ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Saturday, October 31, 2015

ಈ ಸೆಳೆತಕ್ಕೆ ಯಾವ ಹೆಸರಿಡಲಿ?



ಗಳಗನಾಥರ ಮಾಧವಕರುಣಾವಿಲಾಸದಿಂದ ಹಿಡಿದು ಹೋಮರ್ ಇಲಿಯಡ್ ಮತ್ತು ಒಡಿಸ್ಸಿಯವರೆಗೆ ಏನುಂಟು ಏನಿಲ್ಲ ಎನ್ನುವಂತಿದ್ದ ಅಕ್ಕನ ಅಗಾಧ ಪುಸ್ತಕರಾಶಿ; ಪ್ರತಿ ವಾರ ಮನೆಗೆ ಬರುತ್ತಿದ್ದ ಸುಧಾ, ಮನೋಹರ್ ಕಹಾನಿಯಾ, ಇಂಡಿಯಾ ಟುಡೇ, ಕ್ಯಾರವಾನ್, ಸಂಡೇ; ತಿಂಗಳಿಗೊಮ್ಮೆ ತಪ್ಪದೇ ಕೈಸೇರುತ್ತಿದ್ದ, ಕಸ್ತೂರಿ, ಮಯೂರ, ತುಷಾರ, ಮಲ್ಲಿಗೆ, ಸತ್ಯಕಥಾ, ಸರಿತಾ, ರೀಡರ್ಸ್ ಡೈಜೆಸ್ಟ್; ನನ್ನ ಪಠ್ಯವಿಷಯಗಳು ಹಾಗೂ ಇತರೆಲ್ಲಾ ಆಸಕ್ತಿಯ ವಿಷಯಗಳಿಗೆ ಸಂಬಂಧಿಸಿದಂತೆ ಅಗಣಿತ ಪುಸ್ತಕಗಳನ್ನು ಹೊಂದಿದ್ದ ಡೆಲ್ಲಿ ಯೂನಿವರ್ಸಿಟಿಯ ಬೃಹತ್ ಲೈಬ್ರರಿ!  ಯಾರಿಗುಂಟು ಯಾರಿಗಿಲ್ಲ ಪುಸ್ತಕಸಾಮ್ರಾಜ್ಯ ವೈಭವ!  ನಾನೇ ಕೈಯಾರೆ ಕಾಸು ಕೊಟ್ಟು ಪುಸ್ತಕಗಳನ್ನು ಕೊಳ್ಳಬೇಕಾದ ಅಗತ್ಯವೇ ನನಗಿರಲಿಲ್ಲ.  ತಿಂಗಳು ತಿಂಗಳೂ ಅಕ್ಕ ಕೊಡುತ್ತಿದ್ದ ಪಾಕೆಟ್ ಮನಿ ಖರ್ಜಾಗುತ್ತಿದ್ದುದು ನನ್ನ ಸಂಗ್ರಹಕ್ಕೆ ಹೊಸಹೊಸ ಅಂಚೆಚೀಟಿಗಳನ್ನು ಕೊಳ್ಳುವುದಕ್ಕೆ ಅಥವಾ ಅಲ್ಲಿಇಲ್ಲಿಗೆ ಹೋದಾಗ ಛಂದ ಕಂಡ ಪುಟಾಣಿ ಪರ್ಸುಗಳನ್ನೋ, ಮಣಿಗಳನ್ನೋ, ಬೀಸಣಿಗೆಗಳನ್ನೋ ತಂದು ಅಕ್ಕನಿಗೇ ಕೊಡುವುದಕ್ಕೆ ಮಾತ್ರ.  ಅಂಥಾ ಸುವರ್ಣಯುಗ ಅದು.
