ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, September 13, 2013

ಕಥೆ: "ಪಾತ್ರ"



ಬೀಗ ತೆರೆದು ಬಾಗಿಲು ದೂಡುತ್ತಿದ್ದಂತೇ ನೆಲದ ಮೇಲೆ ಮುಖವಡಿಯಾಗಿ ಬಿದ್ದ ಇನ್‌ಲ್ಯಾಂಡ್ ಲೆಟರ್‌ನಲ್ಲಿ ಅಪ್ಪನ ಹೆಸರು ಕಂಡು ಸರಕ್ಕನೆ ಬಾಗಿ ಎತ್ತಿಕೊಂಡು ಹಾಸಿಗೆಯ ಅಂಚಿನಲ್ಲಿ ಕೂತು ಪರಪರ ಬಿಡಿಸಿ ಅಲ್ಲಿದ್ದ ನಾಲ್ಕು ಸಾಲುಗಳನ್ನು ಓದುತ್ತಾ ಹೋದಂತೆ ಗಾಬರಿಗೊಳ್ಳತೊಡಗಿದೆ.
ಪತ್ರದ ಒಕ್ಕಣೆಯಂತೆ ಅಮ್ಮ ಮನೆ ಬಿಟ್ಟು ಹೊರಟುಹೋಗಿದ್ದಳು.  ಹೋಗಿರುವುದು ಎರಡು ಮೈಲಿ ದೂರದದಲ್ಲಿದ್ದ ಸರೋಜ ಚಿಕ್ಕಮ್ಮನ ಮನೆಗೇ ಎಂದು ಬರೆದಿದ್ದನ್ನು ನೋಡಿ ಸ್ವಲ್ಪ ಸಮಾಧಾನವಾದರೂ ಅಮ್ಮ ಯಾಕಾಗಿ ಮನೆ ಬಿಟ್ಟುಹೋದಳು ಎಂಬ ಪ್ರಶ್ನೆಗೆ ಪತ್ರದ ಕೊನೇ ಅಕ್ಷರದವರೆಗೂ ಉತ್ತರ ಸಿಗದೇ ದಿಗಿಲಾಯಿತು.   ಪತ್ರದ ಕೊನೆಯಲ್ಲಿದ್ದ "ಅಲ್ಲಿಗೆ ನಾನೊಬ್ಬನೇ ಹೋಗಲು ಹಿಂಜರಿಕೆ, ನೀನೂ ಬಂದರೆ ಹೋಗುವಾ ಅಂತ ಮಾಡಿದ್ದೀನಿ" ಎಂಬ ಸಾಲಿನ ಮೇಲೇ ಮತ್ತೆ ಮತ್ತೆ ಕಣ್ಣಾಡಿಸುತ್ತಾ ಕೂತುಬಿಟ್ಟೆ.
ಪಶ್ಚಿಮದಲ್ಲಿ ಇಳಿಯುತ್ತಿದ್ದ ಸೂರ್ಯ ಕಿಟಕಿಯಲ್ಲಿ ಇಣುಕಿ ಕಣ್ಣು ಕುಕ್ಕಿದಾಗ ತಲೆ ತಗ್ಗಿಸಿದೆ.  ಊರಿಗೆ ಹೋಗೇಬಿಡುವಾ ಎನಿಸಿ ಎದ್ದು ನಿಂತೆ.  ರೂಂಮೇಟ್ ಸೋಮನಾಥನಿಗೆ ಕಾಯುವುದಾ ಬೇಡವಾ ಅಂತ ಎರಡು ಕ್ಷಣ ಸಂದಿಗ್ಧವಾಯಿತು.  ಮೈಸೂರಿನಿಂದ ಕೊಳ್ಳೇಗಾಲಕ್ಕೆ ಎರಡು ಗಂಟೆಗಳ ಪ್ರಯಾಣ, ಬಸ್ಸುಗಳೇನು ರಾತ್ರಿ ಎಂಟು ಗಂಟೆಯವರೆಗೂ ಸಿಗುತ್ತವೆ ಎನಿಸಿದರೂ ಕ್ಲಾಸು ಮುಗಿದೊಡನೇ ಹಾಸ್ಟೆಲ್‌ಗೆ ಬರುವ ಜಾಯಮಾನದವನಲ್ಲದ ಅವನಿಗೆ ಕಾಯುತ್ತಾ ಕೂರುವುದು ಬೇಡ, ಈಗಲೇ ಹೊರಟುಬಿಡುವಾ ಅನ್ನುವಂತೆ ಮಾಡಿದ್ದು ಅಮ್ಮ ಯಾಕೆ ಹೊರಟುಹೋಗಿದ್ದಾಳೆ ಎನ್ನುವ ಪ್ರಶ್ನೆಯೋ ಅಥವಾ ಅವಳನ್ನು ಹುಡುಕಿ ಹೊರಡಲು ನನ್ನ ಜತೆ ಬೇಡುವ ಅಪ್ಪನ ಅರ್ಥವಾಗದ ನಿಸ್ಸಹಾಯಕತೆಯೋ ಎಂದು ಯೋಚಿಸುತ್ತಲೇ ಹೆಗಲ ಚೀಲಕ್ಕೆ ಒಂದೆರಡು ಬಟ್ಟೆ ತುರುಕಿ, ಸೋಮನಾಥನಿಗೊಂದು ಚೀಟಿ ಬರೆದಿಟ್ಟು ಹೊರನಡೆದೆ.
ಸಿಟಿಬಸ್ಸು ಛತ್ರಿಮರದ ಬಸ್ ಸ್ಟಾಪ್‌ಗೆ ಹತ್ತಿರವಾಗುತ್ತಿದ್ದಂತೇ "ಯಾರ್ರೀ ನರ‍್ಸೀಪುರ, ಕೊಳ್ಳೇಗಾಲಾ?" ಎಂಬ ಮಾಮೂಲೀ ಅರಚಾಟ ಕಿವಿಗೆ ಬಿತ್ತು.  ಅತ್ತ ಹಣಕಿದವನಿಗೆ ಕಂಡದ್ದು ಹೊರಡಲು ತಯಾರಾಗಿ ನಿಂತಿದ್ದ ಎಸ್ ಆರ್ ಟಿ.  ಸಿಟಿಬಸ್ಸು ನಿಧಾನವಾಗುತ್ತಿದ್ದಂತೇ ಧುಮುಕಿ ಓಡುತ್ತಾ ರಸ್ತೆ ದಾಟಿ "ಬುರ್ ಬುರ್ ಬುರ್‌ರ್‌ರ್" ಎಂದು ಹೆದರಿಸುತ್ತಿದ್ದ ಚಾಮರಾಜನಗರದ ಬಸ್ಸನ್ನು ದಾಟಿಕೊಂಡು ಎಸ್ ಆರ್ ಟಿ ಹತ್ತಿಕೊಂಡೆ.  ಕಂಡಕ್ಟರ್ ನಮ್ಮೂರಿನವನೇ.  ಬ್ಯಂದ್ಯತ್ತೆಯ ಮಗ ಪಿಣ್ಣಿಮಾದೇವಣ್ಣ.  "ಊರ್‌ಗೊರಟ್ಯಾ ತಮ್ಮಯ್ಯಾ?  ಬಾ ಬಾ" ಎನ್ನುತ್ತಾ ಅವರಿವರನ್ನು ತಳ್ಳಿ ಸೀಟು ಮಾಡಿಕೊಟ್ಟ.
ಆಲನಹಳ್ಳಿ ದಾಟುತ್ತಿದ್ದಂತೇ ಬಸ್ಸಿನೊಳಗಿನ ಗೊಂದಲ ತಗ್ಗಿ ಒಂದುರೀತಿಯ ಶಾಂತತೆ ಆವರಿಸಿತು.  ಹೊರಗಿನತ್ತ ಗಮನ ಕಡಿಮೆಯಾದಂತೆ ಎದೆಯೊಳಗೆ ಮತ್ತೆ ಉಕ್ಕಿದ ಪ್ರಶ್ನೆಗಳ ಮಹಾಪೂರ.  ಚಿಕ್ಕಮ್ಮನ ಮನೆಯಲ್ಲಿ ಅಮ್ಮ ನೆಮ್ಮದಿಯಾಗಿಯೇ ಇರುತ್ತಾಳೆ ಎಂದು ತುಸು ಸಮಾಧಾನವೆನಿಸಿದರೂ ಅಮ್ಮ ಮನೆ ಬಿಟ್ಟುಹೋದದ್ದು ಯಾಕಾಗಿ ಎಂಬ ಪ್ರಶ್ನೆ ನನ್ನನ್ನು ಮತ್ತೆ ಮತ್ತೆ ಮುಳ್ಳಿನಂತೆ ಚುಚ್ಚಿ ಘಾಸಿಗೊಳಿಸತೊಡಗಿತು.
ಅಪ್ಪ ಅಮ್ಮನ ನಡುವೆ ಏನಾದರೂ ಜಗಳ ಗಿಗಳ ನಡೆಯಿತೇ?  ಎಂದೂ ಇಲ್ಲದ ಜಗಳ ಈಗೇಕೆ?
ಅವರಿಬ್ಬರ ಮಧ್ಯೆ ಎಲ್ಲರ ಸಂಸಾರದಲ್ಲೂ ಇರುವಂತಹ ಸಣ್ಣಪುಟ್ಟ ಮಾತು ನಡೆದರೂ ಭಾರೀ ಕದನಗಳು ನಡೆದಂತಹ ನೆನಪು ನನಗಿಲ್ಲ.  ಅಪ್ಪನಂತೂ ಅಮ್ಮನಿಗೆ ಯಾವುದರಲ್ಲೂ ಕಟ್ಟುಪಾಡು ಮಾಡಿರಲೇ ಇಲ್ಲ.  ವಿಷಯ ಎಂಥದ್ದೇ ಇರಲಿ, ತಾಳ್ಮೆ ಕಳೆದುಕೊಂಡು ಗಲಾಟೆ ಮಾಡುವುದು ಅಮ್ಮನ ಸ್ವಭಾವವೇ ಅಲ್ಲ.  ಸ್ಕೂಲ್ ಮೇಷ್ಟರಾಗಿ ಒಂದಷ್ಟು ವರ್ಷ ಆ ಊರು ಈ ಊರು ಅಲೆದಾಡಿದ ಅಪ್ಪ ನಾನು ಹುಟ್ಟುವುದಕ್ಕೂ ಮೊದಲೇ ಆ ಕೆಲಸ ಬಿಟ್ಟು ಮನೆ ಸೇರಿಕೊಂಡಿದ್ದನಂತೆ.  ಬಾವಿ ತೋಡಿಸಿ ಪಂಪ್ ಸೆಟ್ ಹಾಕಿಸಿ ಜಮೀನನ್ನು ಹಸನು ಮಾಡಿಕೊಂಡು ಬೇಕಾದ್ದಕ್ಕಿಂತಲೂ ಹೆಚ್ಚಿಗೇ ಬೆಳೆದುಕೊಂಡು ನೆಮ್ಮದಿಯಾಗಿಯೇ ಇರತೊಡಗಿದ.  ಜತೆಗೇ ನಮ್ಮೂರಲ್ಲದೇ ಸುತ್ತಮುತ್ತಲ ಊರುಗಳಲ್ಲೆಲ್ಲಾ ಜನ ಕಟ್ಟಿಕೊಂಡು ರಾಮಾಯಣ, ಮಹಾಭಾರತ ಕಲಿಸಿ ಆಡಿಸತೊಡಗಿದ.  ಈಗ ಅವನನ್ನು ಜನ ಗುರುತಿಸುವುದು "ನಾಟಕದ ಮೇಷ್ಟ್ರು" ಅಂತಲೇ.  ಇತ್ತೀಚೆಗಂತೂ ಪುರಾಣಗಳ ಜತೆ ಈ ಕಾಲದ ಸಾಮಾಜಿಕ, ವಿಡಂಬನಾತ್ಮಕ ನಾಟಕಗಳನ್ನೂ ಆಡಿಸತೊಡಗಿದ್ದಾನೆ.  ಅವನು ಕಲಿಸಿ ಆಡಿಸಿದ "ಬಂಡ್ವಾಳಿಲ್ಲದ್ ಬಡಾಯಿ, ಯಮಳ ಪ್ರಶ್ನೆ, ಹುಡುಗಿ ಹುಟ್ಟಿದ್ದಾಳೆ ನೋಡಿ" ಮುಂತಾದ ನಾಟಕಗಳು ತುಂಬಾ ಯಶಸ್ವಿಯಾಗಿವೆ.  ಸ್ಕೂಲು ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ ನಾಟಕ ನಿರ್ದೇಶಿಸಲು ಅಪ್ಪನ ಸಹಾಯ ಕೇಳಿಕೊಂಡು ಅಧ್ಯಾಪಕರು ಮನೆಗೆ ಎಡತಾಕುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ.
