ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, January 6, 2012

ಲೇಖನ- ಹಿಂಸೆ ಮತ್ತು ಯುದ್ಧ: ಭಾರತೀಯ ಹಾಗೂ ಪಾಶ್ಚಿಮಾತ್ಯ ನಾಗರೀಕತೆಗಳ ದೃಷ್ಟಿಕೋನಗಳು



            ಹಿಂಸೆ, ಯುದ್ಧ ಮತ್ತು ಯುದ್ಧೋಪಕರಣಗಳ ಬಗ್ಗೆ ಭಾರತೀಯ ಜನಾಂಗಗಳ ಮನೋಭಾವವನ್ನು ವಿಶ್ವದ ಇತರ ಪ್ರದೇಶಗಳಲ್ಲಿನ ಜನಾಂಗಗಳ ಮನೋಭಾವದೊಂದಿಗೆ ಹೋಲಿಸಿದಾಗ ಕಂಡುಬಂದ ಕೆಲವು ಅಚ್ಚರಿಯ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ್ದೇಶದಿಂದ ಇದನ್ನು ಬರೆಯುತ್ತಿದ್ದೇನೆ.  ಹೇಳಬೇಕಾದ್ದೆಲ್ಲವನ್ನೂ ಪುಟ್ಟ ಲೇಖನದ ಮಿತಿಯಲ್ಲೇ ಹೇಳಲು ಪ್ರಯತ್ನಿಸುತ್ತಿದ್ದೇನೆ, ಇದು ನಿಮಗೆ ತೊಡಕಾಗಲಾರದು ಎಂಬ ಆಶಯದೊಂದಿಗೆ.
            ಮಾರಕಾಸ್ತ್ರಗಳ ಸಂಶೋಧನೆ ಮತ್ತವುಗಳ ಬಳಕೆ ಪಶ್ಚಿಮದ ನಾಗರೀಕತೆಗಳ ಒಂದು ಅವಿಭಾಜ್ಯ ಅಂಗವಾಗಿದೆ.  ಆದರೆ ಈ ವಿಚಾರದಲ್ಲಿ ಭಾರತೀಯ ನಾಗರೀಕತೆಗಳು ದಿವ್ಯ ನಿರ್ಲಕ್ಷ ತೋರಿರುವುದು ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯುತ್ತದೆ.  ಇದನ್ನು ಕೆಲವು ಉದಾಹರಣೆಗಳ ಮೂಲಕ ಪರಿಶೀಲಿಸೋಣ.
            ಲಿಖಿತ ಇತಿಹಾಸದಲ್ಲಿ ನಮಗೆ ದೊರೆಯುವ ಮಾಹಿತಿಗಳ ಪ್ರಕಾರ ಜನಾಂಗಗಳ ನಡುವೆ ಪೂರ್ಣಪ್ರಮಾಣದ ಯುದ್ಧಗಳು ಆರಂಭವಾದದ್ದು ಸುಮಾರು ಆರುಸಾವಿರ ವರ್ಷಗಳ ಹಿಂದೆ, ಈಜಿಪ್ಷಿಯನ್ನರು ಮತ್ತು ಸುಮೇರಿಯನ್ನರ ನಡುವೆ.  ಈ ಯುದ್ಧಗಳಲ್ಲಿ ಈ ಎರಡೂ ಜನಾಂಗಗಳ ವರ್ತನೆ ಯುದ್ಧೋಪಕರಣಗಳ ಸಂಶೋಧನೆಯಲ್ಲಿ ಪಶ್ಚಿಮದ ನಾಗರೀಕತೆಗಳು ಪ್ರದರ್ಶಿಸುವ ಪೈಪೋಟಿಯ ಬಗ್ಗೆ ಸ್ವಾರಸ್ಯಕರ ಒಳನೋಟಗಳನ್ನು ನೀಡುತ್ತವೆ.
