ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, January 5, 2014

ಮಾಂತ್ರಿಕ ವಾಸ್ತವ ಕಥೆ: "ಮೋಡಿಗಾರ"


ಮೂರು ದಿನಗಳ ಕಾನ್‌ಫರೆನ್ಸಿಗೆಂದು ಮೊಟ್ಟಮೊದಲ ಬಾರಿಗೆ ಈ ಅಪರಿಚಿತ ಊರಿಗೆ ಬಂದಿದ್ದೆ.  ಮೊದಲ ದಿನದ ಕಾರ್ಯಕ್ರಮಗಳು, ರಾತ್ರಿಯ ಊಟ ಮುಗಿದದ್ದೇ ಹೋಟೆಲ್ ಕೋಣೆ ಸೇರಿಕೊಂಡೆ.  ಎರಡು ದಿನಗಳ ರೈಲು ಪ್ರಯಾಣ, ಇಡೀ ದಿನದ ಚರ್ಚೆಗಳಿಂದಾಗಿ ಮೈಮನಸ್ಸುಗಳೆರಡಕ್ಕೂ ಹೇಳಲಾರದಷ್ಟು ಆಯಾಸವಾಗಿಹೋಗಿತ್ತು.  ಹಾಸಿಗೆ ಸೇರಿದವನಿಗೆ ರಾತ್ರಿಯಿಡೀ ಎಚ್ಚರವಿಲ್ಲದ ಶವನಿದ್ದೆ.  ಒಂದುಹೊತ್ತಿನಲ್ಲಿ ಯಾರೋ ಮೈ ಅಲುಗಿಸಿದಂತಾಗಿ ಗಕ್ಕನೆ ಎಚ್ಚರವಾಯಿತು.  ಕಣ್ಣುಬಿಟ್ಟರೆ ಯಾರೋ ಒಬ್ಬ ಕಪ್ಪನೆಯ ವ್ಯಕ್ತಿ ಹಾಸಿಗೆಯ ಪಕ್ಕ ನಿಂತಿದ್ದಾನೆ!  ಫ್ರೆಂಚ್ ಕಿಟಕಿಯಿಂದ ತೂರಿಬರುತ್ತಿದ್ದ ಬೆಳದಿಂಗಳಲ್ಲಿ ಅವನ ರೂಪ ಆಕಾರಗಳು ವಿಚಿತ್ರವಾಗಿ ಕಂಡವು.  ಇವನ್ಯಾರು?  ಇದೆಲ್ಲಿಂದ ಬಂದ?  ಸೋಜಿಗ ಪಟ್ಟುಕೊಳ್ಳುತ್ತಿದ್ದಂತೇ ಅವನು ಮಾತಾಡಿದ.
"ಆಯಿತು.  ಎಲ್ಲಾ ಮುಗಿಯಿತು.  ನೀನಿನ್ನು ಹೊರಡಬೇಕು.  ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ಬಂದು ಕರೆದುಕೊಂಡು ಹೋಗುತ್ತೇನೆ.  ತಯಾರಾಗಿರು."
ಹಾಗೆಂದವನು ಮರುಕ್ಷಣ ಅದೆಲ್ಲಿ ಮಾಯವಾದನೋ ಗೊತ್ತಾಗಲೇ ಇಲ್ಲ.  `ಮುಗಿದದ್ದು ಏನು?  ಬೆಳಿಗ್ಗೆ ಬೆಳಿಗ್ಗೆಯೇ ಆರು ಗಂಟೆಗೇ ಬಂದು ನನ್ನನ್ನೆಲ್ಲಿಗೆ ಕರೆದುಕೊಂಡು ಹೋಗುತ್ತಾನೆ?'  ಒಂದೂ ಅರಿವಾಗದೆ ಬೆಪ್ಪನಂತೆ ಕಣ್ಣುಕಣ್ಣು ಬಿಟ್ಟೆ.  ಗೋಡೆಯ ಮೇಲಿನ ಗಡಿಯಾರದತ್ತ ನೋಡಿದೆ.  ಐದೂವರೆಯಾಗುತ್ತಿತ್ತು.  ಆರುಗಂಟೆಗೆ ಇನ್ನು ಮೂವತ್ತು ನಿಮಿಷಗಳು ಮಾತ್ರ.  ಇವನ್ಯಾಎಂದು ತಕ್ಷಣ ಪತ್ತೆಹಚ್ಚಬೇಕು.  ವಿವರಗಳನ್ನು ತಿಳಿದುಕೊಳ್ಳಬೇಕು.  ನನಗಿರುವ ಸಮಯ ತೀರಾ ಕಡಿಮೆ.
ಧಡಕ್ಕನೆ ಎದ್ದುನಿಂತೆ.  ಶರ್ಟ್ ತೊಟ್ಟುಕೊಂಡು ಬಾಗಿಲು ಸಮೀಪಿಸಿದರೆ ಆಶ್ಚರ್ಯ.  ಬಾಗಿಲು ಒಳಗಿನಿಂದ ಬೋಲ್ಟ್ ಆಗಿದೆ!  ನಾನೇನಾದರೂ ಕನಸು ಗಿನಸು ಕಂಡೆನೇ?  ಇಲ್ಲ ಕನಸಲ್ಲ ಅದು.  ಅವನ ರೂಪ ಆಕಾಅಗಳು ನನ್ನ ಕಣ್ಣಲ್ಲಿನ್ನೂ ಕಟ್ಟಿದಂತಿದೆ.  ಕಿವಿಗಳಲ್ಲಿ ಅವನ ದನಿಯಿನ್ನೂ ಮೊಳಗುತ್ತಿದೆ.  ಬಾಗಿಲು ತೆರೆದು ಹೊರಬಂದೆ.  ಅಕ್ಕಪಕ್ಕದ ಕೋಣೆಗಳಲ್ಲೆಲ್ಲಾದರೂ ಅವನ ದನಿ ಕೇಳಿಬರುತ್ತದೇನೋ ಎಂದು ಆಲಿಸಿದೆ.  ಊಹ್~ಝು  ಇಲ್ಲ.  ಎಲ್ಲೆಡೆಯೂ ನಿಶ್ಶಬ್ಧ.  ಅವನು ಬಂದದ್ದು ನನ್ನೊಬ್ಬನ ಬಳಿಗೆ ಮಾತ್ರ ಇರಬೇಕು.  ಆದರೆ ಅದೆಲ್ಲಿ ಮಾಯವಾಗಿಹೋದ?  ಅತ್ತಿತ್ತ ನೋಟ ಹೊರಳಿಸಿದೆ.  ಹಾಲು ಚೆಲ್ಲಿದಂತಹ ಬೆಳದಿಂಗಳಲ್ಲಿ ಕಂಡ ನೋಟದಿಂದ ಬೆಚ್ಚಿದೆ.  ಬೃಹದಾಕಾರದ ಕೋಣವೊಂದು ಹೋಟೆಲ್‌ನ ಗೇಟ್ ದಾಟುತ್ತಿತ್ತು!  ಅದರ ಮೇಲೆ ಕುಳಿತಿದ್ದವನ ಮೈಬಣ್ಣ ಕಡುಗಪ್ಪು!  ಅವನೇ!
