ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Tuesday, July 14, 2015

ಸಿದ್ಧರಾಮಯ್ಯನವರ "ಅನ್ನಭಾಗ್ಯ" ಯೋಜನೆ: ಒಂದು ಅವಲೋಕನ



ಭಾಗ - ೧
ಸರ್ಕಾರಿ ಭಾಗ್ಯದ ಲಕ್ಷ್ಮೀ... ಸ್ವಲ್ಪ ನಿಲ್ಲಮ್ಮಾ
ಬಡವರಿಗೆ ಅತಿಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಾವು ಅಧಿಕಾರ ವಹಿಸಿಕೊಂಡ ದಿನವೇ ಘೋಷಿಸಿದ್ದರು.  ಅದರ ಬಗ್ಗೆ ಅಂದಿನಿಂದಲೂ ಹೊಗೆಯಾಡುತ್ತಿದ್ದ ಪರ-ವಿರೋಧ ವಾದವಿವಾದ ಇತ್ತೀಚೆಗೆ ಉಚಿತ ವಿತರಣೆಯ ಘೋಷಣೆಯಾದೊಡನೇ ತಾರಕಕ್ಕೇರಿದೆ..  ನಾಡಿನ ಹಿರಿಯ ಸಾಹಿತಿಗಳು, ಚಿಂತಕರು ವಾಗ್ವಾದದಲ್ಲಿ ಭಾಗಿಯಾಗಿದ್ದಾರೆ.
            ತಾವೇ ಸಂಪಾದಿಸಿಕೊಳ್ಳಲಾಗದ ದೈನಂದಿನ ಬದುಕಿನ ಅಗತ್ಯವಸ್ತುಗಳನ್ನು ತನ್ನ ಜನತೆಗೆ ನೀಡುವುದು ಸರ್ಕಾರದ ಜವಾಬ್ದಾರಿ.   ಕಲ್ಯಾಣರಾಜ್ಯ” (Welfare State) ಪರಿಕಲ್ಪನೆಯ ಮೂಲಾಧಾರವೇ ಅದು.  ಜಗತ್ತಿನ ಅನೇಕ ದೇಶಗಳು ಜವಾಬ್ದಾರಿಯನ್ನು ತಮ್ಮ ಮಿತಿಯಿದ್ದಷ್ಟು ನಿಭಾಯಿಸುತ್ತಲೇ ಇವೆ.  ಇದಕ್ಕೆ ಬಡ ಆಫ್ರಿಕನ್ ದೇಶಗಳಿರಲಿ, ಶ್ರೀಮಂತ ಪಶ್ಚಿಮ ಯೂರೋಪಿನ್ ದೇಶಗಳೂ ಹೊರತಲ್ಲ.  ಸ್ವಾತಂತ್ರ್ಯ ಬಂದಾಗ ನಮ್ಮಲ್ಲಿ ಎಲ್ಲೆಂದರಲ್ಲಿ ತಾಂಡವವಾಡುತ್ತಿದ್ದ ಹಸಿವನ್ನು ನೀಗಿಸಲು ನಮ್ಮ ಸರ್ಕಾರವೂ ಬಯಸಿದ್ದು ಸಹಜವೇ ಆಗಿತ್ತು.  ಆದರೆ ಆಹಾರಧಾನ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕಾದ, ಅತ್ಯಲ್ಪವಾಗಿದ್ದ ವಿದೇಶೀ ವಿನಿಮಯದ ಹೆಚ್ಚುಭಾಗವನ್ನು ಅದಕ್ಕಾಗಿ ಖರ್ಚುಮಾಡಬೇಕಾದ ದುಃಸ್ಥಿತಿಯಿದ್ದ ದಿನಗಳಲ್ಲಿ ಜವಾಬ್ದಾರಿಯ ನಿರ್ವಹಣೆ ಸಾಧ್ಯವಿರಲಿಲ್ಲ.  ಪ್ರಧಾನಿ ಜವಾಹರ್ಲಾಲ್ ನೆಹರೂ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ ನೀಡಿದ ಪ್ರಾಧಾನ್ಯತೆ, ನಂತರದ ಸರ್ಕಾರಗಳು ನಿಷ್ಟೆಯಿಂದ ಅನುಷ್ಟಾನಗೊಳಿಸಿದಹಸಿರು ಕ್ರಾಂತಿ” ಯೋಜನೆಗಳು, ಕೃಷಿವಿಜ್ಞಾನಿ ಡಾ. ಎಂ. ಎಸ್. ಸ್ವಾಮಿನಾಥನ್ ಅವರಂಥವರ ಶ್ರದ್ಧಾಪೂರ್ವಕ ಅವಿಷ್ಕಾರಗಳು ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಸಮಯಕ್ಕೆ (೧೯೬೯-೭೪) ಫಲ ನೀಡಿ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಯಿತಷ್ಟೇ ಅಲ್ಲ, ಸೋವಿಯೆತ್ ಯೂನಿಯನ್ನಂತಹ ಬೃಹದ್ ರಾಷ್ಟ್ರಗಳಿಗೆ ಅಕ್ಕಿಯನ್ನು ರಫ್ತು ಮಾಡುವ ಮಟ್ಟಕ್ಕೂ ಬೆಳೆಯಿತು.  ಹಿಂದೆ ನಮಗೆ ಗೋಧಿ ಸರಬರಾಜು ಮಾಡುತ್ತಿದ್ದ ಶ್ರೀಮಂತ ಅಮೆರಿಕಾ ಸಹಾ ನಮ್ಮಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳತೊಡಗಿದ್ದೊಂದು ದೇಶ ಸಾಧಿಸಿದ ಹೆಗ್ಗಳಿಕೆ.
            ಹೀಗೆ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಸಾಧಿಸಿದ ಸ್ವಾವಲಂಬನೆ ಸರಕಾರೀ ಗೋದಾಮುಗಳಲ್ಲಿ ಅವು ದಾಖಲೆಯ ಪ್ರಮಾಣದಲ್ಲಿ ಸಂಗ್ರಹವಾಗಳೂ ಕಾರಣವಾದವು.  ಪರಿಣಾಮವಾಗಿ ಗ್ರಾಹಕರಿಗೆ ಸಿಗುವ ರೇಷನ್ ಧಾನ್ಯಗಳ ಪ್ರಮಾಣವೂ ಹೆಚ್ಚಾಯಿತು,  ಬಡವರಿಗೆ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಲಭಿಸುವಂತೆ ಮಾಡುವ ಬಗ್ಗೆ ಜನನಾಯಕರು ಯೋಚಿಸಲೂ ಅವಕಾಶವಾಯಿತು.  ಅಷ್ಟಾಗಿಯೂ ಅದನ್ನು ಜಾರಿಗೆ ತರಲು 'ರಾಜಕಾರಣಿ'ಗಳು ಮುಂದಾಗಲಿಲ್ಲ.  ಕೊನೆಗೂ ಇಂಥದೊಂದು ಯೋಜನೆಯನ್ನು ಜಾರಿಗೆ ತಂದದ್ದು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದ ಚಿತ್ರನಟ ಎನ್. ಟಿ. ರಾಮರಾವ್, ಎಂಭತ್ತರ ದಶಕದ ಮಧ್ಯಭಾಗದಲ್ಲಿ.  ವೃತ್ತಿಪರ ರಾಜಕಾರಣಿಗಳಿಗಿಂತ ತಾನು ಹೆಚ್ಚು ಜನಪರ ಎನ್ನುವುದನ್ನು ಬಿಂಬಿಸುವುದು ರಾಮರಾಯರ ಕೃತ್ಯದ ಹಿಂದಿತ್ತು.  ಅದರಿಂದ ಪ್ರೇರಿತರಾದ ನೆರೆಯ ತಮಿಳುನಾಡಿನ ಸಿನಿಮಾರಂಗಮೂಲದ ರಾಜಕಾರಣಿಗಳು ಅದನ್ನು ವಿವಿಧ ಬಗೆಯಲ್ಲಿ ಅನುಷ್ಟಾನಗೊಳಿಸಿದರು.  ಅದು ಈಗ ಕೇವಲ ಐದು ರೂಪಾಯಿಗಳಿಗೆ ಹೊಟ್ಟೆತುಂಬ ಊಟ ಒದಗಿಸುವಅಮ್ಮ ಕ್ಯಾಂಟೀನ್‌”ಗಳವರೆಗೆ ಬಂದುಮುಟ್ಟಿದೆ.
