ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, April 8, 2012

ಲೇಖನ- "ಸುತ್ತಮುತ್ತ ಚೀನೀ ಭೂತ"


ಬುಧವಾರ, ಏಪ್ರಿಲ್ ೪, ೨೦೧೨ರ "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ

ಇತ್ತೀಚಿನ ದಿನಗಳಲ್ಲಿ ಭಾರತದ ಸುತ್ತಮುತ್ತ ಚೀನೀ ಪ್ರಭಾವ ತೀವ್ರಗತಿಯಲ್ಲಿ ಏರುತ್ತಿದೆ.  ಪಶ್ಚಿಮದಲ್ಲಿ ಪಾಕಿಸ್ತಾನದ ಗ್ವಾಡಾರ್‌ನಲ್ಲಿ ಚೀನೀಯರು ನೌಕಾನೆಲೆಯೊಂದನ್ನು ನಿರ್ಮಿಸಿದ್ದಾರೆ, ಪೂರ್ವದಲ್ಲಿ ಬಾಂಗ್ಲಾದೇಶದ ಚಿಟ್ಟಗಾಂಗ್‌ನಲ್ಲಿ ಆರ್ಥಿಕ ಹಾಗೂ ಸಾಮರಿಕ ಮಹತ್ವದ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ, ಮಿಯಾನ್ಮಾರ್‌ನ ಸಿಟ್ವೇಯಲ್ಲಿ ಬಂದರೊಂದನ್ನು ನಿರ್ಮಿಸಿದ್ದಾರೆ, ಮಿಯಾನ್ಮಾರ್‌ಗೇ ಸೇರಿದ ಕೋಕೋ ದ್ವೀಪಗಳಲ್ಲಿ ಚೀನೀ ನೌಕಾನೆಲೆ ಈಗಾಗಲೇ ಅಸ್ತಿತ್ವದಲ್ಲಿದೆ, ದಕ್ಷಿಣದಲ್ಲಿ ಶ್ರೀಲಂಕಾದ ಹಂಬನ್‌ತೋಟದಲ್ಲಿ ಬಂದರೊಂದನ್ನು ನಿರ್ಮಿಸುವ ಕಾರ್ಯದಲ್ಲಿ ಚೀನೀಯರು ತೊಡಗಿದ್ದಾರೆ.
ಇವುಗಳ ಜತೆಗೇ ದಕ್ಷಿಣ ಚೈನಾ ಸಮುದ್ರದಲ್ಲಿನ ಹೈನಾನ್ ದ್ವೀಪ ಮತ್ತು ಪರಾಸೆಲ್ ದ್ವೀಪಸಮುಚ್ಚಯದ ವೂಡಿ ದ್ವೀಪದಲ್ಲಿರುವ ಚೀನೀ ನೌಕಾನೆಲೆಗಳನ್ನು ಒಟ್ಟಿಗೆ ಸೇರಿಸಿ String of Pearls (ಮುತ್ತಿನ ಹಾರ) ಎಂಬ ಚಂದದ ಹೆಸರಿನಿಂದ ಕರೆಯುವ ವಾಡಿಕೆಯನ್ನು ಪಶ್ಚಿಮದ ವಿದ್ವಾಂಸರು ಮತ್ತು ಅವರನ್ನು ಅನುಕರಿಸುವ ಭಾರತೀಯ ವಿದ್ವಾಂಸರು ಕಳೆದ ಆರೇಳು ವರ್ಷಗಳಿಂದ ಬೆಳೆಸಿಕೊಂಡಿದ್ದಾರೆ.  ಆದರೆ ಈ ಚೀನೀ ನೆಲೆಗಳ ಸ್ವರೂಪ ಮತ್ತು ಉದ್ದೇಶಗಳ ಆಧಾರದ ಮೇಲೆ ಇವುಗಳನ್ನು "ಮುತ್ತುಗಳು" ಎಂದು ಹೆಸರಿಸುವುದು ಹಾಸ್ಯಾಸ್ಪದ.  