ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, July 17, 2013

ಮುಸ್ಲಿಂ ಸಮುದಾಯದ ಉತ್ಪ್ರೇಕ್ಷಿತ ಕೊರಗುಗಳು



"ಇಂದು ಈ ದೇಶದಲ್ಲಿ ಹಿಂಸೆ, ಹತ್ಯಾಕಾಂಡಗಳು ನಡೆದಿರುವುದು ಜಾತಿ ಸಮಾವೇಶ, ರ‍್ಯಾಲಿಗಳಿಂದಲ್ಲ. ಪ್ರವೀಣ್ ತೊಗಾಡಿಯಾರಂತಹ ಮಂದಿಗಳು ದೇಶಾದ್ಯಂತ ಏರ್ಪಡಿಸಿಕೊಂಡು ಬಂದ ಹಿಂದೂ ಸಮಾಜೋತ್ಸವದಂತಹ ಸಮಾವೇಶಗಳು, ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ್ದವು.  ಹಲವು ಕೋಮುಗಲಭೆಗಳಿಗೆ, ಹಿಂಸೆಗಳಿಗೆ ಬಿಜೆಪಿ ಮತ್ತು ಆರೆಸ್ಸೆಸ್‌ನ ರ‍್ಯಾಲಿಗಳು ಕಾರಣವಾಗಿವೆ.  ಅವು ಸಮಾಜವನ್ನು, ದೇಶವನ್ನು ಒಡೆದಿವೆ."
ಉತ್ತರ ಪ್ರದೇಶದಲ್ಲಿ ಜಾತಿಯಾಧಾರಿತ ರ‍್ಯಾಲಿಗಳನ್ನು ನಿರ್ಬಂಧಿಸಿ ಕಳೆದ ಗುರುವಾರ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮರುದಿನವೇ ಅಂದರೆ ಶುಕ್ರವಾರ ಪ್ರಕಟವಾದ ಕನ್ನಡ ದೈನಿಕವೊಂದರ ಸಂಪಾದಕೀಯದಲ್ಲಿ ಕಂಡುಬಂದ ಸಾಲುಗಳಿವು.  ಪ್ರವೀಣ್ ತೊಗಾಡಿಯಾರಂತಹ ಮಂದಿಗಳು ದೇಶಾದ್ಯಂತ ನಡೆಸಿಕೊಂಡು ಬಂದ ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ ಬಗ್ಗೆ ಹೇಳುವ ಈ ಸಂಪಾದಕೀಯ ಅಕ್ಬರುದ್ದೀನ್ ಒವೈಸಿಯಂತಹ ಮಂದಿಗಳು ಹದಿನೈದು ನಿಮಿಷಗಳಲ್ಲಿ ಹಿಂದೂಗಳನ್ನು ಮಟ್ಟಹಾಕುತ್ತೇವೆಂದು ಘೋಷಿಸುವ ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ ಬಗ್ಗೆ ಮೌನವಾಗಿದೆ.
ನನ್ನ ಅರಿವಿನ ಪ್ರಕಾರ ಈ ದೇಶ "ಒಡೆದದ್ದು" ೧೯೪೭ರಲ್ಲಿ ಮತ್ತು ಅದಕ್ಕೆ ಆರೆಸ್ಸೆಸ್ ಆಗಲೀ, ಬಿಜೆಪಿಯಾಗಲೀ ಏರ್ಪಡಿಸಿದ ರ‍್ಯಾಲಿಗಳು ಕಾರಣವಾಗಿರಲಿಲ್ಲ.  ಬ್ರಿಟಿಷ್ ವಸಾಹತುಶಾಹಿ ಆಳರಸರ ಕೈಗೊಂಬೆಯಾಗಿ, ಅವರ ಸಕ್ರಿಯ ಸಹಕಾರದಿಂದ ಮುಸ್ಲಿಂ ಲೀಗ್ ನಡೆಸಿದ ರ‍್ಯಾಲಿಗಳು ಸಮಾಜವನ್ನು ಒಡೆದವು ಮತ್ತು ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಮುಸ್ಲಿಂ ಲೀಗ್ ಆಗಸ್ಟ್ ೧೬, ೧೯೪೬ರಂದು ಕಲ್ಕತ್ತಾ ನಗರದಲ್ಲಿ ಆಯೋಜಿಸಿದ "ಡೈರೆಕ್ಟ್ ಆಕ್ಷನ್ ಡೇ" ಎಂಬ ಕೋಮುವಾದಿ ರ‍್ಯಾಲಿ ಮತ್ತದು ಬಲಿತೆಗೆದುಕೊಂಡ ಸುಮಾರು ನಾಲ್ಕುಸಾವಿರ ಜೀವಗಳು ದೇಶದ ಐಕ್ಯತೆಗೆ ಅಂತಿಮ ಹೊಡೆತ ನೀಡಿ ಭಾರತ ಇಬ್ಬಾಗವಾಗಲು ಕಾರಣವಾದವು.  ಭಾರತವಷ್ಟೇ ಇಬ್ಬಾಗವಾಗಲಿಲ್ಲ, ಮುಸ್ಲಿಂ ಲೀಗ್‌ನ ಮೂರ್ಖತನದಿಂದಾಗಿ ಉಪಖಂಡದ ಬಲಿಷ್ಟ ಮುಸ್ಲಿಂ ಸಮುದಾಯವೂ ಇಬ್ಬಾಗವಾಯಿತು.  ೧೯೭೧ರಲ್ಲಿ ಅದು ಮೂರು ಭಾಗಗಳಾಗಿ ಹೋಳಾಗಿ ಮತ್ತಷ್ಟು ಕೃಶವಾಯಿತು.  ಈ ಒಡೆಯುವಿಕೆಗೂ ಬಿಜೆಪಿಯಾಗಲೀ, ಆರೆಸ್ಸೆಸ್ ಆಗಲೀ ಕಾರಣವಾಗಿರಲಿಲ್ಲ.
