ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Saturday, November 24, 2012

ಭಾರತ - ಚೀನಾ ಗಡಿಸಮಸ್ಯೆ ಕುರಿತ "ಪ್ರಶಾಂತ ಹಿಮಾಲಯದ ಅಶಾಂತ ಗಡಿ" ಪುಸ್ತಕದ "ಮುನ್ನುಡಿ" ಮತ್ತು "ಪ್ರವೇಶ"

ಮುನ್ನುಡಿ
ದೊಣ್ಣೆಗಳನ್ನು ಹಿಡಿದ ಕೆಲವು ನೂರು ಪೋಲೀಸರಿಂದ ಕಾಯಲ್ಪಡುತ್ತಿದ್ದ ಏಶಿಯಾದ ಎರಡು ದೈತ್ಯರಾಷ್ಟ್ರಗಳಾದ ಭಾರತ ಮತ್ತು ಚೀನಾಗಳ ನಡುವಿನ ಗಡಿ ಅಚ್ಚರಿಹುಟ್ಟುಸುವಷ್ಟು ಕ್ಷಿಪ್ರಕಾಲದಲ್ಲಿ ವಿಶ್ವದ ಅತ್ಯಂತ ಶಸ್ತ್ರಸಜ್ಜಿತ ಗಡಿಯಾಗಿ ಬದಲಾದದ್ದು ಆಧುನಿಕ ಇತಿಹಾಸದ ಒಂದು ವ್ಯಂಗ್ಯ.  ಈ ಗಡಿ ಐವತ್ತರ ದಶಕದ ಉತ್ತರಾರ್ಧದಲ್ಲಿ ಹೆಚ್ಚಿನ ಮುನ್ಸೂಚನೆಯಿಲ್ಲದೇ ಸ್ಪೋಟಿಸಿ ಎರಡೂ ರಾಷ್ಟ್ರಗಳ ನಡುವೆ ದ್ವೇಷಪೂರಿತ ಆಪಾದನೆ ಮತ್ತು ಪ್ರತಿಆಪಾದನೆಗಳಿಗೆ ಪ್ರಚೋದನೆ ನೀಡಿತು ಹಾಗೂ ಅಂತಿಮವಾಗಿ ಭಾರತದ ಪ್ರತಿಷ್ಟೆಗೆ ಆಳವಾದ ಗಾಯವನ್ನುಂಟುಮಾಡಿದ ೧೯೬೨ರ ಯುದ್ಧಕ್ಕೆ ಕಾರಣವಾಯಿತು.
ಆನಂತರ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗಾಗಿ ಎರಡೂ ದೇಶಗಳು ಎಂಬತ್ತರ ದಶಕದಲ್ಲಿ ಮಾತುಕತೆಗಳನ್ನಾರಂಭಿಸಿ, ಪರಸ್ಪರ ಆರ್ಥಿಕ ಮತ್ತು ವೈಜ್ಞಾನಿಕ ಸಹಕಾರಗಳ ಹೊಸ ಯುಗವೊಂದಕ್ಕೆ ನಾಂದಿ ಹಾಡುವ ಹಲವು ಒಪ್ಪಂದಗಳನ್ನು ಮಾಡಿಕೊಂಡವೇನೋ ನಿಜ.  ಆದರೂ, ಗಡಿ ಸಮಸ್ಯೆ ಇಂದಿಗೂ ಬಗೆಹರಿಯದೇ ಉಳಿದುಕೊಂಡಿದೆ ಮತ್ತು ತನ್ನ ಹೈಡ್ರಾ ತಲೆಯನ್ನು ಆಗಾಗ ಎತ್ತಿ ಎರಡೂ ದೇಶಗಳ ನಡುವಿನ ಶಾಂತಿಯನ್ನು ಕಲಕುತ್ತಿದೆ ಎನ್ನುವುದು ಮಾಧ್ಯಮಗಳ ಮೂಲಕ ಮತ್ತೆಮತ್ತೆ ಜಗತ್ತಿಗೆ ಸಾರಲ್ಪಡುತ್ತಿದೆ.
            ಈ ಹಿನ್ನೆಲೆಯೊಂದಿಗೆ, ಭಾರತ - ಚೀನಾ ಗಡಿಸಮಸ್ಯೆಯ ಇತಿಹಾಸ ಮತ್ತು ಸ್ವರೂಪವನ್ನು ವಿಶ್ಲೇಷಿಸಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ.  ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೊಸ, ಅಸಾಂಪ್ರದಾಯಿಕ ದೃಷ್ಟಿಕೋನ ಮತ್ತು ವಿಶ್ಲೇಷಣಾ ಪರಿಕರಗಳ ಸಹಾಯದಿಂದ ಸಮಸ್ಯೆಯ ವಾಸ್ತವಿಕತೆಯನ್ನೇ ಪ್ರಶ್ನಿಸಲು ಈ ಕೃತಿ ಪ್ರಯತ್ನಿಸುತ್ತದೆ.  ಇನ್ನೂ ವಿವರವಾಗಿ ಹೇಳಬೇಕೆಂದರೆ, ಎರಡೂ ದೇಶಗಳ ನಡುವೆ ಗಡಿ ಸಮಸ್ಯೆಯೆನ್ನುವುದು ಈ ದಿನಗಳಲ್ಲಿ ನಿಜವಾಗಿಯೂ ಇದೆಯೇ ಎನ್ನುವುದನ್ನು ಮೂರು ಗಡಿಗಳ ಸಿದ್ಧಾಂತದ ಆಧಾರದ ಮೇಲೆ ಶೋಧಿಸುವುದು ಈ ಕೃತಿಯ ಮುಖ್ಯ ಉದ್ದೇಶಗಳಲ್ಲೊಂದಾಗಿದೆ.  ಮುಂದುವರೆದು, ಇಪ್ಪತ್ತೊಂದನೆಯ ಶತಮಾನದಲ್ಲಿ ಈ ಎರಡು ಬೃಹದ್ ರಾಷ್ಟ್ರಗಳ ನಡುವಿನ ವೈಮನಸ್ಯ ಹಿಮಾಲಯದ ಗಡಿಯಿಂದ ಹಿಂದೂಮಹಾಸಾಗರಕ್ಕೆ ವರ್ಗಾಯಿಸಲ್ಪಟ್ಟಿದೆಯೇ, ಹಾಗಿದ್ದರೆ ಈ ಹೊಸ ವಸ್ತುಸ್ಥಿತಿಯ ಸ್ವರೂಪಗಳೇನು, ಭಾರತದ ಮೇಲೆ ಇದರ ದೂರಗಾಮಿ ಪರಿಣಾಮಗಳೇನು ಎಂಬ ಮಹತ್ವದ ಹಾಗೂ ಸಮಕಾಲೀನ ಪ್ರಶ್ನೆಗಳನ್ನೂ ಈ ಕೃತಿ ವಿಶ್ಲೇಷಣೆಗೆ ಎತ್ತಿಕೊಳ್ಳುತ್ತದೆ.
            ಮೂಲತಃ ಕನ್ನಡ ದೈನಿಕ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಸರಣಿಯ ವಿಸ್ತೃತರೂಪವೇ ಈ ಕೃತಿ.  ಆ ಲೇಖನಸರಣಣಿಯ ಪ್ರಕಟಣೆಗೆ ಅವಕಾಶ ನೀಡಿದ ಪತ್ರಿಕೆಯ ಸಂಪಾದಕರಾದ ಶ್ರೀ ತಿಮ್ಮಪ್ಪ ಭಟ್, ಸಂಪಾದಕವರ್ಗದ ಶ್ರೀ ಎನ್. ಎಸ್. ಶ್ರೀಧರಮೂರ್ತಿ, ಶ್ರೀ ಚಂದ್ರಶೇಖರ ಮಂಡೆಕೋಲು ಮತ್ತು ಶ್ರೀ ಹರಿಪ್ರಕಾಶ್ ಕೋಣೆಮನೆ ಅವರಿಗೆ ನನ್ನ ಮೊದಲ ಕೃತಜ್ಞತೆಗಳು ಸಲ್ಲುತ್ತವೆ.  ಲೇಖನಸರಣಿಯನ್ನು ಬರೆಯುತ್ತಿದ್ದಾಗ, ಮುಖ್ಯವಾಗಿ ಭೂಪಟಗಳಿಗೆ ಸಂಬಂಧಿಸಿದಂತೆ ನನಗೆ ಅಗತ್ಯ ಸಹಕಾರ ನೀಡಿದ ನನ್ನ ಮಗ ಆದಿತ್ಯ ಪಿ. ಶೇಖರ್‌ನನ್ನಂತೂ ನಾನಿಲ್ಲಿ ಮರೆಯುವಂತೆಯೇ ಇಲ್ಲ.  ಈಗ ಈ ಕೃತಿಯ ಪ್ರಕಟಣೆಗೆ ನನಗಿಂತಲೂ ಹೆಚ್ಚು ಉತ್ಸಾಹ ತೋರುತ್ತಿರುವ ಪುಸ್ತಕಯಾನದ ಗೆಳೆಯರಾದ ಶ್ರೀ ಎಂ. ದೊರೆರಾಜು ಮತ್ತು ಶ್ರೀ ಕೆ. ಎಂ. ಮಾದಪ್ಪನವರಿಗೆ ನಾನು ಋಣಿ.  ಸೂಕ್ತ ಮುಖಪುಟ ರಚಿಸಿರುವ ಕಲಾವಿದ ಶ್ರೀ ಎಂ. ಖಾನ್ ಅವರನ್ನೂ ನಾನಿಲ್ಲಿ ಕೃತಜ್ಞತೆಯಿಂದ ನೆನೆಯುತ್ತೇನೆ.
            ವಿವಾದಾತ್ಮಕ ವಿಷಯಗಳನ್ನೊಳಗೊಂಡಿರುವ ಈ ಕೃತಿ ಸಹೃದಯಿ ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳ ಉದ್ಭವಕ್ಕೆ ಕಾರಣವಾದಲ್ಲಿ ಅವುಗಳನ್ನು ನನ್ನೊಡನೆ ಹಂಚಿಕೊಳ್ಳಬೇಕೆಂದು ನಮ್ರತೆಯಿಂದ ಕೇಳಿಕೊಳ್ಳುತ್ತೇನೆ.
ಪ್ರೇಮಶೇಖರ
cherryprem@gmail.com


