುಕಳಿಸಿದೆ ಎನ್ನುವುದು ಈಗ ಅವನ ಪರಿಸ್ಥಿತಿಯನ್ನು ನೋಡಿದ ಮೇಲೆ ಅನಿಸತೊಡಗಿತು.  ಅವನು ಹೀಗೆ ಬಿಕ್ಕಿಬಿಕ್ಕಿ ಅತ್ತದ್ದನ್ನು ನಾನು ಹಿಂದೆಂದೂ ನೋಡಿರಲಿಲ್ಲ.  ಅವನೇ ಏಕೆ, ಗಂಡಸೊಬ್ಬ ಹಾಗೆ ಅಳುವುದನ್ನು, ಚಿಕ್ಕವನಾಗಿದ್ದಾಗೊಮ್ಮೆ ಅಪ್ಪನಿಂದ ಸೌದೆ ತುಂಡಿನಲ್ಲಿ ಹೊಡೆಸಿಕೊಂಡ ಚಿಕ್ಕಪ್ಪ ಅತ್ತದ್ದನ್ನು ಬಿಟ್ಟರೆ, ನಾನು ನೋಡಿಯೇ ಇರಲಿಲ್ಲ.  ಇದ್ಯಾಕೋ ವಿಪರೀತಕ್ಕಿಟ್ಟುಕೊಂಡಿದೆ ಅನಿಸಿತು.

"ಮನೆಗೆ ಹೋಗಿ ಅದೇನೋ ನೋಡಿ ಬರಲಾ?" ಅಂದೆ.  "ಬೇಡ" ಅಂದಳು ಲಲಿತೆ.  "ಗಂಡಹೆಂಡತಿ ಅವರೇ ಸರಿಯಾಗಲಿ ಬಿಡಿ.  ನಾವು ಮೂರನೆಯೋರು ತಲೆ ಹಾಕೋದು ಬೇಡ."  ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ಮಗಳಿದ್ದ ಕೋಣೆಯತ್ತ ನಡೆದುಬಿಟ್ಟಳು.

ಒಂಬತ್ತೂವರೆಗೆ ನಾನು ಡಿಪಾರ್ಟ್‌ಮೆಂಟಿಗೆ ಹೋದಾಗ ಶ್ರೀನಿವಾಸನ್ ಆಗಲೇ ಅಲ್ಲಿದ್ದ.  ತನ್ನ ಬೆಳಗಿನ ಕ್ಲಾಸುಗಳನ್ನು ಮುಗಿಸಿ ಹೊರಟುಹೋದ ಅವನು ಮಧ್ಯಾಹ್ನ ನನ್ನ ಕಣ್ಣಿಗೆ ಬೀಳಲೇ ಇಲ್ಲ.  ಗೆಳೆಯ ಅನಂತನಿಂದ "ಸಾಯಂಕಾಲ ಹೊರಡ್ತಾ ಇದೀಯಾ ತಾನೆ?" ಎಂದು ಎರಡು ಸಲ ಫೋನ್ ಬಂದಾಗ ಶ್ರೀನಿವಾಸನ್ ನನ್ನ ತಲೆಯಿಂದ ಅದೆತ್ತರೋ ಹಾರಿಹೋದ.  "ಹೌದಪ್ಪಾ ಹೌದು" ಎಂದು ಎರಡು ಸಲವೂ ನಗುತ್ತಾ ಹೇಳಿ, ಬೇಗಬೇಗನೆ ಮನೆಗೆ ಹೋಗಿ ಎರಡು ನಿಮಿಷ ಶವರ್ ಕೆಳಗೆ ನಿಂತು, ಪ್ರಯಾಣಕ್ಕೆಂದು ವಾರದಿಂದಲೂ ಮಾಡಿಕೊಂಡಿದ್ದ ತಯಾರಿಯನ್ನೆಲ್ಲಾ ಮತ್ತೊಮ್ಮೆ ಪರಿಶೀಲಿಸಿ ಎಲ್ಲವನ್ನೂ ಕಾರಿಗೆ ಹಾಕಿ ಮೂವರೂ ನಾಲ್ಕೂಕಾಲಿಗೆಲ್ಲಾ ಕಾಮಗೆರೆಯತ್ತ ಹೊರಟುಬಿಟ್ಟೆವು.  ಗುಂಡ್ಲುಪೇಟೆಯಲ್ಲಿ ಹತ್ತುನಿಮಿಷ ನಿಂತು ಗಣೇಶಭವನದಲ್ಲಿ ಟೀ ಕುಡಿದು ಸುಲ್ತಾನ್ ಬತೇರಿಯ ಕಡೆಗಿನ ಕಾಡುರಸ್ತೆಯಲ್ಲಿ ಅರ್ಧ ಗಂಟೆ ಸಾಗಿ ಕಾಮಗೆರೆ ತಲುಪಿದಾಗ ಏಳುಗಂಟೆ.

ಅನಂತನ ಹೆಂಡತಿ ಮಕ್ಕಳು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಒಬ್ಬಳು ಮಧ್ಯವಯಸ್ಸಿನ ಆಯಾ ಈಗಾಗಲೇ ಅಲ್ಲಿದ್ದರು.  ಅವರೆಲ್ಲಾ ಮಧ್ಯಾಹ್ನವೇ ಬಂದರಂತೆ.  ಎಲ್ಲರೂ ಮಿಸ್ ಲೋಬೋ ಎಂದು ಕರೆಯುತ್ತಿದ್ದ ಆ ಆಯಾ ಮಕ್ಕಳೊಂದಿಗೆ ಬರೀ ಇಂಗ್ಲೀಷ್‌ನಲ್ಲೇ ಮಾತಾಡುತ್ತಿದ್ದಳು.  ಅನಂತನ ಹೆಂಡತಿ ಕುಸುಮಾ ಅವಳನ್ನು ತನ್ನ ಮಕ್ಕಳ "ಗವರ್ನೆಸ್" ಎಂದು ನಮಗೆ ಪರಿಚಯ ಮಾಡಿಸಿದಳು.  "ಸಾಕು ಬಿಡೇ, ಬೂರ್ಜ್ವಾಗಿತ್ತಿ" ಎಂದು ಅನಂತ ಹೆಂಡತಿಯನ್ನು ಛೇಡಿಸಿದ.

ಅನಂತನ ಮನೆ ಆಸ್ಪತ್ರೆಯ ಕಾಂಪೌಂಡಿನೊಳಗೇ ಇದ್ದು ವಿಶಾಲವಾಗಿತ್ತು.  ಕೆಳಗೆ ವಿಶಾಲ ಡ್ರಾಯಿಂಗ್ ರೂಂ, ಡೈನಿಂಗ್ ಹಾಲ್, ಬಲು ದೊಡ್ಡ ಕಿಚನ್.  ಜತೆಗೆ ದೊಡ್ಡದೊಡ್ಡ ಮೂರು ಕೋಣೆಗಳು.  ಮೇಲೆ ಎರಡು.  ಒಂದು ಕೋಣೆಗೆ ಹೊಂದಿಕೊಂಡಂತೆ ವಿಶಾಲವಾದ ಬಾಲ್ಕನಿ.  ಆ ಕೋಣೆಯನ್ನೇ ಅನಂತ ನಮಗೆಂದು ಅಣಿಮಾಡಿಸಿದ್ದ.  ಮೈಸೂರಿನಲ್ಲಿದ್ದಿದ್ದರೆ ಈ ಮನೆಗೆ ಬಾಡಿಗೆ ಹತ್ತುಸಾವಿರ ಆಗುತ್ತಿತ್ತು ಎಂದು ಲಲಿತೆ ನನ್ನ ಕಿವಿಯಲ್ಲಿ ಪಿಸುಗುಟ್ಟಿದಳು.  ಕತ್ತಲಾಗಿದ್ದುದರಿಂದ ಹೊರಗೇನೂ ನೋಡಲಾಗಲಿಲ್ಲ.

ಮನೆಯ ಉಸ್ತುವಾರಿಯನ್ನೆಲ್ಲಾ ಅನಂತ "ಪ್ರಿಯಾ" ಎಂದು ಕರೆಯುತ್ತಿದ್ದ ಒಬ್ಬಳು ಸ್ವಚ್ಛ ಬಿಳೀಸೀರೆರವಿಕೆಯ, ಮೆಲುಮಾತಿನ, ಗಂಭೀರ ಮುಖಮುದ್ರೆಯ ಹೆಂಗಸು ನೋಡಿಕೊಳ್ಳುತ್ತಿದ್ದಳು.  ಅವಳು ತನ್ನ ಗವರ್ನೆಸ್ ಎಂದು ಅನಂತ ನಗೆಚಟಾಕಿ ಹಾರಿಸಿದ.  ಅವಳಿಗೆ ಸಹಾಯಕರಾಗಿ ಒಂದಿಬ್ಬರು ಚಟುವಟಿಕೆಯ ಲಂಗದಾವಣಿಯ ಹುಡುಗಿಯರು ಓಡಾಡಿಕೊಂಡಿದ್ದರು.  ಅನಂತನ ಹೆಂಡತಿ ಮತ್ತು ಮಕ್ಕಳಿಗೆ ಆಯಾಸವಾಗಿದ್ದುದರಿಂದ ಪ್ರಿಯಾ ಎಂಟುಗಂಟೆಗೆಲ್ಲಾ ಅಡಿಗೆ ರೆಡಿ ಮಾಡಿದಳು.  ಊಟವಾದದ್ದೇ ಅವರೆಲ್ಲಾ ಬೆಡ್‌ರೂಂ ಸೇರಿಕೊಂಡರು.  ಕೆಟ್ಟರಸ್ತೆಯಲ್ಲಿ ಪ್ರಯಾಣ ಮಾಡಿ ನಮಗೂ ಆಯಾಸ.  ಬೇಗ ಹಾಸಿಗೆ ಸೇರಿದರೆ ಸಾಕು ಅನಿಸುತ್ತಿತ್ತು.  ಮಕ್ಕಳಿಗೆ ನಾಳೆ ಆನೆಸವಾರಿ ಎಂದು ಘೋಷಿಸಿ ಅನಂತ ನಮಗೆ ಗುಡ್ ನೈಟ್ ಹೇಳಿ ಹೆಂಡತಿಮಕ್ಕಳನ್ನು ಹಿಂಬಾಲಿಸಿದ.

