ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, December 5, 2013

ಮೂಢನಂಬಿಕೆಗಳ ಮೂಲೋತ್ಪಾಟನೆ ಶಿಕ್ಷೆಯಿಂದಲೋ? ಶಿಕ್ಷಣದಿಂದಲೋ?ಎರಡು ದಶಕಗಳ ಹಿಂದೆ ನಾನೊಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾಗ ಸಂಪನ್ಮೂಲ ವ್ಯಕ್ತಿಯೊಬ್ಬರು ಹೇಳಿದ್ದ ಮಾತೊಂದು ನೆನಪಾಗುತ್ತಿದೆ.  ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಹೊಸಹೊಸ ವೈಜ್ಞಾನಿಕ ಅವಿಷ್ಕಾರಗಳು ಹಾಗೂ ಅದರಿಂದಾಗಿ ಔದ್ಯೋಗಿಕ ಉತ್ಪಾದನಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸತೊಡಗಿ, ಆ ಕ್ಷೇತ್ರಗಳಲ್ಲಿ ಯೂರೋಪಿಯನ್ ರಾಷ್ಟ್ರಗಳ ಏಕಸ್ವಾಮ್ಯವನ್ನು ಅಮೆರಿಕಾ ಮುರಿಯಿತಷ್ಟೆ.  ಕೈಗಾರಿಕಾ ಕ್ರಾಂತಿಯ ಆಧ್ವರ್ಯುವಾಗಿದ್ದ ಇಂಗ್ಲೆಂಡಿಗೆ ಇದರಿಂದ ಜಾಗತಿಕ ವ್ಯಾಪಾರವಹಿವಾಟಿನಲ್ಲಿ ನಷ್ಟವಾಗತೊಡಗಿದಾಗ ಸಹಜವಾಗಿಯೇ ಕಂಗೆಟ್ಟ ಲಂಡನ್ ಸರಕಾರ ಅಮೆರಿಕಾದ ಈ ಪ್ರಗತಿಯ ಹಿಂದಿನ ಮರ್ಮವನ್ನರಿಯಲು ಸಮಿತಿಯೊಂದನ್ನು ಕಳಿಸಿತಂತೆ.  ಕೂಲಂಕಶ ಅಧ್ಯಯನ ನಡೆಸಿ ಅಮೆರಿಕಾದಿಂದ ಹಿಂತಿರುಗಿದ ಆ ಸಮಿತಿ ಮಂಡಿಸಿದ ವರದಿಯ ಸಾರಾಂಶ: 'ತನ್ನ ಎಳೆಯರಲ್ಲಿ ಶಾಲಾದಿನಗಳಿಂದಲೇ ವೈಜ್ಞಾನಿಕ ಮನೋಭಾವವನ್ನು ಉದ್ದೀಪನಗೊಳಿಸಿ ಬೆಳೆಸುವ ಶಿಕ್ಷಣಕ್ರಮವನ್ನು ಅಮೆರಿಕಾ ರೂಪಿಸಿ ಅಚರಣೆಗೆ ತಂದಿರುವುದೇ ಆ ದೇಶದಲ್ಲಿ ಅತ್ಯಧಿಕ ಪ್ರಮಾಣದ ವೈಜ್ಞಾನಿಕ ಅನ್ವೇಷಣೆಗಳು ಘಟಿಸಲು ಕಾರಣ.' ಸರಿಸುಮಾರು ಒಂದು ಶತಮಾನದ ನಂತರ ಇತಿಹಾಸದ ಚಕ್ರ ಒಂದು ಸುತ್ತು ಉರುಳಿತ್ತು.  ಅರವತ್ತರ ದಶಕದಲ್ಲಿ ಪೂರ್ವದ ಜಪಾನ್ ಹಲವು ಕ್ಷೇತ್ರಗಳಲ್ಲಿ ಅಮೆರಿಕಾವನ್ನು ಹಿಂದಿಕ್ಕತೊಡಗಿತು.  ಇದರ ಮರ್ಮವನ್ನರಿಯಲು ವಾಷಿಂಗ್‌ಟನ್ ಸರಕಾರ ಜಪಾನ್‌ಗೊಂದು ಸಮಿತಿ ಕಳುಹಿಸಿತು.  ಆ ಸಮಿತಿ ಸಲ್ಲಿಸಿದ ವರದಿಯಲ್ಲಿ ಇದ್ದುದಾದರೂ ಏನು?  ನೂರು ವರ್ಷಗಳ ಹಿಂದೆ ಇಂಗ್ಲೆಂಡಿನ ಸಮಿತಿಯ ವರದಿಗೂ ಈ ಸಮಿತಿಯ ವರದಿಗೂ ಯಾವ ವ್ಯತ್ಯಾಸವೂ ಇರಲಿಲ್ಲವಂತೆ.
