ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Saturday, April 26, 2014

ಬುದ್ದಿಜೀವೀ ಬುದ್ದಿಜೀವೀ, ಗದ್ದುಗೆಗೆಷ್ಟು ಕಾಲು?

ಭಾಗ - 1
            ನಮ್ಮ ಬುದ್ಧಿಜೀವಿಗಳ ಮಾತುಗಳನ್ನು ಕೇಳಿದರೆ ಇವರು ಮರೆಗುಳಿಗಳೋ, ಮಳ್ಳರೋ ಅಥವಾ ಮಾಯಾವಿಗಳೋ ಎಂಬೆಲ್ಲಾ ಅನುಮಾನಗಳು ಬರುತ್ತವೆ.  ಕಂಡದ್ದನ್ನೆಲ್ಲಾ ಮರೆತುಬಿಟ್ಟಿದ್ದಾರೋ, ಅಥವಾ ಬೇಕಾದ್ದನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡು ಗುಣಿಸಿ ಆಯಕಟ್ಟಿನ ಗದ್ದುಗೆಗೆ ಏಣಿ ಮಾಡಿಕೊಳ್ಳುತ್ತಿದ್ದಾರೋ ಗೊತ್ತಾಗುವುದೇ ಇಲ್ಲ.
ಇತ್ತೀಚಿನವರೆಗೂ ಬಿಜೆಪಿಯನ್ನು ಕೋಮುವಾದಿ, ವಿಚ್ಚಿದ್ರಕಾರಕ ಶಕ್ತಿ ಎಂದು ಹೀಗಳೆದು ಜನಾಭಿಪ್ರಾಯವನ್ನು ಕಾಂಗ್ರೆಸ್‍ನತ್ತ ತಿರುಗಿಸಲು ಪ್ರಯತ್ನಿಸುತ್ತಿದ್ದ ಬುದ್ಧಿಜೀವಿಗಳು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯದ ಸೂಚನೆ ಕಾಣುತ್ತಿದ್ದಂತೇ ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ.  ಅವರೀಗ ತಮ್ಮ ಟೀಕೆಗಳನ್ನು ನೇರವಾಗಿ ನರೇಂದ್ರ ಮೋದಿಯವರತ್ತ ತಿರುಗಿಸಿದ್ದಾರೆ.  ಮೋದಿ ಸರ್ವಾಧಿಕಾರಿ ಮನೋಭಾವದವರು, ಅವರಿರುವೆಡೆ ಭಿನ್ನಮತಕ್ಕೆ ಅವಕಾಶವೇ ಇಲ್ಲ, ಹಿರಿಯ ನಾಯಕರಿಗೆ ಗೌರವವಿಲ್ಲ ಎನ್ನುವುದು ಅವರುಗಳ ಟೀಕೆಗಳ ಒಟ್ಟು ಸಾರಾಂಶ.  ಈ ಮೂಲಕ ಅವರು ನೀಡುತ್ತಿರುವ ಸಂದೇಶ ಬಿಜೆಪಿ ಅಧಿಕಾರಕ್ಕೆ ಬಂದರೂ ಬರಲಿ, ಆದರೆ ಮೋದಿ ಮಾತ್ರ ಪ್ರಧಾನಿಯಾಗಬಾರದು ಎನ್ನುವುದಾಗಿದೆ.  ಬಿದ್ದರೂ ಮೀಸೆ (ಗಡ್ಡ ಸಹಾ!) ಮಣ್ಣಾಗಬಾರದು ಎನ್ನುವ ವರಸೆ ಇದು.
