ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, May 2, 2013

"ನಾ ನಿನಗಿದ್ದರೆ ನೀ ನನಗೆ!"

(ಭಾರತ ಮತ್ತು ಪಾಕಿಸ್ತಾನಗಳ ಜತೆಗೆ ಅಮೆರಿಕಾದ ಸಂಬಂಧಗಳ ಬಗ್ಗೆ ಕನ್ನಡ ದೈನಿಕ "ವಿಜಯವಾಣಿ"ಯ "ಜಗದಗಲ" ಅಂಕಣದಲ್ಲಿ ದಿನಾಂಕ ಏಪ್ರಿಲ್ ೨೪ ಮತ್ತು ಮೇ ೧ರಂದು ಎರಡು ಕಂತುಗಳಲ್ಲಿ ಪ್ರಕಟವಾದ ಲೇಖನ)
 
ಯಾರು ಹಿತವರು ಅಮೆರಿಕಾಗೆ?
(ಭಾಗ - ೧)

ಅಮೆರಿಕಾದಿಂದ ಪಾಕಿಸ್ತಾನ ಭಾರಿ ಯುದ್ಧೋಪಕರಣಗಳನ್ನು ಆಯಾತ ಮಾಡಿಕೊಳ್ಳುವುದರ ಬಗೆಗಿದ್ದ ಕಾನೂನಿನ ನಿರ್ಬಂಧಗಳನ್ನು ಒಬಾಮಾ ಸರಕಾರ ಸೆಪ್ಟೆಂಬರ್ ೨೦೧೨ ಮತ್ತು ಫೆಬ್ರವರಿ ೨೦೧೩ರ ನಡುವೆ ಎರಡು ಬಾರಿ ಸಡಿಲಿಸಿದ ಹಿನ್ನೆಲೆಯಲ್ಲಿಯೇ ಪಾಕಿಸ್ತಾನದ ಬಗ್ಗೆ ಮೃದುಧೋರಣೆ ಹೊಂದಿರುವ ಜಾನ್ ಕೆರ್ರಿ ಅಮೆರಿಕಾದ ವಿದೇಶ ಮಂತ್ರಿಯಾದದ್ದು ಇಸ್ಲಾಮಾಬಾದ್ ಬಗ್ಗೆ ವಾಷಿಂಗ್‌ಟನ್‌ನಲ್ಲಿ ವೃದ್ಧಿಸುತ್ತಿರುವ ಸಹಾನುಭೂತಿಯ ಸ್ಪಷ್ಟ ಚಿತ್ರಣವೆಂದು ಭಾರತದಲ್ಲಿ ಅರ್ಥೈಸಲಾಗುತ್ತಿದೆ.  ಈ ಹಿನ್ನೆಲೆಯಲ್ಲಿಯೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಾರತದ ವಿರುದ್ಧದ ಭಯೋತ್ಪಾದನಾ ತರಬೇತಿ ಶಿಬಿರಗಳ ಮೇಲೆ ಅಮೆರಿಕಾದ ಚಾಲಕರಹಿತ ವಿಮಾನಗಳು ಧಾಳಿಯೆಸಗದಂತೆ ಪಾಕಿಸ್ತಾನ ಮತ್ತು ಅಮೆರಿಕಾಗಳ ನಡುವೆ ೨೦೦೪ರಷ್ಟು ಹಿಂದೆಯೇ ಆಗಿದ್ದ ಗುಪ್ತ ಒಪ್ಪಂದವೊಂದರ ರಹಸ್ಯೋತ್ಪಾಟನೆಯಿಂದಾಗಿ ಭಾರತದಲ್ಲಿ, ಮುಖ್ಯವಾಗಿ ಮಾಧ್ಯಮಗಳಲ್ಲಿ, ಅಮೆರಿಕಾದ ವಿಶ್ವಾಸಾರ್ಹತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.  ಇದೆಲ್ಲದರ ನಡುವೆ ಕಳೆದವಾರ ನಿಯೋಜಿತವಾಗಿದ್ದ ಭಾರತದ ವಿದೇಶಮಂತ್ರಿ ಸಲ್ಮಾನ್ ಖುರ್ಶೀದ್‌ರ ವಾಷಿಂಗ್‌ಟನ್ ಭೇಟಿ ರದ್ಧಾಗಿದೆ.

ಈ ಎಲ್ಲ ಬೆಳವಣಿಗೆಗಳು ವಿಶ್ವದ ಅತಿ ಹಳೆಯ ಗಣರಾಜ್ಯ ಮತ್ತು ಅತಿ ದೊಡ್ಡ ಗಣರಾಜ್ಯಗಳ ನಡುವೆ ಎಲ್ಲವೂ ಸರಿಯಿಲ್ಲವೇನೋ ಎಂಬ ಸಂಶಯಕ್ಕೆ ಎಡೆಮಾಡಿಕೊಡುತ್ತವೆ.  ಇದು ಸಹಜವೇ.  ಇತಿಹಾಸದ ಅತ್ಯಂತ ಭೀಕರ ಭಯೋತ್ಪಾದನಾ ದಾಳಿಗೆ ಒಳಗಾದ ದೇಶ ಅಮೆರಿಕಾ ಆಗಿದ್ದರೂ ಭಯೋತ್ಪಾದನಾ ಕೃತ್ಯಗಳ ಮತ್ತು ಸಾವುನೋವುಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ನಾಲ್ಕನೆಯ ಅತಿ ದೊಡ್ಡ ಬಲಿಪಶು.  ಕುಖ್ಯಾತ ಭಯೋತ್ಪಾದನಾ ಸಂಘಟನೆ ಅಲ್ ಖಯೀದಾ ಹೆಸರಿಸಿದ ತನ್ನ ನಾಲ್ಕು ಗುರಿಗಳಲ್ಲಿ ಅಮೆರಿಕಾ ಮತ್ತು ಭಾರತಗಳೆರಡೂ ಸೇರಿವೆ.  (ಉಳಿದೆರಡು ಇಂಗ್ಲೆಂಡ್ ಮತ್ತು ಇಸ್ರೇಲ್).  ಹೀಗಾಗಿಯೇ ಎರಡೂ ದೇಶಗಳ ನಡುವೆ ಭಯೋತ್ಪಾದನೆಯ ನಿಗ್ರಹದಲ್ಲಿ ಸಹಕಾರದ ಅಗತ್ಯವನ್ನು ನವದೆಹಲಿ ಮತ್ತು ವಾಷಿಂಗ್‌ಟನ್ ಮನಗಂಡು ಕಳೆದೊಂದು ದಶಕದಿಂದಲೂ ಆ ನಿಟ್ಟಿನಲ್ಲಿ ಜಂಟಿ ಕಾರ್ಯಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿವೆ.  ಭಯೋತ್ಪಾದನೆಯ ನಿಗ್ರಹದಲ್ಲಿ ಅಮೆರಿಕಾ ಮತ್ತು ಭಾರತಗಳು ಸಹಯೋಗಿಗಳು ಎಂದು ಮಾಜೀ ಅಧ್ಯಕ್ಷ ಜಾರ್ಜ್ ಬುಷ್ ಜ್ಯೂನಿಯರ್ ಮತ್ತು ಹಾಲಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಅಮೆರಿಕಾದ ಹಲವು ಹಿರಿಯ ನೇತಾರರು ಒಂದಕ್ಕಿಂತ ಹೆಚ್ಚುಬಾರಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ.  ಹೀಗಿರುವಾಗ ಭಾರತದ ವಿರುದ್ಧದ ಪಾಕಿಸ್ತಾನೀ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮಕ್ಕು ನೀಡುವಂತಹ ನೀತಿಗಳನ್ನು ಅಮೆರಿಕಾ ಅನುಸರಿಸುತ್ತಿರುವುದೇಕೆ ಎಂಬ ಪ್ರಶ್ನೆ ಸರ್ವಸಹಜ.   ಅಲ್ಲದೇ, ಅಂತರರಾಷ್ಟ್ರೀಯ ಭಯೋತ್ಪಾದಕರನ್ನು ವ್ಯಾಪಕ ಪ್ರಮಾಣದಲ್ಲಿ ತಯಾರು ಮಾಡುವ ವಿಶ್ವದ ಅತಿ ದೊಡ್ಡ ಕಾರ್ಖಾನೆಯಾಗಿರುವ ಪಾಕಿಸ್ತಾನದ ಬಗ್ಗೆ ಅಮೆರಿಕಾಗೆ ಈ ಮೃದು ಧೋರಣೆ ಅತ್ಮಹತ್ಯೀಯವಲ್ಲವೇ ಎಂಬ ಪ್ರಶ್ನೆಯೂ ಏಳುತ್ತದೆ.

