ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, March 29, 2015

ಪಾಸ್‌ವರ್ಡ್

ಮಧ್ಯಾಹ್ನದ ಊಟದ ನಂತರ ಸ್ವಲ್ಪ ಹೊತ್ತು ಟಿ ವಿ ನೋಡುವುದು ಸಾಹುಕಾರ್ ಕುಪ್ಪಣ್ಣವರು ಹಲವು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದ ಅಭ್ಯಾಸ.  ಚಾನೆಲ್ಲುಗಳನ್ನು ಒಂದೊಂದಾಗಿ ಬದಲಾಯಿಸುತ್ತಾ ಸೀರೆಯುಟ್ಟ ತಮಿಳು ಹೀರೋಯಿನ್‌ಗಳು ನರ್ತಿಸುತ್ತಾ ಹಾಡು ಹೇಳುವ ದೃಶ್ಯ ಕಂಡೊಡನೇ ರಿಮೋಟನ್ನು ಪಕ್ಕಕ್ಕಿಟ್ಟು ಸೋಫಾದಲ್ಲಿ ಆರಾಮವಾಗಿ ಹಿಂದಕ್ಕೆ ಒರಗಿಬಿಡುತ್ತಿದ್ದರು.  ಅವರೇನೂ ತಮಿಳುಪ್ರಿಯರಲ್ಲ.  ವಾಸ್ತವವಾಗಿ ಹೇಳಬೇಕೆಂದರೆ ಅವರಿಗೆ ತಮಿಳು ಬರುತ್ತಲೇ ಇರಲಿಲ್ಲ.  ಮಸಲಾ ವಿಷಯ ಏನೆಂದರೆ ಯಾವುಯಾವುದೋ ಚಿತ್ರ ವಿಚಿತ್ರ ವೇಷಗಳಲ್ಲಿ ಕಾಣಿಸಿಕೊಳ್ಳುವ ಕನ್ನಡ ಹಾಗೂ ಹಿಂದಿ ಸಿನಿಮಾಗಳ ನಾಯಕಿಯರು ಅವರಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ.  ಅವರ ಅಭಿಪ್ರಾಯದಲ್ಲಿ ನೀರೆ ಸೀರೆ ಉಟ್ಟರೇ ಚಂದ.  ಹೀಗಾಗಿ ಈ ಕಾಲದಲ್ಲೂ ಲಕ್ಷಣವಾಗಿ ಸೀರೆ ಉಟ್ಟು, ಉದ್ದನೆಯ ಜಡೆ ಹೆಣೆದುಕೊಂಡು, ಹೆಣೆದ ಜಡೆಗೆ ಮೊಳದುದ್ದ ಮಲ್ಲಿಗೆ ದಂಡೆ ಮುಡಿದು, ಸೆರಗನ್ನು ಗಾಳಿಯಲ್ಲಿ ಅಲೆಅಲೆಯಾಗಿ ಹಾರಾಡಿಸುತ್ತಾ ಓಡಾಡುವ ತಮಿಳು ನಾಯಕಿಯರು ಸಾಹುಕಾರ್ ಕುಪ್ಪಣ್ಣನವರಿಗೆ ತುಂಬಾ ಇಷ್ಟವಾಗಿಹೋಗಿದ್ದರು.  ಇಪ್ಪತ್ತು ವರ್ಷಗಳ ಹಿಂದಿನ ತಮ್ಮ ಶ್ರೀಮತಿಯವರನ್ನು ಆ ನಾಯಕಿಯರಲ್ಲಿ ಕಾಣಲು ಸಾಹುಕಾರರು ಪ್ರಯತ್ನಿಸುತ್ತಿದ್ದರು.  ಕಳೆದುಹೋದ ಕಾಲವನ್ನು ಹಿತವಾಗಿ ಮೆಲುಕು ಹಾಕುತ್ತಿದ್ದರು.  ಆ ಸಮಯದಲ್ಲೇನಾದರೂ ಈಗ ದಢೂತಿಯಾಗಿ ಊದಿಹೋಗಿದ್ದ ಅವರ ಶ್ರೀಮತಿಯೇನಾದರೂ ಎದುರಿಗೆ ಸುಳಿದರೆ ಸಾಹುಕಾರರಿಗೆ ರಸಭಂಗವಾದಂತಾಗಿ ಮುಖ ಹುಳಿ ಮಾಡಿಕೊಂಡುಬಿಡುತ್ತಿದ್ದುದು ಒಂದು ವಿಪರ್ಯಾಸ.
ಹಾಗೆಯೇ ಇಂದೂ ಊಟ ಮುಗಿಸಿ ಟಿ ವಿ ಮುಂದೆ ಕುಳಿತರು.  ಮಾಮೂಲಿನಂತೆ ರಿಮೋಟಿನ ಗುಂಡಿಯನ್ನೊತ್ತುತ್ತಾ ಸೀರೆಯುಟ್ಟ ನೀರೆಯರಿಗಾಗಿ ತಡಕಾಡತೊಡಗಿದರು.  ಆದರೆ ಅವರ ದುರಾದೃಷ್ಟವೋ ಏನೋ ಇಂದು ಆ ಘಳಿಗೆಯಿಂದ ಒಂದರ ಹಿಂದೊಂದರಂತೆ ಹಲವಾರು ಅವಘಡಗಳು ಘಡಘಡನೆ ಘಟಿಸಿಹೋದವು.
ಸಾಹುಕಾರರಿಗೆ ಆಗಾಗ ಕ್ರಿಕೆಟ್ ನೋಡುವ ಅಭ್ಯಾಸವೂ ಇತ್ತು.  ಅದರಲ್ಲೂ ಭಾರತ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಎಂದರೆ ಸ್ವಲ್ಪ ಆಸಕ್ತಿಯಿಂದಲೇ ನೋಡುತ್ತಿದ್ದರು.  ಚಾನೆಲ್ ಬದಲಾಯಿಸುತ್ತಿದ್ದ ಸಾಹುಕಾರರು ಆಕಾಶದಿಂದ ನೇರವಾಗಿ ಸಯೀದ್ ಅಫ್ರೀದಿಯ ಬೊಗಸೆಗೆ ಬೀಳುತ್ತಿದ್ದ ಚೆಂಡನ್ನೂ, "ಓಹ್ ಹಿ ಈಸ್ ಗಾನ್!" ಎಂಬ ರವಿ ಶಾಸ್ತ್ರಿಯ ಉದ್ಗಾರವನ್ನೂ ಕೇಳಿದೊಡನೆ ಕಣ್ಣರಳಿಸಿದರು.  ಅದೇ ಅವರು ಮಾಡಿದ ತಪ್ಪು.  ಹಾಗೆ ಅರಳಿಕೊಂಡ ಕಣ್ಣುಗಳು ಮುಂದಿನ ಮೂರು ನಿಮಿಷಗಳವರೆಗೆ ಮುಚ್ಚಲೇ ಇಲ್ಲ.  ಈ ಅವಧಿಯಲ್ಲಿ ಭಾರತದ ಮತ್ತೊಂದು ವಿಕೆಟ್ ಉರುಳಿ ಆರು ವಿಕೆಟ್ ನಷ್ಟಕ್ಕೆ ನೂರಾ ಮೂವತ್ತೆಂಟು ರನ್ನುಗಳಾದವು.  ಪಾಕಿಸ್ತಾನ ಬಾರಿಸಿದ್ದು ಮುನ್ನೂರಾ ಒಂದು ರನ್.  ಅಂದರೆ ಗೆಲ್ಲಲು ಭಾರತ ಇನ್ನೂ ನೂರಾ ಅರವತ್ತನಾಲ್ಕು ರನ್ನುಗಳನ್ನು ಮಾಡಬೇಕಿತ್ತು.  ಆದರೆ ಕೈಯಲ್ಲಿ ಉಳಿದಿರುವುದು ಕೇವಲ ನಾಲ್ಕು ವಿಕೆಟ್‌ಗಳು!  ಆದರೆ ಡ್ರಾವಿಡ್ ಇನ್ನೂ ಆಡುತ್ತಿರುವುದು ಸಾಹುಕಾರರಿಗೆ ಸ್ವಲ್ಪ ಸಮಾಧಾನ ಉಂಟು ಮಾಡಿತು.  ಅವನೂ ಬಿದ್ದುಹೋದರೆ ಭಾರತದ ಸ್ಥಿತಿ ಶೋಚನೀಯವಾಗಿಬಿಡುತ್ತದೆ ಎಂದು ಸಾಹುಕಾರರು ಗಾಬರಿಗೊಂಡರು.  ಆದರೆ ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಪರಿಸ್ಥಿತಿ ಭಾರತದ ಪರಿಸ್ಥಿತಿಗಿಂತಲೂ ಶೋಚನೀಯವಾಗಲಿದೆ ಎಂಬ ಅರಿವು ಅವರಿಗಿರಲಿಲ್ಲ.
ಡ್ರಾವಿಡ್ ಬಾರಿಸಿದ ಚೆಂಡು ಆಕಾಶಕ್ಕೆ ಚಿಮ್ಮಿತು.  "ಹೋ" ಎಂದು ಉದ್ಗರಿಸಿತು ಜನಸ್ತೋಮ.  "ಅಹ್ ಸಿಕ್ಸ್" ಎಂದು ಸಾಹುಕಾರರು ಆನಂದತುಂದಿಲರಾಗುತ್ತಿದ್ದಂತೇ ಚೆಂಡು ಮೈದಾನದ ನಡುಮಧ್ಯದಲ್ಲೇ ನೇರವಾಗಿ ಅವರೋಹಣಗೈಯ್ಯತೊಡಗಿತು!   ಅದರ ನೇರಕ್ಕೇ ಕೆಳಗೆ ಇಬ್ಬರು ಪಾಕಿಸ್ತಾನೀ ದುರಾತ್ಮರು ತಲೆಯನ್ನೂ ಕೈಗಳನ್ನೂ ಮೇಲೆತ್ತಿ ನಿಂತಿರುವುದನ್ನು ಕಂಡು ಸಾಹುಕಾರರ ಎದೆ ಧಸಕ್ಕೆಂದಿತು.
ಓಹ್ ರಾಹುಲ್ ಔಟಾಗಿಬಿಡುತ್ತಾನಲ್ಲದೇವರೇ!  ಇಬ್ಬರು ಪಾಕಿಗಳಲ್ಲೂ ಗೊಂದಲವುಂಟಾಗಿ ಆಗಾಗ ಆಗುವಂತೆ ಚೆಂಡು ಯಾರ ಕೈಗೂ ಸಿಗದಿರಲಿ  ಸಾಹುಕಾರರು ಮನಸಾರೆ ಹಾರೈಸಿದರು.
ಚೆಂಡು ಇನ್ನಷ್ಟು ಕೆಳಗಿಳಿಯಿತು.  ಪಾಕಿಗಳ ಕೈಗಳು ಮತ್ತಷ್ಟು ಮೇಲೇರಿದವು.  ಸಾಹುಕಾರರ ತೆರೆದ ಕಣ್ಣುಗಳು ಹಾಗೇ ತೆರೆದುಕೊಂಡೇ ಇದ್ದವು...
ಆ ಗಳಿಗೆಗೆ ಸರಿಯಾಗಿ...
ಸಾಹುಕಾರರಿಗೆ ಒಂದು ಭಯಂಕರ ಸೀನು ಬಂದುಬಿಟ್ಟಿತು!
ತೆರೆದಿದ್ದ ಕಣ್ಣುಗಳನ್ನು ತೆರೆದಂತೇ ತಲೆಯನ್ನು ಮೇಲೆತ್ತಿ ಮರುಕ್ಷಣ ಸುಂಯ್ಯನೆ ಕೆಳಗೆ ತಂದು ಮನೆಯೆಲ್ಲಾ ಅದುರುವಂತೆ ಭಯಂಕರವಾಗಿ ಸೀನಿದರು.  ಆಗ...
ಆಗಬಾರದ ಅನಾಹುತ ಆಗಿಹೋಯಿತು.
ಸೀನಿದ ರಭಸಕ್ಕೆ ರೆಪ್ಪೆಗಳ ತಡೆಗೋಡೆ ಇಲ್ಲದ್ದರಿಂದಲೋ ಎನೋ ಕಣ್ಣುಗುಡ್ಡೆಗಳು ಕ್ಷಣಾರ್ಧದಲ್ಲಿ ಕಣ್ಣಗೂಡುಗಳಿಂದ ಹೊರಬಂದು ಕೆಳಗೆ ಬಿದ್ದುಹೋದವು.
ಡ್ರಾವಿಡ್, ಚೆಂಡು, ಪಾಕಿಸ್ತಾನೀ ದುರಾತ್ಮರು, ಅವರೆಲ್ಲರೂ ಇದ್ದ ಟಿ ವಿ ಪರದೆಯ ಚೌಕಟ್ಟು ಎಲ್ಲವೂ ಗಕ್ಕನೆ ಮಾಯವಾಗಿಹೋಗಿ ಕಣ್ಣ ತುಂಬಾ ಕತ್ತಲೆ ತುಂಬಿಕೊಂಡಿತು.  ಹಾಳಾದ ಕರೆಂಟ್ ಈಗಲೇ ಕೈಕೊಟ್ಟುಬಿಟ್ಟಿತಲ್ಲಾ ಛೇ ಅಂದುಕೊಂಡರು ಒಂದುಕ್ಷಣ.  ಮರುಕ್ಷಣ ಕರೆಂಟ್ ಹೋದರೆ ಮನೆಯಿಡೀ ಯಾಕೆ ಕತ್ತಲಾಗಿಬಿಟ್ಟಿತುಅದೂ ಈ ನಡುಮಧ್ಯಾಹ್ನದ ಹೊತ್ತಿನಲ್ಲಿ? ಎಂಬ ಪ್ರಶ್ನೆಗಳು ಧುತ್ತನೆ ಎದುರಾದವು.  ಅದರ ಹಿಂದೆಯೇ ಕಿವಿ ಇರಿಯುವ ಸಾಮೂಹಿಕ ಉದ್ಗಾರ, ರವಿ ಶಾಸ್ತ್ರಿಯ ಪರಿಚಿತ ದನಿ ಕೇಳಿ ಬೆಚ್ಚಿದರು.
"ಓಹ್ ಹಿ ಡ್ರಾಪ್ಡ್ ಇಟ್.  ದೇರ್ ವಾಸ್ ಆನ್ ಅನ್‌ನೆಸಸರಿ ಮಿಕ್ಸ್‌ಅಪ್..."
ರವಿ ಶಾಸ್ತ್ರಿಯ ಉದ್ರೇಕಗೊಂಡ ದನಿ ಸಾಗಿತ್ತು.  ಅದರೆ ಸಾಹುಕಾರರಿಗೆ ಏನೂ ಕಾಣುತ್ತಿಲ್ಲ!
"ಓಹ್ ನಂಗೇನೂ ಕಾಣ್ತಾ ಇಲ್ಲ.  ಕತ್ಲೆ, ಬರೀ ಕತ್ಲೆ"  ಸಾಹುಕಾರರು ಅರ್ತರಾಗಿ ಕೂಗಿದರು.
ಉಂಡು ಆರಾಮವಾಗಿ ಹಾಸಿಗೆಯಲ್ಲಿ ಮೈಚೆಲ್ಲಿದ್ದ ಗೌರಮ್ಮನವರಿಗೆ ಆಗಷ್ಟೇ ಕಣ್ಣು ಎಳೆಯತೊಡಗಿತ್ತು.  ಪತಿರಾಯರ ಅರ್ತನಾದ ಕೇಳಿ ಗಕ್ಕನೆ ಕಣ್ಣು ತೆರೆದರು.
"ಅಯ್ಯೋ ಕತ್ಲೂ,"  ಮತ್ತೊಮ್ಮೆ ಸಾಹುಕಾರರ ಅರ್ತನಾದ ಕೇಳಿದೊಡನೇ ಗಡಬಡಿಸಿ ಎದ್ದು ಕುಳಿತರು. ಗಂಡನ ಅರ್ತನಾದ ಮೂರನೆಯ ಬಾರಿ ಕಿವಿಗಪ್ಪಳಿಸಿದಂತೇ ಏನೋ ಅವಗಢವಾಗಿರಬಹುದೆನಿಸಿ ತಮ್ಮ ಭಾರೀ ಘಟವನ್ನು ತಮ್ಮಿಂದ ಸಾಧ್ಯವಿದ್ದಷ್ಟು ಬೇಗನೆ ಹಾಸಿಗೆಯಿಂದ ಕೆಳಗಿಳಿಸಿ ಹಜಾರದತ್ತ ಸಾಗಿದರು.
ಹತ್ತಿರದಲ್ಲಿ ಹೆಜ್ಜೆ ಸಪ್ಪಳ ಕೇಳಿದ ಸಾಹುಕಾರರು ಮತ್ತಷ್ಟು ಅರ್ತರಾಗಿ "ನಂಗೇನೂ ಕಾಣ್ತಾನೇ ಇಲ್ಲ.  ನನ್ ಕಣ್‌ಗೆ ಏನೋ ಆಗ್ಬಿಟ್ಟಿದೆ" ಎಂದು ಒರಲಿದರು.  ಹತ್ತಿರ ಹೋದ ಗೌರಮ್ಮನವರು ಬಾಗಿ ಗಂಡನ ಮುಖವನ್ನು ಅವಲೋಕಿಸಿದರು.  ನಂತರ ನಗುತ್ತಾ ಹೇಳಿದರು:
"ನಿಮಗೆ ಕಣ್ಣುಗಳೇ ಇಲ್ಲ.  ಇಲ್ಲದ ಕಣ್ಣಗಳಿಗೆ ಏನು ಆಗೋದಿಕ್ಕೆ ಸಾಧ್ಯಸುಮ್ನೆ ಕೂಗಾಡಿ ನನ್ನ ನಿದ್ದೆ ಕೆಡಿಸಿಬಿಟ್ರಿ."
"ನಂಗೇನೂ ಕಾಣ್ತಾನೇ ಇಲ್ಲ ಗೌರಾ.  ಕತ್ಲು.  ಬರೀ ಕತ್ಲು."  ಸಾಹುಕಾರರು ವಿವರಿಸಿದರು.
"ಕತ್ಲಾ!  ಹಂಗೇಳಿ ಮತ್ತೆ" ಎನ್ನುತ್ತಾ ಗೌರಮ್ಮನವರು ದೇವರ ಮನೆಯಿಂದ ಎರಡು ಹಣತೆಗಳನ್ನು ಹಚ್ಚಿ ತಂದು ಖಾಲಿಯಾಗಿ ಭಣಗುಡುತ್ತಿದ್ದ ಸಾಹುಕಾರರ ಕಣ್ಣಗೂಡುಗಳೊಳಗಿಟ್ಟರು.  "ರೆಪ್ಪೆ ಮುಚ್ಕೊಳ್ಳೀ.  ಇಲ್ಲಾಂದ್ರೆ ದೀಪಗಳು ಆರಿಹೋಗ್ತವೆ.  ಈ ಹಾಳು ಗಾಳಿ ಜೋರಾಗಿ ಬೀಸ್ತಾ ಇದೆ" ಎಂದು ಗಂಡನಿಗೆ ಎಚ್ಚರಿಕೆ ಹೇಳಿದರು.
"ಹ್ಞೂಂ.  ಹಂಗೇ ಮಾಡ್ತೀನಿ."  ಎಂದು ಉದ್ಗರಿಸಿದರು ಸಾಹುಕಾರ್ ಕುಪ್ಪಣ್ಣನವರು.  ಹೇಳಿದಂತೆ ಮಾಡಿದರು ಕೂಡಾ.
ಹಾಗೆ ರೆಪ್ಪೆಗಳನ್ನು ಮುಚ್ಚಿದೊಡನೇ ಸಾಹುಕಾರರಿಗೆ ಒಳಗಿನದೆಲ್ಲವೂ ನಿಚ್ಚಳವಾಗಿ ಕಾಣತೊಡಗಿತು.  ಕಂಡ ದಾರಿ ಹಿಡಿದು ನಡೆಯುತ್ತಾ... ನಡೆಯುತ್ತಾ ಹೊರಟುಹೋದರು...
ವರ್ಷಗಳು ಉರುಳಿಹೋದವು...

