ತಮ್ಮನ್ನು
ತಾವು ಸೆಕ್ಯೂಲರಿಸ್ಟ್ಸ್ ಎಂದು ಗಟ್ಟಿ ಗಂಟಲಿನಲ್ಲಿ ಕರೆದುಕೊಳ್ಳುವ ನಮ್ಮ ಹಲವು ವಿಚಾರವಾದಿಗಳು, ಸಾಂಸ್ಕೃತಿಕ ನಾಯಕರು ತಾವು ಬಯಸಿದಂಥ ಸೆಕ್ಯೂಲರಿಸಂ ನಮ್ಮ ದೇಶದಲ್ಲಿ ನೆಲೆಯೂರಿಲ್ಲವೆಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ.
ಕರ್ನಾಟಕದ ಸಂದರ್ಭದಲ್ಲಿ ಇಂಥಾ ಗೋಳಾಟವನ್ನು ರಂಜನೀಯವಾಗಿ ಪ್ರದರ್ಶಿಸಿದ್ದು ಪತ್ರಕರ್ತ ಲಂಕೇಶ್, ಅವರಿಗೆ ಆಗಾಗ ‘ಅಗತ್ಯ’ಕ್ಕನುಗುಣವಾಗಿ ಸಾಥ್ ನೀಡಿದ್ದು ಜ್ಞಾನಪೀಠಿ ಯು. ಆರ್. ಅನಂತಮೂರ್ತಿ.
ಈಗ ಪ್ರೊಫೆಸರ್‍ಗಳಾದ ಕೆ. ಮರುಳಸಿದ್ದಪ್ಪ, ಜಿ. ಕೆ. ಗೋವಿಂದರಾವ್ ಮತ್ತು ಎಸ್. ಜಿ. ಸಿದ್ಧರಾಮಯ್ಯನವರು ಬೇಟನ್ ಅನ್ನು ತಮ್ಮ ಕೈಗೆ ತೆಗೆದುಕೊಂಡು ರಿಲೇ ಗೋಳಾಟವನ್ನು ಮುಂದುವರೆಸಿದ್ದಾರೆ.
ಇವರ ಇಷ್ಟೆಲ್ಲಾ ಪ್ರಯತ್ನಗಳು 'ಯಶಸ್ವಿ'ಯಾಗದಿರಲು ಕಾರಣವೇನು?
ಸಾಮಾನ್ಯ ಜನತೆ ಇವರ ವಿಚಾರಗಳಿಗೆ ಇವರು ಬಯಸಿದಷ್ಟು ಸಹಮತಿ ತೋರದಿರಲು ಇರುವ ಕಾರಣವಾದರೂ ಏನು?
ಜನ ದಡ್ಡರೇ?
ಅಥವಾ ಈ ಬುದ್ದಿಜೀವಿಗಳಿಗಿಂತಲೂ ಹೆಚ್ಚಿನ ಬುದ್ಧಿವಂತರೇ?
ಅಥವಾ ಈ ಬುದ್ಧಿಜೀವಿಗಳ ಪ್ರಚಾರ/ಪ್ರಲಾಪದಲ್ಲೇ ದೋಷವಿದೆಯೇ?
ಈ ಪ್ರಶ್ನೆಗಳನ್ನು ಇಲ್ಲಿ ಚರ್ಚೆಗೆತ್ತಿಕೊಳ್ಳುತ್ತಿದ್ದೇನೆ.
ವಿಚಾರವಾದಿಗಳು ಪ್ರತಿಪಾದಿಸುವ ಸೆಕ್ಯೂಲರಿಸಂ ಜನಸಾಮಾನ್ಯರಿಂದ ಪುರಸ್ಕೃತವಾಗದಿರಲು ಇರುವ ಕಾರಣಗಳಲ್ಲಿ ಮುಖ್ಯವಾದುವು: ೧- ಹಿಂದೂಗಳೆಂದರೆ ಮತಾಂಧರು ಎಂಬ ಇತಿಹಾಸಕ್ಕೆ, ವಾಸ್ತವಕ್ಕೆ ವಿರುದ್ಧವಾದ ವಿಚಾರದ ಪ್ರಚಾರದಲ್ಲಿ ಇವರು ತಿಳಿದೋ ತಿಳಿಯದೆಯೋ ತೊಡಗಿಕೊಂಡಿದ್ದಾರೆ.
೨- ಸೆಕ್ಯೂಲರಿಸಂ ಎಂದರೆ ಅಲ್ಪಸಂಖ್ಯಾತರ ಓಲೈಕೆ ಎಂಬ ನೀತಿಯನ್ನು ಇವರು ಅಪ್ರತ್ಯಕ್ಷವಾಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ಪ್ರತ್ಯಕ್ಷವಾಗಿ ಆಚರಿಸುತ್ತಿದ್ದಾರೆ.