            ೧೯೮೩ರಲ್ಲಿ ದೂರದ ಡೆಲ್ಲಿ ಯೂನಿವರ್ಸಿಟಿಯಲ್ಲಿ ಎಂಎ ಮುಗಿಸಿದರೂ, ಮನೆಗೆ ಸನಿಹದಲ್ಲೇ, ಎಡವಿಬಿದ್ದರೆ ತಲುಪೇಬಿಟ್ಟೆ ಎನ್ನುವಷ್ಟು ಹತ್ತಿರದಲ್ಲೇ ಇದ್ದ ಜವಾಹರ್ಲಾಲ್ ನೆಹರೂ ಯೂನಿವರ್ಸಿಟಿಯಲ್ಲಿ ವರ್ಷ ಎಂಫಿಲ್ಗೆ ಸೇರಲಾಗಲಿಲ್ಲ.  ನನ್ನದೇನೂ ತಪ್ಪಿರಲಿಲ್ಲ.  ವಿದ್ಯಾರ್ಥಿಗಳ ದಂಗೆಯಿಂದಾಗಿ ವರ್ಷ ಅಲ್ಲಿ ಅಡ್ಮಿಷನ್ ಇರಲೇ ಇಲ್ಲ.  ಹೀಗಾಗಿ ಒಂದಿಡೀ ವರ್ಷ ಉಂಡಾಡಿಗುಂಡನಂತೆ ಕಾಲ ಕಳೆಯುವ ಅವಕಾಶ!  ಯಾರಿಗುಂಟು ಯಾರಿಗಿಲ್ಲ ಅದೃಷ್ಟ!  ಮನೆಯಲ್ಲಿದ್ದ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸಿ, ಕೆಲವನ್ನು ಎರಡುಮೂರು ಸಲ ಓದಿ, ಪುಸ್ತಕದ ಹಸಿವು ತಡೆಯದಾದಾಗ ಒಂದು ಆರಾಮದ ವಾಕಿಂಗ್ನಷ್ಟು ಹತ್ತಿರದ ಕಟ್ವಾರಿಯಾ ಸರಾಯ್ನಲ್ಲಿದ್ದ ಗುರುನಾನಕ್ ಲೈಬ್ರರಿಯಲ್ಲಿ ಕೂಲರ್ ಪಕ್ಕವೇ ಜಾಗ ಹಿಡಿದು ಕೂತು ಗಯಾನಾದ ಇಂಡಿಯನ್ನರ ಮಿಡ್ವೈಫ್ರಿಂದ ಹಿಡಿದು, ಇಂಡಿಯಾದ ಇಂಡಿಯನ್ನರ ಸ್ವಾತಂತ್ರ್ಯದ ಕಥೆ ಫ್ರೀಡಂ ಅಟ್ ಮಿಡ್ನೈಟ್ವರೆಗೆ ಸಿಕ್ಕಸಿಕ್ಕದ್ದೆಲ್ಲವನ್ನೂ ಓದಿದರೂ ಇನ್ನೂ ಬೇಕು ಅನಿಸಿದಾಗ ಕೊನೆಗೆ ಉಳಿದ ಮಾರ್ಗ ಒಂದೇ- ಪುಸ್ತಕದ ಅಂಗಡಿಗಳಿಗೆ ಹೋಗಿ ನನಗೆ ಬೇಕಾದ್ದನ್ನು ಕೊಂಡುತಂದು ಓದುವುದು!
            ಇದುವರೆಗೂ ಕೇವಲ ಸ್ಟ್ಯಾಂಪ್ಸ್ ಕೊಳ್ಳಲು ಹೋಗುತ್ತಿದ್ದ ಸೌತ್ ಎಕ್ಸ್ಟೆನ್ಷನ್ ಮಾರ್ಕೆಟ್ನಲ್ಲಿದ್ದ ಸೆಹ್ಗಲ್ ಬ್ರದರ್ಸ್ನಲ್ಲಿ ಸ್ಟ್ಯಾಂಪ್ಸ್ಗಳಿಗಿಂತಲೂ ಪುಸ್ತಕಗಳೇ ಹೆಚ್ಚಾಗಿವೆ ಎಂಬ ಸತ್ಯ ನೆನಪಾಗಿ ಅಲ್ಲಿಗೆ ಹೋದೆ.  