ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Saturday, April 5, 2014

ಬುದ್ದಿಜೀವಿಗಳ ಅತಿಬುದ್ದಿವಂತಿಕೆ ಬೂಮರಾಂಗ್ ಆದ ಬಗೆ



"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಬುಧವಾರ ಏಪ್ರಿಲ್ ೨ರಂದು ಪ್ರಕಟವಾದ ಲೇಖನ
             ಎಲ್. ಕೆ. ಅದ್ವಾನಿ ಒಂದು ಕಾಲದಲ್ಲಿ ಬಿಜೆಪಿಯ ಅನಭಿಷಿಕ್ತ ಸಾಮ್ರಾಟ.  ಹಾಗೆಯೇ ಜಸ್ವಂತ್ ಸಿಂಗ್ ಪಕ್ಷದಲ್ಲೊಬ್ಬ ಗೌರವಾನ್ವಿತ ಹಾಗೂ ಮಹತ್ವಪೂರ್ಣ ನಾಯಕರಾಗಿದ್ದವರು.  ಆದರೆ ಆರು ತಿಂಗಳುಗಳ ಹಿಂದೆ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಿತಗೊಳ್ಳುವ ಮೂಲಕ ಪಕ್ಷದ ನಿರ್ಣಯಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಸ್ಥಾನಕ್ಕೇರಿದಾಗಿನಿಂದ ಈ ಇಬ್ಬರು ಹಿರಿಯರು ಮೂಲೆಗುಂಪಾಗಿದ್ದಾರೆ.  ಪ್ರಸಕ್ತ ಲೋಕಸಭಾ ಚುನಾವಣೆಗಳಲ್ಲಿ ತಾವು ಬಯಸಿದ ಕ್ಷೇತ್ರವನ್ನು ಅದ್ವಾನಿಯವರಿಗೆ ನಿರಾಕರಿಸಲಾಗಿದೆ.  ಪಕ್ಷ ಬಲವಂತವಾಗಿ ಕೊಟ್ಟಿರುವ ಕ್ಷೇತ್ರದಲ್ಲಿ ಈ ವಯೋವೃದ್ಧ ನಾಯಕನಿಗೆ ತಾನು ಕ್ಷೇಮ ಎಂದೆನಿಸುತ್ತಿಲ್ಲ.  ಜಸ್ವಂತ್ ಸಿಂಗ್ ಅವರ ಬಗ್ಗೆ ಹೇಳುವುದಾದರೆ ಅವರಿಗೆ ಪಕ್ಷದ ಟಿಕೆಟ್ಟನ್ನೇ ನಿರಾಕರಿಸಲಾಯಿತು.  ಮುನಿದು ಪಕ್ಷೇತರರಾಗಿ ಕಣಕ್ಕಿಳಿದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.  ಈ ಇಬ್ಬರಿಗೂ ಆಗಿರುವ ಅವಮಾನ ಮತ್ತದರ ಸಂದರ್ಭ ಕಾಕತಾಳೀಯವಲ್ಲದಿದ್ದರೆ ಇವರ ಈಗಿನ ದುಃಸ್ಥಿತಿಗೆ ಇಬ್ಬರಲ್ಲೂ ಸಮಾನವಾಗಿರುವ ಮಹಮದ್ ಆಲಿ ಜಿನ್ನಾ ಬಗೆಗಿನ ಮೃದುಧೋರಣೆಯನ್ನೇ ಕಾರಣವಾಗಿಸಬಹುದು.  ಹಾಗೆ ಮಾಡುವುದರ ಮೂಲಕ ಭೂತ ಹಾಗೂ ವರ್ತಮಾನದ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು.  ಅವುಗಳ ಜತೆಗೇ, ಭವಿಷ್ಯದ ಬಗೆಗಿನ ಹಲವು ಜಟಿಲ ಪ್ರಶ್ನೆಗಳಿಗೆ ಮುಖಾಮುಖಿಯಾಗುವುದರಿಂದ ನಾವು ತಪ್ಪಿಸಿಕೊಳ್ಳಲೂ ಆಗುವುದಿಲ್ಲ.
