ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, May 28, 2012

ಬಾಳಿಗೊಂದಿಷ್ಟು ಗಾಳಿ

ಕಣ್ಣು ಬಿಟ್ಟಾಗ ಎಲ್ಲವೂ ಹೊಸದು.  ಏನೂ ಗುರುತಿಗೆ ಹತ್ತಲೇ ಇಲ್ಲ.
ಧಡಕ್ಕನೆ ಎದ್ದು ಕೂತೆ.
ಬಲಕ್ಕೆ, ಕೈಚಾಚಿದರೆ ಸಿಗುವಷ್ಟು ದೂರದಲ್ಲಿ ಉದ್ದನೆಯ ಲಾರಿಯೊಂದು ನಿಂತಿತ್ತು.  ಒಬ್ಬ ಅದರ ಕೆಳಗೆ ಮಲಗಿಕೊಂಡು ಏನೋ ಮಾಡುತ್ತಿದ್ದ.  ಮತ್ತೊಬ್ಬ ಅವನ ಕಾಲ ಬಳಿ ಕುಕ್ಕರಗಾಲಿನಲ್ಲಿ ಕೂತು ಬೈಯುವಂತೆ ಏನೋ ಹೇಳುತ್ತಿದ್ದ.  ಎಡಕ್ಕಿದ್ದ ಅಗಲ ರಸ್ತೆಯಲ್ಲಿ ಒಂದರ ಹಿಂದೊಂದರಂತೆ ಮೂರು ಕಾರುಗಳು ಭರ್ರಭರ್ರನೆ ಹೊರಟುಹೋದವು.  ಅವುಗಳನ್ನು ಅಟ್ಟಿಸಿಕೊಂಡು ಬಸ್ಸೊಂದು ಬಂತು.  ಕಣ್ಣುಜ್ಜಿಕೊಂಡು ಹಿಂದೆಮುಂದೆ ನೋಡಿದರೆ ಕಂಡದ್ದು ನೀಲೀ, ಗುಲಾಬಿ ರಂಗಿನ ಎರಡುಮೂರು ಪ್ಲಾಸ್ಟಿಕ್ ಗೋಡೆಗಳು.  ತಲೆಯ ಮೇಲೆ ಕಾಲಕಡೆಗೆ ಇಳಿಜಾರಾಗಿ ಸಾಗಿದ್ದ ಬೂದುಬಣ್ಣದ ಸೂರು.  ಅದರ ಎರಡೂ ಪಕ್ಕದಲ್ಲಿದ್ದ ಆಕಾಶ ಇನ್ನೂ ಗಾಢ ನೇರಳೆಯಾಗಿಯೇ ಇತ್ತು.
ಪಕ್ಕದಲ್ಲಿ ಅಮ್ಮ ಕಾಣಲಿಲ್ಲ.  ತಲೆ ತಗ್ಗಿಸಿ ಕಣ್ಣುಮುಚ್ಚಿದೆ.
ಮಲಗಿದ್ದ ನನ್ನನ್ನು ಆತುರಾತುರವಾಗಿ ಎಬ್ಬಿಸಿ ನನ್ನ ತಲೆಯ ಮೇಲೊಂದು ಬಟ್ಟೆಯ ಗಂಟಿಟ್ಟು, ತನ್ನ ತಲೆಯ ಮೇಲೊಂದು ಹೊತ್ತು, ಕೈಯಲ್ಲೊಂದು ಸಾಮಾನು ತುಂಬಿದ ಬಕೀಟು ಹಿಡಿದು ಅಮ್ಮ ನನ್ನನ್ನು ಇಲ್ಲಿಗೆ ಓಡಿಸಿಕೊಂಡು ಬಂದದ್ದು ಕನಸು ನೆನಪಾಗುವಂತೆ ತೆರೆದುಕೊಂಡಿತು.  ನಮ್ಮತ್ತ ಗಮನವೇ ಇಲ್ಲದೇ ಎಲ್ಲಿಗೋ ಧಡಗುಟ್ಟಿಕೊಂಡು ಓಡುತ್ತಿದ್ದ ಕಾರುಗಳು, ಟ್ರಕ್ಕುಗಳನ್ನು ತಿರುತಿರುಗಿ ನೋಡುತ್ತಾ ಚಿರಾಗ್ ದಿಲ್ಲಿಯ ಸೇತುವೆ ಕೆಳಗಿನಿಂದ ಓಡುತ್ತಾ ಬಂದದ್ದು ಎಷ್ಟು ಹೊತ್ತಿನವರೆಗೆ ಎಂದು ನೆನಪಾಗುತ್ತಲೇ ಇಲ್ಲ.  ಕಾಲು ನೋಯುತ್ತಿದ್ದರೂ ಅಮ್ಮನ ಏದುಸಿರು ನೋಡಿ ಸುಮ್ಮನೆ ಅವಳ ಹಿಂದೆ ಓಡಿದ್ದೆ.  ಅಮ್ಮ ನಿಂತಾಗ ನಾನೂ ನಿಂತಿದ್ದೆ.  ಆ ಛಳಿಯಲ್ಲೂ ನಾನು ಬೆವರಿನಿಂದ ತೋಯ್ದುಹೋಗಿದ್ದನ್ನು ಕಂಡ ಅಮ್ಮ ‘ಇಲ್ಲಿ ಕೂರೋಣ’ ಎನ್ನುತ್ತಾ ಈ ಸೇತುವೆ ಕೆಳಗೆ ಸಾಮಾನೆಲ್ಲಾ ಹಾಕಿ ತಾನೂ ಧೊಪ್ಪನೆ ಕುಸಿದು ಕುಳಿತಿದ್ದಳು.  ಆಮೇಲೆ ಯಾವಾಗ ಮಲಗಿಕೊಂಡೆ, ನಿದ್ದೆ ಯಾವಾಗ ಬಂತು ಅಂತಲೆ ನೆನಪಾಗುತ್ತಿಲ್ಲ...
ಪಕ್ಕದಲ್ಲಿದ್ದ ಲಾರಿ ಮೊರೆದು ಬೆಚ್ಚಿಸಿತು.  ಕಣ್ಣುಬಿಟ್ಟು ನೋಡಿದರೆ ಅದು ನಿಧಾನವಾಗಿ ಬಲಕ್ಕಿದ್ದ ಗಲ್ಲಿಯ ಕಡೆ ಹೊರಳಿಕೊಳ್ಳುತ್ತಿತ್ತು.  ಅದರ ಬಾಲಕ್ಕೆ ಉಜ್ಜುವಂತೇ ಓಡಿದ ಬಸ್ಸಿನ ಡ್ರೈವರ್ ತಲೆ ಹೊರಗೆ ಹಾಕಿ ಒಂದು ಚಾಯ್ ಕಪ್ಪು ತುಂಬುವಷ್ಟು ಹಳದೀ ಬಣ್ಣದ ಎಂಜಲನ್ನು ಪಚಕ್ಕನೆ ಉಗುಳಿ ‘ಪೋಂ ಪೋಂ’ ಎಂದು ಹಾರ್ನ್ ಬಾರಿಸಿದ.  ಅದರ ಲೈಟುಗಳು ಕಣ್ಣಿಗೆ ಚುಚ್ಚಿದವು.  ಎದುರಿಗೆ ತಿರುಗಿದರೆ ಗುಲಾಬಿ ಪ್ಲಾಸ್ಟಿಕ್ ಗೋಡೆಯ ಪಕ್ಕ ಬೀಡಿ ಸೇದುತ್ತಾ ಒಬ್ಬ ಕುಳಿತಿದ್ದ.  ಅವನು ಕರ್ರಗಿದ್ದ.  ಕಪ್ಪನೆಯ ಗಡ್ಡಮೀಸೆಗಳೂ ಇದ್ದವು.  ಅದ್ಯಾವಾಗ ಬಂದು ಕೂತನೋ.  ನನ್ನನ್ನು ದುರುಗುಟ್ಟಿ ನೋಡುತ್ತಿದ್ದ.  ನಾನೂ ಅವನನ್ನೇ ನೇರವಾಗಿ ನೋಡಿದೆ.  ಅವನು ತಲೆ ಕೆಳಗೆ ಹಾಕಿ ಒಂದೇ ಸಮನೆ ಕೆಮ್ಮತೊಡಗಿದ.  ಪಕ್ಕಕ್ಕೆ ಮುಖ ತಿರುಗಿಸಿದೆ.  ಮಾರುದೂರದಲ್ಲಿ ಇಬ್ಬರು ಮಲಗಿದ್ದರು.  ಒಬ್ಬ ಗಂಡಸು, ಒಬ್ಬಳು ಹೆಂಗಸು.  ಗಂಡಸು ಬರೀ ಪಾಯಿಜಾಮಾ ಹಾಕಿಕೊಂಡಿದ್ದ.  ಹೆಂಗಸು ಲಂಗದ ಮೇಲೊಂದು ದೊಗಳೆ ಶರಟು ಹಾಕಿಕೊಂಡಿದ್ದಳು.  ಅದರ ಎರಡು ಗುಂಡಿಗಳು ಬಿಚ್ಚಿಹೊಗಿದ್ದವು.  ಅವಳ ಪಕ್ಕ ಅಡ್ಡಾದಿಡ್ಡಿಯಾಗಿ ಮಗುವೊಂದು ಬಿದ್ದುಕೊಂಡಿತ್ತು.  ನಾನು ನೋಡುತ್ತಿದ್ದಂತೆ ಅದು ಒಂದು ಮಗ್ಗುಲು ಉರುಳಿ ರಸ್ತೆಯ ಅಂಚಿಗೆ ಹೋಯಿತು.  ಇನ್ನೊಂದು ಮಗ್ಗುಲು ಉರುಳಿದರೆ ಸೀದಾ ರಸ್ತೆಗೆ ಬೀಳುವುದು ಗ್ಯಾರಂಟಿ.
ರಸ್ತೆಯಾಚೆಯ ಮುಳ್ಳುಪೊದೆಗಳ ಹಿಂದಿನಿಂದ ಅಮ್ಮ ಬಂದಳು.  ಅವಳ ಕೂದಲು ಒದ್ದೆಯಾಗಿತ್ತು.  ಅಮ್ಮ ಸ್ನಾನ ಮಾಡಿದ್ದಳು.  “ಅಲ್ಲಿ ನಲ್ಲಿ ಇದೆ” ಎನ್ನುತ್ತಾ ನಕ್ಕಳು.  ನಾನು ಮಾತಾಡಲಿಲ್ಲ.  ಎದುರಿಗೆ ನೋಡಿದರೆ ಆ ಕರಿಯ ಕೆಮ್ಮುವುದನ್ನು ನಿಲ್ಲಿಸಿ ಸೊರಸೊರನೆ ಚಾಯ್ ಹೀರುತ್ತಿದ್ದ.  ಕೂತೇ ಇದ್ದವನ ಕೈಗೆ ಚಾಯ್ ಲೋಟ ಹೇಗೆ ಬಂತೆಂದು ನಾನು ಗಮನಿಸಿರಲೇ ಇಲ್ಲ.
ಅಮ್ಮ ಸೆರಗಿನಿಂದ ತಲೆಯನ್ನು ಗಸಗಸ ಉಜ್ಜಿಕೊಂಡಳು.  ಕರಿಯನತ್ತ ನೋಡಿ ನಕ್ಕಳು.  ಅವನೂ ನಕ್ಕ.  ಚಾಯ್ ಬೇಕಾ ಅನ್ನುವಂತೆ ಅಮ್ಮನತ್ತ ಸನ್ನೆ ಮಾಡಿದ.  ಅಮ್ಮ ಉತ್ತರಿಸಲಿಲ್ಲ.  ಪಕ್ಕಕ್ಕೆ ತಿರುಗಿದ ಅವಳು ಅದೇನೋ ಗೊಣಗಿಕೊಂಡು ಓಡಿಹೋಗಿ ಆ ಮಗುವಿನ ಕಾಲು ಹಿಡಿದೆಳೆದು ರಸ್ತೆಯಿಂದ ದೂರ ಮಲಗಿಸಿದಳು.  ಅದೇನೋ ಕಿರಕಿರ ಎಂದು ಒರಲಿದ ಅದರ ದೊಗಳೆ ಶರ್ಟನ್ನು ಕೆಳಕ್ಕೆಳೆದು ಅದರ ಕುಂಡೆಯ ಮೇಲಿದ್ದ ಉದ್ದನೆಯ ಕೆಂಪು ಗಾಯವನ್ನು ಮುಚ್ಚಿ ಹಿಂದಕ್ಕೆ ಬಂದು ನನ್ನ ಪಕ್ಕ ಕೂತಳು.   ಕರಿಯನ ಪಕ್ಕದ ಪ್ಲಾಸ್ಟಿಕ್ ಗೋಡೆಯ ಆಚೆಯಿಂದ ಹೆಂಗಸೊಬ್ಬಳು ತುಟಿಗಳಿಗೆ ಚಾಯ್ ತುಂಬಿದ ಲೋಟ ಒತ್ತಿ ಹಿಡಿದಂತೇ ನಮ್ಮತ್ತ ಬಂದಳು.  ಅವಳ ಎಡಗೈಯಲ್ಲಿ ಒಂದು ಕರೀಮಣ್ಣಿನ ಕುಡಿಕೆ ಇತ್ತು.  ನೇರ ನಮ್ಮತ್ತ ಬಂದವಳೇ ಕುಡಿಕೆಯನ್ನು ಅಮ್ಮನ ಮುಂದೆ ಹಿಡಿದು ಕೆಳಗೆ ಕೂತಳು.  ಅಮ್ಮ ಆತುರಾತುರವಾಗಿ ಕುಡಿಕೆಯನ್ನು ಕೈಗೆ ತೆಗೆದುಕೊಂಡಳು.
“ಎಲ್ಲಿಂದ ಬಂದೆ?” ಕಂದು ಬಣ್ಣದ ಸಲ್ವಾರ್ ಕಮೀಜ್‌ನಲ್ಲಿದ್ದ ಆ ಹೆಂಗಸು ಪ್ರಶ್ನಿಸಿದಳು.
“ಚಿರಾಗ್ ದಿಲ್ಲಿ ಸೇತುವೆ.”  ಅಮ್ಮ ಚುಟುಕಾಗಿ ಹೇಳಿ ಒಂದು ಗುಟುಕು ಚಾಯ್ ಹೀರಿದಳು.  ಆ ಹೆಂಗಸಿನಿಂದ ಮತ್ತೊಂದು ಪ್ರಶ್ನೆ ಬಂತು: “ಆ ಜಾಗ ಬಿಟ್ಟು ಇಲ್ಲಿಗ್ಯಾಕೆ ಬಂದೆ?”
ಅಮ್ಮ ಮತ್ತೆರಡು ಗುಟುಕು ಚಾಯ್ ಹೀರಿ ಕುಡಿಕೆಯನ್ನು ನನ್ನ ಮುಂದಿಟ್ಟು ಎಡಗೈಯಿಂದ ಬಾಯಿ ಒರೆಸಿಕೊಂಡಳು.
“ಈವತ್ತು ಅಲ್ಲಿಗೆ ಅದ್ಯಾರೋ ದೊಡ್ಡವರು ಬರ್ತಾರಂತೆ.  ಅದಕ್ಕೆ ನಮ್ಮನ್ನೆಲ್ಲಾ ಅಲ್ಲಿಂದ ಓಡಿಸಿಬಿಟ್ರು, ಅದೂ ಅರ್ಧರಾತ್ರೀಲಿ.  ನಾವು ಏಳೆಂಟು ಬಡಪಾಯಿಗಳನ್ನ ಓಡಿಸೋಕೆ ಒಂದು ದಂಡು ಪೋಲೀಸರು.  ಇಬ್ಬರು ಮೂವರಿಗೆ ಲಾಠಿಯಿಂದ ಹೊಡೆದೂಬಿಟ್ರು, ಹರಾಮಖೋರ ನನ್ಮಕ್ಳು.”  ಅಮ್ಮ ಕ್ಯಾಕರಿಸಿ ರಸ್ತೆಯತ್ತ ಉಗಿದಳು.  “ಓ ಬಿಡು.  ನಮ್ಮಂಥಾ ಬೀದಿ ಭಿಕಾರಿಗಳ ಬದುಕೇ ಹಾಗೆ.”  ಹಿಂದಿನಿಂದ ದನಿ ಬಂತು.  ಅಮ್ಮನೂ ನಾನೂ ಸರ್ರನೆ ಅತ್ತ ತಿರುಗಿದೆವು.  ಅಲ್ಲೊಬ್ಬಳು ಹೆಂಗಸು.  ಅಮ್ಮನಷ್ಟೇ ವಯಸ್ಸು, ಅಮ್ಮನ ಹಾಗೇ ಸೀರೆ ಉಟ್ಟುಕೊಂಡಿದ್ದಳು, ಎದುರಿಗಿದ್ದವಳ ಹಾಗೆ ಸಲ್ವಾರ್ ಕಮೀಜ್ ಅಲ್ಲ.  ಒಮ್ಮೆ ಕೆಮ್ಮಿ ಮುಂದುವರೆಸಿದಳು: “ನಾನೂ ಇಲ್ಲಿಗೆ ಓಡಿಬಂದು ನಾಕು ದಿನ ಆಯ್ತು.  ಆಶ್ರಮ್ ಚೌಕ್‌ನ ಸೇತುವೆ ಕೆಳಗಿದ್ದೆ.  ಇಬ್ರು ಪೋಲೀಸ್ ಬೇವಾರ್ಸಿಗಳು ದಿನಾ ಮಲಗಿರೋವಾಗ ಬಂದು ಕಾಟ ಕೊಡೋಕೆ ಶುರು ಮಾಡಿದ್ರು.  ನಾನು ಎಷ್ಟು ಅಂತ ಸಹಿಸ್ಕೊಳ್ಲಿ?  ಗತಿಗೆಟ್ಟೋಳಿರಬೋದು, ಆದ್ರೆ ನಾನೂ ಹೆಂಗ್ಸಲ್ವಾ?  ಇನ್ನು ಸಾಕು ಅನ್ನಿಸಿಬಿಡ್ತು.  ಈ ಕಡೆ ಓಡಿಬಂದೆ.”
“ಅದ್ಯಾರಂತೆ ಬರೋದು?”  ಸಲ್ವಾರ್ ಕಮೀಜಿನವಳು ಗಟ್ಟಿದನಿಯಲ್ಲಿ ಪ್ರಶ್ನಿಸಿದಳು.  ನಾನು ಕಣ್ಣುಮುಚ್ಚಿಕೊಂಡು ಚಾಯ್ ಹೀರಿದೆ.  ಸೀರೆಯವಳು ಎದ್ದು ನಿಂತಳು.  ಒಮ್ಮೆ ಸೆರಗು ಒದರಿ ತಲೆಯ ಮೇಲೆಳೆದುಕೊಂಡು ರಸ್ತೆ ದಾಟಿದಳು.
“ಅದ್ಯಾರೋ ನಂಗೊತ್ತಿಲ್ಲ.”  ಅಮ್ಮ ಗೊಣಗಿದಳು.  ಆ ಹೆಂಗಸು ಆ ಮಾತು ಬಿಟ್ಟಳು.  ನನ್ನ ತಲೆಯ ಮೇಲೆ ರಭಸವಾಗಿ ಕೈಯಾಡಿಸಿ “ಎಷ್ಟು ಹೇನು ತುಂಬಿವೆ ನೋಡು!  ಒಂದೂ ಕಡೀತಾ ಇಲ್ವೇನೋ ಎಮ್ಮೆ ಚರ್ಮದವನೇ?” ಅಂದಳು ನಗುತ್ತಾ.  ನಾನು ಮಾತಾಡಲಿಲ್ಲ.  ಖಾಲಿ ಕುಡಿಕೆಯನ್ನು ನೆಲದ ಮೇಲಿಟ್ಟೆ.  “ಎಲ್ಲಾನೂ ಹಿಡಿದುಹಾಕ್ತೀನಿ ಬಾರೋ ಅಂದ್ರೆ ಇವನು ಕೈಗೆ ಸಿಗೋದೇ ಇಲ್ಲ.  ಈವತ್ತು ಸಿಕ್ಕಿಬಿಡ್ತಾನೆ.  ಹೊಸಾ ಜಾಗದಲ್ಲಿ ಕಾಲು ಕಟ್ಟಿಹೋದ ಹಾಗೆ ಇಲ್ಲೇ ನನ್ನ ಹಿಂದೆಮುಂದೇನೇ ಸುತ್‌ತಾ ಇರ್ತಾನೆ.   ಆಗ ಹಿಡಿದು ಕೂರಿಸ್ಕೊಂಡು ಎಲ್ಲಾನೂ ಖಾಲಿ ಮಾಡಿಬಿಡ್ತೀನಿ.”  ಅಮ್ಮನೂ ನಕ್ಕಳು.
“ಎಲ್ಲಿ ಇವರಪ್ಪ?”  ಹೆಂಗಸಿನ ಪ್ರಶ್ನೆ.  “ಅವನು ಸತ್ತ.”  ಗೊಣಗಿದ ಅಮ್ಮ ಚಾಯ್ ಏನಾದರೂ ಉಳಿದಿದೆಯಾ ಅಂತ ಕುಡಿಕೆಯನ್ನೆತ್ತಿ ನೋಡಿದಳು.  ನಾನು ಒಂದು ಹನಿಯನ್ನೂ ಉಳಿಸಿರಲಿಲ್ಲ.  ಎದುರಿಗಿದ್ದ ಕರಿಯ ಸದ್ದು ಮಾಡಿಕೊಂಡು ನಕ್ಕ.  “ಅದ್ಯಾಕೆ ಹಾಗೆ ಹಲ್ಲು ಕಿಸೀತೀಯ ಕರಿಮುಸುಡಿಯವನೇ?”  ಹೆಂಗಸು ಅವನ ಭುಜಕ್ಕೆ ಲೋಟದಿಂದ ಹೊಡೆದಳು.  ಅವನು ಇನ್ನೂ ಜೋರಾಗಿ ನಕ್ಕ.  ಅಮ್ಮನೂ ನಕ್ಕಳು.  ನಾನೂ ನಕ್ಕೆ.
“ಇಂವ ಮದ್ರಾಸಿ, ಗೊತ್ತಾ?”  ಆ ಹೆಂಗಸು ಅಮ್ಮನತ್ತ ತಿರುಗಿದಳು.  “ನಾನು ಬಂಗಾಳದೋಳು.  ಸಿಲಿಗುರಿ ಗೊತ್ತಾ?  ಅಲ್ಲಿ ನಮಗೆ ಗದ್ದೆ ಹೊಲ. ಮಾವಿನ ತೋಪು ಎಲ್ಲಾ ಇತ್ತು.”  ಮಾತು ನಿಲ್ಲಿಸಿ ಕೆಟ್ಟದಾಗಿ ಹಾರ್ನ್ ಮಾಡಿದ ಲಾರಿಯ ಡ್ರೈವರ್‌ಗೆ ಏನೋ ಕೆಟ್ಟದಾಗಿ ಬೈದಳು.
