ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, January 26, 2012

ಲೇಖನ- ಸ್ವತಂತ್ರ ಭಾರತದ ಹತ್ತು ತಪ್ಪು ಹೆಜ್ಜೆಗಳು: ಗಣರಾಜ್ಯೋತ್ಸವದಂದು ಒಂದು ಅವಲೋಕನ

            ಭಾರತ ಅನತಿ ಕಾಲದಲ್ಲಿ ಛಿದ್ರವಾಗುತ್ತದೆ ಎಂಬ `ನಂಬಿಕೆ' ಅರವತ್ತರ ದಶಕದಲ್ಲಿ ಪಶ್ಚಿಮದ ದೇಶಗಳಲ್ಲಿ ವ್ಯಾಪಕವಾಗಿ ಪ್ರಚಲಿತವಾಗಿತ್ತು.  ಈ ದೇಶದ ಬಗ್ಗೆ ಇಂತಹ ಅಭಿಪ್ರಾಯವನ್ನು ಯಾವುದೇ ಹಿಂಜರಿಕೆಯೂ ಇಲ್ಲದೇ ಹೇಳುವವರಲ್ಲಿ ಗೌರವಾನ್ವಿತ ವಿದ್ವಾಂಸ ಸೆಲಿಗ್ ಹ್ಯಾರಿಸನ್ರಿಂದ ಹಿಡಿದು ಭವಿಷ್ಯ ಹೇಳುವುದರಲ್ಲಿ ಬಲು ಪ್ರಸಿದ್ಧಳಾಗಿದ್ದ ಅಮೆರಿಕನ್ `ಕೊರವಂಜಿ' ಜೀನ್ ಡಿಕ್ಸನ್ ಸಹಾ ಇದ್ದರು.  ಮತ್ತೆ ಕೆಲವು ವಿದ್ವಾಂಸರು ಈ ದೇಶ ಒಂದಾಗಿ ಉಳಿದರೂ ಹೆಚ್ಚು ಕಾಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಭಾವಿಸಿದ್ದರು.  ಅದಾಗಿ ನಾಲ್ಕು ದಶಕಗಳು ಕಳೆದಿವೆ.  ಭಾರತ ಒಂದಾಗಿ ಉಳಿದಿದೆ ಮತ್ತು ಪ್ರಜಾಪ್ರಭುತ್ವವಿಲ್ಲಿ ದಿನೇದಿನೇ ಆಳವಾಗಿ ಬೇರೂರುತ್ತಿದೆ.  ಭಾರತೀಯರು ಈಗ ಪ್ರಜಾಸತ್ತಾತ್ಮಕ ವಿಧಾನದಲ್ಲಿ ಹದಿನೈದನೇ ಲೋಕಸಭೆಯನ್ನು  ಚುನಾಯಿಸುವುದರಲ್ಲಿ ತೊಡಗಿದ್ದಾರೆ.
            ಸ್ವಾತಂತ್ರ್ಯಾನಂತರದ ಈ ಆರು ದಶಕಗಳಲ್ಲಿ ಈ ದೇಶದಲ್ಲಿ ಗಮನಾರ್ಹ ಬೆಳವಣಿಗೆಗಳಾಗಿವೆ.  ಭಾರತವೀಗ ರಾeಕೀಯವಾಗಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಅರ್ಥಿಕವಾಗಿ Purchasing Power Parity ಯ ಆಧಾರದಲ್ಲಿ ವಿಶ್ವದ ನಾಲ್ಕನೆಯ ಬೃಹತ್ ಅರ್ಥವ್ಯವಸ್ಥೆ.  ವೈದ್ಯಕೀಯ ವಿಜ್ಞಾನ, ಅಣುಭೌತಶಾಸ್ತ್ರ ಮತ್ತು ಖಗೋಳ ವಿಜ್ಞಾನಗಳಗಳೂ ಸೇರಿದಂತೆ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಭಾರತದ ಪ್ರಗತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.  ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ವಿಶ್ವಮಟ್ಟದಲ್ಲಿ ಆಹಾರಧಾನ್ಯಗಳ ಭಾರೀ ಆಯಾತಕ ದೇಶವಾಗಿದ್ದ ಭಾರತವೀಗ ಆಹಾರಧಾನ್ಯಗಳನ್ನು ರಫ್ತು ಮಾಡುತ್ತಿದೆ.  ಇಷ್ಟಾದರೂ ಈ ದೇಶದಲ್ಲಿ ಪ್ರತೀರಾತ್ರಿ ಖಾಲಿ ಹೊಟ್ಟೆಯಲ್ಲಿ ಹಾಸಿಗೆ ಸೇರುವ ಮಿಲಿಯಾಂತರ ಜನರಿದ್ದಾರೆ.  ವೈಜ್ಞಾನಿಕ ಮತ್ತು ಆರ್ಥಿಕ ಪ್ರಗತಿಯ ಪ್ರತಿಫಲದಿಂದ ದೇಶದ ಬೃಹತ್ ಜನಸಂಖ್ಯೆಯ ಬೃಹತ್ ಭಾಗ ವಂಚಿತವಾಗಿದೆ.  ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಧಿಕಾರ ಕೆಲವೇ ಕುಟುಂಬಗಳ, ಪಟ್ಟಭದ್ರ ಹಿತಾಸಕ್ತಿಗಳ ಸೊತ್ತಾಗಿದೆ ಮತ್ತು ಸಾಮಾನ್ಯ ಜನತೆ ಇವುಗಳ ಪಗಡೆಯಾಟದ ದಾಳಗಳಾಗಷ್ಟೇ ಉಳಿದಿವೆ.  ಅಂತರರಾಷ್ಟ್ರೀಯ ರಾಜಕಾರಣದ ಬಗ್ಗೆ ಹೇಳುವುದಾದರೆ ದಕ್ಷಿಣ ಏಶಿಯಾದ ಹೊರಗೆ ಭಾರತವನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.  ವಿವೇಕಾನಂದರು ಕಂಡ ವಿಶ್ವದ ಆಧ್ಯಾತ್ಮಿಕ ಬೆಳಕು, ಗಾಂಧೀಜಿಯವರ ಕನಸಿನ ರಾಮರಾಜ್ಯ, ನೆಹರೂ ಅವರ ಜಾತ್ಯತೀತ ಸಮಾಜವಾದೀ ಸ್ವರ್ಗ ಹೀಗೇಕಾಯಿತು?  ಇದಕ್ಕೆ ಹಲವಾರು ಕಾರಣಗಳಿವೆ, ದುರದೃಷ್ಟಕರ ಬೆಳವಣಿಗೆಗಳಿವೆ, ಕೆಟ್ಟ ರಾಜಕೀಯ, ಆರ್ಥಿಕ, ಸಾಮಾಜಿಕ ನೀತಿಗಳಿವೆ.
            ಈ ಆರು ದಶಕಗಳಲ್ಲಿ ಈ ದೇಶವನ್ನು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯದಂತೆ ತಡೆದಿರುವ, ಆಂತರಿಕ ನೀತಿಯಲ್ಲಿ ಐದು ಮತ್ತು ವಿದೇಶ ನೀತಿಯಲ್ಲಿ ಐದು, ಒಟ್ಟು ಹತ್ತು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡುವುದು ಈ ಲೇಖನದ ಉದ್ದೇಶ.

