ಆಣೆ ಮಾಡಿ ಹೇಳುತ್ತೇನೆ, ಮಾಮೂಲಿನಂತೆ ಆರಂಭವಾದ ಆ ದಿನ ಹೊತ್ತೇರುತ್ತಿದ್ದಂತೆ ಏನೇನೋ ಆಗಿಹೋದದ್ದಕ್ಕೆ
ನಾನು ಯಾವ ಬಗೆಯಲ್ಲೂ ಹೊಣೆಯಲ್ಲ. ನಿಜ ಹೇಳಬೇಕೆಂದರೆ
ಅದು ಹೇಗಾಯಿತೆಂದೂ, ಯಾಕೆ ಹಾಗಾಯಿತೆಂದೂ
ನನ್ನರಿವಿಗಿನ್ನೂ ನಿಲುಕಿಲ್ಲ. ಲಲಿತ ಹೇಳುವುದು ನಾನೋ
ಅವಳೋ ಹಿಂದಿನ ಜನ್ಮದಲ್ಲಿ ಎಸಗಿದ ಯಾವುದೋ ತಪ್ಪಿಗೆ ಈಗ ಈ ಬಗೆಯಾಗಿ ಶಿಕ್ಷೆ ಅನುಭವಿಸಬೇಕಾಗಿದೆ ಅಂತ. ಇದರಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ ಅಂತೇನೂ ಇಲ್ಲ. ಯಾವುದಾದರೂ ದಾರಿ ಹುಡುಕಬಹುದು. ಮನಸ್ಸಿದ್ದಲ್ಲಿ ಮಾರ್ಗ ಎನ್ನುವುದು ಈ ವಯಸ್ಸಿನಲ್ಲೂ ನಿಜ. ಆದರೆ ಈ ವಿಷಯದಲ್ಲಿ ಅದು ವ್ಯಾವಹಾರಿಕವಲ್ಲ ಎನ್ನುವುದು
ಅವಳ ಖಚಿತ ಅಭಿಪ್ರಾಯ. ಈಗ ತಪ್ಪಿಸಿಕೊಂಡರೆ ಮುಂದಿನ
ಜನ್ಮದಲ್ಲಿ ಇದಕ್ಕೆ ಬಡ್ದಿಯನ್ನೂ ಸೇರಿಸಿ ಅನುಭವಿಸಬೇಕಾಗುತ್ತದೆ ಎಂದವಳು ಹೇಳುತ್ತಾಳೆ. ಇದು ನನ್ನನ್ನು ಗೊಂದಲಗಟ್ಟಿಸಿಬಿಟ್ಟಿದೆ. ನವೋದಯ ಶಾಲೆಯಲ್ಲಿ ಓದುತ್ತಿರುವ ಮಗನನ್ನು ಬರಹೇಳಿ ಇದೇನಾಗುತ್ತಿದೆ
ಮಗನೇ ಅಂತ ಕೇಳಿದರೆ ಅವನು ಹೇಳಿದ್ದು ನನ್ನ ಜಂಘಾಬಲವನ್ನೇ ಉಡುಗಿಸಿಬಿಟ್ಟಿತು.
ಭೂಮಿಯ ನಡುಮಧ್ಯದಲ್ಲೊಂದು ಕಣ್ಣಿಗೆ ಕಾಣದ ಕರಿಗೆರೆ, ಲಲಿತೆಯ ನೆತ್ತಿಯ ಕರಿಗೂದಲಿನಂಥದ್ದು ಸುತ್ತಿಕೊಂಡಿದೆಯಂತೆ. ಅವನು ಜಿಯೋಗ್ರಫಿ ಸರ್ ಎಂದು ಕರೆಯುವ ಅವನ ಭೂಗೋಳದ ಮೇಷ್ಟ್ರು
ಅದನ್ನು ಕರಿಹಲಗೆಯ ಮೇಲೆ ಬಿಳೀ ಸೀಮೆಸುಣ್ಣದಲ್ಲಿ ಬರೆದು ತೋರಿಸಿದ್ದಾರಂತೆ. ಗೆರೆಯ ಕೆಳಗೆ ದಕ್ಷಿಣಾರ್ಧಗೋಳವಂತೆ, ಮೇಲೆ ಉತ್ತರಾರ್ಧಗೋಳವಂತೆ. ದಕ್ಷಿಣಾರ್ಧಗೋಳದಲ್ಲಿ ಬೇಸಗೆಯಾದಾಗ ಉತ್ತರಾರ್ಧಗೋಳದಲ್ಲಿ
ಛಳಿಗಾಲವಂತೆ. ಇದೇನು ಚೋದ್ಯ! ಈ ಗೋಳಗಳ ಗೋಳು ಸಾಕೆನಿಸಿ ಅವನು ಮಾತು ನಿಲ್ಲಿಸುತ್ತಾನೇನೋ
ಎಂದು ಕಾದರೆ ಅವನು ನನ್ನ ಮುಂಗೈ ಹಿಡಿದು ಅವ್ವ ಹೇಳುತ್ತಿದ್ದಂತಹ ಜೋಗುಳದ ರಾಗದಲ್ಲಿ ‘ಡಿಸೆಂಬರ್ ಇಪ್ಪತ್ತೊಂದರಂದು ದಕ್ಷಿಣಾರ್ಧಗೋಳದಲ್ಲಿ ದಿನ ಅತ್ಯಂತ ಧೀರ್ಘಾವಾಗಿದ್ದರೆ ಉತ್ತರಾರ್ಧಗೋಳದಲ್ಲಿ
ಅದು ಅತ್ಯಂತ ಚಿಕ್ಕದಾಗಿರುತ್ತದೆ. ಇದು ನಿಯಮ. ಆದಿಪುರುಷನ ಕಾಲದಿಂದಲೂ ಹಾಗೇ ನಡೆದುಕೊಂಡು ಬಂದಿದೆ. ಆದರೆ ಈ ಸಲ ಆ ದಿನ ತಾನು ಚಿಕ್ಕದಾಗಿರುವುದರ ಜತೆಗೆ ಕೋಟಿಕೋಟಿ
ಜನರ ಬದುಕನ್ನೂ ಚಿಕ್ಕದಾಗಿಸಿಬಿಡುತ್ತದೆ. ನೆನಪಿಟ್ಟುಕೋ, ನಾವಿರುವುದು ಉತ್ತರಾರ್ಧಗೋಳದಲ್ಲಿ’ ಎಂದು ಹೇಳುವುದೇ! ದೇವರೇ!
ನನ್ನ ಗಾಬರಿಯನ್ನು ನೋಡಿದ ಮಗ ನಿನಗೆ ನಂಬಿಕೆಯಾಗದಿದ್ದರೆ ಇಟೀಸ್ ಆಲ್ ಮಾಯಾ ಎಫ್‌ಎಂ ರೇಡಿಯೋದಲ್ಲಿ
ನೀನೇ ಕೇಳು ಎನ್ನುತ್ತಾ ತನ್ನ ಮೊಬೈಲ್‌ನಲ್ಲಿ ಆ ಸ್ಟೇಷನ್ ಹಾಕಿದ. ಅದ್ಯಾವನೋ ಮೆಲ್ಲನೆಯ ಗುಡುಗಿನಂತಹ ದನಿಯವನು ಅದೇನೋ ಹೇಳತೊಡಗಿದ. ನನಗೇನೂ ಅರ್ಥವಾಗಲಿಲ್ಲ. ಅದರಲ್ಲೂ ನನ್ನದೇನೂ ತಪ್ಪಿಲ್ಲ. ನಾನು ಓದಿದ್ದು ಸರಕಾರಿ ಶಾಲೆಯಲ್ಲಿ. ಅಲ್ಲಿ ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವ ಪದ್ದತಿ. ಆದರೆ ನಾಲ್ಕನೆ ಕ್ಲಾಸಿಗೇ ಶಾಲೆ ತೊರೆದು ಕುರಿ ಕಾಯಲು ನಿಂತ
ನನ್ನಿಂದ ಇಂಗ್ಲಿಷ್ ದೂರವೇ ಉಳಿಯಿತು, ಕುರಿಗಳು ಹತ್ತಿರಾದವು.
ನನ್ನ ಗೊಂದಲ ಮಗನಿಗೆ ಹೊಳೆದು 'ಸಾರೀ ಸಾರೀ, ಮರೆತಿದ್ದೆ' ಎನ್ನುತ್ತಾ ತನ್ನ ಇಯರ್‌ಫೋನ್ ತೆಗೆದು ನನ್ನ ಕಿವಿಗೆ ಹಾಕಿದ. ಅದನ್ನು ಹಾಕಿಕೊಂಡಾಗೆಲ್ಲಾ ನನಗೆ ಇಂಗ್ಲೀಷೇನು, ಹೀಬ್ರೂ, ಲ್ಯಾಟಿನ್, ಮಂಗೋಲಿಯನ್, ಕೊಂಕಣಿ, ಸ್ವಹೀಲಿ, ಮಾವೋರಿ, ಹೋಪಿ ಇಂಡಿಯನ್- ಹೀಗೆ ಯಾವ ಭಾಷೆಯಾದರೂ ಸರಿ
ಅವ್ವನ ಮಡಿಲಲ್ಲಾಡಿ ಕಲಿತಷ್ಟೇ ಸೊಗಸಾಗಿ ಅರ್ಥವಾಗುತ್ತದೆ. ಗುಡುಗಿಗೆ ಕಿವಿಗೊಟ್ಟೆ:
“In the beginning there was the
Word. The Word was Om. Over the eons Om became Aham…”
“ಇದೇನು ಮಗನೇ ಇವನು ಹೇಳುತ್ತಿರುವುದು?” ಅಂದೆ ಗಾಬರಿಯಲ್ಲಿ. “ನಾನು ವಿವರಿಸುತ್ತೇನೆ” ಎನ್ನುತ್ತಾ ಅವನು ನನ್ನ ಕಿವಿಗಳಿಂದ ಇಯರ್‌ಫೋನ್ ತೆಗೆದ. ಮೊಬೈಲ್ ಪಕ್ಕಕ್ಕಿಟ್ಟು ಹೇಳತೊಡಗಿದ:
“ಓಂ ಅನ್ನು ತಾನು ಅಹಂ ಆಗಿ ಬದಲಾಯಿಸಿದ್ದನ್ನು
ಮನುಷ್ಯ ನಾಗರೀಕತೆ ಎಂದು ಕರೆದ. ಆದರೆ ಈ ನಾಗರೀಕತೆ
ಅವನನ್ನು ಸೃಷ್ಟಿಕರ್ತನಿಂದ ದೂರ ಒಯ್ದಿತು, ಈ ಭೂಮಿಗೆ ಕಟ್ಟಿಹಾಕಿಬಿಟ್ಟಿತು. ಜಗತ್ತು ಹೀಗಾದಾಗ, ತಾನು ಹಾಕಿದ ಗೆರೆಯನ್ನು ಮನುಷ್ಯ ಮೀರಿದಾಗ, ಹತ್ತು ಕಟ್ಟಳೆಗಳನ್ನು ಗಾಳಿಗೆ ತೂರಿದಾಗ
ಅವನನ್ನು ನಾಶ ಮಾಡುವ ಯೋಚನೆ ಸೃಷ್ಟಿಕರ್ತನಿಗೆ ಬರುವುದು ಸಹಜ. ನಲವತ್ತು ದಿನಗಳ ಮಹಾಪ್ರಳಯದ ಬಗ್ಗೆ ಬೈಬಲ್‌ನ ಹಳೇ ಒಡಂಬಡಿಕೆಯಲ್ಲಿರುವುದನ್ನು
ನಿನಗೆ ಎಷ್ಟು ಸಲ ಓದಿ ಹೇಳಿದ್ದೇನೆ ನೆನಪಿದೆ ಅಲ್ಲವಾ?...”
ಕಣ್ಣುಮುಚ್ಚಿ ನೆನಪಿಸಿಕೊಳ್ಳಲು ಹೋದರೆ ನೆನಪು ನಿನ್ನೆಯಿಂದಾಚೆಗೆ ಹೋಗಲೇ ಇಲ್ಲ. ಭೂತಕಾಲವೆಂದರೆ ನಿನ್ನೆ ಮಾತ್ರ ಎನ್ನುವಂತೆ ನಿನ್ನೆಯಲ್ಲೇ
ಗಿರಕಿ ಹೊಡೆಯತೊಡಗಿತು. ನಾನು ಕಣ್ಣುಗಳನ್ನು ಮತ್ತೂ
ಬಿಗಿಯಾಗಿ ಮುಚ್ಚಿದೆ. ಮುಚ್ಚಿದಷ್ಟೂ ಅದು ಸ್ಪಷ್ಟವಾಗುತ್ತಾ
ಹೋಯಿತು.
