ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, December 5, 2013

ಮೂಢನಂಬಿಕೆಗಳ ಮೂಲೋತ್ಪಾಟನೆ ಶಿಕ್ಷೆಯಿಂದಲೋ? ಶಿಕ್ಷಣದಿಂದಲೋ?ಎರಡು ದಶಕಗಳ ಹಿಂದೆ ನಾನೊಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾಗ ಸಂಪನ್ಮೂಲ ವ್ಯಕ್ತಿಯೊಬ್ಬರು ಹೇಳಿದ್ದ ಮಾತೊಂದು ನೆನಪಾಗುತ್ತಿದೆ.  ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಹೊಸಹೊಸ ವೈಜ್ಞಾನಿಕ ಅವಿಷ್ಕಾರಗಳು ಹಾಗೂ ಅದರಿಂದಾಗಿ ಔದ್ಯೋಗಿಕ ಉತ್ಪಾದನಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸತೊಡಗಿ, ಆ ಕ್ಷೇತ್ರಗಳಲ್ಲಿ ಯೂರೋಪಿಯನ್ ರಾಷ್ಟ್ರಗಳ ಏಕಸ್ವಾಮ್ಯವನ್ನು ಅಮೆರಿಕಾ ಮುರಿಯಿತಷ್ಟೆ.  ಕೈಗಾರಿಕಾ ಕ್ರಾಂತಿಯ ಆಧ್ವರ್ಯುವಾಗಿದ್ದ ಇಂಗ್ಲೆಂಡಿಗೆ ಇದರಿಂದ ಜಾಗತಿಕ ವ್ಯಾಪಾರವಹಿವಾಟಿನಲ್ಲಿ ನಷ್ಟವಾಗತೊಡಗಿದಾಗ ಸಹಜವಾಗಿಯೇ ಕಂಗೆಟ್ಟ ಲಂಡನ್ ಸರಕಾರ ಅಮೆರಿಕಾದ ಈ ಪ್ರಗತಿಯ ಹಿಂದಿನ ಮರ್ಮವನ್ನರಿಯಲು ಸಮಿತಿಯೊಂದನ್ನು ಕಳಿಸಿತಂತೆ.  ಕೂಲಂಕಶ ಅಧ್ಯಯನ ನಡೆಸಿ ಅಮೆರಿಕಾದಿಂದ ಹಿಂತಿರುಗಿದ ಆ ಸಮಿತಿ ಮಂಡಿಸಿದ ವರದಿಯ ಸಾರಾಂಶ: 'ತನ್ನ ಎಳೆಯರಲ್ಲಿ ಶಾಲಾದಿನಗಳಿಂದಲೇ ವೈಜ್ಞಾನಿಕ ಮನೋಭಾವವನ್ನು ಉದ್ದೀಪನಗೊಳಿಸಿ ಬೆಳೆಸುವ ಶಿಕ್ಷಣಕ್ರಮವನ್ನು ಅಮೆರಿಕಾ ರೂಪಿಸಿ ಅಚರಣೆಗೆ ತಂದಿರುವುದೇ ಆ ದೇಶದಲ್ಲಿ ಅತ್ಯಧಿಕ ಪ್ರಮಾಣದ ವೈಜ್ಞಾನಿಕ ಅನ್ವೇಷಣೆಗಳು ಘಟಿಸಲು ಕಾರಣ.' ಸರಿಸುಮಾರು ಒಂದು ಶತಮಾನದ ನಂತರ ಇತಿಹಾಸದ ಚಕ್ರ ಒಂದು ಸುತ್ತು ಉರುಳಿತ್ತು.  ಅರವತ್ತರ ದಶಕದಲ್ಲಿ ಪೂರ್ವದ ಜಪಾನ್ ಹಲವು ಕ್ಷೇತ್ರಗಳಲ್ಲಿ ಅಮೆರಿಕಾವನ್ನು ಹಿಂದಿಕ್ಕತೊಡಗಿತು.  ಇದರ ಮರ್ಮವನ್ನರಿಯಲು ವಾಷಿಂಗ್‌ಟನ್ ಸರಕಾರ ಜಪಾನ್‌ಗೊಂದು ಸಮಿತಿ ಕಳುಹಿಸಿತು.  ಆ ಸಮಿತಿ ಸಲ್ಲಿಸಿದ ವರದಿಯಲ್ಲಿ ಇದ್ದುದಾದರೂ ಏನು?  ನೂರು ವರ್ಷಗಳ ಹಿಂದೆ ಇಂಗ್ಲೆಂಡಿನ ಸಮಿತಿಯ ವರದಿಗೂ ಈ ಸಮಿತಿಯ ವರದಿಗೂ ಯಾವ ವ್ಯತ್ಯಾಸವೂ ಇರಲಿಲ್ಲವಂತೆ.
ಇದು ನಿಜವೋ ಸುಳ್ಳೋ ಗೊತ್ತಿಲ್ಲ.  ಅದನ್ನು ಪತ್ತೆಮಾಡಲು ಪೂರಕ ಆಧಾರಗಳನ್ನು ಹುಡುಕಲು ನಾನೂ ಹೋಗಿಲ್ಲ.  ಇದು ಕಟ್ಟುಕತೆಯೇ ಆಗಿದ್ದರೆ ಅದರ ಹಿಂದಿನ ಉದ್ದೇಶ ವೈಜ್ಞಾನಿಕ ಅವಿಷ್ಕಾರಗಳಿಗೆ ಮೂಲ ವೈಜ್ಞಾನಿಕ ಮನೋಭಾವ ಎನ್ನುವುದನ್ನು ಸಮರ್ಥಿಸುವುದಷ್ಟೇ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.  ಬಹುಶಃ ಇದು ಸತ್ಯವಾಗಿರಲೂಬಹುದು ಎಂಬ ಅನಿಸಿಕೆಯನ್ನು ನನ್ನಲ್ಲುಂಟುಮಾಡುವಂತಹ ಮತ್ತೊಂದು ಮಾತೂ ನನಗೆ ನೆನಪಾಗುತ್ತಿದೆ.  ಮೂರು ದಶಕಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯದಲ್ಲಿ ನನಗೆ ಅಮೆರಿಕಾದ ಇತಿಹಾಸವನ್ನು ಬೋಧಿಸಿದ ಪ್ರಾಧ್ಯಾಪಕರು ೧೮೬೧-೬೫ರ ಅಂತರ್ಯುದ್ಧದ ನಂತರದ ದಶಕಗಳಲ್ಲಿ ವೈಜ್ಞಾನಿಕ ಅನ್ವೇಷಣೆ ಮತ್ತು ಔದ್ಯೋಗಿಕ ಉತ್ಪಾದನಾ ಕ್ಷೇತ್ರಗಳಲ್ಲಿ ಅಮೆರಿಕಾ ಇಡತೊಡಗಿದ ಧಾಪುಗಾಲಿಗೆ ಆ ದೇಶದ ಜನತೆಯ ವೈಜ್ಞಾನಿಕ ಮನೋಭಾವವನ್ನೂ, ಅದಕ್ಕೆ ಇಂಬುಗೊಡುವ ಶಿಕ್ಷಣಕ್ರಮವನ್ನೂ ಉಲ್ಲೇಖಿಸಿ ಹೀಗೆ ಹೇಳಿದ್ದರು: 'ಯಾವುದೇ ಒಂದು ವಸ್ತು ಅಥವಾ ಉಪಕರಣದ ಉಪಯುಕ್ತತೆಯನ್ನು ಮತ್ತಷ್ಟು ಹೆಚ್ಚಿಸುವುದರತ್ತ, ಹೊಸ ಉಪಕರಣಗಳನ್ನು ಅನ್ವೇಷಿಸುವತ್ತ ಅಮೆರಿಕನ್ನರು ಚಿಂತಿಸುತ್ತಿರುತ್ತಾರೆ.  ಇದರ ಹಿಂದಿರುವುದು ಶಾಲಾದಿನಗಳಿಂದಲೇ ಅವರಲ್ಲಿ ಮೂಡಿಸಲಾಗುವ ವೈಜ್ಞಾನಿಕ ಮನೋಭಾವ.'
ವೈಜ್ಞಾನಿಕ ಮನೋಭಾವ ಮತ್ತದನ್ನು ರೂಪಿಸಲು ಅಗತ್ಯವಾದ ಶಿಕ್ಷಣ ಹೇಗಿರಬೇಕು ಎನ್ನುವುದನ್ನು ಮೂರು ದಿನಗಳ ಹಿಂದೆ ಇದೇ ಪತ್ರಿಕೆಯಲ್ಲಿ ಗಣ್ಯ ವಿಮರ್ಶಕರಾದ ಶ್ರೀ ಎಸ್. ಆರ್. ವಿಜಯಶಂಕರ ತಮ್ಮ ಭಾನುವಾರದ ಅಂಕಣದಲ್ಲಿ ಜಾರ್ಜ್ ಅರ್ವೆಲ್‌ನ “Scientific education ought to mean the implanting of rational, sceptical, experimental habit of mind”  ಎನ್ನುವ ಸೂಕ್ತ ಹೇಳಿಕೆಯನ್ನು ಉಲ್ಲೇಖಿಸಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.  ವಿವೇಕಯುತ, ಅನುಮಾನಾತ್ಮಕ, ಪ್ರಯೋಗಶೀಲತೆಯ ಮೂಲಕ ಕಲಿಯುವುದು, ಒಂದರ್ಥದಲ್ಲಿ ಈ ಬಗೆಯ ಕಲಿಕೆಯನ್ನು ಒಂದು 'ಮಾನಸಿಕ ಚಟ'ವನ್ನಾಗಿ ವ್ಯಕ್ತಿಯೊಬ್ಬನಲ್ಲಿ ಅಳವಡಿಸುವುದು ವಿಜ್ಞಾನದ ಶಿಕ್ಷಣದ ಸರಿಯಾದ ವಿಧಾನ.
ಇಷ್ಟೆಲ್ಲಾ ಪೀಠಿಕೆಯ ಹಿಂದಿರುವುದು ನನ್ನನ್ನು ಕಾಡುತ್ತಿರುವ 'ಮೂಢನಂಬಿಕೆಗಳನ್ನು ಕಾನೂನಿನ ಮೂಲಕ ಹೋಗಲಾಡಿಸಬಹುದೇ?' ಎಂಬ ಪ್ರಶ್ನೆ, ಸಮಾಜವನ್ನು ಮೂಢನಂಬಿಕೆಗಳಿಂದ ಮುಕ್ತಗೊಳಿಸುವ ಅತ್ಯುತ್ತಮ ವಿಧಾನ ಶಿಕ್ಷೆಯೋ ಅಥವಾ ಶಿಕ್ಷಣವೋ ಎಂಬ ಜಿಜ್ಞಾಸೆ.
ಶಿಕ್ಷೆಯ ವಿಧಾನ ಸರಿಯಾದುದಲ್ಲ ಎನ್ನುವುದು ಮೊದಲನೋಟಕ್ಕೇ ಗೋಚರವಾಗುತ್ತಿದೆ.  ತನಗೆ ಸಮ್ಮತವಾಗದ್ದನ್ನು ಕಾನೂನು ಮತ್ತು ಶಿಕ್ಷೆಯ ಮೂಲಕ ಹೋಗಲಾಡಿಸುವುದರಲ್ಲಿ ಪ್ರಪಂಚದಲ್ಲಿ ಇದುವರೆಗೆ ಬಂದುಹೋಗಿರುವ ಸಾವಿರಾರು ಸರಕಾರಗಳಲ್ಲಿ ಯಾವುದೊಂದೂ ಯಶಸ್ವಿಯಾಗಿಲ್ಲ.  ಹೀಗಾಗಿ ಕರ್ನಾಟಕದ ಪ್ರಸಕ್ತ ಸಿದ್ದರಾಮಯ್ಯ ಸರಕಾರವೂ ಯಶಸ್ವಿಯಾಗುವುದಿಲ್ಲ ಎಂದು ಯಾವುದೇ ಅಳುಕಿಲ್ಲದೇ ಹೇಳಬಹುದು.  ಮೂಢನಂಬಿಕೆಗಳ ವಿರುದ್ಧ ಈ ಸರಕಾರ ಕಾನೂನು ತಂದರೆ ಅದಕ್ಕೆ ವಿರೋಧ ಭುಗಿಲೇಳುತ್ತದೆ.  ಕಾನೂನು ಉಲ್ಲಂಘನೆಯನ್ನು ಉಗ್ರ ಶಿಕ್ಷೆಯ ಮೂಲಕ ಅನುಷ್ಟಾನಗೊಳಿಸಲು ಸರಕಾರ ಮುಂದಾದರೆ ಜನ ಗುಟ್ಟಾಗಿ ತಮಗೆ ಬೇಕಾದ್ದನ್ನು ಮಾಡಿಕೊಳ್ಳುತ್ತಲೇ ಹೋಗುತ್ತಾರೆ.  ಇಷ್ಟೇ ಅಲ್ಲ, ಮುಂದೆ ಬೇರೊಂದು ಸರಕಾರ ಬಂದು ಈ ಕಾನೂನನ್ನೇ ರದ್ದು ಮಾಡಿಬಿಟ್ಟರೆ...?
ಒಟ್ಟಾರೆ, ಕಾನೂನಿನ ಮೂಲಕ ಸಮಾಜದ ನೀತಿನಡವಳಿಕೆಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ.  ಆದರೆ ಸೂಕ್ತ ಶಿಕ್ಷಣದ ಮೂಲಕ, ಎಳೆಯ ವಯಸ್ಸಿನಲ್ಲೇ ಮಕ್ಕಳ ಮನಸ್ಸನ್ನು ಬೇಕಾದಂತೆ ರೂಪಿಸುವ ಮೂಲಕ ಒಂದೆರಡು ತಲೆಮಾರುಗಳ ಆವಧಿಯಲ್ಲಿ ಸಮಾಜದ ಒಟ್ಟಾರೆ ಚಿಂತನೆಯನ್ನು, ಅದರ ನೀತಿನಡವಳಿಕೆಗಳನ್ನು ಬದಲಾಯಿಸಬಹುದು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ.  ಶಿಕ್ಷಣದ ಮೂಲಕ ವೈಜ್ಞಾನಿಕ ಮನೋಭಾವವನ್ನು ತನ್ನ ಜನತೆಯಲ್ಲಿ ಮೂಡಿಸುವ ಕಾರ್ಯಕ್ರಮವನ್ನು ಒಂದೂವರೆ ಶತಮಾನದ ಹಿಂದೆಯೇ ಜಾರಿಗೆ ತಂದು ಅಭೂತಪೂರ್ವ ಪ್ರಗತಿ ಸಾಧಿಸಿದ ಅಮೆರಿಕಾ ಒಂದು ಧನಾತ್ಮಕ ಉದಾಹರಣೆಯಾದರೆ, 'Pಚಿಞisಣಚಿಟಿ Suies' ಎಂಬ ಅವೈಜ್ಞಾನಿಕ, ಅಸತ್ಯಪೂರಿತ, ಇತಿಹಾಸಕ್ಕೆ ಹಾಗೂ ವರ್ತಮಾನಕ್ಕೆ ಅಪಚಾರವೆಸಗುವ ಪಠ್ಯಕ್ರಮವನ್ನು ತನ್ನ ಶಾಲೆಗಳಲ್ಲಿ ಕಡ್ಡಾಯಗೊಳಿಸುವ ಮೂಲಕ ಭಾರತ-ದ್ವೇಷವನ್ನು ಸಾರ್ವತ್ರಿಕಗೊಳಿಸಿ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುತ್ತಿರುವ ಪಾಕಿಸ್ತಾನ ಒಂದು ಋಣಾತ್ಮಕ ಉದಾಹರಣೆಯಾಗುತ್ತದೆ.  ಇವೆರಡರ ನಡುವೆ ಎರಡರ ರಂಗುಗಳನ್ನೂ ಅಷ್ಟಿಷ್ಟು ಒಳಗೊಂಡ ಹಲವಾರು ಉದಾಹರಣೆಗಳಿವೆ.
ಅತಿ ಎನ್ನಿಸುವ, ಸಮಾಜದ ಸ್ವಾಸ್ತ್ಯವನ್ನು ಕೆಡಿಸುವಂತಹ ಮೂಢನಂಬಿಕೆಗಳು ಮೊಳೆಯುವುದಕ್ಕೆ ಅವಕಾಶ ನೀಡದ ಕ್ರಿಶ್ಚಿಯಾನಿಟಿ ಹಾಗೂ ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿಷ್ಟೆಯಿಂದ ತೊಡಗಿಕೊಳ್ಳಲು ಪ್ರೇರೇಪಿಸುವ ಪ್ಯೂರಿಟಾನಿಕಲ್ ನಂಬಿಕೆಗಳ ತಳಹದಿಯ ಮೇಲೆ ರಚಿತವಾಗಿರುವ ಅಮೆರಿಕನ್ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ರೂಪಿಸುವುದು ಸುಲಭ.  ಆದರೆ ಬಹುಪಾಲು ಕರ್ಮ, ಪುನರ್ಜನ್ಮ, ಧೀರ್ಘ ಹಾಗೂ ಕಷ್ಟಕರವಾದ ಮೋಕ್ಷದ ಮಾರ್ಗ ಮುಂತಾದ ಮೌಲ್ಯಗಳ ಆಧಾರದ ಮೇಲೆ ರಚಿತವಾಗಿರುವ ಭಾರತೀಯ ಸಮಾಜವನ್ನು ವೈಜ್ಞಾನಿಕ ಚಿಂತನೆಯತ್ತ ಹೊರಳಿಸುವುದು ಬಹಳ ಕಷ್ಟ.  ಭಾರತೀಯ ವಿಜ್ಞಾನದ ಅತ್ಯುತ್ತಮ ಸಾಧನೆಯಾದ ಮಂಗಳಯಾನ ನೌಕೆಯನ್ನು ನಿರ್ಮಿಸಿದ ವಿಜ್ಞಾನಿಗಳೇ ಉಡಾವಣೆಗೆ ಮುನ್ನ ತಿರುಪತಿಯಲ್ಲಿ ಪೂಜೆ ಸಲ್ಲಿಸುವುದಾದರೆ ಸಾಮಾನ್ಯ ಜನರ ಬಗ್ಗೆ ಏನು ಹೇಳಬೇಕು?  ಇದಕ್ಕೆ ಕಾರಣ ನಾವು ಶಾಲೆಯಲ್ಲಿ ವಿಜ್ಞಾನವನ್ನೂ ಶಾಲೆಯ ಹೊರಗೆ ನಂಬಿಕೆ, ಮೂಢನಂಬಿಕೆಗಳನ್ನೂ ಕಲಿಯುತ್ತಾ ಬಂದಿರುವುದೇ ಆಗಿದೆ.  ಎಲ್ಲ ಭೌತಿಕ ಕ್ರಿಯೆಗಳನ್ನು ಸೂಕ್ತ ವೈಜ್ಞಾನಿಕ ನಿಯಮಗಳ ಮೂಲಕ ವಿವರಿಸುವ 'ವಿರೋಧಾಭಾಸವಿಲ್ಲದ' ಅರಿವನ್ನು ಉದ್ದೀಪಿಸುವಂತಹ ವಾತಾವರಣ ಶಾಲೆಯ ಒಳಗೆ ಹಾಗೂ ಹೊರಗೆ ಸೃಷ್ಟಿಯಾದಾಗಷ್ಟೇ ನಮ್ಮಲ್ಲಿ ಸಾರ್ವತ್ರಿಕವಾಗಿ ವೈಜ್ಞಾನಿಕ ಮನೋಭಾವ ಮೂಡಲು ಸಾಧ್ಯ.  ಹಾಗಾದಾಗ ಮಾತ್ರ ವೈಯುಕ್ತಿಕ ಬದುಕನ್ನು ಕ್ಲಿಷ್ಟಗೊಳಿಸುವ, ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡಹುವ ಮೂಢನಂಬಿಕೆಗಳ ಬೇರುಗಳು ಶಿಥಿಲವಾಗುತ್ತಾ ಹೋಗಿ ಕಾಲಾಂತರದಲ್ಲಿ ನಶಿಸಿಹೋಗುತ್ತವೆ ಎಂದು ಆಶಿಸಬಹುದು.
