ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, December 29, 2011

ಲೇಖನ: ಮಿಥ್ಯ, ಸತ್ಯಗಳ ನಡುವೆ...ಕಥೆ - ಒಂದು
ಮನುಷ್ಯನನ್ನು social animal, political animal ಹೀಗೆ ಎಂತೆಂಥದೋ animal' ಎಂದು ಹೆಸರಿಸಿದ ಕೀರ್ತಿ ಅರಿಸ್ಟಾಟಲ್‌ಗೆ ಸಲ್ಲುತ್ತದೆ.   ಈ ಬಗ್ಗೆ ಒಂದು ಕಥೆ ಇದೆ.  ಹದಿನೆಂಟು - ಇಪ್ಪತ್ತು ವರ್ಷಗಳ ಹಿಂದೆ ನಾನೊಂದು ಕಾರ್ಯಕಮ್ಮಟದಲ್ಲಿ ಭಾಗವಹಿಸುತ್ತಿದ್ದಾಗ ಅಲ್ಲಿಗೆ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ವಿದ್ವಾಂಸರೊಬ್ಬರು ಹೇಳಿದ್ದು.
ಮನುಷ್ಯನನ್ನು ಏನೆಂದು ಹೆಸರಿಸುವುದು? ಎಂಬ ಬಗ್ಗೆ ಒಂದು ದಿನ ಅರಿಸ್ಟಾಟಲ್ ತನ್ನ ಲಿಸಿಯಂನಲ್ಲಿ ವಿದ್ಯಾರ್ಥಿಗಳೊಡನೆ ಚರ್ಚಿಸುತ್ತಿದ್ದನಂತೆ.  ಮನುಷ್ಯನನ್ನು ಮಿಗ ಎನ್ನುವುದಾಗಲೀ ಖಗ ಎನ್ನುವುದಾಗಲೀ ಸಾಧ್ಯವಿಲ್ಲ.  ಮೃಗಗಳು ನಾಲ್ಕು ಕಾಲಿನಲ್ಲಿ ನಡೆಯುತ್ತವೆಯಾದರೆ ಮನುಷ್ಯ ಎರಡೇ ಕಾಲಿನಲ್ಲಿ ನಡೆಯುತ್ತಾನೆ.  ಹೀಗಾಗಿ ಮನುಷ್ಯನನ್ನು ಮೃಗ ಎನ್ನಲಾಗದು.  ಹಾಗೆಯೇ ಪಕ್ಷಿಗಳಂತೆ ಎರಡೇ ಕಾಲುಗಳಲ್ಲಿ ನಡೆಯುವುದರಿಂದಷ್ಟೇ ಮನುಷ್ಯನನ್ನು ಪಕ್ಷಿ ಎನ್ನಲಾದೀತೇಇಲ್ಲ, ಅದೂ ಸಾಧ್ಯವಿಲ್ಲ.  ಯಾಕೆಂದರೆ ಮನುಷ್ಯನಿಗೆ ಪಕ್ಷಿಗಳಿಗಿರುವಂತೆ ರೆಕ್ಕೆ ಪುಕ್ಕಗಳಿಲ್ಲ.  ಹಾಗಿದ್ದರೆ ಮನುಷ್ಯನನ್ನು ಏನೆಂದು ಕರೆಯುವುದುದಿನಪೂರ್ತಿ ಚರ್ಚೆ ನಡೆಯಿತು.  ಸಂಜೆಯ ಹೊತ್ತಿಗೆ ಗುರು ಶಿಷ್ಯರುಗಳು ಒಂದು ತೀರ್ಮಾನಕ್ಕೆ ಬಂದರು.  ಮನುಷ್ಯ ಪಕ್ಷಿಗಳಂತೆ ಎರಡೇ ಕಾಲುಗಳಲ್ಲಿ ನಡೆಯುವುದರಿಂದ ಹಾಗೂ ಮೃಗಗಳಂತೆ ರೆಕ್ಕೆಪುಕ್ಕಗಳನ್ನು ಹೊಂದಿಲ್ಲದ ಕಾರಣ ಅವನನ್ನು "featherless biped" ಅಂದರೆ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿ ಎಂದು ಕರೆಯುವುದು ಸೂಕ್ತ!  ಮನುಷ್ಯಜಾತಿಗೆ ಕೊನೆಗೂ ಒಂದು ಹಣೆಪಟ್ಟಿಯನ್ನು ಹಚ್ಚಿದ ಯಶಸ್ಸಿನಲ್ಲಿ ಗುರುಶಿಷ್ಯರು ಬೀಗಿದರು.
ನಮ್ಮ ಗಾಂಪರೊಡೆಯರು ಮತ್ತವರ ಶಿಷ್ಯರ ಕಥೆಯಂತಿದೆಯಲ್ಲವೇಇರಲಿ, ಮುಂದೆ ಕೇಳಿ.  ಕಥೆ ಬೇರೆಯೇ ದಾರಿ ಹಿಡಿಯುತ್ತದೆ.
ಮನುಷ್ಯನನ್ನು ಕೇವಲ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿ ಎಂದು ಕರೆದು ತಿಪ್ಪೆ ಸಾರಿಸಿ ಕೈ ತೊಳೆದುಕೊಂಡುಬಿಡುವುದು ಒಬ್ಬ ಶಿಷ್ಯನಿಗೆ ಸರಿಕಾಣಲಿಲ್ಲ.  ಆದರೆ ಗುರುವಿಗೆ ಹೇಳುವುದು ಹೇಗೆನಿಮ್ಮ ನಿರ್ಣಯ ತಪ್ಪು ಎಂದು ಗುರುವಿಗೆ (ಬೇಸರವಾಗದಂತೆ) ಅರಿವು ಮಾಡಿಸುವುದು ಹೇಗೆ?
ರಾತ್ರಿಯೆಲ್ಲಾ ಯೋಚಿಸಿದ ಅವನು ಬೆಳಗಿನ ಹೊತ್ತಿಗೆ ಒಂದು ಯೋಜನೆ ರೂಪಿಸಿದ.  ಒಂದು (ಬಡಪಾಯಿ) ಕೋಳಿಹುಂಜವನ್ನು ಹಿಡಿದು ಅದರ ರೆಕ್ಕೆಪುಕ್ಕವನ್ನೆಲ್ಲಾ ಕಿತ್ತುಹಾಕಿದ.  ಅದನ್ನು ಕಂಕುಳಲ್ಲಿ ಇರುಕಿಕೊಂಡು ಗುರುವಿನ ಕೋಣೆಗೆ ಹೋಗಿ ಮೇಜಿನ ಮೇಲಿಟ್ಟ.  ಗುರುವಿಗೆ ಗಾಬರಿ.  ಬೋಳುಬೋಳು ಕೋಳಿಹುಂಜವನ್ನೇ ನೋಡುತ್ತ "ಇದೇನಯ್ಯ ಇದೂ?" ಎಂದು ಒದರಿದ.
"ನಿಮ್ಮ ಮನುಷ್ಯ."  ಶಿಷ್ಯ ತಣ್ಣಗೆ ಹೇಳಿದ.  ಗುರು ಕಣ್ಣುಕಣ್ಣು ಬಿಟ್ಟ.
"ಇದಕ್ಕೆ ರೆಕ್ಕೆಪುಕ್ಕಗಳಿಲ್ಲ.  ಎರಡು ಕಾಲುಗಳಲ್ಲಿ ನಡೆದಾಡುತ್ತದೆ.  This is a featherless biped, YOUR MAN". ಶಿಷ್ಯ ವಿವರಿಸಿದ.
ಗುರುವಿಗೆ ಜ್ಞಾನೋದಯವಾಯಿತು.
ಆನಂತರ ಯೋಚನೆಗೆ ಬಿದ್ದ ಅರಿಸ್ಟಾಟಿಲ್ ಕೊನೆಗೆ Man is a Thinking Animal ಎಂಬ ತೀರ್ಮಾನಕ್ಕೆ ಬಂದ(ನಂತೆ).

ವಾಸ್ತವ - ಒಂದು
ಅರಿಸ್ಟಾಟಿಲ್‌ನ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಂಡಿದ್ದಾಗಿದೆ, ಕೆಲವು ಪ್ರಭುತ್ವಗಳ ಹೊರತಾಗಿ.  ಅವು ತಮ್ಮ ಪ್ರಜೆಗಳಷ್ಟೇ ಅಲ್ಲ, ವಿಶ್ವದ ಮನುಷ್ಯರೆಲ್ಲರೂ ಕೇವಲ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿಗಳು ಎಂದು ಭಾವಿಸಿ ಕೋಳಿಗಳಿಗೆ ಹಾಕುವಂತೇ ಹುಳುಹುಪ್ಪಟೆಯಂತಹ ಕೊಳಕುಗಳನ್ನು ಹೊಟ್ಟೆತುಂಬಾ ತಿನ್ನಿಸುತ್ತವೆ.  ತಲೆಗೂ ತುಂಬುತ್ತವೆ.
ಶೀತಲ ಸಮರ ಜಗತ್ತನ್ನು ಬಿಸಿಯಾಗಿಟ್ಟಿದ್ದ ಕಾಲದಲ್ಲಿ ನಾನು ವಿದ್ಯಾರ್ಥಿ.  ಎಪ್ಪತ್ತರ ದಶಕದ ಉತ್ತರಾರ್ಧ ಅದು.  ನಾನು ಪಿಯುಸಿಯಲ್ಲಿದ್ದೆ.  ಬಾಲ್ಯದಿಂದಲೂ ರೇಡಿಯೋವನ್ನು ಕಿವಿಗೆ ಹಚ್ಚಿ ಕೂರುವ ಹವ್ಯಾಸವಿದ್ದ ನನಗೆ ಶಾರ್ಟ್ ವೇವ್‌ನಲ್ಲಿ ಅಡಿಗಡಿಗೆ ಎದುರಾಗುತ್ತಿದ್ದ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಮಾಸ್ಕೋ, ರೇಡಿಯೋ ನೆದರ್ಲ್ಯಾಂಡ್‌ಗಳ ಸೆಳೆತ ಅಪರಿಮಿತ.  ಬಿಡುವಿನ ದಿನಗಳಲ್ಲಿ ಬೆಳಿಗ್ಗೆ ಆರು ಇಪ್ಪತ್ತಕ್ಕೆ ಬಿಬಿಸಿಯ ಹಿಂದಿ ಕಾರ್ಯಕ್ರಮ, ಅದರಲ್ಲಿನ ವಾರ್ತೆಗಳು, ವಾರ್ತಾ ವಿಶ್ಲೇಷಣೆಯ "ವಿಶ್ವಭಾರತಿ" ಅಂಕಣದೊಂದಿಗೆ ನನ್ನ ರೇಡಿಯೋ ಸಾಂಗತ್ಯ ಆರಂಭವಾದರೆ ಅದು ಮುಕ್ತಾಯವಾಗುತ್ತಿದ್ದುದು ರೇಡಿಯೋ ಪಾಕಿಸ್ತಾನ್‌ನ ರಾತ್ರಿ ಹತ್ತೂವರೆಯ "ಆಲಮಿ ಸ್ಪೋರ್ಟ್ಸ್ ರೌಂಡ್ ಅಪ್" ಉರ್ದು ಕಾರ್ಯಕ್ರಮದೊಂದಿಗೆ.  ರೇಡಿಯೋ ಮಾಸ್ಕೋದ ಕನ್ನಡ ಕಾರ್ಯಕ್ರಮಗಳ ಬಗ್ಗೆ ಅರಿತೊಡನೆ ಅದಕ್ಕೂ ಅಂಟಿಕೊಂಡೆ.  ಅವಕಾಶ ಸಿಕ್ಕಿದಾಗೆಲ್ಲಾ ಸಂಜೆ ನಾಲ್ಕೂವರೆಯಿಂದ ಐದು ಅಥವಾ ಆರೂವರೆಯಿಂದ ಏಳುಗಂಟೆಯವರೆಗೆ ದೂರದ ಮಾಸ್ಕೋದಿಂದ ತೇಲಿಬರುತ್ತಿದ್ದ ಇರೀನಾ ತ್ಯೂರಿನಾಳ ಮುದ್ದುಮುದ್ದಾದ ಕನ್ನಡ ಮಾತುಗಳು ಮತ್ತು ನಮ್ಮ ಕೊಳ್ಳೇಗಾಲದ ಹತ್ತಿರದ ಮುಳ್ಳೂರಿನವರೇ ಅದ ಶ್ರೀ ಮಹದೇವಯ್ಯನವರ ಆಕರ್ಷಕ ದನಿಯನ್ನು ಕೇಳುತ್ತಿದ್ದೆ.  ಅವರು ಬಿಂಬಿಸುತ್ತಿದ್ದ ಭೂಲೋಕದ ಸ್ವರ್ಗ ಸೋವಿಯೆತ್ ಯೂನಿಯನ್‌ನ ಚಿತ್ರಗಳನ್ನು ಮನದಲ್ಲಿ ಅಚ್ಚೊತ್ತಿಕೊಳ್ಳುತ್ತಿದ್ದೆ.  ನಮ್ಮ ದೇಶದ ಬಗ್ಗೆ ಸೋವಿಯೆತ್ ಆಳರಸರಿಗಿದ್ದ ಅಪರಿಮಿತ ಪ್ರೀತಿಗೆ ನನ್ನ ಕಣ್ಣುಗಳು ತೇವವಾಗುತ್ತಿದ್ದವು.  ಆ ಮಹಾನ್ ಸಮತಾವಾದಿ ನಾಡಿನ ಅದ್ಭುತ ಆರ್ಥಿಕ ಪ್ರಗತಿ, ನಿರುದ್ಯೋಗವೇ ಇಲ್ಲದ, ಎಲ್ಲರಿಗೂ ಎಲ್ಲವೂ ಸಿಗುತ್ತಿದ್ದ ಕನಸಿನ ರಾಜ್ಯದ ಬಗ್ಗೆ ದಿನವೂ ಕೇಳುತ್ತಾ ನಮ್ಮ ದೇಶದಲ್ಲಿ ಅಂತಹ ದಿನಗಳು ಯಾವಾಗ ಬರುತ್ತವೆ ಎಂದು ಕನಸು ಕಾಣುತ್ತಾ... ಕಾಣುತ್ತಾ... ಕಮ್ಯೂನಿಸ್ಟನೇ ಆಗಿಬಿಟ್ಟೆ...
ರೇಡಿಯೋ ಮಾಸ್ಕೋಗೆ ಪತ್ರ ಬರೆದೆ.  ಅಲ್ಲಿಂದ ಅತ್ಯಾಕರ್ಷಕ ಅಂಚೆಚೀಟಿ ಅಂಟಿಸಿದ್ದ ಲಕೋಟೆಯಲ್ಲಿ ಉತ್ತರ ಬಂದಾಗ ನಾನು ಅಕ್ಷರಶಃ ಕುಣಿದಾಡಿಬಿಟ್ಟೆ.  ಪತ್ರಸರಣಿ ಆರಂಭವಾಯಿತು.  ಸುಂದರ ವ್ಯೂ ಕಾರ್ಡ್‌ಗಳು, ಪುಸ್ತಕಗಳು, ಕ್ಯಾಲೆಂಡರ್‌ಗಳು, ಹೊಚ್ಚಹೊಸ ಅಂಚೆಚೀಟಿಗಳು ಒಂದಾದ ಮೇಲೊಂದು ಬರತೊಡಗಿ ನನ್ನನ್ನು ಸಮೃದ್ದಗೊಳಿಸತೊಡಗಿದವು.
ಎಲ್ಲ ಕನಸುಗಳೂ ಕೊನೆಯಾಗುವಂತೆ ನನ್ನೀ ಯುಟೋಪಿಯಾವೂ ಒಂದು ದಿನ ಕೊನೆಯಾಯಿತು.
೧೯೭೯ರ ಉತ್ತರಾರ್ಧದ ಒಂದು ಸಂಜೆ.  ಆಗ ನಾನು ದ್ವಿತೀಯ ಕಲಾಸ್ನಾತಕ.  ಆ ದಿನಗಳಲ್ಲಿ ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್‌ನಿಂದ ಪ್ರಕಟವಾಗುತ್ತಿದ್ದ "ಪ್ರಜಾಪ್ರಭುತ್ವ" ವಾರಪತ್ರಿಕೆಯಲ್ಲಿ ಒಂದು ಲೇಖನ ನನ್ನನ್ನು ಕಂಗೆಡಿಸಿಬಿಟ್ಟಿತು.  ಮಾಸ್ಕೋದಲ್ಲಿ ವಿದ್ಯಾರ್ಥಿಯಾಗಿದ್ದ ಬಾಬು ಕೊಪ್ಲೆ ಎಂಬ ಭಾರತೀಯ ಯುವಕನನ್ನು ಸೋವಿಯೆತ್ ಗುಪ್ತಚರ ಸಂಸ್ಥೆ ಕೆಜಿಬಿ ಅಪಹರಿಸಿ ಕೊಂದ ಸುದ್ದಿ ಅದಾಗಿತ್ತು.  ನನ್ನ ಭಾರತವನ್ನು ಅಪರಿಮಿತವಾಗಿ ಪ್ರೀತಿಸುವ ರಶಿಯನ್ನರು ಹೀಗೇಕೆ ಮಾಡಿದರು ಎಂದು ಚಿಂತಿಸಿದೆ.  ಈ ಸುದ್ದಿ ನಿಜವೇ ಎಂದು ನನ್ನ ರೇಡಿಯೋ ಮಾಸ್ಕೋದ ಗೆಳೆಯರಿಗೆ ಪತ್ರ ಬರೆದೆ.  ದಿನಗಳು, ವಾರಗಳು, ತಿಂಗಳುಗಳು ಗತಿಸಿದವು.  ಉತ್ತರ ಬರಲಿಲ್ಲ.  ಹಿಂದೆಲ್ಲಾ ಸೋವಿಯೆತ್ ಸ್ವರ್ಗದ ಬಗ್ಗೆ ನನ್ನೆಲ್ಲಾ ಪ್ರಶ್ನೆಗಳಿಗೆ ತಮ್ಮ ಕಾರ್ಯಕ್ರಮಗಳಲ್ಲಿ, ಪತ್ರಗಳಲ್ಲಿ ತಪ್ಪದೇ ಉತ್ತರಿಸುತ್ತಿದ್ದ ನನ್ನ ರೇಡಿಯೋ ಮಾಸ್ಕೋ ಗೆಳೆಯರು ಈಗ ಮೌನವಾಗಿದ್ದರು.  ಅದೇ ಸಮಯದಲ್ಲಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಕೆಜಿಬಿಯ ತರಬೇತಿ ಸಂಸ್ಥೆ ಗೈಜಾಯಿನಾ ಬಗ್ಗೆ ಓದಿ ಅದರ ಬಗ್ಗೆ ನನ್ನ ಮಾಸ್ಕೋ ಗೆಳೆಯರಿಗೆ ಮತ್ತೊಂದು ಪತ್ರ ಬರೆದೆ.  ಉತ್ತರ ಬರಲಿಲ್ಲ.
ಅದೆಷ್ಟೋ ಕಾಲದ ನಂತರ ಪತ್ರ ಬಂದಾಗ ಅದರಲ್ಲಿದ್ದದ್ದು ಯಾವ ವಿಶೇಷವೂ ಇಲ್ಲದ ಮೂರುನಾಲ್ಕು ಸಾಲುಗಳು, ಜತೆಗೆ ನನಗೆ ಇಷ್ಟವಾದ ಅಂಚೆಚೀಟಿಗಳು ಮತ್ತು ವ್ಯೂ ಕಾರ್ಡ್‌ಗಳು.  ನನ್ನ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ...
ನನಗೆ ಬೇಕಾದ ಉತ್ತರಗಳಿಗಾಗಿ ನಾನು ಬೇರೆಡೆ ಹುಡುಕಾಡತೊಡಗಿದೆ.  ಆಗ ಸಿಕ್ಕಿದ ಉತ್ತರಗಳು ನನ್ನನ್ನು ದಿಗ್ಘ್ರಮೆಗೊಳಿಸಿದವು...
ಅದಾದ ಕೆಲವೇ ವರ್ಷಗಳಲ್ಲಿ, ತನ್ನ ಮಾಧ್ಯಮಗಳ ಮೂಲಕ ಮಾಸ್ಕೋ ಹೊರಜಗತ್ತಿಗೆ ನೀಡುತ್ತಿರುವ ಸುದ್ದಿಗಳೆಲ್ಲಾ ಬೊಗಳೆ, ತನ್ನ ಆರ್ಥಿಕ ಪ್ರಗತಿಯ ಬಗ್ಗೆ ನೀಡುತ್ತಿರುವ ಅಂಕಿಅಂಶಗಳೆಲ್ಲಾ ಸುಳ್ಳಿನ ಕಂತೆ, ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಆಹಾರದ ಕೊರತೆ ದಿಕ್ಕೆಡಿಸುವ ಮಟ್ಟದಲ್ಲಿದೆ ಎಂದು ರಶಿಯನ್ನನೇ ಅದ ಅರ್ಥಶಾಸ್ತ್ರಜ್ಞ ಅನತೋಲಿ ಶತಾಲಿನ್ ಆಧಾರಸಮೇತ ಸಾರಿದ.  ಅವನ ಲೇಖನಗಳನ್ನು ಗೋರ್ಬಚೆವ್‌ರ ಕ್ರೆಮ್ಲಿನ್ ನಿರಾಕರಿಸಲಿಲ್ಲ.  ಆಗ ನನ್ನ ಅರಿವು ವಿಸ್ತಾರವಾದಂತೆನಿಸಿತು...  "ಹೊರಜಗತ್ತಿಗೆ ಸುಳ್ಳು ಹೇಳುವುದರಿಂದ ನಮ್ಮ ನೋವುಗಳೇನೂ ನಿವಾರಣೆಯಾಗುವುದಿಲ್ಲ.  ನಮ್ಮ ಬದುಕು ಸುಧಾರಿಸಬೇಕಾದರೆ ನಾವು ವಾಸ್ತವಗಳನ್ನು ಒಪ್ಪಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದೊಂದೇ ಮಾರ್ಗ" ಎಂದು ಆ ಮಹಾನ್ ನಾಯಕ ಘೋಷಿಸಿದಾಗ ನನ್ನ ಜಗತ್ತು ವಿಶಾಲವಾಯಿತು.
ನನ್ನ ಟ್ರ್ಯಾನ್ಸಿಸ್ಟರ್‌ನ ಶಾರ್ಟ್ ವೇವ್‌ನ ಎಲ್ಲ ಮೀಟರ್ ಬ್ಯಾಂಡ್‌ಗಳಲ್ಲೂ ಕಿವಿ ಕಿತ್ತುಹೋಗುವಂತೆ ಅರಚುತ್ತಿದ್ದ ರೇಡಿಯೋ ಮಾಸ್ಕೋ, ರೇಡಿಯೋ ತಾಷ್ಕೆಂಟ್‌ಗಳು ನಂತರದ ದಿನಗಳಲ್ಲಿ ಗಪ್ಪನೆ ಬಾಯಿ ಮುಚ್ಚಿಕೊಂಡವು.  ಕನ್ನಡ ಕಾರ್ಯಕ್ರಮಗಳು ಇತಿಹಾಸವಾದವು.  ಮಹದೇವಯ್ಯ ಭಾರತಕ್ಕೆ ಹಿಂತಿರುಗಿದರು ಅನಿಸುತ್ತದೆ.  ಇರೀನಾ ತ್ಯೂರಿನಾಳ ಮುದ್ದುಕೊರಳು ಮತ್ತೆ ನನ್ನ ಕಿವಿಗೆ ಬೀಳಲಿಲ್ಲ...
ಸುಳ್ಳಿನ ಮೇಲೆ ಕಟ್ಟಿದ್ದ ಸೋವಿಯೆತ್ ಗೋಪುರ ಕೆಲವೇ ವರ್ಷಗಳಲ್ಲಿ ಕುಸಿದು ಬಿತ್ತು.