ದಿನನಿತ್ಯದಂತೆ ಲಲಿತ ಅಡಿಗೆಮನೆಯಿಂದ ಬಂದು ನನ್ನ ಕೈಯಲ್ಲಿ ಬುತ್ತಿಯಿಟ್ಟು 'ಹೊತ್ತಾಯಿತು' ಅಂದಿದ್ದಳು. ಹೊರಗೆ ನೋಡಿದೆ.
ಹೌದು ಹೊತ್ತಾಗಿತ್ತು. ಹೊತ್ತು ಮಾರೆತ್ತರ
ಏರಿತ್ತು. ಅನುದಿನದ ಪರಿಪಾಠದಂತೆ ಕುರಿಮಂದೆಯನ್ನು
ಕರಿಗುಡ್ಡದ ತಪ್ಪಲಿಗೆ ಅಟ್ಟಿಕೊಂಡು ಹೋಗಿ ಮೇಯಲು ಬಿಟ್ಟು ಕಾಳನಿಗೆ ಕಾಯುವ ಕೆಲಸ ಕೊಟ್ಟು ಮಾಮೂಲಿನಂತೆ
ಗೊಬ್ಬಳಿ ಮರದ ಕೆಳಗಿನ ಹುಲ್ಲಹಾಸಿಗೆಯ ಮೇಲೊರಗಿ ಕಣ್ಣುಮುಚ್ಚಿ, ಮಧ್ಯಾಹ್ನ ತೆರೆದು, ಬುತ್ತಿ ಬಿಚ್ಚಿ ಕಾಳನಿಗೆ ಮುದ್ದೆಯಿಕ್ಕಿ, ನಾನೂ ಉಂಡು ತಾವರೆಕೆರೆಯಲ್ಲಿ ಕೈತೊಳೆದು, ನೀರು ಕುಡಿದು, ಕುರಿಗಳಿಗೆ ರಾತ್ರಿಯ ಮೇವಿಗೆಂದು ಚಿಗುರು
ಹುಲ್ಲು ಕತ್ತರಿಸಿ ಹೊರೆ ಕಟ್ಟುವಷ್ಟರಲ್ಲಿ ಪಡುವಣ ದಿಗಂತದಲ್ಲಿ ಮಸುಕುಮಸುಕಾಗಿ ಕೆಂಪು ಕೂಡತೊಡಗಿದ್ದನ್ನು
ಕಂಡೆ. ನೋಡನೋಡುತ್ತಿದ್ದಂತೇ ಕೆಂಪು ಗಾಢವಾಗಿ ಗಿರಗಿರನೆ
ಸುತ್ತುತ್ತಾ ಬಿರಬಿರನೆ ನನ್ನತ್ತ ಸಾಗಿಬರತೊಡಗಿದ್ದನ್ನು ಕಂಡು ದಿಕ್ಕೆಟ್ಟೆ. ಇನ್ನೊಂದು ಕ್ಷಣದಲ್ಲಿ ಸುತ್ತುವರಿಯುವ ಬಿರುಗಾಳಿಯಲ್ಲಿ
ನನ್ನ ಕುರಿಗಳೆಲ್ಲಿ ಕೈಗೆ ಸಿಕ್ಕದಂತೆ ಚದುರಿಹೋಗುತ್ತವೆಯೋ ಎಂಬ ಗಾಬರಿಯಲ್ಲಿ ದಿಕ್ಕುದಿಕ್ಕಿಗೆ ತಿರುಗಿ
“ಟ್ರ್ಽಽಽ ಬ್ಯಾ, ಟ್ರ್ಽಽಽ ಬ್ಯಾ” ಎಂದು ಕೂಗತೊಡಗಿದೆ. ನನ್ನ ದನಿಗೆ “ಬ್ಯಾ ಬ್ಯಾ” ಎಂದು ಮಾರ್ದನಿ ಕೊಟ್ಟು ಒಂದು ಇನ್ನೊಂದನ್ನು
ಕೂಗಿ ಕರೆಯುತ್ತಾ ಎಲ್ಲವೂ ಓಡೋಡಿ ಬಂದು ನನ್ನ ಸುತ್ತಲೂ ಸೇರಿದವು. ಬೆಳಿಗ್ಗೆ ನಾ ನಿದ್ದೆ ಹೊಡೆಯುತ್ತಿದ್ದಾಗ ಧರೆಗೆ ಬಿದ್ದಿದ್ದ
ಬೆಳ್ಳನ್ನ ಬಿಳೀ ಎಳೆಮರಿಗಳೆರಡನ್ನು ಎತ್ತಿ ಎದೆಗವಚಿಕೊಂಡು, ಅವುಗಳ ಮೇಲೆ ಕಣ್ಣಿಟ್ಟೇ 'ಬ್ಯಹಹ ಬ್ಯಹಹ' ಎಂದು ತಲೆ ಕುಣಿಸುತ್ತಾ ನನ್ನ ಕಾಲಿಗೆ ತೊಡರುತ್ತಲೇ
ನನ್ನನ್ನು ಹಿಂಬಾಲಿಸಿದ ತಾಯಿಕುರಿಗಳನ್ನೂ, ಅವುಗಳ ಅಂಡಿಗೇ ಮುಖ ಉಜ್ಜುತ್ತಾ ಪುಟುಪುಟು ಓಡಿಬಂದ ಇತರ ಕುರಿಗಳನ್ನೂ, ಯಾವ ಬಿರುಗಾಳಿ ನಮ್ಮನ್ನೇನು ಮಾಡೀತು ಎಂಬಂತೆ
ಗತ್ತಿನಿಂದ ತಲೆಯೆತ್ತಿ ಗುಂಪಿನ ಹಿಂದೆ ನಡೆದುಬರುತ್ತಿದ್ದ ಟಗರುಗಳನ್ನೂ ಬಾ ಬಾ ಎನ್ನುತ್ತಾ ಕರೆದುಕೊಂಡು
ಎಂದೋ ಕರಿಗುಡ್ಡದಿಂದುರುಳಿ ಕೆಳಗೆ ಬಂದು ಗುಡ್ಡಕ್ಕೆ ಕಟ್ಟೆ ಕಟ್ಟಿದಂತೆ ನಿಂತಿದ್ದ ಭಾರಿಭಾರಿ ಬಂಡೆಗಳ
ನಡುವೆ ಸೇರುವಷ್ಟರಲ್ಲಿ ಕೆಂಧೂಳು ಸುತ್ತಲೂ ಕವಿದುಕೊಂಡುಬಿಟ್ಟಿತು. ಎಲ್ಲ ಕುರಿಗಳು ಸುರಕ್ಷಿತವಾಗಿ ಸೇರಿದವೋ ಗೊತ್ತಾಗಲೇ ಇಲ್ಲ. ತಲೆಯೆತ್ತಿ ಸುತ್ತಲೂ ನೋಡಿದೆ. ಗುಡ್ಡದ ಬುಡದಿಂದ ಕುರಿಯೊಂದನ್ನು ಅಟ್ಟಿಸಿಕೊಂಡು ಕಾಳ ಓಡಿಬರುತ್ತಿರುವುದು
ಧೂಳುತೆರೆಯಲ್ಲಿ ಮಸುಕುಮಸುಕಾಗಿ ಕಂಡಿತು. ಅವನು ಕುರಿಯನ್ನು
ಗುಂಪು ಸೇರಿಸಿ ತಾನು ಗುಂಪಿನಂಚಿನಲ್ಲಿ ಮುಂಗಾಲುಗಳನ್ನು ನೀಟಿ, ನಾಲಿಗೆ ಚಾಚಿ, ಏದುತ್ತಾ ಬಿದ್ದುಕೊಳ್ಳುವ ಹೊತ್ತಿಗೆ ತಾವರೆಕೆರೆಯಂಚಿನ
ಆಲದ ಮರದ ಕೊಂಬೆಯನ್ನು ಲಟಾರನೆ ಸೀಳಿ ನಮ್ಮತ್ತ ನುಗ್ಗಿಬಂದ ಗಾಳಿ ನನ್ನನ್ನು ಕೆಳಗೆ ನೂಕಿತು. ಗಕ್ಕನೆ ಕೆಳಗೆ ಕೂತು ತಲೆತಗ್ಗಿಸಿದೆ.
ಸುತ್ತಲ ಮರಗಳನ್ನು ಗಿರಕಿ ಹೊಡೆಸುತ್ತಾ ಬೀಸುತ್ತಿದ್ದ ಧೂಳುಗಾಳಿಗೆ ಕಣ್ಣುಬಿಡಲಾಗದೇ ಕೂತುಬಿಟ್ಟೆ. ಕಿವಿಗಳಲ್ಲಿ ಭೋರ್ಗರೆಯುತ್ತಿದ್ದ ಅದರ ಆರ್ಭಟದಲ್ಲಿ ಮೆದುಳು
ಮಂಕಾಗಿಯೋಯಿತು. ಹಾಗೆ ಕೂತದ್ದು ಒಂದು ತಾಸಿನವರೆಗೋ
ಮೂರು ತಾಸಿನವರೆಗೋ ತಿಳಿಯಲೇ ಇಲ್ಲ. ಕೊನೆಗೂ ಮಂಕು
ಹರಿದು ಕಣ್ಣು ತೆರೆದಾಗ ಕತ್ತಲಾಗಿತ್ತು. ಆ ಕತ್ತಲು
ಮೌನವಾಗಿತ್ತು.
ಎದ್ದು ಮನೆಯತ್ತ ನಡೆದೆ. ನನ್ನ ಕುರಿಮಂದೆ ನನ್ನನ್ನು
ಹಿಂಬಾಲಿಸಿತು. ಅವುಗಳ ಹಿಂದೆ ಕಾವಲಾಗಿ ಕಾಳ ನಡೆದುಬಂದ. ಮನೆ ತಲುಪುವವರೆಗೆ ನಮ್ಮ ನಡುವೆ ಮೌನವಿತ್ತು.
“ಓಹ್, ಎಷ್ಟೊಂದು ಧೂಳು! ಕುರಿಗಳೆಲ್ಲಾ ಕೆಂಪೋ ಕೆಂಪು! ನಾಳೆ ನಿಮ್ಮ ಜೊತೆ ನಾನೂ ಬರ್ತೀನಿ. ಒಂದೊಂದನ್ನೂ ಹಿಡಿದು ತಾವರೆಕೆರೇಲಿ ತೊಳೆದುಬಿಡೋಣ” ಎಂದ ಲಲಿತ ನನ್ನ ಕೈಗೆ ನೀರಿನ ಚೊಂಬಿಟ್ಟು ಕೊಟ್ಟಿಗೆಯ ಬಾಗಿಲಿಗೆ ಕೋಲು ಅಡ್ಡ ಹಿಡಿದು ನಿಂತಳು. ಕುರಿಗಳು ಒಂದೊಂದಾಗಿ ಕೋಲಿನ ಮೇಲೆ ಹಾರಿ ಒಳಸೇರತೊಡಗಿದವು. ಲಲಿತಳ ತುಟಿಗಳು ಮಣಮಣಗುಟ್ಟತೊಡಗಿದವು: “ಒಂದು ಎರಡು ಮೂರು...”
ಬಿರುಗಾಳಿಯಿಂದ ನನ್ನ ಕುರಿಮಂದೆಯನ್ನು ಸುರಕ್ಷಿತವಾಗಿ ಕೊಟ್ಟಿಗೆಯ ಬಾಗಿಲಿಗೆ ತಂದ ನೆಮ್ಮದಿಯಲ್ಲಿ
ನಿರಾಳವಾಗಿ ನೀರು ಕುಡಿಯುತ್ತಿದ್ದವನು ಲಲಿತಳ “ಅವ್ವಯ್ಯಾ!” ಎಂಬ ಉದ್ಗಾರ ಕೇಳಿ ಬೆಚ್ಚಿದೆ. ಅವಳತ್ತ ನೋಡಿದರೆ
ಅವಳ ಕಣ್ಣುಗಳು ಕುರಿಮರಿಯೊಂದರ ಮೇಲೆ ಕೀಲಿಸಿವೆ.