ಈ ಚಿಂತನೆಯ ಮತ್ತೊಂದು ಮಗ್ಗುಲಲ್ಲಿ ದೇವರು, ದೈವಿಕ ಶಕ್ತಿ ಮುಂತಾದ ನಂಬಿಕೆಗಳು (ಕೆಲವರಿಗೆ ಮೂಢನಂಬಿಕೆಗಳು) ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಂಡ ಅಮೆರಿಕಾ, ಕೆಲವು ಯೂರೋಪಿಯನ್ ಮತ್ತು ಕಮ್ಯೂನಿಸ್ಟ್ ವ್ಯವಸ್ಥೆಗಳಲ್ಲೂ ಅಸ್ತಿತ್ವದಲ್ಲಿರುವುದನ್ನು ನೋಡಬಹುದು.  ಇದು ಜನತೆಯ ಮನದಲ್ಲಿ ತನ್ನನ್ನು ತಾನು ಪೂರ್ಣವಾಗಿ ಪ್ರತಿಷ್ಟಾಪಿಸಿಕೊಳ್ಳುವುದರಲ್ಲಿ ವಿಜ್ಞಾನವೇ ವಿಫಲವಾಗಿರಲೂಬಹುದು ಎಂಬ ಅನುಮಾನವನ್ನು ಮೂಡಿಸುತ್ತದೆ.  ಈ ನಿಟ್ಟಿನಲ್ಲಿ ಚಿಂತನೆಯನ್ನು ಹರಿಯಬಿಟ್ಟರೆ ಕಣ್ಣಿಗೆ ಕಾಣುವ, ವಿವೇಚನೆಗೆ ನಿಲುಕುವ ಅನೇಕ ವಾಸ್ತವಗಳನ್ನು ವಿಜ್ಞಾನಿಗಳು ನಿರಾಕರಿಸುತ್ತಲೇ ಇರುವುದರಿಂದ ವಿಜ್ಞಾನವನ್ನೇ ಅಂತಿಮ ಸತ್ಯ ಎಂದು ಒಪ್ಪಿಕೊಳ್ಳಲು ಸಮಾಜವೂ ನಿರಾಕರಿಸುತ್ತಿದೆ ಎನಿಸುತ್ತದೆ.  ಈ ಬಗ್ಗೆ ನೂರೊಂದು ಉದಾಹರಣೆಗಳಿದ್ದರೂ ನಾಲ್ಕು ಪ್ರಾತಿನಿಧಿಕ ಉದಾಹರಣೆಗಳನ್ನು ಮಾತ್ರ ವಿಶ್ಲೇಷಣೆಗೆತ್ತಿಕೊಂಡು ತಾವು ಬದಲಾಗಬೇಕಾದ ಅಗತ್ಯವನ್ನು ವಿಜ್ಞಾನಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ.
ಮೊದಲಿಗೆ ಎಲ್ಲರಿಗೂ ಸಂಬಂಧಿಸಿದ ಆರೋಗ್ಯದ ಬಗೆಗಿನ ಸಾಮಾನ್ಯ ಉದಾಹರಣೆಯನ್ನು ಕೈಗೆತ್ತಿಕೊಳ್ಳೋಣ.  ಕಾಯಿಲೆಗಳನ್ನು ಉಪಶಮನಗೊಳಿಸುವುದರಲ್ಲಿ ಹೋಮಿಯೋಪಥಿ ಪರಿಣಾಮಕಾರಿ ಎನ್ನುವುದು ಅದರಿಂದ ಉಪಯೋಗ ಪಡೆದವರೆಲ್ಲರ ಅನುಭವ.  ಆದರೆ ಹೋಮಿಯೋಪಥಿ ಅವೈಜ್ಞಾನಿಕ ಎಂದು ವೈದ್ಯವಿಜ್ಞಾನ ಹೇಳುತ್ತದೆ.  ಲಕ್ಷಾಂತರ ಜನರ ಪ್ರತ್ಯಕ್ಷ ಅನುಭವವನ್ನೇ ಧಿಕ್ಕರಿಸುವ ವಿಜ್ಞಾನ ಜನತೆಗೆ ಪ್ರಿಯವಾಗುವುದಾದರೂ ಹೇಗೆ?  ವಿಜ್ಞಾನ ಹೇಳುವುದೆಲ್ಲವೂ ನಿಜ, ಅದು ತಿರಸ್ಕರಿಸುವುದೆಲ್ಲವೂ ಅಸತ್ಯ ಎಂದು ಅವರು ನಂಬುವುದಾದರೂ ಹೇಗೆ?
ಮನಸ್ಸಿನ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅರಿಯುವುದರಲ್ಲಿ ವಿಜ್ಞಾನ ಇನ್ನೂ ಯಶಸ್ವಿಯಾಗಿಲ್ಲ.  ಇಲ್ಲಿ ನನಗೆ ಬ್ರೆಜಿಲ್‌ನ ಜೋಸ್ ಪೆಡ್ರೋ ಡಿ ಫ್ರೀಟಾಸ್ 'ಅರಿಗೋ'ನ ನೆನಪಾಗುತ್ತದೆ.  ವೈದ್ಯಕೀಯ ವಿಜ್ಞಾನದ ಅಲ್ಪ ತಿಳುವಳಿಕೆಯೂ ಇಲ್ಲದ ಈತ ಐವತ್ತು ಅರವತ್ತರ ದಶಕಗಳಲ್ಲಿ ಕೇವಲ ಅಡಿಗೆಮನೆಯ ಚಾಕುಗಳಿಂದ ಹಲವಾರು ಕ್ಲಿಷ್ಟ ಶಸ್ತ್ರಚಿಕಿತ್ಸೆ ನಡೆಸಿ ನುರಿತ ವೈದ್ಯರು ಕೈಚೆಲ್ಲಿದ್ದ ರೋಗಿಗಳನ್ನು ಪೂರ್ಣವಾಗಿ ಗುಣಪಡಿಸಿದ್ದ.  ಆತ ನಡೆಸಿದ ಒಂದು ಪ್ರಸಿದ್ದ ಶಸ್ತ್ರಚಿಕಿತ್ಸೆ ಹೀಗಿದೆ: ಒಮ್ಮೆ ಮರಣಶಯ್ಯೆಯಲ್ಲಿದ್ದ ಕ್ಯಾನ್ಸರ್ ಪೀಡಿತ ಪರಿಚಿತೆಯೊಬ್ಬಳನ್ನು ನೋಡಲು ಹೋದ ಅರಿಗೋಗೆ ಏನಾಯಿತೋ, ಸೀದಾ ಅಡಿಗೆಮನೆಗೆ ನುಗ್ಗಿ ಚಾಕುವೊಂದನ್ನು ತಂದ.  ರೋಗಿಯ ಜನನೇಂದ್ರಿಯದೊಳಗೆ ಚಾಕುವನ್ನು ತೂರಿಸಿ ರಭಸವಾಗಿ ಆಡಿಸಿದ.  ಒಳಗೆ ಕೈಹಾಕಿ ಕ್ಯಾನ್ಸರ್ ಗಡ್ಡೆಯನ್ನು ಹೊರಗೆಳೆದ.  ಚಣದಲ್ಲಿ ರೋಗಿಯ ಗರ್ಭಾಶಯ ಕ್ಯಾನ್ಸರ್‌ನ ಮೂಲೋತ್ಪಾಟನೆಯಾಗಿತ್ತು!  ತನ್ನ ಶಸ್ತ್ರಚಿಕಿತ್ಸೆಗಳಿಗೆ ಅರಿಗೋ ನೀಡುವ ವಿವರಣೆ ಬಲು ಸರಳ.  'ರೋಗಿಗಳನ್ನು ನೋಡುತ್ತಿದ್ದಂತೇ ನನ್ನ ಕಣ್ಣುಗಳ ಮುಂದೆ ಜರ್ಮನ್ ವೈದ್ಯ ಅಡಾಲ್ಫ್ ಫ್ರಿಟ್ಜ್‌ನ ಮುಖ ಕಾಣಿಸಿಕೊಳ್ಳುತ್ತದೆ.  ಆಮೇಲೆ ನಾನೇನು ಮಾಡುತ್ತೇನೆಂದು ನನಗೆ ಅರಿವಿರುವುದಿಲ್ಲ.'  ಇದಾವುದನ್ನೂ ವೈದ್ಯಕೀಯ ವಿಜ್ಞಾನ ಪುರಸ್ಕರಿಸುವುದಿಲ್ಲ.  ಆದರೆ ಅಡಿಗೆಮನೆಯ ಚಾಕುಗಳಿಂದ ಅರಿಗೂ ನಡೆಸಿದ ಶಸ್ತ್ರಚಿಕಿತ್ಸೆಗಳನ್ನು ಕಣ್ಣಾರೆ ಕಂಡವರು ಇನ್ನೂ ಬದುಕಿದ್ದಾರೆ.  ಲೈಸನ್ಸ್ ಇಲ್ಲದೇ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾನೆಂದು ಅವನನ್ನು ಬಂಧಿಸಲಾಗಿತ್ತು ಕೂಡ.  ಆದರೆ ರಾಷ್ಟ್ರಾಧ್ಯಕ್ಷರೇ ಅವನಿಗೆ ಕ್ಷಮಾದಾನ ನೀಡಿದ್ದರು ಮತ್ತು ಜೈಲಿನಲ್ಲಿದ್ದಾಗ ಅಲ್ಲಿಯೂ ಅಧಿಕಾರಿಗಳ ಸಹಕಾರದಿಂದಲೇ ತನ್ನ 'ಸೇವೆ'ಯನ್ನು ರೋಗಿಗಳಿಗೆ ಆತ ನೀಡುತ್ತಿದ್ದ ಎನ್ನುವುದು ಅವನ ನಂಬಲಸಾಧ್ಯವಾದ ಶಸ್ತ್ರಕ್ರಿಯಾಜ್ಞಾನಕ್ಕೆ ಉದಾಹರಣೆ.  ಅಂದರೆ, ಡಾ. ಫ್ರಿಟ್ಜ್ ತಮ್ಮ ಮರಣಾನಂತರ ಅರಿಗೋನ ಮೂಲಕ ತಮ್ಮ ವೈದ್ಯಕೀಯ ಸೇವೆಯನ್ನು ಮುಂದುವರೆಸಿದರೇ?  ಇದರರ್ಥ ಒಬ್ಬನ ದೇಹದಲ್ಲಿ ಮತ್ತೊಬ್ಬ ಸೇರಿ ಕೆಲಸ ಮಾಡಬಹುದೇ?
ಮೂರನೆಯ ಉದಾಹರಣೆ ಫ್ಲೈಯಿಂಗ್ ಸಾಸರ್ ಹಾಗೂ ಅನ್ಯಲೋಕದ ಜೀವಿಗಳದ್ದು.  ಈ ಬಗೆಗಿನ ವಿವರಗಳಲ್ಲಿ ನೂರಕ್ಕೆ ತೊಂಬತ್ತು ಭಾಗ ಕಟ್ಟುಕತೆಗಳಾಗಿದ್ದರೂ ಪೂರ್ಣ ಸತ್ಯವಾದ, ವಿಜ್ಞಾನಿಗಳ ಅವಗಾಹನೆಗೇ ಬಂದ ಪ್ರಕರಣಗಳೂ ಹೇರಳವಾಗಿವೆ.  ಅವುಗಳ ಸತ್ಯಾಸತ್ಯತೆಯನ್ನು ಆ ವಿಜ್ಞಾನಿಗಳು ಪ್ರಮಾಣೀಕರಿಸಿದ್ದಾರೆ.  ಆದರೆ ಇತರ ವಿಜ್ಞಾನಿಗಳಿಗೆ ಇದು ಅವೈಜ್ಞಾನಿಕ.
ಕರ್ಮ ಹಾಗೂ ಅದಕ್ಕನುಗುಣವಾಗಿ ಮರುನಜನ್ಮವೆತ್ತುವ ಬಗ್ಗೆ ಹಿಂದೂಗಳು, ಬೌದ್ಧರು, ಜೈನರು, ಟಿಬೆಟನ್ನರು ಗಾಢವಾದ ನಂಬಿಕೆಯನ್ನಿಟ್ಟಿದ್ದಾರೆ.  ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಮ್ ಇದನ್ನು ತಿರಸ್ಕರಿಸುತ್ತವೆ.  ಇರುವುದೊಂದೇ ಜನ್ಮ, ನಂತರದ್ದು ಅಂತಿಮ ತೀರ್ಪು, ಅದಕ್ಕನುಗುಣವಾಗಿ ಸ್ವರ್ಗ ಅಥವಾ ನರಕ ಎಂದು ಅವು ಹೇಳುತ್ತವೆ.  (ಪುನರ್ಜನ್ಮದ ಬಗ್ಗೆ ಹಳೆಯ ಒಡಂಬಡಿಕೆ ಹಾಗೂ ಸೈಂಟ್ ಮಾರ್ಕ್ ಮುಂತಾದವರ ಸುವಾರ್ತೆಗಳಲ್ಲಿದ್ದ ಅಂಶಗಳನ್ನು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ರೋಮನ್ ಚಕ್ರವರ್ತಿ ಕಾನ್‌ಸ್ಟಾಂಟೈನ್ ಮತ್ತವನ ತಾಯಿ ಉದ್ದೇಶಪೂರ್ವಕವಾಗಿ ತೆಗೆದುಹಾಕಿದರು ಎಂದು ಹೇಳಲಾಗುತ್ತದೆ.)
ಇತ್ತೀಚಿನ ದಶಕಗಳಲ್ಲಿ ಈ ವಿಷಯಗಳ ಬಗ್ಗೆ ಆಳ ಸಂಶೋಧನೆ ನಡೆಸಿರುವ ರೋಜರ್ ಊಲ್ಜರ್, ಬ್ರಿಯಾನ್ ವೇಸ್ ಮುಂತಾದ ಹಲವು ಕ್ರಿಶ್ಚಿಯನ್ ಧರ್ಮಾನುಯಾಯಿ ಮನೋವಿಶ್ಲೇಷಕರು ಮತ್ತು ಮನೋವೈದ್ಯರು ಕರ್ಮಕ್ಕನುಗುಣವಾಗಿ ಮರುಜನ್ಮದ ಬಗ್ಗೆ ನಿರಾಕರಿಸಲಾಗದಷ್ಟು ವಿವರಗಳನ್ನು ಕಲೆಹಾಕಿದ್ದಾರೆ.  ಆದರೆ ಇತರ ವಿಜ್ಞಾನಿಗಳ ದೃಷ್ಟಿಯಲ್ಲಿ ಇದೆಲ್ಲವೂ ಅವೈಜ್ಞಾನಿಕ.
ಇದರರ್ಥ ಸರಳ.  ಈಗಿನ ವೈಜ್ಞಾನಿಕ ನಿಯಮಗಳ ಮೂಲಕ ತಮ್ಮಿಂದ ವಿವರಿಸಲಾಗದ್ದೆಲ್ಲವನ್ನೂ ಸಾರಾಸಗಟಾಗಿ ಅವೈಜ್ಞಾನಿಕ ಎಂದು ಕರೆದು ಕೈತೊಳೆದುಕೊಳ್ಳುವುದು ವಿಜ್ಞಾನಿಗಳ ಜಾಯಮಾನ.  ಕೋಟ್ಯಾಂತರ ಜನರ ನೈಜ ಅನುಭವಗಳನ್ನೂ, ತಮ್ಮದೇ ಸಹೋದ್ಯೋಗಿಗಳ ಸಂಶೋಧನೆಗಳನ್ನು ತಿರಸ್ಕರಿಸುವ ಮೂಲಕ ವಿಜ್ಞಾನಕ್ಕೊಂದು ಸೀಮಿತ ಪರಿಧಿ ನಿರ್ಮಿಸಿ ಅದರ ವ್ಯಾಪ್ತಿಯನ್ನು ಇವರು ಸಂಕುಚಿತಗೊಳಿಸುತ್ತಿದ್ದಾರೆ, ಆ ಮೂಲಕ ಸಮಾಜದ ಪೂರ್ಣ ಸ್ವೀಕೃತಿಯಿಂದ ವಿಜ್ಞಾನ ವಂಚಿತವಾಗುವಂತೆ ಮಾಡುತ್ತಿದ್ದಾರೆ.
ಹೋಮಿಯೋಪಥಿ, ಅರಿಗೋನ ಶಸ್ತ್ರಚಿಕಿತ್ಸೆ, ಫ್ಲೈಯಿಂಗ್ ಸಾಸರ್‍ಸ್, ಪುನರ್ಜನ್ಮ ಮುಂತಾದುವುಗಳನ್ನು ಅವೈಜ್ಞಾನಿಕ ಎಂದು ಸಾರಾಸಗಟಾಗಿ ತಿರಸ್ಕರಿಸುವ ಬದಲು ಅವುಗಳನ್ನು ಕೂಲಂಕಶವಾಗಿ ಅಭ್ಯಸಿಸಿ, ಅವುಗಳ ಹಿಂದೆ ಕೆಲಸ ಮಾಡುತ್ತಿರುವ, ಇದುವರೆಗೆ ತನ್ನ ಅರಿವಿಗೆ ನಿಲುಕದಿರುವ ವೈಜ್ಞಾನಿಕ ನಿಯಮಗಳನ್ನು ಪತ್ತೆಹಚ್ಚಿ ಅವುಗಳನ್ನು ತನ್ನ ಪರಿಧಿಯೊಳಗೆ ತೆಗೆದುಕೊಂಡು ತನ್ನ ವ್ಯಾಪ್ತಿಯನ್ನು ಸದಾ ವಿಸ್ತರಿಸಿಕೊಳ್ಳಲು ವಿಜ್ಞಾನ ಮುಂದಾಗುವುದು ಸೂಕ್ತ.  ಹಾಗೆ ನೋಡಿದರೆ ಅಂಥದ್ದನ್ನು ಹಿಂದೆ ವಿಜ್ಞಾನ ಮಾಡಿರುವ ಉದಾಹರಣೆಗಳಿವೆ.  ಭೂಮಿ ಚಪ್ಪಟೆಯಾಗಿದೆ, ಭೂಮಿಯೇ ವಿಶ್ವದ ಕೇಂದ್ರ, ಸೂರ್ಯ ಭೂಮಿಯನ್ನು ಸುತ್ತುತ್ತಾನೆ ಮುಂತಾದ ಶತಮಾನಗಳವರೆಗೆ ಪ್ರಚಲಿತವಿದ್ದ ಅನೇಕ 'ವೈಜ್ಞಾನಿಕ ನಂಬಿಕೆ'ಗಳನ್ನು ೧೫-೧೭ನೆ ಶತಮಾನಗಳ ಆವಧಿಯಲ್ಲಿ ವಿಜ್ಞಾನ ಕಸದ ಬುಟ್ಟಿಗೆ ಹಾಕಿದ್ದನ್ನು ನಾವು ನೆನಪಿಸಿಕೊಳ್ಳಬೇಕು.  ಶತಮಾನಗಳ ಹಿಂದಿನ ಈ ಪ್ರಗತಿಶೀಲ ಮನೋಭಾವ ಇಂದಿನ ವಿಜ್ಞಾನಿಗಳಿಗೂ ಅಗತ್ಯ.