ಧಡಧಡನೆ ಕೆಳಗಿಳಿದು ಓಡಿದೆ.  ಗೇಟ್ ಸಮೀಪಿಸಿ ನೋಡಿದರೆ ಕೋಣ ದೂರದಲ್ಲಿ ಒಂದು ಚುಕ್ಕೆಯಾಗಿ ಕಂಡಿತು.  ಅದರತ್ತ ಜಿಗಿಜಿಗಿದು ಓಡಿದೆ.  ಎಷ್ಟು ವೇಗವಾಗಿ ಓಡಿದರೂ ಅದನ್ನು ಸಮೀಪಿಸಲಾಗಲಿಲ್ಲ.  ಓಡುತ್ತಾ ದಾರಿ ಹಲವಾರು ಕವಲುಗಳಾಗಿ ಸೀಳಿದ್ದೆಡೆ ಬಂದು ಗಕ್ಕನೆ ನಿಂತೆ.  ಕೋಣ ಯಾವ ಹಾದಿಯಲ್ಲಿ ಸಾಗಿತೆಂದು ತಿಳಿಯದೇ ಅತ್ತಿತ್ತ ಬೆಪ್ಪಾಗಿ ನೋಡಿದೆ.  ಅಲ್ಲಿದ್ದದ್ದು ಐದು ಸೀಳುಗಳು.  ಒಂದೊಂದೂ ಎತ್ತ ಸಾಗುತ್ತದೆಂದು ಸೂಚಿಸುವ ಕೈಮರಗಳನ್ನು ನಿಲ್ಲಿಸಿದ್ದರು.  ಮೊದಲನೆಯ ದಾರಿ "ಜಾತ್ರೆ"ಗೆ ಹೋಗುತ್ತಿತ್ತು.  ಎರಡನೆಯ ರಸ್ತೆಯ ಕೈಮರ "ಮಧ್ಯಯುಗಕ್ಕೆ" ಎಂದು ಸೂಚಿಸುತ್ತಿತ್ತು.  ಮೂರನೆಯ ರಸ್ತೆ "ಸಿಲಿಕಾನ್ ವ್ಯಾಲಿ"ಗೆ.  ನಾಲ್ಕನೆಯ ರಸ್ತೆಯ ಕೈಮರದಲ್ಲಿ "to the Land of Rising Gun" ಎಂದಿತ್ತು.  ಐದನೆಯ ಹಾಗೂ ಕೊನೆಯ ರಸ್ತೆ "ಹಾಲಿಬಾಲಿವುಡ್"ಗೆ ಹೋಗುತ್ತಿತ್ತು.  ಇವೆಲ್ಲಾ ಏನು ಎಂದು ಯೋಚಿಸುತ್ತಾ ನಿಂತಂತೇ ಐದೂ ರಸ್ತೆಗಳಲ್ಲೂ ಒಬ್ಬೊಬ್ಬರು ನನ್ನತ್ತ ಓಡಿಬರುತ್ತಿದ್ದುದು ಕಂಡು ಅಚ್ಚರಿಗೊಂಡೆ.  ಕಣ್ಣವೆ ಮುಚ್ಚಿ ತೆರೆಯುವಷ್ಟರಲ್ಲಿ ಅವರೆಲ್ಲರೂ ನನ್ನ ಮುಂದಿದ್ದರು.  ಜಾತ್ರೆ ಕಡೆಯ ರಸ್ತೆಯಿಂದ ಬಂದವನು ಒಬ್ಬ ಕಾವಿಯುಟ್ಟ ಸಂನ್ಯಾಸಿ.  ಉದ್ದನೆಯ ಗಡ್ಡಮೀಸೆ, ಎತ್ತರದ ಜಟೆಗಳಿದ್ದ ಗುಂಡುಗುಂಡನೆಯ ಆಸಾಮಿ.  "ನಾನು ಜಗದ್ಗುರು" ಅಂದ.  ಮಧ್ಯಯುಗದಿಂದ ಬಂದವನು ಎತ್ತರದ ಆಳು.  ಉದ್ದನೆಯ ಗಡ್ಡ ಬಿಟ್ಟುಕೊಂಡಿದ್ದ.  ಅಡಿಯಿಂದ ಮುಡಿಯವರೆಗೆ ಬಿಳಿಯುಡುಗೆ.   "ನಾನು ಮುಲ್ಲಾಡೆನ್" ಎಂದು ತನ್ನನ್ನು ಪರಿಚಯಿಸಿಕೊಂಡ.  ಸಿಲಿಕಾನ್ ವ್ಯಾಲಿಯಿಂದ ಬಂದವನು ಒಬ್ಬ ಚಂದದ ಯುವಕ.  ಸೂಟುಬೂಟುಧಾರಿಯಾಗಿದ್ದು ಟೈ ಕಟ್ಟಿಕೊಂಡು ಸೊಗಸುಗಾರ ಪುಟ್ಟಸ್ವಾಮಿಯಂತಿದ್ದ.  "ನಾನು ವಿಜ಼್‌ಕಿಡ್" ಎಂದು ಪರಿಚಯ ಹೇಳಿಕೊಂಡ.  ಲ್ಯಾಂಡ್ ಆಫ್ ರೈಸಿಂಗ್ ಗನ್‌ನ ಕಡೆಯಿಂದ ಬಂದಾತ ತೆಳುದೇಹದ ಮನುಷ್ಯ.  ಅವನ ತಲೆ ಅರ್ಧ ಬೋಳಾಗಿತ್ತು.  ಕುರುಚಲು ಗಡ್ಡಮೀಸೆಗಳು ಗಾಳಿಗೆ ಹಾರಾಡುತ್ತಿದ್ದವು.  ಕುರ್ತಾ ಪಾಯಿಜಾಮ ಧರಿಸಿ ಹೆಗಲಿಗೆ ಚೀಲವೊಂದನ್ನು ತೂಗುಹಾಕಿಕೊಂಡಿದ್ದ.  ಬಂದವನು ಉಳಿದವರಂತೆ ಪರಿಚಯ ಹೇಳಿಕೊಳ್ಳದೇ ಅತ್ತಿತ್ತ ನೋಡುತ್ತಾ ನಿಂತ.  ನೀ ಯಾರೆಂದು ಕೇಳಿದಾಗ ನಿಧಾನವಾಗಿ ನನ್ನತ್ತ ತಿರುಗಿ ಗಂಭೀರ ದನಿಯಲ್ಲಿ "ನಾನೊಬ್ಬ ಬುದ್ಧಿಜೀವಿ" ಅಂದ.  ಅವನ ಮಾತು ಕೇಳಿ ಜಗದ್ಗುರು ಮುಖ ಹುಳಿಮಾಡಿಕೊಂಡರೆ ಮುಲ್ಲಾಡೆನ್ ಎಲ್ಲರಿಗೂ ಕಾಣುವಂತೇ ಅವಡುಗಚ್ಚಿದ.  ಹಾಲಿಬಾಲಿವುಡ್‌ನ ಕಡೆಯಿಂದ ಬಂದು ಕಾಲಬೆರಳಿನಿಂದ ನೆಲ ಕೆರೆಯುತ್ತಾ ನಿಂತಿದ್ದವಳು ಒಬ್ಬಳು ಚಂದದ ಹೆಣ್ಣು.  ತೆಳ್ಳನೆಯ ಬೆಳ್ಳನೆಯ ಮಾಟದ ಮೈಯವಳು, ಹೇಳಿ ಮಾಡಿಸಿದಂತಹ ರೂಪು.  ಒಟ್ಟಿನಲ್ಲಿ ಸಖತ್ ಚೆಲುವೆ, ಲಾವಣ್ಯವತಿ.  ಹುಬ್ಬುಗಳನ್ನು ಕುಣಿಸುತ್ತಾ, ಬಳ್ಳಿನಡು ಬಳುಕಿಸುತ್ತಾ ಮೆಲ್ಲಗೆ ತುಟಿ ತೆರೆದು ಉಲಿದಳು- "ನಾನು ನಟಿ."
"ನೀ ಯಾಕೆ ಇಲ್ಲಿಗೆ ಬಂದೆ?"  ಮುಲ್ಲಾಡೆನ್ ಅವಳತ್ತ ತಿರುಗಿ ಅಬ್ಬರಿಸಿದ.  ಅವಳು ಒಂದು ಕ್ಷಣ ಬೆದರಿದವಳು ಮರುಕ್ಷಣ ಚೇತರಿಸಿಕೊಂಡು ಉತ್ತರಿಸಿದಳು- "ನಾನೇನೂ ಬೇಕಂತ ಇಲ್ಲಿಗೆ ಬಲಿಲ್ಲ.  ಅದ್ಯಾವನೋ ಕರೀ ಮನುಷ್ಯ ವಕ್ಕರಿಸಿ ಸೊಗಸಾಗಿ ನಿದ್ದೆ ಮಾಡ್ತಿದ್ದ ನನ್ನನ್ನ ಎಬ್ಬಿಸ್ಬಿಟ್ಟ.  `ಎಲ್ಲಾ ಮುಗೀತು.  ಆರು ಗಂಟೆಗೆ ತಯಾರಾಗಿರು.  ಬಂದು ಕರಕೊಂಡು ಹೋಗ್ತೀನಿ' ಅಂದ್ಬಿಟ್ಟು ಓಡಿಹೋದ.  `ಅದೆಲ್ಲಿಗೆ ಕರಕೊಂಡು ಹೋಗ್ತೀಯೋ ಮಾರಾಯಾ' ಅಂತ ಕೇಳೋಣಾಂತ ಅವನನ್ನ ಹುಡುಕ್ಕೊಂಡು ಓಡ್ಬಂದೆ."
ಒಂದುಕ್ಷಣ ಎಲ್ಲರ ಮುಖದಲ್ಲೂ ಅಚ್ಚರಿಯ ಸೆಲೆ.  ಮರುಕ್ಷಣ ಎಲ್ಲರೂ ದನಿ ತೆರೆದು ಮಾತಾಡತೊಡಗಿದರು.  ಅವರೆಲ್ಲರೂ ಹೇಳುತ್ತಿದ್ದುದು ಒಂದೇ ವಿಷಯ- ಕರೀಮನುಷ್ಯ ಬಂದು ಎಬ್ಬಿಸಿ `ಎಲ್ಲಾ ಮುಗೀತು...' ಅಂತ ಹೇಳಿದ್ದೇ.  ಅವನನ್ನು ಹುಡುಕಿಕೊಂಡೇ ಇವರೆಲ್ಲರೂ ಇಲ್ಲಿಗೆ ಓಡಿಬಂದಿದ್ದರು!
ಅಂದರೇ ನನ್ನ ಬಳಿ ಬಂದಿದ್ದ ಕರೀಮನುಷ್ಯ ಇವರೆಲ್ಲರ ಬಳಿಯೂ ಹೋಗಿದ್ದಾನೆ!  ಇದೊಳ್ಳೇ ಸೋಜಿಗದಂತಿದೆಯಲ್ಲ!
"ಎಲ್ಲಾ ಮುಗೀತು."  ಮಾತು ಕೇಳಿ ಗಕ್ಕನೆ ತಿರುಗಿದೆ.  ಜಗದ್ಗುರು ಗಡ್ಡ ನೀವಿಕೊಳ್ಳುತ್ತಿದ್ದ.  `ಏನು?' ಎಂದು ಕೇಳುವ ಮೊದಲೇ ವಿವರಣೆ ಬಂತು- "ಇದರರ್ಥ ಈ ಭೂಲೋಕದಲ್ಲಿ ನಮ್ಮ ವ್ಯವಹಾರ ಇಂದಿಗೆ ಮುಗಿಯಿತು ಅಂತ.  ನಮ್ಮೆಲ್ಲರ ಬಳಿ ಬಂದಿದ್ದವನು ಕಾಲ.  ಸರಿಯಾಗಿ ಆರುಗಂಟೆಗೆ ಮತ್ತೆ ಬಂದು ನಮ್ಮ ಆತ್ಮಗಳನ್ನು ತನ್ನೊಡನೆ ಒಯ್ಯುತ್ತಾನೆ."
"ಇದರರ್ಥ ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ನಾವೆಲ್ಲಾ ಸತ್ತೋಗ್ತೀವಿ ಅಂತಾನಾ?"  ಮುಲ್ಲಾಡೆನ್ ಅನುಮಾನದಿಂದ ಪ್ರಶ್ನಿಸಿದ.  "ಹೌದು" ಎಂಬ ಉತ್ತರ ಬಂತು.  ಉಳಿದವರ ಮೇಲೆ ಈ ಒಂದು ಪದದ ಉತ್ತರದ ಪರಿಣಾಮ ಅಗಾಧವಾಗಿತ್ತು.
