ಅರವತ್ತರ ದಶಕದಲ್ಲಿ ಅಂತರರಾಷ್ಟ್ರೀಯ ರಂಗದಲ್ಲಿ ತಲೆಯೆತ್ತಿದ ಸರಕಾರೀ ಪ್ರಾಯೋಜಿತ ಭಯೋತ್ಪಾದನೆ ಅಮೆರಿಕಾ ಮತ್ತು ಸೋವಿಯೆತ್ ಯೂನಿಯನ್‌ಗಳ ನಡುವಿನ ಶೀತಲ ಸಮರದ ಒಂದು ಕರಾಳ ಉಪವಸ್ತು. ವೈರಿಯನ್ನು ನೇರವಾಗಿ ಎದುರಿಸದೇ ತನ್ನ ಅನಾಮಿಕ ಬಂಟರ ಮೂಲಕ ಅವನಿಗೆ ನೋವಾಗುವಲ್ಲಿ ಆಗಾಗ ಕುಟುಕಿ ಕಂಗೆಡಿಸಲು ಆ ಎರಡು ದೈತ್ಯ ರಾಷ್ಟ್ರಗಳು, ಮುಖ್ಯವಾಗಿ ಸೋವಿಯೆತ್ ಯೂನಿಯನ್, ಹುಡುಕಿಕೊಂಡ ಅನೀತಿಯುತ ಸಮರತಂತ್ರದ ಪರಿಣಾಮವಾಗಿ ಉದ್ಭವವಾದ ಈ ಪಿಡುಗು ವಿಶ್ವವನ್ನು ಕಾಡತೊಡಗಿ ಅರ್ಧ ಶತಮಾನವೇ ಆಗುತ್ತಿದೆ. ಈ ಆವಧಿಯನ್ನು ಭಯೋತ್ಪಾದಕರ ಹಿನ್ನೆಲೆ ಮತ್ತವರ ಬೆಂಬಲಿಗ ಸರಕಾರಗಳ ನೀತಿ ಮತ್ತು ಉದ್ದೇಶಗಳ ಆಧಾರದ ಮೇಲೆ ನಾನು ನಾಲ್ಕು ಹಂತಗಳಾಗಿ ವಿಭಾಗಿಸುತ್ತೇನೆ.
ಮೊದಲ ಹಂತ: ೧೯೪೮ - ೧೯೭೯
ಇಸ್ರೇಲ್‌ನ ಸ್ಥಾಪನೆಯಿಂದಾಗಿ ಸಂತ್ರಪ್ತರಾದ ಲಕ್ಷಾಂತರ ಪ್ಯಾಲೆಸ್ತೈನ್ ಅರಬ್ಬರ ರೊಚ್ಚು ಹಾಗೂ ಆ ಯೆಹೂದೀ ರಾಷ್ಟ್ರವನ್ನುನೇರವಾಗಿ ರಣಾಂಗಣದಲ್ಲಿ ಎದುರಿಸಲಾಗದ ಅವರ ಅಸಹಾಯಕತೆ ಮೊದಮೊದಲು ಇಸ್ರೇಲ್ ವಿರುದ್ಧದ ಅರಬ್ ಭಯೊತ್ಪಾದಕ ಗುಂಪುಗಳ ಉಗಮಕ್ಕೆ ದಾರಿ ಮಾಡಿಕೊಟ್ಟಿತು. ಈ ಗುಂಪುಗಳಿಗೆ ಬೆಂಬಲವಾಗಿ ಮಧ್ಯಪ್ರಾಚ್ಯದ ಸರಿಸುಮಾರು ಎಲ್ಲ ತೈಲಸಂಪನ್ನ ಅರಬ್ ದೇಶಗಳೂ ಇದ್ದವು. ತಾವೇ ಕಾಲು ಕೆರೆದು ಆರಂಭಿಸಿದ ೧೯೬೭ರ ಆರು ದಿನಗಳ ಯುದ್ಧ ಮತ್ತು ೧೯೭೪ರ ಯೋಮ್ ಕಿಪ್ಪುರ್ ಯುದ್ಧಗಳಲ್ಲಿ ಇಸ್ರೇಲ್‌ನಿಂದ ಸೋತು ಸುಣ್ಣವಾದ ಈಜಿಪ್ಟ್, ಸಿರಿಯಾ, ಜೋರ್ಡಾನ್ ದೇಶಗಳು ಮತ್ತವರ ಬೆಂಬಲಿಗ ಅರಬ್ ರಾಷ್ಟ್ರಗಳು ತಮ್ಮ ಯೆಹೂದಿ ಶತ್ರುವನ್ನು ನೆಮ್ಮದಿಗೆಡಿಸಲು ಈ ಗುಂಪುಗಳ ಮೊರೆಹೊಕ್ಕವು.