Thursday, November 21, 2013

ಕಥೆ- "ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು"
ಸರಿಸುಮಾರು ಒಂದು ಶತಮಾನದಿಂದಲೂ ಬಂಗಾಳಕೊಲ್ಲಿಗೆ ಅಂಟಿಕೊಂಡಂತೇ ಸಾಗುತ್ತಾ ಪಾಂಡಿಚೆರಿಯನ್ನು ಚೆನ್ನೈಗೆ ಜೋಡಿಸುತ್ತಿದ್ದ ಈಸ್ಟ್ ಕೋಸ್ಟ್ ರಸ್ತೆ ಪರಿಸರವಾದಿಗಳ ಮಧ್ಯಪ್ರವೇಶದಿಂದಾಗಿ ತೀರದಿಂದ ದೂರ ಸರಿದು ಮೊನ್ನೆ ಗುಮ್ಮಿಡಿಪಾಳ್ಯದ ಅಂಚಿಗೇ ಬಂದುಬಿಟ್ಟಿತು.  ಏಶಿಯನ್ ಡೆವೆಲಪ್‌ಮೆಂಟ್ ಬ್ಯಾಂಕಿನ ಧನಸಹಾಯದಿಂದ ಚೆನ್ನೈನಿಂದ ನಾಗರಕೋಯಿಲ್‌ವರೆಗಿನ ಏಳುನೂರು ಕಿಲೋಮೀಟಗಳಿಗೂ ಉದ್ದದ ರಸ್ತೆಯನ್ನು ಹೆದ್ದಾರಿಯನ್ನಾಗಿ ಪರಿವರ್ತಿಸುವ ಯೋಜನೆಯನ್ನು ರಾಜ್ಯಸರಕಾರ ಕೈಗೆತ್ತಿಕೊಂಡಾಗ ಇಡೀ ಕೋರಮಂಡಲ ಕರಾವಳಿಯಲ್ಲಿ ಭಾರೀ ಚಟುವಟಿಕೆಗಳು ಆರಂಭಗೊಂಡವು.  ಜನ ಕಂಡುಕೇಳರಿಯದ ಅದೆಂಥೆಂಥದೋ ವಾಹನಗಳಂತಿದ್ದ ಯಂತ್ರಗಳು, ಯಂತ್ರಗಳಂತಿದ್ದ ವಾಹನಗಳು ಜನಜಾನುವಾರುಗಳನ್ನು ಹೆದರಿಸುತ್ತಾ ಗುಮ್ಮಿಡಿಪಾಳ್ಯದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಕಡಲತೀರಕ್ಕಂಟಿಕೊಂಡು ಸಾಗುತ್ತಿದ್ದ ರಸ್ತೆಯ ಉದ್ದಗಲಕ್ಕೂ ಹರಿದಾಡತೊಡಗಿದವು.  ಮುನ್ನೂರು ವರ್ಷಗಳ ಹಿಂದೆ ಪರಂಗಿಯವರು ಈ ತೀರದಲ್ಲಿ ಕಾಲಿಟ್ಟಾಗ ಎದ್ದಿರಬಹುದಾದ ಅಲ್ಲೋಲಕಲ್ಲೋಲವನ್ನೇ ಈ ಹೊಳೆಯುವ ಹಳದೀಬಣ್ಣದ ರಾಕ್ಷಸ ಯಂತ್ರಗಳು ಈಗ ಉಂಟುಮಾಡಿದವು.  ರಾಬರ್ಟ್ ಕ್ಲೈವ್ ಮತ್ತು ಡೂಪ್ಲೆಯ ಕೆಂಪುಮೂತಿಯ ಸೈನಿಕರನ್ನು ತಮ್ಮ ಪೂರ್ವಜರು ಬಾಯ ಮೇಲೆ ಬೆರಳಿಟ್ಟುಕೊಂಡು ನೋಡಿದಂತೆಯೇ ಕೀಳೂರು, ಕೂನಿಮೇಡುಗಳ ಮೀನುಗಾರ ಗಂಡಸರು ಹೆಂಗಸರು ಮಕ್ಕಳು ಈ ಯಂತ್ರಗಳನ್ನು ನೋಡುತ್ತಾ ನಿಂತುಬಿಟ್ಟರು.  ಕೂನಿಮೇಡುವಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಕೀಳೂರಿನ ಕಿರಾಣಿ ಅಂಗಡಿಗಳಿಗೆ ಅಥವಾ ಮೀನು ಮಾರುಕಟ್ಟೆಗೆ ಹೋಗಿಬಂದ ಗುಮ್ಮಿಡಿಪಾಳ್ಯದ ಜನ ಈ ಯಂತ್ರಗಳನ್ನೂ ಅವು ಭಾರಿ ಭಾರಿ ಮರಗಳನ್ನು ಕಡಿದುರುಳಿಸುತ್ತಿದ್ದ ಬಗೆಯನ್ನೂ, ನೆಲವನ್ನು ಬಗೆದುಹಾಕುತ್ತಿದ್ದ ವೇಗವನ್ನೂ ನೋಡಿ ಬೆರಗಾಗಿ ಊರಿಗೆ ಹಿಂತಿರುಗಿದೊಡನೇ ತಾವು ಕಂಡ ಅದ್ಭುತ ಸಂಗತಿಗಳನ್ನು ಮನೆಮಂದಿ ನೆರೆಹೊರೆಯವರಿಗೆ ಬಣ್ಣಿಸಿದರು.  ಅಲ್ಲಿಯವರೆಗೆ ಹೋಗಲಾರದ ಮುದುಕ ಮುದುಕಿಯರು, ಹೋಗುವ ಅಗತ್ಯವೇ ಇಲ್ಲದ ಮಕ್ಕಳು ಮರಿಗಳು ಬಾಯಿ ಬಿಟ್ಟುಕೊಂಡು ಕಥೆ ಕೇಳಿದವು.
ಒಂದು ಬೆಳಿಗ್ಗೆ ಆ ಮಧ್ಯಾಹ್ನ ಮನೆಗೆ ಬರಲಿದ್ದ ಅತ್ತೆ ಮಾವನವರಿಗಾಗಿ ಸಾರು ರೆಡಿ ಮಾಡಲೆಂದು ಮುದ್ದಿನ ಮಡದಿ ಕಾತ್ತಾಯಿಯ ಆದೇಶದಂತೆ ಮೀನು ತರಲು ಕೀಳೂರಿಗೆ ಹೋಗಿದ್ದ ಪಿಚ್ಚಮುತ್ತು ತಂದ ಸುದ್ದಿ ಮಾತ್ರ ಇದೆಲ್ಲಕ್ಕಿಂಥ ಬೇರೆಯಾಗಿತ್ತು.  ಅವನು ಹೇಳಿದ ಪ್ರಕಾರ ಅದೆಲ್ಲಿಂದಲೋ ಬಂದಿದ್ದ ಒಂದಷ್ಟು ಗಂಡಸರು ಹಳದೀ ಯಂತ್ರಗಳ ಹಿಂದೆ ಮುಂದೆ ಕಲ್ಲುಮಣ್ಣಿನ ನೆಲದಲ್ಲಿ ಮಲಗಿಬಿಟ್ಟಿದ್ದರು.  ಅವರ ಜತೆಯಲ್ಲೇ ಬಂದಿರಬಹುದಾದ ಕೆಲವು ಹೆಂಗಸರು ಅಳಿದುಳಿದ ಮರಗಳನ್ನು ತಬ್ಬಿಹಿಡಿದು ನಿಂತಿದ್ದರು.  ಕೆಲಸಗಾರರ, ರಾಕ್ಷಸ ಯಂತ್ರಗಳ ಡ್ರೈವರುಗಳ ಯಾವ ಆಟಕ್ಕೂ ಬಗ್ಗದೇ ರಸ್ತೆಯ ಕೆಲಸವನ್ನು ಸಂಪೂರ್ಣವಾಗಿ ನಿಲುಗಡೆಗೆ ತಂದುಬಿಟ್ಟಿದ್ದರು.  ಕೊನೆಗೆ ಮರಕ್ಕಾಣಂನಿಂದ ಪೋಲೀಸರ ದಂಡು ಬಂದು ಅವರನ್ನೆಲ್ಲಾ ಬಲವಂತವಾಗಿ ಎಳೆದು ವ್ಯಾನುಗಳೊಳಗೆ ತುಂಬಿಕೊಂಡು ಹೋದಾಗಲಷ್ಟೇ ಅವರ ಸದ್ದಡಗಿ ರಾಕ್ಷಸಯಂತ್ರಗಳು ಮತ್ತೆ ಜೀವ ತಳೆದು ಬುಸುಗುಡಲಾರಂಭಿಸಿದ್ದು.
ಪಿಚ್ಚಮುತ್ತು ವರ್ಣಿಸಿದ ಈ ಘಟನೆ ಇನ್ನು ಕೆಲವೇ ದಿನಗಳಲ್ಲಿ ಇಡೀ ರಸ್ತೆಯನ್ನೇ ಅನಾಮತ್ತಾಗಿ ಎಳೆದುತಂದು ತಮ್ಮೂರಿನ ಪೆರಿಯ ಕುಳಂ ಕೆರೆಏರಿಯ ಮೇಲೆ ಒಗೆದುಬಿಡುತ್ತದೆ ಎಂದು ಗುಮ್ಮಿಡಿಪಾಳ್ಯದ ಹದಿನಾಲ್ಕು ಮನೆಗಳ, ಮೂವತ್ತೆರಡು ಗುಡಿಸಲುಗಳ, ನಲವತ್ತಾರು ಸಂಸಾರಗಳ, ನೂರಾ ಇಪ್ಪತ್ತೇಳು ಜೀವಗಳಲ್ಲಿ ಯಾರೊಬ್ಬರಿಗೂ ಹೊಳೆಯುವ ಸಾಧ್ಯತೆ ಆಗ ಇರಲೇ ಇಲ್ಲ.  ಅದಾದ ಮೇಲೂ ಅದು ಹೇಗಾಯಿತೆಂದು ಅವರ ಅರಿವಿಗೆ ಇನ್ನೂ ಸ್ಪಷ್ಟವಾಗಿ ನಿಲುಕಿಲ್ಲ.  ಇದೆಲ್ಲವೂ ದೈವಲೀಲೆಯೆಂದು ನಾಗರೀಕತೆಯಿಂದ, ಸರಕಾರದಿಂದ, ರಾಜಕೀಯ ಪಕ್ಷಗಳಿಂದ, ಇತ್ತೀಚೆಗೆ ಅಣಬೆಗಳಂತೆ ತಲೆಯೆತ್ತುತ್ತಿರುವ ಎನ್‌ಜಿಓಗಳಿಂದ ಇನ್ನೂ ಹಲವು ಹರದಾರಿಗಳಷ್ಟು ದೂರದಲ್ಲೇ ಬಿದ್ದಿರುವ ಗುಮ್ಮಿಡಿಪಾಳ್ಯದ ನಿವಾಸಿಗಳು ಪ್ರಾಮಾಣಿಕವಾಗಿ ನಂಬುತ್ತಾರೆ.  ಆದರೆ ಅಗ್ನೋಸ್ಟಿಕ್ ಆದ ನಾನು ನಡೆದ ಸತ್ಯಸಂಗತಿಯನ್ನು ನಿಮ್ಮಂತಹ ಟೀವಿ ನೋಡುವ, ಪೇಪರ್ ಓದುವ ನಾಗರೀಕಮಂದಿಗೆ ಹೇಳದೇ ಇರಲಾರೆ.
ಹಿಗ್ಗಿಸಿದರೆ ಪಾಂಡಿಚೆರಿ ಎನ್‌ವಿರಾನ್‌ಮೆಂಟ್ ಫೋರಂ, ಕುಗ್ಗಿಸಿದರೆ ಪಿಇಎಫ್, ಇನ್ನೂ ಕುಗ್ಗಿಸಿ ಮುದ್ದಾಗಿ ಕರೆಯಹೋದರೆ "ಪೆಫ್" ಎನ್ನುವ ಒಂದು ವಿಚಾರವಾದಿ ಸಂಘಟನೆಗೆ ರಸ್ತೆ ಮಾಡುವ ನೆಪದಲ್ಲಿ ಭಾರಿ ಭಾರಿ ಮರಗಳನ್ನು ಈ ಪರಿಯಾಗಿ ಕಡಿದುರುಳಿಸುವುದು ಅಮಾನವೀಯವೆನಿಸಿತು.  ರಸ್ತೆಯ ಅಗಲೀಕರಣ, ತದನಂತರದ ವಾಹನಗಳ ಹೆಚ್ಚಳ, ಅವು ತೂರುವ ಶಬ್ದ ಹಾಗೂ ಕಾರುವ ಹೊಗೆ ಕೀಳೂರಿಗೆ ಉತ್ತರದ ಸಮುದ್ರತೀರದಲ್ಲಿ ತಾನೇ ತಾನಾಗಿ ಬೆಳೆದಿದ್ದ ಸಹಸ್ರಾರು ಏಕರೆ ಮ್ಯಾಂಗ್ರೋವ್ ಕಾಡುಗಳಿಗೆ, ಅದರಲ್ಲಿರುವ ಪಶುಪಕ್ಷಿಕೀಟಾದಿ ಸಕಲ ಜೀವ ಸಂಕುಲಗಳಿಗೆ ಘಾತಕವಾಗುತ್ತದೆ ಎಂಬುದನ್ನು ಮನಗಂಡ ಪೆಫ್‌ನ ಕಾರ್ಯಕರ್ತರು ಒಂದು ದಿನವಿಡೀ ಚರ್ಚಿಸಿ ತಮ್ಮ ಹೋರಾಟದ ರೂಪರೇಷೆಗಳನ್ನು ಸಿದ್ಧಗೊಳಿಸಿದರು.  ಅದರ ಮೊದಲ ಅಂಗವಾಗಿ ತಮಿಳುನಾಡು ಮತ್ತು ಪಾಂಡಿಚೆರಿ ಸರಕಾರಗಳಿಗೆ ರಸ್ತೆಯಿಂದಾಗುವ ಅನಾಹುತಗಳನ್ನು ಮನಕಲಕುವಂತೆ ವಿವರಿಸಿ ಒಂದು ಪಿಟಿಷನ್ ಸಲ್ಲಿಸಿದರು.  ಸರಕಾರಗಳು ಕ್ಯಾರೇ ಅನ್ನದಿದ್ದಾಗ ರಸ್ತೆನಿರ್ಮಾಣದ ಕೆಲಸವನ್ನು ಗುತ್ತಿಗೆಯಾಗಿ ತೆಗೆದುಕೊಂಡಿದ್ದ ಖಾಸಗಿ ಸಂಸ್ಥೆಯ ಪಾಂಡಿಚೆರಿ ಶಾಖೆಯ ಮುಂದೆ ಧರಣಿ ನಡೆಸಿದರು.  ಅದೂ ವಿಫಲವಾದಾಗ ಕೀಳೂರಿನ ಬಳಿ ರಸ್ತೆಯ ಕೆಲಸ ನಡೆಯುತ್ತಿದ್ದೆಡೆ ಹೋಗಿ ಪಿಚ್ಚಮುತ್ತು ಕಂಡು ಕಂಗಾಲಾದ ಕೆಲಸವನ್ನು ಮಾಡಿಬಿಟ್ಟರು.
ವಿಪರ್ಯಾಸವೆಂದರೆ ಪೆಫ್‌ನ ಈ ಕೃತ್ಯಗಳು ಕೀಳೂರಿನ ಜನತೆಗೆ ಸ್ವಲ್ಪವೂ ಇಷ್ಟವಾಗಲಿಲ್ಲ.  ಅತ್ಯಾಧುನಿಕ ರಸ್ತೆಮಾರ್ಗವೊಂದು ತಮ್ಮೂರನ್ನು ಹಾದುಹೋಗಲಿದೆಯೆಂದು ಬೀಗುತ್ತಿದ್ದ ಅವರಿಗೆ ಪೆಫ್‌ನ ಕೆಲಸ ಅಧಿಕಪ್ರಸಂಗವಷ್ಟೇ ಅಲ್ಲ, ಕೀಳೂರುವಿರೋಧಿಯಾಗಿಯೂ ಕಂಡಿತು.  ಪೆಫ್ ಕಾರ್ಯಕರ್ತರ ಮಾತುಗಳಿಗೆ ಅವರು ಕಿವಿಗಳನ್ನೇ ಕೊಡಲಿಲ್ಲ.  ಬಣ್ಣಗೆಟ್ಟ ಜೀನ್ಸ್ ಪ್ಯಾಂಟಿನ ಮೇಲೆ ಮಾಸಲು ಜುಬ್ಬಾ ಧರಿಸಿ ಹೆಗಲಿಗೊಂದು ಜೋಳಿಗೆ ನೇತುಹಾಕಿಕೊಂಡ ಹೋತದ ಗಡ್ಡದ ಗಂಡುಕಾರ್ಯಕರ್ತರನ್ನು ಪಟ್ಟಣಿಗರು, ವಿದ್ಯಾವಂತರು ಎಂದು ನಂಬಲು ಕೀಳೂರಿನ ಜನತೆ ಅನುಮಾನಿಸಿದರು.  ಅವರ ಮಾತನ್ನೇ ಕೇಳಲಿಲ್ಲ.  ಅಲ್ಲದೇ ಪೆಫ್‌ನ ಮಹಿಳಾಕಾರ್ಯಕರ್ತೆಯರ ಬಗೆಗಂತೂ ಅವರ ಬೇಸರ ಕೋಪಕ್ಕೆ ತಿರುಗಿತು.  ಮುದುರಿಹೋದ `ಸೂಡೀದಾರ'ದ ಹಾಗೂ ಸೀರೆಯನ್ನು ಅಲಕ್ಷ್ಯದಿಂದ ಅಸ್ತವ್ಯಸ್ತವಾಗಿ ಸುತ್ತಿಕೊಂಡ, ಕೆದರಿದ ತಲೆಯ, ಬೋಳು ಹಣೆ, ಬೋಳು ಕೈಗಳ ಈ ಹೆಂಗಸರು ಹುಟ್ಟಾ ನೀತಿಗೆಟ್ಟವರು ಎಂದು ಕೀಳೂರಿನ ಮತ್ಸ್ಯಗಂಧಿ ಮತ್ತೈದೆಯರು ತೀರ್ಮಾನ ಕೊಟ್ಟುಬಿಟ್ಟರು.  ಅವರೇನಾದರೂ ಮತ್ತೆ ಇತ್ತ ಕಾಲು ಹಾಕಿದರೆ ರಸ್ತೆ ಕೆಲಸಕ್ಕೆ ತಂದು ಹಾಕಿದ ಜಲ್ಲಿಕಲ್ಲುಗಳಿಂದಲೇ ಅವರ ಮುಖಮೂತಿಗಳನ್ನು ಚಚ್ಚಿಹಾಕಿ ಬುದ್ಧಿ ಕಲಿಸದೇ ಬಿಡುವುದಿಲ್ಲ ಎಂದವರು ಪ್ರತಿಜ್ಞೆ ಕೈಗೊಂಡರು.
ಒಂದುವಾರದಲ್ಲೇ ಆ ಪೆಫ್‌ನ ಅದೇ ಗಂಡಸರು ಮತ್ತೆ ಬಂದರು, ಅವರ ಜತೆ ಬೋಳು ಹಣೆಯ ಬೋಳು ಕೈಗಳ ಅದೇ ಹೆಂಗಸರೂ ಇದ್ದರು.  ಕೀಳೂರಿನ ಹೆಂಗಸರು ಜಲ್ಲಿಕಲ್ಲುಗಳನ್ನೂ ಕೈಗೆತ್ತಿಕೊಂಡರು.  ಆ ಕಲ್ಲುಗಳಿಗೆ ಗುರಿಯಾದವರು ಮಾತ್ರ ರಸ್ತೆ ಕೆಲಸಗಾರರು!
ಇದೆಲ್ಲಾ ಹೇಗಾಯಿತೆಂದರೆ...
ಪಾಂಡಿಚೆರಿಯಲ್ಲಿ ಫ್ರೆಂಚ್ ಇನ್ಸ್‌ಟಿಟ್ಯೂಟ್ ಎಂಬ ಸಂಶೋಧನಾ ಕೇಂದ್ರವಿದೆ.  ಇಂಡಾಲಜಿಯಲ್ಲಿ ಅಲ್ಲಿನ ಫ್ರೆಂಚ್ ಮತ್ತು ಭಾರತೀಯ ಸಂಶೋಧಕರು ಮಾಡಿರುವ ಸಂಶೋಧನೆ ಅಪಾರ.  ಇತ್ತೀಚೆಗೆ ಆ ವಿಷಯ ಹಿಂದಕ್ಕೆ ಸರಿದು ಅದರ ಸ್ಥಾನವನ್ನು ಪರಿಸರವಿಜ್ಞಾನ ಆಕ್ರಮಿಸಿಕೊಂಡಿದೆ.  ಭಾರತೀಯ ಮತ್ತು ಫ್ರೆಂಚ್ ಪರಿಸರ ವಿಜ್ಞಾನಿಗಳ ತಂಡಗಳು ಪಾಂಡಿಚೆರಿಯೂ ಸೇರಿದಂತೆ ದಕ್ಷಿಣದ ಐದು ಸರಕಾರಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಪಾಠ ಹೇಳುತ್ತಿವೆ.  ಆ ಪಾಠಗಳಿಗೆ ತುಂಬಾ `ಬೆಲೆ' ಇದೆ.