ಈಗ ಕರ್ನಾಟಕದತ್ತ ಹೊರಳೋಣ.  ಬಡಜನರಿಗೆ ಕಡಿಮೆ ದರದಲ್ಲಿ ಅಗತ್ಯವಸ್ತುಗಳನ್ನು ಪೂರೈಸುವ ಯೋಜನೆಗಳನ್ನು ಕಳೆದ ಮೂವತ್ತು ವರ್ಷಗಳಿಂದಲೂ ರಾಜ್ಯವನ್ನಾಳಿದ ವಿವಿಧ ಪಕ್ಷಗಳು ರೂಪಿಸಿ ಜಾರಿಗೆ ತರುತ್ತಲೇ ಇವೆ.  ಈಗ ಅನ್ನಭಾಗ್ಯ ಯೋಜನೆಯ ಪರವಾಗಿರುವ ಚಿಂತಕರಲ್ಲಿಯೂ ವಿವಿಧ ಪಂಥದವರಿದ್ದಾರೆ.  ಹಾಗೆಯೇ ಅದನ್ನು ವಿರೋಧಿಸುವವರಲ್ಲಿಯೂ ಬೇರೆಬೇರೆ ಸಾಹಿತ್ಯಕ ಪಂಥದವರಿದ್ದಾರೆ.  ಹೀಗಾಗಿ ಚರ್ಚೆಯನ್ನು ಪಕ್ಷಾತೀತ ಹಾಗೂ ಪಂಥಾತೀತ ನೆಲೆಯಲ್ಲಿ ನಡೆಸುವ ಅಗತ್ಯವಿದೆ.  ಎರಡು ಭಾಗಗಳ ಲೇಖನದಲ್ಲಿ ನಾನು ಮಾಡಹೊರಟಿರುವುದು ಅದನ್ನೇ. 
೧೯೮೩ರಲ್ಲಿ ಆಂಧ್ರ ಮತ್ತು ಕರ್ನಾಟಕಗಳಲ್ಲಿ ಕಾಂಗ್ರೆಸ್ ಧೂಳೀಪಟವಾಯಿತಷ್ಟೇ.  ಆಗ ಆಂಧ್ರದಲ್ಲಿ ಕಾಣಿಸಿಕೊಂಡ ಜನಪರ ಯೋಜನೆಗಳ ಗಾಳಿ ಕರ್ನಾಟಕಕ್ಕೂ ತಟ್ಟಿ ಬಡವರ ಮನೆಗೆ ಪುಕ್ಕಟೆಯಾಗಿ ವಿದ್ಯುತ್ ಸಂಪರ್ಕ ನೀಡುವ ಯೋಜನೆಯೊಂದು ಜಾರಿಯಾಯಿತು.  ಯೋಜನೆಗೆ ಹೆಸರು ಒದಗಿಸಿದ್ದು ಜನಪ್ರಿಯ ಚಲನಚಿತ್ರಭಾಗ್ಯಜ್ಯೋತಿ”.  ಚಲನಚಿತ್ರದ ಕಥಾವಸ್ತುವಿಗೂ, ಸರ್ಕಾರದ ಯೋಜನೆಗೂ ಯಾವ ಸಂಬಂಧವೂ ಇರಲಿಲ್ಲವಾದರೂ ಕತ್ತಲ ಮನೆಗಳಿಗೆ ಬೆಳಕು ನೀಡುವ ಯೋಜನೆಗೆ ಭಾಗ್ಯಜ್ಯೋತಿ ಎಂಬ ಹೆಸರು ಅತ್ಯಂತ ಸೂಕ್ತವಾದುದಾಗಿತ್ತು.  ಆಮೇಲೆ ಜಾರಿಗೆ ಬಂದಕೂಲಿಗಾಗಿ ಕಾಳು” ಯೋಜನೆಯೂ ರಾಜ್ಯದ ಬಡಜನಪರ ಹಾದಿಯಲ್ಲೊಂದು ಮಹತ್ವದ ಹೆಜ್ಜೆ.  ಲೋಕೋಪಯೋಗಿ ಕೆಲಸಗಳಲ್ಲಿ ದುಡಿಯುವ ಕೂಲಿಕಾರ್ಮಿಕರು ತಮ್ಮ ಸಂಪಾದನೆಯನ್ನು ಗಡಂಗಿಗೆ ಸುರಿದು ಹೆಂಡತಿ ಮಕ್ಕಳನ್ನು ಉಪವಾಸದಲ್ಲಿ ಕೆಡವುವುದನ್ನು ತಡೆಯಲು ಅವರ ಕೈಯಲ್ಲಿ ಹಣವನ್ನಿರುವ ಬದಲು ಆಹಾರಧಾನ್ಯಗಳನ್ನೇ ಇಡುವ ವಿವೇಕಯುತ ವ್ಯವಸ್ಥೆ ಇದಾಗಿತ್ತು.  ಅನಂತರದ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಹೊಸದಾಗಿ ಬಡಜನಪರ ಕಾರ್ಯಯೋಜನೆಗಳನ್ನು ರೂಪಿಸುವ ಸಂಪ್ರದಾಯ ಸರಿಸುಮಾರು ನಿಂತೇಹೋಯಿತು.  ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರಧಾನ್ಯಗಳನ್ನು ಪೂರೈಸುವ ಬಗ್ಗೆ ರಾಜಕೀಯ ಪಕ್ಷಗಳು ಚುನಾವಣಾಪ್ರಣಾಣಿಕೆಗಳಲ್ಲಿ ಹೇಳಿದರೂ ಅದನ್ನು ಸಮರ್ಪಕವಾಗಿ ಜಾರಿಗೆ ತಂದದ್ದಿಲ್ಲ.  ಇದಕ್ಕೆ ಉದಾಹರಣೆ ಬಿಪಿಎಲ್ ಕಾರ್ಡುದಾರರಿಗೆ ಕೇಜಿಗೆ ಎರಡು ರೂಪಾಯಿ ದರದಲ್ಲಿ ಅಕ್ಕಿ ಒದಗಿಸುವುದಾಗಿ ೨೦೦೯ರ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಮಾಡಿದ್ದ ವಾಗ್ದಾನವನ್ನು ನೆನಪಿಸಿಕೊಳ್ಳಬಹುದು.
ಪ್ರಸಕ್ತ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ದಿನದಿಂದಲೇ ವಿವಿಧ ಬಡಜನಪರ ಯೋಜನೆಗಳನ್ನು ಹಮ್ಮಿಕೊಳ್ಳತೊಡಗಿದೆ.  ಒಂದು ರೂಪಾಯಿಗೆ ಒಂದು ಕೇಜಿ ಅಕ್ಕಿ ವಿತರಣೆಯ ಅನ್ನಭಾಗ್ಯ, ಮುಸ್ಲಿಂ ಯುವತಿಯರ ವಿವಾಹಕ್ಕಾಗಿ ಧನಸಹಾಯ ಒದಗಿಸುವ ಶಾದಿಭಾಗ್ಯ ಇವುಗಳಲ್ಲಿ ಕೆಲವು.  ಇವೆಲ್ಲವುಗಳಲ್ಲಿ ಕಾಣಿಸಿಕೊಳ್ಳುವಭಾಗ್ಯ’ ಕುತೂಹಲದ ಜತೆಗೆ ತಮಾಷೆಗೂ ಕಾರಣವಾಗಿದೆ.  ಶೌಚಭಾಗ್ಯ, ಕಂಡೋಂ ಭಾಗ್ಯ ಎಂದೆಲ್ಲಾ ಲೇವಡಿ ಪದಗಳು/ಪದಪುಂಜಗಳು ಲಂಗುಲಗಾಮಿಲ್ಲದೇ ಹರಿದಾಡುತ್ತಿವೆ.  ಇದು ತರವಲ್ಲ.  ಸಮಾಜದ ಬೆಳವಣಿಗೆಯನ್ನು ಅಗಾಧವಾಗಿ, ಪರಿಣಾಮಕಾರಿಯಾಗಿ ಪ್ರಭಾವಿಸುವ ಸರ್ಕಾರಿ ಯೋಜನೆಗಳ ಬಗೆಗಿನ ಚರ್ಚೆಯನ್ನು ನಮ್ಮ ನಾಗರಿಕ ಸಮಾಜ ತಮಾಷೆಯನ್ನು, ಕ್ಶುಲ್ಲಕತೆಯನ್ನು ಹೊರತುಪಡಿಸಿ ನಡೆಸಬೇಕಾದ ಅಗತ್ಯವಿದೆ.
