ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, April 9, 2014

ಮೂಡಲ ಸೀಮೆಯ ಮುಸ್ಸಂಜೆ ಸೊಲ್ಲು



ಜನ ಇದಿರಿಗೆ "ಟೈಲರಣ್ಣಾ" ಎಂದೂ, ಬೆನ್ನ ಹಿಂದೆ "ದೊಡ್ಡಲಂಗ" ಅಂತಲೂ ಕರೆಯುತ್ತಿದ್ದ ಟೈಲರ್ ದೊಡ್ಡರಂಗ ಮುದುರಿ ಉಂಡೆಮಾಡಿ ಚಾಚಿದ ತೋಳುಗಳ ಮೇಲೆ ಗುಪ್ಪೆಯಾಗಿ ಇರಿಸಿದ ನವುರು ನವುರು ನೈಲಾನ್ ಸೀರೆಯನ್ನು ಎದೆಗವಚಿಕೊಂಡು ಶ್ರೀನಿವಾಸ ಉರುಫ್ ಸೀನ ಒಂದು ಹೆಜ್ಜೆ ಹಿಂದಿಡುತ್ತಿದ್ದಂತೇ "ಏ ಸೀನಾ, ನಿಂತ್ಕಳೋ" ಎಂಬ ದನಿ ಕೇಳಿ ಗಕ್ಕನೆ ನಿಂತು ಹಿಂತಿರುಗಿ ನೋಡಿದ.
ದೊಡ್ಡರಂಗನ ಲಡಕಾಸೀ ಮಿಶೀನಿನ ಕೊಟಕೊಟ ಹಿನ್ನೆಲೆ ಸಂಗೀತದಲ್ಲಿ ಊರಿನ ಸಮಸ್ಥ ಸುದ್ಧಿಗಳನ್ನೂ ವ್ಯಾಖ್ಯಾನಿಸಿ ಪೋಲಿಭಾಷ್ಯ ಬರೆಯುತ್ತಾ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದ ಐದಾರು ವೇಸ್ಟುಬಾಡಿಗಳಲ್ಲೊಬ್ಬನಾದ ಪುಟ್ಟಮಲ್ಲ ಉರುಫ್ ಗೂದೆಮಲ್ಲ ಮೇಲೆದ್ದು ನಿಂತು ಲುಂಗಿಯನ್ನು ಬಿಚ್ಚಿ ಎರಡೂ ಅಂಚುಗಳನ್ನು ದೂರದೂರ ಒಯ್ದು ಪಟಪಟ ಒದರಿ ಬೆಳಗಿನಿಂದಾ ಅದು ಕುಡಿದಿದ್ದ ಲೀಟಗಟ್ಟಲೆ ಬೆವರು ಮತ್ತು ಡಝನ್‌ಗಟ್ಟಲೆ ಹೂಸುಗಳ ವಾಸನೆಯನ್ನೂ ದಶದಿಕ್ಕುಗಳಿಗೂ ಹರಡುತ್ತಾ "ಆ ಸೀರೆ ಉಟ್ಕಂಡು ಇಲ್ಲಿ ಬರಾಕೆ ನಿಮ್ಮಕ್ಕಂಗೆ ಹೇಳೋ" ಎನ್ನುತ್ತಾ ಕೆಕ್ಕೆಕ್ಕೇ ಕೆನೆದ.  "ಏಯ್ ಬ್ಯಾಡೋ ಮಾರಾಯಾ" ಎಂಬ ದೊಡ್ಡರಂಗನ ಅರೆನಗು ನಸುಭಯ ತುಂಬಿದ ಮೆಲುದನಿಯ ಬೇಡಿಕೆಯನ್ನು ನಿರ್ಲಕ್ಷಿಸಿ ಮತ್ತೊಂದು ವೇಸ್ಟುಬಾಡಿ ಮರಿನಂಜ ಉರುಫ್ ಹೇತ್‌ಪುಕ್ಳಿ ತೊಡೆ ತಟ್ಟಿಕೊಂಡು ಕೆನೆಯುತ್ತಾ "ಹೌದು ಕಣಾ ಸೀನಾ, ಬರಾಕೆ ಹೇಳೋ ಅವಳ್ಗೆ.  ಇಲ್ಲಿ ಸೊಲ್ಪ ಕೆಲ್ಸ ಅದೆ" ಎನ್ನುತ್ತಾ ಕಣ್ಣುಮಿಟುಕಿಸಿದ.
ಸೀನನಿಗೆ ಕೋಪಬಂತು.  "ಬಡ್ಡೆತ್ತವೇ" ಎಂದು ಮನಸ್ಸಿನಲ್ಲೇ ಬೈದುಕೊಂಡು ನಾಕು ಹೆಜ್ಜೆ ದೂರ ಓಡಿ ಹಿಂತಿರುಗಿ "ಗೂದೆಮಲ್ಲ, ಹೇತ್‌ಪುಕ್ಳೀ...  ಗೂದೆ ಕಡಕಂಡಿರದು ಯಾಗಪ್ಪಾ?  ಹೇತ್‌ಬುಟ್ಟು ತಿಕಾ ತೊಳೀದೇ ಮಡ್ಕೆಯಿಂದ ಬೋನ ತಕಂಡು ಉಂಡವ್ರು ಯಾರಪ್ಪಾ?" ಎಂದು ಕೂಗುತ್ತಾ ಆ ಇಬ್ಬರು ವೇಸ್ಟುಬಾಡಿಗಳ ಮಾನವನ್ನು ಹರಾಜು ಹಾಕುತ್ತಾ, ಸೇಡು ತೀರಿಸಿಕೊಳ್ಳುತ್ತಿರುವುದಕ್ಕಾಗಿ ಹಿಗ್ಗುತ್ತಾ, ಅವರೇನಾದರೂ ಅಟ್ಟಿಸಿಕೊಂಡು ಬಂದರೆ...? ಎಂದು ದಿಗಿಲು ಪಡುತ್ತಾ ಓಡಿದ.  ಮನೆ ಹತ್ತಿರವಾಗುತ್ತಿದ್ದಂತೇ ಓಟ ನಿಧಾನಗೊಳಿಸಿದ.  ‘ಬಡ್ಡೆತ್ತವು ಯಂತ ಮಾತಂದ್ವು!’  ಮತ್ತೆ ಅಂದುಕೊಂಡ.  ಅಕ್ಕನ ಮೇಲೂ ಕೋಪಬಂತು.  "ಇವ್ಳಿಂದಾಗಿ ಆ ಪೋಲಿಬಡ್ಡೈಕ್ಳ ಬಾಯ್ಲಿ ಯಂತ ಮಾತು ಕೇಳಬೇಕಾಯ್ತು!  ಇಸ್ಕೂಲ್‌ಗೆ ಹೊತ್ತಾಗ್ತದೆ ಅಂತ ಗ್ವಾಗರೆದ್ರೂ ‘ಓಗಪ್ಪ, ಓಗು ರಾಜಾ, ಸೊಲ್ಪ ಆ ಟೈಲರಣ್ಣನ ಕೈಲಿ ನನ್ ವಸಾಸೀರೆ ಅಂಚನ್ನ ಹೊಲಿಸ್ಕಂಡು ಬಂದ್‌ಬುಡಪ್ಪಾ.  ನಾ ಅವಂಗೆ ಮೊದ್ಲೇ ಯೋಳಿವ್ನಿ.  ಸೀನನ್ ಕೈಲಿ ಕೊಟ್ ಕಳ್ಸು, ಹೊಲಕೊಡ್ತೀನಿ ಅಂತ ನಂಗೆ ವತಾರೆನೇ ಯೋಳವ್ನೆ’ ಅಂತ ಪೂಸಿ ಹೊಡೆದಳಲ್ಲ!  ಅಷ್ಟು ಅರ್ಜೆಂಟಾಗಿದ್ರೆ ತಾನೇ ಹೋಗಿ ಹೊಲಿಸ್ಕಬೇಕಾಗಿತ್ತು" ಎಂದು ಗಟ್ಟಿಯಾಗಿಯೇ ಬೈದುಕೊಂಡ.  ಮನೆ ಸೇರಿ ಬಾಗಿಲಲ್ಲೇ ಕಾದು ನಿಂತಿದ್ದ ವಸಂತಿಯ ಮುಂದೆ ಸೀರೆಯನ್ನು ಎಸೆದ.  ಮುಖವರಳಿಸಿಕೊಂಡು ಕೆಳಗೆ ಬೀಳಲಿದ್ದ ಸೀರೆಯ ಗುಪ್ಪೆಯನ್ನು ಗಬಕ್ಕನೆ ಆತುಕೊಂಡು ಅದರ ಅಂಚಿನತ್ತ ಬೆರಳಾಡಿಸಿದವಳತ್ತ ತಿರುಗಿಯೂ ನೋಡದೇ ಅಲ್ಲೇ ಗೋಡೆಗೊರಗಿಸಿದ್ದ ತನ್ನ ಪುಸ್ತಕದ ಚೀಲವನ್ನು ದರದರ ಎಳೆದುಕೊಂಡು ಹೊಸ್ತಿಲು ದಾಟಿದ.  ಗೂಳಮಾವ ಅಂಗಲಾಚಿಕೊಂಡು ಮಲಗಿದ್ದ ಮೂಲೆಯ ಮಂಚದಿಂದ ಬಂದ "ಭೋಂ" ಎಂಬ ಸದ್ದು ಕೇಳಿ ವಸಂತಿ ಕಿಸಕ್ ಅಂದರೆ ತಾನು "ಯ್ಯಹ್" ಎಂಬು ಮುಖ ಸೊಟ್ಟಗೆ ಮಾಡಿ ಪುಸ್ತಕದ ಚೀಲವನ್ನು ಅನಾಮತ್ತಾಗಿ ಎತ್ತಿ ಬೆನ್ನ ಮೇಲೆ ಏರಿಕೊಂಡು ಓಡಲು ಹೋದ.  "ಸೀನಾ, ಈ ಸೀಬಿಹಣ್ಣು ತಿಂದ್ಕಂಡೋಗು ರಾಜಾ" ಎಂಬ ಕೂಗು ಹಿಂದಿನಿಂದ ಕಿವಿಗೆ ಬಿದ್ದೊಡನೇ ಅವನ ಕಾಲುಗಳು ಚಕ್ಕನೆ ನಿಂತವು.  ಹೆಗಲೇರಿದ್ದ ಪುಸ್ತಕದ ಚೀಲವನ್ನು ಕೆಳಗಿಟ್ಟು ಅಕ್ಕನತ್ತ ಓಡಿದ.  "ಮಣಿ ಕೊಟ್ಲು.  ಅವ್ರ ಮರದಲ್ಲಿ ಬುಟ್ಟಿತ್ತಂತೆ.  ನಿಂಗೆ ಅಂತ ಮಡಿಕ್ಕಂಡಿದ್ದೆ" ಎನ್ನುತ್ತಾ ವಸಂತಿ ಮುಂಚಾಚಿದ ಮುಷ್ಟಿಗಾತ್ರದ ಸೀಬೆಕಾಯಿಯನ್ನು ತೆಗೆದುಕೊಂಡು ಕಚ್ಚಿದ.  ರಸ ನಾಲಿಗೆಗೆ ಇಳಿದು ಕಣ್ಣುಗಳು ಉಲ್ಲಾಸದಲ್ಲಿ ಅರಳಿ ವಸಂತಿಗೆ ಕೃತಜ್ಞತೆ ಸೂಸಿದವು.  ಸೀಬೆಕಾಯಿಯನ್ನು ಕಚ್ಚುತ್ತಲೇ ಶಾಲೆಯತ್ತ ನಡೆದ.  ಒಂದೊಂದು ಕಚ್ಚಿಗೂ ಬಾಯಿ ತುಂಬಾ ತುಂಬಿಕೊಳ್ಳುತ್ತಿದ ಸಿಹಿರಸ ವಸಂತಿಯ ಬಗ್ಗೆ ಅವನ ಮನದಲ್ಲಿ ಮೂಡಿದ್ದ ಬೇಸರವನ್ನು ತೊಳೆದುಬಿಟ್ಟಿತು.  ಅದರ ಸ್ಥಾನದಲ್ಲಿ ತನ್ನಕ್ಕನ ಬಗ್ಗೆ ಪ್ರೀತಿಯ ಮಹಾಪೂರ.  "ತನಗೆ ಕೊಟ್ಟದ್ದನ್ನ ತಾನೇ ತಿನ್ನದೇ ನಂಗೆ ಅಂತ ಜೋಪಾನವಾಗಿ ಮಡಗಿದ್ಲಲ್ಲ ನಮ್ಮಕ್ಕ!  ಎಷ್ಟ್ ಒಳ್ಳೇವ್ಳು ನಮ್ ವಸಂತಕ್ಕ!  ಅಂಥವ್ಳನ್ನ ಸೀರೆ ಹೊಲಿಸ್ಕಳಕ್ಕೆ ತಾನೇ ಯಾಕೆ ಹೋಗ್ಲಿಲ್ಲ ಅಂತ ಬೈಕಂಡ್ನಲ್ಲಾ ನಾನು" ಎಂದು ಪಶ್ಚಾತ್ತಾಪ ಪಟ್ಟುಕೊಂಡ.  ‘ಆ ದೊಡ್‌ಲಂಗನ ತಾವ ಅಕ್ಕ ಹೋಗ್ದೇ ಇದ್ದದ್ದೇ ಒಳ್ಳೇದಾಯ್ತು.  ಇಲ್ಲಾಂದ್ರೆ ಆ ಬಡ್ಡೆತ್ತವು ಗೂದೆಮಲ್ಲ, ಹೇತ್‌ಪುಕ್ಳಿಗಳು ಅಂದ ಮಾತೆಲ್ಲಾ ಅಕ್ಕನ ಕಿವಿಗೆ ಬಿದ್ದು ಅವ್ಳು ಶ್ಯಾನೆ ಬೇಜಾರು ಮಾಡ್ಕಂಡುಬುಡ್ತಿದ್ಲು" ಅಂದುಕೊಂಡ.
