ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, May 3, 2012

ಲೇಖನ- "ಈಜಿಪ್ಟ್: ಅನಿಶ್ಚಿತ ಭವಿಷ್ಯ"



ಮೇ ೨೩, ೨೪ಕ್ಕೆ ನಿಗದಿಯಾಗಿರುವ ಈಜಿಪ್ಟ್‌ನ ಅಧ್ಯಕ್ಷೀಯ ಚುನಾವಣೆಗಳು ದಿನಕ್ಕೊಂದು ರಂಗು ಪಡೆಯುತ್ತಿವೆ.  ಕೇವಲ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಕೊಂಡು ತಮಗೆ ರಾಜಕೀಯ ಅಧಿಕಾರವೇ ಬೇಡ ಎಂದು ಇಲ್ಲಿಯವರೆಗೆ ಹೇಳುತ್ತಿದ್ದ ಇಸ್ಲಾಮಿಕ್ ಸಂಘಟನೆಗಳು ಈಗ ಚುನಾವಣಾ ಕಣಕ್ಕಿಳಿದಿವೆ.  ಎರಡು ಬಲಿಷ್ಟ ಹಾಗೂ ಪ್ರಭಾವಶಾಲಿ ಇಸ್ಲಾಮಿಕ್ ಸಂಘಟನೆಗಳ ಹಣಾಹಣಿಯಲ್ಲಿ ಉದಾರವಾದಿ ಅಭ್ಯರ್ಥಿಯೊಬ್ಬರಿಗೆ ಅನುಕೂಲವಾಗುವ ಸಾಧ್ಯತೆ ಕಂಡುಬರುತ್ತಿದೆ.  ಅದೇ ಸಮಯದಲ್ಲಿ ಉದಾರವಾದಿಯೊಬ್ಬ ರಾಷ್ಟ್ರ ರಾಜಕೀಯದ ಚುಕ್ಕಾಣಿ ಹಿಡಿಯುವುದಕ್ಕೆ ಸೇನೆ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆಯೂ ಎದುರಾಗುತ್ತಿದೆ.  ಈ ಮಧ್ಯಪ್ರಾಚ್ಯ ದೇಶದ ಇದುವರೆಗಿನ ಚುನಾವಣಾ ಇತಿಹಾಸವನ್ನು ಗಮನಿಸಿದರೆ ತಿಳಿಯುವುದೇನೆಂದರೆ ಸೇನೆ ತನಗೆ ಬೇಕಾದವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಅಧ್ಯಕ್ಷನನ್ನಾಗಿ ಕೂರಿಸುತ್ತದೆ.  ಮುಬಾರಕ್ ಸೇರಿದಂತೆ ಹಿಂದಿನ ಅಧ್ಯಕ್ಷರುಗಳೆಲ್ಲಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದು ಹೀಗೆಯೇ.  ಇದು ಹೀಗೆಯೇ ಮುಂದುವರೆಯುತ್ತದೆಯೇ, ಮುಬಾರಕ್ ಬದಲಿಗೆ ಅವರಂಥವರೇ ಮತ್ತೊಬ್ಬರು ಅಧ್ಯಕ್ಷನಾಗುತ್ತಾರೆಯೇ ಮತ್ತು ತೆರೆಯ ಹಿಂದೆ ಸೇನೆ ನನ್ನ ಕೈ ಆಡಿಸುತ್ತಲೇ ಇರುತ್ತದೆಯೇ ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಈ ಚುನಾವಣೆಗಳನ್ನು ವಿಶ್ಲೇಷಿಸಬೇಕು.  ಈ ಗೊಂದಲಪೂರ್ಣ ಚಿತ್ರಣ ಸ್ವಲ್ಪವಾದರೂ ಅರ್ಥಕ್ಕೆ ನಿಲುಕಬೇಕಾದರೆ ಮೊದಲಿಗೆ ಇದೆಲ್ಲಕ್ಕೂ ಕಾರಣವಾದ ಕಳೆದ ವರ್ಷದ ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಆ ಪುರಾತನ ನಾಡಿನಲ್ಲಿ ಘಟಿಸಿದ ಜನಾಂದೋಳನದ ಒಂದು ಸಂಕ್ಷಿಪ್ತ ಆದರೆ ವಸ್ತುನಿಷ್ಟ ವಿಶ್ಲೇಷಣೆಯ ಅಗತ್ಯವಿದೆ.
