ಕಲ್ಪನೆಗಿಂತಲೂ ವಾಸ್ತವ ಹೆಚ್ಚು ಆಶ್ಚರ್ಯಕರ ಎಂಬ ಮಾತನ್ನು ಕ್ಲೀಷೆಯಾಗುವ
ಮಟ್ಟಿಗೆ ಓದಿ ಕೇಳಿ ಕಸದ ಬುಟ್ಟಿಗೆ ಎಸೆದಿದ್ದರೂ ಅದು ನನ್ನ ಬದುಕಿನಲ್ಲೇ ಈ ಬಗೆಯಾಗಿ ಎದುರು ನಿಂತು
ಅಣಕಿಸುತ್ತದೆ ಎಂದು ನಾನು ಊಹಿಸಿರಲೇ ಇಲ್ಲ.
ಬೇಸಗೆರಜೆ ಮುಗಿದು ಯೂನಿವರ್ಸಿಟಿ ತೆರೆದು ಎಂ. ಎ. ತರಗತಿಯ ಹೊಸ ಬ್ಯಾಚ್‌ಗೆ
ಕ್ಲಾಸುಗಳು ಆರಂಭವಾಗಿ ತಿಂಗಳು ಕಳೆದಿತ್ತು. ಆವತ್ತು
ಸೋಮವಾರ. ನನಗೆ ಹೆಚ್ಚು ಕ್ಸಾಸುಗಳಿಲ್ಲದ ವಾರಾಂತ್ಯದ
ಮುಂದುವರಿಕೆಯಂತೇ ಅನಿಸುವ ಸಾಕಷ್ಟು ಬಿಡುವಿನ ದಿನ.
ಒಂಬತ್ತೂವರೆಗೆ ಯೂನಿವರ್ಸಿಟಿ ತಲುಪಿ ಶುಕ್ರವಾರ ಅಂಚೆಯಲ್ಲಿ ಬಂದಿದ್ದ ಜರ್ನಲ್ ಒಂದನ್ನು
ಹಿಡಿದು ಕೂತೆ. ಆವತ್ತು ಅರ್ಧ ಓದಿದ್ದ ಲೇಖನವೊಂದರ
ಪುಟ ತೆರೆದು ಕನ್ನಡಕ ಸರಿಮಾಡಿಕೊಳ್ಳುತ್ತಿದ್ದಂತೇ ಆ ಹುಡುಗ ಬಂದ.
ಐದೂವರೆ ಅಡಿಗಳ ಸಣಕಲ ಶರೀರ, ಗಡ್ಡಮೀಸೆಗಳ
ಕಪ್ಪು ಛಾಯೆಯೂ ಇಲ್ಲದಂತೆ ನೀಟಾಗಿ ಶೇವ್ ಮಾಡಿದ ಇಪ್ಪತ್ತೊಂದು ವರ್ಷಗಳೆಂದು ತಿಳಿಯಲಾಗದ ಮಗುವಿನ
ಮುಖ, ಎಲ್ಲೋ ಎಂದೋ ನೋಡಿದ್ದೇನೆ ಎಂದೆನಿಸುವ ಅಗಲ ಕಡುಗಪ್ಪು ಕಣ್ಣುಗಳು... ತಿಂಗಳಿಂದ ತರಗತಿಯಲ್ಲಿ ಕಾಣಿಸಿಕೊಂಡು ಪರಿಚಯವಾಗಿದ್ದ, ತಾನೂ
ಮೈಸೂರಿನವನೆಂದು ಏನೋ ಸಂಕೋಚದಲ್ಲಿ ಏನೋ ನಿರೀಕ್ಷೆಯಲ್ಲಿ ಒಮ್ಮೆ ಇಂಗ್ಲಿಷ್‌ನಲ್ಲಿ ಮತ್ತೊಮ್ಮೆ ಕನ್ನಡದಲ್ಲಿ
ಹೇಳಿ ನನ್ನಲ್ಲಿ ತುಸು ಆಸಕ್ತಿ ಮೂಡಿಸಿದ್ದ ಶ್ರೀರಾಮ್.
ಏನು? ಅಂದೆ.
ಸರ್, ಮೈಸೂರಿಗೆ
ಹೋಗಿದ್ದೆ. ಬೆಳಿಗ್ಗೆ ಬಂದೆ ಅಂದ.
ಹೌದಾ? ಸಂತೋಷ. ಮನೇಲಿ ಎಲ್ರೂ
ಆರಾಮ? ಔಪಚಾರಿಕತೆ
ಢಾಳಾಗಿಯೆ ತುಂಬಿದ ದನಿಯಲ್ಲಿ ಕೇಳಿದೆ. ಅವನು ಒಂದು
ಹೆಚ್ಚೆ ಮುಂದೆ ಬಂದ.
ಮನೇಲಿರೋದು ಅಪ್ಪ ಮಾತ್ರ. ಅವರು ಚೆನ್ನಾಗಿದ್ದಾರೆ.
ಕಿಟಕಿಯಾಚೆಗಿನ ಏನೋ
ಸದ್ದಿನಿಂದಾಗಿ ಅತ್ತ ಹೊರಳುತ್ತಿದ್ದ ಮುಖವನ್ನು ಛಕ್ಕನೆ ಅವನತ್ತ ತಿರುಗಿಸಿದೆ. ಅವನು ತಯಾರಾಗಿಯೇ ಇದ್ದ ಅನಿಸುತ್ತದೆ. ತೆಳ್ಳನೆಯ ನಿಶ್ಶಬ್ಧ ನಗುವಿನೊಡನೆ ಹೇಳಿದ: ಅಮ್ಮ ನಮ್ಮ
ಜತೆ ಇಲ್ಲ.
ಏನೋ ಹೇಳಲಾಗದ ನಿರಾಳತೆಯ
ಬೆನ್ನ ಹಿಂದೆಯೇ ಆ ವಿಷಯದ ಬಗ್ಗೆ ಕುತೂಹಲ ತೋರಿಸಬಾರದೆಂಬ ವಿವೇಕ ಮೂಡಿ ಮತ್ತದರ ಹಿಂದೆ ಹೇಗೆ ಪ್ರತಿಕ್ರಿಯಿಸಬೇಕೆಂಬ
ಗೊಂದಲದಲ್ಲಿ ಸಿಲುಕಿ ಕಣ್ಣುಗಳನ್ನು ಅರೆಮುಚ್ಚುತ್ತಿದ್ದಂತೇ ಅವನಿಂದ ಮಾತು ಬಂತು:
ಅಪ್ಪನಿಗೆ ನಿಮ್ಮ ಪರಿಚಯ
ಇದೆಯಂತೆ.
ಹೌದೇ? ಹೇಗೆ?
ಅವನು ಚಣ ನಿಧಾನಿಸಿದ. ಗೊತ್ತಿಲ್ಲ.
ನಿಮ್ಮ ಹೆಸರು ಹೇಳಿದ ತಕ್ಷಣ ಅವರು ಹೀಗಿದ್ದಾರಾ
ಹಾಗಿದ್ದಾರಾ ಅಂತ ಪ್ರಶ್ನೆ ಕೇಳಿದ್ರು. ಅವರು
ಹೇಳಿದ್ದೆಲ್ಲಾ ಸರಿಯಾಗೇ ಇತ್ತು. ಎಲ್ಲಾದಕ್ಕೂ ಹ್ಞೂಂ
ಅಂದೆ. ಈಗ ತುಂಟ ನಿಶ್ಶಬ್ಧ ನಗೆಯಲ್ಲಿ ಅವನ ಬಾಯಿ
ತುಸುವೇ ತೆರೆದು ತುಟಿಗಳು ಎರಡು ದಿಕ್ಕಿಗೆ ವಿಸ್ತರಿಸಿ ಕೆನ್ನೆಗಳು ಉಬ್ಬಿಕೊಂಡವು. ಹುಡುಗ ಮುದ್ದಾಗಿ ಕಂಡ. ಅಗಲ ಕಡುಗಪ್ಪು ಕಣ್ಣುಗಳು ಛಕ್ಕನೆ ಕಿರಿದಾಗಿ ಏನನ್ನೋ ನೆನಪಿಸಲು
ಹೆಣಗಿ ಸೋತವು.
ಮುಂದಿನ ಐದಾರು ನಿಮಿಷಗಳಲ್ಲಿ
ನನ್ನ ಪ್ರಶ್ನೆಗಳಿಗೆ ಅವನ ಪ್ರತಿಕ್ರಿಯೆಗಳು ಉತ್ತರಗಳೆನಿಸದೇ ನನ್ನಲ್ಲಿ ಮತ್ತಷ್ಟು ಪ್ರಶ್ನೆಗಳನ್ನು
ಮೂಡಿಸಿದವು.
ನನಗಿಂತಲೂ ಐದಾರು ವರ್ಷಗಳಷ್ಟು
ಹಿರಿಯರಾದ, ತುಮಕೂರಿನ ಕಡೆಯ ಹಳ್ಳಿಯೊಂದರಲ್ಲಿ ಹುಟ್ಟಿ ತುಮಕೂರು, ಬೆಂಗಳೂರುಗಳಲ್ಲಿ
ಓದಿ ಬ್ಯಾಂಕ್ ಕೆಲಸಕ್ಕೆ ಸೇರಿ ಮೂವತ್ತು ವರ್ಷಗಳು ಊರೂರು ಅಲೆದು ಸಾಕಾಗಿ ಸ್ವಯಂ ನಿವೃತ್ತಿ ತೆಗೆದುಕೊಂಡು
ಕಳೆದ ನಾಲ್ಕು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿರುವ ಸಂಪತ್ ಅವರನ್ನು ನಾನು ಎಲ್ಲಿ ಹೇಗೆ ಭೇಟಿಯಾಗಿರಬಹುದೆಂಬ
ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ.
ಮುಂದಿನ ಎರಡು ದಿನಗಳಲ್ಲಿ
ಶ್ರೀರಾಮ್ ಎರಡು ಸಲ ತನ್ನ ತಂದೆ ನನ್ನ ಬಗ್ಗೆ ಫೋನ್‌ನಲ್ಲಿ ವಿಚಾರಿಸಿಕೊಂಡದ್ದಾಗಿ ಹೇಳಿದ. ನಿಮ್ಮನ್ನ ಭೇಟಿಯಾಗಬೇಕು, ನಿಮ್ಮ
ಜತೆ ಮಾತಾಡಬೇಕು ಅಂತಿದ್ದಾರೆ ಸರ್, ಇನ್ನೊಂದೆರಡು ವಾರದಲ್ಲಿ ಪಾಂಡಿಚೆರಿಗೇ ಬರ್ತಾರೆ ಸರ್ ಎಂದು ಎರಡೂ
ಸಲವೂ ಹೇಳಿದ. ಮೂರನೆಯ ದಿನ ಅವನು ತರಗತಿಯಲ್ಲಿ ಕಾಣಿಸಲಿಲ್ಲ. ತರಗತಿಗೆ ಪ್ರವೇಶಿಸುತ್ತಿದ್ದಂತೇ ಕಣ್ಣುಗಳು ಅವನನ್ನು ಹುಡುಕುತ್ತಿದ್ದುದು, ಅವನು
ಕಾಣಿಸದಿದ್ದಾಗ ಏನೋ ಹೇಳಲಾಗದ ನಿರಾಶೆ ಮನಸ್ಸಿಡೀ ತುಂಬಿಕೊಳ್ಳುತ್ತಿದ್ದುದು ಏಕೆಂದು ನನಗೆ ಅರ್ಥವಾಗುತ್ತಲೇ
ಇರಲಿಲ್ಲ. ಆದರೆ ಆ ಅಗಲ ಕಡುಗಪ್ಪು ಕಣ್ಣುಗಳು ದಿನವಿಡೀ
ನನ್ನ ಕಣ್ಣ ಮುಂದೆ ಮತ್ತೆ ಮತ್ತೆ ನೆರಳು ಬೆಳಕಿನಂತೆ ಕಾಣಿಸಿ ಮರೆಯಾಗಿ ಗೊಂದಲಗಟ್ಟಿಸಿದ್ದಂತೂ ನಿಜ.
ಮತ್ತೆರಡು ದಿನಗಳಲ್ಲೂ
ಅವನು ಕಾಣಿಸದಾಗ ಕುತೂಹಲ ತಡೆಯಲಾಗದೇ ತರಗತಿಯ ಇತರ ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ಬಂದ ಉತ್ತರ
ಕೇಳಿ ಬೇಜಾರಾಯಿತು.
ಸ್ಕೂಟರ್ ಅಫಘಾತದಲ್ಲಿ
ಎರಡೂ ಕಾಲುಗಳಿಗೆ ಗಾಯಗಳಾಗಿ ಆಗಿ ಶ್ರೀರಾಮ್‌ನ ತಂದೆ ಆಸ್ಪತ್ರೆಯಲ್ಲಿದ್ದರು. ವಿಷಯ ತಿಳಿದ ಶ್ರೀರಾಮ್ ಮೈಸೂರಿಗೆ ಓಡಿದ್ದ.