ಇದರಲ್ಲೇನು ವಿಶೇಷ ಎಂದು ನಗುಬಂತು. ನೀರಿನ
ಚೊಂಬನ್ನು ಮತ್ತೆ ಮೇಲೆತ್ತುತ್ತಿದ್ದಂತೇ ಅವಳು “ಇದ್ಯಾವ ಮರಿ?” ಎಂದು ಅಚ್ಚರಿಯಲ್ಲಿ ಪಿಸುಗಿದ್ದು ಕಿವಿಗೆ
ಬಿದ್ದು ಮತ್ತೆ ಅವಳತ್ತ ತಿರುಗಿದೆ. ಅವಳು ಆ ಕುರಿಮರಿಯ
ಮುಖವನ್ನು ನನ್ನತ್ತ ತಿರುಗಿಸಿದಳು.
ಬೆಳಿಗ್ಗೆ ಹುಟ್ಟಿದ ಎರಡು ಮರಿಗಳೂ ಸೇರಿದಂತೆ ಎಲ್ಲ ಕುರಿಗಳೂ ಕೆಂಧೂಳು ಮೆತ್ತಿಕೊಂಡು ಕೆಂಗುರಿಗಳಾಗಿದ್ದರೆ
ಇದು ಮಾತ್ರ ಬೆಳ್ಳಗೆ ಹೊಳೆಯುತ್ತಿತ್ತು.
ಅರೆ! ಇದ್ಯಾವ ಮರಿ?
ಯಾವಾಗ ಹುಟ್ಟಿತು? ಬೆಳಿಗ್ಗೆ ಈದ ಎರಡು ಕುರಿಗಳ ಹೊರತಾಗಿ ಯಾವ
ಕುರಿಗೂ ದಿನ ತುಂಬಿರಲಿಲ್ಲವಲ್ಲ!
ಯೋಚಿಸುತ್ತಾ ಅದನ್ನೇ ನೇರವಾಗಿ ನೋಡಿದವನು ಅದರ ತಲೆಯ ಮೇಲೆರಡು ಕೊಂಬುಗಳನ್ನು ಕಂಡು ಸಖೇದಾಶ್ಚರ್ಯದಲ್ಲಿ
ಅದರತ್ತ ಧಾಪುಗಾಲಿಟ್ಟು ಓಡಿದೆ. ಕಂದೀಲಿನ ಬೆಳಕಿನಲ್ಲಿ
ನಾನಲ್ಲಿ ಕಂಡದ್ದು!
ಆ ದಷ್ಟಪುಷ್ಟ ಎಳೆಗುರಿಯ ನೆತ್ತಿ ಗುಂಡಗೆ ಉಬ್ಬಿಕೊಂಡಿತ್ತು. ಅದರ ಎರಡೂ ಬದಿಗೆ ನೆಟ್ಟಗೆ ಮೊಳೆತು ನಿಂತ ಗೇಣುದ್ದದ ಬಿದಿರಕಳಲೆಯಂತಹ
ಎರಡು ಕೊಂಬುಗಳು! ಮೇಲಮೇಲಕ್ಕೆ ಹೋಗುತ್ತಾ ಕಿರಿದಾಗುತ್ತಿದ್ದ
ಆ ಕೊಂಬುಗಳಲ್ಲಿ ಕಬ್ವಿನ ಜಲ್ಲೆಯಲ್ಲಿರುವಂತೆ ಐದೈದು ಗೆಣ್ಣುಗಳಿದ್ದವು.
ಇದು ನಮ್ಮ ಮಂದೆಯ ಮರಿಯಲ್ಲ. ಇಷ್ಟೊಂದು ಎಳೆಯದಾಗಿರುವ
ಇದರ ತಲೆಯ ಮೇಲೆ ಗೇಣುದ್ದದ ಕೊಂಬುಗಳು ಮೂಡಿರುವುದು ಜನ್ಮತಃ ಕುರುಬನಾಗಿರುವ ನನ್ನ ಅನುಭವಕ್ಕೆ, ತಿಳುವಳಿಕೆಗೆ, ನಂಬಿಕೆಗೆ ಪೂರ್ಣ ವಿರುದ್ಧ. ಅಷ್ಟೇ ಅಲ್ಲ, ಸಾಯಂಕಾಲವಿಡೀ ಬೀಸಿದ ಬಿರುಗಾಳಿ ಹೊತ್ತು
ಊರುಕೇರಿ ಕಾಡುಮೇಡಲ್ಲೆಲ್ಲಾ ಚೆಲ್ಲಾಡಿದ ಧೂಳಿನ ಒಂದು ಕಣವೂ ಇದರ ಮೈಮೇಲಿಲ್ಲ.
ಇದೇನು ಮಾಯ!
ನಾನೂ ಲಲಿತಳೂ ಆ ಮರಿಯನ್ನೇ ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಾ ಕೂತುಬಿಟ್ಟೆವು. ಕೊನೆಗೂ ಸುಧಾರಿಸಿಕೊಂಡದ್ದು ಅವಳೇ. “ಇದು ದೇವರು ಕಳಿಸಿರುವ ಕುರಿಮರಿ. ಬಿರುಗಾಳಿಯೆಬ್ಬಿಸಿ ಜಗತ್ತಿಗೆ ಕಣ್ಣುಪಟ್ಟಿ ಹಾಕಿ ನರಮನುಷ್ಯರ
ಕಣ್ಣಿಗೆ ಬೀಳದಂತೆ ತಾನು ಈ ನೆಲಕ್ಕಿಳಿದು ಇದನ್ನು ನಮ್ಮ ಮಂದೆಗೆ ಸೇರಿಸಿದ್ದಾನೆ. ಇದರಿಂದೇನೋ ಲೋಕಕಲ್ಯಾಣ ಆಗುವುದಿದೆ. ಇಂಥಾ ಮರಿಯನ್ನು ನಮ್ಮ ಮಡಿಲಿಗೆ ಹಾಕಿ ಲೋಕಕಲ್ಯಾಣದಲ್ಲಿ
ಅಳಿಲಸೇವೆಯ ಅವಕಾಶವನ್ನು ನಮಗೆ ಕರುಣಿಸಿರುವ ಆ ಜಗನ್ನಿಯಾಮಕನಿಗೆ ನಮೋ ನಮಃ” ಎನ್ನುತ್ತಾ ಆಕಾಶಕ್ಕೆ ತಲೆಯೆತ್ತಿ ಕೈಮುಗಿದಳು.
ಆ ಕುರಿಮರಿಯ ಮುಂದೆಯೂ ಮಂಡಿಯೂರಿ ಕೈಜೋಡಿಸಿದಳು.
ಹಾಗೇ ಮಾಡೆಂದು ನನಗೂ ಹೇಳಿದಳು. ನಾನು ಮಂಡಿಯೂರುತ್ತಿದ್ದಂತೇ
ಎದ್ದು ಧಡಧಡನೆ ಭಾವಿಯತ್ತ ಓಡಿದಳು. ಮೂರು ಕೊಡ ನೀರು
ಸೇದಿ ತನ್ನ ಮೈಮೇಲೆ ಸುರಿದುಕೊಂಡಳು. ಮತ್ತೆ ಮೂರು
ಕೊಡ ಸೇರಿ ಆ ದೇವರಮರಿಯ ಮೇಲೆ ನೆತ್ತಿಯಿಂದ ಬಾಲದವರೆಗೆ ಸುರಿದಳು. ದೇವರಕೋಣೆಗೆ ಓಡಿ ವಿಭೂತಿ, ಅರಿಶಿಣ ಕುಂಕುಮದ ಭರಣಿಗಳನ್ನು ತಂದಳು. ದೇವರನಾಮಗಳನ್ನು ಹೇಳಿಕೊಳ್ಳುತ್ತಾ ಆ ಮರಿಯ ದುಂಡುನೆತ್ತಿಯ
ಮೇಲೆ ವಿಭೂತಿಯ ಪಟ್ಟೆಯೆಳೆದಳು. ಅರಿಶಿಣ ಕುಂಕುಮದ
ಬೊಟ್ಟುಗಳನ್ನಿಟ್ಟಳು. ಕೊಂಬುಗಳಿಗೂ ವಿಭೂತಿಯ ಸುತ್ತುಗಳನ್ನೆಳೆದು
ಮಲ್ಲಿಗೆಯ ದಂಡೆಗಳನ್ನು ಸುತ್ತಿದಳು. ತುದಿಗಳಲ್ಲಿ
ನಿಂಬೆಹಣ್ಣುಗಳನ್ನು ಸಿಕ್ಕಿಸಿದಳು.
ದೈವಿಕಸಿಂಗಾರದಲ್ಲಿ ಕಂಗೊಳಿಸತೊಡಗಿದ ಆ ಕುರಿಮರಿಯನ್ನು ಮೈಮರೆತು ನೋಡುತ್ತಾ ನಿಂತೆ. ನನ್ನ ಕುರಿಮಂದೆಯೂ ಹೊಸ ಗೆಳೆಯನನ್ನು ಮಂತ್ರಮುಗ್ಧವಾಗಿ
ನೋಡುತ್ತಾ ನಿಂತುಬಿಟ್ಟಿತ್ತು.
“ಈ ಮರಿಗೆ ಬೇರೆ ವ್ಯವಸ್ಥೆ ಮಾಡಬೇಕಲ್ಲ?” ಎಚ್ಚರಾಗಿ ಕೇಳಿದೆ.
“ಅದರ ಅಗತ್ಯವಿಲ್ಲ.” ಅವಳ ಎರಡು ಪದಗಳ ನಿಖರ ಉತ್ತರ.
“ಯಾಕೆ?”
“ದೇವರು ಇದನ್ನು ಸೇರಿಸಿದ್ದು ಈ ಮಂದೆಗೆ. ಅಲ್ಲಿಂದ ಇದನ್ನು ಪ್ರತ್ಯೇಕಿಸಿದರೆ ದೇವರ ನಿಯಮಕ್ಕೆ ವಿರುದ್ಧವಾಗಿ
ನಡೆದುಕೊಂಡಂತೆ. ಇದರ ಮೈಗೆ ಅರಿಶಿಣಕುಂಕುಮ ಹೂವುಗಂಧ
ವಿಭೂತಿ ಸೋಂಕಿಸಿ ಇದನ್ನು ಬರಮಾಡಿಕೊಂಡಿದ್ದಾಯ್ತು.
ಹಾಗೆ ಮಾಡಿ ದೇವರ ಆಣತಿಯನ್ನು ನಾವು ಒಪ್ಪಿಕೊಂಡಿದ್ದೂ ಆಯ್ತು. ಅಷ್ಟು ಸಾಕು.
ಇನ್ನು ದೇವರ ಇಚ್ಚೆಯಂತೇ ಇದು ಮಂದೆಯಲ್ಲೊಂದಾಗಿರಲಿ.”
ಅವಳ ಮಾತು ಸರಿಯೆನಿಸಿದರೂ ಹ್ಞೂಂಗುಟ್ಟಲಾಗಲಿಲ್ಲ.
ಅಷ್ಟರಲ್ಲಿ ಮನೆಪಾಠಕ್ಕೆ ಹೋಗಿದ್ದ ಪುಟ್ಟಿ ಓಡೋಡುತ್ತಾ ಬಂದಳು. ಬಂದವಳೇ “ಅರೆ ಹೊಸಾ ಮರಿ! ಅರೆರೆ ಇದೇನು ಸಿಂಗಾರ!” ಎನ್ನುತ್ತಾ ಕುರಿಮರಿಯ ಮುಂದೆ ಹೋಗಿ ನಿಂತಳು.
“ಅರೆ, ಗೋಳಗುಮ್ಮಟ! ಓಹ್, ಕುತುಬ್ ಮಿನಾರ್! ಒಂದಲ್ಲಾ
ಎರಡು!” ಎಂದು ಉದ್ಗರಿಸಿದಳು ಖುಷಿಯಿಂದ.
ಬೆಚ್ಚಿದ ಲಲಿತ ಅವಳತ್ತಲೇ ನೋಡಿದಳು. “ಏನು ಮಗಳೇ ನೀನು ಹೇಳುತ್ತಿರುವುದು?” ಅಂದೆ. ನಮ್ಮತ್ತ ತಿರುಗದೇ
ಪುಟ್ಟಿ ಹೇಳಿದಳು: “ಕಳೆದವಾರ ತಾನೆ ಶರೀಫ ಮೇಷ್ಟ್ರು ಬಿಜಾಪುರಕ್ಕೆ
ಟೂರಿಗೆ ಕರಕೊಂಡು ಹೋಗಿ ತೋರಿಸಿದ್ರಲ್ಲಾ, ಆ ಗೋಳಗುಮ್ಮಟಾನೇ ಇದು.