ಜನವರಿ ೨೫, ೨೦೧೧ರಂದು ಕೈರೋ ನಗರದ ತೆಹ್ರೀರ್ ಚೌಕದಲ್ಲಿ ಜನಾಂದೋಳನ ಆರಂಭವಾದ ಹದಿನೆಂಟು ದಿನಗಳಲ್ಲಿ ಅಧ್ಯಕ್ಷ ಹೋಸ್ನಿ ಮುಬಾರಕ್ ಅಧಿಕಾರ ತ್ಯಜಿಸಿದ ಬೆಳವಣಿಗೆಯನ್ನು ವಿಶ್ವಸಮುದಾಯ ಅರ್ಥೈಸಿದ್ದೇ ವಿಚಿತ್ರ ಬಗೆಯಲ್ಲಿ.  ಮಹಾಭಾರತದ ಪ್ರಕಾರ ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ದ ಮುಕ್ತಾಯವಾದಾಗ ಕುರು ರಾಜಕೀಯ ಸಂಪೂರ್ಣ ಬದಲಾಗಿ, ಒಂದು ಪಕ್ಷ ನಿರ್ನಾಮವಾಗಿ ಅದರ ಕೈಯಲ್ಲಿದ್ದ ಅಧಿಕಾರದ ಎಲ್ಲ ಸೂತ್ರಗಳು ಮತ್ತೊಂದು ಪಕ್ಷದ ಕೈ ಸೇರಿದವು.  ಈಜಿಪ್ಟ್‌ನ ಈ ಹದಿನೆಂಟು ದಿನಗಳ ಜನಾಂದೋಳನದ ಬಗ್ಗೆ ಹೀಗೆ ನಿಖರವಾಗಿ ಹೇಳಲಾಗುವುದಿಲ್ಲ.  ಈ ಜನಾಂದೋಳನದ ಸ್ವರೂಪ ಹಾಗೂ ಫಲಿತಾಂಶಗಳ ಬಗ್ಗೆ ಹಲವಾರು ಹುಸಿಸಂಗತಿಗಳು ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಹರಿದಾಡಿದವು.
ಮೊದಲಿಗೆ ಈ ಜನಾಂದೋಳನದಲ್ಲಿ ಭಾಗವಹಿಸಿದ್ದ ಜನರ ಸಂಖ್ಯೆ ಮತ್ತು ಆಂದೋಳನದ ಪ್ರಾದೇಶಿಕ ವ್ಯಾಪ್ತಿಯನ್ನು ನೋಡೋಣ.  ೧೯೭೯ರಲ್ಲಿ ಇರಾನ್‌ನಲ್ಲಿ ಜರುಗಿದ ಷಾ ವಿರೋಧಿ ಇಸ್ಲಾಮಿಕ್ ಕ್ರಾಂತಿ ಮತ್ತು ದಶಕದ ನಂತರ ೧೯೮೯ರಲ್ಲಿ ಪೂರ್ವ ಯೂರೋಪಿನ ದೇಶಗಳಲ್ಲಿ ಘಟಿಸಿದ ಕಮ್ಯೂನಿಸ್ಟ್ ವಿರೋಧಿ ಆಂದೋಳನಗಳು ರಾಷ್ಟ್ರವ್ಯಾಪಿಯಾಗಿದ್ದವು ಮತ್ತು ಅವುಗಳಲ್ಲಿ ಭಾಗಿಯಾಗಿದ್ದ ಮಿಲಿಯನ್‌ಗಟ್ಟಲೆ ಜನರಿಗೆ ಹೋಲಿಸಿದರೆ ತೆಹ್ರೀರ್ ಚೌಕದಲ್ಲಿ ಸೇರಿದ್ದ ಮೂರು ಲಕ್ಷ ಜನ ಏನೇನೂ ಅಲ್ಲ.  ಮೆಟ್ರೋಪಾಲಿಟನ್ ಕೈರೋದ ಸುಮಾರು ಎರಡು ಕೋಟಿ ಜನಸಂಖ್ಯೆಯಲ್ಲಿ ಕೇವಲ ಮೂರು ಲಕ್ಷ ಜನ ಆಂದೋಳನದಲ್ಲಿ ಭಾಗಿಯಾಗಿದ್ದಾರೆಂದರೆ ಈ ಆಂದೋಳನಕ್ಕೆ ಸಿಕ್ಕಿದ ಸೀಮಿತ ಬೆಂಬಲದ ಲೆಕ್ಕ ಸಿಗುತ್ತದೆ.  ಪುಟ್ಟ ರುಮೇನಿಯಾದ ಪುಟ್ಟ ಊರು ತಿಮಿಶೋರಾದಲ್ಲಿ ೧೯೮೯ರ ಅಂತ್ಯದಲ್ಲಿ ಅಧ್ಯಕ್ಷ ನಿಕೋಲೇ ಚೌಸೆಸ್ಕ್ಯೂ ವಿದುದ್ಧದ ಆಂದೋಳನ ಭುಗಿಲೆದ್ದಾಗ ಸೇನಾ ಕಾರ್ಯಾಚರಣೆಯಲ್ಲಿ ಬಲಿಯಾದವರ ಸಂಖ್ಯೆ ಮೂರು ಸಾವಿರ.  ಇದಕ್ಕೆ ಪ್ರತಿಯಾಗಿ ಈಜಿಪ್ಟಿನಲ್ಲಾದದ್ದನ್ನು ನೋಡಿ.  ಮುಬಾರಕ್ ವಿರೋಧಿ ಜನರ ವಿರುದ್ಧ ಪೋಲೀಸ್ ಪಡೆಯಾಗಲೀ ಸೇನೆಯಾಗಲೀ ಯಾವುದೇ ತೀವ್ರ ಕಾರ್ಯಾಚರಣೆಯನ್ನೂ ಕೈಗೊಳ್ಳಲೇ ಇಲ್ಲ.  ಅವರ ಮೇಲೆ ಹಲ್ಲೆ ಮಾಡಿದವರು ಮುಬಾರಕ್ ಪರವಾಗಿದ್ದ ಜನ.  ಅವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ.
