ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, April 5, 2013

ತೇಜಸ್ವಿ ಲೋಕದಲ್ಲಿ ನನ್ನ ವಿಹಾರ

ನನ್ನ ಅತ್ಯಂತ ಇಷ್ಟದ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಮರೆಯಾಗಿ ಇಂದಿಗೆ ಆರುವರ್ಷಗಳಾಗಿಹೋದವು.  ಅವರ ಬಗ್ಗೆ ಎರಡು ವರ್ಷಗಳ ಹಿಂದೆ ಬರೆದಿದ್ದ ಲೇಖನ


ಶ್ರೀ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ, ಅವರ ಬರಹಗಳ ಬಗ್ಗೆ ಟಿ. ಪಿ. ಅಶೋಕರ ತೇಜಸ್ವಿ ಕಥನ, ಡಿ. ವಿ. ಪ್ರಹ್ಲಾದ್ ಸಂಕಲಿಸಿರುವ ತೇಜಸ್ವಿ ಲೋಕ ಸೇರಿದಂತೆ ಹಲವು ಪುಸ್ತಕಗಳು ಬಂದಿವೆ.  ನೂರೊಂದು ಬಿಡಿಬಿಡಿ ಲೇಖನಗಳು ಪತ್ರಿಕೆಗಳಲ್ಲಿ, ವಿಮರ್ಶಾಸಂಕಲನಗಳಲ್ಲಿ ಪ್ರಕಟವಾಗಿವೆ.  ಅವುಗಳ ಸಾರಾಂಶವನ್ನು ಸಂಗ್ರಹಿಸುವ ಪ್ರಯತ್ನ ಇದಲ್ಲ.  ಅವುಗಳಲ್ಲಿನ ಅಭಿಪ್ರಾಯಗಳನ್ನು ಪುನರುಕ್ತಿಸುವ ಪ್ರಯತ್ನವೂ ಇಲ್ಲಿಲ್ಲ.  ನನ್ನ ಅತ್ಯಂತ ಪ್ರೀತಿಯ ಲೇಖಕ ತೇಜಸ್ವಿಯವರ ಬಗ್ಗೆ ನನ್ನ ವೈಯುಕ್ತಿಕ ಅನಿಸಿಕೆಗಳನ್ನು ನನ್ನ ಸರಳ ಭಾಷೆಯಲ್ಲಿ (ಕ್ಲಿಷ್ಟ, ಗ್ರಾಂಥಿಕ ಕನ್ನಡ ನನಗೆ ಗೊತ್ತಿಲ್ಲ) ನಿಮ್ಮೊಡನೆ ಹಂಚಿಕೊಳ್ಳುವ ಒಂದು ಪುಟ್ಟ ಪ್ರಯತ್ನ ಇದು.

ಐದು ವರ್ಷಗಳ ಹಿಂದೆ ಇಂಥದೇ ಏಪ್ರಿಲ್ ಅಂತ್ಯದ ಒಂದು ದಿನ ಮಂಗಳೂರಿನ ಗೆಳೆಯ ಡಾ. ಜಯರಾಜ್ ಅಮೀನ್ ಅವರು ತೇಜಸ್ವಿಯವರ "ಮಾಯಾಲೋಕ"ವನ್ನು ತಂದುಕೊಟ್ಟಾಗ ನಾನು ಓದುವ ಆ ಮಹಾನ್ ಲೇಖಕನ ಕೊನೆಯ ಪುಸ್ತಕ ಅದಾಗಬಹುದೆಂದು ನಾನು ನೆನಸಿರಲಿಲ್ಲ.  ಅದಾಗಿ ಒಂದು ವರ್ಷದಲ್ಲಿ ಅವರು ಕಣ್ಮರೆಯಾದಾಗ ನನ್ನಲ್ಲುಂಟಾದ ಶೂನ್ಯತೆಗೆ ಹಲವು ಆಯಾಮಗಳಿದ್ದವು.  ಅವರ ಬರಹಗಳನ್ನು ಮತ್ತೆ ಮತ್ತೆ ಓದುವುದಲ್ಲದೇ ಅವರ ಬಗ್ಗೆ ಇತರರ ಬರಹಗಳನ್ನು ಕಾಯುವುದಷ್ಟೇ ನನಗೆ ಉಳಿದದ್ದು.

ಎರಡುಮೂರು ವಾರಗಳ ಹಿಂದೆ ವಿಜಯಕರ್ನಾಟಕದಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಬರೆದಿರುವ ನನ್ನ ತೇಜಸ್ವಿ ಕೃತಿಯ ಬಗ್ಗೆ ಶ್ರೀಮತಿ ವಿ. ಎನ್. ವೆಂಕಟಲಕ್ಷ್ಮಿಯವರ ಬರಹವನ್ನು ಓದಿದೊಡನೇ ಪ್ರೊ. ಶ್ರೀರಾಂ ಅವರಿಗೆ ಫೋನ್ ಮಾಡಿ ಪುಸ್ತಕದ ಪ್ರತಿಯೊಂದನ್ನು ನನಗಾಗಿ ತೆಗೆದಿಡುವಂತೆ ಕೇಳಿಕೊಂಡೆ.  ಕಳೆದವಾರ ನನ್ನ ಪುಸ್ತಕದ ಬಿಡುಗಡೆಯ ಪ್ರಯುಕ್ತ ಮೈಸೂರಿಗೆ ಹೋದಾಗ ಅವರ ಮನೆಗೆ ಹೋಗಿ ಆ ಪುಸ್ತಕದ ಜತೆ ಪುಸ್ತಕ ಪ್ರಕಾಶನ ಅತ್ಯಾಕರ್ಷಕ ಶೈಲಿಯಲ್ಲಿ ಹೊರತಂದಿರುವ ಮಾಯೆಯ ಮುಖಗಳು ಎಂಬ ತೇಜಸ್ವಿಯವರ ಚಿತ್ರ - ಲೇಖನಗಳ ಸುಂದರ ಸಂಕಲನವನ್ನೂ ಕೊಂಡುತಂದು ಓದಿದೆ.  ತೇಜಸ್ವಿಯವರ ಬರಹಗಳು, ಅವರ ಬಗೆಗಿನ ಇತರರ ಬರಹಗಳ ಬಗ್ಗೆ ನನಗಿರುವ ಇಂಗದ ದಾಹವೇ ಈ ಪುಸ್ತಕಗಳನ್ನು ನನ್ನದಾಗಿಸಿಕೊಳ್ಳುವುದರ ಹಿಂದಿನ ಕಾರಣ.

