ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Wednesday, May 8, 2013

ಚೀನೀ ಅತಿಕ್ರಮಣ: ಆದದ್ದೆಲ್ಲಾ ಒಳ್ಳೆಯದಕ್ಕೇ?

"ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಇಂದು ಪ್ರಕಟವಾಗಿರುವ ಲೇಖನ


            ಲಡಾಖ್‌ನಲ್ಲಿನ ಭಾರತೀಯ ಸೇನಾಠಿಕಾಣೆ ದೌಲತ್ ಬೇಗ್ ಓಲ್ದಿಗೆ ಹೊಂದಿಕೊಂಡಂತಿರುವ ದೇಪ್‌ಸಂಗ್ ಬಯಲುಪ್ರದೇಶದಲ್ಲಿ ಏಪ್ರಿಲ್ ೧೫ರಂದು ಹತ್ತೊಂಬತ್ತು ಕಿಲೋಮೀಟರ್‌ಗಳಷ್ಟು ಪಶ್ಚಿಮಕ್ಕೆ ಮುಂದೊತ್ತಿ ಬಂದು ನೆಲೆಯೂರಿ ಏಶಿಯಾದ ಎರಡು ಬೃಹದ್‌ರಾಷ್ಟ್ರಗಳ ನಡುವಿನ ವೈಷಮ್ಯವನ್ನು ತೀಕ್ಷ್ಣಗೊಳಿಸಿದ್ದ ಐವತ್ತು ಸೈನಿಕರ ಚೀನೀ ಪಡೆ ಮೇ ೬ರಂದು ಹಿಂದೆ ಸರಿದಿದೆ.  ಹಿಂದಿನ ಸಂಜೆ ಆ ಪ್ರದೇಶದಲ್ಲಿನ ಎರಡೂ ಸೇನೆಗಳ ನಡುವೆ ನಡೆದ ಮೂರನೆಯ ಸುತ್ತಿನ ಬ್ರಿಗೇಡಿಯರ್ ಮಟ್ಟದ ಮಾತುಕತೆಗಳು ಫಲಪ್ರದವಾಗಿ ಒಪ್ಪಂದವೊಂದು ಏರ್ಪಟ್ಟ ಪರಿಣಾಮ ಈ ಚೀನೀ ಹಿಂಪಯಣ.  ಈ ಒಪ್ಪಂದದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ.  ಅಚ್ಚರಿಯೆಂದರೆ ಅಗತ್ಯ ವಿವರಗಳು ತನಗೂ ದೊರೆತಿಲ್ಲ ಎಂದು  ಚೀನೀ ವಿದೇಶಾಂಗ ಇಲಾಖೆ ಸೋಮವಾರ ಹೇಳಿಕೆ ನೀಡಿದೆ.  ಈ ಒಪ್ಪಂದದಲ್ಲೇನಾದರೂ ಗುಪ್ತ ಅಂಶಗಳಿವೆಯೇ?, ಆಕ್ರಮಿತ ಪ್ರದೇಶದಿಂದ ಹಿಂತಿರುಗಲು ಚೀನೀ ಸೇನೆಯ ಮನವೊಲಿಕೆಗಾಗಿ ಭಾರತವೇನಾದರೂ ರಿಯಾಯಿತಿ ತೋರಿದೆಯೇ?, ಇನ್ನೊಂದು ವರ್ಷದಲ್ಲಿ ಚುನಾವಣೆಗಳನ್ನೆದುರಿಸಲಿರುವ ಯುಪಿಎ ಈಗಾಗಲೇ ಮೈತುಂಬಾ ಸುತ್ತಿಕೊಂಡಿರುವ ಹಗರಣಗಳ ಜತೆ ಈ ಬಿಕ್ಕಟ್ಟನ್ನೂ ತನ್ನ ತಲೆಯ ಮೇಲೆಳೆದುಕೊಳ್ಳುವುದರ ಅನುಚಿತತೆಯನ್ನು ಪರಿಗಣಿಸಿ ಶತಾಯಗತಾಯ ಅದನ್ನು ದೂರೀಕರಿಸುವ ಉದ್ದೇಶದಿಂದ ಒಳಒಪ್ಪಂದದ ಮಾರ್ಗೋಪಾಯ ಹುಡುಕಿದೆಯೇ ಎಂಬ ಸಂಶಯಗಳು ಹಲವು ಕಡೆಯಿಂದ ಕೇಳಿಬರುತ್ತಿವೆ.  