ಇನ್ನು ಈ ಜನಾದೋಳನದ ಬಗೆಗಿನ ಅತ್ಯಂತ ತಮಾಷೆಯ ಸಂಗತಿಯೆಂದರೆ ಇದನ್ನು ಮಾಧ್ಯಮಗಳು ಮತ್ತು ವಿಶ್ಲೇಷಕರು ಫೇಸ್‌ಬುಕ್ ಕ್ರಾಂತಿ ಎಂದು ವರ್ಣಿಸಿದ್ದು ಮತ್ತು ಅಂತರ್ಜಾಲದ ಸೋಶಿಯಲ್ ನೆಟ್‌ವರ್ಕ್‌ಗಳು ಈ ಜನಾಂದೋಳನಕ್ಕೆ ಜನರನ್ನು ಕರೆತಂದವು ಎಂದು ಬೊಬ್ಬೆ ಹೊಡೆದದ್ದು.  ವಾಸ್ತವವಾಗಿ ಹೇಳಬೇಕೆಂದರೆ ತೆಹ್ರೀರ್ ಚೌಕದಲ್ಲಿ ಜನರ ಸಂಖ್ಯೆ ಹೆಚ್ಚತೊಡಗಿ ಮೂರು ಲಕ್ಷ ಸಮೀಪಿಸಿದ್ದು ಮುಬಾರಕ್ ಸರಕಾರ ಅಂತರ್ಜಾಲವನ್ನು ನಿರ್ಬಂಧಿಸಿದ ಮೇಲೆಯೇ.  ಇಂಟರ್‌ನೆಟ್ ಇರಲಿ, ಕಂಪ್ಯೂಟರ್‌ನ ಮುಖವನ್ನೇ ಸಾಮಾನ್ಯ ಜನ ನೋಡಿಲ್ಲದ ಕಾಲದಲ್ಲಿ ಜನಸಂಖ್ಯೆಯ ದೃಷ್ಟಿಯಲ್ಲಿ ಈಜಿಪ್ಟ್‌ಗಿಂತಲೂ ಅದೆಷ್ಟೋ ಪಟ್ಟು ಪುಟ್ಟದಾಗಿದ್ದ ದೇಶಗಳಲ್ಲಿ ಸರಕಾರೀ ವಿರೋಧಿ ಆಂದೋಳನಗಳಲ್ಲಿ ಮಿಲಿಯನ್‌ಗಟ್ಟಲೆ ಜನ ಭಾಗವಹಿಸಿ ಯಶಸ್ವಿಯಾಗಿ ಸರಕಾರಗಳನ್ನು ಬದಲಾಯಿಸಿದ್ದಕ್ಕೆ ಇತ್ತೀಚಿನ ಇತಿಹಾಸದಲ್ಲೇ ಅನೇಕ ಉದಾಹರಣೆಗಳಿವೆ.
