ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, October 8, 2015

೧೯೬೫ರ ಭಾರತ - ಪಾಕಿಸ್ತಾನ್ ಯುದ್ಧ, ಭಾಗ ೧, ೨ ಮತ್ತು ೩“ವಿಜಯವಾಣಿ” ದೈನಿಕದ “ಜಗದಗಲ” ಅಂಕಣದಲ್ಲಿ ಪ್ರಕಟವಾದ ಲೇಖನಸರಣಿ

ಭಾಗ -
ಇಡೀ ರೊಟ್ಟಿಯನ್ನು ಒದ್ದುತಳ್ಳಿ ಚೂರಿಗಾಗಿ ಕಚ್ಚಾಡುವ ಕಥೆ
            ೧೯೬೫ರ ಭಾರತ-ಪಾಕಿಸ್ತಾನ್ ಯುದ್ಧವಾಗಿ ಐವತ್ತು ವರ್ಷಗಳಾಗುತ್ತಿವೆ.  ಎರಡನೆಯ ಕಾಶ್ಮೀರ ಯುದ್ಧ” ಎಂದೂ ಕರೆಸಿಕೊಳ್ಳುವ ಯುದ್ಧದ ಮೂಲವನ್ನು ೧೯೪೭-೪೮ರ ಮೊದಲ ಕಾಶ್ಮೀರ ಯುದ್ಧದಲ್ಲಿ ಕಾಣಬಹುದು.  ಅದರ ಮೂಲವಿರುವುದು ಎಲ್ಲರಿಗೂ ತಿಳಿದ ಹಾಗೆ ಅರವತ್ತೆಂಟು ವರ್ಷಗಳ ಹಿಂದೆ ಘಟಿಸಿದ ಉಪಖಂಡದ ವಿಭಜನೆ.  ಕಳೆದ ಶತಮಾನದ ಮೊದಲ ದಶಕದಲ್ಲಿ ಬ್ರಿಟಿಷ್ ಆಳರಸರ ಸಾಮ್ರಾಜ್ಯಶಾಹೀ ಹಂಚಿಕೆ ಹಾಗೂ ಅಗತ್ಯಗಳೊಂದಿಗೆ ಉತ್ತರ ಭಾರತದ ಮುಸ್ಲಿಂ ಸಮುದಾಯದ ಉಚ್ಛವರ್ಗದ ರಾಜಕೀಯ, ಆರ್ಥಿಕ ಲಾಲಸೆಗಳು ಮೇಳೈಸಿ ದೇಶವಿಭಜನೆಗೆ ರಂಗ ಸಜ್ಜಾದದ್ದೀಗ ಇತಿಹಾಸ.  ಅದರ ಪೀಠಿಕೆಯೊಂದಿಗೆ ೧೯೬೫ರ ಯುದ್ಧದ ಹಿನ್ನೆಲೆ ಮತ್ತು ಪರಿಣಾಮಗಳನ್ನು ವಿಶ್ಲೇಷಿಸುವ ಆರು ಭಾಗಗಳ ಲೇಖನದ ಮೊದಲ ಭಾಗ ಇಂದಿನಜಗದಗಲ”ದಲ್ಲಿ.
“ಇವನೊಬ್ಬ ಮೂರ್ಖ.  ಬಲೂಚಿಸ್ತಾನದಿಂದ ಬರ್ಮಾದವರೆಗೆ, ಕಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ಭರತಖಂಡ ಇವನದಾಗಿತ್ತು.  ಯಾರೋ ಮನೆಮುರುಕರ ಮಾತು ಕೇಳಿ ವಿಶಾಲ ನೆಲದ ಒಂದು ತುಣುಕನ್ನು ಮಾತ್ರ ತನ್ನ ಹೆಸರಿಗೆ ಮಾಡಿಸಿಕೊಂಡು ಹುಸಿ ಹೆಮ್ಮೆಯಲ್ಲಿ ಬೀಗಿದ.  ಬುದ್ಧಿವಂತರು ಮಾಡುವ ಕೆಲಸವೇ ಇದು?  ಈಗ ಅದರ ಪಕ್ಕದ ಇನ್ನೊಂದು ಚೂರು ಕಶ್ಮೀರವೂ ಬೇಕು ಅನ್ನುತ್ತಿದ್ದಾನೆ.  ತನ್ನ ತಟ್ಟೆಯಲ್ಲಿದ್ದ ಇಡೀ ರೊಟ್ಟಿಯಲ್ಲಿ ಒಂದು ಚೂರನ್ನು ಮಾತ್ರ ಕೈಗೆತ್ತಿಕೊಂಡು ಉಳಿದ ಇಡೀ ರೊಟ್ಟಿಯನ್ನು ಅಸಡ್ಡೆಯಿಂದ ದೂರ ತಳ್ಳಿ ಈಗ ಇನ್ನೊಂದು ಚೂರು ಕೊಡಿ ಇನ್ನೊಂದು ಚೂರು ಕೊಡಿ ಎಂದು ಹಲುಬುತ್ತಿದ್ದಾನೆ.  ಮುಠ್ಠಾಳತನಕ್ಕೆ ಏನು ಹೇಳಬೇಕು?  ಇವನಿಗೆ ಬುದ್ಧಿ ಬರುವುದು ಯಾವಾಗ?”
ಪಾಕಿಸ್ತಾನದ ನಿರ್ಮಾತೃಗಳ, ನಂತರ ದೇಶವನ್ನಾಳಿದ ನಾಯಕ/ನಾಯಕಿಯರ ಮೂರ್ಖತನವನ್ನು ೨೦೦೮ರಲ್ಲಿ ಪ್ರಕಟವಾದ ನನ್ನ ನೀಳ್ಗತೆಕನ್ನಡಿ”ಯ ಪಾತ್ರವೊಂದರ ಮಾತುಗಳ ಮೂಲಕ ಚಿತ್ರಿಸಿದ್ದೆ.  ಮಾತುಗಳ ಒಟ್ಟರ್ಥವೆಂದರೆ ಮುಸ್ಲಿಂ ಲೀಗ್ ಕೃತ್ಯ ಇತಿಹಾಸದ ನಿರಾಕರಣೆಯಾಗಿತ್ತು, ವರ್ತಮಾನಕ್ಕೆ ವಂಚನೆಯಾಗಿತ್ತು,.ಭವಿಷ್ಯಕ್ಕೆ ದುರಂತಕಾರಕವಾಗಿತ್ತು.
ಮುಸ್ಲಿಂ ಲೀಗ್ ಎತ್ತಿಹಿಡಿದ ಹಿಂದೂ-ಮುಸ್ಲಿಂ `ಧಾರ್ಮಿಕ ಕಂದರ' ಹೆಚ್ಚೆಂದರೆ ಒಂದು ಶತಮಾನದಷ್ಟು ಮಾತ್ರ ಹಳೆಯದು!  `ಕಂದರ'ವನ್ನು `ಸೃಷ್ಟಿಸಿದವರು' ಉಪಖಂಡದ ಹಿಂದೂಗಳೂ ಅಲ್ಲ, ಮುಸ್ಲಿಮರೂ ಅಲ್ಲ!  ಅದೆಲ್ಲವೂ ಝಾರಿಸ್ಟ್ ರಶಿಯಾ ಮತ್ತು ನಂತರದ ಕಮ್ಯೂನಿಸ್ಟ್ ಸೊವಿಯೆತ್ ಯೂನಿಯನ್ ವಿರುದ್ಧದ ತಮ್ಮ ಸಾಮ್ರಾಜ್ಯಶಾಹಿ ಹೋರಾಟಕ್ಕಾಗಿ ಬ್ರಿಟಿಷರು ಹೂಡಿದ ಹಂಚಿಕೆ.  ನಮ್ಮೆರಡು ಸಮಾಜಗಳ ನಡುವಿನ ಸಾಂಸ್ಕೃತಿಕ ಸಾಮ್ಯತೆ ವಿಶ್ವದಲ್ಲೇ ಅನನ್ಯ.  ನಿಜ ಹೇಳಬೇಕೆಂದರೆ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಇರುವ ಸಾಂಸ್ಕೃತಿಕ ಕಂದರಗಳ ಮುಂದೆ ಪಾಕಿಸ್ತಾನ ಮತ್ತು ಉತ್ತರ ಭಾರತದ ನಡುವಿನ ಕಂದರ ಏನೇನೂ ಅಲ್ಲ.  ಇದನ್ನು ಒಂದು ಪುಟ್ಟ ಆದರೆ ಮಾರ್ಮಿಕ ಉದಾಹರಣೆಯ ಮೂಲಕ ಹೇಳುತ್ತೇನೆ.
ಸೆಪ್ಟೆಂಬರ್ , ೧೯೬೫ರನ್ಯೂಯಾರ್ಕ್ ಟೈಮ್ಸ್” ಪತ್ರಿಕೆಯ ಮುಖಪುಟದಲ್ಲಿ ಹಿಂದಿನ ದಿನ ಆರಂಭವಾದ ಭಾರತ-ಪಾಕಿಸ್ತಾನ್ ಯುದ್ಧದ ಸುದ್ಧಿ ದಪ್ಪಕ್ಷರಗಳಲ್ಲಿ ಪ್ರಕಟವಾಗಿತ್ತು.  ಒಳಪುಟವೊಂದರಲ್ಲಿ ಪುಟ್ಟ ವರದಿಯೊಂದಿತ್ತು.  ಯುದ್ಧದ ಬಗ್ಗೆ ನ್ಯೂಯಾರ್ಕ್ನಲ್ಲಿ ನೆಲೆಸಿದ್ದ ಉಪಖಂಡದ ಜನರ ಅಭಿಪ್ರಾಯವನ್ನು ತಿಳಿಯಲೆಂದು ಪತ್ರಿಕೆಯ ವರದಿಗಾರ ನ್ಯೂಯಾರ್ಕ್ ಸ್ಟೇಟ್ ಯೂನಿವರ್ಸಿಟಿಗೆ ಧಾವಿಸಿದ.  ಕೆಫೆಟೇರಿಯಾದಲ್ಲಿ ಊಟದ ಮೇಜೊಂದರ ಸುತ್ತಲೂ ಕುಳಿತು ಹರಟುತ್ತಿದ್ದ ದಕ್ಷಿಣ ಏಶಿಯನ್ ವಿದ್ಯಾರ್ಥಿಗಳ ಗುಂಪೊಂದನ್ನು ಮಾತಿಗೆಳೆದ ಅವನಿಗೆ ಆಶ್ಚರ್ಯ ಕಾದಿತ್ತು.  ಅಲ್ಲಿ ಭಾರತ ಮತ್ತು ಪಾಕಿಸ್ತಾನ್ ಎರಡೂ ನಾಡುಗಳ ವಿದ್ಯಾರ್ಥಿಗಳಿದ್ದರು.  ಗೋಳದ ಆಚೆಬದಿಯಲ್ಲಿ ನಡೆಯುತ್ತಿದ್ದ ಕಾದಾಟದ ಸೋಂಕೂ ಇಲ್ಲದಂತೆ ಒಟ್ಟಿಗೆ ಉಪಾಹಾರ ಸೇವಿಸುತ್ತಾ ಹರಟುತ್ತಿದ್ದರು.  ಕಣ್ಣರಳಿಸಿದ ವರದಿಗಾರನಿಗೆ ಅವರು ಹೇಳಿದ್ದು: “ನಮ್ಮೆರಡು ದೇಶಗಳ ನಡುವೆ ಯುದ್ಧ ನಡೆಯುತ್ತಿರುವುದು ನಿಜ.  ಆದರೆ ದೂರದ ನಾಡಿನಲ್ಲಿ ನಮ್ಮ ನಡುವೆ ದ್ವೇಷಕ್ಕೆ ಕಾರಣವಿಲ್ಲ.  ನಿಜ ಹೇಳಬೇಕೆಂದರೆ ಪಾಕಿಸ್ತಾನೀಯನೊಬ್ಬ ಭಾರತೀಯನೊಡನೆ, ಭಾರತೀಯನೊಬ್ಬ ಪಾಕಿಸ್ತಾನೀಯನೊಡನೆ ಇರುವಷ್ಟು ನೆಮ್ಮದಿ ಸಂತೋಷದಲ್ಲಿ ಬೇರಾರ ಜತೆಯೂ ಇರಲಾರ.  ನಮ್ಮೆರಡೂ ಜನತೆಗಳ ನಡುವಿನ ಸಾಂಸ್ಕೃತಿಕ ಸಾಮ್ಯತೆಯೇ ಇದಕ್ಕೆ ಕಾರಣ.”