ಮಕ್ಕಳ ಕೂಗಾಟ ಕಿರುಚಾಟ ಕೇಳಿ ಎಚ್ಚರವಾದಾಗ ಬೆಳಗಾಗಿಹೋಗಿತ್ತು.  ಕಿಟಕಿಯ ಬಳಿ ನಿಂತಿದ್ದ ಲಲಿತೆ "ಆ ನಿಮ್ಮ ಫ್ರೆಂಡ್‌ಗೆ ಬೇರಾವ ಟೀಶರ್ಟೂ ಸಿಗಲಿಲ್ವೇನ್ರೀ?" ಎನ್ನುತ್ತಾ ನನ್ನತ್ತ ಬಂದಳು.  ಎದ್ದುಹೋಗಿ ಕಿಟಕಿಯಿಂದ ಕೆಳಗಿಣುಕಿದೆ.  ಮಕ್ಕಳೆಲ್ಲಾ ಗಾರ್ಡನ್‌ನಲ್ಲಿದ್ದರು.  ಪುಟ್ಟಿಯೂ ಅದ್ಯಾವಾಗ ಎದ್ದುಹೋದಳೋ.  ಅನಂತ ಅವರೊಂದಿಗೆ ಸೇರಿಕೊಂಡು ಚಿಟ್ಟೆ ಹಿಡಿಯುತ್ತಿದ್ದ.  ಅವನು ಲಲಿತೆ "ಭೇದಿ ಕಲರ್" ಎಂದು ಮೂಗುಮುರಿಯುವ ಕೆಟ್ಟ ಹಳದೀಬಣ್ಣದ ಟೀಶರ್ಟ್ ಹಾಕಿಕೊಂಡಿದ್ದ.  ನಗುತ್ತಾ ಬಾತ್‌ರೂಮಿನತ್ತ ನಡೆದೆ.

ಹೊರಬರುತ್ತಿದ್ದಂತೇ ಲಲಿತೆ ಬಾತ್‌ರೂಮಿನ ಬಾಗಿಲಲ್ಲೇ ಮೊಬೈಲ್ ಫೋನ್ ಕಿವಿಗೆ ಹಚ್ಚಿ ನಿಂತಿದ್ದಳು.  ಮುಖದಲ್ಲಿ ದಿಗಿಲು.  "...ಹಾಲುಗೀಲು ತರೋದಿಕ್ಕೆ ಹೋಗಿರಬೇಕು ಅಷ್ಟೇ. ಗಾಬರಿಯಾಗಬೇಡಿ" ಎಂದೇನೋ ಗಾಬರಿಯಲ್ಲಿ ಒದರುತ್ತಿದ್ದಳು.  ಮುಂದಿನ ಕ್ಷಣ "ಹಲೋ ಹಲೋ" ಎಂದು ಕೂಗಿ ನನ್ನತ್ತ ತಿರುಗಿ "ಇಟ್ಬಿಟ್ರು" ಅಂದಳು.  "ಯಾರು?" ಅಂದೆ.  "ಆ ಶ್ರೀನಿವಾಸನ್.  ಮೇರಿ ಮನೆ ಬಿಟ್ಟು ಹೋರಟುಹೋಗಿದ್ದಾಳಂತೆ.  ರಾತ್ರಿ ಯಾವಾಗ ಹೋದಳೋ, ಈಗ ಎದ್ದು ನೋಡಿದ್ರೆ ಅವ್ಳು ಕಾಣಿಸ್ತಿಲ್ಲ ಅಂತ ಬಿಕ್ಕಿಬಿಕ್ಕಿ ಅಳ್ತಾ ಇದಾರೆ" ಅಂದಳು.  ಅವಳ ಕೈನಿಂದ ಫೋನ್ ಕಿತ್ತುಕೊಂಡು ಅವನ ನಂಬರ್ ಒತ್ತಿದೆ.  ರಿಂಗ್ ಆಯಿತು.  ಆದರೆ ಅವನು ಉತ್ತರಿಸಲಿಲ್ಲ.  ಮುಂದಿನ ಕಾಲುಗಂಟೆಯಲ್ಲಿ ಮತ್ತೆ ಮತ್ತೆ ರಿಂಗ್ ಮಾಡಿದರೂ ಅವನು ಎತ್ತಿಕೊಳ್ಳಲೇ ಇಲ್ಲ.  ಬೇರೆ ದಾರಿಯೆಂದು ಪ್ರೊ. ವಿಶ್ವನಾಥ್ ಅವರಿಗೆ ಫೋನ್ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು.  ಲ್ಯಾಂಡ್ ಲೈನ್‌ಗೆ ನಾಲ್ಕು ಸಲ ಮಾಡಿದೆ.  ಅವರು ಎತ್ತಿಕೊಳ್ಳಲಿಲ್ಲ.  ಹೊರಗೆಲ್ಲೋ ಹೋಗಿರಬೇಕು.  ಒಂಬತ್ತೂವರೆಗೆ ಎಲ್ಲರೂ ತಯಾರಾಗಿ ಹೊರಹೊರಡುವವರೆಗೂ ಪ್ರತೀ ಹತ್ತುನಿಮಿಷಕ್ಕೊಮ್ಮೆ ಶ್ರೀನಿವಾಸನ್‌ನ ನಂಬರ್ ಒತ್ತುತ್ತಲೇ ಇದ್ದೆ...

ಆಸ್ಪತ್ರೆಯ ಜೀಪಿನಲ್ಲೇ ಸುವರ್ಣಾವತಿ ಡ್ಯಾಂಗೆ ಹೋದೆವು.  ಅಲ್ಲಿಂದ ಕಾಡುಹಾದಿಯಲ್ಲಿ ಸಾಗುತ್ತಾ ನೂರಾರು ಅಡಿಗಳ ಎತ್ತರದ ಬೆಟ್ಟಗಳ ನಡುವಿನ ಬಳುಕುಬಳುಕು ಕಣಿವೆಯಲ್ಲಿ ನುಲಿನುಲಿದುಕೊಂಡು ಹರಿಯುತ್ತಿದ್ದ ಸುವರ್ಣಾವತಿ ಹೊಳೆಯನ್ನು ಬೆರಗಿನಿಂದ ನೋಡುತ್ತಾ ನಾಮದ ಜಲಪಾತ ತಲುಪಿದೆವು.  ಇನ್ನೂರೈವತ್ತು ಮುನ್ನೂರು ಅಡಿಗಳ ಎತ್ತರದಿಂದ ನೇರವಾಗಿ ಕೆಳಗೆ ಧುಮುಕುತ್ತಿದ್ದ ಬೆಳ್ಳನ್ನ ಬಿಳೀ ಜಲರಾಶಿಗೆ ನಾಮದ ಜಲಪಾತ ಎಂಬ ಹೆಸರು ಅನ್ವರ್ಥವಾಗಿಯೇ ಕಂಡಿತು.

ಜಲಪಾತಕ್ಕೆ ಅನತೀ ದೂರದಲ್ಲಿ ಕಣಿವೆಯಲ್ಲಿ ನದಿ ಬಲಕ್ಕೆ ಹೊರಳಿಕೊಳ್ಳುತ್ತಿದ್ದೆಡೆ ತೀರಕ್ಕಂಟಿಕೊಂಡೇ ಇದ್ದ ಒಂದು ಪುಟ್ಟ ಕಲ್ಲಿನ ದೇವಾಲಯ ನನ್ನ ಗಮನ ಸೆಳೆಯಿತು.  ತುಂಬಾ ಹಳೆಯದರಂತೆ ಕಂಡುಬರುತ್ತಿದ್ದ ಅದನ್ನೇ ನೋಡುತ್ತಾ ನಿಂತೆ.  ನನ್ನ ಗಮನ ಅದರತ್ತಲೇ ಇರುವುದನ್ನು ನೋಡಿ ಅನಂತ ಅದರ ಬಗ್ಗೆ ವಿವರಣೆ ನೀಡಿದ: "ಮಾರಮ್ಮನ ದೇವಸ್ಥಾನ ಅದು.  ಕಣಿವೆಮಾರಮ್ಮ ಅಂತಾರೆ.  ಪ್ರತೀ ಮಂಗಳವಾರ, ಶುಕ್ರವಾರ ಪೂಜೆ.  ವರ್ಷಕ್ಕೊಂದು ಸಲ ದೊಡ್ಡ ಜಾತ್ರೆ.  ಉರಿಮಾರಿಯನ್ನ ತಂಪಾಗಿಸೋದಿಕ್ಕೆ ಅಂತ ಮಾಡೋ ಆ ಜಾತ್ರೇನ ‘ತಂಪು’ ಅಂತಾರೆ.  ಹಿಂದೆಲ್ಲಾ ಕುರಿಮರಿ ಬಲಿ ಕೊಟ್ಟು ‘ಧೂಳುಮರಿ’ ಅಂತ ಮಾಡ್ತಾ ಇದ್ರಂತೆ.  ಈಗ ಅದೆಲ್ಲಾ ಇಲ್ಲ.  ಮಾರಮ್ಮನಿಗೆ ಬರೀ ತಂಬಿಟ್ಟಿನ ನೈವೇದ್ಯ ಅಷ್ಟೆ.  ಹಳ್ಳೀ ಹೆಣ್ಣುಮಕ್ಕಳೆಲ್ಲಾ ಹೊಸಾ ಸೀರೆ ಉಟ್ಕೊಂಡು, ಸಿಂಗಾರ ಮಾಡ್ಕೊಂಡು ಥಳಥಳಾ ಅಂತ ಹೊಳೆಯೋ ಕಂಚಿನ ತಟ್ಟೆಗಳಲ್ಲಿ ತಂಬಿಟ್ಟುಗಳನ್ನ ಇಟ್ಕೊಂಡು ಮೆರವಣಿಗೇಲಿ ಹೋಗೋದನ್ನ ನೀನು ಒಂದ್ಸಲ ನೋಡ್ಬೇಕು."  ನಾನು "ಹೌದಾ!" ಎನ್ನುತ್ತಿದ್ದಂತೇ ದೂರದಲ್ಲಿ ನಿಂತಿದ್ದ ಜೀಪಿನ ಡ್ರೈವರ್ ಸೋಮಣ್ಣ ಬಾಯಿ ಹಾಕಿ "ಇದು ಸತ್ಯದ ದೇವರು ಸಾರ್.  ಹೊಳೇಲಿ ಎಂಥಾ ಪ್ರವಾಹ ಬಂದ್ರೂ ನೀರು ಈ ದೇವಸ್ಥಾನದ ಹೊಸ್ತಿಲು ದಾಟಿ ಒಳಗೆ ಹೋಗೋದಿಲ್ಲ, ಅದ್ಭುತ ಸಾರ್" ಎಂದು ಕೂಗಿ ಹೇಳಿದ.  ಅನಂತ ನನ್ನತ್ತ ಸರಿದು "ಇನ್ನೂ ಒಂದು ಅದ್ಭುತ ಇದೆ.  ಅದನ್ನ ಆಮೇಲೆ ಹೇಳ್ತೀನಿ" ಎಂದು ಪಿಸುಗುಟ್ಟಿದ.  ಅವನ ಹೆಂಡತಿ ಅವನತ್ತ ವಾರೆಗಣ್ಣಿನಲ್ಲಿ ನೋಡುತ್ತಾ ನಿಶ್ಶಬ್ಧವಾಗಿ ನಕ್ಕಳು.  ಅವಳ ಪಕ್ಕದಲ್ಲೇ ನಿಂತಿದ್ದ ಪ್ರಿಯಾ ಮುಖ ಹೊರಳಿಸಿ ದೇವಸ್ಥಾನಕ್ಕೆ ಬೆನ್ನು ಹಾಕಿ ನಾಮದ ಜಲಪಾತದ ಮೇಲೇ ನೋಟ ನೆಟ್ಟು ಸರಸರನೆ ನಡೆದುಹೋದಳು.