ಇಸ್ಕೂಲುಮನೆಯಿದ್ದ ದಾರಿಗೆ ತಿರುಗುತ್ತಿದ್ದಂತೇ ಸೀಬೆಕಾಯಿಯೆಲ್ಲಾ ಹೊಟ್ಟೆಸೇರಿ ಕೈ ಖಾಲಿಯಾಗಿ ತಾನು ದೊಡ್ಡರಂಗನ ಟೈಲರಿಂಗ್ ಶಾಪಿಗೆ ನಾಲ್ಕೇ ನಾಲ್ಕು ಹೆಜ್ಜೆಗಳಷ್ಟು ಹತ್ತಿರ ಬಂದುಬಿಟ್ಟಿರುವ ಕಟುಸತ್ಯದ ಅರಿವಾಗಿ ಬೆದರಿದ ಶ್ರೀನಿವಾಸ ಉರುಫ್ ಸೀನ.  ಗಾಬರಿಯಲ್ಲಿ ಗಕ್ಕನೆ ನಿಂತವನ ಕಿವಿಗೆ ಗೂದೆಮಲ್ಲ ಮತ್ತು ಹೇತ್‌ಪುಕ್ಳಿಗಳ ಕೇಕೆ ಕಿವಿಗೆ ಬಿದ್ದು "ಈಗಲೀಗ ನಾ ಕೆಟ್ಟೆ" ಅನಿಸಿಬಿಟ್ಟಿತು.  ಕ್ಷಿಪ್ರ ಚಲನೆಯಲ್ಲಿ ಎಡಗೈಯನ್ನು ಬೆನ್ನ ಹಿಂದೆ ಕೊಂಡೊಯ್ದು ಹೆಗಲೇರಿದ ಪುಸ್ತಕದ ಚೀಲಕ್ಕೆ ಆಸರೆಯಾಗಿಸಿ ಹಿಂತಿರುಗಿ ಓಡಿದ.  ಸೀಗಯ್ಯನ ಮನೆಯ ಪಕ್ಕದ ಸಂದಿಯಲ್ಲಿ ನುಗ್ಗಿ ತಮ್ಮೂರನ್ನು ಮಾದೇಶ್ವರನ ಬೆಟ್ಟಕ್ಕೆ ಕರೆದೊಯ್ಯುತ್ತಿದ್ದ ಟಾರ್ ರಸ್ತೆ ಸೇರಿ ಕುರುಬಗೇರಿಯನ್ನು ಅಡ್ಡಬಳಸಿ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಶಾಲೆ ಸಮೀಪಿಸಿದ.  ಈ ಸುತ್ತುಬಳಸಾಟದಲ್ಲಿ ಶಾಲೆಯ ಗಂಟೆ ಬಾರಿಸಿದ್ದು ಪಾಪ ಅವನ ಕಿವಿಗೆ ಬಿದ್ದಿರಲಿಲ್ಲ.  ಓಡುತ್ತಾ ಹೋಗಿ ತನ್ನ ಐದನೆಯ ತರಗತಿಯ ಬಾಗಿಲಲ್ಲಿ ನಿಂತ.  ಐದನೆಯ ತರಗತಿಯ ಇಡೀ ಜವಾಬ್ದಾರಿಯನ್ನು ಹೊತ್ತಿದ್ದ ಏಬುಲಯ್ಯ ಮೇಷ್ಟ್ರು ಛೇರಿನ ಮೇಲೆ ಕೂತು ಮೇಜಿನ ಕೆಳಗೆ ಕಾಲುಗಳನ್ನು ಮೆಲ್ಲಮೆಲ್ಲಗೆ ಅಲ್ಲಾಡಿಸುತ್ತಿದ್ದರು.  ಕೈಬೆರಳುಗಳು ಸೀಮೆಸುಣ್ಣದ ತುಂಡಿನ ಜತೆ ಆಡುತ್ತಿದ್ದವು.  ಸೀನನ ಸಹಪಾಠಿಗಳಿಂದ ಮಾಮೂಲಿನ ವರದಿ ಮಂಡಿತವಾಗುತ್ತಿತ್ತು.
ಏಬುಲಯ್ಯ ಮೇಷ್ಟರ ಹೆಸರು ಏಬೆಲ್ ಅಂತ.  ಜನ ಗೌರವಪೂರ್ವಕವಾಗಿ ಏಬುಲಯ್ಯ ಎಂದು ಕರೆಯುವುದು ಅವರು ಇಪ್ಪತ್ತೆರಡು ವರ್ಷಗಳ ಹಿಂದೆ ಸರಕಾರೀ ನೇಮಕಾತಿ ಪತ್ರ ಹಿಡಿದು ತಮ್ಮೂರು ಯಳಂದೂರು ತಾಲೂಕಿನ ಗುಂಬಳ್ಳಿಯಿಂದ ಹೆಗ್ಗಡದೇವನ ಕೋಟೆ ತಾಲೂಕಿನ ಮೊಳೆಯೂರಿಗೆ ಬಸ್ ಹತ್ತಿದ್ದಾಗಿನಿಂದಲೇ ಆರಂಭವಾಗಿಬಿಟ್ಟಿತು.  ಅವರು ಇದುವರೆಗೆ ಕೆಲಸ ಮಾಡಿದ ಅರ್ಧ ಡಜನ್ ಹಳ್ಳಿಗಳಲ್ಲಿ ಅವರ ಹೆಸರೂ, ಅದರೊಂದಿಗೇ ಅಂಟಿಕೊಂಡ ಅವರ ವೇಷಭೂಷಗಳು ಮನೆಮಾತಾಗಿವೆ.  ಶಾಲೆಗೆ ಪ್ಯಾಂಟು ಶರಟು ಹಾಕಿಕೊಂಡು ಹೋಗುವ ಅವರು ಶಾಲೆಯಿಂದ ಬಂದೊಡನೇ ತೋಳಿಲ್ಲದ ಬನಿಯನ್ ತೊಟ್ಟು ಅದರ ಮೇಲೆ ಚೌಕಳಿ ಲುಂಗಿಯನ್ನು ಸೊಂಟದಿಂದ ಮುಕ್ಕಾಲಡಿ ಮೇಲೆ ಸರಿಯಾಗಿ ಎದೆಯ ನಟ್ಟನಡುವೆಯೇ ಕಟ್ಟಿಕೊಳ್ಳುತ್ತಾರೆ.  ಆ ವೇಷದಲ್ಲೇ ಮನೆ ಮುಂದೆ, ಹಿಂದೆ ಸುತ್ತಾಡುತ್ತಾರೆ.  ಅಂಗಡಿಗೆ ಹೋಗಿ ನೇವಿ ಬ್ಲೂ ಸಿಗರೇಟ್, ಚೀತಾ ಫೈಟ್ ಬೆಂಕಿಪೊಟ್ಟಣ ತರುತ್ತಾರೆ.  ಶಾಲೆಯ ಹಿಂದುಗಡೆಯೇ ಇದ್ದ ಮುದ್ದೀರವ್ವನ ಮನೆಯ ಹೊರಕೋಣೆಯಲ್ಲಿ ಅವರ ವಾಸ.  ಅವರಿಗೆ ಹೆಂಡತಿ ಮಕ್ಕಳೇನೂ ಇದ್ದಂತೆ ಕಾಣುವುದಿಲ್ಲ.
ಏಬುಲಯ್ಯ ಮೇಷ್ಟರು ಈ ಸ್ಕೂಲಿಗೆ ಬಂದು ಎರಡು ತಿಂಗಳಾಗಿವೆ.  ಅವರೊಂದು ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ.  ಆ ಸಂಪ್ರದಾಯ ಉಂಡವರಿಗೆ ಉತ್ಸಾಹ ಸಂತೋಷ ಹಾಗೂ ಹೆಮ್ಮೆಯನ್ನೂ, ಉಣ್ಣದವರಿಗೆ ನಿರಾಸಕ್ತಿ ಮುಜುಗರ ಹಾಗೂ ವೇದನೆಯನ್ನೂ ಉಂಟುಮಾಡುತ್ತದೆ.  ಎರಡನೆಯ ವರ್ಗದ ಮಕ್ಕಳು ತನ್ನ ತರಗತಿಯಲ್ಲಿಲ್ಲ ಎಂದು ಏಬುಲಯ್ಯ ಮೇಷ್ಟ್ರು ಅಂದುಕೊಂಡಿದ್ದಾರೆ.  ಅದೇನೂ ಅವರ ತಪ್ಪಲ್ಲ.  ಯಾಕೆಂದರೆ ಅವರು ದಿನಾ ಮಧ್ಯಾಹ್ನ ತಪ್ಪದೇ ಉಂಡು ಬರುತ್ತಾರೆ.
ಏಬುಲಯ್ಯ ಮೇಷ್ಟ್ರು ಆರಂಭಿಸಿದ ಆ ಸಂಪ್ರದಾಯ ಏನಪ್ಪಾ ಅಂದರೆ- ಮಧ್ಯಾಹ್ನ ಶಾಲೆ ಆರಂಭವಾದೊಡನೆ ಮಕ್ಕಳು ಒಂದು ಕಡೆಯಿಂದ ಒಬ್ಬೊಬ್ಬರಾಗಿ ಎದ್ದು ನಿಂತು ತಾವೇನು ಊಟ ಮಾಡಿ ಬಂದಿದ್ದೇವೆಂದು ಹೇಳಬೇಕು.  ಎಲ್ಲರೂ ಹೇಳುತ್ತಾರೆ.  "ಅನ್ನ - ಬೇಳೆ ಸಾರು, ರಾಗಿಮುದ್ದೆ - ಮಸ್ಸೊಪ್ಪು, ಜೋಳದಮುದ್ದೆ - ಹುರಿದವೆರೆ..."  ಮೊದಮೊದಲು "ಬಾಡು... ಇಲ್ಲ ಇಲ್ಲ ಛೇ... ಮಾಂಸ!  ಮಾಂಸ ಸಾ" ಎನ್ನುತ್ತಿದ್ದ ಮಕ್ಕಳನ್ನು ಏಬುಲಯ್ಯ ಮೇಷ್ಟ್ರು ತಿದ್ದಿದ್ದಾರೆ.  ಅವೀಗ "ಮಟನ್, ಚಿಕನ್" ಅನ್ನುತ್ತವೆ.  ತಲೆಗೆ ಲೇಸಿನ ಕುಲಾವಿ ಏರಿಸಿಕೊಂಡು ಬರುವ ಅಬ್ದುಲ್ ಖಾದರ್ ವಾರದಲ್ಲಿ ಒಂದೆರಡು ಸಲವಾದರೂ "ಬೀಪ್ ಬೀಪ್" ಎಂದು ಸಿಗ್ನಲ್ ಕೊಡುತ್ತಾನೆ.