ಪೂರ್ಣಚಂದ್ರ ತೇಜಸ್ವಿಯವರ ಬರಹಗಳ ಪರಿಚಯ ನನಗಾದದ್ದು ಸರಿಯಾಗಿ ಮೂವತ್ತೇಳು ವರ್ಷಗಳ ಹಿಂದೆ.  ಇಂಥದೇ ಏಪ್ರಿಲ್ ತಿಂಗಳ ಒಂದು ಮಧ್ಯಾಹ್ನ ಅವರ "ನಿಗೂಢ ಮನುಷ್ಯರು" ಕಿರುಕಾದಂಬರಿಯನ್ನು "ಕಸ್ತೂರಿ" ಮಾಸಿಕದ ವಿಶೇಷಾಂಕದಲ್ಲಿ ಓದಿದಾಗಿನ ಅನುಭವವನ್ನು ನಾನು ಮರೆಯಲು ಸಾಧ್ಯವೇ ಇಲ್ಲ.  ಶಾಲಾಬಾಲಕನಾಗಿದ್ದ ನಾನು ಮಳೆಯೊಂದಿಗೆ ಆರಂಭವಾಗಿ, ಮಳೆಯೊಂದಿಗೆ ಮುಂದೆ ಸಾಗಿ, ಮಳೆಯೊಂದಿಗೇ ಕೊನೆಯಾಗುವ ಆ ಕಥನವನ್ನು ಅತ್ತಿತ್ತ ಅಲುಗದೇ ಒಂದೇ ಭಂಗಿಯಲ್ಲಿ ಕೂತು ಓದಿ ಮುಗಿಸಿದಾಗ ಸ್ವಲ್ಪ ಕೈಕಾಲು ಆಡಿಸಲೆಂದು ಮನೆಯಿಂದ ಹೊರಹೋಗಬೇಕೆನಿಸಿದ್ದು ಸಹಜವೇ ಆಗಿತ್ತು.  ಮರುಕ್ಷಣ ಏನೋ ಬೇಸರ.  "ಈ ಜಿಟಿಜಿಟಿ ಮಳೆಯಲ್ಲಿ ಹೇಗೆ ತಾನೆ ಹೊರಹೋಗೋದು?  ಥತ್!" ಎಂದುಕೊಳ್ಳುತ್ತಾ ಬೇಸರದಿಂದಲೇ ಹೊರಗೆ ಕಣ್ಣಾಡಿಸಿದೆ.  ಅವಾಕ್ಕಾದೆ.

ಹೊರಗೆ ಪ್ರಖರ ಬಿಸಿಲಿತ್ತು!

ಮಳೆಯಿರಲಿ, ಮಳೆ ಬಿದ್ದ ಕುರುಹಾಗಲೀ, ಮಳೆ ತರುವ ಮುಗಿಲುಗಳ ಸುಳಿವಾಗಲೀ ಇರಲಿಲ್ಲ.  "ನಿಗೂಢ ಮನುಷ್ಯರು"ವಿನಲ್ಲಿನ ಮಳೆ ನಾನಿದ್ದ ಪರಿಸರದ ಅರಿವನ್ನೇ ನನ್ನಿಂದ ಮರೆಮಾಡಿ ನನ್ನನ್ನು ಬೇರೊಂದು ನಿಗೂಢಲೋಕಕ್ಕೆ ಒಯ್ದು ಕೆಡವಿತ್ತು!

ತೇಜಸ್ವಿಯವರ ಬರಹಗಳಲ್ಲಿನ ನಿಗೂಢ, ರಸಭರಿತ, ಕಲಿಕೆಯ ಲೋಕಕ್ಕೆ ಅಂದು ಪ್ರವೇಶಿಸಿದ ನಾನು ಇನ್ನೂ ಅಲ್ಲಲ್ಲೇ ಸುತ್ತಿ ಸುಳಿದಾಡುತ್ತಿದ್ದೇನೆ.  ಈ ಮೂವತ್ತೇಳು ವರ್ಷಗಳಲ್ಲಿ ಸರಿಸುಮಾರು ಅವರ ಎಲ್ಲ ಕೃತಿಗಳನ್ನೂ ನಾನು ಕೊಂಡು ಓದಿದ್ದೇನೆ.  ಪುಸ್ತಕದಂಗಡಿಗಳಲ್ಲಿ ಸಿಗದೇಹೋದಾಗ ಸರಸ್ವತಿಪುರಂನಲ್ಲಿರುವ ಪ್ರೊ. ಶ್ರೀರಾಂ ಅವರ ಮನೆಗೇ ಹೋಗಿ ಕೊಂಡುಕೊಂಡಿದ್ದೇನೆ.  ಒಂದೆರಡರ ಹೊರತಾಗಿ ಎಲ್ಲವೂ ಇನ್ನೂ ನನ್ನ ಬಳಿ ಇವೆ.  ನನ್ನೊಡನೆ ನನ್ನ ಸಂಗಾತಿಯಾಗಿ ಅವು ಕೊಳ್ಳೇಗಾಲ, ದೆಹಲಿ, ಮೈಸೂರು, ಪಾಂಡಿಚೆರಿಯಲ್ಲೆಲ್ಲಾ ಬದುಕು ಸವೆಸಿವೆ.  ಕೆಲವಂತೂ ವಾಷಿಂಗ್ಟನ್, ಬೋಸ್ಟನ್, ಸಾನ್‌ಫ್ರಾನ್ಸಿಸ್ಕೋಗಳವರೆಗೂ ನನ್ನ ಜತೆ ಅಲೆದಾಡಿವೆ.  ತೇಜಸ್ವಿಯವರನ್ನು ಓದಿದಷ್ಟು ಆಸಕ್ತಿ, ತನ್ಮಯತೆಯಿಂದ ಕನ್ನಡದ ಇನ್ನಾವ ಬರಹಗಾರರನ್ನೂ ನಾನು ಓದಿಲ್ಲ.  ಇನ್ ಫ್ಯಾಕ್ಟ್, ಚಂದಮಾಮ, ಬಾಲಮಿತ್ರದಿಂದ ನಾನು ಜಂಪ್ ಮಾಡಿದ್ದೇ ತೇಜಸ್ವಿ ಲೋಕಕ್ಕೆ.