"ಓಹ್ ನೋ" ಎಂದು ನಟಿ ಚೀತ್ಕರಿಸಿದಳು.  ವಿಜ಼್‌ಕಿಡ್ "ಓಹ್ ಶಿಟ್" ಎನ್ನುತ್ತಾ ಕೂದಲು ಕಿತ್ತುಕೊಳ್ಳತೊಡಗಿದ.  ಬುದ್ಧಿಜೀವಿ "ಇಟೀಸ್ ಟೂ ಬ್ಯಾಡ್" ಎಂದು ಗೊಣಗಿ ತನ್ನ ಚೀಲದಲ್ಲಿ ಕೈಹಾಕಿ ಏನನ್ನೋ ಆತುರಾತುರವಾಗಿ ಹುಡುಕತೊಡಗಿದ.  ಮುಲ್ಲಾಡೆನ್ ದನಿ ಎತ್ತರಿಸಿ ಹೂಂಕರಿಸಿದ- "ಬಿಲ್‌ಕುಲ್ ಸಾಧ್ಯವಿಲ್ಲ.  ನಾನು ಇಷ್ಟ್ ಬೇಗ ಸಾಯೋದು ಅಂದ್ರೇನು?  ನಾ ಸತ್ರೆ ಜಿಹಾದ್ ಗತಿ ಏನು?" ಎಂದು ಅಲವತ್ತುಕೊಂಡ.  ಹೀಗೆ ಎಲ್ಲರೂ ಅವರವರ ದುಃಖದಲ್ಲಿ ಮುಳುಗಿರಲು ಜಗದ್ಗುರು ಮಾತಾಡಿದ- "ಆಯ್ತು.  ಈವತ್ತು ಸಾಯೋದಕ್ಕೆ ನೀವ್ಯಾರೂ ತಯಾಆಗಿಲ್ಲ ಅಂತ ಅರ್ಥ ತಾನೆ?"
"ಹೌದು ಹೌದು."  ಎಲ್ಲರೂ ದನಿಯೆತ್ತರಿಸಿ ಕೂಗಿದರು.
ಜಗದ್ಗುರು ನಕ್ಕುಬಿಟ್ಟ.  ಮರುಕ್ಷಣ ಗಂಭೀಅನಾದ.  ಎಲ್ಲರೂ ತಾಳ್ಮೆಯಿಂದ ಕಾದರು.  ಕೊನೆಗೂ ಅವನು ಮೌನ ಮುರಿದ.  "ಈವತ್ತು ಸಾವನ್ನ ತಪ್ಪಿಸಿಕೊಳ್ಳಬೇಕು ಅಂದ್ರೆ ಒಂದು ಮಾರ್ಗ ಇದೆ."
"ಏನದು?"  ಎಲ್ಲರೂ ಒಟ್ಟಾಗಿ ಪ್ರಶ್ನಿಸಿದರು.  ಜಗದ್ಗುರುವಿನ ಸುತ್ತಲೂ ಅಮರಿಕೊಂಡರು.
"ಆ ಮಾರ್ಗ ಅಂದ್ರೆ...  ಬೇರೆಯವರ ಆಯಸ್ಸನ್ನ ಹೇಗಾದರೂ ಮಾಡಿ ನಮ್ಮ ಆಯಸ್ಸಿಗೆ ಸೇರಿಸಿಕೊಂಡುಬಿಡೋದು.  ಈ ಕೆಲಸ ಆರು ಗಂಟೆಯ ಒಳಗೆ ಆಗಬೇಕು" 
"ಅದ್ಹೇಗೆ ಸಾಧ್ಯ?"  ಎಲ್ಲರೂ ಸಾಮೂಹಿಕವಾಗಿ ನಿಟ್ಟುಸಿರಿಟ್ಟರು.  "ನೀವೇ ದಾರಿ ತೋರಿಸಿ" ಎಂದು ಜಗದ್ಗುರುವಿಗೆ ದುಂಬಾಲು ಬಿದ್ದರು.  ಜಗದ್ಗುರು ಮತ್ತೊಮ್ಮೆ ಕಣ್ಣುಮುಚ್ಚಿ ತೆರೆದು ಪ್ರಶ್ನಿಸಿದ-  "ಹತ್ತಿರದಲ್ಲಿ ಯಾವುದಾದರೂ ಊರಿದೆಯೇ?
ಎಲ್ಲರೂ ತಲೆ ಕೆಳಗೆ ಹಾಕಿದರು.  "ಗೊತ್ತಿಲ್ಲವಲ್ಲ."  ತಮ್ಮತಮ್ಮೊಳಗೆ ಗೊಣಗಿಕೊಂಡರು.
"ನಿನಗೇನಾದ್ರೂ ಗೊತ್ತೇ?  ಬೇಗ ಹೇಳು."  ಬುದ್ಧಿಜೀವಿ ನನ್ನತ್ತ ತಿರುಗಿ ಆತುರಾತುರವಾಗಿ ಕೇಳಿದ.  "ಹ್ಞೂಂಗುಟ್ಟಿದೆ.  ನಾನು ಬಂದಿದ್ದೇ ಒಂದು ಊರಿಂದ.
ಜಗದ್ಗುರು ನನ್ನತ್ತ ತಿರುಗಿದ.  "ಅಲ್ಲಿನ ಜನಸಂಖ್ಯೆ ಎಷ್ಟು?"
"ಸುಮಾರು ಒಂದು ಲಕ್ಷ."  ಉತ್ತರಿಸಿದೆ.
"ಓಹ್ ಬೇಕಾದಷ್ಟಾಯಿತು."  ತೃಪ್ತಿಯ ಉದ್ಗಾರ ತೆಗೆದ ಅವನು ಕೈಗಳನ್ನು ಆಡಿಸಿ ಎಲ್ಲರ ಗಮನ ಸೆಳೆದ.   "ಇಲ್ಲಿ ಕೇಳಿ.  ಒಬ್ಬೊಬ್ಬರಿಂದಲೂ ಸರಾಸರಿ ಮೂವತ್ತು ವರ್ಷಗಳು ಸಿಕ್ಕಿದರೆ ಮೂವತ್ತು ಲಕ್ಷ ವರ್ಷಗಳಾಗ್ತವೆ.  ಈ ಮೂವತ್ತು ಲಕ್ಷ ವರ್ಷಗಳನ್ನ ನಾವು ಆರು ಜನರೂ ಸಮನಾಗಿ ಹಂಚಿಕೊಂಡರೆ ಒಬ್ಬೊಬ್ಬರಿಗೂ ಐದೈದು ಲಕ್ಷ ಸಿಗುತ್ತೆ.  ಇದರರ್ಥ ನಾವು ಆರೂ ಜನ ಇನ್ನು ಐದು ಲಕ್ಷ ವರ್ಷಗಳವರೆಗೆ ನೆಮ್ಮದಿಯಾಗಿ ಬದುಕಿರಬಹುದು.  ಕಾಲ ನಮ್ಮನ್ನೇನೂ ಮಾಡೋಹಾಗಿಲ್ಲ.  ಈಗ ನಾವು ತಕ್ಷಣ ಮಾಡಬೇಕಾಗಿರೋ ಕೆಲಸ ಅಂದ್ರೆ ಆ ಊರಿಗೆ ಹೋಗಿ ಎಲ್ಲ ಜನರನ್ನೂ ಒಟ್ಟಿಗೆ ಸೇರಿಸಬೇಕು."
"ಎಲ್ಲರನ್ನೂ ಒಟ್ಟಿಗೆ ಸೇರಿಸೋದಾ?  ಅದು ನನಗೆ ನೀರು ಕುಡಿದಷ್ಟು ಸುಲಭ.  ನಾನು ಆ ಊರಲ್ಲಿ ಕಾಣಿಸ್ಕೊಂಡ್ರೆ ಸಾಕು, ಮಕ್ಕಳು ಮುದುಕರಾದಿಯಾಗಿ ಎಲ್ರೂ ನನ್ನ ಹಿಂದೆ ಬಂದ್ಬಿಡ್ತಾರೆ."  ನಟಿ ಕಿಲಿಕಿಲಿ ನಗುತ್ತಾ ಹೇಳಿದಳು.
"ಜನಾ ಎಲ್ಲ ಸೇರಿದ್ಮೇಲೆ ಒಂದು ಭಾಷಣ ಮಾಡ್ಬೇಕು.  `ಈ ಭೂಮಿ, ಈ ದೇಶ, ಈ ಸಮಾಜ ಎಲ್ಲಾ ಗಬ್ಬೆದ್ದುಹೋಗಿದೆ.  ಇದನ್ನ ಬದಲಾಯಿಸ್ಭೇಕು' ಅಂತ ಹೇಳಿ ಅವರನ್ನ ರೊಚ್ಚಿಗೆಬ್ಬಿಸ್ಬೇಕು.  ಬದಲಾವಣೆಗಾಗಿ ಅವರ ಮನಸ್ಸು ಹಾತೊರೆಯಬೇಕು  ಹಾಗೆ ಮಾಡ್ಬೇಕು."
ಬುದ್ಧಿಜೀವಿ ಒಮ್ಮೆ ಕೆಮ್ಮಿದ.  "ಬದಲಾವಣೆಯ ಬಗ್ಗೆ ಭಾಷಣ!  ನನ್ನ ಹವ್ಯಾಸ ಅದು.  ಟೈಮ್ ಪಾಸ್‌ಗೆ ಅಂತ ಅದನ್ನ ಆಗಾಗ ಮಾಡ್ತಾನೇ ಇತೀನಿ.  ಈ ದೇಶದ ಬಗ್ಗೆ, ಸಮಾಜದ ಬಗ್ಗೆ ನನ್ನ ಮಾತುಗಳನ್ನ ಕೇಳಿದ ಜನ `ಚಚ್ಚಾಕು ಈ ದೇಶಾನಾ, ಸುಟ್ಟಾಕು ಈ ಸಮಾಜಾನಾ' ಅಂತ ಮಚ್ಚು, ಕೊಡಲಿ, ತುಪಾಕಿ, ಬಾಂಬುಗಳನ್ನ ಎತ್ಕೊಂಡು ಹುಚ್ಚೆದ್ದು ಕುಣೀದೇ ಇದ್ರೆ ಕೇಳಿ."
