ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, April 26, 2012

ಲೇಖನ- "ಇಸ್ಲಾಮಾಬಾದ್‍ನ ಹಿಂದಿನ ಕಾಣದ ಕೈಇತಿಹಾಸ ಮತ್ತು ವರ್ತಮಾನದ ಆಧಾರದ ಮೇಲೆ ಮುಂದಿನ ಹದಿನೈದು ವರ್ಷಗಳಲ್ಲಿ ಏಷಿಯಾದ ರಾಜಕೀಯ-ಸಾಮರಿಕ ಸ್ಥಿತಿಗತಿಗಳು ಹೇಗೆ ಬದಲಾಗಬಹುದೆಂಬ ಚಿತ್ರಣವನ್ನು ನೀಡುವಂತೆ ದಶಕದ ಹಿಂದೆ ತಜ್ಞರ ತಂಡವೊಂದನ್ನು ಅಮೆರಿಕಾದ ರಕ್ಷಣಾ ಇಲಾಖೆ ಕೇಳಿಕೊಂಡಿತು. ಆ ತಂಡ ಚಿತ್ರಿಸಿದ ಮೂರು ‘ಭವಿಷ್ಯಗಳಲ್ಲಿ ಒಂದು ಹೀಗಿತ್ತು: ಕಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ೨೦೧೨-೧೪ರಲ್ಲಿ ಭಾರತದೊಡನೆ ತನ್ನ ನಾಲ್ಕನೆಯ ಹಾಗೂ ಅಂತಿಮ ಯುದ್ಧವನ್ನು ನಡೆಸುತ್ತದೆ, ಸೋಲು ಅನುಭವಿಸುತ್ತದೆ ಮತ್ತು ಭಾರತದೊಡನೆ ವಿಲೀನಗೊಳ್ಳುತ್ತದೆ.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕಶ್ಮೀರಕ್ಕೆ ಸಂಬಂಧಿಸಿದಂತೆ ಕಳೆದ ಆರೂವರೆ ದಶಕಗಳಲ್ಲಿ ಕಾರ್ಗಿಲ್ ಕದನವೂ ಸೇರಿದಂತೆ ಮೂರು ಯುದ್ಧಗಳು ಮತ್ತು ಅಸಂಖ್ಯಾತ ಗಡಿ ಘರ್ಷಣೆಗಳು ನಡೆದಿವೆ.  ಅಶಾಂತ ಕಶ್ಮೀರ ಇವೆರಡು ದೇಶಗಳನ್ನು ಮತ್ತೊಮ್ಮೆ ಯುದ್ಧಕ್ಕೆ ನೂಕುವ ಸಾಧ್ಯತೆಯನ್ನು ಯಾವಾಗಲೂ ಜೀವಂತವಾಗಿರಿಸಿದೆ.  ಈ ನಿಟ್ಟಿನಲ್ಲಿ ಮತ್ತೊಂದು ಯುದ್ಧ ಯಾರನ್ನೂ ಅಚ್ಚರಿಗೊಳಿಸುವುದಿಲ್ಲ.