ದೇವರನ್ನು ತಲುಪಲು ತಾನು ಮಾತ್ರವಲ್ಲದೇ ಬೇರೆ ಮಾರ್ಗಗಳೂ ಇವೆ ಎನ್ನುವುದು ಹಿಂದೂಧರ್ಮ ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬಂದ ನೀತಿ.
ಹೀಗಾಗಿಯೇ ಇತಿಹಾಸದುದ್ದಕ್ಕೂ ತನ್ನ ನಡುವೆ ಇತರ ಧರ್ಮಗಳು ನೆಲೆನಿಂತು ಸ್ವತಂತ್ರವಾಗಿ ಬೆಳೆಯಲು ಹಿಂದೂಧರ್ಮ ಅವಕಾಶ ಮಾಡಿಕೊಡುತ್ತದೇ ಬಂದಿದೆ.
ಇಸ್ರೇಲ್ ಕ್ರಿ.ಪೂ. ಒಂದನೆಯ ಶತಮಾನದಲ್ಲಿ ರೋಮನ್ ಕಾಲ್ತುಳಿತಕ್ಕೆ ಸಿಲುಕಿದಾಗ ಸ್ವತಂತ್ರವಾಗಿ ತಮ್ಮ ಧರ್ಮವನ್ನು ಆಚರಿಸಬಯಸಿದ ಯೆಹೂದಿಯರಿಗೆ ಭಾರತದ ಕೊಂಕಣ ಮತ್ತು ಮಲಬಾರ್ ತೀರಗಳ ಹಿಂದೂಗಳು ಆಶ್ರಯ ನೀಡಿದರು.
ನಂತರ, ಜೀಸಸ್ ಕ್ರೈಸ್ಟ್ನ ಶಿಷ್ಯರಲ್ಲೊಬ್ಬರಾದ ಸಂತ ಥಾಮಸ್ ಕೋರಮಂಡಲ ತೀರದಲ್ಲಿ ಕ್ರೈಸ್ತಧರ್ಮವನ್ನು ಪ್ರಚಾರ ಮಾಡಿದಾಗ ಅಲ್ಲಿನ ಹಿಂದೂಗಳು ಅದಕ್ಕೂ ಅವಕಾಶ ಮಾಡಿಕೊಟ್ಟರು.
ಹಾಗೆಯೇ, ಕ್ರಿ.ಶ. ೬೨೯ರಲ್ಲಿ ಅಂದರೆ ಪ್ರವಾದಿ ಮಹಮದ್ರ ಜೀವಿತಾವಧಿಯಲ್ಲೇ ಅರಬ್ ವರ್ತಕರು ಕೇರಳದ ತ್ರಿಸ್ಸೂರ್ ಜಿಲ್ಲೆಯಲ್ಲಿರುವ ಕೋಡಂಗಲ್ಲೂರಿನಲ್ಲಿ ಮಸೀದಿಯೊಂದನ್ನು ನಿರ್ಮಿಸಿದರು.
ಆ ಪ್ರದೇಶದ ಹಿಂದೂಗಳು ಅಲ್ಲಿ ಇಸ್ಲಾಂ ಧರ್ಮದ ಪ್ರಚಾರಕ್ಕೆ ಯಾವ ತಡೆಯನ್ನೂ ಒಡ್ಡಲಿಲ್ಲ.
ಅದಾದ ಮೂರುನಾಲ್ಕು ದಶಕಗಳಲ್ಲೇ ಪರ್ಶಿಯಾ ಇಸ್ಲಾಮೀಕರಣಗೊಂಡಾಗ ಅಲ್ಲಿ ನೆಲೆ ಕಳೆದುಕೊಂಡ ಪಾರ್ಸಿಗಳಿಗೆ ಗುಜರಾತ್ ಮತ್ತು ಕೊಂಕಣ ತೀರದ ಹಿಂದೂಗಳು ಆಶ್ರಯ ನೀಡಿದರು.
ಇದೆಲ್ಲವೂ ಹೇಳುವುದೇನೆಂದರೆ ತನ್ನ ನಡುವೆ ತಲೆಯೆತ್ತಿ ಬೆಳೆದು ಪ್ರತ್ಯೇಕವಾಗಿಯೇ ನಿಲ್ಲುವ ಅವಕಾಶವನ್ನು ಅನ್ಯಧರ್ಮಗಳಿಗೆ ಹಿಂದೂಧರ್ಮ ನೀಡುತ್ತಲೇ ಬಂದಿದೆ.
ಹಿಂದೂಧರ್ಮದ ಸಹಿಷ್ಣತಾ ನೀತಿ ಇತರ ಧರ್ಮಗಳಲ್ಲಿ ಕಾಣಬರುವುದು ಕಡಿಮೆ.
ಇದಕ್ಕೆ ನಮಗೆ ತೀರಾ ಹತ್ತಿರದ ಉದಾಹರಣೆಯೆಂದರೆ ಭಾರತ ಮತ್ತು ಪಾಕಿಸ್ತಾನಗಳಲ್ಲಿನ ಅಲ್ಪಸಂಖ್ಯಾತರ ಸ್ಥಿತಿಗತಿ.
