ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, August 28, 2013

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೈವನಿಂದೆ: ಕೆಲವು ಚಿಂತನೆಗಳು
ಇಂದಿನ "ವಿಜಯವಾಣಿ" ದೈನಿಕದಲ್ಲಿನ ನನ್ನ "ಜಗದಗಲ" ಅಂಕಣದಲ್ಲಿ ಪ್ರಕಟವಾಗಿರುವ ಲೇಖನ ಮೂಲಪಾಠ

ಹಿಂದೂ ದೈವ ಗಣಪತಿಯನ್ನು ನಕಾರಾತ್ಮಕವಾಗಿ ಚಿತ್ರಿಸಿರುವ "ಢುಂಢಿ ಅರಣ್ಯಕನೊಬ್ಬ ಗಣಪತಿಯಾದ ಕಥೆ" ಎಂಬ ಕನ್ನಡ ಕೃತಿಯೊಂದು ನಾಡಿನಾದ್ಯಂತ ಟೀಕೆಗೊಳಗಾಗುತ್ತಿದೆ.  ಹಾಗೆ ನೋಡಿದರೆ ಹಿಂದೂ ದೇವದೇವತೆಗಳನ್ನು ನಕಾರಾತ್ಮಕವಾಗಿ ಚಿತ್ರಿಸುವುದು ಇದೇನೂ ಹೊಸದಲ್ಲ.  ವಿದೇಶಗಳಲ್ಲಿ ಹಲಬಗೆಯಲ್ಲಿ ಬಹಳ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ತಿರಸ್ಕಾರಯೋಗ್ಯ ಚಟುವಟಿಕೆ ಕೆಲವರ್ಷಗಳ ಹಿಂದೆ ನಮ್ಮಲ್ಲೂ ಕಾಣಿಸಿಕೊಂಡಿತು.  ನಾಲ್ಕು ವರ್ಷಗಳ ಹಿಂದೆ ನ್ಯೂಲೈಫ್ ಎಂಬ ಕ್ರಿಶ್ಚಿಯನ್ ಸಂಸ್ಥೆ ಕರಾವಳಿ ಪ್ರದೇಶಗಳಲ್ಲಿ ವಿತರಿಸಿದ ಹೊತ್ತಿಗೆಯಲ್ಲಿ ರಾಮನ ಬಗ್ಗೆ ಇದ್ದಿತೆನ್ನಲಾದ ಅವಹೇಳನಕಾರಿಯಾದ ಮಾತುಗಳು, ಅವು ಮಂಗಳೂರಿನಲ್ಲಿ ಸೃಷ್ಟಿಸಿದ ಅಶಾಂತಿಯ ಹಿನ್ನೆಲೆಯಲ್ಲಿ ನನಗೆ ಮತ್ತೊಂದು ಕುತೂಹಲಕರ ಸಂಗತಿ ನೆನಪಿಗೆ ಬರುತ್ತದೆ.  ರಾಮನ ಬಗ್ಗೆ ಪ್ರಾಯಶಃ ನ್ಯೂಲೈಫ್ ಹೊತ್ತಿಗೆಯಲ್ಲಿದ್ದುಕ್ಕಿಂತಲೂ ಅವಹೇಳನಕಾರಿಯಾದ ಮಾತುಗಳಿದ್ದ ಪುಸ್ತಕವೊಂದು ಕನ್ನಡದಲ್ಲಿ ಮೂವತ್ತು ವರ್ಷಗಳ ಹಿಂದೆಯೇ ಬಂದಿದೆ.  ಹಿಂದೂ ಧಾರ್ಮಿಕ/ಸಾಮಾಜಿಕ ಸಂಸ್ಥೆಯೊಂದರ ಸಕ್ರಿಯ ಸದಸ್ಯರೊಬ್ಬರು ರಚಿಸಿದ, ರಾಜ್ಯದ ಪ್ರಮುಖ ಪ್ರಕಾಶನ ಸಂಸ್ಥೆಯೊಂದು ಪ್ರಕಟಿಸಿದ, ರಾಮನ ಜತೆಗೆ ಅನೇಕ ಹಿಂದೂ ದೇವರುಗಳ ಬಗ್ಗೆ ಕಟ್ಟಾ ಹಿಂದೂಗಳಿಗೆ ಮರ್ಮಾಘಾತವಾಗುವಂತಹ ಮಾತುಗಳಿರುವ ಈ ಪುಸ್ತಕ ಮರುಮುದ್ರಣಗಳನ್ನೂ ಕಂಡಿದೆ.  ಅಷ್ಟೇ ಅಲ್ಲ, ಅದರ ಪುಕ್ಕಟೆ ವಿತರಣೆಗೆಂದೇ ಒಬ್ಬರು ಧನಸಹಾಯ ಮಾಡಿದ್ದಾರೆ.  ಈ ಹಿನ್ನೆಲೆಯೊಂದಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಿಶ್ವಾದ್ಯಂತ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಚಟುವಟಿಕೆಗಳ ಪರಿಚಯ ಮತ್ತು ವಿಶ್ಲೇಷಣೆ ಈ ಲೇಖನದ ವಸ್ತುವಿಷಯ.
 ಕೋಟ್ಯಾಂತರ ಜನ ಪೂಜ್ಯಭಾವನೆ ಹೊಂದಿರುವ ರಾಮ, ಜೀಸಸ್, ಮಹಮದ್ ಮುಂತಾದ ಅನೇಕ ಹೆಸರುಗಳನ್ನು ಲೇವಡಿ ಮಾಡುವ ಪ್ರವೃತ್ತಿ ಇಂದು ನಿನ್ನೆಯದಲ್ಲ.  ಎಂಟು - ಒಂಬತ್ತು ಶತಮಾನಗಳ ಹಿಂದೆಯೇ ಕ್ರೂಸೇಡ್‌ಗಳ ಕಾಲದಲ್ಲಿ ಯೂರೋಪಿನ ಕ್ರಿಶ್ಚಿಯನ್ನರು ಪ್ರವಾದಿ ಮಹಮದ್‌ರನ್ನು Mahound ಎಂದು ಕರೆದು ಹೀಯಾಳಿಸಿದ್ದರು.  ನಮ್ಮ ಕಾಲದಲ್ಲಿ ಸಲ್ಮಾನ್ ರಶ್ದೀ ತನ್ನ "Satanic Verses"ನಲ್ಲಿ ಈ ಪದಪ್ರಯೋಗ ಮಾಡಿ ವಿಶ್ವಾದ್ಯಂತ ಮುಸ್ಲಿಂ ಶ್ರದ್ಧಾಳುಗಳ ಮನ ನೋಯಿಸಿದರು.  ನಿಜ ಹೇಳಬೇಕೆಂದರೆ ಜೀವಂತ ಹಾಗೂ ಮೃತ ಪ್ರಸಿದ್ಧರನ್ನು ಅವಹೇಳನ ಮಾಡುವುದು ಆರಂಭದಲ್ಲಿ ರಶ್ದಿಯ ಸ್ವಭಾವವೇ ಆಗಿಹೊಗಿತ್ತು.  ತನ್ನ ಬೂಕರ್ ಪ್ರಶಸ್ತಿ ವಿಜೇತ Midnight's Childrenನಲ್ಲಿ ಆತ ದೇಶದ ಅರ್ಥವ್ಯವಸ್ಥೆಯನ್ನು ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ತಲೆಗೂದಲಿಗೆ ಹೋಲಿಸಿ ಲೇವಡಿ ಮಾಡಿದ್ದರು.  ಅರ್ಥವ್ಯವಸ್ಥೆಯಲ್ಲಿದ್ದ ಬಿಳೀಹಣದ ಪ್ರಮಾಣವನ್ನು ಇಂದಿರಾಗಾಂಧಿಯವರ ತಲೆಯ ಬಲಬದಿಯಲ್ಲಿದ್ದ ಸ್ವಲ್ಪ ಬಿಳೀ ಕೂದಲಿಗೂ ಕಪ್ಪುಹಣದ ಪ್ರಮಾಣವನ್ನು ಅವರ ತಲೆಯ ಉಳಿದೆಲ್ಲಾ ಭಾಗವನ್ನು ಆವರಿಸಿಕೊಂಡಿದ್ದ ಕಪ್ಪುಕೂದಲಿಗೂ ಹೋಲಿಸಿದ್ದರು.  ನಂತರ, ಪಾಕಿಸ್ತಾನದ ಬಗೆಗಿನ ತನ್ನ Shame ಕಾದಂಬರಿಯಲ್ಲಿ ಭುಟ್ಟೋರನ್ನು ಸಂಕೇತಿಸುವ ಪಾತ್ರವೊಂದು ಸರ್ವಾಧಿಕಾರಿ ಜಿಯಾರನ್ನು ಸಂಕೇತಿಸುವ ಪಾತ್ರವನ್ನು ಕುರಾನಿನ ಮೇಲೆ ಎರಡಕ್ಕೆ ಮಾಡುವ ಹೇತ್ಲಾಂಡ ಧರ್ಮಲಂಡ (Diarrheic infidel who shits on Koran)) ಎಂದು ಬೈಯುವಂತೆ ಚಿತ್ರಿಸಿದ್ದರು.  ಈ ಕೃತಿಯನ್ನು ಜಿಯಾ ನಿಷೇಧಿಸಿದರು.  ಆನಂತರ Sಚಿಣಚಿಟಿiಛಿ ಗಿeಡಿsesನಲ್ಲಿ ಪ್ರವಾದಿ ಮಹಮದ್ ಮತ್ತು ಕುರಾನ್ ಬಗ್ಗೆ ಉಪಯೋಗಿಸಿದ ಪದಗಳು ಮತ್ತು ರೂಪಕಗಳನ್ನು ಇರಾನೀ ನಾಯಕ ಆಯತೊಲ್ಲಾ ಖೊಮೇನಿ ದೈವನಿಂದೆ (Blasphemy) ಎಂದು ತೀರ್ಮಾನಿಸಿ ತಲೆದಂಡ ಕೇಳಿದ ನಂತರವೇ ರಶ್ದಿ ತನ್ನ ಚಾಳಿ ಬಿಟ್ಟದ್ದು.  ಆದಾಗ್ಯೂ, ಇತರರು ಮಹಮದ್‌ರನ್ನು ಬರಹಗಳಲ್ಲಿ, ಕಾರ್ಟೂನ್‌ಗಳಲ್ಲಿ ಲೇವಡಿ ಮಾಡುವುದು ಪಶ್ಚಿಮದಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇದೆ.  ಆರೇಳು ವರ್ಷಗಳ ಹಿಂದೆ ಡ್ಯಾನಿಷ್ ವ್ಯಂಗ್ಯಚಿತ್ರಕಾರನೊಬ್ಬ ಪ್ರವಾದಿಯವರ ತಲೆವಸ್ತ್ರಕ್ಕೆ ಬಾಂಬ್ ಸೇರಿಸಿದ್ದನ್ನು ಈ ಸಂದರ್ಭದಲ್ಲಿ ಖೇದದಿಂದ ನೆನಪು ಮಾಡಿಕೊಳ್ಳಬಹುದು.