ವಿದ್ಯಾರ್ಥಿಯೊಬ್ಬನಿಂದ
ಶ್ರೀರಾಮ್‌ನ ಮೊಬೈಲ್ ನಂಬರ್ ಪಡೆದುಕೊಂಡು ಸಂಜೆ ಫೋನ್ ಮಾಡಿದೆ.
ನನ್ನ ಕರೆಯನ್ನು ಅವನು
ನಿರೀಕ್ಷಿರಲಿಲ್ಲವೆಂದು ಕಾಣುತ್ತದೆ, ನಮಸ್ಕಾರ ಸರ್, ಗುಡ್ ಈವ್ನಿಂಗ್ ಸರ್ ಎಂದು
ಮೂರು ನಾಕು ಸಲ ತಡವರಿಸುತ್ತಾ ಒದರಿದ. ಹೇಗಿದ್ದಾರಪ್ಪ
ನಿಮ್ಮ ತಂದೆ? ಅಂದೆ. ಅವನಿಂದ ಉತ್ತರ
ಬರಲಿಲ್ಲ. ಅನುಮಾನಿಸುತ್ತಲೇ ಮತ್ತೆ ಕೇಳಿದೆ. ಈಗ ಬಿಡಿಬಿಡಿಯಾಗಿ ಮಾತುಗಳು ಬಂದವು.
ಎಡಗಾಲಿನ ಗಾಯಗಳು ಒಂದೆರಡು
ವಾರಗಳಲ್ಲಿ ವಾಸಿಯಾಗಬಹುದಾದರೂ ತೊಡೆ ಮೂಳೆ ಮುರಿದಿರುವ ಬಲಗಾಲು ಸರಿಯಾಗಲು ಆರೇಳು ತಿಂಗಳುಗಳೇ ಬೇಕಾಗಬಹುದು
ಎಂದು ಹೇಳಿ ಅವನು ಬಿಕ್ಕತೊಡಗಿದಾಗ ನಾಲಿಗೆಗೆ ಬಂದ ಒಂದೆರಡು ಸಾಂತ್ವನದ ಮಾತುಗಳು ಅರ್ಥಹೀನವೆನಿಸಿ
ಕೇವಲ ಛೆಛೆಛೆ ಎಂದು ನನ್ನಷ್ಟಕ್ಕೇ ನಾನು ಗೊಣಗಿಕೊಳ್ಳುತ್ತಿದ್ದಂತೇ ಅವನೇ ಆಮೇಲೆ ಮಾತಾಡ್ತೀನಿ ಸರ್
ಎಂದು ಪಿಸುಗಿ ಫೋನಿಟ್ಟುಬಿಟ್ಟ.
ಪಕ್ಕದಲ್ಲಿದ್ದ ಲಲಿತೆಗೆ
ಎಲ್ಲವನ್ನೂ ಹೇಳಿದೆ. ಸಂಪತ್ ಬಗ್ಗೆ ಹೇಳಿ ನಿನಗೇನಾದರೂ
ಗೊತ್ತಾ ಅಂದೆ. ಗೊತ್ತಿಲ್ಲ ಅಂದಳು ನಿರಾಶೆಯಿಂದ. ಇಬ್ಬರೂ ಮೌನವಾಗಿ ಕೂತೆವು. ನಮ್ಮನ್ನು ಎಚ್ಚರಿಸಿದ್ದು ಶ್ರೀರಾಮ್‌ನ ಫೋನ್.
ಸಾರಿ ಸರ್, ಆವಾಗ್ಲೇ
ಸರಿಯಾಗಿ ಮಾತಾಡಕ್ಕೇ ಆಗ್ಲಿಲ್ಲ ಎಂದು ಆರಂಭಿಸಿ ತನ್ನ ತಂದೆಯನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದೂ, ಹೀಗಾಗಿ
ತಾನು ಅವರನ್ನು ಬಿಟ್ಟು ಪಾಂಡಿಚೆರಿಗೆ ಬರಲಾಗುವುದಿಲ್ಲವೆಂದೂ, ಮುಂದಿನ
ವರ್ಷ ಮೈಸೂರಿನಲ್ಲೇ ಗಂಗೋತ್ರಿಗೆ ಸೇರಿಕೊಳ್ಳುವುದಾಗಿಯೂ ಅವನು ಹೇಳಿದಾಗ ಪಾಪ ಅನಿಸಿತು. ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಅವನೇ ಮೈಸೂರಿಗೇನಾದ್ರೂ ಬರ್ತಿದೀರಾ ಸರ್? ಅಂದ. ಅಂತಹ ಯಾವ ಯೋಜನೆಯೂ ನನಗಿರಲಿಲ್ಲ. ಅವನ ಸಮಾಧಾನಕ್ಕಾದರೂ ಬರುತ್ತೇನೆಂದು ಹೇಳಬೇಕೆಂದುಕೊಳ್ಳುತ್ತಿದ್ದಂತೇ
ಅವನೇ ಬಂದ್ರೆ ನಮ್ಮಪ್ಪನ್ನ ನೋಡೋಕೆ ಬನ್ನಿ ಸರ್, ನಿಮ್ಮ
ಜತೆ ಮಾತಾಡ್ಬೇಕು ಅಂತಿದಾರೆ ಅಂದ. ದನಿಯಲ್ಲಿದ್ದ
ಅರ್ತತೆ ಗಾಢವಾಗಿ ತಟ್ಟಿತು. ಹಿಂದೆ ಮುಂದೆ ಯೋಚಿಸದೇ
ಒಂದೆರಡು ವಾರದಲ್ಲಿ ಬರ್ತಾ ಇದೀವಿ ಅಂದೆ. ಥ್ಯಾಂಕ್ಯೂ
ಸರ್ ಅಂದ. ನೀವೆಲ್ಲಾ ಆರಾಮಾನಾ ಸರ್? ಎಂದು
ಅವನು ಮಾತು ಮುಂದುವರೆಸಿದಾಗ ಉತ್ತರಿಸುವ ಮನಸ್ಸಾಗದೇ ಇದೆಲ್ಲಾ ಹೇಗಾಯ್ತು? ಅಂದೆ. ಬಂದ ಉತ್ತರ ನನ್ನ ಬೇಸರವನ್ನು ಮತ್ತಷ್ಟು ಹೆಚ್ಚಿಸಿತು.
ಸ್ಕೂಟರ್‌ನಲ್ಲಿ ಹೋಗುತ್ತಿದ್ದ
ಸಂಪತ್‌ರ ಬಲತೋಳಿಗೆ ಪಕ್ಕದ ಬಯಲಿನಲ್ಲಿ ಚಿನ್ನಿ ದಾಂಡು ಆಡುತ್ತಿದ್ದ ಮಕ್ಕಳಲ್ಲೊಬ್ಬ ಹೊಡೆದ ಚಿನ್ನಿ
ಬಡಿಯಿತಂತೆ. ವಾಹನದ ಮೇಲೆ ಹಿಡಿತ ತಪ್ಪಿ ಅಡ್ಡಾದಿಡ್ಡಿ
ಓಡಿಸಿ ಅವರು ರಸ್ತೆ ಬಿಟ್ಟು ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದರಂತೆ.
ಹೀಗೂ ಆಗಬೇಕಿತ್ತೇ ಅನಿಸಿ
ಮನಸ್ಸಿಡೀ ಭಾರವಾಯಿತು.
ಕ್ಯಾಲೆಂಡರ್ ನೋಡಿದೆ. ಇನ್ನು ಹತ್ತು ದಿನಕ್ಕೆ ಆಗಸ್ಟ್ ಹದಿನೈದು. ಈ ಸಲ ಸೋಮವಾರ.
ಮರುದಿನ ಹದಿನಾರು. ಪಾಂಡಿಚೆರಿಯ ಸ್ವಾತಂತ್ರ್ಯ
ದಿನ. ಅದೂ ರಜಾ. ಶನಿವಾರ ಭಾನುವಾರಗಳ ವಾರದ ರಜಾಗಳ ಜತೆ ಸೋಮವಾರ ಮಂಗಳವಾರಗಳೂ
ಸೇರಿ ಒಟ್ಟು ನಾಲ್ಕು ದಿನಗಳ ರಜೆ. ನನ್ನ ಅದೃಷ್ಟವೋ, ಶ್ರೀರಾಮ್‌ನ
ತಂದೆಯ ಅದೃಷ್ಟವೋ ಗೊತ್ತಿಲ್ಲ.
ಮೈಸೂರಿಗೆ ಹೋಗಿ ಏಳೆಂಟು
ತಿಂಗಳುಗಳೇ ಕಳೆದಿತ್ತು. ಪಾಂಡಿಚೆgಯಲ್ಲಿ ಮನೆ ಕಟ್ಟಿಸುತ್ತಿದ್ದುದರಿಂದ
ಬೇಸಿಗೆ ರಜೆಯಲ್ಲೂ ಹೋಗಲಾಗಿರಲಿಲ್ಲ. ಹೀಗಾಗಿ ಲಲಿತೆಯೂ
ಉತ್ಸಾಹಗೊಂಡಳು. ಪುಟ್ಟಿಗೂ ಖುಷಿಯಾಯಿತೆಂದು ಅಂದುಕೊಂಡೆ. ಶ್ರೀರಾಮ್‌ಗೆ ನಾನೇ ಪೋನ್ ಮಾಡಿ ಹೇಳಿದಾಗ ಥ್ಯಾಂಕ್ಸ್ ಸರ್, ಕಾಯ್ತಾ
ಇರ್ತೀನಿ ಸರ್ ಎಂದು ಎರಡು ಸಲ ಹೇಳಿದ.
*
* *
ಶನಿವಾರ ಬೆಳಿಗ್ಗೆ ಬೆಳಿಗ್ಗೆಯೇ ಹೊರಟುಬಿಡಬೇಕೆಂದು ನನ್ನ ಯೋಚನೆಯಾಗಿತ್ತು. ಆದರೆ ಮನೆಯಲ್ಲೇ ಬ್ರೇಕ್‌ಫಾಸ್ಟ್ ಮುಗಿಸಿಕೊಂಡು ಹೊರಡಬೇಕೆಂದೂ
ದಾರಿಯಲ್ಲಿ ಸಿಗುವ ಕೊಳಕು ಹೋಟೆಲ್‌ಗಳಿಗೆ ಹೋಗಬಾರದೆಂದೂ ಲಲಿತೆ ಮಾಮೂಲಿನಂತೆ ಕಂಡೀಷನ್ ಹಾಕಿದ್ದನ್ನು
ಮಾಮೂಲಿನಂತೇ ಒಪ್ಪಿಕೊಂಡೆ. ಆದರೆ ಲಂಚ್‌ಗೆಂದು ಆಕೆ
ಮತ್ತೇನೋ ತಯಾರಿ ಮಾಡಹೊರಟದ್ದನ್ನು ಮಾತ್ರ ತಡೆದೆ.
ಹೊರಡುವ ಸಮಯದಲ್ಲಿ ಅವಳು ಅದೂಇದೂ ಅಂತ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಒದ್ದಾಡುವುದು
ನನಗಿಷ್ಟವಿರಲಿಲ್ಲ. ಕಳೆದ ಸಲ ಹೊಸೂರಿನಲ್ಲಿ ಚಿಕನ್
ಬಿರಿಯಾನಿ ತಿಂದ ಹೋಟೆಲ್ ಕ್ಲೀನಾಗಿತ್ತು ಅಲ್ಲವಾ ಎಂದು ನೆನಪಿಸಿ, ನನ್ನ
ಪರವಾಗಿ ನಿಂತ ಪುಟ್ಟಿಯ ಸಹಾಯವನ್ನು ಧಾರಾಳವಾಗಿಯೇ ತೆಗೆದುಕೊಂಡು ಇಬ್ಬರೂ ಸೇರಿ ಲಲಿತೆಯನ್ನು ಅಡಿಗೆಮನೆಯಿಂದ
ಹೊರಗೆಳೆದುತಂದೆವು. ತುಸು ಗೊಣಗಾಡುತ್ತಾ ತುಸು ನಗುತ್ತಾ
ಅವಳು ಕೂದಲಿಗೆ ಬಾಚಣಿಗೆ ಹೂಡಿದಾಗ ನೆiದಿಯಿಂದ ಅಂದಿನ ಪೇಪರ್ ಮೇಲೆ ಕಣ್ಣಾಡಿಸತೊಡಗಿದೆ.
