ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, October 8, 2015

೧೯೬೫ರ ಭಾರತ - ಪಾಕಿಸ್ತಾನ್ ಯುದ್ಧ, ಭಾಗ ೪, ೫, ಮತ್ತು ೬

ಮೊದಲ ಮೂರು ಭಾಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


ಭಾಗ -
ದಿಲ್ಲಿ ಅಬ್ ಬಹುತ್ ದೂರ್ ಹೈ: ಅಯೂಬ್ ಅಳಲು
“ಪಾಕಿಸ್ತಾನೀಯರು ಶ್ರೀನಗರ್ ವಶಪಡಿಸಿಕೊಳ್ಳುವುದಕ್ಕೆ ಮೊದಲೇ ನಾವು ಲಾಹೋರ್ ತಲುಪಬೇಕು.”  ಭಾರತೀಯ ಸೇನಾ ದಂಡನಾಯಕ ಜನರಲ್ ಜೆ. ಎನ್. ಚೌಧರಿ ಅವರಿಗೆ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿ ಸೆಪ್ಟೆಂಬರ್ ೩ರಂದು ಹೇಳಿದ ಮಾತಿದು.  ಕಾಶ್ಮೀರದ ಮೇಲೆ, ಮುಖ್ಯವಾಗಿ ಜಮ್ಮು-ಅಖ್ನೂರ್ ಹೆದ್ದಾರಿಯ ಮೇಲೆ ಪಾಕಿಸ್ತಾನದ ಒತ್ತಡವನ್ನು ಕಡಿಮೆಗೊಳಿಸುವ ಒಂದೇ ಮಾರ್ಗ ಲಾಹೋರ್ ಮೇಲಿನ ಧಾಳಿ ಎಂಬ ಪ್ರಧಾನಿಯವರ ತೀರ್ಮಾನ ಸೇನಾದಂಡನಾಯಕರಿಗೆ ಅಚ್ಚರಿಯನ್ನುಂಟುಮಾಡಿತು.  ಆದರೆ ಪ್ರಧಾನಿಯವರ ನಿರ್ಧಾರದಲ್ಲಿದ್ದ ವ್ಯಾವಹಾರಿಕತೆಯನ್ನು ಗುರುತಿಸಿದ ಜನರಲ್ ಚೌಧರಿ ಅದನ್ನು ಕಾರ್ಯರೂಪಕ್ಕಿಳಿಸಲು ಮುಂದಾದರು.  ರಹಸ್ಯವಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಂಡ ಸೇನೆ ಮೂರುದಿನಗಳ ನಂತರ ಅಂದರೆ ಸೆಪ್ಟೆಂಬರ್ ೬ರ ಬೆಳಿಗ್ಗೆ ನಾಲ್ಕು ಗಂಟೆಗೆ ಫಿರೋಜ್ಪುರ್, ಅಮೃತ್ಸರ್, ಮತ್ತು ಗುರುದಾಸ್ಪುರ್- ಮೂರೂ ಕಡೆಗಳಿಂದ ಗದಿ ದಾಟಿ ಲಾಹೋರ್ನತ್ತ ಮುಂದುವರೆಯಿತು.  ಅಂತರರಾಷ್ಟ್ರೀಯ ಗಡಿಗೂ ಲಾಹೋರ್ ನಗರಕ್ಕೂ ಸರಿಯಾಗಿ ನಡುವಿರುವ ಇಚೋಗಿಲ್ ಕಾಲುವೆಯನ್ನು ಯಾವುದೇ ಅಡೆತಡೆಯಿಲ್ಲದೇ ದಾಟಿ ಹತ್ತೂವರೆಯ ಹೊತ್ತಿಗೆ ಲಾಹೋರ್ ಹೊರವಲಯ ತಲುಪಿತು.  ಅಲ್ಲಿದ್ದ ಬಾಟಾ ಶೂ ಫ್ಯಾಕ್ಟರಿಯನ್ನು ನಾಶಮಾಡಿದ್ದಲ್ಲದೇ ರೇಡಿಯೋ ಪಾಕಿಸ್ತಾನ್ ಲಾಹೋರ್ ಕೇಂದ್ರದ ಮೇಲೂ ಧಾಳಿಯೆಸಗಿತು.  ವರದಿಗಳ ಪ್ರಕಾರ ಹನ್ನೊಂದು ಗಂಟೆಯ ಸುಮಾರಿಗೆ ಲಾಹೋರ್ ಕೇಂದ್ರ ಪ್ರಸಾರವನ್ನು ನಿಲ್ಲಿಸಿತು.  ಹೀಗೆ, ಸಿಖ್ ಸಮುದಾಯವನ್ನು ಭಾರತದ ವಿರುದ್ದ ಪ್ರಚೋದಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿದ್ದ ಲಾಹೋರ್ ಕೇಂದ್ರವನ್ನು ಬಂದ್ ಮಾಡಿಸಿದ್ದು ಯುದ್ಧದ ಮೊದಲ ದಿನಗಳಲ್ಲಿ ಭಾರತೀಯ ಸೇನೆಯ ಒಂದು ಮುಖ್ಯ ಸಾಧನೆ.  ಆದರೆ ನಂತರ ಭಾರತೀಯ ಸೇನೆ ಹಿಂತಿರುಗಿ ಇಚೋಗಿಲ್ ಕಾಲುವೆಯನ್ನು ಮತ್ತೆ ದಾಟಿ ಅದಕ್ಕೂ ಅಂತರರಾಷ್ಟ್ರೀಯ ಗಡಿಗೂ ಮಧ್ಯೆ ನಿಂತುಬಿಟ್ಟಿತು.
ಲಾಹೋರ್ ನಗರಕ್ಕೆ ಅಷ್ಟು ಸಮೀಪ ಹೋದ ಭಾರತೀಯ ಸೇನೆ ನಗರವನ್ನೇಕೆ ಆಕ್ರಮಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆ ಸಹಜ.  ಹಾಗೆ ನೋಡಿದರೆ ದೇಶವಿಭಜನೆಯ ನಿಯಮಗಳಿಗನುಗುಣವಾಗಿ ಲಾಹೋರ್ ೧೯೪೭ರಲ್ಲೇ ಭಾರತಕ್ಕೆ ಸೇರಬೇಕಾಗಿತ್ತು.  ಅಂದು ಲಾಹೋರ್ ಹನ್ನೊಂದು ಲಕ್ಷ ಜನಸಂಖ್ಯೆಯಲ್ಲಿ ಐದು ಲಕ್ಷ ಸಿಖ್ಖರು ಮತ್ತು ಅಷ್ಟೇ ಸಂಖ್ಯೆಯ ಮುಸ್ಲಿಮರಿದ್ದರು.  ಆದರೆ ಒಂದು ಲಕ್ಷದಷ್ಟಿದ್ದ ಹಿಂದೂಗಳು ಲಾಹೋರ್ ಜನಸಂಖ್ಯೆಯಲ್ಲಿ ಮುಸ್ಲಿಮೇತರಿಗೆ ಮುಂಚೂಣಿ ಒದಗಿಸಿದ್ದರು.  ಆದರೆ ಅದನ್ನು ಕಡೆಗಣಿಸಿ ಲಾಹೋರ್ ಅನ್ನು ಪಾಕಿಸ್ತಾನಕ್ಕೆ ನೀಡಿದ ಸರ್ ಸೆರಿಲ್ ರ್‍ಯಾಡ್‍ಕ್ಲಿಫ್ ತನ್ನ ತೀರ್ಮಾನಕ್ಕೆ ನಂತರ ಕೊಟ್ಟ ಕಾರಣ-ಪಾಕಿಸ್ತಾನಕ್ಕೆ ಯಾವುದೇ ದೊಡ್ಡ ನಗರವಿರಲಿಲ್ಲ.”  ರ್ಯಾಡ್ಕ್ಲಿಫ್ ನಿರ್ಣಯ ಮಾನವ ಇತಿಹಾಸದಲ್ಲಿ ಕಂಡುಕೇಳರಿಯದ ರಕ್ತಪಾತಕ್ಕೆಡೆಮಾಡಿಕೊಟ್ಟದ್ದನ್ನು ಇತಿಹಾಸ ದಾಖಲಿಸಿದೆ.
ಐತಿಹಾಸಿಕ ನಗರ ಒಮ್ಮೆ ತಮ್ಮ ಕೈಗೆ ಸಿಕ್ಕಿದ್ದೇ ಪಾಕಿಸ್ತಾನೀಯರು ಅದನ್ನು ತಮ್ಮ ಸಾಂಸ್ಕೃತಿಕ ರಾಜಧಾನಿಯನ್ನಾಗಿ ಬೆಳೆಸಿದರು.  ವರ್ಷಗಳ ನಂತರಲಾಹೋರ್ ಪಾಕಿಸ್ತಾನದ ಹೃದಯ” ಎಂದು ಹೇಳುವುದರ ಮೂಲಕ ಮಾಜಿ ಪ್ರಧಾನಿ ಶ್ರೀಮತಿ ಬೆನಜ಼ಿರ್ ಭುಟ್ಟೋ ಪಾಕಿಸ್ತಾನಕ್ಕೆ ಲಾಹೋರ್ ಮಹತ್ವವನ್ನು ಬಣ್ಣಿಸಿದರು.  ಭಾರತದ ಗಡಿಗೆ ಸಮೀಪವಿದ್ದ ಒಂದೇಒಂದು ಕಾರಣಕ್ಕಾಗಿ ಪಾಕಿಸ್ತಾನದ ರಾಜಕೀಯ ರಾಜಧಾನಿಯಾಗುವ ಅವಕಾಶವನ್ನು ಲಾಹೋರ್ ಕಳೆದುಕೊಂಡಿತು.  ೪೭ರಲ್ಲಿ ಕಳೆದುಕೊಂಡ ನಗರವನ್ನು ಮತ್ತೆ ಪಡೆಯುವ ಅವಕಾಶ ೬೫ರಲ್ಲಿ ಭಾರತಕ್ಕೆ ಲಭಿಸಿತ್ತು, ಲಾಹೋರ್ ಭಾರತೀಯ ಸೇನೆಯ ಕೈಯಳತೆಯೊಳಗೇ ಇತ್ತು.  ಆದರೆ ಅದನ್ನೇಕೆ ಭಾರತೀಯರು ಕೈವಶ ಮಾಡಿಕೊಳ್ಳಲ್ಲಿಲ್ಲ ಎನ್ನುವುದಕ್ಕೆ ಸಾಮರಿಕ ಕಾರಣಗಳಿವೆ.
