ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, August 24, 2014

ಹಿಂದೂಧರ್ಮಕ್ಕೆ ಹಿಂದುಮುಂದಿಲ್ಲವೇ?

ಭಾಗ - 1

          ಹಿಂದೂ ಧರ್ಮದ ಅಪಹಾಸ್ಯ, ಅವಹೇಳನ ಇಂದು ನಿನ್ನೆಯದಲ್ಲ.  ಅದು ಆರಂಭವಾಗಿ ಶತಮಾನಗಳೇ ಕಳೆದುಹೋಗಿವೆ.  ತನ್ನ ಚಿಪ್ಪಿನೊಳಗೇ ಅಡಗಿಕೊಂಡು ಹೊರಪ್ರಪಂಚಕ್ಕೆ ಬಹುತೇಕ ಅಪರಿಚವಾಗಿಯೇ ಇದ್ದ ಹಿಂದೂ ಸಮಾಜ ತನ್ನ ಅಪರಿಚಿತತೆಯಿಂದಲೇ ಮೊದಲಿಗೆ ಅರಬ್ ಮುಸ್ಲಿಮ್ ಧಾಳಿಕಾರರಲ್ಲಿ, ನಂತರ ಕ್ರಿಶ್ಚಿಯನ್ ವರ್ತಕರು ಮತ್ತು ಸೈನಿಕರಲ್ಲಿ ಅಚ್ಚರಿಯನ್ನುಂಟುಮಾಡಿತು.  ಅನೇಕ ದೇವದೇವಿಯರುಳ್ಳ, ಒಂದೇಒಂದು ನಿರ್ದಿಷ್ಟ ಧರ್ಮಗ್ರಂಥವಿಲ್ಲದ, ಶ್ರೇಣೀಕೃತ ಜಾತಿವ್ಯವಸ್ಥೆಯ ಅನಿಷ್ಟದಲ್ಲಿ ಒಡೆದು ಹಂಚಿಹೋಗಿದ್ದ ಹಿಂದೂ ಸಮಾಜ ಏಕದೈವವನ್ನು, ಏಕಧರ್ಮಗ್ರಂಥವನ್ನೂ ಹೊಂದಿದ್ದ, ಸಮಾನತೆಯ ತಳಹದಿಯ ಮೇಲೆ ರಚಿತವಾಗಿದ್ದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜಗಳಿಗೆ ಸಂಪೂರ್ಣ ವಿರುದ್ಧವಾಗಿದ್ದುದರಿಂದಾಗಿ ಆ ಧರ್ಮಗಳ ಅನುಯಾಯಿಗಳಲ್ಲಿ ಕುತೂಹಲ, ಅಪನಂಬಿಕೆಗಳನ್ನುಂಟುಮಾಡಿದ್ದು ಸಹಜವೇ ಆಗಿತ್ತು.  ಆದರೆ ಈ ಭಾವನೆಗಳು ಕ್ಷಿಪ್ರಕಾಲದಲ್ಲೇ ಅವಹೇಳನದ ರೂಪ ಪಡೆದುಕೊಂಡದ್ದು ದುರ್ಭಾಗ್ಯದ ಬೆಳವಣಿಗೆ. ಅದಕ್ಕಿಂತಲೂ ದೌರ್ಭಾಗ್ಯದ ಸಂಗತಿಯೆಂದರೆ ಪರಧರ್ಮೀಯರು ಆರಂಭಿಸಿದ ಹಿಂದೂ ಅವಹೇಳನವನ್ನು ಈಗ ಸ್ವತಃ ಹಿಂದೂಗಳೇ ಮುಂದುವರೆಸಿಕೊಂಡುಹೋಗುತ್ತಿರುವುದು.  ಅವರ ಈ ಕೃತ್ಯ ಆರೋಗ್ಯಕರವಾಗಿದ್ದು ಹಿಂದೂಧರ್ಮದ ಕೆಲವೊಂದು ಅನಾಚಾರಗಳನ್ನು ತೊಡೆದುಹಾಕುವಂತಿದ್ದರೆ ಅದು ಸ್ವಾಗತಾರ್ಹ ಹಾಗೂ ಶ್ಲಾಘನೀಯವಾಗಿರುತ್ತಿತ್ತು.  ಆದರೆ ದುರದೃಷ್ಟವಶಾತ್ ವಾಸ್ತವ ಹಾಗಿಲ್ಲ.  ಅವರ ಟೀಕೆಗಳಲ್ಲಿ ಎದ್ದುಕಾಣುತ್ತಿರುವುದು ಹೆಚ್ಚಿನಂಶ ಕಿಡಿಗೇಡಿತನ.  ಅಂಥವರಿಗೆ ಚಿಂತಕರೆಂಬ ಹಣೆಪಟ್ಟಿ ದಕ್ಕುತ್ತಿರುವುದು ಸಮಕಾಲೀನ ಸಮಾಜದ ಒಂದು ವರ್ಗದ ಬೌದ್ಧಿಕ ದಾರಿದ್ರ್ಯದ ದ್ಯೋತಕ.  ಇವರು ಈಗ ಎತ್ತುತ್ತಿರುವ ಪ್ರಶ್ನೆ ಹಿಂದೂಧರ್ಮದ ಅದಿಯ ಕುರಿತಾಗಿ, ಇತರ ಧರ್ಮಗಳಿಗಿರುವಂತೆ ಹಿಂದೂಧರ್ಮಕ್ಕೆ ಸ್ಥಾಪಕನೊಬ್ಬ ಇಲ್ಲ ಎನ್ನುವ ಕುರಿತಾಗಿ.
ಇತಿಹಾಸದಲ್ಲಿ ದಾಖಲಾಗಿರುವಂತೆ, ಈಗಲೂ ನಮಗೆ ಗೋಚರಿಸುತ್ತಿರುವಂತೆ ನೂರೊಂದು ವೈವಿಧ್ಯಮಯ ಧರ್ಮಗಳು ಅಥವಾ ಧಾರ್ಮಿಕ ನಂಬುಗೆಗಳನ್ನು ಜಗತ್ತು ಕಂಡಿದೆ.  ಜೀವಂತ ಮನುಷ್ಯನ ಎದೆಯನ್ನು ಬಗೆದು ಮಿಡಿಯುತ್ತಿರುವ ಹೃದಯವನ್ನು ಕಿತ್ತು ಹೊರಗೆಳೆದು ಸೂರ್ಯನಿಗೆ ತೋರಿಸುವ ಪ್ರಾಚೀನ ಅಜ್ಟೆಕ್ ಧಾರ್ಮಿಕ ವಿಧಿಯಿಂದ ಹಿಡಿದು ಒಂದು ಸಣ್ಣ ಕ್ರಿಮಿಯನ್ನೂ ಕೊಲ್ಲಬಾರದೆನ್ನುವ ಜೈನಧರ್ಮದವರೆಗೆ, ಬಹುತೇಕ ಯುದ್ಧಗಳ ಮೂಲಕ ಪ್ರಸಾರಗೊಂಡ ಇಸ್ಲಾಂನಿಂದ ಹಿಡಿದು ಶಾಂತಿಯುತ ಪ್ರಚಾರದಿಂದಲೇ ಒಂದು ಕಾಲದಲ್ಲಿ ಏಶಿಯಾದ ಪ್ರಮುಖ ಧರ್ಮವಾಗಿದ್ದ ಬೌದ್ಧಧರ್ಮದವರೆಗೆ ಹಲವು ಹತ್ತು ಧರ್ಮಗಳು, ನಂಬುಗೆಗಳು ನಮ್ಮೆದುರಿಗಿವೆ.