            ಪಾಕಿಸ್ತಾನದ ಸೃಷ್ಟಿಯ ಹಿಂದಿದ್ದದ್ದು ಬ್ರಿಟಿಷ್ ಸಾಮ್ರಾಜ್ಯಶಾಹಿ ಹುನ್ನಾರ, ಮುಸ್ಲಿಂ ಲೀಗ್ ನಾಯಕರ ರಾಜಕೀಯ ಹಾಗೂ ಆರ್ಥಿಕ ಲಾಲಸೆಗಳು ಮತ್ತು ಆ ಎರಡು ದುಷ್ಟಶಕ್ತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗದ ಕಾಂಗ್ರೆಸ್‌ನ ನಿರ್ವೀರ್ಯತೆ.   ಬ್ರಿಟಿಷ್ ವಸಾಹತುಶಾಹಿಗಳ ಜತೆ ಸೇರಿಕೊಂಡು ಮುಸ್ಲಿಂ ಲೀಗ್ ಸೃಷ್ಟಿಸಿದ ಈ ದೇಶ ಒಡೆಯುವ ಕುಕೃತ್ಯವನ್ನು ವಿರೋಧಿಸಲೆಂದೇ ೧೯೨೫ರಲ್ಲಿ (ಮುಸ್ಲಿಂ ಲೀಗ್ ಸ್ಥಾಪನೆಯಾದ ಹತ್ತೊಂಬತ್ತು ವರ್ಷಗಳ ನಂತರ) ಸೃಷ್ಟಿಯಾದ ಸಂಘಟನೆ ಆರ್‌ಎಸ್‌ಎಸ್‌ಗೆ ದೇಶವಿಭಜನೆಯಿಂದ ತೀವ್ರ ಆಘಾತವಾದದ್ದು ಸಹಜ.  ಆಗ ನಿರಾಶರಾದ ಆರ್‌ಎಸ್‌ಎಸ್ ಬೆಂಬಲಿಗರು ಮತ್ತು ದೇಶವಿಭಜನೆಯಿಂದ ನೊಂದದ್ದಲ್ಲದೇ ಕಾಂಗ್ರೆಸ್‌ನ ಮುಸ್ಲಿಂ-ಪರ ನೀತಿಗಳಿಂದ ಭ್ರಮನಿರಸನಗೊಂಡ ಹಿಂದೂಗಳು ಸೃಷ್ಟಿಸಿದ ರಾಜಕೀಯ ಪಕ್ಷ ಭಾರತೀಯ ಜನಸಂಘ.  ಹೀಗಾಗಿಯೇ ಪಾಕಿಸ್ತಾನದ ಅಸ್ತಿತ್ವದ ನಿರಾಕರಣೆ, ಜಿನ್ನಾದೂಷಣೆ ಹಾಗೂ ಅಖಂಡ ಭಾರತದ ಕಲ್ಪನೆ ಜನಸಂಘದ ಅಸ್ತಿತ್ವದ ಹಿಂದಿನ ಸೈದ್ದಾಂತಿಕ ಬುನಾದಿಗಳಾಗಿದ್ದವು.  ೧೯೭೭-೭೯ರಲ್ಲಿ ಜನತಾ ಪಕ್ಷದ ಜತೆಗಿನ ವಿಫಲವಿವಾಹದ ನಂತರ ಜನಸಂಘ ಭಾರತೀಯ ಜನತಾ ಪಕ್ಷವಾಗಿ ಮರುಹುಟ್ಟು ಪಡೆದಾಗಲೂ ಈ ಸೈದ್ದಾಂತಿಕ ಬುನಾದಿ ಶಿಥಿಲಗೊಳ್ಳಲಿಲ್ಲ.  ಆದರೆ ಒಂಬತ್ತು ವರ್ಷಗಳ ಹಿಂದೆ ೨೦೦೫ರಲ್ಲಿ ಅದ್ವಾನಿಯವರು ಅಖಂಡ ಭಾರತ ಕಲ್ಪನೆಯಿಂದ ದೂರ ಸರಿದದ್ದಲ್ಲದೇ ಪಾಕಿಸ್ತಾನದ ಅಸ್ತಿತ್ವವನ್ನೂ ಸಾರ್ವಜನಿಕವಾಗಿ ಒಪ್ಪಿಕೊಂಡರು.  ಎರಡೇ ದಿನಗಳಲ್ಲಿ ಅವರು ಕರಾಚಿಯಲ್ಲಿನ ಜಿನ್ನಾರ ಸಮಾಧಿಸ್ಥಳಕ್ಕೆ ಭೇಟಿ ನೀಡಿ ಪಾಕಿಸ್ತಾನದ ಸೃಷ್ಟಿಕರ್ತನನ್ನು ಸೆಕ್ಯೂಲರ್ ಎಂದು ಕರೆದದ್ದಲ್ಲದೇ ಹಿಂದೂ ಮುಸ್ಲಿಂ ಸ್ನೇಹದ ರಾಯಭಾರಿ ಎಂದು ಬಣ್ಣಿಸಿದರು.  ನಿಷ್ಟಾವಂತ ಬಿಜೆಪಿಗರಿಗೆ ಇದು ಆಘಾತ.  (ಜಿನ್ನಾರಲ್ಲಿ ಸೆಕ್ಯೂಲರ್ ಮನೋಭಾವವಿದ್ದ ಬಗ್ಗೆ ನಿರಾಕರಿಸಲಾಗದಷ್ಟು ಐತಿಹಾಸಿಕ ಸಾಕ್ಷಿಗಳಿವೆ.  ಸ್ಥಳಾಭಾವದಿಂದ ಅವುಗಳನ್ನು ಇಲ್ಲಿ ಚರ್ಚಿಸುತ್ತಿಲ್ಲ.)