ಮುಂದೊಮ್ಮೆ ಭಾರತ ಮತ್ತು ಚೈನಾಗಳ ನಡುವೆ ಯುದ್ಧವೇನಾದರೂ ಸಂಭವಿಸಿದರೆ ಅದು ೧೯೬೨ರಲ್ಲಾದಂತೆ ಹಿಮಾಲಯದ ಗಡಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ.  ಬದಲಾಗಿ, ಭಾರತದ ಸುತ್ತಲೂ ಹರಡಿಕೊಂಡಿರುವ ತನ್ನೀ ನೆಲೆಗಳಿಂದ ಭಾರತದ ಮೂರೂ ಕಡೆಯ ಸಾಗರತೀರಗಳಿಗೆ ತೀವ್ರತಮ ಅಪಾಯವೊಡ್ಡಲು ಅಂದರೆ ಭಾರತವನ್ನು ಮಾರಣಾಂತಿಕವಾಗಿ 'ಕುಟುಕಲು' ಚೈನಾಗೆ ಅನುಕೂಲವಾಗುತ್ತದೆ!  ಈ ಅಪಾಯದ ಆಧಾರದ ಮೇಲೆ ಚೀನೀ ನೆಲೆಗಳಿಗೆ ಅನ್ವರ್ಥವಾದ ಹೆಸರೆಂದರೆ "ಕುಟುಕುಕೊಂಡಿಗಳು" ಮತ್ತು ಇವುಗಳನ್ನು ಒಟ್ಟಿಗೆ ಸೇರಿಸಿ String of Stings (ಕುಟುಕುಕೊಂಡಿಗಳ ಹಾರ) ಎಂದು ಕರೆಯುವುದು ಎಲ್ಲ ರೀತಿಯಿಂದಲೂ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ.
ಈ ಕುಟುಕುಕೊಂಡಿಗಳಲ್ಲಿ ಮುಖ್ಯವಾದುವುಗಳನ್ನು ಚೈನಾ ಗಳಿಸಿಕೊಂಡ ಬಗೆ ಮತ್ತು ಅದರಲ್ಲಿ ನಮ್ಮ ಬೇಜವಾಬ್ದಾರೀ ನಡವಳಿಕೆಯನ್ನು ಸ್ವಲ್ಪ ಪರಿಶೀಲಿಸೋಣ.
ಮೂಲತಃ ಚೈನಾ ಮತ್ತು ಪಾಕಿಸ್ತಾನಗಳ ನಡುವೆ ನೇರ ಭೂಸಂಪರ್ಕ ಇರಲಿಲ್ಲ.  ಆದರೆ ೧೯೪೭-೪೮ರ ಪ್ರಥಮ ಕಶ್ಮೀರ ಯುದ್ಧದಲ್ಲಿ ಕಶ್ಮೀರದ ಪಶ್ಚಿಮೋತ್ತರ ಭಾಗದ ಮೇಲೆ ಪಾಕಿಸ್ತಾನ ಹತೋಟಿ ಸ್ಥಾಪಿಸಿದಾಗ ಮತ್ತು ಅದನ್ನು ತೆರವುಗೊಳಿಸಲು ಜನವರಿ ೧, ೧೯೪೯ರ ಕದನವಿರಾಮದ ನಂತರ ಭಾರತ ಅಕ್ಷರಷಃ ಯಾವುದೇ ಪ್ರಯತ್ನ ಮಾಡದಿದ್ದಾಗ ಆ ಪ್ರದೇಶದ ಮೂಲಕ ಪಾಕಿಸ್ತಾನ ಚೈನಾದ ಜತೆ ಭೂಸಂಪರ್ಕ ಸಾಧಿಸಿತು.  ಐವತ್ತರ ದಶಕದಲ್ಲಿ ಕಶ್ಮೀರದ ಪೂರ್ವೋತ್ತರ ಭಾಗವಾದ ಲದಾಖ್‌ನ ಮೇಲೆ ಚೀನೀಯರು ಹತೋಟಿ ಸ್ಥಾಪಿಸಿ ಎರಡೂ ದೇಶಗಳ ನಡುವೆ ಸಂಬಂಧಗಳು ತೀವ್ರಗತಿಯಲ್ಲಿ ಕಲುಷಿತಗೊಳ್ಳತೊಡಗಿದಾಗಲಾದರೂ ಪಾಕಿಸ್ತಾನ ಮತ್ತು ಚೈನಾಗಳ ನಡುವೆ ಭೂಸಂಪರ್ಕ ಮುಂದೊಮ್ಮೆ ಭಾರತಕ್ಕೆ ಒಡ್ಡಬಹುದಾದ ಅಪಾಯವನ್ನು ನೆಹರೂ ಸರಕಾರ ಮನಗಾಣದೇ ಹೋದದ್ದು ದುರಂತ.  ೧೯೬೨ರ ಭಾರತ - ಚೈನಾ ಯುದ್ಧವಾದ ಎರಡೇ ತಿಂಗಳಲ್ಲಿ ಚೈನಾ ಮತ್ತು ಪಾಕಿಸ್ತಾನ ತಮ್ಮ ನಡುವಿನ ಗಡಿಯನ್ನು ಅಧಿಕೃತವಾಗಿ ಗುರುತಿಸಿ ಮಾನ್ಯ ಮಾಡುವ ಒಪ್ಪಂದವೊಂದಕ್ಕೆ ಸಹಿ ಹಾಕಿ ದೂರಗಾಮೀ ಮಿತ್ರತ್ವಕ್ಕೆ ನಾಂದಿ ಹಾಡಿದವು.  ನಂತರ ಜಿಯಾ-ಉಲ್-ಹಖ್ ಕಾಲದಲ್ಲಿ ಬಲೂಚಿಸ್ತಾನದ ಗ್ವಾಡಾರ್ ಬಂದರನ್ನು ಸೌದಿ ಅರೇಬಿಯಾದ ಸಹಕಾರದಿಂದ ಅಭಿವೃದ್ಧಿಪಡಿಸಲು ಪಾಕಿಸ್ತಾನ ಆರಂಭಿಸಿದರೂ ಅನತೀಕಾಲದಲ್ಲೇ ಅರಬ್ಬರು ಅಲ್ಲಿಂದ ಮಾಯವಾಗಿ ಅವರ ಸ್ಥಾನದಲ್ಲಿ ಚೀನೀಯರು ತುಂಬಿಕೊಂಡರು.  ಈಗಲ್ಲಿ ಚೀನೀಯರ ಚಟುವಟಿಕೆ ಅದೆಷ್ಟು ಮುಂದುವರಿದಿದೆಯೆಂದರೆ ಅವರೀಗ ಚೈನಾವನ್ನು ಅರಬ್ಬೀ ಸಮುದ್ರಕ್ಕೆ ಜೋಡಿಸುವ ರೈಲುಹಾದಿಯನ್ನು ನಿರ್ಮಿಸುವ ಸಾಹಸಕ್ಕೆ ಕೈಹಾಕಿದ್ದಾರೆ!
ಪಾಕ್ ಆಕ್ರಮಿತ ಕಶ್ಮೀರದ ಗಿಲ್ಗಿಟ್ - ಬಾಲ್ಟಿಸ್ತಾನದ ದುರ್ಗಮ ಪರ್ವತ ಪ್ರದೇಶದಲ್ಲಿ ಚೈನಾ ಮತ್ತು ಪಾಕಿಸ್ತಾನಗಳನ್ನು ಸಂಪರ್ಕಿಸುವ "ಕಾರಾಕೊರಂ ಹೆದ್ದಾರಿ"ಯನ್ನು ಚೀನೀಯರು ನಾಲ್ಕು ದಶಕಗಳ ಹಿಂದೆಯೇ ನಿರ್ಮಿಸಿದರಷ್ಟೇ.  ಎಂಬತ್ತರ ದಶಕದಲ್ಲಿ ಪರಮಾಣು ಅಸ್ತ್ರಕ್ಕೆ ಅಗತ್ಯವಾದ ಪರಿಕರಗಳು ಚೈನಾದಿಂದ ಪಾಕಿಸ್ತಾನಕ್ಕೆ ಹರಿದುಬಂದದ್ದು ಮತ್ತು ೧೯೮೭ರಲ್ಲಿ ಪಾಕಿಸ್ತಾನದ ಮೊತ್ತಮೊದಲ ಪರಮಾಣು ಅಸ್ತ್ರ ಪರೀಕ್ಷೆಗೆಂದು ಚೈನಾದ ಲಾಪ್‌ನಾರ್‌ಗೆ ರಹಸ್ಯವಾಗಿ ಸಾಗಿಸಲ್ಪಟ್ಟದ್ದು ಈ ಮಾರ್ಗದ ಮೂಲಕ.  ಈಗ ಚೀನೀಯರು ನಿರ್ಮಿಸಹೊರಟಿರುವ ರೈಲುಹಾದಿ ಈ ಕಾರಾಕೊರಂ ಹೆದ್ದಾರಿಗೆ ಹೊಂದಿಕೊಂಡಂತೇ ಸಾಗುತ್ತದೆ.
