ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, May 30, 2013

ಕಥೆಯಲ್ಲವಿದು, ಕಟುವಾಸ್ತವವು!

ಚುನಾವಣೆಗಳಲ್ಲಿ ನಿಚ್ಚಳ ಬಹುಮತ ಪಡೆಯುವುದರಲ್ಲಿ ವಿಫಲವಾದರೂ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಸಹಜವಾಗಿಯೇ ಅಧಿಕಾರಕ್ಕೇರಲು ಮಾರ್ಗ ಹುಡುಕುತ್ತಿದೆ.  ಯಾವುದೇ ಅನಿರೀಕ್ಷಿತ ದುರಂತಗಳು ಸಂಭವಿಸದಿದ್ದಲ್ಲಿ ಹದಿನೆಂಟು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ನವಾಜ್ ಶರೀಫ್ ಜೂನ್ ೫ರಂದು ಪ್ರಧಾನಮಂತ್ರಿಯಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತ.  ತಾನು ಅಧಿಕಾರಕ್ಕೆ ಹಿಂತಿರುಗುವುದರ ಬಗ್ಗೆ ಚುನಾವಣೆಗಳಿಗೂ ಮೊದಲೇ ಆಶಾಭಾವನೆ ಹೊಂದಿದ್ದ ಶರೀಫ್ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು.  ದೆಹಲಿಯ ಜತೆ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದ್ದರು.  ಅವರ ಹೇಳಿಕೆಗಳಿಗೆ ದೆಹಲಿ ಉತ್ಸಾಹದ ಪ್ರತಿಕ್ರಿಯೆ ತೋರಲಿಲ್ಲ.  ಇದು ಹಲವು ವಲಯಗಳಲ್ಲಿ ಟೀಕೆಗೊಳಗಾಗಿದೆ.  ಶರೀಫ್‌ರ ಹೇಳಿಕೆಗಳಿಗೆ ಧನಾತ್ಮಕವಾಗಿ ಸ್ಪಂದಿಸಬೇಕೆಂದು ಪ್ರಮುಖ ಆಂಗ್ಲದೈನಿಕವೊಂದು ಸಂಪಾದಕೀಯದಲ್ಲಿ ಸರಕಾರಕ್ಕೆ ಸಲಹೆ ನೀಡಿದೆ.
ಇದನ್ನೆಲ್ಲಾ ಗಮನಿಸಿದಾಗ ಬೇಸರವಾಗುತ್ತದೆ.  ಹಿಂದಿನ ಅನುಭವಗಳಿಂದ ನಾವು ಪಾಠಗಳನ್ನು ಕಲಿಯುತ್ತಿಲ್ಲವೇ?  Public memory is very short ಎನ್ನುವ ಹಾಗೆ ಜನತೆಯನ್ನೂ, ಸರಕಾರವನ್ನು ಎಚ್ಚರಿಸಬೇಕಾದ ಮಾಧ್ಯಮದ ಜ್ಞಾಪಕಶಕ್ತಿಯೂ ಅಲ್ಪಕಾಲಿಕವಾಗಬೇಕೆ?  ಶರೀಫ್‌ರ ಮಾತುಗಳು, ನಡವಳಿಕೆಗಳ ಬಗ್ಗೆ ಅತುರದ ತೀರ್ಮಾನ ತೆಗೆದುಕೊಳ್ಳದೇ ಎಚ್ಚರವಹಿಸಬೇಕು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ.  ಅದರಲ್ಲಿ ಅತಿಮುಖ್ಯವಾದುದನ್ನು ಎಲ್ಲರಿಗೂ ನೆನಪಿಸಬಯಸುತ್ತೇನೆ.
