ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, May 16, 2013

ಬೇಕಾಗಿದೆ: ಸೇಡಿನ ರಾಜಕೀಯಕ್ಕೆ ಅಂತ್ಯ!

"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ನಿನ್ನೆ, ಬುಧವಾರ, ಮೇ ೧೫, ೨೦೧೩ರಂದು ಪ್ರಕಟವಾದ ಲೇಖನ


            ಪಾಕಿಸ್ತಾನದಲ್ಲಿ ನವಾಜ್ ಶರೀಫ್‌ರ ರಾಜಕೀಯ ಪುನರಾಗಮನ ಎರಡು ಬಗೆಯಲ್ಲಿ ಗಮನಾರ್ಹ.  ಒಮ್ಮೆ ರಾಜಕೀಯವಾಗಿ ಕುಸಿದ ವ್ಯಕ್ತಿ ದಶಕದ ನಂತರ ಮತ್ತೊಮ್ಮೆ ಫೀನಿಕ್ಸ್‌ನಂತೆ ಮೇಲೆದ್ದುಬರುವುದು ಪಾಕಿಸ್ತಾನೀ ರಾಜಕೀಯದಲ್ಲಿ ಇದುವರೆಗೆ ಕಂಡು ಕೇಳರಿಯದ ಘಟನೆ.  ಈ ಬೆಳವಣಿಗೆ ಪಾಕಿಸ್ತಾನೀ ರಾಜಕಾರಣ ಪ್ರಬುದ್ಧತೆಯ ಹಾದಿಗಿಳಿದಿರಬಹುದು ಎಂಬ ಸಮಾಧಾನದ ಜತೆಗೇ ಆ ಗೊಂದಲಮಯ ರಾಷ್ಟ್ರದ ಇದುವರೆಗಿನ ಬದುಕಿನ ಸ್ಥಾಯೀಭಾವವಾದ ಸೇಡಿನ ರಾಜಕೀಯ ಮತ್ತೊಮ್ಮೆ ಉಗ್ರವಾಗಿ ತಲೆಯೆತ್ತಲಿದೆಯೇ ಎಂಬ ಆತಂಕವನ್ನೂ ಮೂಡಿಸುತ್ತದೆ.  ಈ ಪೀಠಿಕೆಯೊಂದಿಗೆ, ಮೇ ೧೧ರ ಸಾರ್ವತ್ರಿಕ ಚುನಾವಣೆಗಳು ಸೃಷ್ಟಿಸಿರುವ ಆಸಕ್ತಿಕರ ರಾಜಕೀಯ ವಾತಾವರಣದ ಈ ಎರಡು ಆಯಾಮಗಳನ್ನು ವಿವರವಾಗಿ ಚರ್ಚೆಗೆತ್ತಿಕೊಳ್ಳುತ್ತೇನೆ.