ಜಾತಿಯಾಧಾರಿತ ರ‍್ಯಾಲಿಗಳನ್ನು ಬೆಂಬಲಿಸುವಂತಹ, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಈ ಸಂಪಾದಕೀಯದಲ್ಲಿನ ಮತ್ತೊಂದು ಸಾಲು ಹೀಗಿದೆ:
"ಹಿಂದುತ್ವದ ಹೆಸರಿನಲ್ಲಿ ಕೇಸರಿ ನಾಯಕರು ಹಮ್ಮಿಕೊಳ್ಳುತ್ತಿರುವ ಹಿಂದುತ್ವದ ರ‍್ಯಾಲಿಗಳಿಗೂ, ಹಾಗೆಯೇ ಮುಸ್ಲಿಮ್ ರಾಜಕಾರಣಿಗಳು ಹಮ್ಮಿಕೊಳ್ಳುವ ರಾಜಕೀಯ ರ‍್ಯಾಲಿಗಳಿಗೂ ಕಡಿವಾಣ ಬೀಳಬೇಕಾಗಿದೆ."
ಈ ಸಾಲಿನಲ್ಲಿರುವ ಪದಗಳು ಮತ್ತವುಗಳ ಜೋಡಣೆಯಲ್ಲಿ ಈ ಸಂಪಾದಕೀಯ ಪ್ರದರ್ಶಿಸಿರುವ ಜಾಣತನವನ್ನು ಗಮನಿಸಿ.  "ಹಿಂದುತ್ವ"ದ ಬಗ್ಗೆ "ಕೇಸರಿ ನಾಯಕರು" ಹಮ್ಮಿಕೊಳ್ಳುವ "ಹಿಂದುತ್ವ"ದ ರ‍್ಯಾಲಿಗಳಿಗೆ ಮತ್ತು "ಮುಸ್ಲಿಮ್ ರಾಜಕಾರಣಿಗಳು" ಹಮ್ಮಿಕೊಳ್ಳುವ "ರಾಜಕೀಯ ರ‍್ಯಾಲಿ"ಗಳಿಗೆ ಕಡಿವಾಣ ಬೀಳಬೇಕಾಗಿದೆಯಂತೆ.  ಎಲ್ಲರಿಗೂ ಸೇರಿದ ಈ ಜಗತ್ತಿನಲ್ಲಿ ನೆಮ್ಮದಿಯಾಗಿ ಬದುಕಲು ಮತ್ತು ಇತರರನ್ನು ನೆಮ್ಮದಿಯಾಗಿ ಬದುಕಲು ಬಿಡಲು ಇಂತಹ ಜಾಣತನದ ಅಗತ್ಯವಿದೆಯೇ ಎಂದು ಪ್ರಶ್ನಿಸುತ್ತಾ ಈ ವಿಷಯವನ್ನು ವಿಶ್ಲೇಷಣೆಗೆ ಎತ್ತಿಕೊಳ್ಳುತ್ತೇನೆ.
