ಭಾಗ - ಮೂರು
"ರಾ॒ಮಸೀತೆಯರ ಬಗ್ಗೆಯಾಗಲೀ, ಜೀಸಸ್ ಬಗ್ಗೆಯಾಗಲೀ ಅಥವಾ ಮಹಮದ್ದರ ಬಗ್ಗೆಯಾಗಲೀ
ನಮಗೆ ನಂಬಿಕೆ ಗೌರವ ಇಲ್ಲದಿದ್ದರೆ ಏನೂ ನಷ್ಟ ಇಲ್ಲ.
ಆದ್ರೆ ಅವರನ್ನ ದೇವರುಗಳು, ಮಹಾತ್ಮರು ಅಂತ ಪೂಜಿಸೋ ಗೌರವಿಸೋ ಕೋಟ್ಯಾಂತರ ಜನ ಈ ಭೂಮಿ ಮೇಲಿದ್ದಾರೆ
ಅನ್ನೋದನ್ನ ನಾವು ಮರೀಬಾರದು. ಅವರ ನಂಬಿಕೆಗಳಿಗೆ, ಭಾವನೆಗಳಿಗೆ ಘಾಸಿಯಾಗೋವಂಥ ಯಾವುದನ್ನೂ ನಾನು
ಆಡಬಾರದು, ಬರೀಬಾರದು, ಚಿತ್ರಿಸಬಾರದು. ಆ ಅಧಿಕಾರ ನಮಗಿಲ್ಲ. ಇದನ್ನ ಅರೀದೇ ಜನ ನೆರೆಮನೆಯವನ ಹಾದರದ ಬಗ್ಗೆ ಮಾತಾಡೋವಷ್ಟೇ
ಹಗುರವಾಗಿ ಜೀಸಸ್ - ಮೇರಿ ಮ್ಯಾಗ್ಡಲೀನ ಬಗ್ಗೆ ಮಾತಾಡ್ತಾರೆ, ರಾಮ ಹೆಂಡ ಕುಡೀತಿದ್ದ ಅಂತ ಹೇಳಿಕೆ ಕೊಡ್ತಾರೆ. ಬಾಯಿಗೆ ಬಂದದ್ದು ಒದರಿಕೊಂಡು ಬೀದಿಯಲ್ಲಿ ಹೋಗೋ ಒಬ್ಬ ಅರೆಹುಚ್ಚನ
ಬಗ್ಗೆ ಮಾತಾಡೋವಷ್ಟೆ ಕ್ಷುಲ್ಲಕವಾಗಿ ಪ್ರವಾದಿ ಮಹಮದ್ದರ ಬಗ್ಗೆ ಮಾತಾಡ್ತಾರೆ. ಜಾತಿಗಳೇ ಬೇಡ ಅಂದ ಬಸವಣ್ಣನ ಜಾತಿಮೂಲವನ್ನ ಕೆದಕ್ತಾರೆ...
ಇನ್ನೊಂದಷ್ಟು ಜನ ಉಳಿದವರ ನಂಬಿಕೆಗಳನ್ನೆಲ್ಲಾ ತಿರಸ್ಕಾರದಿಂದ ನೋಡ್ತಾ, ಬಾಯಿಗೆ ಬಂದದ್ದನ್ನ ವಿವೇಚನೆ ಇಲ್ಲದೇ ಹೊರಕ್ಕೆ
ಹಾಕ್ತಾ ಓಡಾಡ್ತಿರ್ತಾರೆ. ದುರಂತ ಅಂದ್ರೆ ಇಂಥವರ
ಮಾತುಗಳಿಗೆ ಪ್ರಚಾರ ಕೊಡೋ ಪತ್ರಿಕೆಗಳ ಒಂದು ಗುಂಪೇ ಇದೆ.
ಪ್ರಗತಿಯ ಲಕ್ಷಣ ಅಂದರೆ ಮತ್ತೊಬ್ಬರ ನಂಬಿಕೆಗಳನ್ನ ಲೇವಡಿ ಮಾಡೋದು ಅನ್ನೋ ವಿಲಕ್ಷಣ ಸಂಸ್ಕೃತಿಯನ್ನ
ಈ ಪತ್ರಿಕೆಗಳು ಹುಟ್ಟು ಹಾಕ್ತಾ ಇವೆ. ಮದುವೆಮನೆಯಲ್ಲಿ
ಬಾಸಿಂಗ ಕಟ್ಟಿಕೊಂಡ ಮದುಮಗ, ಶವಯಾತ್ರೆಯಲ್ಲಿ ಸಿಂಗರಿಸಿದ ಹೆಣ ಆಗೋ ತೆವಲು ಇರೋ ಕೆಲವು ಬುದ್ಧಿಜೀವಿಗಳು
ಎಲ್ಲದಕ್ಕೂ ಬಾಯಿ ಹಾಕ್ತಾ ಇಂಥಾ ಪತ್ರಿಕೆಗಳ ಮೂಲಕ ಸದಾ ಸುದ್ಧಿಯಲ್ಲಿರ್ತಾರೆ. ಆದರೆ ಬುದ್ಧಿಜೀವಿಯೊಬ್ಬ ಸುದ್ಧಿಜೀವಿಯಾದ್ರೆ ಅವನು ಲದ್ದಿಜೀವಿಯಾಗೋ
ಕಾಲ ದೂರ ಇಲ್ಲ ಅನ್ನೋದು ಇವರಿಗೆ ಗೊತ್ತಿಲ್ಲ."