ಹೀಗಿದ್ದೂ, ಸೀಮಿತ ಬೆಂಬಲದ ಈ ಜನಾಂದೋಳನ ಅಧ್ಯಕ್ಷ ಮುಬಾರಕ್‌ರ ಆಳ್ವಿಕೆಯ ಅಂತ್ಯಕ್ಕೆ ಕಾರಣವಾದದ್ದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.  ಫೆಬ್ರವರಿ ೧೧, ೨೦೧೧ರಂದು ಮುಬಾರಕ್ ರಾಜಿನಾಮೆ ನೀಡಿದ ಮರುಗಳಿಗೆ ದೇಶವನ್ನಾಳಲು ಒಂದು ಸೇನಾಸಮಿತಿ ಅಸ್ತಿತ್ವಕ್ಕೆ ಬಂದಿತಷ್ಟೇ.  ಆ ಸಮಿತಿ ಎರಡು ದಿನಗಳ ನಂತರ ಸಂವಿಧಾನವನ್ನು ರದ್ದು ಪಡಿಸಿ, ಸಂಸತ್ತನ್ನು ವಿಸರ್ಜಿಸಿತು.  ಇದರರ್ಥ ಮುಬಾರಕ್ ಆಳ್ವಿಕೆಯ ಅಂತ್ಯದ ಹಿಂದಿದ್ದದ್ದು ಈಜಿಪ್ಟಿನ ಸೇನೆ, ತೆಹ್ರೀರ್ ಚೌಕದಲ್ಲಿ ಸೇರಿದ್ದ ಜನರಲ್ಲ.
ಆರು ದಶಕಗಳ ಹಿಂದೆ ರಾಜಸತ್ತೆಯನ್ನು ಕಿತ್ತೊಗೆದು ಅಧ್ಯಕ್ಷನಾದ ಕರ್ನಲ್ ಗಮಾಲ್ ಅಬ್ದುಲ್ ನಾಸೆರ್, ನಂತರದ ಅನ್ವರ್ ಸಾದತ್ ಮತ್ತು ಹೋಸ್ನಿ ಮುಬಾರಕ್- ಎಲ್ಲರೂ ಮಾಜಿ ಸೇನಾಧಿಕಾರಿಗಳೇ ಮತ್ತು ಅವರ ಬೆನ್ನಿಗೆ ನಿಂತು ನಿಜವಾಗಿ ಅಧಿಕಾರವನ್ನು  ಚಲಾಯಿಸುತ್ತಿದ್ದದ್ದು ಸೇನೆ.  ಹಿಂದಿನ ಇಬ್ಬರು ಅಧ್ಯಕ್ಷರಿಗೂ ಮುಬಾರಕ್‌ಗೂ ಇದ್ದ ಪ್ರಮುಖ ವ್ಯತ್ಯಾಸವೆಂದರೆ ಅವರಿಬ್ವರೂ ಸೇನೆಯ ತೆರೆಯ ಹಿಂದಿನ ಅಧಿಕಾರಕ್ಕೆ ಯಾವ ಚ್ಯುತಿಯೂ ಬಾರದಂತೆ ತಮ್ಮ ಅಧ್ಯಕ್ಷೀಯ ಅಧಿಕಾರಗಳನ್ನು ರೂಪಿಸಿಕೊಂಡರು ಮತ್ತು ಅದಕ್ಕನುಗುಣವಾಗಿ ನಡೆದುಕೊಂಡರು.  ಆದರೆ ಈ ಸಂಪ್ರದಾಯವನ್ನು ಮುರಿಯುವ ದುಸ್ಸಾಹಸಕ್ಕೆ ಮುಬಾರಕ್ ೨೦೧೦ರ ಮಧ್ಯಭಾಗದಲ್ಲಿ ಕೈಹಾಕಿದರು.  ಅವರು ಮಾಡಬಯಸಿದ್ದಿಷ್ಟೇ- ತಮ್ಮ ನಂತರ ತಮ್ಮ ಪುತ್ರ ಗಮಾಲ್ ಮುಬಾರಕ್ ಅಧ್ಯಕ್ಷನಾಗಬೇಕು ಎಂದು ಬಯಸಿದರು ಮತ್ತು ಅದಕ್ಕೆ ಬುನಾದಿ ಹಾಕತೊಡಗಿದರು.  ಅವರ ಈ ಪ್ರಯತ್ನ ಸೇನೆಗೆ ಇಷ್ಟವಾಗದ್ದಕ್ಕಿ ಸ್ಪಷ್ಟ ಕಾರಣಗಳಿವೆ.