ಅಲ್ಲೇ ಊಟ ಮಾಡಿದೆವು.  ತಣ್ಣಗಿನ ಇಡ್ಲಿ, ಗಟ್ಟಿ ಚಟ್ನಿ ತುಂಬಾ ರುಚಿಯಾಗಿತ್ತು.  ಚಿತ್ರಾನ್ನ ಬೇಡ ಅಂತ ಹೇಳಿ ಇಡ್ಲಿಚಟ್ನಿಯನ್ನೇ ಮತ್ತಷ್ಟು ಹಾಕಿಸಿಕೊಂಡೆ.  ಊಟವಾದದ್ದೇ ಹೆಂಗಸರು ಮಕ್ಕಳೆಲ್ಲಾ ನೀರಿಗಿಳಿದುಬಿಟ್ಟರು.  ಅನಂತನೂ ಅವರ ಜತೆ ಸೇರಿಕೊಂಡ.  ನಾನು ನೀರಿಗೆ ಕಾಲು ಇಳಿಬಿಟ್ಟು ಕೂತೆ.  ಅಲ್ಲೇ ಆಟವಾಡುತ್ತಾ ಹೆಚ್ಚು ಹೊತ್ತು ಕಳೆದುಬಿಟ್ಟದ್ದರಿಂದ ಆನೆಸವಾರಿಯನ್ನು ನಾಳೆಗೆ ಮುಂದೂಡಬೇಕಾಯಿತು.  ಜತೆಗೆ ಮಳೆಯೂ ಬರುವ ಹಾಗೆ ಕಂಡದ್ದರಿಂದ ಆತುರಾತುರವಾಗಿ ಆಸ್ಪತ್ರೆಯತ್ತ ಹೊರಟುಬಿಟ್ಟೆವು.

ಸಂಜೆ ಶ್ರೀನಿವಾಸನ್‌ಗೆ ಫೋನ್ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು.  ವಿಶ್ವನಾಥರ ಫೋನ್ ಈಗ ವ್ಯಾಪ್ತಿ ವಲಯದ ಹೊರಗಿತ್ತು.  ಬೇಸರವಾಯಿತು.

ಪ್ರಿಯಾ ಊಟಕ್ಕೆ ಅಣಿ ಮಾಡತೊಡಗಿದಾಗ ಅನಂತ ನಮ್ಮಿಬ್ಬರ ಊಟ ಆಮೇಲೆ ಎಂದು ಹೇಳಿ ಹೆಂಗಸರು ಮಕ್ಕಳನ್ನಷ್ಟೇ ಊಟಕ್ಕೆ ಕೂರಿಸಿದ.  ಅವರೆಲ್ಲಾ ಊಟ ಮುಗಿಸಿ ಮಲಗಲು ಹೋದರೆ ನಾವು ಗಾರ್ಡನ್‌ನಲ್ಲಿ ಮಾವಿನ ಮರದ ಕೆಳಗಿದ್ದ ಬೆತ್ತದ ಕುರ್ಚಿಗಳತ್ತ ನಡೆದೆವು.  ಟೀಪಾಯ್ ಮೇಲೆ ಎಲ್ಲವೂ ರೆಡಿಯಾಗಿತ್ತು.

"ಭಾಭಿ ಏನೂ ಅಬ್ಜೆಕ್ಟ್ ಮಾಡಲ್ಲ ತಾನೆ?" ಎನ್ನುತ್ತಾ ಬಾಟಲಿಯ ಬಿರಡೆ ತೆರೆದ ಅನಂತ.  "ಇಲ್ಲ.  ನಾನು ಕುಡಿಯೋದಕ್ಕೆ ಅವಳ ತಕರಾರೇನೂ ಇಲ್ಲ.  ಆದ್ರೆ ಕುಡಿದ ರಾತ್ರಿ ಹತ್ರ ಮಲಗೋದಿಕ್ಕೆ ಬಿಡೋದಿಲ್ಲ ಅಷ್ಟೇ.  ಕಜ್ಜಿನಾಯೀನ ಓಡಿಸೋ ಹಾಗೆ ಅಟ್ಟಿಬಿಡ್ತಾಳೆ."  ನಗೆಯಾಡಿದೆ.  ಅವನೂ ನಕ್ಕ.  "ಹೆಚ್ಚಿನ ಹೆಂಗಸರಿಗೆ ಇದರ ವಾಸನೆ ಇಷ್ಟ ಆಗೋದಿಲ್ಲ.  ನೀನು ಒಂದ್ ಕೆಲ್ಸ ಮಾಡು.  ಕೊನೇಲಿ ಒಂದು ಕಾಲು ಲೋಟ ತಣ್ಣಗಿರೋ ಹಾಲು ಕುಡಿದುಬಿಡು.  ವಾಸನೆ ಎಲ್ಲಾ ಹೊರಟುಹೋಗುತ್ತೆ.  ನೀನು ‘ಆ’ ಅಂತ ಬಾಯಿ ತೆರೆದು ಭಾಭೀ ಮುಖಕ್ಕೇ ಗಾಳಿ ಊದಿದ್ರೂ ಅವರಿಗೆ ಏನೂ ಗೊತ್ತಾಗೋದೇ ಇಲ್ಲ" ಎನ್ನುತ್ತಾ ಗ್ಲಾಸಿಗೆ ತುಂಬಿಸಿ ನನ್ನತ್ತ ಸರಿಸಿದ.  "ಕುಸುಮಾ ಇದ್ಯಾವುದರ ಬಗ್ಗೂ ತಲೆ ಕೆಡಿಸಿಕೊಳ್ಳೋದಿಲ್ಲ.  ಶಿ ಈಸ್ ವೆರಿ ಅಕಾಮೊಡೇಟಿವ್" ಎನ್ನುತ್ತಾ ಗ್ಲಾಸ್ ಎತ್ತಿ "ಚಿಯರ್ಸ್" ಅಂದ.

ಹಜಾರದ ವಿಶಾಲ ಕಿಟಕಿಗಳಿಂದ ತೂರಿಬರುತ್ತಿದ್ದ ಬೆಳಕಿನಲ್ಲಿ ಅದೂ ಇದೂ ಹರಟುತ್ತಾ ಚಿಕನ್ ಫ್ರೈ, ಹುರಿದ ಗೋಡಂಬಿ ನೆಂಜಿಕೊಂಡು ನಿಧಾನವಾಗಿ ಎರಡು ಮೂರು ಪೆಗ್ ಏರಿಸಿದೆವು.  ಬಾಟಲು ಖಾಲಿಯಾಗುತ್ತಿದ್ದಂತೇ ಅದನ್ನೇ ಗಮನಿಸುತ್ತಿದ್ದವಳಂತೆ ಆ ಬಿಳಿಯುಡುಗೆಯ ಹೆಂಗಸು ತಟ್ಟೆಯಲ್ಲಿ ಬಿಸಿಬಿಸಿ ಊಟ ತಂದಿಟ್ಟಳು.  ಅವಳು ನಾಕು ಹೆಜ್ಜೆ ನಡೆಯುತ್ತಿದ್ದಂತೇ "ಈ ಪ್ರಿಯಾ ಹೇಗನಿಸ್ತಾಳೆ?" ಎಂಬ ಪ್ರಶ್ನೆ ಹಾಕಿ ನನ್ನನ್ನು ಅವಾಕ್ಕಾಗಿಸಿದ ಅನಂತ.  ಮರೆಯಾಗುತ್ತಿದ್ದ ಅವಳ ಬೆನ್ನಿನತ್ತ ಒಮ್ಮೆ ನೋಡಿ "ತುಂಬಾ ಕಾಳಜಿ ತಗೋತಾಳೆ.  ಒಳ್ಳೇ ಗವರ್ನೆಸ್" ಎನ್ನುತ್ತಾ ನಗಲು ಪ್ರಯತ್ನಿಸಿದೆ.