            ಹತ್ತು ಚುನಾವಣೆಗಳು, ಹನ್ನೊಂದು ವರ್ಷಗಳಲ್ಲಿ ಗವರ್ನರ್ ಜನರಲ್ ಅಥವಾ ಅಧ್ಯಕ್ಷರಿಂದ ನೇಮಕವಾದ ಏಳು ಪ್ರಧಾನಮಂತ್ರಿಗಳು, ತನ್ನನ್ನೇ ತಾನು ಪ್ರಧಾನಮಂತ್ರಿ ಸ್ಥಾನಕ್ಕೆ ನೇಮಿಸಿಕೊಂಡ ಒಬ್ಬರು, ಹನ್ನೊಂದು ವರ್ಷಗಳಲ್ಲಿ ಚುನಾವಣೆಗಳ ಮೂಲಕ ಎರಡು ಸಲ ಅಧಿಕಾರ ಪಡೆದ ಒಬ್ಬರು ಮತ್ತು ಮೂರುಸಲ ಅಧಿಕಾರಕ್ಕೆ ಬಂದ ಮತ್ತೊಬ್ಬರು ಪ್ರಧಾನಮಂತ್ರಿಗಳು, ಐದು ವರ್ಷಗಳ ಪೂರ್ಣಾವಧಿ ಮುಗಿಸಿದ ಚುನಾಯಿತ ಸಂಸತ್ತಿನಲ್ಲಿ ಅಧಿಕಾರವನ್ನು ಹಂಚಿಕೊಂಡ ಇಬ್ಬರು ಪ್ರಧಾನಮಂತ್ರಿಗಳು, ಮೂರು ಸೇನಾ ಕ್ರಾಂತಿಗಳು, ನಾಲ್ವರು ಸೇನಾಡಳಿತಗಾರರು, ಒಬ್ಬರು ನಾಗರಿಕ ಸೇನಾಡಳಿಗಾರ- ಪಾಕಿಸ್ತಾನದ ರಾಜಕೀಯ ಇತಿಹಾಸದ ಈ ಅಂಕಿಅಂಶಗಳು ಆ ದೇಶದಲ್ಲಿ ಅಧಿಕಾರ ಹಸ್ತಾಂತರವಾದ ವೇಗ ಮತ್ತು ಬಗೆಯ ಚಿತ್ರಣ ನೀಡುತ್ತವೆ.  ಹೆಚ್ಚಿನ ಸಂದರ್ಭದಲ್ಲಿ ಈ ಹಸ್ತಾಂತರ ಶಾಂತಿಪೂರ್ಣವಾಗಿಲ್ಲದ ಕಾರಣ ಸೇಡಿನ ರಾಜಕೀಯ ವಿಜೃಂಭಿಸಿ ಅಧಿಕಾರ ಕಳೆದುಕೊಂಡ ವ್ಯಕ್ತಿ ಮೂಲೆಗುಂಪಾಗಿ ನಿಕೃಷ್ಟತೆಗೆ, ಅವಮಾನಕ್ಕೆ, ಹಲವು ಸಂದರ್ಭಗಳಲ್ಲಿ ರಕ್ತಪಾತಕ್ಕೆ, ಬಲಿಯಾದ ಉದಾಹರಣೆಗಳು ಗಾಬರಿ ಹುಟ್ಟಿಸುವ ಮಟ್ಟದಲ್ಲಿವೆ.  ಹೆಸರಿಗೆ ಕಳಂಕ ಹತ್ತಿಸಿಕೊಳ್ಳುವುದರಿಂದ ರಾಷ್ಟ್ರನಿರ್ಮಾತೃ ಮಹಮದ್ ಆಲಿ ಜಿನ್ನಾ ಅವರೂ ತಪ್ಪಿಸಿಕೊಳ್ಳಲಾಗಲಿಲ್ಲ ಎಂದರೆ ಪರಿಸ್ಥಿತಿಯ ಕಲುಷಿತತೆಯ ಅಗಾಧತೆಯ ಒಂದು ಚಿತ್ರಣ ದೊರೆಯತ್ತದೆ.