ಭಾರತೀಯ ಸೇನೆ ಲಾಹೋರ್ ತಲುಪುತ್ತಿದ್ದಂತೇ ಉಗ್ರ ಪ್ರತಿದಾಳಿ ಆರಂಭಿಸಿದ ಪಾಕ್ ವಿಮಾನದಳ ನಮ್ಮ ಸೇನೆಗೆ ಅಪಾರ ಹಾನಿಯೆಸಗಿತು.  ಹೀಗಾಗಿ ಲಾಹೋರ್ ಹೊರವಲಯ ತಲುಪಿದ್ದ ಮುಂಚೂಣಿ ತುಕಡಿ ಹಿಂತೆಗೆಯುವ ನಿರ್ಧಾರನ್ನು ತೆಗೆದುಕೊಳ್ಳುವ ಒತ್ತಡಕ್ಕೆ ಮೇಜರ್ ಜನರಲ್ ನಿರಂಜನ್ ಪ್ರಸಾದ ಒಳಗಾದರು.  ಇದು ಪಶ್ಚಿಮ ಕಮ್ಯಾಂಡ್ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಹರ್ಬಕ್ಷ್ ಸಿಂಗ್ ಅವರಿಗೆ ಸಮ್ಮತವಿರಲ್ಲಿಲ್ಲ ಎಂಬ ಮಾತಿದೆ.  ಇಷ್ಟಾಗಿಯೂ, ನಿರಂಜನ್ ಪ್ರಸಾದರ ನಿರ್ಣಯ ಭಾರತೀಯ ರಾಜಕೀಯ ನಾಯಕವರ್ಗ ಮತ್ತು ಸೇನೆಯ ಉದ್ದೇಶಕ್ಕೆ ಅನುಗುಣವಾಗಿಯೇ ಇತ್ತು ಎಂದು ಹೇಳಬೇಕಾಗುತ್ತದೆ.  ಪಾಕ್ ಪ್ರತಿರೋಧವನ್ನು ನಿರ್ಲಕ್ಷಿಸಿ ಲಾಹೋರ್ ನಗರವನ್ನು ಆಕ್ರಮಿಸಿಕೊಳ್ಳುವುದು ಕಷ್ಟವೇನೂ ಆಗಿರಲಿಲ್ಲ, ನಿಜ.   ಆದರೆ ಇಪ್ಪತ್ತು ಲಕ್ಷದಷ್ಟು ಜನಸಂಖ್ಯೆಯಿದ್ದ ವೈರಿ ನಗರವೊಂದನ್ನು ಬಿಗಿ ಹಿಡಿತದಲ್ಲಿಟ್ಟುಕೊಳ್ಳುವುದೆಂದರೆ ನಮ್ಮ ಸೇನೆಯ ಒಂದು ದೊಡ್ಡ ಭಾಗವನ್ನು ಅಲ್ಲಿ ಕಟ್ಟಿಹಾಕಿಬಿಟ್ಟಂತಾಗುತ್ತಿತ್ತು.  ಇದು ಇತರೆಡೆ ನಮ್ಮ ಕಾದುವ ಸಾಮರ್ಥ್ಯಕ್ಕೆ ಹೊಡೆತ ನೀಡುವುದು ಖಂಡಿತವಾಗಿತ್ತು.  ಇದು ಯುದ್ಧದ ದೃಷ್ಟಿಯಿಂದ ವ್ಯಾವಹಾರಿಕ ಎನಿಸಿಕೊಳ್ಳುತ್ತಿರಲಿಲ್ಲ.  ಅಷ್ಟಾಗಿಯೂ, ಲಾಹೋರ್ ಅನ್ನು ಆಕ್ರಮಿಸಿಕೊಳ್ಳಬೇಕೆನ್ನುವುದು ಭಾರತದ ಉದ್ದೇಶವೇನೂ ಆಗಿರಲಿಲ್ಲ.  ಪಾಕಿಸ್ತಾನದ ಹೃದಯವಾಗಿದ್ದ ನಗರದ ಮೇಲೆ ಒತ್ತಡ ಹೇರಿ ಪಾಕಿಗಳನ್ನು ಕಂಗೆಡಿಸಿ ಅವರು ಚಿಕನ್ಸ್ ನೆಕ್-ಛಾಂಬ್ ಝಾರಿಯನ್ ಕ್ಷೇತ್ರದಲ್ಲಿ ಮುಂದುವರೆಯದಂತೆ, ಜಮ್ಮು-ಅಖ್ನೂರ್ ಹೆದ್ದಾರಿಯನ್ನು ಬಿಟ್ಟು ಇತ್ತ ಗಮನ ಹರಿಸುವಂತೆ ಮಾಡುವುದಷ್ಟೇ ನಮ್ಮ ಉದ್ದೇಶವಾಗಿದ್ದದ್ದು.  ಅದಂತೂ ಯಶಸ್ವಿಯಾಯಿತು.  ಅದರಲ್ಲೂ, ತಮ್ಮ ಕಾಶ್ಮೀರ ದಾಳಿಗೆ ಮೂಲನೆಲೆಯಾಗಿ ಪಾಕಿಗಳು ಬಳಸಿಕೊಂಡಿದ್ದ ಸಿಯಾಲ್ ಕೋಟ್ ನಗರದ ಮೇಲೆಯೇ ಭಾರತೀಯ ಸೇನೆ ಸೆಪ್ಟೆಂಬರ್ ೮ರಂದು ಧಾಳಿಯೆಸಗಿದಾಗ ಕಂಗೆಟ್ಟುಹೋದ ಪಾಕ್ ಸೇನೆಗೆ ಕಾಶ್ಮೀರವನ್ನು ಮರೆತು ತಮ್ಮ ದೇಶದ ಹೃದಯಭಾಗ ಪಂಜಾಬ್ ಅನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಯಿತು.  ಇದೆಲ್ಲವನ್ನೂ ಗಮನಿಸಿದರೆ ಪ್ರಧಾನಿ ಶಾಸ್ತ್ರಿಯವರ ಹಾಗೂ ಭಾರತೀಯ ಸೇನೆಯ ಮೂಲೋದ್ದೇಶ ಸಫಲವಾಯಿತೆಂದೇ ಹೇಳಬೇಕು.
ನಂತರದ ಬೆಳವಣಿಗೆಗಳು ಅಷ್ಟೇನೂ ಮಹತ್ವವೆನಿಸಿಕೊಳ್ಳುವುದಿಲ್ಲ.  ಉತ್ತರದ ಕಾರ್ಗಿಲ್ನಿಂದ ಹಿಡಿದು ದಕ್ಷಿಣದ ರಣ್ವರೆಗೆ ಗಡಿಯುದ್ದಕ್ಕೂ ಭುಗಿಲೆದ್ದ ಘರ್ಷಣೆಗಳು ಯುದ್ಧದ ಅಂತ್ಯದವರೆಗೂ ಅನಿರ್ಣಾಯಕವಾಗಿಯೇ ಉಳಿದುಬಿಟ್ಟವು.   ಕಾರ್ಗಿಲ್, ಪೂಂಚ್, ಲಾಹೋರ್, ಸಿಯಾಲ್ಕೋಟ್, ಜೈಸಾಲ್ಮೇರ್ ರಣಾಂಗಣಗಳಲ್ಲಿ ಭಾರತೀಯ ಸೇನೆ ಮುಂದುವರೆದರೆ, ಚಿಕನ್ಸ್ ನೆಕ್-ಛಾಂಬ್ ಝಾರಿಯನ್, ಖೇಮ್ ಕರನ್, ಮುನಾಭಾವ್, ನಗರ್ ಪಾರ್ಕರ್ ರಣಾಂಗಣಗಳಲ್ಲಿ ಪಾಕ್ ಸೇನೆ ಮೇಲುಗೈ ಸಾಧಿಸಿತು.  ಲಾಹೋರ್ ಮೇಲಿನ ನಮ್ಮ ದಾಳಿಗೆ ಪ್ರತಿಯಾಗಿ ಖೇಮ್ ಕರನ್ ಪಟ್ಟಣದ ಮೇಲೆ ಎರಗಿದ ಪಾಕ್ ಸೇನೆ ಅದನ್ನು ಆಕ್ರಮಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತಷ್ಟೇ ಅಲ್ಲ, ಯುದ್ದದ ಅಂತ್ಯದವರೆಗೂ ಪಟ್ಟಣವನ್ನು ಬಿಟ್ಟುಕೊಡದೇ, ನಂತರದ ಮಾತುಕತೆಗಳಲ್ಲಿ ಅದಕ್ಕೆ ಬದಲಾಗಿ ಕಾಶ್ಮೀರದಲ್ಲಿ ಭಾರತದಿಂದ ರಿಯಾಯಿತಿಗಳನ್ನು ಪಡೆದುಕೊಳ್ಳಲು ಪಾಕಿಸ್ತಾನ ಹವಣಿಸಿತು.  ಯುದ್ಧ ಆರಂಭವಾದ ಒಂದೇವಾರದಲ್ಲಿ ಎರಡೂ ಸೇನೆಗಳಿಗೆ ಅರಿವಾದದ್ದೆಂದರೆ ಯುದ್ಧ ಇನ್ನೆಷ್ಟು ದಿನಗಳು ನಡೆದರೂ ಅಷ್ಟೇ, ಪರಿಣಾಮವಂತೂ ಅನಿರ್ಣಾಯಕ ಎಂದು.  ಕಾಶ್ಮೀರದ ಮೇಲಿನ ಪಾಕ್ ಒತ್ತಡವನ್ನು ನಿವಾರಿಸಿಕೊಂಡ ಮೇಲೆ ಯುದ್ಧವನ್ನು ಮುಂದುವರೆಸುವುದರಲ್ಲಿ ಭಾರತಕ್ಕೆ ಆಸಕ್ತಿಯೇನೂ ಉಳಿಯಲಿಲ್ಲ.  ಆದರೆ ಗೆಲ್ಲುವ ಹುಮ್ಮಸ್ಸಿನಲ್ಲಿ ಯುದ್ಧವನ್ನಾರಂಭಿಸಿದ್ದ ಪಾಕಿಸ್ತಾನಕ್ಕೆ ಹೊಸ ವಾಸ್ತವವನ್ನು ಒಪ್ಪಿಕೊಳ್ಳಲು ಕಷ್ಟವೇ ಆಯಿತು.  ಸಂದರ್ಭದಲ್ಲಿ ಪಾಕ್ ಭ್ರಮನಿರಸನಗಳ ಬಗ್ಗೆ ಕೆಲಮಾತುಗಳು ನಮ್ಮ ವಿಶ್ಲೇಷಣೆಗೆ ಅಗತ್ಯವಾಗುತ್ತವೆ.
ಪಾಕ್ ರಕ್ಷಣಾಪಡೆಗಳು ಪೂರ್ಣವಾಗಿ ಅವಲಂಬಿತವಾಗಿದ್ದದ್ದು ಅಮೆರಿಕಾದಿಂದ ಪಡೆದುಕೊಂಡಿದ್ದ ಶಸ್ತ್ರಾಸ್ತ್ರಗಳ ಮೇಲೆ.  ಅವೆಲ್ಲವನ್ನೂ ಪಾಕಿಸ್ತಾನ ಗಳಿಸಿಕೊಂಡಿದ್ದದ್ದು ಅಮೆರಿಕಾ ನೇತೃತ್ವದ ಬಾಗ್ದಾದ್ ಕೌಲುಕೂಟದ ಸದಸ್ಯನಾಗಿ.  ಕೌಲುಕೂಟದ ಗುರಿ ಕಮ್ಯೂನಿಸ್ಟ್ ಸೋವಿಯೆತ್ ಯೂನಿಯನ್, ಕಾರಣದಿಂದಾಗಿಯೇ ತಾನು ಪಡೆದುಕೊಂಡ ಯುದ್ಧೋಪಕರಣಗಳನ್ನು ಪಾಕಿಸ್ತಾನ ಕಮ್ಯೂನಿಸ್ಟರ ವಿರುದ್ಧವಷ್ಟೇ ಬಳಸಬೇಕಾಗಿತ್ತು.  ಆದರೆ ಪಾಕಿಸ್ತಾನದ ಏಕೈಕ ಗುರಿ ಭಾರತ.  ಅಂದರೆ ಯಾವ ನಿರೀಕ್ಷೆಯಿಂದ ಅಮೆರಿಕಾ ಪಾಕಿಸ್ತಾನಕ್ಕೆ ಅತ್ಯಾಧುನಿಕ ಯುದ್ಧೋಪರಣಗಳನ್ನು ಪೂರೈಸಿತ್ತೋ ಉದ್ದೇಶ ಸಾರ್ಥಕವಾಗುವಂತಿರಲಿಲ್ಲ.  ಅಮೆರಿಕನ್ ಶಸ್ತ್ರಾಸ್ತ್ರಗಳು ಪಾಕ್ ಕೈಯಲ್ಲಿ ದುರ್ಬಳಕೆಯಾಗುವ ಸಾಧ್ಯತೆಯನ್ನು ಭಾರತ ಐವತ್ತರ ದಶಕದ ಉತ್ತರಾರ್ಧದಲ್ಲೇ ಅಮೆರಿಕಾದ ಗಮನಕ್ಕೆ ತಂದಿತ್ತು.  ಆಗ ಭಾರತದ ಆತಂಕಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಐಸೆನ್ಹೋವರ್ ಸರ್ಕಾರ ತನ್ನ ಯುದ್ಧೋಪರಣಗಳು ಭಾರತದ ವಿರುದ್ಧ ಬಳಕೆಯಾದರೆ ಅವುಗಳ ಪೂರೈಕೆಯನ್ನು ತಕ್ಷಣ ನಿಲುಗಡೆಗೆ ತರುವುದಾಗಿ ನೆಹರೂ ಸರ್ಕಾರಕ್ಕೆ ವಾಗ್ದಾನ ನೀಡಿತ್ತು.  ಅದನ್ನು ನೆನಪಿಸಿಕೊಂಡ ಲಿಂಡನ್ ಜಾನ್ಸನ್ ಸರ್ಕಾರ ಯುದ್ಧ ಆರಂಭವಾಗುತ್ತಿದ್ದಂತೇ ತನ್ನೆಲ್ಲಾ ಯುದ್ಧೋಪಕರಣಗಳ, ಅವುಗಳ ಬಿಡಿಭಾಗಗಳ ಪೂರೈಕೆಯನ್ನು ನಿಲುಗಡೆಗೆ ತಂದಿತು.  ಇದು ಪಾಕಿಸ್ತಾನಕ್ಕೆ ಬಿದ್ದ ಭಾರಿ ಹೊಡೆತ.  ಇದು ಸಾಲದು ಎಂಬಂತೆ ಅತ್ಯಾಧುನಿಕ ತಾಂತ್ರಿಕತೆಯಿಂದ ಕೂಡಿದ್ದ ಪ್ಯಾಟನ್ ಟ್ಯಾಂಕ್ಗಳನ್ನು ಸಮರ್ಥವಾಗಿ ಉಪಯೋಗಿಸುವಷ್ಟು ಪರಿಣಿತಿಯನ್ನು ಪಾಕ್ ಸೈನಿಕರು ಸಾಧಿಸಿರಲಿಲ್ಲ.  ಪಾಕ್ ಬಲಹೀನತೆಯನ್ನು ಸದುಪಯೋಗಪಡಿಸಿಕೊಂಡ ಭಾರತೀಯ ಸೈನಿಕರು, ಮುಖ್ಯವಾಗಿ ಹವಾಲ್ದಾರ್ ಅಬ್ದುಲ್ ಹಮೀದ್, ಬ್ರಿಗೇಡಿಯರ್ ತ್ಯಾಗರಾಜ್ರಂಥವರು ತಮ್ಮ ಸಾಹಸಕೃತ್ಯಗಳಿಂದ ನೂರಾರು ಪಾಕ್ ಪ್ಯಾಟನ್ ಟ್ಯಾಂಕ್ಗಳನ್ನು  ನಿರುಪಯುಕ್ತಗೊಳಿಸಿದರು.  ಎರಡನೆಯ ಮಹಾಯುದ್ಧದ ನಂತರ ಅತ್ಯಂತ ಭೀಕರ ಟ್ಯಾಂಕ್ ಯುದ್ಧ ನಡೆದ ಖೇಮ್ ಕರನ್ ಕ್ಷೇತ್ರದಲ್ಲಿ ಭಾರತೀಯ ಸೇನೆ ನೂರಕ್ಕೂ ಮಿಕ್ಕಿ ಪ್ಯಾಟನ್ ಟ್ಯಾಂಕ್ಗಳನ್ನು ನಾಶಪಡಿಸಿದ್ದರಿಂದಾಗಿ ರಣಾಂಗಣಪ್ಯಾಟನ್ ಟ್ಯಾಂಕ್ಗಳ ಸ್ಮಶಾನ” ಎಂದು ಹೆಸರಾಗಿದೆ.