ಆಂತರಿಕ ನೀತಿಯ ಐದು ತಪ್ಪುಗಳು
೧. ಮೀಸಲಾತಿಯ ಮುಂದುವರಿಕೆ: ಸಂವಿಧಾನದ ನಿರ್ಮಾತೃಗಳಿಂದ ಸಕಾರಾತ್ಮಕ ತಾರತಮ್ಯ ಎಂದು ವರ್ಣಿಸಲ್ಪಟ್ಟ ಮೀಸಲಾತಿ ವ್ಯವಸ್ಥೆ ಶತಶತಮಾನಗಳಿಂದಲೂ ಎಲ್ಲ ರಂಗಗಳಲ್ಲೂ ತುಳಿತಕ್ಕೊಳಗಾಗಿದ್ದ ದಲಿತರ ಏಳಿಗೆಗೆ ಅತ್ಯಗತ್ಯವಾಗಿತ್ತು.  ದಲಿತರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಧಿಕಾರಗಳಲ್ಲಿ ತಮ್ಮ ಪಾಲನ್ನು ಪಡೆದುಕೊಳ್ಳಲು ಮೀಸಲಾತಿಯೆಂಬ ಈ ಊರುಗೋಲಿನ ಅಗತ್ಯವಿತ್ತು.  ಆದರೆ ಸುಮಾರು ಆರು ದಶಕಗಳ ಮೀಸಲಾತೀ ವ್ಯವಸ್ಥೆಯಿಂದಾಗಿ ಆಗಿರುವುದೇನು?  ಮೇಲೆ ಹೇಳಿದ ಯಾವ ರಂಗದಲ್ಲೂ ದಲಿತರು ತಮ್ಮ ನ್ಯಾಯಯುತ ಪಾಲನ್ನು ಪಡೆದುಕೊಳ್ಳಲಾಗಿಲ್ಲ.  ಕ್ರೂರವ್ಯಂಗವೆಂದರೆ ತಮ್ಮ ಪಾಲನ್ನು  ಪಡೆಯಲು ದಲಿತರಿಗೆ ಅಡ್ಡಿಯಾಗಿ ನಿಂತಿರುವುದು ಈ ಮೀಸಲಾತಿ ವ್ಯವಸ್ಥೆಯೇ.  ಈ ಮೀಸಲಾತಿಯಿಂದಾಗಿ ದಲಿತರು ಇತರ ಜಾತಿಗಳ ಜನರ ಕೆಂಗಣ್ಣಿಗೆ, ಅಸೂಯೆಗೆ ಗುರಿಯಾಗುತ್ತಿದ್ದು ಪರಿಣಾಮವಾಗಿ ಇವರ ವಿರುದ್ಧ ತಾರತಮ್ಯ ಎಲ್ಕೆಜಿಯಿಂದಲೇ ಆರಂಭವಾಗುತ್ತದೆ.  ವಿಶ್ವವಿದ್ಯಾಲಯ ಮಟ್ಟದಲ್ಲಿ ಈ ತಾರತಮ್ಯ ಉಗ್ರ ರೂಪ ತಾಳುತ್ತದೆ.  ನಿಮಗೇನು ಸೆಕೆಂಡ್ ಕ್ಲಾಸ್ ಬಂದರೆ ಸಾಕು ಎಂದು ಹೇಳಿ ಪ್ರಾಧ್ಯಾಪಕರು ದಲಿತ ವಿದ್ಯಾರ್ಥಿಗಳಿಗೆ ನ್ಯಾಯವಾಗಿ ಸಿಗಬೇಕಾದ ಅಂಕಗಳನ್ನು ನೀಡುವುದಿಲ್ಲ.   ಇನ್ನು ಉದ್ಯೋಗದ ಬಗ್ಗೆ ಹೇಳುವುದಾದರೆ ದಲಿತರಿಗೆ ಮೀಸಲಾತಿ ಇರುವುದೇನೋ ನಿಜ.  ಆದರೆ ಅಟೆಂಡರ್, ವಾಚ್ಮನ್, ಸ್ವೀಪರ್ ಮುಂತಾದ ಗ್ರೂಪ್ ಡಿ ಹುದ್ದೆಗಳಲ್ಲಿ ಈ ಮೀಸಲಾತಿಯನ್ನು ನಿಷ್ಟೆಯಿಂದ ನೂರಕ್ಕೆ ನೂರರಷ್ಟು ಪಾಲಿಸಲಾಗುತ್ತಿದೆ.  ಅದೇ ನಿಷ್ಟೆ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಕಂಡುಬರುವುದಿಲ್ಲ.  ಹೀಗಾಗಿ ಹೆಚ್ಚಿನ ದಲಿತರು ಶತಮಾನಗಳ ಹಿಂದೆ ನಿರ್ವಹಿಸುತ್ತಿದ್ದಂತಹ ದೈಹಿಕ ಶ್ರಮದ, ಕೆಳಮಟ್ಟದ ಕೆಲಸಗಳನ್ನೇ ಈಗಲೂ ಕಚೇರಿಗಳಲ್ಲಿ ನಿರ್ವಹಿಸುತ್ತಿದ್ದಾರೆ.  ಇದರಿಂದಾಗಿರುವ ಒಂದು ದುರಂತವೆಂದರೆ ರಾಷ್ಟ್ರದ ಜನಸಂಖ್ಯೆಯ ಕಾಲುಭಾಗದಷ್ಟಿರುವ ಈ ಜನರ ಸಂಪೂರ್ಣ ಸೇವೆ ದೇಶದ ಪ್ರಗತಿಗೆ ಲಭ್ಯವಾಗುತ್ತಿಲ್ಲ.  ವಾಸ್ತವವೆಂದರೆ ಬುದ್ಧಿಶಕ್ತಿಯಲ್ಲಾಗಲೀ, ಕಾರ್ಯಕ್ಷಮತೆಯಲ್ಲಾಗಲೀ ದಲಿತರು ಯಾರಿಗೂ ಕಡಿಮೆ ಇಲ್ಲ.  ಅವರ ವಿರುದ್ಧ ತರಗತಿಗಳಲ್ಲಿ, ಉದ್ಯೋಗದ ಹಾಗೂ ಭಡ್ತಿಯ ಸಂದರ್ಶನಗಳಲ್ಲಿ ಮತ್ತು ಸರಕಾರೀ ಕಚೇರಿಗಳಲ್ಲಿ ನಡೆಯುವ ತಾರತಮ್ಯ ನಿಂತರೆ ಅವರ ಯೋಗ್ಯತೆಗನುಗುಣವಾದ ಅಂಕ, ಹುದ್ದೆ, ಅಧಿಕಾರ, ಸವಲತ್ತು, ಸ್ನೇಹ, ಒಡನಾಟ ಎಲ್ಲವೂ ತನ್ನಿಂತಾನೇ ಸಿಗುತ್ತವೆ.  ಇದಾಗಬೇಕಾದರೆ ಮೀಸಲಾಗಿ ನಿಲ್ಲಬೇಕು, ಮೀಸಲಾತಿ ಬೇಡ ಎಂದು ದಲಿತರು ತಾವಾಗಿಯೇ ಅದನ್ನು ತಿರಸ್ಕರಿಸಬೇಕು.  ತಾವು ಯಾವ ಜಾತಿಯೆಂದು ಅಧ್ಯಾಪಕರಿಗಾಗಲೀ, ಸಂದರ್ಶನ ಸಮಿತಿಯ ಸದಸ್ಯರಿಗಾಗಲೀ ತಿಳಿಯುವ ಅವಕಾಶವನ್ನು ಇಲ್ಲವಾಗಿಸಬೇಕು.
            ಇತ್ತೀಚಿನ ದಶಕಗಳಲ್ಲಿ ಈ ಮೀಸಲಾತಿ ಅಡ್ಡಾದಿಡ್ಡಿಯಾಗಿ ಮುಂದುವಎರೆಯುತ್ತಿದೆ.  ಮೀಸಲಾತಿ ಗಳಿಸಲು ವಿವಿಧ ಜಾತಿ ಮತ್ತು ಕೋಮುಗಳಲ್ಲಿ ಸ್ಪರ್ಧೆ ನಡೆಯುತ್ತಿದೆ.  ವಿವಿಧ ವರ್ಗಗಳು ಕೇಳುವ ಮೀಸಲಾತಿಯನ್ನು ನೀಡಲು ರಾಜಕೀಯ ಪಕ್ಷಗಳಲ್ಲೂ ಪೈಪೋಟಿ ಇದೆ.  ಇನ್ನೂ ಒಂದು ನಿಟ್ಟಿನಿಂದ ನೋಡುವುದಾದರೆ ಈ ಮೀಸಲಾತಿಯ ಪಿಡುಗು ಕ್ರೀಡೆಗಳಿಗೂ ಹರಡಿ ಕ್ರಿಕೆಟ್, ಹಾಕಿ ಮುಂತಾದ ಟೀಮ್ಗಳಲ್ಲೂ ಕೌಶಲದ ಬದಲಾಗಿ ಪ್ರಾದೇಶಿಕತೆಯ ಆಧಾರದ ಮೀಸಲಾತಿ ಜಾರಿಯಲ್ಲಿದೆ!  ಕೇಂದ್ರ ಮಂತ್ರಿಮಂಡಳಗಳ ನಿರ್ಮಾಣದಲ್ಲಿ ಅರ್ಹತೆಗಿಂತಲೂ ಮುಖ್ಯವಾಗಿ ಜಾತಿ, ಕೋಮು, ಪ್ರದೇಶಗಳ ಆಧಾರದಲ್ಲಿ ಮೀಸಲಾತಿಯ ಉಗ್ರ ತಾಂಡವ ನಡೆಯುತ್ತಿದೆ.