ಸಾಂಸ್ಕೃತಿಕ ಸಾಮ್ಯತೆ ಏನೆಂದು ವಿವರಿಸುವ ಮೊದಲು ಮೇಲಿನ ಸಂದರ್ಭದಲ್ಲೇ ನಡೆದ ಒಂದು ಸ್ವಾರಸ್ಯಕರ ಸಂಗತಿಯನ್ನು ಹೇಳುತ್ತೇನೆ.  ಪಾಕಿಸ್ತಾನೀಯರ ಜತೆ ಭಾರತೀಯ ವಿದ್ಯಾರ್ಥಿಗಳೂ ದನದ ಮಾಂಸವನ್ನು ತಿನ್ನುತ್ತಿದ್ದನ್ನು ಕಂಡ ವರದಿಗಾರ ಅಚ್ಚರಿಗೊಂಡ.  ಹಸು ನಿಮಗೆ ಪವಿತ್ರವಲ್ಲವೇ?” ಎಂದು ಪ್ರಶ್ನಿಸಿದ.  ಅಮೆರಿಕನ್ ಹಸು ಪವಿತ್ರವಲ್ಲ.”  ನಗುವಿನ ಜತೆ ಉತ್ತರ ಬಂತು.
ಮಧ್ಯಯುಗದಲ್ಲಿ ರಾಜಕೀಯವಾಗಿ ಭಾರತದ ಮುಖ್ಯ ಭಾಗದಿಂದ ಬೇರ್ಪಟ್ಟ ಸಿಂಧೂ ಕಣಿವೆ ಮತ್ತು ಅದರಾಚೆಗಿನ ಪ್ರದೇಶಗಳು ನಿರಂತರ ಮುಸ್ಲಿಂ ಆಳ್ವಿಕೆಯ ಪರಿಣಾಮವಾಗಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತಾ ಇಸ್ಲಾಂನ ಸಾಮಾಜಿಕ ನೀತಿನಿಯಮಗಳನ್ನು ಮೈಗೂಡಿಸಿಕೊಂಡು ಪಶ್ಚಿಮ ಮತ್ತು ಮಧ್ಯ ಏಶಿಯಾಗಳಿಗೆ ಹತ್ತಿರವಾದರೂ ಅಲ್ಲಿನ ಜನರ ಬದುಕಿನ ಅನೇಕ ಮುಖಗಳು ಭಾರತೀಯವಾಗಿಯೇ ಉಳಿದವು.  ಹೀಗಾಗಿ ಉತ್ತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಾಮ್ಯತೆಗಳು ದಟ್ಟವಾಗಿವೆ.  ಇದಕ್ಕೆ ಪ್ರತಿಯಾಗಿ ಯಾವಯಾವ ಕ್ಷೇತ್ರಗಳಲ್ಲಿ ಉತ್ತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಾಮ್ಯತೆ ಇದೆಯೋ ಸರಿಸುಮಾರು ಅವೆಲ್ಲವುಗಳಲ್ಲೂ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ವ್ಯತ್ಯಾಸಗಳಿವೆ.  ಅವುಗಳಲ್ಲಿ ಮುಖ್ಯವಾದುವನ್ನು ಹೀಗೆ ವಿವರಿಸಬಹುದು:
ಜನಾಂಗ ಮತ್ತು ಭಾಷೆಗಳು:  ಪಾಕಿಸ್ತಾನ ಮತ್ತು ಉತ್ತರ ಭಾರತಗಳ ಜನ ಆರ್ಯರು, ದಕ್ಷಿಣ ಭಾರತದ ಜನ ದ್ರಾವಿಡರು ಎಂದು ವಿದ್ವಾಂಸರು ಹೇಳುತ್ತಾರೆ.  (ಆರ್ಯ-ದ್ರಾವಿಡ ಎನ್ನುವುದೆಲ್ಲಾ ಮಿಥ್ಯೆ ಎಂಬ ವಾದವೊಂದಿದ್ದರೂ ಇದು ವಿದ್ವಾಂಸರ ವಲಯದಲ್ಲಿ ಇನ್ನೂ ಪೂರ್ಣ ಮನ್ನಣೆ ಪಡೆದಿಲ್ಲ.)  ಪಾಕಿಸ್ತಾನ ಮತ್ತು ಉತ್ತರ ಭಾರತದ ಭಾಷೆಗಳು ಇಂಡೋ ಯೂರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿವೆ.  ಅದರಲ್ಲೂ ಸಿಂಧಿ ಮತ್ತು ಪಂಜಾಬಿ ಭಾಷೆಗಳು ಸಂಸ್ಕೃತಜನ್ಯವಾಗಿದ್ದು ಉತ್ತರ ಭಾರತದ ಭಾಷೆಗಳ ಅವಳಿಯಂತಿವೆ.  ಗಡಿನಾಡು ಪ್ರಾಂತ್ಯದ ಪುಷ್ತೂ ಭಾಷೆ ಪರ್ಶಿಯನ್ ಸಂಜಾತವಾದರೂ ಅದರ ಮೇಲೆ ಸಂಸ್ಕೃತದ ಪ್ರಭಾವ ಧಾರಾಳವಾಇದೆ.  ಜತೆಗೆ ಈಗ ಪಾಕಿಸ್ತಾನದ ಅಧಿಕೃತ ಭಾಷೆಯಾಗಿರುವ ಉರ್ದು ಮೂಲತಃ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಹುಟ್ಟಿದ ಉತ್ತರ ಭಾರತದ ಭಾಷೆ.  ಇದಕ್ಕೆ ಪ್ರತಿಯಾಗಿ ದಕ್ಷಿಣ ಭಾರತದ ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿವೆ.  ಉತ್ತರದ ಮತ್ತು ದಕ್ಷಿಣದ ಭಾಷೆಗಳ ನಡುವಿನ ವ್ಯತ್ಯಾಸಗಳು ಹಾಗೂ ಘರ್ಷಣೆಗಳು ನಿಮಗೆ ತಿಳಿದೇ ಇವೆ.
ಭೂಗೋಳ ಹಾಗೂ ಚರಿತ್ರೆ:  ಪಾಕಿಸ್ತಾನ ಮತ್ತು ಉತ್ತರ ಭಾರತದ ಭೌಗೋಳಿಕ ಲಕ್ಷಣಗಳು ಹಾಗೂ ಹವೆ ಒಂದೇ ರೀತಿಯದು.  ವಿಷಯದಲ್ಲಿ ಪ್ರದೇಶಗಳಿಗೂ ದಕ್ಷಿಣ ಭಾರತಕ್ಕೂ ಗಮನಾರ್ಹ ವ್ಯತ್ಯಾಸಗಳಿವೆ.  ಹಾಗೆಯೇ ಪಾಕಿಸ್ತಾನ ಮತ್ತು ಉತ್ತರ ಭಾರತದ ಚಾರಿತ್ರಿಕ ಅನುಭವಗಳು ಏಕರೀತಿಯವು.  ಇತಿಹಾಸದುದ್ದಕ್ಕೂ ಹೊರಗಿನಿಂದ ವಲಸೆಗೆ ಅಥವಾ ಧಾಳಿಗೆ ಒಳಗಾದ ಪ್ರದೇಶಗಳು ವಿವಿಧ ಸಂಸ್ಕೃತಿ ಸಂಸ್ಕಾರಗಳ ಪ್ರಭಾವಗಳಿಗೆ ಸಿಕ್ಕು ಕಾಸ್ಮೋಪಾಲಿಟನ್ ಆದವು.  ಅದಕ್ಕೆ ವಿರುದ್ಧವಾಗಿ ಹೆಚ್ಚು ಧಾಳಿಗಳಿಗೆ ಒಳಗಾಗದೆ, ವಲಸೆಗಳನ್ನು ಕಾಣದೆ `ಸುರಕ್ಷಿತ'ವಾಗುಳಿದ ದಕ್ಷಿಣ ಭಾರತ ಹೇಳಿಕೊಳ್ಳುವಂತಹ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಕಾಣಲಿಲ್ಲ.  ಹೀಗಾಗಿ ಪ್ರದೇಶದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಉದಾರತೆ ಹೆಚ್ಚಾಗಿ ಕಾಣಬರಲಿಲ್ಲ.
ಲಲಿತಕಲೆಗಳು:  ಕಥಕ್ ನೃತ್ಯ ಪಾಕಿಸ್ತಾನ ಮತ್ತು ಉತ್ತರ ಭಾರತಗಳೆರಡಕ್ಕೂ ಸಾಮಾನ್ಯವಾದದ್ದು.  ಹಾಗೆಯೇ ಎರಡೂ ಪ್ರದೇಶಗಳಲ್ಲಿ ಮೆರೆಯುವುದು ಹಿಂದೂಸ್ತಾನೀ ಸಂಗೀತ.  ಇದಕ್ಕೆ ವಿರುದ್ಧವಾಗಿ ದಕ್ಷಿಣ ಭಾರತದಲ್ಲಿ ಭರತನಾಟ್ಯಂ ಮತ್ತು ಕರ್ನಾಟಕ ಸಂಗೀತಗಳಿವೆ.  ಅಷ್ಟೇ ಅಲ್ಲ, ಪಾಕಿಸ್ತಾನ ಮತ್ತು ಉತ್ತರ ಭಾರತದ ಇಸ್ಲಾಮೇತರ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳು ಒಂದೇ ರೀತಿಯವು.  ಪುಟ್ಟ ಪುಟ್ಟ, ಹೆಚ್ಚು ಎತ್ತರವಿಲ್ಲದ ದೇವಾಲಯಗಳು.  ಆದರೆ ದಕ್ಷಿಣದ ದೇವಾಲಯಗಳು ವಿಶಾಲವಾಗಿದ್ದು ಎತ್ತರದ ಗೋಪುರವನ್ನು ಹೊಂದಿರುತ್ತವೆ.
ಊಟತಿಂಡಿ:  ಪಾಕಿಸ್ತಾನ ಮತ್ತು ಉತ್ತರ ಭಾರತದ ಜನರ ಪ್ರಮುಖ ಆಹಾರ ಗೋಧಿ.  ಆದರೆ ದಕ್ಷಿಣ ಭಾರತದ ಜನರ ಪ್ರಮುಖ ಆಹಾರ ಅಕ್ಕಿ.  ಗೋಧಿಯೇನೋ ಈಗ ದಕ್ಷಿಣದ ಮೂಲೆಮೂಲೆಗೆ ತಲುಪಿರಬಹುದು, ಆದರೆ ತೀರಾ ಇತ್ತೀಚಿನವರೆಗೂ ದಕ್ಷಿಣದ ಜನ ಗೋಧಿಯನ್ನು ದೂರವಿಟ್ಟಿದ್ದು `ಐತಿಹಾಸಿಕ' ಸತ್ಯ.  ೧೯೬೭ರಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಸರಕಾರ ಸೋತದ್ದಕ್ಕೆ ಬರಗಾಲದಿಂದ ಪರಿತಪಿಸುತ್ತಿದ್ದ ತಮಿಳು ಜನತೆಗೆ `ಉತ್ತರದಿಂದ ಬಂದ ಗೋಧಿ ತಿನ್ನಿ' ಎಂದು ಮುಖ್ಯಮಂತ್ರಿ ಭಕ್ತವತ್ಸಲಂ ಉಪದೇಶಿಸಿದ್ದೂ ಒಂದು ಕಾರಣ ಎಂದು ಹೇಳುತ್ತಾರೆ.