"ಅವಳ ಜತೆ ಮಲಗಿದ್ದೀನಿ ನಾನು.  ಒಂದ್ಸಲ ಅಲ್ಲ, ನೂರಾರು ಸಲ."   ಸಹಜದನಿಯಲ್ಲಿ ಹೇಳಿದ ಅವನು.  ಅವನಿಗೆ ನಶೆ ಏರಿದಂತೇನೂ ಇರಲಿಲ್ಲ.

ಇದೇನೂ ನನ್ನನ್ನು ಬೆಚ್ಚಿ ಬೀಳಿಸಲಿಲ್ಲ.  ನಮ್ಮ ಯೂನಿವರ್ಸಿಟಿಯಲ್ಲಿ ಭಾರಿಭಾರಿ ಪ್ರೊಫೆಸರುಗಳೇ ಕಸಗುಡಿಸುವ ಹೆಂಗಸರನ್ನು ಹಾಸಿಗೆಗೆ ಎಳೆದುಕೊಂಡ ಮೂರುನಾಲ್ಕು ಪ್ರಕರಣಗಳು ನನಗೆ ಗೊತ್ತಿವೆ.  ಆದರೆ ಅನಂತನೂ ಹೀಗೆ ಮಾಡಿದ್ದಾನೆಂದರೆ...!  ಸ್ವಲ್ಪ ಅಚ್ಚರಿಯಾಯಿತು ಅಷ್ಟೇ.

"ಕಥೆ ಕೇಳು" ಎನ್ನುತ್ತಾ ಅವನು ಒಂದು ತುತ್ತು ಬಾಯಿಗಿಟ್ಟು ಅಗಿಯುತ್ತಲೇ ಮಾತಾಡಿದ: "ನಾನಿಲ್ಲಿಗೆ ಬಂದು ಐದು ವರ್ಷ ಆಯ್ತು.  ಬಂದ ಒಂದು ವರ್ಷಕ್ಕೆಲ್ಲಾ ಶುರುವಾಯ್ತು.  ಇದಂತೂ ತುಂಬಾ ಪೆದ್ದು ಹೆಣ್ಣು.  ಗಂಡ ಬೇರಾವಳನ್ನೋ ಕಟ್ಕೊಂಡು ಊರೇ ಬಿಟ್ಟು ಅದೆತ್ತಲೋ ಓಡ್ಹೋಗಿದ್ದ.  ಇಂದೋ ನಾಳೆಯೋ ಸಾಯೋ ಹಾಗಿದ್ದ ಇವಳ ರೋಗಿಷ್ಟ ತಾಯಿ ಇವಳನ್ನ ಕರೆತಂದು ನನ್ನ ಮುಂದೆ ಅಡ್ಡಬೀಳಿಸಿ ಇವಳಿಗೆ ನೀವೇ ದಿಕ್ಕು, ದೇವ್ರು ಎಲ್ಲಾ.  ಇವಳ್ನ ಹೊಟ್ಟೆಗಾಕೊಂಡು ಕಾಪಾಡಿ.  ನೀವು ಕೈಬಿಟ್ರೆ ಊರು ಇವಳ್ನ ಮಾನವಾಗಿ ಬದುಕೋಕೆ ಬಿಡಲ್ಲ ಅಂತ ಗೋಳುಗರೆದ್ಲು.  ಆಗ ಅವಳ ಹೆಸ್ರು ಕೆಂಪದೇವಿ ಅಂತ.  ಒಣಕಲು ಹಂಚಿಕಡ್ಡಿ ಇದ್ದ ಹಾಗಿದ್ಲು.  ಮೈಲಿ ಒಂದು ಅರಪಾವು ಮಾಂಸವೂ ಇರ್ಲಿಲ್ಲ.  ನಯನಾಜೂಕು ಒಂದೂ ಇಲ್ಲದ ಪಕ್ಕಾ ಹಳ್ಳಿಗುಗ್ಗು."  ಮತ್ತೊಂದು ತುತ್ತು ಬಾಯಿಗಿಟ್ಟು ಮುಂದುವರೆಸಿದ: "ಪ್ರಿಯಾ ಅಂತ ಹೆಸರಿಟ್ಟೋನು ನಾನು.  ಮನೆ ಕಸಗಿಸ ಗುಡಿಸ್ಕೊಂಡು ಇಲ್ಲೇ ಸರ್ವೆಂಟ್ಸ್ ಕ್ವಾರ್ಟರ್ಸ್‌ನಲ್ಲೇ ಇರು ಅಂತ ಇರಿಸ್ಕೊಂಡೆ.  ಸ್ವಚ್ಛವಾಗಿ ಮಾತಾಡೋದು ಕಲಿಸ್ದೆ.  ಹಠ ಹಿಡಿದು ಕ್ಲೀನ್ಲಿನೆಸ್ ಅಭ್ಯಾಸ ಮಾಡಿಸ್ದೆ.  ನಂಗೆ ತೃಪ್ತಿಯಾಗೋ ಮಟ್ಟಕ್ಕೆ ಇವ್ಳು ಬೆಳೆದಾಗ ಅಡಿಗೆಮನೆನೂ ಸೇರಿ ಇಡೀ ಮನೆ ಜವಾಬ್ದಾರೀನ ಇವಳ ತಲೆ ಮೇಲೆ ಹಾಕ್ದೆ..."  ಒಂದೊಂದೇ ತುತ್ತು ಬಾಯಿಗಿಟ್ಟುಕೊಳ್ಳುತ್ತಾ, ಹೆಂಡತಿಯಿಂದ ದೂರವಾಗಿ ಒಂಟಿಯಾಗಿದ್ದ ತನಗೆ ಹೆಣ್ಣಿನ ಸಂಗ ಬೇಕೇಬೇಕೆನಿಸಿದಾಗ ಎದುರಿಗೆ ಕಂಡವಳು ವರ್ಷದಿಂದ ಇಲ್ಲೇ ತಿಂದು ಉಂಡು ಮೈಕೈ ತುಂಬಿಕೊಂಡಿದ್ದ ಈ ಹಳ್ಳಿ ಹುಡುಗಿ ಎಂದು ವಿವರವಾಗಿ ಹೇಳಿದ.  ಇವನು ತನ್ನ ಬಯಕೆಯನ್ನು ಹೊರಹಾಕಿದಾಗ ಅವಳು ಮಾತೇ ಆಡದೇ ಹೊರಟುಹೋದಳಂತೆ.  ಇನ್ನವಳು ಇತ್ತ ತಲೆ ಹಾಕಲಾರಳು ಅಂತ ಇವನು ಅಂದುಕೊಳ್ಳುತ್ತಿದ್ದಂತೇ ಮಾರನೇ ದಿನವೇ ಬಂದು ತನಗೆ ಮರುಹುಟ್ಟು ಕೊಟ್ಟ ದೇವರಿಗೆ ತಾನು ಏನನ್ನೂ ಇಲ್ಲ ಅನ್ನಲಾರೆ ಎಂದು ಹೇಳಿ ತನ್ನನ್ನು ಇವನಿಗೊಪ್ಪಿಸಿಕೊಂಡಳಂತೆ.

"ಬಹದ್ದೂರ್ ಕಣಯ್ಯ ನೀನು" ಅಂದೆ ನಿಶ್ಶಬ್ಧವಾಗಿ ನಗುತ್ತಾ.  ಅವನು ತಲೆ ಒದರಿದ.  "ಇಲ್ಲಿ ಯಾವ ಬಹಾದುರೀನೂ ಇಲ್ಲ.  ದೈಹಿಕ ಅಗತ್ಯ ಅಷ್ಟೇ.  ಆರೋಗ್ಯವಂತ ಗಂಡಸಿಗೆ ಲೈಂಗಿಕ ಸಾಮರ್ಥ್ಯ ಅತ್ಯುಚ್ಛಮಟ್ಟ ತಲುಪೋದು ಮೂವತ್ತೈದರ ಅಸುಪಾಸಿಗೆ.  ಆ ಸಮಯದಲ್ಲಿ ಸೆಕ್ಸ್ ಹಸಿವನ್ನ ನಿಗ್ರಹಿಸೋದು ಸುಲಭ ಅಲ್ಲ.  ನೀತಿಯುತ ಮಾರ್ಗದಲ್ಲಿ ಕೆಲಸ ಆಗದೇಹೋದಾಗ ಮನಸ್ಸು ಅಡ್ಡದಾರೀನ ಹುಡುಕುತ್ತೆ.  ನಾ ಮಾಡಿದ್ದು ಅದನ್ನೇ."