ವಿಶ್ಲೇಷಣೆಗೆ ಮೊದಲು ಒಂದು ಸ್ಪಷ್ಟೀಕರಣ:
ಮಾನವರೆಲ್ಲರೂ ಸಮಾನರು ಎಂಬ ಧೃಡನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತು ಎಲ್ಲ ಬಗೆಯ ಶೋಷಣೆ, ಭೇದಭಾವ, ತಾರತಮ್ಯ, ಹಿಂಸೆಗಳನ್ನು ತಿರಸ್ಕರಿಸುವುದು ನನ್ನ ಜೀವನಮೌಲ್ಯ.  ಇದನ್ನು ಪುರಸ್ಕರಿಸದ ಯಾವುದೇ ಧರ್ಮ ನನಗೆ ಅಧರ್ಮ.  ಧರ್ಮವನ್ನು ತಿರಸ್ಕರಿಸಿ ಮಾತಾಡಿ, ಬರೆದು ಪ್ರಶಸ್ತಿ, ಪುರಸ್ಕಾರ, ಸ್ಥಾನಮಾನಗಳನ್ನು ಗಳಿಸಿಕೊಂಡು ಜೀವನಪೂರ್ತಿ ಅನುಭವಿಸಿದ ನಂತರ "ನಾನೊಬ್ಬ ಹಿಂದೂ" ಎಂದು ಹೇಳುವ ಅಪ್ರಾಮಾಣಿಕತೆ ನನ್ನಲ್ಲಿಲ್ಲ.  ವಿಮರ್ಶೆಯನ್ನು ಸ್ವಾಗತಿಸುವ ಧರ್ಮದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುವ, ವಿಮರ್ಶೆಗೆ ಬದಲಾಗಿ ತಲೆದಂಡ ಕೇಳುವ ಧರ್ಮದ ಬಗ್ಗೆ ಜಾಣಮೌನ ವಹಿಸುವ ಚತುರಮತಿ ಬುದ್ಧಿಜೀವಿಯೂ ನಾನಲ್ಲ.  ಒಂದುಕಡೆಯಿಂದ ಬೆಂಬಲ ಪಡೆದು ಇನ್ನೊಂದು ಕಡೆಗೆ ಬಾಣ ಹೂಡದೇ, ಆಸರೆಗಾಗಿ ಒಂದು ಕಡೆ ವಾಲಿಕೊಳ್ಳದೇ, ಸ್ವತಂತ್ರನಾಗಿರುವ ನನ್ನಂಥವರಿಗೆ ಸಿಗುವ ಬೆಂಬಲ ಕಡಿಮೆ ಎಂಬ ಅರಿವು ನನಗಿದೆ.  ಅಲ್ಲದೇ, ಪ್ರಶಸ್ತಿ, ಸ್ಥಾನಮಾನಗಳ ಹುಚ್ಚೂ ನನಗಿಲ್ಲ.  ಈ ವಾಸ್ತವಗಳೇ ಮೇಲಿನ ಸಂಪಾದಕೀಯವನ್ನೂ, ಅದನ್ನು ವ್ಯಕ್ತಪಡಿಸಿದ ಪತ್ರಿಕೆಯ ಉದ್ದೇಶವನ್ನೂ ಪ್ರಶ್ನಿಸುವ ನೈತಿಕ ಧೈರ್ಯವನ್ನು ನನಗೆ ನೀಡಿವೆ.  ತತ್‌ಪರಿಣಾಮವಾದ ಈ ವಿಶ್ಲೇಶಣೆಯಲ್ಲಿ ನನ್ನ ವಾದಸರಣಿ ಹೀಗಿದೆ: ಮುಸ್ಲಿಂ ಸಮುದಾಯ ಈ ನಾಡಿಗೆ ಎರಡು ಬಗೆಯಲ್ಲಿ ಅನ್ಯಾಯವೆಸಗಿದೆ.  ಒಂದು- ಶತಮಾನಗಳ ಕಾಲ ತನ್ನ ರಾಜಕೀಯ ಅಧಿಕಾರವನ್ನು ಒಪ್ಪಿಕೊಂಡು, ಸಹಕರಿಸಿದ ಹಿಂದೂ ಸಮುದಾಯದ ವಿರುದ್ಧ ನಿಂತು ಬ್ರಿಟಿಷ್ ವಸಾಹತುಶಾಹಿಗಳಿಗೆ ಸಹಕರಿಸಿತು.  ಎರಡು- ತನ್ನ ಉತ್ಪ್ರೇಕ್ಷಿತ ಕುಂದುಗಳ ಬಗ್ಗೆ ದೊಡ್ಡದಾಗಿ ದನಿಯೆತ್ತಿ, ಆ ಸದ್ದಿನಲ್ಲಿ ಈ ನಾಡಿನಲ್ಲಿ ನಿಜವಾಗಿ ನೊಂದವರ ದನಿ ಅಡಗಿಹೋಗುವಂತೆ ಮಾಡಿತು.