೨೦೧೦ರಲ್ಲಿ ಪ್ರಕಟವಾದ ನನ್ನ ನೀಳ್ಗತೆ "ಗತ-ಗತಿ"ಯ ("ಬೊಳ್ಳೊಣಕಯ್ಯ"
ಸಂಕಲನದಲ್ಲಿದೆ) ಪಾತ್ರವೊಂದು ಆಡುವ ಈ ಮಾತುಗಳು ನಮ್ಮ ಬುದ್ಧಿಜೀವಿಗಳಲ್ಲಿ ವ್ಯಾಪಕವಾಗಿರುವ
"politically correct" ಆಗಬಯಸುವ ತೆವಲಿನ ವಿಶ್ಲೇಷಣೆಗೆ ಸೂಕ್ತ ಪೀಠಿಕೆಯಾಗುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಈ ತೆವಲು ಸೋವಿಯೆತ್ ಯೂನಿಯನ್
ಮತ್ತು ಪಶ್ಚಿಮ ಯೂರೋಪಿನ ಎಡಪಂಥೀಯ ಬುದ್ಧಿಜೀವಿಗಳಿಂದ ಎರವಲು ಪಡೆದ "ಪ್ರಗತಿಪರ" ಎಂಬ
ಚಂದದ ಹೆಸರಿನಿಂದ ಕರೆಸಿಕೊಳ್ಳುತ್ತದೆ. ಈ ಪ್ರಗತಿಪರ
ವಿಚಾರಗಳನ್ನು ವ್ಯಾಪಕವಾಗಿ ಪ್ರತಿಪಾದಿಸಿದ್ದು ಲಂಕೇಶ್ ಮತ್ತು ಯು. ಆರ್. ಅನಂತಮೂರ್ತಿ. ಹಿಂಬಾಲಕರಲ್ಲಿರುವ ವಿಮರ್ಶಾಶೂನ್ಯ ಅಭಿಮಾನವನ್ನು ತೊರೆದು
ನಿಷ್ಪಕ್ಷಪಾತವಾಗಿ ಇವರಿಬ್ಬರ ನಡವಳಿಕೆಗಳನ್ನು ವಿಶ್ಲೇಷಿಸಿದರೆ ತಂತಮ್ಮ ಸುಪ್ತ ಬಯಕೆಗಳನ್ನು ಈಡೇರಿಸಿಕೊಳ್ಳಲು
ಪ್ರಗತಿಪರತೆ ಇವರಿಗೊಂದು ಊರುಗೋಲಾದ ದುರಂತ ಮನದಟ್ಟಾಗುತ್ತದೆ.
ವಿವಿಧ ಕಾರಣಗಳಿಂದಾಗಿ ಅಧ್ಯಾಪನದಲ್ಲಿ ಆಸಕ್ತಿ ಕಳೆದುಕೊಂಡ ಲಂಕೇಶ್ ಆಯ್ದುಕೊಂಡದ್ದು ಪತ್ರಿಕಾಮಾಧ್ಯಮ. ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಪ್ರಭಾವಿ ವ್ಯಕ್ತಿಯಾಗುವ
ಬಯಕೆಯ ಜತೆಗೇ ಹಣ ಸಂಪಾದಿಸಿ ಸ್ವಂತ ಮನೆ, ಜತೆಗೆ ವಿರಾಮಕ್ಕೆಂದು ತಮ್ಮದೇ ತೋಟವೊಂದನ್ನು ಹೊಂದುವ ಮಾನವಸಹಜ ಆಸೆಯೂ
ಅವರಿಗಿತ್ತು. ಅದೆಲ್ಲವನ್ನೂ ಗಳಿಸಲು ಕರ್ನಾಟಕದ 'ಜಾಣಜಾಣೆಯರ' ಮನಗೆದ್ದು ಪತ್ರಿಕೆಯನ್ನು ಜನಪ್ರಿಯಗೊಳಿಸಲು
ಅಗತ್ಯವಾದ ಯೋಜನೆಯನ್ನು ಅವರು ರೂಪಿಸಿದರು. ಅವರ ಆರ್‌ಎಸ್‌ಎಸ್
ವಿರೋಧಿ ಛಾಪಿನ ಶಿವಮೊಗ್ಗಾ ಹಿನ್ನೆಲೆ ಮತ್ತು ವಿಶ್ವವಿದ್ಯಾಲಯದಲ್ಲಿ ನೋವುಂಟುಮಾಡಿದ್ದ ಜಾತಿ ರಾಜಕಾರಣ
ಸಹಜವಾಗಿಯೇ ಪತ್ರಿಕೆಯ ಸ್ವರೂಪವನ್ನು ನಿರ್ಧರಿಸಿದವು.