ಆದರೆ ಒಂದಲ್ಲಾ ಒಂದು ಮಗುವಿಗೆ ಒಂದು ವಿಷಯದಲ್ಲಿ ಮಾತ್ರ ಸಮಸ್ಯೆ ಎದುರಾಗುತ್ತದೆ.  ಅಂದು ಮನೆಯಲ್ಲಿ ಹೊಟ್ಟೆಗೇನೂ ಸಿಗಲಿಲ್ಲ ಎನ್ನುವುದನ್ನು ಒಬ್ಬಿಬ್ಬರಿಗೆ ಪಿಸುದನಿಯಲ್ಲಿ ಹೇಳಬಹುದು.  ಎಲ್ಲರಿಗೂ ಹೇಳುವುದು ಹೇಗೆ?  ಅಂಥ ಸಂದಿಗ್ಧದಲ್ಲಿ ತೊಳಲುವ ಒಂದಲ್ಲಾ ಒಂದು ಜೀವ ಆ ಸಿದ್ದಯ್ಯನಪುರವೆಂಬ ಹಳ್ಳಿಯ ಆ ಐಡೆಡ್ ಮಿಷನ್ ಎಲಿಮೆಂಟರಿ ಸ್ಕೂಲ್ ಎಂಬ ಶಾಲೆಯ ಆ ಐದನೆಯ ತರಗತಿಯಲ್ಲಿ ಪ್ರತಿ ಮಧ್ಯಾಹ್ನವೂ ಇರುತ್ತದೆ.  ಸಹಪಾಠಿಗಳು ತಾವು ಉಂಡದ್ದನ್ನು ಹೇಳುತ್ತಿರುವಾಗ ಹಸಿದ ಜೀವ ಅತ್ತಲೇ ನೋಡುತ್ತಿರುತ್ತದೆ.  ತಾನೇನು ಹೇಳಬೇಕು ಎಂದು ಮನದಲ್ಲೇ ಮಥಿಸುತ್ತಿರುತ್ತದೆ.  ಹಳ್ಳಿಗಾಡಿನ ವಿವಿಧ ಭಕ್ಷ್ಯಭೋಜ್ಯಗಳ ಹೆಸರುಗಳು ಹತ್ತಿರಾಗುತ್ತಿರುವಂತೇ ಚಡಪಡಿಸತೊಡಗುತ್ತದೆ.  ತನ್ನ ಸರದಿ ಇನ್ನೇನು ಬಂತು ಎನ್ನುವಾಗ ನಿರ್ಧಾರ ತೆಗೆದುಕೊಂಡೇ ಬಿಡುತ್ತದೆ.  "ನಾ ಯಾನ್ನೂ ಉಣ್ನೇ ಇಲ್ಲ ಕಣಾ" ಎಂದು ಪಕ್ಕದ ಆತ್ಮೀಯರಿಗೆ ಪಿಸುಗಿ ಎದ್ದು ನಿಂತು ಮೆತ್ತಗೆ ಹೇಳಿದರೆ ತಾನು ಉಂಡಿಲ್ಲದಿರುವುದು ಎಲ್ಲರಿಗೂ ತಿಳಿದುಹೋಗಿಬಿಡುತ್ತದೆ ಎಂದು ತರ್ಕಿಸಿ ಗಟ್ಟಿ ಗಂಟಲಿನಲ್ಲಿ ಏನಾದರೊಂದು ಊಟದ ಹೆಸರನ್ನು ಹೇಳಿಬಿಡುತ್ತದೆ.  ಗಕ್ಕನೆ ಕೂತು ಉಂಡಷ್ಟೇ ನಿರಾಳವಾಗುತ್ತದೆ.
ನಮ್ಮ ಕಥಾನಾಯಕ ಸೀನನೂ ಅವನ ಜತೆ ಒಂದೇ ಬೆಂಚಿನಲ್ಲಿ ಕೂತುಕೊಳ್ಳುವ ಚಂದ್ರಹಾಸ ಮತ್ತು ಫಿಲೋಮಿನ್ ರಾಜನೂ ತಮ್ಮದೇ ಒಂದು ಸಂಪ್ರದಾಯವನ್ನು ರೂಪಿಸಿಕೊಂಡಿದ್ದಾರೆ.  ಏಬುಲಯ್ಯ ಮೇಷ್ಟ್ರು ಹುಟ್ಟುಹಾಕಿದ ಸಂಪ್ರದಾಯಕ್ಕಿಂತ ಈ ಸಂಪ್ರದಾಯ ಒಂದು ತಿಂಗಳು ಅಂದರೆ ಅವರು ಮೂವರೂ ಒಂದೇ ಬೆಂಚಿನಲ್ಲಿ ಕೂತುಕೊಳ್ಳಲಾರಂಭಿಸಿದಾಗಿನಿಂದ ಇಲ್ಲಿಯವರೆಗೆ ಗತಿಸಿರುವ ಮೂರು ತಿಂಗಳಷ್ಟು ಹಳೆಯದು.  ಇದು ಉಳಿದ ವಿದ್ಯಾರ್ಥಿಗಳಿಗೆ ಅಷ್ಟಾಗಿ ತಿಳಿದಿಲ್ಲ.  ಮೇಷ್ಟ್ರಿಗಂತೂ ಗೊತ್ತೇ ಇಲ್ಲ.
ಅದೇನಪ್ಪಾ ಅಂದರೆ- ಬೆಳಿಗ್ಗೆ "ಸ್ವಾಮಿದೇವನೆ ಲೋಕಪಾಲನೆ..."ಗೆ ನಿಂತ ಸಾಲು ಮುರಿಯದಂತೇ ತರಗತಿಯೊಳಗೆ ಸಾಗಬೇಕು ಮತ್ತು ಮುಖ್ಯೋಪಾಧ್ಯಾಯರಾದ ನಂಜದೇವರು ಅವರ ಕಟ್ಟಾ ಆದೇಶದ ಪ್ರಕಾರ ಸಾಲಿನಲ್ಲಿ ವಿದ್ಯಾರ್ಥಿಗಳ ಸ್ಥಾನ ಎಂದೂ ಬದಲಾಗಬಾರದು.  ಹೀಗಾಗಿ ಸಾಲಿನಲ್ಲಿ ಮುಂದಿರುತ್ತಿದ್ದ ಚಂದ್ರಹಾಸನು ಬೆಂಚಿನಲ್ಲಿ ಮೊದಲು ಅಂಡೂರಿ ಅದನ್ನು ಪಾವನಗೊಳಿಸುತ್ತಿದ್ದನು.  ಅವನ ಹಿಂದೆ ಫಿಲೋಮಿನ್ ರಾಜ್, ಕೊನೆಯಲ್ಲಿ ನಮ್ಮ ಶ್ರೀನಿವಾಸ ಉರುಫ್ ಸೀನ.  ಪ್ರತಿಬೆಳಿಗ್ಗೆಯೂ ಕೊನೆಯಲ್ಲಿ ಬೆಂಚು ತಲುಪುವ ದುರ್ಭಾಗ್ಯ ತನ್ನದಾದ ಬಗ್ಗೆ ಸೀನನಿಗೆ ತುಂಬಾ ದುಃಖವಾಗಿತ್ತು.  ಹೀಗಾಗಿ ಪ್ರಾರ್ಥನೆ ಮಣ್ಣುಮಸಿ ಗಣಗಂಟೆ ಮಣ್ಣಾಂಗಟ್ಟಿ ಏನೂ ಇಲ್ಲದ ಮಧ್ಯಾಹ್ನ ಅವಸರವಸರವಾಗಿ ಓಡಿಹೋಗಿ ಬೆಂಚಿನ ಮೇಲೆ ವಿರಾಜಮಾನನಾಗಿ ಸುತ್ತಲೂ ಹೆಮ್ಮೆಯಿಂದ ಕತ್ತು ಹೊರಳಿಸಿ ಬೀಗುತ್ತಿದ್ದನು.  ಇದನ್ನು ಕಂಡ ಫಿಲೋಮಿನ್ ರಾಜನೂ ತಾನೇನೂ ಕಡಿಮೆ ಎಂದು ಮೊದಲು ನುಗ್ಗಲು ಯತ್ನಿಸುತ್ತಿದ್ದನು.  ಇವರಿಬ್ಬರ ರಗಳೆಯನ್ನು ಕಂಡ ಚಂದ್ರಹಾಸನು ತಾನೇಕೆ ಹಿಂದೆ ಬೀಳಬೇಕು, ಬೆಳಗಿನಂತೇ ಮಧ್ಯಾಹ್ನವೂ ತಾನೇ ಮೊದಲಿಗನಾಗಬೇಕು ಎಂದು ಒದ್ದಾಡತೊಡಗಿದನು.  ಹೀಗೆ ಮೂವರ ನಡುವೆ ಪೈಪೋಟಿಯೇರ್ಪಟ್ಟು ಮೊದಲು ಬೆಂಚು ತಲುಪಿದವನು "ನಾ ಫಸ್ಟ್" ಎಂದು ಹೆಮ್ಮೆಯಿಂದಲೂ, ಎರಡನೆಯವನು "ನಾ ಸೆಕೆಂಡು ಕನಾ" ಎಂದು ಸ್ವಲ್ಪ ನಿರಾಶೆಯಿಂದ, ಸದ್ಯ ಕೊನೆಯವನಾಗಲಿಲ್ಲವಲ್ಲ ಎಂಬ ಸಮಾಧಾನದಿಂದಲೂ ಉದ್ಗರಿಸುತ್ತಿದ್ದರು.  ಆದರೆ ಕೊನೆಯವನಾಗಿಬಿಟ್ಟವನು ಮಾತ್ರ "ನಾ ಥರ್ಡ್" ಎಂದು ಯಾವ ಮುಖ ಎತ್ತಿಕೊಂಡು ಹೇಳಿಯಾನು?  ಹ್ಞೂ ನಾಳೆ ನೋಡಿಕೊಳ್ಳುವಾ ಎಂದು ತನ್ನೊಳಗೇ ನಿಶ್ಚಯಿಸಿ ಜೋಲುಮೋರೆ ಹಾಕಿಕೊಂಡು ಸದ್ದಿಲ್ಲದೇ ಕುಳಿತರೆ ನೆಮ್ಮದಿಯಾಗಿರಲು ಉಳಿದಿಬ್ಬರು ಬಿಡಬೇಕಲ್ಲ?  "ಥರ್ಡ್ ಥರ್ಡ್" ಎಂದು ಪಿಸುಗಿ ಗೋಳಾಡಿಸುತ್ತಿದ್ದರು.  ಒಂದೆರಡು ದಿನಗಳಲ್ಲೇ ಈ ಮೂರು ಮಂಗಗಳ ಸೃಜನಶೀಲತೆಯಿಂದಾಗಿ ಇಂಗ್ಲೀಷಿನ "ಥರ್ಡ್" ಅಚ್ಚಗನ್ನಡದ "ತರಡು" ಎಂದಾಗಿ ರೂಪಾಂತರ ಹೊಂದಿತು.  ಈ ರೂಪಾಂತರ ಕಾಫ್ಕಾನ ಕಥಾನಾಯಕ ಗ್ರೆಗರಿ ಸಂಸಾ ಹೊಂದಿದ ಕೊಳಕು ಹುಳದ ರೂಪಾಂತರಕ್ಕಿಂತಲೂ ಅತ್ತತ್ತಲೇ ಆಗಿತ್ತು ಎಂದು ನಿಮ್ಮಂತಹ ತಿಳುವಳಿಕಸ್ಥ ಮಂದಿ ಅಂದುಕೊಳ್ಳಬಹುದೇನೋ.  ಅದೂ ನಿಜವೇ ಬಿಡಿ.  ಥರ್ಡ್ ಆದ ಬಡಪಾಯಿ ಇಡೀ ಮಧ್ಯಾಹ್ನ ಉಳಿದಿಬ್ಬರ ತರಡುಕೀಟಲೆಗಳನ್ನು ಕೇಳಿ ಕೇಳಿ ಅನುಭವಿಸುತ್ತಿದ್ದ ಸಂಕಟ ಸಂಸಾನ ಸಂಕಟಕ್ಕಿಂತ ಕಡಿಮೆಯೇನಲ್ಲ.  ನಮ್ಮ ಕಥಾನಾಯಕ ಸೀನ ಈಗ ಸಿಕ್ಕಿಕೊಂಡಿರುವ ದಯನೀಯ ಪರಿಸ್ಥಿತಿ ಈಗ ನಿಮ್ಮ ಅರಿವಿಗೆ ತಟ್ಟಿರಬೇಕು.
ತನ್ನಕ್ಕನ ಸೀರೆಯ ಅಂಚು ಹೊಲಿಸಲು ದೊಡ್ಡಲಂಗ, ಒಹ್ ಸಾರೀ, ಟೈಲರ್ ದೊಡ್ಡರಂಗನ ಬಳಿಹೋಗಿ, ಅಲ್ಲಿ ಗೂದೆಮಲ್ಲ ಮತ್ತು ಹೇತ್‌ಪುಕ್ಳಿಗಳಿಂದ ಕೇಳಬಾರದ ಮಾತು ಕೇಳಿ, ಅವರಿಗೆ ಮರ್ಮಕ್ಕೆ ತಾಗುವಂತೆ ಕೊಟ್ಟು, ಅವರಿಂದ ಒದಗಬಹುದಾದ ಅಪಾಯಗಳಿಗೆ ಹೆದರಿ ಊರು ಸುತ್ತಿ ಶಾಲೆ ಸೇರಿ ತರಗತಿಯ ಬಾಗಿಲಲ್ಲಿ ಸೀನ ನಿಂತಾಗ ಏಬುಲಯ್ಯ ಮೇಷ್ಟ್ರು ಹುಟ್ಟುಹಾಕಿದ್ದ ಧಾರ್ಮಿಕ ಸಂಪ್ರದಾಯದ ವಿಧಿಗಳು ಅರ್ಧದಷ್ಟು ನೆರವೇರಿದ್ದವು.
ಮೇಷ್ಟ್ರ ಕಣ್ಣಸನ್ನೆಯನ್ನನುಸರಿಸಿ ತರಗತಿಯೊಳಗೆ ಕಾಲಿಟ್ಟ ಸೀನ ತಲೆ ತಗ್ಗಿಸಿಯೇ ತನ್ನ ಬೆಂಚು ಸೇರಿದ.  ಜತೆಗಾರರ ಕುಹಕದ ನೋಟಗಳನ್ನು ಬೇಕೆಂದೇ ತಪ್ಪಿಸಿದ.  ಆದರೆ ಬೆಂಚಿನ ಆ ಕೊನೆಯಲ್ಲಿದ್ದ ಚಂದ್ರಹಾಸ ಪಿಸುದನಿಯಲ್ಲಿ "ತರಡುಡುಡುಡುಡುಡ್ಡೂ..." ಎಂದು ರಾಗಾಲಾಪನೆ ಶುರುಮಾಡಿದಾಗ ಸೀನ ತೀರಾ ಅವಮಾನದಲ್ಲಿ ಕುಸಿದುಹೋದ.  ಅದು ಸಾಲದು ಎಂಬಂತೆ ಪಕ್ಕದಲ್ಲಿದ್ದ ಫಿಲೋಮಿನ್ ರಾಜ್ ಕಿವಿಯಲ್ಲೇ ಕಿಸಿಕಿಸಿ ಅಂದಾಗ ಸೀನನ ತಲೆಯೇ ಕೆಟ್ಟುಹೋಯಿತು.  ಆ ಮೂರಕ್ಷರದ ಪದ ಅವನ ಮಸ್ತಿಷ್ಕದ ತುಂಬೆಲ್ಲಾ ಆವರಿಸಿ ಅವನನ್ನು ಇನ್ನಿಲ್ಲದ ಗೊಂದಲದಲ್ಲಿ ಕೆಡವಿಬಿಟ್ಟಿತು.  ಆ ಗಳಿಗೆಗೆ ಸರಿಯಾಗಿ...
ಪಕ್ಕದ ಬೆಂಚಿನ ಅಂಚಿನಲ್ಲಿದ್ದ ಗೀತಾ ಉರುಫ್ ಕುಂಜಿ "ಅನ್ನ - ಬೆಂಡೆಕಾಯಿ ಗೊಜ್ಜು ಸಾ" ಎಂದು ಹೇಳಿ ಮುಂದಿನ ಸರದಿ ಸೀನನದು ಎನ್ನುವಂತೆ ಅವನತ್ತ ನೋಡುತ್ತಾ ಕೂತು ಅರ್ಧ ನಿಮಿಷವೇ ಕಳೆದಿತ್ತು.  ತರಡುಗೊಂದಲಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸೀನನಿಗೆ ಇದಾವುದರ ಪರಿವೆಯೂ ಇಲ್ಲ.  ತನ್ನ ಸರದಿಗಾಗಿ ಅವಸರದಲ್ಲಿ ಕಾಯುತ್ತಿದ್ದ ಫಿಲೋಮಿನ್ ರಾಜ್ "ಏ ತರಡೂ, ಹೇಳೋ" ಎಂದು ಸೀನನ ಕಿವಿಯಲ್ಲಿ ಪಿಸುಗಿದ.  ಏಬುಲಯ್ಯ ಮೇಷ್ಟ್ರು ಬೇರೆ "ಹೇಳೋ ಬೇಗ" ಅಂದುಬಿಟ್ಟರು.
ಗಾಬರಿಯಲ್ಲಿ ಗಡಬಡಿಸಿ ಧಡಕ್ಕನೆದ್ದ ಸೀನ "ತರಡು ಸಾ" ಎಂದುಬಿಟ್ಟ.  ಅನಾಹುತ ಘಟಿಸಿಹೋಗಿತ್ತು.
"ಹೋ" ಎಂದು ಇಡೀ ತರಗತಿ ಕೂಗಿಬಿಟ್ಟಿತು.  ಏಬುಲಯ್ಯ ಮೇಷ್ಟರೂ ಹೊಟ್ಟೆ ಕುಲುಕಾಡಿಸಿಕೊಂಡು ನಗತೊಡಗಿದರು.  ಆ ಸಂಜೆ ಶಾಲೆ ಮುಕ್ತಾಯವಾಗುವ ಹೊತ್ತಿಗೆ ಇಡೀ ತರಗತಿ ಸೀನನಿಗೆ "ತರಡು" ಎಂದು ನಾಮಕರಣ ಮಾಡಿಬಿಟ್ಟಿತ್ತು.  ತುಂಟ ಪನ್ನಗಿರಿಯಂತೂ ಸೀನ ಎತ್ತಹೋದರೂ ಬಿಡದೇ "ಹೇಗಿತ್ತೋ ತರಡಿನ ಸಾರು?  ಅಂದಹಾಗೆ, ಅದು ಯಾರ ತರಡು?  ನಿಮ್ಮ ಗೂಳಮಾವ ಬಂದಿದ್ದಾನಲ್ಲಾ, ಅವನ ತರಡನ್ನ ಕತ್ತರಿಸಿ ಸಾರು ಮಾಡಿ ಬಾರಿಸಿದಿಯೇನು?" ಎಂದು ಗೋಳಾಡಿಸಿದ.
ಮನೆಗೆ ಬಂದಾಗ ಜಗಲಿಯ ಮೇಲೆ ಕೂತಿದ್ದ ಗೂಳಮಾವನತ್ತ ನೋಡಲೂ ಸೀನ ನಾಚಿಕೊಂಡ.  "ಸ್ಕೂಲ್ ಆಯ್ತಾ ಶ್ರೀನಿವಾಸ್" ಎಂದು ಗಟ್ಟಿ ಗಂಟಲಿನಲ್ಲಿ ಹೊರಬಂದ ಅವರ ಪ್ರಶ್ನೆಗೆ ಅವರತ್ತ ತಿರುಗದೆಯೇ "ಹ್ಞೂ ಆಯ್ತು" ಎಂದು ಪಿಸುಗಿ ಮನೆಯೊಳಗೆ ಓಡಿಬಿಟ್ಟ.  ಪುಸ್ತಕದ ಚೀಲವನ್ನು ಮೂಲೆಯಲ್ಲೆಸೆದು ಕೊಟ್ಟಿಗೆಯತ್ತ ದೌಡಾಯಿಸಿದ.  "ಟೈಗರ್ ಟೈಗರ್" ಎಂದು ಕೂಗುತ್ತಾ ಒಳನುಗ್ಗಿದ.  ಮೂಲೆಯಲ್ಲಿ ಕೆಡೆದುಕೊಂಡಿದ್ದ ಟೈಗರ್ ಧಡಕ್ಕನೆ ಮೇಲೆದ್ದು ನಿಂತು "ಮೆಹೆಹೇ ಮೆಹೆಹೇ" ಎಂದು ಮಾರ್ದನಿ ಕೊಟ್ಟಿತು.
ತೆಲುಗು ಮಾತಾಡುವ ಚಂಬಪ್ಪಸೆಟ್ಟರ ಕನ್ನಡನೆಲದಲ್ಲಿರುವ ಮಾವಿನ ತೋಪಿನ ಪರ್ಮನೆಂಟ್ ಕಾವಲುಗಾರನಾದ ತಮಿಳು ಮಾತಾಡುವ ಕೊಳಂದೈ ಸಾಮಿಯ ಮಗ ಪೆರುಮಾಳ್ ಉರುಫ್ ಪೆಪೆಟ್ಟೆ ಸೀನನ ಆತ್ಮೀಯ ಗೆಳೆಯರ ಬಳಗದಲ್ಲೊಬ್ಬನಾಗಿ ಬೆಳೆಯುತ್ತಿದ್ದಾನೆ.  ಕಳೆದ ಮಾವಿನ ಹಣ್ಣಿನ ಸೀಜ಼ನ್ನಿನಲ್ಲಿ ಅಂಗೈಗೆ ಬಿದ್ದ ಗಿಣಿಮಾವಿನಕಾಯಿಯ ಒಂದು ತೆಳು ಪಾರೆ ಹಾಗೂ ಆಶ್ವಾಸನೆಯಲ್ಲಿ ತೂಗಾಡಿದ ಒಂದು ಇಡೀ ಮಾವಿನಕಾಯಿ ಅವರಿಬ್ಬರನ್ನೂ ಹತ್ತಿರ ತಂದಿದ್ದವು.  ಒಂದು ಇಡೀ ಗಿಣಿಮಾವಿನ ಕಾಯಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಗೆಳೆಯನೊಡನೆ ಮಾವಿನ ತೋಪಿನ ಅಂಚಿನಲ್ಲಿದ್ದ ಅವನ ಗುಡಿಸಲಿನತ್ತ ನಡೆದ ಸೀನ "ಬೊವ್ವೊವ್ವೊವ್ವೋ" ಎಂದು ಅರಚುತ್ತಾ ಓಡಿಬಂದ ಒಂದು ಭಯಂಕರ ನಾಯಿಯನ್ನು ಕಂಡು ಹೆದರಿ ಅದಕ್ಕಿಂತಲೂ ಜೋರಾಗಿ "ಅವ್ವವ್ವವ್ವೋ" ಎಂದು ಕಿರುಚಿಕೊಂಡು ಹಿಂದಕ್ಕೆ ತಿರುಗಿ ಪೇರಿ ಕೀಳಲು ಹೋದ.  ಪೆಪೆಟ್ಟೆ "ಏಯ್ ಟೈಗರ್!  ವಾಯಿ ಮೂಡು" ಎಂದು ನಾಯಿಗೆ ಆಜ್ಞಾಪಿಸಿ ಅದನ್ನು ಗಪ್‌ಚಿಪ್ಪಾಗಿಸಿದ್ದಲ್ಲದೇ ಗೆಳೆಯನತ್ತ ತಿರುಗಿ ಹೊಟ್ಟೆಹಿಡಿದು ನಕ್ಕ.
ತಾನೂ ಅಂಥದೊಂದು ನಾಯಿ ಸಾಕಬೇಕು, ನನ್ನ ಗೆಳೆಯರು ಅದಕ್ಕೆ ಹೆದರಿ ಉಚ್ಚೆ ಹೊಯ್ದುಕೊಳ್ಳಬೇಕು, "ವಾಯಿ ಮೂಡು" ಎಂದು ನಾನದಕ್ಕೆ ಆಜ್ಞಾಪಿಸಿ ಸುಮ್ಮನಿರಿಸಬೇಕು, ಗೆಳೆಯರ ಪುಕ್ಕಲತನಕ್ಕೆ ಹೊಟ್ಟೆ ಹಿಡಿದು ನಗಬೇಕು, ನಕ್ಕು ಬೀಗಬೇಕು- ಎಂಬ ಬಯಕೆಯ ಸರಪಳಿಗಳು ಉದ್ದುದ್ದಕ್ಕೆ ಬೆಳೆಯುತ್ತಾ ಹೋಗಿ ಸೀನನ ಮನದೆಲ್ಲಾ ಆಲೋಚನೆಗಳನ್ನು ಇಡಿಯಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡುಬಿಟ್ಟವು.
ಆದರೆ ನಾಯಿ ಸಾಕುವ ಯಾವುದೇ ಉದ್ದೇಶ ಆ ಮನೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಹಕ್ಕುಗಳನ್ನು ಹೊಂದಿದ ಯಾರಿಗೂ ಲವಲೇಶವೂ ಇರಲಿಲ್ಲ.  ಸೀನನ ಬಯಕೆ ಕೇಳಿ ಎಲ್ಲರೂ ನಕ್ಕುಬಿಟ್ಟರು.  ‘ನಾಯಾ?  ಅದ್ಯಾತಕ್ಕೆ?  ಅದ್ಯಾವ ಕೊಪ್ಪರಿಕೆ ಕಾಯಕ್ಕೇ?’ ಎಂದು ತಾತ ಅಣಕು ಅಚ್ಚರಿಯಲ್ಲಿ ರಾಗ ಎಳೆದರೆ ಅಪ್ಪ ‘ಇದ್ರೆ ಈ ಹಟ್ಟೀಲಿ ನಾನಿರಬೇಕು, ಇಲ್ಲಾ ನಾಯಿ ನರಿ ಇರಬೇಕು’ ಎಂದು ಘೋಷಿಸಿ ಸೀನನನ್ನು ದಿಕ್ಕೆಡಿಸಿಬಿಟ್ಟ.  ಅವ್ವನಂತೂ ‘ತಿಕ ಅಮಿಕಂದು ನೆಟ್ಟಗೆ ಇಸ್ಕೂಲ್ಗೋಗಿದ್ ಬಾ.  ನಾಯಿ ಗೀಯಿ ಅಂತ ಹಠ ಹಿಡುದ್ರೆ ಗಾಚಾರ ನೆಟ್ಗಿರಲ್ಲ ನೋಡು’ ಎಂದು ಎಚ್ಚರಿಸಿಬಿಟ್ಟಳು.