ಇದು ನಿಜವೋ ಸುಳ್ಳೋ ಗೊತ್ತಿಲ್ಲ.  ಅದನ್ನು ಪತ್ತೆಮಾಡಲು ಪೂರಕ ಆಧಾರಗಳನ್ನು ಹುಡುಕಲು ನಾನೂ ಹೋಗಿಲ್ಲ.  ಇದು ಕಟ್ಟುಕತೆಯೇ ಆಗಿದ್ದರೆ ಅದರ ಹಿಂದಿನ ಉದ್ದೇಶ ವೈಜ್ಞಾನಿಕ ಅವಿಷ್ಕಾರಗಳಿಗೆ ಮೂಲ ವೈಜ್ಞಾನಿಕ ಮನೋಭಾವ ಎನ್ನುವುದನ್ನು ಸಮರ್ಥಿಸುವುದಷ್ಟೇ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.  ಬಹುಶಃ ಇದು ಸತ್ಯವಾಗಿರಲೂಬಹುದು ಎಂಬ ಅನಿಸಿಕೆಯನ್ನು ನನ್ನಲ್ಲುಂಟುಮಾಡುವಂತಹ ಮತ್ತೊಂದು ಮಾತೂ ನನಗೆ ನೆನಪಾಗುತ್ತಿದೆ.  ಮೂರು ದಶಕಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯದಲ್ಲಿ ನನಗೆ ಅಮೆರಿಕಾದ ಇತಿಹಾಸವನ್ನು ಬೋಧಿಸಿದ ಪ್ರಾಧ್ಯಾಪಕರು ೧೮೬೧-೬೫ರ ಅಂತರ್ಯುದ್ಧದ ನಂತರದ ದಶಕಗಳಲ್ಲಿ ವೈಜ್ಞಾನಿಕ ಅನ್ವೇಷಣೆ ಮತ್ತು ಔದ್ಯೋಗಿಕ ಉತ್ಪಾದನಾ ಕ್ಷೇತ್ರಗಳಲ್ಲಿ ಅಮೆರಿಕಾ ಇಡತೊಡಗಿದ ಧಾಪುಗಾಲಿಗೆ ಆ ದೇಶದ ಜನತೆಯ ವೈಜ್ಞಾನಿಕ ಮನೋಭಾವವನ್ನೂ, ಅದಕ್ಕೆ ಇಂಬುಗೊಡುವ ಶಿಕ್ಷಣಕ್ರಮವನ್ನೂ ಉಲ್ಲೇಖಿಸಿ ಹೀಗೆ ಹೇಳಿದ್ದರು: 'ಯಾವುದೇ ಒಂದು ವಸ್ತು ಅಥವಾ ಉಪಕರಣದ ಉಪಯುಕ್ತತೆಯನ್ನು ಮತ್ತಷ್ಟು ಹೆಚ್ಚಿಸುವುದರತ್ತ, ಹೊಸ ಉಪಕರಣಗಳನ್ನು ಅನ್ವೇಷಿಸುವತ್ತ ಅಮೆರಿಕನ್ನರು ಚಿಂತಿಸುತ್ತಿರುತ್ತಾರೆ.  ಇದರ ಹಿಂದಿರುವುದು ಶಾಲಾದಿನಗಳಿಂದಲೇ ಅವರಲ್ಲಿ ಮೂಡಿಸಲಾಗುವ ವೈಜ್ಞಾನಿಕ ಮನೋಭಾವ.'
ವೈಜ್ಞಾನಿಕ ಮನೋಭಾವ ಮತ್ತದನ್ನು ರೂಪಿಸಲು ಅಗತ್ಯವಾದ ಶಿಕ್ಷಣ ಹೇಗಿರಬೇಕು ಎನ್ನುವುದನ್ನು ಮೂರು ದಿನಗಳ ಹಿಂದೆ ಇದೇ ಪತ್ರಿಕೆಯಲ್ಲಿ ಗಣ್ಯ ವಿಮರ್ಶಕರಾದ ಶ್ರೀ ಎಸ್. ಆರ್. ವಿಜಯಶಂಕರ ತಮ್ಮ ಭಾನುವಾರದ ಅಂಕಣದಲ್ಲಿ ಜಾರ್ಜ್ ಅರ್ವೆಲ್‌ನ “Scientific education ought to mean the implanting of rational, sceptical, experimental habit of mind”  ಎನ್ನುವ ಸೂಕ್ತ ಹೇಳಿಕೆಯನ್ನು ಉಲ್ಲೇಖಿಸಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.  ವಿವೇಕಯುತ, ಅನುಮಾನಾತ್ಮಕ, ಪ್ರಯೋಗಶೀಲತೆಯ ಮೂಲಕ ಕಲಿಯುವುದು, ಒಂದರ್ಥದಲ್ಲಿ ಈ ಬಗೆಯ ಕಲಿಕೆಯನ್ನು ಒಂದು 'ಮಾನಸಿಕ ಚಟ'ವನ್ನಾಗಿ ವ್ಯಕ್ತಿಯೊಬ್ಬನಲ್ಲಿ ಅಳವಡಿಸುವುದು ವಿಜ್ಞಾನದ ಶಿಕ್ಷಣದ ಸರಿಯಾದ ವಿಧಾನ.