ಅರಬ್ ಭಯೋತ್ಪಾದಕ ಸಂಘಟನೆಗಳ ಕೆಂಗಣ್ಣು ಅನತೀಕಾಲದಲ್ಲಿಯೇ ಇಸ್ರೇಲ್‌ಗೆ ಬೆಂಬಲ ನೀಡುತ್ತಿದ್ದ ಪಶ್ಚಿಮದ ರಾಷ್ಟ್ರಗಳು, ಮುಖ್ಯವಾಗಿ ಅಮೆರಿಕಾದತ್ತಲೂ ತಿರುಗಿದ್ದು ಸಹಜವೇ ಆಗಿತ್ತು. ಹೀಗೇ ಇಸ್ರೇಲ್ ವಿರೋಧೀ ಭಯೋತ್ಪಾದಕ ಸಂಘಟನೆಗಳು ಅಮೆರಿಕಾವನ್ನೂ ತಮ್ಮ ವಿರೋಧಿಯೆಂದು ಬಗೆದದ್ದು ಸೋವಿಯೆತ್ ಯೂನಿಯನ್‌ಗೆ ಹಲವು ಬಗೆಯಲ್ಲಿ ವರದಾನವಾಗಿ, ಈ ಸಂಘಟನೆಗಳನ್ನು ಪ್ರೋತ್ಸಾಹಿಸುವುದು ಆ ಕಮ್ಯೂನಿಸ್ಟ್ ದೈತ್ಯನ ವಿದೇಶನೀತಿಯ ಒಂದು ಪ್ರಮುಖ ಅಂಗವಾಯಿತು. ಇಸ್ರೇಲ್-ವಿದೋಧಿ ಅರಬ್ ಭಯೋತ್ಪಾದನೆಯ ಜತೆ ಸೋವಿಯೆತ್ ಯೂನಿಯನ್‌ನ ಪಶ್ಚಿಮ-ವಿದೋಧಿ ವಿದೇಶನೀತಿಯ ಅಪವಿತ್ರ ವಿವಾಹದಿಂದಾಗಿ ಮಾರ್ಕ್ಸಿಸ್ಟ್ ಭಯೋತ್ಪಾದಕರೂ ಸೃಷ್ಟಿಯಾದರು. ಈ ಭಯೋತ್ಪಾದಕ ಗುಂಪುಗಳಿಗೆ ಧನಸಹಾಯ ಮತ್ತು ಮಾರಕಾಸ್ತ್ರಗಳ ಪೂರೈಕೆಯ ಜತೆಗೆ ಭಯೋತ್ಪಾದನಾ ಚಟುವಟಿಕೆಗಳ ತರಬೇತಿ ನೀಡುವುದನ್ನು ಸೋವಿಯೆತ್ ಗೂಢಚಾರ ಸಂಸ್ಥೆ ಕೆಜಿಬಿ (ಕೊಮಿತೆತ್ ಗೋಸುದರ್ಸ್ತ್ ವೆನ್ನೋನಿ ಬಿಝೋ ಪಾಸ್ನೋಸ್ತಿ) ಮತ್ತು ಆಗಿನ ಪೂರ್ವ ಜರ್ಮನಿಯ ಗೂಢಚಾರ ಸಂಸ್ಥೆ ಸ್ತಾಸಿ ವ್ಯಾಪಕವಾಗಿ ರೂಢಿಸಿಕೊಂಡವು. ಈ ತರಬೇತಿ ಕೇಂದ್ರಗಳು ಹಿಂದಿನ ದಕ್ಷಿಣ ಯೆಮೆನ್ ಮತ್ತು ಗಢಾಫಿಯ ಲಿಬಿಯಾಗಳಲ್ಲಿದ್ದವು. ಹೀಗೆ ವಿಶ್ವದ ಅಗ್ರಶಕ್ತಿಯೊಂದರ ಸಕ್ರಿಯ ಸಹಕಾರದಿಂದಾಗಿ ಈ ಅರಬ್ ಮತ್ತು ಮಾರ್ಕ್ಸಿಸ್ಟ್ ಭಯೋತ್ಪಾದಕರು ಪಶ್ಚಿಮ ಯೂರೋಪ್, ಲ್ಯಾಟಿನ್ ಅಮೆರಿಕಾ, ಈಶಾನ್ಯ ಆಫ್ರಿಕಾ ಮತ್ತು ಪಶ್ಚಿಮ ಏಶಿಯಾಗಳಲ್ಲಿ ನಡೆಸಿದ ಭಯೋತ್ಪಾದನಾ ಚಟುವಟಿಕೆಗಳು ಶೀತಲ ಸಮರದ ಇತಿಹಾಸದ ಒಂದು ರಕ್ತರಂಜಿತ ಅಧ್ಯಾಯ.