*     *     *

ಸಾಹುಕಾರರ ಈ ಗತಿ ನನಗೆ ತಿಳಿದದ್ದು ನಾನು ಪಾಂಡಿಚೆರಿಯಿಂದ ಮೈಸೂರಿಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ.  ಬಹಳ ದಿನವಾಗಿತ್ತು ಆ ದಾರಿಯಲ್ಲಿ ಪ್ರಯಾಣಿಸಿ.  ಕಿಟಕಿಯ ಹೊರಗೆ ಸರಿದೋಡುತ್ತಿದ್ದ ಜಗತ್ತಿನತ್ತ ಕುತೂಹಲದ ನೋಟ ಬೀರುತ್ತಾ ಕುಳಿತುಕೊಂಡಿದ್ದೆ.  ಒಂದು ತಿರುವಿನಲ್ಲಿ ಬಸ್ಸು ನಿಂತುಬಿಟ್ಟಿತು.  ಡ್ರೈವರ್ ಹಿಂದೆ ತಿರುಗಿ ಪ್ರಶ್ನಿಸಿದ: "ಯಾರಾದ್ರೂ ಪ್ರಯತ್ನಿಸ್ತೀರಾ?"  ಏನನ್ನು ಅಂತ ಕುತೂಹಲವಾಯಿತು.  ಕೇಳಿಯೇಬಿಟ್ಟೆ.  ಅವನು ನನ್ನನ್ನೊಮ್ಮೆ ವಿಚಿತ್ರವಾಗಿ ನೋಡಿ ನಂತರ ನಕ್ಕು ಹೇಳಿದ: "ಓ ನೀವು ಹೊಸಬರಿರಬೇಕು.  ನಿಮಗೆ ವಿಷ್ಯ ಗೊತ್ತಿಲ್ಲಾಂತ ಕಾಣುತ್ತೆ..." ಎಂದು ಆರಂಭಿಸಿ ಸಾಹುಕಾರ್ ಕುಪ್ಪಣ್ಣನವರ ಇಡಿ ವೃತ್ತಾಂತವನ್ನು ನನಗೆ ವಿವರವಾಗಿ ಹೇಳಿದ.  ಕೊನೆಯಲ್ಲಿ "...ಹೀಗೆ ಹೊರಟುಹೋದ ಸಾಹುಕಾರರನ್ನು ಹುಡುಕಿ ಕರೆತಂದವರಿಗೆ ಅವರ ಒಬ್ಬಳೇ ಮಗಳನ್ನು ಮದುವೆ ಮಾಡಿ ಕೊಟ್ಟು ಮನೆ ಅಳಿಯನನ್ನಾಗಿ ಮಾಡಿಕೊಳ್ಳುವುದಾಗಿ ಅವರ ಧರ್ಮಪತ್ನಿ ಗೌರಮ್ಮನವರು ಡಂಗೂರ ಸಾರಿಸಿದ್ದಾರೆ.  ಅದೆಷ್ಟೋ ಯುವಕರು ಪ್ರಯತ್ನ ಪಟ್ಟಿದ್ದಾರೆ.  ಆದರೆ ಯಾರಿಗೂ ಜಯ ಸಿಕ್ಕಿಲ್ಲ" ಅಂದ.
ಅರೆ ಇದೇನು ವಿಚಿತ್ರ ಅಂದುಕೊಂಡೆ.  ಅಷ್ಟರಲ್ಲಿ ಪಕ್ಕದಲ್ಲಿದ್ದ ಹಿರಿಯರೊಬ್ಬರು "ಹೋಗಪ್ಪ ಒಂದು ಪ್ರಯತ್ನ ಅಂತ ಮಾಡಿನೋಡು.  ಆ ಮುತ್ತೈದೆಯ ಗೋಳನ್ನ ನೀಗಿಸು.  ಇದನ್ನ ನಿಮ್ಮಂತಹ ಯುವಕರು ಮಾಡದೇ ನನ್ನಂತಹ ಮುದುಕರು ಮಾಡೋಕಾಗುತ್ತಾ?" ಅಂದರು.  "ಅವರ ಜತೆ ಹೋಗಿ.  ಬೇಗ ಬೇಗ" ಎನ್ನುತ್ತಾ ಡ್ರೈವರ್ ಅವಸರಿಸಿದ.  ಆತುರಾತುರವಾಗಿ ಬಸ್ಸಿನಿಂದ ಕೆಳಗಿಳಿಯುತ್ತಿದ್ದ ಹಲವಾರು ಯುವಕರತ್ತ ಬೆರಳು ಮಾಡಿದ.  ಪಕ್ಕದಲ್ಲಿದ್ದ ಹಿರಿಯರು ನನ್ನ ತೋಳು ಹಿಡಿದು ನನ್ನನ್ನು ಬಸ್ಸಿನಿಂದ ಕೆಳಗಿಳಿಸಿಯೇಬಿಟ್ಟರು.  ಮುಂದಿನ ಕ್ಷಣದಲ್ಲಿ ಬಸ್ಸು ಸರ್ರನೆ ಮುಂದಕ್ಕೆ ಸರಿದು ಮರೆಯಾಗಿಹೋಯಿತು.
ಇದೆಲ್ಲವೂ ಒಂದೆರಡು ಕ್ಷಣದಲ್ಲಿ ನಡೆದುಹೋಯಿತು.
ಅಪರಿಚಿತ ಊರು.  ಪರಿಚಯವಿಲ್ಲದ ಜನ.  ಒಂದುಕ್ಷಣ ಗಾಬರಿಯಾಯಿತು.  ನಾನೂ ಮನುಷ್ಯನಲ್ಲವೇಮರುಕ್ಷಣ ಧೈರ್ಯ ತಂದುಕೊಂಡೆ.  ನಾನು ಯುವಕನಲ್ಲವೇ?
ಆ ಯುವಕರ ಗುಂಪನ್ನು ಹಿಂಬಾಲಿಸಿದೆ.  ಹಾಗೇ ನಡೆಯುತ್ತಿದ್ದಂತೇ ಜನ ಯಾವುಯಾವುದೋ ದಾರಿಗಳಿಂದ ಬಂದು ನಮ್ಮನ್ನು ಸೇರಿಕೊಂಡರು.  ಅವರಲ್ಲಿ ಹೆಚ್ಚಿನವರು ಯುವಕರಾಗಿದ್ದರೂ ಮುದುಕರೂ ಸಾಕಷ್ಟು ಸಂಖ್ಯೆಯಲ್ಲಿದ್ದರು.  ಚಪಲ ಅಂದುಕೊಂಡೆ.  ಅವರು ನಮ್ಮನ್ನು ಸೇರಿಕೊಂಡರೋ, ನಾವು ಅವರನ್ನು ಸೇರಿಕೊಂಡೆವೋ, ಅಂತೂ ಒಂದು ಜನಜಾತ್ರೆಯಾಗಿ ಹಾದಿಯಲ್ಲಿ ಹರಿದೆವು.  ಅವರೆಲ್ಲರೂ ನಡೆದತ್ತ ನಡೆದು ನಾನು ಸಾಹುಕಾರ್ ಕುಪ್ಪಣ್ಣನವರ ಭವ್ಯ ಮಹಲಿನ ಮುಂದೆ ಬಂದು ನಿಂತಾಗ ಪೂರ್ವದಲ್ಲಿ ಸೂರ್ಯ ಮೂಡುತ್ತಿದ್ದ.
ನಮ್ಮನ್ನೆಲ್ಲಾ ಒಂದು ವಿಶಾಲವಾದ ಚಪ್ಪರದ ಕೆಳಗೆ ಒಟ್ಟುಗೂಡಿಸಿದರು.  ಅಲ್ಲಿ ಹಲವಾರು ಟೀವೀಗಳಿದ್ದವು, ರೈಲ್ವೇ ಸ್ಟೇಷನ್‌ಗಳಲ್ಲಿರುತ್ತವಲ್ಲಾ ಹಾಗೆ.  ನಾನು ನೋಡುತ್ತಿದ್ದಂತೇ ಅವೆಲ್ಲವುಗಳಲ್ಲೂ ಏಕಕಾಲದಲ್ಲಿ ಮೈತುಂಬಾ ಸೆರಗು ಹೊದ್ದು, ಹಣೆತುಂಬಾ ಕುಂಕುಮ ಹಚ್ಚಿಕೊಂಡಿದ್ದ ಗುಂಡುಗುಂಡನೆಯ ಮಹಿಳೆಯೊಬ್ಬರು ಅವತರಿಸಿ ಮಾತಾಡತೊಡಗಿದರು:
"ವೀರರೇ, ಶೂರರೇ, ಪರಾಕ್ರಮಿಗಳೇ ಏನು ಹೇಳಲಿ ನನ್ನ ಕಥೆಯ.  ನನ್ನ ಪತಿದೇವರು ವರ್ಷ ವರ್ಷಗಳಿಂದ ಹೀಗೇ ಕೂತುಬಿಟ್ಟಿದ್ದಾರೆ.  ಮಾತಿಲ್ಲ ಕತೆಯಿಲ್ಲ.  ಮಾತಾಡಿ ಮಾತಾಡೀ ಅಂತ ತಿಂಗಳುಗಟ್ಟಲೆ ಗೋಳಾಡಿದ್ದಕ್ಕೆ ಒಂದು ದಿನ ಕನಸಲ್ಲಿ ಬಂದು ಎಂದೋ ಕಳೆದುಹೋದ ನನ್ನನ್ನೇ ಹುಡುಕಿಕೊಂಡು ನಾನು ಹೊರಟಿದ್ದೇನೆ.  ನಾ ನಡೆದದ್ದು ಕಾಣದ ಹಾದಿ.  ಈ ಹುಡುಕಾಟದಲ್ಲಿ ನಾನು ದಾರಿ ತಪ್ಪಿದ್ದೇನೆ ಅಂತ ಈಗ ತಾನೆ ಅರಿವಿಗೆ ಬಂತು.  ಬಂದ ದಾರಿ ಯಾವುದು, ಹೋಗಬೇಕಾದ ದಾರಿ ಯಾವುದು- ಏನೂ ತಿಳಿಯುತ್ತಿಲ್ಲ.  ದಿಕ್ಕೆಟ್ಟು ಅಲೆಯುತ್ತಿದ್ದೇನೆ ಎಂದು ಹೇಳಿ ಅತ್ತುಬಿಟ್ಟರು.  ಏನು ಮಾಡಬೇಕು ಅಂತ ನನಗೆ ತಿಳಿಯುತ್ತಿಲ್ಲ.  ನಾನು ಹೆಣ್ಣುಹೆಂಗಸು.  ಇವರನ್ನು ಎಲ್ಲಿ ಅಂತ ಹುಡುಕಲಿಜತೆಗೇ ನನಗಿರುವುದು ಒಬ್ಬಳು ಮಗಳು.  ಮಗನಾದರೂ ಇದ್ದಿದ್ದರೆ ಇವರನ್ನ ಹುಡುಕಲು ಕಳಿಸುತ್ತಿದ್ದೆ" ಎಂದು ಹೇಳಿ ಕಣ್ಣೊರೆಸಿಕೊಂಡರು.  ನೆರೆದಿದ್ದ ಜನಸಮೂಹ "ತ್ಚು ತ್ಚು" ಅಂದಿತು.  ಅವರೇ ಸಾಹುಕಾರರ ಪತ್ನಿ ಗೌರಮ್ಮನವರು ಎಂದು ನನಗರಿವಾಗಿ ಅವರ ಮುಂದಿನ ಮಾತುಗಳತ್ತ ಗಮನ ಕೊಟ್ಟೆ.  ಆಕೆ ಮಾತು ಮುಂದುವರೆಸಿದರು: "ಆ ದಿನದಿಂದ ಅನುದಿನವೂ ಪ್ರಾತಃಕಾಲದಲ್ಲಿ ಇಲ್ಲಿ ನೆರೆಯುವ ವೀರರಿಗೆ ನಾನು ವೀಳೆಯ ನೀಡುತ್ತಿದ್ದೇನೆ, ನನ್ನ ಪತಿದೇವರನ್ನು ಹುಡುಕಿತನ್ನಿ ಎಂದು.  ವಿಜಯಶೀಲರಾಗಿ ಬಂದವರಿಗೆ ನನ್ನ ಸುಪುತ್ರಿಯ ಕೈಹಿಡಿದು ಈ ಸಂಪತ್ತಿಗೆ ಒಡೆಯರಾಗುವ ಯೋಗ.  ಇದುವರೆಗೆ ಆ ಯೋಗ ಯಾರಿಗೂ ದಕ್ಕಿಲ್ಲ.  ಇಂದು ನಿಮಗೆ ವೀಳೆಯ ನೀಡುತ್ತಿದ್ದೇನೆ.  ನಿಮ್ಮಲ್ಲೊಬ್ಬರು ವಿಜಯಶೀಲರಾಗಿ ಬರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುತ್ತೇನೆ."  ಹಾಗೆಂದವರೇ ಟಿವಿ ಪರದೆಗಳ ಹೊರಗೆ ಕೈಚಾಚಿ ವೀಳೆಯಗಳನ್ನು ಮುಂದೆ ಚಾಚಿದರು.  ಎಲ್ಲರೂ ಒಬ್ಬೊಬ್ಬರಾಗಿ ಹೋಗಿ ವೀಳೆಯ ತೆಗೆದುಕೊಂಡರು.  ನನಗೂ ಸಿಕ್ಕಿತು.