ದಿನಕ್ಕೆ ಐದುಸಲದ ಪ್ರಾರ್ಥನೆಯಂತಹ ಇಸ್ಲಾಂನ ಧಾರ್ಮಿಕ ನಿಯಮವನ್ನು ಪಾಲಿಸದ, ಮಧ್ಯಪಾನ ಮಾಡುತ್ತಿದ್ದ, ಹಂದಿಮಾಂಸವನ್ನು ಇಷ್ಟಪಡುತ್ತಿದ್ದ, ಪಾರ್ಸೀ ಸ್ತ್ರೀಯನ್ನು ವಿವಾಹವಾಗಿದ್ದ ಜಿನ್ನಾರನ್ನು ಒಬ್ಬ ನಿಷ್ಟಾವಂತ ಮುಸ್ಲಿಂನಂತೆ ಬಿಂಬಿಸುವ ಪ್ರಯತ್ನ ಅವರ ನಿಧನಾನಂತರ ಆರಂಭವಾಯಿತು.  ಪಾಶ್ಚಾತ್ಯ ಉಡುಪುಗಳನ್ನು ಹೆಚ್ಚಾಗಿ ಇಷ್ಟಪಟ್ಟು ಧರಿಸುತ್ತಿದ್ದ ಜಿನ್ನಾ ಇಸ್ಲಾಂಗೆ ಹತ್ತಿರವಾದ ಶೇರ್ವಾನಿ ಮತ್ತು ಟೋಪಿ ಧರಿಸಿದ್ದು ತಮ್ಮ ಬದುಕಿನ ಅತ್ಯಂತ ಕಡಿಮೆ ಆವಧಿಯಲ್ಲಿ.  ಆ ಉಡುಪಿನಲ್ಲಿದ್ದ ಅವರ ಚಿತ್ರಗಳಷ್ಟೇ ಸರಕಾರಿ ಕಚೇರಿಗಲ್ಲಿ, ಸರಕಾರೀ ಪ್ರಕಟಣೆಗಳಲ್ಲಿ, ಅಂಚೆಚೀಟಿಗಳು ಮತ್ತು ಕರೆನ್ಸಿ ನೋಟುಗಳಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ ಕಾಣಿಸಿಕೊಂಡು ಅವರ ಬೇರೆಲ್ಲಾ ರೂಪಗಳನ್ನು ಸಂಪೂರ್ಣವಾಗಿ ಮರೆಮಾಡಿಬಿಟ್ಟವು.  ಜಿನ್ನಾರ ನಿಧನಕ್ಕೆ ಕಾರಣವಾದದ್ದು ಕ್ಯಾನ್ಸರ್ ಜತೆಗೆ ಕ್ಷಯರೋಗ ಸಹಾ.  ಆದರೆ ಕ್ಷಯವನ್ನು ಬಡವರ ರೋಗವೆಂದು ಪರಿಗಣಿಸಿ ಅದು ರಾಷ್ಟ್ರಪಿತನಿಗೆ ಅಂಟಿಕೊಂಡಿದ್ದನ್ನು ಮರೆಯಾಗಿಸುವ ವ್ಯವಸ್ಥಿತ ಪ್ರಯತ್ನವೂ ನಡೆಯಿತು.  ನವರಾಷ್ಟ್ರಕ್ಕೆ ಅಗತ್ಯವೆಂದು ಭಾವಿಸಲ್ಪಟ್ಟ ರಾಷ್ಟ್ರಪಿತನ ಈ ಒಂದು ಆರಾಧನಾಯೋಗ್ಯ, ಮಾದರಿ ಚಿತ್ರಣ ಮುಂದಿನ ಒಂದು ಒಂದೂವರೆ ದಶಕದಲ್ಲಿ ಸ್ವಾರ್ಥಿ ನಾಯಕರಿಂದ ಮಸುಕಾಗತೊಡತೊಡಗಿತು.  ಇದು ಅಂತಿಮವಾಗಿ ಎಂತಹ ಕೆಳಮಟ್ಟ ತಲುಪಿತೆಂದರೆ ಜಿನ್ನಾ ತಮ್ಮ ಸಹೋದರಿ ಫಾತಿಮಾ ಜಿನ್ನಾರೊಂದಿಗೆ ದೈಹಿಕ ಸಂಬಂಧ ಹೊಂದಿದ್ದರೆಂದು ಮಿಲಿಟರಿ ಸರ್ವಾಧಿಕಾರಿ ಅಯೂಬ್ ಖಾನ್ ಹೇಳತೊಡಗಿದರು.  ಇದರ ಹಿಂದಿದ್ದದ್ದು ಅವರ ರಾಜಕೀಯ ಲಾಲಸೆ.  ತನ್ನ ಸರ್ವಾಧಿಕಾರಕ್ಕೆ ಜನಬೆಂಬಲ ಪಡೆದುಕೊಳ್ಳುವುದಕ್ಕೋಸ್ಕರ ಅಯೂಬ್ ೧೯೬೫ರ ಆದಿಯಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ಘೋಷಿಸಿದರು.  ಮೊದಲೇ ಸಾಕಷ್ಟು ಜನಪ್ರಿಯವಾಗಿದ್ದ ಅವರು ತಮ್ಮ ಕಪಿಮುಷ್ಟಿಯಲ್ಲಿದ್ದ ಸರಕಾರಿ ಯಂತ್ರಗಳ ಮೂಲಕ ಜನಬೆಂಬಲದ ಮಟ್ಟವನ್ನು ಅತ್ಯುಚ್ಛಮಟ್ಟಕ್ಕೇರಿಸಿಕೊಳ್ಳುವ ಹುನ್ನಾರದಲ್ಲಿದ್ದರು.  ಆದರೆ ಅವರ ಪ್ರಯತ್ನಕ್ಕೆ ಅಡ್ಡಿಯಾದದ್ದು ವಿರೋಧಪಕ್ಷಗಳೆಲ್ಲವೂ ಒಟ್ಟುಗೂಡಿ ಫಾತಿಮಾ ಜಿನ್ನಾರನ್ನು ಕಣಕ್ಕಿಳಿಸಿದಾಗ.  ದಶಕಗಳ ಕಾಲ ವಿಧುರ ಜಿನ್ನಾರ ಮನೆವಾಳ್ತೆ ನೋಡಿಕೊಂಡು, ಪಾಕಿಸ್ತಾನದ ಸೃಷ್ಟಿಯಲ್ಲಿ ಅವರೆಲ್ಲಾ ಕಾರ್ಯಕ್ರಮಗಳಿಗೆ ಹೆಗಲುಕೊಟ್ಟು ಸಹಕರಿಸಿದ್ದ ಫಾತಿಮಾರ ಬಗ್ಗೆ ದೇಶದಲ್ಲಿ ಸಹಜವಾಗಿಯೇ ಅಪಾರ ಗೌರವ ಮತ್ತು ಪ್ರೀತಿಯಿತ್ತು.  ತನ್ನ ಚುನಾವಣಾ ಲೆಕ್ಕಾಚಾರಗಳು ಬುಡಮೇಲಾಗುವುದೆಂದು ಹೆದರಿದ ಅಯೂಬ್ ಫಾತಿಮಾರ ನಡತೆಯ ಬಗ್ಗೆ ದುರಭಿಪ್ರಾಯ ಮೂಡಿಸಿ ಮತಗಳನ್ನು ಕಸಿಯಲು ಹವಣಿಸಿದರು.  ತನ್ನೀ ಕುಕೃತ್ಯದ ಮೂಲಕ ಜಿನ್ನಾರ ಹೆಸರಿಗೂ ಅಳಿಸಲಾಗದ ಕಳಂಕ ಹಚ್ಚುವುದಕ್ಕೆ ಆ ಸರ್ವಾಧಿಕಾರಿ ಹಿಂದೆಗೆಯಲಿಲ್ಲ.