ಅದ್ವಾನಿ ಮಾಡಿದ್ದನ್ನೇ ನಾಲ್ಕು ವರ್ಷಗಳ ನಂತರ ಜಸ್ವಂತ್ ಸಿಂಗ್ ಇನ್ನೂ ದೊಡ್ಡದಾಗಿ ಮಾಡಿದರು.  ೨೦೦೯ರಲ್ಲಿ ಪ್ರಕಟಿಸಿದ ದೇಶವಿಭಜನೆಯ ಬಗೆಗಿನ ತಮ್ಮ Jinnah: India-Partition Independence ಎಂಬ ಕೃತಿಯಲ್ಲಿ ಜಿನ್ನಾರನ್ನು ಸೆಕ್ಯೂಲರ್ ಮನೋಭಾವದವರೆಂದು ಬಿಂಬಿಸಿದ್ದಲ್ಲದೇ ದೇಶವಿಭಜನೆಯಲ್ಲಿ ಅವರು ಪ್ರಮುಖ 'ದೋಷಿ' ಅಲ್ಲ ಎಂಬಂತೆ ಚಿತ್ರಿಸಿದರು.  ಆ ಕಾರಣಕ್ಕಾಗಿ ಅವರು ಇತರ ಬಿಜೆಪಿ ಮುಂದಾಳುಗಳಿಂದ ಉಗ್ರ ಪ್ರತಿಕ್ರಿಯೆಯನ್ನೆದುರಿಸಬೇಕಾಯಿತು.  ಒಂದರ್ಥದಲ್ಲಿ ಬಿಜೆಪಿಯೊಡನೆ ಜಸ್ವಂತ್ ಸಿಂಗ್‌ರ ಸಖ್ಯ ವ್ಯಾವಹಾರಿಕವಾಗಿ ಅಲ್ಲಿಗೆ ಮುಗಿಯೆತೆಂದೇ ಹೇಳಬೇಕು.  ಆದರೆ ೨೦೦೪ರಲ್ಲಿ ಅಧಿಕಾರ ಕಳೆದುಕೊಂಡ ನಂತರ ನಿರಾಶೆಯಿಂದಲೋ, ಅಧಿಕಾರ ಮತ್ತೆ ಸಿಗಲಾರದೆಂಬ ಹತಾಷೆಯಿಂದಲೋ ರಾಷ್ಟ್ರರಾಜಕಾರಣದಲ್ಲಿ ಎಡಬಿಡಂಗಿಯಂತೆ ವರ್ತಿಸುತ್ತಾ, ಹಿಂದೊಮ್ಮೆ ತಾನೇ ಉಗ್ರವಾಗಿ ಪ್ರತಿಪಾದಿಸಿದ್ದ ನೀತಿಗಳನ್ನು ಅಷ್ಟೇ ಉಗ್ರವಾಗಿ ವಿರೋಧಿಸುತ್ತಾ, ಸಂಸತ್ತಿನ ಕಲಾಪಗಳಿಗೆ ಮತ್ತೆಮತ್ತೆ ತಡೆಯೊಡ್ಡುತ್ತಾ ಆಚಾರವಿಚಾರಗಳಲ್ಲಿ ಗೊಂದಲಗಳ ಅಗರವಾಗಿದ್ದ ಬಿಜೆಪಿ ಈ ಇಬ್ಬರು ನಾಯಕರ ಬಗ್ಗೆ ಒಂದು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಸಹಜವಾಗಿಯೇ ಅಸಮರ್ಥವಾಗಿತ್ತು.  ಎಲ್ಲ ಬದಲಾದದ್ದು ಅದ್ವಾನಿಯವರ ವಿರೋಧದ ನಡುವೆಯೂ ಕಳೆದ ಸೆಪ್ಟೆಂಬರ್‌ನಲ್ಲಿ ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಪಕ್ಷ ನಿರ್ಣಯಿಸಿದಾಗ.  ಶೀಘ್ರದಲ್ಲೇ ಉತ್ಕರ್ಷಕ್ಕೇರಿದ ಮೋದಿಯವರ ಜನಪ್ರಿಯತೆ ಮತ್ತು ಡಿಸೆಂಬರ್‌ನಲ್ಲಿ ನಡೆದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿನ ಅನುಕೂಲಕರ ಫಲಿತಾಂಶಗಳು ಮೋದಿಯವರನ್ನು ಪಕ್ಷದ ಅವಿರೋಧ ನಾಯಕನನ್ನಾಗಿಸಿದ್ದಲ್ಲದೇ ತಮ್ಮ ಪ್ರಭಾವದ ಮಿತಿಯನ್ನು ಅದ್ವಾನಿಯವರಿಗೆ ಮನವರಿಕೆ ಮಾಡಿಕೊಟ್ಟವು.