ಇಷ್ಟೆಲ್ಲಾ ಪೀಠಿಕೆಯ ಹಿಂದಿರುವುದು ನನ್ನನ್ನು ಕಾಡುತ್ತಿರುವ 'ಮೂಢನಂಬಿಕೆಗಳನ್ನು ಕಾನೂನಿನ ಮೂಲಕ ಹೋಗಲಾಡಿಸಬಹುದೇ?' ಎಂಬ ಪ್ರಶ್ನೆ, ಸಮಾಜವನ್ನು ಮೂಢನಂಬಿಕೆಗಳಿಂದ ಮುಕ್ತಗೊಳಿಸುವ ಅತ್ಯುತ್ತಮ ವಿಧಾನ ಶಿಕ್ಷೆಯೋ ಅಥವಾ ಶಿಕ್ಷಣವೋ ಎಂಬ ಜಿಜ್ಞಾಸೆ.
ಶಿಕ್ಷೆಯ ವಿಧಾನ ಸರಿಯಾದುದಲ್ಲ ಎನ್ನುವುದು ಮೊದಲನೋಟಕ್ಕೇ ಗೋಚರವಾಗುತ್ತಿದೆ.  ತನಗೆ ಸಮ್ಮತವಾಗದ್ದನ್ನು ಕಾನೂನು ಮತ್ತು ಶಿಕ್ಷೆಯ ಮೂಲಕ ಹೋಗಲಾಡಿಸುವುದರಲ್ಲಿ ಪ್ರಪಂಚದಲ್ಲಿ ಇದುವರೆಗೆ ಬಂದುಹೋಗಿರುವ ಸಾವಿರಾರು ಸರಕಾರಗಳಲ್ಲಿ ಯಾವುದೊಂದೂ ಯಶಸ್ವಿಯಾಗಿಲ್ಲ.  ಹೀಗಾಗಿ ಕರ್ನಾಟಕದ ಪ್ರಸಕ್ತ ಸಿದ್ದರಾಮಯ್ಯ ಸರಕಾರವೂ ಯಶಸ್ವಿಯಾಗುವುದಿಲ್ಲ ಎಂದು ಯಾವುದೇ ಅಳುಕಿಲ್ಲದೇ ಹೇಳಬಹುದು.  ಮೂಢನಂಬಿಕೆಗಳ ವಿರುದ್ಧ ಈ ಸರಕಾರ ಕಾನೂನು ತಂದರೆ ಅದಕ್ಕೆ ವಿರೋಧ ಭುಗಿಲೇಳುತ್ತದೆ.  ಕಾನೂನು ಉಲ್ಲಂಘನೆಯನ್ನು ಉಗ್ರ ಶಿಕ್ಷೆಯ ಮೂಲಕ ಅನುಷ್ಟಾನಗೊಳಿಸಲು ಸರಕಾರ ಮುಂದಾದರೆ ಜನ ಗುಟ್ಟಾಗಿ ತಮಗೆ ಬೇಕಾದ್ದನ್ನು ಮಾಡಿಕೊಳ್ಳುತ್ತಲೇ ಹೋಗುತ್ತಾರೆ.  ಇಷ್ಟೇ ಅಲ್ಲ, ಮುಂದೆ ಬೇರೊಂದು ಸರಕಾರ ಬಂದು ಈ ಕಾನೂನನ್ನೇ ರದ್ದು ಮಾಡಿಬಿಟ್ಟರೆ...?
ಒಟ್ಟಾರೆ, ಕಾನೂನಿನ ಮೂಲಕ ಸಮಾಜದ ನೀತಿನಡವಳಿಕೆಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ.  ಆದರೆ ಸೂಕ್ತ ಶಿಕ್ಷಣದ ಮೂಲಕ, ಎಳೆಯ ವಯಸ್ಸಿನಲ್ಲೇ ಮಕ್ಕಳ ಮನಸ್ಸನ್ನು ಬೇಕಾದಂತೆ ರೂಪಿಸುವ ಮೂಲಕ ಒಂದೆರಡು ತಲೆಮಾರುಗಳ ಆವಧಿಯಲ್ಲಿ ಸಮಾಜದ ಒಟ್ಟಾರೆ ಚಿಂತನೆಯನ್ನು, ಅದರ ನೀತಿನಡವಳಿಕೆಗಳನ್ನು ಬದಲಾಯಿಸಬಹುದು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ.  ಶಿಕ್ಷಣದ ಮೂಲಕ ವೈಜ್ಞಾನಿಕ ಮನೋಭಾವವನ್ನು ತನ್ನ ಜನತೆಯಲ್ಲಿ ಮೂಡಿಸುವ ಕಾರ್ಯಕ್ರಮವನ್ನು ಒಂದೂವರೆ ಶತಮಾನದ ಹಿಂದೆಯೇ ಜಾರಿಗೆ ತಂದು ಅಭೂತಪೂರ್ವ ಪ್ರಗತಿ ಸಾಧಿಸಿದ ಅಮೆರಿಕಾ ಒಂದು ಧನಾತ್ಮಕ ಉದಾಹರಣೆಯಾದರೆ, 'Pಚಿಞisಣಚಿಟಿ Suies' ಎಂಬ ಅವೈಜ್ಞಾನಿಕ, ಅಸತ್ಯಪೂರಿತ, ಇತಿಹಾಸಕ್ಕೆ ಹಾಗೂ ವರ್ತಮಾನಕ್ಕೆ ಅಪಚಾರವೆಸಗುವ ಪಠ್ಯಕ್ರಮವನ್ನು ತನ್ನ ಶಾಲೆಗಳಲ್ಲಿ ಕಡ್ಡಾಯಗೊಳಿಸುವ ಮೂಲಕ ಭಾರತ-ದ್ವೇಷವನ್ನು ಸಾರ್ವತ್ರಿಕಗೊಳಿಸಿ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುತ್ತಿರುವ ಪಾಕಿಸ್ತಾನ ಒಂದು ಋಣಾತ್ಮಕ ಉದಾಹರಣೆಯಾಗುತ್ತದೆ.  ಇವೆರಡರ ನಡುವೆ ಎರಡರ ರಂಗುಗಳನ್ನೂ ಅಷ್ಟಿಷ್ಟು ಒಳಗೊಂಡ ಹಲವಾರು ಉದಾಹರಣೆಗಳಿವೆ.