೨. ವೋಟ್ ಬ್ಯಾಂಕ್ಗಳ ನಿರ್ಮಾಣ: ಕೇವಲ ಹತ್ತು ವರ್ಷಗಳವರೆಗೆ ಮಾತ್ರ ಜಾರಿಯಲ್ಲಿದ್ದು ದಲಿತರ ಒಂದು ತಲೆಮಾರನ್ನು ಸುಶಿಕ್ಷಿತಗೊಳಿಸಿ ತನ್ಮೂಲಕ ಮುಂದಿನ ತಲೆಮಾರುಗಳ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಬೇಕಾಗಿದ್ದ ಮೀಸಲಾತಿ ವ್ಯವಸ್ಥೆಯ ಅನಿರ್ದಿಷ್ಟ ಆವಧಿಯ ಮುಂದುವರಿಕೆಯಿಂದಾಗಿ ದಲಿತರು ಈಗ ಒಂದು ಬೃಹತ್ ವೋಟ್ ಬ್ಯಾಂಕ್ ಆಗಿ ಬದಲಾಗಿದ್ದಾರೆ.  ಅವರನ್ನು ಹೀಗೆ ಮತಬ್ಯಾಂಕುಗಳಾಗಿಯೇ ಉಳಿಸುವುದರಲ್ಲಿನ ಲಾಭವನ್ನು ರಾಜಕೀಯ ಪಕ್ಷಗಳು ಕಂಡುಕೊಂಡಿವೆ.  ಮೀಸಲಾತಿಯಿಂದಾಗಿ ದಲಿತ ವೋಟ್ ಬ್ಯಾಂಕ್ ನಿರ್ಮಾಣವಾದದ್ದನ್ನೂ ಮತ್ತು ಅದರಿಂದ ಕಾಂಗ್ರೆಸ್ ಪಕ್ಷ ಹೆಚ್ಚಿನ ಲಾಭ ಗಳಿಸಿದ್ದನ್ನೂ ಕಂಡ ಇತರ ಪಕ್ಷಗಳು ಚುನಾವಣಾ ಲಾಭಗಳಿಗಾಗಿ ತಂತಮ್ಮ ವೋಟ್ ಬ್ಯಾಂಕ್ಗಳನ್ನು ಸೃಷ್ಟಿಸಿಕೊಂಡದ್ದು ಈಗ ಇತಿಹಾಸ.  ಇದರಿಂದಾಗಿ ಕೋಮು, ಜಾತಿ, ಭಾಷೆಗಳಲ್ಲಿ ಮೊದಲೇ ಛಿದ್ರಗೊಂಡಿದ್ದ ಭಾರತೀಯ ಸಮಾಜ ಮತ್ತಷ್ಟು ಛಿದ್ರಗೊಳ್ಳುತ್ತಿದೆ.  ವಿವಿಧ ಭಾಷಿಕ ಜನರ, ಜಾತಿ ಹಾಗೂ ವರ್ಗದ ಜನರ ನಡುವಿನ ಕಂದರ ದಿನೇದಿನೇ ಅಗಲವಾಗುತ್ತಿದೆ.  ಇದರಿಂದಾಗಿ, ಭಯೋತ್ಪಾದನೆ, ನಕ್ಸಲಿಸಂ, ನದೀನೀರಿನ ಹಂಚಿಕೆ ಮುಂತಾದ ರಾಷ್ಟ್ರವನ್ನು ಪೀಡಿಸುವ ಯಾವುದೇ ಸಮಸ್ಯೆಯ ಬಗ್ಗೆ ಏಕರೂಪದ ತೀರ್ಮಾನಗಳನ್ನು ತ್ವರಿತವಾಗಿ ಕೈಗೊಳ್ಳುವುದರಲ್ಲಿ ರಾಷ್ಟ ಮತ್ತೆ ಮತ್ತೆ ವಿಫಲವಾಗುತ್ತಿದೆ.  ಪರಿಣಾಮವಾಗಿ ನಾವು ತೆರಬೇಕಾಗಿರುವ ಬೆಲೆಯೂ ದಿನೇದಿನೇ ಅಧಿಕವಾಗುತ್ತಿದೆ.  ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ಮೀಸಲಾಗಿರಬೇಕಾದ  ಭಾರತೀಯರ ಅಮೂಲ್ಯ ಸಮಯ, ಕರ್ತೃತ್ವಶಕ್ತಿ ಹಾಗೂ ಸಂಪನ್ಮೂಲಗಳ ಬಹುಭಾಗ ವ್ಯರ್ಥವಾಗುತ್ತಿದೆ.
೩. ನೆಹರೂ ನೀತಿಗಳ ಬಗ್ಗೆ ವಿರೋಧವಿಲ್ಲದ್ದು: ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ಲಾಲ್ ನೆಹರೂ ಮಹಾನ್ ನಾಂiiಕ ನಿಜ.  ನಮ್ಮ ನೆರೆಯ ರಾಷ್ಟ್ರಗಳು ಸೈನಿಕ ಶಾಸನ, ಏಕಪಕ್ಷದ ಸರ್ವಾಧಿಕಾರಗಳತ್ತ ಜಾರುತ್ತಿದ್ದ ಸಮಯದಲ್ಲಿ ಅವರು ಭಾರತವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಸಿದರು ಎಂಬುದೂ ನಿಜ.  ಆದರೆ ಅವರ ಹಲವಾರು ನೀತಿಗಳು, ಮುಖ್ಯವಾಗಿ ಆರ್ಥಿಕ ಮತ್ತು ವಿದೇಶನೀತಿಗಳು ದೋಷಪೂರಿತವಾಗಿದ್ದವು.  ಆಮದು ರಫ್ತು ನೀತಿ, ಲೈಸನ್ಸ್ ರಾಜ್ ಮುಂತಾದ ಆರ್ಥಿಕ ನೀತಿಗಲು ರಾಷ್ಟ್ರದ  ತ್ವರಿತ ಆರ್ಥಿಕ ಪ್ರಗತಿಗೆ ಅಡ್ಡಿಯಾಗಿದ್ದರೆ ಅವರ ಅಲಿಪ್ತತೆ, ಅಮೆರಿಕಾವಿರೋಧೀ ನೀತಿ ಮುಂತಾದ ವಿದೇಶನೀತಿಗಳು ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಭಾರತಕ್ಕೆ ಸಿಗಬೇಕಾಗಿದ್ದ ಸ್ಥಾನಮಾನ, ಮನ್ನಣೆ, ಜವಾಬ್ದಾರಿಗಳಿಗೆ ಮುಳುವಾದವು.  ಆ ದಿನಗಳ ದುರಂತವೆಂದರೆ ಈಗಿನಂತಹ ಪರಿಣಾಮಕಾರೀ ವಿರೋಧಪಕ್ಷಗಳು ಆಗ ಇರಲೇ ಇಲ್ಲ ಮತ್ತು ನೆಹರೂ ಅವರ ಇಂಗಿತಗಳನ್ನು ಯಾವುದೇ ಚರ್ಚೆ ಇಲ್ಲದೇ ರಾಷ್ಟ್ರೀಯ ನೀತಿಗಳಾಗಿ ಈ ದೇಶ ಒಪ್ಪಿಕೊಳ್ಳುತ್ತಿತ್ತು.   ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಯಾವುದೇ ಮಸೂದೆಗಳು ಮೊಟ್ಟಮೊದಲು ಸಂಸತ್ತಿನಲ್ಲಿ ಮಂಡಿತವಾಗಬೇಕು ಮತ್ತು ಅವುಗಳ ಮೇಲೆ ಪ್ರಜಾಪ್ರತಿನಿಧಿಗಳಿಂದ ಚರ್ಚೆಯಾಗಬೇಕು.  