          ಇಷ್ಟಾಗಿಯೂ ಈಗ ಜಾಗತಿಕವಾಗಿ ಪ್ರಮುಖವೆನಿಸಿಕೊಳ್ಳುವ ಧರ್ಮಗಳೆಲ್ಲವುಗಳ ಮೂಲವನ್ನು ಕೇವಲ ಎರಡೇ ಧರ್ಮಗಳಲ್ಲಿ ಗುರುತಿಸಬಹುದಾಗಿದೆ.  ಅವೆಂದರೆ ಹಿಂದೂ ಹಾಗೂ ಯೆಹೂದಿ ಧರ್ಮಗಳು.  ಉಳಿದೆಲ್ಲಾ ಧರ್ಮಗಳು ಈ ಎರಡರಲ್ಲೇ ಮೊಳೆತ ನಿರಾಕರಣಾ ಅಥವಾ ಸುಧಾರಣಾ ಪ್ರಕ್ರಿಯೆಗಳು.  ಬೌದ್ಧಧರ್ಮ, ಜೈನಧರ್ಮ, ಸಿಖ್ ಧರ್ಮ ಮುಂತಾದುವುಗಳ ಮೂಲ ಹಿಂದೂಧರ್ಮದಲ್ಲಿದ್ದರೆ ಕ್ರಿಶ್ಚಿಯಾನಿಟಿ, ಇಸ್ಲಾಂ ಮತ್ತು ಬಹಾಯಿ ಧರ್ಮಗಳ ಮೂಲವನ್ನು ಯೆಹೂದಿ ಧರ್ಮದಲ್ಲಿ ಕಾಣಬಹುದಾಗಿದೆ.  ಹೀಗಾಗಿ ಹಿಂದೂ ಮತ್ತು ಯೆಹೂದಿ ಧರ್ಮಗಳ ಉಗಮದ ಬಗ್ಗೆ ಚರ್ಚಿಸಿದರೆ ಅದು ಉಳಿದೆಲ್ಲಾ ಧರ್ಮಗಳ ಉಗಮದ ಚರ್ಚೆಗೆ ಪೀಠಿಕೆಯಾಗುತ್ತದೆ.
ಮೊದಲಿಗೆ ಹಿಂದೂಧರ್ಮವನ್ನು ಕೈಗೆತ್ತಿಕೊಳ್ಳೋಣ ಹಾಗೂ ಈ ಚರ್ಚೆಯನ್ನು “ಹಿಂದೂ” ಎಂಬ ಪದದ ಉಗಮದಿಂದಲೇ ಪ್ರಾರಂಭಿಸೋಣ. ಭಾರತೀಯರಿಗೆ ಹಿಂದೂ ಎಂಬ ಹೆಸದು ಕೊಟ್ಟವರು ಪರ್ಷಿಯನ್ನರು.  ಇದರ ಹಿಂದೆ ಭಾಷಿಕ ಹಾಗೂ ಉಚ್ಚಾರಣೀಯ ಕಾರಣಗಳಿವೆ.  ಪರ್ಶಿಯನ್ ಭಾಷೆಯಲ್ಲಿ “ಸ” ಅಕ್ಷರ ಇಲ್ಲದ ಕಾರಣ ಬೇರೆಲ್ಲಾ ಭಾಷೆಗಳ “ಸ”ಕಾರಗಳು ಪರ್ಷಿಯನ್ ನಾಲಿಗೆಯಲ್ಲಿ “ಹ”ಕಾರಗಳಾಗಿ ಬದಲಾಗುತ್ತವೆ.  ಈ ಕಾರಣದಿಂದಾಗಿ ಹಿಂದೂ, ಹಿಂದೂಸ್ತಾನ ಎಂಬ ಹೆಸರುಗಳು ಹುಟ್ಟಿಕೊಂಡ ಬಗೆ ಹೀಗಿದೆ-  ಸಿಂಧೂ ನದಿಗೆ ಆ ಹೆಸರು ಕೊಟ್ಟವರು ಆರ್ಯರು.  ಆರ್ಯಪೂರ್ವ ಕಾಲದಲ್ಲಿ ಸಿಂಧೂ ಕಣಿವೆಯ ಜನರು ಆ ನದಿಯನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರೆಂದು ನಮಗೆ ತಿಳಿಯದಾಗಿದೆ.  ಸಿಂಧೂ ನಾಗರಿಕತೆಯ ಲಿಪಿಯನ್ನು ಓದುವುದರಲ್ಲಿ ಯಶಸ್ಸು ಸಿಗುವವರೆಗೆ ಆ ಹೆಸರೂ ನಮ್ಮಿಂದ ಮರೆಯಾಗಿಯೇ ಇರುತ್ತದೆ.  ಕ್ಯಾಸ್ಪಿಯನ್ ಸಮುದ್ರದ ಉತ್ತರ ತೀರದ  ತಮ್ಮ ಮೂಲನೆಲೆಯನ್ನು ತೊರೆದು ಸಿಹಿನೀರನ್ನರಸಿ ಇತ್ತ ಬಂದ ಆರ್ಯರಿಗೆ ಮೂರೂವರೆ ಸಹಸ್ರಮಾನಗಳ ಹಿಂದೆ ಈ ನದಿ ಎದುರಾದಾಗ ಅದರ ಅಗಾಧತೆ ಅವರನ್ನು ದಿಗ್ಮೂಢರನ್ನಾಗಿಸಿತು.  ಅದರಿಂದಲೇ ಅವರು ಅಗಾಧ ಜಲರಾಶಿ ಅಥವಾ ಸಾಗರವನ್ನು ಸೂಚಿಸುವ ಸಿಂಧೂ” ಎಂಬ ಹೆಸರನ್ನು ಆ ನದಿಗಿಟ್ಟರು.  ನಂತರ ಅದು ಪರ್ಶಿಯನ್ ನಾಲಿಗೆಯಲ್ಲಿ “ಹಿಂದೂ” ಎಂದಾಗಿ ಅಪಭ್ರಂಶಗೊಂಡಿತು.  ಅವರು ಸಿಂಧೂನದಿಯನ್ನು ಹಿಂದೂ ಎಂದು ಕರೆದದ್ದಲ್ಲದೇ ಈ ಪ್ರದೇಶವನ್ನೂ ಆ ಹೆಸರಿನಿಂದಲೇ ಗುರುತಿಸಲಾರಂಭಿಸಿದರು.  ಅದರ ಮುಂದುವರಿಕೆಯ ಫಲವಾಗಿ ಈ ನಾಡಿನ ಜನರಿಗೂ ಹಿಂದೂ ಎಂಬ ಹೆಸರು ಬಂತು.  ಹೀಗಾಗಿ ಹಿಂದೂ ಎನ್ನುವುದು ಮೂಲತಃ ಧರ್ಮಸೂಚಕವಾಗಿರಲಿಲ್ಲ.  ಉತ್ತರ ಭಾರತದಲ್ಲಿ ವಾಸಿಸುವ ಎಲ್ಲರೂ, ಅವರ ಧಾರ್ಮಿಕ ನಂಬಿಕೆಗಳೇನೇ ಇರಲಿ ಅವರೆಲ್ಲರೂ ಹಿಂದೂಗಳೇ ಅಂದರೆ ಹಿಂದೂ (ಸಿಂಧೂ) ದೇಶವಾಸಿಗಳೇ.  ಇಂದಿಗೂ ಸಹಾ ಪಶ್ಚಿಮ ಹಾಗೂ ಮಧ್ಯ ಏಶಿಯಾದ ಭಾಷೆಗಳಲ್ಲಿ ಹಿಂದೂ ಅಂದರೆ ಭಾರತೀಯ (ಇಂಡಿಯನ್) ಎಂದರ್ಥ, ಹಿಂಧೂಧರ್ಮೀಯ ಎಂದಲ್ಲ.