ರಾಜಕೀಯ ದೊಂಬರಾಟಗಳು, 'ಮಾನ್ಯ'ರೆನಿಸಿಕೊಂಡವರ ಕತ್ತಲಬದುಕುಗಳ ರೋಚಕತೆಗಳನ್ನು ವ್ಯಂಗ್ಯ ಹಾಗೂ ಲೇವಡಿಯ ಭಾಷಾಪ್ರಯೋಗಗಳ ಮೂಲಕ
ಬಿಂಬಿಸಿ 'ಸಾಮಾನ್ಯ ಮನಸ್ಸು'ಗಳನ್ನು ಆಕರ್ಷಿಸಿ ಪತ್ರಿಕೆಯನ್ನು ಜನಪ್ರಿಯಗೊಳಿಸುವ, ಆ ಮೂಲಕ ತಮ್ಮ ಆಶಯಗಳನ್ನು ಈಡೇರಿಸಿಕೊಳ್ಳುವ
ವ್ಯವಸ್ಥಿತ ಯೋಜನೆಗಳನ್ನು ಲಂಕೇಶ್ ಹಾಕಿಕೊಂಡರು.
ಸಮಾಜವಿಜ್ಞಾನಗಳ ಆಡಂಬೋಲವಾಗಿದ್ದ ಶೈಕ್ಷಣಿಕ ಕ್ಷೇತ್ರದಲ್ಲಿ ಪಾಶ್ಚಾತ್ಯ ಚಿಂತನೆಗಳ ಹುಚ್ಚುಕುಣಿತ, ಅವುಗಳನ್ನು ಭಾರತೀಯ ಸಂದರ್ಭಕ್ಕೆ ಹೊಂದಿಸುವ
ಆತುರತೆಯ ದೊಂಬರಾಟ, ಅದು ಉಂಟುಮಾಡಿದ
ಅರೆಜ್ಞಾನ, ನಿರುದ್ಯೋಗ, ಜಾತೀಯತೆ, ಅವೆಲ್ಲವೂ ಹುಟ್ಟುಹಾಕಿದ ಭ್ರಮನಿರಸನ ಉಗ್ರವಾಗಿ
ತಾಂಡವವಾಡುತ್ತಿದ್ದ ಆ ದಿನಗಳಲ್ಲಿ ಹತಾಶ ಯುವಜನರ ಬೃಹತ್ ಪಡೆಯೊಂದು ಲಂಕೇಶ್ ಪತ್ರಿಕೆಯನ್ನು ತಮ್ಮ
ಅಭಿವ್ಯಕ್ತಿಗೆ ಒದಗಿಬಂದ ವೇದಿಕೆಯೆಂದು ಭಾವಿಸಿ ಅಪ್ಪಿಕೊಂಡದ್ದು ಲಂಕೇಶರ ರೊಟ್ಟಿಯನ್ನು ತುಪ್ಪದಲ್ಲಿ
ಬೀಳಿಸಿತು. (ಈಗ ಕಾಲ ಬದಲಾಗಿದೆ. ಅಂಥದೇ ಲಂಕೇಶ್ ಅಂಥದೇ ಲಂಕೇಶ್ ಪತ್ರಿಕೆಯನ್ನು ಇಂದು ಆರಂಭಿಸಿದರೆ
ಅದಕ್ಕೆ ಭವಿಷ್ಯವಿರುವುದಿಲ್ಲ. ಆ ಅರ್ಥದಲ್ಲಿ ಲಂಕೇಶ್
ಕಾಲದ ಕೂಸು.)