೧೯೯೯ರ ಬೇಸಿಗೆಯಲ್ಲಿ ನಡೆದ ಕಾರ್ಗಿಲ್ ಕದನದ ಹಿಂದಿದ್ದದ್ದು ಪಾಕ್ ಸೇನೆಯ ದಂಡನಾಯಕ ಪರ್ವೇಜ್ ಮುಷರಫ್ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.  ತನ್ನ ಯೋಜನೆಗಳನ್ನು ಮುಷರಫ್ ನನಗೆ ತಿಳಿಸಲೇ ಇಲ್ಲ ಎಂದು ಆಗ ಪ್ರಧಾನಿಯಾಗಿದ್ದ ಶರೀಫ್ ಕನಿಷ್ಟ ನೂರುಬಾಯಿಯಾದರೂ ಹೇಳಿಕೆ ನೀಡಿದ್ದರು.  ಆದರೆ ಆಮೇಲೆ ಬಯಲಾದ ಸತ್ಯದ ಪ್ರಕಾರ ಮುಷರಫ್ ತನ್ನೆಲ್ಲಾ ಯೋಜನೆಗಳನ್ನು ಶರೀಫ್ ಜತೆ ಹಂಚಿಕೊಂಡಿದ್ದರು, ಶರೀಫ್ ಉತ್ಸಾಹದಿಂದ ಜನರಲ್ ಸಾಬ್, ಬಿಸ್ಮಿಲ್ಲಾ ಕರೇಂ ಎಂದು ಅಶೀರ್ವದಿಸಿದ್ದರು.  ಅಂದರೆ ಫೆಬ್ರವರಿ ೨೦, ೧೯೯೯ರಂದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಲಾಹೋರಿಗೆ ಆಹ್ವಾನಿಸಿ ಉಭಯ ದೇಶಗಳ ನಡುವಿನ ಮೈತ್ರಿಯ ಬಗ್ಗೆ ಟಿವಿ ಕ್ಯಾಮೆರಾಗಳೆದುರು ವರ್ಣರಂಜಿತ ಭಾಷಣಗಳನ್ನು ಮಾಡುವಾಗ ಶರೀಫ್‌ಗೆ ತನ್ನ ಸೈನಿಕರು ಕಾರ್ಗಿಲ್‌ನಲ್ಲಿ ನಡೆಸುತ್ತಿದ್ದ ಕುತಂತ್ರಗಳ ಸ್ಪಷ್ಟ ಅರಿವಿತ್ತು.  ಅಂದು ಅದೆಂತಹ ಸೊಗಸಾದ ಮುಖವಾಡವನ್ನಾತ ಧರಿಸಿದ್ದರು!
ಹದಿಮೂರು ವರ್ಷಗಳ ಹಿಂದೆ ಜೀವವುಳಿಸಿಕೊಳ್ಳಲೋಸುಗ ದೇಶಭ್ರಷ್ಟರಾಗಿ ಸೌದಿ ಅರೇಬಿಯಾಗೆ ಓಡಿಹೋಗುವಾಗ ಕೊಂಡೊಯ್ದ ತಾಮ್ರದ ಚೊಂಬಿನಂತೆ ಹೊಳೆಯುತ್ತಿದ್ದ ಬುರುಡೆಯನ್ನು ಒಂದಷ್ಟು ಕರಿಗೂದಲಿನಿಂದ ಅಲಂಕರಿಸಿಕೊಂಡು ಹಿಂತಿರುಗಿದ ಮಾತ್ರಕ್ಕೆ ಶರೀಫ್‌ರ ಆಂತರ್ಯವೂ ಬದಲಾಗಿದೆ ಎಂದು ನಾನು ಭಾವಿಸುವುದಿಲ್ಲ.  ಹೀಗಾಗಿಯೇ, ಮನಮೋಹನ್ ಸಿಂಗ್ ಸರಕಾರ ಆ ಮುಖವಾಡಧಾರಿಯ ಹೇಳಿಕೆಗಳಿಗೆ ಅತ್ಯುತ್ಸಾಹವನ್ನು ಬದಿಗಿರಿಸಿ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿರುವ ಬಗ್ಗೆ ನನಗೆ ನೆಮ್ಮದಿಯೆನಿಸುತ್ತಿದೆ.