ವೀಳೆಯ ಕೈಗೆ ಬಂದೊಡನೇ ಜನಸಮೂಹ ಸಾಹುಕಾರ್ ಕುಪ್ಪಣ್ಣನವರನ್ನರಸಿ ದಿಕ್ಕುದಿಕ್ಕಿಗೆ ಚದುರಿಹೋಯಿತು.  ಅವರು ಎಬ್ಬಿಸಿದ ಧೂಳಿನಲ್ಲಿ ಒಂದುಕ್ಷಣ ನನಗೇನೂ ಕಾಣಲಿಲ್ಲ.  ಸುಮ್ಮನೆ ನಿಂತೆ.  ನನ್ನೊಳಗೆ ಗೊಂದಲ ಆರಂಭವಾಗಿತ್ತು.  ಒಂದರ ಮೇಲೊಂದು ಪ್ರಶ್ನೆಗಳು.
ಈ ಸಾಹುಕಾರ್ ಕುಪ್ಪಣ್ಣನೆಂಬ ಮಹಾಶಯನನ್ನು ಹುಡುಕಿ ಕರೆತಂದರೆ ನನಗೆ ಸಿಗುವುದೇನುಅವರ ಮಗಳು ಮತ್ತವರ ಆಸ್ತಿ.  ಉತ್ತರ ಸ್ಪಷ್ಟವಾಗಿಯೇ ಇತ್ತು.  ಪ್ರಶ್ನೆ ಅದಲ್ಲ.  ಅದು ಹೀಗೆ- ಸಾಹುಕಾರರ ಮಗಳು ಮತ್ತವರ ಆಸ್ತಿಯ ಅಗತ್ಯ ಈಗ ನನಗಿದೆಯೇ?
ನನಗೀಗ ಮದುವೆಯ ವಯಸ್ಸು.  ಮದುವೆ ಮಾಡಿಕೋ ಎಂದು ಸರಸಕ್ಕ ಒತ್ತಾಯ ಮಾಡುತ್ತಲೇ ಇದ್ದಾಳೆ.  ಮಾಡಿಕೊಳ್ಳಬೇಕು ಎಂದು ನನಗೂ ಅನಿಸುತ್ತಿದೆ.  ಸುಂದರ, ಸುಸಂಸ್ಕೃತ, ವಿದ್ಯಾವಂತ ಹುಡುಗಿಯೊಬ್ಬಳು ಸಿಕ್ಕಿದರೆ ಮದುವೆ ಮಾಡಿಕೊಂಡೇ ಬಿಡೋಣ ಎಂದು ತೀರ್ಮಾನಿಸಿಬಿಟ್ಟಿದ್ದೇನೆ.  ಈಗ ನನ್ನ ಮುಂದಿರುವ ಪ್ರಶ್ನೆ ಏನೆಂದರೆ ಸಾಹುಕಾರರ ಮಗಳು ಸುಂದರಿಯೇ, ಸುಸಂಸ್ಕೃತಳೇ, ವಿದ್ಯಾವಂತೆಯೇ?
ಅವಳು ಇದಾವುದೂ ಅಲ್ಲದೇ ಇದ್ದ ಪಕ್ಷದಲ್ಲಿ ನನ್ನ ಶ್ರಮವೆಲ್ಲಾ ವ್ಯರ್ಥವಲ್ಲವೇ?
ಸಾಹುಕಾರರನ್ನು ಹುಡುಕಲು ಹೊರಡುವ ಮೊದಲು ಅವರ ಮಗಳನ್ನೊಮ್ಮೆ ನೋಡಬೇಕು.  ಅವಳು ನಾ ಬಯಸಿದಂತೇ ಇದ್ದರೆ ಆಗ ಕುಪ್ಪಣ್ಣನವರ ಶೋಧಕ್ಕೆ ಹೊರಟರಾಯಿತು.  ಅವಳೇನಾದರೂ ಅವಿದ್ಯಾವಂತ, ನಯನಾಜೂಕಿಲ್ಲದ ಅಡ್ಡಾದಿಡ್ಡಿ ಮೈನ ಹಳ್ಳಿಯ ಎಮ್ಮೆಯಂತಿದ್ದರೆ ನೀನೂ ಬ್ಯಾಡ ನಿಮ್ಮಪ್ಪನನ್ನು ಹುಡುಕುವ ತಾಪತ್ರಯವೂ ಬ್ಯಾಡ ಎಂದು ಹೇಳಿ ಸಿಕ್ಕಿದ ಬಸ್ ಹತ್ತಿ ಮೈಸೂರಿಗೆ ಹೊರಟುಬಿಡಬೇಕು...
ಹೀಗೆ ಯೋಚಿಸುತ್ತಿದ್ದಂತೇ ಗೌರಮ್ಮನವರ ದನಿ ಕೇಳಿಸಿತು: "ಇನ್ನೂ ಇಲ್ಲೇ ಯಾಕೆ ನಿಂತಿದ್ದೀಯಪ್ಪಉಳಿದವರೆಲ್ಲರೂ ಹೊರಟಾಯಿತು."
"ನಾನೊಮ್ಮೆ ನಿಮ್ಮ ಮಗಳನ್ನು ನೋಡಬೇಕು" ಅಂದೆ.
ಅವರು ಬೆಚ್ಚಿದಂತೆ ಕಂಡಿತು.  ಹಿಂದೆಂದೂ ಇಂತಹ ಪ್ರಸಂಗ ಅವರಿಗೆ ಎದುರಾಗಿರಲಿಲ್ಲವೇನೋ.  "ನೀನು ಅವಳನ್ನ ನೋಡಬೇಕಾ?"  ಎಂದು ಅಚ್ಚರಿಯ ಉದ್ಗಾರ ತೆಗೆದರು.  "ಹೌದು ತಾಯೀ" ಅಂದೆ.  ಅವರು ಅರೆಕ್ಷಣ ಮೌನವಾಗಿದ್ದು ನಂತರ "ಸರಿ ಏನು ನಡೆಯಬೇಕೆಂದು ಆ ಜಗನ್ನಿಯಾಮಕನ ಇಚ್ಛೆಯೋ ಹಾಗೆಯೇ ಆಗಲಿ" ಎಂದು ಸಣ್ಣಗೆ ಗುನುಗಿ "ಕನಕಾ ಇವರನ್ನು ರೋಹಿಣಿಯ ಬಳಿಗೆ ಕರೆದುಕೊಂಡು ಹೋಗು" ಎಂದು ಕೂಗಿದರು.
ಇವರ ಮಗಳ ಹೆಸರು ರೋಹಿಣಿ!  ಅಮ್ಮ ಹೇಳುತ್ತಿದ್ದಂತೆ ನನ್ನ ಜನ್ಮನಕ್ಷತ್ರವೂ ರೋಹಿಣಿ!
ಮೊದಲ ಶಕುನವೇ ಶುಭಕರವಾಗಿ ಕಾಣುತ್ತಿದೆ ಅನಿಸಿತು.
"ಇಲ್ಲಿ ಬನ್ನಿ" ಎಂದು ಕರೆದ ಮಧ್ಯವಯಸ್ಸಿನ ಹೆಂಗಸೊಬ್ಬಳನ್ನು ಹಿಂಬಾಲಿಸಿದೆ.  ಆಕೆ ನನ್ನನ್ನು ಹೆಬ್ಬಾಗಿಲ ಮೂಲಕ ಒಳನಡೆಸಿದಳು.  ನಾನು ಎಡಬಲ ನೋಡದೇ ಮುಂದೆ ಸಾಗಿದೆ.  ಈ ಆಸ್ತಿ ಪಾಸ್ತಿ ವೈಭವದ ಕಡೆ ಕಣ್ಣು ಹೊರಳಿಸುವುದೇನಿದ್ದರೂ ರೋಹಿಣಿ ನನಗಿಷ್ಟವಾದರೆ ಮಾತ್ರ...
ಒಳಕೋಣೆಯೊಂದರ ಬಾಗಿಲಲ್ಲಿ ಕಂಡ ಯುವತಿಯೊಬ್ಬಳು ಕೈಜೋಡಿಸಿ ನಗುಮೊಗ ಮಾಡಿದಳು.
"ಸಾಹುಕಾರರ ಮಗಳನ್ನು ನೋಡಬೇಕು" ಅಂದೆ.
"ನೋಡುತ್ತಲೇ ಇದ್ದೀರಲ್ಲ?" ಎನ್ನುತ್ತಾ ನಕ್ಕಳು.
ಸಾವರಿಸಿಕೊಳ್ಳಲು ನನಗೆ ನಿಮಿಷಗಳು ಬೇಕಾದವು.
ಅವಳು ಅಗರ್ಭ ಶ್ರೀಮಂತರ ಏಕೈಕ ಪುತ್ರಿಯಂತಿರಲೇ ಇಲ್ಲ.  ಸಾಧಾರಣ ಸೀರೆ ರವಿಕೆಯಲ್ಲಿದ್ದಳು.  ಅಲ್ಲಲ್ಲಿದ್ದ ಮಾಮೂಲೀ ಆಭರಣಗಳ ಹೊರತಾಗಿ ಬೇರಾವ ಅಲಂಕಾರವೂ ಇಲ್ಲ.  ಮುಖದಲ್ಲಿ ಮಾತ್ರ ಸೌಮ್ಯ ಮುಗುಳ್ನಗೆ.  ಕಣ್ಣುಗಳಲ್ಲಿ ಕಾಂತಿ, ಬುದ್ದಿವಂತಿಕೆ ಶೂಚಿಸುವ ಅಗಲ ಹಣೆ...
ಅವಳು ವಿದ್ಯಾವಂತೆ, ವಿನಯಶೀಲೆ ಎಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿ ಗೋಚರವಾಗುತ್ತಿತ್ತು.  ಎಲ್ಲಕ್ಕಿಂತ ಹೆಚ್ಚಾಗಿ ನನ್ನಂತಹ ಮಧ್ಯಮವರ್ಗದವನೊಡನೆ ಸಂಸಾರ ಮಾಡುವಷ್ಟು ಸರಳತೆ ಅವಳಲ್ಲಿ ಎದ್ದು ಕಾಣುತ್ತಿತ್ತು.
ನನಗವಳು ಇಷ್ಟವಾದಳು.
ಮುಂದಿನ ಪ್ರಶ್ನೆ- ನಾನು ಅವಳಿಗೆ ಒಪ್ಪಿಗೆಯೇ?
ಅವರಪ್ಪನನ್ನು ನಾನೇನಾದರೂ ಹುಡುಕಿ ಕರೆತಂದೇಬಿಟ್ಟರೆ ಆಗವಳು ತಾಯಿಯ ಮಾತು ಮೀರಲಾಗದೇ ತನಗಿಷ್ಟವಿಲ್ಲದಿದ್ದರೂ ನನ್ನನ್ನು ಮದುವೆಯಾಗುವ ದುರಾದೃಷ್ಟಕ್ಕೊಳಗಾದರೆ...?
ಬದುಕಿನಲ್ಲಿ ಅವಳಿಗೂ ಸಂತೋಷವಿರುವುದಿಲ್ಲ.  ನನಗೂ ನೆಮ್ಮದಿ ಇರುವುದಿಲ್ಲ.
ಅಂತಹ ಬದುಕು ನನಗೂ ಬೇಡ.  ಅವಳಿಗೂ ಬೇಡ.
"ನೋಡಿ ನೀವು ನನಗೇನೋ ಇಷ್ಟವಾಗಿದ್ದೀರಿ.  ನಿಮ್ಮ ತಂದೆಯವರನ್ನು ಹುಡುಕಲು ನನಗೊಂದು ಸಕಾರಣ ಸಿಕ್ಕಿತು.  ಆದರೆ ನಾನು ನಿಮಗೆ ಒಪ್ಪಿಗೆಯೇ?" ಎನ್ನುತ್ತಾ ನನ್ನ ಬಗ್ಗೆ ಎಲ್ಲವನ್ನೂ ಹೇಳಿದೆ.  ಈಗಿಲ್ಲದ ಸ್ಕೂಲ್ ಟೀಚರ್ ಅಮ್ಮ, ಎಂದೋ ನಮ್ಮನ್ನು ಬಿಟ್ಟು ಇನ್ನೊಬ್ಬಳ ಸೆರಗು ಹಿಡಿದು ಹೋದ ಅಪ್ಪ, ಈ ಪ್ರಪಂಚದಲ್ಲಿ ನನಗೀಗ ಎಲ್ಲವೂ ಆಗಿರುವ ನನ್ನ ಸರಸಕ್ಕ... ಮೊನ್ನೆ ತಾನೇ ಕೈಗೆ ಹತ್ತಿದ ಅದ್ಯಾಪಕ ವೃತ್ತಿ...