ಅಫ್ಘಾನಿಸ್ತಾನದಲ್ಲಿ ಅಕ್ಟೋಬರ್ ೨೦೦೧ರಲ್ಲಿ ಪ್ರಾರಂಭವಾದ ಅಮೆರಿಕಾ ನೇತೃತ್ವದ ನ್ಯಾಟೋ ಮಿಲಿಟರಿ ಕಾರ್ಯಾಚರಣೆ ನಿರೀಕ್ಷಿತ ಫಲ ನೀಡಿಲ್ಲ.  ಅದಕ್ಕೆ ವಿರುದ್ಧವಾಗಿ ತಾಲಿಬಾನ್ ದಿನೇದಿನೇ ಬಲಶಾಲಿಯಾಗುತ್ತಿದೆ.  ಮುಂದಿನ ವರ್ಷ ಆ ದೇಶದಿಂದ ನ್ಯಾಟೋ ಸೇನೆ ವಾಪಸಾದ ಮೇಲೆ ಅಲ್ಲಿನ ಹಮೀದ್ ಕರ್ಜಾಯ್ ಸರಕಾರ ಉಳಿಯುವ ಬಗ್ಗೆ ಅನುಮಾನಗಳಿವೆ.  ಈ ಹನ್ನೊಂದು ವರ್ಷಗಳ ಸೇನಾ ಕಾರ್ಯಾಚರಣೆ, ಅಪಾರ ಧನವ್ಯಯ, ಹತ್ತಿರಹತ್ತಿರ ಐದು ಸಾವಿರ ಸೈನಿಕರ ಜೀವ ಹಾನಿ ಎಲ್ಲವೂ ಹೊಳೆಯಲ್ಲಿ ಹುಣಿಸೆಹಣ್ಣು ತೇಯ್ದಂತಾಗಲು ಮುಖ್ಯ ಕಾರಣ ಪಾಕಿಸ್ತಾನ.  ನಾಯಿಯ ಜತೆ ಬೇಟಯಾಡುವ, ಮೊಲದ ಜತೆ ಓಡುವ ಇಬ್ಬಂದಿ ನೀತಿಯನ್ನು ಅನುಸರಿಸಿಕೊಂಡು ಬಂದಿರುವ ಪಾಕಿಸ್ತಾನ ಅಫ್ಘನ್ ಯುದ್ಧದಲ್ಲಿ ಅಮೆರಿಕಾಗೆ ಬಹಿರಂಗವಾಗಿ ಸಹಕರಿಸುತ್ತಲೇ ರಹಸ್ಯವಾಗಿ ತಾಲಿಬಾನ್ ಅನ್ನು ಪೋಷಿಸುತ್ತಿದೆ.   ಆ ದೇಶದ ಕುಖ್ಯಾತ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್‌ಐ) ತಾಲಿಬಾನ್‌ನ ಬೆನ್ನಿಗೆ ನಿಂತಿದೆ ಮತ್ತು ಅದರ ಮಾಜಿ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಹಮೀದ್ ಗುಲ್ ತಾಲಿಬಾನ್‌ನ ಸಲಹೆಗಾರನಾಗಿ ಹಾಗೂ ಅದರ ಶಸ್ತ್ರಾಸ್ತ್ರ ಪೂರೈಕೆದಾರನಾಗಿ ಕಾರ್ಯನಿರ್ವಹಿದ್ದಾನೆ.

ಇಷ್ಟಾಗಿಯೂ ಪಾಕಿಸ್ತಾನದ ಜತೆಗಿನ ಸಖ್ಯವನ್ನು ತೊರೆಯಲು ಅಮೆರಿಕಾ ಮನಸ್ಸು ಮಾಡಿಲ್ಲ.  ಬದಲಾಗಿ ಅದಕ್ಕೆ ಆರ್ಥಿಕ ಹಾಗೂ ಮಿಲಿಟರಿ ಸಹಾಯವನ್ನು ವರ್ಷವರ್ಷಕ್ಕೂ ವೃದ್ಧಿಸುತ್ತಲೇ ಇದೆ.  ಕಳೆದೊಂದು ದಶಕದಲ್ಲಿ ಭಯೋತ್ಪಾದನೆಯ ನಿಗ್ರಹಕ್ಕೆಂದು ಅಮೆರಿಕಾ ಪಾಕಿಸ್ತಾನಕ್ಕೆ ನೀಡಿರುವ ಒಟ್ಟು ಮೊತ್ತ ಹದಿನೈದು ಬಿಲಿಯನ್ ಡಾಲರ್‌ಗಳು.  ಇದರ ಜತೆಗೆ ಎಂಟು ಬಿಲಿಯನ್ ಡಾಲರ್‌ಗಳ ಆರ್ಥಿಕ ನೆರವನ್ನೂ ಪಾಕಿಸ್ತಾನ ಪಡೆದಿದೆ.  ಮುಂದಿನ ವರ್ಷಗಳಲ್ಲಿ ಈ ಧನಸಹಾಯ ಮತ್ತಷ್ಟು ಹೆಚ್ಚುವ ಸೂಚನೆಯನ್ನು ವಿದೇಶಮಂತ್ರಿ ಜಾನ್ ಕೆರ್ರಿ ನೀಡಿದ್ದಾರೆ.

ಅಮೆರಿಕಾಗೆ ಪಾಕಿಸ್ತಾನದ ಬಗೆಗಿರುವ ಮೃದುಧೋರಣೆಗೆ ಮತ್ತು ಭಾರತದ ಬಗೆಗಿರುವ ನಿರುತ್ಸಾಹಕರ ನಿಲುವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಕಳೆದ ಆರೂವರೆ ದಶಕಗಳಲ್ಲಿ ದಕ್ಷಿಣ ಏಶಿಯಾದ ಈ ಎರಡು ದೇಶಗಳು ಅಮೆರಿಕಾದ ಬಗ್ಗೆ ಅನುಸರಿಸಿಕೊಂಡು ಬಂದ ನೀತಿಗಳ ನಿಷ್ಪಕ್ಷಪಾತೀ ಅವಲೋಕನದ ಅಗತ್ಯವಿದೆ.  ಇದನ್ನು ಎರಡು ಭಾಗಗಳಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.

ಭಾರತಕ್ಕೆ ವಿರುದ್ಧವಾಗಿ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಬಲಿಷ್ಟ ರಾಷ್ಟ್ರವೊಂದರ ಸ್ನೇಹದ ಅಗತ್ಯವನ್ನು ಪಾಕಿಸ್ತಾನಿ ನಾಯಕರು ಆ ದೇಶದ ಹುಟ್ಟಿಗೂ ಮೊದಲೇ ಅರಿತಿದ್ದರು.  ಇದಕ್ಕೆ ಸಂಬಂಧಿಸಿದಂತೆ ಮೇ ೧, ೧೯೪೭ರಂದು ಮಹಮದ್ ಆಲಿ ಜಿನ್ನಾ ತಮ್ಮ ಮುಂಬೈ ನಿವಾಸದಲ್ಲಿ ಭೇಟಿ ಮಾಡಿದ ಅಮೆರಿಕಾದ ವಿದೇಶಾಂಗ ಇಲಾಖೆಯ ದಕ್ಷಿಣ ಏಶಿಯಾ ವ್ಯವಹಾರಗಳ ವಿಭಾಗದ ಮುಖ್ಯಸ್ಥ ರೇಮಾಂಡ್ ಎ. ಹೇರ್ ಮತ್ತು ನವದೆಹಲಿಯಲ್ಲಿದ್ದ ಅಮೆರಿಕನ್ ದೂತಾವಾಸದ ಸೆಕೆಂಡ್ ಸೆಕ್ರೆಟರಿ ಥಾಮಸ್ ಇ. ವೇಲ್ ಅವರಿಗೆ ಹೇಳಿದ ಈ ಮಾತುಗಳು ಗಮನ ಸೆಳೆಯುತ್ತವೆ: (ಸಧ್ಯದಲ್ಲೇ ಅಸ್ತಿತ್ವಕ್ಕೆ ಬರಲಿರುವ) ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿರುತ್ತದೆ, ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ರಶಿಯಾದ ಆಕ್ರಮಣನೀತಿಗೆ ವಿರೋಧಿಯಾಗಿ ನಿಲ್ಲುತ್ತವೆ.  ತಮ್ಮ ಈ ಪ್ರಯತ್ನದಲ್ಲಿ ಅವು ಅಮೆರಿಕಾದ ಸಹಕಾರವನ್ನು ಎದುರುನೋಡುತ್ತವೆ.  ಮುಂದುವರಿದು ಅವರು ರಶಿಯನ್ ಆಕ್ರಮಣದ ಅಪಾಯದ ಜತೆಗೆ ಹಿಂದೂ ಸಾಮ್ರಾಜ್ಯಶಾಹಿಯ ಅಪಾಯವನ್ನು ಉಲ್ಲೇಖಿಸಿ ಮಧ್ಯಪ್ರಾಚ್ಯಕ್ಕೆ ಹಿಂದೂ ಸಾಮ್ರಾಜ್ಯಶಾಹಿಯ ಮುನ್ನುಗ್ಗುವಿಕೆಯನ್ನು ತಡೆಯಲು ಪಾಕಿಸ್ತಾನದ ಸೃಷ್ಟಿ ಅತ್ಯಗತ್ಯವಾಗಿದೆ ಎಂದೂ ಹೇಳಿದರು.  ಆದರೆ ಆ ದಿನಗಳಲ್ಲಿ ಪಾಕಿಸ್ತಾನದ ಬಗ್ಗೆ, ತನಗೆ ಅದರ ಅಗತ್ಯದ ಬಗ್ಗೆ ಅಮೆರಿಕಾಗೆ ಆಸಕ್ತಿ ಇರಲಿಲ್ಲ.  ಪಾಕಿಸ್ತಾನದ ಸೃಷ್ಟಿ ಒಂದು ನಕಾರಾತ್ಮಕ ಬೆಳವಣೆಗೆಯೆಂದೇ ಟ್ರೂಮನ್ ಸರಕಾರ ಭಾವಿಸಿತ್ತು.    ಭಾವನೆ ಮುಂದಿನ ಎರಡು ವರ್ಷಗಳಲ್ಲಿ ಹಂತಹಂತವಾಗಿ ಬದಲಾಯಿತು.