ಪಶ್ಚಿಮ ಚೈನಾದ ಕಾಶ್‌ಗರ್‌ನಿಂದ ಅರಬ್ಬೀ ಸಮುದ್ರತೀರದಲ್ಲಿನ ಗ್ವಾಡಾರ್ ಬಂದರಿಗೆ ಸಂಪರ್ಕ ಕಲ್ಪಿಸುವ ಈ ರೈಲುಹಾದಿ ಕೇವಲ ಆರ್ಥಿಕ ಮಹತ್ವದ್ದು ಎಂದು ಚೈನಾ ಹೇಳುತ್ತಿದೆ.  ಪಶ್ಚಿಮ ಏಶಿಯಾದ ತೈಲರಾಷ್ಟ್ರಗಳಿಂದ ಚೈನಾದ ಪೂರ್ವತೀರದ ಬಂದರುಗಳಿಗೆ ಜಲಮಾರ್ಗದಲ್ಲಿ ತೈಲ ಸಾಗಿಸಲು ಈಗ ಇಪ್ಪತ್ತೊಂದು ದಿನಗಳು ಬೇಕಾಗುತ್ತವೆ.  ಆದರೆ ಈ ರೈಲುಹಾದಿ ಪೂರ್ಣಗೊಂಡ ನಂತರ ಈ ತೈಲ ಸಾಗಾಟಕ್ಕೆ ತಗಲುವ ಕಾಲ ಕೇವಲ ನಲವತ್ತೆಂಟು ಗಂಟೆಗಳು!  ಈ ದೃಷ್ಟಿಯಿಂದ ಈ ರೈಲುಹಾದಿ ಚೀನೀಯರಿಗೆ ಆರ್ಥಿಕವಾಗಿ ಅತ್ಯಂತ ಅನುಕೂಲಕರ ಎಂಬುದು ನಿಜವಾದರೂ ಅದರ ಸಾಮರಿಕ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ.  ಭಾರತ ಮತ್ತು ಚೈನಾಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿದ ಪಕ್ಷದಲ್ಲಿ ಚೈನಾ ತನ್ನ ಸೈನಿಕರನ್ನು ತ್ವರಿತಗತಿಯಲ್ಲಿ ಅರಬ್ಬೀ ಸಮುದ್ರತೀರಕ್ಕೆ ಕಳುಹಿಸಿ ಭಾರತದ ಪಶ್ಚಿಮ ತೀರಕ್ಕೆ ಅಪಾಯವೊಡ್ಡಲು ಈ ರೈಲುಹಾದಿ ಸಹಕಾರಿಯಾಗಬಲ್ಲುದು.
ಇನ್ನು ಪೂರ್ವದತ್ತ ತಿರುಗೋಣ.