ಹಾಗೆ ನೋಡಿದರೆ ಸೇಡಿನ ರಾಜಕೀಯ ಮತ್ತು ವಿರೋಧಿಗಳ ಸಂಪೂರ್ಣ ನಿರ್ನಾಮ ಪಾಕಿಸ್ತಾನ ಸೃಷ್ಟಿಯಾದ ಮರುವರ್ಷವೇ ಕಾಣಿಸಿಕೊಂಡರೂ ಅದೊಂದು ವ್ಯವಸ್ಥಿತ ನೀತಿಯಾಗಿ ಬೆಳೆದದ್ದು ಅಯೂಬ್ ಖಾನ್ ಕಾಲದಲ್ಲಿ.  ಜಿನ್ನಾರ ಸಹವರ್ತಿಯಾಗಿದ್ದದ್ದು, ಪಾಕಿಸ್ತಾನಕ್ಕೆ ಅದರ ಮೊದಲ ಸಂವಿಧಾನ ನೀಡಿದ್ದು ಇಸ್ಕಂದರ್ ಮಿರ್ಜಾ ಅವರ ಹೆಗ್ಗಳಿಕೆ.  ಆದರೆ ಅಕ್ಟೋಬರ್ ೧೯೫೮ರಲ್ಲಿ ಅಯೂಬ್ ಖಾನ್ ಸೇನಾಕ್ರಾಂತಿ ನಡೆಸಿದೊಡನೆ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ತಯಾರಾಗಿರಿಸಿದ್ದ ವಿಮಾನದಲ್ಲಿ ಮಿರ್ಜಾರನ್ನು ಕೂರಿಸಿ ಇನ್ನೆಂದೂ ಹಿಂತಿರುಗಕೂಡದೆಂದು ತಾಕೀತು ಮಾಡಿ ಲಂಡನ್‌ಗೆ ಅಟ್ಟಿಬಿಟ್ಟದ್ದು.

ಅಯೂಬ್‌ರ ಸೇಡಿನ ಮನೋಭಾವಕ್ಕೆ ಹೆದರಿ ಮಾಜಿ ಪ್ರಧಾನಿ ಹೆಚ್. ಎಸ್. ಸುರ್ಹವರ್ದಿ ಲೆಬನಾನ್‌ಗೆ ಓಡಿಹೋದರು.  ಆದರೆ ಸರ್ವಾಧಿಕಾರಿಯ ಕೈ ಅಲ್ಲಿಯವರೆಗೂ ಚಾಚಿತು.  ಮುಸ್ಲಿಂ ಲೀಗ್‌ನ ಗಣ್ಯ ನೇತಾರ ಮುಂದೆಂದಾದರೂ ಸ್ವದೇಶಕ್ಕೆ ಹಿಂತಿರುಗಿ ತನಗೆ ಮುಳ್ಳಾಗಬಹುದೆಂಬ ಭಯ ಅಯೂಬ್ ಖಾನ್‌ರಿಗಿತ್ತು.  ಕೊನೆಗೂ ಅವರ ಬೇಹುಗಾರರು ಡಿಸೆಂಬರ್ ೧೯೬೩ರಲ್ಲಿ ಮೊದಲೇ ಅನಾರೋಗ್ಯದಿಂದ ಜರ್ಜರಿತರಾಗಿದ್ದ ಸುಹ್ರವರ್ದಿಯವರ ಹತ್ಯೆಯನ್ನು ಅತ್ಯಂತ ಚಾಕಚಕ್ಯತೆಯಿಂದ ನೆರವೇರಿಸಿಬಿಟ್ಟರು.