  ಪ್ರವಾದಿ ಮಹಮದ್ದರ ಜೀವನಕಾಲದಲ್ಲಿಯೇ ಅಂದರೆ ಕ್ರಿ.ಶ. ೬೧೨ರಲ್ಲೇ ಅರಬ್ ವರ್ತಕರು ಕೇರಳದ ಕೋಡಂಗಲ್ಲೂರಿನಲ್ಲಿ ಮಸೀದಿಯೊಂದನ್ನು ನಿರ್ಮಿಸಿದರಂತೆ.  ಇದು ನಿಜವೇ ಆಗಿದ್ದಲ್ಲಿ ಪರಧರ್ಮೀಯರಿಂದ ತುಂಬಿದ್ದ, ತಮ್ಮ ರಾಜಕೀಯ ಅಧಿಕಾರ ಹಾಗೂ ಸೇನಾ ಹಿಡಿತದಲ್ಲಿಲ್ಲದ ದೂರದ ನಾಡೊಂದರಲ್ಲಿ ತಮ್ಮ ಧರ್ಮವನ್ನು ಬಹಿರಂಗವಾಗಿ ಆಚರಿಸುವ ಅವಕಾಶ ಮುಸ್ಲಿಂ ಸಮುದಾಯಕ್ಕೆ ಮೊಟ್ಟಮೊದಲು ದೊರೆತದ್ದು ಬಹುಶ: ಭಾರತದಲ್ಲಿ, ಹಿಂದೂ ಭಾರತದಲ್ಲಿ.
ನಂತರದ ಧೀರ್ಘ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿ ಹೇಳುವುದಾದರೆ ಅಲ್ಪಸಂಖ್ಯಾತ ಮುಸ್ಲಿಂ ರಾಜಕೀಯ ಅಧಿಕಾರವನ್ನು ಅದೆಷ್ಟೋ ಪಟ್ಟು ದೊಡ್ಡದಾಗಿದ್ದ ಪರಧರ್ಮೀಯ ಸಮುದಾಯವೊಂದು ಮಾನ್ಯ ಮಾಡಿದ್ದೂ ಭಾರತದಲ್ಲೇ.  ಪರ್ಶಿಯಾ, ತುರ್ಕಿ, ಲೆವಾಂಟ್, ಉತ್ತರ ಆಫ್ರಿಕಾಗಳಲ್ಲಿ ಅನ್ಯಧರ್ಮಗಳನ್ನು ಸಂಪೂರ್ಣವಾಗಿ ನಾಶಮಾಡಿ ಇಸ್ಲಾಂ ಅನ್ನು ಸಾರ್ವತ್ರಿಕಗೊಳಿಸಿದಂತೆ ಭಾರತದಲ್ಲಿ ಮಾಡದೇಹೋದದ್ದು ಮುಸ್ಲಿಂ ಅರಸರುಗಳ ಹೆಗ್ಗಳಿಕೆಯೇನಲ್ಲ, ಪರಧರ್ಮ ಸಹಿಷ್ಣುತೆಯೂ ಅಲ್ಲ.  ಅದೊಂದು ಸೇನಾ ಅಗತ್ಯವಾಗಿತ್ತು ಅಷ್ಟೇ.  ಉಳಿದೆಲ್ಲಾ ಕಡೆ ಇಸ್ಲಾಮಿಕ್ ಪ್ರಭುತ್ವಗಳಿಗೆ ಅಪಾಯವೊದಗಿದ್ದು ಇಸ್ಲಾಮೇತರರಿಂದ.  ಆದರೆ ಭಾರತದ ಮುಸ್ಲಿಂ ರಾಜಮನೆತನಗಳಿಗೆ ಕಂಟಕಪ್ರಾಯರಾಗಿದ್ದದ್ದು ಪರ್ಶಿಯಾ, ಅಫ್ಘಾನಿಸ್ತಾನ್ ಹಾಗೂ ಮಧ್ಯ ಏಶಿಯಾದ ಮುಸ್ಲಿಂ ಸಾಮ್ರಾಜ್ಯಗಳು.  ಅವುಗಳ ವಿರುದ್ಧ ಸಮರ್ಥವಾಗಿ ಸೆಣಸಬೇಕಾದರೆ ಭಾರತದಲ್ಲಿ ಯಾವುದೇ ತೀವ್ರ ಪ್ರತಿರೋಧ ತಲೆಯೆತ್ತದಂತೆ ನೋಡಿಕೊಳ್ಳಬೇಕಾದ್ದು ಭಾರತೀಯ ಮುಸ್ಲಿಂ ಅರಸರಿಗೆ ಅತ್ಯಗತ್ಯವಾಗಿತ್ತು.  ಅವರ ಹಿಂದೂ-ಪ್ರೇಮದ ಹಿಂದಿದ್ದದ್ದು ಇದು.  ಹೊರಗಿನ ಮುಸ್ಲಿಂ ಸೇನೆಗಳ ವಿರುದ್ಧದ ಅವರ ಸಂಘರ್ಷದಲ್ಲಿ ಹಿಂದೂಗಳು ಸಕ್ರಿಯವಾಗಿ ಸಹಕರಿಸಿದರು.  ಇಂಥದೇ ಸಹಕಾರ ಮುಸ್ಲಿಂ ಅರಸರಿಗೆ ಐಬೀರಿಯಾ ಹಾಗೂ ಬಾಲ್ಕನ್‌ಗಳಲ್ಲಿ ದೊರೆಯಲಿಲ್ಲ.  ಹೀಗಾಗಿ ಅವರು ಅಲ್ಲಿಂದ ಕಾಲ್ತೆಗೆಯಬೇಕಾಯಿತು.  ಅಂತಿಮವಾಗಿ ಭಾರತದಲ್ಲಿ ಮುಸ್ಲಿಂ ಆಡಳಿತವನ್ನು ಕೊನೆಗಾಣಿಸಿದ್ದು ಭಾರತೀಯ ಮುಸ್ಲಿಮೇತರರಲ್ಲ, ಯೂರೋಪಿಯನ್ನರು.
