ಕನ್ನಡ ದೈನಿಕ "ವಿಜಯವಾಣಿ"ಯ "ಜಗದಗಲ" ಅಂಕಣದಲ್ಲಿ ನಿನ್ನೆ, ಬುಧವಾರ, ಮೇ ೨೨, ೨೦೧೩ರಂದು ಪ್ರಕಟವಾದ ಲೇಖನ
ಇಸ್ಲಾಮಿಕ್ ರಾಷ್ಟ್ರ ಸೌದಿ ಅರೇಬಿಯಾ ಎರಡು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಅಲ್ಲಿನ ಲೇಬರ್ ಮಿನಿಸ್ಟ್ರಿ ೨೦೧೧ರಿಂದ ಹಂತಹಂತವಾಗಿ ಜಾರಿಗೆ
ತರುತ್ತಿರುವ ನಿತಾಖತ್ ಕಾಯಿದೆ ಖಾಸಗೀ ಕಾರ್ಖಾನೆ/ಸಂಸ್ಥೆಗಳಲ್ಲಿ ಅವುಗಳಲ್ಲಿನ ಉತ್ಪಾದನಾವಸ್ತು ಅಥವಾ
ಕಾರ್ಯವಿಧಾನದ ಆಧಾರದ ಮೇಲೆ ಸ್ಥಳೀಯ ಕಾರ್ಮಿಕರ ಸಂಖ್ಯೆ ಶೇಕಡಾ ಆರರಿಂದ ಐವತ್ತರಷ್ಟಿರಬೇಕೆಂದು ಹೇಳುತ್ತದೆ. ಇತ್ತೀಚೆಗೆ ಈ ಕಾಯಿದೆಯ ಪರಿಣಾಮವಾಗಿ ಸುಮಾರು ಇಪ್ಪತ್ತು
ಲಕ್ಷ ಭಾರತೀಯರ ಉದ್ಯೋಗಕ್ಕೆ ಸಂಚಕಾರ ಬಂದೊದಗಿರುವ ಹಿನ್ನೆಲೆಯಲ್ಲಿ ಇದು ಮಾಧ್ಯಮಗಳಲ್ಲಿ ಹೆಚ್ಚಾಗಿ
ಚರ್ಚಿತವಾಗುತ್ತಿದೆ.
ಇದರ ಜತೆಗೇ, ಆ ಸಂಪ್ರದಾಯಸ್ಥ
ರಾಷ್ಟ್ರದ ಇಪ್ಪತ್ತೇಳು ವರ್ಷದ ಮಹಿಳೆ ರಹಾ ಮೊಹಾರಕ್ ಕಳೆದ ಶನಿವಾರ, ಮೇ ೧೯ರಂದು ಮೌಂಟ್ ಎವರೆಸ್ಟ್‌ನ ನೆತ್ತಿಯ
ಮೇಲೆ ಪದಾರ್ಪಣ ಮಾಡಿ ಇತಿಹಾಸ ನಿರ್ಮಿಸಿದ್ದಾಳೆ.
Arabs with Altitude ಎಂಬ ಪರ್ವತಾರೋಹಣ ತಂಡದ ಸದಸ್ಯೆಯಾದ ಈ ಗ್ರಾಫಿಕ್
ಡಿಸೈನರ್ ವಿಶ್ವದ ಅತ್ಯಂತ ಎತ್ತರದ ಶಿಖರದ ಮೇಲೆ ವಿಕ್ರಮ ಸಾಧಿಸಿದ ಸೌದಿ ಅರೇಬಿಯಾ ಏಕೆ, ಇಡೀ ಪಶ್ಚಿಮ ಏಶಿಯಾದ ಮೊತ್ತಮೊದಲ ಮಹಿಳೆ.