ಉಡುಗೆತೊಡುಗೆ:  ಪಾಕಿಸ್ತಾನ ಮತ್ತು ಉತ್ತರ ಭಾರತದ ಜನರ ಸಾಮಾನ್ಯ ಉಡುಪುಗಳು ಕುರ್ತಾ ಪೈಜಾಮ, ಸಲ್ವಾರ್ ಕಮೀಜ಼್ ಅಥವಾ ಅವುಗಳ ರೂಪಾಂತರಗಳು.  ಆದರೆ ದಕ್ಷಿಣ ಭಾರತದ ಉಡುಪುಗಳೆಂದರೆ ಪಂಚೆ ಮತ್ತು ಸೀರೆ.  ಅನುಕೂಲಕರವೆನಿಸುವುದರಿಂದ ದಕ್ಷಿಣದ ಸ್ತ್ರೀಯರೂ ಹೆಚ್ಚುಹೆಚ್ಚಾಗಿ ಸಲ್ವಾರ್ ಕಮೀಜ಼್ ತೊಟ್ಟರೂ ಅದು ಇತ್ತೀಚಿನ ಬೆಳವಣಿಗೆ.  ಉಡುಪನ್ನು ಪಂಜಾಬೀ ಡ್ರೆಸ್ ಎಂದು ಕರೆಯುವುದನ್ನು ದಕ್ಷಿಣದ ಜನ ಇನ್ನೂ ಬಿಟ್ಟಿಲ್ಲ.
ಇಷ್ಟೆಲ್ಲಾ ಸಾಂಸ್ಕೃತಿಕ ಐಕ್ಯತೆಯನ್ನು ಕಡೆಗಣಿಸಿ, ಇಡಿಯಾಗಿ ತನ್ನದಾಗಿದ್ದ ಭರತಖಂಡದಲ್ಲಿ ಹಿಂದೂಗಳ ಜತೆ ಸಹಬಾಳ್ವೆಯನ್ನು ತಿರಸ್ಕರಿಸಿ, ತನಗಷ್ಟೇ ಮೀಸಲಾದ ಒಂದು ತುಂಡಿಗಾಗಿ ಸುಳ್ಳು, ವಂಚನೆ, ಸ್ವಜನದ್ರೋಹದ ಮಾರ್ಗ ಹಿಡಿದ ಮುಸ್ಲಿಂ ಲೀಗ್ ನಲವತ್ತೇಳರ ಆಗಸ್ಟ್ನಲ್ಲಿ ಕೊನೆಗೂ ಪಾಕಿಸ್ತಾನವನ್ನು ಗಳಿಸಿಕೊಂಡಿತು.  ಅದಾದ ಮರುಗಳಿಗೆಯೇ ಪಕ್ಕದ ಕಾಶ್ಮೀರಕ್ಕಾಗಿ ಕಿತ್ತಾಟ ಆರಂಭಿಸಿತು.  ಪರಿಣಾಮವಾಗಿ ಅಕ್ಟೋಬರ್ ಕೊನೆಯವಾರದಲ್ಲಿ ಕಾಶ್ಮೀರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನದ ಕಣವಾಯಿತು.  ಜನವರಿ , ೧೯೪೮ರಂದು ಕಾಶ್ಮೀರ ಸಮಸ್ಯೆಯನ್ನು ಭಾರತ ವಿಶ್ವಸಂಸ್ಥೆಗೆ ಒಯ್ದದ್ದು ಪಾಕಿಸ್ತಾನಕ್ಕೆ ಅನುಕೂಲಕರವಾಯಿತು.  ಪಾಕಿಸ್ತಾನವನ್ನು ಸೃಷ್ಟಿಸಲು ಮತ್ತು ಕಾಶ್ಮೀರ ಅದರ ಭಾಗವಾಗಲು ದಶಕಗಳಿಂದ ಹಂಚಿಕೆ ಹೂಡಿದ್ದ ಬ್ರಿಟನ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪರ ನಿಂತಿತು.  ಎರಡನೇ ಮಹಾಯುದ್ಧದ ನಂತರ ಪಶ್ಚಿಮದ ಪ್ರಜಾಪ್ರಭುತ್ವವಾದೀ ಗುಂಪಿನ ನಾಯಕತ್ವವನ್ನು ಬ್ರಿಟನ್ನಿಂದ ಪಡೆದುಕೊಂಡಿದ್ದ ಅಮೆರಿಕಾ ಸಹಾ ತನ್ನ ಸೋವಿಯೆತ್-ವಿರೋಧೀ ನೀತಿಗಳಿಗೆ ಪಾಕಿಸ್ತಾನ ಅನುಕೂಲಕರವೆಂದು ಬಗೆದು ಆದರ ಪರವಾಗಿ ನಿಂತಿತು.  ಇದಕ್ಕೆ ವಿರುದ್ಧವಾಗಿ, ನೆಹರೂರನ್ನು ಅವರ ಅಲಿಪ್ತ ನೀತಿಯಿಂದಾಗಿ ಅಮೆರಿಕಾ ಮತ್ತು ಬ್ರಿಟನ್ ಒಬ್ಬ ಶತ್ರುವಿನಂತೆ ಪರಿಗಣಿಸಿದವು.  ಜತೆಗೇ ಸ್ಟ್ಯಾಲಿನ್ ಸೋವಿಯೆತ್ ಯೂನಿಯನ್ ಸಹಾ ಭಾರತವನ್ನು ಸಂಶಯದಿಂದ ನೋಡಿತು.  ಹೀಗಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಏಕಾಂಗಿಯಾಯಿತು.  ನಿಜ ಹೇಳಬೇಕೆಂದರೆ ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ಯುದ್ಧಕ್ಕಿಂದ ಕಾಶ್ಮೀರದಲ್ಲಿ ಸೇನಾಯುದ್ದ ಭಾರತಕ್ಕೆ ಅನುಕೂಲಕರವಾಗಿರುತ್ತಿತ್ತು.  ಆದರೆ ಯಾವ ವಿವೇಕಯುತ ಸಲಹೆಯನ್ನೂ ಗಣನೆಗೆ ತೆಗೆದುಕೊಳ್ಳುವ ಅಭ್ಯಾಸವೇ ಇಲ್ಲದ ನೆಹರು ಅನಗತ್ಯವಾಗಿ ವಿಶ್ವಸಂಸ್ಥೆಗೆ ಹೋಗಿ ಕೈ ಸುಟ್ಟುಕೊಂಡರು.  ಇದರಿಂದ ಲಾಭವಾದದ್ದು ಪಾಕಿಸ್ತಾನಕ್ಕೆ.  ಅಷ್ಟೇ ಅಲ್ಲ, ಜನವರಿ , ೧೯೪೯ರಂದು ಕಾಶ್ಮೀರದ ಒಂದು ದೊಡ್ಡ ಭಾಗ ಪಾಕಿಸ್ತಾನೀ ಸೇನೆಯ ವಶದಲ್ಲಿರುವಾಗಲೇ ವಿಶ್ವಸಂಸ್ಥೆಯ ಕದನವಿರಾಮ ನಿರ್ಣಯವನ್ನು ಒಪ್ಪಿಕೊಂಡು ಯುದ್ಧ ನಿಲ್ಲಿಸಿ ನೆಹರೂ ಮತ್ತೊಂದು ದೊಡ್ಡ ಅವಿವೇಕದ ಕೆಲಸ ಮಾಡಿದರು.  ಹೀಗಾಗಿ ಕಾಶ್ಮೀರದ ಮೂರನೇ ಒಂದು ಭಾಗ ಇಂದಿಗೂ ಪಾಕಿಸ್ತಾನದ ವಶದಲ್ಲಿದೆ.
ಹೀಗೆ ೧೯೪೭-೪೮ರ ಯುದ್ಧದಲ್ಲಿ ನೆಹರೂ ಅವರ ಎರಡು ಅವಿವೇಕೀ ನಿರ್ಧಾರಗಳಿಂದ ಕಾಶ್ಮೀರದ ಮೂರನೇ ಒಂದು ಭಾಗವನ್ನು ಕೈವಶ ಮಾಡಿಕೊಂಡ ಪಾಕಿಸ್ತಾನ ಇಡೀ ರಾಜ್ಯವನ್ನು ಕಬಳಿಸಲು ಮಾಡಿದ ಎರಡನೆಯ ಪ್ರಯತ್ನವೇ ೧೯೬೫ರ ಯುದ್ಧ.
ಭಾಗ -
ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತದೆ!
೧೯೪೭-೪೮ರ ಪ್ರಥಮ ಕಾಶ್ಮೀರ ಯುದ್ಧ, ಜನವರಿ , ೧೯೪೯ರ ಕದನವಿರಾಮ ಕಾಶ್ಮೀರದ ಮೂರನೆಯ ಒಂದು ಭಾಗ ಪಾಕಿಸ್ತಾನದ ವಶವಾಗಲು ಸಹಕಾರಿಯಾದವಷ್ಟೇ.  ನಂತರ ವಲಯದಲ್ಲಿ ಶಾಶ್ವತ ಶಾಂತಿಗಾಗಿ ಹಲವು ಕಡೆಗಳಿಂದ ಪ್ರಯತ್ನಗಳು ಆರಂಭವಾದವು.  ಇವುಗಳಲ್ಲಿ ಅತ್ಯಂತ ಮುಖ್ಯವಾದುದು ಕಾಶ್ಮೀರ ಸಮಸ್ಯೆಯಿಂದ ಬೃಹತ್ ರಾಷ್ಟ್ರಗಳು ದೂರಸರಿದು, ಪರಸ್ಪರ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳನ್ನು ಉತ್ತೇಜಿಸಬೇಕೆಂದು ವಿಶ್ವಸಂಸ್ಥೆಯ ಪ್ರತಿನಿಧಿ (United Nations Highcommissioner for India and Pakistan, UNHIP) ಫ್ರ್ಯಾಂಕ್ ಗ್ರಹಾಂ ೧೯೫೩ರಲ್ಲಿ ನೀಡಿದ ಸಲಹೆ.  ಇದನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಒಪ್ಪಿಕೊಂಡದ್ದರ ಪರಿಣಾಮವಾಗಿ ಎರಡೂ ರಾಷ್ಟ್ರಗಳ ನಡುವೆ ಅದೇ ವರ್ಷ ಮಾತುಕತೆಗಳು ಆರಂಭವಾದವು.  ಲಭ್ಯವಿರುವ ವಿವರಗಳ ಪ್ರಕಾರ ಹತೋಟಿ ರೇಖೆಯನ್ನು ಅಲ್ಪಸ್ವಲ್ಪ ಬದಲಾಯಿಸಿ ಅಂತರರಾಷ್ಟ್ರೀಯ ಗಡಿರೇಖೆಯನ್ನಾಗಿ ಮಾರ್ಪಡಿಸಿ ಕಾಶ್ಮೀರವನ್ನು ಖಾಯಂ ಆಗಿ ಹಂಚಿಕೊಳ್ಳುವ ಬಗ್ಗೆ ರಹಸ್ಯ ಮಾತುಕತೆಗಳಲ್ಲಿ ಸರಿಸುಮಾರು ಒಂದು ತೀರ್ಮಾನಕ್ಕೆ ಬರಲಾಗಿತ್ತು.  ಯೋಜನೆಯ ಪ್ರಕಾರ ಶ್ರೀನಗರ ಭಾರತದಲ್ಲೇ ಉಳಿಯುವಂತೆಯೂ, ವುಲಾರ್ ಸರೋವರ ಮತ್ತದರ ಪಶ್ಚಿಮದ ಪ್ರದೇಶಗಳು ಪಾಕಿಸ್ತಾನಕ್ಕೆ ಹೋಗುವಂತೆಯೂ ವ್ಯವಸ್ಥೆಯಾಗಿತ್ತು.  ಆದರೆ ಎರಡು ಕಾರಣಗಳಿಂದಾಗಿ ಯೋಜನೆ ಕುಸಿದುಬಿದ್ದಿತು.  ೧೯೪೮-೪೯ರ ನಂತರ ಸೋವಿಯೆತ್ ಕಮ್ಯೂನಿಸ್ಟರು ತಮ್ಮ ಪ್ರಭಾವವನ್ನು ದಕ್ಷಿಣ ಏಶಿಯಾದಲ್ಲಿ ವಿಸ್ತರಿಸಿ ಮೂಲಕ ಹಿಂದೂಮಹಾಸಾಗರದತ್ತ ಮುಂದೊತ್ತಿ ಬರುವ ಅಪಾಯವನ್ನು ನಿಗ್ರಹಿಸುವಲ್ಲಿ ಪಾಕಿಸ್ತಾನದ `ಅಗತ್ಯ' ಬಗ್ಗೆ ಅಮೆರಿಕಾವನ್ನು ನಂಬಿಸುವಲ್ಲಿ ಬ್ರಿಟನ್ ಯಶಸ್ವಿಯಾಯಿತು.  ನೆಹರೂ ಅವರ ಅಮೆರಿಕಾ-ವಿರೋಧಿ ಹೇಳಿಕೆಗಳು ಮತ್ತು ಮಾಸ್ಕೋ ಜತೆಗಿನ ಒಡನಾಟಗಳು ಅಮೆರಿಕಾವನ್ನು ಅಡ್ಡದಾರಿಗೆಳೆಯುವ ಬ್ರಿಟಿಷ್ ತಂತ್ರಕ್ಕೆ ಸಹಕಾರಿಯಾದವು.  