ನವಿರು ಹಾಸ್ಯದೊಡನೆ ಗಂಭೀರ ಸತ್ಯಗಳನ್ನು ಹೇಳುವ ತೇಜಸ್ವಿಯವರ ಕಥೆಗಳಲ್ಲಿ ಕಾಣುವ ವಿಭಿನ್ನ ಬದುಕಿನ ಚಿತ್ರಣ ನನಗೆ ಅನನ್ಯ.  ಕರ್ವಾಲೋ, ಕಿರಗೂರಿನ ಗಯ್ಯಾಳಿಗಳು, ಮಾಯಾಮೃಗ, ನಿಗೂಢ ಮನುಷ್ಯರು, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕಗಳಲ್ಲಿ ಅವರು ಸೃಷ್ಟಿಸುವ ಮಾಯಾಲೋಕವಂತೂ ಅದ್ಭುತರಮ್ಯ.  ಅವರ ಕಲ್ಪನೆಯ ಡೇರ್ ಡೆವಿಲ್ ಮುಸ್ತಾಫಾ, ತಬರ, ಕುಬಿ ಡಾಕ್ಟರ್, ತುಕ್ಕೋಜಿ, ಕೃಷ್ಣೇಗೌಡ, ಅಣ್ಣಪ್ಪಣ್ಣ- ಮುಂತಾದ ನೂರೊಂದು ಪಾತ್ರಗಳು ಮನುಷ್ಯಸ್ವಭಾವದ ನೂರೊಂದು ವೈಚಿತ್ರ್ಯ ವೈರುದ್ಧಗಳೊಡನೆ, ಮನುಷ್ಯಸಂಬಂಧದ ಸಾವಿರದೊಂದು ಆಯಾಮಗಳೊಡನೆ ನಾನೆಂದೂ ಮರೆಯಲಾಗದ ಬಗೆಯಲ್ಲಿ ನನ್ನನ್ನು ಮುಖಾಮುಖಿಯಾಗಿಸಿವೆ.  ಅವರ ಬರಹಗಳಲ್ಲಿ ಅಜರಾಮರರಾಗಿಹೋಗಿರುವ ಮಾರ ಮತ್ತು ಅವನನ್ನು ಕಾಡಿಸುವ ಕುಕ್ಕುಟ ಪಿಶಾಚ, ಕೊಳಕ ಮಾಸ್ತಿ ಮತ್ತವನ ಬಡಪಾಯಿ ನಾಯಿ, ಪ್ಯಾರ ಮತ್ತವನ ಪ್ಯಾಂಟಿನೊಳಗೆ ನುಗ್ಗಿ ದಾಂಧಲೆ ಎಬ್ಬಿಸುವ ಓತಿಕ್ಯಾತ, ಹಾವಾಡಿಗ ಎಂಗ್ಟ, ಅವನ ಹೆಂಡತಿ, ಅವಳ ಮೊಲೆಯನ್ನು ಗುಡಗುಡಿ ಸೇದುವಂತೆ ಕಚ್ಚಿಕೊಂಡಿರುವ ಮಗು, ಲಾರಿ ಡ್ರೈವರುಗಳ ಪಟ್ಟದರಾಣಿಯರಾದ ಹೈವೇ ಗರ್ಲ್ಸ್, ಜಗಳಗಂಟ ಬಂಗಾಳಿ, "ನಾನು ಲಿಂಗಾಯತ, ಹಾವು ನಮಗೆ ದೇವರು" ಹಾಗೂ "ಅಯ್ಯೋ ನನ್ನ ಹೆಂಡತಿ ಬಸುರಿ, ನಾನು ಹಾವು ಹೊಡೆಯುವುದಿಲ್ಲ" ಎಂದು ಓಡಿಹೋಗುವ ‘ವಿಜ್ಞಾನಿ’ಗಳು, ದನ ಮೇಯಿಸುವ ಬೆಪ್ಪು ತಲಪುರಕಿ, ದುರುಳ ಸಬ್‌ಇನ್ಸ್‌ಪೆಕ್ಟರ್ ಪೀಟರ್ ರಾಣಿ, ಬೇಟೆಯೆಂದರೆ ತುದಿಗಾಲಲ್ಲಿ ನಿಲ್ಲುವ ಕಿವಿ ಮತ್ತದರ ಮೂತಿಗೇ ಉಚ್ಚೆಯ ಪಿಚಕಾರಿ ಹೊಡೆಯುವ ಕಪ್ಪೆ, ನರಕದ ತುತ್ತೂರಿಯಂತೆ ಕೂಗುವ ಹಂದಿಮರಿ, ಶಾಂತಾ ಅವರನ್ನು ಸಮುದ್ರಸ್ನಾನಕ್ಕಿಳಿಸಲು ಹಂಚಿಕೆ ಹಾಕುವ ಅಂಡಮಾನಿನ ಅಕ್ಟೋಪಸ್, ಕಣ್ಣಿಗೆಲ್ಲಾ ಟಾರ್ ಮೆತ್ತಿಕೊಂಡು ದಿಕ್ಕುತೋಚದೇ ಹುಚ್ಚೆದ್ದು ಕುಣಿಯುವ ಕಾಳಪ್ಪನ ಕೋಬ್ರ, ಫಾರೆಸ್ಟರ್ ಗಾಡ್ಲಿಯನ್ನೇ ಬೋನಿನೊಳಗೆ ಕೂಡಿಹಾಕುವ ಮಂಗಗಳು- ಮುಂತಾದ ಅಸಂಖ್ಯ ನೈಜಪಾತ್ರಗಳು ಈ ಜಗತ್ತು ಅದೆಷ್ಟು ವೈವಿಧ್ಯಮಯ, ಸ್ವಾರಸ್ಯಕರ ಎಂದು ಸಾರಿಹೇಳಿವೆ.  ಜತೆಗೇ, ತೇಜಸ್ವಿಯವರ ಕುತೂಹಲಪೂರ್ಣ ಕಣ್ಣು ಕಿವಿಗಳ ಬಗ್ಗೆ ಬೆರಗು ಹುಟ್ಟಿಸಿವೆ.  ಅಷ್ಟೇ ಅಲ್ಲ, ನಿನ್ನ ಚಿಪ್ಪಿನಿಂದ ಹೊರಗೆ ಬಾ, ಸುತ್ತಲ ಪ್ರಪಂಚವನ್ನು ಕಣ್ಣುಬಿಟ್ಟುಕೊಂಡು ನೋಡು, ನೋಡಿ ಕಲಿ, ಕಲಿತು ನಲಿ ಎಂದು ಪ್ರೀತಿಯಿಂದ ಅನುನಯಿಸಿವೆ, ಹಠ ತೊಟ್ಟು ಜುಲುಮೆ ಮಾಡಿವೆ.