ಈ ಸುದ್ಧಿಗಳ ನಡುವೆ ಮತ್ತೊಂದು ಮಹತ್ವದ ಸುದ್ಧಿ ವಿಶ್ವದ, ಮುಖ್ಯವಾಗಿ ಭಾರತದ, ಸುದ್ಧಿಮಾಧ್ಯಮಗಳಲ್ಲಿ ಸ್ಥಾನ ಪಡೆಯದೇ ಮರೆಯಾಗಿಹೋಗುತ್ತಿದೆ. ಪ್ರವಾದಿ ಮಹಮದ್‌ರ ಬದುಕಿನೊಂದಿಗೆ, ಇಸ್ಲಾಂನ ಇತಿಹಾಸದೊಂದಿಗೆ ಅವಿನಾಭಾವ ಸಂಬಂಧ
ಹೊಂದಿರುವ ಹಲವು ಮಸೀದಿಗಳು ಹಾಗೂ ಸಮಾಧಿಗಳು ನಾಶವಾಗುತ್ತಿರುವುದನ್ನು ಯಾರೂ ಗಮನಿಸುತ್ತಿಲ್ಲ. ಎರಡು ಶತಮಾನಗಳ ಹಿಂದೆ ಆರಂಭವಾದರೂ ಇತ್ತೀಚಿನ ವರ್ಷಗಳಲ್ಲಿ
ವ್ಯಾಪಕವಾಗಿರುವ ಈ ಬೆಳವಣಿಗೆಯ ಪರಿಚಯ ಇಂದಿನ ಜಗದಗಲದ ವಸ್ತುವಿಷಯ.
೨೦೦೭ರಲ್ಲಿ ಸೌದಿ ಅರೇಬಿಯಾದ ಉನ್ನತ ಧರ್ಮಾಧಿಕಾರಿ
(ಉಡಿಚಿಟಿಜ ಒuಜಿಣi) ಅಬ್ದುಲ್ಲಜೀಜ್-ಅಲ್-ಶೇಖ್‌ರ ಅನುಮೋದನೆಯೊಂದಿಗೆ ಅಲ್ಲಿನ ಇಸ್ಲಾಮಿಕ್ ವ್ಯವಹಾರಗಳ
ಮಂತ್ರಾಲಯ ಹೊರಡಿಸಿದ ಪ್ರಕಟಣೆಯೊಂದು ಮದೀನಾ ಪಟ್ಟಣದ ಮಸ್ಜಿದ್ ಅನ್-ನಬಾವಿ ಮಸೀದಿಯ ಗುಮ್ಮಟವನ್ನು
ಕೆಡವುವ ಹಾಗೂ ಪ್ರವಾದಿ ಮಹಮದ್, ಅಬು ಬಕ್ರ್ ಮತ್ತು ಉಮರ್‌ರ ಸಮಾಧಿಗಳನ್ನು ನೆಲಸಮಗೊಳಿಸುವ ಪ್ರಸ್ತಾಪ ಮುಂದಿಟ್ಟಿತು. ಅದಾದ ನಂತರದ ಈ ಒಂದೂವರೆ ದಶಕದಲ್ಲಿ ಇಸ್ಲಾಂನ
ಅತ್ಯಂತ ಪವಿತ್ರ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನಾಗಳು ಸಂಪೂರ್ಣವಾಗಿ ಬದಲಾಗಿಹೋಗಿವೆ. ಒಂದುಕಾಲದಲ್ಲಿ ಮರುಭೂಮಿ ಪಟ್ಟಣಗಳಾಗಿದ್ದ ಇವೆರಡೂ ಈಗ ಕಣ್ಣುಕುಕ್ಕುವ
ಗಗನಚುಂಬಿಗಳಿಂದ, ಶಾಪಿಂಗ್ ಮಾಲ್‌ಗಳಿಂದ, ಐಷಾರಾಮಿ ಹೋಟೆಲ್‌ಗಳಿಂದ ತುಂಬಿಹೋಗಿವೆ. ಸೌದಿ ರಾಜಮನೆತನಕ್ಕೆ ಮೆಕ್ಕಾ ಪಟ್ಟಣ ಆ ನಾಡಿನ ಭವಿಷ್ಯದ
ಸಂಕೇತ, ಅಗಣಿತ ಪೆಟ್ರೋ-ಡಾಲರ್
ಸಂಪತ್ತನ್ನು ಐಹಿಕ ಸುಖಭೋಗಗಳ ಅಗರವಾಗಿಸುವ ಪ್ರಕ್ರಿಯೆಯ ಜೀವಂತ ಉದಾಹರಣೆ. ಈ ಹಾದಿಯಲ್ಲಿ ಎದುರಾಗುವ ಯಾವುದೇ ಅಡ್ಡಿ, ಅದು ಇಸ್ಲಾಂನ ಪರಮಪೂಜ್ಯ ಸಂಕೇತವೇ ಆಗಿರಲಿ, ನಿರ್ನಾಮವಾಗಲೇಬೇಕು. ಹಾಗೆ ನಾಮಾವಶೇಷವಾದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ
ಕಟ್ಟಡಗಳ ಸಂಖ್ಯೆ ಸುಮಾರು ನಾನೂರರಿಂದ ಐನೂರು ಎಂದು ಇಸ್ಲಾಮಿಕ್ ಹೆರಿಟೇಜ್ ರೀಸರ್ಚ್ ಫೌಂಡೇಶನ್‌ನ
ಕಾರ್ಯನಿರ್ವಾಹಕ ನಿರ್ದೇಶಕ ಡಾ. ಇರ್ಫಾನ್ ಅಲ್-ಅಲಾವಿ ವ್ಯಥೆಯಿಂದ ಹೇಳುತ್ತಾರೆ. ಈ ವಿನಾಶಕ್ಕೆ ಪ್ರತಿಕ್ರಿಯೆ?