ಕೊನೆಗೆ ಸೀನನ ಕಷ್ಟಕ್ಕೆ ನೆರವಾದವಳೆಂದರೆ ವಸಂತಿಯೇ.  ‘ನಾಯಿ ಬ್ಯಾಡ.  ಯಾವಾಗ್ಲೂ ಗಲಾಟೆ ಮಾಡ್ತಿರುತ್ತೆ.  ನೆಂಟ್ರು ಇಷ್ಟ್ರು ಬಂದ್ರೆ ಕಡಿಯಕೋಗುತ್ತೆ.  ಅದೆಲ್ಲಿ ಗಾಚಾರ ಬುಡು.  ಅಪ್ಪನ್ ಕೈಲಿ ಒಂದ್ ಆಡ್ಮರಿ ತೆಗಿಸ್ಕೋ.  ನಾನೇ ಯೋಳಿ ತೆಗಿಸ್ಕೊಡ್ತೀನಿ.  ನಿನ್ ಪ್ರೀತಿನೆಲ್ಲಾ ಅದ್ಕೇ ತೋಸು.  ಸರಿಯಾ?  ಎಂದು ಪೂಸಿ ಹೊಡೆದಿದ್ದಳು.  ಪ್ರೀತಿಯ ಅಕ್ಕನ ಸಲಹೆಯೇನೋ ಸೊಗಸಾದದ್ದೇ.  ಆದರೆ ಒಂದೇ ಸಮಸ್ಯೆ.  ಆಡಿನಮರಿ ಬೌ ಅನ್ನುವುದಿಲ್ಲವಲ್ಲ?  ಸೀನ ಸಮಸ್ಯೆ ತೋಡಿಕೊಂಡಾಗ ಅವಳು ತನ್ನೆಲ್ಲಾ ಮಾತಿನ ಚಾತುರ್ಯ ತೋರಿಸಿ ಅದು ಬೌ ಎನ್ನುವುದೇ ಬಹುದೊಡ್ಡ ಕಂಟಕ ಎನ್ನುವುದನ್ನು ಅವನಿಗೆ ಮನದಟ್ಟು ಮಾಡಿಕೊಟ್ಟಿದ್ದಳು.  ಅವನ ತಲೆ ಸವರಿ ಒಪ್ಪಿಸಿದವಳು ಮಾತು ಕೊಟ್ಟಂತೇ ನಾಕೇ ದಿನದಲ್ಲಿ ಜೋಗಿಸಿದ್ದಪ್ಪನ ಹಟ್ಟಿಯಿಂದ ಸೀನನ ಕೊಟ್ಟಿಗೆಗೆ ಒಂದು ಆಡಿನಮರಿ ಬರುವಂತೆ ನೋಡಿಕೊಂಡಳು.  ಅದರ ಮಿರುಮಿರುಗುವ ಕಪ್ಪು ತುಪ್ಪುಳ ಸವರಿದ ಸೀನ ‘ನಿನ್ ದಮಾಸಿನ ರೌಕೆ ಥರಾ ಇದೆ ಅಲ್ವಕ್ಕಾ?’ ಎಂದು ಅಕ್ಕನ ಜತೆ ತನ್ನ ಸಂತೋಷ ಹಂಚಿಕೊಂಡ.  ಒಂದೆಡೆ ನಿಲ್ಲದೇ ಚಂಗಚಂಗನೆ ಜಿಗಿದಾಡುತ್ತಿದ್ದ ಅದರ ಆಟವನ್ನು ಕಂಡೇ ಅದಕ್ಕೆ "ಆಡು" ಎಂದು ಹೆಸರಿಟ್ಟಿರಬೇಕೆಂಬ ಅನುಮಾನ ಅರ್ಧಗಂಟೆಯಲ್ಲೇ ಸೀನನ ತಲೆಯಲ್ಲುದಿಸಿತು.  ಸಾಕಿದರೆ ಬೊವ್ವೊವ್ವೋ ಎಂದು ಗಲಾಟೆಯೆಬ್ಬಿಸುವ ನಾಯಿಗಿಂತ ’ಮೆಹೆಹೆ ಮೆಹೆಹೆ’ ಎಂದು ಮುದ್ದುಗರೆಯುವ ಆಡಿನಮರಿ ಸಾಕಬೇಕು ಎಂದು ಸೀನನಿಗೆ ನಾಕುದಿನದಲ್ಲಿ ಅನಿಸಿಬಿಟ್ಟಿತು.  ‘ನಿನ್ನ ಆಡ್ಮರಿಗೊಂದು ಹೆಸರಿಡು ರಾಜಾ’ ಎಂದು ವಸಂತಿ ಸೂಚಿಸಿದಾಗ ಸೀನನಿಗೆ ಥಟಕ್ಕನೆ ಹೊಳೆದ ಹೆಸರು ಟೈಗರ್.  ‘ಟೈಗರ್ ಅಂದ್ರೆ ಹುಲಿ ಅಂತಲ್ವಾ’ ಎಂದು ರಾಗ ಎಳೆದ ವಸಂತಿ ಮರುಕ್ಷಣ ಮುಖ ಅರಳಿಸಿಕೊಂಡು ‘ಚೆಂದೊಳ್ಳಿ ಹೆಸ್ರು!  ಇಟ್ರೆ ಇಂಥಾ ಹೆಸ್ರಿಡಬೇಕು’ ಎಂದು ತಮ್ಮನ ಭುಜ ತಟ್ಟಿದಳು.  ಆಡಿನಮರಿ ಟೈಗರ್ ಆಗಿ ವರ್ಷವೇ ಕಳೆದುಹೋಗಿದೆ.  ಹುಲ್ಲುಸೊಪ್ಪನ್ನಲ್ಲದೇ ಸೀನ ಚೆಡ್ಡಿ ಶರಟುಗಳ ಜೇಬಿನಲ್ಲಿ ತುಂಬಿಕೊಂಡು ತಂದು ಪ್ರೀತಿಯಿಂದ ತಿನ್ನಿಸುವ ಹುರಿಗಡಲೆ, ಬಠಾಣಿ, ಕಡಲೆಬೀಜಗಳಿಂದ ಹಿಡಿದು ಕೊಬ್ಬರಿ ಬೆಲ್ಲದವರೆಗೆ ಏನನ್ನೂ ಬಿಡದೆ ತಿಂದು ಅರಗಿಸಿಕೊಂಡು ಮಜಬೂತಾಗಿ ಬೆಳೆದಿರುವ ಆ ಹೋತವನ್ನೀಗ ‘ಆಡ್ಮರಿ’ ಎಂದು ಯಾರೂ ಕರೆಯುವುದಿಲ್ಲ.  ನಿಜ ಹೇಳಬೇಕೆಂದರೆ ಅದೀಗ ‘ಆಡ್ಮರಿ’ಗಳನ್ನು ಉತ್ಪತ್ತಿ ಮಾಡುವ ಹಂತಕ್ಕೆ ಬಂದಿದೆ.
ಈ ಸಂಜೆ ಅದರ ಪಕ್ಕ ಕುಳಿತು ಅದರ ಮೈಸವರಿ ತನ್ನ ಮನಸ್ಸು ಹಗುರಾಗಿಸಿಕೊಂಡು ಸೀನ ಮಧ್ಯಾಹ್ನದಿಂದ ಏಬುಲಯ್ಯ ಮೇಷ್ಟ್ರೂ ಸೇರಿದಂತೆ ಇಡೀ ಐದನೆಯ ತರಗತಿ ತನ್ನನ್ನು ನಿಷ್ಕರುಣೆಯಿಂದ ಕೆಡವಿದ್ದ ತರಡುಗೊಂದಲಗುಂಡಿಯಿಂದ ಮೇಲೆದ್ದುಬಂದು ನಿಂತ.  ಆಗ ಪಿಸುದನಿಯಲ್ಲಿ ವಸಂತಿ ಕರೆದಳು.
ಬಾಗಿಲತ್ತ ನೋಡಿದವನಿಗೆ ಅಕ್ಕ ಕಾಣಲಿಲ್ಲ.  ಅವಳು ಕರೆದದ್ದು ತನ್ನ ಭ್ರಮೆಯೇನೋ ಎಂದು ಮತ್ತೆ ಟೈಗನತ್ತ ತಿರುಗುವಷ್ಟರಲ್ಲಿ ಅಕ್ಕನ ಪಿಸುದನಿ ಮತ್ತೆ ಕಿವಿಗೆ ಬಿದ್ದು ಅದು ಬಂದ ದಿಕ್ಕೂ ಅರಿವಿಗೆ ನಿಲುಕಿ ಸೀನ ಕೊಟ್ಟಿಗೆ ಹಿಂಭಾಗದ ಮೋಟುಗೋಡೆಯತ್ತ ತಿರುಗಲು ತೆಂಗಿನ ಸೋಗೆಗಳ ನಡುವಿನ ಹತ್ತಾರು ಕಿಂಡಿಗಳಲ್ಲಿ ಅಷ್ಟೇ ಸಂಖ್ಯೆಯಲ್ಲಿ ವಸಂತಿಯ ಮುಖದ ಚೂರುಗಳು ಕಂಡವು.  ಅವನ ನೋಟ ತನ್ನತ್ತ ತಿರುಗಿದ್ದೇ ಅವಳು "ಮನೇಗೆ ಬಾ ರಾಜಾ" ಎಂದು ಆತುರಾತುರವಾಗಿ ಪಿಸುಗಿ ಮರೆಯಾಗಿಹೋದಳು.  ಅವಳ ದನಿ ಮಾಮೂಲಿನಂತಿಲ್ಲವೆಂದೆನಿಸಿ ಕ್ಷಣ ಬೆಪ್ಪಾದ ಸೀನ ಧಡಕ್ಕನೆದ್ದು ಟೈಗಗೊಂದು ಮುತ್ತುಕೊಟ್ಟು "ಮಲಿಕಂಡು ನಿದ್ದೆ ಮಾಡು" ಎಂದದಕ್ಕೆ ಸಂಜೆ ಆರುಗಂಟೆಗೇ ಗುಡ್ ನೈಟ್ ಹೇಳಿ ಕೊಟ್ಟಿಗೆಯಿಂದ ಹೊರಗೋಡಿ ಬಂದ.
ಜಗಲಿಯಲ್ಲಿ ಕೂತಿದ್ದ ಗೂಳಮಾವನತ್ತ ನೋಡಲು ನಾಚಿಕೆಯಾಗಿ ಸೀನ ತಲೆ ತಗ್ಗಿಸಿ ಮನೆಬಾಗಿಲತ್ತ ಧಾಪುಗಾಲಿಡುತ್ತಿದ್ದಂತೇ ಅದ್ಯಾರೋ ಗಹಗಹಿಸಿದಂತಾಗಿ, ಆ ನಗೆ ಏಬುಲಯ್ಯ ಮೇಷ್ಟ್ರ ಅಟ್ಟಹಾಸದಂತೆನಿಸಿ ಗಕ್ಕನೆ ಅತ್ತ ಹೊರಳಿದರೆ...  ಸಂದೇಹವೇ ಇಲ್ಲ.  ಅದು ನೂರಕ್ಕೆ ನೂರು ಏಬುಲಯ್ಯ ಮೇಷ್ಟ್ರೇ.  ಗೂಳಮಾವನೆದುರು ಕೂತಿದ್ದಾರೆ.  ಇಬ್ಬರೂ ಏನೋ ಮಾತಾಡಿಕೊಂಡು ನಗುತ್ತಿದ್ದಾರೆ.
ಬೆಂಚಿನಲ್ಲಿ ಥರ್ಡ್, ಬಾಯಿ ತಪ್ಪಿ ಹೊರಬಂದ ಬಾಯಿಗಿಡಲಾಗದ, ಇಡಬಾರದ ಊಟ, ಅದು ಗೂಳಮಾವನದೇ ಎಂಬ ಪನ್ನಗಿರಿಯ ಸಂದೇಹ, ಸಂದೇಹದ ಪರಿಹಾರಕ್ಕೆಂದೇ ಗೂಳಮಾವನನ್ನು ಪ್ರತ್ಯಕ್ಷ ಭೇಟಿಯಾಗಲು ಬಂದಿರಬಹುದಾದ ಏಬುಲಯ್ಯ ಮೇಷ್ಟ್ರು...
ಸೀನ ಮತ್ತೆ ಗುಂಡಿಯಲ್ಲಿ ಧೊಪ್ಪನೆ ಬಿದ್ದುಬಿಟ್ಟ.
ಅದೇ ಗಳಿಗೆಗೆ ಸರಿಯಾಗಿ ಬೆನ್ನ ಹಿಂದೆ "ಮೆಹೆಹೆ ಮೆಹೆಹೆ" ಎಂಬ ಸದ್ದು ಕಿವಿಗೆ ಬಿದ್ದು ಸೀನ ಗಕ್ಕನೆ ಹಿಂದೆ ತಿರುಗಿದರೆ ಟೈಗರ್ ಅವನ ಹಿಂದೆಯೇ ನಿಂತಿದೆ.  "ನೀ ಯಾಕ ಬಂದೆ, ನಡೆ ಒಳಕ್ಕೆ" ಎನ್ನುತ್ತಾ ಒಂದು ಕೈನಲ್ಲಿ ಟೈಗನ ನೆತ್ತಿಯನ್ನು ಸವರುತ್ತಾ ಮತ್ತೊಂದು ಕೈಯನ್ನು ಅದರ ಕುಂಡೆಗೆ ಹಾಕಿ ತಳ್ಳುತ್ತಾ ಸೀನ ಅದನ್ನು ಮತ್ತೆ ಕೊಟ್ಟಿಗೆಯತ್ತ ನಡೆಸಿ ಒಳಕ್ಕೆ ದಬ್ಬಿ ಬಾಗಿಲೆದುಕೊಂಡು ಹಿಂದೆ ತಿರುಗುತ್ತಿದ್ದಂತೆ "ಭರ್ಜರಿ ಹೋತ ಕಣಣ್ಣ!" ಎಂಬ ಏಬುಲಯ್ಯ ಮೇಷ್ಟ್ರ ಉದ್ಗಾರವೂ ಅದರ ಹಿಂದೆಯೇ ಗೂಳಮಾವನ ಗಕಗಕ ನಗೆಯೊಂದಿಗೆ ಬಂದ "ಬೀಗರೂಟಕ್ಕಾಯ್ತು ಬಿಡು" ಎಂಬ ಮಾತೂ ಕೇಳಿಬಂದು ಸೀನನ ಎದೆಯಾಳದಲ್ಲಿ ಭಾರೀ ಭೂಕಂಪವಾಗಿ ಆತಂಕದಲೆಗಳು ಮೇಲೆದ್ದು ಸುನಾಮಿಯಾಗಿ ಮುಖದಡದತ್ತ ಮುನ್ನುಗ್ಗಿಬಂದವು.  ಅವನು ಹಟ್ಟಿಯ ಬಾಗಿಲಿಗೆ ಅದ್ಹೇಗೆ ತಲುಪಿದನೋ ಅವನಿಗೇ ಗೊತ್ತಿಲ್ಲ.  ಹೊಸಿಲು ದಾಟಿ ಒಳಗಡಿಯಿಡುವ ಹೊತ್ತಿಗೆ ಅಲೆಗಳ ರಭಸ ಅದೆಷ್ಟಾಗಿತ್ತೆಂದರೆ ದಡ ಕೊಚ್ಚಿಹೋಗಿ ಕಣ್ಣಕಾಲುವೆಗಳಲ್ಲಿ ನೀರು ಜಿನುಗತೊಡಗಿತ್ತು.  ಮನೆಯಿಡೀ ತುಂಬಿಕೊಂಡಿದ್ದ ಉಪ್ಪಿಟ್ಟು, ಬೋಂಡದ ಪರಿಮಳ ಅವನ ಮೂಗನ್ನು ಮುಟ್ಟಿದರೂ ಮನಸ್ಸಿಗೆ ಮುಟ್ಟುವಲ್ಲಿ ಸೋತಿತು.