            ಈಜಿಪ್ಷಿಯನ್ನರು ಮತ್ತು ಸುಮೇರಿಯನ್ನರ ನಡುವೆ ಸಿನಾಯ್ ಪರ್ಯಾಯದ್ವೀಪದ ಹತೋಟಿಗಾಗಿನ ಕಾದಾಟ ಸಾಮಾನ್ಯವಾಗಿತ್ತು.  ಆದರೆ ಎರಡೂ ಸೇನೆಗಳ ನಡುವಿನ ಸೈನಿಕ ಸಂಖ್ಯೆ ಮತ್ತು ಸಮರತಂತ್ರಗಳ ನಡುವಿನ ಸಮಾನತೆಯಿಂದಾಗಿ ಪ್ರತೀ ಯುದ್ಧವೂ ಜಯಾಪಜಯಗಳ ನಿರ್ಣಯವಾಗದೇ ಕೊನೆಗೊಳ್ಳುವುದೂ ಸಾಮಾನ್ಯವಾಗಿತ್ತು.  ಯುದ್ಧದಲ್ಲಿ ನಿಶ್ಚಿತ ಜಯ ಗಳಿಸಲೇಬೇಕೆಂಬ ಉದ್ದೇಶದಿಂದ ಸುಮೇರಿಯನ್ನರು ಹೊಸದೊಂದು ಯುದ್ಧೋಪಕರಣವನ್ನು ಸಂಶೋಧಿಸಿದರು.  ನಮ್ಮ ಕಾಲದ ಯುದ್ಧ ಟ್ಯಾಂಕ್‌ಗಳಿಗೆ ‘ಆದಿಪುರುಷನೆಂದು ಕರೆಯಬಹುದಾದ  ಈ ಉಪಕರಣ ಕುದುರೆಗಳನ್ನು ಹೂಡಿದ ರಥದ ಮೇಲೆ ಕೂರಿಸಿದ ಒಂದು ಮರದ ಪೆಟ್ಟಿಗೆಯಾಗಿತ್ತು.  ಆ ಪೆಟ್ಟಿಗೆಯ ಗೋಡೆಗಳಲ್ಲಿ ಹಲವಾರು ರಂಧ್ರಗಳಿದ್ದವು.  ಸುಮೇರಿಯನ್ ಸೈನಿಕರು ಈ ಪೆಟ್ಟಿಗೆಗಳ ಒಳಗೆ ಸುರಕ್ಷಿತವಾಗಿ ಕುಳಿತು ರಂಧ್ರಗಳ ಮೂಲಕ ಈಜಿಪ್ಷಿಯನ್ ಸೈನಿಕರ ಮೇಲೆ ಬಾಣಗಳನ್ನು ಪ್ರಯೋಗಿಸಬಹುದಾಗಿತ್ತು.  ರಥಕ್ಕೆ ಕುದುರೆಗಳನ್ನು ಹೂಡಿದ್ದರಿಂದ ಸುಮೇರಿಯನ್ನರಿಗೆ ಸ್ವಾಭಾವಿಕವಾಗಿಯೇ ಬರೀ ಕಾಲಾಳುಗಳೇ ತುಂಬಿದ್ದ ಈಜಿಪ್ಷಿಯನ್ ಸೇನೆಗಿಂತ ವೇಗದ ಚಲನಾಸಾಮರ್ಥ್ಯವಿತ್ತು.  ಇದರ ಪರಿಣಾಮವಾಗಿ ಸುಮೇರಿಯನ್ನರು ಈಜಿಪ್ಷಿಯನ್ನರ ಮೇಲೆ ಇತಿಹಾಸದಲ್ಲಿ ಪ್ರಾಯಶಃ ಪ್ರಪ್ರಥಮ ಬಾರಿಗೆ ನಿರ್ಣಾಯಕ ಜಯ ಗಳಿಸಿದರು.  ಅಷ್ಟೇ ಅಲ್ಲ, ಮರುವರ್ಷ ಇಂತಹ ಮತ್ತಷ್ಟು ‘ಟ್ಯಾಂಕ್ಗಳನ್ನು ನಿರ್ಮಿಸಿ ಈಜಿಪ್ಟಿನ ಮೇಲೆ ಮತ್ತೊಂದು ಯುದ್ಧ ಹೂಡಿದರು.  ಅತ್ತ ಈಜಿಪ್ಷಿಯನ್ ಪಾಳಯದಲ್ಲಿ ಗೊಂದಲ.  ಅವರಲ್ಲಿ ಈ ‘ಟ್ಯಾಂಕ್ಗಳ ನಿರ್ಮಾಣಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಸಂಪನ್ಮೂಲಗಳ ಕೊರತೆ ಅರಂಭದಲ್ಲಿ ಇದ್ದಿರುವ ಸಾಧ್ಯತೆ ಇದೆ.  ಆದರೆ ಸುಮೇರಿಯನ್ ‘ಟ್ಯಾಂಕ್ಗಳನ್ನು ನಿರುಪಯುಕ್ತಗೊಳಿಸುವ ತಂತ್ರವೊಂದನ್ನು ಹರಿತ ತಲೆಯ ಈಜಿಪ್ಷಿಯನ್ ಸೇನಾಧಿಕಾರಿಯೊಬ್ಬ ರೂಪಿಸಿ ತನ್ನ ಸೇನೆಗೆ ವಿಜಯದ ಮಾಲೆ ತೊಡಿಸಿದ.
            ಆತ ಮಾಡಿದ್ದಿಷ್ಟೇ: ದಷ್ಟಪುಷ್ಟವಾಗಿ ಬೆಳೆದಿದ್ದ ಒಂದಷ್ಟು ಹೆಣ್ಣುಕುದುರೆಗಳನ್ನು ತಂದು ರಣರಂಗದಲ್ಲಿ ಬಿಟ್ಟ.  ಸುಮೇರಿಯನ್ ಟ್ಯಾಂಕ್ಗಳನ್ನು ಎಳೆಯುತ್ತಿದ್ದುವೆಲ್ಲಾ ಬರೀ ಗಂಡುಕುದುರೆಗಳು ಎನ್ನುವುದನ್ನು ಪತ್ತೆ ಮಾಡಿಕೊಂಡಿದ್ದ ಅವನ ಈ ಉಪಾಯ ಯಶಶ್ವಿಯಾಯಿತು.  ಈಜಿಪ್ಷಿಯನ್ ಹೆಣ್ಣುಕುದುರೆಗಳ ಹಿಂದೆ ಬಿದ್ದ ಸುಮೇರಿಯನ್ ಗಂಡುಕುದುರೆಗಳೆಲ್ಲಾ ಸಾರಥಿಗಳ ಯಾವುದೇ ಮಾತಿಗೂ ಸೊಪ್ಪು ಹಾಕದೇ ‘ಟ್ಯಾಂಕ್ಗಳನ್ನೂ ಎಳೆದುಕೊಂಡು ದಿಕ್ಕುದಿಕ್ಕಿಗೆ ಓಡತೊಡಗಿದವು.  ಸುಮೇರಿಯನ್ ಪಾಳಯದಲ್ಲಿ ಗೊಂದಲವೋ ಗೊಂದಲ.  ಇನ್ನು ಯುದ್ಧದಲ್ಲಿ ಯಾರು ಗೆದ್ದರೆಂದು ನಾನು ಹೇಳಬೇಕಿಲ್ಲವಷ್ಟೇ?