ಎರಡನೆಯ ಹಂತ: ೧೯೭೯ - ೧೯೮೮
ಇತಿಹಾಸದ ಒಂದು ವಿಪರ್ಯಾಸದಂತೆ ಎಪ್ಪತ್ತರ ದಶಕದ ಅಂತ್ಯದಲ್ಲಿ ಮುಸ್ಲಿಂ ಸಂಘಟನೆಗಳು, ಒಟ್ಟಾರೆ ಜಾಗತಿಕ ಮುಸ್ಲಿಂ ಮನಸ್ಸು, ಸೋವಿಯೆತ್ ಯೂನಿಯನ್ ವಿರುದ್ಧ ತಿರುಗಿಬಿದ್ದು ಅಮೆರಿಕಾದ ಮಾಸ್ಕೋ-ವಿರೋಧಿ ನೀತಿಗಳಿಗೆ ಸಹಕಾರ ನೀಡತೊಡಗಿದವು. ಕಾಬೂಲ್‌ನಲ್ಲಿನ ತನ್ನ ಕೈಗೊಂಬೆ ಬಬ್ರಾಕ್ ಕರ್ಮಾಲ್ ಸರಕಾರವನ್ನು ಉಳಿಸಲು ೧೯೭೯ರ ಡಿಸೆಂಬರ್ ಅಂತ್ಯದಲ್ಲಿ ಅಫಘಾನಿಸ್ತಾನವನ್ನು ಪ್ರವೇಶಿಸಿದ ಸೋವಿಯೆತ್ ಸೇನೆಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಲು ಅಮೆರಿಕಾ ಬಳಸಿಕೊಂಡದ್ದು ಇಸ್ಲಾಮನ್ನು. ಧರ್ಮವೇ ಇಲ್ಲದ ಕಮ್ಯೂನಿಸ್ಟರನ್ನು ಅಫಘಾನಿಸ್ತಾನದಲ್ಲಿ ಇರಗೊಟ್ಟರೆ ಅವರು ಆ ದೇಶದಲ್ಲಿ ಇಸ್ಲಾಮನ್ನೇ ನಾಶ ಮಾಡಿಬಿಡುತ್ತಾರೆ, ಇಸ್ಲಾಂ ಉಳಿಯಬೇಕಾದರೆ ರಶಿಯನ್ನರು ಅಫಘಾನಿಸ್ತಾನದಿಂದ ಕಾಲ್ತೆಗೆಯುವಂತೆ ಮಾಡಲೇಬೇಕು ಎಂದು ಅಮೆರಿಕಾ ವಾದಿಸಿದಾಗ ಅದನ್ನು ಒಪ್ಪಿ ಇಸ್ಲಾಮನ್ನು ಉಳಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿ ಮೊರಾಕ್ಕೋದಿಂದ ಹಿಡಿದು ಫಿಲಿಪೀನ್ಸ್‌ವರೆಗೆ ದೂರದೂರದ ದೇಶಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಅಫಘಾನಿಸ್ತಾನಕ್ಕೆ ಬಂದರು. ಈ ಇಸ್ಲಾಂನ ಸೈನಿಕರಿಗೆ ಪಾಕಿಸ್ತಾನದ ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ ಅಮೆರಿಕಾದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ(ಸಿಐಏ)ಯ ಆಫೀಸ್ ಆಫ್ ದ ಟೆಕ್ನಿಕಲ್ ಸರ್ವೀಸಸ್ ಮತ್ತು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ ಏಜೆನ್ಸಿ(ಐಎಸ್‌ಐ)ಯ ನಿರ್ದೇಶನಾಲಯಗಳು ತರಬೇತಿ ನೀಡಿದವು.