ಪಕ್ಕದ ಟೆಕ್ಸನ್ಸ್ಗೂ ಹೋದೆ. ಎರಿಕ್ ವಾನ್ ಡ್ಯಾನಿಕೆನ್ ಕ್ರೇಜ್ ಹತ್ತಿದ್ದ ಕಾಲದಲ್ಲಿ ಅವನದು ಒಂದಷ್ಟು, ದ್ವಿತೀಯ ಮಹಾಯುದ್ಧದ ಬಗೆಗಿನ ಹೆರ್ಮಾನ್ ವೂಕ್ ಎರಡು ಸಂಪುಟಗಳ ಅದ್ಭುತ ಆಖ್ಯಾಯಿಕೆ, ಜತೆಗೆ ಗಳಿಗೆಯಲ್ಲಿ ಆಸಕ್ತಿ ಹುಟ್ಟಿಸಿದ ಒಂದಷ್ಟು ಕೊಂಡುತಂದೆ.  ಡಾಲಲ್ ಮತ್ತು ಪೌಂಡ್ಗಳು ರೂಪಾಯಿಗಳಾಗಿ ಬಿಚ್ಚಿ ಚೆಲ್ಲಾಡಿಕೊಳ್ಳುತ್ತಿದ್ದ ಅಂಗಡಿಗಳಲ್ಲಿ ನನ್ನ ಪುಟ್ಟ ಪರ್ಸ್ ತೀರಾ ದಯನೀಯವಾಗತೊಡಗಿದ ಅರಿವು ಒಂದೆರಡು ಭೇಟಿಗಳಲ್ಲೇ ಆಗಿ ಖಿನ್ನನಾಗಿಸಿತು.  ಅದೇ ಸಮಯದಲ್ಲಿ ಒಂದು ಸಂಜೆ ಬಿಳೀ ಹಾಳೆಗಳನ್ನು ತರಲೆಂದು, ಮಾಮೂಲಾಗಿ ಹೋಗುತ್ತಿದ್ದ ಶಾಪಿಂಗ್ ಸೆಂಟರಿನಲ್ಲಿದ್ದ ಬಂಗಾಳಿ ಆಂಟಿಯ ಸ್ಟೇಷನರಿ ಅಂಗಡಿ ಮುಚ್ಚಿದ್ದರಿಂದಾಗಿ ಹಾಗೇ ನಡೆಯುತ್ತಾ,  ಜೆಎನ್ಯುನಲ್ಲಿದ್ದ ಗೀತಾ ಬುಕ್ ಡಿಪೋಗೆ ಹೋದಾಗ ಕಂಡದ್ದು ನಿಧಿ.  ರಾಶಿ ರಾಶಿ ರಶಿಯನ್ ಪುಸ್ತಕಗಳು!  ಟಾಲ್ಸ್ಟಾಯ್, ಗಾರ್ಕಿ, ಚೆಕೋವ್, ತುರ್ಗೆನೆವ್, ಪುಷ್ಕಿನ್, ಗೊಗೋಲ್, ಇಬ್ರಗೆಂಬಿಕೋವ್...  ಯಾವ ಪುಸ್ತಕದ ಬೆಲೆಯೂ ಹತ್ತು ರೂಪಾಯಿಗಳಿಗಿಂತ ಹೆಚ್ಚಿಲ್ಲ!  ಗಾರ್ಕಿಯ ಆತ್ಮಕಥೆಯ ಮೊದಲ ಭಾಗ ಮೈ ಚೈಲ್ಡ್ಹುಡ್ ಬೆಲೆ ಒಂದೇ ರೂಪಾಯಿ!  ಚೆಕೋವ್ ಕಥೆಗಳ ಸಂಗ್ರಹಕ್ಕೆ ಮೂರು ರೂಪಾಯಿ!  ಬೇಕಾದ್ದನ್ನೆಲ್ಲಾ ಕೊಂಡುಕೊಳ್ಳುವ ಶ್ರೀಮಂತ ನಾನು ಅಂತ ಅನಿಸಿದ್ದು ಅಂದು.  ಗೀತಾ ಬುಕ್ ಡಿಪೋಗೆ ಮತ್ತೆ ಮತ್ತೆ ಹೋದೆ...
ಹೀಗೇ ಕನ್ನಡ ಪುಸ್ತಕಗಳೂ ಸಿಕ್ಕಿಬಿಟ್ಟರೆ...?