ನಮ್ಮ ನಿಜವಾದ ಮಿತ್ರರು ಯಾರು, ಶತೃಗಳು ಯಾರು ಎಂದು ಅರಿಯಲಾಗದ, ಆ ಬಲಹೀನತೆಯಿಂದಲೇ ರಾಷ್ಟ್ರಹಿತಕ್ಕೆ ಮಾರಕವಾಗುವ ನಿಲುವುಗಳನ್ನು ತೆಗೆದುಕೊಳ್ಳುವ ನಮ್ಮ ಕೆಲವು ನಾಯಕರ, ರಾಜಕೀಯ ಪಕ್ಷಗಳ, ಬುದ್ಧಿಜೀವಿಗಳ, ಮಾಧ್ಯಮಗಳ ನಡವಳಿಕೆಗಳನ್ನು ನೋಡಿದಾಗಲೆಲ್ಲಾ ನನಗೆ ಕಥೆಯೊಂದು ನೆನಪಾಗುತ್ತದೆ.  ದಶಕದ ಹಿಂದೆ, ಕೇಂದ್ರದಲ್ಲಿ ಎನ್‌ಡಿಎ ಸರಕಾರವಿದ್ದಾಗ, ಅಣ್ವಸ್ತ್ರನೀತಿ ಹಾಗೂ ವಿದೇಶನೀತಿಯ ಬಗ್ಗೆ ಸರಕಾರದ ನೀತಿಗಳು ಪಾರದರ್ಶಕವಾಗಿರಬೇಕೆಂದು ಮಾಧ್ಯಮದ ಹಾಗೂ ನೇತಾರವರ್ಗದ ಕೆಲವರು ದಿನನಿತ್ಯ ಕೂಗೆಬ್ಬಿಸುತ್ತಿದ್ದಾಗ ಅಂತರ್ಜಾಲದಲ್ಲಿ ಹಾರಾಡುತ್ತಿದ್ದ ಈ ಕಥೆಯನ್ನು ಹಿಡಿದು ಆಂಗ್ಲ ದೈನಿಕವೊಂದು ಮುಖಪುಟದಲ್ಲೇ ಪ್ರಕಟಿಸಿತ್ತು.  ಈಗಲೂ ಪ್ರಸ್ತುತವೆನಿಸುವ ಆ ಕಥೆಗೆ ಸ್ವಲ್ಪ ಉಪ್ಪುಖಾರ ಹಚ್ಚಿ ನಿಮಗೆ ನೀಡುತ್ತಿದ್ದೇನೆ.  ಭಾರತ ಮತ್ತು ಪಾಕಿಸ್ತಾನಗಳಲ್ಲಿನ ಆಡಳಿತವ್ಯವಸ್ಥೆಯ ವಿವಿಧ ಅಂಗಗಳ ನಡುವಿನ ಸಂಬಂಧಗಳು, ಆಡಳಿತಗಾರರ ಹಾಗೂ ರಕ್ಷಣಾಸಂಸ್ಥೆಗಳ ಕಾರ್ಯವಿಧಾನ ಹಾಗೂ ಮನೋಭಾವ, ಒಟ್ಟಾರೆ ರಾಜಕೀಯ ವ್ಯವಸ್ಥೆಯ ವೈರುಧ್ಯಗಳನ್ನು ವಿಡಂಬನಾತ್ಮಕವಾಗಿ ಅಷ್ಟೇ ಪರಿಣಾಮಕಾರಿಯಾಗಿ ಬಿಂಬಿಸುವ ಬೇರೊಂದು ಕಥೆ ನನಗೆ ಸಿಕ್ಕಿಲ್ಲ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತ ಧಾಳಿ ನಡೆಸಲಿದೆ ಎಂದು ಗುಪ್ತಚರನೊಬ್ಬ ಮಾಹಿತಿ ಕೊಟ್ಟಕೂಡಲೇ ಕಾರ್ಯೋನ್ಮುಖನಾದ ಐಎಸ್‌ಐ ನಿರ್ದೇಶಕ ಪಾಕಿಸ್ತಾನೀ ಸೇನೆಯಲ್ಲಿದ್ದ ತನ್ನ ಕಡೆಯ ಅಧಿಕಾರಿಗಳ ತುರ್ತು ಸಭೆಯೊಂದನ್ನು ಸೇರಿಸಿದ.  