ತಾವು ಕಂಡ ಜನ ಜಾನುವಾರುಗಳ, ಹಕ್ಕಿ ಹಾವುಗಳ ಬಗ್ಗೆ ಬರೆಯುವಾಗ, ಅಷ್ಟೇಕೆ ತಮ್ಮ ಬಗ್ಗೆಯೇ ಹೇಳಿಕೊಳ್ಳುವಾಗ ಅವರ ಬರಹಗಳಲ್ಲಿ ಕಂಡುಬರುವ ಪ್ರಾಮಾಣಿಕತೆಯೇ ಅವುಗಳನ್ನು ಮತ್ತೆ ಮತ್ತೆ ಓದುವಂತೆ ನನ್ನನ್ನು ಪ್ರೇರೇಪಿಸಿವೆ.  ಹೊಸ ಬರಹಗಳಿಗಾಗಿ ಕಾತುರದಿಂದ ಕಾಯುವಂತೆ ಮಾಡಿವೆ.  ತೇಜಸ್ವಿಯವರದು ನೇರ ನಡೆ, ನೇರ ನುಡಿ.  ಸ್ವರ್ಗ ನರಕ, ದೇವರು ದೆವ್ವ- ಮುಂತಾದುವುಗಳ ಬಗ್ಗೆ ನಂಬಿಕೆಯೇ ಇಲ್ಲದ, ಜಗತ್ತಿನ ಎಲ್ಲ ಕ್ರಿಯೆ ಪ್ರಕ್ರಿಯೆಗಳಿಗೆ ಭೌತಿಕ ಕಾರಣಗಳಿವೆ ಎಂದು ನಂಬುವ ಒಂದು ರೀತಿಯ ಅಗ್ನೋಸ್ಟಿಕ್ ಆದ ವಿಚಾರಧಾರೆ ಅವರದಾಗಿತ್ತು.  ಹೀಗಾಗಿಯೇ "ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ" ಎಂದು ಮುಂತಾಗಿ ಹೇಳಲು ಅಥವಾ ಬರೆಯಲು ನನಗೆ ನಿಜಕ್ಕೂ ಹಿಂಜರಿಕೆಯಾಗುತ್ತದೆ.  ಅಷ್ಟೇಕೆ, ಅವರಿಂದ ಅತೀವವಾಗಿ ಪ್ರಭಾವಿತನಾಗಿ, ಅವರ ಬರಹಗಳಿಂದ ಎಷ್ಟೋ ಕಲಿತ ನಾನು ಅವರ ನಿಧನಾನಂತರ ಬಂದ ನನ್ನ ಅಲೆಮಾರಿಯ ಕಥೆಗಳು ಸಂಕಲನದಲ್ಲಿ ತೇಜಸ್ವಿ ದ್ರೋಣರಿಗೆ, ಪ್ರೇಮಶೇಖರ ಏಕಲವ್ಯನಿಂದ ಎಂದು ಬರೆದು ಅವರಿಗರ್ಪಿಸಬೇಕೆಂದು ಮೊದಲು ಬಯಸಿದವನು ಅಂಥದ್ದೇನನ್ನೂ ಅವರು ಇಷ್ಟಪಡುತ್ತಿರಲಿಲ್ಲ ಎಂಬ ಅರಿವು ತಟ್ಟಿದ್ದೇ ಆ ಯೋಜನೆಯನ್ನು ಬದಿಗಿಟ್ಟೆ.

ನವ್ಯಮಾರ್ಗದಲ್ಲಿ ಸ್ವಲ್ಪಕಾಲ ಸಾಗಿ ನಂತರ ಅದನ್ನು ತೊರೆದು ತಮ್ಮದೇ ಹೊಸದಿಗಂತದತ್ತ ಹೆಜ್ಜೆ ಹಾಕಿ ಕೆಲಕಾಲದ ನಂತರ ಕಂಪ್ಯೂಟರ್‌ನ ಅಂತರ್ಜಾಲದಲ್ಲಿ ಸಿಲುಕಿದ ತೇಜಸ್ವಿಯವರು ಸೃಜನಶೀಲ ಸಾಹಿತ್ಯವನ್ನು ಬದಿಗಿಟ್ಟು, ನೈಲ್ ನದಿ, ಮಾನವಶಾಸ್ತ್ರ ಮತ್ತು ಹಾರುವ ತಟ್ಟೆಗಳ ಬಗೆಗಿನ ಬರಹಗಳು, ವಿಸ್ಮಯ ಹಾಗೂ ಮಿಲನಿಯಮ್ ಸರಣಿಗಳ ಮೂಲಕ ಕನ್ನಡದ ಓದುಗರಿಗೆ ತೆರೆದಿಟ್ಟ ಜಗತ್ತು ಅಗಾಧ, ಅದ್ವಿತೀಯ.  ಈ ವಿಷಯಗಳ ಬಗ್ಗೆ ಇಂಗ್ಲಿಷ್‌ನಲ್ಲಿ ಸಾಕಷ್ಟು ಓದಿರುವ ನನಗೆ ತೇಜಸ್ವಿಯವರ ಬರಹಗಳು ನೀಡುವ ವಿವರಗಳು ದಶಕಗಳಷ್ಟು ಹಳೆಯದೆನಿಸಿದರೂ ಕನ್ನಡ ಓದುಗರಿಗೆ ಈ ವಿಷಯಗಳನ್ನು ಪರಿಚಯಿಸಲು, ಇಷ್ಟಾದರೂ ವಿವರಗಳನ್ನು ನೀಡಲು ಅವರು ನಡೆಸಿದ ಪ್ರಯತ್ನದ ಬಗ್ಗೆ ಅತೀವ ಮೆಚ್ಚುಗೆಯಿದೆ.