ಕೊನೆಗೆ ಮಾರ್ಚ್ ೧೯೬೯ರಲ್ಲಿ ಅಯೂಬ್ ಎಲ್ಲೆಡೆಯಿಂದ ವಿರೋಧ ಎದುರಿಸಿ ಜನರಲ್ ಯಾಹ್ಯಾಖಾನ್‌ಗೆ ಅಧಿಕಾರ ಹಸ್ತಾಂತರಿಸಿ ನಿರ್ಗಮಿಸಿದ ನಂತರ ಮೂಲೆಗುಂಪಾಗಿಹೋದರು.  ಯುದ್ಧಾನಂತರ ಯಾಹ್ಯಾ ಖಾನ್ ಸಹಾ ಅವಮಾನಿತರಾಗಿ ಝುಲ್ಫಿಕರ್ ಆಲಿ ಭುಟ್ಟೋಗೆ ಅಧಿಕಾರ ವರ್ಗಾಯಿಸಿದರು.  ಗಾದಿ ಸಿಕ್ಕಿದೊಡನೆ ಭುಟ್ಟೋ ಮಾಡಿದ ಮೊದಲ ಕೆಲಸ ಯಾಹ್ಯಾ ಖಾನ್‌ರನ್ನು ಗೃಹಬಂಧನದಲ್ಲಿರಿಸಿದ್ದು.

ಕೊನೆಗೂ ಭುಟ್ಟೋರ ದಾರುಣ ಅಂತ್ಯವಾದದ್ದು ತನ್ನಿಡೀ ರಾಜಕೀಯ ಜೀವನದಲ್ಲಿ ಯಾವ ಸೇನೆಯನ್ನು ಮತ್ತೆಮತ್ತೆ ಅವಮಾನಿಸಿದ್ದರೋ ಅದೇ ಸೇನೆಯಿಂದ.  ಅಧಿಕಾರ ಲಾಲಸೆಯಿಂದ ಸೇನೆಗೆ ಕೆಟ್ಟಹೆಸರು ತರಲು ೬೫ರಲ್ಲಿ ಅದನ್ನು ಭಾರತದ ವಿರುದ್ಧ ಯುದ್ಧಕ್ಕೆ ದೂಡಿದ್ದು, ಅವನಿಗೆ ಫ್ರಾಕ್ ತೊಡಿಸಿ ಪಾಕಿಸ್ತಾನದ ಬೀದಿಗಳಲ್ಲಿ ಕೋತಿಯಂತೆ ಕುಣಿಸುತ್ತೇನೆ ಎಂದು ಸೇನಾದಂಡನಾಯಕ ಮಹಮದ್ ಮೂಸಾ ಖಾನ್‌ರನ್ನು ಮತ್ತೆಮತ್ತೆ ಲೇವಡಿ ಮಾಡಿದ್ದು, ತಾನೇ ದಂಡನಾಯಕನ ಸ್ಥಾನಕ್ಕೇರಿಸಿದ್ದ ಜಿಯಾ ಉಲ್ ಹಕ್‌ರನ್ನು ಸಾರ್ವಜನಿಕವಾಗಿ ಜನರನ್ನು ರಂಜಿಸಲು ಕುಣಿಯುವ ಕೋತಿ ಎಂದು ಕರೆದದ್ದು ಅದಾವುದನ್ನೂ ಸೇನೆ ಮರೆಯಲಿಲ್ಲ.  ಸಿಕ್ಕಿದ ಮೊದಲ ಅವಕಾಶದಲ್ಲಿ ಭುಟ್ಟೋರನ್ನು ಉರುಳಿಸಿದ ಜಿಯಾ ನಂತರ ಅವರ ಮೇಲೆ ಮಿಲಿಟರಿ ನ್ಯಾಯಾಲಯ ರಾಜಕೀಯ ಕೊಲೆಯೊಂದರ ಆರೋಪ ಹೊರಿಸಿ ಗಲ್ಲುಶಿಕ್ಷೆ ವಿಧಿಸುವಂತೆ ನೋಡಿಕೊಂಡರು.