ಪ್ರವೇಶ

                        ನಾನು ಮೊದಲು ೨೦೦೮ರಲ್ಲಿ, ನಂತರ ೨೦೧೦ರಲ್ಲಿ ವಿಸ್ತೃತವಾಗಿ, ಪ್ರತಿಪಾದಿಸಿದ “ಮೂರು ಗಡಿಗಳ ಸಿದ್ಧಾಂತ”(The Three Frontiers Theory)ವು ಮಂಡಿಸುವ ಕೆಲವು ವಾದಗಳು ಮತ್ತು ಅದು ಒಳಗೊಂಡಿರುವ ಹಲವು ಪಾರಿಭಾಷಿಕ ಪದ ಹಾಗೂ ಪದಗುಚ್ಚಗಳನ್ನು ಈ ಕೃತಿಯ ಉದ್ದಕ್ಕೂ ಬಳಸಿಕೊಂಡಿದ್ದೇನೆ.  ಇದು ಈ ಕೃತಿ ತನ್ನಲ್ಲಿ ಒಳಗೊಂಡಿರುವ ವಿಷಯಗಳನ್ನು ಮತ್ತು ಅದು ಅಂತಿಮವಾಗಿ ಪ್ರತಿಪಾದಿಸುವ ನಿರ್ಣಯಗಳನ್ನು ಓದುಗರು ಸರಿಯಾದ ಬಗೆಯಲ್ಲಿ ಗ್ರಹಿಸಲು ಅಗತ್ಯವಾಗಿದೆ.  ಹೀಗಾಗಿ ಈ ಸಿದ್ದಾಂತದ ಮೂಲಭೂತ ಅಂಶಗಳನ್ನು ಕೆಳಗೆ ನೀಡಿದ್ದೇನೆ.
ಮೂರು ಗಡಿಗಳ ಸಿದ್ದಾಂತವು ಜಗತ್ತಿನ ರಾಷ್ಟ್ರಗಳ ನಡುವಿನ ಗಡಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸುತ್ತದೆ-  ೧. ಒಂದೇ ಅಲುಗಿನ ಗಡಿಗಳು (Single-edged Frontiers), ೨. ಎರಡು ಅಲುಗಿನ ಗಡಿಗಳು (Double-edged Frontiers), ಮತ್ತು ೩. ಮೊಂಡು ಅಲುಗಿನ ಗಡಿಗಳು (Dull-edged Frontiers).  ಒಂದೇ ಅಲುಗಿನ ಗಡಿಗಳು ಅವು ಪ್ರತ್ಯೇಕಿಸುವ ಎರಡೂ ದೇಶಗಳಲ್ಲಿ ಕೇವಲ ಒಂದಕ್ಕೆ ಮಾತ್ರ ಸಾಮರಿಕ ಅನುಕೂಲತೆಗಳನ್ನು ಒದಗಿಸುತ್ತವೆ.  ಎರಡು ಅಲುಗಿನ ಗಡಿಗಳು ತಾವು ಪ್ರತ್ಯೇಕಿಸುವ ಎರಡು ದೇಶಗಳಿಗೂ ಸಮಾನ ಸಾಮರಿಕ ಅನೂಕೂಲತೆಗಳನ್ನು ಒದಗಿಸುತ್ತವೆ.  ಮೊಂಡು ಅಲುಗಿನ ಗಡಿಗಳು ಎರಡೂ ದೇಶಗಳಲ್ಲಿ ಯಾವುದಕ್ಕೂ ಸಾಮರಿಕ ಅನುಕೂಲತೆಗಳನ್ನು ಒದಗಿಸುವುದಿಲ್ಲ.
೧೮೭೧ ಮತ್ತು ೧೯೧೪ರ ನಡುವೆ ಫ್ರಾನ್ಸ್ ಮತ್ತು ಜರ್ಮನಿಗಳನ್ನ್ನು ಪ್ರತ್ಯೇಕಿಸುತ್ತಿದ್ದ ಗಡಿರೇಖೆ ಒಂದು ಅಲುಗಿನ ಗಡಿಗಳಿಗೆ ಅತ್ಯಂತ ಸಮರ್ಪಕ ಉದಾಹರಣೆ.  ಈ ರೇಖೆ ಆಗಷ್ಟೇ ಏಕೀಕರಣಗೊಂಡಿದ್ದ ಜರ್ಮನಿಗೆ ಫ್ರಾನ್ಸ್ ವಿರುದ್ದ ಸಾಮರಿಕ ಅನುಕೂಲಗಳನ್ನು ಒದಗಿಸಿತ್ತು ಮತ್ತು ತನ್ಮೂಲಕ ಜರ್ಮನಿಯ ಪರವಾಗಿ ಒಂದೇ ಅಲುಗಿನ ಗಡಿಯಾಗಿತ್ತು.  ಪ್ರಸಕ್ತ ಸಂದರ್ಭದಲ್ಲಿ ಇರಾನ್ ಮತ್ತು ಇರಾಕ್‌ಗಳ ನಡುವೆ ಇರುವ ಷಟ್ ಅಲ್ ಅರಬ್ ಗಡಿ ಒಂದೇ ಅಲುಗಿನ ಗಡಿಗೆ ಉತ್ತಮ ಉದಾಹರಣೆ.  ಇದು ಇರಾನ್‌ಗೆ ಮಾತ್ರ ಸಾಮರಿಕ ಅನುಕೂಲತೆಗಳನ್ನು ಒದಗಿಸಿದೆ.  ಹೀಗಾಗಿಯೇ ಇರಾಕ್ ಎಲ್ಲ ಬಗೆಯಿಂದಲೂ ಬಲಾಢ್ಯವಾಗಿದ್ದರೂ ೧೯೮೦-೮೮ರ ಗಲ್ಫ್ ಯುದ್ಧದಲ್ಲಿ ಇರಾನ್ ಅನ್ನು ಮಣಿಸುವುದರಲ್ಲಿ ವಿಫಲಗೊಂಡಿತು.   ಎರಡು ಅಲುಗಿನ ಗಡಿಗಳಿಗೆ ಅನೇಕ ಉದಾಹರಣೆಗಳಿವೆ.  ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪಂಜಾಬ್‌ನಲ್ಲಿ ಹಾದುಹೋಗುವ ರ್‍ಯಾಡ್‌ಕ್ಲಿಫ್ ಗಡಿರೇಖೆ ಇವುಗಳಲ್ಲಿ ಪ್ರಮುಖವಾದುದು ಮತ್ತು ನಮಗೆ ಹೆಚ್ಚು ಪರಿಚಿತವಾದುದು.  ಈ ಗಡಿ ಎರಡೂ ದೇಶಗಳಿಗೆ ಸಮಾನವಾದ ಸಾಮರಿಕ ಅನುಕೂಲತೆಗಳನ್ನು ನೀಡಿದೆ.  ಹೀಗಾಗಿ ಎರಡೂ ದೇಶಗಳು ಪರಸ್ಪರರ ಉದ್ದೇಶಗಳ ಬಗ್ಗೆ ಸದಾ ಅಪನಂಬಿಕೆಯನ್ನು ತೋರುತ್ತಿವೆ ಮತ್ತು ಆ ಕಾರಣದಿಂದಾಗಿಯೇ ಕಟ್ಟೆಚ್ಚರದಿಂದ ಗಡಿಯನ್ನು ಕಾಯುತ್ತಿವೆ.  ಭಾರತ ಮತ್ತು ಚೀನಾಗಳ ನಡುವೆ ಈಗ ಇರುವ ನಿಯಂತ್ರಣ ರೇಖೆ ಮೊಂಡು ಅಲುಗಿನ ಗಡಿಯ ಒಂದು ಅತ್ಯುತ್ತಮ ಉದಾಹರಣೆ.  ಇದು ಎರಡರಲ್ಲಿ ಯಾವ ದೇಶಕ್ಕೂ ಸಾಮರಿಕ ಅನುಕೂಲತೆಯನ್ನು ನೀಡಿಲ್ಲ ಮತ್ತು ಈ ಕಾರಣದಿಂದಾಗಿಯೇ ತಾನು ೧೯೬೨ರ ಯುದ್ದದ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಎರಡೂ ದೇಶಗಳ ನಡುವೆ ಮತ್ತೊಂದು ಯುದ್ಧವನ್ನು ಅನಾವಶ್ಯಕಗೊಳಿಸಿಬಿಟ್ಟಿದೆ.
ಪರಿಣಾಮಕಾರಿ ವಿಶ್ಲೇಷಣೆಯ ಅನುಕೂಲಕ್ಕಾಗಿ ಮೂರು ಗಡಿಗಳ ಸಿದ್ಧಾಂತವು ತನ್ನದೇ ಆದ ಕೆಲವು ಹೊಚ್ಚಹೊಸ ಪಾರಿಭಾಷಿಕ ಪದ ಅಥವಾ ಪದಗುಚ್ಚಗಳನ್ನು ರೂಪಿಸಿಕೊಂಡಿದೆ.  ಇದರ ಪ್ರಕಾರ ಒಂದೇ ಅಲುಗಿನ ಗಡಿಯಿಂದಾಗಿ ಸಾಮರಿಕ ಅನುಕೂಲತೆಗಳನ್ನು ಪಡೆದುಕೊಂಡಿರುವ ದೇಶವನ್ನು 'ದಿಬ್ಬದ ದೇಶ' (Ridge State) ಎಂದೂ, ಅಂತಹ ಅನುಕೂಲತೆಯಿಂದ ವಂಚಿತವಾಗಿರುವ ದೇಶವನ್ನು 'ಕಣಿವೆ ದೇಶ' (Valley State) ಎಂದು ಹೆಸರಿಸಲಾಗಿದೆ.  ಇಬ್ಬರು ಪ್ರತಿಸ್ಪರ್ಧಿಗಳಲ್ಲಿ ದಿಬ್ಬದ ಮೇಲಿರುವವನಿಗೆ ಅಂದರೆ ಎತ್ತರದಲ್ಲಿರುವವನಿಗೆ ಕೆಳಗಿನ ಕಣಿವೆಯಲ್ಲಿರುವವನಿಗಿಂತ ಹೆಚ್ಚು ಅನುಕೂಲಗಳಿರುತ್ತವೆ ಎಂಬ ಸಾಮಾನ್ಯ ನಂಬಿಕೆಯ ಆಧಾರದ ಮೇಲೆ ಈ ಹಣೆಪಟ್ಟಿಗಳನ್ನು ರೂಪಿಸಲಾಗಿದೆ.  ಸಮತಟ್ಟಾದ ನೆಲದಲ್ಲಿ ನಿಂತ ಇಬ್ಬರು ಪ್ರತಿಸ್ಪರ್ಧಿಗಳಿಗೆ ಸಮಾನ ಅನುಕೂಲತೆಗಳಿರುವುದು ಸಹಜವಾದ ಕಾರಣ ಎರಡು ಅಲುಗಿನ ಗಡಿಯು ಪ್ರತ್ಯೆಕಿಸುವ ಎರಡು ದೇಶಗಳನ್ನು 'ಸಮತಟ್ಟು ದೇಶಗಳು' (Plain States) ಎಂದು ಕರೆಯಲಾಗಿದೆ.  ಮುಂದುವರೆದು, ಮೊಂಡು ಅಲುಗಿನ ಗಡಿಯ ಎರಡೂ ಬದಿಗಿರುವ ದೇಶಗಳೆರಡನ್ನು 'ಕಂದರ ದೇಶಗಳು' (Canyon States) ಎಂದು ಕರೆಯಬಹುದು.  ಕಾರಣ, ಆಳ ಕಮರಿಯ ಆಚೆ ಈಚೆ ನಿಂತಿರುವ ಪ್ರತಿಸ್ಪರ್ಧಿಗಳಿಗೆ ಒಬ್ಬರ ವಿರುದ್ಧವಾಗಿ ಇನ್ನೊಬ್ಬರಿಗೆ ಯಾವುದೇ ತೆರನಾದ ಸಾಮರಿಕ ಅನುಕೂಲತೆಗಳಿರುವುದಿಲ್ಲ ಎನ್ನುವುದು ಸರ್ವವಿದಿತವೇ ಆಗಿದೆ.
            ಕಳೆದ ಶತಮಾನದ ಮೊದಲನೆಯ ದಶಕ ಮತ್ತು ಎರಡನೆಯ ದಶಕದ ಆರಂಭದಲ್ಲಿ ಭಾರತ - ಚೀನಾ ಗಡಿಯು ತನ್ನ ಪೂರ್ವಭಾಗದಲ್ಲಿ ಸೇನಾ ಕಾರ್ಯಚರಣೆಗಳನ್ನು ಕಂಡಿತು.  ಈ ಕಾರ್ಯಾಚರಣೆಗಳನ್ನು ಕೈಗೊಂಡದ್ದು ಬಲಾಢ್ಯ ಬ್ರಿಟಿಷ್ ಭಾರತ, ಆಂತರಿಕ ಕ್ಷೋಭೆ ಮತ್ತು ನಂತರ ಗಣರಾಜ್ಯೀಯ ಕ್ರಾಂತಿಯ ಪರಿಣಾಮವಾಗಿ ದುರ್ಬಲಗೊಂಡಿದ್ದ ಚೀನಾದ ವಿರುದ್ಧ.  ಇದಕ್ಕೆ ಪ್ರತಿಕ್ರಿಯೆಯಾಗಿ ನಲವತ್ತು ವರ್ಷಗಳ ನಂತರ, ಯಶಸ್ವೀ ಕಮ್ಯೂನಿಸ್ಟ್ ಕ್ರಾಂತಿಯ ಪರಿಣಾಮವಾಗಿ ಸದೃಢಗೊಂಡಿದ್ದ ಚೀನಾ ಪಶ್ಚಿಮ ವಲಯದಲ್ಲಿ ಸೇನಾ ಕಾರ್ಯಾಚರಣೆಗಳನ್ನು ಕೈಗೊಂಡಿತು.  ಹೀಗೆ ತಮ್ಮ ನಡುವಿನ ದೀರ್ಘ ಗಡಿಯಲ್ಲಿ, ಮೊದಲು ಭಾರತ, ನಂತರ ಚೀನಾ ಕೈಗೊಂಡ ಮಿಲಿಟರಿ ಕಾರ್ಯಾಚರಣೆಗಳು ಮೂರು ಗಡಿಗಳ ಸಿದ್ಧಾಂತದ ಪ್ರಕಾರ, ತಮ್ಮ ವಿರುದ್ಧವಾಗಿದ್ದ ಒಂದೇ ಅಲುಗಿನ ಗಡಿಗಳನ್ನು ಮೊಂಡು ಅಲುಗಿನ ಗಡಿಗಳನ್ನಾಗಿ ಪರಿವರ್ತಿಸಲು ನವದೆಹಲಿ ಮತ್ತು ಬೀಜಿಂಗ್ ನಡೆಸಿದ ಪ್ರಯತ್ನಗಳಾಗಿವೆ.
ಭಾರತ ಮತ್ತು ಚೀನಾಗಳ ನಡುವೆ ೧೯೪೯ ಮತ್ತು ೧೯೬೨ರ ನಡುವೆ ಘಟಿಸಿದುದೆಲ್ಲವೂ ಸ್ವತಂತ್ರ ಭಾರತದ ಇತಿಹಾಸದ ಒಂದು ಅವಿಭಾಜ್ಯ ಹಾಗೂ ಮರೆಯಲಾಗದ ಅಧ್ಯಾಯವಾಗಿದೆ.  ಅನೇಕ ವಿದ್ವಾಂಸರು ಅತ್ಯಂತ ಸಹನೆ ಮತ್ತು ಪರಿಶ್ರಮದಿಂದ ಸಂಗ್ರಹಿಸಿರುವ ಅಗಾಧ ಮಾಹಿತಿಗಳು ಮತ್ತು ಮಾಡಿರುವ ಆಳ ವಿಶ್ಲೇಷಣೆಗಳ ಪ್ರಕಾರ ೧೯೬೨ರ ಯುದ್ದಕ್ಕೆ ಕಾರಣವಾದ ಬೆಳವಣಿಗೆಗಳನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು.  ಮಾತುಕತೆಗಳ ಮೂಲಕ ಮತ್ತು ೧೯೫೯-೬೨ರ ನಡುವೆ ಭಾರತೀಯ ಸೇನೆ ಮೊದಲು ಲಡಾಕ್ ಮತ್ತು ನಂತರ ನೇಫಾದಲ್ಲಿ ಕೈಗೊಂಡ 'ಮುಂಚೂಣಿ ನೀತಿ' (Forward Policy) ಎಂದು ಕರೆಸಿಕೊಳ್ಳುವ ಸಣ್ಣ ಪ್ರಮಾಣದ ಅಘೋಷಿತ ಮಿಲಿಟರಿ ಕಾರ್ಯಾಚರಣೆಗಳ ಮೂಲಕ ಅಕ್ಸಾಯ್ ಚಿನ್ ಪ್ರದೇಶದಲ್ಲಿದ್ದ ಮೂರು 'ಅನಧಿಕೃತ' ಗಡಿಗಳಲ್ಲಿ ತನಗೆ ಅನುಕೂಲಕರವಾಗಿದ್ದ ಒಂದನ್ನು ಅಧಿಕೃತ ಗಡಿಯೆಂದು ಮತ್ತು ಪೂರ್ವದ ಮೆಕ್‌ಮಹೋನ್ ರೇಖೆಯ ಬಗೆಗಿನ ತನ್ನ ನಿಲುವಿಗೆ ಚೀನಿಯರಿಂದ ಮಾನ್ಯತೆ ಪಡೆಯಲು ಭಾರತ ತೋರಿದ ಅನಾವಶ್ಯಕ ಆತುರ ಮೊದಲ ಗುಂಪಿಗೆ ಸೇರುತ್ತದೆ.  ಗಡಿಭಾಗದ ಪ್ರದೇಶಗಳ ಮೇಲೆ ಹಕ್ಕುಸ್ಥಾಪನೆ ಮತ್ತು ಗಡಿಯ ಬಗ್ಗೆ ಚೀನಾದ ನೀತಿಗಳಲ್ಲಿ ಮತ್ತೆಮತ್ತೆ ಉಂಟಾದ ಬದಲಾವಣೆಗಳು ಎರಡನೆಯ ಗುಂಪಿಗೆ ಸೇರುತ್ತವೆ.