ತಮ್ಮ ಬದುಕಿನ ಕೊನೆಯ ದಶಕದಲ್ಲಿ ಆಂಗ್ಲಪುಸ್ತಕಗಳಲ್ಲಿ, ಅಂತರ್ಜಾಲದಲ್ಲಿ ಸಿಗುವ ವಿಷಯಗಳನ್ನು ಕನ್ನಡಕ್ಕಿಳಿಸುವುದನ್ನೇ ಹೆಚ್ಚಾಗಿ ಮಾಡಿದ ತೇಜಸ್ವಿಯವರನ್ನು ಇಂಟರ್‌ನೆಟ್ ಸಾಹಿತಿ ಎಂದು ಕಟಕಿಯಾಡಿದವರಿದ್ಡಾರೆ.  ಆದರೆ ತೇಜಸ್ವಿಯವರ ಆಸಕ್ತಿಯಲ್ಲಾದ ಬದಲಾವಣೆಯನ್ನು ನಾನು ಬೇರೊಂದು ಬಗೆಯಲ್ಲಿ ನೋಡುತ್ತೇನೆ.  ಅರವತ್ತರ ದಶಕದ ಆರಂಭದಲ್ಲಿ ಬರವಣಿಗೆಯನ್ನಾರಂಭಿಸಿದ ತೇಜಸ್ವಿ ನಂತರದ ನಲವತ್ತೈದು ವರ್ಷಗಳಲ್ಲಿ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಸಾಗಿಬಂದರು, ಏಕತಾನತೆಯನ್ನು ಮೀರಿ ಹೊಸಹೊಸ ದಾರಿಗಳನ್ನು ಅರಸಿ ವಿಹರಿಸಿ ನಮ್ಮನ್ನೂ ಅಲ್ಲಿ ಸುತ್ತಾಡಿಸಿದರು.  ಅವರ ಸಮಕಾಲೀನರಲ್ಲಿ ಅನೇಕರು ಐವತ್ತರ ದಶಕದಲ್ಲಿ ಬರೆದಂತಹ ಬರಹಗಳನ್ನೇ ಐವತ್ತು ವರ್ಷಗಳ ನಂತರವೂ ಬರೆಯುತ್ತಿದ್ದಾರೆ.  ಅವರ ಚೀರ್ ಲೀಡರ‍್ಸ್ಗಳಾಗಿ ನಡೆದುಕೊಳ್ಳುವ ಕೆಲವು ವಿಮರ್ಶಕರು ಹಾಡಿದ್ದನ್ನೇ ಹಾಡುವ ಈ ಕಿಸುಬಾಯಿದಾಸರ ಬರಹಗಳಲ್ಲಿ ಹೊಸಹೊಸ ಹೊಳಹುಗಳನ್ನು ಭ್ರಮಿಸಿಕೊಂಡು ಇವರನ್ನು ಇನ್ನೂ ಚಲಾವಣೆಯಲ್ಲಿಟ್ಟಿದ್ದಾರೆ.  ಇಂಥವರೇ ಬದಲಾವಣೆ, ಬೆಳೆಯುವಿಕೆಯನ್ನೇ ಉಸಿರಾಗಿಸಿಕೊಂಡು ನಿತ್ಯನೂತನರಾಗಿ ಬರೆದು ಬದುಕಿದ ತೇಜಸ್ವಿಯರನ್ನು ಕತ್ತಲೆಗೆ ಸರಿಸುತ್ತಿರುವವರು.

ಕುವೆಂಪು ಅವರ ಮಗನಾಗಿ ಅವರ ಪ್ರಭಾವವನ್ನು ತಮ್ಮ ಏಳಿಗೆಗೆ ಎಂದೂ ಉಪಯೋಗಿಸಿಕೊಳ್ಳದಿದ್ದ ಬಗ್ಗೆ ತೇಜಸ್ವಿಯವರ ಬಗ್ಗೆ ನನಗೆ ಅತೀವ ಗೌರವ.  ತಂದೆತಾಯಿಯದಿರಲಿ, ಮಾವ ಅತ್ತೆ, ತಮಗಿಂತಲೂ ಕಿರಿಯ ಗೆಳೆಯಗೆಳತಿಯರ ಪ್ರಭಾವವನ್ನು ಬಳಸಿಕೊಂಡು ಮೇಲೇರುವ ಜನರಿರುವ ಈ ಕಾಲದಲ್ಲಿ ತೇಜಸ್ವಿ ನಮ್ಮ ಯುವಜನತೆಗೆ ಅನುಕರಣೀಯ, ಆದರ್ಶಪ್ರಾಯರಾಗಬೇಕು.