ಸ್ವಾತಂತ್ರ್ಯದ ಸಮಯದಲ್ಲಿ ಪಾಕಿಸ್ತಾನದಲ್ಲಿ ಶೇಕಡಾ ಇಪ್ಪತ್ತರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇಕಡಾ ಎರಡಕ್ಕಿಂತಲೂ ಕಡಿಮೆ!
ಇದನ್ನು ಆದೇ ಅವಧಿಯಲ್ಲಿ ಭಾರತದಲ್ಲಿನ ಅಲ್ಪಸಂಖ್ಯಾತರ ಶೇಕಡಾವಾರು ಪ್ರಮಾಣಕ್ಕೆ ಹೋಲಿಸುವ ಗೋಜಿಗೆ ನಮ್ಮ ಸೆಕ್ಯೂಲರ್ ವಿಚಾರವಾದಿಗಳು ಹೋಗುವುದಿಲ್ಲ.
ತಮ್ಮ ನೀತಿಗಳು, ವಾದಸರಣಿಗಳು ಅದೆಷ್ಟು ದೋಷಪೂರಿತ, ಅದೆಷ್ಟು ಅತಾರ್ಕಿಕ, ಅದೆಷ್ಟು ಅವಾಸ್ತವಿಕ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ಇವರು ೧೯೪೭ನೇ ಇಸವಿಯನ್ನು 'ಸ್ವಾತಂತ್ರ್ಯದ ವರ್ಷ' ಎನ್ನುವುದಕ್ಕಿಂತಲೂ 'ದೇಶವಿಭಜನೆಯ ವರ್ಷ' ಎಂದು ಗುರುತಿಸಿ ಅದರಾಚೆಯ ಕಾಲವನ್ನು 'ವಿಭಜನಾಪೂರ್ವ ಕಾಲ' ಎಂದೂ ಅದರೀಚೆಯ ಕಾಲವನ್ನು 'ವಿಭಜನೋತ್ತರ ಕಾಲ' ಎಂದೂ ವಿಶ್ಲೇಷಿಸಬೇಕು.
ಜತೆಗೆ ತಮ್ಮ ಸಾಮಾಜಿಕ, ಧಾರ್ಮಿಕ, ರಾಜಕೀಯ ಅವಲೋಕನಗಳಿಗೆ ಭಾರತ ಮತ್ತು ಪಾಕಿಸ್ತಾನಗಳೆರಡರ ಅಂದರೆ ಇಡೀ ಉಪಖಂಡದ ಸ್ಥಿತಿಗತಿಗಳನ್ನು ಪರಿಗಣಿಸಬೇಕು.
ಯಾಕೆಂದರೆ ಇವೆರಡೂ ದೇಶಗಳ ಚರಿತ್ರೆಯ ದೋಷಗಳು, ವರ್ತಮಾನದ ನೋವುಗಳು ಒಂದಕ್ಕೊಂದು ಅದೆಷ್ಟುಮಟ್ಟಿಗೆ ತಳುಕುಹಾಕಿಕೊಂಡಿವೆಯೆಂದರೆ ಅವುಗಳನ್ನು ಬೇರೆಬೇರೆಯಾಗಿ ನೋಡುವುದು ಸಾಧ್ಯವೇ ಇಲ್ಲ.
ಬೇರೆಬೇರೆಯಾಗಿ ನೋಡಿದರೆ ನಮಗೆ ಸಿಗುವುದು ಅರೆಸತ್ಯಗಳು.
ಅರೆಸತ್ಯಗಳು ಸುಳ್ಳುಗಳಿಗಿಂತಲೂ ಹೆಚ್ಚು ಅಪ್ರಾಮಾಣಿಕ, ಅಪಾಯಕಾರಿ.
ಕಳೆದ ಎರಡೂವರೆ ಶತಮಾನಗಳಲ್ಲಿ ಹಿಂದೂಧರ್ಮ ತನ್ನೊಳಗಿನ ಕೊಳಕುಗಳನ್ನು ಒಂದೊಂದಾಗಿ ತೊಡೆದುಹಾಕಿಕೊಳ್ಳುತ್ತಾ ಬಂದಿದೆ.
ಸಮಾಜಸುಧಾರಕರಿಗೆ, ಅವರ ಮಾನವಪರ ನೀತಿಬೋಧನೆಗಳಿಗೆ ಅವಕಾಶ ನೀಡಿದೆ ಮತ್ತು ಅವರ ನೀತಿಗಳನ್ನು ತನ್ನೊಳಗೆ ಅಂತರ್ಗತಗೊಳಿಸಿಕೊಂಡು ಉದಾತ್ತವಾಗುತ್ತಾ ಸಾಗಿಬಂದಿದೆ.