“ಇಂವ ಎಲ್ಲಿ ಸಿಕ್ದ?”  ಅಮ್ಮ ಅವಳತ್ತ ಬಾಗಿ ಮೆಲ್ಲಗೆ ಪ್ರಶ್ನೆ ಹಾಕಿದಳು.  ಆ ಹೆಂಗಸಿನಿಂದ ನಿಧಾನವಾಗಿ ಉತ್ತರ ಬಂತು: “ವಸಂತ್ ವಿಹಾರ್ ಜೈಲ್‌ನಲ್ಲಿ.   ಅಲ್ಲಿ ಮೂರು ತಿಂಗಳು ಕೂಡಿ ಹಾಕಿದ್ರು ನನ್ನ, ದಂಧೆ ಮಾಡೋವ್ಳು ಅಂತ.  ನೀನೇ ನೋಡಿ ಹೇಳು, ನಾನು ಅಂಥೋಳ ಹಾಗೆ ಕಾಣ್ತೀನಾ?  ದಂಧೆ ಮಾಡೋವ್ಳಾಗಿದ್ರೆ ಹೀಗಿರ್ತಿದ್ನಾ?  ರಸ್ತೆಬದೀಲಿ ಮಲಕ್ಕೋತಿದ್ನಾ?”  ಥಟ್ಟನೆ ದನಿ ಎತ್ತರಿಸಿ “ಕೋಠೀಲಿರ್ತಿದ್ದೆ ಕೋಠೀಲಿ” ಅಂದಳು.  ಮರುಕ್ಷಣ ಛಕ್ಕನೆ ಮಾತು ನಿಲ್ಲಿಸಿದಳು.   ಮತ್ತೆ ಸಣ್ಣಗೆ ಆರಂಭಿಸಿದಳು: “ಜೈಲಿಂದ ಹೊರಕ್ಕೆ ಬಂದಾಗ ಎಲ್ಲಿ ಹೋಗಬೇಕು ಅಂತ ಗೊತ್ತಾಗ್ಲಿಲ್ಲ.  ಆ ಬಿಸಿಲಿಗೆ ಕಣ್ಣುಬಿಡೋಕೂ ಆಗ್ಲಿಲ್ಲ.  ಸುಮ್ನೆ ನಿಂತ್ಬಿಟ್ಟೆ.  ಇವ್ನೂ ಅಲ್ಲೇ ಇದ್ದ.  ಅದೇ ಜೈಲ್‌ನಲ್ಲಿ ಒಂದುವರ್ಷ ಇದ್ನಂತೆ.  ಇವನತ್ರ ದುಡ್ಡಿತ್ತು.  ಕೈಹಿಡಿದು ರಸ್ತೆ ದಾಟಿಸಿ ಮುನಿರ್ಕಾ ಒಳಗೆ ಕರಕೊಂಡು ಹೋದ.  ಅಲ್ಲಿದ್ದ ಮದ್ರಾಸಿ ಧಾಭಾದಲ್ಲಿ ಹೊಟ್ಟೆತುಂಬಾ ಚಾವಲ್ ತಿನ್ನಿಸ್ದ.  ಚಾವಲ್ ತಿಂದು ಎಷ್ಟು ಕಾಲ ಆಗಿತ್ತು ಗೊತ್ತಾ?  ಆ ಜೈಲ್ ಊಟ, ಓಹ್ ಕೇಳಬೇಡ.  ಕಲ್ಲುಮಣ್ಣು ತುಂಬಿದ್ದ ರೋಟಿ ಜೊತೆ ಕೊಳೆತ ತರಕಾರಿ ತಿಂದು ಸಾಕಾಗೋಗಿತ್ತು.  ಅಲ್ಲಾ, ಒಂದು ಮಾತು ಹೇಳ್ತೀನಿ ಕೇಳು.  ಎಲ್ಲಿಯ ಮದ್ರಾಸು, ಎಲ್ಲಿಯ ಬಂಗಾಳ!  ಆದ್ರೆ ನೋಡು, ನಾವಿಬ್ರೂ ತಿನ್ನೋದು ಚಾವಲ್.  ಚಪಾತಿ ಕಂಡ್ರೆ ಇಬ್ಬರಿಗೂ ವಾಕರಿಕೆ.  ಇವನಂತೂ ಅದನ್ನ ನಾಯಿ ಚರ್ಮ ಅಂತಾನೆ.”  ಒಮ್ಮೆ ಕರಿಯನತ್ತ ಕಣ್ಣು ಮಿಟುಕಿಸಿ “ಚಾವಲ್ ತಿನ್ನಿಸಿದೋನು ರಟ್ಟೆ ಹಿಡಕೊಂಡು ಬಾ ನನ್ ಜತೆ ಅಂದ.  ಅಷ್ಟೇ.  ಹೊರಟ್ಬಿಟ್ಟೆ.  ಇವನೇನಾದ್ರೂ ಚಪಾತಿ ತಿನ್ಸಿದ್ರೆ ಹರಗೀಸ ಇವನ ಹಿಂದೆ ಹೊರಡ್ತಿರಲಿಲ್ಲ ನಾನು.”  ಮೈಕುಲುಕಿಸಿಕೊಂಡು ನಕ್ಕಳು.  ಕರಿಯನೂ ನಕ್ಕ.  ಅವನ ಹಲ್ಲುಗಳು ಫಳಕ್ಕನೆ ಹೊಳೆದವು.  ನಗೆ ನಿಲ್ಲಿಸಿ ಅವಳು ಹೇಳಿದಳು: “ಐದಾರು ತಿಂಗಳಾಯ್ತು ಇಲ್ಲಿಗೆ ಬಂದು.  ಸದ್ಯಕ್ಕೆ ಇಲ್ಲಿಂದ ಹೋಗೋದಿಲ್ಲ.  ಛಳಿಗಾಲ ಶುರುವಾಗೇಬಿಡ್ತಲ್ಲ.  ಇನ್ನು ಮೂರು ತಿಂಗ್ಳು ತಲೆ ಮೇಲೊಂದು ಗಟ್ಟಿ ಸೂರು ಇರಲೇಬೇಕು ನೋಡು.”  ನಕ್ಕಳು.  ಅಮ್ಮ ತಲೆಯೆತ್ತಿ ಸೇತುವೆಯ ಸೂರು ನೋಡಿದಳು.
ನನಗೆ ಉಚ್ಚೆ ಹುಯ್ಯಬೇಕೆನಿಸಿತು.  ಎದ್ದು ಹೋಗಿ ಸೇತುವೆ ಇಳಿಜಾರಾಗಿ ರಸ್ತೆಗೆ ಅಂಟಿಕೊಳ್ಳುತ್ತಿದ್ದೆಡೆ ನಡೆದೆ.  ಅಲ್ಲೊಂದು ಕಡೆ ಟಾರ್ ಕಿತ್ತುಹೋಗಿ ರಸ್ತೆ ತಗ್ಗಾಗಿತ್ತು.  ಆ ತಗ್ಗಿಗೆ ಉಚ್ಚೆ ಹೊಯ್ದೆ.  ಅದು ಪೂರ್ತಿ ತುಂಬಿಯೇಹೋದಾಗ ಖುಷಿಯಾಯಿತು.
ಹಿಂದಕ್ಕೆ ಬಂದಾಗ ಆ ಹೆಂಗಸು ಅಮ್ಮನ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಿದ್ದಳು.  ಅಮ್ಮ ಮುಖ ಅರಳಿಸಿಕೊಂಡು “ಹ್ಞೂ ಹ್ಞೂ” ಅನ್ನುತ್ತಾ ತಲೆಯಾಡಿಸುತ್ತಿದ್ದಳು.  ನಾನು ಹತ್ತಿರಾದೊಡನೆ ಅಮ್ಮ “ಹ್ಞೂಂ, ಹಾಗೇ ಮಾಡ್ತೀನಿ” ಎನ್ನುತ್ತಾ ಅವಳಿಂದ ದೂರ ಸರಿದು ನನ್ನತ್ತ ತಿರುಗಿ “ಇನ್ಮುಂದೆ ಇವಳನ್ನ ಮಂಜರಿ ಕಾಕಿ ಅಂತ ಕರೀಬೇಕು ನೀನು ಗೊತಾಯ್ತಾ?” ಅಂದಳು.  “ಹ್ಞೂಂ” ಅಂದೆ.  ಎದುರಿಗಿದ್ದ ಕರಿಯ ಎದ್ದುನಿಂತು ಕಂಬಳಿ ಕೊಡವಿದ.  “ನನ್ನನ್ನ ಏನಂತ ಕರೀತೀಯೋ ನಾಯಿಮರೀ?” ಅಂದ.
ಈ ಪ್ರಶ್ನೆಗೆ ನನಗಿಂತಲೂ ಅಮ್ಮ ಹೆಚ್ಚು ಗೊಂದಲಗೊಂಡಳು.  ಮಂಜರಿ ಕಾಕಿ ಖೊಖ್ಖೊಖ್ಖೋ ಅಂತ ನಕ್ಕುಬಿಟ್ಟಳು: “ಹೆಸರು ಹೇಳು ಅಂದ್ರೆ ಅದೇನೋ ಇಷ್ಟುದ್ದದ ಮದ್ರಾಸಿ ಹೆಸರು ಹೇಳೋದಾ ಈ ದರಿದ್ರದೋನು!”  ಕಮೀಜ್ ಮೇಲೆತ್ತಿ ನೇತಾಡುತ್ತಿದ್ದ ಸಲ್ವಾರ್‌ನ ಲಾಡಿಯನ್ನು ಎರಡು ಬೆರಳಿನಿಂದ ಹಿಡಿದೆಳೆದು ತೋರಿಸುತ್ತಾ “ಇದಕ್ಕಿಂತ್ಲೂ ಉದ್ದ ಇತ್ತು ಅದು!  ಅದ್ಯಾವ ದೇವರ ಹೆಸರೋ, ದಯ್ಯದ ಹೆಸರೋ ನಮ್ಮಪ್ಪಾ!  ಅದನ್ನ ಹೇಳೋಕೆ ನನ್ ನಾಲಿಗೇನೆ ಹೊರಳ್ಲಿಲ್ಲ.  ಕೊನೆಗೆ ಇವನ ಮೂತಿಗೆ ತಿವಿದು 'ಮಸಿಗಿಂತ್ಲೂ ಕಡೆಯಾಗಿದೀಯಲ್ಲೋ?  ನಿನ್ನನ್ನ ಕಾಲೂ ಅಂದ್ರೆ ಆಗದಾ?' ಅಂದೆ.  ತುಟಿಪಿಟಕ್ಕನ್ನದೇ ಒಪ್ಕೊಂಡ.  ಆವತ್ನಿಂದ ನನ್ ಕಾಲೂ ಮಿಂಯಾ ಇವ್ನು” ಎನ್ನುತ್ತಾ ಕುಲುಕುಲು ನಕ್ಕಳು.  ನನ್ನತ್ತ ತಿರುಗಿ “ಕಾಲೂ ಕಾಕಾ ಅನ್ನು ಈ ಕರಿಮುಸುಡಿಯವನನ್ನ” ಎನ್ನುತ್ತಾ ಮತ್ತೊಮ್ಮೆ ನಕ್ಕಳು.
ಅಷ್ಟೊತ್ತಿಗೆ ಸರಿಯಾಗಿ ರಸ್ತೆಯಾಚೆಗೆ ಹೋಗಿದ್ದ ಸೀರೆಯವಳು ಒದ್ದೆಯಾಗಿದ್ದ ಸೆರಗನ್ನು ಎರಡೂ ಕೈಗಳಿಂದ ಮೇಲೆತ್ತಿ ಎದೆಯ ಮುಂದೆ ಹಿಡಿದು ಗಾಳಿಗೆ ಆಡಿಸುತ್ತಾ ಹಿಂತಿರುಗಿ ಬಂದಳು.  ಅವಳು ಮುಖ ತೊಳೆದಿದ್ದಳು.  “ಈವತ್ತು ಯಾವ ಕಡೆ ಸವಾರಿ, ಬಿಮ್ಲಾ?” ಅಂದ ಮಂಜರಿ ಕಾಕಿಯತ್ತ ತಿರುಗಿ “ಬೋಗಲ್‌ಗೆ ಹೋಗಬೇಕು.  ಈಗಲೇ ಹೊರಟೆ” ಎಂದು ಒದರಿ ಸೇತುವೆ ರಸ್ತೆಗೆ ಅಂಟಿಕೊಂಡಿದ್ದೆಡೆ ಹೋಗಿ ಅಲ್ಲಿದ್ದ ಸಣ್ಣದೊಂದು ಗೋಣಿ ಚೀಲದ ಗಂಟನ್ನು ಬಿಚ್ಚಿ ಏನನ್ನೋ ಎತ್ತಿಕೊಂಡು, ಚೀಲವನ್ನು ಮತ್ತೆ ಕಟ್ಟಿಟ್ಟು ನಮ್ಮತ್ತ ತಿರುಗದೇ ರಸ್ತೆಗೆ ಜಿಗಿದು ಜೋಡಿಯಾಗಿ ನುಗ್ಗಿಬರುತ್ತಿದ್ದ ಎರಡು ಕಾರುಗಳನ್ನು ಲೆಕ್ಕಿಸದೇ ಓಡಿದಳು.  “ಪಾಪದವಳು” ಅಂದಳು ಮಂಜರಿ ಕಾಕಿ.  ತಕ್ಷಣ ರಸ್ತೆ ದೀಪಗಳು ಆರಿಹೋದವು.  “ಬೆಳಗಾಯಿತು” ಅಂದಳು ಅಮ್ಮ.
ಅಮ್ಮ ಬಕೆಟ್ ಹತ್ತಿರಕ್ಕೆಳೆದುಕೊಂಡು ಅದರೊಳಗಿದ್ದ ಚೀಲ ಬಿಡಿಸಿ ಗೋಧಿಹಿಟ್ಟು ಹೊರತೆಗೆದು ಪಾತ್ರೆಗೆ ಹಾಕಿದಳು.  ಹಿಟ್ಟಿನಲ್ಲಿ ಬೆರಳಾಡಿಸಿ ಒಂದಾದಮೇಲೊಂದರಂತೆ ಮೂರು ಹುಳುಗಳನ್ನು ಎತ್ತಿ ನೆಲದ ಮೇಲೆ ಹಾಕಿದಳು.  ಎರಡು ಸತ್ತುಹೋಗಿದ್ದವು.  ಮೂರನೆಯದು ಉರುಳಾಡುತ್ತಿತ್ತು.  ಹೊಟ್ಟೆಯ ಮೇಲೆ ಮಲಗಿಕೊಂಡು ಅದನ್ನೇ ನೋಡತೊಡಗಿದೆ.  ಅಡ್ಡಾದಿಡ್ಡಿಯಾಗಿ ತೆವಳುತ್ತಾ ಕಡಲೆಯ ಗಾತ್ರದ ಕಲ್ಲೊಂದನ್ನು ಸುತ್ತಿ ಅತ್ತ ಹೋದ ಅದರ ಮೇಲೆ ಗಮನವಿಟ್ಟು ನಾನೂ ತುಸು ಮುಂದೆ ತೆವಳುತ್ತಿದ್ದಂತೇ ಯಾರೋ ತಲೆಗೆ ಪಟ್ಟನೆ ಹೊಡೆದರು.  ಬೆಚ್ಚಿ ತಲೆಯೆತ್ತಿದರೆ ಅಲ್ಲೊಬ್ಬ ಹಲ್ಲು ಕಿರಿಯುತ್ತಾ ನಿಂತಿದ್ದ.  ನನಗಿಂತ ದೊಡ್ಡವನು.  ಪ್ಯಾಂಟು ಹಾಕಿಕೊಂಡಿದ್ದ.  “ಏನೋ ನಿನ್ನ ಹೆಸರು?” ಅಂದ.  ಉತ್ತರಿಸದೇ ಏಟು ಬಿದ್ದ ಜಾಗವನ್ನು ಉಜ್ಜಿಕೊಳ್ಳುತ್ತಾ ಅವನನ್ನೇ ದುರುಗುಟ್ಟಿ ನೋಡಿದೆ.   “ನೋವಾಯ್ತಾ?  ಮೆಲ್ಲಗೆ ಹೊಡೀಬೇಕು ಅಂದ್ಕೊಂಡೆ, ಜೋರಾಗೆ ಬಿದ್ಬಿಡ್ತು,  ಸಾರೀ.”  ಪಕ್ಕ ಕೂತು ನನ್ನ ತಲೆ ಸವರಿದ.  “ನಾನು ರಾಕೇಶ್.  ನಿನ್ನನ್ನ ಈ ಮೊದ್ಲು ಇಲ್ಲಿ ನೋಡಿರ್ಲಿಲ್ಲ.  ಯಾರೋ ಹೊಸಾ ಹುಡುಗ ಬಂದಿದ್ದಾನೆ, ನಂಗೊಬ್ಬ ಹೊಸಾ ದೋಸ್ತ್ ಅಂತ ಬಂದೆ.”  ಅವನ ದನಿ ತಗ್ಗಿತ್ತು.  ಪಾತ್ರೆಯಲ್ಲಿ ನೀರು ತುಂಬಿಸಿಕೊಂಡು ರಸ್ತೆ ದಾಟುತ್ತಿದ್ದ ಅಮ್ಮನತ್ತ ಕೈತೋರಿ “ನಿಮ್ಮಮ್ಮನಾ?” ಅಂದ.  “ಹ್ಞೂಂ” ಅಂದೆ.  ನನ್ನ ಕೋಪ ಸ್ವಲ್ಪ ಕಡಿಮೆಯಾಗಿತ್ತು.
“ಅದು ನಮ್ಮಮ್ಮ.”  ಸ್ವಲ್ಪ ದೂರದಲ್ಲಿ ಎದ್ದುನಿಂತು ಮೈಮುರಿಯುತ್ತಿದ್ದ ಹೆಂಗಸೊಬ್ಬಳತ್ತ ಕೈತೋರಿದ.  ಹತ್ತಿರಾದ ಅಮ್ಮನತ್ತ ಸಣ್ಣಗೆ ನಗೆಬೀರಿದ.  ಅಮ್ಮ ಅದನ್ನು ಗಮನಿಸಲಿಲ್ಲ.  ನನ್ನತ್ತಲೂ ನೋಡದೇ ನೀರಿನ ಪಾತ್ರೆಯನ್ನು ಕೆಳಗಿಡುತ್ತಾ “ಆ ಕಾಂಪೌಂಡ್ ಪಕ್ಕಹೋಗಿ ಎರಡಕ್ಕೆ ಮಾಡೋದಾದ್ರೆ ಮಾಡಿ ಮುಗಿಸಿಬಿಟ್ಟು ಬಾ” ಅಂದಳು.  ಅವಳ ದನಿ ಗದರಿಕೆಯಂತಿತ್ತು.  “ಆಮೇಲೆ ಹೋಗ್ತೀನಿ” ಅಂದೆ ಸಣ್ಣಗೆ.  ಆದರೆ ರಾಕೇಶ್ ನನ್ನ ಕೈ ಹಿಡಿದು “ಬಾರೋ ಹೋಗೋಣ, ನಾನೂ ಮಾಡ್ಬೇಕು” ಅಂದ.  ಅಮ್ಮನತ್ತ ತಿರುಗಿ “ನಾ ಕರಕೊಂಡು ಹೋಗ್ತೀನಿ ಆಂಟೀ” ಅಂದ.  ಈಗ ಅಮ್ಮ ಅವನನ್ನೇ ನೇರವಾಗಿ ನೋಡಿದಳು.  ಏನೋ ಹೇಳಲು ನೋಡಿ ಹೇಳದೇ 'ಹೋಗು' ಎನ್ನುವಂತೆ ನನಗೆ ಸನ್ನೆ ಮಾಡಿದಳು.  ಹೊರಟೆ.  ರಸ್ತೆ ದಾಟಿ ಆಚೆ ಕಡೆಯ ಫುಟ್‌ಪಾತ್ ಏರಿದಾಗ ರಾಕೇಶ್ “ನಂಗೆ ಹನ್ನೊಂದು ವರ್ಷ.  ನಿಂಗೆ?” ಅಂದ.  “ಗೊತ್ತಿಲ್ಲ” ಅಂದೆ.  ನನಗೆ ನಿಜವಾಗಿಯೂ ಗೊತ್ತಿರಲಿಲ್ಲ.  ನಡೆಯುತ್ತಿದ್ದವನು ನಿಂತು ನನ್ನ ಮುಖವನ್ನೊಮ್ಮೆ ನೇರವಾಗಿ ನೋಡಿ “ನಿಂಗೆ ಏಳು ವರ್ಷ, ಹೆಚ್ಚು ಅಂದ್ರೆ ಎಂಟಾಗಿರಬೋದು” ಅಂದ.  “ಇರಬಹುದು” ಅಂದೆ.
ಎರಡಕ್ಕೆ ಮಾಡುತ್ತಿದ್ದಾಗ “ನೀವು ಎಲ್ಲಿಂದ ಬಂದ್ರಿ?” ಅಂದ ರಾಕೇಶ್.  “ಚಿರಾಗ್ ದಿಲ್ಲಿ ಸೇತುವೆ ಕೆಳಗಿನಿಂದ” ಅಂದೆ.  “ಸೇತುವೆ ಅನ್ನಬೇಡ.  ಫ್ಲೈಓವರ್ ಅನ್ನು” ಅಂದ ರಾಕೇಶ್.  ಹೊಸ ಹೆಸರು ಚಂದ ಅನಿಸಿತು.  ಹೇಳಲು ಪ್ರಯತ್ನಿಸಿದೆ.  ಮೊದಲ ಸಲ ಆಗಲಿಲ್ಲ.  ರಾಕೇಶ್ ನಗುತ್ತಾ ಮೂರುನಾಕು ಸಲ ಹೇಳಿಸಿದ.  ಕೊನೆಗೆ ಅವನು “ಈಗ ಸರಿಯಾಗಿ ಹೇಳ್ತಿದೀಯ” ಅಂದಾಗ ಖುಷಿಯಾಯಿತು.  “ಇದು ಯಾವ ಜಾಗ?” ಅಂದೆ.  ಅವನು “ಲಜ್‌ಪತ್‌ನಗರ್ ಫ್ಲೈಓವರ್” ಅಂದಾಗ ನನಗೆ ಅಚ್ಚರಿಯಾಯಿತು.  ಈ ಹೆಸರನ್ನು ಅಮ್ಮನ ಬಾಯಲ್ಲಿ ತುಂಬಾ ಸಲ ಕೇಳಿದ್ದೆ.  ಈಗ ನಾವು ಬಂದಿರುವುದು ಅಲ್ಲಿಗೇ!  ಏನೋ ಒಂಥರಾ ಖುಷಿ.  ಆದರೂ ನಂಬಿಕೆಯಾಗದೇ “ಇದು ನಿಜವಾಗ್ಲೂ ಲಜ್‌ಪತ್‌ನಗರವಾ?” ಅಂದೆ.  ಅವನು “ಹ್ಞೂ, ನಿಜವಾಗ್ಲೂ.   ನಾ ಯಾಕೆ ಸುಳ್ಳು ಹೇಳ್ಲಿ?” ಎನ್ನುತ್ತಾ  ರಸ್ತೆಯತ್ತ ಕೈಮಾಡಿ “ಇದರ ಹೆಸ್ರು ಮಹಾತ್ಮಾ ಗಾಂಧಿ ಮಾರ್ಗ್ ಅಂತಾ.  ಹಾಗಂತ ಬೋರ್ಡ್ ಹಾಕಿದ್ದಾರೆ” ಅಂದ.  ನನಗೆ ಮತ್ತೆ ಆಶ್ಚರ್ಯವಾಯಿತು.  ಇವನಿಗೆ ಓದಲಿಕ್ಕೆ ಬರುತ್ತದೆ!  ನಾನೂ ಕಲಿಯಬೇಕು.  ಆದರೆ ಹೇಗೆ ಅಂತ ಗೊತ್ತಿಲ್ಲ.  ಸುಮ್ಮನೆ ತಲೆ ಕೆಳಗೆ ಹಾಕಿ ಕೂತುಬಿಟ್ಟೆ.