ಕೇರಳದ ಇಬ್ಬರು ಮೀನುಗಾರರ ಹತ್ಯೆಯ ಆಪಾದನೆಗೊಳಗಾಗಿರುವ ಇಟ್ಯಾಲಿಯನ್ ನೌಕಾಸೈನಿಕರ ವಾಪಸಾತಿಯ ಬಗ್ಗೆ ಭಾರತ ಸರಕಾರ ಮಾಡಿಕೊಂಡ ಒಳಒಪ್ಪಂದದ ಕಹಿನೆನಪು ಸಾರ್ವಜನಿಕರ ಮನಸ್ಸಿನಲ್ಲಿ ಹಸಿಯಾಗಿರುವ ಹಿನ್ನೆಲೆಯಲ್ಲಿ ಇಂತಹ ಸಂಶಯಗಳು ಸಹಜವೇ.  ಸಧ್ಯಕ್ಕೆ ಚೀನೀ ಹಿಂತಿರುಗುವಿಕೆಗೆ ಪ್ರತಿಯಾಗಿ ಚುಮರ್‌ನಲ್ಲಿ ತಾನು (ಚೀನೀ ಸೇನೆಯ ಅತಿಕ್ರಮಣದ ನಂತರ) ನಿರ್ಮಿಸಿದ್ದ ಬಂಕರ್ ಒಂದನ್ನು ತೆರವುಗೊಳಿಸಿ ಪಶ್ಚಿಮಕ್ಕೆ ಸರಿಯಲು ಭಾರತೀಯ ಸೇನೆ ಸಮ್ಮತಿಸಿದೆ ಎನ್ನುವುದರ ಹೊರತಾಗಿ ಬೇರಾವ ಗಮನಾರ್ಹ ಮಾಹಿತಿಯೂ ಹೊರಬಿದ್ದಿಲ್ಲ.  ಬಹಿರಂಗಗೊಂಡಿರುವ ಈ ಅತ್ಯಲ್ಪ ಮಾಹಿತಿಯೇ ಭಾರತೀಯ ಸೇನೆಯೂ ಪಶ್ಮಿಮಕ್ಕೆ ಹಿಂದೆ ಸರಿಯುವುದಾದರೆ ನಿರ್ಮಾನುಷ ಪ್ರದೇಶ ನಿರ್ಮಾಣವಾಗಿರುವುದು ಭಾರತೀಯ ನೆಲದಲ್ಲೇ ಎಂಬ ಆತಂಕಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ.  ನಮ್ಮದೇ ಪ್ರದೇಶದಿಂದ ನಾವೇಕೆ ಹಿಂದೆ ಸರಿಯಬೇಕು ಎಂದು ಪ್ರಶ್ನಿಸುವುದರ ಮೂಲಕ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆತಂಕಕ್ಕೆ ಧ್ವನಿ ನೀಡಿದ್ದಾರೆ.

            ಮೇ ೫ರ ಒಪ್ಪಂದದ ವಿವರಗಳ ಕೊರತೆಯಿಂದಾಗಿ ಅದರ ಬಗೆಗಿನ ಚರ್ಚೆಯನ್ನು ಬದಿಗಿಟ್ಟು ದೇಪ್‌ಸಂಗ್‌ನಲ್ಲಿ ಭಾರತೀಯ ಮತ್ತು ಚೀನೀ ಸೇನೆಗಳ ಮುಖಾಮುಖಿ ನಿಲುಗಡೆಗೆ ಬಂದು ಎರಡೂ ದೇಶಗಳ ನಡುವಿನ ವೈಷಮ್ಯ ಸಧ್ಯಕ್ಕೆ ತಹಬಂದಿಗೆ ಬಂದಿದೆ ಎಂಬ ವಾಸ್ತವವನ್ನಷ್ಟೇ ಗಣನೆಗೆ ತೆಗೆದುಕೊಂಡು ದ್ವಿಪಕ್ಷೀಯ ಸಂಬಂಧಗಳ ಮೇಲೆ ಈ ಹತ್ತೊಂಬತ್ತು ದಿನಗಳ ಬೆಳವಣಿಗೆಗಳ ಪರಿಣಾಮಗಳನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶ.