ತಿಂಡಿ ತಿಂದು ಒಂಬತ್ತು
ಗಂಟೆಯ ಹೊತ್ತಿಗೆ ಹೊರಟೆವು. ಎರಡುಗಂಟೆಯ ಹೊತ್ತಿಗೆ
ಹೊಸೂರು ತಲುಪಿ ಲಂಚ್ ಮುಗಿಸಿ ಹೊರಟು ಮೈಸೂರು ತಲುಪಿ ಅಕ್ಕನ ಮನೆ ಮುಂದೆ ಗಾಡಿ ನಿಲ್ಲಿಸಿದಾಗ ಸಮಯ
ಸರಿಯಾಗಿ ಐದುಗಂಟೆ ನಲವತ್ತು ನಿಮಿಷ. ಮೈಸೂರು ಮಳೆಯಲ್ಲಿ
ಮೀಯುತ್ತಿತ್ತು. ಹೊಸೂರಿನಿಂದ ಹೊರಟಾಗಿನಿಂದಲೂ ಹಿಂದಿನ
ಸೀಟಿನಲ್ಲಿ ಪವಡಿಸಿದ್ದ ಲಲಿತೆ ಗಕ್ಕನೆ ಎದ್ದು ಮಳೆಯ ಪರದೆಯಲ್ಲಿ ಮುಸುಕಿದ್ದ ಕಿಟಕಿಗಳತ್ತ ಬೆರಗಿನ
ನೋಟ ಹೋಡಿ ಇದೆಲ್ಲಿದ್ದೀವಿ ನಾವು? ಎಂದಾಗ ನಾನು ಮತ್ತು ಪುಟ್ಟಿಯ ನಗೆಯ ಜತೆ ಎರಡೂ ಕೈಗಳಲ್ಲಿ ಒಂದೊಂದು
ಬಿಡಿಸಿದ ಛತ್ರಿಗಳನ್ನು ಹಿಡಿದುಕೊಂಡು ಕಾರಿನ ಬಳಿ ಓಡಿಬಂದ ಅಕ್ಕನ ನಗೆಯೂ ಸೇರಿಕೊಂಡಿತು.
ಶ್ರೀರಾಮ್‌ಗೆ ಫೋನ್
ಮಾಡಿ ಮೈಸೂರು ತಲುಪಿದ ಬಗ್ಗೆ ಹೇಳಿದೆ. ನಾಳೆ ಬೆಳಿಗ್ಗೆ
ಹತ್ತು ಗಂಟೆಯ ಹೊತ್ತಿಗೆ ಭೇಟಿಯಾಗುವಾ ಅಂದಾಗ ಹ್ಞೂಂ ಅಂದ. ಅಡ್ರೆಸ್ ಹೇಳಿ ಸರ್, ಬೈಕ್
ತಗೋಂಡು ಬಂದು ಕರಕೊಂಡು ಹೋಗ್ತೀನಿ ಅಂದವನಿಗೆ ನೀವೇನೂ ಬರೋದು ಬೇಡ, ನಾನು
ಪಾಂಡಿಚೆರಿಯಿಂದ ಬಂದಿರೋದು ನನ್ನ ಕಾರ್‌ನಲ್ಲೇ. ಆಸ್ಪತ್ರೆಗೆ
ನಾನೇ ಬರ್ತೀನಿ. ಅಡ್ರೆಸ್ ಹೇಳಿದ್ರೆ ಸಾಕು ಅಂದೆ. ನಾನು ಕೇಳಿಯೇ ಇಲ್ಲದ ಆಸ್ಪತ್ರೆಯ ವಿಳಾಸವೊಂದನ್ನು ಬಿಡಿಬಿಡಿಯಾಗಿ
ಒಂದೊಂದು ಪದವನ್ನೂ ಡಿಕ್ಟೇಷನ್ ಕೊಡುವಂತೆ ಎರಡೆರಡು ಸಲ ಎತ್ತರದ ದನಿಯಲ್ಲಿ ಹೇಳಿದ.
ರಾತ್ರಿ ತುಂಬಾ ಹೊತ್ತಿನವರೆಗೆ
ಮಳೆ ಸುರಿಯತ್ತಲೇ ಇತ್ತು. ಊಟವಾದ ಮೇಲೆ ಲಲಿತೆ ಮತ್ತು
ಪುಟ್ಟಿ ಅಕ್ಕನ ಜತೆ ಅವಳ ಕೋಣೆ ಸೇರಿಕೊಂಡರು. ಅವರ
ಮಾತುಗಳು ಮಳೆಯ ಹಿನ್ನೆಲೆಯೊಂದಿಗೆ ತುಂಬಾ ಹೊತ್ತಿನವರೆಗೆ ಕೇಳಿಬರುತ್ತಿದ್ದವು. ಆಯಾಸವಾಗಿದ್ದರೂ ನಿದ್ದೆಯೇ ಬರಲಿಲ್ಲ. ನಾಳೆ ಭೇಟಿಯಾಗಲಿರುವ ಸಂಪತ್‌ರ ಬಗ್ಗೆ ಯೋಚಿಸುತ್ತಾ ಹಾಸಿಗೆಯಲ್ಲಿ
ಹೊರಳಾಡಿದೆ. ಅವರನ್ನು ನಾನೆಲ್ಲಿ ಭೇಟಿಯಾಗಿರಬಹುದು
ಎಂಬ ಪ್ರಶ್ನೆಯ ಜತೆ ಅವರ ಹೆಂಡತಿಯೇಕೆ ಅವರಿಂದ ದೂರವಿದ್ದಾರೆ, ಶ್ರೀರಾಮ್‌ನ
ಒಂದು ವರ್ಷದ ವಿದ್ಯಾಭ್ಯಾಸ ಹಾಳಾಯಿತಲ್ಲ, ಈಗಲಾದರೂ ಅವನ ತಾಯಿ ಹಿಂತಿರುಗಿ ಬಂದು ಗಂಡನ ಜವಾಬ್ದಾರಿ ತೆಗೆದುಕೊಂಡರೆ
ತಂದೆ ಮಗ ಇಬ್ಬರಿಗೂ ಅನುಕೂಲವಾಗಬಹುದಲ್ಲ ಎಂಬ ಹಲವು ಹತ್ತು ಪ್ರಶ್ನೆಗಳು ನನ್ನನ್ನು ತುಂಬಾ ಹೊತ್ತಿನವರೆಗೆ
ಕಾಡುತ್ತಿದ್ದವು.
ಭಾನುವಾರ ಬೆಳಿಗ್ಗೆ
ಎದ್ದಾಗ ಎಂಟು ಗಂಟೆಯಾಗಿಹೋಗಿತ್ತು. ಮಳೆ ಅದ್ಯಾವಾಗ
ನಿಂತಿತ್ತೋ ಹಿತ್ತಲಲ್ಲಿ ಎಳೆಬಿಸಿಲು ಹರಡಿಕೊಂಡಿತ್ತು.
ಜತೆಗೆ ತಣ್ಣನೆಯ ಗಾಳಿ.
ಪಾಂಡಿಚೆರಿಯಿಂದ ಹೊರಡುವಾಗ
ಹಾಕಿದ್ದ ಯೋಜನೆಯಂತೆ ತಿಂಡಿಯ ನಂತರ ನಾನು ಲಲಿತೆಯನ್ನು ಅವಳ ತವರಿನಲ್ಲಿ ಬಿಟ್ಟು ಅಲ್ಲಿ ಹತ್ತು ನಿಮಿಷ
ಕೂತ ಶಾಸ್ತ್ರ ಮಾಡಿ ಹೊರಟು ಶ್ರೀರಾಮ್‌ನ ತಂದೆಯನ್ನು ನೋಡಿ ನಂತರ ಬೇಕಾದ ಕಡೆ ಅಲೆದು ದೊರೆ ಮತ್ತು
ಮಾದಪ್ಪನವರನ್ನು ಭೇಟಿಯಾಗಿ ಸಂಜೆಯ ಊಟದ ಹೊತ್ತಿಗೆ ಲಲಿತೆಯ ತವರುಮನೆ ತಲುಪಬೇಕಾಗಿತ್ತು. ಆದರೆ ಬೆಳಗಾಗುವ ಹೊತ್ತಿಗೆ ಲಲಿತೆ ಎಲ್ಲವನ್ನೂ ಬದಲಾಯಿಸಿದ್ದಳು.
ಚಿಕ್ಕಂದಿನಿಂದ ಬೆಳೆಸಿಕೊಂಡಿದ್ದ
ಅಭ್ಯಾಸದಂತೆ ಹಿತ್ತಲಿನ ತೊಟ್ಟಿಯ ಬಳಿ ಹಲ್ಲುಜ್ಜಿ ಒಳಗೆ ಬಂದಾಗ ಚಹಾದ ಲೋಟ ಕೈಗಿತ್ತ ಅಕ್ಕನೂ, ಅವಳ ಪಕ್ಕ
ತುಂಟನಗೆ ಸೂಸುತ್ತಾ ನಿಂತ ಲಲಿತೆಯೂ ಹೇಳಿದ ಮಾತುಗಳ ಪ್ರಕಾರ ತಿಂಡಿಯ ನಂತರ ಅಕ್ಕನೇ ಲಲಿತೆಯನ್ನು
ಅವಳ ತವರಿಗೆ ತಲುಪಿಸುವುದೆಂದೂ, ಜತೆಗೆ ಇಡೀ ಭಾನುವಾರ ಅಕ್ಕನೂ ಲಲಿತೆಯ ತವರುಮನೆಯಲ್ಲೇ ಇರುವುದೆಂದೂ
ನಿರ್ಧಾರವಾಗಿತ್ತು. ನಾನು ನನ್ನ ಅಲೆದಾಟವನ್ನು ಆದಷ್ಟು
ಬೇಗನೆ ಮುಗಿಸಿ ಮಧ್ಯಾಹ್ನದ ಊಟದ ಹೊತ್ತಿಗೆ ಅಲ್ಲಿಗೇ ತಲುಪಬೇಕೆಂದು ಇಬ್ಬರೂ ತಾಕೀತು ಮಾಡಿಬಿಟ್ಟರು. ಅಕ್ಕನೂ ಲಲಿತೆಯೂ ಒಟ್ಟಿಗೆ ಸೇರಿಬಿಟ್ಟಾಗ ನನಗೂ ಪುಟ್ಟಿಗೂ
ಯಾವ ಮಾತಿಗೂ ಅವಕಾಶವಿಲ್ಲವೆನ್ನುವುದು ನಮ್ಮಿಬ್ಬರ ಇದುವರೆಗಿನ ಅನುಭವ.
*
* *
ಹೆಚ್. ಡಿ. ಕೋಟೆ ರಸ್ತೆಯಲ್ಲಿ
ಮೈಸೂರ್ ಪಬ್ಲಿಕ್ ಸ್ಕೂಲ್‌ಗೆ ಅರ್ಧ ಕಿಲೋಮೀಟರ್ ಆಚೆ ಎತ್ತರದ ಹಸಿರುಮರಗಳ ನಡುವೆ ಹುದುಗಿದ್ದ, ಮೊದಲ
ನೋಟಕ್ಕೆ ಆಸ್ಪತ್ರೆಯೆಂದು ಗುರುತಿಸಲಾಗದ, ಫಕ್ಕನೆ ನೋಡಿದರೆ ಯಾರೋ ಶ್ರೀಮಂತರ ಐಷಾರಾಮೀ ನಿವಾಸದಂತೆ ಕಾಣುವ ಆ
ಹೊಚ್ಚಹೊಸ ಒಂದಂತಸ್ತಿನ ಕಟ್ಟಡವನ್ನು ಪತ್ತೆ ಮಾಡುವುದು ಕಷ್ಟವಾಗಲಿಲ್ಲ. ಗೇಟಿನ ಬಳಿಯೇ ನಿಂತಿದ್ದ ಶ್ರೀರಾಮ್ ಕಾರಿನ ಬಳಿ ಓಡಿಬಂದು
ಒಳಗೆ ಪಾರ್ಕಿಂಗ್‌ಗೆ ಸ್ಥಳವಿಲ್ಲವೆಂದು ಆತುರಾತುರವಾಗಿ ಹೇಳಿದಾಗ ಕಾಂಪೌಂಡ್‌ಗೆ ಅಂಟಿಕೊಂಡಂತೇ ನಿಂತಿದ್ದ
ಒಂದಷ್ಟು ಕಾರುಗಳ ನಡುವೆ ನನ್ನದನ್ನೂ ಸೇರಿಸಿದೆ.
