ನೆನಪಾಗದೇ ಹೋದ ವಿಷಯ
ಗಳೆಲ್ಲಾ ನಿನ್ನ ಬಗ್ಗೇ
ಅಂದರೆ ನೊಂದುಕೊಳ್ಳಬೇಡ
ಸತ್ಯದ ಒಂದು ಮಗ್ಗಲು ಹೀಗೂ ಇರುತ್ತದೆ
ನನಗೆ ವಿಷಾದವಾಗುತ್ತದೆ
ಜೋಡಿಹೆಜ್ಜೆಗಳಲ್ಲಿ ಕಂಡ ಕನಸು
ಗಳೆಲ್ಲಾ ಏಕಾಕಿತನದ ಬಗ್ಗೇ
ಅಂದರೆ ಮುಖ ತಿರುಗಿಸಬೇಡ
ಬದುಕಿನ ಒಂದು ಮುಖ ಹೀಗೂ ಇರುತ್ತದೆ
ನನಗೆ ಬಿಕ್ಕುವಂತಾಗುತ್ತದೆ
ನನಗೂ ಅನಿಸುತ್ತದೆ ಒಂದಲ್ಲಾ ಒಂದು ದಿನ
ನೆನಪುಗಳು ನವೆದು ಕನಸುಗಳು ಕರಗಿ
ಈ ಬದುಕು ಬರಡು ಬೆಂಗಾಡಾಗಿ ಬತ್ತಲ
ವಾಸ್ತವ ಇದಿರು ನಿಂತು ಹೆದರಿಸಿ
ಹೆಜ್ಜೆ ಹಿಮ್ಮುಖವಾದಾಗ
ಎಲ್ಲೆಲ್ಲೂ ನೀನೇ... ನನ್ನಲ್ಲೂ...
ಇರಬೇಕಿತ್ತೆಂದು... ಬೇಕೆಂದು...
ಸಾವಿರದೊಂದು ಕಥೆಗಳಲ್ಲೊಂದ
ದಿನಕ್ಕೊಂದರಂತೆ
ಹೇಳುತ್ತಿರಬೇಕೆಂದು
ಕೇಳುತ್ತಿರಬೇಕೆಂದು
** ** **
No comments:
Post a Comment