            ಕಳೆದರ್ಧ ಶತಮಾನದ ವಿಶ್ವ ಇತಿಹಾಸವನ್ನೇ ಅವಲೋಕಿಸಿದರೆ ವಿರೋಧಿ ರಾಷ್ಟ್ರಗಳ ನಡುವಿನ ವೈಷಮ್ಯದ ಹಿಗ್ಗುವಿಕೆ ಹಾಗೂ ಕುಗ್ಗುವಿಕೆಯ ಬಗ್ಗೆ ಹಲವು ಕುತೂಹಲ ಸಂಗತಿಗಳು ಅರಿವಿಗೆ ನಿಲುಕುತ್ತವೆ.  ಸಣ್ಣ ಮನಸ್ತಾಪವೊಂದು ಐತಿಹಾಸಿಕ ವೈಷಮ್ಯದ ಅಥವಾ ಆರ್ಥಿಕ ಹಿತಾಸಕ್ತಿಗಳ ಒತ್ತಡಕ್ಕೆ ಸಿಲುಕಿ ವಿಷಮಗೊಂಡು ಸಶಸ್ತ್ರ ಘರ್ಷಣೆಗೆ ಕಾರಣವಾದಾಗ ಎರಡೂ ದೇಶಗಳ ನಡುವಿನ ನಾಗರಿಕ, ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ, ರಾಜತಾಂತ್ರಿಕ ಹೊಕ್ಕುಬಳಕೆಗಳು ತಟಕ್ಕನೆ ನಿಂತುಹೋಗುತ್ತದೆ.  ಯುದ್ಧ ನಿರ್ಮಿಸಿದ ಹೊಸ ವಾಸ್ತವಗಳ ಆಧಾರದ ಮೇಲೆ ಈ ಪರಸ್ಪರ ದೂರೀಕರಣದ ಅವಧಿ ನಿರ್ಧಾರವಾಗುತ್ತದೆ.  ಸಶಸ್ತ್ರ ಘರ್ಷಣೆ ಉಭಯ ದೇಶಗಳ ನಡುವಿನ ಭೌಗೋಳಿಕ (ಕೆಲವೊಮ್ಮೆ ಆರ್ಥಿಕ ಹಾಗೂ ಸಾಮರಿಕ ಹಿತಾಸಕ್ತಿಗಳ) ಗಡಿಯನ್ನು ಗಮನಾರ್ಹವಾಗಿ ಬದಲಾಯಿಸಿದರೆ ವೈಷಮ್ಯ ಧೀರ್ಘಕಾಲದವರೆಗೆ ಮುಂದುವರೆಯುತ್ತದೆ.  ಅಂತಹ ಬದಲಾವಣೆಗಳೇನೂ ಇಲ್ಲದಿದ್ದರೆ ಸ್ನೇಹದ ಮಾತುಕತೆ ಕ್ಷಿಪ್ರಕಾಲದಲ್ಲಿ ಆರಂಭವಾಗುತ್ತದೆ.  ಘರ್ಷಣೆಗೆ ವಿರುದ್ಧವಾಗಿ, ಎರಡೂ ದೇಶಗಳು ಯುದ್ಧದ ಹೊಸ್ತಿಲಿಗೆ ಹೋಗಿ, ಆತಂಕವನ್ನು ಉತ್ತುಂಗಕ್ಕೇರಿಸಿ, ಇನ್ನೇನು ಜಟಾಪಟಿ ಆರಂಭವಾಯಿತು ಎನ್ನುವಷ್ಟರಲ್ಲಿ ರಣಕಹಳೆ ಮೊಳಗಿಸುವುದನ್ನು ತಡೆದರೆ ಉಭಯ ಪಕ್ಷಗಳ ನಡುವೆ ಉಚ್ಛಸ್ಥರೀಯ ಮಾತುಕತೆಗಳು ಅನತೀಕಾಲದಲ್ಲೇ ಆರಂಭವಾಗುತ್ತವೆ.  ಇದಕ್ಕೆ ಎರಡು ಕಾರಣಗಳಿವೆ.  ಒಂದು- ಯುದ್ಧ ಘಟಿಸಲಿಲ್ಲವಾದ್ದರಿಂದ ಗಡಿಯೂ ಬದಲಾಗಿರುವುದಿಲ್ಲ.  