ನಂತರ ಪರ್ಶಿಯನ್ನರಿದ ಹಿಂದೂ ಎಂಬ ನಾಡಿನ ಬಗ್ಗೆ ಅರಿತ ಗ್ರೀಕರು ಅದನ್ನು ತಮ್ಮ ಭಾಷಾನಿಯಮಗಳಿಗನುಸಾರವಾಗಿ “ಇಂಡಿಯಾ” ಎಂದು ಬದಲಾಯಿಸಿಕೊಂಡರು.  ಕಳೆದ ಎರಡೂವರೆ ಸಾವಿರ ವರ್ಷಗಳಿಂದಲೂ ಭಾರತ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿರುವುದು ಈ ಹೆಸರಿನಿಂದ.  ಮೊದಲಿಗೆ ಪ್ರದೇಶಸೂಚಕವಾದ ಹಿಂದೂ ಅಥವಾ ಇಂಡಿಯಾ ಎಂಬ ನಾಮಪದಗಳು ಮುಂದೆ ವಹಾಹತೀಕರಣದ ಕಾಲದಲ್ಲಿ ಪ್ರತ್ಯೇಕ ಅರ್ಥಗಳನ್ನು ಪಡೆಕೊಂಡವು.  ಇದಕ್ಕೆ ಕಾರಣ ವಹಾಹತುಶಾಹಿ ವಿದ್ವಾಂಸರು ಇಂಡಿಯಾ ಎಂಬ ನಾಮಪದವನ್ನು ಭೌಗೋಳಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಸೂಚಿಸಲೂ, ಹಿಂದೂ ಎಂಬ ನಾಮಪದವನ್ನು ಆ ಭೌಗೋಳಿಕ ಪ್ರದೇಶಕ್ಕೇ ವಿಶಿಷ್ಟವಾದ ಧಾರ್ಮಿಕ ನಂಬುಗೆಗಳನ್ನು ಸೂಚಿಸಲೂ ಬಳಸಿಕೊಳ್ಳತೊಡಗಿದ್ದು.  ನಂತರ ವಸಾಹತುಶಾಹಿ ಶೈಕ್ಷಣಿಕ ಮೂಸೆಯಲ್ಲಿ ಅದ್ದಿತೆಗೆದ ಭಾರತೀಯರೂ ಈ ಅರ್ಥಗಳನ್ನೇ ಒಪ್ಪಿಕೊಂಡು ಪ್ರಚುರಪಡಿಸುತ್ತಾ ಬರುತ್ತಿದ್ದಾರೆ.
            ಹಿಂದೂಧರ್ಮದ ಉಗಮದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಆಧಾರಗಳಿಲ್ಲ.  ಇದಕ್ಕೆ ಕಾರಣ ಹಿಂದೂಧರ್ಮವೆಂದು ಕರೆಸಿಕೊಳ್ಳುತ್ತಿರುವ ಸಂಪ್ರದಾಯ, ರೂಡಿರಿವಾಜುಗಳ ಮೊತ್ತದ ಪ್ರಾಚೀನತೆ.  ಇದನ್ನು ವಿವರಿಸುವ ಮೊದಲು ಮಾನವಸಮಾಜದಲ್ಲಿ ಧರ್ಮದ ಉಗಮದ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವುದು ಇಲ್ಲಿ ಉಚಿತ.
          ಧಾರ್ಮಿಕ ನಂಬುಗೆಗಳ, ವಿಚಾರಗಳ ಇತಿಹಾಸ ಬಹುಷಃ ಮಾನವ ಇತಿಹಾಸದಷ್ಟೇ ಪ್ರಾಚೀನ.  ಹೀಗಾಗಿ ಮಾನವನ ಪ್ರಾಚೀನತೆಯ ಬಗ್ಗೆ ನಮಗೆ ನಿಖರವಾಗಿ ತಿಳಿಯುವವರೆಗೆ ಧರ್ಮದ ಪ್ರಾಚೀನತೆಯೂ ನಮಗೆ ನಿಖರವಾಗಿ ತಿಳಿಯುವುದಿಲ್ಲ.  ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ ಈಗ ಚಾಲ್ತಿಯಲ್ಲಿರುವ ವಿಕಾಸವಾದದ ಪ್ರಕಾರ ಆಫ್ರಿಕಾದಲ್ಲಿ ವಾನರರಿಂದ ಮಾನವ ಪ್ರಬೇಧ ಬೇರ್ಪಟ್ಟದ್ದು ಅರವತ್ತು ಲಕ್ಷ ವರ್ಷಗಳ ಹಿಂದೆ.  ಅದರ ಮುಂದುವರಿಕೆಯಾಗಿ ಇಪ್ಪತ್ತಮೂರು ಲಕ್ಷ ವರ್ಷಗಳ ಹಿಂದೆ ಆಯುಧಗಳನ್ನು ತಯಾರಿಸುವ ಬುದ್ಧಿಶಕ್ತಿಯನ್ನು ಹೊಂದಿದ ಹೋಮೊ ಹ್ಯಾಬಿಲಿಸ್ ಮಾನವನ ಉಗಮವಾಯಿತು.  ನಾವು ಹೋಮೋ ಸೇಪಿಯನ್ ಸೇಪಿಯನ್‍ಗಳು ಉಗಮವಾದದ್ದು ಸುಮಾರು ಒಂದು ಲಕ್ಷ ವರ್ಷಗಳ ಹಿಂದೆ.  ಅದರೆ ಇತ್ತೀಚೆಗೆ ದೊರೆಯುತ್ತಿರುವ ಅಧಾರಗಳಿಂದಾಗಿ ವಿಕಾಸವಾದದ ಬುಡವೇ ಅಲುಗಾಡತೊಡಗಿದೆ.  ಈ ಹೊಸ ಆಧಾರಗಳ ಪ್ರಕಾರ ಕಲ್ಲಿನಿಂದ ಆಯುಧಗಳನ್ನೂ, ಉಪಕರಣಗಳನ್ನೂ ತಯಾರಿಸಬಲ್ಲ ಬುದ್ಧಿಶಕ್ತಿಯುಳ್ಳ ಮಾನವ ಸುಮಾರು “ನಾಲ್ಕೂವರೆಯಿಂದ ಐದು ಕೋಟಿ” ವರ್ಷಗಳ ಹಿಂದೆಯೇ ಪ್ರಪಂಚದ ವಿವಿಧೆಡೆ ಕಾಣಿಸಿಕೊಂಡಿದ್ದ! (ಇದರ ಬಗ್ಗೆ ಮುಂದೆ ಅವಕಾಶವಾದಾಗ ವಿವರವಾಗಿ ಬರೆಯುತ್ತೇನೆ.)
          ಆಯುಧಗಳನ್ನೂ, ಉಪಕರಣಗಳನ್ನೂ ತಯಾರಿಸಬಲ್ಲ ಮಾನವನಿಗೆ ಸಹಜವಾಗಿಯೇ ಪ್ರಕೃತಿಯ ಹಲವು ನಿಯಮಗಳು ಪರಿಚಯವಾಗಿದ್ದಿರಲೇಬೇಕು.  ಆ ಮೂಲಕ ತನ್ನನ್ನು ತಾನರಿಯುವ ಪ್ರಯತ್ನವನ್ನೂ ಆತ ನಡೆಸಿರಬೇಕು.  ಅದೇ ಧಾರ್ಮಿಕ ನಂಬುಗೆಗಳಿಗೆ ತಳಹದಿಯೂ ಆಗಿರಬೇಕು.