ಆದರೆ ಹಲವಾರು ನಿರ್ಣಯಗಳು ಮೊದಲು ಸಂಸತ್ತಿನಲ್ಲಿ ಮಂಡಿತವಾಗದೇ, ಸಾರ್ವಜನಿಕ ಭಾಷಣಗಳಲ್ಲಿ ನೆಹರೂ ಅವರ ಇಂಗಿತಗಳಾಗಿ ಹೊರಬರುತ್ತಿದ್ದವು.  ಕೆಲವು ಮೂಲಗಳ ಪ್ರಕಾರ ಕೆಲವು ಪ್ರಮುಖ ನಿರ್ಣಯಗಳನ್ನು ನೆಹರೂ ಅವರು ಸಂಸತ್ತಿನಲ್ಲಿ ಮಂಡಿಸುವ ಮೊದಲೇ ತಮ್ಮ ಗೆಳತಿಯಾಗಿದ್ದ ಲೇಡಿ ಎಡ್ವಿನಾ ಮೌಂಟ್ಬ್ಯಾಟನ್ ಅವರಿಗೆ ಪತ್ರ ಮುಖೇನ ತಿಳಿಸಿದ್ದೂ ಉಂಟಂತೆ.  ಹೀಗೆ ನೆಹರೂ ಅವರ ಇಂಗಿತಗಳು, ಆಶಯಗಳು ಯಾವುದೇ ಚರ್ಚೆಯಾಗದೇ ಸರಕಾರದ ನೀತಿನಿರ್ಣಯಗಳ ರೂಪ ತಾಳಿದ್ದರಿಂದಾಗಿ ಹಲವಾರು ಕ್ಷೇತ್ರಗಳಲ್ಲಿ ಈ ದೇಶ ಹಿನ್ನಡೆ ಸಾಧಿಸಬೇಕಾಯಿತು.  ಚೀನಾದಂತಹ ಸಮಾಜವಾದೀ ರಾಷ್ಟ್ರ ೧೯೭೮ರಲ್ಲೇ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರೆ ನಾವು ೧೯೯೧-೯೨ರವರೆಗೆ ಕಾಯಬೇಕಾಯಿತು.  ವಿದೇಶನೀತಿಗಳಲ್ಲಿ ನೆಹರೂ ಎಸಗಿದ ತಪ್ಪುಗಳನ್ನು ಈ ದೇಶ ಚರ್ಚೆಯಿಲ್ಲದೇ ಒಪ್ಪಿಕೊಂಡ ಪರಿಣಾಮಗಳನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ.
೪. ರ್ತುಪರಿಸ್ಥಿತಿ: ಲೋಕಸಭೆಗೆ ತಮ್ಮ ಆಯ್ಕೆಯನ್ನು ಅನೂರ್ಜಿತಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಪರಿಣಾಮದಿಂದ ನುಣುಚಿಕೊಳ್ಳಲು ಶ್ರೀಮತಿ ಇಂದಿರಾಗಾಂಧಿಯವರು ಹೇರಿದ ತುರ್ತುಪರಿಸ್ಥಿತಿಯ ದೂರಗಾಮಿ ದುಷ್ಪರಿಣಾಮವೆಂದರೆ ಕಾಂಗ್ರೆಸ್ ಪಕ್ಷ ದುರ್ಬಲವಾದದ್ದು ಮತ್ತು ಹಲವಾರು ಪ್ರಾದೇಶಿಕ ಪಕ್ಷಗಳು ಅಲ್ಲಲ್ಲಿ ಪ್ರಾಬಲ್ಯ ಗಳಿಸಿಕೊಂಡದ್ದು.  ರಾಷ್ಟ್ರೀಯ ಮನೋಭಾವದ ಕೊರತೆಯಿರುವ ಮತ್ತು ಪ್ರಾದೇಶಿಕ ಸಂಕೇತಗಳ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಹಿಡಿಯಬಯಸುವ ಹೆಚ್ಚಿನ ಪ್ರಾದೇಶಿಕ ಪಕ್ಷಗಳ ಕಾರ್ಯವಿಧಾನ ಹಲವಾರು ಸಂದರ್ಭಗಳಲ್ಲಿ ರಾಷ್ಟ್ರೀಯ ಏಕತೆಗೆ ಮಾರಕವಾಗುತ್ತಿದೆ.  ಅಲ್ಲದೇ ಕಳೆದೆರಡು ದಶಕಗಳಲ್ಲಿ ಈ ಪಕ್ಷಗಳು ಕೇಂದ್ರದಲ್ಲೂ ಪ್ರಭಾವ ಬೀರಲಾರಂಭಿಸಿರುವುದರಿಂದಾಗಿ ಅವುಗಳು ಪ್ರತಿನಿಧಿಸುವ ರಾಜ್ಯಗಳತ್ತ ಕೇಂದ್ರ ಸರಕಾರ ವಾಲಿ ಇತರ ರಾಜ್ಯಗಳ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ.
೫. ಭಯೋತ್ಪಾದನೆಯ ನಿಗ್ರಹದಲ್ಲಿ ವಿಫಲತೆ: ಭಯೋತ್ಪಾದಕ ಘಟನೆಗಳಲ್ಲಿ ಭಾರತಕ್ಕೆ ವಿಶ್ವದಲ್ಲಿ ಇರಾಕ್ ಮತ್ತು ಪಾಕಿಸ್ತಾನಗಳ ನಂತರ ಮೂರನೆಯ ಸ್ಥಾನ.  ಮೊನ್ನೆಮೊನ್ನೆಯವರೆಗೂ ಭಾರತ ಮೊದಲ ಸ್ಥಾನದಲ್ಲಿತ್ತು.  ಈ ದೇಶದ ಒಬ್ಬರು ಪ್ರಧಾನಮಂತ್ರಿ, ಮತ್ತೊಬ್ಬರು ಮಾಜಿ ಪ್ರಧಾನಮಂತ್ರಿ ಭಯೋತ್ಪಾದನೆಗೆ ಬಲಿಯಾಗಿದ್ದಾರೆ.  ದೇಶದ ಸಂಸತ್ ಒಮ್ಮೆ ಭಯೋತ್ಪಾದನಾ ದಾಳಿಗೊಳಗಾಗಿದೆ.  ಹೀಗಿದ್ದೂ ಈ ದೇಶದ ಸರಕಾರಗಳು ಪರಿಣಾಮಕಾರಿಯಾದ ಭಯೋತ್ಪಾದನೆ ನಿಗ್ರಹ ಕಾನೂನನ್ನು ರೂಪಿಸಿ ಅನುಷ್ಟಾನಗೊಳಿಸುವಲ್ಲಿ ವಿಫಲವಾಗಿವೆ.  ೯/೧೧ ನಂತರ ಅಧ್ಯಕ್ಷ ಬುಷ್ ಸರಕಾರ ಜಾರಿಗೆ ತಂದ ಕಟುವಾದ ಪೇಟ್ರಿಯಾಟ್ ಕಾಯಿದೆಯನ್ನು ಅಮೆರಿಕನ್ ಜನತೆ ಮತ್ತು ವಿರೋಧಪಕ್ಷವಾದ ಡೆಮೋಕ್ರಾಟಿಕ್ ಪಕ್ಷ ಒಪ್ಪಿಕೊಂಡು ಸಹಕರಿಸಿದವು.  ಪರಿಣಾಮವಾಗಿ ಆ ನಂತರ ಅಮೆರಿಕನ್ ನೆಲದಲ್ಲಿ ಒಂದು ಭಯೋತ್ಪಾದನಾ ಕೃತ್ಯವೂ ಘಟಿಸಿಲ್ಲ.   ಆದರೆ ಹಿಂದಿನ ಎನ್ಡಿಏ ಸರಕಾರ ಜಾರಿಗೊಳಿಸಿದ್ದ ಪೋಟಾ ಕಾಯಿದೆಯನ್ನು ಈಗಿನ ಯುಪಿಎ ಸರಕಾರ ಅನಗತ್ಯವೆಂದು ರದ್ಧುಗೊಳಿಸಿತು.  