ವಾಸ್ತವ - ಎರಡು
ಶೀತಲ ಸಮರ ಮುಕ್ತಾಯವಾದ ಮೇಲೆ propaganda ಅರ್ಥಹೀನಗೊಂಡು ಮಹತ್ವ ಕಳೆದುಕೊಳ್ಳುತ್ತಿದ್ದಂತೇ ವಾಯ್ಸ್ ಆಫ್ ಅಮೆರಿಕಾ ಸಹಾ ತನ್ನ ದನಿಯನ್ನು ಗಣನೀಯವಾಗಿ ತಗ್ಗಿಸಿಬಿಟ್ಟಿತು.  ಈ ದಿನಗಳಲ್ಲಿ ಬಿಬಿಸಿ ಸಹಾ ಮೊದಲಿನಷ್ಟು ಜೋರಾಗಿ' ಕೇಳಿಸುವುದಿಲ್ಲ.  ರೇಡಿಯೋ ಮಾಸ್ಕೋ ಅಡ್ರೆಸ್ಸೇ ಇಲ್ಲ.
          ಇವೆಲ್ಲವುಗಳಿಗೆ ಬದಲಾಗಿ ಶಾರ್ಟ್ ವೇವ್‌ನ ಎಲ್ಲ ಮೀಟರ್ ಬ್ಯಾಂಡ್‌ಗಳಲ್ಲೂ ಬೇರೊಂದು ದನಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕರ್ಕಶವಾಗಿ ಮೊಳಗತೊಡಗಿದೆ.  ಇಂಗ್ಲಿಷ್ ಜತೆ ಹಿಂದಿ ತಮಿಳು ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಅದು ಬಾಯಿ ಬಡಿದುಕೊಳ್ಳುತ್ತಿದೆ.  ಅದು ಚೈನಾ ರೇಡಿಯೋ ಇಂಟರ್‌ನ್ಯಾಷನಲ್.
          ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ರೇಡಿಯೋ ಮಾಸ್ಕೋಗಿದ್ದ ಬಾಯಿಗಿಂತಲೂ ಈ ಚೈನಾ ರೇಡಿಯೋದ ಬಾಯಿ ಅಗಲವಾಗಿದೆ, ದನಿ ಜೋರಾಗಿದೆ.  ಚೈನಾದ ಸಮತಾವಾದಿ ಸ್ವರ್ಗದ ಸುಂದರ ಚಿತ್ರಣಗಳು ಅಲ್ಲಿ ಮಣಗಟ್ಟಲೆ ದೊರೆಯುತ್ತವೆ.  ಚೀನೀಯರು ಟಿಬೆಟ್‌ನಲ್ಲಿ ಮಾಡುತ್ತಿರುವ ಒಳ್ಳೆಯ ಕಾರ್ಯಗಳು, ಅದನ್ನು ವಿರೋಧಿಸಿ ಕೆಲವು ದೇಶದ್ರೋಹಿ ಟಿಬೆಟಿಯನ್ ಪುಂಡರು ಚೀನೀ ಪೋಲೀಸರ ಮೇಲೆ ಹಲ್ಲೆ ಮಾಡಿ ಅವರನ್ನು ಕೊಂದದ್ದು, ಶಾಂತ ಟಿಬೆಟ್‌ನಲ್ಲಿ ಅಶಾಂತಿ ಉಂಟುಮಾಡಿದ್ದು- ಇವೆಲ್ಲವನ್ನೂ ಅಲ್ಲಿ ಕೇಳಿ ತಿಳಿದುಕೊಳ್ಳಬಹುದು.  ನಮ್ಮ ಇಂಗ್ಲಿಷ್ ದೈನಿಕವೊಂದು ಈ ಸುದ್ದಿಗಳಿಗೆ ತುಂಬಾ ಗೌರವ ಕೊಟ್ಟು ಪ್ರಕಟಿಸುತ್ತದೆ.  ಅದರ ಸಂಪಾದಕರು ಆಗಾಗ ಚೈನಾಗೆ ಹೋಗಿ ಬರುತ್ತಾರೆ.  ಅಲ್ಲಿಂದ ಬಂದ ಮೇಲೆ ಅಲ್ಲಿ ತಾವು ಕಂಡ ಸತ್ಯಗಳನ್ನು ತಮ್ಮ ಪತ್ರಿಕೆಯಲ್ಲಿ ಮರೆಯದೇ ಬರೆಯುತ್ತಾರೆ.  ತಮ್ಮ ಚೀನೀ ಭೇಟಿಗಳಿಗೆ ಅವರು ತಮ್ಮ ಸ್ವಂತ ಹಣವನ್ನೇನೂ ಖರ್ಚು ಮಾಡುವುದಿಲ್ಲ ಎಂಬ ಗುಸುಗುಸು, ಪಿಸುಪಿಸು.  ಏನೋಪ್ಪ, ನನಗೆ ಅದೇನೂ ಅರ್ಥವಾಗುವುದಿಲ್ಲ.
ಆದರೆ ಈ ಚೈನೀಸ್ ರೇಡಿಯೋ ಕೇಳಲು ಯಾಕೋ ನನಗೆ ಉತ್ಸಾಹವೆನಿಸುತ್ತಿಲ್ಲ.  ಹಿಂದೆ ಬಾಲ್ಯದಲ್ಲಿ ರಾತ್ರಿಯ ನೀರವತೆಯಲ್ಲಿ ನಾನು ಮೈಮರೆತು ಆಲಿಸುತ್ತಿದ್ದ ಇದೇ ಚೀನೀ ರೇಡಿಯೋ ಕೇಂದ್ರಗಳಿಂದ ತೇಲಿಬರುತ್ತಿದ್ದ ಸುಶ್ರಾವ್ಯ ವಾದ್ಯಸಂಗೀತಗಳಷ್ಟು ಈ ವಾರ್ತೆಗಳು ಆಕರ್ಷಕವೆನಿಸುತ್ತಿಲ್ಲ...  ನನ್ನ ಟ್ರ್ಯಾನ್ಸಿಸ್ಟರ್‌ನಲ್ಲಿ ಬೇಕಾದ ಕೇಂದ್ರಕ್ಕೆ ಟ್ಯೂನ್ ಮಾಡುವಾಗ ಮತ್ತೆಮತ್ತೆ ಅಡ್ಡ ಬರುವ ಈ ಚೀನೀ ರೇಡಿಯೋ ಬೇಡಬೇಡವೆಂದರೂ ನನಗೆ ರೇಡಿಯೋ ಮಾಸ್ಕೋವನ್ನು ನೆನಪಿಸಿಬಿಡುತ್ತದೆ...

ಕಥೆ - ಎರಡು
ಮೂರು-ನಾಲ್ಕು ವರ್ಷಗಳ ಹಿಂದೆ ರಾಮಕೃಷ್ಣ ಮಠದ ಸಂನ್ಯಾಸಿಯೊಬ್ಬರು ಹೇಳಿದ ಕಥೆ ಇದು.  ಈ ಕಥೆಯಲ್ಲೂ ಒಂದು ಕೋಳಿ ಇದೆ.  ಹುಂಜವೋ ಹೇಂಟೆಯೋ ನೆನಪಾಗುತ್ತಿಲ್ಲ.  ಸಧ್ಯಕ್ಕೆ ಕೋಳಿ ಎಂದು ನ್ಯೂಟ್ರಲ್ ಜೆಂಡರ್‌ನಲ್ಲೇ ಕರೆಯೋಣ ಬಿಡಿ.  ತೊಂದರೆಯೇನಿಲ್ಲ.  ಆ ಮೆಲುಮಾತಿನ ಸಂನ್ಯಾಸಿ ಚಂದದ ಇಂಗ್ಲಿಷ್‌ನಲ್ಲಿ ಕಥೆ ಹೇಳಿ ಮುಗಿಸುತ್ತಿದ್ದಂತೇ ನನಗೆ ತಡೆಯಲಾರದಷ್ಟು ನಗು ಬಂದುಬಿಟ್ಟಿತ್ತು.
ಕೋಳಿಗೆ ಹಾರುವ ಇಚ್ಚೆ.  ಒಂದು ದಿನ ನವಿಲೊಂದು ಹಾರಿದ್ದನ್ನು ಕಂಡ ಮೇಲಂತೋ ಅದಕ್ಕೆ ತಡೇಯಲಾಗಲಿಲ್ಲ.  "ನೀನು ನನಗಿಂತಲೂ ದಢೂತಿ.  ಅದು ಹೇಗೆ ಹಾರಾಡುತ್ತಿ?" ಎಂದು ಕೇಳಿಯೇ ಬಿಟ್ಟಿತು.  "ಒಂಚೂರು ದನದ ಸಗಣಿ ತಿಂದೆ ಅಷ್ಟೇ.  ಹಾರುವ ಸಾಮರ್ಥ್ಯ ಬಂದುಬಿಟ್ಟಿತು."  ನವಿಲು ನಗುತ್ತಾ ಉತ್ತರಿಸಿ ವೈಯಾರದಿಂದ ಹಾರಿಹೋಯಿತು.
ಹಾರುವ ಮರ್ಮ ತಿಳಿದದ್ದೇ ಕೋಳಿ ಹತ್ತಿರದಲ್ಲೇ ಕಂಡ ಸಗಣಿ ಗುಪ್ಪೆಯತ್ತ ಓಡಿತುಆತುರಾತುರವಾಗಿ ಹಿಡಿ ಸಗಣಿ ಮುಕ್ಕಿತು, ರೆಕ್ಕೆ ಬಿಚ್ಚಿತು.  ಆಶ್ಚರ್ಯ!  ನವಿಲು ಹೇಳಿದ್ದು ನಿಜ.  ಕೋಳಿಗೆ ಹಾರುವ ಸಾಮರ್ಥ್ಯ ಬಂದುಬಿಟ್ಟಿತ್ತು.  ಖುಷಿಯಾಗಿ ಹಾರಿದ ಕೋಳಿ ಮರದ ರೆಂಬೆಯೊಂದರ ಮೇಲೆ ಕೂತು ದಿಕ್ಕುದಿಕ್ಕಿಗೆ ಕೇಳುವಂತೆ ವಿಜಯದ ಕೇಕೆ ಹಾಕಿತು.
ಬಂದೂಕು ಹಿಡಿದು ಹೋಗುತ್ತಿದ್ದ ಬೇಟೆಗಾರನೊಬ್ಬನಿಗೆ ನಮ್ಮ ಈ ಕೋಳಿಯ ವಿಜಯದ ಅಟ್ಟಹಾಸ ಕಿವಿಗೆ ಬಿದ್ದು ಅವನ ಕಣ್ಣು ಮರದ ಮೇಲೆ ಕುಳಿತಿದ್ದ ಅದರ ಮೇಲೆ ಬಿತ್ತು.  ಅರೆ!  ಗುಂಡುಗುಂಡು ಪೊಗದಸ್ತು ರೋಲಿ-ಪೋಲಿ ಕೋಳಿ!  ಬಾಯಲ್ಲಿ ನೀರೂರಿತು.  ಬಂದೂಕನ್ನೆತ್ತಿ ಗುರಿಯಿಟ್ಟ.  ಕೋಳಿಗೆ ಗಾಬರಿ.  ಏನು ಮಾಡಲೂ ತೋಚಲಿಲ್ಲ.  ಅಭ್ಯಾಸವಿಲ್ಲದ್ದರಿಂದ ಹಾರಬೇಕೆಂದೂ ಹೊಳೆಯಲಿಲ್ಲ...
ಬಂದೂಕಿನಿಂದ ಗುಂಡು ಹಾರಿತು.  ಕೋಳಿ ಧೊಪ್ಪನೆ ಕೆಳಗೆ ಬಿತ್ತು.  ಸಗಣಿಯನ್ನು ನಂಬಿದ್ದಕ್ಕೆ...
Moral of the story: You can not stay on top for long by just bullshitting!

Friday, December 23, 2011

ಅತ್ಯಂತ ಪುಟ್ಟ ಕಥೆ: ಚರ


ಬೆಳಗಾಯಿತು.

Monday, December 12, 2011

ದೆಹಲಿ: ರಾಜಧಾನಿಗೆ ಇಂದಿಗೆ ನೂರು ವರ್ಷ


"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ.  ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ...  ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆದು ನನ್ನತ್ತ ಮುಗುಳ್ನಗತೊಡಗಿತ್ತು.  ಆ ಮುಗುಳ್ನಗೆಗೂ, ಮೂವತ್ತೇಳು ವರ್ಷಗಳ ಹಿಂದೆ ಎಲ್ಲವನ್ನೂ ಎರಡು ಹೆಣ್ಣುಮಕ್ಕಳನ್ನೂ ಸಹಾ ಕಳೆದುಕೊಂಡು ಜೀವ ಮಾತ್ರ ಉಳಿಸಿಕೊಂಡು ಲಾಹೋರಿನಿಂದ ಓಡಿ ಅಮೃತಸರ ಸೇರಿದಾಗ ಮಾಜೀ ನನ್ನೆಡೆ ಬೀರಿದ ಮುಗುಳ್ನಗೆಗೂ ಅದೆಂತಹ ಸಾಮ್ಯತೆ ಇತ್ತು ಎಂದು ನನಗೆ ಈಗಲೂ ಅಚ್ಚರಿಯಾಗುತ್ತದೆ.  ನನ್ನ ತಾಯಿಯಂತೇ ದೆಹಲಿಯೂ ಸಹಾ ಎಂದು ನನಗೆ ಎಷ್ಟೋ ಸಲ ಅನಿಸುತ್ತದೆ.  ಅದೆಷ್ಟೇ ಹಾನಿಯಾಗಲೀ, ಇದ್ದುದೆಲ್ಲವೂ ಲೂಟಿಯಾಗಲಿ, ಜೀವವೊಂದು ಉಳಿದರೆ ಸಾಕು, ದೆಹಲಿ ಹಾಗೂ ಮಾಜೀ ಮತ್ತೆ ಮುಗುಳ್ನಗತೊಡಗುತ್ತಾರೆ.  ಆರು ಶತಮಾನಗಳ ಹಿಂದೆ ಆ ಕುಂಟ ಕಿರಾತಕ ತೈಮೂರ್ ಇದೇ ದೆಹಲಿಯನ್ನು ಲೂಟಿಮಾಡಿ ಬೆಂಕಿ ಹಚ್ಚಿದ್ದ.  ಅವನು ಅತ್ತ ಹೋದದ್ದೇ ದೆಹಲಿ ಕಣ್ಣು ತೆರೆದು ಮೇಲೆದ್ದಿತ್ತು.  ಮತ್ತೆ... ಮುನ್ನೂರು ವರ್ಷಗಳೂ ಆಗಿಲ್ಲ, ಆ ನಾದಿರ್ ಷಾ ಇಡೀ ಊರನ್ನು ಸ್ಮಶಾನವಾಗಿಸಿ ಕೊಹಿನೂರನ್ನೂ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ.  ಮಾಸಿದ ಸೀರೆಯ ಕೆದರಿದ ತಲೆಯ ವಾಸನೆ ಬಾಯಿಯ ಹುಚ್ಚಿಯಿಂದ ದೂರ ಓಡುವಂತೆ ಆ ಬ್ರಿಟಿಷರು ದೆಹಲಿಯನ್ನು ಕಡೆಗಣಿಸಿ ಬಂಗಾಳಿ ಯುವಚೆಲುವೆ ಕಲಕತ್ತೆಯ ಮಡಿಲಲ್ಲಿ ಮಲಗಿದರು.  ಆದರೆ ನಾಕು ದಿನದಲ್ಲಿ ಕಲಕತ್ತೆಯ ಮೈಯೆಲ್ಲಾ ಕಜ್ಜಿಯೆದ್ದು ಗಬ್ಬೆದ್ದುಹೋಯಿತು.  ದೆಹಲಿ ದೆಹಲಿಯೇ, ಕಲಕತ್ತೆ ಕಲಕತ್ತೆಯೇ.  ನಿಧಾನವಾಗಿಯಾದರೂ ಚೇತರಿಸಿಕೊಂಡು ಮೇಲೆದ್ದು "ಬನ್ನೀ ಮಕ್ಕಳೇ" ಎಂದು ಮುಗುಳ್ನಕ್ಕ ದೆಹಲಿಯ ಕರೆಯನ್ನು ಮನ್ನಿಸದಿರುವುದು ಪರಂಗಿ ದೊರೆಗಳಿಗೂ ಸಾಧ್ಯವಾಗಲಿಲ್ಲ.  ದೆಹಲಿ ಮತ್ತೆ ರಾಜಧಾನಿ.  ಒಬ್ಬರಿಗೆ ಒಬ್ಬಳೇ ತಾಯಿ.  ಒಂದು ರಾಷ್ಟ್ರಕ್ಕೆ ಒಂದೇ ರಾಜಧಾನಿ.  ಅದು ದೆಹಲಿ, ನನ್ನ ದೆಹಲಿ, ತನ್ನೊಳಗೆ ಅದೆಷ್ಟೋ ಯಾತನೆಗಳನ್ನು ಅಡಗಿಸಿಕೊಂಡು ಮುಗುಳುನಗುವ ನನ್ನ ಮಹಾನ್ ಮಾತೆ..."
ನನ್ನ ಕಥೆ "ಕನ್ನಡಿ"ಯ ಭಾಗವಾಗಿ ಈ ಮಾತುಗಳನ್ನು ನಾನು ಬರೆಯುವ ಹೊತ್ತಿಗೆ ನನ್ನ - ದೆಹಲಿಯ ನಂಟು ಕಾಲು ಶತಮಾನವನ್ನು ದಾಟಿತ್ತು.
ದೆಹಲಿ ಭಾರತದ ರಾಜಧಾನಿಯಾಗಿ ನೂರು ವರ್ಷ ತುಂಬುತ್ತಿರುವ ಈ ದಿನ ಎಲ್ಲವೂ ನೆನಪಾಗುತ್ತಿದೆ...
ನಾನು ಅಕ್ಷರಗಳನ್ನು ಕಲಿಯುವ ಹೊತ್ತಿಗೆ ಸೋದರಮಾವನನ್ನು ಮದುವೆಯಾಗಿ ಪುಟ್ಟಕ್ಕ ದೆಹಲಿಯಲ್ಲಿ ಸಂಸಾರ ಹೂಡಿ ವರ್ಷ ಕಳೆದಿತ್ತು.  ಅಕ್ಷರಗಳನ್ನು ಗುರುತಿಸುವ ಸಾಮರ್ಥ್ಯ ಕೈಗೆಟುಕಿದ್ದೇ ಮನೆಯಲ್ಲಿದ್ದ ಆಕ್ಸ್‌ಫರ್ಡ್ ಸ್ಕೂಲ್ ಅಟ್ಲಾಸ್‌ನಿಂದ ಹಿಡಿದು ಸಿಕ್ಕಿದ ಎಲ್ಲ ಭೂಪಟಗಳಲ್ಲೂ DELHI ಎಂಬ ಹೆಸರನ್ನು ನನ್ನ ಪೆನ್ಸಿಲ್‌ನ ಮೊನೆಯ ವೃತ್ತಗಳಲ್ಲಿ ಬಂಧಿಸಿ ನನ್ನದಾಗಿಸಿಕೊಂಡುಬಿಟ್ಟೆ.  ದೆಹಲಿ ಅಂದರೆ ನನಗೆ ಅಕ್ಕನ ಊರು.  ನನ್ನ ಪುಟ್ಟಕ್ಕ ಇದ್ದ ಪುಟ್ಟ ಹೆಸರಿನ ದೊಡ್ಡ ಊರು.
ಅದಾದ ಎರಡು ವರ್ಷಗಳಿಗೆ ಪುಟ್ಟಕ್ಕ ಊರಿಗೆ ಬಂದಾಗ ತಂದದ್ದು ಅಗಲದ ತೆಳು ಲೋಹದ ಪೆಟ್ಟಿಗೆ.  ಅದರೊಳಗೆ ಅಲಂಕಾರಿಕವಾಗಿ ಜೋಡಿಸಿದ್ದ ಅದೆಷ್ಟೋ ಬಗೆಯ, ಆಕಾರದ, ಸುವಾಸನೆಯ, ರುಚಿಯ ಬಿಸ್ಕೆಟ್‌ಗಳ ಸಾಲುಸಾಲು.  ಪೆಟ್ಟಿಗೆ ಮುಚ್ಚಳದ ಉದ್ದಗಲಕ್ಕೂ ನೂರೊಂದು ಬಣ್ಣಗಳ ಕಣ್ಸೆಳೆಯುವ ಚಿತ್ತಾರ.  ಅಂಚಿನಿಂದ ಅಂಚಿನವರೆಗೆ ಹರಡಿಕೊಂಡ ನೀಲಿನೀಲಿ ನೀರು, ನೀರಲ್ಲಿ ದೋಣಿಗಳು, ದೋಣಿಗಳಲ್ಲಿ ಮನೆಗಳು, ಮನೆಗಳಲ್ಲಿ ಜನಗಳು, ಹಿನ್ನೆಲೆಯಲ್ಲಿ ಹಸಿರು ಗಿಡಮರಗಳು, ಅವುಗಳಾಚೆ ಹಿಮಾಚ್ಛಾದಿತ ಪರ್ವತಸಾಲು...  ನಾನು ನಡೆದಾಡುವ ನೆಲದ ಮತ್ತೊಂದೆಡೆಯಲ್ಲಿ ಅಷ್ಟೆಲ್ಲಾ ಬಣ್ಣಗಳಿವೆಯೆಂದು ನನಗೆ ಗೊತ್ತಾದದ್ದೇ ಅಂದು.  ಕಣ್ಣರಳಿಸಿ ನೋಡುತ್ತಾ ಕೂತುಬಿಟ್ಟೆ.  "ಅದು ಕಾಶ್ಮೀರ" ಅಂದಳು ಪುಟ್ಟಕ್ಕ.
ನನ್ನ ಜಗತ್ತಿನೊಳಗೆ ಮೊದಲೇ ಇದ್ದ ದೆಹಲಿಯ ಜತೆ ಅಂದು ಕಾಶ್ಮೀರವೂ ಸೇರಿಕೊಂಡಿತು.  ದಿನಗಳೆದಂತೆ ಅವೆರಡೂ ನನ್ನೊಳಗೆ ಅಗಾಧವಾಗಿ ಬೆಳೆಯತೊಡಗಿದವು.  ಆ ಬೆಳವಣಿಗೆ ಇಂದಿಗೂ ಅವಿಚ್ಛಿನ್ನವಾಗಿ ಸಾಗಿದೆ...
ವರ್ಷಗಳ ನಂತರ ಪುಟ್ಟಕ್ಕನೇ ಕಳುಹಿಸಿದ ಹಣದಲ್ಲಿ ಟಿಕೆಟ್ ಕೊಂಡು ಜಿ.ಟಿ. ಎಕ್ಸ್‌ಪ್ರೆಸ್ ಹತ್ತಿ ಇಡೀ ಎರಡು ದಿನ ಚುಗುಚುಗು ಸಾಗಿ ನ್ಯೂಡೆಲ್ಲಿ ರೈಲ್ವೇ ಸ್ಟೇಶನ್‌ನಲ್ಲಿಳಿದು ಆ ಜನಸಾಗರದಲ್ಲಿ ಕಾಡುಪಾಪದಂತೆ ಕಣ್ಣುಕಣ್ಣು ಬಿಡುತ್ತಾ ನಿಂತಾಗ ಕಣ್ಣೆದುರು ಕಾಣಿಸಿ ನೆಮ್ಮದಿ ಮೂಡಿಸಿದ್ದು ಸೋದರಮಾವ.  ಸ್ಟೇಶನ್‌ನಿಂದ ಹೊರ ಕರೆತಂದು ಇಲ್ಲೇ ನಿಂತುಕೋ, ಸ್ಕೂಟರ್ ತರುತ್ತೇನೆ ಎಂದು ಹೇಳಿ ಅತ್ತ ಹೋದರು.  ಎರಡು ಚಕ್ರಗಳ ಸ್ಕೂಟರ್ ನಿರೀಕ್ಷಿಸಿದ್ದ ನನ್ನ ಮುಂದೆ ಅವರು ತಂದು ನಿಲ್ಲಿಸಿದ್ದು ಮೂರು ಚಕ್ರಗಳ ಆಟೋರಿಕ್ಷಾ!  ದಟ್ಟ ಗಡ್ಡಮೀಸೆಗಳ ನಡುವೆ ಹಲ್ಲು ಕಿರಿದ ಪಗಡಿತಲೆಯ ಆಟೋ ಡ್ರೈವರ್.  ದೆಹಲಿಗರು ಆಟೋರಿಕ್ಷಾವನ್ನು ಸ್ಕೂಟರ್ ಎಂದು ಕರೆಯುತ್ತಾರೆಂದು ಅರಿತಾಗ ನಗು ಬಂತು.  ದೆಹಲಿಯಲ್ಲಿ ಕಾಲಿರಿಸಿದ ಅರೆಗಳಿಗೆಯಲ್ಲಿ ಕಲಿತ ಮೊದಲ ಭಾಷಾಪಾಠ.  ಆಮೇಲೆ ಸ್ಕೂಟರ್ ಅನ್ನು ಸಕೂಟರ್ ಎನ್ನುತ್ತಾರೆಂದು ತಿಳಿದಾಗ...!  ಆಮೇಲಾಮೇಲೆ ಸಟೂಲ್, ಸಪೂನ್, ಸಕೂಲ್, ಸಟೇಟ್ ಬ್ಯಾಂಕ್...
ನನ್ನ ಕಲಿಕೆ ಇನ್ನೂ ನಿಂತಿಲ್ಲ.