ಗಮಾಲ್ ಸೇನಾಧಿಕಾರಿಯಲ್ಲ.  ಜತೆಗೇ ಆತ ರಾಜಕೀಯ ಸುಧಾರಣೆಗಳನ್ನು ಬೆಂಬಲಿಸುವ ಉದಾರವಾದಿ.  ಈತ ಅಧ್ಯಕ್ಷನಾಗಿದ್ದರೆ ೧೯೫೨ರಿಂದಲೂ ತೆರೆಯ ಹಿಂದೆ ಅಧಿಕಾರದ ಸೂತ್ರಗಳನ್ನು ಹಿಡಿದುಕೊಂಡು ಬಂದಿರುವ ಸೇನೆಯ ರಾಜಕೀಯ ವಹಿವಾಟು ಅಂತ್ಯವಾಗುವುದು ಖಂಡಿತವಾಗಿತ್ತು.  ಇದನ್ನು ತಪ್ಪಿಸಲೆಂದೇ ಸೇನಾವರಿಷ್ಟರು ಹೋಸ್ನಿ ಮುಬಾರಕ್‌ರನ್ನು ಆದಷ್ಟು ಬೇಗ ಗದ್ದುಗೆಯಿಂದ ಇಳಿಸಿ ೨೦೧೧ರ ಸೆಪ್ಟೆಂಬರ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮಾತು ಕೇಳುವ, ಕೇಳಿಕೊಂಡೇ ಇರುವ ವ್ಯಕ್ತಿಯೊಬ್ಬನನ್ನು ಆಯ್ಕೆ ಮಾಡಿಸುವ ಹಂಚಿಕೆ ಹಾಕಿದರು.  ಅದರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದದ್ದು eನವರಿ ೨೫, ೨೦೧೧ರಂದು ರಾಷ್ಟ್ರೀಯ ಪೋಲಿಸ್ ದಿನಾಚರಣೆಯ ಸಂದರ್ಭವನ್ನು ಪೋಲಿಸ್ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆಯ ದಿನವನ್ನಾಗಿ ಆಚರಿಸಲು ಜನ ಮುಂದಾದಾಗ ಮತ್ತು ಹಾಗೆ ಒಗ್ಗೂಡಿದ ಜನ ಮುಬಾರಕ್ ವಿರೋಧಿಗಳಾಗಿ ಬದಲಾದಾಗ.  ತೆಹ್ರೀರ್ ಚೌಕದಲ್ಲಿ ಸೇರಿದ ಜನ ತಮಗರಿವಿಲ್ಲದಂತೇ ಸೇನೆಯ ಹೂಟಕ್ಕೆ ಸಹಕರಿಸಲು ತೊಡಗಿದ್ದರು!  ಹೀಗಾಗಿಯೇ ಆ ಜನರ ವಿದುದ್ದ ಯಾವುದೇ ತೀವ್ರ ಕ್ರಮವನ್ನು ತೆಗೆದುಕೊಳ್ಳಲು ಸೇನೆ ಮುಂದಾಗಲಿಲ್ಲ.  ಯಾವುದೇ ನಿರ್ದಿಷ್ಟ ನಾಯಕತ್ವವಿಲ್ಲದ ಈ ಜನಾಂದೋಳನ ಮುಬಾರಕ್ ಆಳ್ವಿಕೆಯ ಅಂತ್ಯದಲ್ಲಿ ಮುಕ್ತಾಯವಾದದ್ದೇ ಸೇನೆಯ ಸಹಕಾರದಿಂದ.
ಯಾವುದೇ ಕಾರಣದಿಂದಲೂ ತಾನು ಅಧಿಕಾರ ತೊರೆಯುವುದಿಲ್ಲವೆಂದು ಮುಬಾರಕ್ ಫೆಬ್ರವರಿ ೧೦ರಂದು ಘೋಷಿಸುತ್ತಿದ್ದಂತೇ ಸೇನೆ ಚುರುಕಾಯಿತು.  ಮುಬಾರಕ್ ಮೇಲೆ ಅದರ ಒತ್ತಡ ಅದೆಷ್ಟು ತೀವ್ರವಾಯಿತೆಂದರೆ ಕೇವಲ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಮುಬಾರಕ್ ತನ್ನ ನಿರ್ಧಾರ ಬದಲಿಸಿ ರಾಜಿನಾಮೆ ನೀಡಿ ಮೆಡಿಟರೇನಿಯನ್ ಸಮುದ್ರತೀರದ ವಿಹಾರಧಾಮ ಶರ್ಮ್ ಅಲ್ ಶೇಖ್‌ನಲ್ಲಿನ ತಮ್ಮ ನಿವಾಸಕ್ಕೆ ಓಡಿಹೋದರು.  ಆತ ಹಾಗೆ ಮಾಡದೇ ಹೋಗಿದ್ದರೆ ಸೇನಾಕ್ರಾಂತಿಗೆ ಬಲಿಯಾಗುತ್ತಿದ್ದರು ಎಂಬ ವಿಷಯ ಈಜಿಪ್ಟ್‌ನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬೆರಳೆಣಿಕೆಯ ಜನರ ಹೊರತಾಗಿ ಹೆಚ್ಚಿನವರ, ಮುಖ್ಯವಾಗಿ ಮಾಧ್ಯಮಗಳ, ಗಮನಕ್ಕೆ ಬರಲೇ ಇಲ್ಲ.