ಹೀಗಾಗಿ ಪರಸ್ಪರ ದೂರುಗಳಿರುವುದಿಲ್ಲ.  ಎರಡು- ಯುದ್ಧದಿಂದಾಗಬಹುದಾಗಿದ್ದ ಹಾನಿಯ ಚಿತ್ರಣ ನಾಯಕರುಗಳ ಅರಿವಿಗೆ ನಿಲುಕಿ ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾಗದಿರುವಂತೆ ಎಚ್ಚರಿಕೆ ವಹಿಸುವ ವಿವೇಕಚಿಂತನೆಗೆ ಅವರಿಗೆ ಸಮಯಾವಕಾಶ ದೊರೆಯುತ್ತದೆ.  ೧೯೬೨ರ ಅಕ್ಟೋಬರ್‌ನಲ್ಲಿ ಘಟಿಸಿದ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು (Cuban Missile Crisis) ಮತ್ತದರ ನಂತರದ ಬೆಳವಣಿಗೆಗಳು ಇದಕ್ಕೊಂದು ಉತ್ತಮ ಉದಾಹರಣೆ.  ಅಮೆರಿಕಾಕ್ಕೆ ತೀರಾ ಸನಿಹದ ಕ್ಯೂಬಾದಲ್ಲಿ ಅಣ್ವಸ್ತ್ರ ಕ್ಷಿಪಣಗಳನ್ನು ಸೋವಿಯೆತ್ ಯೂನಿಯನ್ ನಿಯೋಜಿಸುತ್ತಿದೆಯೆಂದರಿತ ಕೆನಡಿ ಸರಕಾರ ಉಗ್ರ ಕ್ರಮಕ್ಕೆ ಮುಂದಾಯಿತು.  ಕ್ಯೂಬಾ ಸುತ್ತಲೂ ನೌಕಾ ದಿಗ್ಬಂಧನವೊಡ್ಡಿ ಅಲ್ಲಿಗೆ ಕ್ಷಿಪಣಿಗಳ ಭಾಗಗಳನ್ನು ಸಾಗಿಸುತ್ತಿದ್ದ ಸೋವಿಯೆತ್ ನೌಕೆಗಳ ದಾರಿಗಡ್ಡವಾಗಿ ಅಮೆರಿಕನ್ ನೌಕೆಗಳು ನಿಂತಾಗ ಯಾವ ಕ್ಷಣದಲ್ಲಾದರೂ ಆ ಎರಡು ಅಣ್ವಸ್ತ್ರ ದೈತ್ಯರ ನಡುವೆ ಸಮರ ಆರಂಭವಾಗಬಹುದೆಂಬ ಆತಂಕ ಎಲ್ಲೆಡೆ ಮೂಡಿತು.  ವಾಸ್ತವವಾಗಿ ಅಕ್ಟೋಬರ್ ೨೭ರಂದು ಅಂತಹ ಅನಾಹುತದ ಅಂಚಿನಲ್ಲಿ ವಿಶ್ವ ನಿಂತಿತ್ತು.  ಅದೃಷ್ಟವಶಾತ್ ತಮ್ಮ ಕಾರ್ಯಕ್ರಮಗಳನ್ನು ನಿಲುಗಡೆಗೆ ತರಲು ಸೋವಿಯೆತ್ ನೇತಾರ ನಿಕಿತಾ ಕೃಶ್ಚೇವ್ ಸರಿಯಾದ ಸಮಯದಲ್ಲಿ ಮನಸ್ಸು ಮಾಡಿದ್ದರಿಂದ ಮತ್ತು ಟರ್ಕಿ ಮತ್ತು ಇಟಲಿಗಳಲ್ಲಿದ ಅಮೆರಿಕನ್ ಅಣ್ವಸ್ತ್ರ ಕ್ಷಿಪಣಿಗಳ ಬಗೆಗಿನ ಸೋವಿಯೆತ್ ಆತಂಕಗಳಿಗೆ ಅಧ್ಯಕ್ಷ ಕೆನಡಿ ಸಕಾತ್ಮಕವಾಗಿ ಸ್ಪಂದಿಸಿದ್ದರಿಂದಾಗಿ ಮಾನವಕುಲ ವಿನಾಶದಿಂದ ಕೊನೇಕ್ಷಣದಲ್ಲಿ ಬಚಾವಾಯಿತು.   