            ಚೀನಿಯರಿಂದ ಸಿಡಿಮದ್ದಿನ ಬಗ್ಗೆ ಅರಿತ ತುರ್ಕರು ಅದರ ಉಪಯೋಗದಿಂದ ೧೪೫೩ರಲ್ಲಿ ಕಾನ್‌ಸ್ಟಾಂಟಿನೋಪಲ್ ಕೋಟೆಯನ್ನು ಭೇಧಿಸಿ ನಗರವನ್ನು ಆಕ್ರಮಿಸಿಕೊಂಡು ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡರು.  ಸಿಡಿಮದ್ದು ಮತ್ತು ಫಿರಂಗಿಯ ಬಗ್ಗೆ ತುರ್ಕರಿಂದ ಅರಿತ ಯೂರೋಪಿಯನ್ನರು ಅದನ್ನು ಉಪಯೋಗಿಸಿಕೊಂಡು ಇಡೀ ವಿಶ್ವದಲ್ಲಿ ತಮ್ಮ ವಸಾಹತುಶಾಹೀ ಸಾಮ್ರಾಜ್ಯಗಳನ್ನು ಸ್ಥಾಪಿಸಿದ್ದು ಇತಿಹಾಸ.  ಫರ್ಗಣಾದ ಮೊಗಲ್ ಅರಸ ಜಹರುದ್ದೀನ್ ಬಾಬರ್, ದೆಹಲಿಯ ಸುಲ್ತಾನ ಇಬ್ರಾಹಿಮ್ ಲೋದಿಯನ್ನು ಸೋಲಿಸಿ ೧೫೨೬ರಲ್ಲಿ ದೆಹಲಿಯನ್ನು ಕೈವಶ ಮಾಡಿಕೊಂಡದ್ದು ಈ ಫಿರಂಗಿಗಳ ಸಹಾಯದಿಂದಲೇ.
            ಇಪ್ಪತ್ತನೆಯ ಶತಮಾನಕ್ಕೆ ಬಂದರೆ ಪ್ರಥಮ ಮಹಾಯುದ್ಧದಲ್ಲಿ ಅಡೆತಡೆಯಿಲ್ಲದೇ ಮುಂದೊತ್ತಿ ಬರುತ್ತಿದ್ದ ಜರ್ಮನ್ ಸೇನೆಯನ್ನು ಬೆಲ್ಜಿಯಂನ ಸೊಮ್ ರಣಾಂಗಣದಲ್ಲಿ ತಡೆದು ನಿಲ್ಲಿಸಿದ್ದು ಬ್ರಿಟಿಷ್ ಯುದ್ಧ ಟ್ಯಾಂಕ್‌ಗಳು.  ಅತ್ಯಂತ ರಹಸ್ಯವಾಗಿ ನಿರ್ಮಾಣಗೊಂಡು ಸೊಮ್ ರಣಾಂಗಣದಲ್ಲಿ ಏಕಾಏಕಿ ಕಾಣಿಸಿಕೊಂಡ ಈ ಟ್ಯಾಂಕ್‌ಗಳು ಜರ್ಮನ್ ಸೇನೆಯನ್ನು ದಿಕ್ಕೆಡಿಸಿಬಿಟ್ಟವು.  ಅಲ್ಲಿಂದಾಚೆಗೆ ಯುದ್ಧದ ಗತಿಯೇ ಬದಲಾಗಿಹೋಯಿತು.
            ಕಳೆದ ಶತಮಾನದಲ್ಲಿ ಅಮೆರಿಕಾ ಮತ್ತು ಸೋವಿಯೆತ್ ಯೂನಿಯನ್‌ಗಳ ನಡುವೆ ನಡೆದ ಶಸ್ತ್ರಾಸ್ತ್ರ ಪೈಪೋಟಿ ಯುದ್ಧ ಇತಿಹಾಸದಲ್ಲಿ ಅದ್ವಿತೀಯ.  ೧೯೪೫ರಲ್ಲಿ ಅಮೆರಿಕಾ ಅಣ್ವಸ್ತ್ರವನ್ನು ಗಳಿಸಿಕೊಂಡರೆ ನಾಲ್ಕು ವರ್ಷಗಳ ನಂತರ ೧೯೪೯ರಲ್ಲಿ ಸೋವಿಯೆತ್ ಯೂನಿಯನ್ ಸಹಾ ಅಣ್ವಸ್ತ್ರ ರಾಷ್ಟವಾಯಿತು.  ಆಮೇಲೆ ಜಲಜನಕ ಬಾಂಬ್‌ಗಳ ಸಂಶೋಧನೆಯಲ್ಲೂ ಅಮೆರಿಕಾ ಮೊದಲು, ಸೋವಿಯೆತ್ ಯೂನಿಯನ್ ನಂತರ.  ಮುಂದಿನ ಒಂದು ದಶಕದಲ್ಲಿ ಅಣುಸಿಡಿತಲೆಗಳನ್ನು ಒಯ್ಯಬಲ್ಲ ಕ್ಷಿಪಣಿಗಳನ್ನು ನಿರ್ಮಿಸುವುದರ ಮೂಲಕ ಸೋವಿಯೆತ್ ಯೂನಿಯನ್ ಶಸ್ತ್ರ್ರಾಸ್ತ್ರ ಪೈಪೋಟಿಯಲ್ಲಿ ಅಮೆರಿಕಾವನ್ನು ಹಿಂದೆ ಹಾಕಿತು.  ಆದರೆ ಅತ್ಯಲ್ಪ ಕಾಲದಲ್ಲಿ ಅಮೆರಿಕಾ ಶಕ್ತಿಯ ಸಮತೋಲನವನ್ನು ತನ್ನ ಕಡೆಗೆ ತಿರುಗಿಸಿಕೊಂಡಿತು.  ೧೯೭೭ರಲ್ಲಿ ನ್ಯೂಟ್ರಾನ್ ಬಾಂಬನ್ನು ಯಶಸ್ವಿಯಾಗಿ ಪರೀಕ್ಷಿಸುವುದರ ಮೂಲಕ ಹಾಗೂ ಎಂಬತ್ತರ ದಶಕದ ಆರಂಭದಲ್ಲಿ  ಸ್ಟಾರ್ ವಾರ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ  ಅಮೆರಿಕಾ ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ಸೋವಿಯೆತ್ ಯೂನಿಯನ್ ವಿರುದ್ಧ ಅಂತಿಮ ವಿಜಯ ಸಾಧಿಸಿತು.