ಅವಳು ಮೌನವಾಗಿ ಎಲ್ಲವನ್ನೂ ಕೇಳಿಸಿಕೊಂಡಳು.  ತಲೆಯೆತ್ತಿ ಗಂಭೀರದನಿಯಲ್ಲಿ ಹೇಳಿದಳು: "ನನ್ನ ಇಷ್ಟಾನಿಷ್ಟಗಳ ಬಗ್ಗೆ ಕಾಳಜಿ ತೋರಿದ ಮೊಟ್ಟಮೊದಲ ವ್ಯಕ್ತಿ ನೀವು.  ನನ್ನ ಮುಖವನ್ನೂ ನೋಡದೇ ಕೇವಲ ನಮ್ಮ ಆಸ್ತಿಗಾಗಿ ಆಸೆಪಟ್ಟು ನನ್ನ ತಂದೆಯವರನ್ನು ಹುಡುಕಹೊರಟವರೇ ಎಲ್ಲಾ.  ನಾನು ನಿನಗಿಷ್ಟವೇ? ಎಂದು ಇದುವರೆಗೆ ನನ್ನನ್ನು ಕೇಳಿದವರಾರೂ ಇಲ್ಲ.   ಈಗ ನೀವು ಕೇಳುತ್ತಿದ್ದೀರಿ."  ಒಮ್ಮೆ ನಿಲ್ಲಿಸಿ ಸ್ಪಷ್ಟ ದನಿಯಲ್ಲಿ ಹೇಳಿದಳು: "ನಿಮ್ಮನ್ನು ಮದುವೆಯಾಗಲು ನನಗೆ ಇದೊಂದೇ ಕಾರಣ ಸಾಕು.  ನೀವು ನನಗೆ ಒಪ್ಪಿಗೆ."
ನನಗೆ ನಿರಾಳವೆನಿಸಿತು.  ಇನ್ನು ಸಾಹುಕಾರ್ ಕುಪ್ಪಣ್ಣನವರನ್ನು ಹುಡುಕಲು ಹೊರಡಬೇಕು.  ಈಗಾಗಲೇ ಹೊರಟಿರುವ ಸಾವಿರಾರು ಜನರ ಕೈಗೆ ಸಾಹುಕಾರರು ಸಿಗುವ ಮೊದಲೇ ನಾನವರನ್ನು ಹುಡುಕಿಬಿಡಬೇಕು.  ಯಾವ ಕಾರಣಕ್ಕೂ ರೋಹಿಣಿಯನ್ನು ಕಳೆದುಕೊಳ್ಳಬಾರದು.
"ಸರಿ.  ನಾನಿನ್ನು ಬರಲೇ?" ಎನ್ನುತ್ತಾ ಅವಸರವಸರವಾಗಿ ಹಿಂದೆ ತಿರುಗಿದೆ.
ಅವಳು ನಕ್ಕುಬಿಟ್ಟಳು.  ನಾನು ಗಕ್ಕನೆ ಅವಳತ್ತ ತಿರುಗಿದೆ.  ಅವಳು ನಗುತ್ತಲೇ ಪ್ರಶ್ನಿಸಿದಳು: "ನೀವು ಹೊರಟಿರುವುದು ಕಾಣದ ಹಾದಿಯಲ್ಲಿ.  ಅದಕ್ಕೆ ಅಗತ್ಯ ತಯಾರಿ ಮಾಡಿಕೊಂಡಿರುವಿರೇನು?"
ನನಗೇನೂ ಅರ್ಥವಾಗಲಿಲ್ಲ.  ಅವಳ ಮುಖವನ್ನೇ ಮಿಕಿಮಿಕಿ ನೋಡಿದೆ.  ಅವಳು ನಗೆ ನಿಲ್ಲಿಸಿ ಸೌಮ್ಯದನಿಯಲ್ಲಿ ಹೇಳಿದಳು: "ನನ್ನನ್ನು ಮದುವೆಯಾಗಲು ನಿಮಗೆಷ್ಟು ಆಸೆ ಇದೆಯೋ ಅಷ್ಟೇ ಆಸೆ ನನ್ನ ಇಷ್ಟಾನಿಷ್ಟಗಳಿಗೆ ಬೆಲೆಕೊಡುವ ನಿಮ್ಮನ್ನು ಮದುವೆಯಾಗಲು ನನಗೂ ಇದೆ.  ನಿಮ್ಮನ್ನು ಕಳೆದುಕೊಳ್ಳಲು ನಾನು ತಯಾರಿಲ್ಲ.  ನಿಮ್ಮ ಹುಡುಕಾಟದಲ್ಲಿ ನಾನು ಸಹಕರಿಸುತ್ತೇನೆ.  ನಿಮ್ಮ ಗೆಲುವೇ ನನ್ನ ಗೆಲುವು."  ಹಾಗೆಂದವಳೇ ಪಕ್ಕಕ್ಕೆ ಹೊರಳಿ ಕೂಗಿ ಹೇಳಿದಳು: "ಕನಕಾ ಇವರಿಗೊಂದು ಕುದುರೆ ಕೊಡು.  ಇವರ ಕಾಲುಗಳಿಗೆ ಬಲ ಬರಲಿ.  ಇವರಿಗೆ ಬುತ್ತಿ ಕಟ್ಟಿಕೊಡು.  ಹಸಿವು ತಣಿಯಲಿ.  ಸೋರೆಬುರುಡೆಯಲ್ಲಿ ನೀರು ತುಂಬಿಸಿಕೊಡು.  ನೀರಡಿಕೆ ಕಾಡದಿರಲಿ" ಅಂದಳು.
"ಎಲ್ಲವೂ ಎಂದೋ ತಯಾರಾಗಿ ಇವರಿಗಾಗಿ ಕಾಯುತ್ತಿವೆ" ಎಂಬ ಉತ್ತರ ಬಂತು.
ಕನಕ ನೀಡಿದ ರೊಟ್ಟಿಗಳಿದ್ದ ಬುತ್ತಿಯ ಚೀಲ, ನೀರು ತುಂಬಿದ್ದ ಸೋರೆ ಬುರುಡೆಯನ್ನು ತೆಗೆದುಕೊಂಡು ತಯಾರಾಗಿ ನಿಂತಿದ್ದ ಬಿಳಿಗುದುರೆಯನ್ನೇರಿದೆ.
"ಬರಲೇ?"  ರೋಹಿಣಿಯತ್ತ ತಿರುಗಿ ಕೇಳಿದೆ.  ಅವಳ ಮುಖದಲ್ಲಿ ಮತ್ತೆ ನಗೆ.  "ಕಣ್ಣದಾರಿ ಹಿಡಿದು ಹೋದವರನ್ನು ಕಣ್ಣೊಳಗೇ ನುಗ್ಗಿ ಹುಡುಕಬೇಕು ಗೊತ್ತೇ?" ಅಂದಳು.  ನಾನು ಗೊಂದಲಕ್ಕೊಳಗಾದೆ.  ಅವಳ ಮಾತಿನ ಅರ್ಥ ನನಗೆ ಹೊಳೆಯಲೇ ಇಲ್ಲ.  ಅವಳು ಮತ್ತೊಮ್ಮೆ ನಕ್ಕಳು.  "ನನ್ನನ್ನು ತಲುಪುವ ಹಾದಿಯನ್ನು ನನ್ನವನಿಗೆ ನಾ ತೋರದೇ ಇನ್ನಾರು ತೋರಬೇಕು?" ಎನ್ನುತ್ತಾ ಕುದುರೆಗೆ ಸನ್ನೆ ಮಾಡಿ ಮುಂದೆ ಹೆಜ್ಜೆ ಇಟ್ಟಳು.  ಅವಳದೇ ಕುದುರೆಯಲ್ಲವೇಅವಳನ್ನು ಪುಟುಪುಟು ಹಿಂಬಾಲಿಸಿತು.
ಹಲವು ದ್ವಾರಗಳನ್ನು ದಾಟಿ ಒಂದು ವಿಶಾಲ ಹಜಾರಕ್ಕೆ ಬಂದೆವು.  ಅಲ್ಲಿ ಟೀವಿಯೆದುರಿನ ಸೋಫಾದಲ್ಲಿ ಸಾಹುಕಾರ್ ಕುಪ್ಪಣ್ಣನವರು ಕಲ್ಲಿನಲ್ಲಿ ಕಡೆದ ಪ್ರತಿಮೆಯಂತೆ ಕುಳಿತುಬಿಟ್ಟಿದ್ದರು.  ರೋಹಿಣಿ ಅವರತ್ತ ಕೈತೋರಿದಳು.  ತಕ್ಷಣ ಕಣ್ಣದಾರಿ ಹಿಡಿದುಹೋದವರನ್ನು ಕಣ್ಣೊಳಗೇ ನುಗ್ಗಿ ಹುಡುಕಬೇಕು ಎಂಬ ಅವಳ ಮಾತಿನ ಅರ್ಥ ನನಗೆ ಹೊಳೆದುಬಿಟ್ಟಿತು.  ಅವಳತ್ತ ನೋಡಿ ಸಣ್ಣಗೆ ನಗುತ್ತಾ "ಅರ್ಥವಾಯಿತು" ಅಂದೆ.
"ಅರ್ಥ ಮಾಡಿಸುವುದೇ ಹೆಣ್ಣಿನ ಕರ್ತವ್ಯ."  ಕುಲುಕುಲು ನಕ್ಕಳು.  ಕುದುರೆಯ ಕಣ್ಣಮುಂದೆ ಚಿಟಕೆ ಹೊಡೆದಳು.  ಅದು ಮುಂದೆ ಹೆಜ್ಜೆ ಇಟ್ಟಿತು.
ಸಾಹುಕಾರ್ ಕುಪ್ಪಣ್ಣವರ ಮುಂದೆ ಹೋಗಿ ನಿಂತಾಗ ಸಮಸ್ಯೆ ಎದುರಾಯಿತು.  ಎಡಗಣ್ಣಿನ ಮೂಲಕ ಒಳಗೆ ಹೋಗುವುದೋ, ಅಥವಾ ಬಲಗಣ್ಣಿನ ಮೂಲಕವೋ?
ರೋಹಿಣಿಯತ್ತ ನೋಡಿದೆ.  ಅವಳು ಎಡಗಣ್ಣಿಗೆ ಸೆರಗಿನ ತುದಿಯೊತ್ತಿದಳು.  ಅದು ಸೂಚನೆ.  ಎಡಗಣ್ಣ ಬಾಗಿಲಲ್ಲಿ ನಿಂತೆ.  ಆ ಕ್ಷಣದಲ್ಲಿ ಸಾಹುಕಾರರ ತುಟಿಗಳು ಅಲುಗಿದವು.  ಆಗಸದ ಯಾವುದೋ ಅಂಚಿನಲ್ಲಿ ತೆಳುವಾಗಿ ಗುಡುಗುಟ್ಟಿದಂತೆ ಪ್ರಶ್ನೆ ಬಂತು:
"ಪಾಸ್‌ವರ್ಡ್ ಪ್ಲೀಸ್."
ನನಗೆ ದಿಗ್ಭ್ರಮೆಯಾಯಿತು.  ಇದೆಂತಹ ಪಾಸ್‌ವರ್ಡ್ ಇದಕ್ಕೆದಿಕ್ಕೆಟ್ಟವನಂತೆ ಮತ್ತೆ ರೋಹಿಣಿಯತ್ತ ನೋಡಿದೆ.  ಅವಳು ತನ್ನೆದೆಯ ಮೇಲೆ ತೋರುಬೆರಳನ್ನಿಟ್ಟು ಕಣ್ಣರೆಪ್ಪೆಗಳನ್ನು ಮೂರು ಸಲ ಪಟಪಟ ಬಡಿದಳು.
ನನಗೆ ಪಾಸ್‌ವರ್ಡ್ ಸಿಕ್ಕಿತ್ತು!
ಸಾಹುಕಾರರತ್ತ ತಿರುಗಿ ಧೃಢದನಿಯಲ್ಲಿ ಹೇಳಿದೆ:
"ರೋಹಿಣಿ ರೋಹಿಣಿ ರೋಹಿಣಿ."
ಸಾಹುಕಾರರ ಎಡಗಣ್ಣ ರೆಪ್ಪೆ ನಿಧಾನವಾಗಿ ತೆರೆದುಕೊಂಡಿತು!
ಸಂತೋಷದಿಂದ ರೋಹಿಣಿಯತ್ತ ನೋಡಿದೆ.  ಅವಳ ಮುಖದಲ್ಲೂ ಸಂತಸದ ಕಿರಣ.
"ನಾನಿನ್ನು ಬರಲೇ?" ಅಂದೆ.  ಅವಳು ಹತ್ತಿರ ಸರಿದಳು.  ನನ್ನ ಕೈ ಹಿಡಿದು ಹೇಳಿದಳು: "ಇಲ್ಲಿಂದಾಚೆಗೆ ನೀವೇ ಹೋಗಬೇಕು.  ನಿಮ್ಮ ಜತೆ ನಾನು ಹೆಜ್ಜೆ ಹಾಕುವಂತಿಲ್ಲ."