Wednesday, November 14, 2012

ಮತ್ತೊಮ್ಮೆ ಕಾರ್ನಾಡ್: ಸಂಸ್ಕೃತಿ ಚಿಂತನೆಯ ಮುಂದಿರುವ ಸವಾಲುಗಳು


          ಗಿರೀಶ್ ಕಾರ್ನಾಡ್ ಮತ್ತೆ ಸುದ್ದಿಯಲ್ಲಿದ್ದಾರೆ.  ಸರ್ ವಿದಿಯಾಧರ್ ಸೂರಜ್‌ಪ್ರಸಾದ್ ನೈಪಾಲ್ ಅವರನ್ನು ಮುಸ್ಲಿಂ ವಿರೋಧಿ ಎಂದು ಮುಂಬೈ ಸಾಹಿತ್ಯೋತ್ಸವದಲ್ಲಿ ಟೀಕಿಸಿದ ಬಿಸಿ ಆರುವ ಮೊದಲೇ ನೆಲಮಂಗಲದಲ್ಲಿ ರವೀಂದ್ರನಾಥ್ ಟ್ಯಾಗೋರ್ ಎರಡನೆಯ ದರ್ಜೆಯ ನಾಟಕಕಾರ ಎಂದು ಹೇಳಿದ್ದಾರೆ.  ಕಾರ್ನಾಡ್ ಪರ/ವಿರೋಧ ಬಾಣಗಳ ಹಾರಾಟ ಸಾಗಿದೆ.

          ಎಸ್. ಎಲ್. ಭೈರಪ್ಪ, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡರಂಥ ಸಾಹಿತ್ಯಕ ದಿಗ್ಗಜಗಳ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದೇವೆಂಬುದರ ಆಧಾರದ ಮೇಲೆ ಸಾಹಿತ್ಯಕ್ಷೇತ್ರದಲ್ಲಿನ ಸ್ಥಾನಮಾನಗಳಿರಲಿ, ವೈಯುಕ್ತಿಕ ಸಂಬಂಧಗಳೂ ಸಹಾ ನಿರ್ಧರಿತವಾಗುವಂಥ ಉಸಿರುಕಟ್ಟುವ ವಾತಾವರಣ ಕನ್ನಡ ಸಾಂಸ್ಕೃತಿಕವಲಯದಲ್ಲಿ ನಿರ್ಮಾಣವಾಗಿರುವ ಕಾಲ ಇದು.  ಇಲ್ಲೀಗ ನೈಪಾಲರ ಬಗೆಗಿನ ಕಾರ್ನಾಡರ ಅಸಹನೆಯ ಹಿಂದಿನ ಕಾರಣಗಳಂಥ ವಿವಾದಾಸ್ಪದ ವಿಷಯವನ್ನು ಚರ್ಚೆಗೆತ್ತಿಕೊಳ್ಳುವುದು ಜಾರುವ ನೆಲದಲ್ಲಿ ಕಾಲಿಟ್ಟಂತೆ.  ಇಂಥಾ ಪರಿಸ್ಥಿತಿಯಲ್ಲಿ, ಕಾರ್ನಾಡರ ಬಗೆಗಿನ ನನ್ನ ವೈಯುಕ್ತಿಕ ಅನುಮಾನ, ಅಭಿಪ್ರಾಯಗಳ ಸುಳಿವು ನೀಡಿಯೇ ಮುಂದುವರೆಯುವುದು ಸೂಕ್ತ.

          ತುಘ್‌ಲಕ್ನ ಹಿಂದಿರುವುದು ಆಲ್ಬರ್ಟ್ ಕಮೂನ ಕಾಲಿಗುಲ ಎಂಬ ಆಪಾದನೆಯಂಥವುಗಳನ್ನು ಕೇಳಿಯೂ ಕಾರ್ನಾಡ್ ಒಬ್ಬ ಅತ್ಯುತ್ತಮ ನಾಟಕಕಾರ ಎಂದು ನಂಬಿದವನು ನಾನು.  ಹನ್ನೊಂದು ದಿನಗಳ ಹಿಂದಷ್ಟೇ ದೆಹಲಿಯ ಕೋಟ್ಲಾ ಮೈದಾನದಲ್ಲಿ ಆಸಕ್ತಿಯಿಂದ ತುಘ್‌ಲಕ್ ನೋಡಿ ಕಾರ್ನಾಡರ ಪ್ರತಿಭೆಯ ಬಗ್ಗೆ (ಅದೆಷ್ಟನೆಯ ಬಾರಿಯೋ) ವಿಸ್ಮಿತನಾದವನು ನಾನು.  ಆದರೆ ಅವರ ಸಾಹಿತ್ಯೇತರ ಚಿಂತನೆಗಳ ಬಗ್ಗೆ ನನ್ನಲ್ಲಿ ಅಸಹನೆ ಮೂಡಿದ ಉದಾಹರಣೆಗಳುಂಟು.  ಕಾವೇರಿ ವಿವಾದದ ಬಗೆಗಿನ ಅವರ ಹೇಳಿಕೆಗಳು, ಮೇಲೇರಲು ನನಗೆ ಯಾರೂ ಸಹಕರಿಸಲಿಲ್ಲ, ಹಾಗಾಗಿ ನಾನೂ ಯಾರಿಗೂ ಸಹಕರಿಸುವುದಿಲ್ಲ ಎಂಬ ಅವರ ಘನತೆಗೆ ತಕ್ಕುದಲ್ಲದ ಮಾತುಗಳು ಮೂಡಿಸಿದ ಬೇಸರದ ಹಿನ್ನೆಲೆಯಲ್ಲಿಯೇ ನಾಟಕಗಳ ಹೊರತಾದ ಅವರ ಸೃಜನಶೀಲ ಕೃತಿಗಳನ್ನೂ ಅನುಮಾನದಿಂದ ನೋಡುವವನು ನಾನು.  ಎರಡೂವರೆ ವರ್ಷಗಳ ಹಿಂದೆ ದೇಶ ಕಾಲ ತ್ರೈಮಾಸಿಕದ ವಿಶೇಷ ಸಂಚಿಕೆಯಲ್ಲಿ ಓದಿದ ಮುಸಲ್ಮಾನ ಬಂದ, ಮುಸಲ್ಮಾನ ಬಂದ ಎಂಬ ಅವರ ಸಣ್ಣಕಥೆಯಂತೂ ನನ್ನಲ್ಲಿ ಅತ್ಯಂತ ತಿರಸ್ಕಾರವನ್ನುಂಟುಮಾಡಿತ್ತು.  ನಮ್ಮ ಬುದ್ಧಿಜೀವಿಗಳು ಬಹಿರಂಗವಾಗಿ ಇಷ್ಟಪಡದ ಸೌಂದರ್ಯ ಸ್ಪರ್ಧೆಗಳಲ್ಲೊಂದು ನಿಯಮವಿದೆಯಂತೆ.  ವಿಶ್ವಸುಂದರಿಯಾಗಿ ಆಯ್ಕೆಯಾದವಳು ಆನಂತರ ತನಗೆ ಪ್ರಶಸ್ತಿ ತಂದುಕೊಟ್ಟ ಮೈಮಾಟದ ಅಂಕಿಅಂಶಗಳಲ್ಲಿ ತೀವ್ರತರದ ಬದಲಾವಣೆಗಳನ್ನು ತಂದುಕೊಂಡರೆ ಆಕೆಯಿಂದ ಪ್ರಶಸ್ತಿಯನ್ನು ಕಿತ್ತುಕೊಳ್ಳಲಾಗುತ್ತದಂತೆ.  ಇಂತಹ ನಿಯಮವನ್ನು ಜ್ಞಾನಪೀಠ ಪ್ರತಿಷ್ಠಾನವೂ ಜಾರಿಗೆ ತಂದು, ಪ್ರಶಸ್ತಿಯ ಮೌಲ್ಯವನ್ನು ಕುಗ್ಗಿಸುವ ಕೃತಿಗಳನ್ನು ರಚಿಸುವ ಜ್ಞಾನಪೀಠಿಗಳಿಂದ ಪ್ರಶಸ್ತಿಯನ್ನು ಕಿತ್ತುಕೊಳ್ಳುವಂತಾದರೆ ಎಷ್ಟು ಒಳ್ಳೆಯದು ಎಂದು ಯೋಚಿಸಿದ್ದೆ.