ಭಾರತ ಆಕ್ರಮಣ ಮಾಡುವ ಮೊದಲೇ ನಾವೇ ಅದರ ಮೇಲೆ ಆಕ್ರಮಣ ಮಾಡಬೇಕು.  ರಕ್ಷಣೆಯ ಅತ್ಯುತ್ತಮ ವಿಧಾನವೆಂದರೆ ಆಕ್ರಮಣ ಎಂಬ ಐಎಸ್‌ಐ ಮುಖ್ಯಸ್ಥನ ಸಲಹೆ ಸೇನಾಧಿಕಾರಿಗಳಿಗೆ ಒಪ್ಪಿಗೆಯಾಯಿತು.  ಸಣ್ಣಪುಟ್ಟ ಪಟಾಕಿ ಹೊಡೆಯುವುದೇನೂ ಬೇಡ.  ದೆಹಲಿ ಮೇಲೆ ಆಟಂ ಬಾಂಬ್ ಹಾಕಿಬಿಡೋಣ ಅಂತ ಮತ್ಯಾರೋ ಅಂದರು.  ಅದೂ ಅಂಗೀಕೃತವಾಯಿತು.  ಅಧ್ಯಕ್ಷ ಮುಷರಫ್‌ರ ಅನುಮತಿ ಪಡೆಯೋಣ ಅಂತ ಅದ್ಯಾರೋ ಮೆಲ್ಲಗೆ ಅಂದದ್ದಕ್ಕೆ ಐಎಸ್‌ಐ ಮುಖ್ಯಸ್ಥ ಅಯ್ ಸುಮ್ನಿರಯ್ಯ.  ಅದ್ಯಾವ ದೊಣ್ಣೆನಾಯಕ ಅಂತ ಅವನ ಅನುಮತಿ ಪಡೆಯಬೇಕು? ಎಂದು ಗದರಿಬಿಟ್ಟ.  ಪಾಕಿಸ್ತಾನೀ ಸರಕಾರದ ಅನುಮತಿ ಪಡೆಯುವುದಿರಲಿ, ಅದಕ್ಕೆ ವಿಷಯ ತಿಳಿಸುವ ಗೋಜಿಗೂ ಹೋಗದೇ ಐಎಸ್‌ಐ ಅಣ್ವಸ್ತ್ರ ಧಾಳಿಗೆ ತಯಾರಿ ನಡೆಸಿತು.  ಬಾಂಬೊಂದನ್ನು ಘಾವ್ರಿ ಮಿಸೈಲಿನ ನೆತ್ತಿ ಮೇಲೆ ಕೂರಿಸಲಾಯಿತು.  ಕೌಂಟ್‌ಡೌನ್ ಶುರುವಾಯ್ತು.  ಬಟನ್ ಅನ್ನೂ ಒತ್ತಿದರು.  ಆದರೆ...!  ಮಿಸೈಲು ಕಮಕ್‌ಕಿಮಕ್ ಅನ್ನಲಿಲ್ಲ.  ಮತ್ತೆ ಒತ್ತಿದರೂ ಜಪ್ಪಯ್ಯ ಅನ್ನಲಿಲ್ಲ.  ಎಷ್ಟೆಂದರೂ ಅದು ‘ಮೇಡ್ ಇನ್ ಪಾಕಿಸ್ತಾನ್’ ಮಿಸೈಲ್!  ‘ದೇವರಿಗೆ ಇಕ್ಕಿದ ಬೋನ’ದಂತೆ ಸುಮ್ಮನೆ ಕೂತಿತ್ತು.  ಪಾಕಿಸ್ತಾನಿಯರಿಗೆ ಕೋಪ ಉಕ್ಕುಕ್ಕಿ ಬಂತು.  ಅರೆ ಇಸ್ಕಿ ಮಾಕೀ ಎಂದು ಬೈದರು.  ಇನ್ನೊಂದು ಮಿಸೈಲ್ ತಂದು ಅಣುಸಿಡಿತಲೆ ಜೋಡಿಸಿ ಬಟನ್ ಒತ್ತಿದರು.  ಅದು ಮೊದಲಿನದರ ಅಪ್ಪ.