ನನ್ನ ಮುಖದಲ್ಲಿ ಆತಂಕ ಮೂಡಿರಬೇಕು.  ಅವಳು ಆಶ್ವಾಸನೆ ನೀಡುವಂತೆ ನನ್ನ ಕೈಯನ್ನು ಒತ್ತುತ್ತಾ ಹೇಳಿದಳು: "ಚಿಂತೆ ಬೇಡ.  ನಿಮಗೆ ಯಾವಾಗ ನನ್ನ ಸಹಾಯ ಬೇಕಾಗುತ್ತದೋ ಆಗ ತಲೆಯೆತ್ತಿ ಮೇಲೆ ನೋಡಿ.  ಆಕಾಶದಲ್ಲಿ ನಾನಿರುತ್ತೇನೆ."
"ನೀನು ಆಕಾಶದಲ್ಲಿ!  ಹಾಗೆಂದರೇನು?"  ಬೆರಗಿನ ಉದ್ಗಾರ ತೆಗೆದೆ.  ಅವಳ ಮುಖದಲ್ಲಿ ಮತ್ತೆ ನಗೆ.
"ನನ್ನ ಹೆಸರೇನು?"  ಕೇಳಿದಳು.
ರೋಹಿಣಿ ತಾನೆ?"
"ಹಾಗೆಂದರೇನು?"  ಅವಳ ಕಣ್ಣುಗಳಲ್ಲಿ ತುಂಟ ನಗೆ.
"ನಕ್ಷತ್ರ ಅಲ್ಲವಾ?"  ಅನುಮಾನಿಸುತ್ತಲೇ ಪಿಸುಗಿದೆ.
"ಯೆಸ್ ಅದೇ.  ನಕ್ಷತ್ರ ನನ್ನ ನಿಜರೂಪ.  ಎಲ್ಲೆಲ್ಲಿಗೆ ನಾನು ಮಾನವರೂಪದಲ್ಲಿ ಹೋಗಲಾಗುವುದಿಲ್ಲವೋ ಅಲ್ಲಿಗೆ ನನ್ನ ನಕ್ಷತ್ರರೂಪದಲ್ಲಿ ಆರಾಮವಾಗಿ ಹೋಗಬಹುದು.  ಇಲ್ಲಿಂದಾಚೆಗೆ ಆ ರೂಪದಲ್ಲೇ ನಾನು ನಿಮಗೆ ಬೆಳಕು ತೋರುತ್ತಾ ಸಾಗುತ್ತೇನೆ.  ಧೈರ್ಯವಾಗಿ ಮುಂದೆ ಸಾಗಿ.  ಗುಡ್ ಲಕ್."  ಹೇಳಿ ಕುದುರೆಯ ಹಣೆ ನೇವರಿಸಿದಳು.  ಮರುಕ್ಷಣ ಅದು ಛಂಗನೆ ಹಾರಿ ತೆರೆದಿದ್ದ ಸಾಹುಕಾರರ ಎಡಗಣ್ಣಿನೊಳಗೆ ಪ್ರವೇಶಿಸಿತು.
ಒಳಗೆ ಬಟಾಬಯಲು.  ಅಲ್ಲೊಂದು ಆರಿದ ದೀಪ.  ಅದರಲ್ಲಿ ಎಣ್ಣೆ ಇರಲಿಲ್ಲ.  ಬತ್ತಿ ಮಾತ್ರ ಇನ್ನೂ ಹೊಚ್ಚಹೊಸದಾಗಿಯೇ ಇತ್ತು.  ಮತ್ತೆ ಎಣ್ಣೆ ತುಂಬಿದರೆ ಢಾಳಾಗಿ ಉರಿಯುತ್ತದೆ ಅನಿಸಿತು.
ಮಬ್ಬುಗತ್ತಲಲ್ಲಿ ದಾರಿ ಯಾವುದೂ ಇರಲಿಲ್ಲ.  ಆ ಅನಂತ ಶೂನ್ಯದಲ್ಲಿ ಸುಮ್ಮನೆ ಒಂದು ಕಡೆ ಸಾಗಿದೆ.  ಮುಂದೆ ಹೋಗುತ್ತಿದ್ದೇನೆಯೇಅಥವಾ ಅಲ್ಲಲ್ಲೇ ಸುತ್ತುತ್ತಿದ್ದೇನೆಯೇ?"  ಒಂದೂ ತಿಳಿಯಲಿಲ್ಲ.  ಮನಸ್ಸಿಗೇನೋ ಮಂಪರು ಕವಿದಂಥ ಅನುಭವ...  ರೋಹಿಣಿ ಮರೆತೇಹೋದಳು.
ತಾಸುಗಳು ಸರಿದವು.  ಅದೆಷ್ಟೋ ಹೊತ್ತು ಸಾಗಿದ ಮೇಲೆ ಅಲ್ಲೊಂದು ಕಡೆ ದೀಪಗಳು ಕಂಡುಬಂದವು. ಅತ್ತ ದೌಡಾಯಿಸಿದೆ.  ಅಲ್ಲೊಂದು ರಸ್ತೆ.  ಅದು ಹಿಡಿದು ಮುಂದುವರಿದೆ.  ಹಾಗೆ ಸಾಗಿದಂತೆ ದೃಶ್ಯಗಳು ಬದಲಾದವು.  ಗಿಡಮರಗಳು ಕಾಣಿಸಿಕೊಂಡವು.  ಹಕ್ಕಿಗಳು ಹಾಡತೊಡಗಿದ್ದವು.  ಒಂದು ಮರದ ಕೆಳಗೆ ಕುಳಿತು ಒಂದು ರೊಟ್ಟಿ ತಿಂದು ಸ್ವಲ್ಪ ನೀರು ಕುಡಿದು ದಣಿವಾರಿಸಿಕೊಂಡು ಮುಂದೆ ಸಾಗಿದೆ.  ಅನತೀ ದೂರದಲ್ಲಿ ರಸ್ತೆ ಎರಡಾಗಿ ಸೀಳಿತ್ತು.  ಯಾವ ಸೀಳು ಹಿಡಿದು ಹೋಗಬೇಕೆಂದು ತಿಳಿಯದೇ ಅತ್ತಿತ್ತ ನೋಡಿದೆ.  ಅಲ್ಲೊಂದು ಮರದ ಕೆಳಗೆ ಸ್ತ್ರೀಯೊಬ್ಬಳು ತಲೆತಗ್ಗಿಸಿ ಹೂಮಾಲೆ ಕಟ್ಟುತ್ತಾ ಕುಳಿತಿದ್ದಳು.  ನಾ ಕಂಡ ಮೊಟ್ಟಮೊದಲ ಮಾನವಸ್ತ್ರೀ!  ಅತ್ತ ಓಡಿದೆ.
ನಾನು ಹತ್ತಿರಾಗುತ್ತಿದ್ದಂತೇ ಆಕೆ ತಲೆಯೆತ್ತಿದಳು.  ನನ್ನ ಕಣ್ಣಮುಂದಿನ ದೃಶ್ಯ ಕನಸೇನಾನು ನೋಡಿಯೇ ನೋಡಿದೆ.
ಅದು ನನ್ನಮ್ಮ!  ಅವಳ ಮುಖದಲ್ಲಿ ಪ್ರಶಾಂತ ನಗೆ.
"ಅಮ್ಮಾ" ಎನ್ನುತ್ತಾ ಹತ್ತಿರ ಓಡಿದೆ.  ಅವಳು ಕೈಯೆತ್ತಿ ತಡೆದಳು.
"ನಾನು ನಿನಗೆ ಮಾಡಬೇಕಾದ್ದೆಲ್ಲವನ್ನೂ ಮಾಡಿದ್ದೇನೆ.  ಇನ್ನು ನೀನು ನನ್ನನ್ನು ಅವಲಂಬಿಸಬಾರದು."
"ಹಾಗೆಂದರೇನಮ್ಮ?"  ಕೇಳಿದೆ.  "ನಾನು ದಾರಿ ತಪ್ಪಿದ್ದೇನೆ."  ಕುಸುಕಿದೆ.
ಅಮ್ಮ ನಕ್ಕುಬಿಟ್ಟಳು.  "ಅಯ್ಯೋ ಪೆದ್ದಾ.  ಪ್ರೀತಿಸುವ ಹೆಣ್ಣೊಬ್ಬಳು ಸಿಕ್ಕಿರುವಾಗ ನೀನು ಅದ್ಹೇಗೆ ತಾನೆ ದಾರಿ ತಪ್ಪುತ್ತೀಯೋ?"
ನನಗೆ ತಕ್ಷಣ ರೋಹಿಣಿ ನೆನಪಾದಳು.  ಸರಕ್ಕನೆ ತಲೆಯೆತ್ತಿದೆ.
ಕಣ್ಣಳತೆಯಲ್ಲಿ ನಕ್ಷತ್ರವೊಂದು ಮಿನುಗುತ್ತಿತ್ತು!
"ಇಲ್ಲಿ ಕೇಳು."  ಅಮ್ಮ ಹೇಳಿದಳು: "ಬದುಕಿನ ಒಂದು ಹಂತದವರೆಗೆ ಮಾತ್ರ ತಾಯಿ ದಾರಿ ತೋರುತ್ತಾಳೆ.  ಆ ಹಂತ ಕಳೆದ ಮೇಲೆ ದಾರಿ ತೋರುವುದು ಬಾಳಸಂಗಾತಿಯಷ್ಟೇ.  ಸಂಗಾತಿ ತೋರಿದ ದಾರಿ ಹಿಡಿದು ಹೋದವನಿಗಷ್ಟೇ ಶ್ರೇಯಸ್ಸಾಗುತ್ತದೆ.  ಸಂಗಾತಿಯನ್ನು ಕಡೆಗಣಿಸಿ ಅನ್ಯರು ತೋರಿದ ದಾರಿಯಲ್ಲಿ ನಡೆದವನಿಗೆ ಸೋಲು, ಅಪಮಾನ, ನೋವು ಕಟ್ಟಿಟ್ಟ ಬುತ್ತಿ."  ಹೇಳುತ್ತಾ ಅಮ್ಮ ನಕ್ಷತ್ರದತ್ತ ಕೈ ತೋರಿದಳು: "ಇನ್ನು ಮುಂದೆ ಅದೇ ನಿನ್ನ ದಾರಿದೀಪ.  ಅದು ನಿನ್ನ ಭವಿಷ್ಯದ ಕೀಲಿಕೈ.  ನಿನ್ನ ಯಶಸ್ಸಿನ, ಸಂತೋಷದ, ನೆಮ್ಮದಿಯ, ತೃಪ್ತಿಯ, ಶಾಂತಿಯ ಪಾಸ್‌ವರ್ಡ್."  ಹಾಗೆಂದವಳೇ ಅಮ್ಮ ಅದೃಶ್ಯವಾದಳು.
ನನಗೇನೂ ಬೇಸರವಾಗಲಿಲ್ಲ.  ನನ್ನಮ್ಮ ತನ್ನ ಪಾಲಿನ ಕರ್ತವ್ಯವನ್ನು ಮಾಡಿದ್ದಳು.  ನನ್ನ ಮುಂದಿನ ಬದುಕಿನ ಬೆಳಕನ್ನು ನನಗೆ ತೋರಿದ್ದಳು.
ತಲೆಯೆತ್ತಿ ಮೇಲೆ ನೋಡಿದೆ.  ನಕ್ಷತ್ರ ಹೊಳೆಯುತ್ತಿತ್ತು.
ರೋಹಿಣಿ!
ನನ್ನ ಭವಿಷ್ಯದ ಕೀಲಿಕೈ...  ನನ್ನ ಯಶಸ್ಸಿನ, ಸಂತೋಷದ, ನೆಮ್ಮದಿಯ, ತೃಪ್ತಿಯ, ಶಾಂತಿಯ  ಪಾಸ್‌ವರ್ಡ್!"
ಅಮ್ಮ ಅದೃಶ್ಯವಾದೆಡೆ ಅವಳು ಕಟ್ಟಿ ಮುಗಿಸಿದ್ದ ಹೂಮಾಲೆಯಿತ್ತು.  ಅಮ್ಮ ಅದನ್ನಲ್ಲೇ ಬಿಟ್ಟು ಹೋಗಿದ್ದಳು.  ಅದು ನನಗೇ ಇರಬೇಕು.  ಎತ್ತಿಕೊಂಡೆ.
ನಕ್ಷತ್ರ ರಸ್ತೆಯ ಎಡಸೀಳಿನಲ್ಲಿ ಚಲಿಸಿತು.  ನಾನದನ್ನು ಹಿಂಬಾಲಿಸಿದೆ.  ನಡೆಯುತ್ತಾ ಪಟ್ಟಣವೊಂದರ ಒಳಹೊಕ್ಕೆವು.  ಜನಜಂಗುಳಿ, ಅಂಗಡಿ ಮುಂಗಟ್ಟುಗಳು, ವಾಹನಗಳ ನಡುವೆ ಸಾಗುವಾಗ ನನ್ನ ಕಣ್ಣು ಆಗಸದಲ್ಲಿನ ನಕ್ಷತ್ರದ ಮೇಲೇ ನೆಟ್ಟಿತ್ತು.
ಅಲ್ಲೊಂದು ಕಡೆ ಬೆಟ್ಟದಷ್ಟು ಎತ್ತರಕ್ಕೆ ಸೀರೆಗಳ ರಾಶಿ.  ಅದಕ್ಕೆ ಮುಗಿಬಿದ್ದ ಹೆಂಗೆಳೆಯರ ಗುಂಪು.
