ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Tuesday, July 5, 2016

ಸುದ್ಧಿಮಾಧ್ಯಮ: ದೇಶ ಸೆರಗಿಗೆ ಕಟ್ಟಿಕೊಂಡ ಕೆಂಡ



೨೬/೧೧ರ ಮುಂಬೈ ಧಾಳಿಗಳ ರೂವಾರಿಯೊಬ್ಬ ಕರಾಚಿಯಿಂದ ಹೊರಡುತ್ತಿದ್ದ ಅಜ್ಮಲ್ ಕಸಾಬ್ ಸೇರಿದಂತೆ ಹತ್ತು ಭಯೋತ್ಪಾದಕರಿಗೆ ನೀಡಿದನೆನ್ನಲಾದ 'ಉಪದೇಶ' ಹೀಗಿತ್ತು: “ತಾಜ್ ಹೋಟೆಲ್ ಆಕ್ರಮಿಸಿಕೊಂಡ ನಂತರ ಯಾವುದಾದರೊಂದು ಕೋಣೆ ಸೇರಿ ಅಲ್ಲಿರುವ ಟೀವಿ ಚಾಲೂ ಮಾಡಿ ಭಾರತೀಯ ನ್ಯೂಸ್ ಚಾನಲ್ ಒಂದನ್ನು ನೋಡಿ.  ಭಾರತೀಯ ಭದ್ರತಾ ಪಡೆಗಳು ನಿಮ್ಮ ವಿರುದ್ಧ ಕೈಗೊಳ್ಳುತ್ತಿರುವ ತಂತ್ರಗಳ ಇಡೀ ವಿವರ ಅದರಲ್ಲಿ ನಿಮಗೆ ದೊರೆಯತೊಡಗುತ್ತದೆ.  ಅದಕ್ಕನುಗುಣವಾಗಿ ನಿಮ್ಮ ಪ್ರತಿತಂತ್ರಗಳನ್ನು ನೀವು ರೂಪಿಸಿಕೊಳ್ಳಬಹುದು.”  ನಮ್ಮ ಮಾಧ್ಯಮಗಳು ಅತ್ಯುತ್ಸಾಹದಿಂದ ಪ್ರಸಾರ ಮಾಡುತ್ತಿದ್ದ ವಿವರಗಳೇ ತಾಜ್ ಹೋಟೆಲ್ ಮೇಲೆ ಪಾಕ್ ಉಗ್ರರ ಹಿಡಿತ ದೀರ್ಘವಾಗಲು ಕಾರಣವಾಯಿತು ಎಂಬ ಕಟುವಾಸ್ತವದ ಹಿನ್ನೆಲೆಯಲ್ಲಿ ಪಾಕ್ ಭಯೋತ್ಪಾದಕ ನಮ್ಮ ಮಾಧ್ಯಮಗಳ ನಾಡಿಮಿಡಿತವನ್ನು ಅದೆಷ್ಟು ಚೆನ್ನಾಗಿ ಅರಿತಿದ್ದ ಎಂಬ ಕಹಿಸತ್ಯ ಎದೆಗೆ ನಾಟುತ್ತದೆ.  ಪೀಠಿಕೆಯೊಂದಿಗೆ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ಮಾಧ್ಯಮಗಳು ಅನುಸರಿಸುವ ಕುನೀತಿಯ ಪರಿಚಯ ಮಾಧ್ಯಮಗಳ ಬಗೆಗಿನ ಲೇಖನದ ಮೂರನೆಯ ಹಾಗೂ ಅಂತಿಮ ಕಂತಿನ ವಸ್ತುವಿಷಯ.  ನನ್ನ ಅವಲೋಕನವನ್ನು ಕಾಲು ಶತಮಾನದಷ್ಟು ದೀರ್ಘವಾದ ಕಾಶ್ಮೀರದಲ್ಲಿನ ಭಯೋತ್ಪಾದನೆಯೊಂದಿಗೆ ಪ್ರಾರಂಭಿಸುತ್ತೇನೆ.

ಭಾರತದಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳುವ ಭೂಪಟಗಳಲ್ಲಿ ದೇಶದ ಶಿರೋಭಾಗದಂತಿರುವ ಜಮ್ಮು ಮತ್ತು ಕಾಶ್ಮೀರ ವಾಸ್ತವವಾಗಿ ಮೂರು ದೇಶಗಳ ಹತೊಟಿಯಲ್ಲಿದೆ.  ಈಶಾನ್ಯದ ಅಕ್ಸಾಯ್ ಚಿನ್ ಚೈನಾದ ವಶದಲ್ಲಿದ್ದರೆ ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳ ಮೇಲೆ ಪಾಕಿಸ್ತಾನದ ಹತೋಟಿ ಇದೆ.  ಎರಡರ ನಡುವಿನ ಪ್ರದೇಶ ಭಾರತದ ಆಡಳಿತದಲ್ಲಿದೆ.  ಚೈನಾದ ವಶದಲ್ಲಿರುವ ಪ್ರದೇಶದ ಬಗ್ಗೆ ನಮ್ಮ ಸುದ್ಧಿಮಾಧ್ಯಮಗಳಲ್ಲಿ ಯಾವ ಚರ್ಚೆಯೂ ಆಗದಿರುವುದಕ್ಕೆ ನನ್ನ ಅಕ್ಷೇಪವೇನೂ ಇಲ್ಲ.  ಯಾಕೆಂದರೆ ನಾಗರಿಕ ವಸತಿಯಿಲ್ಲದ ಅಲ್ಲಿ ಸುದ್ಧಿಯಾಗುವಂತಹದೇನೂ ಘಟಿಸುವುದಿಲ್ಲ.  ಆದರೆ ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ್ದು ಹಾಗಲ್ಲ.  ಅಲ್ಲಿ ಎರಡು ಪ್ರತ್ಯೇಕ ರಾಜಕೀಯ ವಿಭಾಗಗಳಿವೆ.  ಭೂಭಾಗದ ದೃಷ್ಟಿಯಿಂದ ಪುಟ್ಟದಾದದ್ದು ಪಶ್ಚಿಮದಲ್ಲಿ ಒಂದು ಬಾಗಿಸಿದ ಬೆರಳಿನಾಕಾರದಲ್ಲಿರುವ ಪ್ರದೇಶ.  ಇದನ್ನು ತಾನು ಭಾರತದಿಂದ ವಿಮೋಚನೆಗೊಳಿಸಿರುವುದಾಗಿ ಹೇಳಿಕೊಳ್ಳುವ ಪಾಕಿಸ್ತಾನ ಅದಕ್ಕೆಅಜ಼ಾದ್ ಕಶ್ಮೀರ್” (ಸ್ವತಂತ್ರ ಕಾಶ್ಮೀರ) ಎಂದು ಹೆಸರಿಟ್ಟು ಅಲ್ಲೊಂದು ಕೈಗೊಂಬೆ ಸರ್ಕಾರವನ್ನು ಹುಟ್ಟುಹಾಕಿ ಅದನ್ನು ಸಾಕುನಾಯಿಯಂತೆ ಆರ್ಗನೈಜ಼ೇಶನ್ ಆಫ್ ಇಸ್ಲಾಮಿಕ್ ಕಂಟ್ರೀಸ್ ಮುಂತಾದ ಅಂತರರಾಷ್ಟ್ರೀಯ ಮುಸ್ಲಿಂ ವೇದಿಕೆಗಳಿಗೆ ಕರೆದುಕೊಂಡುಹೋಗುತ್ತದೆ.  ಇಲ್ಲಿನವರು ಸುನ್ನಿ ಮುಸ್ಲಿಮರು ಮತ್ತವರು ಪಾಕ್ ಆಡಳಿತವನ್ನು ಒಪ್ಪಿಕೊಂಡಿದ್ದಾರೆ.  ಇಷ್ಟಾಗಿಯೂ, ಭಾರತದ ಕಾಶ್ಮೀರಕ್ಕೆ ಹೋಲಿಸಿದರೆ ಇಲ್ಲಿ ಶಿಕ್ಷಣ ತೀರಾ ಕೆಳಮಟ್ಟದಲ್ಲಿರುವ ಬಗ್ಗೆ ಯುವಜನತೆಯಲ್ಲಿ ಅಸಂತೋಷವಿದೆ.  ೨೦೦೭ರಲ್ಲಿ ಭಾರತಕ್ಕೆ ಭೇಟಿಯಿತ್ತ ಅಲ್ಲಿನ ವಿದ್ಯಾರ್ಥಿತಂಡದ ನಾಯಕ ಬಯಲುಮಾಡಿದ್ದು ಹೀಗೆ: “ಅಜ಼ಾದ್ ಕಶ್ಮೀರ್ ತನ್ನ ಅವಿಭಾಜ್ಯ ಅಂಗವೆಂದು ಭಾರತ ಸಾಂವಿಧಾನಿಕವಾಗಿ ಘೋಷಿಸಿರುವುದರಿಂದ ಅಲ್ಲಿನ ಜನರೂ ಭಾರತದ ಪ್ರಜೆಗಳು ಎನ್ನುವುದನ್ನು ಭಾರತ ಒಪ್ಪಿಕೊಳ್ಳಬೇಕು ಮತ್ತು ಭಾರತೀಯರಿಗೆ ಇರುವ ಸವಲತ್ತುಗಳನ್ನೆಲ್ಲಾ ನಮಗೂ ವಿಸ್ತರಿಸಬೇಕು.  ಅದರ ಪ್ರಕಾರ ಐಐಟಿ, ಎನ್‌‍ಐಟಿ ಮುಂತಾದ ವಿವಿಧ ಶಿಕ್ಷಣಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ನಮಗೆ ಅವಕಾಶ ಕಲ್ಪಿಸಬೇಕು.”  ಪಾಕಿಸ್ತಾನದ ಮೂಗಿಗೇ ಗುದ್ದಿದಂತಹ ಮಾತಿದು.  ಇದನ್ನು ಭಾರತೀಯ ಮಾಧ್ಯಮದಲ್ಲಿ ಕೇಳಿದ/ನೋಡಿದ ನೆನಪು ನಿಮಗಿದೆಯೇ?

ಅಜ಼ಾದ್ ಕಶ್ಮೀರ್‍‍ಗಿಂತಲೂ ಐದಾರು ಪಟ್ಟು ದೊಡ್ಡದಾದ ಪ್ರದೇಶ ಉತ್ತರದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್.  ಇದನ್ನು ಪಾಕಿಸ್ತಾನ ತನ್ನ ಅಧಿಕೃತ ಪ್ರದೇಶವೆಂದು ಕರೆದುಕೊಳ್ಳುತ್ತದೆ.  ಅಂದರೆ ಅದರ ಪ್ರಕಾರ ಇದು ಜಮ್ಮು ಮತ್ತು ಕಾಶ್ಮೀರದ ಭಾಗವಲ್ಲ!  ಇಸ್ಲಾಮಾಬಾದ್‌‍ ನಿಲುವನ್ನು ಪಾಕಿಸ್ತಾನದ ಸುಪ್ರೀಮ್ ಕೋರ್ಟ್ ತಿರಸ್ಕರಿಸಿ, ಸರ್ಕಾರಕ್ಕೆ ಛೀಮಾರಿ ಹಾಕಿ, ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗವೆಂದು ಘೋಷಿಸಿದೆ.  ಇದನ್ನಾದರೂ ಭಾರತೀಯ ಮಾಧ್ಯಮಗಳು ನಿಮಗೆ ತಿಳಿಸಿದ್ದುಂಟೇ?  ಅದೂ ಹೋಗಲಿ ಬಿಡಿ, ಪ್ರದೇಶಗಳಲ್ಲಿ ೧೯೪೭ರಿಂದಲೂ ಚಾಲ್ತಿಯಲ್ಲಿರುವುದು ಅಘೋಷಿತ ಮಿಲಿಟರಿ ಆಡಳಿತ.  ಅಲ್ಲಿನ ಜನ ಶಿಯಾ ಮುಸ್ಲಿಮರು.  ಪಾಕಿಸ್ತಾನದ ಸುನ್ನಿ ಮುಸ್ಲಿಮರ ಆಡಳಿತವನ್ನು ಕಳೆದ ಆರವತ್ತೆಂಟು ವರ್ಷಗಳಿಂದಲೂ ಒಪ್ಪಿಕೊಳ್ಳದ ಇವರ ವಿರುದ್ಧ ಪಾಕಿಸ್ತಾನೀ ಸೇನೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.  