ರಾಜಕೀಯ ಅಧಿಕಾರ ಕಳೆದುಕೊಂಡು, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲಾರದೇ, ಪಾಶ್ಚಿಮಾತ್ಯ ವಿದ್ಯಾಭ್ಯಾಸವನ್ನು ದೂರವಿಟ್ಟು, ಹಲವು ದಶಕಗಳವರೆಗೆ ಸ್ವನಿರ್ಮಿತ ಚಿಪ್ಪಿನೊಳಗೆ ಅಡಗಿಕೊಂಡ ಭಾರತೀಯ ಮುಸ್ಲಿಂ ಸಮುದಾಯ ಅಲ್ಲಿಂದ ಹೊರಬಂದದ್ದು ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಸರ್ ಸೈಯದ್ ಅಹಮದ್ ಖಾನ್ ಅವರು ಮಹಮ್ಮಡನ್ ಎಜುಕೇಶನ್ ಮೂವ್‌ಮೆಂಟ್ ಅನ್ನು ಚಾಲನೆಗೊಳಿಸಿದಾಗ.  ಇದರ ಅನುಗುಣವಾಗಿ ಪಾಶ್ಮಿಮಾತ್ಯ ಶಿಕ್ಷಣವನ್ನು ಗಳಿಸಿಕೊಳ್ಳತೊಡಗಿದ ಮುಸ್ಲಿಂ ಸಮುದಾಯ ಮೊದಲು ಬೇಡಿಕೆಯಿತ್ತದ್ದು ಬ್ರಿಟಿಷ್ ಭಾರತೀಯ ಆಡಳಿತಾಂಗದಲ್ಲಿ ತನಗೆ ಮೀಸಲಾತಿಗಾಗಿ.  ಉತ್ತರ ಭಾರತದ ಶ್ರೀಮಂತ ನವಸಾಕ್ಷರ ಮುಸ್ಲಿಮರನ್ನೊಳಗೊಂಡ "ಶಿಮ್ಲಾ ಡೆಪ್ಯುಟೇಷನ್" ಈ ಬೇಡಿಕೆಯನ್ನು ಲಾರ್ಡ್ ಮಿಂಟೋ ಮುಂದಿಟ್ಟದ್ದು ೧೯೦೬ರಲ್ಲಿ.  ಹಿಂದೂಮಹಾಸಾಗರದತ್ತ ರಶಿಯನ್ನರ ಧಾಪುಗಾಲನ್ನು ತಡೆಗಟ್ಟಲು ಮುಸ್ಲಿಂ ಬಹುಸಂಖ್ಯಾತ ಪಶ್ಚಿಮ ಭಾರತದಲ್ಲಿ ಪ್ರತ್ಯೇಕ ರಾಜಕೀಯ ವ್ಯವಸ್ಥೆಯೊಂದರ ನಿರ್ಮಾಣಕ್ಕಾಗಿ ಆಗಷ್ಟೇ ಹಂಚಿಕೆ ಹಾಕಿದ್ದ ಬ್ರಿಟಿಷರು ಶಿಮ್ಲಾ ಡೆಪ್ಯುಟೇಷನ್‌ನ ಬೇಡಿಕೆಯನ್ನು ತಮ್ಮ ಉದ್ದೇಶ ಸಾಧನೆಗಾಗಿ ಉಪಯೋಗಿಸಿಕೊಂಡರು.  ಇದರ ಪರಿಣಾಮವಾಗಿ ಆರಂಭವಾದ ಮುಸ್ಲಿಂ-ಬ್ರಿಟಿಶ್ ಸಹಕಾರದ ಕೂಸು ಮುಸ್ಲಿಂ ಲೀಗ್.  ಆ ಪಕ್ಷ ದೆಹಲಿ, ಉತ್ತರ ಪ್ರದೇಶ, ಬಾಂಬೆಗಳ ಮೇಲುವರ್ಗದ ಮುಸ್ಲಿಮರಿಂದಲೇ ತುಂಬಿತ್ತು.  