ಭಯೋತ್ಪಾದನೆಯನ್ನು ಹತ್ತಿಕ್ಕುವ, ಭಯೋತ್ಪಾದಕ ಕೃತ್ಯಗಳನ್ನು ಎಸಗಿದವರನ್ನು ತ್ವರಿತವಾಗಿ ಶಿಕ್ಷಿಸಿ ಆ ಮೂಲಕ ಭವಿಷ್ಯದ ಭಯೋತ್ಪಾದಕರಿಗೆ ಎಚ್ಚರಿಕೆ ನೀಡುವಂತಹ ಒಂದು ವ್ಯವಸ್ಥೆ ನಮ್ಮಲ್ಲಿಲ್ಲ.  ಧರ್ಮ, ಪ್ರಾದೇಶಿಕತೆ ಮುಂತಾದ ವಿಷಯಗಳು ಭಯೋತ್ಪಾದನೆಯ ನಿಗ್ರಹದಲ್ಲಿ ಅನಗತ್ಯವಾಗಿ ನುಸುಳಲು ರಾಜಕೀಯ ಪಕ್ಷಗಳು ಮತ್ತು ಬುದ್ಧಿಜೀವಿಗಳು ಅವಕಾಶ ಮಾಡಿಕೊಟ್ಟು ರಾಷ್ಟ್ರವನ್ನು ದುರಂತದತ್ತ ದೂಡುತ್ತಿದ್ದಾರೆ.  ಅಫ್ಜಲ್ ಗುರು ನಿರಪರಾಧಿ ಎಂದು ಸಾರುವ, ಅಜ್ಮಲ್ ಕಸಬ್ನ ಎಲ್ಲ ನೌಟಂಕಿಗಳಿಗೂ ತಲೆಯಾಡಿಸುವ ವ್ಯವಸ್ಥೆ ನಮ್ಮದು.  ಅಷ್ಟೇ ಅಲ್ಲ, ರಾಜೀವ್ ಗಾಂಧಿಯ ಹತ್ಯೆಯ ಸಂಚನ್ನು ರೂಪಿಸಿದ ಪ್ರಭಾಕರನ್ ತನ್ನ ಮಿತ್ರ ಎಂದು ಮುಖ್ಯಮಂತ್ರಿ ಕರುಣಾನಿಧಿ ಹೇಳಿಕೆ ಕೊಡುತ್ತಾರೆ ಮತ್ತು ರಾಜೀವ್ರ ಪತ್ನಿ ಸೋನಿಯಾ ಗಾಂಧಿ ತಮ್ಮ ಯುಪಿಎ ಸರಕಾರದ ಉಳಿವಿಗಾಗಿ ಈ ಕರುಣಾನಿಧಿಯವರನ್ನು ಸತತ ಐದು ವರ್ಷಗಳವರೆಗೆ (೨೦೦೪-೦೯) ಅವಲಂಬಿಸುತ್ತಾರೆ.  ಇದು ಬೇರಾವ ದೇಶದಲ್ಲಿ ನಡೆಯಲು ಸಾಧ್ಯ?

ವಿದೇಶ ನೀತಿಯ ಐದು ತಪ್ಪುಗಳು
ಕಾಶ್ಮೀರ ಸಮಸ್ಯೆಯ ಸೃಷ್ಟಿ:  ಪಾಕಿಸ್ತಾನೀ ಆಕ್ರಮಣದ ವಿಷಮಪರಿಸ್ಥಿತಿಯಲ್ಲಿ ಕಾಶ್ಮೀರ ಭಾರತದಲ್ಲಿ ವಿಲೀನಕ್ಕೆ ಒಪ್ಪಿಕೊಂಡರೂ ಆನಂತರ ಆ ರಾಜ್ಯವನ್ನು ಇತರೆಲ್ಲಾ ರಾಜ್ಯಗಳಂತೆ ಒಕ್ಕೂಟದಲ್ಲಿ ಸಂಪೂರ್ಣವಾಗಿ ಒಂದಾಗಿಸುವ ಪ್ರಯತ್ನವನ್ನು ನಮ್ಮ ಸರಕಾರಗಳು ಮಾಡಲಿಲ್ಲ.  ಅಲ್ಲದೇ ೩೭೦ನೇ ಅನುಚ್ಛೇದದ ಪ್ರಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಆ ರಾಜ್ಯ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡು ಬರುವಂತೆ ಮಾಡಲಾಗಿದೆ.  ಕಾಶ್ಮೀರದ ಸಂಬಂಧದಲ್ಲಿ ನೆಹರೂ ಸರಕಾರ ತಪ್ಪಿನ ಮೇಲೆ ತಪ್ಪು ಎಸಗಿದೆ.  ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಗೆ ದೂರು ಒಯ್ದದ್ದು ಮೊದಲ ತಪ್ಪು.  ನೆಹರೂ ಅವರ ಪಶ್ಚಿಮ ವಿರೋಧೀ ನೀತಿಗಳಿಂದಾಗಿ ಬರೀ ಅಮೆರಿಕನ್ ಮಿತ್ರರಿಂದಲೇ ತುಂಬಿದ್ದ ಆಗಿನ ವಿಶ್ವಸಂಸ್ಥೆ ನಮ್ಮ ವಿರುದ್ಧವಾಗಿ ನಿಂತಿತು.  ಅಮೆರಿಕಾ, ಬ್ರಿಟನ್ ಮುಂತಾದ ಪಶ್ಚಿಮದ ದೇಶಗಳು ಪಾಕಿಸ್ತಾನದ ಪರವಾಗಿ ದಾಳ ಉರುಳಿಸಿದವು.  ವಾಸ್ತವವಾಗಿ ಕಾಶ್ಮೀರದಲ್ಲಿ ಸೈನಿಕ ಯುದ್ಧ ನಡೆಸುವುದಕ್ಕಿಂತಲೂ ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ಯುದ್ಧ ನಡೆಸುವುದು ಭಾರತಕ್ಕೆ ಹೆಚ್ಚು ಕಷ್ಟಕರವಾಗಿತ್ತು.  ನಂತರ ಕಾಶ್ಮೀರದ ಮೂರನೆಯ ಒಂದು ಭಾಗ ಪಾಕಿಸ್ತಾನದ ಹಿಡಿತದಲ್ಲಿರುವಾಗಲೇ ವಿಶ್ವಸಂಸ್ಥೆಯ ನಿರ್ಣಯಗಳನ್ನು ಒಪ್ಪಿಕೊಂಡು ಯುದ್ಧವಿರಾಮ ಘೋಷಿಸಿದ್ದು ನೆಹರೂ ಮಾಡಿದ ಎರಡನೆಯ ತಪ್ಪು.  ಇದರಿಂದಾಗಿ ಕಾಶ್ಮೀರದ ಮೂರನೆಯ ಒಂದು ಭಾಗ ಈಗಲೂ ಪಾಕಿಸ್ತಾನದ ಹಿಡಿತದಲ್ಲಿದೆ ಮತು ಪಾಕಿಸ್ತಾನ ಅಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ.  ಈ ಕಾರಣಗಳಿಂದಾಗಿ ಕಾಶ್ಮೀರ ದಶಕಗಳಿಂದ ಅಶಾಂತಿಯಲ್ಲಿ  ಬೇಯುತ್ತಿದೆ.  ಅಲ್ಲಿ ಪಾಕಿಸ್ತಾನೀ ಪ್ರೇರಿತ ಭಯೊತ್ಪಾದನೆಯಿಂದಾಗಿ ಸಾವಿರಾರು ಜನರ ಪ್ರಾಣಹಾನಿಯಾಗುತ್ತಿದೆ ಹಾಗೂ ರಾಷ್ಟ್ರದ ಪ್ರಗತಿಗೆ ಅಗತ್ಯವಾಗಿದ್ದ ಬಿಲಿಯನ್ಗಟ್ಟಲೆ ಹಣ ವ್ಯರ್ಥವಾಗುತ್ತಿದೆ.