            ಇಸ್ಲಾಂ ಅಥವಾ ಬೇರಾವುದೇ ಧರ್ಮದ ಸಂಕೇತಗಳಿಗೆ ಅವಮಾನವೆಸಗುವ, ಅವಮಾನಿಸಿದವರನ್ನು ರಕ್ಷಿಸಿ ತಾವು ಅಭಿವ್ಯಕ್ತಿ ಸ್ವಾತಂತ್ರದ ಸಮರ್ಥಕರೆಂದು ಘೋಷಿಸಿಕೊಳ್ಳುವ ಪಾಶ್ಚಿಮಾತ್ಯ ಸಮಾಜಗಳು ಮತ್ತು ಸರಕಾರಗಳು ಕ್ರೈಸ್ತ ಧರ್ಮದ ಸಂಕೇತಗಳಿಗೆ ಅವಮಾನವಾದಾಗ ಹೇಗೆ ವರ್ತಿಸುತ್ತವೆ ಎನ್ನುವುದು ಕುತೂಹಲಕರ.  ಐವತ್ತರ ದಶಕದಲ್ಲಿ ಗ್ರೀಕ್ ಲೇಖಕ ನಿಕೋಸ್ ಕಝಾನ್‌ತ್ಸಾಕಿಸ್ ತನ್ನ ಕಾದಂಬರಿ“The Last Temptation of Jesus Christ”ನಲ್ಲಿ ಮೇರಿ ಮ್ಯಾಗ್ಡಲೀನಾ ಮತ್ತು ಜೀಸಸ್ ನಡುವಿನ ಶಾರೀರಿಕ ಸಂಬಂಧದ ಬಗ್ಗೆ ಬರೆದಾಗ ಅದು ಪಾಶ್ಚಿಮಾತ್ಯ ಕ್ರಿಶ್ಚಿಯನ್ ಸಮಾಜಗಳಲ್ಲಿ ಕಡು ಟೀಕೆಗೊಳಗಾಯಿತು.  ಕಾದಂಬರಿಯನ್ನು ಬ್ರಿಟಿಷ್ ಸರಕಾರ ನಿಷೇಧಿಸಿತು.


ಈ ಸಂದರ್ಭದಲ್ಲಿ ಎಂ. ಎಫ್. ಹುಸೇನ್‌ರ ಚಿತ್ರಗಳ ಬಗೆಗೂ ಉಲ್ಲೇಖಿಸುವುದು ಅವಶ್ಯಕ.  ಅವರು ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿರುವುದನ್ನು ತಪ್ಪಲ್ಲವೆಂದು ಭಾವಿಸಿದರೂ ಆ ಚಿತ್ರಗಳು ಸಂಕೇತಿಸುವ ವಿಚಾರಗಳು ಒಪ್ಪತಕ್ಕವಲ್ಲ.  ಗಣಪತಿಯ ತಲೆಯ ಮೇಲೆ ಕುಳಿತಿರುವ ನಗ್ನ ಲಕ್ಷ್ಮಿಯ ಚಿತ್ರ, ಸಿಂಹ ಮತ್ತು ಪಾರ್ವತಿ ಇರುವ ಚಿತ್ರ, ರಾವಣ, ಸೀತೆ ಮತ್ತು ಹನುಮಂತ ಇರುವ ಚಿತ್ರಗಳು ಕೆಲವು ಉದಾಹರಣೆಗಳಷ್ಟೇ.  ಇದೇ ಹುಸೇನ್ ತನ್ನ ತಾಯಿ, ಮಗಳು, ಮುಸ್ಲಿಂ ಅರಸರು, ಕವಿಗಳು ಮತ್ತು ತತ್ವಜ್ಞಾನಿಗಳನ್ನು ಪೂರ್ಣ ಉಡುಪಿನಲ್ಲಿ ಚಿತ್ರಿಸುತ್ತಾರೆ.  ನಕಾರಾತ್ಮಕ ವಿಚಾರಗಳನ್ನು ಸೂಚಿಸುವಂತಹ ಹಿಂದು ದೇವತೆಗಳ ಚಿತ್ರಗಳ ಜತೆ ಆತ ನಗ್ನವಾಗಿ ಚಿತ್ರಿಸಿರುವುದು ನನಗೆ ತಿಳಿದಂತೆ ಒಬ್ಬ ಬ್ರಾಹ್ಮಣ ಮತ್ತು ಜರ್ಮನ್ ಸರ್ವಾಧಿಕಾರಿ ಹಿಟ್ಲರ್‌ನನ್ನು ಮಾತ್ರ.  ಇದನ್ನು ತಪ್ಪು ಎನ್ನಲಾಗದು, ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ವಾದವನ್ನು ನಾನು ಒಪ್ಪುವುದಿಲ್ಲ.  ಕಲೆ ಅಥವಾ ಸಾಹಿತ್ಯ ಮತ್ತೊಬ್ಬರ ನಂಬಿಕೆಗಳನ್ನು ಅವಮಾನಿಸುವ ಸ್ವಾತಂತ್ಯ್ರವನ್ನು ನಮಗೆ ನೀಡುವುದಿಲ್ಲ.  ಇದು ಸ್ವಾತಂತ್ರ್ಯದ ದುರುಪಯೋಗ.  ಹುಸೇನ್‌ರ ತಪ್ಪಿನಲ್ಲಿ ಅವರನ್ನು ಸಮರ್ಥಿಸುವವರದೂ ಪಾಲಿದೆ.
            ಇಡೀ ಪ್ರಕರಣದಲ್ಲಿ ನನಗೆ ತುಂಬಾ ಬೇಸರವನ್ನುಂಟುಮಾಡಿದ್ದೆಂದರೆ ಹುಸೇನರ ನಡವಳಿಕೆ.  ‘ನನ್ನಿಂದ ತಪ್ಪಾಗಿದೆ ಎಂಬ ಎರಡು ಪದಗಳು ಅವರ ಬಾಯಿಂದ ಬರಲೇ ಇಲ್ಲ.  ಒಂದೇ ಒಂದು ಸಲ ಆ ಮಾತುಗಗಳನ್ನು ಅವರು ಉಚ್ಚರಿಸಿದ್ದರೂ ಸಾಕಿತ್ತು, ಈ ನಾಡು ಅವರನ್ನು ಕ್ಷಮಿಸಿ ಅಪ್ಪಿಕೊಳ್ಳುತ್ತಿತ್ತು.  ಹಾಗೆ ಮಾಡುವ ಸುಸಂಸ್ಕೃತ ನಡವಳಿಕೆಗೆ ಬದಲಾಗಿ ಹುಸೇನ್ ಆಯ್ದುಕೊಂಡದ್ದು ದೇಶ ತೊರೆಯುವ ನಿರ್ಧಾರ.  ದುಬೈನಲ್ಲಿ ಅವರು ಹೆಚ್ಚುಕಾಲ ಬದುಕಲಿಲ್ಲವಾದರೂ ಇರುವಷ್ಟು ಕಾಲ ಸುರಕ್ಷಿತವಾಗಿಯೇ ಇದ್ದರು.  ಯಾಕೆಂದರೆ ಇಸ್ಲಾಂಗೆ ಸಂಬಂಧಿಸಿದ ವ್ಯಕ್ತಿಗಳನ್ನು ಮತ್ತು ಸಂಕೇತಗಳನ್ನು ಅವರು ತಮ್ಮ ಚಿತ್ರಗಳಲ್ಲಿ ಅವಮಾನಿಸಲಿಲ್ಲ.  ಹಿಂದೂ ಸಂಕೇತಗಳನ್ನು ಚಿತ್ರಿಸಿದ ಬಗೆಯಲ್ಲಿ ಇಸ್ಲಾಂ ಬಗ್ಗೆ ಒಂದೇ ಒಂದು ಚಿತ್ರ ರಚಿಸಿದ್ದರೂ ದುಬೈ ಇರಲಿ ಪ್ರಪಂಚದ ಯಾವುದೇ ಭಾಗದಲ್ಲಿ ಅವರು ನಿಶ್ಚಿಂತೆಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ.
            ಇಲ್ಲಿ, ಭಾರತಮಾತೆಯನ್ನು ಸೂಚಿಸುವ ಹುಸೇನ್‌ರ ಚಿತ್ರದ ಪ್ರಸ್ತಾಪವೂ ಅಗತ್ಯ.  ಈ ಚಿತ್ರದಲ್ಲಿ ನಗ್ನ ಭಾರತಮಾತೆಯ ಜತೆ ಅಶೋಕ ಚಕ್ರದಂತಹ ರಾಷ್ಟ್ರೀಯ ಚಿನ್ಹೆಗಳೂ ನಕಾರಾತ್ಮಕ ಬಗೆಯಲ್ಲಿ ಉಪಯೋಗಿಸಲ್ಪಟ್ಟಿವೆ.  ಭಾರತಮಾತೆ ಎಂಬ ದೇವತೆಯೇನೂ ಇಲ್ಲ.  ಕನ್ನಡಾಂಬೆ, ತೆಲುಗುತಲ್ಲಿ ಮುಂತಾದವುಗಳ ಹಾಗೆ ಇದೊಂದು ಭಾವುಕ ಕಲ್ಪನೆಯಷ್ಟೇ.  ಆದರೂ ಈ ಕಲ್ಪನೆ ಕೋಟ್ಯಾಂತರ ಮಂದಿಯ ಮನದಲ್ಲಿ ಪವಿತ್ರ ಸ್ಥಾನ ಗಳಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.  ಸ್ವಾತಂತ್ರ್ಯಹೋರಾಟದಲ್ಲಿ ಭಾರತಮಾತೆ ಎಂಬ ಕಲ್ಪನೆ ಹೊಮ್ಮಿಸಿದ ಸ್ಪೂರ್ತಿ ಯಾವ ದೇವತೆಗೂ ಕಡಿಮೆಯಿಲ್ಲ.  ಕೋಟ್ಯಾಂತರ ಜನರಿಗೆ ಭಾರತಮಾತೆ ಎಂದರೆ ತಾಯಿಯೇ.  ಆದರೆ ಹುಸೇನ್‌ರಂಥವರು ಮತ್ತವರ ಬೆಂಬಲಿಗರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.  ಹಾಗೆ ನೋಡಿದರೆ ಮಾತೆ ಅಥವಾ ತಾಯಿ ಎಂಬ ಪೂಜನೀಯ ವ್ಯಕ್ತಿಯನ್ನು ಹಿಂದಿದ್ದ ಉನ್ನತಸ್ಥಾನದಿಂದ ಕೆಳಗಿಳಿಸುವ ಪ್ರಕ್ರಿಯ ಇಂದಿನ ಜಗತ್ತಿನಲ್ಲಿ ಜಾರಿಯಲ್ಲಿರುವುದೂ ಕಾಣುತ್ತದೆ.  ಇದಕ್ಕೆ ಸಂಬಂಧಿಸಿದಂತೆ ತೊಂಬತ್ತರ ದಶಕದ ಉತ್ತರಾರ್ಧದ ಮಿಸ್ ಯೂನಿವರ್ಸ್ ಸ್ಪರ್ಧೆಯೊಂದು ನನಗೆ ನೆನಪಾಗುತ್ತದೆ.  ಆ ಸ್ಪರ್ಧೆಯಲ್ಲಿ ರಾಣಿ ಜಯರಾಜ್ ಎಂಬ ಭಾರತೀಯ ಸುಂದರಿಯೊಬ್ಬಳು ಅಂತಿಮ ಸುತ್ತು ತಲುಪಿದ್ದಳು.  ಅವಳಿಗೂ ಪ್ರಶಸ್ತಿಗೂ ಇದ್ದ ಅಂತರವೆಂದರೆ ಒಂದು ಪ್ರಶ್ನೆಗೆ ಉತ್ತರ ಮಾತ್ರ.  "ನಿಮ್ಮ ಮೇಲೆ ಪ್ರಭಾವ ಬೀರಿದ ಮಹಿಳೆ ಯಾರು?" ಎಂಬ ತೀರ್ಪುಗಾರರ ಪ್ರಶ್ನೆಗೆ ಅಕೆ ಉತ್ತರಿಸಿದ್ದು ನನ್ನ ತಾಯಿ ಎಂದು.  ಮಾರ್ಗರೇಟ್ ಥ್ಯಾಚರ್, ಇಂದಿರಾಗಾಂಧಿ, ಮದರ್ ಥೆರೆಸಾ, ಕೊನೇಪಕ್ಷ, ಲೇಡಿ ಡಯಾನಾರಂತಹ ಹೆಸರುಗಳನ್ನು ನಿರೀಕ್ಷಿಸಿದ್ದ ತೀರ್ಪುಗಾರರಿಗೆ ರಾಣಿಯ ಉತ್ತರ ಸಮ್ಮತವಾಗಲಿಲ್ಲ.  ಆಕೆಗೆ ಕಿರೀಟ ಸಿಗಲಿಲ್ಲ.  ಆದರೆ ಇಲ್ಲಿನ ಪ್ರಶ್ನೆ ವಿಶ್ವಸುಂದರಿ ಕಿರೀಟದ್ದಲ್ಲ.  ವ್ಯಕ್ತಿಯೊಬ್ಬರಿಗೆ ತನ್ನ ತಾಯಿ ಮಾದರಿಯಾಗುವುದು ಸಾಧ್ಯವಿಲ್ಲವೇ?  ಈ ದಿನಗಳಲ್ಲಿ ತಾಯಿ ಅಂತಹ ಯೋಗ್ಯತೆ, ಸಾಮರ್ಥ್ಯಗಳನ್ನು ಕಳೆದುಕೊಂಡಿದ್ದಾಳೆಯೇ?  ಆ ತೀರ್ಪುಗಾರರು ತಮ್ಮ ತಾಯಂದಿರಿಂದ ಯಾವ ಸ್ಪೂರ್ತಿಯನ್ನೂ ಪಡೆಯಲಿಲ್ಲ ಅಂದರೆ ಉಳಿದರೂ ಪಡೆಯಲಿಲ್ಲವೇ?  ಆ ಅಯೋಗ್ಯ ತೀರ್ಪುಗಾರರೂ, ಹುಸೇನರಂಥವರೂ ತಾಯಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಅಗತ್ಯವಿದೆ.