ಹೀಗೆ ಅಮೆರಿಕನ್ ದಿಗ್ಬಂಧನದಿಂದಾಗಿ ಪಾಕಿಸ್ತಾನ ಕಂಗೆಟ್ಟರೆ, ಸಣ್ಣ ಯುದ್ಧೋಪಕರಣಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದ ಭಾರತ ಯುದ್ಧವನ್ನು ಸೀಮಿತ ಪ್ರಮಾಣದಲ್ಲಿ ಮುಂದುವರಿಸಿಯೇಕೊಂಡು ಹೋಗುವ ಸಾಮರ್ಥ್ಯ ಪಡೆದಿತ್ತು.  ಇರಾನ್ ಮತ್ತು ಜೋರ್ಡಾನ್ಗಳಿಂದ ಸಹಾಯ ದೊರೆತರೂ ಅದು ಪಾಕ್ ಯುದ್ಧಯೋಜನೆಗಳಿಗೆ ಸಾಲುವ ಮಟ್ಟದಲ್ಲಿರಲಿಲ್ಲ.  ಇದೆಲ್ಲಾ ಪ್ರತಿಕೂಲ ವಾಸ್ತವಗಳು ಅರಿವಿಗೆ ತಟ್ಟುತ್ತಿದ್ದಂತೇಹದಿನೈದು ದಿನಗಳಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತೇವೆ’ ಎಂದು ಘೋಷಿಸಿದ್ದ ಅಯೂಬ್ ಖಾನ್ ತಮ್ಮ ನಡೆಗಳನ್ನು ಬದಲಾಯಿಸುವ ಅನಿವಾರ್ಯತೆಗೆ ಒಳಗಾಗಿ ಸಂಧಾನದ ಮಾರ್ಗಗಳನ್ನು ಹುಡುಕತೊಡಗಿದರು.  ಕದನಸ್ತಂಭನಕ್ಕೆ ಬಹಿರಂಗ ಮನವಿ ಮಾಡಿಕೊಳ್ಳುವ ಮೊದಲು ಕಡೆಯ ಪ್ರಯತ್ನವಾಗಿ ಅವರು ಮಿತ್ರದೇಶಗಳಿಂದ ಸಹಾಯ ಪಡೆಯುವ ಪ್ರಯತ್ನ ಮಾಡಿದರು.  ಅದರ ಅಂಗವಾಗಿ ನಿವೃತ್ತ ಏರ್ ಮಾರ್ಷಲ್ ನೂರ್ ಖಾನ್ರನ್ನು ಟರ್ಕಿ, ಇಂಡೋನೇಶಿಯಾ ಹಾಗೂ ಚೈನಾಗೆ ಕಳುಹಿಸಿದರು.
ಪಾಕಿಸ್ತಾನದಂತೇ ಬಾಗ್ದಾದ್ ಕೌಲುಕೂಟದ ಸದಸ್ಯನಾಗಿದ್ದ ಟರ್ಕಿಯ ಬಳಿ ಅಮೆರಿಕನ್ ಶಸ್ತ್ರಾಸ್ತ್ರಗಳೂ, ಅವುಗಳ ಬಿಡಿಭಾಗಗಳೂ ಇದ್ದುದೇನೋ ನಿಜ.  ಆದರೆ ಕೌಲುಕೂಟದ ನಿಯಮಗಳಿಗನುಗುಣವಾಗಿ ಅಮೆರಿಕಾದ ಸಮ್ಮತಿಯಿಲ್ಲದೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುವುದು ಟರ್ಕಿಗೆ ಸಾಧ್ಯವಿರಲಿಲ್ಲ.  ಹೀಗಾಗಿ ಅದು ತಾನೇ ಉತ್ಪಾದಿಸಿದ್ದ ಕೆಲವು ಯುದ್ಧೋಪರಣಗಳನ್ನು ಸೀಮಿತ ಪ್ರಮಾಣದಲ್ಲಿ ಪೂರೈಸುವುದರ ಹೊರತಾಗಿ ಮತ್ತೇನೂ ಮಾಡಲಾಗಲಿಲ್ಲ.  ಇನ್ನು ಇಂಡೋನೇಶಿಯಾದ ವಿಷಯಕ್ಕೆ ಬಂಡರೆ ಅಧ್ಯಕ್ಷ ಸುಕಾರ್ನೋ ಭಾರಿ ಆಶ್ವಾಸನೆಯನ್ನೇನೋ ನೀಡಿದರು.  ಅವರು ಹೇಳಿದ ಮಾತುಗಳನ್ನು ನೂರ್ ಖಾನ್ ತಮ್ಮ ಕೃತಿ “The First Round”ನಲ್ಲಿ ಹೀಗೆ ದಾಖಲಿಸಿದ್ದಾರೆ: “ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇಂಡೋನೇಶಿಯಾಗೆ ಸೇರಿವೆ.  ಅವು ನಮ್ಮ ಸುಮಾತ್ರಾದಿಂದ ಕೇವಲ ನೂರೈವತ್ತು ಕಿಲೋಮೀಟರ್ಗಳಷ್ಟು ಹತ್ತಿರದಲ್ಲಿವೆ ಎನ್ನುವುದು ನಿಮಗೆ ಗೊತ್ತೇ?  ನಾವು ಅವುಗಳನ್ನು ಆಕ್ರಮಿಸಿಕೊಳ್ಳುತ್ತೇವೆ.  ಭಾರತೀಯ ನೌಕಾದಳ ಇತ್ತ ಗಮನ ಹರಿಸುತ್ತಿದ್ದಂತೇ ನೀವು ಅತ್ತ ಅರೇಬಿಯನ್ ಸಮುದ್ರದಲ್ಲಿ ಅದನ್ನು ಮಣಿಸಿ.”
ಇದೇನೋ ಮಹಾನ್ ಯೋಜನೆ ಮತ್ತು ಮಹಾನ್ ಆಶ್ವಾಸನೆ.  ಆದರೆ ಇದು ಆಶ್ವಾಸನೆಯಾಗಷ್ಟೇ ಉಳಿಯಿತು.  ನಿಕೋಬಾರ್ ದ್ವೀಪಗಳನ್ನು ಆಕ್ರಮಿಸಿಕೊಳ್ಳುವ ಯಾವ ಪ್ರಯತ್ನವನೂ ಇಂಡೋನೇಶಿಯಾ ಮಾಡಲಿಲ್ಲ.  ಸುಕಾರ್ನೋ ವಿರುದ್ಧ ಬಂಡೇಳುವಂತೆ ಅಮೆರಿಕಾದ ಸಿಐಎ ಸೇನಾಧಿಕಾರಿ ಜನರಲ್ ಸುಹಾರ್ತೋರನ್ನು ಎತ್ತಿಕಟ್ಟಿದ್ದರಿಂದಾಗಿ ತಮ್ಮ ಗಾದಿಯನ್ನೂ, ಜೀವವನ್ನೂ ಉಳಿಸಿಕೊಳ್ಳುವತ್ತ ಗಮನಹರಿಸುವುದು ಸುಕಾರ್ನೋಗೆ ಮುಖ್ಯವಾಯಿತು.
ಇದಕ್ಕೆ ವಿರುದ್ಧವಾಗಿ ಪಾಕ್ ಬೆಂಬಲಕ್ಕೆ ಚೈನಾ ಪೂರ್ಣವಾಗಿ ನಿಂತಿತು
ಭಾಗ -
ಹಾವೂ ಸಾಯಬಾರದು, ಕೋಲೂ ಮುರಿಯಬಾರದು: ಚೀನೀ ಚತುರ ನಡೆ
ಭಾರತೀಯ ಸೇನೆ ಗಡಿ ದಾಟಿ ಲಾಹೋರ್ ಮೇಲೆ ಆಕ್ರಮಣವೆಸಗಿದ ಮರುದಿನ ಅಂದರೆ ಸೆಪ್ಟೆಂಬರ್ ೭ರಂದು ಪಾಕಿಸ್ತಾನದ ಸಹಾಯಕ್ಕೆ ಬರುವಂತೆ ಕೋರಿ ಅಯೂಬ್ ಖಾನ್ ಚೀನೀ ಅಧ್ಯಕ್ಷ ಲಿಯು ಶಾವೋಕಿ ಅವರಿಗೆ ಪತ್ರದ ಮೂಲಕ ಅಧಿಕೃತ ವಿನಂತಿ ಮಾಡಿಕೊಂಡರು.  ಮರುದಿನವೇ ಚೀನೀ ಸರ್ಕಾರದಿಂದ ಭಾರತಕ್ಕೆ ಸಂದೇಶವೊಂದು ಬಂತು.  ಸಂದೇಶದಲ್ಲಿದ್ದುದು, ದಕ್ಷಿಣ ಏಶಿಯಾದಲ್ಲಿ ಭಾರತ ಶಾಂತಿಕಂಟಕವಾಗಿದೆ, ಕಾಶ್ಮೀರಿಗಳನ್ನು ಹಿಂಸಾಮಾರ್ಗದಿಂದ ಸದೆಬಡಿಯುತ್ತಿದೆ ಹಾಗೂ ಪಾಕಿಸ್ತಾನದ ವಿರುದ್ಧ ಧಾಳಿಯೆಸಗಿದೆಯೆಂಬ ದೂಷಣೆಗಳೊಂದಿಗೆ ಭಾರತೀಯ ಸೈನಿಕರು ಅಕ್ಸಾಯ್ ಚಿನ್ ಮತ್ತು ಸಿಕ್ಕಿಂಗಳಲ್ಲಿ ಹತೋಟಿ ರೇಖೆಯನ್ನು ದಾಟಿ ಚೀನೀ ಪ್ರದೇಶಗಳನ್ನು ಅತಿಕ್ರಮಿಸಿದ್ದಾರೆಂಬ ಆಪಾದನೆ.  ಸೆಪ್ಟೆಂಬರ್ ೧೨ರಂದು ಉತ್ತರಿಸಿದ ಭಾರತ, ಕಾಶ್ಮೀರದಲ್ಲಿ ಗಲಭೆಯೆಬ್ಬಿಸಲು ಪಾಕಿಸ್ತಾನ ಮಾಡಿದ ಯೋಜನೆಗಳು ಹಾಗೂ ಛಾಂಬ್ ಕ್ಷೇತ್ರದಲ್ಲಿ ನಡೆಸಿದ ಧಾಳಿಯ ವಿವರಗಳನ್ನು ನೀಡುವುದರ ಜತೆಗೇ ಭಾರತೀಯ ಸೈನಿಕರು ಹತೋಟಿ ರೇಖೆಯನ್ನು ದಾಟಿ ಚೀನೀ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಾಲಿಟ್ಟಿಲ್ಲವೆಂದು ಸ್ಪಷ್ಟವಾಗಿ ತಿಳಿಸಿತು.  ಇದಕ್ಕೆ ಚೀನೀಯರು ಪ್ರತಿಕ್ರಿಯಿಸಿದ್ದು ನಾಲ್ಕು ದಿನಗಳ ನಂತರ, ಸೆಪ್ಟೆಂಬರ್ ೧೬ರಂದು.  ಕಾಶ್ಮೀರದಲ್ಲಿ ಭಾರತ ಕುಕೃತ್ಯಗಳಲ್ಲಿ ನಿರತವಾಗಿದೆಯೆಂಬ ದೂಷಣೆಯನ್ನು ಮುಂದುವರೆಸುವುದರ ಜತೆ ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರು ಚೀನೀ ಪ್ರದೇಶಕ್ಕೆ ಅತಿಕ್ರಮಣ ಮಾಡಿ ಅಲ್ಲಿ ಕೆಲವು ಶಿಬಿರಗಳನ್ನು ಸ್ಥಾಪಿಸಿದ್ದಾರೆಂದು ಚೀನಾ ಆಪಾದಿಸಿತು.  ಮುಂದುವರೆದು ಅದು, “ಇನ್ನು ಮೂರು ದಿನಗಳ ಒಳಗೆ ಶಿಬಿರಗಳನ್ನು ಭಾರತ ತೆಗೆಯದಿದ್ದರೆ ಮುಂದಾಗುವ ಎಲ್ಲ ದುಷ್ಪರಿಣಾಮಗಳಿಗೆ ಭಾರತವೇ ಜವಾಬ್ದಾರ” ಎಂದೂ ಎಚ್ಚರಿಸಿತು.  ಎಚ್ಚರಿಕೆ ಭಾರತದ ಮೇಲೆ ದಾಳಿಯೆಸಗುವ ಸ್ಪಷ್ಟ ಸೂಚನೆಯಂತಿತ್ತು.