ದೆಹಲಿಯನ್ನು ನಾಶಮಾಡಿ, ಭಾರತವನ್ನು ಮಣಿಸಿ, ಶಾನ್-ಎ-ಪಾಕಿಸ್ತಾನ್ ಅವಾರ್ಡ್‌ನ ಕನಸು ಕಾಣುತ್ತಿದ್ದ ಐಎಸ್‌ಐ ನಿರ್ದೇಶಕ ನಿರಾಶೆಯಲ್ಲಿ ಕುಸಿದುಹೋದ.  ಲೋಕಲ್ ಮಿಸೈಲ್‌ಗಳ ಸಹವಾಸವೇ ಬೇಡ ಬಾಸ್.  ಒಂದು ಭರ್ಜರಿ ಮಿಸೈಲನ್ನ ಹೊರಗಿನಿಂದ ತರಿಸಿಬಿಡೋಣ.  ಸಹಾಯಕನೊಬ್ಬ ಸಲಹೆ ನೀಡಿದ.  ಎಲ್ಲಿಂದ ತರಿಸೋದು?  ಚೈನಾದವರು ನಮ್ಮ ಸರಕಾರ ಕೇಳಿದ್ರೆ ಮಾತ್ರ ಕೊಡೋದು.  ಅಮೆರಿಕಾದವರನ್ನ ಕೇಳಿದ್ರೆ ಮುಗಿದೇಹೋಯ್ತು, ತಮ್ಮ ಮಿಸೈಲ್‌ಗೆ ನನ್ನನ್ನೇ ಕಟ್ಟಿ ಉಡಾಯಿಸಿಬಿಡ್ತಾರೆ.  ನಿರ್ದೇಶಕ ತಲೆ ಚಚ್ಚಿಕೊಂಡ.  ಚಿಂತೆ ಬೇಡ ಬಾಸ್.  ಸಹಾಯಕ ಸಮಾಧಾನಿಸಿದ, ಕಮ್ಯೂನಿಸ್ಟರು ಮಗುಚಿಕೊಂಡ ಮೇಲೆ ರಶಿಯಾದಲ್ಲಿ ರಾಶಿಗಟ್ಟಲೆ ಮಿಸೈಲುಗಳು ಹೇಳೋರು ಕೇಳೋರು ಇಲ್ಲದೇ ಬಿದ್ದಿವೆ.  ಯಾವನಾದ್ರೂ ಒಬ್ಬ ಮಿಲಿಟರಿ ಆಫೀಸರ್‌ಗೆ ಕೈಬಿಸಿ ಮಾಡಿದ್ರೆ ಒಂದಲ್ಲಾ ಹತ್ತು ಮಿಸೈಲ್ ಕೊಡ್ತಾನೆ.  ನಿರ್ದೇಶಕನಿಗೆ ಕುಣಿದಾಡುವಂತಾಯಿತು.  "ಶಾಭ್ಭಾಶ್!  ಇದ್ರೆ ನಿನ್ನಂಥ ಅಸಿಸ್ಟೆಂಟು ಇರ್ಬೇಕು.  ನಾನು ಪ್ರೆಸಿಡೆಂಟ್ ಆದ್ರೆ ನಿನ್ನನ್ನ ಡಿಫೆನ್ಸ್ ಮಿನಿಸ್ಟರ್ ಮಾಡ್ಕೋತೀನಿ" ಎನ್ನುತ್ತಾ ಸಹಾಯಕನನ್ನು ಬಿಗಿದಪ್ಪಿಕೊಂಡ.  ವಾರ ಕಳೆಯುವುದರೊಳಗೆ ರಶಿಯಾದಿಂದ ಭರ್ಜರಿ ಮಿಸೈಲೊಂದು ಪಾಕಿಸ್ತಾನ ತಲುಪಿತು.