ಭಾರತ ಉಪಖಂಡ ವಸಾಹತುಶಾಹಿ ಅಳ್ವಿಕೆಯ ಅಂತ್ಯದೊಂದಿಗೆ ವಿಭಜನೆಗೊಂಡು ಎರಡು ಪರಸ್ಪರ ವಿರೋಧೀ ರಾಷ್ಟ್ರಗಳಾಗಿ ಉದಯಿಸಿದ ಘಳಿಗೆ ಆಧುನಿಕ ಇತಿಹಾಸದ ಒಂದು ಮಹತ್ತರ ಸಂಕ್ರಮಣ ಕಾಲ.  ದ್ವಿತೀಯ ಜಾಗತಿಕ ಸಮರ ಮುಕ್ತಾಯವಾಗುತ್ತಿದ್ದಂತೇ ತನ್ನ ಸೇನಾ ಹಿಡಿತದಲ್ಲಿದ್ದ ಪೂರ್ವ ಯೂರೋಪಿನ ಎಲ್ಲ ದೇಶಗಳಲ್ಲಿ ಕಮ್ಯೂನಿಸ್ಟ್ ಕೈಗೊಂಬೆ ಸರಕಾರಗಳನ್ನು ಸ್ಥಾಪಿಸಿದ ಸ್ಟ್ಯಾಲಿನ್ ನೇತೃತ್ವದ ಸೋವಿಯೆತ್ ಯೂನಿಯನ್ ತನ್ನ ವಿಸ್ತರಣ ನೀತಿಯನ್ನು ಮುಂದುವರಿಸಿ ಗ್ರೀಸ್ ಮತ್ತು ಟರ್ಕಿಗಳಲ್ಲಿ ಬುಡಮೇಲು ಕೃತ್ಯಗಳನ್ನೆಸಗಲು ಅಲ್ಲಿನ ಕಮ್ಯೂನಿಸ್ಟರಿಗೆ ಕುಮ್ಮಕ್ಕು ನೀಡತೊಡಗಿತಷ್ಟೇ.  ರಶಿಯನ್ನರ ಕ್ರಮಗಳನ್ನು ವಿರೋಧಿಸಿದ ಅಧ್ಯಕ್ಷ ಹ್ಯಾರಿ ಟ್ರೂಮನ್ ಮಾರ್ಚ್ ೧೨, ೧೯೪೭ರಂದು ತಮ್ಮ ಪ್ರಸಿದ್ಧ ಟ್ರೂಮನ್ ನೀತಿ ಅಥವಾ Truman Doctrineನ ಘೋಷಣೆಯೊಂದಿಗೆ ಕಮ್ಯೂನಿಸ್ಟ್ ದಂಗೆಗಳನ್ನು ಎದುರಿಸುತ್ತಿರುವ ಯಾವುದೇ ದೇಶಕ್ಕೆ ಆರ್ಥಿಕ ಹಾಗೂ ಸೇನಾ ಸಹಕಾರ ನೀಡುವುದು ಇನ್ನು ಮುಂದೆ ಅಮೆರಿಕಾದ ನೀತಿಯಾಗಿರುತ್ತದೆ ಎಂದು ಸಾರಿದಾಗ ಶೀತಲ ಸಮರ ಅಧಿಕೃತವಾಗಿ ಆರಂಭಗೊಂಡಿತು.  ಈ ಸಮರದಲ್ಲಿ ತನ್ನ ಪರವಾಗಿ ನಿಲ್ಲಲು ಅಮೆರಿಕಾ ವಿಶ್ವದ ಎಲ್ಲೆಡೆ ಸಹಯೋಗಿಗಳಿಗಾಗಿ ಹುಡುಕತೊಡಗಿತು.  ದಕ್ಷಿಣ ಏಶಿಯಾದಲ್ಲಿ ಅದರ ಕಣ್ಣುಬಿದ್ದದ್ದು ಸ್ವಾತಂತ್ರ್ಯದತ್ತ ಧಾಪುಗಾಲಿಡುತ್ತಿದ್ದ ಭಾರತದತ್ತ.  ಉಪಖಂಡದ ವಿಭಜನೆ ಮತ್ತು ಎರಡು ವಿರೋಧಿ ರಾಷ್ಟ್ರಗಳು ಅಸ್ತಿತ್ವ ಈ ವಲಯದಲ್ಲಿ ಕಮ್ಯೂನಿಸ್ಟ್ ಸರ್ವಾಧಿಕಾರದ ವಿರುದ್ದ ಪ್ರಜಾಪ್ರಭುತ್ವದ ಪರಿಣಾಮಕಾರೀ ಸಮರಕ್ಕೆ ಅಡ್ಡಿಯಾಗುತ್ತದೆಂದು ಭಾವಿಸಿದ ಟ್ರೂಮನ್ ಸರಕಾರ ಬ್ತಿಟಿಷರ ವಿಭಜನಾತಂತ್ರವನ್ನು ವಿರೋಧಿಸಿತು.  ಆದರೆ ಭಾರತದ ಸ್ವಾತಂತ್ರ್ಯಹೋರಾಟದ ಮುಂಚೂಣಿಯಲ್ಲಿದ್ದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ದೇಶವಿಭಜನೆಯನ್ನು ಒಪ್ಪಿಕೊಂಡಾಗ ತನ್ನ ನೀತಿಯನ್ನು ಬದಲಾಯಿಸಿಕೊಳ್ಳುವುದು ಅಮೆರಿಕಾಗೆ ಅಗತ್ಯವಾಯಿತು.  ಆನಂತರ ಜವಾಹರ್‌ಲಾಲ್ ನೇತೃತ್ವದ ಸ್ವತಂತ್ರ ಭಾರತ ಅಲಿಪ್ತನೀತಿ ಅನುಸರಿಸತೊಡಗಿದಾಗ ಈ ದೇಶದಿಂದ ನಿರೀಕ್ಷಿತ ಸಹಯೋಗ ದೊರೆಯಲಾರದೆಂದರಿತ ಅಮೆರಿಕಾ ತಿರುಗಿದ್ದು ಪಾಕಿಸ್ತಾನದತ್ತ.  ಪಾಕಿಸ್ತಾನದ ಸೃಷ್ಟಿಗೆ ಕಳೆದ ನಲವತ್ತು ವರ್ಷಗಳಿಂದಲೂ ಯೋಜನೆ ರೂಪಿಸಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದ್ದ ಬ್ರಿಟನ್ ಪಾಕಿಸ್ತಾನದ ಬಗ್ಗೆ ಅಮೆರಿಕಾ ಆಸಕ್ತಿ ತಾಳುವಲ್ಲಿ ಪ್ರಮುಖ ಪಾತ್ರ ವಹಿಸಿತು.  ಬ್ರಿಟಿಷ್ ವಾದಕ್ಕೆ ಸಹಕಾರಿಯಾದದ್ದು ಪಾಕಿಸ್ತಾನದ ಭೌಗೋಳಿಕ ಸ್ಥಾನ ಮತ್ತು ಆ ದೇಶದ ಜನತೆಯ ಧರ್ಮ.  ಸೋವಿಯೆತ್ ಯೂನಿಯನ್‌ಗೆ ಭೌಗೋಳಿಕವಾಗಿ ಹತ್ತಿರದಲ್ಲಿದ್ದ ಪಾಕಿಸ್ತಾನದ ನೆಲ ಅಮೆರಿಕಾದ ಸೋವಿಯೆತ್-ವಿರೋಧಿ ಚಟುವಟಿಕೆಗಳಿಗೆ ಒಳ್ಳೆಯ ನೆಲೆಯಾಗಬಹುದಾಗಿದ್ದುದರ ಜತೆಗೆ ಮುಸ್ಲಿಂ ರಾಷ್ಟ್ರವೊಂದು ನಾಸ್ತಿಕ ಕಮ್ಯೂನಿಸ್ಟರನ್ನು ತಿರಸ್ಕರಿಸುವ ಸರಳ ಸಾಧ್ಯತೆ ಅಮೆರಿಕಾವನ್ನು ಪಾಕಿಸ್ತಾನದತ್ತ ಸೆಳೆಯಿತು.  ಎಲ್ಲ ಸಾಧಕ-ಬಾಧಕಗಳ ಪರಿಶೀಲನೆಯ ನಂತರ ಅಂತಿಮವಾಗಿ ಪಾಕಿಸ್ತಾನದ ಜತೆ ಸಾಮರಿಕ ಸಹಯೋಗವನ್ನು ಸ್ಥಾಪಿಸುವ ನಿರ್ಧಾರವನ್ನು ಅಮೆರಿಕಾ ಕೈಗೊಂಡದ್ದು ಸೆಪ್ಟೆಂಬರ್ ೧೯೪೯ರಲ್ಲಿ.