ಅತಿ ಎನ್ನಿಸುವ, ಸಮಾಜದ ಸ್ವಾಸ್ತ್ಯವನ್ನು ಕೆಡಿಸುವಂತಹ ಮೂಢನಂಬಿಕೆಗಳು ಮೊಳೆಯುವುದಕ್ಕೆ ಅವಕಾಶ ನೀಡದ ಕ್ರಿಶ್ಚಿಯಾನಿಟಿ ಹಾಗೂ ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿಷ್ಟೆಯಿಂದ ತೊಡಗಿಕೊಳ್ಳಲು ಪ್ರೇರೇಪಿಸುವ ಪ್ಯೂರಿಟಾನಿಕಲ್ ನಂಬಿಕೆಗಳ ತಳಹದಿಯ ಮೇಲೆ ರಚಿತವಾಗಿರುವ ಅಮೆರಿಕನ್ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ರೂಪಿಸುವುದು ಸುಲಭ.  ಆದರೆ ಬಹುಪಾಲು ಕರ್ಮ, ಪುನರ್ಜನ್ಮ, ಧೀರ್ಘ ಹಾಗೂ ಕಷ್ಟಕರವಾದ ಮೋಕ್ಷದ ಮಾರ್ಗ ಮುಂತಾದ ಮೌಲ್ಯಗಳ ಆಧಾರದ ಮೇಲೆ ರಚಿತವಾಗಿರುವ ಭಾರತೀಯ ಸಮಾಜವನ್ನು ವೈಜ್ಞಾನಿಕ ಚಿಂತನೆಯತ್ತ ಹೊರಳಿಸುವುದು ಬಹಳ ಕಷ್ಟ.  ಭಾರತೀಯ ವಿಜ್ಞಾನದ ಅತ್ಯುತ್ತಮ ಸಾಧನೆಯಾದ ಮಂಗಳಯಾನ ನೌಕೆಯನ್ನು ನಿರ್ಮಿಸಿದ ವಿಜ್ಞಾನಿಗಳೇ ಉಡಾವಣೆಗೆ ಮುನ್ನ ತಿರುಪತಿಯಲ್ಲಿ ಪೂಜೆ ಸಲ್ಲಿಸುವುದಾದರೆ ಸಾಮಾನ್ಯ ಜನರ ಬಗ್ಗೆ ಏನು ಹೇಳಬೇಕು?  ಇದಕ್ಕೆ ಕಾರಣ ನಾವು ಶಾಲೆಯಲ್ಲಿ ವಿಜ್ಞಾನವನ್ನೂ ಶಾಲೆಯ ಹೊರಗೆ ನಂಬಿಕೆ, ಮೂಢನಂಬಿಕೆಗಳನ್ನೂ ಕಲಿಯುತ್ತಾ ಬಂದಿರುವುದೇ ಆಗಿದೆ.  ಎಲ್ಲ ಭೌತಿಕ ಕ್ರಿಯೆಗಳನ್ನು ಸೂಕ್ತ ವೈಜ್ಞಾನಿಕ ನಿಯಮಗಳ ಮೂಲಕ ವಿವರಿಸುವ 'ವಿರೋಧಾಭಾಸವಿಲ್ಲದ' ಅರಿವನ್ನು ಉದ್ದೀಪಿಸುವಂತಹ ವಾತಾವರಣ ಶಾಲೆಯ ಒಳಗೆ ಹಾಗೂ ಹೊರಗೆ ಸೃಷ್ಟಿಯಾದಾಗಷ್ಟೇ ನಮ್ಮಲ್ಲಿ ಸಾರ್ವತ್ರಿಕವಾಗಿ ವೈಜ್ಞಾನಿಕ ಮನೋಭಾವ ಮೂಡಲು ಸಾಧ್ಯ.  ಹಾಗಾದಾಗ ಮಾತ್ರ ವೈಯುಕ್ತಿಕ ಬದುಕನ್ನು ಕ್ಲಿಷ್ಟಗೊಳಿಸುವ, ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡಹುವ ಮೂಢನಂಬಿಕೆಗಳ ಬೇರುಗಳು ಶಿಥಿಲವಾಗುತ್ತಾ ಹೋಗಿ ಕಾಲಾಂತರದಲ್ಲಿ ನಶಿಸಿಹೋಗುತ್ತವೆ ಎಂದು ಆಶಿಸಬಹುದು.