ಜನರಲ್ ಜಿಯಾ ಕಾಲದಲ್ಲಿ ಪಾಕ್-ವಿರೋಧೀ ದಂಗೆಗಳು ಅತ್ಯುಗ್ರ ಮಟ್ಟ ತಲುಪಿದಾಗ ಅದನ್ನು ಕ್ರೂರವಾಗಿ ದಮನಗೈದದ್ದು ಪರ್ವೆಜ್ ಮುಷರ್ರಫ್.  ಆತ ಪ್ರಸಿದ್ಧಿಗೆ ಬಂದದ್ದೇ ಘಟನೆಗಳಿಂದ.  ನಂತರ ಅಲ್ಲಿ ಇಸ್ಲಾಮಾಬಾದಿನ ಹಿಡಿತ ಮತ್ತಷ್ಟು ಬಿಗಿಯಾಯಿತು.  ಅಲ್ಲಿ ಪಾಕಿಸ್ತಾನೀ ಸೇನೆಯ ಕರ್ಮಕಾಂಡಗಳ ಬಗ್ಗೆ ನಮ್ಮ ಸುದ್ಧಿ ಮಾಧ್ಯಮಗಳು ಚಕಾರವೆತ್ತುವುದಿಲ್ಲ.  ಆದರೆ ಭಾರತದ ವಶದಲ್ಲಿರುವ ಕಾಶ್ಮೀರದಲ್ಲಾಗುವ ಘಟನೆಗಳ ಬಗ್ಗೆ ಮಾತ್ರ ಮಾಧ್ಯಮಗದು ಅತ್ಯುತ್ಸಾಹ!

ಕಾಶ್ಮೀರದ ಬಗ್ಗೆ ನಮ್ಮ ಸುದ್ಧಿಮಾಧ್ಯಮಗಳ ವರ್ತನೆಯನ್ನು ನೇರವಾಗಿದೇಶದ್ರೋಹ” ಎಂದೇ ಕರೆಯಬಹುದು.  ಕುರಿತಂತೆ ನನಗೆ ಮೊಟ್ಟಮೊದಲಿಗೆ ನೆನಪಾಗುವುದು ಇಪ್ಪತ್ತೈದು ವರ್ಷಗಳ ಹಿಂದೆ ೧೯೯೦ರ ಆದಿಯಲ್ಲಿ ಮುಂಬೈನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಜಮ್ಮು ಮತ್ತು ಕಾಶ್ಮೀರದ ಅಂದಿನ ಗವರ್ನರ್ ಜಗ್‌‍ಮೋಹನ್‌‍ ಸಂದರ್ಶನ.  ಮುಸ್ಲಿಮರ ಬಗ್ಗೆ, ಕಾಶ್ಮೀರಿಗಳ ಬಗ್ಗೆ ಜಗ್‌‍ಮೋಹನ್‌‍ ಲಘು ಹಾಗೂ ಆಕ್ಷೇಪಾರ್ಹ ಹೇಳಿಕೆಗಳು ಸಂದರ್ಶನದಲ್ಲಿದ್ದವು.  ಕಣಿವೆಯಲ್ಲಿ ಆಗಷ್ಟೇ ತಲೆಯೆತ್ತಿದ್ದ ಭಯೋತ್ಪಾದನೆಯ ನಿಗ್ರಹದ ಬಗ್ಗೆ ವಿ. ಪಿ. ಸಿಂಗ್ ಸರಕಾರ ಮತ್ತು ಸೇನೆ ಕೈಗೊಂಡಿದ್ದ ಕಾರ್ಯಕ್ರಮಗಳ ಬಗ್ಗೆ ಹಲವಾರು ಅನುಮಾನಗಳನ್ನು ಸಂದರ್ಶನ ಸೃಷ್ಟಿಸಿತು.  ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಇದೊಂದು ಪ್ರಬಲ ಅಸ್ತ್ರವಾಯಿತು.  ಜಗ್ ಜಗ್ ಮೋಹನ್ ಕೊ ಭಾಗ್ ಭಾಗ್ ಮೋಹನ್ ಕರ್ ದೇಂಗೆ” ಎಂದು ಪಾಕ್ ಪ್ರಧಾನಿ ಬೆನಜೀರ್ ಭುಟ್ಟೋ ಅಬ್ಬರಿಸಿದರು.  ಜಗ್‌‍ಮೋಹನ್‌‍ ವಿರುದ್ಧ ದೇಶದಲ್ಲೇ ಅಸಮಾಧಾನ ಭುಗಿಲೆದ್ದಿತು.  ಇದೆಲ್ಲದರ ಪರಿಣಾಮವಾಗಿ ಕೇಂದ್ರ ಸರಕಾರ ಅವರನ್ನು ಗವರ್ನರ್ ಸ್ಥಾನದಿಂದ ತೆಗೆದುಹಾಕಿತು.