            ರಾಮ, ಕೃಷ್ಣ, ಜೀಸಸ್, ಮೇರಿ, ಮಹಮದ್ ಮುಂತಾದವರನ್ನು ಮಹಾತ್ಮರು, ದೇವರು ಎಂದು ನಂಬಿ ಆರಾಧಿಸುವ ಕೋಟ್ಯಾಂತರ ಜನ ಈ ಭೂಮಿಯಲ್ಲಿದ್ದಾರೆ ಎಂಬ ಸತ್ಯವನ್ನು ನಾವು ಮರೆಯಬಾರದು.  ಅವರ ನಂಬಿಕೆಗಳನ್ನು ಘಾಸಿಗೊಳಿಸುವ ಸ್ವಾತಂತ್ರ್ಯವನ್ನು ಕಲೆ ಅಥವಾ ಸಾಹಿತ್ಯ ನಮಗೆ ಕೊಡುವುದಿಲ್ಲ ಎಂಬ ಪ್ರಜ್ಞೆ ನಮಗಿರಬೇಕು.  ಇನ್ನೊಬ್ಬರ ಭಾವನೆಗಳನ್ನು ನೋಯಿಸದೇ ಮಹಾನ್ ಸಾಹಿತಿ, ಚಿತ್ರಕಾರರಾಗುವ ಹೇರಳ ಅವಕಾಶಗಳು ನಮಗಿವೆ.  ಮನುಷ್ಯಪ್ರೀತಿ, ಮಾನವತೆಯ ಕಾಳಜಿ ಇಲ್ಲದ ಕಲೆ ಮತ್ತು ಸಾಹಿತ್ಯಗಳಿಂದ ಒಳಿತಿಗಿಂತಲೂ ಕೆಡುಕೇ ಆಗುತ್ತದೆ.
            ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ನೀಳ್ಗತೆ "ಗತ - ಗತಿ"ಯ ("ಬೊಳ್ಳೊಣಕಯ್ಯ" ಸಂಕಲನದಲ್ಲಿದೆ) ಪಾತ್ರವೊಂದರ ಮಾತುಗಳೊಂದಿಗೆ ಲೇಖನವನ್ನು ಪೂರ್ಣಗೊಳಿಸುವುದು ಸೂಕ್ತ:
"ರಾಮಸೀತೆಯರ ಬಗ್ಗೆಯಾಗಲೀ, ಜೀಸಸ್ ಬಗ್ಗೆಯಾಗಲೀ ಅಥವಾ ಮಹಮದ್ದರ ಬಗ್ಗೆಯಾಗಲೀ ನಮಗೆ ನಂಬಿಕೆ ಗೌರವ ಇಲ್ಲದಿದ್ದರೆ ಏನೂ ನಷ್ಟ ಇಲ್ಲ.  ಆದ್ರೆ ಅವರನ್ನ ದೇವರುಗಳು ಮಹಾತ್ಮರು ಅಂತ ಪೂಜಿಸೋ ಗೌರವಿಸೋ ಕೋಟ್ಯಾಂತರ ಜನ ಈ ಭೂಮಿ ಮೇಲಿದ್ದಾರೆ ಅನ್ನೋದನ್ನ ನಾವು ಮರೀಬಾರದು... ಇದನ್ನ ಅರೀದೇ ಜನ ನೆರೆಮನೆಯವನ ಹಾದರದ ಬಗ್ಗೆ ಮಾತಾಡೋವಷ್ಟೇ ಹಗುರವಾಗಿ ಜೀಸಸ್ - ಮೇರಿ ಮ್ಯಾಗ್ಡಲೀನ ಬಗ್ಗೆ ಮಾತಾಡ್ತಾರೆ, ರಾಮ ಹೆಂಡ ಕುಡೀತಿದ್ದ ಅಂತ ಹೇಳಿಕೆ ಕೊಡ್ತಾರೆ.  ಬಾಯಿಗೆ ಬಂದದ್ದು ಒದರಿಕೊಂಡು ಬೀದಿಯಲ್ಲಿ ಹೋಗೋ ಒಬ್ಬ ಅರೆಹುಚ್ಚನ ಬಗ್ಗೆ ಮಾತಾಡೋವಷ್ಟೆ ಕ್ಷುಲ್ಲಕವಾಗಿ ಪ್ರವಾದಿ ಮಹಮದ್ದರ ಬಗ್ಗೆ ಮಾತಾಡ್ತಾರೆ...  ದುರಂತ ಅಂದ್ರೆ ಇಂಥವರ ಮಾತುಗಳಿಗೆ ಪ್ರಚಾರ ಕೊಡೋ ಪತ್ರಿಕೆಗಳ ಒಂದು ಗುಂಪೇ ಇದೆ.  ಪ್ರಗತಿಯ ಲಕ್ಷಣ ಅಂದರೆ ಮತ್ತೊಬ್ಬರ ನಂಬಿಕೆಗಳನ್ನ ಲೇವಡಿ ಮಾಡೋದು ಅನ್ನೋ ವಿಲಕ್ಷಣ ಸಂಸ್ಕೃತಿಯನ್ನ ಈ ಪತ್ರಿಕೆಗಳು ಹುಟ್ಟು ಹಾಕ್ತಾ ಇವೆ.  ಮದುವೆಮನೆಯಲ್ಲಿ ಬಾಸಿಂಗ ಕಟ್ಟಿಕೊಂಡ ಮದುಮಗ, ಶವಯಾತ್ರೆಯಲ್ಲಿ ಸಿಂಗರಿಸಿದ ಹೆಣ ಆಗೋ ತೆವಲು ಇರೋ ಕೆಲವು ಬುದ್ಧಿಜೀವಿಗಳು ಎಲ್ಲದಕ್ಕೂ ಬಾಯಿ ಹಾಕ್ತಾ ಇಂಥಾ ಪತ್ರಿಕೆಗಳ ಮೂಲಕ ಸದಾ ಸುದ್ಧಿಯಲ್ಲಿರ್ತಾರೆ.  ಆದರೆ ಬುದ್ಧಿಜೀವಿಯೊಬ್ಬ ಸುದ್ಧಿಜೀವಿಯಾದ್ರೆ ಅವನು ಲದ್ದಿಜೀವಿಯಾಗೋ ಕಾಲ ದೂರ ಇಲ್ಲ ಅನ್ನೋದು ಇವರಿಗೆ ಗೊತ್ತಿಲ್ಲ."

Wednesday, August 21, 2013

ಈ ಕಥೆಗಳಿಗೇಕೆ ಆದಿ ಅಂತ್ಯಗಳಿಲ್ಲ?ಈ ಆದಿ ಅಂತ್ಯಗಳಿಲ್ಲದ ಕಥೆಯನ್ನು ಓದುವ ಮೊದಲು ಪೀಠಿಕೆಯಾಗಿ "ನಿಗೂಢರು" ಕಥೆಯನ್ನು ಓದಿದರೆ ಈ ಕಥೆಯ ಹಲವು ಬೇರೆಯೇ ಆಯಾಮಗಳು ನಿಮ್ಮ ಮುಂದೆ ಅನಾವರಣಗೊಳ್ಳಬಹುದು

ಮಧ್ಯಾಹ್ನ ತರಗತಿಗಳೇ ಇರಲಿಲ್ಲ.  ಹೆಚ್‌ಓಡಿ ಮಹಾಶಯ ಅದ್ಯಾವನೋ ಒಬ್ಬ ತನ್ನ ಪರಿಚಯದವನನ್ನು ಹಿಡಿದುಕೊಂಡು ಬಂದು "ಗೆಸ್ಟ್ ಲೆಕ್ಚರ್" ಎಂಬ ಹೆಸರಿನಲ್ಲಿ ಅದೆಂಥದೋ ಕೆಲಸಕ್ಕೆ ಬಾರದ ವಿಷಯದ ಬಗ್ಗೆ ಇಡೀ ಮಧ್ಯಾಹ್ನ ಕೊರೆಸಿದ.  ವಿದ್ಯಾರ್ಥಿಗಳಿರಲಿ, ನನ್ನ ಸಹೋದ್ಯೋಗಿಗಳೂ ತೂಕಡಿಸುತ್ತಿದ್ದರು.  ನಮಗೆ ನಿದ್ದೆ ಬರಿಸುವುದಕ್ಕಾಗಿ ಅವನಿಗೆ ಯೂನಿವರ್ಸಿಟಿ ತೆತ್ತದ್ದು ವಿಮಾನಯಾನದ ಟಿಎ, ಜತೆಗೆ ಡಿಎ, ಅದೂ ಸಾಲದು ಎಂಬಂತೆ ಒಂದೂವರೆ ಗಂಟೆಗಳ ಒಂದು "ಸೆಷನ್"ಗೆ ಐನೂರು ರೂಪಾಯಿಗಳಂತೆ ಎರಡು ಸೆಷನ್‌ಗಳ ಲಬೋಲಬೋಗಳಿಗೆ ಒಂದು ಸಾವಿರ ರೂಪಾಯಿಗಳು!  ಮುಂದಿನ ತಿಂಗಳು ಹೆಚ್‌ಓಡಿಯನ್ನು ಅವನು ತನ್ನ ಯೂನಿವರ್ಸಿಟಿಗೆ ಕರೆಯುತ್ತಾನೆ.  ಇವನಿಗೂ ಅಷ್ಟೇ ದುಡ್ಡು ಸಿಗುತ್ತದೆ.  ಎಲ್ಲಾ "ನನ್ನ ಬೆನ್ನನ್ನ ನೀ ಕೆರೆ, ನಿನ್ನ ಬೆನ್ನನ್ನ ನಾ ಕೆರೀತೀನಿ" ಅನ್ನೋ ಥರಾ.  ಅವರಿಬ್ಬರ ಪರ್ಸುಗಳು ದಪ್ಪವಾಗುವುದರ ಹೊರತಾಗಿ ಇನ್ನಾರಿಗೂ ಮೂರು ಕಾಸಿನ ಪ್ರಯೋಜನವೂ ಇಲ್ಲ.  ತೆರಿಗೆದಾರನ ಹಣ ಪೋಲಾಗುವುದೇ ಹೀಗೆ.