ಪಾರಂಪರಿಕವಾಗಿ ಶ್ರೀಮಂತರಾಗಿದ್ದ, ಜತೆಗೇ ಆಗಷ್ಟೇ ಪಾಶ್ಚಿಮಾತ್ಯ ವಿದ್ಯಾಭ್ಯಾಸಕ್ಕೆ ತೆರೆದುಕೊಂಡಿದ್ದ ಅವರಿಗೆ ಪ್ರತ್ಯೇಕ ರಾಷ್ಟ್ರದ ಕಲ್ಪನೆ, ಅದರ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಬ್ರಿಟನ್ನಿನ ಸಹಕಾರದ ಪೂರ್ಣ ಆಶ್ವಾಸನೆ, ಮುಸ್ಲಿಂ ರಾಷ್ಟ್ರದಲ್ಲಿ ತಮ್ಮ ಶ್ರೀಮಂತಿಕೆ ಹಾಗೂ ವಿದ್ಯಾಭ್ಯಾಸಗಳಿಂದಾಗಿ ತಾವು ಗಳಿಸಿಕೊಳ್ಳಬಹುದಾದ ಸ್ಥಾನಮಾನಗಳು- ಎಲ್ಲವೂ ಆಪ್ಯಾಯಮಾನವಾಗಿ ಕಂಡವು.  ಹೀಗೆ ಬ್ರಿಟಿಷ್ ಆಳರಸರ ಸಾಮ್ರಾಜ್ಯಶಾಹೀ ಹಂಚಿಕೆ ಹಾಗೂ ಅಗತ್ಯಗಳೊಂದಿಗೆ ಉತ್ತರ ಭಾರತದ ಮುಸ್ಲಿಂ ಸಮುದಾಯದ ಉಚ್ಛವರ್ಗದ ರಾಜಕೀಯ, ಆರ್ಥಿಕ ಲಾಲಸೆಗಳು ಮೇಳೈಸಿದವು.  ಉಪಖಂಡದಲ್ಲಿ ತಮ್ಮ ರಾಜಕೀಯ ಅಧಿಕಾರವನ್ನು ಕೊನೆಗೊಳಿಸಿದ್ದ ಬ್ರಿಟಿಷರ ಜತೆಗೇ ಮುಸ್ಲಿಂ ಸಮುದಾಯ ಕೈಜೋಡಿಸಿ, ಶತಮಾನಗಳ ಕಾಲ ತಮ್ಮ ಅಧಿಕಾರವನ್ನು ಮಾನ್ಯಮಾಡಿ ಸಹಕರಿಸಿದ್ದ ಹಿಂದೂಗಳ ವಿರುದ್ಧವೇ ಘರ್ಷಣೆಗಿಳಿಯಿತು.  ತನ್ನ ಕೃತ್ಯಕ್ಕೆ ಅದು ಮುಂದೊಡ್ಡಿದ ತರ್ಕವೇ ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಈ ಎರಡು ರಾಷ್ಟ್ರಗಳು ಒಂದೇ ರಾಜ್ಯದಲ್ಲಿ ಸಹಬಾಳ್ವೆ ನಡೆಸಲಾಗದು ಎನ್ನುವ "ದ್ವಿರಾಷ್ಟ್ರ ಸಿದ್ಧಾಂತ".  ಈಗ ಮಹಾಮಹಾ ವಿಚಾರವಾದಿಗಳಿಂದ ಹಿಡಿದು ಒಬ್ಬ ಬೀದಿಯಲ್ಲಿ ಹೋಗುವ ದಾಸಯ್ಯನೂ ಅಗತ್ಯವಿರಲೀ ಇಲ್ಲದಿರಲೀ ಎಗ್ಗಿಲ್ಲದೇ ಉದುರಿಸುವ "ಕೋಮುವಾದ" ಎಂಬ ನುಡಿಮುತ್ತು ಸಂಕೇತಿಸುವ ಬಹುತೇಕ ಅನಾಚಾರಗಳೂ ಈ ದೇಶದಲ್ಲಿ ಜನ್ಮ ತಾಳಿದ್ದು ಹೀಗೆ.