          ಕಾರ್ನಾಡರನ್ನು ಅನುಮಾನಿಸುತ್ತಲೇ, ತಿರಸ್ಕರಿಸುತ್ತಲೇ, ಮೆಚ್ಚುತ್ತಲೇ ಅವರ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ರೂಪಿಸಿಕೊಂಡಿದ್ದೇನೆ.  ಧೀರ್ಘಕಾಲದ ಮೌನವನ್ನು ಥಟ್ಟನೆ ಭಂಗಿಸಿ ಧಿಗ್ಗನೆದ್ದು ಕೂತು ಮಾತು ಆರಂಭಿಸುವಂತೆ ಅವರು ಆಗಾಗ ನೀಡುವ ಹೇಳಿಕೆಗಳ ಹಿಂದೆ ಸದಾ ಸುದ್ಧಿಯಲ್ಲಿರಬೇಕೆನ್ನುವ ಗೀಳು ಕೆಲಸಮಾಡುತ್ತಿಲ್ಲ.  ತಮ್ಮ ಅಭಿಪ್ರಾಯ, ನಿಲುವುಗಳನ್ನು ಇತರರು ಒಪ್ಪಲೇಬೇಕೆನ್ನುವ ಒತ್ತಾಯವೂ ಅವರಲ್ಲಿಲ್ಲ.  ಟೀಕೆಗಳ ಬಗ್ಗೆ ಅವರು ಸಹನೆ ಕಳೆದುಕೊಂಡು ಪ್ರತಿಕ್ರಿಯಿಸಿದ ಹಾಗೆಯೂ ಕಾಣುವುದಿಲ್ಲ.  ಪ್ರಸಕ್ತ ವಿವಾದವನ್ನೇ ಉದಾಹರಣೆಗೆ ತೆಗೆದುಕೊಂಡರೆ, ತಮಗೆ ಪ್ರೊಫೆಷನಲ್ ಸೆಕ್ಯೂಲರಿಸ್ಟ್ ಎಂಬ ಹಣೆಪಟ್ಟಿ ಹಚ್ಚಿರುವುದರ ಬಗ್ಗೆ ತಮ್ಮಲ್ಲಿ ಯಾವ ಅಭ್ಯಂತರವೂ ಇಲ್ಲ ಎಂದು ತಣ್ಣಗೆ ಹೇಳಿದ್ದಾರೆ.  ಒಟ್ಟಿನಲ್ಲಿ, ತಮಗನಿಸಿದ್ದನ್ನು ನೇರವಾಗಿ, ಪ್ರಾಮಾಣಿಕವಾಗಿ ಹೇಳಿಬಿಡುವ ಅವರು ಚೀರ್‌ಗರ್ಲ್ಸ್‌ರಂಥ ಕಾರ್ಡ್‌ಹೋಲ್ಡರ್ ವಂದಿಮಾಗಧರನ್ನು ಕಟ್ಟಿಕೊಂಡು ದಿನಕ್ಕೊಂದು ಕಡೆ ಗಿಲೀಟಿನ ಮಾತುಗಳನ್ನಾಡುತ್ತಲೇ ಇದುವರೆಗಿನ ಬದುಕು ಕಳೆದವರಲ್ಲ.  ಅವರ ಮಾತುಗಳನ್ನು ಮೊದಲು ಗಮನವಿಟ್ಟು ಕೇಳಿದ ನಂತರವಷ್ಟೇ ಅದು ಪುರಸ್ಕಾರಯೋಗ್ಯವೋ, ತಿರಸ್ಕಾರಯೋಗ್ಯವೋ ಎಂದು ತೀರ್ಮಾನಿಸಲು ನನ್ನನ್ನು ಪ್ರೇರೇಪಿಸುವುದು ನನಗೆ ದಕ್ಕಿದ ಅವರ ಈ ವ್ಯಕ್ತಿತ್ವ.

          ನೈಪಾಲರಿಗೆ ನೀಡಲಾದ ಜೀವಮಾನ ಸಾಧನೆಯ ಪ್ರಶಸ್ತಿಯ ಉದ್ದೇಶವನ್ನೇ ಕಾರ್ನಾಡ್ ಪ್ರಶ್ನಿಸಿದ್ದಾರೆ.  ಇದು ವಿಚಾರಯೋಗ್ಯ ಪ್ರಶ್ನೆ.  ಈ ಪ್ರಶಸ್ತಿ ಜಗತ್ತಿಗೆ ನೀಡುತ್ತಿರುವ ಸಂದೇಶವೇನು ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ.  ಬಹುಮುಖಿ ಭಾರತೀಯ ಸಂಸೃತಿಯ ಬಗ್ಗೆ ಏಕಮುಖ ತೀರ್ಮಾನಗಳನ್ನು ಕೊಡುವ, ಭಾರತೀಯ ಸಂಸ್ಕೃತಿಯಲ್ಲಿ ಇಸ್ಲಾಂನ ಸ್ಥಾನದ ಬಗ್ಗೆ ಪೂರ್ವಗ್ರಹಪೀಡಿತ, ನಕಾರಾತ್ಮಕ ನಿಲುವುಗಳನ್ನು ತಳೆದಿರುವ, ಇಸ್ಲಾಮಿಕ್ ಮೂಲಭೂತವಾದವನ್ನೇ ಇಸ್ಲಾಂನ ನೈಜರೂಪ ಎಂಬ ಅಭಿಪ್ರಾಯ ಹೊಂದಿರುವ, ಮತ್ತವುಗಳನ್ನು ಯಾವ ಹಿಂಜರಿಕೆಯೂ ಇಲ್ಲದೇ ಪ್ರಚುರಪಡಿಸುತ್ತಿರುವ ನೈಪಾಲರಿಗೆ ಈ ಬಗೆಯ ಪ್ರಶಸ್ತಿಯೆಂದರೆ ಅವರ ನಿಲುವುಗಳನ್ನು ಸಮರ್ಥಿಸಿದಂತಾಗುವುದಿಲ್ಲವೇ?  ಈ ಪ್ರಶಸ್ತಿಯ ಹಿಂದೆ ಕೆಲಸ ಮಾಡುತ್ತಿರುವ ಶಕ್ತಿಗಳು ಯಾವುವು ಮತ್ತು ಅವುಗಳ ಉದ್ದೇಶವೇನು?

ನೈಪಾಲರಿಗೆ ನೊಬೆಲ್ ಬಹುಮಾನ ಸಿಕ್ಕಿದ್ದು ೨೦೦೧ರಲ್ಲಿ.  ಆ ದಿನಗಳಲ್ಲಿ ಪಾಶ್ಚಿಮಾತ್ಯ ಜಗತ್ತಿಗೆ ಇಸ್ಲಾಮಿಕ್ ಮೂಲಭೂತವಾದ ಒಡ್ಡಿದ ಅಪಾಯ, ಅದಕ್ಕೆ ಅಮೆರಿಕಾ ಮತ್ತು ಪಶ್ಚಿಮ ಯೂರೋಪ್ ಪ್ರತಿಕ್ರಿಯಿಸಿದ ಬಗೆಗೂ ಇಸ್ಲಾಂವಿರೋಧಿ ನೈಪಾಲರ ನೊಬೆಲ್‌ಗೂ ಸಂಬಂಧವಿರಬಹುದೇ?  ನೊಬೆಲ್ ಬಹುಮಾನಗಳ (ಮುಖ್ಯವಾಗಿ ಶಾಂತಿ ಮತು ಸಾಹಿತ್ಯ) ಹಿಂದಿರುವ ಪಶ್ಚಿಮಪರ ರಾಜಕೀಯದ ಅರಿವಿದ್ದವರಿಗೆ ನನ್ನ ಪ್ರಶ್ನೆ ಅರ್ಥವಾಗಬಹುದು.  ಬ್ರಾಹ್ಮಣರನ್ನು ಜರೆದರೆ ಪ್ರಶಸ್ತಿ ನಿಶ್ಚಿತ ಎಂಬ ಕೆಟ್ಟ ಪರಿಸ್ಥಿತಿ ಇತ್ತೀಚಿನವರೆಗೂ ಭಾರತದಲ್ಲಿತ್ತು.  ಈಗ ಇಸ್ಲಾಂ ವಿರುದ್ಧ ಬರೆದರೆ ಅಂತರರಾಷ್ಟ್ರೀಯ ಪ್ರಶಸ್ತಿ ನಿಶ್ಚಿತ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೇ?  ಅದೀಗ ನೈಪಾಲರ ಜೀವಮಾನ ಸಾಧನೆ ಪ್ರಶಸ್ತಿಯ ಮೂಲಕ ಭಾರತಕ್ಕೂ ಕಾಲಿಡುತ್ತಿದೆಯೇ?  ಅಂದರೆ ಭಾರತೀಯ ಸಾಹಿತ್ಯದ ಒಂದು ವರ್ಗ ಭಾರತೀಯ ಸಂಸ್ಕೃತಿಗೆ ಇಸ್ಲಾಂನ ಕಾಣಿಕೆಯನ್ನು ನಗಣ್ಯಗೊಳಿಸಲು, ತನ್ಮೂಲಕ ಇಸ್ಲಾಮನ್ನು ನಿರಾಕರಿಸಲು ಪ್ರಯತ್ನ ಆರಂಭಿಸಿದೆಯೇ?  ಹಾಗಿದ್ದಲ್ಲಿ ಇದರ ದೂರಗಾಮಿ ಪರಿಣಾಮಗಳೇನು?  ಸಂಸ್ಕೃತಿ ಚಿಂತಕರು ಗಮನಿಸಬೇಕಾದ ವಿಷಯ ಇದು.