ಮೊಟ್ಟಮೊದಲ ಬಡಜನಪರ ಯೋಜನೆಯಾದ ಭಾಗ್ಯಜ್ಯೋತಿ ನಾಡಿನ ಜನತೆಯಲ್ಲಿ ಉಂಟುಮಾದಿದ ಸಂಚಲನೆ, ಅದರ ಯಶಸ್ಸು ಪ್ರಸಕ್ತ ಸರ್ಕಾರದ ಯೋಜನೆಗಳ ಹೆಸರುಗಳ ಆಯ್ಕೆಯ ಹಿಂದಿರಬಹುದಾದ ಕಾರಣ.  ಪೂರಕವಾಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪೂರ್ವಾಶ್ರಮದಲ್ಲಿ ಜನತಾದಳದಲ್ಲಿದ್ದರೆನ್ನುವುದನ್ನೂ ನೆನಪಿಸಿಕೊಳ್ಳಬೇಕು.  ಅಲ್ಲದೇ, ದಿನನಿತ್ಯದ ಬದುಕಿನಲ್ಲಿ ಒಳ್ಳೆಯದನ್ನು, ಬದುಕನ್ನು ಸಹನೀಯಗೊಳಿಸುವಂಥದನ್ನು, ಸುಖಸಮೃದ್ಧಿಯನ್ನು ಸೂಚಿಸುವಂಥದ್ದನ್ನು ಬಣ್ಣಿಸಲು ಕನ್ನಡಿಗರು ಸಾಮಾನ್ಯವಾಗಿ ಬಳಸುವುದು ಭಾಗ್ಯ ಎಂಬ ಪದ ಎನ್ನುವುದನ್ನು ನಾವು ಮರೆಯಬಾರದು.
ಕೇಜಿಗೆ ಒಂದು ರೂಪಾಯಿ ದರವಿದ್ದ ತನ್ನ ಅನ್ನಭಾಗ್ಯ ಯೋಜನೆಯನ್ನು ಸರ್ಕಾರ ಮೇ ತಿಂಗಳಲ್ಲಿ ಮಾರ್ಪಡಿಸಿ ಬಿಪಿಎಲ್ ಕಾರ್ಡುದಾರರಿಗೆ ಪುಕ್ಕಟೆಯಾಗಿ ಅಕ್ಕಿ ನೀಡುವ ನಿರ್ಣಯವನ್ನು ಜಾರಿಗೆ ತಂದಂದಿನಿಂದ ಯೋಜನೆಯ ಬಗೆಗಿನ ಚರ್ಚೆ ಸಹಜವಾಗಿಯೇ ತಾರಕಕ್ಕೇರಿದೆ.  ಕೆಲವು ಹಿರಿಯ ಸಾಹಿತಿಗಳು ಇದನ್ನು ಟೀಕಿಸಿದ್ದಾರೆ.  ಆದರೆ ಟೀಕಿಸಿದವರನ್ನೇ ಟೀಕಿಸುವ, ಟೀಕೆಯನ್ನು ವೈಯುಕ್ತಿಕ ಮಟ್ಟಕ್ಕೆ ಇಳಿಸುವ ಹೀನಕೃತ್ಯವನ್ನು ಪ್ರಗತಿಪರರೆಂದು ಕರೆದುಕೊಳ್ಳುವ ಕೆಲವು ಸಾಹಿತಿಗಳು ಮಾಡತೊಡಗಿದ್ದಾರೆ, ಇದಕ್ಕೆ ಮುಖ್ಯಮಂತ್ರಿಗಳೂ ದನಿಗೂಡಿಸಿ ತಮ್ಮನ್ನು ತಾವು ವಾದವಿವಾದದ ಕಣಕ್ಕಿಳಿಸಿಕೊಂಡಿದ್ದಾರೆ.  ಇದು ಅಗತ್ಯವಿರಲಿಲ್ಲ.
ಮೊದಲಿಗೆ ಯೋಜನೆಯ ಔಚಿತ್ಯವನ್ನು ನೋಡೋಣ.  ದೇಶ ಎಷ್ಟೇ ಪ್ರಗತಿ ಸಾಧಿಸಿದ್ದರೂ, ದೇಶದ ಅಭಿವೃದ್ಧಿ ದರವೀಗ ಚೀನಾದ್ದನ್ನು ಮೀರಿಸಿದ್ದರೂ ಇಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಸಿಗೆ ಸೇರುವ ಜನರಿದ್ದೇ ಇದ್ದಾರೆ.  ಇವರಿಗೆ ಆಹಾರವನ್ನೊದಗಿಸುವುದು ಸರ್ಕಾರದ ಆದ್ಯ ಕರ್ತವ್ಯ, ನಿಜ.  ಇದಕ್ಕೆ ಆಹಾರಭದ್ರತಾ ಕಾನೂನಿನ ಮೂಲಕ ಸಾಂವಿಧಾನಿಕ ಬೆಂಬಲವೂ ಇದೆ.  ಅದೂ ನಿಜ.  ಆದರೆ ವಿಷಯವನ್ನು ಕಾನೂನಿನ ಹೊರತಾಗಿ ನೋಡಬೇಕಾದ ಆಗತ್ಯವಿದೆ.  ಹಸಿವಿನ ಸಮಸ್ಯೆಯನ್ನು ಇತರ ನಾಗರಿಕ ಸಮಾಜಗಳು ಪರಿಹರಿಸಿಕೊಂಡ ವಿಧಾನ ಇಲ್ಲಿ ನಮ್ಮ ಅನುಕೂಲಕ್ಕೆ ಬರುತ್ತದೆ.  ಬಗ್ಗೆ ಉದಾಹರಣೆಯಾಗಿ ಮೂವತ್ತರ ದಶಕದಲ್ಲಿ ಅಮೆರಿಕಾ ತಾಳಿದ ನಿಲುವನ್ನು ತೆಗೆದುಕೊಳ್ಳಬಹುದು.
            ೧೯೨೯ರಲ್ಲಿ ಆರಂಭವಾದThe Great Depression” ಅಂದರೆಮಹಾ ಆರ್ಥಿಕ ಕುಸಿತ” ಕೋಟ್ಯಂತರ ಅಮೆರಿಕನ್ನರ ನೌಕರಿಯನ್ನು, ಆದಾಯವನ್ನು ಕಿತ್ತುಕೊಂಡುಬಿಟ್ಟಿತು.  ಪರಿಣಾಮವಾಗಿ ಅವರು ಕಳೆದುಕೊಂಡದ್ದು ತಮ್ಮಕೊಳ್ಳುವ ಸಾಮರ್ಥ್ಯ”ವನ್ನು.  ಹೀಗಾಗಿ, ದೇಶದಲ್ಲಿ ಆಹಾರಧಾನ್ಯಗಳ ಅಗಾಧ ಭಂಡಾರವೇ ಇದ್ದರೂ ಅದನ್ನು ಕೊಂಡು ತಿನ್ನುವ ಸಾಮರ್ಥ್ಯ ಜನರಿಗಿಲ್ಲದೇ ಹಸಿವಿನ ಹೊಡೆತಕ್ಕೆ ಸಿಕ್ಕಿಹೋದರು.  ಆಗ ಶ್ರೀಮಂತ ಸರ್ಕಾರದ ಮುಂದಿದ್ದ ಆಯ್ಕೆ ಹಸಿವಿನಿಂದ ಕಂಗೆಟ್ಟ ಜನರಿಗೆ ಪುಕ್ಕಟೆಯಾಗಿ ಆಹಾರಧಾನ್ಯಗಳನ್ನು ವಿತರಿಸುವುದಾಗಿತ್ತು.  ಆದರೆ ಮೇಧಾವಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಬೇರೆಯದೇ ಮಾರ್ಗ ತೋರಿದರು.  ಪುಕ್ಕಟೆಯಾಗಿ ಏನನ್ನೂ ಹಂಚುವುದು ಸಮಾಜದ ಒಟ್ಟಾರೆ ಹಿತದ ದೃಷ್ಟಿಯಿಂದ ವಿವೇಕಯುತ ಕ್ರಮವಲ್ಲ.  ಜನರಿಗೆ ಕೆಲಸ ನೀಡಿ, ಅದಕ್ಕೆ ಪ್ರತಿಯಾಗಿ ಸಂಬಳ ಕೊಡಿ.  ತಮಗೆ ಬೇಕಾದ್ದನ್ನು ಜನ ಆತ್ಮಗೌರವದಿಂದ ಸಂಪಾದಿಸಿಕೊಳ್ಳಲಿ.  ನೀಡಲು ಕೆಲಸವಿಲ್ಲದಿದ್ದರೆ ಸುಮ್ಮನೆ ಒಂದು ಗುಂಡಿ ತೋಡಲು ಹೇಳಿ, ಅದಕ್ಕೆ ಕೂಲಿ ಕೊಡಿ.  ನಾಳೆ ಅದೇ ಗುಂಡಿಯನ್ನು ಮುಚ್ಚಲು ಹೇಳಿ, ಅದಕ್ಕೂ ಕೂಲಿ ಕೊಡಿ.”