ಅದೊಂದು ಸೀರೆಗಳ ಡಿಸ್ಕೌಂಟ್ ಸೇಲ್.  ನಕ್ಷತ್ರ ಅದರ ಮೇಲೆ ನಿಂತುಬಿಟ್ಟಿತು.  ಅದರರ್ಥ ಸಾಹುಕಾರರು ಇಲ್ಲೆಲ್ಲೋ ಇದ್ದಾರೆ ಎಂದೇ?
ಇರಬೇಕು.  ಸಾಹುಕಾರರಿಗೆ ಸೀರೆಗಳೆಂದರೆ ಬಲು ಇಷ್ಟ.  ಸೀರೆಯುಟ್ಟ ನೀರೆಯರೆಂದರೆ ಪ್ರಾಣ.
ಸುತ್ತಲೂ ಹುಡುಕಾಟ ನಡೆಸಿದೆ.  ಸೀರೆಗಳ ಬೆಟ್ಟ ನಿಧಾನವಾಗಿ ಕರಗುತ್ತಿತ್ತು.  ಕೊಟ್ಟಕೊನೆಯ ಸೀರೆಯನ್ನು ಒಬ್ಬಾಕೆ ಸೆಳೆದುಕೊಂಡೊಡನೆ ಇದುವರೆಗೂ ಸೀರೆರಾಶಿಯಡಿಯಲ್ಲಿ ಅಡಗಿಬಿದ್ದಿದ್ದ ವಸ್ತುವೊಂದು ನನ್ನ ಕಣ್ಣು ಸೆಳೆಯಿತು.
ಅದೊಂದು ಕಣ್ಣು!  ಸಾಹುಕಾರ್ ಕುಪ್ಪಣ್ಣನವರ ಎಡಗಣ್ಣು!
ಮುಂದೆ ನುಗ್ಗಿ ಗಬಕ್ಕನೆ ಕೈಚಾಚಿದೆ.  ನನ್ನ ಕೈ ಅದನ್ನು ಸಮೀಪಿಸುವಷ್ಟರಲ್ಲಿ ಅದೆಲ್ಲಿಂದಲೋ ಹಾರಿಬಂದ ಚಂದದ ಬಳೆಗಳಿಂದಾಲಂಕೃತವಾದ ಕೋಮಲ ಕೈಯೊಂದು ಅದನ್ನು ಮುಚ್ಚಿಬಿಟ್ಟಿತು.  ಸರಕ್ಕನೆ ತಲೆಯೆತ್ತಿದೆ.  ಬೆಚ್ಚಿದೆ.
ಕಾಲೇಜು ಸಹಪಾಠಿ ಅನಿತಾಳ ಕಣ್ಣುಗಳು ನನ್ನನ್ನೇ ನೇರವಾಗಿ ದಿಟ್ಟಿಸುತ್ತಿದ್ದವು!
ನಾನು ಸಾವರಿಸಿಕೊಳ್ಳುವ ಮೊದಲೇ ಅವಳಿಂದ ಪ್ರಶ್ನೆ ಬಂತು:
"ನನಗೆ ಬಿಡುಗಡೆ ನೀಡದೇ, ನನ್ನಿಂದ ಬಿಡುಗಡೆ ಪಡೆಯದೇ ನೀನು ಅದ್ಹೇಗೆ ತಾನೆ ಇನ್ನೊಬ್ಬಳನ್ನು ಮದುವೆಯಾಗಬಲ್ಲೆ?"
ನನಗೇನೂ ಅರ್ಥವಾಗಲಿಲ್ಲ.  ಅವಳನ್ನೇ ಮಿಕಿಮಿಕಿ ನೋಡಿದೆ.  ಅವಳ ಕಣ್ಣುಗಳು ಸಂಕುಚಿತಗೊಂಡವು.  ದನಿ ಗಡುಸಾಯಿತು.
"ಮರೆತುಬಿಟ್ಟೆಯೇನುಅಂದು ಕಾಲೇಜಿನ ನಾಟಕದಲ್ಲಿ ನಾವಿಬ್ಬರೂ ಸತಿಪತಿಯರಾಗಿ ಅಭಿನಯಿಸಿದ್ದುನಾ ನಿನ್ನ ಸಹಧರ್ಮಿಣಿ ಎಂದು ನಂಬಿದ ನನ್ನ ಅಭಿನಯಕ್ಕೆ ಅದೆಷ್ಟು ಚಪ್ಪಾಳೆಗಳು!  ಗೆಳತಿಯರ ಬಾಯಲ್ಲೆಲ್ಲಾ ನಮ್ಮಿಬ್ಬರ ಅನುರೂಪ ಜೋಡಿಯ ಮಾತೇ.  ಆ ಗಳಿಗೆಯಿಂದ ನಿನ್ನ ಕನಸು ಕಾಣತೊಡಗಿದ ನಾನು ಇಂದಿನವರೆಗೂ ಅದರಿಂದ ಹೊರಬಂದಿಲ್ಲ, ಹೊರಬರಲಾಗಿಲ್ಲ.  ನನಗೆ ಮದುವೆಯಾಗಿದೆ, ಮಕ್ಕಳಿವೆ.  ಆದರೂ ನನ್ನ ಗಂಡನೊಡನೆ ಮನಸಾರೆ ಸಹಬಾಳ್ವೆ ನಡೆಸಲು ನನಗಿನ್ನೂ ಆಗಿಲ್ಲ.  ಅವನ ಜತೆ ಸೇರಿದಾಗೆಲ್ಲಾ ನೀನು ನಮ್ಮ ನಡುವೆ ಇರುವೆಯೆನೋ, ನಾನಿನ್ನೂ ನಿನ್ನವಳೇನೋ ಎಂಬ ಸಂದಿಗ್ಧ ನನ್ನನ್ನು ಕಾಡುತ್ತದೆ.  ಹೇಳು ನಿನ್ನಲ್ಲೂ ನನ್ನ ಬಗ್ಗೆ ಆ ಭಾವನೆ ಇದೆಯೇ?"
"ಇಲ್ಲ."  ಥಟ್ಟನೆ ಹೇಳಿದೆ.  ನಾನು ಸತ್ಯವನ್ನೇ ಹೇಳಿದ್ದೆ.  ನನ್ನ ಬದುಕಿನ ನಾಟಕಗಳು ನಾಟಕಗಳಾಗಿಯೇ ಉಳಿದಿದ್ದವು.   "ನಿನ್ನ ಗಂಡನೊಂದಿಗೆ ಹೊಂದಿಕೋ.  ಇನ್ನೆಂದೂ ನಿಮ್ಮಿಬ್ಬರ ನಡುವೆ ನನ್ನನ್ನೆಳೆಯಬೇಡ."  ಮೃದುವಾಗಿ ಆದರೆ ಸ್ಪಷ್ಟವಾಗಿ ಹೇಳಿದೆ.
"ಓಹ್!"  ಅವಳು ಉದ್ಗರಿಸಿದಳು.  "ಇದುವರೆಗೆ ನಾನೇ ನಿರ್ಮಿಸಿಕೊಂಡಿದ್ದ ಸೆರೆಮನೆಯೊಳಗೆ ನಾನಿದ್ದೆ.  ನಿನ್ನನ್ನೂ ಆಗಾಗ ಅದರೊಳಗೆಳೆಯುತ್ತಿದ್ದೆ."  ಒಮ್ಮೆ ತಲೆಯೆತ್ತಿ ಕಣ್ಣುಮುಚ್ಚಿದಳು.  ಮರುಕ್ಷಣ ಕಣ್ಣು ತೆರೆದು ನನ್ನ ಕೈ ಹಿಡಿದಳು.  "ನನ್ನದೇ ಸೆರೆಮನೆಯಿಂದ ನನಗಿಂದು ಬಿಡುಗಡೆ.  ನನ್ನಿಂದ ನಿನಗೂ.  ಈ ಬಿಡುಗಡೆಯ ಸಂಕೇತ ಈ ಕಣ್ಣು.  ಇದು ಬಿಡುಗಡೆಯ ಕಣ್ಣು.  ತೆಗೆದುಕೋ."
ಸಾಹುಕಾರ್ ಕುಪ್ಪಣ್ಣನವರ ಎಡಗಣ್ಣು ನನ್ನ ಕೈಸೇರಿತು.
ಮರುಕ್ಷಣ ನಕ್ಷತ್ರ ಮುಂದೆ ಚಲಿಸಿತು.  ಅದರ ನೆರಳಿನಂತೆ ನನ್ನ ಕುದುರೆಯೂ ಮುಂದೆ ಹೊರಟಿತು.   ಪಟ್ಟಣದ ಹೊರಗೆ ಬಂದು ಬಂದ ದಾರಿಯಲ್ಲೇ ಹಿಂದೆ ಸಾಗಿ ರಸ್ತೆ ಎರಡಾಗಿ ಸೀಳಿದ್ದೆಡೆ ಬಂದೆವು.  ನಕ್ಷತ್ರ ಈಗ ಬಲಸೀಳಿನಲ್ಲಿ ಸಾಗಿತು.  ನಾನು ಹಿಂಬಾಲಿಸಿದೆ.  ಅದನ್ನನುಸರಿಸಿ ಒಂದು ಬೃಹತ್ ನಗರವನ್ನು ಪ್ರವೇಶಿಸಿದೆ.  ಅಲ್ಲೊಂದು ಕ್ರಿಕೆಟ್ ಮೈದಾನ.  ಕಾಶ್ಮೀರದ ಭೂಕಂಪದಲ್ಲಿ ನೊಂದವರ ಸಹಾಯಾರ್ಥ ಭಾರತ-ಪಾಕಿಸ್ತಾನ್ ತಂಡಗಳ ನಡುವೆ ಮ್ಯಾಚ್ ನಡೆಯುತ್ತಿತ್ತು.  ನಕ್ಷತ್ರ ಮೈದಾನದ ನಟ್ಟನಡುವೆ ನಿಂತುಬಿಟ್ಟಿತು.
ನಾನು ಸ್ಟೇಡಿಯಂನೊಳಗೆ ಹೋಗುವಷ್ಟರಲ್ಲಿ ಆಟ ಅತ್ಯಂತ ಕುತೂಹಲಕರ ಘಟ್ಟ ತಲುಪಿತ್ತು.  ಡ್ರಾವಿಡ್ ಬಾರಿಸಿದ ಚೆಂಡು ಮೇಲೇರಿ ಮೈದಾನದ ನಟ್ಟನಡುವೆಯೇ ಕೆಳಗಿಳಿಯುತ್ತಿತ್ತು!  ಅದರ ನೇರ ಕೆಳಗೆ ಇಂಜಮಾಮ್ ಉಲ್ ಹಕ್ ಮತ್ತು ಧನಿಷ್ ಕನೇರಿಯಾ!  ನೆರೆದಿದ್ದ ಜನಸ್ತೋಮ ಉಸಿರು ಬಿಗಿಹಿಡಿದು ನೋಡುತ್ತಿದ್ದಂತೇ ಅದು ನೇರವಾಗಿ ಇಂಜಮಾಮ್‌ನ ಬೊಗಸೆಯಲ್ಲಿ ಬಿತ್ತು.  ಅದನ್ನು ಬಿಗಿಯಾಗಿ ಹಿಡಿದ ಅವನು ಮೈದಾನದ ಸುತ್ತಲೂ ಒಮ್ಮೆ ಕುಣಿದು ಮುಚ್ಚಿದ ಬೊಗಸೆ ಬಿಡಿಸಿದ.  ಅಲ್ಲಿ...
ಅಲ್ಲಿದ್ದುದು ಚೆಂಡಲ್ಲ.  ಒಂದು ಕಣ್ಣು!
ಒಂದುಕ್ಷಣ ಗೊಂದಲ.  ಪಾಕಿಸ್ತಾನಿಗಳು ವೃತ್ತಾಕಾರದಲ್ಲಿ ನಿಂತು ತಮ್ಮತಮ್ಮಲ್ಲೇ ಮಾತಾಡಿಕೊಂಡರು.  ಅವರ ನಿರ್ಧಾರವೇನೆಂದು ತಿಳಿಯಲು ನಾನು ಅತೀವ ಉತ್ಸುಕನಾಗಿದ್ದೆ.  ಮಾತುಕತೆ ಮುಗಿದ ನಂತರ ಇಂಜಮಾಮ್ ದನಿಯೆತ್ತಿ ಘೋಷಿಸಿದ: "ನನ್ನ ದೇಶಬಾಂಧವರೇ..."
ಅವನು ನಿಂತಿದ್ದುದು ಭಾರತದ ನೆಲದಲ್ಲಿ!
ಭಾರತೀಯ ಉಪಖಂಡದ ಇತಿಹಾಸದಲ್ಲಿ ಇದೊಂದು ಅಮೋಘ ಕ್ಷಣ.
ಇಂಜಮಾಮ್ ಮುಂದುವರೆಸಿದ: "ಇದುವರೆಗೂ ಭಾರತ-ಪಾಕಿಸ್ತಾನಗಳ ಜನತೆಯನ್ನು ಎದುರುಬದುರಾಗಿ ನಿಲ್ಲಿಸಿದ ಚೆಂಡು ಅದೆತ್ತಲೋ ಮಾಯವಾಗಿಹೋಯಿತು.  ಅದರ ಬದಲಾಗಿ ಈಗ ಅವತರಿಸಿರುವುದು ಒಂದು ಕಣ್ಣು.  ಜ್ಞಾನದ ಕಣ್ಣು.  ಇನ್ನು ಮುಂದೆ ನಮ್ಮೆರಡು ದೇಶಗಳ ಜನತೆ ವಿಶ್ವವನ್ನು ಒಂದೇ ದೃಷ್ಟಿಯಿಂದ ನೋಡಬೇಕು ಎಂದು ಈ ಜ್ಞಾನನೇತ್ರ ಹೇಳುತ್ತದೆ..."