ಈ ನಾಟಕಗಳ ಜತೆ ಅಪ್ಪ ನಮ್ಮ ಬೀದಿಯ ಜೀವನನಾಟಕಗಳಲ್ಲೂ ಕೈಯಾಡಿಸುತ್ತಿದ್ದಾನೆ.  ಜನರು ತಮ್ಮ ಸಮಸ್ಯೆಗಳನ್ನೆತ್ತಿಕೊಂಡು ಪರಿಹಾರಕ್ಕಾಗಿ ಅಪ್ಪನ ಬಳಿ ಬರುತ್ತಾರೆ.  ಅಣ್ಣತಮ್ಮಂದಿರ ನಡುವಿನ ಆಸ್ತಿ ವಿವಾದ, ಗಂಡಹೆಂಡಿರ ನಡುವಿನ ಮನಸ್ತಾಪಗಳಂತಹ ಸಾಂಸಾರಿಕ ಕಲಹಗಳಲವಾರು ಅಪ್ಪನ ಮಧ್ಯಸ್ಥಿಕೆಯಿಂದ ಪರಿಹಾರ ಕಂಡಿವೆ.  ಹೀಗಾಗಿ ಅಪ್ಪ ಒಂದುರೀತಿಯಲ್ಲಿ ಜನಪ್ರಿಯ ವ್ಯಕ್ತಿ.  ಯಾವಾಗಲೂ ಮುಖದ ಮೇಲೆ ತೆಳುನಗೆಯ ಲೇಪ ಹಚ್ಚಿಕೊಂಡು, ತಮಾಷೆ ಮಾಡಿಕೊಂಡು ಓಡಾಡುವ ಅಪ್ಪನ ಬಗ್ಗೆ ಎಲ್ಲರಿಗೂ ಪ್ರೀತಿ.
ಇದೆಲ್ಲದರ ನಡುವೆ ತಲೆ ತೂರಿಸಿಕೊಂಡ ಅವನು ಮನೆಯ ಒಳಗಿನ ವ್ಯವಹಾರವನ್ನು ಪೂರ್ತಿಯಾಗಿ ಅಮ್ಮನ ತಲೆಗೇ ಕಟ್ಟಿಬಿಟ್ಟ.  ಅಮ್ಮನಂತೂ ಒಂದೂ ಮಾತು ತೆಗೆಯದೇ ಎಲ್ಲವನ್ನೂ ಚೆನ್ನಾಗಿಯೇ ನಿಭಾಯಿಸಿದಳು.  ಶಾಲೆಯಲ್ಲಿ ನೂರಾರು ಮಕ್ಕಳಿಗೆ ಪಾಠ ಹೇಳಿ ಅನುಭವವಿದ್ದ ಅಪ್ಪ ಮನೆಯಲ್ಲಿ ತನ್ನ ಮಕ್ಕಳಿಗೆ ಪಾಠ ಹೇಳಿಕೊಡುವುದರಿಂದ ತಪ್ಪಿಸಿಕೊಂಡು ಬೀದಿ ತಿರುಗತೊಡಗಿದಾಗ ಅಮ್ಮ ಒಂದು ಮಾತೂ ಅನ್ನಲಿಲ್ಲ.  ತಾನೇ ಸ್ಕೂಲಿಗೆ ಬಂದು ಸುಮಿತ್ರಾ ಮೇಡಮ್ ಜೊತೆ ಮಾತಾಡಿ ನನ್ನನ್ನೂ ಅಕ್ಕನನ್ನೂ ಅವರ ಮನೆಗೆ ಪಾಠಕ್ಕೆ ಕಳುಹಿಸಿದಳು.  ಅಮ್ಮ ಹಾಗೆ ಮಾಡದೇ ಇದ್ದಿದ್ದರೆ ನನಗೆ ಎಸ್ಸೆಸ್ಸೆಲ್ಸಿಯಲ್ಲಿ ಗಣಿತ ಮತ್ತು ಹಿಂದಿಯಲ್ಲಿ ಪಾಸುಮಾರ್ಕ್ ಬರುತ್ತಲೇ ಇರಲಿಲ್ಲವೇನೋ ಎಂದು ನನಗೆ ಈಗಲೂ ಅನಿಸುತ್ತಿದೆ. 
ಕಬ್ಬು, ಭತ್ತ, ಹಿಪ್ಪನೇರಳೆ ಬೆಳೆಯಲ್ಲಿ ಬಂದ ಆದಾಯದಲ್ಲೇ ಅಪ್ಪ ಯಾತಕ್ಕೂ ಕಡಿಮೆಯಾಗದಂತೆ ಬದುಕಿದ.  ಅಣ್ಣನ, ಅಕ್ಕನ ಮದುವೆಯನ್ನು ಭರ್ಜರಿಯಾಗಿಯೇ ಮಾಡಿದ.  ಮಾಧವ ಭಾವನಿಗೆ ಒಂದು ಲಕ್ಷ ಕೈಯಲ್ಲಿ ಕೊಟ್ಟದ್ದಲ್ಲದೇ ಸ್ವಾಮೀಜಿಗಳ ಕೈಗೆ ಎರಡು ಲಕ್ಷ ಹಾಕಿ ಅವರ ಕಾಲೇಜಿನಲ್ಲಿ ಭಾವನಿಗೆ ಪೊಲಿಟಿಕಲ್ ಸೈನ್ಸ್ ಲೆಕ್ಚರರ್ ಕೆಲಸವನ್ನೂ ಕೊಡಿಸಿದ್ದ.
ಅಮ್ಮ ಹೋಗಿರುವುದು ಸರೋಜ ಚಿಕ್ಕಮ್ಮನ ಮನೆಗೇ ಎಂದು ಅಪ್ಪ ಹೇಳದೇ ಇದ್ದರೂ ನನಗೆ ಗೊತ್ತಾಗುತ್ತಿತ್ತು.  ಒಬ್ಬ ಅಣ್ಣ, ಇಬ್ಬರು ಅಕ್ಕಂದಿರು, ಒಬ್ಬ ತಮ್ಮ, ಒಬ್ಬಳು ತಂಗಿ ಇದ್ದ ಅಮ್ಮನಿಗೆ ಈಗ ತನ್ನವರಾಗಿ ಉಳಿದಿರುವವಳು ಸರೋಜ ಚಿಕ್ಕಮ್ಮ ಮಾತ್ರ ಎಂದು ಇಡೀ ಬೀದಿಗೇ ಗೊತ್ತು.  ತನ್ನ ಮಗಳು ಯಶೋದೆಯನ್ನು ಅಣ್ಣನಿಗೆ ಕೊಡಬೇಕು ಅಂತ ದೊಡ್ಡಮಾವ ಬಯಸಿದ್ದ.  ಅವಳು ಹುಟ್ಟಿದಾಗಿನಿಂದಲೂ ಅವನು ಹಾಗೇ ಹೇಳುತ್ತಿದ್ದನಂತೆ.  ಅಣ್ಣನಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದಾಗ ಕಜ್ಜಾಯ, ತಂಬಿಟ್ಟು, ಚಕ್ಕುಲಿ, ಕೋಡುಬಳೆ ತುಂಬಿದ ಎರಡು ದೊಡ್ಡ ಬ್ಯಾಗುಗಳನ್ನು ಹಿಡಿದುಕೊಂಡು ಅತ್ತೆ ಮಾವ ಇಬ್ಬರೂ ಮನೆಗೆ ಬಂದು ಅಮ್ಮ ಅಪ್ಪನ ಜತೆ ವಿಷಯ ಪ್ರಸ್ತಾಪ ಮಾಡಿದರು.  ಈ ಸಂಬಂಧ ಅಮ್ಮನಿಗೂ ಒಪ್ಪಿಗೆ ಇತ್ತು.  ಅಪ್ಪನಂತೂ ಇದರ ಬಗ್ಗೆ ತಲೆ ಕೆಡಿಸಿಕೊಂಡವನೇ ಅಲ್ಲ.  ‘ನಿನ್ನ ಮಗ ಹ್ಞೂಂ ಅಂದರೆ ವಾಲಗ ಊದಿಸೋದಿಕ್ಕೆ ನಾನು ರೆಡಿ’ ಎಂದು ಅಮ್ಮನಿಗೆ ಮುಗುಮ್ಮಾಗಿ ಹೇಳಿಬಿಟ್ಟ.  ತಕರಾರು ಬಂದದ್ದೇ ಅಣ್ಣನಿಂದ.  ತನ್ನ ಸಹಪಾಠಿಯನ್ನೇ ಪ್ರೀತಿಸಿಕೊಂಡಿದ್ದ ಅವನು ‘ನಿಮ್ಮ ಮಗಳನ್ನು ಮದುವೆಯಾಗಲಾರೆ’ ಎಂದು ಮಾವನಿಗೆ ನೇರವಾಗೇ ಹೇಳಿಬಿಟ್ಟ.  ಪೆಚ್ಚಾದ ಮಾವ ಅಮ್ಮನಿಗೆ ದುಂಬಾಲು ಬಿದ್ದ.  ಅಣ್ಣನ ಮನ ಒಲಿಸಲು ಪ್ರಯತ್ನಿಸಿದ ಅಮ್ಮ ಅವನ ಕಟುನಿರ್ಧಾರದಿಂದ ಸುಮ್ಮನಾಗಿಬಿಟ್ಟಳು...
ಆ ದಿನ ದುರ್ದಾನ ತೆಗೆದುಕೊಂಡವನಂತೆ ಹೊರಟುಹೋದ ದೊಡ್ಡಮಾವ ಮತ್ತೆ ನಮ್ಮ ಮನೆಯತ್ತ ಕಾಲು ಹಾಕಲಿಲ್ಲ.  ಅದಾಗಿ ಎರಡು ತಿಂಗಳಿಗೆ ತನ್ನ ಮಗಳ ಮದುವೆಯನ್ನು ಶಾಂತಿ ದೊಡ್ಡಮ್ಮನ ಮಗ ರವಿಯ ಜತೆ ಮಾಡಿ ಮುಗಿಸಿದ.  ಮದುವೆಗೆ ಅಮ್ಮನನ್ನು ಕರೆಯಲಿಲ್ಲ.  ಶಾಂತಿ ದೊಡ್ಡಮ್ಮನೂ ಕರೆಯಲಿಲ್ಲ.  ‘ಹೀಗೆ ಮಾಡಿಬಿಟ್ಟರಲ್ಲಾ’ ಎಂದು ಅಮ್ಮ ಅಲವತ್ತುಕೊಂಡು ಚಿಕ್ಕಮಾವ ಮತ್ತು ಗಿರಿಜಾ ದೊಡ್ಡಮ್ಮನಿಗೆ ಕಾಗದ ಬರೆದಾಗ ಅವರಿಬ್ಬರಿಂದಲೂ ಬಂದ ಉತ್ತರ- ‘ನಿನಗೆ ಸರಿಯಾಗೇ ಮಾಡಿದ್ದಾರೆ ಬಿಡು’ ಅಂತ.  ಅಲ್ಲಿಗೆ ತನಗೆ ತವರು ಮನೆಯ ಬಾಗಿಲು ಮುಚ್ಚಿಹೋಯಿತು ಎಂದು ಅಮ್ಮನಿಗೆ ಅರ್ಥವಾಗಿಹೋಯಿತು.
ಇದೆಲ್ಲಾ ನಡೆದು ಐದು ವರ್ಷಗಳೇ ಆಗಿಹೋದವು.  ದೊಡ್ಡಮಾವ, ಚಿಕ್ಕಮಾವ, ದೊಡ್ಡಮ್ಮಂದಿರ ಮುಖವನ್ನು ಅಮ್ಮ ನೋಡಿಲ್ಲ.  ಅಣ್ಣನ, ಮಾಲಕ್ಕನ ಮದುವೆಗೂ ಅವರನ್ನು ಕರೆಯಲಿಲ್ಲ.
ಇದೆಲ್ಲದರ ನಡುವೆ ಅಮ್ಮನಿಗೆ ಹತ್ತಿರವಾಗಿ ಉಳಿದವಳೆಂದರೆ ಸರೋಜ ಚಿಕ್ಕಮ್ಮ ಮಾತ್ರ.  ಅಮ್ಮನ ಬಗ್ಗೆ ಉಳಿದವರ ಕೋಪಕ್ಕೂ ತನಗೂ ಏನೇನೂ ಸಂಬಂಧವೇ ಇಲ್ಲ ಅನ್ನುವಂತೆ ಅವಳ ವ್ಯವಹಾರ.  ದೊಡ್ಡಮಾವನ ಮಗಳ ಮದುವೆ ಮುಗಿಸಿಕೊಂಡು ಅವಳು ನೇರವಾಗಿ ಬಂದದ್ದು ನಮ್ಮ ಮನೆಗೇ.  ಬಂದವಳು ಅಳುತ್ತಿದ್ದ ಅಮ್ಮನನ್ನು ತಬ್ಬಿಕೊಂಡು ‘ಯಾರು ಹೇಗಾದ್ರೂ ಇರ‍್ಲಿ, ನಾ ಮಾತ್ರ ನಿನ್ನಿಂದ ದೂರಾಗಲ್ಲ’ ಅಂತ ಸಮಾಧಾನಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ.  ಅವಳ ಮನೆ ಇರುವುದು ಎರಡು ಮೈಲಿ ದೂರದ ಬಸ್ತಿಪುರದಲ್ಲಿ.  ತಿಂಗಳಿಗೊಂದು ಸಲವಾದರೂ ಬಂದು ಅಮ್ಮನನ್ನು ನೋಡಿಕೊಂಡು ಹೋಗುತ್ತಾಳೆ.  ಅಮ್ಮನೂ ಅಷ್ಟೆ, ಮನಸ್ಸು ಬಂದಾಗಲೆಲ್ಲಾ ಚಿಕ್ಕಮ್ಮನ ಮನೆಗೆ ಓಡುತ್ತಾಳೆ.  ವರ್ಷದ ಹಿಂದೆ ಮಲ್ಲೇಶ ಚಿಕ್ಕಪ್ಪ ವಾಂತಿಬೇಧಿಯಾಗಿ ತೀರಿಕೊಂಡಾಗಿನಿಂದ ಅಮ್ಮ-ಚಿಕ್ಕಮ್ಮನ ನಡುವಿನ ಅನುಬಂಧ ಮತ್ತೂ ಗಟ್ಟಿಯಾಗಿದೆ.  ಹೈಸ್ಕೂಲಿಗೆ ಹೋಗುವ ಇಬ್ಬರು ಹೆಣ್ಣುಮಕ್ಕಳನ್ನು ಕಟ್ಟಿಕೊಂಡು ಬದುಕುತ್ತಿರುವ ಚಿಕ್ಕಮ್ಮನ ಬಗ್ಗೆ ಅಮ್ಮನಿಗೆ ಅತೀವ ಕಾಳಜಿ.