ಸಲಹೆಯನ್ನು ಮನ್ನಿಸಿದ ಫ್ರಾಂಕ್ಲಿನ್ ರೂಸ್ವೆಲ್ಟ್ ಸರ್ಕಾರ ಬೃಹದ್ ಆರ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡಿತು.  ಆರ್ಥಿಕ ಕುಸಿತದ ಅತಿಯಾದ ಬಾಧೆಗೊಳಗಾಗಿದ್ದ ದೇಶದ ಪೂರ್ವ-ಮಧ್ಯ ಭಾಗದಲ್ಲಿ ಟೆನೆಸ್ಸೀ ವ್ಯಾಲಿ ಪ್ರಾಜೆಕ್ಟ್ ಕೈಗೆತ್ತಿಕೊಂಡು ನೂರಕ್ಕೂ ಮಿಕ್ಕಿದ ಅಣೆಕಟ್ಟುಗಳ ನಿರ್ಮಾಣಕ್ಕೆ ಕೈಹಾಕಿತು.  ದೇಶದ ಉದ್ದಗಲಕ್ಕೂ ಸಹಸ್ರಾರು ಮೈಲುದ್ದದ ಚತುಷ್ಪಥ, ಷಟ್ಪಥ ರಸ್ತೆಗಳ ನಿರ್ಮಾಣವನ್ನು ಆರಂಭಿಸಿತು.  ನ್ಯೂಯಾರ್ಕ್ ಮ್ಯಾನ್ಹಟನ್ ಸೇರಿದಂತೆ ವಿವಿಧ ನಗರಗಳಲ್ಲಿ ವಿವಿಧೋದ್ದೇಶ ಬೃಹತ್ ಗಗನಚುಂಬಿಗಳ ನಿರ್ಮಾಣವೂ ಆರಂಭವಾಯಿತು.  ಪರಿಣಾಮವಾಗಿ ಟೆನೆಸ್ಸೀ ವ್ಯಾಲಿ ಅಥಾರಿಟಿ ಕೆಲವೇ ವರ್ಷಗಳಲ್ಲಿ ಜಗತ್ತಿನ ಅತಿದೊಡ್ಡ ವಿದ್ಯುಚ್ಚಕ್ತಿ ಉತ್ಪಾದನಾ ಸಂಸ್ಥೆಯಾಗಿ ಬೆಳೆದು ಸ್ಥಾನವನ್ನು ಇಂದೂ ಉಳಿಸಿಕೊಂಡಿದೆ.  ಅತ್ಯಂತ ಸುವ್ಯವಸ್ಥಿತ ರಸ್ತೆಗಳನ್ನು ಹೊಂದಿದ ವಿಶ್ವದ ಅಗ್ರಗಣ್ಯ ರಾಷ್ಟ ಅಮೆರಿಕಾ ಆಗಿದೆ.  ಗಗನಚುಂಬಿಗಳ ಅಗಾಧತೆಯ ಬಗ್ಗೆ ನಾನೇನೂ ಹೇಳಬೇಕಾಗಿಲ್ಲ.  ಆದರೆ ಒಂದು ಮಾತು ಮಾತ್ರ ಹೇಳಲೇಬೇಕು-  ಅಮೆರಿಕನ್ ಸರ್ಕಾರ ಎಲ್ಲಾ ಯೋಜನೆಗಳನ್ನು ಕೈಗೆತ್ತಿಕೊಂಡದ್ದು ತನ್ನ ಜನರಿಗೆ ಕೆಲಸ ಕೊಟ್ಟು ಮೂಲಕ ಕೊಳ್ಳುವ ಸಾಮರ್ಥ್ಯವನ್ನು ಅವರಿಗೆ ನೀಡುವ ಉದ್ದೇಶದಿಂದಷ್ಟೇ.   ವಿಶ್ವದಾಖಲೆಗಳನ್ನು ಸ್ಥಾಪಿಸುವ ಯಾವ ಉದ್ದೇಶವೂ ರೂಸ್ವೆಲ್ಟ್ ಸರ್ಕಾರಕ್ಕಿರಲಿಲ್ಲ.  ಪರಿಣಾಮವಾಗಿ ಕೋಟ್ಯಂತರ ಜನ ಉದ್ಯೋಗ ಪಡೆದರು, ಸಂಬಳ ಪಡೆದರು, ಕೊಳ್ಳುವ ಸಾಮರ್ಥ್ಯವನ್ನು ಮತ್ತೆ ಗಳಿಸಿದರು, ವಸ್ತುಗಳನ್ನು ಕೊಳ್ಳತೊಡಗಿದರು.  ಪರಿಣಾಮವಾಗಿ ವಸ್ತುಗಳಿಗೆ ಬೇಡಿಕೆ ಹೆಚ್ಚಿ, ಇದ್ದ ದಾಸ್ತಾನು ಕರಗಿ, ಹೊಸ ಉತ್ಪಾದನೆಗಾಗಿ ಕಾರ್ಖಾನೆಗಳು ಮತ್ತೆ ಕಾರ್ಯಾರಂಭ ಮಾಡಿದವು, ಹಿಂದೆ ಕೆಲಸ ಕಳೆದುಕೊಂಡಿದ್ದವರೆಲ್ಲಾ ಮತ್ತೆ ಕೆಲಸ ಗಳಿಸಿದರು, ಹೊಸಬರ ಕೈಗೂ ನೌಕರಿ ಬಂತು.  ಕೊಳ್ಳುವ ಸಾಮರ್ಥ್ಯ ಗಳಿಸಿದ ಅವರೆಲ್ಲರ ಬೇಡಿಕೆಗಳನ್ನು ಪೂರೈಸಲು ಮತ್ತಷ್ಟು ಕಾರ್ಖಾನೆಗಳು ತಲೆಯೆತ್ತಿದವು... ಮತ್ತಷ್ಟು ನೌಕರಿ... ಮತ್ತಷ್ಟು... ಆದಾಯ...  ಮತ್ತಷ್ಟು ಕೊಳ್ಳುವ ಸಾಮರ್ಥ್ಯ... ಮತ್ತಷ್ಟು ಕಾರ್ಖಾನೆಗಳು... ಸರಪಳಿ ಹೀಗೇ ಮುಂದುವರೆಯಿತು.  ಅಮೆರಿಕಾ ಆರ್ಥಿಕ ಮುಗ್ಗಟ್ಟಿನಿಂದ ಹೊರಬಂದು ಮತ್ತೆ ವಿಶ್ವದ ಅಗ್ರಸ್ಥಾನದಲ್ಲಿ ನಿಂತಿತು.
ಈಗ ಹೇಳಿ, ಹಸಿವಿನಿಂದ ಕಂಗೆಟ್ಟ ತನ್ನ ಜನರಿಗೆ ರೂಸ್ವೆಲ್ಟ್ ಸರ್ಕಾರ ಪುಕ್ಕಟೆಯಾಗಿ ಗೋಧಿ ಹಂಚಿದ್ದರೆ ಏನಾಗಿರುತ್ತಿತ್ತು?
ನಮ್ಮ ದುರಂತವೆಂದರೆ ನಮ್ಮ ಮುಖ್ಯಮಂತ್ರಿಗಳ ಸಲಹೆಗಾರರು ಜಾನ್ ಮೇನಾರ್ಡ್ ಕೀನ್ಸ್ ಅಲ್ಲ, ಕೀನ್ಸ್ರಂಥವರು ಮುಖ್ಯಮಂತ್ರಿಗಳಿಗೆ ಬೇಕಾಗಿಲ್ಲ.  ಯಾಕೆಂದರೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅಲ್ಲ.