ಚೀನಾ ಜತೆ ಅನಗತ್ಯ ಗಡಿವಿವಾದ: ಪಶ್ಚಿಮದಲ್ಲಿ ಅಕ್ಸಾಯ್ ಚಿನ್ ಮತ್ತು ಪೂರ್ವದಲ್ಲಿ ಅರುಣಾಚಲ ಪ್ರದೇಶಗಳು ಭಾರತ ಮತ್ತು ಚೀನಾಗಳ ನಡುವೆ ವಿವಾದಿತ ಪ್ರದೇಶಗಳಾಗಿವೆ.  ಇವುಗಳಲ್ಲಿ ಈಗ ಅಕ್ಸಾಯ್ ಚಿನ್ ಚೀನಾದ ವಶದಲ್ಲೂ ಅರುಣಾಚಲ ಪ್ರದೇಶ ಭಾರತದ ವಶದಲ್ಲೂ ಇವೆ.  ಐತಿಹಾಸಿಕ ದಸ್ತಾವೇಜುಗಳು ಮತು ಭೂಪಟಗಳ ಅಧ್ಯಯನದ ಪ್ರಕಾರ ನಮಗೆ ತಿಳಿಯುವುದೇನೆಂದರೆ ಈ ಎರಡೂ ಪ್ರದೇಶಗಳು ಐತಿಹಾಸಿಕವಾಗಿ ಭಾರತಕ್ಕೆ ಸೇರಿರಲಿಲ್ಲ.  ಟಿಬೆಟ್ ಮೇಲೆ ಚೀನಾದ ಸಾರ್ವಭೌಮತ್ವವಿತ್ತು ಮತ್ತು ಅರುಣಾಚಲ ಪ್ರದೇಶದ ವಿವಿಧ ಬುಡಕಟ್ಟುಗಳ ನಾಯಕರು ಟಿಬೆಟ್ನ ದಲಾಯಿ ಲಾಮಾರ ಸಾಮಂತರಾಗಿದ್ದರು.  ಈ ಪ್ರದೇಶವನ್ನು ಸೇನಾಕಾರ್ಯಾಚರಣೆಗಳ ಮೂಲಕ ವಶಪಡಿಸಿಕೊಂಡು ೧೯೧೧ರಲ್ಲಿ ಭಾರತಕ್ಕೆ ಸೇರಿಸಿದವನು ಕರ್ನಲ್ ಫ್ರಾನ್ಸಿಸ್ ಯಂಗ್ಹಸ್ಬೆಂಡ್.  ಭಾರತದ ಈ ಆಕ್ರಮಣವನ್ನು ಮತ್ತು ಹೊಸ ಮೆಕ್ಮಹೋನ್ ರೇಖೆಯನ್ನು ಗಡಿಯಾಗಿ ಅಧಿಕೃತಗೊಳಿಸಿದ್ದು ೧೯೧೪ರ ಶಿಮ್ಲಾ ಒಪ್ಪಂದದಲ್ಲಿ.  ಆದಾಗ್ಯೂ ೧೯೩೮ರವರೆಗೂ ಸರ್ವೇ ಆಫ್ ಇಂಡಿಯಾ ಸಹಾ ಈ ಪ್ರದೇಶವನ್ನು ಟಿಬೆಟ್ನ ಭಾಗವೆಂದೇ ತೋರಿಸುತ್ತಿತ್ತು.  ಪಶ್ಚಿಮದ ಅಕ್ಸಾಯ್ ಚಿನ್ ಬಗ್ಗೆ ಹೇಳುವುದಾದರೆ ಆ ಪ್ರದೇಶವನ್ನು ಉನ್ನತ ಕಾರಾಕೊರಂ ಪರ್ವತಗಳು ಭಾರತದಿಂದ (ಲಢಾಖ್ನಿಂದ) ಬೇರ್ಪಡಿಸುತ್ತವೆ.  ಆ ಪ್ರದೇಶವನ್ನು ಬ್ರಿಟಿಷ್ ಭಾರತ ೨೦ನೇ ಶತಮಾನದ ಆದಿಭಾಗದಲ್ಲಿ ಭೂಪಟದಲ್ಲಿ ಮಾತ್ರ ಸೇರಿಸಿಕೊಂಡಿತೇ ವಿನಾಃ ಅದರ ಮೇಲೆ ವಾಸ್ತವ ಹತೋಟಿ ಸ್ಥಾಪಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ.  ಇದೇ ಪರಿಸ್ಥಿತಿ ಸ್ವಾತಂತ್ರಾನಂತರವೂ ಮುಂದುವರೆಯಿತು.  ಅಕ್ಸಾಯ್ ಚಿನ್ನಲ್ಲಿ ಚೀನಿಯರು ರಸ್ತೆಯೊಂದನ್ನು ನಿರ್ಮಿಸಿದ್ದಾರೆಂದು ೧೯೫೬ರಲ್ಲಿ ಭಾರತಕ್ಕೆ ತಿಳಿದದ್ದೇ ಚೀನೀ ಸರಕಾರ ಪೀಕಿಂಗ್ನಲ್ಲಿ ಹೊರಡಿಸಿದ ಪ್ರಕಟಣೆಗಳಿಂದ!  ಆನಂತರದ ಮಾತುಕತೆಗಳಲ್ಲಿ ಅಕ್ಸಾಯ್ ಚಿನ್ ಮೇಲೆ ತನ್ನ ಅಧಿಕಾರವನ್ನು ಭಾರತ ಒಪ್ಪಿಕೊಳ್ಳುವುದಾದರೆ ಅರುಣಾಚಲದ ಮೇಲೆ ಭಾರತದ ಅಧಿಕಾರವನ್ನು ತಾನು ಒಪ್ಪಿಕೊಳ್ಳುವುದಾಗಿ ಚೀನಾ ಹೇಳಿತು.  ಗಡಿಸಮಸ್ಯೆಯ ಪರಿಹಾರಕ್ಕೆ ಇದೊಂದು ಅತ್ಯಂತ ಸಮರ್ಪಕ ವಿಧಾನವಾಗಿತ್ತು.  ಹೇಗೆಂದರೆ ಭೌಗೋಳೀಕವಾಗಿ ಕಾರಾಕೊರಂ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದ ಅಕ್ಸಾಯ್ ಚಿನ್ ಅನ್ನು ಭಾರತ ತನ್ನ ವಶಕ್ಕೆ ತೆಗೆದುಕೊಂಡರೂ ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗುವ ಪರ್ವತ ಕಣಿವೆಗಳಿಂದಾಗಿ ಆ ಪ್ರದೇಶದ ಜತೆ ನಮ್ಮ ಸಂಪರ್ಕ ತಪ್ಪಿಹೋಗುತ್ತದೆ.  ಅದೇ ರೀತಿ ಚೀನಾ (ಟಿಬೆಟ್) ಮತ್ತು ಅರುಣಾಚಲ ಪ್ರದೇಶಗಳ ನಡುವೆ ಹಿಮಾಲಯ ಪರ್ವತವಿದ್ದು ಚಳಿಗಾಲದಲ್ಲಿ ಚೀನೀಯರಿಗೆ ಈ ಪ್ರದೇಶದ ಜತೆ ಸಂಪರ್ಕ ತಪ್ಪಿಹೋಗುತ್ತದೆ.  ಹೀಗಾಗಿ ಚೀನಿ ಸಲಹೆಯ ಪರಿಣಾಮವಾಗಿ ಭೌಗೋಳಿಕವಾಗಿ ಭಾರತದಿಂದ ಪ್ರತ್ಯೇಕವಾದ ಅಕ್ಸಾಯ್ ಚಿನ್ ಚೀನಕ್ಕೂ, ಚೀನಾದಿಂದ ಪ್ರತ್ಯೇಕವಾದ ಅರುಣಾಚಲ ಪ್ರದೇಶ ಭಾರತಕ್ಕೂ ದೊರಕುತ್ತಿತ್ತು ಮತ್ತು ಸಮಸ್ಯೆ ಪರಿಹಾರವಾಗುತ್ತಿತ್ತು.  ಆದರೆ ನೆಹರೂ ಸರಕಾರ ಅದನ್ನು ತಿರಸ್ಕರಿಸಿ ಎರಡೂ ಪ್ರದೇಶಗಳು ಭಾರತಕ್ಕೆ ಸೇರಬೇಕು ಎಂದು ಪಟ್ಟು ಹಿಡಿಯಿತು.  ಇದರ ಪರಿಣಾಮ- ೬೨ರ ಯುದ್ಧ, ಸೋಲು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಮಾನ...