ವಾಪಸ್ ಬರುತ್ತಾ ರಸ್ತೆ ದಾಟುತ್ತಿದ್ದಂತೇ ರಾಕೇಶ್ ಎದುರಿನ ರಸ್ತೆ ತೋರಿಸಿ “ಅಲ್ಲಿ ನೇರಕ್ಕೆ ಹೋದ್ರೆ ಸಬ್ಜಿ ಮಂಡಿ ಇದೆ.  ಓಖ್ಲಾ ಸಬ್ಜಿ ಮಂಡಿ ಅಂತಾರೆ.  ಬೆಳಗಿನ ಹೊತ್ತು ಹೋದ್ರೆ ತುಂಬ ತರಕಾರಿ ಸಿಗುತ್ತೆ.  ಸುಮ್ನೆ ಅಲ್ಲೆಲ್ಲಾ ಸುರಿದಿರ್ತಾರೆ.  ನಾನು ಆವಾಗಾವಾಗ ಹೋಗಿ ಆಯ್ಕೊಂಡು ಬಂದು ನಮ್ಮಮ್ಮಂಗೆ ಕೊಡ್ತೀನಿ” ಅಂದ.  ನನಗೆ ಆಸೆಯಾಯಿತು.  “ನನ್ನನ್ನೂ ಕರಕೊಂಡು ಹೋಗ್ತೀಯ ಅಲ್ಲಿಗೆ?” ಅಂದೆ.  “ಓಹೋ, ಖಂಡಿತ.  ನಾಳೆ ಹೋಗೋಣ” ಅಂದ ಅವನು ತುಂಬ ಒಳ್ಳೆಯವನಂತೆ ಕಂಡ.  ಅವನಿಗೆ ತುಂಬ ವಿಷಯಗಳು ಗೊತ್ತಿರುವಂತಿತ್ತು.  ಅವನಿಂದ ಇನ್ನೂ ಏನಾದರೂ ತಿಳಿದುಕೊಳ್ಳಬೇಕೆನಿಸಿ “ಮತ್ತೇನೇನಿದೆ ಇಲ್ಲಿ?” ಅಂದೆ.  ಅವನು ಸ್ವಲ್ಪ ಯೋಚಿಸಿದಂತೆ ಮಾಡಿ ಆಮೇಲೆ “ಲಜ್‌ಪತ್‌ನಗರ್ ಮಾರ್ಕೆಟ್ ನೋಡಿದ್ದೀಯ?” ಅಂದ.  “ಇಲ್ಲ” ಅಂದೆ.  ಆ ಮಾರ್ಕೆಟ್ ನೋಡುವ ಆಸೆಯಾಯಿತು.  “ನಾನಂತೂ ದಿನಾ ಹೋಗ್ತೀನಿ, ಗುಡ್ಡೂ ಭೈಯಾನ ಜೊತೆ” ಅಂದ ರಾಕೇಶ್.
“ಗುಡ್ಡು ಭೈಯಾ ಯಾರು?”
“ಓ! ನಿಂಗೊತ್ತಿಲ್ಲ ಅಲ್ವಾ?  ಅವ್ನು ತುಂಬಾ ಒಳ್ಳೇವ್ನು.  ಲಜ್‌ಪತ್‌ನಗರ್ ಮಾರ್ಕೆಟ್‌ನಲ್ಲಿ ಬಲೂನ್ ಮಾರ್ತಾನೆ.  ಅವನ ಹತ್ರ ತುಂಬಾ ದುಡ್ದಿರುತ್ತೆ.”
“ಹೌದಾ!”  ನಾನು ಕಣ್ಣರಳಿಸಿದೆ.
“ಹೌದು.  ದಿನಾ ಮಧ್ಯಾಹ್ನ ಇಲ್ಲಿಗೆ ಬರ್ತಾನೆ.  ಆವಾಗ ತೋರಿಸ್ತೀನಿ.”  ನಾನು ಹ್ಞೂಂಗುಟ್ಟುವುದಕ್ಕೂ ಮೊದಲೇ ಅವನು ನನ್ನ ಹತ್ತಿರ ಸರಿದು “ಒಂದು ಗುಟ್ಟು” ಅಂದ.  ನಾನು ಕಣ್ಣರಳಿಸಿದೆ.  ಅವನು ಮತ್ತೂ ಹತ್ತಿರ ಸರಿದು “ನಾನು ಗುಡ್ಡೂ ಭೈಯಾನ ಜೊತೆ ಸೇರಿ ಬಿಸಿನೆಸ್ ಮಾಡ್ತೀನಿ” ಅಂದ.  ನನಗೇನೂ ಅರ್ಥವಾಗಲಿಲ್ಲ.  ಅವನೇ ಹೇಳಿದ: “ನೋಡು, ಎಷ್ಟು ದಿನ ಅಂತ ಹೀಗೆ ಅವರಿವರನ್ನ ಬೇಡ್ಕೊಂಡು ಇರೋದು?  ಆ ಗುಡ್ಡೂ ಭೈಯಾ ಯಾರನ್ನೂ ಒಂದು ಪೈಸೇನೂ ಕೇಳಲ್ಲ.  ಯಾಕಂದ್ರೆ ಅವ್ನು ಬಲೂನ್ ಮಾರಿ ತುಂಬಾ ದುಡ್ಡು ಸಂಪಾದಿಸ್ತಾನೆ.  ಅಷ್ಟೇ ಅಲ್ಲ, ಮಾರೋದಿಕ್ಕೆ ನಂಗೂ ಬಲೂನ್ ಕೊಡಿಸ್ತೀನಿ ಅಂತ ಹೇಳಿದ್ದಾನೆ.  ನಿಂಗೊತ್ತಾ ಒಂದು ಬಲೂನ್ ಮಾರಿದ್ರೆ ಎರಡು ರೂಪಾಯಿ ಸಿಗುತ್ತೆ.  ಒಂದು ದಿನಕ್ಕೆ ಕೊನೇಪಕ್ಷ ಐವತ್ತು ಬಲೂನ್ ಮಾರಿದ್ರೆ ನೂರು ರೂಪಾಯಿ ಸಿಗುತ್ತೆ.  ನೂರು ರೂಪಾಯಿ ಗೊತ್ತಾ!  ದಿನಕ್ಕೆ ನೂರು ರೂಪಾಯಿ ಆಂದ್ರೆ ತಿಂಗಳಿಗೆ ಮೂರುಸಾವಿರ ರೂಪಾಯಿ.  ಕೇಳಿಸ್ತಾ ನಿಂಗೆ?  ಮೂರು ಸಾವಿರ!”  ಅವನ ದನಿ ಛಕ್ಕನೆ ಏರಿಬಿಟ್ಟಿತು.  ಕಣ್ಣುಗಳು ಹೊಳೆಯುತ್ತಿದ್ದವು.  ಅವನನ್ನೇ ಬೆರಗಿನಿಂದ ನೋಡಿದೆ.  “ಯಾವಾಗ ನೀನು ಬಲೂನ್ ಮಾರೋಕೆ ಶುರು ಮಾಡೋದು?” ಅಂದೆ.  ನನಗಂತೂ ತುಂಬಾ ಕುತೂಹಲವಾಗಿತ್ತು.
ಅವನು ಸ್ವಲ್ಪ ಯೋಚಿಸಿದಂತೆ ಮಾಡಿ “ನಿನ್ನತ್ರ ಏನಾದ್ರೂ ದುಡ್ಡಿದೆಯಾ?” ಅಂದ ನನ್ನನ್ನೇ ನೇರವಾಗಿ ನೋಡುತ್ತಾ.  “ಇಲ್ಲ” ಅಂದೆ.  ಅವನು ಒಮ್ಮೆ “ಪಿಚ್” ಅಂತ ಸದ್ದು “ಮಾಡಿ ಮಾರೋಕೆ ಬಲೂನ್ ಕೊಡೋದು ಒಬ್ಬ ಸೇಠ್‌ಜಿ.  ನಾವು ಅವನ ಹತ್ರ ಇನ್ನೂರೈವತ್ತು ರೂಪಾಯಿ ಡಿಪಾಜಿಟ್ ಇಟ್ರೆ ಮಾತ್ರ ಅವ್ನು ನಮಗೆ ಬಲೂನ್ ಕೊಡ್ತಾನೆ.  ಇಲ್ಲಾಂದ್ರೆ ಇಲ್ಲ.  ನಾನು ಈಗ ನೂರಾ ಎಂಬತ್ತನಾಲ್ಕು ರೂಪಾಯಿ ಸೇರಿಸಿದ್ದೀನಿ.  ಇನ್ನು ಅರವತ್ತಾರು ರೂಪಾಯಿ ಸೇರಿಸಿಬಿಟ್ರೆ ನನ್ನ ಬಿಸಿನೆಸ್ ಶುರು ಆಗಿಬಿಡುತ್ತೆ.  ಅದಕ್ಕೇ ನಿನ್ನತ್ರ ದುಡ್ದಿದೆಯಾ ಅಂತ ಕೇಳಿದ್ದು.  ನೀನೇನೂ ಸುಮ್ನೆ ಕೊಡ್ಬೇಡ.  ಸಾಲ ಅಂತ ಕೊಡು.  ಒಂದು ತಿಂಗಳಲ್ಲಿ ನಿನ್ ದುಡ್ಡು ವಾಪಸ್ ಮಾಡಿಬಿಡ್ತೀನಿ.  ಬಡ್ಡೀನೂ ಕೊಡ್ತೀನಿ.”
ನನಗೆ ಅಳುವಂತಾಯಿತು.  “ನನ್ನತ್ರ ನಿಜವಾಗ್ಲೂ ಇಲ್ಲ.  ಸಿಕ್ಕಿದ ಕಾಸನ್ನೆಲ್ಲಾ ಅಮ್ಮ ತಗೋತಾಳೆ.  ನಾನು ಎಲ್ಲಾದ್ರೂ ಬೀಳಿಸಿಕೊಂಡುಬಿಡ್ತೀನಿ ಆಂತ ಭಯ ಅಮ್ಮಂಗೆ” ಅಂದೆ.  ಎಷ್ಟು ತಡೆದುಕೊಂಡರೂ ಕಣ್ಣಲ್ಲಿ ನೀರು ಜಿನುಗೇಬಿಟ್ಟಿತು. 
“ನಮ್ಮಮ್ಮನೂ ಹಾಗೇನೇ...”  ಏನೂ ಹೇಳಲು ಹೋಗಿ ನಿಲ್ಲಿಸಿಬಿಟ್ಟ.  ಎನು ಮಾತಾಡಬೇಕೆಂದು ಗೊತ್ತಾಗದೇ ನಾನೂ ಸುಮ್ಮನಾಗಿಬಿಟ್ಟೆ.
ಹಿಂದಕ್ಕೆ ಬಂದಾಗ ಅಮ್ಮ ಸೇತುವೆಯ ಕಂಬದ ಹತ್ತಿರ ಒಣಕಡ್ಡಿಗಳನ್ನು ಒಟ್ಟುಗೂಡಿಸಿ ಬೆಂಕಿ ಹಚ್ಚಿದ್ದಳು.  ಮಾಮೂಲಿನಂತೆ ಗೋಧಿಹಿಟ್ಟಿನ ಉಂಡೆಗಳನ್ನು ಅಂಗೈಗಳಲ್ಲಿ ಒತ್ತಿ ಒತ್ತಿ ಅಗಲಕ್ಕೆ ಮಾಡಿ ಎರಡೂ ತೊಡೆಗಳ ಮೇಲೆ ಹರಡಿಕೊಂಡು ಬೆಂಕಿಯ ಮುಂದೆ ಕೂತಿದ್ದಳು.  ಅವು ನಾಲ್ಕಿದ್ದವು.  ಇಕ್ಕಳದಲ್ಲಿ ಹಿಡಿದ ಒಂದು ಚಪಾತಿ ಬೆಂಕಿಯಲ್ಲಿ ಬೇಯುತ್ತಿತ್ತು.  ಅದರ ಗಮಗಮಕ್ಕೆ ನನ್ನ ಬಾಯಲ್ಲಿ ನೀರೂರಿತು.  “ನಿನ್ನತ್ರ ತವಾ ಇಲ್ವಾ ಆಂಟೀ?” ಅಂದ ರಾಕೇಶ್.  “ನಮ್ಮತ್ರ ಇದೆ.  ಬೇಕಾದ್ರೆ ನಮ್ಮಮ್ಮನ್ನ ಕೇಳಿ ಈಸ್ಕೊಂಡುಬರ್ತೀನಿ” ಅಂತಲೂ ಸೇರಿಸಿದ.  “ಬೇಡ.  ಇದೇ ಸಾಕು” ಅಂದಳು ಅಮ್ಮ ಅವನತ್ತ ನೋಡದೇ.  ಅವನು ಮತ್ತೆ ಒತ್ತಾಯಿಸಲಿಲ್ಲ.  ಪಕ್ಕಕ್ಕೆ ತಿರುಗಿ “ಬಾ ಬಾ” ಎಂದು ಯಾರನ್ನೋ ಕರೆದ.  ತಿರುಗಿನೋಡಿದರೆ ರಸ್ತೆಯ ಪಕ್ಕ ಮಲಗಿದ್ದ ಆ ಹೆಣ್ಣುಮಗು ಎದ್ದು ನಮ್ಮತ್ತ ಬರುತ್ತಿತ್ತು.  ಅದರ ಅಪ್ಪ ಅಮ್ಮನೂ ಎದ್ದು ನಮ್ಮತ್ತಲೇ ನೋಡುತ್ತಿದ್ದರು.  ಆ ಮಗು ನೇರವಾಗಿ ಅಮ್ಮನ ಹತ್ತಿರ ಬಂದು ಕೈ ಒಡ್ಡಿತು.  ಅಮ್ಮನಿಗೆ ನಗೆ.  “ಚಪಾತಿ ಗಮಲಿಗೆ ಎದ್ದು ಬಂದುಬಿಟ್ಟಿದೆ ನೋಡು” ಎನ್ನುತ್ತಾ ಆಗಷ್ಟೇ ಬೇಯಿಸಿದ್ದ ಚಪಾತಿಯನ್ನು ಅದರ ಮುಂದೆ ಹಿಡಿದಳು.  “ಬಿಸಿ.  ಹಿಡಕೋತೀಯ?  ಕೈ ಸುಡಲ್ವಾ?” ಎಂದು ಆ ಮಗುವನ್ನು ಕೇಳಿದಳು.  ಅದು ಸದ್ದಿಲ್ಲದೇ ನಗುತ್ತಾ ಅಮ್ಮನ ಕೈಯಿಂದ ಚಪಾತಿಯನ್ನು ಕಿತ್ತುಕೊಂಡು ಕಚ್ಚಿತು.  “ಇವಳ ಹೆಸರು ಗುಡಿಯಾ ಅಂತ ಆಂಟೀ” ಅಂದ ರಾಕೇಶ್.
ಗುಡಿಯಾ ಚಪಾತಿಯನ್ನು ಆತುರಾತುರವಾಗಿ ಅರ್ಧ ಮುಗಿಸಿ ಉಳಿದರ್ಧವನ್ನು ಎಡಗೈಯಲ್ಲಿ ಹಿಡಿದು ಬಲಗೈಯನ್ನು ಅಮ್ಮ ಬೆಂಕಿಯಿಂದ ತೆಗೆಯುತ್ತಿದ್ದ ಮತ್ತೊಂದು ಚಪಾತಿಯತ್ತ ಚಾಚಿದಳು.  ತಕ್ಷಣ ಅವಳ ಅಮ್ಮ “ದರಿದ್ರದ್ದೇ” ಎಂದು ಕೂಗುತ್ತಾ ಓಡಿಬಂದು ಅವಳ ರಟ್ಟೆ ಹಿಡಿದು ಎಳೆದುಕೊಂಡು ಹೋದಳು.  ಗುಡಿಯಾ ಕೈಕಾಲುಗಳನ್ನು ಒದರುತ್ತಾ ಕಿರುಚಾಡಿದಳು.  ಕಿರುಚಾಟದಲ್ಲಿ ಅವಳ ಕೈಯಲ್ಲಿದ್ದ ಅರ್ಧ ಚಪಾತಿ ಕೆಳಗೆ ಬಿದ್ದುಹೋಯಿತು.  ಅವಳಮ್ಮ ಅವಳಿಗೊಂದು ಏಟು ಕೊಟ್ಟು ಕೆಳಗೆ ಬಿದ್ದಿದ್ದ ಚಪಾತಿಯನ್ನು ಎತ್ತಿ ತನ್ನ ಲಂಗಕ್ಕೆ ಒರೆಸಿ ಗುಡಿಯಾಳ ಬಾಯಿಗೆ ತುರುಕಿದಳು.  ಗುಡಿಯಾ ಅಳುತ್ತಲೇ ಅದನ್ನು ಕಚ್ಚಿದಳು.
ತನ್ನಮ್ಮ ಕರೆದದ್ದರಿಂದ ರಾಕೇಶ್ ಅತ್ತ ಓಡಿದ.  ಅಮ್ಮ ಮೂರನೆಯ ಚಪಾತಿಯನ್ನು ಸುಡುತ್ತಿದ್ದಳು.  ರಾಕೇಶ್ ಅತ್ತ ಹೋದೊಡನೇ ಸುಟ್ಟಿದ್ದ ಎರಡು ಚಪಾತಿಗಳನ್ನು ನನ್ನತ್ತ ತಳ್ಳಿ “ಆ ನೀಲೀ ಪ್ಲಾಸ್ಟಿಕ್‌ನಲ್ಲಿ ಈರುಳ್ಳಿ ಇದೆ” ಅಂದಳು.  ಅವಳು ಹೇಳದಿದ್ದರೂ ನನಗೆ ಗೊತ್ತಿತ್ತು.  ಚೀಲದೊಳಗೆ ಕೈಹಾಕಿ ಸಿಕ್ಕಿದ ಅರ್ಧ ಈರುಳ್ಳಿಯನ್ನು ಎತ್ತಿಕೊಂಡೆ.
ಮತ್ತೆರಡು ಚಪಾತಿಗಳನ್ನು ಸುಟ್ಟು ಮುಗಿಸಿದ ಅಮ್ಮ ಅವುಗಳನ್ನು ಬಟ್ಟೆಗೆ ಸುತ್ತಿ ನಡುವಿಗೆ ಸಿಕ್ಕಿಸಿಕೊಂಡಳು.  ನನ್ನತ್ತ ಬಾಗಿ ಕಿವಿಯಲ್ಲಿ “ಇಲ್ಲೇ ಜೋಪಾನವಾಗಿ ಆಡಿಕೊ.  ಯಾರಾದ್ರೂ ಕಾಸುಗೀಸು ಕೊಟ್ರೆ ಭದ್ರವಾಗಿ ಇಟ್ಕೋ.  ಯಾರ್ಗೂ ಕೊಡ್ಬೇಡಾ.  ನಾನು ನಿಜಾಮುದ್ದೀನ್ ರೈಲ್ವೇ ಸ್ಟೇಷನ್ ಹತ್ರ ಹೋಗಿದ್ದು ಬರ್ತೀನಿ.  ಬರೋವಾಗ ತಿನ್ನೋಕೇನಾದ್ರೂ ತರ್ತೀನಿ.  ಅಲ್ಲೀವರೆಗೆ ಹಸಿವಾದ್ರೆ ಬಕೆಟ್‌ನಲ್ಲಿ ಒಂದು ಡಬಲ್ ರೋಟಿ ಇದೆ, ತಗೊಂಡು ತಿನ್ನು” ಎಂದು ಪಿಸುದನಿಯಲ್ಲಿ ಹೇಳಿ ಎದ್ದುನಿಂತಳು.  ನಾನು ಹ್ಞೂಂಗುಟ್ಟಿದೆ.
            ಅಮ್ಮನ ಹಿಂದೆಯೇ ಮಂಜರಿ ಕಾಕಿ ಮತ್ತು ಕಾಲೂ ಕಾಕಾ ಸಹಾ ಎಲ್ಲಿಗೋ ಹೊರಟುಹೋದರು.  ಗುಡಿಯಾಳ ಅಮ್ಮನೂ ಒಂದು ಚೀಲ ಹಿಡಿದುಕೊಂಡು ಅವಳನ್ನೂ ಎತ್ತಿಕೊಂಡು ಅದೆಲ್ಲೋ ಮಾಯವಾದಳು.  ಗುಡಿಯಾಳ ಅಪ್ಪ ಮಾತ್ರ ಎತ್ತಲೂ ಹೋಗದೇ ಸುಮ್ಮನೆ ಅಲ್ಲೇ ಕೂತಿದ್ದ.  ನನ್ನನ್ನು ಸನ್ನೆ ಮಾಡಿ ಹತ್ತಿರ ಕರೆದ.  ಹೋದೆ.  “ಈಗ ಹೋದವ್ಳು ನಿಮ್ಮಮ್ಮನಾ?” ಅಂದ.  “ಹ್ಞೂಂ” ಅಂದೆ.  “ನಿಮ್ಮಪ್ಪ?” ಅಂದ.  “ಸತ್ತೋದ್ನಂತೆ” ಅಂದೆ.  “ಹೋಗ್ಲಿ ಬಿಡು.  ನನ್ನನ್ನೇ ಅಪ್ಪ ಅನ್ನು” ಅಂದ.  ಅದಕ್ಕೂ “ಹ್ಞೂಂ” ಅಂದೆ.  “ಒಳ್ಳೇ ಹುಡುಗ” ಅಂತ ನನ್ನ ಬೆನ್ನು ತಟ್ಟಿದ.  “ಚೂರು ಗಟ್ಟಿಯಾಗಿ ನಿಂತ್ಕೋ” ಎನ್ನುತ್ತಾ ನನ್ನ ಭುಜದ ಮೇಲೆ ಕೈಹಾಕಿ ಮೇಲೇಳಲು ಪ್ರಯತ್ನಿಸಿದ.  ಆಗ ಗೊತ್ತಾಯಿತು ಅವನ ಬಲಗಾಲು ಒಂದು ಕಡ್ಡಿಯಂತಿದೆ ಅಂತ.  ಪಾಪ ಕಷ್ಟಪಟ್ಟು ಎದ್ದು ಎಡಗಾಲನ್ನು ನೆಲಕ್ಕೆ ಊರಿ ನಿಂತ.  ಆಗ ನೋಡಿದರೆ ಅವನ ಎಡಪಾದ ಸೊಟ್ಟಸೊಟ್ಟಾಗಿ ತಿರುಚಿಕೊಂಡಿತ್ತು.  ರಸ್ತೆಯಂಚಿನತ್ತ ಕೈತೋರಿ “ಆ ಕಡೆ ಹೋಗೋಣ” ಎಂದು ಹೇಳಿ ಆ ಸೊಟ್ಟಗಾಲನ್ನು ಎಳೆದು ಹಾಕುತ್ತಾ ಅಡ್ಡಾದಿಡ್ದಿಯಾಗಿ ನಡೆಯತೊಡಗಿದ.  ನನಗಂತೂ ಅವನ ಭಾರವನ್ನು ತಡೆಯಲಿಕ್ಕೇ ಆಗುತ್ತಿರಲಿಲ್ಲ.  ಬಿದ್ದುಹೋಗುವಂತಾಗುತ್ತಿತ್ತು.  ಆದರೂ ಪಾಯಿಜಾಮಾದೊಳಗೆ ಅರ್ಧ ಮುರಿದ ಒಣರೆಂಬೆಯಂತೆ ನೇತಾಡುತ್ತಿದ್ದ ಅವನ ಬಲಗಾಲನ್ನು ನೋಡಿ ಅಯ್ಯೋ ಪಾಪ ಅಂದುಕೊಂಡು ಕಷ್ಟಪಟ್ಟು ಸಹಿಸಿಕೊಂಡೆ.