ಮೈಸೂರಿನಲ್ಲಿ ಅಧ್ಯಾಪಕರಾಗಿ ಕೊನೆಗೆ ವೈಸ್ ಛಾನ್ಸಲರ್ ಆಗುವುದು ತೇಜಸ್ವಿಯವರಿಗೆ ಸುಲಭವಾಗಿತ್ತು.  ಅವರದನ್ನು ಬಿಟ್ಟು ಮಲೆನಾಡಿನ ಮೂಲೆಯಲ್ಲಿ ತಮಗಿಷ್ಟವಾದ ಕೆಲಸಗಳಲ್ಲಿ ತೊಡಗಿಕೊಂಡರು.  ಹಾಗೆ ದೂರಕ್ಕೆ ಹೋದ ಅವರನ್ನು ಅವರ ವಾರಿಗೆಯ ಸಾಹಿತಿಗಳು ಪಕ್ಕಕ್ಕೆ ಸರಿಸಿ ತಣ್ಣಗೆ ಮುಂದೆ ಹೋಗಿಬಿಟ್ಟರು ಎಂಬ ಮಾತಿದೆ.  ಆದರೆ ಇದಾದದ್ದು ತೇಜಸ್ವಿಯವರ ಸ್ವಂತ ನಿರ್ಧಾರದಿಂದಲೇ, ಇದಕ್ಕಾಗಿ ಬೇರಾರನ್ನೂ ದೂರುವ ಅಗತ್ಯವಿಲ್ಲ ಎಂದು ನನ್ನ ನಂಬಿಕೆ.  ಆದರೂ, ಒಬ್ಬ ಸಾಹಿತಿಯಾಗಿ ಆ ಕ್ಷೇತ್ರ ನೀಡಬಹುದಾದ ಸವಲತ್ತುಗಳ ಬೆನ್ನುಹತ್ತಿ ಅವರು ಹೋಗದೇ ಇದ್ದದ್ದು, ಸ್ಥಾನಮಾನ ಪ್ರಶಸ್ತಿ ಗೌರವಗಳಿಗಾಗಿ ಇತರರೊಡನೆ ಸ್ಪರ್ಧೆಗಿಳಿಯದಿದ್ದದ್ದು, ಯಾರ ದಾರಿಗೂ ಅಡ್ಡವಾಗಿ ನಿಲ್ಲದಿದ್ದದ್ದು ಅವೆಲ್ಲಕ್ಕೂ ಹಪಹಪಿಸುತ್ತಿದ್ದ ಅವರ ವಾರಿಗೆಯ ಹಲವು ಸಾಹಿತಿಗಳಿಗೆ ನೆಮ್ಮದಿಯನ್ನುಂಟುಮಾಡಿರಲೇಬೇಕು.

ಅವರ ಸಮಕಾಲೀನರ ವಿಷಂii ಬಿಡೋಣ.  ಅವರುಗಳಲ್ಲಿದ್ದ ಮಾತ್ಸರ್ಯ ಸಹಜವೇ.  ಆದರೆ ಈಗ ಕನ್ನಡ ಸಾಹಿತ್ಯಚರಿತ್ರೆಯ ರಚನೆಯನ್ನು ಸ್ವಇಚ್ಚೆಯಿಂದ (ಅಥವಾ, ಸ್ವೇಚ್ಛೆಯಿಂದ ಎನ್ನಿ, ಬೇಕಾದರೆ!) ತಮ್ಮ ಕೈಗೆ ತೆಗೆದುಕೊಂಡಿರುವ ಈ ತಲೆಮಾರಿನ ಬರಹಗಾರರೂ ತೇಜಸ್ವಿಯರನ್ನು ಪಕ್ಕಕ್ಕೆ ಸರಿಸಿ ತಮ್ಮ ಚಿಕ್ಕಪ್ಪ ದೊಡ್ಡಪ್ಪ, ಅತ್ತೆ ಮಾವ, ಸೊಸೆ ಅಳಿಯ, ದಿನಬೆಳಗಾದರೆ ಕೈಗೆ ಕಾಲಿಗೆ ತೊಡರುವ ಗೆಳೆಯಗೆಳತಿಯರನ್ನು ಹಾಡಿ ಹೊಗಳಿ ಅಟ್ಟಕ್ಕೆ ಪಟ್ಟಕ್ಕೆ ಏರಿಸುತ್ತಿರುವುದು ಹೇಸಿಗೆ ಹುಟ್ಟಿಸುತ್ತದೆ.  ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಅದು ಸತ್ಯವಾಗಿಬಿಡುತ್ತದೆ ಎಂದ ಕುಖ್ಯಾತ ನಾಝಿ ಗೊಬೆಲ್ಸ್‌ನ ಸಂತಾನದವರಂತೆ ಇವರು ನನಗೆ ಕಾಣುತ್ತಾರೆ.  ನಮ್ಮ ಸಾಹಿತ್ಯಲೋಕದಲ್ಲೀಗ ಪ್ರಾಮಾಣಿಕತೆ ಮರೆಯಾಗುತ್ತಿದೆ, ನಾಚಿಕೆ ಇಲ್ಲವಾಗುತ್ತಿದೆ.  ಲಂಕೇಶ್ ಮತ್ತು ತೇಜಸ್ವಿ ನಮ್ಮ ನಡುವೆ ಇನ್ನೂ ಇರಬೇಕಾಗಿತ್ತು ಎಂದು ಮನ ಬಯಸುತ್ತದೆ, ಅವರಿಬ್ಬರ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂಬ ನಂಬಿಕೆ ನನ್ನಲ್ಲಿ ದಿನೇದಿನೇ ಬಲವಾಗುತ್ತಿದೆ.

5 comments:

  1. ತೇಜಸ್ವಿ ಬಗ್ಗೆ ನನ್ನದೇ ಮನದ ಮಾತನ್ನು ಬರೆದಿದ್ದೀರಿ. ಸೊಗಸಾದ ಲೇಖನ.

    ReplyDelete
    Replies
    1. ಧನ್ಯವಾದಗಳು, ಮಂಜುನಾಥ್.

      Delete
  2. I also felt the way as you after reading 'Nigudha Manushyaru'!!... One of the stories about a 'Spy' was thrilling...

    ReplyDelete
    Replies
    1. Nice you shared with me your refreshing thoughts. Thank you.