ಮತ್ತೆ, ನನ್ನ ಇಂಡಿಯನ್
ಹಿಸ್ಟರಿ ಟೆಕ್ಸ್ಟ್ ಬುಕ್‌ನಲ್ಲಿ ಕುತುಬ್ ಮಿನಾರ್ ಚಿತ್ರಾನ ನಿಮ್ಮಿಬ್ರಿಗೂ ಎಷ್ಟು ಸಲ ತೋರಿಸಿಲ್ಲ
ನಾನು? ಅದಕ್ಕೂ ಈ ಕೊಂಬುಗಳಿಗೂ ಏನಾದ್ರೂ ವ್ಯತ್ಯಾಸ
ಕಾಣುತ್ತಾ?” ಅಂದಳು. ಆವಳ ಬೆರಳುಗಳು ಕೊಂಬುಗಳನ್ನು ಸವರುತ್ತಿದ್ದವು.
ಲಲಿತ ನಕ್ಕಳು. “ಒಳ್ಳೆಯದೇ ಆಯಿತಲ್ಲ ಮಗಳೇ. ಹೂವು ಗಂಧ ಎಲ್ಲಕ್ಕೂ
ಪವಿತ್ರ ಅಲ್ಲವೇ?” ಎನ್ನುತ್ತಾ ಪುಟ್ಟಿಯ ಭುಜಗಳ ಮೇಲೆ ಕೈಗಳನ್ನಿಟ್ಟಳು.
“ಹೌದಮ್ಮ, ಎಷ್ಟು ಚಂದ ಕಾಣ್ತಿದೆ!” ಅಂದಳು ಪುಟ್ಟಿ. “ಇದಕ್ಕೊಂದು ಹೆಸರಿಡ್ತೀನಮ್ಮ” ಎನ್ನುತ್ತಾ ಕಣ್ಣುಮುಚ್ಚಿ ತಲೆಯೆತ್ತಿ ಯೋಚಿಸಿದಳು. ಚಣದಲ್ಲಿ ಛಕ್ಕನೆ ಕಣ್ಣುತೆರೆದು “ಅಲೋಕ” ಅಂದಳು. ನಾನೂ ಲಲಿತಳೂ ಮಾತಿಲ್ಲದೇ ನಗೆ ವಿನಿಮಯ
ಮಾಡಿಕೊಳ್ಳುತ್ತಿದ್ದಂತೇ “ಅಲೋಕಾ, ಅಲೋಕಾ, ನನ್ನ ಅಲೋಕಾ!” ಎನ್ನುತ್ತಾ ಕುರಿಮರಿಗೊಂದು ಮುತ್ತು ಕೊಟ್ಟಳು.
ಲಲಿತ ಪುಟ್ಟಿಯ ನೆತ್ತಿಯ ಮೇಲೆ ಮುತ್ತಿಟ್ಟಳು.
ತಾಯಿ ಮಗಳಿಗೆ ಖುಷಿಯೋ ಖುಷಿ.
ಕೊಟ್ಟಿಗೆಯ ಬಾಗಿಲಿಗಡ್ಡ ಇರಿಸಿದ್ದ ಕೋಲನ್ನು ಲಲಿತ ತೆಗೆದದ್ದೇ ಅಲೋಕ ಚಂಗನೆ ನೆಗೆಯುತ್ತಾ ಒಳಗೋಡಿತು. ಕುರಿಗಳೆಲ್ಲಾ ಅದನ್ನು ಮೂಸುತ್ತಾ ಸ್ವಾಗತಿಸಿದವು. ಹಾಲು ಕುಡಿಯುವ ಎಳೆಮರಿಗಳಿದ್ದ ಒಂಬತ್ತು ಕುರಿಗಳು ನಾ ಮುಂದು
ತಾ ಮುಂದು ಎಂದು ಅಲೋಕನ ಮೂತಿಗೆ ತಮ್ಮ ಕೆಚ್ಚಲನ್ನು ಒತ್ತಿದವು. ಆ ತುಂಟ ಮರಿಯೋ ರುಚಿ ನೋಡುವಂತೆ ಎಲ್ಲ ಕುರಿಗಳ ಕೆಚ್ಚಲಿಗೂ
ಬಾಯಿ ಹಾಕಿ ಚೀಪುತ್ತಾ ಕೊಟ್ಟಿಗೆಯ ಉದ್ದಗಲಕ್ಕೂ ಕುಣಿದಾಡಿತು. ಪುಟ್ಟಿ ಕೇಕೆ ಹಾಕಿದಳು. ಸುಮಾರು ಹೊತ್ತು ಆ ಮುಗ್ಧ ಜೀವಿಗಳ ಸಂಭ್ರಮವನ್ನೇ ನೋಡುತ್ತಾ
ನಾವೂ ಸಂಭ್ರಮಿಸಿದೆವು. ಮನೆಯೊಳಗೆ ಹೋದಮೇಲೂ ನಾವು
ಮೂವರಲ್ಲಿ ಅಲೋಕನ ಮಾತೇ. ರಾತ್ರಿ ಒಂದು ಹೊತ್ತಿನಲ್ಲಿ
ಲಲಿತ ಕಂದೀಲು ಕೈಲಿ ಹಿಡಿದು ಕೊಟ್ಟಿಗೆಗೆ ಹೋಗಿ ನೋಡಿಬಂದ ನೆನಪು...
ಬೆಳಿಗ್ಗೆ ಎಚ್ಚರವಾದಾಗ ಪುಟ್ಟಿ ಪಕ್ಕದಲ್ಲಿರಲಿಲ್ಲ.
ಅವಳು ಕೊಟ್ಟಿಗೆಯಲ್ಲಿದ್ದಾಳೆ ಅಂದಳು ಲಲಿತ ನಗುತ್ತಾ. ಎದ್ದು ಹೋಗಿ ನೋಡಿದರೆ ಪುಟ್ಟಿಯ ಗೆಳೆಯಗೆಳತಿಯರ ಹಿಂಡೇ
ಕೊಟ್ಟಿಗೆಯಲ್ಲಿತ್ತು. ಕುರಿಗಳ ಬ್ಯಾ, ಮಕ್ಕಳ ಕೇಕೆಗಳಲ್ಲಿ ಕೊಟ್ಟಿಗೆ ಕಲರವಗುಟ್ಟುತ್ತಿತ್ತು. ಎಲ್ಲರೂ ಅಲೋಕನನ್ನು ಮುಟ್ಟಲು ಒಬ್ಬರ ಮೇಲೊಬ್ಬರು ಬೀಳುತ್ತಿದ್ದರು. ಅದಂತೂ ಹತ್ತಿರ ಬಂದಂತೆ ಮಾಡಿ ಇನ್ನೇನು ಮುಟ್ಟೇಬಿಟ್ಟೆವು
ಅಂದುಕೊಳ್ಳುತ್ತಿದ್ದಂತೆ ಚಂಗನೆ ದೂರ ಹಾರಿ ಕುರಿಯೊಂದರ ಕೆಚ್ಚಲಿಗೆ ಬಾಯಿ ಹಾಕುತ್ತಿತ್ತು. ಮಕ್ಕಳು ‘ಹೋ’ ಎಂದು ಕೂಗುತ್ತಿದ್ದವು.
ಅದರ ಕೊಂಬುಗಳಿಗೆ ಲಲಿತ ರಾತ್ರಿ ಹಾಕಿದ್ದ ಮಲ್ಲಿಗೆ ಚೂರೂ ಬಾಡಿರಲಿಲ್ಲ. ಅರಿಶಿಣಕುಂಕುಮ ವಿಭೂತಿ ಗಂಧ ಈಗ ಹಚ್ಚಿದಷ್ಟೇ ಹೊಸದಾಗಿತ್ತು. ಲಲಿತಳನ್ನು ಕೂಗಿ ಕರೆದು ಹೇಳಿದೆ. “ನಾನಾಗಾಲೇ ನೋಡಿಯಾಯ್ತು” ಅಂದಳು. “ಒಂದಿಡೀ ರಾತ್ರಿ ಹಾಗೇ ಉಳಿದಿದೆ ಅಂದರೆ ಎಂದೆಂದಿಗೂ ಹಾಗೇ ಉಳಿಯುತ್ತದೇರೀ” ಎಂದೂ ಸೇರಿಸಿದಳು.
ಅಲೋಕನನ್ನು ನೋಡುತ್ತಾ ಮೈಮರೆತು ಮನೆಗೆ ಹೋಗದ ಮಕ್ಕಳನ್ನು ಹುಡುಕುತ್ತಾ ಬಂದ ಅಪ್ಪಅಮ್ಮಂದಿರು, ಅಜ್ಜಅಜ್ಜಿಯರು ಕಣ್ಣಮುಂದಿನ ದೃಶ್ಯ ನೋಡಿ
ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಗಂಟೆ ಬಾರಿಸಿದರೂ
ಶಾಲೆಗೆ ಬಾರದ ಮಕ್ಕಳನ್ನು ಹುಡುಕಿಕೊಂಡು ಬಂದ ಶರೀಫ ಮೇಷ್ಟ್ರಂತೂ ಅಲೋಕನನ್ನೂ, ಲಲಿತ ಅದಕ್ಕೆ ಮಾಡಿದ್ದ ಅಲಂಕಾರವನ್ನೂ ನೋಡಿ
ಮಂತ್ರಮುಗ್ಧರಾಗಿಹೋಗಿ ಅಲ್ಲೇ ಆ ಗಳಿಗೆಯಲ್ಲೇ ಹಾಡೊಂದನ್ನು ಕಟ್ಟಿ ಹಾಡಿದರು. ಮಕ್ಕಳಿಂದಲೂ ಹಾಡಿಸಿದರು.
ಆ ಗಳಿಗೆಗೆ ಸರಿಯಾಗಿ ಬೆನ್ನ ಹಿಂದೆ ದನಿ ಕೇಳಿಸಿತು: “ಕುತುಬ್ ಮಿನಾರಿಗೆ
ಮಲ್ಲಿಗೆ ಮಾಲೆ! ಗೋಳಗುಮ್ಮಟಕ್ಕೆ ವಿಭೂತಿ! ಉದ್ದಾರವಾಯ್ತು.”
ಗಕ್ಕನೆ ಅತ್ತ ತಿರುಗಿದೆ. ದನಿಯೇನೋ ಪರಿಚಿತವೇ
ಅನಿಸಿತು. ಆದರೆ ಯಾರೂ ಕಾಣಲಿಲ್ಲ. ಸುತ್ತಲೂ ಗಾಬರಿಯಲ್ಲಿ ತಿರುಗುತ್ತಿದ್ದಂತೇ ಒಂದೆರಡು ನಗೆಗಳು
ಕಿವಿ ಇರಿದವು. ಚಣದಲ್ಲಿ ಅವು ಹತ್ತಾದವು, ಮರುಚಣದಲ್ಲಿ ನೂರಾದವು. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಇಡೀ ಊರು ನಮ್ಮ ಮನೆಯ
ಮುಂದೆ ನೆರೆದಿತ್ತು. ಗುಂಪಿನ ನಡುವಿನಿಂದ ಗುಡುಗಿನಂಥಾ
ದನಿ ಸಿಡಿಯಿತು:
“ಬ್ರೇಕಿಂಗ್ ನ್ಯೂಸ್! ಊರಿನ ಸೆಕ್ಯೂಲರ್ ಪರಂಪರೆಯ ಮೇಲೆ ಬರ್ಬರ ಧಾಳಿ.”
ಅದ್ಯಾರೆಂದು ಗೊತ್ತಾಗಲಿಲ್ಲ. ಆತಂಕ, ಕುತೂಹಲದಿಂದ ಕಾಲ್ಬೆರಳುಗಳ ಮೇಲೆ ನಿಂತು
ಕತ್ತನ್ನು ಮೇಲೆತ್ತಿ ಗುಂಪಿನತ್ತ ಕಣ್ಣು ಕೀಲಿಸುತ್ತಿದ್ದಂತೇ ಅದರ ನಟ್ಟನಡುವಿನಿಂದ ತಲೆಯೊಂದು ಮೇಲೇಳುವುದನ್ನು
ಕಂಡೆ.