***

ದೆಹಲಿಯದು ಧೀರ್ಘ ಇತಿಹಾಸವಾದರೂ ಅದರ ಪ್ರಾಚೀನ ಚಿತ್ರ ಅಥೆನ್ಸ್, ರೋಮ್, ದಮಾಸ್ಕಸ್, ಜೆರುಸಲೇಂ ಮುಂತಾದ ವಿಶ್ವದ ಪ್ರಾಚೀನ ರಾಜಧಾನಿಗಳಷ್ಟು ರೋಚಕವಾಗಿಲ್ಲ.  ಆ ನಗರಗಳ ಇತಿಹಾಸದಂತೆ ದೆಹಲಿಯ ಇತಿಹಾಸ ನಿರಂತರವಾಗಿಲ್ಲ ಮತ್ತು ಲಿಖಿತವಾಗಿ ದಾಖಲಾಗಿಲ್ಲ.  ಹಾಗಿದ್ದರೂ ದೆಹಲಿ ವಿಶ್ವಾದ್ಯಂತ ಎಲ್ಲರ ಕುತೂಹಲವನ್ನು ನಿರಂತರವಾಗಿ ಕೆರಳಿಸುತ್ತಲೇ ಇದೆ.  ಇದಕ್ಕೆ ಕಾರಣ ಈ ನಗರ ಇತಿಹಾಸದಲ್ಲಿ ವಹಿಸಿದ ಪಾತ್ರ.  ಕನಿಷ್ಟ ಒಂದುಸಾವಿರ ವರ್ಷಗಳಲ್ಲಿ ಅದು ರಾಜಧಾನಿಯಾಗಿ ಮೆರೆದ ಮಹಾನ್ ಸಾಮ್ರಾಜ್ಯಗಳು, ಅವುಗಳ ವೈಭವ, ಉಚ್ಪ್ರಾಯ, ಪತನ, ಐಹಿಕವಾದದ್ದೆಲ್ಲವೂ ಒಂದಲ್ಲಾ ಒಂದು ದಿನ ಕುಸಿದು ನೆಲಸಮವಾಗುತ್ತದೆಂಬ ಐತಿಹಾಸಿಕ ಸತ್ಯವನ್ನು ಸಾರುತ್ತಿರುವ ಇಲ್ಲಿನ ಕೋಟೆಕೊತ್ತಲಗಳು, ಗೋಪುರ ಗುಂಬಜ್‌ಗಳು, ಸಮಾಧಿಗಳು...
ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಇದೇ ದೆಹಲಿಯಾಗಿದ್ದಿರಬಹುದೆಂದು ಹೇಳಲು ನೇರ ಅಧಾರಗಳಿಲ್ಲವಾದರೂ ಸಾಂಧರ್ಭಿಕ ಸಾಕ್ಷ್ಯಗಳ ಮೂಲಕ ಹಾಗೆ ಹೇಳಬಹುದೆಂದು ಇತಿಹಾಸಕಾರ ಪರ್ಸೀವಲ್ ಸ್ಪಿಯರ್ ಹೇಳುತ್ತಾರೆ.  ಅವರ ಪ್ರಕಾರ ಕುರುಕ್ಷೇತ್ರ ಯುದ್ದ ನಡೆದದ್ದು ಐದು ಪತ್ ಅಥವಾ ವಿಸ್ತರಣ ನಗರಗಳಿಗಾಗಿ.  ಸೋನೆಪತ್, ಪಾನಿಪತ್, ಬಾಗ್‌ಪತ್ ಮತ್ತು ತಿಲ್‌ಪತ್ ಆ ಐದರಲ್ಲಿ ನಾಲ್ಕು ಎಂದು ಗುರುತಿಸಲ್ಪಟ್ಟಿವೆ.  ದೆಹಲಿ ಐದನೆಯದು ಎಂದು ಸಹಜವಾಗಿಯೆ ಭಾವಿಸಬಹುದಾಗಿದೆ ಎಂದು ಸ್ಪಿಯರ್ ಹೇಳುತ್ತಾರೆ.  ಪುರಾಣಕಾಲವನ್ನು ಕಡೆಗಣಿಸಿದರೂ ಇತಿಹಾಸದ ಆರಂಭದಿಂದಲೂ ಇಲ್ಲಿ ಜನವಸತಿ ಇತ್ತೆಂದು ಅಧಾರಸಹಿತವಾಗಿ ಹೇಳಬಹುದು.  ದೆಹಲಿ ಮತ್ತು ಸುತ್ತಮತ್ತಲ ಪ್ರದೇಶಗಳು ಸಿಂಧೂಕಣಿವೆಯ ನಾಗರೀಕತೆ ಬೆಳೆದು ಬೆಳಗಿದ ಭೌಗೋಳಿಕ ವಲಯದ ವ್ಯಾಪ್ತಿಯಲ್ಲಿ ಸೇರಿವೆ.  ದೆಹಲಿಯ ಪುರಾನಾ ಕಿಲಾ ಪ್ರದೇಶದಲ್ಲಿ ಅದರ ಕುರುಹುಗಳು ದೊರೆತಿವೆ.  ಆ ನಂತರ ಸಾವಿರ ವರ್ಷಗಳವರೆಗೆ ದೆಹಲಿಯ ಬಗ್ಗೆ ವಿವರಗಳು ದೊರೆಯುವುದಿಲ್ಲ.  ಮೌರ್ಯರ ಕಾಲದಲ್ಲಿ ದೆಹಲಿ ಮತ್ತೆ ಇತಿಹಾಸದ ನಕ್ಷೆಯಲ್ಲಿ ಕಾಣಿಸಿಕೊಂಡರೂ ಆಗ ಅದೊಂದು ನಿಕೃಷ್ಟ ಪ್ರಾಂತೀಯ ಪಟ್ಟಣವಾಗಿತ್ತಷ್ಟೇ.  ಅದೇ ಸ್ಥಿತಿ ಮುಂದಿನ ಒಂದು ಸಾವಿರ ವರ್ಷಗಳಷ್ಟು ಧೀರ್ಘ ಕಾಲದವರೆಗೆ ಅಂದರೆ ಕುಶಾನರು, ಗುಪ್ತರು ಮತ್ತು ವರ್ಧನರ ಆಳ್ವಿಕೆಯಲ್ಲೂ ಮುಂದುವರೆಯಿತು.
            ಇತಿಹಾಸದಲ್ಲಿ ತನ್ನದೇ ನಿರ್ದಿಷ್ಟ ಹಾಗೂ ವಿಶಿಷ್ಟ ಸ್ಥಾನವನ್ನು ದೆಹಲಿ ಪಡೆದುಕೊಂಡದ್ದು ಹನ್ನೊಂದನೇ ಶತಮಾನದಲ್ಲಿ, ೧೦೨೦ರ ಸುಮಾರಿಗೆ ತೋಮರ್ ರಜಪೂತ್ ಅರಸ ಅನಂಗಪಾಲ ಈಗಿನ ಸೂರಜ್ ಕುಂಡ್ ಪ್ರದೇಶದಲ್ಲಿ ತನ್ನ ರಾಜಧಾನಿ ಅನಂಗ್‌ಪುರವನ್ನು ಸ್ಥಾಪಿಸಿದಾಗ.  ಉಳಿದೆಲ್ಲಾ ಸ್ಥಳಗಳನ್ನು ಬಿಟ್ಟು ಈ ಬರಡು ಕಲ್ಲುಗುಡ್ಡಗಳ ನೆಲದಲ್ಲಿ ಆತ ತನ್ನ ರಾಜಧಾನಿಯನ್ನು ಕಟ್ಟಿಕೊಂಡದ್ದಕ್ಕೆ ಇದ್ದ ಒಂದೇ ಕಾರರಣ- ಸುರಕ್ಷತೆ.  ಇದು ಅಂದಿನ ವಿವಿಧ ರಜಪೂತ್ ರಾಜವಂಶಗಳ ನಡುವಿನ ದಿನನಿತ್ಯದ ಕದನಗಳ ಪರಿಣಾಮ.  ನಂತರ ೧೦೫೦ರಲ್ಲಿ ಆನಂಗಪಾಲ ತನ್ನ ರಾಜಧಾನಿಯನ್ನು ಈಗಿನ ಕುತುತ್ ಪ್ರದೇಶದ ಕಿಲಾ ರಾಯ್ ಪಿಥೋರಾಗೆ ವರ್ಗಾಯಿಸಿದ.  ಅಲ್ಲಿ ಆತ ಕಟ್ಟಿಸಿದ ಕೋಟೆಯ ಕುರುಹುಗಳು ಕುತುಬ್ ಮಿನಾರ್‌ನ ಸುತ್ತಮುತ್ತ ಹರಡಿಕೊಂಡಿವೆ.  ಇತಿಹಾಸಕಾರರು ಗುರುತಿಸುವ ದೆಹಲಿಯ ಏಳು ನಗರಗಳಲ್ಲಿ ಮೊದಲನೆಯದು ಈ ಕಿಲಾ ರಾಯ್ ಪಿಥೋರಾ.  ೧೧೫೦ರಲ್ಲಿ ಅಜ್ಮೀರದ ಚೌಹಾನರು ದೆಹಲಿ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  ನಾಲ್ಕು ದಶಕಗಳ ನಂತರ ೧೧೯೨ನಲ್ಲಿ ದೆಹಲಿ ಅಫ್ಘಾನಿಸ್ತಾನದಿಂದ ಬಂದ ತುರ್ಕಿ ದಾಳಿಕಾರ ಮಹಮದ್ ಘೋರಿಯ ವಶವಾಯಿತು.  ಆತ ಕಿಲಾ ರಾಯ್ ಪಿಥೋರಾವನ್ನು ತನ್ನ ಭಾರತ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿ ತನ್ನ ನಂಬಿಕಸ್ಥ ಗುಲಾಮ ಮತ್ತು ನೆಚ್ಚಿನ ಅಳಿಯನಾದ ಕುತ್ಬುದ್ದೀನ್ ಐಬಕ್‌ಗೆ ಅದರ ಜವಾಬ್ಧಾರಿಯನ್ನು ವಹಿಸುವುದರೊಂದಿಗೆ ದೆಹಲಿ ಒಂದಾದ ಮೇಲೊಂದರಂತೆ ಬೃಹತ್ ಸಾಮ್ರಾಜ್ಯಗಳ ರಾಜಧಾನಿಯಾಗುವ ಯುಗ ಆರಂಭವಾಯಿತು.
            ೧೦೫೦ರಿಂದ ಮುಂದಿನ ಆರುನೂರು ವರ್ಷಗಳಲ್ಲಿ ದೆಹಲಿಯನ್ನಾಳಿದ ವಿವಿಧ ಅರಸರು ಏಳು ನಗರಗಳನ್ನು ಕಟ್ಟಿದರು.  ಅವು ಕಿಲಾ ರಾಯ್ ಪಿಥೋರಾ (೧೦೫೦), ಸಿರಿ (೧೩೦೩), ತುಘಲಖಾಬಾದ್ (೧೩೨೧), ಜಹಾಂಪನಾ (೧೩೩೪), ಫಿರೋಜಾಬಾದ್ (೧೩೫೪), ದಿನ್ ಪನಾ ಅಥವಾ ಶೇರ್‌ಶಹಾಬಾದ್ (೧೫೪೦), ಶಹಜಹಾನಾಬಾದ್ (೧೬೪೮).  ನಂತರ ೧೯೧೧ರಿಂದೀಚೆಗೆ ಬ್ರಿಟಿಷರು ಕಟ್ಟಿದ ನವದೆಹಲಿ ದೆಹಲಿಯಲ್ಲಿ ನಿರ್ಮಾಣವಾದ ಎಂಟನೆಯ ನಗರವಾಗಿ ಇಂದು ವಿಶ್ವದ ಸುಂದರ ರಾಜಧಾನಿಗಳಲ್ಲೊಂದಾಗಿ ಕಣ್ಮನ ಸೆಳೆಯುತ್ತಿದೆ.  (ಇವೆಲ್ಲವುಗಳ ಹಿಂದೆ ಪಾಂಡವರ ಇಂದ್ರಪ್ರಸ್ಥವೂ ಸೇರಿದಂತೆ ಆರು ನಗರಗಳಿದ್ದವು, ಅಂದರೆ ದೆಹಲಿಯಲ್ಲಿ ಇದುವರೆಗೆ ಹದಿನಾಲ್ಕು ನಗರಗಳ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.  ಇದು ಉತ್ಪ್ರೇಕ್ಷೆ ಇರಬಹುದು.  ಭಾರತೀಯ ಪುರಾಣಗಳು ಮತ್ತು ಸಂಸ್ಕೃತಿಯಲ್ಲಿ ಸಂಖ್ಯೆ ಹದಿನಾಲ್ಕು ಪಡೆದುಕೊಂಡಿರುವ ಮಹತ್ವದಿಂದಾಗಿ ಆ ಸಂಖ್ಯೆಯನ್ನು ದೆಹಲಿಗೂ ಅನ್ವಯಿಸುವ ಉತ್ಸಾಹೀ ಪ್ರಯತ್ನ ಇದು ಎಂದು ನನಗನಿಸುತ್ತದೆ.)
            ೧೦೫೦ರಿಂದೀಚಿಗಿನ ನಗರಗಳ ಅದ್ಭುತ ವಾಸ್ತುಶಿಲ್ಪದ ಕುರುಹುಗಳಲ್ಲಿ ಹಲವು ಇಂದಿಗೂ ದೆಹಲಿಯ ಹೆಗ್ಗುರುತುಗಳಾಗಿ ನಿಂತಿವೆ.  ವಯೊವೃಧ್ದ ಲೇಖಕ ಖುಶ್ವಂತ್ ಸಿಂಗ್ ಪ್ರಕಾರ ಜನ ದೆಹಲಿಯನ್ನು ನೋಡಲು ಬರುವುದು ಮೂರು ಹಳೆಯ ಅದ್ಭುತಗಳನ್ನು.  ಮೊದಲನೆಯದು ಕುತುಬ್ ಮಿನಾರ್, ಎರಡನೆಯದು ಲಾಲ್ ಕಿಲಾ, ಮೂರನೆಯದು ಸ್ವತಃ ಖುಶ್ವಂತ್ ಸಿಂಗ್!  ಈ ಮೂರರ ಜತೆ ಹುಮಾಯೂನ್ ಸಮಾಧಿ, ಜಾಮಾ ಮಸೀದಿ, ಜಂತರ್ ಮಂತರ್, ಜತೆಗೆ ಇತ್ತೀಚಿಗಿನ ಬಿರ್ಲಾ ಮಂದಿರ್, ಬಹಾಯಿಗಳ ಲೋಟಸ್ ಟೆಂಪಲ್, ವಿಶ್ವದ ಅತಿ ದೊಡ್ಡ ದೇವಾಲಯ ಅಕ್ಷರ್ ಧಾಮ್... ದೆಹಲಿಯಲ್ಲಿ ಏನುಂಟು ಏನಿಲ್ಲ?  ಇವುಗಳ ಜತೆಗೇ ಕುಸಿದು ಬಿದ್ದಿರುವ, ಅರೆಬರೆ ನಿಂತಿರುವ ಅದೆಷ್ಟೋ ಕಟ್ಟಡಗಳು ದೆಹಲಿಯ ಗತವೈಭವವಕ್ಕೆ, ಈ ಶ್ರೀಮಂತ ನಗರದ ಮೇಲಿನ ಪೈಶಾಚಿಕ ದಾಳಿಗಳಿಗೆ, ಈ ದುರ್ದೈವೀ ನಗರ ಅನುಭವಿಸಿದ ದುರಂತಗಳಿಗೆ ಸಾಕ್ಷಿಯಾಗಿ ನಿಂತಿವೆ.
ಈ ನಗರದ ಮೇಲೆ ಅದೇಕೆ ಇಷ್ಟೋಂದು ದಾಳಿಗಳಾದವು?  ಉತ್ತರಕ್ಕೆ ಈ ನಗರದ ಭೌಗೋಳಿಕ ನೆಲೆ ಕಾರಣ.  ಮೂರು ಕಡೆ ಸಾಗರ, ಉತ್ತರ ಮತ್ತು ಪೂರ್ವದಲ್ಲಿ ಹಿಮಾಲಯ, ಪಶ್ಚಿಮೋತ್ತರದಲ್ಲಿ ಹಿಂದೂಕುಶ್ ಪರ್ವತಗಳಿಂದ ಸುತ್ತುವರೆದಿರುವ ಭರತವರ್ಷಕ್ಕೆ ಅರಬ್ಬರು ಮತ್ತು ಯೂರೋಪಿಯನ್ ಸಾಮ್ರಾಜ್ಯಶಾಹಿಗಳ ಹೊರತಾಗಿ ಇತಿಹಾಸದ ಆದಿಕಾಲದಿಂದಲೂ ವಲಸೆಗಾರರಾಗಲೀ,  ಧಾಳಿಕಾರರಾಗಲೀ ಪ್ರವೇಶಿಸಿದ್ದು ವಾಯುವ್ಯದ ಖೈಬರ್ ಕಣಿವೆಯ ಮೂಲಕ.  ಯಶಸ್ವಿಯಾಗಿ ಖೈಬರ್ ಕಣಿವೆಯನ್ನು ಪ್ರವೇಶಿಸಿದ ಸೇನೆಗೆ ಯಾವುದೇ ನೈಸರ್ಗಿಕ ತಡೆಗಳಿಲ್ಲದ ಪಂಜಾಬಿನ ಬಯಲು ಪ್ರದೇಶವನ್ನು ವಶಪಡಿಸಿಕೊಳ್ಳುವುದು ಸುಲಭ.  ಪಂಜಾಬ್ ಕೈಗೆ ಸಿಕ್ಕಿದ ಮೇಲೆ ಸಹಜವಾಗಿಯೇ ಎಲ್ಲರ ಕಣ್ಣು ಬೀಳುವುದು ವಿಶಾಲ ಗಂಗಾಬಯಲಿಗೆ ಹೆಬ್ಬಾಲಿನಂತಿರುವ ದೆಹಲಿಯ ಮೇಲೆ.  ಇದೇ ದೆಹಲಿಯ ದುರದೃಷ್ಟಕ್ಕೆ ಮೂಲ.
ಖೈಬರ್ ಕಣಿವೆಯನ್ನು ವಶಪಡಿಸಿಕೊಂಡವರು ಅನತೀ ಕಾಲದಲ್ಲೇ ಇಡೀ ಪಂಜಾಬನ್ನು ವಶಕ್ಕೆ ತೆಗೆದುಕೊಳ್ಳುವುದು, ನಂತರ ನೇರವಾಗಿ ದೆಹಲಿಯತ್ತ ಮುನ್ನುಗ್ಗಿ ಬರುವುದು, ಗಂಗಾ ಬಯಲಿಗೆ ನುಗ್ಗಲು ದೆಹಲಿಯನ್ನು ನೆಲೆಯನ್ನಾಗಿ ಬಳಸಿಕೊಳ್ಳುವುದು ಇತಿಹಾಸದ ಉದ್ದಕ್ಕೂ ನಡೆದುಕೊಂಡು ಬಂದಿದೆ.  ಹೀಗಾಗಿಯೇ ೧೯೬೫ರ ಯುದ್ದಕ್ಕೆ ಒಂದೆರಡು ದಿನಗಳ ಮುಂಚೆ ಪಾಕಿಸ್ತಾನೀ ನಾಯಕ ಜನರಲ್ ಅಯೂಬ್ ಖಾನ್ "ಇತಿಹಾಸ ನಮ್ಮ ಕಡೆ ಇದೆ.  ಪಂಜಾಬ್ (ಲಾಹೋರ್) ಯಾರ ಕೈಯಲ್ಲಿದೆಯೋ ಅವರು ಅನತಿ ಕಾಲದಲ್ಲೇ ದೆಹಲಿಯ ಅಧಿನಾಯಕರಾಗುತ್ತಾರೆ.  ಈಗ ಲಾಹೋರ್ ನಮ್ಮ ಕೈಯಲ್ಲಿದ.  ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನೀ ಧ್ವಜವನ್ನು ಹಾರಿಸುತ್ತೇವೆ" ಎಂದು ಘೋಷಿಸಿದ್ದು.  ಇತಿಹಾಸ ಅವರ ಕಡೆಗಿದ್ದರೂ ವರ್ತಮಾನ ಅವರ ಕಡೆಗಿರಲಿಲ್ಲ.  ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರ ಬುದ್ಧಿವಂತಿಕೆಯಿಂದಾಗಿ ಅಯೂಬ್ ಖಾನರ ಆಸೆ ನೆರವೇರಲಿಲ್ಲ ಮತ್ತು ಇತಿಹಾಸದಲ್ಲಿ ಮೊತ್ತಮೊದಲಿಗೆ ಲಾಹೋರ್‌ನ ಅಧಿಪತಿಗಳು ದೆಹಲಿಯನ್ನು ಪದಾಕ್ರಾಂತಗೊಳಿಸಿಕೊಳ್ಳುವುದರಲ್ಲಿ ವಿಫಲರಾದರು.  ಪರಿಣಾಮವಾಗಿ ಪುಟ್ಟಕ್ಕ ದೆಹಲಿಯಲ್ಲಿ ನೆಮ್ಮದಿಯಾಗಿ ನೆಲೆನಿಂತು ನನ್ನನ್ನೂ ಇಲ್ಲಿಗೆ ಕರೆಸಿಕೊಳ್ಳುವಂತಾಯಿತು, ನಾನು ಈ ಮಹಾನ್ ನಗರವನ್ನು ನನ್ನೊಳಗೆ ತುಂಬಿಕೊಳ್ಳುವಂತಾಯಿತು.
ಪುಟ್ಟಕ್ಕನ ಮಾತಿನಲ್ಲಿ ಒಬ್ಬ ಮಾಸೂಮ್ ಲಡ್ಕಾ ಆಗಿ ದೆಹಲಿಗೆ ಕಾಲಿಟ್ಟ ನಾನು ಈ ನಗರದಲ್ಲಿ ಏನೆಲ್ಲಾ ಕಂಡೆ!  ಎಷ್ಟೆಲ್ಲಾ ಕಲಿತೆ?  ಬೇಸಗೆಯಲ್ಲಿ ಬನಿಯನ್ ಅನ್ನೂ ಕಿತ್ತೆಸೆದು, ಛಳಿಗಾಲದಲ್ಲಿ ಅಕ್ಕ ಹೆಣೆದ ಸ್ವೆಟರನ್ನು ಅಹಹ ಅಹಹ ಎನ್ನುತ್ತಾ ಮೈಗೇರಿಸಿಕೊಂಡು, ಗಳಿಗೆಗೊಮ್ಮೆ ಗರಂ ಚಾಯ್ ಗುಟುಕರಿಸುತ್ತಾ, ರಜಾಯ್‌ನೊಳಗೆ ಹುದುಗುವ ಮಜವನ್ನು ಅನುಭವಿಸುತ್ತಾ... ತ್ತಾ... ತ್ತಾ... ನಾನು ನಾನಾಗಿ ಬೆಳೆದದ್ದು ದೆಹಲಿಯಲ್ಲಿ, ಈ ನಗರದ ಲೈಬ್ರರಿಗಳಲ್ಲಿ, ಅರ್ಟ್ ಗ್ಯಾಲರಿಗಳಲ್ಲಿ.
ಬಂದ ಮಾರನೇ ದಿನಕ್ಕೆ ಸಾಮಾನು ತರಲು ಅಕ್ಕನ ಜತೆ ಹೊರಗೆ ಹೋದಾಗ ಎಲ್ಲೆಲ್ಲೂ ಕಂಡದ್ದು ಸಲ್ವಾರ್ ಕಮೀಜ್ ತೊಟ್ಟ ಹುಡುಗಿಯರು, ಹೆಂಗಸರು.  ಸೀರೆಗಳು ಅಲ್ಲೊಂದು ಇಲ್ಲೊಂದು.  ಕರ್ನಾಟಕದಲ್ಲಿ ಕಾಣುತ್ತಿದ್ದ ನೋಟಕ್ಕೆ ತದ್ವಿರುದ್ಧ.  ಇಲ್ಲಿ ಮುಸ್ಲಿಮರು ಜಾಸ್ತಿ ಅಲ್ಲವಾ? ಅಂದೆ ಮೆಲ್ಲಗೆ.  ಹಾಗೇನಿಲ್ಲ, ಈ ಕಡೆಯ ಹೆಂಗಸರ ಉಡುಪೇ ಇದು.  ಈ ಉಡುಪಿಗೆ ಧರ್ಮದ ಸೋಂಕಿಲ್ಲ ಎಂದು ಹೇಳಿ ಅಕ್ಕ ಭಾರತದ ಒಂದು ಚಂದದ ಮುಖವನ್ನು ನನಗೆ ತೋರಿಸಿದಳು.  ಅದೇ ದಿನಗಳಲ್ಲಿ ನೆರೆಯ ಪಾಕಿಸ್ತಾನದಲ್ಲಿ ಜಿಯಾ ಉಲ್ ಹಕ್ ಸೀರೆಯನ್ನು ಇಸ್ಲಾಮಿಗೆ ವಿರುದ್ಧ ಎಂದು ಘೋಷಿಸಿ ಬಹಿಷ್ಕರಿಸಿದ್ದರ ಹಿನ್ನೆಲೆಯಲ್ಲಿ ಅಕ್ಕನ ಮಾತುಗಳು ವಿಶೇಷ ಅರ್ಥ ಪಡೆದುಕೊಂಡವು.  ಅಂದು ನಾನು ದೆಹಲಿಯಲ್ಲಿ ಎಲ್ಲೆಲ್ಲೂ ಕಂಡ 'ಜಾತ್ಯಾತೀತ' ಉಡುಪು ಈಗ ಭಾರತದ ಉದ್ದಗಲಕ್ಕೂ ಹರಡಿಹೋಗಿದೆ.
ಕೆಲವೇ ದಿನಗಳಲ್ಲಿ ಗೆಳೆಯ ರಾಜೇಶ್ವರನ ತಂದೆ ಮತ್ತೊಂದು ಮುಖವನ್ನು ನನಗೆ ತೋರಿಸಿದರು.  ದೆಹಲಿಗೆ ಅನತೀ ದೂರದ ಹರಿಯಾನಾದ ಪಲ್‌ವಲ್ ಪಟ್ಟಣದಲ್ಲಿನ ತನ್ನ ಮನೆಗೆ ನನ್ನನ್ನಾತ ಕರೆದೊಯ್ದ.  ಜವಾಹರ್ ನಗರ್ ಎಂಬ ಹೆಸರಿನ ಆ ವಿಸ್ತರಣದ ಎಲ್ಲ ನಾಲ್ಕು ಸಾವಿರ ಕುಟುಂಬಗಳೂ ನಲವತ್ತೇಳರಲ್ಲಿ ಎಲ್ಲವನ್ನೂ ಕಳೆದುಕೊಂಡು ಪಾಕಿಸ್ತಾನದ ಮುಲ್ತಾನ್ ಪಟ್ಟಣದಿಂದ ನಿರಾಶ್ರಿತರಾಗಿ ಓಡಿಬಂದಂಥವು.  ರಾಜೇಶ್ವರನ ತಂದೆ ಅಲ್ಲಿನ ಆರ್‌ಎಸ್‌ಎಸ್ ಶಾಖೆಯ ಕಾರ್ಯದರ್ಶಿ.  ದೇಶವಿಭಜನೆಯ ದುರಂತವನ್ನು ನೆನಪಿಸಿಕೊಳ್ಳುತ್ತಾ "ಮತ್ತೆ ಅವಕಾಶ ಸಿಕ್ಕಿದರೆ ಕಳೆಹೋದದ್ದೆಲ್ಲವನ್ನೂ ಮರಳಿಪಡೆಯುವ ಬಯಕೆ ನಮಗೆಲ್ಲರಿಗೂ ಇದೆ" ಎಂದವರು ಹೇಳಿದರು.  ಕಾಲು ಶತಮಾನದ ಹಿಂದೆ ಜನವರಿಯ ಒಂದು ಛಳಿರಾತ್ರಿಯಲ್ಲಿ ಅವರಿಂದ ಕೇಳಿದ ಆ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿವೆ.  ನನ್ನಲ್ಲಿ ನೂರೊಂದು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.  ತೀನ್ ಮೂರ್ತಿ ಲೈಬ್ರರಿಯಲ್ಲಿ ಬೈಂಡ್ ಮಾಡಿಸಿಟ್ಟಿರುವ ಉದ್ದೋಉದ್ದದ ಹಳೆಯ `ನಮ್ಮ' ಹಾಗೂ `ಅವರ' ವರ್ತಮಾನ ಪತ್ರಿಕೆಗಳಲ್ಲಿ ೬೫ರ, ೭೧ರ ಯುದ್ಧಗಳ ದಿನಗಳ ಸಂಚಿಕೆಗಳನ್ನು ಹುಡುಕಿ ತೆಗೆದು ಮೇಜಿನ ಮೇಲೆ ಅಗಲಕ್ಕೆ ಹರಡಿ ನಡುಬಾಗಿಸಿ ನಿಂತು ತಿಂಗಳುಗಟ್ಟಲೆ ಓದಿ, ಜೆಎನ್‌ಯು, ICWA ಮತ್ತು IDSA ಲೈಬ್ರರಿಗಳಲ್ಲಿ ಸಿಕ್ಕಿದ ಪಾಕಿಸ್ತಾನೀ ಪುಸ್ತಕಗಳನ್ನು ವರ್ಷಗಟ್ಟಲೆ ಗಮನವಿಟ್ಟು ಓದಿ ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಹೆಣಗುತ್ತಿದ್ದೇನೆ.  ೧೯೪೭ನ್ನು ಸ್ವಾತಂತ್ರದ ವರ್ಷ ಎನ್ನುವುದಕ್ಕಿಂತಲೂ "ದೇಶವಿಭಜನೆಯ ವರ್ಷ" ಎಂದು ಕರೆದು ಅದರಾಚೆಯ ಕಾಲವನ್ನು "ವಿಭಜನಾಪೂರ್ವ ಕಾಲ", ಅದರೀಚೆಯ ಕಾಲವನ್ನು "ವಿಭಜನೋತ್ತರ ಕಾಲ" ಎಂದು ಪರಿಗಣಿಸಿದರೆ ದಕ್ಷಿಣ ಏಶಿಯಾವನ್ನು ಈ ದಿನಗಳಲ್ಲಿ ಕಾಡುತ್ತಿರುವ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸಿಗಬಹುದೇನೋ ಅನಿಸುತ್ತದೆ.
ದೆಹಲಿಶೋಧದ ಹುಚ್ಚು ಹತ್ತಿ ಮೊತ್ತಮೊದಲು ಕುತುಬ್ ಮಿನಾರ್ ಸುತ್ತಲೂ ಹೆಜ್ಜೆ ಸರಿಸಿದಾಗ ಕಿವಿಗೆ ಕೇಳಿದ್ದು ಮಹಮದ್ ಘೋರಿಯ ಸೇನೆಯ ಕುದುರೆಗಳ ಖುರಪುಟಗಳು, ರಜಿಯಾ ಸುಲ್ತಾನಾಳಾ ಸಂಪ್ರದಾಯವಿರೋಧೀ ರಣಕಹಳೆ, ದಖನ್ ಅನ್ನು ಪದಾಕ್ರಾಂತಗೊಳಿಸಿಕೊಂಡ ಅಲ್ಲಾವುದ್ದೀನ್ ಖಾಲ್ಜಿಯ ಹೆಮ್ಮೆಯ ಠೇಂಕಾರ.  ಕೆಂಪುಕೋಟೆಯ ದಿವಾನ್ ಎ ಆಮ್‌ನಲ್ಲಿ ಕೇಳಿಬಂದದ್ದು ಅಕ್ಬರನ ದಿನ್ ಎ ಇಲಾಹೀ ಧರ್ಮೋಪದೇಶದ ಹಿಂದೆಯೇ ಅನಾರ್ಕಲಿಯ ಕರುಳುಹಿಂಡುವ ರೋಧನ, ದಿವಾನ್ ಎ ಖಾಸ್‌ನಲ್ಲಿ ಮುಮ್ತಾಜಳ ಮೆಲುಮಾತು, ಜಹನಾರಾಳಾ ಬರಡು ಬದುಕಿನ ಕಥೆ ವ್ಯಥೆ...  ದೆಹಲಿ ಬಲಿಷ್ಟರ ಕೇಕೆಗಳ, ಬಲಿಗಳ ಆಕ್ರಂದನಗಳ, ಅವೆರಡೂ ಅಲ್ಲದವರ ಗೊಣಗೊಣಗಳ ನಗರ...
ಕೆಲವು ಪ್ರಶ್ನೆಗಳಿಗೆ ಉತ್ತರಗಳು ದೆಹಲಿಯ ಮಾರುಕಟ್ಟೆಗಳಲ್ಲಿ ಸಿಕ್ಕಿವೆ.  ಬಟ್ಟೆಗಳ ಸಾಗರ ಸರೋಜಿನಿ ನಗರ್ ಮಾರ್ಕೆಟ್ ಮತ್ತು ಶಂಕರ್ ಮಾರ್ಕೆಟ್, ಸೂರ್ಯನ ಕೆಳಗಿಗಿರುವ ಎಲ್ಲವೂ ಸಿಗುವ ಚಾಂದನೀ ಚೌಕ್, ಕನಾಟ್ ಪ್ಲೇಸ್, ಜನಪಥ್, ಲಜ್‌ಪತ್ ನಗರ್ ಮಾರ್ಕೆಟ್- ಎಲ್ಲೆಲ್ಲಿಯೂ ಕಾಣಸಿಗುವ ಮುಗುಳುನಗೆಯ ಸಿಂಧಿ, ಪಂಜಾಬೀ ವ್ಯಾಪಾರಿಗಳು.  ಇದ್ದುದೆಲ್ಲವನ್ನೂ, ಕುಟುಂಬದಲ್ಲಿ ಕನಿಷ್ಟ ಒಂದು ಆತ್ಮೀಯ ಜೀವವನ್ನಾದರೂ ಕಳೆದುಕೊಂಡು ನಿರಾಶ್ರಿತರಾಗಿ ದೆಹಲಿಗೆ ಓಡಿಬಂದು ಎಲ್ಲರನ್ನೂ ಎದೆಗವಚಿಕೊಳ್ಳುವ ಈ ಮಹಾ(ನ್) ನಗರದಲ್ಲಿ ಫೀನಿಕ್ಸ್‌ನಂತೆ ಮತ್ತೆ ಬದುಕು ಕಟ್ಟಿಕೊಂಡು ಎದೆಯೆತ್ತಿ ನಿಂತಿರುವ ಈ ಜನರ ಸ್ನೇಹಪರ ನಡೆನುಡಿ, ತಾಳ್ಮೆ ಅಸಾದೃಶ.  ಡಜನ್‌ಗಟ್ಟಲೆ ಸಾಮಾನು ಹೊರತೆಗೆಸಿ ಏನೂ ಇಷ್ಟವಾಗದೇ ಹಿಂದೆ ತಿರುಗಿದರೆ ಇನಿತೂ ಬೇಸರಗೊಳ್ಳದೇ ನಿಮಗಿಷ್ಟವಾದದ್ದು ಬೇರೆಲ್ಲೂ ಸಿಗದಿದ್ದರೆ ಇಲ್ಲಿಗೇ ಬನ್ನಿ, ನಿಮಗೆಂದೇ ತೆಗೆದಿಟ್ಟಿರುತ್ತೇನೆ ಎನ್ನುವ ಬಗೆ.  ಇಂತಹ ತಾಳ್ಮೆಯನ್ನು ಆ ಕ್ರೂರ ಬದುಕೇ ಕಲಿಸಿರಬೇಕು.  ದೆಹಲಿ ನೊಂದ, ನೋವನ್ನು ಅರ್ಥ ಮಾಡಿಕೊಂಡು ಸಂತೈಸುವ ನಗರ.
ಈ ಪ್ರಶ್ನೆಗಳ ಸಹವಾಸವೇ ಸಾಕು ಎಂದುಕೊಂಡು ಲಗಾಮಿಲ್ಲದ ಕುದುರೆಯಂತೆ ಈ ನಗರದ ಬೀದಿಬೀದಿಗಳಲ್ಲಿ ಅಲೆದಾಗ...  ಮಾಂಸ ಮೊಟ್ಟೆ ಇರಲಿ, ಹಾಲಿನ ವಾಸನೆಗೂ ಮುಖ ಕಿವಿಚುವ ಅಕ್ಕನ ಜತೆ ಮುನಿರ್ಕಾದ ಉಡುಪಿ ಹೋಟೆಲ್, ಯೂಸುಫ್ ಸರಾಯ್‌ನ ಕರ್ನಾಟಕ ರೆಸ್ಟೋರೆಂಟ್, ಮೋತಿಬಾಗ್‌ನ ಕರ್ನಾಟಕ ಸಂಘದ ಹೋಟೆಲ್, ಕರೋಲ್ ಬಾಗ್, ಕನಾಟ್ ಪ್ಲೇಸ್‌ಗಳ ಮದ್ರಾಸ್ ಹೋಟೆಲ್‌ಗಳಲ್ಲಿ ಅಪ್ಪಟ ಸಸ್ಯಾಹಾರಿ ಮೇವು ಮೇಯ್ದು ಸಾಕೆನಿಸಿ ಕೈಬೀಸಿ ಕರೆದ ಗೆಳೆಯರ ಜತೆಗೂಡಿ ಯೂಸುಫ್ ಸರಾಯ್‌ನ ಸೋನಾ, ಕನಾಟ್ ಪ್ಲೇಸ್‌ನ ಹ್ಯಾರುವೊ (ಈವು ಮಾಯವಾಗಿವೆ), ಕರೀಮ್ಸ್ ಮುಂತಾದೆಡೆ ಬಿರಿಯಾನಿ, ತಂದೂರಿ ಚಿಕನ್‌ಗೆ ಕೈ ಹಾಕಿದೆ.  ಜತೆಗೇ ಎಲ್ಲೆಲ್ಲೂ ಸಿಗುವ ಧಾಬಾಗಳಲ್ಲಿ ಬ್ರೆಡ್ ಪಕೋಡ, ಸಮೋಸಾ, ಮಟರಿ ತಿಂದು ಚಾಯ್ ಕುಡಿಯುವುದರಲ್ಲಿನ ಮಜಾ...  ಪ್ರಪಂಚದ ಅತ್ಯಂತ ರುಚಿಯಾದ ಊಟ ಲಾಹೋರ್ ನಗರದ ರಸ್ತೆ ಬದಿಯಲ್ಲಿ ಸಿಗುತ್ತದೆ ಎಂದು ಇಮ್ರಾನ್ ಖಾನ್ ಹೇಳುತ್ತಾನೆ.  ಅದು ದೆಹಲಿಯಲ್ಲೂ ಸಿಗುತ್ತದೆ ಎಂದು ನಾನು ಹೇಳುತ್ತೇನೆ.  (ಕರೀಮ್ಸ್ ಬಂದದ್ದು ಲಾಹೋರ್‌ನಿಂದ ಎಂದು ನೆನಪಿಸಿಕೊಳ್ಳುತ್ತೇನೆ.)  ಏನೇ ಆಗಲಿ ದೆಹಲಿ ನಾಲಿಗೆ ಚಪಲದವರ ನಗರ.
ಕಮಾನಿ ಆಡಿಟೋರಿಯಂನಲ್ಲಿ ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿಯಿಂದ ಹಿಡಿದು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಕನ್ನಡತಿ ಭಾಗೀರಥಿ ಬಾಯಿ ನಾಯಕಿಯಾಗಿದ್ದ ಶೇಕ್ಸ್‌ಪಿಯರನ ಟ್ವೆಲ್ಫ್ತ್ ನೈಟ್ನ ಹಿಂದಿ ರೂಪಾಂತರದವರೆಗೆ ನೂರೊಂದು ಹಿಂದಿ, ಕನ್ನಡ, ಇಂಗ್ಲಿಷ್ ನಾಟಕಗಳನ್ನು ನೋಡಿ ಆನಂದಿಸಿದ್ದು ಇಲ್ಲಿನ ಮಾವಲಂಕಾರ್ ಹಾಲ್, AIFACS ಗ್ಯಾಲರಿ ಮುಂತಾದ ಹಲವು ಹತ್ತು ರಂಗಮಂದಿರಗಳಲ್ಲಿ.  ದೆಹಲಿ ನಾಟಕ ಪ್ರಿಯರ ನಗರ.
ಯಾತಕ್ಕೂ ಮನಸ್ಸಿಲ್ಲದೇ ಸುಮ್ಮನೇ ಮನೆಯಲ್ಲೇ ಕುಳಿತಾಗಲೂ ದೆಹಲಿ ಚೇತೋಹಾರಿ.  ಅಂತಹ ಒಂದು ಮಧ್ಯಾಹ್ನ ಅಕ್ಕನ ಹೊಸ ಗೆಳತಿಯೊಬ್ಬಳು ಮನೆಗೆ ಬಂದು ಮಾತಿನ ಮಧ್ಯೆ ಕೇಳಿದಳು: "ನನ್ನನ್ನ ಏನಂತ ಕರೀತೀಯ?"  ಅಕ್ಕನ ಗೆಳತಿಯರೆಲ್ಲಾ ನನಗೆ ಅಕ್ಕಂದಿರೇ.  ಈ ಹೊಸಬಿಗೆ ಯಾವ ವಿನಾಯಿತಿಯೂ ಇಲ್ಲ.  ಈಕೆಯೂ ನನಗೆ ದೀದಿಯೇ.  ಅದೇ ಹೇಳಿದೆ.  "ಇಲ್ಲ", ಆಕೆ ತಲೆ ಅಲುಗಿಸಿದಳು: "ನಾವು ಗೆಳೆಯರು.  ನಾನು ನಿನ್ನ ಗೆಳತಿ, ದೀದಿ ಅಲ್ಲ..."
ಸ್ನೇಹಪರ ದೆಹಲಿ!
ಇಂಥಾ ದೆಹಲಿ ಸುಮಾರು ಒಂದೂವರೆ ಶತಮಾನಗಳವರೆಗೆ ಬ್ರಿಟಿಷ್ ಭಾರತ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿದ್ದ ಕಲ್ಕತ್ತಾವನ್ನು ಹಿಂದಕ್ಕೆ ಹಾಕಿ ದೇಶದ ರಾಜಧಾನಿಯಾಗಿ ಘೋಷಿಸಲ್ಪಟ್ಟು ಇಂದಿಗೆ, ಅಂದರೆ ಡಿಸೆಂಬರ್ ೧೨, ೨೦೧೧ಕ್ಕೆ, ಸರಿಯಾಗಿ ನೂರುವರ್ಷ.