"ಶಹಬ್ಬಾಸ್!  ಹೀಗೆ ಜನಾನ ಹುಚ್ಚೆಬ್ಬಿಸಿ ಅವ್ರೆಲ್ಲಾ `ಥತ್ ಯಾವನಿಗೆ ಬೇಕು ಈ ಸಮಾಜ, ಈ ದೇಶ, ಕೊನೆಗೇ ಈ ಬದುಕು' ಅನ್ನೋ ಹಾಗೆ ಮಾಡಿಬಿಡ್ಬೇಕು.  ಅಲ್ಲಿಗೆ ಕಬ್ಬಿಣ ಸರಿಯಾದ ಹದಕ್ಕೆ ಕಾದ ಹಾಗೆ.  `ನಿಮ್ಮ ಆಯಸ್ಸನ್ನೆಲ್ಲಾ ನಮಗೆ ಕೊಟ್ಟರೆ ನಿಮಗೆ ಸ್ವರ್ಗದ ದಾರಿ ತೋರಿಸ್ತೇವೆ.   ನೀವೆಲ್ಲಾ ಆರಾಮವಾಗಿ ಅಲ್ಲಿಗೆ ಹೋಗಬೋದು' ಅಂತ ಆಶ್ವಾಶನೆ ಕೊಟ್ಟು ಅವರನ್ನ ನಂಬಿಸಬೇಕು.  ಹೀಗೆ ಅವರು ತಾವಾಗಿಯೇ ತಂತಮ್ಮ ಆಯಸ್ಸನ್ನ ನಮಗೆ ಕೊಡೋ ಹಾಗೆ ಮಾಡಬೇಕು."
"ನಿಮ್ಮ ಆಯಸ್ಸನ್ನ ಕೊಟ್ರೆ ಸ್ವರ್ಗಕ್ಕೆ ದಾರಿ ತೋರಿಸ್ತೀನಿ ಅಂತ ಜನರನ್ನ ನಂಬಿಸೋದಾ?  ಆ ಕೆಲ್ಸಾನೇ ತಾನೆ ನಾನೀಗ ಮಾಡ್ತಾ ಇರೋದು?  `ಸ್ಯೂಯಿಸೈಡ್ ಬಾಂಬ'ಗಳನ್ನ ನಾನು ತಯಾರು ಮಾಡ್ತಾ ಇರೋದೇ ಹೀಗೆ ಅಂತ ಗೊತ್ತಿಲ್ವಾ?"  ಮುಲ್ಲಾಡೆನ್ ಹೆಮ್ಮೆಯಿಂದ ಹೇಳಿದ.
"ನಂಬಿಸಿ ಅವರ ಆಯಸ್ಸನ್ನೆಲ್ಲಾ ಕಿತ್ತುಕೊಂಡ ಮೇಲೆ ಅವರಿಗೆ ಸ್ವರ್ಗದ ಭ್ರಮೆ ಉಂಟಾಗೋ ಹಾಗೆ ಮಾಡಬೇಕು."
ವಿಜ಼್‌ಕಿಡ್ ಬೆರಳೆತ್ತಿದ.  "ಸ್ವರ್ಗದ ಭ್ರಮೆ ಅಂದ್ರೆ...  ಒಂಥರಾ ವರ್ಚುಅಲ್ ಸ್ವರ್ಗಾನಾ?  ಅದನ್ನ ನಾನು ಮಾಡ್ತೀನಿ ಬಿಡಿ.   ಸ್ವರ್ಗ ಒಂದೇ ಯಾಕೆ?  ಅತಳ ವಿತಳ ಪಾತಾಳ ರಸಾತಳದಂಥಾ ಛಪ್ಪನ್ನೈವತ್ತಾರು ಲೋಕಗಳ ವೆಬ್‌ಸೈಟ್‌ಗಳು ನನ್ನ ನಾಲಿಗೇ ತುದೀನಲ್ಲಿವೆ.  ಯಾವುದು ಬೇಕು ಹೇಳಿ..."  ಅಂದವನೇ ಗಕ್ಕನೆ ದನಿ ತಗ್ಗಿಸಿ "...ಆದ್ರೆ ನನ್ ಕಂಪ್ಯೂಟರ್ ನನ್ನತ್ರ ಇಲ್ವಲ್ಲಾ.  ಛೆ ಏನ್ಮಾಡೋದು?"  ಎನ್ನುತ್ತಾ ಕೈಗಳನ್ನು ಹಿಸುಕಿಕೊಳ್ಳತೊಡಗಿದ.
ಜಗದ್ಗುರು ಒಮ್ಮೆ ಮುಗುಳ್ನಕ್ಕು ಅವನ ಭುಜ ತಟ್ಟಿದ.  "ಚಿಂತೆ ಯಾಕೆ?  ಕಂಪ್ಯೂಟರ್ ತಾನೆ?  ಇಗೋ ನೋಡು"  ಎನ್ನುತ್ತಾ ಕೈಗಳನ್ನು ಗಾಳಿಯಲ್ಲಿ ಅತ್ತಿತ್ತ ಬೀಸಿ "ಛೂ ಮಂತ್ರಗಾಳಿ" ಅಂದ.   ಅವನು ಮಾಡಿದ್ದು ಪವಾಡ.  ಹೊಚ್ಚಹೊಸ ಕಂಪ್ಯೂಟರ್ ಕ್ಷಣಾರ್ಧದಲ್ಲಿ ನಮ್ಮ ಮುಂದಿತ್ತು!  ಅದನ್ನು ವಿಜ಼್‌ಕಿಡ್‌ನ ಕಡೆ ಅಸಡ್ಡೆಯಿಂದ ನೂಕಿ ಹೇಳಿದ ಜಗದ್ಗುರು- "ಕಂಪ್ಯೂಟರ್ರು, ಸ್ಪೀಕರ್ರು, ಇಂಟನೆಟ್ಟು, ಬ್ರಾಡ್‌ಬ್ಯಾಂಡು ಎಲ್ಲ ಇವೆ ತಗಾ."

ಊರಿನತ್ತ ಹೊರಟೆವು.  ಅಲ್ಲಿಗೆ ತಲುಪಿದಾಗ ಆರು ಗಂಟೆಗೆ ಇನ್ನು ಹತ್ತು ನಿಮಿಷಗಳು ಮಾತ್ರವಿದ್ದವು.  "ಓಹ್ ಟೈಮ್ ಆಗೋಗ್ತಾ ಇದೆ.  ಇನ್ನೊಂದು ನಿಮಿಷದಲ್ಲಿ ಜನರನ್ನ ಸೇರಿಸಬೇಕು.  ತಕ್ಷಣ ಹೊರಡು"  ಎನ್ನುತ್ತಾ ಜಗದ್ಗುರು ನಟಿಯನ್ನು ಅವಸರಿಸಿದ.  ಅವಳು ಒಮ್ಮೆ ಕಣ್ಣು ಮಿಟುಕಿಸಿ ಸೀರೆಯನ್ನು ಹೊಕ್ಕಳಿನ ಕೆಳಗೆ ಸರಿಸಿ ಸೆರಗನ್ನು ಜಾರಿಸಿ "ಇದೋ ಹೊರಟೆ" ಎನ್ನುತ್ತಾ ಎದೆ ಸೆಟೆಸಿ ಹೊರಟಳು.  ಹೀಗೆ ಹೋದಳು.  ಹಾಗೆ ಬಂದಳು.  ಬಂದವಳ ಹಿಂದೆ ಇಡೀ ಊರ ಜನ...  ಜನಸಾಗರ.