ಅರೆಬೋಳು ತಲೆ, ಪೊದೆಪೊದೆ ಗಡ್ಡ, ಬಣ್ಣದ ಜುಬ್ಬಾ, ಮೈಕ್ ಹಿಡಿದ ಬಲಗೈ, ತಡಕಾಡುತ್ತಾ ಹತ್ತಿರವಿದ್ದ ಹೆಂಗಸೊಬ್ಬಳ
ಹೆಗಲ ಮೇಲೆ ಇಳಿದ ಎಡಗೈ...
ಹಿಂದೆಂದೂ ಈ ಅವತಾರವನ್ನು ನೋಡಿದ ನೆನಪಿರಲಿಲ್ಲ.
ಲಲಿತಳತ್ತ ತಿರುಗಿದೆ. ಅವಳ ಮುಖದಲ್ಲೂ ಗೊಂದಲ. ಹತ್ತಿರವಿದ್ದ ಒಂದಿಬ್ಬರನ್ನು ಕೇಳಿದರೆ ಅವರಿಗೂ ಗೊತ್ತಿದ್ದಂತೆ
ಕಾಣಲಿಲ್ಲ. ಒಬ್ಬ ಮಾತ್ರ 'ನಿನ್ನೆಯೋ ಮೊನ್ನೆಯೋ ಟೀವಿಯಲ್ಲಿ ಬಿಗ್ ಫೈಟ್‌ನಲ್ಲೋ
ಇಂಡಿಯಾ ಡಿಸೈಡ್ಸ್‌ನಲ್ಲೋ ನೋಡಿದ ಹಾಗೆ ನೆನಪು' ಅಂದ.
“ಯಾರು ಸ್ವಾಮೀ ನೀವು?” ನೇರವಾಗಿಯೇ ಕೇಳಿದೆ. ಅವನು ಉತ್ತರಿಸಲಿಲ್ಲ. ಹೆಂಗಸಿನ ಹೆಗಲ ಮೇಲಿದ್ದ ಅವನ ಕೈಯ ಬೆರಳುಗಳು ಮೆಲ್ಲಗೆ
ಕೆಳಗಿಳಿದು ಅವಳೆದೆಯ ಮೇಲ್ಭಾಗವನ್ನು ಮೃದುವಾಗಿ ಸವರಿದವು. ನನ್ನ ಜತೆಯೇ ಗೋಲಿ, ಬುಗುರಿಯಾಡಿಕೊಂಡು ಬೆಳೆದಿದ್ದ ನಾಕೈದು ಮಂದಿ
ಗಂಡಸರು ಓಡೋಡಿ ಬಂದು ಅವನಿಗೂ ನಮಗೂ ಮಧ್ಯೆ ನಿಂತರು.
ಅವನು ಕೊಟ್ಟ ಮುಖವಾಡಗಳನ್ನು ಗಬಕ್ಕನೆ ಸೆಳೆದುಕೊಂಡು ಮುಖಮುಚ್ಚಿಕೊಂಡರು. ಕೈಗಳನ್ನು ಮೇಲೆಕೆಳಗೆ ತಿರುಗಿಸುತ್ತಾ, ಸೊಂಟವನ್ನು ಕುಣಿಸುತ್ತಾ, ಕಾಲುಗಳನ್ನು ಮೇಲೆತ್ತಿ ಗಾಳಿಯಲ್ಲಿ ಆಡಿಸುತ್ತಾ, ದಿಕ್ಕುದಿಕ್ಕಿಗೆ ತಿರುತಿರುಗಿ ಕುಣಿಯತೊಡಗಿದರು. ಎಕ್ಸ್‌ಪ್ರೆಸ್ಸೋ ಕಾಫಿಯ ಕಪ್ ಹಿಡಿದ ತುಂಡುಗೂದಲ ಯುವತಿಯೊಬ್ಬಳು
ಹಾಡತೊಡಗಿದಳು:
ಬುದ್ವಂತ ಬಂದಾನ, ನಮ್ಮುಂದೆ ನಿಂತಾನ!
ಸೆಳಕೊಂಡಾನ ಎಲ್ಲಾರಾ ಗ್ಯಾನ.
ಸೆಳಕೊಂಡಾನ ಎಲ್ಲಾರ ಗ್ಯಾನಾ ಈ ಬುದ್ವಂತ,
ಕಲಿಕಾಲದ ಸೆಕ್ಯೂಲರ್ ಗುಣವಂತ!
ಇದೇನೆಂದು ಸೋಜಿಗಗೊಳ್ಳುತ್ತಿದ್ದಂತೆ ಫೋನ್ ಹೊಡೆದುಕೊಂಡಿತು. ಓಡಿಹೋಗಿ ಅದನ್ನೆತ್ತಿಕೊಂಡೆ. ನವೋದಯ ಶಾಲೆಯಿಂದ ಮಗ ಮಾತಾಡುತ್ತಿದ್ದ:
“ಇವನು ಬುದ್ವಂತ. ಈ ಜನ ಅವನ ಚೀರ್ ಗರ್ಲ್ಸ್. ಅವನು ಉತ್ತರಿಸಲಾಗದ ಪರಿಸ್ಥಿತಿ ಬಂದಾಗಲೆಲ್ಲಾ ಈ ಜನ ಹೀಗೆ
ಅಡ್ಡಾದಿಡ್ಡಿ ಕುಣಿದು ಮಾತುಕತೆಯ ಜಾಡನ್ನೇ ಮರೆಸಿಬಿಡುತ್ತಾರೆ. ಇದು ಹೊಸಕಾಲದ ಹೊಸವರಸೆ.”
ಗೊಂದಲದಲ್ಲಿ ಹ್ಞೂಂಗುಟ್ಟಿ ಫೋನನ್ನು ಹತ್ತಿರ ಬಂದ ಲಲಿತಳ ಕೈಗಿತ್ತೆ. ಗಂಡು ಚೀರ್‌ಗರ್ಲ್ಸ್ ನರ್ತನ ಮುಂದುವರೆದಿತ್ತು. ಬುದ್ವಂತ ಮುಸಿಮುಸಿ ನಗುತ್ತಾ ನಿಂತಿದ್ದ. ಅವನ ಪಕ್ಕದಲ್ಲಿದ್ದ ಹೆಂಗಸು ಕಣ್ಣುಗಳನ್ನು ಮುಚ್ಚುವುದು
ತೆರೆಯುವುದು ಮಾಡುತ್ತಿದ್ದಳು.
ಫೋನ್‌ನಲ್ಲಿ ಮಗನೊಡನೆ ಮಾತು ಮುಗಿಸಿದ ಲಲಿತ ಗಕ್ಕನೆ ನನ್ನತ್ತ ತಿರುಗಿದಳು. ಅವಳ ಮುಖ ಬಿಳಿಚಿಹೋಗಿತ್ತು. ಕಣ್ಣುಗಳಲ್ಲಿ ಗೊಂದಲ. ಹತ್ತಿರ ಓಡಿಹೋಗಿ ಅವಳ ಭುಜದ ಮೇಲೆ ಕೈಯಿಟ್ಟೆ. “ಯಾರಾದರೂ ನೋಡುವ ಮೊದಲು ಎಲ್ಲವನ್ನೂ ತೆಗೆದುಬಿಡೋಣ. ಒಂದು ಕೊಡ ನೀರು ತಾ, ಬೇಗ” ಎನ್ನುತ್ತಾ ಅಲೋಕನತ್ತ
ಒಂದು ಹೆಜ್ಜೆಯಿಟ್ಟೆ. ಅವಳು ನನ್ನ ಕೈ ಹಿಡಿದಳು. ಆತುರಾತುರವಾಗಿ ಹೇಳಿದಳು: “ಇಲ್ಲ, ಏನೂ ಮಾಡೋಹಾಗಿಲ್ಲ. ಏನನ್ನೂ ಮುಚ್ಚಿಡೋಹಾಗಿಲ್ಲ.” ಅವಳ ದನಿ ಗದ್ಗದವಾಗಿತ್ತು. “ನಾ ಹೇಳೋದು...” ನನ್ನ ಮಾತು ಅಷ್ಟಕ್ಕೇ ನಿಂತಿತು. ಚೀರ್‌ಗರ್ಲ್ಸ್
ನರ್ತನ ಗಕ್ಕನೆ ನಿಂತಿತ್ತು. ಬಿಸಿಗಾಳಿಯಂತೆ ಗುಂಪಿನುದ್ದಗಲಕ್ಕೂ
ಹರಡಿಕೊಳ್ಳುತ್ತಿದ್ದ ಬುದ್ವಂತ ಅವರನ್ನು ದಾಟಿ ಬಂದು ನನ್ನ ಮುಂದೆ ನಿಲ್ಲುತ್ತಿದ್ದಂತೇ ಬಿಸಿ ನನ್ನ
ಮುಖಕ್ಕೂ ತಟ್ಟಿ ಎರಡು ಹೆಚ್ಚೆ ಹಿಂದೆ ಸರಿದೆ.
ಇಷ್ಟೇ ನಡೆದದ್ದು. ಇದರ ಹೊರತಾಗಿ ಬೇರೇನಾದರೂ
ಘಟಿಸಿದ್ದರೆ ಅದು ನನ್ನ ಪಂಚೇಂದ್ರಿಯಗಳಿಗೆ ನಿಲುಕಿಲ್ಲ.
ಲಲಿತಳಿಗೂ ಏನೂ ಗೊತ್ತಿಲ್ಲ. ಅವಳು ಮುಗ್ಧೆ.
ಸಂಜೆ ಗೋಧೂಳಿಯ ಸಮಯದಲ್ಲಿ ಚಲವಾದಿ ಮಲ್ಲನಗೌಡ ತಮಟೆ ಬಾರಿಸಿಕೊಂಡು ಏನನ್ನೋ ಸಾರುತ್ತಾ ಬಂದ. ಕಿವಿಗೊಟ್ಟು ಕೇಳಿಸಿಕೊಂಡೆವು.
“ಊರಿನ ಸೆಕ್ಯೂಲರ್ ಪರಂಪರೆಯ ಮೇಲೆ ಆಗಿರುವ
ಕರಾಳ ಧಾಳಿಯ ಬಗ್ಗೆ ವಿಚಾರಣೆ ನಡೆಸಲು ಇದೇ ಶುಕ್ರವಾರ ಬೆಳಿಗ್ಗೆ ಹತ್ತುಗಂಟೆಗೆ ಪಂಚಾಯಿತಿ ಸೇರುತ್ತಿದೆ. ಮನೆಗೊಬ್ಬರು ಬರಬೇಕು ಕಣ್ರಪ್ಪೋ.” ತಮಟೆಯ ಟಮಟಮ ಸದ್ದಿಗೆ ಚೀರ್‌ಗರ್ಲ್ಸ್‌ರ ‘ಹೋ’ಕಾರದ ಹಿಮ್ಮೇಳ.
ಅದೆಲ್ಲವೂ ರಾತ್ರಿಯ ಕತ್ತಲಲ್ಲಿ ಕರಗುವ ಹೊತ್ತಿಗೆ ನಮ್ಮೆದೆಗಳಲ್ಲಿ ಗಾಢಾಂಧಕಾರ ಕವಿದುಕೊಂಡಿತ್ತು. ನನಗೂ ಲಲಿತಳಿಗೂ ತುತ್ತು ಗಂಟಲಲ್ಲಿ ಇಳಿಯಲಿಲ್ಲ. ಪುಟ್ಟಿಗೆ ಮಾತ್ರ ನಾವೇ ಬಲವಂತವಾಗಿ ಊಟ ಮಾಡಿಸಿದೆವು. ಮುದ್ದೆ ಮಜ್ಜಿಗೆ ಕಲಸಿಕೊಟ್ಟಾಗ ಕಾಳ ಮಾತಿಲ್ಲದೇ ತಿಂದ. ರಾತ್ರಿ ಕಲ್ಲು ಕರಗುವ ಹೊತ್ತಿಗೆ ಬಾಗಿಲಿಗೆ ಬಂದವರಿಬ್ಬರು
ಪಂಚರ ಆಣತಿಯಾಗಿದೆಯೆಂದು ಹೇಳಿ ಅಲೋಕನನ್ನು ನಮ್ಮ ಮಂದೆಯಿಂದ ಬೇರ್ಪಡಿಸಿ ಎಳೆದೊಯ್ದರು. ಅದು ನಮ್ಮತ್ತ ತಿರುತಿರುಗಿ ನೋಡುತ್ತಾ ‘ಬ್ಯಾ ಬ್ಯಾ’ ಎಂದು ಅರ್ತವಾಗಿ ಕೂಗುತ್ತಿತ್ತು. ನನಗೆ ಸಂಕಟವಾಯಿತು. “ಅಲೋಕನ್ನ ಶಿಲುಬೆಗೇರಿಸುತ್ತಾರಾ?” ಅಂದಳು ಪುಟ್ಟಿ ಬಿಕ್ಕುತ್ತಾ. ಆಗಲೇ ನಾನು ಮಗನಿಗೆ ಫೋನು ಮಾಡಿ ಅವನನ್ನು ಕರೆಸಿಕೊಂಡು
ಇದೆಲ್ಲಾ ಏನು ಎಂದು ಕೇಳಿದ್ದು, ಅವನು ಗೋಳಗಳ ಗೋಳು ಹೇಳಿ ಮೊಬೈಲ್‌ನಲ್ಲಿ ಇಟೀಸ್ ಆಲ್ ಮಾಯಾ ಎಫ್‌ಎಂ ರೇಡಿಯೋ
ಹಚ್ಚಿ ಇಯರ್‌ಫೋನ್ ನನ್ನ ಕಿವಿಗಿಟ್ಟದ್ದು.