ಗೆಸ್ಟ್’ನ ಪ್ರಲಾಪ, ಅದನ್ನು ಹೊಗಳಿ ಅಟ್ಟಕ್ಕೇರಿಸಿದ ಹೆಚ್‌ಓಡಿಯ "ಪ್ರೆಸಿಡೆಂಷಿಯಲ್ ಅಡ್ರೆಸ್", ಅದ್ಯಾರೋ ಒಂದಿಬ್ಬರು ಅರೆನಿದ್ದೆಯಲ್ಲೇ ಗೊಣಗಿದ ಒಂದೆರಡು ಪ್ರಶ್ನೆಗಳು, ಅವಕ್ಕೆ ಉತ್ತರ (?)- ಅಂತೂ ಪ್ರಹಸನ ಮುಗಿದು ಮನೆ ಸೇರಿ ಶವ ಕೆಳಗೆ ನಿಂತಾಗ ಅದೆಷ್ಟೋ ನೆಮ್ಮದಿ.
ಛಳಿಗಾಲ, ಆರುಗಂಟೆಗೂ ಮೊದಲೇ ಕತ್ತಲಾಗಿಬಿಡುತ್ತದೆ.  ಆದು ಬಿಟ್ಟರೆ ಛಳಿಗಾಲದ ಮತ್ತಾವ ಕುರುಹೂ ಇಲ್ಲ.  ವಾಸ್ತವವಾಗಿ ಪಾಂಡಿಚೆರಿಯಲ್ಲಿ ಛಳಿಯೇ ಇಲ್ಲ.  ನಾವು ತಮಾಷೆಗೆ ಹೇಳುವಂತೆ ಇಲ್ಲಿರುವುದು ಮೂರೇ ಸೀಜ಼ನ್‌ಗಳು- ಬೇಸಗೆ, ಉರಿಬೇಸಗೆ, ಬಿರುಬೇಸಗೆ!  ಹಾಟ್, ಹಾಟರ್, ಹಾಟೆಸ್ಟ್!
ಚಾಯ್ ಮಾಡಿ ಬಾಲ್ಕನಿಯ ಕತ್ತಲಲ್ಲಿ ಕುಳಿತು ಲೋಟಕ್ಕೆ ತುಟಿಯೊತ್ತುವಷ್ಟರಲ್ಲಿ ಫೋನ್ ಕಿಣಿಕಿಣಿಗುಟ್ಟಿತು.  ಬಿಸಿಬಿಸಿ ಚಾಯ್‌ನ ಆಕರ್ಷಣೆಗೆ ಯಾವಾಗಲೂ ಸೋಲುವ ನಾನು ಆರಾಮವಾಗಿ ಒಂದೆರಡು ಗುಟುಕು ಕುಡಿದು ನಿಧಾನವಾಗಿಯೇ ಎದ್ದುಹೋಗಿ ಎತ್ತಿಕೊಂಡೆ.  ಸದ್ಯ, ಅಲ್ಲಿಯವರೆಗೂ ಅದು ಬಡಿದುಕೊಳ್ಳುತ್ತಲೇ ಇತ್ತು.
"ನಾನೋ, ರುಕ್ಮಿಣಿ."
ಕಿವಿಗಳನ್ನೇ ನಂಬಲಾಗಲಿಲ್ಲ.  "ಎಷ್ಟು ದಿನ ಆಗಿತ್ತೇ ನಿನ್ನ ದನಿ ಕೇಳಿ!  ಎಲ್ಲಿಂದ ಮಾತಾಡ್ತಿದಿಯೇ?"  ಅಚ್ಚರಿ ಸಂತೋಷದಲ್ಲಿ ಕೂಗಿಯೇಬಿಟ್ಟೆ.
ಅವಳು ನಕ್ಕಳು.  "ಇಲ್ಲೇ ಪಾಂಡಿಚೆರಿಯಿಂದಾನೇ ಕಣೋ.  ಸಾಯಂಕಾಲ ಬಂದೆ.  ನಿಮ್ಮ ಯೂನಿವರ್ಸಿಟಿಗೇ ಬಂದಿದ್ದೀನಿ, ಅಕ್ಯಾಡೆಮಿಕ್ ಸ್ಟ್ಯಾಫ್ ಕಾಲೇಜಿನಲ್ಲಿ ಓರಿಯೆಂಟೇಷನ್ ಕೋರ್ಸ್ ಮಾಡೋದಿಕ್ಕೆ.  ಪೂರ್ತಿ ನಾಲ್ಕು ವಾರ ಇಲ್ಲೇ ಠಿಕಾಣಿ."
"ಎಲ್ಲಿ ಉಳಕೊಂಡಿದ್ದೀ?"
"ಇಲ್ಲೇ ಹಾಸ್ಟೆಲ್‌ನಲ್ಲೇ.  ಸಣ್ಣ ರೂಮು.  ಕುರಿ ತುಂಬಿದ ಹಾಗೆ ತುಂಬಿದ್ದಾರೆ.  ಐದು ಜನ ಇದೀವಿ.  ಇರೋದು ಮೂರು ಮಂಚಗಳು.  ಕಬ್ಬಿಣದವು.  ಒಬ್ಬರು ಕೂತರೇ ಕಿಂಯ್ಯೋ ಅಂತ ಕಿರುಚ್ತವೆ.  ಇನ್ನು ಇಬ್ಬರು ಮಲಗಿದರೆ ಹೇಗೋ."  ನಕ್ಕಳು.
"ಊಟ ಮಾಡಿದೆಯಾ?"
"ಇನ್ನೂ ಇಲ್ಲ ಕಣೋ.  ಇಲ್ಲಿ ಮೆಸ್ ಇಲ್ಲವಂತಲ್ಲ.  ಪಕ್ಕದ ಲೇಡೀಸ್ ಹಾಸ್ಟೆಲ್‌ನಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದ್ದಾರೆ.  ಯಾಕೆ ನಿಂಗೊತ್ತಿಲ್ವಾ ನಿಮ್ಮ ಯೂನಿವರ್ಸಿಟಿ ಬಂಡವಾಳ?  ಅರ್ಧ ಗಂಟೆಯಿಂದ ಕಾದು ನಿಂತಿದ್ದೀವಿ.  ಒಳಗೆ ಕಾಲಿಡೋದಿಕ್ಕೇ ಆಗ್ತಾ ಇಲ್ಲ.  ಅದೇನು ಹುಡುಗೀರೋ."  ದನಿಯಲ್ಲಿ ಬೇಸರವಿತ್ತು.
ಕ್ಷಣ ತಡೆದು ಹೇಳಿದೆ: "ನೇರ ನಿನ್ನ ಕೋಣೆಗೆ ನಡೆ."
"ನಡೆದು?"
"ನಿನ್ನ ಸಾಮಾನೆಲ್ಲಾ ಪ್ಯಾಕ್ ಮಾಡ್ಕೊ."
"ಮಾಡ್ಕೊಂಡು?"
"ಎತ್ಕೊಂಡು ಹೊರಕ್ಕೆ ಬಾ."
"ಬಂದು?  ಹಾಳು ಬಾವಿ ಹುಡುಕ್ಕೊಂಡು ಹೋಗು ಅಂತೀಯ?"
"ಛೆ ಛೆ!  ಹಾಳು ಬಾವಿ ನಿನ್ನಂಥೋಳಿಗಲ್ಲ.  ನನ್ನತ್ರ ಕಾರ್ ಇಲ್ಲ ಅಮ್ಮಣ್ಣೀ.  ಇರೋದು ಮೋಟಾರ್ ಬೈಕು.  ತಗೋಂಡು ಒಂದು ವಾರವೂ ಆಗಿಲ್ಲ.  ಕೂತು ಪಾವನಗೊಳಿಸೋವಂತೆ."

*     *     *

ಅವಳ ಭಾರದ ಸೂಟ್‌ಕೇಸ್ ಹಿಡಿದವನು ನಾನು.  ತೆಪ್ಪಗೆ ಮೆಟ್ಟಲು ಹತ್ತುತ್ತಿದ್ದೆ.  "ಆಕಾಶಕ್ಕೆ ಹತ್ತಿಸ್ತಾ ಇದೀಯೇನೋ ನನ್ನಾ?  ಅಯ್ ಅಯ್ಯೋ ಉಸ್ ಉಸ್ಸಪ್ಪಾ" ಎನ್ನುತ್ತಾ ಮೂರನೆಯ ಮಹಡಿಗೆ ಹತ್ತಿಬಂದಳು.  ಮನೆಯೊಳಗೆ ಕಾಲಿಟ್ಟವಳು ಪುಟ್ಟ ಡ್ರಾಯಿಂಗ್ ರೂಂ, ಅತೀಪುಟ್ಟ ಡೈನಿಂಗ್ ಹಾಲ್, ಒಂದೇ ಬೆಡ್‌ರೂಂ ನೋಡಿ ಮುಖ ಚಿಕ್ಕದು ಮಾಡಿದಳು.  "ಇರೋದು ಒಂದೇ ರೂಮು!  ದೊಡ್ಡದಾಗಿ ಕರಕೊಂಡು ಬಂದುಬಿಟ್ಟೆ!  ಎಲ್ಲೋ ಇರ್ಲಿ ನಾನು?"
"ಇಲ್ಲೇ ಇರೇ ಮಾರಾಯ್ತೀ?  ಈ ಬೆಡ್ ಸಾಕಾಗಲ್ವಾ?"  ದೀಪ ಹಾಕಿ ನನ್ನ ಬೃಹದಾಕಾರದ ಮಂಚ ಹಾಸಿಗೆ ತೋರಿಸಿದೆ.  ಅದರ ಗಾತ್ರ ನೋಡಿ ಬೆಚ್ಚಿದಳು.
"ಇದೆಲ್ಲಿಂದ ತಂದೆಯೋ ಈ ಭೂತವನ್ನ?"