ಈ ಒಂಬತ್ತು ವರ್ಷಗಳಲ್ಲಿ ಮುಸ್ಲಿಂ ಕ್ರೋಧ ಸೋವಿಯೆತ್ ಯೂನಿಯನ್‌ನತ್ತ ತಿರುಗಿ ಅಮೆರಿಕಾಗೆ ನೆಮ್ಮದಿಯೆನಿಸಿದರೂ ಆ ಕ್ರೋಧ ವ್ಯಕ್ತವಾದದ್ದು ಅಫಘಾನಿಸ್ತಾನದಲ್ಲಿ ಮಾತ್ರ. ತನ್ನ ಎಲ್ಲೆಯೊಳಗೆ ಅದು ಪ್ರವೇಶಿಸದಂತೆ ಹಾಗೂ ವಿಶ್ವದ ಇತರೆಡೆ ತನ್ನ ಹಿತಾಸಕ್ತಿಗಳ ಮೇಲೆ ಯಾವುದೇ ಭಯೋತ್ಪಾದಕ ಧಾಳಿಗಳಾಗದಂತೆ ನೋಡಿಕೊಂಡದ್ದು ಸೋವಿಯೆತ್ ಸಾಧನೆ. ಇದಕ್ಕೆ ವಿರುದ್ಧವಾಗಿ ಲಿಬಿಯಾದ ಅಧ್ಯಕ್ಷ ಮುವಾಮರ್ ಗಢಾಫಿಯ ಪಶ್ಚಿಮ ವಿರೋಧಿ ನೀತಿಗಳಿಂದಾಗಿ ಅಮೆರಿಕಾ ಮತ್ತು ಬ್ರಿಟನ್‌ಗಳು ಆಗಾಗ ಭಯೋತ್ಪಾದನಾ ಧಾಳಿಗಳನ್ನೆದುರಿಸಿದ್ದುಂಟು. ಅದೇ ದಿನಗಳಲ್ಲಿ ಭಾರತದ ಪಂಜಾಬ್‌ನಲ್ಲಿ ಉಗ್ರಭಯೋತ್ಪಾದನೆಯನ್ನು ಪಾಕಿಸ್ತಾನ ಪ್ರಾಯೋಜಿಸಿತು.
ಮೂರನೆಯ ಹಂತ: ೧೯೮೮ - ೨೦೧೧
ಸರಕಾರೀ ಪ್ರಾಯೋಜಿತ ಭಯೋತ್ಪಾದನೆ ಮತ್ತೊಮ್ಮೆ ಉಗ್ರ ಪಶ್ಚಿಮ-ವಿರೋಧಿಯಾಗಿ ಬೆಳೆದದ್ದು ಮತ್ತು ಅದನ್ನು ಅಡಗಿಸಲು ಪಶ್ಚಿಮದ ರಾಷ್ಟ್ರಗಳು ಪಣತೊಟ್ಟು ಸರಿಸುಮಾರು ಯಶಸ್ವಿಯಾದದ್ದು ಈ ಆವಧಿಯಲ್ಲಿ.
ಒಂಬತ್ತು ವರ್ಷಗಳ ಯುದ್ಧದ ನಂತರ ೧೯೮೮ರಲ್ಲಿ ಸೋವಿಯೆತ್ ಸೇನೆ ಕೊನೆಗೂ ಅಫಘಾನಿಸ್ತಾನದಿಂದ ಕಾಲ್ತೆಗೆದಾಗ ಯುದ್ಧದಿಂದ ಜರ್ಝರಿತವಾಗಿದ್ದ ಆ ನತದೃಷ್ಟ ದೇಶವನ್ನು ಹೇಗಿತ್ತೋ ಹಾಗೇ ಬಿಟ್ಟು ಅಮೆರಿಕನ್ನರು ಓಡಿಹೋದರು. ಅಮೆರಿಕನ್ನರಿಗೆ ಇಸ್ಲಾಮಿನ ಮೇಲೆ ಯಾವ ಪ್ರೀತಿಯೂ ಇಲ್ಲ, ಅವರು ಅಫಘಾನಿಸ್ತಾನದಲ್ಲಿ ಕಾರ್ಯನಿರತರಾಗಿದ್ದದ್ದು ಇಸ್ಲಾಮನ್ನು ಉಳಿಸಲೆಂದಲ್ಲ, ಬದಲಾಗಿ ರಶಿಯನ್ನರು ಹಿಂದೂ ಮಹಾಸಾಗರದತ್ತ ಮುನ್ನುಗ್ಗದಂತೆ ತಡೆದು ತನ್ಮೂಲಕ ಈ ವಲಯದಲ್ಲಿ ತಮ್ಮ ಸೈನಿಕ ಪ್ರಭಾವಕ್ಕೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳುವ ಸ್ವಾರ್ಥಪರ ಹುನ್ನಾರದಿಂದ ಎಂಬುದು ಅಫಘಾನಿಸ್ತಾನದಲ್ಲಿ ಕಾರ್ಯನಿರತರಾಗಿದ್ದ ಇಸ್ಲಾಂನ ಸೈನಿಕರಿಗೆ ಅರಿವಾದದ್ದೇ ಅವರು ಅಮೆರಿಕಾದ ವಿರುದ್ಧ ತಿರುಗಿಬಿದ್ದರು. ಇವರಲ್ಲಿ ಪ್ರಮುಖನಾದವನು ಒಸಾಮಾ ಬಿನ್ ಲಾದೆನ್ ಮತ್ತು ೧೯೮೭ರಲ್ಲಿ ಆತ ಸ್ಥಾಪಿಸಿದ ಅಲ್ ಖಯೀದಾ ಸಂಘಟನೆ ವಿಶ್ವದ ಅತ್ಯಂತ ಘಾತಕ ಭಯೋತ್ಪಾದನಾ ಸಂಘಟನೆಯಾಗಿ ಬೆಳೆದು ನಿಂತದ್ದು ಈಗ ಇತಿಹಾಸ.