* *
*
ನಾಳೆ ಶುಕ್ರವಾರ, ಡಿಸೆಂಬರ್ ೨೧, ೨೦೧೨, ಪಂಚಾಯಿತಿಯ ದಿನ. ಅಲ್ಲಿಯವರೆಗೆ ಊರು ಬಿಟ್ಟು ಎತ್ತಲೂ ಹೋಗಬಾರದೆಂದು ನಮಗೆ
ಕಟ್ಟಳೆ ಮಾಡಿದ್ದಾರೆ. ನಾವು ಓಡಿಹೋಗುವ ಪ್ರಯತ್ನ
ಮಾಡಬಹುದೆಂದು ಒಂದಿಬ್ಬರನ್ನು ನಮ್ಮ ಹಿಂದೆ ಹಾಕಿರುವುದು ನಮ್ಮ ಗಮನಕ್ಕೆ ಬಂದಿದೆ. ಅನುಭವಿಸೋಣ, ಕರ್ಮ ಕಳೆದುಕೊಳ್ಳೋಣ' ಎನ್ನುತ್ತಿದ್ದಾಳೆ ಲಲಿತ
ಸ್ಕೂಲಿನಲ್ಲಿ ತನಗೆ ತುಂಬಾ ಮುಖ್ಯ ಕೆಲಸವಿರುವುದಾಗಿಯೂ, ಶುಕ್ರವಾರ ಬೆಳಿಗ್ಗೆ ಪಂಚಾಯಿತಿಯು ಹೊತ್ತಿಗೆ
ಬಂದುಬಿಡುವುದಾಗಿಯೂ ಹೇಳಿ ಮಗ ಬೆಳಿಗ್ಗೆ ಕತ್ತಲು ಕರುಗುವ ಮೊದಲೇ ಹೊರಟುಹೋದ. ಮಂಕಾಗಿದ್ದ ಪುಟ್ಟಿಯನ್ನು ಹೇಗೋ ಮಾಡಿ ಶಾಲೆಗೆ ಕಳುಹಿಸಿದೆವು. ಹಿಂದೆಯೇ ತಂಗಳು ಉಂಡು ನಾನು ನಿತ್ಯದ ಕಾಯಕಕ್ಕೆ ತಯಾರಾದೆ. ಇಬ್ಬರಿಗೂ ಬುತ್ತಿ ಕಟ್ಟಿಕೊಂಡು ಲಲಿತಳೂ ನನ್ನ ಜತೆ ಬಂದಳು. ಕುರಿಗಳನ್ನು ತೊಳೆಯಲು ನನಗೆ ಸಹಾಯ ಮಾಡುವುದು ಅವಳ ಉದ್ದೇಶವಾಗಿದ್ದರೆ
ಅವಳನ್ನು ಈ ಪರಿಸ್ಥಿತಿಯಲ್ಲಿ ಮನೆಯಲ್ಲಿ ಒಂಟಿಯಾಗಿ ಬಿಡಬಾರದೆನ್ನುವುದು ನನ್ನ ಉದ್ದೇಶವಾಗಿತ್ತು.
ಇಬ್ಬರೂ ಸೇರಿ ಕುರಿಗಳನ್ನು ಒಂದೊಂದಾಗಿ ಹಿಡಿದು ನೀರಿಗೆಳೆದುಕೊಂಡು ಹೋಗಿ ತೊಳೆದೆವು. ಎಲ್ಲವೂ ಬೆಳ್ಳಗೆ ಹೊಳೆಯಲಾರಂಭಿಸುವ ಹೊತ್ತಿಗೆ ಸೂರ್ಯ ನೆತ್ತಿಯ
ಆ ಕಡೆ ಕೆಳಗಿಳಿಯತೊಡಗಿದ್ದ. ಬುತ್ತಿ ಬಿಚ್ಚಿ ಉಂಡೆವು.
ಇಂದು ಯಾವ ಬಿರುಗಾಳಿಯೂ ಇಲ್ಲ. ಮತ್ತೊಂದು ಬಿರುಗಾಳಿಗೆ
ಎದೆ ಕೊಟ್ಟು ನಿಲ್ಲುವ ಶಕ್ತಿ ನನಗಂತೂ ಇರಲಿಲ್ಲ.
ಲಲಿತ ಮೌನವಾಗಿದ್ದಳು. ನಾಳೆ ಪಂಚಾಯಿತಿಗೆ
ಹೋಗಬೇಕಾದ್ದರಿಂದ ಕುರಿಮಂದೆ ಕೊಟ್ಟಿಗೆಯಲ್ಲೇ ಉಳಿಯುವುದು ಅನಿವಾರ್ಯ. ಇಡೀ ದಿನಕ್ಕೆ ಬೇಕಾಗುವಷ್ಟು ಹುಲ್ಲನ್ನು ಕತ್ತರಿಸಿ ಹೊರೆ
ಕಟ್ಟಿದೆವು. ನಾವು ಮಾಡುವುದೆಲ್ಲವನ್ನೂ ನೋಡುತ್ತಾ
ಮುಖಕ್ಕೆ ಕಪ್ಪು ಮುಸುಕು ಹಾಕಿಕೊಂಡ ಇಬ್ಬರು ದೂರದಲ್ಲಿ ಸುಳಿದಾಡುತ್ತಿದ್ದರು. ಅವರತ್ತಲೇ ನೋಡುತ್ತಾ ಲಲಿತ ಗಂಭೀರದನಿಯಲ್ಲಿ ಹೇಳಿದಳು:
“ನಾಳೆ ಯಾರಿಂದಲೂ ಕರೆಸಿಕೊಳ್ಳದೇ ನಾವಾಗಿಯೇ ಪಂಚಾಯಿತಿಗೆ ಹೋಗೋಣ.”
* *
*
ರಾತ್ರಿ ನಿದ್ದೆ ಬರಲಿಲ್ಲ. ಕಪ್ಪುಮೋಡಗಳು ಆಕಾಶದುದ್ದಕ್ಕೂ
ಕವಿದುಕೊಂಡು ಕತ್ತಲು ದಟ್ಟವಾಗುತ್ತಿದ್ದಂತೆ ನಾನು ಅಧೀರನಾಗತೊಡಗಿದೆ. ಲಲಿತ ಮತ್ತೂ ಮೌನವಾದಳು. “ಏನಾದರೂ ಮಾತಾಡು” ಅಂದೆ. ಉತ್ತರವಾಗಿ ಹೊರಗಿನಿಂದ ಒಂದಷ್ಟು ನರಿಗಳ
ಊಳುಗಳು ಒಳತೂರಿಬಂದವು. ಅವುಗಳಿಗೆ ಹಿಮ್ಮೇಳವಾಗಿ
ಮನುಷ್ಯರ ಹಾಡುಗಳು.
ಊಳುಹಾಡುಗಳು ನಮ್ಮ ಅಂಗಳಕ್ಕೇ ಬಂದವು. ನನಗೆ
ಭಯವಾಯಿತು. ಲಲಿತಳತ್ತ ತಿರುಗಿದೆ. ಅವಳು ಬೆಚ್ಚಿ ಎದ್ದುಕೂತ ಪುಟ್ಟಿಯನ್ನು ಮಡಿಲಿಗೆ ಅವಚಿಕೊಂಡು
ಮೃದುವಾಗಿ ಬೆನ್ನುತಟ್ಟುತ್ತಿದ್ದಳು.
ಹೊರಗಿನ ಸದ್ದೆಲ್ಲಾ ಗಕ್ಕನೆ ನಿಂತಿತು. “ಮುಂದಿನ ಕಾರ್ಯಕ್ರಮ ಇದೀಗ!”
ಚಲವಾದಿ ಮಲ್ಲನಗೌಡ ತಮಟೆ ಬಾರಿಸಿದ. “ಮಿಡ್‌ನೈಟ್ ಮಸಾಲಾ.”
ಬುದ್ವಂತ ಮೈಕ್‌ನಲ್ಲಿ ಘೋಷಿಸಿದ. ಮರುಕ್ಷಣ
ಬಾಗಿಲ ಮೇಲೆ ನೂರಾರು ಮುಷ್ಟಿಗಳು ಎರಗಿದಂಥ ಭೀಕರ ಸದ್ದು.
ಲಲಿತಳತ್ತ ನೋಡಿದೆ. ಮಾತಿಲ್ಲದೇ ಎಡಗೈಯಲ್ಲಿ
ಸನ್ನೆ ಮಾಡಿದಳು. ಬಲಗೈ ಪುಟ್ಟಿಯ ಬೆನ್ನನ್ನು ತಟ್ಟುತ್ತಲೇ
ಇತ್ತು. ಎದ್ದುಹೋಗಿ ಬಾಗಿಲು ತೆರೆದೆ.
“ಹೊರಗೆ ಬಾ. ನಿನ್ನ ಹೆಂಡ್ತೀನೂ ಕರಿ.” ಬುದ್ವಂತ ಗಡ್ಡ ತುರಿಸಿಕೊಳ್ಳುತ್ತಾ ಹೇಳಿದ. ದನಿಯಲ್ಲಿ ದರ್ಪವಿತ್ತು. ಅವನ ಎಡಗೈ ಹೆಂಗಸಿನ ಹೆಗಲ ಮೇಲೆ ಉರುಳಾಡುತ್ತಿತ್ತು.
“ಈ ರಾತ್ರಿಯಲ್ಲೇನು ರಂಪ?
ಪಂಚಾಯಿತಿಯಿರುವುದು ಬೆಳಿಗ್ಗೆ ಹತ್ತುಗಂಟೆಗೆ ಅಲ್ಲವ?” ಬೇಸರದಿಂದಲೇ ಪ್ರಶ್ನಿಸಿದೆ.
ಅವನು ನಕ್ಕುಬಿಟ್ಟ. “ಪಂಚಾಯಿತೀಲಿ ನಿಂಗೇನು ಕೆಲಸ? ಅದನ್ನ ನಾವು ವಿರಾಮವಾಗಿ ಮಾಡಿಕೊಳ್ತೀವಿ. ತೆಪ್ಪಗೆ ನಾವು ತಗೊಂಡಿರೋ ತೀರ್ಮಾನಾನ ಕೇಳಿಸ್ಕೋ.” ಚೀರ್‌ಗರ್ಲ್ಸ್ ಕೇಕೆ ಹಾಕಿದರು. ಹೆಂಗಸು ಕಣ್ಣುಗಳನ್ನು ಅರೆಮುಚ್ಚಿದಳು.