ಅಲ್ಲೇ ಇದ್ದ ವಸಂತಿ ಹತ್ತಿರ ಬಂದಳು.  ಅವಳು ಸೀನನೇ ಮಧ್ಯಾಹ್ನ ದೊಡ್ಡಲಂಗನಿಂದ ಅಂಚು ಹೊಲಿಸಿಕೊಂಡು ಬಂದಿದ್ದ ಹೊಸಸೀರೆ ಉಟ್ಟುಕೊಂಡಿದ್ದಳು.  ಕಿವಿಗಳಲ್ಲಿ ಮಿರುಗುವ ಓಲೆ ಜುಮಕಿ, ಕೊರಳಿನಲ್ಲಿ ಹೊಳೆಯುವ ಚೈನು. ಕೈಗಳಲ್ಲಿ ಗಲಗಲ ಬಳೆಗಳು.  ಜತೆಗೆ ಎಣ್ಣೆ ಹಾಕಿ ಕೂದಲನ್ನು ನಯವಾಗಿ ಬಾಚಿ ದಪ್ಪ ಜಡೆ ಹೆಣೆದುಕೊಂಡು ಮಲ್ಲಿಗೆ ಮುಡಿದುಕೊಂಡು ಗಮಗಮ ಅಂತಿದ್ದಳು.  ಅವಳ ಕಣ್ಣುಗಳು ಮಾತ್ರ ನಗುತ್ತಿದ್ದವೋ ಅಳುತ್ತಿದ್ದವೋ ಗೊತ್ತಾಗುತ್ತಿರಲಿಲ್ಲ.
ವಸಂತಿ ಹತ್ತಿರ ಬಂದು ಸೀನನ ಕೈಹಿಡಿದಳು.
"ಯಾಕಳ್ತಿದೀಯ?  ವಿಷಯ ಗೊತ್ತಾಗಿಬಿಡ್ತಾ?"  ಮೃದುವಾಗಿ ಪ್ರಶ್ನಿಸಿದಳು.
"ಹ್ಞೂ."  ಸೀನ ತಲೆಯೆತ್ತದೇ ಪಿಸುಗಿದ.  ಕೆನ್ನೆಯ ಮೇಲೆ ಕಣ್ಣೀರಧಾರೆ ಹರಿಯಿತು.
"ಅದಕ್ಕೆ ಅಳ್ತಾ ಇದೀಯ?"
"ಹ್ಞೂ."  ಕೈ ಕಣ್ಣುಗಳತ್ತ ಹೋಯಿತು.
ವಸಂತಿಯೂ ಕಣ್ಣೀರೊರೆಸಿಕೊಂಡಳು.  "ಅಳಬ್ಯಾಡ ಸುಮ್ನಿರು.  ನನ್ ರಾಜ ನೀನು" ಎನ್ನುತ್ತಾ ಅವನನ್ನು ಹೊಟ್ಟೆಗೆ ಒತ್ತಿಕೊಂಡೇ ಒಳಕೋಣೆಗೆ ಕರೆದೊಯ್ದಳು.  ಮಂಚದ ಮೇಲೆ ಕೂತು ಅವನನ್ನು ಪಕ್ಕ ಕೂರಿಸಿಕೊಂಡು ಅವನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡಳು.  ಬಾಗಿ ಅವನ ಕಿವಿಯಲ್ಲಿ "ನಿನ್ನ ಬುಟ್ಬುಟ್ಟು ನಾ ಎಲ್ಲೂ ಓಗಲ್ಲ, ಅಳಬ್ಯಾಡ ಸುಮ್ನಿರು" ಅಂದಳು.  ಸೀನನ ಹಣೆಯ ಮೇಲೆ ಎರಡು ಬೆಚ್ಚಗಿನ ಹನಿಗಳು ಬಿದ್ದವು.  ವಸಂತಿ ಮತ್ತೇನೋ ಪಿಸುಗಲು ಬಾಯಿ ತೆರೆಯುತ್ತಿದ್ದಂತೇ ಹಜಾರದ ಉದ್ದಗಲಕ್ಕೂ ಅಪ್ಪನ ದೊಡ್ಡ ದನಿ ಒಮ್ಮೆ ಗುಡುಗಾಡುತ್ತಾ ಓಡಾಡಿತು.  ಹಿಂದೆಯೇ ಗೂಳಮಾವನ ನಗೆ.  ಏಬುಲಯ್ಯ ಮೇಷ್ಟ್ರು ಅದೇನೋ ಕುಂಯ್ ಕುಂಯ್ ಅಂದರು.  ವಸಂತಿ ಗಪ್‌ಚಿಪ್ಪಾದಳು.  ಬೀದಿಯಲ್ಲಿ ಹೋಗುತ್ತಿದ್ದ ಮಾರಿ ಮನೆಯೊಳಗೇ ಬಂದಂತೆ ಸೀನ ಛಿಲ್ಲನೆ ಬೆವರಿದ.  "ಆ ಏಬುಲಯ್ಯ ಮೇಷ್ಟ್ರು..." ಮುಂದೆ ದನಿ ಹೊರಡಲಿಲ್ಲ.  "ಊಂ ಅವ್ರೇ.  ಒಳಕೆ ಬಂದವ್ರೆ."  ವಸಂತಿ ನಗುತ್ತಾ ಪಿಸುಗುಟ್ಟಿದಳು.  "ಅವ್ರು ಅವ್ರು... ಮೇಷ್ಟ್ರು... ನನ್ ಟೈಗರ್ರು... ಟೈಗರ್ರು..."  ಅವನೇನೋ ಹೇಳತೊಡಗಿದಂತೇ ಹೊರಗಿನಿಂದ "ತಾಯೀ ವಸಂತಮ್ಮಾ, ಸೊಲ್ಪ ಬವ್ವಾ ಇಲ್ಲೀ" ಎಂವ ಅವ್ವನ ಅಕ್ಕರೆಯ ಕರೆ ಕೇಳಿ ವಸಂತಿ ಗಕ್ಕನೆ ಸೀನನನ್ನು ನೆಟ್ಟಗೆ ಕೂರಿಸಿ ಎದ್ದು ನಿಂತಳು.  ಸೀರೆ ಸರಿಪಡಿಸಿಕೊಂಡು ಗೋಡೆಯಲ್ಲಿದ್ದ ಕನ್ನಡಿಯಲ್ಲಿ ಕಣ್ಣು ಕೀಲಿಸಿ ತಲೆಯ ಮೇಲೊಮ್ಮೆ ಕೈಯಾಡಿಸಿ ಅದೇ ಕೈಯನ್ನು ಸೀನನ ತಲೆಯ ಮೇಲೂ ಆಡಿಸಿ "ಇಲ್ಲೇ ಕುಂತಿರು.  ಇದೀಗ ಬಂದೆ" ಎಂದು ಪಿಸುಗಿ ಹೊಸಸೀರೆಯಿಂದ ಧಸಬಸ ಸದ್ದು ಹೊರಡಿಸುತ್ತಾ ಕೋಣೆಯಿಂದ ಹೊರಗೆ ಹೋದಳು.  ಸೀನ ಬೆಚ್ಚಿ ಅಕ್ಕ ಮರೆಯಾದ ಬಾಗಿಲನ್ನೇ ಮಿಕಿಮಿಕಿ ನೋಡಿದ.  ಹಜಾರದಲ್ಲಿ ತಟ್ಟೆ ಲೋಟಗಳ ಕಣಕಣ ಸದ್ದುಗಳು.  "ನಮ್ ವಸಂತಮ್ನೇ ಮಾಡಿದ್ದು."  ಅವ್ವನ ನಗುಮಾತು.  "ಊಂ ಊಂ, ಅವ್ಳೇ ಮಾಡಿದ್ದು."  ಅಪ್ಪನ ಗುಡುಗು.  ಈ ಸಲ ಉಪ್ಪಿಟ್ಟು, ಬೋಂಡಗಳ ಪರಿಮಳ ಸೀನನ ಮೂಗನ್ನು ವಿಶಾಲವಾಗಿ ಅರಳಿಸಿ ದಾರಿ ಮಾಡಿಕೊಂಡು ಮಷ್ಥಿಷ್ಕ ತಲುಪುವಲ್ಲಿ ಯಶಸ್ವಿಯಾಯಿತು.
ಎರಡೇ ನಿಮಿಷಗಳಲ್ಲಿ ವಸಂತಿ ಹಿಂದೆ ಬಂದಳು.  ಕೆಂಪಾಗಿದ್ದ ಮೋರೆಯನ್ನು ಸೆರಗಿನಿಂದ ಒರೆಸಿಕೊಂಡು ಮಂಚದ ಮೇಲೆ ಕುಕ್ಕರಿಸಿದಳು.  ಸೀನನನ್ನು ಹತ್ತಿರ ಎಳೆದುಕೊಂಡು ಅವನ ತಲೆಯನ್ನು ಮೊದಲಿನಂತೇ ತೊಡೆಗೆ ಒತ್ತಿಕೊಂಡಳು.
"ಮೇಷ್ಟ್ರು... ಏಬುಲಯ್ಯ ಮೇಷ್ಟ್ರು ನಿಜವಾಗ್ಲೂ..."  ಮುಂದೆ ಸ್ವರ ಹೊರಡದೇ ಸೀನ ಅಕ್ಕನ ತೊಡೆಗೆ ಕಣ್ಣುಗಳನ್ನು ಒತ್ತಿದ.  ವಸಂತಿ ಅವನ ಪ್ರಶ್ನೆಯನ್ನು ಅರ್ಥಮಾಡಿಕೊಂಡಳು.  "ಹ್ಞೂ ಕಣೋ ರಾಜಾ, ನಿಜವಾಗ್ಲೂ" ಅಂದಳು ನಾಚುತ್ತಾ.  "ಹಂಗಂದ್ರೆ!"  ಸೀನ ದನಿ ಕಳೆದುಕೊಳ್ಳುವಷ್ಟರಲ್ಲಿ  "ಇರು ಇರೂ.  ಅದ್ಯಾನೋ ಮಾತಾಡ್ತಾ ಅವ್ರೆ.  ಕೇಳುಸ್ಕಳಣ" ಎನ್ನುತ್ತಾ ವಸಂತಿ ನೆಟ್ಟಗೆ ಕೂತಳು.  ಅವ್ವ ಏನೋ ಅಂದದ್ದಕ್ಕೆ ಉತ್ತರವೆಂಬಂತೆ ಏಬುಲಯ್ಯ ಮೇಷ್ಟ್ರು ಮಾತಾಡಗಿದರು.