      Delete
  3. ಈ ಲೇಖನದ ಬಗ್ಗೆ ಹೆಸರಾಂತ ಹಾಗೂ ಗೌರವಾನ್ವಿತ ಕಥೆಗಾರರೊಬ್ಬರು ಏಪ್ರಿಲ್ ೮ರಂದು ನನ್ನೊಂದಿಗೆ ವೈಯುಕ್ತಿಕವಾಗಿ ಹಂಚಿಕೊಂಡ ಅಭಿಪ್ರಾಯಗಳು ಮತ್ತು ಅದಕ್ಕೆ ನಾನು ಇಂದು ನೀಡಿದ ಉತ್ತರ ಲೇಖನಕ್ಕೆ ಪೂರಕವಾಗಿರುವುದರಿಂದ ಅವುಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಅವರ ಅನಾಮಧೇಯತೆಯನ್ನು ಕಾಪಾಡುವುದು ನನ್ನ ಜವಾಬ್ದಾರಿಯಾದದ್ದರಿಂದ ಇಲ್ಲಿ ಅವರ ಹೆಸರು ಸಾರ್ವಜನಿಕವಾಗದಂತೆ ಎಚ್ಚರಿಕೆ ವಹಿಸುತ್ತಿದ್ದೇನೆ.

    ಪ್ರಿಯ ಪ್ರೇಮಶೇಖರ ಅವರಿಗೆ,
    ನೀವು ತೇಜಸ್ವಿ ಅವರ ಬಗ್ಗೆ ಬರೆದ ಲೇಖನ ಓದಿದೆ. ಪ್ರಾಮಾಣಿಕವಾಗಿದೆ. ಆದರೆ ಕನ್ನಡ ಸಾರಸ್ವತ ಲೋಕದ ಆತ್ಮವಂಚನೆ, ಸ್ವಜನಪಕ್ಷಪಾತ ಎಷ್ಟೊಂದು ಕಲುಷಿತವಾಗಿದೆ ಎಂದರೆ ತೇಜಸ್ವಿ ಮತ್ತು ಲಂಕೇಶರನ್ನು ಕೂಡ ನಮ್ಮ ಸ್ವಾರ್ಥಕ್ಕೆ ಬಳಸುವಲ್ಲಿ ನಾವು ಪರಿಣತಿಯನ್ನೇ ಸಾಧಿಸಿಬಿಟ್ಟಿದ್ದೇವೆ. ನುಡಿನಡೆ ಬೇರೆಯಲ್ಲ ಎಂದು ಬಹುಶಃ ಕನ್ನಡಿಗರಿಗೆ ತೋರಿಸಿಕೊಟ್ಟ ಕೆಲವೇ ಪ್ರಜ್ಞಾವಂತ ಜನರಲ್ಲಿ ತೇಜಸ್ವಿ (ಇತ್ತೀಚಿನ ತಲೆಮಾರುಗಳಲ್ಲಿ) ಮೊದಲಿಗರು. ಶಿವರಾಮ ಕಾರಂತ, ಮಾಸ್ತಿ ತಕ್ಷಣ ಹೊಳೆಯುವ ಹೆಸರುಗಳು. ಕನ್ನಡಿಗರು ಮೂಲತಃ ಗೃಹೀತ, ತಥಾಕಥಿತ ಸತ್ಯದ ಆರಾಧಕರು ಮತ್ತು ಮನೋ ದಾಸ್ಯದ ಬುದ್ಧಿಯವರು ಎಂದು ಇತ್ತೀಚೆಗೆ ಬಲವಾಗಿ ಅನ್ನಿಸುತ್ತಿದೆ. ಇಲ್ಲದಿದ್ದರೆ ಈ ನಲ್ವತ್ತು ವರ್ಷಗಳಲ್ಲಿ ಸಾಹಿತ್ಯ ವಿಮರ್ಶೆಯ ಹೆಸರಿನಲ್ಲಿ ನಾವು ಕಟ್ಟಿರುವ ಉತ್ಪ್ರೇಕ್ಷಿತ ಸುಳ್ಳುಗಳು ಕನ್ನಡ ಸಾಹಿತ್ಯಕ್ಕೆ ಮಾಡಿರುವ ಅಪಚಾರದ ಕುರಿತು ಯಾರೂ ದನಿಯೆತ್ತದಿರುವುದು; ದನಿಯೆತ್ತಿದರೂ ಅಸಮರ್ಪಕ ಕಾರಣಗಳಿಗಾಗಿ, ಪೆದ್ದುತನವನ್ನು ತೋರಿಸಲೆಂದೇ, ನಿರ್ದಿಷ್ಟ ರಾಜಕೀಯ ಕಾರ್ಯಸೂಚಿ ಇಟ್ಟುಕೊಂಡು ಮಾತಾಡುವುದು ನಿಜಕ್ಕೂ ಅಸಹನೀಯ. ಒಟ್ಟಾಗಿ ಇರುವಂತೆ ಕಾಣುತ್ತಲೇ ವಿಘಟನೆಗೊಳ್ಳುತ್ತಿರುವ, ವೈಯಕ್ತಿಕ ನೆಲೆಯಲ್ಲಿ ಎಲ್ಲ ಸಮಸ್ಯೆಗಳ ನಡುವೆಯೂ ಸಹನೀಯವಾಗಿಯೇ ಇರುವಂತೆ ತೋರುವ ಮಾಯಾಲೋಕವನ್ನು ಎಷ್ಟು ವಿಮರ್ಶಕರು ಅರ್ಥ ಮಾಡಿಕೊಂಡಿದ್ದಾರೋ ದೇವರೇ ಬಲ್ಲ. ತೇಜಸ್ವಿಯವರಿಂದ ಪ್ರಯೋಜನ ಇರಲಿಲ್ಲವಾದ್ದರಿಂದ ಅವರ ಬಗ್ಗೆ ಎಲ್ಲರಿಗೂ ಕೇಳಿಸುವಂತೆ ಮಾತಾಡಲು ಅವರು ಸಾಯಬೇಕಾಯಿತು! ಒಂದೊಮ್ಮೆ ಲಂಕೇಶರ ಉತ್ತೇಜನವಿಲ್ಲದಿರುತ್ತಿದ್ದರೆ ನಮ್ಮ ಜನ ತೇಜಸ್ವಿಯವರನ್ನು ತಿರುಗಿಯೂ ನೋಡುತ್ತಿರಲಿಲ್ಲ.