ಮೊದಮೊದಲು ಒಂದು ನಿರ್ದಿಷ್ಟ ನೆಲೆಯಿಲ್ಲದ ಸರಕಾರೇತರ ಭಯೋತ್ಪಾದನಾ ಸಂಘಟನೆಯಾಗಿದ್ದ ಅಲ್ ಖಯೀದಾ ಅಧ್ಯಕ್ಷ ಜಾಫರ್ ನಿಮೇರಿಯ ಪತನಾನಂತರ ಶೀಘ್ರಗತಿಯಲ್ಲಿ ಇಸ್ಲಾಮಿಕ್ ಮೂಲಭೂತವಾದದ ತೊಟ್ಟಿಲಾಗಿ ಬದಲಾದ ಸುಡಾನ್‌ನಲ್ಲಿ ಕಾಲೂರಿದರೂ ಅದಕ್ಕೆ ಗಟ್ಟಿಯಾದ ನೆಲೆ ಸಿಕ್ಕಿದ್ದು ತೊಂಬತ್ತರ ದಶಕದ ಮಧ್ಯದಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರದ ಸೂತ್ರಗಳನ್ನು ಹಿಡಿದಾಗ. ಹೀಗೆ ಅಲ್ ಖಯೀದಾ ಸುಡಾನ್ ಮತ್ತು ಅಫಘಾನಿಸ್ತಾನಗಳಲ್ಲಿ ಶಾಶ್ವತ ನೆಲೆ ಮತ್ತು ಪಾಕಿಸ್ತಾನ ಮತ್ತು ಕಶ್ಮೀರಗಳಲ್ಲಿ ಬೆಂಬಲದ ಗೂಡುಗಳನ್ನು ಗಳಿಸಿಕೊಂಡು ತನ್ನ ಮುಂದಿನ ಕರಾಳ ಹಂಚಿಕೆಗಳ ಸೂಚನೆಗಳನ್ನು ಆಗಾಗ ನೀಡತೊಡಗಿದರೂ ಇದ್ಯಾವುದನ್ನೂ ಅಮೆರಿಕಾ ಆಗಲೀ ವಿಶ್ವವಾಗಲೀ ಗಣನೆಗೆ ತೆಗೆದುಕೊಳ್ಳದೇ ಹೋದದ್ದು ದುರಂತ. ಅಲ್ ಖಯೀದಾ ಬೆಳೆದ ಬಗೆ ಒಂದು ತಲೆಮಾರಿನ ಬೇಜವಾಬ್ದಾರಿ ವರ್ತನೆಗೆ ಮುಂದಿನ ತಲೆಮಾರು ತೆರಬೇಕಾದ ಭೀಕರ ಬೆಲೆಗೆ ಒಂದು ಉದಾಹರಣೆ.
ದಶಕದ ಹಿಂದೆ ಸೆಪ್ಟೆಂಬರ್ ೧೧ರ ಮಂಗಳವಾರದ ಆ ನಿರ್ಣಾಯಕ ಬೆಳಗಿನಲ್ಲಿ ಕೇವಲ ಪ್ರಯಾಣಿಕರ ವಿಮಾನಗಳನ್ನೇ ಅಸ್ತ್ರಗಳನ್ನಾಗಿ ಬಳಸಿ ಹಿಂದಿನ ಯಾವುದೇ ಶತ್ರುಗಳಾದ ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್‌ಗಳು ಎಸಗಲಾಗದಿದ್ದಷ್ಟು ಹಾನಿಯನ್ನು ಅಮೆರಿಕಾಗೆ ಅಲ್ ಖಯೀದಾ ಎಸಗಿದ್ದು ಎಲ್ಲರಿಗೂ ತಿಳಿದದ್ದೇ. ಆ ಧಾಳಿಯ ನಂತರ ಎಚ್ಚತ್ತುಕೊಂಡ ಅಮೆರಿಕಾ ತನ್ನ ಗಡಿಯೊಳಗೆ ತೆಗೆದುಕೊಂಡ ಸುರಕ್ಷಾಕ್ರಮಗಳಿಂದ ಹಾಗೂ ಅಫಘಾನಿಸ್ತಾನ ಮತ್ತ್ತು ಇರಾಕಿನಲ್ಲಿ ಕೈಗೊಂಡ ಮಿಲಿಟರಿ ಕಾರ್ಯಾಚರ್ಣೆಗಳು ಮತ್ತು ಆ ಮೂಲಕ ಅಲ್ ಖಯೀದಾ ಮತ್ತದರ ಬೆಂಬಲಿಗರ ಮೇಲೆ ಹೇರಿದ ಒತ್ತಡಗಳಿಂದಾಗಿ ತನ್ನ ನೆಲದ ಮೇಲೆ ಹಾಗೂ ಇತರೆಡೆ ತನ್ನ ಹಿತಾಸಕ್ತಿಗಳ ಮೇಲೆ ಮತ್ತೊಂದು ಘಾತಕ ಧಾಳಿಯಾಗದಂತೆ ನೋಡಿಕೊಂಡಿದೆ