ಈ ಚಿಂತನೆಯ ಮತ್ತೊಂದು ಮಗ್ಗುಲಲ್ಲಿ ದೇವರು, ದೈವಿಕ ಶಕ್ತಿ ಮುಂತಾದ ನಂಬಿಕೆಗಳು (ಕೆಲವರಿಗೆ ಮೂಢನಂಬಿಕೆಗಳು) ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಂಡ ಅಮೆರಿಕಾ, ಕೆಲವು ಯೂರೋಪಿಯನ್ ಮತ್ತು ಕಮ್ಯೂನಿಸ್ಟ್ ವ್ಯವಸ್ಥೆಗಳಲ್ಲೂ ಅಸ್ತಿತ್ವದಲ್ಲಿರುವುದನ್ನು ನೋಡಬಹುದು.  ಇದು ಜನತೆಯ ಮನದಲ್ಲಿ ತನ್ನನ್ನು ತಾನು ಪೂರ್ಣವಾಗಿ ಪ್ರತಿಷ್ಟಾಪಿಸಿಕೊಳ್ಳುವುದರಲ್ಲಿ ವಿಜ್ಞಾನವೇ ವಿಫಲವಾಗಿರಲೂಬಹುದು ಎಂಬ ಅನುಮಾನವನ್ನು ಮೂಡಿಸುತ್ತದೆ.  ಈ ನಿಟ್ಟಿನಲ್ಲಿ ಚಿಂತನೆಯನ್ನು ಹರಿಯಬಿಟ್ಟರೆ ಕಣ್ಣಿಗೆ ಕಾಣುವ, ವಿವೇಚನೆಗೆ ನಿಲುಕುವ ಅನೇಕ ವಾಸ್ತವಗಳನ್ನು ವಿಜ್ಞಾನಿಗಳು ನಿರಾಕರಿಸುತ್ತಲೇ ಇರುವುದರಿಂದ ವಿಜ್ಞಾನವನ್ನೇ ಅಂತಿಮ ಸತ್ಯ ಎಂದು ಒಪ್ಪಿಕೊಳ್ಳಲು ಸಮಾಜವೂ ನಿರಾಕರಿಸುತ್ತಿದೆ ಎನಿಸುತ್ತದೆ.  ಈ ಬಗ್ಗೆ ನೂರೊಂದು ಉದಾಹರಣೆಗಳಿದ್ದರೂ ನಾಲ್ಕು ಪ್ರಾತಿನಿಧಿಕ ಉದಾಹರಣೆಗಳನ್ನು ಮಾತ್ರ ವಿಶ್ಲೇಷಣೆಗೆತ್ತಿಕೊಂಡು ತಾವು ಬದಲಾಗಬೇಕಾದ ಅಗತ್ಯವನ್ನು ವಿಜ್ಞಾನಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ.
ಮೊದಲಿಗೆ ಎಲ್ಲರಿಗೂ ಸಂಬಂಧಿಸಿದ ಆರೋಗ್ಯದ ಬಗೆಗಿನ ಸಾಮಾನ್ಯ ಉದಾಹರಣೆಯನ್ನು ಕೈಗೆತ್ತಿಕೊಳ್ಳೋಣ.  ಕಾಯಿಲೆಗಳನ್ನು ಉಪಶಮನಗೊಳಿಸುವುದರಲ್ಲಿ ಹೋಮಿಯೋಪಥಿ ಪರಿಣಾಮಕಾರಿ ಎನ್ನುವುದು ಅದರಿಂದ ಉಪಯೋಗ ಪಡೆದವರೆಲ್ಲರ ಅನುಭವ.  ಆದರೆ ಹೋಮಿಯೋಪಥಿ ಅವೈಜ್ಞಾನಿಕ ಎಂದು ವೈದ್ಯವಿಜ್ಞಾನ ಹೇಳುತ್ತದೆ.  ಲಕ್ಷಾಂತರ ಜನರ ಪ್ರತ್ಯಕ್ಷ ಅನುಭವವನ್ನೇ ಧಿಕ್ಕರಿಸುವ ವಿಜ್ಞಾನ ಜನತೆಗೆ ಪ್ರಿಯವಾಗುವುದಾದರೂ ಹೇಗೆ?  ವಿಜ್ಞಾನ ಹೇಳುವುದೆಲ್ಲವೂ ನಿಜ, ಅದು ತಿರಸ್ಕರಿಸುವುದೆಲ್ಲವೂ ಅಸತ್ಯ ಎಂದು ಅವರು ನಂಬುವುದಾದರೂ ಹೇಗೆ?