ಕಾಮ ತುಂಬಾ ಸಂಕೀರ್ಣ, ಯಾವ ವ್ಯಾಖ್ಯಾನಕ್ಕೂ ನಿಲುಕದ್ದು ಎನ್ನುವುದರ ಅರಿವು ನನಗಿದ್ದರೂ ಅದು ಹಸಿವು ನೀರಡಿಕೆಯಂತೆ ತಡೆಯಲಿಕ್ಕೇ ಆಗದಿರುವಂತಹದೇ ಎಂಬ ಪ್ರಶ್ನೆ ಮೂಡಿತು.  ನನ್ನ ಅನುಮಾನವನ್ನು ಹೊರಹಾಕಿಯೇಬಿಟ್ಟೆ.  ಅವನ ಉತ್ತರ ಥಟಕ್ಕನೆ ಬಂತು: "ಬೇಕೆಂದಾಗೆಲ್ಲಾ ಅದು ಕೈಯಳತೆಯೊಳಗೇ ಇದ್ರೆ ಅದರ ಮಹತ್ವ ಗೊತ್ತಾಗೋದಿಲ್ಲ.  ಅದು ಸಿಗದೇ ಹೋದಾಗಷ್ಟೇ ಅದೆಷ್ಟು ಮುಖ್ಯ ಅಂತ ಗೊತ್ತಾಗೋದು.  ಬೇಕು ಅಂದಾಗ ಅದು ಸಿಕ್ಕಿಬಿಟ್ರೆ ಸರಿ.  ಆಗ ನೋಡು ದಿನದ ಬೇರೆಲ್ಲಾ ಕೆಲಸಕಾರ್ಯಗಳು ಸಲೀಸಾಗಿ ನಡೀತವೆ.  ಅದು ಸಿಗದೇ ಹೋದಾಗ ಬೇರಾವುದಕ್ಕೂ ಮೂಡ್ ಬರೋದೇ ಇಲ್ಲ.  ಜೀವನ ಮುಂದಕ್ಕೆ ಹೋಗೋದೇ ಇಲ್ಲ.  ಭಾಭೀನ ಬಿಟ್ಟು ಒಂದಷ್ಟು ದಿನ ನನ್ನ ಹಾಗೇ ದೂರ ಹೋಗು, ನಿಂಗೇ ಗೊತ್ತಾಗುತ್ತೆ."  ನಕ್ಕ.  ಅವನ ಹೆಂಡತಿ ಛಕ್ಕನೆ ನೆನಪಾದಳು.  "ನಿನ್ನ ಹೆಂಡತಿಗೆ ಇದರ ಸುಳಿವು ಹತ್ತಿಲ್ವಾ?" ಅಂದೆ.  "ಬರೀ ಸುಳಿವಾ!  ಎಲ್ಲಾನೂ ಡೀಟೇಲಾಗೇ ಗೊತ್ತು.  ನಾನೇ ಹೇಳಿದ್ದೀನಿ" ಅಂದ.  ಈಗ ನಾನು ಬೆಚ್ಚಿದೆ.

ಅವನು ನನ್ನ ಮುಂಗೈ ತಟ್ಟಿ ತಣ್ಣನೆಯ ದನಿಯಲ್ಲಿ ಹೇಳುತ್ತಾ ಹೋದ: "ಇನ್ ಫ್ಯಾಕ್ಟ್, ಪ್ರಿಯಾಳನ್ನ ಕೇಳೋದಕ್ಕೂ ಮೊದ್ಲೇ ನಾನು ನನ್ನ ಸಮಸ್ಯೇನ ಕುಸುಮಾ ಜತೆ ಹಂಚ್ಕೊಂಡೆ.  ಈ ಕೊಂಪೇಲಿ ನಂಗೆ ಕಾಣ್ತಾ ಇರೋ ಒಂದೇ ಮಾರ್ಗ ಪ್ರಿಯಾ ಅಂದೆ.  ಅವ್ಳು ಭಯಂಕರ ಕೋಪ ಮಾಡ್ಕೊಂಡ್ಲು.  ‘ನೀನು ಹೀಗೆ ಮಾಡಬೋದಾ?’ ಅಂದ್ಲು.  ಒಂದು ಹತ್ತು ನಿಮಿಷ ಅತ್ಲು.  ನಾನು ನಿಧಾನವಾಗಿ ಎಲ್ಲಾನೂ ವಿವರಿಸ್ದೆ.  ‘ನೀನು ನಿನ್ನ ಕಾಲೇಜ್ ಬಿಟ್ಟು ಕಾಮಗೆರೆಗೆ ಬರೋದಿಕ್ಕೆ ತಯಾರಿಲ್ಲ.  ನಾನು ಕಾಮಗೆರೇನ ಬಿಟ್ಟು ಮಂಗಳೂರಿಗೆ ಬರೋದು ಸಾಧ್ಯಾನೇ ಇಲ್ಲ.  ಇಲ್ಲಿ ನಾ ಶುರು ಮಾಡಿರೋ ಕೆಲ್ಸಾ ಎಲ್ಲಾ ಮಣ್ಣುಪಾಲಾಗುತ್ತೆ.  ನೀನು ಮಂಗಳೂರಲ್ಲೇ ಇರಬೇಕು, ಇಲ್ಲಿ ನಂಗೆ ಸೆಕ್ಸ್ ಬೇಕೇಬೇಕು.  ಪ್ರಿಯಾ ಬೇಡ ಅಂತ ನೀನು ಅನ್ನೋದೇ ಆದ್ರೆ ನಂಗಿರೋ ಬೇರೆ ದಾರಿ ಆಸ್ಪತ್ರೆ ನರ್ಸ್‌ಗಳು.  ಆಮೇಲೆ ನಾಕು ದಿನದಲ್ಲಿ ಕಸಗುಡಿಸೋರು, ವಾರ್ಡ್‌ಬಾಯ್‌ಗಳೆಲ್ಲಾ ನನ್ನ ಬಗ್ಗೆ ಮಾತಾಡ್ಕೊಂಡು ನಗ್ತಾರೆ.  ಇನ್ನು ಬೇರೆ ದಾರಿ ರೂರಲ್ ಪ್ರಾಸ್ಟಿಟ್ಯೂಟ್ಸ್.  ಒಂದುರೂಪಾಯಿಗಾಗಿ ಕಜ್ಜಿಮುದುಕರ ಜತೆಗೂ ಮಲಗೋ ಅವರು...’ ಅಂತ ನಾನು ಹೇಳ್ತಿದ್ದ ಹಾಗೇ ‘ಸಾಕು ಸಾಕು’ ಅಂತ ಎದ್ದುಹೋದ್ಲು.  ಅರ್ಧಗಂಟೇಲಿ ವಾಪಸ್ ಬಂದು ಗ್ರೀನ್ ಸಿಗ್ನಲ್ ಕೊಟ್ಲು.  ‘ಹೆಲ್ತ್ ಜೋಪಾನ.  ಪ್ರಿಯಾನೂ ಯಾವ ತೊಂದರೇಗೂ ಸಿಕ್ಕೊಳ್ಳದ ಹಾಗೆ ನೋಡ್ಕೋ.  ಅವಳಿಗೆ ಅನ್ಯಾಯ ಆಗಬಾರದು.  ನೀನು ಅವಳನ್ನ ಬಿಟ್ಟು ಇನ್ಯಾರನ್ನೂ ಮುಟ್ಟಬಾರದು.  ಅವ್ಳೂ ಅಷ್ಟೇ, ಆಸ್ಪತ್ರೇನಲ್ಲಾಗಲೀ, ಹಳ್ಳಿನಲ್ಲಾಗಲೀ ಬೇರೆ ಯಾರ ಜತೆಗೂ ಸಂಬಂಧ ಇಟ್ಕೊಳ್ಳದ ಹಾಗೆ ಎಚ್ಚರ ತಗೋ’ ಅಂದ್ಲು."

ವಿವರಗಳನ್ನು ಅರಗಿಸಿಕೊಳ್ಳಲು ನಾನು ಹೆಣಗುತ್ತಿದ್ದಂತೇ ಅವನು ಬೆರಳು ನೆಕ್ಕುತ್ತಾ ಮುಂದುವರೆಸಿದ: "ಇದರ ಬಗ್ಗೆ ನಂಗೆ ಯಾವ ತಪ್ಪಿತಸ್ಥ ಭಾವನೇನೂ ಇಲ್ಲ.  ಪ್ರಿಯಾ ಜತೆ ನನ್ನ ಸಂಬಂಧ ಯಾರ ಮೇಲಾದ್ರೂ ಪರಿಣಾಮ ಬೀರೋದೇ ಆದ್ರೆ ಅದು ನನ್ನ ಹೆಂಡತಿ ಮೇಲೆ ಮಾತ್ರ.  ಅವಳೇ ಒಪ್ಪಿಗೆ ಕೊಟ್ಟ ಮೇಲೆ ಮತ್ತೇನು?  ಪ್ರಶ್ನೆ ಮಾಡೋವಂಥ ಸಂಬಂಧಿಕರಾರೂ ಪ್ರಿಯಾಗೆ ಇಲ್ಲ.  ಅಲ್ಲದೇ ಪ್ರಿಯಾಳನ್ನೇನೂ ನಾನು ಅವಳ ಇಷ್ಟಕ್ಕೆ ವಿರುದ್ಧವಾಗಿ ರೇಪ್ ಮಾಡ್ಲಿಲ್ಲ.  ನಿರಾಕರಿಸೋ ಸ್ವಾತಂತ್ರ್ಯಾನ ಅವಳಿಗೆ ಕೊಟ್ಟೆ.  ಅವ್ಳು ಒಪ್ಪಿದ ಕೂಡ್ಲೇ ಅವಳ ಮೇಲೇನೂ ಎರಗಿಬಿಡ್ಲಿಲ್ಲ ನಾನು.  ನನ್ನಲ್ಲಿ ಯಾವ ರೋಗಗಳೂ ಇಲ್ಲ ಅನ್ನೋದನ್ನ ಖಾತ್ರಿ ಪಡಿಸ್ಕೊಂಡೆ.  ಅವಳಿಗೆ ಗೊತ್ತಾಗದ ಹಾಗೆ ಅವಳನ್ನೂ ಎಲ್ಲಾ ಪರೀಕ್ಷೆಗೂ ಒಳಪಡಿಸ್ದೆ.  ಎಲ್ಲಾ ಸರಿ ಅಂತ ಗ್ಯಾರಂಟಿ ಆದಮೇಲಷ್ಟೇ ನಾನು ಮುಂದುವರೆದದ್ದು.  ಇಷ್ಟು ವರ್ಷಗಳಲ್ಲಿ ಆಕೆ ಒಂದ್ಸಲಾನೂ ಪ್ರೆಗ್ನೆಂಟ್ ಆಗದ ಹಾಗೆ ಎಚ್ಚರ ವಹಿಸಿದ್ದೀನಿ.  ಅಲ್ಲದೇ ಈ ವಿಚಾರ ನಾವು ಮೂವರನ್ನ ಬಿಟ್ಟು ಬೇರೆ ಇನ್ಯಾರಿಗೂ ಗೊತ್ತಾಗದ ಹಾಗೆ ನೋಡ್ಕೊಂಡಿದ್ದೀನಿ.  ಇದರ ಬಗ್ಗೆ ತಿಳೀತಾ ಇರೋ ನಾಲ್ಕನೇ ವ್ಯಕ್ತಿ ನೀನು.  ನಿಂಗೆ ಹೇಳಿದ್ದೀನಿ ಅಂತ ನಾಳೆ ಪ್ರಿಯಾಗೂ ಹೇಳ್ತೀನಿ.  ಅವಳಿಗೂ ಗೊತ್ತಾಗೋದು ಒಳ್ಳೇದು."