ಏಪ್ರಿಲ್ ೪, ೧೯೭೯ರಂದು ರಾತ್ರಿ ಎರಡೂವಗೇ ಮೊದಲೇ ನಿತ್ರಾಣರಾಗಿದ್ದ, ಕೈಕೋಳ ತೊಡಿಸಿದ್ದ ಭುಟ್ಟೋರನ್ನು ಎಬ್ಬಿಸಿ ಸ್ನಾನ ಮಾಡಿಸಿ ಹೊಸ ಬಿಳೀ ಕುರ್ತಾ ಪೈಜಾಮಾ ತೊಡಿಸಿ ವಧಾಸ್ಥಾನಕ್ಕೆ ಕೈಕಾಲುಗಳನ್ನು ಹಿಡಿದು ಎತ್ತಿಕೊಂಡು ಹೋಗಲಾಯಿತು.  ಹಾಗೆ ಎತ್ತಿಕೊಂಡು ಹೋಗುತ್ತಿದ್ದವರಲ್ಲೊಬ್ಬ ನೆಲವನ್ನು ಗುಡಿಸುತ್ತಿದ್ದ ಭುಟ್ಟೋರ ಹೊಸ ಕುರ್ತಾದ ಮೇಲೆ ಕಾಲಿಟ್ಟದ್ದರಿಂದಾಗಿ ಅದು ಹರಿದುಹೋಯಿತು.  ನೇಣುಗಂಬದ ಮುಂದೆ ನಿಲ್ಲಲೂ ಕಷ್ಟಪಡುತ್ತಿದ್ದ ಭುಟ್ಟೋರ ಬಾಯಿಯಿಂದ ಕ್ಷೀಣವಾಗಿ ಬಂದದ್ದು ಯೆಹ್ ಮುಝೆ ಎಂಬ ಎರಡು ಪದಗಳು ಮಾತ್ರ.  ಭುಟ್ಟೋ ಹೇಳಬಯಸಿದ್ದು ಈ ಶಿಕ್ಷೆ!  ನನಗೆ? ಅಂತಲೋ ಅಥವಾ ಕೈಕೋಳಗಳನ್ನು ಕುರಿತು ಇದು ನನಗೆ ತೊಂದರೆ ಕೊಡುತ್ತಿದೆ ಅಂತಲೋ ಎಂಬ ಜಿಜ್ಞಾಸೆ ಇನ್ನೂ ನಡೆಯುತ್ತಿದೆ.  ಅದಿರಲಿ, ಇಡೀ ಪ್ರಕರಣ ಎತ್ತಿತೋರುವುದು ಭುಟ್ಟೋ ವಿರುದ್ಧ ಸೇನೆಯ ಆಕ್ರೋಶ ಅದೆಷ್ಟಿತ್ತು ಅಂತ.