ಒಮ್ಮೆ ಗಡಿಯಾರ ನೋಡಿಕೊಂಡ ಜಗದ್ಗುರು ಬುದ್ಧಿಜೀವಿಯತ್ತ ತಿರುಗಿ ಹೂಂಕರಿಸಿದ.  ಜನಸ್ತೋಮದತ್ತ ಗಡಬಡಿಸಿ ಓಡಿದ ಬುದ್ಧಿಜೀವಿ ಮಾತಾಡಲು ಬಾಯಿ ತೆರೆದವನು ಒಂದೂ ಮಾತಿಲ್ಲದೇ ಅತ್ತಿತ್ತ ತಿರುಗಿ ಏನನ್ನೋ ಹುಡುಕತೊಡಗಿದ.  "ಮೈಕೇ ಇಲ್ವಲ್ಲ?  ನನ್ ತಲೇ ಓಡ್ತಾನೇ ಇಲ್ಲ" ಎಂದು ಪೇಚಾಡಿಕೊಂಡ.  ಮುಲ್ಲಾಡೆನ್ "ಅರೆ ಇಸ್ಕೀ ಮಾ ಕೀ" ಎಂದು ಅವಡುಗಚ್ಚಿದ.   "ತಿರುಬೋಕಿ ನನ್ಮಗ.  ಇಂಥೋರಿಂದ್ಲೇ ಎಲ್ಲಾ ಹಾಳಾಗೋದು" ಎಂದು ಗೊಣಗಿದ ಜಗದ್ಗುರು ಗಾಳಿಯಲ್ಲಿ ಕೈ ಆಡಿಸಿ ಮೈಕೊಂದನ್ನು ಸೃಷ್ಟಿಸಿ ಬುದ್ಧಿಜೀವಿಯತ್ತ ಎಸೆದ.  ಮರುಕ್ಷಣ ಬುದ್ಧಿಜೀವಿಯ ರಣಕಹಳೆ ಮೊಳಗತೊಡಗಿತು... ಜನ ಹುಚ್ಚೆದ್ದು ಕುಣಿಯತೊಡಗುತ್ತಿದ್ದಂತೇ ಜಗದ್ಗುರು ಮುಲ್ಲಾಡೆನ್‌ನನ್ನು ಮುಂದೆ ನೂಕಿದ.  "ಮಸಲಾ ಯೆಹ್ ಹೈ ಕೀ..." ಎಂದು ಮುಲ್ಲಾಡೆನ್ ಮಾತು ಆರಂಭಿಸಿ ಅರೆಕ್ಷಣ ಕಳೆದಿಲ್ಲ,  ಜನಸಾಗರ ಅವನ ಮುಂದೆ ಅಂಗಲಾಚಿ ಮಲಗಿತು.  "ಏನು ಬೇಕೋ ತಗೋ.  ಸ್ವರ್ಗಕ್ಕೆ ದಾರಿ ತೋರಿಸಿಬಿಡು ನಮ್ಮಪ್ಪಾ" ಎಂದು ಗೋಗರೆಯತೊಡಗಿತು.  ಅದಕ್ಕೇ ಕಾದಿದ್ದ ಜಗದ್ಗುರು ಅರೆಕ್ಷಣದಲ್ಲಿ ಜನರ ಆಯಸ್ಸನ್ನೆಲ್ಲಾ ಆಯ್ದು ತನ್ನ ಕಮಂಡಲದೊಳಕ್ಕೆ ತುಂಬಿಕೊಂಡುಬಿಟ್ಟ.  ಅಲ್ಲಿಗೆ ಐದುಗಂಟೆ ಐವತ್ತೆಂಟು ನಿಮಿಷವಾಯಿತು...  ಕ್ಲೈಮ್ಯಾಕ್ಸ್!
ವಿಜ಼್‌ಕಿಡ್ ಕಂಪ್ಯೂಟರ್ ಪರದೆಯ ಮೇಲೆ www.virtualheaven.com ಎಂಬ ಅಕ್ಷರಗಳನ್ನು ಮೂಡಿಸುತ್ತಿದ್ದಂತೇ ವರ್ಚುಅಲ್ ಸ್ವರ್ಗದ ಬಾಗಿಲು ತೆರೆದುಕೊಂಡಿತು...  ಜನರೆಲ್ಲರೂ ನಾ ಮುಂದು ತಾ ಮುಂದು ಎಂದು ನುಗ್ಗತೊಡಗಿದರು.  ಕೊಟ್ಟಕೊನೆಯಲ್ಲಿ ಕುಂಟನೊಬ್ಬ ಒಳಸೇರುತ್ತಿದ್ದಂತೇ "ಲಾಗ್ ಔಟ್, ಲಾಗ್ ಔಟ್.  ಬೇಗ.  ಒಂದು ನರಪಿಳ್ಳೆಯೂ ಹೊರಬರಕೂಡದು" ಎಂದು ಜಗದ್ಗುರು ಅವಸರಿಸಿದ.  ಅವನ ಅವಸರಕ್ಕೆ ಅರ್ಥವಿತ್ತು.  ಆರುಗಂಟೆಗೆ ಇನ್ನು ಎರಡೇ ಸೆಕೆಂಡುಗಳಿದ್ದವು!
ವಿಜ಼್‌ಕಿಡ್‌ನ ಬೆರಳು ಮೌಸ್‌ನ ಗುಂಡಿಯನ್ನು ಒತ್ತುತ್ತಿದ್ದಂತೇ ಆಗಬಾರದ ಅನಾಹುತ ಆಗಿಹೋಯಿತು.  ಕಂಪ್ಯೂಟರ್ ಪರದೆಯಿಂದ ಸ್ವರ್ಗ ಮರೆಯಾಗುತ್ತಿದ್ದಂತೇ ಅದರೊಳಗೆ ಸೇರಿದ್ದ ಜನರೆಲ್ಲಾ ಪುತಪುತನೆ ಕೆಳಗೆ ಉದುರತೊಡಗಿದರು!  ~ಆಂಟಿ ಕ್ಲೈಮ್ಯಾಕ್ಸ್!
ಬಿದ್ದವರು ಥಟ್ಟನೆ ಮೇಲೆದ್ದು "ಸುಳ್ಳುಗಾರ್ರು, ಮೋಸಗಾರ್ರು.  ಹಿಡೀರಿ ಬಡೀರಿ.  ನಮ್ ಆಯಸ್ನೆಲ್ಲಾ ವಾಪಸ್ ಕಿತ್ಕೊಳ್ಳೀ"  ಎಂದು ಒಬ್ಬರನ್ನೊಬ್ಬರು ಹುರಿದುಂಬಿಸುತ್ತಾ ನಮ್ಮತ್ತ ಬರತೊಡಗಿದರು.
"ಓಡಿ ಬೇಗ ಓಡಿ.  ಇನ್ನೊಂದು ಕ್ಷಣವೂ ಇಲ್ಲಿರಕೂಡದು" ಎಂದು ಅರಚುತ್ತಾ ಜಗದ್ಗುರು ಆಯಸ್ಸುಗಳಿಂದ ತುಂಬಿದ್ದ ಕಮಂಡಲವನ್ನು ಅವಚಿ ಹಿಡಿದು ಓಡತೊಡಗಿದ.  ನಾವು ಐದು ಜನರೂ ಅವನ ಹಿಂದೆ ಓಡತೊಡಗಿದೆವು.  ನಮ್ಮ ಹಿಂದೆ ಜನಸುನಾಮಿ ಭೋರ್ಗರೆದು ನುಗ್ಗಿಬರುತ್ತಿತ್ತು.
ಎಷ್ಟು ವೇಗವಾಗಿ ಓಡಿದರೂ ಅವರಿಂದ ತಪ್ಪಿಸಿಕೊಳ್ಳಲಾಗಲಿಲ್ಲ.  ನಾವು ಆರು ಜನರನ್ನೂ ಹಿಡಿದು ತದುಕತೊಡಗಿದರು.  "ಇವಳೇ ಮಾಯಾಂಗನೆ" ಎನ್ನುತ್ತಾ ಒಂದು ಗುಂಪು ನಟಿಯನ್ನು ಎಳೆದಾಡತೊಡಗಿತು.  ಮತ್ತೊಂದು ಗುಂಪು ಬುದ್ಧಿಜೀವಿಯನ್ನು ಸುತ್ತುಗಟ್ಟಿತು.  ಒಬ್ಬಾತ ಕೈಗೆ ಸಿಕ್ಕಿದ ಮೈಕನ್ನು ಬುದ್ಧಿಜೀವಿಯ ಗಂಟಲೊಳಗೆ ತುರುಕಿಬಿಟ್ಟ.  ವಿಜ಼್‌ಕಿಡ್‌ನ ಕತೆಯಂತೂ ಯಾರಿಗೂ ಬೇಡ.  ಅವನನ್ನು ಸುತ್ತುಗಟ್ಟಿದ ಒಂದು ಭಾರೀ ಗುಂಪು ಅಣ್ವಸ್ತ್ರವಿದ್ದ ಕ್ಷಿಪಣಿಯೊಂದಕ್ಕೆ ಅವನನ್ನು ಕಟ್ಟಿಹಾಕಿ ಕ್ಷಣಗಣನೆಯನ್ನು ಆರಂಭಿಸಿಯೇಬಿಟ್ಟಿತ್ತು.  ಹಲವಾರು ಜನ ಮುಲ್ಲಾಡೆನ್‌ನನ್ನು ಅನಾಮತ್ತಾಗಿ ಎತ್ತಿ ವಿಮಾನವೊಂದರೊಳಗೆ ತುರುಕಿ ಬಾಗಿಲು ಮುಚ್ಚಿಬಿಟ್ಟಿತು.  "ಈ ವಿಮಾನವನ್ನು ನೇರವಾಗಿ ವೈಟ್ ಹೌಸ್‌ಗೆ ಗುದ್ದಿಸಿ ಬಿಡೋಣ" ಎಂದವರು ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ನಾನು ಬೆವತುಹೋದೆ.  ಒಂದು ಬಾರೀ ಗುಂಪು ಜಗದ್ಗುರುವನ್ನು ಹಿಡಿದು ಬಡಿಯತೊಡಗಿತು.  ಅವನ ಕೈಯಲ್ಲಿದ್ದ ಕಮಂಡಲವನ್ನು ಕಿತ್ತುಕೊಂಡ ಒಬ್ಬ ಕಮಂಡಲದೊಳಗಿದ್ದುದೆಲ್ಲವನ್ನೂ ಜನರತ್ತ ಎರಚತೊಡಗಿದ.  ಅವರವರು ಕಳಕೊಂಡದ್ದೆಲ್ಲವೂ ಅವರವರಿಗೆ ಸಿಕ್ಕಿಬಿಟ್ಟಿತು.  ಅದಾದದ್ದೇ ಎಲ್ಲರೂ ನನ್ನತ್ತ ತಿರುಗಿದರು.  ವಿಪರೀತ ಹೆದರಿಕೆಯಾಗಿ ದಿಕ್ಕೆಟ್ಟು ಓಡತೊಡಗಿದೆ.  ಜನಸಮೂಹ ಇನ್ನೇನು ನನ್ನನ್ನು ಹಿಡಿಯಿತು ಎನ್ನುವಷ್ಟರಲ್ಲಿ ಓಡುತ್ತಿದ್ದವನು ಛಕ್ಕನೆ ನೆಲದಿಂದ ಮೇಲೇರಿ ಹಾರತೊಡಗಿದೆ.  ನನ್ನ ಶರೀರ ಏಕಾಏಕಿ ಹತ್ತಿಯಷ್ಟು ಹಗುರಾಗಿಬಿಟ್ಟಿತ್ತು! ಏನೋ ಒಂದು ರೀತಿಯ ನೆಮ್ಮದಿ ಮನಸ್ಸನ್ನಾವರಿಸಿತು.