ಅಲಿಪ್ತ ನೀತಿ: ಶೀತಲ ಸಮರದ ದಿನಗಳಲ್ಲಿ ಭಾರತಕ್ಕೆ ಅಮೆರಿಕನ್ ಮಿತ್ರತ್ವ ಅನುಕೂಲಕರವಾಗುತ್ತಿತ್ತು.  ಇದರಿಂದಾಗಿ ಅಮೆರಿಕಾ ಪಾಕಿಸ್ತಾನವನ್ನು ಕಡೆಗಣಿಸುತ್ತಿತ್ತು ಮತ್ತದರ ಪರಿಣಾಮವಾಗಿ ಪಾಕಿಸ್ತಾನ ನಮಗೆ ಮಗ್ಗುಲ ಮುಳ್ಳಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.  ಅಷ್ಟೇ ಅಲ್ಲ, ಚೀನಾ ಸಹಾ ೬೨ರಲ್ಲಿ ನಮ್ಮ ವಿರುದ್ಧ ಯುದ್ಧಕ್ಕಿಳಿಯುತ್ತಿರಲಿಲ್ಲ.   ಈ ಸಂಬಂಧದಲ್ಲಿ ಪಕ್ಕದ ತೈವಾನ್ಗೆ ಸೇರಿದ ಎರಡು ದ್ವೀಪಗಳನ್ನು ಆಕ್ರಮಿಸಿಕೊಳ್ಳಲು ಚೀನಾ ೧೯೫೮ರಲ್ಲಿ ಪ್ರಯತ್ನಿಸಿದ್ದು, ನಂತರ ಅಮೆರಿಕಾದ ಬೆದರಿಕೆಯಿಂದ ಹಿಂತೆಗೆದದ್ದು ಸೂಕ್ತ ಉದಾಹರಣೆ.  ಆದರೆ ನೆಹರೂ ಅವರ ಅಲಿಪ್ತ ನೀತಿಯಿಂದಾಗಿ ಅಮೆರಿಕಾ ಭಾರತದಿಂದ ದೂರಾಗಿ ಪಾಕಿಸ್ತಾನಕ್ಕೆ ಹತ್ತಿರವಾಯಿತು.  ಸೋವಿಯೆತ್ ಯೂನಿಯನ್ ನಮ್ಮ ಬೆಂಬಲಕ್ಕೆ ನಿಂತದ್ದು ೧೯೭೧ರ ಆಗಸ್ಟ್ನಿಂದೀಚೆಗಷ್ಟೇ.  (೬೨ರ ಭಾರತ - ಚೀನಾ ಯುದ್ಧದಲ್ಲಿ ಮಾಸ್ಕೋ ಆಳ ಸೈದ್ಧಾಂತಿಕ ಭೇದಗಳಿದ್ದಾಗ್ಯೂ ಚೀನಾದ ಪರ ವಹಿಸಿತ್ತು.)  ಹೀಗಾಗಿ ಶೀತಲ ಯುದ್ಧದ ಬಹುಪಾಲು ಆವಧಿಯಲ್ಲಿ ಭಾರತದ ಪರವಾಗಿ ಯಾವುದೇ ಬೃಹತ್ ರಾಷ್ಟ್ರ ಇರಲಿಲ್ಲ.  ಅಲ್ಲದೇ ಇತರ ಪ್ರಮುಖ ಅಲಿಪ್ತ ದೇಶಗಳೂ ಸಹಾ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ವಹಿಸಲು ನಿರಾಕರಿಸಿದವು.  ಚೀನಾದ ಜತೆಗಿನ ೬೨ರ ಯುದ್ಧದಲ್ಲಿ ಅಲಿಪ್ತ ಇಂಡೋನೇಷಿಯಾ ಬಹಿರಂಗವಾಗಿ ಭಾರತದ ವಿರುದ್ಧ ಹಾಗೂ ಚೀನಾದ ಪರ ವಹಿಸಿತು.  ಅಲಿಪ್ತ ಯುಗೊಸ್ಲಾವಿಯಾ ಮತ್ತು ಈಜಿಪ್ಟ್ಗಳು ಭಾರತಕ್ಕೆ ಯಾವುದೇ ಬೆಂಬಲ ವ್ಯಕ್ತಪಡಿಸಲಿಲ್ಲ.  ಆಗ ನಮ್ಮ ನೆರವಿಗೆ ಬಂದ ದೇಶಗಳೆಂದರೆ ನೆಹರೂ ಅವಕಾಶ ಸಿಕ್ಕಿದಾಗೆಲ್ಲಾ ತೆಗಳುತ್ತಿದ್ದ ಅಮೆರಿಕಾ ಮತ್ತು ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್!
ಅಸಮರ್ಪಕ ಅಣ್ವಸ್ತ್ರನೀತಿ: ೧೯೭೪ರಲ್ಲಿ ಪ್ರಥಮವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಭಾರತ ತಾನೊಂದು ಅಣ್ವಸ್ತ್ರ ರಾಷ್ಟ್ರ ಎಂದು ನೇರವಾಗಿ ಘೋಷಿಸಿಕೊಳ್ಳುವ ಬದಲು ತನ್ನದು ಕೇವಲ ಶಾಂತಿಯುತ ಅಣುಸ್ಪೋಟ ಎಂದು ಹೇಳಿಕೆ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆ ಹಾಗೂ ನಗೆಪಾಟಲಿಗೀಡಾಯಿತು.  ಒಂದುವೇಳೆ ಭಾರತ ತಾನೊಂದು ಅಣ್ವಸ್ತ್ರ ರಾಷ್ಟ್ರವೆಂದು ಆಗಲೇ ಘೋಷಿಸಿಕೊಂಡಿದ್ದರೆ ಒಂದು ವರ್ಷದ ಹಿಂದಷ್ಟೇ ಅನುಷ್ಟಾನಕ್ಕೆ ಬಂದಿದ್ದ, ಇನ್ನೂ ಪರಿಣಾಮಕಾರಿಯಾಗಿರದ ಅಣುಪ್ರಸರಣ ನಿಷೇಧ ಒಪ್ಪಂದ (ಓPಖಿ) ಸಡಿಲಾಗಿ ಅಣ್ವಸ್ತ್ರ ರಾಷ್ಟ್ರವೆಂಬ ಪಟ್ಟ ಭಾರತಕ್ಕೆ ೭೦ರ ದಶಕದಲ್ಲೇ ದೊರಕುತ್ತಿತ್ತು.  ಆ ಪಟ್ಟ ಗಳಿಸಲು ಭಾರತ ಕಾಲು ಶತಮಾನ ಕಾಯಬೇಕಾದ ಅಗತ್ಯವಿರಲಿಲ್ಲ ಹಾಗೂ ಎರಡು ಬಾರಿ (೧೯೭೪ರಲ್ಲಿ ಮತ್ತು ೧೯೯೮ರಲ್ಲಿ) ದಿಗ್ಬಂಧನಕೊಳ್ಳಗಾಗುತ್ತಿರಲಿಲ್ಲ..  ಕೊನೆಗೂ ಎನ್ಡಿಏ ಸರಕಾರ ೧೯೯೮ರಲ್ಲಿ ಧೀಮಂತ ನಿರ್ಣಯ ಕೈಗೊಂಡು ಅನಿರ್ಧಿಷ್ಟತೆಗೆ ಅಂತ್ಯ ಹಾಡಿದ್ದು ಸಕಾರಾತ್ಮಕ ಬೆಳವಣಿಗೆ.