ಮುಬಾರಕ್ ಅತ್ತ ಹೋಗುತ್ತಿದ್ದಂತೇ ಆಂದೋಳನದ ಬಗ್ಗೆ ಸೇನೆಯ ವರ್ತನೆ ಬದಲಾಯಿತು.  ತೆಹ್ರೀರ್ ಚೌಕದಲ್ಲಿ ಜನ ಒಗ್ಗೂಡುವುದನ್ನು ಅದು ಪ್ರತಿಬಂಧಿಸಿತು.  ಅಲ್ಲಿದ್ದವರನ್ನು ಬಲವಂತವಾಗಿ ಜಾಗ ಖಾಲಿ ಮಾಡಿಸಿತು.  ಇದರರ್ಥ ಮುಬಾರಕ್ ವಿರೋಧಿ ಆಂದೋಳನ ಸೇನಾವಿರೋಧಿಯಾಗಿ ಬದಲಾಗುವುದನ್ನು ಅದು ಸಹಿಸಲಿಲ್ಲ.  ಮುಬಾರಕ್ ಆಳ್ವಿಕೆಯಲ್ಲಿ ಜನರಿಗೆ ಸಿಕ್ಕಿದ ಪ್ರತಿಭಟನಾ ಸ್ವಾತಂತ್ರ್ಯ ಸೇನಾಡಳಿತದಲ್ಲಿ ಇರಲಿಲ್ಲ ಎಂಬುದೊಂದು ದಾರುಣ ಸತ್ಯ.  ಇದು ಈಜಿಪ್ಷಿಯನ್ನರು ತಮ್ಮ ಜನಾಂದೋಳನದಿಂದ ಗಳಿಸಿದ್ದು.  ಅವರಿಗೆ ಸಿಕ್ಕಿದ್ದು ಪ್ರಜಾಪ್ರಭುತ್ವವಲ್ಲ, ಬದಲಾಗಿ ಸೇನೆಯ ನೇರ ಆಡಳಿತ.  ತೆಹ್ರೀರ್ ಚೌಕದಲ್ಲಿ ಸೇರಿದ್ದ ಜನ ತಮ್ಮ ಘೋಷಣೆಗಳಲ್ಲಿ ಪ್ರಜಾಪ್ರಭುತ್ವದ ಜತೆ ಪ್ಯಾಲೆಸ್ತೈನ್ ಅನ್ನೂ ಸೇರಿಸಿಕೊಂಡಿದ್ದರು.  ಆದರೆ ಜನಾಂದೋಳನದ ನಂತರ ಅಧಿಕಾರ ಸೂತ್ರ ಹಿಡಿದ ಸೇನಾಸಮಿತಿ ಇಸ್ರೇಲ್ ಜತೆಗಿನ ಒಪ್ಪಂದವನ್ನು ಮಾನ್ಯ ಮಾಡುವುದಾಗಿ ಘೋಷಿಸಿ ಪ್ಯಾಲೆಸ್ತೈನ್ ಬಗ್ಗೆ ತಾನು ಇಸ್ರೇಲ್-ವಿರೋಧಿ ನೀತಿಯನ್ನು ತಳೆಯುವುದಿಲ್ಲ ಎಂದು ಸಾರಿತು.  ಈ ಅರ್ಥದಲ್ಲೂ ಆ ಜನಾಂದೋಳನ ವಿಫಲಗೊಂಡಿತು.
ತೆಹ್ರೀರ್ (ವಿಮೋಚನೆ) ಚೌಕದಲ್ಲಿ ಸೇರಿದ್ದ ಸುಮಾರು ಮೂರು ಲಕ್ಷ ಜನರು ತಮ್ಮನ್ನು ಯಾರಿಂದ ವಿಮೋಚನೆಗೊಳಿಸಿಕೊಂಡರೆಂದು ವಸ್ತುನಿಷ್ಟವಾಗಿ ಪರಿಶೀಲಿಸುವ ಗೋಜಿಗೆ ಯಾರೂ ಹೋಗಲಿಲ್ಲ.  ಈಗಿಪ್ಷಿಯನ್ನರು ತಮಗರಿವಿಲ್ಲದಂತೇ ತಮ್ಮ ಆಶಯಗಳಿಗೆ ವಿರುದ್ಧವಾದ ಫಲಿತಾಂಶವನ್ನು ಸೃಷ್ಟಿಸಿಕೊಂಡರು ಎಂಬ ಕಹಿ ಸತ್ಯವನ್ನು ಯಾರೂ ಮನಗಾಣದೇ ಹೋದದ್ದು ಇಪ್ಪತ್ತೊಂದನೇ ಶತಮಾನದ ಮಾನವನ ವಸ್ತುನಿಷ್ಟ ರಾಜಕೀಯ ಚಿಂತನಾಪ್ರಬುದ್ಧತೆಯ ಬಗ್ಗೆ ಸಂದೇಹವನ್ನುಂಟು ಮಾಡುತ್ತದೆ.