ಮುಂದೆ ನಡೆದ ಘಟನೆ ಇತಿಹಾಸ.
ಭಾರತ-ಪಾಕಿಸ್ತಾನ್ ತಂಡಗಳೆರಡನ್ನೂ ಜಂಟೀ ವಿಜಯಿಗಳೆಂದು ಘೋಷಿಸಲಾಯಿತು.  ಟ್ರೋಫಿಯೆಂದು ಆ ಕಣ್ಣನ್ನೇ ಕೊಡಲಾಯಿತು.  ಡ್ರಾವಿಡ್ ಮತ್ತು ಇಂಜಮಾಮ್ ಇಬ್ಬರೂ ಜತೆಯಾಗಿ ಆ ಕಣ್ಣನ್ನು ಎತ್ತಿಹಿಡಿದ ಚಿತ್ರ ವಿಶ್ವದ ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸಿತು.
ಎಲ್ಲ ಮುಗಿದ ನಂತರ ಸ್ಟೇಡಿಯಂ ಪೂರ್ಣವಾಗಿ ಖಾಲಿಯಾಯಿತು.  ಅಲ್ಲಿ ಉಳಿದವನು ನಾನೊಬ್ಬನೇ.  ಡ್ರಾವಿಡ್ ಮತ್ತು ಇಂಜಮಾಮ್ ಇಬ್ಬರೂ ನನ್ನ ಬಳಿ ಬಂದರು.  "ಇನ್ನೂ ಇಲ್ಲೇ ಯಾಕಿದ್ದೀಯನಮ್ಮ ಆಟೋಗ್ರಾಫ್ ಬೇಕೇನು?" ಅಂದರು.  ನಾನು "ಆಟೋಗ್ರಾಫ್ ಬೇಡ.  ಆ ಕಣ್ಣು ಬೇಕು" ಅಂದೆ.
ಅವರಿಬ್ಬರೂ ಪರಸ್ಪರ ಮಾತಾಡಿಕೊಂಡರು.  ನಾನು ತಾಳ್ಮೆಯಿಂದ ಕಾದೆ.
ಮಾತುಕತೆ ಮುಗಿಸಿದ ಅವರಿಬ್ಬರೂ ನನ್ನತ್ತ ತಿರುಗಿ ಆ ಕಣ್ಣನ್ನು ನನ್ನ ಕೈಯಲ್ಲಿಟ್ಟು ಒಂದೇದನಿಯಲ್ಲಿ ಹೇಳಿದರು: "ಈ ಕಣ್ಣು ನಿನಗೆ.  ಇದಕ್ಕೆ ಪ್ರತಿಯಾಗಿ ನಮಗೇನು ಬೇಕು ಎಂಬುದನ್ನು ಸಮಯ ಬಂದಾಗ ಹೇಳುತ್ತೇವೆ."
ನನ್ನ ಹುಡುಕಾಟ ಮುಗಿದಿತ್ತು.  ಬಿಡುಗಡೆಯ ಹಾಗೂ ಜ್ಞಾನದ ಕಣ್ಣುಗಳು ನನ್ನಲ್ಲಿದ್ದವು.
ಕುದುರೆಯನ್ನು ಬಂದದಾರಿಯಲ್ಲೇ ಹಿಂದಕ್ಕೆ ದೌಡಾಯಿಸಿದೆ.  ನಕ್ಷತ್ರದ ಬೆಳಕಿನಲ್ಲಿ ಸಾಗಿ ಸಾಹುಕಾರರ ಬಲಗಣ್ಣಿನ ಮೂಲಕ ಹೊರಬಂದೆ.  ಅಲ್ಲೇ ಕಾಯುತ್ತಿದ್ದ ಗೌರಮ್ಮನವರ ಕೈಯಲ್ಲಿ ಎರಡೂ ಕಣ್ಣುಗಳನ್ನಿಟ್ಟೆ.
ಅವರ ಆನಂದ ಹೇಳತೀರದು.  ಸರಸರನೆ ನಡೆದವರೇ ಎರಡೂ ಕಣ್ಣುಗಳನ್ನು ಸಾಹುಕಾರ್ ಕುಪ್ಪಣ್ಣನವರ ಕಣ್ಣಗೂಡುಗಳೊಗಿಟ್ಟರು.  ಮರುಕ್ಷಣ ಸಾಹುಕಾರರು ಕಣ್ಣುಗಳನ್ನು ಅಗಲವಾಗಿ ತೆರೆದು ಒಮ್ಮೆ ಆಕಳಿಸಿದರು.  ಗೌರಮ್ಮನವರತ್ತ ನೋಡಿ "ಭಾಳಾ ಹಸಿವಾಗೈತೆ.  ಊಟ ಕೊಡು ಗೌರಾ" ಅಂದರು.
ಸಾಹುಕಾರರು ಈ ಜಗತ್ತಿಗೆ ಮತ್ತೆ ಹಿಂತಿರುಗಿದ್ದರು.
ಮಾತು ಕೊಟ್ಟಂತೆ ಗೌರಮ್ಮನವರು ರೋಹಿಣಿಯನ್ನು ನನಗೆ ಮದುವೆ ಮಾಡಿಕೊಟ್ಟರು.  ಮಂಗಲಸೂತ್ರಧಾರಣೆಯ ಮರುಗಳಿಗೆ ಅಮ್ಮ ಕಟ್ಟಿ ಕೊಟ್ಟಿದ್ದ ಹೂಮಾಲೆಯನ್ನು ಸರಸಕ್ಕ ನನ್ನ ಕೈಯಿಂದ ರೋಹಿಣಿಯ ಕೊರಳಿಗೆ ಹಾಕಿಸಿದಳು.
ಸರಸಕ್ಕನ ಸಮ್ಮುಖದಲ್ಲಿ ಸಾಹುಕಾರರು ನನ್ನನ್ನು ಕರೆದು ಹೇಳಿದರು: "ಗೌರಾ ಘೋಷಿಸಿದಂತೆ ಈ ಸಮಸ್ತ ಆಸ್ತಿಪಾಸ್ತಿಗೆ ನೀನೇ ಒಡೆಯ.  ನಾನೂ ಗೌರಾಳೂ ನಮಗೆಂದು ಕಟ್ಟಿಕೊಂಡಿರುವ ತೋಟದ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತೇವೆ."  ಮಾತು ಕೊಟ್ಟಂತೆ ಎಲ್ಲವನ್ನೂ ನನ್ನ ಹೆಸರಿಗೆ ಬರೆಯಿಸಿಕೊಟ್ಟರು.
ವೈಭವಯುತ ಭವನ, ಬೃಹತ್ ಗದ್ದೆ ಹೊಲ ತೋಟಗಳು, ಮೈಸೂರಿನಲ್ಲಿ ಭಾರೀ ಕಟ್ಟಡ ಸಮುಚ್ಚಯಗಳು, ನಾಲ್ಕು ವಿದೇಶೀ ಕಾರುಗಳು...
ಅವೆಲ್ಲವುಗಳ ಒಡೆಯ ನಾನು!
ಸರಸಕ್ಕ ಮತ್ತು ರೋಹಿಣಿಯ ಜತೆ ಕೂತು ಆಸ್ತಿಪಾಸ್ತಿಯ ಲೆಕ್ಕ ಪತ್ರ ನೋಡುತ್ತಿದ್ದೆ.  ಕಾಲಿಂಗ್ ಬೆಲ್ ಸದ್ದಾಯಿತು.  ರೋಹಿಣಿ ಬಾಗಿಲು ತೆರೆದಳು.  ತೆರೆದ ಬಾಗಿಲಲ್ಲಿ ರಾಹುಲ್ ಡ್ರಾವಿಡ್ ಮತ್ತು ಇಂಜಮಾಮ್ ಉಲ್ ಹಕ್!
"ಓ ಬನ್ನಿ ಬನ್ನೀ" ನಗುತ್ತಾ ಸ್ವಾಗತಿಸಿದೆ.  ಅವರಿಬ್ಬರೂ ಒಳಬಂದವರೇ ನನ್ನ ಕೈ ಹಿಡಿದು "ಆ ಕಣ್ಣನ್ನು ನಿನ್ನ ಕೈಲಿಟ್ಟಾಗ ನಾವು ಹೇಳಿದ್ದೇನೆಂದು ನೆನಪಿದೆಯೇ?" ಎಂದು ಕೇಳಿದರು.
"ಓಹೋ ಚೆನ್ನಾಗಿಯೇ ನೆನಪಿದೆ" ಅಂದೆ.
"ಕಣ್ಣಿಗೆ ಪ್ರತಿಯಾಗಿ ನಮಗೀಗ ಹಣದ ಅಗತ್ಯವಿದೆ.  ಆ ದಿನದ ಕ್ರಿಕೆಟ್ ಮ್ಯಾಚ್‌ನಿಂದ ಸಂಗ್ರಹಿಸಿದ ಹಣ ಕಾಶ್ಮೀರದ ಭೂಕಂಪ ಸಂತ್ರಪ್ತರ ಪುನರ್ವಸತಿಗೆ ಸಾಕಾಗಲಿಲ್ಲ.  ಇನ್ನೂ ಸಾವಿರದ ಒಂದು ಕುಟುಂಬಗಳು ಪರಿಹಾರಕ್ಕಾಗಿ ಕಾದು ಕುಳಿತಿವೆ.  ನಮಗೀಗ ತಕ್ಷಣ ಹಣ ಬೇಕು."
ರೋಹಿಣಿಯತ್ತ ತಿರುಗಿದೆ.  ಅವಳ ಮುಖದಲ್ಲಿ ನಗು.  "ನನ್ನಲ್ಲೇನಿದೆಎಲ್ಲ ಇರುವುದು ನಿಮ್ಮಲ್ಲೇ ಅಲ್ಲವೇನಿಮ್ಮಲ್ಲಿರುವುದನ್ನು ಏನು ಮಾಡಬೇಕು ಎಂಬ ನಿರ್ಧಾರ ಪೂರ್ತಿಯಾಗಿ ನಿಮ್ಮದೇ" ಅಂದಳು.
ಆ ಮಾತುಗಳು ನನಗೆ ದಾರಿ ತೋರಿದವು.
ನನ್ನಲ್ಲಿ ಅಮ್ಮ ಕಲಿಸಿದ ಅಕ್ಷರಗಳಿವೆ, ಸರಸಕ್ಕ ತುಂಬಿದ ಆತ್ಮವಿಶ್ವಾಸವಿದೆ, ಈ ನಾಡು ಕರೆದುಕೊಟ್ಟ ನೌಕರಿಯಿದೆ.  ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿಸುವವಳು ಜತೆ ಇದ್ದಾಳೆ.  ನನ್ನ ಭವಿಷ್ಯದ ಕೀಲಿಕೈ ನನ್ನ ಅಂಗೈಯಲ್ಲಿದೆ.  ನನ್ನ ಯಶಸ್ಸಿನ, ಸಂತೋಷದ, ನೆಮ್ಮದಿಯ, ತೃಪ್ತಿಯ, ಶಾಂತಿಯ ಪಾಸ್‌ವರ್ಡ್ ನನ್ನಲ್ಲಿದೆ.  ಇಷ್ಟು ಸಾಕಲ್ಲವೇ?
ಡ್ರಾವಿಡ್ ಮತ್ತು ಇಂಜಮಾಮ್ ಇಬ್ಬರ ಕೈಗಳನ್ನೂ ಹಿಡಿದು ಧೃಢದನಿಯಲ್ಲಿ ಹೇಳಿದೆ: "ನನ್ನೆಲ್ಲಾ ಆಸ್ತಿಗಳನ್ನೂ ತೆಗೆದುಕೊಳ್ಳಿ.  ಬಂಗಲೆಗಳು, ಜಮೀನುಗಳು, ವಾಹನಗಳು, ಬೆಳ್ಳಿಬಂಗಾರ ಒಡವೆವಸ್ತುಗಳು, ದನಕರು ಕುದುರೆಗಳು ಎಲ್ಲವೂ ನಿಮಗೇ.  ಇವೆಲ್ಲವನ್ನು ಮಾರಿದರೆ ಅಗತ್ಯವಿರುವ ಹಣ ನಿಮಗೆ ಸಿಗುತ್ತದೆ.  ಕಾಶ್ಮೀರದ ಜನತೆಯ ಕಣ್ಣಿರೊರೆಸಲು ಈ ಸಂಪತ್ತು ವಿನಿಯೋಗವಾದರೆ ಅದೇ ಸಾಕು.  ಕಾಶ್ಮೀರದಲ್ಲಿ ಶಾಂತಿ ನೆಮ್ಮದಿ ನೆಲೆಸಿದರೆ ಇಡೀ ಭಾರತೀಯ ಉಪಖಂಡದಲ್ಲಿ ಶಾಂತಿ ನೆಲೆಸಿದಂತೆ."