ಮಹಾವೀರ, ಗೌತಮ ಬುದ್ಧರಂಥ ಪ್ರಾಚೀನರಿಂದ ಹಿಡಿದು ಆಧುನಿಕ ಕಾಲದ ರಾಜಾರಾಮ್ ಮೋಹನ್ ರಾಯ್, ನಾರಾಯಣ ಗುರು, ಮಹಾತ್ಮಾ ಗಾಂಧಿ, ಅಂಬೇಡ್ಕರ್- ಇವರೆಲ್ಲರ ಮಾನವಪರ ನೀತಿಬೋಧನೆಗಳು ಮತ್ತು ಉದಾತ್ತ ಕ್ರಿಯೆಗಳು ಹಿಂದೂಧರ್ಮವನ್ನು ಶ್ರೀಮಂತಗೊಳಿಸಿವೆ.
ಹಾಗೆಂದ ಮಾತ್ರಕ್ಕೆ ಹಿಂದೂಧರ್ಮ ತನ್ನೆಲ್ಲಾ ಕೊಳಕುಗಳನ್ನೂ ಸಂಪೂರ್ಣವಾಗಿ ತೊಳೆದುಕೊಂಡುಬಿಟ್ಟಿದೆ ಎಂದೇನಲ್ಲ.
ಆದರೆ, ಅದರ ಕೊಳಕುನಿವಾರಣಾ ಪ್ರಕ್ರಿಯೆ ನಿರಂತರವಾಗಿ ಸಾಗಿದೆ ಎನ್ನುವುದನ್ನು ನಾವು ಗುರುತಿಸಬೇಕು ಮತ್ತು ಅದರ ಆಧಾರದ ಮೇಲೆ, ಈಗಾಗಲೇ ಗಮನಾರ್ಹವಾಗಿ ಶಿಥಿಲಗೊಂಡಿರುವ ಅಸ್ಪೃಶ್ಯತೆಯಂತಹ ಅಮಾನವೀಯ ಆಚರಣೆಗಳೂ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಅಂತ್ಯಗೊಳ್ಳುತ್ತವೆ ಎಂದು ನಿರೀಕ್ಷಿಸಬಹುದಾಗಿದೆ.
ವಿಶ್ವದ ಇತರ ಪ್ರಮುಖ ಧರ್ಮಗಳಲ್ಲಿ ಇಂತಹ ಬೆಳವಣಿಗೆಗಳು ಅಪರೂಪ.
ಕೆಲವು ಧರ್ಮಗಳಲ್ಲಂತೂ ಸುಧಾರಕರು ತಮ್ಮ ಮಾನವಪರ ನೀತಿಬೋಧನೆಗಳಿಂದಾಗಿ ಜೀವ ಕಳೆದುಕೊಳ್ಳುವ ಉದಾಹರಣೆಗಳೇ ಹೆಚ್ಚು.
ಇನ್ನು ಅಲ್ಪಸಂಖ್ಯಾತರ ಓಲೈಕೆಯೇ ಸೆಕ್ಯೂಲರಿಸಂ ಎಂಬ ತಪ್ಪಭಿಪ್ರಾಯವನ್ನು ಗಮನಿಸೋಣ.
ಸ್ವತಂತ್ರ ಭಾರತದ ನೀತಿಗಳನ್ನು ರೂಪಿಸಿದ ಜವಾಹರ್ಲಾಲ್ ನೆಹರೂ ಮುಸ್ಲಿಮರ ಪರ ನಿಂತದ್ದಕ್ಕೆ ಉದಾತ್ತ ಕಾರಣಗಳಿವೆ.
ಅವರಿದ್ದ ಕಾಲಘಟ್ಟದಲ್ಲಿ ಮುಸ್ಲಿಮರ ಪರ ನಿಲ್ಲುವುದು ಒಂದು ಐತಿಹಾಸಿಕ ಅಗತ್ಯವಾಗಿತ್ತು.
ರಕ್ತರಂಜಿತ ದೇಶವಿಭಜನೆಗೆ ಮುಸ್ಲಿಂ ಲೀಗ್ ಕಾರಣವಾದದ್ದು, ಅದರಿಂದಾಗಿ ದೇಶದಲ್ಲಿ ಉದ್ಭವವಾದ ಮುಸ್ಲಿಂ-ವಿರೋಧಿ ಭಾವನೆಗಳು ಇಲ್ಲಿನ ಅಮಾಯಕ ಮುಸ್ಲಿಮರ ಬದುಕನ್ನು ಅತಂತ್ರಗೊಳಿಸದಂತೆ ತಡೆಯಲು, ಬಹುಸಂಖ್ಯಾತರಂತೆ ಅವರೂ ನಿಶ್ಚಿಂತೆಯಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಾದ ಸವಲತ್ತುಗಳನ್ನು ಒದಗಿಸುವುದು ಆ ದಿನಗಳಲ್ಲಿ ಅತ್ಯಗತ್ಯವಾಗಿತ್ತು.