ಎರಡು ವಾರಗಳಲ್ಲಿ ಹುಡುಗ
ತುಂಬಾ ಇಳಿದುಹೋಗಿದ್ದ. ಕಣ್ಣುಗಳ ಸುತ್ತ ಮಸುಕಾಗಿ
ಕಪ್ಪು ವರ್ತುಲಗಳು ಕಾಣಿಸಿಕೊಂಡಿದ್ದವು. ತಲೆ ಸರಿಯಾಗಿ
ಬಾಚಿರಲಿಲ್ಲ. ಆದರೆ ಸ್ವಲ್ಪ ಹೊತ್ತಿನ ಹಿಂದೇ ಆತುರಾತುರವಾಗಿ
ಶೇವ್ ಮಾಡಿದಂತೆ ಬೆಳ್ಳಗಿನ ಕೆನ್ನೆಗಳ ಕೆಳಗೆ, ಕಿವಿಗಳ ಹತ್ತಿರ ನಸುಗಪ್ಪು
ಕೂದಲು ಕಲೆಗಳು ಎದ್ದು ಕಾಣುತ್ತಿದ್ದವು. ತಿಂಡಿ ಮಾಡಿ
ಸರ್. ಇಲ್ಲೇ ಕ್ಯಾಂಟೀನ್ ಇದೆ. ಇಡ್ಲಿ ಸಾಂಬಾರ್ ಚೆನ್ನಾಗಿರುತ್ತೆ, ಪೊಂಗಲ್ಲೂ
ಸಿಗುತ್ತೆ ಎಂದು ಏನೇನೋ ಅಡ್ಡಾದಿಡ್ಡಿ ಹೇಳತೊಡಗಿದವನನ್ನು ತಡೆದು ಹೇಗಿದ್ದಾರೆ? ಅಂದೆ. ಈಗ ಪರವಾಗಿಲ್ಲ ಅಂದ. ಹದಿನೈದಿಪ್ಪತ್ತು ಅಡಿಗಳ ನಸುಗತ್ತಲು ಕವಿದಿದ್ದ ಪುಟ್ಟ
ಕಾರಿಡಾರಿನಲ್ಲಿ ನಡೆಸಿ ಮೂಲೆಯ ಕೋಣೆಯ ಮುಂದೆ ನಿಲ್ಲಿಸಿ ಒಂದ್ನಿಮಿಷ ಇರಿ ಎಂದು ಹೇಳಿ ಒಳಗೆ ಹೋದವನು
ಐದಾರು ನಿಮಿಷಗಳಾದರೂ ಹೊರಗೆ ಬರಲಿಲ್ಲ. ಒಳಗಿನಿಂದ
ಯಾವ ಶಬ್ದವೂ ಕೇಳಿಬರಲಿಲ್ಲ.
ಮುಚ್ಚಿದ್ದ ಎರಡುಕೋಣೆಗಳಾಚೆ
ಬಾಗಿಲು ತೆರೆದಿತ್ತು. ಮೂರುನಾಲ್ಕು ವಾರ್ಡ್‌ಬಾಯ್‌ಗಳು, ನರ್ಸ್‌ಗಳು
ಒಳಗೆ ಹೊರಗೆ ಆತುರಾತುವಾಗಿ ಓಡಾಡುತ್ತಿದ್ದರು. ಬಿಳೀಪಂಚೆ, ತುಂಬುತೋಳಿನ
ಶರ್ಟಿನಲ್ಲಿದ್ದ ಒಬ್ಬ ದಪ್ಪನೆಯ ವ್ಯಕ್ತಿ ಒಮ್ಮೆ ತೆರೆದ ಬಾಗಿಲತ್ತ ಮತ್ತೊಮ್ಮೆ ನನ್ನತ್ತ ದುರುಗುಟ್ಟಿ
ನೋಡುತ್ತಾ ನಿಂತಿದ್ದ. ಇರಿಸುಮುರಿಸಾದಂತೆನಿಸಿ ನೋಟವನ್ನು
ಬೇರೆಡೆ ಹೊರಳಿಸಿ ಫೋಯರ್‌ನಲ್ಲಿ ರಿಸೆಪ್ಷನ್ ಡೆಸ್ಕ್‌ನ ಹಿಂದಿದ್ದ, ಶಿಲುಬೆಯಿಂದ
ಕೆಳಗಿಳಿಸಿದ ಜೀಸಸ್‌ನ ಶರೀರವನ್ನು ಹರಡಿದ ತೊಡೆಗಳ ಮೇಲಿರಿಸಿಕೊಂಡು ದಯನೀಯವಾಗಿ ತಲೆಬಾಗಿಸಿ ಕುಳಿತ
ಮಾತೆ ಮೇರಿಯ ಚಿತ್ರವನ್ನು ನೋಡತೊಡಗಿದೆ. ಅದು ಪಿಕಾಸೋನ
ಪಯೆತಾ ಅಲ್ಲವಾ ಅಂದುಕೊಳ್ಳುತ್ತಿದ್ದಂತೇ ಇಬ್ಬರು ವಾರ್ಡ್‌ಬಾಯ್‌ಗಳು ಕತ್ತಿನವರೆಗೆ ಬಿಳೀಬಟ್ಟೆಯಲ್ಲಿ
ಮುಚ್ಚಿದ್ದ ಚಿಕ್ಕವಯಸ್ಸಿನ ಹೆಂಗಸೊಬ್ಬಳಿದ್ದ ಸ್ಟ್ರೆಚರನ್ನು ನನ್ನ ಮುಂದೆಯೇ ತಳ್ಳಿಕೊಂಡು ಹೋದರು. ಅವಳ ಮುಖ ಬಿಳಿಚಿಹೋಗಿತ್ತು. ಅರೆಬರೆ ತೆರೆದಿದ್ದ ಕಣ್ಣುಗಳೂ ಒಗೆದು ನೀಲಿ ಹಾಕಿದ ಬಿಳುಪು
ಕರವಸ್ತ್ರದಂತೆ ಬೆಳ್ಳಗಿದ್ದವು. ಆ ಬಿಳೀಪಂಚೆಯ ಮನುಷ್ಯ
ನನ್ನ ಪಕ್ಕ ನನಗೆ ತಾಗುವಂತೇ ತಲೆಯೆತ್ತಿ ಸೂರು ನೋಡುತ್ತಾ ನಡೆದುಹೋದ. ನನ್ನಿಂದ ನಾಲ್ಕು ಹೆಜ್ಜೆ ನಡೆದಂತೇ ಆ ಇಬ್ಬರು ವಾರ್ಡ್‌ಬಾಯ್‌ಗಳು, ಅವರು
ತಳ್ಳಿಕೊಂಡು ಹೋಗುತ್ತಿದ್ದ ಸ್ಟ್ರೆಚರ್, ಅದರ ಮೇಲೆ ಮಲಗಿದ್ದ ಬಿಳಿಚಿದ ಮುಖದ ಎಳೆಯ ಹೆಂಗಸು ಎಲ್ಲರೂ ಅವನ ಬೃಹದಾಕಾರದ
ಬಿಳೀಶರ್ಟಿನ ಬೆನ್ನಿನ ಹಿಂದೆ ಮರೆಯಾಗಿಹೋದರು.
ಫೋನ್ ರಿಂಗಣಿಸಿ ಎತ್ತಿ
ಕಿವಿಗಿಟ್ಟೆ. ಅತ್ತಲಿಂದ ಗೆಳೆಯ ದೊರೆ ಮಾತಾಡುತ್ತಿದ್ದರು. ಸಾಯಂಕಾಲ ಸಿಗ್ತೀರಲ್ವಾ ಅಂದರು. ಹೇಳಕ್ಕಾಗಲ್ಲ ಗುರುಗಳೇ... ಎನ್ನುತ್ತಿದ್ದಂತೇ ಇಡೀ ಕಾರಿಡಾರ್
ತುಂಬಾ ನನ್ನದೇ ದನಿ ಗುಡುಗಾಡಿ ನನ್ನದೆಗೇ ಬಡಿದಂತಾಗಿ ಬೆಚ್ಚಿ ದನಿ ತಗ್ಗಿಸಿದೆ. ಮಧ್ಯಾಹ್ನ ಜಯನಗರಕ್ಕೆ ಹೋಗಬೇಕು. ಹಾಗಂತ ಆರ್ಡರ್ ಅಗಿದೆ ಅಂದೆ. ಓಹೋಹೋ!
ಮಾವನ ಮನೇಲಿ ಈವತ್ತು ಬಾಡೂಟ ಜೋರು ಅಂತ ಕಾಣುತ್ತೆ. ಕೊಕ್ಕೊಕ್ಕೊ ಕೋಳಿ ಸೆಂಟರಿಗೆ ಈಗಾಗಲೇ ಬಲ್ಕ್ ಸಪ್ಲೈ ಆರ್ಡರ್
ಹೋಗಿರಬೇಕು ಎನ್ನುತ್ತಾ ಗಹಗಹಿಸಿದರು. ನಾನೂ ನಗಲು
ಪ್ರಯತ್ನಿಸಿದಾಗ ನನ್ನ ಗಂಟಲಿನಿಂದ ಶಬ್ದವೇ ಹೊರಡಲಿಲ್ಲ.
ಅವರೇ ಇರಲಿ, ಮಧ್ಯಾಹ್ನ ತಾನೆ? ಎಲ್ಲಾ ಮುಗಿಸಿ ರೆಸ್ಟ್ ತಗೋಂಡು ಸಾಯಂಕಾಲ ಏಳುಗಂಟೆಗೆಲ್ಲಾ ಶ್ಯಾಮ್‌ಸುಂದರ್
ಟಾಕೀಸ್ ಹತ್ರ ಬಂದ್ಬಿಡಿ. ಅಷ್ಟೊತ್ತಿಗೆ ಮಾದಪ್ಪನವರೂ
ಅಲ್ಲಿ ತಲುಪಿರ್ತಾರೆ. ಅದೇ ಮಾಮೂಲಿ ಜಾಗದಲ್ಲಿ ಸೇರಿಬಿಡೋಣ
ಅಂದರು. ಯಾವುದನ್ನೂ ಮಧ್ಯಾಹ್ನ ಹೇಳ್ತೀನಿ. ಅಲ್ಲಿಗೆ ಹೋದ ಮೇಲೆ ಏನೇನು ಹೊಸ ಆರ್ಡರ್‌ಗಳು ಜಾರಿಯಾಗ್ತವೊ... ಎಂದು ದನಿ ಎಳೆಯುತ್ತಿದ್ದಂತೇ ಅವರು ಜೋರು ದನಿಯಯಲ್ಲಿ ಅಯ್, ಅದೆಂಗಾಗ್ತದೆ? ವರ್ಷದ ಮೇಲೆ ಮೈಸೂರಿಗೆ ಬಂದಿದ್ದೀರಿ. ನಾಳೆ ಬೇರೆ ಸ್ವಾತಂತ್ರ್ಯ ದಿನಾನ ಮುಂದಿಟ್ಕೊಂಡು ಈವತ್ತು
ಸ್ವಾತಂತ್ರ್ಯ ಕಳಕೊಳ್ಳೋದು ಅಂದ್ರೇನು? ಅವಮಾನ, ತೀರಾ
ಅವಮಾನ! ತೆಪ್ಪಗೆ ಬಂದ್ಬಿಡಿ. ಇಲ್ಲಾಂದ್ರೆ ಆ ಮಾದಪ್ಪನವರ ಮನೆ ಅಲ್ಲೇ ಕೆ. ಜಿ. ಕೊಪ್ಪಲಿನಲ್ಲಿ
ಇದೆಯಲ್ಲಾ, ನೇರ ನಿಮ್ಮಾವನ ಮನೆಗೆ ನುಗ್ಗಿ ನಿಮ್ಮನ್ನ ಎಳಕಂಡು... ಎಂದೇನೋ ಒದರುತ್ತಿದ್ದಂತೇ
ಕೋಣೆಯ ಬಾಗಿಲು ತೆರೆಯಿತು. ಸಾರಿ ಸರ್, ಮಲಗಿಬಿಟ್ಟಿದ್ರು
ಎನ್ನುತ್ತಾ ಶ್ರೀರಾಮ್ ಮುಖ ಒರೆಸಿಕೊಂಡು ಬಂದ. ಆಮೇಲೆ
ಮಾತಾಡ್ತೀನಿ ಎಂದು ಫೋನಿಗೆ ಊದಿ ಅವನತ್ತ ತಿರುಗಿ ಮಲಗಿರ್ಲಿ ಬಿಡಿ. ಕಾಯ್ತೀನಿ ಅಂದೆ. ಇಲ್ಲ ಇಲ್ಲ, ಎದ್ದಿದ್ದಾರೆ, ಬನ್ನೀ
ಬನ್ನೀ ಎನ್ನುತ್ತಾ ಬಾಗಿಲು ವಿಶಾಲವಾಗಿ ತೆರೆದ.
ಅನುಮಾನಿಸುತ್ತಲೇ ಒಳಗೆ
ಕಾಲಿಟ್ಟೆ. ಎರಡುಮೂರು ದಿಂಬುಗಳ ಆಸರೆಯಲ್ಲಿ ಎದೆ
ಮತ್ತು ತಲೆ ಮಾತ್ರ ನೆಟ್ಟಗಿರುವಂತೆ ಒರಗಿ ಕುಳಿತಿದ್ದ ವ್ಯಕ್ತಿ ನೇರವಾಗಿ ನೋಟಕ್ಕೆ ನಿಲುಕಿದರು. ತೋಳಿಲ್ಲದ ಬನಿಯನ್ ಕೆಳಗಿನ ಶರೀರ ಸ್ವಚ್ಚ ಬಿಳೀಹೊದಿಕೆಯಲ್ಲಿ
ಮುಚ್ಚಿತ್ತು. ಬಲತೋಳು ಬ್ಯಾಂಡೇಜಿನಿಂದ ಮುಚ್ಚಿತ್ತು. ಎಡಗೈಯನ್ನು ತುಸುವೇ ಮೇಲೆತ್ತಿ ನಮಸ್ಕಾರ ಅಂದರು ಆತ. ನಾನೂ ಎರಡೂ ಕೈ ಜೋಡಿಸಿ ನಮಸ್ಕಾರ ಎನ್ನುತ್ತಿದ್ದಂತೇ ಶ್ರೀರಾಮ್
ಕೂತ್ಕೊಳ್ಳಿ, ಸರ್ ಕೂತ್ಕೊಳ್ಳಿ ಎನ್ನುತ್ತಾ ಸ್ಟೂಲೊಂದನ್ನು ಮಂಚದ ಹತ್ತಿರಕ್ಕೆ ಎಳೆದಿಟ್ಟ. ಮಾತಿಲ್ಲದೇ ಕೂತು ಮಂಚದ ಮೇಲಿದ್ದ ವ್ಯಕ್ತಿಯ ಮುಖದ ಮೇಲೆ
ನೋಟ ಕೀಲಿಸಿದೆ.