ಡಾ. ಅಲಾವಿಯರ ಮಾತಿನಲ್ಲೇ ಹೇಳುವುದಾದರೆ “No one has the balls to stand up and
condemn this cultural vandalism.”
ಹಾಗೆ ನೋಡಿದರೆ ಈ ವಿನಾಶಕಾರ್ಯ ಇಂದಿನದಲ್ಲ.
ಅದಕ್ಕೆ ಎರಡು ಶತಮಾನಗಳ ಇತಿಹಾಸವಿದೆ. ಇದೆಲ್ಲವೂ
ಆರಂಭವಾದದ್ದು ಅಟೋಮಾನ್ ಟರ್ಕಿಶ್ ಸಾಮ್ರಾಜ್ಯದ ಭಾಗವಾಗಿದ್ದ, ಮೆಕ್ಕಾ ಮತ್ತು ಮದೀನಾ ಪಟ್ಟಣಗಳಿರುವ ಹೆಜಾಝ್
ಎಂದು ಕರೆಯಲ್ಪಡುವ ಪ್ರದೇಶ ೧೮೦೬ರಲ್ಲಿ ಒಳನಾಡಿನ ನಜ್ದ್ ಪ್ರದೇಶದಿಂದ ಬಂದ ವಹಾಬಿ ಸೇನೆಯ ವಶವಾದಾಗ. ವಹಾಬಿಗಳ ಧಾಳಿಗೆ ಮೊದಲು ತುತ್ತಾದದ್ದು ಮದೀನಾ ಪಟ್ಟಣದ
ಜನ್ನತ್ ಅಲ್-ಬಾಖಿ ಸಮಾಧಿಸ್ಥಳ. ಉದಾರ ಇಸ್ಲಾಂನ ಅನುಯಾಯಿಗಳಾದ
ಅಟೋಮಾನ್ ತುರ್ಕರು ಶತಮಾನಗಳಿಂದ ಈ ಸಮಾಧಿಸ್ಥಳದಲ್ಲಿ ನಿರ್ಮಿಸಿದ್ದ ಇಸ್ಲಾಮಿಕ್ ಸಾಧುಸಂತರ ಸುಂದರ
ಗೋರಿಗಳೆಲ್ಲಾ ಕಟ್ಟಾ ಸಂಪ್ರದಾಯನಿಷ್ಟ ವಹಾಬಿಗಳಿಂದ ಸಂಪೂರ್ಣವಾಗಿ ಧ್ವಂಸವಾದವು. ಈ ಸಮಾಧಿಸ್ಥಳಕ್ಕೆ ಹತ್ತಿರದ, ಪ್ರವಾದಿ ಮಹಮದ್ ಮತ್ತವರ ಕುಟುಂಬವರ್ಗ ಮತ್ತು
ಅನುಯಾಯಿಗಳ ಗೋರಿಗಳಿರುವ ಅಲ್-ಮಸ್ಜಿದ್ ಅಲ್-ನಬಾವಿ ಅಥವಾ ಪ್ರವಾದಿಗಳ ಮಸೀದಿಯನ್ನೂ ಕೆಡವಲು ವಹಾಬಿಗಳು
ಮಾಡಿದ ಪ್ರಯತ್ನ ಎಲ್ಲೆಡೆಯಿಂದ ಬಂದ ವಿರೋಧ, ೧೮೧೧ರಲ್ಲಿ ಆರಂಭವಾದ ವಹಾಬಿ-ತುರ್ಕಿ ಯುದ್ಧ ಮತ್ತು ಏಳುವರ್ಷಗಳ ನಂತರ
೧೮೧೮ರಲ್ಲಿ ಘಟಿಸಿದ ವಹಾಬಿಗಳ ಸೋಲಿನಿಂದಾಗಿ ಯಶಸ್ವಿಯಾಗಲಿಲ್ಲ. ನಾಶವಾಗಿದ್ದ ಹಲವಾರು ಕಟ್ಟಡಗಳನ್ನು ತುರ್ಕರು ೧೮೪೮ ಮತ್ತು
