- ೧ -
ಅವರು
ಕಟ್ಟುವೆವು ನಾವು
ಅಂದಾಗ ನಾ
ಹುಟ್ಟೇ ಇರಲಿಲ್ಲ.
ಅವರು
ಪದುಮ ಒಳಗಿಲ್ಲ
ಅಂದಾಗ ನಾ ನೀ
ಬೆಳಗಿನಿಂದ ಒಳಗೇ ಕೂತಿದ್ದೀಯಲ್ಲ,
ದೊಡ್ಡಪ್ಪನಿಗೆ ಕಾಣುವುದಿಲ್ಲ
ವಾ ಎಂದು ದೊಡ್ಡಮ್ಮನ ಕಿವಿ
ಯಲ್ಲಿ ಪಿಸುಗುಟ್ಟಿದ್ದೆ.
ಅವರು
ಇಕ್ಕರ್ಲಾ ವದೀರ್ಲಾ
ಅಂದಾಗ ನಾನು
ಮೊಲೆಯಿಕ್ಕಿದ ಅಮ್ಮನ ಹೊಟ್ಟೆಗೆ
ಒದ್ದ ಪುಟ್ಟತಂಗಿಯ ಪಾದಗಳ ಗುಲಾಬಿ
ಯನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದೆ.
ಅವರು
ನಾವು ಹುಡುಗಿಯರೇ ಹೀಗೆ
ಅಂದಾಗ ನಾನು
ಕುಂಟೋಬಿಲ್ಲೆ ಕಲಾವತಿ
ಯ ಕಾಲು ತುಳಿದು
ಅಳಿಸಿದ್ದೆ.
ಅವರು
ಹಾರುವ ಓತಿಯ ಬೆನ್ನು ಹತ್ತಿ
ದಾಗ ನಾನೊಂದು ಚಿಟ್ಟೆ
ಯ ಬಾಯಿಗೆ ಇನ್ನೊಂದು ಚಿಟ್ಟೆ
ಯ ಬಾಲ ತುರುಕಿದ್ದೆ.
ಅವರು
ಒಂದೂ ಮಗ, ಎರಡೂ ಮಗ...
ಎಂದು ನಾಮ
ಕರಣ ಮಾಡುತ್ತಿದ್ದಾಗ ನಾನು
ಒಂಬತ್ತು ಹೆಣ್ಣುಗಳ ಹಿಂದೆ
ಹುಟ್ಟಿದ್ದ ಚಿಕ್ಕಮ್ಮನ ಒಬ್ಬನೇ ಮಗ
ನಿಗೆ ಯಾವ ಹೆಸರು ಚಂದ
ಎಂದು ಬಾಲಮಿತ್ರನಾಗಿದ್ದ ಚಂದ
ಮಾಮನನ್ನು ಕೇಳುತ್ತಿದ್ದೆ.
ಅವರು
ಅಜ್ಜನ ಹೆಗಲ ಸುಕ್ಕುಗಳ
ಲೆಕ್ಕ ತೆಗೆಯುತ್ತಿದ್ದಾಗ ನಾನು
ನನ್ನ ಸ್ಟ್ಯಾಂಪ್ ಆಲ್ಬಂ ಬಿಡಿಸಿ
ಒಂದೊಂದನ್ನೂ ಮುಟ್ಟಿ ಲೆಕ್ಕ ಹಾಕಿ
ಅಬ್ಬ! ನೂರಾ ಹನ್ನೊಂದಿವೆ
ಎಂದು ಬೀಗಿದ್ದೆ.
ನಾನು ಅಲ್ಲೆಲ್ಲೂ ಸಲ್ಲಲಿಲ್ಲ.
- ೨ -
ಇವರು
ರಸಋಷಿಯ ಪುತ್ತಳಿ
ಗೆ ಬೆನ್ನು ಹಾಕಿ ನಿಂತು ಎದೆ
ಸೆಟೆಸಿ ನೀ ಏರಿದೆತ್ತರಕೆ ನಾ ಏರಿ
ಯಾಯ್ತು, ನೀ ಇಳಿದಾಳಕೆ ನಾ ಇಳಿದೂ ಆಯ್ತು
ನಿನ್ನದೇನಿದೆ ಇನ್ನು?
ಎನ್ನುವಾಗ ನಾನು ಬೆಚ್ಚಿ ಉಸಿರೆಳೆದು
ಕೊಳ್ಳಹೋದರೆ
ನವರಂಧ್ರಗಳಿಂದಲೂ ಸ್ವಜನಪಕ್ಷ
ಪಾತಿ ಸಿಎಫ್ಸಿ ಹೊರಹಾಕಿ
ಮುಸಿಮುಸಿ ನಗುತ್ತಾರೆ.
ಇವರು
ಕಾಲದೇಶಗಳ ಪರಿವೇ ಇಲ್ಲದೆ
ಸಂಪಿಗೆ ಮರದಡಿ ಕೂತು
ಮಾಸ್ತಿಯವರ ಆಸ್ತಿ
ಯನ್ನು ಥೇಟ್ ಅತ್ತೆ
ಯದನ್ನು ಅಳಿಯ ದಾನ ಮಾಡಿ
ದ ಹಾಗೆ ಯಾರುಯಾರಿಗೋ ಎತ್ತೆತ್ತಿ
ಕೊಡುವಾಗ ಬೇಡ
ಅನ್ನಲು ಬಾಯಿ ತೆರೆದರೆ
ಬಿಡ್ ಕೂಗಲು ಬಂದೆಯಾ?
ನಿನ್ನದ್ಯಾವ ಗಂಟಿದೆ?
ಎಂದು ಕೆಂಡ ಕಾರುತ್ತಾರೆ.
ಇವರು
ಬ್ರೇಕ್ಫಾಸ್ಟಿಗೆ ವೈಎನ್ಕೆ
ಲಂಚ್ಗೆ ರೂಮಿ ರಿಲ್ಕೆ
ಎಲ್ಲಕ್ಕೂ ಹೋಟೆಲಿರುವಾಗ ಮನೆ ಯಾಕೆ
ಎಂದು
ಆ
ಲಾ
ಪಿ
ಸು
ವಾ
ಗ
ನಾನೇನಾದರೂ ಅತ್ತ ಹಣಕಿ
ದರೆ ನೀ ಯಾವೂರ ದಾಸಯ್ಯಾ?
ತಿಳಕೋ ಇದು ಬೆಂಗಳೂರು ಮಾಫಿಯಾ
ನಿನಗಿಲ್ಲಿ ಜಾಗವಿಲ್ಲಯ್ಯಾ
ಎಂದು ನನ್ನ ಕಥೆಗೆ
ಗೆ ಮಂಗಳ ಹಾಡಿ
ಬಿಡುತ್ತಾರೆ,
ನಾನು ಇಲ್ಲೆಲ್ಲೂ ಸಲ್ಲುತ್ತಿಲ್ಲ.
*** *** ***
oh! i m visiting ur blog after a long time. This poem is too good!
ReplyDeletesindhu
ಸಿಂಧೂ, ನಿಮ್ಮ ಮಾತು ಕೇಳಿ ಖುಶಿಯಾಗ್ತಿದೆ. Thanks a ton!
Delete