ಗೋಧಿಬಣ್ಣದ ದುಂಡುಮುಖದಲ್ಲಿ
ಎದ್ದು ಕಂಡದ್ದು ಉಬ್ಬಿದ ಕೆನ್ನೆಯ ಮೂಳೆಗಳು ಮತ್ತು ದಟ್ಟ ಹುಬ್ಬುಗಳು. ವಯಸ್ಸಿಗೆ ಅಪವಾದವಾಗಿ ತಲೆತುಂಬಾ ದಟ್ಟವಾಗಿ ತುಂಬಿದ್ದ
ತುಸುವೇ ನರೆತ ಕೂದಲು. ಕಿರಿದಾದ ಹಣೆ, ದಟ್ಟ
ಹುಬ್ಬುಗಳ ಕೆಳಗಿನ ಕಂದು ಕಣ್ಣುಗಳು, ನುಣ್ಣಗೆ ಶೇವ್ ಮಾಡಿದ ಗೋಧಿ ಬಣ್ಣದ ಹೊಳೆಯುವ ಮುಖ...
ಈ ವ್ಯಕ್ತಿಯನ್ನು ಹಿಂದೆಂದೂ
ನೋಡಿದ ನೆನಪು ನನಗಿರಲಿಲ್ಲ. ಯಾಕೋ ಏನೋ ಯಾವುದೋ ಒಂದು
ಅಸಂಗತ ನಾಟಕದಲ್ಲಿ ನನ್ನದಲ್ಲದ ಪಾತ್ರವೊಂದನ್ನು ಯಾರದೋ ಸೂಚನೆಯ ಮೇರೆಗೆ ನಟಿಸುತ್ತಿರುವಂತೆನಿಸಿ
ಚಣ ಅತೀವ ಗೊಂದಲಕ್ಕೊಳಗಾದೆ. ನಿಮಗೆ ತೊಂದರೆಯಾಗಿರಬೇಕು
ಎಂಬ ಮಾತು ಕಿವಿಗೆ ಬಿದ್ದಾಗ ನಾನು ಕಣ್ಣುಮುಚ್ಚಿರುವುದು ಅರಿವಾಗಿ ಗಕ್ಕನೆ ಕಣ್ಣು ತೆರೆದೆ. ಆತ ನನ್ನನ್ನೇ ನೇರವಾಗಿ ನೋಡುತ್ತಿದ್ದರು.
ನನ್ನ ನೋಟ ತಮ್ಮತ್ತ
ಬಿದ್ದೊಡನೇ ತಿಂಡಿಯಾಯಿತೇ? ಅಂದರು. ಆಯಿತು. ನಿಮ್ಮದು? ಅಂದೆ. ಓಹೋ ಆಯಿತು.
ಇಲ್ಲದಿದ್ದರೆ ಇವನು ಬಿಡಬೇಕಲ್ಲ ಎನ್ನುತ್ತಾ ನಕ್ಕರು. ನನ್ನ ನಿರೀಕ್ಷೆಗೂ ಮೀರಿ ಅವರು ಗೆಲುವಾಗಿದ್ದರು. ನಿಂತೇ ಇದ್ದ ಮಗನತ್ತ ಕಣ್ಣುಗಳನ್ನು ಹೊರಳಿಸಿ ಸರ್ ಬಂದಾಯಿತಲ್ಲ, ಇನ್ನಾದರೂ
ನೀನು ಹೋಗಿ ತಿಂಡಿ ತಿನ್ನು ರಾಮಣ್ಣ ಅಂದರು. ಗಕ್ಕನೆ
ಶ್ರೀರಾಮ್‌ನತ್ತ ತಿರುಗಿದೆ. ಆತ ಸಣ್ಣಗೆ ನಗುತ್ತಿದ್ದ. ಒಳಗೆಲ್ಲೋ ಚುಚ್ಚಿದಂತಾಗಿ ಇನ್ನೂ ತಿಂಡಿ ಆಗಿಲ್ಲವಾ? ಅಂದೆ. ಅವನು ಉತ್ತರಿಸಲಿಲ್ಲ. ನಗೆ ಮಾತ್ರ ದೊಡ್ಡದಾಯಿತು. ನಾನೂ ಸಾಕಷ್ಟು ಸಲ ಹೇಳಿದೆ. ನೀವು ಬಂದ ಮೇಲೆ ತಿಂತೀನಿ ಅಂತಾನೇ ಇದ್ದಾನೆ ಅಂದರು ಸಂಪತ್. ಮಗನತ್ತ ತಿರುಗಿ ಈಗ ಹೋಗಿ ಮೊದಲು ಏನಾದ್ರೂ ತಿನ್ನು. ಬರೋವಾಗ... ಮಾತು ನಿಲ್ಲಿಸಿ ನನ್ನತ್ತ ತಿರುಗಿ ಏನು ತಗೋತೀರಿ? ಕಾಫಿ ಆಗಬಹುದಾ? ಅಂದರು. ನನಗೇನೂ ಬೇಕಿರಲಿಲ್ಲ. ಹಾಗೇ ಹೇಳಿದೆ.
ಅದರ ಬಗ್ಗೆ ಅವರ ಗಮನ ಹೋಗಲಿಲ್ಲ. ಮತ್ತೆ ಮಗನತ್ತ ತಿರುಗಿ ...ಎರಡು ಕಾಫಿ ತಗೋಂಡು ಬಂದುಬಿಡು
ರಾಮಣ್ಣ ಅಂದರು. ಹ್ಞೂಂಗುಟ್ಟಿ ಶ್ರೀರಾಮ್ ಬೆನ್ನ
ಹಿಂದೇ ಬಾಗಿಲೆಳೆದುಕೊಂಡು ಹೋದ.
ಇದೇ ಮೊದಲಲ್ಲವಾ ನಾವು
ಭೇಟಿಯಾಗ್ತಾ ಇರೋದು?
ಪ್ರಶ್ನೆ ಕೇಳಿ ಬೆಚ್ಚಿದೆ. ಕ್ಷಣದಲ್ಲಿ ಸಾವರಿಸಿಕೊಂಡೆ.
ಯೆಸ್, ನಾನು
ನಿಮ್ಮನ್ನ ನೋಡ್ತಾ ಇರೋದು ಇದೇ ಮೊದಲು. ಆದ್ರೆ ನನ್ನ
ಪರಿಚಯ ನಿಮಗಿದೆ ಅಂತ ನಿಮ್ಮ ಮಗ ಹೇಳ್ತಿದ್ರು.
ಪರಿಚಯ! ನೇರ ಪರಿಚಯ ಅಲ್ಲ ಅದು.
ಅಂದ್ರೆ?
ನನ್ನ ಹೆಂಡತಿಯ ಮೂಲಕ
ನಂಗೆ ಪರಿಚಯ ನೀವು. ನಿಮ್ಮ ಬಗ್ಗೆ ಸಾವಿರ ಸಲ ಹೇಳಿದ್ದಾಳೆ. ಕೈಗೆ ಸಿಕ್ಕಿದ ನಿಮ್ಮ ಕಥೆಗಳನ್ನೆಲ್ಲಾ ಬಲವಂತವಾಗಿ ಓದಿಸಿದ್ದಾಳೆ. ಮಾತು ನಿಲ್ಲಿಸಿದರು. ನನ್ನ ಕುತೂಹಲ ಏರುತ್ತಿದ್ದಂತೇ ಬಲತೋಳಿನ ಬ್ಯಾಂಡೇಜಿನ ಅಂಚಿನಲ್ಲಿ
ಬೆರಳಾಡಿಸತೊಡಗಿದರು. ಕಿಟಕಿಯತ್ತ ನೋಟ ಹೊರಳಿಸಿದೆ. ಅಲ್ಲಿ ಆಕಾಶ ಕಪ್ಪುಗಟ್ಟುತ್ತಿತ್ತು.
ನನ್ನ ಹೆಂಡತಿಯ ಬಗ್ಗೆ ಹೇಳ್ತಾ ಇದ್ದೆ. ನಿಮ್ಮ ಕ್ಲಾಸ್‌ಮೇಟ್ ಅವಳು, ಗಂಗೋತ್ರಿನಲ್ಲಿ. ಪೂರ್ಣಿಮಾ ಅಂತ.
ನೆನಪಿದೆಯಾ?
ಛಕ್ಕನೆ ಅವರತ್ತ ತಿರುಗಿದೆ. ಅವರ ನೋಟ ನೇರವಾಗಿ ನನ್ನ ಕಣ್ಣುಗಳ ಮೇಲಿತ್ತು. ಮರೆತೇಹೋಗಿದ್ದ ಪೂರ್ಣಿಮಾ ಧುತ್ತನೆ ಎದುರಿಗೆ ನಿಂತಿದ್ದಳು.
ನನ್ನ ಮೇಲೆ ನೋಟ ಕೀಲಿಸಿ
ಸಂಪತ್ ಮಾತು ಮುಂದುವರೆಸಿದರು: ಮದುವೆಗೂ ಮೊದಲೇ ನಿಮ್ಮ ಹೆಸರಿನ ಪರಿಚಯ ನಂಗಾಯ್ತು. ಇನ್‌ಫ್ಯಾಕ್ಟ್, ನಮ್ಮ
ಮದುವೆ ನಿಶ್ಚಯವಾದ ನಂತರ ನಾವು ಭೇಟಿಯಾದಾಗೆಲ್ಲಾ ನಿಮ್ಮ ಹೆಸರು ಹೇಳದೆ ಅವಳು ಮಾತಾಡಿದ್ದೇ ಇಲ್ಲ. ಆಕೆಯ ಕ್ಲೋಸ್ ಫ್ರೆಂಡ್ ಅಂತೆ ನೀವು. ಆಕೆ ಎಲ್ಲಾನೂ ನಿಮ್ಮ ಜತೆ ಹಂಚಿಕೋತಾ ಇದ್ಲಂತೆ. ಅತ್ತ ಹೊರಳಿ ನಸುವಾಗಿ ಕೆಮ್ಮಿದರು. ಎದೆ ಹಿಡಿದುಕೊಂಡು ನಿಮಿಷದವರೆಗೆ ಮೌನವಾದರು. ನಾನು ಆತಂಕದಿಂದ ನೀರು ಬೇಕೇ? ಎನ್ನುತ್ತಾ
ಟೀಪಾಯ್ ಮೇಲಿದ್ದ ಬಾಟಲಿಯತ್ತ ಕೈಚಾಚುತ್ತಿದ್ದಂತೇ ಬೇಡವೆನ್ನುವಂತೆ ಕೈಯಾಡಿಸಿದರು. ನಿಜ ಹೇಳ್ಬೇಕು ಅಂದ್ರೆ ನಂಗೆ ನಿಮ್ಮ ಮೇಲೆ ಅಸೂಯೆ, ಬೇಸರ, ಕೋಪ ಎಲ್ಲಾ
ಆಗ್ತಿತ್ತು. ನಕ್ಕರು.
ನನಗೆ ನಗಲಾಗಲಿಲ್ಲ.
ಗೊಂದಲದಲ್ಲಿದ್ದೆ.
ನನಗೆ ನೆನಪಿರುವಂತೆ
ಆಕೆ ನನ್ನ ಗೆಳತಿ ನಿಜ. ಆದರೆ ಮೂರು ಹೊತ್ತೂ ನನ್ನ
ಬಗ್ಗೇ ಮಾತಾಡುವಷ್ಟು ಗಾಢ ಸ್ನೇಹ ನಮ್ಮದಾಗಿರಲಿಲ್ಲ.