ಏನನ್ನಾದರೂ ಪ್ರಾಮಾಣಿಕವಾಗಿ, ಉತ್ಕಟವಾಗಿ ಬಯಸಿದರೆ ವಿಧಿ ನಮಗರಿವಿಲ್ಲದಂತೆ ನಮ್ಮನ್ನು ಅದರತ್ತ ಕರೆದೊಯ್ಯುತ್ತದಂತೆ!
ಅದು ಡಿಸೆಂಬರ್ ತಿಂಗಳ ಒಂದು ಛಳಿಯ ಬೆಳಗು.
ಸರಕಾರಿ ಪುಸ್ತಕಸಂಸ್ಥೆಯೊಂದರ ಹೊಸ ಪ್ರಕಟಣೆಗಳ ಬಗ್ಗೆ ದಿನದ ಪತ್ರಿಕೆಯಲ್ಲೊಂದು ಪುಟ್ಟ ಜಾಹಿರಾತು, ವಿವಿಧ ಭಾರತೀಯ ಭಾಷೆಗಳಲ್ಲಿ ಹೊಸ ಪುಸ್ತಕಗಳಿವೆಂಬ ಸೂಚನೆ, ಭಾಷೆಗಳ ಪಟ್ಟಿಯಲ್ಲಿ ಕನ್ನಡವೂ!  ಖುಷಿಯಾಗಿಬಿಟ್ಟಿತು.  ಮಾರಾಟ ಮಳಿಗೆಯ ಅಡ್ರೆಸ್ ನೋಡಿದರೆ ಅದು ಮನೆಯಿಂದ ಅಷ್ಟೇನೂ ದೂರವಿಲ್ಲ!
ಗಡಬಡಿಸಿ ಸ್ನಾನ ಮಾಡಿದೆ.  ತಿಂಡಿ ತಿಂದೇ ಇರಬೇಕು.  ಇಲ್ಲದಿದ್ದರೆ ಹೊರಹೋಗಲು ಅಕ್ಕ ಬಿಟ್ಟಿರುವ ಸಾಧ್ಯತೆ ಇಲ್ಲ.  ಆತುರಾತುರವಾಗಿ ತಯಾರಾಗಿ ಹೊರಹಾರಿದೆ.
ಚಳಿಗಾಲದ ಸುಂದರ ಬೆಳಗು, ಬಿಸಿಲು ಛಂದ ಇತ್ತು.  ಸುತ್ತಿಬಳಸಿ ಹೋಗುತ್ತವೆ ಎಂದು ೫೧೧, ೬೧೮ ಬಿಟ್ಟೆ.  ೫೦೭ ಬಂದದ್ದೆ ಖುಶಿಯಿಂದ ಒಳನುಗ್ಗಿ ಗ್ರೀನ್ ಪಾರ್ಕ್ನಲ್ಲಿ ಇಳಿದು ದಟ್ಟನೆರಳಿನ ಸರ್ವಿಸ್ ರಸ್ತೆ ಸೇರಿ ನಂಬರ್ಗಳನ್ನು ನೋಡುತ್ತಾ ಎಡಕ್ಕೇ ಕತ್ತು ಹೊರಳಿಸಿಕೊಂಡು ಮುಂದೆ ನಡೆದೆ.  ಎರಡು ನಿಮಿಷಗಳಲ್ಲಿ ಪುಸ್ತಕದ ಮಳಿಗೆಯ ಮುಂದಿದ್ದೆ.
ಮಳಿಗೆಯ ಬಾಗಿಲು ತೆರೆದಿತ್ತು.  ಟೇಬಲ್ ಮೇಲೆ ಪುಸ್ತಕವೊಂದನ್ನು ಹರಡಿ ಅದರಲ್ಲಿ ಮಗ್ನಳಾಗಿದ್ದ ಯುವತಿಯೊಬ್ಬಳ ಹೊರತಾಗಿ ಒಂದು ನರಪಿಳ್ಳೆಯೂ ಇರಲಿಲ್ಲ.  ಆದರೆ ಪುಸ್ತಕಗಳಿದ್ದವು.