ಬ್ರಿಟಿಷ್ ವಸಾಹತುಶಾಹಿಗಳ ಜತೆ ಸೇರಿಕೊಂಡು ಮುಸ್ಲಿಂ ಲೀಗ್ ಸೃಷ್ಟಿಸಿದ ಈ ದೇಶ ಒಡೆಯುವ ಕುಕೃತ್ಯವನ್ನು ವಿರೋಧಿಸಲೆಂದೇ ೧೯೨೫ರಲ್ಲಿ (ಮುಸ್ಲಿಂ ಲೀಗ್ ಸ್ಥಾಪನೆಯಾದ ಹತ್ತೊಂಬತ್ತು ವರ್ಷಗಳ ನಂತರ) ಸೃಷ್ಟಿಯಾದ ಸಂಘಟನೆ ಆರ್‌ಎಸ್‌ಎಸ್.
ಮುಸ್ಲಿಂ ಲೀಗ್ ಒಂದು ಕ್ರಿಯೆ, ಆರ್‌ಎಸ್‌ಎಸ್ ಒಂದು ಪ್ರತಿಕ್ರಿಯೆ.
ಆರ್‌ಎಸ್‌ಎಸ್ ಅನ್ನು ತನ್ನ ರಾಜಕೀಯ ನೆಲೆಯ ವಿರೋಧಿಯೆಂದು ಪರಿಗಣಿಸಿದ ಕಾಂಗ್ರೆಸ್ ಅಂತಿಮವಾಗಿ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್‌ನ ಹುನ್ನಾರಗಳನ್ನು ಬೆಂಬಲಿಸಿದಾಗ ೧೯೪೭ರಲ್ಲಿ ದೇಶ ಒಡೆಯಿತು.  ಕಾಂಗ್ರೆಸ್ ಹಾಗೂ ಆರ್‌ಎಸ್‌ಎಸ್‌ಗಳ ನಡುವೆ ಮೈತ್ರಿಯೇರ್ಪಟ್ಟು ಎರಡೂ ಸಂಘಟನೆಗಳು ಮುಸ್ಲಿಂ ಲೀಗ್ ವಿರುದ್ಧ ದನಿಯೆತ್ತಿದ್ದರೂ ದೇಶವಿಭಜನೆಯನ್ನು ತಡೆಯಲಾಗುತ್ತಿರಲಿಲ್ಲ.  ಯಾಕೆಂದರೆ ಈ ದೇಶವನ್ನು ಒಡೆಯುವುದು ಬ್ರಿಟಿಷರ "ಹಿಡನ್ ಅಜೆಂಡಾ" ಆಗಿತ್ತು ಮತ್ತು ಅವರ ಪರವಾಗಿ ಹಿಂದೂಗಳ ರಕ್ತಹರಿಸಲು ಮುಸ್ಲಿಂ ಲೀಗ್ ಟೊಂಕಕಟ್ಟಿ ನಿಂತಿತ್ತು.  ಇದು ಜಗತ್ತಿಗೇ ಮನವರಿಕೆಯಾದದ್ದು ಆಗಸ್ಟ್ ೧೬, ೧೯೪೬ರಂದು.  ಡೈರೆಕ್ಟ್ ಆಕ್ಷನ್ ಡೇ ಎಂಬ ಮುಸ್ಲಿಂ ಲೀಗ್‌ನ ರ‍್ಯಾಲಿ ಮತ್ತದರ ಪರಿಣಾಮವಾದ, ಇತಿಹಾಸದಲ್ಲಿ ಕುಪ್ರಸಿದ್ಧವಾಗಿರುವ, ದ ಗ್ರೇಟ್ ಕಲ್ಕಟ್ಟಾ ಕಿಲ್ಲಿಂಗ್ಸ್ ದೇಶವಿಭಜನೆಯನ್ನು ಅನಿವಾರ್ಯವಾಗಿಸಿದವು.
ಆಗ ನಿರಾಶರಾದ ಆರ್‌ಎಸ್‌ಎಸ್ ಬೆಂಬಲಿಗರು ಮತ್ತು ದೇಶವಿಭಜನೆಯಿಂದ ನೊಂದದ್ದಲ್ಲದೇ ಕಾಂಗ್ರೆಸ್‌ನ ಮುಸ್ಲಿಂ-ಪರ ನೀತಿಗಳಿಂದ ಭ್ರಮನಿರಸನಗೊಂಡ ಹಿಂದೂಗಳು ಸೃಷ್ಟಿಸಿದ ರಾಜಕೀಯ ಪಕ್ಷ ಭಾರತೀಯ ಜನಸಂಘ.  ದೇಶವಿಭಜನೆ ಮತ್ತು ಕಾಂಗ್ರೆಸ್ ನೀತಿಗಳು ಒಂದು ಕ್ರಿಯೆ, ಬಿಜೆಪಿ ಒಂದು ಪ್ರತಿಕ್ರಿಯೆ.