ಬಸ್ಸು ಟಿ ನರಸೀಪುರದ ಬಸ್ ಸ್ಟ್ಯಾಂಡಿನಲ್ಲಿ ನಿಂತು  ಜನರೆಲ್ಲರೂ ಏನಾದರೂ ಬಾಯಾಡಿಸಲೆಂದು ಕೆಳಗಿಳಿದು ಬಸ್ಸು ಸರಿಸುಮಾರು ಖಾಲಿಯಾಗುತ್ತಿದ್ದಂತೇ ಪ್ರಶ್ನೆಯೊಂದು ಧುತ್ತನೆ ಮೇಲೆದ್ದು ಬಂತು.
ನನ್ನನ್ನು ಕಂಡರೆ ಅಮ್ಮನಿಗೆ ಪ್ರಾಣ.  ತಾನು ಏಕಾಏಕಿ ಚಿಕ್ಕಮ್ಮನ ಮನೆಗೆ ಹೊರಟುಹೋಗಿರುವುದನ್ನು ನನಗೆ ಅವಳೇ ಯಾಕೆ ತಿಳಿಸಲಿಲ್ಲ?  ಮಕ್ಕಳ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ ಅಪ್ಪನಿಗೆ ಈಗ ನನಗೆ ಪತ್ರ ಬರೆಯುವಂತೆನಿಸಿರಬೇಕಾದರೆ...!  ಅಪ್ಪ ಅಮ್ಮ ಇಬ್ಬರೂ ನನಗೆ ಇದುವರೆಗೂ ಅಪರಿಚತವಾದ ಯಾವುದೋ ಹೊಚ್ಚಹೊಸದೊಂದು ರೀತಿಯಲ್ಲಿ ವರ್ತಿಸುತ್ತಿರುವಂತೆನಿಸಿ ಎದೆಯ ತಳಮಳ ಮತ್ತೂ ಏರಿತು.
ಬಸ್ಸು ಮತ್ತೆ ಹೊರಡುತ್ತಿದ್ದಂತೇ ತಲೆಯೊಳಗೆ ಮತ್ತೊಂದು ಜೇನುಹುಳು ಹೊಕ್ಕಿತು.  ಅಮ್ಮನಿಗೇನಾದರೂ ಆಗಿದೆಯೇ?  ವಿಷಯ ತಿಳಿದರೆ ನಾನು ಗಾಬರಿಯಾಗಿಬಿಡುತ್ತೇನೆ ಎಂದುಕೊಂಡು ಅಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆಂದು ಅಪ್ಪ ಸುಳ್ಳು ಬರೆದಿರಬಹುದೇ?
ಬಸ್ಸಿನ ಸೀಟು ಕೆಂಡದಂತೆ ಸುಡತೊಡಗಿತು.  ಎಷ್ಟೊತ್ತಿಗೆ ಮನೆ ತಲುಪುತ್ತೇನೋ ಅನಿಸಿ ಕುಳಿತಲ್ಲೇ ಹೊಸಕಾಡತೊಡಗಿದೆ.  ಈ ಹಾಳು ಬಸ್ಸಂತೂ ತುಂಬ ನಿಧಾನವಾಗಿ ಚಲಿಸುತ್ತಿದೆಯೆನಿಸಿ ಇದರಿಂದ ಕೆಳಗಿಳಿದು ಮನೆಯವರೆಗೆ ಓಡಿಬಿಡಲೇ ಅನಿಸಿತು.  ಒಮ್ಮೆ ಎದ್ದು ನಿಂತು ಮತ್ತೆ ಧೊಪ್ಪನೆ ಕೆಳಗೆ ಕುಸಿದೆ...
ಮನೆ ತಲುಪಿದಾಗ ಗಂಟೆ ಎಂಟು ದಾಟಿತ್ತು.  ಅಪ್ಪ ಜಗಲಿಯಲ್ಲಿ ಯಾರೋ ಇಬ್ಬರು ಅಪರಿಚಿತರ ಜತೆ ಮಾತಾಡುತ್ತಾ ಕೂತಿದ್ದವನು ನನ್ನನ್ನು ನೋಡಿದವನೇ "ಈಗ ಬಂದ್ಯಾ ಮಗಾ, ಬಾ ಬಾ" ಎನ್ನುತ್ತಾ ಎದ್ದು ನಿಂತ.  "ಒಳಗೆ ಹೋಗಿ ಕಾಲು ತೊಳಕೋ.  ನಾನು ಇನ್ನೊಂದೆರಡು ನಿಮಿಷದಲ್ಲಿ ಬಂದೆ" ಎಂದು ಹೇಳಿ ಮತ್ತೆ ಕೂತ.
ಮನೆಯೊಳಗೆ ಹೋದೆ.  ಅಮ್ಮ ಎಲ್ಲಾದರೂ ಮಲಗಿರಬಹುದೇ ಎಂದು ಕೋಣೆಕೋಣೆಯಲ್ಲೂ ಇಣುಕಿದೆ.  ಅಮ್ಮ ಇರಲಿಲ್ಲ.  ಅವಳು ಚಿಕ್ಕಮ್ಮನ ಮನೆಗೆ ಹೊರಟುಹೋಗಿದ್ದೇ ನಿಜವಿರಬೇಕು.  ಕೈಕಾಲು ತೊಳೆದು ಮತ್ತೆ ಜಗಲಿಗೆ ಬಂದೆ.  ಅಪ್ಪನ ಮಾತು ನಡೆದೇ ಇತ್ತು.  ನನ್ನನ್ನು ನೋಡಿದವನೇ "ಬಂದೇ ಮಗಾ" ಎಂದು ಹೇಳಿ ಮತ್ತೆ ಅಲ್ಲಿದ್ದವರತ್ತ ತಿರುಗಿದ.  "ಸರಿ ಆಯ್ತು.  ನೀವು ಹೊರಡಿ.  ನಾನು ಶನಿವಾರ ಸಾಯಂಕಾಲದ ಹೊತ್ತಿಗೆ ಬರ್ತೀನಿ" ಎನ್ನುತ್ತಾ ಎದ್ದು ನಿಂತ.  ಅವರಿಬ್ಬರೂ ಎದ್ದು ನಿಂತರು.  ಒಬ್ಬ ಅಪ್ಪನ ಕೈ ಹಿಡಿದು "ಹಂಗಾದ್ರೆ ನೀವು ನಾಳೆ ಬರೋದಿಕ್ಕೆ ಆಗೋದೇ ಇಲ್ವಾ?" ಎನ್ನುತ್ತಾ ರಾಗ ಎಳೆದ.  ಅಪ್ಪ ಪಟಕ್ಕನೆ "ಇಲ್ಲ ಇಲ್ಲಾ.  ನಾಳೆ ಆಗೋದೇ ಇಲ್ಲ.  ನಂಗೆ ಬೇರೆ ಕೆಲ್ಸ ಇದೆ ಅಂದೆನಲ್ಲ" ಅಂದವನು ಕ್ಷಣ ತಡೆದು "ಶನಿವಾರ ಖಂಡಿತಾ ಬರ್ತೀನಿ.  ಅಲ್ಲೀವರೆಗೆ ನೀವು ಪಾರ್ಟು ಮಾಡೋರ್‌ನೆಲ್ಲಾ ಗುರುತು ಮಾಡಿ ಒಂದು ಮೀಟಿಂಗ್‌ಗೆ ರೆಡಿ ಮಾಡ್ಕೊಳ್ಳಿ" ಅಂದ.  ಆ ಮನುಷ್ಯ "ಆಯ್ತು ಮೇಷ್ಟ್ರೇ.  ನಿಮ್ಮನ್ನೇ ನಂಬಿದ್ದೀವಿ.  ಉಗಾದಿ ಹೊತ್ಗೆ ಎಲ್ಲಾನೂ ತಯಾರ್ ಮಾಡ್ಬುಡಿ ದೇವ್ರೂ" ಎನ್ನುತ್ತಾ ಕೈ ಮುಗಿದ.  ಅಪ್ಪ "ಆಯ್ತು ಬಿಡಿ.  ಅದು ನನ್ ಜವಾಬ್ದಾರಿ.  ಏನೂ ಯೋಚ್ನೆ ಮಾಡ್ಬೇಡಿ" ಎನ್ನುತ್ತಾ ತಾನೂ ಕೈಮುಗಿದ.  ಅವರಿಬ್ಬರೂ ಮತ್ತೊಮ್ಮೆ ಕೈ ಮುಗಿದು ಜಗಲಿಯ ಮೆಟ್ಟಲಿಳಿದರು.  ಅಪ್ಪ ತಾನೂ ಇಳಿದು "ನಿಮ್ಗೆ ಕುಡಿಯೋದಕ್ಕೂ ಏನೂ ಕೊಡ್ಲಿಲ್ಲ ನಾನು.  ಬೇಜಾರು ಮಾಡ್ಕೋಬೇಡಿ.  ನಮ್ ಹೆಂಗಸ್ರು ಮನೇಲಿಲ್ಲ.  ತಂಗೀ ಮನೇಗೆ ಹೋಗಿ ಕೂತ್ಬಿಟ್ಟಿದ್ದಾಳೆ.  ನಾಲ್ಕು ದಿನ ಆಯ್ತು.  ಕಾಯ್ಸೋದು ಬೇಯ್ಸೋದು ಎಲ್ಲಾ ನನ್ ಹಣೇಬರಾನೇ" ಎನ್ನುತ್ತಾ ನಕ್ಕ.  ಅವರಲ್ಲೊಬ್ಬ "ಅಯ್ ಇರ‍್ಲಿ ಬಿಡಿ ಮೇಷ್ಟ್ರೇ" ಅಂದರೆ ಇನ್ನೊಬ್ಬನ ಮುಖದಲ್ಲಿ ಕಿರುನಗೆ ಕಾಣಿಸಿಕೊಂಡಿತು.  ದನಿಯಲ್ಲಿ ಸಲಿಗೆ ತುಂಬಿಕೊಂಡು "ಓ ಹೀಂಗಾ ಸಾ ಸಮಾಚಾರ!  ಮನೇಲಿ ಸೊಲ್ಪ ತಾಪತ್ರಯ ಆಗ್ಬುಟ್ಟದೆ ಅಂತ ನೀವು ಆವಾಗ್ಲೇ ಯೋಳಿದ್ದು ಇದನ್ನೇಯೇನೋ" ಅಂದ.  ಅಪ್ಪ "ಹ್ಞೂ ಅದೇ" ಎನ್ನುತ್ತಾ ನಕ್ಕ.
ಅವರು ಹೊರಟುಹೋದ ನಂತರ ಇಬ್ಬರೂ ಒಳಗೆ ಹೋದೆವು.  ಅಮ್ಮನ ಬಗ್ಗೆ ನಾಲಿಗೆಯ ತುದಿಯವರೆಗೆ ಬಂದ ಪ್ರಶ್ನೆ ಅಲ್ಲೇ ನಿಂತುಬಿಟ್ಟಿತು.  ಯಾವುದೇ ವಿಷಯದ ಬಗ್ಗೆ ಅಪ್ಪನನ್ನು ನೇರವಾಗಿ, ಸರಾಗವಾಗಿ ಪ್ರಶ್ನಿಸುವ ಅಭ್ಯಾಸವೇ ನನಗಿಲ್ಲವಲ್ಲಾ ಎಂಬ ವಾಸ್ತವ ಧುತ್ತನೆ ಎದ್ದು ನಿಂತು ನನ್ನನ್ನು ಕಂಗೆಡಿಸಿಬಿಟ್ಟಿತು.  ನಾಲಿಗೆ ಸವರಿಕೊಳ್ಳುತ್ತಾ ಅಪ್ಪನೇ ಮಾತಾಡಲಿ ಎನ್ನುವಂತೆ ಅವನನ್ನೇ ನೋಡಿದೆ.