ನಾಲ್ಕನೆಯ ಹಂತ: ೨೦೧೧ರಿಂದೀಚೆಗೆ
ಕಳೆದ ಮೇ ೧ರಂದು ಅಮೆರಿಕಾ ಲಾಡೆನ್‌ನನ್ನು ಅವನ ಅಡಗುದಾಣದಲ್ಲೇ ನಿರ್ಮೂಲಗೊಳಿಸಿ ಅಲ್ ಖಯೀದಾವನ್ನು ನಿರ್ವೀರ್ಯಗೊಳಿಸಿದ ನಂತರ ಹಾಗೂ ಲಿಬಿಯಾದಲ್ಲಿ ಅಧ್ಯಕ್ಷ ಗಢಾಫಿಯ ಪತನಾನಂತರ ಸರಕಾರೀ ಪ್ರಾಯೋಜಿತ ಭಯೋತ್ಪಾದನೆ ವಿಶ್ವರಂಗದಲ್ಲಿ ಅಂತ್ಯವಾಯಿತೆಂಬ ನಂಬಿಕೆ ಕೆಲವೇ ದಿನಗಳಲ್ಲಿ ಹುಸಿಯಾಗಿದೆ. ಇದಕ್ಕೆ ಕಾರಣವಾಗಿ ಎಂಬತ್ತರ ದಶಕದ ಲಿಬಿಯಾದ ವರ್ತನೆಗಳನ್ನು ಮರುಕಳಿಸುವಂತೆ ಮಾಡುತ್ತಿರುವುದು ಇರಾನ್. ಈ ಬೆಳವಣಿಗೆ ಸಮಕಾಲೀನ ಇರಾನ್ ಎದುರಿಸುತ್ತಿರುವ ಎರಡು ಧಾರ್ಮಿಕ-ರಾಜಕೀಯ ಗೊಂದಲಗಳು ಮತ್ತು ಅವುಗಳಿಂದ ಹೊರಬರಲು ತೆಹರಾನ್ ಹುಡುಕಿಕೊಂಡ ಎರಡು ನಕಾರಾತ್ಮಕ ನೀತಿಗಳು ಕಾರಣವಾಗಿವೆ.
ಆಧುನಿಕ ಇರಾನ್‌ನ ರಾಜಕೀಯ ಹಾಗೂ ಸಾಮಾಜಿಕ ದಿಕ್ಕುದೆಸೆಯನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟ ಆಯತೊಲ್ಲಾ ಖೊಮೇನಿ ೧೯೭೯ರ ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬಂದ ನಂತರ ತನ್ನ ದೇಶಕ್ಕೆ ಇಸ್ಲಾಮಿಕ್ ಜಗತ್ತಿನ ನಾಯಕತ್ವ ದೊರಕಿಸಿಕೊಡಲು ಸೌದಿ ಅರೇಬಿಯಾ ಜತೆ ಸೈದ್ಧಾಂತಿಕ ಸಮರಕ್ಕಿಳಿದ. ಆದರೆ ಸುನ್ನಿ ಪ್ರಾಬಲ್ಯದ ಇಸ್ಲಾಮಿಕ್ ಜಗತ್ತಿನಲ್ಲಿ ಶಿಯಾ ಇರಾನ್‌ಗೆ ಮನ್ನಣೆ ಸಿಗದಿದ್ದಾಗ ಇರಾನಿ ನಾಯಕರಿಗೆ ಹೊಳೆದ ಮಾರ್ಗ ಉಗ್ರ ಇಸ್ರೇಲ್-ವಿರೋಧಿ ನೀತಿ. ಈ ನೀತಿಯ ಅಂಗವಾಗಿಯೇ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ, ಪ್ಯಾಲೆಸ್ತೈನ್‌ನಲ್ಲಿ ಹಮಸ್ ಸೇರಿದಂತೆ ಕೆಲವು ಪ್ರಮುಖ ಇಸ್ರೇಲ್-ವಿರೋಧೀ ಭಯೋತ್ಪಾದಕ ಸಂಘಟನೆಗಳಿಗೆ ಇರಾನ್ ಬೆಂಬಲ ನೀಡತೊಡಗಿತು. ಇದರ ಜತೆಗೆ ಇತ್ತೀಚೆಗೆ ಇರಾನ್‌ನ ಅಣ್ವಸ್ತ್ರದ ಬಯಕೆಗೆ ಪಶ್ಚಿಮದ ರಾಷ್ಟ್ರಗಳು, ಮುಖ್ಯವಾಗಿ ಅಮೆರಿಕಾ ಒಡ್ಡುತ್ತಿರುವ ತಡೆಗೆ ಪ್ರತಿಯಾಗಿ ಮುಸ್ಲಿಂ ಜಗತ್ತಿನ ಬೆಂಬಲ ಗಳಿಸಲು ಮತ್ತು ತನ್ನ ಪ್ರತಿಕ್ರಿಯಾಸಾಮರ್ಥ್ಯವನ್ನು ಪ್ರದರ್ಶಿಸಲು ತೆಹರಾನ್ ಭಯೋತ್ಪಾದನಾ ಮಾರ್ಗವನ್ನು ಹಿಡಿದಿದೆ. ಕಳೆದ ಎರಡು ತಿಂಗಳುಗಳಲ್ಲಿ ಏಶಿಯಾದ ಅರ್ಧ ಡಜನ್ ದೇಶಗಳಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಅಥವಾ ಅದರ ವಿಫಲಯತ್ನಕ್ಕೆ ಅದು ಕಾರಣವಾಗಿದೆ. ಫೆಬ್ರವರಿ ೧೩ರಂದು ದೆಹಲಿಯಲ್ಲಿ ಇಸ್ರೇಲಿ ರಾಜತಂತ್ರಜ್ಞೆಯೊಬ್ಬರ ಮೇಲೆ ನಡೆದ ಧಾಳಿ, ಅದೇ ದಿನ ಜಾರ್ಚಿಯಾದ ರಾಜಧಾನಿ ತಿಬಿಲೀಸಿಯಲ್ಲಿ ಇಸ್ರೇಲೀ ದೂತಾವಾಸದ ವಾಹನವೊಂದರ ಕೆಳಗೆ ಅಡಗಿಸಿಟ್ಟಿದ್ದ ಗ್ರೆನೇಡ್, ಅದರ ಮರುದಿನ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ತನ್ನದೇ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಸಿಕ್ಕಿಬಿದ್ದ ಇರಾನೀ ಭಯೋತ್ಪಾದಕ ಮತ್ತು ಈ ಹಂಚಿಕೆಗೆ ಸಂಬಂಧಿಸಿದಂತೆ ಥಾಯ್ಲೆಂಡ್ ಮತ್ತು ಮಲೇಶಿಯಾದಲ್ಲಿ ಸೆರೆಸಿಕ್ಕ ಮತ್ತಿಬ್ಬರು ಇರಾನೀಯರು, ಮಾರ್ಚ್ ೧೫ರಂದು ಅಜರ್‌ಬೈಜಾನ್‌ನಲ್ಲಿ ಅಮೆರಿಕಾ ಮತ್ತು ಇಸ್ರೇಲ್ ಹಿತಾಸಕ್ತಿಗಳ ಮೇಲೆ ಧಾಳಿಯೆಸಗಲು ಯೋಜನೆ ರೂಪಿಸುತ್ತಿದ್ದ ಆರೋಪದ ಮೇಲೆ ಬಂಧಿತರಾದ ಮೂವತ್ತೆರಡು ಇರಾನೀಯರು ಇರಾನ್‌ನ ಈ ಹೊಸ ರೂಪಕ್ಕೆ ಸಾಕ್ಷಿ. ಈ ಪ್ರಕರಣಗಳು ಭಯೋತ್ಪಾದನೆಯನ್ನು ವಿದೇಶನೀತಿಯ ಅಂಗವಾಗಿ ಇರಾನ್ ಅನುಸರಿಸಲಾರಂಭಿಸಿರುವುದರ ಸ್ಪಷ್ಟ ಸೂಚನೆ.