          ಪ್ರಕೃತಿ ನಿಯಮಗಳ ಮೇಲೆ ತನ್ನನ್ನು ತಾನರಿಯಲು ಪ್ರಯತ್ನಿಸಿದ ಮಾನವನಲ್ಲಿ ಧಾರ್ಮಿಕ ಜಿಜ್ಞಾಸೆಗಳುದಿಸಿದವೆಂದು ಹೇಳಲು ನಾನಿಲ್ಲಿ ಬ್ರಿಟಿಷ್ ಮಾನವಶಾಸ್ತ್ರಜ್ಞ ಎಡ್ವರ್ಡ್ ಟೈಲರ್ (1832-1917) ಮಾಡಿರುವ ಅವಲೋಕನವನ್ನು ಬಳಸಿಕೊಳ್ಳುತ್ತೇನೆ.  ಟೈಲರ್ ಹೇಳುವುದು ಹೀಗೆ: ಇದ್ದಕ್ಕಿದ್ದಂತೆ ಮನಸ್ಸಿನಲ್ಲಿ ಮೂಡುವ ವಿವರಿಸಲಾಗದ ಆಲೋಚನೆಗಳು, ಕಾಣುವ ಚಿತ್ರಗಳು, ಕನಸುಗಳು, ಹಳವಂಡಗಳು, ಅವುಗಳಲ್ಲಿ ಮೃತ ಪರಿಚಯಸ್ಥರು ಕಾಣಿಸಿಕೊಳ್ಳುವುದು ಮುಂತಾದುವು ತಾನೆಂದರೆ ಭೌತಿಕ ಶರೀರ ಮಾತ್ರವಲ್ಲ, ಶರೀರದೊಳಗೆ ‘ಮತ್ತೇನೋ’ ಅಂದರೆ ಆತ್ಮ (ಲ್ಯಾಟಿನ್‍ನಲ್ಲಿ “ಅನಿಮಾ”) ಇರಬಹುದೆಂಬ ಕಲ್ಪನೆಯನ್ನು ಆದಿಮಾನವನಲ್ಲಿ ಮೂಡಿಸಿರಬಹುದು.  ಅದು ಮುಂದುವರೆದು, ಸತ್ತ ನಂತರ ದೇಹವನ್ನು ತ್ಯಜಿಸಿದ ಆತ್ಮವು ನಾಶವಾಗದೇ ಪ್ರಕೃತಿಯಲ್ಲಿ ಅಂದರೆ ಮರಗಿಡಗಳು, ಕಲ್ಲುಬಂಡೆಗಳು, ನದಿ ಪರ್ವತಗಳಲ್ಲಿ, ಸೂರ್ಯ ಚಂದ್ರ ಗ್ರಹ ನಕ್ಷತ್ರಗಳಲ್ಲಿ ನೆಲೆಸುತ್ತವೆಂಬ ನಂಬಿಕೆಯೂ ಮೂಡಿರಬೇಕು.  ಅದರ ಮುಂದುವರಿಕೆಯಾಗಿ ಮೃತ ಪ್ರೀತಿ ಪಾತ್ರರು ನೆಲೆಸಿರುವ ಪ್ರಕೃತಿಯ ಚಿನ್ಹೆಗಳೂ ಆದಿಮಾನವನಿಗೆ ಪ್ರೀತಿಪಾತ್ರವಾಗಿ ಕ್ರಮೇಣ ಅವುಗಳ ಮೇಲೆ ಭಕ್ತಿ ಮೊಳೆತು ಅವು ಪೂಜಾರ್ಹಗೊಳ್ಳತೊಡಗಿರಬೇಕು.  ಪೂಜಾವಿಧಾನಗಳು ಮತ್ತು ಅವುಗಳಿಗೆ ಒತ್ತುಕೊಟ್ಟ ಭಾವನೆಗಳು ಮತ್ತು ನಂಬಿಕೆಗಳು ಧಾರ್ಮಿಕ ವಿಧಿವಿಧಾನಗಳಿಗೆ ತಳಹದಿಯಾಗಿರಬೇಕು.  ಧರ್ಮ ಹೀಗೆ ಉದಿಸಿರಬೇಕು.
          ಪ್ರಾಚೀನ ಹಿಂದೂ ನಂಬುಗೆಗಳಲ್ಲಿ ಪ್ರಕೃತಿಯ ಬಗ್ಗೆ ಪೂಜ್ಯ ಭಾವನೆ, ಅದರ ಅರಾಧನೆ ಪ್ರಮುಖವಾಗಿ ಕಾಣಿಸಿಕೊಳ್ಳುವುದರಿಂದ ಹಿಂದೂಧರ್ಮದ ಮೊಳಕೆಯನ್ನು ಹೊಮೋ ಹ್ಯಾಬಿಲಿಸ್‍ನ ಕಾಲದಲ್ಲೇ ಗುರುತಿಸಬಹುದೇನೋ.  ಆದರೆ ಪ್ರಶ್ನೆಯೆಂದರೆ ಇದಾದದ್ದು ಯಾವಾಗ?  ವಿಕಾಸವಾದದ ಪ್ರಕಾರ ಅದಾದದ್ದು ಕೇವಲ ಇಪ್ಪತ್ತಮೂರು ಲಕ್ಷ ವರ್ಷಗಳ ಹಿಂದೆ.  ಆದರೆ ಮೇಲೆ ವಿವರಿಸಿದಂತೆ ಇತ್ತೀಚೆಗೆ ದೊರೆಯುತ್ತಿರುವ ಆಧಾರಗಳ ಪ್ರಕಾರ ಅದಾದದ್ದು ಐದು ಕೋಟಿ ವರ್ಷಗಳ ಹಿಂದೆ!
          ಈ ವಿಧಾನದಲ್ಲಿ ಸೃಷ್ಟಿಯಾದದ್ದು ಕೇವಲ ಹಿಂದೂ ಧಾರ್ಮಿಕ ನಂಬುಗೆಗಳು ಮಾತ್ರವಲ್ಲ.  ಪ್ರಪಂಚದ ಎಲ್ಲೆಡೆ ಮಾನವ ಗುಂಪುಗಳು ಈ ಬಗೆಯಾಗಿಯೇ ತಂತಮ್ಮ ಧಾರ್ಮಿಕ ನಂಬುಗೆಗಳನ್ನು ಮೂಡಿಸಿಕೊಂಡಿರಬೇಕು.  ಅವುಗಳಲ್ಲಿ ಕೆಲವು ನಶಿಸುತ್ತಾ, ಮತ್ತೆ ಕೆಲವು ಬದಲಾಗುತ್ತಾ ಬೆಳೆಯುತ್ತಾ ಸಾಗಿಬಂದಿವೆ.  ಹೀಗೆ ಸಾಗಿಬಂದಿರುವುದಕ್ಕೆ ಅತ್ಯಂತ ಸೂಕ್ತ ಉದಾಹರಣೆ ಹಿಂದೂಧರ್ಮ.  ಮೇಲೆ ವಿವರಿಸಿದಂತೆ ಎಂದೋ ಉದಿಸಿದ ನಂಬುಗೆಗಳು ಹೊಸರೂಪಗಳನ್ನು ಪಡೆಯುತ್ತಾ, ಪೂರ್ಜಾರ್ಹವಾದ ಹೊಸ ದೈವಗಳನ್ನು ಸೃಷ್ಟಿಸಿಕೊಳ್ಳುತ್ತಾ, ಅದಕ್ಕನುಗುಣವಾಗಿ ಹೊಸ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ, ಅವೆಲ್ಲವನ್ನೂ ಅಕ್ಷರರೂಪದಲ್ಲಿ ದಾಖಲಿಸುತ್ತಾ ಸಾವಿರಾರು, ಲಕ್ಷಾಂತರ ವರ್ಷಗಳವರೆಗೆ ಸಾಗಿಬಂದಿರುವ ಹಿಂದೂಧರ್ಮಕ್ಕೆ ನಿರ್ದಿಷ್ಟ ಸ್ಥಾಪಕನೊಬ್ಬ, ಒಂದೇಒಂದು ಧರ್ಮಗ್ರಂಥ ಇರಲು ಹೇಗೆ ಸಾಧ್ಯ
          ಇನ್ನು ಯೆಹೂದಿ ಧರ್ಮದ ಬಗ್ಗೆ ಹೇಳುವುದಾದರೆ ಅದು ಸ್ಥಾಪನೆಗೊಂಡ ಬಗೆಯನ್ನು ನಿರ್ದಿಷ್ಟವಾಗಿ ಗುರುತಿಸಬಹುದು.  ಬೈಬಲ್‍ನ ಹಳೇ ಒಡಂಬಡಿಕೆಯಲ್ಲಿ ದಾಖಲಾಗಿರುವಂತೆ ಯೆಹೋವ ದೇವರು ಭಯಂಕರ ಶಬ್ಧ ಹೊರಡಿಸುತ್ತಿದ್ದ ಒಂದು ಹಾರಾಡುವ ಯಂತ್ರದಲ್ಲಿ ಕುಳಿತು ಒಂದುಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಿದ್ದ.  ಅಷ್ಟೇ ಅಲ್ಲ, ತನ್ನ ಕಟ್ಟಳೆಗಳನ್ನು ಮೀರಿದ ಸೊಡೋಂ ನಗರದ ನಿವಾಸಿಗಳನ್ನು ಆತ ಬೃಹದಾಕಾರದ ಅಣಬೆಯಂತಹ ಹೊಗೆಯನ್ನು ಸೃಷ್ಟಿಸಿದ ಭಯಂಕರ ಅಸ್ತ್ರ (ಅಣುಬಾಂಬ್‍ ?) ಬಳಸಿ ನಾಶಮಾಡಿದ.  ಈ ವಿವರಗಳಿಂದ ತಿಳಿಯುವುದೇನೆಂದರೆ ಯೆಹೋವ ದೇವರು ಆ ಕಾಲದ ಮಾನವನ ಸಾಮರ್ಥ್ಯಕ್ಕೆ ಮೀರಿದ ತಿಳುವಳಿಕೆ, ಬುದ್ಧಿ, ಶಕ್ತಿಸಾಮರ್ಥ್ಯಗಳನ್ನು ಹೊಂದಿದ್ದ ವಿಜ್ಞಾನಿಯಾಗಿದ್ದಿರಬಹುದು.  ಈ ಬಗೆಗಿನ ವಿವರಗಳು ಮುಂದಿನವಾರ, ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ.