ಪಕ್ಷದ ಮೂಲಭೂತ ಸಿದ್ದಾಂತಕ್ಕೆ ವಿರುದ್ಧವಾಗಿ ಜಿನ್ನಾರನ್ನು ಸೆಕ್ಯೂಲರ್ ಎಂಬ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವರ್ಣಿಸಿದ್ದಲ್ಲದೇ ಆ ಅಭಿಪ್ರಾಯದಿಂದ ದೂರ ಸರಿಯದ್ದಕ್ಕಾಗಿ ಈ ಇಬ್ಬರು ಹಿರಿಯ ನಾಯಕರು ಅವಗಣನೆಗೆ ಒಳಗಾಗಿದ್ದಾರೆ.  ಈಗ ಅನಾವರಣಗೊಳ್ಳುತ್ತಿರುವ ರಾಜಕೀಯ ಚಿತ್ರಗಳ ಪ್ರಕಾರ ಮೋದಿಯವರ ಜನಪ್ರಿಯತೆ ದಿನೇದಿನೇ ಏರುತ್ತಿದೆ.  ಈ ಜನಪ್ರಿಯತೆಯ ಬಹುಪಾಲು ಮತಗಳಾಗಿ ಬದಲಾದರೆ ಮೋದಿ ಮುಂದಿನ ಪ್ರಧಾನಿಯಾಗುವುದು ನಿಶ್ಚಯ.  ಕೇವಲ ಒಂದು ವರ್ಷದ ಹಿಂದೆ ಅಧಿಕಾರದ ಕನಸನ್ನೂ ಕಾಣಲು ಅಸಮರ್ಥವಾಗಿದ್ದ ಬಿಜೆಪಿ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಅದೃಷ್ಟರೇಖೆಯನ್ನು ಬದಲಾಯಿಸಿಕೊಂಡು ಚುನಾವಣಾವಿಜಯದತ್ತ ಧಾಪುಗಾಲಿಡಲು ಅತಿ ಮುಖ್ಯ ಕಾರಣ ಮೋದಿಯವರ ಜನಪ್ರಿಯತೆ.  ರಾಜಕೀಯ ವಿರೋಧಿಗಳಿಂದ, ಬುದ್ಧಿಜೀವಿಗಳು ಹಾಗೂ ಮಾಧ್ಯಮದ ಒಂದು ದೊಡ್ಡ ವರ್ಗದಿಂದ ನರಹಂತಕ, ಸಾವಿನ ವ್ಯಾಪಾರಿ ಎಂದೆಲ್ಲಾ ಕರೆಯಿಸಿಕೊಂಡ ಮೋದಿ ಹೀಗೆ ಜನಪ್ರಿಯವಾಗಲು ಇರುವ ಕಾರಣವಾದರೂ ಏನು?  ಮೋದಿ ಮತ್ತವರನ್ನು ಬೆಂಬಲಿಸುವ ಕೋಟ್ಯಾಂತರ ಹಿಂದೂಗಳೆಲ್ಲರೂ ಮತಾಂಧ ಹಿಂದುತ್ವವಾದಿಗಳು, ಮುಸ್ಲಿಂ-ವಿರೋಧಿಗಳು ಎಂದರ್ಥವೇ?
ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಡಪಂಥೀಯರು, ಬುದ್ಧಿಜೀವಿಗಳು ಮತ್ತು ಕೆಲ ಮಾಧ್ಯಮಗಳು ಹಾಗೆ ಹೇಳಬಹುದು.  ದಶಕದಿಂದಲೂ ಅವರು ಹಾಗೆ ಹೇಳುತ್ತಲೇ ಇದ್ದಾರೆ.  ಮೋದಿಯವರನ್ನು ರಾಷ್ಟ್ರರಾಜಕಾರಣದಲ್ಲಿ ನಿಕೃಷ್ಟಗೊಳಿಸುವ ಉದ್ದೇಶದಿಂದಲೇ ಅವರು ಇಂತಹ ಪ್ರಚಾರದಲ್ಲಿ ತೊಡಗಿದ್ದಾರೆ.  ಅವರ ದುರದೃಷ್ಟವೆಂದರೆ ಅವರ ಈ ಅಪಪ್ರಚಾರವೇ ಅಂತಿಮವಾಗಿ ಮೋದಿಯವರಿಗೆ ವರದಾನವಾಗಿ ಅಸಂಖ್ಯ ಹಿಂದೂಗಳನ್ನು ಬಿಜೆಪಿಯ ತೆಕ್ಕೆಗೆ ತಂದಿದೆ ಮತ್ತು ಮೋದಿ ರಾಷ್ಟ್ರರಾಜಕಾರಣದಲ್ಲಿ ಅತಿಮುಖ್ಯ ಪಾತ್ರ ವಹಿಸಲು ಸಜ್ಜಾಗುತ್ತಿದ್ದಾರೆ.  ಅವರ ಬಹುಪಾಲು ಬೆಂಬಲಿಗರು ಮತಾಂಧರೂ ಅಲ್ಲ, ಮುಸ್ಲಿಂ-ವಿರೋಧಿಗಳೂ ಅಲ್ಲ.  ಅವರಿಗೆ ಬೇಕಾಗಿರುವುದು ತಮ್ಮ ಧರ್ಮಕ್ಕೆ ಗೌರವಯುತ ಸ್ಥಾನ ಅಷ್ಟೇ.  ಅದನ್ನು ಮೋದಿ ಹೊರತಾಗಿ ಬೇರಾರೂ ತಂದುಕೊಡಲಾರರು ಎಂದವರು ನಂಬಿದ್ದಾರೆ.  ಆ ನಂಬಿಕೆ ದಿನೇದಿನೇ ಬಲಗೊಳ್ಳುತ್ತಿದೆ.  ಈ ಬೆಳವಣಿಗೆಗೆ ಸ್ಪಷ್ಟ ಕಾರಣಗಳಿವೆ.
೨೦೦೨ರ ಗುಜರಾತ್ ಕೋಮುಗಲಭೆಗೆ ಕಾರಣವಾದದ್ದು ಗೋಧ್ರಾ ಹತ್ಯಾಕಾಂಡ.  ಸಬರ್‌ಮತಿ ಎಕ್ಸ್‌ಪ್ರೆಸ್‌ನ ಎಸ್-೬ ಬೋಗಿಗೆ ಬಿದ್ದ ಬೆಂಕಿ ಒಂದರ್ಧದಲ್ಲಿ ಹಿಂದೂಧರ್ಮಕ್ಕೆ ಬಿದ್ದ ಬೆಂಕಿ.  ಆಗ ಹಿಂದೂಗಳಿಗೆ ಬೇಕಾಗಿದ್ದದ್ದು ಒಂದು ಸಾಂತ್ವನದ ಮಾತು.  ಆದರೆ ಅವರಿಗೆ ಸಿಕ್ಕಿದ್ದೇನು?  ಬೋಗಿಯಲ್ಲಿದ್ದ ಕರಸೇವಕರು ಹೊರಗಿದ್ದ ಮುಸ್ಲಿಮರನ್ನು ಪ್ರಚೋದಿಸಿ ತಮ್ಮ ದುರಂತಕ್ಕೆ ತಾವೇ ಕಾರಣರಾದರು ಎಂದು ಮಾಧ್ಯಮಗಳು ಮತ್ತು ಬುದ್ಧಿಜೀವಿಗಳ ಒಂದು ವರ್ಗ ಏಕಪಕ್ಷೀಯವಾಗಿ ತೀರ್ಮಾನಿಸಿ ಆ ನಿಟ್ಟಿನಲ್ಲಿ ಪ್ರಚಾರ ಆರಂಭಿಸಿಬಿಟ್ಟವು.  ಇವರುಗಳು ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ ಗೋಧ್ರಾ ಹತ್ಯಾಕಾಂಡಕ್ಕೆ ರಾಷ್ಟ್ರಮಟ್ಟದಲ್ಲಿ ಸಂತಾಪ ವ್ಯಕ್ತಪಡಿಸಿ, ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಗಾಗಿ ಆಗ್ರಹಿಸಿ, ಗುಜರಾತಿ ಹಿಂದೂಗಳ ಆಕ್ರೋಶವನ್ನು ಶಮನಗೊಳಿಸಿದ್ದರೆ ಕೋಮುಗಲಭೆಯನ್ನು ನಿಶ್ಚಯವಾಗಿಯೂ ತಪ್ಪಿಸಬಹುದಾಗಿತ್ತು. ನಂತರ ಕೋಮುಗಲಭೆ ಆರಂಭವಾದಾಗ ಅಧಿಕ ಪ್ರಸಾರವುಳ್ಳ ಆಂಗ್ಲ ಪತ್ರಿಕೆಯೊಂದು ಗೋಧ್ರಾ ಹತ್ಯಾಕಾಂಡಕ್ಕೆ ಕಾರಣರಾದವರನ್ನು ಕೇವಲ misಛಿಡಿeಚಿಟಿಣs (ಕಿಡಿಗೇಡಿಗಳು) ಎಂದೂ, ನಂತರದ ಕೋಮುಗಲಭೆಯಲ್ಲಿ ತೊಡಗಿದ ಹಿಂದೂಗಳನ್ನು ಊiಟಿಜu uಟಿಜಚಿmeಟಿಣಚಿಟiss (ಹಿಂದೂ ಮೂಲಭೂತವಾದಿಗಳು) ಎಂದೂ ಕರೆದು ತನ್ನ ಬೇಜವಾಬ್ದಾರಿ ಪಕ್ಷಪಾತಿ ನಿಲುವನ್ನು ಮೆರೆಯಿಸಿತು!  ಮುಸ್ಲಿಂ ಅರಸರನ್ನೂ, ತನ್ನ ತಾಯಿಯನ್ನೂ ಪೂರ್ಣ ಉಡುಪಿನಲ್ಲಿ ಚಿತ್ರಿಸಿ, ಹಿಂದೂ ದೇವತೆಗಳನ್ನು ನಗ್ನವಾಗಿ, ಅಶ್ಲೀಲವಾಗಿ ಚಿತ್ರಿಸಿದ ಎಂ. ಎಫ್. ಹುಸೇನರ ಪರವಾಗಿ ನಿಂತು ಸಾಂಸ್ಕೃತಿಕ ದಿವಾಳಿತನವನ್ನು ಪ್ರದರ್ಶಿಸಿದ್ದೂ ಇದೇ ಮಾಧ್ಯಮಗಳು ಮತ್ತು ಬುದ್ಧಿಜೀವಿಗಳು.
ತನ್ನ ನಡುವೆ ತಲೆಯೆತ್ತಿ ಬೆಳೆದು ಪ್ರತ್ಯೇಕವಾಗಿಯೇ ನಿಲ್ಲುವ ಅವಕಾಶವನ್ನು ಅನ್ಯಧರ್ಮಗಳಿಗೆ ಹಿಂದೂಧರ್ಮ ಇತಿಹಾಸದುದ್ದಕ್ಕೂ ನೀಡುತ್ತಲೇ ಬಂದಿದೆ.  (ಇದನ್ನು ಇದೇ ಅಂಕಣದಲ್ಲಿ ಅಕ್ಟೋಬರ್ ೧೬, ೨೦೧೩ರಂದು ಉದಾಹರಣೆಗಳ ಮೂಲಕ ವಿವರಿಸಿದ್ದೇನೆ.)  ಅಷ್ಟೇ ಅಲ್ಲ, ಅಲ್ಪಸಂಖ್ಯಾತ ಧರ್ಮಗಳ ರಾಜಕೀಯ ಆಡಳಿತವನ್ನೂ ಹಿಂದೂಧರ್ಮ ಶತಮಾನಗಳ ಕಾಲ ಒಪ್ಪಿಕೊಂಡ ಐತಿಹಾಸಿಕ ಉದಾಹರಣೆಯಿದೆ.  ಇಂತಹ ಉದಾರತೆಯನ್ನು ಕ್ರಿಶ್ಚಿಯಾನಿಟಿಯಾಗಲೀ, ಇಸ್ಲಾಮ್ ಆಗಲೀ ಪ್ರದರ್ಶಿಸಿಲ್ಲ.  ಸ್ವಾತಂತ್ರ್ಯದ ಸಮಯದಲ್ಲಿ ಪಾಕಿಸ್ತಾನದಲ್ಲಿ ಶೇಕಡಾ ಇಪ್ಪತ್ತರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇಕಡಾ ಎರಡಕ್ಕಿಂತಲೂ ಕಡಿಮೆ.  ಇದನ್ನು ಆದೇ ಅವಧಿಯಲ್ಲಿ ಭಾರತದಲ್ಲಿನ ಅಲ್ಪಸಂಖ್ಯಾತರ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ ಯಾವ ಧರ್ಮ ಸಹಿಷ್ಣು, ಯಾವುದು ಅಸಹಿಷ್ಣು ಎನ್ನುವುದು ಎಂತಹ ಅನಕ್ಷರಸ್ತನಿಗೂ ಗೊತ್ತಾಗುತ್ತದೆ.  ಆದರೆ ನಮ್ಮ ಬುದ್ಧಿಜೀವಿಗಳಿಗೆ ಮಾತ್ರ ಇದಾವುದೂ ಕಾಣುವುದಿಲ್ಲ.