ಅಲ್ಲದೇ ಆ ದಿನಗಳಲ್ಲಿ ನಾನು ಬರೆದ ಕಥೆಗಳೆಲ್ಲವನ್ನೂ ಆಕೆ ಕಟುವಾಗಿ ವಿಮರ್ಶಿಸಿದ್ದಳು. ಅವಳ ಕಟುಮಾತುಗಳು ಅನಗತ್ಯವಾಗಿದ್ದವು ಎಂದು ನನಗೆ ಮತ್ತೆಮತ್ತೆ
ಅನಿಸಿತ್ತು. ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ
ನನ್ನ ಕಥೆಯೊಂದನ್ನು ಎಲ್ಲ ಬಗೆಯಲ್ಲೂ ಸೋತ ಬಾಲಿಶ ಕಥೆ ಎಂದು ಹೀಗಳೆದ ಅವಳ ವಿಮರ್ಶೆಗೆ ಎಪ್ಪತ್ತೈದು
ರೂಪಾಯಿ ಬಹುಮಾನ ಬಂದಾಗ ನನ್ನನ್ನು ಬಲವಂತವಾಗಿ ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ತಿಂಡಿ ಕಾಫಿ ಕೊಡಿಸಿ
‘ನಿನ್ನಿಂದಾಗಿ ನನಗೆ ಸಿಕ್ಕಿದ ಹಣ ಇದು. ನಿನಗೇ ಖರ್ಚು
ಮಾಡ್ತಾ ಇದೀನಿ ನೋಡು ಎಂದು ಹೇಳಿದ್ದಂತೂ ನನ್ನ ಗಂಗೋತ್ರಿ ದಿನಗಳ ಅತಿದೊಡ್ಡ ಅವಮಾನ ಎಂದು ನನಗೆ ಈಗಲೂ
ಅನಿಸುತ್ತದೆ.
ಸಂಪತ್ ಸುಳ್ಳು ಹೇಳುತ್ತಿರಬಹುದು. ಅವರ ಮಾತುಗಳಲ್ಲಿ ಉತ್ಪ್ರೇಕ್ಷೆ ಇರಬಹುದು. ದೂರ ಹೋದ ಹೆಂಡತಿಯ ವರ್ತನೆಗೆ ನನ್ನನ್ನು ಒಂದು ಕಾರಣವನ್ನಾಗಿ
ಕಾಣುವ ಹಂಚಿಕೆ ಅವರದಿರಬಹುದು. ನನ್ನ ತಲೆ ಗಿರಿಗುಟ್ಟತೊಡಗಿತು.
ಆದರೆ ಅವರ ಮಾತುಗಳಲ್ಲಿ
ನನ್ನ ಬಗ್ಗೆ ಅಸೂಯೆಯಾಗಲೀ, ಬೇಸರವಾಗಲೀ, ಕೋಪವಾಗಲೀ ಇರಲಿಲ್ಲ. ಅವರು ಸಣ್ಣಗೆ ನಗುತ್ತಿದ್ದರು. ನನ್ನ ಗೊಂದಲ ಮತ್ತೂ ಹೆಚ್ಚಿತು.
ಬಾಗಿಲು ಸದ್ದಾಯಿತು. ಅತ್ತ ತಿರುಗಿದೆ. ಎರಡೂ ಕೈಗಳಲ್ಲಿ ಕಾಫಿಯ ಲೋಟಗಳನ್ನು ಹಿಡಿದ ಶ್ರೀರಾಮ್ ಮೊಣಕೈಯಲ್ಲಿ
ಬಾಗಿಲನ್ನು ದೂಡಿಕೊಂಡು ಒಳಬಂದ.
ಅರೆ! ಇಷ್ಟು ಬೇಗ ಬಂದೆ! ತಿಂಡಿ ತಿಂದೆಯೋ ಇಲ್ಲವೋ? ಮಗನನ್ನು
ಪ್ರಶ್ನಿಸಿದರು ಸಂಪತ್. ದನಿಯಲ್ಲಿ ಪ್ರೀತಿ ಬೆರೆತ
ಗದರಿಕೆ. ಶ್ರೀರಾಮ್ ನಕ್ಕ. ನೀವು ಕಾಫಿ ಕುಡೀತಾ ಇರೋವಾಗ ನಾನು ತಿಂಡಿ ತಿಂದು ಬರ್ತೀನಿ
ಎನ್ನುತ್ತಾ ಲೋಟಗಳನ್ನು ನಮ್ಮಿಬ್ಬರ ಕೈಯಲ್ಲಿತ್ತು ಕುರ್ಚಿಯ ತೋಳಿನಲ್ಲಿದ್ದ ನ್ಯಾಪ್‌ಕಿನ್ ಒಂದನ್ನು
ಎತ್ತಿ ತಂದೆಯ ಕುತ್ತಿಗೆಯ ಕೆಳಗೆ ಹೆಗಲು ಮುಚ್ಚುವಂತೆ ಹರಡಿ ಮಾತಿಲ್ಲದೇ ಹಿಂತಿರುಗಿ ಬಾಗಿಲು ದಾಟಿದ. ಅವನು ಬಂದುಹೋದದ್ದರ ಕುರುಹಾಗಿ ಕೈಯಲ್ಲಿದ್ದ ಕಾಫಿಯ ಲೋಟವನ್ನು
ತುಟಿಗೆ ಒಯ್ದೆ. ನನಗದು ಅಗತ್ಯವಾಗಿ ಬೇಕಾಗಿತ್ತು.
ಎರಡು ಗುಟುಕುಗಳನ್ನು
ಹೀರುವಷ್ಟರಲ್ಲಿ ಪರಿಸ್ಥಿತಿಗೆ ಸಾಕಷ್ಟು ಹೊಂದಿಕೊಂಡಿದ್ದೆ. ಗಂಗೋತ್ರಿ ಬಿಟ್ಟ ನಂತರ ಪೂರ್ಣಿಮಾರನ್ನ ಭೇಟಿಯಾಗಿಲ್ಲ ನಾನು. ರೀಸರ್ಚ್‌ಗೆ ಅಂತ ಡೆಲ್ಲಿಗೆ ಹೊರಟುಹೋದ ನಂಗೆ ಗಂಗೋತ್ರಿ
ಸ್ನೇಹಿತರ ಸಂಪರ್ಕ ಹೆಚ್ಚು ದಿನ ಉಳೀಲಿಲ್ಲ. ಯಾವಾಗ
ನಿಮ್ಮ ಮದುವೆಯಾದದ್ದು? ಕೇಳಿದೆ.
ಇಪ್ಪತ್ತೆರಡು ವರ್ಷ
ಆಯ್ತು. ಬಾಯಿಪಾಠವಾಗಿದ್ದಂತೆ ಥಟಕ್ಕನೆ ಹೇಳಿದರು.
ಅಂದರೆ ನಮ್ಮ ಎಂ ಎ ಮುಗಿದ
ಆರು ವರ್ಷಗಳ ನಂತರ! ಅಷ್ಟು ಕಾಲ ಪೂರ್ಣಿಮಾ ಏನು ಮಾಡುತ್ತಿದ್ದಿರಬಹುದು? ರೀಸರ್ಚ್? ನೌಕರಿ?
ಈಗೆಲ್ಲಿದ್ದಾರೆ ಆಕೆ? ಆಕೆ ಈಗ ನಿಮ್ಮ ಜತೆ ಯಾಕಿಲ್ಲ ಎಂಬ ಪ್ರಶ್ನೆಯನ್ನು ನಾಗರೀಕಗೊಳಿಸಲು
ಪ್ರಯತ್ನಿಸಿದ್ದೆ.
ಹ್ಞುಂ! ಕಣ್ಣುಮುಚ್ಚಿದರು ಆತ. ಗೊತ್ತಿಲ್ಲ.
ಒಂದು ಪದದ ಉತ್ತರ. ನಾನು ಮಾತಿಲ್ಲದೇ ಅವರನ್ನೇ
ನೋಡಿದೆ. ಹೊರಗೆಲ್ಲೋ ಏಕಾಏಕಿ ಜೀವ ತಳೆದ ಮೈಕೊಂದು
ನಾನೊಬ್ಬ ಕಳ್ಳನು... ಎಂದು ಅಲೆಅಲೆಯಾಗಿ ಕೂಗಿತು.
ನನ್ನ ಪ್ರಶ್ನೆ ಅನಗತ್ಯವಾಗಿತ್ತು
ಎಂದೆನಿಸತೊಡಗಿದಂತೇ ಆತ ಮುಂದುವರೆಸಿದರು:
ಒಂಥರಾ ಮೂಡಿ ಹೆಂಗಸು
ಆಕೆ. ಅಂತರ್ಮುಖಿ ಅಂತಾರಲ್ಲಾ ಹಾಗೆ. ತನ್ನಷ್ಟಕ್ಕೆ ತಾನೇ ಇರೋದಿಕ್ಕೆ ಇಷ್ಟಪಡ್ತಿದ್ಲು. ಆಕೆ ಒಂದಲ್ಲಾ ಒಂದು ದಿನ ನನ್ನನ್ನ ಬಿಟ್ಟುಹೋಗ್ತಾಳೆ ಅಂತ
ಮದುವೆಯಾದ ದಿನದಿಂದ್ಲೂ ಅನಿಸ್ತಾನೇ ಇತ್ತು ನಂಗೆ.
ಅದು ಎರಡು ವರ್ಷಗಳ ಹಿಂದೆ ನಿಜವಾಗಿಹೋಯ್ತು.
ಆತ ಹೇಳುತ್ತಿರುವುದು
ನನಗೆ ಪರಿಚಯವಿದ್ದ ಪೂರ್ಣಿಮಾ ಬಗ್ಗೆಯೇ ಎಂದು ಅನುಮಾನವಾಗತೊಡಗಿತು. ನನ್ನ ಸಹಪಾಠಿ ಪೂರ್ಣಿಮಾ ಯಾವಾಗಲೂ ಗಲಗಲಗುಟ್ಟುತ್ತಾ ಒಂದುಕ್ಷಣ
ಒಂದು ಕಡೆ ನಿಲ್ಲದೇ ಸದಾ ಸ್ನೇಹಿತರನ್ನು ಹುಡುಕುತ್ತಾ ಓಡಾಡುತ್ತಿದ್ದ ಹೆಣ್ಣು. ಸ್ನೇಹದ ಮಾತುಗಳಿಗಿಂತಲೂ ವಾದ ಬೆಳೆಸುವುದರಲ್ಲಿ ಅವಳು ಮುಂದು. ಹಾಗಿದ್ದೂ ಅವಳಿಗೆ ಗೆಳೆಯರ ಕೊರತೆ ಇರಲಿಲ್ಲ.
ನಮ್ಮ ನಡುವೆ ನಿಮಿಷದವರೆಗೆ
ಮೌನವಿತ್ತು. ಅದನ್ನು ಮುರಿದವರು ಅವರೇ.
ತಾಳಿ ಕಟ್ಟಿದ ನೆಪಕ್ಕೆ
ಸಾಯೋವರೆಗೂ ಜತೆಲೇ ಇರಬೇಕು ಅನ್ನೋದು ಹಳೇಕಾಲದ ಮಾತಾಯ್ತು. ಈಗ ಎಲ್ಲ ಬದಲಾಗ್ತಿದೆ. ವಿವಾಹ ಒಂದು ಅನಿರ್ದಿಷ್ಟ ಕಾಲಾವಧಿಯ ಕಾಂಟ್ರ್ಯಾಕ್ಟ್, ಅಗತ್ಯ ಬಂದಾಗ ಅದನ್ನು ಪುನರ್ವಿಮರ್ಶಿಸಿ ನವೀಕರಿಸಬೇಕು, ನವೀಕರಿಸೋವಾಗ ಎರಡೂ ಪಾರ್ಟಿಗಳ ಸ್ಥಾನಮಾನ, ಹಕ್ಕುಭಾದ್ಯತೆಗಳ
ಪುನರ್ನಿರ್ಣಯವಾಗಬೇಕು. ನನ್ನ ಮತ್ತು ಪೂರ್ಣಿಮಾಳ
ವಿಷಯದಲ್ಲಿ ಈ ಪುನರ್ವಿಮರ್ಶೆ, ಪುನರ್ನಿರ್ಣಯ ಸರಿಯಾಗಿ ಆಗ್ಲಿಲ್ಲ. ಹೀಗಾಗಿ ನಮ್ಮ ವಿವಾಹ ನವೀಕರಣವಾಗ್ಲಿಲ್ಲ. ರೆಕಾರ್ಡ್ ಮಾಡಿದ ವಾಕ್ಯಗಳಂತೆ ಬಂದ ಈ ಮಾತುಗಳು ನನಗೆ ತೀರಾ
ಅನಿರೀಕ್ಷಿತ. ಇದನ್ನು ಹೇಳಿದ್ದು ನನ್ನೆದುರು ಹಾಸಿಗೆಯಲ್ಲಿ
ಮಲಗಿದ್ದ ಮನುಷ್ಯನೋ ಅಥವಾ ಹೊರಗೆ ದೂರದಲ್ಲಿ ಅರಚುತ್ತಿದ್ದ ಮೈಕೋ ಎಂದು ನಾನು ಅನುಮಾನಿಸುತ್ತಿರುವಂತೇ
ನನ್ನೆಲ್ಲಾ ಅನುಮಾನಗಳನ್ನು ಪರಿಹರಿಸುವಂತೆ ಆತ ಒಮ್ಮೆ ಕೆಮ್ಮಿ ಮಾತು ಮುಂದುವರೆಸಿದರು: ...ನನ್ನಲ್ಲಿ
ಏನನ್ನ ಬಯಸ್ತಿದಾಳೆ ಆಕೆ ಅಂತ ನಂಗೆ ಕೊನೆಗೂ ಗೊತ್ತಾಗಲೇ ಇಲ್ಲ ಅವಳನ್ನ ಅರ್ಥ ಮಾಡಿ... ಥಟಕ್ಕನೆ ಮಾತು ನಿಲ್ಲಿಸಿದರು. ಬಾಗಿಲು ದೂಡಿಕೊಂಡು ಒಳಬಂದ ಶ್ರೀರಾಮ್. ಈಗಲಾದ್ರೂ ತಿಂಡಿ ತಿಂದೆಯಾ ರಾಮಣ್ಣ? ಅಂದರು
ಸಂಪತ್. ದನಿ ಸಂಪೂರ್ಣವಾಗಿ ಬದಲಾಗಿತ್ತು. ತಲೆಯಾಡಿಸಿದ ಶ್ರೀರಾಮ್ ಹಾಸಿಗೆಯ ಅಂಚಿನಲ್ಲಿ ಕೂತ. ಸಂಪತ್ ಮತ್ತೆ ನನ್ನತ್ತ ತಿರುಗಿದರು.