ರಸ್ತೆ ಇನ್ನೂ ಒಂದಡಿ ಇದೆ ಅನ್ನುವಾಗಲೇ ಅವನು ಕೆಳಗೆ ಕೂತು ಪಾಯಿಜಾಮಾದ ಲಾಡಿ ಬಿಚ್ಚಿ ಉಚ್ಚೆ ಹೊಯ್ಯತೊಡಗಿದ.  ಉದ್ದನೆಂii ಕಾರಿನಲ್ಲಿ ಕೂತು ಇತ್ತಲೇ ನೋಡುತ್ತಿದ್ದ ಒಬ್ಬಳು ದಪ್ಪ ಹೆಂಗಸು ಮುಖ ಕಿವಿಚಿ ಗಾಜು ಮುಚ್ಚಿಕೊಂಡಳು.  ಅವನು ತುಂಬಾ ಹೊತ್ತಿನವರೆಗೆ ಉಚ್ಚೆ ಹೊಯ್ಯುತ್ತಲೇ ಇದ್ದ.  ಆದರೆ ನೆಲದ ಮೇಲಿದ್ದದ್ದು ಸ್ವಲ್ಪವೇ.  ಮೆಲ್ಲಗೆ ಬಾಗಿ ನೋಡಿದೆ.  ಅವನ ಉಚ್ಚೆ ಬಿಟ್ಟುಬಿಟ್ಟೂ ಚೂರುಚೂರೇ ಬರುತ್ತಿತ್ತು.  ಅವನು ಹಲ್ಲು ಕಚ್ಚಿಕೊಂಡಿದ್ದ.
ಅವನು ಕೊನೆಗೂ ಮುಗಿಸಿ “ಹ್ಞೂಂಹ್” ಎಂದು ಉಸಿರುಬಿಟ್ಟಾಗ ನನಗೆ ಎಷ್ಟೋ ನೆಮ್ಮದಿ.  ಆದರೆ ಪುನ: ಅವನ ಭಾರವನ್ನು ನೆನಸಿಕೊಂಡು ಭಯವಾಯಿತು.  ಆದರೆ ಅವನು ಈ ಸಲ ನನ್ನ ಭುಜದ ಮೇಲೆ ಕೈಹಾಕದೇ ಕೈಗಳನ್ನು ನೆಲದ ಮೇಲೆ ಊರಿ ರಸ್ತೆಯ ಅಂಚಿನಲ್ಲೇ ತೆವಳತೊಡಗಿದ.  ನಾನು ನೆಮ್ಮದಿಯಿಂದ ಅವನ ಪಕ್ಕ ನಡೆಯತೊಡಗಿದೆ.  “ನನ್ನನ್ನ ಅಪ್ಪ ಅಂತೀಯ ತಾನೆ?” ಅಂದ.  ಇದ್ಯಾಕೆ ಮತ್ತೆ ಅದನ್ನೇ ಕೇಳುತ್ತಿದ್ದಾನೆ ಅನಿಸಿದರೂ ಸುಮ್ಮನೆ “ಹ್ಞೂಂ” ಅಂದೆ.  ಅಷ್ಟರಲ್ಲಿ ಅವನು ಅಲ್ಲಿದ್ದ ಬಿಳೀ ಬಣ್ಣ ಬಳಿದಿದ್ದ ದುಂಡು ಕಲ್ಲೊಂದರ ಹತ್ತಿರ ತಲುಪಿ “ಉಸ್” ಎನ್ನುತ್ತಾ ಅದನ್ನೊರಗಿ ಕೂತು ಎಡಗಾಲನ್ನು ರಸ್ತೆಗೆ ಇಳಿಬಿಟ್ಟು ನನ್ನ ಕೈ ಹಿಡಿದುಕೊಂಡ.  “ನಾನು ನಿಂಗೆ ಅಪ್ಪ ಆದ್ರೆ ನಿಮ್ಮಮ್ಮಂಗೆ ಏನಾಗ್ತೀನಿ ಹೇಳೂ?” ಅಂದ.  “ಗೊತ್ತಿಲ್ಲ” ಅಂದೆ.  ಅವನು ಜೋರಾಗಿ ನಕ್ಕುಬಿಟ್ಟ.  “ಗಂಡ ಆಗ್ತೀನಿ ಗಂಡ.  ಪತಿದೇವ್ ಆಗಿಬಿಡ್ತೀನಿ” ಅಂದ.  “ಸರಿ” ಅಂದೆ.  ಅವನು ಮತ್ತೊಮ್ಮೆ ನಕ್ಕು “ಹಾಗಂತ ನಿಮ್ಮಮ್ಮಂಗೆ ಹೇಳು” ಅಂದ.  “ಬಂದಾಗ ಹೇಳ್ತೀನಿ” ಅಂದೆ.  ಅವನು ನನ್ನ ಬೆನ್ನು ತಟ್ಟಿ “ನೀನು ತುಂಬಾ ಒಳ್ಳೇ ಹುಡುಗ” ಅಂದ.  ರಸ್ತೆಯಲ್ಲಿ ನಡೆಯುತ್ತಿದ್ದ ಇಬ್ಬರು ಹೆಂಗಸರತ್ತ ಕೈಚಾಚಿದ.  ಒಬ್ಬಾಕೆ ಪರ್ಸ್ ತೆಗೆದು ಒಂದು ರೂಪಾಯಿ ಹೊರಗೆತ್ತಿ ಅವನ ಕೈಗೆ ಹಾಕಿದಳು.  ಇವನು ಅದನ್ನು ಕಣ್ಣಿಗೊತ್ತಿಕೊಂಡು “ಬೋಣಿ ಆಯ್ತು” ಎಂದು ಮೆಲ್ಲಗೆ ಗೊಣಗಿ ನನ್ನತ್ತ ಕೈತೋರಿ “ಇವ ನನ್ನ ಮಗ.  ಬಡಕೂಸು.  ತಾಯಿ ಇಲ್ಲದ ತಬ್ಬಲಿ.  ಇದಕ್ಕೂ ಏನಾದ್ರೂ ಕೊಡಿ ಅಮ್ಮಾ” ಅಂದ.  ಅವರಿಬ್ಬರಿಗೆ ಅದು ಕೇಳಿಸಲಿಲ್ಲ.  ಅಷ್ಟೊತ್ತಿಗೆ ರಾಕೇಶ್ ನನ್ನನ್ನು ಕರೆಯುತ್ತಾ ನಮ್ಮತ್ತ ಬರುವುದು ಕಾಣಿಸಿತು.  ಅವನ ಜತೆ ಇನ್ನೂ ಒಂದಿಬ್ಬರಿದ್ದರು.  ಒಬ್ಬಳು ನನ್ನಷ್ಟೇ ಎತ್ತರದ ಹುಡುಗಿಯೂ ಇದ್ದಳು.  ನಾನು ಅತ್ತ ಓಡಲು ಕಾಲು ತೆಗೆದೆ.  ಇವನು “ನಿಂತ್ಕೋ ನಿಂತ್ಕೋ” ಎಂದು ಕೂಗಿಕೊಂಡ.  ಕೂಗಿದ ರಭಸಕ್ಕೆ ನಾನು ಬೆಚ್ಚಿ ನಿಂತೆ.  ನನ್ನನ್ನು ಹತ್ತಿರಕ್ಕೆಳೆದುಕೊಂಡು “ನಿಮ್ಮಮ್ಮಂಗೆ ಹೇಳು, ಖಂಡಿತವಾಗಿಯೂ ಹೇಳು.  ಆದ್ರೆ ಈವತ್ತಲ್ಲ” ಅಂದ.  “ಮತ್ಯಾವತ್ತು?” ಅಂದೆ.  “ಅದನ್ನ ಆಮೇಲೆ ಹೇಳ್ತೀನಿ.  ಈಗ ಹೋಗಿ ಆಟ ಆಡ್ಕೋ” ಅಂದ.  ನಾನು ಓಡಿಹೋಗಿ ರಾಕೇಶನ ಗುಂಪನ್ನು ಸೇರಿಕೊಂಡೆ.
ರಾಕೇಶ್ ತನ್ನ ಗೆಳೆಯರನ್ನೆಲ್ಲಾ ನನಗೆ ಪರಿಚಯ ಮಾಡಿಕೊಟ್ಟ.  ಮದನ್, ಭೋಗಿ, ನಾಮ್‌ವರ್ ಎಲ್ಲರೂ ನನಗೂ ಗೆಳೆಯರಾದರು.  ಆ ಹುಡುಗಿ ಬದಾಮ್ ಜಾಸ್ತಿ ಮಾತಾಡುತ್ತಲೇ ಇರಲಿಲ್ಲ.  ಅವಳಿಗೂ ಇದು ಹೊಸ ಜಾಗ.  ಅವಳೂ ಅವರಮ್ಮನೂ ಇಲ್ಲಿಗೆ ಬಂದದ್ದು ನಿನ್ನೆ ಸಾಯಂಕಾಲ ಅಂತೆ.  ಹಾಗಂತ ರಾಕೇಶನೇ ಹೇಳಿದ.
ರಾಕೇಶ್ ನಮ್ಮನ್ನು ಸ್ವಲ್ಪ ದೂರ ನಡೆಸಿಕೊಂಡು ಹೋಗಿ “ಈ ರಸ್ತೆ ಲಜ್‌ಪತ್‌ನಗರ್ ಮಾರ್ಕೆಟ್ ಕಡೆ ಹೋಗುತ್ತೆ” ಎಂದು ಒಂದು ಕಡೆ ಕೈ ಮಾಡಿ ತೋರಿಸಿ ಅಲ್ಲಿ ಕೆಂಪುದೀಪ ಹಸಿರಾಗುವವರೆಗೆ ಕಾದು ನಿಂತಿದ್ದ ಕಾರುಗಳ ಗುಂಪಿನ ನಡುವೆ ಓಡಾಡಿ ಕಾಸು ಕೇಳತೊಡಗಿದ.  ಒಂದಿಬ್ಬರು ಕೊಟ್ಟರು.  ಅವನು ತನ್ನ ಶರಟು ಬಿಚ್ಚಿ ಮುದುರಿ ಉಂಡೆ ಮಾಡಿಕೊಂಡು ನಿಂತಿದ್ದ ಕಾರುಗಳ ಗಾಜುಗಳನ್ನು ಒರೆಸಿದ.  ಈಗ ಹೆಚ್ಚು ಜನ ಕಾಸು ಕೊಟ್ಟರು.  ಅವನನ್ನು ಕಂಡು ನಾವೂ ಹಾಗೇ ಶರಟು ಬಿಚ್ಚಿ ಸಿಕ್ಕಿದ ಕಾರುಗಳ ಗಾಜುಗಳನ್ನೆಲ್ಲಾ ಒರೆಸಿದಂತೆ ಮಾಡಿದೆವು.  ಬದಾಮ್ ಮಾತ್ರ ಬೆಪ್ಪಳಂತೆ ಸುಮ್ಮನೆ ನಿಂತಿದ್ದಳು.  ಅರ್ಧಗಂಟೆಯಲ್ಲಿ ನನಗೆ ಮೂರೂವರೆ ರೂಪಾಯಿಗಳು ಸಿಕ್ಕಿದ್ದವು.  ರಾಕೇಶನಿಗೆಷ್ಟು ಸಿಕ್ಕಿತೋ ಗೊತ್ತಿಲ್ಲ.  ಅವನು ನಮಗೆ ತೋರಿಸಲಿಲ್ಲ.  ಎಲ್ಲಕ್ಕಿಂತ ಆಶ್ಚರ್ಯವೆಂದರೆ ಬದಾಮ್ ಕೈಯಲ್ಲಿ ಎಂಟು ರೂಪಾಯಿಗಳಿದ್ದವು.  ನಿಂತೇ ಇದ್ದವಳ ಕೈಗೆ ಅದು ಹೇಗೆ ಇಷ್ಟು ದುಡ್ಡು ಬಂತೆಂದು ನನಗೆ ಆಶ್ಚರ್ಯ, ಜತೆಗೆ ಅಸೂಯೆ ಸಹಾ.  ಉಳಿದವರ ಮಾತಿನಿಂದ ಅವರಿಗೂ ಅಸೂಯೆಯಾಗಿರುವುದು ಗೊತ್ತಾಯಿತು.  ರಾಕೇಶ್ ಮಾತ್ರ “ಪಾಪ, ಚಿಕ್ಕ ಹುಡುಗಿ” ಎಂದು ಅವಳ ಪರ ವಾದಿಸಿದ.  ಇನ್ನೂ ಸ್ವಲ್ಪ ಹೊತ್ತು ಕಳೆದ ಮೇಲೆ ನನಗೆ ಇನ್ನೂ ಎರಡು ರೂಪಾಯಿ ಸಿಕ್ಕಿದಾಗ ಸಮಾಧಾನವಾಯಿತು.  ಮದನ್, ಭೋಗಿ, ನಾಮ್‌ವರ್ ಮೂವರೂ ತಂತಮ್ಮ ಜೇಬಿನಲ್ಲಿದ್ದ ದುಡ್ಡನ್ನು ಎಣಿಸಿಕೊಂಡು ನಮ್ಮತ್ತ ತಿರುಗಿಯೂ ನೋಡದೇ ರಸ್ತೆ ದಾಟಿ ಎದುರಿನ ದೇವಸ್ಥಾನದ ಪಕ್ಕದ ಗಲ್ಲಿಯೊಳಗೆ ಹೋದರು.  “ಹೋಗಲಿಬಿಡು ಬೇವಾರ್ಸಿಗಳು.  ಇನ್ನೇನು ಗುಡ್ಡೂಭೈಯಾ ಬರೋ ಹೊತ್ತಾಯ್ತು.  ಈ ಗೂಬೆಗಳು ತೊಲಗಿದ್ದೇ ಒಳ್ಳೆದಾಯ್ತು” ಅಂದ.  ಯಾಕೆ ಅಂತ ಗೊತ್ತಾಗಲಿಲ್ಲ.  ಆದರೂ ಏನೂ ಕೇಳಲು ಹೋಗಲಿಲ್ಲ.
ತುಂಬಾ ಹೊತ್ತಾದ ಮೇಲೆ ರಾಕೇಶ್ ಗುಡ್ಡೂ ಭೈಯಾ ಎಂದು ಕರೆಯುತ್ತಿದ್ದವನು ಬಂದ.  ಅವನು ತುಂಬಾ ಎತ್ತರಕ್ಕಿದ್ದ.  ಕರೀಪ್ಯಾಂಟು, ಕೆಂಪು ಟೀಶರ್ಟು ಹಾಕಿಕೊಂಡಿದ್ದ.  ಕಾಲಲ್ಲಿ ಬಿಳೀಬಣ್ಣದ ಬೂಟುಗಳಿದ್ದರೆ ತಲೆಯ ಮೇಲೂ ಬಿಳೀ ಬಣ್ಣದ್ದೇ ಟೋಪಿಯಿತ್ತು.  ಹೆಗಲಿಗೆ ಒಂದು ಚೀಲ ನೇತುಹಾಕಿಕೊಂಡಿದ್ದ.  “ನಾಲ್ಕೂವರೆಯಾಗಿಹೋಯ್ತು, ನನ್ ಬಿಸಿನೆಸ್ ಶುರುವಾಗೋ ಹೊತ್ತು.  ಬೇಗ ಹೋಗಬೇಕು ನಾನು” ಎಂದು ಒದರುತ್ತಾ ಕೂತವನು ಬದಾಮ್‌ಳನ್ನು ನೋಡಿ ಹೆಸರು ಕೇಳಿದ.  ಅವಳು ಹೇಳದೇ ನಾಚಿಕೊಂಡಳು.  ರಾಕೇಶನೇ ಹೇಳಿದ.  ಅವನು ನನ್ನ ಹೆಸರು ಕೇಳಿದಾಗ ನಾನೇನೂ ನಾಚಿಕೊಳ್ಳಲಿಲ್ಲ.
ಗುಡ್ಡೂಭೈಯಾ ನಮಗೆಲ್ಲರಿಗೂ ಎರಡೆರಡು ಬಿಸ್ಕೆಟ್ ಕೊಟ್ಟ.  ತಾನು ಒಂದು ಚಿಕ್ಕ ಡಬ್ಬದಲ್ಲಿದ್ದ ಮೂರು ಚಪಾತಿಗಳನ್ನು ತಿಂದು ಬಾಟಲಿಯಿಂದ ನೀರು ಕುಡಿದ.  ಅವನ ಬಾಟಲಿ ತುಂಬಾ ಚಂದ ಇತ್ತು.
ಅವನು ನೀರು ಕುಡಿದು ಮುಗಿಸುವುದನ್ನೇ ಕಾದಿದ್ದು ರಾಕೇಶ್ ಜೇಬಿನಿಂದ ದುಡ್ಡು ತೆಗೆದು ಅವನ ಮುಂದೆ ಹಿಡಿದ.  ಅದನ್ನು ಲೆಕ್ಕ ಹಾಕಿದ ಗುಡ್ಡೂಭೈಯಾ ಚೀಲದಿಂದ ಒಂದು ಚಿಕ್ಕ ಪುಸ್ತಕ ತೆಗೆದು ಅದರಲ್ಲಿ ಏನೋ ಬರೆದುಕೊಂಡ.  ಅದರತ್ತ ಇಣುಕಿ ನೋಡಿದ ರಾಕೇಶ್‌ನ ಮುಖ ಅರಳಿಕೊಂಡಿತು.  ಮರುಕ್ಷಣ ಅವನು ಸಪ್ಪಗಾದ.  ಎತ್ತಲೋ ನೋಡುತ್ತ “ಇನ್ನೂ ಐವತ್ತೊಂಬತ್ತು ರೂಪಾಯಿ ಬೇಕಲ್ಲಾ” ಎಂದು ಗೊಣಗಿದ.  ಅದಕ್ಕೆ ಗುಡ್ಡೂಭೈಯಾ “ಐವತ್ತೊಂಬತ್ತು ರೂಪಾಯಿಯೇನು ಬಿಡು, ಇನ್ನೊಂದು ವಾರ, ಹತ್ತು ದಿನದಲ್ಲಿ ಸಿಕ್ಕಿಬಿಡುತ್ತೆ ನಿಂಗೆ.  ಆಮೇಲೆ ನೀನೂ ನನ್ನ ಹಾಗೆ ಬಿಸಿನೆಸ್‌ಮ್ಯಾನ್ ಆಗಿಬಿಡ್ತೀಯ” ಎನ್ನುತ್ತ ನಕ್ಕ.  ನನಗೆಲ್ಲವೂ ಅರ್ಥವಾಯಿತು.
“ಗುಡ್ಡೂಭೈಯಾ.”  ಮೆಲ್ಲಗೆ ಕರೆದೆ.  ಅವನು ಹುಬ್ಬೇರಿಸಿದ.  ನಾನು ಉಗುಳು ನುಂಗುತ್ತಾ “ನಂಗೂ ಬಲೂನ್ ಮಾರಬೇಕು ಅಂತ ಆಸೆ” ಅಂದೆ.  ಅವನೆಲ್ಲಿ ಆಗುವುದಿಲ್ಲ ಅಂದುಬಿಡುತ್ತಾನೋ ಎಂದು ಭಯವಾಯಿತು.  ಆದರೆ ಹಾಗೇನೂ ಆಗಲಿಲ್ಲ.  ಅವನು “ಭೇಷ್” ಎನ್ನುತ್ತಾ ನನ್ನ ಭುಜ ತಟ್ಟಿದ.  “ಎಷ್ಟು ಸಂಪಾದಿಸಿದೀಯ?” ಅಂದ.  ಜೇಬಿನಲ್ಲಿದ್ದ ಚಿಲ್ಲರೆ ಕಾಸುಗಳನ್ನೆಲ್ಲಾ ಎತ್ತಿ ಅವನ ಮುಂದೆ ಹಿಡಿದೆ.  ರಾಕೇಶ್ ಮುಂದೆ ಬಂದು ಒಂದು ರೂಪಾಯಿಯ ಒಂದು ಮತ್ತು ಎಂಟಾಣೆಯ ಒಂದು ಸಿಕ್ಕಾವನ್ನು ಎತ್ತಿ ನನ್ನ ಜೇಬಿಗೇ ಹಾಕಿ “ಎಲ್ಲಾನೂ ಕೊಟ್ಟುಬಿಟ್ರೆ ಈವತ್ತು ಏನು ಸಿಕ್ತು ಅಂತ ನಿಮ್ಮಮ್ಮ ಕೇಳಿದ್ರೆ ಏನು ಹೇಳ್ತೀಯ?  ಏನೂ ಇಲ್ಲ ಅಂದ್ರೆ ಅವ್ಳು ನಂಬಲ್ಲ.  ಈ ದೊಡ್ಡೋರು ನಮ್ಮಂತಾ ಚಿಕ್ಕೋರ ಯಾವ ಮಾತನ್ನೂ ನಂಬಲ್ಲ.  ಬೀಳಿಸಿಕೊಂಡಿದ್ದೀಯ ಅಂತ ಇಲ್ಲಾ ಏನಾದ್ರೂ ತಗೊಂಡು ತಿಂದು ಹಾಳು ಮಾಡಿದ್ದೀಯ ಅಂತ ಬೈತಾಳೆ ನಿಮ್ಮಮ್ಮ.  ಅದ್ಕೇ, ಸಿಕ್ಕಿದ್ದು ಇದು ಅಂತ ಇಷ್ಟಾದರೂ ಅವಳ ಕೈಗೆ ಹಾಕು.  ದಿನಾ ಹಂಗೇ ಮಾಡು.  ಆಗ ಏಟು ತಿನ್ನೋದು ತಪ್ಪುತ್ತೆ.  ನಾ ಮಾಡೋದೂ ಹಂಗೇನೇ” ಅಂದ.  ಅವನ ಮಾತು ಸರಿಯೆನಿಸಿತು.
ಗುಡ್ಡೂಭೈಯಾ ನನ್ನ ಅಂಗೈಯಲ್ಲಿ ಉಳಿದಿದ್ದ ನಾಲ್ಕು ರೂಪಾಯಿಗಳನ್ನು ಎತ್ತಿಕೊಂಡು ತನ್ನ ಪ್ಯಾಂಟಿನ ಜೇಬಿಗೆ ಸೇರಿಸಿ ಚೀಲದಿಂದ ಅದೇ ಪುಟ್ಟ ಪುಸ್ತಕ ತೆಗೆದು ಗುರುತು ಮಾಡಿದ.  “ನಿನ್ನ ಅಕೌಂಟ್ ಇದು” ಅಂತ ನನಗೂ ತೋರಿಸಿದ.  ನನಗೆ ನನ್ನ ಬಗ್ಗೇ ಹೆಮ್ಮೆಯೆನಿಸಿತು.  ಪೂರ್ತಿ ಇನ್ನೂರೈವತ್ತು ರೂಪಾಯಿಗಳು ಸೇರಿ ನಾನು ಬಲೂನ್ ಮಾರಲು ಶುರು ಮಾಡುವವರೆಗೆ ಅಮ್ಮನಿಗೆ ಗುಟ್ಟು ಬಿಡಬಾರದೆಂದು ಗುಡ್ಡೂಭೈಯಾ ಮತ್ತು ರಾಕೇಶ್ ಇಬ್ಬರೂ ತಾಕೀತು ಮಾಡಿದರು.