ಎಚ್ಚರಿಕೆ ಸಹಜವಾಗಿಯೇ ಭಾರತಕ್ಕೆ ಆತಂಕವನ್ನುಂಟುಮಾಡಿತು.  ಪಾಕಿಸ್ತಾನದ ಜತೆ ಸೆಣಸುವುದರ ಜತೆಗೆ ಉತ್ತರದಲ್ಲಿ ಚೀನೀ ಹೆಮ್ಮಾರಿಯನ್ನೂ ಮೈಮೇಲೆ ಎಳೆದುಕೊಳ್ಳುವುದು ಭಾರತಕ್ಕೆ ಸಾಧ್ಯವಿರಲೇ ಇಲ್ಲ.  ಹೀಗಾಗಿ ಚೀನೀ ಎಚ್ಚರಿಕೆಗೆ ಮೃದುವಾಗಿಯೇ ಪ್ರತಿಕ್ರಿಯಿಸಿದ ನವದೆಹಲಿ, ವಿವಾದಿತ ಪ್ರದೇಶದಲ್ಲಿ ಜಂಟಿ ಸರ್ವೇಕ್ಷಣೆಗೆ ತಾನು ಸಿದ್ಧವಾಗಿರುವುದಾಗಿಯೂ, ಚೀನೀ ನೆಲದಲ್ಲಿ ಭಾರತೀಯ ಸೈನಿಕರು ಯಾವುದೇ ಶಿಬಿರ ಸ್ಥಾಪಿಸಿರುವುದು ನಿಜವಿದ್ದಲ್ಲಿ ಅವುಗಳನ್ನು ನಾಶಪಡಿಸಲು ತನ್ನ ಅಭ್ಯಂತರವೇನೂ ಇಲ್ಲವೆಂದೂ ತಿಳಿಸಿತು.  ಜತೆಗೇ, ಕಾಶ್ಮೀರದ ವಿಷಯದಲ್ಲಿ ಚೈನಾ ಮಧ್ಯಪ್ರವೇಶಿಸುವುದನ್ನು ಖಂಡಿಸಿತು.  ಇಷ್ಟಾಗಿಯೂ ಚೀನೀ ಎಚ್ಚರಿಕೆಯಿಂದ ಸಹಜವಾಗಿಯೇ ಆತಂಕಗೊಂಡ ಭಾರತ ಮಾಸ್ಕೋ ಮತ್ತು ವಾಷಿಂಗ್ಟನ್ಗಳಿಗೆ ಚೀನೀ ನಡೆಗಳ ವಿವರಗಳನ್ನು ತಲುಪಿಸಿತು.  ತಕ್ಷಣ ಪ್ರತಿಕ್ರಿಯಿಸಿದ ಅಮೆರಿಕಾ ಮತ್ತು ಸೋವಿಯೆತ್ ನಾಯಕರು, ಕಾಶ್ಮೀರದ ವಿಷಯ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯಗಳ ಮೂಲಕ ಇತ್ಯರ್ಥವಾಗಬೇಕೆಂದೂ, ಇದರಲ್ಲಿ ಚೈನಾ ಹಸ್ತಕ್ಷೇಪ ಎಸಗಕೂಡದೆಂದೂ ಹೇಳಿಕೆ ನೀಡಿದರು.  ಜತೆಗೇ, ಚೈನಾ ಯುದ್ಧಕ್ಕಿಳಿದರೆ ಭಾರತದ ನೆರವಿಗೆ ಬರಬೇಕೆಂದು ಶಾಸ್ತ್ರಿ ಸರ್ಕಾರ ಅಮೆರಿಕಾಗೆ ಮನವಿಯನ್ನೂ ಮಾಡಿಕೊಂಡಿತ್ತೆಂದು ಇತ್ತೀಚೆಗೆ ಬಹಿರಂಗಗೊಂಡಿರುವ ಕೆಲವು ರಹಸ್ಯ ದಾಖಲೆಗಳು ಹೇಳುತ್ತವೆ.
ಸೆಪ್ಟೆಂಬರ್ ೧೯ ಬಂತು, ಚೈನಾ ನೀಡಿದ್ದ ಗಡುವು ಮುಗಿಯಿತು.  ಚೈನಾದ ಮುಂದಿನ ನಡೆ ಏನಿರಬಹುದೆಂಬ ಆತಂಕ ಭಾರತೀಯ ಸರ್ಕಾರ ಮತ್ತು ಸೇನಾ ವಲಯದಲ್ಲಿ ವೃದ್ಧಿಸುತ್ತಿದ್ದಂತೇ ಚೈನಾ ಗಡುವನ್ನು ಮತ್ತೆ ಮೂರು ದಿನಗಳಿಗೆ ವಿಸ್ತರಿಸಿತು.  ಚೈನಾ ಮಾಡಿದ್ದ ಆಪಾದನೆಗಳು ಪೊಳ್ಳು ಎಂದೂ, ಅದರ ಎಚ್ಚರಿಕೆ ಹುಸಿಯೆಂದೂ ಇದರಿಂದ ಸಾಬೀತಾಯಿತು.  ಆನಂತರ ಹೊರಬಂದ ವಿವರಗಳ ಪ್ರಕಾರ ದಿನಗಳಲ್ಲಿ ಟಿಬೆಟ್ನಲ್ಲಿದ್ದ ಚೀನೀ ಸೈನಿಕರ ಸಂಖ್ಯೆ ಕೇವಲ ೬೧,೦೦೦.  ಇದರರ್ಥ ಪಾಕಿಸ್ತಾನಕ್ಕೆ ಸಹಕಾರವಾಗುವಂತೆ ಭಾರತದ ಮೇಲೆ ಧಾಳಿಯೆಸಗುವ ಯಾವ ಯೋಜನೆಯೂ ಚೈನಾಗೆ ಇರಲಿಲ್ಲ.  ಇದೇಕೆ ಹೀಗೆ?  ಇದಕ್ಕೆ ಉತ್ತರವಿರುವುದು ಹಿಂದಿನ ಮೂರು ವರ್ಷಗಳ ಬೆಳವಣಿಗೆಗಳಲ್ಲಿ.
ಪಾಕಿಸ್ತಾನ ಮತ್ತು ಚೈನಾಗಳ ಸಂಬಂಧಗಳಲ್ಲಿ ಮಹತ್ತರ ತಿರುವುಂಟಾದದ್ದು ೧೯೬೨ರ ಭಾರತ - ಚೈನಾ ಯುದ್ಧದ ಸಂದರ್ಭದಲ್ಲಿ.  ಅಕ್ಟೋಬರ್ ೨೦ರಂದು ಯುದ್ಧ ಆರಂಭವಾದಾಗ ಪಾಕಿಸ್ತಾನದ ಸಹಾನುಭೂತಿ ಭಾರತದ ಕಡೆಗಿತ್ತು.  ತಿಂಗಳ ನಂತರ ಯುದ್ಧ ಮುಗಿಯುವ ಹೊತ್ತಿಗೆ ಅದು ಸಂಪೂರ್ಣ ಬದಲಾಗಿಹೋಗಿತ್ತು.
ಯುದ್ಧದಲ್ಲಿ ಚೀನೀಯರು ಮೇಲುಗೈ ಸಾಧಿಸಿದಾಗ ಶಸ್ತ್ರಾಸ್ತ್ರಪೂರೈಕೆಗಾಗಿ ನೆಹರೂ ಸರ್ಕಾರ ಅಮೆರಿಕಾ ಮತ್ತು ಬ್ರಿಟನ್ಗಳ ಮೊರೆಹೊಕ್ಕಿತಷ್ಟೇ.  ಏಶಿಯನ್ ವ್ಯವಹಾರಗಳಲ್ಲಿ ಕಮ್ಯೂನಿಸ್ಟ್ ಚೈನಾ ಚಾಲಕನ ಸ್ಥಾನದಲ್ಲಿ ಕೂರುವುದನ್ನು ಸಹಿಸದ ಎರಡು ರಾಷ್ಟ್ರಗಳು ಅಂದೂ ಮುಂದೂ ಭಾರತದ ಬೆಂಬಲಕ್ಕೆ ನಿಲ್ಲಲು ಉತ್ಸಾಹದಿಂದಲೇ ಮುಂದೆ ಬಂದವಷ್ಟೇ ಅಲ್ಲ, ಭಾರತದ ಗಡಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನೂ ಹೊತ್ತುಕೊಳ್ಳಲು ತಯಾರಾದವು.  ಇದಕ್ಕೆ ಪ್ರತಿಯಾಗಿ ಭಾರತ ತನ್ನ ವಿದೇಶನೀತಿಯಲ್ಲಿ ಭಾರಿ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಅಗತ್ಯವಿತ್ತು.  ಕೆಲವು ರಹಸ್ಯ ವರದಿಗಳ ಪ್ರಕಾರ ನೆಹರೂರ ಭಾರತ ತನ್ನ ಅಲಿಪ್ತ ನೀತಿಗೆ ತಿಲಾಂಜಲಿಯಿತ್ತು, ವರ್ಷದ ಹಿಂದಷ್ಟೇ ಸ್ಥಾಪನೆಯಾಗಿದ್ದ ಅಲಿಪ್ತ ರಾಷ್ಟ್ರಗಳ ಬಣದಿಂದ ಹೊರಬಂದು ಅಮೆರಿಕಾ-ನೇತೃತ್ವದ ಮಿಲಿಟರಿ ಕೂಟ South East Asia Treaty Organization (SEATO) ಸೇರಲು ತಯಾರಾಯಿತು.  ಆದರೆ ಸೇನಾ ಸಹಕಾರಕ್ಕೆ ಪ್ರತಿಯಾಗಿ ಅಮೆರಿಕಾ ಮತ್ತು ಬ್ರಿಟನ್ ಭಾರತದ ಮುಂದಿಟ್ಟ ನಿಬಂಧನೆಯೆಂದರೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜತೆ ರಾಜಿಗೆ ಮುಂದಾಗಬೇಕು ಎನ್ನುವುದಾಗಿತ್ತು.  ರಾಜಿ ಅಂದರೆ ಕಾಶ್ಮೀರದಲ್ಲಿ ಪಾಕಿಸ್ತಾನ ಕೇಳಿದಷ್ಟು ಪ್ರದೇಶವನ್ನು ಭಾರತ ಬಿಟ್ಟುಕೊಡಬೇಕು ಎಂದರ್ಥ.  ನವೆಂಬರ್ ೨೨, ೧೯೬೨ರಂದು ಭಾರತಕ್ಕೆ ಭೇಟಿ ನೀಡಿದ ಅಮೆರಿಕಾದ ಉಪವಿದೇಶಾಂಗ ಕಾರ್ಯದರ್ಶಿ ಅವೆರೆಲ್ ಹ್ಯಾರಿಮನ್ ಮತ್ತು ಬ್ರಿಟಷ್ ಕಾಮನ್ವೆಲ್ತ್ ಸಂಬಂಧಗಳ ಬಗೆಗಿನ ಕಾರ್ಯದರ್ಶಿ ಡಂಕನ್ ಸ್ಯಾಂಡಿಸ್ ನಿಬಂಧನೆಯನ್ನು ನೆಹರೂರ ಮುಂದಿಟ್ಟರು.  ಇದು ನೆಹರೂರಿಗೆ ಸಮ್ಮತವಾಗಲಿಲ್ಲ.  ಪರಿಣಾಮವಾಗಿ ಭಾರತ ಪಶ್ಚಿಮದ ಬಣಕ್ಕೆ ಸೇರದೇ ಯಥಾಸ್ಥಿತಿ ಮುಂದುವರೆಯುವಂತಾಯಿತು.