ಜೂನ್ ೨೧, ೨೦೧೫
ಭಾಗ - ೨

ರವಿಕೆಯ ವಿಂಡೊ ಡಿಸೈನ್ನಲ್ಲಿ ಕಂಡ ಪೊಲಿಟಿಕಲ್ ಡಿಸೈನ್ 
ಉತ್ತಮ ಅಕ್ಕಿ ನಾಲ್ಕರಿಂದ ಐದು ರೂಪಾಯಿಗಳಿಗೇ ದೊರೆಯುತ್ತಿದ್ದ ದಿನಗಳಲ್ಲಿ ಎರಡು ರೂಪಾಯಿಗಳಿಗೆ ಒಂದು ಕೆ.ಜಿ. ಅಕ್ಕಿ ವಿತರಿಸುವ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಯೋಜನೆ ಸರ್ಕಾರದ ಬಜೆಟ್ ದೃಷ್ಟಿಯಿಂದ ಮಹತ್ವದ್ದಾಗೇನೂ ಇರಲಿಲ್ಲ.  ಅದರಲ್ಲೂ ಅಕ್ಕಿಯ ಕಣಜ ಆಂಧ್ರಪ್ರದೇಶದಲ್ಲಿ ಅದು ಅಸಾಧ್ಯವೂ ಆಗಿರಲಿಲ್ಲ.  ಆದರೆ ಮೂರುದಶಕಗಳ ಹಿಂದೆ ಮಾರುಕಟ್ಟೆದರಕ್ಕಿಂತ ಕಡಿಮೆ ದರದಲ್ಲಿ ಆಹಾರಧಾನ್ಯವನ್ನು ಒದಗಿಸುವ ಆಲೋಚನೆಯೇ ಕ್ರಾಂತಿಕಾರಕವಾದುದಾಗಿತ್ತು.   ಆದರೆ ಇದನ್ನಷ್ಟೇ ಹೇಳಿದರೆ ಅರ್ಧಸತ್ಯವನ್ನು ಮಾತ್ರ ಹೇಳಿದಂತಾಗುತ್ತದೆ.  ರಾಮರಾಯರ ನಿರ್ಧಾರದ ಹಿಂದೆ ಜನಪರ ಕಾಳಜಿಗಿಂತಲೂ ಅವರ ವೃತ್ತಿಬದುಕಿನ ರಂಗುರಂಗಾಟ ಹೆಚ್ಚಿನ ಪಾತ್ರ ವಹಿಸಿತ್ತು.  ಹೇಳಿಕೇಳಿ ರಾಮರಾವ್ ಒಬ್ಬ ಚಿತ್ರನಟ.  ನಾಟಕೀಯತೆ ಅವರ ವೃತ್ತಿಬದುಕಿನ ಮೂಲಲಕ್ಷಣ.  ಸಹಜವಾಗಿಯೇ ಅದು ಅವರ ರಾಜಕೀಯ ಬದುಕಿನಲ್ಲೂ ಪ್ರಾಧಾನ್ಯತೆ ಪಡೆದು ಅವರ ಅಧಿಕಾರಾವಧಿಯುದ್ದಕ್ಕೂ ಮತ್ತೆಮತ್ತೆ ಕಾಣಿಸಿಕೊಂಡಿತು.  ತನ್ನ ಪಕ್ಷವನ್ನುತೆಲುಗು ದೇಶಂ” ಎಂದು ಕರೆದದ್ದು, ಒಣ ರಾಯಲಸೀಮಾಗೆ ನೀರುಣಿಸುವ ಮತ್ತು ಚೆನ್ನೈ ನಗರಕ್ಕೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ನಾಲೆಗೆತೆಲುಗು ಗಂಗಾ” ಎಂದು ಹೆಸರಿಟ್ಟದ್ದು, ಇನ್ನೂ ಮುಂತಾದ ನಡೆಗಳು ತೆಲುಗರ ಗೌರವವನ್ನು ಕಾಪಾಡುವವನು ತಾನು ಮಾತ್ರ ಎಂದು ನಾಟಕೀಯ ಬಗೆಯಲ್ಲಿ ತೋರಿಸುವ ಕೃತ್ಯಗಳಾಗಿದ್ದವು.  ರಾಮರಾಯರ ತೆಲುಗು ಗೀಳು ವ್ಯಕ್ತವಾದ ಬಗೆ ಅದೆಷ್ಟು ಮಟ್ಟಿಗಿತ್ತೆಂದರೆ ಅವರೇಕೆ ತಮ್ಮ ಹೆಸರನ್ನುತೆಲುಗು ರಾವ್” ಎಂದು ಬದಲಾಯಿಸಿಕೊಳ್ಳುತ್ತಿಲ್ಲ ಎಂದು ಲೇವಡಿಗೊಳಗಾದದ್ದೂ ಉಂಟು.
ಚಿತ್ರರಂಗದ ವ್ಯಕ್ತಿಗಳ ಹಿಡಿತಕ್ಕೆ ಸಿಲುಕಿದ ತಮಿಳುನಾಡಲ್ಲೂ ಇಂಥದೇ ಸ್ಥಿತಿಯನ್ನು ಕಾಣಬಹುದು.  ತಮಿಳರನ್ನು ಭಾವನಾತ್ಮಕವಾಗಿ ಉದ್ರೇಕಿಸಲು ಶ್ರೀಲಂಕಾ ಸಮಸ್ಯೆ ಮತ್ತು ಕಾವೇರಿ ಜಲವಿವಾದಗಳು ಪಕ್ಷಭೇದವಿಲ್ಲದೇ ಎಲ್ಲ ತಮಿಳು ರಾಜಕಾರಣಿಗೆಗಳಿಗೂ ಸಿಕ್ಕಿದ್ದರಿಂದಾಗಿ ಅವರು ರಾಜ್ಯದೊಳಗಿನ ತಮ್ಮ ಸ್ಪರ್ಧೆಯಲ್ಲಿ ತಮಿಳನ್ನು ಬದಿಗಿರಿಸಿ ಸ್ವವೈಭವೀಕರಣಕ್ಕಿಳಿದು ತಂತಮ್ಮ ಮತ್ತು ತಮ್ಮವರ ಹೆಸರುಗಳನ್ನು ಮುಂಚೂಣಿಗೆ ತಂದುನಿಲ್ಲಿಸಿ ಮೂಲಕ ಜನಪ್ರಿಯತೆ ಗಳಿಸುವ ಮಾರ್ಗ ಹಿಡಿದರು.  ಸರಕಾರಿ ರಸ್ತೆಸಾರಿಗೆ ಸಂಸ್ಥೆಯೊಂದಕ್ಕೆ ಎಂ. ಜಿ. ರಾಮಚಂದ್ರನ್ ತನ್ನ ತಾಯಿ ಸತ್ಯಭಾಮಾರ ಹೆಸರಿಟ್ಟುಅಣ್ಣೈ ಸತ್ಯ” (ಮಾತೆ ಸತ್ಯ) ಎಂದು ಕರೆದರು.  ಅದನ್ನು ಮುಂದುವರೆಸಿದ ಅವರ ಶಿಷ್ಯೆ ಮತ್ತು ರಾಜಕೀಯ ಉತ್ತರಾಧಿಕಾರಿ ಜಯಲಲಿತಾ ಸರ್ಕಾರಿ ಸಾರಿಗೆ ಸಂಸ್ಥೆಯೊಂದಕ್ಕೆ ತನ್ನ ತಾಯಿ ಸಂಧ್ಯಾರ ಹ್ಸರ್ ಸಂಧ್ಯಾರ ಹೆಹೆಸರಿಟ್ಟುಹೆಸರಿಟ್ಟು ಅಣ್ಣೈ ಸಂಧ್ಯಾ (ಮಾತೆ ಸಂಧ್ಯಾ) ಎಂದು ಕರೆದದ್ದು ಸಾಕಾಗದೇ ಆತ್ಮರತಿಯ     ಉತ್ತುಂಗಕ್ಕೇರಿ ಐಷಾರಾಮಿ ಬಸ್ಗಳನ್ನಷ್ಟೇ ಹೊಂದಿದ್ದ ಸರಕಾರಿ ಸಂಸ್ಥೆಗೆ ತನ್ನ ಹೆಸರನ್ನೇ ಇಟ್ಟು ಜೆ. ಜಯಲಲಿತಾ ಟ್ರ್ಯಾನ್ಸ್ಪೋರ್ಟ್ ಕಾರ್ಪೊರೇಷನ್ ಅಥವಾ JJTC ಎಂದು ನಾಮಕರಣ ಮಾಡಿದ್ದರು.  ಇದರಲ್ಲೆಷ್ಟು ಅತಿರೇಕವಿತ್ತೆಂದರೆ ಹೆಸರಿನಲ್ಲಿ ಎರಡನೆಯ J ಅಕ್ಷರದ ಮೇಲೊಂದು ಕಿರೀಟ ಬೇರೆ!  ಈಗವರು ಸಾರ್ವಜನಿಕ ಹಣದಲ್ಲಿ ನಡೆಯುವ ಉಪಾಹಾರ ಗೃಹಗಳಿಗೆ ಅಮ್ಮ ಕ್ಯಾಂಟೀನ್ ಎಂದು ಹೆಸರಿಡಲು ಅವಕಾಶ ಮಾಡಿಕೊಟ್ಟಿದ್ದಾರೆ.