Sunday, December 4, 2011

ಕವನ: ಪಳೆಯುಳಿಕೆ


(ಅದೆಷ್ಟೋ ವರ್ಷಗಳ ಹಿಂದೆ ಬರೆದ ಕವನ ಇದು.  ಈಗ ಇಂಥವನ್ನು ಬರೆಯಲಾಗುವುದಿಲ್ಲ)

ನಿನ್ನೆ ಮೊನ್ನೆಯವರೆಗೆ
ನಿನ್ನಿರವಿನರಿವಿರಲೇ ಇಲ್ಲ ನನಗೆ

ಅಂದು
ಸಹ್ಯಾದ್ರಿಯ ಸೆರಗಿನಿಂದ
ನೀ ಹನಿ
ಹನಿಯಾಗಿ ತೇಲಿ
ಬಂದು ನಿಂತಾಗ ನನಗೆ ಕನಸು
ಹರಿಯುವ ಹೊತ್ತು
ಶತಶತಮಾನಗಳ ಕಾಯುವಿಕೆ
ಗೆ ತೆರೆಬಿತ್ತು

ಪಟಪಟ ತೆರೆದ ದಿನಗಳೊಂದೊಂದರಲಿ
ಸರಸರ ಹರಿದ ಮಾಸಮಾಸಗಳಲಿ
ನಿನ್ನ ನಗೆಯ ಕುಲುಕುಲು ಹನಿಗಳು
ಹಗಲಲ್ಲಿ ಹೂವಾಗಿ ಅರಳಿದವು
ರಾತ್ರಿ ನಕ್ಷತ್ರಗಳಾಗಿ ಮಿನುಗಿದವು

ಬದುಕೊಂದು ಮಗ್ಗಲು ಬದಲಿಸಿದ
ಸಂಕ್ರಮಣ
ಕನಸಿನಿಂದ ನನಸಿಗೋ
ಮತ್ತೊಂದು ಕನಸಿಗೋ ಜಾರಿ
ದಂಥ ಸುಷುಪ್ತಿಯಲಿ ಮಿನುಗಿ
ದ ಅಗ್ನಿಯ ಸುತ್ತ ನನ್ನ ಬೆನ್ನ ಹಿಂದೆ
ಸಪ್ತಪದಿ ತುಳಿದದ್ದು ನೀನೋ
ಅಥವಾ ಬರೀ ನಿನ್ನ ನೆರಳೋ?
ಅರಿವಾಗದೇ ಬೆರಗಾದೆ ಒಂದು ಕ್ಷಣ

ಮೈಮನಗಳ ಮಿಲನದ
ನನಸಿನಂಥಾ ಕನಸು
ನಿಶಾಗೀತ
ಭೋರ್ಗರೆದುಕ್ಕಿದ ನೆರೆಗಂಗೆಯಾಳಕ್ಕೆ
ನನ್ನನ್ನು ಸೆಳೆದದ್ದು ನೀನೋ
ಅಥವಾ ಬರೀ ನಿನ್ನ ನೆನಪೋ?
ತಿಳಿಯದೇ ತೊಳಲಿದೆ ಒಂದು ಕ್ಷಣ

ಬೆಳಗಾಗುವ ಹೊತ್ತಿಗೆ ಎಲ್ಲ
ಮಳೆಯ ಹಾಗೆ ನಿನ್ನ ಜೇನಹನಿ
ಮಳೆ ನಿಂತೇಹೋಗಿತ್ತು

ನೀ ನಾನಾಗಿ ನಾ ನೀನಾಗಿ
ಮತ್ತೆ
ನೀ ನೀನೇ ನಾ ನಾನೇ ಆಗಿ
ಹೋದದ್ದು ಕಣ್ಣಂಚಿನಲ್ಲೇ ಕರಗಿದ
ಕನಸೆನಿಸಿತ್ತು
ಎದೆಯಲ್ಲಿ ಆಸೆಯೊಂದು
ಅನಾಥವಾಗಿ ಅತ್ತಿತ್ತು
ಈ ಬದುಕಿಗೆ ನೀನಲ್ಲದಿದ್ದರೂ
ನಿನ್ನಂಥವಳೊಬ್ಬಳು ಬೇಕಿತ್ತು

-ಪ್ರೇಮಶೇಖರ

Wednesday, November 16, 2011

ಕವನ: "ಅಭಿಸಾರಿಕೆ"


ಉರಿವ ಸೂರ್ಯ
ಕರಗಿ ನೀರಿಗಿಳಿದ
ಮೇಲೆ
ಮಿಣುಕುಬತ್ತಿಯ ಬದುಕು.
ನಲುಗುತ್ತದೆ, ನರಳುತ್ತದೆ,
ನಸುಗಾಳಿಗೂ ಬೆದರಿ
ಬಾಗುತ್ತದೆ ಉದ್ದೋಉದ್ದಕ್ಕೆ
ಮಲಗಿಬಿಡುತ್ತದೆ

     ನಿಸ್ಸಹಾಯಕವಾಗಿ.

ಹಿಂದೆಂದೋ ಕಂಡ ಕನಸುಗಳು
ಚದುರಿಹೋದ ಮುಗಿಲುಗಳು
ಒಡಲು ಬಟಾಬಯಲು.

ಬಾಲಿವುಡ್ ತಾರೆ
ಬಾರ್ ಗರ್ಲ್ ಆಗಿ
ಬದುಕು ನಲುಗಿ
ಪುಪ್ಪುಸ ಅಲುಗಿ
ಅಂಧೇರಿಯ ಕತ್ತಲೆ
ಯಲ್ಲಿ ಮೂರುಕಾಸಿನ...

     ಓಹ್ ಬೇಡ ಬಿಡಿ.

ಅಲ್ಲಿ ನೋಡಿ
ಕಣ್ಣು - ಹೆಣ್ಣು
ಹೆಣ್ಣು - ಕಣ್ಣು

     ಎಲ್ಲವೂ ಒದ್ದೆ ಒದ್ದೆ.

ಸೂರ್ಯನೇ ನೀರಿಗಿಳಿದ
ಮೇಲೆ

     ಇನ್ನೇನು ಬಿಡಿ.

Friday, October 21, 2011

"ಕನ್ನಡತೀ..." ಒಂದು ತುಂಟ ಕವನ

(ಇದೊಂದು ತುಂಟ ಕವನ.  ಹಲವಾರು ವರ್ಷಗಳ ಹಿಂದೆ ಬರೆದದ್ದು.  ಈಗ ಇಂಥವನ್ನು ಬರೆಯಲಾಗುವುದಿಲ್ಲ,  ಓದಿ ಒಮ್ಮೆ ನಕ್ಕುಬಿಡಿ.)

ಕರಾವಳಿಯ ಕನ್ಯೆಯರು
ಭಾವನೆಗಳೇ ಇಲ್ಲದ
ಬರಡು ಬೇತಾಳಗಳು.

ಮಲೆನಾಡ ಬೆಡಗಿಯರೋ, ಅಬ್ಬ!
ಕುದಿವ ಹಂಡೆ.
ನವಭಾವಗಳು ಉಕ್ಕಿ ಹರಿವ
ಹುಚ್ಚುಹೊಳೆ ದಂಡೆ.

ಮಹಾರಾಜರ ಮೈ
ಸೂರಿನಲ್ಲಿ ಮಹಾರಾಣಿ
ಯರಾರೂ ಈಗಿಲ್ಲ.
ಹೆಜ್ಜೆಹೆಜ್ಜೆಗೆ ಎದುರು 'ಸಿಕ್ಕು'
ವವರು ಈ ಗಳಿಗೆ ಮುದ್ದುಕೋಳಿಮರಿ,
ಮರುಗಳಿಗೆ ಉರಿಗಣ್ಣ ಹೆಮ್ಮಾರಿ!
ಇವರೊಂದಿಗೆ ಏಗಲು ಆ
ಮಹಿಷಾಸುರನೇ ಸರಿ!

ಒಂದು ಕೇಜಿ ಹೆಣ್ತನ
ಕಸು ಒಂದು ಕಪ್,
ಸಣ್ಣಗೆ ಹೆಚ್ಚಿದ ಎರಡು
ದೊಡ್ಡಸೈಜಿನ ನಗೆಗಳು,
ಚಿಟಿಕೆ ಕೋಪ,
ಮುನಿಸು ರುಚಿಗೆ ತಕ್ಕಷ್ಟು,
ಶುದ್ಧ ರಿಫೈನ್ಡ್ ಲವಲವಿಕೆ
ಯಲ್ಲಿ ಹದಿನಾರುವರ್ಷ ಹದ
ವಾಗಿ ಹುರಿದರೆ
ತುಂಬುತ್ತದೆ ಕಣ್ಣು
ಧಾರವಾಡದ ಹೆಣ್ಣು!

ಧಾರವಾಡದ ಹೆಣ್ಣು
ದಾಳಿಂಬೆ ಹಣ್ಣು
ಜತೆಗಿದ್ದರೆ ಈ ಬದುಕು
ಓಹ್ ಅದೆಷ್ಟು ಚೆನ್ನು!