*     *     *
ನೀಲೀ ಪ್ಲಾಸ್ಟಿಕ್ ಹಾಳೆಗಳನ್ನು ಸುತ್ತಿ ಕಂಕುಳಲ್ಲಿ ಇರುಕಿಕೊಂಡು ಅಮ್ಮ ಬಂದಾಗ ಸೂರ್ಯ ಫ್ಲೈಓವರ್‌ನ ಎಡಪಕ್ಕದ ಎತ್ತರದ ಕಟ್ಟಡದ ಹಿಂದೆ ಮರೆಯಾಗಿಹೋಗಿದ್ದ.  ಜೇಬಿನಲ್ಲಿದ್ದ ಒಂದೂವರೆ ರೂಪಾಯಿಗಳನ್ನು ತೆಗೆದು ಅಮ್ಮನಿಗೆ ಕೊಟ್ಟೆ.  ಅಮ್ಮ ಎರಡು ಬಾಳೆಹಣ್ಣುಗಳನ್ನೂ ತಂದಿದ್ದಳು.  ಎರಡನ್ನೂ ನನಗೇ ಕೊಟ್ಟು “ನಾನು ತಿಂದಾಯ್ತು. ಎರಡೂ ನಿನಗೇ” ಅಂದಳು.  ಖುಷಿಯಾಯಿತು.  ಒಂದೂವರೆ ನಾನು ತಿಂದೆ.  ಉಳಿದರ್ಧವನ್ನು ಬದಾಮ್‌ಗೆ ಕೊಟ್ಟೆ.  ತನಗೆ ನಿದ್ದೆ ಬರುತ್ತಿದೆಯೆಂದು ಅಮ್ಮ ಪ್ಲಾಸ್ಟಿಕ್ ಹಾಳೆಗಳ ಮೇಲೇ ಮಲಗಿಬಿಟ್ಟಳು.  ಗುಡ್ಡೂಭೈಯಾನ ಜತೆ ಹೋಗಿದ್ದ ರಾಕೇಶ್ ಇನ್ನೂ ಬಂದಿರಲಿಲ್ಲ.  ಉಳಿದವರೂ ಎಲ್ಲೂ ಕಾಣುತ್ತಿರಲಿಲ್ಲ.  ಒಂದಿಬ್ಬರು ಜನ ರಸ್ತೆಯ ಆಚೆಬದಿಯ ಕಾಂಪೌಂಡ್ ಮೇಲೆ ಬಿಳೀ ಸೀರೆಯುಟ್ಟುಕೊಂಡು ಕೈಮುಗಿದುಕೊಂಡು ಬಾಯನ್ನು ಚೂರೇ ತೆರೆದುಕೊಂಡು ನಗುತ್ತಾ ನಿಂತಿದ್ದ ಅಂಗ್ರೇಜಿ ಹೆಂಗಸೊಬ್ಬಳ ಪಟಗಳನ್ನು ಅಂಟಿಸುತ್ತಿದ್ದರು.  ನೀಲೀ ಪಗಡಿಯ ಒಬ್ಬ ಮುದುಕ ಸರದಾರ್ಜಿಯ ಪಟಗಳೂ ಇದ್ದವು.  ಒಂದೆರಡರಲ್ಲಿ ಅವನ ಜತೆ ಆ ಅಂಗ್ರೇಜೀ ಹೆಂಗಸೂ ಇದ್ದಳು.  ಇಬ್ಬರೂ ಕೈಗಳನ್ನು ಮೇಲೆತ್ತಿ ಎರಡಕ್ಕೆ ಮಾಡಬೇಕು ಅನ್ನುವಂತೆ ಎರಡು ಬೆರಳುಗಳನ್ನು ತೋರಿಸುತ್ತಿದ್ದರು.  ಇಬ್ಬರ ಮುಖದಲ್ಲೂ ನಗುವೋ ನಗು.  ನಾನೂ ಬದಾಮ್ ಇಬ್ಬರೂ ನಗುತ್ತಾ ಪಟಗಳನ್ನು ಅಂಟಿಸುತ್ತಿದ್ದವರ ಹಿಂದೆ ಹಿಂದೆಯೇ ಹೋದೆವು.
ಹಿಂದಕ್ಕೆ ತಿರುಗಿ ಅಮ್ಮನ ಬಳಿ ಬಂದಾಗ ಅವಳೂ ಕಾಲೂ ಕಾಕಾನೂ ಕಲ್ಲುಗಳಿಂದ ನೆಲಕ್ಕೆ ಮೊಳೆ ಹೊಡೆಯುತ್ತಿದ್ದರು.  “ರಾತ್ರಿ ನೀನು ಚಳೀಲಿ ನಡುಗ್ತಾ ಇದ್ದೆ ಅಂತ ನಿಮ್ಮಮ್ಮ ಗುಡಾರ ನಿಲ್ಲಿಸ್ತಾ ಇದ್ದಾಳೆ ಕಣೋ” ಅಂದಳು ಮಂಜರಿ ಕಾಕಿ ನಗುತ್ತಾ.  ನಾನೂ ಏನೂ ಮಾತಾಡಲಿಲ್ಲ.   ಗುಡಾರ ತಯಾರಾಗುವುದನ್ನೇ ನೋಡುತ್ತಾ ನಿಂತೆ.  ಬದಾಮ್ ಅವರಮ್ಮನ ಬಳಿ ಓಡಿಹೋದಳು.
ಕತ್ತಲಾದ ಮೇಲೆ ಬಿಮ್ಲಾ ಚಾಚಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಬಂದಳು.  ಅವಳು ಅಳುತ್ತಿದ್ದಳು.  “ಏನಾಯ್ತು?” ಎಂದು ಅಮ್ಮನೂ ಮಂಜರಿ ಕಾಕಿಯೂ ಒಟ್ಟಿಗೆ ಕೇಳಿದರು.  ಅವಳು ಅಳುತ್ತಲೇ “ಬೆಳಗಿನಿಂದ ಕಾಯಿಸಿ ಈಗ ಇಲ್ಲ ಹೋಗು, ನಾಳೆ ಬಾ ಅಂದುಬಿಟ್ರು” ಅಂದಳು.  “ಏನನ್ನ?” ಅಂತ ಅಮ್ಮ ಕೇಳಿದರೆ ಅವಳು ಉತ್ತರಿಸಲಿಲ್ಲ.  ಅಳು ಜೋರುಮಾಡಿದಳು.  “ಆಯ್ ಅದಕ್ಯಾಕೆ ಅಷ್ಟು ಗೋಳಾಡ್ತೀಯ?  ನಾಳೆ ಸಿಗುತ್ತೆ ಬಿಡು” ಅಂದ ಮಂಜರಿ ಕಾಕಿ ಅಮ್ಮನನ್ನು ಹತ್ತಿರ ಕರೆದು ಯಾವುದೋ ಮಗುವಿನ ಬಗ್ಗೆ ಹೇಳತೊಡಗಿದಳು.  ನಾನು ಹೋಗಿ ರಸ್ತೆಗೆ ಕಾಲು ಇಳಿಬಿಟ್ಟುಕೊಂಡು ಬರೀ ಕೆಂಪುಬಣ್ಣದ ಕಾರುಗಳನ್ನು ಲೆಕ್ಕಹಾಕುತ್ತಾ ಕುಳಿತೆ.
ರಾತ್ರಿ ಗುಡಾರದಲ್ಲಿ ನಾನೊಬ್ಬನೇ ಮಲಗಿದೆ.  ಮಂಜರಿ ಕಾಕಿ ಮತ್ತು ಬಿಮ್ಲಾ ಚಾಚಿಯ ಜತೆ ಅಮ್ಮ ಹೊರಗೇ ಮಲಗಿಕೊಂಡಳು.  ಅವರು ಮೂವರೂ ತುಂಬಾ ಹೊತ್ತಿನವರೆಗೆ ಮಾತಾಡುತ್ತಿದ್ದರು.  ಮಧ್ಯೆ ಮಧ್ಯೆ ಕಾಲೂ ಕಾಕಾನ ದನಿಯೂ ಕೇಳುತ್ತಿತ್ತು.
ಏನೋ ಗಲಾಟೆ ಕೇಳಿ ಗಕ್ಕನೆ ಎಚ್ಚರವಾಯಿತು.  “ಅಮ್ಮಾ” ಎಂದು ಕೂಗುತ್ತಾ ಎದ್ದು ಹೊರಗೆ ಓಡಿಬಂದೆ.  ಅಲ್ಲಿ ನೋಡಿದರೆ ಅಮ್ಮ ಮತ್ತು ಬಿಮ್ಲಾ ಚಾಚಿ ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರು.  ಅವರ ಕಾಲಬಳಿಯೇ ನೆಲದ ಮೇಲೆ ಬಿದ್ದು ಉರುಳಾಡುತ್ತಿದ್ದ ಒಬ್ಬನಿಗೆ ಗುಡಿಯಾಳ ಅಮ್ಮ ಒಂದೇಸಮನೆ ಪೊರಕೆಯಿಂದ ಸಿಕ್ಕಿದ ಕಡೆ ಹೊಡೆಯುತ್ತಿದ್ದಳು.  ನೋಡಿದರೆ ಅವನು ಗುಡಿಯಾಳ ಅಪ್ಪ.  ರಾಕೇಶ್‌ನ ಅಮ್ಮ, ಬದಾಮ್‌ಳ ಅಮ್ಮ, ಕಾಲೂ ಕಾಕಾ, ಜತೆಗೆ ಇನ್ನೂ ಒಂದಷ್ಟು ಜನ ಗಲಾಟೆ ನೋಡುತ್ತಾ ನಿಂತಿದ್ದರು.  ಮಂಜರಿ ಕಾಕಿ ಗುಡಿಯಾಳ ಅಮ್ಮನ ಹಿಂದೆ ನಿಂತು “ಬಾರಿಸು ಸೂಳೆಮಗನಿಗೆ, ಇನ್ನೂ ನಾಕು ಇಕ್ಕು ಮಾನಗೆಟ್ಟ ನಾಯಿಗೆ” ಎನ್ನುತ್ತಿದ್ದಳು.  ಗುಡಿಯಾ ಗಂಟಲು ಕಿತ್ತುಹೋಗುವಂತೆ ಅರಚುತ್ತಿದ್ದಳು.  ನಾನು ಹೆದರಿಹೋದೆ.  ಅಮ್ಮನ ಬಳಿ ಓಡಿಹೋಗಿ ಅವಳ ಕಾಲುಗಳನ್ನು ಅವಚಿ ಹಿಡಿದುನಿಂತೆ.  ಅಮ್ಮ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಳು.  ಅವಳ ಕಾಲುಗಳು ಸಣ್ಣಗೆ ನಡುಗುತ್ತಿದ್ದವು.
ಕೊನೆಗೆ ಯಾರೋ ಇಬ್ಬರು ಬಂದು ಗುಡಿಯಾಳ ಅಮ್ಮನನ್ನು ಹಿಡಿದು ದೂರ ನಿಲ್ಲಿಸಿದರು.  ಒಬ್ಬ ಅವಳ ಕೈಲಿದ್ದ ಪೊರಕೆಯನ್ನು ಕಿತ್ತು ರಸ್ತೆಗೆ ಎಸೆದ.  ಅವಳು ಒಂದೇಸಮನೆ ಬೈಯುತ್ತಾ ಹೋಗಿ ಗುಡಿಯಾಳನ್ನು ರಭಸವಾಗಿ ಎತ್ತಿಕೊಂಡು ಅಲ್ಲಿದ್ದ ಒಂದು ಚೀಲವನ್ನು ದರದರ ಎಳೆಯುತ್ತಾ ರಸ್ತೆಗಿಳಿದು ಫ್ಲೈಓವರ್‌ನ ಗೋಡೆಯ ಹಿಂದೆ ಮರೆಯಾಗಿಹೋದಳು.  ಗುಡಿಯಾಳ ಅಪ್ಪ ಸತ್ತಂತೆ ಬಿದ್ದುಕೊಂಡಿದ್ದ.  ಅವನನ್ನು ಅಲ್ಲೇ ಬಿಟ್ಟು ಅಮ್ಮ ನನ್ನನ್ನು ತಳ್ಳಿಕೊಂಡು ಗುಡಾರದೊಳಗೆ ಬಂದಳು.  ಬಿಮ್ಲಾ ಚಾಚಿಯೂ ಬಂದಳು.  ಇಬ್ಬರೂ ಏನೋ ಮಾತಾಡದೇ ನನ್ನನ್ನು ಮಧ್ಯೆ ಮಲಗಿಸಿ ತಾವು ಆಚೀಚೆ ಮಲಗಿದರು.  ನನಗೆ ತುಂಬಾ ಹೊತ್ತಿನವರೆಗೆ ನಿದ್ದೆಯೇ ಬರಲಿಲ್ಲ.
ಬೆಳಿಗ್ಗೆ ಎಚ್ಚರವಾದಾಗ ಅಮ್ಮ ಚಾಯ್ ಕುಡಿಯುತ್ತಾ ಗುಡಾರದ ಬಾಗಿಲಲ್ಲಿ ಕೂತಿದ್ದಳು.  ಎದ್ದು ಹೊರಗೆ ಬಂದೆ.  ಮಂಜರಿ ಕಾಕಿ ಮತ್ತು ಕಾಲೂ ಕಾಕಾ ಏನೋ ಹೇಳಿಕೊಂಡು ನಗುತ್ತಾ ಚಾಯ್ ಕುಡಿಯುತ್ತಿದ್ದರು.  ಬಿಮ್ಲಾ ಚಾಚಿ ಎಲ್ಲೂ ಕಾಣಲಿಲ್ಲ.  ಗುಡಿಯಾಳ ಅಪ್ಪನೂ ಅಲ್ಲಿರಲಿಲ್ಲ.  ಅದೆಲ್ಲಿ ಹೋದನೋ.  ಅವನನ್ನು ಮತ್ತೆ ನಾನು ನೋಡಲೇ ಇಲ್ಲ.
ಆದಷ್ಟು ಬೇಗ ಇನ್ನೂರೈವತ್ತು ರೂಪಾಯಿ ಸೇರಿಸಬೇಕೆಂದು ನಾನು ರಾಕೇಶ್‌ನ ಜತೆ ಸೇರಿ ತುಂಬಾ ಒಡಾಡಿದೆ.  ಎಲ್ಲರನ್ನೂ ಕಾಸು ಕೇಳಿದೆ.  ಗುಡ್ಡೂಭೈಯಾ ಬರುವ ಹೊತ್ತಿಗೆ ನನ್ನ ಜೇಬಿನಲ್ಲಿ ಒಂಬತ್ತು ರೂಪಾಯಿಗಳಿದ್ದವು.  ಎರಡನ್ನು ಅಮ್ಮನಿಗೆಂದು ಇಟ್ಟುಕೊಂಡು ಬಾಕಿ ಏಳು ರೂಪಾಯಿಗಳನ್ನು ಅವನಿಗೆ ಕೊಟ್ಟೆ.  ಅವನು ತನ್ನ ಪುಸ್ತಕದಲ್ಲಿ ಬರೆದುಕೊಂಡು “ಹನ್ನೊಂದಾಯಿತು” ಅಂದ.  ಸಾಯಂಕಾಲ ರಾಕೇಶ್ ನನ್ನನ್ನೂ ಬದಾಮ್‌ಳನ್ನೂ ಓಖ್ಲಾ ಸಬ್ಜಿ ಮಂಡಿಗೆ ಕರೆದುಕೊಂಡು ಹೋದ.  ಅಲ್ಲಿ ಕಟ್ಟೆಯ ಕೆಳಗಿನ ಕಸದ ರಾಶಿಯ ಬಳಿ ನಮಗೆ ತುಂಬಾ ಮೂಲಂಗಿಗಳು ಸಿಕ್ಕಿದವು.  ಚಪಾತಿಯ ಜತೆ ತಿನ್ನಲು ಈರುಳ್ಳಿ ಬೇಕಾಗಿದ್ದುದರಿಂದ ನಾನು ಅವುಗಳಿಗಾಗಿ ತುಂಬಾ ಹುಡುಕಾಡಿದೆ.  ಸಿಕ್ಕಿದವೆಲ್ಲಾ ಕೊಳೆತುಹೋಗಿ ನಾತ ಹೊಡೆಯುತ್ತಿದ್ದವು.  ಒಂದೆರಡು ಮಾತ್ರ ಸ್ವಲ್ಪ ಚೆನ್ನಾಗಿದ್ದವು.  ನಾನು ಈರುಳ್ಳಿ ಹುಡುಕುತ್ತಿದ್ದಾಗ ಅವರಿಬ್ಬರೂ ಎಲ್ಲಿಂದಲೋ ಸೇಬುಗಳನ್ನು ಹುಡುಕಿ ತಂದರು.  ನನಗೂ ಒಂದು ಕೊಟ್ಟರು.
ಸೇಬು ತಿನ್ನುತ್ತಾ ನಾವು ನಮ್ಮ ಜಾಗಕ್ಕೆ ಬಂದಾಗ ಎಲ್ಲರೂ ಅಲ್ಲಿದ್ದರು.  ಬಿಮ್ಲಾ ಚಾಚಿ ಹಳದೀ ಶರ್ಟು ತೊಟ್ಟ ಒಂದು ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸುತ್ತಲೂ ನೋಡುತ್ತಾ ಖುಷಿಯಿಂದ ತನ್ನ ಪಾಡಿಗೆ ತಾನು ಹಾಡಿಕೊಳ್ಳುತ್ತಿದ್ದಳು.  ಅಮ್ಮ ಚಪಾತಿ ಸುಡುತ್ತಿದ್ದಳು.  ಮಂಜರಿ ಕಾಕಿ ಬೆಳ್ಳಗಿದ್ದ ಏನನ್ನೋ ಬೇಯಿಸುತ್ತಿದ್ದಳು.  ಬದಾಮ್‌ಳ ಅಮ್ಮ ದಪ್ಪ ಮಡಕೆಯಲ್ಲಿ ಎನೋ ಗಮಗಮ ಅನ್ನುವುದನ್ನು ಕಡ್ದಿಯಿಂದ ತಿರುವುತ್ತಿದ್ದಳು.  ಎಲ್ಲರೂ ಗಲಗಲ ಮಾತಾಡಿಕೊಂಡು ನಗುತ್ತಿದ್ದರು.  ನಾನು ತಂದ ಮೂಲಂಗಿಗಳ ಬಗ್ಗೆ ಅಮ್ಮನಿಗೆ ಗಮನವೇ ಇಲ್ಲ.  “ನಿನ್ನ ಬಿಮ್ಲಾ ಚಾಚಿ ಈವತ್ತು ನಮಗೆಲ್ಲಾ ಔತಣ ಕೊಡ್ತಿದಾಳೆ.  ಮಾಂಸ, ಕೋಳಿಮಾಂಸದ ಔತಣ” ಅಂದಳು.  ನನಗೆ ಬಾಯಲ್ಲಿ ನೀರೂರಿತು.  ಕೋಳಿಮಾಂಸ ತಿಂದು ತುಂಬ ದಿನಗಳಾಗಿದ್ದವು.  ಎಷ್ಟೊತ್ತಿಗೆ ಅದು ತಯಾರಾಗುತ್ತದೋ ಎಂದು ಕಾಯತೊಡಗಿದೆ.  ಬದಾಮ್ ಬಿಮ್ಲಾ ಚಾಚಿಯ ತೊಡೆಯಲ್ಲಿದ್ದ ಮಗುವನ್ನು ಮಾತಾಡಿಸಲು ಪ್ರಯತ್ನಿಸುತ್ತಿದ್ದಳು.  ಆದರೆ ಅದು ಒಂದೇಸಮನೆ ನಿದ್ದೆ ಮಾಡುತ್ತಿತ್ತು.  ನಾನೂ ಅವರ ಜತೆ ಸೇರಿಕೊಂಡೆ.  ಆ ಮಗುವಿನ ಹೆಸರೇನೆಂದು ಕೇಳಿದರೆ ಬಿಮ್ಲಾ ಚಾಚಿ ಹಾಡು ನಿಲ್ಲಿಸಿ ನನ್ನನ್ನೇ ನೋಡಿದಳು.  ಬದಾಮ್‌ಳೂ ಕೇಳಿದಾಗ ಮಾತ್ರ “ಅದೇನೋ ಹೇಳಿದರು.  ನೆನಪೇ ಆಗ್ತಿಲ್ಲ” ಅಂತ ರಾಗ ಎಳೆದಳು.  “ನೀನೇ ಒಂದು ಹೆಸರು ಹೇಳು” ಆಂದಳು.  “ನಂಗೊತ್ತಿಲ್ಲಾ” ಎನ್ನುತ್ತಾ ಬದಾಮ್ ಮುಖ ಮುಚ್ಚಿಕೊಂಡಳು.  ನನಗೂ ಏನೂ ಹೊಳೆಯಲಿಲ್ಲ.  ಅಮ್ಮನನ್ನು ಕೇಳಿದೆ.  ಅವಳು ಹೇಳುವ ಮೊದಲೇ ಮಂಜರಿ ಕಾಕಿ “ಚಾರು ಮುಜುಂದಾರ್” ಅಂದಳು.  “ಬೇಡ, ಅಷ್ಟುದ್ದದ ಹೆಸರು ಬೇಡ” ಅಂತ ಬಿಮ್ಲಾ ಚಾಚಿ ತಲೆಯಾಡಿಸಿಬಿಟ್ಟಳು.  ಅಮ್ಮನೂ ಹಾಗೇ ಅಂದಳು.  “ಹಾಗಿದ್ರೆ ನೀನೇ ಹೇಳು” ಅಂದಳು ಮಂಜರಿ ಕಾಕಿ.  ಅಮ್ಮ “ಅಣ್ಣಾ ಹಜಾರೆ” ಅಂದಳು.  ಉಳಿದವರೆಲ್ಲ ಜೋರಾಗಿ ನಕ್ಕುಬಿಟ್ಟರು.  ಮೂವರೂ ಸ್ವಲ್ಪ ಹೊತ್ತು ಏನೇನೋ ಹೆಸರು ಹೇಳಿಕೊಂಡು ನಗುತ್ತ್ತಿದ್ದರು.  ಮಲಗಿದ್ದ ಕಾಲೂ ಕಾಕಾ ಕಣ್ಣುಮುಚ್ಚಿಕೊಂಡೇ “ರಜನಿ ಅಂತ ಕರೀರಿ.  ಸೂಪರ್ ಹೆಸರು ಅದು” ಎಂದು ಕೂಗಿದ.  ತಕ್ಷಣ ಬದಾಮ್‌ಳ ಅಮ್ಮ “ದೇವರೇ, ಅದು ನನ್ನ ಹೆಸರು!” ಎಂದು ಅವನಿಗಿಂತಲೂ ಜೋರಾಗಿ ಕೂಗಿಬಿಟ್ಟಳು.  “ಥೂ, ಎಮ್ಮೆ ತಲೆಯವನೇ, ಇದು ಗಂಡುಮಗು.  ಅದಕ್ಕೆ ಹುಡುಗಿ ಹೆಸರು ಹೇಳಿ ನನ್ ಮಾನ ತೆಗೀತಿದೀಯಲ್ಲ, ಸುಮ್ನೆ ಬಿದ್ಕೋ” ಎಂದು ಮಂಜರಿ ಕಾಕಿ ಗದರಿದಳು.  “ಅದು ಹುಡುಗಿಯ ಹೆಸರಲ್ಲ” ಎಂದು ಕಾಲೂ ಕಾಕಾ ಎದ್ದುಕೂತು ಹೇಳಿದ.  ಆದರೆ ಅವನ ಮಾತನ್ನು ಒಪ್ಪಲು ಯಾರೂ ತಯಾರಿರಲಿಲ್ಲ.  ಮಂಜರಿ ಕಾಕಿಯೂ ಅಮ್ಮನೂ ಸೇರಿ ಅವನ ಬಾಯಿ ಮುಚ್ಚಿಸಿಬಿಟ್ಟರು.  ಮಂಜರಿ ಕಾಕಿಯಂತೂ ಒಲೆಯಿಂದ ಉರಿಯುತ್ತಿದ್ದ ಒಂದು ದಪ್ಪ ಕಡ್ಡಿಯನ್ನು ಹೊರಗೆತ್ತಿ “ನಿನ್ನ ಮೀಸೆ ಸುಟ್ಟುಬಿಡ್ತೀನಿ” ಅಂತ ಹೆದರಿಸಿದಾಗ ಅವನು “ಏನಾದ್ರೂ ಇಟ್ಕೊಳ್ರೇ ರಂಡೇರಾ” ಎನ್ನುತ್ತಾ ಎದ್ದು ರಸ್ತೆಯಾಚೆ ಹೋದ.  ಕೊನೆಗೆ ಬಿಮ್ಲಾ ಚಾಚಿಯೇ ಇಟ್ಟ ಶಾರುಖ್ ಎಂಬ ಹೆಸರು ಎಲ್ಲರಿಗೂ ಇಷ್ಟವಾಯಿತು.