ಹೀಗೆ ಅಮೆರಿಕಾದ ಜಾಗತಿಕ ಸಮರಯೋಜನೆಯಲ್ಲಿ ಪಾಕಿಸ್ತಾನಕ್ಕೆ ಸ್ಥಾನ ಸಿಕ್ಕಿದ್ದು ಭಾರತದ ವಿರುದ್ಧ ಸೇನಾಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಹಾದಿಯಲ್ಲಿದ್ದ ಆ ದೇಶಕ್ಕೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು.  ಅವಕಾಶವನ್ನು ಅಲ್ಲಿನ ನಾಯಕರು ಸರಿಯಾಗಿಯೇ ಉಪಯೋಗಿಸಿಕೊಂಡರು.  ಅದರಲ್ಲೂ, ಪಾಕಿಸ್ತಾನದ ಆಡಳಿತಾತ್ಮಕ ಖರ್ಚುವೆಚ್ಚಗಳನ್ನು, ಮುಖ್ಯವಾಗಿ ರಕ್ಷಣಾ ಕ್ಷೇತ್ರದಲ್ಲಿನ ಖರ್ಚುಗಳನ್ನು ನಿಭಾಯಿಸಲು ಅಮೆರಿಕಾದ ಮೇಲೆ ಅತಿಯಾದ ಅವಲಂಬನೆಯನ್ನು ಪ್ರತಿಪಾದಿಸುತ್ತಿದ್ದ ಗುಲಾಮ್ ಮಹಮದ್ ೧೯೫೧ರಲ್ಲಿ ಪಾಕಿಸ್ತಾನದ ಮೂರನೆಯ ಗವರ್ನರ್ ಜನರಲ್ ಆದಮೇಲಂತೂ ಪಾಕ್-ಅಮೆರಿಕಾ ಸಾಮರಿಕಸಖ್ಯ ವ್ಯಾಪಕವಾಗಿ ವೃದ್ಧಿಸತೊಡಗಿ ಅಂತಿಮವಾಗಿ ಯಾವ ಹಂತ ತಲುಪಿತೆಂದರೆ ಐವತ್ತರ ದಶಕದ ಉತ್ತರಾರ್ಧದಲ್ಲಿ ಪೆಶಾವರ್‌ನ ಹೊರವಲಯದಲ್ಲಿ ರಶಿಯಾ ವಿರುದ್ಧ ಅತ್ಯಂತ ರಹಸ್ಯವಾದ ಬೇಹುಗಾರಿಕಾ ಹಾಗೂ ಸೇನಾ ನೆಲೆಯೊಂದನ್ನು ಸ್ಥಾಪಿಸಲು ಅಮೆರಿಕಾಗೆ ಅಯೂಬ್ ಖಾನ್ ಸರಕಾರ ಅನುವು ಮಾಡಿಕೊಟ್ಟಿತು.  ಈ ನೆಲೆಯ ಬಗ್ಗೆ ಪಾಕಿಸ್ತಾನದಲ್ಲಿ ಅರಿತಿದ್ದವರು ಬೆರಳೆಣಿಕೆಯಷ್ಟು ಮಂದಿ.  ಅದರ ಬಗ್ಗೆ ಅರಿತ ಅಂದಿನ ಪಾಕ್ ವಿದೇಶಮಂತ್ರಿ ಜುಲ್ಫಿಕರ್ ಆಲಿ ಭುಟ್ಟೋ ಅಲ್ಲಿಗೆ ಭೇಟಿ ನೀಡಬಯಸಿದಾಗ ಅಲ್ಲಿಂದ ಬಂದ ಉತ್ತರ: ಮಾನ್ಯ ವಿದೇಶಮಂತ್ರಿಗಳು ಸೇನಾನೆಲೆಯ ಸ್ವಾಗತ ವಿಭಾಗಕ್ಕೆ ಬರಬಹುದು.  ಅಲ್ಲಿ ಅವರು ಚಹಾ ಮತ್ತು ಬಿಸ್ಕತ್‌ಗಳನ್ನು ಸ್ವೀಕರಿಸಬಹುದು.  ಅಲ್ಲಿಂದಾಚೆಗೆ ಅವರಿಗೆ ಪ್ರವೇಶವಿಲ್ಲ.  ಇಂತಹ ಅತ್ಯುಚ್ಛ ಮಟ್ಟದ ರಹಸ್ಯ ಸೇನಾನೆಲೆಯನ್ನು ಸ್ಥಾಪಿಸುವ ಅವಕಾಶ ಅಮೆರಿಕಾಗೆ ತನ್ನ ಘನಿಷ್ಟ ಸಹಯೋಗಿಗಳಾಗಿದ್ದ ಪಶ್ಚಿಮ ಯೂರೋಪಿಯನ್ ದೇಶಗಳಲ್ಲೂ ಸಿಕ್ಕಿರಲಿಲ್ಲ ಎಂಬ ವಾಸ್ತವದ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಪಾಕಿಸ್ತಾನ ಸರಕಾರಗಳ ನಡುವೆ ಇದ್ದ ನಂಬಿಕೆಯ ಆಳವನ್ನು ನಾವು ಅರ್ಥಮಾಡಿಕೊಳ್ಳಬೇಕು.  ಇದನ್ನು ಅ ದಿನಗಳಲ್ಲಿ ಅಮೆರಿಕಾ ಬಗ್ಗೆ ಭಾರತ ಅನುಸರಿಸಿದ ನೀತಿಗಳೊಂದಿಗೆ ಮುಂದಿನವಾರ ಹೋಲಿಸೋಣ.

 

ನಾ ನಿನಗಿದ್ದರೆ ನೀ ನನಗೆ!
(ಭಾಗ - ೨)

ಭಾರತದ ಮೊದಲ ಪ್ರಧಾನಮಂತ್ರಿ ಹಾಗೂ ವಿದೇಶಮಂತ್ರಿಯಾದ ಜವಾಹರ್‌ಲಾಲ್ ನೆಹರೂ ಅವರ ಹಲವು ವೈಯುಕ್ತಿಕ ಸೈದ್ಧಾಂತಿಕ ಆಯಾಮಗಳಲ್ಲಿ ಅವರು ಫೇಬಿಯನ್ ಸೋಶಿಯಲಿಸ್ಟ್, ಅಂದರೆ ಸಂವಿಧಾನಾತ್ಮಕ ಶಾಂತಿಮಾರ್ಗದಿಂದ ಸಮಾಜವಾದಿ ವ್ಯವಸ್ಥೆಯ ನಿರ್ಮಾಣವನ್ನು ಸಮರ್ಥಿಸುವಂತಹವರಾಗಿದ್ದದ್ದೂ ಒಂದು.  ಹೀಗಾಗಿ ಅವರ ಚಿಂತನೆ, ನಡೆನುಡಿಗಳಲ್ಲಿ ಸಮಾಜವಾದಿ ತತ್ವಗಳು ಮತ್ತು ಸಮಾಜವಾದಿ ದೇಶಗಳ ಬಗ್ಗೆ ಮೃದುಧೋರಣೆ ಕಂಡುಬರುತ್ತದೆ.  ಸಹಜವಾಗಿಯೇ ಇದರ ಛಾಪನ್ನು ಅವರು ಸಂಪೂರ್ಣವಾಗಿ ತಮ್ಮ ಕೈಯಾರೆ ರೂಪಿಸಿದ ಭಾರತದ ವಿದೇಶನೀತಿಯಲ್ಲೂ ಕಾಣಬಹುದು.  ಹೀಗಾಗಿಯೇ, ತಾತ್ವಿಕವಾಗಿ ಅಲಿಪ್ತನೀತಿ ಅದೆಷ್ಟೇ ನೈತಿಕವಾಗಿದ್ದರೂ ಭಾರತದ ಅಲಿಪ್ತತೆ ದೋಷಪೂರ್ಣವಾಗಿತ್ತು.