            ಪಾಶ್ಚಾತ್ಯ ನಾಗರೀಕತೆಗಳಲ್ಲಿ ಯುದ್ಧ ಮತ್ತು ಶಸ್ತ್ರಾಸ್ತ್ರ ಪೈಪೋಟಿಯ ಮನೋಭಾವವನ್ನು ಪರಿಣಾಮಕಾರಿಯಾಗಿ ಚಿತ್ರಿಸಲು ಮೇಲಿನ ಕೆಲವು ಉದಾಹರಣೆಗಳನ್ನು ನಿಮ್ಮ ಮುಂದಿಟ್ಟೆ.  ಈಗ ಇದೇ ವಿಷಯದಲ್ಲಿ ಭಾರತೀಯರ ಮನೋಭಾವವನ್ನು ಅವಲೋಕಿಸೋಣ.
            ಸಿಂಧೂಕಣಿವೆಯ ನಾಗರೀಕತೆಯನ್ನು ವಿಶದವಾಗಿ ಅಭ್ಯಸಿಸಿರುವ ಹಲವಾರು ವಿದ್ವಾಂಸರ ಪ್ರಕಾರ ಸಿಂಧ್ ಕೊಳ್ಳದ ಯಾವುದೇ ಉತ್ಖನನ ಸ್ಥಳದಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ.  ಪತ್ತೆಯಾಗಿರುವ ಕೆಲವು ಆಯುಧಗಳು ಆರ್ಯರಿಗೆ ಸಂಬಂಧಿಸಿದಂಥವು ಎಂಬ ಅಭಿಪ್ರಾಯವಿದೆ.  ದಿನನಿತ್ಯದ ಬದುಕಿಗೆ ಅಗತ್ಯವಾದ ಉಪಕರಣಗಳು ಯಥೇಜ್ಛವಾಗಿ ದೊರಕಿದ್ದರೂ ಆಯುಧಗಳು ಕಾಣದಿರುವುದು ಹಾಗೂ ಸಿಂಧ್ ಕೊಳ್ಳದ ನಿವಾಸಿಗಳ ದೈಹಿಕ ಲಕ್ಷಣಗಳು ಆ ಜನರು ಯುದ್ಧಕೋರ ಅಥವಾ ಕ್ಷಾತ್ರ ಜನಾಂಗವಾಗಿರಲಿಲ್ಲವೇನೋ ಎಂಬ ಅನುಮಾನವನ್ನು ನಮ್ಮಲ್ಲಿ ಉಂಟುಮಾಡುತ್ತವೆ.
            ಕ್ಯಾಸ್ಪಿಯನ್ ಸಮುದ್ರದ ಉತ್ತರದ ಪ್ರದೇಶಗಳಿಂದ ಕಾಕಸಸ್ ಪರ್ವತಗಳು, ಅರ್ಮೇನಿಯಾ, ಪೂರ್ವ ತುರ್ಕಿ, ಉತ್ತರ ಇರಾನ್ ಮತ್ತು ಅಫಘಾನಿಸ್ತಾನಗಳ ಮೂಲಕ ಭಾರತಕ್ಕೆ ಪ್ರವೇಶಿಸಿದ ಆರ್ಯರು ದೈಹಿಕ ಹಾಗೂ ಮಾನಸಿಕವಾಗಿ ಸಿಂಧ್ ಕೊಳ್ಳದ ಜನರಿಗಿಂತ ಬೇರೆಯಾಗಿದ್ದರು.  ಎತ್ತರವಾಗಿದ್ದು ಅಗಲ ಭುಜಗಳನ್ನು ಹೊಂದಿದ್ದ ಅವರು ಸ್ವಾಭಾವಿಕವಾಗಿಯೇ ಮಧ್ಯಮ ಎತ್ತರದ ಸಿಂಧ್ ಜನರಿಗಿಂತ ಹೆಚ್ಚಿನ ಯುದ್ಧಕಲಿಗಳಾಗಿದ್ದರು.  ಅಲ್ಲದೇ ಮಾರಕಾಸ್ತ್ರಗಳ ಜತೆ ಕುದುರೆಗಳನ್ನೂ ಹೊಂದಿದ್ದ ಅವರು ಸಿಂಧ್ ಕಣಿವೆಯ ಜನರನ್ನು ನಿರಾಯಾಸವಾಗಿ ದಮನಗೈದು ಅತ್ಯಲ್ಪ ಕಾಲದಲ್ಲೇ ಇಡೀ ಉತ್ತರ ಭಾರತದ ಸಾರ್ವಭೌಮರಾದರು.  ಆದರೆ ಆನಂತರ ನಡೆದದ್ದು ಮಾತ್ರ ವಿಶಿಷ್ಟ.