ಭುಟ್ಟೋರ ಹಾದಿಯನ್ನೇ ಹಿಡಿದಿದ್ದ ನವಾಜ್ ಶರೀಫ್ ನೇಣಿನ ಕುಣಿಕೆಯಿಂದ ತಪ್ಪಿಸಿಕೊಂಡದ್ದೊಂದು ಸೋಜಿಗ.  ಅಕ್ಟೋಬರ್ ೧೯೯೯ರಲ್ಲಿ ಕೆಲವು ಸೇನಾಧಿಕಾರಿಗಳನ್ನು ತನ್ನೆಡೆ ಸೆಳೆದುಕೊಂಡು, ಶ್ರೀಲಂಕಾ ಸೇನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕೊಲಂಬೋಗೆ ಹೋಗಿದ್ದ ಸೇನಾದಂಡನಾಯಕ ಮುಷರಫ್‌ರನ್ನು ಪದಚ್ಯುತಗೊಳಿಸಲು ಪ್ರಧಾನಮಂತ್ರಿ ಶರೀಫ್ ಹೂಡಿದ ಕುಟಿಲ ಪ್ರಯತ್ನ ತಿರುಗುಬಾಣವಾಯಿತು.  ಶರೀಫ್ ಸಂಪರ್ಕಿಸಿದ್ದ ಸೇನಾಧಿಕಾರಿಗಳಿಂದಲೇ ಮಾಹಿತಿ ಬಂದೊಡನೆ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ ನಾಗರಿಕ ವಿಮಾನವೊಂದನ್ನು ಹತ್ತಿ ಮುಷರಫ್ ಕರಾಚಿಯತ್ತ ದೌಡಾಯಿಸಿದಾಗ ಆ ವಿಮಾನಕ್ಕೆ ಇಳಿಯಲು ಅವಕಾಶ ಕೊಡದಂತೆ ಶರೀಫ್ ನಿಲ್ಡಾಣದ ಅಧಿಕಾರಿಗಳಿಗೆ ತಾಕೀತು ಮಾಡಿದರು.  ಮುಷರಫ್ ಜತೆಗೆ ನೂರಾರು ಅಮಾಯಕರ ಬದುಕಿನೊಡನೆ ಚೆಲ್ಲಾಟವಾಡಲು ನೋಡಿದ ಶರೀಫ್ ಹುನ್ನಾರ ಅಕ್ಷಮ್ಯ.  ಕೊನೆಗೂ ಮರುಇಂಧನಪೂರೈಕೆಗಾಗಿ ಅವಕಾಶ ಪಡೆದು ವಿಮಾನ ಕೆಳಗಿಳಿದಾಗ ನಿಲ್ದಾಣದಿಂದಲೇ ತನ್ನ ಸಹೋದ್ಯೋಗಿಗಳನ್ನು ಸಂಪರ್ಕಿಸಿ ಇಸ್ಲಾಮಾಬಾದ್‌ನಲ್ಲಿ ಸೇನಾಕ್ರಾಂತಿಗೆ, ಶರೀಫ್‌ರ ಬಂಧನಕ್ಕೆ ವ್ಯವಸ್ಥೆ ಮಾಡಿದ ಮುಷರಫ್ ಕಾರ್ಯತಂತ್ರ ಬೆರಗುಗೊಳಿಸುವಂತಹದ್ದು.  ಎಷ್ಟಿದ್ದರೂ ಅದು ಇಬ್ಬರಲ್ಲೊಬ್ಬರು ಕೆಳಗುರುಳಲೇಬೇಕಾಗಿದ್ದಂತಹ ಸನ್ನಿವೇಶ.  ಸೋಲೊಪ್ಪಲು ಮುಷರಫ್ ತಯಾರಿರಲಿಲ್ಲ ಎನ್ನುವುದಕ್ಕಿಂತಲೂ ತನ್ನೊಳಗೆ ಒಡಕನ್ನುಂಟುಮಾಡುವ ಶರೀಫ್ ಪ್ರಯತ್ನಕ್ಕೆ ಸಹಕರಿಸಲು ಸೇನೆ ತಯಾರಿರಲಿಲ್ಲ ಎನ್ನುವುದು ಆ ಸಂಜೆಯ ಕೆಲವು ತಾಸುಗಳ ಕ್ರೂರ ವಾಸ್ತವಕ್ಕೆ ಹೆಚ್ಚು ಹತ್ತಿರ.

ಶರೀಫ್‌ರಿಗೂ ಭುಟ್ಟೋ ಹಾದಿಯನ್ನೇ ತೋರುವ ಮುಷರಫ್ ಪ್ರಯತ್ನಕ್ಕೆ ತಡೆಯಾಗಿ ಪಂಜಾಬ್‌ನ ಈ ಅತೀ ಶ್ರೀಮಂತ ರಾಜಕಾರಣಿ ನೇಣು ತಪ್ಪಿಸಿಕೊಂಡದ್ದು ಸೌದಿ ಅರೇಬಿಯಾದ ಮಧ್ಯಪ್ರವೇಶದಿಂದ.  ಶರೀಫ್‌ರೊಂದಿಗೆ ಘನಿಷ್ಟ ವ್ಯವಹಾರ ವಹಿವಾಟುಗಳನ್ನು ಹೊಂದಿದ್ದ ಸೌದಿ ರಾಜಮನೆತನ ಶರೀಫ್ ಜೀವದಾನಕ್ಕಾಗಿ ಮುಷರಫ್ ಮನವೊಲಿಸುವುದರಲ್ಲಿ ಕೊನೆಗೂ ಯಶಸ್ವಿಯಾಯಿತು.  ಹತ್ತು ವರ್ಷಗಳವರೆಗೆ ದೇಶಕ್ಕೆ ಹಿಂತಿರುಗಲಾರೆ, ಇಪ್ಪತ್ತೊಂದು ವರ್ಷಗಳವರೆಗೆ ರಾಜಕೀಯಕ್ಕೆ ಮರುಪ್ರವೇಶ ಮಾಡಲಾರೆ ಎಂಬ ವಾಗ್ದಾನ ಕೊಟ್ಟು ಶರೀಫ್ ಜೆಡ್ಡಾಗೆ ಹೋಗಿ ನೆಲೆಸಿದರು.