ಕಾಲದ ಅಗತ್ಯಕ್ಕಷ್ಟೇ ನೆಹರೂರ ಸೆಕ್ಯೂಲರಿಸಂನ ಒಂದು ಭಾಗವಾಗಿದ್ದ ಮುಸ್ಲಿಂ-ಪರ ನೀತಿಗಳನ್ನೇ ಪೂರ್ಣ ಹಾಗೂ ನಿಜವಾದ ಸೆಕ್ಯೂಲರಿಸಂ ಎಂದು ನಂತರದ ನೇತಾರರು ತಪ್ಪಾಗಿ ಅರ್ಥೈಸಿಬಿಟ್ಟರು.
ಅದಕ್ಕೆ ಸಹಕರಿಸಿದ್ದು ಇತಿಹಾಸದ ಅರೆಜ್ಞಾನ ಹೊಂದಿರುವ ಬುದ್ಧಿಜೀವಿಗಳು.
ಇದರಿಂದಾಗಿ ಸೆಕ್ಯೂಲರಿಸಂ ಎಂದರೆ ಅಲ್ಪಸಂಖ್ಯಾತರ ಓಲೈಕೆ ಎಂಬಂತಾಗಿಬಿಟ್ಟಿದೆ.
ಇದನ್ನೊಂದು ಸೂಕ್ತ ಉದಾಹರಣೆಯ ಮೂಲಕ ವಿವರಿಸಬಹುದು.
ಶ್ರಾದ್ಧದ ದಿನ ಎಲ್ಲೆಲ್ಲೂ ಓಡಾಡಿ ಮೈಲಿಗೆ ಮಾಡುತ್ತದೆಂದು ಮನೆಯ ಬೆಕ್ಕನ್ನು ಕಟ್ಟಿಹಾಕುವುದನ್ನು ಒಬ್ಬಾತ ರೂಢಿಸಿಕೊಂಡರೆ ನಂತರದ ತಲೆಮಾರುಗಳು ಅದನ್ನೊಂದು ಶಾಸ್ತ್ರವೆಂದು ಬಗೆದು ಪ್ರತಿ ಶ್ರಾದ್ಧದಂದು ಎಲ್ಲಿಂದಾದರೂ ಬಡಪಾಯಿ ಬೆಕ್ಕೊಂದನ್ನು ಹಿಡಿದುತಂದು ಕಟ್ಟಿಹಾಕುವ ಮೂರ್ಖತನದಂತಿದೆ ಈಗಿನವರ ಸೆಕ್ಯೂಲರಿಸಂ.
ಪರಿಸ್ಥಿತಿ ಹೀಗಿರುವಾಗ, ಪ್ರಗತಿಪರರೆಂದುಕೊಳ್ಳುವ ವಿಚಾರವಾದಿಗಳು ಹಿಂದೂಗಳನ್ನು ಕೋಮುವಾದಿಗಳೆಂದು ಕರೆದು ಅವರ ವಿರುದ್ಧ ಪುಂಖಾನುಪುಂಖ ಹೇಳಿಕೆಗಳನ್ನು ಕೊಡುತ್ತಾರೆ, ಹಿಂದೂ ಧರ್ಮಗ್ರಂಥಗಳನ್ನು, ಅವುಗಳ ಭಾಗಗಳನ್ನು ಸುಡುತ್ತೇನೆಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ.
ಇವರು ನಿಜವಾಗಿಯೂ ಮಾನವತಾವಾದಿಗಳೇ ಆಗಿದ್ದರೆ ಇತರ ಧರ್ಮಗಳ ಪವಿತ್ರ ಗ್ರಂಥಗಳಲ್ಲಿರುವ ಅಮಾನವೀಯ ವಿಚಾರಗಳ ಬಗ್ಗೆಯೂ ಪ್ರಸ್ತಾಪಿಸಿ ಜನಜಾಗೃತಿ ಮೂಡಿಸುತ್ತಿಲ್ಲವೇಕೆ?
ಹಿಂದೂಧರ್ಮವೊಂದು ಉದಾತ್ತವಾದರೆ ಸಾಕು, ಉಳಿದವು ಏನಾದರೂ ಆಗಲಿ ನಮಗೇನು ಎನ್ನುವ ಉಗ್ರ ಹಿಂದುಧರ್ಮಾಭಿಮಾನಿಗಳೇ ಇವರು?
ಅಥವಾ ಜೀವಭಯವೇ?
(ನೆರೆಯ ಬಾಂಗ್ಲಾದೇಶದಲ್ಲಿ ಕಳೆದೆರಡು ತಿಂಗಳಲ್ಲಿ ಘಟಿಸಿರುವ ಮೂವರು ಪ್ರಗತಿಪರರ ಹತ್ಯೆಗಳನ್ನು ಗಮನಿಸಿ).
ಅಂದರೆ ಇವರು ಅಪ್ರಾಮಾಣಿಕ, ಆಷಾಡಭೂತಿಗಳಷ್ಟೇ ಅಲ್ಲ, ಅಂಜುಕುಳಿಗಳೂ ಸಹಾ.