ಮೂರುವರ್ಷಗಳ ಸಂಶೋಧನಾವೇತನ ಪಡೆದು, ತಮಿಳು ಆಡುನುಡಿಯಲ್ಲಿ ನಾಲ್ಕುವಾರಗಳ ಕ್ರ್ಯಾಷ್ ಕೋರ್ಸ್ ಮಾಡಿ ಸಾರ್ಬೋನ್ ಯೂನಿವರ್ಸಿಟಿಯಿಂದ ಈ ಫ್ರೆಂಚ್ ಇನ್ಸ್‌ಟಿಟ್ಯೂಟಿಗೆ ದಯಮಾಡಿಸಿದ ಇಪ್ಪತ್ತಾರರ ಫ್ರೆಂಚ್ ಚೆಲುವೆ ಜೋನ್ ಮಾರ್ತೇ ಸ್ವಲ್ಪ ಹಳೆಯ ಕಾಲದವಳು.  ಅವಳ ಆಸಕ್ತಿ ಇತಿಹಾಸ, ಅದರಲ್ಲೂ ಬಿಡಿಸಿ ಹೇಳಬೇಕೆಂದರೆ ಈ ದೇಶದಲ್ಲಿ ಮೂರು ಶತಮಾನಗಳ ಹಿಂದೆ ಮೊಳಕೆಯಲ್ಲೇ ಮುರುಟಿಹೋದ ಡಚ್ ಸಾಮ್ರಾಜ್ಯದ ಪುಟ್ಟ ಆದರೆ ರೋಚಕ ಇತಿಹಾಸ.  ತಾಯಿಯ ಡಚ್ ಮೂಲ ಮತ್ತು ತಂದೆಯ ಫ್ರೆಂಚ್ ಬೇರುಗಳೆರಡನ್ನೂ ಸಮಸಮವಾಗಿ ಮೈಗೂಡಿಸಿಕೊಂಡು ಜಗತ್ತಿಗೆ ಕಾಲಿಟ್ಟ ಜೋನ್ ತನ್ನ ಇತಿಹಾಸದ ಯಾವುದೋ ಒಂದು ಘಟ್ಟದಲ್ಲಿ ಡಚ್ ಇತಿಹಾಸದತ್ತ ಅಪರಿಮಿತ ಒಲವು ಮೂಡಿಸಿಕೊಂಡುಬಿಟ್ಟಳು.  ಹಾಲೆಂಡಿನ ಲೈಡನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕಿಯಾಗಿದ್ದ ಜ್ಯೂಲಿಯಾನಾ ಮಾರ್ತೆ ತನ್ನ ಹುಚ್ಚನ್ನು ಮಗಳಿಗೆ ಹೊಕ್ಕುಳಬಳ್ಳಿಯ ಮೂಲಕವೇ ತುಂಬಿಸಿಬಿಟ್ಟಿದ್ದು ಈ ಐತಿಹಾಸಿಕ ಬೆಳವಣಿಗೆಗೆ ಕಾರಣವಾಗಿದ್ದರೂ ಇರಬಹುದೇನೋ.  ಯಾರು ಬಲ್ಲರು?  ಎಲ್ಲಾ, ಅವಳು ದಿನದಲ್ಲಿ ಹತ್ತು ಸಲವಾದರೂ ನೆನಪಿಸಿಕೊಳ್ಳುವ "ಅವರ್ ಲೇಡಿ ಆಫ್ ಇಮ್ಯಾಕ್ಯುಲೇಟ್ ಕನ್ಸೆಪ್ಷನ್"ಳ ಮಹಿಮೆ.  ಆದರಿದು ನಮ್ಮ ಕಥಾನಾಯಕಿ ಕಾತ್ತಾಯಿಯ ಬದುಕನ್ನೂ ಹಿಗ್ಗಾಮುಗ್ಗಾ ಜಗ್ಗಾಡಿ ಎತ್ತೆತ್ತಲೋ ಒಗೆದುಬಿಟ್ಟದ್ದಂತೂ ನಿಜ.  ಕಾತ್ತಾಯಿ ಅದಕ್ಕೆಲ್ಲಾ ಊರಾಚೆಯ ಬೆಂಗಾಡಿನಲ್ಲಿ ದಿಕ್ಕಿಲ್ಲದೇ ಒಂಟಿಯಾಗಿ ನಿಂತಿರುವ ಪುರಾತನ ಹುಣಿಸೆಮರದಲ್ಲಿ ಊರು ಹುಟ್ಟಿದಾಗಿನಿಂದಲೂ ವಾಸವಾಗಿರುವ "ಮುನೇಶ್ವರ"ನೆಂಬ ಮಹಾಕಂಟಕ ಪರಮಪಿಶಾಚಿಯನ್ನೇ ದೂಷಿಸುತ್ತಾಳೆ.  ಅವಳಿಗೆ ಅವರ್ ಲೇಡಿ ಆಫ್ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಯಾರೆಂದು ಪರಿಚಯವಿಲ್ಲ.
ರಾತ್ರಿಯ ಮೂರುಗಂಟೆಗೆ ಚೆನ್ನೈನ ಅಣ್ಣಾ ಇಂಟನ್ಯಾಷನಲ್ ಏಪೋರ್ಟ್‌ನಲ್ಲಿ ಭಾರತದ ನೆಲ ಮುಟ್ಟಿ ನಾಲ್ಕೂಮುಕ್ಕಾಲಿಗೆ ಟ್ಯಾಕ್ಸಿಯೇರಿ ಪಾಂಡಿಚೆರಿಯತ್ತ ಪಯಣಿಸಿದ ಜೋನ್ ಮಾರ್ತೆಗೆ ಕಣ್ಣರೆಪ್ಪೆಗಳು ಕೂಡಿಕೊಳ್ಳತೊಡಗಿದ್ದರ ಅರಿವೇ ಹತ್ತಲಿಲ್ಲ.  ಅದಕ್ಕೆ ತೀರದಿಂದ ದೂರದಲ್ಲಿ ಮಲಗಿದ್ದ ದಿಂಡಿವನಂ ರಸ್ತೆ ಬಿಟ್ಟು ಬಂಗಾಳ ಕೊಲ್ಲಿಯ ತೀರಕ್ಕೆ ಅಂಟಿಕೊಂಡು ಸಾಗಿದ್ದ ಈಸ್ಟ್ ಕೋಸ್ಟ್ ರಸ್ತೆಯನ್ನು ಹಿಡಿದು ಜೋನ್ ಮಾರ್ತೆಯ ಮುಖಕ್ಕೆ ಮುತ್ತಿಡಲು ಮುಂಜಾನೆಯ ಸಮುದ್ರದ ತಂಗಾಳಿಗೆ ಯಥೇಚ್ಛ ಅವಕಾಶ ಕಲ್ಪಿಸಿದ ಚಾಲಕ ಕದಿವೇಲ್ ಸಹಾ ಕಾರಣವಾಗಿದ್ದ.  ಮರಕ್ಕಾಣಂ ದಾಟಿದಂತೆ ರಸ್ತೆಯ ಅಗಲೀಕರಣದಲ್ಲಿ ತೊಡಗಿಕೊಂಡ ಹಳದೀಬಣ್ಣದ ಬುಲ್‌ಡೋಜರುಗಳು, ಕ್ರೇನುಗಳು, ಡಂಪರುಗಳು, ರೋಡ್‌ರೋಲರುಗಳು, ಕ್ರಾಲರುಗಳು ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿಯಾಗಿ ಕೆಡೆದುಕೊಂಡು ಮುಂಜಾನೆಯ ಸಕ್ಕರೆನಿದ್ದೆಯಲ್ಲಿ ಮುಳುಗಿದ್ದರಿಂದಾಗಿ ಟ್ಯಾಕ್ಸಿಯ ವೇಗ ಕುಂಠಿತವಾಗಿ ಜೋನ್ ಮಾರ್ತೆಗೆ ಎಚ್ಚರವಾಗಿ ಕಣ್ಣುಬಿಟ್ಟು ಎಡಬಲ ನೋಡಲಾಗಿ ಎಲ್ಲವೂ ಕಂಡುಬಿಟ್ಟಿತು.  ಕೋಳಿ ಕೂಗುವ ಮೊದಲೇ ಅಲ್ಲಿಗೆ ತಲುಪಿ, ಯಂತ್ರಗಳಂಥ ವಾಹನಗಳು, ವಾಹನಗಳಂಥ ಯಂತ್ರಗಳು ಎಚ್ಚರವಾಗುವುದನ್ನೇ ಕಾಯುತ್ತಾ, ಅದೃಷ್ಟ ನೆಟ್ಟಗಿದ್ದು ಇನ್ನೂ ನಿಂತಿದ್ದ ಮರಗಳನ್ನು ಅಪ್ಪಿನಿಲ್ಲಲು ತಯಾರಿ ನಡೆಸುತ್ತಿದ್ದ ಇಪ್ಪತ್ತು - ಮೂವತ್ತು ಯುವಕ ಯುವತಿಯವರೂ, `ಅರ್ಜೆಂಟ್ ಕೆಲಸ ಮುಗಿಸಿ ಬರುತ್ತೇವೆ, ನಿಮಗೆ ಮಾಡುತ್ತೇವೆ ಇರಿ' ಎಂದುಕೊಳ್ಳುತ್ತಾ ಅವರತ್ತ ದುರುಗುಟ್ಟಿ ನೋಡಿಕೊಂಡು ಸಮುದ್ರತೀರದ ಪೊದೆಗಳತ್ತ ಸಾಗಿದ್ದ ಒಂದು ಕಾಲುದಾರಿ ಹಿಡಿದು ಧಾಪುಗಾಲಿಡುತ್ತಿದ್ದ ಕೀಳೂರಿನ ಗಂಡಸರೂ, ಇನ್ನೊಂದು ಕಾಲುಹಾದಿ ಹಿಡಿದು ಮತ್ತೊಂದು ದಿಕ್ಕಿನ ಪೊದೆಗಳತ್ತ ಅವಸರವಸರವಾಗಿ ನಡೆಯುತ್ತಿದ್ದ ಹೆಂಗಸರೂ ಕಂಡುಬಿಟ್ಟರು.  ಅಲ್ಲೇನು ನಡೆಯುತ್ತಿದೆಯೆಂದವಳು ಚಾಲಕ ಕದಿವೇಲುವನ್ನು ಸಾರ್ಬೋನ್‌ನಲ್ಲಿ ಕಲಿತ ಶುದ್ಧ ತಮಿಳು "ಚೆಮ್ಮೊಳಿ"ಯಲ್ಲಿ ಕೇಳಲಾಗಿ ಅವನು ಉತ್ಸಾಹದಿಂದ ಎಲ್ಲವನ್ನೂ ಕುಲಗೆಟ್ಟುಹೋದ ಪಕ್ಕಾ ಮದ್ರಾಸೀ ತಮಿಳಿನಲ್ಲಿ ಹೇಳತೊಡಗಿದ.  ಹೇಳುಹೇಳುತ್ತಲೇ ಕಣ್ಣುಗಳನ್ನು ಒಂದುಪಕ್ಕಕ್ಕೆ ವಾಲಿಸಿ, ರಸ್ತೆಬದಿಯ ಹುಣಿಸೆಮರದ ಕೊಂಬೆಯನ್ನು ಎಗರಿ ಹಿಡಿದೆಳೆದು ಜೋತಾಡುತ್ತಿದ್ದ ಎಳೆಗಾಯಿಗಳ ಜೊಂಪೆಯನ್ನು ಎಟುಕಿಸಿಕೊಳ್ಳುವ ಭರದಲ್ಲಿ ನಿಗುರಿ ನಿಂತು ಹೊಟ್ಟೆ ಕಿಬ್ಬೊಟ್ಟೆಗಳನ್ನು ಇಡಿಯಾಗಿ ತೆರೆದಿಟ್ಟು ಹೊಕ್ಕುಳ ತುಂಬಾ ಬೆಳಗಿನ ಸೂರ್ಯನ ಕೆಂಪುಕಿರಣಗಳನ್ನು ತುಂಬಿಕೊಳ್ಳುತ್ತಿದ್ದ ಪೆಫ್‌ನ ಲಲನಾಕಾರ್ಯಕರ್ತೆಯನ್ನೇ ನೋಡುತ್ತಾ ವಾಹನದ ಚಾಲನೆಯನ್ನು ನಿಧಾನಗೊಳಿಸಿಬಿಟ್ಟ.  ಹಿತ್ತಲಗಿಡ ಮದ್ದಲ್ಲವೆನ್ನುವಂತೆ ತಮ್ಮ ಕಣ್ಣಮುಂದೆಯೇ ಹೊಕ್ಕುಳತೂತಿನೊಳಗೆ ಸೂರ್ಯದೇವನನ್ನು ಆವಾಹಿಸಿಕೊಳ್ಳುತ್ತಿದ್ದ ಚೆಲುವೆಯನ್ನು ಕಡೆಗಣಿಸಿದ ಕೆಲ ಪಡ್ಡೆಗಂಡುಕಾರ್ಯಕರ್ತರುಗಳು ಹತ್ತಿರಾದ ಜೋನ್ ಮಾರ್ತೆಯತ್ತ ಹಲ್ಲು ಬಿಡಲಾಗಿ ಅವಳೂ ಹಲ್ಲರಳಿಸಿ "ಹಾಯ್"ಗರೆಯಲು ವಾಹನ ಸಂಪೂರ್ಣವಾಗಿ ನಿಲುಗಡೆಗೆ ಬಂದು ಪಡ್ಡೆಗಂಡುಗಳು ಕಾರಿನ ಬಳಿಗೂ, ಕದಿವೇಲುವಿನ ಕಣ್ಣುಗಳು ಹೊಕ್ಕುಳ ಬಾಗಿಲಿಗೂ ತಲುಪಿದವು.
ಜೋನ್ ಮಾರ್ತೆ ಯಥೇಚ್ಛವಾಗಿ ಹಲ್ಲುಕಿರಿಯುತ್ತಾ ವಾಹನದಿಂದ ಕೆಳಗಿಳಿದಳು.  ಹೆಚ್ಚುಕಡಿಮೆ ತನ್ನದೇ ವಯಸ್ಸಿನ, ತನ್ನಷ್ಟೇ ಜೀವನೋತ್ಸಾಹ ತುಂಬಿತುಳುಕುತ್ತಿದ್ದ ಗಂಡುಹೆಣ್ಣುಗಳ ಸಂಗ ಅವಳಿಗೆಷ್ಟು ಇಷ್ಟವಾಗಿಬಿಟ್ಟಿತೆಂದರೆ ಇಲ್ಲೊಂದಷ್ಟು ಹೊತ್ತು ಇರೋಣ ಎಂದು ಕದಿವೇಲುಗೆ ಹೇಳಿ ಗುಂಪಿನಲ್ಲಿ ಒಂದಾಗಿ ಸೇರಿಹೋದಳು.  ಎಲ್ಲರ ಕೈ ಕುಲುಕಿದಳು, ಭುಜ ತಟ್ಟಿದಳು, ತಟ್ಟಿಸಿಕೊಂಡಳು, ಅವರಲ್ಲೊಬ್ಬ ಮುಂದೆ ಹಿಡಿದ ಲೋಟವನ್ನು ಎರಡೂ ಕೈಗಳಲ್ಲಿ ತೆಗೆದುಕೊಂಡು ಚಹಾ ಸವಿದಳು.  ಅಲ್ಲೇನು ನಡೆಯುತ್ತಿದೆಯೆಂದು ಅರಿತುಕೊಂಡುಬಿಟ್ಟಳು.  ಅರಿತು ನೊಂದುಕೊಂಡಳು.
ಗುಂಪಿನಲ್ಲಿ ಬೆಳ್ಳಗೆ ಎತ್ತರಕ್ಕೆ ನಿಂತಿದ್ದ, ಎಲ್ಲರಿಂದಲೂ "ಅರಿಸ್ಟಾಟಿಲ್" ಎಂದು ಕರೆಸಿಕೊಳ್ಳುತ್ತಿದ್ದ ಆದಿತ್ಯನೆಂಬ ಯುವಕ ಜೋನ್ ಮಾರ್ತೆ ಕಾರಿನಿಂದ ಇಳಿದಾಗಿನಿಂದಲೂ ಅವಳನ್ನೇ ನೋಡುತ್ತಾ ಏನೋ ಗಹನವಾದ ಮನಮಂಥನದಲ್ಲಿ ತೊಡಗಿದ್ದ.  ಪಾಂಡಿಚೆರಿ ವಿಶ್ವವಿದ್ಯಾಲಯದ ಪ್ರೊಫೆಸರರೊಬ್ಬರ ಏಕೈಕ ಸಂತಾನವಾದ ಅವನು ಆಗಾಗ ಎಲ್ಲೆಂದರಲ್ಲಿ ಹೀಗೆ ಮನಮಂಥನದಲ್ಲಿ ತೊಡಗಿಬಿಡುವುದು ಅವನ ಗೆಳೆಯಗೆಳತಿಯರೆಲ್ಲರಿಗೂ ಚೆನ್ನಾಗಿ ಗೊತ್ತಿರುವ ಸಂಗತಿ.  ಅವನು ಕೆಳತುಟಿಯನ್ನು ನವಿರಾಗಿ ಕಚ್ಚಿಕೊಳ್ಳುತ್ತಾ ಒಂದೇ ದಿಕ್ಕಿಗೆ ನೋಡುತ್ತಾ ನಿಂತುಬಿಟ್ಟನೆಂದರೆ ಅವನ ತಲೆಯೊಳಗೆ ಅಭೂತಪೂರ್ವ ಯೋಜನೆಯೊಂದು ಮೂರ್ತಗೊಳ್ಳುತ್ತಿದೆಯೆಂದೇ ಅರ್ಥ.  ಅವನು ಇದ್ದಕ್ಕಿದ್ದಂತೆ "ಹುಫ್" ಎಂದು ಒಮ್ಮೆ ಉಸಿರು ಹೊರಹಾಕಿ, ತಲೆಯನ್ನು ಒಮ್ಮೆ ಛಕ್ಕನೆ ಮೇಲೆತ್ತಿ ಕೆಳಗಿಳಿಸಿ, ಭುಜವನ್ನೊಮ್ಮೆ ಕುಣಿಸಿ ಸುತ್ತಲಿದ್ದವರತ್ತ ಮುಗುಳ್ನಕ್ಕನೆಂದರೆ ಜಟಿಲ ಪ್ರಶ್ನೆಯೊಂದಕ್ಕೆ ಉತ್ತರ ಸಿದ್ಧವಾಯಿತೆಂದೇ ಅರ್ಥ.  ಪ್ರಶ್ನೆಯೊಂದಕ್ಕೆ ಉತ್ತರ ಹೊಳೆದೊಡನೇ "ಯುರೇಕಾ!" ಎಂದು ಕೂಗುತ್ತಾ ಓಡದೇ ಮೈಮನಗಳನ್ನು ಹಗುರಾಗಿಸಿಕೊಂಡು ಮುಗುಳ್ನಕ್ಕು ತಣ್ಣನೆಯ ದನಿಯಲ್ಲಿ ಮಾತು ಆರಂಭಿಸುವುದು ಆದಿತ್ಯನ ಹುಟ್ಟುಗುಣ.  ಹೀಗಾಗಿಯೇ ಮಿತ್ರವಲಯ ಅವನನ್ನು ಅರ್ಕಿಮಿಡೀಸ್ ಎನ್ನದೇ ಅರಿಸ್ಟಾಟಿಲ್ ಎಂದು ಕರೆಯುವುದು.
ಬೇರೆಬೇರೆ ಕಾಲುಹಾದಿ ಹಿಡಿದು ಓಡುತ್ತಿದ್ದ ಕೀಳೂರಿನ ಹೆಂಗಸರು ಗಂಡಸರತ್ತ ಒಮ್ಮೆ ನೋಡಿ ಜೋನ್ ಮಾರ್ತೆಯತ್ತ ನಡೆದ ಆದಿತ್ಯ.  "ನಾನು ಆದಿತ್ಯ" ಎಂದು ಮುಗುಳ್ನಗುತ್ತಾ ಪರಿಚಯಸಿಕೊಂಡು ಕೈ ನೀಡಿದ.  ಅವನ ಕೈಗೆ ತನ್ನ ಕೈ ಕೂಡಿಸಿದ ಜೋನ್ "ಹಾಯ್" ಎಂದು ಉಲಿದು ಮತ್ತೇನೋ ಅನ್ನುವಷ್ಟರಲ್ಲಿ ಆದಿತ್ಯ "ನಿನ್ನಿಂದ ನಮಗೊಂದು ದೊಡ್ಡ ಉಪಕಾರವಾಗಬೇಕಾಗಿದೆ" ಎಂದು ತಣ್ಣಗೆ ಹೇಳಿ ನೇರವಾಗಿ ವಿಷಯಕ್ಕೆ ಬಂದ.  ಕುತೂಹಲದಲ್ಲಿ ಅರಳಿಕೊಂಡ ಜೋನ್‌ಳ ಕಣ್ಣುಗಳ ಮೇಲೇ ದೃಷ್ಟಿ ನೆಟ್ಟು ಮಾತು ತೆಗೆದ.  ಜೋನ್ ಆಸಕ್ತಿಯಿಂದ ಕೇಳಿಸಿಕೊಂಡಳು.  ಆದಿತ್ಯನ ಮಾತು ಮುಗಿಯುತ್ತಿದ್ದಂತೇ ಮಿತ್ರವಲಯ "ವಾಹ್ ವಾಹ್!  ಗ್ರೇಟ್ ಐಡಿಯಾ!  ಸೂಪರ್ ಸೂಪರ್!" ಎಂದು ಕೂಗಿ ಕುಣಿಯಿತು.  ಜೋನ್ ಮಾರ್ತೆಯಂತೂ "ನಾನಿದನ್ನು ಮಾಡಿಯೇ ಮಾಡುತ್ತೇನೆ, ಈಗಲೇ, ಈ ಕ್ಷಣವೇ" ಎಂದು ಪ್ರತಿಜ್ಞೆ ಕೈಗೊಂಡುಬಿಟ್ಟಳು.  ಎರಡು ಗಳಿಗೆ ಕಣ್ಣುಮುಚ್ಚಿ ತಲೆತಗ್ಗಿಸಿ ನಿಂತಿದ್ದವಳು ಫಕ್ಕನೆ ಕಣ್ಣುತೆರೆದು ಆದಿತ್ಯನತ್ತ ಕಣ್ಣುಮಿಟುಕಿಸಿ ಸಮುದ್ರದಲೆಗಳನ್ನೂ ಮೀರಿಸುವ ದೊಡ್ಡದನಿಯಲ್ಲಿ "ಬೈ ಬೈ" ಎಂದು ಎಲ್ಲರಿಗೂ ಹೇಳಿ ಕಾರಿನತ್ತ ನಡೆದು ಗಕ್ಕನೆ ನಿಂತಳು.  ಒಂದು ದಿಕ್ಕಿಗೆ ತಿರುಗಿ ಬಾಣದಂತೆ ಓಡುತ್ತಾ ಸಮುದ್ರತೀರದತ್ತ ಪೊದೆಗಳತ್ತ ಸಾಗಿದ್ದ ಒಂದು ಕಾಲುದಾರಿಯುದ್ದಕ್ಕೂ ಕುಲುಕುಲು ನಗೆ ಚೆಲ್ಲಿಕೊಂಡು ಹೋಗುತ್ತಿದ್ದ ಕೀಳೂರಿನ ಹೆಂಗೆಳೆಯರ ಗುಂಪನ್ನು ಸೇರಿಕೊಂಡಳು.  ಅಚ್ಚರಿಯಿಂದ ಕಣ್ಣರಳಿಸಿದ ಅವರಿಗೆ "ಇದು... ಇದು..." ಎನ್ನುತ್ತಾ ಬೆರಳೆತ್ತಿದಳು.  ಅವರೆಲ್ಲರಿಗೂ ಅರ್ಥವಾಗಿ "ಓಹೋಹೋ, ಬಾ ನಮ್ಮ ಜೊತೆ" ಎನ್ನುತ್ತಾ ನಕ್ಕರು.  ಒಬ್ಬಳಂತೂ ಜೋನ್ ಮಾರ್ತೆಯ ಕೈಹಿಡಿದು ತನ್ನ ಪಕ್ಕಕ್ಕೆ ಎಳೆದುಕೊಂಡಳು.  "ನಾನು ಹೇಳುವವರೆಗೂ ಅಪ್ಪಿತಪ್ಪಿಯೂ ಅತ್ತ ತಿರುಗಬೇಡಿ.  ನಾಟಕದ ಮೊದಲ ಅಂಕದ ಪರದೆ ಈಗಷ್ಟೇ ಮೇಲೆದ್ದಿದೆ" ಎಂದು ಗೆಳೆಯರಿಗೆ ಹೇಳಿದ ಆದಿತ್ಯ "ಚಾಯ್ ಇದೆಯಾ?" ಎನ್ನುತ್ತಾ ಕಣ್ಮಣಿಯತ್ತ ನಡೆದ.  "ಇದೆ, ನಿನಗೇ ಅಂತ ಇಟ್ಟಿದ್ದೇನೆ" ಎನ್ನುತ್ತಾ ಅವಳು ಫ್ಲಾಸ್ಕ್ ಎತ್ತಿಕೊಂಡಳು.