            ಇತ್ತೀಚಿನವರೆಗೂ ಅದ್ವಾನಿಯವರನ್ನು ಬಾಬ್ರಿ ಮಸೀದಿಯ ಧ್ವಂಸಕ್ಕೆ ಕಾರಣವಾಗಿಸಿ ಹೀಗಳೆಯುತ್ತಿದ್ದ ಬುದ್ಧಿಜೀವಿಗಳು ಈಗ ಏಕಾಏಕಿ ಅವರ ಬಗ್ಗೆ ಸಹಾನುಭೂತಿಯ ಹೊಳೆಯನ್ನೇ ಹರಿಸುತ್ತಾ, ಮೋದಿಯವರನ್ನು ಹೀಗಳೆಯತೊಡಗಿರುವುದರ ಹಿಂದಿನ ಆಷಾಢಭೂತಿತನ ಸ್ಪಷ್ಟವಾಗಿಯೇ ಎದ್ದು ಕಾಣುತ್ತಿದೆ.  ಹೀಗಾಗಿ ಇವರ ಮಾತುಗಳನ್ನು ನಿರ್ಲಕ್ಷಿಸಬಹುದಾದರೂ ಇವರ ಸೋಗಲಾಡಿತನದ ಬಗ್ಗೆ ಈಗಾಗಲೇ ನಡೆಯುತ್ತಿರುವ ಚರ್ಚೆಗಳಿಗೆ ಮತ್ತೊಂದು ಆಯಾಮವನ್ನು ಒದಗಿಸುವ ಉದ್ದೇಶದಿಂದ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಇದುವರೆಗೆ ದೇಶವನ್ನಾಳಿದ ನಾಯಕರನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಮುಕ್ತಮನಸ್ಸಿನಿಂದ ವಿಶ್ಲೇಷಿದರೆ ಸರ್ವಾಧಿಕಾರಿಯ ಮನೋಭಾವ ಕಾಂಗ್ರೆಸ್ ನೇತಾರರಲ್ಲೇ, ಮುಖ್ಯವಾಗಿ ನೆಹರೂ-ಗಾಂಧಿ ಕುಟುಂಬದಲ್ಲೇ ಅಧಿಕವಾಗಿ ಕಂಡುಬರುತ್ತದೆ.  ಭಿನ್ನಮತವನ್ನು ಹೊಸಕಿಹಾಕುವ ಪ್ರವೃತ್ತಿ ಕಾಂಗ್ರೆಸ್‍ನ ಇತಿಹಾಸದುದ್ದಕ್ಕೂ ಕಾಣಸಿಗುತ್ತದೆ.  ಈ ನಿಟ್ಟಿನಲ್ಲಿ, ನಮ್ಮ ವಿಶ್ಲೇಷಣೆಯ ಅನುಕೂಲಕ್ಕಾಗಿ ಕಾಂಗ್ರೆಸ್‍ನ ಇತಿಹಾಸವನ್ನು ಎರಡು ನಿರ್ದಿಷ್ಟ ಹಂತಗಳಾಗಿ ವಿಭಾಗಿಸಿಕೊಳ್ಳೋಣ.
ಮೊದಲನೆಯ ಹಂತ: 1885 - 1977
ಭಿನ್ನಮತಗಳ ಒತ್ತಡಕ್ಕೆ ಸಿಲುಕಿದಾಗ ಕಾಂಗ್ರೆಸ್ ಬಾಗುವ ಬದಲು ಮುರಿಯುವುದು ಈ ಹಂತದಲ್ಲಿ ಕಾಣುವ ಪ್ರಮುಖ ಲಕ್ಷಣ.  ಜತೆಗೇ ಭಿನ್ನಮತೀಯರಿಗೆ ಪಕ್ಷದ ವ್ಯವಹಾರಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ಯಾವುದೇ ಜವಾಬ್ದಾರಿಯುತ ಸ್ಥಾನ ಸಿಗದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ಈ ಹಂತದಲ್ಲಿ ಮತ್ತೆಮತ್ತೆ ಕಾಣಬರುತ್ತದೆ.  ಭಿನ್ನಮತದ ಒತ್ತಡಕ್ಕೆ ಸಿಲುಕಿ ಕಾಂಗ್ರೆಸ್ ಹೋಳಾಗುವುದು ಮೊದಲಿಗೆ ಕಾಣಿಸಿಕೊಂಡದ್ದು 1908ರಲ್ಲಿ.  ಆ ವರ್ಷ ಐತಿಹಾಸಿಕ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ “ಉಗ್ರಗಾಮಿಗಳು” ಮತ್ತು “ಮಂದಗಾಮಿಗಳು” ಎಂದಾಗಿ ಒಡೆಯಿತು.  ಅನಂತರ ಕಾಂಗ್ರೆಸ್ ಮತ್ತೊಮ್ಮೆ ಹೋಳಾದದ್ದು ನಾಲ್ಕು ದಶಕಗಳ ನಂತರ 1969ರಲ್ಲಿ.  ಇದರ ಮೂಲವನ್ನು ನೆಹರೂ ಅವರ ನೀತಿಗಳಲ್ಲಿ ಗುರುತಿಸಬಹುದು.