೧೮೬೦ರ ನಡುವೆ ಪುನರ್ನಿಮಿಸಿದರು. ತುರ್ಕಿ ವಾಸ್ತುಶಿಲ್ಪದ
ಶ್ರೇಷ್ಟ ವಿನ್ಯಾಸಗಳನ್ನು ಬಳಸಿ ನಿರ್ಮಾಣಗೊಂಡ, ಅರಾಬಿಕ್ ಅಲಂಕಾರಾಕ್ಷರಗಳಿಂದ ಶೋಭಿತವಾದ ಈ ಕಟ್ಟಡಗಳಿಗೆ ಮತ್ತೊಮ್ಮೆ ಕುತ್ತು
ಬಂದದ್ದು ೧೯೨೫ರಲ್ಲಿ.
ಆ ವರ್ಷ ಬ್ರಿಟಿಷರ ಸಕ್ರಿಯ ಸಹಾಯದಿಂದ ನಜ್ದ್‌ನ ಅರಸ ಅಬ್ದುಲ್ಲಜೀಜ್ ಬಿನ್ ಸೌದ್ ತನ್ನ ಬೆದೂಯಿನ್
ಸೇನೆಯೊಂದಿಗೆ ಹೆಜಾಝ್ ಪ್ರದೇಶವನ್ನು ಆಕ್ರಮಿಸಿಕೊಂಡ ಮತ್ತು ನಜ್ದ್ ಮತ್ತು ಹೆಜಾಝ್‌ಗಳೆರಡನ್ನೂ ಒಟ್ಟುಗೂಡಿಸಿ
ಹೊಸ ರಾಜ್ಯವೊಂದನ್ನು ಸ್ಥಾಪಿಸಿ ಅದಕ್ಕೆ ತನ್ನ ಮನೆತನದ ಹೆಸರನ್ನೇ ಇಟ್ಟು ಸೌದಿ ಅರೇಬಿಯಾ ಎಂದು ಕರೆದ. ಆರೇಳು ಶತಮಾನಗಳಿಂದ ಉದಾರವಾದಿ ತುರ್ಕರ ಆಡಳಿತದಲ್ಲಿದ್ದ
ಸುಸಂಸ್ಕೃತ ಹೆಜಾಝ್ ಹೀಗೆ ಕಟ್ಟಾ ಸಂಪ್ರದಾಯನಿಷ್ಟರಾದ, ಅಲೆಮಾರಿ ಹಾಗೂ ಅನಕ್ಷರಸ್ತ ವಹಾಬಿಗಳ ಕೈಗೆ
ಬಂದೊಡನೆ ಅದರ ಹಣೆಬರಹವೇ ಬದಲಾಗಿಹೋಯಿತು. ಹೆಜಾಝ್‌ನಲ್ಲಿ
ಪ್ರಚಲಿತವಿದ್ದ ಧಾರ್ಮಿಕ ಆಚರಣೆಗಳಲ್ಲಿ ಮುಖ್ಯವಾದುವುಗಳೆಂದರೆ ಪ್ರವಾದಿ ಮಹಮದ್, ಅವರ ಕುಟುಂಬವರ್ಗ ಮತ್ತು ಸಹವರ್ತಿಗಳ ಬದುಕಿಗೆ
ಸಂಬಂಧಿಸಿದ ಘಟನೆಗಳ ಆಚರಣೆಯೊಂದಿಗೆ ಅಳಿದ ಸಾಧುಸಂತರಿಗೆ ಗೌರವ ಸೂಚಿಸುವುದು ಮತ್ತು ಇವರೆಲ್ಲರ ಸಮಾಧಿಗಳಿಗೆ
ಮತ್ತಿತರ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಹೋಗುವುದು (ನಮ್ಮಲ್ಲಿ ದರ್ಗಾಗಳಿಗೆ ಹೋಗುವಂತೆ). ಆದರೆ ವಹಾಬಿಗಳ ದೃಷ್ಟಿಯಲ್ಲಿ ಇವೆಲ್ಲವೂ ಇಸ್ಲಾಮ್‌ಗೆ ವಿರುದ್ದ. ಹೊಸ ಆಡಳಿತದೊಂದಿಗೆ ಹೆಜಾಝ್‌ನಲ್ಲಿ ಸಕ್ರಿಯರಾದ ಸುನ್ನಿ