ಇಷ್ಟಾಗಿಯೂ ಲಂಕೇಶ್ ಸಂಯಮ ಮೀರಲಿಲ್ಲ. ವ್ಯಂಗ್ಯಕ್ಕೆ, ಲೇವಡಿಗೆ ರಾಜಕಾರಣಿಗಳ ಜತೆ ಹಿಂದೂ ಧಾರ್ಮಿಕ
ವ್ಯಕ್ತಿಗಳನ್ನೂ ಆಯ್ಕೆಮಾಡಿಕೊಂಡರೂ ಅವರ ಬಾಣಕ್ಕೆ ಗುರಿಯಾಗುತ್ತಿದ್ದವರು ಆಷಾಡಭೂತಿ, ಸೋಗಲಾಡಿ ಧಾರ್ಮಿಕ ವ್ಯಕ್ತಿಗಳು ಮಾತ್ರ. ನೀತಿವಂತ ಧಾರ್ಮಿಕ ವ್ಯಕ್ತಿಗಳನ್ನು ಗುರುತಿಸುವ ಗುಣಗ್ರಹಿಕೆ, ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವ
ಉದಾತ್ತ ಮನೋಭಾವ ಲಂಕೇಶರಲ್ಲಿತ್ತು. ಇದಕ್ಕೊಂದು ಸಾಕ್ಷಿ
ನಿಡುಮಾಮಿಡಿ ಮಠದ ಜಚನಿ ಅವರ ಬಗ್ಗೆ ಲಂಕೇಶರಿಗಿದ್ದ ವಿಶ್ವಾಸ ಹಾಗೂ ಅಭಿಮಾನ.
ಸರಿಸುಮಾರು ಇದೇ ಮನೋಭಾವ ಅನಂತಮೂರ್ತಿಯವರದ್ದು.
ಮಾನಸಹಜವಾದ ಎಲ್ಲ ಗುಣಗಳೂ ಅವರಲ್ಲಿದ್ದವು.
ಕೋಮಲಸ್ನೇಹವನ್ನೂ, ಮುಗ್ಧಪ್ರೀತಿಯನ್ನು ಅಗಾಧವಾಗಿ ಬಯಸುತ್ತಿದ್ದ ಅವರು ಅವು ಎಲ್ಲಿ ದೊರೆತರೂ
ತೀವ್ರವಾಗಿ ಸ್ಪಂದಿಸಬಲ್ಲವರಾಗಿದ್ದರು. ಇದೆಲ್ಲಕ್ಕಿಂತಲೂ
ಮಿಗಿಲಾಗಿ ಅಥವಾ ಪೂರಕವಾಗಿ ಜನಪ್ರಿಯತೆ, ಸ್ಥಾನಮಾನ, ಪ್ರಶಸ್ತಿಯ ಬಯಕೆ ಅವರಲ್ಲಿತ್ತು. ಅಂದರೆ "ಗುರುತಿಸಿಕೊಳ್ಳುವ" ಇಚ್ಚೆ ಅವರಲ್ಲಿ
ಗಾಢವಾಗಿತ್ತು. ಅವರ ಬದುಕಿನ ಅತಿದೊಡ್ಡ ದುರಂತವೆಂದರೆ
ಗುರಿಗಳು ಸ್ಪಷ್ಟವಾಗಿದ್ದಂತೆ ಮಾರ್ಗಗಳು ಸ್ಪಷ್ಟವಾಗಿರಲಿಲ್ಲ. ಐವತ್ತು-ಅರವತ್ತರ ದಶಕಗಳಲ್ಲಿ ದೇಶದೊಳಗೆ ವಿಜೃಂಭಿಸುತ್ತಿದ್ದ
ನೆಹರೂರ 'ಧರ್ಮನಿರಪೇಕ್ಷ' ಮನೋಭಾವದ ಜತೆಗೆ ಪಶ್ಚಿಮ ಯೂರೋಪಿನಲ್ಲಿ ಪ್ರಭಾವಿಯಾಗಿದ್ದ
ಅಸ್ತಿತ್ವದಾದದ ಸೆಳೆತಕ್ಕೆ ಸಿಲುಕಿ ರಚಿಸಿದ "ಸಂಸ್ಕಾರ" ಕಾದಂಬರಿಗೆ "ಕಾಲಮಹಿಮೆ"ಯಿಂದಾಗಿ
ದೊರೆತ ಮನ್ನಣೆ ಮೂರ್ತಿಯವರನ್ನು ದಿಕ್ಕುತಪ್ಪಿಸಿತು.