ಹಾಗೇ ಹಾರುತ್ತಿದ್ದಂತೇ ಬಿಳುಪು ಭವನವೊಂದರ ಬಾಗಿಲು ಕಂಡಿತು.  ಅದರೊಳಗೆ ನುಗ್ಗಿ ಧಡಕ್ಕನೆ ಬಾಗಿಲು ಮುಚ್ಚಿ ಬೋಲ್ಟ್ ಹಾಕಿದೆ.  ನೆಮ್ಮದಿಯ ಉಸಿರು ಬಿಟ್ಟು ಸುತ್ತ ನೋಡುತ್ತಿದ್ದಂತೇ ಅಚ್ಚರಿಗೊಂಡೆ.  ನನ್ನ ಮಿತ್ರರೆಲ್ಲರೂ ಈಗಾಗಲೇ ಅಲ್ಲಿದ್ದರು!  ಎಲ್ಲರ ಪರಿಸ್ಥಿತಿಯೂ ಶೋಚನೀಯವಾಗಿತ್ತು.  ಕಾವಿಯೆಲ್ಲಾ ಹರಿದು ಜೂಲಾಗಿ ಹೋಗಿದ್ದ ಜಗದ್ಗುರು ಮೂಲೆಯಲ್ಲಿ ಮುದುರಿ ಕುಳಿತಿದ್ದ.  ಬುದ್ಧಿಜೀವಿಯ ತಲೆಯಲ್ಲಿನ ಕೂದಲೆಲ್ಲವನ್ನೂ ಜನರು ಒಂದೂ ಬಿಡದೇ ಕಿತ್ತುಬಿಟ್ಟಿದ್ದರು.  ಚೊಂಬಿನಂತಿದ್ದ ಬುರುಡೆಯಲ್ಲಿ ಹಲವಾರು ಬುಗುಟೆಗಳು.  ಗಡ್ಡ ಮೀಸೆಗಳೂ ಸಾಫ್ ಆಗಿಹೋಗಿದ್ದವು.  ಮುಲ್ಲಾಡೆನ್‌ನ ಬಿಳಿಯುಡುಗೆ ಸುಟ್ಟು ಕರಕಲಾಗಿಹೋಗಿತ್ತು.  ವಿಜ಼್‌ಕಿಡ್‌ನ ಸೂಟು ಬೂಟೆಲ್ಲಾ ಅದೆಲ್ಲಿ ಎಗರಿಹೋಗಿದ್ದವೋ.  ಅವನ ಮೈಮೇಲಿದ್ದುದು ನಕ್ಷತ್ರಗಳು ಮತ್ತು ಗೆರೆಗಳಿದ್ದ ಒಂದು ಒಳಚಡ್ಡಿ ಮಾತ್ರ.  ಅವನಿಗೆ ಅದಾದರೂ ಇತ್ತು.  ನಟಿಯ ಮೈ ಮೇಲೆ ಒಂದು ದಾರವೂ ಇರಲಿಲ್ಲ!
ನನ್ನನ್ನು ನೋಡಿದೊಡನೇ ಜಗದ್ಗುರು ಗಕ್ಕನೆ ಮೇಲೆದ್ದ.  "ಬಾ ನಿನ್ನನ್ನೇ ಕಾಯುತ್ತಿದ್ದೆವು" ಎಂದು ಹೇಳುತ್ತಾ ಗೋಡೆಯಲ್ಲಿದ್ದ ಚಿತ್ರವೊಂದರತ್ತ ನಡೆದ.  ಎಲ್ಲರೂ ಅವನನ್ನು ಹಿಂಬಾಲಿಸಿದೆವು.
ಅದೊಂದು ಸುಂದರ ಪ್ರಕೃತಿ ದೃಶ್ಯ.  ತುಂಬಿ ಹರಿಯುತ್ತಿದ್ದ ನದಿಯೊಂದರ ದಡದಲ್ಲಿ ಒಂದು ನಾವೆ.  ಹುಟ್ಟು ಹಿಡಿದು ನಿಂತ ಅಂಬಿಗ...
ನಾವು ಹತ್ತಿರಾದೊಡನೇ ಅಂಬಿಗನ ಮುಖದಲ್ಲಿ ಮಂದಹಾಸ ಮಿನುಗಿತು.  "ಬನ್ನಿ ಬನ್ನಿ" ಎನ್ನುತ್ತಾ ನಮ್ಮನ್ನು ಸ್ವಾಗತಿಸಿದ.  ಅವನ ಕಣ್ಣುಗಳಲ್ಲಿ ಅದೇನೋ ಮೋಡಿ.
"ಈ ದೋಣಿಯಲ್ಲಿ ಆಚೆದಡ ಸೇರಿಬಿಟ್ಟರೆ ನಾವು ಬಚಾವಾದಂತೆ" ಎನ್ನುತ್ತಾ ಜಗದ್ಗುರು ಮುಂದಾಗಿ ದೋಣಿ ಹತ್ತಿದ.  ಎಲ್ಲರೂ ಒಬ್ಬೊಬ್ಬರಾಗಿ ಅವನನ್ನು ಅನುಸರಿಸಿದೆವು.  ದೋಣಿ ಹೊರಟಿತು.  ನಿಧಾನವಾಗಿ ಆಚೆದಡ ಹತ್ತಿರಾಗತೊಡಗಿದಂತೇ ನಮಗೆಲ್ಲಾ ಸಂತೋಷವೋ ಸಂತೋಷ.  ಇಡೀ ಹೊಳೆಯಲ್ಲಿರುವುದು ಒಂದೇ ದೋಣಿ.  ಈಗ ಅದರಲ್ಲಿರುವುಧು ನಾವು ಮಾತ್ರ.  ರೊಚ್ಚಿಗೆದ್ದ ಜನ ನಮ್ಮನ್ನು ಹಿಂಬಾಲಿಸಿ ಬಂದರೂ ಅವರಿಗೆ ಯಾವ ದೋಣಿಯೂ ಸಿಗುವುದಿಲ್ಲ.  ಉಕ್ಕಿಹರಿಯುತ್ತಿರುವ ಈ ಮಹಾನದಿಯಲ್ಲಿ ಈಜುವುದು ಯಾರಿಗೂ ಸಾಧ್ಯವಿಲ್ಲ.
ನೆಮ್ಮದಿಯೆನಿಸಿತು.  ಅಂಬಿಗನ ಬಗ್ಗೆ ಹೇಳಲಾರದಷ್ಟು ಕೃತಜ್~ಝತೆ ಮೂಡಿತು.  ಜಗದ್ಗುರುವಂತೂ ದನಿಯೆತ್ತರಿಸಿ "ಅಂಬಿಗಾ ನಿನ್ನ ನಂಬಿದೇ,  ಜಗದಂಬಾ ರಮಣ ನಿನ್ನ ನಾ ನಂಬಿದೇ..." ಎಂದು ಹಾಡತೊಡಗಿದ.  ಹಿಂದೆಯೇ ಮುಲ್ಲಾಡೆನ್ "ಅಲ್ಲಾ ಹೋ ಅಕ್ಬರ್" ಎಂದು ಉದ್ಗರಿಸಿದರೆ ವಿಜ಼್‌ಕಿಡ್ "ಲೀಡ್ ಕೈಂಡ್ಲಿ ಲೈಟ್" ಎನ್ನುತ್ತಾ ಮುಂಡಿಯೂರಿ ಕುಳಿತುಬಿಟ್ಟ.  ಬುದ್ಧಿಜೀವಿಯೂ, ನಟಿಯೂ ಅಂಬಿಗನ ಕಾಂತಿಯುಕ್ತ ಮುಖವನ್ನೇ ನೋಡುತ್ತಾ ಮಂತ್ರಮುಗ್ಧರಾಗಿ ಕುಳಿತುಬಿಟ್ಟಿದ್ದರು.
ಆಚೆದಡ ಬಂದೇಬಿಟ್ಟಿತು.
ದೋಣಿಯಿಂದ ಹೊರಗೆ ಜಿಗಿದೆವು.  ನಮ್ಮ ಸಂತೋಷವನ್ನು ನೋಡಿ ಅಂಬಿಗ ಮುಗುಳ್ನಕ್ಕು ಹೇಳಿದ- "ಇನ್ನು ನಿಮಗೆ ಯಾವ ಅಪಾಯವೂ ಇಲ್ಲ.  ಯಾಕೆಂದರೆ ನೀವೀಗ ಭೂಲೋಕದ ಬಂಧನವನ್ನು ದಾಟಿ ಬಂದಿದ್ದೀರಿ."
ನಮಗೆ ಏನೊಂದೂ ಅರ್ಥವಾಗಲಿಲ್ಲ.  "ಹಾಗೆಂದರೇನು?"  ಎಲ್ಲರೂ ಒಟ್ಟಾಗಿ ಪ್ರಶ್ನಿಸಿದೆವು.
"ನೀವೀಗ ದಾಟಿದ್ದು ವೈತರಿಣಿ ನದಿ."  ಉತ್ತರ ಬಂತು.
ಒಂದುಕ್ಷಣ ಎಲ್ಲರೂ ಬೆಚ್ಚಿದೆವು.  ಇದು ಹೇಗಾಯಿತು?  ಇವನೇನು ಮೋಡಿ ಮಾಡಿದ?  ನಮ್ಮ ಮೇಲೆ ಅದಾವ ಮಂತ್ರ ಪ್ರಯೋಗಿಸಿದ?  ಅದೆಂಥ ಮಾಟ ಹೂಡಿದ?  ಹೊಳೆ ದಾಟಿಸುತ್ತಿದ್ದಾನೆ ಎಂದುಕೊಂಡರೆ ಲೋಕದಿಂದ ಲೋಕಕ್ಕೇ ದಾಟಿಸಿಬಿಟ್ಟನಲ್ಲ!