ಎಲ್ಲವೂ ತಯಾರಾಗಿ ನನ್ನನ್ನೂ ಬದಾಮ್ ಅನ್ನೂ ಪಕ್ಕಪಕ್ಕ ಕೂರಿಸಿ ಊಟ ಕೊಟ್ಟರು.  “ಇದು ಶಾರುಖ್‌ನ ನಾಮಕರಣದ ಔತಣ” ಎಂದು ಮಂಜರಿ ಕಾಕಿ ನಗಾಡಿದಳು.  ಅವಳು ಬೇಯಿಸಿದ್ದು ಚಾವಲ್ ಅಂತೆ.  ನನಗದು ಇಷ್ಟವಾಗಲಿಲ್ಲ.  ಬದಾಮ್ ಸಹಾ ಬೇಡ ಅಂದುಬಿಟ್ಟಳು.  ದೊಡ್ಡವರು ಹೆಚ್ಚು ಒತ್ತಾಯಿಸದೇ ನಮಗೆ ಅಮ್ಮ ಮಾಡಿದ ಚಪಾತಿ ಮತ್ತು ರಜನಿ ಚಾಚಿ ಮಾಡಿದ ಕೋಳಿಮಾಂಸವನ್ನು ಮಾತ್ರ ಕೊಟ್ಟರು.  ತುಂಬ ಚೆನ್ನಾಗಿತ್ತು.  ಖುಶಿಯಿಂದ ತಿಂದೆವು.  ಅಮ್ಮನೂ ಮಂಜರಿ ಕಾಕಿಯೂ ಬಿಮ್ಲಾ ಚಾಚಿಯ ತಟ್ಟೆಗೆ ಮತ್ತೆ ಮತ್ತೆ ಚಪಾತಿ, ಕೋಳಿಮಾಂಸ ಹಾಕಿ ತಿನ್ನು ತಿನ್ನು ಎಂದು ಒತ್ತಾಯಿಸುತ್ತಿದ್ದರು.  ಅವಳು ನಾಚಿಕೊಂಡಂತೆ ಮಾಡಿ “ಬೇಡ ಬೇಡ, ನಂಗೆ ಸಾಕು.  ನೀವು ತಿನ್ನಿ” ಎನ್ನುತ್ತಾ ಅವರ ತಟ್ಟೆಗೇ ಹಾಕಲು ನೋಡುತ್ತಿದ್ದಳು.  ಅವರು “ಬೇಡ, ನೀನು ತಿನ್ನು” ಎನ್ನುತ್ತಾ ತಮ್ಮ ತಟ್ಟೆಗಳನ್ನು ಮೇಲೆತ್ತಿ ಹಿಡಿದುಕೊಂಡರು.  ಎಲ್ಲರಿಗೂ ನಗುವೋ ನಗು.  ಎಚ್ಚರಾದ ಶಾರುಖ್ ಒಂದೇಸಮನೆ ಪುರಕ್ ಪುರಕ್ ಎಂದು ಹೂಸು ಬಿಡತೊಡಗಿದ.  “ಬೇಧಿ ಮಾಡ್ಕೋತಿದೆ” ಅಂದಳು ಬಿಮ್ಲಾ ಚಾಚಿ ನಗುತ್ತಾ.
ನಾವು ಊಟ ಮಾಡುತ್ತಿದ್ದಾಗ ರಾಕೇಶ್ ನಮ್ಮನ್ನೇ ನೋಡುತ್ತಾ ದೂರದಲ್ಲಿ ಕುಳಿತಿದ್ದ.  ಯಾಕೋ ನಮ್ಮ ಹತ್ತಿರ ಬರಲಿಲ್ಲ.  ಅವರಮ್ಮನೂ ಬರಲಿಲ್ಲ.  ಅವಳು ಸಣ್ಣಗೆ ಉರಿಯುತ್ತಿದ್ದ ಬೆಂಕಿಯಲ್ಲಿ ಏನನ್ನೋ ಸುಡುತ್ತಿದ್ದಳು.  ಅದು ಚಟ್ ಚಟ್ ಎಂದು ಸದ್ದು ಮಾಡುತ್ತಿತ್ತು.
ಜಾಸ್ತಿ ಊಟ ಮಾಡಿದ್ದರಿಂದಲೋ ಏನೋ ಬದಾಮ್ ಎರಡಕ್ಕೆ ಮಾಡಬೇಕು ಅಂದಳು.  ಅವಳನ್ನು ರಸ್ತೆಯಾಚೆಯ ಕಾಂಪೌಂಡ್ ಪಕ್ಕದ ಪೊದೆಗೆ ಕರೆದುಕೊಂಡು ಹೋಗಲು ನನಗೆ ಹೇಳಿದರು.  ನನಗೆ ನಿದ್ದೆ ಬರುತ್ತಿದ್ದರೂ ಒಪ್ಪಿಕೊಂಡೆ.  ನಾವಿಬ್ಬರೂ ರಸ್ತೆ ದಾಟುತ್ತಿದ್ದಾಗ ಹಿಂದಿನಿಂದ ಅವಳ ಅಮ್ಮನೂ ಬಂದಳು.   ಅವಸರವಾಗ್ತಿದೆ ಎಂದು ಬದಾಮ್ ಹೇಳಿದರೂ ಬಿಡದೇ ನಮ್ಮನ್ನು ಸ್ವಲ್ಪ ದೂರ ನಡೆಸಿ ಬೆಳಕು ಕಡಿಮೆಯಿದ್ದ ಕಡೆ ಕರೆದುಕೊಂಡು ಹೋದಳು.  ಅಲ್ಲಿ ಬದಾಮ್ ಅನ್ನು ಕೂರಿಸಿ ತಾನೂ ಕೆಳಗೆ ಕೂತು ಉಚ್ಚೆ ಹೊಯ್ದಳು.  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಬ್ಬ ನಮ್ಮತ್ತಲೇ ನೋಡುತ್ತಾ ನಿಂತುಕೊಂಡ.  ಉಚ್ಚೆ ಹೊಯ್ದು ಎದ್ದು ನಿಂತ ರಜನಿ ಚಾಚಿ ಸೀರೆಯನ್ನು ತುಂಬಾ ಮೇಲೆತ್ತಿ ಮತ್ತೆಮತ್ತೆ ಒದರಿದಳು.  ರಸ್ತೆಯಲ್ಲಿ ನಿಂತಿದ್ದವನು ಅವಳತ್ತಲೇ ನೋಡುತ್ತಿದ್ದ.  ಚಾಚಿ ಮತ್ತೊಮ್ಮೆ ಸೀರೆ ಒದರಿ “ಬರ್ತೀಯೇನಲೇ?” ಅಂದಳು.  ಅವನು ಹೆದರಿಕೊಂಡಂತೆ ಮಾಡಿ ಅತ್ತಿತ್ತ ನೋಡಿ ಎಡಗೈಯನ್ನು ಚೂರೇ ಮೇಲೆತ್ತಿ ಚಾಚಿಯತ್ತ ಸನ್ನೆ ಮಾಡಿದ.  ಸೀರೆಯನ್ನು ಮಂಡಿಯವರೆಗೆ ಎತ್ತಿಹಿಡಿದುಕೊಂಡೇ ಅವನ ಬಳಿ ಹೋದ ರಜನಿ ಚಾಚಿ ಒಂದೆರಡು ನಿಮಿಷ ಏನೋ ಮಾತಾಡಿ ನಂತರ ನನ್ನತ್ತ ತಿರುಗಿ “ಅವಳು ಹೇತಮೇಲೆ ಕರಕೊಂಡು ವಾಪಸ್ ಹೋಗು.  ನಾನು ಆಮೇಲೆ ಬರ್ತೀನಿ” ಅಂದಳು.  ನಾನು “ಹ್ಞೂಂ” ಅಂದೆ.  ಅವನ ಜತೆ ನಡೆಯತೊಡಗಿದ ಅವಳು ಮತ್ತೆ ಹಿಂದಕ್ಕೆ ತಿರುಗಿ “ತಿಕ ತೊಳೆಯೋದು ಮರೀಬೇಡಾ” ಎಂದು ಬದಾಮ್‌ಗೆ ಕೂಗಿ ಹೇಳಿದಳು.
ನಾವಿಬ್ಬರೂ ಹಿಂದಕ್ಕೆ ಬರುತ್ತಿದ್ದಾಗ ಸ್ಕೂಟರ್ ನಿಲ್ಲಿಸಿಕೊಂಡು ಏನೋ ಮಾಡುತ್ತಿದ್ದ ಒಬ್ಬ ಬೇಸರದಲ್ಲಿ ಏನೇನೋ ಮಾತಾಡಿಕೊಳ್ಳುತ್ತಿದ್ದ.  “ಪಾಗಲ್ ಅನ್ಸುತ್ತೆ” ಅಂದಳು ಬದಾಮ್.  ಅವನಿಗದು ಕೇಳಿಸಿಬಿಟ್ಟಿತು.  ತಲೆಯೆತ್ತಿ ದುರುಗುಟ್ಟಿ ನೋಡಿದ.  ಬದಾಮ್ ಹೆದರಿಕೊಂಡು ಓಡಿದಳು.  ನಾನೂ ನಾಕು ಹೆಜ್ಜೆ ಓಡಿ ನಿಂತು ಅವನತ್ತ ಬಾಯಿ ತೆರೆದು ಅಣಕಿಸಿ ಎರಡೂ ಕೈಗಳಿಂದ ಚಡ್ಡಿಯನ್ನು ಅಲ್ಲಾಡಿಸುತ್ತಾ “ಬರ್ತೀಯೇನಲೇ?” ಎಂದು ಕೂಗಿದೆ.  ಅವನು “ಸೂಳೆಮಕ್ಕಳೇ” ಎಂದು ಜೋರಾಗಿ ಬೈದು ಕೈಗಳನ್ನು ಬೀಸುತ್ತಾ ನಮ್ಮನ್ನು ಅಟ್ಟಿಸಿಕೊಂಡು ಬರುವಂತೆ ಮಾಡಿದ.  ನಾವಿಬ್ಬರೂ ಅಲ್ಲಿಂದ ಓಟ ಕಿತ್ತೆವು.
ಈ ರಾತ್ರಿಯೂ ನನ್ನನ್ನೂ, ಬದಾಮ್ ಅನ್ನೂ ಗುಡಾರದೊಳಗೆ ಮಲಗಲು ಹೇಳಿ ಅಮ್ಮನೂ ಮಂಜರಿ ಕಾಕಿಯೂ ಹೊರಗೆ ಮಲಗಿದರು.  ಸ್ವಲ್ಪ ಹೊತ್ತಿನಲ್ಲಿ ರಜನಿ ಚಾಚಿ ಹಿಂತಿರುಗಿ ಬಂದದ್ದು ಅವಳ ದನಿಯಿಂದ ಗೊತ್ತಾಯಿತು.  ಅವಳೇನೋ ಹೇಳಿದ್ದಕ್ಕೆ ಅಮ್ಮನೂ ಮಂಜರಿ ಕಾಕಿಯೂ ಜೋರಾಗಿ ನಕ್ಕರು.  ಆಮೇಲೆ ಅವರು ಮೂವರೂ ತುಂಬಾ ಹೊತ್ತಿನವರೆಗೆ ಪಿಸುಪಿಸು ಮಾತಾಡಿಕೊಂಡು ನಗುತ್ತಿದ್ದರು.
ನನಗೆ ಇನ್ನೇನು ನಿದ್ದೆ ಬರುತ್ತಿದೆ ಅನ್ನುವಾಗ ಬದಾಮ್ ತಿಕ ತೊಳೆಯಲಿಲ್ಲ ಅನ್ನುವುದು ನೆನಪಾಯಿತು.  ಅವಳಿಗೆ ನೆನಪಿಸಬೇಕೆಂದು ನೋಡಿದರೆ ಅವಳಾಗಲೇ ನಿದ್ದೆಹೋಗಿಬಿಟ್ಟಿದ್ದಳು.
*     *     *
            ಬೆಳಿಗ್ಗೆ ಎಚ್ಚರವಾದಾಗ ಪಕ್ಕದಲ್ಲಿ ಕೂತ ಅಮ್ಮ ಬದಾಮ್‌ಳನ್ನು ಎಬ್ಬಿಸುತ್ತಿದ್ದಳು.  ಕಣ್ಣುಜ್ಜಿಕೊಂಡು ಎದ್ದುಕೂತ ಅವಳಿಗೆ “ನೀನು ಹೊರಕ್ಕೆ ಹೋಗು, ಎಷ್ಟೊತ್ತು ಮಲಗೋದು?” ಎಂದು ಸಣ್ಣಗೆ ಗದರಿದಳು.  ಬದಾಮ್ ಮಾತಾಡದೇ ತೆವಳಿಕೊಂಡೇ ಹೊರಗೆ ಹೋದಳು.  ಅವಳು ಹೋದದ್ದೇ ಅಮ್ಮ ರವಿಕೆಯೊಳಗಿಂದ ನೀಟಾಗಿ ಮಡಿಸಿದ್ದ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದನ್ನು ಹೊರತೆಗೆದು ಅದರಲ್ಲಿದ್ದ ಕಾಗದದ ರೂಪಾಯಿಗಳನ್ನೆಲ್ಲಾ ಬೇರೆಬೇರೆ ಮಾಡಿ ಎಣಿಸತೊಡಗಿದಳು.  ಅಲ್ಲಿ ತುಂಬಾ ರೂಪಾಯಿಗಳಿದ್ದವು.  ಅಷ್ಟು ದುಡ್ದು ಅಮ್ಮನ ಬಳಿ ಇದೆಯೆಂದೇ ನನಗೆ ಗೊತ್ತಿರಲಿಲ್ಲ.  ಅಷ್ಟು ದುಡ್ದಿದ್ದರೂ ಅಮ್ಮ ಖುಷಿಯಾಗಲೇ ಇಲ್ಲ.  ಅವುಗಳನ್ನು ಕೈಲಿ ಹಿಡಿದಂತೇ ತಲೆಯೆತ್ತಿ ಕಣ್ಣುಮುಚ್ಚಿಕೊಂಡು ಪಿಸುದನಿಯಲ್ಲಿ “ದೇವರೇ, ಇನ್ನೂ ನೂರಾ ತೊಂಬತ್ತು ರೂಪಾಯಿ, ನಾನು ಜಾಸ್ತಿ ಕೇಳಲ್ಲ, ನೂರಾ ತೊಂಬತ್ತು ಮಾತ್ರ ನನ್ನ ಕೈ ಸೇರೊ ಹಾಗೆ ಮಾಡು” ಎಂದು ಮತ್ತೆಮತ್ತೆ ಗೊಣಗಿಕೊಂಡಳು.
            ನಾನು ಎದ್ದು ಹೊರಗೆ ಬಂದೆ.  ಅಲ್ಲಿ ಬಿಮ್ಲಾ ಚಾಚಿ ಶಾರುಖ್‌ನನ್ನು ಒಂದು ದೊಡ್ಡ ಬಣ್ಣದ ಕಾಗದದ ಮೇಲೆ ನಿಲ್ಲಿಸಿಕೊಂಡು ಎರಡಕ್ಕೆ ಮಾಡಿಸುತ್ತಿದ್ದಳು.  ಹತ್ತಿರ ಹೋಗಿ ನೋಡಿದರೆ ಅದು ನಿನ್ನೆ ಸಾಯಂಕಾಲ ಆ ಇಬ್ಬರು ಕಾಂಪೌಂಡ್ ಮೇಲೆ ಅಂಟಿಸಿದ್ದ ಸೀರೆಯುಟ್ಟ ಅಂಗ್ರೇಜಿ ಹೆಂಗಸಿನ ಚಿತ್ರ ಇದ್ದ ಹಾಳೆಗಳು.  ಅಂತಹ ಹಾಳೆಗಳ ಒಂದು ರಾಶಿ ಬಿಮ್ಲಾ ಚಾಚಿಯ ಪಕ್ಕ ಇತ್ತು.  ಎದುರಿನ ಕಾಂಪೌಂಡ್‌ನತ್ತ ನೋಡಿದರೆ ಅದು ಖಾಲಿ.
            ಸಾಯಂಕಾಲ ಗುಡ್ಡೂಭೈಯಾ ಬಂದಾಗ ಅವನಿಗೆ ಆರು ರೂಪಾಯಿಗಳನ್ನು ಕೊಟ್ಟೆ.  ಅಮ್ಮನಿಗೆ ಅಂತ ಉಳಿಸಿಕೊಂಡದ್ದು ನಿನ್ನೆಯ ಹಾಗೇ ಒಂದೂವರೆ ರೂಪಾಯಿ ಮಾತ್ರ.  ನಿನ್ನೆ ಏನೂ ಮಾತಾಡದೇ ತೆಗೆದುಕೊಂಡ ಅಮ್ಮ ಇಂದು ಮಾತ್ರ ನನ್ನ ತೋಳು ಹಿಡಿದು “ನಿಜ ಹೇಳು, ಇಷ್ಟೇನಾ ಸಿಕ್ಕಿದ್ದು?” ಅಂದಳು.  “ನಿಜವಾಗ್ಲೂ ಅಷ್ಟೇನೇ, ನಿನ್ನಾಣೆ” ಅಂದರೂ ಬಿಡದೇ “ಸುಳ್ಳು ಹೇಳಬೇಡ” ಎಂದು ಜೋರು ಮಾಡಿದಳು.  ನನಗೆ ಅಳುವೇ ಬಂದುಬಿಟ್ಟಿತು.  ಕೊನೆಗೆ ರಾಕೇಶ್‌ನೇ “ಇಲ್ಲಿ ಯಾರೂ ಕಾಸು ಕೊಡಲ್ಲ ಆಂಟೀ.  ಇದು ಭಾಳಾ ಮೋಸದ ಜಾಗ” ಎಂದು ನನ್ನ ಪರವಾಗಿ ವಾದಿಸಿದಾಗ ನನ್ನ ತೋಳು ಬಿಟ್ಟಳು.  ನನ್ನ ಕಣ್ಣೀರು ಒರೆಸುತ್ತಾ “ಒಂದೊಂದು ಪೈಸೆಯೂ ಮುಖ್ಯ ನಂಗೆ.  ನನ್ ಕೈಲಿ ಐನೂರು ರೂಪಾಯಿ ಸೇರಿಬಿಡ್ಲಿ.   ಆಮೇಲೆ ನೀ ಸಂಪಾದಿಸಿದ ಒಂದು ಕಾಸನ್ನೂ ನಾನು ಮುಟ್ಟಲ್ಲ.  ಎಲ್ಲಾ ನಿಂಗೆ” ಅಂದಳು.
            ಕತ್ತಲಾಗುತ್ತಿದ್ದಂತೆ ಛಳಿ ಜಾಸ್ತಿಯಾಯಿತು.  ಸಣ್ಣಗೆ ಮಂಜೂ ಕವಿದುಕೊಂಡಿತು.
ಬಿಮ್ಲಾ ಚಾಚಿ ಕೊಟ್ಟ ಎರಡೆರಡು ಡಬಲ್ ರೋಟಿಗಳಿಂದಲೇ ನಮಗಿಬ್ಬರಿಗೂ ಹೊಟ್ಟೆ ತುಂಬಿದ್ದರಿಂದ ಬದಾಮ್ ಮತ್ತು ನಾನು ಚಪಾತಿ ಬೇಡವೆಂದೆವು.  “ಶಾರುಖ್ ಬರಲಾಗಿ ಇವೆರಡಕ್ಕೂ ಸಿರಿ ಬಂದುಬಿಡ್ತು” ಅಂದಳು ಮಂಜರಿ ಕಾಕಿ.  “ನೋಡ್ತಾ ಇರು, ಇನ್ನು ನಾಕು ದಿನದಲ್ಲಿ ಶಾರುಖ್‌ಗೊಬ್ಬ ತಮ್ಮನ್ನ ತರ್ತೀನಿ ನಾನು.  ಆಗ ನೋಡ್ಕೋ ಇವರಿಬ್ರಿಗೂ ದಿನಾ ಕೋಳಿಮೊಟ್ಟೆ, ಮಾಂಸ ತಿನ್ನಿಸ್ತೀನಿ.  ಆಡಿನ ಮಾಂಸಾನೂ ತಂದು ತಿನ್ನಿಸ್ತೀನಿ” ಅಂದಳು ಅಮ್ಮ.
ಮಲಗುವ ಹೊತ್ತಿಗೆ ಗುಡಿಯಾಳ ಅಮ್ಮ ಬಂದಳು.  ಬಂದವಳೇ ಗುಡಿಯಾಳ ಅಪ್ಪನನ್ನು ಹುಡುಕತೊಡಗಿದಳು.  “ಇಲ್ಲೇನು ಹುಡುಕ್ತಿದೀಯ?  ಅಂವ ಆವತ್ತೇ ಅದೆಲ್ಲೋ ಹೊರಟುಹೋದ” ಎಂದು ಮಂಜರಿ ಕಾಕಿ ಹೇಳಿದಾಗ ಅಳತೊಡಗಿದಳು.  “ಎಲ್ಲೋದ ಅಂತ ನೀವ್ಯಾರೂ ನೋಡಲಿಲ್ವಾ?” ಎಂದು ಅಲ್ಲಿದ್ದ ಎಲ್ಲರನ್ನೂ ಒಬ್ಬೊಬ್ಬರಾಗಿ ಕೇಳಿದಳು.  ಯಾರೂ ಉತ್ತರಿಸಲಿಲ್ಲ.  ರಜನಿ ಚಾಚಿಯಂತೂ “ಹೋಗವ್ನು ನಮಗೆಲ್ಲಾ ಹೇಳಿಬಿಟ್ಟು, ಅಡ್ರೆಸ್ ಬರಕೊಟ್ಟು ಹೋದನಾ?  ಹೋಗ್ಹೋಗು ನೀನೊಬ್ಳು” ಎಂದು ಗದರಿಬಿಟ್ಟಳು.  ಗುಡಿಯಾಳ ಅಮ್ಮ, ಪಾಪ, ಅಳುತ್ತಾ ಹೊರಟುಹೋದಳು.