            ಸಿಂಧ್ ಕೊಳ್ಳದ ಜನಾಂಗವನ್ನು ನಿರಾಯಾಸವಾಗಿ ಸೋಲಿಸಿದ ಆರ್ಯರು ನಂತರದ ಶತಮಾನ ಹಾಗೂ ಸಹಸ್ರಮಾನಗಳಲ್ಲಿ ದಂಡೆತ್ತಿ ಬಂದ ಇರಾನಿಯನ್ ಮತ್ತು ಅಫ್ಘನ್‌ರ ಮುಂದೆ ಶರಣಾಗತರಾದರು.  ಸುಮಾರು ಸಾವಿರದ ಇನ್ನೂರು ವರ್ಷಗಳ ಹಿಂದೆ ಇಸ್ಲಾಂ ಧರ್ಮವನ್ನು ಅಂಗೀಕರಿಸಿದ ಅಫ್ಘನ್ ಆರ್ಯರು ಉತ್ತರ ಭಾರತವನ್ನು ಆಕ್ರಮಿಸಿಕೊಂಡ ಬಗೆ ವಿಶಿಷ್ಟವಾದುದು.  ಕೆಲವು ಇತಿಹಾಸಕಾರರ ಪ್ರಕಾರ ಬಕ್ತಿಯಾರ್ ಖಾಲ್ಜಿಯ ನೇತೃತ್ವದ ಕೇವಲ ಹದಿನೆಂಟು ಕುದುರೆಸವಾರರು ಇಡೀ ಬಂಗಾಲವನ್ನು ಗೆದ್ದುಕೊಂಡರಂತೆ!
            ಇಲ್ಲಿ ಕುತೂಹಲಕರ ವಿಷಯವೆಂದರೆ ಇರಾನ್ ಮತ್ತು ಅಫ್ಘನ್ ಜನರು, ಭಾರತದ ಆರ್ಯರು ಈ ದೇಶಕ್ಕೆ ಬರುವ ದಾರಿಯಲ್ಲಿ ಬಿಟ್ಟುಬಂದಿದ್ದ ತಮ್ಮ ದಾಯಾದಿಗಳೇ ಆಗಿದ್ದರು.  ಇದರರ್ಥ ಈ ಮೂರೂ ದೇಶಗಳಲ್ಲಿನ ಜನರು ಆರ್ಯರೇ.  ಆದರೆ ಇರಾನ್ ಮತ್ತು ಅಫ್ಘನ್ ಆರ್ಯರು ತಮ್ಮ ಕ್ಷಾತ್ರಗುಣ ಹಾಗೂ ಯುದ್ಧೋತ್ಸಾಹಗಳನ್ನು ಉಳಿಸಿಕೊಂಡರೆ ಇದೇ ಗುಣಗಳನ್ನು ಭಾರತದ ಆರ್ಯರು ಕಳೆದುಕೊಂಡದ್ದು ಹೇಗೆ?  ನನಗೆ ಈ ಪ್ರಶ್ನೆಗೆ ಉತ್ತರ ದೊರಕಿದ್ದು ಭೂಗೋಳ ಮತ್ತು ಅರ್ಥಶಾಸ್ತ್ರಗಳಲ್ಲಿ.            ತುರುಗಾಹಿಗಳಾಗಿದ್ದ ಆರ್ಯರು ಮರುಭೂಮಿಯಾಗಿದ್ದ ತಮ್ಮ ಮೂಲಸ್ಥಾನವನ್ನು ತೊರೆದು ಪೂರ್ವದ ಯೂರೋಪ್ ಮತ್ತು ದಕ್ಷಿಣದ ತುರ್ಕಿ ಹಾಗೂ ಇರಾನ್‌ಗೆ ಹೊರಟದ್ದು ತಮಗೆ ಆಹಾರ, ತಮ್ಮ ದನಗಳಿಗೆ ಹುಲ್ಲು, ಮತ್ತು ಇಬ್ಬರಿಗೂ ಅಗತ್ಯವಾದ ಸಿಹಿನೀರನ್ನರಸಿ.  ಪರ್ವತಮಯವಾದ ಪೂರ್ವ ತುರ್ಕಿ ಹಾಗೂ ಅರ್ಮೇನಿಯಾ, ಬರಡುಗುಡ್ಡಗಳಿಂದ ಕೂಡಿದ ಇರಾನ್,  ಹಿಮಾಚ್ಛಾದಿದ ಪರ್ವತಗಳಿಂದ ಆವೃತವಾದ ಅಫಫಾನಿಸ್ತಾನದಲ್ಲಿ ವೃಧ್ದಿಸುತ್ತಿದ್ದ ಆರ್ಯನ್ ಜನಸಂಖ್ಯೆಗೆ ಅಗತ್ಯವಾದ ಅನ್ನ, ನೀರು, ಹುಲ್ಲು ದೊರೆಯಲಿಲ್ಲ.  ಹೀಗಾಗಿಯೇ ಆ ಪ್ರದೇಶಗಳಲ್ಲಿನ ಹೆಚ್ಚಿನ ಆರ್ಯರು ನೀರನ್ನರಸಿ ಭಾರತಕ್ಕೆ ಬಂದರು.  