ಹೀಗೆ ನೆರೆನಾಡುಗಳೆರಡರಲ್ಲಿ ಚಿತ್ರನಟನಟಿಯರು ರಾಜಕೀಯದಲ್ಲಿ ಅಳವಡಿಸಿಕೊಂಡ ನಾಟಕೀಯತೆಯನ್ನು ನಮ್ಮ ಕರ್ನಾಟಕದಲ್ಲಿ ವೃತ್ತಿಪರ ರಾಜಕಾರಣಿಯಾದ ಸಿದ್ದರಾಮಯ್ಯನವರು ಅನುಕರಿಸಹೊರಟಿದ್ದಾರೆ.  ಆದರೆ ಅನುಕರಣೆ ಜನಪ್ರಿಯತೆ ತರುವುದಕ್ಕಿಂತಲೂ ಹೆಸರು ಕೆಡಿಸುವುದೇ ಹೆಚ್ಚು.  ಇದಕ್ಕೆ ನನಗೆ ನೆನಪಾಗುವ ಸೂಕ್ತ ಉದಾಹರಣೆಯೆಂದರೆ ತಮಿಳರುಕಾಪ್ಪಿರಿಯೇಲ್” ಎಂದು ಉಚ್ಚರಿಸುವ ಗೇಬ್ರಿಯಲ್ ಎಂಬ ಹೆಸರಿನ ಒಬ್ಬ ಮಧುರೈ ನಗರದ ನಿವಾಸಿ.  ಗೇಬ್ರಿಯಲ್ ಬೇರೆಬೇರೆ ಬಗೆಯ, ವೃತ್ತಿಯ/ಧರ್ಮದ ವ್ಯಕ್ತಿಗಳ ಉಡುಪುಗಳನ್ನು ಅನುಕರಿಸುತ್ತಿದ್ದ.  ಅಷ್ಟೇ ಅಲ್ಲ, ಅವುಗಳ 'ರಿಮಿಕ್ಸ್'ಗಳನ್ನೂ ಮಾಡುತ್ತಿದ್ದ.  ಅವನ ಅನುಕರಣಾಪ್ರವೃತ್ತಿಗೆ ಕಳಸಪ್ರಾಯವಾದದ್ದು ಇದು- ಮಹಿಳೆಯರ ವಿಂಡೋ ಡಿಸೈನ್ ರವಿಕೆಯನ್ನು ಅನುಕರಿಸುವ ಬಯಕೆ ಒಮ್ಮೆ ಅವನಿಗಾಯಿತು.  ಗಂಡಾದ ತಾನು ರವಿಕೆ ತೊಡುವುದು ಸರಿಯಲ್ಲವೆಂಬ ತುಸು ವಿವೇಕವಿದ್ದ ಅವನು ಬೇರೊಂದು ಮಾರ್ಗ ಹುಡುಕಿದ.  ದರ್ಜಿಯೊಬ್ಬರ ಬಳಿ ಹೋಗಿ ತನಗೊಂದು ನಿಕ್ಕರ್ ಹೊಲಿದುಕೊಡಬೇಕೆಂದೂ, ಅದರಲ್ಲಿ ಮುಂದುಗಡೆ ವಿಂಡೋ ಡಿಸೈನ್ ಇರಬೇಕೆಂದೂ ಬೇಡಿಕೆಯಿತ್ತ.  ತಮಿಳು ಪತ್ರಿಕೆಗಳಲ್ಲಿ ನಾನು ನೋಡಿದ ಪ್ರಕಾರ ಗೇಬ್ರಿಯಲ್ಗೆ ದರ್ಜಿ ಎರಡು ತಪರಾಕಿ ಕೊಟ್ಟು ಹೊರಗಟ್ಟಿದರು.
ಅಧಿಕಾರಕ್ಕೆ ಬಂದ ದಿನವೇ ಘೋಷಿಸಿದ ಅನ್ನಭಾಗ್ಯ ಯೋಜನೆಯ ಹಿಂದಿನ ಉದ್ಡೇಶ ಅದೆಷ್ಟೇ ಉದಾತ್ತವಾಗಿದ್ದರೂ ಕೊರತೆ ಬಜೆಟ್ ಮೇಲೆ ಅದರಿಂದಾಗಬಹುದಾದ ದುಷ್ಪರಿಣಾಮಗಳನ್ನು ಗಮನಿಸದೇಹೋದದ್ದು ಮುಖ್ಯಮಂತ್ರಿಗಳ ಅನುಕರಣೋತ್ಸಾಹ ಮತ್ತು ಸೀಮಿತ ದೃಷ್ಟಿಕೋನಕ್ಕೊಂದು ದೃಷ್ಟಾಂತ.  ನಂತರದ ನಿರ್ಣಯಗಳೂ ಅದೇ ಬಗೆಯವು.  ಮೂಢನಂಬಿಕೆಗಳ ವಿರುದ್ಧದ ಕಾನೂನಿನ ಕರಡುಪ್ರತಿ ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸಿದ್ದು ಸರಿಯಷ್ಟೇ.  ಸಾಮಾಜಿಕ ಪಿಡುಗುಗಳಾಗಿ ಬೆಳೆದು ಲಕ್ಷಾಂತರ ಜನರ ಮಾನಸಿಕ ಸಮತೋಲನವನ್ನೇ ಹಾಳುಮಾಡುತ್ತಿರುವ ವಾಸ್ತು ಮತ್ತು ಟೀವಿ ಜೋತಿಷ್ಯ, ಭಾಗಿಯಾಗುವವರ ದೇಹಶುಚಿತ್ವವಷ್ಟೇ ಅಲ್ಲ ನೋಡುವುದಕ್ಕೂ ಅಸಹ್ಯವೆನಿಸುವ ಮಡೆಸ್ನಾನ ಮುಂತಾದ ಅನಿಷ್ಟಗಳನ್ನು ವ್ಯವಸ್ಥಿತವಾಗಿ ತಡೆಗಟ್ಟುವುದು ದಿನದ ಅಗತ್ಯ, ನಿಜ.  ಆದರೆ ಸಮಿತಿ ರಚಿಸಿದ ಕರಡು ದೇಶದ ಪ್ರಜೆಗಳಿಗೆ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನೇ ಮುಕ್ಕಾಗಿಸಹೊರಟದ್ದು ದುರಂತ.  ಇದು ಸಮಿತಿಯ ತಪ್ಪಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಪ್ಪು.  ಸಮಿತಿಗೆ ಸದಸ್ಯರನ್ನು ಆಯ್ಕೆಮಾಡುವಾಗಲೇ ಇದುವರೆಗೆ ವ್ಯಕ್ತವಾಗಿರುವ ಅವರುಗಳ ಮನೋಭಾವ, ಮೌಲ್ಯಗಳ ಆಧಾರದ ಮೇಲೆ ಅವರು ರೂಪಿಸಬಹುದಾದ ಕರಡು ಹೇಗಿರುತ್ತದೆಂಬ ಒಂದು ಸ್ಥೂಲ ಕಲ್ಪನೆ ಇಲ್ಲದೇಹೋದದ್ದು ಮುಖ್ಯಮಂತ್ರಿಗಳ, ಅವರ ಸಲಹೆಗಾರರ ಅಪಕ್ವತೆ ಮತ್ತು ಸೀಮಿತ ದೃಷ್ಟಿಕೋನಕ್ಕೊಂದು ಉದಾಹರಣೆ.  ಇದರ ಜತೆಗೆ, ಸಮಾಜವನ್ನು ಒಡೆಯುವ ಆರೋಪವನ್ನು ಬಿಜೆಪಿಯ ಮೇಲೆ ಹೊರಿಸುತ್ತಲೇ, ಶಾದಿಭಾಗ್ಯ ಹಾಗೂ ಅಹಿಂದ (''ಲ್ಪಸಂಖ್ಯಾತ, 'ಹಿಂ'ದುಳಿದ, ''ಲಿತ) ಶಾಲಾಮಕ್ಕಳಿಗೆ ಕರ್ನಾಟಕ ದರ್ಶನ ಯೋಜನೆಗಳ ಮೂಲಕ ಸಮಾಜವನ್ನು, ಎಳೆಮಕ್ಕಳನ್ನೂ ಒಡೆಯುವ ಹುನ್ನಾರಗಳನ್ನು ಹೂಡಿದ್ದು ಸರ್ಕಾರದ ಚಿಂತನೆ ಸಾಗತೊಡಗಿದ ಅಪಾಯಕಾರಿ ಜಾಡನ್ನು ಸೂಚಿಸಿತು.  ಇವೆರಡಕ್ಕೂ ವಿರೋಧ ವ್ಯಕ್ತವಾದದ್ದು ಮತ್ತು ಮೂಢನಂಬಿಕೆಗಳನ್ನು ತಡೆಗಟ್ಟುವ ಕಾನೂನಿನ ಕರಡು ನಗೆಪಾಟಲಿಗೀಡಾದದ್ದು ನಿರೀಕ್ಷಿತವೇ ಆಗಿತ್ತು.