ಆದರೆ ಕೆಲವೇ ದಿನಗಳಲ್ಲಿ ಹೊರಬಿದ್ದ ಸತ್ಯವೆಂದರೆ ಜಗ್‌‍ಮೋಹನ್ ಪತ್ರಿಕೆಗೆ ಅಥವಾ ಇನ್ನಾವುದೇ ಪತ್ರಿಕೆಗೆ ಯಾವ ಸಂದರ್ಶನವನ್ನೂ ನೀಡಿರಲಿಲ್ಲ.  ಪತ್ರಿಕೆ ಪ್ರಕಟಿಸಿದ್ದ ಇಡೀ ಸಂದರ್ಶನ ಕಪೋಲಕಲ್ಪಿತ.  ಸತ್ಯ ಹೊರಬರುವ ಹೊತ್ತಿಗೆ ಅನಾಹುತ ಘಟಿಸಿಹೋಗಿತ್ತು.  ಸರಕಾರ ಮತ್ತು ಭದ್ರತಾ ಪಡೆಗಳು ವಿನಾಕಾರಣ ಕಳಂಕ ಹೊತ್ತಿದ್ದವು, ಆಗಷ್ಟೇ ಮೊಳಕೆಯೊಡೆದಿದ್ದ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ದೇಶಕ್ಕೆ ನಿರ್ಣಾಯಕ ಹಿನ್ನಡೆಯಾಗಿತ್ತು.

                ನಂತರ ೧೯೯೫ರ ಬೇಸಗೆಯಲ್ಲಿ, ಚರಾರ್--ಶರೀಫ್ ಮಸೀದಿಗೆ ಬೆಂಕಿ ಬಿದ್ದ ವಿಷಯಕ್ಕೆ ಬರೋಣ.   ಘಟನೆಯ ಬಗ್ಗೆ ನಾನು ಮೊಟ್ಟಮೊದಲು ಕೇಳಿದ್ದು ರೇಡಿಯೋ ಪಾಕಿಸ್ತಾನ್ ವಾರ್ತೆಗಳಲ್ಲಿ.  ಭಾರತೀಯ ಸೇನೆ ಪವಿತ್ರ ಸ್ಥಳಕ್ಕೆ ಬೆಂಕಿಹಚ್ಚಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆಯೆಂದು ವಾರ್ತೆಗಳಲ್ಲಿ ಬಿತ್ತರಿಸಲಾಯಿತು.  ನಮ್ಮ ಇಂಗ್ಲಿಷ್ ಸುದ್ಧಿ ಮಾಧ್ಯಮಗಳು ಇದನ್ನೇ ಮತ್ತಷ್ಟು ದೊಡ್ಡದಾಗಿ ಹೇಳಿದವು.  ಆನಂತರ ಹೊರಬಂದ ಸತ್ಯವೆಂದರೆ ಕಳೆಗುಂದುತ್ತಿದ್ದ ಭಯೋತ್ಪಾದನೆಯನ್ನು ಕೆರಳಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಲ್ಲೆಬ್ಬಿಸಲೆಂದು ಪಾಕ್ ಪ್ರಚೋದಿತ ಉಗ್ರಗಾಮಿಗಳು ಮಸೀದಿಗೆ ಬೆಂಕಿಹಚ್ಚಿ ಅದನ್ನು ಸೇನೆಯ ತಲೆಗೆ ಕಟ್ಟಿದ್ದರು!  ಒಳಸಂಚಿನಂತೆ ಪಾಕಿಸ್ತಾನೀ ಸುದ್ಧಿಮಾಧ್ಯಮಗಳು ಭಾರತೀಯ ಸೇನೆಯ ವಿರುದ್ದ ಅಪಪ್ರಚಾರ ಆರಂಭಿಸಿದವು.  ಇಡೀ ಘಟನೆಯಲ್ಲಿ ಪಾಕಿಸ್ತಾನೀ ಸರಕಾರ, ಸೇನೆ, ಐಎಸ್‌‍, ಕಾಶ್ಮೀರಿ ಉಗ್ರಗಾಮಿಗಳು ಮತ್ತು ಪಾಕಿಸ್ತಾನದ ಸರಕಾರೀ ಸುದ್ಧಿ ಮಾಧ್ಯಮಗಳು ಶಾಮೀಲಾಗಿದ್ದವು.  ಒಳಸಂಚಿಗೆ ನಮ್ಮ ಸುದ್ಧಿಮಾಧ್ಯಮಗಳೂ ಸೇರಿಕೊಂಡದ್ದು ಹೇಗೆ? ಯಾಕೆ?