ಇವರು ಕತ್ತಿ ಬೀಸುವುದು ಸಹಿಷ್ಣು ಹಿಂದೂಧರ್ಮದ ವಿರುದ್ಧ ಮಾತ್ರ.
ಹಮಾರಾ ಕುತ್ತಾ ಹಮಾರೀ ಗಲೀ ಮೆ ಶೇರ್!
ಇವರ ಬಣ್ಣಗಳು ಇನ್ನೂ ಹಲವಾರಿವೆ.
ಬದುಕುಪೂರ್ತಿ ಸಾರ್ವಜನಿಕವಾಗಿ ಹಿಂದೂ ಸಂಪ್ರದಾಯಗಳ ವಿರುದ್ಧ ಮಾತಾಡಿ, ಬರೆದು ಸನ್ಮಾನ, ಸ್ಥಾನಮಾನಗಳನ್ನು ಗಳಿಸಿ ಮನೆಯೊಳಗೆ, ಮನದೊಳಗೆ ಸಂಪ್ರದಾಯಸ್ಥ ಹಿಂದೂ ಆಗಿಯೇ ಬಾಳಿ ಅಳಿದುಹೋದವರನ್ನು ನಾವು ಕಂಡಿದ್ದೇವೆ, ಈಗಲೂ ಸದ್ಧುಮಾಡಿಕೊಂಡು ಓಡಾಡುವವರನ್ನೂ ನೋಡುತ್ತಿದ್ದೇವೆ.
ಇವರಿಗೆ ಜಾಣ್ಮೆ ಇದೆ, ಪದಸಂಪತ್ತಿದೆ, ವಾಕ್ಚಾತುರ್ಯವಿದೆ.
ಇವೆಲ್ಲವುಗಳ ಜತೆ ಸ್ವಲ್ಪ ನಾಚಿಕೆಯೂ ಇದ್ದಿದ್ದರೆ ಭೂಮಿಯ ಮೇಲೆ ಇವರುಗಳ ಅಸ್ತಿತ್ವ ಅರ್ಥ ಪಡೆದುಕೊಳ್ಳುತ್ತಿತ್ತು, ಬುದ್ಧ, ಬಸವ ಅಲ್ಲವಾದರೂ ನಾರಾಯಣ ಗುರು, ಮಹಾತ್ಮಾ ಫುಲೆ ಆಗಿ ಈಗಿನ, ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶಕರಾಗುತ್ತಿದ್ದರು, ಈಗ ಆಗುತ್ತಿರುವಂತೆ ನಗೆಪಾಟಲಿಗೀಡಾಗುತ್ತಿರಲಿಲ್ಲ, ಬುದ್ಧಿಜೀವಿ ಎಂಬ ಗೌರವಪೂರ್ಣ ಅಭಿದಾನ ಅಪಹಾಸ್ಯಕ್ಕೊಳಗಾಗುತ್ತಿರಲಿಲ್ಲ.
ನಮ್ಮ ಸಾಂಸ್ಕೃತಿಕ ರಂಗದಲ್ಲಿ ಆಷಾಡಭೂತಿ, ಅಂಜುಕುಳಿ, ಅಪ್ರಾಮಾಣಿಕ ವಿಚಾರವಾದಿಗಳ ಅಟ್ಟಹಾಸ ಅದೆಷ್ಟು ಜೋರಾಗಿದೆಯೆಂದರೆ ಇವರಿಗೆ ಹೆದರಿ ಅದಕ್ಕೆ ತಕ್ಕಂತೆ ತಮ್ಮ ನಡೆನುಡಿಯನ್ನು ಮಾರ್ಪಡಿಸಿಕೊಳ್ಳುವವರ ಒಂದು ದೊಡ್ಡ ವರ್ಗವೇ ಸೃಷ್ಟಿಯಾಗಿಬಿಟ್ಟಿದೆ.
ಸ್ವಾತಂತ್ರೋತ್ತರ ಭಾರತದ ಚುಕ್ಕಾಣಿಯನ್ನು ಬಹುಕಾಲ ಹಿಡಿದ ಕಾಂಗ್ರೆಸ್ನ ನೀತಿಗಳಿಂದಾಗಿ ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ, ಮಾಧ್ಯಮ, ಆಡಳಿತಶಾಹಿ ಕ್ಷೇತ್ರಗಳಲ್ಲಿ ಆಯಕಟ್ಟಿನ ಸ್ಥಾನಗಳನ್ನು ಗಳಿಸಿಕೊಂಡಿರುವ ವಿಚಾರವಾದಿಗಳು ಯಾರನ್ನಾದರೂ ಮೇಲೆತ್ತಬಲ್ಲರು, ಕೆಳಗೆ ತುಳಿಯಲೂಬಲ್ಲರು.