"ನನ್ ಕಾಗ್ದ ಸಿಕ್ತಾ ಮಗಾ?" ಅಂದ ಅಪ್ಪ.  "ಹ್ಞೂ"ಗುಟ್ಟಿದೆ.  "ತಕ್ಷಣ ಹೊರಟ್ಬಿಟ್ಟೆ ಅಂತ ಕಾಣುತ್ತೆ?" ಎಂದು ಗೊಣಗಿದ.  ಮರುಕ್ಷಣ ದನಿಯೆತ್ತರಿಸಿ "ನಿಂಗೆ ಹಸಿವಾಗಿರಬೇಕಲ್ಲ?" ಅಂದ.  ನಾನು ಉತ್ತರಿಸುವ ಮೊದಲೇ "ಹತ್ ನಿಮಿಷ್ದಲ್ಲಿ ಅನ್ನ ಸಾರು ಮಾಡಿಬಿಡ್ತೀನಿ.  ಅಲ್ಲೀವರೆಗೆ ತಡಕೋ" ಎನ್ನುತ್ತಾ ಅಡಿಗೆ ಮನೆಯತ್ತ ನಡೆದ.  ನಾನು ಚಡಪಡಿಸತೊಡಗಿದೆ.  ಅಮ್ಮನ ಬಗ್ಗೆ ಮಾತಾಡುವುದನ್ನು ಅಪ್ಪ ಬೇಕೆಂದೇ ತಪ್ಪಿಸುತ್ತಿದ್ದಾನೆ ಅಂದುಕೊಳ್ಳುತ್ತಿದ್ದಂತೇ ಅಡಿಗೆ ಮನೆಯಿಂದ ಅಪ್ಪನ ದನಿ ಕೇಳಿಸಿತು.
"ಇಲ್ಲೇ ಬಾ ಮಗಾ.  ಅಡಿಗೆ ಪಾಡಿಗೆ ಅಡಿಗೆ ಆಗ್ತಾ ಇರುತ್ತೆ.  ನಾವು ಮಾತಾಡಬೋದು."
ಕೊನೆಗೂ ಅವನಿಂದ ವಿಷಯ ತಿಳಿಯುವ ಗಳಿಗೆ ಬಂತೆಂದು ಅಡಿಗೆಮನೆಯತ್ತ ಧಾಪುಗಾಲು ಹಾಕಿದೆ.
ಹುಟ್ಟಿದಾರಭ್ಯದಿಂದ ಅಪ್ಪನನ್ನು ಅಡಿಗೆಮನೆಯಲ್ಲಿ ಒಮ್ಮೆಯೂ ಕಂಡಿರದಿದ್ದ ನನಗೆ ಈಗಿನ ನೋಟ ವಿಚಿತ್ರವಾಗಿ ಕಂಡಿತು.  ಪಂಚೆಯನ್ನು ಮೇಲೆತ್ತಿ ಕಟ್ಟಿಕೊಂಡು, ಹೆಗಲ ಮೇಲೆ ಟವಲೊಂದನ್ನು ಹೊದ್ದು ಅಡಿಗೆಮನೆಯ ಮೂಲೆಯಿಂದ ಮೂಲೆಗೆ ಓಡಾಡುತ್ತಾ ಡಬ್ಬಗಳನ್ನು ತಡಕಾಡುತ್ತಿದ್ದ ಅಪ್ಪ ತಾನೇ ಕಲಿಸಿ ಆಡಿಸುವ ನಾಟಕವೊಂದರ ಪಾತ್ರದಂತೆ ಕಂಡುಬಂದ.  ಅಕ್ಕಿ ತೊಳೆಯುತ್ತಾ "ಈಗ ಇಲ್ಲಿ ನೀನಿರೋದಕ್ಕೆ ಸರಿಹೋಯ್ತು.  ನಿಮ್ಮಣ್ಣ ಇದ್ದಿದ್ರೆ ನನ್ನನ್ನ ಆ ದೇವರೇ ಕಾಪಾಡಬೇಕಾಗ್ತಿತ್ತು" ಎನ್ನುತ್ತಾ ಸಣ್ಣಗೆ ನಕ್ಕ ಅಪ್ಪ.  "ಯಾಕೆ?" ಅಂದೆ.  ಅವನ ನಗು ದೊಡ್ಡದಾಯಿತು.  "ನಾಟಕಗಳನ್ನ ಡೈರೆಕ್ಟ್ ಮಾಡೋ ನೀನು ನಿನ್ನ ಬದುಕನ್ನ ಡೈರೆಕ್ಟ್ ಮಾಡೋದ್ರಲ್ಲಿ ಈ ಥರಾ ಸೋತುಹೋದೆಯಲ್ಲ ಅಂತ ಹಂಗಿಸಿಬಿಡ್ತಿದ್ದ."  ಬಾಯಿ ತೆರೆದು ನಕ್ಕ.
ಅಪ್ಪನ ನಾಟಕದ ಗೀಳು ಅಣ್ಣನಿಗೆ ಸ್ವಲ್ಪವೂ ಇಷ್ಟವಾಗಿರಲಿಲ್ಲ ಎಂಬ ವಿಷಯ ಥಟ್ಟನೆ ನೆನಪಿಗೆ ಬಂದು ಅಪ್ಪ ಹೇಳಿದ್ದು ಸರಿ ಅನ್ನಿಸಿತು.  ಹಿಂದೆಯೇ ಅಪ್ಪನ ಈ ಮಾತು ಮುಂದೆ ಹೇಳಲಿರುವ ಯಾವುದೋ ನೋವಿನ ಸುದ್ದಿಗೆ ಪೀಠಿಕೆಯೇನೋ ಎಂದೆನಿಸಿ ಅಧೀರನಾದೆ.
ಅಪ್ಪನಿಗೆ ನನ್ನ ಮುಖದಲ್ಲಿ ಚಿಂತೆಯ ಎಳೆ ಕಂಡಿತೇನೋ, ಸಮಾಧಾನಿಸುವ ದನಿ ಹೊರಡಿಸಿದ: "ಗಾಬರಿಯಾಗಬೇಡ.  ಅಂಥಾದ್ದೇನೂ ಆಗಿಲ್ಲ.  ನಿಮ್ಮಮ್ಮನ ಜತೆ ನಾನೇನೂ ಭಾರೀ ಜಗಳ ಆಡಿಲ್ಲ.  ಏನೋ ಒಂದು ಸಣ್ಣ ಮಾತು ಅಷ್ಟೇ."
ಸುತ್ತಿ ಬಳಸಿ ದಿಕ್ಕು ತಪ್ಪಿಸುತ್ತಾ ಥಟಕ್ಕನೆ ಮಾತಿನ ಚಾಟಿ ಬೀಸುವ ನಾಟಕದ ಚಾಲಾಕೀ ಪಾತ್ರವೊಂದರಂತೆ ಕಂಡುಬಂದ ಅಪ್ಪ.  ಅವನ ಇಲ್ಲಿಯವರೆಗಿನ ವರ್ತನೆ ಅವನದೇ ನಾಟಕವೊಂದರ ರಿಹರ್ಸಲ್ ಇರಬಹುದೇ ಎಂಬ ಅನುಮಾನ ನನಗಾಯಿತು.  ನನ್ನೆದೆಯೊಳಗಿನ ಗೊಂದಲದ ಪರಿವೇ ಇಲ್ಲದಂತೆ ಅವನು ಅನ್ನಕ್ಕಿಡುತ್ತಾ ಮಾತು ಮುಂದುವರೆಸಿದ: "ಗಂಡ ಹೆಂಡತೀ ಮಧ್ಯೆ ಏನೋ ಒಂದು ಮಾತು ಬಂತು.  ಭಾಳಾ ಸಣ್ಣ ಮಾತು.  ಅಷ್ಟಕ್ಕೇ ನಿಮ್ಮಮ್ಮ ಕೋಪ ಮಾಡ್ಕೊಂಡು ಒಂದು ಇಡೀ ದಿನ ಊಟ ಬಿಟ್ಟಳು.  ಮಾರನೇ ಬೆಳಿಗ್ಗೆ ಬೆಳಿಗ್ಗೆಯೇ ಎದ್ದು ಸೀದಾ ನಿಮ್ಮ ಚಿಕ್ಕಮ್ಮನ ಮನೆಗೆ ನಡೆದುಬಿಟ್ಟಳು."
ಅಮ್ಮ ಕೋಪ ಮಾಡಿಕೊಂಡು ಊಟ ಬಿಡುವುದು!  ಇದು ನಂಬಲಾಗದ ವಿಷಯ.  ಅಥವಾ ವಿಷಯ ಅಪ್ಪ ಹೇಳುವಷ್ಟು ಕ್ಷುಲ್ಲಕವಾಗಿಲ್ಲದಿರಬಹುದೇ?  ಅಣ್ಣ ಬೆಂಗಳೂರು ಸೇರಿ, ಅಕ್ಕ ಮದುವೆಯಾಗಿ ಚಾಮರಾಜನಗರದಲ್ಲಿ ಸಂಸಾರ ಹೂಡಿ, ಅದರ ಬೆನ್ನ ಹಿಂದೆಯೇ ನಾನೂ ಊರು ಬಿಟ್ಟು ಮೈಸೂರು ಸೇರಿ ಗಂಗೋತ್ರಿ ಹಾಸ್ಟೆಲ್ ವಾಸ ಆರಂಭಿಸಿದ ನಂತರ ಮನೆಯಲ್ಲುಳಿದ ಅಪ್ಪ ಅಮ್ಮನ ನಡುವಿನ ಸಂಬಂಧ ಈ ಏಳೆಂಟು ತಿಂಗಳುಗಳಲ್ಲಿ ಯಾವಯಾವ ಆಯಾಮಗಳನ್ನು ಪಡೆದುಕೊಂಡಿರಬಹುದು ಎಂದು ಯೋಚಿಸುತ್ತಾ ಹೋದಂತೆ ಏನೊಂದೂ ಅರ್ಥವಾಗದೇ ಉತ್ತರಗಳಿಗಿಂತಲೂ ಹೆಚ್ಚಾಗಿ ಚಿತ್ರ ವಿಚಿತ್ರ ಪ್ರಶ್ನೆಗಳೇ ಮೂಡತೊಡಗಿದವು.  ಅಪ್ಪನನ್ನು ಅದು ಕೇಳಬೇಕು ಇದು ಕೇಳಬೇಕು ಎನಿಸಿ ಎನೊಂದೂ ಕೇಳಲಾಗದೇ ಕೊನೆಯಲ್ಲಿ ತಲೆಗೆ ಹೊಳೆದ "ಅಣ್ಣಂಗೂ ಅಕ್ಕಂಗೂ ವಿಷಯ ತಿಳಿಸಿದ್ಯಾ?" ಎಂಬ ಪ್ರಶ್ನೆಯನ್ನು ಆತುರಾತುರವಾಗಿ ಹೊರಹಾಕಿ ಅವನನ್ನೇ ನೋಡುತ್ತಾ ನಿಂತೆ.
"ನೋಡೂ, ಅವರಿಬ್ಬರಿಗೂ ಅವರದ್ದೇ ಸಂಸಾರ ತಾಪತ್ರಯಗಳು.  ಅದರ ನಡುವೆ ನನ್ನದನ್ನೂ ಅವರ ಮುಂದೆ ಹಿಡಿಯಲೇ?" ಎನ್ನುತ್ತಾ ನಕ್ಕ ಅಪ್ಪ.  ನಗುತ್ತಲೇ ಮುಂದುವರೆಸಿದ: "ಅವರಿಗೆಲ್ಲಾ ಹೇಳುವಂಥ ದೊಡ್ಡ ವಿಷಯವೇನಲ್ಲ ಬಿಡು."  ಮಾತು ಮುಗಿಸಿ ಈರುಳ್ಳಿಯ ಸಿಪ್ಪೆ ಬಿಡಿಸತೊಡಗಿದ.
"ದೊಡ್ಡದಲ್ಲ ಅಂದರೆ!  ಅದೇನು ನಡೆಯಿತು?"  ಥಟಕ್ಕನೆ ಕೇಳಿಬಿಟ್ಟು ಸಿಗುವ ಉತ್ತರ ಎಂಥದಿರಬಹುದೆಂದು ಒಳಗೊಳಗೇ ಬೆವರತೊಡಗಿದೆ.
"ಅದೆಲ್ಲಾ ನಿನಗರ್ಥವಾಗೋಲ್ಲ ಬಿಡು."  ಗೊಣಗಿ ಈರುಳ್ಳಿಯನ್ನು ಆವೇಶದಿಂದಲೋ ಎಂಬಂತೆ ಚಕಚಕನೆ ಕತ್ತರಿಸತೊಡಗಿದ.