ಮನಸ್ಸಿನ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅರಿಯುವುದರಲ್ಲಿ ವಿಜ್ಞಾನ ಇನ್ನೂ ಯಶಸ್ವಿಯಾಗಿಲ್ಲ.  ಇಲ್ಲಿ ನನಗೆ ಬ್ರೆಜಿಲ್‌ನ ಜೋಸ್ ಪೆಡ್ರೋ ಡಿ ಫ್ರೀಟಾಸ್ 'ಅರಿಗೋ'ನ ನೆನಪಾಗುತ್ತದೆ.  ವೈದ್ಯಕೀಯ ವಿಜ್ಞಾನದ ಅಲ್ಪ ತಿಳುವಳಿಕೆಯೂ ಇಲ್ಲದ ಈತ ಐವತ್ತು ಅರವತ್ತರ ದಶಕಗಳಲ್ಲಿ ಕೇವಲ ಅಡಿಗೆಮನೆಯ ಚಾಕುಗಳಿಂದ ಹಲವಾರು ಕ್ಲಿಷ್ಟ ಶಸ್ತ್ರಚಿಕಿತ್ಸೆ ನಡೆಸಿ ನುರಿತ ವೈದ್ಯರು ಕೈಚೆಲ್ಲಿದ್ದ ರೋಗಿಗಳನ್ನು ಪೂರ್ಣವಾಗಿ ಗುಣಪಡಿಸಿದ್ದ.  ಆತ ನಡೆಸಿದ ಒಂದು ಪ್ರಸಿದ್ದ ಶಸ್ತ್ರಚಿಕಿತ್ಸೆ ಹೀಗಿದೆ: ಒಮ್ಮೆ ಮರಣಶಯ್ಯೆಯಲ್ಲಿದ್ದ ಕ್ಯಾನ್ಸರ್ ಪೀಡಿತ ಪರಿಚಿತೆಯೊಬ್ಬಳನ್ನು ನೋಡಲು ಹೋದ ಅರಿಗೋಗೆ ಏನಾಯಿತೋ, ಸೀದಾ ಅಡಿಗೆಮನೆಗೆ ನುಗ್ಗಿ ಚಾಕುವೊಂದನ್ನು ತಂದ.  ರೋಗಿಯ ಜನನೇಂದ್ರಿಯದೊಳಗೆ ಚಾಕುವನ್ನು ತೂರಿಸಿ ರಭಸವಾಗಿ ಆಡಿಸಿದ.  ಒಳಗೆ ಕೈಹಾಕಿ ಕ್ಯಾನ್ಸರ್ ಗಡ್ಡೆಯನ್ನು ಹೊರಗೆಳೆದ.  ಚಣದಲ್ಲಿ ರೋಗಿಯ ಗರ್ಭಾಶಯ ಕ್ಯಾನ್ಸರ್‌ನ ಮೂಲೋತ್ಪಾಟನೆಯಾಗಿತ್ತು!  ತನ್ನ ಶಸ್ತ್ರಚಿಕಿತ್ಸೆಗಳಿಗೆ ಅರಿಗೋ ನೀಡುವ ವಿವರಣೆ ಬಲು ಸರಳ.  'ರೋಗಿಗಳನ್ನು ನೋಡುತ್ತಿದ್ದಂತೇ ನನ್ನ ಕಣ್ಣುಗಳ ಮುಂದೆ ಜರ್ಮನ್ ವೈದ್ಯ ಅಡಾಲ್ಫ್ ಫ್ರಿಟ್ಜ್‌ನ ಮುಖ ಕಾಣಿಸಿಕೊಳ್ಳುತ್ತದೆ.  ಆಮೇಲೆ ನಾನೇನು ಮಾಡುತ್ತೇನೆಂದು ನನಗೆ ಅರಿವಿರುವುದಿಲ್ಲ.'  ಇದಾವುದನ್ನೂ ವೈದ್ಯಕೀಯ ವಿಜ್ಞಾನ ಪುರಸ್ಕರಿಸುವುದಿಲ್ಲ.  ಆದರೆ ಅಡಿಗೆಮನೆಯ ಚಾಕುಗಳಿಂದ ಅರಿಗೂ ನಡೆಸಿದ ಶಸ್ತ್ರಚಿಕಿತ್ಸೆಗಳನ್ನು ಕಣ್ಣಾರೆ ಕಂಡವರು ಇನ್ನೂ ಬದುಕಿದ್ದಾರೆ.  ಲೈಸನ್ಸ್ ಇಲ್ಲದೇ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾನೆಂದು ಅವನನ್ನು ಬಂಧಿಸಲಾಗಿತ್ತು ಕೂಡ.  ಆದರೆ ರಾಷ್ಟ್ರಾಧ್ಯಕ್ಷರೇ ಅವನಿಗೆ ಕ್ಷಮಾದಾನ ನೀಡಿದ್ದರು ಮತ್ತು ಜೈಲಿನಲ್ಲಿದ್ದಾಗ ಅಲ್ಲಿಯೂ ಅಧಿಕಾರಿಗಳ ಸಹಕಾರದಿಂದಲೇ ತನ್ನ 'ಸೇವೆ'ಯನ್ನು ರೋಗಿಗಳಿಗೆ ಆತ ನೀಡುತ್ತಿದ್ದ ಎನ್ನುವುದು ಅವನ ನಂಬಲಸಾಧ್ಯವಾದ ಶಸ್ತ್ರಕ್ರಿಯಾಜ್ಞಾನಕ್ಕೆ ಉದಾಹರಣೆ.  ಅಂದರೆ, ಡಾ. ಫ್ರಿಟ್ಜ್ ತಮ್ಮ ಮರಣಾನಂತರ ಅರಿಗೋನ ಮೂಲಕ ತಮ್ಮ ವೈದ್ಯಕೀಯ ಸೇವೆಯನ್ನು ಮುಂದುವರೆಸಿದರೇ?  ಇದರರ್ಥ ಒಬ್ಬನ ದೇಹದಲ್ಲಿ ಮತ್ತೊಬ್ಬ ಸೇರಿ ಕೆಲಸ ಮಾಡಬಹುದೇ?