ಈ ಕಟುವಾಸ್ತವನ್ನು ಅರಿತಿರುವ ಬುದ್ಧಿವಂತರು (?) ಬಹಿರಂಗವಾಗಿ ಇವರ ಅವಕೃಪೆಗೆ ಪಾತ್ರರಾಗದಂತೆ ಎಚ್ಚರ ವಹಿಸುತ್ತಾರೆ.
ಕೆಲವೊಮ್ಮೆ ಇದು ಎಷ್ಟರಮಟ್ಟಿಗೆ ಹೋಗುತ್ತದೆಯೆಂದರೆ ತಮ್ಮ ಬರಹಗಳಿಂದ ಅಪ್ರಾಮಾಣಿಕ ವಿಚಾರವಾದಿಗಳನ್ನು ಎದುರು ಹಾಕಿಕೊಂಡಿರುವ ನನ್ನಂತಹ ಲೇಖಕರ ಬಗ್ಗೆ ಸಾರ್ವಜನಿಕವಾಗಿ ಒಳ್ಳೆಯ ಮಾತುಗಳನ್ನಾಡಲು, ಬರೆಯಲು ಈ 'ಬುದ್ಧಿವಂತರು' ಹೆದರುತ್ತಾರೆ!
ಸ್ವಂತಿಕೆಯಿಲ್ಲದ ಇಂತಹ ಬದುಕೂ ಒಂದು ಬದುಕೇ ಎಂದು ನಾವು ಕನಿಕರಿಸಬೇಕಷ್ಟೆ.
ದುರಂತವೆಂದರೆ ನಮ್ಮ ಸಾಹಿತ್ಯಕ, ಸಾಹಿತ್ಯ ಕ್ಷೇತ್ರಗಳಲ್ಲಿ ಇಂಥವರ ಸಂಖ್ಯೆ ಗಣನೀಯವಾಗಿದೆ.
ವಿಚಾರವಾದಿಗಳನ್ನು ಮೆಚ್ಚಿಸಲು ಬಹಿರಂಗವಾಗಿ ಬಿಜೆಪಿಯನ್ನು ವಿರೋಧಿಸುವ, ಒಳಗೆ ಸ್ಥಾನಮಾನಗಳಿಗಾಗಿ ಸದ್ಧುಗದ್ದಲವಿಲ್ಲದೇ ಕೇಂದ್ರಮಂತ್ರಿಗಳ, ಬಿಜೆಪಿ ನಾಯಕರ ಬೆನ್ನುಹತ್ತುವ ಹಲವರ ಉದಾಹರಣೆಗಳಿವೆ.
ಅಂದರೆ, ಮುಖವಾಡಗಳನ್ನು ಧರಿಸಿದವರ ಜಗತ್ತಿನಲ್ಲಿ ನಾವಿಂದು ಬದುಕುತ್ತಿದ್ದೇವೆ.
ಇಲ್ಲಿ ನಾಟಕಕ್ಕೆ ಮೊದಲ ಮಣೆ, ನೈಜತೆ ಅನಾಥ.
ಆದರೆ ಸಾರ್ವಕಾಲಿಕ ಸತ್ಯವೊಂಡಿದೆ.
ಅದೆಂದರೆ ವ್ಯಕ್ತಿ ಸ್ವಾರ್ಥಿಯಾಗಬಲ್ಲ, ಆ ಹಾದಿಯಲ್ಲಿ ಅವಿವೇಕಿಯಾಗಲೂಬಲ್ಲ.
ಆದರೆ ಸಮಾಜ ಮಾತ್ರ ಎಂದಿಗೂ ನಿಸ್ವಾರ್ಥಿ, ಹಾಗಾಗಿ ತನ್ನ ವಿವೇಕವನ್ನು ಯಾವಾಗಲೂ ಕಾಪಾಡಿಕೊಳ್ಳುತ್ತದೆ.
ಅದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತದೆ, ಅವರವರ
ಯೋಗ್ಯತೆಗನುಗುಣವಾಗಿ ಇತಿಹಾಸದಲ್ಲಿ ಸೂಕ್ತ ಸ್ಥಾನವನ್ನು ನಿಗದಿಗೊಳಿಸುತ್ತದೆ.
ಸಮಾಜದ ನ್ಯಾಯನಿರ್ಣಯ ನಿಧಾನವಾಗಬಹುದು.
ಆದರೆ ಅದು ಖಂಡಿತಾ ನಡೆದೇನಡೆಯುತ್ತದೆ.
ರಾಷ್ಟ್ರದ ಸಂದರ್ಭದಲ್ಲಿ ಹೇಳುವುದಾದರೆ ಪ್ರಗತಿಪರರ ಸ್ವಾರ್ಥಪರ ಸುಳ್ಳುಗಳನ್ನು ಸಮಾಜ ಆರುದಶಕಗಳು ಕಾದ ನಂತರ ತಿರಸ್ಕರಿಸಿದೆ, ನರೇಂದ್ರ ಮೋದಿ ಎಂಬ ವ್ಯಕ್ತಿಯಲ್ಲಿ ನಿಸ್ವಾರ್ಥ, ವಿವೇಕಿ ನಾಯಕನನ್ನು ಹುಡುಕಿಕೊಂಡಿದೆ.