ಅಲ್ಲಿ ಅವರಿಗೆದುರಾದ ಮೊದಲ ನದಿಯ ಅಗಾಧತೆಯನ್ನು ಕಂಡು ಬೆರಗಾಗಿ ಅದಕ್ಕೆ ಸಿಂಧೂ ಎಂದು ಹೆಸರಿಟ್ಟರು.  ಅಂತಹ ಸಿಹಿನೀರಿನ ಅಗಾಧ ನದಿಯನ್ನು ಅವರು ತಮ್ಮ ಮೂಲಸ್ಥಾನದಿಂದ ಇಲ್ಲಿಗೆ ಬಂದ ಮಾರ್ಗದಲ್ಲಿ ಎಲ್ಲೂ ಕಂಡೇ ಇರಲಿಲ್ಲ.  ಸಿಂಧೂ ನಂತರ ಅವರಿಗೆದುರಾದದ್ದು ಮತ್ತೆ ಐದು ನದಿಗಳು; ಇನ್ನೂ ಸ್ವಲ್ಪ ದೂರ ಸಾಗಿದರೆ ಎದುರಾದದ್ದು ಮತ್ತೆರಡು ಬೃಹತ್ ನದಿಗಳು- ಯಮುನಾ ಮತ್ತು ಗಂಗಾ, ಅವೆರಡರ ಅರ್ಧ ಡಜನ್ ಉಪನದಿಗಳು!  ಇಷ್ಟೊಂದು ಸಿಹಿನೀರನ್ನು ಆರ್ಯರು ತಮ್ಮ ಇತಿಹಾಸದಲ್ಲಿ ಕಂಡೇ ಇರಲಿಲ್ಲ.  ಈ ಅಗಾಧ ಸಿಹಿನೀರು, ಸಾವಿರಾರು ಚದರ ಮೈಲು ವಿಸ್ತಾರದ ಫಲವತ್ತಾದ ನೆಲ- ಇವೆರಡರಿಂದ ತಮಗೆ ಬೇಕಾದ್ದನ್ನೆಲ್ಲಾ ಬೆಳೆದುಕೊಳ್ಳುವ ಅವಕಾಶ!  ಅಂದರೆ ಅಲೆದಾಟದ ಬದುಕಿಗೆ ಅಂತ್ಯ!  ಹೀಗಾಗಿಯೇ ಕ್ಯಾಸ್ಪಿಯನ್ ಪ್ರದೇಶದಿಂದ ನೂರಾರು ವರ್ಷಗಳವರೆಗೆ ಅಲೆದಾಡುತ್ತಾ ಭಾರತಕ್ಕೆ ಬಂದ ಆರ್ಯರು ಬಂಗಾಲವನ್ನು ದಾಟಿ ಮುಂದೆ ಹೋಗಲಿಲ್ಲ.  ಹೋಗುವ ಅಗತ್ಯವೇ ಅವರಿಗಿರಲಿಲ್ಲ.  ಹೀಗಾಗಿಯೇ ಅಸ್ಸಾಂ ಅದರಾಚೆಗಿನ ನಾಗಾಲ್ಯಾಂಡ್, ಬರ್ಮಾ ಮುಂತಾದ ಪ್ರದೇಶಗಳಲ್ಲಿ ಮಂಗೋಲ್ ಜನಾಂಗ ಯಾವ ಅಡೆತಡೇಯೂ ಇಲ್ಲದೇ ನೆಲೆಸಿತು.  ಒಂದುವೇಳೆ ಅರ್ಮೇನಿಯಾ, ತುರ್ಕಿ, ಇರಾನ್ ಮತ್ತು ಅಫಘಾನಿಸ್ತಾನಗಳಂತೆ ಉತ್ತರ ಭಾರತವೂ ಹೆಚ್ಚಿನ ಜನವಸತಿಗೆ ಯೋಗ್ಯವಲ್ಲದ ಬರಡು ನೆಲವಾಗಿದ್ದರೆ ಆರ್ಯರು ಭಾರತವನ್ನೂ ದಾಟಿ ಬರ್ಮಾ, ಥಾಯ್‌ಲ್ಯಾಂಡ್ ಮಂತಾದ ಆಗ್ನೇಯ ಏಶಿಯಾದ ದೇಶಗಳಿಗೆ ಖಂಡಿತಾ ಹೋಗುತ್ತಿದ್ದರು ಎಂದು ನಾನು ನಂಬುತ್ತೇನೆ.
            ಅನ್ನನೀರಿನ ಕೊರತೆ ನೀಗಿದ್ದೇ ಭಾರತದ ಆರ್ಯರು ತಮ್ಮ ಕ್ಷಾತ್ರಗುಣ ಅಂದರೆ martial spirit ಅನ್ನು ಕಳೆದುಕೊಂಡರು.  ನಂಬಿಕೆಯಾಗುತ್ತಿಲ್ಲವೇ?  ಇರಿ, ವಿವರಿಸುತ್ತೇನೆ.