ಫತ್ವಾ ಹೊರಡಿಸುವ, ತಲೆದಂಡ ಕೇಳುವ ನಿಯಮ ಹಾಗೂ ಸಂಪ್ರದಾಯ ಹಿಂದೂಧರ್ಮದಲ್ಲಿದ್ದರೆ, ಎಕೆ-೪೭ ಹಿಡಿದ ಮೂಲಭೂತವಾದಿ ಭಯೋತ್ಪಾದಕರು ಹಿಂದೂಗಳಲ್ಲಿದ್ದರೆ ನಮ್ಮ ಬುದ್ಧಿಜೀವಿಗಳ ವರ್ತನೆಯ ಈಗಿರುವುದಕ್ಕಿಂತ ಸಂಪೂರ್ಣ ವಿರುದ್ಧವಾಗಿರುತ್ತಿತ್ತು.  ಇದರರ್ಥವೇನೆಂದರೆ ಸಹಿಷ್ಣುವಾಗಿರುವುದೇ ಹಿಂದೂಧರ್ಮದ ಬಲಹೀನತೆ ಎಂಬ ಅಭಿಪ್ರಾಯ ಹಿಂದೂಗಳಲ್ಲಿ ಮೂಡುವಂತೆ ಬುದ್ಧಿಜೀವಿಗಳು ಮಾಡಿದ್ದಾರೆ.  ಗುಜರಾತ್ ಕೋಮುಗಲಭೆಯಲ್ಲಿ ಮೋದಿಯವರ ಕೈ ಇತ್ತೋ ಇಲ್ಲವೋ ಗೊತ್ತಿಲ್ಲ (ಇರಲಿಲ್ಲ ಎಂದು ನ್ಯಾಯಾಂಗ ಹೇಳಿದೆ.)  ಆದರೆ ಅವರ ಮೇಲಿನ ಆ ಆರೋಪವೇ ಅವರನ್ನು ಹಿಂದೂಧರ್ಮದ ರಕ್ಷಕ ಎಂದು ಕೋಟ್ಯಾಂತರ ಹಿಂದೂಗಳು ನಂಬುವಂತೆ ಮಾಡಿದೆ.  ಬುದ್ಧಿಜೀವಿಗಳು ಅಂತಿಮವಾಗಿ ಸಾಧಿಸಿದ್ದು ಇದು.
ಗೋಡೆಗೆ ಒತ್ತರಿಸಲ್ಪಟ್ಟರೆ ಮುದ್ದು ಬೆಕ್ಕೂ ಕ್ರೂರವಾಗಿ ಪ್ರತಿಕ್ರಿಯಿಸುತ್ತದಂತೆ!  ಬುದ್ಧಿಜೀವಿಗಳ ಅತಾರ್ಕಿಕ ಪ್ರಲಾಪಗಳಿಂದಾಗಿ ಹಿಂದೂಗಳು ಆ ಸ್ಥಿತಿ ತಲುಪುವ ದಿನ ಬಂದಿದೆ.  ಮೋದಿಯವರ ಅಧಿಕಾರಾವಧಿಯಲ್ಲಿ ಒಳ್ಳೆಯದೇ ಆಗುತ್ತದೆಂದು ಆಶಿಸುತ್ತಾ, ಕೆಲವು ಅತ್ಯುತ್ಸಾಹಿಗಳಿಂದ ಅನುಚಿತವೇನಾದರೂ ಘಟಿಸಿದರೆ ಅದಕ್ಕೆ ಜವಾಬ್ದಾರರು ಈ ಬುದ್ಧಿಜೀವಿಗಳೇ ಎಂಬ ಸತ್ಯವನ್ನೂ ನೆನಪಿನಲ್ಲಿಟ್ಟುಕೊಳ್ಳೋಣ.