ಹತ್ತು ನಿಮಿಷಗಳಲ್ಲಿ ಹೆಂಗೆಳೆಯರ ಗುಂಪು ಧಾಪುಗಾಲಿಡುತ್ತಾ ಇತ್ತ ಬರುತ್ತಿತ್ತು.  ಅವರ ನಡುವಿನಿಂದ ಜೋನ್ ಮಾರ್ತೆ ಗಾಳಿಯನ್ನು ಬಗೆಯುವಂತೆ ಕೈಗಳನ್ನು ಆಡಿಸುತ್ತಾ "ಆದಿತಿಯಾ, ಮಿಸ್ತರ್ ಆದಿತಿಯಾ" ಎಂದು ಕೂಗುತ್ತಿದ್ದಳು.  "ಈಗ ನಾಟಕದ ಎರಡನೆಯ ಅಂಕ.  ಎಲ್ರೂ ನೋಡಿ" ಎನ್ನುತ್ತಾ ಆದಿತ್ಯ ಅವರತ್ತ ಓಡಿದ.
ಅವನು ಹತ್ತಿರಾದಂತೆ ಹೆಂಗೆಳೆಯರಲ್ಲೊಬ್ಬಳು ಗಾಬರಿಯ ದನಿಯಲ್ಲಿ "ಸಾರ್, ಇವರೇನೋ ಹೇಳ್ತಿದಾರೆ ಸಾರ್.  ನಮಗೆ ಸರಿಯಾಗಿ ಅರ್ಥ ಆಗ್ತಾ ಇಲ್ಲ ಸಾರ್.  ಭಯ ಆಗ್ತಿದೆ ಸಾರ್.  ಸ್ವಲ್ಪ ಇವರ ಮಾತನ್ನ ತಮಿಳಿನಲ್ಲಿ ಹೇಳಿ ಸಾರ್" ಅಂದಳು.
ಪೆಫ್ ಕಾರ್ಯಕರ್ತರಿಗೂ ಕೀಳೂರಿನ ಜನತೆಗೂ ಸಂಪರ್ಕ ಏರ್ಪಟ್ಟಿತ್ತು.
ಜೋನ್ ಸಮುದ್ರದತ್ತಲೂ ರಸ್ತೆಯತ್ತಲೂ ಕೈಯನ್ನು ತಿರುತಿರುಗಿಸುತ್ತಾ ಒಂದು ತಮಿಳು ಪದದ ಹಿಂದೆಮುಂದೆ ಎಡಬಲ ಹತ್ತು ಫ್ರೆಂಚ್ ಪದಗಳನ್ನು ಸಿಕ್ಕಿಸಿ ಏನೇನೋ ಒದರತೊಡಗಿದಳು.  ಅವಳ ಬಾಯಿಂದ "ಮೀನ್ ಇಲ್ಲೈ, ಸಾಪ್ಪಾಡ್ ಇಲ್ಲೈ" ಎಂಬ ಪದಗಳು ಮತ್ತೆ ಮತ್ತೆ ಹೊರಬರುತ್ತಿದ್ದವು.  ಕೊನೆಗೆ "ಸುನಾಮಿ" ಎಂಬ ಭಯಂಕರ ಪದ ಕೇಳುತ್ತಿದ್ದಂತೇ ಕೀಳೂರು ವನಿತೆಯರು ಕಂಗಾಲಾಗಿಹೋದರು.  ಆದಿತ್ಯನತ್ತ ಯಾಚನೆಯ ದೃಷ್ಟಿ ಬೀರಿದರು.
ಸಮಾಧಾನಿಸುವಂತೆ ಅವರತ್ತ ಕೈಯಾಡಿಸಿ ಆದಿತ್ಯ ಜೋನ್‌ಳತ್ತ ತಿರುಗಿ ಫ್ರೆಂಚ್‌ನಲ್ಲಿ ಪ್ರಶ್ನಿಸಿದ.  ಅದಕ್ಕೇ ಕಾದಿದ್ದಂತೆ ಅವಳು ಒಂದು ಹತ್ತು ನಿಮಿಷ ಉಸಿರೂ ತೆಗೆದುಕೊಳ್ಳದೇ ಬಡಬಡನೆ ನೂರಕ್ಕೆ ನೂರು ಫ್ರೆಂಚ್‌ನಲ್ಲಿ ಅರಚಾಡಿದಳು.  ಎರಡು ಸಲ ಬಿಕ್ಕಿದಳು.  ನಾಲ್ಕು ಸಲ ಕಣ್ಣಿಗೆ ಕರವಸ್ತ್ರ ಒತ್ತಿದಳು.  ಅವಳ ಮಾತುಗಳನ್ನು ಕೇಳುತ್ತಿದ್ದಂತೇ ಆದಿತ್ಯನ ಮುಖದಲ್ಲಿ ಹೆಪ್ಪುಗಟ್ಟತೊಡಗಿದ ಆತಂಕ, ಭಯಾಶ್ಚರ್ಯಭರಿತ ಸ್ತ್ರೀಸಂಕುಲವನ್ನು ಮತ್ತಷ್ಟು ದಿಕ್ಕೆಡಿಸಿತು.  ಅಷ್ಟರಲ್ಲಾಗಲೇ "ಎನ್ನಂಗೋ?  ಎನ್ನಾಚ್ಚಿಂಗೋ?" ಎನ್ನುತ್ತಾ ಕೀಳೂರಿನ ಸಮಸ್ತ ಸ್ತ್ರೀಸಂಕುಲ ಅಲ್ಲಿ ಜಮಾಯಿಸಿಬಿಟ್ಟಿತ್ತು.
ಜೋನ್ ಮಾತು ಮುಗಿಸಿ ಕಣ್ಣಿಗೆ ಕರವಸ್ತ್ರ ಒತ್ತಿ ಕೆಳಗೆ ಕುಕ್ಕರಿಸಿದಳು.  ಅವಳ ಭುಜ ಸವರುತ್ತಾ ಆದಿತ್ಯ ಕೀಳೂರು ವನಿತೆಯರಿಗೆ ಅಚ್ಛತಮಿಳಿನಲ್ಲಿ "ಇವರ ಮಾತು ಕೇಳಿದ್ರೆ ಭಯ ಆಗುತ್ತೆ" ಅಂದ.  "ಏನು ಸಾರ್, ದಯವಿಟ್ಟು ಎಲ್ಲಾನೂ ತಮಿಳಿನಲ್ಲಿ ಹೇಳಿ" ಎಂದು ಮೂರುನಾಲ್ಕು ಸ್ತ್ರೀಕಂಠಗಳು ಒರಲಿದವು.  ತಾನೂ ಒಮ್ಮೆ ಕಣ್ಣಿಗೆ ಕರವಸ್ತ್ರ ಒತ್ತಿಕೊಂಡು ಆದಿತ್ಯ ಆರಂಭಿಸಿದ:
"ಇದೊಂದು ದುರಂತಕಥೆ.  ಮನುಷ್ಯ ತನ್ನ ಕೈಯಾರೆ ತಾನೆ ಮಾಡಿಕೊಂಡದ್ದು.  ಇವರ ತಂದೆಯ ಊರು ಫ್ರಾನ್ಸ್‌ನ ಆಟ್ಲಾಂಟಿಕ್ ಮಹಾಸಾಗರತೀರದ ಒಂದು ಹಳ್ಳಿ.  ಹಳ್ಳಿಯ ಮುಕ್ಕಾಲುಪಾಲು ಜನ ಮೀನುಗಾರರು.  ಇವರ ತಾತನೂ ಸಹಾ.  ಇಲ್ಲಿರೋ ಹಾಗೇ ಆ ಊರಿನ ಸಮುದ್ರತೀರದಲ್ಲೂ ಸಖತ್ ಮ್ಯಾಂಗ್ರೋವ್ ಕಾಡುಗಳಿದ್ದವಂತೆ.  ಯಾವ ಅಲೆಯೂ ಅದನ್ನ ದಾಟಿ ಊರಿಗೆ ಬರುತ್ತಿರಲಿಲ್ಲ.  ಇವರಿಗೆ ದಿನವೂ ಹಿಡಿದಷ್ಟು ಮೀನು.  ಎಲ್ಲರದೂ ನೆಮ್ಮದಿಯ ಬದುಕು."  ಒಮ್ಮೆ ಉಸಿರೆಳೆದುಕೊಂಡು ಮುಂದುವರೆಸಿದ: "ಹದಿನೈದು ವರ್ಷಗಳ ಹಿಂದೆ ಸಮುದ್ರತೀದಲ್ಲಿದ್ದ ಪುಟ್ಟರಸ್ತೆಯನ್ನ ಅಗಲ ಮಾಡಿ ಹೈವೇ ಮಾಡಿದರಂತೆ.  ಪ್ಯಾರಿಸ್ ಮತ್ತು ಬೋರ್ಡೋ ಎಂಬ ಎರಡು ಮಹಾನಗರಗಳ ನಡುವೆ ಆ ರಸ್ತೆ ಶಾರ್ಟ್‌ಕಟ್ ಆಗಿ ಅಲ್ಲಿ ಟ್ರಕ್ಕುಗಳು, ಬಸ್ಸುಗಳು, ಕಾರುಗಳು, ಟ್ಯಾಂಕಗಳು ಇಪ್ಪತ್ತನಾಲ್ಕು ಗಂಟೆಗಳು ಓಡಾಡೋದಿಕ್ಕೆ ಶುರು ಆಯ್ತಂತೆ.  ಅಲ್ಲಿಗೆ ಆ ಊರಿನ ನೆಮ್ಮದಿ ಕೊನೆಯಾಯ್ತಂತೆ.  ವಾಹನಗಳ ಧೂಳು ಹೊಗೆಯಿಂದಾಗಿ ಆರೇ ತಿಂಗಳಲ್ಲಿ ಮ್ಯಾಂಗ್ರೋವ್ ಕಾಡುಗಳ ಮರಗಳೆಲ್ಲಾ ಬೋಳಾಗಿಹೋದವಂತೆ.  ಇನ್ನೆರಡುತಿಂಗಳಲ್ಲಿ ಮರಗಳೆಲ್ಲಾ ಸತ್ತು ಕೊಳೆತು ಇಡೀ ಸಮುದ್ರದ ನೀರು ಗಬ್ಬೆದ್ದುಹೋಯಿತಂತೆ.  ಅಲ್ಲಿದ್ದ ಮೀನುಗಳ ಮೈತುಂಬಾ ಅದೆಂಥದೋ ವಿಷ ತುಂಬಿಕೊಂಡು ಅದನ್ನ ತಿಂದ ಸಾವಿರಾರು ಜನ ಒಂದೇ ದಿನದಲ್ಲಿ ಸತ್ತುಹೋದರಂತೆ.  ಸತ್ತುಹೋದವರಲ್ಲಿ ಈಯಮ್ಮನ ಅಜ್ಜಅಜ್ಜಿಯೂ ಇದ್ದರಂತೆ."  ನಿಲ್ಲಿಸಿದ.  ಜೋನ್ ಭಯಂಕರವಾಗಿ ಬಿಕ್ಕಿದಳು.  "ಹಂಗಾಯ್ತಾ!" ಎಂದು ಒಬ್ಬಾಕೆ ಮೂಗಿನ ಮೇಲೆ ಬೆರಳಿಟ್ಟುಕೊಂಡರೆ ಉಳಿದವರು ಕೈಯೇ ಮೇಲೇಳದಷ್ಟು ಬೆದರಿ ನಿಂತಿರಲು ಆದಿತ್ಯ ಮಾತು ಮುಗಿಸಿದ: "ಊರಿಗೆ ಊರೇ ನಾಶವಾಗಿಹೋಯಿತಂತೆ.  ಅಲ್ಲೊಂದು ಊರಿತ್ತು ಅನ್ನೋ ಕುರುಹೂ ಇಲ್ಲವಂತೆ ಈಗ.  ಇಲ್ಲಿ ಈ ಸಮುದ್ರ, ಈ ಮ್ಯಾಂಗ್ರೋವ್ ಕಾಡು, ಈ ರಸ್ತೆ- ಎಲ್ಲಾನೂ ನೋಡಿದ ಕೂಡಲೇ ಇವರಿಗೆ ಅದೆಲ್ಲಾ ನೆನಪಿಗೆ ಬಂದುಬಿಡ್ತಂತೆ."
ಅಲ್ಲಿ ದಟ್ಟಮೌನ ಆವರಿಸಿತು.  ಸಮುದ್ರವೂ ಮೌನವಾಗಿಬಿಟ್ಟಿತು.  ನಿಮಿಷಗಳ ನಂತರ ಒಬ್ಬೊಬ್ಬರಾಗಿ ಬಾಯಿ ತೆರೆದರು.  ಏನೇನೋ ಪ್ರಶ್ನೆ ಕೇಳಿದರು.  ಆದಿತ್ಯ ಅವೆಲ್ಲವನ್ನೂ ಜೋನ್‌ಗೆ ಫ್ರೆಂಚ್‌ನಲ್ಲಿ ಕೇಳಿ `ಉತ್ತರ' ಪಡೆದು ನೆರೆದಿದ್ದ ವನಿತಾಮಂಡಳಿಗೆ ತಮಿಳಿನಲ್ಲಿ ಅರುಹಿದ.  ಕೊನೆಯಲ್ಲಿ ಒಬ್ಬಾಕೆ "ಆ ರಸ್ತೆ ಏನಾಯ್ತಂತೆ?" ಅಂದಳು.  ಆದಿತ್ಯ ಆ ಪ್ರಶ್ನೆಯನ್ನು ಫ್ರೆಂಚ್‌ಗೆ ಭಾಷಾಂತರಿಸಲು ಬಾಯಿ ತೆರೆಯುತ್ತಿದ್ದಂತೇ ಮತ್ತೊಬ್ಬಾಕೆ "ರಸ್ತೆಯಂತೆ ರಸ್ತೆ!  ಊರನ್ನೇ ಎಕ್ಕುಟ್ಟಿಸಿಬಿಟ್ಟ ಆ ರಸ್ತೆ ಏನಾದ್ರೆ ನಮಗೇನಂತೆ?" ಎಂದು ಅರಚಿದಳು.  "ಅಂಥಾ ರಸ್ತೆ ಇದ್ರೆಷ್ಟು ಬಿಟ್ರೆಷ್ಟು?" ಮತ್ತೊಬ್ಬಾಕೆ ಕೂಗಿದಳು.  "ನರಕದ ರಸ್ತೆ ಕಣವ್ವ ಅದೂ.  ಅಂಥಾ ರಸ್ತೆ ಎಲ್ಲೂ ಇರಬಾರ್ದು.  ಈ ಪರಂಗಿ ದೊರೆಸಾನಿ ಹೀಗೆ ಅಳೋದನ್ನ ನೋಡಿದ್ರೆ ನನ್ ಕರುಳೇ ಕಿತ್ತುಹೋಗುತ್ತೆ."  ಮುದುಕಿಯೊಬ್ಬಳು ಮರುಗಿದಳು.  ಮರುಕ್ಷಣ ಹತ್ತಾರು ಯುವತಿಯರು ಜೋನ್‌ಳ ಸುತ್ತಲೂ ಕುಸಿದು ಅವಳನ್ನು ತಬ್ಬಿಕೊಂಡು "ಅಳಬೇಡಿ, ಅಳಬೇಡಿ" ಎಂದು ಸಮಾಧಾನಿಸತೊಡಗಿದರು.  ಅವರೂ ಅಳುತ್ತಿದ್ದರು.
ಕೀಳೂರಿನ ಹೆಂಗಸರೆಲ್ಲರೂ ಈ ರಸ್ತೆ ಬೇಡವೇ ಬೇಡ ಎಂದು ಆ ಗಳಿಗೆಯಲ್ಲೇ ತೀರ್ಮಾನಿಸಿಬಿಟ್ಟರು.  ತಮ್ಮೂರಿಗೆ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲೇಬೇಕೆಂದು ಎಲ್ಲರೂ ಒಕ್ಕೊರಲಿನಲ್ಲಿ ಕೂಗು ಹಾಕಿದರು.  ಒಬ್ಬೊಬ್ಬಳೂ ಒಂದೊಂದು ದಿಕ್ಕಿಗೆ ಓಡಿಹೋಗಿ ತಂತಮ್ಮ ಗಂಡಂದಿರಿಗೆ, ಅಪ್ಪಂದಿರಿಗೆ, ಅಣ್ಣತಮ್ಮಂದಿರಿಗೆ ಜೋನ್‌ಳ ಕಥೆ ಹೇಳಿ "ಏಳು ಎದ್ದೇಳು, ಮಾಡು ಇಲ್ಲವೇ ಮಡಿ" ಎಂದೆಲ್ಲಾ ಹುರಿದುಂಬಿಸಿ ಅಖಾಡಕ್ಕೆ ಇಳಿಸಿಯೇಬಿಟ್ಟರು.  ತಾವೇ ಮುಂದಾಗಿ ಜಲ್ಲಿ ಕಲ್ಲುಗಳನ್ನು ಕೈಗೆತ್ತಿಕೊಂಡು ನಿಂತರು.  ಧೀರ್ಘಕಥೆಯೊಂದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಹೆಂಗಸರೆಲ್ಲಾ ಆಗಷ್ಟೇ ಕಣ್ಣುಜ್ಜಿಕೊಂದು ಬರುತ್ತಿದ್ದ ರಸ್ತೆಕೆಲಸಗಾರರ ತಿಕಮುಖಕ್ಕೆಲ್ಲಾ ಜಲ್ಲಿಕಲ್ಲುಗಳಿಂದ ಬಾರಿಸತೊಡಗಿದರೆ ಗಂಡಸರೆಲ್ಲಾ ಗುದ್ದಲಿ ಪಿಕಾಸಿಗಳನ್ನು ಕೈಗೆತ್ತಿಕೊಂಡು ಮೂರು ದಿನದ ಹಿಂದಷ್ಟೇ ಒಂದು ಪಕ್ಕಕ್ಕೆ ಟಾರ್ ಮೆತ್ತಿಸಿಕೊಂಡು ಹೊಳೆಯುತ್ತಿದ್ದ ರಸ್ತೆಯನ್ನು ಎಲ್ಲೆಂದೆರಲ್ಲಿ ದಬದಬ ಅಗೆದುಬಿಟ್ಟರು...
ಕಾಕತಾಳೀಯವೆಂಬಂತೆ ಈ ಘಟನೆಗೂ ನಮ್ಮ ಕಥಾನಾಯಕ ಪಿಚ್ಚಮುತ್ತು ಸಾಕ್ಷಿಯಾಗಿದ್ದ.  ಕಾತ್ತಾಯಿ ಅವನನ್ನು ಅಂದೂ ಮೀನು ತರಲು ಬೆಳಿಗ್ಗೆ ಬೆಳಿಗ್ಗೆಯೇ ಕೀಳೂರಿಗೆ ಕಳುಹಿಸಿದ್ದಳು.