ಆರು ತಿಂಗಳಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸುವುದಾಗಿ ಸೇನೆ ಫೆಬ್ರವರಿ ೧೩, ೨೦೧೧ರಂದು ಹೇಳಿತ್ತು.  ಆ ಚುನಾವಣೆಗಳು ಹದಿನೈದು ತಿಂಗಳುಗಳ ನಂತರ ಈ ತಿಂಗಳು ನಡೆಯಲಿವೆ.
ಚುನಾವಣೆಗಳಿಗೆ ತಿಂಗಳಿರುವಾಗ ಇಪ್ಪತ್ತಕ್ಕೂ ಅಧಿಕವಾಗಿದ್ದ ಅಭ್ಯರ್ಥಿಗಳಲ್ಲಿ ಮುಖ್ಯರಾಗಿದ್ದವರು ಮೂವರು- ಉಗ್ರ ಸಂಪ್ರದಾಯವಾದಿ ಸಲಾಫಿ ಸಂಘಟನೆಯ ಹಝೀಂ ಅಬು ಇಸ್ಮಾಯಿಲ್, ಇಸ್ಲಾಮಿಕ್ ಬ್ರದರ್‌ಹುಡ್‌ನ ಮಹಮದ್ ಮೋರ್ಸಿ ಮತ್ತು ಅದೇ ಸಂಘಟನೆಯಿಂದ ಹತ್ತು ತಿಂಗಳ ಹಿಂದೆ ಉಚ್ಚಾಟಿಸಲ್ಪಟ್ಟ ಅಬ್ದೆಲ್ ಮೊಮೀನ್ ಅಬುಲ್ ಫತೂಹ್.  ಇವರಲ್ಲಿ ಮೊದಲ ಇಬ್ಬರು ಕಟ್ಟಾ ಇಸ್ಲಾಮಿಕ್ ಸಂಪ್ರದಾಯವಾದಿಗಳು.  ಅಬು ಇಸ್ಮಾಯಿಲ್ ಎಲ್ಲ ರಂಗಳಲ್ಲಿಯೂ ಇಸ್ಲಾಮಿಕ್ ಕಾನೂನಿನ ಅನುಷ್ಟಾನಕ್ಕೆ ಬದ್ಧನಾದರೆ ಮೋರ್ಸಿ ಕೊರಾನ್ ನಮ್ಮ ಸಂವಿಧಾನ, ಶರಿಯ ನಮ್ಮ ಮಾರ್ಗದರ್ಶಿ ಎಂದು ಘೋಷಿಸಿರುವಾತ.  ಇವರಿಬ್ಬರಿಗೆ ಬದಲಾಗಿ ಅಬುಲ್ ಫತೂಹ್ ಉದಾರವಾದಿ, ಇಸ್ಲಾಂ ಮತ್ತು ಈಜಿಪ್ಟ್ ಎರಡರ ಬಗೆಗೂ ಸಂಪ್ರದಾಯವಿರೋಧೀ ಬಹುತ್ವ ಮೌಲ್ಯಗಳ ಪ್ರತಿಪಾದಕ.  ಈಜಿಪ್ಷಿಯನ್ ಸಮಾಜದಲ್ಲಿ ಇಸ್ಲಾಮಿಕ್ ಸಂಘಟನೆಗಳ ಬೆಂಬಲಿಗರು ಹಾಗೂ ಉದಾರವಾದಪ್ರಿಯರ ಶೇಕಡಾವಾರು ಪ್ರಮಾಣ ಸ್ಪಷ್ಟವಾಗಿ ಗೋಚರವಾಗದ ಪರಿಸ್ಥಿತಿಯಲ್ಲಿ ಈ ಮೂವರಲ್ಲಿ ಯಾರು ವಿಜಯಶೀಲರಾಗಿ ಗಾದಿ ಏರುತ್ತಾರೋ ಎಂಬ ಪ್ರಶ್ನೆ ಎಲ್ಲರ ಉಂದಿದ್ದಂತೇ ಚುನಾವಣಾ ಚಿತ್ರಣ ಸಂಪೂರ್ಣವಾಗಿ ಬದಲಾಗುವಂತಹ ಬೆಳವಣಿಗೆ ಶನಿವಾರ, ಏಪ್ರಿಲ್ ೨೮ರ ರಾತ್ರಿ ಘಟಿಸಿದೆ.  