"ಇದು ಅನ್ಯಾಯ."  ಜಗದ್ಗುರು ಅರಚಿದ.  "ಹೌದು ಹೌದು.  ಭಾಳಾ ಅನ್ಯಾಯ."  ಎಲ್ಲರೂ ದನಿಗೂಡಿಸಿದೆವು.  ಅಂಬಿಗ ನಕ್ಕುಬಿಟ್ಟ.
"ನ್ಯಾಯಾನ್ಯಾಯಗಳ ಬಗ್ಗೆ ನನಗಿಂತಲೂ ಗೊತ್ತೇ ನಿಮಗೆ?"  ಮತ್ತೊಮ್ಮೆ ನಕ್ಕು ಮುಂದುವರೆಸಿದ- "ನಿಮ್ಮೆಲ್ಲರನ್ನೂ ಸೃಷ್ಟಿಸಿ ಭೂಲೋಕದಲ್ಲಿರಿಸಿದಾಗ ಒಂದಲ್ಲಾ ಒಂದು ದಿನ ನಾನೇ ಕೈಯಾರೆ ನಿಮ್ಮನ್ನೆಲ್ಲಾ ಭೂಮಿಯಿಂದ ಹೊರಗೆಳೆದು ತರಬೇಕಾಗುತ್ತದೆ ಎಂದು ನಾನು ಕನಸುಮನಸಿನಲ್ಲೂ ನೆನಸಿರಲಿಲ್ಲ."
ಇವನೇನು ಹೇಳುತ್ತಿದ್ದಾನೆ?
"ನೀನಾರು?  ನಿನ್ನ ಮಾತುಗಳು ಮೋಡಿಯಂತಿವೆಯಲ್ಲ?"  ಕೇಳಿಯೇಬಿಟ್ಟೆ. 
ಅವನು ಮತ್ತೊಮ್ಮೆ ನಕ್ಕ.  "ಸರಿಯಾಗಿಯೇ ಹೇಳಿದೆ.  ಇದು ಮೋಡಿ.  ನಾನು ಮೋಡಿಗಾರ.  ಮತ್ತೊಮ್ಮೆ ಹೇಳುತ್ತಿದ್ದೇನೆ.  ನಾನು ಮೋಡಿಗಾರ.  ಮೋಡಿ ಮಾಡುವುದು ನನ್ನ ಕೆಲಸ.  ನನ್ನೊಬ್ಬನ ಹಕ್ಕು.  ಅದನ್ನು ಉಪಯೋಗಿಸಿಯೇ ನಾನು ನಿಮ್ಮೆಲ್ಲರನ್ನೂ ಸೃಷ್ಟಿಸಿ ಭೂಲೋಕದಲ್ಲಿರಿಸಿದ್ದು.  ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳಿ ಎಂದೆ.  ನಿಮ್ಮ ಅನುಕೂಲಕ್ಕೆಂದೇ ಅಲ್ಲಿ ಶುದ್ಧ ಗಾಳಿ, ನೀರು ತುಂಬಿಸಿದೆ.  ನಿಮ್ಮ ಕಣ್ಣುಗಳಿಗೆ ಹಬ್ಬವಾಗಲೆಂದು ಎಲ್ಲೆಲ್ಲೂ ಬಣ್ಣಬಣ್ಣದ ಚಿತ್ತಾರ ಬಿಡಿಸಿದೆ.  ಎಲ್ಲ ಬಣ್ಣಗಳ ಹೂವು ಹಕ್ಕಿ, ಹಸಿರು ಎಲೆ, ಕೆಂಪು ಹಣ್ಣು, ಬಿಳೀ ಮುಗಿಲು, ನೀಲಿ ಆಕಾಶ... ಹೀಗೆ.  ನಿಮ್ಮ ಕಿವಿಗಳಿಗಿಂಪಾಗಲೆಂದು ಹಕ್ಕಿಗಳಿಗೆ ಹಾಡು ಕಲಿಸಿದೆ.   ನಿಮ್ಮನ್ನು ಸಂತೋಷವಾಗಿಡಲೆಂದೇ ನಾನು ಕಲಿತ ಮಾಟ, ಮಂತ್ರ, ಮೋಡಿಯನ್ನೆಲ್ಲಾ ಉಪಯೋಗಿಸಿ ಇದೆಲ್ಲವನ್ನೂ ಮಾಡಿದೆ.  ಆದರೆ ನೀವು ಮಾಡಿದ್ದೇನು?  ನನ್ನ ಮೋಡಿಯ ಕೈಚಳಕವನ್ನು ಅನುಕರಿಸಲು ಸ್ಪರ್ಧೆಗಿಳಿದು ನಿಮ್ಮನಿಮ್ಮಲ್ಲೇ ವಿರಸ ಕಟ್ಟಿಕೊಂಡಿರಿ.  ಜಗಳಾಡಿದಿರಿ.  ರಕ್ತ ಹರಿಸಿದಿರಿ.  ಭೂಮಿಯನ್ನು ನರಕವಾಗಿಸಿದಿರಿ.  ಆದ್ದರಿಂದಲೇ ನಾ ಕಲಿತ ಇನ್ನೊಂದು ಮೋಡಿವಿದ್ಯೆಯನ್ನು ಉಪಯೋಗಿಸಿ ನಿಮ್ಮನ್ನು ಭೂಲೋಕದಿಂದ ಹೊರತಂದೆ."  ಹೇಳುತ್ತಾ ಜಗದ್ಗುರುವಿನತ್ತ ತಿರುಗಿದ- "ನಾ ಹೇಳಿದ್ದೇನು? `ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ' ಅಂತ.  ನೀನು ಮಾಡಿದ್ದೇನು?  ಸತ್ಕರ್ಮಗಳನ್ನೇ ಮಾಡದೇ ಫಲಕ್ಕಾಗಿ ಹಂಬಲಿಸಿದೆ.  ಜಗತ್ತಿಗೆಲ್ಲಾ ಇರುವವನು ಒಬ್ಬನೇ ಗುರು.  ಅದು ನಾನು.  ಆದರೆ ನೀನು ನಿನ್ನನ್ನೇ ಜಗದ್ಗುರು ಎಂದು ಕರೆದುಕೊಂಡೆ.  ಜಗತ್ತಿನ ಮೇರೆಗಳು ಯಾವುವು ಅನ್ನುವುದನ್ನೇನಾದರೂ ಬಲ್ಲೆಯೇನೋ ಮೂಢಾ?"
ಜಗದ್ಗುರುವಿನ ತಲೆ ತಗ್ಗಿತು.  ಮೋಡಿಗಾರ ಮುಲ್ಲಾಡೆನ್‌ನತ್ತ ತಿರುಗಿದ.
"ನಾನು ನಿನಗೆ ಕಲಿಸಿದ್ದೇನು?  ನಿನ್ನೊಳಗಿನ ವೈರಿಗಳ ವಿರುದ್ಧ ಜಿಹಾದ್ ನಡೆಸು ಅಂತ ಅಲ್ಲವೇ?  ಆದರೆ ನೀನು ಅದನ್ನು ಮರೆತು ನಿನ್ನ ಹೊರಗಿನ ಮುಗ್ಧರನ್ನು ಕೊಚ್ಚಿಹಾಕಿ ಅದನ್ನು `ಧರ್ಮಯುದ್ಧ' ಅಂತ ಕರೆದೆಯಲ್ಲೋ ಕಿರಾತಕ."
ಮುಲ್ಲಾಡೆನ್‌ನ ನಡು ಬಾಗಿಹೋಯಿತು.  ಮೋಡಿಗಾರನ ನೋಟ ವಿಜ಼್‌ಕಿಡ್‌ನತ್ತ ಹೊರಳಿತು.
"ನಿನ್ನ ನೆರೆಯವನನ್ನು ಪ್ರೀತಿಸು ಅಂತ ನಾನು ನಿನಗೆ ಗಿಣಿಗೆ ಹೇಳಿದ ಹಾಗೆ ಹೇಳಿದೆ.  ಆದರೆ ನೀನು ನಿನ್ನ ನೆರೆಯವನ ಹೆಂಡತಿಯನ್ನ ಪ್ರೀತಿಸಹೊರಟೆಯಲ್ಲೋ ಭಡವಾ."
ವಿಜ಼್‌ಕಿಡ್ ಗೆರೆಗೆರೆ ಚಡ್ಡಿಯಿಂದ ಮುಖ ಮುಚ್ಚಿಕೊಂಡ.  ಮೋಡಿಗಾರ ಬುದ್ಧಿಜೀವಿಯತ್ತ ತಿರುಗಿದ.