Monday, October 17, 2011

ಲೇಖನ: ಇಂದಿರಾ ಗಾಂಧಿಯವರ ಬಗ್ಗೆ ಕೆಲವು ಮಾತುಗಳು            ಸ್ವಾತಂತ್ರೋತ್ತರ ಭಾರತದ ಅತೀ ವಿವಾದಾಸ್ಪದ ರಾಜಕಾರಣಿ ಶ್ರೀಮತಿ ಇಂದಿರಾ ಗಾಂಧಿ.  ಆಂತರಿಕ ಹಾಗೂ ವಿದೇಶೀ ವ್ಯವಹಾರಗಳಲ್ಲಿ ಅವರು ಅನುಸರಿಸಿದ ನೀತಿಗಳು ತೀವ್ರ ಚರ್ಚೆಗೊಳಗಾಗಿವೆ.  ಅದರೆ ಈ ಚರ್ಚೆಗಳು ಹೆಚ್ಚಿನ ಸಂದರ್ಭಗಳಲ್ಲಿ ವಸ್ತುನಿಷ್ಟತೆ ಕಳೆದುಕೊಂಡು ಪೂರ್ವಾಗ್ರಹಪೀಡಿತವಾಗಿವೆ ಎಂದು ನನಗನಿಸುತ್ತದೆ.  ಮೊದಲಿಗೆ ಅವರ ಕೆಲವು ವಿದೇಶಾಂಗ ನೀತಿಗಳನ್ನು ಚರ್ಚೆಗೆತ್ತಿಕೊಳ್ಳುವಾ.
            ೧೯೭೧ರ ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಅವರು ತೋರಿದ ಚಾಣಾಕ್ಷತೆ ಮತ್ತು ಕುಟಿಲನೀತಿಗಳು ಭಾರತದ ಹಿಂದಿನ ಇಬ್ಬರು ಪ್ರಧಾನಮಂತ್ರಿಗಳ ಸ್ವಭಾವಕ್ಕೆ ವ್ಯತಿರಿಕ್ತವಾಗಿದ್ದವು.  ಸ್ವತಃ ತನ್ನ ತಂದೆ ಜವಹರ್‌ಲಾಲ್ ನೆಹರೂ ಅವರ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿ ಇಂದಿರಾ ಗಾಂಧಿ ನಡೆದುಕೊಂಡರು.  ಪೂರ್ವ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿದಾಗ ಅದನ್ನು ಭಾರತಕ್ಕೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಲು ಆಕೆ ಹಂಚಿಕೆ ಹಾಕಿದರು.  ಅದಕ್ಕೆ ಆಕೆ ಹಂತಹಂತವಾಗಿ ಕಾರ್ಯಯೋಜನೆ ರೂಪಿಸಿದರು.  ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನೀ ಸೇನೆಯ ಶಕ್ತಿಯನ್ನು ಕುಂದಿಸುವುದು ಮೊದಲ ಹಂತ.  ಅದಕ್ಕಾಗಿ ಆಕೆ ಕೈಗೊಂಡ ಕ್ರಮ ವಿಶ್ವನಾಯಕರನ್ನು ಇಂದಿಗೂ ಬೆಚ್ಚಿಸುತ್ತಿದೆ.
            ತನ್ನ ವಾಯುಪ್ರದೇಶದ ಮೂಲಕ ಪಾಕಿಸ್ತಾನ ತನ್ನ ಎರಡೂ ಅಂಗಗಳ ನಡುವೆ ನೇರ ವಿಮಾನಯಾನ ಸಂಪರ್ಕ ಹೊಂದಲು ಭಾರತ ಅಂತರರಾಷ್ಟ್ರೀಯ ವಾಯುಯಾನ ನಿಯಮಗಳಿಗೆ ಅನುಗುಣವಾಗಿ ಅವಕಾಶ ನೀಡಿತ್ತು.  ಈ ಅವಕಾಶವನ್ನು ಕೇವಲ ನಾಗರೀಕರ ಹಾಗೂ ನಾಗರೀಕ ವಸ್ತ್ರುಗಳ ಸಾಗಾಣಿಕೆಗಾಗಿ ಮಾತ್ರ ಪಾಕಿಸ್ತಾನ ಉಪಯೋಗಿಸಿಕೊಳ್ಳಬೇಕಾಗಿತ್ತು.  ಆದರೆ ಪೂರ್ವ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಾಗ ಪಾಕಿಸ್ತಾನೀ ಸರಕಾರ ನಿಯಮಗಳನ್ನು ಉಲ್ಲಂಘಿಸಿ ಸೇನೆ ಮತ್ತು ಸೇನಾಸಾಮಗ್ರಿಗಳನ್ನೂ ರಹಸ್ಯವಾಗಿ ಭಾರತದ ವಾಯುಪ್ರದೇಶದ ಮೂಲಕ ಸಾಗಿಸತೊಡಗಿತು.  ಇದು ಭಾರತ ಸರಕಾರಕ್ಕೆ ತಿಳಿದರೂ ಸ್ಪಷ್ಟ ಆಧಾರಗಳಿಲ್ಲದೇ (ಈಗ ಪ್ರಚಲಿತವಿರುವ ಪರಿಭಾಷೆಯಲ್ಲಿ `ಹಾರ್ಡ್ ಎವಿಡೆನ್ಸ್') ಪಾಕಿಸ್ತಾನಕ್ಕೆ ನೀಡಿದ್ದ ಸೌಲಭ್ಯವನ್ನು ಹಿಂತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ.  ಪಾಕಿಸ್ತಾನದ ನಿಯಮೋಲ್ಲಂಘನೆಯನ್ನು ನೋಡಿಯೂ ಸುಮ್ಮನಿರುವ ಪರಿಸ್ಥಿತಿ ಭಾರತದ್ದು.
ಅದು ಮಾರ್ಚ್ ೭೧.  ಶ್ರೀನಗರದಿಂದ ಹೊರಟ ಇಂಡಿಯನ್ ಏರ್‌ಲೈನ್ಸ್ ವಿಮಾನವೊಂದನ್ನು ಕಶ್ಮೀರೀ ವಿಭಜನವಾದಿಯೊಬ್ಬ (ಆತನ ಹೆಸರು ತಕ್ಷಣಕ್ಕೆ ನೆನಪಾಗುತ್ತಿಲ್ಲ.  ಹಮೀದ್ ಖುರೇಶಿ ಅಂತ ಇರಬೇಕು) ಅಪಹರಿಸಿ ಲಾಹೋರ್‌ಗೆ ಕೊಂಡೊಯ್ದ.  ಭಾರತದ ಜೈಲುಗಳಲ್ಲಿರುವ ತನ್ನ ಸಹಚರರನ್ನು ಬಿಡುಗಡೆಗೊಳಿಸದಿದ್ದರೆ ಪ್ರಯಾಣಿಕರನ್ನು ಕೊಲ್ಲುವುದಾಗಿಯೂ, ವಿಮಾನವನ್ನು ಸ್ಪೋಟಿಸುವುದಾಗಿಯೂ ಬೆದರಿಕೆ ಇತ್ತ.  ಭಾರತ ಸರಕಾರ ಮಣಿಯಲಿಲ್ಲ.  ಕೊನೆಗೆ ಅಪಹರಣಕಾರ ಪ್ರಯಾಣಿಕರನ್ನು ಬಿಡುಗಡೆಗೊಳಿಸಿದ.  ಆದರೆ ವಿಮಾನವನ್ನು ನಾಶಪಡಿಸಿದ.  ಭಾರತಕ್ಕೆ ಇದು ಮುಖಭಂಗ.  ಉಭಯರಾಷ್ಟ್ರಗಳ ನಡುವೆ ವೃದ್ದಿಸುತ್ತಿದ್ದ ವೈಮನಸ್ಯದ ಆ ದಿನಗಳಲ್ಲಿ ಭಾರತಕ್ಕೆ ಹೀಗೆ ಅವಮಾನವಾದದ್ದು ಪಾಕಿಸ್ತಾನೀ ನಾಯಕರಿಗೆ ಸಂತೋಷ ತಂದಿತು.  ವಿದೇಶ ಮಂತ್ರಿ  ಜುಲ್ಫಿಕರ್ ಆಲಿ ಭುಟ್ಟೋ ಅವರು ಲಾಹೋರ್ ಏರ್‌ಪೋರ್ಟ್‌ಗೆ ಹೋಗಿ ಬಹಿರಂಗವಾಗಿಯೇ ಅಪಹರಣಕಾರನ ಬೆನ್ನುತಟ್ಟಿದರು.  ಅಪಹರಣಕಾರ ಪಾಕಿಸ್ತಾನದಲ್ಲಿ ಹೀರೋ ಅನಿಸಿಕೊಂಡ.  ಪಾಕಿಸ್ತಾನೀ ಸರಕಾರ ಅವನಿಗೆ ಇರಲು ಮನೆ, ಕೈತುಂಬಾ ಕಾಸು ಎಲ್ಲವನ್ನೂ ಕೊಟ್ಟು ತನ್ನ ಸಂತೋಷ ವ್ಯಕ್ತಪಡಿಸಿತು.  ಅಪಹರಣಕಾರನಿಗೆ ಪಾಕಿಸ್ತಾನ ನೀಡಿದ ಈ ಸಹಕಾರ/ಸೌಲಭ್ಯಗಳನ್ನು ಭಾರತವಿರೋಧೀ ಕೃತ್ಯವೆಂದು ಬಣ್ಣಿಸಿದ ಭಾರತ ಸರಕಾರ ಆ ನೆಪವೊಡ್ಡಿ ತನ್ನ ವಾಯುಪ್ರದೇಶವನ್ನು ಉಪಯೋಗಿಸಿಕೊಳ್ಳಲು ಪಾಕಿಸ್ತಾನಕ್ಕೆ ನೀಡಿದ್ದ ಸೌಲಭ್ಯವನ್ನು ಹಿಂತೆಗೆದುಕೊಂಡಿತು.  ಪರಿಣಾಮವಾಗಿ ಪೂರ್ವ ಪಾಕಿಸ್ತಾನ ತಲುಪಲು ಪಾಕಿಸ್ತಾನೀ ಸೇನೆ ಇಡೀ ಭಾರತ ಪರ್ಯಾಯದ್ವೀಪವನ್ನು ಸುತ್ತಿ ಶ್ರೀಲಂಕಾ ಮೂಲಕ ಸಾಗುವ ದಾರಿ ಹಿಡಿಯಬೇಕಾಯಿತು.  ಈ ಮಾರ್ಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು ಹಾಗೂ ದುಬಾರಿಯಾಗಿತ್ತು.   ಮುಂದೆ ಡಿಸೆಂಬರ್‌ನಲ್ಲಿ ಯುದ್ಧ ಆರಂಭವಾದಾಗ ಇದರ ಪರಿಣಾಮ ಪಾಕಿಸ್ತಾನೀ ಸೇನೆಯನ್ನು ಬಹುವಾಗಿ ತಟ್ಟಿತು.
ಆದರೆ ಇಡೀ ವಿಮಾನಾಪಹರಣ ಪ್ರಕರಣ ಭಾರತೀಯ ಗುಪ್ತಚರ ಇಲಾಖೆ ಖಂW ರಹಸ್ಯವಾಗಿ ರೂಪಿಸಿದ ಷಡ್ಯಂತ್ರವಾಗಿತ್ತು ಮತ್ತು ಅಪಹರಣಕಾರ ಭಾರತದ ಏಜಂಟ್ ಎನ್ನುವುದು ಮೂರುನಾಲ್ಕು ವರ್ಷಗಳ ನಂತರ ಬಹಿರಂಗಗೊಂಡಿತು.  ಪಾಕಿಸ್ತಾನಕ್ಕೆ ನೀಡಿದ್ದ ವಾಯುಮಾರ್ಗದ ಉಪಯೋಗದ ಸೌಲಭ್ಯವನ್ನು ಹಿಂತೆಗೆದುಕೊಳ್ಳಲು ನೆಪವೊಂದರ ಸೃಷ್ಟಿಗೋಸ್ಕರ ಇಂದಿರಾ ಗಾಂಧಿ ಸರಕಾರ ಹೂಡಿದ ಹೂಟ ಇದಾಗಿತ್ತು ಹಾಗೂ ಭಾರತ ಹೆಣೆದು ಹರಡಿದ ಜಾಲದಲ್ಲಿ ಪಾಕಿಸ್ತಾನ ಸುಲಭವಾಗಿ ಸಿಕ್ಕಿಕೊಂಡಿತ್ತು.  ಮುಂದೆ ಜೂನ್‌ನಲ್ಲಿ ಪಾಕಿಸ್ತಾನದೊಡನೆ ಯುದ್ಧ ಹೂಡಿ ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸಲು ಇಂದಿರಾ ಗಾಂಧಿ ಹಂಚಿಕೆ ಹೂಡಿದರು.  ಆದರೆ ಸೇನಾ ದಂಡನಾಯಕ ಮಾಣಿಕ್ ಶಾ ಇದನ್ನು ಪುರಸ್ಕರಿಸಲಿಲ್ಲ.  ಅವರ ಪ್ರಕಾರ ಬೇಸಗೆಯಲ್ಲಿ ಯುದ್ಧ ಹೂಡುವುದು ಸಾಮರಿಕ ದೃಷ್ಟಿಯಿಂದ ನಮಗೆ ಅನುಕೂಲಕರವಾಗಿರಲಿಲ್ಲ.  ಆ ಸಮಯದಲ್ಲಿ ಸಿಕ್ಕಿಂ ಮತ್ತು ಓಇಈಂ (ಓoಡಿಣh ಇಚಿseಡಿಟಿ ಈಡಿoಟಿಣieಡಿ ಂgeಟಿಛಿಥಿ ಅಥವಾ ಈಗಿನ ಅರುಣಾಚಲ ಪ್ರದೇಶ)ಗಳು ಚೈನಾ (ಟಿಬೆಟ್) ಜತೆ ಹೊಂದಿರುವ ಹಿಮಾಲಯದ ಗಡಿಯಲ್ಲಿನ ಪರ್ವತ ಕಣಿವೆಗಳು ಹಿಮರಹಿತವಾಗಿರುವುದರಿಂದ ಪಾಕಿಸ್ತಾನದ ಪರವಾಗಿ ಚೈನಾ ತನ್ನ ಸೇನೆಯನ್ನು ಸುಲಭವಾಗಿ ಈಶಾನ್ಯ ಭಾರತದೊಳಗೆ ನುಗ್ಗಿಸುವ ಅಪಾಯವಿದೆ ಎಂದು ಮಾಣಿಕ್ ಶಾ ತರ್ಕಿಸಿದರು.  ಜತೆಗೇ ಸಧ್ಯದಲ್ಲೇ ಮಾನ್ಸೂನ್ ಆರಂಭವಾಗುವುದರಿಂದ ನೂರೊಂದು ನದೀಕವಲುಗಳಿಂದ ಗಿಡಿದಿರುವ ಪೂರ್ವ ಪಾಕಿಸ್ತಾನದಲ್ಲಿ ಸೇನೆ ಮುಂದುವರೆಯಲು ಅತೀವ ತೊಡಕಾಗುತ್ತದೆ ಎಂದೂ ಮಾಣಿಕ್ ಶಾ ವಾದಿಸಿದರು.   ಅವರ ವಾದವನ್ನು ಇಂದಿರಾ ಗಾಂಧಿ ತಾಳ್ಮೆಯಿಂದ ಆಲಿಸಿದ್ದಷ್ಟೇ ಅಲ್ಲ, ವಾದದಲ್ಲಿನ ವಾಸ್ತವವನ್ನು ಪುರಸ್ಕರಿಸಿ ಯುದ್ಧವನ್ನು ಚಳಿಗಾಲಕ್ಕೆ ಮುಂದೂಡಲು ತೀರ್ಮಾನಿಸಿದರು. ಇಂದಿರಾ ಗಾಂಧಿಯವರ ಈ ವರ್ತನೆ ಅವರ ತಂದೆ ನೆಹರೂ ಅವರ ವರ್ತನೆಗೆ ತೀರಾ ವಿರುದ್ಧವಾಗಿತ್ತು.  ಎಲ್ಲ ವಿಷಯಗಳಲ್ಲೂ ತಾನು ಸರ್ವಜ್ಞ ಎಂಬಂತೆ ವರ್ತಿಸುತ್ತಿದ್ದ ಅವರು ಸೇನಾಧಿಕಾರಿಗಳ ಮಾತನ್ನು ಕೇಳುತ್ತಲೇ ಇರಲಿಲ್ಲ.  ನೆಹರೂ ಅವರೊಡನೆ ಹೆಣಗಾಡುವುದು ಮಾನಸಿಕವಾಗಿ ಅತೀವ ಕ್ಲೇಶಕರ ಎಂದು ಜನರಲ್ ತಿಮ್ಮಯ್ಯ ಪರಿತಪಿಸಿದ್ದು ನಮಗೆ ತಿಳಿದೇ ಇದೆ.  ನೆಹರೂ ಅವರ ಸ್ವಭಾವಕ್ಕೆ ವಿರುದ್ಧವಾಗಿ ಇಂದಿರಾ ಅವರು ತಮಗೆ ತಿಳಿಯದ ವಿಷಯಗಳಲ್ಲಿ `ತಿಳಿದವರ' ಸಲಹೆ ಪಡೆಯುವುದು ಸೂಕ್ತ ಎಂದು ಭಾವಿಸಿ ಅದರಂತೆ ನಡೆದುಕೊಳ್ಳುವ ವಿವೇಕವನ್ನು ಪ್ರದರ್ಶಿಸಿದರು.  ಮುಂದಿನ ತಿಂಗಳು ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸಿಂಜರ್ ಚೈನಾಗೆ ರಹಸ್ಯವಾಗಿ ಭೇಟಿ ನೀಡಿ ಅಮೆರಿಕಾ - ಚೈನಾ ಸೌಹಾರ್ದಕ್ಕೆ ನಾಂದಿ ಹಾಡಿದರು.  ಈ ಬೆಳವಣಿಗೆಯಿಂದಾಗಿ ಭಾರತದ ವಿರುದ್ಧ `ವಾಷಿಂಗ್‌ಟನ್ - ಬೀಜಿಂಗ್ - ಇಸ್ಲಾಮಾಬಾದ್'ಗಳು ಸೇರಿದ ಒಂದು ಂxis ರೂಪುಗೊಂಡಿತು.  ಭಾರತವೇನಾದರೂ ಪಾಕಿಸ್ತಾನದ ಮೇಲೆ ಯುದ್ಧ ಸಾರಿದರೆ ಅಮೆರಿಕಾ ಮತ್ತು ಚೈನಾಗಳು ಪಾಕಿಸ್ತಾನದ ಪರ ನಿಲ್ಲುವ ಸಾಧ್ಯತೆ ಕಂಡುಬಂದಿತು.  ಈ ಅಪಾಯವನ್ನು ಮನಗಂಡ ಇಂದಿರಾ ಗಾಂಧಿ ಮರುತಿಂಗಳೇ ಸೋವಿಯೆತ್ ಯೂನಿಯನ್ ಜತೆ ಒಂದು ಸ್ನೇಹ ಮತ್ತು ಸೌಹಾರ್ದಗಳ ಒಪ್ಪಂದಕ್ಕೆ ಸಹಿ ಹಾಕಿದರು.  ಈ ಒಪ್ಪಂದ ಮೆಲ್ನೋಟಕ್ಕೆ ಒಂದು ಸಾಮಾನ್ಯ ನಾಗರೀಕ ಒಪ್ಪಂದದಂತೆ ಕಂಡುಬಂದರೂ ವಾಸ್ತವವಾಗಿ ಇದು ಸೈನಿಕ ಒಪ್ಪಂದವೊಂದಕ್ಕೆ ಸಮಾನವಾಗಿತ್ತು.  ಈ ಒಪ್ಪಂದದ ಹನ್ನೆರಡನೇ ಕಲಮಿನ ಪ್ರಕಾರ ಅಗತ್ಯ ಬಿದ್ದರೆ ಭಾರತಕ್ಕೆ ಸೇನಾ ಸಹಾಯ ನೀಡಲು ಸೋವಿಯೆತ್ ಯೂನಿಯನ್ ಬದ್ಧವಾಗಿತ್ತು.  ಪಾಕಿಸ್ತಾನದ ಜತೆಗಿನ ತನ್ನ ಯುದ್ಧದಲ್ಲಿ ಅಮೆರಿಕಾ ಮತ್ತು ಚೈನಾಗಳು ಪ್ರವೇಶಿಸದಂತೆ ತಡೆಯಲು ಇಂದಿರಾ ಗಾಂಧಿ ರೂಪಿಸಿದ ತಂತ್ರ ಇದಾಗಿತ್ತು.
ಇದೆಲ್ಲದರ ಪರಿಣಾಮವಾಗಿ ಭಾರತ ೧೯೭೧ರಲ್ಲಿ ಅಭೂತಪೂರ್ವ ಜಯ ಗಳಿಸಿತು.  ನಿಜ ಹೇಳಬೇಕೆಂದರೆ ಅದು ಸ್ವತಂತ್ರ ಭಾರತ ಗಳಿಸಿದ ಏಕೈಕ ನಿರ್ಣಾಯಕ ವಿಜಯ.  ೧೯೪೭-೪೮ರಲ್ಲಿ ನೆಹರೂ ಅವಸರವಸರವಾಗಿ ಕದನವಿರಾಮ ಘೋಷಿಸಿ ಕಾಶ್ಮೀರದ ಮೂರನೆಯ ಒಂದು ಭಾಗ ಪಾಕಿಸ್ತಾನದ ಅಧೀನದಲ್ಲಿ ಉಳಿಯಲು ಕಾರಣರಾದರು.  ಅವರದೇ ಅವಾಸ್ತವಿಕ ನಿಲುವುಗಳಿಂದಾಗಿ ೧೯೬೨ರಲ್ಲಿ ಚೈನಾದ ಜತೆಗಿನ ಯುದ್ಧದಲ್ಲಿ ನಾವು ಸೋಲು ಅನುಭವಿಸಿದೆವು.  ೧೯೬೫ರಲ್ಲಿ ಲಾಲ್ ಬಹಾದುರ್ ಶಾಸ್ತ್ರಿಯವರ ದಿಟ್ಟ ಹಾಗೂ ವಸ್ತುನಿಷ್ಟ ನಿಲುವುಗಳಿಂದಾಗಿ ಕಾಶ್ಮೀರದ ಮೇಲಿನ ಪಾಕಿಸ್ತಾನೀ ದುರಾಕ್ರಮಣವನ್ನು ನಾವು ಯಶಸ್ವಿಯಾಗಿ ತಡೆಗಟ್ಟಿದರೂ ಅದು ಒಂದು ನಿರ್ಣಾಯಕ ಗೆಲುವಾಗಿರಲಿಲ್ಲ.  ಆದರೆ ೭೧ರ ಈ ವಿಜಯ, ಪಾಕಿಸ್ತಾನದ ಸಂಪೂರ್ಣ ಸೋಲು ಮತ್ತದರ ವಿಭಜನೆಯಿಂದಾಗಿ ಸ್ವತಂತ್ರ ಭಾರತದ ಮೊದಲ ಹಾಗೂ ಏಕೈಕ ನಿರ್ಣಾಯಕ ಗೆಲುವೆಂದು ಪರಿಗಣಿತವಾಗಿದೆ.  ಪಾಕಿಸ್ತಾನೀ ಸೇನಾಧಿಕಾರಿಯೊಬ್ಬನ ಮಾತುಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮೂರು ಯುದ್ಧಗಳನ್ನು ಮೂರು ಟೆಸ್ಟ್‌ಗಳ ಒಂದು ಕ್ರಿಕೆಟ್ ಸರಣಿಗೆ ಹೋಲಿಸಬಹುದು.  ೪೭-೪೮ರ ಪಂದ್ಯದಲ್ಲಿ ಪಾಕಿಸ್ತಾನ ವಿಜಯಿಯಾಯಿತು.  ೬೫ರ ಪಂದ್ಯ ಡ್ರಾ ಆಯಿತು.  ೭೧ರ ಪಂದ್ಯದಲ್ಲಿ ಭಾರತ ಭಾರೀ ಗೆಲುವು ಸಾಧಿಸಿತು.  ಭಾರತ ಇನ್ನಿಂಗ್ಸ್ ವಿಜಯ ಸಾಧಿಸಿತು ಎಂದು ಹೇಳುವುದನ್ನು ಅವನ ಸ್ವಾಭಿಮಾನವೇ ತಡೆದಿರಬೇಕು.    ಇನ್ನಿಂಗ್ಸ್ ವಿಜಯ ಸಾಧ್ಯವಾದದ್ದು ಇಂದಿರಾ ಗಾಂಧಿಯವರ ಚಾಣಾಕ್ಷತನದಿಂದ.  ಈ ವಿಜಯದಿಂದಾಗಿ ವಿಶ್ವ ಭಾರತವನ್ನು ನೋಡುವ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಯಿತು.  ಚೈನಾ ಮತ್ತು ಪಾಕಿಸ್ತಾನಗಳೆರಡೂ ಜತೆಯಾಗಿ ಸೇರಿಕೊಂಡು ನಮ್ಮ ಪೂರ್ವೋತ್ತರ ರಾಜ್ಯಗಳ ಮೇಲೆ ಒತ್ತಡ ಹೇರುವ ಅಪಾಯ ದೂರವಾಯಿತು.
ಇಂದಿರಾ ಗಾಂಧಿ ಸರಕಾರ ೭೪ರಲ್ಲಿ ಅಣುಬಾಂಬ್ ಪರೀಕ್ಷಣೆ ನಡೆಸಿದ್ದರಿಂದಾಗಿ ಪಾಕಿಸ್ತಾನ ಸಹಾ ಬಾಂಬ್ ತಯಾರಿಕೆಯಲ್ಲಿ ತೊಡಗಿತು ಎಂದು ಕೆಲವರು ವಾದಿಸುತ್ತಾರೆ.  ಆದರೆ ಇದು ಸತ್ಯದೂರ.  ಪಾಕಿಸ್ತಾನಕ್ಕೆ ಅಣ್ವಸ್ತ್ರದ ಅಗತ್ಯವಿದೆಯೆಂದೂ, ಹುಲ್ಲು ತಿಂದಾದರೂ ಪಾಕಿಸ್ತಾನೀಯರು ಅದನ್ನು ಪಡೆದುಕೊಳ್ಳುವುದಾಗಿಯೂ ವಿದೇಶ ಮಂತ್ರಿ ಜುಲ್ಪಿಕರ್ ಆಲಿ ಭುಟ್ಟೋ ೧೯೬೭ರಲ್ಲೇ ಘೋಷಿಸಿದ್ದ.  ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಆತ ಅಸ್ತಿಭಾರ ಹಾಕಿದ್ದು ತಾನು ಅಧ್ಯಕ್ಷನಾದ ಒಂದು ತಿಂಗಳ ಒಳಗೆ, ೨೦ ಜನವರಿ ೧೯೭೨ರಲ್ಲಿ.  ಅಂದರೆ ಭಾರತ ಅಣ್ವಸ್ತ್ರ ಪರೀಕ್ಷಣೆ ನಡೆಸುವುದಕ್ಕೆ ಎರಡು ವರ್ಷಗಳಿಗೂ ಹಿಂದೆ.  ಇದರರ್ಥ, ಭಾರತ ಅಣ್ವಸ್ತ್ರ ಹೊಂದಿರಲಿ ಇಲ್ಲದಿರಲಿ, ಪಾಕಿಸ್ತಾನ ಮಾತ್ರ ಅದನ್ನು ಹೊಂದಲು ಉತ್ಕಟವಾಗಿ ಬಯಸಿತ್ತು.  ನಮ್ಮ ಅಣುಕಾರ್ಯಕ್ರಮಗಳು ಶಾಂತಿಯುತ ಎಂದು ಹೇಳುಹೇಳುತ್ತಲೇ ಇಂದಿರಾ ಗಾಂಧಿ ರಹಸ್ಯವಾಗಿ ಅಣ್ವಸ್ತಗಳನ್ನು ಉತ್ಪಾದಿಸಿ ಸಿದ್ಧವಾಗಿರಿಸಿದ್ದರು.  ಇದರ ಪರಿಣಾಮವಾಗಿಯೇ ೧೯೯೦ರ ಜುಲೈನಲ್ಲಿ ಪಾಕಿಸ್ತಾನ ನಮ್ಮ ಮೇಲೆ ಅಣ್ವಸ್ತ್ರ ದಾಳಿ ನಡೆಸುವ ಬೆದರಿಕೆ ಒಡ್ಡಿದಾಗ ವಿ ಪಿ ಸಿಂಗ್ ಸರಕಾರ ಅದೇ ಭಾಷೆಯಲ್ಲಿ ಇಸ್ಲಾಮಾಬಾದ್‌ಗೆ ಪ್ರತ್ಯುತ್ತರ ನೀಡಿ ಪಾಕ್ ಯುದ್ದೋತ್ಸಾಹಿಗಳನ್ನು ತಣ್ಣಗಾಗಿಸಿದ್ದು ಈಗ ಇತಿಹಾಸ.  ಒಂದುವೇಳೆ ಭಾರತದ ಬಳಿ ಆಗ ಅಣ್ವಸ್ತ್ರಗಳು ಇಲ್ಲದೇ ಹೋಗಿದ್ದರೆ...!