"ಏ ಬೇಡ ಕಣೋ!"  ಅಂದೆ ಗಾಬರಿಯಲ್ಲಿ.

ಅವನು ನಕ್ಕುಬಿಟ್ಟ.  ಮತ್ತೆ ನನ್ನ ಮುಂಗೈ ತಟ್ಟುತ್ತಾ ಹೇಳಿದ: "ನಥಿಂಗ್ ಟು ವರಿ.  ಇಡೀ ಪ್ರಪಂಚವನ್ನ ಸುತ್ತಿಬಂದ್ರೂ ನಿನ್ನಂಥಾ ಗೆಳೆಯ ನಂಗೆಲ್ಲೂ ಸಿಗಲೇ ಇಲ್ಲ ಅಂತ ಈಗಾಗಲೇ ಅವಳಿಗೆ ಹೇಳಿದ್ದೀನಿ."

ನಾನು ಅವನನ್ನೇ ಬೆರಗಿನಿಂದ ನೋಡಿದೆ.  ನಮ್ಮಿಬ್ಬರ ನಡುವೆ ಹಲವು ನಿಮಿಷಗಳವರೆಗೆ ಮೌನವಿತ್ತು.  ಅವನು ಕುರ್ಚಿಯಲ್ಲಿ ಹಿಂದಕ್ಕೆ ಒರಗಿ ಕಣ್ಣು ಮುಚ್ಚಿದ.  ನಾನು ಕಪ್ಪನೆಯ ಆಕಾಶಕ್ಕೆ ಮುಖ ಮಾಡಿದೆ.

ಏಕಾಏಕಿ ನೆನಪಾಯಿತು.  ಥಟಕ್ಕನೆ ಕೇಳಿದೆ: "ಈಗ ನೀನು ಈ ಊರು ಬಿಟ್ಟು ಹೋಗ್ತಾ ಇದೀಯಲ್ಲ, ಇವಳ ಗತಿಯೇನು?"

ಅವನು ನೆಟ್ಟಗೆ ಕುಳಿತ.  "ಯೆಸ್, ಅದೇ ವಿಷಯಕ್ಕೆ ಬರ್ತಾ ಇದೀನಿ.  ಈ ದೇಶದೊಳಗೇ ಬೇರೊಂದು ಊರಿಗೆ ಹೋಗ್ತಾ ಇದ್ದಿದ್ರೆ ಇವಳನ್ನ ಜತೇಲೆ ಕರಕೊಂಡು ಹೋಗಿಬಿಡ್ತಾ ಇದ್ದೆ.  ಆದ್ರೆ ಹೋಗ್ತಾ ಇರೋದು ಅಮೆರಿಕಾಗೆ, ಅದೂ ಓದೋದಿಕ್ಕೆ.  ಅಲ್ಲಿಗೆ ಹೋದಮೇಲೆ ನನ್ನ ಬದುಕು ಮತ್ಯಾವ ತಿರುವು ತಗೊಳ್ಳುತ್ತೋ, ಇನ್ನೊಂದು ಸಲ ಈ ಕಡೆ ಬರೋದಿಕ್ಕೆ ಆಗುತ್ತೋ ಇಲ್ವೋ ನಾನು ಏನೂ ಹೇಳಲಾರೆ.  ಇವಳನ್ನ ಇಲ್ಲೇ ಬಿಟ್ಟುಹೋಗೋದು ಅನಿವಾರ್ಯ.  ತಿಂಗಳ ಹಿಂದೆ ಪಕ್ಕ ಕೂರಿಸ್ಕೊಂಡು ಮಾತು ತೆಗೆದೆ.  ವಿಷಯ ಕೇಳಿ ಗೋಳೋ ಅಂತ ಅತ್ತುಬಿಟ್ಲು.  ನಿಮ್ಮನ್ನ ಬಿಟ್ರೆ ನಂಗ್ಯಾರು ದಿಕ್ಕು?  ನನ್ನನ್ನ ಕೈಬಿಟ್ಟು ಹೋಗಬೇಡಿ ಅಂತ ಕಾಲು ಹಿಡ್ಕೊಂಡು ಗೋಳಾಡಿದ್ಲು.  ಮುಂದೆ ಇಲ್ಲಿಗೆ ಬರೋ ಆಸಾಮಿ ಇವಳನ್ನ ಇಲ್ಲಿ ಇರಿಸ್ಕೋತಾನೋ, ಇರಿಸ್ಕೊಂಡ್ರೂ ಯಾವ ರೀತಿ ಇರಿಸ್ಕೋಬೋದು ಅನ್ನೋ ಯೋಚನೆ ನನ್ನನ್ನ ಕೊರೀತಾ ಇತ್ತು.  ಬಹಿರಂಗವಾಗಿ ನಾನು ಇವಳಿಗಾಗಿ, ಇವಳ ಪರವಾಗಿ ಏನಾದ್ರೂ ಮಾಡೋದಿಕ್ಕೆ ಹೋದ್ರೆ ಒಂದಲ್ಲಾ ಒಂದುದಿನ ಆಡಿಕೋಳ್ಳೋರ ಬಾಯಿಗೆ ಬಿದ್ದುಹೋಗ್ತೀವಿ.  ಎಲ್ಲಾನೂ ಅವಳೊಬ್ಳೇ ಇಲ್ಲಿ ಒಂಟಿಯಾಗಿ ಅನುಭವಿಸಬೇಕಾಗುತ್ತೆ.  ಅವರು ಇವರು ಸಲಿಗೆ ತಗೋಬೋದು.  ಜತೆಗೇ ಸಮಸ್ಯೆಯ ಇನ್ನೊಂದು ಮುಖಾನೂ ಇದೆ.  ಬರಡಾಗಿ ನಿಂತಿದ್ದ ಇವಳಿಗೆ ಸೆಕ್ಸ್ ರುಚಿ ಹತ್ತಿಸಿದೋನೇ ನಾನು.  ಈಗ ನಾನು ಏಕಾಏಕಿ ಬಿಟ್ಟು ಹೊರಟುಹೋದ್ರೆ ಇವ್ಳು ಆಸೇನ ಹ್ಯಾಗೆ ಅದುಮಿಟ್ಕೋತಾಳೆ?  ಇವಳಿಗೀಗ ವಯಸ್ಸು ಬರೀ ಮೂವತ್ತೊಂದು ಕಣಯ್ಯ.  ಒಂದು ಮಾತು ಹೇಳ್ತೀನಿ ಕೇಳು.  ಒಂಟಿ ಹೆಣ್ಣು ಬಳ್ಳಿ ಹಂಗೇ.  ಹತ್ರ ಇರೋ ಮರಕ್ಕೆ ಬಳ್ಳಿ ಸುತ್ಕೊಂಡುಬಿಡುತ್ತಲ್ಲಾ ಹಂಗೆ ಒಂಟಿ ಹೆಣ್ಣೂ ಹತ್ರ ಇರೋ ಗಂಡಸಿಗೆ ಸುತ್ಕೊಂಡುಬಿಡ್ತಾಳೆ.  ಅದು ಒಳ್ಳೇ ಮರ ಆಗಿರುತ್ತೆ ಅನ್ನೋ ಗ್ಯಾರಂಟಿ ಏನು?   ಇದನ್ನೆಲ್ಲಾ ಲೆಕ್ಕಾಚಾರ ಹಾಕಿ ನಾನು ಒಂದು ಪ್ಲಾನ್ ಮಾಡಿದ್ದೀನಿ.  ಕುಸುಮಾನೇ ಇದನ್ನ ಹೇಳಿಕೊಟ್ಟದ್ದು."  ತಳದಲ್ಲಿ ಒಂದು ಗುಟುಕಿನಷ್ಟು ಉಳಿದಿದ್ದ ವಿಸ್ಕಿಯ ಲೋಟಕ್ಕೇ ನೀರು ತುಂಬಿ ಗಟಗಟನೆ ಕುಡಿದ.  ನಾನು ತಾಳ್ಮೆಯಿಂದ ಕಾದೆ.