ಅಂಡಮಾನಿನ ಉತ್ತರದಲ್ಲಿದ್ದ ಎರಡು ಪುಟ್ಟ ಕೋಕೋ ದ್ವೀಪಗಳು ತನಗೆ ಸೇರಬೇಕೆಂದು ಮಿಯಾನ್ಮಾರ್ (ಹಿಂದಿನ ಬರ್ಮಾ) ಐವತ್ತರ ದಶಕದ ಆರಂಭದಲ್ಲಿ ವಾದಿಸಿತು.  ಆಧಾರ ತೋರಿಸಿ ಎಂದು ನೆಹರೂ ಕೇಳಿದಾಗ ಮಿಯಾನ್ಮಾರಿಗಳು ಮುಂದೆ ಮಾಡಿದ್ದು ಒಂದೂವರೆ ಶತಮಾನಗಳ ಹಿಂದೆ ಆ ದ್ವೀಪಗಳಲ್ಲಿ ದಕ್ಷಿಣ ಮಿಯಾನ್ಮಾರ್‌ನ ಹಂಪಾವದೀ ಜಿಲ್ಲೆಯ ರೆವಿನ್ಯೂ ಅಧಿಕಾರಿಗಳು ತೆರಿಗೆ ಸಂಗ್ರಹಿಸಿದ್ದರು ಎನ್ನಲಾದ ದಾಖಲೆ.  ಅದನ್ನು ಮನ್ನಿಸಿದ ಶಾಂತಿದೂತ ನೆಹರೂ ಆ ದ್ವೀಪಗಳನ್ನು ಮಿಯಾನ್ಮಾರ್‌ಗೆ ಒಪ್ಪಿಸಿದರು.  ಆನಂತರ ಮಿಯಾನ್ಮಾರ್ ಆ ದ್ವೀಪಗಳನ್ನು ಚೈನಾಗೆ ಗುತ್ತಿಗೆಗೆ ಕೊಟ್ಟು ಅವರಲ್ಲಿ ನೌಕಾ ನೆಲೆಗಳನ್ನು ನಿರ್ಮಿಸಿದ್ದಾರೆ.  ಜತೆಗೇ ಹಿಂದುಳಿದ ಮಿಯಾನ್ಮಾರ್‌ನತ್ತ ಭಾರತ ನಿರ್ಲಕ್ಷ ತೋರಿದಾಗ ಚೀನೀಯರು ಆ ದೇಶಕ್ಕೆ ಅಗಾಧ ಆರ್ಥಿಕ ನೆರವು ನೀಡಿ ಮಿಯಾನ್ಮಾರಿಗಳ ವಿಶ್ವಾಸ ಗಳಿಸಿ ಆ ದೇಶದ ಬಂಗಾಳ ಕೊಲ್ಲಿ ತೀರದ ಸಿಟ್ವೇಯಲ್ಲಿ ಬಂದರೊಂದನ್ನು ನಿರ್ಮಿಸುವ ಅವಕಾಶವನ್ನು ಗಳಿಸಿಕೊಂಡರು.  ಈಗ ಮಿಯಾನ್ಮಾರ್‌ನ ನೆಲದ ಮೂಲಕ ಚೈನಾವನ್ನು ಬಂಗಾಳ ಕೊಲ್ಲಿಯ ತೀರಕ್ಕೆ ಸಂಪರ್ಕಿಸುವ ರೈಲುಹಾದಿ ನಿರ್ಮಿಸುವಲ್ಲಿ ಚೀನೀಯರು ಕಾರ್ಯನಿರತರಾಗಿದ್ದಾರೆ.  ಈ ರೈಲುಹಾದಿ ಪೂರ್ಣವಾದಾಗ ಚೈನಾ ತನ್ನ ಯುನಾನ್ ಪ್ರಾಂತ್ಯದಿಂದ ಸಿಟ್ವೇ ಬಂದರಿಗೆ ಮತ್ತು ಅಲ್ಲಿಂದ ಬಂಗಾಳಕೊಲ್ಲಿಯ ಕೋಕೋ ದ್ವೀಪಗಳಲ್ಲಿರುವ ತನ್ನ ನೆಲೆಗೆ ಸೈನಿಕರನ್ನೂ, ಯುದ್ಧಸಾಮಗ್ರಿಗಳನ್ನೂ ಒಂದೇ ದಿನದಲ್ಲಿ ಸಾಗಿಸಬಹುದು!