                ತೀರಾ ಇತ್ತೀಚಿನ ಘಟನೆಗಳನ್ನೇ ಗಮನಿಸುವುದಾದರೆ ಎರಡು ವರ್ಷಗಳ ಹಿಂದೆ ಅಮರನಾಥ್ ಯಾತ್ರಿಗಳಿಗೆ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸುವುದರ ವಿರುದ್ಧ ಭುಗಿಲೆದ್ದ ಆಂದೋಲನವನ್ನು ಪರಿಶೀಲಿಸಬಹುದು.  ಆಗ ಪ್ರತ್ಯೇಕತಾವಾದೀ ನಾಯಕನೊಬ್ಬ ಸೇನೆಯ ಗುಂಡಿಗೆ ಬಲಿಯಾದ ಎಂಬ ಸುದ್ಧಿ ಮಾಧ್ಯಮಗಳಲ್ಲಿ ಕಾಳ್ಗಿಚಿನಂತೆ ಹಬ್ಬಿ ಮತ್ತಷ್ಟು ದೊಂಬಿ, ಬಂದ್‌‍ಗಳಿಗೆ ಕಾರಣವಾಯಿತು.  ಆನಂತರ ಹೊರಬಂದ ವಿಷಯವೆಂದರೆ ಆತ ಸತ್ತದ್ದು ಸೇನೆಯ ಗುಂಡಿನಿಂದಲ್ಲ, ಬದಲಾಗಿ ಅವನದೇ ಸಹಚರರು ಹಿಂದಿನಿಂದ ಹಾರಿಸಿದ ಗುಂಡಿನಿಂದ!  ಆಮೇಲೆ ಎಲ್ಲರೂ ಗಪ್‌‍ಚಿಪ್!  ಶೋಪಿಂಯಾದಲ್ಲಿ ಭದ್ರತಾ ಪಡೆಗಳು ಇಬ್ಬರು ಅತ್ತಿಗೆ-ನಾದಿನಿಯರನ್ನು ಮಾನಭಂಗಗೊಳಿಸಿ ಕೊಂದ ಆಪಾದನೆ ೨೦೦೯ರಲ್ಲಿ ಬಂದಾಗ ದೌರ್ಜನ್ಯವನ್ನು ಖಂಡಿಸಿ ಇಡೀ ಕಾಶ್ಮೀರ ಕಣಿವೆ ಭುಗಿಲೆದ್ದದ್ದೂ, ನಮ್ಮ ಸುದ್ಧಿಮಾಧ್ಯಮಗಳು ಇದನ್ನು ಚಪ್ಪರಿಸಿ ಚಪ್ಪರಿಸಿ ಸವಿದದ್ದೂ ನಿಮಗೆ ನೆನಪಿರಬಹುದು.  ಇಡೀ ಘಟನೆ ಕಟ್ಟುಕತೆ ಎಂಬ ಸುದ್ದಿ ಆನಂತರ ಹೊರಬಂತು.  ಮಹಿಳೆಯರು ಜೀವ ಕಳೆದುಕೊಂಡದ್ದು ಅಕಸ್ಮಾತ್ ನೀರಿಗೆ ಬಿದ್ದುದರಿಂದ, ಅದನ್ನು ಮಾನಭಂಗ ಮತ್ತು ಕೊಲೆ ಎಂದು ಹೇಳಿ `ಅಪರಾಧ'ವನ್ನು ಭದ್ರತಾಪಡೆಗಳ ತಲೆಗೆ ಕಟ್ಟಿ, ಇಡೀ ಪ್ರಕರಣವನ್ನು ಭಾರತ-ವಿರೋಧೀ ದಂಗೆಯಾಗಿ ಪರಿವರ್ತಿಸಲು ಶೋಪಿಂಯಾದ ವೈದ್ಯಾಧಿಕಾರಿಗಳು ಮತ್ತು ವಕೀಲರುಗಳು ಸಾಕ್ಷಾಧಾರಗಳನ್ನು ತಿರುಚಿದ್ದಾರೆ ಎಂದು ತನಿಖಾ ಆಯೋಗ ಹೇಳಿತು.  ಇಬ್ಬರಿಗೂ ಸಂಬಂಧಿಸಿದ ಪುರುಷ ಏಕಾಏಕಿ ಶ್ರೀಮಂತಿಕೆ ಪ್ರದರ್ಶಿಸತೊಡಗಿದ ಸೋಜಿಗದ ಕಾರಣವೂ ಹೊರಬಂತು.