ನನ್ನತ್ತ ಒಮ್ಮೆ ತಲೆಯೆತ್ತಿ ನೋಡಿ ಮತ್ತೆ ಪುಸ್ತಕದಲ್ಲಿ ಮುಳುಗಿಹೋದವಳನ್ನು ನಿರ್ಲಕ್ಷಿಸಿ ಕನ್ನಡ ಪುಸ್ತಕಗಳಿಗಾಗಿ ಕಣ್ಣಾಡಿಸಿದೆ.  ಬಂಗಾಲಿ, ಒರಿಯಾಗಳಾಚೆ ಕಂಡೇಬಿಟ್ಟವು.  ನಾನು ನಿಧಿ ತುಂಬಿದ ಕೊಪ್ಪರಿಕೆಯ ಮುಂದೆ ನಿಂತಿದ್ದೆ.
ಮಹಮದ್ ಬಶೀರ್ ಅವರ ಪಾತುಮ್ಮನ ಆಡು ಮತ್ತು ಬಾಲ್ಯಕಾಲ ಸಖಿ, ಎಂ. ಟಿ. ವಾಸುದೇವನ್ ನಾಯರ್ ಚೌಕಟ್ಟಿನ ಮನೆ, ನಾನಕ್ ಸಿಂಗ್ ಬಿಳಿಯ ರಕ್ತ, ತಮಿಳು, ಮಲಯಾಲಂ, ತೆಲುಗು, ಒರಿಯಾ, ಉರ್ದು ಕಥಾಸಂಕಲನಗಳು, ಜಿ. ಹೆಚ್. ನಾಯರಕು ಸಂಪಾದಿಸಿದ್ದ ಕನ್ನಡ ಸಣ್ಣಕಥೆಗಳು...  ಬೆಲೆ? ಒಂದೂಕಾಲು, ಒಂದೂವರೆ, ಒಂದೂಮುಕ್ಕಾಲು, ಎರಡು ಎರಡೂವರೆ, ಮೂರು, ಮೂರೂವರೆ... ಅಷ್ಟೇ.  ತುಂಬಾ 'ಕಾಸ್ಟ್ಲಿ' ಮಾಲೆಂದರೆ ಕನ್ನಡ ಸಣ್ಣಕಥೆಗಳು!  ಮೊಣಕಾಲಷ್ಟೇ ಆಳದ ಗುಂಡಿಯಲ್ಲಿ ಚಂಗ್ ಚಂಗ್ ಎಂದು ಚಿಮ್ಮುವ ಮೀನುಗಳನ್ನು ಹಿಡಿದಿಡಿದು ಬುಟ್ಟಿಗೆ ತುಂಬಿಕೊಳ್ಳುವಂತೆ ಎತ್ತೆತ್ತಿ ಎದೆಗವಚಿಕೊಂಡೆ.
ಎಲ್ಲವನ್ನೂ ನೆಲದ ಮೇಲಿಟ್ಟು, ಒಂದೊಂದಾಗಿ ತೆರೆದು ಬೆಲೆ ನೋಡಿ, ಕೂಡಿಸಿ ಅನುಮಾನದಿಂದ ಪರ್ಸ್ ತೆರೆದುನೋಡಿದರೆ ಅನುಮಾನ ನಿಜವೇ ಆಗಿತ್ತು.  ಯಾವುದನ್ನು ಬಿಡಲಿ ಎಂದು ಅಳೆದೂಸುರಿದು ಐದಾರನ್ನು ಮನಸ್ಸಿಲ್ಲದ್ದ ಮನಸ್ಸಿನಿಂದ ಅವುಗಳ ಸ್ಥಾನಕ್ಕೆ ಸೇರಿಸಿ ಆಕೆಯತ್ತ ತಿರುಗಿದೆ.
ನನ್ನತ್ತಲೇ ನೋಡುತ್ತಿದ್ದ ಅವಳು ಛಕ್ಕನೆ ಪುಸ್ತಕದತ್ತ ಹೊರಳಿಕೊಂಡಳು.  ಭಂಗಿಯಲ್ಲಿ ಸೊಗಸಾಗಿ ಕಂಡಳು.
ಪುಸ್ತಕದಲ್ಲಿ (ಸುಳ್ಳುಸುಳ್ಳೇ) ಮಗ್ನಳಾದ ಹೆಣ್ಣು ಅದೆಷ್ಟು ಆಕರ್ಷಕ!