ಉಲೆಮಾಗಳು ಅಲ್ಲಿನ ಆಚರಣೆಗಳನ್ನೆಲ್ಲಾ ಮೂಢನಂಬಿಕೆ, ನಾಸ್ತಿಕತೆಯ ಅಟ್ಟಹಾಸ, ಧರ್ಮವಿರೋಧಿ ಎಂದೆಲ್ಲಾ ಬಣ್ಣಿಸಿ ಅವುಗಳ
ನಾಶಕ್ಕೆ ಕರೆನೀಡಿದರು. ಇದರ ದುಷ್ಪರಿಣಾಮವಾದದ್ದು
ಮೆಕ್ಕಾ ಮತ್ತು ಮದೀನಾಗಳ ಮಸೀದಿಗಳು ಮತ್ತು ಸಮಾಧಿಸ್ಥಳಗಳ ಮೇಲೆ.
ಏಪ್ರಿಲ್ ೨೧, ೧೯೨೫ರಂದು ಮದೀನಾದ
ಅಲ್-ಬಾಖಿ ಸಮಾಧಿಗೃಹ ಮತ್ತದರ ಗುಮ್ಮಟವನ್ನು ಕೆಡವಲಾಯಿತು. ಅಲ್ಲದೇ, ಹದಿಮೂರನೆಯ ಶತಮಾನದ ಸಂತ ಇಮಾಮ್ ಮಹಮದ್ ಅಲ್-ಬುಸಿರಿ
ಪ್ರವಾದಿಯವರ ಗುಣಗಾನ ಮಾಡಿ ರಚಿಸಿದ್ದ, ಪ್ರವಾದಿಯವರ ಗೋರಿ ಅಲ್-ಮಸ್ಜಿದ್ ಅಲ್-ನಬಾವಿಯ ಗೋಡೆಯ ಮೇಲೆ ಅರಾಬಿಕ್
ಅಲಂಕಾರಾಕ್ಷರಗಳಲ್ಲಿ ಸುಂದರವಾಗಿ ಬರೆಯಲ್ಪಟ್ಟಿದ್ದ, ಕವಿತೆಯ ಮೇಲೆ ಬಣ್ಣ ಬಳಿದು ಮರೆಮಾಡಲಾಯಿತು.
ಇದರ ಜತೆಗೇ ಮದೀನಾದಲ್ಲಿ ನಾಶಗೊಂಡ ಇತರ ಪ್ರಮುಖ ಗೋರಿಗಳು: ೧. ಕಾಳಗದಲ್ಲಾದ ಪೆಟ್ಟಿನಿಂದ ಉದುರಿಹೋದ
ಪ್ರವಾದಿ ಮಹಮದ್‌ರ ಹಲ್ಲನ್ನು ಹೂಳಿ ನಿರ್ಮಿಸಿದ್ದ ಗೋರಿಯ ಮೇಲಿನ ಖುಬ್ಬತ್ ಅಲ್-ತನಾಯ ಗುಮ್ಮಟ, ೨. ಪ್ರವಾದಿಯವರ ಪುತ್ರಿ ಫಾತಿಮಾ ಅಲ್ ಝಹ್ರಾಳ
ಗೋರಿ, ೩. ಪ್ರವಾದಿಯವರ
ಸಂಬಂಧಿಕ ಮತ್ತವರ ಅತಿಮುಖ್ಯ ಸಹವರ್ತಿ ಹಂಝಾ ಇಬ್ನ್ ಅಬ್ದ್ ಅಲ್-ಮುತ್ತಲೀಬ್‌ನ ಗೋರಿ, ೪. ಎರಡು ದೀಪಸ್ಥಂಭಗಳ ಮಸೀದಿ, ೫. ಪ್ರವಾದಿಯವರ ಈಜಿಪ್ಷಿಯನ್ ಪತ್ನಿ ಮರಿಯಾ
ಮತ್ತವರ ಮಗ ಇಬ್ರಾಹಿಂ ಜನಿಸಿದ ಗೃಹ ಮಶ್ರುಬಾತ್ ಉಮ್ ಇಬ್ರಾಹಿಂ, ೬. ಇಮಾಂ ಮೂಸಾ ಅಲ್-ಖದೀಂರ ತಾಯಿ ಹಮೀದಾ
ಅಲ್-ಬರ್ಬರಿಯಾಳ ಗೋರಿ.