ಅನ್ನಭಾಗ್ಯ ಯೋಜನೆಯ ಅಧ್ವಾನದ ಬಗ್ಗೆ, ಅದರ ಫಲ ವ್ಯಾಪಕವಾಗಿ ದುರುಪಯೋಗವಾಗುತ್ತಿರುವ ಬಗ್ಗೆ ಸಾಕಷ್ಟು ವಿವರಗಳು ಎಲ್ಲರಿಗೂ ತಿಳಿದದ್ದೇ.  (ಇದನ್ನು ವರ್ಷದ ಹಿಂದೆಯೇ ಜುಲೈ , ೨೦೧೪ರ ಅಂಕಣದಲ್ಲೂ ಬರೆದಿದ್ದೆ)  ಅದಿಲ್ಲಿ ಚರ್ವಿತಚರ್ವಣವಾಗುವುದು ಬೇಡ.  ಆದರೆ, ಯೋಜನೆಯ ದುರಂತವನ್ನು ಮನಗಾಣಿಸಲು, ನನ್ನ ಮುಂದಿನ ಅವಲೋಕನದ ಜಾಡನ್ನು ಸೂಚಿಸಲು ಎರಡು ಉರಿವ ನೈಜ ಉದಾಹರಣೆಗಳನ್ನಿಲ್ಲಿ ನೀಡುತ್ತೇನೆ.  ರಾಜ್ಯದ ಉತ್ತರ ತುದಿಯಲ್ಲಿರುವ ಹಳ್ಳಿಯೊಂದರಲ್ಲಿ ಮಗನನ್ನು ಕಳೆದುಕೊಂಡಿರುವ, ಕೇವಲ ಕರಿಬೇವಿನ ಸೊಪ್ಪನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳಲು ಹೆಣಗುತ್ತಿರುವ ವೃದ್ಧ ದಂಪತಿಗಳಿಗೆ ಬಿಪಿಎಲ್ ಕಾರ್ಡ್ ಇಲ್ಲ.  ಇದಕ್ಕೆ ವಿರುದ್ಧವಾಗಿ ರಾಜ್ಯದ ದಕ್ಷಿಣ ತುದಿಯ ನಗರವೊಂದರಲ್ಲಿ ಪುಕ್ಕಟೆ ಧಾನ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡುದಾರರೊಬ್ಬರು ನ್ಯಾಯಬೆಲೆ ಅಂಗಡಿಗೆ ಸ್ವಂತ ಕಾರಿನಲ್ಲಿ ಬರುತ್ತಾರೆ.  ಕಾರಿನ ಮುಂದಿನ ನಿಲ್ದಾಣ ಹತ್ತಿರದ ಹೋಟೆಲ್.  ಎರಡು ಊರುಗಳ ನಡುವೆ, ಕಾವೇರಿಯಿಂದಮಾ ಕೃಷ್ಣಾವರಮಿರ್ಪ ಕರುನಾಡಿನಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ನಡೆಯುತ್ತಿರುವ ಅನ್ಯಾಯಗಳ ಸಂಖ್ಯೆ ಒಂದು ಕೇಜಿಯಲ್ಲಿರುವ ಅಕ್ಕಿಕಾಳುಗಳಿಗಿಂತಲೂ ಹೆಚ್ಚು.
ಯೋಜನೆಯ ವ್ಯಾಪಕ ದುರುಪಯೋಗಕ್ಕೆ ಸರ್ಕಾರವನ್ನು ಹೊಣೆಯಾಗಿಸಬಾರದು, ನಿಜ.  ಇದರ ಹಿಂದಿರುವುದು ಜನರ ಅಪ್ರಾಮಾಣಿಕತೆ ಎನ್ನುವುದೂ ನಿಜ.  ಆದರೆ ಇದನ್ನು ತಡೆಯಲಾಗದ್ದರಲ್ಲಿ ಸರ್ಕಾರದ ಹೊಣೆಗೇಡಿತನವಿದೆ ಎನ್ನುವುದೂ ಅಷ್ಟೇ ನಿಜ. ಮೇಲೆ ಉಲ್ಲೇಖಿಸಿದಂತಹ ಅಸಹಾಯ ವೃದ್ಧರು, ದುಡಿದು ಅನ್ನ ಸಂಪಾದಿಸಿಕೊಳ್ಳಲಾಗದ ದುರ್ದೈವಿಗಳು ನಮ್ಮಲ್ಲಿದ್ದಾರೆ.  ಅವರನ್ನು ಗುರುತಿಸಿ, ಬದುಕಲು ಅಗತ್ಯವಾದ ವಸ್ತುಗಳನ್ನು ಪೂರೈಸುವುದು ಸರ್ಕಾರದ, ಸಮಾಜದ ಆದ್ಯ ಕರ್ತವ್ಯ.  ಹಾಗೆಯೇ ದುರ್ಫಲಾನುಭವಿಗಳನ್ನೂ ಹುಡುಕಿ ಹೊರಗಿಡುವುದೂ ಅಷ್ಟೇ ಅಗತ್ಯ.   ಇದಾಗಬೇಕಾಗಿರುವುದು ಯುದ್ಧಸನ್ನದ್ಧತೆಯ ವೇಗದಲ್ಲಿ.  ಆದರೆ ಪ್ರಸಕ್ತ ಸರ್ಕಾರದಿಂದ ಅಂತಹದೇನೂ ನಡೆಯುತ್ತಿಲ್ಲ.  ಯೋಜನೆಯ ದುರ್ಫಲಾನುಭವಿಗಳ ವಿರುದ್ಧ ಮಂತ್ರಿಗಳು, ಜಿಲ್ಲಾಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಎಚ್ಚರಿಸುವುದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವುದು ಅಲ್ಲಲ್ಲಿ ನಡೆಯುತ್ತಿದೆ.  ಆದರೆ ಅಕ್ರಮಗಳು ದಿನೇದಿನೇ ಅಧಿಕವಾಗುತ್ತಲೇ ಇರುವುದನ್ನು ನೋಡಿದರೆ ಅವುಗಳನ್ನು ತಡೆಯುವಲ್ಲಿ ಸರ್ಕಾರ ಪೂರ್ಣಮನಸ್ಸಿಟ್ಟು ಕೆಲಸ ಮಾಡುತ್ತಿಲ್ಲ ಎನ್ನುವುದು ವೇದ್ಯವಾಗುತ್ತದೆ.  ಹಾಗಿದ್ದರೆ ಸರ್ಕಾರದ ನೀತಿಯ ಹಿಂದಿರುವುದೇನು?