ಅವಳ ಮೇಲೆ ದೃಷ್ಟಿಯಿಟ್ಟು ಒಂದೊಂದೇ ಹೆಜ್ಜೆ ಮುಂದಿಟ್ಟೆ...
ಓದುತ್ತಿದ್ದ ಪುಸ್ತಕವನ್ನು ಪಕ್ಕಕ್ಕಿಟ್ಟು ಒಮ್ಮೆ ಸದ್ದಿಲ್ಲದೇ ಸಣ್ಣಗೆ ನಕ್ಕು ನನ್ನಾಯ್ಕೆಯ ಪುಸ್ತಕಗಳನ್ನು ಒಂದೊಂದೇ ಎತ್ತಿ ತೆರೆದುನೋಡಿ, ರಶೀದಿ ಪುಸ್ತಕದಲ್ಲಿ ನಿಧಾನವಾಗಿ ಬರೆಯುತ್ತಾ ಹೋದಳು...  ನಾನು ನೋಡುತ್ತಲೇ ಇದ್ದೆ.  ಆಕೆ ಕೊನೆಗೂ ತಲೆಯೆತ್ತಿ ಮೊತ್ತ ಹೇಳಿದಳು.  ಅದು ಅವಳ ಕೊರಳಿಂದ ನಾ ಕೇಳಿದ ಮೊದಲ ಮಾತು.  ಸ್ವಲ್ಪ ದಪ್ಪ, ಆದರೂ ಆಕರ್ಷಕ ಅಪ್ಪಟ ಪಂಜಾಬೀ ದನಿ...  ನನಗೆ ಖುಶಿಯಾಯಿತು.
ಖುಶಿಗೆ ಗಳಿಗೆಯ ನಿಜವಾದ ಕಾರಣ ಅವಳು ಹೇಳಿದ ಮೊತ್ತ.  ನಾನು ಲೆಕ್ಕ ಹಾಕಿದ್ದಕ್ಕಿಂತಲೂ ಅದು ಕಡಿಮೆ ಇತ್ತು.   ಅಚ್ಚರಿ, ಸಂತೋಷ, ಅನುಮಾನದಿಂದ ಬಿಲ್ ಎತ್ತಿ ನೋಡಿದರೆ ಆಕೆ ಎಲ್ಲ ಪುಸ್ತಕಗಳಿಗೂ ಹತ್ತು ಪರ್ಸೆಂಟ್ ಡಿಸ್ಕೌಂಟ್ ಕೊಟ್ಟಿದ್ದಳು.  ಮಿಸ್ ಟೆನ್ ಪರ್ಸೆಂಟ್!
ಮತ್ತೆ ಪುಸ್ತಕದ ಕಪಾಟಿನತ್ತ ಓಡಿದೆ.  ಭಾರದ ಎದೆಯಿಂದ ಹಿಂದಕ್ಕಿರಿಸಿದ್ದ ಪುಸ್ತಕಗಳಲ್ಲಿ ಎರಡು ಮೂರನ್ನು ಎತ್ತಿಕೊಂಡು ಓಡಿಬಂದೆ.  ಈಗ ಅವಳ ಮುಖದ ತುಂಬಾ ನಗೆ.  ಅದು ಬಹಳ ಹೊತ್ತಿನವರೆಗೆ ಮಾಸಲೇ ಇಲ್ಲ.  ನಗೆಯ ನಡುವೆ ಕನ್ನಡ್ ಪಡತೇ ಹೈಂ?  ಬಂಗ್ಲೋರ್ ಸೆ? ಹೀಗೆ ಒಂದೆರಡು ಪುಟ್ಟಪುಟ್ಟ ಪ್ರಶ್ನೆಗಳು.  ಮೊದಲ ಪ್ರಶ್ನೆಗೆ ಜೀ ಹ್ಞಾಂ ಎಂದು ಸರಾಗವಾಗಿಯೂ, ಎರಡನೆಯ ಪ್ರಶ್ನೆಗೆ ಜೀ ನಹೀ, ಮೈಸೂರ್ ಸೆ ಎಂದು ತಡವರಿಸಿ ಹೇಳಿದಂತೆಯೂ ನೆನಪು...
ಇದು ಆರಂಭ...

--***೦೦೦***--