ಆದರೆ ಈ ಧ್ವಂಸದ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ಇಸ್ಲಾಂನ ಅತ್ಯಂತ ಪವಿತ್ರಕ್ಷೇತ್ರ ಮೆಕ್ಕಾಗೂ
ಕಾಲಿಟ್ಟಿದೆ ಮತ್ತು ಅದು ಸಮಾಧಿಸ್ಥಳಗಳನ್ನು ದಾಟಿ ಪವಿತ್ರ ಮಸೀದಿಗಳಿಗಿಗೂ ಹರಡಿದೆ. ವಿಶ್ವದ ಮೂರು ಅತ್ಯಂತ ಪುರಾತನ ಮಸೀದಿಗಳ ಧ್ವಂಸ ಕಾರ್ಯ
ಈಗಾಗಲೇ ಆರಂಭವಾಗಿದೆ. ಈ ಧ್ವಂಸಕಾರ್ಯಗಳ ಹಿಂದಿರುವುದು
ಧಾರ್ಮಿಕ ನಂಬುಗೆಗಳಲ್ಲ.
ಬ್ರಿಟನ್‌ನ ದ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿರುವಂತೆ ಮೆಕ್ಕಾದ ಮಸ್ಜಿದ್ ಅಲ್-ಹರಮ್‌ನ
ಪೂರ್ವಭಾಗಗಳನ್ನು ಯಂತ್ರಗಳ ಸಹಾಯದಿಂದ ಕೆಡವುವ ಕಾರ್ಯ ಹಲವು ವಾರಗಳ ಹಿಂದೆಯೇ ಆರಂಭವಾಗಿದೆ. ವಿಶ್ವಾದ್ಯಂತ ಶ್ರದ್ಧಾವಂತ ಮುಸ್ಲಿಮರು ಮುಖಮಾಡಿ ನಿಂತು
ಪ್ರಾರ್ಥನೆಗೈಯುವ ಕಾಬಾ ಇರುವುದು ಈ ಮಸೀದಿಯಲ್ಲೇ ಎಂದರಿತರೆ ಈ ಕಾರ್ಯಾಚರಣೆಯ ಋಣಾತ್ಮಕತೆಯ ಪೂರ್ಣ
ಅರಿವು ತಟ್ಟುತ್ತದೆ. ಪ್ರವಾದಿ ಮಹಮದ್ದರು ರೆಕ್ಕೆಯುಳ್ಳ
ಕುದುರೆಯ ಮೇಲೆ ಕುಳಿತು ಸ್ವರ್ಗಾರೋಹಣಗೈದರೆಂದು ನಂಬಲಾಗಿರುವ ಸ್ಥಳದ ಗುರುತಿಗಾಗಿ ನಿರ್ಮಿಸಿದ್ದ
ಸ್ಥಂಭವೊಂದು ಕೆಡವಲ್ಪಟ್ಟಿರುವ ಹಲವು ಸ್ಥಂಭಗಳಲ್ಲೊಂದು.