ಇದೆಲ್ಲದರ ಪರಿಣಾಮವಾಗಿ ಪಾಕಿಸ್ತಾನದ ಜತೆಗಿನ ಅಮೆರಿಕಾದ ಸಖ್ಯ ದಿನೇದಿನೇ ವೃದ್ಧಿಯಾಗುತ್ತಾ ಹೋಗಿ ೧೯೫೪ರಲ್ಲಿ ಎರಡೂ ದೇಶಗಳು ಪರಸ್ಪರ ರಕ್ಷಣಾ ಒಪ್ಪಂದವೊಂದಕ್ಕೆ ಸಹಿಹಾಕಿದವು.  ಮರುವರ್ಷವೇ ಅಮೆರಿಕಾ ನೇತೃತ್ವದ South East Asia Treaty Organization (SEATO) ಮತ್ತು ಬಾಗ್ದಾದ್ ಒಪ್ಪಂದ ಅಥವಾ Central Treaty Organization (CENTO) ಸೇನಾಕೂಟಗಳಲ್ಲಿ ಪಾಕಿಸ್ತಾನ ಸದಸ್ಯನಾಗಿ ಸೇರಿತು.  ಒಪ್ಪಂದಗಳಿಂದಾಗಿ ಅಮೆರಿಕಾದಿಂದ ಅತ್ಯಾಧುನಿಕ ಶಸ್ತ್ರಾಸ಼ಗಳು ಪಾಕಿಸ್ತಾನಕ್ಕೆ ಹರಿದುಬರತೊಡಗಿ ಪಾಕ್ ಸೇನೆಯ ಸಾಮರ್ಥ್ಯ ಗಣನೀಯವಾಗಿ ಏರಿತು.  ಇದರಿಂದಾಗಿ ೧೯೫೭ರ ಹೊತ್ತಿಗೆ ಕಾಶ್ಮೀರ ಸಮಸ್ಯೆಯನ್ನು ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳುವಲ್ಲಿ ಪಾಕಿಸ್ತಾನ ಆಸಕ್ತಿ ಕಳೆದುಕೊಂಡಿತು.  ಅದರ ನಾಯಕರು, ಮುಖ್ಯವಾಗಿ ವಿದೇಶಮಂತ್ರಿ ಫಿರೋಜ್ ಖಾನ್ ನೂನ್ ಮತ್ತು ಪ್ರಧಾನಮಂತ್ರಿ ಹೆಚ್. ಎಸ್. ಸುಹ್ರವರ್ದಿ ಕಾಶ್ಮೀರದ ಭೂಪಟವನ್ನು ಯುದ್ಧದ ಮೂಲಕ ತನಗೆ ಅನುಕೂಲವಾಗುವಂತೆ ಬದಲಾಯಿಸುವ ಸಾಮರ್ಥ್ಯ ಈಗ ಪಾಕಿಸ್ತಾನಕ್ಕಿದೆ ಎಂಬ ಹೇಳಿಕೆಗಳನ್ನು ಬಹಿರಂಗವಾಗಿಯೇ ನೀಡತೊಡಗಿದರು.  ಇದರಿಂದ ರೋಸಿದ ನೆಹರೂಯುದ್ಧದ ಮಾತಾಡುವವರ ಜತೆ ಶಾಂತಿಯ ಮಾತುಕತೆ ಅನಗತ್ಯ” ಎಂದು ಘೋಷಿಸಿ ದ್ವಿಪಕ್ಷೀಯ ಮಾತುಕತೆಗಳಿಗೆ ಅಂತ್ಯ ಹಾಡಿದರು.  ಅದೇ ಸಮಯಕ್ಕೆ ಶಾಂತಿಯ ಬಗ್ಗೆ ನಿಷ್ಟೆಯಿದ್ದ ಅಧ್ಯಕ್ಷ ಇಸ್ಕಂದರ್ ಮಿರ್ಜಾರನ್ನು ಜನರಲ್ ಅಯೂಬ್ ಖಾನ್ ಸೈನಿಕ ಕ್ರಾಂತಿಯ ಮೂಲಕ ಕೆಳಗಿಳಿಸಿ ಲಂಡನ್ನಿಗೆ ಗಡೀಪಾರು ಮಾಡಿದರು.
ಇದೇ ಆವಧಿಯಲ್ಲಿ ಕಾಶ್ಮೀರದಲ್ಲಿನ ಬೆಳವಣಿಗೆಗಳು, ಮುಖ್ಯವಾಗಿ ಶೇಖ್ ಅಬ್ದುಲ್ಲಾರ ನಿಲುವುನಡೆಗಳ ಕಿರುಪರಿಚಯ ನಮ್ಮ ವಿಶ್ಲೇಷಣೆಗೆ ಅಗತ್ಯವಾಗುತ್ತದೆ.  ೧೯೪೭-೪೮ರ ಯುದ್ಧದ ಸಮಯದಲ್ಲಿ ಕಾಶ್ಮೀರಿ ಜನನಾಯಕ ಶೇಖ್ ಅಬ್ದುಲ್ಲಾ ಬಹಿರಂಗವಾಗಿ ಭಾರತದ ಪರವಾಗಿದ್ದರೂ ತೆರೆಯ ಹಿಂದೆ ಅವರ ಚಟುವಟಿಕೆಗಳು ಬೇರೆಯೇ ಆಗಿದ್ದವು.  ಜನವರಿ ೧೯೪೮ರಲ್ಲಿ ಕಾಶ್ಮೀರದ ಬಗೆಗಿನ ಚರ್ಚೆಗೆಂದು ವಿಶ್ವಸಂಸ್ಥೆಗೆ ತೆರಳಿದ ಭಾರತೀಯ ಆಯೋಗದ ಸದಸ್ಯರಾಗಿದ್ದ ಅಬ್ದುಲ್ಲಾ ನಿಯೋಗದ ನಾಯಕ ಗೋಪಾಲಸ್ವಾಮಿ ಅಯ್ಯಂಗಾರರ ಮೂಗಿನ ಕೆಳಗೇ ಬೇರೆ ರಾಗ ಹಾಡಿದರು.  ಜನವರಿ ೨೮, ೧೯೪೮ರಂದು ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ಪ್ರತಿನಿಧಿಯಾಗಿದ್ದ ಸೆನೇಟರ್ ವಾರೆನ್ ಆಸ್ಟಿನ್ ಜತೆ ಮಾತಾಡುತ್ತಾ ಅಬ್ದುಲ್ಲಾ, ಭಾರತ ಮತ್ತು ಪಾಕಿಸ್ತಾನಗಳೆರಡರಿಂದಲೂ ಪ್ರತ್ಯೇಕವಾದ ಸ್ವತಂತ್ರ ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದರು.  ದಿನಗಳಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಬ್ರಿಟಿಷ್ ನೀತಿಗೆ ಸಂಪೂರ್ಣ ವಿರುದ್ಧವಾಗಿ ಭಾರತದ ಪರವಾಗಿದ್ದ ಅಮೆರಿಕಾ ಸರಕಾರವನ್ನು ಪ್ರತಿನಿಧಿಸುತ್ತಿದ್ದ ಆಸ್ಟಿನ್, ಅಬ್ದುಲ್ಲಾರ `ಬಯಕೆ' ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.  ನಂತರ ವಿಶ್ವಸಂಸ್ಥೆಯಿಂದ ಹಿಂತಿರುಗಿದ ಮೇಲೆ ಅಬ್ದುಲ್ಲಾ ಫೆಬ್ರವರಿ ೨೧ರಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಹೆನ್ರಿ ಎಫ್. ಗ್ರೇಡಿ ಅವರ ಜತೆ ಮಾತಾಡುತ್ತಾ ಬೇರೊಂದು ರಾಗ ತೆಗೆದರು.  ಕಾಶ್ಮೀರ ಆಂತರಿಕವಾಗಿ ಸ್ವಾಯುತ್ತವಾಗಿರಬೇಕೆಂದೂ, ವಿದೇಶವ್ಯವಹಾರಗಳು ಮತ್ತು ರಕ್ಷಣೆಯನ್ನು ಭಾರತ ಮತ್ತು ಪಾಕಿಸ್ತಾನಗಳೆರಡೂ ಜಂಟಿಯಾಗಿ ನೋಡಿಕೊಳ್ಳಬೇಕೆಂದೂ ಸೂಚಿಸಿದರು.  ಅವ್ಯವಹಾರಿಕ ಸಲಹೆಯನ್ನು ಗ್ರೇಡಿ ಪುರಸ್ಕರಿಸಲಿಲ್ಲ.  ಐದೇ ತಿಂಗಳ ನಂತರ ಜುಲೈ ೪೮ರಲ್ಲಿ ಅಬ್ದುಲ್ಲಾರ ತಲೆಯಲ್ಲಿ ಮತ್ತೊಂದು ವಿಚಾರ ಸುಳಿದಾಡಿತು.  ಶ್ರೀನಗರಕ್ಕೆ ಆಗಮಿಸಿದ್ದ ವಿಶ್ವಸಂಸ್ಥೆಯ ನಿಯೋಗದ ಸದಸ್ಯರಾಗಿದ್ದ ಜೋಸೆಫ್ ಕೋರ್ಬೆಲ್ ಜತೆ ಮಾತಾಡುತ್ತಾ ಅಬ್ದುಲ್ಲಾ ಕಾಶ್ಮೀರವನ್ನು ವಿಭಜಿಸಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಂಚಿ ಸಮಸ್ಯೆಯನ್ನು ಪರಿಹರಿಸಿಬಿಡಬೇಕೆಂದು ಸೂಚಿಸಿದರು.  ಅಬ್ದುಲ್ಲಾರ ಸಲಹೆ ಅವರ ಸ್ವಂತದ್ದೋ ಅಥವಾ ಭಾರತ ಸರಕಾರದ್ದೋ ಎಂಬ ಗೊಂದಲ ನಿಯೋಗವನ್ನು ಕಾಡಿತೆಂದು ಕೋರ್ಬೆಲ್ ತಮ್ಮ ಕೃತಿ “Danger in Kashmir”ನಲ್ಲಿ ಬರೆಯುತ್ತಾರೆ.  ಜನವರಿ , ೧೯೪೯ರಂದು ಕದನಸ್ಥಂಭನವಾಗಿ ಕಾಶ್ಮೀರದ ಮೂರನೇ ಎರಡು ಭಾಗದ ಮೇಲೆ ಭಾರತದ ಆಡಳಿತ ಸ್ಥಿರವಾಗಿ, ಅದರ ಮೇಲೆ ತಮ್ಮ ಅಧಿಕಾರ ಗಟ್ಟಿಯಾದ ಮೇಲೆ ಅಬ್ದುಲ್ಲಾ ಅವರು ನೆಹರೂ ಮುಂದೆ ಅನೇಕ ಬೇಡಿಕೆಗಳನ್ನಿತ್ತರು.  ತಮ್ಮನ್ನು ಕಾಶ್ಮೀರದ ಪ್ರಧಾನಮಂತ್ರಿ (ವಜ಼ೀರ್--ಆಜ಼಼ಂ) ಎಂದು ಕರೆಯಬೇಕು, ಕಾಶ್ಮೀರಕ್ಕೆ ತನ್ನದೇ ಆದ ಪ್ರತ್ಯೇಕ ಸಂವಿಧಾನ, ಧ್ವಜ, ರೇಡಿಯೋ ಇರಬೇಕು, ಭಾರತದ ಇತರ ಪ್ರದೇಶಗಳ ಜನ ಕಾಶ್ಮೀರದಲ್ಲಿ ಸ್ಥಿರಾಸ್ತಿಗಳನ್ನು ಹೊಂದಬಾರದು ಎಂಬುದು ಬೇಡಿಕೆಗಳಲ್ಲಿ ಪ್ರಮುಖವಾಗಿದ್ದವು.  ಇವುಗಳಿಗೆ ಒಪ್ಪದಿದ್ದರೆ ಭಾರತ ಒಕ್ಕೂಟದಲ್ಲಿ ಉಳಿಯುವುದು ಕಾಶ್ಮೀರಕ್ಕೆ ಸಾಧ್ಯವಾಗದೆಂದು ನೆಹರೂ ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಅಬ್ದುಲ್ಲಾ ಪ್ರಯತ್ನಿಸಿದರು.  ಅವರ ಬೇಡಿಕೆಗಳಲ್ಲಿ ಕೆಲವನ್ನು ಒಪ್ಪಿಕೊಂಡ ನೆಹರೂ ಮತ್ತೆ ಕೆಲವನ್ನು ನಯವಾಗಿಯೇ ತಿರಸ್ಕರಿಸಿದರು.  ಹೀಗೆ ಕಾಶ್ಮೀರಕ್ಕೆ ಕೊಟ್ಟ ಸವಲತ್ತುಗಳನ್ನು ನಮ್ಮ ಸಂವಿಧಾನದ ಅನುಚ್ಛೇದ ೩೭೦ರಲ್ಲಿ ನೋಡಬಹುದು.