ನಿಜ ಹೇಳಬೇಕೆಂದರೆ ತಮ್ಮೆರಡು ರಾಷ್ಟ್ರಗಳು ಇಡೀ ವಿಶ್ವವನ್ನು ಎಂತಹ ದುರಂತದ ಅಂಚಿಗೊಯ್ದಿದ್ದವೆಂಬುದರ ಕರಾಳ ಚಿತ್ರಣದ ಅರಿವು ಎರಡೂ ದೇಶಗಳ ನಾಯಕರಿಗೆ ಪೂರ್ಣವಾಗಿ ದಕ್ಕಿದ್ದು ಬಿಕ್ಕಟ್ಟು ಅಂತ್ಯವಾದ ಮೇಲೆಯೇ.  ಇನ್ನೊಮ್ಮೆ ಅಂತಹ ಪರಿಸ್ಥಿತಿ ಏರ್ಪಡದಂತೆ ಎಚ್ಚರಿಕೆ ವಹಿಸುವ ಸಲುವಾಗಿಯೇ ಎರಡೂ ಸರ್ಕಾರಗಳ ನಡುವೆ ಉಚ್ಛಸ್ಥರೀಯ ಮಾತುಕತೆ ಆರಂಭವಾಯಿತು.  ಪ್ರಪಂಚದ ಎಲ್ಲೆಡೆ ಹರಡಿಕೊಂಡಿದ್ದ ಎರಡೂ ಸೇನೆಗಳ ನಡುವೆ ಯಾವುದೋ ಒಂದು ಮೂಲೆಯಲ್ಲಿ ಛಕ್ಕನೆ ಕಿಡಿ ಹೊತ್ತಿದರೆ ಅದು ವಿಶ್ವವ್ಯಾಪಿಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಇಬ್ಬರು ಅಧ್ಯಕ್ಷರ ನಡುವೆ ಸದಾ ನೇರ ಸಂಪರ್ಕದ ಅಗತ್ಯವನ್ನು ಮನಗಂಡ ಮಾಸ್ಕೋ ಮತ್ತು ವಾಷಿಂಗ್‌ಟನ್ ತಮ್ಮ ನಡುವೆ ಹಾಟ್‌ಲೈನ್ ಸಂಪರ್ಕವನ್ನು ಏರ್ಪಡಿಸಿಕೊಂಡವು.  ಇದು ಇನ್ನೂ ಮುಂದುವರೆದು ಸೀಮಿತ ಅಣ್ವಸ್ತ್ರಪರೀಕ್ಷಣಾ ನಿಷೇಧ ಒಪ್ಪಂದ (ಐimieಜ ಖಿesಣ ಃಚಿಟಿ ಖಿಡಿeಚಿಣಥಿ)ಕ್ಕೆ ಸಹಿ ಬಿದ್ದು ಹಂತಹಂತದ ಅಣ್ವಸ್ತ್ರ ನಿಶ್ಶಸ್ತ್ರಿಕರಣಕ್ಕೆ ದಾರಿ ಮಾಡಿಕೊಟ್ಟಿತು.  ಘರ್ಷಣೆಯ ಅಂಚಿಗೆ ತಲುಪಿ ಕೊನೇಕ್ಷಣದಲ್ಲಿ ಹಿಂತೆಗೆದುದರ ಸಕಾರಾತ್ಮಕ ಪರಿಣಾಮವಿದು.  ಒಂದುವೇಳೆ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ಘಟಿಸದೇ ಇದ್ದಿದ್ದರೆ ಎರಡು ದೈತ್ಯರಾಷ್ಟ್ರಗಳ ನಡುವೆ ಅಣ್ವಸ್ರ ನಿಶ್ಶಸ್ತ್ರೀಕರಣದ ಪ್ರಕ್ರಿಯೆ ಆರಂಭವಾಗುತ್ತಿತ್ತೇ ಎಂಬ ಅನುಮಾನವಿದೆ.