"ಗೂಳಯ್ಯಂಗೆ ನನ್ ಕಥೆಯೆಲ್ಲಾ ಗೊತ್ತು.  ಇವ್ನು ನಂಗೆ ಬರೀ ಸ್ನೇಹಿತ ಅಲ್ಲ.  ನಿಮಗೆ ತಮ್ಮ ಆದ್ರೆ ನಂಗೆ ಅಣ್ಣ.  ಇಪ್ಪತ್ತು ವರ್ಷದಿಂದ ನನ್ನ ಕಷ್ಟಸುಖಾನೆಲ್ಲಾ ನೋಡ್ತಾ ಬಂದಿದ್ದಾನೆ.  ಅವ್ನೇ ನಿಮ್ಗೆ ಎಲ್ಲಾನೂ ಹೇಳಿರಬೋದು.  ಆದ್ರೆ ನಾನೂ ಒಂದೆರಡು ಮಾತು ಹೇಳಿಬಿಟ್ರೆ ಚಂದ.  ನನ್ ಅಪ್ಪ ಅಮ್ಮ ಎಲ್ಲಾ ನಾ ಚಿಕ್ಕೋನಾಗಿದ್ದಾಗ್ಲೇ ಹೋಗಿಬಿಟ್ರು.  ಇರೋವ್ಳು ಒಬ್ಬ ಅಕ್ಕ.  ಅಕ್ಕ ಭಾವನ ಜತೆಯೇ ಬೆಳೆದೆ.  ಇಪ್ಪತ್ತಾರನೇ ವಯಸ್ಸಿಗೆ ಅಕ್ಕನ ಮಗಳು, ನಂಗಿಂತ ಹನ್ನೊಂದು ವರ್ಷಕ್ಕೆ ಚಿಕ್ಕೋಳು, ನಿರ್ಮಲಕುಮಾರೀನ ಮದುವೆ ಆದೆ.  ಮದುವೆಯಾದ ಹತ್ತು ವರ್ಷಕ್ಕೆ ನನ್ ಹೆಂಡ್ತಿ ಬಸುರಾದ್ಲು..." ನಿಲ್ಲಿಸಿದರು.  "ಅಯ್ ನಮ್ಗೆಲ್ಲಾ ಗೊತ್ತು ಬಿಡಿ.  ಹಳೇದ್ನೆಲ್ಲಾ ಮತ್ತೆ ಯಾಕ ನೆನಸ್ಕಂಡು ಕಣ್ಣೀರ್ ಹಾಕ್ತೀರಿ?" ಎಂಬ ಅಪ್ಪನ ಹೂಂಕಾರಕ್ಕೆ ಪ್ರತಿಯಾಗಿ ಅವ್ವ "ಅವರು ಹೇಳ್ಬೇಕೂ ಅಂತೀರೋದನ್ನ ಹೇಳ್‌ಬುಡ್ಲಿ ಸುಮ್ನಿರಿ.  ಹೇಳ್ಕಂಡ್ರೆ ಅವುರ್ ಮನಸ್ಗೂ ಸಮಾಧಾನ ಆಗಬೌದು" ಅಂದಳು.  ಏಬುಲಯ್ಯ ಮೇಷ್ಟ್ರು ಮುಂದುವರೆಸಿದರು: "ಹೆರಿಗೇನಲ್ಲಿ ಹೋಗಿಬಿಟ್ಲು ನನ್ ಹೆಂಡ್ತಿ.  ಮಗು ಉಳಕೊಂಡ್ತು.  ಹೆಣ್ಮಗು.  ಆರು ವರ್ಷ ಆಯ್ತು.  ನಮ್ಮಕ್ಕನೇ ಸಾಕ್ತಾ ಇದಾಳೆ.  ನನ್ ಮಗ್ಳು ನಂಜೊತೆ ಇರ್ಬೇಕು ಅಂತ ನಂಗೆ ಆಸೆ.  ಆದ್ರೆ, ಹೆಣ್ಣು ದಿಕ್ಕಿಲ್ಲದ ಮನೇಲಿ ಮಗೂನ ಹ್ಯಾಗೆ ಬೆಳೆಸ್ಲಿ?"  ಏಬುಲಯ್ಯ ಮೇಷ್ಟರ ದನಿ ನಿಧಾನಕ್ಕೆ ಕುಗ್ಗಿದಂತೆ ಅಪ್ಪನ ಗಟ್ಟಿ ದನಿ ಹಜಾರದಲ್ಲಿ ಮೊಳಗಿತು: "ಇನ್ನು ಚಿಂತೆ ಮಾಡಬ್ಯಾಡಿ.  ನಿಮ್ ಮಗಳ್ನ ನಿಮ್ ಕಣ್ಮುಂದೇ ಇರಿಸ್ಕಬೌದು.  ನಮ್ ವಸಂತಮ್ಮ ಎಲ್ಲಾನೂ ನೋಡ್ಕೋತಾಳೆ."
ಸೀನನಿಗೆ ಏನೊಂದೂ ಅರ್ಥವಾಗಲಿಲ್ಲ.  ಎಲ್ಲವೂ ಅಯೋಮಯ.  ಮಾತುಕತೆ ನೋಡಿದರೆ ಅಕ್ಕನನ್ನು ಏಬುಲಯ್ಯ ಮೇಷ್ಟ್ರು ಮದುವೆ ಮಾಡಿಕೊಳ್ಳುತ್ತಿರಬಹುದೇನೋ ಅನಿಸುತ್ತಿದೆ.  ಅದೇ ಇರಬೇಕು.  ಇವರಿಬ್ಬರ ಮದುವೆ ಬೀಗರೂಟಕ್ಕೇ ಗೂಳಮಾವ ನನ್ನ ಟೈಗರ್ ಮೇಲೆ ಕಣ್ಣು ಹಾಕಿರುವುದು.  ಇದು ತುಂಬಾ ಅನ್ಯಾಯ.  ಇದನ್ನು ತಡೆಯಲೇಬೇಕು.  ಆ ಮೇಷ್ಟರನ್ನು ಹರಗೀಸ ಮದುವೆ ಮಾಡಿಕೊಳ್ಳಬೇಡ ಎಂದು ಅಕ್ಕನನ್ನು ಒಪ್ಪಿಸಿದರೆ ಆಯಿತು.  ಮದುವೆಯೂ ಇಲ್ಲ, ಬೀಗರೂಟವೂ ಇಲ್ಲ.  ನನ್ನ ಟೈಗಗೆ ಯಾವ ಡೇಂಜರ್ರೂ ಇಲ್ಲ.
ಹೇಳಲೆಂದು ಅಕ್ಕನತ್ತ ತಿರುಗಿದರೆ ಅವಳು ತಲೆತಗ್ಗಿಸಿ ಎಡಗೈಯಲ್ಲಿ ಸೆರಗು ಸುತ್ತಿ ಕಣ್ಣಿಗೆ ಒತ್ತಿಕೊಂಡಿದ್ದಳು.  ಬಿಡುವಾಗಿದ್ದ ಅವಳ ಬಲಗೈ ತಡಕಾಡುತ್ತಾ ಬಂದು ಸೀನನ ಭುಜವನ್ನು ಬಿಗಿಯಾಗಿ ಎಳೆದುಕೊಂಡಿತು.  ಅವನನ್ನು ಗಟ್ಟಿಯಾಗಿ ಎದೆಗೊತ್ತಿಕೊಂಡಳು ವಸಂತಿ.  ಹಜಾರದಲ್ಲಿ ಏಬುಲಯ್ಯ ಮೇಷ್ಟ್ರು ಮತ್ತೆ ಬಾಯಿ ತೆರೆದರು: "ನಿಮ್ ಬಾಯ್ಲಿ ಬಂದ್ಹಾಗೇ ಆಗ್ಲಿ.  ನಾನು ಅದೃಷ್ಟ ಮಾಡಿದ್ದೆ ಅಂದ್ಕೋತೀನಿ.  ನಂಗೆ ಹೆಣ್ಣು ಸಿಗೋದು ಮೂಡಣ ಸೀಮೇಲೇ ಅಂತ ಒಬ್ಬ ಬುಡುಬುಡಿಕೆಯೋನು ಐದು ವರ್ಷದ ಹಿಂದೇನೇ ಹೇಳಿದ್ದ.  ಅವನ ಮಾತು ಈಗ ನಿಜ ಆಗ್ತಾ ಇದೆ."  ಒಮ್ಮೆ ಕೆಮ್ಮಿ ಮುಂದುವರೆಸಿದರು: "ನಿಮಗೆ ಈಗ್ಲೇ ಇನ್ನೊಂದು ಮಾತು ಹೇಳಿಬಿಡ್ಬೇಕು.  ನಿಮಗೆ ಗೊತ್ತಿರೋ ಹಾಗೇ ನಂಗೆ ಪರ್ಮನೆಂಟ್ ಗೌರ್ಮೆಂಟ್ ಕೆಲ್ಸ ಇದೆ.  ಆಸ್ತಿ ಅಂತ ಇರೋದು ಗುಂಬಳ್ಳೀಲಿ ಒಂದು ಆರಂಕಣದ ಹಳೇ ಮನೆ.  ಒಂದೂಮುಕ್ಕಾಲು ಏಕರೆ ಭತ್ತದ ಗದ್ದೆ.  ನೂರು ತೆಂಗಿನ ಮರಗಳು.  ಎಲ್ಲಾನೂ ಅಕ್ಕ ಭಾವನೇ ನೋಡ್ಕೊತಿದ್ದಾರೆ.  ನಂದು ಊರೂರು ತಿರುಗೋ ಚಾಕರಿ ನೋಡಿ."  ನಕ್ಕರು.  "ಇರ್ಲಿ ಬಿಡಿ.  ಅಷ್ಟು ಸಾಕು.  ನಮ್ ವಸಂತಮ್ಮ ಪುಣ್ಯ ಮಾಡಿದ್ಲು."  ಅಪ್ಪ ಗುಟುರು ಹಾಕಿದ.  ಒಮ್ಮೆ ಕೆಮ್ಮಿದಂತೆ ಸದ್ದು ಹೊರಡಿಸಿ ಮುಂದುವರೆಸಿದ: "ಅವಳ್ದು ಅಂತ ಬಂಗಾರ ಗಿಂಗಾರ ಎಲ್ಲಾ ಸಾಕಷ್ಟಿದೆ.  ಅದೆಲ್ಲಾ ಅವಳ್ದೇ.  ಅದರ ಜೊತೇಲಿ ನಾವು ತಮಗೆ ಏನು ಕೊಡಬೇಕೋ ಅದ್ನೆಲ್ಲಾ..."  ಅಪ್ಪನ ಮಾತನ್ನು ಏಬುಲಯ್ಯ ಮೇಷ್ಟ್ರು ತಡೆದರು: "ನೋಡೀ ನೋಡಿ, ಅದೇ ನಾನು ಬ್ಯಾಡ ಅಂದದ್ದು.  ಗೂಳಯ್ಯನ ಕೈಲೇ ಹೇಳಿ ಕಳಿಸಿದ್ದೆ.  ಹೌದೋ ಇಲ್ವೋ ನೀನೇ ಹೇಳು ಗೂಳಣ್ಣ.  ನಂಗೆ ಏನೂ ಬೇಡ.  ಬ್ಯಾಡವೇ ಬ್ಯಾಡ.  ಚರ್ಚ್‌ನಲ್ಲೋ ದೇವಸ್ತಾನದಲ್ಲೋ ಸಿಂಪಲ್ಲಾಗಿ ಕಾರ್ಯ ಮುಗಿಸಿಕೊಟ್ಬಿಡಿ ಸಾಕು.  ಅದ್ದೂರಿ ಮದುವೆ, ಬೀಗರೂಟ ಅಂಥದೇನೂ ಬೇಡ.  ಎರಡನೇ ಮದುವೆಗೆ ಇದೆಲ್ಲಾ ಯಾಕೆ?  ಸುಮ್ನೆ ಆಡಿಕೊಳ್ಳೋರ ನಾಲಿಗೆಗೆ ಬಿದ್ದ ಹಾಗಾಗುತ್ತೆ..."
ಸೀನನ ಕಿವಿಗೆ ಅವರ ಮುಂದಿನ ಮಾತುಗಳು ಬೀಳಲಿಲ್ಲ.  ಎದೆ ತುಂಬ ಆನಂದದ ಅಲೆ.  ಏಬುಲಯ್ಯ ಮೇಷ್ಟ್ರಿಗೆ ಬರೀ ಮದುವೆ ಸಾಕಂತೆ.  ಬೀಗರೂಟ ಬೇಡವಂತೆ.  ಅಬ್ಬ, ಸಧ್ಯ!  ನನ್ ಟೈಗರ್ ಪುಣ್ಯ ಮಾಡಿತ್ತು.  ಏಬುಲಯ್ಯ ಮೇಷ್ಟ್ರನ್ನು ಅಕ್ಕ ಧಾರಾಳವಾಗಿ ಮದುವೆಯಾಗಲಿ.  ಅದು ನನಗೂ ಒಳ್ಳೆಯದೇ.  ಮೇಷ್ಟ್ರು ನನಗೆ ಒಳ್ಳೆಯ ಮಾರ್ಕ್ಸು ಕೊಡುತ್ತಾರೆ.  ನಾಕನೇ ಕ್ಲಾಸಿನಲ್ಲಿದ್ದಾಗ ಶಂಭಯ್ಯ ಮೇಷ್ಟರು ತಮ್ಮ ಹೆಂಡತಿಯ ತಮ್ಮ ಅಂದುಕೊಂಡು ಸುರೇಶನಿಗೆ ಹೆಚ್ಚು ಮಾರ್ಕ್ಸ್ ಕೊಡುತ್ತಿರಲಿಲ್ಲವೇ?