                ತನ್ನ ಕೆಳಗೆ ಬೇರಾವ ವೃಕ್ಷವೂ ಬೆಳೆಯದಂತೆ ನೋಡಿಕೊಳ್ಳುವ ಆಲದಮರದಂತೆ ರಾಷ್ಟ್ರರಾಜಕಾರಣದಲ್ಲಿ ತಾನೇ ತಾನಾಗಿ ಆವರಿಸಿಕೊಂಡ ನೆಹರೂ ದ್ವಿತೀಯ ಸ್ತರದ ನಾಯಕವರ್ಗ ತಲೆಯೆತ್ತಲು ಅವಕಾಶವನ್ನೇ ನೀಡಲಿಲ್ಲ.  ಅಷ್ಟೇ ಅಲ್ಲ, ರಕ್ಷಣೆ, ಗಡಿಗಳ ಸುರಕ್ಷೆ, ವಿದೇಶ ವ್ಯವಹಾರ, ಅರ್ಥವ್ಯವಸ್ಥೆಗಳ ಕ್ಷೇತ್ರಗಳಲ್ಲಿ ನುರಿತವರ ಅಭಿಪ್ರಾಯಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ತಮ್ಮದೇ ಅಭಿಪ್ರಾಯಗಳನ್ನು ಹೇರಿ ಆಚರಣೆಗೆ ತಂದ ಅವರದ್ದು ಸರ್ವಾಧಿಕಾರಿಯ ಮನೋಭಾವ.  ಈ ಬಗೆಯಾಗಿ ಅವರು ಸೃಷ್ಟಿಸಿದ ಕಾಶ್ಮೀರ ಸಮಸ್ಯೆ, ಭಾರತ-ಚೀನಾ ಗಡಿವಿವಾದಗಳಿಗೆ ದೇಶ ಈಗಲೂ ಅಗಾಧ ಬೆಲೆತೆರುತ್ತಿದೆ.
ನೆಹರೂರ ನಿಧನಾನಂತರ ಶಾಸ್ತ್ರಿಯವರ ಅಧಿಕಾರ ಒಂದು ಮಧ್ಯಂತರ ವ್ಯವಸ್ಥೆಯಷ್ಟೇ ಆಗಿತ್ತು.  ಕೇಂದ್ರಮಂತ್ರಿಯಾಗಿ ಇಂದಿರಾ ಗಾಂಧಿ ಆಡಳಿತಾನುಭವ ಗಳಿಸಿಕೊಳ್ಳಲು ಶಾಸ್ತ್ರಿ ಮಂತ್ರಿಮಂಡಲ ವೇದಿಕೆ ಕಲ್ಪಿಸಿಕೊಟ್ಟಿತಷ್ಟೇ.  ಈ ಹುನ್ನಾರಕ್ಕೆ ಪ್ರತಿಯಾಗಿ ತಿರುಗಿಬಿದ್ದು ಇಂದಿರಾರ ಅಧಿಕಾರಕ್ಕೆ ವಿರೋಧ ತೋರಿದ ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಮುಂತಾದ ಹಿರಿಯ ನಾಯಕರಿಗೆ ಕಾಂಗ್ರೆಸ್ ತೊರೆಯುವುದರ ಹೊರತಾಗಿ ಬೇರಾವ ಮಾರ್ಗವೂ ಇರಲಿಲ್ಲ.  ಹಿರಿಯರ ಆತ್ಮಗೌರವಕ್ಕೆ ಚ್ಯುತಿಬಾರದಂತಹ ಸಂಧಾನದ ಮೂಲಕ ಭಿನ್ನಮತವನ್ನು ಅಂತರ್ಗತಗೊಳಿಸಿಕೊಳ್ಳುವ ಸಂಪ್ರದಾಯ ಕಾಂಗ್ರೆಸ್ ಸಂಸ್ಕೃತಿಯಲ್ಲಿರಲಿಲ್ಲ.  ಕಾಂಗ್ರೆಸ್ ನಾಯಕರು ಅಂಥ ಸಂಸ್ಕೃತಿಯನ್ನು ಬೆಳೆಯಗೊಟ್ಟಿರಲಿಲ್ಲ.  ಪರಿಣಾಮವಾಗಿ 1969ರಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಕಾಂಗ್ರೆಸ್ ಎರಡು ಹೋಳಾಯಿತು.