ತನ್ನ ಅಭ್ಯರ್ಥಿ ಅಬು ಇಸ್ಮಾಯಿಲ್‌ನ ತಾಯಿ ಅಮೆರಿಕನ್ ನಾಗರೀಕಳಾಗಿದ್ದಳೆಂಬ ಕಾರಣದಿಂದಾಗಿ ಜಾರಿiಲ್ಲಿರುವ ರಾಷ್ಟ್ರೀಯತಾ ಕಾನೂನುಗಳ ಪ್ರಕಾರ ಅತ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹವಾಗುವ ಅಪಾಯವನ್ನು ಮನಗಂಡು ಸಲಾಫಿ ಸಂಫಟನೆ ತನ್ನ ಬೆಂಬಲವನ್ನು ಉದಾರವಾದಿ ಅಬುಲ್ ಫತೂಹ್‌ಗೆ ಘೋಷಿಸಿದೆ.  ಸಂಸತ್ತಿನಲ್ಲಿ ಈಗಾಗಲೇ ಬಹುಮತ ಹೊಂದಿರುವ ತನ್ನ ಪ್ರತಿಸ್ಪರ್ಧಿ ಸಂಘಟನೆ ಮುಸ್ಲಿಂ ಬ್ರದರ್‌ಹುಡ್ ಅಧ್ಯಕ್ಷಸ್ಥಾನವನ್ನೂ ಕೈವಶ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಸಲಾಫಿ ಈ ನೀತಿ ಅನುಸರಿಸಿದೆ ಎನ್ನುವುದು ನಿರ್ವಿವಾದ.  ಅದರ ಬೆಂಬಲದಿಂದಾಗಿ ಅಬುಲ್ ಫತೂಹ್ ಆಯ್ಕೆ ಸುಗಮವಾಗುವುದೂ ನಿಶ್ಚಿತ.  ಆದಾಗ್ಯೂ ಕೆಲವು ಪ್ರಶ್ನೆಗಳು ಎದುರಾಗಿತ್ತವೆ.
ಉದಾರವಾದಿಯೊಬ್ಬ ಅಧ್ಯಕ್ಷನಾಗುವುದನ್ನು ಸೇನೆ ಸಹಿಸುತ್ತದೆಯೇ?  ಆರು ದಶಕಗಳಿಂದ ಸವಿದಿರುವ ರಾಜಕೀಯದ ರುಚಿಯನ್ನು ಸೇನೆ ಸುಲಭವಾಗಿ ಬಿಟ್ಟುಕೊಡುತ್ತದೆಯೇ?  ಹಾಗಿಲ್ಲದ ಪಕ್ಷದಲ್ಲಿ ನಿಗದಿಯಾದಂತೆ ಮೇ ೨೩, ೨೪ರಂದು ಚುನಾವಣೆಗಳು ನಿಜವಾಗಿಯೂ ನಡೆಯುತ್ತವೆ ಎಂದು ಹೇಳಲಾಗದು.  ಒಂದುವೇಳೆ ಸೇನೆಯ ನೀತಿಯಲ್ಲಿ ಅಭೂತಪೂರ್ವ ಬದಲಾವಣೆ ಕಂಡುಬಂದು ಚುನಾವಣೆಗಳು ನಡೆದು ಫತೂಹ್ ಅಧ್ಯಕ್ಷನಾದರೂ ಅವನ ಕಾಲಾವಧಿ ಎಷ್ಟು ದಿನ? ಹುಟ್ಟಾ ಉದಾರವಾದಿ ಫತೂಹ್ ಕಟ್ಟಾ ಸಂಪ್ರದಾಯವಾದಿ ಸಲಾಫಿಯ ನೆರಳಲ್ಲಿ ಎಷ್ಟು ದಿನ ನೆಮ್ಮದಿಯಾಗಿ ರಾಜ್ಯವಾಳಲು ಸಾಧ್ಯ?
ಒಟ್ಟಿನಲ್ಲಿ ಈಜಿಪ್ಟ್‌ನ ಭವಿಷ್ಯ ಅನಿಶ್ಚಿತ.
***     ***     ***
ಬುಧವಾರ, ಮೇ ೨, ೨೦೧೨ರಂದು "ವಿಜಯವಾಣಿ" ಪತ್ರಿಕೆಯ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ

No comments:

Post a Comment