ನನಗೇನೂ ಅರ್ಥವಾಗಲಿಲ್ಲ. ಅವನನ್ನೇ ಮಿಕಿಮಿಕಿ
ನೋಡಿದೆ. ಅವನು ಮತ್ತೊಮ್ಮೆ ನಕ್ಕು ಹೇಳಿದ: “ನಿಮ್ಮಿಬ್ರಿಗೂ ಶಿಕ್ಷೆಯಾಗಬೇಕು. ಅದು ಏನು ಅಂತ
ನಾವೆಲ್ಲಾ ತೀರ್ಮಾನ ತಗೊಂಡಿದ್ದೀವಿ. ನಿಮ್ಮಿಬ್ರನ್ನೂ...” ಅವನ ಮಾತು ಮುಗಿಯುವ ಮೊದಲೇ “ಇದು ಅನ್ಯಾಯ” ಎಂದು ಕೂಗುತ್ತಾ ಶರೀಫ ಮೇಷ್ಟ್ರು ಬಂದರು. “ಇವರಿಬ್ಬರಿಗೂ ಮಾತಾಡೋ ಅವಕಾಶಾನೆ ಕೊಡದೇ
ನೀವು ನೀವೇ ತೀರ್ಮಾನ ತಗೊಂಡದ್ದು ಭಾಳಾ ತಪ್ಪು, ಅನ್ಯಾಯ.”
ದನಿಯೆತ್ತರಿಸಿ ಹೇಳಿ ನನಗೂ ಬುದ್ವಂತನಿಗೂ ಮಧ್ಯೆ ಬಂದು ನಿಂತರು. ತೇಕುತ್ತಾ ಮಾತು ಮುಂದುವರೆಸಿದರು: “ಅಷ್ಟಕ್ಕೂ ಇವರಿಬ್ರೂ ಮಾಡಿರೋ...”
ಬುದ್ವಂತ ಅವರನ್ನು ಅಷ್ಟಕ್ಕೆ ತಡೆದ.
“ಯಾರೋ ನೀನು?
ಕುಲ ಗೊತ್ತಿಲ್ಲ. ಗೋತ್ರ ಗೊತ್ತಿಲ್ಲ. ನಾಕು ಪದ್ಯ ಗೀಚಿ ಪ್ರೈಮರಿ ಸ್ಕೂಲ್ ಮಕ್ಕಳ ಮುಂದೆ ಕುಂಯ್
ಕುಂಯ್ ಅಂದಮಾತ್ರಕ್ಕೆ ತನ್ನನ್ನ ತಾನು ಭಾಳಾ ದೊಡ್ಡಮನುಷ್ಯ ಅಂದ್ಕೊಂಡುಬಿಟ್ಟಿದ್ದಾನೆ. ಯೂನಿವರ್ಸಿಟೀಗೆ ಬಂದು ಸೆಮಿನಾರ್‌ನಲ್ಲಿ ಪ್ರೆಸೆಂಟ್ ಮಾಡು
ನಿನ್ ಪದ್ಯಾನ. ಆಗ ಗೊತ್ತಾಗುತ್ತೆ ನಿನ್ ಬಂಡವಾಳ. ಬಂದುಬಿಟ್ಟ ದೊಡ್ಡದಾಗಿ ಊರಿಗೇ ಪಾಠ ಹೇಳೋದಿಕ್ಕೆ” ಎಂದು ಅಬ್ಬರಿಸಿದ. ಹಿಂದೆ ತಿರುಗಿ “ಎಳಕೊಂಡು ಹೋಗ್ರೋ ಈ ಮುದಿಯನ್ನ” ಎಂದು ಕೂಗಿದ. ಅವನ ಬಾಯಿ ಮುಂದೆ ಮೈಕ್ ಇದ್ದುದರಿಂದ ಆ ಕೂಗು ಸುತ್ತಲ ಗಿರಿಕಂದರಗಳಲ್ಲಿ
ಪ್ರತಿಧ್ವನಿಸಿತು. ಹೆಂಗಸು ಕಣ್ಣುಗಳನ್ನು ಪೂರ್ತಿಯಾಗಿ
ಮುಚ್ಚಿಕೊಂಡಳು. ನಾನು ಮಾತೂ ಹೊರಡದಷ್ಟು ಗಾಬರಿಯಲ್ಲಿ
ನಿಂತಿದ್ದಂತೇ ಒಂದಷ್ಟು ಜನ ಮುಂದೆ ನುಗ್ಗಿ ಶರೀಫ ಮೇಷ್ಟ್ರನ್ನು ರಟ್ಟೆ ಹಿಡಿದು ಎಳೆದುಕೊಂಡು ಹೋದರು. ಅವರೇನೋ ಹೇಳುತ್ತಿದ್ದರು. ಆದರೆ ಅದು ನನಗೆ ಕೇಳದಂತೆ ಚಲವಾದಿ ಮಲ್ಲನಗೌಡ ನನ್ನ ಕಿವಿಯಲ್ಲೇ
ತಮಟೆ ಬಡಿದ.
ಅವನ ಹಿಂದೆ ಬುದ್ವಂತ ಯಾರಿಗೋ ಪಿಸುಗುಟ್ಟುವುದು ಕೇಳಿಸಿತು: “ಕತ್ತಲಲ್ಲೇ ನಮ್ಮ ಪ್ಲಾನನ್ನ ಇಂಪ್ಲಿಮೆಂಟ್ ಮಾಡಿಬಿಡ್ಬೇಕು. ಬೆಳಗಾಗಿಬಿಟ್ರೆ ಕಷ್ಟ.” ಅವನು ಮೈಕ್‌ನಲ್ಲಿ ಪಿಸುಗುಟ್ಟಿದ್ದರಿಂದ ತಮಟೆಯ
ಸದ್ದಿನಲ್ಲೂ ನನಗದು ಸ್ಪಷ್ಟವಾಗಿ ಕೇಳಿಸಿತು. ಎಲ್ಲರಿಗೂ
ಕೇಳಿಸಿರಲೇಬೇಕು. ಇಡೀ ಗುಂಪು “ಹೌದು ಹೌದು” ಎಂದು ಕೂಗಿತು. “ಗೌಡಾ, ತಮಟೆ ಬಡಿದದ್ದು ಸಾಕು. ಇನ್ನು ಅದರ ಅಗತ್ಯ ಇಲ್ಲಾ. ಹೋಗಿ ರೆಸ್ಟ್ ತಗೋ.” ಚಲವಾದಿಯತ್ತ ಅಸಡ್ಡೆಯಿಂದ ಒದರಿ ಬುದ್ವಂತ ಎದೆಸೆಟೆಸಿ
ನನ್ನ ಮನೆಯೊಳಗೆ ಒಂದು ಹೆಜ್ಜೆಯಿಟ್ಟ. “ಇನ್ನು ಹೊರಡಿ.”
ಅಬ್ಬರಿಸಿದ. “ಹೊರಡಿ ಹೊರಡಿ” ಜನಸ್ತೋಮ ಕೂಗಿತು.
“ಹೊರಡೋಣ. ಕರ್ಮ ಕಳೆದುಕೊಳ್ಳೋಣ” ಅಂದಳು ಲಲಿತ ಪುಟ್ಟಿಯನ್ನು ಮಲಗಿಸಿ ಎದ್ದುನಿಲ್ಲುತ್ತಾ.
ಮಲಗಿದ್ದ ಪುಟ್ಟಿಯನ್ನೊಮ್ಮೆ ನೋಡಿದೆ. ಕಣ್ಣುಗಳು
ತೇವವಾದವು. ತಲೆತಗ್ಗಿಸಿ ಪಕ್ಕಕ್ಕೆ ಹೊರಳಿಕೊಂಡೆ.
“ಹೋ” ಎಂದು ಕೂಗುತ್ತಾ
ಗುಂಪು ನಮ್ಮನ್ನು ರೈಲ್ವೇ ಸ್ಟೇಷನ್‌ಗೆ ಕರೆದೊಯ್ದಿತು.
ನಾವು ಫ್ಲಾಟ್‌ಫಾರ್ಮ್‌ನಲ್ಲಿ ಕಾಲಿಡುವುದಕ್ಕೂ ಟ್ರೇನೊಂದು ಧಡಗುಟ್ಟುತ್ತಾ ಬಂದು ನಿಲ್ಲುವುದಕ್ಕೂ
ಸರಿಹೋಯಿತು.
ಸಬರ್‌ಮತಿ ಎಕ್ಸ್‌ಪ್ರೆಸ್!
“ಸರಿಯಾದ ಸಮಯಕ್ಕೇ ಬಂದ್ವಿ. ನಾ ಹೇಳಿರ್ಲಿಲ್ವಾ, ಬೆಳಕಾಗೋವರೆಗೆ ಕಾಯಕೂಡದು ಅಂತ.” ಬುದ್ವಂತ ಗುಂಪಿನತ್ತ ನೋಡಿ ನೆಮ್ಮದಿಯ ಉಸಿರು
ಹಾಕಿದ. ಜುಬ್ಬಾದ ಜೇಬಿನಿಂದ ಟಿಕೆಟ್ ತೆಗೆದು ನನ್ನ
ಕೈಗೆ ತುರುಕಿದ. “ಗೋಧ್ರಾಗೆ. ಒನ್ ವೇ ಟಿಕೆಟ್.” ಗಹಗಹಿಸಿದ.
ಯಾವ ಬೋಗಿಯೆಂದು ಟಿಕೆಟ್ ಮೇಲೆ ಕಣ್ಣಾಡಿಸಿದೆ.
ಬುದ್ವಂತ ಮತ್ತೊಮ್ಮೆ ಗಹಗಹಿಸಿದ. “ಇದೇ ಬೋಗಿ.” ಮೈಕ್‌ನಲ್ಲಿ ಅರಚಿದ. ತಲೆಯೆತ್ತಿ ಮುಂದೆ ನೋಡಿದೆ.
ನಮ್ಮ ಮುಂದೆ “ಎಸ್ 6” ಬೋಗಿಯಿತ್ತು.
ಬೋಗಿಯ ಬಾಗಿಲತ್ತ ಒಂದು ಹೆಜ್ಜೆಯಿಟ್ಟ ಲಲಿತ ಗಕ್ಕನೆ ನಿಂತಳು. ಬುದ್ವಂತನತ್ತ ನೇರವಾಗಿ ನೋಡಿ ಗಂಭೀರದನಿಯಲ್ಲಿ ಕೇಳಿದಳು:
“ಹೊರಡುವ ಮೊದಲು ಅಲೋಕನನ್ನೊಮ್ಮೆ ನಮಗೆ ತೋರಿಸಿ.”
ಒಂದು ಕ್ಷಣ ಅವನು ಅಪ್ರತಿಭನಾದ. ಅವನೇನೋ ಹೇಳಲು
ಪ್ರಯತ್ನಿಸಿದ. ಆದರೆ ಮಾತುಗಳು ಹೊರಬರದೇ ತುಟಿಗಳು
ಕಂಪಿಸಿದವು. ಅಷ್ಟರಲ್ಲಿ ಜೇಬಿನಲ್ಲಿದ್ದ ಫೋನ್ ಹೊಡೆದುಕೊಂಡಿತು. ಎತ್ತಿಕೊಂಡೆ.
ಅತ್ತಲಿಂದ ಮಗ ಮಾತಾಡುತ್ತಿದ್ದ: “ಈ ಜನರ ಷಡ್ಯಂತ್ರದ ವಿರುದ್ಧದ ಒಂದೇ ಒಂದು
ಸಾಕ್ಷಿ ಅಲೋಕ. ಅದನ್ನೆಂದೂ ಇವರು ನಿಮಗೆ ತೋರಿಸಲಾರರು.”
ನನಗೆ ಧೈರ್ಯ ಬಂತು. ಕುರಿಮರಿಯನ್ನು ತೋರಿಸಲೇಬೇಕೆಂದು
ಪಟ್ಟುಹಿಡಿಯಬೇಕೆಂದುಕೊಂಡೆ. ಫೋನನ್ನು ಲಲಿತಳ ಕೈಲಿತ್ತು
ಬುದ್ವಂತನತ್ತ ತಿರುಗಿದೆ.
ಅವನು ಅಲ್ಲಿರಲಿಲ್ಲ. ಅವನು ನಿಂತಿದ್ದ ಸ್ಥಳದಲ್ಲಿ
ಅವನ ಚೀರ್‌ಗರ್ಲ್ಸ್ ಅಡ್ಡಾದಿಡ್ಡಿಯಾಗಿ ಕುಣಿಯುತ್ತಿದ್ದರು.
ಲಲಿತಳತ್ತ ತಿರುಗಿದೆ. ಅವಳು ನನ್ನ ಹತ್ತಿರ ಸರಿದಳು. ಕುಣಿಯುತ್ತಿದ್ದ ಚೀರ್‌ಗರ್ಲ್ಸ್‌ರತ್ತಲೇ ನೋಡುತ್ತಾ ಹೇಳಿದಳು:
“ಈ ಗಂಡಸರು ಆಯ್ಕೆ ಮಾಡಿಕೊಂಡಿರೋ ಬದುಕು ನೋಡ್ರೀ.