            ಇಂತಹ ಉದಾಹರಣೆ ಭಾರತ - ಚೀನಾ ಸಂಬಂಧಗಳಲ್ಲೂ ಕಾಣಸಿಗುತ್ತದೆ.  ೬೨ರ ಯುದ್ಧದ ಕಹಿ ಪರಿಣಾಮದಿಂದಾಗಿ ಚೀನಾದ ಜತೆ ಕಡಿದುಕೊಂಡ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸುವತ್ತ ಮನಸ್ಸು ಮಾಡಲು ಭಾರತಕ್ಕೆ ಹದಿನಾಲ್ಕು ವರ್ಷಗಳು ಬೇಕಾದವು.  ಅಷ್ಟಾಗಿಯೂ, ದ್ವಿಪಕ್ಷೀಯ ಮಾತುಕತೆಗಳು ಆರಂಭವಾಗಲು ಮತ್ತೆ ನಾಲ್ಕು ವರ್ಷಗಳು ಬೇಕಾದವು.  ಅಂದರೆ ಎರಡೂ ದೇಶಗಳು ಮತ್ತೆ ಪರಸ್ಪರ ಮಾತಾಡಲು ಬೇಕಾದದ್ದು ಬರೋಬ್ಬರಿ ಹದಿನೆಂಟು ವರ್ಷಗಳು!  ಇದನ್ನು ೧೯೮೬-೮೭ರ ಬಿಕ್ಕಟ್ಟಿಗೆ ಹೋಲಿಸೋಣ.  ೬೨ರ ನಂತರ ಭಾರತೀಯ ಸೇನೆ ಗಡಿರಕ್ಷಣೆಯಲ್ಲಿ ತನ್ನ ಸಾಮರ್ಥ್ಯವನ್ನು ಗಮನಾರ್ಹವಾಗಿ ವೃದ್ಧಿಸಿಕೊಂಡಿತು.  ಅದರಲ್ಲೂ ೧೯೮೦ರಲ್ಲಿ ಶ್ರೀಮತಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಹಿಂತಿರುಗಿದ ಮೇಲಂತೂ ದ್ವಿಪಕ್ಷೀಯ ಮಾತುಕತೆಗಳ ಜತೆಗೆ ಸೇನಾಪ್ರಾಬಲ್ಯಕ್ಕೂ ಅವರು ನೀಡಿದ ಪ್ರಾಮುಖ್ಯತೆಯಿಂದಾಗಿ ಮುಂದಿನ ಆರುವರ್ಷಗಳಲ್ಲಿ ರಕ್ಷಣೆಯ ಎಲ್ಲ ವಿಭಾಗಗಳಲ್ಲೂ ಭಾರತೀಯ ಸೇನೆ ಸಾಧಿಸಿದ ಪ್ರಗತಿ ಅಭೂತಪೂರ್ವ.  ಈ ಹಿನ್ನೆಲೆಯಲ್ಲಿ ಪೂರ್ವವಲಯದಲ್ಲಿ ಭಾರತೀಯ ಸೇನೆಯ ಯುದ್ಧಸನ್ನಧ್ದತೆಯನ್ನು ಪರೀಕ್ಷಿಸುವ ಘೋಷಿತ ಉದ್ದೇಶದೊಂದಿಗೆ ಜನರಲ್ ಸುಂದರ್‌ಜೀ ನೇತೃತ್ವದ ಭಾರತೀಯ ಸೇನೆ ೧೯೮೬ರ ನವೆಂಬರ್‌ನಲ್ಲಿ ಕೈಗೊಂಡ ಆಪರೇಷನ್ ಚೆಕರ್‌ಬೋರ್ಡ್ ಕಸರತ್ತಿನಿಂದಾಗಿ ಅತೀವ ಆತಂಕಕ್ಕೊಳಗಾದ ಚೀನಾ ಗಡಿಯಲ್ಲಿ ತನ್ನ ಸೇನೆಯನ್ನೂ ಆತುರಾತುರವಾಗಿ ಜಮಾಯಿಸಿತು.  ಅದಕ್ಕೆ ಪ್ರತಿಯಾಗಿ ಚಳಿಗಾಲದಲ್ಲಿ ಆಪರೇಷನ್ ಫಾಲ್ಕನ್ ಎಂಬ ಸಂಕೇತನಾಮದ ಕಾರ್ಯಾಚರಣೆಯನ್ನು ಆರಂಭಿಸಿದ ಭಾರತೀಯ ಸೇನೆ ತವಾಂಗ್‌ನ ಉತ್ತರದ ಹತೋಂಗ್‌ಲಾ ಗಡಿಪ್ರದೇಶದಲ್ಲಿ ಮುಂಚೂಣಿಗೆ ತಲುಪಿ ಆಯಕಟ್ಟಿನ ಸ್ಥಳಗಳಲ್ಲಿ ನೆಲೆನಿಂತಿತು.  