ಇಷ್ಟಾಗಿಯೂ, ಚೈನಾ ವಿರುದ್ಧ ಭಾರತದ ಬಗ್ಗೆ ಅಮೆರಿಕಾ ತಳೆದ ಸಹಾನುಭೂತಿಯ ನಿಲುವು ಮತ್ತು ಯುದ್ಧದ ದಿನಗಳಲ್ಲಿ ನೀಡಿದ ಸಹಕಾರ ಪಾಕಿಸ್ತಾನೀ ನಾಯಕರಲ್ಲಿ ಅಸಂತೋಷವನ್ನಷ್ಟೇ ಅಲ್ಲ ದೇಶದ ಬಗ್ಗೆ ಅಪನಂಬಿಕೆಯನ್ನೂ ಮೂಡಿಸಿತು.  ಯುದ್ಧದಲ್ಲಿ ಭಾರತವನ್ನು ಮಣಿಸುವುದರಲ್ಲಿ ಯಶಸ್ವಿಯಾದ ಚೀನೀಯರು ಸಹಜವಾಗಿಯೇ ಪಾಕಿಸ್ತಾನದ ಆಸಕ್ತಿಯನ್ನು ತಮ್ಮೆಡೆ ಸೆಳೆದುಕೊಂಡರು.  ಅಮೆರಿಕಾಗಿಂತಲೂ ಚೈನಾ ಹೆಚ್ಚು ವಿಶ್ವಾಸಾರ್ಹ ಎಂಬ ನಂಬಿಕೆಯನ್ನು ಪಾಕ್ ಆಡಳಿತವಲಯದಲ್ಲಿ ಬೇರೂರಿಸಿ ಬೆಳೆಸಿದ್ದು ವಿದೇಶಾಂಗ ಸಚಿವ ಝುಲ್ಫಿಕರ್ ಆಲಿ ಭುಟ್ಟೋ.   ಭುಟ್ಟೋ ಮತ್ತು ಚೀನೀ ವಿದೇಶಾಂಗ ಸಚಿವ ಚೆನ್ ಯಿ ಮಾರ್ಚ್ , ೧೯೬೩ರಲ್ಲಿ ಸಿಂಕಿಯಾಂಗ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳ ನಡುವಿನ ಗಡಿಯ ಬಗ್ಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದರು.  ಪ್ರಕಾರ ಚೈನಾ ಕೇಳಿದಂತೆ ಮಿಂಟಾಕಾ ಕಣಿವೆಮಾರ್ಗ ಮತ್ತು ಶಕ್ಸ್ಗನ್ ಕಣಿವೆಗಳು ಸೇರಿದ ಸುಮಾರು ಐದು ಸಾವಿರ ಚದರ ಕಿಲೋಮೀಟರ್ಗಳಷ್ಟು ಪ್ರದೇಶವನ್ನು ಪಾಕಿಸ್ತಾನ ಬಿಟ್ಟುಕೊಟ್ಟಿತು.  ಗಡಿಯ ವಿಷಯದಲ್ಲಿ ಯಾವುದೇ ರಾಜಿಗೆ ತಯಾರಾಗಿರದ, ಅದಕ್ಕಾಗಿ ಯುದ್ಧಕ್ಕೂ ಹಿಂಜರಿಯದ ಭಾರತಕ್ಕಿಂತ ಹೀಗೆ ಕೇಳಿದಷ್ಟು ಪ್ರದೇಶವನ್ನು ಚಕಾರವೆತ್ತದೇ ಬಿಟ್ಟುಕೊಟ್ಟ ಪಾಕಿಸ್ತಾನ ಚೀನೀಯರಿಗೆ ಸಹಜವಾಗಿಯೇ ಪ್ರಿಯವಾಯಿತು.  ಅನಂತರ ಪಾಕಿಸ್ತಾನದ ಉಪಯೋಗವನ್ನು ಚಾಣಾಕ್ಷ ಚೀನೀಯರು ಅರಿಯಲು ಹೆಚ್ಚುಕಾಲ ಬೇಕಾಗಲಿಲ್ಲ.  ಭಾರತವನ್ನು ದಕ್ಷಿಣ ಏಶಿಯಾದ ಎಲ್ಲೆಯೊಳಗೇ ಕಟ್ಟಿಹಾಕಿ ಅದು ತನಗೆ ಪ್ರತಿಸ್ಪರ್ಧಿಯಾಗಿ ಬೆಳೆಯದಂತೆ ತಡೆಯುವ ಚೀನೀ ವಿದೇಶನೀತಿಗೆ ಪಾಕಿಸ್ತಾನ ಅತ್ಯಗತ್ಯವೆನಿಸಿಬಿಟ್ಟಿತು.  ಹೀಗಾಗಿ ಯಾವುದೇ ಕಾರಣಕ್ಕೂ ಪಾಕಿಸ್ತಾನವನ್ನು ಕಳೆದುಕೊಳ್ಳಬಾರದೆನ್ನುವುದು ಚೈನಾದ ಏಶೀಯಾ ನೀತಿಯ ಪ್ರಮುಖ ಭಾಗವಾಯಿತು.
ಆದರೆ ೧೯೬೨ ಮತ್ತು ೧೯೬೫ರ ನಡುವೆ ಚೈನಾದ ಆಂತರಿಕ ರಾಜಕೀಯ ಹಾಗೂ ಅಂತರರಾಷ್ಟ್ರೀಯ ರಂಗದಲ್ಲಿ ಮಹತ್ತರ ಬದಲಾವಣೆಗಳು ಘಟಿಸಿಹೋದವು.  ಅಕ್ಟೋಬರ್ ೬೨ರಲ್ಲಿ ಕ್ಯೂಬಾದಲ್ಲಿ ಸೋವಿಯೆತ್ ಯೂನಿಯನ್ ಇರಿಸಿದ್ದ ಕ್ಷಿಪಣಿಗಳ ಬಗ್ಗೆ ಅಮೆರಿಕಾ ತಳೆದ ಬಿಗಿ ನಿಲುವಿನಿಂದಾಗಿ ಎರಡೂ ದೈತ್ಯ ರಾಷ್ಟ್ರಗಳ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ಆರಂಭವಾಗಬಹುದೆನ್ನುವ ಸ್ಥಿತಿ ಉಂಟಾಗಿತ್ತು.  ಇಡೀ ಪ್ರಪಂಚ ಆತಂಕದಿಂದ ಅತ್ತ ನೋಡುತ್ತಿದ್ದಾಗ ಭಾರತದ ಮೇಲೆ ಎರಗುವುದು ಚೀನೀಯರಿಗೆ ಸುಲಭವಾಯಿತು.  ಆದರೆ ಮುಂದಿನ ಮೂವತ್ತು ತಿಂಗಳುಗಳಲ್ಲಿ ಹಲವಾರು ಪ್ರತಿಕೂಲ ಬೆಳವಣಿಗೆಗಳಿಂದಾಗಿ ಚೈನಾ ಬಲಗುಂದಿತು.  ಅಂತರಿಕವಾಗಿ ಚೀನಿ ರಾಜಕೀಯ ರಂಗದಲ್ಲಿ ಎರಡು ಬಣಗಳಾಗಿದ್ದವು.  ಮಾವೋ, ಅವರ (ನಾಲ್ಕನೆಯ) ಪತ್ನಿ ಜಿಯಾಂಗ್ ಕ್ವಿಂಗ್ ಮತ್ತು ರಕ್ಷಣಾ ಮಂತ್ರಿ ಲಿನ್ ಬಿಯಾವೋ ಒಂದು ಕಡೆಯಿದ್ದರೆ ಅವರ ವಿರೋಧಿ ಪಾಳಯದಲ್ಲಿ ಅಧ್ಯಕ್ಷ ಲಿಯು ಶಾವೋಕಿ, ಉದಾರವಾದಿ ಕಮ್ಯೂನಿಸ್ಟ್ ಚಿಂತಕ ಡೆಂಗ್ ಝಿಯಾವೋ ಬಿಂಗ್ ಮತ್ತು ಸೇನಾ ದಂಡನಾಯಕ ಲಿಯು ರೂಯ್ಕ್ವಿಂಗ್ ಇದ್ದರು.  ಅದರಲ್ಲೂ, ತಮ್ಮ ಬಲಗೈ ಹಾಗೂ ಉತ್ತರಾಧಿಕಾರಿಯೆನಿಸಿದ್ದ ಲಿನ್ ಬಿಯಾವೋ ತೀವ್ರ ಅಸ್ವಸ್ಥರಾಗಿದ್ದಂತೂ ಮಾವೋರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿರಿಸಿಬಿಟ್ಟಿತ್ತು.  ಅಂತರರಾಷ್ಟ್ರೀಯ ರಂಗಕ್ಕೆ ಬಂದರೆ ೧೯೬೪ರ ನಡೆದ ಎರಡು ಬೆಳವಣಿಗೆಗಳು ಮಾವೋರಿಗೆ ಆತಂಕವನ್ನುಂಟುಮಾಡಿದ್ದವು.  ಕಮ್ಯೂನಿಸ್ಟ್ ಬಣದಲ್ಲಿ ಎರಡು ಗುಂಪುಗಳಾಗಿ ಉತ್ತರ ಕೊರಿಯಾ ಮತ್ತು ಉತ್ತರ ವಿಯೆಟ್ನಾಂ ಹೊರತಾಗಿ ಉಳಿದೆಲ್ಲಾ ಕಮ್ಯೂನಿಸ್ಟ್ ದೇಶಗಳು ಚೈನಾವನ್ನು ತೊರೆದು ಸಾರಾಸಗಟಾಗಿ ಸೋವಿಯೆತ್ ಯೂನಿಯನ್ ಹಿಂದೆ ನಿಂತುಬಿಟ್ಟಿದ್ದವು.  ಹೀಗಾಗಿ ಚೀನೀ ವರ್ಚಸ್ಸಿಗೆ ಭಾರಿ ಹೊಡೆತ ಬಿದ್ದಿತ್ತು.  ಇದು ಸಾಲದು ಎಂಬಂತೆ ಅಕ್ಟೋಬರ್ನಲ್ಲಿ ಚೈನಾ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗಿನಿಂದ ಅದು ವಿಶ್ವಶಾಂತಿಗೆ ಕಂಟಕವಾಗಿ ಬೆಳೆಯದಂತೆ ತಡೆಯುವ ಬಗ್ಗೆ ಅಮೆರಿಕಾ ಮತ್ತು ಸೋವಿಯೆತ್ ಯೂನಿಯನ್ ಜಂಟಿಯಾಗಿ ತೆರೆಮರೆಯಲ್ಲಿ ಯೋಜನೆಗಳನ್ನು ರೂಪಿಸತೊಡಗಿದ್ದವು.  ಅಂತರಿಕ ಹಾಗೂ ಅಂತರರಾಷ್ಟ್ರೀಯ ವಾಸ್ತವಗಳು ಹೀಗೆ ಪ್ರತಿಕೂಲವಾಗಿದ್ದಾಗ ಯುದ್ಧದಲ್ಲಿ ಪಾಕಿಸ್ತಾನ ಬಯಸಿದಂತಹ ಪೂರ್ಣ ಸಹಕಾರ ನೀಡುವ, ಅಂದರೆ ಭಾರತದ ಮೇಲೆ ಯುದ್ಧ ಸಾರುವ ಸ್ಥಿತಿಯಲ್ಲಿ ಚೈನಾ ಇರಲಿಲ್ಲ.  ಹಾಗೆಂದು ಪಾಕಿಸ್ತಾನವನ್ನು ನಿರ್ಲಕ್ಷಿಸುವುದೂ ಸಾಧ್ಯವಿರಲಿಲ್ಲ.  ಅದಕ್ಕಾಗಿ ಚೈನಾ ಅನುಸರಿಸಿದ ನೀತಿ ಅತ್ತ ಹಾವೂ ಸಾಯಬಾರದು, ಇತ್ತ ಕೋಲೂ ಮುರಿಯಬಾರದು ಎನ್ನುವಂತಹದಾಗಿತ್ತು.