ತಮ್ಮ ಆಶಯಗಳನ್ನು ಈಡೇರಿಸಿಕೊಳ್ಳಲು ಸಾಹಿತ್ಯವೇ ಏಕೈಕ ಏಣಿಯೆಂದು ತಪ್ಪಾಗಿ ಬಗೆದ ಅವರು ಆ
ಹಾದಿಯಲ್ಲಿ ಮುಂದುವರೆದರು. ಪರಿಣಾಮ ನಿರೀಕ್ಷಿತವೇ
ಆಗಿತ್ತು. ಹೇಳಿಕೊಟ್ಟ ಬುದ್ಧಿ, ಕಟ್ಟಿಕೊಟ್ಟ ಬುತ್ತಿ ಎಲ್ಲಿಯವರೆಗೆ ಬಂದೀತು?
ಧನಾತ್ಮಕ ಕೃತಿಗಳು ಮೂರ್ತಿಯವರಿಂದ ಬರಲಿಲ್ಲ.
ಪಾಂಡಿತ್ಯದ ಜತೆ ಮೂರ್ತಿಯವರಲ್ಲಿದ್ದದ್ದು ಸಮಯಪ್ರಜ್ಞೆ ಹಾಗೂ ಸನ್ನಿವೇಶಪ್ರಜ್ಞೆಗಳು ಸಮರ್ಪಕವಾಗಿ
ಮೇಳೈಸಿದ್ದ ಅದ್ಭುತ ಅಭಿನಯಸಾಮರ್ಥ್ಯ, ಜತೆಗೆ ಅತ್ಯಾಕರ್ಷಕ ವ್ಯಕ್ತಿತ್ವ. ಆದರೆ ತಮ್ಮ ವಿದ್ಯಾಭ್ಯಾಸದ ಮಟ್ಟ ಮತ್ತು ಸಮಾಜವಾದಿ ಚಿಂತನೆಗಳ
ಒತ್ತಡದಿಂದಾಗಿ ಅಭಿನಯವನ್ನವರು ಕೀಳೆಂದು ಬಗೆದರೋ ಏನೋ ಆ ದಾರಿ ಹಿಡಿಯಲ್ಲಿಲ್ಲ. ಹಿಡಿದದ್ದೇ ಅಗಿದ್ದರೆ ಅದರಲ್ಲವರು ಅಗಾಧ ಯಶಸ್ಸು ಗಳಿಸುತ್ತಿದ್ದುದು
ನಿಶ್ಚಿತ. ರಾಜಕುಮಾರರಿಗೆ ಪ್ರತಿಸ್ಪರ್ಧಿಯಾಗಿ ಮೇಲ್ವರ್ಗದ
ನಟನೊಬ್ಬನನ್ನು ಕನ್ನಡ ಚಿತ್ರರಂಗದ ಒಂದು ಪ್ರಭಾವಿವರ್ಗ ಹಠತೊಟ್ಟು ಹುಡುಕುತ್ತಿದ್ದಾಗ ಆ ಸ್ಥಾನಕ್ಕೆ
ಸೂಕ್ತವಾಗಿದ್ದವರು ಅನಂತಮೂರ್ತಿ. ಅದನ್ನವರು ಗುರುತಿಸಿಕೊಂಡಿದ್ದರೆ
ಅವರು ಬಯಸಿದ್ದ ಸುಕೋಮಲ ಸ್ನೇಹ, ಮುಗ್ಧಪ್ರೀತಿ ಅವರಿಗೆ ಮೊಗೆದಷ್ಟೂ ಉಕ್ಕುವಂತೆ ಸಿಗುತ್ತಿತ್ತು. ಅಂದರೆ, ವಿಷ್ಣುವರ್ಧನರಿಗೆ ಸಿಕ್ಕಿದ 'ಎಲ್ಲ'ವೂ ದುಪ್ಪಟ್ಟಾಗಿ ಅನಂತಮೂರ್ತಿಯವರ ಕಾಲಬುಡದಲ್ಲಿ
ಬಂದು ಬಿದ್ದಿರುತ್ತಿದ್ದವು. ಅವರು ಬಯಸಿದ್ದಕ್ಕಿಂತಲೂ
ಹೆಚ್ಚಿನ ರಾಜಕೀಯ ಸ್ಥಾನಮಾನಗಳೂ ಅವರದಾಗುತ್ತಿದ್ದವು.
ಕೇವಲ ರಾಜ್ಯಸಭೆಯ ಸದಸ್ಯತ್ವಕ್ಕಾಗಿ ಇಳಿವಯಸ್ಸಿನಲ್ಲಿ ಅವರಿವರ ಬಾಗಿಲು ಬಡಿಯಬೇಕಾದ ದುರ್ಗತಿಗೆ
ಆವರು ಇಳಿಯಬೇಕಾಗುತ್ತಿರಲಿಲ್ಲ.