ನನ್ನದೇ ಏನೇನೋ ಕಥೆ
ಹೇಳ್ತಾ ಕೂತುಬಿಟ್ಟೆ. ನಿಮ್ಮ ವಿಷಯ ಹೇಳಿ. ಮಕ್ಕಳೆಷ್ಟು? ನೀವು ಕಥೆಗಳಲ್ಲಿ ಬರೆಯೋ ಹಾಗೆ ಒಬ್ಬಳೇ ಮಗಳೇನು?
ಸಮ್ಮತಿಯಲ್ಲಿ ಮೌನವಾಗಿ
ನಕ್ಕೆ.
ನಮ್ಮ ನಡುವೆ ಮತ್ತೆ
ಮೌನ. ಅದು ಸಾಕೆನಿಸಿ ಆಯಿತು. ನೀವು ರೆಸ್ಟ್ ತಗೊಳ್ಳಿ. ನಾನು ನಾಳೆ ಬರ್ತೀನಿ ಎನ್ನುತ್ತಾ ಮೇಲೆದ್ದೆ. ನನ್ನನ್ನನುಸರಿಸಿ ಶ್ರೀರಾಮನೂ ಗಕ್ಕನೆ ಮೇಲೆದ್ದ.
ಸಂತೋಷ. ಹೋಗಿಬನ್ನಿ.
ನೀವು ಬಂದದ್ದು ನಂಗೆ ತುಂಬಾ ಖುಷಿ ಕೊಡ್ತು.
ಒಂಥರಾ ನೆಮ್ಮದಿ ಕೂಡ. ನಕ್ಕರು. ಶ್ರೀರಾಮ್‌ನತ್ತ
ತಿರುಗಿ ಆ ಸುಂದರಯ್ಯನ್ನ ಸ್ವಲ್ಪ ಕರೆ ರಾಮಣ್ಣ ಅಂದರು.
ಶ್ರೀರಾಮ್ ಹ್ಞೂಂಗುಟ್ಟಿ ಅತ್ತ ಬಾಗಿಲು ದಾಟುತ್ತಿದ್ದಂತೇ ಸನ್ನೆ ಮಾಡಿದರು. ಕುತೂಹಲದಿಂದ ಹತ್ತಿರ ನಡೆದೆ. ಬೇಕೋ ಬೇಡವೋ ಎನ್ನುವಂತೆ ಮಾತುಗಳು ಬಂದವು:
ಒಂದು ಪ್ರಶ್ನೆ. ಪೂರ್ಣಿಮಾ ಜತೆ ನನ್ನ ನಿಶ್ಚಿತಾರ್ಥ ಆದ ದಿನದಿಂದ್ಲೂ ನನ್ನನ್ನ
ಕಾಡ್ತಾ ಇದೆ ಇದು. ನಿಜವಾದ ಉತ್ತರ ಕೊಟ್ಬಿಡಿ. ನಿಜ ಹೇಗಿದ್ರೂ ಸಹಿಸಿಕೊಳ್ಳೋ ಶಕ್ತಿ ನಂಗಿದೆ.
ನನಗೆ ಎದೆಯಾಳದಲ್ಲಿ
ನಸು ಭಯ ಚಿಮ್ಮಿತು. ಅವರನ್ನೇ ನೇರವಾಗಿ ನೋಡಿದೆ.
ಪೂರ್ಣಿಮಾ ನಿಮ್ಮನ್ನ
ಪ್ರೀತಿಸಿದ್ಲಾ? ನಿಮ್ಮನ್ನ
ಮದುವೆಯಾಗಬೇಕು ಅಂತ ಬಯಸಿದ್ಲಾ?
ಯಾರೋ ತಲೆಗೆ ಸುತ್ತಿಗೆಯಿಂದ
ಬಾರಿಸಿದಂತಾಯಿತು. ಚಣ ಕಣ್ಣುಗಳು ಕತ್ತಲುಗಟ್ಟಿದವು. ಇಪ್ಪತ್ತೆಂಟು ವರ್ಷಗಳ ಹಿಂದಿನ ದಿನಗಳು ಒಂದರ ಮೇಲೊಂದು
ಬಿದ್ದು ಹೊರಳಾಡಿ ಒಂದಕ್ಕೊಂದು ತಳುಕು ಹಾಕಿಕೊಂಡು ಗೋಜಲು ಮುದ್ದೆಯಾದವು.
ಎರಡುವರ್ಷಗಳ ಒಡನಾಟದಲ್ಲಿ
ವಾದ, ತರ್ಕ, ಅನಗತ್ಯ ದುಂದುಮಾತುಗಳ ನಡುವೆ ಪ್ರೀತಿ ಪ್ರೇಮದ ಒಂದಾದರೂ ಮಾತು ಎಂದಾದರೂ
ಹಣಕಿತ್ತೇ? ಒಂದೆರಡು
ಬಾರಿ ಕಾಡಿ ನಂತರ ಗುರುತೇ ಇಲ್ಲದಂತೆ ಮರೆಯಾಗಿಹೋಗಿದ್ದ ಪ್ರಸಂಗವೊಂದು ಥಟಕ್ಕನೆ ನೆನಪಾಯಿತು.
ನಮ್ಮ ಪ್ರೊಫೆಸರ್ ಒಬ್ಬರನ್ನು
ನೋಡಲು ಅವರಿದ್ದ ಅಪಾರ್ಟ್‌ಮೆಂಟ್‌ಗೆ ಒಂದು ಭಾನುವಾರ ಬೆಳಿಗ್ಗೆ ಇಬ್ಬರೂ ಹೋಗಿದ್ದೆವು. ಲಿಫ್ಟ್‌ನೊಳಗೆ ಸೇರಿದಾಗ ಬೇಕಾದ ಫ್ಲೋರಿನ ನಂಬರನ್ನು ಅವಳೇ
ಒತ್ತಿದಳು. ವಿಶಾಲ ಕನ್ನಡಿಯಲ್ಲಿ ನೋಡಿಕೊಂಡು ಕೆದರಿದ್ದ
ತಲೆಗೂದಲನ್ನು ಬೆರಳುಗಳಿಂದಲೇ ಸರಿಮಾಡಿಕೊಳ್ಳುತ್ತಿದ್ದ ನನ್ನ ಮೈಗೆ ಮೈ ತಾಗಿಸಿ ನಿಂತಳು. ನೋಡೋ, ನಾನು ನಿಂಗಿಂತಾ ಎಷ್ಟು ಕುಳ್ಳಿ! ನಮ್ಮಿಬ್ಬರ ಜೋಡಿ ಚೆನ್ನಾಗಿರಲ್ಲ ಅಲ್ವಾ? ಒಳ್ಳೇ ಚಿನ್ನಿ ದಾಂಡು ಇದ್ದಂಗಿದೀವಿ ಅಂದಳು. ಅಷ್ಟರಲ್ಲಿ ನಮಗೆ ಬೇಕಾದ ಫ್ಲೋರ್ ಬಂದು ಲಿಫ್ಟ್ ನಿಂತಿತು. ಹಾಗಂತ ನನ್ ಫ್ರೆಂಡ್ಸೆಲ್ಲಾ ಹೇಳ್ಕೊಂಡು ನಗ್ತಾರೆ ಎನ್ನುತ್ತಾ
ಬಿರುಕು ಬಿಡುತ್ತಿದ್ದ ಬಾಗಿಲನ್ನು ಜಿಗಿದು ದಾಟಿದಳು.
ಬಾಗಿಲು ದೂಡಿಕೊಂಡು
ಶ್ರೀರಾಮ್ ಒಳಬಂದ. ಅವನ ಹಿಂದೆ ಒಬ್ಬ ನೀಲೀ ಉಡುಪಿನ
ಮಧ್ಯವಯಸ್ಸಿನ ಮನುಷ್ಯ. ಸಂತೋಷವೆನ್ನುವುದನ್ನು ಅನುಭವಿಸಿಯೇ
ಇಲ್ಲವೆಂಬಂತೆ ಅವನ ಮುಖದಲ್ಲಿ ಮ್ಲಾನತೆ ಮಡುಗಟ್ಟಿತ್ತು.
ಅವನ ಎಡಗೈಯಲ್ಲಿ ಬೆಡ್‌ಪ್ಯಾನ್. ಅವನು ಹಾಸಿಗೆಯ
ಬಳಿಹೋಗಿ ಹೊದಿಕೆಗೆ ಕೈ ಹಾಕುತ್ತಿದ್ದಂತೇ ನಾನೂ ಶ್ರೀರಾಮನೂ ಸದ್ದಿಲ್ಲದೇ ಹೊರನಡೆದೆವು.
ಕಾರಿಡಾರ್‌ನಲ್ಲಿ ನಾನು
ರಭಸದಿಂದ ಹೆಜ್ಜೆ ಹಾಕಿದೆ. ಫೋಯರ್ ತಲುಪಿದವನು ಏಕಾಏಕಿ
ನಿಂತೆ. ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದ ಶ್ರೀರಾಮ್. ಕ್ಯಾಂಟೀನ್ ಎಲ್ಲಿ? ಅಂದೆ. ಮಾತಿಲ್ಲದೇ ಒಂದುಕಡೆ ಕೈತೋರಿದ. ನಡೀರಿ, ಕಾಫಿ
ಕುಡಿಯೋಣ ಅಂದೆ.
ಕಾಫಿಯ ಕಪ್ಪುಗಳನ್ನು
ಹಿಡಿದು ಗಿಜಿಗುಟ್ಟುತ್ತಿದ್ದ ಕ್ಯಾಂಟೀನ್‌ನಿಂದ ಹೊರಬಂದು ಸಿಮೆಂಟ್ ಬೆಂಚಿನ ಮೇಲೆ ಕುಳಿತೆವು. ಆಕಾಶಪೂರ್ತಿ ಕಡುಗಪ್ಪನೆಯ ಮೋಡಗಳು.
ಲೋಟವನ್ನು ತುಟಿಯ ಬಳಿ
ಒಯ್ದು ಪ್ರಶ್ನಿಸಿದೆ:
ನಿಮ್ಮ ತಂದೆಯವರ ಪರಿಸ್ಥಿತಿ
ಅಷ್ಟೇನೂ ಕೆಟ್ಟದಾಗಿಲ್ಲ. ಅವರನ್ನ ನೋಡಿಕೊಳ್ಳೋದಿಕ್ಕೆ
ಬೇರೆ ವ್ಯವಸ್ಥೆ ಮಾಡಿ ನೀವು ಸ್ಟಡೀಸ್ ಮುಂದುವರಿಸಬೋದಲ್ಲ? ಈ ಕಾಲದಲ್ಲಿ ಒಂದುವರ್ಷ ಕಳಕೊಂಡ್ರೆ ಅದು ತುಂಬಾನೇ ದೊಡ್ದ ನಷ್ಟ.
ಅವನು ಒಮ್ಮೆ ನನ್ನನ್ನೇ
ನೇರವಾಗಿ ನೋಡಿ ತಲೆತಗ್ಗಿಸಿ ಮಾತು ಹೊರಡಿಸಿದ:
ಅಪ್ಪನ ನಿಜವಾದ ತೊಂದರೆ
ಈ ಅಕ್ಸಿಡೆಂಟ್‌ನಿಂದೇನೂ ಅಲ್ಲ.
ನಾನು ಕಣ್ಣರಳಿಸಿದೆ. ಅವನು ಅನುಮಾನಿಸುತ್ತಲೇ ಮುಂದುವರೆಸಿದ: ವರ್ಷದ ಹಿಂದೆ ಅಪ್ಪನಿಗೆ
ಮೊದಲ ಸಲ ಹಾರ್ಟ್ ಅಟ್ಯಾಕ್ ಆಯ್ತು. ಈಗ ಸ್ಕೂಟರ್
ಅಕ್ಸಿಡೆಂಟ್ ಆದ ಮಾರನೇ ರಾತ್ರಿ ಎರಡನೆಯ ಸಲ ಆಯ್ತು.