ಕಾಂಗ್ರೆಸ್‍ನ ಈ ವಿಭಜನೆ ಒಂದರ್ಥದಲ್ಲಿ ದೇಶಕ್ಕೆ ಒಳ್ಳೆಯದನ್ನೇ ಮಾಡಿತೆಂದು ಹೇಳಬೇಕು.  ಶ್ರೀಮತಿ ಇಂದಿರಾ ಗಾಂಧಿ ದೇಶ ಕಂಡ ಅತ್ಯುತ್ತಮ ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ್ದಕ್ಕೆ ಪಕ್ಷದೊಳಗೆ ಯಾವ ವಿರೋಧವೂ ಇಲ್ಲದ್ದು ಅತಿಮುಖ್ಯ ಕಾರಣ.  ಅವರನ್ನು ವಿರೋಧಿಸಿ ಪಕ್ಷ ತೊರೆದುಹೋದ ನಾಯಕರುಗಳು 1977-79ರ ಜನತಾ ಅವಧಿಯಲ್ಲಿ ತೋರಿದ ಬೇಜವಾಬ್ದಾರಿಯ ನಡವಳಿಕೆಯ ಎದುರು ಇಂದಿರಾ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಾರೆ.  ಇಷ್ಟಾಗಿಯೂ 1969ರಲ್ಲಾದ ಕಾಂಗ್ರೆಸ್‍ನ ಎರಡನೆಯ ವಿಭಜನೆಯನ್ನು ನಾನಿಲ್ಲಿ ಉಲ್ಲೇಖಿಸುತ್ತಿರುವುದು ಭಿನ್ನಮತವನ್ನು ಅಂತರ್ಗತಗೊಳಿಸಿಕೊಳ್ಳುವ ಶಕ್ತಿ ಹಾಗೂ ಚಾತುರ್ಯ ಆ ಪಕ್ಷದಲ್ಲಿಲ್ಲ ಎನ್ನುವುದನ್ನು ಬಿಂಬಿಸಲಿಕ್ಕಷ್ಟೇ.
ಮತ್ತೆ, 1977ರಲ್ಲಿ ಕಾಂಗ್ರೆಸ್ ಮೂರನೆಯ ಬಾರಿಗೆ ಹೋಳಾಯಿತು.  ಚುನಾವಣೆಗಳಲ್ಲಿನ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಇಂದಿರಾರನ್ನು ಹೊರದಬ್ಬಿ ತಾವೇ ನಿಜವಾದ ಕಾಂಗ್ರೆಸ್ಸಿಗರು ಎಂದು ಘೋಷಿಸಿಕೊಂಡ ಬ್ರಹ್ಮಾನಂದ ರೆಡ್ಡಿ ಮತ್ತವರ ಬೆಂಬಲಿಗರು ಮೂರೇ ದಿನದಲ್ಲಿಮೂಲೆಗುಂಪಾದರು.  ಇಂದಿರಾ ಮತ್ತೆ ಸಮ್ರಾಜ್ಞಿ.
ಸ್ವಾತಂತ್ರ್ಯಾನಂತರದ ಎರಡು ವಿಭಜನೆಗಳಲ್ಲೂ ನೆಹರೂ-ಗಾಂಧಿ ಕುಟುಂಬಕ್ಕೆ ಸವಾಲೊಡ್ಡಿದ ವ್ಯಕ್ತಿಗಳಲ್ಲಿ ಅಂತಿಮವಾಗಿ ತಮ್ಮೆಲ್ಲಾ ಸ್ವಾಭಿಮಾನವನ್ನು ಬದಿಗಿಟ್ಟು ಮಾತೃಪಕ್ಷಕ್ಕೆ ಹಿಂತಿರುಗಿ ಜೀಯ ಹಸಾದ” ಎಂಬ ನಿಲುವು ತಳೆದವರು ಸಿಕ್ಕಷ್ಟು ಕಾಲ ಅಧಿಕಾರ ಅನುಭವಿಸಿದ್ದು ಕಂಡುಬರುತ್ತದೆ.  ಹಾಗೆ ಮಾಡದೇ ದೂರವೇ ಉಳಿದವರು ರಾಷ್ಟ್ರರಾಜಕಾರಣದಲ್ಲಿ ಕ್ರಮೇಣ ಮೂಲೆಗುಂಪಾಗಿಹೋದರು.  ಸಂಸ್ಥಾ ಕಾಂಗ್ರೆಸ್ ಸೇರಿದ್ದ ವೀರೇಂದ್ರ ಪಾಟೀಲ್, ಕರ್ನಾಟಕ ಕ್ರಾಂತಿರಂಗ ಕಟ್ಟಿದ ಬಂಗಾರಪ್ಪ, ತಮಿಳ್ ಮಾಣಿಲ ಕಾಂಗ್ರೆಸ್ ಹುಟ್ಟುಹಾಕಿದ್ದ ಚಿದಂಬರಂ ಮೊದಲನೆಯ ಗುಂಪಿಗೆ ಕೆಲವು ಉದಾಹರಣೆಗಳು.  ಸ್ವಾಭಿಮಾನಿ ದೇವರಾಜ ಅರಸ್, ಅರ್ಜುನ್ ಸಿಂಗ್‌ರಂಥವರು ಎರಡನೆಯ ಗುಂಪಿಗೆ ಸೇರುತ್ತಾರೆ.