ಚೈನಾ ಮತ್ತು ಇಂಡೋನೇಷಿಯಾಗಳು ಮಾಡಿದ ಒಂದು ಕಿಡಿಗೇಡಿ ಕೃತ್ಯವನ್ನು ನಾನಿಲ್ಲಿ ನಿಮಗೆ ಹೇಳಲೇಬೇಕು.  ಯುದ್ಧದ ದಿನಗಳಲ್ಲಿ ಸುರಕ್ಷಾ ಕ್ರಮಗಳ ಪ್ರಕಾರ ರಾತ್ರಿಯ ವೇಳೆ ದೆಹಲಿಯಲ್ಲಿ ಬ್ಲಾಕ್ ಔಟ್ ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿತ್ತು.  ನಗರದ ದೀಪಗಳು ಆಕ್ರಮಣಕಾರಿ ಪಾಕ್ ಯುದ್ಧವಿಮಾನಗಳಿಗೆ ರಾಜಧಾನಿಯ ಗುರುತು ನೀಡಬಾರದೆನ್ನುವುದು ಇದಕ್ಕೆ ಹಿಂದಿದ್ದ ಕಾರಣ.  ನಿಯಮ ದೆಹಲಿಯಲ್ಲಿದ್ದ ವಿದೇಶಿ ರಾಯಭಾರ ಕಚೇರಿಗಳಿಗೂ ಅನ್ವಯವಾಗುತ್ತಿತ್ತು.  ಅದಕ್ಕನುಗುಣವಾಗಿ ಎಲ್ಲ ವಿದೇಶೀ ರಾಯಭಾರಿ ಕಚೇರಿಗಳು ತಮ್ಮ ಹೊರಗಿನ ದೀಪಗಳನ್ನು ಆರಿಸಿ, ಕಿಟಕಿಗಳನ್ನು ಕಪ್ಪು ಕಾಗದದಿಂದ ಮುಚ್ಚಿಬಿಟ್ಟರೆ ಇಂಡೋನೇಷಿಯಾ ಮತ್ತು ಚೈನಾದ ರಾಜತಂತ್ರಜ್ಞರು ತಂತಮ್ಮ ಕಚೇರಿಗಳನ್ನು ಫ್ಲಡ್ ಲೈಟ್ಗಳಿಂದ ಬೆಳಗಿಸಿಬಿಟ್ಟರು.  ಪಾಕ್ ವಿಮಾನಗಳಿಗೆ ಸ್ಪಷ್ಟ ಸೂಚನೆ ನೀಡುವ ದುರುದ್ದೇಶ ಇದು.  ದೀಪಗಳನ್ನು ಅರಿಸುವಂತೆ ಭಾರತ ಸರ್ಕಾರ ಮಾಡಿಕೊಂಡ ಮನವಿಗಳಿಗೆ ಎರಡೂ ರಾಯಭಾರ ಕಚೇರಿಗಳು ಸೊಪ್ಪು ಹಾಕಲಿಲ್ಲ.  ಆದರೆ ಕೃತ್ಯಕ್ಕಾಗಿ ಅವುಗಳ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದು ರಾಜತಂತ್ರಜ್ಞರ ಹಕ್ಕುಗಳು ಮತ್ತು ವಿನಾಯಿತಿಗಳ ಬಗೆಗಿನ ೧೯೬೧ರ ಜಿನೀವಾ ಒಪ್ಪಂದಗಳ ಪ್ರಕಾರ ಭಾರತಕ್ಕೆ ಸಾಧ್ಯವಿರಲಿಲ್ಲ.  ತಕ್ಷಣ ರಾಯಭಾರ ಕಚೇರಿಗಳನ್ನು ಮುಚ್ಚಿಸುವುದೂ ಸಾಧ್ಯವಿರಲಿಲ್ಲ.  ಅಂತಿಮವಾಗಿ, ಫ್ಲಡ್ ಲೈಟ್ಗಳನ್ನು ತೆಗೆಯದಿದ್ದರೆ ಎರಡೂ ರಾಯಭಾರ ಕಚೇರಿಗಳಿಗೆ ವಿದ್ಯುತ್ ಪೂರೈಕೆಯನ್ನು ತಡೆಗಟ್ಟುವುದಾಗಿ ಭಾರತ ಸರ್ಕಾರ ಎಚ್ಚರಿಸಿತು.  ಇದು ತಕ್ಷಣ ಫಲ ನೀಡಿ ಫ್ಲಡ್ ಲೈಟ್ಗಳು ಆರಿಹೋದವು.
ಭಾಗ -
ಯುದ್ಧದಲ್ಲಿ ಡ್ರಾ, ಸಂಧಾನದಲ್ಲಿ ಸೋಲು
            ೧೯೬೫ರ ಯುದ್ಧ ಸಾಗಿದ ಬಗೆ ತಮ್ಮ ಲೆಕ್ಕಗಳು ತಾಳೆ ತಪ್ಪಿದ್ದನ್ನು ಪಾಕಿಸ್ತಾನೀ ನಾಯಕರಿಗೆ ಕೆಲವೇ ದಿನಗಳಲ್ಲಿ ಮನವರಿಕೆ ಮಾಡಿಕೊಟ್ಟಿತು.  ಕಾಶ್ಮೀರದಲ್ಲಿ ಅಶಾಂತಿಯೆಬ್ಬಿಸುವ ಅವರಆಪರೇಷನ್ ಜಿಬ್ರಾಲ್ಟರ್” ಯೋಜನೆ ಆಗಸ್ಟ್ನಲ್ಲೇ ಪೂರ್ಣವಾಗಿ ಮಣ್ಣುಮುಕ್ಕಿತ್ತು.  ಅಯೂಬ್ ಖಾನ್ ಘೋಷಿಸಿದ್ದಂತೆ ಇತಿಹಾಸ ಅವರ ಕಡೆಗಿದ್ದರೂ ವರ್ತಮಾನ ಅವರ ಪರವಾಗಿರಲಿಲ್ಲ.  ಲಾಹೋರ್ ಅಧಿಪತಿಗಳು ದೆಹಲಿಯ ಅಧಿಪತಿಗಳಾಗುವುದರಲ್ಲಿ ನಿರ್ಣಾಯಕವಾಗಿ ವಿಫಲರಾಗಿದ್ದರು.  ಉಪಖಂಡದ ಮುಸ್ಲಿಂ ಮುಂದಾಳುಗಳು ಪರಂಪರಾಗತವಾಗಿ ಬೆಳೆಸಿಕೊಂಡು ಬಂದಿದ್ದಒಬ್ಬ ಮುಸ್ಲಿಂ ಒಂದೂಕಾಲು ಲಕ್ಷ ಹಿಂದೂಗಳಿಗೆ ಸಮ” ಎಂಬ ನಂಬಿಕೆ ಧೂಳೀಪಟವಾಗಿಹೋಗಿತ್ತು.  ಎಲ್ಲಕ್ಕಿಂತ ಮುಖ್ಯವಾಗಿ, ಕಾಶ್ಮೀರದ ಹತೋಟಿ ರೇಖೆಯಲ್ಲಿ ತಾವು ನಡೆಸುವ ಕಿತಾಪತಿಗಳಿಗೆ ಪ್ರತಿಯಾಗಿ ಭಾರತವೆಂದೂ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನದ ಮೇಲೆ ಧಾಳಿಯೆಸಗದು ಎಂದು ಪಾಕ್ ನಾಯಕರು ಪರಸ್ಪರ ಪದೇಪದೇ ಹೇಳಿಕೊಂಡು ಬಿಡುತ್ತಿದ್ದ ನೆಮ್ಮದಿಯ ಉಸಿರಿಗೇ ಸಂಚಕಾರ ಬಂದಿತ್ತು.  ಭಾರತೀಯ ಸೇನೆ ಲಾಹೋರ್ ಮೇಲೆಯೇ ಧಾಳಿಯೆಸಗಿತ್ತು.  ಕಾಶ್ಮೀರದ ಮೇಲಿನ ಯಾವುದೇ ಧಾಳಿಯನ್ನು ಭಾರತದ ಮೇಲಿನ ಧಾಳಿಯೆಂದೇ ನಾವು ಪರಿಗಣಿಸುತ್ತೇವೆ” ಎಂದು ನೆಹರೂ ನೀಡಿದ್ದ ಎಚ್ಚರಿಕೆಯನ್ನು ಅವರ ಉತ್ತರಾಧಿಕಾರಿ ಶಾಸ್ತ್ರಿ ನಿಜವಾಗಿಸಿಬಿಟ್ಟಿದ್ದರು.  ಪರಿಣಾಮವಾಗಿ, ತಮ್ಮ ಕನಸು ಕಾಶ್ಮೀರವನ್ನು ಬಿಟ್ಟು ತಮ್ಮ ದೇಶದ ಹೃದಯ ಲಾಹೋರನ್ನು ಕಾಪಾಡಿಕೊಳ್ಳುವ ಒತ್ತಡಕ್ಕೆ ಪಾಕಿಸ್ತಾನೀಯರು ಒಳಗಾಗಿದ್ದರು. 
ಇಷ್ಟಾಗಿಯೂ, ಐವತ್ತು ವರ್ಷಗಳ ಹಿಂದೆ ನಡೆದುಹೋದ ಯುದ್ಧದತ್ತ ಇಂದು ಹಿಂತಿರುಗಿ ನೋಡಿದರೆ ಕಣ್ಣಿಗೆ ರಾಚುವ ದಾರುಣ ಸತ್ಯವೆಂದರೆ ಎರಡೂ ದೇಶಗಳನ್ನು ಪ್ರಬಲವಾಗಿ ಕಾಡುತ್ತಿದ್ದುದು ಒಂದೊಂದು ಕೊರತೆ- ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಕೊರತೆ, ಭಾರತಕ್ಕೆ ಆತ್ಮವಿಶ್ವಾಸದ ಕೊರತೆ.  ವಿಶ್ವಸಂಸ್ಥೆಯ ಭದ್ರತಾ ಸಮಿತಿ ತನ್ನನಿರ್ಣಯ ಸಂಖ್ಯೆ ೨೧೧”ರ ಮೂಲಕ ಕದನವಿರಾಮಕ್ಕೆ ಕರೆ ನೀಡಿದಾಗ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನವದೆಹಲಿ ಮತ್ತು ಇಸ್ಲಾಮಾಬಾದ್ಗಳನ್ನು ಪ್ರೇರೇಪಿಸಿದ್ದು ಕೊರತೆಗಳೇ.  ಪಾಕಿಸ್ತಾನದ ಬಗ್ಗೆ ಹೇಳುವುದಾದರೆ, ಸೆಪ್ಟೆಂಬರ್ ೨೨ರ ಹೊತ್ತಿಗೆ ಪಾಕಿಸ್ತಾನ ತನ್ನ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಶೇಕಡಾ ೮೦ರಷ್ಟನ್ನು ಉಪಯೋಗಿಸಿಬಿಟ್ಟಿತ್ತು.  ಅಮೆರಿಕನ್ ಶಸ್ತ್ರಾಸ್ತ್ರಗಳ ಪೂರೈಕೆ ಪೂರ್ಣವಾಗಿ ನಿಲುಗಡೆಗೆ ಬಂದಿತ್ತು.  ಬಿಡಿಭಾಗಗಳ ಪೂರೈಕೆಯನ್ನೂ ಅಮೆರಿಕಾ ನಿಲ್ಲಿಸಿದ್ದರಿಂದಾಗಿ ಸೇಬರ್ ಜೆಟ್ ಫೈಟರ್ ಬಾಂಬರ್ ಹಾಗೂ ಪ್ಯಾಟನ್ ಟ್ಯಾಂಕ್ಗಳನ್ನೂ ಒಳಗೊಂಡಂತೆ ಕ್ಷತಿಗೊಂಡ ಯುದ್ಧೋಪಕರಣಗಳನ್ನು ದುರಸ್ತಿ ಮಾಡಿ ಉಪಯೋಗಿಸುವುದು ಪಾಕಿಸ್ತಾನಕ್ಕೆ ಸಾಧ್ಯವಿರಲಿಲ್ಲ.  ಇದು ಸಾಲದು ಎಂಬಂತೆ ಮಿತ್ರದೇಶಗಳಿಂದ ನಿರೀಕ್ಷಿತ ಮಟ್ಟದಲ್ಲಿ ಬಾರದ ನೆರವು ಪಾಕಿಸ್ತಾನೀಯರನ್ನು ಕಂಗೆಡಿಸಿಬಿಟ್ಟಿತ್ತು.
ಇನ್ನು ಭಾರತದತ್ತ ತಿರುಗೋಣ.  ಪ್ರಧಾನಿ ಶಾಸ್ತ್ರಿ ಸೆಪ್ಟೆಂಬರ್ ೨೨ರಂದು ಸೇನಾ ಮುಖ್ಯಸ್ಥ ಜನರಲ್ ಜೆ ಎನ್ ಚೌಧರಿ ಅವರನ್ನು ನೇರವಾಗಿ ಪ್ರಶ್ನಿಸಿದ್ದುನಮ್ಮಲ್ಲಿರುವ ಶಸ್ತ್ರಾಸ್ತ್ರಭಂಡಾರ ಸಹಾಯದಿಂದ ಯುದ್ಧವನ್ನು ಇನ್ನೆಷ್ಟು ದಿನಗಳವರೆಗೆ ಮುಂದುವರೆಸುವುದು ನಮಗೆ ಸಾಧ್ಯವಾಗುತ್ತದೆ?   ಯುದ್ಧ ಮುಂದುವರೆದರೆ ನಾವು ಗೆಲ್ಲುವ ಸಾಧ್ಯತೆ ಇದೆಯೇ?”  ಇದಕ್ಕೆ ಜನರಲ್ ಚೌಧರಿಯವರ ಉತ್ತರ ನಿರಾಶಾದಾಯಕವಾಗಿತ್ತು.  ತನ್ನ ಶಸ್ತ್ರಾಸ್ತ್ರಗಳ ಬಹುಭಾಗವನ್ನು ಸೇನೆ ಉಪಯೋಗಿಸಿಬಿಟ್ಟಿರುವುದಾಗಿಯೂ, ಕಾರಣದಿಂದ ಯುದ್ಧದಲ್ಲಿ ಜಯವನ್ನು ನಿರೀಕ್ಷಿಸಲಾಗದೆಂದೂ, ಭದ್ರತಾ ಸಮಿತಿಯ ನಿರ್ಣಯವನ್ನು ಒಪ್ಪಿಕೊಂಡು ಕದನವಿರಾಮವನ್ನು ಘೋಷಿಸುವುದು ಅನುಕೂಲಕರವೆಂದೂ ಅವರು ಅಭಿಪ್ರಾಯಪಟ್ಟರು.  ಅದನ್ನು ನಂಬಿದ ಶಾಸ್ತ್ರಿ ಅದೇ ದಿನ ಕದನವಿರಾಮವನ್ನು ಘೋಷಿಸಿದರು.