ಮೈಗಾಡ್! ನಾನು ಕಣ್ಣರಳಿಸಿದೆ. ಅವನು ಹೇಳುತ್ತಲೇ ಹೋದ: ಈಗ ಅಪ್ಪನಿಗೆ ಟ್ರೀಟ್‌ಮೆಂಟ್ ಕೊಡ್ತಾ
ಇರೋದು ಇದಕ್ಕೇ. ಕಾಲಿನದೇನೂ ತೊಂದರೆ ಇಲ್ಲ. ಅದರ ಪಾಡಿಗೆ ಅದು ಸರಿಯಾಗುತ್ತೆ. ಇನ್‌ಫ್ಯಾಕ್ಟ್, ಮೊನ್ನೆವರೆಗೂ
ಅವರ ಪರಿಸ್ಥಿತಿ ತುಂಬಾ ಗಂಭೀರವಾಗೇ ಇತ್ತು. ನಿನ್ನೆ
ಬೆಳಗಿನಿಂದ ಅನಿರೀಕ್ಷಿತವಾಗಿ ತುಂಬಾ ಲವಲವಿಕೆಯಿಂದ ಇದಾರೆ. ಅವರ ಮುಖದ ಕಳೆ ಏರಿಬಿಟ್ಟಿದೆ. ಡಾಕ್ಟರ್‌ಗಳಿಗೂ ಅಶ್ಚರ್ಯ. ನಂಗೆ ನೆಮ್ಮದಿ.
ಆದ್ರೆ ಈ ಸುಂದರಯ್ಯಂದು ಬೇರೆ ರಾಗ. ಅಪ್ಪನ
ಮುಖದ ಈ ಕಳೆ ಒಳ್ಳೇದಲ್ಲ ಅಂತ ನಂಗೆ ಎರಡು ಸಲ ಹೇಳ್ದ.
ಓಹ್! ಇಗ್ನೋರ್ ಹಿಮ್.
ಅವನಿಗೇನು ಗೊತ್ತು? ಗಮಾರ. ನನ್ನ ದನಿಯಲ್ಲೇ ಏಕಾಏಕಿ ಕಾಠಿಣ್ಯ ಇಣುಕಿತ್ತು. ಯೆಸ್ ಯೆಸ್ ಎನ್ನುತ್ತಾ ಶ್ರೀರಾಮ್ ನಕ್ಕ. ನಗೆಯ ಹಿಂದೆಯೇ ಮಿಂಚೊಂದು ಆಕಾಶದ ಉದ್ದಗಲಕ್ಕೂ ಸಳಸಳನೆ
ಹರಿದಾಡಿತು. ಅದರ ಬೆನ್ನಿಗೇ ಆಕಾಶ ಎರಡು ಮೂರು ಕಡೆ
ಗುಡುಗಾಡಿತು. ಮರುಕ್ಷಣ ಕಟ್ಟೆ ಒಡೆದಂತೆ ಧೋ ಎನ್ನುತ್ತಾ
ಮಳೆ ಆರಂಭವಾಯಿತು. ಇನ್ನೂ ಕಾಫಿ ಉಳಿದಿದ್ದ ಲೋಟಗಳನ್ನು
ಅಲ್ಲೇ ಬಿಟ್ಟು ಆಸ್ಪತ್ರೆಯೊಳಗೆ ಓಡಿದೆವು. ಪಕ್ಕದ
ಬೆಂಚಿನಲ್ಲಿ ಬುತ್ತಿ ಬಿಚ್ಚುತ್ತಿದ್ದ ಆಯಾ ಒಬ್ಬಳು ಅಯ್, ಇದ್ಯಾತಕ್ಕಪ್ಪಾ
ಈಪಾಟಿ ಮಳೆ! ಯಾರನ್ನ ಹೊತ್ಕೊಂಡು ಹೋಗಕ್ಕೋ ಎನ್ನುತ್ತಾ
ಬುತ್ತಿಯನ್ನು ಮುದುರಿ ಎತ್ತಿಕೊಂಡು ನಮ್ಮ ಹಿಂದೆ ಓಡಿಬಂದಳು.
ಆಸರೆ ತಲುಪಿ ಮುಖ ಒರೆಸಿಕೊಳ್ಳುತ್ತಾ
ಆಗಿನಿಂದಲೂ ತಡೆಹಿಡಿದಿದ್ದ ಪ್ರಶ್ನೆಯನ್ನು ಹೊರಹಾಕಿದೆ: ನಿಮ್ಮಮ್ಮ ಎಲ್ಲಿದ್ದಾರೆ ಅಂತ ಗೊತ್ತೇ?
ಗೊತ್ತು. ಛಕ್ಕನೆ ಹೇಳಿದ. ನಂತರ ಹೇಳಲೋ ಬೇಡವೋ ಅನ್ನುವಂತೆ ಮುಂದುವರೆಸಿದ: ಅಪ್ಪನಿಗೆ
ಗೊತ್ತಿಲ್ಲ. ಕ್ಷಣ ತಡೆದು ಸುರಿಯುತ್ತಿದ್ದ ಬಿರುಮಳೆಗೆ
ಸ್ಪರ್ಧೆಯೊಡ್ಡುವಂತೆ ಮಾತು ಹರಿಸಿದ: ಅಮ್ಮ ಇಲ್ಲೇ ಮೈಸೂರಲ್ಲೇ ಇದ್ದಾಳೆ. ಸೈಕೋ ಥೆರಪಿಸ್ಟ್ ಡಾ. ಮನೋಜ್ ದಾಸ್ ಹೆಸರು ಕೇಳಿರಬೇಕಲ್ಲ? ಅವರ ಅಸಿಸ್ಟೆಂಟ್.
ನಂಜೊತೆ ದಿನಾ ಫೋನ್‌ನಲ್ಲಿ ಮಾತಾಡ್ತಾಳೆ.
ಆಗಾಗ ಭೇಟಿಯಾಗ್ತೀವಿ. ಅಪ್ಪನಿಗೆ ಹೆಂಡತಿ
ಇಲ್ಲ ಅಷ್ಟೇ. ನಂಗೆ ಅಮ್ಮ ಇದ್ದಾಳೆ. ಅವಳು ನೆಮ್ಮದಿಯಾಗಿದ್ದಾಳೆ ಅಂತ ನಂಗನ್ಸುತ್ತೆ. ಅಪ್ಪನ ಅಕ್ಸಿಡೆಂಟ್ ಬಗ್ಗೆ ಅಮ್ಮನಿಗೆ ನಾನು ಹೇಳಿಲ್ಲ.
ಯಾಕೆ?
ಅಪ್ಪ ತುಂಬಾ ಪೊಸೆಸಿವ್. ಅಮ್ಮ ಈಗ ಬಂದ್ರೆ ಅವ್ಳು ಸುಲಭವಾಗಿ ಇಲ್ಲಿಂದ ಹೋಗಕ್ಕಾಗಲ್ಲ. ಸಧ್ಯ ದೂರ ಇದ್ದು ಇಬ್ರೂ ನೆಮ್ಮದಿಯಾಗಿದ್ದಾರೆ. ನಂಗೆ ಅಷ್ಟು ಸಾಕು. ಅಥವಾ ಇದರಲ್ಲಿ ನನ್ನ ಸ್ವಾರ್ಥವೂ ಇರಬೋದು. ಅಪ್ಪ ಅಮ್ಮನ ಡೈವೋರ್ಸ್ ಆದಾಗಿನಿಂದ ನಾನೂ ನೆಮ್ಮದಿಯಾಗಿದೀನಿ. ಈ ನೆಮ್ಮದಿ ನನ್ನ ಬದುಕನ್ನ ನಾನೇ ಸ್ವತಂತ್ರವಾಗಿ ರೂಪಿಸಿಕೊಳ್ಳೋ
ಶಕ್ತೀನ ನಂಗೆ ಕೊಟ್ಟಿದೆ.
ಅವನನ್ನೇ ನೇರವಾಗಿ ನೋಡಿದೆ. ಮಗುವಿನ ಮುಖದ ಹಿಂದಿರಬಹುದಾದ ಪ್ರಬುದ್ಧ ಯುವಕನನ್ನು ಹುಡುಕಿದೆ.
ಬಿರುಮಳೆಯ ಜತೆ ಸುತ್ತಲೂ
ಸೇರಿಕೊಂಡ ಜನರ ಗದ್ದಲದಿಂದಾಗಿ ಏನೂ ಮಾತಾಡಬೇಕೆನಿಸದೇ ಸುಮ್ಮನೆ ನಿಂತೆವು. ಶ್ರೀರಾಮ್ ಒಮ್ಮೆ ಒಳಗೆ ಹೋಗಿ ಸಂಪತ್‌ರನ್ನು ನೋಡಿಬಂದ. ನನಗೆ ಹೋಗಬೇಕೆನಿಸಲಿಲ್ಲ. ಅವನು ಹಿಂತಿರುಗುವ ಹೊತ್ತಿಗೆ ಮಳೆ ಕಡಿಮೆಯಾಗಿತ್ತು. ನಾನು ಹೊರಟೆ.
ತಲೆಯ ಮೇಲೆ ಕರವಸ್ತ್ರ ಹರಡಿಕೊಂಡು ಅವನೂ ಕಾರಿನ ಬಳಿ ಬಂದ. ಕಾರಿನ ಬಾಗಿಲು ತೆರೆಯುತ್ತಾ ಕೇಳಿದೆ:
ನನ್ನ ಬಗ್ಗೆ ನಿಮ್ಮಮ್ಮನಿಗೆ
ಹೇಳಿದಿರಾ?
ಹ್ಞೂಂ ಹೇಳಿದೆ. ಅವನು ಸಹಜವಾಗಿಯೇ ಹೇಳಿದ.
ಏನಂದ್ರು? ಮೈಯೆಲ್ಲಾ ಕಿವಿಯಾದೆ.
ಅಮ್ಮಂಗೆ ನಿಮ್ಮ ಪರಿಚಯ
ಇಲ್ಲ ಅಂತ ಕಾಣುತ್ತೆ. ಸುಮ್ಮನೆ ಹೌದಾ ಅಂದ್ಬಿಟ್ಟು
ಚೆನ್ನಾಗಿ ಪಾಠ ಮಾಡ್ತಾರಾ ಅಂತ ಕೇಳಿದ್ಲು.
ಮಾತಿಲ್ಲದೇ ಎಂಜಿನ್
ಗೊರಗುಟ್ಟಿಸಿ ಅವನಿಗೆ ಕೈಯಾಡಿಸಿದೆ. ಎಡಬಲ ನೋಡದೇ
ಕಾರನ್ನು ರಸ್ತೆಗೆ ನುಗ್ಗಿಸಿದೆ.
ಶಿವಪುರ ಸಮೀಪಿಸುವ ಹೊತ್ತಿಗೆ
ಮಳೆ ಇನ್ನಷ್ಟು ಸಿಟ್ಟಿನಿಂದ ಸುರಿಯತೊಡಗಿತು. ವೈಪರ್‌ಗಳು
ಸೋತುಹೋದವು.
ವಾಹನವನ್ನು ರಸ್ತೆ ಬದಿಗೆ
ತಂದು ನಿಲ್ಲಿಸುತ್ತಿದ್ದಂತೇ ಸಂಪತ್‌ರ ಪ್ರಶ್ನೆಗೆ ನಾನು ಉತ್ತರವನ್ನೇ ಕೊಡದಿದ್ದದ್ದು ಏಕಾಏಕಿ ನೆನಪಾಯಿತು. ಹಿಂದೆಯೇ ಏನು ಉತ್ತರ ಕೊಡಬಹುದಾಗಿತ್ತೆಂಬ ಪ್ರಶ್ನೆ ಕತ್ತಲ
ಬಿಲದಿಂದ ಛಂಗನೆ ನೆಗೆದು ಎದುರು ನಿಂತು ಹೆಡೆ ಬಿಚ್ಚಿ ಹೆದರಿಸಿತು. ಗಲಿಬಿಲಿಗೊಂಡು ನಿಸ್ಸಹಾಯಕತೆಯಲ್ಲಿ ಎಡಬಲ ನೋಟ ಹೊರಳಾಡಿಸಿದೆ. ಸುತ್ತಲೂ ಸೂತಕದಂತೆ ಕವಿದುಕೊಂಡ ಬೂದು ಮುಸುಕಿನಲ್ಲಿ ಏನೂ
ಕಾಣಲಿಲ್ಲ. ಸೀಟಿಗೆ ತಲೆಯೊತ್ತಿ ಕಣ್ಣುಮುಚ್ಚಿದೆ.
--***೦೦೦***--
ಕಥೆ ಬಹಳ ಇಷ್ಟವಾಯ್ತು.
ReplyDelete