ಭಿನ್ನಮತಗಳ ಒತ್ತಡಕ್ಕೆ ಸಿಲುಕಿದಾಗ ಕಾಂಗ್ರೆಸ್ ಬಾಗದೇ ಮುರಿಯುವುದನ್ನು ಉದಾಹರಣೆಗಳ ಮೂಲಕ ಚರ್ಚಿಸಿದ ಬಳಿಕ ಭಿನ್ನಮತೀಯರಿಗೆ ಪಕ್ಷದ ವ್ಯವಹಾರಗಳಲ್ಲಿ ಯಾವುದೇ ಅಧಿಕಾರಯುತ ಸ್ಥಾನ ಸಿಗದಂತೆ ನೋಡಿಕೊಳ್ಳುವ ವ್ಯವಸ್ಥೆಯತ್ತ ಹೊರಳೋಣ.
ಸ್ವಾತಂತ್ರಪೂರ್ವದಲ್ಲೇ ಕಾಣಿಸಿಕೊಂಡ ಈ ವರ್ತನೆಯ ಹಿಂದಿದ್ದದ್ದು ಮಹಾತ್ಮಾ ಗಾಂಧಿ.  ಆ ಶಾಂತಿದೂತನ ನೇತೃತ್ವದಲ್ಲಿ ಕಾಂಗ್ರೆಸ್ ಅತ್ಯುಗ್ರ ಮಟ್ಟದ ನಿರಂಕುಶತೆಯನ್ನು ಪ್ರದರ್ಶಿಸಿದ್ದು 1927ರಲ್ಲಿ.  ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹರಿಕಾರರಾಗಿದ್ದ ಮಹಮದ್ ಆಲಿ ಜಿನ್ನಾರಿಗೆ ಕಾಂಗ್ರೆಸ್ ವ್ಯವಹಾರಗಳಲ್ಲಿ ಅರ್ಹ ಪಾತ್ರ ನೀಡಲು ಮಹಾತ್ಮ ಗಾಂಧಿ ನಿರ್ಣಾಯಕವಾಗಿ ತೀರ್ಮಾನಿಸಿದ ವಿನಾಶಕಾರಿ ಬೆಳವಣಿಗೆ, ಅವರ ಅಭಿಮಾನಿಗಳು ಕಾಂಗ್ರೆಸ್ ಸಮಾವೇಶದ ವೇದಿಕೆಯಿಂದ ಜಿನ್ನಾರನ್ನು ಬಲವಂತವಾಗಿ ಕೆಳಗೆಳೆದು ತಂದ ವಿಷಾದಕರ ಘಟನೆ ನಡೆದದ್ದು ಆ ವರ್ಷ.  ತೀವ್ರವಾಗಿ ಮನನೊಂದ ಜಿನ್ನಾ ರಾಷ್ಟ್ರರಾಜಕಾರಣದಿಂದಲೇ ದೂರ ಸರಿಯತೊಡಗಿದರು.  ಆನಂತರ ವಿಭಜನಾಶಕ್ತಿಗಳು ಆ ಅದ್ಟುತ ವಾಗ್ಮಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅವರ ಪ್ರಚಂಡ ಬುದ್ಧಿಮತ್ತೆಯನ್ನೆಲ್ಲಾ ಪಾಕಿಸ್ತಾನದ ಸೃಷ್ಟಿಗಾಗಿ ಬಳಸಿಕೊಳ್ಳಲು ಹೆಚ್ಚುಕಾಲ ಬೇಕಾಗಲಿಲ್ಲ.  ಪಾಕಿಸ್ತಾನದ ಸೃಷ್ಟಿಗೆ ಹಂಚಿಕೆ ಹಾಕಿದ್ದು ಬ್ರಿಟಿಷರಾದರೂ ಅವರ ಹುನ್ನಾರ ಸುಲಭವಾಗಿ ಕಾರ್ಯಗತಗೊಳ್ಳಲು ಜಿನ್ನಾರ ವಾಕ್ಬಟುತ್ವ ಸಹಾಯಕವಾಯಿತು.  ದೇಶವಿಭಜನೆಯೆಂಬ ವಿಷವನ್ನು ಅಮೃತವೆಂದು ನಂಬಿಸಿ ಮುಸ್ಲಿಂ ಸಮುದಾಯದ ಒಂದು ದೊಡ್ಡ ಭಾಗ ಮತ್ತು ಅಂತಿಮವಾಗಿ ಕಾಂಗ್ರೆಸ್ ಸಹಾ ಅದನ್ನು ಸವಿಯುವಂತೆ ಮಾಡಿದ ಮಾತಿನ ಮಲ್ಲ ಜಿನ್ನಾ ಹೇಳುವ ಈ ಮಾತುಗಳು ಅರ್ಥಪೂರ್ಣ: “ಪಾಕಿಸ್ತಾನವನ್ನು ನಾನು ಸೃಷ್ಟಿಸಿದ್ದು ಕೇವಲ ನನ್ನ ಆಪ್ತ ಕಾರ್ಯದರ್ಶಿ ಮತ್ತವನ ಟೈಪ್‍ರೈಟರ್‍‌ನಿಂದ ಮಾತ್ರ.”