"ಮಧ್ಯಾಹ್ನ ನೋಡಿದೆಯಲ್ಲ ಆ ಕಣಿವೆಮಾರಮ್ಮನ ದೇವಸ್ಥಾನ" ಎನ್ನುತ್ತಾ ಆರಂಭಿಸಿದ: "ಆ ದೇವತೆಗೆ ಪೂಜೆ ಮಾಡೋದು ಹೆಂಗಸರು ಮಾತ್ರ.  ಗಂಡಸಯಾರೋ ಹೊಸ್ತಿಲು ದಾಟಿ ಒಳಗೆ ಹೋಗೋಹಾಗಿಲ್ಲ.  ಅಷ್ಟೇ ಅಲ್ಲ, ಪೂಜಾರಿಣಿಯ ವೃತ್ತಿ ವಂಶಪಾರಂಪರ್ಯ ಅಲ್ಲ.  ಒಬ್ಬಳು ಪೂಜಾರಿಣಿ ತೀರಿಹೋದ್ರೆ ಅಥವಾ ವಯಸ್ಸಾಗಿ ನಿತ್ರಾಣ ಆಗಿಬಿಟ್ರೆ ಮಾರಮ್ಮ ಮೂರು ಅಮಾವಾಸ್ಯೆಗಳ ಒಳಗೆ ಮತ್ತೊಬ್ಬಳು ಹೆಂಗಸಿನ ಮೈಮೇಲೆ ಬಂದು ಇನ್ನು ಮುಂದೆ ಇವಳೇ ತನ್ನ ಪೂಜೆ ಮಾಡಬೇಕು ಅಂತ ಆದೇಶ ಕೊಡ್ತಾಳೆ.  ಊರು ಅದನ್ನ ನಿಷ್ಟೆಯಿಂದ ಪಾಲಿಸುತ್ತೆ.  ಪೂಜಾರಿಣಿಯ ಊಟತಿಂಡಿ, ಬಟ್ಟೆಬರೆ, ವಸತಿ ಒಟ್ಟಾರೆ ಇಡೀ ಕ್ಷೇಮದ ಜವಾಬ್ದಾರಿ ಆಗ ಊರೊಟ್ಟಿನ ಮೇಲೆ ಬೀಳುತ್ತೆ.  ಅಷ್ಟೇ ಅಲ್ಲ, ಪೂಜಾರಿಣಿಯ ಮೇಲೆ ಯಾವನೂ ಕಣ್ಣು ಹಾಕೋದಿಲ್ಲ.  ಹಾಗೇನಾದ್ರೂ ಮಾಡಿದೋನು ರಕ್ತ ಕಾರಿಕೊಂಡು ಸಾಯ್ತಾನೆ ಅನ್ನೋ ನಂಬಿಕೆ ಜನರಲ್ಲಿದೆ.  ತಲೆತಲಾಂತರದಿಂದ ನಡಕೊಂಡು ಬಂದದ್ದು ಇದು..."  ಕ್ಷಣ ತಡೆದು "ಮಾರಮ್ಮನ ಪೂಜಾರಿಣಿ ಒಂಬತ್ತು ದಿನಗಳ ಹಿಂದೆ ಸತ್ತುಹೋದ್ಲು" ಅಂದ.

"ಮೈಗಾಡ್!" ಅಂದೆ.  "ಇವಳ ಮೈ ಮೇಲೇ ಮಾರಮ್ಮ ಬಂದು ತನ್ನ ಪೂಜಾರಿಣಿ ಪಟ್ಟಾನ ಇವಳಿಗೇ ಕೊಡಿಸ್ತಾಳೆ ಅಂತ ಅದ್ಯಾವ ಗ್ಯಾರಂಟಿ ಮೇಲೆ ಹೇಳ್ತೀಯ?"  ಛಟ್ಟನೆ ಪ್ರಶ್ನಿಸಿದೆ.

ಅವನು ನಕ್ಕುಬಿಟ್ಟ.  "ಇವಳ ಮೈಮೇಲೆ ಮಾರಮ್ಮ ತಾನಾಗಿ ಬರೋದಿಲ್ಲ.  ನಾವು ಬರಿಸ್ತಾ ಇದೀವಿ.  ಮುಂದಿನ ಮಂಗಳವಾರ ಅಮಾವಾಸ್ಯೆ.  ಆವತ್ತು ಇವಳ ಮೈಮೇಲೆ ಮಾರಮ್ಮ ಬರೋದಿಕ್ಕೆ ಎಲ್ಲಾ ತಯಾರೀನೂ ಮಾಡಿಯಾಗಿದೆ.  ಹೇಗೆ ಕೈ ಆಡಿಸಬೇಕು, ಮೈ ಅದುರಿಸಬೇಕು, ವಾಲಾಡಬೇಕು, ‘ಅಹಹಹಾ’ ಅಂತ ಕಾಕು ಹಾಕಬೇಕು, ಕಣ್ಣು ಮೆಡರಿಸಬೇಕು, ನಾಲಿಗೆ ಚಾಚಬೇಕು ಎಲ್ಲಾದರ ಟ್ರೈನಿಂಗೂ ಭರ್ಜರಿಯಾಗಿ ಆಗಿದೆ.  ಅಷ್ಟೇ ಅಲ್ಲಾ, ಕಳ್ಳಿ ಅಗಿಯೋದು, ಉರಿಯೋ ಕರ್ಪೂರಾನ್ನ ನಾಲಿಗೆ ಮೇಲೆ ಇಟ್ಕೊಳ್ಳೋದು ಎಲ್ಲ ಟ್ರಿಕ್ಸ್ ಅನ್ನೂ ಕಲಿಸಿದ್ದೀನಿ.  ಕಲಿತ ವಿದ್ಯೇನೆಲ್ಲಾ ನಿನ್ನೆ ನೀವೇಲ್ಲಾ ಬರೋದಿಕ್ಕೆ ಮೊದ್ಲು ಕುಸುಮಾ ಮುಂದೆ ಪ್ರದರ್ಶನ ಮಾಡಿದ್ಲು.  ಪ್ರಿಯಾ ಪರೀಕ್ಷೆನಲ್ಲಿ ಪಾಸು, ‘ಏ ಗ್ರೇಡ್’ ಅಂತ ಕುಸುಮಾ ಸರ್ಟಿಫಿಕೇಟ್ ಕೊಟ್ಟುಬಿಟ್ಲು."

ನಾನು ದಂಗಾಗಿಹೋಗಿದ್ದೆ.  "ಏನು ಹೇಳ್ತಾ ಇದೀಯ ಅನಂತ!  ಇದೆಲ್ಲಾ ನಡೆಯೋ ಅಂಥಾದ್ದಾ?"  ದನಿ ಎಳೆದೆ.

ಅವನು ಮತ್ತೊಮ್ಮೆ ನಕ್ಕ.  "ಅಲ್ಲೋ ಪೆದ್ದ, ಮಾರಮ್ಮ ಮೈ ಮೇಲೆ ಬರೋದನ್ನ ನೀನು ನಂಬ್ತಿಯೇನೋ?  ಯಾವತ್ತೋ ಯಾರೋ ಯಾವ ಸ್ವಾರ್ಥಕ್ಕೋ ಶುರು ಮಾಡಿದ ನಾಟಕ ಇದೆಲ್ಲಾ.  ಅದೀಗ ನಮಗೆ ಉಪಯೋಗಕ್ಕೆ ಬರ್ತಾ ಇದೆ ಅಷ್ಟೇ.  ಒಟ್ಟಿನಲ್ಲಿ ಪ್ರಿಯಾ ನಾನು ಹತ್ತಿರದಲ್ಲಿ ಇಲ್ಲದಿದ್ರೂ ಯಾವ ತಂಟೆ ತಾಪತ್ರಯಗಳೂ ಇಲ್ಲದೇ ನೆಮ್ಮದಿಯಾಗಿ ಬದುಕೋದಿಕ್ಕೆ ಇದಕ್ಕಿಂತ ಒಳ್ಳೇ ದಾರಿ ಇಲ್ಲ.  ಈ ನಾಟಕಾನ್ನ ಇವಳು ಆಡಲಿಲ್ಲ ಅಂದ್ರೆ ಮತ್ಯಾರೋ ಆಡೋದು ಗ್ಯಾರಂಟಿ.  ಅದಕ್ಕೆ ಮೊದ್ಲೇ ಇವಳು ನಾಕು ಜನರ ಮುಂದೆ ಪರೀಕ್ಷೆನಲ್ಲಿ ಪಾಸಾಗಿಬಿಡ್ಲಿ, ಅಷ್ಟು ಸಾಕು.  ಪೂಜಾರಿಣಿ ಪಟ್ಟ ಗ್ಯಾರಂಟಿ.  ಆಮೇಲೆ ಪ್ರತಿ ಮಂಗಳವಾರ, ಶುಕ್ರವಾರ ಮಧ್ಯಾಹ್ನ ಒಂದು ಅರ್ಧಗಂಟೆ ಜನರ ಮುಂದೆ ವಾಲಾಡೋದು, ಜನ ಕೇಳಿದ ಪ್ರಶ್ನೆಗಳಿಗೆ ಏನಾದ್ರೂ ಒಂದು ಗೊಣಗಾಡೋದು ಮಾಡಿದ್ರೆ ಆಯ್ತು.  ಹತ್ತರಲ್ಲಿ ಒಂದು ಕಾಕತಾಳೀಯ ಅನ್ನೋಹಾಗೆ ನಿಜ ಆಗಿಬಿಟ್ರೆ ಸಾಕು.  ಪ್ರಸಿದ್ಧಿ ಆಗಿಬಿಡ್ತಾಳೆ.  ಜನ ಇವಳನ್ನೇ ದೇವತೆ ಅಂತ ಪೂಜೆ ಮಾಡ್ತಾರೆ.  ನಾನು ಇದ್ರೂ ಒಂದೇ, ಇಲ್ಲದಿದ್ರೂ ಒಂದೇ, ಪ್ರಿಯಾ ಬದುಕುಪೂರ್ತಿ ನೆಮ್ಮದಿಯಾಗಿ ಕಳೆದುಬಿಡ್ತಾಳೆ.  ನನ್ನನ್ನ ದೇವರು ಅಂದ್ಕೊಂಡು ಎಲ್ಲಾನೂ ಅರ್ಪಿಸಿದೋಳನ್ನ ದೇವತೆ ಮಾಡೋದು ನನ್ನ ಕರ್ತವ್ಯ.  ಏನಂತಿ?"