ಭಾರತೀಯ ಮುಸ್ಲಿಮರು ತಮಗೋಸ್ಕರ ಪಾಕಿಸ್ತಾನವನ್ನು ಸೃಷ್ಟಿಸಿಕೊಂಡರು, ಕಾಂಗ್ರೆಸ್‌ನ ಸಹಕಾರದಿಂದ ಭಾರತದಲ್ಲಿಯೂ ಸವಲತ್ತುಗಳನ್ನು ಪಡೆದುಕೊಂಡರು.  ಮೊದಲಿಗೆ ಅವರ ಪಾಕಿಸ್ತಾನ್ ಬೇಡಿಕೆಯ ಅಬ್ಬರ, ಸ್ವಾತಂತ್ರಾನಂತರ ಹೊಸಹೊಸ ಆಯಾಮಗಳನ್ನು ಪಡೆದುಕೊಂಡ ಅವರ ಉತ್ಪ್ರೇಕ್ಷಿತ ಕೊರಗುಗಳು ಮತ್ತವುಗಳು ರಾಷ್ಟ್ರೀಯ ಚರ್ಚೆಯಲ್ಲಿ ಪಡೆದುಕೊಂಡ ಮುಂಚೂಣಿ ಸ್ಥಾನದಿಂದಾಗಿ ಹಿಂದೂ ಪುರೋಹಿತಶಾಹಿಯ ಹಲವು ಅಮಾನವೀಯ ನೀತಿಗಳಿಂದಾಗಿ ಶತಮಾನಗಳಿಂದ ನಿಜವಾಗಿಯೂ ನೊಂದಿದ್ದ ದಲಿತರ ಉದ್ಧಾರ ನಿಧಾನಗೊಂಡಿತು.  ಒಂದು ಪ್ರದೇಶದಲ್ಲಿ ಬಹುಸಂಖ್ಯಾತರಾಗದೇ, ದೇಶದ ಎಲ್ಲೆಡೆ ಹರಡಿಹೋಗಿದ್ದರಿಂದಾಗಿ ಬ್ರಿಟಿಷ್ ರಾಜಕೀಯ-ರಾಜತಾಂತ್ರಿಕ-ಸಾಮರಿಕ ಅಗತ್ಯಗಳಿಗೆ ಅವರ ಉಪಯೋಗ ಏನೇನೂ ಇರಲಿಲ್ಲ.  ಹೀಗಾಗಿ ಬ್ರಿಟಿಷ್ ಸತ್ತೆಯಿಂದ ಅವರು ನಿರ್ಲಕ್ಷಿತಗೊಂಡರು.  ಮುಸ್ಲಿಮರಂತೆ ಸಂಘಟಿತರಾಗಿ ಹೋರಾಡುವ ಸಾಮರ್ಥ್ಯವನ್ನೂ ದಲಿತರು ಪ್ರದರ್ಶಿಸದ ಕಾರಣ ಸ್ವತಂತ್ರ ಭಾರತದಲ್ಲೂ ಅವರ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ.  ಮುಸ್ಲಿಂ ಸಮುದಾಯ ತನ್ನ ದನಿಯನ್ನು ಕುಗ್ಗಿಸದ ಹೊರತು ದಲಿತ, ಹಿಂದುಳಿದ ಸಮುದಾಯಗಳ ದನಿಗಳು ರಾಷ್ಟ್ರಮಟ್ಟದಲ್ಲಿ ಮುಂಚೂಣಿಗೆ ಬರಲಾರವು.
ಈ ನಿಟ್ಟಿನಲ್ಲಿ, ಮುಸ್ಲಿಂ ಸಮುದಾಯಕ್ಕೆ ಆತ್ಮವಿಮರ್ಶೆಯ ಅಗತ್ಯವಿದೆ.

2 comments:

  1. ಎಷ್ಟು ವಿಚಾರಪೂರ್ಣ ಲೇಖನ ಬರೆದಿರುವಿರಿ? ಇದನ್ನು ಪೇಪರಿನಲ್ಲಿ ಹಾಕಿದ್ದೀರಾ? ಹೆಚ್ಚು ಜನ ಓದುವ ಸಾಧ್ಯತೆ ಇತ್ತು.

    ReplyDelete
    Replies
    1. ಲೇಖನವನ್ನು ಇಷ್ಟಪಟ್ಟದ್ದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಅಂಕಣ "ಜಗದಗಲ"ದ ಭಾಗವಾಗಿ ಇದು ವಿಜಯವಾಣಿ ಪತ್ರಿಕೆಯಲ್ಲಿ ಕಳೆದ ಜುಲೈನಲ್ಲಿ ಪ್ರಕಟವಾಗಿತ್ತು. ನಂತರ ನನ್ನ "ಉಪಖಂಡದ ಉಪಕಥೆಗಳು" ಕೃತಿಯಲ್ಲೂ ಸೇರಿದೆ.

      Delete