ಅನಂತರ ಹೊರಬಂದ ವಿವರಗಳೆಂದರೆ ಭಾರತ ತನ್ನ ಶಸ್ತ್ರಾಸ್ತ್ರಗಳಲ್ಲಿ ಬಳಸಿದ್ದದ್ದು ಕೇವಲ ಶೇಕಡಾ ೧೪ರಷ್ಟನ್ನು ಮಾತ್ರ.  ಅಷ್ಟೇ ಅಲ್ಲ, ಪಾಕಿಸ್ತಾನದ ಟ್ಯಾಂಕ್ಗಳ ಎರಡುಪಟ್ಟು ಟ್ಯಾಂಕ್ಗಳು ಭಾರತದಲ್ಲಿದ್ದವು.   ಜನರಲ್ ಚೌಧರಿ ಪ್ರಧಾನಿಯವರಿಗೆ ತಪ್ಪು ಮಾಹಿತಿ ನೀಡಿದರು ಎನ್ನುವುದು ಸ್ಪಷ್ಟ.  ಬಹುಶಃ ನಮ್ಮ ಸೇನೆಯ ಕಾದುವ ಸಾಮರ್ಥ್ಯದ ಬಗ್ಗೆ ಅವರಿಗೆ ಸಂದೇಹವಿದ್ದಿರಬಹುದು.  ಪಶ್ಚಿಮ ಕಮ್ಯಾಂಡ್ ಅರ್ಧದಷ್ಟು ಡಿವಿಜ಼ನ್ಗಳು ಹೊಸದಾಗಿದ್ದವು.  ೧೯೬೨ರಲ್ಲಿ ಚೀನಾದಿಂದ ಅನುಭವಿಸಿದ ಮುಖಭಂಗದ ನಂತರ ಸೃಷ್ಟಿಯಾದ ಇವುಗಳಲ್ಲಿನ ಸೈನಿಕರಿಗಿನ್ನೂ ಯುದ್ಧತರಬೇತಿ ಪೂರ್ಣವಾಗಿರಲಿಲ್ಲ.  ಡಿವಿಜ಼ನ್ಗಳ ಅನನುಭವ ಯುದ್ಧದ ಮೊರಲ ಹತ್ತುದಿನಗಳಲ್ಲೇ ಬಯಲಾಗಿತ್ತು.  ಲಾಹೋರ್ ಮೇಲಿನ ಒತ್ತಡವನ್ನು ಒಂದೇ ಗತಿಯಲ್ಲಿ ಕಾಯ್ದುಕೊಳ್ಳುವುದು ಭಾರತೀಯ ಸೇನೆಗೆ ಸಾಧ್ಯವಾಗಿರಲಿಲ್ಲ.  ಒಂದು ಹಂತದಲ್ಲಂತೂ ಪಾಕ್ ಪ್ರತಿಧಾಳಿ ಅದೆಷ್ಟು ಉಗ್ರವಾಯಿತೆಂದರೆ ಖೇಮ್ ಕರನ್ ಪಟ್ಟಣವನ್ನು ನಾವು ಬಿಟ್ಟುಕೊಡಬೇಕಾಯಿತಷ್ಟೇ ಅಲ್ಲ, ಅಮೃತ್ಸರ್ ನಗರವನ್ನೂ ತೊರೆದು ಇತ್ತ ಓಡಿಬರಲು ಸೇನೆಯ ಕೆಲವು ಉಚ್ಛಾಧಿಕಾರಿಗಳು ಆಲೋಚಿಸಿದ್ದರು!  ಘಾತಕ ವಿಷಯ ದಿನಗಳಲ್ಲಿ ಉಚ್ಛ ನಾಯಕತ್ವಕ್ಕೆ ಸಂಬಂಧಿಸಿದಂತೆ ಸೇನೆ ಅದೆಷ್ಟು ದುರದೃಷ್ಟಶಾಲಿಯಾಗಿತ್ತೆಂದು ತೋರಿಸುತ್ತದೆ.  ಸಮಯದಲ್ಲಿ ರಾಷ್ಟ್ರದ ಮಾನ ಉಳಿದದ್ದು ಸೇನೆಯ ಕೆಳಹಂತದ ಅಧಿಕಾರಿಗಳು ಮತ್ತು ಸಾಮಾನ್ಯ ಸೈನಿಕರಿಂದ.  ಅವರ ಸಾಧನೆಯೆಂದರೆ ಅಮೃತ್ಸರ್ ನಗರವನ್ನು ಭಾರತದ ಇತರ ಭಾಗಗಳಿಂದ ಕತ್ತರಿಸಿಬಿಡುವ ಉದ್ದೇಶದಿಂದ ಬಿಯಾಸ್ ಸೇತುವೆಯನ್ನು ಆಕ್ರಮಿಸಿಕೊಳ್ಳಲು ಮುನ್ನುಗ್ಗಿಬಂದ ಪಾಕ್ ಸೇನೆಯ ಮೊದಲ ಆರ್ಮರ್ಡ್ ಡಿವಿಜ಼ನ್ ಅನ್ನು ಅಸಲ್ ಉತ್ತರ್ನಲ್ಲಿ ಕಟ್ಟಿಹಾಕಿ ಸೋಲಿಸಿದ್ದು.  ವಿಜಯದ ಹೊರತಾಗಿ ಅಂತಹ ಹೇಳಿಕೊಳ್ಳುವ ವಿಜಯಗಳನ್ನು ಪಂಜಾಬ್ ಮತ್ತು ರಾಜಾಸ್ತಾನ್ ವಲಯಗಳಲ್ಲಿ ಸೇನೆ ಸಾಧಿಸಲಿಲ್ಲ.  ಕಾಶ್ಮೀರ್ ವಲಯಕ್ಕೆ ಬಂದರೆ, ಯುದ್ಧ ಆರಂಭವಾಗುವುದಕ್ಕೂ ಮೊದಲೇ ಹಾಜಿ ಪೀರ್ ಕಣಿವೆಮಾರ್ಗ ಮತ್ತು ಕಾರ್ಗಿಲ್ ವಲಯದಲ್ಲಿ ಸೇನೆ ಅದ್ಭುತ ವಿಜಯಗಳನ್ನು ಸಾಧಿಸಿತ್ತೇನೋ ನಿಜ, ಆದರೆ ಜಮ್ಮು-ಅಖ್ನೂರ್ ರಸ್ತೆಯನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಚಿಕನ್ಸ್ ನೆಕ್-ಛಾಂಬ್ ಝಾರಿಯನ್ ಕ್ಷೇತ್ರದಲ್ಲಿ ಪಾಕ್ ಸೇನೆ ಎಸಗಿದ ಆಪರೇಷನ್ ಗ್ರ್ಯಾಂಡ್ ಸ್ಲ್ಯಾಮ್ ಧಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಭಾರತೀಯ ಸೇನೆ ವಿಫಲವಾಯಿತು.  ಅಂಥದೊಂದು ಧಾಳಿಯನ್ನು ಪಾಕಿಸ್ತಾನ ಆಯೋಜಿಸುತ್ತಿದೆಯೆಂಬ ಸೂಚನೆಯೇ ಭಾರತಕ್ಕಿರಲಿಲ್ಲ.  ಇದು ನಮ್ಮ ಸೇನಾ ಬೇಹುಗಾರಿಕೆಯ ವೈಫಲ್ಯ ಸಹಾ.
ಭಾರತೀಯ ರಕ್ಷಣಾಪಡೆಗಳು ಪ್ರದರ್ಶಿಸಿದ ಮತ್ತೊಂದು ವೈಫಲ್ಯವೆಂದರೆ ಭೂಸೇನೆ ಮತ್ತು ವಾಯುಸೇನೆಗಳ ನಡುವೆ ಸಮನ್ವಯವೇ ಇರಲಿಲ್ಲ.  ಒಂದರ ಯೋಜನೆಗಳು ಇನ್ನೊಂದಕ್ಕೆ ಗೊತ್ತಾಗುತ್ತಲೇ ಇರಲಿಲ್ಲ.  ಇವೆರಡೂ ಛಾಂಬ್ ಹೊರತಾಗಿ ಬೇರೆಲ್ಲೂ ಜಂಟಿ ಕಾರ್ಯಾಚರಣೆ ನಡೆಸಲಿಲ್ಲ.  ಇದು ಪಾಕ್ ಸೇನೆ ಮತ್ತು ಪಾಕ್ ವಾಯುದಳ ಪ್ರದರ್ಶಿಸಿದ ಸಮನ್ವಯತೆ ಮತ್ತು ಹೊಂದಾಣಿಕೆಗೆ ಸಂಪೂರ್ಣ ವಿರುದ್ಧ.  ನಿಜ ಹೇಳಬೇಕೆಂದರೆ ಲಾಹೋರ್ ಕ್ಷೇತ್ರದಲ್ಲಿ ಭಾರತೀಯ ಸೇನೆಯ ಧಾಪುಗಾಲನ್ನು ತಡೆದದ್ದೇ ಪಾಕ್ ವಾಯುಸೇನೆ.  ಅನಂತರ ಅದು ಪಠಾಣ್ಕೋಟ್ ವಾಯುನೆಲೆಯ ಮೇಲೂ ಯಶಸ್ವಿಯಾಗಿ ಧಾಳಿಯೆಸಗಿ ಹದಿಮೂರು ಭಾರತೀಯ ವಿಮಾನಗಳನ್ನು ನಾಶಮಾಡಿತು.  ಅಷ್ಟೇ ಅಲ್ಲ, ಪೂರ್ವ ಪಾಕಿಸ್ತಾನದಲ್ಲಿದ್ದ ಪಾಕ್ ವಾಯುಸೇನೆ ಪಶ್ಚಿಮ ಬಂಗಾಳದ ಕಲಾಯ್ಕುಂಡ್ ವಾಯುನೆಲೆಯ ಮೇಲೂ ಧಾಳಿಯೆಸಗಿ ಏಳು ವಿಮಾನಗಳನ್ನು ನಾಶಮಾಡಿತು.  ಇದೆಲ್ಲದರ ನಡುವೆ ಪಾಕ್ ನೌಕಾದಳ ಸಹಾ ದ್ವಾರಕಾ ಮೇಲೆ ಯಶಸ್ವಿಯಗಿ ಧಾಳಿಯೆಸಗಿ ಕೂದಲೂ ಕೊಂಕದಂತೆ ವಾಪಸ್ಸಾಗಿತ್ತು.  ಒಟ್ಟಾರೆಯಾಗಿ ಒಂದು ದೀರ್ಘ ಯುದ್ಧದಲ್ಲಿ ಪರಿಣಾಮಕಾರಿಯಾಗಿ ಕಾದುವ ಸಾಮರ್ಥ್ಯ, ಚಾಕಚಕ್ಯತೆ ತಮ್ಮಲ್ಲಿಲ್ಲವೆಂದು ಭಾರತೀಯ ರಕ್ಷಣಾಪಡೆಗಳು ತೋರಿಸಿಬಿಟ್ಟಿದ್ದವು.