ಕಳೆದೈದು ವರ್ಷಗಳಲ್ಲಿನ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಶರೀಫ್ ಸ್ವದೇಶಕ್ಕೆ ಹಿಂತಿರುಗಿ, ರಾಜಕೀಯ ಪ್ರವೇಶಿಸಿ ಈಗ ಮತ್ತೆ ಪ್ರಧಾನಮಂತ್ರಿಯಾಗುವ ಹೊಸ್ತಿಲಲ್ಲಿ ನಿಂತಿದ್ದಾರೆ.  ಈ ಅಭೂತಪೂರ್ವ ಸಾಧನೆಗೆ ಅವರನ್ನು ಅಭಿನಂದಿಸುತ್ತಾ ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳುವ ಅಗತ್ಯವಿದೆ.  ಹದಿಮೂರೂವರೆ ವರ್ಷಗಳ ಹಿಂದೆ ಕೈಕೋಳ ತೊಡಿಸಿಕೊಂಡು ನಿಂತ ಕ್ಷಣಗಳ ನೆನಪಾದಾಗಲೆಲ್ಲಾ ಶರೀಫ್ ಮುಖ ಈಗಲೂ ಕೋಪದಿಂದ ಕೆಂಪಾಗಿಬಿಡುತ್ತದೆ ಎಂದು ಅವರ ನಿಕಟ ಸಹವರ್ತಿಯೊಬ್ಬರು ಹೇಳಿದ್ದಾರೆ.  ಸಬ್‌ಜೈಲ್ ಆಗಿ ಬದಲಾಗಿರುವ ತನ್ನದೇ ಫಾರ್ಮ್‌ಹೌಸ್‌ನಲ್ಲಿ ಅಕ್ಷರಶಃ ಬೋನಿನಲ್ಲಿ ಸಿಕ್ಕಿಬಿದ್ದಿರುವ ಹೆಗ್ಗಣದಂತಾಗಿರುವ ಮುಷರಫ್‌ರ ಅಂತ್ಯಕ್ಕೆ ಕಾರ್ಯಯೋಜನೆ ರೂಪಿಸಲು, ಚುನಾವಣೆಗಳು ತನಗೆ ನೀಡಿರುವ ಅವಕಾಶವನ್ನು ತನ್ನ ಸೇಡಿಗಾಗಿ ದುರುಪಯೋಗಪಡಿಸಿಕೊಳ್ಳಲು ಶರೀಫ್ ಪ್ರಯತ್ನಿಸಿದರೆ ಪಾಕಿಸ್ತಾನದ ಸೇಡಿನ ರಾಜಕೀಯ ಇತಿಹಾಸದ ಮತ್ತೊಂದು ಅಧ್ಯಾಯ ಆರಂಭವಾಗುತ್ತದೆ.  ಅದು ಅಂತಿಮವಾಗಿ ಅವರನ್ನೇ ಬಲಿತೆಗೆದುಕೊಳ್ಳಲೂಬಹುದು.

ಕ್ಷಮೆ ಹಾಗೂ ಗತದೊಡನೆ ರಾಜಿಯಂತಹ ವಿವೇಕಯುತ ಮಾರ್ಗಗಳನ್ನು ಅನುಸರಿಸಿ ಪಾಕಿಸ್ತಾನದ ರಾಜಕಾರಣದ ಗತಿಯನ್ನೇ ಬದಲಾಯಿಸಿಬಿಡುವ, ಹೊಸ ಧನಾತ್ಮಕ ರಾಜಕೀಯ ಸಂಸ್ಕೃತಿಯೊಂದಕ್ಕೆ ನಾಂದಿ ಹಾಡಿ ಆ ದುರದೃಷ್ಟಶಾಲಿ ದೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಮಾದರಿ ರಾಜಕಾರಣಿಯಾಗುವ ಅವಕಾಶ ಶರೀಫ್ ಮುಂದಿದೆ.  ಅವರು ಆ ಮಾರ್ಗ ಹಿಡಿಯಲಿ ಎಂದು ಹಾರೈಸೋಣ.

3 comments:

  1. I am completely overpowered by the presentations (as no other site has done so far.) especially political ones. Thyanselaat! Pray continue in the same spirit.

    ReplyDelete