ಈ ಸುದ್ಧಿ ಭಾರತೀಯ ಗುಪ್ತಚರ ಇಲಾಖೆಗಳಿಗೆ ಸಿಕ್ಕಿಬಿಟ್ಟಿತು.  ತಕ್ಷಣ ಅವು ವಿಷಯವನ್ನು ರಕ್ಷಣಾ ಸಚಿವ, ಗೃಹಸಚಿವ ಮತ್ತು ಪ್ರಧಾನಮಂತ್ರಿಗಳಿಗೆ ತಲುಪಿಸಿ ಕರ್ತವ್ಯ ನಿಭಾಯಿಸಿದವು.  ಪ್ರತಿದಾಳಿ ನಡೆಸಿ ಎಂದು ಸೇನೆಗೆ ಆದೇಶ ಕೊಟ್ಟುಬಿಡಲೇ? ಎಂದು ಪ್ರಧಾನಮಂತ್ರಿ ಅರೆಕ್ಷಣ ಯೋಚಿಸಿದರು.  ಬೇಡ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೈಯುಕ್ತಿಕ ನಿರ್ಧಾರಗಳು ಸಲ್ಲ ಎಂದಿತು ವಿವೇಕ.  ಇತರರೊಂದಿಗೆ ಚರ್ಚಿಸುವುದೊಳಿತು ಎಂದುಕೊಂಡು ಕ್ಯಾಬಿನೆಟ್ ಸಭೆ ಕರೆದರು. ಸಭೆಯಲ್ಲಿ ವಿಧವಿಧವಾದ ಸಲಹೆಗಳು ಬಂದವು.  ಪ್ರತಿಧಾಳಿಗೆ ಸಿದ್ಧರಾಗಿರೋಣ, ಮೊದಲು ನಾವೇ ಧಾಳಿ ನಡೆಸಿಬಿಡೋಣ, ಪಾಕಿಸ್ತಾನಿಗಳು ಧಾಳಿ ನಡೆಸದಂತೆ ಮಿತ್ರದೇಶಗಳ ಮೂಲಕ ರಾಜತಾಂತ್ರಿಕ ಒತ್ತಡ ಹಾಕೋಣ, ವಿಶ್ವಸಂಸ್ಥೆಗೆ ತಿಳಿಸಿಬಿಡೋಣ- ಹೀಗೆ ಅನೇಕ ಸಲಹೆಗಳು.
ನಮ್ಮ ನ್ಯೂಸ್ ಚಾನಲ್‌ಗಳಿಗೆ ವಿಷಯ ತಿಳಿದುಬಿಟ್ಟಿತು.  ಅವುಗಳಿಗಂತೂ ಸುಗ್ಗಿಯೋ ಸುಗ್ಗಿ.  ಅದ್ಯಾರ‍್ಯಾರೋ ಎಕ್ಸ್‌ಪರ್ಟ್’(?)ಗಳನ್ನು ಕೂರಿಸಿಕೊಂಡು ದಿನಗಟ್ಟಲೆ ‘ಗಂಭೀರ’ ವಿಶ್ಲೇಷಣೆ ನಡೆಸಿದವು.  ಪತ್ರಿಕೆಗಳೇನೂ ಹಿಂದೆ ಬೀಳಲಿಲ್ಲ.  ಇನ್ನು ವಿರೋಧಪಕ್ಷಗಳು ಬಿಟ್ಟಾವೆಯೇ?  ಇದೊಂದು ಗಂಭೀರ ವಿಷಯ.  ನಮ್ಮನ್ನು ಬಿಟ್ಟು ಸರಕಾರ ತಾನೇ ನಿರ್ಧಾರ ತೆಗೆದುಕೊಳ್ಳುವುದು ಅಂದರೇನು?  ಪಾಕಿಸ್ತಾನದ ಮೇಲೆ ಆಟಂ ಬಾಂಬ್ ಹಾಕಬೇಕೋ ಬೇಡವೋ ಎಂಬುದನ್ನು ಪಾರ್ಲಿಮೆಂಟಿನಲ್ಲಿ ಚರ್ಚೆಮಾಡಿ ನಿರ್ಧರಿಸೋಣ ಎಂದು ಸರಕಾರದ ಮೇಲೆ ಒತ್ತಡ ಹಾಕಿದವು.  