ಇದೆಲ್ಲದರ ಅರ್ಥ- ಮುಂದೊಮ್ಮೆ ಭಾರತ ಮತ್ತು ಚೈನಾಗಳ ನಡುವೆ ಯುದ್ಧವೇನಾದರೂ ಸಂಭವಿಸಿದರೆ ಅದು ಹಿಮಾಲಯ ಗಡಿಗಳಿಂದಾಚೆಗೆ ಹಬ್ಬಿ ಪಾಕಿಸ್ತಾನದ ಗ್ವಾಡಾರ್ ಮತ್ತು ಮಿಯಾನ್ಮಾರ್‌ನ ಕೋಕೋ ದ್ವೀಪಗಳಿಂದ ಹೊರಟ ಚೀನೀ ಯುದ್ಧನೌಕೆಗಳು ಪೂರ್ವ ಪಶ್ಚಿಮಗಳೆರಡರಲ್ಲೂ ನಮ್ಮ ಕಡಲತೀರಗಳಿಗೆ ಬೆದರಿಕೆ ಒಡ್ಡುತ್ತವೆ.  ಗಿಲ್ಗಿಟ್ - ಬಾಲ್ಟಿಸ್ತಾನ್‌ಗಳ ಮೇಲೆ ಪಾಕಿಸ್ತಾನದ ಆಕ್ರಮಣವನ್ನು ತೆರವುಗೊಳಿಸದ ಹಾಗೂ ಕೋಕೋ ದ್ವೀಪಗಳನ್ನು ಮಿಯಾನ್ಮಾರ್‌ಗೆ ಒಪ್ಪಿಸುವ ಎರಡು ಬೇಜವಾಬ್ದಾರೀ ನಿರ್ಣಯಗಳು ಮುಂದೊಮ್ಮೆ ನಮ್ಮ ದೇಶಕ್ಕೆ ಈ ಬಗೆಯ ಅಪಾಯವನ್ನೊಡ್ಡಬಹುದೆಂಬ ಅರಿವು ಅಂದಿನ ನಮ್ಮ ಸರಕಾರಕ್ಕಿರಲಿಲ್ಲ ಎನ್ನುವುದು ನಮ್ಮ ದುರಾದೃಷ್ಟ.  ನನಗೆ ತಿಳಿದಂತೆ ವಿಶ್ವದ ಇನ್ಯಾವ ದೇಶದ ನಾಯಕರೂ ರಾಷ್ಟ್ರದ ಸುರಕ್ಷತೆಯ ವಿಷಯದಲ್ಲಿ ಈ ಬಗೆಯ ಬೇಜವಾಬ್ದಾರಿತನವನ್ನು ಪ್ರದರ್ಶಿಸಿಲ್ಲ.
ಈ ವಲಯದಲ್ಲಿ ಪ್ರಭಾವವನ್ನು ವೃದ್ಧಿಸಿಕೊಂಡು, ಭಾರತದ ಸುತ್ತಲೂ ಕುಟುಕುಕೊಂಡಿಗಳ ಹಾರವನ್ನು ನಿರ್ಮಿಸಿ, ಈ ದೇಶವನ್ನು ಸೈನಿಕವಾಗಿ ಸುತ್ತುವರೆಯುವ ಯೋಜನೆಯಲ್ಲಿ ಯಶಸ್ಸು ಗಳಿಸುತ್ತಿದ್ದಂತೇ ಭಾರತದ ಬಗ್ಗೆ ಚೈನಾದ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಗಳು ಕಾಣಬರುತ್ತಿವೆ.  ಹದಿಮೂರು ವರ್ಷಗಳ ಹಿಂದೆ ಕಾರ್ಗಿಲ್ ಸಮರದ ಸಂದರ್ಭದಲ್ಲಿ ಪಾಕಿಸ್ತಾನವನ್ನು ಚೈನಾ ಬೆಂಬಲಿಸಲಿಲ್ಲ.  ಬದಲಿಗೆ, ತನ್ನ ಸೈನಿಕರನ್ನು ಕಾರ್ಗಿಲ್‌ನಿಂದ ಹಿಂದಕ್ಕೆ ಕರೆಸಿಕೊಂಡು ಕಶ್ಮೀರದಲ್ಲಿ ಶಾಂತಿಸ್ಥಾಪನೆಗೆ ದಾರಿ ಮಾಡಿಕೊಡಬೇಕೆಂದು ಇಸ್ಲಾಮಾಬಾದ್‌ಗೆ ಬುದ್ಧಿಮಾತು ಹೇಳಿತ್ತು.  ಆದರೀಗ ಕಶ್ಮೀರಕ್ಕೆ ಸಂಬಂಧಿಸಿದಂತೆ ಚೈನಾ ಸಾರಾಸಗಟಾಗಿ ಪಾಕಿಸ್ತಾನದ ಪರ ನಿಂತಿದೆ.  ಜತೆಗೇ ೨೦೦೯ರ ಬೇಸಗೆಯಿಂದೀಚೆಗೆ ಅದರ ಸೈನಿಕರು ಲದಾಖ್ ಗಡಿಯಲ್ಲಿ ಭಾರತದ ಪ್ರದೇಶದೊಳಗೆ ಅತಿಕ್ರಮಿಸುವುದು ಅಸ್ವಾಭಾವಿಕ ಎನ್ನುವ ಮಟ್ಟಿಗೆ ನಡೆಯುತ್ತಿದೆ.  