ಹೀಗೆ ಜಿನ್ನಾರನ್ನು ಕಾಂಗ್ರೆಸ್‍ನಿಂದ ಹೊರಗಟ್ಟುವ ಮೂಲಕ ಒಂದರ್ಥದಲ್ಲಿ ದೇಶವಿಭಜನೆಗೆ ಗಾಂಧೀಜಿ ಮತ್ತವರ ಕಾಂಗ್ರೆಸ್ ಹಿಂಬಾಲಕರು ಪರೋಕ್ಷ ಕಾರಣರಾದರು.  ಆನಂತರವೂ ಗಾಂಧೀಜಿಯವರ ನಿಲುವು ನೀತಿಗಳು ಸುಭಾಶ್ ಚಂದ್ರ ಬೋಸ್, ಸರ್ದಾರ್ ಪಟೇಲ್ ಮುಂತಾದ ಪ್ರಜ್ಞಾವಂತ, ಜವಾಬ್ದಾರಿಯುತ ನಾಯಕರ ಪೂರ್ಣ ಸೇವೆಯಿಂದ ರಾಷ್ಟ್ರ ವಂಚಿತವಾಗುವುದಕ್ಕೆ ಕಾರಣವಾದವು.
ಎರಡನೆಯ ಹಂತ: 1977ರಿಂದ ಇಲ್ಲಿಯವರೆಗೆ
                ಮೊದಲ ಹಂತಕ್ಕೆ ಹೋಲಿಸಿದರೆ ಈ ಹಂತದಲ್ಲಿನ ಬೆಳವಣಿಗೆಗಳು ಭಯಾನಕ.  ದೇಶದ ಬಗ್ಗೆ ಕಾಳಜಿಯಿರುವ ಯಾರದೇ ಆತ್ಮಸಾಕ್ಷಿಯನ್ನು ಇವು ಗಾಢವಾಗಿ ಕಲಕಿಬಿಡುತ್ತವೆ.  ವಿದೇಶೀ ಮೂಲದ ಮಹಿಳೆಯೊಬ್ಬರು ಇಂದಿರಾ ಗಾಂಧಿಯವರ ಮನೆತನಕ್ಕೆ ಪ್ರವೇಶ ಪಡೆದುಕೊಂಡು ಶೇಕ್ಸ್‍ಪಿಯರ್‍ನ ದುರಂತನಾಟಕಗನ್ನು ನೆನಪಿಸುವಂಥ ಘಟನಾವಳಿಗಳ ಮೂಲಕ ಹಂತಹಂತವಾಗಿ ಅಧಿಕಾರದ ಸೂತ್ರಗಳನ್ನು ಕೈಗೆ ತೆಗೆದುಕೊಂಡರು. ಅವರ ಹಾದಿಗೆ ಅಡ್ಡಿಯಾಗಬಹುದಾಗಿದ್ದ ವ್ಯಕ್ತಿಗಳು ಒಬ್ಬೊಬ್ಬರಾಗಿ ಅನೂಹ್ಯ ರೀತಿಯಲ್ಲಿ ಮರೆಯಾದರು.