ಸರಿ, ಪಾರ್ಲಿಮೆಂಟಿನಲ್ಲಿ ಚರ್ಚೆ ಆರಂಭವಾಯಿತು.  ಪತ್ರಿಕೆಗಳು ಮತ್ತು ನ್ಯೂಸ್ ಚಾನಲ್‌ಗಳ ಅಬ್ಬರದಿಂದಾಗಿ ಚರ್ಚೆ ಜನತೆಗೂ ಹಬ್ಬಿತು.  ‘ಇದೇ ಸರಿಯಾದ ಸಮಯ.  ಆ ಪಾಕಿಸ್ತಾನವನ್ನ ಹುಟ್ಟಿಲ್ಲಾ ಅನ್ನಿಸಿಬಿಡಿ ಎಂದು ವಿಹೆಚ್‌ಪಿ ಮತ್ತು ಶಿವಸೇನೆಗಳು ರಣಕಹಳೆ ಮೊಳಗಿಸಿದರೆ ತಮ್ಮನ್ನು ತಾವು Secular and Progressive ಎಂದು ಕರೆದುಕೊಂಡವರು (ನಮ್ಮ ಅನುಕೂಲಕ್ಕಾಗಿ ಇನ್ನು ಮುಂದೆ ಇವರನ್ನು ಪುಟ್ಟದಾಗಿ ಎಸ್‌ಪಿ ಅಂತ ಕರೆಯೋಣ) ಕೂಡದು ಕೂಡದು, ಪಾಕಿಸ್ತಾನದ ಜನ ಅಮಾಯಕರು.  ಯಾರೋ ಒಂದಿಬ್ಬರು ಭಾರತವಿರೋಧೀ ಚಟುವಟಿಕೆಗಳಲ್ಲಿ ತೊಡಗಿಕೊಂಡರು ಅಂದರೆ ನಾವು ಪಾಕಿಸ್ತಾನದ ಮೇಲೆ ಬಾಂಬ್ ಹಾಕಿ ಸಾಮಾನ್ಯಜನರನ್ನು ಸಂಕಷ್ಟಕ್ಕೀಡು ಮಾಡುವುದು ಘೋರ ಅಪರಾಧ, ಮಾನವಹಕ್ಕುಗಳ ಉಲ್ಲಂಘನೆ.  ಅಷ್ಟಕ್ಕೂ ಪಾಕಿಸ್ತಾನೀಯರು ನಮ್ಮ ಮೇಲೆ ಅಣ್ವಸ್ತ್ರ ಧಾಳಿ ನಡೆಸಲು ತಯಾರಿ ನಡೆಸುತ್ತಿದ್ದಾರೆ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ?  ನಮಗೆ ಹಾರ್ಡ್ ಎವಿಡೆನ್ಸ್ ತೋರಿಸಿ ಎಂದೆಲ್ಲಾ ಗದ್ದಲ ಎಬ್ಬಿಸಿದರು.  ಕೆಲವು ಪತ್ರಿಕೆಗಳು ಈ ಎಸ್‌ಪಿಗಳ ವಾದದ ಪರ ಭಾರೀ ಪ್ರಚಾರ ನಡೆಸಿದವು.
ಇದಾವುದರತ್ತಲೂ ಗಮನ ಕೊಡದೇ ಅತ್ತ ಪಾಕಿಸ್ತಾನೀಯರು ರಶಿಯನ್ ಮಿಸೈಲಿನ ಮೇಲೆ ಅಣ್ವಸ್ತ್ರ ಕೂರಿಸಿ ಉಡಾಯಿಸಿಯೇಬಿಟ್ಟರು.  ನಿಜಕ್ಕೂ ಭರ್ಜರಿ ಮಿಸೈಲ್ ಅದು.  ಸುಂಯ್ಯನೆ ಗಗನಕ್ಕೆ ಚಿಮ್ಮಿತು.  ಪಾಕಿಗಳ ಆನಂದಕ್ಕೆ ಪಾರವೇ ಇಲ್ಲ.  ಹಿಂದೂಸ್ತಾನ್ ಬನ್ ಗಯಾ ಖಬರ್‌ಸ್ತಾನ್ ಎಂದು ಕುಣಿದಾಡಿದರು.
ಆದರೆ...!