೨೦೧೨ನೇ ಇಸವಿಯ ಮೂರನೇ ಒಂದು ಭಾಗ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಮೆರಿಕನ್ ತಜ್ಞರ ತಂಡ ನುಡಿದ ಭವಿಷ್ಯಕ್ಕೆ ರಂಗಸಜ್ಜಿಕೆ ಆರಂಭವಾಗಿದೆಯೇ ಎಂದು ನೋಡಿದರೆ ಅಂತಹದೇನೂ ಕಾಣುತ್ತಿಲ್ಲ.  ಎರಡೂ ದೇಶಗಳ ನಡುವೆ ಮುಂಬೈ ಧಾಳಿಗಳ ನಂತರದ ತಿಂಗಳುಗಳಲ್ಲಿ ಇದ್ದ ಉದ್ರಿಕ್ತ ಪರಿಸ್ಥಿತಿಗೆ ವಿರುದ್ಧವಾಗಿ ಇತ್ತೀಚಿನ ದಿನಗಳಲ್ಲಿ ಭಾರತದ ಬಗ್ಗೆ ಪಾಕಿಸ್ತಾನದ ನೀತಿಗಳಲ್ಲಿ ಅಭೂತಪೂರ್ವ ಸಕಾರಾತ್ಮಕ ಬದಲಾವಣೆಗಳು ಕಾಣುತ್ತಿವೆ.  ಭಾರತದೊಡನೆ ಆರ್ಥಿಕ ಸಹಕಾರವನ್ನು ವೃದ್ಧಿಸಿಕೊಳ್ಳುವತ್ತ ಇಸ್ಲಾಮಾಬಾದ್ ತೀವ್ರ ಆಸಕ್ತಿ ತೋರುತ್ತಿದೆ.  ಅದಕ್ಕೆ ಪೂರಕವಾಗಿ ಪಾಕ್ ಸೇನಾ ದಂಡನಾಯಕ ಜನರಲ್ ಅಷ್ಪಾಕ್ ಪರ್ವೆಜ್ ಕಯಾನಿ ತನ್ನ ದೇಶ ಸಿಯಾಚಿನ್ ಪ್ರದೇಶದಲ್ಲಿ ನಿಶ್ಶಸ್ತ್ರೀಕರಣದ ಬಗ್ಗೆ ಆಸಕ್ತಿ ಹೊಂದಿದೆಯೆಂದು ಹೇಳಿಕೆ ಕೊಟ್ಟಿದ್ದಾರೆ.  ಇದೇ ಜನರಲ್ ಕಯಾನಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸ್ನೇಹವೃದ್ಧಿಯ ವಿರುದ್ಧವಾಗಿದ್ದರು ಮತ್ತು ಪಾಕಿಸ್ತಾನದ ಸಾಮರಿಕ ಯೋಜನೆಗಳು ಭಾರತ-ಕೇಂದ್ರಿತ ಎಂಬ ಹೇಳಿಕೆಗಳನ್ನು ಇತ್ತೀಚಿನವರೆಗೂ ನೀಡುತ್ತಿದ್ದರು.
ಈ ಬೆಳವಣಿಗೆಗಳನ್ನು ಭಾರತದ ಜತೆಗಿನ ಸಂಬಂಧಗಳನ್ನು ಉತ್ತಮಪಡಿಸಿಕೊಂಡು ಶಾಂತಿಯುತ ಸಹಬಾಳ್ವೆಗೆ ಪಾಕಿಸ್ತಾನ ಕೊನೆಗೂ ಮನಸ್ಸು ಮಾಡುತ್ತಿರುವ ಸ್ಪಷ್ಟ ಸಂಕೇತಗಳು ಎಂದು ಪರಿಗಣಿಸಬಹುದಾಗಿದೆ.  ಈ ಬಗ್ಗೆ ನೆಮ್ಮದಿಯೆನಿಸಿದರೂ, ಪಾಕಿಸ್ತಾನ ಸ್ವಇಚ್ಚೆಯಿಂದ ಈ ನೀತಿ ಹಿಡಿದಿದೆಯೋ ಅಥವಾ ಕಾಣದ ಕೈನ ತಾಳಕ್ಕೆ ಅನುಗುಣವಾಗಿ ಹೆಜ್ಜೆ ಹಾಕುತ್ತಿದೆಯೋ ಎಂಬ ಪ್ರಶ್ನೆ ಎದುರಾಗುತ್ತದೆ.  ಈ ನಿಟ್ಟಿನಲ್ಲಿ ಸ್ವಲ್ಪ ಪತ್ತೇದಾರಿ ನಡೆಸಿದರೆ ದಕ್ಷಿಣ ಏಷಿಯಾದ ಈ ಎರಡು ಅಗ್ರ ಶಕ್ತಿಗಳ ನಡುವೆ ಯುದ್ಧವಾಗದಂತೆ ನೋಡಿಕೊಳ್ಳಲು ತೃತೀಯ ಶಕ್ತಿಯೊಂದು ಕಾರ್ಯನಿರತವಾಗಿರುವ ಸ್ಪಷ್ಟ ಸೂಚನೆಗಳು ಸಿಗುತ್ತವೆ ಮತ್ತು ಈ ತೃತೀಯ ಶಕ್ತಿ ನೆರೆಯ ಚೈನಾ ಆಗಿರಬಹುದು ಎಂಬ ಸಂಗತಿ ನಮ್ಮನ್ನು ನಿಬ್ಬೆರಗಾಗಿಸುತ್ತದೆ.