ಇಂತಹ ಸನ್ನಿವೇಶದಲ್ಲಿ ಚೈನಾ ಏನಾದರೂ ಯುದ್ಧಕ್ಕಿಳಿದಿದ್ದರೆ ಅದು ಭಾರತಕ್ಕೆ ಮಾರಣಾಂತಿಕವಾಗಿಬಿಡುತ್ತಿತ್ತು.  ಪಾಕಿಸ್ತಾನದ ಪರವಾಗಿ ಯುದ್ಧಕ್ಕಿಳಿಯಲು ಚೈನಾ ತಯಾರಾಗಿರಲ್ಲಿಲ್ಲ ಎನ್ನುವುದು ಅನಂತರ ಬಯಲಾದ ಸತ್ಯ.  ಆದರೆ ಸೆಪ್ಟೆಂಬರ್ ೨೧-೨೨ರಂದು ಮೇಲ್ನೋಟಕ್ಕೆ ಅಂತಹ ಸಾಧ್ಯತೆ ದಟ್ಟವಾಗಿಯೇ ಇತ್ತು.  ಇದೆಲ್ಲವನ್ನೂ ಜನರಲ್ ಚೌಧರಿ ಪರಿಗಣಿಸಿದ್ದಿರಬಹುದಾದ ಸಾಧ್ಯತೆಗಳಿವೆ.  ಅದರಲ್ಲೂ ಚೀನೀ ಸೇನೆ ಚುಂಬಿ ಕಣಿವೆಯಿಂದ ದಕ್ಷಿಣಕ್ಕೆ ಬಂದಿದ್ದರೆ, ಅದಕ್ಕೆ ಹೊಂದುವಂತೆ ಪಾಕ್ ಸೇನೆ ಪೂರ್ವ ಪಾಕಿಸ್ತಾನದ ಗಡಿಯನ್ನು ದಾಟಿ ಉತ್ತರಕ್ಕೆ ಸಾಗಿ ಕೂಚ್ಬಿಹಾರ್ನಲ್ಲಿ ಚೀನೀ ಸೇನೆಯನ್ನು ಕೂಡಿಕೊಂಡಿದ್ದರೆ ಅಲ್ಲಿಗೆ ಇಡೀ ಈಶಾನ್ಯ ಭಾರತ ನಮ್ಮ ಕೈತಪ್ಪಿಹೋಗುತ್ತಿದ್ದುದು ನಿಶ್ಚಿತ.  ಪಶ್ಚಿಮ ವಲಯದಲ್ಲಿ ಭಾರಿ ಕಲಿತನವನ್ನೇನೂ ಪ್ರದರ್ಶಿಸಿರದಿದ್ದ ಸೇನೆಯಿಂದ ಪೂರ್ವ ಮತ್ತು ಉತ್ತರ ವಲಯಗಳಲ್ಲಿ ಯಾವ ಅದ್ಭುತವನ್ನೂ ನಿರೀಕ್ಷಿಸಲು ಸಾಧ್ಯವಿರಲಿಲ್ಲ.  ಅಂದರೆ  ೧೯೬೨ರ ಸೋಲಿಗಿಂತಲೂ ಭೀಕರವಾದ ಸೋಲು ನಮ್ಮೆದುರು ಎದ್ದುನಿಲ್ಲುತ್ತಿತ್ತು.  ದುಃಸ್ವಪ್ನ, ಚೈನಾ ನೀಡಿದ್ದ ಎಚ್ಚರಿಕೆಯ ಎರಡನೇ ಗಡುವು ಮುಕ್ತಾಯವಾಗುತ್ತಿದ್ದ ಸೆಪ್ಟೆಂಬರ್ ೨೨ರಂದು ಜನರಲ್ ಚೌಧರಿಯವರನ್ನು ಖಂಡಿತವಾಗಿಯೂ ಕಾಡಿದ್ದಿರಬಹುದು.   ಕದನಸ್ತಂಭನಕ್ಕೆ ಪ್ರಧಾನಿಯವರನ್ನು ದೂಡಲು ಅವರಿಗಿದ್ದಿರಬಹುದಾದ ಒತ್ತಡಗಳು ಇವು.  ಅವರ ಮಾತುಗಳಿಗೆ ಸಮ್ಮತಿಸಿದ ಪ್ರಧಾನಿ ಶಾಸ್ತ್ರಿ ಅಂದೇ ಭದ್ರತಾ ಸಮಿತಿಯ ಕದನವಿರಾಮ ನಿರ್ಣಯವನ್ನು ಒಪ್ಪಿಕೊಂಡರು.  ಬದುಕಿದೆಯಾ ಬಡಜೀವವೇ ಎಂದುಕೊಂಡ ಅಯೂಬ್ ಖಾನ್ ಸಹಾ ಮರುದಿನವೇ ಕದನವಿರಾಮವನ್ನು ಘೋಷಿಸಿದರು.  ಯುದ್ಧ 'ಡ್ರಾ' ಆಯಿತು.
ಯುದ್ಧರಂಗದಲ್ಲಿ ನಿರ್ಣಾಯಕ ಗೆಲುವನ್ನು ಸಾಧಿಸುವಲ್ಲಿ ಭಾರತೀಯ ರಕ್ಷಣಾಪಡೆಗಳು ವಿಫಲವಾದಂತೇ ದಕ್ಕಿದ್ದ ಅಲ್ಪಸ್ವಲ್ಪ ಗೆಲುವನ್ನು ಖಾಯಂಗೊಳಿಸುವಲ್ಲಿ ಭಾರತದ ರಾಜಕೀಯ ನಾಯಕತ್ವ ನಾಲ್ಕು ತಿಂಗಳ ನಂತರ ತಾಷ್ಕೆಂಟ್ನಲ್ಲಿ ವಿಫಲವಾಯಿತು.  ನಿಜ ಹೇಳಬೇಕೆಂದರೆ ಸಂಧಾನಕ್ಕಾಗಿ ಸೋವಿಯೆತ್ ಮಧ್ಯಸ್ತಿಕೆಯನ್ನು ಒಪ್ಪಿಕೊಂಡದ್ದೇ ಮೊದಲ ತಪ್ಪು.  ದಿನಗಳಲ್ಲಿ ಮಾಸ್ಕೋ ಭಾರತದ ಪರವಾಗಿರಲಿಲ್ಲ.  ಭಾರತದ ಜತೆ ಸ್ನೇಹವನ್ನು ವೃದ್ಧಿಸಿಕೊಳ್ಳುತ್ತಲೇ ಪಾಕಿಸ್ತಾನವನ್ನೂ ಖುಷಿಯಾಗಿರಿಸಲು ಸೋವಿಯೆತ್ ನಾಯಕರು ಪರಸಾಹಸ ಪಡುತ್ತಿದ್ದರು.  ಪಾಕಿಸ್ತಾನ ಪೂರ್ಣವಾಗಿ ಅಮೆರಿಕಾ ಮತ್ತು ಚೈನಾಗಳ ದಾಸನಾಗುವುದನ್ನು ತಪ್ಪಿಸುವ ಉದ್ಡೇಶದಿಂದ ರಶಿಯನ್ನರು ದೇಶಕ್ಕೆ ಯುದ್ಧೋಪಕರಣಗಳನ್ನಲ್ಲದೇ, ಔದ್ಯೋಗಿಕ ಹಾಗೂ ಅಣುಶಕ್ತಿ ತಂತ್ರಜ್ಞಾನವನ್ನೂ ನೀಡಲು ಉತ್ಸುಕವಾಗಿದ್ದರು.  ಪಾಕಿಸ್ತಾನದ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಲು ತಾಷ್ಕೆಂಟ್ ಸಮಾವೇಶ ಸೋವಿಯೆತ್ ನಾಯಕರಿಗೆ ಅಪೂರ್ವ ಅವಕಾಶವನ್ನೊದಗಿಸಿತು.  ಶಾಂತಿ ಸಮಾವೇಶ ಯಶಸ್ವಿಯಾಗಬೇಕಾದರೆ ಎರಡೂ ದೇಶಗಳ ಸೇನೆಗಳು ವೈರಿ ನೆಲದಲ್ಲಿ ಆಕ್ರಮಿಸಿಕೊಂಡಿದ್ದ ಪ್ರದೇಶಗಳನ್ನು ಬಿಟ್ಟುಕೊಡಬೇಕಾಗಿತ್ತು.  ಸಿಂಧ್ ಮತ್ತು ಪಂಜಾಬ್ನಲ್ಲಿ ಹಾಗೆ ಮಾಡಲು ಶಾಸ್ತ್ರಿ ಸಿದ್ಧರಾಗಿದ್ದರು.  ಆದರೆ ಕಾಶ್ಮೀರದಲ್ಲಿ ನಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಅವರು ತಯಾರಿರಲಿಲ್ಲ.  ಅವರ ಹಾಗೂ ಸರ್ಕಾರದ ಇತರೆಲ್ಲರ ಅಭಿಪ್ರಾಯದಲ್ಲಿ ಕಾಶ್ಮೀರ ಭಾರತದ್ದೇ ಆಗಿರುವುದರಿಂದ ಅಲ್ಲಿ ಯಾವುದೇ ನೆಲವನ್ನು ಪಾಕಿಸ್ತಾನಕ್ಕೆ ನೀಡುವುದು ಸಾಧುವಲ್ಲ, ವೈರಿಯ ವಶದಲ್ಲಿರುವ ನಮ್ಮ ನೆಲದಲ್ಲಿ ಸ್ವಲ್ಪವನ್ನು ನಾವು ಹಿಂದಕ್ಕೆ ಪಡೆದುಕೊಂಡಿದ್ದೇವೆ ಅಷ್ಟೇ.  ಆದರೆ ಪಾಕಿಸ್ತಾನವನ್ನು ಓಲೈಸಲು ತುದಿಗಾಲಲ್ಲಿ ನಿಂತಿದ್ದ ಸೋವಿಯೆತ್ ಪ್ರಧಾನಿ ಅಲೆಕ್ಸೀ ಕೊಸಿಗಿನ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಮ್ಮ ಸೇನೆ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸುವಂತೆ ಶಾಸ್ತ್ರಿಯವರ ಮೇಲೆ ಅತಿಯಾದ ಒತ್ತಡ ಹಾಕಿದರು.  ನಿರಾಕರಿಸಲು ಶಾಸ್ತ್ರಿಯವರಿಗೆ ಸಾಧ್ಯವಾಗಲೇ ಇಲ್ಲ.  ಭಾರತೀಯ ಯೋಧರು ಅಪ್ರತಿಮ ಧೀರೋತ್ತಾದತೆ ಮೆರೆದು ವಶಪಡಿಸಿಸಿಕೊಂಡಿದ್ದ, ಸಾಮರಿಕವಾಗಿ ಅತಿ ಮುಖ್ಯವೆನಿಸಿದ್ದ ಹಾಜಿ ಪೀರ್ ಕಣಿವೆಮಾರ್ಗವನ್ನು ಹಿಂತಿರುಗಿಸಲು ಶಾಸ್ತ್ರಿ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡರು.  ಹಾಗೆ ಮಾಡುವುದರ ಮೂಲಕ ಭಾರತ ಸರ್ಕಾರ ಅಪ್ರತ್ಯಕ್ಷವಾಗಿ ಪಾಕಿಸ್ತಾನಕ್ಕೆ, ಹೊರಜಗತ್ತಿಗೆ, ಅಷ್ಟೇಕೆ ಭಾರತೀಯರಿಗೇ ಹೇಳಿದ್ದು ಕಾಶ್ಮೀರ ನಮ್ಮದಲ್ಲ, ಅದೊಂದು ವಿವಾದಿತ ಪ್ರದೇಶ ಎಂದು.
ಇಂತಹದೇ ತಪ್ಪನ್ನು ಆರುವರ್ಷಗಳ ನಂತರ ಇಂದಿರಾ ಗಾಂಧಿ ಮಾಡಲಿಲ್ಲ.  ೧೯೭೧ರ ಯುದ್ಧದ ನಂತರ ಅವರು ಸಂಧಾನಕ್ಕಾಗಿ ತೃತೀಯ ಪಕ್ಷದ ಮೊರೆಹೋಗಲಿಲ್ಲ.  ವೈರಿಯನ್ನು ಆಹ್ವಾನಿಸಿದ್ದು ನಮ್ಮದೇ ನೆಲಕ್ಕೆ.  ಶಿಮ್ಲಾದಲ್ಲಿ ವಿಜಯಿಯ ಸ್ಥಾನದಲ್ಲಿ ನಿಂತ ಇಂದಿರಾ ಸಿಂಧ್ ಮತ್ತು ಪಂಜಾಬ್ನಲ್ಲಿ ನಮ್ಮ ಸೇನೆ ವಶಪಡಿಸಿಕೊಂಡಿದ್ದ ಪ್ರದೇಶಗಳೆಲ್ಲವನ್ನೂ ಪಾಕಿಸ್ತಾನಕ್ಕೆ ಹಿಂತಿರುಗಿಸಿದರು.  ಆದರೆ ಕಾಶ್ಮೀರದಲ್ಲಿ ಮತ್ತೆ ನಮ್ಮ ತೆಕ್ಕೆಗೆ ಬಂದಿದ್ದ ಹಾಜಿ ಪೀರ್ ಕಣಿವೆಮಾರ್ಗ, ಕಾರ್ಗಿಲ್ ಉತ್ತರದ ಟೈಗರ್ ಹಿಲ್ಸ್, ಸ್ಯಾಡಲ್ ಮುಂತಾದ ಪ್ರದೇಶಗಳನ್ನು ಭಾರತದ ಅವಿಭಾಜ್ಯ ಅಂಗವೆಂದು ಘೋಷಿಸಿ ನಮ್ಮಲ್ಲೇ ಉಳಿಸಿಕೊಂಡರು.  ಅವು ಈಗಲೂ ನಮ್ಮವೇ.

No comments:

Post a Comment