"ನಾ ತರಲಿಲ್ಲ.  ನನಗೂ ಮೊದಲೇ ಇಲ್ಲಿತ್ತು ಇದು.  ಮನೇ ಓನರ್ ತನಗೆ ಬೇಡವಾದ್ದನ್ನೆಲ್ಲಾ ಇಲ್ಲಿ ತುಂಬಿದ್ದ.  ಅದರಲ್ಲಿ ಇದೂ ಒಂದು.  ಇಲ್ಲಿರೋ ಯಾವ ಫರ್ನೀಚರ್ರೂ ನಂದಲ್ಲ."
"ನಿಮ್ಮ ಮನೇ ಓನಗೆ ನಾಕೈದು ಜನ ಹೆಂಡತಿಯರಿದ್ದಾರೇನೋ?"  ಅವಳ ಕಣ್ಣುಗಳು ಇನ್ನೂ ಮಂಚದ ಮೇಲೇ ಓಡಾಡುತ್ತಿದ್ದವು.
"ಇದ್ದರೋ ಏನೋ, ಅಂದಕಾಲತ್ತಿಲೇ.  ಈಗಂತೂ ಅವನು ಒಂಟಿ.  ಮಕ್ಕಳೆಲ್ಲಾ ಫ್ರಾನ್ಸ್‌ನಲ್ಲಿದ್ದಾರೆ.  ಹೆಂದತಿ ಸಹಾ ಅವರೊಂದಿಗೆ ಓಡಿಹೋಗಿದ್ದಾಳೆ."  ನಕ್ಕೆ.  "ಸ್ನಾನ ಆಯ್ತೇನೇ?  ಇಲ್ಲಾ ಇನ್ನೂ ಮೈಸೂರು ಮಣ್ಣನ್ನ ಮೈಗೆ ಅಂಟಿಸಿಕೊಂಡೇ ಇದ್ದೀಯೇನು?"  ಕೇಳಿದೆ.
ಅವಳು ಮುಖ ಮುದುಡಿದಳು.  "ಏನೋ ನಾಕು ಮಗ್ ಮೈ ಮೇಲೆ ಸುರಕೊಂಡೆ.  ಅಷ್ಟೊತ್ತಿಗೆ ನಲ್ಲಿ ಸನಾದಿ ಊದೋದಿಕ್ಕೆ ಶುರುಮಾಡ್ತು.  ಓವಹೆಡ್ ಟ್ಯಾಂಕ್ ಹಾಳಾಗಿದೆ ಅಂತ ಆ ಕೇಟೇಕರ್ ತಾಟಕಿ ಅರಚಿಬಿಟ್ಲು."
"ಸರಿ, ಇಲ್ಲಂತೂ ಓವಹೆಡ್ ಟ್ಯಾಂಕ್ ಸರಿಯಾಗೇ ಇದೆ.  ಪಟ್ಟಾಗಿ ಒಂದು ಗಂಟೆ ಸ್ನಾನ ಮಾಡಿ ನಿನ್ನ ಹೆಡ್ಡನ್ನೂ ಸರಿಮಾಡ್ಕೋ.  ನಾನು ಊಟಕ್ಕೆ ರೆಡಿ ಮಾಡ್ತೀನಿ."
"ನೀ ಯಾವ ಸೀಮೆ ಅಡಿಗೆ ಮಾಡ್ತೀಯೋ ಮಂಗ?  ಈ ಹಾಳು ಊರಿಗೆ ಬಂದು ನಿನ್ನ ಕೈಲಿ ಅಡಿಗೆ ಮಾಡಿಸಿಕೊಂಡು ಉಣ್ಣಬೇಕಾದ ಗತಿ ಬಂತಲ್ಲ ನಂಗೆ!  ತೆಪ್ಪಗೆ ಕೂತಿರು.  ಎರಡು ನಿಮಿಷದಲ್ಲಿ ಸ್ನಾನ ಮಾಡಿ ಬಂದುಬಿಡ್ತೀನಿ.  ಅಕ್ಕಪಕ್ಕದಲ್ಲಿ ಎಲ್ಲಾದ್ರೂ ಹೋಟೆಲ್ ಇದ್ರೆ ಹೋಗಿ ಹೊಟ್ಟೆ ತುಂಬ ಅನ್ನ ಸಾಂಬಾರ್ ಬಾರಿಸಿ ಬರೋಣ."
"ನೀನು ಬಾರಿಸಿಕೋಬೇಕಾದ್ದು ನಿನ್ನ ಹಣೇನ.  ಇದು ನಿಮ್ಮ ಮೈಸೂರಲ್ಲ.  ಇಲ್ಲೀ ಜನ ರಾತ್ರಿ ಹೊತ್ನಲ್ಲಿ ನಮ್ಮ ಹಾಗೆ ಅನ್ನ ಸಾರು ತಿನ್ನೋದಿಲ್ಲ.  ಯಾವ ಹೋಟೆಲಿಗೆ ಹೋದ್ರೂ ಸಿಗೋದು ಬರೀ ಇಡ್ಲಿ ದೋಸೆ ಅಥವಾ ಸಪ್ಪಾದಿ ಬೂರಿ ಬರೋಡಾ ಅಷ್ಟೇ."
"ಅದೇನೋ ಸಪ್ಪಾದಿ ಬೂರಿ ಬರೋಡಾ ಅಂದ್ರೆ?  ಅದ್ಯಾವ ತಿಂಡೀನೋ ಅದೂ?"
"ಚಪಾತಿ ಪೂರಿ ಪರೋಟಾವನ್ನ ಈ ಜನ ಹೇಳೋದು ಹಾಗೆ."  ನಕ್ಕುಬಿಟ್ಟೆ.  "ಇರಲಿ, ಅದು ಬೇಡ, ಅನ್ನಾನೇ ಬೇಕು ಅಂದ್ರೆ ಮುನಿಯಾಂಡಿ ವಿಲಾಸ್‌ಗಳಿಗೆ ಹೋಗೋಣ.  ಅವೋ ಬೀದಿಗೊಂದು ಇವೆ.  ಅಲ್ಲಿ ಬಣ್ಣದ ಅನ್ನ ಸಿಗತ್ತೆ.  ಅನ್ನದಲ್ಲಿ ಕೋಳಿ ಕುರಿ ಮಾಂಸದ ತುಂಡುಗಳೂ ಇರುತ್ವೆ.  ಅದನ್ನ ಬಿರಿಯಾನಿ ಅಂತಾರೆ."  ನಕ್ಕೆ.  ದುರುಗುಟ್ಟಿಕೊಂಡು ನೋಡಿದಳು.
"ಈ ಊರಿಗೆ ಬಂದು ಏನೇನು ಕಲಿತಿದ್ದೀಯೋ?  ನೀನಂತೂ ಮೊದಲೇ ಕಪಿ.  ಬಾಲ ಒಂದಿಲ್ಲ ಅಷ್ಟೇ."  ಮುಖ ಸಿಂಡರಿಸಿದವಳ ತುಟಿಗಳು ಮಾತಿನ ಕೊನೆಗೆ ತೆಳುನಗೆಯಲ್ಲಿ ಬಿರಿದವು.
ಜೋರಾಗಿ ನಕ್ಕುಬಿಟ್ಟೆ.  "ಬಿಡೇ ಮಾರಾಯ್ತಿ.  ನಿನ್ನನ್ನೇನು ಜಾತಿಗೆಡಿಸೋದಿಲ್ಲ ನಾನು.  ಹೋಗು, ನೆಮ್ಮದಿಯಾಗಿ ಸ್ನಾನ ಮಾಡಿ ಬಾ.  ನಾನು ಒಂದಷ್ಟು ಅನ್ನ ಬೇಯಿಸ್ತೀನಿ.  ಬೇಳೆ ಜತೆಗೆ ನುಗ್ಗೇಕಾಯಿನೂ ಬೇಯಿಸಿರ್ತೀನಿ.  ನೀನೇ ಬಂದು ಸಾರು ಮಾಡೊವಂತೆ."  ಬಾತ್‌ರೂಮಿನ ದೀಪ ಹಾಕಿದೆ.  "ಹ್ಞುಹ್" ಎಂದು ಒಮ್ಮೆ ಹೂಂಕರಿಸಿ ತನ್ನ ಸೂಟ್‌ಕೇಸಿನತ್ತ ಧಪಧಪ ಹೆಜ್ಜೆಹಾಕಿದಳು.  ಅದನ್ನು ತೆರೆದಂತೇ ಬಿಟ್ಟು ಬಾತ್‌ರೂಮಿಗೆ ನುಗ್ಗಿದಳು.  ಎರಡು ಕ್ಷಣದಲ್ಲಿ ಶವನ "ಸುಂಯ್" ಹಿನ್ನೆಲೆ ಸಂಗೀತದೊಡನೆ ಗುನುಗು ಹಾಡು ಕೇಳಿಬರತೊಡಗಿತು.
"ಬಣ್ಣಾ... ಬಣ್ಣ...  ನನ್ನ ಬದುಕಿನ ಬಣ್ಣ..."
ಅವಳು ಇಡೀ ಅರ್ಧಗಂಟೆ ಸ್ನಾನ ಮಾಡಿ ಹೊಚ್ಚಹೊಸ ನೈಟಿ ಧರಿಸಿ ಬಾತ್‌ರೂಮಿನಿಂದ ಬೆಡ್‌ರೂಮಿಗೆ ನಾಕು ಸಲ ಧಸಬಸ ಸದ್ದು ಮಾಡಿಕೊಂಡು ಓಡಾಡಿ ಹಾಲ್‌ನ ನಟ್ಟನಡುವೆ ನಡುಬಗ್ಗಿಸಿ ನಿಂತು ಕೆಳಗೆ ತೂಗಿದ ಕೂದಲ ಜಲಪಾತಕ್ಕೆ ಟವಲ್‌ನಿಂದ ಫಟ್‌ಫಟ್ ಹೊಡೆದಳು.  ನೂರು ನೂರು ನೆನಪುಗಳು ಎದೆಯಾಳದಿಂದ ಒದ್ದುಕೊಂಡು ಮೇಲೆದ್ದು ಬಂದವು.
ಅವಳು ಕೂದಲಿಗೆ ಟವಲ್ ಸುತ್ತಿ ಶಿವನ ಶಿಖೆಯಂತೆ ಮೇಲೆತ್ತಿ ನಿಲ್ಲಿಸುವಷ್ಟರಲ್ಲಿ ಅನ್ನ ಆಗಿ ಬೇಳೆಸಾರು ಕುದಿಯುತ್ತಿತ್ತು.  ಇನ್ನೊಂದು ಬರ್ನನಲ್ಲಿ ನಾನು ಆಲೂಗೆಡ್ಡೆಯ ತುಂಡುಗಳನ್ನು ಹುರಿಯುತ್ತಿದ್ದೆ.