                ಭದ್ರತಾಪಡೆಗಳ ಬಗ್ಗೆ ಸುಳ್ಳುಸುದ್ಧಿ ಹಬ್ಬಿಸಿ ಅಶಾಂತಿ ಉಂಟುಮಾಡುವುದರಿಂದ ಪ್ರತ್ಯೇಕತಾವಾದಿಗಳಿಗೆ, ಪಾಕಿಸ್ತಾನಕ್ಕೆ ಲಾಭವಿದೆ, ನಿಜ.  ಆದರೆ ಇದರಲ್ಲಿ ನಮ್ಮ ಸುದ್ಧಿಮಾಧ್ಯಮಗಳಿಗೆ ಯಾವ ಲಾಭವಿದೆ?  ಅವುಗಳ ಹಿಂದೆ ನಿಜವಾಗಿ ಇರುವವರು ಯಾರು?  ಹಿನ್ನೆಲೆಯಲ್ಲಿ, ೨೦೦೨ರ ಗುಜರಾತ್ ದಂಗೆಗಳ ಒಂದು ಮುಖವನ್ನು ಮಾತ್ರ ವರದಿ ಮಾಡುವಂತೆ ಪಶ್ಚಿಮ ಏಶಿಯಾದ ತೈಲಸಂಪನ್ನ ಶ್ರೀಮಂತ ದೇಶವೊಂದು ಭಾರತದ ಪತ್ರಕರ್ತೆಯೊಬ್ಬರಿಗೆ ಅರ್ಧ ಮಿಲಿಯನ್ ಡಾಲರ್ ನೀಡಿತೆನ್ನಲಾದ 'ಸುದ್ಧಿ' ಸತ್ಯಾಸತ್ಯತೆಯ ಪರಿಶೀಲನೆಯಿಂದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಕೋಮುಗಲಭೆಗಳ ಸಂಪೂರ್ಣ ಜವಾಬ್ದಾರಿಯನ್ನು ನರೇಂದ್ರ ಮೋದಿಯವರ ತಲೆಗೆ ಕಟ್ಟಿ ಅವರನ್ನು ಕೋಮುವಾದಿ, ನರಹಂತಕ ಎಂದು ವಿಶ್ವಾದ್ಯಂತ ಬಿಂಬಿಸಿದ್ದು ಕಾಂಗ್ರೆಸ್ ರಾಜಕಾರಣಿಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಒಂದಷ್ಟು ಭಾರತೀಯ ವಿಚಾರವಾದಿಗಳು.  ಇವರಿಗೆ ಅಳತೆಮೀರಿ ಪ್ರಚಾರ ಕೊಟ್ಟದ್ದು ಸುದ್ಧಿಮಾಧ್ಯಮ, ಮುಖ್ಯವಾಗಿ ಆಂಗ್ಲ ಸುದ್ಧಿಮಾಧ್ಯಮ.  ವಾಸ್ತವ ಇವರು ಬಿಂಬಿಸಿದ್ದಕ್ಕಿಂತ ಸಂಪೂರ್ಣ ವಿರುದ್ಧವಾಗಿತ್ತು ಎನ್ನುವುದನ್ನು ನಂತರ ತನಿಖಾ ಆಯೋಗಗಳು ಬಯಲು ಮಾಡಿದವು.  ಮಾಧ್ಯಮಗಳಲ್ಲಿ ಇದಕ್ಕೆಷ್ಟು ಪ್ರಚಾರ ಸಿಕ್ಕಿತು?