            ಇದಾದಮೇಲೂ ಅಬ್ದುಲ್ಲಾ ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ಸೌದಿ ಅರೇಬಿಯಾದ ನಾಯಕರ ಜತೆ ರಹಸ್ಯವಾಗಿ ಮಾತುಕತೆ ನಡೆಸಿ ನೆಹರೂರ ಶಂಕೆಗೆ ಒಳಗಾದರು.  ಇದರ ಪರಿಣಾಮವೆಂದರೆ ಅಬ್ದುಲ್ಲಾ ಸರಕಾರದ ಬರಖಾಸ್ತು, ಅವರ ಬಂಧನ, ಬಿಡುಗಡೆ, ಮತ್ತೆ ಬಂಧನ... ದುರದೃಷ್ಟವಶಾತ್ ಅಬ್ದುಲ್ಲಾರಿಗೆ ಬದಲಾಗಿ ರಾಜ್ಯದ ಮುಖ್ಯಮಂತ್ರಿಯಾಗಲು ಪ್ರಭಾವಶಾಲೀ ಕಾಶ್ಮೀರೀ ನಾಯಕರನ್ನು ಗುರುತಿಸಿ ಬೆಳೆಸುವಲ್ಲಿ ದೆಹಲಿ ವಿಫಲವಾಯಿತು.  ನೆಹರೂ ಸರ್ಕಾರ ಕಾಶ್ಮೀರದಲ್ಲಿ ಹುಟ್ಟುಹಾಕಿದ ಕಾಂಗ್ರೆಸ್ ನಾಯಕರೆಲ್ಲರೂ ಬಲಹೀನ ಭ್ರಷ್ಟಾಚಾರಿಗಳು.  (ಈಗಲೂ ಭ್ರಷ್ಟಾಚಾರದಲ್ಲಿ ಕಾಶ್ಮೀರಕ್ಕೆ ದೇಶದಲ್ಲೇ ಎರಡನೇ ಸ್ಥಾನ!)  ಹೀಗಾಗಿ ಕಾಶ್ಮೀರದಲ್ಲಿ ಆಡಳಿತವ್ಯವಸ್ಥೆ ಕೆಟ್ಟುಹೋಗಿ ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡತೊಡಗಿತು.  ಪರಿಣಾಮವಾಗಿ ಸರಕಾರ ಮತ್ತು ಜನತೆಯ ನಡುವೆ ಕಂದರವೇರ್ಪಟ್ಟು ಅದು ದಿನೇದಿನೇ ಅಗಲವಾಗುತ್ತಾ ಹೋಯಿತು.  ಇದನ್ನು ಗಮನಿಸಿ ಪರಿಹಾರೋತ್ಮಕ ಉಪಾಯಗಳನ್ನು ಕೈಗೊಳ್ಳುವಲ್ಲಿ ನೆಹರೂ ಸರ್ಕಾರ ನಿರ್ಲಕ್ಷ ತೋರಿತು.  ಕಾಶ್ಮೀರಿ ಕಣಿವೆಯಲ್ಲಿ ಅರವತ್ತರ ದಶಕದ ಆರಂಭದಲ್ಲಿ ಪ್ರತ್ಯೇಕತಾವಾದ ಮೊಳೆತದ್ದು ಹೀಗೆ.  ಭಾರತದ ವಿರುದ್ಧ, ಕಾಶ್ಮೀರದ ಸರಕಾರದ ವಿರುದ್ಧ, ಸಾಮಾನ್ಯಜನತೆಯನ್ನು ಕೆರಳಿಸುವ ಎಲ್ಲ ಅವಕಾಶಗಳನ್ನೂ ಪಾಕ್ ಬೆಂಬಲಿತ ಪ್ರತ್ಯೇಕತಾವಾದಿಗಳು ಉಪಯೋಗಿಸಿಕೊಳ್ಳತೊಡಗಿದರು.  ೧೯೬೩ರಲ್ಲಿ ಹಜರತ್ಬಾಲ್ ಮಸೀದಿಯಲ್ಲಿರುವ ಪ್ರವಾದಿ ಮಹಮದ್ದರದೆಂದು ನಂಬಲಾಗಿರುವ ಗಡ್ಡದ ಕೂದಲು ಮಾಯವಾದ ಸಂದರ್ಭದಲ್ಲಿ ಘಟಿಸಿದ ದಂಗೆಗಳು ಭಾರತ-ವಿರೋಧಿಯಾಗಿ ಬದಲಾದದದ್ದು ಬೆಳವಣಿಗೆಯಲ್ಲಿ ಒಂದು ಪ್ರಮುಖ ಘಟ್ಟ.  ಹೀಗೆ ಕಾಶ್ಮೀರೀ ಕಣಿವೆಯಲ್ಲಿ ಸಣ್ಣಗೆ ಭಾರತ-ವಿರೋಧೀ ದಂಗೆಗಳು ಆರಂಭವಾದದ್ದೇ ಅದನ್ನು ಇಡೀ ಕಾಶ್ಮೀರಿ ಜನತೆಯ ಸ್ವಾತಂತ್ರ ಹೋರಾಟ ಎಂದು ಭಾವಿಸಿ ಕಬ್ಬಿಣ ಹದವಾಗಿ ಕಾದಿದೆ ಎಂದುಕೊಂಡು ಯುದ್ಧಕ್ಕೆ ತಯಾರಿ ಮಾಡಿದ್ದು ಅಯೂಬ್ ಖಾನ್ ಸರಕಾರ.
ನಿಷ್ಪಕ್ಷಪಾತವಾಗಿ ಅವಲೋಕಿಸಿದರೆ ಅರಂಭದಲ್ಲಿ ಜನರಲ್ ಅಯೂಬ್ ಖಾನ್ ಶಾಂತಿಗಾಗಿ ಶ್ರಮಿಸಿದ್ದು ಕಂಡುಬರುತ್ತದೆ.  ಎರಡೂ ದೇಶಗಳ ನಡುವೆ ಸದಾ ಕಿರಿಕಿರಿ, ಅಪನಂಬಿಕೆಯನ್ನುಂಟುಮಾಡುತ್ತಿದ್ದ ಸಿಂಧೂ ನದಿಯ ನೀರಿನ ಸಮಸ್ಯೆ ಪರಿಹಾರವಾದದ್ದು ಇವರ ಕಾಲದಲ್ಲಿ.  ವಿಷಯದಲ್ಲಿ ಧನಾತ್ಮಕವಾಗಿ ವರ್ತಿಸಿದ, ಅಷ್ಟೇಕೆ ಒಂದು ಹೆಜ್ಜೆ ಮುಂದೆಹೋಗಿ ಪಾಕಿಸ್ತಾನಕ್ಕೆ ನೀರು ಹೆಚ್ಚಾಗಿಯೇ ಸಿಗುವಂತೆ ಮಾಡಿದ ನೆಹರೂ ಅಯೂಬ್ ೧೯೬೧ರಲ್ಲಿ ನೀಡಿದ ಮತ್ತೊಂದು ಮಹತ್ವದ ಸಲಹೆಗೆ ಋಣಾತ್ಮಕವಾಗಿ ಪ್ರತಿಕ್ರಿಯಿಸಿದರು.  ಭಾರತ ಮತ್ತು ಪಾಕಿಸ್ತಾನಗಳೆರಡಕ್ಕೂ ಒಂದೇ ಸೇನೆ ಇರಬೇಕೆಂದೂ, ಅದು ಎರಡೂ ದೇಶಗಳನ್ನು ವೈರಿಗಳಿಂದ ರಕ್ಷಿಸಬೇಕೆಂದೂ ಅಯೂಬ್ ಸಲಹೆಯಾಗಿತ್ತು.  ಸಲಹೆ ಅನುಷ್ಟಾನಕ್ಕೆ ಬಂದಿದ್ದರೆ ಬಹುಷಃ ೧೯೬೨ರ ಭಾರತ-ಚೀನಾ ಯುದ್ಧದಲ್ಲಿ ಪಾಕಿಸ್ತಾನೀ ಸೈನಿಕರು ಚೀನಾ ವಿರುದ್ಧ ಭಾರತದ ಪರ ಹೋರಾಡುತ್ತಿದ್ದರು.  ಅದರರ್ಥ ಪಾಕಿಸ್ತಾನ ಮತ್ತು ಚೀನಾಗಳ ನಡುವೆ ಸ್ನೇಹಕ್ಕೆ ಅವಕಾಶವಾಗುತ್ತಿರಲಿಲ್ಲ.  ಆದರೆ ಅಯೂಬ್ ಸಲಹೆಗೆ ನೆಹರೂರ ಪ್ರತಿಕ್ರಿಯೆ: “Joint defense forces!  Against whom?” ಎಂದು!  ಇಷ್ಟಾಗಿಯೂ, ಭಾರತ-ಚೀನಾ ಯುದ್ಧದಲ್ಲಿ ಅಯೂಬ್ ಭಾರತದ ಪರವಾದ ಹೇಳಿಕೆ ನೀಡಿದರಷ್ಟೇ ಅಲ್ಲ, ಭಾರತಕ್ಕೆ ಅನುಕೂಲವಾಗುವಂತಹ ಕೆಲವು ನಿಲುವುಗಳನ್ನೂ ತೆಗೆದುಕೊಂಡರು.  ಪಾಕ್ ಸೇನೆಯನ್ನು ಭಾರತದ ಗಡಿಯಿಂದ ದೂರ ಒಯ್ದು, ತಮ್ಮಿಂದ ಭಾರತಕ್ಕೆ ಯಾವುದೇ ಅಪಾಯವಿಲ್ಲ ಎಂದು ತೋರಿಸಿದ್ದು ಇವುಗಳಲ್ಲೊಂದು.   ಆದರೆ ಇದಕ್ಕೂ  ಭಾರತದ ಪ್ರತಿಕ್ರಿಯೆ ಖೇದಕರವಾಗಿತ್ತು.  ಭಾರತ-ಚೀನಾ ಯುದ್ಧ ಆರಂಭವಾದ ಮರುದಿನ ರಕ್ಷಣಾಮಂತ್ರಿ ಕೃಷ್ಣ ಮೆನನ್ ಮುಂಬೈಯಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದರು.  ಅಲ್ಲಿ ಅವರು ಖಂಡಿಸಿದ್ದು ಭಾರತದ ಮೇಲೆ ಆಕ್ರಮಣವೆಸಗಿದ್ದ ಚೀನಾವನ್ನಲ್ಲ, ಬದಲಾಗಿ ಪಾಕಿಸ್ತಾನವನ್ನು!   ಇಂತಹ ಬೇಜವಾಬ್ದಾರಿ, ದೂರದೃಷ್ಟಿಹೀನ ನಾಯಕರನ್ನು ಪಡೆದದ್ದು ದೇಶದ ದುರದೃಷ್ಟ.