ಏಕಪಕ್ಷೀಯ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಳ ನಡುವೆ ಘರ್ಷಣೆಯೇರ್ಪಟ್ಟಾಗ ಎರಡರಿಂದಲೂ ಸಮಾನ ಅಂತರವನ್ನು ಕಾಪಾಡಿಕೊಳ್ಳುವ ಅಲಿಪ್ತನೀತಿ ಒಂದು ಅನೀತಿಯುತ ನಿಲುವು ಎಂಬ ಟೀಕೆಗಳು ಪಶ್ಚಿಮದಿಂದ ಬರತೊಡಗಿದಂತೇ ಅಲಿಪ್ತ ಚಳುವಳಿಯ ಮುಂಚೂಣಿಯಲ್ಲಿದ್ದ ಭಾರತ ವಾಸ್ತವವಾಗಿ ನಿಚ್ಚಳ ಸೋವಿಯೆತ್-ಪರ ನೀತಿಗಳನ್ನು ಅನುಸರಿಸತೊಡಗಿತು.  ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಪಶ್ಚಿಮದ ದೇಶಗಳು ಮತ್ತು ಸೋವಿಯೆತ್ ಯೂನಿಯನ್‌ಗಳ ಕುಕೃತ್ಯಗಳ ಪ್ರಶ್ನೆ ಬಂದಾಗ ಭಾರತ ಅನುಸರಿಸಿದ ನೀತಿಗಳು ವಿವೇಕಿಗಳನ್ನು ದಂಗುಬಡಿಸುತ್ತವೆ.  ಇದಕ್ಕೆ ಹಲವು ಉದಾಹರಣೆಗಳಿವೆ.  ೧೯೫೬ರ ಅಂತ್ಯದಲ್ಲಿ ಘಟಿಸಿದ ಸುಯೆಜ್ ಬಿಕ್ಕಟ್ಟು ಮತ್ತು ಹಂಗೆರಿಯ ಪ್ರಜಾಪ್ರಭುತ್ವವಾದಿ ಕ್ರಾಂತಿಯ ಬಗ್ಗೆ ನೆಹರೂರ ಭಾರತ ಅನುಸರಿಸಿದ ದ್ವಂದ್ವ ನೀತಿಗಳು ಇದಕ್ಕೊಂದು ಉತ್ತಮ ಉದಾಹರಣೆ.  ಸುಯೆಜ್ ಕಾಲುವೆಯ ಮಾಲಿಕತ್ವದ ಪ್ರಶ್ನೆ ಎತ್ತಿಕೊಂಡು ಆ ವರ್ಷ ಬ್ರಿಟನ್ ಮತ್ತು ಫ್ರಾನ್ಸ್‌ಗಳು ಇಸ್ರೇಲ್‌ನ ಸಹಕಾರದೊಂದಿಗೆ ಈಜಿಪ್ಟ್ ಮೇಲೆ ಧಾಳಿ ನಡೆಸಿದವು.  ಇದನ್ನು ನೆಹರೂ ಕಟುಶಬ್ಧಗಳಲ್ಲಿ ಖಂಡಿಸಿದರು.  ಅದೇ ದಿನಗಳಲ್ಲಿ ಕಮ್ಯೂನಿಸ್ಟ್ ಸರ್ವಾಧಿಕಾರದ ವಿರುದ್ಧ ಹಂಗೆರಿಯಲ್ಲಿ ಭುಗಿಲೆದ್ದ ಜನಾಂದೋಳನವನ್ನು ಹತ್ತಿಕ್ಕಲು ಬುಡಾಪೆಸ್ಟ್ ನಗರಕ್ಕೆ ತನ್ನ ಸೇನೆಯನ್ನು ಕಳುಹಿಸಿದ ಸೋವಿಯೆತ್ ಯೂನಿಯನ್ ಆಂದೋಳನದ ನಾಯಕ ಇಮ್ರೆ ನ್ಯಾಗಿ ಸೇರಿದಂತೆ ಸಾವಿರಕ್ಕೂ ಅಧಿಕ ಹಂಗೆರಿಯನ್ನರನ್ನು ಕೊಂದಿತು.  ಈ ಅಮಾನುಷ ಕೃತ್ಯದ ಬಗ್ಗೆ ನೆಹರೂ ತುಟಿ ಬಿಚ್ಚಲೇ ಇಲ್ಲ.  ಇಂತಹ ಹಲವು ಧೋರಣೆಗಳಿಂದಾಗಿ ಪಶ್ಚಿಮದ ದೇಶಗಳು ಭಾರತವನ್ನು ಅನುಮಾನದಿಂದ ನೋಡುವಂತಾಯಿತು.