ಕಳೆದ ಎರಡು-ಮೂರು ತಿಂಗಳುಗಳಲ್ಲಿ ಭಾರತ - ಪಾಕಿಸ್ತಾನಗಳ ನಡುವೆ ಉತ್ತಮ ಸಂಬಂಧಗಳನ್ನು ವೃದ್ಧಿಗೊಳಿಸುವ ಅಗತ್ಯವನ್ನು ಒತ್ತಿ ಹೇಳುವಂತಹ ಹಲವಾರು ಹೇಳಿಕೆಗಳನ್ನು ಚೀನೀ ಸರಕಾರ ನೀಡಿದೆ.  ಅಧ್ಯಕ್ಷ ಜರ್ದಾರಿಯವರ ಏಪ್ರಿಲ್ ೮ರ ಭಾರತ ಭೇಟಿಯನ್ನು ಚೈನಾದ ಸರಕಾರ ಮತ್ತು ಸರಕಾರಿ ನಿಯಂತ್ರಿತ ಮಾಧ್ಯಮಗಳು ಶ್ಲಾಘಿಸಿವೆ.  ಇದೆಲ್ಲಕ್ಕೂ ಕಲಶಪ್ರಾಯವಾದ ಬೆಳವಣಿಗೆಯೆಂದರೆ, ಭಾರತದ ಜತೆ ಆರ್ಥಿಕ ಸಂಬಂಧಗಳನ್ನು ವೃದ್ಧಿಗೊಳಿಸಿಕೊಳ್ಳುವಂತೆ ನಮ್ಮ ಚೀನೀ ಮಿತ್ರರು ನಮಗೆ ಸಲಹೆ ನೀಡಿದ್ದಾರೆ ಎಂದು ತಿಂಗಳ ಹಿಂದೆ ಬಹಿರಂಗವಾಗಿ ಹೇಳುವ ಮೂಲಕ ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಬೆಕ್ಕನ್ನು ಚೀಲದಿಂದ ಹೊರಗೆ ಬಿಟ್ಟಿದ್ದಾರೆ!
ಚೈನಾದ ಈ ನಡವಳಿಕೆ ಅದರ ಇಲ್ಲಿಯವರೆಗಿನ ಸ್ವಭಾವಕ್ಕೆ ಸಂಪೂರ್ಣ ವಿರುದ್ಧ.  ಭಾರತವನ್ನು ದಕ್ಷಿಣ ಏಶಿಯಾದ ಎಲ್ಲೆಯೊಳಗೇ ಕಟ್ಟಿಹಾಕುವ ತಂತ್ರದ ಅಂಗವಾಗಿ ಪಾಕಿಸ್ತಾನವನ್ನು ಒಂದು ಬಲಿಷ್ಟ ಶಕ್ತಿಯಾಗಿ ಬೆಳೆಸುವುದು ಬೀಜಿಂಗ್‌ನ ದಕ್ಷಿಣ ಏಶಿಯಾ ನೀತಿಯ ಪ್ರಮುಖ ಅಂಶವಾಗಿತ್ತು.  ಇದರ ಅಂಗವಾಗಿಯೇ ಪಾಕಿಸ್ತಾನ ಅಣ್ವಸ್ತ್ರಶಕ್ತಿಯಾಗಲು ಎಲ್ಲ ಸಹಕಾರಗಳನ್ನೂ ಚೈನಾ ನೀಡಿತ್ತು.  ಇದೇ ಚೈನಾ ಈಗ ಭಾರತ - ಪಾಕಿಸ್ತಾನಗಳ ನಡುವೆ ಸ್ನೇಹವೃದ್ಧಿಯನ್ನು ಬಯಸುತ್ತಿದೆ.  ಇದಕ್ಕೆ ಕಾರಣಗಳನ್ನು ಶೋಧಿಸಹೊರಟರೆ ಮತ್ತಷ್ಟು ಬೆರಗು ಹುಟ್ಟಿಸುವ ಸಂಗತಿಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತವೆ.