ಇಷ್ಟಾಗಿಯೂ ಪಾಕಿಸ್ತಾನ ಅಣ್ವಸ್ತ್ರ ಗಳಿಸಿಕೊಳ್ಳಲು ಭಾರತ ಅವಕಾಶ ನೀಡಬಾರದಾಗಿತ್ತು ಎಂಬುದು ನನ್ನ ಅಭಿಪ್ರಾಯ.   ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಕಳೆದ ಎರಡು ದಶಕಗಳಿಂದ ಅವ್ಯಾಹತವಾಗಿ ಸಾಗುತ್ತಿರುವುದಕ್ಕೆ ಇಸ್ಲಾಮಾಬಾದ್ ಅಣ್ವಸ್ತ್ರಗಳನ್ನು ಹೊಂದಿರುವುದು ಪ್ರಬಲ ಕಾರಣವಾಗಿದೆ.  ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಾಶಪಡಿಸಲು ಭಾರತೀಯ ಸೇನೆ ಯಾವಾಗ ಪ್ರಯತ್ನಿಸಿದರೂ ಪಾಕಿಸ್ತಾನ ಅಣ್ವಸ್ತ್ರಗಳನ್ನು ಝಳಪಿಸಿ ಹಿಮ್ಮೆಟ್ಟಿಸುತ್ತಿದೆ.  (ಇದರ ಬಗ್ಗೆ ಹಿಂದೆಯೇ ಬರೆದಿದ್ದೇನೆ.)  ಪಾಕಿಸ್ತಾನದ ರಿಯಾಕ್ಟರ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ನಮ್ಮ ವಾಯುಪಡೆಗಿದ್ದರೂ ಇಂದಿರಾ ಗಾಂಧಿ ಆ ದಿಕ್ಕಿನಲ್ಲಿ ಯಾಕೆ ಯೋಚಿಸಲಿಲ್ಲ ಎಂದು ನನಗೆ ಅಚ್ಚರಿಯಾಗುತ್ತದೆ.  ಕೊನೇಪಕ್ಷ ಇಸ್ರೇಲೀಯರು ಅಂತಹ ಯೋಜನೆ ರೂಪಿಸಿ ನಮ್ಮ ಸಹಕಾರ ಕೇಳಿದಾಗಲಾದರೂ ನಾವು ಮುಂದುವರಿಯಬೇಕಾಗಿತ್ತು.  ಇಂದಿರಾ ಗಾಂಧಿ ಹಾಗೇಕೆ ಮಾಡಲಿಲ್ಲ ಎಂಬುದು ಒಂದು ಉತ್ತರಿಸಲಾಗದ ಪ್ರಶ್ನೆ.  ಇಂದಿರಾ ಗಾಂಧಿಯವರ ಹತ್ಯೆಗೆ ನಾಲ್ಕು ತಿಂಗಳು ಮೊದಲು ಅವರನ್ನು ಭೇಟಿ ಮಾಡಿದ ಪತ್ರಕರ್ತ ತಾರಿಖ್ ಆಲಿ ತಮ್ಮ ಇತ್ತೀಚಿನ ಕೃತಿ ಆUಇಐ ನಲ್ಲಿ ಈ ಬಗ್ಗೆ ಕೆಲವು ಕುತೂಹಲಕರ ಮಾಹಿತಿ ನೀಡುತ್ತಾರೆ.  ಸಂಭಾಷಣೆಯ ನಡುವೆ ಶ್ರೀಮತಿ ಗಾಂಧಿಯವರು ...ಪಾಕ್ ರಿಯಾಕ್ಟರ್‌ಗಳನ್ನು ನಾಶಪಡಿಸಲು ನಮಗೆ ಇಸ್ರೇಲೀಯರ ಸಹಕಾರ ಬೇಕಿಲ್ಲ.  ನಮಗೆ ಅಗತ್ಯವೆನಿಸಿದಾಗ ನಾವೇ ಅದನ್ನು ಮಾಡುತ್ತೇವೆ ಎಂದು ಹೇಳಿದರಂತೆ.  ಅವರ ಮನದಲ್ಲೇನಿತ್ತೋ, ಅವರೇನು ಮಾಡಬೇಕೆಂದು ಬಯಸಿದ್ದರೋ ಅದು ಯಾರಿಗೂ ಗೊತ್ತಿಲ್ಲ.  ಹಂತಕರ ಗುಂಡಿಗೆ ಬಲಿಯಾಗದಿದ್ದರೆ ಅವರೇನಾದರೂ ಮಾಡುತ್ತಿದ್ದರೋ ಏನೋ, ಗೊತ್ತಿಲ್ಲ.
ಈ ಹಂತಕರ ಗುಂಡುಗಳನ್ನೇ ಚರ್ಚೆಗೆತ್ತಿಕೊಳ್ಳುವಾ.  ಭಿಂದ್ರಾಂವಾಲೇಯನ್ನು ಎತ್ತಿಕಟ್ಟಿದ್ದೇ ಇಂದಿರಾ ಗಾಂದಿ, ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದರು ಎಂದು ಕೆಲವರು ಕ್ಲೀಶೆಯಾಗುವ ಮಟ್ಟಿಗೆ ಹೇಳುತ್ತಾ ಬಂದಿದ್ದಾರೆ.  eಚಿಟಠಿoiiಞ ಅನುಸರಿಸಿದ ಇಂದಿರಾ ಗಾಂಧಿ ಅದಕ್ಕೇ ಬಲಿಯಾದರು ಎಂಬ ಮಾತಿನ ಹಿಂದಿನ ತರ್ಕ ಇದೇ ಇರಬಹುದೇನೋ.  ಆದರೆ ಈ ಆಪಾದನೆ ವಸ್ತುನಿಷ್ಟ ತರ್ಕಕ್ಕೆ ವಿರುದ್ಧವಾದುದು ಎಂಬುದು ನನ್ನ ಅಭಿಪ್ರಾಯ.  ವಾಸ್ತವದಲ್ಲಿ ಖಲಿಸ್ತಾನ್ ಸಮಸ್ಯೆಯ ವಿಷಯದಲ್ಲಿ ಇಂದಿರಾ ಗಾಂಧಿ ಪೂರ್ಣವಾಗಿ ಡಿeಚಿಟಠಿoiiಞ ಅನುಸರಿಸಲಿಲ್ಲ, ಅನುಸರಿಸಿದ್ದರೆ ಆಕೆ `ಬಲಿ'ಯಾಗುತ್ತಿರಲಿಲ್ಲ ಎಂಬುದು ಇಡೀ ಪ್ರಕರಣವನ್ನು ಯಾವುದೇ ಪೂರ್ವಾಗ್ರಹವೂ ಇಲ್ಲದೇ ವಿಶ್ಲೇಶಿಸಿದರೆ ಅರಿವಾಗುತ್ತದೆ.
ಪಂಜಾಬಿನಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದು ನಿಂತಿದ್ದ ಅಕಾಲಿದಲದ ಶಕ್ತಿಯನ್ನು ಕುಂದಿಸುವ ಪ್ರಯತ್ನ ಮಾಡುವುದು ಕಾಂಗ್ರೆಸ್ ನಾಯಕಿಯಾಗಿ ಇಂದಿರಾ ಗಾಂಧಿಯವರಿಗೆ ಅಗತ್ಯವಾಗಿತ್ತು.  ಅಕಾಲಿ ನಾಯಕತ್ವಕ್ಕೆ ತಲೆಬಾಗದೇ ಇದ್ದ ಜರ್ನೈಲ್ ಸಿಂಗ್ ಭಿಂದ್ರಾಂವಾಲೇ ಎಂಬ ಯುವ ಅಕಾಲಿಯನ್ನು ಈ ವಿಷಯದಲ್ಲಿ ಉಪಯೋಗಿಸಿಕೊಳ್ಳಲು ಶ್ರೀಮತಿ ಗಾಂಧಿ ಬಯಸಿದ್ದರಲ್ಲಿ ಅಸಹಜತೆಯೇನೂ ಇಲ್ಲ.  ರಾಜಕೀಯದಲ್ಲಿ ಇದು ಹೊಸದೇನಲ್ಲ.  ಅಕಾಲಿಗಳ ವಿರುದ್ಧ ಭಿಂದ್ರಾಂವಾಲೇಯನ್ನು ಇಂದಿರಾ ಗಾಂಧಿ ಎತ್ತಿಕಟ್ಟುವಾಗ ಈತ ಮುಂದೊಮ್ಮೆ ರಾಷ್ಟ್ರ ವಿರೋಧಿಯಾಗಿ ಬೆಳೆದು ನಿಲ್ಲುತ್ತಾನೆಂದು ಯಾರೂ ಊಹಿಸಿರಲಿಲ್ಲ.  ಆ ಆತಂಕ ಸಹಜವಾಗಿಯೇ ಇಂದಿರಾ ಗಾಂಧಿಯವರಿಗೂ ಇರಲಿಲ್ಲ.   ಎಲ್ಲರ ಊಹೆಗಳನ್ನೂ ಮೀರಿ ಆತ ಉಗ್ರ ರಾಷ್ಟ್ರವಿರೊಧಿಯಾದ.  ಪವಿತ್ರ ಸ್ಥಳವಾದ ಸ್ವರ್ಣಮಂದಿರ ಭಯೋತ್ಪಾದಕರ ಅಡಗುದಾಣವಾಗಿ ಬದಲಾಯಿತು.  ಯಾವಾಗ ಅವನು ರಾಷ್ಟ್ರವಿರೋಧಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದನೋ ಆಗ ಅವನನ್ನು ನಿರ್ವೀರ್ಯಗೊಳಿಸುವ ಪ್ರಯತ್ನಗಳನ್ನು ಇಂದಿರಾ ಗಾಂಧಿ ಸರಕಾರ ಕೈಗೊಂಡಿತು.  ಭಿಂದ್ರಾಂವಾಲೆ ಅಕಾಲಿಗಳ ವಿರುದ್ಧದ ಶಕ್ತಿಯಾಗಿ ಬೆಳೆಯಬೇಕೆಂದು ಶ್ರೀಮತಿ ಗಾಂಧಿ ಬಯಸಿದ್ದರು, ರಾಷ್ಟ್ರವಿರೋಧಿ ಶಕ್ತಿಯಾಗಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.  ಭಯೋತ್ಪಾದಕರನ್ನು ಮಣಿಸುವ ಸೀಮಿತ ಕಾರ್ಯತಂತ್ರಗಳು ವಿಫಲವಾದಾಗ ಅವರನ್ನು ನೇರವಾಗಿ ಎದುರಿಸುವ ಯೋಜನೆಯನ್ನು ಇಂದಿರಾ ಗಾಂಧಿ ಸರಕಾರ ರೂಪಿಸಿತು.  ಸ್ವರ್ಣಮಂದಿರದಲ್ಲಿನ ಭಯೋತ್ಪಾದಕರ ಅಡಗುದಾಣವನ್ನು ನಾಶಪಡಿಸದೇ ಖಲಿಸ್ತಾನೀ ಭಯೋತ್ಪಾದಕರನ್ನು ಅಡಗಿಸಲು ಸಾಧ್ಯವಿಲ್ಲ ಎಂದರಿತ ಭಾರತೀಯ ಸೇನೆ, ಜೂನ್ ೩ - ೪, ೧೯೮೪ರಂದು ಕಾರ್ಯಾಚರಣೆ ಕೈಗೊಂಡಿತು.  ಈ ಆಪರೇಶನ್ ಬ್ಲೂಸ್ಟಾರ್ ರಾಷ್ಟ್ರವಿರೋಧಿ ಶಕ್ತಿಗಳನ್ನು ಮಣಿಸುವುದರಲ್ಲಿ ಇಂದಿರಾ ಗಾಂಧಿ ಸರಕಾರದ ದೃಡಸಂಕಲ್ಪದ ದ್ಯೋತಕ.  ಸೇನೆ ಕಳುಹಿಸಿ ಇಂದಿರಾ ಗಾಂಧಿ ಮಂದಿರವನ್ನು ಅಪವಿತ್ರಗೊಳಿಸಿದರು ಎಂಬ ವಾದ ಹುರುಳಿಲ್ಲದ್ದು.  ಸ್ವರ್ಣಮಂದಿರದ ಪವಿತ್ರತೆ ಹಾಳಾಗಿದ್ದರೆ ಅದು ಮಂದಿರವನ್ನು ಯಾವಾಗ ಕೊಲೆಗಡುಕರು, ಭಯೋತ್ಪಾದಕರು ತಮ್ಮ ಅಡಗುದಾಣವನ್ನಾಗಿ ಪರಿವರ್ತಿಸಿದರೋ ಆವಾಗಲೇ ಆಯಿತು.  ಸೇನೆ ಪ್ರವೇಶಿಸಿದಾಗಲ್ಲ.  ಈ ಕಾರ್ಯಾಚರಣೆಯ ಸಮಯದಲ್ಲಿ ಸೇನೆ ವರ್ತಿಸಿದ ರೀತಿಯನ್ನೂ ನಾವು ಗಮನಿಸಬೇಕು.  ಸೈನಿಕರು ಏಕಾಏಕಿ ಮಂದಿರದೊಳಗೆ ಪ್ರವೇಶಿಸಲಿಲ್ಲ.  ಶರಣಾಗತರಾಗಲು ಮಾಡಿಕೊಂಡ ಹಲವಾರು ಮನವಿಗಳಿಗೆ ಭಯೋತ್ಪಾದಕರು ಸೊಪ್ಪು ಹಾಕದಿದ್ದಾಗ, ಸೈನಿಕರ ವಿರುದ್ಧ ಮಂದಿರದ ಒಳಗಿನಿಂದ ನಿರಂತರವಾಗಿ ಗುಂಡುಗಳನ್ನು ಹಾರಿಸತೊಡಗಿದಾಗ ಅಂತಿಮ ಮಾರ್ಗವಾಗಿ ಸೇನೆ ಮಂದಿರದೊಳಗೆ ಪ್ರವೇಶಿಸಿತು. ಬೂಟುಗಳನ್ನು ಕಳಚಿಟ್ಟು, ಮಂದಿರದ ಹೊಸ್ತಿಲಿಗೆ ತಲೆಬಾಗಿ ವಂದಿಸಿ ಸೈನಿಕರು ಒಳಪ್ರವೇಶಿಸಿದರು.   ಹಾಗೆ ಮಾಡುವಾಗ ಸೈನಿಕರು ಭಯೋತ್ಪಾದಕರ ಗುಂಡುಗಳಿಗೆ ನೇರವಾಗಿ ನಿಲ್ಲುವಂತಹ ಪ್ರತಿಕೂಲ ಪರಿಸ್ಥಿತಿಗೊಳಗಾದರು.  ಇದರಿಂದಾಗಿ ಮುನ್ನೂರರಷ್ಟು ಸೈನಿಕರು ಜೀವತೆರುವಂತಾಯಿತು.  ಪ್ರಪಂಚದ ಯಾವ ಸೇನೆಯೂ ತನ್ನ ಕಾರ್ಯಾಚರಣೆಯನ್ನು ಈ ಪರಿಯಾಗಿ ಅರಂಭಿಸಿದ ಮತ್ತೊಂದು ಉದಾಹರಣೆ ಇಲ್ಲ.  ಪವಿತ್ರ ಸ್ಥಳವೊಂದನ್ನು ಭಯೋತ್ಪಾದಕ ಕೃತ್ಯಗಳಿಗೆ ಇಷ್ಟು ಧೀರ್ಘಕಾಲ ಉಪಯೋಗಿಸಿಕೊಳ್ಳಲು ರಾಷ್ಟ್ರವೊಂದು ಅವಕಾಶ ನೀಡಿದ ಉದಾಹರಣೆ ಸಹಾ ಮತ್ತೊಂದಿಲ್ಲ.  ೧೯೭೯ರ ನವೆಂಬರ್‌ನಲ್ಲಿ ಮೆಕ್ಕಾದ ಪವಿತ್ರ ಮಸೀದಿಯಲ್ಲಿ ನಡೆದ ಘಟನಾವಳಿಗಳನ್ನು ನೆನಪಿಸಿಕೊಳ್ಳಿ.  ಸೌದಿ ಅರೇಬಿಯಾ ಸರಕಾರ ಕೈಗೊಂಡ ಕ್ರಮಗಳನ್ನೇ ಇಂದಿರಾ ಗಾಂಧಿ ಸರಕಾರ ಕೈಗೊಂಡಿದ್ದರೆ ಖಲಿಸ್ತಾನೀ ಭಯೊತ್ಪಾದನೆ ೧೯೮೧ರಲ್ಲೇ ಅಂದರೆ ಮೊಳಕೆಯಲ್ಲೇ ಇತಿಶ್ರೀಯಾಗುತ್ತಿತ್ತು.
ಈ ಆಪರೇಷನ್ ಬ್ಲೂಸ್ಟಾರ್‌ನಿಂದಾಗಿಯೇ ಮನನೊಂದ ಸಿಖ್ ಬಾಂಧವರು ರೊಚ್ಚಿಗೆದ್ದು ಇಂದಿರಾ ಗಾಂಧಿಯವರನ್ನು ಕೊಲೆಗೈದರು ಎಂಬ ವಾದ ಪ್ರಚಲಿತವಿದೆ.  ಬ್ಲೂಸ್ಟಾರ್ ಘಟನೆ ಸಿಖ್ಖರ ಮನನೋಯಿಸಿದ್ದೂ ನಿಜ.
ಧರ್ಮವೆಂಬುದು ಅಫೀಮು ಎಂದು ಕಾರ್ಲ್ ಮಾರ್ಕ್ಸ್ ಹೇಳಿರುವುದನ್ನು ನಾವ್ಯಾರೂ ಮರೆತಿಲ್ಲ.  ಕೆಲವು ವಸ್ತುನಿಷ್ಟ ಕ್ರಮಗಳಿಂದ ಇಂದಿರಾ ಗಾಂಧಿ ತಮ್ಮ ಜೀವಕ್ಕೆ ಒದಗಿದ್ದ ಅಪಾಯವನ್ನು ದೂರ ಸರಿಸಬಹುದಾಗಿತ್ತು.  ಆಪರೇಷನ್ ಬ್ಲೂಸ್ಟಾರ್ ಹಿನ್ನೆಲೆಯಲ್ಲಿ ಸಿಖ್ ಅಂಗರಕ್ಷಕರನ್ನು ಹೊಂದಿರುವುದು ವ್ಯಾವಹಾರಿಕವಾಗಿ ಉಚಿತವಲ್ಲ ಎಂದ ಅಧಿಕಾರಿಗಳ ಮಾತುಗಳನ್ನು ಇಂದಿರಾ ಗಾಂಧಿ ಧಿಕ್ಕರಿಸಿದರು.  ಸಿಖ್ ಭಾಂಧವರ ಬಗ್ಗೆ ತಮಗೆ ಯಾವುದೇ ಆತಂಕವಿಲ್ಲ ಎಂದು ಘೋಷಿಸಿದರು.  ಆದರೆ ಅಂತಿಮವಾಗಿ ಅವರ ಬಲಿ ತೆಗೆದುಕೊಂಡದ್ದು ಅವರು ವಿಶ್ವಾಸವಿರಿಸಿದ್ದ ಸಿಖ್ ಅಂಗರಕ್ಷಕರೇ.  ಅಧಿಕಾರಿಗಳ ಮಾತುಗಳನ್ನು ಪುರಸ್ಕರಿಸಿ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಇಬ್ಬರನ್ನೂ ಅಂಗರಕ್ಷಣ ಪಡೆಯಿಂದ ಬೇರೆಡೆಗೆ ವರ್ಗಾಯಿಸಿದ್ದಿದರೆ  ಹಾಗೂ ಕೆಲವು ವರ್ಷಗಳವರೆಗೆ ಅಂಗರಕ್ಷಣ ಪಡೆಯಲ್ಲಿ ಯಾವುದೇ ಸಿಖ್ ಪೇದೆ/ಸೈನಿಕ ಇಲ್ಲದಂತೆ ನೋಡಿಕೊಂಡಿದ್ದರೆ ಹಾಗೂ ಈ ಕ್ರಮಗಳನ್ನು ಪತ್ರಕರ್ತರಿಗೂ ಅರಿವಾಗದಂತೆ ರಹಸ್ಯವಾಗಿ ಜಾರಿಗೊಳಿಸಿದ್ದರೆ ಅಕ್ಟೋಬರ್ ೩೧, ೧೯೮೪ ಶ್ರೀಮತಿ ಇಂದಿರಾ ಗಾಂಧಿಯವರ ಬದುಕಿನ ಕೊನೆಯ ದಿನವಾಗುತ್ತಿರಲಿಲ್ಲ.  ಆಕೆ ನಿಜವಾಗಿಯೂ ಪೂರ್ಣಪ್ರಮಾಣದ ಡಿeಚಿಟಠಿoiiಞ ಅನುಸರಿಸಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು.
ಜತೆಗೇ ಇಡೀ ಪ್ರಕರಣದಲ್ಲಿ ಪಾಕಿಸ್ತಾನದ ಜಿಯಾ ಉಲ್ ಹಕ್ ಸರಕಾರದ ಪಾತ್ರದ ಬಗ್ಗೆ ನಮ್ಮಲ್ಲಿ ಹೆಚ್ಚು ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ.  ಇಡೀ ಖಲಿಸ್ತಾನ್ ಚಳುವಳಿ ಪಾಕಿಸ್ತಾನ ಪ್ರೇರಿತ.  ಸಿಖ್ಕರನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನು ಪಾಕಿಸ್ತಾನ ಅರವತ್ತರ ದಶಕದಲ್ಲೇ ಆರಂಭಿಸಿತು.  ೬೫ರ ಯುದ್ಧದ ಆರಂಭದ ದಿನಗಳಲ್ಲಿ ಸಿಖ್ಖರನ್ನು ಹಿಂದೂಗಳ ವಿರುದ್ಧ ಪ್ರಚೋದಿಸುವ ಹಲವಾರು ಕಾರ್ಯಕ್ರಮಗಳನ್ನು ರೇಡಿಯೋ ಪಾಕಿಸ್ತಾನದ ಲಾಹೋರ್ ಕೇಂದ್ರ ಅವಿರತವಾಗಿ ಪ್ರಸಾರ ಮಾಡಿತು.  ಅದು ಕೊನೆಗೂ ನಿಂತದ್ದು ಭಾರತೀಯ ಸೇನೆ ರೇಡಿಯೋ ಕೇಂದ್ರವನ್ನು ಧ್ವಂಸಗೊಳಿಸಿದಾಗ.  ಮತ್ತೆ, ಇಂದಿರಾ ಗಾಂಧಿಯವರ ಹತ್ಯೆಯಲ್ಲಿ ಜಿಯಾ ಉಲ್ ಹಕ್‌ರ ಕೈವಾಡವಿತ್ತು, ಅದಕ್ಕೆ ಪ್ರತಿಯಾಗಿ ರಾಜೀವ್ ಗಾಂಧಿ ಅವರು ಜಿಯಾ ಅವರ ತಲೆದಂಡ ಕೇಳಿದರು, ಜಿಯಾ ಹತ್ಯೆಗೆ ಇದು ಮೂಲ ಎಂದು ಪಾಕಿಸ್ತಾನದ ಸೇನೆಯ ಉನ್ನತ ವಲಯಗಳಲ್ಲಿ ವದಂತಿ ಈಗಲೂ ಇದೆ.  ಇವೆಲ್ಲದರ ಹಿಂದಿನ ಸತ್ಯಗಳು ನಮ್ಮಂತಹ ಸಾಮಾನ್ಯ ನಾಗರೀಕರ ಕೈಗೆ ಬಹುಷಃ ಎಂದಿಗೂ ಸಿಗುವುದಿಲ್ಲ.  ಆದರೂ ಇಂದಿರಾ ಗಾಂಧಿಯವರು ಮತ್ತೆ ಮತ್ತೆ ಉಲ್ಲೇಖಿಸುತ್ತಿದ್ದ ಜಿoಡಿeigಟಿ hಚಿಟಿಜ ಯಾವುದು ಎಂದು ಅರಿತರೆ ಸ್ವತಂತ್ರ ಭಾರತ ಅನೇಕ ಸಮಸ್ಯೆಗಳ ಮೂಲಗಳಿಗೆ ನಾವು ತಲುಪಬಹುದು.
ಇತರ ಆಂತರಿಕ ವ್ಯವಹಾರಗಳಲ್ಲಿ ಇಂದಿರಾ ಗಾಂಧಿ ತೋರಿದ ಧೀಮಂತಿಕೆ ಸಹಾ ಗಮನಾರ್ಹ.  ರಾಜಧನದ ರದ್ದತಿ, ಕೆಲವೇ ಪರಿವಾರಗಳ ಸೊತ್ತಾಗಿದ್ದ ಬ್ಯಾಂಕುಗಳ ರಾಷ್ಟ್ರೀಕರಣಗಳನ್ನು ಆಕೆ ಕೈಗೊಂಡ ಬಗೆ (ಅದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲೂ ಆಕೆ ಹಿಂಜರಿಯಲಿಲ್ಲ) ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಭೂತಪೂರ್ವ.  ಆದರೆ ತುರ್ತುಪರಿಸ್ಥಿತಿಯನ್ನು ಹೇರಿದ್ದು ಮಾತ್ರ ಆಕೆಯ ಆಡಳಿತದ ಒಂದು ಕಪ್ಪುಚುಕ್ಕೆ.  ಲೋಕಸಭೆಗೆ ಆಕೆಯ ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಆಕೆ ಮನ್ನಿಸಬೇಕಾಗಿತ್ತು.
೭೭ರ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಜನತಾ ಪರಿವಾರದ ಪ್ರಮುಖರು ವರ್ತಿಸಿದ ಬಗೆ ಮಾತ್ರ ಇಂದಿರಾ ಗಾಂಧಿ ಈ imಠಿಚಿಣieಟಿಣ oಟಜ meಟಿ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರು ಎಂಬುದನ್ನು ಎತ್ತಿತೋರಿಸುತ್ತದೆ.  ರಾಷ್ಟ್ರದ ಬಗ್ಗೆ ನೈಜ ಕಾಳಜಿ ಹೊಂದಿದ್ದ ಜೆಪಿ ಎಂಬ ಮಹಾನ್ ಚೇತನದ ವಿಶ್ವಾಸವನ್ನು ಕೇವಲ ಅಧಿಕಾರ ಪಡೆಯುವುದಕ್ಕಾಗಿ ಆ ಜನ ದುರುಪಯೋಗಪಡಿಸಿಕೊಂಡರು.  ಅವರ ರಾಷ್ಟ್ರನಿಷ್ಟೆಯಾದರೂ ಎಂತಹದು?  ೭೧ರ ಯುದ್ಧದ ಸಮಯದಲ್ಲಿ ಮಂತ್ರಿಮಂಡಲದ ರಹಸ್ಯ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳು ತಕ್ಷಣ ಸಿಐಏ ಗೆ ತಲುಪುತ್ತಿದ್ದುದು ಜಗಜೀವನ್ ರಾಂ ಅವರಿಂದ ಎಂಬ ಮಾತಿದೆ.  ಇನ್ನು ಮೊರಾರ್ಜಿ ದೇಸಾಯಿ ಸಿಐಏ ಯ ಠಿಚಿಥಿ ಡಿoe ನಲ್ಲಿದ್ದರು ಎಂದು ಅಮೆರಿಕಾದ ಪತ್ರಕರ್ತ ಸೇಮರ್ ಹೆರ್ಷ್ ಆಪಾದಿಸಿದ್ದು ನಿಮಗೆ ನೆನಪಿರಬಹುದು.  ಹೆರ್ಷ್ ವಿರುದ್ದ ದಾವೆ ಹೂಡಿದ ದೇಸಾಯಿ ತಾವು ಪರಿಶುದ್ಧರು ಎಂದು ನ್ಯಾಯಾಲಯಕ್ಕೆ ಮನಗಾಣಿಸುವಲ್ಲಿ ಸೋತುಹೋದರು.  ಇನ್ನು ಆ ಚರಣ್ ಸಿಂಗ್, ಅವರ ಬಗ್ಗೆ ಬರೆಯುವುದೇ ಬೇಡ ಬಿಡಿ.  ಇವರೆಲ್ಲರ ಮೈತ್ರಿ ಎರಡೂವರೆ ವರ್ಷಗಳಷ್ಟೂ ಬಾಳಲಿಲ್ಲ.  ಮುಂದಿನ ಚುನಾವಣೆಯಲ್ಲಿ ಸಹಜವಾಗಿಯೇ ಜನತೆ ಇಂದಿರಾ ಗಾಂಧಿಯವರ ಪರವಾಗಿ ಮತ ಚಲಾಯಿಸಿದರು.  ರಾಷ್ಟ್ರವನ್ನಾಳಲು ಯಾರು ಸಮರ್ಥರು ಎಂದು ಜನತೆ ಅರ್ಥ ಮಾಡಿಕೊಂಡಿದ್ದರು.
ದೇಶವನ್ನಾಳಿದ ಇತರ ಪ್ರಧಾನಮಂತ್ರಿಗಳಿಗಿಂತ ಇಂದಿರಾ ಅವರು ಅನೇಕ ವಿಧಗಳಲ್ಲಿ ಉನ್ನತರಾಗಿದ್ದರೂ ಅವರು ಮಹಿಳೆ ಎಂಬ ಕಾರಣಕ್ಕಷ್ಟೇ ಅವರನ್ನು ನಿಕೃಷ್ಟವಾಗಿ ಕಂಡ ಹಲವಾರು ಉದಾಹರಣೆಗಳು ನಮ್ಮ ಸಾಮಾಜಿಕ ಹಾಗೂ ರಾಜಕೀಯ ವಲಯಗಳಲ್ಲಿವೆ.  ಅವರು ಪ್ರಧಾನ ಮಂತ್ರಿಯಾದಾಗ ಬೇವಾ ಪ್ರಧಾನ್‌ಮಂತ್ರಿ ಬನ್ ಗಯೀ ಎಂದು ಹಲವಾರು ಸಂಪ್ರದಾಯಸ್ಥರು ಗೋಳಾಡಿದ್ದುಂಟು.   ಇನ್ನು ಅವರ ಚಾರಿತ್ರ್ಯವಧೆಗೂ ಪ್ರಯತ್ನಗಳು ನಡೆದದ್ದೂ ಇದೆ.  ಸ್ತ್ರೀಯೊಬ್ಬಳನ್ನು ಬೇರಾವುದೇ ರೀತಿಯಲ್ಲೂ ಕೆಳೆಗೆಳೆಯಲಾಗದಾಗ ಆಕೆಯ ಚಾರಿತ್ರ್ಯವಧೆ ಮಾಡುವುದು ಪುರುಷಪ್ರಧಾನ ಸಮಾಜದ ಒಂದು ಚಾಳಿ.  ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಕನ್ನಡದಲ್ಲೇ ಒಬ್ಬರು ಎಸ್. ಆರ್. ಭಸ್ಮೆ ಎನ್ನುವವರು ಇಂದಿರಾ ಅವರ ಬಗ್ಗೆ, ಅವರ ಆಡಳಿತದ ಬಗ್ಗೆ ರಂಡೆ ಮುಂಡೆ ರಾಜ್ಯ ಎಂಬ ಪುಸ್ತಕ ಬರೆದು ಪ್ರಕಟಿಸಿದ್ದು ನನಗಿನ್ನೂ ನೆನಪಿದೆ.
ಶೀಮತಿ ಇಂದಿರಾ ಗಾಂಧಿ ಮತ್ತು ಶ್ರೀ ಪಿ. ವಿ. ನರಸಿಂಹರಾವ್ ಅವರುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ imಚಿge ಅನ್ನು ಸಕಾರಾತ್ಮಕವಾಗಿ ಹಾಗೂ ಪರಿಣಾಮಕಾರಿಯಾಗಿ ಬದಲಾಯಿಸಿದ ಇಬ್ಬರು ಪ್ರಧಾನಮಂತ್ರಿಗಳು.  ಇವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದರಲ್ಲಿ ಈ ದೇಶ ಮೀನಮೇಷ ಎಣಿಸಬಾರದು.