ಇವೆಲ್ಲವುಗಳಿಂದ ಅಯೂಬ್ ಖಾನ್ರಿಗೆ ಮನವರಿಕೆಯಾದದ್ದು ಭಾರತದ ಜತೆ ಶಾಂತಿಯ ಮಾತುಕತೆಗಳಲ್ಲಿ ಯಾವುದೇ ಅರ್ಥವಿಲ್ಲ ಎಂದು.  ಅಲ್ಲಿಂದಾಚೆಗೆ ಅವರು ಹಿಡಿದದ್ದು ಬೇರೆಯದೇ ದಾರಿ.  ಅವರ ನೀತಿಗೆ ನೀರೆರೆದು ಪೋಷಿಸಿದ್ದು ವಿದೇಶಮಂತ್ರಿ ಝುಲ್ಫಿಕರ್ ಆಲಿ ಭುಟ್ಟೋ.  ನೆಹರೂ ನಂತರದ ಭಾರತ ಸಮರ್ಥ ನಾಯಕತ್ವದ ಕೊರತೆಯಿಂದ ನರಳುತ್ತಿದೆ, ಭಾರತವನ್ನು ಮಣಿಸಲು ಇದೇ ಸುಸಮಯ ಎಂದು ಅಯೂಬ್ ಕಿವಿಯೂದಿದ್ದು ಇದೇ ಭುಟ್ಟೋ.  ಜತೆಗೆ, ಅಮೆರಿಕದ ಅತ್ಯಾಧುನಿಕ ಸೇಬರ್ ಜೆಟ್ ಫೈಟರ್ ಬಾಂಬರ್ಗಳು ಮತ್ತು ಪ್ಯಾಟನ್ ಟ್ಯಾಂಕ್ಗಳಿಂದ ಸುಸಜ್ಜಿತವಾಗಿದ್ದ ಪಾಕ್ ಸೇನೆ ಸಹಾ ಅಯೂಬ್ ಯುದ್ಧೋತ್ಸಾಹವನ್ನು ಇಮ್ಮಡಿಸಿತು.  ಹೀಗೆ ಉತ್ಸಾಹಗೊಂಡ ಅಯೂಬ್ ತನ್ನ ಸೇನೆಯ ಕಾದುವ ಸಾಮರ್ಥ್ಯವನ್ನು ಮತ್ತು ಭಾರತದ ಪ್ರತಿಕ್ರಿಯಾಸಾಮರ್ಥ್ಯವನ್ನು ಪರೀಕ್ಷಿಸಲು, ಮೂಲಕ ಕಾಶ್ಮೀರಕ್ಕಾಗಿ ದೊಡ್ಡ ಯುದ್ಧಕ್ಕೆ ಪೂರ್ವತಯಾರಿ ಮಾಡಿಕೊಳ್ಳಲು ಏಪ್ರಿಲ್ ೧೯೬೫ರಲ್ಲಿ ಪುಟ್ಟದೊಂದು ಸೇನಾ ಕಾರ್ಯಾಚರಣೆಗೆ ಹಂಚಿಕೆ ಹಾಕಿದರು.  ಅದಕ್ಕಾಗಿ ಅವರು ಆಯ್ದುಕೊಂಡದ್ದು ಗುಜರಾತ್ ಕಚ್ಛ್ ಪ್ರದೇಶವನ್ನು.  ಕೇಡುಗಾಲ ಆರಂಭವಾಗಿತ್ತು, ನಾಯಿ ಮೊಟ್ಟೆ ಇಡತೊಡಗಿತ್ತು.
ಭಾಗ -
ಪುಟ್ಟ ಮನುಷ್ಯನಿಂದ ದೊಡ್ಡ ನಿರ್ಧಾರ
೧೯೬೫ರ ಭಾರತ-ಪಾಕಿಸ್ತಾನ್ ಘರ್ಷಣಾಸರಣಿಗಳು, ಬಳಸಿದ ಯುದ್ಧೋಪಕರಣಗಳು, ಹತರಾದ ಸೈನಿಕರು ಮತ್ತು ನಾಗರಿಕರ ಸಂಖ್ಯೆ, ಗಳಿಸಿದ/ಕಳೆದುಕೊಂಡ ಪ್ರದೇಶಗಳ ದೀರ್ಘ ವಿವರಗಳೆಲ್ಲವೂ ಶಾಲಾ ಪಠ್ಯಪುಸ್ತಕಗಳೂ ಸೇರಿದಂತೆ ಯುದ್ಧದ ಬಗ್ಗೇ ಇರುವ ನೂರಾರು ಕೃತಿಗಳಲ್ಲಿ ನಿಮಗೆ ಸುಲಭವಾಗಿಯೇ ಸಿಗುತ್ತವೆ.  ಹೀಗಾಗಿ ಯುದ್ಧಕ್ಕೆ ಮೂಲಕಾರಣವಾದ ಪಾಕ್ ಆಂತರಿಕ ರಾಜಕೀಯದ ಕೆಸರು, ಯುದ್ಧದ ಪರಿಣಾಮ ಅಲ್ಲಿನ ರಾಜಕೀಯದಲ್ಲಿ ಎಬ್ಬಿಸಿದ ಸುಳಿಗಳು, ಎರಡೂ ರಾಷ್ಟ್ರಗಳ ವೈಮನಸ್ಯಗಳನ್ನು ಇತರ ರಾಷ್ಟ್ರಗಳು ನೋಡಿದ ಬಗೆ, ಇದರಿಂದ ಎರಡೂ ದೇಶಗಳು ಕಲಿತ ಪಾಠಗಳು- ಮುಖ್ಯ ವಿಷಯಗಳನ್ನಷ್ಟೇ ಅವಲೋಕನಕ್ಕೆತ್ತಿಕೊಳ್ಳುತ್ತೇನೆ.
ಉತ್ತರ ಗುಜರಾತ್ ಕಚ್ಛ್ನಲ್ಲಿ, ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಹೊಂದಿಕೊಂಡಿರುವ ರಣ್ ಪ್ರದೇಶ ವರ್ಷದ ಅರ್ಧಭಾಗಕ್ಕೂ ಹೆಚ್ಚುಕಾಲ ಅರಬ್ಬೀಸಮುದ್ರದ ನೀರಿನಿಂದ ತುಂಬಿಹೋಗುತ್ತದೆ.  ಹೀಗಾಗಿ ಇದನ್ನು ಸಮುದ್ರವೆಂದೇ ಪರಿಗಣಿಸಬೇಕೆಂದೂ, ಕಾರಣದಿಂದಾಗಿಯೇ ಭಾರತ-ಪಾಕಿಸ್ತಾನ್ ಗಡಿರೇಖೆ ರಣ್ ನಡುಮಧ್ಯದಲ್ಲಿ ಹಾದುಹೋಗಬೇಕೆಂದೂ, ಅಂದರೆ ಸುಮಾರು ಐದುಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣದ ರಣ್ ಭಾಗ ತನಗೆ ಸೇರಬೇಕೆಂದೂ ಪಾಕಿಸ್ತಾನ ಐವತ್ತರ ದಶಕದಲ್ಲೇ ತಕರಾರು ತೆಗೆದಿತ್ತು.  ಅದನ್ನು ಆಕ್ರಮಿಸಿಕೊಳ್ಳಲು ೧೯೫೬ರಲ್ಲಿ ಪಾಕಿಸ್ತಾನ ನಡೆಸಿದ ಪ್ರಯತ್ನವನ್ನು ಭಾರತ ವಿಫಲಗೊಳಿಸಿತ್ತು.
ಪುಟ್ಟ ಪ್ರಮಾಣದ ಘರ್ಷಣೆಗಳು ೧೯೬೫ರ ಜನವರಿಯಲ್ಲೇ ಆರಂಭವಾದರೂ ದೊಡ್ಡ ಸುದ್ಧಿಯಾಗುವ ಮಟ್ಟಿಗೆ ಅವು ಹೆಚ್ಚಿದ್ದು ಏಪ್ರಿಲ್ನಲ್ಲಿ.  ಅಮೆರಿಕದಿಂದ ಪಡೆದಿದ್ದ ಅತ್ಯಾಧುನಿಕ ಪ್ಯಾಟನ್ ಟ್ಯಾಂಕ್ಗಳ ಸಹಾಯದಿಂದ ವೇಗವಾಗಿ ಮುಂದೊತ್ತಿಬಂದ ಪಾಕ್ ಸೇನೆಯನ್ನು ತಡೆಯುವುದು ಭಾರತೀಯ ಸೇನೆಗೆ ಸಾಧ್ಯವಾಗಲಿಲ್ಲ.  ಅದೃಷ್ಟವಶಾತ್ ಭಾರತಕ್ಕೆ ಭಾರೀ ಮುಖಭಂಗವಾಗುವ ಮೊದಲೇ ಬ್ರಿಟಿಷ್ ಪ್ರಧಾನಿ ಹೆರಾಲ್ಡ್ ವಿಲ್ಸನ್ ಮಧ್ಯಪ್ರವೇಶಿಸಿ ಕಚ್ಛ್ ಸಮಸ್ಯೆಯನ್ನು ಒಂದು ಅಂತರರಾಷ್ಟ್ರೀಯ ಟ್ರಿಬ್ಯೂನಲ್ಗೆ ಒಪ್ಪಿಸುವಂತೆ ಪ್ರಧಾನಿ ಶಾಸ್ತ್ರಿ ಮತ್ತು ಅಧ್ಯಕ್ಷ ಅಯೂಬ್ ಖಾನ್ ಮನವೊಲಿಸುವುದರಲ್ಲಿ ಯಶಸ್ವಿಯಾದರು.
ತನ್ನ ಕೈಯಳತೆಯೊಳಗೇ ಇದ್ದ ವಿಜಯವನ್ನು ಪಾಕಿಸ್ತಾನ ಹೀಗೆ ಬಿಟ್ಟುಕೊಟ್ಟದ್ದೇಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು.   ಇದಕ್ಕೆ ಉತ್ತರ ದೊರೆಯುವುದು ಪಾಕ್ ಸೇನೆಯ ಇಬ್ಬರು ಕ್ಯಾಪ್ಟನ್ಗಳಾದ ಗುಲಾಮ್ ಹುಸೇನ್ ಮತ್ತು ಮಹಮದ್ ಸಜ್ಜಾದ್ರಿಂದ.  ಆಗಸ್ಟ್ನಲ್ಲಿ ಸ್ಥಳೀಯರಂತೆ ವೇಷಧರಿಸಿ ಕಾಶ್ಮೀರಕ್ಕೆ ನುಸುಳಿಬಂದಿದ್ದ ಸಹಸ್ರಾರು ಪಾಕ್ ಸೈನಿಕರಲ್ಲಿ ಇಬ್ಬರಾದ ಇವರನ್ನು ಭಾರತೀಯ ಸೇನೆ ಬಂಧಿಸಿ ಅವರಲ್ಲಿದ್ದ ದಾಖಲೆಪತ್ರಗಳನ್ನು ವಶಪಡಿಸಿಕೊಂಡಾಗ ಕಚ್ಛ್ ಅತಿಕ್ರಮಣವನ್ನು ಕಾಶ್ಮೀರದಲ್ಲಿ ದೊಡ್ಡ ಯುದ್ಧವೊಂದರ ಪೂರ್ವತಯಾರಿಯಂತೆ ಅಂದರೆ ಒಂದು ರಿಹರ್ಸಲ್ನಂತೆ ಪಾಕಿಸ್ತಾನ ಪರಿಗಣಿಸಿತ್ತೆಂಬ ವಿವರಗಳು ದೊರೆತವು.  ಪಾಕಿಸ್ತಾನಕ್ಕೆ ಕಚ್ಛ್ ಮುಖ್ಯವಾಗಿರಲಿಲ್ಲ.  ತನ್ನ ಸೇನೆ ದೊಡ್ಡ ಹಾಗೂ ನಿರ್ಣಾಯಕ ಯುದ್ಧವೊಂದರಲ್ಲಿ ಭಾರತೀಯ ಸೇನೆಯನ್ನು ಮಣಿಸಲು ಸಮರ್ಥವಾಗಿದೆಯೇ ಎಂದು ತಿಳಿದುಕೊಳ್ಳುವುದಷ್ಟೇ ಅದಕ್ಕೆ ಬೇಕಾಗಿದ್ದದ್ದು.