ಅವನು ಏನೂ ಹೇಳದೇಹೋದುದಕ್ಕೆ ಬೇಸರವೂ, ಅವನಿಂದ ಕೆಟ್ಟ ಸುದ್ದಿಯೊಂದು ಹೊರಬರದೇ ಇದ್ದುದಕ್ಕೆ ಸಮಾಧಾನವೂ ಒಟ್ಟಿಗೇ ಆಗಿ ಚಿಂತೆಯೂ ಅಲ್ಲದ, ನೆಮ್ಮದಿಯೂ ಅಲ್ಲದ ಅಥವಾ ಅವೆರಡು ಒಟ್ಟಿಗೆ ಮೇಳೈಸಿದಂಥ ವಿಚಿತ್ರ ಮನಸ್ಥಿತಿಯಲ್ಲಿ ಮತ್ತೇನೂ ಕೇಳಲಾಗದೇ ಸುಮ್ಮನೆ ನಿಂತುಬಿಟ್ಟೆ.
"ಹಾಳು ಈರುಳ್ಳಿ" ಎನ್ನುತ್ತಾ ಅಪ್ಪ ಟವಲ್‌ನ ಅಂಚಿನಿಂದ ಕಣ್ಣೊರೆಸಿಕೊಂಡ.  ನನ್ನತ್ತ ನೋಡದೇ ಸ್ವಗತದಂತೆ ಮಾತು ಮುಂದುವರೆಸಿದ: "ಏನು ನಡೀತು ಅಂತ ನಾ ನಿಂಗೆ ಹೇಳೋದಿಲ್ಲ.  ನೀ ಕೇಳಬೇಡ.  ನಿನಗೆ ಕಾಗದ ಬರೆದದ್ದು ಒಂದೇ ಒಂದು ಕಾರಣಕ್ಕೆ.  ನಿಮ್ಮಮ್ಮ ಬೇರೆ ಎಲ್ಲಿಗೆ ಹೋಗಿದ್ರೂ, ನಿನ್ನ ದೊಡ್ಡಮಾವನ ಮನೆಗೆ ಹೋಗಿದ್ರೂ ಸಹಾ ನಾನು ನೇರವಾಗಿ ಅಲ್ಲಿಗೆ ಹೋಗಿ ಅವಳನ್ನ ಕರಕೊಂಡು ಬರ್ತಿದ್ದೆ.  ಆದ್ರೆ ಆ ನಿನ್ನ ಸರೋಜ ಚಿಕ್ಕಮ್ಮನ ಮನೆಯೊಳಗೆ ಮಾತ್ರ ಒಂಟಿಯಾಗಿ ಕಾಲಿಡೋದಿಕ್ಕೆ ನಾನು ಹಿಂಜರೀತೀನಿ.  ಅದ್ಯಾಕೆ ಅಂತೀಯ?...  ಹ್ಞುಂ ಬಿಡು... ಅದೊಂದ್ ಕಥೆ.  ಅದೆಲ್ಲಾ ಈಗ್ಯಾಕೆ ಬಿಡು."  ಮತ್ತೊಮ್ಮೆ ಕಣ್ಣಿಗೆ ಟವಲ್ ಒತ್ತಿದ.  ಮತ್ತೆ ಬಾಯಿ ತೆರೆಯಲಿಲ್ಲ.
ನಾನು ದಂಗಾಗಿ ನಿಂತುಬಿಟ್ಟೆ.  ಏನು ಹೇಳಬೇಕು, ಕೇಳಬೇಕು ಎಂದು ಹೊಳೆಯಲಿಲ್ಲ.  ಅಪ್ಪನ ಮಾತುಗಳು, ಅಡಿಗೆ ಮನೆಯಲ್ಲಿನ ಅವನ ಓಡಾಟಗಳು, ಇಡಿ ಸನ್ನಿವೇಶದಲ್ಲಿದ್ದ ಅತೀ ಹೊಸತನ, ಅದಕ್ಕೆ ಸುತ್ತಿಕೊಂಡಿದ್ದ ಅಪರಿಚಿತ ನಿಗೂಢತೆ- ಎಲ್ಲವೂ ಒಟ್ಟಿಗೆ ಸೇರಿ ನನ್ನನ್ನು ಯಾವುದೋ ಅರ್ಥವಾಗದ ಮಾಯಾಲೋಕವೊಂದರೊಳಗೆ ಕೂಡಿಹಾಕಿಬಿಟ್ಟವು.
ಅಡಿಗೆಯಾಯಿತು.  ಅಪ್ಪ ತಟ್ಟೆ ಇಟ್ಟ.  "ಸಾಕಾ?,  ಹ್ಞೂ,  ಬೇಕಾ?, ಬೇಡ"ಗಳ ನಡುವೆ ಊಟದ ಶಾಸ್ತ್ರ ಮುಗಿಯಿತು.  ನನ್ನ ಮಂಚದ ಪಕ್ಕದಲ್ಲೇ ಅಪ್ಪ ನೆಲದ ಮೇಲೆ ಚಾಪೆ ಹಾಸಿಕೊಂಡ.  ದೀಪ ಆರಿಸಿ ಮಲಗುತ್ತಾ "ಬೆಳಿಗ್ಗೆ ಬೆಳಿಗ್ಗೇನೇ ಅಲ್ಲಿಗೆ ಹೋಗಿಬಿಡೋಣ ಮಗಾ.  ನಿಮ್ಮಮ್ಮನ್ನ ಕರಕೊಂಡು ನಾನು ಇಲ್ಲಿಗೆ ಬಂದುಬಿಡ್ತೀನಿ.  ಕ್ಲಾಸುಗಳು ತಪ್ಪಿಸಿಕೋಬಾರದು ಅಂತಿದ್ರೆ ನೀನು ಅಲ್ಲಿಂದ್ಲೇ ಮೈಸೂರಿನ ಬಸ್ಸು ಹತ್ತಿಬಿಡು.  ನಾನೂ ಅಮ್ಮನೂ ಬಸ್ ಸ್ಟ್ಯಾಂಡಿಗೆ ಬಂದು ಬಸ್ ಹತ್ತಿಸ್ತೀವಿ." ಅಂದವನೇ ಅತ್ತ ತಿರುಗಿ ಮಲಗಿಬಿಟ್ಟ.  ಮತ್ತೆ ಒಂದು ಮಾತೂ ಇಲ್ಲ.  ನಾನು ಗೋಡೆಯತ್ತ ತಿರುಗಿದೆ... ನಿದ್ದೆ ಬರುವ ಹೊತ್ತಿಗೆ ಒಂದು ಯುಗ ಕಳೆದಿತ್ತು.
ಬೆಳಿಗ್ಗೆ ಎಚ್ಚರವಾದಾಗ ಅಪ್ಪ ಆಗಲೇ ಎದ್ದು ಸ್ನಾನವನ್ನೂ ಮುಗಿಸಿದ್ದ.  ಹಲ್ಲುಜ್ಜಿ ಮುಖ ತೊಳೆದು ಬಂದಾಗ ಟೀ ಲೋಟ ಕೈಗಿತ್ತ.  "ಹೇಗೂ ನಡೆದೇ ತಾನೆ ನಾವು ಹೋಗೋದು.  ಅಲ್ಲೇ ದಾರೀನಲ್ಲಿ ಚಂದ್ರಣ್ಣನ ಹೋಟೇಲಿನಲ್ಲಿ ತಿಂಡಿ ಮಾಡಿಬಿಡುವಾ.  ಏನಂತಿ?" ಅಂದ.  "ತಿಂಡಿ ಗಿಂಡಿ ಏನೂ ಬೇಡ" ಅಂದೆ.
ನಾನು ಸ್ನಾನ ಮುಗಿಸುವ ಹೊತ್ತಿಗೆ ಅಪ್ಪ ಬಿಳೀ ಪಂಚೆ ಉಟ್ಟುಕೊಂಡು, ತುಂಬು ತೋಳಿನ ಬಿಳೀ ಶರಟು ತೊಟ್ಟುಕೊಂಡು, ಹೆಗಲ ಮೇಲೊಂದು ಹಳದೀ ಬಣ್ಣದ ಉದ್ದನೆಯ ಟವಲ್ ಹಾಕಿಕೊಂಡು, ಕೈಯಲ್ಲಿ ಮನೆಯ ಬೀಗ ಹಿಡಿದು ತಯಾರಾಗಿ ನಿಂತುಬಿಟ್ಟಿದ್ದ.  ಆತುರಾತುರವಾಗಿ ಬಟ್ಟೆ ಧರಿಸಿದೆ.
"ಯಾವಾಗ ಬಂದೆ?  ಕಾಣಿಸ್ಲೇ ಇಲ್ಲಾ?" ಎಂದು ದಾರಿಯಲ್ಲಿ ಎದುರು ಸಿಕ್ಕಿ ಪ್ರಶ್ನೆ ಹಾಕಿದ ಹಲವಾರು ಪರಿಚಿತರಲ್ಲಿ ಕೆಲವರಿಗೆ ನಾನೂ, ಇನ್ನು ಕೆಲವರಿಗೆ ಅಪ್ಪನೂ "ನಿನ್ನೆ ರಾತ್ರಿ" ಎಂದು ಉತ್ತರ ಕೊಟ್ಟೆವು.
ಊರು ದಾಟಿದ ಮೇಲೆ ನಮ್ಮ ಹೆಜ್ಜೆ ಚುರುಕಾಯಿತು.  ಅಪ್ಪ ಮೌನವಾಗಿದ್ದ.  ಏನು ಕೇಳಿದರೆ ಏನು ಉತ್ತರ ಸಿಗುತ್ತದೋ ಎಂಬ ಹೆದರಿಕೆಯಲ್ಲಿ ನಾನೂ ಮೌನವಾಗಿ ನಡೆದೆ.  ಅಮ್ಮನನ್ನು ನೋಡುವ ಆತುರ, ಎಲ್ಲ ಪ್ರಶ್ನೆಗಳಿಗೆ ಅವಳಿಂದ ಉತ್ತರ ಸಿಗಬಹುದೆಂಬ ನಿರೀಕ್ಷೆಯಿಂದಲೋ ಏನೋ ನನ್ನ ಹೆಜ್ಜೆ ಚುರುಕಾಗಿಬಿಟ್ಟಿತ್ತು.
ಒಂದುಮೈಲಿ ಟಾರ್ ರಸ್ತೆಯಲ್ಲಿ ನಡೆದು, ಒಣಗಿಹೋಗಿದ್ದ ಕೆರೆಯೊಳಗಿಳಿದು, ಮರಡೀ ಗುಡ್ಡ ಸುತ್ತಿ, ಬೃಹದಾಕಾರದ ಬಸರೀ ಮರದ ಬಳಿ ಎರಡಾಗುವ ರಸ್ತೆಯ ಬಲ ಸೀಳಿನಲ್ಲಿ ಹತ್ತು ಹೆಜ್ಜೆ ನಡೆದರೆ ಸರೋಜ ಚಿಕ್ಕಮ್ಮನ ಮನೆ.  ಚುರುಕಾಗಿ ನಡೆದರೆ ಅರ್ಧಗಂಟೆ ಸಾಕು.  ಹಿಂದೆ ಹಲವಾರು ಸಲ ನಾನೂ ಮಾಲಕ್ಕನೂ ಪಂಥ ಕಟ್ಟಿಕೊಂಡು ಓಡುನಡಿಗೆಯಲ್ಲಿ ಇಪ್ಪತ್ತೇ ನಿಮಿಷದಲ್ಲಿ ತಲುಪಿದ್ದೂ ಉಂಟು.
ಕೆರೆ ದಾಟಿ ಗುಡ್ಡ ಸಮೀಪಿಸುತ್ತಿದ್ದಂತೇ ಅಪ್ಪ ಕೇಳಿದ: "ಹಸಿವಿಲ್ವಾ ಮಗಾ?  ರಾತ್ರಿ ಬೇರೆ ನೀನು ಸರಿಯಾಗೇ ಊಟ ಮಾಡ್ಲಿಲ್ಲ.  ನನ್ನ ಕೈನ ಊಟ...  ಹ್ಞುಹ್!  ದೇವರಿಗೇ ಪ್ರೀತಿ.  ನಿಂಗೆ ಹಿಡಿಸ್ಲಿಲ್ವೋ ಏನೋ."  ಅವನ ದನಿ ಸಹಜವಾಗಿತ್ತು.
"ಇಲ್ಲ.  ಹಂಗೇನಿಲ್ಲ.  ಚೆನ್ನಾಗೇ ಇತ್ತು" ಅಂದೆ.  "ಅಷ್ಟಾದರೂ ಮಾಡಿದೆಯಲ್ಲ?" ಎಂದು ಸೇರಿಸಿದೆ.
ಅಪ್ಪ ನಕ್ಕ.  "ಅಡಿಗೆ ಮಾಡೋದೇನೂ ದೊಡ್ಡ ವಿಷಯ ಅಲ್ಲ ಮಗಾ.  ಆದ್ರೆ ಆ ಪಾತ್ರೆ ಗೀತ್ರೆ, ಸೌಟು ಸಟ್ಟುಗ ತೊಳೆಯೋದು ಇದೆಯಲ್ಲಾ ಅದು ಮಾತ್ರ ರಗಳೆ.  ಕೊನೆ ಪಕ್ಷ ಅವನ್ನ ತೊಳೆಯೋದಕ್ಕಾದ್ರೂ ಮನೇಲಿ ಹೆಂಡ್ತಿ ಅನ್ನೋಳು ಇರಬೇಕು."