ತಾವು ಹಿಡಿದ ದಾರಿಯಲ್ಲಿ ಅನಂತಮೂರ್ತಿಯವರು ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಹೋದರೂ
ಅವರ ಆಕ್ರೋಶ ಸಾತ್ವಿಕವಾಗಿತ್ತು. ಅವರು ವಿರೋಧಿಸಿದ್ದು
ಹಿಂದೂಧರ್ಮವನ್ನಲ್ಲ, ಬದಲಾಗಿ ಅದರ ಕೆಲವು
ಅಮಾನವೀಯ ಆಚರಣೆಗಳನ್ನು. ತಾವೊಬ್ಬ ಹಿಂದೂ ಎಂದು ಹಲಬಾರಿ
ಹೇಳಿಕೊಂಡ ಅನಂತಮೂರ್ತಿಯವರೊಳಗೊಬ್ಬ ಮಾಧ್ವ ಬ್ರಾಹ್ಮಣನಿದ್ದ ಮತ್ತು ಸದಾ ಜಾಗೃತನಾಗಿದ್ದ ಆತ ಸನ್ನಿವೇಶಕ್ಕನುಗುಣವಾಗಿ
ಹೊರಬಂದು ಯಾರಿಗೂ ಹಾನಿಯಾಗದಂತಹ ಸಾತ್ವಿಕ ಮಾಧ್ಯ ಆಚರಣೆಗಳನ್ನು ಅವರ ಮನೆಯಲ್ಲೇ ಅವರಿಂದಲೇ ಮಾಡಿಸುತ್ತಿದ್ದ. ತಾವು ಇಹಲೋಕ ತ್ಯಜಿಸಿದಾದಲೂ ಆತ ಕಾಣಿಸಿಕೊಳ್ಳಬೇಕೆಂದು
ಮೂರ್ತಿಯವರು ಬಯಸಿದ್ದು ಈಗ ಇತಿಹಾಸ.
ಲಂಕೇಶ್ ಮತ್ತು ಅನಂತಮೂರ್ತಿಯವರ ನೈಜರೂಪವನ್ನು ಅವರ ಹಿಂಬಾಲಕರು ಗುರುತಿಸಲೇ ಇಲ್ಲ. ಅವರಿಗೆ ಪ್ರಗತಿಪರ, ಕ್ರಾಂತಿನಾಯಕರ ಪಟ್ಟಕಟ್ಟಿ ಆರಾಧಿಸಿ ತನ್ಮೂಲಕ
ತಮ್ಮ ಅರೆಬೆಂದ ಪ್ರಗತಿಪರ ಚಿಂತನೆಗಳಿಗೆ ಅಭಿವ್ಯಕ್ತಿ ಕಂಡುಕೊಳ್ಳಲು ಅವರು ಪ್ರಯತ್ನಿಸಿದರು, ಪ್ರಯತ್ನಿಸುತ್ತಲೇ ಇದ್ದಾರೆ. ಇವರಲ್ಲಿ ಸ್ಥೂಲವಾಗಿ ಎರಡು ಗುಂಪುಗಳಿವೆ. ಮೊದಲ ಗುಂಪಿನವರು ಸದ್ದಿಲ್ಲದೇ ತಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುವಂತವರು, ಎರಡನೆಯವರು ಬಾಯಿಬಡುಕರು. ಮೊದಲನೆಯ ಗುಂಪಿನ ಮುಂಚೂಣಿಯಲ್ಲಿರುವವರು "ದೇವರಿಗೆ
ಇಕ್ಕಿದ ಬೋನ"ದಂತೆ ಹೆಚ್ಚುಸಮಯ ಸುಮ್ಮನೆ ಅಲುಗಾಡದೇ ಕೂತು ಆ ಮೂಲಕವೇ ಹೆಸರು ಮಾಡಿದಂಥವರು. ತಮ್ಮ ಸೀಮಿತ ಜ್ಞಾನವನ್ನು ಇವರು ಮರೆಮಾಡಿಕೊಂಳ್ಳುವುದು
ದಿವ್ಯಮೌನದ ಮೂಲಕ. ಈ ಕಾರಣದಿಂದಾಗಿಯೇ ದಶಕಗಳಿಂದಲೂ
ಒಂದಿಂಚೂ ಮುಂದೆ ಸಾಗದ ಬೌದ್ಧಿಕತೆಯನ್ನು ಹಾಡಿದ್ದೇ ಹಾಡುವ ಕಿಸಬಾಯಿ ದಾಸನಂತೆ ಅಲ್ಲಲ್ಲಿ ಪ್ರದರ್ಶಿಸುತ್ತಾ