*     *     *

ಮಾರನೆಯ ಬೆಳಿಗ್ಗೆ ರೋಹಿಣಿಯ ಜತೆ ಪಾಂಡಿಚೆರಿಯ ಬಸ್ಸು ಹತ್ತಿದೆ.  ನನ್ನ ಕೈಯಲ್ಲಿ ಅವಳ ಕೈ, ಅವಳ ಮೊಗದಲ್ಲಿ ಬೆಳದಿಂಗಳಿನಂಥ ಸೌಮ್ಯ ಮಂದಹಾಸ.
ನನ್ನದು ನನ್ನ ಜತೆ ಇತ್ತು.  ನನ್ನದಲ್ಲದ್ದು ಹಿಂದೆ ಉಳಿದಿತ್ತು.

--***೦೦೦***--

ಮೈಸೂರು, ಪಾಂಡಿಚೆರಿ
ಏಪ್ರಿಲ್ ೨೦೦೬

8 comments:

  1. ಇಷ್ಟವಾಯಿತು. ಮೊದಲ ಅರ್ಧ ತುಂಬ ಚೆನ್ನಾಗಿದೆ. ಆಮೇಲೆ ಅ-ವಾಸ್ತವವಾಗಿ ನಡೆಯುವಂಥ ಎಲ್ಲ ಘಟನೆಗಳಿಗೂ ಒಂದೊಂದು ವಾಸ್ತವ ಸಂಗತಿ, ವಿಚಾರ, ಅಥವ ಐಡಿಯಾವನ್ನು ಹುಷಾರಾಗಿ ಜೋಡಿಸಿದೆ ಅನ್ನಿಸಿತು. ಆದರೂ ಕಥೆಯ ಹಿಂದೆ ಇರುವ ನೋಟದ ಕೋನ ಇಷ್ಟವಾಯಿತು. ಓದಿ ಖುಷಿಪಟ್ಟೆ. ಥ್ಯಾಂಕ್ಸ್.
    ಓ.ಎಲ್.ಎನ್. ಸ್ವಾಮಿ

    ReplyDelete
    Replies
    1. ನಮಸ್ತೇ ಸರ್. ಈ ಕಥೆ ತಮಗೆ ಇಷ್ಟವಾದದ್ದು ನೋಡಿ ತುಂಬಾ ಖುಷಿಯಾಗುತ್ತಿದೆ. ಕೃತಜ್ಞತೆಗಳು.

      Delete
  2. ತುಂಬಾ ಅರ್ಥಗರ್ಭಿತ, ಸುಂದರ ಕಥೆ. ಮಾರ್ಕೆಜನ prolepsis technique ನ ಮನಮೋಹಕ ಉದಾಹರಣೆಯೇ ಇದು? you are easily one of the best kannada short story writers!
    -Anil Talikoti

    ReplyDelete
    Replies
    1. I am happy this story impressed you. Thank you so much for all the appreciative remarks.

      Delete
  3. ಬಹುಸೊಗಸಾದ ಕತೆ, ಈ ಹಿಂದೆಯೇ ನಿಮ್ಮಲ್ಲಿ ಓದಿದ್ದೆ. ಕನಸು ವಾಸ್ತವಗಳ ನಡುವೆ ತೂಗುಯ್ಯಾಲೆಯಾಗುತ್ತಾ ಅರ್ಥದ ಸೇತುವೆಯನ್ನು ಕಟ್ಟುತ್ತಾ ನತೆ ನಡೆಯುವ ಪರಿ ಮನಮೆಚ್ಚಿತು. ಅನಿಲ್ ಅವರು ಹೇಳಿದ ಮಾತೇ ನನ್ನದೂ.

    ReplyDelete
    Replies
    1. ಪ್ರಿಯ ಮಂಜುನಾಥ, ಮತ್ತೊಮ್ಮೆ ಇಲ್ಲಿ ನಮ್ಮ ಭೇಟಿ! ಖುಶಿಯಾಗ್ತಿದೆ.

      Delete
  4. ಅಬ್ಬ !ಅದೆಷ್ಟು ಸುಂದರ ಕಥೆ ರೀ ಪ್ರೇಮ್ . .. ನಿಮ್ಮ ಹೆಸರಿನಂತೆ ಕಥೆಯ ತುಂಬಾ ಪ್ರೀತಿ ಪ್ರೇಮವೇ ತುಂಬಿಕೊಂಡಿದೆ . ಅದನ್ನು ಸಾದರ ಪಡಿಸಿದ ರೀತಿ ಕೂಡ ಮನ ಮುಟ್ಟು ವಂತಿದೆ .. ಮನಕ್ಕೆ ತಟ್ಟುವಂತಿದೆ ... ಕಥೆಯಲ್ಲಿ ಎರಡು ಕ್ಷಣ ಮಾತ್ರ ಪ್ರತ್ಯಕ್ಷ ವಾಗುವ ಹಿಂದಿನ ನಾಟಕದ ಪಾತ್ರಧಾರಿಯ ಆಳವಾದ ನಿಜ ಪ್ರೀತಿಯ ಅನುಭವ ನಿಜವಾಗಿಯೂ ಮನ ಕಲುಕಿತು . ಸರಸಕ್ಕನ ಪಾತ್ರ ಚಿಕ್ಕದಾದರೂ ಕಥೆಯ ಹಂದರಕ್ಕೆ ಸುಂದರ ಸಾಥ್ ಕೊಟ್ಟಿದೆ ...ಧನ್ಯವಾದಗಳು ಪ್ರೆಮ್ ಜಿ

    ReplyDelete
  5. ಸರ್,
    ಈ ಕಥೆಯನ್ನು ನಾನು ಸುಮಾರು 7 ವರ್ಷಗಳ ಹಿಂದೆ ಓದಿದ್ದ್ಡ ನೆನಪು ಆಗ ನಾನಿನ್ನೂ ಚಿಕ್ಕವನಾಗಿದ್ದೆ ಏನೊಂದೂ ಅರ್ಥವಾಗಿರಲಿಲ್ಲ ಈಗ ನಿಮ್ಮ ಪ್ರೇಮತಾಣ ಜಾಲತಾಣದಲ್ಲಿ ಮತ್ತೊಮ್ಮೆ ಓದಿದಾಗ ನೆನಪುಗಳು ಚಿಮ್ಮಿ ಬಂದವು ನನಗೀಗ ಬಹಳ ಖುಷಿಯಾಗುತ್ತಿದೆ,ಕಥೆಯ ನಿಜವಾದ ಅರ್ಥ ಉದ್ದೇಶ ತಿಳಿದು ತುಂಬಾ ಸಂತೋಷವಾಗುತ್ತಿದೆ.

    ReplyDelete