"ಅಂದ್ರೆ ಈಗ ಅಮ್ಮನ್ನ ಕರಕೊಂಡು ಬರೋದು ಪಾತ್ರೆ ತೊಳೆಯೋದಿಕ್ಕೆ ಒಬ್ಳು ಮನೇಲಿರ‍್ಲಿ ಅಂತಾನಾ?"  ನಿನ್ನೆ ರಾತ್ರಿಯಿಂದ ಎದೆಯೊಳಗಿದ್ದ ಅಸಹನೆ ಕಟ್ಟೆಯೊಡೆದು ಹೊರಚಿಮ್ಮಿ ನನ್ನನ್ನೇ ಅವಾಕ್ಕಾಗಿಸಿತು.
ಅಪ್ಪ ಥಟ್ಟನೆ ನಿಂತ.  "ಛೆಛೇ.  ತಮಾಷೆ... ತಮಾಷೆಗೆ ಹಾಗಂದೆ ಅಷ್ಟೇ."  ತಡವರಿಸಿದ.  ನನ್ನ ತೋಳು ಹಿಡಿದ.  "ಹಂಗಲ್ಲ ಮಗಾ.  ನಿಮ್ಮಮ್ಮನ್ನ ಕರಕೊಂಡು ಬರೋದು ಪಾತ್ರೆ ತೊಳೆಯೋದಿಕ್ಕಲ್ಲ.  ನನ್ ಮನೇಲಿ ಮತ್ತೆ ಬೆಳಕು ಮೂಡಿಸೋದಿಕ್ಕೆ."  ಥಟಕ್ಕನೆ ಮಾತು ನಿಲ್ಲಿಸಿದ.  ಆತುರಾತುರವಾಗಿ ಮತ್ತೆ ಆರಂಭಿಸಿದ: "ನಿನ್ನೆ ರಾತ್ರಿಯಿಂದ ನೀನೇ ನೋಡಿದ್ದೀಯೆ.  ಆ ಮನೆ ಮನೇ ಥರಾ ಇದೆಯಾ?  ನೀನೇ ಹೇಳು?"  ನನ್ನ ಉತ್ತರಕ್ಕೂ ಕಾಯದೇ ಮುಂದುವರೆಸಿದ: "ಆ ಮನೇಲಿ ಅವಳಿದ್ರೇ ಅದು ಮನೆ ಅನ್ನಿಸ್ಕೊಳ್ಳೋದು.  ಎಲ್ಲಾನೂ ಒಪ್ಪ ಓರಣವಾಗಿ ಅವ್ಳು ನಡೆಸ್ಕೊಂಡು ಹೋದ್ರೆ ಮನೇಲಿ ಶಾಂತಿ ನೆಮ್ಮದಿ ಇರುತ್ತೆ.  ಮನೇಲಿ ಶಾಂತಿ ನೆಮ್ಮದಿ ಸಿಕ್ಕಿದ್ರೆ ಸಾಕು, ನಾನು ಹೊರಗೆ ಹೋಗಿ ಇಡೀ ಜಗತ್ತನ್ನೇ ಜಯಿಸ್ಕೊಂಡು ಬರಬಲ್ಲೆ.  ಈಗ ಮನೇಲಿ ಅವಳಿಲ್ಲ.  ಅದು ಮನೇ ಅಲ್ಲ.  ಅದರರ್ಥ ನಾನು ಇನ್ನು ಬದುಕಿದ್ದೂ ಸತ್ತ ಹಾಗೆ.  ನಿಮ್ಮಮ್ಮ..."
ಹಿಂದೆ ಕರುವೊಂದನ್ನು ಹಿಡಿದುಕೊಂಡು ಬರುತ್ತಿದ್ದ ಹಳ್ಳಿ ಹುಡುಗನೊಬ್ಬ ತಾರಕ ದನಿಯಲ್ಲಿ ಹಾಡಿದ:

                        ಹರನೇ ಶಿವಪ್ಪ ಕಾಯೋ ತಂದೆ
                        ಮೂರು ಸೇರು ಕಡಲೆ ತಿಂದೆ
                        ಹೂಸನ್ನು ತಡೆಯಲಾರೆ
                        ಕಾಪಾಡಯ್ಯಾ...  ಶಿವನೇ ಕಾಪಾಡಯ್ಯಾ

ನಗು ಬಂತು.  ಅಪ್ಪನ ಕಡೆ ನೋಡಿದೆ.  ಥಟಕ್ಕನೆ ಮಾತು ನಿಲ್ಲಿಸಿದ್ದ ಅವನ ಮುಖದಲ್ಲೂ ನಗೆಯ ಎಳೆ.  ನನ್ನ ನಗೆಯನ್ನು ನೋಡಿದವನೇ ಬಾಯಿ ತೆರೆದೇ ನಗತೊಡಗಿದ.
"ನೋಡು, ನಿನ್ನ ಯಾವ್ದಾದ್ರೂ ನಾಟಕದಲ್ಲಿ ಇದನ್ನ ಸೇರಿಸ್ಕೊಳ್ಳೋದಿಕ್ಕೆ ಆಗುತ್ತಾ?" ಅಂದೆ.  ಅವನ ಜತೆ ಸಹಜವಾಗಿ ಮಾತಾಡಲು ಸಾಧ್ಯವಾದುದಕ್ಕಾಗಿ ನೆಮ್ಮದಿಯೆನಿಸಿತ್ತು.
ಅಪ್ಪನ ನಗು ದೊಡ್ಡದಾಯಿತು.
"ಅಣ್ಣಾವ್ರ ಅಭಿಮಾನಿ ದೇವರುಗಳು ಕಲ್ಲು ಹೊಡಿತಾರೆ ಅಷ್ಟೆ.  ಅದೆಲ್ಲಿ ಗ್ರಾಚಾರ ಬಿಡು."  ನಗುತ್ತಲೇ ಹೇಳಿದ ಅಪ್ಪ.  ಆ ಹುಡುಗನಂತೂ ಯಾರ ಪರಿವೆಯೂ ಇಲ್ಲದೇ ಆ ಹಾಡನ್ನು ಮತ್ತೆ ಮತ್ತೆ ಹೇಳುತ್ತಾ ಕರುವನ್ನು ಓಡಿಸಿಕೊಂಡು ನಮ್ಮನ್ನು ದಾಟಿ ಮುಂದೆ ಹೋದ.  ನಾವು ನಗುತ್ತಲೇ ಮುಂದೆ ಹೆಜ್ಜೆಯಿಟ್ಟೆವು.  ಮುಂದಿನ ಮೂರು ಹೆಜ್ಜೆಗಳಲ್ಲಿ ಮುಖದಲ್ಲಿನ ನಗೆ ಕರಗಿಹೋಗಿ ನಿಮಿಷಗಳ ಹಿಂದೆ ಅಪ್ಪನೊಡನೆ ಆಡಿದ ಬಿರುಸು ಮಾತು, ಅದಕ್ಕವನ ಉತ್ತರ, ಅದು ಪ್ರಕಟವಾದ ಬಗೆ- ಎಲ್ಲವೂ ನೆನಪಾಗಿ ಮತ್ತೆ ಬಾಯಿ ತೆರೆದರೆ ಅಂಥದೇ ಸನ್ನಿವೇಶಕ್ಕೆ ಸಿಲುಕಿಕೊಳ್ಳಬಹುದೆಂಬ ವಿಲಕ್ಷಣ ಭಯ ಏಕಾಏಕಿ ಮೂಡಿ ವಿಚಿತ್ರ ಕಂಪನವನ್ನನುಭವಿಸಿದೆ.  ಆ ಕ್ಷಣದಲ್ಲಿ ಮೌನ ಅತ್ಯಂತ ಪ್ರಿಯವಾಗಿಬಿಟ್ಟಿತು.  ಅಪ್ಪನತ್ತ ಓರೆಗಣ್ಣಿನಲ್ಲಿ ನೋಡಿದೆ.  ಅವನು ನಿಧಾನವಾಗಿ ಹೆಜ್ಜೆ ಕೀಳುತ್ತಿದ್ದ.  ತಲೆ ತಗ್ಗಿತ್ತು.
ಮರಡೀ ಗುಡ್ಡ ಬಳಸಿ ಚೌಡೇಶ್ವರಿ ಗುಡಿ ಸಮಿಪಿಸಿದೆವು.  ಅಲ್ಲೊಬ್ಬಳು ಹುಚ್ಚಿ ರಸ್ತೆ ಬದಿಯಲ್ಲಿ ಅಸ್ತವ್ಯಸ್ತವಾಗಿ ಬಿದ್ದುಕೊಂಡಿದ್ದಳು.
ಎಣ್ಣೆಕಾಣದ ತಲೆಗೂದಲು ಬಣ್ಣ ಕಳೆದುಕೊಂಡು ಜಡೆಗಟ್ಟಿತ್ತು.  ಸಗಣಿ ಬಣ್ಣದ ಹರಿದ ಸೀರೆ ಮಂಡಿಯ ಮೇಲೇರಿ ತೊಡೆಗಳನ್ನು ಅರ್ಧದವರೆಗೆ ಬತ್ತಲುಗೊಳಿಸಿತ್ತು.  ಎದೆ ಮುಚ್ಚಿದ್ದುದ್ದು ಬಣ್ಣ ಮಾಸಿದ ನೀಲೀ ರವಿಕೆ.  ಅದೂ ಅಲ್ಲಲ್ಲಿ ಹರಿದುಹೋಗಿತ್ತು.  ಸೆರಗು ಎದೆ ಬಿಟ್ಟು ನೆಲದ ಮೇಲೆ ಸತ್ತ ಹಾವಿನಂತೆ ಮುದುರಿಕೊಂಡು ಬಿದ್ದಿತ್ತು.  ತನ್ನ ಪಾಡಿಗೆ ತಾನು ಮಣಮಣ ಗೊಣಗಿಕೊಳ್ಳುತ್ತಿದ್ದಳು.  ಅವಳ ಸುತ್ತಲೂ ಅಲ್ಲಲ್ಲಿ ಕೆಲವು ಪುಡಿಗಾಸುಗಳು ಬಿದ್ದಿದ್ದವು.
ಅಪ್ಪ ಲೊಚಗುಟ್ಟಿದ.  "ಹುಚ್ಚು ಜನ!  ಅವಳ ಮುಂದೆ ಕಾಸು ಎಸೆದಿದ್ದಾರಲ್ಲ.  ಅದರ ಬದಲು ಏನಾದರೂ ತಿನ್ನೋದಿಕ್ಕೆ ಕೊಂಡು ಕೊಡಬಾರದಿತ್ತಾ.  ಛೇ ಛೇ."
ಅಸಹ್ಯ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಅವಳ ಮುಂದೆ ನಿಂತು ಅವಳ ಕೈಗೆ ತಿಂಡಿ ಕೊಡುವುದಕ್ಕಿಂತಾ ಕೈಗೆ ಸಿಕ್ಕಿದ ಕಾಸು ಎಸೆದು ಮುಂದೆ ಹೋಗುವುದು ಸುಲಭದ ಕೆಲಸ ಅಂತ ಜನ ಭಾವಿಸಿರಬಹುದು ಎಂದು ನನಗನಿಸಿತು.  ಆದರೆ ಏನೂ ಹೇಳಲಿಲ್ಲ.
ನೆಲದ ಮೇಲೆ ಅಲ್ಲಲ್ಲಿ ಮೂತಿಯಾಡಿಸುತ್ತಾ ನಿಧಾನವಾಗಿ ಕಾಲೆಳೆಯುತ್ತಿದ್ದ ಬಡಕಲು ದನವೊಂದನ್ನು ತಪ್ಪಿಸಿ ನಾಲ್ಕು ಹೆಜ್ಜೆ ನಡೆದಂತೆ ಯಾರೋ ಕಿಸಕ್ಕನೆ ನಕ್ಕ ಸದ್ದು ಕೇಳಿ ಹಿಂದೆ ತಿರುಗಿದೆ.  ಅಪ್ಪನೂ ತಿರುಗಿದ.
ರೇಶಿಮೆ ಸೀರೆ ಉಟ್ಟುಕೊಂಡು, ಮೈತುಂಬಾ ಆಭರಣ ಹೇರಿಕೊಂಡು, ಉದ್ದ ಜಡೆಗೆ ಮಲ್ಲಿಗೆ ಮುಡಿದುಕೊಂಡು, ಎಡಗೈಯಲ್ಲಿ ಹೂವು ಹಣ್ಣು ಅಗರಬತ್ತಿಗಳ ಪ್ಯಾಕೆಟ್‌ಗಳಿಂದ ತುಂಬಿದ್ದ ಬ್ಯಾಸ್ಕೆಟ್ ಹಿಡಿದು ಗಂಡನಂತಿದ್ದವನೊಂದಿಗೆ ನಡೆಯುತ್ತಿದ್ದ ಇತ್ತೀಚೆಗಷ್ಟೇ ಮದುವೆಯಾದಂತಿದ್ದವಳೊಬ್ಬಳು ಹುಚ್ಚಿಯ ಕಡೆ ನೋಡಿ ಮತ್ತೊಮ್ಮೆ ಕಿಸಕ್ಕನೆ ನಕ್ಕು ಸೆರಗಿನಿಂದ ಬಾಯಿ ಮುಚ್ಚಿಕೊಂಡಳು.  ಅವಳ ಗಂಡ ರಸ್ತೆಯತ್ತ ಮುಖ ತಿರುಗಿಸಿ ಬಿರಬಿರನೆ ಹೆಜ್ಜೆ ಹಾಕುತ್ತಿದ್ದ.