ಭಾಗ - 2
ಮೂಲ ಹೀಬ್ರೂ ಬೈಬಲ್‍ನಲ್ಲಿ ದೇವರ ಹೆಸರು “YHWH” ಎಂದಿದೆ.  ಇದನ್ನು “ಯೆಹೋವ” ಎಂದು ಉಚ್ಚರಿಸುವುದು ಎಷ್ಟು ಸಮಂಜಸ ಎಂದು ನನಗೆ ತಿಳಿಯದು.  ಅದರೂ ಆ ಉಚ್ಚಾರಣೆಯೇ ಸಾರ್ವತ್ರಿಕವಾಗಿರುವುದರಿಂದಾಗಿ ನಾನೂ ಅದನ್ನೇ ಬಳಸುತ್ತೇನೆ.
ಸಾಮಾನ್ಯವಾಗಿ ಎಲ್ಲ ಧರ್ಮಗಳೂ ಹೇಳುವುದು ದೇವರಿಗೆ ಮೂರು ಪ್ರಮುಖ ಲಕ್ಷಣಗಳು ಅಥವಾ ಸಾಮರ್ಥ್ಯಗಳಿವೆ ಎಂದು.  ದೇವರು ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞ.  ಆದರೆ ಯೆಹೋವ ದೇವರು ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿ ಆಗಿರಲಿಲ್ಲ.  ಆತ ಸರ್ವಜ್ಞ ಆಗಿದ್ದನೇ ಅಲ್ಲವೇ ಎನ್ನುವುದಕ್ಕೆ ನಿಖರ ಪುರಾವೆಗಳು ದೊರೆಯುವುದಿಲ್ಲ.
ಮೊದಲಿಗೆ, ಯೆಹೋವ ದೇವರು ಸೊಡೋಂ ಮತ್ತು ಗೊಮೋರಾ ಪಟ್ಟಣಗಳನ್ನು ನಾಶಮಾಡಿದ ಬಗೆಯನ್ನು ಆತ ಸರ್ವಶಕ್ತ ಆಗಿರಲಿಲ್ಲ ಎನ್ನುವುದಕ್ಕೆ ಒಂದು ಉದಾಹರಣೆಯಾಗಿ ಪರಿಗಣಿಸಬಹುದು.  ಅಲ್ಲಿನ ಜನ ತಾನು ವಿಧಿಸಿದ್ದ ಕಟ್ಟಳೆಗಳನ್ನೆಲ್ಲಾ ಕಡೆಗಣಿಸಿ ಅನಾಚಾರಗಳಲ್ಲಿ ಮೈಮರೆತಿದ್ದಾಗ ಅವರನ್ನ ನಾಶಮಾಡಲು ನಿರ್ಧರಿಸುವ ದೇವರು ಲಾಟ್ ಎನ್ನುವ ಧರ್ಮಭೀರು, ಸಂಭಾವಿತ ಮತ್ತವನ ಕುಟುಂಬವನ್ನ ಮಾತ್ರ ಕಾಪಾಡಲು ಪ್ರಯತ್ನಿಸುತ್ತಾನೆ.  ಅದಕ್ಕಾಗಿ ತನ್ನ ದೂತರನ್ನ ಲಾಟ್‌ನ ಮನೆಗೆ ಕಳಿಸುತ್ತಾನೆ.  ಲಾಟನಿಗೆ ಆ ದೇವದೂತರು ಹೇಳುವುದು “ನಾಳೆ ಬೆಳಿಗ್ಗೆ ಈ ಪಟ್ಟಣ ನಾಶ ಆಗುತ್ತದೆ.  ಅಷ್ಟರೊಳಗೆ ನೀವೆಲ್ಲರೂ ಈ ಊರನ್ನು ತೊರೆದು ಓಡಿಹೋಗಿ ಪರ್ವತಗಳನ್ನು ತಲುಪಬೇಕು.  ಇಲ್ಲವಾದರೆ ನಿಮ್ಮನ್ನು ನಾವು ಕಾಪಾಡಲಾಗುವುದಿಲ್ಲ” ಎಂದು.  ಯೆಹೋವ ದೇವರು ಸರ್ವಶಕ್ತ ಆಗಿದ್ದರೆ ಇಡೀ ಪಟ್ಟಣ ನಾಶ ಆಗುತ್ತಿದ್ದರೂ, ಅದರಲ್ಲಿರುವ ಸಕಲ ಜೀವಿಗಳೂ ಸಾಯುತ್ತಿದ್ದರೂ, ಆ ದುರಂತದ ನಡುವೆಯೇ ಲಾಟ್ ಮತ್ತವನ ಕುಟುಂಬವನ್ನು ಕಾಪಾಡಬಹುದಾಗಿತ್ತು.  ಆದರೆ ಯೆಹೋವ ದೇವರಿಗೆ ಅಂತಹ ಶಕ್ತಿ ಇರಲಿಲ್ಲ.  ತನ್ನ ಶಕ್ತಿಯ ಇತಿಮಿತಿಗಳನ್ನ ಅವನು ಅರಿತಿದ್ದ.  ಅಲ್ಲದೇ, ಸೊಡೋಂ ನಗರ ನಾಶವಾದ ಬಗೆ ನಮಗೆ ತಿಳಿಯುವುದು ಲಾಟ್‍ನ ಹೆಂಡತಿಯ ಕಂಡ ನೋಟದಿಂದ.  ಆ ವಿವರಗಳು ಯೆಹೋವ ದೇವರು ಆ ನಗರದ ಮೇಲೆ ಅಣ್ವಸ್ತ್ರ ಪ್ರಯೋಗಿಸಿದ್ದಿರಬಹುದಾದ ದಟ್ಟ ಸೂಚನೆಯನ್ನು ನೀಡುತ್ತವೆ.
ಯೆಹೋವ ದೇವರು ಸರ್ವಾಂತರ್ಯಾಮಿ ಅಗಿರಲಿಲ್ಲ ಎನ್ನುವುದಕ್ಕೆ ಉದಾಹರಣೆಗಳು ಬೈಬಲ್‍ನ ಹಲವೆಡೆ ದೊರೆಯುತ್ತವೆ.  ಕಿವಿ ಕಿತ್ತುಹೋಗೋವಂತಹ ಭಯಂಕರ ಸದ್ದುಮಾಡುವ ಒಂದು ಹಾರಾಡುವ ವಾಹನದಲ್ಲಿ ಕುಳಿತುಕೊಂಡು ಈ ದೇವರು ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿದ್ದ.  ಮೋಸೆಸ್, ಅಬ್ರಹಾಮ್ ಮುಂತಾದವರನ್ನೆಲ್ಲಾ ಯೆಹೋವ ದೇವರು ಭೇಟಿ ಮಾಡಿದಾಗೆಲ್ಲಾ ಅಂತಹ ವಾಹನದಲ್ಲೇ ಅವನು ಬರುವುದು.  ತಾನು ಕಣ್ಣಾರೆ ಕಂಡ ಅಂತಹ ಒಂದು ವಾಹನದ ಸಮಗ್ರ ವಿವರಗಳನ್ನು ಎಜ಼ಕೀಲ್ ಕೊಡುತ್ತಾನೆ.