ಇಷ್ಟಾಗಿಯೂ ೧೯೬೨ರಲ್ಲಿ ಭಾರತ ಮತ್ತು ಚೀನಾಗಳ ನಡುವೆ ಗಡಿಯ ಬಗ್ಗೆ ಯುದ್ಧ ಆರಂಭವಾದಾಗ ಭಾರತಕ್ಕೆ ಸಹಕರಿಸಲು ಮುಂದೆಬಂದದ್ದು ಅಮೆರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್.  ನೆಹರೂರವರ ಪ್ರೀತಿಯ ಸೋವಿಯೆತ್ ಸರಕಾರ ಅಲಿಪ್ತಮಾರ್ಗ ಅನುಸರಿಸಿದರೆ ಅಲ್ಲಿನ ಸರಕಾರೀ ಮಾಲಿಕತ್ವದ ಪ್ರಾವ್ದಾ ಪತ್ರಿಕೆ ಚೀನಾದ ಪರವಾಗಿ ಲೇಖನಗಳನ್ನು ಪ್ರಕಟಿಸಿ ಕ್ರೆಮ್ಲಿನ್‌ನ ಅಂತರಂಗವನ್ನು ಬಹಿರಂಗಪಡಿಸಿತು.  ಈ ಬೆಳವಣಿಗೆಗಳು ನೆಹರೂರ ಕಣ್ಣು ತೆರೆಸಿದವು.  ಇದನ್ನೊಂದು ಅವಕಾಶವೆಂದು ಬಗೆದ ಪಶ್ಚಿಮದ ರಾಷ್ಟ್ರಗಳು ಭಾರತವನ್ನು ಅಲಿಪ್ತನೀತಿಯಿಂದ ವಿಮುಖಗೊಳಿಸಿ ತಮ್ಮೆಡೆ ಸೆಳೆದುಕೊಳ್ಳಲು ಪ್ರಯತ್ನಿಸಿದವು.  ಜನವರಿ ೧೯೬೩ರಲ್ಲಿ ಭಾರತಕ್ಕೆ ಭೇಟಿ ನೀಡಿದ ಆಂಗ್ಲೋ-ಅಮೆರಿಕನ್ ಜಂಟಿ ನಿಯೋಗವೊಂದು ಅಮೆರಿಕಾ ನೇತೃತ್ವದ ಮಿಲಿಟರಿ ಬಣ ಸೌತ್ ಈಸ್ಟ್ ಏಶಿಯಾ ಟ್ರೀಟಿ ಆರ್ಗನೈಜ಼ೇಶನ್ (SEATO)ಗೆ ಭಾರತ ಸೇರಿಕೊಳ್ಳುವುದಾದರೆ ಭಾರತ-ಚೀನಾ ಗಡಿಯಲ್ಲಿ ಭಾರತದ ರಕ್ಷಣೆಯನ್ನು ಆ ಮಿಲಿಟರಿ ಬಣ ಹೊತ್ತುಕೊಳ್ಳುವುದಾಗಿ ಹೇಳಿತು.  ಕೆಲವು ಮೂಲಗಳ ಪ್ರಕಾರ ನೆಹರೂ ಈ ಸಲಹೆಯನ್ನು ಒಪ್ಪಿಕೊಂಡು ಅಲಿಪ್ತನೀತಿಯನ್ನು ತೊರೆದು ಅಮೆರಿಕಾ ಜತೆ ಸೇರಿಕೊಳ್ಳುವುದರತ್ತ ವಾಲಿದ್ದರು.  ಆದರೆ ಅದಕ್ಕೆ ತಡೆಯಾದದ್ದು ಸಿಯಾಟೋದ ನೆರವಿಗೆ ಬದಲಾಗಿ ಭಾರತ ಕಾಶ್ಮೀರದಲ್ಲಿ ಪಾಕಿಸ್ತಾನದ ಹಿತಾಸಕ್ತಿಗಳನ್ನು ಮಾನ್ಯ ಮಾಡಬೇಕೆಂಬ ಷರತ್ತನ್ನು ಆ ನಿಯೋಗ ಹಾಕಿದ್ದು.  ಈ ಷರತ್ತಿನ ಅವ್ಯಾವಹಾರಿಕತೆ ಅದೆಷ್ಟೇ ಇರಲಿ, ಭಾರತವನ್ನು ಓಲೈಸುವ ಭರದಲ್ಲಿ ಇದುವರೆಗೆ ತನಗೆ ನಿಷ್ಟವಾಗಿದ್ದ ಪಾಕಿಸ್ತಾನವನ್ನು ಕಡೆಗಣಿಸಲು ಅಮೆರಿಕಾ ತಯಾರಾಗಿರಲಿಲ್ಲ ಎನ್ನುವುದನ್ನು ಅಂದರೆ ವಾಷಿಂಗ್‌ಟನ್‌ನ ಮಿತ್ರನಿಷ್ಟೆಯನ್ನು ಅದು ತೋರಿಸುತ್ತದೆ ಎಂಬ ಸತ್ಯವನ್ನು ಗುರುತಿಸುವುದರಲ್ಲಿ ನಾವು ಸೋಲಬಾರದು.  ಈ ಗುರುತಿಸುವಿಕೆ ಅಮೆರಿಕಾವನ್ನು ದೂರವಿರಿಸಿ, ಅಲಿಪ್ತತೆಯ ನಟನೆ ಮಾಡುತ್ತಾ ಸೋವಿಯೆತ್-ಪರ ನೀತಿಗಳನ್ನು ನಾವು ಅನುಸರಿಸಿದುದರ ಅವ್ಯಾವಹಾರಿಕತೆ ಮತ್ತು ಅದರಿಂದಾದ ನಷ್ಟದ ಒಂದು ಅಂದಾಜನ್ನು ನಮಗೆ ನೀಡುತ್ತದೆ.  ಈ ಅಂದಾಜಿನ ಹಿನ್ನೆಲೆಯಲ್ಲಿ, ಭಾರತದ ವಿದೇಶನೀತಿಯ ಮೊದಲ ಐದು ದಶಕಗಳನ್ನು ಎನ್‌ಡಿಎ ಸರಕಾರದಲ್ಲಿ ವಿದೇಶಮಂತ್ರಿಯಾಗಿದ್ದ ಜಸ್ವಂತ್ ಸಿಂಗ್ ಅವರು ಐದು ನಿರರ್ಥಕ ದಶಕಗಳು ಎಂದು ವ್ಯಾಖ್ಯಾನಿಸಿದ್ದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಪಾಕಿಸ್ತಾನವಷ್ಟೇ ಅಲ್ಲ, ತನಗೆ ಸಹಕರಿಸಿದ ಯಾವ ದೇಶವನ್ನೂ ಅಮೆರಿಕಾ ಬಿಟ್ಟುಕೊಟ್ಟಿಲ್ಲ ಎನ್ನುವುದನ್ನೂ ನಾವು ಗಮನಿಸುವ ಅಗತ್ಯವಿದೆ.  ಶೀತಲಸಮರದಲ್ಲಿ ಸೋವಿಯೆತ್ ಬಲವನ್ನು ಕುಂದಿಸುವ ಹಾಗೂ ವಿಯೆಟ್ನಾಂನಿಂದ ಗೌರವಯುತವಾಗಿ ಕಾಲುತೆಗೆಯುವ ಉದ್ದೇಶದಿಂದ ಕಮ್ಯೂನಿಸ್ಟ್ ಚೀನಾದ ಜತೆ ಸಂಬಂಧಗಳನ್ನು ಸುಧಾರಿಸಿಕೊಂಡ ಮೇಲೂ ತನ್ನನ್ನು ಅವಲಂಬಿಸಿದ ತೈವಾನ್ ಅನ್ನು ಅಮೆರಿಕಾ ಕೈಬಿಟ್ಟಿಲ್ಲ.  ಆ ಪುಟ್ಟ ದ್ವೀಪರಾಷ್ಟ್ರವನ್ನು ನುಂಗಿ ನೊಣೆಯಲು ದೈತ್ಯ ಚೀನಾಗೆ ಅದು ಅವಕಾಶ ನೀಡಿಲ್ಲ.  ಹಾಗೆಯೇ ಚೀನಾ ಜತೆಗಿನ ಸಖ್ಯಕ್ಕಾಗಿ ಅದು ಜಪಾನ್ ಹಾಗೂ ದಕ್ಷಿಣ ಕೊರಿಯಾಗಳ ರಕ್ಷಣೆಯನ್ನು ಬಲಿಗೊಟ್ಟಿಲ್ಲ.

ಉಪಖಂಡದ ಬಗ್ಗೆ ಅಮೆರಿಕಾದ ನೀತಿಗಳನ್ನು ಅವಲೋಕಿಸಿದರೆ ತನ್ನ ಮಿತ್ರದೇಶವಾದ ಪಾಕಿಸ್ತಾನಕ್ಕೆ ಸಹಕರಿಸಿದರೂ ಭಾರತವನ್ನು ಅಮೆರಿಕಾ ಸಾರಾಸಗಟಾಗಿ ತಿರಸ್ಕರಿಸಲಿಲ್ಲ ಎನ್ನುವುದು ಅರಿವಾಗುತ್ತದೆ.  ೧೯೫೪ರ ರಕ್ಷಣಾ ಒಪ್ಪಂದದ ನಂತರ ಅಮೆರಿಕಾ ಪಾಕಿಸ್ತಾನಕ್ಕೆ ಹೇರಳ ಶಸ್ತ್ರಾಸ್ತ್ರಗಳ ಪೂರೈಕೆ ಆರಂಭಿಸಿತಷ್ಟೇ.  ಈ ಬಗ್ಗೆ ಭಾರತ ಅಪಸ್ವರ ಎತ್ತಿದಾಗ ನವದೆಹಲಿ ಬಯಸಿದರೆ ಅಂತಹದೇ ಶಸ್ತ್ರಾಸ್ತ್ರಗಳನ್ನು ಭಾರತಕ್ಕೂ ನೀಡಲು ತಯಾರಾಗಿರುವುದಾಗಿ ೧೯೫೭ರಲ್ಲಿ ಅಮೆರಿಕಾ ಹೇಳಿತು.  ಆದರೆ ಇದನ್ನು ಭಾರತ ತಿರಸ್ಕರಿಸಿತು.  ಅಮೆರಿಕಾದ ಈ ನಿಲುವನ್ನು ತನ್ನ ಶಸ್ತಾಸ್ತ್ರವ್ಯಾಪಾರಕ್ಕೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ತಂತ್ರವೆಂದು ತಳ್ಳಿಹಾಕಿದರೂ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಕೇವಲ ಟೀಕೆ ಹಾಗೂ ನಿಂದನೆಗಳಲ್ಲಿ ಸಮಯ ಕಳೆದ ಭಾರತದ ವರ್ತನೆಯನ್ನೂ ಸಮರ್ಥಿಸಲಾಗದು.