Friday, October 14, 2011

ಕವನ: ವಿಪರ್ಯಾಸ


ಹುಟ್ಟಿದ ಹಬ್ಬದ ಬೆಳಗು
ಕೋಳಿ ಕೂಗಲಿಲ್ಲ
ಆದರೂ ನನಗೆ ಎಚ್ಚರವಾಯಿತು

ವರುಷವರುಷಗಳ ಹಿಂದೆ
ಬಾಲ್ಯದಲ್ಲಿ ನನ್ನ ಗಾಳ
ದ ಚೂಪು ಮೊನೆಗೆ ಸಿಕ್ಕಿ
ನೇತಾಡಿದ ಮೀನುಗಳು
ನೆನಪಿನ ನೆರಳು
ಗಳಾಗಿ ಜೋತಾಡಿದವು
ಒಂದೊಂದು ವರುಷಕ್ಕೆ
ಒಂದೊಂದು ಮೀನು
ಗಂಟಲಿಗೆ, ನೆತ್ತಿಗೆ,
ಕಣ್ಣಗುಡ್ಡೆಯ ನಟ್ಟನಡುವೆ
ಚುಚ್ಚಿದ ಗಾಳ-
ವರುಷಗಳು ಪಟಪಟ
ಒದರಾಡಿ ಸೋತವು