ದಿನದೂಡುತ್ತಿದ್ದಾರೆ. ಕನ್ನಡಪರ ಕಾಳಜಿಯನ್ನೊಡ್ಡಿ
ನಿರ್ದಿಷ್ಟ ಸಂಸ್ಥೆಯೊಂದರ ಪ್ರಶಸ್ತಿಯನ್ನು ನಿರಾಕರಿಸುವ ಇವರು ಬೇರೆಡೆಯಿಂದ ಪ್ರಶಸ್ತಿಗಳು, ಗೌರವಗಳು ಬಂದಾಗ ನಗುಮೊಗದಿಂದ ಸ್ವೀಕರಿಸುತ್ತಾರೆ. ಆಗ ಇವರ ಕನ್ನಡಪ್ರೇಮ ಅದೆಲ್ಲಿ ಮುಖಮುಚ್ಚಿಕೊಳ್ಳುತ್ತದೋ
ಕಾಣೆ. ಕನ್ನಡಪರ ಕಾರಣವನ್ನೊಡ್ಡಿ ಗೌರವದ ಸ್ಥಾನವೊಂದನ್ನು
ನಿರಾಕರಿಸುವ ಇವರು, ಎಲ್ಲವನ್ನೂ ತೊರೆದು
ಬಟಾಬಯಲಿನಲ್ಲಿ ನಿರಾಡಂಬರವಾಗಿ ನಿಂತ ತ್ಯಾಗಮೂರ್ತಿಯ ಸನ್ನಿಧಿಯಲ್ಲಿ ತಾತ್ಕಾಲಿಕ ಸೂರಿನಡಿಯಲ್ಲಿ
ಕನ್ನಡ ಸಮ್ಮೇಳನ ಆರಂಭವಾಗುವ ಶುಭಘಳಿಗೆಯಲ್ಲೇ ಅತ್ತ ರಾಜಧಾನಿಯ ಐಷಾರಾಮಿ ಹೋಟೆಲ್‌ನ ಹವಾನಿಯಂತ್ರಿಕ
ಸಭಾಂಗಣದಲ್ಲಿ ಆಂಗ್ಲಪತ್ರಿಕೆಯೊಂದು ನಡೆಸುವ ಸಾಹಿತ್ಯಕ 'ಹಬ್ಬ'ದಲ್ಲಿ ಭಾಗವಹಿಸುತ್ತಾರೆ! ಇಂಥಾ ಧರೆಗೆ ದೊಡ್ಡವರ ಬಗ್ಗೆ ಮಾತಾಡಿ ಸಮಯ ವ್ಯರ್ಥಮಾಡುವುದರ
ಬದಲು ಬಾಯಿಬಡುಕರ ಬಗ್ಗೆ ಮಾತಾಡೋಣ. ಮಾತಾಡುವವರ ಜತೆ
ಮಾತಾಡುವುದು ಸುಲಭ ಹಾಗೂ ಚಂದ ಸಹಾ ಎಂಬ ನಂಬಿಕೆಯೊಂದಿಗೆ ಪ್ರೊ. ಕೆ. ಎಸ್. ಭಗವಾನ್‌ರ ಇತ್ತೀಚಿನ
ಹೇಳಿಕೆಗಳನ್ನು ಚರ್ಚೆಗೆತ್ತಿಕೊಳ್ಳುತ್ತೇನೆ.
ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕಗಳು ಅಮಾನವೀಯ, ಆ ಕಾರಣಕ್ಕಾಗಿಯೇ ಅವುಗಳನ್ನು ತಾವು ಸುಡಲು
ತಯಾರಿರುವುದಾಗಿ ಭಗವಾನ್ ಹೇಳಿದ್ದಾರೆ. ಪ್ರಶ್ನೆಯೆಂದರೆ
ಮಾನವಪರರಿಗೆ ಸಹ್ಯವಾಗದಿರಬಹುದಾದ ವಾಕ್ಯಗಳು, ವಿಚಾರಗಳು ಭಗವದ್ಗೀತೆಗಿಂತಲೂ ಹೆಚ್ಚಾಗಿ ಇತರ ಧರ್ಮಗಳ ಪವಿತ್ರಗ್ರಂಥಗಳಲ್ಲಿ
ಇವೆಯಲ್ಲ? ಅಷ್ಟೇ ಅಲ್ಲ, ಅವುಗಳು ಇಪ್ಪತ್ತೊಂದನೆಯ ಶತಮಾನದಲ್ಲೂ ಕೆಲವು
ದೇಶಗಳ ಧಾರ್ಮಿಕ ಪಾಠಶಾಲೆಗಳ ಪಠ್ಯಕ್ರಮಗಳಲ್ಲಿ ಅಡಕವಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೋಧಿಸಲ್ಪಡುತ್ತಿವೆಯಲ್ಲ?