ಅವಳು ಹೋದೊಡನೇ ಮಲಗಲೆಂದು ಗುಡಾರದೊಳಗೆ ನುಗ್ಗಿದ ನನ್ನ ಹಿಂದೆಯೇ ಬಂದ ಬದಾಮ್‌ಳನ್ನು “ಒಂದ್ನಿಮಿಷ ಹೊರಗೇ ಇರು” ಎಂದು ತಡೆದ ಅಮ್ಮ ತಾನು ಒಳಬಂದು ಸೊಂಟದಲ್ಲಿದ್ದ ಒಂದು ಬಟ್ಟೆ ತೆಗೆದು ಅದರಲ್ಲಿದ್ದ ಕಾಗದದ ರೂಪಾಯಿಗಳನ್ನು ಮಡಿಲಿಗೆ ಉದುರಿಸಿದಳು.  ಮುದುರಿದ್ದ ಅವುಗಳನ್ನು ಒಂದೊಂದಾಗಿ ಎತ್ತಿ ಅಂಗೈಗಳಲ್ಲಿ ಒತ್ತಿ ಲೆಕ್ಕ ಹಾಕಿ ತುಟಿಗಳನ್ನು ಒಂದೇಸಮನೆ ಅಲುಗಿಸುತ್ತಾ ರವಿಕೆಯೊಳಗಿಂದ ಗುಲಾಬಿ ಪ್ಲಾಸ್ಟಿಕ್ ಚೀಲ ಹೊರತೆಗೆದು ಎಲ್ಲವನ್ನೂ ಅಲ್ಲಿಗೆ ಸೇರಿಸಿದಳು.
ಬೆಳಿಗ್ಗೆ ಎಚ್ಚರವಾಗುತ್ತಿದ್ದಂತೇ ಬಿಮ್ಲಾ ಚಾಚಿ “ಶಾರುಖ್‌ಗೆ ಒಂಚೂರು ಜ್ವರ ಬಂದ್ಬಿಟ್ಟಿದೆ” ಎನ್ನುವುದು ಕೇಳಿಸಿ ಎದ್ದು ಹೊರಗೆ ಬಂದೆ.  “ಛಳೀಲಿ ಜಾಸ್ತಿಯಾಗಿಬಿಡಬೋದು, ಬೆಚ್ಚಗೆ ಏನಾದ್ರೂ ಹಾಕು” ಅಂದಳು ಮಂಜರಿ ಕಾಕಿ.  ಅಮ್ಮ ನಮ್ಮ ಬಟ್ಟೆಯ ಗಂಟನ್ನು ಬಿಚ್ಚಿ ತಡಕಾಡಿ ನಾನು ಚಿಕ್ಕವನಾಗಿದ್ದಾಗ ಹಾಕಿಕೊಳ್ಳುತ್ತಿದ್ದ ಕೆಂಪುಬಣ್ಣದ ಸ್ವೆಟರ್ ಅನ್ನು ತೆಗೆದು “ಕಂಕುಳಲ್ಲಿ ಒಂಚೂರು ಹರಿದುಹೋಗಿರೋದು ಬಿಟ್ರೆ ಬೇರೆ ಕಡೆಯಲ್ಲಾ ಕಬ್ಬಿಣ, ಕಬ್ಬಿಣದ ಹಾಗಿದೆ” ಎನ್ನುತ್ತಾ ಶಾರುಖ್‌ಗೆ ತೊಡಿಸಿದಳು.  ಅವನ ಗಂಟಲಿನಿಂದ ಗೊರಗೊರ ಸದ್ದು ಬರುತ್ತಿತ್ತು.  ಬಿಮ್ಲಾ ಚಾಚಿ ತಿನ್ನಿಸಿದ ಬಾಳೆಹಣ್ಣನ್ನು ಉಗಿದುಬಿಟ್ಟು ಅಳತೊಡಗಿದ.  ಅವಳು “ಹೀಗೆ ಅಳೋ ಇದನ್ನ ಎತ್ಕೊಂಡು ಎಲ್ಲೆಲ್ಲಿಗೆ ಓಡಾಡ್ಲಿ ಈವತ್ತು” ಎಂದು ಗೊಣಗಿದಳು.  “ಹೊಟ್ಟೆಗೆ ಒಂದಷ್ಟು ದಾರೂ ಹೋದ್ರೆ ಸುಮ್ನೆ ಮಲಗಿಬಿಡ್ತಾನೆ.  ಆದ್ರೆ ಎನು ಮಾಡ್ಲಿ, ಬಾಟಲು ಖಾಲಿ.  ಎರಡೇ ದಿನಕ್ಕೆ ಎಲ್ಲಾನೂ ಮುಗಿಸ್ಬಿಟ್ಟ” ಎಂದು ಲೊಚಗುಟ್ಟಿದಳು.  ಮಂಜರಿ ಕಾಕಿ ಕಣ್ಣುಸನ್ನೆ ಮಾಡಿದಾಗ ಕಾಲೂ ಕಾಕಾ ತನ್ನ ಗುಡಾರದೊಳಗೆ ಹೋಗಿ ಒಂದು ಚಿಕ್ಕ ಬಾಟಲನ್ನು ತಂದು “ಚೂರೇ ಇರೋದು” ಎನ್ನುತ್ತಾ ಬಿಮ್ಲಾ ಚಾಚಿಯ ಕೈಲಿತ್ತ.  ಅವಳು ಖುಶಿಯಿಂದ ಬಿರಡೆ ತೆರೆದು ಶಾರುಖ್‌ನ ಬಾಯಿಗೆ ಒಂದಿಷ್ಟು ಹುಯ್ದಳು.  ಅವನು ಚಪ್ಪರಿಸಿಕೊಂಡು ಕುಡಿದ.  ಖಾಲಿ ಬಾಟಲನ್ನು ಕೆಳಗಿಟ್ಟು ಬಿಮ್ಲಾ ಚಾಚಿ ಅವನನ್ನು ತೋಳುಗಳ ಮೇಲೆ ಮಲಗಿಸಿಕೊಂಡು ಅತ್ತಿತ್ತ ತೂಗುತ್ತಾ “ಲಾಲಲಾ...” ಅನ್ನತೊಡಗಿದಳು.
ಕೆಳಗೆ ಬಿದ್ದಿದ್ದ ಖಾಲಿ ಬಾಟಲನ್ನು ಎತ್ತಿಕೊಂಡು ರಾಕೇಶ್ ಅಲ್ಲಿದ್ದ ಅಕ್ಷರಗಳಲ್ಲಿ ಹಸಿರು ಬಣ್ಣಕ್ಕೆ ದಪ್ಪಕ್ಕಿದ್ದವುಗಳನ್ನು ಬೆರಳಿನಿಂದ ಸವರುತ್ತಾ “ಆರ್ಡಿನರಿ ಕಂಟ್ರಿ ಲಿಕರ್” ಎಂದು ಓದಿದ.  ಅದನ್ನು ಕೇಳಿ ಅಮ್ಮ ಬಾಯಿ ಮೇಲೆ ಬೆರಳಿಟ್ಟುಕೊಂಡಳು.  “ಎಲ್ಲಿ ಕಲಿತೆಯೋ ಓದೋದನ್ನ?  ಜಾಣ ಇದ್ದೀಯ!” ಅಂದಳು.  “ಅವನು ಈಗ ಓದಿದ್ದು ಅಂಗ್ರೇಜಿ, ಹಿಂದಿ ಅಲ್ಲ” ಎಂದು ರಾಕೇಶ್‌ನ ತಾಯಿ ದೂರದಿಂದಲೇ ಕೂಗಿ ಹೇಳಿದಳು.  “ಓದೋದನ್ನ ಗುಡ್ದೂಭೈಯಾ ಕಲಿಸಿಕೊಟ್ಟ.  ನಿಂಗೂ ಬೇಕಾದ್ರೆ ಕಲಿಸೋಕೆ ಹೇಳ್ತೀನಿ” ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದ ರಾಕೇಶ್.
ಸಾಯಂಕಾಲ ತುಂಬಾ ಛಳಿ ಇತ್ತು.  ಆದರೆ ಶಾರುಖ್‌ನ ಮೈ ಮಾತ್ರ ಬಿಸಿಯಾಗಿತ್ತು.  ಬಿಮ್ಲಾ ಚಾಚಿ ಕೊಟ್ಟ ಏನನ್ನೂ ತಿನ್ನದೇ ರಚ್ಚೆ ಹಿಡಿದ.  ಅವಳು ಕೋಪದಿಂದ ಒಂದೇಟು ಬಿಗಿದಳು.  ಅವನ ಅಳು ಜೋರಾಯಿತು.  ಆ ರಾತ್ರಿ ಅವನು ಮಲಗಲೇ ಇಲ್ಲ.  ಮಾರನೆಯ ಇಡೀ ದಿನ ಬಿಮ್ಲಾ ಚಾಚಿ ಎಲ್ಲೂ ಹೋಗದೇ ಅವನನ್ನು ಮಲಗಿಸಿಕೊಂಡು ಪಕ್ಕ ಕೂತಳು.  ನಾನು ಗುಡ್ಡೂಭೈಯಾನಿಗೆ ಕಾಸುಗಳನ್ನು ಎಣಿಸಿ ಕೊಡುವುದನ್ನು ನೋಡಿದ ಅವಳು ಅಮ್ಮ ಬಂದೊಡನೇ ಹೇಳಿಬಿಟ್ಟಳು.  ಅಮ್ಮನಿಗೆ ತುಂಬಾ ಕೋಪ ಬಂತು.  “ನಂಗೊತ್ತಿತ್ತು, ನೀನು ಏನೋ ಮಾಡಬಾರದ್ದು ಮಾಡ್ತಿದೀಯ ಅಂತ” ಎಂದು ಬೈಯುತ್ತಾ ನನ್ನ ಕೆನ್ನೆಗೊಂದು ಬಾರಿಸಿದ್ದಲ್ಲದೇ ಬೆನ್ನಿಗೆ ಗುದ್ದಿದಳು.  “ಐನೂರು ರೂಪಾಯಿ ಸೇರಿಸೋದಿಕ್ಕೆ ನಾನು ಎಷ್ಟು ಕಷ್ಟ ಪಡ್ತಿದೀನಿ ಅನ್ನೋದು ನಂಗೊಬ್ಬಳಿಗೆ ಮಾತ್ರ ಗೊತ್ತು.  ಇವ್ನು ನನ್ನ ಹೊಟ್ಟೇಲಿ ಹುಟ್ಟಿದೋನು, ಸಂಪಾದಿಸಿದ ಕಾಸನ್ನೆಲ್ಲಾ ಯಾವ್ದೋ ಬೇವಾರ್ಸೀ ಕೈಗೆ ಹಾಕ್ತಾ ಇದಾನೆ.  ಈಗಲೇ ಹೀಗೆ, ಇನ್ನು ದೊಡ್ಡೋನಾದ್ಮೇಲೆ ನಂಗೆ ಹೊಟ್ಟೆಗೆ ಹಾಕ್ತಾನಾ?  ಎಷ್ಟಾದ್ರೂ, ಬಂದದ್ದನ್ನೆಲ್ಲಾ ಬೀದಿ ನಾಯಿಗಳ ಬಾಯಿಗೆ ಹಾಕಿ ನನ್ನನ್ನ ಬೀದಿಗೆ ತಳ್ಳಿ ತಾನೂ ನಾಶವಾಗಿಹೋದವ್ನ ಬೀಜಕ್ಕೆ ಹುಟ್ಟಿದೋನಲ್ಲವ ಈ ಬಾಂಚೋತ್” ಎಂದು ಎಲ್ಲರಿಗೂ ಒಪ್ಪಿಸಿಕೊಂಡು ಅತ್ತಳು.  “ಗುಡ್ಡೂಭೈಯಾನಿಗೆ ದುಡ್ಡು ಕೊಟ್ಟದ್ದು ಯಾಕೆ” ಅಂತ ಮಂಜರಿ ಕಾಕಿ ಕೇಳಿದಾಗ ಹೇಳುವುದಕ್ಕಾಗದೇ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದೆ.  ರಾಕೇಶ್‌ನೇ ಎಲ್ಲವನ್ನೂ ಹೇಳಿದ.  ಅವಳು “ಹೌದೇನೋ?” ಎಂದಾಗ ಅಳುತ್ತಲೇ “ಹ್ಞೂಂ” ಅಂದೆ.  “ಬಲೂನ್ ಮಾರಿ ತಿಂಗಳಿಗೆ ಮೂರುಸಾವಿರ ರೂಪಾಯಿ ಸಂಪಾದಿಸಿ ಅಮ್ಮನಿಗೆ ಕೊಡಬೇಕು ಅಂತ ಅಂದ್ಕೊಂಡಿದೀನಿ.  ಆ ಯಾವ ದುಡ್ಡನ್ನೂ ನಾನು ಹಾಳುಮಾಡಲ್ಲ, ಅಮ್ಮನ ಆಣೆ” ಎಂದು ಅತ್ತೆ.  “ಮೂರುಸಾವಿರ ರೂಪಾಯಿ ತಂದು ನಂಗೆ ಕೊಡೋವ್ನ ಮೂತಿ ನೋಡು” ಎಂದು ಅಮ್ಮ ನನ್ನ ಕೆನ್ನೆಗೆ ತಿವಿದಳು.  “ಅದೆಲ್ಲಿ ತೋರ್‍ಸು ಆ ಕಳ್ಳ ನನ್ಮಗನ್ನ, ಎಳೇಮಕ್ಳು ಭಿಕ್ಷೆ ಬೇಡಿ ತಂದದ್ದನ್ನ ಈಸ್ಕೊಂಡು ಜೇಬಿಗೆ ಬಿಟ್ಕೊಳ್ಳೋ ಸೂಳೆಮಗನ್ನ” ಎಂದು ಅಮ್ಮ ರಾಕೇಶ್‌ನನ್ನು ಹಿಡಿದುಕೊಂಡಳು.  ಅವನು ಗಾಬರಿಯಾದ. “ಇಲ್ಲೇ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಬಲೂನ್ ಮಾರ್‍ತಾ ನಿಂತಿರ್ತಾನೆ” ಎಂದು ನಡುಗುತ್ತಾ ಹೇಳಿದ ಅವನ ತೋಳು ಹಿಡಿದು “ನಡೆ, ತೋರ್‍ಸು ನಂಗೆ.  ಅವನ ತಿಥಿ ಮಾಡ್ತೀನಿ” ಎನ್ನುತ್ತಾ ಅಮ್ಮ ಅವನನ್ನು ತಳ್ಳಿಕೊಂಡೇ ರಸ್ತೆಗಿಳಿದಳು.  ಅವಳ ಜತೆ ಮಂಜರಿ ಕಾಕಿ, ರಜನಿ ಚಾಚಿಯೂ ಹೊರಟರು.  ನನ್ನ ಜತೆ ಉಳಿದವಳು ಬಿಮ್ಲಾ ಚಾಚಿ ಮಾತ್ರ.  ನನ್ನ ಬಲೂನ್ ಮಾರುವ ಆಸೆಯನ್ನು ಹಾಳು ಮಾಡಿದ ಅವಳ ಬಗ್ಗೆ ತುಂಬಾ ಕೋಪ ಬಂತು.  ಅವಳ ಮುಖ ನೋಡಲೂ ಇಷ್ಟವಾಗಲಿಲ್ಲ.  ಅವಳಿಂದ ದೂರ ಹೋಗಿ ರಸ್ತೆಗೆ ಕಾಲು ಇಳಿಬಿಟ್ಟು ಅಳುತ್ತಾ ಕೂತೆ.
ಹೋದವರು ಸ್ವಲ್ಪ ಹೊತ್ತಿನಲ್ಲೇ ಹಿಂದಕ್ಕೆ ಬಂದರು.  ಅಮ್ಮನಂತೂ ಖುಷಿಯಿಂದ ಬೀಗುತ್ತಿದ್ದಳು.  ನನ್ನ ಜತೆ ಏನೂ ಮಾತಾಡದೇ ಬಿಮ್ಲಾ ಚಾಚಿಯತ್ತ ಹೋಗಿ “ಪೂರ್ತಿ ವಸೂಲು ಮಾಡ್ಕೊಂಡು ಬಂದೆ” ಎಂದು ನಗುತ್ತಾ ಹೇಳಿದಳು.  ಅವಳತ್ತ ನೋಡುವುದಕ್ಕೂ ನನಗೆ ಮನಸ್ಸಾಗಲಿಲ್ಲ.  ಕೆಟ್ಟ ಅಮ್ಮ ಅವಳು.
ರಾಕೇಶ್ ನನ್ನ ಪಕ್ಕ ಬಂದು ಕೂತುಕೊಂಡು ನಡೆದದ್ದನ್ನು ಪಿಸುದನಿಯಲ್ಲಿ ಹೇಳಿದ.  ಗುಡ್ಡೂಭೈಯಾ ಹತ್ತಿರದಲ್ಲೇ ಕೆಂಪುದೀಪದ ಬಳಿ ಸಿಕ್ಕಿದನಂತೆ.  ಅಮ್ಮನ ಬೈಗಳಿಗೆ ಒಂಚೂರೂ ಬೇಸರ ಮಾಡಿಕೊಳ್ಳದೇ, ತಾನು ಒಳ್ಳೆಯವನೆಂದೂ, ಚಿಕ್ಕಮಕ್ಕಳು ಭಿಕ್ಷೆ ಬೇಡುವುದನ್ನು ತಪ್ಪಿಸಿ ಬಿಸಿನೆಸ್ ಮಾಡುವಂತೆ ಮಾಡುವುದು ತನ್ನ ಪ್ಲಾನ್ ಎಂದು ಹೇಳಿದನಂತೆ.  ಅವನ ಮಾತನ್ನು ಅಮ್ಮ ನಂಬದೇ ಅವನನ್ನು ಕಳ್ಳ, ಸುಲಿಗೆಗಾರ ಅಂದಾಗ ಛೆ ಛೆ ಅಂದುಕೊಂಡು ತನ್ನ ಲೆಕ್ಕದ ಪುಸ್ತಕ ತೆಗೆದು ಅಲ್ಲಿದ್ದನ್ನು ತೋರಿಸಿ ಐವತ್ತು ರೂಪಾಯಿಗಳನ್ನು ಅಮ್ಮನಿಗೆ ಕೊಟ್ಟನಂತೆ.  ನಾನು ಇದುವರೆಗೆ ಅವನಿಗೆ ಕೊಟ್ಟಿರುವುದು ಕೇವಲ ಮೂವತ್ತಾರು ರೂಪಾಯಿಗಳೆಂದೂ, ಗುಡ್ಡೂಭೈಯಾ ತನ್ನ ದುಡ್ಡನ್ನೂ ಸೇರಿಸಿ ಅಮ್ಮನಿಗೆ ಐವತ್ತು ರೂಪಾಯಿ ಕೊಟ್ಟನೆಂದೂ ರಾಕೇಶ್ ಹೇಳಿದಾಗ ಗುಡ್ಡೂಭೈಯಾ ಎಷ್ಟು ಒಳ್ಳೆಯವನು, ಅಂಥವನನ್ನು ಅಮ್ಮ ಕಳ್ಳ ಅಂದಳಲ್ಲ ಎಂದು ಬೇಸರವಾಗಿ ಮತ್ತಷ್ಟು ಅಳುಬಂತು.
ಎಲ್ಲೋ ಹೋಗಿದ್ದ ತನ್ನಮ್ಮ ಬಂದು ಕರೆಯುವವರೆಗೆ ರಾಕೇಶ್ ನನ್ನ ಪಕ್ಕವೇ ಕುಳಿತಿದ್ದ.  ಅವನು ಹೋದಮೇಲೆ ಎದ್ದು ಗುಡಾರದ ಬಳಿ ಹೋದೆ.  ಈಗ ಅಮ್ಮ ಖುಷಿಯಾಗಿದ್ದಳು.  ತಾನು ಕುಡಿಯುತ್ತಿದ್ದ ಚಾಯ್ ಅನ್ನು ನನ್ನ ಬಾಯಿಗೆ ಹಿಡಿದಳು.  ನಾನು ಬೇಡ ಅಂದೆ.  ಅವಳು ನಕ್ಕಳು.  ನನ್ನನ್ನು ತಬ್ಬಿಕೊಂಡು ತೊಡೆಯ ಮೇಲೆ ಕೂರಿಸಿಕೊಂಡಳು.  ತುಂಬಾ ದಿನವಾಗಿತ್ತು ಅಮ್ಮ ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು.  “ನನ್ಮೇಲೆ ಕೋಪವಾ?” ಅಂದಳು.  ಕೋಪ ಸ್ವಲ್ಪ ಕಡಿಮೆಯಾಗಿದ್ದರೂ ನಾನು ಮಾತಾಡಲಿಲ್ಲ.  ಮುಖ ಊದಿಸಿಕೊಂಡು ಕುಳಿತೆ.  ಅಮ್ಮ ನನ್ನ ತಲೆ ಸವರಿದಳು.  “ಬೋಗಲ್‌ನಲ್ಲಿ ಒಂದ್ಕಡೆ ತುಂಬಾ ಸಣ್ಣಸಣ್ಣ ಮಕ್ಕಳನ್ನ ಇಟ್ಕೊಂಡಿದ್ದಾರಂತೆ.  ಬಿಮ್ಲಾ ಚಾಚಿ ಅಲ್ಲಿ ಐನೂರು ರೂಪಾಯಿ ಡಿಪಾಜಿಟ್ ಕಟ್ಟಿ ಶಾರುಖ್‌ನನ್ನ ತಂದಿದ್ದಾಳೆ.  ಅವನನ್ನ ಎತ್ಕೊಂಡು ಭಿಕ್ಷೆಗೆ ಹೋದ ಗಳಿಗೆಯಿಂದ ಅವಳಿಗೆ ತುಂಬ ದುಡ್ದು ಸಿಕ್ತಾ ಇದೆ.  ಬಂದದ್ದರಲ್ಲಿ ಮಗು ಕೊಟ್ಟೋವ್ರಿಗೆ ದಿನಕ್ಕೆ ಐವತ್ತು ರೂಪಾಯಿ ಅಂತ ಕೊಟ್ರೆ ಸಾಕು.  ಉಳಿದದ್ದೆಲ್ಲಾ ಅವಳಿಗೇ.  ಹೀಗಾಗಿ ನಾಕೇ ದಿನದಲ್ಲಿ ಅವಳತ್ರ ತುಂಬಾ ದುಡ್ದು ಸೇರಿಬಿಟ್ಟಿದೆ.  ನೀನೇ ನೋಡ್ತಾ ಇದೀಯಲ್ಲ, ಆವತ್ತು ಕೋಳಿ ತಂದು ನಮಗೆಲ್ಲಾ ತಿನ್ನಿಸಿದ್ಲು.  ಆಮೇಲೆ ದಿನಕ್ಕೊಂದು ತಿಂಡಿ ತರ್ತಿದಾಳೆ.  ಆದಷ್ಟು ಬೇಗ ಐನೂರು ರೂಪಾಯಿ ಸೇರಿಸಿ ನಾನೂ ಒಂದು ಮಗು ತಂದುಬಿಡಬೇಕು ಅಂತ ನನ್ನಾಸೆ.  ದಿನಕ್ಕೊಂದು ತಿಂಡಿ ತಂದು ನಿಂಗೆ ತಿನ್ನಿಸ್ಬೇಕು, ನಿನ್ ಮೈಮೇಲೆ ಒಳ್ಳೇ ಬಟ್ಟೆ ಹಾಕ್ಬೇಕು, ನಿಂಗೆ ಛಳಿ ತಡೆಯೋದಿಕ್ಕೆ ಒಂದು ಸ್ವೆಟರ್ ತರಬೇಕು ಅಂತೆಲ್ಲಾ ಆಸೆ ಇಟ್ಕೊಂಡಿದೀನಿ...” ಅಮ್ಮನ ಮಾತುಗಳು ನಿಧಾನವಾಗಿ ಪಿಸುದನಿಗಿಳಿದು ಕೇಳದಂತಾದವು.