ಅಣ್ವಸ್ತ್ರ ಗಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ಕೊಟ್ಟದ್ದು: ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ತಾನಕ್ಕಿಂತ ಭಾರತ ಹಲವು ಪಟ್ಟು ಬಲಿಷ್ಟ.  ಹೀಗಾಗಿ ಹಿಂದೆ ಕಾಶ್ಮೀರದಲ್ಲಿ ಪಾಕಿಸ್ತಾನ ತಂಟೆ ಎಬ್ಬಿಸಿ ಕೆಣಕಿದಾಗ ಭಾರತ ಅದನ್ನು ಬೇರೆಡೆ ಯುದ್ದಕ್ಕೆಳೆದು ಮಣಿಸುತ್ತಿತ್ತು.  ೧೯೬೫ರ ಯುದ್ಧ ಇದಕ್ಕೊಂದು ಉದಾಹರಣೆ.   ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ ಅರಾಜಕ ಪರಿಸ್ಥಿತಿ ಉಂಟು ಮಾಡಿ, ಜಮ್ಮು - ಅಖ್ನೂರ್ ರಸ್ತೆಯನ್ನು ವಶಪಡಿಸಿಕೊಂಡು ಕಾಶ್ಮೀರದ ಜತೆ ಭಾರತಕ್ಕಿದ್ದ ಏಕೈಕ ಕೊಂಡಿಯನ್ನು ಕತ್ತರಿಸಿಬಿಡಲು ಪಾಕಿಸ್ತಾನ ಯತ್ನಿಸಿದಾಗ ಭಾರತ ಲಾಹೋರ್ ಮೇಲೆ ಆಕ್ರಮಣವೆಸಗಿ ಪಾಕಿಸ್ತಾನೀಯರ ಗಮನವನ್ನು ಅತ್ತ ಸೆಳೆಯಿತು.  ಪರಿಣಾಮವಾಗಿ ಕಾಶ್ಮೀರದಲ್ಲಿ ತನ್ನ ತರಲೆಯನ್ನು ಪಾಕಿಸ್ತಾನ ಕೈಬಿಡಬೇಕಾಯಿತು.  ಆದರೆ ೧೯೮೭ರಲ್ಲಿ ಪಾಕಿಸ್ತಾನ ರಹಸ್ಯವಾಗಿ ಅಣ್ವಸ್ತ್ರ ಪರೀಕ್ಷಣೆ ನಡೆಸಿದಾಗಿನಿಂದ ಪರಿಸ್ಥಿತಿ ಬದಲಾಗಿದೆ.  ಅಣ್ವಸ್ತ್ರ ಗಳಿಸಿಕೊಳ್ಳುವುದರ ಮೂಲಕ ಪಾಕಿಸ್ತಾನ ಸಾಂಪ್ರದಾಯಿಕ ಅಸ್ತ್ರಗಳಲ್ಲಿ ಭಾರತ ಹೊಂದಿದ್ದ ಮೇಲುಗೈಯನ್ನು ಅರ್ಥಹೀನಗೊಳಿಸಿಬಿಟ್ಟಿದೆ.  ಕಾಶ್ಮೀರದಲ್ಲಿ ೧೯೮೯ರಲ್ಲಿ ಆರಂಭವಾದ ಪಾಕ್ ಪ್ರೇರಿತ ಭಯೋತ್ಪಾದನೆ ಇನ್ನೂ ನಿಂತಿಲ್ಲ.  ಪ್ರತೀಬಾರಿ ಆತಂಕವಾದವನ್ನು ನಿಗ್ರಹಿಸಲು ಭಾರತ ಪರಿಣಾಮಕಾರೀ ಪ್ರಯತ್ನಕ್ಕೆ ಮುಂದಾದಾಗಲೂ ಪಾಕಿಸ್ತಾನ ಅಣ್ವಸ್ತ್ರ ಝಳಪಿಸಿ ನಮ್ಮ ಕೈ ಕಟ್ಟಿಹಾಕುತ್ತಿದೆ.  ಡಿಸೆಂಬರ್ ೨೦೦೧ರ ಪಾರ್ಲಿಮೆಂಟ್ ದಾಳಿಯ ನಂತರದ ಹತ್ತು ತಿಂಗಳಲ್ಲಿ ಭಯೋತ್ಪಾದಕರ ತರಬೇತಿ ಶಿಬಿರಗಳನ್ನು ನಾಶಪಡಿಸಲೋಸುಗ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಲು ಮೂರು ಸಲ ಪ್ರಯತ್ನಿಸಿತು.  ಮೂರೂ ಸಲವೂ ಪಾಕಿಸ್ತಾನ ಅಣ್ವಸ್ತ್ರ ಝಳಪಿಸಿ ಭಾರತವನ್ನು ಹಿಮ್ಮೆಟ್ಟಿಸಿತು.  ಹೀಗಾಗಿ ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಅವ್ಯಾಹತವಾಗಿ ಮುಂದುವರೆಯುತ್ತಿದೆ.  ಇರಾಕೀ ಅಣು ರಿಯಾಕ್ಟರ್ ಅನ್ನು ಇಸ್ರೇಲಿಗಳು ಧ್ವಂಸ ಮಾಡಿದಂತೆ ಪಾಕಿಸ್ತಾನೀ ರಿಯಾಕ್ಟರುಗಳನ್ನು ನಾವೂ ಧ್ವಂಸ ಮಾಡಿದ್ದರೆ ಭಾರತ ಹೀಗೆ ಅಸಹಾಯಕವಾಗುವ ದುರ್ಗತಿಗೆ ಸಿಕ್ಕಿಕೊಳ್ಳುತ್ತಿರಲಿಲ್ಲ.  ಕೊನೇಪಕ್ಷ ಈ ಕೆಲಸ ಮಾಡಲು ಇಸ್ರೇಲಿಯರು ಮುಂದೆ ಬಂದಾಗಲಾದರೂ ಅವರು ಕೇಳಿದ ಸಹಕಾರವನ್ನು ನಾವು ಕೊಡಬೇಕಾಗಿತ್ತು.  ಆದರೆ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ಹಿಂದೆಗೆದದ್ದೇಕೆ ಎಂದು ಅರ್ಥವಾಗುವುದಿಲ್ಲ.  ಒಟ್ಟಿನಲ್ಲಿ ಅಣ್ವಸ್ತ್ರ ಗಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ಕೊಟ್ಟು ನಮ್ಮ ಕೈಯನ್ನು ನಾವೇ ಕಟ್ಟಿಕೊಂಡಿದ್ದೇವೆ

2 comments:

  1. ವಿದೇಶಾಂಗ ನೀತಿಯ ಬಗ್ಗೆ ನನಗೆ ಏನೂ ಗೊತ್ತಿಲ್ಲ
    ಅಷ್ಟಾಗಿ ಆಸಕ್ತಿಯೂ ಇಲ್ಲ ಸರ್. ಆದರೆ ಕೆಂಡಸಂಪಿಗೆಯ ದಿನಗಳಿಂದಲೂ
    ನೀವು ಬರೆದ ಲೇಖನಗಳು ಓದಿಸಿಕೊಂಡು ಹೋಗುತ್ತವೆ. ಕೆಲವು ವಿಷಯಗಳನ್ನು
    ಸಮರ್ಪಕವಾಗಿ ತಿಳಿಸಿಕೊಡುತ್ತವೆ. ನಿಮ್ಮ ಶೈಲಿಗೆ ಮತ್ತು ಇವನ್ನು ಇಲ್ಲಿ ಓದಲು ಕೊಟ್ಟಿದ್ದಕ್ಕಾಗಿ
    ಧನ್ಯವಾದಗಳು
    ಸ್ವರ್ಣಾ

    ReplyDelete
  2. ನನ್ನ ಬರಹಗಳ ಬಗ್ಗೆ ನೀವು ತೋರುವ ಪ್ರೀತಿ ಕಂಡು ಖುಷಿಯಾಗುತ್ತಿದೆ. ಕೃತಜ್ಞತೆಗಳು.

    ReplyDelete