"ನಿನ್ನನ್ನ ಸೃಷ್ಟಿಸಿ, ವಿದ್ಯೆ ಬುದ್ದಿಯನ್ನ ನಿನ್ನೊಳಗೆ ತುಂಬಿ ಭೂಲೋಕಕ್ಕೆ ನಿನ್ನನ್ನ ಕಳಿಸಿದ್ದು ಯಾಕೆ ಅಂತ ನೆನಪಿದೆಯಾ?  ಅಶಕ್ತರಿಗೆ ಊರುಗೋಲಾಗು, ಮುಗ್ಧರಿಗೆ ಬೆಳಕಾಗು ಅಂತ ಅಲ್ಲವೇ?  ಆದರೆ ನೀನು ನನ್ನ ಉದ್ದೇಶವನ್ನೇ ಹಾಳು ಮಾಡಿಬಿಟ್ಟೆ.  ಬುದ್ಧಿ ಕಳೆದುಕೊಂಡು ಲದ್ದಿಜೀವಿಯಾಗಿಬಿಟ್ಟೆ.  ಅನ್ನ ಕೇಳಿದ ಅಶಕ್ತರ ಕೈಗೆ ಗನ್ನು ಕೊಟ್ಟೆ.  ಅವರನ್ನು ರಣರಂಗಕ್ಕೆ ನೂಕಿ ನೀನು ಮಜ ನೋಡುತ್ತಾ ಕುಳಿತೆ.  ಮುಗ್ಧರನ್ನು ಕತ್ತಲೆಗೆ ತಳ್ಳಿ ಅವರನ್ನು ನನ್ನ ವಿರುದ್ಧವೇ ದಂಗೆಯೇಳಲು ಪ್ರಚೋದಿಸಿದೆ.  ನಾನು ನಿನ್ನ ಅಪ್ಪ ಎಂಬ ಸತ್ಯವನ್ನು ಮುಚ್ಚಿಟ್ಟು ಸೃಷ್ಟಿಕರ್ತ ಅನ್ನೋನೇ ಇಲ್ಲ ಅಂತ ಭಾಷಣ ಬಿಗಿದೆ.  ನಿನ್ನದು ಅತಿಯಾಯಿತು."
ಬುದ್ಧಿಜೀವಿಯ ಮುಖ ಬೆಪ್ಪು ಬಡೆದುಹೋಗಿತ್ತು.  ಮೋಡಿಗಾರನ ಕಣ್ಣುಗಳು ನಟಿಯ ಮೇಲೆ ಕೀಲಿಸಿದವು.
"ನಿನ್ನ ಎದೆ ತುಂಬಾ ಪ್ರೀತಿ ಮಮತೆಯನ್ನ ತುಂಬಿದೆ ನಾನು.  ಅದೆಲ್ಲವನ್ನೂ ಭೂಲೋಕದ ಜನಕ್ಕೆ ಪುಕ್ಕಟೆಯಾಗಿ ಹಂಚುವ ಕರ್ತವ್ಯ ನಿನ್ನದಾಗಿತ್ತು.  ಆದರೆ ನೀನದನ್ನು ಹಣಕ್ಕೆ ಮಾರಹೊರಟೆ.  ಅದರಿಂದ ಐಶ್ವರ್ಯ ಗಳಿಸಲು ನೋಡಿದೆ.  ಹುಚ್ಚಾಟ, ಬರೀ ಹುಚ್ಚಾಟ."
ನಟಿಯ ಕಣ್ಣುಗಳಿಂದ ಕಣ್ಣೀರ ಕೋಡಿ ಹರಿಯತೊಡಗಿತು.  ಮೋಡಿಗಾರ ಕೊನೆಯದಾಗಿ ನನ್ನತ್ತ ತಿರುಗಿದ.  ಅವನ ಕಣ್ಣುಗಳು ಬೆಂಕಿಯಾಗಿದ್ದವು.
"ಎಲ್ಲರಿಗಿಂತ ಹೆಚ್ಚು ಅಯೋಗ್ಯ ನೀನು.  ವಾಸ್ತವವಾಗಿ ಹೇಳಬೇಕೆಂದರೆ ಇವರೆಲ್ಲರೂ ಇಷ್ಟೋಂದು ಹದಗೆಟ್ಟುಹೋಗಲು ನೀನೇ ಕಾರಣ.  ಇವರೆಲ್ಲರೂ ಹಾದಿ ತಪ್ಪಿದರೆ ಸರಿದಾರಿಗೆ ತರುವ ಗುರುತರ ಜವಾಬ್ದಾರಿ ನಿನ್ನ ಮೇಲಿತ್ತು.  ಆದರೆ ನೀನು ಮಾಡಿದ್ದೇನು?  `ಎಲ್ಲವೂ ಮಾಯೆ' ಎಂದು ಜಗದ್ಗುರು ಸತ್ಯ ಹೇಳಿದಾಗ ನೀನು ಅವನನ್ನು ಹಾಸ್ಯ ಮಾಡಿ ನಕ್ಕೆ.  ಅವನು ಸುಳ್ಳು ಹೇಳತೊಡಗಿದಾಗ ಅವನ ಪಾದಪೂಜೆಗೆ ತೊಡಗಿದೆ.  ಅವನು ತನ್ನ ಮಿತಿಯನ್ನು ದಾಟಿ ಸುಳ್ಳು ಸುಳ್ಳೇ ಪವಾಡ ಮಾಡತೊಡಗಿದಾಗ `ಭೇಷ್' ಎಂದು ಅವನನ್ನು ಹುರಿದುಂಬಿಸಿದೆ.  ಅವನು ಸುಳ್ಳು ಸುಳ್ಳೇ ಬೂದಿ ಸೃಷ್ಟಿಸಿ ಕೊಟ್ಟಾಗ ಅದನ್ನು ಭಕ್ತಿಯಿಂದ ಹಣೆಗೆ ಹಚ್ಚಿಕೊಂಡೆ.  ಈ ಮುಲ್ಲಾಡೇನ್ ಒಂದು ಕಾಲದಲ್ಲಿ ನಾ ಹೇಳಿದಂತೇ ಮಾಡಿದ್ದುಂಟು.  ಆದರೆ ಅವರಿವರು ಅವನನ್ನು ಅಡ್ಡದಾರಿಗೆ ಹಚ್ಚಿದಾಗ ನೀನು ಮುಖ ಅತ್ತ ತಿರುಗಿಸಿದೆ.  ಜಿಹಾದ್‌ನ ಅರ್ಥ ನಿನಗೆ ಚೆನ್ನಾಗಿಯೇ ಗೊತ್ತಿತ್ತು.  ಅದನ್ನವನಿಗೆ ಹೇಳುವ ಕರ್ತವ್ಯ ನಿನ್ನದಾಗಿತ್ತು.  ಆದರೆ ನೀನದನ್ನು ಅಲಕ್ಷಿಸಿದೆ.  ಇಡೀ ಭೂಮಂಡಲವೇ ನಿನ್ನ ಸೈಟು ಎಂದು ನಾನು ಮಾಡಿಕೊಟ್ಟಿದ್ದ ಟೈಟಲ್ ಡೀಡನ್ನು ತಿಪ್ಪೆಗೆಸೆದು ವೆಬ್‌ಸೈಟ್‌ಗಳೆಂಬ ಸೋಮಾರಿಕಟ್ಟೆಗಳನ್ನು ಸೃಷ್ಟಿಸೋದಿಕ್ಕೆ ವಿಜ಼್‌ಕಿಡ್‌ಗೆ ದುಂಬಾಲು ಬಿದ್ದೆ.  ಅವನನ್ನು ಕುಲಗೆಡಿಸಿಬಿಟ್ಟೆ.  ಈ ಬುದ್ಧಿಜೀವಿ ಮೊದಮೊದಲು ಬುದ್ಧಿಯನ್ನೇ ಹಂಚಿದ.  ಆವಾಗ ನೀನವನನ್ನು ಜೈಲಿಗೆ ತಳ್ಳಿ ಉಪವಾಸ ಕೆಡವಿದೆ.  ಕೊನೆಗೆ ಅವನು ಲದ್ದಿಜೀವಿಯಾಗಿ ರೂಪಾಂತರ ಹೊಂದಿದಾಗ ಅವನನ್ನು ಬಿಡುಗಡೆಗೊಳಿಸಿದೆ.  ಅವನು ಲದ್ದಿಯನ್ನೇ ಬುದ್ಧಿ ಎಂದು ಜನಕ್ಕೆ ಹಂಚತೊಡಗಿದಾಗ ಅವನಿಗೆ ಅವಾರ್ಡ್ ಮೇಲೆ ಅವಾರ್ಡ್ ಕೊಟ್ಟು ಸನ್ಮಾನಿಸಿದೆ.  ನಟಿ ನೈಜ ಪ್ರೀತಿ ತೋರಿದಾಗ ಅವಳನ್ನು ಗುಲಾಮಳಂತೆ ನಡೆಸಿಕೊಂಡೆ.  ಅವಳು ನಾಟಕವಾಡತೊಡಗಿದಾಗ ಅವಳನ್ನು ಹೆಗಲ ಮೇಲೆ ಕೂರಿಸಿಕೋಡು ಕುಣಿದೆ.  ಅವಳ ಸೆರಗು ಹಿಡಿದು ನೀನು ಹಾರಾಡದ ಜಾಗವೇ ಇಲ್ಲ.  ಅಯೋಗ್ಯ."
ನಾನು ತಲೆ ತಗ್ಗಿಸಿದೆ.  ನನ್ನಿಂದ ಸಾಧ್ಯವಿದ್ದುದು ಅದು ಮಾತ್ರ.
ಮೋಡಿಗಾರ ಒಮ್ಮೆ ನಮ್ಮನ್ನೆಲ್ಲಾ ತಿವಿಯುವಂತೆ ನೋಡಿ ಕೊನೆಯ ಮಾತೆಂಬಂತೆ ಹೇಳಿದ- "ಹೀಗೆ ನಾನು ಹೇಳಿದ್ದೆಲ್ಲವನ್ನೂ ತಿರಸ್ಕರಿಸಿ ನಿಮಗೆ ತೋಚಿದ್ದನ್ನು ಮಾಡಹೊರಟ ನಿಮ್ಮನ್ನ ಇನ್ನೆಷ್ಟು ಕಾಲ ನನ್ನ ಸುಂದರ ಸೃಷ್ಟಿಯಾದ ಭೂಲೋಕದಲ್ಲಿರಿಸಲಿ?  ಸಾಧ್ಯವಿಲ್ಲ.  ನಿಮ್ಮಂಥವರಿಗಾಗಿಯೇ ನರಕವನ್ನು ಸೃಷ್ಟಿಸಿದ್ದೇನೆ.  ಅಲ್ಲಿ ಬಿದ್ದಿರಿ."
--***೦೦೦***--
ಏಪ್ರಿಲ್ ೫, ೨೦೦೫