          ನೈಪಾಲ್ ಬಗ್ಗೆ ಮಾತಾಡಲು ಕಾರ್ನಾಡ್ ಆಯ್ದುಕೊಂಡ ಸಂದರ್ಭದ ಔಚಿತ್ಯದ ಪ್ರಶ್ನೆ ಹಲವರನ್ನು ಕಾಡಿದೆ.  ಮುಂಬೈ ಸಾಹಿತ್ಯೋತ್ಸವದ ಆಯೋಜಕ ಅನಿಲ್ ಧಾರ್ಕರ್ ಈ ಬಗ್ಗೆ ವಿ. ಎಸ್. ನೈಪಾಲ್ ಬಗ್ಗೆ ಗಿರೀಶ್ ಕಾರ್ನಾಡ್ ಅವರ ಧಾಳಿಯಿಂದ ನಾವೆಲ್ಲಾ ಬೆಚ್ಚಿದ್ದೇವೆ.  ಅವರನ್ನು ನಾವಿಲ್ಲಿಗೆ ಆಹ್ವಾನಿಸಿದ್ದು ತಮ್ಮ ರಂಗಯಾನದ ಬಗ್ಗೆ ಮಾತಾಡಲಷ್ಟೆ.  ಶ್ರೀ ನೈಪಾಲ್‌ರಿಗೂ ಇದಕ್ಕೂ ಯಾವ ಸಂಬಂಧವೂ ಇರಲಿಲ್ಲ ಎಂದು ಹೇಳುವ ಮೂಲಕ ತಮ್ಮ ಅಸಂತೋಷ, ಅಸಮಾಧಾನವನ್ನು ಹೊರಹಾಕಿದ್ದಾರೆ.  ಆದರೆ ನೈಪಾಲ್ ಬಗ್ಗೆ ಮಾತಾಡಲು ತಾವು ಆಯ್ಕೆ ಮಾಡಿಕೊಂಡದ್ದು ಸರಿಯಾದ ಸಂದರ್ಭ, ಸರಿಯಾದ ಸ್ಥಳ ಹಾಗೂ ಸರಿಯಾದ ಶ್ರೋತೃಸಮೂಹ ಎಂದು ಕಾರ್ನಾಡ್ ಯಾವ ಹಿಂಜರಿಕೆಯೂ ಇಲ್ಲದೇ ಹೇಳಿದ್ದಾರೆ.  ಅವರ ಪ್ರಕಾರ, ಹತ್ತುವರ್ಷಗಳ ಹಿಂದೆ ನೈಪಾಲ್ ಬಿಬಿಸಿ ಟೆಲಿವಿಷನ್‌ನಲ್ಲಿ ಮುಸ್ಲಿಮರ ವಿರುದ್ಧ ಆಡಿದ ಮಾತುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರಹಾಕುವುದು ತಾವು ಸರಕಾರೀ ನೌಕರನಾಗಿದ್ದರಿಂದ ಸಾಧ್ಯವಾಗಲಿಲ್ಲ.  ಸರಕಾರೀ ನೌಕರರಿರಲಿ, ಸರಕಾರೀವ್ಯವಸ್ಥೆಯಿಂದ ಎಲ್ಲ ಸವಲತ್ತುಗಳನ್ನೂ ಪಡೆದುಕೊಂಡೂ, ವ್ಯವಸ್ಥೆಯ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳುವವರ ಪರವಾಗಿ ಮಾತಾಡುವವರು ಕಾರ್ನಾಡರಿಂದ ಕಲಿಯುವುದು ಸಾಕಷ್ಟಿದೆ.

          ತಮ್ಮ ರಂಗ ಯಾನದ ಬಗ್ಗೆ ಮಾತಾಡುವಂತೆ ತಮಗೆ ಬಹಳ ಹಿಂದೆಯೇ ಆಹ್ವಾನ ಬಂದಿತ್ತೆಂದೂ, ನೈಪಾಲರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಲಾಗುವ ಬಗ್ಗೆ ತಮಗೆ ತಿಳಿದದ್ದು ಎರಡು ದಿನಗಳ ಹಿಂದಷ್ಟೇ ಎಂದೂ ಕಾರ್ನಾಡ್ ಹೇಳಿದ್ದಾರೆ.  ಹೀಗಾಗಿಯೇ ಆ ನೊಬೆಲ್ ಪುರಸೃತರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಲು ಇದೇ ಸುಸಂದರ್ಭವೆನಿಸಿತು ಎಂದೂ ಅವರು ಹೇಳಿದ್ದಾರೆ.  ಇಲ್ಲಿ ಸುಮ್ಮನಿದ್ದು, ಆಮೇಲೆ ಬೆಂಗಳೂರಿಗೆ ಹೋಗಿ ಮಾತಾಡಿದರೇನು ಪ್ರಯೋಜನ? ಎಂದವರು ಪ್ರಶ್ನಿಸುತ್ತಾರೆ.  ಮೇಲೆ ಉಲ್ಲೇಖಿಸಿರುವ ನೈಪಾಲರ ಜೀವಮಾನ ಸಾಧನೆಯ ಪ್ರಶಸ್ತಿಯ ಔಚಿತ್ಯದ ಬಗ್ಗೆ ಯೋಚಿಸಿದರೆ ಕಾರ್ನಾಡರ ಈ ಪ್ರಶ್ನೆ ಅರ್ಥಪಡೆದುಕೊಳ್ಳುತ್ತದೆ.  ಎಲ್ಲರಿಗೂ ಗೊತ್ತಿರುವ, ಕಾರ್ನಾಡರೇ ಹಲವು ಕಡೆ ವಿವರಿಸಿರುವ ಅವರ ರಂಗ ಸಾನ್ನಿದ್ಯದ ಬಗೆಗಿನ ಮಾತುಕತೆಗಳಿಗಿಂತಲೂ ನೈಪಾಲರಿಗೆ ನೀಡಲಾದ ಪ್ರಶಸ್ತಿಯ ಉದ್ದೇಶ ಮತ್ತು ಔಚಿತ್ಯದ ಬಗ್ಗೆ ಮಾತಾಡುವುದು ಈ ದಿನದ ಅಗತ್ಯ.  ಅದನ್ನು ಕಾರ್ನಾಡ್ ಸರಿಯಾದ ಸಂದರ್ಭದಲ್ಲಿ, ಸರಿಯಾದ ಸ್ಥಳದಲ್ಲಿ, ಸರಿಯಾದ ಶ್ರೋತೃಗಳ ಮುಂದೆ ಸರಿಯಾಗಿ ಮಾಡಿದ್ದಾರೆ.

          ನಾನು ಶಾಲೆಯಲ್ಲಿದ್ದಾಗ ಪತ್ರಿಕೆಗಳಲ್ಲಿ ಓದಿದ್ದ ಒಂದು ವಿಷಯವನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತ.  ೧೯೭೧-೭೨ರಲ್ಲಿರಬೇಕು, ಚಿಂತಕ ನೋಮ್ ಚೋಮ್‌ಸ್ಕಿ ಬೆಂಗಳೂರಿಗೆ ಆಹ್ವಾನಿತರಾಗಿದ್ದರು.  ಅವರು ಭಾಷಾಶಾಸ್ತ್ರಜ್ಞರಾಗಿದ್ದವರು ಮತ್ತು ವಿಯೆಟ್ನಾಂ ಯುದ್ದದ ಕಡುವಿರೋಧಿಯಾಗಿದ್ದವರು.  ಅವರ ಕೃತಿ America and the New Mandarins ವಿಶ್ವಾದ್ಯಂತ ಚರ್ಚೆಗೊಳಗಾಗುತ್ತಿತ್ತು.  ಬೆಂಗಳೂರಿಗೆ ಅವರು ಅಹ್ವಾನಿತರಾಗಿದ್ದದ್ದು ಭಾಷಾಶಾಸ್ತ್ರದ ಬಗ್ಗೆ ಮಾತಾಡಲು.  ಆದರೆ ಅವರು ಮಾತಾಡಿದ್ದು ವಿಯೆಟ್ನಾಂನಲ್ಲಿ ಅಮೆರಿಕಾ ನಡೆಸುತ್ತಿದ್ದ ದೌರ್ಜನ್ಯಗಳ ಬಗ್ಗೆ.  ತಮ್ಮ ಭಾಷಣವನ್ನು ಅವರು ಆರಂಭಿಸಿದ್ದು ಸರಿಸುಮಾರು ಹೀಗೆ: ...ಈ ಗಳಿಗೆಯಲ್ಲಿ ನಾಗರೀಕ ಪ್ರಪಂಚದ ಮುಂದಿರುವ ಅತ್ಯಂತ ಜಟಿಲ ಪ್ರಶ್ನೆ ವಿಯೆಟ್ನಾಂನಲ್ಲಿ ಅಮೆರಿಕಾ ನಡೆಸುತ್ತಿರುವ ನರಮೇಧ.  ಇದನ್ನು ನಿರ್ಲಕ್ಷಿಸಿ ಭಾಷಾಶಾಸ್ತ್ರದ ಬಗ್ಗೆ ಮಾತಾಡುವುದು ಅರ್ಥಹೀನ.  ಭಾಷಾಶಾಸ್ತ್ರದ ಬಗೆಗಷ್ಟೇ ನನ್ನ ಮಾತುಗಳನ್ನು ನಿರೀಕ್ಷಿಸಿ ಇಲ್ಲಿಗೆ ಬಂದಿರುವವರು ಹೊರಹೋಗಬಹುದು...

          ಟ್ಯಾಗೋರ್ ಕುರಿತು ಕಾರ್ನಾಡ್ ಹೇಳಿಕೆಯ ಬಗ್ಗೆ ಒಂದೆರಡು ಮಾತು.  ಕಾರ್ನಾಡ್‌ರಂತಹ ಒಬ್ಬ ಪ್ರತಿಭಾವಂತ ನಾಟಕಕಾರ ಮತ್ತೊಬ್ಬರ (ಅವರು ಯಾರೇ ಆಗಿರಲಿ) ನಾಟಕಗಳ ಬಗ್ಗೆ ಏನನ್ನಾದರೂ ಹೇಳಿದರೆ ರಂಗಕರ್ಮಿಗಳು ಮತ್ತು ರಂಗಾಸಕ್ತರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ.  ನಾಟಕಕಾರರಿಂದ ಹಿಡಿದು ರಾಜಕಾರಣಿಗಳವರೆಗೆ ಹಲವಾರು ಬಂಗಾಲಿ ಪ್ರಮುಖರು ಕಾರ್ನಾಡ್ ಹೇಳಿಕೆ ವಿರುದ್ಧ ಮುಜುಗರ, ಅಸಂತೋಷ, ಕೋಪ ವ್ಯಕ್ತಪಡಿಸುತ್ತಿರುವುದರ ಹಿಂದಿರುವುದು ವಸ್ತುನಿಷ್ಟ ಅವಲೋಕನಕ್ಕಿಂತಲೂ ಸಬ್‌ನ್ಯಾಷನಲಿಸ್ಟ್ ಎಂದು ಕರೆಯಬಹುದಾದಷ್ಟು ಉಗ್ರವಾದ ಬಂಗಾಲೀ ಭಾಷೀಯ, ಪ್ರಾದೇಶಿಕ, ಸಾಂಸ್ಕೃತಿಕ ಅಭಿಮಾನ ಎಂದು ನನಗನಿಸುತ್ತದೆ.  ರವೀಂದ್ರನಾಥ್ ಟ್ಯಾಗೋರ್ ಭಾರತದ ಮೊಟ್ಟಮೊದಲ ಹಾಗೂ ಏಕೈಕ ನೊಬೆಲ್ ಪುರಸ್ಕೃತ ಸಾಹಿತಿ, ಭಾರತೀಯ ಕಾವ್ಯಕ್ಕೆ ಹೊಸದಿಕ್ಕನ್ನು ತೋರಿದವರು.  ಈ ಕಾರಣಗಳಿಂದಾಗಿಯೇ ಅವರ ಸಾಹಿತ್ಯಕ ಕೃತಿಗಳ ವಿಮರ್ಶೆ, ಪುನರ್ವಿಮರ್ಶೆ ಮತ್ತೆ ಮತ್ತೆ ನಡೆಯಬೇಕಾದ ಅಗತ್ಯವಿದೆ.  ಯಾವುದೇ ಸಾಹಿತ್ಯ ಕೃತಿಯೊಂದು ಜೀವಂತವಾಗಿ ಉಳಿಯಬೇಕಾದರೆ ಅದರ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಲೇ ಇರಬೇಕು.  ಯಾವಾಗ ವಿಮರ್ಶೆ, ಪುನರ್ವಿಮರ್ಶೆಗಳು ನಿಂತುಹೋಗುತ್ತವೋ ಆಗ ಆ ಕೃತಿಯೊಂದು ಸಾಹಿತ್ಯಕ ಮಮ್ಮಿಯಾಗಿಬಿಡುತ್ತದೆ.  ಕೃತಿಯೊಂದನ್ನು ಕೊಲ್ಲುವ ಅತ್ಯುತ್ತಮ ವಿಧಾನವೆಂದರೆ ಅದರ ಬಗ್ಗೆ ಚರ್ಚೆ ಮಾಡದಿರುವುದು.  ಹಾಗೆ ಕೃತಿಯೊಂದನ್ನು ಕೊಂದರೆ ಕೃತಿಕಾರನ ಅಸ್ತಿತ್ವವೂ ಅಷ್ಟರ ಮಟ್ಟಿಗೆ ಘಾಸಿಗೊಳಗಾಗುತ್ತದೆ, ಇತಿಹಾಸದಲ್ಲಿ ನಗಣ್ಯವಾಗುತ್ತದೆ.  ಟ್ಯಾಗೋರರಿಗೆ ಅಂತಹ ದುರ್ಗತಿ ಬರುವುದು ಬೇಡ.  ಅವರ ಕೃತಿಗಳು ಪವಿತ್ರ ಗೋವುಗಳಾಗುವುದು ಬೇಡ.  ಕಾರ್ನಡರು ಎತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಅವರ ಬಗ್ಗೆ ವೈಯುಕ್ತಿಕ ನಿಂದನೆಗಳಿಲ್ಲದ ಅರೋಗ್ಯಕರ ಚರ್ಚೆಯೊಂದು ಆರಂಭವಾದರೆ ಟ್ಯಾಗೋರರನ್ನು ನಮ್ಮ ನಡುವೆ ಮತ್ತೊಮ್ಮೆ ಜೀವಂತಗೊಳಿಸಿಕೊಳ್ಳಬಹುದು.