ಪಾಕಿಸ್ತಾನದ ನೆಲದ ಮೂಲಕ ಚೈನಾವನ್ನು ಅರಬ್ಬೀ ಸಮುದ್ರಕ್ಕೆ ಸಂಪರ್ಕಿಸುವ ರೈಲುಹಾದಿಯ ನಿರ್ಮಾಣದತ್ತ ಚೀನೀಯರು ತೀವ್ರ ಗಮನ ಹರಿಸಿದ್ದಾರಷ್ಟೇ.  ಈ ರೈಲುಹಾದಿಯ ಆರ್ಥಿಕ ಹಾಗೂ ಸಾಮರಿಕ ಮಹತ್ವದ ಅಗಾಧತೆಯನ್ನು ಚೀನೀಯರು ಮನಗಂಡಿದ್ದಾರೆ.  ಹೀಗಾಗಿಯೇ ರೈಲುಹಾದಿಯ ನಿರ್ಮಾಣದ ಮೊದಲ ಹಂತದ  ಕೆಲಸಗಳು ಆರಂಭವಾಗಿರುವ  ಪಾಕ್ ಆಕ್ರಮಿತ ಕಶ್ಮೀರದ ಗಿಲ್ಗಿಟ್ - ಬಾಲ್ಟಿಸ್ತಾನ್ ಪ್ರದೇಶದಲ್ಲಿ ಸುಮಾರು ಏಳರಿಂದ ಹನ್ನೊಂದು ಸಾವಿರ ಚೀನೀ ಸೈನಿಕರು ಈಗಾಗಲೇ ಖಾಯಂ ಆಗಿ ಬೀಡುಬಿಟ್ಟಿದ್ದಾರೆ.  ಪಾಕ್ ಆಕ್ರಮಿತ ಕಶ್ಮೀರದಲ್ಲಿ ಸುದ್ಧಿಸಂಸ್ಥೆಗಳಿಗೆ ಪ್ರವೇಶವಿಲ್ಲದ ಕಾರಣ ಅಲ್ಲಿನ ಘಟನಾವಳಿಗಳ ಬಗ್ಗೆ ನಿಖರ ವಿವರಗಳು ಸಿಗದಿದ್ದರೂ ಲಭ್ಯ ಮಾಹಿತಿಗಳ ಪ್ರಕಾರ ಅಲ್ಲಿನ ಪಾಕ್ ವಿರೋಧೀ ದಂಗೆಗಳನ್ನು ಅಡಗಿಸಿ ಶಾಂತಿ ಸ್ಥಾಪಿಸುವುದರಲ್ಲಿ ಚೀನೀ ಸೇನೆ ಗಮನಾರ್ಹ ಪಾತ್ರ ವಹಿಸುತ್ತಿದೆ.  ಅಂದರೆ, ಅಲ್ಲಿ ಶಾಂತಿ ಸ್ಥಾಪನೆಯ ಗುತ್ತಿಗೆಯನ್ನು ಚೈನಾ ತೆಗೆದುಕೊಂಡಿದೆ!  ಇದರರ್ಥ ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಿ ಶೀಘ್ರವಾಗಿ ರೈಲುಹಾದಿಯನ್ನು ನಿರ್ಮಿಸುವುದು ಪಾಕಿಸ್ತಾನಕ್ಕಿಂತಲೂ ಚೈನಾಗೆ ಹೆಚ್ಚು ಅಗತ್ಯವಾಗಿದೆ.