ಕಮ್ಯೂನಿಸಂ ವಿಸ್ತರಣೆಯನ್ನು ತಡೆಯುವ ಉದ್ದೇಶದೊಂದಿಗೆ ಅಮೆರಿಕಾದಿಂದ ಪಡೆದುಕೊಂಡ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ವಾಸ್ತವವಾಗಿ ಉಪಯೋಗಿಸುವುದು ಭಾರತದ ವಿರುದ್ದ ಎಂದು ನವದೆಹಲಿ ವಾದಿಸಿದಾಗ ಆದನ್ನು ಮಾನ್ಯಮಾಡಿದ ಐಸೆನ್‌ಹೋವರ್ ಸರಕಾರ ಪಾಕಿಸ್ತಾನ ಹಾಗೇನಾದರೂ ವರ್ತಿಸಿದರೆ ಆ ದೇಶಕ್ಕೆ ಶಸ್ತ್ರಾಸ್ತ್ರಪೂರೈಕೆಯನ್ನು ನಿಲುಗಡೆಗೆ ತರುವುದಾಗಿ ಮಾತುಕೊಟ್ಟಿತು.  ೧೯೬೫ರಲ್ಲಿ ಅಯೂಬ್ ಖಾನ್ ಸರಕಾರ ಕಾಶ್ಮೀರದಲ್ಲಿ ಕಾಲುಕೆರೆದು ಯುದ್ಧ ಆರಂಭಿಸಿದಾಗ ಲಿಂಡನ್ ಜಾನ್ಸನ್ ಸರಕಾರ ಪಾಕಿಸ್ತಾನ ಮತ್ತು ಭಾರತಗಳೆರಡಕ್ಕೂ ಶಸ್ತ್ರಾಸ್ತ್ರಗಳು ಮತ್ತು ಬಿಡಿಭಾಗಗಳ ಪೂರೈಕೆಯನ್ನು ತಡೆಹಿಡಿಯಿತು.  ಇದರಿಂದ ಭಾರತಕ್ಕೆ ತಟ್ಟಿದ ಹಾನಿ ಸೀಮಿತ.  ಸಣ್ಣ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದ ಭಾರತ ಯುದ್ಧವನ್ನು ಮುಂದುವರೆಸುವ ಸ್ಥಿತಿಯಲ್ಲಿದ್ದರೆ ಎಲ್ಲ ಬಗೆಯಲ್ಲೂ ಅಮೆರಿಕಾದ ಮೇಲೆ ಅವಲಂಬಿತವಾಗಿದ್ದ ಪಾಕಿಸ್ತಾನ ಎರಡೇ ವಾರಗಳಲ್ಲಿ ಶಸ್ತ್ರಾಸ್ತ್ರಗಳ ತೀವ್ರ ಕೊರತೆ ಅನುಭವಿಸಿತು.  ಬಿಡಿಭಾಗಗಳ ಪೂರೈಕೆಯೂ ನಿಂತದ್ದರಿಂದಾಗಿ ಸೇಬರ್ ಜೆಟ್ ಯುದ್ಧವಿಮಾನಗಳು, ಪ್ಯಾಟನ್ ಟ್ಯಾಂಕ್‌ಗಳು ಸೇರಿದಂತೆ ಹಲವು ಬಗೆಯ ಭಾರೀ ಯುದ್ಧೋಪರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರುಪಯುಕ್ತವಾದವು.  ಮಿತ್ರದೇಶಗಳಾದ ಚೀನಾ, ಟರ್ಕಿ ಮತ್ತು ಇಂಡೋನೇಶಿಯಾಗಳಿಂದ ನಿರೀಕ್ಷಿತ ಸಹಾಯ ದೊರೆಯದೇ ಕದನಸ್ಥಂಭನಕ್ಕಾಗಿ ಪಾಕಿಸ್ತಾನ ದಮ್ಮಯ್ಯಗುಡ್ಡೆ ಹಾಕಬೇಕಾದ ದುಃಸ್ಥಿತಿಗೊಳಗಾಯಿತು.

ಪ್ರಸಕ್ತ ಸನ್ನಿವೇಶದಲ್ಲಿ ತಾಲಿಬಾನ್ ವಿರುದ್ಧದ ಸಮರದಲ್ಲಿ ಪಾಕಿಸ್ತಾನದ ಸಹಾಯ ಪಡೆಯಲೋಸುಗ ಕಾಶ್ಮೀರದಲ್ಲಿ ಆ ದೇಶದ ಕುಕೃತ್ಯಗಳತ್ತ ಅಮೆರಿಕಾ ನಿರ್ಲಕ್ಶ್ಯ ತೋರಿದ್ದನ್ನು ವಿಶ್ಲೇಷಿಸಿದರೆ ಇದು ಅಮೆರಿಕಾದ ಇದುವರೆಗಿನ ಸಮರನೀತಿಗೆ ಅನುಗುಣವಾಗಿಯೇ ಇದೆ ಎಂದರಿವಾಗುತ್ತದೆ.  ಇದಕ್ಕೆ ಸ್ವಲ್ಪ ಐತಿಹಾಸಿಕ ವಿವರಣೆ ಅಗತ್ಯ.

ಪ್ರಜಾಪ್ರಭುತ್ವದ ಹೆಸರಿನಲ್ಲಿ ಕಮ್ಯೂನಿಸ್ಟ್ ಸರ್ವಾಧಿಕಾರದ ವಿರುದ್ಧ ಶೀತಲಸಮರಕ್ಕಿಳಿದ ಅಮೆರಿಕಾ ವಿಶ್ವದ ಎಲ್ಲೆಡೆ ಮರಿ ಸರ್ವಾಧಿಕಾರಿಗಳನ್ನು ಬೆಂಬಲಿಸಿದ್ದು ನಿಮಗೆ ನೆನಪಿರಬಹುದು.  ಇದಕ್ಕೆ ಉತ್ತರ ಎರಡು ಆಯಾಮಗಳಲ್ಲಿದೆ.  ಮೊದಲನೆಯ ವಿವರಣೆಯೆಂದರೆ ಫಿಲಿಪ್ಪೀನ್ಸ್‌ನ ಫರ್ಡಿನೆಂಡ್ ಮಾರ್ಕೋಸ್, ಸೋಮಾಲಿಯಾದ ಸೈಯದ್ ಬಾರ್ರೆ, ಈಜಿಪ್ಟ್‌ನ ಅನ್ವರ್ ಸಾದಾತ್ ಮತ್ತು ಹೋಸ್ನಿ ಮುಬಾರಕ್, ಇಂಡೋನೇಶಿಯಾದ ಸುಹಾರ್ತೋ, ಝಾಯಿರೆಯ ಮೊಬುಟು ಸೆಸೆ ಸೆಕೋ, ಕೀನ್ಯಾದ ಡೇನಿಯಲ್ ಅರಪ್ ಮೋಯ್ ಮತ್ತು ಚಿಲಿಯ ಪಿನೋಷೆ ಸೇರಿದಂತೆ ದಕ್ಷಿಣ ಅಮೆರಿಕಾದ ಬಹುತೇಕ ಎಲ್ಲ ಸರ್ವಾಧಿಕಾರಿಗಳನ್ನೂ ಅಮೆರಿಕಾ ಸಮರ್ಥಿಸಿದ್ದಕ್ಕೆ ಕಾರಣ ಅವರೆಲ್ಲರೂ ತಮ್ಮ ಸ್ವಂತ ಅಥವಾ ತಮ್ಮ ದೇಶಗಳ ಹಿತಸಾಧನೆಗಾಗಿ ಅಮೆರಿಕಾದ ಸಖ್ಯ ಗಳಿಸಿ ಅದಕ್ಕೆ ಪ್ರತಿಯಾಗಿ ಮಾಸ್ಕೋ ವಿರುದ್ಧ ವಾಷಿಂಗ್‌ಟನ್‌ಗೆ ಸಹಕರಿಸಲು ತಯಾರಾಗಿದ್ದರು ಎನ್ನುವುದಾಗಿತ್ತು.  ಅವರು ಸರ್ವಾಧಿಕಾರಿಗಳಾಗಿದ್ದರು ಎಂಬ ಕಾರಣಕ್ಕೆ ಅಮೆರಿಕಾ ಅವರನ್ನು ದೂರವಿಟ್ಟಿದ್ದರೆ ಅವರೆಲ್ಲರೂ ಸಹಾಯಕ್ಕಾಗಿ ಪಾಳಯ ಬದಲಾಯಿಸಿ ಮಾಸ್ಕೋದ ಮೊರೆಹೋಗುತ್ತಿದ್ದರು.  ಪರಿಣಾಮವಾಗಿ ವಿಶ್ವದ ಎಲ್ಲೆಡೆ ಸೇನಾನೆಲೆಗಳನ್ನು ಸ್ಥಾಪಿಸಿಕೊಳ್ಳಲು ಮತ್ತು ಅಮೆರಿಕಾದ ವಿರುದ್ಧ ಶಕ್ತಿವರ್ಧನೆ ಮಾಡಿಕೊಳ್ಳಲು ಸೋವಿಯೆತ್ ಯೂನಿಯನ್‌ಗೆ ಸಹಕಾರಿಯಾಗುತ್ತಿತ್ತು.  ಎರಡನೆಯ ಹಾಗೂ ನಮ್ಮ ವಿಶ್ಲೇಷಣೆಗೆ ಅತ್ಯಂತ ಮುಖ್ಯವಾದ ವಿವರಣೆಯೆಂದರೆ ವಿಶ್ವದ ಎಲ್ಲೆಡೆ ಸರ್ವಾಧಿಕಾರಿಗಳತ್ತ ಚಾಟಿ ಬೀಸುತ್ತಾ ಹೋದರೆ ಅಮೆರಿಕಾದ ಶಕ್ತಿ ಎಲ್ಲೆಡೆ ಸೋರಿಹೋಗಿ ಸೋವಿಯೆತ್ ಯೂನಿಯನ್ ಅನ್ನು ಪರಿಣಾಮಕಾರಿಯಾಗಿ ಎದುರಿಸುವುದು ಅಸಾಧ್ಯ ಎಂಬ ಅರಿವು ಅಮೆರಿಕಾದ ಸಮರತಜ್ಞರಿಗಿತ್ತು.  ಏಕಕಾಲದಲ್ಲಿ ಹಲವು ಯುದ್ಧರಂಗಗಳನ್ನು ಸೃಷ್ಟಿಸಿಕೊಳ್ಳುವುದು ಒಳ್ಳೆಯ ಸಮರತಂತ್ರವಲ್ಲ, ಬದಲಾಗಿ ಪ್ರಮುಖ ವಿರೋಧಿಯತ್ತ ಎಲ್ಲ ಗಮನ ಹರಿಸುವುದು ನಿಶ್ಚಿತ ಯಶಸ್ಸಿನ ಮಾರ್ಗ ಎನ್ನುವುದು ಸರ್ವವಿದಿತವೇ ಅಲ್ಲವೇ?  ಒಂದುವೇಳೆ ಸೋವಿಯೆತ್ ಸರ್ವಾಧಿಕಾರದ ಜತೆ ಉಳಿದೆಲ್ಲ ಮರಿ ಸರ್ವಾಧಿಕಾರಿಗಳ ವಿರುದ್ಧ ಅಮೆರಿಕಾ ಯುದ್ಧ ಸಾರಿದ್ದರೆ ಮಾಸ್ಕೋವನ್ನೂ ಮಣಿಸುವುದು ಸಾಧ್ಯವಾಗುತ್ತಿರಲಿಲ್ಲ ಮತ್ತು ಮರಿ ಸರ್ವಾಧಿಕಾರಿಗಳು ತಲೆಯೆತ್ತುವುದನ್ನೂ ತಡೆಯಲಾಗುತ್ತಿರಲಿಲ್ಲ.  ತಾಲಿಬಾನ್ ವಿಷಯದಲ್ಲೂ ಅಮೆರಿಕಾ ಮಾಡುತ್ತಿರುವುದು ಇದೇ.  ಪ್ರಮುಖ ವಿರೋಧಿಯತ್ತ ಗಮನ ಹರಿಸುವುದು ಅದರ ಗುರಿ.  ಕಾಶ್ಮೀರದಲ್ಲಿ ಭಾರತದ ಹಿತಾಸಕ್ತಿಯತ್ತ ಗಮನ ನೀಡಿದರೆ ಪಾಕಿಸ್ತಾನದಿಂದ ಸರಿಯಾದ ಸಹಕಾರ ದೊರೆಯದೇ ತಾಲಿಬಾನ್ ವಿರುದ್ಧದ ಸಮರ ವಿಫಲವಾಗುವ ಆತಂಕ ಅಮೆರಿಕಾದ ಸಮರತಜ್ಞರಿಗಿದೆ.