ಈ ಮೇಲಿನ ವಿವರಗಳನ್ನು ನೋಡಿದರೆ ಯೆಹೋವ ದೇವರು ಆ ಕಾಲದಲ್ಲಿ ವೈಜ್ಞಾನಿಕವಾಗಿ ಮುಂದುವರಿದ ಜನಾಂಗಕ್ಕೆ ಸೇರಿದ ಒಬ್ಬ ವಿಜ್ಞಾನಿಯಾಗಿದ್ದಿರಬೇಕು.  ಅವನ ಕೃತ್ಯಗಳು ಮತ್ತು ಸಾಧನೆಗಳು ಆದಿಮಾನವನ ತಿಳುವಳಿಕೆಗೆ ಮೀರಿದ್ದಾಗಿರಬೇಕು.  ಆದರೆ ಪ್ರಶ್ನೆಯೆಂದರೆ ಯೆಹೋವ ದೇವರು ಮತ್ತವನ ದೂತರು ಸೇರಿದ್ದ ವೈಜ್ಞಾನಿಕವಾಗಿ ಮುಂದುವರೆದ ಜನಾಂಗ ಅನಾದಿಕಾಲದಲ್ಲಿ ಈ ಭೂಮಿಯ ಯಾವುದೋ ಒಂದು ಕಡೆ ಅಸ್ತಿತ್ವದಲ್ಲಿತ್ತೇ ಅಥವಾ ಅವರೆಲ್ಲರೂ ಬರುತ್ತಿದ್ದುದು ಬೇರಾವುದೋ ಗ್ರಹದಿಂದಲೋ?  ಈ ಪ್ರಶ್ನೆಯ ಜಾಡು ಹಿಡಿದು ನಾವು ಮುಂದುವರೆಯುವುದು ಬೇಡ.  ಅದರ ಚರ್ಚೆ ಈ ಲೇಖನದ ವ್ಯಾಪ್ತಿಯನ್ನು ಮೀರಿಹೋಗುತ್ತದೆ.  ಹೀಗಾಗಿ ಮುಂದೊಮ್ಮೆ ಈ ವಿಷಯವನ್ನೇ ಪ್ರತ್ಯೇಕವಾಗಿ ಚರ್ಚೆಗೆತ್ತಿಕೊಳ್ಳೋಣ.
ಆದರಿಲ್ಲಿ ನಾವು ಅಗತ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಯೆಹೋವ ದೇವರು ನೀಡಿದ “ಹತ್ತು ಕಟ್ಟಳೆಗಳು” (Ten Commandments) ಯೆಹೂದಿ ಧರ್ಮದ (ಮತ್ತದರ ಕುಡಿ ಕ್ರೈಸ್ತ ಧರ್ಮದ) ಮೂಲತತ್ವಗಳಾಗಿರುವುದನ್ನು ಅಂದರೆ ಮೂಲತಃ ಯೆಹೂದಿ ಧರ್ಮ ಯೆಹೋವ ದೇವರಿಂದ ಬೋಧಿಸಲ್ಪಟ್ಟದ್ದನ್ನು.  ಆದರೆ ಇದಾದದ್ದು ಯಾವಾಗ ಎಂಬ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಲಾಗುವುದಿಲ್ಲ.  ಈ ಬಗ್ಗೆ ಒಂದು ಊಹೆ ಮಾಡಬಹುದಷ್ಟೇ.  ಹೋಮೋ ಎರೆಕ್ಟಸ್ ಮಾನವನ ಮೆದುಳಿಗಿಂತ ಹೋಮೋ ಸೇಪಿಯನ್ ಮಾನವನ ಮೆದುಳು ಸುಮಾರು ಒಂದೂವರೆ ಪಟ್ಟು ದೊಡ್ಡದಾಗಿತ್ತು ಮತ್ತು ಈ ಬೆಳವಣಿಗೆ ಘಟಿಸಿದ್ದು ವಿಕಾಸವಾದದ ನಿಯಮಗಳನ್ನು ಸಾರಾಸಗಟಾಗಿ ತೂರಿಬಿಡುವಷ್ಟು ಅತಿ ಕಡಿಮೆ ಅವಧಿಯಲ್ಲಿ ಎಂದು ವಿಜ್ಞಾನ ಹೇಳುವುದಕ್ಕೂ, “ದೇವರ ಪುತ್ರರು ಮನುಷ್ಯನ ಕುವರಿಯರನ್ನು ಪತ್ನಿಯರನ್ನಾಗಿ ಸ್ವೀಕರಿಸಿದರು” ಎಂದು ಬೈಬಲ್‍ನ ಆದಿ ಕಾಂಡ ಹೇಳುವುದಕ್ಕೂ ತಾಳೆ ಹಾಕಿದರೆ ಅಚ್ಚರಿಯ ಊಹೆಗಳಿಗೆ ದಾರಿಯಾಗುತ್ತದೆ.  ಅದರ ಪ್ರಕಾರ ಯೆಹೋವ ದೇವರು ಮತ್ತವನ ವೈಜ್ಞಾನಿಕವಾಗಿ ಮುಂದುವರೆದ ಜನಾಂಗದ ಪುರುಷರು ಭೂಮಿಯಲ್ಲಿದ್ದ ‘ಅರೆಮಾನವ’ ಹೋಮೋ ಎರೆಕ್ಟಸ್ ಹೆಣ್ಣುಗಳ ಜತೆ ಲೈಂಗಿಕ ಸಂಪರ್ಕ ಬೆಳೆಸಿ ದೊಡ್ಡ ಗಾತ್ರದ ಮೆದುಳನ್ನು ಹೊಂದಿದ ಹೋಮೋ ಸೇಪಿಯನ್ ಮನುಷ್ಯನ ಸೃಷ್ಟಿಗೆ ಕಾರಣವಾಗಿದ್ದಿರಬಹುದು.  ಅಂದರೆ ಯೆಹೋವ ದೇವರು ಮತ್ತವನ ಸಹಚರರು ತಮ್ಮ ಜೈವಿಕ ಪ್ರಯೋಗಗಳಿಂದ ಹೊಸದೊಂದು ಮಾನವ ಜನಾಂಗವನ್ನು ಸೃಷ್ಟಿಸಿ ಅದಕ್ಕೆ ಹತ್ತು ಕಟ್ಟಳೆಗಳನ್ನು ವಿಧಿಸಿ ಯೆಹೂದಿ ಧರ್ಮಕ್ಕೆ ತಳಹದಿ ಹಾಕಿದ್ದಿರಬಹುದು.  ಇದರರ್ಥ ಹೊಮೋ ಸೇಪಿಯನ್ ಮತ್ತು ನಂತರದ ನಮ್ಮ ಹೋಮೋ ಸೇಪಿಯನ್ ಸೇಪಿಯನ್ ಮಾನವರು ವೈಜ್ಞಾನಿಕವಾಗಿ ಮುಂದುವರೆದ ಯಾವುದೊ ಜನಾಂಗ ಯಾವುದೋ ಉದ್ದೇಶಕ್ಕಾಗಿ ನಡೆಸಿದ ಪ್ರಯೋಗದ ಪರಿಣಾಮವೇ?  ಆ ಜನಾಂಗ ತಮ್ಮ ಸೃಷ್ಟಿಯಾದ ಮಾನವನ ಮೇಲೆ ಯೆಹೂದಿ ಧರ್ಮವನ್ನು ವಿಧಿಸಿದ್ದು ಸಹಾ ಯಾವುದೋ ಉದ್ದೇಶದಿಂದಲೇ?  ಈ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರವಿಲ್ಲ.
ಈ ಬಗೆಯಲ್ಲಿ ಯೆಹೂದಿ ಧರ್ಮದ ಉಗಮವನ್ನು ನಾವು ಗುರುತಿಸಬಹುದಾದರೂ ಅದಾದದ್ದು ಯಾವಾಗ ಎಂದು ನಿಖರವಾಗಿ ಹೇಳಲಾಗುವುದಿಲ್ಲ.  ಹೋಮೋ ಸೇಪಿಯನ್ ಮಾನವ ಉದಿಸಿದ ಕಾಲಮಾನದ ಬಗ್ಗೆ ವಿಕಾಸವಾದ ಹೇಳುವುದಕ್ಕೂ, ದೊರೆತಿರುವ ಹಲವಾರು ಆಧಾರಗಳು ಸೂಚಿಸುವುದಕ್ಕೂ ಲಕ್ಷಾಂತರ, ಮಿಲಿಯಾಂತರ ವರ್ಷಗಳ ವ್ಯತ್ಯಾಸವಿದೆ.  ಈ ವ್ಯತ್ಯಾಸ ಅಳಿಸಿಹೋಗಿ ಒಂದು ನಿಖರ ಕಾಲಮಾನ ನಮಗೆ ಸ್ಪಷ್ಟವಾಗಿ ತಿಳಿದಾಗ ಆ ಕಾಲಮಾನವನ್ನು ಯೆಹೂದಿ ಧರ್ಮದ ಉದಯದ ಕಾಲ ಎಂದು ಅಂಗೀಕರಿಸಬಹುದು.