ಮೂರನೆಯ ಉದಾಹರಣೆ ಫ್ಲೈಯಿಂಗ್ ಸಾಸರ್ ಹಾಗೂ ಅನ್ಯಲೋಕದ ಜೀವಿಗಳದ್ದು.  ಈ ಬಗೆಗಿನ ವಿವರಗಳಲ್ಲಿ ನೂರಕ್ಕೆ ತೊಂಬತ್ತು ಭಾಗ ಕಟ್ಟುಕತೆಗಳಾಗಿದ್ದರೂ ಪೂರ್ಣ ಸತ್ಯವಾದ, ವಿಜ್ಞಾನಿಗಳ ಅವಗಾಹನೆಗೇ ಬಂದ ಪ್ರಕರಣಗಳೂ ಹೇರಳವಾಗಿವೆ.  ಅವುಗಳ ಸತ್ಯಾಸತ್ಯತೆಯನ್ನು ಆ ವಿಜ್ಞಾನಿಗಳು ಪ್ರಮಾಣೀಕರಿಸಿದ್ದಾರೆ.  ಆದರೆ ಇತರ ವಿಜ್ಞಾನಿಗಳಿಗೆ ಇದು ಅವೈಜ್ಞಾನಿಕ.
ಕರ್ಮ ಹಾಗೂ ಅದಕ್ಕನುಗುಣವಾಗಿ ಮರುನಜನ್ಮವೆತ್ತುವ ಬಗ್ಗೆ ಹಿಂದೂಗಳು, ಬೌದ್ಧರು, ಜೈನರು, ಟಿಬೆಟನ್ನರು ಗಾಢವಾದ ನಂಬಿಕೆಯನ್ನಿಟ್ಟಿದ್ದಾರೆ.  ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಮ್ ಇದನ್ನು ತಿರಸ್ಕರಿಸುತ್ತವೆ.  ಇರುವುದೊಂದೇ ಜನ್ಮ, ನಂತರದ್ದು ಅಂತಿಮ ತೀರ್ಪು, ಅದಕ್ಕನುಗುಣವಾಗಿ ಸ್ವರ್ಗ ಅಥವಾ ನರಕ ಎಂದು ಅವು ಹೇಳುತ್ತವೆ.  (ಪುನರ್ಜನ್ಮದ ಬಗ್ಗೆ ಹಳೆಯ ಒಡಂಬಡಿಕೆ ಹಾಗೂ ಸೈಂಟ್ ಮಾರ್ಕ್ ಮುಂತಾದವರ ಸುವಾರ್ತೆಗಳಲ್ಲಿದ್ದ ಅಂಶಗಳನ್ನು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ರೋಮನ್ ಚಕ್ರವರ್ತಿ ಕಾನ್‌ಸ್ಟಾಂಟೈನ್ ಮತ್ತವನ ತಾಯಿ ಉದ್ದೇಶಪೂರ್ವಕವಾಗಿ ತೆಗೆದುಹಾಕಿದರು ಎಂದು ಹೇಳಲಾಗುತ್ತದೆ.)
ಇತ್ತೀಚಿನ ದಶಕಗಳಲ್ಲಿ ಈ ವಿಷಯಗಳ ಬಗ್ಗೆ ಆಳ ಸಂಶೋಧನೆ ನಡೆಸಿರುವ ರೋಜರ್ ಊಲ್ಜರ್, ಬ್ರಿಯಾನ್ ವೇಸ್ ಮುಂತಾದ ಹಲವು ಕ್ರಿಶ್ಚಿಯನ್ ಧರ್ಮಾನುಯಾಯಿ ಮನೋವಿಶ್ಲೇಷಕರು ಮತ್ತು ಮನೋವೈದ್ಯರು ಕರ್ಮಕ್ಕನುಗುಣವಾಗಿ ಮರುಜನ್ಮದ ಬಗ್ಗೆ ನಿರಾಕರಿಸಲಾಗದಷ್ಟು ವಿವರಗಳನ್ನು ಕಲೆಹಾಕಿದ್ದಾರೆ.  ಆದರೆ ಇತರ ವಿಜ್ಞಾನಿಗಳ ದೃಷ್ಟಿಯಲ್ಲಿ ಇದೆಲ್ಲವೂ ಅವೈಜ್ಞಾನಿಕ.