ಆದರೆ ಭಯೋತ್ಪಾದನೆಯನ್ನು ವಿದೇಶನೀತಿಯಾಗಿ ಅನುಸರಿಸಿದ ಯಾವ ರಾಷ್ಟ್ರವೂ ಇದುವರೆಗೆ ಯಶಸ್ವಿಯಾಗಿಲ್ಲ ಮತ್ತು ಆ ನೀತಿ ಅನುಸರಿಸಿದ ನಾಯಕರು ಹೀನಾಯವಾಗಿ ಚರಿತ್ರೆಯ ಕಸದಬುಟ್ಟಿಗೆ ಸೇರಿದ್ದಾರೆ ಎಂಬ ಐತಿಹಾಸಿಕ ಸತ್ಯದ ಹಿನ್ನೆಲೆಯಲ್ಲಿ ಇರಾನ್‌ನ ಈ ಹೊಸರೂಪದ ವಿಫಲತೆಯನ್ನು ಮುಂಗಾಣಬಹುದು. ಅದರಲ್ಲೂ, ಇರಾನಿ ತೈಲದ ಮೇಲೆ ಅವಲಂಬಿತವಾದ ಚೈನಾದಂತಹ ಬೆರಳೆಣಿಕೆಯ ಕೆಲವು ದೇಶಗಳ ಹೊರತಾಗಿ ನೈಜ ನೇಹಿಗರೇ ಇಲ್ಲದ ಹಾಗೂ ಧಾರ್ಮಿಕ, ರಾಜಕೀಯ ಕಾರಣಗಳಿಂದಾಗಿ ಮುಸ್ಲಿಂ ಜಗತ್ತಿನಲ್ಲೂ ಒಂಟಿಯಾಗಿರುವ ತೆಹರಾನ್ ತನ್ನ ಈಗಿನ ಹಾದಿಯಲ್ಲಿ ಯಶಸ್ವಿಯಾಗುವ ಸಾಧ್ಯತೆ ಲವಲೇಶವೂ ಇಲ್ಲ. ಜತೆಗೇ, ಹಿಂದೆ ಭಯೋತ್ಪಾದನಾ ಸಂಘಟನೆಗಳು ಫ್ರಾಂಕೆನ್‌ಸ್ಟೈನ್ ರಕ್ಕಸನಾಗಿ ಬೆಳೆದು ತನ್ನ ಸೃಷ್ಟಿಕರ್ತ ಹಾಗೂ ಪೋಷಕರಿಗೇ ತಲೆನೋವಾದದ್ದುಂಟು. ಇಸ್ರೇಲ್-ವಿರೋಧಿ ಅರಬ್ ಭಯೋತ್ಪಾದಕ ಸಂಘಟನೆಗಳು ತಮ್ಮೆಲ್ಲಾ ಚಟುವಟಿಕೆಗಳಿಗೆ ಅನಿಯಂತ್ರಿತ ಬೆಂಬಲ ಸಿಗದೇ ಹೋದಾಗ ಅರಬ್ ರಾಷ್ಟ್ರಗಳ ವಿರುದ್ಧವೇ ತಿರುಗಿಬಿದ್ದದ್ದು ತೆಹೆರಾನ್‌ಗೆ ಒಂದು ಪಾಠವಾಗಬೇಕು. ಭಾರತ-ವಿರೋಧಿ ಭಯೋತ್ಪಾದನೆಯನ್ನು ದಶಕಗಳವರೆಗೆ ಪ್ರಾಯೋಜಿಸಿದ ಪಾಕಿಸ್ತಾನ ಈಗ ಅದೇ ಭಯೋತ್ಪಾದಕರಿಂದ ಇನ್ನಿಲ್ಲದ ಕೋಟಲೆಗೀಡಾಗಿರುವುದನ್ನು ಇರಾನೀ ನಾಯಕರು ಅಗತ್ಯವಾಗಿ ಗಮನಿಸಬೇಕು.
ಇಡೀ ಬೆಳವಣಿಗೆಯನ್ನು ಮತ್ತೊಂದು ಮಗ್ಗುಲಿಂದ ನೋಡುವುದಾದರೆ, ಇರಾನೀ ನಾಯಕತ್ವದ ನಕಾರಾತ್ಮಕ ನಡವಳಿಕೆಯಿಂದಾಗಿ ವಿಶ್ವದಲ್ಲಿ ನಿರ್ಲಕ್ಷಕ್ಕೊಳಗಾಗಿರುವ ಇರಾನೀ ಜನತೆ ಮೈಕೊಡವಿ ಮೇಲೆದ್ದು ಬದಲಾವಣೆಯ ರಣಕಹಳೆಯೂದುವುದು ಮತ್ತು ಅವರ ಬೆಂಬಲಕ್ಕೆ ವಿಶ್ವಸಮುದಾಯ ನಿಂತು ವರ್ಷದ ಹಿಂದೆ ಲಿಬಿಯಾದಲ್ಲಾದದ್ದು ಇರಾನ್‌ನಲ್ಲಿ ಮರುಕಳಿಸಲೂಬಹುದು ಎಂದು ಆಶಿಸಬಹುದು.
*** *** ***
ಬುಧವಾರ, ಏಪ್ರಿಲ್ ೧೧, ೨೦೧೨ರ "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ
No comments:
Post a Comment