ಅಮೆರಿಕಾದ ಈ ನೀತಿಗಳಿಂದ ಭಾರತ ಕಲಿಯುವುದೂ ಸಾಕಷ್ಟಿದೆ.  ಇದರಲ್ಲಿ ಮೊದಲನೆಯ ಮುಖ್ಯ ಪಾಠವೆಂದರೆ ನಾನು ಹಿಂದೆ ಇದೇ ಅಂಕಣದಲ್ಲಿ ವಿವರವಾಗಿ ಬರೆದಿರುವಂತೆ ಚೀನಾದ ಜತೆ ಅನಗತ್ಯ ಗಡಿವಿವಾದವನ್ನು ಮೈಮೇಲೆ ಎಳೆದುಕೊಂಡು ಹೊಸದೊಂದು ದೊಡ್ಡ ರಣರಂಗವನ್ನು ಸೃಷ್ಟಿಸಿಕೊಳ್ಳದೇ ಪೂರ್ಣಗಮನವನ್ನು ಪಾಕಿಸ್ತಾನದತ್ತ ಹರಿಸಿದ್ದರೆ ಆ ದೇಶ ನಮಗೆ ಇಷ್ಟು ದೊಡ್ಡ ಕಂಟಕವಾಗಿ ಬೆಳೆಯುವುದನ್ನು ತಡೆಗಟ್ಟಬಹುದಾಗಿತ್ತು.  ಮತ್ತೊಂದು ಮಹತ್ವದ ಪಾಠವೆಂದರೆ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಗತ್ಯವಾದ ಪರಿಣಾಮಕಾರೀ ಮಾರ್ಗೋಪಾಯಗಳನ್ನು ನಾವೇ ಹುಡುಕಿಕೊಳ್ಳಬೇಕು.  ಇನ್ನು ಮೂರನೆಯ ಹಾಗೂ ಅತ್ಯಂತ ಮಾರ್ಮಿಕ ಪಾಠವೆಂದರೆ ಅಮೆರಿಕಾದ ಸಮಸ್ಯೆಗಳಿಗೆ ನಾವು ಹಿಂದೆಂದೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.  ಸೋವಿಯೆತ್ ಯೂನಿಯನ್, ಉತ್ತರ ಕೊರಿಯಾ, ಇರಾಕ್ ವಿರುದ್ಧದ ಅದರ ಆತಂಕಗಳನ್ನು ನಮ್ಮ ಆತಂಕಗಳೆಂದು ನಾವೆಂದೂ ಭಾವಿಸಲಿಲ್ಲ.  ಹಾಗಿರುವಾಗ ನಮ್ಮ ಆತಂಕಗಳನ್ನು ತನ್ನದು ಎಂದು ಪರಿಗಣಿಸಿ ಆ ದೇಶ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಶಿಸುವುದು ಅರ್ಥಹೀನ.  ಶಾಲೆಯಲ್ಲಿ ಕಲಿತ ಕತ್ತೆ-ಕುದುರೆಯ ಪಾಠವನ್ನು ನಾ ನಿನಗಿದ್ದರೆ ನೀ ನನಗೆ ಎಂದು ಬದಲಾಯಿಸಿಕೊಂಡರೆ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ.

***

 

4 comments:

 1. Hello Sir,

  My comment is related to Dealing with China on the current border issue.

  Its not just about having friends which matters. What also matters is our responsiveness on dealing with the situation in hand, especially when our core interests are at stake.

  The present govt. is totally ill-equipped to deal such kind of situations. I could not make out one thing.... If the Srilanka can handle powerful India, Japan/Vietnam can handle powerful China, Why can't India can't handle China? (Its not just about being powerful, Its also about how we quickly & appropriately respond when our core interests are at stake)

  Note: I am neither against Congress party nor supporter of BJP. (Nowadays based on the comment peoples around have some default opinion. That's why this note)

  -Srinivasa S S

  ReplyDelete
  Replies
  1. Thank you very much for your comments. Yes, lack of determination on the part of the Manmohan Singh administration to counter the Chinese push is the main problem. I remember on earlier occasions like this, previous administrations have acted with more determination. For ex. the way Indians dealt a crushing defeat on the Cbinese forces in a brief and undeclared war along the McMahon Line during the winter of 1987-88. Gone or those days. The Chinese committed similar intrusion at Kongka Pass nearly five years ago and the Indian government responded exactly the way it's doing now. That is a long story, I may write a detailed article on this shortly.

   Delete
 2. ಮೆಕ್ ಮಹೋನ್ ಲೈನ್ ಕುರಿತು ಹಿ೦ದೆ ನೀವು ಬರೆದುದು ನೆನಪಾಯಿತು, ಅದೊ೦ದು ಸ್ಥಾಪಿತ ಮತ್ತು ಇತ್ಯರ್ಥವಾದ ವಿಷಯ ಎ೦ದು ನಮ್ಮ ದೇಶ ಚೀನಾದೊ೦ದಿಗೆ ವ್ಯವಹರಿಸಿದ ಕ್ರಮ ತೀರಾ ಅವ್ಯಾವಹಾರಿಕವಾಗಿತ್ತು ಮತ್ತು ತೀರಾ, ಕೇವಲ ಸ್ವಾರ್ಥವಷ್ಟೇ ಅದರ ಉದ್ದೇಶ. ದಯವಿಟ್ಟು ನಿಮ್ಮ ಆ ಲೇಖನದ ಲಿ೦ಕ್ ಕೊಡಬಹುದೇ ? ಜಾರ್ಜ್ ಫ಼ೆರ್ನಾ೦ಡಿಸ್ ರಕ್ಷಣಾ ಸಚಿವರಾದ ಬಳಿಕ ಹೇಳಿದ ಒ೦ದು ಮಾತು ನಮ್ಮ ಮೊದಲ ಶತ್ರು ಚೀನಾ, ಪಾಕಿಸ್ತಾನ ಅಲ್ಲ, ಎ೦ಬುದು ಅಷ್ಟು ಸಮತೋಲನದಿ೦ದ ಕೂಡಿರಲಿಲ್ಲ ಅನ್ನಬಹುದು. ವ೦ದನೆಗಳು

  ReplyDelete
 3. http://premashekhara.blogspot.in/search/label/%E0%B2%B2%E0%B3%87%E0%B2%96%E0%B2%A8%20%28%E0%B2%AD%E0%B2%BE%E0%B2%B0%E0%B2%A4%E0%B2%A6%20%E0%B2%B5%E0%B2%BF%E0%B2%A6%E0%B3%87%E0%B2%B6%E0%B2%BE%E0%B2%82%E0%B2%97%20%E0%B2%A8%E0%B3%80%E0%B2%A4%E0%B2%BF%29

  ReplyDelete