ಅದ್ಯಾಯಾರೋ ಬಂದುಹೋದರು.  ಅದೇನೇನೋ ಮಾತಾಡಿದರು.  ಮುನಿಸಿಕೊಂಡವರಂತೆ ಕೀಳೂರಿಗರ ಜತೆ ಮಾತೇ ಆಡಲಿಲ್ಲ.  ಅದೇ ಜನ ಗುಮ್ಮಿಡಿಪಾಳ್ಯದ ಪೆರಿಯಕುಳಂ ಕೆರೆಏರಿಯ ಮೇಲೂ ಕಾಣಿಸಿಕೊಂಡು ನೆಲ ಅಳೆದು ಅಲ್ಲಲ್ಲಿ ಗೆರೆ ಎಳೆದು ಗುರುತು ಮಾಡಿಹೋದರು.

*     *     *

ಮೂವತ್ತೆರಡರ ಪಿಚ್ಚಮುತ್ತು ಗುಮ್ಮಿಡಿಪಾಳ್ಯದಲ್ಲಿ ಮನೆಯ ಮುಂದೇ ಒಂದು ಪುಟ್ಟ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದಾನೆ.  ಅಲ್ಲಿರುವುದು ಬೀಡಿ, ಬೆಂಕಿಪೊಟ್ಟಣ, ಬಾಳೆಹಣ್ಣು, ಹುರಿಗಡಲೆ, ಎಲೆಅಡಿಕೆ, ಅಕ್ಕಿ ಮತ್ತು ಮೂರುನಾಲ್ಕು ಕಾಳುಗಳು.  ಜತೆಗೇ ಹೆಂಡತಿ ಕಾತ್ತಾಯಿ ಮನೆಯಲ್ಲೇ ಮಾಡಿ ತಂದಿಡುವ ವಡೆ ಹಾಗೂ ಮೆಣಸಿನಕಾಯಿ ಬಜ್ಜಿ.  ಪಿಚ್ಚಮುತ್ತು ವಾರಕ್ಕೆರಡು ಸಲ ಸೈಕಲ್ಲಿನಲ್ಲಿ ಹತ್ತು ಕಿಲೋಮೀಟರ್ ದೂರದ ಮರಕ್ಕಾಣಂಗೆ ಹೋಗಿ ಸಾಮಾನು ತರುತ್ತಾನೆ.  ಅವನು ಹೀಗೆ ಹೋದಾಗಲೆಲ್ಲಾ ಕಾತ್ತಾಯಿ ವ್ಯಾಪಾರ ಮಾಡುತ್ತಾಳೆ.  ಇಪ್ಪತ್ತಾರರ ಅವಳಿಗೆ ಊರಿನ ಏಕೈಕ ಅಂಗಡಿಯ ಮಾಲಕಿ ತಾನು ಎಂಬ ಹೆಮ್ಮೆ ಇದೆ.  ವಾರಕ್ಕೆ ಎರಡುಮೂರು ಸಲವಾದರೂ ಕಾತ್ತಾಯಿ ಮೀನು ತರಲೆಂದು ಗಂಡನನ್ನು ಕೀಳೂರಿಗೆ ಕಳಿಸುತ್ತಾಳೆ.  ಬೆಳಿಗ್ಗೆ ಬೆಳಿಗ್ಗೆಯೇ ಹೋದರೆ ಒಳ್ಳೇ ಮೀನು ಸಿಗುತ್ತದೆ ಎಂಬ ಅವಳ ಮಾತಿಗೆ ಅವನ ಸಂಪೂರ್ಣ ಸಹಮತ ಇದ್ದರೂ ಒಮ್ಮೊಮ್ಮೆ ಹಠ ಹಿಡಿದವನಂತೆ ಸಾಯಂಕಾಲವೇ ಹೋಗುತ್ತಾನೆ.  ಈಗ ಹೋದರೆ ಅದ್ಭುತ ರುಚಿಯ ವಂಜಿರಂ ಮೀನು ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಹೇಳುತ್ತಾನೆ.  ಎಲ್ಲ ಬಲ್ಲ ಕಾತ್ತಾಯಿ ನಗುತ್ತಾಳೆ.
ಕೀಳೂರಿನಿಂದ ಗುಮ್ಮಿಡಿಪಾಳ್ಯಕ್ಕೆ ನೇರ ಕಾಲುದಾರಿ ಇದೆ.  ಅದರ ಹೊರತಾಗಿ ಸಮುದ್ರತೀರದಲ್ಲಿ ಸ್ವಲ್ಪ ದೂರ ಹರಿದು ಹಳೆಯ ಕೋಟೆಯೊಂದನ್ನು ಬಳಸಿ ಒಳನಾಡಿಗೆ ತಿರುಗಿ ನುಲಿದುಕೊಂಡು ಹೋಗುವ ಬಳಸುದಾರಿಯೂ ಇದೆ.  ಈ ಹಳೆಯ ಕೋಟೆ ಮೂರೂವರೆ ಶತಮಾನಗಳ ಹಿಂದೆ ಡಚ್ಚರು ಕಟ್ಟಿಸಿದ್ದು.
ಪಿಚ್ಚಮುತ್ತು ಸಂಜೆಯ ಹೊತ್ತಿನಲ್ಲಿ ಮೀನು ತರಲು ಕೀಳೂರಿಗೆ ಹೋದಾಗಲೆಲ್ಲಾ ಈ ಬಳಸು ಹಾದಿಯಲ್ಲೇ ಹಿಂತಿರುಗುತ್ತಾನೆ.  ಕೋಟೆಯ ಹತ್ತಿರವಿರುವ ಕಳ್ಳಂಗಡಿಯಲ್ಲಿ ಮಿತಿಯಲ್ಲಿ ಒಂದಷ್ಟು ಏರಿಸಿ ಊರು ಸೇರುವುದು ಅವನ ಪ್ರಿಯ ಅಭ್ಯಾಸ.
ಕೀಳೂರಿನ ಜನತೆ ರಸ್ತೆ ಕೆಲಸವನ್ನು ನಿಲುಗಡೆಗೆ ತಂದ ಘಟನೆಗೆ ಪಿಚ್ಚಮುತ್ತು ಪ್ರತ್ಯಕ್ಷ ಸಾಕ್ಷಿಯಾಗಿದ್ದನಷ್ಟೆ.  ಅದಾದ ತಿಂಗಳಲ್ಲಿ ಅವನು ಸೈಕಲ್ಲಿನ ಹ್ಯಾಂಡಲ್‌ಗೆ ಮೀನಿದ್ದ ಚೀಲನ್ನು ತೂಗುಹಾಕಿಕೊಂಡು ಕಳ್ಳುಕನಸಿನಲ್ಲಿ ತೇಲುತ್ತಾ ಕೋಟೆಯನ್ನು ಸಮೀಪಿಸುತ್ತಿದ್ದಂತೇ ಅಚಾನಕ್ಕಾಗಿ ವಾಸ್ತವಕ್ಕಿಳಿದ.  ಒಬ್ಬಳು ಬಿಳೀ ಚೆಲುವೆ ಆ ಹಳೆಯ ಕೋಟೆಯ ಮುಂದೆ ದಿಕ್ಕಿಲ್ಲದವಳಂತೆ ನಿಂತಿದ್ದು ಕಂಡು ಅವನು ದಂಗಾಗಿಹೋದ.  ಸೈಕಲ್‌ನ ವೇಗ ತಾನಾಗಿಯೇ ಕುಂಠಿತಗೊಂಡಿತು.  ಅದೇ ಗಳಿಗೆಗೆ ಸರಿಯಾಗಿ ಅವಳೂ ಇತ್ತ ಹೊರಳಿದಳು.  ಇಬ್ಬರಿಗೂ ಗುರುತು ಹತ್ತಿತ್ತು.
ಕೀಳೂರಿನ ಹೆಂಗಸರ ರಣನರ್ತನದ ಸಮಯದಲ್ಲಿ ಆ ದೇಸೀ ಕಪ್ಪು ಹೆಣ್ಣುಗಳ ನಡುವೆ ಬೆಳ್ಳಗೆ ಹೊಳೆಯುತ್ತಿದ್ದ ಪರಂಗಿ ಹೆಣ್ಣನ್ನು ಪಿಚ್ಚಮುತ್ತು ಹೇಗೆ ತಾನೆ ಮರೆಯಬಲ್ಲ?
ಕೀಳೂರಿನ ಹೆಂಗಸರು ಕಲ್ಲುಗಳನ್ನೆತ್ತಿಕೊಂಡಾಗ, ಆಗಷ್ಟೇ ಮೀನು ಕೊಳ್ಳುವ ನೆಪದಲ್ಲಿ ಎಳೆಯ ಮೀನುಗಾರ್ತಿಯೊಬ್ಬಳಿಗೆ ಏನೋ ತಮಾಷೆಗೆ ಅಂತ ಒಂದು ಮಾತು ಅಂದಿದ್ದ ತನ್ನ ಮೇಲೇ ಇವರೆಲ್ಲಾ ಎರಗಲಿದ್ದಾರೆ ಎಂದು ಹೆದರಿ ಸೈಕಲ್ಲನ್ನು ಗಡಗಡ ಓಡಿಸಲು ಹೋಗಿ ಜಲ್ಲಿಕಲ್ಲುಗಳ ರಾಶಿಗೆ ಗುದ್ದಿ ಬಿದ್ದು, ಹೆಂಗಸರು ಕಲ್ಲುಗಳನ್ನೆತ್ತಿಕೊಳ್ಳಲು ಅಲ್ಲಿಗೇ ಬಂದಾಗ "ಅಯ್ಯಯ್ಯೋ ಬ್ಯಾಡ ಬ್ಯಾಡಾ" ಎಂದು ಬಿದ್ದಲ್ಲಿಂದಲೇ ಅರಚಿಕೊಂಡು ಆ ಕುರುಕ್ಷೇತ್ರದಲ್ಲೂ ನಗೆಯ ಅಲೆಯೆಬ್ಬಿಸಿದವನನ್ನು ಜೋನ್ ಹೇಗೆ ತಾನೆ ಮರೆಯುತ್ತಾಳೆ?  ಅವನತ್ತ "ಹಾಯ್"ಗರೆದು ನಸುನಕ್ಕಳು.
ಜೀವನದಲ್ಲಿ ಮೊತ್ತಮೊದಲ ಬಾರಿಗೆ ಬಿಳಿಯ ಹೆಣ್ಣೊಂದು ತನಗೊಬ್ಬನಿಗೇ ಹಾಯ್ ಎಂದಾಗ, ನಸುನಕ್ಕಾಗ ಪಿಚ್ಚಮುತ್ತು ರೋಮಾಂಚನಗೊಂಡುಬಿಟ್ಟ.  ಹಿಂದೆಯೇ ತನ್ನ ನಗೆಪಾಟಲಿನ ಪ್ರಹಸನ ನೆನಪಾಗಿ ಸಂಕೋಚಗೊಂಡು ಧಡಕ್ಕನೆ ಸೈಕಲ್‌ನಿಂದ ಕೆಳಗಿಳಿದ.  ಮುಂದೇನೆಂದು ತೋಚದೇ ಹಲ್ಲುಬಿಟ್ಟ.  ಜೋನ್ ತಾನಾಗಿಯೇ ಹತ್ತಿರ ಬಂದಳು.  ಆ ಭೂತಕೋಟೆಯಲ್ಲಿ ಒಂಟಿಯಾಗಿ ಗಂಟೆಗಟ್ಟಲೆ ಅಲೆದಾಡಿದ್ದ ಅವಳಿಗೂ ಯಾರೊಡನಾದರೂ ಮಾತಾಡಬೇಕೆನಿಸಿತ್ತೇನೋ.  ತನ್ನ ಹೆಸರು ಹೇಳಿದಳು, ಅವನ ಹೆಸರು ಕೇಳಿದಳು.  ಅವನು ಹೆಸರು ಹೇಳಿದಾಗ "ಪೀಷಮೂಥು ಪೀಷಮೂಥು" ಎಂದು ಗುನುಗುನಿಸಿದಳು.  ಪಿಚ್ಚಮುತ್ತುವಿಗೆ ಮತ್ತೊಮ್ಮೆ ರೋಮಾಂಚನವಾಯಿತು.  ಮುಂದಿನ ಹತ್ತು ನಿಮಿಷಗಳಲ್ಲಿ, ತಾನು ಹೆಂಡತಿಯ ಮಾತಿನಂತೆ ಮೀನು ಕೊಂಡುಕೊಂಡು ಹೋಗುತ್ತಿರುವುದನ್ನು ಅವನು ಅವಳಿಗೂ, ತಾನು ಈ ಕೋಟೆಯ ಬಗ್ಗೆ ವಿಷಯ ಸಂಗ್ರಹಿಸುತ್ತಿರುವುದಾಗಿ ಅವಳು ಅವನಿಗೂ ಅರುಹಿ ಪರಿಚಯ ಮಾಡಿಕೊಂಡರು.  ಅವನು ಅವಳ ಕೋರಿಕೆಯ ಮೇಲೆ ಚೀಲ ಬಿಡಿಸಿ ಬಾಳೆಲೆಯಲ್ಲಿ ಬೆಚ್ಚಗೆ ಮಲಗಿದ್ದ ಮೊಳದುದ್ದದ ಎರಡು ವಂಜಿರಂ ಮೀನುಗಳನ್ನು ಅವಳಿಗೆ ತೋರಿಸಿದ.  ಅವನು ಕೇಳದೇ ಇದ್ದರೂ ಅವಳು ಕೈಲಿದ್ದ ನೋಟು ಪುಸ್ತಕ ಬಿಡಿಸಿ ತಾನು ರಚಿಸಿದ್ದ ಕೋಟೆಯ ರೇಖಾಚಿತ್ರವನ್ನೂ, ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ವಿವಿಧ ಚಿತ್ರಗಳನ್ನೂ ತೋರಿಸಿದಳು.
ಕತ್ತಲಾಗುತ್ತಿತ್ತು.
"ನಾನು ಪಾಂಡಿಚೆರಿಗೆ ಬಸ್ಸು ಹಿಡೀಬೇಕು.  ನನ್ನನ್ನ ನಿನ್ನ ಸೈಕಲ್‌ನಲ್ಲಿ ಕೂನಿಮೇಡು ಬಸ್‌ಸ್ಟಾಪ್‌ವರೆಗೆ ಕರಕೊಂಡು ಹೋಗ್ತಿಯೇನು?"  ಜೋನ್‌ಳ ಬೇಡಿಕೆಯಿಂದ ಪಿಚ್ಚಮುತ್ತು ನಾಚಿಕೊಂಡುಬಿಟ್ಟ.  "ಬೇಕಾದ್ರೆ ನಾನೇ ಪೆಡಲ್ ಮಾಡ್ತೀನಿ, ನೀನು ಹಿಂದೆ ಕೂತುಕೋ" ಎಂದವಳು ಅಂದಾಗಂತೂ ಅವನು ಮತ್ತೂ ಭಯಂಕರವಾಗಿ ನಾಚಿಕೊಂಡ.  "ಬ್ಯಾಡಬ್ಯಾಡಾ.  ನಾನೇ ಪೆಡಲ್ ತುಳೀತೀನಿ" ಎಂದು ಪಿಸುಗಿದ.  ಜೋನ್ "ನೈಸ್ ನೈಸ್" ಎನ್ನುತ್ತಾ ಛಂಗನೆ ಹಾರಿ ಕ್ಯಾರಿಯರ್ ಏರಿದಳು.  ಪಿಚ್ಚಮುತ್ತು ಕಳ್ಳನ್ನು ಮರೆತೇಬಿಟ್ಟ.
ತಡವಾಗಿ ಮನೆಗೆ ಬಂದ ಗಂಡನಿಂದ ಕಳ್ಳಿನ ಪರಿಮಳ ಬಾರದೇ ಇದ್ದುದನ್ನೂ, ಆದರೂ ಅವನು ಉಲ್ಲಾಸದಿಂದಿರುವುದನ್ನೂ ಕಂಡು ಕಾತ್ತಾಯಿ ಕಣ್ಣರಳಿಸಿದಳು.  ಅವನು "ದಾರೀಲೀ ಹೀಗೇ ಯಾರೋ ಸಿಕ್ಕಿದ್ರು" ಅಂದ.  ತುಂಬಾ ಬೇಕಾದವರಿರಬೇಕು ಅಂದುಕೊಂಡಳು ಕಾತ್ತಾಯಿ.
ಮರುದಿನ ಊರ ಮುಕ್ಕಾಲು ಪಾಲು ಜನ ಹೊಲಗಳಲ್ಲಿ ಗೇರುಬನಗಳಲ್ಲಿ ಗೇಯುತ್ತಾ ಊರು ಭಣಗುಡುತ್ತಿದ್ದ ಮಧ್ಯಾಹ್ನದ ಹೊತ್ತಿನಲ್ಲಿ ಮನೆಯೊಳಗೆ ಕಾತ್ತಾಯಿ ಸಂಜೆಯ ವ್ಯಾಪಾರಕ್ಕೆಂದು ಬಜ್ಜಿ ಕರಿಯುತ್ತಿದ್ದಳು.  ಹೊರಗೆ ಗಲಾಟೆ ಕೇಳಿ ಗಡಬಡಿಸಿ ಹೊರಬಂದು ನೋಡಲಾಗಿ ನಾಕೈದು ಜನ ಪೋಲೀಸರು ಅಂಗಡಿಯೊಳಗಿಂದ ಪಿಚ್ಚಮುತ್ತುವನ್ನು ಹೊರಗೆಳೆದು ಕೈಗೆ ಕೋಳ ತೊಡಿಸುತ್ತಿದ್ದುದನ್ನು ಕಂಡು ಬೆವತುಹೋದಳು.  ಅವಳ ಕಣ್ಣೆದುರೇ ಆ ಜನ ಪಿಚ್ಚಮುತ್ತುವನ್ನು ಎತ್ತಿ ವ್ಯಾನಿನೊಳಗೆ ಒಗೆದು ಹೊರಟೇಹೋದರು.  ದಿ~ಘ್ಮೂಢಳಾಗಿ ನಿಂತವಳಿಗೆ ಪರಿಸ್ಥಿತಿಯ ಅರಿವು ತಟ್ಟಲು ಐದಾರು ನಿಮಿಷಗಳೇ ಬೇಕಾದವು.  ಸುತ್ತಲೂ ನೋಡಿದವಳಿಗೆ ಕಂಡದ್ದು ಗರಬಡಿದಂತೆ ನಿಂತಿದ್ದ ಹತ್ತಾರು ಚಿಳ್ಳೆಪಿಳ್ಳೆಗಳು, ಇಬ್ಬರು ಮುದುಕಿಯರು, ಎದುರಿನ ತಿರುವಿನಲ್ಲಿ ನಿಧಾನವಾಗಿ ಕರಗುತ್ತಿದ್ದ ಧೂಳು.  ಸೆರಗ ತುದಿಯನ್ನು ಎಡಗೈಯಲ್ಲಿ ಹಿಡಿದು ಅಣ್ಣ ಕಣ್ಣನ್ ಕೆಲಸಮಾಡುತ್ತಿದ್ದ ಗೇರುಬನಕ್ಕೆ ಒಂದೇ ಉಸಿರಿನಲ್ಲಿ ಓಡಿದಳು...