ಅವರಿಂದ ನೋಟ ಕಿತ್ತು ಹುಚ್ಚಿಯ ಕಡೆ ಹೊರಳಿಸಿದಾಗ ಅವಳ ಹೊಟ್ಟೆ ತುಸು ಉಬ್ಬಿದ್ದಂತೆ ಕಂಡಿತು.
ಆ ಗಳಿಗೆಗೆ ಸರಿಯಾಗಿ ಹುಚ್ಚಿಯನ್ನು ಸಮೀಪಿಸಿದ್ದ ಬೀದಿದನ ಅವಳ ಜಡೆಗಟ್ಟಿದ ಕೂದಲಿಗೆ ಒಮ್ಮೆ ಬಾಯಿ ಹಾಕಿ ಥಟ್ಟನೆ ಮೂತಿಯನ್ನು ಮೇಲೆತ್ತಿ ಪೆಕರುಪೆಕರಾಗಿ ಅತ್ತಿತ್ತ ನೋಡುತ್ತಾ ನಿಂತಿತು.  ಹುಚ್ಚಿ ಕೇಕೆ ಹಾಕಿದಳು.  ನಗುತ್ತಲೇ ಎಡಗೈ ನೆಲಕ್ಕೆ ಊರಿ ಎದ್ದು ಕೂತಳು.  "ಹಸಿವಾಗೈತಾ?  ಹಟ್ಟಿಲೀ ಹುಲ್ಲು ಹಾಕಿದ್ನಲ್ಲ ಅದು ಬ್ಯಾಡ ಅನುಸ್ತಾ?  ಮನೆ ಊಟ ಬುಟ್‌ಬುಟ್ಟು ಬೀದಿ ತಿರುಗ್ತಾ ಇದೀಯಾ ಪೋಲೀ" ಎನ್ನುತ್ತಾ ಬಲಗೈಯೆತ್ತಿ ಹಸುವಿನ ಕೊರಳು ಸವರಿದಳು.  ಹಾಗೇ ಕೈಯನ್ನು ಅದರ ಹೊಟ್ಟೆಯತ್ತ ಕೊಂಡೊಯ್ದಳು.  "ಓ ಹೊಟ್ಟೆ ಒಳ್ಗೆ ಏನೂ ಇಲ್ಲ!  ನಿಂಗೆ ಶ್ಯಾನೇ ಹಸಿವಾಗ್ಬುಟ್ಟದೆ ಅಲ್ವಾ?" ಎನ್ನುತ್ತಾ ದಢಕ್ಕನೆ ಎದ್ದು ನಿಂತಳು.  ಎರಡೂ ಕೈಗಳಿಂದ ಹಸುವಿನ ಕೊರಳನ್ನು ತಬ್ಬಿ "ಅಳಬ್ಯಾಡ ಸುಮ್ನಿರು, ಏನಾದ್ರೂ ತಕ್ಕೊಡ್ತೀನಿ" ಎನ್ನುತ್ತಾ ಅದರ ಕಿವಿಯ ಕೆಳಗೆ ಮುತ್ತಿಟ್ಟಳು.  "ಅಲ್ಲಿ ನೋಡ್ರೀ" ಎನ್ನುತ್ತಾ ರೇಶಿಮೆ ಸೀರೆಯವಳು ಗಂಡನ ಕೈಹಿಡಿದೆಳೆದಳು.  ನಡೆಯುತ್ತಿದ್ದ ಹಲವರು ನಿಂತರು.
ಹುಚ್ಚಿ ಹಸುವಿನ ಕಿವಿಯಲ್ಲಿ ಮತ್ತೇನೇನೋ ಗೊಣಗಿ ಅದರ ಮೂತಿಗೆ ಲೊಚಲೊಚನೆ ಮುತ್ತಿಟ್ಟಳು.  ಹಸು ಕಣ್ಣುಗಳನ್ನು ಅರೆಮುಚ್ಚಿ ನಿಂತುಬಿಟ್ಟಿತ್ತು.
ಕಣ್ಣುಗಳನ್ನು ಅರೆಮುಚ್ಚಿ ನಿಂತಿದ್ದ ಕುಳ್ಳನೆಯ ಬಿಡಾಡಿ ಬಡಕಲು ದನ, ಅದರ ಕೊರಳು ತಬ್ಬಿ ಮುತ್ತಿಡುತ್ತಿರುವ ಹುಚ್ಚಿ, ದನದ ಮೋಟು ಬಾಲ, ನೆಲದ ಮೇಲೆ ಬಿದ್ದು ಹೊರಳಾಡಿಸುತ್ತಿದ್ದ ಅವಳ ಸೆರಗು, ಅದರ ತಿರುಚಿಕೊಂಡಿದ್ದ ಬೂದು ಕೊಂಬುಗಳು, ಅವಳ ಜಡೆಗಟ್ಟಿದ ಮಾಸಲು ಕೂದಲು...  ಲಳಲಳ ಅಲ್ಲಾಡುತ್ತಿದ್ದ ಅದರ ಗಂಗೆದೊಗಲು, ನಡುವಿನ ಕೆಳಗಿಳಿದಿದ್ದ ಅವಳ ಸೀರೆ...  ಈ ಅಸಂಗತ ಚಿತ್ರಕ್ಕೊಂದು ಅನ್ವರ್ಥ ಶಿರ್ಷಿಕೆಯಂತಿದ್ದ "ಇದೆಂಥಾ ಹುಚ್ಚಾಟ ನೋಡ್ರಿ" ಎಂಬ ಹೆಣ್ಣುದನಿ...
ನನಗೆ ಹೇಗೆಹೇಗೋ ಅನಿಸತೊಡಗಿತು.  ಅಪ್ಪನತ್ತ ನೋಡಿದೆ.  ಅವನು ನನ್ನತ್ತ ನೋಡಿದ.  "ದುರಂತ ಮಗಾ... ದುರಂತ" ಅಂದ.  ಅವನ ಕಣ್ಣುಗಳಲ್ಲಿ ನೀರಾಡಿದಂತೆ ಕಂಡಿತು.  ತಲೆಯೆತ್ತಿ ಮೇಲೆ ನೋಡಿದೆ.  ಸೂರ್ಯ ಕಣ್ಣು ಕುಕ್ಕಿದ.  "ಬಾ ಹೋಗೋಣ" ಎನ್ನುತ್ತಾ ಅಪ್ಪನ ಕೈಹಿಡಿದೆ.  ಅವನು ಕೈಬಿಡಿಸಿಕೊಂಡ.  ಎದುರಿನ ನೋಟದಿಂದ ಕಣ್ಣು ತೆಗೆಯಲಿಲ್ಲ.  ಸುತ್ತಲಿನ ಜನ ಇಬ್ಬರು ನಾಲ್ಕಾದರು, ನಾಲ್ವರು ಎಂಟಾದರು.
ಹುಚ್ಚಿಗೆ ಆಯಾಸವೆನಿಸಿತೇನೋ, ಒಂದುಕ್ಷಣ ಸುಮ್ಮನೆ ನಿಂತುಬಿಟ್ಟಳು.  "ಹೋಗೇ ಲೌಡೀ ಅತ್ಲಾಗೆ.  ಇವಳೊಬ್ಳು ಬಂದ್‌ಬುಟ್ಲು" ಎನ್ನುತ್ತಾ ಹಸುವನ್ನು ನೂಕಿದಳು.  ಅದು ತಲೆಯನ್ನೊಮ್ಮೆ ಒದರಿ ಅವಳತ್ತ ಮೂತಿ ಚಾಚಿ ಮತ್ತೆ ಕಣ್ಣುಗಳನ್ನು ಅರೆಮುಚ್ಚಿತು.  ಹುಚ್ಚಿ ಕಿಲಕಿಲ ನಕ್ಕಳು.  ಮತ್ತೆ ಅದರ ಕೊರಳು ತಬ್ಬಿದಳು.  "ನಿಂಗೆ ಹಸಿವಲ್ವಾ?...  ಏನ್ ಕೊಡ್ಲಿ ನಿಂಗೆ?" ಅದರ ಕಿವಿಯಲ್ಲಿ ಗೊಣಗಿದಳು.  ಮರುಕ್ಷಣ ದನಿಯೆತ್ತರಿಸಿ "ಹಾಲ್ ಕುಡೀತೀಯ?" ಅಂದಳು.  ಉತ್ತರವಾಗಿ ರೇಶಿಮೆ ಸೀರೆಯವಳು ಕಿಲಕಿಲ ನಕ್ಕಳು.  ಹುಚ್ಚಿ ರವಿಕೆಯ ಎರಡೂ ಅಂಚುಗಳನ್ನು ಬಂಧಿಸಿದ್ದ ಒಂದೇ ಒಂದು ಹುಕ್ಕನ್ನು ಪಟ್ಟನೆ ಕಿತ್ತಳು.  ಹೊರಗೆ ಹರಡಿಕೊಂಡ ಮೊಲೆಗಳಲ್ಲೊಂದನ್ನು ಎತ್ತಿ ಹಸುವಿನ ಮೂತಿಗೆ ಹಿಡಿದಳು.  "ಕುಡಿ ಕುಡಿ.  ಹೊಟ್ಟೆ ತುಂಬೋವಷ್ಟು ಕುಡಿ" ಎನ್ನುತ್ತಾ ಬತ್ತಿದ ಮೊಲೆಯನ್ನು ಅದರ ಬಾಯಿಗೆ ತುರುಕಲು ಪ್ರಯತ್ನಿಸಿದಳು.
ಹಸು ಎರಡು ಹೆಜ್ಜೆ ಹಿಂದಿಟ್ಟಿತು.  ಅವಳು "ಬ್ಯಾಡ ಅಂತೀಯಲ್ಲ?  ಹಿಂಗಾದ್ರೆ ಹೆಂಗೆ?  ಕುಡ್ಕೋ ಬಾ" ಎನ್ನುತ್ತಾ ಮೊಲೆಯನ್ನು ಎತ್ತಿ ಹಿಡಿದಂತೇ ಅದರತ್ತ ಮುನ್ನುಗ್ಗಿದಳು.  ಹಸು ಬೆದರಿದಂತೆ ಕಂಡಿತು.  ತಲೆಯನ್ನು ಅತ್ತಿತ್ತ ರಭಸವಾಗಿ ಆಡಿಸಿತು.  ಹುಚ್ಚಿ ಅದರ ಕೊಂಬು ಹಿಡಿದಳು.
ಅಪ್ಪ ಒಂದು ಹೆಜ್ಜೆ ಮುಂದಿಟ್ಟ.
ಎಡಗೈಯಲ್ಲಿ ಅದರ ಒಂದು ಕೊಂಬು, ಬಲಗೈಯಲ್ಲಿ ಮೊಲೆಯನ್ನು ಎತ್ತಿ ಹಿಡಿದ ಹುಚ್ಚಿ ಏರುದನಿಯಲ್ಲಿ ಅರಚಿದಳು: "ಕುಡಿ ಅಂದ್ರೆ ಕುಡೀಬೇಕು ಕಣಾ.  ಇಲ್ಲದ ಆಟ ಆಡಿದ್ರೆ ನಂಗೆ ಕ್ವಾಪ ಬಂದ್ಬುಡುತ್ತೆ."
ಅಪ್ಪ ಮತ್ತೊಂದು ಹೆಜ್ಜೆ ಮುಂದಿಟ್ಟ.
ಹಸು ಮತ್ತೊಮ್ಮೆ ತಲೆಯನ್ನು ರಭಸವಾಗಿ ಅಲ್ಲಾಡಿಸಿತು.  ಅದರ ಕೊಂಬು ಹುಚ್ಚಿಯ ಕೈಯಿಂದ ತಪ್ಪಿಹೋಯಿತು.  ಮರುಕ್ಷಣ ಹಸು ಅವಳನ್ನು ತಳ್ಳಿಕೊಂಡು ಮುಂದೆ ಓಡಿತು.  ಹುಚ್ಚಿ ಧೊಪ್ಪನೆ ಕೆಳಗೆ ಬಿದ್ದಳು.  ಜನ "ಹೋ" ಎಂದು ನಕ್ಕರು.
ಅಪ್ಪ ಇನ್ನೂ ಒಂದು ಹೆಜ್ಜೆ ಮುಂದಿಟ್ಟ.