*     *     *

ಅನಂತನಿಗೆ ಗುಡ್ ನೈಟ್ ಹೇಳಿ ನಶೆಯಿಂದಲೋ ಇನ್ಯಾತರಿಂದಲೋ ಮಬ್ಬುಗಟ್ಟಿದ್ದ ತಲೆಯನ್ನು ಕೆಳಗೆ ಹಾಕಿ ಮಹಡಿಯ ಮೆಟ್ಟಲು ಹತ್ತಿದೆ.  ಹಾಸಿಗೆಯಲ್ಲಿದ್ದದ್ದು ಪುಟ್ಟಿಯೊಬ್ಬಳೇ.  ಬಾಲ್ಕನಿಯ ಬಾಗಿಲು ತೆರೆದಿತ್ತು.  ಅಲ್ಲಿ ನೋಡಿದರೆ ಗಂಟೆ ಹನ್ನೆರಡು ದಾಟಿದ್ದರೂ ಲಲಿತೆ ತಲೆತಗ್ಗಿಸಿ ಶಥಪಥ ಹಾಕುತ್ತಿದ್ದಳು.  ನನ್ನನ್ನು ಕಂಡವಳೇ ಹತ್ತಿರ ಓಡಿಬಂದು ಕೈಹಿಡಿದಳು.  "ಒಂದು ವಿಷಯ.  ನೀವು ಧೈರ್ಯ ತಗೋಬೇಕು" ಅಂದಳು.  ಎದೆಯಲ್ಲಿ ಛಳಕ್ ಅಂದಂತಾಯಿತು.  "ಏನು?" ಅಂದೆ.  ಉಗುಳು ನುಂಗಿ ನನ್ನ ಕೈ ಬಲವಾಗಿ ಹಿಡಿದಳು.  "ವಿಶ್ವನಾಥ್ ಫೋನ್ ಮಾಡಿದ್ರು... ನಿಮ್ಮ ಫೋನಿಗೇ... ಅರ್ಧಗಂಟೆ ಹಿಂದೆ.  ಶ್ರೀನಿವಾಸನ್ ಸೂಯಿಸೈಡ್ ಮಾಡ್ಕೊಂಡರಂತೆ."

"ಏನಂದೇ?"  ಚೀರಿದೆ.

ಅವಳು ಮತ್ತೊಮ್ಮೆ ಉಗುಳು ನುಂಗಿದಳು.  "ಮೇರಿ ಎಲ್ಲಿ ಹೋದ್ಲು ಏನು ಎತ್ತ ಯಾವುದೂ ಗೊತ್ತಾಗ್ಲಿಲ್ಲವಂತೆ.  ಹುಡುಕ್ಕೊಂಡು ಅವಳಿದ್ದ ಚರ್ಚ್‌ಗೆ ಹೋದ್ರಂತೆ ಶ್ರೀನಿವಾಸನ್.  ವಿಷಯ ತಿಳಿದ ಅಲ್ಲಿನೋರು ನೀನೇ ಕಿರುಕುಳ ಕೊಟ್ಟು ಓಡಿಸಿಬಿಟ್ಟಿದ್ದೀಯ, ಪೋಲೀಸ್ ಕಂಪ್ಲೇಟ್ ಕೊಡ್ತೀವಿ, ಜೈಲಿಗೆ ಹಾಕಿಸ್ತೀವಿ ಅಂತೆಲ್ಲಾ ಹೆದರಿಸಿಬಿಟ್ರಂತೆ.  ಎಲ್ಲೆಲ್ಲೋ ಅಲೆದು ಸಂಜೆ ವಿಶ್ವನಾಥರ ಮನೆಗೆ ಬಂದ್ರಂತೆ.  ಇವ್ರು ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದು ಆಗತಾನೆ ಮನೆಗೆ ಬಂದಿದ್ರಂತೆ.  ಶ್ರೀನಿವಾಸನ್ ಇವರ ಮುಂದೆ ಎಲ್ಲಾನೂ ಹೇಳ್ಕೊಂಡು ಅತ್ತುಬಿಟ್ರಂತೆ.  ಹೆದರಬೇಡಿ, ಹುಡುಕಿಸೋಣ ಬಿಡಿ ಅಂತ ಇವ್ರು ಧೈರ್ಯ ಹೇಳಿ ಮನೆಗೆ ಕಳಿಸಿದ್ರಂತೆ.  ಆಮೇಲೆ ಎಂಟೂವರೆ ಹೊತ್ಗೆ ಊಟ ಮಾಡಿದ್ರೋ ಇಲ್ವೋ, ಏನಾದ್ರೂ ಕೊಡೋಣ ಅಂತ ಹೋಗಿ ನೋಡಿದ್ರೆ ಮನೆಯಿಡೀ ಕತ್ಲೆ.  ಕಿಟಕೀಲಿ ಟಾರ್ಚ್ ಹಾಕಿ ನೋಡಿದ್ರೆ..." ಅವಳಿಗೆ ಮುಂದೆ ಹೇಳಲಾಗಲಿಲ್ಲ.  ತಲೆತಗ್ಗಿಸಿ ಕಣ್ಣಿಗೆ ನೈಟಿಯ ತೋಳಂಚು ಒತ್ತಿದಳು.

ನನಗೆ ಎದೆಯಲ್ಲಿ ಸಣ್ಣಗೆ ಉರಿಯೆನಿಸಿತು.  ಚಣದಲ್ಲಿ ಜ್ವಾಲಾಮುಖಿಯಂತೆ ಭುಗಿಲೆದ್ದಿತು.  ಓಡಿಹೋಗಿ ಹೂಜಿಯಲ್ಲಿದ್ದ ನೀರನ್ನೆಲ್ಲಾ ಗಂಟಲಿಗೆ ಸುರಿದುಕೊಂಡೆ.  ಉರಿ ನಿಲ್ಲಲಿಲ್ಲ.  ವಾಂತಿ ಬರುವಂತೆನಿಸಿ ಬಾತ್‌ರೂಮಿಗೆ ಓಡಿದೆ.  ಎಷ್ಟು ವ್ಯಾಕ್ ವ್ಯಾಕ್ ಅಂದರೂ ಈಗತಾನೆ ಕುಡಿದ ನೀರು ಬಿಟ್ಟು ಮತ್ತೇನೋ ಬರಲಿಲ್ಲ.  ಸುಸ್ತಾಗಿ ಮತ್ತೆ ಬಾಲ್ಕನಿಯತ್ತ ಕಾಲೆಳೆದೆ.  ನನ್ನ ಹಿಂದೆಯೇ ಓಡಿಬಂದಿದ್ದ ಲಲಿತೆ ನನ್ನನ್ನು ಕುರ್ಚಿಯಲ್ಲಿ ಕೂರಿಸಿ ತಾನು ಪಕ್ಕ ನಿಂತಳು.  "ಸಮಾಧಾನ ಮಾಡ್ಕೊಳ್ಳಿ."  ಬೆನ್ನು ಸವರಿದಳು.  ಎದೆಯ ಉರಿ ಸ್ವಲ್ಪ ಇಳಿಯಿತು.  ಅವಳು ನನ್ನ ಕೊರಳು ಬಳಸಿ ಹೆಗಲ ಮೇಲೆ ತಲೆಯಿಟ್ಟಳು.  ನನ್ನ ಕುತ್ತಿಗೆಗೆ ಒತ್ತಿದ ಅವಳ ಕೆನ್ನೆ ತೇವವಾಗಿತ್ತು.  "ಛೆ, ಹೀಗಾಗಬಾರದಾಗಿತ್ತು" ಅಂದೆ.  ನನ್ನ ದನಿ ನನಗೇ ಅಪರಿಚಿತವೆನಿಸಿತು.  "ಹೌದೂರೀ ಹೀಗಾಗಬಾರದಾಗಿತ್ತು.  ಅನ್ಯಾಯಾರೀ.  ನಾನಂತೂ ಮೇರಿ ಹಿಂದಕ್ಕೆ ಬಂದ್ರೆ, ಇವರಿಬ್ಬರ ಸಂಸಾರ ಸರಿಹೋದ್ರೆ ಇಬ್ಬರನ್ನೂ ಇಲ್ಲಿಗೆ ಕರಕೊಂಡು ಬಂದು ನಿನ್ನ ಸೇವೆ ಮಾಡಿಸ್ತೀನಿ ತಾಯೀ ಅಂತ ಕಣಿವೆಮಾರಮ್ಮಂಗೆ ಹರಕೆ ಹೊತ್ಕೊಂಡಿದ್ದೇರೀ" ಎನ್ನುತ್ತಾ ಬಿಕ್ಕಿದಳು.

--***೦೦೦***--

ಡಿಸೆಂಬರ್ ೨೦, ೨೦೦೯

8 comments:

 1. kathe thumba chennagide... narration style ella thumba ishta aythu.. namma naduve nadeyuttiruva ee amshagaLannu rasavattagi kannige kattuvante bareda shaili ishtavaythu... dhanyavadagaLu :)

  ReplyDelete
  Replies
  1. ಕಥೆ ನಿಮಗೆ ಇಷ್ಟವಾದದ್ದು ಖುಶಿ ತಂದಿದೆ. ನಿಮ್ಮ ಒಳ್ಳೆಯ ಮಾತುಗಳಿಗಾಗಿ ಕೃತಜ್ಞತೆಗಳು. ನೀವು ನನ್ನ ಬ್ಲಾಗ್ ಅನ್ನು ಫಾಲೋ ಮಾಡುತ್ತಿರುವುದನ್ನು ಗಮನಿಸಿದೆ. ಅದಕ್ಕೂ ಸಹಾ ಕೃತಜ್ಞತೆಗಳು. ಬಿಡುವಾದಾಗ ಇಲ್ಲಿರುವ ಇತರ ಕಥೆಗಳನ್ನೂ ಓದಿ ಅಭಿಪ್ರಾಯ ತಿಳಿಸಿ. ವಂದನೆಗಳು.

   Delete
 2. this is reality, can't accept if we don't accept we are the losers, it does not look like story. very good narration,

  ReplyDelete
  Replies
  1. Thank you so much, ma'am, for your appreciative and encouraging comments.

   Delete
 3. Good one, although lengthy!!. The story reveals many aspects of life :D.M.Sagar

  ReplyDelete