ಮುಂದೆ ನಡೆದದ್ದೇನೆಂದು ಹೊರಜಗತ್ತಿಗೆ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.  ಆದರೆ ಕೆಲವು ಅನಧಿಕೃತ ಮೂಲಗಳ ಪ್ರಕಾರ ಎರಡೂ ಸೇನೆಗಳ ನಡುವೆ ವ್ಯಾಪಕ ಪ್ರಮಾಣದ ಯುದ್ಧವಾಗದೇಹೋದರೂ ಅಲ್ಲಲ್ಲಿ ಸಣ್ಣಪ್ರಮಾಣದ ಘರ್ಷಣೆಗಳು ನಡೆದವು ಮತ್ತು ಅವುಗಳಲ್ಲಿ ಚೀನೀ ಸೇನೆ ಹೆಚ್ಚು ಹಾನಿಯನ್ನನುಭವಿಸಿತು.  ಪರಿಣಾಮವಾಗಿ ೬೨ರಂತೆ ೮೭ ಇಲ್ಲ ಎಂದು ಚೀನಾಗೆ ಮನವರಿಕೆಯಾಯಿತು.

ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಕೆಲವೇ ತಿಂಗಳಲ್ಲಿ ಎರಡೂ ದೇಶಗಳ ನಡುವೆ ಉಚ್ಛಸ್ಥರೀಯ ಮಾತುಕತೆಗಳು ಆರಂಭವಾದವು.  ಮೇ ೧೯೮೭ರಲ್ಲಿ ವಿದೇಶಮಂತ್ರಿ ಎನ್. ಡಿ. ತಿವಾರಿ ತಮ್ಮ ಉತ್ತರ ಕೊರಿಯಾ ಯಾತ್ರೆಯ ನಡುವೆ ಬೀಜಿಂಗ್ ತಲುಪಿದರು ಮತ್ತು ಭಾರತ ಸರಕಾರದ ಮಹತ್ವದ ಸಂದೇಶವೊಂದನ್ನು ಚೀನೀ ಸರಕಾರಕ್ಕೆ ತಲುಪಿಸಿದರು.  ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಚೀನಾಗೆ ಭೇಟಿ ನೀಡಿದರು.  ೧೯೫೮ರ ನಂತರದ ಮೊತ್ತಮೊದಲ ಭಾರತೀಯ ಪ್ರಧಾನಿಯೊಬ್ಬರ ಬೀಜಿಂಗ್ ಭೇಟಿಯಲ್ಲಿ ದ್ವಿಪಕ್ಷೀಯ ಸಹಕಾರದ ಹಲವು ಒಪ್ಪಂದಗಳಿಗೆ ಸಹಿ ಬಿತ್ತು.  ಎರಡು ವರ್ಷಗಳ ನಂತರ ಚೀನೀ ಪ್ರಧಾನಿ ಲಿ ಪೆಂಗ್ ಭಾರತಕ್ಕೆ ಬಂದರು.  ಪರಸ್ಪರ ಉಚ್ಚಸ್ಥರೀಯ ಮಾತುಕತೆ ಮುಂದುವರೆದು ಗಡಿಯಲ್ಲಿ ಶಾಂತಿ ಕಾಪಾಡುವ ಐತಿಹಾಸಿಕ ಒಪ್ಪಂದವೊಂದಕ್ಕೆ ಸೆಪ್ಟೆಂಬರ್ ೧೯೯೩ರಲ್ಲಿ ಬೀಜಿಂಗ್‌ನಲ್ಲಿ ಪ್ರಧಾನಮಂತ್ರಿಗಳಾದ ಪಿ.ವಿ. ನರಸಿಂಹರಾವ್ ಮತ್ತು ಲಿ ಪೆಂಗ್‌ರಿಂದ ಸಹಿಯಾಯಿತು.  ೧೯೮೬-೮೭ರ ಚಳಿಗಾಲದ ಘರ್ಷಣೆಗಳು ಘಟಿಸದೇ ಹೋಗಿದ್ದರೆ ಎರಡೂ ದೇಶಗಳು ಶಾಂತಿಮಾರ್ಗದಲ್ಲಿ ಹೀಗೆ ಧಾಪುಗಾಲಿಡುತ್ತಿರಲಿಲ್ಲ.