            1968ರಲ್ಲಿ ರಾಜೀವ್ ಗಾಂಧಿಯವರ ಪತ್ನಿಯಾಗಿ ಸೋನಿಯಾ ಪ್ರಧಾನಮಂತ್ರಿಯವರ ಕುಟುಂಬದ ಸದಸ್ಯರಾದಾಗ ಇಂದಿರಾರ ಉತ್ತರಾಧಿಕಾರಿ ಯಾರಾಗಬಹುದೆಂಬ ಪ್ರಶ್ನೆ ಇರಲಿಲ್ಲ.  ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಆ ಸ್ಥಾನ ಸಂಜಯ್ ಗಾಂಧಿಯದು ಎಂಬ ಮಾತುಗಳು ಹೊರಡತೊಡಗಿದವು.  1980ರಲ್ಲಿ ಇಂದಿರಾ ಚುನಾವಣೆಗಳಲ್ಲಿ ಜಯಗಳಿಸಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಸಂಜಯ್‍ರ ಉತ್ತರಾಧಿಕಾರತ್ವ ಸಹಾ ಗಟ್ಟಿಯಾಯಿತು.  ಆದರೆ ಆರೇ ತಿಂಗಳಲ್ಲಿ ಸಂಜಯ್ ವಿಮಾನಾಫಘಾತದಲ್ಲಿ ಮೃತರಾಗಿ ಸೋನಿಯಾರ ಪತಿ ರಾಜಕೀಯಕ್ಕಿಳಿಯುವಂತಾಯಿತು.  ಮುಂದಿನ ನಾಲ್ಕುವರ್ಷಗಳಲ್ಲಿ ಇಂದಿರಾ ಹತ್ಯೆಯಾಗಿ ಸೋನಿಯಾರ ಪತಿ ಪ್ರಧಾನಿಯಾದರು.  ಅಲ್ಲಿಗೆ ಸೋನಿಯಾರ ಕೈಗೆ ಆಡಳಿತ ಸೂತ್ರಗಳು ಹತ್ತಿರಾದವು.  ಆದರೆ ಏಳು ವರ್ಷಗಳು ತುಂಬುವಷ್ಟರಲ್ಲಿ ರಾಜೀವ್ ಹತ್ಯೆಗೊಳಗಾದರು.  ಸಂಜಯ್, ಇಂದಿರಾ, ರಾಜೀವ್- ಈ ಮೂವರ ಮರಣಗಳ ಬಗ್ಗೆ ಶಂಕಾತೀತ ವಿವರಣೆಗಳು ಇದುವರೆಗೂ ಬಂದಿಲ್ಲ.
ರಾಜೀವ್ ತೆರವು ಮಾಡಿದ ಸ್ಥಾನವನ್ನು ಆ ಕ್ಷಣದಲ್ಲಿ ತುಂಬಲು ಸೋನಿಯಾ ಅಥವಾ ಅವರ ಮಕ್ಕಳು ಅಶಕ್ತರಾಗಿದ್ದರು.  ಆಗ ಸೋನಿಯಾ ಮೌನವಾಗಿ ಅವಕಾಶ ಮಾಡಿಕೊಟ್ಟದ್ದು 'ಮತ್ತೊಬ್ಬ ಶಾಸ್ತ್ರಿ’ಯ ಆಗಮನಕ್ಕೆ.  ನರಸಿಂಹರಾವ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಕೆಳಗಿಳಿಯುತ್ತಿದ್ದಂತೇ ಅವರನ್ನೂ, ನಂತರ ಸೀತಾರಾಮ್ ಕೇಸರಿಯವರನ್ನೂ ಅವಮಾನಕರ ರೀತಿಯಲ್ಲಿ ಮೂಲೆಗೊತ್ತರಿಸಿ ಸೋನಿಯಾ ಗಾಂಧಿ ಪಕ್ಷದ ನಾಯಕತ್ವವನ್ನು ತಮ್ಮ ಕೈಗೆ ತೆಗೆದುಕೊಂಡರು.  ಇದೆಲ್ಲವನ್ನೂ ಸೋನಿಯಾ ಮಾಡಿದ್ದು ಸ್ವಂತ ಬುದ್ಧಿಶಕ್ತಿಯಿಂದಲೋ ಅಥವಾ ಇದೆಲ್ಲದರ ಹಿಂದೆ ಬೇರಾವುದೋ ಶಕ್ತಿ ಕೆಲಸಮಾಡಿತ್ತೇ?