ಛೆ! ಬೇಸರ, ಮರುಕ ಎರಡೂ ಆಗುತ್ತೆ.”
ರೈಲು ಒಮ್ಮೆ ಧೀರ್ಘವಾಗಿ ಸಿಳ್ಳು ಹಾಕಿತು.
ಚೀರ್‌ಗರ್ಲ್ಸ್ ಕುಣಿಯುತ್ತಲೇ ನಮ್ಮನ್ನು ಸುತ್ತುವರೆದರು. ನಮ್ಮನ್ನು ನಡುವೆ ಸಿಕ್ಕಿಸಿಕೊಂಡು ಬೋಗಿಯ ಬಾಗಿಲತ್ತ ಕುಣಿಕುಣಿಯುತ್ತಾ
ಸಾಗಿದರು.
ಮೆಟ್ಟಲೇರಿ ನಿಂತು ಲಲಿತಳಿಗೆ ಕೈ ನೀಡಲೆಂದು ಹಿಂದೆ ತಿರುಗಿದೆ. ಗುಂಪಿನ ಮಧ್ಯೆ ಬುದ್ವಂತ ಕಾಣಿಸಿಕೊಂಡ. ವಿಶಾಲವಾಗಿ ನಗುತ್ತಾ ನನ್ನತ್ತ ಕೈಬೀಸಿದ. ಅವನ ಎಡಗೈ ಹೆಂಗಸಿನ ಹೆಗಲ ಮೇಲಿಂದ ತುಂಬಾ ಕೆಳಗಿಳಿದಿತ್ತು. ಛಕ್ಕನೆ ಮುಖ ಹೊರಳಿಸಿದೆ. ಲಲಿತಳನ್ನು ಕೈಹಿಡಿದು ಮೇಲೆ ಹತ್ತಿಸಿಕೊಂಡೆ. ರೈಲು ಹೊರಟಿತು.
ಬಾಗಿಲಲ್ಲೇ ನಿಂತು ಗುಂಪಿನತ್ತ ನೋಡಿದೆ. ಚೀರ್‌ಗರ್ಲ್ಸ್
ನೃತ್ಯ ನಿಲ್ಲಿಸಿ ಬುದ್ವಂತನ ಕೈ ಕುಲುಕುತ್ತಿದ್ದರು.
ಅವನು ನಗುತ್ತಿದ್ದ. ಆ ಹೆಂಗಸು ಕಣ್ಣೊರೆಸಿಕೊಳ್ಳುತ್ತಿದ್ದಳು.
ಇದ್ದಕ್ಕಿದ್ದಂತೇ ಗುಂಪಿನ ನಡುವೆ ಹಾಹಾಕಾರವೆದ್ದಿತು. ಎಲ್ಲರೂ ಏನನ್ನೋ ಹಿಡಿಯುವಂತೆ ಗಡಬಡಿಸಿ ಓಡಾಡತೊಡಗಿದರು. ಲಲಿತಳಿಗೆ ತೋರಿಸಿದೆ. “ಅರೆ! ಅಲ್ನೋಡ್ರೀ.”
ಅವಳು ಖುಷಿಯಿಂದ ಕೂಗಿದಳು.
ಅವಳು ಬೆರಳು ತೋರಿದೆಡೆ ನೋಡಿದೆ.
ಅಲೋಕ!
ಹಣೆಯಲ್ಲಿ ವಿಭೂತಿ, ಕೊಂಬುಗಳಲ್ಲಿ ಅರಿಶಿನ
ಕುಂಕುಮ, ಹೂವು, ಗಂಧ, ನಿಂಬೆಹಣ್ಣುಗಳು... ನನ್ನ ಲಲಿತ ಈಗಷ್ಟೇ ತೊಳೆದು ಕೈಯಾರೆ ಅಲಂಕರಿಸಿದಂತೆ.
ಗುಂಪಿನ ನಡುವಿಂದ ಜಿಗಿಜಿಗಿದು ಓಡಿಬರುತ್ತಿತ್ತು.
ಟ್ರೇನ್ ವೇಗ ಹೆಚ್ಚಿಸಿಕೊಂಡಂತೆ ಅದರ ಓಟವೂ ತೀವ್ರವಾಯಿತು. ಬುದ್ವಂತ, ಅವನ ಚೀರ್‌ಗರ್ಲ್ಸ್ ಎಲ್ಲರೂ ಚಣದಲ್ಲಿ ಕಣಗಳಾಗಿ
ಕತ್ತಲಲ್ಲಿ ಕರಗಿಹೋದರು.
ಟಿಕೆಟ್ ಹೊರತೆಗೆದು ನಮ್ಮ ಬರ್ತ್ ನಂಬರ್ ನೋಡಿದೆ.
ಇಪ್ಪತ್ತಮೂರು ಮತ್ತು ಇಪ್ಪತ್ತನಾಲ್ಕು, ಸೈಡ್ ಬರ್ತ್ಸ್. ಪಕ್ಕದಲ್ಲೇ
ಹೊರಜಗತ್ತಿಗೆ ಕಿಟಕಿ ಎಂದು ತಿಳಿದು ಖುಷಿಯಾಯಿತು.
ನಿಧಾನವಾಗಿ ನಡೆದುಹೋಗಿ ನಮ್ಮ ಸೀಟ್‌ನಲ್ಲಿ ಕುಳಿತುಕೊಂಡೆ.
“ಅಬ್ಬ!” ಹತ್ತಿರ ಬಂದ ಲಲಿತ ನಮ್ಮ ಬರ್ತ್‌ಗಳ ನಂಬರ್
ಮೇಲೆ ನೋಟ ನೆಟ್ಟಂತೆಯೇ ಉದ್ಗರಿಸಿ ಪಕ್ಕ ಕುಳಿತಳು. “ಏನು?” ಅವಳನ್ನೇ ನೇರವಾಗಿ ನೋಡಿದೆ.
“ಇಪ್ಪತ್ತೊಂದು ಕಳೆದ ಮೇಲೆ ಎಷ್ಟಾದರೂ ಇರಲಿ
ಅಂದುಕೊಳ್ತಾನೇ ಇದ್ದೆ” ಅಂದಳು ನಗುತ್ತಾ. ನನಗೇನೂ ಅರ್ಥವಾಗಲಿಲ್ಲ. ಕಣ್ಣು ಕಿರಿದುಗೊಳಿಸಿದೆ.
“ಮಗ ಹೇಳಿದ್ದೇನು ಮರೆತುಬಿಟ್ರಾ?
ಅದೇರೀ, ಆ ಇಟೀಸ್ ಆಲ್ ಮಾಯಾ
ಎಫ್‌ಎಂನಲ್ಲಿ ಹೇಳಿದ ವಿಷಯ.”
ನಕ್ಕಳು.
ನೆನಪಾಯಿತು. ಹಿಂದೆಯೇ ಪ್ರಶ್ನೆ: 'ಗೋಧ್ರಾ ಇನ್ನೆಷ್ಟು ದೂರ?'
ಎದುರಿಗಿದ್ದವರತ್ತ ತಿರುಗಿದೆ. ನನ್ನೆದೆಯ ಪ್ರಶ್ನೆ
ಬೋಗಿಯಲ್ಲಿ ಮಾರ್ದನಿಸಿತು: “ಗೋಧ್ರಾ ಇನ್ನೆಷ್ಟು ದೂರ?”
ಒಂದುಕ್ಷಣ ಅವರೆಲ್ಲರೂ ನನ್ನನ್ನೇ ವಿಚಿತ್ರವಾಗಿ ನೋಡಿದರು. ಮರುಕ್ಷಣ ಎಲ್ಲರ ಮುಖಗಳಲ್ಲೂ ನಗೆ. ಒಬ್ಬಾತ ನಗುತ್ತಲೇ ಹೇಳಿದ: “ಗೋಧ್ರಾ! ಅದನ್ನ ದಾಟಿ ಯಾವುದೋ ಕಾಲವಾಯ್ತು.
ಆ ಕಡೆಯಿಂದಾನೇ ಬರ್ತಾ ಇದೀವಿ.”
ಅಮ್ಮನನ್ನು ನೆನಪಿಸಿದಾಕೆಯೊಬ್ಬಳು ಮುಗುಳ್ನಕ್ಕಳು.
“ಅಂದರೆ! ಈಗೆಲ್ಲಿ ಹೋಗ್ತಾ ಇದೀವಿ ನಾವು?” ನಾನು ಗಾಬರಿಯ ಪ್ರಶ್ನೆ ಹಾಕಿದೆ.
“ಸಬರ್‌ಮತಿ ಆಶ್ರಮ.” ಎಲ್ಲರೂ ಒಕ್ಕೊರಲಿನಿಂದ ಉತ್ತರಿಸಿದರು.
ಲಲಿತಳತ್ತ ತಿರುಗಿ 'ಕೇಳಿದೆಯಾ?' ಎನ್ನಲು ಬಾಯಿ ತೆರೆಯುತ್ತಿದ್ದಂತೇ ಜೇಬಿನಲ್ಲಿದ್ದ
ಫೋನ್ ಕಿಣಿಕಿಣಿಗುಟ್ಟಿತು. ಎತ್ತಿ ಕಿವಿಗೆ ಹಿಡಿದೆ. ಮಗನ ದನಿ ಕೇಳಿಬಂತು:
“ನಾನು ಈಗ ತಾನೆ ಮನೆಗೆ ಬಂದೆ. ಶರೀಫ ಮೇಷ್ಟ್ರು ಎಲ್ಲಾನೂ ಹೇಳಿದ್ರು. ಪುಟ್ಟೀನ ಕರಕೊಂಡು ಈಗ ಹೊರಡ್ತಾ ಇದೀನಿ. ಶರೀಫ ಮೇಷ್ಟ್ರೂ ನಮ್ಜತೆ ಇರ್ತಾರೆ. ಇನ್ನರ್ಧ ಗಂಟೆಗೆ ಸಬರ್‌ಮತಿ ಆಶ್ರಮಕ್ಕೆ ಇನ್ನೊಂದು ಟ್ರೇನಿದೆ. ಹನ್ನೆರಡು ಗಂಟೆ ಆಗೋದರ ಒಳಗೆ ಈ ಊರನ್ನ ಬಿಡಬೇಕು ನಾವು.”
“ಯಾಕೆ?” ಅಚ್ಚರಿಯಲ್ಲಿ ಪ್ರಶ್ನೆ ಹಾಕಿದೆ.
“ಇಪ್ಪತ್ತೊಂದು ಆರಂಭವಾಗುವ ಹೊತ್ತಿಗೆ ಓಂ
ಅನ್ನು ಅಹಂ ಆಗಿ ಬದಲಾಯಿಸಿದವರ ಹೊರತಾಗಿ ಇನ್ಯಾರೂ ಈ ಊರಲ್ಲಿರಬಾರದು ಅಂತ ಮಾಯಾಕಟ್ಟಳೆ ಇದೆ.” ಅವನು ಆತುರಾತುರವಾಗಿ ಹೇಳಿ ಲೈನ್ ಕತ್ತರಿಸಿದ.
ಲಲಿತಳತ್ತ ತಿರುಗಿದೆ. ಅವಳು ನಗುತ್ತಾ ಕಡುಗತ್ತಲಲ್ಲಿ
ಬೆಳ್ಳಗೆ ಹೊಳೆಯುತ್ತಾ ಟ್ರೇನಿನ ವೇಗಕ್ಕೆ ಸಮನಾಗಿ ಓಡಿಬರುತ್ತಿದ್ದ ಅಲೋಕನತ್ತ ‘ಬಾ ಬಾ’ ಎಂದು ಕೈಯಾಡಿಸುತ್ತಿದ್ದಳು.
ಅವಳ ಮುಖದಲ್ಲಿ ಅಂತಹ ಚಂದದ ನಗೆಯನ್ನು ಕಂಡು ಇಡೀ ಇಪ್ಪತ್ತನಾಲ್ಕು ತಾಸುಗಳೇ ಕಳೆದುಹೋಗಿದ್ದವಲ್ಲ!
ಹಿಂದಕ್ಕೆ ಒರಗಿ ಅವಳನ್ನೇ ನೋಡುತ್ತಾ ಕುಳಿತೆ.
--***೦೦೦***--
ಅಕ್ಟೋಬರ್ ೭, ೨೦೧೨
No comments:
Post a Comment