ಇಂತಹದೇ ಸಕಾರಾತ್ಮಕ ಬೆಳವಣಿಗೆಗಳನ್ನು ಮುಂದಿನ ದಿನಗಳಲ್ಲಿ ನಾವು ನಿರೀಕ್ಷಿಸಬಹುದು.  ಅಂತರರಾಷ್ಟ್ರೀಯ ಬೆಳವಣಿಗೆಗಳೂ ಇದಕ್ಕೆ ಸಹಕಾರಿಯಾಗಿವೆ.  ಪೂರ್ವ ಚೀನಾ ಸಮುದ್ರದಲ್ಲಿ ಸೆಂಕಾಕು ದ್ವೀಪಗಳ ಬಗ್ಗೆ ಜಪಾನ್‌ನೊಂದಿಗೆ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟು ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕಾದ ರಹಸ್ಯ ಬೆಂಬಲದೊಂದಿಗೆ ವಿಯೆಟ್ನಾಂ ಹಾಗೂ ಫಿಲಿಪ್ಪೀನ್ಸ್‌ಗಳು ಬಿಗಿ ನಿಲುವು ತಾಳಿರುವ ಹಿನ್ನೆಲೆಯಲ್ಲಿ ಭಾರತದ ಜತೆ ಗಡಿಸಮಸ್ಯೆಯನ್ನು ಉಲ್ಪಣಗೊಳಿಸಿಕೊಳ್ಳುವುದು ಬೀಜಿಂಗ್‌ಗೆ ಹಾನಿಕಾರಕವಾಗುವ ಅಪಾಯದ ಅರಿವು ಅಲ್ಲಿನ ನಾಯಕರಿಗಿದೆ.  ಅಲ್ಲದೇ ಕೆಲವು ಚದರ ಕಿಲೋಮೀಟರ್‌ಗಳ ಹಿಮಾವೃತ ಪ್ರದೇಶಕ್ಕಾಗಿ ಕಾದಾಟಕ್ಕಿಳಿದರೆ ಭಾರತದೊಂದಿಗೆ ಆರ್ಥಿಕ ಸಂಬಂಧ ಹಾಳಾಗಿ ಬಿಲಿಯನ್‌ಗಟ್ಟಲೆ ಯುವಾನ್‌ಗಳ ಲುಕ್ಸಾನಾಗುವ ಅಪಾಯದ ಅರಿವೂ ಚೀನಿಯರನ್ನು ಕಂಗೆಡಿಸಲು ಸಾಕು.  ಇದೆಲ್ಲಾ ಕಾರಣಗಳಿಂದ ವಿದೇಶಮಂತ್ರಿ ಸಲ್ಮಾನ್ ಖುರ್ಶೀದ್‌ರ ಬೀಜಿಂಗ್ ಭೇಟಿ ಮತ್ತು ಚೀನೀ ಪ್ರಧಾನಿ ಲೀ ಕೇಕ್ವಿಯಾಂಗ್‌ರ ಮೇ ಅಂತ್ಯದ ಭಾರತ ಭೇಟಿಯಿಂದ ಹೆಚ್ಚಿನದನ್ನು ನಾವು ನಿರೀಕ್ಷಿಸಬಹುದಾಗಿದೆ.

1 comment:

  1. I think comparison between 'US-Soviet relations' and 'India-China relations' does not make sense much. The former is relationship is among equally powerful rivals, but the latter is not so.

    Hence I don't think any substantial breakthrough happens. The 'India-China' relationship is such that the China assumes the 'Master' role and 'India' assumes the 'Subordinate role'. And that will continue to be so till we are also become powerful or deterministic.

    ReplyDelete