ಸೀನನ ಹೃದಯ ಮಧ್ಯಾಹ್ನದಿಂದ ಬಿದ್ದು ಹೊರಳಾಡುತ್ತಿದ್ದ ಗೊಂದಲಗುಂಡಿಯಿಂದ ಮೇಲೆದ್ದು ಬಂದು ಗಾಳಿಯಲ್ಲಿ ಹಕ್ಕಿಯಂತೆ ಹಾರಾಡತೊಡಗಿತು.  ಹಜಾರದಲ್ಲಿ ಅಪ್ಪ ಏನೋ ಸಂತೋಷದಲ್ಲಿ ಗುಡುಗಾಡುತ್ತಿದ್ದ.  ಆದರೆ ಅದ್ಯಾವುದೂ ಸೀನನಿಗೆ ಕೇಳುತ್ತಿಲ್ಲ.  ಅವನ ಕಿವಿ ತುಂಬ ಟೈಗನ "ಮೆಹೆಹೆ ಮೆಹೆಹೆ."  ನೆಮ್ಮದಿಯಿಂದ ಅಕ್ಕನ ಮೋರೆ ನಿರುಕಿಸಿದ.  ಅವಳ ಕಣ್ಣುಗಳು ಕೊಳಗಳಾಗಿದ್ದವು.  "ಅಳ್ಬೇಡಕ್ಕ."  ಸಮಾಧಾನಿಸಿದ.  ಅವಳು ಅಳುತ್ತಾ ನಕ್ಕಳು.
ಆವಾಗಿನಿಂದ ಸುಮ್ಮನೆ ಕುಳಿತಿದ್ದ ಗೂಳಮಾವ ಕಾದು ಕುಳಿತಿದ್ದಂತೆ ಈಗ ಬಾಯಿ ತೆರೆದ.  ಅವನ ದನಿ ಕಿವಿಗೆ ಬಿದ್ದೊಡನೇ ಸೀನನಿಗೆ ಶಾಲೆಯಲ್ಲಿ ಮಧ್ಯಾಹ್ನ ನಡೆದದ್ದು ನೆನಪಾಗಿಬಿಟ್ಟಿತು.  ಕಣ್ಣಮುಂದೇ ಪನ್ನಗಿರಿಯ ಕೀಟಲೆ ಧುತ್ತನೆ ಮೇಲೆದ್ದು ಕುಣಿಯತೊಡಗಿತು.  ಸೀನ ಮತ್ತೆ ಗೊಂದಲಗುಂಡಿಯೊಳಗೆ ಧೊಪ್ಪನೆ ಬಿದ್ದುಬಿಟ್ಟ, ಸ್ವಲ್ಪ ಜೋರಾಗಿಯೇ.
ಏನೋ ಬಾಯಿ ತಪ್ಪಿ ಅಂದುಬಿಟ್ಟೆ.  ಎಲ್ಲಾ ಆ ಹಾಳು ಚಂದ್ರಹಾಸ ಮತ್ತು ಫಿಲೋಮಿನ್‌ರಾಜರಿಂದ.  ಅದನ್ನೆಲ್ಲಾ ಏಬುಲಯ್ಯ ಮೇಷ್ಟ್ರು ಅಕ್ಕನಿಗೆ ಹೇಳಿಬಿಟ್ಟರೇನು ಮಾಡುವುದು?  ಅಕ್ಕ ಅದೆಷ್ಟು ನಗಬಹುದು!  ಈ ಮದುವೆ ಯಾಕೋ ನನಗಂತೂ ತುಂಬಾ ಡೇಂಜರ್ ಅನಿಸುತ್ತಿದೆ.  ಏನು ಮಾಡಲಿ?
ತಲೆಯೆತ್ತಿ ವಸಂತಿಯತ್ತ ಹತಾಷೆಯ ನೋಟ ಬೀರಿದ.  ಸಣ್ಣಗೆ ಕುಸುಕಿ ಏನೋ ಹೇಳಹೊರಟರೆ ಮೆಲ್ಲಗೆ "ಹುಷ್" ಎಂದು ಸದ್ದು ಹೊರಡಿಸಿ ಹಜಾರದತ್ತ ಬೆರಳು ತೋರಿದಳು.  ಹಜಾರದಲ್ಲೀಗ ಅಪ್ಪನ ಗುಡುಗು ನಿಂತು ಅವ್ವನ ಮಾತು ಸಣ್ಣಗಿನ ಸೋನೆ ಮಳೆಯಂತೆ ಹನಿಯುತ್ತಾ ಸಾಗಿತ್ತು.
"...ನಾ ಏನ್ ಹೇಳ್ಲಿ ಸಾ?  ಅವುಳ್ ಹಣೇಲಿ ಹಂಗೇ ಆಗ್ಬೇಕು ಅಂತ ಆ ಬ್ರಮ್ಮದೇವ ಬರ್ದಿದ್ನೋ ಏನೋ.  ಚೊಚ್ಚಲ ಹೆರಿಗೆಗೆ ಅಂತ ಸೀರೆ ಉಡ್ಸಿ ಇವ್ಳನ್ನ ಇಲ್ಲಿ ಬಿಟ್ಟೋದ ನಾಕು ದಿನಕ್ಕೆ ಅಲ್ಲಿ ಅವ್ರ ಆಯ್ಸು ಮುಗೀತು ಸಾ.  ಅಯ್ಯಯ್ಯಪ್ಪಾ ಯದೆನೋವು, ನೀರ್ ಕೊಡಿ ಅಂತ ಕೇಳಿದ್ದೇ ಕೊನೇ ಮಾತಂತೆ ಸಾ..."  ಗಕ್ಕನೆ ಎಲ್ಲೆಡೆ ಮೌನ ಕವಿದುಕೊಂಡುಬಿಟ್ಟಿತು.
ನಿಮಿಷದ ನಂತರ ಏಬುಲಯ್ಯ ಮೇಷ್ಟ್ರ ದನಿ ಗುಹೆಯಿಂದ ಬಂದಂತೆ ನಿಧಾನವಾಗಿ ಬಂತು: "ಇರ್ಲಿ ಇರ್ಲಿ ಬಿಡಿ.  ನಂಗೆಲ್ಲಾ ಗೊತ್ತು.  ಗೂಳಣ್ಣ ಹೇಳಿದ್ದಾನೆ."  ಹಿಂದೆಯೇ ಅವ್ವನ "ಆದ್ರೂ ಒಂದ್ಸಲ ಕೇಳ್ಕಳಿ.  ನಾ ಹೇಳಬೇಕಾದ, ನೀವು ಕೇಳಬೇಕಾದ ಸಮಯ ಇದು.  ಈಗ ಹೇಳಿಬಿಡ್ಬೇಕು" ಎಂಬ ಮಾತು ಸೋನೆಮಳೆಯ ನಡುವೆ ಗಕ್ಕನೆ ಗಾಳಿ ಬೀಸಿದರೆ ಸುಂಯ್ಯನೆ ಎರಚಾಡುವ ಬಿರುಸುಹನಿಗಳಂತೆ ಥಟಕ್ಕನೆ ಬಂತು.  ಏಬುಲಯ್ಯ ಮೇಷ್ಟ್ರ ಉತ್ತರ ಬರಲಿಲ್ಲ.  ಅವ್ವನ ಸೋನೆಮಳೆ ಮತ್ತೆ ಹನಿಯತೊಡಗಿತು: "ಮುಂದಿಂದು ಕೇಳಿ... ಹ್ಞುಂ, ಕೂಸೇನೋ ಹುಟ್ತು ಸಾ.  ಅದ್ಯಾವ ಕರ್ಮ ಮಾಡಿತ್ತೋ ಇವ್ಳ ಎದೆ ಬತ್ತೋಯ್ತು.  ಹಸೀನ ಹಾಲೇ ಗತಿಯಾಯ್ತು ಅದಕ್ಕೆ.  ಒಳಲೇನಲ್ಲಿ ನಾನೇ ಕುಡಿಸ್ತಿದ್ದೆ.  ನನ್ನೇ ಹಚ್ಕ್ಂಡುಬಿಡ್ತು.  ವಸಂತಿ ನನ್ನ ಅವ್ವ ಅವ್ವ ಅನ್ನೋದನ್ನ ನೋಡಿ ತಾನೂ ಅವ್ವ ಅನ್ನಕೆ ಶುರು ಮಾಡ್ಕಂತು.  ಸ್ವಂತ ಅವ್ವನ್ನ ಅಕ್ಕ ಅಂದ್ಕಂಡೇ ಬೆಳೀತು ಸಾ."  ಅವ್ವನ ಮಾತು ನಿಂತಿತು.  ಅಪ್ಪ ಗುಡುಗು ಬಾರಿಸಿದ: "ನಮ್ ವಸಂತಮ್ಮನೇ ತನ್ನವ್ವ ಅಂತ ಹುಡುಗಂಗೆ ಗೊತ್ತೇ ಇಲ್ಲ."  ಗೂಳಮಾವ ಗಟ್ಟಿಯಾಗಿಯೇ ಹ್ಞೂಂಗುಟ್ಟಿದ.  ಸೀನ ತನ್ನ ಚಿಂತೆಯಲ್ಲಿ ತಾನಿದ್ದ.
ಅವ್ವ ಮುಂದುವರೆಸಿದಳು: "ಹಂಗೇ ನಡಕಂಡು ಹೋಗ್ಲಿ.  ಹುಡ್ಗ ನಮ್ ಜೊತೇನೇ ಇರ್ಲಿ.  ನಾವೇ ಸಾಕ್ಕೋತೀವಿ.  ಮೇಷ್ಟ್ರು ಹಸೀನ ಜೊತೆ ಕರನೂ ಹೊಡಕಂಡು ಬಂದ್ರು ಅಂತ ಸರೀಕರು ನಿಮ್ಮ ಬೆನ್ನ ಹಿಂದೆ ಆಡ್ಕೊಂಡು ನಗೋದು ಬ್ಯಾಡ."
"ಅಯ್ ಅಧೆಂಗಾಗ್ತದೆ?"  ಏಬುಲಯ್ಯ ಮೇಷ್ಟ್ರು ಛಕ್ಕನೆ ದನಿ ಎತ್ತರಿಸಿಬಿಟ್ಟರು.  ಸೀನನ ಗಮನ ಅತ್ತ ಹೊರಳಿತು.  ಅವರ ಮುಂದಿನ ಮಾತು ಬಂತು: "ಸೀನ, ಐ ಮೀನ್, ಶ್ರೀನಿವಾಸ ವಸಂತಾಳ ಮಗ.  ಅವಳ ಮಗ ಅವಳ ಜತೆನೇ ಇರಬೇಕು.  ವಸಂತಾ ನನ್ನ ಹೆಂಡತಿ ಆದ ಗಳಿಗೆಯಿಂದ ಸೀನ ನನ್ನ ಮಗ.  ನಂಗಿರೋಳು ಒಬ್ಳು ಹೆಣ್ಮಗಳು.  ಸೀನ ಅವಳಿಗೆ ಅಣ್ಣನಾಗಿ, ನನ್ ಮನೇ ಹಿರೀಮಗನಾಗಿ ಬೆಳೀತಾನೆ.  ನಾ ಎಲ್ಲಾ ನಿರ್ಧಾರ ಮಾಡ್ಕಂಡೇ ಬಂದಿದ್ದೀನಿ.  ಇದಕ್ಕೆ ನೀವು ಇಲ್ಲ ಅನ್ನಬೇಡಿ."
ಸೀನ ಬೆಚ್ಚಿದ.  ಗಕ್ಕನೆ ತಲೆಯೆತ್ತಲು ನೋಡಿದ.  ಆಗಲಿಲ್ಲ.  ವಸಂತಿ ಅವನ ಮುಖವನ್ನು ತನ್ನೆದೆಗೆ ಬಿಗಿಯಾಗಿ ಒತ್ತಿಕೊಂಡಿದ್ದಳು.  ಸೀನ ಮತ್ತೆ ಮತ್ತೆ ಮಿಸುಕಿದ.  ಸೋತ.  ವಸಂತಿಯ ಒಂದು ಕೈ ಅವನ ಮುಖವನ್ನು ಎದೆಗೆ ಒತ್ತಿ ಹಿಡಿದಿದ್ದರೆ ಇನ್ನೊಂದು ಕೈ ಅವನ ಶರಟಿನ ಒಳತೂರಿ ಬೆನ್ನನ್ನು ಮೃದುವಾಗಿ ನೇವರಿಸುತ್ತಿತ್ತು.  ಸೀನ ಕ್ಷಣ ನಿಶ್ಚಲನಾದ.
ಹಾಗೇ ಇದ್ದರೆ ಚಂದ ಅನಿಸಿತು.
ವಸಂತಿ ಸೀನನನ್ನು ತನ್ನೆದೆಗೆ ಮತ್ತೂ ಬಿಗಿಯಾಗಿ ಒತ್ತಿಕೊಂಡಳು.  ಗಲ್ಲವನ್ನು ಅವನ ನೆತ್ತಿಯ ಮೇಲೆ ಊರಿ ಕಣ್ಣುಮುಚ್ಚಿ ಮೈಯನ್ನು ಹಿಂದೆ ಮುಂದೆ ತೂಗಾಡಿಸಿದಳು.  ಸೀನನಿಗೆ ಜೋಕಾಲಿಯಾಡುತ್ತಿರುವಂತೆನಿಸಿತು.
ಕಿವಿ ತುಂಬಿದ ಹೃದಯದ ಬಡಿತದ ಇಂಪು ಹಾಡನ್ನಾಲಿಸುತ್ತಾ ಸೀನ ಚಣಚಣಕ್ಕೂ ಹಗುರಾಗತೊಡಗಿದ.
 --***೦೦೦***--
 ಫೆಬ್ರವರಿ ೨೧, ೨೦೦೯

No comments:

Post a Comment