"ಏನು ಮಾಡಿದೀಯೋ?  ಸಾರು ಗಮಗಮ ಅಂತಿದೆ" ಎನ್ನುತ್ತಾ ಅಡಿಗೆಮನೆಯೊಳಗೆ ಬಂದಳು.  "ಇನ್ನು ನೀನು ಹೋಗಿ ಕೈತೊಳಕೊಂಡು ಕೂರು" ಎನ್ನುತ್ತಾ ತಾನೇ ಡೈನಿಂಗ್ ಟೇಬಲ್ ಅಣಿಗೊಳಿಸಿದಳು.  ನನ್ನ ತಟ್ಟೆಗೆ ಬಡಿಸಿ ತಾನೂ ಬಡಿಸಿಕೊಂಡಳು.  ತುತ್ತು ಬಾಯಿಗಿಟ್ಟು ಕಣ್ಣರಳಿಸಿದಳು.  "ನುಗ್ಗೆಕಾಯಿಹುಳಿಯ ರುಚಿ ಥೇಟ್ ನಿಮ್ಮಮ್ಮ ಮಾಡ್ತಾ ಇದ್ದಂಗೇ ಇದೆ ಕಣೋ"  ಎನ್ನುತ್ತಾ ಮತ್ತಷ್ಟು ಸಾರು ಸುರಿದುಕೊಂಡು ಸೊರಸೊರ ಹೀರಿದಳು.  "ನೀನು ಇಷ್ಟು ಚೆನ್ನಾಗಿ ಅಡಿಗೆ ಮಾಡ್ತೀಯ ಅಂತ ಗೊತ್ತಿದ್ರೆ ನಿನ್ನನ್ನೇ ಮದುವೆ ಮಾಡಿಕೊಳ್ತಾ ಇದ್ದೆನಲ್ಲೋ" ಎನ್ನುತ್ತಾ ನಕ್ಕು ಸಟಕ್ಕನೆ ಮುಖ ಸಪ್ಪಗಾಗಿಸಿಕೊಂಡಳು.
ಊಟವಾದ ಮೇಲೆ ಬಾಲ್ಕನಿಯಲ್ಲಿ ಕುಳಿತೆವು.  "ದೀಪ ಆರಿಸೋ.  ಕಣ್ಣಿಗೇ ಚುಚ್ಚುತ್ತೆ" ಎನ್ನುತ್ತಾ ಬೆಡ್‌ರೂಮಿನ ಕಿಟಕಿಯಿಂದ ಹರಿದುಬರುತ್ತಿದ್ದ ಬೆಳಕಿಗೆದುರಾಗಿ ಕೈ ಅಡ್ಡತಂದಳು.  ಎದ್ದುಹೋಗಿ ದೀಪ ಆರಿಸಿ ಬಂದೆ.  ಬಾಲ್ಕನಿ ಕತ್ತಲುಗಟ್ಟಿತು.  ಐವತ್ತು ಅರವತ್ತು ಅಡಿಗಳಾಚೆಯ ತಾಳೆಮರಗಳ ತೋಪಿನಲ್ಲಿ ಗಾಳಿ ಮೆಲುವಾಗಿ ಸುಂಯ್‌ಗುಡುತ್ತಾ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿತ್ತು.  ಅದರಾಚೆ ಬಂಗಾಳಕೊಲ್ಲಿಯ ಅಲೆಗಳ "ಧೂ...ಪ್ ಧೊಪ್" ಬಡಿತ.  ಅದರ ಹೊರತಾಗಿ ಎಲ್ಲೆಡೆ ನಿಶ್ಶಬ್ಧ.
ನೀರವ ನಿಶೆಯಲ್ಲಿ ನೆನಪುಗಳು ಅಲೆಯಂತೆ ಎದ್ದುಬಂದು ನಮ್ಮೆದೆಗೆಳಿಗೆ ಬಡಿದು ಇಬ್ಬರನ್ನೂ ಅತ್ತಿತ್ತ ತಳ್ಳಾಡತೊಡಗಿದವು.  ಬೆಳಕಿನಲ್ಲಿ ತಂತಾನೇ ಮೂಡಿ ಮುಖದ ಮೇಲೆಲ್ಲಾ ಕವಿದುಕೊಂಡಿದ್ದ ಮುಖವಾಡಗಳೆಲ್ಲಾ ಕತ್ತಲಲ್ಲಿ ಅದೆತ್ತಲೋ ಕರಗಿಹೋಗಿ ಮನಸ್ಸು, ಕಣ್ಣುಗಳು ಬತ್ತಲಾದವು.
"ಹತ್ತು ವರ್ಷಗಳೇ ಆಗಿಹೋದವಲ್ಲ ನಾವು ಭೇಟಿಯಾಗಿ!"  ಸಣ್ಣಗೆ ದನಿ ತೆಗೆದಳು.  "ನಿಮ್ಮಮ್ಮ ಹೋಗಿಬಿಟ್ಟ ಸುದ್ಧಿಯೂ ತಕ್ಷಣ ನನಗೆ ತಿಳೀಲಿಲ್ಲ."
".........."
"ತಿಳಿದರೂ ಬಂದು ನಿನಗೂ ಸರಸಕ್ಕನಿಗೂ ಸಾಂತ್ವನ ಹೇಳೋ ಸ್ಥಿತೀಲಿ ನಾನಿರಲಿಲ್ಲ."
"ನೀವೆಲ್ಲ ಇದ್ದಕ್ಕಿದ್ದ ಹಾಗೆ ಮನೆ ಬಿಟ್ಟು ಬೇರೆ ಕಡೆ ಹೊರಟುಹೋದದ್ದು ಯಾಕೆ?  ಅದೂ ನಾವು ಎರಡುದಿನಕ್ಕೆ ಅಂತ ಶೃಂಗೇರಿಗೆ ಹೋಗಿದ್ದು ಬರೋದರ ಒಳಗೆ?"  ಇಡೀ ಹತ್ತು ವರ್ಷಗಳಿಂದ ಶವವಾಗಿ ಕೊಳೆಯುತ್ತಿದ್ದ ಪ್ರಶ್ನೆ ಕತ್ತಲಲ್ಲಿ ಜೀವ ತಳೆದು ಎದ್ದುಕೂತು ನರಳಿತು.
ಅವಳು ಮೌನವಾದಳು.  ನಾನು ಕಾದೆ.  ಗಾಳಿಗೆದುರಾಗಿ ಪ್ರಯಾಸದಿಂದ ಹೊರಳಿಬರುವ ಸಮುದ್ರದ ಪುಟ್ಟ ಅಲೆಯಂತೆ ಕೊನೆಗೂ ಅವಳ ಉತ್ತರ ಮೆಲ್ಲಮೆಲ್ಲನೆ ಬಂತು.
"ನಮ್ಮಮ್ಮನ ಈಗೋ ಇರಬೋದೇನೋ.  ನನಗೆ ಗೊತ್ತಿಲ್ಲ.  ಒಂದುದಿನ ನಿಮ್ಮಮ್ಮನ ಜತೆ ಏನೋ ಮಾತಾಡಿ ಬಂದವಳು ನನ್ನನ್ನು ಕರೆದು ನಿನ್ನ ಬಗ್ಗೆ ಮಾತು ತೆಗೆದಳು.  ನೀನು ನನಗಿಷ್ಟವಾ ಅಂತ ಕೇಳಿದಳು.  ಹಿಂದುಮುಂದು ಗೊತ್ತಿಲ್ಲದೇ "ಹ್ಞೂ" ಅಂದುಬಿಟ್ಟೆ.  ಆಗ ನನ್ನ ಜೊತೆ ಮಾತು ನಿಲ್ಲಿಸಿದ ಅಮ್ಮ ಮತ್ತೆ ಮಾತಾಡಿದ್ದು ವಾರದ ನಂತರ ಮೈಸೂರಿನ ಮತ್ತೊಂದು ಮೂಲೆಯಲ್ಲಿ ಬೇರೆ ಮನೆ ಮಾಡಿ ಒಲೆ ಹೂಡಿದಾಗಲೇ."
ನಾನು ದಂಗಾಗಿಹೋದೆ.  ಪ್ರತಿಕ್ರಿಯಿಸಲಾರದೇ ಕತ್ತಲಲ್ಲಿ ಅವಳ ಮುಖದ ಬಣ್ಣಗಳನ್ನು ಹುಡುಕಿದೆ.  ಅವಳ ದನಿ ಸಾಗಿತ್ತು: "ಏನು ನಡೀತು ಅಂತ ನಾನೇ ನಿಮ್ಮಮ್ಮನ್ನ ಕೇಳಿದೆ.  ಅವರು ಮೊದಲೇ ಮಹಾ ಮೌನಿ.  ಏನೂ ಹೇಳಲೇ ಇಲ್ಲ.  ಸುಮ್ಮನೆ ಸಣ್ಣಗೆ ನಕ್ಕುಬಿಟ್ಟರು.  ನಾನೇ ಒತ್ತಾಯಿಸಿದಾಗ ‘ಎಲ್ಲಾದ್ರೂ ಸುಖವಾಗಿ ಬಾಳು ಮಗೂ’ ಅಂತ ಹೇಳಿ ತಲೆ ಸವರಿದರು.  ಸರಸಕ್ಕನ್ನ ಕೇಳೋಣಾಂದ್ರೆ ಅವಳು ಸಿಗ್ಲೇ ಇಲ್ಲ.  ಅದ್ಯಾಕೋ ಹಿಂಜರಿಕೆಯಾಗಿ ನಿನ್ನ ಜತೆ ಮಾತು ತೆಗೆಯಲು ಆಗಲೇ ಇಲ್ಲ.  ಅದೇನು ಮರುಳೋ, ಆದದ್ದಾಗಲೀ ಅಂತ ಸುಮ್ಮನಿದ್ದುಬಿಟ್ಟೆ.  ವಾರ ಕಳೆಯುವುದರೊಳಗೆ ದೆಹಲಿಯಲ್ಲಿ ರೀಸರ್ಚ್ ಮಾಡುತ್ತಿದ್ದ ಸೋದರಮಾವ ರಜಕ್ಕೆ ಅಂತ ಬಂದ.  ಮಾರನೇ ದಿನವೇ ಅವನ ಜತೆ ನನ್ನ ಎಂಗೇಜ್‌ಮೆಂಟು.  ತಿಂಗಳಲ್ಲಿ ಮದುವೆಯೂ ಆಗಿಹೋಯ್ತು.  ತಾಳಿಕಟ್ಟಿ ಅವನು ಮತ್ತೆ ದೆಹಲಿಗೆ ಹೊರಟುಹೋದ.  ಅವನನ್ನು ಅಷ್ಟು ಅರ್ಜೆಂಟಾಗಿ ಅಮ್ಮ ಕರೆಸಿದ್ದೇ ಅದಕ್ಕಾಗಿ ಅಂತ ಆಮೇಲೆ ಗೊತ್ತಾಯ್ತು.  ‘ಏನೇ ಈಗ ತಾನೆ ಮದುವೆಯಾಗಿರೋ ನಿನ್ನ ಮಗಳ ಮುಖದ ಕಳೆಗಿಂತ ನಿನ್ನ ಮುಖದ ಕಳೆಯೇ ಜೋರಾಗಿದೆಯಲ್ಲೇ?’ ಅಂತ ಮದುವೆಗೆ ಬಂದಿದ್ದ ದೊಡ್ಡತ್ತೆ ಅಮ್ಮನನ್ನ ಕೆಣಕಿದಾಗ ನಾ ಕಳಕೊಂಡದ್ದೇನು ಅಮ್ಮ ಗಳಿಸಿದ್ದೇನು ಅಂತ ಲೆಕ್ಕ ಹಾಕೋದಿಕ್ಕೆ ಶುರು ಮಾಡ್ದೆ."  ನಿಡುಸುಯ್ದಳು.
ಮುಂದಿನ ಐದಾರು ನಿಮಿಷಗಳು ನಮ್ಮ ನಡುವೆ ಮೌನವಿತ್ತು.