ಪೂರ್ವದ ಅರುಣಾಚಲ ಪ್ರದೇಶದಲ್ಲಿ ತನ್ನ ಸಾಮರಿಕ ಸ್ಥಿತಿಯನ್ನು ಭಾರತ ಎಂಬತ್ತರ ದಶಕದಿಂದೀಚೆಗೆ ಗಣನೀಯವಾಗಿ ಉತ್ತಮಗೊಳಿಸಿಕೊಂಡಿರುವುದರಿಂದ ಅಲ್ಲಿ ತನ್ನ ಬೇಳೆ ಬೇಯದು ಎಂದರಿತ ಚೈನಾ ಪಶ್ಚಿಮದ ಲದಾಖ್‌ನಲ್ಲಿ ಅಂದರೆ ಭಾರತ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲದ ಪ್ರದೇಶದಲ್ಲಿ ಒತ್ತಡವನ್ನು ಅಧಿಕಗೊಳಿಸಿ ನವದೆಹಲಿಯ ನೆಮ್ಮದಿಯನ್ನು ಕೆಡಿಸುವ ಪ್ರಯತ್ನ ಮಾಡುತ್ತಿದೆ.  ಈ ಬೆಳವಣಿಗೆಗಳು ಭವಿಷ್ಯದಲ್ಲಿ ಭಾರತ ಎದುರಿಸಬೇಕಾದ ದೊಡ್ಡದೊಂದು ಅಪಾಯದ ಮುನ್ಸೂಚನೆಯಂತೆ ಕಾಣುತ್ತಿವೆ.  ಕಶ್ಮೀರದಲ್ಲಿ ಮೂರೂ ಕಡೆ ಪಾಕಿಸ್ತಾನೀ ಮತ್ತು ಚೀನೀ ಸೇನೆಗಳೆರಡರ ನಡುವೆ ಇಕ್ಕಳದಲ್ಲಿ ಸಿಲುಕುವಂತೆ ಸಿಲುಕಿಕೊಂಡಿರುವ ನಮ್ಮ ಸೇನೆಗೆ ಏಕಕಾಲದಲ್ಲಿ ಎರಡು ರಣಾಂಗಣಗಳಲ್ಲಿ ಸೆಣಸುವ ವಿಷಮ ಪರಿಸ್ಥಿತಿ ಒದಗಬಹುದೆಂಬ ಕಳವಳವನ್ನು ಮಾಜೀ ಸೇನಾ ದಂಡನಾಯಕ ಜನರಲ್ ದೀಪಕ್ ಕಪೂರ್ ಮತ್ತು ಮಾಜೀ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಬ್ರಜೇಶ್ ಮಿಶ್ರಾ ವ್ಯಕ್ತ ಪಡಿಸಿದ್ದಾರೆ.
ಅಂತರರಾಷ್ಟ್ರೀಯ ಪರಿಸ್ಥಿತಿಯೂ ಚೈನಾಗೆ ಅನುಕೂಲಕರವಾಗಿರುವಂತೆ ಕಂಡುಬರುತ್ತಿದೆ.  ಕಳೆದೊಂದು ದಶಕದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಗ್ರಹಿಸುವುದನ್ನಷ್ಟೇ ತನ್ನ ವಿದೇಶನೀತಿಯ ಪ್ರಮುಖ ಗುರಿಯಾಗಿಸಿಕೊಂಡು ತನ್ನ ಚಟುವಟಿಕೆಗಳನ್ನು ಮೆಡಿಟರೇನಿಯನ್ ಸಮುದ್ರದಿಂದ ಪಾಮೀರ್‌ವರೆಗಷ್ಟೇ ಸೀಮಿತಗೊಳಿಸಿಕೊಂಡು ಉಳಿದೆಡೆ ನಿರಾಸಕ್ತವಾಗಿರುವ ಅಮೆರಿಕಾ ದಕ್ಷಿಣ ಏಶಿಯಾ ಮತ್ತು ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಏರುತ್ತಿರುವ ಚೀನೀ ವರ್ಚಸ್ಸನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸ್ಥಿತಿಯಲ್ಲಿಲ್ಲ.  ಇದು ಚೈನಾಗೆ ಒಂದು ವರದಾನ.
***     ***     ***

No comments:

Post a Comment