ಕಣ್ಣನ್ ಮರಕ್ಕಾಣಂ ಪೋಲೀಸ್ ಸ್ಟೇಷನ್‌ನಿಂದ ಹಿಂತಿರುಗಿದ್ದು ಕಾಡುಗತ್ತಲು ಗಂವ್‌ಗುಟ್ಟಿದ ಮೇಲೇ.  ಇಡಿ ಮಧ್ಯಾಹ್ನದಿಂದಲೂ ಬೇರೇನೂ ತೋಚದೇ ಅಳುತ್ತಲೇ ಕುಳಿತಿದ್ದ ಕಾತ್ತಾಯಿಯ ಮುಂದೆ ಸುಸ್ತಾಗಿ ಕೂತವನು ಒಂದು ಚೊಂಬು ನೀರು ಕೇಳಿ ತರಿಸಿಕೊಂಡು ಗಟಗಟನೆ ಕುಡಿದು ಸುಧಾರಿಸಿಕೊಂಡು ಪುರುಚಲು ಗಡ್ಡವನ್ನು ಒಮ್ಮೆ ಕೆರೆದುಕೊಂಡು ಕಥೆ ಹೇಳಿದ.  ಅವನ ಪ್ರಕಾರ ಪಿಚ್ಚಮುತ್ತು ಅರೆಸ್ಟ್ ಆಗಿರುವುದು ಒಂದು ಪರಂಗಿ ಹೆಂಗಸಿನ ನಾಪತ್ತೆಯ ಸಂಬಂಧದಲ್ಲಿ.  ನಿನ್ನೆ ಸಾಯಂಕಾಲ ಅವನು ಆ ಹೆಂಗಸನ್ನು ಕೋಟೆಯ ಬಳಿ ಸೈಕಲ್ಲಿನ ಮೇಲೆ ಕೂರಿಸಿಕೊಂಡು ಹೊರಟಿದ್ದನ್ನು ಜನ ನೋಡಿದ್ದಾರಂತೆ.  ಆನಂತರ ಆ ಹೆಂಗಸನ್ನು ಯಾರೂ ನೋಡಿಲ್ಲವಂತೆ.  ಪಾಂಡಿಚೆರಿಯ ದೊಡ್ಡದೊಡ್ಡ ಜನ ಪತ್ತೆಗಿಳಿದು ಇದೊಂದು ಭಾರೀ ಕೇಸ್ ಆಗಿಬಿಟ್ಟಿದೆಯಂತೆ.  ಪಿಚ್ಚಮುತ್ತುವಿಗೆ ಮರಕ್ಕಾಣಂ ಪೋಲೀಸ್ ಸ್ಟೇಷನ್‌ನಲ್ಲಿ ತುಂಬಾ ಹೊಡೆದುಬಿಟ್ಟರಂತೆ.  ಅವನು ಗೋಳೋ ಎಂದು ಅಳುತ್ತಾ ಆಯಮ್ಮನ್ನ ಕೂನಿಮೇಡು ಬಸ್‌ಸ್ಟಾಪ್‌ನಲ್ಲಿ ಇಳಿಸಿ ತಾನು ಹಿಂತಿರುಗಿದ್ದಾಗಿ ಪರಿಪರಿಯಾಗಿ ಹೇಳಿ ಇನ್ಸ್‌ಪೆಕ್ಟರ್ ಕಾಲು ಹಿಡಿದುಕೊಂಡನಂತೆ.  ಅವರು ಅವನ ಮುಖಕ್ಕೇ ಒದ್ದುಬಿಟ್ಟರಂತೆ.  ಸಾಯಂಕಾಲದ ಹೊತ್ತಿಗೆ ಅವನನ್ನು ಪಾಂಡಿಚೆರಿಗೆ ಕರೆದುಕೊಂಡುಹೋದರಂತೆ.  "ಆಗವನು ನಿಲ್ಲಲೂ ಕಷ್ಟಪಡುತ್ತಿದ್ದ."  ಕಣ್ಣನ್ ಮಾತು ಮುಗಿಸಿ ತಲೆತಗ್ಗಿಸಿದ.  "ಆಂಡವಾ!" ಎನ್ನುತ್ತಾ ಕುಸಿದ ಕಾತ್ತಾಯಿಯನ್ನು ನಾದಿನಿ ರಾಜಾತ್ತಿ ತಬ್ಬಿ ಹಿಡಿದು ರೋಧಿಸತೊಡಗಿದಳು.  "ಅಪ್ಪ ಅಮ್ಮ ಇಬ್ರೂ ವಾಂತಿಭೇದಿಯಾಗಿ ಸತ್ತು ವರ್ಷವೂ ಆಗಿಲ್ಲ.  ಇದ್ದೊಬ್ಬ ಅಣ್ಣ ಈ ಗತಿಯಾದನಲ್ಲಾ.  ಅಯ್ಯೋ ಇನ್ನು ನಂಗ್ಯಾರಪ್ಪಾ ದಿಕ್ಕೂ" ಎಂದು ಕೂದಲು ಕಿತ್ತುಕೊಂಡಳು.
ಪಾಂಡಿಚೆರಿಯಿಂದ ಬಸ್ಸಿನಲ್ಲಿ ಬಂದು ಕೀಳೂರಿನ ಬಸ್‌ಸ್ಟಾಪಿನಲ್ಲಿ ಇಳಿದಾಗ ಅಲ್ಲಿನ ಒಂದಿಬ್ಬರು ಪರಿಚಯದವರು ಎದುರಾಗಿ, ನಿಮ್ಮ ಮಾಮ ಆವತ್ತು ಮೀನು ಕೊಳ್ಳುತ್ತಾ ಕೀಳೂರಿನ ಹೆಣ್ಣೊಬ್ಬಳನ್ನು ಚುಡಾಯಿಸಿದನೆಂದೂ ಅದಕ್ಕೆ ಆ ಪರಂಗಿಯಮ್ಮ ಬೈದಳೆಂದೂ, ಇವನು ನೀ ಒಂದ್ಸಲ ಸಿಕ್ಕು, ನಿಂಗೆ ಮಾಡ್ತೀನಿ ಎಂದು ಹೇಳಿ ಸೈಕಲ್ ಏರಿ ಅಲ್ಲಿಂದ ಓಡಿಬಿಟ್ಟನೆಂದೂ ಹೇಳಿದ್ದನ್ನು ಕಣ್ಣನ್ ತಂಗಿಗೆ ಹೇಳಲಿಲ್ಲ.  ಅಂಥಾ ಚೆಂದೊಳ್ಳಿ ದೊರೆಸಾನಿಗೆ ಏನು ಮಾಡಿಬಿಟ್ಟನೋ ಈ ಪಾಪಿ, ಇನ್ನಿವನಿಗೆ ಜೈಲೇ ಗತಿ ಎಂದು ಅವನ ಕಿವಿಗೆ ಬೀಳುವಂತೇ ಕೆಲವು ಹೆಂಗಸರು ಮಾತಾಡಿಕೊಂಡಾಗ ಸುಮ್ಮನೆ ತಲೆತಗ್ಗಿಸಿ ಬಂದುಬಿಟ್ಟಿದ್ದ.
ಅದೆಷ್ಟೋ ಹೊತ್ತಿನವರೆಗೆ ಗರಬಡಿದಂತೆ ಕೂತಿದ್ದ ಕಾತ್ತಾಯಿ ಕಣ್ಣು ತೆರೆದು, ಹೋದ ಅಮಾವಾಸ್ಯೆ ಮಟಮಟ ಮಧ್ಯಾಹ್ನ ತಾನೊಬ್ಬಳೇ ಹುಣಿಸೆಮರದ ಪಕ್ಕದಿಂದ ಹಾದುಬರುತ್ತಿರುವಾಗ ಮುನೇಶ್ವರ ಜಡೆ ಬೀಸಿ ಗಾಳಿ ಎಬ್ಬಿಸಿತೆಂತೂ, ಎದ್ದ ಗಾಳಿಯಲ್ಲಿ ತರಗೆಲೆಗಳು ಗಿರಗಿರನೆ ತಿರುಗಿ ತನ್ನ ಸುತ್ತಲೂ ಮುತ್ತಿಕೊಂಡು ತನಗೆ ಅರೆಕ್ಷಣ ಕಣ್ಣು ಕತ್ತಲಿಟ್ಟಂತಾಯಿತೆಂದೂ ಹೇಳಿದಳು.  "ನಾನಾಗಲೇ ಅಂದುಕೊಂಡೆ, ಏನೋ ಕೇಡು ಕಾದಿದೆ ಅಂತ" ಎಂದು ಹೇಳಿ ಭೋರಿಟ್ಟು ಅಳತೊಡಗಿದಳು.
ಜೋನ್ ಮಾರ್ತೆಯ ನಾಪತ್ತೆಯ ಬಗ್ಗೆ ಪೋಲೀಸರ ವಿಶೇಷ ತನಿಖೆ ಭರದಿಂದ ಸಾಗುತ್ತಿದ್ದಂತೆ ನಾಲ್ಕನೆಯ ದಿನ ಬೆಳಿಗ್ಗೆ ಬೆಳಿಗ್ಗೆಯೇ ಅವಳು ಲ್ಯಾಲಿ ಟ್ಯುಲಿಂಡರ್ ಸ್ಟ್ರೀಟ್‌ನ ತನ್ನ ಬಾಡಿಗೆ ಬಿಡಾರದಲ್ಲಿ ಪ್ರತ್ಯಕ್ಷಳಾದಳು.  ವಿಷಯ ತಿಳಿದ ಬಜಾರ್ ಪೋಲೀಸ್ ಸ್ಟೇಷನ್‌ನ ಇನ್ಸ್‌ಪೆಕ್ಟರ್ ಸೆಂದಿಲ್ ಕುಮಾರ್ ಆತುರಾತುರವಾಗಿ ಯೂನಿಫಾರ್ಮ್ ಧರಿಸಿ ಅಲ್ಲಿಗೆ ಓಡಿದ.  "ಇದೆಲ್ಲಿ ಮಾಯವಾಗಿಹೋಗಿದ್ದೆ?" ಎಂದವನು ಕೇಳುತ್ತಿದ್ದಂತೇ ಅವಳು "ಮೀನು ಹಿಡಿಯೋದಿಕ್ಕೆ ಸಮುದ್ರಕ್ಕೆ ಹೋಗಿದ್ದೆ" ಎನ್ನುತ್ತಾ ನಕ್ಕಳು.  ಅವನು ದಂಗಾಗಿ ಸೋಫಾದಲ್ಲಿ ಕುಸಿಯುತ್ತಿದ್ದಂತೆ ಅವಳು ಮತ್ತೊಮ್ಮೆ ವಿಶಾಲವಾಗಿ ನಕ್ಕಳು.
"ಕೂನಿಮೇಡು ಬಸ್ ಸ್ಟಾಪ್‌ನಲ್ಲಿ ನಿಂತಿದ್ದಾಗ ಪಕ್ಕದ ಹಳ್ಳಿಯ ಮೀನುಗಾರ ವೇಲುತಂಬಿ ಬಂದ.  ಅವನ ಹತ್ರ ಒಂದು ದೊಡ್ಡ ಫಿಶಿಂಗ್ ಬೋಟ್ ಇದೆ.  ವಾರದ ಹಿಂದೆ ನಾನು ಕೋಟೆಯ ಅಧ್ಯಯನ ಮಾಡುತ್ತಿದ್ದಾಗ ಪರಿಚಯವಾಗಿದ್ದೋನು.  ಅವನು ಇನ್ನಿಬ್ಬರ ಜತೆ ಮೀನು ಹಿಡಿಯೋದಿಕ್ಕೆ ಸಮುದ್ರಕ್ಕೆ ಹೊರಟಿದ್ದ.  ನಾನೂ ಬರ್ಲಾ? ಅಂದೆ.  ಅವ್ನು ಇಲ್ಲ ಇಲ್ಲಾ, ನಾವು ಹೆಂಗಸರನ್ನ ಸಮುದ್ರಕ್ಕೆ ಕರಕೊಂಡು ಹೋಗೋದಿಲ್ಲ ಅಂದ.  ಪಕ್ಕದಲ್ಲಿದ್ದ ತನ್ನ ತಂಗಿಯನ್ನ ತೋಸಿ ನಾನೂ ಬರ್ತೀನಿ ಅಂತ ಇವ್ಳು ಪ್ರತೀಸಲ ಗೋಗರೀತಾಳೆ, ನಾನು ಕರಕೊಂಡು ಹೋಗಿಲ್ಲ ಅಂದ.  ನಾನು ಪರ್ಸ್‌ನಿಂದ ಎರಡು ಸಾವಿರ ರೂಪಾಯಿ ತೆಗೆದು ಅವನ ಮುಂದೆ ಹಿಡಿದೆ.  ನಿನ್ನ ಬೋಟ್‌ನಲ್ಲಿ ನಂಗೊಂದು ನಿನ್ ತಂಗಿಗೊಂದು ಟಿಕೆಟ್ ಕೊಡು ಅಂದೆ ಅಷ್ಟೇ.  ನಮ್ಮಿಬ್ಬರಿಗೂ ಸೀಟ್ ಸಿಕ್ಕಿಬಿಡ್ತು.  ಇಡೀ ಮೂರು ದಿನ ಸಮುದ್ರದಲ್ಲೇ.  ರಾಮೇಶ್ವರಂ, ಧನುಷ್ಕೋಡಿಯವರೆಗೂ ಹೋಗಿಬಂದ್ವಿ.  ಅವರೆಲ್ಲಾ ಮೀನು ಹಿಡಿಯೋದು ಹೇಗೆ, ಸಂಸ್ಕರಿಸೋದು ಹೇಗೆ ಎಲ್ಲಾನೂ ನೋಡ್ದೆ.  ಗಂಟೆಗಟ್ಟಲೆ ಸಮುದ್ರದಲ್ಲಿ ಈಜಿದೆ.  ಆಳ ಸಮುದ್ರದಲ್ಲಿ ತೀರದಲ್ಲಿರೋ ಹಾಗೆ ಅಲೆಗಳೇ ಇಲ್ಲ ಗೊತ್ತೇ?  ಅಲ್ಲಿ ಈಜೋದು ಅಂದ್ರೆ ಎಷ್ಟ್ ಮಜ ಗೊತ್ತಾ?  ಸಮುದ್ರದಲ್ಲಿ ಮೂರು ದಿನಗಳನ್ನ ಮಜವಾಗಿ ಕಳೆದು ಈಗ ಬಂದಿದ್ದೀನಿ ಅಷ್ಟೆ."
ಇನ್ಸ್‌ಪೆಕ್ಟರ್ ಸೆಂದಿಲ್ ಕುಮಾರ್ ಸುಸ್ತಾಗಿಹೋದ.  ಹತಾಷೆಯಲ್ಲಿ ಒಮ್ಮೆ ಹೂಂಕರಿಸಿ ಧಡಕ್ಕನೆ ಮೇಲೇಳಲು ಹೋದ.  ಎರಡೂ ಕೈಗಳನ್ನು ಸೋಫಾದ ತೋಳುಗಳ ಮೇಲೆ ಊರಿ ತಲೆ ಕೆಳಗೆ ಮಾಡುತ್ತಿದ್ದಂತೆ ಕಂಡ ನೋಟದಿಂದ ಅವನೆದೆ ಧಸಕ್ಕೆಂದಿತು.
ಆತುರಾತುರವಾಗಿ ಯೂನಿಫಾರ್ಮ್ ಧರಿಸುವಾಗ ಪ್ಯಾಂಟಿನ ಜಿಪ್ ಮೇಲೆಳೆಯುವುದು ಮರೆತುಹೋಗಿತ್ತೇನೋ, ಫಿರಂಗಿ ದುರ್ಗದ ದಿಡ್ಡಿಬಾಗಿಲು "ಆ" ಎಂದು ತೆರೆದುಕೊಂಡಿತ್ತು!
ಅವಳೆದುರಿಗೆ ಜಿಪ್‌ನತ್ತ ಕೈಹಾಕಲು ವಿಪರೀತ ನಾಚಿಕೆಯಾಗಿಹೋಗಿ ತಲೆಯ ಮೇಲೆ ರಾರಾಜಿಸುತ್ತಿದ್ದ ಹ್ಯಾಟನ್ನು ಸರಕ್ಕನೆ ತೆಗೆದು ಅದನ್ನು ಮುಚ್ಚಿಕೊಂಡ.  ಹಾಗೆ ಮುಚ್ಚಿಕೊಂಡೇ ಈ ಥರಾ ಓಪನ್ ಆಗಿಹೋಗಿರೋ ಫಿರಂಗಿ ದುರ್ಗದ ದಿಡ್ಡಿಬಾಗಿಲಿಂದ ಅದೆಷ್ಟು ಮಾನ ಹೊರಹರಿದು ಹರಾಜಾಗಿಹೋಗಿದೆಯೋ ಎಂದು ಚಿಂತಿಸುತ್ತಾ ಜೋನ್ ಮಾರ್ತೆಯ ಬಿಡಾರದ ಬಾಗಿಲು ದಾಟಿದ.
ಜೋನ್ ಮಾರ್ತೆ ಆರಾಮವಾಗಿ ತನ್ನ ಸಂಶೋಧನೆ ಪುನರಾರಂಭಿಸಿದಳು.  ಕೀಳೂರಿನ ಬಳಿಯ ಕೋಟೆಯ ಬಗ್ಗೆ ಅವಳ ವಿಷಯ ಸಂಗ್ರಹಣೆ ಮುಗಿದಿತ್ತು.  ಹೀಗಾಗಿ ಮತ್ತೆ ಆ ದಿಕ್ಕಿಗೆ ಕಾಲುಹಾಕಲಿಲ್ಲ.  ಕಡಲೂರಿನ ದಕ್ಷಿಣಕ್ಕಿರುವ ಪೊರ್ಟೋ ನೋವೋಗೆ ನಾಲ್ಕು ದಿನಗಳ ಪ್ರೋಗ್ರಾಂ ಹಾಕಿಕೊಂಡಳು.  ನಾಗಪಟ್ಟಿಣಂನಲ್ಲಿ ಡಚ್ಚರ ಒಂದಷ್ಟು ಸಮಾಧಿಗಳಿವೆ ಎಂದು ಯಾರೋ ಹೇಳಿದ್ದರಿಂದ ಒಂದೆರಡು ದಿನ ಅಲ್ಲಿಗೂ ಹೋಗಿಬರಬೇಕೆಂದು ಪ್ಲಾನು ಹಾಕಿದಳು.
ಆದರೆ ಪಿಚ್ಚಮುತ್ತು ಮಾತ್ರ ಮನೆಗೆ ಹಿಂತಿರುಗಲಿಲ್ಲ.  ಕಾತ್ತಾಯಿಗೆ ಅವನ ಬಗ್ಗೆ ಏನೊಂದೂ ತಿಳಿಯಲಿಲ್ಲ.  ನೀನು ಅಲ್ಲಿಗೆಲ್ಲಾ ಬರುವುದು ಬೇಡ ಎಂದು ಹೇಳಿ ಕಣ್ಣನ್ ತಾನೊಬ್ಬನೇ ದಿನಕ್ಕೊಂದು ಸಲ ಪಾಂಡಿಚೆರಿಯ ಬಜ಼ಾರ್ ಪೋಲೀಸ್ ಸ್ಟೇಷನ್‌ಗೆ ಹೋಗಿ ವಿಚಾರಿಸುತ್ತಿದ್ದ.  ವಿಚಾರಣೆ ನಡೆಯುತ್ತಿದೆ, ನಾಳೆ ಬಾ ಎಂದು ದಿನವೂ ಹೇಳುತ್ತಿದ್ದರು.  ಮಾಮನನ್ನೊಮ್ಮೆ ನೋಡಬೇಕು ಎಂದರೆ "ಅದೆಲ್ಲಾ ಆಗೋಲ್ಲ, ತನಿಖೆ ನಡೆಯೋವಾಗ ಹೊರಕ್ಕೆ ಕರಕೊಂಡು ಬರೋಕಾಗಲ್ಲ, ಹೋಗು ಹೋಗು" ಎಂದು ಇನ್ಸ್‌ಪೆಕ್ಟರ್ ಸೆಂದಿಲ್ ಕುಮಾರ್ ಕೈ ಆಡಿಸಿಬಿಟ್ಟರು.  "ಒಂದೇ ಒಂದ್ಸಲ ಶಾಮೀ, ನಿಮ್ ಕಾಲಿಗೆ ಬೀಳ್ತೀನಿ" ಎಂದವನು ಗೋಗರೆದಾಗ ಇನ್ಸ್‌ಪೆಕ್ಟರ್ ಬೂಟುಗಾಲು ತೋರಿಸಿ "ಗೆಟ್ ಔಟ್" ಎಂದು ಆಂಗಿಲಂನಲ್ಲಿ ಅಬ್ಬರಿಸಿಬಿಟ್ಟರು. 
ತಡೆಯಲಾರದೇ ಕಾತ್ತಾಯಿ ಅಣ್ಣನಿಗೆ ತಿಳಿಯದಂತೆ ಮರಕ್ಕಾಣಂ ಪೋಲೀಸ್ ಸ್ಟೇಷನ್‌ಗೆ ಹೋದಳು.  ಇವಳನ್ನು ಅಳೆಯುವಂತೆ ಮೇಲಿಂದ ಕೆಳಗೆ ನೋಡಿದ ಇನ್ಸ್‌ಪೆಕ್ಟರ್ ಸ್ಟ್ಯಾಲಿನ್ ಸುಬ್ರಮಣಿ "ಓಹೋ ನೀನು ಅವನ ಹೆಂಡತಿಯಾ?" ಅಂದರು ಆಶ್ಚರ್ಯದಲ್ಲಿ.  ಕಾತ್ತಾಯಿ ತಲೆತಗ್ಗಿಸಿಯೇ ಹ್ಞೂಂಗುಟ್ಟಿದಾಗ ಅವರು ಒಂದು ಹೆಜ್ಜೆ ಮುಂದೆ ಬಂದು  "ನಿನ್ನನ್ನ ನೋಡಿದ್ರೆ ನಗ್ಮಾ ನೆನಪಾಗ್ತಾಳೆ.  ಕಲರ್ ಕೊಂಚ ಕಮ್ಮಿಯಾಯ್ತು ಅಷ್ಟೇ.  ಇಷ್ಟ್ ಚೆನ್ನಾಗಿರೋ ನಿನ್ನನ್ನ ಬಿಟ್ಟು ನಿನ್ ಗಂಡ ಆ ಬಿಳೀ ಹಲ್ಲೀನ ಯಾಕೆ ಹಿಡಿದ!" ಎಂದು ಲೊಚಗುಟ್ಟಿದರು.  ಅದ್ಯಾರಿಗೋ ಹೇಳಿ ಟೀ ತರಿಸಿಕೊಟ್ಟರು.  ಮುದುರಿಕೊಂಡು ಅಳುತ್ತಿದ್ದ ಕಾತ್ತಾಯಿಗೆ "ನೀ ಟೀ ಕುಡಿ.  ನನ್ ಕೈಲಾದ್ದನ್ನ ನಾನು ಮಾಡ್ತೀನಿ" ಎನ್ನುತ್ತಾ ಭುಜ ಸವರಿದರು.