ಡಿಸೆಂಬರ್ ೧೩, ೨೦೦೧ರ ಸಂಸತ್ ಧಾಳಿಯ ನಂತರ ಎನ್‌‍ಡಿಏ ಸರಕಾರ ಜಾರಿಗೆ ತಂದ "ಪೋಟಾ" ಮುಸ್ಲಿಂ-ವಿರೋಧಿ ಎಂದು ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳೂ, ಬುದ್ಧಿಜೀವಿಗಳೂ ಹುಯಿಲೆಬ್ಬಿಸಿದರು.  ತಮ್ಮ ಆಪಾದನೆಯ ಸಮರ್ಥನೆಗಾಗಿ ಪೋಟಾ ಕಾಯಿದೆಯಡಿಯಲ್ಲಿ ಬಂಧಿತರಾದವರಲ್ಲಿ ಬೇರೆಲ್ಲಾ ಧರ್ಮದವರಿಗಿಂತಲೂ ಮುಸ್ಲಿಮರು ಅಧಿಕವಾಗಿದ್ದಾರೆ ಎಂಬ ಅಂಕಿಅಂಶವನ್ನು ಎತ್ತಿಹಿಡಿದರು.  ಇದನ್ನೆಲ್ಲಾ ಹೇಳಲು ಇವರಿಗೆ ಮತ್ತೆಮತ್ತೆ ಅವಕಾಶ ಕೊಟ್ಟದ್ದು ಆಂಗ್ಲ ಸುದ್ಧಿಮಾಧ್ಯಮಗಳು.  ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವವರಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ.  ಹೀಗಿರುವಾಗ ಬಂಧಿತರಾದವರಲ್ಲೂ ಅವರೇ ಅಧಿಕವಾಗಿರುವುದು ಸಹಜವೇ ಆಗಿದೆ.  ವಿಷಯದಲ್ಲಿ ವಿವಿಧ ಧರ್ಮಗಳ ಜನಸಂಖ್ಯೆಗನುಗುಣವಾಗಿ ಶೇಕಡಾವಾರು ಮೀಸಲಾತಿಯನ್ನು ಅನುಸರಿಸಲಾಗುವುದಿಲ್ಲ.  ವಾಸ್ತವವನ್ನು ಮಾಧ್ಯಮ ಜನತೆಗೆ ತಿಳಿಸಲೇ ಇಲ್ಲ.  ತಾನು ಅಧಿಕಾರಕ್ಕೇರಿದಾಗ ಯುಪಿಏ ಸರಕಾರ ಫೋಟಾ ಇಲ್ಲದೆಯೂ ನಾವು ಭಯೋತ್ಪಾದನೆಯನ್ನು ನಿಗ್ರಹಿಸಬಹುದು ಎಂದು ಘೋಷಿಸಿತು.  ನಿಲುವು ಅದೆಷ್ಟು ಟೊಳ್ಳಿನದು ಎನ್ನುವುದನ್ನು ದೇಶ ನಂತರ ಮತ್ತೆಮತ್ತೆ ಕಂಡಿತು.  ಮಾಧ್ಯಮಗಳು ಇದರ ಬಗ್ಗೆ ಮಾತಾಡುತ್ತವೆಯೇ?

ನವೆಂಬರ್ 3, 2015