 

Friday, October 19, 2012

ಮಲಾಲಾ ಪ್ರಕರಣ: ತಾಲೀಬಾನೀಕರಣದತ್ತ ಮತ್ತೊಂದು ಅನಾಗರಿಕ ಹೆಜ್ಜೆಅಕ್ಟೋಬರ್ ೯, ೨೦೧೨, ಮಂಗಳವಾರದ ಮಧ್ಯಾಹ್ನ ಹನ್ನೆರಡೂಮುಕ್ಕಾಲರ ಹೊತ್ತಿಗೆ ಪಾಕಿಸ್ತಾನದ ಖೈಬರ್-ಪಕ್ತೂನ್‌ಖ್ವಾ (ಹಿಂದಿನ ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್) ಪ್ರಾಂತ್ಯದ ಸ್ವಾತ್ ಕಣಿವೆಯ ಮಿಂಗೋರಾ ಪಟ್ಟಣದ ಶಾಲೆಯಲ್ಲಿ ಅರೆವಾರ್ಷಿಕ ಪರೀಕ್ಷೆ ಬರೆದು ಸಹಪಾಠಿಗಳ ಜತೆ ಶಾಲಾವಾಹನದಲ್ಲಿ ಹಿಂತಿರುಗುತ್ತಿದ್ದ ಹದಿನಾಲ್ಕರ ಕಿಶೋರಿ ಮಲಾಲಾ ಯೂಸುಫ್‌ಝಾಯ್‌ಳನ್ನು ಪಾಕಿಸ್ತಾನಿ ತಾಲಿಬಾನಿಗಳು ಗುಂಡುಹಾರಿಸಿ ಕೊಲ್ಲಲು ಪ್ರಯತ್ನಿಸಿದರು.  ಈ ದುಷ್ಕೃತ್ಯಕ್ಕೆ ಅವರು ಮುಂದಾದದ್ದು ಈಗ ಅಫ್ಘಾನಿಸ್ತಾನದಲ್ಲಿ ಅಡಗಿರುವ ಪಾಕ್ ತಾಲಿಬಾನ್ ನಾಯಕ ಮುಲ್ಲಾ ಫಲ್ಲುಲ್ಲಾನ ಆದೇಶದ ಮೇಲೆ.  ತಲೆಗೆ ಬಿದ್ದ ಗುಂಡಿನಿಂದಾಗಿ ಒಂದುವಾರದಿಂದಲೂ ಕೋಮಾದಲ್ಲಿರುವ ಮಲಾಲಾಳನ್ನು ಚಿಕಿತ್ಸೆಗಾಗಿ ಬ್ರಿಟನ್ನಿಗೆ ಕೊಂಡೊಯ್ದಿರುವ ಸುದ್ದಿ ಈ ಲೇಖನ ಬರೆಯುವ ಹೊತ್ತಿಗೆ (ಸೋಮವಾರ ಮಧ್ಯಾಹ್ನ) ಬಂದಿದೆ.  ಅವಳು ಬದುಕಿ ಉಳಿದರೆ ಅವಳ ಹತ್ಯೆಗೆ ಮತ್ತೆ ಪ್ರಯತ್ನಿಸುವುದಾಗಿ ತಾಲಿಬಾನಿ ನಾಯಕರು ಹೇಳಿದ್ದಾರೆ.  ಕಳೆದ ಒಂದುವಾರದಲ್ಲಿ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದು ಎಲ್ಲರಿಗೂ ಪರಿಚಿತವಾಗಿರುವ ಈ ಘಟನೆಯ ವಿವರಗಳನ್ನು ಇಲ್ಲಿ ಪುನರಾವರ್ತಿಸುವುದರ ಬದಲು ಪಾಕಿಸ್ತಾನದಲ್ಲಿ ತಾಲಿಬಾನ್ ತೀವ್ರವಾದದ ವಿವಿಧ ಆಯಾಮಗಳ ವಿಶ್ಲೇಷಣೆಯನ್ನು ಕೈಗೆತ್ತಿಕೊಳ್ಳುತ್ತೇನೆ.
ಮಲಾಲಾಳನ್ನು ತಾಲಿಬಾನ್ ತನ್ನ ಹಾದಿಯ ಮುಳ್ಳು ಎಂದು ಬಗೆಯಲಾರಂಭಿಸಿದ್ದರ ಹಿಂದೆ ಸ್ವಾತ್‌ನಲ್ಲಿ ಇಸ್ಲಾಮಿಕ್ ಮೂಲಭೂತವಾದದ ಅಸ್ತಿತ್ವದ ಪ್ರಶ್ನೆಯಿದೆ.  ಇದೆಲ್ಲವೂ ಆರಂಭವಾದದ್ದು ಫೆಬ್ರವರಿ ೨೦೦೯ರಲ್ಲಿ ಪಾಕಿಸ್ತಾನ್ ಸರ್ಕಾರ ತಾಲಿಬಾನಿಗಳ ಜತೆ ಒಪ್ಪಂದವೊಂದಕ್ಕೆ ಸಹಿ ಹಾಕಿದಾಗ.  ಪಾಕಿಸ್ತಾನದ ಚರಿತ್ರೆಯಲ್ಲಿ ಒಂದು ಗಮನಾರ್ಹ ಬೆಳವಣಿಗೆಯಾದ ಈ ಒಪ್ಪಂದ ೨೦೦೭ರ ಅಕ್ಟೋಬರ್‌ನಿಂದಲೂ ಸೇನೆ ಮತ್ತು ತಾಲಿಬಾನ್ ನಡುವೆ ನಡೆಯುತ್ತಿದ್ದ ಯುದ್ಧವನ್ನು ನಿಲುಗಡೆಗೆ ತಂದದ್ದಲ್ಲದೇ ಸ್ವಾತ್ ಕಣಿವೆಯಲ್ಲಿ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೆ ತರಲು (ಅಂದರೆ ತಾಲಿಬಾನೀಕರಣಕ್ಕೆ) ತಾಲಿಬಾನ್‌ಗೆ ಅನುವು ಮಾಡಿಕೊಡುವಂಥದ್ದಾಗಿತ್ತು.  ಒಪ್ಪಂದದ ನಂತರದ ಒಂದು ವಾರದಲ್ಲಿ ಪಾಕ್ ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ಮತ್ತು ಇತರ ತಾಲಿಬಾನೀ ನಾಯಕರುಗಳು ಹಲವಾರು ಹೇಳಿಕೆಗಳ ಮೂಲಕ ಸ್ವಾತ್ ಕಣಿವೆಯಲ್ಲಿ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದ ಹಕ್ಕಿರುವುದಿಲ್ಲ ಹಾಗೂ ಬುರ್ಖಾ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಯಾವುದೇ ಸ್ತ್ರೀಗೆ ಮರಣದಂಡನೆ ವಿಧಿಸಲಾಗುವುದು ಎಂದು ಸಾರಿದ್ದರು.
ಅಫ್ಘಾನಿಸ್ತಾನಕ್ಕೆ ಹೊಂದಿಕೊಂಡ ಸ್ವಾತ್ ಕಣಿವೆಯಲ್ಲಿ ಇಸ್ಲಾಮಿಕ್ ಕಾನೂನುಗಳ ಅನುಷ್ಠಾನದ ಪ್ರಯತ್ನ ಆರಂಭವಾದದ್ದು ೧೯೯೪ರಲ್ಲಿ ಬೆನಝಿರ್ ಭುಟ್ಟೋ ಪ್ರಧಾನಮಂತ್ರಿಯಾಗಿದ್ದಾಗ.  ಅಫ್ಘಾನಿಸ್ತಾನದಿಂದ ಸೋವಿಯತ್ ಸೇನೆಯ ನಿರ್ಗಮನದ ನಂತರ ಆ ದೇಶದಲ್ಲಿ ನಿರ್ಮಾಣವಾಗಿದ್ದ ಅರಾಜಕ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಕಾಬೂಲ್‌ನಲ್ಲಿ ತನ್ನ ಕೈಗೊಂಬೆ ಸರಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಕುಖ್ಯಾತ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್‌ನ ಸಹಕಾರದಿಂದ ತಾಲಿಬಾನನ್ನು ಸೃಷ್ಟಿಸಿ ಅದನ್ನು ಎರಡು ವರ್ಷಗಳ ನಂತರ ೧೯೯೬ರಲ್ಲಿ ಅಫಘಾನಿಸ್ತಾನದಲ್ಲಿ ಪಟ್ಟಕ್ಕೇರಿಸಿದ್ದೇ ಬೆನಝಿರ್ ಸರಕಾರ.  ಪಕ್ತೂನಿ ಸಂಘಟನೆಯಾದ ತಾಲಿಬಾನ್ ಸ್ವಾತ್ ಮತ್ತು ಸುತ್ತುಮುತ್ತಲಿನ  ಗುಡ್ಡಗಾಡಿನಲ್ಲಿ ಮೊದಲು ನೆಲೆಯೂರಿ ಆ ಪ್ರದೇಶವನ್ನು ತನ್ನ ಅಫ್ಘನ್ ಕಾರ್ಯಾಚರಣೆಗೆ ಜಿಗಿಯುವ ಹಲಗೆಯನ್ನಾಗಿ ಉಪಯೋಗಿಸಿಕೊಂಡಿತು.  ಹೀಗಾಗಿ ದಕ್ಷಿಣ ಏಶಿಯಾದಲ್ಲಿ ಮೊಟ್ಟಮೊದಲು ತಾಲಿಬಾನೀಕರಣಗೊಂಡದ್ದೇ ಸ್ವಾತ್ ಕಣಿವೆ.  ಹೊಸ ಸಹಸ್ರಮಾನ ಆರಂಭವಾಗುತ್ತಿದ್ದಂತೇ ಸ್ವಾತ್ ಉಗ್ರ ಮೂಲಭೂತವಾದದ ಸುಳಿಯಲ್ಲಿ ಸಿಲುಕಿತು.  ೯/೧೧ ಘಟನೆಗಳ ಪರಿಣಾಮವಾಗಿ ಅಮೆರಿಕಾ ಅಫ್ಘಾನಿಸ್ತಾನದ ಮೇಲೆ ಧಾಳಿಯೆಸಗಿ ತಾಲಿಬಾನ್ ಸರಕಾರವನ್ನು ಕಿತ್ತೊಗೆದಾಗ ತಾಲಿಬಾನಿಗಳು ಆಶ್ರಯ ಪಡೆದದ್ದು ಖೈಬರ್-ಫಕ್ತೂನ್‌ಖ್ವಾ ಪ್ರಾಂತ್ಯದಲ್ಲಿ, ಮುಖ್ಯವಾಗಿ ಸ್ವಾತ್ ಕಣಿವೆಯಲ್ಲಿ.  ಅಫ್ಘಾನಿಸ್ತಾನದ ಜತೆ ತೆರೆದ ಗಡಿ ಹೊಂದಿರುವ ಸ್ವಾತ್‌ನಲ್ಲಿ ತಾಲಿಬಾನಿಗಳು ಸ್ಥಳೀಯ ಫಕ್ತೂನಿಗಳ ಜತೆ ಬೆರೆತುಹೋದರು.  