ಮಾರನೆಯ ಮಧ್ಯಾಹ್ನ, ಕಾತ್ತಾಯಿ ನಿನ್ನೆ ಮರಕ್ಕಾಣಂ ಪೋಲೀಸ್ ಸ್ಟೇಷನ್‌ನಲ್ಲಿ ಕಂಡಿದ್ದ ಪೇದೆಯೊಬ್ಬ ಸೈಕಲ್‌ನಲ್ಲಿ ಬಂದು ಬಾಗಿಲು ತಟ್ಟಿದ.  ಕಣ್ಣನ್ ಪಾಂಡಿಚೆರಿ ಪೋಲೀಸ್ ಸ್ಟೇಷನ್‌ಗೆ ಹೋಗಿದ್ದ.  ಬಾಗಿಲು ತೆರೆದ ಕಾತ್ತಾಯಿಗೆ "ವಣಕ್ಕಂ ಅಮ್ಮಾ.  ನನ್ನನ್ನ ಇನ್ಸ್‌ಪೆಕ್ಟರ್ ಕಳ್ಸಿದಾರೆ" ಅಂದ.  ಕಾತ್ತಾಯಿಗೆ ತನ್ನ ಗಂಡನೇ ಬಂದು ಎದುರಿಗೆ ನಿಂತಷ್ಟು ಸಮಾಧಾನವಾಯಿತು.  ಮಾತೇ ಹೊರಡಲಿಲ್ಲ.  ಪೇದೆಯೇ ಮಾತಾಡಿದ: "ನಮ್ಮ ಇನ್ಸ್‌ಪೆಕ್ಟರ್ ಶಾರ್ ನಿನ್ನ ಬಗ್ಗೇ ನಿನ್ನೆಯೆಲ್ಲಾ ಯೋಚಿಸ್ತಿದ್ರು ಕಣಮ್ಮ.  ನಿಂಗೆ ಹೀಗಾಯ್ತಾಲ್ಲಾ ಅಂತ ಅತ್ತೇಬಿಟ್ರು.  ನಮ್ ಶಾದು ಹೆಂಗರುಳು ಕಣಮ್ಮ."  ಕಾತ್ತಾಯಿ ಕಣ್ಣರಳಿಸಿದಳು.  ಪೇದೆ ಮುಂದುವರೆಸಿದ: "ನಾನೊಂದ್ ಸುದ್ಧಿ ತಂದಿದ್ದೀನಿ.  ನಿನ್ ಗಂಡ ಪಾಂಡಿಚೆರಿ ಪೋಲೀಸ್ ಸ್ಟೇಷನ್‌ನಲ್ಲಿರೋದು ಗೊತ್ತು ತಾನೆ?  ನೀನು ಅಲ್ಲಿಗೆ ಹೋದ್ರೆ ನಿನ್ನನ್ನ ಯಾರೂ ಸ್ಟೇಷನ್ ಮೆಟ್ಲೂ ಹತ್ಸೋದಿಲ್ಲ.  ಅದಕ್ಕೆ ನಮ್ ಶಾರು ಒಂದು ಪ್ಲಾನ್ ಮಾಡಿದ್ದಾರೆ.  ನಿನ್ ಗಂಡನ್ನ ನಿನ್ ಮುಂದೆ ತಂದು ನಿಲ್ಲಿಸ್ಲೇಬೇಕು ಅಂತ ನಿರ್ಧಾರ ಮಾಡ್ಬಿಟ್ಟಿದ್ದಾರೆ ಕಣಮ್ಮ.  ಅವ್ರು ದೇವ್ರು ಕಣಮ್ಮ."
ಕಾತ್ತಾಯಿ ಇನ್ಸ್‌ಪೆಕ್ಟಗೆ ಮನದಲ್ಲೆ ಕೈಮುಗಿದಳು.  ಪೇದೆ ಮುಂದುವರೆಸಿದ.  "ಏನಾದ್ರೂ ನೆಪ ಹೇಳಿ ನಿನ್ ಗಂಡನ್ನ ನಮ್ ಶಾರು ನಮ್ ಮರಕ್ಕಾಣಂ ಸ್ಟೇಷನ್‌ಗೆ ಕರಕೊಂಡು ಬರ್ತಾರೆ.  ಆಗ ನೀನು ಬಂದು ನಿನ್ ಗಂಡನ್ನ ಕಣ್ತುಂಬಾ ನೋಡಿ, ಬಾಯ್ತುಂಬಾ ಮಾತಾಡು."
"ಯಾವಾಗ?"  ಕಾತ್ತಾಯಿ ಅತೀವ ಸಮಾಧಾನದಲ್ಲಿ ಪ್ರಶ್ನಿಸಿದಳು.
"ಈ ರಾತ್ರಿ."  ಪೇದೆ ದನಿ ತಗ್ಗಿಸಿದ: "ಇದು ಬಾಳಾ ಗುಟ್‌ನಲ್ಲಿ ಆಗಬೇಕಾದ ಕೆಲ್ಸ.  ಯಾರಿಗಾದ್ರೂ ಮೇಲಿನವರಿಗೆ ತಿಳಿದುಬಿಟ್ರೆ ಮುಗಿದೇಹೋಯ್ತು.  ಈವತ್ತು ರಾತ್ರಿ ಒಂದು ಒಂಬತ್ತು ಗಂಟೆ ಹೊತ್ಗೆ ನಿನ್ ಗಂಡ ನಮ್ ಸ್ಟೇಷನ್‌ನಲ್ಲಿರ್ತಾನೆ.  ನೀನು ಅಷ್ಟೊತ್ತಿಗೆ ಸ್ಟೇಷನ್‌ಗೆ ಬಂದ್ಬಿಡು.  ರಾತ್ರಿಯೆಲ್ಲಾ ಅವನ ಜತೆ ಮಾತಾಡು, ಕಷ್ಟಸುಖ ವಿಚಾರಿಸ್ಕೋ.  ಬೆಳಿಗ್ಗೆ ಬೆಳಿಗ್ಗೇನೇ ಅವನನ್ನ ನಮ್ ಶಾರು ವಾಪಸ್ ಪಾಂಡಿಚೆರಿಗೆ ಕಳಿಸಿಬಿಡ್ತಾರೆ.  ನೀನು ಮನೆಗೆ ಬಂದ್ಬಿಡು.  ಅಂದಹಾಗೆ ರಾತ್ರಿ ಅಷ್ಟುದೂರ ಬರೋದಿಕ್ಕೆ ನಿಂಗೆ ಭಯ ಆಗಲ್ಲ ತಾನೆ?"
"ಖಂಡಿತಾ ಬರ್ತೀನಿ ಶಾಮಿ.  ನಂಗ್ಯಾವ ಭಯವೂ ಇಲ್ಲ.  ನಮ್ಮಣ್ಣನ್ನ ಜೊತೇಲಿ ಕರಕೊಂಡ್ ಬರ್ತೀನಿ."  ತಟಕ್ಕನೆ ಹೇಳಿದಳು ಕಾತ್ತಾಯಿ.
"ನೋನೋನೋ!  ನಿನ್ ಅಣ್ಣ ಗಿಣ್ಣ ಯಾರೂ ಬರಕೂಡ್ದು."  ಪೇದೆ ಕೈ ಆಡಿಸಿಬಿಟ್ಟ.  ಗಾಬರಿಗೊಂಡ ಕಾತ್ತಾಯಿತ್ತ ಒಂದು ಹೆಜ್ಜೆ ಇಟ್ಟು ದನಿ ತಗ್ಗಿಸಿ ಹೇಳೀದ: "ನಾನು ಮೊದ್ಲೇ ಹೇಳ್ದೆ, ಇದು ಭಾಳಾ ಗುಟ್ಟಿನ ವಿಷಯ.  ನಮ್ ಶಾರು ನಿನ್ ಕಣ್ಣೀರು ನೋಡ್ಲಾರದೇ ಭಾಳಾ ರಿಸ್ಕ್ ತಗೋಂಡು ನಿಂಗೋಸ್ಕರ ಈ ವ್ಯವಸ್ಥೆ ಮಾಡ್ತಿದಾರೆ.  ನೀನು ಅಣ್ಣ ತಮ್ಮ ಮಾವ ಭಾವ ಅಂತ ಯಾಯಾರನ್ನೋ ಸ್ಟೇಷನ್‌ಗೆ ಕರಕೊಂಡ್ ಬಂದು ಆಮೇಲೆ ಮೇಲಿನವರಿಗೆ ಗೊತ್ತಾದ್ರೆ ನಮ್ ಶಾರು ಕೆಲಸ ಕಳಕೋಬೇಕಾಗುತ್ತೇ ಗೊತ್ತಾ ನಿಂಗೆ?"
ಕಾತ್ತಾಯಿ ಅವಾಕ್ಕಾದಳು.  "ಹಂಗಾರೆ... ಹಂಗಾರೆ..."  ಮುಂದೆ ಮಾತು ಹೊರಡಲಿಲ್ಲ.  ಕಣ್ಣುಗಳಲ್ಲಿ ನೀರು ಜಿನುಗಿತು.
"ಛೆ ಛೆ ಛೇ!  ಅಳೋದ್ಯಾಕೆ?  ಎಲ್ಲಾದಕ್ಕೂ ಮಾರ್ಗ ಇದೆ."  ಮತ್ತಷ್ಟು ದನಿ ತಗ್ಗಿಸಿದ: "ನಾನು ನಮ್ ಶಾದು ಮೋಟಾ ಬೈಕ್ ತಗೊಂಡು ಬರ್ತೀನಿ.  ಅದರ ಮೇಲೆ ನಿನ್ನನ್ನ ಕೂರಿಸ್ಕಂಡು ಜೋಪಾನವಾಗಿ ನಮ್ ಸ್ಟೇಷನ್‌ಗೆ ಕರಕಂಡ್ ಹೋಗಿ ನಿನ್ ಗಂಡನ್ ಜೊತೆ ಮೀಟ್ ಮಾಡ್ಸಿ ಬೆಳಿಗ್ಗೆ ಬೆಳಿಗ್ಗೇನೇ ಅದೇ ಮೋಟಾರ್ ಬೈಕ್‌ನಲ್ಲಿ ನಿನ್ನನ್ನ ಕ್ಷೇಮವಾಗಿ ನಿನ್ ಮನೆ ತಲುಪಿಸಿಬಿಡ್ತೀನಿ.  ಈವತ್ತಿಗೆ ನಾನೇ ನಿನ್ನಣ್ಣ.  ನನ್ ತಂಗೀಗೆ ಅಷ್ಟೂ ಮಾಡಕ್ಕಾಗಲ್ವಾ ನನ್ ಕೈಲಿ?"
ಕಾತ್ತಾಯಿಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ.  ಆ ಮುರುಗನೇ ಈ ಪೇದೆಯ ರೂಪದಲ್ಲಿ ಬಂದಿರುವಂತೆನಿಸಿತು.  ಅವನಿಗೆ ಕೈಯೆತ್ತಿ ಮುಗಿದಳು.  ಪೇದೆ ವಿಶಾಲವಾಗಿ ನಕ್ಕ.  "ರಾತ್ರಿ ಎಂಟುಗಂಟೆಗೆಲ್ಲಾ ಊರು ಮಲಗಿಬಿಡುತ್ತೆ.  ನೀನು ಹೀಗೇ ನಡಕೊಂಡು ಆ ತಿರುವಿನವರೆಗೆ ಬಾ.  ಅಲ್ಲಿ ನಾನು ಬೈಕ್ ನಿಲ್ಲಿಸ್ಕಂಡು ಕಾಯ್ತಿರ್ತೀನಿ.  ನೀನು ನಿನ್ ಗಂಡನ್ನ ನೋಡೋಕೆ ಅಂತ ನನ್ ಜೊತೆ ಸ್ಟೇಷನ್‌ಗೆ ಬರೋದನ್ನ ಯಾರೂ ನೋಡಬಾರ್ದು ನೋಡು ಅದಕ್ಕೆ ಈ ಅರೇಂಜ್‌ಮೆಂಟು.  ನೀನೂ ಯಾರ್ಗೂ ಹೇಳ್ಬೇಡ.  ನಿಮ್ಮಣ್ಣಂಗೂ."
"ಸರಿ ಶಾಮೀ, ಹಂಗೇ ಮಾಡ್ತೀನಿ.  ಯಾರ್ಗೂ ಹೇಳಲ್ಲ."  ಮತ್ತೊಮ್ಮೆ ಕೈಮುಗಿದಳು.
"ವೆರಿ ಗುಡ್" ಅಂದ ಪೇದೆ ಗಡಿಯಾರ ನೋಡಿಕೊಂಡು "ಟೈಮಾಯ್ತು, ಇನ್ನು ನಾನು ಹೊರಡ್ತೀನಿ, ನೆನಪಿಟ್ಕೋ, ಸರಿಯಾಗಿ ರಾತ್ರಿ ಎಂಟ್‌ಗಂಟೆಗೆ ಆ ತಿರುವಿನ ಪಾಲದ ಹತ್ರ" ಎಂದು ಹೇಳಿ ತಿರುಗಿದ.  ಕಾತ್ತಾಯಿ ಅವನ ಬೆನ್ನಿಗೆ ಕೈಮುಗಿದಳು.  ಎರಡು ಹೆಜ್ಜೆ ಹಾಕಿದ ಪೇದೆ ಗಕ್ಕನೆ ನಿಂತ.  ಮುಚ್ಚಿದ್ದ ಪೆಟ್ಟಿಗೆ ಅಂಗಡಿಯ ನೆರಳಿನಲ್ಲಿ ಮೇಯುತ್ತಿದ್ದ ಒಂದು ಭಾರೀ ಹುಂಜದತ್ತ ಬೆರಳು ಮಾಡಿ "ಭರ್ಜರಿ ಹುಂಜ!  ಇದು ನಿಂದೇನಮ್ಮ?" ಅಂದ.
"ಹ್ಞೂ ಶಾಮೀ" ಅಂದಳು ಕಾತ್ತಾಯಿ.
"ಒಳ್ಳೇದಾಯ್ತು ಬಿಡು.  ನಂ ಶಾಗೆ ಕೋಳಿ ಅಂದ್ರೆ ಪ್ರಾಣ.  ಈ ಹುಂಜವನ್ನ ತಂದು ಅವರ ಕಾಲಬಳಿ ಹಾಕಿಬಿಡು.  ಆಗ ನೋಡು ಅವರ ಕರುಣೆಯನ್ನ.  ಬೇಕಾದ್ರೆ ನಾಳೆ ಬೆಳಿಗ್ಗೆ ನಿನ್ ಗಂಡನ್ನ ನಿನ್ ಜೊತೆ ಮನೆಗೇ ಕಳಿಸಿಬಿಡ್ತಾರೆ."
"ಹಂಗೇ ಮಾಡ್ತೀನಿ ಶಾಮೀ.  ನನ್ ಗಂಡ ಮನೇಗೆ ಬರೋದಾದ್ರೆ ಈ ಹುಂಜ ಏನು, ಒಂದು ಆಡನ್ನೇ ತಂದು ಇನಿಸ್‌ಪೆಟ್ರ ಮುಂದೆ ಕೆಡವಿಬಿಡ್ತೀನಿ" ಅಂದಳು ಕಾತ್ತಾಯಿ ಒಂದೇ ಉಸಿರಿನಲ್ಲಿ.  "ಛೆ ಛೇ.  ಆಡು ಗೀಡು ಈಗ ಬೇಡ.  ಅದನ್ನೆಲ್ಲಾ ಆಮೇಲೆ ನೋಡ್ಕೊಳ್ಳೋಣ.  ಈಗ ಈ ಹುಂಜ ಸಾಕು.  ಇದನ್ನ ಕತ್ತರಿಸಿ ಗಮಗಮಾ ಅನ್ನೋ ಹಾಗೆ ಸಾರು ಮಾಡಿ ಒಂದ್ ಒಳ್ಳೇ ಸ್ಟೀಲ್ ಡಬ್ಬದಲ್ಲಿ ತುಂಬ್ಕೊಂಡು ತಂದ್ಬಿಡು."  ಅಷ್ಟು ಹೇಳಿ ಪೇದೆ ಸೈಕಲ್ ಹತ್ತಿ ಗಾಳಿಯಲ್ಲಿ ತೂರುವಂತೆ ಭರಭರ ಹೊರಟುಹೋದ.
ಅವನು ತಿರುವಿನಲ್ಲಿ ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದ ಕಾತ್ತಾಯಿ ಒಳಗೆ ಬಂದು ಬೆಳಿಗ್ಗೆ ಮಾಡಿ ಹಾಗೆಯೇ ಇಟ್ಟಿದ್ದ ಅಡಿಗೆಯನ್ನು ತಟ್ಟೆಗೆ ಹಾಕಿಕೊಂಡು ನೆಮ್ಮದಿಯಾಗಿ ಉಂಡಳು.  ವಾರವಾಗಿತ್ತು ಅವಳು ಹಾಗೆ ನೆಮ್ಮದಿಯಿಂದ ಊಟ ಮಾಡಿ.  ಊಟ ಮುಗಿಸಿದವಳೇ ಕೈಯಲ್ಲಿ ನಾಕು ಅಕ್ಕಿ ಕಾಳುಗಳನ್ನೆತ್ತಿಕೊಂಡು ಹೊರಗೆ ಬಂದು ಹುಂಜಕ್ಕೆ ತೋರಿಸಿ ನೆಲಕ್ಕೆ ಹಾಕಿದಳು.  ಓಡಿಬಂದು ಅಕ್ಕಿಕಾಳಿಗೆ ಬಾಯಿ ಹಾಕಿದ ಹುಂಜವನ್ನು ಗಬಕ್ಕನೆ ಹಿಡಿದುಕೊಂಡಳು.  ಗಾಬರಿಯಲ್ಲಿ ಕಿರುಚಿಕೊಂಡ ಅದರ ಎರಡು ಕಾಲುಗಳನ್ನೂ ಎಡಗೈಯಲ್ಲಿ ಬಿಗಿಯಾಗಿ ಹಿಡಿದು  "ಈಗಾಗಲೇ ಗಂಟೆ ಮೂರಾಯಿತು.  ಕೋಳಿ ಸಾರು ಮಾಡಿ ಈಗಲೇ ರೆಡಿಯಾಗಿಟ್ಟುಬಿಟ್ಟರೆ ಸರಿ, ಆಮೇಲೆ ಅಣ್ಣ ಬಂದು ಹೋಗುವವರೆಗೆ ನನಗೆ ಪುಸುಸೊತ್ತು ಸಿಗುವುದಿಲ್ಲ" ಎಂದುಕೊಳ್ಳುತ್ತಾ ಮೀನು ಕೊಯ್ಯುವ ದಪ್ಪ ಕತ್ತಿಯನ್ನೆತ್ತಿಕೊಂಡು ಮನೆಯ ಹಿಂಭಾಗಕ್ಕೆ ನಡೆದಳು.  ಅವಳ ಕೈಯಲ್ಲಿ ತಲೆಕೆಳಕಾಗಿ ನೇತಾಡುತ್ತಿದ್ದ ಹುಂಜ "ಕೊರ್ ಕೊರ್ ಕೊರ್ರ್" ಎಂದು ಅರ್ತವಾಗಿ ಕೂಗುತ್ತಾ ರೆಕ್ಕೆಗಳನ್ನು ನಿಸ್ಸಹಾಯಕವಾಗಿ ಪಟಪಟ ಬಡಿಯುತ್ತಿದ್ದಂತೆ ಕಪ್ಪುಮೋಡವೊಂದು ಎಲ್ಲಿಂದಲೋ ಬಂದು ಹೊಳೆಯುತ್ತಿದ್ದ ಸೂರ್ಯನನ್ನು ನುಂಗಿ ನೆರಳುಗಟ್ಟಿಸಿಬಿಟ್ಟಿತು.  ಇದ್ದಕ್ಕಿದ್ದಂತೆ ಬೀಸಿದ ಗಾಳಿಗೆ ಹಿತ್ತಲ ತೆಂಗಿನ ಮರದ ಗರಿಗಳು "ಉಸ್ಸೋ" ಎಂದು ಒಟ್ಟಾಗಿ ನಿಟ್ಟುಸಿರಿಟ್ಟವು.

--***೦೦೦***--


ಅಕ್ಟೋಬರ್ ೧೨, ೨೦೦೮