ಇದರರ್ಥ ಸರಳ.  ಈಗಿನ ವೈಜ್ಞಾನಿಕ ನಿಯಮಗಳ ಮೂಲಕ ತಮ್ಮಿಂದ ವಿವರಿಸಲಾಗದ್ದೆಲ್ಲವನ್ನೂ ಸಾರಾಸಗಟಾಗಿ ಅವೈಜ್ಞಾನಿಕ ಎಂದು ಕರೆದು ಕೈತೊಳೆದುಕೊಳ್ಳುವುದು ವಿಜ್ಞಾನಿಗಳ ಜಾಯಮಾನ.  ಕೋಟ್ಯಾಂತರ ಜನರ ನೈಜ ಅನುಭವಗಳನ್ನೂ, ತಮ್ಮದೇ ಸಹೋದ್ಯೋಗಿಗಳ ಸಂಶೋಧನೆಗಳನ್ನು ತಿರಸ್ಕರಿಸುವ ಮೂಲಕ ವಿಜ್ಞಾನಕ್ಕೊಂದು ಸೀಮಿತ ಪರಿಧಿ ನಿರ್ಮಿಸಿ ಅದರ ವ್ಯಾಪ್ತಿಯನ್ನು ಇವರು ಸಂಕುಚಿತಗೊಳಿಸುತ್ತಿದ್ದಾರೆ, ಆ ಮೂಲಕ ಸಮಾಜದ ಪೂರ್ಣ ಸ್ವೀಕೃತಿಯಿಂದ ವಿಜ್ಞಾನ ವಂಚಿತವಾಗುವಂತೆ ಮಾಡುತ್ತಿದ್ದಾರೆ.
ಹೋಮಿಯೋಪಥಿ, ಅರಿಗೋನ ಶಸ್ತ್ರಚಿಕಿತ್ಸೆ, ಫ್ಲೈಯಿಂಗ್ ಸಾಸರ್‍ಸ್, ಪುನರ್ಜನ್ಮ ಮುಂತಾದುವುಗಳನ್ನು ಅವೈಜ್ಞಾನಿಕ ಎಂದು ಸಾರಾಸಗಟಾಗಿ ತಿರಸ್ಕರಿಸುವ ಬದಲು ಅವುಗಳನ್ನು ಕೂಲಂಕಶವಾಗಿ ಅಭ್ಯಸಿಸಿ, ಅವುಗಳ ಹಿಂದೆ ಕೆಲಸ ಮಾಡುತ್ತಿರುವ, ಇದುವರೆಗೆ ತನ್ನ ಅರಿವಿಗೆ ನಿಲುಕದಿರುವ ವೈಜ್ಞಾನಿಕ ನಿಯಮಗಳನ್ನು ಪತ್ತೆಹಚ್ಚಿ ಅವುಗಳನ್ನು ತನ್ನ ಪರಿಧಿಯೊಳಗೆ ತೆಗೆದುಕೊಂಡು ತನ್ನ ವ್ಯಾಪ್ತಿಯನ್ನು ಸದಾ ವಿಸ್ತರಿಸಿಕೊಳ್ಳಲು ವಿಜ್ಞಾನ ಮುಂದಾಗುವುದು ಸೂಕ್ತ.  ಹಾಗೆ ನೋಡಿದರೆ ಅಂಥದ್ದನ್ನು ಹಿಂದೆ ವಿಜ್ಞಾನ ಮಾಡಿರುವ ಉದಾಹರಣೆಗಳಿವೆ.  ಭೂಮಿ ಚಪ್ಪಟೆಯಾಗಿದೆ, ಭೂಮಿಯೇ ವಿಶ್ವದ ಕೇಂದ್ರ, ಸೂರ್ಯ ಭೂಮಿಯನ್ನು ಸುತ್ತುತ್ತಾನೆ ಮುಂತಾದ ಶತಮಾನಗಳವರೆಗೆ ಪ್ರಚಲಿತವಿದ್ದ ಅನೇಕ 'ವೈಜ್ಞಾನಿಕ ನಂಬಿಕೆ'ಗಳನ್ನು ೧೫-೧೭ನೆ ಶತಮಾನಗಳ ಆವಧಿಯಲ್ಲಿ ವಿಜ್ಞಾನ ಕಸದ ಬುಟ್ಟಿಗೆ ಹಾಕಿದ್ದನ್ನು ನಾವು ನೆನಪಿಸಿಕೊಳ್ಳಬೇಕು.  ಶತಮಾನಗಳ ಹಿಂದಿನ ಈ ಪ್ರಗತಿಶೀಲ ಮನೋಭಾವ ಇಂದಿನ ವಿಜ್ಞಾನಿಗಳಿಗೂ ಅಗತ್ಯ.