ನಿನ್ನ ವೇದನೆ ನನಗೆ
ಅನಿರೀಕ್ಷಿತ
ನಿನಗೆ ನೀರಿನಂತಿದ್ದ
ನನಗೆ ಕಣ್ಣೀರಿನಂತಿದ್ದ
ಗಣಿತದ ಪ್ರಶ್ನೆಪತ್ರಿಕೆಯಂತೆ.
ಲೆಕ್ಕದಲ್ಲಿ ನೀನಿಂದೂ ಜಾಣೆ
ತಲಾಕ್ ಹೇಳು
ವುದು ಮೂರೇ ಸಲ ಅನ್ನುತ್ತೀಯ.
ನಿನ್ನ ಧೈರ್ಯ ನನಗಿಲ್ಲ. ಅಂದೂ ಇರಲಿಲ್ಲ.
ಇದ್ದಿದ್ದರೆ ಇಂದು ಪೋನ್ ಅಗತ್ಯವಾಗುತ್ತಿರಲಿಲ್ಲ.
ನೀ ಬಿಡಿಸಿದ ಲೆಕ್ಕ
ಗಳೆಲ್ಲವೂ ಕಳೆದುಹೋದುದೆಲ್ಲಿ
ಎಂದು ಹುಡುಕುತ್ತಿದ್ದೇನೆ.
ನನ್ನ ದಾರಿಗೆಂದೂ ಅವು
ಅಡ್ಡಬಂದ ನೆನಪಿಲ್ಲ.
ಲೆಕ್ಕಕ್ಕೆ ಸಿಗುತ್ತಿರುವುದು
ದೆಹಲಿಯ ಬಿರುಬೇಸಗೆ
ಯ ಮಧ್ಯಾಹ್ನದ ಒಂದು ಕ್ಯಾಂಪಾ ಕೋಲಾ,
ಎರಡು ಸ್ಟ್ರಾಗಳು, ಜತೆಗೆ ಮೂರು
ದಶಕಗಳಲ್ಲಿ ಉದುರಿದ ನೆತ್ತಿ
ಯ ಕೂದಲುಗಳು.
ಹೋಗಲಿ ಬಿಡು,
ದಿನದ ಆ ಐದು ಗಳಿಗೆಗಳಲ್ಲಿ ಒಂಟಿ
ಯೆನಿಸಿದರೆ ನನ್ನ ಮನೆಗೆ ಬಂದುಹೋಗು,
ಫತ್ವಾದ ಭಯವಿಲ್ಲದಿದ್ದರೆ.
ಇಲ್ಲೊಬ್ಬಳು ದೇವತೆಯಿದ್ದಾಳೆ,
ಸೊಗಸಾದ ಚಹಾ ಮಾಡುತ್ತಾಳೆ.
ನಿನ್ನವನಿಗೆ
(ಕ್ಷಮಿಸು, ಅವನನ್ನು ನಾ ಹಾಗೆ
ಕರೆಯುವಲ್ಲಿ ನಮ್ಮಿಬ್ಬರ ನಿನ್ನೆಗಳಿವೆ)
ಇದನ್ನೇನೂ ಹೇಳಬೇಡ.
ನನ್ನವಳಿಗೆ ನಾ ಹೇಳಲೇಬೇಕು.
ಅದರಲ್ಲಿ ನಮ್ಮಿಬ್ಬರ ನಾಳೆಯಿದೆ.
ಇಂದು?
ಅದು ನಾವು
ನಾಲ್ವರ ಕೈಯಲ್ಲಿ ಇನ್ನೂ ಇದೆ.
No comments:
Post a Comment