ಅಲ್ಲಿ ಹುಟ್ಟಿಕೊಂಡ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಸ್ವಾತ್‌ನಲ್ಲಿ ಇಸ್ಲಾಮಿಕ್ ಕಾನೂನುಗಳ ಅನುಷ್ಟಾನವನ್ನು ಗುರಿಯಾಗಿಟ್ಟುಕೊಂಡು ೨೦೦೭ರ ಅಕ್ಟೋಬರ್‌ನಲ್ಲಿ ಪಾಕ್ ಸೇನೆಯ ಜತೆ ಸಂಘರ್ಷಕ್ಕಿಳಿಯಿತು.  ತಾಲಿಬಾನಿಗಳ ಬಳಿ ಪಾಕಿಸ್ತಾನೀ ಸೇನೆಯ ಬಳಿ ಇರುವಂತದೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದುವು ಮತ್ತು ನೆರೆಯ ಅಫಘಾನಿಸ್ತಾನದಲ್ಲಿ ಉಗ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಫ್ಘನ್ ತಾಲಿಬಾನಿಗಳ ಸಹಕಾರದಿಂದಾಗಿ ಅವುಗಳ ಪೂರೈಕೆಗೆ ಯಾವ ಧಕ್ಕೆಯೂ ಇರಲಿಲ್ಲ.  ಜತೆಗೇ, ಪಾಕಿಸ್ತಾನೀ ಸೇನೆಯಲ್ಲಿದ್ದ ಸಾವಿರಾರು ಪಕ್ತೂನ್ ಸೈನಿಕರು ಸೈನ್ಯವನ್ನು ತೊರೆದು ಬಂಡುಕೊರರ ಪಾಳಯ ಸೇರಿದ್ದರಿಂದ ತಾಲಿಬಾನಿಗಳ ಶಕ್ತಿ ಇಮ್ಮಡಿಸಿ ಅವರನ್ನು ಸದೆಬಡಿಯುವುದು ಏಶಿಯಾದ ಅತ್ಯಂತ ಬಲಿಷ್ಟ ಸೇನೆಗಳಲ್ಲೊಂದಾದ ಪಾಕ್ ಸೇನೆಗೂ ಕಷ್ಟಕರವಾಯಿತು.  ಇದರ ಪರಿಣಾಮವೇ ಸ್ವಾತ್ ಕಣವೆಯಲ್ಲಿ ಇಸ್ಲಾಮಿಕ್ ಕಾನೂನುಗಳನ್ನು ಅನುಷ್ಟಾನಗೊಳಿಸಲು ತಾಲಿಬಾನಿಗಳಿಗೆ ಅವಕಾಶ ನೀಡುವ ಒಪ್ಪಂದಕ್ಕೆ ಜರ್ದಾರಿ ನೇತೃತ್ವದ ಸರಕಾರ ಸಹಿ ಹಾಕಿದ್ದು.  ಮಹಿಳಾಪ್ರಧಾನಿ ಬೇನಜ಼ಿರ್ ಭುಟ್ಟೋ ಆಳ್ವಿಕೆಯಲ್ಲೇ ಮಹಿಳಾಸ್ವಾತಂತ್ರ್ಯದ ಉಗ್ರವಿರೋಧಿಯಾದ ತಾಲಿಬಾನ್ ಸೃಷ್ಟಿಯಾದ ಕ್ರೂರ ವ್ಯಂಗ್ಯದ ಮುಂದುವರಿಕೆಯಾಗಿ ಅಕೆಯ ಪತಿಯ ಆಡಳಿತದಲ್ಲಿ ಪಾಕಿಸ್ತಾನದ ಒಂದು ಪ್ರದೇಶವೇ ತಾಲಿಬಾನೀಕರಣಕ್ಕೆ ಒಳಗಾಗಹೊರಟತ್ತು.
ಇಷ್ಟಕ್ಕೂ ಪಾಕಿಸ್ತಾನದ ಒಂದು ಮೂಲೆಯಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೆ ಬಂದರೆ ಇಷ್ಟೇಕೆ ಗಲಾಟೆ ಎಂಬ ಪ್ರಶ್ನೆ ಸ್ವಾಭಾವಿಕವಾಗಿಯೇ ಮೂಡಬಹುದು.  ಹೇಳಿಕೇಳಿ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರ.  ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಹೀಗಾಗಿ ಅವೆರಡೂ ರಾಷ್ಟ್ರಗಳಿಗೂ ಒಂದೇ ಸರಕಾರ ಇರಕೂಡದು ಎಂಬ ದ್ವಿರಾಷ್ಟ್ರ ಸಿದ್ಧಾಂತದ ಆಧಾರದ ಮೇಲೆ ಭಾರತದ ಮುಸ್ಲಿಮರಿಗಾಗಿ ಸೃಷ್ಟಿಸಲ್ಪಟ್ಟ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಕಾನೂನುಗಳಲ್ಲದೇ ಮತ್ಯಾವ ಕಾನೂನುಗಳಿರಬೇಕು ಎಂಬ ಪ್ರಶ್ನೆ ಸಹಜವೇ.  ಸರಿ, ಈ ಬಗ್ಗೆ ಯಾವುದೇ ತಕರಾರಿಲ್ಲ.  ಸೌದಿ ಅರೇಬಿಯಾದಲ್ಲಿನ ಕಟ್ಟಾ ಇಸ್ಲಾಮಿಕ್ ಆಡಳಿತದ ಬಗ್ಗೆ ಜಗತ್ತು ಚಕಾರವೆತ್ತಿಲ್ಲ.  ಹಾಗೆಯೇ ಇರಾನ್‌ನಲ್ಲಿ ಖೊಮೇನಿಯ ಹಾಗೂ ತೊಂಬತ್ತರ ದಶಕದಲ್ಲಿ ಅಫಘಾನಿಸ್ತಾನದಲ್ಲಿದ್ದ ತಾಲಿಬಾನ್ ಆಡಳಿತವನ್ನು ಜಗತ್ತು ಒಪ್ಪಿಕೊಂಡಿತ್ತು.  ಅಫ್ಘನ್ ತಾಲಿಬಾನಿಗಳು ಇಸ್ಲಾಮೀಕರಣದ ಹುಮ್ಮಸ್ಸಿನಲ್ಲಿ ಪುರಾತನ ಬಾಮಿಯನ್ ಬುದ್ಧ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದನ್ನೂ ಜಗತ್ತು ಹಲ್ಲುಕಚ್ಚಿ ಸಹಿಸಿಕೊಂಡ ಉದಾಹರಣೆ ನಮ್ಮೆದುರಿಗೇ ಇದೆ.  ಇಡೀ ಪಾಕಿಸ್ತಾನ ತಾಲೀಬಾನೀಕರಣವಾದರೂ ಜಗತ್ತು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ.  ಪ್ರಶ್ನೆ ಅದಲ್ಲ.  ಸಾರ್ವಭೌಮ ಪಾಕಿಸ್ತಾನದ ಎಲ್ಲ ಪ್ರದೇಶಗಳಲ್ಲೂ ಒಂದು ಬಗೆಯ ಕಾನೂನು ಹಾಗೂ ಆಡಳಿತವಿದ್ದರೆ ಸ್ವಾತ್ ಪ್ರದೇಶದಲ್ಲಿ ಮಾತ್ರ ಬೇರೆಯ ಕಾನೂನುಗಳೂ, ಆಡಳಿತವೂ ಏರ್ಪಡುವುದು ಅಂದರೆ ಒಂದೇ ರಾಷ್ಟ್ರದಲ್ಲಿ ಎರಡು ವಿಭಿನ್ನ ರಾಜಕೀಯ ಹಾಗೂ ಕಾನೂನು ವ್ಯವಸ್ಥೆಗಳು ಏರ್ಪಡಹೊರಟಿದ್ದು ಆಧುನಿಕ ರಾಷ್ಟ್ರವ್ಯವಸ್ಥೆಯಲ್ಲಿ ಕಂಡು ಕೇಳರಿಯದ ವೈಚಿತ್ರ್ಯ. ಆ ದಿನಗಳಲ್ಲಿ ವಿಶ್ಲೇಷಕರನ್ನು ಕಾಡಿದ್ದು ಇದು.  (ಇದರ ಬಗ್ಗೆ ತಲೆಕೆಡಿಸಿಕೊಂಡ ನಾನೂ ಸಹಾ ಆಗ ಇಂಥದ್ದೊಂದು ವೈಚಿತ್ರ್ಯವನ್ನು ಭಾರತೀಯ ಸಂದರ್ಭಕ್ಕೆ ಹೊಂದಿಸಿ ಮುಖಾಮುಖಿ ಎಂಬ ಕಥೆ ಬರೆದೆ.)
ಆದರೆ ಮುಂದಿನ ಮೂರೇ ತಿಂಗಳಲ್ಲಿ ಪರಿಸ್ಥಿತಿ ಬದಲಾಗಿಹೋಯಿತು.  ತನ್ನ ಪ್ರಭಾವವನ್ನು ಸ್ವಾತ್‌ನಾಚೆಗೂ ವಿಸ್ತರಿಸಲು ತಾಲಿಬಾನ್ ಮುಂದಾಗಿ ಇಸ್ಲಾಮಾಬಾದ್‌ನ ಉತ್ತರಕ್ಕೆ ಕೇವಲ ನೂರು ಕಿಲೋಮೀಟರ್ ದೂರದಲ್ಲಿದ್ದ ಬುನೇರ್ ಪಟ್ಟಣದ ಮೇಲೆ ಆಕ್ರಮಣವೆಸಗಿದಾಗ ಪಾಕ್ ಸೇನೆ ತೀವ್ರಕ್ರಮಕ್ಕೆ ಮುಂದಾಯಿತು.  ಅವರನ್ನು ಬುನೇರ್‌ನಿಂದ ಹೊರಗಟ್ಟಿದ ಸೇನೆ ಮುಂದುವರೆದು ಸ್ವಾತ್‌ಗೇ ಪ್ರವೇಶಿಸಿ ಹಲವು ವಾರಗಳ ಭೀಷಣ ಕಾಳಗದ ನಂತರ ತಾಲಿಬಾನಿಗಳನ್ನು ಮಣಿಸಿತು.  ಸೇನೆಯ ವಿಜಯದ ಹಿಂದೆ ಅಮೆರಿಕಾದ ಸಕ್ರಿಯ ಸಹಕಾರವಿತ್ತು.