ಅದು ಕೇವಲ ರಾಜಕೀಯ ಲಾಭದ ನಿರೀಕ್ಷೆ ಮಾತ್ರ, ಬಡಜನಪರ ಕಾಳಜಿಯಲ್ಲ.  ಅಧಿಕಾರಕ್ಕೆ ಬಂದ ದಿನ ಒಂದು ರೂಪಾಯಿಗೆ ಕೆ.ಜಿ. ಅಕ್ಕಿಯೆಂದು ಮುಖ್ಯಮಂತ್ರಿಗಳು ಘೋಷಿಸಿದದ್ದರ ಹಿಂದಿದ್ದದ್ದು ಒಂದಕ್ಕೊಂದು ಪೂರಕವಾದ ಎರಡು ರಾಜಕೀಯ ಕಾರಣಗಳು.  ಒಂದು- ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಆಯ್ಕೆ ಅವಿರೋಧವಾದದ್ದಲ್ಲ ಎಂಬ ಅರಿವು, ಹಾಗೂ ಅದು ಯಾವಾಗ ಬೇಕಾದರೂ ಕೈತಪ್ಪಿಹೋಗಬಹುದೆಂಬ ಕಳವಳ ಅವರಲ್ಲಿದ್ದ ಸಾಧ್ಯತೆಯಿದೆ.  ಸಿಕ್ಕಿದ ಅವಕಾಶದಲ್ಲಿ ಏನನ್ನಾದರೂ ಸಾಧಿಸಿ ಜನಮಾನ್ಯನಾಗಬೇಕೆಂಬ ತುಡಿತ ಅವರನ್ನು ಭಾಗ್ಯ ಯೋಜನೆಗಳಿಗೆ ಪ್ರೇರೇಪಿಸಿರಬಹುದು.  ಎರಡು- ಸಧ್ಯಕ್ಕೆ ತಾತ್ಕಾಲಿಕ ಎಂದೆನಿಸಿದ ತಮ್ಮ ಅಧಿಕಾರಾವಧಿಯನ್ನು ಕೊನೇಪಕ್ಷ ಐದು ವರ್ಷಗಳವರೆಗೆ ವಿಸ್ತರಿಸಲು ಸಿದ್ದರಾಮಯ್ಯನವರು ಎಣಿಕೆ ಹಾಕಿದ್ದಿರಬಹುದು.  ಅದಕ್ಕಾಗಿ ಅವರು ಕಣ್ಣಿಟ್ಟದ್ದು ವರ್ಷದೊಳಗೆ ನಡೆಯಲಿದ್ದ ಲೋಕಸಭಾ ಚುನಾವಣೆಗಳು.  ತಮ್ಮ ಯೋಜನೆಗಳ ಮೂಲಕ ಕಾಂಗ್ರೆಸ್ ವೋಟ್ಬ್ಯಾಂಕ್ಗಳನ್ನು ವಿಸ್ತರಿಸಿ ಹಿಂದೆ ದೇವರಾಜ ಅರಸು ಮಾಡಿದ್ದಂತೆ ಕರ್ನಾಟಕವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿಸುವುದು, ತನ್ಮೂಲಕ ಪಕ್ಷದ ಹೈಕಮಾಂಡ್ಗೆ ತಾವು ಪ್ರಿಯ ಹಾಗೂ ಅನಿವಾರ್ಯವೆನಿಸುವುದು.  ಈಗ ಅನ್ನಭಾಗ್ಯ ಯೋಜನೆಯನ್ನು ಮಾರ್ಪಡಿಸಿ ಪುಕ್ಕಟೆಯಾಗಿ ಅಗತ್ಯವಸ್ತುಗಳ ವಿತರಣೆಯನ್ನು ಘೋಷಿಸಿದ್ದರ ಹಿಂದಿರುವುದೂ ರಾಜಕೀಯ ಲಾಭದ ನಿರೀಕ್ಷೆ.  ಘೋಷಣೆಯ ಸಮಯ ಗ್ರಾಮಪಂಚಾಯಿತಿ ಚುನಾವಣೆಗಳ ಸಮಯಕ್ಕೆ ಹೊಂದಿಕೊಂಡದ್ದನ್ನು ಗಮನಿಸಿ.  ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುವುದಿಲ್ಲ.  ಆದರೆ, ಪಕ್ಷಗಳು ತೆರೆಯ ಹಿಂದೆ ಕಾರ್ಯಶೀಲವಾಗಿರುತ್ತವೆ ಮತ್ತು ಹೆಚ್ಚಿನ ಪ್ರಭಾವಿ ಅಭ್ಯರ್ಥಿಗಳು ವಿವಿಧ ಪಕ್ಷಗಳ “Proxy”ಗಳಾಗಿರುತ್ತಾರೆ ಎನ್ನುವುದು ಯಾರೂ ಅರಿಯದ ಗುಟ್ಟೇನಲ್ಲ.  ಇದರರ್ಥ, ಅಗತ್ಯವಸ್ತುಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ (ಅವರದಕ್ಕೆ ಯೋಗ್ಯರಾಗಿರದಿದ್ದರೂ ಸಹಾ) ಪುಕ್ಕಟೆಯಾಗಿ ವಿತರಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಭಾವಶಾಲಿಯಾಗಿಸುವುದು ಮೂಲಕ ತಮ್ಮ ಅಧಿಕಾರವನ್ನು ಭದ್ರಗೊಳಿಸಿಕೊಳ್ಳುವುದು ಮಾರ್ಪಾಡುಗೊಂಡ ಅನ್ನಭಾಗ್ಯ ಯೋಜನೆಯ ಹಿಂದಿರುವ ಉದ್ದೇಶ.
ಉನ್ನತ ಸ್ಥಾನವನ್ನು ಬಯಸುವುದು, ಅದು ಸಿಕ್ಕಿದಾಗ ಅಧಿಕಾರಾವಧಿಯನ್ನು ವಿಸ್ತರಿಸಿಕೊಳ್ಳುವುದು ರಾಜಕಾರಣಿಯೊಬ್ಬರ ಸಹಜಗುಣ.  ಇದಕ್ಕೆ ಸಿದ್ದರಾಮಯ್ಯನವರೂ ಹೊರತಲ್ಲ.  ಹೊರತಾಗಕೂಡದು ಸಹಾ.  ಆದರೆ ಅವರು ತಮ್ಮ ಉದ್ದೇಶಸಾಧನೆಗಾಗಿ ಆಯ್ಕೆಮಾಡಿಕೊಂಡಿರುವ ಮಾರ್ಗಗಳು ಪ್ರತಿಗಾಮಿ ಹಾಗೂ ಅನೈತಿಕ.  ಮಾರ್ಗಗಳು ರಾಜಕಾರಣಿಯೊಬ್ಬರಿಗೆ, ರಾಜಕೀಯ ಪಕ್ಷವೊಂದಕ್ಕೆ ತಾತ್ಕಾಲಿಕ ಲಾಭ ತರಬಹುದು.  ಆದರೆ ಅಂತಿಮವಾಗಿ ಅವು ಸಮಾಜದ ಒಂದು ಬಹುದೊಡ್ಡ ವರ್ಗ ಅಪ್ರಾಮಾಣಿಕವಾಗಲು, ಹಾದಿಯಲ್ಲೇ ಮುಂದುವರೆಯಲು, ಮೂಲಕ ಆತ್ಮಗೌರವ ಕಳೆದುಕೊಳ್ಳಲು ಪ್ರೇರೇಪಿಸುತ್ತವೆ.  ಆತ್ಮಗೌರವ ಕಳೆದುಕೊಂಡ ಸಮಾಜವನ್ನು ಹೊಂದಿದ ಯಾವುದೇ ನಾಡಿಗೆ ಒಳ್ಳೆಯ ಭವಿಷ್ಯವಿರುವುದಿಲ್ಲ.  ಇದರ ಅರಿವು ನಮ್ಮ ನಾಯಕರುಗಳಿಗೆ ಅಗತ್ಯವಾಗಿ ಇರಬೇಕು.  ಇಲ್ಲದಿದ್ದರೆ ಮುಂದಿನ ತಲೆಮಾರು ಅವರನ್ನು ಕ್ಷಮಿಸಲಾರದು.  ಅಥವಾ ಈಗಿನ ತಲೆಮಾರೇ ಎಚ್ಚತ್ತುಕೊಂಡರೆ ಮೇಲೆ ಉಲ್ಲೇಖಿಸಿದ ಗೇಬ್ರಿಯಲ್ಗೆ ದರ್ಜಿ ಕೊಟ್ಟಂತಹ ತಪರಾಕಿಯನ್ನು ಮುಂದಿನ ಚುನಾವಣೆಯಲ್ಲಿ ಕೊಟ್ಟು ಮನೆಗೆ ಕಳುಹಿಸುತ್ತದೆ.
ಜೂನ್ ೩೦, ೨೦೧೫
ಲೇಖನಸರಣಿಯ ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

"ವಿಜಯವಾಣಿ" ದೈನಿಕದ ಜೂನ್ ೨೪ - ೩೦, ೨೦೧೫ರ ಸಂಚಿಕೆಗಳಲ್ಲಿನ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಎರಡು ಭಾಗಗಳ ಲೇಖನ

No comments:

Post a Comment