"ನೀ ಯಾಕೆ ಇನ್ನೂ ಮದುವೇ ಆಗಿಲ್ಲ."  ಥಟ್ಟನೆ ಪ್ರಶ್ನಿಸಿ ಬೆಚ್ಚಿಸಿದಳು.  ನಾನು ಉತ್ತರಿಸಲಿಲ್ಲ.  ಅದನ್ನವಳು ನಿರೀಕ್ಷಿಸಿರಲೂ ಇಲ್ಲವೇನೋ.  ಮಾತು ಮುಂದುವರೆಸಿದಳು: "ನಿನ್ನ ಕಥೆಗಳನ್ನೆಲ್ಲಾ ಓದ್ತೀನಿ.  ನಾನೆಲ್ಲಾದರೂ ಸಿಗ್ತೀನೇನೋ ಅಂತ ಹುಡುಕ್ತಿರ್ತೀನಿ.  ಪ್ರತಿಸಲ ನಿರಾಶೆಯಾದಾಗಲೆಲ್ಲಾ ಆವತ್ತು ಅಮ್ಮ ನಿನ್ನ ಬಗ್ಗೆ ಕೇಳಿದ ಪ್ರಶ್ನೆ ನೆನಪಿಗೆ ಬರುತ್ತೆ.  ಅವಳಿಗೆ ನಾನು ಬೇರಾವ ರೀತೀಲಿ ಉತ್ತರಿಸಬಹುದಾಗಿತ್ತು ಅಂತ ಯೋಚಿಸ್ತೀನಿ."
ಇಡೀ ಒಂದು ದಶಕದ ಹಿಂದೆ ಇದ್ದಕ್ಕಿದ್ದಂತೆ ದೂರ ಸರಿದುಹೋದವಳು ಈಗ ಕತ್ತಲಿನಲ್ಲಿ ಎದುರು ಕೂತು ‘ನನ್ನೆದೆಯ ಗೀರುಗಳನ್ನು ಲೆಕ್ಕಹಾಕೋ’ ಎಂದು ಕೇಳುತ್ತಿದ್ದಳು.  ನನಗೆ ಮತ್ತೆ ಮತ್ತೆ ಲೆಕ್ಕ ತಪ್ಪುತ್ತಿತ್ತು.
"ಕೆಲಸಕ್ಕೆ ಯಾವಾಗ ಸೇರಿದೆ?"  ವಿಷಯ ಬದಲಾಯಿಸಲು ಪ್ರಯತ್ನಿಸಿದೆ.
"ಐದಾರು ತಿಂಗಳಾಯ್ತು ಅಷ್ಟೇ.  ತಾಳಿ ಕಟ್ಟಿದ ಆ ಮಹಾರಾಯ ತನ್ನ ಕೆಲಸವಾಯ್ತು ಅಂತ ಮತ್ತೆ ದೆಹಲಿಗೆ ಓಡಿಹೋದ.  ಅವನು ಕಟ್ಟಿಹೋದ ಮೂಗುದಾರವನ್ನ ಅಮ್ಮ ಭದ್ರವಾಗಿ ಹಿಡಿದಿದ್ದೇನೋ ನಿಜ.  ಆದರೂ ನನ್ನ ಓದು ಮುಂದುವರೀತು ಸಧ್ಯ.  ಅವನು ಪಿಹೆಚ್‌ಡಿ ಮುಗಿಸೋವಷ್ಟರಲ್ಲಿ ನನ್ನ ಎಂಎನೂ ಮುಗೀತು.  ಅದೀಗ ಅನುಕೂಲಕ್ಕೆ ಬಂತು ನೋಡು."  ನಕ್ಕಳು.  ನಗೆಯಲ್ಲಿ ನಲಿವಿರಲಿಲ್ಲ.
"ಯಾಕೆ ಏನಾಯ್ತು?"  ನನಗರಿವಿಲ್ಲದಂತೇ ಪ್ರಶ್ನೆ ಹೊರಬಿದ್ದಿತ್ತು.
"ಏನ್ ಹೇಳ್ಲಿ?  ಅವನಿಗೆ ತುಂಬಾ ಹಣ ಬೇಕಂತೆ.  ಅದನ್ನ ಸಂಪಾದಿಸೋದಿಕ್ಕೆ ಯಾವಾಗ್ಲೂ ದುಡೀತಾನೇ ಇರಬೆಕಂತೆ.  ಕೆಲಸ ಕೆಲಸ ಅಂತ ಅವನು ಮೂರುಹೊತ್ತೂ ಅದೇ ಗುಂಗಿನಲ್ಲಿರ್ತಾನೆ.  ಅಮೆರಿಕಾ ಇಂಗ್ಲೆಂಡು ಅಂತ ಹಾರಾಡ್ತಿರ್ತಾನೆ.  ಮೊನ್ನೇನೂ ಅದೆಲ್ಲಿಗೋ ಹಾರಿಹೋದ.  ಇನ್ನು ಅದ್ಯಾವಾಗ ಮುಖ ತೋರಿಸ್ತಾನೋ.  ನನಗೆ ಒಂಟಿತನ ಸಾಕು ಅನಿಸಿಬಿಡ್ತು.  ಇಲ್ಲಿಗೆ ಸೇರ್ಕೊಂಡೆ.  ಪ್ರೈವೇಟ್ ಕಾಲೇಜು.  ಯುಜಿಸಿ ಸ್ಕೇಲಿಗೆ ಸೈನ್ ಮಾಡಿಸಿಕೊಂಡು ಅದರ ಅರ್ಧ ಕೊಡ್ತಾರೆ.  ಇರಲಿ, ನನಗೆ ಬೇಕಾಗಿರೋದು ಅದಲ್ಲ.  ತಿಂಗಳು ತಿಂಗಳು ನನ್ನ ಕೈಯಿಂದಲೇ ಅವರಿಗೆ ದುಡ್ಡು ಕೊಟ್ಟು ದುಡಿಯೋದಕ್ಕೂ ಸಿದ್ದ ನಾನು."  ಮತ್ತೊಮ್ಮೆ ಅಗಿದುಗಿದ ಕಬ್ಬಿನ ಸಿಪ್ಪೆಯಂತಹ ನಗೆ.
"ಮಕ್ಕಳಿವೆಯಾ?"
"ಹ್ಞೂ, ಒಬ್ಬ ಮಗ ಇದ್ದಾನೆ.  ಯುಕೆಜಿಗೆ ಹೋಗ್ತಿದಾನೆ."
"ಈಗ ಯಾರ ಜತೆ ಬಿಟ್ಟು ಬಂದಿದ್ದೀಯ?"
"ಅಮ್ಮನ ಜತೆಯೇ.  ನನಗಿಂತ ಅವಳನ್ನೇ ಹೆಚ್ಚು ಹಚ್ಚಿಕೊಂಡಿದ್ದಾನೆ ಅವನು.  ಅವಳೂ ಅಷ್ಟೇ.  ಅವಳ ಪದಕವಂತೆ ಅವನು."
"ನಾನು ಇಲ್ಲಿದೀನಿ ಅಂತ ನಿಮ್ಮಮ್ಮನಿಗೆ ಗೊತ್ತಾ?"  ಕೇಳಬೇಕೋ ಬೇಡವೋ ಎಂದುಕೊಳ್ಳುತ್ತಲೇ ಕೇಳಿಬಿಟ್ಟೆ.
"ಇಲ್ಲ.  ನಂಗೆ ಗೊತ್ತಾದದ್ದೂ ಇತ್ತೀಚೆಗೆ.  ನಿನ್ನ ಕಥೆಗಳಲ್ಲಿ ಈ ಊರಿನ ಪ್ರಸ್ತಾಪ ಬರೋದನ್ನ ನೋಡಿ ಅನುಮಾನ ಬಂದಿತ್ತು.  ಎರಡು ತಿಂಗಳ ಹಿಂದೆ ಗಂಗೋತ್ರಿಗೆ ಒಂದು ಸೆಮಿನಾಗೆ ಅಂತ ಹೋಗಿದ್ದಾಗ ಅದೃಷ್ಟ ಅನ್ನೋಹಾಗೆ ಸರಸಕ್ಕ ಸಿಕ್ಕಿದ್ಲು.  ನೀನು ಇಲ್ಲಿದ್ದೀಯ ಅಂತ ಗೊತ್ತಾದ ತಕ್ಷಣ ಪ್ಲಾನ್ ಹಾಕ್ದೆ.  ಈ ಕೋರ್ಸ್ ನೆಪ ಮಾಡ್ಕೊಂಡು ಬಂದುಬಿಟ್ಟೆ."
ನಾನು ಮತ್ತೆ ಮಾತಾಡಲಿಲ್ಲ.  ಅವಳು ಮೌನವಾದಳು.  ಅದೆಷ್ಟು ನಿಮಿಷಗಳು ಸರಿದವೋ, ಅಲೆಯೊಂದು ಧಡಾರನೆ ದಡಕ್ಕೆ ಬಡಿಯಿತು.  ತಾಳೆ ಮರಗಳ ತೋಪಿನಲ್ಲಿ ಗಾಳಿ ಬೆಚ್ಚಿದ ದೈತ್ಯನಂತೆ ಬುಸುಗುಟ್ಟಿತು.  ಅದು ಕರಗುತ್ತಿದ್ದಂತೇ ದೂರದಿಂದೆಲ್ಲೋ ಬಂದಂತೆ ಅವಳ ದನಿ ಕೇಳಿಬಂತು:
"ನಾನು ಸೋತುಹೋಗಿದೀನಿ ಕಣೋ.  ಯಾಕೋ ನಂಗ್ಯಾರೂ ಇಲ್ಲ ಅನ್ಸುತ್ತೆ.  ನನ್ನದಲ್ಲದ ದಾರೀಲಿ ಬಹುದೂರ ಸಾಗಿಬಂದುಬಿಟ್ಟಿದ್ದೀನಿ ಅನಿಸ್ತಿದೆ."
ಬಿಕ್ಕಿದ್ದು ಅವಳೋ ಇಲ್ಲಾ ಕತ್ತಲೆಯೋ ಗೊತ್ತಾಗಲಿಲ್ಲ.  ಥಟ್ಟನೆ ಮೇಲೆದ್ದೆ.  ಅವಳ ಕೈಹಿಡಿದು ಎಬ್ಬಿಸಿದೆ.  ನಿಧಾನವಾಗಿ ಎದ್ದಳು.  ಒಳಗೆ ಬಂದು ಲೈಟ್ ಹಾಕುವವರೆಗೂ ಅವಳ ಕೈ ನನ್ನ ಕೈಯಲ್ಲಿತ್ತು.  ದೀಪ ಹತ್ತಿಕೊಳ್ಳುತ್ತಿದ್ದಂತೇ ಛಕ್ಕನೆ ಕೈಬಿಡಿಸಿಕೊಂಡಳು.  ಅತ್ತ ಮುಖ ತಿರುಗಿಸಿಕೊಂಡು ಸರಸರನೆ ಬಾತ್‌ರೂಮಿನತ್ತ ಓಡಿದಳು.  ನಾನು ಅಲ್ಲೇ ಮಂಚದ ಅಂಚಿನಲ್ಲಿ ಕುಸಿದೆ.  ಐದು ನಿಮಿಷದ ನಂತರ ಅವಳು ಟವಲ್‌ನಲ್ಲಿ ಮುಖ ಒರೆಸುತ್ತಾ ಬಂದಾಗ ತುಂಬಾ ಫ್ರೆಶ್ ಆಗಿ ಕಂಡಳು.  ಬಾಲ್ಕನಿಯ ಕತ್ತಲಲ್ಲಿ ಹೊರಚೆಲ್ಲಾಡಿದ್ದ ಬಣ್ಣಗಳೆಲ್ಲಾ ಈಗ ಬೆಳಕಿನಲ್ಲಿ ಒಂದಾಗಿ ಸೇರಿ ಬಿಳಿಯ ಬಣ್ಣವಾಗಿಬಿಟ್ಟಿದ್ದವು.