            ಸಂಪನ್ಮೂಲಗಳ ಕೊರತೆ ಇರುವಾಗ, ಸೀಮಿತ ಸಂಪನ್ಮೂಲಗಳ ಸಮಾನ ಹಂಚಿಕೆಯನ್ನು ನಿರ್ವಹಿಸುವ ರಾಜಕೀಯ ಹಾಗೂ ಕಾನೂನು ವ್ಯವಸ್ಥೆ ಇಲ್ಲದಿದ್ದಾಗ ತಮ್ಮಲ್ಲಿರುವ ವಸ್ತುಗಳನ್ನು ಕಾಪಾಡಿಕೊಳ್ಳುವುದು, ಅವಕಾಶ ಸಿಕ್ಕಿದಾಗ ಇತರರ ವಸ್ತುಗಳನ್ನು ಕಸಿದುಕೊಳ್ಳುವುದು ಮನುಷ್ಯನ ಸ್ವಭಾವವಾಗುತ್ತದೆ.   ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನ ಅನುಕ್ಷಣವೂ ತಮ್ಮ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಜಾಗರೂಕತೆಯನ್ನು ಕಾಪಾಡಿಕೊಂಡಿರಬೇಕಾಗುತ್ತದೆ.  ಹಾಗಿಲ್ಲದಿದ್ದ ಪಕ್ಷದಲ್ಲಿ ತಮ್ಮ ವಸ್ತುಗಳನ್ನೂ, ಅಷ್ಟೇ ಅಲ್ಲ, ಜೀವವನ್ನೂ ಸಹಾ ಕಳೆದುಕೊಳ್ಳಬೇಕಾಗುತ್ತದೆ ಅಲ್ಲವೇ?
            ಸಂಪನ್ಮೂಲಗಳ ತೀವ್ರ ಕೊರತೆ ಇದ್ದ ಪಶ್ಚಿಮ ಮತ್ತು ಮಧ್ಯ ಏಶಿಯಾದ ನಾಡುಗಳಲ್ಲಿ ನೆಲೆಸಿದ ಆರ್ಯರು ಸ್ವಾಭಾವಿಕವಾಗಿಯೇ ತಮ್ಮ ಜೀವ ಹಾಗೂ ವಸ್ತುಗಳ ರಕ್ಷಣೆಗಾಗಿ ಕ್ಷಾತ್ರಗುಣವನ್ನು ಉಳಿಸಿಕೊಂಡರು.  ಪ್ರತಿದಿನದ ಬದುಕೂ ಒಂದು ಸಂಘರ್ಷವಾಗಿದ್ದ ಆ ದಿನಗಳಲ್ಲಿ ಅದು ಅಗತ್ಯವಾಗಿತ್ತು.  ಆದರೆ ಸಂಪನ್ಮೂಲಗಳು ಯಥೇಚ್ಛವಾಗಿದ್ದ ಉತ್ತರ ಭಾರತದಲ್ಲಿ ಜೀವಕ್ಕಾಗಲೀ, ಆಸ್ತಿಪಾಸ್ತಿಗಾಗಲೀ ಯಾವ ತೊಂದರೆಯೂ ಇರಲಿಲ್ಲ.   ಎಲ್ಲರಿಗೂ ಎಲ್ಲವೂ ಸಿಗುವಾಗ ಮತ್ತೊಬ್ಬನನ್ನು ಕೊಂದು ಅವನ ಆಸ್ತಿಯನ್ನು ಕಸಿಯುವ ಮನೊಭಾವದ ಅಗತ್ಯವೆಲ್ಲಿ?  ಇಂತಹ ಸನ್ನಿವೇಶದಲ್ಲಿ ಅನುಕ್ಷಣವೂ ದೈಹಿಕ ಸಾಮರ್ಥ ಹಾಗೂ ಮಾನಸಿಕ ಚಾಗರೂಕತೆಯನ್ನು ಕಾಪಾಡಿಕೊಳ್ಳುವ ಅಗತ್ಯವೂ ಇರುವುದಿಲ್ಲ.  ಹೀಗಾದಾಗ ತಲೆಮಾರುಗಳು ಉರುಳಿದಂತೆ ಕ್ಷಾತ್ರಗುಣವೂ ಕ್ರಮೇಣ ನಶಿಸಿಹೋಗುತ್ತದೆ.  ಭಾರತವನ್ನು ತಮ್ಮ ಮನೆ ಮಾಡಿಕೊಂಡ ಜನಾಂಗಗಳೆಲ್ಲವೂ ಕಾಲ ಉರುಳಿದಂತೆ ತಮ್ಮ ಕ್ಷಾತ್ರಗುಣವನ್ನು ಕಳೆದುಕೊಂಡದ್ದು ಹೀಗೇ.  ಇದರ ತಾರ್ಕಿಕ ಮುಂದುವರಿಕೆಯಾಗಿ ಶಾಂತಿಯ ಮಂತ್ರ ಹೆಚ್ಚುಹೆಚ್ಚು ಜನಪ್ರಿಯವಾಗುತ್ತಾ ಹೋಯಿತು.  ಕ್ಷಾತ್ರಗುಣ ಕಡಿಮೆಯಾದಂತೆ ಶಾಂತಿ ಪ್ರಿಯವಾಗುವುದು ಅಥವಾ ಅಗತ್ಯವಾಗುವುದು ಸ್ವಾಭಾವಿಕವಲ್ಲವೇ?