    ನಮ್ಮೆಲ್ಲ ಸುಳ್ಳುಗಳನ್ನು ಮುಚ್ಚಲು ನಾವು ವರ್ಷಕ್ಕೊಮ್ಮೆ ತೇಜಸ್ವಿ, ಲಂಕೇಶ, ಡಿ.ಆರ್. ನಾಗರಾಜರ ಭಜನೆ ಮಾಡುತ್ತೇವೆ. ಅವರ ನೇರ ನಡೆನುಡಿ, ಹೊಸ ಚಿಂತನೆ ಮಾಡಲು ಯಾರ ಪರವಾನಗಿಯ ಅಗತ್ಯವೂ ಇಲ್ಲ ಎಂಬ ನಿಲುಮೆ, ಸತ್ಯ ಹೇಳಲು ಹೇಸುವುದೂ ಇಲ್ಲ ಹೆದರುವುದೂ ಇಲ್ಲ ಎಂಬ ನಿರ್ಧಾರಗಳನ್ನು ಕನ್ನಡಿಗರು ಇನ್ನಷ್ಟೇ ತಮ್ಮವನ್ನಾಗಿಸಿಕೊಳ್ಳಬೇಕಿದೆ. ನಿಮ್ಮ ಲೇಖನ ಓದಿ ನಿಮಗೇ ಹೇಳಬೇಕಾದ ಅಭಿಪ್ರಾಯ ಸಾರ್ವಜನಿಕರಿಗೆ ಏಕೆ ತಿಳಿಯಬೇಕು? ಹಾಗೆಂದೇ ನಿಮ್ಮ ಖಾಸಗಿ ಐಡಿಗೆ ಬರೆದಿರುವೆ.

    *

    ಪ್ರಿಯ ಶ್ರೀ...

    ಲೇಖನದ ಬಗ್ಗೆ ಒಳ್ಳೆಯ ಮಾತುಗಳಿಗಾಗಿ ಕೃತಜ್ಞತೆಗಳು. ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಸ್ವಲ್ಪ ಬಿಜ಼ಿಯಾಗಿದ್ದೆ.


    ನಿಮ್ಮ ಮಾತು ನಿಜ. ವರ್ಷಕ್ಕೊಮ್ಮೆ ತೇಜಸ್ವಿ, ಲಂಕೇಶ, ಡಿ.ಆರ್. ನಾಗರಾಜರ ಭಜನೆ ಮಾಡುತ್ತಾ ಅವರನ್ನೂ ಸ್ವಾರ್ಥಕ್ಕೆ ಬಳಸುವಲ್ಲಿ ಹಲವರು ಪರಿಣತಿಯನ್ನೇ ಸಾಧಿಸಿಬಿಟ್ಟಿದ್ದಾರೆ. ಈ ನಲ್ವತ್ತು ವರ್ಷಗಳಲ್ಲಿ ಸಾಹಿತ್ಯ ವಿಮರ್ಶೆಯ ಹೆಸರಿನಲ್ಲಿ ಕಟ್ಟಿರುವ ಉತ್ಪ್ರೇಕ್ಷಿತ ಸುಳ್ಳುಗಳು ಕನ್ನಡ ಸಾಹಿತ್ಯಕ್ಕೆ ಮಾಡಿರುವ ಅಪಚಾರದ ಬಗ್ಗೆ ತುಂಬ ನೋವಾಗುತ್ತದೆ. ದುರಂತವೆಂದರೆ ಈ ’ಸುಳ್ಳುಗಾರ’ರ ಕೈಯಲ್ಲಿ ಧ್ವನಿವರ್ಧಕಗಳಿವೆ. ಹೀಗಾಗಿ ಉಳಿದವರ ದನಿ ಯಾರಿಗೂ ಕೇಳುತ್ತಿಲ್ಲ. ಇನ್ನೂ ಒಂದು ಅರ್ಥದಲ್ಲಿ, ಈ ಸುಳ್ಳುಗಳ ವಿರುದ್ಧ ಸ್ಪಷ್ಟ, ನಿರ್ಣಾಯಕ, ಪರಿಣಾಮಕಾರೀ ದನಿಯೆತ್ತಲು ಯಾರೂ ತಯಾರಾಗಿಯೂ ಇಲ್ಲ. ಬದಲಾಗಿ ಈ ಸುಳ್ಳುಗಾರರ ಮರ್ಜಿ ಹಿಡಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಕಲೆಯನ್ನು ಈ ತಲೆಮಾರಿನ ಬರಹಗಾರರು ಮತ್ತು ವಿಮರ್ಶಕರು ಕರಗತ ಮಾಡಿಕೊಂಡಿದ್ದಾರೆ.

    ನನಗೇ ಹೇಳಬೇಕಾದ ವಿಷಯಗಳನ್ನು ನೀವು ಸಾರ್ವಜನಿಕವಾಗಿ ಹೇಳದಿದ್ದುದು ನಿಮಗೇ ಒಳಿತು ಅನಿಸುತ್ತದೆ. ಇಂತಹ ಮಾತುಗಳನ್ನು ಸಾರ್ವಜನಿಕವಾಗಿ ಆಡಿದ್ದರಿಂದಾಗಿ ನನಗಾಗಿರುವ ನಷ್ಟ ನಿಮಗೂ ಆಗುವುದು ಬೇಡ. ಇದೇ ಸಮಯದಲ್ಲಿ, ನನ್ನ ಮಾತುಗಳಿಗೆ ಇನ್ನಷ್ಟು ದನಿಗಳು ಸೇರಿಕೊಂಡಿದ್ದರೆ ನಮ್ಮ ಕೈಗೂ ಧ್ವನಿವರ್ಧಕಗಳು ಬರಬಹುದಿತ್ತೇನೋ ಅಂತಲೂ ಅನಿಸುತ್ತಿದೆ.

    ವಂದನೆಗಳು.

    ReplyDelete