ಕೆಳಗೆ ಬಿದ್ದ ಹುಚ್ಚಿ ಒಣಮಲ್ಲಿಗೆಯ ದಂಡೆಯೊಂದನ್ನು ಕಚ್ಚಿ ನೇತಾಡಿಸುತ್ತಾ ಕಾಂಪೌಂಡ್ ಪಕ್ಕ ನಿಂತಿದ್ದ ಹಸುವಿನತ್ತ ತಿರುಗಿ ಕೂಗಿದಳು: "ಏ ಹಾದರ್‌ಗಿತ್ತೀ, ಹಾಲ್ ಕುಡಿ ಅಂದ್ರೆ ಓಡೋಗ್ತೀಯಾ?  ಎಷ್ಟೈತೆ ನಿನ್ ಕೊಬ್ಬು!  ಇರು ನಿಂಗೆ ಸರ‍್ಯಾಗೇ ಮಾಡ್ತೀನಿ.  ನಿಂಗೆ ಇನ್ಯಾವತ್ತೂ ಹಾಲ್ ಕೊಡಲ್ಲ.  ನನ್ ಆಟ್ ಕುಡಿಸ್ತೀನಿ ಬಾ" ಎಂದವಳೇ ಎರಡೂ ಕೈಗಳಿಂದ ಸೀರೆಯನ್ನು ಸರಕ್ಕನೆ ತೊಡೆಗಳ ಮೇಲಕ್ಕೆ ಎಳೆದುಕೊಂಡಳು.  ಬಲಗೈಯನ್ನು ತನ್ನ ಯೋನಿಯತ್ತ ತೋರಿಸುತ್ತಾ "ಬಾ ನನ್ ಆಟ್ ಕುಡಿ ಬಾ ಲೌಡಿ" ಎಂದು ಹಸುವನ್ನು ಕರೆಯತೊಡಗಿದಳು.
"ಹಖ್ ಥೂ" ಎಂದು ಅದ್ಯಾರೋ ಕ್ಯಾಕರಿಸಿ ಉಗಿದರು.  "ನಡೀರಪ್ಪ ಇಲ್ಲಿಂದ.  ಮಾನಗೆಟ್ಟ ಹುಚ್ಚುಮುಂಡೆ ಇವ್ಳು."  ಮತ್ಯಾರೋ ಅಂದರು.  ಅತ್ತ ನೋಡಿದ ನನಗೆ ಕಂಡದ್ದು ಗಂಡನನ್ನು ಎಳೆದುಕೊಂಡು ಓಡುತ್ತಿದ್ದ ರೇಶಿಮೆ ಸೀರೆಯವಳು.  ಅವಳ ಹಿಂದೆ ನಾಲ್ಕಾರು ಗಂಡಸರು.
ಪಕ್ಕಕ್ಕೆ ಹೊರಳಿದೆ.  ಅಪ್ಪ ಕಾಣಲಿಲ್ಲ.  ಹುಚ್ಚಿಯತ್ತ ತಿರುಗಿದೆ.  ಅಪ್ಪ ಅಲ್ಲಿದ್ದ.
"ಅವ್ವಾ ತಾಯೀ ಮೈಮುಚ್ಕೋ.  ಜನಾ ತಿರುಗಾಡೋ ಜಾಗದಲ್ಲಿ ಹೀಗೆ ಮಾಡಬಾರ‍್ದು ಕಣವ್ವ" ಎನ್ನುತ್ತಾ ತನ್ನ ಹೆಗಲ ಮೇಲಿದ್ದ ಟವಲ್ ತೆಗೆದು ಅವಳಿಗೆ ಹೊದಿಸಲು ಹೋದ ಅಪ್ಪ.  ಅವಳು ಅವನತ್ತ ನೋಡಿ ನಗಾಡಿದಳು.  "ನೀ ಬಂದ್ಯಾ?  ಬಾ ಬಾ ನೀನೇ ಕುಡ್ಕೋ ನನ್ ಆಟ್‌ನ" ಎನ್ನುತ್ತಾ ಅಪ್ಪನ ಕೈ ಹಿಡಿದಳು.
ಸುತ್ತಮುತ್ತಲೂ ನಗೆಯ ಅಲೆಯೆದ್ದಿತು.  ನಾನು ಹಿಡಿಯಾಗಿಹೋದೆ.
ಅವಳಿಂದ ಕೈ ಬಿಡಿಸಿಕೊಂಡ ಅಪ್ಪ ಟವಲನ್ನು ಅವಳ ಮೈ ಮೇಲೆ ಹೊದಿಸಿ "ಏನಾದ್ರೂ ತಿಂತೀಯವ್ವ" ಅಂದ.  ಹುಚ್ಚಿಯ ನಗೆ ನಿಂತಿತು.  ಅಪ್ಪನನ್ನೇ ದುರುಗುಟ್ಟಿ ನೋಡಿದಳು.  "ಏಯ್ ಯಾವನೋ ನೀನು?  ನನ್ ಮೈ ಮುಟ್ಟೋಕೆ ಎಷ್ಟ್ ಧೈರ್ಯ ನಿಂಗೆ!"  ದನಿಯೆತ್ತಿ ಅರಚಿದಳು.   ಮರುಕ್ಷಣ ನಕ್ಕಳು.  "ಓ ಈಗ ನೆನಪಾಯ್ತು.  ಶ್ಯಾನೇ ದಿನ ಆಗಿತ್ತು ನಿನ್ ಮೊಕ ಕಂಡು" ಎನ್ನುತ್ತಾ ಅಪ್ಪನ ಎರಡು ಕೈಗಳನ್ನೂ ಹಿಡಿದುಕೊಂಡಳು.  ಅವನನ್ನು ತನ್ನೆಡೆಗೆ ಎಳೆದುಕೊಳ್ಳುತ್ತಾ "ಆಹಾ ಗಂಡಯ್ಯಾ!  ಆವತ್ತು... ಆವತ್ತು... ಆ ಇಸ್ಕೂಲ್ ಹಿಂದ್ಗಡೆ ಕತ್ಲೇಲಿ ಬಂದು ನಂಗೆ ಮಸಾಲೆ ದ್ವ್ಯಾಸೆ ತಿನ್ನಿಸ್ದೋನು ನೀನೇ ಅಲ್ವಾ?" ಅಂದಳು.  ಧಡಕ್ಕನೆ ಮೇಲೆದ್ದು ಅಪ್ಪನನ್ನು ತಬ್ಬಿಕೊಂಡಳು.  ಬಿಡಿಸಿಕೊಳ್ಳಲು ಅಪ್ಪ ಕೊಸರಾಡುತ್ತಿದ್ದಂತೇ ಅವಳು "ಛೆ ಯಂಥೋನು ನೀನು?  ಆವತ್ತು ನನ್ ಸೀರೇನೆಲ್ಲಾ ಕಿತ್ತಾಕ್ಬುಟ್ಟು ಓಡೋದೋನು ಈಗ ಬಂದು ಮೊಕ ತೋರುಸ್ತಿದ್ದೀಯಲ್ಲ!  ಅಯ್ ನನ್ ಗಂಡಯ್ಯಾ" ಎನ್ನುತ್ತಾ ಅಪ್ಪನ ಕೆನ್ನೆಗೆ ಮುತ್ತಿಟ್ಟಳು.
ಜನರ ನಗೆ ತಾರಕಕ್ಕೇರಿತು.  "ಹೇ ಮೇಷ್ಟ್ರೇ ನಿಮಗೇನೂ ಬುದ್ಧಿಗಿದ್ದಿ ಇಲ್ವಾ?"  ಯಾರೋ ಕೂಗಿದರು.  "ಅವಳನ್ನ ಬಿಟ್ಟು ಇತ್ಲಾಗೆ ಬನ್ರೀ" ಮತ್ಯಾರೋ ಅರಚಿದರು.  "ಬಿಡವ್ವ ಬಿಡವ್ವ" ಎನ್ನುತ್ತಾ ಅಪ್ಪ ಕೊಸರಾಡಿದಷ್ಟೂ ಅವಳ ಹಿಡಿತ ಬಿಗಿಯಾಯಿತು.  ಉಡದಂತೆ ಹಿಡಿದುಬಿಟ್ಟಿದ್ದಳು.  ಅಪ್ಪ ನನ್ನತ್ತ ತಿರುಗಿದ.  ಅವನ ಕಣ್ಣುಗಳಲ್ಲಿ ಹತಾಷೆ.  ಮುಖ ಬೆವತುಹೋಗಿತ್ತು.
ಅವನತ್ತ ಓಡಿದೆ.  ಅದ್ಯಾರೋ ಇಬ್ಬರು ನನಗಿಂತಲೂ ಮುಂದೆ ನುಗ್ಗಿ ಹುಚ್ಚಿಯ ಕೈಗಳನ್ನು ಎಳೆದು ಹಾಕಿ ಅಪ್ಪನನ್ನು ಬಿಡಿಸಿದರು.  ಎಳೆದಾಟದಲ್ಲಿ ಹುಚ್ಚಿ ಕೆಳಗೆ ಬಿದ್ದಳು.  ಅಪ್ಪ ನನ್ನತ್ತ ಓಡಿಬಂದ.  ಹುಚ್ಚಿ ಬಿದ್ದಲ್ಲೇ ನಗತೊಡಗಿದಳು.  "ಓಹೋಹೋಹೋ ಬಂದ್ಬುಟ್ಟ ಸರದಾರ!  ಇನ್ನೊಂದ್ಸಲ ನನ್ ಸೀರೆಗೆ ಕೈ ಹಾಕುದ್ರೆ ನಿನ್ ತಿಥಿ ಮಾಡ್ಬುಡ್ತೀನಿ"  ಎಂದು ಬೈದಳು.  ಅಪ್ಪ ಪಂಚೆಯ ತುದಿಯಿಂದ ಮುಖ ಒರೆಸಿಕೊಳ್ಳುತ್ತಾ ಅವಳನ್ನೇ ನೋಡಿದ.  ಅವಳು ಮತ್ತೆ ಬಾಯಿ ತೆರೆದು ಅರಚಿದಳು: "ಏನ್ ಹಾಗೆ ನೋಡ್ತೀಯ? ಹೋಗ್ ಹೊರಟ್ ಹೋಗ್.  ತಿಕ ಮುಚ್ಕಂಡ್ ಹೋಗ್."
ಅಪ್ಪನ ತಲೆ ತಗ್ಗಿತು.  ಗಕ್ಕನೆ ಹಿಂದೆ ತಿರುಗಿದ.  ಅದೇ ಗಳಿಗೆಗೆ ಸರಿಯಾಗಿ ಹುಚ್ಚಿ ತನ್ನ ಪಕ್ಕ ಬಿದ್ದಿದ್ದ ಅಪ್ಪನ ಟವಲ್ ಅನ್ನು ಎತ್ತಿ ಉಂಡೆ ಮಾಡಿ ಅಪ್ಪನತ್ತ ಬೀಸಿ ಒಗೆದಳು.  ಅದು ನೇರವಾಗಿ ಬಂದು ಅಪ್ಪನ ಹಿಂಭಾಗಕ್ಕೆ ಬಡಿಯಿತು.
ಅಪ್ಪ ನನ್ನನ್ನೂ ಎಳೆದುಕೊಂಡು ಹಿಂತಿರುಗಿ ನೋಡದೇ ಓಡತೊಡಗಿದ.  ನಾನು ವಶೀಕರಣಕ್ಕೊಳಗಾದಂತೆ ಅವನ ಜತೆ ಓಡಿದೆ.  ಬಸರೀಮರ ತಲುಪುತ್ತಿದ್ದಂತೇ ಅವನ ಓಟ ನಿಧಾನವಾಯಿತು.  ನನ್ನ ಕೈ ಬಿಟ್ಟು ಏದುತ್ತಾ ನಿಂತುಬಿಟ್ಟ.  ನಾನು ಉಸಿರೆಳೆದುಕೊಳ್ಳುತ್ತಿದ್ದಂತೇ ಅವನು ಕಾಲುಗಳನ್ನು ಎಳೆದುಹಾಕುತ್ತಾ ಹೋಗಿ ಮರದ ಬುಡವನ್ನು ಒರಗಿ ಕೂತ.  ಒಮ್ಮೆ ತಲೆ ಮೇಲೆತ್ತಿದ.  ಅವನ ಕೊರಳ ನರಗಳು ಉಬ್ಬಿದವು.  ಕಣ್ಣರೆಪ್ಪೆಗಳು ಅಂಕೆ ತಪ್ಪಿದಂತೆ ಪಟಪಟ ಬಡಿದುಕೊಂಡವು.
ಅಪ್ಪ ಒಮ್ಮೆ ಬಿಕ್ಕಿದ.
"ಅಪ್ಪಾ" ಎಂದು ಒರಲಿದೆ.  ಅಪ್ಪ ತಲೆ ತಗ್ಗಿಸಿದ.  ಮಂಡಿಗಳ ನಡುವೆ ತಲೆ ಹುದುಗಿಸಿ ಬಿಕ್ಕಿಬಿಕ್ಕಿ ಅಳತೊಡಗಿದ.

--***೦೦೦***--

ಮೇ ೨೦೦೬

1 comment:

  1. ಚೆನ್ನಾಗಿದೆ.... ಆದರೆ ಇದರ ಮುಂದುವರಿದ ಭಾಗ ಪ್ರಕಟಿಸಲಿಲ್ಲವೆ ??? ....

    ReplyDelete