ಅದರ ಪರಿಣಾಮವಾಗಿ ವಿಶ್ವದ ವಿವಿಧೆಡೆ ಮಾನವಹಕ್ಕುಗಳ ಉಲ್ಲಂಘನೆ, ಜೀವಹರಣದಂತಹ ಹಿಂಸಾಚಾರಗಳು ಘಟಿಸುತ್ತಿವೆಯಲ್ಲ?
ಆ ವಿಚಾರಗಳ್ಯಾವುವೆಂದು ನಾನು ಹೇಳುವ ಅಗತ್ಯವಿಲ್ಲ.
ಮಾನವಪರ ಭಗವಾನರು ತಾವೇ ಅವುಗಳನ್ನು ನೋಡಬಹುದು.
(ನಮ್ಮ ವಿಚಾರವಾದಿಗಳ "politically correct" ನಡವಳಿಕೆಯನ್ನು ವಿಶ್ಲೇಷಿಸುತ್ತಾ
ನಾನೇ "politically correct" ಆಗಬೇಕಾದ ದುರಂತದ ಬಗ್ಗೆ ನನಗೆ ವಿಷಾದವಿದೆ).
ತಮ್ಮ ಮಾನವಪರ ಕಾಳಜಿಗಳನ್ನು ಭಗವದ್ಗೀತೆಯ ಜತೆ ಇತರ ಧರ್ಮಗಳ ಗ್ರಂಥಗಳಿಗೂ ವಿಸ್ತರಿಸಿದರೆ ಮಾತ್ರ
ಭಗವಾನ್ ಮತ್ತಿತರರನ್ನು ಪ್ರಾಮಾಣಿಕರೆಂದು ನಂಬಬಹುದು.
ಇಲ್ಲದಿದ್ದರೆ ಇವರು ಪ್ರಚಾರಕ್ಕಾಗಿ ನಿರಪಾಯಕಾರಿ ಧರ್ಮವೊಂದರ ನಿಂದನೆ ಮಾಡುವ ನಾಟಕವಾಡುತ್ತಿದ್ದಾರೆಂದು
ತಿಳಿಯಬೇಕಾಗುತ್ತದೆ. ಇದೆಲ್ಲದರ ಅರ್ಥ ಇಷ್ಟೇ: ಫತ್ವಾ
ಹೊರಡಿಸುವ, ತಲೆದಂಡ ಕೇಳುವ
ನಿಯಮ ಹಾಗೂ ಸಂಪ್ರದಾಯ ಹಿಂದೂಧರ್ಮದಲ್ಲಿದ್ದರೆ, ಎಕೆ-೪೭ ಹಿಡಿದ ಮೂಲಭೂತವಾದಿ ಭಯೋತ್ಪಾದಕರು ಹಿಂದೂಗಳಲ್ಲಿದ್ದರೆ ಬುದ್ಧಿಜೀವಿಗಳ
ವರ್ತನೆ ಈಗಿರುವುದಕ್ಕಿಂತ ಸಂಪೂರ್ಣ ವಿರುದ್ಧವಾಗಿರುತ್ತಿತ್ತು. ಸಹಿಷ್ಣುವಾಗಿರುವುದೇ ಹಿಂದೂಧರ್ಮದ ಬಲಹೀನತೆ ಎಂಬ ಅಭಿಪ್ರಾಯ
ಹಿಂದೂಗಳಲ್ಲಿ ಮೂಡುವಂತೆ ಬುದ್ಧಿಜೀವಿಗಳು ಮಾಡಿದ್ದಾರೆ.
ಇವರು ಅರಿಯಬೇಕಾದ ಸತ್ಯವೊಂದಿದೆ. ಗೋಡೆಗೆ
ಒತ್ತರಿಸಲ್ಪಟ್ಟರೆ ಮುದ್ದು ಬೆಕ್ಕೂ ಕ್ರೂರವಾಗಿ ಪ್ರತಿಕ್ರಿಯಿಸುತ್ತದಂತೆ! ಬುದ್ಧಿಜೀವಿಗಳ ಅತಾರ್ಕಿಕ ಪ್ರಲಾಪಗಳಿಂದಾಗಿ ಹಿಂದೂಗಳು
ಆ ಸ್ಥಿತಿ ತಲುಪುವ ದಿನ ಬಂದರೆ ಅಚ್ಚರಿ ಪಡಬೇಕಾಗಿಲ್ಲ.
ಅದರಿಂದಾಗುವ ಅನಾಹುತಗಳಿಗೆ ಈ ಬುದ್ಧಿಗೇಡಿಗಳೇ ಕಾರಣ.
No comments:
Post a Comment