ಕರ್ನಾಟಕದ ಸಂದರ್ಭದಲ್ಲಿ ಮೋದಿಯಂತಹ ನಾಯಕನೊಬ್ಬನಿಗಾಗಿ ಹುಡುಕುವಂತೆ ಹಿಂದೂಗಳನ್ನು ಪ್ರೇರೇಪಿಸಿದ್ದು ಲಂಕೇಶ್, ಯು. ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಮತ್ತವರ ಹಿಂಬಾಲಕರು.  ಮೊದಲಿಗೆ ಬಿಜೆಪಿಯನ್ನೂ, ಆರ್‌ಎಸ್‌ಎಸ್ ಅನ್ನೂ ಕೋಮುವಾದಿ ಎಂದು ಪದೇಪದೇ ಕರೆಯುವುದರ ಮೂಲಕ ತಮ್ಮ ಸಹಿಷ್ಣತಾ ಮನೋಭಾವವೇ ತಮಗೆ ಮುಳುವಾಗುತ್ತಿದೆಯೆಂಬ ಭಾವನೆ ಹಿಂದೂಗಳಲ್ಲಿ ಮೂಡುವಂತೆ ಮಾಡಿದ್ದು ಲಂಕೇಶ್.  ಅದನ್ನು ಮುಂದುವರೆಸಿದವರು ಉಳಿದಿಬ್ಬರು.  ತಮ್ಮ ಹದಿವಯಸ್ಸಿನಲ್ಲಿ ದೇಶವಿಭಜನೆಯ ದುರಂತವನ್ನು ಕಣ್ಣಾರೆ ಕಂಡ, ಆ ದುರಂತ ಮತ್ತು ಆ ದಿನಗಳ ರಕ್ತಪಾತ, ಅವುಗಳಿಗೆ ನಿಜವಾಗಿಯೂ ಕಾರಣರಾದವರನ್ನು ಗಮನಿಸುತ್ತಲೇ ಬಂದ ಇವರುಗಳು ತಾವು ಸಾಕ್ಷಿಯಾದುದಕ್ಕೆ ಸಂಪೂರ್ಣ ವಿರುದ್ಧವಾದ ಅಭಿಪ್ರಾಯಗಳನ್ನು ಬೆಳೆಸಿಕೊಂಡು ಪ್ರಚಾರ ಮಾಡಿದ್ದೇಕೆ, ಅದರ ಹಿಂದಿನ ಮರ್ಮವೇನಿರಬಹುದು ಎಂದು ಅಚ್ಚರಿಯಾಗುತ್ತದೆ.  ಎಲ್ಲ ಧರ್ಮಗಳನ್ನೂ ಸಮಾನವಾಗಿ ನೋಡಿ, ಎಕರೀತಿಯ ತಪ್ಪುಗಳನ್ನು ಏಕರೀತಿಯ ಮಾತುಗಳಿಂದ ಟೀಕಿಸಿ ಸಮಾಜಕ್ಕೆ ಬುದ್ಧಿವಾದ ಹೇಳಿ, ಸಮಾಜಕ್ಕೆ ಸಾಂಸ್ಕೃತಿಕ ನಾಯಕತ್ವ ನೀಡುವಲ್ಲಿ ಇವರೆಲ್ಲರೂ ವಿಫಲರಾದರು.  ಅಂತಿಮವಾಗಿ ಇವರೆಲ್ಲರ ಕೃತ್ಯಕ್ಕೆ ಹಿಂದೂಗಳು ಈಗ ಉತ್ತರವಾಗಿ ಗುರುತಿಸಿರುವುದು ಮೋದಿಯವರನ್ನು.  ಮೋದಿ ಪ್ರಧಾನಿಯಾದರೆ ಈ ದೇಶದಲ್ಲಿರಲು ನಾನು ಇಚ್ಚಿಸುವುದಿಲ್ಲ ಎಂದು ಅನಂತಮೂರ್ತಿಯವರು ಹೇಳುತ್ತಾರೆ.  ಮೋದಿಯವರ ಸೃಷ್ಟಿಯಲ್ಲಿ ಅವರದೂ ಪಾಲಿದೆ.  ಈಗ ತಮ್ಮ ಅಭಿಪ್ರಾಯದಲ್ಲಿ ಕೆಟ್ಟವರಾದ ಮೋದಿಯವರನ್ನು ಸೃಷ್ಟಿಸಿ ಅವರ ಕೈಯಲ್ಲಿ ನಮ್ಮನ್ನೆಲ್ಲಾ ಇತ್ತು ಅನಂತಮೂರ್ತಿಯವರು ಮಾತ್ರ ಹೋಗುವುದಾದರೂ ಎಲ್ಲಿಗೆ?

1 comment:

  1. ಪಾಕಿಸ್ಥಾನ ಜಾತ್ಯಾತೀತ ರಾಷ್ಟ್ರವಾಗಬೇಕೆಂದು ಬಯಸಿದ ಜಿನ್ನಾ ರಾಷ್ಟ್ರ ಗೀತೆ ಬರೆಸಲು ಉರ್ದು ಅರಿತ ಹಿಂದು ಕವಿಯ ಹುಡುಕಾಟದಲ್ಲಿದ್ದರು. ಆಗ ಅವರಿಗೆ ದೊರಕಿದ ವ್ಯಕ್ತಿ ಜಗನಾಥ ಅಜಾದ್. ಜಿನ್ನಾ ಅವರಿಂದಲೇ ಅದೇಶ ದೊರೆತ ಅಜಾದ್ ಅವರಿಗೆ ಇಲ್ಲವೆನ್ನಲಾಗಲಿಲ್ಲ. ೧೯೪೭ರ ಆಗಸ್ತ್ ೯ ರಂದು ಸಂದೇಶ ಸಿಕ್ಕ ನಂತರ ಗೀತೆ ರಚಿಸಲು ದೊರೆತ ಸಮಯವಕಾಶ ಕೇವಲ ಐದು ದಿನಗಳು ಮಾತ್ರ.

    http://halliyimda.blogspot.in/2009/08/blog-post_24.html

    ReplyDelete