ಇನ್ನು ಜೈನ, ಬೌದ್ಧ, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳು ಉದಿಸಿದ ಬಗೆ ಮತ್ತು ಕಾಲ ನಮಗೆಲ್ಲರಿಗೂ ನಿಖರವಾಗಿಯೇ ತಿಳಿದಿದೆ.  ಹೀಗಾಗಿ ಅದರ ಬಗ್ಗೆ ಚರ್ಚೆಯನ್ನು ಬದಿಗಿಟ್ಟು ಹಿಂದೂಧರ್ಮಕ್ಕೆ ಹಿಂತಿರುಗೋಣ.
ಲೇಖನದ ಮೊದಲ ಭಾಗದಲ್ಲಿ ವಿವರಿಸಿರುವಂತೆ ಪ್ರಕೃತಿಯ ಆರಾಧನೆಯ ರೂಪದಲ್ಲಿ ಎಂದೊ ಉದಿಸಿದ ಹಿಂದೂ ಧರ್ಮ ತನ್ನ ಇತಿಹಾಸದುದ್ದಕ್ಕೂ ಹೊಸತುಗಳನ್ನು ಸ್ವೀಕರಿಸುತ್ತಾ, ವಿಕಾಸಗೊಳ್ಳುತ್ತಾ, ಬೆಳೆಯುತ್ತಾ ಸಾಗಿಬಂದಿದೆ.  ಈ ಬೆಳವಣಿಗೆಯಲ್ಲಿ ಕಂಡುಬರುವ ಪ್ರಮುಖ ಲಕ್ಷಣವೆಂದರೆ ಹಿಂದೂಧರ್ಮಕ್ಕೆ ಯಾವುದೂ “ಅನ್ಯ”ವಲ್ಲ.  ಭಾರತದ ಸಿಂಧೂ ಕಣಿವೆಯ ನಾಗರಿಕರಿಗೆ ಪೂಜನೀಯವಾಗಿದ್ದ ಎಂದು ಹೇಳಬಹುದಾದ ಶಿವನನ್ನು ಹೊರಗಿನಿಂದ ಬಂದ ಹಿಂದೂಗಳು ತಮ್ಮ ತ್ರಿಮೂರ್ತಿಗಳಲ್ಲಿ ಒಬ್ಬನನ್ನಾಗಿ ಅಂಗೀಕರಿಸಿದ್ದು ಹಿಂದೂಧರ್ಮದ ವೈಚಾರಿಕವೈಶಾಲ್ಯಕ್ಕೊಂದು ಉದಾಹರಣೆ.  (ಶಿವ ಮತ್ತು ಶಿವಲಿಂಗದ ಆರಾಧನೆ ಮೂಲತಃ ಪೂರ್ವ ಆಫ್ರಿಕಾದಲ್ಲಿ ಆರಂಭವಾಗಿ ಭಾರತಕ್ಕೆ ಬಂದಿರಬಹುದು ಎಂಬ ವಾದವೂ ಇದೆ.)  ವಿಜಯಿ ಜನಾಂಗವೊಂದು ಸೋತ ಜನಾಂಗದ ದೈವವೊಂದನ್ನು ತನ್ನ ಪ್ರಮುಖ ದೈವಗಳಲ್ಲೊಂದಾಗಿ ಅಂಗೀಕರಿಸಿದ ಉದಾಹರಣೆ ಬಹುಶಃ ಬೇರೆಲ್ಲೂ ಸಿಗಲಾರದು.  ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ತಾವು ಪ್ರಸರಿಸಿದ ನೆಲದಲ್ಲಿ ಮೊದಲೇ ಇದ್ದ ವಿಚಾರ ಮತ್ತು ನಂಬಿಕೆಗಳನ್ನು ಬೇರುಸಹಿತ ಕಿತ್ತೊಗೆದು ಅಲ್ಲಿ ತಮ್ಮ ವಿಚಾರ ಮತ್ತು ನಂಬಿಕೆಗಳನ್ನು ನೆಟ್ಟದ್ದು ಎಲ್ಲರಿಗೂ ಗೊತ್ತೇ ಇದೆ.  ಪ್ರಾಚೀನ ಗ್ರೀಕ್, ರೊಮನ್ ಮತ್ತು ಈಜಿಪ್ಷಿಯನ್ ದೇವರುಗಳನ್ನು ನಾವಿಂದು ಕಾಣುವುದು ಕೇವಲ ಮ್ಯೂಸಿಯಂಗಳಲ್ಲಿ ಮಾತ್ರ.  ಪ್ರಾಚೀನ ಯೂರೋಪಿನ ಕೆಲ್ಟಿಕ್, ಬಾಸ್ಕ್, ಮಾಗ್ಯಾರ್, ನೋರ್ಸ್ ಮುಂತಾದ ಜನಾಂಗಗಳ ನಂಬಿಕೆಗಳು ನಮಗೆ ಸಿಗುವುದು ಪುಸ್ತಕಗಳಲ್ಲಿ ಮಾತ್ರ.  ಆದರೆ ಪ್ರಾಚೀನ ಸಿಂಧೂ ಕಣಿವೆಯಷ್ಟೇ ಅಲ್ಲ, ಭಾರತದ ಉದ್ದಗಲಕ್ಕೂ ಅಸ್ತಿತ್ವದಲ್ಲಿದ್ದ  ವಿವಿಧ ಬುಡಕಟ್ಟುಗಳ ನಂಬಿಕೆಗಳು, ಆಚರಣೆಗಳು, ದೈವಗಳು ಹಿಂದೂಧರ್ಮದಲ್ಲಿ ಐಕ್ಯವಾಗಿ ಇಂದಿಗೂ ಜೀವಂತವಾಗಿ ಉಳಿದಿವೆ.
ಹೀಗೆ ತನ್ನ ಸಂಪರ್ಕಕ್ಕ ಬಂದ ಯಾವುದನ್ನೂ ವಿರೋಧಿಸದೇ, ಎಲ್ಲವನ್ನೂ ಸ್ವೀಕರಿಸುತ್ತಾ, ಅಂತರ್ಗತಗೊಳಿಸಿಕೊಳ್ಳುತ್ತಾ ಅದಕ್ಕನುಗುಣವಾಗಿ ಬದಲಾಗುತ್ತಾ, ವಿಶಾಲವಾಗುತ್ತಾ ಬಂದ ಹಿಂದೂಧರ್ಮವನ್ನು ಒಂದೇಒಂದು ಪುಸ್ತಕದಲ್ಲಿ  ಬಂಧಿಸಿಡುವುದು ಸಾಧ್ಯವೇ ಇಲ್ಲ.  ಬಂಧಿಸಿಟ್ಟರೂ ಆ ಪುಸ್ತಕಕ್ಕೆ ಕಾಲಕಾಲಕ್ಕೆ ತಿದ್ದುಪಡಿಗಳನ್ನು ತರಲೇಬೇಕು.  ಅದು ಕಡ್ಡಾಯ.  ಇದನ್ನು ಹಿಂದೂಧರ್ಮದ ಇತಿಹಾಸ ಸಾರಿ ಹೇಳುತ್ತದೆ.
ಹೀಗೆ ಯಾವುದನ್ನೂ ಅನ್ಯ ಎಂದು ತಿರಸ್ಕರಿಸದೇ ಎಲ್ಲವನ್ನೂ ಅಂತರ್ಗತಗೊಳಿಸಿಕೊಳ್ಳುವ ಸ್ವಭಾವವನ್ನು ರೂಢಿಸಿಕೊಂಡಿರುವುದರಿಂದಲೇ ದೇವರನ್ನು ತಲುಪಲು ತಾನೊಂದೇ ಮಾರ್ಗ ಎಂದು ಹಿಂದೂಧರ್ಮ ಹೇಳುವುದಿಲ್ಲ.  ನಿಮ್ಮ ಭಾವಕ್ಕೆ ತಕ್ಕಂತೆ ನೀವು ಯಾವ ದಾರಿಯನ್ನಾದರೂ ಹಿಡಿಯಬಹುದು ಎಂದದು ಹೇಳುತ್ತದೆ.  ಒಬ್ಬ ಸ್ಥಾಪಕನಿಗೆ ಸೀಮಿತವಾದ, ಒಂದು ಪುಸ್ತಕದಲ್ಲಿ ಬದಲಾಗದಂತೆ ಬಂಧಿಯಾಗಿಹೋಗಿರುವ ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂಗಳಲ್ಲಿ ಈ ವಿಶಾಲ ಮನೋಭಾವವನ್ನು ಕಾಣಲಾಗದು.   ಹಿಂದೂ ಧರ್ಮಕ್ಕೂ ಇತರ ಧರ್ಮಗಳಿಗೂ ಇರುವ ಪ್ರಮುಖ ವ್ಯತ್ಯಾಸ ಇದು.