            ಹನ್ನೆರಡನೆಯ ಶತಮಾನದ ಅಂತ್ಯದಲ್ಲಿ ಭಾರತದ ಹಿಂದೂ ಆರ್ಯರನ್ನು ಸೋಲಿಸಿ ಈ ದೇಶವನ್ನು ಗೆದ್ದು ಆಳತೊಡಗಿದ ಅಫ್ಘನ್ ಮುಸ್ಲಿಂ ಆರ್ಯರು ಮೂರು ಶತಮಾನಗಳು ಉರುಳುವಷ್ಟರಲ್ಲಿ ತಮ್ಮ ಕಲಿತನವನ್ನು ಕಳೆದುಕೊಂಡು ಮಧ್ಯಏಶಿಯಾದಿಂದ ಬಂದ ಮೊಗಲರಿಗೆ ಸೋತು ಶರಣಾದರು.  ಎರಡು ಶತಮಾನಗಳ ನಂತರ ಮೊಗಲರೂ ಸ್ವಭಾವದಲ್ಲಿ ‘ಭಾರತೀಯರೇ ಆಗಿಹೋದರು ಮತ್ತು ಎಲ್ಲ ಭಾರತೀಯ ಜನಾಂಗಗಳ ಗತಿಯನ್ನೇ ಅನುಭವಿಸಿದರು.
            ಹೀಗೆ ಹೊರಗಿನಿಂದ ವಲಸೆ ಅಥವಾ ಧಾಳಿಯ ಮೂಲಕ ಭಾರತವನ್ನು ಗೆದ್ದುಕೊಂಡ ಯಾವುದೇ ಕ್ಷಾತ್ರಕುಲ ಕೆಲವು ತಲೆಮಾರುಗಳ ನಂತರ ತನ್ನ ಕಲಿತನವನ್ನು ಕಳೆದುಕೊಂಡು ಹೊಸ ಧಾಳಿಕಾರರ ಮುಂದೆ ಮಂಡಿಯೂರಿತು.  ಇದು ಮತ್ತೆ ಮತ್ತೆ ಮತ್ತೆ ನಡೆಯಿತು.  ಆದರೆ ಬದುಕೊಂದು ಸಂಘರ್ಷವಾಗಿದ್ದ ಪಶ್ಚಿಮ ಏಶಿಯಾದ ಜನಾಂಗಗಳು ತಂತಮ್ಮ ಕ್ಷಾತ್ರಗುಣಗಳನ್ನು ಉಳಿಸಿ ಬೆಳೆಸಿ ಯುದ್ಧಕಲೆಯನ್ನು ಕರಗತಗೊಳಿಸಿಕೊಂಡು, ನವನವೀನ ಮಾರಕಾಸ್ತ್ರಗಳನ್ನು ಸಂಶೋಧಿಸಿಕೊಂಡು ತಮ್ಮ ಕೊಲ್ಲುವ ಸಾಮರ್ಥ್ಯವನ್ನು ಹರಿತಗೊಳಿಸುತ್ತಾ ಸಾಗಿದವು.  ಹಿಂಸೆ ಈ ಜನಾಂಗಗಳ ಬದುಕಿನ ಭಾಗವೇ ಆಗಿಹೋಯಿತು.

2 comments:

  1. ಒಳ್ಳೆಯ ಒಳನೋಟಗಳು.

    ಆದರೆ ಇದೇ ತರ್ಕ ಅಮೆರಿಕಕ್ಕೇಕೆ ಅನ್ವಯಿಸುವುದಿಲ್ಲ?

    - ಶ್ರೀ ಕರ್

    ReplyDelete
  2. ಅಮೆರಿಕಾದಲ್ಲಿ ವಸಾಹತುಗಳನ್ನು ಸ್ಥಾಪಿಸಿ ನೆಲೆನಿಂತ ಸ್ಪ್ಯಾನಿಶ್, ಫ್ರೆಂಚ್, ಮತ್ತು ಇಂಗ್ಲಿಷರು ನೆಲಕ್ಕಾಗಿ ಪರಸ್ಪರ ಮೂರು ಶತಮಾನಗಳ ಕಾಲ ನಿರಂತರವಾಗಿ ಕಾದಾಡಿದರು. ನಂತರ ಪೂರ್ವತೀರದ ಹದಿಮೂರು ಮೂರು ಬ್ರಿಟಿಷ್ ವಸಾಹತುಗಳ ಜನ ಇಂಗ್ಲೆಂಡಿನ ವಿರುದ್ದ ಹೋರಾಡಿ ಸ್ವಾತಂತ್ರ್ಯ ಗಳಿಸಿದರು. ತದ ನಂತರ ಆ Whitt Anglo-Saxon Protestant (WASP) ಜನಾಂಗ ರೆಡ್ ಇಂಡಿಯನ್ ಮೂಲನಿವಾಸಿಗಳ ನೆಲವನ್ನೆಲ್ಲಾ ಕಸಿದುಕೊಳ್ಲಲು ಅನುಸರಿಸಿದ್ದು ಕುಟಿಲ ಯುದ್ಧತಂತ್ರಗಳು... ಹೀಗಾಗಿ ಮೊದಲ ದಿನದಿಂದಲೂ ತನ್ನ ಅಸ್ತಿತ್ವ, ಅಭಿವೃದ್ಧಿಗಾಗಿ ಹೋರಾಡುತ್ತಲೇ ಬಂದ ಆ ಜನಾಂಗ ತನ್ನ ಕ್ಷಾತ್ರಗುಣವನ್ನು ಕಳೆದುಕೊಳ್ಳುವುದು ಸಾಧ್ಯವೇ ಇರಲಿಲ್ಲ.

    ReplyDelete