ಚೀನೀಯರ ಈ ಎಲ್ಲ ಯೋಜನೆಗಳು ಯಶಸ್ವಿಯಾಗಿ ಚೈನಾ ಮತ್ತು ಅರಬ್ಬೀ ಸಮುದ್ರಗಳ ನಡುವೆ ನೇರ ರೈಲು ಸಂಪರ್ಕ ನಿರ್ಮಾಣವಾಗಲು ಕೊನೇಪಕ್ಷ ಹನ್ನೆರಡು - ಹದಿನೈದು ವರ್ಷಗಳು ಹಿಡಿಯುತ್ತವೆ.  ಅಲ್ಲಿಯವರೆಗೆ ಮತ್ತು ಆನಂತರ ಪಾಕಿಸ್ತಾನದ ಭೌಗೋಳಿಕ ನಕ್ಷೆ ಮತ್ತು ಆಂತರಿಕ ರಾಜಕಾರಣ ಹೀಗಿರುವಂತೆಯೇ ಇದ್ದರೆ ಮಾತ್ರ ಚೈನಾ ಯುಶಸ್ವಿಯಾಗಿ ರೈಲು ಹಾದಿಯನ್ನು ನಿರ್ಮಿಸಿ ಅದರ ಫಲವನ್ನು ಅನುಭವಿಸಲು ಸಾಧ್ಯವಾಗುತ್ತದೆ.  ಆದರೆ ಪಾಕಿಸ್ತಾನದ ಪ್ರಸಕ್ತ ಆಂತರಿಕ ಪರಿಸ್ಥಿತಿ ಚೈನಾಗೆ ಆತಂಕ ಹುಟ್ಟಿಸುವಂತಿದೆ.  ಪಾಕಿಸ್ತಾನೀ ಸೇನೆ ೨೦೦೭ರ ಉತ್ತರಾರ್ಧದಿಂದಲೂ ಖೈಬರ್ - ಫಕ್ತೂನ್‌ಖ್ವಾ ಪ್ರಾಂತ್ಯದ ದುರ್ಗಮ ಪರ್ವತಗಳು ಮತ್ತು ಕಣಿವೆಗಳಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ವಿರುದ್ಧ ಸೆಣಸುತ್ತಿದೆ.  ಜತೆಗೇ ನೈಸರ್ಗಿಕ ಸಂಪನ್ಮೂಲಗಳ ಅಗಾಧ ಭಂಡಾರ ಬಲೂಚಿಸ್ತಾನದದಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಸಂಗ್ರಾಮ ಸೇನೆಯನ್ನೂ, ರಾಷ್ಟ್ರನಾಯಕರನ್ನೂ ಕಂಗೆಡಿಸುತ್ತಿದೆ.  ಇದು ಸಾಲದು ಎಂಬಂತೆ ಪಾಕಿಸ್ತಾನೀ ಸೇನೆಯಲ್ಲಿ ಇತ್ತೀಚೆಗೆ ಬಿರುಕುಗಳು ಕಾಣಿಸಿಕೊಂಡಿವೆ.  ರಾಷ್ಟ್ರದ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸೇನೆಯ ಅಗ್ರನಾಯಕತ್ವ ಗಮನ ಕೊಟ್ಟರೆ ಮಧ್ಯಮ ಮತ್ತು ಕೆಳಹಂತದ ಅಧಿಕಾರಿಗಳು ಮತ್ತು ಸೈನಿಕರು ಇಸ್ಲಾಮಿಕ್ ಮೂಲಭೂತವಾದಿಗಳತ್ತ ಒಲವು ತೋರುತ್ತಿದ್ದಾರೆ.  ಸೇನೆಯಲ್ಲಿ ಶೇಕಡಾ ಮೂವತ್ತರಷ್ಟಿರುವ ಪಕ್ತೂನಿಗಳಲ್ಲಿ ಬಹುಪಾಲು ಸೈನಿಕರು ಗಡಿನಾಡಿನಲ್ಲಿ ಸೇನೆ ನಡೆಸುತ್ತಿರುವ ಸೈನಿಕ ಕಾರ್ಯಾಚರಣೆಗಳ ಬಗ್ಗೆ ಅಸಮ್ಮತಿ ಹೊಂದಿದ್ದಾರೆ.  ಈ ಆಂತರಿಕ ಛಿದ್ರತೆಗಳು ಪಾಕಿಸ್ತಾನಿ ಸೇನೆಯ  ಸಾಮರಿಕ ಸಾಮರ್ಥ್ಯವನ್ನು ಬಹಳಷ್ಟು ಕುಂದಿಸಿದೆ.
ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಭಾರತದೊಂದಿಗೆ ಮತ್ತೊಂದು ಯುದ್ಧವಾದರೆ ಅದರಲ್ಲಿ ಬಳಕೆಯಾಗುವ ಅಸ್ತ್ರಗಳ ಆಧಾರದ ಮೇಲೆ ಎರಡು ವಿಭಿನ್ನ ಪರಿಣಾಮಗಳನ್ನು ಮುಂಗಾಣಬಹುದು.  ಒಂದು- ಯುದ್ಧದಲ್ಲಿ ಅಣ್ವಸ್ತ್ರಗಳು ಬಳಕೆಯಾದರೆ ಅದು ಪಾಕಿಸ್ತಾನಕ್ಕೆ ಹೆಚ್ಚು ಮಾರಕವಾಗಿ ಅದರ ಭೌಗೋಳಿಕ ಮೇಲ್ಮೈಲಕ್ಷಣ ಬದಲಾಗುವುದು ನಿಶ್ಚಯ.  ಎರಡು- ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಯುದ್ಧವೇ ನಡೆದರೆ ಅದರಲ್ಲಿ ಪಾಕಿಸ್ತಾನೀ ಸೇನೆ ಸೋತು ಅದು ಆ ದೇಶದ ರಾಜಕೀಯದ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳುವುದು ನಿಶ್ಚಿತ.  ಇದೆಲ್ಲದರ ಪರಿಣಾಮವಾಗಿ, ಮೇಲೆ ಉಲ್ಲೇಖಿಸಿದ ಅಮೆರಿಕದ ರಕ್ಷಣಾ ವಿಶೇಷಜ್ಞರ ಭವಿಷ್ಯದಂತೆ ಪಾಕಿಸ್ತಾನ ಭಾರತದೊಡನೆ ವಿಲೀನಗೊಳ್ಳದಿದ್ದರೂ ಆ ದೇಶ ಈಗಿರುವಂತೆ ಉಳಿಯುವುದಿಲ್ಲ ಎಂಬುದು ಮಾತ್ರ ನಿರ್ವಿವಾದದ ಸಂಗತಿ.  ರಣಾಂಗಣದಲ್ಲಿ ಸೋತ ಸೇನೆ ರಾಷ್ಟ್ರ ರಾಜಕಾರಣದ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಂತೇ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಕೈ ಮೇಲಾಗುತ್ತದೆ ಮತ್ತು ಸಿಂಧ್ ಹಾಗೂ ಬಲೂಚಿಸ್ತಾನಗಳಲ್ಲಿ ಪ್ರತ್ಯೇಕತೆಗೆ ಭಾರೀ ಕುಮ್ಮಕ್ಕು ಸಿಕ್ಕಿ ಅವು ಸ್ವತಂತ್ರಗೊಳ್ಳುವುದಕ್ಕೆ ದಾರಿ ಸುಗಮವಾಗುತ್ತದೆ.  ಸ್ವತಂತ್ರ ಸಿಂಧ್ ಮತ್ತು ಬಲೂಚಿಸ್ತಾನಗಳು ತಮ್ಮ ಆರ್ಥಿಕ, ಸಾಮರಿಕ, ಒಟ್ಟಾರೆ ಅಸ್ತಿತ್ವದ ಅಗತ್ಯಗಳಿಗಾಗಿ ಭಾರತವನ್ನು ಅವಲಂಬಿಸುತ್ತವೆ, ಅಂದರೆ ನವದೆಹಲಿಯ ಪ್ರಭಾವಕ್ಕೊಳಗಾಗುತ್ತವೆ.  ಚೈನಾಗೆ ಛಳಿ ಹುಟ್ಟಿಸಿರುವುದು ಈ ದುಃಸ್ವಪ್ನ.
ಪಾಕಿಸ್ತಾನದಲ್ಲಿ ಚೈನಾ ಎದುರುನೋಡುವ ಅಪಾಯಗಳು ಮೂರು ಬಗೆಯವು.  ಮೊದಲನೆಯದು- (ಭಾರತದೊಡನೆ ವಿಲೀನಗೊಂಡು) ಪಾಕಿಸ್ತಾನ ಭೂಪಟದಿಂದ ಸಂಪೂರ್ಣವಾಗಿ ಮಾಯವಾಗುವುದು, ಎರಡನೆಯದು- ಪಾಕಿಸ್ತಾನ ಉಳಿದರೂ ಸಿಂಧ್ ಮತ್ತು ಮತ್ತು ಬಲೂಚಿಸ್ತಾನಗಳನ್ನು ಕಳೆದುಕೊಂಡು ಕೇವಲ ಪಂಜಾಬ್ ಮತ್ತು ಖೈಬರ್ - ಫಕ್ತೂನ್‌ಖ್ವಾಗಳನ್ನೊಳಗೊಂಡ ಪುಟ್ಟ ಹಾಗೂ ಸಮುದ್ರತೀರವಿಲ್ಲದ ದೇಶವಾಗಿಬಿಡುವುದು, ಮತ್ತು ಮೂರನೆಯದು- ಪಾಕಿಸ್ತಾನದ ಭೌಗೋಳಿಕ ಸ್ಥಿತಿಯಲ್ಲಿ ಯಾವ ಬದಲಾವಣೆಯಾಗದಿದ್ದರೂ ಆ ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳ ಹಿಡಿತ ಉಂಟಾಗುವುದು.  ಈ ಮೂರರಲ್ಲಿ ಒಂದು ಘಟಿಸಿದರೂ ಪಾಕ್ ನೆಲದ ಮೂಲಕ ಅರಬ್ಬೀ ಸಮುದ್ರವನ್ನು ತಲುಪುವ ಚೈನಾದ ಯೋಚನೆ ಮಣ್ಣುಪಾಲಾಗಿ ಅದರ ಕನಸು ಹಳವಂಡವಾಗುತ್ತದೆ.
ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಕೈಮೇಲಾದರಂತೂ ಅದು ಚೈನಾಗೇ ಮುಳುವಾಗುತ್ತದೆ.  ಈಗಾಗಲೇ ಪಾಕಿಸ್ತಾನದೊಂದಿಗೆ ನೇರ ಗಡಿ ಹೊಂದಿರುವ ಉಯ್ಘರ್ ಝಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಚೀನೀ ಸರಕಾರದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮುಸ್ಲಿಂ ಉಗ್ರಗಾಮಿಗಳು ಪಾಕಿಸ್ತಾನದಲ್ಲಿ ರಹಸ್ಯವಾಗಿ ತರಬೇತಿ ಪಡೆಯುತ್ತಿದ್ದಾರೆ.  ಪಾಕ್ ಸರಕಾರವನ್ನು ಇಸ್ಲಾಮಿಕ್ ಮೂಲಭೂತವಾದಿಗಳು ತಮ್ಮ ಕೈಗೆ ತೆಗೆದುಕೊಂಡರೆ ಆಗ ಈ ಉಯ್ಘರ್ ಉಗ್ರಗಾಮಿಗಳಿಗೆ ಪಾಕಿಸ್ತಾನದಲ್ಲಿ ಬಹಿರಂಗವಾಗಿಯೇ ಬೆಂಬಲ ದೊರೆಯುತ್ತದೆ.  ಪರಿಣಾಮವಾಗಿ ಉಯ್ಘರ್ ಝಿನ್‌ಝಿಯಾಂಗ್ ಹೊತ್ತಿ ಉರಿಯತೊಡಗುತ್ತದೆ.
ಇಂತಹ ಯಾವುದೇ ಅನಾಹುತಗಳು ಘಟಿಸದಂತೆ ನೋಡಿಕೊಳ್ಳಲು ಚೈನಾ ಶತಾಯಗತಾಯ ಹೆಣಗುವುದು ಸಹಜ.  ಈ ನಿಟ್ಟಿನಲ್ಲಿ ಬೀಜಿಂಗ್‌ನ ದೂರಗಾಮಿ ಯೋಜನೆಯ ಮೊದಲ ಹಂತವಾಗಿ ಪ್ರಸ್ತುತದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧವಾಗದಂತೆ ನೋಡಿಕೊಳ್ಳಲೇಬೇಕು ಎಂದು ಚಾಲಾಕೀ ಚೈನಾ ಅರಿತಿದೆ.
***     ***     ***
ಬುಧವಾರ, ಏಪ್ರಿಲ್ ೨೫, ೨೦೧೨ರಂದು "ವಿಜಯವಾಣಿ" ಪತ್ರಿಕೆಯ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ


No comments:

Post a Comment