ಪ್ರವಾದಿಯವರ ಪಾರ್ಥಿವ ಶರೀರವನ್ನು ಒಳಗೊಂಡಿರುವ ಮದೀನಾದ ಮಸ್ಜಿದ್ ಅನ್-ನಬಾವಿಯ ಭಾಗಗಳನ್ನು
ಕೆಡವಿ ವಿಶ್ವದ ಅತ್ಯಂತ ದೊಡ್ಡ ಕಟ್ಟಡವನ್ನು ನಿರ್ಮಿಸುವ ಕಾರ್ಯ ಕಳೆದ ವರ್ಷಾಂತ್ಯದಲ್ಲೇ ಆರಂಭವಾಗಿದೆ. ಹಲವು ಬಿಲಿಯನ್ ಡಾಲರ್‌ಗಳ ವೆಚ್ಚದ ಈ ಕೆಲಸ ಪೂರ್ಣಗೊಂಡಾಗ
ಏಕಕಾಲದಲ್ಲಿ ಹದಿನಾರು ಲಕ್ಷ ಜನ ಸೇರಬಹುದಾದ ಪ್ರಾರ್ಥನಾಗೃಹವೊಂದು ಎದ್ದು ನಿಲ್ಲುತ್ತದಂತೆ. ಮಸ್ಜಿದ್ ಅಲ್-ನಬಾವಿಗೆ ಹೊಂದಿಕೊಂಡತೇ ಇರುವ, ಪ್ರವಾದಿಯವರು ಮೊಟ್ಟಮೊದಲ ಈದ್ ಪ್ರಾರ್ಥನೆ
ಸಲ್ಲಿಸಿದರೆಂದು ನಂಬಲಾಗಿರುವ ಸ್ಥಳದಲ್ಲಿ ನಿರ್ಮಿಸಲಾಗಿರುವ ಮಸ್ಜಿದ್ ಘಮಾಮ್ ಸಹಾ ಕ್ಷತಿಗೊಳ್ಳಲಿದೆ. ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮೆಕ್ಕಾ ಮತ್ತು
ಮದೀನಾಗಳ ಸ್ವರೂಪ ಸಂಪೂರ್ಣವಾಗಿ ಬದಲಾಗಲಿದೆ. ಸೌದಿ
ಸರಕಾರ ಪುನರ್ನಿರ್ಮಾಣ ಎಂದು ಕರೆಯುವ ಈ ಕೃತ್ಯಗಳ ಉಸ್ತುವಾರಿಯನ್ನು ಅರಸ ಅಬ್ದುಲ್ಲಾ ಮೆಕ್ಕಾದ ಮಸ್ಜಿದ್
ಅಲ್-ಹರಮ್‌ನ ಇಮಾಮ್ ಮತ್ತು ಪ್ರಮುಖ ವಹಾಬಿ ಧರ್ಮಗುರು ಅಬ್ದುಲ್ ರಹಮಾನ್ ಅಲ್-ಸುಹೈದ್‌ರ ಕೈಯಲ್ಲಿರಿಟ್ಟಿದ್ದಾರೆ. ದೇಶದ ಅತಿದೊಡ್ಡ ನಿರ್ಮಾಣ ಸಂಸ್ಥೆಯಾದ ಸೌದಿ ಬಿನ್‌ಲಾಡಿನ್
ಗ್ರೂಪ್ ಇಡೀ ಕಾರ್ಯಾಚರಣೆಗೆಯ ಗುತ್ತಿಗೆ ಪಡೆದುಕೊಂಡಿದೆ.