"ಹ್ಞಾ ಮರೆತೇಹೋಗಿತ್ತು.  ಜಾನಕಿ ಅಕ್ಕನೂ ಇಲ್ಲೇ ಇದ್ದಾಳಂತಲ್ಲ!  ಸರಸಕ್ಕ ಹೇಳಿದ್ಲು."  ಟವಲ್‌ನ ಒಂದು ತುದಿಯಿಂದ ಹುಬ್ಬುಗಳನ್ನು ಒತ್ತುತ್ತಾ ಮಾತು ತೆಗೆದಳು.
"ಹ್ಞೂ ಇದ್ದಾಳೆ.  ಅವಳೇ ನನಗೆ ಈ ಮನೆ ಫಿಕ್ಸ್ ಮಾಡಿಕೊಟ್ಟದ್ದು."  ಹೇಳಿದೆ.  ಅವಳ ಮುಂದಿನ ಪ್ರಶ್ನೆ ಬರುವುದಕ್ಕೆ ಮೊದಲೇ ಮಾತು ಮುಂದುವರಿಸಿದೆ: "ಅವಳೀಗ ಮೈಸೂರಲ್ಲೇ ಇದ್ದಾಳೆ.  ಮಗನ ಸ್ಕೂಲಿಗೆ ಏನೋ ರಜೆ ಅಂತ ಹೇಳಿ ಮೊನ್ನೆ ತಾನೆ ಹೋದ್ಲು.  ಬರೋದು ಇನ್ನೊಂದು ವಾರಕ್ಕೆ ಅಂತ ಕಾಣುತ್ತೆ."
ಮಾತು ಮುಗಿಸಿ ನೀರಿನ ಹೂಜಿಯತ್ತ ಕೈಚಾಚುತ್ತಿದ್ದಂತೇ ಅವಳ ಪ್ರಶ್ನೆ ಬಂತು:
"ನಿಮ್ಮಿಬ್ಬರ ಮಧ್ಯೆ ಏನು ನಡೀತಾ ಇದೆಯೋ?"
ನನ್ನ ಕೈ ಹೂಜಿಯಿಂದ ಒಂದು ಇಂಚು ದೂರದಲ್ಲಿ ಥಟ್ಟನೆ ನಿಂತುಬಿಟ್ಟಿತು.  ಟವಲನ್ನು ಹಗ್ಗದ ಮೇಲೆ ಹರಡುತ್ತಾ ಅವಳು ರಾಗ ಎಳೆದಳು:
"ಕಾಂಪಿಟಿಷನ್ನಾ?  ಅವಳ ಕಥೆ ಪ್ರಕಟವಾದ ಮುಂದಿನ ಸಂಚಿಕೆಯಲ್ಲಿ ನಿನ್ನ ಕಥೆ.  ಅಥವಾ ಅದರ ಉಲ್ಟಾ.  ಮೊನ್ನೆ ನಿಮ್ಮಿಬ್ಬರ ಕಥೆಗಳೂ ಒಂದೇ ಕಡೆ ಪ್ರಕಟವಾಗಿರೋದನ್ನ ನೋಡ್ದೆ."
ನಕ್ಕು ಎರಡು ಗುಟುಕು ನೀರು ಕುಡಿದೆ.  ಹರಡಿದ ಟವಲ್‌ನ ಒಂದು ತುದಿಯಿಂದ ಹುಬ್ಬುಗಳನ್ನು ಮತ್ತೊಮ್ಮೆ ಒತ್ತಿಕೊಂಡು ನನ್ನತ್ತ ಬಂದಳು.
"ನೀನೆಲ್ಲಿ ಮಲಗ್ತೀಯೋ?"  ಪಕ್ಕ ನಿಂತು ಕೇಳಿದಳು.
"ಇಲ್ಲೇ ಮಲಗಿದರೆ ಆಗದಾ?  ಈ ಮಂಚ ಇಬ್ಬರಿಗೆ ಸಾಕಾಗದಾ?"
"ಏಯ್ ಏನೋ ಹೇಳ್ತಾ ಇದೀಯ ನೀನು?"  ಬೆನ್ನಿಗೆ ಗುದ್ದಿದಳು.  ಕಣ್ಣುಗಳಲ್ಲಿ ಫಕ್ಕನೆ ಲಜ್ಜೆ ಇಣುಕಿತ್ತು.  ಹತ್ತುವರ್ಷ ಚಿಕ್ಕವಳಾಗಿ ಕಂಡಳು.  ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದ್ದ ‘ಅಮ್ಮ ಎಲ್ಲೋ ಕಾಣ್ತಾ ಇಲ್ಲ, ನಿಮ್ಮಮ್ಮನೂ ಹತ್ರ ಇಲ್ಲ, ನಂಗೆ ಜಡೆ ಹೆಣೆದುಕೊಡೋ’ ಎಂದು ಕೇಳುತ್ತಿದ್ದ ಅದೇ ಆಸೆಗಳ ವಯಸ್ಸಿನ ಹುಡುಗಿಯಾಗಿಬಿಟ್ಟಿದ್ದಳು.
"ನಾನು ತಮಾಷೆ ಮಾಡ್ತಿಲ್ವೇ.  ಇನ್ನೂ ಇಬ್ಬರು ಬಂದರೂ ಇಲ್ಲಿ ಜಾಗ ಇರತ್ತೆ."  ಮಂಚದ ಮೇಲೆ ಕುಳಿತಂತೇ ಅವಳ ಕೈ ಹಿಡಿದೆಳೆದೆ.  ಧೊಪ್ಪನೆ ಕುಕ್ಕರಿಸಿದವಳು ನನ್ನನ್ನೇ ನೇರವಾಗಿ ನೋಡಿದಳು.  "ಇಬ್ರೂ ಇಲ್ಲೇ ಮಲಗೋದು ಅಂತೀಯ?"  ಪಿಸುಗುದನಿಯಲ್ಲಿ ಪ್ರಶ್ನಿಸಿದಳು.
ನಾನು ಉತ್ತರಿಸಲಿಲ್ಲ.  ಮೈಮೇಲಿದ್ದ ಜುಬ್ಬಾವನ್ನು ತಲೆಯ ಮೇಲಿಂದ ಸೆಳೆದು ಹಾಕಿ ಕುರ್ಚಿಯ ಮೇಲೆಸೆದೆ.
"ಏಯ್ ಇಲ್ಲಿ ಕೇಳೋ."  ಸಣ್ಣಗೆ ಕರೆದಳು.  ಅತ್ತ ತಿರುಗಿದೆ.  "ನಂಗೆ... ನಂಗೆ... ಅದಾಗಿಬಿಟ್ಟಿದೆ ಕಣೋ."  ನನ್ನತ್ತ ನೋಡದೇ ದನಿ ಎಳೆದು ತಪ್ಪಿತಸ್ಥಳಂತೆ ತಲೆತಗ್ಗಿಸಿದಳು.
"ಅಯ್ ತಂದ್ಲು ಸುದ್ಧೀನ!  ಮಲಗೇ ತೆಪ್ಪಗೆ."  ಹೇಳುತ್ತ ಅವಳ ಎರಡೂ ಭುಜಗಳಿಗೆ ಕೈಹಾಕಿ ಹಾಸಿಗೆಯ ಮೇಲೆ ಕೆಡವಿದೆ.  ಕೈಗಳನ್ನು ಎರಡೂ ದಿಕ್ಕಿಗೆ ವಿಶಾಲವಾಗಿ ಹರಡಿ ಪಿಳಿಪಿಳಿ ಕಣ್ಣುಬಿಟ್ಟಳು.
ನನ್ನೆದೆಯಲ್ಲಿ ಮತ್ತೊಮ್ಮೆ ನೆನಪುಗಳ ಪ್ರವಾಹ.
"ಜಾಣಮರಿ.  ಗೋಡೆ ಪಕ್ಕಕ್ಕೆ ಉರುಳಿಹೋಗು ಮತ್ತೆ."  ಮಗುವಿಗೆ ಹೇಳುವ ಹಾಗೆ ಹೇಳಿದೆ.  "ನನಗೆ ಜಾಗ ಬೇಡವಾ?"  ಛಕ್ಕನೆ ದನಿ ಎತ್ತರಿಸಿದೆ.  ಥೇಟ್ ಮಕ್ಕಳಾಟದಂತೇ ಎರಡು ಸುತ್ತು ಉರುಳಿ ಗೋಡೆ ಸೇರಿದಳು.  ಮೊನ್ನೆ ತಾನೆ ಒಗೆದು ಒಣಗಿಸಿಟ್ಟಿದ್ದ, ನುಸಿಗುಳಿಗೆಗಳ ಪರಿಮಳ ಸೂಸುತ್ತಿದ್ದ ಹೊದಿಕೆಯನ್ನು ಬೀರುವಿನಿಂದ ಹೊರತೆಗೆದೆ.  ಅದನ್ನು ಕೈಗಳಲ್ಲಿ ಹಿಡಿದಂತೇ ಮಂಚದ ಮೇಲೆ ಮಂಡಿಗಳನ್ನೂರಿ ಅವಳನ್ನು ಸಮೀಪಿಸಿದೆ.  ಬಟ್ಟಲುಗಣ್ಣುಗಳನ್ನು ಅರಳಿಸಿಕೊಂಡು ನನ್ನನ್ನೇ ನೋಡುತ್ತಿದ್ದವಳ ಮೈನ ಉದ್ದಕ್ಕೂ ಹೊದಿಕೆ ಹೊದಿಸಿದೆ.  "ಈ ಮಂಚದಲ್ಲಿ ಸೊಗಸಾದ ನಿದ್ದೆ ಬರುತ್ತೆ ರುಕ್ಕೂ.  ನೆಮ್ಮದಿಯಾಗಿ ಮಲಗು."  ಪಿಸುಗಿ ಮಂಚದಿಂದ ಕೆಳಗಿಳಿದೆ.  ಮತ್ತೆ ಅವಳತ್ತ ತಿರುಗದೇ ದೀಪ ಆರಿಸಿ ಕೋಣೆಯಿಂದ ಹೊರಬಂದು ಕತ್ತಲುಗಟ್ಟಿದ್ದ ಪ್ಯಾಸೇಜ್‌ನಲ್ಲಿ ಹೆಜ್ಜೆ ಎಳೆದೆ.  ಹಾಲ್ ಸೇರಿ ಸೋಫಾದಲ್ಲಿ ಅಂಗಾತ ಉರುಳಿದೆ.  ಕತ್ತಲಲ್ಲಿ ಕೈ ಕಣ್ಣುಗಳತ್ತ ಸರಿಯಿತು.  ಬೆರಳುಗಳಿಗೆ ತೇವ ಹತ್ತಿತು.
ರೆಪ್ಪೆಗಳನ್ನು ಬಿಗಿಯಾಗಿ ಮುಚ್ಚಿದೆ.
ನನ್ನದಲ್ಲದ ಹಾದಿಯಲ್ಲಿ ಬಹುದೂರ ಸಾಗಿಬಂದಿರುವಂತೆನಿಸಿತು.

--***೦೦೦***--