೨೦೦೨ರ ಗುಜರಾತ್ ಕೋಮುಗಲಭೆಗೆ ಕಾರಣವಾದದ್ದು ಗೋಧ್ರಾ ಹತ್ಯಾಕಾಂಡ.
ಸಬರ್ಮತಿ ಎಕ್ಸ್ಪ್ರೆಸ್ನ ಎಸ್-೬ ಬೋಗಿಗೆ ಬಿದ್ದ ಬೆಂಕಿ ಒಂದರ್ಧದಲ್ಲಿ ಹಿಂದೂಧರ್ಮಕ್ಕೆ ಬಿದ್ದ ಬೆಂಕಿ.
ಆಗ ಹಿಂದೂಗಳಿಗೆ ಬೇಕಾಗಿದ್ದದ್ದು ಒಂದು ಸಾಂತ್ವನದ ಮಾತು.
ಆದರೆ ಅವರಿಗೆ ಸಿಕ್ಕಿದ್ದೇನು?
ಬೋಗಿಯಲ್ಲಿದ್ದ ಕರಸೇವಕರು ತಮ್ಮ ದುರಂತಕ್ಕೆ ತಾವೇ ಕಾರಣರಾದರು ಎಂದು ಪ್ರಗತಿಪರರು ಏಕಪಕ್ಷೀಯವಾಗಿ ತೀರ್ಮಾನಿಸಿ ಆ ನಿಟ್ಟಿನಲ್ಲಿ ಪ್ರಚಾರ ಆರಂಭಿಸಿಬಿಟ್ಟರು.
ಮಾಧ್ಯಮದ ಒಂದು ವರ್ಗ ಇದಕ್ಕೆ ಕುಮ್ಮಕ್ಕು ನೀಡಿತು.
ಇವರುಗಳು ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ ಗೋಧ್ರಾ ಹತ್ಯಾಕಾಂಡಕ್ಕೆ ರಾಷ್ಟ್ರಮಟ್ಟದಲ್ಲಿ ಸಂತಾಪ ವ್ಯಕ್ತಪಡಿಸಿ, ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಗಾಗಿ ಆಗ್ರಹಿಸಿ, ಗುಜರಾತಿ ಹಿಂದೂಗಳ ಆಕ್ರೋಶವನ್ನು ಶಮನಗೊಳಿಸಿದ್ದರೆ ನಂತರದ ಕೋಮುಗಲಭೆಯನ್ನು ನಿಶ್ಚಯವಾಗಿಯೂ ತಪ್ಪಿಸಬಹುದಾಗಿತ್ತು.
ಆದರೆ ಪ್ರಗತಿಪರರು, ಸೆಕ್ಯೂಲರಿಸ್ಟರು ಹಿಡಿದದ್ದು ಬೇರೆ ದಾರಿ.
ಮುಸ್ಲಿಂ ಅರಸರನ್ನೂ, ತನ್ನ ತಾಯಿಯನ್ನೂ ಪೂರ್ಣ ಉಡುಪಿನಲ್ಲಿ ಚಿತ್ರಿಸಿ, ಹಿಂದೂ ದೇವತೆಗಳನ್ನು ನಗ್ನವಾಗಿ, ಅಶ್ಲೀಲವಾಗಿ ಚಿತ್ರಿಸಿದ ಎಂ. ಎಫ್. ಹುಸೇನರ ಪರವಾಗಿ ನಿಂತು ಸಾಂಸ್ಕೃತಿಕ ದಿವಾಳಿತನವನ್ನು ಪ್ರದರ್ಶಿಸಿದ್ದೂ ಇವರೇ. ಇವರ ಅಪಪ್ರಚಾರವೇ ಅಂತಿಮವಾಗಿ ತಮ್ಮ ಧರ್ಮದ ರಕ್ಷಕ ಮೋದಿ ಎಂಬ ನಂಬಿಕೆಯನ್ನು ಬಹುಸಂಖ್ಯಾತರಲ್ಲಿ ಮೂಡಿಸಿತು, ಅವರನ್ನು ಬಿಜೆಪಿಯ ತೆಕ್ಕೆಗೆ ತಂದಿತು.
ಈ
ಎಲ್ಲಾ ಬೆಳವಣಿಗೆಗಳು ಸೂಚಿಸುವುದೇನೆಂದರೆ ನಮ್ಮ ಜಾಣ ಆದರೆ ಸ್ವಾರ್ಥಿ ಹಾಗೂ ಅಂಜುಕುಳಿ ಪ್ರಗತಿಪರರಿಗೆ ಆತ್ಮವಿಮರ್ಶೆಗೆ ಇದು ಸಕಾಲ ಎಂದು.
ಆಗಸ್ಟ್ 11, 2015
No comments:
Post a Comment