ಈ ಎಲ್ಲಾ ಕ್ಯತ್ಯಗಳಿಗೆ ಸರಕಾರ ನೀಡುತ್ತಿರುವ ಕಾರಣ ವರ್ಷವರ್ಷವೂ ಅಧಿಕವಾಗುತ್ತಿರುವ ಹಜ್ ಯಾತ್ರಿಗಳಿಗೆ
ಅಗತ್ಯವಾದಷ್ಟು ಸ್ಥಳಾವಕಾಶ ಒದಗಿಸುವುದು. ಈ ವಾದದಲ್ಲಿ
ಸತ್ಯವಿದೆ. ವಿಮಾನಯಾನದ ವೆಚ್ಚ ಕಡಿಮೆಯಾಗುತ್ತಿರುವ
ಮತ್ತು ಮಧ್ಯಮವರ್ಗದ ಗಾತ್ರ ಹಿಗ್ಗುತ್ತಿರುವ ಈ ದಿನಗಳಲ್ಲಿ ಹಜ್ ಯಾತ್ರಿಗಳ ಸಂಖ್ಯೆ ಸುಮಾರು ಒಂದುಕೋಟಿ
ಇಪ್ಪತ್ತು ಲಕ್ಷ. ೨೦೨೫ರ ಹೊತ್ತಿಗೆ ಈ ಸಂಖ್ಯೆಗೆ
ಮತ್ತೆ ಐವತ್ತು ಲಕ್ಷ ಸೇರಿಕೊಳ್ಳುವ ಅಂದಾಜಿದೆ. ಈ
ಕಾರಣದಿಂದಾಗಿ ಯಾತ್ರಿಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿರುವುದನ್ನು ಅಲ್ಲೆಗಳೆಯಲಾಗುವುದಿಲ್ಲ. ಆದರೆ, ಪುರಾತನ ಪವಿತ್ರ ಸ್ಥಳಗಳಿಗೆ ಹಾನಿಯಾಗದಂತೆ ಈ ವಿಸ್ತರಣ ಕಾರ್ಯವನ್ನು ಕೈಗೊಳ್ಳಬಹುದಾಗಿತ್ತು. ಇಲ್ಲಿ ಗಾಬರಿಗೊಳಿಸುವ ಮತ್ತೊಂದು ವಿಜಾರವೆಂದರೆ ನಿರ್ಮಾಣವಾಗುತ್ತಿರುವ
ಹೊಸ ಕಟ್ಟಡಗಳಲ್ಲಿ ಅತಿ ಶ್ರೀಮಂತರಿಗಷ್ಟೇ ಉಪಯೋಗವಾಗಬಹುದಾದ ಅತೀ ಐಶಾರಾಮಿ ಹೋಟೆಲ್‌ಗಳು ಮತ್ತು ಶಾಪಿಂಗ್
ಮಾಲ್‌ಗಳಿವೆ. ಎರಡು ಸ್ಪಾಗಳೂ ನಿರ್ಮಾಣವಾಗಲಿವೆಯಂತೆ. ಅಂದರೆ ಪ್ರವಾದಿ ಮಹಮದ್ ಸರ್ವಸಮಾನತೆಯನ್ನು ಬೋಧಿಸಿದ ಆ
ನೆಲದಲ್ಲೀಗ ಜರುಗುತ್ತಿರುವ ನಿರ್ಮಾಣಕಾರ್ಯಗಳಲ್ಲಿ ವಿಜೃಂಭಿಸುತ್ತಿರುವುದು ಧಾರ್ಮಿಕತೆಗಿಂತಲೂ ಶ್ರೀಮಂತಿಕೆಯ
ಕೊಳಕು ಪ್ರದರ್ಶನ, ಬಡವ ಬಲ್ಲಿದನೆಂಬ
ತಾರತಮ್ಯದ ಬೆತ್ತಲೆ ಅಟ್ಟಹಾಸ. ಈ ಹಿನ್ನೆಲೆಯಲ್ಲಿ, ಮೆಕ್ಕಾ ಐಷಾರಾಮಿ ಲಾಸ್ ವೇಗಸ್ ಆಗಿ ಬದಲಾಗುತ್ತಿದೆ
ಎಂಬ ಟೀಕೆ ಅರ್ಥಪೂರ್ಣವೆನಿಸುತ್ತದೆ. ಈ ಬದಲಾವಣೆಗೆ
ಬಲಿಯಾಗುತ್ತಿರುವುದು ಇಸ್ಲಾಂನ ಪುರಾತನ ಪವಿತ್ರ ಕ್ಷೇತ್ರಗಳು. ಮೆಕ್ಕಾ ಮತ್ತು ಮದೀನಾಗಳೆರಡೂ ಐತಿಹಾಸಿಕವಾಗಿ ನಾಶವಾಗಿಹೋಗಿವೆ
ಎಂದು ಸೌದಿ ಅರೇಬಿಯಾದ ಖ್ಯಾತ ವಾಸ್ತುಶಿಲ್ಪ ವಿದ್ವಾಂಸ ಸಮೀ ಅಂಗಾವಿ ವ್ಯಥೆಪಡುತ್ತಾರೆ. ತನ್ನ ತವರಲ್ಲಿ ಇಸ್ಲಾಂಗೆ ಈ ದುರ್ಗತಿ ಬರಬಾರದಾಗಿತ್ತು.
No comments:
Post a Comment