ಕತ್ತಲಾಗುತ್ತಿದ್ದಂತೇ ಮಂಜು ಮುಸುಕಿಕೊಳ್ಳತೊಡಗಿತು.  ಊಟ ಮಾಡುವ ಹೊತ್ತಿಗೆ ರಸ್ತೆಯಾಚೆಯ ಕಾಂಪೌಂಡ್ ಕಾಣಿಸದಷ್ಟು ದಟ್ಟವಾಗಿ ಕವಿದುಕೊಂಡಿತು.  ನಾವೆಲ್ಲಾ ಚಪಾತಿ ತಿಂದರೂ ಶಾರುಖ್ ಮಾತ್ರ ಏನನ್ನೂ ತಿನ್ನಲಿಲ್ಲ.  ಬಿಮ್ಲಾ ಚಾಚಿ, ಅಮ್ಮ ಇಬ್ಬರೂ ಬ್ರೆಡ್ ತಿನ್ನಿಸಲು ಹೋದರೆ ಅವನು ಬಾಯಿ ತೆರೆಯಲೇ ಇಲ್ಲ.  ಅವನ ಮೈ ಮಾತ್ರ ಆ ಛಳಿಯಲ್ಲೂ ಬಿಸಿಯಾಗಿತ್ತು.  ಬಿಮ್ಲಾ ಚಾಚಿ ಏನೋ ನೆನಸಿಕೊಂಡು ಕಾಲೂ ಕಾಕಾನನ್ನು ಗಂಟೆ ಎಷ್ಟಾಯಿತೆಂದು ಕೇಳಿದಳು.  “ಎಂಟಾಗಿರಬೇಕು” ಅಂದ ಅವನು.  ಅವಳು ಗಾಬರಿಯಾದಳು.  ಶಾರುಖ್‌ನನ್ನು ಒಂದು ಬಟ್ಟೆಯಲ್ಲಿ ಸುತ್ತಿ ಅಮ್ಮನ ಮಡಿಲಿಗೆ ಹಾಕಿ “ಇನ್ನೇನು ಆ ಜನ ಹುಡುಕ್ಕೊಂಡು ಬರಬೋದು.  ಈವತ್ತಂತೂ ಏನೂ ಸಂಪಾದನೇನೇ ಇಲ್ಲ ನಂಗೆ.  ಅವರಿಗೇನು ಕೊಡ್ಲಿ?  ನಾನು ನಿನ್ನೆ ರಾತ್ರಿಯಿಂದ ಇಲ್ಲಿಗೆ ಬಂದಿಲ್ಲ ಅಂತ ಹೇಳ್ಬಿಡಿ” ಎಂದು ಒದರಿ ಹಿಂದಕ್ಕೆ ತಿರುಗದೇ ಓಡಿ ರಸ್ತೆಗಿಳಿದಳು.  ಅಮ್ಮ ಆತುರಾತುರವಾಗಿ ಶಾರುಖ್‌ನನ್ನು ಗುಡಾರದೊಳಕ್ಕೆ ತೆಗೆದುಕೊಂಡು ಹೋದಳು.  ಏನಾಗುತ್ತಿದೆಯೆಂದು ತಿಳಿಯದೇ ನನಗೆ ಹೆದರಿಕೆಯಾಯಿತು.  ಅಳತೊಡಗಿದೆ.  ಅಮ್ಮ ಬಂದು ಪಕ್ಕ ಕೂತಳು.  ಯಾರೂ ಮಾತಾಡುತ್ತಿರಲಿಲ್ಲ.
ಸ್ವಲ್ಪ ಹೊತ್ತಿನಲ್ಲಿ ರಸ್ತೆಯಲ್ಲಿ ಮೆಲ್ಲಗೆ ಹೋಗುತ್ತಿದ್ದ ಒಂದು ಸ್ಕೂಟರ್ ಹಿಂದಕ್ಕೆ ತಿರುಗಿ ಬಂದು ನಮ್ಮ ಪಕ್ಕ ನಿಂತುಕೊಂಡಿತು.  ಅದರಿಂದ ಒಬ್ಬಳು ಹೆಂಗಸು, ಒಬ್ಬ ಗಂಡಸು ಇಳಿದರು.  ಹೆಂಗಸು ಸಲ್ವಾರ್ ಮೇಲೆ ಕೋಟು ಹಾಕಿಕೊಂಡಿದ್ದಳು.  ಕಣ್ಣಿಗೆ ಕಪ್ಪುಬಣ್ಣದ ಕನ್ನಡಕ.  ಗಂಡಸು ತಲೆಗೆ ಅಂಟಿದಂತಹ ಟೋಪಿ ಹಾಕಿಕೊಂಡಿದ್ದ.  ಧಪಧಪನೆ ನಮ್ಮ ಹತ್ತಿರ ಬಂದವನೇ ಜೇಬಿನಿಂದ ಬಿಮ್ಲಾ ಚಾಚಿಯ ಫೋಟೋ ಅಂಟಿಸಿದ ಒಂದು ಕಾರ್ಡ್ ತೆಗೆದು ಕಾಲೂ ಕಾಕಾನ ಮುಂದೆ ಹಿಡಿದು “ಈ ಹೆಂಗ್ಸು ಇಲ್ಲಿದಾಳಲ್ವಾ?” ಅಂದ.  ಅದನ್ನು ನೋಡಿದಂತೆ ಮಾಡಿದ ಕಾಕಾ “ಹ್ಞೂಂ, ಇಲ್ಲೇ ನೋಡಿದ ಹಾಗಿತ್ತು.  ಈಗೆಲ್ಲೋ ಕಾಣಿಸ್ತಾ ಇಲ್ಲಾ” ಅಂದ ನಿಧಾನವಾಗಿ.  ಅವನ ಕೈಯಿಂದ ಕಾರ್ಡ್ ಕಿತ್ತುಕೊಂಡ ಮಂಜರಿ ಕಾಕಿ ರಸ್ತೆಯ ಬದಿಗೆ ಹೋಗಿ ಬೆಳಕಿಗೆ ಹಿಡಿದಂತೆ ಮಾಡಿ ಅಲ್ಲಿಂದಲೇ “ಇವಳಾ!  ಇವ್ಳು ನಿನ್ನೆ ರಾತ್ರಿಯಿಂದ್ಲೂ ಬಂದಿಲ್ಲ” ಅಂದಳು.  ಹಿಂದಕ್ಕೆ ಬಂದು “ಅವಳನ್ಯಾಕೆ ಹುಡುಕ್ತಿದೀರಿ?  ಏನು ವಿಷಯ?” ಎಂದು ಆ ಹೆಂಗಸನ್ನು ಕೇಳಿದಳು.  “ಮಗೂ ತಗೊಂಡು ಬಂದಿದ್ದಾಳೆ ಮಗೂನ!  ಗೊತ್ತಾ?  ನಿನ್ನೆಯಿಂದ ದುಡ್ಡು ಕಟ್ಟಿಲ್ಲ.  ಎಲ್ಲಿ ಸತ್ತಳೋ” ಅಂದಳು ಅವಳು ಕೋಪದಿಂದ.  ಅವಳ ಸ್ವರ ಗಂಡಸಿನ ಸ್ವರದಂತಿತ್ತು.  ಚಿರಾಗ್ ದಿಲ್ಲಿ ಫ್ಲೈಓವರ್ ಕೆಳಗಿದ್ದಾಗ ಅಲ್ಲಿ ಅಮ್ಮ ಹಿಜಡಾಗಳು ಎಂದು ಕರೆಯುತ್ತಿದ್ದ ಇಬ್ಬರು ಹೆಂಗಸರಿಗೂ ಅಂಥದೇ ಸ್ವರ ಇದ್ದದ್ದು ನೆನಪಾಯಿತು.
ಅವಳ ಮಾತಿಗೆ ಯಾರೂ ಉತ್ತರಿಸಲಿಲ್ಲ.  ಕೊನೆಗೆ ಆ ಗಂಡಸೇ “ಅವಳು ಎಲ್ಲಿದ್ರೂ ಹುಡುಕಿಬಿಡ್ತೀವಿ.  ಅವಳೇನಾದ್ರೂ ಬಂದ್ರೆ ಹಾಗಂತ ಹೇಳಿ ಅವಳಿಗೆ” ಎಂದು ಹೇಳಿ ಹಿಂದಕ್ಕೆ ತಿರುಗಿ ಹೋಗಿ ಸ್ಕೂಟರ್ ಏರಿದ.  ಅವನ ಹಿಂದೆ ಹೋದ ಹೆಂಗಸು ಸ್ಕೂಟರ್ ಪಕ್ಕ ನಿಂತು ನಮ್ಮತ್ತ ತಿರುಗಿ “ನಾಳೆ ಬೆಳಿಗ್ಗೆ ಬೆಳಿಗ್ಗೇನೇ ಬಂದು ಎರಡೂ ದಿನದ ದುಡ್ದು ಕಟ್ಟದೇ ಹೋದ್ರೆ ಬೀದೀಲೀ ಸೀರೆ ಬಿಚ್ಚಿ ಹೋಡೀತೀವಿ ಆಂತ ಹೇಳಿ ಆ ರಂಡೆಗೆ” ಅಂದಳು.
ಅವರಿಬ್ಬರೂ ಹೋದ ಮೇಲೆ ತುಂಬಾ ಹೊತ್ತು ಯಾರೂ ಮಾತಾಡಲಿಲ್ಲ.  ಬಿಮ್ಲಾ ಚಾಚಿ ರಸ್ತೆಯ ಮತ್ತೊಂದು ಕಡೆಯಿಂದ ಸದ್ದಿಲ್ಲದೇ ಬಂದು ಪಕ್ಕ ಕೂತಾಗಲೂ ಯಾರೂ ಮಾತಾಡಲಿಲ್ಲ.  ಅವಳಿಗೆ ಏನೋ ಹೇಳಲು ಮಂಜರಿ ಕಾಕಿ ಬಾಯಿ ತೆರೆದರೆ “ಏನೂ ಹೇಳಬೇಡ.  ನಾನೆಲ್ಲಾ ಕೇಳಿಸಿಕೊಂಡೆ” ಅಂದುಬಿಟ್ಟಳು.
ನನಗೆ ನಿದ್ದೆ ಬರುವಂತಾಯಿತು.  ಬದಾಮ್ ತನ್ನ ತಾಯಿಯ ತೊಡೆಯ ಮೇಲೇ ಮಲಗಿಬಿಟ್ಟಿದ್ದಳು.  ನಾನು ಗುಡಾರದೊಳಗೆ ಹೋದೆ.  ಅಲ್ಲಿ ಶಾರುಖ್ ಮಲಗಿದ್ದ.  ನಾನೂ ಪಕ್ಕ ಮಲಗಿ ಅವನ ಕೈಯನ್ನು ಮೆಲ್ಲಗೆ ಮುಟ್ಟಿದೆ.  ಅವನ ಜ್ವರ ಇಳಿದಿತ್ತು.  “ಅಮ್ಮಾ, ಶಾರುಖ್‌ನ ಜ್ವರ ಹೊರಟುಹೋಗಿದೆ” ಎಂದು ಕೂಗಿದೆ.  ಅಮ್ಮ ಒಳಗೆ ಬಂದಳು.  ಶಾರುಖ್‌ನ ಹಣೆ ಮುಟ್ಟಿದಳು.  ಅವನ ಮೂಗಿನ ಮೇಲೆ ಬೆರಳಿಟ್ಟಳು.  ಅವನನ್ನು ಥಟ್ಟನೆ ಎತ್ತಿಕೊಂಡು ಗುಡಾರದ ಹೊರಗೆ ಓಡಿದಳು.  ನಾನು ಎದ್ದುಹೋದೆ.
ಅಮ್ಮನ ತೊಡೆಯಲ್ಲಿದ್ದ ಶಾರುಖ್‌ನನ್ನು ಬಿಮ್ಲಾ ಚಾಚಿ ಮತ್ತು ಮಂಜರಿ ಕಾಕಿ ಮುಟ್ಟಿಮುಟ್ಟಿ ನೋಡುತ್ತಿದ್ದರು.  ಮೂವರ ಮುಖದಲ್ಲೂ ಗಾಬರಿ.  ಬದಾಮ್‌ಳನ್ನು ಕೆಳಗೆ ಮಲಗಿಸಿ ರಜನಿ ಚಾಚಿಯೂ ಹತ್ತಿರ ಬಂದು ಶಾರುಖ್‌ನ ಮೂಗಿನ ಮೇಲೆ. ಎದೆಯ ಮೇಲೆ ಕೈಇಟ್ಟಳು.  ಅವಳ ಕೈ ನಿಮಿಷದವರೆಗೆ ಅಲ್ಲೇ ಇತ್ತು.  ನಂತರ ನಿಧಾನವಾಗಿ ಕೈ ಎತ್ತಿ ಹಿಂದಕ್ಕೆ ಕೂತಳು.  ಬಿಮ್ಲಾ ಚಾಚಿ ಮತ್ತು ಮಂಜರಿ ಕಾಕಿಯೂ ಹಿಂದೆ ಸರಿದು ಕೂತರು.  ಅವರೆಲ್ಲರೂ ತಲೆ ತಗ್ಗಿಸಿಕೊಂಡಿದ್ದರು.
ಬಿಮ್ಲಾ ಚಾಚಿ ದಢಕ್ಕನೆ ಮೇಲೆದ್ದಳು.  “ಇಷ್ಟೇ ಋಣ ಇದ್ದದ್ದು” ಅಂದಳು.  ಮರುಕ್ಷಣ “ನಾನು ಬದುಕಬೇಕಲ್ಲ?” ಅಂದಳು ಜೋರಾಗಿ.  ಬಾಗಿ ಅಮ್ಮನ ಮಡಿಲಲ್ಲಿದ್ದ ಶಾರುಖ್‌ನನ್ನು ಎತ್ತಿಕೊಂಡಳು.  ಅವನನ್ನು ಹೆಗಲಿಗೆ ಹಾಕಿಕೊಂಡು ಎಡಪಕ್ಕದ ಅಗಲ ರಸ್ತೆಯತ್ತ ನಡೆದಳು.  ನಾನು ನೋಡುತ್ತಲೇ ಇದ್ದೆ.  ಅವಳು ರಸ್ತೆಗಿಳಿದು, ಮೊರೆಯುತ್ತಾ ಬಂದ ಲಾರಿಯೊಂದರಿಂದ ತಪ್ಪಿಸಿಕೊಂಡು ಓಡಿ ಎಡಕ್ಕೆ ಹೊರಳಿ ಮಂಜಿನಲ್ಲಿ ಕರಗಿಹೋದಳು.  ಅವಳು ಓಡುತ್ತಿದ್ದ ರಭಸ ನೋಡಿದರೆ ರಸ್ತೆಯಾಚೆಯ ಅಗಲ ಚರಂಡಿ ಮಂಜಿನಲ್ಲಿ ಕಾಣದೇ ಅವಳು ಅದರೊಳಗೆ ಬಿದ್ದುಬಿಡಬಹುದೇನೋ ಎಂದು ಭಯವಾಯಿತು.
ಅಮ್ಮನತ್ತ ನೋಡಿದೆ.  ಅವಳ ತಲೆ ತಗ್ಗಿಯೇ ಇತ್ತು.  ಯಾರೋ ಗಟ್ಟಿಯಾಗಿ ನಿಟ್ಟುಸಿರಿಟ್ಟರು.  ತಲೆಯೆತ್ತಿದೆ.  ಅದು ರಜನಿ ಚಾಚಿ.  ಮಂಜರಿ ಕಾಕಿ ಕಾಣಲಿಲ್ಲ.  ರಸ್ತೆಯತ್ತ ತಿರುಗಿದೆ.
ಎರಡುನಿಮಿಷಗಳಲ್ಲಿ ಬಿಮ್ಲಾ ಚಾಚಿ ಮಂಜಿನಿಂದ ಹೊರಬಂದಳು.  ಅವಳ ಹೆಗಲಲ್ಲಿ ಶಾರುಖ್ ಇರಲಿಲ್ಲ.  ತಲೆ ಕೆಳಗೆ ಹಾಕಿ ಕಾಲುಗಳನ್ನು ಎಳೆಯುತ್ತಾ ಬಂದ ಅವಳು ನೆಟ್ಟಗೆ ಫ್ಲೈಓವರ್ ರಸ್ತೆಗೆ ಸೇರುತ್ತಿದ್ದೆಡೆ ಹೋದಳು.  ಅಲ್ಲಿದ್ದ ಚೀಲವನ್ನೆತ್ತಿ ಹೆಗಲಿಗೆ ಹಾಕಿಕೊಂಡಳು. ಅದು ಸ್ವಲ್ಪ ಹೊತ್ತಿನ ಹಿಂದೆ ಅವಳ ಹೆಗಲಲ್ಲಿದ್ದ ಶಾರುಖ್‌ನಂತೇ ಕಂಡಿತು.
ಬಿಮ್ಲಾ ಚಾಚಿ ಒಂದೂ ಮಾತಿಲ್ಲದೇ ತಲೆತಗ್ಗಿಸಿ ಮತ್ತೊಂದು ಕಡೆಯ ರಸ್ತೆಯತ್ತ ನಡೆದಳು.  ರಸ್ತೆಗಿಳಿದು ನಿಂತು ಹಿಂತಿರುಗಿ ನನ್ನತ್ತ ನೇರವಾಗಿ ನೋಡಿದಳು.  ನಾನು ಅಮ್ಮನತ್ತ ತಿರುಗಿದೆ.  ಅಮ್ಮನ ತಲೆ ತಗ್ಗಿಯೇ ಇತ್ತು.  ಪಕ್ಕಕ್ಕೆ ತಿರುಗಿದೆ.  ಈಗ ಅಲ್ಲಿ ರಜನಿ ಚಾಚಿಯೂ ಕಾಣಲಿಲ್ಲ.  ಛಕ್ಕನೆ ಬಿಮ್ಲಾ ಚಾಚಿಯತ್ತ ಕಣ್ಣು ಹೊರಳಿಸಿದೆ.  ಕ್ಷಣದ ಹಿಂದೆ ಅವಳು ನಿಂತಿದ್ದ ಸ್ಥಳ ಈಗ ಸುತ್ತಲ ಮಂಜಿನಲ್ಲಿ ಗುರುತಿಗೆ ಸಿಕ್ಕದಂತೆ ಬೆರೆತುಹೋಗಿತ್ತು.  ಬಿಟ್ಟಕಣ್ಣು ಬಿಟ್ಟಂತೇ ಆ ಶೂನ್ಯವನ್ನೇ ನೋಡಿದೆ.  ಯಾರೋ ಗಟ್ಟಿಯಾಗಿ ಬಿಕ್ಕಿದರು.  ಗಕ್ಕನೆ ಇತ್ತ ತಿರುಗಿದೆ.
ಅಮ್ಮ ಅಳುತ್ತಿದ್ದಳು.  “ಅಮ್ಮ ಅಮ್ಮ...” ಅಂದೆ.  ಮುಂದೆ ಸ್ವರ ಹೊರಡಲಿಲ್ಲ.  ಅಮ್ಮ ನನ್ನನ್ನು ಏಳೆದು ಎದೆಗವಚಿಕೊಂಡಳು.  “ಊಂ ಊಂ” ಎಂದು ಬಿಕ್ಕಿದಳು.  ಒಂದೊಂದು ಬಿಕ್ಕಿಗೂ ಅವಳೆದೆ ಅಲುಗಿ ನನ್ನನ್ನು ಹಿಂದೆಮುಂದೆ ತಳ್ಳಾಡಿತು.  ನನಗೂ ಅಳು ಬಂತು.
ಅಮ್ಮ ಏಕಾಏಕಿ ನನ್ನನ್ನು ಬಿಟ್ಟಳು.  ರವಿಕೆಯೊಳಗೆ ಕೈಹಾಕಿ ಗುಲಾಬಿ ಪ್ಲಾಸ್ಟಿಕ್ ಚೀಲವನ್ನು ಸರಕ್ಕನೆ ಹೊರಗೆಳೆದಳು.  ನಾನು ದಿಗ್ಭ್ರಮೆಯಿಂದ ನೋಡುತ್ತಿದ್ದಂತೇ ಅಮ್ಮ ಅದನ್ನು ನನ್ನ ಬಲ ಅಂಗೈಯಲ್ಲಿಟ್ಟು ಎಡ ಅಂಗೈಯಿಂದ ಗಟ್ಟಿಯಾಗಿ ಮುಚ್ಚಿದಳು.  ಏನೋ ಹೇಳಲು ಬಾಯಿ ತೆರೆದಳು.  ಹೇಳಲಾಗದೇ ನನ್ನನ್ನೇ ಸುಮ್ಮನೆ ನೋಡಿದಳು.  ಅವಳ ಕಣ್ಣರೆಪ್ಪೆಗಳು ಪಟಪಟ ಬಡಿದುಕೊಂಡವು.  ಅವಳು ಮತ್ತೆ ಅಳಲು ಶುರುಮಾಡುತ್ತಾಳೆಂದು ನನಗೆ ಭಯವಾಗುತ್ತಿದ್ದಂತೇ ಅಮ್ಮ ನನ್ನ ಮುಚ್ಚಿದ ಮುಷ್ಟಿಯನ್ನು ಎಳೆದು ತನ್ನ ಎದೆಗೊತ್ತಿಕೊಂಡು ನನ್ನನ್ನು ಬಿಗಿಯಾಗಿ ಅವಚಿಕೊಂಡಳು.  ಛಕ್ಕನೆ ಸುತ್ತಲ ಎಲ್ಲ ಸದ್ದುಗಳೂ ನನ್ನ ಕಿವಿಗಳಿಂದ ದೂರಾದವು.
ಮಂಜುರಾತ್ರಿಯಲ್ಲಿ ನೆಲೆಸಿದ ನೀರವತೆಯಲ್ಲಿ ನಮ್ಮೆರಡೂ ಹೃದಯಗಳ ಬಡಿತದ ಜತೆ ಎದೆಗಳ ನಡುವೆ ಅಡಗಿದ್ದ ಗುಲಾಬಿ ಪ್ಲಾಸ್ಟಿಕ್‌ನ ಮೃದುಮರ್ಮರವೂ ಕೇಳಿಯೂ ಕೇಳದಂತೆ ನನ್ನ ಕಿವಿ ತುಂಬತೊಡಗಿತು.

--***೦೦೦***--

ಫೆಬ್ರವರಿ ೧೫, ೨೦೧೨

2 comments:

  1. I read this in Mayura... Good story which gives us glimpse of lifestyle lead by poorest people in India

    ReplyDelete