ಶ್ರೀಮತಿ ಸೋನಿಯಾ ಗಾಂಧಿಯವರ ಆಪ್ತವಲಯದಲ್ಲಿ ಪ್ರಮುಖರಾಗಿದ್ದವರು ಮಾಧವರಾವ್ ಸಿಂಧ್ಯಾ  ಬಯಸಿದರೆ ನಾಯಕಿಯ ರಾಜಕೀಯ ನಿರ್ಣಯಗಳ ಮೇಲೆ ಸಿಂಧ್ಯಾ ನಿರಾಕರಿಸಲಾಗದಂಥ ಪ್ರಭಾವ ಬೀರಬಲ್ಲವರಾಗಿದ್ದರು.  ಆದರೆ ವಾಯು ಅಫಘಾತದಲ್ಲಿ ಮರಣಹೋಂದಿ ಸಿಂಧ್ಯಾ ಸೋನಿಯಾರನ್ನು ಸ್ವತಂತ್ರರಾಗಿಸಿಬಿಟ್ಟರು.  ಸೋನಿಯಾ ಅನಭಿಷಿಕ್ತ ಸಮ್ರಾಜ್ಞಿಯಾದರು.
ಕಳೆದ ನಾಲ್ಕೂವರೆ ದಶಕಗಳಲ್ಲಿ ಸೋನಿಯಾ ಹಂತಹಂತವಾಗಿ ಅಧಿಕಾರಕ್ಕೆ ಹತ್ತಿರಾದದ್ದು, ಅದಕ್ಕೆ ಸಹಾಯಕವಾಗಿ ನಡೆದ ಅಫಘಾತಗಳು, ಹತ್ಯೆಗಳು ಅರ್ಥಕ್ಕೆ ನಿಲುಕುವುದಿಲ್ಲ.  ವಿಧಿಯನ್ನು ನಂಬದ ಬುದ್ಧಿಜೀವಿಗಳು ಇವೆಲ್ಲವನ್ನೂ “ವಿಧಿಯಾಟ” ಎಂದು ಕರೆದು ಸುಮ್ಮನಾಗಿಬಿಡುತ್ತಾರೆಯೇ?  ಹಾಗಿಲ್ಲದ ಪಕ್ಷದಲ್ಲಿ ಈ ಎಲ್ಲಾ ಬೆಳವಣಿಗೆಗಳ ಹಿಂದೆ ಯಾವುದೋ ಅನೂಹ್ಯ ಶಕ್ತಿ ಕೆಲಸ ಮಾಡುತ್ತಿದೆಯೆಂದು ತರ್ಕಿಸಬಹುದೇ?  ಅಂದರೆ ರಾಜೀವ್‍ರನ್ನು ಸೋನಿಯಾ ಪ್ರೇಮಿಸಿ ಮದುವೆಯಾದದ್ದರ ಹಿಂದೆ ಯಾವುದೋ ವಿದೇಶಿ ಶಕ್ತಿಯೊಂದರ ದೀರ್ಘಕಾಲಿಕ ಷಡ್ಯಂತ್ರ ಇರಬಹುದೇ?  ನಮ್ಮ ಬುದ್ದಿಜೀವಿಗಳು ರಾಷ್ಟ್ರಹಿತವನ್ನು ನಿಜವಾಗಿಯೂ ಬಯಸುವವರಾದರೆ ತಮ್ಮ ಬುದ್ದಿಯನ್ನು ಉಪಯೋಗಿಸಬೇಕಾದ ಕ್ಷೇತ್ರ ಇದು.
1977ರಿಂದ ಇಲ್ಲಿಯವರೆಗಿನ ಈ ಎರಡನೆಯ ಹಂತದ ಮತ್ತೊಂದು  ಪ್ರಮುಖ ಲಕ್ಷಣವೆಂದರೆ ತನ್ನ ಹಾದಿಯಲ್ಲಿ ಸೋನಿಯಾ ಗಾಂಧಿ ಅನುಸರಿಸಿದ “ಉಪಯೋಗಿಸಿ ಎಸೆ” ವಿಧಾನ.  ವಿಶ್ವದಲ್ಲಿ ಇಂತಹ ‘ಸಂಪ್ರದಾಯ’ ಕಾಣಿಸಿಕೊಳ್ಳುವುದು ಪಾಕಿಸ್ತಾನದಲ್ಲಿ ಮಾತ್ರ. ಪಾಕ್ ರಾಜಕಾರಣಕ್ಕೂ ಸೋನಿಯಾ ರಾಜಕಾರಣಕ್ಕೂ ಇರುವ ಸಾಮ್ಯತೆಗಳ ಚರ್ಚೆ ಮುಂದಿನವಾರ.

No comments:

Post a Comment