ದೇವರನ್ನು ತಲುಪಲು ಇತರ ಮಾರ್ಗಗಳ (ಧರ್ಮಗಳ) ಅಸ್ತಿತ್ವವನ್ನೂ ಮಾನ್ಯ ಮಾಡಿರುವ ಹಿಂದೂಧರ್ಮ ತನ್ನೊಳಗೂ ಸಹಾ ವಿವಿಧ ಮಾರ್ಗಗಳಿಗೆ ಅವಕಾಶ ನೀಡಿದೆ.  ಆರಾಧಿಸಲು ದೈವದ ಆಯ್ಕೆಯಲ್ಲಿ ಹಿಂದೂಗಳಿಗೆ ಸ್ವಾತಂತ್ರ್ಯವಿದೆ.  ಆಯ್ಕೆ ಮಾಡಿಕೊಂಡ ದೈವಕ್ಕೆ ನಿಮಗಿಷ್ಟವಾದ ರೂಪವನ್ನು ನೀವು ಕೊಡಬಹುದು.  ನಿಮಗಿಷ್ಟವಾದ ಬಗೆಯಲ್ಲಿ ಆರಾಧಿಸಬಹುದು.  ನಿರ್ದಿಷ್ಟ ಶ್ಲೋಕಗಳ ಮೂಲಕವೂ ಆರಾಧಿಸಬಹುದು ಅಥವಾ ನಿಮ್ಮ ಸೃಜನಶೀಲತೆಗನುಗುಣವಾಗಿ ನೀವೇ ನಿಮ್ಮದೇ ಭಾಷೆಯಲ್ಲಿ, ಬೇಕಾದ ಬಗೆಯಲ್ಲಿ ವಾಕ್ಯಗಳನ್ನು ರಚಿಸಿಕೊಳ್ಳಬಹುದು.  ನಿಮ್ಮ ಆರಾಧ್ಯದೈವವನ್ನು ತಂದೆಯೆ ಎನ್ನಬಹುದು, ಮಗುವೇ ಎಂದೂ ಕರೆಯಬಹುದು.  ಆರಾಧಿಸಲು ನಿರ್ದಿಷ್ಟ ಸ್ಥಳಕ್ಕೆ ಹೋಗಬಹುದಾದರೂ ಹೋಗಲಾಗದಿದ್ದರೆ, ಹೋಗುವ ಮನಸ್ಸಿಲ್ಲದಿದ್ದರೆ ನೀವಿರುವ ಸ್ಥಳದಲ್ಲೇ ಆರಾಧಿಸಬಹುದು.  ಇಷ್ಟವಿದ್ದರೆ ಮತ್ತೊಬ್ಬರಿಂದ (ಅರ್ಚಕರಿಂದ) ಆರಾಧನೆ ಮಾಡಿಸಬಹುದು.  ಇಷ್ಟವಿಲ್ಲದಿದ್ದರೆ ನೀವೇ ಮಾಡಬಹುದು.  ಅದು ನಿಮ್ಮಿಷ್ಟ.  ಆರಾಧನೆಯೇ ಬೇಡ ಎನಿಸಿಸರೆ ಸುಮ್ಮನಿದ್ದುಬಿಡಿ.  ಆರಾಧಿಸಲೇಬೇಕು ಎಂದು ಹಿಂದೂಧರ್ಮ ನಿಮಗೆ ಕಟ್ಟಳೆ ವಿಧಿಸುವುದಿಲ್ಲ.
ಒಟ್ಟಿನಲ್ಲಿ ಹೇಗಾದರೂ ಆರಾಧಿಸಿ, ಆರಾಧಿಸದೆಯೂ ಇರಿ.  ಯಾವ ಕಟ್ಟಳೆಯೂ ಇಲ್ಲ.  ಅಷ್ಟೇ ಅಲ್ಲ, ಆರಾಧನೆಯನ್ನೇ ಖಂಡಿಸಿ, ಟೀಕಿಸಿ.  ಆರಾಧಿಸಲೇಬೇಡಿರೆಂದು ಇತರರಿಗೆ ಹೇಳಿ.  ನಿಮಗೆ ಯಾವ ಅಪಾಯವೂ ಇಲ್ಲ.  ಅಥವಾ ನೀವು ಆರಾಧಿಸುವ ವಿಧಾನ ಶಾಸ್ತ್ರಗಳಿಗಿಂತ/ ಧರ್ಮಗ್ರಂಥಗಳಲ್ಲಿರುವುದಕ್ಕಿಂತ ಬೇರೆಯಾಗಿದೆ, ಆ ಕಾರಣದಿಂದಾಗಿ ನಿಮ್ಮಿಂದ ದೈವನಿಂದೆಯಾಗಿದೆ, ಆ ಕಾರಣಕ್ಕಾಗಿ ನಿಮಗೆ ತಲೆದಂಡದ ಶಿಕ್ಷೆಯಾಗಬೇಕು ಎಂದು ಯಾವ ಪುರೋಹಿತರಾಗಲೀ, ಧರ್ಮಜ್ಞಾನಿಗಳಾಗಲೀ ಹೇಳುವುದಿಲ್ಲ.  ಹಿಂದೂಧರ್ಮದಲ್ಲಿ “blasphemy” ಅಥವಾ “ದೈನನಿಂದೆ”ಗೆ ಹಾಗೂ “ಫತ್ವಾ”ಗೆ ಸ್ಥಾನವೇ ಇಲ್ಲ.
ಈ ಸ್ವಭಾವವನ್ನು ಹಿಂದೂಧರ್ಮದ ಬಲಹೀನತೆಯಲ್ಲ.  ಅದೇ ಅದರ ಶಕ್ತಿ.  ಎಲ್ಲವನ್ನೂ, ಸ್ವೀಕರಿಸುವುದರಿಂದ, ಒಳಗೊಳ್ಳುವುದರಿಂದ, ಆ ಮೂಲಕ ಬಹುತ್ವಕ್ಕೆ ಅವಕಾಶ ನೀಡುವುದರಿಂದ ಹಿಂದೂಧರ್ಮ ಯಾವ ಹೊಡೆತಕ್ಕೂ ಕುಸಿದು ಬೀಳುವುದಿಲ್ಲ.  ಹಿಂದೂಧರ್ಮ ಬಾಗುತ್ತದೆ, ಮುರಿಯುವುದಿಲ್ಲ.  ವೈರಿಯನ್ನೇ ತಮ್ಮವರನ್ನಾಗಿ ಮಾಡಿಕೊಳ್ಳುವವರಿಗೆ ಸೋಲೆಲ್ಲಿ?  ಈ ಮನೋಭಾವದಿಂದಾಗಿಯೇ, ಸ್ವಭಾವದಿಂದಾಗಿಯೇ ಹಿಂದೂ ಧರ್ಮ ಎಲ್ಲ ಒತ್ತಡಗಳನ್ನೂ ತಾಳಿಕೊಂಡು ಇನ್ನೂ ಉಳಿದಿದೆ.  ಇತರ ಧರ್ಮಗಳ ಮೇಲೆ ಅಂತಹ ಒತ್ತಡ ಇನ್ನೂ ಬಿದ್ದಿಲ್ಲ ಅಷ್ಟೇ.

"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ದಿನಾಂಕ ೧೩ ಹಾಗೂ ೨೦ ಆಗಸ್ಟ್ ೨೦೧೪ರಂದು ಪ್ರಕಟವಾದ ಲೇಖನ