ಲೆಕ್ಕ ಹಾಕಿ
ಬುಟ್ಟಿಯಲ್ಲಿ ತುಂಬಿ
ಮಾರಲು ಹೊರಟಾಗ
ನಡುನೆತ್ತಿಯ ಮೇಲೆ
ಕಾಗೆ ಕೂಗುತ್ತಿತ್ತು

Sunday, September 11, 2011

9/11: ಇಂದಿಗೆ ಹತ್ತು ವರ್ಷ


ಹತ್ತು ವರ್ಷಗಳ ಹಿಂದಿನ ಆ ಮಂಗಳವಾರದ ಬೆಳಗು ಇತಿಹಾಸದ ದಿಕ್ಕು ಸಂಪೂರ್ಣವಾಗಿ ಬದಲಾಗಿಹೋಯಿತು. ಶೀತಲ ಸಮರದಲ್ಲಿ ಬಲಾಢ್ಯ ಸೋವಿಯೆತ್ ಯೂನಿಯನ್ ಅನ್ನು `ಸೋಲಿಸಿ' ಏಕಶೃಂಗೀ ಜಾಗತಿಕ ವ್ಯವಸ್ಥೆಯಲ್ಲಿ "ಎನ್ನಯ ಸರಿಸಮಾನರರೈ" ಎಂದು ಬೀಗುತ್ತಿದ್ದ ಅಮೆರಿಕಾಗೆ ಅಂದು ಬಿದ್ದ ಪೆಟ್ಟು ನ ಭೂತೋ, (ಇಂದಿನವರೆಗೆ) ನ ಭವಿಷ್ಯತಿ.
ಬಲಾಢ್ಯ ಅಮೆರಿಕಾದ ಬಲಾಢ್ಯ ಅಧ್ಯಕ್ಷ ಜಾರ್ಜ್ ಬುಷ್ ಜ್ಯೂನಿಯರ್ ಹಲವಾರು ಗಂಟೆಗಳ ಕಾಲ ಗುಪ್ತ ಸ್ಥಳವೊಂದರಲ್ಲಿ ಅಡಗಿಕೊಂಡ ಆ ದಿನ ಬಹುಷಃ ಹೆದರದ ಅಮೆರಿಕನ್ನನೇ ಇರಲಿಲ್ಲ. ಆನಂತರ ಸುಧಾರಿಸಿಕೊಂಡು ಮೇಲೆದ್ದು "ಇದೆಲ್ಲಾ ನಾಟಕ, ಅಮೆರಿಕನ್ ಸರಕಾರವೇ ಇದನ್ನು ಮಾಡಿಸಿದೆ, ಇದರ ಹಿಂದಿರುವುದು ಯಾವುದೋ ಕುಟಿಲೋದ್ದೇಶ" ಎಂದು ಮಾಳಿಗೆಯ ಮೇಲಿನಿಂದ ಕೂಗತೊಡಗಿದ ಕೆಲವು ತಲೆಕೆಟ್ಟ ಅಮೆರಿಕನ್ನರೂ ತಮ್ಮ ಜೀವದ ಬಗ್ಗೆ, ಭವಿಷ್ಯದ ಬಗ್ಗೆ ಅಂದು ಹೆದರಿದ್ದರು. ಆ ಹೆದರಿಕೆಗೆ ಸ್ಪಷ್ಟ ಕಾರಣಗಳಿದ್ದವು.
ಹತ್ತಿರ ಹತ್ತಿರ ಎರಡು ಶತಮಾನಗಳ ಹಿಂದೆ ೧೮೧೨-೧೬ರ ಯುದ್ಧದಲ್ಲಿ ಉತ್ತರದ ಕೆನಡಾದಿಂದ ಧಾಳಿಯಿಟ್ಟ ಬ್ರಿಟಿಷ್ ಸೇನೆ ಅಮೆರಿಕನ್ ಸೇನೆಯನ್ನು ಬಗ್ಗು ಬಡಿದು, ಅದನ್ನೂ, ಅದರ ಅಧ್ಯಕ್ಷ ಜೇಮ್ಸ್ ಮ್ಯಾಡಿಸನ್‌ನನ್ನೂ ವಾಷಿಂಗ್‌ಟನ್‌ನಿಂದ ಹೊರಗೋಡಿಸಿ ಅಧ್ಯಕ್ಷರ ನಿವಾಸಕ್ಕೆ ಬೆಂಕಿಯಿಟ್ಟು ಅಟ್ಟಹಾಸಗೈದಂದಿನಿಂದ ಅಮೆರಿಕಾದ ರಾಜಧಾನಿಯ ಮೇಲೆ ಧಾಳಿಯೆಸಗುವ ಸಾಮರ್ಥ್ಯವನ್ನು ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್ ಸೇರಿದಂತೆ ಹಿಂದಿನ ಯಾವ ವೈರಿಯೂ ತೋರಿರಲಿಲ್ಲ. ತಮ್ಮ ರಾಜಧಾನಿಯೂ ಧಾಳಿಗೊಳಗಾಗುತ್ತದೆ ಎಂದು ಅಮೆರಿಕನ್ನರ ಹಲವಾರು ತಲೆಮಾರುಗಳಿಗೆ ಅನಿಸಿರಲೇ ಇಲ್ಲ. ಅವರೆಲ್ಲರ ನಂಬಿಕೆಗಳು ಅಂದು ಸುಳ್ಳಾದವು.
ತಮ್ಮ ದೇಶಕ್ಕೆ ಇಂತಹ ಮರ್ಮಾಘಾತವನ್ನು ನೀಡಿದವರ್‍ಯಾರು ಎಂದು ಯಾವೊಬ್ಬ ಅಮೆರಿಕನ್ನನಿಗೂ ಅಂದು ಅರಿವಿರಲಿಲ್ಲ. ಜಪಾನಿನ ರೆಡ್ ಆರ್ಮಿಯಿಂದ ಹಿಡಿದು ಯುನಾ ಬಾಂಬರ್‌ನಂತಹ ಮತ್ಯಾವನೋ ತಲೆಕೆಟ್ಟವನ ಬಗ್ಗೆ ಅವರ ಊಹೆಗಳು ಗಿರಿಗಿಟ್ಟೆ ಹಾಕುತ್ತಿದ್ದವು. ಅವರ ಆತಂಕವನ್ನು ಹೆಚ್ಚಿಸಿದ್ದು ಮುಂದಿನ ಕ್ಷಣದ ಅನಿಶ್ಚಿತತೆ. ಅಪಹರಣಗೊಂಡ ನಾಲ್ಕು ವಿಮಾನಗಳಲ್ಲಿ ಎರಡು ಅಮೆರಿಕಾದ ಆರ್ಥಿಕ ಶಕ್ತಿಯ ಸಂಕೇತವಾದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳನ್ನು, ಮೂರನೆಯದು ಮಿಲಿಟರಿ ಸಾಮರ್ಥ್ಯದ ಸಂಕೇತವಾದ ಪೆಂಟಗನ್‌ನ ಒಂದು ಪಾರ್ಶ್ವವನ್ನೂ ನೆಲಸಮಗೊಳಿಸಿದ್ದವು. ಪೆನ್ಸಿಲ್ವೇನಿಯಾದಲ್ಲಿ ಅಫಘಾತಕ್ಕೀಡಾದ ನಾಲ್ಕನೆಯ ವಿಮಾನದ ಗುರಿ ಏನಿತ್ತು? ವೈಟ್ ಹೌಸ್? ಕ್ಯಾಪಿಟಲ್ ಹಿಲ್? ಉಳಿದ ಮೂರರಂತೆ ಇದೂ ತನ್ನ ಗುರಿ ಮುಟ್ಟಿದ್ದರೆ...! ಅಧ್ಯಕ್ಷನೂ ಸೇರಿದಂತೆ ಅಮೆರಿಕನ್ ಆಡಳಿತವ್ಯವಸ್ಥೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಂಡು ಅನುಷ್ಠಾನಕ್ಕೆ ತರುವ ಅಧಿಕಾರವುಳ್ಳವರಲ್ಲಿ ಹೆಚ್ಚಿನವರನ್ನು ಅದು ನಿರ್ನಾಮಗೊಳಿಸಿಬಿಟ್ಟಿದ್ದರೆ...! ಅಪಹರಣವಾದ್ದು ಆ ನಾಲ್ಕು ವಿಮಾನಗಳು ಮಾತ್ರವೇ? ಅಥವಾ ಐದನೆಯದೇನಾದರೂ ಇದೆಯೇ? ಒಟ್ಟಿನಲ್ಲಿ ಅಂದು ಗೊಂದಲವೋ ಗೊಂದಲ.
ಮೇಲಿನ ಪ್ರಶ್ನೆಗಳಲ್ಲಿ ಕೊನೆಯ ಎರಡಕ್ಕೆ ಉತ್ತರ ಸಿಗಲು ಇಪ್ಪತ್ತನಾಲ್ಕು ಗಂಟೆಗಳಿಗಿಂತಲೂ ಅಧಿಕ ಸಮಯ ಹಿಡಿಯಿತು. ಇನ್ನುಳಿದ ಪ್ರಶ್ನೆಗಳು ಇದುವರೆಗೂ ಪ್ರಶ್ನೆಗಳಾಗಿಯೇ ಉಳಿದಿವೆ.
ಈ ಕೃತ್ಯಗಳ ಹಿಂದಿರುವುದು ಅಲ್ ಖಯೀದಾ ಎಂದು ಅರಿವಾದಾಗ ಹೆಚ್ಚಿನ ಅಮೆರಿಕನ್ನರಿಗೆ ನಂಬಿಕೆಯೇ ಆಗಲಿಲ್ಲ. ಸೋವಿಯೆತ್ ಯೂನಿಯನ್‌ನಿಂದ ಅಣ್ವಸ್ತ್ರ ಧಾಳಿಯ ಭಯವಿಲ್ಲದ, ಶೀತಲ ಸಮರೋತ್ತರ ಕಾಲದ "Brave New World" (!) ನಲ್ಲಿನ `ಶಾಂತಿ, ನೆಮ್ಮದಿ'ಯ ಆ ದಿನಗಳಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿಹೋಗಿದ್ದ ಸಾಮಾನ್ಯ ಅಮೆರಿಕನ್ನರಿಗೆ ಅಲ್ ಖಯೀದಾ ಎಂಬ ವೈರಿಯೊಬ್ಬ ತಲೆಯೆತ್ತುತ್ತಿರುವ ಸೂಚನೆ ಸಿಗದಿದ್ದುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಹಿಂದಿನ ಒಂದು ದಶಕದಲ್ಲಿ ಅಮೆರಿಕಾದ ಒಳಗೆ ಮತ್ತು ಹೊರಗೆ ಅಮೆರಿಕನ್ ಹಿತಾಸಕ್ತಿಗಳ ಮೇಲೆ ನಡೆದ ಧಾಳಿಗಳ ಹಿಂದೆ ಅಲ್ ಖಯೀದಾ ಇದ್ದ ಬಗ್ಗೆ ಅರಿವಿದ್ದವರಿಗೂ ಇಂತಹದೊಂದು ಧಾಳಿಯ ಕಲ್ಪನೆ ಇದ್ದಿರಲಾರದು. ಅಲ್ ಖಯೀದಾ ೧೯೯೩ರಲ್ಲಿ ಇದೇ ವಿಶ್ವ ವ್ಯಾಪಾರ ಕೇಂದ್ರದ ಬೇಸ್‌ಮೆಂಟ್‌ನಲ್ಲಿದ್ದ ಕಾರ್ ಪಾರ್ಕಿಂಗ್‌ನಲ್ಲಿ ನಡೆಸಿದ ಬಾಂಬ್ ಸ್ಫೋಟ, ೧೯೯೮ರ ಆಗಸ್ಟ್‌ನಲ್ಲಿ ಪೂರ್ವ ಆಫ್ರಿಕಾದ ದಾರ್ ಎಸ್ ಸಲಾಂ ಮತ್ತು ನೈರೋಬಿಗಳಲ್ಲಿನ ಅಮೆರಿಕನ್ ದೂತಾವಾಸಗಳಲ್ಲಿ ನಡೆಸಿದ ಬಾಂಬ್ ಸ್ಫೋಟಗಳು, ೨೦೦೦ರ ಅಕ್ಟೋಬರ್‌ನಲ್ಲಿ ಏಡನ್ ಬಂದರಿನಲ್ಲಿದ್ದ ಅಮೆರಿಕನ್ ನೌಕೆ ಯುಎಸ್‌ಎಸ್ ಕೋಲ್ ಮೇಲೆ ನಡೆಸಿದ ಧಾಳಿ- ಇವ್ಯಾವುವೂ ಆ ಭಯೋತ್ಪಾದಕ ಸಂಘಟನೆಯ ವಿಧ್ವಂಸಕ ಸಾಮರ್ಥ್ಯಗಳು ಈ ಮಟ್ಟಕ್ಕೆ ಏರಬಹುದೆಂದು ಸೂಚನೆ ನೀಡಿರಲಿಲ್ಲ. ಜತೆಗೇ, ಕೇವಲ ಪ್ರಯಾಣಿಕರ ವಿಮಾನಗಳನ್ನೇ ಆಯುಧಗಳಾಗಿ ಬಳಸಿ ವಿಶ್ವದ ದೊಡ್ಡಣ್ಣನ ತಲೆಯ ಮೇಲೆ ಈ ಪರಿಯಾಗಿ ಮೊಟಕಬಹುದೆಂದು ಅಮೆರಿಕದ ಒಳಗಾಗಲೀ ಹೊರಗಾಗಲೀ ಯಾರಾದರೂ ಊಹಿಸಿರಬಹುದಾದ ಸಾಧ್ಯತೆ ಬಹುಷಃ ಇರಲಿಲ್ಲ.
ಈ ಧಾಳಿಗಳ ಬಗ್ಗೆ ಸತತ ಎಂಬತ್ತು ಗಂಟೆಗಳವರೆಗೆ ವರದಿ, ಚರ್ಚೆಗಳನ್ನು ಪ್ರಸಾರ ಮಾಡಿದ ಅಮೆರಿಕನ್ ದೂರದರ್ಶನ ಕೇಂದ್ರಗಳಲ್ಲಿ ಹಿಂದಿನ ಇಂತಹದೇ ದುರಂತಗಳ ಸಮೀಕ್ಷೆ ಸಹಾ ನಡೆಯಿತು. ತೀರಾ ಇತ್ತೀಚೆಗೆ ೧೯೯೪ರ ಬೇಸಿಗೆಯಲ್ಲಿ ರವಾಂಡಾದಲ್ಲಿ ಘಟಿಸಿದ ಹುಟು - ಟುಟ್ಸಿ ಜನಾಂಗೀಯ ಮಾರಣಹೋಮದಲ್ಲಿ ಒಂದೇ ದಿನದಲ್ಲಿ ಹತರಾದದ್ದು ಸುಮಾರು ಎರಡೂವರೆ ಲಕ್ಷ ಜನ. ಮಧ್ಯಯುಗದಲ್ಲಿ ಮಂಗೋಲ್ ಧಾಳಿಕಾರರಾದ ಚೆಂಗೀಸ್ ಖಾನ್, ಅತ್ತಿಲ, ಹುಲಕು ಖಾನ್‌ರು ಸಮರ್ಕಂದ್, ಬುಖಾರಾ, ಕಂದಹಾರ್, ಕಾಬೂಲ್, ಖೀವಾಗಳ ಮೇಲೆ ನಡೆಸಿದ ಪೈಶಾಚಿಕ ಧಾಳಿಗಳಲ್ಲಿ ಒಂದೊಂದು ಊರಿನಲ್ಲೂ ಒಂದೊಂದೇ ದಿನದಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದರು. ಅಷ್ಟೇಕೆ, ಇದೇ ಅಮೆರಿಕನ್ನರು ಹಿರೋಷಿಮಾ ಮೇಲೆ ಹಾಕಿದ ಅಣ್ವಸ್ತ್ರದಿಂದ ಎಂಬತ್ತು ಸಾವಿರ ಜಪಾನೀಯರು ಅಸುನೀಗಿದ್ದರು. ಸಾವುನೋವಿನ ಪ್ರಮಾಣಕ್ಕೆ ಹೋಲಿಸಿದರೆ ೯/೧೧ರ ಧಾಳಿಗಳು ಏನೇನೂ ಅಲ್ಲ. ಆದರೆ ಈ ಧಾಳಿಗಳು ವಿಶ್ವ ಇತಿಹಾಸವನ್ನು ಬದಲಿಸಿದ ಮಟ್ಟಿಗೆ ಹಿಂದಿನ ಯಾವ ಧಾಳಿಯೂ ಬದಲಾಯಿಸಿರಲಿಲ್ಲ.
ಅಲ್ ಖಯೀದಾ ಈ ಮಟ್ಟದ ವಿಧ್ವಂಸಕ ಸಂಘಟನೆಯಾಗಿ ಬೆಳೆಯುವುದಕ್ಕೆ ಅಮೆರಿಕಾವನ್ನೇ ದೂಷಿಸುವವರಿದ್ದಾರೆ. ಈ ಅಪಾದನೆಯನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳಬಹುದು. ೧೯೭೯ರ ಡಿಸೆಂಬರ್‌ನಲ್ಲಿ ಅಫಘಾನಿಸ್ತಾನವನ್ನು ಪ್ರವೇಶಿಸಿದ ಸೋವಿಯೆತ್ ಸೇನೆಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಲು ಅಮೆರಿಕಾ ಬಳಸಿಕೊಂಡದ್ದು ಇಸ್ಲಾಮನ್ನು. ಧರ್ಮವೇ ಇಲ್ಲದ ಕಮ್ಯೂನಿಸ್ಟರನ್ನು ಅಫಘಾನಿಸ್ತಾನದಲ್ಲಿ ಇರಗೊಟ್ಟರೆ ಅವರು ಆ ದೇಶದಲ್ಲಿ ಇಸ್ಲಾಮನ್ನೇ ನಾಶ ಮಾಡಿಬಿಡುತ್ತಾರೆ, ಇಸ್ಲಾಂ ಉಳಿಯಬೇಕಾದರೆ ರಶಿಯನ್ನರು ಅಫಘಾನಿಸ್ತಾನದಿಂದ ಕಾಲ್ತೆಗೆಯುವಂತೆ ಮಾಡಲೇಬೇಕು ಎಂದು ಅಮೆರಿಕಾ ವಾದಿಸಿದಾಗ ಅದನ್ನು ಒಪ್ಪಿ ಇಸ್ಲಾಮನ್ನು ಉಳಿಸುತ್ತಿದ್ದೇನೆ ಎಂಬ ನಂಬಿಕೆಯಲ್ಲಿ ದೂರದೂರದ ದೇಶಗಳಿಂದ ಅಫಘಾನಿಸ್ತಾನಕ್ಕೆ ಬಂದವರಲ್ಲಿ ಒಸಾಮಾ ಬಿನ್ ಲಾಡೆನ್ ಸಹಾ ಒಬ್ಬ. ಒಂಬತ್ತು ವರ್ಷಗಳ ನಂತರ ಸೋವಿಯೆತ್ ಸೇನೆ ಕೊನೆಗೂ ಅಫಘಾನಿಸ್ತಾನದಿಂದ ಕಾಲ್ತೆಗೆದಾಗ ಯುದ್ಧದಿಂದ ಜರ್ಝರಿತವಾಗಿದ್ದ ಆ ನತದೃಷ್ಟ ದೇಶವನ್ನು ಹೇಗಿತ್ತೋ ಹಾಗೇ ಬಿಟ್ಟು ಅಮೆರಿಕನ್ನರು ಓಡಿಹೋದರು. ಅಮೆರಿಕನ್ನರಿಗೆ ಇಸ್ಲಾಮಿನ ಮೇಲೆ ಯಾವ ಪ್ರೀತಿಯೂ ಇಲ್ಲ, ಅವರು ಅಫಘಾನಿಸ್ತಾನದಲ್ಲಿ ಕಾರ್ಯನಿರತರಾದಿದ್ದದ್ದು ಇಸ್ಲಾಮನ್ನು ಉಳಿಸಲೆಂದಲ್ಲ, ಬದಲಾಗಿ ರಶಿಯನ್ನರು ಹಿಂದೂ ಮಹಾಸಾಗರದತ್ತ ಮುನ್ನುಗ್ಗದಂತೆ ತಡೆದು ತನ್ಮೂಲಕ ಈ ವಲಯದಲ್ಲಿ ತಮ್ಮ ಸೈನಿಕ ಪ್ರಭಾವವಕ್ಕೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳುವ ಸ್ವಾರ್ಥಪರ ಹುನ್ನಾರದಿಂದ ಎಂಬುದು ಆಗ ಲಾದೆನ್‌ಗೆ ಅರಿವಾಯಿತು. ವಾಸ್ತವವಾಗಿ ಇಸ್ಲಾಮಿನ ಹೆಸರು ಹೇಳಿಕೊಂಡು ಅಮೆರಿಕಾ ತನ್ನ ಬೇಳೆ ಬೇಯಿಸಿಕೊಂಡಿತ್ತು, ಅದಕ್ಕೆ ಸಹಕರಿಸಿ ತಾನು ಮೂರ್ಖನಾದೆ ಎಂಬ ಜ್ಞಾನೋದಯವಾದದ್ದೇ ಆತ ಅಮೆರಿಕಾದ ವಿರುದ್ಧ ತಿರುಗಿ ಬಿದ್ದ. ಅವನ ಅಮೆರಿಕಾದ್ವೇಷ ಆರಂಭವಾದದ್ದು ಹೀಗೆ. ೧೯೮೮ರ ನಂತರ ಅಫಘಾನಿಸ್ತಾನದ ಪುನರ್ನಿರ್ಮಾಣಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಆರ್ಥಿಕ ಸಹಕಾರವನ್ನು ನೀಡಿ ಆ ದೇಶ ಚೇತರಿಸಿಕೊಳ್ಳುವಂತೆ ಅಮೆರಿಕಾ ನೋಡಿಕೊಂಡಿದ್ದರೆ ಅಲ್ ಖಯೀದಾವಾಗಲೀ ತಾಲಿಬಾನ್ ಆಗಲಿ ತಲೆಯೆತ್ತಲು ಸಾಧ್ಯವಿರಲಿಲ್ಲ. ಇದನ್ನು ಅರಿಯಲಾರದಷ್ಟು ಸಂಕುಚಿತ ಮನೋಭಾವದವರಾಗಿದ್ದರೇ ವೈಟ್ ಹೌಸ್‌ನ ಪ್ರಭೃತಿಗಳು ಎಂಬು ಅಚ್ಚರಿಯಾಗುತ್ತದೆ. ಒಟ್ಟಿನಲ್ಲಿ, ಒಂಬತ್ತು ವರ್ಷಗಳ ಅಂತರ್ಯುದ್ಧ ಬಳುವಳಿಯಾಗಿತ್ತ ಹಸಿವು, ಬಡತನ, ರೋಗರುಜಿನ, ಅನಕ್ಷರತೆ, ನಿರುದ್ಯೋಗಗಳಲ್ಲಿ ನರಳಲು ಅಫ್ಘನ್ ಜನತೆಯನ್ನು ಬಿಟ್ಟು, ಆ ದೇಶ ಮೂಲಭೂತವಾದಕ್ಕೆ ಫಲವತ್ತಾದ ನೆಲವಾಗುವುದನ್ನು ಮನಗಾಣದೇ ಮುಖ ತಿರುಗಿಸಿಕೊಂಡು ಓಡಿಹೋದ ಅಮೆರಿಕಾ "ಜಗತ್ತಿನ ದೊಡ್ಡಣ್ಣ" ಎಂಬ ಉಪಾಧಿಗೆ ತಕ್ಕ ಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸಲಿಲ್ಲ ಎನ್ನುವುದು ವಿಷಾದದ ಸಂಗತಿ.
ಆ ನಂತರವೂ ಸಹಾ ಈ ವಲಯದಲ್ಲಿನ ಬೆಳವಣಿಗೆಗಳ ಬಗ್ಗೆ, ಅವುಗಳಿಂದ ತನಗೂ, ವಿಶ್ವಕ್ಕೂ ತಗುಲಬಹುದಾದ ದುರಂತಗಳ ಬಗ್ಗೆ ಅಮೆರಿಕಾ ದಿವ್ಯ ನಿರ್ಲಕ್ಷ ತೋರಿತು. ಅಫಘಾನಿಸ್ತಾನದಲ್ಲಿ ಪತನಗೊಂಡ ಶಿಬ್ಗತುಲ್ಲಾ ಮುಜಾದೀದಿ ಸರಕಾರ; ರಾಜಕೀಯ ಸ್ಥಿರತೆ ಸಾಧಿಸಲಾಗದ ಬಲಹೀನ ಬುರ್ಹಾನುದ್ದೀನ್ ರಬ್ಬಾನಿ ಸರಕಾರ; ಪಖ್ತೂನ್ ನಾಯಕ ಗುಲ್ಬುದ್ದೀನ್ ಹೆಕ್‌ಮತ್ಯಾರ್, ಉಝ್ಬೇಗ್ ನಾಯಕ ಜನರಲ್ ದೋಸ್ತುಂ ಮತ್ತು ತಾಜಿಕ್ ನಾಯಕ ಅಹ್ಮದ್ ಷಾ ಮಾಸೂದ್‌ರ ನಡುವೆ ಉಲ್ಬಣಗೊಂಡ ವೈಷಮ್ಯ; ಅದರಿಂದಾದ ಅರಾಜಕತೆ ಪಾಕಿಸ್ತಾನದ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟದ್ದು; ಅದು ಪ್ರತಿಗಾಮಿ ತಾಲಿಬಾನನ್ನು ಹುಟ್ಟುಹಾಕಿ ತನ್ನ ಕೈಗೊಂಬೆಯಾಗಿರಿಸಿಕೊಂಡದ್ದು; ಈ ಬೆಳವಣಿಗೆಗಳಿಂದ ಈ ವಲಯದ ರಾಜಕೀಯ ಕುದಿಯತೊಡಗಿದ್ದು- ಇದ್ಯಾವುದನ್ನೂ ಅಮೆರಿಕಾ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಕೊನೇಪಕ್ಷ, ೧೯೯೩ರಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಬೇಸ್‌ಮೆಂಟ್‌ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಅಲ್ ಖಯೀದಾ ಕಾರಣವೆಂದು ಅರಿತಾಗಲಾದರೂ ಆ ಸಂಘಟನೆಗೆ ಸುಡಾನ್, ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಿಗುತ್ತಿರುವ ಬೆಂಬಲವನ್ನು ಗಮನಿಸಿ ಅದನ್ನು ಹತ್ತಿಕ್ಕಲು ಪರಿಣಾಮಕಾರೀ ಕ್ರಮಗಳನ್ನು ಕ್ಲಿಂಟನ್ ಸರಕಾರ ಕೈಗೊಳ್ಳಬೇಕಾಗಿತ್ತು. ಅಧ್ಯಕ್ಷ ಕ್ಲಿಂಟನ್ ತನ್ನ ಮೊದಲ ಆವಧಿಯಲ್ಲಿ ವಿದೇಶ ನೀತಿಯನ್ನು ನಿರ್ಲಕ್ಷಿಸಿ ಕೇವಲ ಆರ್ಥಿಕ ಹಿಂಜರಿತವನ್ನು ತಡೆಗಟ್ಟುವುದರಲ್ಲೇ ಮಗ್ನರಾಗಿಬಿಟ್ಟರು. ತನ್ನ ಎರಡನೇ ಆವಧಿಯಲ್ಲಿ ಆತ ಎಚ್ಚತ್ತುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅಲ್ ಖಯೀದಾ ಅಪಾಯಕಾರಿ ಮಟ್ಟಕ್ಕೆ ಬೆಳೆದಿತ್ತು ಮತ್ತು ಅದಕ್ಕೆ ಅಫಘಾನಿಸ್ತಾನದಲ್ಲಿ ಭದ್ರ ನೆಲ ಸಿಕ್ಕಿತ್ತು. ಒಂದು ತಲೆಮಾರಿನ ಬೇಜವಾಬ್ದಾರಿ ವರ್ತನೆಗೆ ಮುಂದಿನ ತಲೆಮಾರು ತೆರಬೇಕಾದ ಭೀಕರ ಬೆಲೆಗೆ ಇದೊಂದು ಉದಾಹರಣೆ.
೯/೧೧ರ ಧಾಳಿಯ ನಂತರ ಎಚ್ಚತ್ತುಕೊಂಡ ಅಮೆರಿಕಾ, ಅಫಘಾನಿಸ್ತಾನ ಮತ್ತು ಇರಾಕಿನಲ್ಲಿ ಕೈಗೊಂಡ ಮಿಲಿಟರಿ ಕಾರ್ಯಾಚರ್ಣೆಗಳು ತನ್ನ ಹಿಂದಿನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಾಷಿಂಗ್‌ಟನ್ ಗಡಿಬಿಡಿಯಲ್ಲಿ ಕೈಗೊಂಡ ಕ್ರಮಗಳಂತೆ ಕಾಣುತ್ತಿವೆ. ಗಡಿಬಿಡಿಯಲ್ಲಿ ಮಾಡುವ ಯಾವುದೇ ಕೆಲಸವೂ ಪರಿಣಾಮಕಾರಿಯಾಗಿರುವುದಿಲ್ಲ ಎನ್ನುವುದನ್ನೂ ಅವು ಎತ್ತಿ ತೋರಿಸುತ್ತಿವೆ.
ಇರಾಕ್ ಒಂದು ಕೆಸರು, ಅಲ್ಲಿರುವ ವಿರೋಧಿ ಸದ್ದಾಂ ಮತ್ತವನ ಮಾರಕಾಸ್ತ್ರಗಳ ತಂತ್ರಜ್ಞಾನ ಮಾತ್ರ ಎಂಬ ನಂಬಿಕೆ ಅದೆಷ್ಟು ಅರ್ಥಹೀನ ಎಂದು ಅರಿಯಲು ಅಮೆರಿಕಾಗೆ ಹೆಚ್ಚು ಕಾಲವೇನೂ ಬೇಕಾಗಲಿಲ್ಲ. ಪಾಕಿಸ್ತಾನದ ಇಬ್ಬಂದಿ ನೀತಿಯನ್ನು ಗುರುತಿಸಿ ಪರಿಹಾರಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗದ ನಿಸ್ಸಹಾಯಕತೆ ಅಥವಾ ಬೇಜವಾಬ್ದಾರಿಯಿಂದಾಗಿ ಅಫ್ಘನ್ ಕಾರ್ಯಾಚರಣೆ ದಿಕ್ಕು ತಪ್ಪಿದೆ. ತಾಲಿಬಾನ್ ದಿನೇ ದಿನೇ ಬಲಿಷ್ಟವಾಗುತ್ತಾ ನಡೆದಿದೆ. ಅಫಘಾನಿಸ್ತಾನ ಮತ್ತೊಂದು ವಿಯೆಟ್ನಾಂ ಆಗುವ ಎಲ್ಲ ಸೂಚನೆಗಳು ಕಾಣಬರುತ್ತಿವೆ. ಯಾವುದೇ ಪವಾಡದಿಂದ ಅಫ್ಘನ್ ಕಾರ್ಯಾಚರಣೆ ಇನ್ನೊಂದೆರಡು ವರ್ಷಗಳಲ್ಲಿ ಅಮೆರಿಕಾದ ಯಶಸ್ಸಿನಲ್ಲಿ ಮುಕ್ತಾಯವಾದರೂ ವಾಷಿಂಗ್‌ಟನ್‌ನ ತಲೆನೋವುಗಳು ದೂರಾಗುತ್ತವೆ ಎಂದು ಹೇಳಲಾಗದು. ತಾಲಿಬಾನಿಗಳು ಪಾಕಿಸ್ತಾನದಲ್ಲಿ ಭದ್ರವಾಗಿ ಬೇರು ಬಿಟ್ಟಿದ್ದಾರೆ. ಪಾಕಿಸ್ತಾನಿ ಸೇನಾ ವರಿಷ್ಟರು ಅಮೆರಿಕ ಪರವಾಗಿದ್ದರೂ ಕೆಳಹಂತರ ಅಧಿಕಾರಿಗಳು ಮತ್ತು ಸೈನಿಕರಲ್ಲಿ ಬಹುಪಾಲು ತಾಲಿಬಾನ್ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಈ ಸಹಾನುಭೂತಿ ಐಎಸ್‌ಐನಲ್ಲಿ ಅಪಾಯಕಾರಿ ಮಟ್ಟದಲ್ಲಿದೆ. ಕೆಲವರ್ಷಗಳ ಹಿಂದೆ ಗಡಿನಾಡಿನಲ್ಲಷ್ಟೇ ಬಲಿಷ್ಟವಾಗಿದ್ದ ತಾಲಿಬಾನಿಗಳು ಇತ್ತೀಚೆಗೆ ಲಷ್ಕರ್ ಎ ತೊಯ್ಬಾದಂತಹ ತಮ್ಮ ಸಹಚರರಿಂದಾಗಿ ಜನನಿಬಿಡ ಪಂಜಾಬಿನಲ್ಲೂ ಜನಮನ್ನಣೆ ಗಳಿಸಿಕೊಳ್ಳುತ್ತಿದ್ದಾರೆ. ಅಫಘಾನಿಸ್ತಾನದಿಂದ ಕಾಲ್ತೆಗೆಯುವಂತಾದರೆ ಅವರು ತಮ್ಮ ಕಾರ್ಯಕ್ಷೇತ್ರವನ್ನು ಪಾಕಿಸ್ತಾನಕ್ಕೆ ವಿಸ್ತರಿಸುತ್ತಾರೆ. ಅಮೆರಿಕಾದ ಪಾಲಿಗೆ ಅದು ಹಿಂದೆಂದಿಗಿಂತಲೂ ಮಿಗಿಲಾದ ಸವಾಲಾಗುತ್ತದೆ. ಹಣಕಾಸಿನ ಪರಿಸ್ಥಿತಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಅಫಘಾನಿಸ್ತಾನಕ್ಕಿಂತ ಅದೆಷ್ಟೋ ಪಟ್ಟು ಮಿಗಿಲಾಗಿರುವ ಪಾಕಿಸ್ತಾನ ತಾಲಿಬಾನ್ ಮತ್ತು ಅಲ್ ಖಯೀದಾಗಳ ಕಾರ್ಯಕ್ಷೇತ್ರವಾದರೆ ಅದರ ಪರಿಣಾಮ ಊಹೆಗೂ ಮೀರಿದ್ದು. ಚಾಣಾಕ್ಷ ಮತ್ತು (ಪಾಕಿಸ್ತಾನದ ಪರಿಸ್ಥಿತಿಯಲ್ಲಿ) ಸಮರ್ಥ ಆಡಳಿತಗಾರನಾಗಿದ್ದ ಮುಷರ್ರಫ್ ಪತನಗೊಂಡಾಗಿನಿಂದ ಪಾಕಿಸ್ತಾನ ರಾಜಕೀಯ ಅಸ್ಥಿರತೆಯನ್ನೆದುರಿಸುತ್ತಿದೆ. ಸಧ್ಯಕ್ಕೆ ಜರ್ದಾರಿ - ಗಿಲಾನಿ ಸರಕಾರವಿದ್ದರೂ ಅದು ನಿಂತಿರುವುದು ಸೇನೆಯ ಬೆಂಬಲದ ಮೇಲೆ. ಸ್ವತಂತ್ರವಾಗಿ ಪಾಕಿಸ್ತಾನಕ್ಕೆ ರಾಜಕೀಯ ಸ್ಥಿರತೆ ತಂದುಕೊಂಡುವ ಸಾಮರ್ಥ್ಯ ಅಲ್ಲಿನ ಯಾವ ರಾಜಕೀಯ ಪಕ್ಷಕ್ಕಾಗಲೀ, ನಾಯಕನಿಗಾಗಲೀ ಇಲ್ಲ. ಸೇನೆ ಬಯಸಿದಾಗ ಈಗಿನ ಸರಕಾರವನ್ನು ಕಸದ ಬುಟ್ಟಿಗೆ ಎಸೆಯಬಹುದು. ಅಂತಹ ಸಂದರ್ಭದಲ್ಲಿ ತಮ್ಮ ಬಗ್ಗೆ ಸಹಾನುಭೂತಿ ಹೊಂದಿರುವ ಕೆಳಹಂತದ ಅಧಿಕಾರಿಗಳು ಮತ್ತು ಸೈನಿಕರ ಸಹಕಾರದಿಂದ ತಾಲಿಬಾನ್ ಮತ್ತು ಅಲ್ ಖಯೀದಾ ಇಸ್ಲಾಮಾಬಾದ್‌ನಲ್ಲಿ ರಾಜಕೀಯ ಸೂತ್ರಧಾರಾಗಬಹುದು. ಅಲ್ಲಿಗೆ ಇರಾಕ್‌ನಲ್ಲಿ ಏನಾಗಬಾರದೆಂದು ಅಮೆರಿಕಾ ಇಷ್ಟು ವರ್ಷಗಳಿಂದ ಹೆಣಗುತ್ತಿದೆಯೋ ಅದು ಪಾಕಿಸ್ತಾನದಲ್ಲಿ ನಡೆದುಹೋಗುತ್ತದೆ, ಅಂದರೆ, ಅಲ್ ಖಯೀದಾಗೆ ಅಣ್ವಸ್ತ್ರಗಳು ಸಿಕ್ಕಿಹೋಗುತ್ತವೆ! ಅಲ್ಲಿಗೆ ಅಮೆರಿಕಾದ ರಕ್ಷಣೆಯ ಕೋಟೆಯಲ್ಲಿ ಭಾರಿ ಬಿರುಕುಗಳು ಕಾಣಿಸಿಕೊಂಡಂತೇ.
ಈ ಬೆಳವಣಿಗೆಗಳ ಪರಿಣಾಮ ಅಮೆರಿಕಾದ ಮೇಲಷ್ಟೇ ಅಲ್ಲ, ನಮ್ಮ ಮೇಲೂ ಸಹಾ ಭೀಕರವಾಗಿರುತ್ತದೆ.
ತಾಲಿಬಾನ್ ಒಂದು ಫಕ್ತೂನಿ ಸಂಘಟನೆ. ಹಿಂದೆ ನವದೆಹಲಿ ಅವರ ವಿರುದ್ಧವಾಗಿ ಸೋವಿಯೆತ್ ಯೂನಿಯನ್ ಅನ್ನು ಬೆಂಬಲಿಸಿದ್ದರಿಂದ ಮತ್ತು ಪಾಕಿಸ್ತಾನದ ಪ್ರಭಾವದಿಂದ ಅವರು ಭಾರತವನ್ನು ದ್ವೇಷಿಸುತ್ತಿದ್ದಾರೆ. ತಮ್ಮ ಭಾರತದ್ವೇಷವನ್ನು ಅಲ್ ಖಯೀದಾ ತಲೆಗೂ ತುಂಬಿದ್ದಾರೆ. ಹೀಗಾಗಿಯೇ ಅಲ್ ಖಯೀದಾ ಅಮೆರಿಕಾ, ಇಂಗ್ಲೆಂಡ್, ಇಸ್ರೇಲ್ ಜತೆಗೆ ಭಾರತವನ್ನೂ ತನ್ನ ವೈರಿ ಎಂದು ಘೋಷಿಸಿದ್ದು. ತಾಲಿಬಾನ್ ಮತ್ತು ಅಲ್ ಖಯೀದಾಗಳಿಗೆ ಪಾಕಿಸ್ತಾನದ ರಾಜಕೀಯದಲ್ಲಿ ಪಾಲು ದೊರೆಯುತ್ತಿದ್ದಂತೇ ಅವುಗಳ ಭಾರತದ್ವೇಷ ಘೋಷಣೆಯ ಮಟ್ಟವನ್ನು ಮೀರಿ ಕಾರ್ಯರೂಪಕ್ಕಿಳಿಯುತ್ತದೆ.
ಲಷ್ಕರ್ ಎ ತೋಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಗಳು ಮುಂಬೈ, ಅಹಮದಾಬಾದ್, ದೆಹಲಿ ಸೇರಿದಂತೆ ಭಾರತದ ನಗರಗಳಲ್ಲಿ ಈಗಾಗಲೇ ಪ್ರದರ್ಶಿಸಿರುವ ವಿಧ್ವಂಸಕ ಸಾಮರ್ಥ್ಯ; ಕಶ್ಮೀರದಲ್ಲಿ ಐಎಸ್‌ಐ ತನ್ನ ಕಾರ್ಯತಂತ್ರವನ್ನು ಬದಲಿಸಿದ್ದು, ಅದನ್ನು ಅರಿತು ಸರಿಯಾಗಿ ಪ್ರತಿಕ್ರಿಯಿಸಲಾಗದೇ ಹೋದ ನಮ್ಮ ರಾಜಕೀಯ ಹಾಗೂ ಭದ್ರತಾ ವ್ಯವಸ್ಥೆ, ಪರಿಣಾಮವಾಗಿ ಶಾಂತಿಗೆ ಮರಳುತ್ತಿದ್ದ ಕಶ್ಮೀರ ಕಣಿವೆ ಮತ್ತೊಮ್ಮೆ ಹಿಂಸೆ ಅಶಾಂತಿಯ ದಳ್ಳುರಿಗೆ ಸಿಲುಕಿರುವುದು, ಅಲ್ಲೀಗ ಯಾವ ತರ್ಕವೂ, ವಿಶ್ಲೇಶಣೆಯೂ ಅರ್ಥಹೀನವಾಗಿರುವುದು; ಪಂಜಾಬಿನಲ್ಲಿ ಭಯೋತ್ಪಾದನೆಯನ್ನು ಮತ್ತೆ ಉತ್ತೇಜಿಸಲು ಐಎಸ್‌ಐ ಕಾರ್ಯತಂತ್ರ ರೂಪಿಸಿರುವುದು; ಪಕ್ಷಭೇದದ ರಾಜಕೀಯದಿಂದ ಹೊರಬರಲಾಗದ, ಆ ಕಾರಣದಿಂದಾಗಿಯೇ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ನೀತಿಯೊಂದನ್ನು ರೂಪಿಸಲಾಗದ ನಮ್ಮ ಕೇಂದ್ರ ಸರಕಾರ- ಇಂತಹ ಪರಿಸ್ಥಿತಿಯಲ್ಲಿ ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿನ ಬೆಳವಣಿಗೆಗಳು ಅಮೆರಿಕಾಗಿಂತಲೂ ಭಾರತದ ಮೇಲೆ ಭೀಕರ ಪರಿಣಾಮವನ್ನುಂಟು ಮಾಡುತ್ತವೆ.