ಕಚ್ಛ್ ಯಶಸ್ಸಿನಿಂದ ಉತ್ಸಾಹಗೊಂಡ ಅಯೂಬ್ ಸರ್ಕಾರದ ಮುಂದಿನ ಹೆಜ್ಜೆ ಭಾರತೀಯ ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಹದಗೆಡಿಸುವುದಾಗಿತ್ತು.  ಅದರ ಪ್ರಕಾರ ಜುಲೈ-ಆಗಸ್ಟ್ನಲ್ಲಿ ಇಪ್ಪತ್ತೈದರಿಂದ ಮೂವತ್ತು ಸಾವಿರ ಪಾಕ್ ಸೈನಿಕರು ಕಾಶ್ಮೀರಿಳಂತೆ ವೇಷಧರಿಸಿ ಕಾಶ್ಮೀರಕ್ಕೆ ನುಸುಳಿಬಂದರು.  ರಾಜಕೀಯ ನಾಯಕರಂತಹ ಮುಖ್ಯ ವ್ಯಕ್ತಿಗಳನ್ನು ಹತ್ಯೆಗೈದು, ರಸ್ತೆ ಮುಂತಾದ ಸಂಪರ್ಕವ್ಯವಸ್ಥೆಯನ್ನು ಹಾಳುಗೆಡವಿ ಕಾಶ್ಮೀರದಲ್ಲಿ ಗೊಂದಲವೆಬ್ಬಿಸುವುದು, ಮತ್ತು ಇವೆಲ್ಲಾ ಕುಕೃತ್ಯಗಳನ್ನು ಭಾರತೀಯ ಸೇನೆಯ ತಲೆಗೆ ಕಟ್ಟಿ ಸ್ಥಳೀಯ ಜನತೆ ಭಾರತದ ವಿರುದ್ಧ ದಂಗೆಯೇಳುವಂತೆ ಮಾಡುವುದು ಪಾಕ್ ಸೈನಿಕರ ಉದ್ದೇಶವಾಗಿತ್ತು.  ಅಷ್ಟಾದರೆ ಸಾಕು, ಕಾಶ್ಮೀರದ ಮೇಲೆ ಧಾಳಿಯೆಸಗಿ ಅಲ್ಲಿದ್ದ ಭಾರತೀಯ ಸೇನೆಯನ್ನು ಸುಲಭವಾಗಿ ನಿರ್ವೀರ್ಯಗೊಳಿಸಿಬಿಡಬಹುದು, ಕಾಶ್ಮೀರ ಎಂಬ ಸೇಬು ಮಾಗಿ ಪಾಕ್ ಮಡಿಲಿಗೆ ಬಿದ್ದುಬಿಡುತ್ತದೆ ಎಂದು ಅಯೂಬ್ ಸರ್ಕಾರ ಲೆಕ್ಕಾಚಾರ ಹಾಕಿತ್ತು.
ಆದರೆ ಭಾರತದ ವಿರುದ್ಧ ದಂಗೆಯೇಳುವ ಯಾವ ಸೂಚನೆಯನ್ನೂ ಕಾಶ್ಮೀರಿಗಳು ನೀಡಲಿಲ್ಲ.  ಪಾಕ್ ಸೈನಿಕರ ನುಸುಳುವಿಕೆಯನ್ನು ಭಾರತೀಯ ಸುರಕ್ಷಾಪಡೆಗಳ ಗಮನಕ್ಕೆ ತಂದದ್ದೇ ಮಹಮದ್ ದೀನ್ ಮತ್ತು ವಜ಼ೀರ್ ಮಹಮದ್ ಎಂಬಿಬ್ಬರು ಕುರುಬರು.  ನಂತರ ಗಡಿ ದಾಟಿ ಒಳನುಸುಳಿದ್ದ ಪಾಕ್ ಸೈನಿಕರ ಬೇಟೆಯಾಡಲು ಭಾರತೀಯ ಸೇನೆಗೆ ಹೆಚ್ಚು ಸಮಯ ಬೇಕಾಗಲಿಲ್ಲ.  ಇಷ್ಟಾಗಿಯೂ, ಪಾಕ್ ಸೇನೆ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದು ಹೇಗೆ?
ವರ್ಷಗಳ ನಂತರ ವಿಶ್ವಾಸಾರ್ಹ ಹಾಗೂ ಗೌರವಾನ್ವಿತ ಭಾರತೀಯ ಪತ್ರಕರ್ತ ಕುಲದೀಪ್ ನಯ್ಯಾರ್ ಜತೆ ಮಾತಾಡುತ್ತಾ ಅಯೂಬ್ಕಾಶ್ಮೀರಿಗಳು (ಭಾರತದ ವಿರುದ್ಧ) ಬಂದೂಕು ಕೈಗೆತ್ತಿಕೊಳ್ಳುವಂತಹ ಜನರಲ್ಲ ಎನ್ನುವುದು ನನಗೆ ಚೆನ್ನಾಗಿಯೇ ಗೊತ್ತಿತ್ತು” ಎಂದು ಹೇಳಿ ೧೯೬೫ರ ಯುದ್ಧದ ಇಡೀ ಹೊಣೆಯನ್ನು ಝುಲ್ಫಿಕರ್ ಆಲಿ ಭುಟ್ಟೋ ಮೇಲೆ ಹೊರಿಸುತ್ತಾರೆ.  ಇದು ನಿಜ ಎನ್ನುವುದಕ್ಕೆ ಇತರ ಪೂರಕ ಆಧಾರಗಳು ದೊರೆಯುತ್ತವೆ.
ಪಾಕಿಸ್ತಾನದ ಇತಿಹಾಸದಲ್ಲಿ ಭುಟ್ಟೋ ಒಬ್ಬ ಖಳನಾಯಕ.  ತನ್ನ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ದೇಶದ ಹಿರವನ್ನು ಬಲಿಗೊಡುತ್ತಲೇ ತನ್ನ ಮಾತಿನ ಚಾತುರ್ಯದಿಂದಾಗಿ ತಾನು ಪಾಕಿಸ್ತಾನದ ಭಾಗ್ಯವಿದಾತನೆಂಬ ಚಿತ್ರವನ್ನು ಬಹುಪಾಲು ಜನರಲ್ಲಿ ಮೂಡಿಸಿದ ಕುತಂತ್ರಿ ಈತ.  ತನ್ನ ಇರಾನೀ ಪತ್ನಿ ನುಸ್ರತ್ ರಾಜಕೀಯ ಸಂಪರ್ಕಗಳ ಲಾಭ ಪಡೆದು ಐವತ್ತರ ದಶಕದಲ್ಲಿ ಪಾಕಿಸ್ತಾನದ ರಾಜಕೀಯಕ್ಕಿಳಿದ ಭುಟ್ಟೋ ಅತಿಶೀಘ್ರದಲ್ಲಿ ಅತಿಯಾದ ಅಧಿಕಾರ ಲಾಲಸೆಗೊಳಗಾದರು.  ಅಯೂಬ್ ಸೇನಾಸರ್ಕಾರದಲ್ಲಿ ವಿದೇಶ ಮಂತ್ರಿಯಾಗಿದ್ದ ಇವರು ಮಿಲಿಟರಿ ಆಡಳಿತದಲ್ಲಿದ್ದ ಪಾಕಿಸ್ತಾನದಲ್ಲಿ ತಾನು ಬಯಸಿದ ಉನ್ನತ ಸ್ಥಾನ ಸಿಗಲಾರದು ಎಂದರಿತಾಗ ಸೇನೆಯ ವರ್ಚಸ್ಸು ಕುಗ್ಗುವಂತೆ ತಂತ್ರ ಹೂಡಿದರು.  ತಂತ್ರದ ಒಂದು ಭಾಗವೇ ಆತ ೧೯೬೫ರಲ್ಲಿ ಪಾಕಿಸ್ತಾನವನ್ನು ಯುದ್ಧರಂಗಕ್ಕೆ ನೂಕಿದ್ದು.  ನೆಹರೂ ನಂತರದ ಭಾರತ ಸಮರ್ಥ ನಾಯಕತ್ವದ ಕೊರತೆಯಿಂದ ನರಳುತ್ತಿದೆ, ಜತೆಗೆ ಭಾರತದ ವಿರುದ್ಧ ಕಾಶ್ಮೀರಿಗಳು ಒಟ್ಟಾಗಿ ದಂಗೆಯೇಳಲು ತುದಿಗಾಲಲ್ಲಿ ನಿಂತಿದ್ದಾರೆ, ಭಾರತವನ್ನು ಮಣಿಸಲು ಇದೇ ಸುಸಮಯ ಎಂದು ಅಯೂಬ್ ಖಾನ್ರನ್ನು ಉಬ್ಬಿಸಿದರು.  ಪಾಕ್ ಸೇನೆ ಸೋಲುತ್ತದೆ ಎಂದು ಭುಟ್ಟೋಗೆ ಚೆನ್ನಾಗಿಯೇ ಗೊತ್ತಿತ್ತು. ಅವರಿಗೆ ಬೇಕಾಗಿದ್ದದ್ದು ಅದೇ.  ಪಾಕಿಸ್ತಾನದ ಗರಿಮೆಯನ್ನು ಕಾಪಾಡುವುದು ಸೇನೆಯಿಂದ ಸಾಧ್ಯವಿಲ್ಲ, ಅದು ತನ್ನಿಂದ ಮಾತ್ರ ಸಾಧ್ಯ ಎಂದು ಸಾಮಾನ್ಯ ಪಾಕ್ ನಾಗರಿಕರು ನಂಬಿ ತನ್ನ ಬೆನ್ನ ಹಿಂದೆ ನಿಲ್ಲುವಂತೆ ಮಾಡುವುದು ಭುಟ್ಟೋರ ರಾಜಕೀಯ ಲೆಕ್ಕಾಚಾರವಾಗಿತ್ತು.  ಮೂರು ವರ್ಷಗಳ ನಂತರ, ೧೯೬೮ರಲ್ಲಿ, “ಪಾಕಿಸ್ತಾನೀ ಸೇನೆ ಸೋಲುವ ಸಾಧ್ಯತೆಯೇ ಅಧಿಕ ಎಂದು ಅರಿತಿದ್ದೂ ದೇಶವನ್ನು ಯುದ್ದಕ್ಕೆ ದೂಡಿದ್ದೇಕೆ?” ಎಂಬ ಪತ್ರಕರ್ತ ತಾರಿಖ್ ಆಲಿಯ ಪ್ರಶ್ನೆಗೆ ಭುಟ್ಟೋ ಕೊಟ್ಟ ಉತ್ತರ: “ ಹಾಳು ಸೇನೆಗೆ ಕೆಟ್ಟ ಹೆಸರು ತರಲು ಇದಕ್ಕಿಂತಲೂ ಒಳ್ಳೆಯ ಮಾರ್ಗ ಬೇರೇನಿತ್ತು?”
ಇದು ಇಲ್ಲಿಗೇ ನಿಲ್ಲಲಿಲ್ಲ.  ಯುದ್ದದಲ್ಲಿ ಪಾಕಿಸ್ತಾನಿ ಸೇನೆಯ ದಂಡನಾಯಕನಾಗಿದ್ದ ಜನರಲ್ ಮಹಮದ್ ಮೂಸಾರನ್ನು ಭುಟ್ಟೋ ಬಹಿರಂಗವಾಗಿಯೇ ಅವಮಾನಿಸುತ್ತಾಅವನಿಗೆ ಫ್ರಾಕ್ ತೊಡಿಸಿ ಪಾಕಿಸ್ತಾನೀ ನಗರಗಳ ಬೀದಿಬೀದಿಗಳಲ್ಲಿ ಕೋತಿಯಂತೆ ಕುಣಿಸುತ್ತೇನೆ” ಅಂದರು.  ಭುಟ್ಟೋರ ಕುತಂತ್ರ ಯಶಸ್ವಿಯಾಗಿ ಸೇನೆ ಮುಖಭಂಗವನ್ನನುಭವಿಸಿ ರಾಜಕೀಯದಿಂದ ಹಿಂತೆಗೆದದ್ದು ೧೯೭೧ರ ಸೋಲಿನ ನಂತರ.  ತಾ ಬಯಸಿದ್ದ ಅಧಿಕಾರ ಆಗ ಭುಟ್ಟೋಗೆ ದಕ್ಕಿತ್ತು.  ಸೋತು ಸುಣ್ಣವಾಗಿದ್ದ ಸೇನೆಗೆ ಇಷ್ಟೆಲ್ಲಾ ಅವಮಾನವನ್ನು ಸಹಿಸಿಕೊಳ್ಳದೆ ಬೇರೆ ಮಾರ್ಗವಿರಲಿಲ್ಲ.  ಆದರೆ ಇದಾವುದನ್ನೂ ಸೇನೆ ಮರೆಯಲಿಲ್ಲ.  ನಂತರ ತಾನೇ ದಂಡನಾಯಕನ ಸ್ಥಾನಕ್ಕೇರಿಸಿದ್ದ ಜಿಯಾ-ಉಲ್-ಹಕ್ರನ್ನು ಸಾರ್ವಜನಿಕವಾಗಿಜನರನ್ನು ರಂಜಿಸಲು ಕುಣಿಯುವ ಕೋತಿಎಂದು ಭುಟ್ಟೋ ಕರೆದದ್ದನ್ನೂ ಸೇನೆ ಮರೆಯಲಿಲ್ಲ.  ಸಿಕ್ಕಿದ ಮೊದಲ ಅವಕಾಶದಲ್ಲಿ ಭುಟ್ಟೋರನ್ನು ಜಿಯಾ ಉರುಳಿಸಿದರು, ಮಿಲಿಟರಿ ನ್ಯಾಯಾಲಯ ರಾಜಕೀಯ ಕೊಲೆಯೊಂದರ ಆರೋಪ ಹೊರಿಸಿ ಭುಟ್ಟೋಗೆ ಗಲ್ಲುಶಿಕ್ಷೆ ವಿಧಿಸುವಂತೆ ನೋಡಿಕೊಂಡರು.  ಅದು ಜಾರಿಯಾದ ರೀತಿ ಭುಟ್ಟೋ ಬಗ್ಗೆ ಸೇನೆಗೆ ಅದೆಂತಹ ರೋಷವಿತ್ತೆಂಬುದನ್ನು ಎತ್ತಿತೋರುತ್ತದೆ.