೨೦೦೯ರ ಮಧ್ಯಭಾಗದಿಂದಲೂ ಪಾಕ್ ಸೇನೆ ಸ್ವಾತ್‌ನಲ್ಲಿ ಬೀಡುಬಿಟ್ಟಿದ್ದರೂ ತಾಲಿಬಾನಿಗಳ ಚಟುವಟಿಕೆಗಳನ್ನು ಪೂರ್ಣವಾಗಿ ನಿಗ್ರಹಿಸಲು ಅದಕ್ಕೆ ಸಾಧ್ಯವಾಗಿಲ್ಲ.  ಸ್ತ್ರೀಶಿಕ್ಷಣದ ಕಟ್ಟಾವಿರೋಧಿಗಳಾಗಿರುವ ತಾಲಿಬಾನಿಗಳು ಹೆಣ್ಣುಮಕ್ಕಳ ಶಾಲೆಗಳ ಮೇಲೆ ಧಾಳಿಯೆಸಗುವ, ತಮ್ಮ ವಿರೋಧಿಗಳ ಹತ್ಯೆಗೈಯುವ ಚಟುವಟಿಕೆಗಳನ್ನು ಸೇನೆಯ ಮೂಗಿನ ಕೆಳಗೇ ಎಗ್ಗಿಲ್ಲದೇ ಸಾಗಿಸುತ್ತಿದ್ದಾರೆ.  ಇದನ್ನು ವಿರೋಧಿಸಿದ ಮಲಾಲಾ ತಾಲಿಬಾನಿಗಳ ವೈರಿಯಾಗಿದ್ದಾಳೆ.  ಸ್ವಾತ್‌ನಲ್ಲಿ ಪಾಶ್ಚಿಮಾತ್ಯ ಶಿಕ್ಷಣಕ್ರಮದ ಪರವಾಗಿದ್ದಾಳೆ ಎನ್ನುವುದು ಮಲಾಲಾ ವಿರುದ್ಧದ ತಾಲಿಬಾನ್ ಆರೋಪ.
ತನ್ನ ತಾಲಿಬಾನ್ ವಿರೋಧಿ ಚಟುವಟಿಕೆಗಳನ್ನ್ನು ಮಲಾಲಾ ಆರಂಭಿಸಿದ್ದು ಮೂರೂವರೆ ವರ್ಷಗಳ ಹಿಂದೆ, ಹನ್ನೊಂದರ ಬಾಲೆಯಾಗಿದ್ದಾಗ.  ಸ್ತ್ರೀಶಿಕ್ಷಣದ ಅಗತ್ಯವನ್ನು, ತಾಲಿಬಾನ್ ದುಷ್ಕೃತ್ಯಗಳ ಕರಾಳತೆಯನ್ನು ಗುಲ್ ಮಕಾಯ್ ಎಂಬ ಗುಪ್ತನಾಮದಲ್ಲಿ ಬಿಬಿಸಿ ಬ್ಲಾಗ್‌ನಲ್ಲಿ ಬರೆಯುತ್ತಿದ್ದ ಮಲಾಲಾ ಬಿಬಿಸಿ ಉರ್ದು ಕಾರ್ಯಕ್ರಮಗಳ ಶ್ರೋತೃಗಳಿಗೆ ಪರಿಚಿತೆ.  ಈ ಕಾರಣಕ್ಕಾಗಿಯೇ ತಾಲಿಬಾನಿಗಳಿಂದ ಅವಳಿಗೆ ಜೀವಬೆದರಿಕೆ ಇತ್ತು ಮತ್ತು ಅದರ ಅರಿವು ಅವಳಿಗೂ ಇತ್ತು.  ಈ ಬಗ್ಗೆ ತನ್ನ ಜತೆ ಮಲಾಲಾ ಮಾತಾಡಿದ್ದಾಗಿ ಅವಳ ಸಹಪಾಠಿ, ತಾಲಿಬಾನಿ ಧಾಳಿಯಿಂದ ಗಾಯಗೊಂಡಿರುವ ಶಾಜ಼ಿಯಾ ರಂಜಾನ್ ಹೇಳಿದ್ದಾಳೆ.
ಮಲಾಲಾಳ ಮೇಲಿನ ಧಾಳಿ ಇಡೀ ಪಾಕಿಸ್ತಾನ ಹಾಗೂ ನೆರೆಯ ಅಫ್ಘಾನಿಸ್ತಾನದಲ್ಲಿ ತೀವ್ರ ಜನಾಕ್ರೋಶವನ್ನುಂಟುಮಾಡಿದೆ.  ಮಲಾಲಾಳಿಗಾಗಿ ಪ್ರಾರ್ಥನೆ, ತಾಲಿಬಾನ್ ವಿರೋಧೀ ಜಾಥಾಗಳು ಸಾಮಾನ್ಯವಾಗುತ್ತಿವೆ.  ಜಿಯಾ ಸರಕಾರ ಭುಟ್ಟೋರನ್ನು ಗಲ್ಲಿಗೇರಿಸಿದಾಗಲೂ ಸುಮ್ಮನಿದ್ದ ಪಾಕಿಸ್ತಾನಿ ಜನತೆ ಈಗ ಮೈಕೊಡವಿ ಮೇಲೇಳುತ್ತಿರುವುದು ಆಶಾಭಾವನೆಯ ಜತೆ ಅಚ್ಚರಿಯನ್ನೂ ಉಂಟುಮಾಡುತ್ತಿದೆ.  ಪಾಕಿಸ್ತಾನೀ ಸರಕಾರ, ವಿರೋಧಪಕ್ಷಗಳು ಮಲಾಲಾಳ ಮೇಲಿನ ಹತ್ಯೆಯ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿವೆ.  ಹೀಗೇ ಖಂಡಿಸುತ್ತಲೇ ಇಡೀ ಪ್ರಕರಣವನ್ನು ಅಮೆರಿಕಾದ ವಿರುದ್ಧ ಒಂದು ಅಸ್ತ್ರವಾಗಿ ಬಳಸಿಕೊಳ್ಳಲು ಅವು ಯೋಜಿಸುತ್ತಿವೆ!
ಸ್ವಾತ್‌ನಲ್ಲಿ ಪಾಕ್ ತಾಲಿಬಾನಿಗಳನ್ನು ಅಡಗಿಸದೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಜಯ ಸಾಧಿಸುವುದು ಅಸಾಧ್ಯವೆಂದರಿತಿದ್ದ ಅಮೆರಿಕಾ ೨೦೦೩-೦೪ರಿಂದಲೂ ತನ್ನ ಚಾಲಕರಹಿತ ವಿಮಾನಗಳ ಮೂಲಕ ತಾಲಿಬಾನಿಗಳ ಬೇಟೆಯಾಡುತ್ತಿದೆ.  ಪರಿಣಾಮವಾಗಿ ಬೇನಝಿರ್ ಭುಟ್ಟೋರ ಹತ್ಯೆಯ ಹಿಂದಿದ್ದ ಎನ್ನಲಾದ ಬೈತುಲ್ಲಾ ಮೆಹ್ಸೂದ್, ಸ್ವಾತ್‌ನ ಕಟುಕ ಎಂದು ಕುಖ್ಯಾತನಾಗಿದ್ದ ಇಬ್ನ್ ಅಮೀನ್ ಸೇರಿದಂತೆ ಸಾವಿರಾರು ತಾಲಿಬಾನಿಗಳು ಹತರಾಗಿದ್ದಾರೆ.
ಈ ಧಾಳಿಗಳನ್ನು ನಿಲ್ಲಿಸುವಂತೆ ಪಾಕ್ ಸರಕಾರ ಮಾಡಿಕೊಂಡ ಲೆಕ್ಕವಿಲ್ಲದಷ್ಟು ಮನವಿಗಳಿಗೆ, ಒಡ್ಡಿದ ಬೆದರಿಕೆಗಳಿಗೆ ಅಮೆರಿಕಾ ಸೊಪ್ಪು ಹಾಕಿಲ್ಲ.  ಅಮೆರಿಕಾದ ಈ ನೀತಿಗಳಿಂದಲೇ ತಾಲಿಬಾನಿಗಳು ಪ್ರಚೋದನೆಗೊಂಡು ಮಲಾಲಳ ಮೇಲಿನ ಧಾಳಿಯಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಭಾವನೆಯನ್ನು ಪಾಕಿಸ್ತಾನೀಯರಲ್ಲಿ ಹುಟ್ಟುಹಾಕಲು ಜಮಾತ್-ಇ-ಇಸ್ಲಾಮಿ ನೇತಾರ ಫಜ್ಲುರ್ ರೆಹಮಾನ್, ತೆಹ್ರೀಕ್-ಎ-ಇನ್ಸಾಫ್ ನಾಯಕ, ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್‌ರಿಂದ ಹಿಡಿದು ಪಾಕಿಸ್ತಾನಿ ಸರಕಾರವೂ ಪ್ರಯತ್ನಿಸುತ್ತಿದೆ.  ಆದರೆ ಇದಾವುದನ್ನೂ ಒಪ್ಪಲು ಪಾಕ್ ಸೇನೆ ತಯಾರಿಲ್ಲ.  ತಾಲಿಬಾನಿಗಳು ಸೇನೆಯ ಬದ್ಧವರಿಗಳೆಂದು ನಂಬಿರುವ, ಜನರಲ್ ಆಷ್ಪಾಕ್ ಪರ್ವೇಜ್ ಕಯಾನಿ ಸ್ವಾತ್‌ನಲ್ಲಿ ಮತ್ತೆ ಸೇನಾಕಾರ್ಯಾಚರಣೆಯನ್ನು ಆರಂಭಿಸುವ ಸೂಚನೆಯನ್ನು ಕಳೆದ ಒಂದುವಾರದಲ್ಲಿ ಮೂರುಬಾರಿ ನೀಡಿದ್ದಾರೆ.  ಗೊಂದಲಮಯ ಪಾಕಿಸ್ತಾನದಲ್ಲಿ ಸಧ್ಯಕ್ಕೆ ಇದೊಂದು ಬೆಳ್ಳಿರೇಖೆ.
ಈ ಸಂದರ್ಭದಲ್ಲಿ ಮತ್ತೊಂದು ಮುಖ್ಯ ವಿಷಯವನ್ನೂ ಪ್ರಸ್ತಾಪಿಸಬೇಕು.  ಮಲಾಲಾ ಮೇಲಿನ ಧಾಳಿಯನ್ನು ಖಂಡಿಸಿದ ಇಮ್ರಾನ್ ಖಾನ್ ತಾಲಿಬಾನ್ ಅನ್ನು ಖಂಡಿಸಲು ನಿರಾಕರಿಸಿದರು.  ಈ ಬಗ್ಗೆ ಟೀವಿ ಚಾನಲ್ ಒಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹೇಳಿದ್ದು ಹೀಗೆ: ನಾನಿಲ್ಲಿ ಕೂತು ತಾಲಿಬಾನ್ ವಿರುದ್ಧ ಭಾರಿಭಾರಿ ಹೇಳಿಕೆಗಳನ್ನು ಕೊಟ್ಟರೆ ಅಲ್ಲಿ ನನ್ನ ಪಕ್ಷದ ಕಾರ್ಯಕರ್ತರನ್ನು ಕಾಪಾಡುವವರಾರು?
ಬಂದೂಕುಧಾರಿಗಳ ಹುಮ್ಮಸ್ಸು ಏರುವುದೇ ನಾಗರೀಕ ಸಮಾಜದ ಇಂತಹ ಹೇಡಿತನದಿಂದ ಎಂದು ನಾವು ಖಾನ್‌ರ ಹೇಳಿಕೆಯನ್ನು ಖಂಡಿಸಬೇಕಾಗಿಲ್ಲ.  ಸ್ವಾರ್ಥಸಾಧನೆಗಾಗಿ ಇಂತಹ ಆಟಗಳನ್ನು ಆಡುವವರು ನಮ್ಮಲ್ಲೇ ಸಾಕಷ್ಟಿರುವಾಗ ತನ್ನ ಹಿಂಬಾಲಕರ ಹಿತವನ್ನು ಪರಿಗಣಿಸುವ, ಅದನ್ನು ಮುಚ್ಚುಮರೆಯಿಲ್ಲದೇ ಹೇಳುವ ಇಮ್ರಾನ್ ಖಾನ್ ಅದೆಷ್ಟೋ ಪಟ್ಟು ಪ್ರಾಮಾಣಿಕ.
ಅಕ್ಟೋಬರ್ ೧೭, ೨೦೧೨, ಬುಧವಾರ "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