ಹೇಳೀಕೇಳೀ ಅದು ರಶಿಯನ್ ಮಿಸೈಲ್.  ಪಾಕಿಗಳು ಬಟನ್ ಒತ್ತಿದೊಡನೆ ಮೇಲಕ್ಕೆ ಚಿಮ್ಮಿದ ಅದು ದೆಹಲಿಯ ದಿಕ್ಕು ಬಿಟ್ಟು ರಶಿಯನ್ನರು ಮೊದಲೇ ನಿಶ್ಚಿತಗೊಳಿಸಿದ್ದಂತೆ ತನ್ನ ಗುರಿ ವಾಷಿಂಗ್ಟನ್‌ನತ್ತ ಸಾಗಿತು.  ತಮ್ಮತ್ತ ಧಾವಿಸಿ ಬರುತ್ತಿದ್ದ ಈ ಯಮದೂತನನ್ನು ಅಮೆರಿಕನ್ ರಡಾರ್‌ಗಳು ನೋಡಿಬಿಟ್ಟವು.  ತಕ್ಷಣ ವೈಟ್‌ಹೌಸ್‌ಗೆ ಸುದ್ಧಿ ಹೋಯಿತು.  ಪಾಕಿ ಮಿಸೈಲನ್ನು ಅಂತರಿಕ್ಷದಲ್ಲೇ ಹೊಡೆದುರುಳಿಸಲು ಸೇನೆಗೆ ಅದೇಶ ಹೊರಟಿತು.  ಅದರಂತೆ ಮಿಸೈಲ್ ಧ್ವಂಸವಾಯಿತು.  ಎಷ್ಟಾದರೂ ಅಮೆರಿಕನ್ನರು ಸ್ಟಾರ್ ವಾರ್ ಪ್ರವೀಣರಲ್ಲವೇ?
ಬುಷ್ ಮಹಾಶಯ ಅಷ್ಟಕ್ಕೇ ಸುಮ್ಮನಾಗಲಿಲ್ಲ.  ಅವನ ಪಿತ್ಥ ಕೆದರಿಹೋಗಿತ್ತು.  ತನ್ನ ದೇಶದ ಮೇಲೆ ನ್ಯೂಕ್ಲಿಯರ್ ಮಿಸೈಲ್ ಧಾಳಿ ನಡೆಸಲು ಹವಣಿಸಿದ ಪಾಕಿಗಳ ಹುಟ್ಟಿಲ್ಲಾ ಅನ್ನಿಸಿಬಿಡಬೇಕು ಎಂದು ನಿರ್ಧರಿಸಿದ.  ಪರಿಣಾಮ...  ಅಮೆರಿಕನ್ ಮಿಸೈಲ್‌ಗಳು ನ್ಯೂಕ್ಲಿಯರ್ ವಾರ್‌ಹೆಡ್ ಹೊತ್ತು ಪಾಕಿಸ್ತಾನದತ್ತ ಧಾವಿಸಿದವು.  ಏನಾಗುತ್ತಿದೆ ಎಂದು ಐಎಸ್‌ಐಗೆ ಗೊತ್ತಾಗುವ ಮೊದಲೇ ಇಸ್ಲಾಮಾಬಾದ್, ಲಾಹೋರ್, ಕರಾಚಿಗಳು ಧ್ವಂಸವಾದವು.
ಭಾರತದಲ್ಲಿ ಸುದ್ಧಿ ಹರಡುತ್ತಿದ್ದಂತೇ ನಮ್ಮ ‘ಎಸ್‌ಪಿ’ಗಳು ತೃತೀಯ ಜಗತ್ತಿನ ಸೋದರ ರಾಷ್ಟ್ರವೊಂದರ ಮೇಲೆ ದುಷ್ಟ ಅಮೆರಿಕಾದ ಪೈಶಾಚಿಕ ಧಾಳಿ’ಯನ್ನು ಉಗ್ರವಾಗಿ ಖಂಡಿಸಿದರು.  ಊರೂರುಗಳಲ್ಲಿ ಅಮೆರಿಕ-ವಿರೋಧೀ ಮೆರವಣಿಗೆಗಳನ್ನು ಆಯೋಜಿಸಿದರು.  ಅಣ್ವಸ್ತ್ರ ಧಾಳಿಯಲ್ಲಿ ತತ್ತರಿಸಿದ ಪಾಕಿಸ್ತಾನಕ್ಕೆ ನೆರವು ನೀಡಲೆಂದು ಭಾರತದ ಎಲ್ಲೆಡೆ ಚಂದಾ ಸಂಗ್ರಹಿಸತೊಡಗಿದರು...

2 comments:

  1. First part of the Story is anyway true... If it happens really I have a doubt on the second part of it wherein 'if' Pakistan launches the nuclear warhead and misses its intended target... The second part is unlikely 'if' it Pakistan decides to launch...

    ReplyDelete