ಏಪ್ರಿಲ್ , ೧೯೭೯ರಂದು, ಮರಣದಂಡನೆಯ ನಿಯಮಗಳಿಗೆ ವಿರುದ್ಧವಾಗಿ, ರಾತ್ರಿ ಎರಡೂವಗೇ ಭುಟ್ಟೋರನ್ನು ಎಬ್ಬಿಸಿ ಸ್ನಾನ ಮಾಡಿಸಿ ಹೊಸಬಟ್ಟೆ ತೊಡಿಸಿ ವಧಾಸ್ಥಾನಕ್ಕೆ ಕೈಕಾಲುಗಳನ್ನು ಹಿಡಿದು ಎತ್ತಿಕೊಂಡು ಹೋಗಲಾಯಿತು.  ಹಾಗೆ ಎತ್ತಿಕೊಂಡು ಹೋಗುತ್ತಿದ್ದವರಲ್ಲೊಬ್ಬ ನೆಲವನ್ನು ಗುಡಿಸುತ್ತಿದ್ದ ಭುಟ್ಟೋರ ಹೊಸ ಕುರ್ತಾದ ಮೇಲೆ ಕಾಲಿಟ್ಟದ್ದರಿಂದಾಗಿ ಅದು ಹರಿದುಹೋಯಿತು.  ನಿತ್ರಾಣವಾಗಿದ್ದು ನೇಣುಗಂಬದ ಮುಂದೆ ನಿಲ್ಲಲೂ ಕಷ್ಟಪಡುತ್ತಿದ್ದ ಭುಟ್ಟೋರ ಬಾಯಿಯಿಂದ ಕ್ಷೀಣವಾಗಿ ಬಂದದ್ದುಯೆಹ್ ಮುಝೆ” ಎಂಬ ಎರಡು ಪದಗಳು ಮಾತ್ರ.  ಭುಟ್ಟೋ ಹೇಳಬಯಸಿದ್ದು ' ಶಿಕ್ಷೆ!  ನನಗೆ?' ಅಂತಲೋ ಅಥವಾ ಕೈಕೋಳಗಳನ್ನು ಕುರಿತು 'ಇದು ನನಗೆ ತೊಂದರೆ ಕೊಡುತ್ತಿದೆ' ಅಂತಲೋ ಎಂಬ ಜಿಜ್ಞಾಸೆ ಇನ್ನೂ ನಡೆಯುತ್ತಿದೆ.
ಇಷ್ಟಾಗಿಯೂ, ಭುಟ್ಟೋರ ಮಾತಿನ ಚಾತುರ್ಯವನ್ನು ಮೆಚ್ಚಲೇಬೇಕು.  ಪಾಕಿಸ್ತಾನವನ್ನು ಇದುವರೆಗೆ ಆಳಿದ ನಾಯಕರಲ್ಲೇ ಅಯೂಬ್ ಖಾನ್ ಅತ್ಯಂತ ಬುದ್ಧಿವಂತ, ವಿವೇಕಿ, ದೂರದೃಷ್ಟಿಯುಳ್ಳ ನಾಯಕ.  ಅಂಥವರನ್ನೇ ಭುಟ್ಟೊ ಮಂಗ ಮಾಡಿದರು.   ಭುಟ್ಟೋರ ಮಾತುಗಳನ್ನು ಪೂರ್ಣವಾಗಿ ನಂಬಿದ ಅಯೂಬ್ ಯುದ್ಧದಲ್ಲಿ ಜಯ ನಿಶ್ಚಿತ ಎಂಬ ವಿಶ್ವಾಸವನ್ನು ಬೆಳೆಸಿಕೊಂಡರು ಮತ್ತದರ ಸಮರ್ಥನೆಗಾಗಿ ಬೇರೆಬೇರೆ ಆಧಾರಗಳನ್ನು ಹೊಂದಿಸತೊಡಗಿದರು.  ಆಗಸ್ಟ್ ೨೯ರಂದು ಯುದ್ಧದ ತಯಾರಿಯ ಬಗ್ಗೆ ಸೇನಾ ದಂಡನಾಯಕ ಮಹಮದ್ ಮೂಸಾರಿಗೆ ನೀಡಿದ ಅತಿ ಗೌಪ್ಯ ಸಂದೇಶದಲ್ಲಿ ಅಯೂಬ್ ಹೀಗೆ ಹೇಳುತ್ತಾರೆ: “ಸಾಮಾನ್ಯ ನಿಯಮದಂತೆ, ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಕೊಡುವ ಒಂದೆರಡು ಹೊಡೆತಗಳಿಗೆ ಹಿಂದೂ ಸ್ಥೈರ್ಯ ಕುಸಿದುಹೋಗುತ್ತದೆ...”
ಅದೇ ಬಗೆಯಲ್ಲಿ, ಇತಿಹಾಸವೂ ಪಾಕಿಸ್ತಾನದ ಕಡೆಗಿದೆ ಎಂದೂ ಅಯೂಬ್ ನಂಬಿದ್ದರು.  ಖೈಬರ್ ಕಣಿವೆಯನ್ನು ವಶಪಡಿಸಿಕೊಂಡವರು ಅನತೀಕಾಲದಲ್ಲೇ ಇಡೀ ಪಂಜಾಬನ್ನು ವಶಕ್ಕೆ ತೆಗೆದುಕೊಳ್ಳುವುದು, ನಂತರ ಯಾವ ತಡೆಯೂ ಇಲ್ಲದೇ ದೆಹಲಿಯತ್ತ ಮುನ್ನುಗ್ಗಿ ಬರುವುದು ಇತಿಹಾಸದ ಉದ್ದಕ್ಕೂ ನಡೆದುಕೊಂಡು ಬಂದ ವಾಸ್ತವ.  ಇದನ್ನು ೧೯೬೫ರಲ್ಲಿ ಅಯೂಬ್ ಖಾನ್ ಅರ್ಥೈಸಿದ್ದು ಹೀಗೆ: “ಇತಿಹಾಸ ನಮ್ಮ ಕಡೆಗಿದೆ.  ಪಂಜಾಬ್ (ಲಾಹೋರ್) ಯಾರ ಕೈಯಲ್ಲಿದೆಯೋ ಅವರು ಅನತಿಕಾಲದಲ್ಲೇ ದೆಹಲಿಯ ಅಧಿನಾಯಕರಾಗುತ್ತಾರೆ.  ಈಗ ಲಾಹೋರ್ ನಮ್ಮ ಕೈಯಲ್ಲಿದೆ.  ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನೀ ಧ್ವಜವನ್ನು ಹಾರಿಸುತ್ತೇವೆ.”
ಹೀಗೆ ಯುದ್ಧೋತ್ಸಾಹದಲ್ಲಿ ಬೀಗಿದ ಅಯೂಬ್ ಖಾನ್ ಹೂಡಿದ ಯುದ್ಧತಂತ್ರ ಅಸಾಧಾರಣದ್ದೇ ಅಗಿತ್ತು.  ಇಡೀ ಆಗಸ್ಟ್ ತಿಂಗಳ ಉದ್ದಕ್ಕೂ ಕಾಶ್ಮೀರದಲ್ಲಿನ ಹತೋಟಿ ರೇಖೆಯ ಉದ್ದಗಲಕ್ಕೂ ನಡೆಸಿದ ಧಾಳಿಗಳು ನಿರೀಕ್ಷಿತ ಫಲ ನೀಡದೇ, ಆಯಕಟ್ಟಿನ ಹಾಜಿ ಪೀರ್ ಕಣಿವೆ ಮತ್ತು ಸ್ಯಾಡಲ್ ನೆಲೆ ಭಾರತದ ವಶವಾದದ್ದನ್ನು ಸಹಿಸದ ಅಯೂಬ್ ಅಂತಿಮವಾಗಿ ಕಾಶ್ಮೀರವನ್ನು ಭಾರತದಿಂದ ಕತ್ತರಿಸಿಬಿಡಲು ಮುಂದಾದರು.  ಕಾಶ್ಮೀರವನ್ನು ಬಾರತಕ್ಕೆ ಸಂಪರ್ಕಿಸುತ್ತಿದ್ದ ಏಕೈಕ ರಸ್ತೆಯಾದ ಜಮ್ಮು-ಅಖ್ನೂರ್ ಹೆದ್ದಾರಿಯನ್ನು ಹಾಳುಗೆಡವಿಬಿಡುವುದು ಅವರ ಯೋಜನೆಯಾಗಿತ್ತು.   ಅದರ ಅಂಗವಾಗಿ ಸೆಪ್ಟೆಂಬರ್ ೧ರಂದು ಪಾಕ್ ಸೇನೆ ಚಿಕನ್ಸ್ ನೆಕ್-ಛಾಂಬ್ ಝಾರಿಯನ್ ಕ್ಷೇತ್ರದಲ್ಲಿ ಗಡಿ ದಾಟಿ ಅಖ್ನೂರ್ನತ್ತ ಸಾಗತೊಡಗಿತು.  ಅಲ್ಲಿ ಸಾಮರಿಕ ಅನುಕೂಲತೆ ಹೊಂದಿದ್ದ ಪಾಕ್ ಸೇನೆಯನ್ನು ತಡೆಯುವುದು ಭಾರತಕ್ಕೆ ಅಸಾಧ್ಯವಾಗಿತ್ತು.  ಪಾಕ್ ಸೇನೆಯ ಗಮನವನ್ನು ಬೇರೆಡೆ ತಿರುಗಿಸದೇ ಹೆದ್ದಾಗಿಯನ್ನು ರಕ್ಷಿಸುವುದು ಭಾರತಕ್ಕೆ ಸಾಧ್ಯವಿರಲೇ ಇಲ್ಲ.  ಇದನ್ನರಿತ ಪ್ರಧಾನಿ ಶಾಸ್ತ್ರಿ ಲಾಹೋರ್ ಮೇಲೆರಗುವಂತೆ ಭಾರತೀಯ ಸೇನೆಗೆ ಆದೇಶಿಸಿದರು.  ಯುದ್ಧದ ಗತಿಯನ್ನೇ ಬದಲಿಸಿದ ನಡೆ ಇದು.  ಐದು ಅಡಿಯಷ್ಟೇ ಎತ್ತರವಿದ್ದ ಶಾಸ್ತ್ರಿಯವರ ಮಹತ್ವದ ನಿರ್ಣಯವನ್ನು ಪಶ್ಚಿಮ ಕಮ್ಯಾಂಡ್ ನಾಯಕ ಲೆಫ್ಟಿನೆಂಟ್ ಜನರಲ್ ಹರ್ಬಕ್ಷ್ ಸಿಂಗ್ ಬಣ್ಣಿಸಿದ್ದು ಹೀಗೆ: “Tallest decision by the shortes man!” 

ಕೊನೆಯ ಮೂರು ಭಾಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

No comments:

Post a Comment